ಮಹಮ್ಮದ್ ಅಲಿ ಜಿಲ್ಲಾ ಅವರು ಪಾಕಿಸ್ತಾನದಲ್ಲಿ ರಾಷ್ಟ್ರಪಿತ, ಅತ್ಯುನ್ನತ ನಾಯಕ, ಎಂದು ಪ್ರಚಲಿತವಾಗಿದ್ದಾರೆ. ಇವರು ಬಾಂಬೆ ಪ್ರೆಸಿಡೆನ್ಸಿಯ ಬ್ರಿಟಿಷ್ ಭಾರತದ ಪರಿಮಿತಿಯಲ್ಲಿದ್ದ ಕರಾಚಿಯಲ್ಲಿ ೧೮೭೬ ಡಿಸೆಂಬರ್ ೨೫ರಂದು ಜನ್ಮ ತಾಳಿದರು. ಏಳು ಅಣ್ಣತಮ್ಮಂದಿರಲ್ಲಿ ಹಿರಿಯರಾಗಿದ್ದ ಇವರು ಶ್ರೀಮಂತ ಗುಜರಾತಿ ವ್ಯಾಪಾರಿ ಮನೆತನಕ್ಕೆ ಸೇರಿದವರಾಗಿದ್ದರು. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಜಿನ್ನಾ ಸಿಂಧ್ ಮದ್ರಾಸದಿಂದ ವಿವಿಧ ಧರ್ಮದ ಶಾಲೆಗಳಲ್ಲಿ ತನ್ನ ವಿದ್ಯಾರ್ಜನೆ ಮಾಡಿದ್ದರು. ೧೮೯೨ರಲ್ಲಿ ಇಂಗ್ಲೆಡ್‌ನ ಗ್ರಹಾಂ ಹಡಗಿನ ಕಂಪನಿಯಲ್ಲಿ ಕೆಲಸಕ್ಕೆ ಸೇರ ಹೊರಟಿದ್ದ ಜಿಲ್ಲಾ ಎಮಿಬಾಯಿ ಎಂಬ ತನ್ನ ದೂರ ಸಂಬಂಧಿಯನ್ನು ತಾಯಿಯ ಒತ್ತಡಕ್ಕೆ ಮದುವೆಯಾದರು. ಕೆಲವೇ ತಿಂಗಳಲ್ಲಿ ಆಕೆಯನ್ನು ಕಳೆದುಕೊಂಡ ಜಿನ್ನಾ ತನ್ನ ತಾಯಿಯನ್ನೂ ಕಳೆದುಕೊಂಡು ತಮ್ಮ ಕೆಲಸವನ್ನು ಬಿಟ್ಟು ಕಾನೂನು ವಿದ್ಯಾಭ್ಯಾಸದ ಕಡೆಗೆ ಒಲವು ತೋರಿ ೧೯ನೆಯ ವಯಸ್ಸಿನಲ್ಲಿ ಇಂಗ್ಲೆಂಡಿನ ಬಾರ್‌ಗೆ ಕರೆಯಲ್ಪಟ್ಟ ಅತ್ಯಂತ ಕಿರಿಯ ಭಾರತೀಯನೆನಿಸಿಕೊಂಡರು. ಇದೇ ಸಂದರ್ಭದಲ್ಲಿ ಭಾರತದ ದಾದಾಭಾಯಿ ನವರೋಜಿ, ಸರ್ ಫಿರೋಜಶಹಾ ಮೆಹತಾ ಇವರೊಂದಿಗೆ ಸೇರಿ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡು ಭಾರತದಲ್ಲಿ ಸಂವಿಧಾನಾತ್ಮಕ ಸ್ವಯಂ ಆಡಳಿತ ವ್ಯವಸ್ಥೆಯ ಬಗ್ಗೆ ಚಿಂತನೆ ಬೆಳೆಸಿಕೊಂಡರು. ಭಾರತೀಯರ ಮೇಲೆ ಬ್ರಿಟಿಷರ ದಬ್ಬಾಳಿಕೆ ಹಾಗೂ ಭಾರತೀಯರನ್ನು ತಿರಸ್ಕಾರ ಮನೋಭಾವದಿಂದ ನೋಡುವ ಬ್ರಿಟಿಷರನ್ನು ಅವರು ವಿರೋಧಿಸತೊಡಗಿದ್ದರು. ಇಂತಹ ಮನೋಭಾವನೆ ಹೊಂದಿದ್ದ ಜಿನ್ನಾ ಇವರು ಇಂಗ್ಲೆಂಡಿನಿಂದ ಭಾರತಕ್ಕೆ ತನ್ನ ತಂದೆಯ ಮುರಿದುಬಿದ್ದ ವ್ಯಾಪಾರ ವಹಿವಾಟಿನ ಪುನರಾರಂಭಿಸಲು ಶ್ಚೇತನಕ್ಕೆ ಹಿಂದಿರುಗಿದರು ಹಾಗೂ ೧೮೯೬ ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು.

ಹೀಗೆ ಪ್ರಾರಂಭವಾದ ಇವರ ರಾಜಕೀಯ ಜೀವನ ಭಾರತದ ಸಂಪೂರ್ಣ ಸ್ವಾತಂತ್ರ್ಯದ ಪರವಾದ ಹೋರಾಟಕ್ಕೆ ಎಡೆ ಮಾಡದಿದ್ದರೂ, ಭಾರತದ ಸಮಾಜದ ಮೇಲೆ ಬ್ರಿಟಿಷರ ಪ್ರಭಾವ, ಅವರಿಂದಾದ ಅನುಕೂಲಗಳನ್ನು ಅರಿತು ಬ್ರಿಟಿಷರ ಇಂಪೀರಿಯಲ್‌ ಶಾಸನ ಸಮಿತಿಯ ಸದಸ್ಯರಾದರು. ಹೆಚ್ಚಿನ ಅಧಿಕಾರವಿಲ್ಲದಿದ್ದರೂ, ಈ ಶಾಸನ ಸಮಿತಿಯ ಮೂಲಕ ಬಾಲ್ಯವಿವಾಹದ ನಿಯಂತ್ರಣಾ ಕಾಯಿದೆ, ಮುಸಲ್ಮಾನರ ವಕ್ಫನ ಶಾಸನೀಕರಣ, ಸ್ಯಾಂಡರಸ್ಟ್‌ಸಮಿತಿ ಮುಖಾಂತರ ಭಾರತೀಯ ಸೇನಾ ಅಕಾಡಮಿಯನ್ನು ಡೆಹರಾಡೂನನಲ್ಲಿ ಸ್ಥಾಪಿಸುವಲ್ಲಿ ಯಶಸ್ಸನ್ನು ಸಾಧಿಸಿದರು.

ಜಿನ್ನಾ ಹಾಗೂ ಮುಸ್ಲಿಮ್‌ ಲೀಗ್ ಸಂಬಂಧ

ತನ್ನ ವಿದ್ಯಾಭ್ಯಾಸ, ಪರಿಸರ ಹಾಗೂ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಬೆಳೆದ ಜಿನ್ನಾ ೧೯೦೬ರಲ್ಲಿ ಸ್ಥಾಪಿಸಿದ್ದ ಆಲ್ ಇಂಡಿಯಾ ಮುಸ್ಲಿಮ್‌ ಲೀಗ್‌ಗೆ ಸೇರುವುದನ್ನು ಅದರ ಧಾರ್ಮಿಕ ನಿಲುವಿಗಾಗಿ ವಿರೋಧಿಸಿದ್ದವರು. ಇವರ ದೃಷ್ಟಿಯಲ್ಲಿ ಇದು ತೀರಾ ಮುಸ್ಲಿಮ್‌ ಪರವಾದ ಸಂಘಟನೆಯಾಗಿತ್ತು. ಧರ್ಮನಿರಪೇಕ್ಷತೆ, ತಾಟಸ್ಥ್ಯತೆಯಲ್ಲಿ ನಂಬಿಕೆ ಬೆಳೆಯಿಸಿಕೊಂಡಿದ್ದ ಜಿನ್ನಾ ಬಹುಶಃ ತನ್ನ ಗುಜರಾತಿನ ಧರ್ಮನಿರಪೇಕ್ಷ ಸಮಾಜದ ಮೂಲಾಂಶಗಳನ್ನು ರೂಢಿಸಿಕೊಂಡಿದ್ದ ಕಾರಣ ೧೯೧೩ರಲ್ಲಿ ಮುಸ್ಲಿಮ್ ಲೀಗ್‌ ಸದಸ್ಯತ್ವ ಪಡೆದು ೧೯೧೬ರಲ್ಲಿ ಲಕ್ನೋದಲ್ಲಿನ ಸಮ್ಮೇಳನದಲ್ಲಿ ಅದರ ಅಧ್ಯಕ್ಷ ಸ್ಥಾನ ಅಲಂಕರಿಸಿ ಲಕ್ನೋ ಒಪ್ಪಂದ ಮೇರೆಗೆ, ಕಾಂಗ್ರೆಸ್‌ ಹಾಗೂ ಮುಸ್ಲಿಮ್‌ ಲೀಗನ್ನು ಒಟ್ಟಿಗೆ ಸೇರಿಸಿ ಮುಸ್ಲಿಮ್‌ ಲೀಗ್‌ನ ತೀವ್ರತರವಾದ ಮುಸ್ಲಿಮ್ ಪರ ಚಿಂತನೆಗೆ ಕಡಿವಾಣ ಹಾಕಿ ಸ್ವಯಂ ಸರ್ಕಾರ ಭಾರತಕ್ಕೆ ಎಂಬ ನಿಲುವಿನ ಹಲವಾರು ಅಂಶಗಳ ಬಗ್ಗೆ ಒಮ್ಮತ ಮೂಡಿಸಿದ ನಾಯಕರಾಗಿದ್ದರು.

ಇವರ ದೃಷ್ಟಿಯಲ್ಲಿ ಮುಸ್ಲಿಮ್‌ ಲೀಗ್‌ರಾಜಕೀಯವಾಗಿ ಮುಸ್ಲಿಮ್‌ ಪರವಾದ ಸಂಘಟನೆಯಾಗಿತ್ತೇ ಹೊರತು ಧಾರ್ಮಿಕವಲ್ಲ ಎಂಬ ಚರ್ಚೆ ಕೆಲವು ಚರಿತ್ರೆಕಾರರಲ್ಲಿ ಒಮ್ಮತ ಮೂಡಿಸಿಲ್ಲ. ೧೯೧೮ರಲ್ಲಿ ರತನಭಾಯಿ ಪೇಟೀಟ್‌ನ್ನು ತಮ್ಮ ಪತ್ನಿಯಾಗಿ ಸ್ವೀಕರಿಸಿದರು. ಜಿನ್ನಾರಿಗೆ ಇದು ಇವರ ಎರಡನೇ ಮದುವೆ. ಈಕೆ ಪಾರ್ಸಿಯವರಾಗಿದ್ದರು. ಮುಂದೆ ಈ ಮದುವೆಗೆ ಪಾರ್ಸಿ ಹಾಗೂ ಮುಸ್ಲಿಮರಿಂದ ವಿರೋಧ ವ್ಯಕ್ತವಾಗಿ ಶ್ರೀಮತಿ ರಥನ್‌ಭಾಯಿ ಪೆಟಿಟ್‌ ಅವರು ಇಸ್ಲಾಂಗೆ ಪರಿವರ್ತನೆಯಾಗಿ ಮರಿಯಂ ಜಿನ್ನಾ ಎಂಬ ಹೆಸರಿನಿಂದ ಪ್ರಚಲಿತರಾದರು. ವೈಯಕ್ತಿಕವಾಗಿ ಜಿನ್ನಾ ಈ ಧಾರ್ಮಿಕ ಅಂಶದ ಬಗ್ಗೆ ಹೆಚ್ಚು ಗಮನ ಹರಿಸದಿದ್ದರೂ ಒತ್ತಡಕ್ಕೆ ಮಣಿಯುವ ಇವರ ಸ್ವಭಾವ ಇವರ ನಾಯಕತ್ವದ ಹುಳುಕಾಗಿತ್ತು.

