ಪೊಲೀಸ್ ಕಾರ್ಯಾಚರಣೆ

೧೯೪ರಲ್ಲಿ ಕೇಂದ್ರದಲ್ಲಿ ಬಂದ ಕಾಂಗ್ರೆಸ್-ಲೀಗ್ ಸರ್ಕಾರಕ್ಕಾಗಲಿ, ೧೯೪೭ ರಲ್ಲಿ ಬಂದ ಕಾಂಗ್ರೆಸ್‌ ಸರ್ಕಾರಕ್ಕಾಗಲಿ ನಿಜಾಮನ ವಿರುದ್ಧ ಕಷ್ಟಕರ ಪರಿಸ್ಥಿತಿಯಲ್ಲಿ ಹೋರಾಡುತ್ತಿದ್ದ ರೈತರಿಗೆ ಸಹಾಯ ಮಾಡುವುದು ಅಗತ್ಯವೆನಿಸಲಿಲ್ಲ. ಬದಲಾಗಿ ಕಂಗ್ರೆಸ್‌ಸರ್ಕಾರ ನಿಜಾಮ ಆತನ ‘‘ಸ್ವಾತಂತ್ರ ಹೈದರಾಬಾದು’ ಯೋಜನೆಯನ್ನು ‘ಅಂತಾರಾಷ್ಟ್ರೀಯಗೊಳಿಸುವುದನ್ನು’ ತಡೆಯಲು ಓಲೈಸುವುದರಲ್ಲಿ ಮಗ್ನವಾಗಿತ್ತು. ಈ ಓಲೈಸುವಿಕೆಯ ಭಾಗವಾಗಿ ನವಂಬರ್ ೧೯೪೭ರಲ್ಲಿ ನಿಜಾಮನ ಜತೆ ‘ತಟಸ್ಥ ಒಪ್ಪಂದ’…… ಮಾಡಿಕೊಂಡಿತು. ಈ ಒಪ್ಪಂದದ ಪ್ರಕಾರ ಹೈದರಾಬಾದಿನ ‘ಆಂತರಿಕ ವ್ಯವಹಾರ’ಗಳಲ್ಲಿ ಭಾರತ ಸರ್ಕಾರ ತಲೆಹಾಕುವುದಿಲ್ಲ. ಒಂದು ವರ್ಷದ ನಂತರ ಹೈದರಾಬಾದಿನ ಸ್ವಾತಂತ್ರ್ಯದ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಒಪ್ಪಂದಕ್ಕೆ ಬರಲಾಗುವುದು. ಇದಕ್ಕೆ ಬದಲಾಗಿ ನಿಜಾಮ ಬೇರೆ ದೇಶಗಳಲ್ಲಿ ರಾಯಭಾರಿಗಳನ್ನು ನೇಮಿಸಬಾರದು. ಆದರೆ ‘ಏಜೆಂಟ್ ಜನರಲ್’ಗಳನ್ನು ನೇಮಿಸಬಹುದು. ಇದು ಬರಿಯ ಹೆಸರಿನ ಹುಸಿ ಗುದ್ದಾಟ ಆಗಿತ್ತು. ಈ ಒಪ್ಪಂದ ಓಲೈಸುವ ಬದಲಾಗಿ ನಿಜಾಮನಿಗೆ ಕಾಂಗ್ರೆಸ್‌ ಸರ್ಕಾರ ಶರಣಾಗಿತ್ತು ಎಂದೆನ್ನುವುದುಂಟು.

ಇದು ನಿಜಾಮನಿಗೆ ಒಂದು ವರ್ಷದ ಗದ್ದಿಗೆ ಉಳಿಸಿಕೊಳ್ಳುವ ಮತ್ತು ಅದನ್ನು ಶಾಶ್ವತಗೊಳಿಸುವ ಸುವರ್ಣ ಅವಕಾಶ ಒದಗಿಸಿತು. ಈ ಅವಕಾಶ ಬಳಸಿ ನಿಜಾಮ ಪಾಕಿಸ್ತಾನ, ಬ್ರಿಟನ್‌ಗಳ ಸಹಕಾರದಿಂದ ತನ್ನ ಸೈನ್ಯವನ್ನು ಆಧುನಿಕಗೊಳಿಸಲು ಆರಂಭಿಸಿದ. ವಿದೇಶಗಳಲ್ಲಿ ‘ಏಜೆಂಟ್‌ ಜನರಲ್‌’ಗಳನ್ನು ನೇಮಿಸಿ ಸ್ವತಂತ್ರ ದೇಶವಾಗಿರುವ ಪೋಸು ಹೊಡೆದ. ರೈತರ ಹೋರಾಟವನ್ನು ದಮನ ಮಾಡಲು ಇನ್ನಷ್ಟು ಸಂಪನ್ಮೂಲಗಳನ್ನು ಹರಿಯಬಿಟ್ಟ. ಕೆ.ಎಂ. ಮುನ್ಶಿ ಅವರನ್ನು ಭಾರತದ ‘ಏಜೆಂಟ್‌ ಜನರಲ್‌’ ಆಗಿ ನೇಮಿಸುವ ಮೂಲಕ, ಕಾಂಗ್ರೆಸ್‌ ಸರ್ಕಾರ ನಿಜಾಮನ ‘ಸ್ವತಂತ್ರ ಹೈದರಾಬಾದ್’ಗೆ ಮಾನ್ಯತೆ ಕೊಟ್ಟಿತು. ಹೀಗಾಗಿ ಹೈದರಾಬಾದಿನಲ್ಲಿದ್ದ ಭಾರತದ ಸೈನ್ಯದ ತುಕಡಿಗಳನ್ನು ವಾಪಸು ಪಡೆಲಾಯಿತು. ಕಮ್ಯುನಿಸ್ಟ್‌ ಪಕ್ಷದ ಮೇಲೆ ನಿಷೇಧ ಹೇರಲಾಯಿತು. ತೆಲಂಗಾಣ ರೈತರ ಸಶಸ್ತ್ರ ಹೋರಾಟ ಅಲ್ಲದಿದ್ದರೆ ನಿಜಾಮನ ‘ಸ್ವತಂತ್ರ ಹೈದರಾಬಾದು’ ಸ್ವತಂತ್ರ ಭಾರತದ ದೇಹದ ಮೇಲೆ ಶಾಶ್ವತ ‘‘ಹುಣ್ಣು’ ಆಗಿ ಇರುತ್ತಿತ್ತು. ಬ್ರಿಟಿಷ್‌  ಮತ್ತು ಇತರ ಸಾಮ್ರಾಜ್ಯಶಾಹಿಗಳಿಗೆ ಸ್ವತಂತ್ರ ಭಾರತವನ್ನು ಮಣಿಸಲು ‘ಉತ್ತಮ ಸಲಕರಣೆ’ ಆಗಿ ಇರುತ್ತಿತ್ತು.

