ಕೋಮುವಾದ ಭಾರತದ ಜ್ವಲಂತ ಸಮಸ್ಯೆಯಾಗಿರುವುದರಿಂದ ಅದರ ಸ್ಪಷ್ಟ ಗ್ರಹಿತಿಕೆ ಸಮಕಾಲೀನ ಅಗತ್ಯವಾಗಿದೆ. ಕೋಮುವಾದವನ್ನು ಕುರಿತ ಬರವಣಿಗೆಗಳನ್ನು ಹೆಚ್ಚಾಗಿ ಮಾಕ್ಸ್ವ್‌ವಾದಿ ಬರಹಗಾರರಿಂದ ಕಾಣುತ್ತೇವೆ. ಕೋಮುವಾದ ಹಾಗೂ ರಾಷ್ಟ್ರೀಯತೆ ವಸಾಹತುಶಾಹಿಯ ಕೊಡುಗೆಗಳು ಎನ್ನುವ ವಿಚಾರದಿಂದ ಅದರ ಚರ್ಚೆ ಆರಂಭವಾಗುತ್ತದೆ. ಕೆಲವು ವಿದ್ವಾಂಸರು ವಸಾಹತು ಆಳ್ವಿಕೆ ಆರಂಭವಾಗುವ ಮೊದಲು ಕೋಮು ಭಾವನೆಯನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಕೋಮುವಾದವನ್ನು ವಸಾಹತು ಹುಟ್ಟುಹಾಕಿದ ಭಾವನೆಯೆಂದು ಹೆಚ್ಚು ಜನ ಒಪ್ಪುತ್ತಾರೆ.

ಕೋಮುವಾದ ಒಂದು ಧರ್ಮೀಯರು ತಮ್ಮ ಧರ್ಮ ಶ್ರೇಷ್ಠವೆಂದೂ ಭಾವಿಸುತ್ತಾ ಇತರ ಧರ್ಮೀಯರನ್ನು ಅಸಹನೆಯಿಂದ ಕಾಣುವುದೇ ಆಗಿದೆ. ಕೋಮುವಾದದ ಬೆಳವಣಿಗೆಯನ್ನು ಬಿಪನ್‌ ಚಂದ್ರ ಅವರು ವಸಾಹತು ಆರ್ಥಿಕತೆಯ ಉಪ ಉತ್ಪನ್ನವೆಂದೇ ನಂಬುತ್ತಾರೆ. ವಸಾಹತು ಕಾಲದ ಆರ್ಥಿಕ ದುರವಸ್ಥೆಯಲ್ಲಿ ಮಧ್ಯಮ ವರ್ಗಗಳು (ಬೂರ್ಜ್ವಾ) ಬೆಳವಣಿಗೆಯನ್ನು ಸಾಧಿದೆ ತನ್ನ ಒಳ ಒತ್ತಡಗಳನ್ನು ತನ್ನ ಪ್ರತಿಷ್ಠೆ ಹಾಗೂ ಧಾರ್ಮಿಕ ಕುರುಹುಗಳಿಗೆ (ಐಡೆಂಟಿಟಿ) ಮಹತ್ವ ನೀಡುತ್ತಾ ನೆಮ್ಮದಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿತು ಎಂದು ಸೂಚಿಸುವ ಮೂಲಕ ಕೋಮುವಾದದ ಹುಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕ ವಿಚಾರಗಳನ್ನು ಹೊರಗೆಳೆಯುತ್ತಾರೆ.

ಯಾವ ರಾಜಕೀಯ ಅಸಹನೆಯನ್ನು ಕೋಮುವಾದವೆಂದು ಕರೆಯುತ್ತೇವೆಯೋ ಅದು ಸಾಂಪ್ರದಾಯಿಕ, ರಾಜಕೀಯ ಆಚರಣೆಯಿಂದ ಬೆಳೆದುಬಾರದೆ, ಧರ್ಮವನ್ನು ರಾಜಕೀಯಕ್ಕಾಗಿ ಬಳಸುವ ಆಧುನಿಕ ಪರಿಪಾಠದಿಂದ ಒಡಮೂಡಿದೆ ಎಂದು ವಿವರಿಸುತ್ತಾರೆ. ಸಾಂಪ್ರದಾಯಿಕ ಅರ್ಥದ ಧರ್ಮಗಳು ಸಹನೆಯನ್ನು ಆದರ್ಶವಾಗಿ ಎತ್ತಿ ಹಿಡಿಯುತ್ತಿದ್ದವು. ಹಾಗಾಗಿ ಕೋಮುವಾದ ಸಾಂಪ್ರದಾಯಿಕ ಅರ್ಥದ ಧರ್ಮವಾಗದೆ ಆಧುನಿಕ ರಾಜಕೀಯ ಸ್ವರೂಪವನ್ನು ಹೊಂದಿದೆ ಎಂದು ಚರ್ಚಿಸುವ ಮೂಲಕ ಕೋಮುವಾದಕ್ಕಿರುವ ಆಧುನಿಕ ಹುಟ್ಟನ್ನು ಸೂಚಿಸುತ್ತಾರೆ.

ಭಾರತದ ಕೋಮು ರಾಜಕೀಯ ಸಿದ್ಧಾಂತ, ಹಿಂದೂ ಮುಸ್ಲಿಮರಿಬ್ಬರಲ್ಲೂ ಇರುವ ಧರ್ಮ ಮತ್ತು ಸಂಸ್ಕೃತಿಯ ಸಂಸರ್ಗವನ್ನು ಆಧರಿಸಿದ, ರಾಷ್ಟ್ರೀಯತೆಯಿಂದ ಹೊರಬಂದ ಪರಿಕಲ್ಪನೆಯಾಗಿದೆ ಎಂದು ಕೆ.ಎನ್. ಪಣಿಕ್ಕರ್ ಅವರು ವಿವರಿಸುತ್ತಾರೆ. ಅವರು ಕೋಮುವಾದ ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಹುಟ್ಟಿ ಇಪ್ಪತ್ತನೆಯ ಶತಮಾನದಲ್ಲಿ ವಿದ್ವತ್‌ ವರ್ಗದಿಂದ ವಿಸ್ತರಣೆಯಾಯಿತು ಮತ್ತು ರಾಜಕೀಯ ವಿಧಾನವಾಯಿತೆಂದು ಹೇಳುತ್ತಾರೆ. ಕೋಮುವಾದದ ಬೆಳವಣಿಗೆಯಲ್ಲಿ ಹಿಂದೂ ಮುಸ್ಲಿಮ್ ಇಬ್ಬರ ಪಾತ್ರವೂ ಅಂತರ್ಗತವಾಗಿದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಚರಿತ್ರೆ ಬರವಣಿಗೆಯಲ್ಲಿ ಕೋಮುವಾದದ ಚರ್ಚೆಯನ್ನು ನಂತರದ ದಿನಗಳಲ್ಲಿ ಆರ್.ಎಸ್. ಶರ್ಮ, ರೊಮಿಲಾ ಥಾಪರ್‌, ಡಿ.ಎನ್. ಝಾ, ಇರ್ಫಾನ್ ಹಬೀಬ್, ಹರ್ಬನ್ಸ್ ಮುಖಿಯಾ, ಸುಮಿತ್‌ಸರ್ಕಾರ್, ಪಾರ್ಥಚಟರ್ಜಿ, ಕೆ.ಎನ್. ಪಣಿಕ್ಕರ್, ಗ್ಯಾನೇಂದ್ರ ಪಾಂಡೆ ಮುಂತಾದ ಚರಿತ್ರೆಕಾರರು ಮುಂದುವರಿಸಿದ್ದಾರೆ ಮತ್ತು ಅವಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.

ಬ್ರಿಟಿಷ್‌ ಇತಿಹಾಸಕಾರರೂ ಬ್ರಿಟಿಷ್ ಆಳ್ವಿಕೆ ಕೋಮುವಾದವನ್ನು ಹುಟ್ಟುಹಾಕಿತೆಂದು ಹೇಳಿರುವುದು, ೧೯೪೪ರಷ್ಟು ಹಿಂದೆ ಕಪ್‌ಲ್ಯಾಂಡ್ ಎಂಬ ಇತಿಹಾಸಕಾರರ ಕೃತಿಯಲ್ಲಿ ಕಂಡುಬರುತ್ತದೆ. ಬ್ರಿಟಿಷರ ಆಳ್ವಿಕೆ ಆರಂಭವಾಗಿ ೧೮೮೦ರಷ್ಟು ಹಿಂದೆಯೇ ಬಂಗಾಳದಲ್ಲಿ ನಡೆದ ೧೮೯೩ ಘರ್ಷಣೆಯಲ್ಲಾದ ಸಾವು ನೋವನ್ನು ಫಿಲಿಪ್‌ಮೇಸನ್ ಎಂಬ ಇತಿಹಾಸಕಾರ ‘ದಿ ಮ್ಯಾನ್‌ ಹೂ ರೂಲ್ಡ್‌ ಇಂಡಿಯಾ’ ಎನ್ನುವ ಕೃತಿಯಲ್ಲಿ ದಾಖಲಿಸುತ್ತಾರೆ. ಈ ಅಂಶಗಳಿಂದ ೧೮೫೭ಕ್ಕೂ ಹಿಂದೆ ಭಾರತದಲ್ಲಿ ಕೋಮು ಹೋರಾಟಗಳು ಕಾಣಬರುವುದಿಲ್ಲ, ಅದು ಅನಂತರದ ಬೆಳವಣಿಗೆ ಎನ್ನುವುದು ಸ್ಪಷ್ಟವಾಗುತ್ತದೆ. ಇದೆಲ್ಲಕ್ಕೂ ಪ್ರಮುಖವಾದ ಮತ್ತೊಂದು ಆಧಾರ ಕೋಮುಭಾವನೆಯ ಬೆಳವಣಿಗೆ ಹತ್ತೊಂಬತ್ತನೆಯ ಶತಮಾನದ ಕಡೆಯ ಭಾಗದಲ್ಲಿ ಬೆಳೆದ ಪ್ರತ್ಯೇಕತಾ ಭಾವನೆಯಿಂದ ಎಂದು ಹೇಳಬಹುದು. ೧೮೫೭ರ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿದ್ದರು. ಅವರು ಮೊಗಲ್ ಸಾಮ್ರಾಟನನ್ನು ಕೇಂದ್ರವಾಗಿರಿಸಿಕೊಂಡು ಮತ್ತೊಮ್ಮೆ ಸಾಮ್ರಾಜ್ಯ ಸ್ಥಾಪನೆಯ ಕನಸುಕಂಡರು. ಈ ಹೋರಾಟಕ್ಕೆ ಭಾರತೀಯ ರಾಜರುಗಳೆಲ್ಲ ಕೈ ಜೋಡಿಸಿದಾಗ ಅವರಲ್ಲಿ ಹಿಂದೂ ಮುಸ್ಲಿಮ್ ಎಂಬ ಯಾವ ಪ್ರತ್ಯೇಕತಾ ಭಾವನೆಯೂ ಇರಲಿಲ್ಲ. ಭಾಷಾ ಭಿನ್ನತೆ, ಪ್ರಾದೇಶಿಕ ಭಿನ್ನತೆಗಳೂ ತಲೆದೋರಲಿಲ್ಲ. ಎಲ್ಲರೂ ಸಮಾನವಾಗಿ ಬ್ರಿಟಿಷ್ ಶೋಷಣೆಗೆ ಒಳಪಟ್ಟವರಾಗಿದ್ದರು. ಜಮೀನುದಾರರು ಭೂಮಿಯನ್ನು ಕಳೆದುಕೊಂಡಿದ್ದರು, ರೈತರು ತೆರಿಗೆಯಿಂದ ಜರ್ಜರಿತರಾಗಿದ್ದರು. ರಾಜರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೆಪದಲ್ಲಿ ರಾಜ್ಯವನ್ನು ಕಳೆದುಕೊಂಡಿದ್ದರು. ಅವರಲ್ಲಿ ನಾನಾ ಸಾಹೇಬ, ಝಾನ್ಸಿ ಲಕ್ಷ್ಮಿಬಾಯಿ, ಮುಂಡರಗಿಯ ಭೀಮರಾವ್ ಮುಂತಾದವರಿದ್ದರು. ಆದರೆ ಅವರ್ಯಾರು ತಾವೇ ಮುಂದೆ ಚಕ್ರವರ್ತಿಗಳಾಗುವ ಕನಸುಕಾಣಲಿಲ್ಲ. ಹಿಂದೂ ರಾಜರ ಸೈನ್ಯಗಳಲ್ಲಿ ಮುಸಲ್ಮಾನರೂ, ಮೊಗಲ್ ಸೈನ್ಯದಲ್ಲಿ ಹಿಂದೂಗಳೂ ಇದ್ದರು. ಬ್ರಿಟಿಷ್ ಸೈನ್ಯದಲ್ಲಿ ಹಂದಿ ಮತ್ತು ದನದ ಕೊಬ್ಬಿನ ವಿಚಾರ ಹರಡಿದಾಗ ಇಬ್ಬರೂ ಒಂದಾಗಿಯೇ ತಮ್ಮ ದ್ವೇಷವನ್ನು ಹೊರಹಾಕಿದರು. ೧೮೫೭ರ ಹೋರಾಟ ಹಿಂದೂ-ಮುಸ್ಲಿಮರ ಏಕತೆಯನ್ನು ಸಾರಿದ ಹೋರಾಟವು ಆಗಿದೆ.