ಕಾಂಗ್ರೆಸ್‌ನೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಈವರೆವಿಗೆ ರಾಜಕೀಯವಾಗಿ ಹಿಂದೂ ಮುಸ್ಲಿಮ್‌ ಭ್ರಾತೃತ್ವಕ್ಕೆ, ಭಾರತೀಯರ ಸ್ವಾತಂತ್ರ್ಯಕ್ಕೆ ಬೆಲೆಕೊಟ್ಟು ಶ್ರಮಿಸುತ್ತಿದ್ದ ಜಿನ್ನಾ ೧೯೧೮ರಲ್ಲಿ ಮೋಹನದಾಸ್ ಕರಮಚಂದ್‌ ಗಾಂಧೀಯವರ ಅಹಿಂಸಾ ನಾಗರಿಕ ಅಸಹಕಾರ ಚಳವಳಿ ಹಾಗೂ ಸ್ವರಾಜ್ಯದ ಘೋಷಣೆ ಸೇರಿದಂತೆ, ಗಾಂಧೀಜಿಯವರ ಬೆಳವಣಿಗೆಯನ್ನು ಅಸಮ್ಮತಿಸುವುದರೊಂದಿಗೆ ಕಾಂಗ್ರೆಸ್‌ ನೊಂದಿಗೆ ಹಾಗೂ ಅದರ ನೀತಿ ನಿಲುವುಗಳ ಬಗ್ಗೆ ವಿರೋಧಿ ಮನೋಭಾವನೆ ತಾಳತೊಡಗಿದರು. ಸಂವಿಧಾನಾತ್ಮಕ ಚಳವಳಿಯಲ್ಲಿ ನಂಬಿಕೆ ಇಟ್ಟಿದ್ದ ಇವರಿಗೆ ಈ ಹಾದಿಯಲ್ಲದೇ ಬೇರೆ ದಾರಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗಲಾರದೆಂಬ ಅಚಲ ನಂಬಿಕೆ ಇತ್ತು. ಆದರೆ ಗಾಂಧೀಜಿ, ಹಿಂದೂ ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಟು, ಭಾರತೀಯ ಉಡುಪು ತೊಟ್ಟು, ಭಾರತೀಯ ಮಾತೃಭಾಷೆ ಹಿಂದಿ, ಹಿಂದೂಸ್ತಾನಿ ಬಳಸಿ ನಾಯಕತ್ವ ನೀಡತೊಡಗಿದ್ದು ಇಂಗ್ಲಿಷ್ ವಿದ್ಯಾಭ್ಯಾಸ ಪಡೆದು, ಅದೇ ಶೈಲಿಯಲ್ಲಿ ಕಾಂಗ್ರೆಸ್‌ನ ಚಟುವಟಿಕೆ ಮುಂದುವರೆಸಿ ಗಣ್ಯರೆನಿಸಿದ್ದ ಆಗಿನ ಕಾಂಗ್ರೆಸ್ಸಿನ ನಾಯಕರ ಶೈಲಿಗೆ ವಿಭಿನ್ನವಾಗಿತ್ತು. ಈ ಬಗ್ಗೆ ಬಹಳಷ್ಟು ಆಂಗ್ಲ ವಿದ್ಯಾಭ್ಯಾಸ ಪಡೆದಿದ್ದ ಕಾಂಗ್ರೆಸ್ಸಿಗರಲ್ಲಿ ವಿಚಲತೆ ಇದ್ದದ್ದೂ ಹೌದು. ಜಿನ್ನಾ ಕೂಡಾ ಇದೇ ಗುಂಪಿಗೆ ಸೇರಿದವರಾದುದರಿಂದ ಇವರಿಗೆ ಗಾಂಧೀಜಿಯವರ ಬೆಂಬಲ ನೀಡಿದ್ದು ಸರಿ ಬೀಳಲಿಲ್ಲ. ಹಾಗಾಗಿ ಇವರು ಗಾಂಧೀಜಿಯವರನ್ನು ಟೀಕಿಸಿದರು. ೧೯೨೦ರಲ್ಲಿ ಕಾಂಗ್ರೆಸ್ಸಿನ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಗಾಂಧೀಜಿಯವರ ಹೋರಾಟ ಶೈಲಿ ಹಿಂದೂ-ಮುಸ್ಲಿಮ್ ಒಡಕಿಗೆ ಕಾರಣವಾಗಬಹುದು ಎನ್ನುವವರೆಗೆ ಇವರು ತಮ್ಮ ಪ್ರತಿರೋಧ ಹೊಂದಿದ್ದರು. ಹೀಗಾಗಿ, ಕಾಂಗ್ರೆಸ್ ವಿರೋಧಿ ಹಾಗೂ ಬ್ರಿಟಿಷ್ ವಿರೋಧಿ ಬಣಗಳ ಹೋರಾಟದಲ್ಲಿ ಜಿನ್ನಾ ತಮ್ಮನ್ನು ತೊಡಗಿಸಿಕೊಂಡರು. ಈ ರೀತಿಯಾದ ಗಾಂಧೀ ಪರವಲ್ಲದ ಜಿನ್ನಾರವರ ಚಿಂತನೆಯ ಬಗ್ಗೆ ಬೀಕು ಪರೇಕ್ ಅವರ ಈ ಕೆಳಗಿನ ಚಿಂತನೆ ನಿಜಕ್ಕೂ ವಿಚಾರಶೀಲವಾದದ್ದು.

ಜಿನ್ನಾ ಗಾಂಧೀಯವರ ಬಹುದೊಡ್ಡ ಎದುರಾಳಿ, ಇವರದು ಸಂಕೀರ್ಣ ವ್ಯಕ್ತಿತ್ವ….. ಜಿನ್ನಾ ಸಹಾ ಗಾಂಧೀಜಿ ಬಂದ ಭೂಭಾಗದಿಂದಲೇ ಬಂದವರಾದರೂ, ಅವರಂತೆ ಭಾಷೆ, ಸಂಸ್ಕೃತಿ ಹಾಗೂ ವಕೀಲವೃತ್ತಿಗೆ ಸೇರಿದ್ದರೂ, ಇವರಿಬ್ಬರ ಸ್ನೇಹ ವಿರೋಧಾಭಾಸಗಳಿಂದಲೇ ಕೂಡಿತ್ತು. ‘ಜಿನ್ನಾ’ ಎಂಬುದು ಆಗಿನ ಕಾಲದಲ್ಲಿ ಹಿಂದೂ ಧರ್ಮದಿಂದ ಬದಲಾಯಿಸಿ ಕೊಂಡವರು ತಮ್ಮ ಹೆಸರಿನ ಒಂದು ಭಾಗ ಉಳಿಸಿಕೊಳ್ಳುತ್ತಿದ್ದ ಸಂಸ್ಕೃತಿಗೆ ಸೇರಿದ ಹಿಂದು ಹೆಸರು, ಜಿನ್ನಾ ಅವರಿಗೆ ಗಾಂಧೀಜಿಯವರಂತೆ ಧಾರ್ಮಿಕತೆ ಯನ್ನು ಧರ್ಮದ ರಾಜಕೀಯದೊಂದಿಗೆ ಬೆರಸುವುದಕ್ಕೆ ಒಪ್ಪಿಗೆ ಇರಲಿಲ್ಲ. (ಪರೇಕ್‌) ೨೦೦೭:೨೫)