೧೯೪೮ರ ಮಧ್ಯದ ಹೊತ್ತಿಗೆ ನಿಜಾಮನ ರಜಾಕಾರರ ಪಡೆ, ಸೈನ್ಯ, ಪೊಲೀಸು ಪಡೆಗಳ ಮೇಳೆ ದಿನದಿಂದ ದಿನಕ್ಕೆ ಹೊಸ ವಿಜಯಗಳನ್ನು ಪಡೆಯುತ್ತಾ ತೆಲಂಗಾಣ ರೈತರ ಸಶಸ್ತ್ರ ಹೋರಾಟ ಮುನ್ನಡೆದಿತ್ತು. ೨೩ ಜಿಲ್ಲೆಗಳಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಆಂಧ್ರ ಮಹಾ ಸಭಾ ರೈತ ಸಮಿತಿಗಳ ಮೂಲಕ ರಾಜಕೀಯ ಆಡಳಿತ ನಡೆಸುತ್ತಿತ್ತು. ಇದು ಇನ್ನು ಹಲವು ಜಿಲ್ಲೆಗಳಲ್ಲಿ ಹರಡುವ ಸಂಭವವಿತ್ತು. ಆದರೆ, ತೆಲಂಗಾಣ ರೈತರ ಹೋರಾಟ ನಿಜಾಮನ ಮೇಲೆ ಪೂರ್ಣ ವಿಜಯ ಸಾಧಿಸುವ ಸೂಚನೆ ಕಂಡುಬಂದಾಗ ಕಾಂಗ್ರೆಸ್‌ ಸರ್ಕಾರ ಗಾಬರಿಗೊಂಡು ‘ಹೈದರಾಬಾದ್‌ನ ಜನರ ಸಂಕಷ್ಟಗಳನ್ನು ಮನಗಂಡು’ ಭಾರತದ ಸೈನ್ಯ ಪಡೆಗಳಿಗೆ ಹೈದರಾಬಾದು ರಾಜ್ಯದೊಳಗೆ ನುಗ್ಗಿ ವಶಪಡಿಸಿಕೊಳ್ಳಲು ಆಜ್ಞೆ ಮಾಡಿತು. ಇದನ್ನು ಕೇಂದ್ರ ಸರ್ಕಾರ ‘ಪೊಲೀಸ್ ಕಾರ್ಯಾಚರಣೆ’ ಎಂದು ಕರೆಯಿತು. ತೆಲಂಗಾಣ ರೈತರ ಹೋರಾಟದಿಂದ ಆಗಲೇ ಸುಸ್ತಾಗಿದ್ದ ನಿಜಾಮನ ಸೈನ್ಯ ಐದು ದಿನಗಳಲ್ಲೆ ಭಾರತದ ಸೈನ್ಯಗಳಿಗೆ ಶರಣಾಯಿತು.

ಆದರೆ ಮುಂದಿನ ಒಂದು ವಾರದೊಳಗೆ ‘ಪೊಲೀಸು ಕಾರ್ಯಾಚರಣೆ’ಯ ನಿಜವಾದ ಬಣ್ಣ ಬಯಲಾಯಿತು. ಭಯಾನಕ ಅಪರಾಧಗಳೆಸಗಿದ್ದ ನಿಜಾಮನ ಅಧಿಕಾರಿಗಳಿಗಾಗಲಿ, ರಜಾಕಾರರಿಗಾಗಲಿ ಹೆಚ್ಚಿನ ಶಿಕ್ಷೆಯೇನು ಆಗಲಿಲ್ಲ. ಅದರ ಬದಲು ಸೈನ್ಯ ತೆಲಂಗಾಣ ರೈತರ ಚಳವಳಿಯ ವ್ಯವಸ್ಥಿತ ದಮನಕ್ಕೆ ತೊಡಗಿತು. ದೇಶಮುಖ್‌ಗಳು ಜಮೀನುದಾರರುಗಳು ಸೈನ್ಯದ ಸಹಾಯದಿಂದ ತಮ್ಮ ಗ್ರಾಮಗಳಿಗೆ ಮರಳಿ ತಮ್ಮ ಜಮೀನು ಹಾಗೂ ಅಧಿಕಾರಗಳನ್ನು ಪುನಃ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಸೈನ್ಯವು ಕಮ್ಯುನಿಸ್ಟ್ ಮತ್ತು ಸಂಘಂ ಕಾರ್ಯಕರ್ತರನ್ನು ಶೋಧಸಿ ಬಂಧಿಸಿತು. ರಾಜಾಜಿ ಮತ್ತು ಗೃಹ ಮಂತ್ರಿ ವಲ್ಲಭಬಾಯಿ ಪಟೇಲ್‌ ‘ರಜಾಕಾರರೊಂದಿಗೆ ಸೇರಿ ಜನರಿಗೆ ಉಪಟಳ ಕೊಡುತ್ತಿರುವ’ ಕಮ್ಯುನಿಸ್ಟ್‌ರನ್ನು ಹತ್ತಿಕ್ಕುವುದು ಪೊಲೀಸು ಕಾರ್ಯಾಚರಣೆಯ ಉದ್ದೇಶವೆಂದು ಬಹಿರಂಗವಾಗಿಯೇ ಹೇಳಿದರು. ಸುಮಾರು ೫೦ ಸಾವಿರ ಸೈನಿಕರನ್ನು ಕಳಿಸಲಾಗಿತ್ತು. ಹಳ್ಳಿಗಳಲ್ಲಿ ಮಿಲಿಟರಿ ಕ್ಯಾಂಪ್‌ಗಳನ್ನು ಸ್ಥಾಪಿಸಲಾಯಿತು. ಸಾಮೂಹಿಕ ಲೂಟಿ, ಕೊಲೆ, ಮಾನಭಂಗ, ಚಿತ್ರಹಿಂಸೆ ಮುಂತಾದ ಅತ್ಯಾಚಾರಗಳನ್ನು ‘ಸ್ವತಂತ್ರ’ ಭಾರತದ ಸೈನ್ಯ ತೆಲಂಗಾಣ ಪ್ರಜೆಗಳ ಮೇಲೆ ಮಾಡಿತು. ಇಷ್ಟೆಲ್ಲ ಸತತ ಹಾಗೂ ವ್ಯವಸ್ಥಿತ ದಮನದ ನಡುವೆ ಹಳೆಯ ಪ್ರದೇಶಗಳಲ್ಲಿ ಪಕ್ಷ ಹಾಗೂ ಸಂಘಂ ಸಾಕಷ್ಟು ಹತೋಟಿಯಲ್ಲಿತ್ತು. ಇನ್ನು ಹಲವು ಜಿಲ್ಲೆಗಳಿಗೆ ಚಳವಳಿ ಹರಡಿತು.