ಹಾಗಾದರೆ ಹಿಂದೂ-ಮುಸ್ಲಿಮ್‌ ಪ್ರತ್ಯೇಕತಾ ಭಾವನೆ ತಲೆದೋರಿದ್ದಾದರೂ ಹೇಗೆ? ಬ್ರಿಟಿಷರು ಪಾಶ್ಚಿಮಾತ್ಯ ಶಿಕ್ಷಣವನ್ನು ಭಾರತದಲ್ಲಿ ಪರಿಚಯಿಸಿದಾಗ ಅದಕ್ಕೆ ಮೊದಲು ತೆರೆದುಕೊಂಡವರು ಮೇಲ್ವರ್ಗದ ಹಿಂದೂಗಳು. ಶಿಕ್ಷಣ ಹಾಗೂ ಸಮಾಜ ಸುಧಾರಣಾ ಚಳವಳಿ ಅವರನ್ನು ಆಧುನಿಕತೆಯ ಕಡೆಗೆ ಕರೆದೊಯ್ಯಲಾರಂಭಿಸಿತು. ವಿಶೇಷವಾಗಿ ಬಂಗಾಳ ಮತ್ತು ಮುಂಬೈ ಪ್ರಾಂತ್ಯಗಳಲ್ಲಿ ಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಆರಂಭವಾದವು. ಅವೆಲ್ಲ ಹಿಂದೂಗಳು ಆಧುನಿಕತೆಯತ್ತ ಮುಖಮಾಡುವಂತೆ ಮಾಡಿತು. ಈವರೆಗೆ ಮೊಗಲರ ಕಾಲದಿಂದ ವ್ಯಾಪಾರದಲ್ಲಿ ಮುಂದಿದ್ದ ಮುಸ್ಲಿಮರು ಆರ್ಥಿಕವಾಗಿಯೂ ಹಿಂದಕ್ಕೆ ಸರಿಯಲು ಆರಂಭಿಸಿದ್ದರು. ಸಾಂಪ್ರದಾಯಿಕ ಮದರಸಾದ ಶಿಕ್ಷಣವನ್ನು ಪಡೆಯುತ್ತಿದ್ದರಿಂದ ಪಾಶ್ಚಿಮಾತ್ಯ ಚಿಂತೆಯ ಪ್ರಭಾವದಿಂದ ದೂರವೇ ಉಳಿದರು. ಇಂಗ್ಲಿಷ್ ಶಿಕ್ಷಣದಿಂದ ಹಿಂದೂಗಳಿಗೆ ಉದ್ಯೋಗಾವಕಾಶಗಳೂ ಹೆಚ್ಚಿದ್ದರಿಂದ ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿತಿತು. ಶಿಕ್ಷಣ ಮತ್ತು ಆರ್ಥಿಕ ಪರಿಸ್ಥಿತಿ ಎರಡೂ ಸೇರುತ್ತಾ ವಿದ್ಯಾವಂತ ಹಿಂದೂಗಳು ಮಧ್ಯಮವರ್ಗವಾಗಿ ಮೂಡಿಬರತೊಡಗಿದರು. ಮಧ್ಯಮವರ್ಗ ಎಂಬ ಪದವನ್ನು ಅದರ ಲಕ್ಷಣದೊಂದಿಗೆ ಇಲ್ಲಿ ಗ್ರಹಿಸಬೇಕಾಗುತ್ತದೆ. ಮಧ್ಯಮವರ್ಗ ಎಂದಾಗ ಅವರು ನಗರದ ಹಿನ್ನೆಲೆಯ ವಿದ್ಯಾವಂತರೆಂಬ ಹೊಸತನವನ್ನೇ ಪಡೆದುಕೊಳ್ಳುತ್ತಾರೆ. ಈ ಮಧ್ಯಮ ವರ್ಗ ಬೌದ್ಧಿಕ ವರ್ಗವೂ ಆಗುವುದರಿಂದ ರಾಜಕೀಯವಾಗಿಯೂ ಹೆಚ್ಚು ಪ್ರಜ್ಞಾವಂತರಾಗಿರುತ್ತಾರೆ. ಈ ಸಂದರ್ಭದಲ್ಲಿ ಹಿಂದೂಗಳು ಎಂದಾಗ ವಿಶಾಲ ಅರ್ಥದಲ್ಲಿ ಎಲ್ಲ ಜಾತಿ ವರ್ಗಗಳಿಗೂ ಅನ್ವಯಿಸದೆ ವಿಶೇಷವಾಗಿ ಮೇಲೆ ಚರ್ಚಿಸಿದ ವಿದ್ಯಾವಂತ ಮಧ್ಯಮವರ್ಗಕ್ಕೆ ಅನ್ವಯಿಸುತ್ತದೆ. ಆದರೆ ಸಮಾನವಾಗಿ ಅಂತಹ ಮಧ್ಯಮವರ್ಗ ಮುಸ್ಲಿಮ್‌ ಸಮುದಾಯದಲ್ಲಿ ಉದಯಿಸಲಿಲ್ಲ. ಇದನ್ನು ಗಮನಿಸಿದ ಕೆಲವು ವಿದ್ಯಾವಂತ ಮುಸ್ಲಿಮರು ಬ್ರಿಟಿಷ್ ನೀತಿಯಲ್ಲೇ ಅನುಮಾನ ವ್ಯಕ್ತಪಡಿಸಿದರು. ಮುಸಲ್ಮಾನರನ್ನು ಹತ್ತಿಕ್ಕುವುದು ಬ್ರಿಟಿಷರ ಯೋಜಿತ ನಡೆಯಾಗಿತ್ತೆಂದು ತಿಳಿಯಲಾಗಿದೆ. ಇಂತಹ ಅನುಮಾನಕ್ಕೂ ಕಾರಣವಿತ್ತು. ೧೮೫೭ರ ದಂಗೆಯ ನಂತರ ಮತ್ತೊಮ್ಮೆ ಮೊಗಲ್ ಸಾಮ್ರಾಜ್ಯದ ಕಲ್ಪನೆ ತಲೆಯೆತ್ತಬಾರದೆಂಬುದು ಬ್ರಿಟಿಷರ ಅಂತರಂಗದ ಭಾವನೆಯಾಗಿತ್ತು. ಏಕೆಂದರೆ ಈ ಬೃಹತ್‌ಹೋರಾಟದಲ್ಲಿ ಹಿಂದೂ-ಮುಸ್ಲಿಮರು ಒಂದಾಗಿ ಹೋರಾಡಿ ಬ್ರಿಟಿಷರಿಗೆ ಎಚ್ಚರಿಕೆಯನ್ನು ನೀಡಿದ್ದರು. ರಾಣಿಯರು ಘೋಷಣೆ ೧೮೫೮ರಲ್ಲಿ ಭಾರತೀಯರ ಸಾಂಸ್ಕೃತಿಕ ಧಾರ್ಮಿಕ ವಿಚಾರಗಳಲ್ಲಿ ಬ್ರಿಟಿಷರು ಕೈ ಹಾಕುವುದಿಲ್ಲವೆಂದು ಹೇಳಿಕೊಂಡಿದ್ದರೂ ಅಂತರಂಗದಲ್ಲಿ ಹಿಂದೂ ಮುಸಲ್ಮಾನರನ್ನು ಬೇರ್ಪಡಿಸುವುದು ಆಡಳಿತದ ದೃಷ್ಟಿಯಿಂದಲೂ ಮುಖ್ಯವಾಗಿತ್ತು. ಆದ್ದರಿಂದ ಮುಸಲ್ಮಾನರು ಆರ್ಥಿಕ ಅವಕಾಶಗಳನ್ನು ಕಳೆದುಕೊಂಡದ್ದು ಪೂರಕ ಕಾರಣವಾಗಿತ್ತು. ಇಂತಹದೇ ನಡೆ ದಕ್ಷಿಣ ಭಾರತದಲ್ಲಿ ಟಿಪ್ಪುವಿನ ಮರಣಾನಂತರ ಮುಸಲ್ಮಾನರು ತಮ್ಮ ಆರ್ಥಿಕ ಪ್ರಾಬಲ್ಯವನ್ನು ಕಳೆದುಕೊಳ್ಳುವಂತೆ ಮಾಡಿತು. ಟಿಪ್ಪುವಿನ ಹೆಸರಿನ ಬಲದಲ್ಲಿ ಮುಸಲ್ಮಾನರು ಒಂದುಗೂಡುವ ಸಾಧ್ಯತೆಯನ್ನು ಅವರು ತಡೆಹಿಡಿದಿದ್ದರು. ಹಿಂದು ಪರ ಮುಸ್ಲಿಮ್ ವಿರೋಧಿ ರಾಜಕೀಯವನ್ನು ಬ್ರಿಟಿಷರು ಮೈಸೂರನ್ನು ಟಿಪ್ಪುವಿನಿಂದ ವಶಪಡಿಸಿಕೊಳ್ಳುವ ಸಂದರ್ಭದಲ್ಲೂ ತಕ್ಕಮಟ್ಟಿಗೆ ತೋರಿಸಿದ್ದರು.

ಬ್ರಿಟಿಷರು ೧೮೫೭ರ ಭಾರತದ ಚರಿತ್ರೆಯಲ್ಲೇ ಟಿಪ್ಪುವಿನ ಮರಣಾನಂತರ ಮುಸಲ್ಮಾನರು ಮೈಸೂರು ರಾಜ್ಯದಲ್ಲಿ ಮತ್ತೆ ತಲೆಯೆತ್ತದಂತೆ ಖಚಿತಪಡಿಸಿಕೊಂಡರು. ದಂಗೆಯ ನಂತರದ ಕಾಲ ಕಗ್ಗತ್ತಲ ಕಾಲವಾಗಿತ್ತೆಂದು ಎ.ಆರ್. ದೇಸಾಯಿಯವರು ಬರೆಯುತ್ತಾರೆ. ದಂಗೆ ಮುಗಿದಾಗ ದೆಹಲಿಯೊಂದರಲ್ಲೇ ೨೭,೦೦೦ ಕ್ಕೂ ಹೆಚ್ಚು ಮುಸಲ್ಮಾನರನ್ನು ನೇಣು ಹಾಕಿದರು. ದಂಗೆಗೆ ಮುಂಚಿತವಾಗಿಯೇ ೧೮೪೩ರಲ್ಲಿ ಬ್ರಿಟಿಷರು ಹೇಳಿದ ಮಾತುಗಳೆಂದರೆ “ಮಹಮದೀಯರು ನಮ್ಮ ದ್ವೇಷಿಗಳು ನಮ್ಮ ಹೊಂದಾಣಿಕೆಯೇನಿದ್ದರೂ ಹಿಂದೂಗಳೊಂದಿಗೆ ಮಾತ್ರ.” ಅದೇ ದಂಗೆಯನ್ನು ಹತ್ತಿಕ್ಕಿದ ನಂತರ ಎಲಿಫ್‌ನನ ಮಾತನ್ನೂ ಗಮನಿಸಬೇಕಾಗುತ್ತದೆ. ಅವನ ಪ್ರಕಾರ, “ವಿಭಜಿಸಿ ಆಲು ಎಂಬ ಹಳೆಯ ರೋಮನ್‌ರ ಘೋಷಣೆ ಇಂದು ನಮ್ಮದಾಗಬೇಕಾಗಿದೆ.” ನಂತರ ದಿನಗಳಲ್ಲಿ ಮುಸಲ್ಮಾನರನ್ನು ಸೈನಿಕ ಹುದ್ದೆಗಳಿಂದಲೂ ದೂರವಿಡಲಾಯಿತು. ಇದೂ ಅವರ ಆರ್ಥಿಕ ಕುಸಿತಕ್ಕೆ ಕಾರಣವಾಯಿತು.

