೧೯೪೬-೫೧ರ ಅವಧಿಯಲ್ಲಿ ನಡೆದ ಚಾರಿತ್ರಿಕ ತೆಲಂಗಾಣ ರೈತರ ಸಶಸ್ತ್ರ ಹೋರಾಟ ಭಾರತ ಬ್ರಿಟಿಷ್‌ ವಸಾಹತು ಆದ ನಂತರ ನಡೆದ ರೈತ ಹೋರಾಟಗಳಲ್ಲೆಲ್ಲಾ ಶಿಖರ ಪ್ರಾಯವಾದದ್ದು. ಐದು ವರ್ಷಗಳ ದೀರ್ಘ ಅವಧಿ, ವ್ಯಾಪಕತೆ, ರಾಷ್ಟ್ರಮಟ್ಟದಲ್ಲಿ ದೂರಗಾಮಿ ಪ್ರಭಾವ, ಸಾಧನೆಗಳು ಎಲ್ಲ ರೀತಿಯಲ್ಲೂ ಅದು ಬರಿಯ ರೈತ ಹೋರಾಟ ಮಾತ್ರ ಅಲ್ಲ. ಮಹತ್ವದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಬದಲಾವಣೆಗೆ ಹೋರಾಟ. ನಿಜವಾಗಿ ಹೇಳಬೇಕಾದರೆ ತೆಲಂಗಾಣ ಹೋರಾಟವನ್ನು ೧೮೫೭ರ ಪ್ರಥಮ ಸ್ವಾತಂತ್ರ್ಯ ಸಮರದೊಡನೆ ಮಾತ್ರ ಹೋಲಿಸಲು ಸಾಧ್ಯ.

ತೆಲಂಗಾಣ ಹೋರಾಟ ನಡೆದದ್ದು ಎರಡನೇ ಮಹಾಯುದ್ಧದ ನಂತರ ಜಗತ್ತಿನಲ್ಲಿ ಬೇರೆ ಬೇರೆ ಶಕ್ತಿಗಳ ಬಲಾಬಲದಲ್ಲಿ ಆದ ಭಾರೀ ಬದಲಾವಣೆಗಳ ಹಿನ್ನೆಲೆಯಲ್ಲಿ. ಫಾಸಿಸಂ ವಿರುದ್ಧ ಹೋರಾಟದಲ್ಲಿ ಬ್ರಿಟನ್‌ನಂತಹ ಸಾಮಾಜ್ಯ ಶಾಹಿಗಳಿಗೆ ಬೆಂಬಲ ನೀಡಿದ್ದ ವಸಾಹತುಗಳ ಜನತೆಗೆ ಭರವಸೆ ನೀಡಿದ್ದ ಸ್ವಾತಂತ್ರ್ಯ, ಮಹಾಯುದ್ಧ ತಂದ ಕಷ್ಟ ಕಾರ್ಪಣ್ಯಗಳ ಅಂತ್ಯ ಮರೀಚಿಕೆಯಾದಾಗ, ಭಾರೀ ಹೋರಾಟದಲ್ಲಿ ದೊಡ್ಡ ಜನವಿಭಾಗಗಳು. ಮುಖ್ಯವಾಗಿ ರೈತರು ದುಮುಕಿದ ಹಿನ್ನೆಲೆಯಲ್ಲಿ. ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷರು ಗೆದ್ದಿದ್ದರೂ ಸುಸ್ತಾಗಿದ್ದರು. ಅವರಿಂದ ಸ್ವಾತಂತ್ರ್ಯ ಸುಲಭವಾಗಿ ಕಿತ್ತುಕೊಳ್ಳಬಹುದು. ಎಂದು ಹೊಂಚು ಹಾಕುತ್ತಿದ್ದರು. ಈ ಎಲ್ಲ ಅಂಶಗಳನ್ನು ಉಪಯೋಗಿಸಿ ಭಾರತವನ್ನು ಹೇಗೆ ತಮ್ಮ ಕಪಿಮುಷ್ಟಿಯಲ್ಲಿ ಭದ್ರವಾಗಿ ಇರಿಸಿಕೊಳ್ಳುವುದು ಎಂದು ಬ್ರಿಟಿಷರು ಲೆಕ್ಕ ಹಾಕುತ್ತಿದ್ದರು.

ಆದರೆ ಮಹಾಯುದ್ಧ ತಂದ ಕಷ್ಟಕಾರ್ಪಣ್ಯಗಳ ಹೊರೆ ತಾಳಲಾರದೆ, ಸ್ವಾತಂತ್ರ್ಯ ಮತ್ತು ಹೊಸ ಬದುಕಿನ ಭರವಸೆ ಹುಸಿಯಾಗುವ ಸಂಭವ ಕಂಡು ಜನತೆಯಲ್ಲಿ ಅತೃಪ್ತಿ ಭುಗಿಲೆದ್ದಿತ್ತು. ಇದು ಹಲವು ರೂಪಗಳಲ್ಲಿ ಹೋರಾಟಗಳಲ್ಲಿ ಕಂಡುಬಂದವು. ಐ.ಎನ್.ಎ. ಸುಭಾಸ್‌ಚಂದ್ರ ಬೋಸ್ ಸ್ಥಾಪಿಸಿದ ಸೇನೆ ಅಧಿಕಾರಿಗಳ ಮತ್ತು ಸೈನಿಕರ ಬಿಡುಗಡೆಗೆ ನಡೆದ ಹೋರಾಡ, ಮುಂಬಯಿಯಲ್ಲಿ ಆರಂಭವಾಗಿ ಹರಡಿದ ನೌಕಾ ಸೈನಿಕರ ಬಂಡಾಯ, ಬಂಗಾಳದಲ್ಲಿ ಆರಂಭವಾದ ‘ತೇಭಾಗಾ’ ಎಂಬ ರೈತ ಚಳವಳಿ, ಮಹಾರಾಷ್ಟ್ರದಲ್ಲಿ ವಾರಲೀಯರ ಹೋರಾಟ, ಕೇರಳದ ತಿರುವಾಂಕೂರಿನ ಪುನ್ನಪ್ರ ವಯಲಾರ್ ಹೋರಾಟಗಳ ಸರಮಾಲೆಯಲ್ಲೇ ತೆಲಂಗಾಣ ರೈತರ ಸಶಸ್ತ್ರ ಹೋರಾಟ ಸಹ ಬರುತ್ತದೆ.