ಹೋರಾಟ ಮುಂದುವರಿಕೆ

ಭಾರತೀಯ ಸೈನ್ಯ ದೊಡ್ಡ ಪ್ರಮಾಣದಲ್ಲಿ ತೆಲಂಗಾಣ ರೈತರ ಮೇಲೆ ದಾಳಿ ಮಾಡಲಾರಂಭಿಸಿದಾಗ, ಮುಂದಿನ ಹಾದಿಯ ಬಗ್ಗೆ ಹೋರಾಟದ ನಾಯಕತ್ವದ ಒಳಗೆ ತೀವ್ರ ಚರ್ಚೆ ನಡೆಯಿತು. ಬಹಳ ಚರ್ಚೆ, ಭಿನ್ನಾಭಿಪ್ರಾಯದ ನಂತರ ಭಾರತದ ಪಡೆಗಳ ವಿರುದ್ಧ ಶಸಸ್ತ್ರ ಹೋರಾಟ ಮುಂದುವರಿಸಲು ನಿರ್ಧರಿಸಲಾಯಿತು. ೨೩ ವರ್ಷ ಸತತ ರೈತ ಹೋರಾಟದ ಫಲವಾದ ಜಮೀನು ಮತ್ತು ಇತರ ಪ್ರಜಾಸತ್ತಾತ್ಮಕ ಹಕ್ಕು ಸ್ವಾತಂತ್ರಗಳನ್ನು ಆರ್ಥಿಕ ಸವಲತ್ತುಗಳನ್ನು ಉಳಿಸಿಕೊಳ್ಳುವುದು ಅಗತ್ಯ. ಭಾರತ ಸರ್ಕಾರ ಹೋರಾಟದ ಸಾಧನೆಗಳನ್ನು ಉಳಿಸಿಕೊಳ್ಳಲು ಬಿಡುವುದಿಲ್ಲ. ಅದು ಪಾಳೆಯಗಾರಿಕೆ ವ್ಯವಸ್ಥೆ ಜತೆ ರಾಜಿ ಮಾಡಿಕೊಳ್ಳುತ್ತದೆ. ತೆಲಂಗಾಣದಲ್ಲಿ ಪಳೆಯಗಾರಿಕೆ ವ್ಯವಸ್ಥೆ ಪುನಃ ಸ್ಥಪನೆ ಆಗದಂತೆ ನೋಡಿಕೊಳ್ಳುವುದು ಅಗತ್ಯ. ಮಾತ್ರವಲ್ಲ ಅದನ್ನು ಸಾಧಿಸಲು ಇಡೀ ದೇಶದಲ್ಲಿ ಪಾಳೆಯಗಾರಿಕೆ ವ್ಯವಸ್ಥೆ ನಾಶ ಮಾಡುವತ್ತ ಹೋರಾಟ ಮುಂದುವರೆಸಬೇಕು. ಇದು ನಿಧಾರದ ಹಿಂದೆ ಇದ್ದ ಆಶಯ.

ರೈತರು ಮತ್ತು ಗೆರಿಲ್ಲಾ ಸ್ಕ್ವಾಡುಗಳು ನಾಯಕತ್ವದ ನಿರ್ಣಯ ಅನುಮೋದಿಸಿ ೧೯೪೮-೫೧ರ ವರೆಗೆ ವೀರಾವೇಶದಿಂದ ಹೋರಾಡಿದರು. ಆದರೆ ಕಮ್ಯುನಿಸ್ಟ್ ಮತ್ತು ಸಂಘಂ ಕಾರ್ಯಕರ್ತರನ್ನು ಕಂಡ ಕಂಡಲ್ಲಿ ಬಂಧಿಸಲಾಗುತ್ತಿತ್ತು ಅಥವಾ ಕೊಲ್ಲಲಾಗುತ್ತಿತ್ತು. ಈ ಮಧ್ಯೆ ೧೯೫೦ರಲ್ಲಿ ನಿಜಾಮನನ್ನೇ ರಾಜ್ಯದ ರಾಜಪ್ರಮುಖನನ್ನಾಗಿ ನೇಮಿಸಲಾಯಿತು. ದೊಡ್ಡ ಪ್ರಮಾಣದಲ್ಲಿ ನುರಿತ ಕಾರ್ಯಕರ್ತರ ಹಾನಿಯಿಂದಾಗಿ ಸಶಸ್ತ್ರ ಹೋರಾಟವನ್ನು ಮುಂದುವರೆಸುವುದು ೧೯೫೧ರ ಸುಮಾರಿಗೆ ಕಷ್ಟವಾಗುತ್ತಾ ಹೋಯಿತು.

ಭಾರತದ ಜತೆ ಹೈದರಾಬಾದ್‌ನ ವಿಲೀನಿಕರಣವು, ಹೊಸ ಶಕ್ತಿ ಮತ್ತು ರಾಜಕೀಯ ಸಂಬಂಧಗಳನ್ನು ಉಂಟು ಮಾಡಿದ್ದು ಹೋರಾಟಕ್ಕೆ ಪ್ರತಿಕೂಲವಾಯಿತು. ಹೊಸ ಹೈದರಾಬಾದು ಸರ್ಕಾರ ಎರಡು ಕಾನೂನುಗಳನ್ನು ತಂದಿತು. ಒಂದು ಜಾಗೀರು ವ್ಯವಸ್ಥೆಯನ್ನು ರದ್ದು ಮಾಡಿತು. ಇನ್ನೊಂದು ದೇಶಮುಖರ ಜಮೀನು ಉಳುವ ಗೇಣಿದಾರರಿಗೆ ಜಮೀನು ಹಕ್ಕನ್ನು ಕೊಟ್ಟಿತು. ಇವೆರಡೂ ಕಾನೂನುಗಳು ಹೋರಾಟ ಆಗಲೇ ಸಾಧಿಸಿದ್ದ ಸಾಧನೆಗಳನ್ನು ಕನಿಷ್ಟ ಉಳಿಸುವ ಭರವಸೆ ನೀಡಿದವು…. ಮೇಲ್ನೋಟಕ್ಕಾದರೂ. ಆದರೆ ಮುಂದೆ ಕಾಂಗ್ರೆಸ್ ಭೂಸುಧಾರಣೆ ಕಾನೂನುಗಳ ಸಾಮಾನ್ಯ ಅಂಶವಾದ ಉದ್ದೇಶಪೂರ್ವಕ ಹುಳುಕುಗಳ ಮೂಲಕ ಮತ್ತು ಜಮೀನುದಾರರು ಮತ್ತೆ ಪಡೆದ ರಾಜಕೀಯ ಶಕ್ತಿಯ ಸಂದರ್ಭದಲ್ಲಿ ಈ ಕಾನೂನುಗಳು ಬರಿಯ ಕಾಗದದ ಮೇಲೆ ಉಳಿಯುವುವು ಆಗಿದ್ದವು. ಆದರೆ, ಇವು ಕೆಲವು ಜನವಿಭಾಗಗಳಾದರೂ ಹೋರಾಟದ ಮೊನಚು ಕಳೆದುಕೊಳ್ಳುವಂತೆ ಮಾಡಿದವು. ಈ ನಡುವೆ ೧೯೫೦ರಲ್ಲಿ ಭಾರತದ ಹೊಸ ಸಂವಿಧಾನ ಅಂಗೀಕರಿಸಲಾಗಿದ್ದು, ೧೯೫೧ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಘೋಷಿಸಲಾಯಿತು.