ಹೀಗೆ ಜಿನ್ನಾ ತನ್ನದೇ ಆದ ವಿಶೇಷ ವ್ಯಕ್ತಿತ್ವ ಹೊಂದಿದ್ದ ನಾಯಕರಾಗಿದ್ದರು. ೧೯೨೭ರಲ್ಲಿ ಜಿನ್ನಾ ಹಿಂದೂ ಮುಸ್ಲಲ್ಮಾನರ ಒಡಗೂಡಿ ಭವಿಷ್ಯದ ಭಾರತಕ್ಕೆ ಸಂವಿಧಾನ ರಚಿಸುವ ಸಂದರ್ಭದಲ್ಲಿ, ಬೇರೆ ಬೇರೆ ಧರ್ಮವನ್ನು ಆಧರಿಸಿದಂತಹ ಪ್ರತ್ಯೇಕ ಚುನಾವಣಾ ಬಣಗಳ ಹಕ್ಕನ್ನು ಪ್ರತಿಪಾದಿಸಿದರು. ನೆಹರೂ ಅವರ ವರದಿಯಾಗಲೀ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಜಿನ್ನಾ ಅವರು ರೂಪಿಸಿದ ೧೪ ಅಂಶಗಳ ಪ್ರತ್ಯೇಕ ಚುನಾವಣಾ ಬಣಗಳ ಹಕ್ಕನ್ನು ಒಪ್ಪಲಿಲ್ಲ. ವೈಯಕ್ತಿಕವಾಗಿ ಜಿನ್ನಾ ಇದರ ಪರವಾಗಿಲ್ಲದಿದ್ದರೂ, ಇವರು ಮುಸ್ಲಿಮ್‌ ಲೀಗ್‌ನ ನಾಯಕರಾಗಿ ಈ ವಿಷಯ ಪ್ರತಿಪಾದಿಸಿದ್ದರು. ಈ ದೃಷ್ಟಿಯಲ್ಲಿ ಜಿನ್ನಾ ತನ್ನೊಳಗೆ ತುಮುಲದಲ್ಲಿರುತ್ತಿದ್ದರೆಂದರೆ ತಪ್ಪಾಗಲಾರದು. ಹೀಗಾಗಿ ದುಂಡುಮೇಜಿನ ಪರಿಷತ್ತಿನಲ್ಲಿ ಸೋತ ಮಾತುಕತೆಯ ಸಂದರ್ಭದಲ್ಲಿ ಮತ್ತು ಮುಸ್ಲಿಮ್‌ ಲೀಗ್‌ನಲ್ಲಿದ್ದ ಒಡಕಿನಿಂದ ಬೇಸತ್ತ ಜಿಲ್ಲಾ ರಾಜಕೀಯ ಚಟುವಟಿಕೆಗಳನ್ನು ತೊರೆದು ಲಂಡನ್ ಸೇರಿದ್ದರು. ೧೯೩೪ರಲ್ಲಿ ಆಘಾ ಖಾನ್ ಸರ್ ಮೊಹಮ್ಮದ್ ಇಕ್ಬಾಲ್‌ ಇವರುಗಳ ಒತ್ತಡಕ್ಕೆ ಮಣಿದ ಜಿನ್ನಾ ಭಾರತಕ್ಕೆ ಹಿಂತಿರುಗಿ ಬಂದು ಒಡಕಾಗಿದ್ದ ಮುಸ್ಲಿಮ್‌ ಲೀಗ್‌ನ ನಾಯಕತ್ವವನ್ನು ಮತ್ತೆ ವಹಿಸಿಕೊಂಡರು. ಲಿಯಾಖತ್‌ ಅಲಿ ಖಾನ್ ಅವರೊಂದಿಗೆ ಕೂಡಿ ಲೀಗ್‌ಗಾಗಿ ಶ್ರಮಿಸಿದರು. ೧೯೩೭ರಲ್ಲಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಬಂದ ಮುಸ್ಲಿಮ್‌ ಲೀಗ್ ಬೆಳೆಯುತ್ತಿದ್ದ ಹಿಂದೂ ಮುಸ್ಲಿಮ್ ವಿಭಜನೆಯ ಜೋರಾಟದ ಪ್ರತೀಕವಾಗಿತ್ತು. ಇಂತಹ ವಿಭಜನೆಯಲ್ಲಿ ವೈಯಕ್ತಿಕವಾಗಿ ನಂಬಿಕೆ ಇಲ್ಲದ ಜಿನ್ನಾ ಅವರು ಲೀಗ್‌ನ ನಾಯಕತ್ವದ ಕಾರಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇಕ ಅಸ್ಮಿತೆಗಾಗಿ ಕಾಂಗ್ರೆಸ್‌ ನೊಂದಿಗೆ ಚರ್ಚಿಸಿ, ನಂತರ ಧರ್ಮನಿರಪೇಕ್ಷತೆಯ ಚೌಕಟ್ಟಿನಲ್ಲಿ ದೇಶಕ್ಕಾಗಿ ಹೋರಾಡಲು ಒಂದಾದರು. ಮುಸ್ಲಿಮ್‌ ಲೀಗನ ನಾಯಕರಾಗಿ ಜಿನ್ನಾ ಅವರ ಪ್ರತ್ಯೇಕ ಚುನಾವಣಾ ಬಣದ ಚರ್ಚೆಯಿಂದ ಕಾಂಗ್ರೆಸ್‌ ಅವರನ್ನು ನಿರ್ಲಕ್ಷ ಭಾವನೆಯಿಂದ ನೋಡತೊಡಗಿತು. ಕಾಂಗ್ರೆಸ್‌ನಲ್ಲಿಯೇ ಇದ್ದು ಧರ್ಮನಿರಪೇಕ್ಷತೆಯ ಪರವಾಗಿ, ಗಾಂಧೀಜಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದ ಮುಸ್ಲಿಮ್ ನಾಯಕರು ಇವರಿಗೆ ಸರಿಸಮಾನರಾಗಿಲ್ಲದಿದ್ದರೂ ಕಾಂಗ್ರೆಸ್‌ ಮುಸ್ಲಿಮ್‌ರ ವಿರೋಧಿಯಲ್ಲ ಎಂಬುದನ್ನು ಪ್ರತಿಪಾದಿಸುವ ಮುಖಾಂತರ ಇವರಿಗೆ ಸವಾಲಾಗಿದ್ದರು. ಇದು ಜಿನ್ನಾ ಅವರ ಧರ್ಮನಿರಪೇಕ್ಷ ಭಾವನೆಯನ್ನು ಕಾಂಗ್ರೆಸ್‌ನ ಹಿಂದೂ ನಾಯಕರು ಅನುಮಾನಿಸಲೂ ಕಾರಣವಾಯಿತು ಎಂದರೆ ತಪ್ಪಾಗಲಾರದು. ಆದರೂ, ೧೯೩೦ ರಲ್ಲಿ ಸರ್ ಮೊಹಮ್ಮದ್ ಇಕ್ಬಾಲರು ಪ್ರಚಲಿತತೆಗೆ ತಂದ ಸ್ವತಂತ್ರ ಪಾಕಿಸ್ತಾನದ ಕೂಗು ಅಳಿಸಿರಲಿಲ್ಲ. ಹೀಗಾಗಿ ಸ್ವತಂತ್ರ ಭಾರತದಲ್ಲಿ ಮುಸ್ಲಿಮರಿಗೆ ಭದ್ರತೆ ಇರುವುದಿಲ್ಲ ಮತ್ತು ಅವರೀರ್ವರ ನಡುವೆ ಹೊಂದಾಣಿಕೆ ಅಸಾಧ್ಯ ಎಂಬ ಚಿಂತನೆ ಬೆಳೆಯತೊಡಗಿತು. ಇದಕ್ಕೆ ೧೯೪೦ರಲ್ಲಿನ ಲಾಹೋರ್‌ನ ಕಾಂಗ್ರೆಸ್ ಸಮ್ಮೇಳನದಲ್ಲಿ ಪಾಕಿಸ್ತಾನ ಕುರಿತ ನಿಲುವು ಬಹುಶಃ ಜಿನ್ನಾ, ಸರ್ ಮೊಹಮ್ಮದ್ ಇಕ್ಬಾಲರೊಂದಿಗಿನ ಪತ್ರ ವ್ಯವಹಾರದಿಂದ ಪ್ರಭಾವಿತರಾಗಿದ್ದರೆಂಬ ಭಾವನೆಯನ್ನು ನೀಡುತ್ತದೆ. ಜಿನ್ನಾರವರು ಈ ರೀತಿಯಲ್ಲಿ ಪರರ ಪ್ರಭಾವಕ್ಕೆ ಒಳಗಾಗಿ ವರ್ತಿಸುವ ರೀತಿ ಜಿನ್ನಾ ಅವರ ಅತಿಯಾದ ಪ್ರಜಾಪ್ರಭುತ್ವಿಕ, ಉದಾರವಾದಿ ಮನಸ್ಸಿನ ಸಡಿಲತೆಯೋ ಅಥವಾ ಗಾಂಧೀಜಿಯನ್ನು ವಿರೋಧಿಸಿ ನಿಂತಿದ್ದ ಇವರು ತಮ್ಮ ‘ಸ್ಥಾನಕ್ಕಾಗಿ’ ಮಾರಿಕೊಂಡ ತಮ್ಮ ನಂಬಿಕೆಗಳ ಹೋಮವೇ ಎಂಬುದು ಸಂಕೀರ್ಣವಾದ ವಿಚಾರವಾಗಿದೆ. ಹಲವಾರು ಪ್ರಮುಖ ಕಾಂಗ್ರೆಸ್‌ನಲ್ಲಿನ ಮುಸ್ಲಿಮ್ ನಾಯಕರು, ಸಂಘಟನೆಗಳು ಇದನ್ನು ವಿರೋಧಿಸಿದರೂ, ೧೯೪೧ರ ಹೊತ್ತಿಗೆ ಸಂಪೂರ್ಣವಾಗಿ ಬೆಳೆದು ನಿಂತಿದ್ದ ಈ ಚಿಂತನೆ, ಜಿನ್ನಾ ಅವರು ಪ್ರಾರಂಭಿಸಿದ ‘ಡಾನ್ ಪತ್ರಿಕೆಯಲ್ಲಿ ಮೂರ್ತಸ್ವರೂಪ ಪಡೆಯತೊಡಗಿತ್ತು. ಪಂಜಾಬನ್ನು ಬಿಟ್ಟಂತೆ ಭಾರತದ ವಾಯವ್ಯ ದಿಕ್ಕಿನಲ್ಲಿ ಈ ಚಿಂತನೆಗೆ ಬೆಂಬಲ ಪೂರ್ಣ ಸ್ವರೂಪದಲ್ಲಿತ್ತು. ಸಿಕಂದರ್‌ ಹೈಯತ್‌ಖಾನ್ ಅವರ ಸಾವಿನ ನಂತರ ೧೯೪೨ ರಲ್ಲಿ ಪಂಜಾಬ್‌ ಸಹ ಪಾಕಿಸ್ತಾನದ ಬೇಡಿಕೆಗೆ ಮಣಿಯಿತು. ೧೯೪೪ರಲ್ಲಿ ಈ ಚಿಂತನೆ ಕೈಬಿಡುವಂತೆ ಕೇಳಲು ಗಾಂಧಿ ಜಿನ್ನಾರ ನಡುವೆ ಸುಮಾರು ೧೪ ಬಾರಿ ಚರ್ಚೆಯಾಯಿತು. ೧೯೪೬ರ ಬ್ರಿಟಿಷ್‌ ಕ್ಯಾಬಿನೆಟ್‌ಮಿಷನ್ ನಂತರ ಜಿನ್ನಾ ಪಾಕಿಸ್ತಾನದ ಸಲುವಾಗಿ ಕಾಂಗ್ರೆಸ್‌ನ ಬ್ರಿಟಿಷ್‌ ವಿರೋಧಿ ನಿಲುವನ್ನು ಬದಿಗಿಟ್ಟು ‘ನೇರ ಹೋರಾಟಕ್ಕಾಗಿ’ ಕರೆ ನೀಡಿದರು. ೧೯೪೬ರ ಅಕ್ಟೋಬರ್‌೨೫, ೨೬ರಂದು ಮಧ್ಯಂತರ ಸರ್ಕಾರ ರಚಿಸಿದ ಬ್ರಿಟಿಷರಿಗೆ ಮುಸ್ಲಿಮ್‌ ಲೀಗ್ ಹಾಗೂ ಕಾಂಗ್ರೆಸ್‌ನ ಸಮ್ಮಿಶ್ರ ಸರ್ಕಾರದ ಉಳಿವಿನ ಬಗ್ಗೆ ನಂಬಿಕೆ ಇರಲಿಲ್ಲ. ಸರ್ಕಾರದ ಆಂತರ್ಯದಲ್ಲಿಯೂ ಕಾಂಗ್ರೆಸ್‌ ಹಾಗೂ ಮುಸ್ಲಿಮ್‌ ಲೀಗ್‌ನ ನಡುವಿನ ವ್ಯತ್ಯಾಸಗಳು ಬೆಳೆಯತೊಡಗಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಸಹಾ ಧರ್ಮದ ಆಧಾರದ ಮೇಲೆ ಪಾಕಿಸ್ತಾನದ ವಿಭಜನೆಗೆ ಸಮ್ಮತಿಸಿತ್ತು. ೧೯೪೭ರ ಜುಲೈ ಹೊತ್ತಿಗೆ ಭಾರತದ ವಾಯವ್ಯ ಗಡಿ ಭಾಗ ಪಾಕಿಸ್ತಾನಕ್ಕೆ ಎಂಬ ಚಿಂತನೆಗೆ ಒಪ್ಪಿಗೆ ದೊರಕಿ ಜನ ನಿರ್ಧಾರಕ್ಕೆ ಬೆಂಬಲ ದೊರಕಿತು. ಈ ಕುರಿತು ಜಿನ್ನಾ ೧೯೪೭ರ ಅಕ್ಬೋಬರ್‌೩೦ ರಂದು ಲಾಹೋರ್‌ನ ಭಾಷಣವೊಂದರಲ್ಲಿ ಪಾಕಿಸ್ತಾನದ ರಚನೆ ಆಗಿಲ್ಲದಿದ್ದಲ್ಲಿ ಊಹಿಸಿಕೊಳ್ಳಲಾರದಷ್ಟು ಅನಾಹುತವಾಗುತ್ತಿತ್ತೆಂದು, ಆದಕಾರಣ ಮುಸ್ಲಿಮ್‌ ಲೀಗ್‌ಅಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದದ್ದು ಗಮನಾರ್ಹವಾಗಿದೆ.

ಪಾಕಿಸ್ತಾನದ ಹುಟ್ಟು ಮತ್ತು ಬೆಳವಣಿಗೆ

ಜಿನ್ನಾ ಅವರ ಅಪೇಕ್ಷೆ ಇದ್ದದ್ದು ಧರ್ಮನಿರಪೇಕ್ಷವಾದ ಪಾಕಿಸ್ತಾನ. ತಾನು ಬೆಳೆದು ಬಂದ ಹಾದಿಯಲ್ಲಿ ಧರ್ಮಾಧಾರಿತ ತಾರತಮ್ಯ ಕಲಿಯದೇ ಇದ್ದ ಇವರು ಈ ಬಗ್ಗೆ ತಮ್ಮ ಭಾಷಣಗಳಲ್ಲಿ ಅದನ್ನು ಪ್ರತಿಪಾದಿಸುತ್ತಲೇ ಬೆಳೆದರು. ಆದರೆ ಜಿನ್ನಾ ಅವರ ಪಾಕಿಸ್ತಾನ ಎಂದಿಗೂ ಆ ಹಾದಿಯಲ್ಲಿ ನಡೆಯಲು ಸಾಧ್ಯವಾಗಲಿಲ್ಲ. ಆಗಸ್ಟ್ ೧೧, ೧೯೪೭ರಲ್ಲಿ ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿನ ಇವರ ಭಾಷಣ ಇವರ ಧರ್ಮನಿರಪೇಕ್ಷತೆಯಲ್ಲಿನ ಒಂದು ನಂಬಿಕೆಗೆ ಒಂದು ಸಾಕ್ಷಿ. ಆದರೆ, ಈ ಬಗ್ಗೆ ವಿವಾದಗಳಿಲ್ಲ ಎಂಬರ್ಥವಲ್ಲ. ಇವರ ಈ ಭಾಷಣದ ಆಯ್ದ ಭಾಗ ಹೀಗಿದೆ:

ಪಾಕಿಸ್ತಾನವನ್ನು ಒಂದು ಸಂತೋಷಮಯ ಹಾಗೂ ಅಭಿವೃದ್ಧಿ ಪರ ರಾಷ್ಟ್ರ ಮಾಡಬೇಕಾದರೆ ಬಡವರ, ಜನಸಾಮಾಜ್ಯರ ಕಲ್ಯಾಣದ ಬಗ್ಗೆ ನಾವು ಗಮನಹರಿಸಬೇಕು… ನೀವು ಇಲ್ಲಿ ಸ್ವತಂತ್ರರು, ನೀವು ದೇವಸ್ಥಾನಕ್ಕಾಗಲೀ, ಮಸೀದಿಗಾಗಲೀ ಅಥವಾ ಇನ್ನಾವುದೇ ಪೂಜಿತ ಸ್ಥಳಕ್ಕೆ ಪಾಕಿಸ್ತಾನದಲ್ಲಿ ಹೋಗಬಹುದು. ನೀವು ಯಾವುದೇ ಧರ್ಮ, ಜಾತಿಗೆ ಸೇರಿರಬಹುದು. ಅದು ರಾಜ್ಯದ ಆಳ್ವಿಕೆಗೆ ಸಂಬಂಧಿಸಿದ್ದಲ್ಲ… ಇನ್ನು ಸ್ವಲ್ಪ ಕಾಲದಲ್ಲಿ ಧರ್ಮದ ಹೆಸರಿನಲ್ಲಿ ಅಂಧತೆಯಲ್ಲಿ ಹಿಂದುಗಳು ಹಿಂದೂಗಳಾಗಿರದೇ ಮುಸಲ್ಮಾನರು ಮುಸಲ್ಮಾನರಾಗಿದೇ ಅದು ಕೇವಲ ವೈಯಕ್ತಿಕವಾದ ನಂಬಿಕೆಯಾಗಿ ಮಾತ್ರ ಉಳಿದು… ರಾಜಕೀಯವಾಗಿ ಎಲ್ಲರೂ ರಾಷ್ಟ್ರದ ನಾಗರಿಕರಾಗಿರುತ್ತಾರೆ (ಗುಹಾ ೨೦೦೮)

ಆದರೆ ರಾಮಚಂದ್ರ ಗುಹಾರಂತಹ ಬರಹಗಾರರೂ ಸಹಾ ಜಿನ್ನಾ ಅವರ ಇಂತಹ ಚಿಂತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಜಮಾತೆ ಇಸ್ಲಾಂನಂತಹ ಇಸ್ಮಾಂ ಪರಪಕ್ಷಗಳು ಸಹಾ ಪಾಕಿಸ್ತಾನದ ರಚನೆಯನ್ನು ಮೊದಲಿಗೆ ವಿರೋಧಿಸಿದ್ದರೂ ಸಹಾ ನಂತರದಲ್ಲಿ ಪಾಕಿಸ್ತಾನದ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪಾಕಿಸ್ತಾನಕ್ಕೆ ಇಸ್ಲಾಂ ರಾಜ್ಯದ ಪಟ್ಟ ಕಟ್ಟುವುದರಲ್ಲಿ ಸಹಾಯಕಾರಿಯಾಗಿ ಮುನ್ನಡೆದವು ಎಂಬುದನ್ನು ಇಲ್ಲಿ ನೆನಯಬೇಕಾಗಿದೆ.