ಕೋಮುಭಾವನೆಯ ಬೆಳವಣಿಗೆಗೆ ಮೊದಲು ‘ಹಿಂದೂ-ಮುಸ್ಲಿಮ್‌’ ಎಂಬ ಐಡೆಂಟಿಟಿ ಆರಂಭವಾದ ಇತರ ಸಾಧ್ಯತೆಗಳೆಂದರೆ ಸಮಾಜ ಸುಧಾರಣಾ ಚಳವಳಿಗಳು. ಬ್ರಹ್ಮ ಸಮಾಜ ಮೊದಲು ಪಾಶ್ಚಿಮಾತ್ಯ ಸಂಸ್ಕೃತಿಗೆ ಎದುರಾಗಿ ಭಾರತದ ಸಮಾಜವನ್ನು ಪರಿಶೀಲಿಸತೊಡಗಿತು. ಉಪನಿಷತ್ತುಗಳ ಆಧಾರದ ಮೇಲೆ ಆಧ್ಯಾತ್ಮಿಕ ಧಾರ್ಮಿಕ ವಿಚಾರಗಳನ್ನು ಒಪ್ಪಿಕೊಂಡರು. ಪಾಶ್ಚಿಮಾತ್ಯ ಶಿಕ್ಷಣವನ್ನು ಒಪ್ಪಿಕೊಳ್ಳುತ್ತಾ ಸತಿಯಂತಹ ಆಚರಣೆಗಳನ್ನು ವಿರೋಧಿಸಿದರು. ಒಂದು ರೀತಿಯಲ್ಲಿ ಉದಯಿಸುತ್ತಿದ್ದ ಮಧ್ಯಮ ವರ್ಗ ಹಿಂದೂ ಐಡೆಂಟಿಟಿಯನ್ನು ಕಟ್ಟಿಕೊಂಡಿತು. ಆದ್ದರಿಂದ ಆರಂಭದಲ್ಲಿ ಸಹಜವಾಗಿ ಬಂಗಾಳದ ಮೇಲ್ಜಾತಿಯ ಸುತ್ತಲ ಸಮಸ್ಯೆಗಳನ್ನು ಚರ್ಚಿಸಿತು. ಮುಂದುವರೆದು ಹತ್ತೊಂಬತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಆರಂಭವಾದ ಆರ್ಯಸಮಾಜ ಪಾಶ್ವಿಮಾತ್ಯ ಸಂಸ್ಕೃತಿಯ ಎದುರು, ‘ಹಿಂದೂ’ ಧರ್ಮ ಸಂಸ್ಕೃತಿಯನ್ನು ಸನಾತನ ಪರಂಪರೆಯಲ್ಲಿ ಗುರುತಿಸಿಕೊಳ್ಳತೊಡಗಿತು. ಅದರಲ್ಲೂ ವೇದಗಳು ಹಿಂದೂ ಸಂಸ್ಕೃತಿಯ ಬೇರು ಎಂದು ಭಾವಿಸಿತು. ಸಮಾಜ ಸುಧಾರಣಾ ಚಳವಳಿಗಳು ಹಿಂದೂ ಧರ್ಮವನ್ನು ಮತ್ತೆ ಮತ್ತೆ ಅರ್ಥೈಸತೊಡಗಿದವು. ಬ್ರಹ್ಮ ಸಮಾಜ ಮತ್ತು ಆರ್ಯಸಮಾಜದ ಚಟುವಟಿಕೆಗಳು ಹಿಂದೂಗಳಿಗೆ ಮೀಸಲಾಗಿದ್ದವು. ಬ್ರಹ್ಮ ಸಮಾಜ ನಿರಾಕಾರ ಸಿದ್ಧಾಂತವನ್ನು ಬೋಧಿಸಿದರೂ, ಮೂರ್ತಿಪೂಜೆಯನ್ನು ಕೈಬಿಟ್ಟರೂ, ಕ್ರೈಸ್ತ, ಇಸ್ಮಾಂ ಧರ್ಮತತ್ವಗಳಿಂದ ಎಷ್ಟೋ ಅಂಶಗಳನ್ನು ಹೀರಿಕೊಂಡರೂ ಸುಧಾರಣೆ ಅನ್ವಯಿಸಿದ್ದು ಮಾತ್ರ ಹಿಂದೂಗಳಿಗೆ, ಆರ್ಯಸಮಾಜ ವೈದಿಕ ಸಿದ್ಧಾಂತಗಳನ್ನು ‘ಹಿಂದೂ’ ಎಂದೂ ಕರೆಯಲಾರಂಭಿಸಿತು.

ಕೆ.ಎನ್. ಪಣಿಕ್ಕರ್ ಅವರು ಹತ್ತೊಂಬ್ಬತ್ತನೆಯ ಶತಮಾನದಲ್ಲಿ ಬೆಳೆದ ಹಿಂದೂ ಪ್ರತಿಪಾದನೆಯನ್ನು ‘ನವ ಹಿಂದೂವಾದ’ ಎಂದು ಗುರುತಿಸುತ್ತಾರೆ. ಅದು ರೂಢಿಸಿಕೊಂಡ ಗೋಹತ್ಯಾ ನಿಷೇಧ, ಶುದ್ಧಿ ಮುಂತಾದ ಆಚರಣೆಗಳು ಸ್ಪಷ್ಟವಾಗಿ ಇಸ್ಮಾಂ ಸಮಾಜವನ್ನು ದೂರ ಇಟ್ಟಿತು. ಹದಿನೆಂಟನೆಯ ಶತಮಾನದ ಅಂತ್ಯ ಹಾಗೂ ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಹಸುವನ್ನು ಹಿಂದೂ ಧರ್ಮದ ಸಂಕೇತವಾಗಿ ನೋಡತಿಡಗಿದರು. ಚಳವಳಿಯ ನಾಯಕತ್ವವನ್ನು ನಗರದ ಮೇಲ್ವರ್ಗದ ಜನ ವಹಿಸಿಕೊಂಡರೂ ಗ್ರಾಮೀಣರನ್ನು ಒಳಗೊಳ್ಳುವುದು ಸುಲಭದ ವಿಚಾರವಾಯಿತು. ೧೮೮೦ ರಿಂದ ೧೮೯೦ರಲ್ಲಿ ಈ ಚಿಂತನೆಯು ಪಂಜಾಬ್, ಮಧ್ಯ ಪ್ರಾಂತ್ಯ, ಉತ್ತರ ಪ್ರದೇಶದ ಪೂರ್ವ ಭಾಗಗಳು ಬಿಹಾರ್‌ಗಳಿಗೆ ಹರಡಿತು. ಹಿಂದೂ ರಾಜರು, ಭೂಮಾಲೀಕರು, ವ್ಯಾಪಾರಿಗಳು, ಬ್ಯಾಂಕರ್‌ಗಳು, ಹಿಂದೂ ಅಧಿಕಾರಿಗಳು, ನ್ಯಾಯಾಧೀಶರು, ವಕೀಲ ಮುಂತಾದವರು ಭಾಗವಹಿಸಿದರು. ಈ ಸಭೆಯಗಳು ಉಗ್ರ ಸ್ವರೂಪವನ್ನು ತೆಗೆದುಕೊಂಡಂತೆ ನಿಧಾನವಾಗಿ ಶ್ರೀಮಂತರು ಹಿಂದಕ್ಕೆ ಸರಿಯ ತೊಡಗಿದರು. ಕೋಮು ಗಲಭೆಗೆ ೧೮೯೧ರ ಹೊತ್ತಿಗೆ ಸರ್ಕಾರ ತಲೆತೂರಿಸುವಂತಾಯಿತು. ಇದೇ ಸಮಕಾಲೀನವಾಗಿ ಆರಂಭವಾದ ಸರ್ ಸೈಯದ್ ಅಹಮದ್ ಖಾನರ ಸುಧಾರಣಾ ಪ್ರಯತ್ನಗಳು ಮುಸ್ಲಿಮ್‌ಸಮುದಾಯದ ಅಭಿವೃದ್ಧಿಯ ಹಿನ್ನಡೆಯನ್ನು ಗಮನಿಸಿತು. ಸರ್ ಸೈಯದ್ ಅಹಮದ್‌ಖಾನರ ಹೋರಾಟದ ಆರಂಭದಲ್ಲಿ ಹಿಂದೂ-ಮುಸ್ಲಿಮ್ ಏಕತೆಯನ್ನು ಸಾರಿದರು. ಅವರಿಬ್ಬರ ಸಮಾನತೆಯನ್ನು ಸಾಧಿಸ ಪ್ರಯತ್ನಿಸಿದರು. ಸೈಂಟಿಫಿಕ್‌ ಸೊಸೈಟಿಗಳು ಈ ನಿಟ್ಟಿನಲ್ಲಿ ಮೊದಲು ಸ್ಥಾಪಿಸಿದ ಸಂಘಟನೆಗಳು. ಆದರೆ ಆಲಿಘರ್‌ ಕಾಲೇಜನ್ನು ಆರಂಭಿಸಿದಾಗ ಮುಸಲ್ಮಾನರು ಆಧುನಿಕ ಶಿಕ್ಷಣ ಪದ್ಧತಿಯಿಂದ ಮುಂದುವರೆಯುವುದರ ಕಡೆ ಹೆಚ್ಚು ಗಮನ ನೀಡಿದರು. ಇದಕ್ಕೆ ಬೇಕಾದ ಹಣದ ಬೆಂಬಲವನ್ನು ಶ್ರೀಮಂತ ಮುಸ್ಲಿಮ್ ಜಾಗೀರುದಾರರನ್ನು ಒಗ್ಗೂಡಿಸ ತೊಡಗಿದರು. ಈ ಶ್ರೀಮಂತ ಮುಸ್ಲಿಮ್ ಜಮೀನುದಾರರು ತಮ್ಮ ಸಮುದಾಯದ ಬಗ್ಗೆ ಚರ್ಚಿಸತೊಡಗಿದರು.

೧೮೮೫ರಲ್ಲಿ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ ಆರಂಭವಾದಾಗ ಇದಕ್ಕೊಂದು ಹೊಸ ತಿರುವು ಬರತೊಡಗಿತು. ಅದು ಆರಂಭವಾದ ಎರಡು ವರ್ಷಗಳಲ್ಲಿ ಕಾಂಗ್ರೆಸ್‌ ವೇದಿಕೆಯನ್ನು ದಮನ ಮಾಡುವುದು ಬ್ರಿಟಿಷರ ಉದ್ದೇಶವಾಗಿತ್ತು. ಕಾಂಗ್ರೆಸ್‌ ನ ನಿಂದನೆಯಲ್ಲದೆ ಬ್ರಿಟಿಷರು ಮುಸ್ಲಿಮ್‌ ಸಮುದಾಯದ ಕಾಂಗ್ರೆಸ್‌ ಜೊತೆ ಕೈ ಜೋಡಿಸದಂತೆ ಎಚ್ಚರಿಕೆ ವಹಿಸಿದರು. ಮುಸ್ಲಿಮ್‌ ಹಿತಾಸಕ್ತಿಗಳನ್ನು ಪರಿಗಣಿಸತೊಡಗಿತು. ಅವರ ಶಿಕ್ಷಣ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಮುಂದಾದರು. ಸರ್ ಸೈಯದ್‌ ಅಹಮದ್ ಖಾನ್ ಮತ್ತಿತರರು ಬ್ರಿಟಿಷ್ ಪರವಾಗಿರುವುದರಿಂದ ಮುಸ್ಲಿಮ್ ಸಮುದಾಯದ ಅಭಿವೃದ್ಧಿ ಸಾಧ್ಯವೆಂದು ಭಾವಿಸಿದರು. ಈ ಹೊತ್ತಿಗೆ ಬ್ರಿಟಷ್‌ಭಾರತದಲ್ಲಿ ರಾಜಕೀಯವಾಗಿ ಜನ ತಮ ಬಲಾಬಲಗಳ ಕುರಿತು ಅರಿಯಲಾರಂಭಿಸಿದ್ದರು. ಜನಗಣತಿ ಈ ದಿಕ್ಕಿನಲ್ಲಿ ತನ್ನ ಪಾತ್ರವನ್ನು ನಿರ್ವಹಿಸಿತ್ತು. ಜನಗಣತಿಯಿಂದಾಗಿ ಒಟ್ಟಾರೆ ಭಾರತೀಯರ ಜನಸಂಖ್ಯಾ ವಿನ್ಯಾಸದ ಅರಿವು ಮೂಡಿತು. ಸಿಖ್‌ರು, ಕ್ರೈಸ್ತರು, ಮುಸಲ್ಮಾನರನ್ನು ಹೊರತುಪಡಿಸಿ ಉಳಿದವರನ್ನು ಹಿಂದೂಗಳೆಂದು ಪ್ರತ್ಯೇಕಿಸಲಾಯಿತು. ಹೀಗೆ ವರ್ಗೀಕರಿಸಿದ್ದರಿಂದ ಹಿಂದೂಗಳು ಬಹುಸಂಖ್ಯಾತರೆಂದೂ ಮುಸಲ್ಮಾನರು ಅಲ್ಪ ಸಂಖ್ಯಾತರೆಂಬ ಗ್ರಹಿಕೆ ಬರತೊಡಗಿತು.

ಈ ಸಂದರ್ಭದ ರಾಜಕೀಯ ಬೆಳವಣಿಕೆ ತಮ್ಮ ಸಂಖ್ಯಾಬಲದ ಬಗೆಗೆ ತಿಂಚಿಸುವಂತೆ ಮಾಡಿತು. ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಭಾರತೀಯರಿಗೆ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಕಾಂಗ್ರೆಸ್ ತನ್ನ ಹೋರಾಟವನ್ನು ಆರಂಭಿಸಿತ್ತು. ಚುನಾವಣೆಯ ಮೂಲಕ ಪ್ರತಿನಿಧಿತ್ವವನ್ನು ಕೊಟ್ಟರೆ ಅದು ಬಹುಸಂಖ್ಯಾತರ ಪರವಾಗಿ ಮಾತ್ರ ಉಳಿಯುತ್ತದೆಂಬ ಭಾವನೆ ವಿದ್ಯಾವಂತ ಮುಸ್ಲಿಮರಿಗೆ ಭಾಸವಾಗತೊಡಗಿತು. ಆದ್ದರಿಂದ ಮುಸಲ್ಮಾನರು ಬ್ರಿಟಿಷ್ ಸರ್ಕಾರದಿಂದ ರಕ್ಷಣೆಯನ್ನು ಬಯಸಿದರು. ಅದು ಉದ್ಯೋಗದಲ್ಲಿರಬಹುದು ಅಥವಾ ರಾಜಕೀಯದಲ್ಲಾಗಿರಬಹುದು ಎಂದು ಅವರು ಉಲ್ಲೇಖಿಸಿದರು. ಸರ್ ಸೈಯದ್ ಅಹಮದ್ ಖಾನರ ಮರಣದವರೆಗೆ ಅವರ ಬೆಂಬಲಿಗ ಮುಸ್ಲಿಮ್ ವಲಯ ಕಾಂಗ್ರೆಸ್‌ ಗೆ ಪರ್ಯಾಯವಾಗಿ ಯಾವ ರಾಜಕೀಯ ವೇದಿಕೆಯನ್ನು ಹುಟ್ಟುಹಾಕದೆ ಅವರ ಪರವಾಗಿ ಉಳಿಯಲು ನಿರ್ಧರಿಸಿದರು. ಈ ಎಲ್ಲಾ ಸೂಕ್ಷ್ಮ ಬೆಳವಣಿಗೆಯನ್ನು ಗಮನಿಸುತ್ತಿದ್ದ ಬ್ರಿಟಿಷ್ ಸರ್ಕಾರ ಅಲ್ಪಸಂಖ್ಯಾತರ ಬೆಂಬಲಕ್ಕೆ ಮುಂದಾಯಿತು.