ಭಾರತ ಸೈನ್ಯ ಹೈದರಾಬಾದ್‌ಗೆ ನುಗ್ಗಿದ ಮೊದಲ ಕೆಲವು ತಿಂಗಳುಗಳಲ್ಲಿ ಅದು ‘ರಕ್ಷಕ ಸೈನ್ಯ’ ಎಂಬ ಭ್ರಮೆ, ಶಾಖೆ ಮತ್ತು ವಿಭಾಗಸ್ತರ ಹೋರಾಟಗಾರರಿಗೂ ಇತ್ತು. ಅದರಿಂದ ಆದ ಸಮರಸನ್ನದ್ದ ಸ್ಥಿತಿಯ ಅಭಾವ, ಉದಾಸೀನ ಕೆಲವೊಮ್ಮೆ ಶಸ್ತ್ರಾಸ್ತ್ರಗಳನ್ನು ಬಿಟ್ಟು ಕೊಟ್ಟಿದ್ದು ಆರಂಭದ ದಿನಗಳಲ್ಲೇ ಹಲವಾರು ಕಾರ್ಯಕರ್ತರ ಬಂಧನ, ಕೊಲೆಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರ ಹಾನಿ ಕೆಲವು ರೈತ ವಿಭಾಗಗಳಲ್ಲಿ ಹೋರಾಟದಲ್ಲಿ ಭಾಗವಹಿಸುವ ಮೊದಲಿನ ಉತ್ಸಾಹ ಆಸಕ್ತಿ ಇಲ್ಲದೆ ಹೋದದ್ದು ಚಳವಳಿ ಮುಂದುವರಿಸಲು ಕಮ್ಯುನಿಸ್ಟ್ ಪಕ್ಷದ ಕೇಂದ್ರ ಹಾಗೂ ರಾಜ್ಯದ ನಾಯಕತ್ವದ ಒಂದು ಗುಂಪಿನ ಸತತ ವಿರೋಧ ಮತ್ತು ಅಸಹಕಾರ.. ಇವೆಲ್ಲಾ ಕಾರಣಗಳಿಂದ ಕಮ್ಯುನಿಸ್ಟರು ೧೯೫೧ ಅಕ್ಟೋಬರ್ ೨೦ ರಂದು ಸಶಸ್ತ್ರ ಹೋರಾಟವನ್ನು ಹಿಂತೆಗೆದುಕೊಂಡರು.

ಬರ್ರೆಲು ತಿನೇವಾಡು

ಈ ಐದು ವರ್ಷದ ಸತತ ಹೋರಾಟದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಕಮ್ಯುನಿಸ್ಟ್‌ ಕಾರ್ಯಕರ್ತರು ಮತ್ತು ರೈತ ನಾಯಕರುಗಳ ಕೊಲೆಯಾಯಿತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಮ್ಯುನಿಸ್ಟರು ಮತ್ತು ರೈತ ಹೋರಾಟಗಾರರು ೩೪ ವರ್ಷಗಳ ಜೈಲುವಾಸ ಅನುಭವಿಸಬೇಕಾಯಿತು. ಸುಮಾರು ೫೦ ಸಾವಿರಕ್ಕೂ ಹೆಚ್ಚು ಜನ ಪೊಲೀಸರು ಮತ್ತು ಮಿಲಿಟರಿ ಕ್ಯಾಂಪ್‌ಗಳಲ್ಲಿ ಭಯಾನಕ ಚಿತ್ರಹಿಂಸೆಗೆ ಗುರಿಯಾದರು. ಸಾವಿರಾರು ಮಹಳೆಯರು ಮಾನಭಂಗ, ಅವಮಾನಗಳಿಗೆ ಗುರಿಯಾದರು. ಈ ಅತ್ಯಾಚಾರಗಳನ್ನೆಲ್ಲಾ ಮೊದಲ ಎರಡು ವರ್ಷ ಗೂಂಡಾಗಳು, ರಜಾಕಾರರು, ನಿಜಾಮನ ಪೊಲೀಸು, ಸೈನ್ಯ ನಡೆಸಿದರೆ ಮುಂದಿನ ಮೂರು ವರ್ಷಗಳ ಕಾಲ ಇವರೆಲ್ಲರನ್ನೂ ಮೀರಿಸುವಂತೆ ಭಾರತೀಯ ಸೈನ್ಯ ನಡೆಸಿತು. ಕುರಿಗಳಿಂದ ತೃಪ್ತರಾಗುವ ಜನ ಹೋಗಿ ಇಡೀ ಎಮ್ಮೆಯಿಂದ ಮಾತ್ರ ತೃಪ್ತರಾಗುವ ಜನ ಬಂದರು- ‘ಗೊರ್ರೆಲು ತಿನೇವಾಡು ಪೋಯಿ, ಬರ್ರೆಲು ತಿನೇವಾಡು ವಚ್ಚಾಡು’ ಎಂದು ಜನ ಅಂದುಕೊಳ್ಳುವಂತಾಯಿತು.

ತೆಲಂಗಾಣ ಹೋರಾಟದ ಪ್ರಾಮುಖ್ಯತೆ

ತೆಲಂಗಾಣ ರೈತರ ಸಶಸ್ತ್ರ ಹೋರಾಟವನ್ನು ಅದರ ಪ್ರಾಮುಖ್ಯತೆ, ವ್ಯಾಪಕತೆ ದೃಷ್ಟಿಯಿಂದ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಮರದೊಡನೆ ಮಾತ್ರ ಹೋಲಿಸಲು ಸಾಧ್ಯ. ಇವೆರಡು ಹೋರಾಟಗಳು ಜನಸಮೂಹ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ ಸಾಮ್ರಾಜ್ಯ ಶಾಹಿ ವಿರೋಧಿ ಹೋರಾಟಗಳು. ೧೮೫೭ರ ಹೋರಾಟ ಅರಸರುಗಳು, ಪಾಳೆಯಗಾರರು ಬ್ರಿಟಿಷರಿಂದ ಪ್ರಾಮುಖ್ಯತೆ ಕಳೆದುಕೊಂಡ ಧಾರ್ಮಿಕ ಶಕ್ತಿಗಳ ನಾಯಕತ್ವದಲ್ಲಿ ಬ್ರಿಟಿಷರ ಆಗಮನದಿಂದ ದಿವಾಳಿಯೆದ್ದ ಬಡರೈತರು, ಕುಶಲ ಕುಲಕಸುಬಿಗರು ಮತ್ತು ಅತೃಪ್ತ ಸೈನಿಕರ ಬೆಂಬಲದಿಂದ ನಡೆದ ಹೋರಾಟ. ಈ ಹೋರಾಟದಲ್ಲಿ ಕೊನೆಯ ಬಾರಿಗೆ ಭಾರತದ ಹಳೆಯ ಪಾಳೆಯಗಾರಿ ವರ್ಗ ಬ್ರಿಟಿಷ್‌ ವಿರೋಧಿ ಹೋರಾಟಕ್ಕೆ ನಾಯಕತ್ವ ಕೊಟ್ಟು ಸೋತು ಅವಮಾನಕಾರಿ ಒಪ್ಪಂದಕ್ಕೆ ಬಂದಿತು.

ಈ ಅವಮಾನಕಾರಿ ಸಾಮ್ರಾಜ್ಯಶಾಹಿ ಪಾಳೆಯಗಾರಿ ಒಪ್ಪಂದದ, ಸಖ್ಯದ ವಿರುದ್ಧ ಸುಮಾರು ನೂರು ವರ್ಷಗಳ ನಂತರ ಹೊಸದಾಗಿ ಹುಟ್ಟಿದ ಕಾರ್ಮಿಕ ವರ್ಗದ ಪಕ್ಷದ ನಾಯಕತ್ವದಲ್ಲಿ ಪ್ರಥಮ ಬಾರಿ ರೈತ ಮತ್ತು ಇತರ ಜನಸಮೂಹ ನಡೆಸಿದ ಚಾರಿತ್ರಿಕ ಪಾಳೆಯಗಾರಿ ವಿರೋಧಿ, ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ ಇದು. ಈ ಹೋರಾಟ ಆಕಸ್ಮಿಕವು ಅಲ್ಲ ಅಥವಾ ಕಮ್ಯುನಿಸ್ಟ್ ಪಕ್ಷದ ಅಥವಾ ಆಂಧ್ರ ಮಹಾಸಭಾದ ಶಿಶುವೂ ಅಲ್ಲ. ರೈತರು ಮತ್ತು ಮಧ್ಯಮಕಾಲೀನ ಜಮೀನುದಾರಿ ಪದ್ಧತಿಯಲ್ಲಿನ ವೈರುಧ್ಯ; ಬಹುಸಂಖ್ಯಾತ ಹಿಂದು ಪ್ರಜೆಗಳು ಮತ್ತು ಮುಸ್ಲಿಮ್ ಏಕಾಧಿಕಾರಿ ರಾಜನ ನಡುವಿನ ವೈರುಧ್ಯ; ಬಹುಸಂಖ್ಯಾತ ತೆಲುಗು, ಮರಾಠಿ, ಕನ್ನಡ ಮಾತನಾಡುವ ಪ್ರಜೆಗಳು ಮತ್ತು ಆಡಳಿತ ಭಾಷೆ ಉರ್ದು ಹೇರಿಕೆಯಲ್ಲಿನ ವೈರುಧ್ಯ; ಅದೇ ತಾನೆ ಜನ್ಮ ತಾಳಿದ ಭಾರತ ಒಕ್ಕೂಟ ಮತ್ತು ನಿಜಾಮನ ರಾಜ್ಯಾಡಳಿತದ ಹೈದರಾಬಾದು ರಾಜ್ಯ ಹೀಗೆ ಬಹಳಷ್ಟು ವೈರುಧ್ಯಗಳು ಒಂದೇ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಉತ್ಕಟಗೊಂಡಾಗ ಹುಟ್ಟಿದ ಚಳವಳಿ ತೆಲಂಗಾಣ ರೈತರ ಸಶಸ್ತ್ರ ಹೋರಾಟ. ತೆಲಂಗಾಣ ಚಳವಳಿಗೂ ಉಳಿತ ರೈತ ಚಳವಳಿಗೂ ಇರುವ ಪ್ರಮುಖ ವ್ಯತ್ಯಾಸವೇನೆಂದರೆ ಅದು ಜಾರಿಗೆ ತಂದ ವ್ಯಾಪಕ ಸುಧಾರಣೆಗಳು ಪಾಳೆಯಗಾರಿ ಪದ್ಧತಿಯನ್ನು ಸೀಮಿತ ಅವಧಿಯಲ್ಲಿ ಮತ್ತು ಪ್ರದೇಶದಲ್ಲಿಯಾದರೂ ನಿರ್ನಾಮ ಮಾಡಿದ್ದು, ಒಂದೂವರೆ ವರ್ಷಗಳ ಕಾಲ ರೈತರ ನಾಯಕತ್ವದಲ್ಲಿ ಗ್ರಾಮ ರಾಜ್ಯ ಸ್ಥಾಪಿಸಿದ್ದು.

ತೆಲಂಗಾಣ ಹೋರಾಟ ಇನ್ನೂ ಹಲವು ಕಾರಣಗಳಿಗಾಗಿ ಗಮನಾರ್ಹವಾಗಿದೆ. ಇದು ಮೊದಲ ಬಾರಿಗೆ ಭಾರತದ ಸಮಸ್ಯೆಗಳನ್ನು ಪರಿಹರಿಸಲು ದೇಶದ ಕೃಷಿ ಸಂಬಂಧಗಳಲ್ಲಿ ಮೂಲಭೂತ ಬದಲಾವಣೆಯ ಅನಿವಾರ್ಯತೆ ಮತ್ತು ತುರ್ತು ಅಗತ್ಯತೆಯನ್ನು ಬಲವಾಗಿ ದೇಶದ ಮುಂದಿರಿಸಿತು. ಕಾಂಗ್ರೆಸ್‌ ನಂತಹ ಆಳುವ ವರ್ಗದ ಪಕ್ಷಗಳು ಸಹ ಭೂಸುಧಾರಣೆಯನ್ನು ಅಂಗೀಕರಿಸಿದ್ದು ಈ ಹೋರಾಟದ ನೇರ ಫಲ. ಮುಂದೆ ಕಾಮಗ್ರೆಸ್ ಸರ್ಕಾರಗಳು ಮಾಡಿದ ಅರೆಮನಸ್ಸಿನ, ತಡವರಿಕೆಯ, ಅಸಮರ್ಪಕ ಭೂಸುಧಾರಣೆಯ ಪ್ರಯತ್ನಗಳೆಲ್ಲ ಕೂಡಾ ತೆಲಂಗಾಣ ಹೋರಾಟದಂತಹ ವ್ಯಾಪಕ ಹೋರಾಟದ ಬೆದರಿಕೆಯಿಂದ ಆದಂತಹವು. ವಿನೋಬಾರ ಕನಸಿನ ಲೋಕದ ಭೂದಾನ, ಗ್ರಾಮದಾನ ‘ಚಳವಳಿ’ಗಳು ಸಹ ಈ ಹೋರಾಟದ ಭಯದಿಂದ ಹುಟ್ಟಿದಂತಹುದು. ಪೊಲೀಸ್ ಕಾರ್ಯಾಚರಣೆಯ ನಂತರ ವಿನೋಬಾ ತೆಲಂಗಾಣ ಪ್ರದೇಶದಲ್ಲೇ ಭೂದಾನ ಆರಂಭಿಸಿದರು ಎಂಬುದು ಗಮನಾರ್ಹವಾಗಿದೆ.