‘ಅಭಿವೃದ್ಧಿ’ ಕುಂಠಿತ ಪಾಕಿಸ್ತಾನದಲ್ಲಿ ಧರ್ಮಾಂಧತೆ ಹಾಗೂ ಮೌಢ್ಯತೆಯು ವಿದ್ಯಾಭ್ಯಾಸವನ್ನು ಮೀರಿ ಬೆಳೆದು ನಿಂತ ಸಂದರ್ಭದಲ್ಲಿ ಧರ್ಮನಿರಪೇಕ್ಷತೆ ಎಂಬ ಚಿಂತನೆ ಹೆಚ್ಚಿನ ‘ಪಾಕಿಸ್ತಾನಿ’ಗಳಿಗೆ ಧರ್ಮವಿಲ್ಲದ ಸಮಾಜದ ರಚನೆ ಎಂಬ ಕಲ್ಪನೆ ನೀಡುತ್ತದೆ ಎಂದೆನಿಸುತ್ತದೆ. ಹಾಗಾಗಿ ಜಿನ್ನಾ ಅವರ ಎಲ್ಲ ಧರ್ಮಾವಲಂಬಿಗಳನ್ನು ಒಳಗೊಂಡ, ಬಹುತ್ವ ಸಮಾಜದ ಸಮಾನ ಹಕ್ಕಿನ ಧಾರ್ಮಿಕ ಹಾಗೂ ರಾಜಕೀಯ ಪ್ರಜಾಪ್ರಭುತ್ವದ ಅರಿವಿರುವ ಸಮಾಜದ ಸಮಾನ ಹಕ್ಕಿನ ಧಾರ್ಮಿಕ ಹಾಗೂ ರಾಜಕೀಯ ಪ್ರಜಾಪ್ರಭುತ್ವದ ಅರಿವಿರುವ ಪಾಕಿಸ್ತಾನದ ರಚನೆಯು ಸಫಲವಾಗಲಿಲ್ಲ ಎಂಬ ಚಿಂತನೆ ಕೂಡಾ ವಿದ್ಯಾವಂತರನ್ನು ಕಾಡುತ್ತದೆ. ಹಾಗೆಂದ ಮಾತ್ರಕ್ಕೆ ಜಿನ್ನಾ ಯಾವಾಗಲೂ ಧರ್ಮನಿರಪೇಕ್ಷತಾ ಭಾಷಣಗಳನ್ನೇ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಫೆಬ್ರುವರಿ ೨೧, ೧೯೪೮ರಲ್ಲಿ ೫ನೇ ಹಾಗೂ ೬ನೇ ಹೆವಿಲೈಟ್ ರೆಜಿಮೆಂಟ್‌ಗಳಿಗೆ ಇವರು ಆಡಿರುವ ಭಾಷಣದಲ್ಲಿ ಇವರು ಬಳಸಿರುವ ಭಾಷೆ ಹೀಗಿದೆ:

…. ನೀವು ಇಸ್ಲಾಂ ಪ್ರಜಾಪ್ರಭುತ್ವವನ್ನು ಉಳಿಸಿಬೆಳೆಸಲು, ಇಸ್ಲಾಂ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ನಿಮ್ಮ ನೆಲದಲ್ಲಿ  ಉಳಿಸಲು ಕಾಯ್ದು ನಿಂತಿರಬೇಕು. ಇದನ್ನು ನೀವು ನಂಬಿಕೆ, ಶಿಸ್ತು, ತನ್ನತ್ವವನ್ನು ಬಿಡದೇ ಕಾರ್ಯೋನ್ಯುಖರಾಗದೆ ಸಾಧಿಸಲಾಗದು.

ಇಲ್ಲಿ ‘ಇಸ್ಲಾಂ’ ಎನ್ನುವ ಪದ ಎಲ್ಲ ರೀತಿಯ ಅನುಮಾನಗಳಿಗೆ ಆಸ್ಪದ ನೀಡಿದೆ. ಇದೇನೇ ಇರಲಿ, ಜಿನ್ನಾ ಪಾಕಿಸ್ತಾನದ ರಚನೆಯಿಂದ ಅತ್ಯಂತ ಪ್ರಭಾವೀ ರಾಜಕಾರಣಿಯಾಗಿ ಪಾಕಿಸ್ತಾನದಲ್ಲಿ ಉಳಿದಿದ್ದಾರೆ. ಆದರೆ ಇಂತಹ ಪಾಕಿಸ್ತಾನದ ಉಳಿವು, ಮುಂದುವರಿಕೆಯು ಇವರು ಹಾಕಿ ಕೊಟ್ಟ ಹಾದಿಯಲ್ಲಿಯೇ ಏಕೆ ಉಳಿಯಲಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇದರಂತೆಯೇ ೧೯೪೮ರಲ್ಲಿ ಢಾಕಾದಲ್ಲಿ ಜಿಲ್ಲಾ ‘ಉರ್ದು’, ಬಂಗಾಲದ ಹೋರಾಟಕ್ಕೆ ನಾಂದಿಯಾದದ್ದು ಇಲ್ಲಿ ನೆನೆಪಿಸಿಕೊಳ್ಳಬೇಕಿದೆ. ಒಟ್ಟಿನಲ್ಲಿ ಪಾಕಿಸ್ತಾನ ತನ್ನ ಸ್ವಾತಂತ್ರ್ಯ ಪಡೆದ ದಿನದಿಂದ ಪ್ರಜಾಪ್ರಭುತ್ವ ಹಾಗೂ ಸೇನಾಧಿಕಾರದ ನಡುವೆ ತೂಗುತ್ತಾ ತನ್ನ ಉಳಿವನ್ನು ಕಂಡುಕೊಂಡಿದೆ. ೧೯೫೬ರ ಮಾರ್ಚ್ ೨೩ರಂದು ಅಸ್ತಿತ್ವಕ್ಕೆ ಬಂದ ಇಸ್ಲಾಂಮಿಕ್ ಪಬ್ಲಿಕ್ ಆಫ್ ಪಾಕಿಸ್ತಾನವು ತನ್ನ ಕೊನೆಯ ಗೌರ್ನರ್ ಜನರಲ್ ಆದ ಇಸ್ಕಂದರ್ ಮಿರ್ಜಾ ಅವರನ್ನು ಮೊದಲ ಅಧ್ಯಕ್ಷರಾಗಿ ಒಪ್ಪಿಕೊಮಡಿತು. ಆದರೆ, ಎರಡೇ ವರ್ಷಗಳಲ್ಲಿ ಫೀಲ್ಡ್ ಮಾರ್ಷಲ್ ಆಯೂಬ್‌ಖಾನ್ ದೇಶವನ್ನು ಸೇನಾಧಿ ಪತ್ಯಕ್ಕೆ ಒಳಪಡಿಸಿದರು. ಇವರು ಈ ಸೇನಾಧಿಪತ್ಯದ ಮೂಲಕ ಹೊಸರೀತಿಯ ‘ಮೂಲ ಪ್ರಜಾಪ್ರಭುತ್ವದ’ ಪರಂಪರೆಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಹೊಸ ಸಂವಿಧಾನದ ರಚನೆ ಮಾಡಿದರು. ಇವರ ಕಾಲದಲ್ಲಿ ಪಾಕಿಸ್ತಾನದ ಸಂಬಂಧ ಅಮೆರಿಕೆಯಿಂದಿಗೆ ಹಾಗೂ ಇತರೇ ಮುಸ್ಲಿಮ್ ರಾಷ್ಟ್ರಗಳೊಂದಿಗೆ ಬೆಳೆದರೂ ಭಾರತದೊಂದಿಗೆ ಸಂಬಂಧ ಹಳಸಿತು. ಇದು ೧೯೬೫ರಲ್ಲಿ ಕಾಶ್ಮೀರ ಕುರಿತಂತೆ ಇಂಡೋಪಾಕ್ ಕದನಕ್ಕೆ ಕಾರಣವಾಯಿತು. ೧೯೬೦ರ ದಶಕದಲ್ಲಿ ಈ ದೇಶದ ಮತ್ತೊಂದು ಅವಿಭಾಜ್ಯ ಅಂಗವೆನಿಸಿದ ಪೂರ್ವ ಪಾಕಿಸ್ತಾನದಲ್ಲಿ ಬೆಂಗಾಲಿಯರ ರಾಷ್ಟ್ರೀಯತೆ ಕೂಡಾ ಬೆಳೆಯತೊಡಗಿತು. ಹೀಗಾಗಿ ೧೯೬೯ರಲ್ಲಿನ ರಾಷ್ಟ್ರವ್ಯಾಪಿಯಾಗಿ ಬೆಳೆದ ಚಳವಳಿಯ ಹಿನ್ನೆಲೆಯಲ್ಲಿ ಜನರಲ್‌ ಆಯೂಬ್‌ ಖಾನ್‌ ಅವರು ಜನರಲ್ ಯಾಹ್ಯಾಖಾನರಿಗೆ ಅಧಿಕಾರ ಹಸ್ತಾಂತರಿಸಿದರು. ೧೯೭೦ರಲ್ಲಿ ಚುನಾವಣೆ ನಡೆದಾಗ ಪೂರ್ವ ಪಾಕಿಸ್ತಾನ ಚಂಡಮಾರುತಕ್ಕೆ ಸಿಕ್ಕಿ ನಲುಗಿತು. ಜನರು ಈ ಚುನಾವಣೆಯಲ್ಲಿ ಭಾಗವಹಿಸಿ ಶೇಖ್ ಮುಜಿಭೂರ್ ರೆಹಮಾನ್‌ರನ್ನು ಗೆಲ್ಲಿಸಿದರು. ಆದರೆ ವಾಯವ್ಯ ಪಾಕಿಸ್ತಾನದಲ್ಲಿ ಜುಲ್ಫಿಕರ್‌ ಅಲಿ ಭುಟ್ಟೊ ಅವರು ಗೆಲುವನ್ನು ಸಾಧಿಸಿದರು. ನ್ಯಾಯಯುತವಾಗಿ ಮಜಿಭೂರ್ ರೆಹಮಾನ್ ಅಧಿಖಾರ ಸ್ವೀಕರಿಸಬೇಕಿದ್ದರು. ೧೬೭ ಸ್ಥಾನ ಗೆದ್ದಿದ್ದರು. ಯಾಹ್ಯಾಖಾನ್ ಹಾಗೂ ಭುಟ್ಟೋ ಅವರು ಇವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ಈ ಕಾರಣದಿಂದ ಮುಜಿಭೂರ್ ರೆಹಮಾನ್ ಅವರು ಪಾಕಿಸ್ತಾನದ ವಿರುದ್ಧ ಅಸಹಕಾರ ಷಳವಳಿಗೆ ಕರೆ ನೀಡಿದರು. ಈ ಹಿನ್ನೆಲೆಯಲ್ಲಿ ಒಂದು ದುಂಡುಮೇಜಿನ ಪರಿಷತ್ತು ಕರೆಯಲಾಗಿ ಈ ಮೂವರು ನಾಯಕರು ಯಾವ ನಿರ್ಣಯಕ್ಕೂ ಬರಲಾಗದ ಕಾರಣ ವಾಯವ್ಯ ಪಾಕಿಸ್ತಾನವು ಪೂರ್ವ ಪಾಕಿಸ್ತಾನದ ಮೇಲೆ ಸೇನಾ ದಾಳಿ ನಡೆಸಿ, ಈ ಹೋರಾಟದ ಅವಾಮಿ ಪಕ್ಷದ ನಾಯಕರುಗಳನ್ನು ಬಂಧಿಸಿತು. ಆದರೆ ೧೯೭೧ರ ಮಾರ್ಚ್‌೨೭ರಂದು ಮೇಜರ್ ಜಿಯೊರ್ ರೆಹಮಾನ್ ಎಂಬ ಯೋಧ ಮುಜಿಭೂರ್ ರೆಹಮಾನರ ಹೆಸರಿನಲ್ಲಿ ‘ಬಾಂಗ್ಲಾ ದೇಶದ’ ಹುಟ್ಟನ್ನು ಸಾರಿದರು. ಹೀಗಾಗಿ ಬಾಂಗ್ಲಾದೇಶದ ‘ಮುಕ್ತಿಭಾಹಿನಿ’ ಹಾಗೂ ಪಾಕಿಸ್ತಾನದ ಸೇನೆಯ ನಡುವಿನ ಧಾಳಿ ತೀವ್ರವಾಗತೊಡಗಿತು. ೧೯೭೧ರ ಮಾರ್ಚ್‌ನಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಪೂರ್ವ ಪಾಕಿಸ್ತಾನದ ಹೋರಾಟಕ್ಕೆ ಸ್ಪಂದನೆ ವ್ಯಕ್ತಪಡಿಸಿದರು. ಇದರಿಂದ ಭಾರತವು ಪೂರ್ವ ಪಾಕಿಸ್ತಾನದ ಹೋರಾಟಕ್ಕೆ ಬೆಂಬಲ ಕೊಟ್ಟದ್ದರಿಂದ ೧೯೭೧ ಡಿಸೆಂಬರ್ ೩ ರಂದು ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧಕ್ಕೆ ನಾಂದಿಯಾಯಿತು. ೧೯೭೧ರ ಡಿಸೆಂಬರ್ ೧೬ರಂದು ಪಾಕಿಸ್ತಾನದ ಸೇನೆ ಪೂರ್ವ ಪಾಕಿಸ್ತಾನದಿಂದ ಹೊರಬಿದ್ದು, ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು. ಇದರಿಂದ ಜನರಲ್ ಯಾಹ್ಯಾ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪರಿಣಾಮವಾಗಿ ಭುಟ್ಟೊ ಅವರು ದೇಶದ ಅಧ್ಯಕ್ಷರಾದರು. ಹಾಗೂ ಮಾರ್ಷಲ್ ಕಾನೂನಿನ ಆಡಳಿತಗಾರರಾದರು.