ಭಾರತದ ಹಿಂದೂ-ಮುಸ್ಲಿಮ್ ಪ್ರತ್ಯೇಕತಾವಾದದ ಬೆಳವಣಿಕೆಯಲ್ಲಿ ಇದೇ ಸಂದರ್ಭದಲ್ಲಿ ತಲೆ ಎತ್ತಿ ಮತ್ತೊಂದು ಅಂಶ ಭಾಷೆ. ಮೊಗಲರ ಆಸ್ಥನದ ಭಾಷೆ ಪರ್ಷಿಯನ್ ಆಗಿದ್ದು, ಉಳಿದಂತೆ ಜನಸಾಮಾನ್ಯರು ಹುಟ್ಟು ಹಾಕಿದ ಭಾಷೆ ಉರ್ದುವಾಗಿತ್ತು. ಉರ್ದುವು ಯಾವ ಧಾರ್ಮಿಕ ಗ್ರಂಥವೂ ಇಲ್ಲದೆ ಎಲ್ಲರೂ ಬಳಸುತ್ತಿದ್ದ ಭಾಷೆಯಾಗಿತ್ತು. ಉರ್ದು ಸೈನಿಕರ ನೆಲೆಯಲ್ಲಿ ಹುಟ್ಟಿದ ಭಾಷೆ. ಆದ್ದರಿಂದ ಅದರಲ್ಲಿ ಹಲವು ಭಾಷಾ ಪದಗಳು ಸೇರಿಹೋಗಿದ್ದವು. ಉತ್ತರ ಭಾರತದಲ್ಲಿ ಹಿಂದಿ ಎಂಬ ಒಂದು ಭಾಷೆಯಿರಲಿಲ್ಲ. ಬ್ರಿಜುಭಾಷ, ಮೈಥಿಲಿ, ಹಿಂದವಿ ಮುಂತಾದ ಭಾಷೆಗಳನ್ನು ಜನರು ಆಡುತ್ತಿದ್ದರು. ಹಿಂದೂ ಮತ್ತು ಮುಸ್ಲಿಮ್ ಐಡೆಂಟಿಟಿಯ ವಾದಗಳಿಂದ ಆರ್ಯ ಸಮಾಜ ಹಾಗೂ ಅಲಿಘರ್‌ ವಾದಕ್ಕೆ ಸಿಕ್ಕಿ, ಹಿಂದೂಗಳ ಭಾಷೆ ಹಿಂದಿ ಎಂತಲೂ, ಮುಸಲ್ಮಾನರ ಭಾಷೆ ಉರ್ದು ಎಂದೂ ಗುರುತಿಸಿಕೊಳ್ಳತೊಡಗಿತು. ಈ ವಾದದ ನಂತರ ಹಿಂದಿ ಭಾಷೆಗೆ ದೇವನಾಗರಿ ಲಿಪಿಯನ್ನು ಬಳಸತೊಡಗಿದರು ಹಾಗೂ ಹೆಚ್ಚು ಹೆಚ್ಚು ಪದಗಳನ್ನು ಬಳಸತೊಡಗಿದರು. ಉರ್ದು ಬರವಣಿಕೆಯಲ್ಲಿ ಪರ್ಷಿಯನ್ ಪದಗಳು ವಿಶೇಷವಾಗಿ ಕಾಣಿಸಿಕೊಂಡುದು ಮಾತ್ರವಲ್ಲದೆ ಅರಾಬಿಕ್ ಲಿಪಿಯನ್ನು ಮಾತ್ರ ಬಳಸಿದರು. ಸಂಸ್ಕೃತಿಯ ವಿಭಜನೆಗೆ ಇದು ಮತ್ತಷ್ಟು ಒತ್ತು ನೀಡಿತು. ರಾಜಾರಾಮ ಮೋಹನರಾಯರ ಕಾಲಕ್ಕೆ ಈ ಚರ್ಚೆ ಆರಂಭವಾಗಿರಲಿಲ್ಲ. ಆದ್ದರಿಂದ ಅವರ ಪತ್ರಿಕೆ, ಬರವಣಿಗೆಗಳು ಉರ್ದು ಭಾಷೆಯಲ್ಲಿದ್ದವು. ಆದರೆ ಇಲ್ಲಿಂದ ಮುಂದೆ ಹಿಂದೂ ರಾಷ್ಟ್ರೀಯವಾದಕ್ಕೆ ಹಿಂದೆ ಭಾಷೆ ತನ್ನನ್ನು ಗುರುತಿಸಿಕೊಂಡಿತು. ಉರ್ದು ಮುಸ್ಲಿಮ್ ಧರ್ಮದ ಜೊತೆಗೆ ಬೆಸೆದುಕೊಂಡಿತು. ಭಾಷೆ ಹಾಗೂ ಧರ್ಮಗಳ ಒಂದಕ್ಕೊಂದು ತಳುಕುಹಾಕಿಕೊಂಡವು.

ಕೋಮುವಾದ ಹಾಗೂ ರಾಷ್ಟ್ರೀಯ ಬೆಳವಣಿಗೆಯಲ್ಲಿ ೧೯೦೫ ಮತ್ತೊಂದು ಪ್ರಮುಖ ಘಟ್ಟ. ಬಂಗಾಳದ ವಿಭಜನೆ ಕೋಮು ರಾಜಕಾರಣದಲ್ಲಿ ಬ್ರಿಟಿಷರು ತೆಗೆದುಕೊಂಡ ಮೊದಲ ಅಧಿಕೃತ, ಆಡಳಿತಾತ್ಮಕ ನಡೆಯಾಗಿತ್ತು. ಬಂಗಾಳವನ್ನು ಜನಸಂಖ್ಯೆಯ ಕಾರಣಕ್ಕೆ ವಿಭಜಿಸಿದುದಾಗಿ ಹೇಳಿಕೊಂಡರೂ ಅಂತರಂಗದಲ್ಲಿ ಹಿಂದೂ-ಮುಸ್ಲಿಮ್ ಪ್ರತ್ಯೇಕತೆಯೇ ಕಾರಣವಾಗಿತ್ತು. ಪೂರ್ವ ಬಂಗಾಳದಲ್ಲಿ ಮುಸ್ಲಿಮರ ಸಂಖ್ಯೆ ಅಧಿಕವಾಗಿದ್ದು ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರು. ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. ಹೀಗೆ ಒಡೆಯುವುದರಿಂದ ಬೆಳೆಯುತ್ತಿದ್ದ ರಾಷ್ಟ್ರೀಯ ಪ್ರಜ್ಞೆಗೆ ಬಂಗಾಳದಲ್ಲಿ ತಡೆಯೊಡ್ಡುವುದು ಬ್ರಿಟಿಷರ ಹುನ್ನಾರವಾಗಿತ್ತೆಂಬುದು ಎಲ್ಲ ರಾಷ್ಟ್ರೀಯ ಹೋರಾಟಗಾರರ ಗಮನಕ್ಕೂ ಬಂದ ವಿಚಾರವಾಗಿತ್ತು. ಇದನ್ನು ವಿರೋಧಿಸಿ ಆರಂಭವಾದ ಸ್ವದೇಶಿ ಚಳವಳಿ ರಾಷ್ಟ್ರೀಯ ಹೋರಾಟಕ್ಕೆ ಒತ್ತಾಸೆ ನೀಡಿತು. ಜನಂದೋಲನದ ಸ್ವರೂಪವನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಬ್ರಿಟಿಷರಿಗೆ ವಿಧೇಯತೆಯನ್ನು ತೋರಿಸುವ ರಾಜಕೀಯ ಮುಸಲ್ಮಾನರಿಗೂ ಅಷ್ಟೇನೂ ರುಚಿಸಲಿಲ್ಲ. ಅವರ ಕ್ರಿಯಾತ್ಮಕ ಹೋರಾಟವ್ನು ತಡೆಯಲು ಸಾಧ್ಯವೂ ಆಗಲಿಲ್ಲ. ರಾಖಿ ಬಂಧನದ ಮೂಲಕ ಹಿಂದೂ-ಮುಸ್ಲಿಮ್ ಬಾಂಧವ್ಯವನ್ನು ಸಾರುವ ಪ್ರಯತ್ನ ಮಾಡಿದರು.

ಕಾಂಗ್ರೆಸ್ಸನ್ನು ಸೇರುವ ಮುಸ್ಲಿಮರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಬದ್ರುದ್ದೀನ್ ತ್ಯಾಬ್ಜಿ ಕಾಂಗ್ರೆಸ್‌ ಅಧ್ಯಕ್ಷತೆಯನ್ನೂ ವಹಿಸಿದ್ದರು. ಮುಂಬೈ, ಬಂಗಾಳ ಹಾಗೂ ಉತ್ತರ ಭಾರತದ ಹಲವಾರು ಪ್ರದೇಶಗಳಿಂದ ಮುಸಲ್ಮಾನರು ಕಾಂಗ್ರೆಸ್ಸನ್ನು ಪ್ರವೇಶಿಸಿದರು. ರಾಷ್ಟ್ರೀಯವಾದಿ ಮುಸಲ್ಮಾನರ ಸಂಖ್ಯೆ ಸಹ ಹೆಚ್ಚಿತು. ೧೯೨೦ರ ದಶಕದವರೆಗೆ ಮುಸಲ್ಮಾನರಲ್ಲಿ ರಾಷ್ಟ್ರೀಯವಾದದ ಭಾವನೆ ಹಾಗೇ ಮುಂದುವರೆಯಿತು. ಇದರಿಂದ ಬ್ರಿಟಿಷರು ಮುಸಲ್ಮಾನರನ್ನು ರಾಜಕೀಯವಾಗಿ ತಮ್ಮ ಕಡೆ ಒಲಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬೇಕಾಯಿತು. ಖಿಲ ಭಾರತ ಮುಸ್ಲಿಮ್‌ ಲೀಗ್ ೧೯೦೬ರ ಕೊನೆಯ ಹೊತ್ತಿಗೆ ತನ್ನ ಅಸ್ತಿತ್ವವನ್ನು ಪಡೆದುಕೊಂಡಿತು. ಶ್ರೀಮಂತ ಜಮೀನುದಾರಾದ ಆಗಾಖಾನ್, ಡಾಕಾದ ನವಾಬ, ನವಾಬ ಮೊಹಿಸಿನ್‌ ಉಲ್‌ಮುಲ್ಕ್ ಮುಂತಾದವರು ಇದರ ನೇತೃತ್ವವನ್ನು ವಹಿಸಿದರು. ಇದು ರಾಷ್ಟ್ರೀಯವಾದಿ ಮುಸ್ಲಲ್ಮಾನರು ಕಾಂಗ್ರೆಸ್‌ನ್ನು ಸೇರುವುದನ್ನು ತಡೆಯುವ ಪ್ರಯತ್ನ ಮಾಡಿತು. ಮುಸ್ಲಿಮ್ ಲೀಗ್ ಬಹುಸಂಖ್ಯಾತ ಹಿಂದುಗಳ ದಬ್ಬಾಳಿಕೆಯ ಕಲ್ಪನೆಗೆ ಹೆದರಿ ಬ್ರಿಟಿಷ್ ಪರ ಧೋರಣೆಯನ್ನು ತಳೆಯುವಂತಾಯಿತು. ೧೯೦೫ರ ಬಂಗಾಳ ವಿಭಜನೆಯ ಪರಿಣಾಮ ಎರಡು ಬಗೆಯಲ್ಲಿ ಕಾಣಿಸಿಕೊಂಡಿತು. ರಾಷ್ಟ್ರೀಯವಾದಿ ಮುಸಲ್ಮಾನರ ಬೆಳವಣಿಗೆ ಹಾಗೂ ಬ್ರಿಟಿಷ್ ಪರ ಧೋರಣೆಯುಳ್ಳ ಮುಸ್ಲಿಮರ ರಾಜಕೀಯ ವೇದಿಕೆಯ ಹುಟ್ಟು ಏಕಕಾಲಕ್ಕೆ ಕಾಣಿಸಿಕೊಂಡಿತು.