ಭಾಷಾವಾರು ಪ್ರಾಂತ್ಯ ರಚನೆ

ತೆಲಂಗಾಣ ಚಳವಳಿಯ ಇನ್ನೊಂದು ಸಾಧನೆಯೆಂದರೆ ನಮ್ಮ ಭಾಷೆ, ಸಂಸ್ಕೃತಿ, ರಾಷ್ಟ್ರೀಯತೆ ಮುಂತಾದ ಪ್ರಜಾಸತ್ತಾತ್ಮಕ ವೈಜ್ಞಾನಿಕ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡಣೆಗೆ ಅದು ತಂದ ಬಲವಾದ ಒತ್ತಾಯ. ಚಳವಳಿಯುದ್ದಕ್ಕೂ ಹೈದರಾಬಾದ್‌ ರಾಜ್ಯವನ್ನು ವಿಸರ್ಜಿಸಿ ತೆಲುಗು ಮಾತನಾಡುವ ಎಲ್ಲ ಪ್ರದೇಶಗಳನ್ನು ಸೇರಿಸಿ ಆಂಧ್ರ ಪ್ರದೇಶ ರಚಿಸಬೇಕು ಎಂಬ ಘೋಷಣೆಯಿತ್ತು. ೧೯೫೨ರಲ್ಲಿ ಪೊಟ್ಟಿ ರಾಮುಲುರವರು ಹುತಾತ್ಮರಾಗಿ ಆದ ಆಂಧ್ರ ಪ್ರದೇಶದ ಜನನಕ್ಕೆ ಕಾರಣವಾದ ಚಳವಳಿ ಸಹ ತೆಲಂಗಾಣ ಚಳವಳಿಯ ಮೇಲೆ ಆಧಾರಿತವಾದದ್ದು. ಇದು ಆ ಮೇಲೆ ಕರ್ನಾಟಕ ಏಕೀಕರಣ, ಐಕ್ಯ ಕೇರಳ ಚಳವಳಿಗಳಿಗೆ ಇಂಬು ಕೊಟ್ಟಿತು. ಆಂಧ್ರಪ್ರದೇಶದ ಜನನದಿಂದಾಗಿ ದೇಶದಾದ್ಯಂತ ಬ್ರಿಟಿಷರ ಮತ್ತು ನಂತರ ಬಂದ ಆಳುವ ವರ್ಗಗಳನ್ನು ಒಡೆದು ಆಳಲು ಅನುಕೂಲವಾಗಿದ್ದ ಅವೈಜ್ಞಾನಿಕವಾಗಿ ಮಾಡಿದ್ದ ವಿಂಗಡಣೆ ಹೋಗಿ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು. ಇದು ದೇಶದ ಬೇರೆ ಬೇರೆ ರಾಷ್ಟ್ರೀಯತೆಗಳ ಜನರ ಬಹಳ ಸಮಯದ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳ ವಿಜಯ ಹಾಗೂ ದೇಶದಲ್ಲಿ ಪ್ರಜಾಸತ್ತಾತ್ಮಕ ಚಳವಳಿಯ ದೊಡ್ಡ ಸಾಧನೆ.

ಪಾಳೆಯಗಾರಿ ಪದ್ಧತಿಯ ನಿರ್ಮೂಲನೆ ಹೇಗೆ?

ಪಾಳೇಯಗಾರಿ ಪದ್ಧತಿಯ ನಿರ್ಮೂಲನ ಭಾರತದ ಬೆಳವಣಿಗೆಗೆ ಮತ್ತು ನೂಜ ಪ್ರಜಾಸತ್ತೆ ಸ್ಥಾಪಿಸಲು ಅಗತ್ಯ ಎಂದು ಎಲ್ಲರೂ ಒಪ್ಪುತ್ತಾರೆ. ಇದು ತನ್ನಿಂದ ತಾನೇ ಆಗುವಂಥದಲ್ಲ. ಅದಕ್ಕೆ ಸತತ ಚಳವಳಿ ಅಗತ್ಯ. ಪಾಳೆಯಗಾರಿ ಪದ್ಧತಿಯ ನಿರ್ಮೂಲನದ ಚಳವಳಿಗೆ, ತೆಲಂಗಾಣ ಚಳವಳಿ ಕೊಟ್ಟ ಅತಿದೊಡ್ಡ ಕೊಡುಗೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವದ್ದು. ತೆಲಂಗಾಣ ಚಳವಳಿ ಭಾರತದ ಪಾಳೇಯಗಾರಿ ಪದ್ಧತಿಯ ನಿರ್ಮೂಲನದ ಚಳವಳಿಯ ರಣನೀತಿ ಮತ್ತು ಕಾರ್ಯತಂತ್ರಗಳಿಗೆ ಸಂಬಂಧಿಸಿರುವ ಎಲ್ಲ ಮೂಲಭೂತ ತಾತ್ವಿಕ ಮತ್ತು ಸೈದ್ಧಾಂತಿಕ ಸವಾಲುಗಳನ್ನು ಮುಂದೊಡ್ಡತಲ್ಲದೆ ಅವುಗಳಿಗೆ ಸಮಂಜಸವಾದ ಮತ್ತು ವೈಜ್ಞಾನಿಕವಾದ ಉತ್ತರಗಳನ್ನೂ, ನೈಜವಾದ ಮತ್ತು ಕ್ರಿಯಾತ್ಮಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲೂ ಸಹಾಯಕವಾಯಿತು. ಈ ಚಳವಳಿಯಲ್ಲಿ ರೈತ ವರ್ಗದ ಪಾತ್ರ, ರೈತವರ್ಗದ ವಿಂಗಡಣೆಯ ಮೂರ್ತ ಅಧ್ಯಯನ, ಈ ರೈತ ವಿಭಾಗಗಳ ವಿಶಿಷ್ಟ ಪಾತ್ರ, ಪಾಳೆಯಗಾರಿ ಪದ್ಧತಿಯ ನಿರ್ಮೂಲನದ ಸ್ಥೂಲ ಮುನ್ನೋಟ ಇವೇ ಮುಂತಾದವು ಅದು ಮುಂದೊಡ್ಡಿದ ಸವಾಲುಗಳು. ಇವುಗಳ ಮೇಲೆ ಗಹನವಾದ ಗಂಭೀರವಾದ ಚರ್ಚೆಗಳು ನಡೆದವು.

ಭಿನ್ನಾಭಿಪ್ರಾಯಗಳು

ಈ ಹೋರಾಟದಲ್ಲಿ ಅದರಲ್ಲೂ ಕೊನೆಯ ಎರಡು ವರ್ಷಗಳಲ್ಲಿ ಚಳವಳಿಯ ನಾಯಕತ್ವದಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದವು ಎಂದು ಇಲ್ಲಿ ಹೇಳಲೇಬೇಕು. ಅದರಲ್ಲೂ ಮೂರನೇ ಹಂತದಲ್ಲಿ ಹೋರಾಟ ಮುಂದುವರಿಕೆ, ಹಿಂದಕ್ಕೆ ತೆಗೆದುಕೊಂಡದ್ದು ಮತ್ತು ಆ ಹಂತದ ಸಾಧನೆ ವೈಫಲ್ಯಗಳ ಬಗ್ಗೆ. ಈ ಬಗ್ಗೆ ನಾಯಕತ್ವದಲ್ಲಿ ಮೂರು ಪಂಥಗಳೇ ಹುಟ್ಟಿಕೊಂಡವು. ಸ್ವಲ್ಪಮಟ್ಟಿಗೆ ಈ ತೀವ್ರ ಭಿನ್ನಾಭಿಪ್ರಾಯಗಳು ಮೂರನೇ ಹಂತದ ಕೆಲವು ವೈಫಲ್ಯಗಳಿಗೆ ಕಾರಣವಾದವು.