೧೯೭೨ರಲ್ಲಿ ಪಾಕಿಸ್ತಾನವು ಭಾರತದೊಂದಿಗೆ ಸ್ಪರ್ಧಿಸುವ ಸಲುವಾಗಿ ಅಬ್ದುಲ್ ಸಲಾಮ್ ಅವರ ನೇತೃತ್ವದಲ್ಲಿ ಅಣುಬಾಂಬ್‌ನ ತಯಾರಿಕೆಗೆ ತೊಡಗಿತು. ೧೯೭೩ರಲ್ಲಿ ಹೊಸದಾದ ಮತ್ತೊಂದು ಸಂವಿಧಾನಕ್ಕೆ ಎಡೆಮಾಡಿತು. ೧೯೭೪ರ ಸಂದರ್ಭದಲ್ಲಿ ಬಲೂಚಿಸ್ತಾನದಲ್ಲಿ ಧಾರ್ಮಿಕ ಚಳವಳಿ ಪ್ರಾರಂಭವಾಗಿ “ಮಹಮದೀಯರು ಮುಸ್ಲಿಂಯೇತರರು” ಎಂದು ಸಂಸತ್ತಿನ ಹೇಳಿಕೆ ಹಾಗೂ ಒಪ್ಪಿಗೆ ನೀಡುವಂತೆ ಬುಟ್ಟೊ ಅವರಿಗೆ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸನ್ನದ್ದಾಗಿದ್ದ ಪೀಪಲ್ಸ್ ಪಕ್ಷವು ಭುಟ್ಟೊರವರ ನೇತೃತ್ವದಲ್ಲಿ ಗೆಲುವನ್ನು ಸಾಧಿಸಿದರು. ಆದರೆ, ವಿರೋಧಪಕ್ಷಗಳು ಈ ಗೆಲುವನ್ನು ಒಪ್ಪದೇ, ನಡೆಸಿದ ಹೋರಾಟದ ಫಲವಾಗಿ ಮತ್ತೊಮ್ಮೆ ಪಾಕಿಸ್ತಾನದ ಪ್ರಜಾಪ್ರಭುತ್ವ ಸೇನೆಯ ಅಧಿತಪತ್ಯಕ್ಕೆ ಸೆರೆಯಾಯಿತು. ಪಾಕಿಸ್ತಾನದಲ್ಲಿನ ಜನತೆಯ ರಾಜಕೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಪ್ರಜಾಪ್ರಭುತ್ವದ ಸೆಳೆತವಿಲ್ಲವೇನೋ ಎಂಬ ಭಾವನೆ ಇದರಿಂದ ಬಲವಾಗಿದೆ.

ರಕ್ತರಹಿತವಾಗಿ ಅಧಿಕಾರವನ್ನು ವಶಪಡಿಸಿಕೊಂಡ ಮೊಹಮ್ಮದ ಜಿಯಾ ಉಲ್‌ ಹಕ್‌ ತದನಂತರದಲ್ಲಿ ಜುಲ್ಫಿಕರ್‌ಅಲಿ ಭುಟ್ಟೊ ಅವರನ್ನು ನೇಣುಗಂಬಕ್ಕೆ ಏರಿಸಿದರು. ಜಿಯಾ ಉಲ್‌ ಹಕ್‌ ತಮ್ಮ ಆಡಳಿತದ ಅವಧಿಯಲ್ಲಿ ಸಮಾಜವಾದಿ ಚಿಂತನೆಯನ್ನು ಬದಲಿಸಿ ಪಾಕಿಸ್ತಾನದಲ್ಲಿ ಇಸ್ಲಾಂಮಿಕ್ ಕಾನೂನುಗಳನ್ನು ಆಚರಣೆಗೆ ತಂದರು. ಈ ಕಾರಣದಿಂದ ಪಾಕಿಸ್ತಾನದಲ್ಲಿ ಹೆಚ್ಚಿನ ಸಮುದಾಯಿಕ ಒಡಕುಗಳಿಗೆ ನಾಂದಿಯಾಯಿತು ಹಾಗೂ ಇಸ್ಲಾಂ ಧಾರ್ಮಿಕ ಮೌಢ್ಯತೆ ಪ್ರಬಲವಾಗಿ ಬೆಳೆಯಲು ಕಾರಣವಾಯಿತು ಎಂಬ ಅಭಿಪ್ರಾಯ ರಾಜ್ಯಶಾಸ್ತ್ರಜ್ಞರು ಹಾಗೂ ವಿದ್ವಾಂಸರಲ್ಲಿ ಇದೆ. ಇದೇ ಸಂದರ್ಭದಲ್ಲಿ ಸೇನಾ ನಾಯಕರು ರಾಜ್ಯದ ವಿರುದ್ಧದ ಧ್ವನಿಗಳನ್ನು ಗೌರವಿಸದೇ ಹಿಂಸೆಯ ಮೂಲವಾದರೂ ಅದನ್ನು ಅಡಗಿಸುವ ರೀತಿಯನ್ನು ಕಾಣಬಹುದು. ಪಾಕಿಸ್ತಾನದಲ್ಲಿನ ಸ್ಟಹಿತಾಸಕ್ತಿ ಗುಂಪುಗಳಾದ ಧಾರ್ಮಿಕ ನಾಯಕರು, ಸೇನಾ ನಾಯಕರು ಊಳಿಗಮಾನ್ಯ ಪದ್ಧತಿಯ ಪ್ರತಿಪಾದಕ ಭೂ ಒಡೆಯರ ಪ್ರಭಾವವನ್ನು ಇಲ್ಲಿ ಕಾಣಬಹುದು. ೧೯೮೫ರಲ್ಲಿ ಜಿಯಾ ಅವರು ಮಾರ್ಷಲ್‌ಕಾನೂನನ್ನು ತೆಗೆದುಹಾಕಿ ತಮ್ಮ ಬಂಟನಾದ ಮೊಹಮ್ಮದ್ ಖಾನ್ ಜುನೆಜೋ ಅವರನ್ನು ಪಕ್ಷರಹಿತ ಚುನಾವಣೆಯ ಮೂಲಕ ಆಯ್ಕೆ ಮಾಡಿದರು. ಜುನೆಜೋ ಅವರು ಈ ಸಹಾಯ ಪಡೆದ ಕಾರಣ ಜಿಯಾವರನ್ನು ಸೇನೆಯ ಮುಖ್ಯಸ್ಥರನ್ನಾಗಿ ಮುಂದುವರಿಸಿದರು. ತೋರಿಕೆಗೆ ಇದೊಂದು ಪ್ರಜಾಪ್ರಭುತ್ವವಾಗಿದ್ದರೂ, ಇದರ ನಿಯಂತ್ರಣ ಜಿಯಾ ಅವರದ್ದೇ ಆಗಿತ್ತು. ಜುನೆಜೋ ಅವರು ಜಿನೇವಾ ಒಪ್ಪಂದಕ್ಕೆ ಸಹಿ ಹಾಕಿದ ಕಾರಣ ಹಾಗೂ ಓಜರಿಯಲ್ಲಿ ಆದ ದೊಡ್ಡ ಪ್ರಮಾಣದ ಭಯೋತ್ಪಾದಕ ಸಿಡಿತದ ಕಾರಣದಿಂದ ಮಿಲಿಟರಿಯ ಕೆಲವು ಜನರಲ್‌ಗಳನ್ನು ವಿರು ಶಿಕ್ಷೆಗೆ ಗುರಿಪಡಿಸಿದರು. ಈ ಹಿನ್ನೆಲೆಯಲ್ಲಿ, ಜಿಯಾ ಉಲ್‌ಹಕ್ ಜುನೇಜೋ ಅವರ ಆಡಳಿತಾತ್ಮಕ ಸ್ವಾತಂತ್ರ್ಯವನ್ನು ಟೀಕಿಸಿದರು. ಪರಿಣಾಮವಾಗಿ ೧೯೮೮ರ ಮೇ ತಿಂಗಳಿನಲ್ಲಿ ಹಲವಾರು ಕಾರಣಗಳನ್ನು ಒಡ್ಡಿ ಜುನೇನೋ ಅವರ ಆಡಳಿತದ ಕಾಲದಲ್ಲಿ ಆದ ಆಗುಹೋಗುಗಳ ಕಾರಣಗಳನ್ನು ಗುರುತಿಸಿ ಅವರ ಸರ್ಕಾರವನ್ನು ರದ್ದು ಮಾಡಿ ಚುನಾವಣೆಗೆ ಕರೆ ನೀಡಿದರು. ೧೯೮೮ರ ಆಗಸ್ಟ್ ೧೭ರಂದು ಜಿಯಾ ಉಲ್‌ಹಕ್ ಅವರು ಚುನಾವಣೆಗೆ ಕರೆ ನೀಡಿದರು. ನಂತರ ನಡೆದ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದರು. ಇದನ್ನು ಜಿಯಾ ಉಲ್‌ಹಕ್ ಅವರ ಸಮಾಜವಾದಿ ಚಿಂತನೆಯ ವಿರೋಧಿಗಳ ಚಟುವಟಿಕೆ ಎಂದು ಗುರುತಿಸುವುದುಂಟು.

೧೯೮೮ರಿಂದ ೧೯೯೯ರ ದಶಕದಲ್ಲಿ ಮತ್ತೊಮ್ಮೆ ಪಾಕಿಸ್ತಾನವು ನಾಗರಿಕ ಆಡಳಿತಕ್ಕೆ ಒಳಪಟ್ಟಿತು. ಪ್ರಜಾಪ್ರಭುತ್ವದ ಮೂರನೇ ಸರ್ಕಾರ ಇದಾಗಿತ್ತು. ಬೆನಜಿರ್ ಭುಟ್ಟೊ ಹಾಗೂ ನವಾಜ್ ಶರೀಫರ ಆಡಳಿತಗಳಡಿಯಲ್ಲಿ ಮುನ್ನಡೆದ ಇವರೀರ್ವರ ಸರ್ಕಾರಗಳು, ಭ್ರಷ್ಟಾಚಾರದ ಕಾರಣದಿಂದ ಅಧಿಕಾರ ಹಸ್ತಾಂತರ ಮಾಡಬೇಕಾಯಿತು. ಇದೇ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿದ್ದ ಮುಲ್ಲಾ ಮಹಮ್ಮದ್ ಓಮರ್‌ನ ತಾಲೀಬಾನ್ ಸರ್ಕಾರವನ್ನು ಗುರುತಿಸಿದ ಮೂರು ರಾಷ್ಟ್ರಗಳಲ್ಲಿ ಪಾಕಿಸ್ತಾನ ಸಹ ಒಂದಾಗಿತ್ತು. ೧೯೯೦ರಲ್ಲಿ ರಷ್ಟಾವು ಆಫ್ಘಾನಿಸ್ತಾನವನ್ನು ಆವರಿಸಿದ್ದ ಸಂದಭದಲ್ಲಿ ಅಲ್ಲಿನ ರಷ್ಯಾ ವಿರೋಧಿ ಹೋರಾಟಕ್ಕೆ ತಾಲೀಬಾನ್ ಮುಂದಾಳತ್ವ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕೆಗೆ ಬೆಂಬಲ ನೀಡಿದ ಪಾಕಿಸ್ತಾನ ಹಲವಾರು ಸಂದರ್ಭಗಳಲ್ಲಿ ತನ್ನ ಭೂ ಪ್ರದೇಶವನ್ನು ತಾಲೀಬಾನ್ ಸೈನಿಕರಿಗೆ ಬಳಸಲು, ತನ್ನ ಮದ್ರಾಸಾಗಳ ಮೂಲಕ ಹೋರಾಟಕ್ಕೆ ಸೈನಿಕರನ್ನು ಸಿದ್ಧಗೊಳಿಸಲು, ಸಹಾಯಮಾಡಿತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಧರ್ಮನಿರಪೇಕ್ಷ ಮನೋಭಾವನೆಗೆ ಧಕ್ಕೆಯಾಗಿ ಇದೊಂದು ಇಸ್ಲಾಂ ಮೂಲಭೂತವಾದಿಗಳ ರಾಷ್ಟ್ರವೆಂಬ ಪರಿಕಲ್ಪನೆಗೆ ಎಡೆಯಾಯಿತು.

ಪಾಕಿಸ್ತಾನವು ೧೯೯೮ರ ಅವಧಿಯಲ್ಲಿ ಅಣುಬಾಂಬ್ ಸ್ಫೋಟ ಮಾಡಿತು. ಪರಿಣಾಮವಾಗಿ ಈ ರಾಷ್ಟ್ರಕ್ಕೆ ಆರ್ಥಿಕ ಸಹಾಯದ ಸ್ಥಗಿತವನ್ನು ಶಿಕ್ಷೆಯಾಗಿ ನೀಡಬೇಕೆಂದ ಅಂತಾರಾಷ್ಟ್ರೀಯ ನಿಲುವಿಗೆ ಸಿಕ್ಕಿದ ಪಾಕಿಸ್ತಾನ ಆರ್ಥಿಕವಾಗಿ ಸೋಲನ್ನು ಸಹಜವಾಗಿಯೇ ಅನುಭವಿಸಿತು. ಇದು ಪಾಕಿಸ್ತಾನದ ಅಭಿವೃದ್ಧಿಗೆ ಧಕ್ಕೆಯಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯವನ್ನು ಮುಸ್ಲಿಮ್‌ ವಿರೋಧಿ ಎಂಬ ಪ್ರತಿಪಾದನೆಯನ್ನು ಪಾಕಿಸ್ತಾನದ ಧಾರ್ಮಿಕ ಗುಂಪುಗಳು ಮಾಡಿತು. ಆ ಮೂಲಕ, ಬಹುತ್ವ ಸಮಾಜವಾಗಿರುವ ಪಾಕಿಸ್ತಾನ ಹೊರ ಪ್ರಪಂಚಕ್ಕೆ ಮುಸ್ಲಿಮ್‌ ರಾಷ್ಟ್ರವೆಂಬ ಮುಖವಾಡವನ್ನು ತೋರತೊಡಗಿತು. ಇದಕ್ಕೆ ಪೂರಕವಾಗಿ ಅಲ್ಲಿನ ನಾಗರಿಕ ಸೇವಾ ಅಧಿಕಾರಿಗಳು ಇಸ್ಲಾಂ ಎಂದರೆ ಅದೊಂದು ಏಕಧರ್ಮೀಯ ವ್ಯವಸ್ಥೆ ಎಂಬಂತೆ ಪ್ರಚಾರ ಮಾಡಿದರು. ಇದು ಈ ಇಸ್ಲಾಂ ಧರ್ಮದಲ್ಲಿನ ಹಲವಾರು ವಿಭಿನ್ನತೆ / ಬಹುತ್ವತೆಯನ್ನು ಮರೆಮಾಚುವುದರ ಮುಖಾಂತರ ಎಲ್ಲ ಮುಸ್ಲಿಮ್‌ ಜನತೆಗೆ ಧರ್ಮಾಂಧರು, ಉದಾರವಾದಿಗಳಲ್ಲ ಎಂಬ ರೀತಿಯಲ್ಲಿ ಪ್ರತಿಪಾದಿಸಿತು. ಮಾಧ್ಯಮಗಳು ಸಹ ಈ ಸತ್ಯವನ್ನು ಮರೆಮಾಚಿದುದರ ಫಲವಾಗಿ ಪಾಕಿಸ್ತಾನದ ಉದಾರವಾದಿ ಧ್ವನಿಗಳು, ಊಳಿಗಮಾನ್ಯ ಪದ್ಧತಿಯ ಯಜಮಾನಿಕೆ ವಿರೋಧಿ ಚಿಂತನೆಗಳು ಬೆಳಕಿಗೆ ಬರದಂತಾದವು.

೧೯೯೭ರ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬಂದ ನವಾಜ್ ಶರೀಫರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡುವುದರ ಮುಖಾಂತರ ಪ್ರಧಾನಮಂತ್ರಿಗಳ ಅಧಿಕಾರವನ್ನು ಯಾವುದೇ ಅಡಚಣೆ ಇಲ್ಲದಂತೆ ಅಸೀಮಿತವಾಗಿ ರೂಪಿಸಿಕೊಳ್ಳತೊಡಗಿದರು. ಇದನ್ನು ವಿರೋಧಿಸಿದ ಸೇನಾಪತಿಗಳಾದ ಜಿಹಂಗೀರ್ ಕರಾಮತ್, ಅಂತಿನ ನಾಗರಿಕ ಅಧ್ಯಕ್ಷರಾಗಿದ್ದ ಫರೋಕ್ ಲೆಗರೀ ಹಾಗೂ ಮುಖ್ಯ ನ್ಯಾಯಾಧೀಶರಾದ ಸಾಜದ್ ಅಲಿಶಾ ಇವರುಗಳನ್ನು ಒತ್ತಡದಿಂದ ಶರೀಫ್ ರಾಜಿನಾಮೆ ನೀಡುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ತಮ್ಮ ಆಡಳಿತದ ಎರಡನೇ ವರ್ಷದಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಮಗೆ ತಳಿಸದೇ ಸೇನಾಪತಿಯಾದ ಪರ್ವೇಜ್ ಮುಷರಫ್ ಭಾರತವನ್ನು ಕೆಣಕಿದ್ದಾರೆ ಎಂಬ ಕಾರಣಕ್ಕೆ ೧೯೯೯ರ ಅಕ್ಟೋಬರ್ ೧೨ರಂದು ಅವರನ್ನು ಸ್ಥಾನಪಲ್ಲಟಗೊಳಿಸಿ ಐಯ್.ಎಸ್.ಆಯ್‌ನ ಮುಖ್ಯಸ್ಥರಾದ ಜಿಯಾ ಉದ್ದೀನ್ ಭಟ್‌ ಅವರಿಗೆ ಆ ಸ್ಥಾನವನ್ನು ಶರೀಫ್ ಅವರು ನೀಡಲು ಸಿದ್ದರಾದರು. ಈ ಸಂದರ್ಭದಲ್ಲಿ ದೇಶದ ಹೊರಗಿದ್ದ ಮುಶ್ರಫ್‌ ಅವರನ್ನು ಬೆಂಬಲಿಸಿದ ಸೇನೆ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿತು. ಪರ್ವೇಜ್ ಮುಶ್ರಫ್ ಪರಿಸ್ಥಿತಿಯನ್ನು ಅರಿತು ಹಿಂದಿರುಗಲು ಪ್ರಯತ್ನಿಸಿದಾಗ ಅವರನ್ನು ದೇಶ ಪ್ರವೇಶ ಮಾಡದಂತೆ ಮಾಡಿದ ನವಾಜ್ ಶರೀಫ್‌ರ ಪ್ರಯತ್ನ ಸಫಲವಾಗಲಿಲ್ಲ. ಇದರಿಂದ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಪ್ರಜಾಪ್ರಭುತ್ವೀಯ ಸರ್ಕಾರವನ್ನು ಮತ್ತೊಮ್ಮೆ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತು. ಜನರಲ್ ಮುಷರಫ್ ಅದರ ನಾಯಕರಾದರು.

ಅಮೆರಿಕೆಯ ಅಧ್ಯಕ್ಷ ಹಾಗೂ ಕೊಲ್ಲಿ ರಾಷ್ಟ್ರಗಳ ಬೆಂಬಲದಿಂದ ಜೀವ ಉಳಿಸಿಕೊಂಡು ರಾಷ್ಟ್ರದಿಂದ ಹೊರದೂಡಲ್ಪಟ್ಟ ಶರೀಫ್ ಸೌದಿ ಅರೇಬಿಯಾದಲ್ಲಿ ರಾಜಕೀಯ ಆಶ್ರಯ ಹೊಂದಿ ೨೦೦೫ರವರೆಗೆ ಅಲ್ಲಿಯೇ ಉಳಿದರು. ಇತ್ತ ಭ್ರಷ್ಟಾಚಾರದ ಕಾರಣ ಸೆರೆಮನೆವಾಸ ತಪ್ಪಿಸಿಕೊಂಡ ಬೆನಜೀರ್ ಭುಟ್ಟೊ ಲಂಡನ್‌ನಲ್ಲಿ ತಮ್ಮ ವಾಸ ಹೂಡಿದರು.

೨೦೦೦ದಿಂದ ೨೦೦೮ರ ವರೆಗೆ ವಿವಿಧ ರೀತಿಯಲ್ಲಿ ಪ್ರಜಾಪ್ರಭುತ್ವ ಹಾಗೂ ಸೇನೆ ನಿರ್ದೇಶಿತ ಪ್ರಜಾಪ್ರಭುತ್ವ ಮಾದರಿ ಸರ್ಕಾರಗಳನ್ನು ನಡೆಸಿದ ಮುಶ್ರಫ್, ೨೦೦೦ ಇಸವಿಯಲ್ಲಿ ಪಾಕಿಸ್ತಾನದ ಮುಖ್ಯ ನ್ಯಾಯಾಂಗ ನೀಡಿದ ಚುನಾವಣೆಯನ್ನು ನಡೆಸುವ ಆದೇಶವನ್ನು ಅಕ್ಟೋಬರ್ ೧೨, ೨೦೦೨ರೊಳಗೆ ನಡೆಸುವ ಬದಲು, ೨೦೦೨ರ ಏಪ್ರಿಲ್ ೩೦ ರಂದು ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆ ನಡೆಸಿ ತಮ್ಮ ಅಧಿಕಾರವನ್ನು ಶಾಸನಬದ್ಧಗೊಳಿಸಲು ಪ್ರಯತ್ನಿಸಿದರು. ೨೦೦೨ರ ಅಕ್ಟೋಬರ್‌ನಲ್ಲಿ ನಡೆಸಿದ ಚುನಾವಣೆಯಲ್ಲಿ ಮುಶ್ರಫ್ ಪರ ಪಕ್ಷವು “ಗೆಲುವನ್ನು ಸಾಧಿಸಿ” ಸಂಸತ್ತನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಬೇರೆ ರಾಜಕೀಯ ಪಕ್ಷಗಳು ಇವರ ಈ ನೀತಿಯನ್ನು ವಿರೋಧಿಸಿದವು. ಆದಾಗ್ಯೂ ಡಿಸೆಂಬರ್ ೨೦೦೩ರಲ್ಲಿ ಮುಷರಫ್ ಪರವಾದಿಗಳು ಸಂಸತ್ತಿನಲ್ಲಿ ೨/೩ ಭಾಗ ಹೆಚ್ಚಿನ ಸಂಖ್ಯೆಯಲ್ಲಿ ಬಹುಮತ ಸಾಧಿಸಿ ೧೭ನೇ ಸಂವಿಧಾನ ತಿದ್ದುಪಡೆಯ ಮುಖಾಂತರ ಮುಶ್ರಫ್ ಅವರ ಅಧಿಕಾರವನ್ನು ೧೯೯೯ರಿಂದ ಶಾಸನಬದ್ಧವಾಗಿಸಿದರು. ೨೦೦೪ರ ಜನವರಿ ೧ ರಂದು ಮುಶ್ರಫ್‌ ಪ್ರಜಾಪ್ರಭುತ್ವಿಕವಾಗಿ ಪಾಕಿಸ್ತಾನದ ಅಧ್ಯಕ್ಷೀಯ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿಕೊಂಡರು.

ಆರ್ಥಿಕವಾಗಿ ಹಲವು ಪ್ರಮುಖ ಬದಲಾವಣೆ ತಂದ ಮುಷರಫ್‌ ತಮ್ಮ ಉದಾರವಾದಿ ಆಲೋಚನೆಯ ಮುಖಾಂತರ ಸಾಮಾಜಿಕ ಸುಧಾರಣೆ ತರಬಯಸಿದರು. ಆದರೆ, ತೀವ್ರಗಾಮಿ ಇಸ್ಲಾಂ ಚಿಂತಕರು ಇವರ ಈ ಪ್ರಯತ್ನಗಳನ್ನು ವಿರೋಧಿಸಿದರು. ಇದಕ್ಕೆ ಮುಖ್ಯ ಕಾರಣ ೨೦೦೧ ಸೆಪ್ಟೆಂಬರ್ ೧೧ರ ನಂತರ ಅಮೆರಿಕೆಯ “ಟ್ವಿನ್ ಟವರ್‌ಗಳ” ನಾಶಕ್ಕೆ ಇಸ್ಮಾಂ ಭಯೋತ್ಪಾದನೆ ಕಾರಣವೆಂದು ಅಮೆರಿಕಾ ಭಾವಿಸಿತು. ಪರಿಣಾಮವಾಗಿ ಆಫ್ಘಾನಿಸ್ತಾನದ ವಿರುದ್ಧ ನಡೆಸಿದ ಯುದ್ಧದಲ್ಲಿ ಪಾಕಿಸ್ತಾನ ಅಮೆರಿಕೆಯ ಪರ ವಹಿಸಿತು. ಈ ಕಾರಣಕ್ಕಾಗಿ ಹಲವಾರು ಭಾರಿ ಮುಷರಫ್‌ರವರ ಜೀವನದ ಮೇಲೆ ಕೂಡ ಭಯೋತ್ಪಾದಕ ಹಾಗೂ ತೀವ್ರಗಾಮಿ ಮುಸಲ್ಮಾನ ಸಂಘಟನೆಗಳು ಕೊನೆಯ ಪ್ರಯತ್ನ ಮಾಡಿದವು. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹೆಚ್ಚಾದ ಭಯೋತ್ಪಾದನೆಗೂ ಪಾಕಿಸ್ತಾನವೇ ಕಾರಣವೆಂಬ ಭಾರತದ ಹೇಳಿಕೆಗಳು ಪಾಕಿಸ್ತಾನದ ಅಸ್ವಸ್ಥ ಪ್ರಜಾಪ್ರಭುತ್ವ, ಮಿಲಿಟರಿ ಆಡಳಿತ, ಇಸ್ಲಾಂ ಪರವಾದ ಇಸ್ಲಾಮೀಕರಣದ ಪ್ರಯತ್ನ, ಎಲ್ಲವೂ ಸೇರಿ, ಪಾಕಿಸ್ತಾನವು ಒಂದು ಭಯೋತ್ಪಾದಕ, ಪ್ರಜಾಪ್ರಭುತ್ವ ವಿರೋಧಿ, ತೀವ್ರಗಾಮಿ ಇಸ್ಲಾಂ ಪ್ರಚಾರಕ ರಾಷ್ಟ್ರವೆಂಬಂತಹ ವಿಚಾರದ ಪ್ರತಿಪಾದನೆಯಾಯಿತು. ಏಷ್ಯಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೂ, ಪಾಶ್ಚಿಮಾತ್ಯ ಮಾಧ್ಯಮಗಳಲ್ಲೂ ಹಾಗೂ ಮಧ್ಯಪೂರ್ವ ಮಾಧ್ಯಗಳು ಸಹ ಇದನ್ನೇ ಪ್ರಬಲವಾಗಿ ಪ್ರಚಾರ ಮಾಡಿದ ಫಲವಾಗಿ ಪಾಕಿಸ್ತಾನದ ಜನಸಾಮಾನ್ಯನ ಚಿತ್ರಣ ಮತ್ತು ಅವನ ಧ್ವನಿ ಎಲ್ಲಿಯೂ ಪ್ರತಿಧ್ವನಿಸಲಿಲ್ಲ.

೨೦೦೭ರಲ್ಲಿ ಹಿಂತಿರುಗಿ ಬಂದ ನವಾಜ್ ಶರೀಫ್ ಹಾಗೂ ಬೆನೆಜಿರ್ ಭುಟ್ಟೊ ಅವರು ಮತ್ತೊಮ್ಮೆ, ಪಾಕಿಸ್ತಾನ್ ಜನಪರ ಚಿಂತನೆಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು. ಲಾಹೋರ್‌ನಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಹೋರಾಟದ ಫಲವಾಗಿ ನ್ಯಾಯವಾದಿಗಳು ಬೀದಿಗಿಳಿದು ಮುಷರಫ್ ವಿರುದ್ಧ ಸಾರಿದ ಸಮರ ನಿಜಕ್ಕೂ ಪಾಕಿಸ್ತಾನದ ಜನಸಾಮಾಜ್ಯರ ಧ್ವನಿಯಾಗಿದ್ದು ಅದು ಅವರ ಪ್ರಜಾಪ್ರಭುತ್ವದ ಬಯಕೆಯ ಪ್ರತೀಕವಾಗಿತ್ತು. ಪ್ರಜಾಪ್ರಭುತ್ವದ ಬಯಕೆಯ, ಅಭಿವೃದ್ಧಿಪರವಾದ, ಬಹುತ್ವ ಸಮಾಜದ, ಉದಾರವಾದಿ ಚಿಂತನೆಯ ಪ್ರತಿನಿಧೀತ ಅಂಶಗಳಾಗಿದ್ದು ಜನಸಾಮಾನ್ಯರ ಪ್ರಜಾಪ್ರಭುತ್ವದ ಜನಪರ ನಾಯಕರಾದ ಪಾಕಿಸ್ತಾನದ ನಾಗರಿಕರ ನೈಜ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವುದಾಗಿತ್ತು. ಅಷ್ಟರಲ್ಲಿಯೇ ಸಿಡಿದ ಮತ್ತೊಂದು ಭಯೋತ್ಪಾದಕ ಮಾನವ ಬಾಂಬ್ ಈ ಪ್ರಜಾಪ್ರಭುತ್ವ ಜನಸಾಮಾನ್ಯರ ಆಸೆ ಆಕಾಂಕ್ಷೆಗಳ ಪ್ರತೀಕವೆನಿಸಿದ್ದ ಶ್ರೀಮತಿ ಬೆನೆಜೀರ್ ಬುಟ್ಟೊ ಅವರನ್ನು ಬಲಿ ತೆಗೆದುಕೊಂಡಿತು. ಹಾಗಾಗಿ, ಪ್ರಜಾಪ್ರಭುತ್ವದ ಬೇರಿಗೆ ಪದೇ ಪದೇ ಕೊಡಲಿ ಪೆಟ್ಟು ಬಿದ್ದಿದ್ದ ಪಾಕಿಸ್ತಾನ ಪ್ರಜಾಪ್ರಭುತ್ವದ ಆಸೆಯನ್ನೇ ಮತ್ತೆ ಕೈಬಿಡಬೇಕಾಯಿತೇನೋ ಎನ್ನುವ ವಾತಾವರಣ ಕಂಡುಬಂದಿತು. ಆದರೂ ಪಾಕಿಸ್ತಾನವು ದಿಟ್ಟತೆಯಿಂದ ೨೦೦೭ರಲ್ಲಿ ಇಫ್ತಿಕರ್ ಮುಹಮ್ಮದ್ ಚೌದರಿಯವರನ್ನು ಹಾಗೂ ೧೪ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ಎದುರಿಸಿದ್ದ ಮುಶ್ರಫ್ ಅವರು ಪ್ರಜಾಪ್ರಭುತ್ವದ ಹೋರಾಟಕ್ಕೆ ಮಣಿದು ಫೆಬ್ರುವರಿ ೨೦೦೮ರಲ್ಲಿ ಚುನಾವಣೆ ನಡೆಸಿದರು.

ಪಾಕಿಸ್ತಾನದ ಪ್ರಮುಖ ಪಕ್ಷಗಳಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಾಕಿಸ್ತಾನದ ಮುಸ್ಲಿಮ್‌ ಲೀಗ್ (ನವಾಜ್ ಶರೀಫ್) ಚುನಾವಣೆ ಗೆದ್ದು, ಮತ್ತೆ ಸಮ್ಮಿಶ್ರ ಸರ್ಕಾರದ ರಚನೆಯಾಯಿತು. ಹೀಗೆ ಪಾಕಿಸ್ತಾನದ ಹುಟ್ಟು ಹಾಗೂ ಬೆಳವಣಿಗೆಯು ಹೆಚ್ಚುನಾಂಶ ಪ್ರಜಾಪ್ರಭುತ್ವದ ಪರ, ಧರ್ಮನಿರಪೇಕ್ಷ ಸಮಾಜದ ಆಸೆ, ಜನಸಾಮಾನ್ಯರ ಅಭಿವೃದ್ಧಿಯ ಬಯಕೆ, ಬಹುತ್ವ ಸಮಾಜದ ಪರಸ್ಪರ ಗೌರವದ ಸ್ಪಂದನೆಗಳ ಮೇಲೆ ಗೋಡೆ ಕಟ್ಟಿದ ಚರಿತ್ರೆಯಾಗಿ ಪರಿಣಮಿಸುತ್ತದೆ.

ಯಾವ ವಿಶ್ಲೇಷಣಾಕಾರನಾದರೂ ಪಾಕಿಸ್ತಾನದ ರಾಜಕೀಯ ಚರಿತ್ರೆಯನ್ನು ಅಧ್ಯಯನಿಸಿದ ನಂತರ ಪಾಕಿಸ್ತಾನ ಮೂಲಭೂತವಾದಿ ರಾಷ್ಟ್ರವೆನ್ನುವುದನ್ನು ಒಪ್ಪದೇ ಪಾಕಿಸ್ತಾನದ ಜನಸಾಮಾನ್ಯರು ಭಾರತೀಯರಂತೆಯೇ ಪ್ರಜಾಪ್ರಭುತ್ವವಾದಿಗಳು ಎಂಬುದನ್ನು ಗಮನಿಸದೇ ಇರಲಾರರು. ಆದರೆ, ಎಲ್ಲ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಪರ ರಾಷ್ಟ್ರಗಳಲ್ಲಿ ಇಂದಿರುವ ಪರಿಸ್ಥಿತಿಯಂತೆ ಪಾಕಿಸ್ತಾನದಲ್ಲೀ ‘ರಾಜಕೀಯ’, ‘ರಾಜಕೀಯ ಪಕ್ಷಗಳು’, ‘ಧರ್ಮಾಧಿಕಾರಿಗಳು’, ಊಳಿಗ ಮಾನ್ಯ ಪದ್ಧತಿಯ ಯಜಮಾನಿಕಾ ಗುಂಪುಗಳು ಹಾಗೂ ‘ರಾಜಕಾರಣಿಗಳು’ ಪಾಕಿಸ್ತಾನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಜನಸಾಮಾನ್ಯರ ಧ್ವನಿ ರಾಜಕಾರಣಿ ಹಾಗೂ ರಾಜಕಾರಣದ ಅಡಿಯಲ್ಲಿ ಹುದುಗಿಹೋಗಿದೆ. ಈ ಸತ್ಯವನ್ನು ಹೇಳುವಲ್ಲಿ ಮಾಧ್ಯಮಗಳು ಸೋತಿರುವುದರಿಂದ ಅಂತಾರಾಷ್ಟ್ರೀಯ ಸಾರ್ವಜನಿಕ ಅಭಿಪ್ರಾಯಗಳೂ ಸಹ ಪಾಕಿಸ್ತಾನವನ್ನು ನೆಗೇಟಿವ್‌ಆಗಿ ಗುರುತಿಸುತ್ತವೆ.

ಪ್ರಸ್ತುತ ಪಾಕಿಸ್ತಾನದ ಹಾದಿಗಳು

ಆಗಸ್ಟ್ ೭ ರಂದು ಪಾಕಿಸ್ತಾನದ ಸಮ್ಮಿಶ್ರ ಸರ್ಕಾರವು ತನ್ನ ಅಧ್ಯಕ್ಷರಾದ ಜನರಲ್ ಪರ್ವೆಜ್ ಮುಷರಫ್‌ರನ್ನು ಅಧ್ಯಕ್ಷ ಸ್ಥಾನದಿಂದ ಸ್ಥಾನಪಲ್ಲಟ ಮಾಡಲು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆಪಾದನೆಯ ಪಟ್ಟಿಯಲ್ಲಿನ ಅಂಶಗಳು ಪ್ರಜಾಪ್ರಭುತ್ವ ಅಂಶಗಳನ್ನು ಮುಷರಫ್ ಅವರು ಬಲಹೀನಗೊಳಿಸಿದರೆಂಬ ಆಧಾರದ ಮೇಲಿವೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ಮುಶ್ರಫ್ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟು ಆಗಸ್ಟ್ ೧೮, ೨೦೦೮ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಆಸಿಫ್ ಜರ್ದಾರಿಯವರು ಆ ಸ್ಥಾಮ ಅಲಂಕರಿಸಿರುವುದನ್ನು ಗಮನಿಸಬಹುದು. ಆದರೂ, ಪಾಕಿಸ್ತಾನವೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಜನತೆ ಪ್ರಜಾಪ್ರಭುತ್ವ ಬಯಸುವವರು, ಯಾರೂ ಹುಟ್ಟಿನಿಂದ ಭಯೋತ್ಪಾದಕರಲ್ಲ ಎಂಬುದರ ಅರಿವಿಲ್ಲದೇ, ಮಾಧ್ಯಮಗಳು, ಪಾಕಿಸ್ತಾನವನ್ನು ತೊಂದರೆಗೊಳಗಾದ ರಾಜ್ಯ, ಇದೊಂದು ರಾಷ್ಟ್ರದೊಳಗಿನ ಆಂತರಿಕ ಹೋರಾಟ ಎಂಬಂತೆ ಪ್ರತಿಬಿಂಬಿಸಿ ಮತ್ತೊಮ್ಮೆ ಈ ರಾಷ್ಟ್ರದ ಚಿತ್ರಣವನ್ನು ಭಯಭೀತವಾಗಿ ಬಿಂಬಿಸಿದ್ದಾರೆ.

ಭಯೋತ್ಪಾದನೆ ಹಾಗೂ ಭಯೋತ್ಪಾದಕರನ್ನು ಹತ್ತಿಕ್ಕಲು ಪಾಕಿಸ್ತಾನಕ್ಕೆ ನೀಡಿದ ಹಣ ದುರುಪಯೋಗವಾಗಿದೆ, ಮುಷರಫ್ ಅಮೆರಿಕಾದ ಭಯೋತ್ಪಾದನಾ ವಿರೋಧಿ ಯುದ್ಧವನ್ನು ಪಾಕಿಸ್ತಾನದ ಅಸ್ತಿತ್ವ ಬದಿಗಿಟ್ಟು, ಗುಲಾಮರಂತೆ ಆಡಳಿತ ನಡೆಸಿದ್ದಾರೆ ಎನ್ನುವ ಅಭಿಪ್ರಾಯ ಬಲವಾಗಿತ್ತು. ಇಲ್ಲಿನ ಮದ್ರಸಾಗಳು ಭಯೋತ್ಪಾದಕರನ್ನು ಬೆಳೆಸುವ ತಾಣವಾಗಿದೆ ಮತ್ತು ಇಲ್ಲಿ ನಾಗರಿಕತು, ನೌಕರಶಾಹಿ, ಸೇನೆ ಹಾಗೂ ರಾಜಕಾರಣಿಗಳ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವ ಅಂಶವೂ ಗಮನಾರ್ಹವಾಗಿದೆ. ಇಲ್ಲಿನ ಬುಡಕಟ್ಟು ಜನಾಂಗಗಳು ವಾಯುವ್ಯ ಗಡಿಯನ್ನು ನಿಯಂತ್ರಿಸಿ ಭಯೋತ್ಪಾದಕರಿಗೆ ಹಾಗೂ ಭಯೋತ್ಪಾದನೆ ಅರಳಲು ನೆರಳು ನೀಡುತ್ತಿದೆ ಎಂಬ ಅಮೆರಿಕೆಯ ವಾದ. ಪಾಕಿಸ್ತಾನದ ಅಭಿವೃದ್ಧಿಪರ ಚಿಂತನೆ ಅದರ ಇಸ್ಮಾಲಿಕ್ ಅಜೆಂಡಾವನ್ನು ಮುಚ್ಚಿಡುವ ಪ್ರಯತ್ನ ಎಂಬೆಲ್ಲಾ ಅಪವಾದಗಳು ಪಾಕಿಸ್ತಾನದಲ್ಲಿನ ಯಾವುದೇ ಪ್ರಜಾಪ್ರಭುತ್ವವಾದಿ ಬದಲಾವಣೆಗೂ ಬೆಂಬಲ ನೀಡುವುದಿಲ್ಲ. ತಾಲಿಬಾನ್ ಸಂಘಟನೆ ಪಾಕಿಸ್ತಾನದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಮನೆ ಮಾಡಿದೆ ಎಂದು ಹೇಳಿ ಯುದ್ಧ ಸನ್ನಿತವಾಗಿ ಬಾಂಬ್ ದಾಳಿ ನಡೆಸಿರುವ ಅಮೆರಿಕಾ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ತರಲು ಬೆಂಬಲಿಸುತ್ತದೆ ಎಂದರೆ ಇದು ನಂಬಲರ್ಹವೇ? ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳು, ಸದ್ಯಕ್ಕೆ ಪಾಕಿಸ್ತಾನಕ್ಕೆ ಸದ್ಯದಲ್ಲಿರುವ ನಾಗರಿಕ ಸಮ್ಮಿಶ್ರ ಸರ್ಕಾರವೇ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಉಳಿಯಲು/ ಅಳೆಯಲು ಕೊನೆಯ ಅವಕಾಶವೆಂದೂ ಪ್ರತಿಬಿಂಬಿಸಿವೆ.

ಹೀಗೆ ಒಂದೆಡೆ ಮಾಧ್ಯಮಗಳ ಹೊಡೆತ, ಮತ್ತೊಂದೆಡೆ ರಾಜಕೀಯ ಅವಕಾಶವಾದಿತ್ವ, ಇನ್ನೊಂದೆಡೆ ಧಾರ್ಮಿಕ ಉದ್ಧಟತನ, ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅಪನಂಬಿಕೆಗಳು ಹಾಗೂ ಇಸ್ಲಾಂ ಧರ್ಮ ಹಾಗೂ ಭಯೋತ್ಪಾದನೆ ಎಂಬಂತೆ ಬೆಳೆದಿರುವ ಏಕಮುಖದ ಅಭಿಪ್ರಾಯ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಕ್ಕಿದ ಸ್ವತಂತ್ರ ರಾಷ್ಟ್ರವೆಂದು ಅವಹೇಳನ ಮಾಡುತ್ತಲೇ ಬಂದಿವೆ.

ಆದರೆ, ಪರ್ವೇಜ್ ಮುಷರಫ್‌ ಅವರ ಒಂಬತ್ತು ವರ್ಷಗಳ ಆಡಳಿತದ ನಂತರ ಅಧಿಕಾರಕ್ಕೆ ಬಂದಿರುವ ಸೂಕ್ಷ್ಮತರದ ಈ ಸಮ್ಮಿಶ್ರ ಸರ್ಕಾರ ಕೂಡ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವಂತಹವು. ಇದಕ್ಕೆ ಸರ್ವರೀತಿಯ ಬೆಂಬಲ ಅವಶ್ಯಕವೆಂಬುದನ್ನು ಯಾರೂ ಚಿಂತಿಸಿದಂತಿಲ್ಲ. ಗಾಜಿನ ಮನೆಯಲ್ಲಿರುವ ಈ ಪ್ರಜಾಪ್ರಭುತ್ವವೆಂಬ ಗಾಜಿಗೆ ಕಲ್ಲು ತೂರುವ ಈ ಪ್ರತಿಕ್ರಿಯೆ ನಿಲ್ಲಿಸಬೇಕೆಂದು ಹೇಳಬೇಕಿಲ್ಲ.

ಆಂತರ್ಯದಲ್ಲಿಯೇ ಅಡಚಣೆಗಳುಳ್ಳ ಈ ಸರ್ಕಾರದಲ್ಲಿ ನವಾಜ್ ಶರೀಫ್ ಸದ್ಯದ ಪರಿಸ್ಥಿತಿಯಲ್ಲಿ ಸೇನೆಗೆ ಯಾವುದೇ ಕರುಣೆ ತೋರಲಾರರು. ಹಾಗೆಯೇ ತಾಲೀಬಾನಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲಾರರು. ಹೀಗಾಗಿ ಇವರಿಗೆ ಅಮೆರಿಕಾದ ಬೇಡಿಕೆಗಳಿಗೆ ಸ್ಪಂಧಿಸಲು ಸಾಧ್ಯವಾಗುತ್ತಿಲ್ಲ. ಸಾಧ್ಯವಾದರೆ ಪ್ರಧಾನ ಮಂತ್ರಿ ಪಟ್ಟ ಏರಬೇಕೆಂದು ಬಯಸಿರುವ ಶರೀಫ್ ಯಾವ ಸಂದರ್ಭದಲ್ಲಿಯೂ ಸೇನೆಯ ನಂಬಿಕೆಯನ್ನು ಪಡೆಯಲಾರರು. ಹೀಗಾಗಿ ಕಳೆದ ೬೦ ವರ್ಷಗಳಿಂದಲೂ ಪಾಕಿಸ್ತಾನದಲ್ಲಿ ರಾಜಕೀಯ ಪಕ್ಷಗಳ ಹಾಗೂ ಸೇನೆಯ ನಡುವಿನ ವಿರಸ ಪಾಕಿಸ್ತಾನದ ಅಭಿವೃದ್ಧಿಗೆ ಮಾರಕವಾಗಿದೆ. ಈ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿರುವುದು, ಸಾಮಾಜಿಕವಾಗಿ ರಾಜಕೀಯ ಪಕ್ಷಗಳು ಮಾಡಬಹುದಾದ ಯಾವುದೇ ಕಾರ್ಯವನ್ನು ಕೈಗೆ ಎಟುಕುವಂತೆ ಮಾಡಿದೆ. ಹೀಗೆ ಇಂದು ಪಾಕಿಸ್ತಾನವು ಭಾರತದೊಂದಿಗೆ ಸಾಂಸ್ಕೃತಿಕ ರಕ್ತ ಹಂಚಿಕೊಂಡಿದ್ದರೂ ಷಷ್ಠ್ಯಬ್ದಿ ಕಾಲದಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವದ ಸೋಲಿಗೆ ಕಾರಣಗಳೇನು? ಇಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಪಥ ಹಾಗೂ ಗುರಿಗಳೇನು? ಇದು ಧರ್ಮ ನಿರಪೇಕ್ಷೆಯನ್ನು ಬಯಸುವ ಬಹುತ್ವ ಸಮಾಜ ಹೊಂದಿದಾಗ್ಯೂ ಧಾರ್ಮಿಕ ಮೌಢ್ಯತೆ ಹಾಗೂ ಏಕ ಧರ್ಮವಾದ ಇಸ್ಲಾಂ, ಅದರಲ್ಲೂ ಮೂಲಭೂತವಾದಿ ಇಸ್ಲಾಂ ರಾಷ್ಟ್ರವೆಂದು ಪ್ರತಿನಿಧಿತವಾಗಲು ಕಾರಣವೇನು? ರಾಷ್ಟ್ರೀಯವಾದಿ ಜಿನ್ನಾ ತನ್ನ ಧರ್ಮನಿರಪೇಕ್ಷವಾದ ಪಾಕಿಸ್ತಾನ ಕಟ್ಟಲು ಹೋಗಿ ಅಲ್ಲಿನ ಧಾರ್ಮಿಕವಾದಿ ಬಂಡವಾಳಶಾಹಿ ಉಳಿಗಮಾನ್ಯರ ಭೂಒಡೆಯರ ಹಿಡಿತಕ್ಕೆ ಸಿಕ್ಕಿ ಸೇನೆಯ ಅಧಿಕಾರಕ್ಕೆ ಎಡೆ ಮಾಡಿ ಪಾಕಿಸ್ತಾನದ ಜನಸಾಮಾನ್ಯನ ಆಸೆ, ಕನಸು, ಒಗ್ಗಟ್ಟಿನ ಬದುಕಿಗೆ ಸವಾಲಾಗಿರುವ ಪಾಕಿಸ್ತಾನದ ಸೃಷ್ಟಿ ಆಗಿದ್ದಾದರೂ ಏಕೆ? ಇದೇನು ಕೇವಲ ಮಾಧ್ಯಮಗಳ ಪ್ರತಿಪಾದನೆಯೇ, ಅಥವಾ ಪಾಕಿಸ್ತಾನದ ರಾಜ್ಯ ರಾಜಕೀಯ ರಾಜಕಾರಣಗಳ ಸೋಲೆ ಎಂಬುದು ಇಂದಿಗೂ ಚರ್ಚಾಸ್ಪದವಾದ ವಿಚಾರವಾಗಿದೆ.