ಹೀಗೆ ಬೆಳೆದ ಮುಸ್ಲಿಮ್‌ ವಾದಿಗಳಿಗೆ ಸಮಾನವಾಗಿ ಹಿಂದೂವಾದವೂ ಬೆಳೆಯುತ್ತಾ ಹೋಯಿತು. ಹಿಂದೂ ಜಮೀನುದಾರರು, ಶ್ರೀಮಂತರು ಮುಸ್ಲಿಮ್ ದ್ವೇಷವನ್ನು ಹಾಗೂ ಈಗಾಗಲೇ ಆರಂಭಗೊಂಡಿದ್ದ ಹಿಂದೂ ಕಲ್ಪನೆಯನ್ನು ಬೆಳೆಸತೊಡಗಿದರು. ಸಮಾಜ ಸುಧಾರಣೆಯ ಹಿನ್ನೆಲೆಯಲ್ಲಿ ಹಿಂದೂಗಳು ತಾವು ಒಂದು ಎಂಬಭಾವನೆಯೊಂದಿಗೆ ಹಿಂದುತ್ವವನ್ನು ಕಂಡುಕೊಂಡಿದ್ದನ್ನು ಗಮನಿಸಿದ್ದೇವೆ. ಅವರು ಗುರುತಿಸಿಕೊಂಡ ಹಿಂದುಗಳಿಗೆ ವೈದಿಕ ನೆಲೆಯಿತ್ತು. ಆದ್ದರಿಂದ ಅವರು ಗೋಹತ್ಯೆಯ ವಿರುದ್ಧ ಹೋರಾಡ ತೊಡಗಿದರು. ಇದು ನಿಧಾನವಾಗಿ ಕೋಮು ಬಣ್ಣಕ್ಕೆ ತಿರುಗಿತು. ಈ ಹೊತ್ತಿಗೆ ಬಂದ ಚರಿತ್ರೆಯ ಬರವಣಿಗೆಗಳು ಮುಸಲ್ಮಾನರ ದ್ವೇಷವನ್ನು ಹೆಚ್ಚಿಸುವಂತೆ ಮಾಡಿತು. ಮುಸ್ಲಿಮ್ ಆಳ್ವಿಕೆಯಲ್ಲಿ ಹಿಂದೂಗಳ ಶೋಷಣೆಯಾಗಿದೆ ಎಂಬ ವಸಾಹತು ಬರವಣಿಗೆಗಳನ್ನು ಪೂರ್ಣವಾಗಿ ಸ್ವೀಕರಿಸಿದರು. ಹಿಂದೂವಾದಿಗಳೂ ಸಹ ಶಾಸನ ಸಭೆಯಲ್ಲಿ ಹಿಂದೂಗಳಿಗೆ ಸ್ಥಾನದ ಮೀಸಲಾತಿಯನ್ನು ಕೇಳತೊಡಗಿದರು.

ಪಂಜಾಬ್‌ ಹಿಂದೂ ಸಭಾ ೧೯೦೯ರಲ್ಲಿ ಸ್ಥಾಪಿತವಾಯಿತು. ಅವರಿಗೆ ಕಾಂಗ್ರೆಸ್‌ನ ನೀತಿ ಸರಿಯೆನಿಸಲಿಲ್ಲ. ದೇಶವನ್ನು ಒಂದುಗೂಡಿಸಲು ಹೊರಟು ಹಿಂದೂಗಳ ಹಿತಾಸಕ್ತಿಯನ್ನು ಕೈಬಿಟ್ಟಿರುವುದು ಅವರ ವಿರೋಧಕ್ಕೆ ಕಾರಣವಾಗಿತ್ತು. ಇದು ಮುಂದುವರೆದು ೧೯೧೫ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಕಾಸಿಂ ಬಜಾರ್‌ನ ರಾಜನ ನೇತೃತ್ವದಲ್ಲಿ ಮೊದಲ ಸಭೆ ಸೇರಿತು. ಆರಂಭದಲ್ಲಿ ಮುಸ್ಲಿಮ್‌ ಲೀಗ್‌ನಷ್ಟು ಪ್ರಬಲವಾಗಿಯೇನು ಕಾಣಬರುತ್ತಿರಲಿಲ್ಲ. ಆದರೂ ಒಬ್ಬರ ಮೇಲೊಬ್ಬರು ದೂರು ಹೊರಿಸುತ್ತಾ ತಮ್ಮ ವಾದಗಳನ್ನು ಬಲಪಡಸಿಕೊಳ್ಳುತ್ತಾ ಮುಂದುವರೆದರು.

ಮಿಂಟೋ-ಮಾರ್ಲೆ ಸುಧಾರಣೆಗಳು ೧೯೦೯ರಲ್ಲಿ ಹೊರಬಂದಾಗ ಭಾರತದ ಮುಸಲ್ಮಾನರಿಗೆ ಪ್ರತ್ಯೇಕ ಮತದಾನವನ್ನು ನೀಡಲಾಯಿತು. ಈ ಮೂಲಕ ಭಾರತದ ರಾಜ್ಯಾಂಗಕ್ಕೆ ಕೋಮು ಅಂಶವನ್ನು ಸೇರ್ಪಡೆಮಾಡಿತು. ಅನಂತರ ಅದನ್ನು ಸಿಖ್ ಮತ್ತಿತರ ಅಲ್ಪಸಂಖ್ಯಾತ ಧರ್ಮೀಯರಿಗೆ ೧೯೩೫ರಲ್ಲಿ ವಿಸ್ತರಿಸಿತು. ಪ್ರತ್ಯೇಕ ಮತದಾನವನ್ನು ಭೂ ಮಾಲೀಕರು, ಯೂರೋಪಿಯನ್ನರು, ವ್ಯಾಪಾರಗಾರರು ಮತ್ತು ಕೈಗಾರಿಕೋದ್ಯಮಿಗಳಿಗೂ ನೀಡಿತು. ಈ ಪ್ರತ್ಯೇಕತೆಯನ್ನು ರಾಷ್ಟ್ರೀಯ ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿತು. ಬೆಳೆಯುತ್ತಿದ್ದ ರಾಷ್ಟ್ರೀಯ ಏಕತೆಯನ್ನು ಒಡೆಯುವುದೇ ಇದರ ಹುನ್ನಾರವೆಂದು ವಾದಿಸಿತು. ಕಾಂಗ್ರೆಸ್ ನಾಯಕತ್ವ ಬಂಗಾಳ ವಿಭಜನೆ ನಂತರ ಬದಲಾಯಿತು. ಇದರಿಂದ ರಾಷ್ಟ್ರೀಯತೆ ಉಗ್ರ ಸ್ವರೂಪವನ್ನು ತಳೆದುದು ಮಾತ್ರವಲ್ಲದೆ ಅದರ ವೈಖರಿಯೂ ಭಿನ್ನವಾಯಿತು. ಕಾಂಗ್ರೆಸ್‌ನ ಎರಡನೆಯ ಹಂತಕ್ಕೆ ಬಂದ ನಾಯಕರು ತೀವ್ರವಾದಿಗಳನ್ನು ಬೆಂಬಲಿಸಿದರು. ಜನಸಂಘಟನೆಗೆ ಧಾರ್ಮಿಕ ಸಂಕೇತಗಳನ್ನು ಬಳಸಿದ ವಿಚಾರ ವಿವಾದಕ್ಕೆ ಒಳಗಾಗಿದೆ. ಅರವಿಂದ ಘೋಷರು ಅನುಶೀಲನ ಸಮಿತಿಯಂತಹ ಕ್ರಾಂತಿಕಾರಿ ಹೋರಾಟಕ್ಕೆ ಬೆಂಬಲ ನೀಡಿದಾಗ ಕಾಳಿಕಾದೇವಿಯ ಮುಂದೆ ದೀಕ್ಷೆ ತೆಗೆದುಕೊಳ್ಳುವ ಪದ್ಧತಿಯನ್ನು ಜಾರಿಗೆ ತಂದರು. ಲಾಲಾ ಲಜಪತರಾಯರು ಕಾಂಗ್ರೆಸ್ ನಾಯಕತ್ವದ ಮುಂಚೂಣಿಯಲ್ಲಿದ್ದರು. ಅದೇ ಸಮಾನವಾಗಿ ಆರ್ಯ ಸಮಾಜದ ಧೋರಣೆಗಳನ್ನು ಬಲವಾಗಿ ನಂಬಿದ್ದು, ಹಿಂದುತ್ವದ ಪರವಾದ ನಿಲುವನ್ನೇ ಹೊಂದಿದ್ದರು. ಅವರ ಉತ್ಕಟವಾದ ರಾಷ್ಟ್ರಪ್ರೇಮ ಹಿಂದುತ್ವವಾದವನ್ನು ಮೀರಿತ್ತು. ಬಾಲಗಂಗಾಧರ ತಿಲಕರು ಜನಸಂಘಟನೆಗಾಗಿ ಬಳಸಿದ ಸಂಕೇತಗಳನ್ನು ಕುರಿತು ಚರಿತ್ರೆಕಾರರು ವಿಶೇಷವಾಗಿ ಚರ್ಚಿಸಿದ್ದಾರೆ. ಗಣೇಶೋತ್ಸವದ ಮೂಲಕ ಮಹಾರಾಷ್ಟ್ರದಲ್ಲಿ ಹುಟ್ಟುಹಾಕಿದ ಚಾಲನೆ ಪರೋಕ್ಷವಾಗಿ ಹಿಂದೂಗಳನ್ನು ಒಂದುಗೂಡಿಸಿತು. ಶಿವಾಜಿ ಜಯಂತಿ ಮುಸಲ್ಮಾನರಲ್ಲಿ ಅನುಮಾನವನ್ನು ಹುಟ್ಟುಹಾಕಿತು. ಔರಂಗಜೇಬನ, ಮೊಗಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಶಿವಾಜಿ ಮುಸ್ಲಿಮ್‌ ವಿರೋಧಿಯೆಂಬ ಸ್ವರೂಪವನ್ನೇ ಹೊಂದಿದ್ದರಿಂದ ಅವರು ಆರಿಸಿಕೊಂಡ ಸಂಕೇತಗಳೆಲ್ಲ ಮುಸಲ್ಮಾನರನ್ನು ರಾಷ್ಟ್ರೀಯ ಚಳವಳಿಯಿಂದ ದೂರವಿಡಲು ಯಸ್ವಿಯಾದವು. ಈ ಕಾಂಗ್ರೆಸ್ ಅಧ್ಯಾಯ ಉಗ್ರರಾಷ್ಟ್ರೀಯತೆಯ ಜೊತೆಗೆ ಹಿಂದೂ ಪರನೀತಿಯಾಗಿ ಬೆಳೆದುಬಂದಿತು. ಇವರ ನಡುವೆಯೇ ಸೆಕ್ಯೂಲರ್ ನಾಯಕರಾಗಿ ಜಿನ್ನಾ ಕಾಣಿಸಿಕೊಂಡಿದ್ದರು.

೧೯೧೨ರಿಂದ ೨೪ರ ನಡುವಿನ ಘಟ್ಟದಲ್ಲಿ ರಾಷ್ಟ್ರೀಯವಾದಿ ಮುಸಲ್ಮಾನ ವಿದ್ಯಾವಂತ ಯುವಕರು ಹೋರಾಟವನ್ನು ಪ್ರವೇಶಿಸಿದರು. ಅಹರಾರ್‌ನಂತಹ ಉಗ್ರರಾಷ್ಟ್ರೀಯ ಚಳವಳಿ ಯಂಗ್‌ಟರ್ಕ್‌ ಚಳವಳಿಯ ಮಾದರಿಯಲ್ಲಿ ರಚಿತವಾಗಿತ್ತು. ಮೌಲಾನ ಮಹಮದ್ ಅಲಿ, ಹಕೀಂ ಅಜಮಲ್‌ಖಾನ್, ಹಸನ್‌ಇಮಾಮ್‌, ಮೌಲಾನ ಅಬ್ದುಲ್‌ಕಲಾಂ ಆಜಾದ್ ಹೋರಾಟವನ್ನು ಪ್ರವೇಶಿಸಿದರು. ಎಂ.ಎ. ಜಿನ್ನಾ ಕಾಂಗ್ರೆಸ್‌ನ ಪ್ರಭಾವಿ ಯುವ ನಾಯಕ ಲೀಗನ್ನು ಸೇರಲು ಬಯಸಿತು. ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಲೀಗ್‌ನ ಬೆಳವಣಿಗೆಯಲ್ಲಿ ಪ್ರಮುಖ ಘಟ್ಟ ೧೯೧೬ರಲ್ಲಿ ಲಕ್ನೋದಲ್ಲಿ ನಡೆದ ಹೊಂದಾಣಿಕೆ ಹಾಗೂ ಒಪ್ಪಂದ. ಈ ಹೊಂದಾಣಿಕೆಯಲ್ಲಿ ಯುದ್ಧಾನಂತರ ಭಾರತಕ್ಕೆ ಜವಾಬ್ದಾರಿ ಸರ್ಕಾರವನ್ನು ಪಡೆಯುವುದಾಗಿತ್ತು. ಕೋಮು ರಾಜಕಾರಣ ಮಹತ್ವದ ಬೆಳವಣಿಗೆಯೆಂದರೆ ಪ್ರತ್ಯೇಕ ಮತದಾನವನ್ನು ಒಪ್ಪಿಕೊಳ್ಳಲಾಗಿತ್ತು. ಹೀಗೆ ಮುಂದುವರೆದ ರಾಷ್ಟ್ರೀಯತೆಯ ತೀವ್ರತೆ ಮುಸ್ಲಿಮ್‌ ಸಮಸ್ಯೆಯಾಗಿದ್ದ ಅದರಲ್ಲೂ ಕೇವಲ ಭಾವುಕ ಸಮಸ್ಯೆಯಾಗಿದ್ದ ಖಿಲಾಫತ್ ಸಮಸ್ಯೆಗೆ ಎಲ್ಲರೂ ‌ಪ್ರತಿಕ್ರಿಯೆಯನ್ನು ತೋರಿಸಿದರು. ಈ ಸಂದರ್ಭ ಸಾಮ್ರಾಜ್ಯಶಾಹಿ ವಿರೋಧದ ಚರ್ಚೆಗೆ ಅನುವು ಮಾಡಿಕೊಟ್ಟಿತು. ರೌಲತ್‌ಕಾಯಿದೆಯ ವಿರೋಧ ಹಾಗೂ ಖಿಲಾಫತ್ ಸಮಸ್ಯೆ ಚಳವಳಿಗೆ ಅನುವು ಮಾಡಿಕೊಟ್ಟಿತು.