ತೆಲಂಗಾಣದ ಪರಿಸ್ಥಿತಿ

ಈಗಿನ ಆಂಧ್ರಪ್ರದೇಶ ರಾಜ್ಯದ ಎಂಟು ಜಿಲ್ಲೆಗಳಿಂದ ಕೂಡಿದ ಪ್ರದೇಶಕ್ಕೆ ತೆಲಂಗಾಣ ಎಂದು ಹೆಸರು. ಇದು ರಾಜ್ಯಗಳ ಪುನರ್ವಿಂಗಡಣೆಯಾಗುವ ಮೊದಲು ಹೈದರಾಬಾದ್ ನಿಜಾಮನ ಆಡಳಿತದಲ್ಲಿದ್ದ ಪ್ರದೇಶ. ಹೈದರಾಬಾದ್ ಬ್ರಿಟಿಷರ ಸಾಮಂತರಾಗಿದ್ದ ಭಾರತೀಯ ರಾಜರುಗಳ ಅಂದರೆ ಬ್ರಿಟಿಷರ ನೇರ ಆಳ್ವಿಕೆಯಲ್ಲಿ ಇರದ ಆಳ್ವಿಕೆಯಲ್ಲಿದ್ದ ೫೦೦ ಕ್ಕೂ ಹೆಚ್ಚು ‘ರಾಜಾಡಳಿತ ಪ್ರದೇಶ’ಗಳಲ್ಲಿ ಅತೀ ದೊಡ್ಡದು. ಜನಸಂಖ್ಯೆ ಸುಮಾರು ೧.೬ ಕೋಟಿ ಆಗಿತ್ತು. ನಿಜಾಮನ ಆಳ್ವಿಕೆಗೆ ತೆಲುಗು ಮಾತನಾಡುವ ಜನಸಂಖ್ಯೆಯಲ್ಲಿ ಶೇಕಡಾ ೫೦ ಜನರಿರುವ ತೆಲಂಗಾಣವಲ್ಲದೆ ವಿಸ್ತೀರ್ಣದಲ್ಲಿ ಶೇ.೫೦, ಮರಾಠಿ ಮಾತನಾಡುವ ಶೇ. ೨೫ ಜನರಿರುವ ಮರಾಠಾವಾಡ ವಿಸ್ತೀರ್ಣದಲ್ಲಿ ಶೇ. ೨೮ ಮತ್ತು ಕನ್ನಡ ಮಾತನಾಡುವ ಶೇ.೧೧ ಜನರಿರುವ ಕೆಲವು ಜಿಲ್ಲೆಗಳು ವಿಸ್ತೀರ್ಣದಲ್ಲಿ ಶೇ.೨೨ ಸೇರಿದ್ದವು. ಈಗ ಕರ್ನಾಟಕದಲ್ಲಿರುವ ಗುಲ್ಬರ್ಗ, ಬೀದರ, ರಾಯಚೂರು ಜಿಲ್ಲೆಗಳು ನಿಜಾಮನ ಹೈದರಾಬಾದಿಗೆ ಸೇರಿದ್ದವು. ಉರ್ದು ಮಾತನಾಡುವವರು ಶೇ.೧೨ ಅಲ್ಪಸಂಖ್ಯಾತರಾಗಿದ್ದರೂ ರಾಜ್ಯದ ಆಡಳಿತ ಭಾಷೆ ಉರ್ದುವಾಗಿತ್ತು. ರಾಜ್ಯದ ಬಹುಸಂಖ್ಯಾತರ ಜನರ ಭಾಷೆ, ಸಂಸ್ಕೃತಿಗಳ ಸ್ವಾಭಾವಿಕ ಬೆಳವಣಿಗೆಯನ್ನು ಪೂಣ್ವಾಗಿ ಹತ್ತಿಕ್ಕಲಾಗಿತ್ತು. ಜನರ ಭಾಷೆಗಳಲ್ಲಿ ಕಲಿಸುವ ಶಾಲೆಗಳನ್ನು ತೆರೆಯಲು ವಿಪರೀತ ಅಡೆತಡೆಗಳಿದ್ದವು. ಇದರ ಫಲವಾಗಿ ೧೯೨೭ರಲ್ಲಿ ಇಡೀ ರಾಜ್ಯದಲ್ಲಿ ಕೇವಲ ೧೫ ಹೈಸ್ಕೂಲುಗಳು ಇದ್ದವು. ಸಾಕ್ಷರತೆ ಕೇವಲ ಶೇ.೫ ಇತ್ತು.

ಇಡೀ ರಾಜ್ಯ ಪಾಳೆಯಗಾರಿಕೆ ವ್ಯವಸ್ಥೆ ಅದರ ಎಲ್ಲ ಕ್ರೌರ್ಯಗಳೊಂದಿಗೆ ಭದ್ರವಾಗಿ ಬೇರೂರಿದ್ದ ಪ್ರದೇಶವಾಗಿತ್ತು. ಹೈದರಾಬಾದ್‌ರಾಜ್ಯದ ಒಟ್ಟು ಜಮೀನಿನ ಶೇ. ೬೦ ಭಾಗ ಸರ್ಕಾರಿ ಭೂಕಂದಾಯಕ್ಕೆ ದಿವಾನಿ ಅಥವಾ ಖಾಲ್ಸಾ ಭೂಮಿ ಒಳಗಾಗಿದ್ದರೆ, ಶೇ. ೩೦ ಭಾಗ ಜಾಗೀರ್‌ದಾರಿ ಪದ್ಧತಿಯಲ್ಲಿ ಮತ್ತು ಶೇ.೧೦ ನಿಜಾಮನ ಸ್ವಂತ ಜಮೀನು ಸರ್ಫ್‌ಎಖಾಸ್‌ಆಗಿತ್ತು. ಈಗಿನ ಹೈದರಾಬಾದು ಜಿಲ್ಲೆ ನಿಜಾಮನ ಸ್ವಂತ ಜಾಗೀರಾಗಿತ್ತು. ನಿಜಾಮ ಮತ್ತು ಅವನ ದೊಡ್ಡ ಕುಟುಂಬ ವರ್ಷಕ್ಕೆ ಸುಮಾರು ೨ ಕೋಟಿ ರೂ. ವೆಚ್ಚ ಮಾಡುತ್ತಿತ್ತು. ಜಾಗೀರ್‌ದಾರಿ ಇದ್ದ ಪ್ರದೇಶಗಳಲ್ಲಿ ಎಲ್ಲ ಜಮೀನು ಜಾಗೀರ್‌ದಾರನದ್ದೇ ಮಾತ್ರವಲ್ಲ, ಅವನು ಎಲ್ಲವೂ ಆಗಿದ್ದ. ಆಡಳಿತ, ಪೊಲೀಸು, ಕೋರ್ಟು ಎಲ್ಲದಕ್ಕೂ ಅವನೇ ಮುಖ್ಯಸ್ಥ. ಆದ್ದರಿಂದ ಜಾಗೀರು ಪ್ರದೇಶಗಳಲ್ಲಿ ಅತ್ಯಂತ ಹೇಯವಾದ ದಬ್ಬಾಳಿಕೆ, ಪಾಳೆಯಗಾರಿಕೆ ಶೋಷಣೆ ಇತ್ತು. ಕಂದಾಯಕ್ಕೆ ಯಾವುದೇ ನಿಯಮಕಟ್ಟಳೆಗಳು ಇರಲಿಲ್ಲ. ಜಾಗೀರ್‌ದಾರನ ಮದುವೆಗೂ, ಕಾರು ಕೊಂಡಾಗ, ಅರಮನೆ ವಿಸ್ತರಿಸುವಾಗ ಹೀಗೆ ಮನಸ್ಸಿಗೆ ಬಂದಂತೆ ಜನಸಾಮಾನ್ಯರ ಮೇಲೆ ಕಂದಾಯ ಹಾಕಲಾಗುತ್ತಿತ್ತು. ರೈತರ ಮನೆಯಲ್ಲಿರುವ ವಸ್ತುಗಳ ಮೇಲೂ ಕಂದಾಯ ಕೊಡಬೇಕಾಗುತ್ತಿತ್ತು. ಅಲ್ಲದೆ ಹಲವಾರು ವಸ್ತುಗಳು, ಸೇವೆಗಳನ್ನು ಆತನಿಗೆ ಪುಕ್ಕಟ್ಟೆ ಕೊಡಬೇಕಾಗಿತ್ತು. ದಿವಾನಿ ಪ್ರದೇಶಗಳಲ್ಲಿ ಪಾಳೆಯಗಾರಿಕೆ ಶೋಷಣೆ ಕಡಿಮೆ ಇರಬೇಕಾಗಿತ್ತು. ಆದರೆ ಇಲ್ಲೂ ವಿಶಿಷ್ಟ ರೀತಿಯ ಪಾಳೆಯಗಾರರು ಶೋಷಣೆಯನ್ನು ಇನ್ನಷ್ಟು ದುರ್ಭರಗೊಳಿಸಿದ್ದರು. ದೇಶಪಾಂಡೆ, ದೇಶಮುಖ್ ಮುಂತಾಗಿ ಕರೆಯಲಾಗುತ್ತಿದ್ದ ಇವರು ಸರ್ಕಾರ ಮತ್ತು ರೈತರ ನಡುವೆ ಭೂಕಂದಾಯ ವಸೂಲಿ ಮಾಡುವ ಮಧ್ಯವರ್ತಿಗಳಾಗಿದ್ದರು. ಆದರೆ ೧೯ನೆಯ ಶತಮಾನದ ಮಧ್ಯಭಾಗದಲ್ಲೇ ಈ ಪದ್ಧತಿಯನ್ನು ರದ್ದು ಮಾಡಲಾಗಿತ್ತು. ಇವರು ತಮ್ಮ ಹಳೇ ಸ್ಥಾನಮಾನ ಬಳಸಿ, ಹೆಚ್ಚಾಗಿ ಬಲಪ್ರಯೋಗ ಮಾಡಿ ಕಾನೂನುಬಾಹಿರವಾಗಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಮತ್ತು ರೈತರ ಜಮೀನನ್ನು ಕಬಳಿಸಿದ್ದರು. ಅದನ್ನು ರೈತರಿಗೆ ಕೊಟ್ಟು ಸಾಗುವಳಿ ಮಾಡಿಸಿ ಅವರಿಂದ ಕಂದಾಯ ವಸೂಲಿ ಮಾಡುತ್ತಿದ್ದರು. ಅವರು ಜಾಗೀರುದಾರರನ್ನು ಮೀರಿಸುವ ಪಾಳೆಯಗಾರಿಕೆ ಶೋಷಣೆ ನಡೆಸುತ್ತಿದ್ದರು.

ಮೇಲೆ ಹೇಳಿದ ಮೂರು ಬಗೆಯ ಜಮೀನುಗಳಲ್ಲಿ ರೈತರಿಂದ ಅತಿದೊಡ್ಡ ಪ್ರಮಾಣದಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾನೂನುಬದ್ಧವಾಗಿಯೂ, ಕಾನೂನುಬಾಹಿರವಾಗಿಯೂ, ತೆರಿಗೆ ಮತ್ತು ಭೂಕಂದಾಯಗಳನ್ನು ಬಲಾತ್ಕಾರವಾಗಿ ವಸೂಲು ಮಾಡುತ್ತಿತ್ತು. ರೈತನ ಶ್ರಮದ ದುಡಿಮೆಯ ದೊಡ್ಡ ಭಾಗವನ್ನು ನಿಜಾಮ ಮತ್ತು ಜಮೀನುದಾರರು ಕೊಳ್ಳೆ ಹೊಡೆಯುತ್ತಿದ್ದರು. ಭೂಒಡೆತನದ ವಿಪರೀತ ಕೇಂದ್ರೀಕರಣದ ಈ ಒಂದೇ ಒಂದು ಉದಾಹರಣೆ ಕಣ್ಣಿಗೆ ಕಟ್ಟಿದ ಹಾಗೆ ಹೇಳುತ್ತದೆ. ಜನ್ನಾರೆಡ್ಡಿ ಪ್ರತಾಪರೆಡ್ಡಿ ಎಂಬುವವನು ಸುಮಾರು ಒಂದುವರೆ ಲಕ್ಷ ಎಕರೆ ಜಮೀನು ಹೊಂದಿದ್ದ. ಹಲವಾರು ಜಾಗೀರುದಾರರು ೩೦-೪೦ ಸಾವಿರ ಎಕರೆಗಳಷ್ಟು ಜಮೀನು ಹೊಂದಿದ್ದರು.

ಇಷ್ಟೇ ಅಲ್ಲದೆ ವೆಟ್ಟಿ-ಬಲಾತ್ಕಾರದ ಬಿಟ್ಟಿ ದುಡಮೆ ಪದ್ಧತಿ ಜಾರಿಯಲ್ಲಿತ್ತು. ಈ ಪದ್ಧತಿ ರೈತರನ್ನು ಮಾತ್ರವಲ್ಲದೆ ಇತರ ಕುಶಲ ಕುಲಕಸುಬಿಗರನ್ನೂ ತಟ್ಟುತ್ತಿತ್ತು. ಇವರು ಜಮೀನುದಾರರಿಗೆ ಪುಕ್ಕಟೆ ಸೇವೆ ಸಲ್ಲಿಸಬೇಕಾಗಿತ್ತು. ದಲಿತ ಕುಟುಂಬಗಳಂತೂ ಈ ಪದ್ಧತಿಯಿಂದಾಗಿ ಗುಲಾಮಗಿರಿಯ ಜೀವನ ನಡೆಸುತ್ತಿದ್ದವು.

ನಿಜಾಮನ ಆಡಳಿತ ಭ್ರಷ್ಟ ಲಂಚಕೋರ ಅಧಿಕಾರಿಗಳಿಂದ ಕೂಡಿದ ಏಕಾಧಿಕಾರವಾಗಿತ್ತು. ಇಲ್ಲಿ ಯಾವುದೇ ರೀತಿಯ ಪ್ರಜಾಸತ್ತಾತ್ಮಕ ಹಕ್ಕುಗಳಾಗಲಿ, ಸ್ವಾತಂತ್ರ್ಯವಾಗಲಿ ಇರಲಿಲ್ಲ. ನಿಜಾಮ ಮಜ್ಲಿಸ್‌ಎ ಇತ್ತೇಹಾದ್ ಮುಸಲ್ಮೀನ್‌ಎಂಬ ಸಂಘಟನೆಗೆ ಕೋಮುವಾದಿ ಪ್ರಚಾರ ಮಾಡಲು ಕುಮ್ಮಕ್ಕು ಕೊಟ್ಟಿದ್ದ. ನಿಜಾಮನ ಹೈದರಾಬಾದಿನಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಹೀಗೆ ಎಲ್ಲ ರೀತಿಯ ಶೋಷಣೆ, ದಮನಗಳಿಂದ ತೆಲಂಗಾಣದ ರೈತರ ಆಕ್ರೋಶ ಮುಗಿಲು ಮುಟ್ಟಿತ್ತು.

ಇದು ತೆಲಂಗಾಣದಲ್ಲಿ ೧೯೪೦ರ ದಶಕದ ಆರಂಭದಲ್ಲಿದ್ದ ಪರಿಸ್ಥಿತಿ. ಇದೇ ತೆಲಂಗಾಣ ರೈತರ ಹೋರಾಟದ ಹಿನ್ನೆಲೆ.

ಪಾಳೆಯಗಾರಿ ಪದ್ಧತಿಯ ಈ ಅತಿರೇಕಗಳು ಮತ್ತು ನಿಜಾಮನ ಸರ್ವಾಧಿಕಾರದ ವಿರುದ್ಧ ಈ ಮೊದಲೇ ಹಲವು ದಂಗೆಗಳಾಗಿದ್ದವು. ಆದರೆ ಇಡೀ  ವ್ಯವಸ್ಥೆಯನ್ನು ಅಲುಗಾಡಿಸುವಷ್ಟು ಶಕ್ಯವಾಗಿರಲಿಲ್ಲ.

ಆಂಧ್ರ ಮಹಾಸಭಾದ ಉದಯ

ರಾಷ್ಟ್ರದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯಿಂದ ಆಕರ್ಷಿತರಾದ ಪ್ರಭಾವಿತರಾದ ಹಲವು ಉದಾರವಾದಿ ಬುದ್ಧಿ ಜೀವಿಗಳು ೧೯೨೮ರಲ್ಲಿ ಆಂದ್ರ ಮಹಾಸಭಾ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಕಟ್ಟಿದ್ದರು. ಆರಂಭದಲ್ಲಿ ಇದನ್ನು ಸಾಂಸ್ಕೃತಿಕ ವಿಷಯಗಳಿಗೆ ಸೀಮಿತಗೊಳಿಸಿಕೊಂಡರು. ೧೯೩೦ರ ದಶಕದುದ್ದಕ್ಕೂ ಹೈದರಾಬಾದಿನ ದಮನಕಾರಿ ರಾಜಕೀಯ ಪರಿಸ್ಥಿತಿಯಲ್ಲಿ ಇದು ವಿದ್ಯಾರ್ಥಿಗಳು, ಮಧ್ಯಮವರ್ಗದವರು, ರೈತರು, ಸಣ್ಣ ವ್ಯಾಪಾರಿಗಳು, ಕುಲಕಸುಬಿಗರು ಇವರೆಲ್ಲರ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳ ಕೇಂದ್ರ ಬಿಂದುವಾಗಿ ಬೆಳೆಯಿತು. ಈ ಸಮಯದಲ್ಲಿ ಆಂಧ್ರ ಮಹಾಸಭಾದ ಯುವ ಹಾಗೂ ಪ್ರಗತಿಗಾಮಿ ಕಾರ್ಯಕರ್ತರು ಎಲ್ಲಾ ಜನ ವಿಭಾಗಗಳನ್ನು ಅದರಲ್ಲೂ ರೈತರನ್ನು ಅವರ ಬೇಡಿಕೆಗಳ ಸುತ್ತ ಸಂಘಟಿಸುತ್ತ ಅದನ್ನು ವಿಶಾಲ ತಳಹದಿಯಲ್ಲಿ ಬೆಳೆಸಿದರು. ಇವರಲ್ಲಿ ಹಲವಾರು ಕಮ್ಯುನಿಸ್ಟ್‌ಪಕ್ಷದೆಡೆಗೆ ಆಕರ್ಷಿತರಾಗಿ ಅದನ್ನು ಸೇರಿದರು. ೧೯೪೦ರಲ್ಲಿ ನಡೆದ ಆಂಧ್ರ ಮಹಾಸಭಾದ ೭ನೇ ಸಮ್ಮೇಳನದ ಹೊತ್ತಿಗೆ ಕಮ್ಯುನಿಸ್ಟರು ಅದರ ನಾಯಕತ್ವದ ಪ್ರಮುಖ ಅಂಗವಾಗಿದ್ದರು.

ಆರಂಭ ಭಾಗದಲ್ಲಿ ‘ಸಂಘಂ’ ಜನ ‘ಆಂಧ್ರ ಮಹಾಸಭಾ’ವ್ನು ಹೀಗೆ ಕರೆಯುತ್ತಿದ್ದರು. ಏಕೆಂದರೆ ಅದರ ಹಿಂದಿನ ಅವತಾರದಲ್ಲಿ ಅದು ‘ಆಂಧ್ರ ಜನ ಸಂಘಂ’ ಆಗಿತ್ತು. ವೆಟ್ಟಿ ಪದ್ಧತಿಯ ವಿರುದ್ಧ ರೈತರ ಒಕ್ಕಲು ಎಬ್ಬಿಸುವಿಕೆಯ ವಿರುದ್ಧ, ಭ್ರಷ್ಟ ಅಧಿಕಾರಿಗಳ ವಿರುದ್ಧ, ನಿಜಾಮರ ದುರಾಡಳಿತದ ವಿರುದ್ಧ ಬೆಳೆಯುತ್ತಾ ಹಳ್ಳಿಗಳಲ್ಲಿ ದೊಡ್ಡ ಬೆಂಬಲ ಪಡೆಯಿತು. ಅಲ್ಲಲ್ಲಿ ಭೂಮಾಲೀಕರ ಗೂಂಡಾಗಳನ್ನು ಎದುರಿಸಲು ಹಲವು ಬಾರಿ ಹೊಡೆದಟ್ಟಲು ಶಕ್ತವಾಗಿತ್ತು.

ಹೈದರಾಬಾದ್‌ ಮೈಸೂರು ಮುಂತಾದ ಬ್ರಿಟಿಷ್‌ ಸಾಮಂತ ರಾಜರುಗಳ ಆಳ್ವಿಕೆಯ ಪ್ರದೇಶಗಳಲ್ಲಿ ಕಾಂಗ್ರೆಸ್, ಸತ್ಯಾಗ್ರಹ, ಚಳವಳಿ, ಸಂಘಟನೆ ಕಟ್ಟುವಲ್ಲಿ ಹಿಂಜರಿಕೆ ತೋರುತ್ತಿತ್ತು. ‘ನಮ್ಮವರೇ’ ಆದ ಈ ರಾಜರುಗಳ ವಿರುದ್ಧ ಚಳವಳಿ ಹೂಡುವುದು ಸರಿಯಲ್ಲ ಎಂಬ ಭಾವನೆ ವ್ಯಾಪಕವಾಗಿತ್ತು. ಆದರೂ ದೇಶದಾದ್ಯಂತ ಪ್ರಬಲವಾಗಿದ್ದ ಕಾಂಗ್ರೆಸ್‌ ಸತ್ಯಾಗ್ರಹ, ಚಳವಳಿಯಿಂದ ಪ್ರಭಾವಿತಾದ ಹಲವರು ಕಾಂಗ್ರೆಸ್‌ನ್ನು ಹೈದರಾಬಾದಿನಲ್ಲೂ ಸಂಘಟಿಸಿದ್ದರು. ಆದರೆ ನಿಜಾಮನ ದಮನಕಾರಿ ಆಡಳಿತ ಕಾಂಗ್ರೆಸ್‌‘ನಮ್ಮವರೇ’ ಅಂತ ಯಾವುದೇ ರಿಯಾಯಿತಿ ತೋರಿಸುತ್ತಿರಲಿಲ್ಲ. ೧೯೩೮ ರಲ್ಲಿ ವ್ಯಾಪಕವಾಗಿ ಕಾಂಗ್ರೆಸ್ ಸತ್ಯಾಗ್ರಹ ಸಂಘಟಿಸಿದಾಗ ಅದನ್ನು ನಿಷೇಧಿಸಲೂ ಆತ ಹಿಂಜರಿಯಲಿಲ್ಲ. ಮಾತ್ರವಲ್ಲ, ಹೈದರಾಬಾದ್‌ ಕಾಂಗ್ರೆಸ್ಸಿಗರಿಗೆ ಸತ್ಯಾಗ್ರಹ ನಿಲ್ಲಿಸುವಂತೆ ಕಾಂಗ್ರೆಸ್‌ ಕೇಂದ್ರೀಯ ನಾಯಕತ್ವದಿಂದ ನಿರ್ದೇಶನ ಬಂತು. ಇದೇ ಸಮಯದಲ್ಲಿ ಆರ್ಯ ಸಮಾಜ ಮತ್ತು ಹಿಂದೂ ಮಹಾಸಭಾ ನಿಜಾಮನ ವಿರುದ್ಧ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸುವ ಹೆಸರಲ್ಲಿ ಕೋಮುವಾದಿ ಚಳವಳಿ ಆರಂಭಿಸಿದ್ದರು. ಕಾಂಗ್ರೆಸ್‌ ಸತ್ಯಾಗ್ರಹ ಸಹ ನಿಜಾಮನ ವಿರುದ್ಧ ಧಾರ್ಮಿಕ ‘ಕೋಮುವಾದಿ ಚಳವಳಿ ಎಂಬ ತಪ್ಪು ಕಲ್ಪನೆಗೆ ಗುರಿಯಾಗಬಹುದು’ ಎಂದು ಸ್ವತಃ ಗಾಂಧೀಜಿಯವರೇ ಪ್ರಮುಖ ನಾಯಕರನ್ನು ಕರೆಸಿ ಎಚ್ಚರಿಸಿದರು. ೧೯೩೮ರಿಂದ ೧೯೪೬ರವರೆಗೆ ಕಾಂಗ್ರೆಸ್‌ ಮೇಲೆ ನಿಷೇಧ ಮುಂದುವರೆಯಿತು. ಇದರಿಂದಾಗಿ ಹೋರಾಟ ಮನೋಭಾವದ ದೇಶಪ್ರೇಮಿ ಕಾಂಗ್ರೆಸ್ಸಿಗರು ಸಹ ಆಂಧ್ರ ಮಹಾಸಭಾದಲ್ಲಿ ಕೆಲಸ ಮಾಡಲಾರಂಭಿಸಿದರು.

ಎರಡೆಯ ಮಹಾಯುದ್ಧ ಮುಗಿದ ಕೂಡಲೇ ದೇಶಾದ್ಯಂತ ಸಾಮ್ಯಾಜ್ಯಶಾಹಿ ವಿರೋಧಿ ಅಲೆ ಎದ್ದಿತು. ಮಹಾಯುದ್ಧಾನಂತರ ಆರ್ಥಿಕ ಪರಿಸ್ಥಿತಿ ಉಲ್ಬಣವಾಗಿ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಆ ಪರಿಸ್ಥಿತಿಯಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ದೇಶದಲ್ಲಿ ಬಹಳ ವ್ಯಾಪಕವಾಗಿ ಬೆಳೆದವು. ಆ ಹೋರಾಟದ ಅಂಗವಾಗಿ ಬ್ರಿಟಿಷರ ಮತ್ತು ಅವರ ಏಜೆಂಟರಾದ ಭೂಮಾಲೀಕರ ದಬ್ಬಾಳಿಕೆಯ ವಿರುದ್ಧ ಹಲವಾರು ಕಡೆ ರೈತರ ಹೋರಾಟಗಳು ಆರಂಭವಾಗಿ ಬಲಗೊಳ್ಳುತ್ತಿದ್ದವು. ಬಂಗಾಳದಲ್ಲಿ ತೇಭಾಗ ಚಳವಳಿ, ಮಹಾರಾಷ್ಟ್ರದ ವಾರಲಿಯರ ಹೋರಾಟ, ಕೇರಳದ ಪುನ್ನಪ್ರವಯಲಾರ್ ಹೋರಾಟ ಮತ್ತು ತೆಲಂಗಾಣ ಹೋರಾಟ ಈ ವ್ಯಾಪಕ ಹೋರಾಟದ ಭಾಗಗಳಾಗಿದ್ದವು. ಇವುಗಳಲ್ಲೆಲ್ಲ ತೆಲಂಗಾಣ ಹೋರಾಟವೇ ಅತಿ ವ್ಯಾಪಕವಾಗಿ ಮತ್ತು ಹೆಚ್ಚು ಕಾಲಾವಧಿ ನಡೆದಿದ್ದರಿಂದ ಮಾತ್ರವಲ್ಲದೆ ಸಾಧನೆಗಳ ದೃಷ್ಟಿಯಿಂದಲೂ ಗಮನಾರ್ಹವಾದುದು.

ತೆಲಂಗಾಣದ ರೈತರ ಹೋರಾಟದ ಘಟ್ಟಗಳು

ತೆಲಂಗಾಣ ರೈತರ ಹೋರಾಟ ಮೂರು ಘಟ್ಟಗಳಲ್ಲಿ ಬೆಳೆಯಿತು. ಪ್ರತಿ ಘಟ್ಟದಲ್ಲಿ ಚಳವಳಿಯ ಉದ್ದೇಶಗಳು, ಸಂಘಟನಾ ಸ್ವರೂಪ, ಎದುರಾಳಿಗಳು, ಬಾಹ್ಯ ಸನ್ನಿವೇಶ ಇತ್ಯಾದಿ ಬೇರೆ ಬೇರೆ ಆಗಿದ್ದವು. ಆ ಮೂರು ಘಟ್ಟಗಳೆಂದರೆ:

ಮೊದಲನೇ ಘಟ್ಟವನ್ನು ೧೯೪೬ ಜುಲೈನಿಂದ ೧೯೪೭ ಆಗಸ್ಟ್‌ವರೆಗೆ ಗುರುತಿಸಬಹುದು. ಈ ಘಟ್ಟದಲ್ಲಿ ನಿಜಾಮನ ಏಕಾಧಿಕಾರ ಮತ್ತು ಪಾಳೆಯಗಾರಿ ಪದ್ಧತಿಯನ್ನು ಕೊನೆಗೊಳಿಸುವ ಉದ್ದೇಶ ಇತ್ತು. ಎದುರಾಳಿಗಳು ನಿಜಾಮನ ಸರ್ಕಾರ, ಪೊಲೀಸು, ಸೈನ್ಯ ಮತ್ತು ಆತನಿಗೆ ನಿಷ್ಠವಾಗಿದ್ದ ಪಾಳೆಯಗಾರಿಕೆ ಭೂಮಾಲೀಕ ದೊರೆಗಳು ಮತ್ತು ಸಣ್ಣ ಜನ ವಿಭಾಗಗಳು, ಬ್ರಿಟಿಷ್‌ ರ್ಕಾರ ಆತಂಕದಿಂದ ಗಮನಿಸುತ್ತಿತ್ತು. ಆದರೆ ಇದು ನಿಜಾಮನ ಆಂತರಿಕ ಸಮಸ್ಯೆ ಎಂಬಂತೆ ತಡಸ್ಥವಾಗಿತ್ತು.

ಎರಡನೇ ಘಟ್ಟವನ್ನು ೧೯೪೭ ಆಗಸ್ಟ್‌ನಿಂದ ೧೯೪೮ ಸೆಪ್ಟೆಂಬರ್‌ವರೆಗೆ ಗುರುತಿಸಬಹುದು. ಈ ಘಟ್ಟದಲ್ಲಿ ಸಹ ಹೋರಾಟ ನಿಜಾಮನ ಏಕಾಧಿಕಾರ ಮತ್ತು ಪಾಳೆಯಗಾರಿ ಪದ್ಧತಿಯನ್ನು ಕೊನೆಗೊಳಿಸುವುದೇ ಉದ್ದೇಶ ಆಗಿತ್ತು. ಆದರೆ ಜತೆಗೆ ಹೈದರಾಬಾದು ಭಾರತದ ಒಕ್ಕೂಟಕ್ಕೆ ಸೇರಬೇಕು. ನಿಜಾಮನ ಜತೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಒತ್ತಾಯ ಸೇರಿಕೊಂಡಿತು. ಎದುರಾಳಿಗಳು ನಿಜಾಮನ ಸರ್ಕಾರ, ಪೊಲೀಸು ಸೈನ್ಯ ಮತ್ತು ಆತನಿಗೆ ನಿಷ್ಠವಾಗಿದ್ದ ಪಾಳೆಯಗಾರಿಕೆ ಭೂಮಾಲೀಕ ದೊರೆಗಳು ಮತ್ತು ಸಣ್ಣ ಜನವಿಭಾಗಗಳು. ಸ್ವತಂತ್ರ ಭಾರತ ಸರ್ಕಾರ ಆತಂಕದಿಂದ ಗಮನಿಸುತ್ತಿತ್ತು. ಆದರೆ ಇದು ನಿಜಾಮನ ಆಂತರಿಕ ಸಮಸ್ಯೆ ಎಂಬಂತೆ ತಟಸ್ಥವಾಗಿತ್ತು. ಮಾತ್ರವಲ್ಲ, ನಿಜಾಮನ ಜತೆ ರಾಜಿ ಮಾತುಕತೆಯಲ್ಲೂ ತೊಡಗಿತ್ತು.

ಮೂರನೇ ಘಟ್ಟವನ್ನು ೧೯೪೮ ಸೆಪ್ಟೆಂಬರ್‌ನಿಂದ ೧೯೫೧ ಅಕ್ಟೋಬರ್‌ವರೆಗೆ ಗುರುತಿಸಬಹುದು. ಈ ಘಟ್ಟದಲ್ಲಿ ಹೋರಾಟದ ಪ್ರಮುಖ ಉದ್ದೇಶ ಪಾಳೆಯಗಾರಿ ಪದ್ಧತಿಯನ್ನು ಕೊನೆಗೊಳಿಸುವುದೇ ಆಗಿತ್ತು. ಪಾಳೆಯಗಾರಿ ವಿರೋಧ ಹೋರಾಟದ ಮೊದಲ ಎರಡು ಹಂತದ ಸಾಧನೆಗಳನ್ನು ಉಳಿಸಿಕೊಂಡು ಮತ್ತು ಅದನ್ನು ಸಾಧ್ಯವಾದರೆ ವಿಸ್ತರಿಸುವುದು ಸೇರಿಕೊಂಡಿತು. ಇದಕ್ಕೆ ಪಾಳೆಯಗಾರಿ ಪದ್ಧತಿ ಜತೆ ರಾಜಿ ಮಾಡಿಕೊಂಡು ಅದನ್ನು ಉಳಿಸಲು ಹೋರಾಟ ಕಾಂಗ್ರೆಸ್‌ ಕೇಂದ್ರ ಸರ್ಕಾರವನ್ನು ಎದುರಿಸುವುದು ಅಗತ್ಯವಾಯಿತು. ಎದುರಾಳಿಗಳು ಭಾರತ ಸರ್ಕಾರ, ಪ್ರಾಂತೀಯ ಕಾಂಗ್ರೆಸ್‌ ಸರ್ಕಾರ, ಅದರ ಪೊಲೀಸು, ಸೈನ್ಯ, ಪಾಳೆಯಗಾರಿ ಭೂಮಾಲೀಕರ ದೊರೆಗಳು ಮತ್ತು ಅವರ ಬೆಂಬಲಿಗರು.

ಮೊದಲ ಕಿಡಿ

ತೆಲಂಗಾಣ ಸಶಸ್ತ್ರ ಹೋರಾಟಕ್ಕೆ ಕಿಡಿಯಾದ ಘಟನೆ ಜುಲೈ ೪, ೧೯೪೬ ರಂದು ನಡೆಯಿತು. ನಲಗೊಂಡಾ ತಾಲೂಕಿನ ವಿಸನೂರು ರಾಮಚಂದ್ರರೆಡ್ಡಿ ಇವನು ೪೦ ಸಾವಿರ ಎಕರೆ ಜಮೀನು ಮಾಲೀಕ ಎಂಬ ಕುಖ್ಯಾತ ದೇಶಮುಖನ ಸಶಸ್ತ್ರ ಗೂಂಡಾಗಳು ಐಲಮ್ಮ ಎಂಬ ರೈತ ಮಹಿಳೆಯ ಹೊಲಕ್ಕೆ ಲೂಟಿ ಮಾಡಲು ಬಂದಾಗ ಕಮ್ಯುನಿಸ್ಟ್‌ಪಕ್ಷ ಮತ್ತು ಆಂದ್ರ ಮಹಾ ಸಭಾದ ಸ್ವಯಂ ಸೇವಕರು ಅವರನ್ನು ಹಿಮ್ಮೆಟ್ಟಿಸಿದರು. ಅದೇ ದಿನ ಆ ಆಕ್ರಮಣವನ್ನು ಪ್ರತಿಭಟಿಸಿ ನಡೆದ ಶಾಂತಿಯುತ ಮೆರವಣಿಗೆಯ ಮೇಲೆ ದೇಶಮುಖ್‌ನ ಸಶಸ್ತ್ರ ಗೂಂಡಾಗಳು ದಾಳಿ ಮಾಡಿ, ಮೆರವಣಿಗೆಯ ನಾಯಕತ್ವ ವಹಿಸಿದ್ದ ದೊಡ್ಡಿ ಕೊಮರಯ್ಯ ಎಂಬುವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದರಿಂದ ರೊಚ್ಚಿಗೆದ್ದ ಜನಸಮೂಹ ಸಿಕ್ಕಿದ ಆಯುಧ ಲಾಟಿ ಇತ್ಯಾದಿಗಳಿಂದ ಗೂಂಡಾಗಳನ್ನು ಬಡಿದೋಡಿಸಿತು. ದೊಡ್ಡ ಕೊಮರಯ್ಯ ಹುತಾತ್ಮರಾದ ಆ ದಿನದಿಂದ ಪ್ರತಿಭಟನಾ ಮೆರವಣಿಗೆಗಳು ನಡೆದವು.

ಈ ಘಟನೆ ಪ್ರದೇಶದ ರೈತರನ್ನೆಲ್ಲ ರೊಚ್ಚಿಗೆಬ್ಬಿಸಿತು. ದೊಡ್ಡಿ ಕೊಮರಯ್ಯ ಅವರ ಮೇಲಿನ ಹಾಡುಗಳು ಎಲ್ಲೆಲ್ಲೂ ಕೇಳಿ ಬರತೊಡಗಿದವು.

ಪ್ರತಿ ಹಳ್ಳಿಯಲ್ಲಿ ಆ ಹಳ್ಳಿಯ ಭೂಮಾಲೀಕನ ಅಥವಾ ದೇಶಮುಖನ ಅರಮನೆಯಂತಹ ಮನೆಗಳ ಎದುರಿನಲ್ಲೇ ಕೆಂಬಾವುಟ ಹಾರಿಸಿ ‘ಇಲ್ಲಿ ಸಂಘಂ ಸಂಘಟಿಸಲಾಗಿದೆ. ಇನ್ನು ಮೇಲೆ ವೆಟ್ಟಿ ಇಲ್ಲ, ಕಾನೂನುಬಾಹಿರ ಕಡ್ಡಾಯ ತೆರಿಗೆ ಕಂದಾಯಗಳಿಲ್ಲ, ಒಕ್ಕಲೆಬ್ಬಿಸುವಿಕೆ ಇಲ್ಲ’ ಎಂದು ಘೋಷಿಸುತ್ತಿದ್ದರು. ಜನರ ಚಳುವಳಿಯಿಂದಾಗಿ ಸರ್ಕಾರ ಧಾನ್ಯ ಲೆವಿ ವಸೂಲಿ ಮಾಡಲಾಗಲಿಲ್ಲ. ಹಲವು ಕಡೆ ಭೂಮಾಲೀಕರ ಮತ್ತು ದೇಶಮುಖರನ್ನು ಹಳ್ಳಿಗಳಿಂದ ಓಡಿಸಲಾಯಿತು. ಅಥವಾ ಅವರೇ ಹತ್ತಿರದ ಪಟ್ಟಣಗಳಿಗೆ ಓಡಿ ಹೋದರು. ಹಳ್ಳಿಗಳಲ್ಲಿ ಉಳಿದ ಭೂಮಾಲೀಕರು ಸಂಪೂರ್ಣವಾಗಿ ಅಧಿಕಾರ ಹೀನರಾಗಿದ್ದರು. ಈ ಪೂರ್ಣ ಪ್ರಮಾಣದ ಕೃಷಿಕ ದಂಗೆಗೆ ಉತ್ತರವಾಗಿ ನಿಜಾಮ ಸರ್ಕಾರ ‘ಸಂಘಂ’ ಮತ್ತು ಕಮ್ಯುನಿಸ್ಟ್‌ಕಾರ್ಯಕರ್ತರ ಸಾಮೂಹಿಕ ಶೋಧನೆ, ಬಂಧನ, ಭಯೋತ್ಪಾದನೆಗೆ ತೊಡಗಿತು. ನಿಜಾಮನ ಪೊಲೀಸು ಮತ್ತು ಸೈನ್ಯಗಳು ಜನರ ಮೇಲೆ ಆಕ್ರಮಣ ನಡೆಸತೊಡಗಿದವು. ಜನಸಮೂಹ ಗೂಂಡಾಗಳನ್ನು, ನಿಜಾಮನ ಪೊಲೀಸ್, ಮಿಲಿಟರಿ ದಾಳಿಗಳನ್ನು ಲಾಡಿಗಳಿಂದಲೇ ಎದುರಿಸುತ್ತಿದ್ದರು. ಈ ಅವಧಿಯಲ್ಲಿ ಸಂಘಂ ಮತ್ತು ಪಾರ್ಟಿಯಿಂದ ಲಾಟಿ ಚಲಾಯಿಸಲು ತರಬೇತಿ ಪಡೆದ ರೈತ ಸ್ಕ್ವಾಡ್‌ಗಳು ಜನರ ರಕ್ಷಣಾ ಕಾರ್ಯ ಮಾಡುತ್ತಿದ್ದರು.

ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರ ಬಂಧನ, ಚಿತ್ರ ಹಿಂಸೆ, ಜನರ ಮೇಲೆ ಸತತ ಆಕ್ರಮಣ ನಡೆದಾಗ್ಯೂ ಚಳವಳಿ ಪಾಳೆಗಾರಿಕೆ ಭೂಮಾಲಕತವ ರದ್ದು ಮಾಡುವ ಚಳವಳಿಯಾಗಿ ಮುಂದುವರಿಯಿತು. ತೆಲಂಗಾಣ ಹೋರಾಟದ ಈ ಮೊದಲನೇ ಘಟ್ಟದಲ್ಲಿ ೧೯೪೬ ಜುಲೈನಿಂದ ೧೯೪೭ ಆಗಸ್ಟ್‌ವರೆಗೆ ಪ್ರತಿರೋಧಕ್ಕೆ ಮದ್ದು ಗುಂಡುಗಳ ಶಸ್ತ್ರಾಸ್ತ್ರಗಳನ್ನು ಕೊನೆಯ ಒಂದೆರಡು ತಿಂಗಳಲ್ಲಿ, ಅದರಲ್ಲಿಯೂ ಸಣ್ಣ ಪ್ರಮಾಣದಲ್ಲಿ ಬಳಸಲಾಯಿತು. ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ಕಾರ್ಯಾಚರಣೆ ಪುರುಷರೊಡನೆ ಕೆಲಸ ಮಾಡಿದರು. ಈ ಅವಧಿಯಲ್ಲಿ ಹೊಸ ಜನಪದ ಹಾಡುಗಳು ಇತರ ಜಾನಪದ ಕಲೆಗಳನ್ನು ಬೆಳೆಸಿದ ದೊಡ್ಡ ಸಾಂಸ್ಕೃತಿಕ ಚಳವಳಿ ಸಹ ಆರಂಭವಾಯಿತು. ಈ ಸಾಂಸ್ಕೃತಿಕ ಚಳವಳಿ ಪಾರಂರಿಕ ಜಾನಪದ ರೂಪಗಳಾದ ‘ಬುರ್ರಕಥಾ’, ‘ಗೊಲ್ಲ ಸುದ್ದುಲು’ ಮುಂತಾದವುಗಳನ್ನು ಸೃಜನಾತ್ಮಕವಾಗಿ ಬಳಿತು. ಹಲವು ‘ಜನತಾ ಕವಿ’ಗಳು ಹುಟ್ಟಿಕೊಂಡರು.

ಸಶಸ್ತ್ರ ವಿಮುಕ್ತಿ ಹೋರಾಟ

ಆಗಸ್ಟ್‌೧೯೪೭ರಲ್ಲಿ ರಾಷ್ಟ್ರಮಟ್ಟದಲ್ಲಿ ನೆಹರೂ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಹಸ್ತಾಂತರವಾಯಿತು. ಹೆಚ್ಚಿನ ಸ್ಥಳೀಯ ರಾಜರುಗಳು ಅಗಾಧ ರಾಜಧನ ಪಡೆಯುವ ಭರವಸೆಯ ಮೇಲೆ ಭಾರತದ ಒಕ್ಕೂಟಕ್ಕೆ ಸೇರಲು ಒಪ್ಪಿದರು. ಹೈದರಾಬಾದ್‌ನ ನಿಜಾಮ ಇದಕ್ಕೆ ನಿರಾಕರಿಸಿದ್ದರಿಂದ ಹೈದರಾಬಾದ್‌ನ ರಾಜಕೀಯ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಉಂಟಯಿತು. ಹೈದರಾಬಾದ್‌ನ ನಿಜಾಮನ ಮೇಲೆ ಸಾರ್ವಜನಿಕ ಒತ್ತಡ ತರಲು ಕಾಂಗ್ರೆಸ್‌ ರಾಜ್ಯ ಶಾಖೆಯ ಮೂಲಕ ಚಳವಳಿ ನಡೆಸಲು ತೀರ್ಮಾನಿಸಿತು. ಈ ಚಳವಳಿಗೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳ ಬೆಂಬಲವಿತ್ತು. ಇದರಿಂದಾಗ ತೆಲಂಗಾಣ ಹೋರಾಟದ ಬೆಳವಣಿಗೆಗೆ ಹೊಸ ಅವಕಾಶ ಸಿಕ್ಕಿದಂತಾಯಿತು. ಕಮ್ಯುನಿಸ್ಟ್‌ಪಕ್ಷ ಮತ್ತು ಸಂಘಂ ಸ್ವಾಭಾವಿಕವಾಗಿ ಈ ಆಂದೋಲನದಲ್ಲಿ ಭಾಗವಹಿಸಲು ನಿರ್ಧರಿಸಿತು.

ಈಗಾಗಲೇ ಪಾರ್ಟಿ ಮತ್ತು ಸಂಘಂ ಇವೆರಡು ತೆಲಂಗಾಣದಲ್ಲಿ ದೊಡ್ಡ ರಾಜಕೀಯ ಶಕ್ತಿಯಾಗಿದ್ದರಿಂದ ಈ ಆಂದೋಲನದಲ್ಲಿ ಮುಖ್ಯ ಧ್ವನಿ ಇವರದ್ದೇ ಆಯಿತು. ಶಾಲಾ ಕಾಲೇಜುಗಳಿಗೆ ಬಹಿಷ್ಕಾರ, ಹೈದರಾಬಾದ್ ಭಾರತದ ಗಡಿ ಉಲ್ಲಂಘನೆ, ಭಾರತದ ಒಕ್ಕೂಟದೊಂದಿಗೆ ಹೈದರಾಬಾದ್‌ನ ವಿಲೀನ ಹೈದರಾಬಾದ್ ರಾಜ್ಯ ವಿಸರ್ಜಿಸಿ ಭಾಷಾವಾರು ರಾಜ್ಯಗಳಾಗಿ ಪುನರ್ವಿಂಗಡಣೆ ಮುಂತಾದವು ಈ ಚಳವಳಿಯ ಮುಖ್ಯ ಅಂಶಗಳಾದವು. ಸಾಂಸ್ಕೃತಿಕ ಚಳವಳಿ ಇನ್ನೂ ಎತ್ತರಕ್ಕೆ ಏರಿತು. ಪ್ರಜಾ ನಾಟ್ಯ ಮಂಡಳಿ ಎಂಬ ಹೊಸ ಸಾಂಸ್ಕೃತಿಕ ಸಂಘಟನೆ ಹೊಮ್ಮಿತು. ನಾಟ್ಯ ಮಂಡಳಿಯ ಸಂಚಾರಿ ಸ್ಕ್ವಾಡುಗಳ ಹಾಡುಗಳು, ನಾಟಕಗಳು ಜನಪ್ರಿಯವಾದವು. ‘ಮಾ ಭೂಮಿ’ ಎಂಬ ನಾಟಕ ಅತ್ಯಂತ ಜನಪ್ರಿಯವಾಯಿತು. ೧೯೮೦ರ ದಶಕದಲ್ಲಿ ಇದೇ ಹೆಸರಿನ ಚಲನಚಿತ್ರ ಸಹ ಮಾಡಲಾಗಿದೆ. ನಾಟ್ಯ ಮಂಡಳಿಯ ಪ್ರದರ್ಶನದ ನಂತರ ಹೋರಾಟಕ್ಕೆ ಹಣ ಸಂಗ್ರಹ ಸಹ ಹೋರಾಟದ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಘಟ್ಟದಲ್ಲಿ ಹೋರಾಟಕ್ಕೆ ಹೈದರಾಬಾದು ಗಡಿಯಾಚೆಯಿಂದ ಬೆಂಬಲ ಹಲವು ರೂಪ ಹಣ, ಶಸ್ತ್ರಾಸ್ತ್ರ, ಆಹಾರ, ಕಾರ್ಯಕರ್ತರುಗಳಲ್ಲಿ ಹರಿದು ಬಂತು. ಮುಖ್ಯವಾಗಿ ಮದ್ರಾಸು ರಾಜ್ಯದ ಭಾಗವಾಗಿದ್ದ ಗಡಿಯಲ್ಲಿದ್ದ ಆಂಧ್ರ ಜಿಲ್ಲೆಗಳಿಂದ.

ಈ ಆಂದೋಲನವನ್ನು ಕಾಂಗ್ರೆಸ್ ಜೊತೆ ಜಂಟಿ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಪೂರ್ಣ ಪ್ರಮಾಣದ ಪಾಳೆಗಾರಿ ವಿರೋಧಿ, ಸಾಮ್ರಾಜ್ಯಶಾಹಿ ವಿರೋಧಿ ಚಳವಳಿಯಾಗಿ ಮಾರ್ಪಡಿಸಲಾಯಿತು. ಈ ಎರಡನೆಯ ಘಟ್ಟದ ಚಳವಳಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬಹಳ ಆಳವಾಗಿ ಹಾಗೂ ವ್ಯಾಪಕವಾಗಿ ರಾಜ್ಯದ ತುಂಬೆಲ್ಲಾ ಹರಡಿತು. ಇನ್ನು ಹೆಚ್ಚು ಜನ ವಿಭಾಗಗಳು ಚಳವಳಿಯಲ್ಲಿ ಭಾಗವಹಿಸುವಂತಾಯಿತು. ಇದರಿಂದ ಗಾಬರಿಗೊಂಡ ನಿಜಾಮ ಸರ್ಕಾರ ಕಾಸಿಂ ರಿಜವೀ ಎಂಬುವವನ ನಾಯಕತ್ವದಲ್ಲಿ ಮುಸ್ಲಿಮ್ ಮತಾಂಧ ರಜಾಕಾರರ ಪಡೆಯೊಂದನ್ನು ಕಟ್ಟಿ ಪೊಲೀಸ್ ಮಿಲಿಟರಿ ಬೆಂಬಲದೊಂದಿಗೆ ಮೂಲೆ ಮೂಲೆಗೂ ಕಳುಹಿಸಿತು. ರಾಜಕಾರರು ರಾಜ್ಯದಾದ್ಯಂತ ಸಾಮೂಹಿಕ ಕೊಲೆ, ಲೂಟಿ, ಮಾನಭಂಗ, ಅಗ್ನಿಸ್ಪರ್ಶ ಮುಂತಾದ ಅತ್ಯಾಚಾರಗಳಲ್ಲಿ ತೊಡಗಿದರು. ಇವರ ವಿರುದ್ಧ ಮದ್ದು ಗುಂಡುಗಳ ಶಸ್ತ್ರಾಸ್ತ್ರ ಪ್ರಯೋಗ ಅನಿವಾರ್ಯವಾಯಿತು.