ಒಂದು ಪಂಥ ಮೂರನೇ ಹಂತದಲ್ಲಿ ಚಳವಳಿಯನ್ನು ಮುಂದುವರೆಸಿದ್ದು ಸರಿ. ಅದನ್ನು ಆ ಮೇಲೆ ಹಿಂದಕ್ಕೆ ತೆಗೆದುಕೊಂಡದ್ದು ಸರಿ. ಚಳವಳಿಯ ಒಟ್ಟಾರೆ ಸಾಧನೆಗಳು ಸಕಾರಾತ್ಮಕ ಎನ್ನುತ್ತದೆ. ಎರಡನೇ ಪಂಥ ಮೂರನೇ ಹಂತದಲ್ಲಿ ಹೋರಾಟ ಮುಂದುವರಿಕೆಯೇ ತಪ್ಪು ಎನ್ನುತ್ತದೆ. ಅದು ಚಳವಳಿಯ ಮೊದಲ ಎರಡು ಹಂತಗಳ ಸಾಧನೆಗಳ ಬಹುಪಾಲನ್ನು ನುಂಗುಹಾಕಿತು ಎನ್ನುತ್ತದೆ. ಮೂರನೇ ಪಂಥ ಮೂರನೇ ಹಂತದಲ್ಲಿ ಚಳವಳಿಯನ್ನು ಮುಂದುವರೆಸಿದ್ದು ಸರಿ ಎಂದಿದೆ. ಆದರೆ, ಅದನ್ನು ಆ ಮೇಲೆ ಹಿಂದಕ್ಕೆ ತೆಗೆದುಕೊಂಡದ್ದು ತಪ್ಪು ಎನ್ನುತ್ತದೆ. ಹೋರಾಟವನ್ನು ಮುಂದುವರೆಸಬೇಕಾಗಿತ್ತು. ಹಾಗೆ ಮಾಡಿದ್ದು ಚಳವಳಿಗೆ ಘಾತಕ ಮಾಡಿದಂತೆ ಎನ್ನುತ್ತದೆ.

ತೆಲಂಗಾಣ ಚಳವಳಿಯ ಬಗೆಗಿನ ಭಿನ್ನಾಭಿಪ್ರಾಯಕ್ಕೂ ಕಮ್ಯುನಿಸ್ಟ್‌ ಚಳವಳಿಯ ಭಿನ್ನಾಭಿಪ್ರಾಯಗಳಿಗೂ ಮತ್ತು ಒಡಕುಗಳಿಗೂ ನೇರವಾದ ಗಾಢ ಸಂಬಂಧವಿದೆ. ತೆಲಂಗಾಣಾ ಚಳವಳಿಯ ಅನುಭವನ ಆಧಾರದ ಮೇಲೆ ಪ್ರಜಾಸತ್ತಾತ್ಮಕ ಚಳವಳಿ ಮುಂದೆ ಹೋಗಬೇಕಾದ ಹಾದಿಯನ್ನು ಆರಿಸುವಲ್ಲಿ ಕಮ್ಯುನಿಸ್ಟ್ ಚಳವಳಿ ಮೂರು ಸ್ಥೂಲ ಕವಲುಗಳಾಗಿದೆ. ಮೊದಲನೇ ಪಂಥ ಸಿ.ಪಿ.ಐ.ಎಂ., ಎರಡನೇ ಪಂಥ ಸಿ.ಪಿ.ಐ. ಮತ್ತು ಮೂರನೇ ಪಂಥ ನಕ್ಸಲೀಯ ಗುಂಪುಗಳ ಅಭಿಪ್ರಾಯವನ್ನು ಬಿಂಬಿಸುತ್ತದೆ.

ಇದರರ್ಥ ತೆಲಂಗಾಣ ಚಳವಳಿಯ ಸಾಧನೆಗಳ ಬಗ್ಗೆ, ಮಹತ್ವದ ಬಗ್ಗೆ, ಅದು ಪಾಳೆಯಗಾರಿ ಪದ್ಧತಿ ನಿರ್ನಾಮ ಮಾಡುವಲ್ಲಿ ತೋರಿದ ಹಾದಿ ಬ್ಗೆ ಅದರ ನಾಯಕರಲ್ಲೇ ಗುಮಾನಿ ಇದೆ ಎಂದಲ್ಲಿ ಅಥವಾ ಚಳವಳಿಯ ನಾಯಕತ್ವ ಯಾವುದೇ ತಪ್ಪು ಮಾಡಿಲ್ಲವೆಂದಲ್ಲ. ಸಂಕೀರ್ಣ ಸಮಸ್ಯೆಗಳೊಡ್ಡಿದ್ದ ಈ ಚಳವಳಿಯ ನಿರ್ವಹಣೆಯಲ್ಲಿ ಭಿನ್ನಾಭಿಪ್ರಾಯಗಳು ಮತ್ತು ತಪ್ಪುಗಳಾಗಿದ್ದಾವೆ ಎನ್ನುವುದನ್ನು ಕಮ್ಯುನಿಸ್ಟರೂ ಒಪ್ಪಿಕೊಂಡಿದ್ದಾರೆ. ತೆಲಂಗಾಣ ಚಳವಳಿ ಪಾಳೆಯಗಾರಿಕೆ ಪದ್ಧತಿಯ ನಾಶ ಮತ್ತು ನೈಜ ಪ್ರಜಾಪ್ರಭುತ್ವ ಸ್ಥಾಪನೆಯ ಮಹಾ ಪ್ರಯೋಗದ ಒಂದು ಮುಖ್ಯ ಹೆಜ್ಜೆ ಎಂದು ಹೇಳುವುದು ಹೆಚ್ಚು ಸರಿಯಾದೀತು.

ತೆಲಂಗಾಣ ಚಳವಳಿಯ ಟೀಕಾತ್ಮಕ ವಿಶ್ಲೇಷಣೆ

ತೆಲಂಗಾಣಾ ಚಳವಳಿ ರೈತರ ಆಂಶಿಕ ಆರ್ಥಿಕ ಬೇಡಿಕೆಗಳ ಮೇಲೆ ಆಧರಿಸಿದ ಸಶಸ್ತ್ರ ಹೋರಾಟವಾಗಿ ಆರಂಭವಾಗಿ, ಬೆಳೆಯುತ್ತಾ ನಿಜಾಮನ ದುರಾಡಳಿತವನ್ನು ಕೊನೆಗಾಣಿಸುವ ಪ್ರಜಾಸತ್ತಾತ್ಮಕ ಪಾಳೆಯಗಾರಿ ವಿರೋಧಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ವಿಮುಕ್ತಿ ಹೋರಾಟದ ಸ್ವರೂಪ ಪಡೆಯಿತು. ನಿಜಾಮನ ಆಡಳಿತವಿರುವವರೆಗೆ ಚಳವಳಿ ಸ್ಥೂಲವಾಗಿ ಸರಿಯಾದ ಹಾದಿಯಲ್ಲೇ ನಡೆದಿತ್ತು. ಆದರೆ ನಿಜಾಮನ ಆಡಳಿತ ಕೊನೆಗೊಂಡು ಭಾರತದ ಸೈನ್ಯಗಳು ಪ್ರವೇಶಿಸಿದ ನಂತರವೂ ಅವುಗಳ ವಿರುದ್ಧ ‘ವಿಮುಕ್ತಿ ಹೋರಾಟದ’ ಘೋಷಣೆಯಲ್ಲೇ ಸಶಸ್ತ್ರ ಹೋರಾಟ ಮುಂದುವರಿಸಿದ್ದು ತಪ್ಪು ಹೆಜ್ಜೆ ಎಂದು ಹೇಳಬಹುದು.

ಭಾರತದ ಸೈನ್ಯಗಳ ವಿರುದ್ಧ ತೆಲಂಗಾಣ ರೈತರು ತಮ್ಮ ಸತತ ಹೋರಾಟದ ಫಲಗಳಾದ ಕೃಷಿ ಕ್ರಾಂತಿ, ಇತರ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳು ರಕ್ಷಣೆಗಾಗಿ ಹೋರಾಟ ಮುಂದುವರಿಸಿದ್ದು ಸರಿಯಾದ ನೀತಿಯೇ. ಆದರೆ ಈ ಹೋರಾಟವನ್ನು ಭಾರತದಲ್ಲಿ ಪ್ರಜಾಸತ್ತಾತ್ಮಕ ಕ್ರಂತಿಗೆ ಹೋರಾಟದ ಮೊದಲ ಘಟ್ಟದ ವಿಮುಕ್ತಿ ಹೋರಾಟವೆಂದು ನಿರ್ವಚಿಸಿದ್ದು ತಪ್ಪು ನೀತಿ. ದೇಶದ ಆಗಿನ ರಾಜಕೀಯ ಪರಿಸ್ಥಿತಿ, ಬೇರೆ ಬೇರೆ ವರ್ಗ ಶಕ್ತಿಗಳ ಪರಸ್ಪರ ಸಂಬಂಧ ಇದಕ್ಕೆ ಪೂರಕವಾಗಿರಲಿಲ್ಲ. ರೈತವರ್ಗದ ಮಿತ್ರವರ್ಗಗಳಾಗಿದ್ದ ದೊಡ್ಡ ರೈತರ ವರ್ಗ ಮತ್ತು ಬೇರೆ ಪ್ರಜಾಸತ್ತಾತ್ಮಕ ಶಕ್ತಿಗಳು ಭಾರತ ಒಕ್ಕೂಟಕ್ಕೆ ಸೇರಿದ ನಂತರ ತೆಲಂಗಾಣ ಚಳವಳಿಯನ್ನು ಬೆಂಬಲಿಸಲಿಲ್ಲ. ಬ್ರಿಟಿಷರ ನೇರ ಆಡಳಿತದಲ್ಲಿದ್ದ ಪ್ರದೇಶಗಳಲ್ಲಿ ನೆಹರೂ ಸರಕಾರ ಪ್ರಜಾಸತ್ತಾತ್ಮಕ ಮತ್ತು ನ್ಯಾಯವಾದ ಆಲ್ವಿಕೆ ನಡಬಹುದೆಂಬ ವಿಶೇಷ ನಿರೀಕ್ಷೆ, ತೆಲಂಗಾಣ ಹೋರಾಟಕ್ಕೆ ಬೆಂಬಲವಾಗಿ ಭಾರತದ ಕಾರ್ಮಿಕ ವರ್ಗದ ಮಹಾಮುಷ್ಕರ ಸಫಲವಾಗದೆ ಹೋದದ್ದು, ಭಾರತದ ಸರಕಾರದ ವಿರುದ್ಧ ತಪ್ಪು ಘೋಷಣೆಯೊಂದಿಗೆ ಹೋರಾಡಿದ್ದರಿಂದ ಕೆಲವು ಪ್ರಜಾಸತ್ತಾತ್ಮಕ ಶಕ್ತಿಗಳ ಬೆಂಬಲ ಸಿಗದೆ ಹೋದದ್ದು ಇತ್ಯಾದಿ ಕಾರಣಗಳಿಂದ ತೆಲಂಗಾಣ ಹೋರಾಟವನ್ನು ಭಾರತ ಸರಕಾರದ ವಿರುದ್ಧ ಮುಕ್ತಿ ಹೋರಾಟವಾಗಿ ಮುಂದುವರಿಸುವುದು ಸಾಧ್ಯವಿರಲಿಲ್ಲ.

ಅದೇ ಸಮಯದಲ್ಲಿ ಮೇಲೆ ಹೇಳಿದ ತಪ್ಪು ನೀತಿಯಿಂದಾಗಿ ಮತ್ತು ಚಳವಳಿಯೊಳಗೆ ಅನೈಕ್ಯತೆಯಿಂದಾಗಿ ಭಾರತದ ಸೈನ್ಯಗಳ ವಿರುದ್ಧ ತೆಲಂಗಾಣ ರೈತರ ಭೂಮಿ ಮತ್ತು ಇತರ ಪ್ರಜಾಸತ್ತಾತ್ಮಕ ಹೋರಾಟ ಮುಂದುವರೆಸುವುದು, ಅದಕ್ಕೆ ರಾಷ್ಟ್ರಾದ್ಯಂತ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳ ಬೆಂಬಲ ಪಡೆಯುವುದು, ಸಶಸ್ತ್ರ ಹೋರಾಟ ಮುಂದುವರಿಸುತ್ತಲೇ, ಚಳವಳಿ ಮತ್ತು ಕಾರ್ಯಕರ್ತರ ರಕ್ಷಣೆ ಜತೆ ತಾತ್ಕಾಲಿಕವಾಗಿ ಚಳವಳಿಯನ್ನು ಹಿಂತೆಗೆಯುವುದು, ಭಾರತದ ಸರಕಾರದಿಂದ ಪರಮಾವಧಿ ರಿಯಾಯಿತಿಗಳನ್ನು ಸಂಪಾದಿಸಿ ಚಳವಳಿ ಇನ್ನೂ ಮೇಲಿನ ಹಂತಗಳಿಗೆ ಹೋಗಲು ಬೇಕಾದ ಪರಿಸ್ಥಿತಿ ನಿರ್ಮಾಣ ಮಾಡುವುದು…… ಇವು ಸಾಧ್ಯವಾಗದೇ ಹೋಯಿತು.

ತೆಲಂಗಾಣಾ ಸಶಸ್ತ್ರ ಹೋರಾಟದ ಸಫಲತೆಗಳು, ವೈಫಲ್ಯಗಳು ಪಾಳೆಯಗಾರಿಕೆ ಪದ್ಧತಿಯ ನಿರ್ನಾಮದ ಮತ್ತು ನೈಜ ಪ್ರಜಾಸತ್ತೆ ಸ್ಥಾಪನೆಯ ಚಳವಳಿಗೆ ಮಾರ್ಗದರ್ಶಕವಾಗಬಲ್ಲವು.