ಗಾಂಧೀಜಿಯ ಪ್ರವೇಶದಿಂದ ಕಾಂಗ್ರೆಸ್‌ ಹಿಂದೂ ಮುಸ್ಲಿಮ್ ಏಕತೆಯ ಸಮಸ್ಯೆಯೊಂದಿಗೆ ರಾಷ್ಟ್ರೀಯ ಚಳವಳಿಯ ಕಡೆ ಸಾಗಿತು. ರಾಷ್ಟ್ರೀಯ ಹೋರಾಟಕ್ಕೆ ಹೊಸ ಚಾಲನೆ ನೀಡಿದರು. ಖಿಲಾಫತ್ ಚಳವಳಿಯಲ್ಲಿ ಸೌಹಾರ್ದದ ಚಳವಳಿ ಹಿಂಸಾರೂಪಕವನ್ನು ತಾಳಿದೆಯೆಂದು ೧೯೨೨ರಲ್ಲಿ ಅಸಹಕಾರ ಚಳವಳಿಯನ್ನು ಗಾಂಧೀಜಿ ಹಿಂದಕ್ಕೆ ತೆಗೆದುಕೊಂಡಾಗ ಬರದಿಂದ ಸಾಗುತ್ತಿದ್ದ ಹೋರಾಟವನ್ನು ಹಿಂದಕ್ಕೆ ಎಳೆದಂತಾಯಿತು. ಇದು ಹಿಂದೂ ಮತ್ತು ಮುಸ್ಲಿಮ್ ವಾದಿಗಳು ತಮ್ಮ ಜಾಡಿಗೆ ಹಿಂದಕ್ಕೆ ಹೋಗುವಂತೆ ಮಾಡಿದ ಒಂದು ಪ್ರಮುಖ ಕಾರಣವೂ ಆಗಿತ್ತು. ಲಾಲಾ ಲಜಪತ್‌ರಾಯ್, ಮದನಮೋಹನ ಮಾಳವೀಯ, ಎನ್.ಸಿ.ಕೇಳ್ಕರ್‌ ಹಿಂದೂ ಮಹಾಸಭಾವನ್ನು ಸೇರಿ ಹಿಂದುತ್ವವನ್ನು ಬಲಪಡಿಸತೊಡಗಿದರು. ಶುದ್ಧಿ ಚಳವಳಿ ಮತ್ತೆ ಕೈಗೆತ್ತಿಕೊಂಡರು. ಪರಸ್ಪರ ಪ್ರತಿಕ್ರಿಯೆ, ನಿಂದನೆಯಲ್ಲಿ ಸ್ಪರ್ಧಿಸುತ್ತಾ ಕೋಮು ಘರ್ಷಣೆಗಳಿಗೂ ಕಾರಣವಾದರು. ಅಸಹಕಾರ ಆಂದೋಲನವನ್ನು ಹಿಂತೆಗೆದುಕೊಂಡು ಸೈಮನ್‌ ಭಾರತಕ್ಕೆ ಬರುವ ನಡುವೆ ೧೧೨ ಪ್ರಮುಖ ಕೋಮು ಸಂಘರ್ಷಗಳು ಘಟಿಸಿರುವುದಾಗಿ ಸೈಮನ್‌ ವರದಿ ದಾಖಲಿಸಿದೆ.

ಕೋಮು ನೆಲೆಯ ರಾಜಕೀಯ ಸಂಘರ್ಷ ೧೯೨೭ರಲ್ಲಿ ಬಯಲಾಯಿತು. ಸೈಮನ್‌ ವರದಿಯ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಸರ್ವಪಕ್ಷಗಳ ಸಭೆಯನ್ನು ಕರೆದು ಮೋತಿಲಾಲ್‌ನೆಹರು ವರದಿಯನ್ನು ಸಿದ್ಧಪಡಿಸಿದರು. ಆ ವರದಿಯನ್ನು ಕಲ್ಕತ್ತ ಸಮಾವೇಶದಲ್ಲಿ ೧೯೨೮ರಲ್ಲಿ ಎಲ್ಲರ ಸಮಿತಿಗಾಗಿ ಮಂಡಿಸಲಾಯಿತು. ಈಗಾಗಲೇ ಮುಸ್ಲಿಮ್‌ ಲೀಗ್‌ಪ್ರತ್ಯೇಕ ಮತದಾನ ಹಾಗೂ ವಾಯುವ್ಯ ಸರಹದ್ದಿನ ಸುಧಾರಣೆ ಹಾಗೂ ಪ್ರತ್ಯೇಕ ಸಿಂದ್‌ಸ್ಥಾಪನೆಯನ್ನು ಕುರಿತು ಚರ್ಚಿಇತ್ತು. ಆದ್ದರಿಂದ ನೆಹರು ವರದಿಯ ಕೆಲವು ಅಂಶಗಳನ್ನು ಜಿನ್ನಾ ಹಾಗೂ ಮತ್ತೆ ಕೆಲವು ಅಂಶಗಳನ್ನು ಹಿಂದೂ ಮಹಾಸಭಾ ವಿರೋಧಿಸಿತು. ಅಂತಿಮವಾಗಿ ಜಿನ್ನಾ ತಮ್ಮದೇ ಆದ ೧೪ ಅಂಶಗಳನ್ನು ಮಂಡಿಸಿದರು. ಈ ಅಂಶಗಳು ಮುಂದಿನ ಲೀಗ್‌ನ ಹೋರಾಟದ ಪ್ರಮುಖ ಅಂಶಗಳಾದವು. ಹಿಂದೂ ಮಹಾಸಭಾ ಹಾಗೂ ಮುಸ್ಲಿಮ್‌ ಲೀಗ್‌ನೊಡನೆ ಸಂಧಾನ ಮಾಡಿಕೊಳ್ಳುತ್ತಾ ಹೋದಂತೆ ಹಾಗೂ ಕಾಂಗ್ರೆಸ್‌ನ ಒಳಗೇ ಇದ್ದ ಉದಾರ ಕೋಮುವಾದಿಗಳಿಂದ ಕಾಂಗ್ರೆಸ್ ಸಹ ಪ್ರಬಲ ಸೆಕ್ಯೂಲರ್ ವೇದಿಕೆಯಾಗಿ ನಿಲ್ಲಲಾಗಲಿಲ್ಲ. ದೇಶ ನರಳುತ್ತಿದ್ದ ಪ್ರಬಲ ಆರ್ಥಿಕ ವಿಚಾರಗಳ ಚರ್ಚೆಗಿಂತ ಕೋಮು ರಾಜಕೀಯಕ್ಕೆ ಹೆಚ್ಚಿನ ಗಮನ ನೀಡಬೇಕಾಯಿತು. ಅಂತರಂಗದಲ್ಲಿ ಧರ್ಮದ್ವೇಷವನ್ನು ಬಲಪಡಿಸಿಕೊಳ್ಳುತ್ತಾ ಹೊರಗೆ ದೇಶ, ಭಾಷೆ, ಸಂಸ್ಕೃತಿ, ಸ್ವಾತಂತ್ರ್ಯದ ವಿಚಾರಗಳನ್ನು ಮಾತನಾಡುತ್ತಿದ್ದುದು ಅಪರೋಪದ್ದೇನು ಆಗಿರಲಿಲ್ಲ. ಇಷ್ಟಾಗಿಯೂ ಕೋಮುವಾದ ಉಗ್ರರೂಪವನ್ನು ತಾಳಿರಲಿಲ್ಲ.

ದುಂಡುಮೇಜಿನ ಅಧಿವೇಶನದ ನಂತರ ರ್ಯಾಮ್‌ಸೆ ಮ್ಯಾಕ್‌ಡೊನಾಲ್ಡ್ ಕಮ್ಯುನಲ್ ಅವಾರ್ಡ್‌ನ್ನು ಘೋಷಿಸಿದರು. ಮುಸ್ಲಿಮ್‌ ಲೀಗ್‌ತನ್ನ ಪಕ್ಷವನ್ನು ಜಿಲ್ಲಾ ನೇತೃತ್ವದಲ್ಲಿ ಬಲಪಡಿಸತೊಡಗಿತು. ೧೯೩೫ರ ಕಾಯಿದೆ ಸ್ವಯಂ ಆಳ್ವಿಕೆ ನೀಡದುದನ್ನು ವಿರೋಧಿಸಿತು. ಕಾಂಗ್ರೆಸ್ ಹಲವು ಪ್ರಾಂತ್ಯಗಳಲ್ಲಿ ೧೯೩೭ರ ಚುನಾವಣೆಯಲ್ಲಿ ಗೆದ್ದು ಬಂದು ಸರ್ಕಾರವನ್ನು ರಚಿಸಿತು. ಅಲ್ಲಿ ಮುಸ್ಲಿಮ್‌ ಲೀಗ್ ಸ್ಪರ್ಧಿಯಾಗಿ ವಿರೋಧಿ ಬಣವಾಗಿ ತಲೆಯೆತ್ತಿತ್ತು. ಕಾಂಗ್ರೆಸ್‌ ಹಾಗೂ ಗಾಂಧೀಜಿಯ ನಿಂದನೆ ತೀವ್ರವಾಯಿತು. ಕೋಮುವಾದದ ಮಾನಸಿಕವಾಗಿ ಶತ್ರುವನ್ನು ಕುಗ್ಗಿಸುವ ನಿರಂತರ ಪ್ರಯತ್ನವನ್ನು ಮಾಡತೊಡಗಿತು. ಮುಸ್ಲಿಮ್‌ ಲೀಗ್ ಹಾಗೂ ಹಿಂದೂ ಮಹಾಸಭಾ ವಿದ್ಯಾವಂತ ಮಧ್ಯಮವರ್ಗವನ್ನು ಹಾಗೂ ಶ್ರೀಮಂತ ಜಮೀನುದಾರರನ್ನು ಒಳಗೊಂಡಿತ್ತು. ಈಗ ಅವರ ಕಾರ್ಯಾಚರಣೆ ವಿಸ್ತರಿಸತೊಡಗಿತು. ಬೇರೆ ಬೇರೆ ಪ್ರದೇಶದಲ್ಲಿ ಹಿಂದೂ ಹಾಗೂ ಮುಸ್ಲಿಮ್ ಪೈಪೋಟಿ ಬೇರೆ ಬೇರೆ ಸ್ವರೂಪದಲ್ಲಿತ್ತು. ಭೂಮಾಲೀಕ ಹಿಂದೂವಾಗಿದ್ದರೆ, ಮುಸಲ್ಮಾನರು ಗುತ್ತಿಗೆದಾರರಾಗಿರುತ್ತಿದ್ದರು. ಶ್ರೀಮಂತ ವರ್ತಕರು ಹಿಂದೂಗಳಾಗಿದ್ದಲ್ಲಿ ಅವರಿಂದ ಸಾಲ ಪಡೆದವರು ಮುಸಲ್ಮಾನರಿರುತ್ತಿದ್ದರು. ಹೀಗೆ ಬೇರೆ ಬೇರೆ ಹಂತದಲ್ಲಿ ಸಂಬಂಧವನ್ನು ಹೊಂದಿದ್ದರು. ಕೋಮು ರಾಜಕೀಯ ಆರಂಭವಾದಂತೆ ವ್ಯಕ್ತಿಯ ಧರ್ಮದ ಜೊತೆಗೆ ಉಳಿದೆಲ್ಲ ಸಾಮಾಜಿಕ ಸಂಬಂಧಗಳು ಉರುಳಾಗ ತೊಡಗಿದವು. ಇದು ರಾಜಕೀಯದಿಂದ ಆರಂಭಗೊಂಡು ಸಾಮಾಜಿಕ, ಆರ್ಥಿಕ ವಿಚಾರದೊಂದಿಗೆ ಬೆಸೆದುಕೊಳ್ಳತೊಡಗಿತು.