ಪಾರ್ಟಿ ಮತ್ತು ಆಂಧ್ರ ಮಹಾಸಭಾ ಹತ್ತು ಸಾವಿರ ಗ್ರಾಮ ಸ್ಕ್ವಾಡುಗಳು ಮತ್ತು ಎರಡು ಸಾವಿರ ಗೆರಿಲ್ಲಾ ಸ್ಕ್ವಾಡುಗಳನ್ನು ಸಂಘಟಿಸಿತು. ಈ ಸ್ಕ್ವಾಡುಗಳು ಬಂದೂಕುಗಳನ್ನು ಹೊಂದಿದ್ದವು. ಗ್ರಾಮ ಸ್ಕ್ವಾಡುಗಳು ಹಳ್ಳಿಗಳಲ್ಲಿ ಇದ್ದು ಗ್ರಾಮ ರಕ್ಷಣೆ ಮಾಡಿದರೆ, ಗೆರಿಲ್ಲಾ ಸ್ಕ್ವಾಡುಗಳು ಪ್ರದೇಶದಿಂದ ಪ್ರದೇಶಕ್ಕೆ ಚಲಿಸುತ್ತ ಪೊಲೀಸು ಮತ್ತು ಮಿಲಿಟರಿ ಮೇಲೆ ಅನಿರೀಕ್ಷಿತ ದಾಳಿ ನಡೆಸುತ್ತಾ ಗೆರಿಲ್ಲಾ ಹೋರಾಟ ನಡೆಸುತ್ತಿದ್ದವು. ಈ ಸ್ಕ್ವಾಡುಗಳ ಕಾರ್ಯಾಚರಣೆಗೆ ಜನಸಮೂಹ ಸಹಾಯ ಮಾಡುತ್ತಿತ್ತು. ಜನರೇ ಹಲವು ಕಡೆ ಅಸಾಂಪ್ರದಾಯಿಕ ಕ್ರಮಗಳಿಂದ ಪೊಲೀಸು, ಮಿಲಿಟರಿಗಳನ್ನು ಹಿಮ್ಮೆಟ್ಟಿಸುತ್ತಿದ್ದರು. ರಾತ್ರಿ ಕಾಲದಲ್ಲಿ ರಜಾಕಾರ, ಪೊಲೀಸು ಅಥವಾ ಮಿಲಿಟರಿ ಪಡೆಗಳು ವಿಶ್ರಮಿಸುತ್ತಿದ್ದಾಗ ಹತ್ತಿರದ ಹಳ್ಳಿಗಳಲ್ಲಿ ಒಂದು ದೊಡ್ಡ ಗುಂಪು ಹೋಗಿ ಇಡೀ ಕ್ಯಾಂಪ್‌ಗೆ ಬೆಂಕಿಯಿಡುವುದು ಈ ಘಟ್ಟದಲ್ಲಿ ಜನರೇ ಕಂಡುಕೊಂಡ ಇಂತಹ ಒಂದು ಕ್ರಮ.

ಮೂರು ಸಾವಿರ ಹಳ್ಳಿಗಳಲ್ಲಿ ಗ್ರಾಮರಾಜ್ಯ

೧೯೪೭ ಆಗಸ್ಟ್‌ನಿಂದ ೧೯೪೮ ಸೆಪ್ಟೆಂಬರ್‌ವರೆಗೆ ಇದ್ದ ಈ ಕಾಲಘಟ್ಟದಲ್ಲಿ ಸಶಸ್ತ್ರ ರೈತರು ಸಾಧ್ಯವಿರುವ ಎಲ್ಲ ಪಾಳೇಗಾರಿ ವಿರೋಧಿ ಕ್ರಮಗಳನ್ನು ಜಾರಿಗೆ ತಂದರು. ಬಲಾತ್ಕಾರದ ಬಿಟ್ಟಿ ದುಡಿಮೆ, ಒಕ್ಕಲೆಬ್ಬಿಸುವಿಕೆ ಇವು ಸಂಪೂರ್ಣವಾಗಿ ನಿಂತು ಹೋದವು. ಜಮೀನುದಾರರಿಗೆ ಕೊಡದಿದ್ದ ಗೇಣಿ ಮತ್ತು ಕಂದಾಯಗಳಲ್ಲಿ ಕಡಿತದಿಂದ ಆರಂಭವಾಗಿ ಪೂರ್ಣವಾಗಿ ನಿಲ್ಲಿಸುವುದರಲ್ಲೂ ಚಳವಳಿ ಸಫಲವಾಯಿತು. ಗೇಣಿಗೆ ಪಡೆದುಕೊಂಡಿದ್ದ ಜಮೀನನ್ನು ರೈತರು ಉಳಿಸಿಕೊಳ್ಳುವಂತಾಯಿತು. ಭೂಮಾಲೀಕರು ಕಸಿದುಕೊಂಡಿದ್ದ ರೈತರ ಜಮೀನುಗಳನ್ನು ಅವರಿಗೆ ವಾಪಸ್ಸು ಮಾಡಲಾಯಿತು. ಭೂಹಿಡುವಳಿ ಮಿತಿಯನ್ನು ಕಡ್ಡಾಯವಾಗಿ ಪೂರ್ಣವಾಗಿ ಜಾರಿಗೆ ತರಲಾಯಿತು. ನೂರು ಎಕರೆ ಒಂ ಮತ್ತು ಹತ್ತು ಎಕರೆ ನೀರಾವರಿ ಜಮೀನು ಇದು ಪರಮಾವಧಿ ಮಿತಿಯಾಗಿತ್ತು. ಹೀಗೆ ಸಿಕ್ಕಿದ ಹೆಚ್ಚುವರಿ ಜಮೀನು ಮತ್ತು ಸರ್ಕಾರದ ಹಾಗೂ ಜಮೀನುದಾರರು ಖಾಲಿ ಬಿಟ್ಟಿದ್ದ ಜಮೀನು ಎಲ್ಲ ಸೇರಿ ಸುಮಾರು ಹತ್ತು ಲಕ್ಷ ಎಕರೆ ಜಮೀನನ್ನು ರೈತರಲ್ಲಿ ಹಂಚಲಾಯಿತು. ಈ ಭೂಸುಧಾರಣೆ, ಭೂಹಿಡುವಳಿಯ ಮಿತಿಯ ಕ್ರಮಗಳನ್ನು ಕಾರ್ಯಗತಗೊಳಿಸಿದ್ದು ರೈತ ಸಮಿತಿಗಳು ಎನ್ನುವುದು ಈ ಚಳವಳಿಯ ವಿಶೇಷ.

ಎಲ್ಲ ಕಾರ್ಯಕ್ರಮಗಳಲ್ಲೂ ರೈತರನ್ನು ಮತ್ತು ಇತರ ಜನ ವಿಭಾಗಗಳನ್ನು ತೊಡಗಿಸಲಾಯಿತು. ಕುಖ್ಯಾತ ಜಮೀನುದಾರರ ಭಾರಿ ದವಸ ಧಾನ್ಯಗಳ ಕಣಜವನ್ನು ಸ್ವಾಧೀನಪಡಿಸಿಕೊಂಡು ಹಳ್ಳಿ ಬಡವರಿಗೆ ಹಂಚಲಾಯಿತು. ಕೃಷಿ ಕಾರ್ಮಿಕರಿಗೆ ಕೂಲಿ ಏರಿಸಲಾಯಿತು ಹಾಗೂ ಅದು ಜಾರಿಗೆ ಬರುವಂತೆ ನೋಡಿಕೊಳ್ಳಲಾಯಿತು. ಸುಮಾರು ಹದಿನಾರು ಸಾವಿರ ಚದರ ಮೈಲಿ ಹಾಗೂ ಮೂವತ್ತು ಲಕ್ಷ ಜನಸಂಖ್ಯೆಯಿರುವ ಮೂರು ಜಿಲ್ಲೆಗಳಾದ ನಾಲ್ಗೊಂಡ, ವಾರಂಗಲ್ ಮತ್ತು ಖಮ್ಮಂಗಳ ಮೂರು ಸಾವಿರ ಹಳ್ಳಿಗಳಲ್ಲಿ ಈ ಒಂದೂವರೆ ವರ್ಷಗಳ ಅವಧಿಯಲ್ಲಿ ರೈತ ಸಮಿತಿಗಳೇ ಆಡಳಿತವನ್ನು ನಡೆಸಿದವರು. ಗ್ರಾಮ ಪಂಚಾಯತ್‌ಗಳ ಮೇಲೆ ಆಧಾರಿತ ಗ್ರಾಮ ರಾಜ್ಯ ಸ್ಥಾಪಿಸಲಾಯಿತು. ಆ ಎಲ್ಲ ಕ್ರಮಗಳಿಂದ ಮಧ್ಯಯುಗದ ಪಾಳೇಗಾರಿಯ ವ್ಯವಸ್ಥೆಯ ಮೇಲೆ ಆಧಾರಿತವಾದ ನಿಜಾಮನ ಆಡಳಿತ ಬುಡಸಹಿತವಾಗಿ ನಡುಗಹತ್ತಿತು.