ಚುನಾವಣೆಯ ಫಲಿತಾಂಶ ಮುಸ್ಲಿಮ್‌ ಲೀಗ್‌ನ ತೀವ್ರ ವಿರೋಧಕ್ಕೆ ಕಾರಣವಾಯಿತು. ಮುಸ್ಲಿಮ್‌ ಪ್ರತ್ಯೇಕ ಮತದಾನವಿದ್ದ ೪೮೨ ಸೀಟುಗಳಲ್ಲಿ ೧೦೯ ಮುಸ್ಲಿಮ್‌ ಲೀಗ್‌ಗೆ ದೊರಕಿತ್ತು. ಅಂದರೆ ಮುಸ್ಲಿಮ್ ಸ್ಥಾನಗಳಲ್ಲಿ ೪.೮ ಮತಗಳನ್ನು ಮಾತ್ರವೇ ಮುಸ್ಲಿಮ್‌ ಲೀಗ್‌ತನ್ನದಾಗಿಸಿಕೊಂಡಿತ್ತು. ಮುಸ್ಲಿಮ್‌ ಲೀಗ್‌ಗೆ ತನ್ನ ಅಸ್ತಿತ್ವದ ಪ್ರಶ್ನೆ ಆರಂಭವಾಯಿತು. ಎರಡನೆಯ ಮಹಾಯುದ್ಧ ಆರಂಭವಾದುದರಿಂದ ೧೯೩೯ರಲ್ಲಿ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡಿದ್ದನ್ನು ಬಳಸಿಕೊಳ್ಳುತ್ತಾ ಮುಸ್ಲಿಮ್‌ ಲೀಗ್‌ಹಾಗೂ ಹಿಂದೂಮಹಾಸಭಾಗಳೆರಡು ಬ್ರಿಟಿಷರಿಗೆ ಬೆಂಬಲ ನೀಡಲು ಮುಂದಾದವು. ಆದರೆ ಈ ಬೆಂಬಲವನ್ನು ಬ್ರಿಟಿಷರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ಹಿಂದೂ ಮಹಾಸಭಾದಲ್ಲಿ ಫಾಸಿಸ್ಟ್‌ ಧೋರಣೆ ಆರಂಭವಾಯಿತು. ವಿ.ಡಿ. ಸಾವರ್ಕರ್‌ ಅವರು ಅದರ ನೇತೃತ್ವವನ್ನು ವಹಿಸಿದರು. ವ್ಯಕ್ತಿಯಾಗಿಯೂ ಸಾವರ್ಕರ್‌ರು ಬದಲಾಗಿದ್ದರು. ಕೇಶವ ಬಲರಾಮ ಹೆಡಗೇವಾರ್ ಅವರಿಂದ ೧೯೨೫ರಲ್ಲಿ ಆರಂಭವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂ ಪರವಾದ ಇದೇ ಧೋರಣೆಯನ್ನು ಹೊಂದಿತ್ತು. ಹಿಂದೂವಾದ ಮುಸ್ಲಿಮ್ ಸಂಘರ್ಷದ ತೀವ್ರ ಭಾವನೆಯನ್ನು ತಮ್ಮ ಬರಹದಲ್ಲಿ ಹೊರಹಾಕಿತು. ಎಂ.ಎಸ್. ಗೋಳ್ವಲ್ಕರ್ ಅವರು ಬಂಚ್ ಆಫ್ ಥಾಟ್ಸ್ ಎನ್ನುವ ಕಾರ್ಯಸೂಚಿ ಕೃತಿಯನ್ನು ಹೊರತಂದರು. ಹಿಂದೂಸ್ತಾನ ಹಿಂದೂಗಳದ್ದು ಎಂಬ ತತ್ವವನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಹಿಂದೂ ಧರ್ಮವನ್ನು ಒಪ್ಪಿ ಅನುಸರಿಸುವವರು ಮಾತ್ರ ಇಲ್ಲಿ ಬದುಕಬೇಕೆಂಬ ಧೋರಣೆಯನ್ನು ಹೊಂದಿದ್ದರು. ನಾವು ಹಿಂದೂಗಳು ಒಂದು ಕಡೆ ಬ್ರಿಟಿಷರ ವಿರುದ್ಧವಾಗಿಯೂ ಮತ್ತೊಂದು ಕಡೆ ಮುಸ್ಲಿಮರ ವಿರುದ್ಧವಾಗಿಯೂ ಹೋರಾಡಬೇಕೆಂದು ತಿಳಿಸಿದರು. ಹಿಂದೂ-ಮುಸ್ಲಿಮ್ ಏಕತೆಯನ್ನು ಸಾರುತ್ತಿದ್ದ ಕಾಂಗ್ರೆಸ್‌ ಸಹ ಅವರಿಗೆ ಬೇಡವಾಗಿತ್ತು. ಕೋಮು ಆಧಾರದ ಮೇಲೆ ದೇಶ ವಿಭಜನೆಯ ಚರ್ಚೆ ಆರಂಭವಾದಾಗ ಅವರು ಅದರ ಪರವಾಗಿಯೇ ನಿಂತರು. ಹಿಂದೂ ಧರ್ಮ ಹಾಗೂ ಸಂಸ್ಕೃತಿ ಆತಂಕದಲ್ಲಿದೆ ಎಂದು ಅವರು ಭಾವಿಸಿದರು. ಕಾಂಗ್ರೆಸ್‌ನ ನೇತೃತ್ವದಲ್ಲಿ ನಡೆದ ಹೋರಾಟ ಅಹಿಂಸಾ ತತ್ವದ ಮೇಲೆ ನಿಂತಿತ್ತು. ಗಾಂಧೀಜಿಯ ನೇತೃತ್ವ ಕಾಂಗ್ರೆಸ್‌ ಶಸ್ತ್ರಸಜ್ಜಿತ ಹೋರಾಟಕ್ಕೆ ಇಳಿಯದಂತೆ ಸದಾ ತಡೆಯೊಡ್ಡಿತು. ಆದರೆ ಹಿಂದೂ ಮಹಾಸಭಾಕ್ಕಾಗಲಿ, ಮುಸ್ಲಿಮ್‌ ಲೀಗ್‌ಗಾಗಲಿ ಅಹಿಂಸೆ ಸಿದ್ಧಾಂತವಾಗಿರಲಿಲ್ಲ, ಅದು ಹೋರಾಟದ ಮಾರ್ಗವು ಆಗಿರಲಿಲ್ಲ. ೧೯೩೭ರ ನಂತರ ಈ ಅಂಶಗಳು ಸ್ಪಷ್ಟವಾಗತೊಡಗಿದವು. ಕಾಂಗ್ರೆಸ್‌ನ ನಡೆಯಲ್ಲಿ ಅವರಿಗೆ ತಪ್ಪುಗಳೇ ಕಾಣತೊಡಗಿದವು. ೧೯೩೭ರಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಿದಾಗ ಮುಸ್ಲಿಮ್‌ ಲೀಗ್‌ನೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದಿತ್ತು. ಕಾಂಗ್ರೆಸ್‌ನ ಅಭಿವೃದ್ಧಿ ಯೋಜನೆಗಳು ಕೇವಲ ಹಿಂದೂಗಳನ್ನು ಎಟುಕಿಸುವಂತಿದ್ದವು. ಹಾಗಾಗಿ ೧೯೩೯ರಲ್ಲಿ ಕಾಂಗ್ರೆಸ್‌ ಸರ್ಕಾರ ರಾಜೀನಾಮೆ ನೀಡಿದಾಗ ಮುಸ್ಲಿಮ್‌ ಲೀಗ್‌ ‘ಡೇ ಆಫ್‌ ಡೆಲಿವರೆನ್ಸ್‌’ಅನ್ನು ಆಚರಿಸಿತು. ಆಲ್‌ಇಂಡಿಯಾ ಮುಸ್ಲಿಮ್‌ ಲೀಗ್‌ನ ೧೯೪೦ರ ಅಧಿವೇಶನದಲ್ಲಿ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿತು. ಮುಸಲ್ಮಾನರು ಅಧಿಕವಾದ ಪ್ರದೇಗಳನ್ನು ತಮ್ಮ ಸ್ವತಂತ್ರ ರಾಜ್ಯವೆಂದು ಪರಿಗಣಿಸಬೇಕೆಂದು ಬೇಡಿಕೆಯನ್ನು ಲ್ಲಿಸಿತು. ಒಂದು ಕೇಂದ್ರ ಸರ್ಕಾರವನ್ನು ಹೊಂದಿರುವ ಸಂವಿಧಾನ ತಮಗೆ ಬೇಕಿಲ್ಲ ಎಂದು ತಿಳಿಸಿತು. ಪಾಕಿಸ್ತಾನದ ಕಲ್ಪನೆ ಮೊದಲು ಬಂದುದು ಕವಿ ಇಕ್ಬಾಲ್‌ರಿಗೆ. ಭಾರತದ ಮುಸಲ್ಮಾನರು ಒಂದು ಸಮುದಾಯ ಮಾತ್ರವಲ್ಲ ಒಂದು ದೇಶವಾಗುತ್ತಾರೆಂದು ಜಿಲ್ಲಾ ಘೋಷಿಸಿದರು. ಹಿಂದೂಗಳು ಮತ್ತು ಮುಸಲ್ಮಾನರು ಒಂದು ದೇಶವಾಗಲು ಸಾಧ್ಯವೇ ಇಲ್ಲ. ಅವರು ವಿಭಿನ್ನ ಸಂಸ್ಕೃತಿ, ಸಾಮಾಜಿಕ ಆಚರಣೆ, ಭಾಷೆ, ಸಾಹಿತ್ಯ, ಧರ್ಮ-ದರ್ಶನವನ್ನು ಹೊಂದಿದ್ದಾರೆ ಹಾಗೂ ಲಾಹೋರ್ ಅಧಿವೇಶನದ ಜಿಲ್ಲಾರ ಈ ಮಾತುಗಳು ಭಾರತ ಪಾಕಿಸ್ತಾನದ ಪ್ರತ್ಯೇಕತೆಯ ಚರ್ಚೆಗೆ ಭದ್ರವಾದ ತಳಪಾಯವನ್ನು ಹಾಕಿತು.

ಎರಡನೆಯ ಮಹಾಯುದ್ಧದ ಸಂದರ್ಭವಾದುದರಿಂದ ಭಾರತ ಸ್ವಾತಂತ್ರ್ಯದ ಯಾವುದಾದರೊಂದು ತೀರ್ಮಾನಕ್ಕೆ ಬರಬೇಕಾದ ಅನಿವಾರ್ಯತೆ ಬ್ರಿಟಿಷರಿಗೆ ಹೆಚ್ಚಿತು. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವಾಗಿ ತೋರಿಸಿಕೊಂಡ ಬ್ರಿಟಿಷರು ಭಾರತದಲ್ಲಿ ಹೆಚ್ಚು ಕಾಲ ಆಡಳಿತವನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅಲ್ಲದೆ ಭಾರತದ ಆಂತರಿಕ ಸಮಸ್ಯೆ ಯುದ್ಧ ಸಂದರ್ಭದಲ್ಲಿ ಮಾರಕವಾದ ವಿಚಾರವಾಗಿತ್ತು. ಭಾರತ ಬೇರೆ ದೇಶದೊಂದಿಗೆ ಕೈ ಜೋಡಿಸದಂತೆಯೂ ಎಚ್ಚರ ವಹಿಸಬೇಕಾಗಿತ್ತು. ದೇಶದ ರಾಜಕೀಯದಲ್ಲಿ ಪ್ರಧಾನ ಚರ್ಚೆ ದೇಶ ವಿಭಜನೆ, ಹಾಗಾದರೆ ಹೇಗೆ ವಿಭಜಿಸಬೇಕೆಂಬ ಚರ್ಚೆಗಳಲ್ಲಿ ಕ್ರಿಪ್ಸ್‌ ಆಯೋಗ, ಕ್ಯಾಬಿನೆಟ್‌ ಮಿಷನ್‌ ಪ್ಲಾನ್‌ಗಳು ಮುರಿದು ಬಿದ್ದವು. ಏಕತೆಯನ್ನು ಸಾರುತ್ತಿದ್ದ ಕಾಂಗ್ರೆಸ್‌ನಲ್ಲೂ ಭಿನ್ನಾಭಿಪ್ರಾಯಗಳು ತಲೆದೋರಲು ಆರಂಭವಾಯಿತು. ಮುಸ್ಲಿಮ್‌ ಲೀಗ್‌ಅನ್ನು ಸಮಾಧಾನ ಪಡಿಸುವ ವಾದಪ್ರತಿವಾದಗಳು ಮುಂದುವರೆಯುತ್ತಾ ಹೋದವು.

ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಸತ್ಯಮೂರ್ತಿ ಅವರು ‘ಹಿಂದೂಗಳಿಂದ ಮುಸ್ಲಿಮ್‌ ಲೀಗ್‌ ಶೋಷಣೆಗೆ ಒಳಗಾಗಿದೆ ಎಂಬುದು ತಪ್ಪು. ಏಕೆಂದರೆ ಹಿಂದೂ ಸಮುದಾಯದಲ್ಲಿ ಶ್ರೀಮಂತ ಜಮೀನ್ದಾರರು, ಬಡವರು ಎಲ್ಲರೂ ಇದ್ದಾರೆ. ಸಾರಸಗಟಾಗಿ ಹಿಂದುಗಳು ಶೋಷಣೆಗೆ ಇಳಿದಿಲ್ಲ’ ಎಂದು ಹೇಳತೊಡಗಿದರು. ರಾಜೇಂದ್ರ ಪ್ರಸಾದರು ಸಣ್ಣ ರಾಜ್ಯಗಳು ಸ್ವತಂತ್ರ ಆರ್ಥಿಕತೆಯನ್ನು ಹೊಂದುವುದು ಕಷ್ಟದ ವಿಚಾರ. ಭಾರತದ ಹೊರಗಿನ ಮುಸ್ಲಿಮ್‌ ರಾಜ್ಯಗಳು ಆರ್ಥಿಕತೆಗಿಂತ ಇತರ ವಿಭಿನ್ನ ವಿಚಾರಗಳ ಮೇಲೆ ತಮ್ಮ ನೆಲೆಯನ್ನು ಕಾಣುತ್ತಿವೆ ಎಂದರು. ಅದನ್ನೇ ಮುಂದುವರಿಸಿ, ನೆಹರೂ ಅವರು ಪ್ರಪಂಚದಲ್ಲಿ ಇಂದು ದೊಡ್ಡ ಒಕ್ಕೂಟಗಳು ರಚನೆಗೊಳ್ಳುತ್ತಿವೆ. ಅದರಿಂದ ಯಾವುದೇ ವಿಭಜನೆಯು ಸೂಕ್ತವಲ್ಲ ಎಂದು ಸಾರಿದರು. ಕಾಂಗ್ರೆಸ್‌ ಸಮಾಜವಾದಿ ಪಕ್ಷ ದ್ವಿರಾಷ್ಟ್ರ ಸಿದ್ಧಾಂತವನ್ನು ನಿರಾಕರಿಸಿತು. ಮುಸ್ಲಿಮ್ ಲೀಗ್‌ನ ಬೇಡಿಕೆಯನ್ನು ಹಿಂದೂ ಮಹಾಸಭಾ ಹಾಗೂ ಸಾವರ್ಕರ್‌ ಪೂರ್ಣವಾಗಿ ನಿರಾಕರಿಸಿದರು. ಗಾಂಧೀಜಿ ವಿಭಜನೆಯನ್ನು ಪೂರ್ಣವಾಗಿ ನಿರಾಕರಿಸಿದರು. ಭಾರತ ಅಖಂಡವಾದುದು ಎಂದು ಚಾರಿತ್ರಿಕವಾಗಿ ಅದರ ಅಖಂಡತೆಯನ್ನು ಮಂಡಿಸಿದರು. ಅಂಬೇಡ್ಕರರು ಭಾರತದ ವಿಭಜನೆಯ ಬಗೆಗೆ ದೀರ್ಘವಾಗಿ ಮತ್ತು ವಾಸ್ತವದ ನೆಲೆಯಲ್ಲಿ ಚರ್ಚಿಸಿದರು. ಲೀಗ್‌ಮುಸ್ಲಿಮ್ ಐಡೆಂಟಿಟಿಯನ್ನು ಕಂಡುಕೊಂಡ ನಂತರ ಹಿಂದೂ-ಮುಸ್ಲಿಮ್ ಎರಡೂ ಹೋರಾಟದ ಬಣಗಳಾಗಿವೆ. ‘ಏಕತೆ’ ಎನ್ನುವುದು ಕೃತಕವಾದುದು. ಅದು ಸಹಜವಾಗಿ ಮೂಡಬೇಕಾದುದು. ಮುಸ್ಲಿಮ್ ಒಂದು ಎಂಬ ಭಾವನೆ ಧರ್ಮ ಮತ್ತು ಸಂಸ್ಕೃತಿಯೊಂದಿಗೆ ಬಂದಿದೆ ಎಂದರು. ಒಂದು ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕ ರಾಜ್ಯಗಳನ್ನು ಹುಟ್ಟುಹಾಕುವುದು ಪಾಕಿಸ್ತಾನದ ಮೂಲ ಉದ್ದೇಶ. ಆದರೆ ಬಹುಸಂಖ್ಯಾತ ರಾಜ್ಯಗಳನ್ನು ಹುಟ್ಟು ಹಾಕುವುದು ಇಂದಿನ ಸಂದರ್ಭದಲ್ಲಿ ಅಸಾಧ್ಯವಾದುದೇನು ಅಲ್ಲ. ಆತುರದ ನಿರ್ಧಾರಗಳಿಗಿಂತ ಶಾಶ್ವತ ಪರಿಹಾರವನ್ನು ಅವರು ಬಯಸಿದರು.

ಮುಸಲ್ಮಾನರು ಪ್ರತ್ಯೇಕತೆಯನ್ನು ಕೇಳುವುದು ಅವರ ಹಕ್ಕು ಎಂದು ಕಮ್ಯುನಿಸ್ಟ್ ಪಕ್ಷ ತನ್ನ ನಿಲುವನ್ನು ತಳೆಯಿತು. ಸ್ವಯಂ ನಿರ್ಣಯದ ಹಕ್ಕು ಎಲ್ಲರಿಗೂ ಇರಬೇಕೆಂದು ಅದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಬೆಳೆದ ಬಿಕ್ಕಟ್ಟಿನಲ್ಲಿ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಯ ನಂತರ ಸೆರೆಮನೆಯಲ್ಲಿದ್ದರು. ಹಿಂದೂ-ಮುಸ್ಲಿಮ್‌ ಒಂದಾಗದ ಭಾರತವನ್ನು ಕಲ್ಪಿಸಿಕೊಳ್ಳುವುದು ಅವರಿಗೆ ಅಸಾಧ್ಯವಾಗಿತ್ತು. ೧೯೪೬ರ ನಂತರ ಜಿನ್ನಾ ಹಾಗೂ ನೆಹರೂ ಅವರಲ್ಲಿ ನಾಯಕತ್ವದ ಪೈಪೋಟಿಯೂ ತೀವ್ರಗೊಂಡು ದೇಶದ ವಿಭಜನೆಯು ಅನಿವಾರ್ಯವಾಗತೊಡಗಿತು.

* * *

ಕೋಮುವಾದ ಕೇವಲ ಚರ್ಚೆವಾದಗಳ ಹಂತಕ್ಕೆ ನಿಲ್ಲದೆ ರಕ್ತಪಾತಕ್ಕೆ ತಿರುಗಿತು. ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಲು ಸುರಿಸದೆ ಇದ್ದ ರಕ್ತವನ್ನು ಭಾರತೀಯರು ಭಾರತದ ವಿಭಜನೆಗಾಗಿ ಸುರಿದರು.೧೯೪೬ರ ಆಗಸ್ಟ್ ೧೬ರಂದು ಪಾಕಿಸ್ತಾನಕ್ಕಾಗಿ ನೇರ ಹೋರಾಟ ಆರಂಭವಾಯಿತು. ಕಲ್ಕತ್ತಾದಲ್ಲಿ ನಡೆದ ಆಕ್ರಮಣಗಳು ಹತೋಟಿಗೆ ಸಿಗದಂತಾಯಿತು. ಲೀಗ್ ಪಾಕಿಸ್ತಾನದ ಘೋಷಣೆಯನ್ನು ಮಾಡಿದರೆ, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರದ ಘೋಷಣೆಗಳನ್ನು ಕೂಗಿತು. ಈ ಕ್ರೌರ್ಯ ದೇಶದಾದ್ಯಂತ ಹರಡಿತು. ಇದು ಉತ್ತರ ಭಾರತದಲ್ಲಿ ತೀವ್ರವಾಗಿತ್ತು. ನೆಹರೂ ನೇತೃತ್ವದಲ್ಲಿ ಸೆಪ್ಟೆಂಬರ್‌೧೯೪೬ರಲ್ಲಿ ಹಂಗಾಮಿ ಸರ್ಕಾರವನ್ನು ರಚಿಸಲಾಗಿತ್ತು. ಈ ಎಲ್ಲದರ ನಡುವೆ ಏಕಾಂಗಿಯಾಗಿ ಚರಿತ್ರೆಯನ್ನು ಬದಲಾಯಿಸಲು ಪ್ರಯತ್ನಿಸಿದ ವ್ಯಕ್ತಿ ಗಾಂಧೀಜಿಯಾಗಿದ್ದರು. ಗಲಭೆ ಪ್ರದೇಶಗಳಿಗೆ ಭೀತಿಯಿಲ್ಲದೆ ನಡೆದರು. ತಮ್ಮ ೭೭ನೆಯ ವಯಸ್ಸಿನಲ್ಲಿ ಶಾಂತಿಗಾಗಿ ಅವರು ಉಪವಾಸ ಆರಂಭಿಸಿದ್ದರು. ಭಾರತದ ವಿಭಜನೆ ಆಗುವುದಾದರೆ ಅದು ತನ್ನ ಹೆಣದ ಮೇಲೆಯೇ ಎಂದು ಅವರು ಘೋಷಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಕೊಡುವುದು ನಿರ್ಧಾರವಾಗಿದ್ದು ಆ ದಿಕ್ಕಿನ ಕಾರ್ಯಾಚರಣೆಗಾಗಿ ಲಾರ್ಡ್‌ ಮೌಂಟ್‌ ಬ್ಯಾಟನ್‌ರನ್ನು ಭಾರತಕ್ಕೆ ಕಳುಹಿಸಲಾಯಿತು. ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನವೆಂಬ ಎರಡು ಡೊಮಿನಿಯನ್‌ಗಳಿಗೆ ಅಧಿಕಾರವನ್ನು ಹಸ್ತಾಂತರಿಸಲು ನಿರ್ಧರಿಸಲಾಯಿತು. ಅನಂತರ ನೆಹರು ಅವರ ವಿರೋಧದಿಂದಾಗಿ ಮತ್ತು ಒಂದು ದೇಶಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಸಾಧ್ಯವಿಲ್ಲವೆಂದು ಕಂಡುಬಂದಿತು. ಜೂನ್ ೩ ರಂದು ಲಾರ್ಡ್‌ ಮೌಂಟ್‌ ಬ್ಯಾಟನ್‌ ಇನ್ನು ವರ್ಷದ ನಂತರ ಕೊಡಬೇಕಾಗಿದ್ದ ಸ್ವಾತಂತ್ರ್ಯವನ್ನು ಆಗಸ್ಟ್‌೧೫, ೧೯೪೭ರಂದೇ ಬಿಟ್ಟುಕೊಡುವುದಾಗಿ ಘೋಷಿಸಿದರು. ಆದರೂ ವಿಭಜನೆಯ ಸಮಸ್ಯೆ ಮಾತ್ರ ಪೂರ್ಣ ಬಗೆಹರಿದಿರಲಿಲ್ಲ. ಪಾಕಿಸ್ತಾನ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುವುದೆಂದು ತಿಳಿಸಿರಲಿಲ್ಲ. ದಿನದಿನವೂ ಪಂಜಾಬಿನಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗತೊಡಗಿತು. ಭವಿಷ್ಯದ ಭಯದಿಂದ ಹಿಂದೂಗಳು ಭಾರತದ ಕಡೆಗೂ ಮುಸಲ್ಮಾನರು ಪಾಕಿಸ್ತಾನದ ಕಡೆಗೂ ಹೋಗತೊಡಗಿದರು. ಇದರಲ್ಲಾಗುತ್ತಿದ್ದ ಸಾವು ನಿರಂತರವಾಗತೊಡಗಿತ್ತು. ಪಾಕಿಸ್ತಾನ ಮತ್ತು ಭಾರತ ಎಂಬುದಾಗಿ ದೇಶವನ್ನು ವಿಭಜಿಸಲು ನಿರ್ಧರಿಸಿದ ನಂತರ ಮೌಂಟ್‌ ಬ್ಯಾಟನ್‌ ಬಂಗಾಳ ಮತ್ತು ಪಂಜಾಬ್‌ದಲ್ಲಿ ಗಡಿರೇಖೆಯನ್ನು ನಿರ್ಧರಿಸಲು ಎರಡು ಆಯೋಗಗಳನ್ನು ನೇಮಿಸಿದರು. ಹೈದರಾಬಾದ್‌, ಪಶ್ಚಿಮ ಪಂಜಾಬ್‌ ವಾಯುವ್ಯ ಸರಹದ್ದಿನ ಪ್ರಾಂತ್ಯ, ಬಲೂಚಿಸ್ತಾನ ಹಾಗೂ ಪೂರ್ವ ಬಂಗಳವನ್ನೊಳಗೊಂಡ ಪಾಕಿಸ್ತಾನವನ್ನು ರಚಿಸಿ ಮೊದಲು ಪಾಕಿಸ್ತಾನಕ್ಕೆ ಸ್ವಾತಂತ್ರ್ಯವನ್ನು ನೀಡಿದಾಗ ಅವರು ಹೇಳಿದ ಮಾತು ಐತಿಹಾಸಿಕವಾಗಿತ್ತು. ‘ವಿಧಿಯೊಡನೆ ಮಾಡಿಕೊಂಡ ಅನುಸಂಧಾನ’ (Tryst with Destiny) ಎಂದು ಅವರು ಘೋಷಿಸಿದರು. ಆದರೆ ಅದು ಕೋಮುವಾದಕ್ಕೆ ಹಾಡಿದ ಅಂತ್ಯವಾಗಿರಲಿಲ್ಲ. ಲಕ್ಷಾಂತರ ಹೆಣಗಳನ್ನು ಹೊತ್ತ ರೈಲುಗಳು ಭಾರತದಿಂದ ಪಾಕಿಸ್ತಾನದ ಕಡೆಗೂ ಹಾಗೂ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಹರಿದುಬಂದವು.