ಭಾರತದ ರಾಷ್ಟ್ರೀಯತೆಯ ಬಗ್ಗೆ ಎರಡು ಮಜಲುಗಳಲ್ಲಿ ಚರ್ಚೆ ನಡೆದಿದೆ. ಸಾಮಾನ್ಯವಾಗಿ ಭಾಷಣಗಳಲ್ಲಿ ಜನಪ್ರಿಯ ಅಥವಾ ಜನಗಳನ್ನು ಮುಟ್ಟುವ ಬರವಣಿಗೆಗಳಲ್ಲಿ ಇದನ್ನು ಭಾವುಕತೆಯ ನೆಲೆಯಲ್ಲಿ, ಒತ್ತಡದಲ್ಲಿ ರೂಪಿಸಿದ್ದೇ ಹೆಚ್ಚು. ನಮ್ಮ ರಾಷ್ಟ್ರೀಯತೆ ಅಮೋಘವಾದದ್ದು; ಅದು ಅನಾದಿ, ಅದು ಚಿರಂಜೀವಿ; ಕೆಲವೊಮ್ಮೆ ಅದು ತೂಕಡಿಸಿ, ನಿದ್ರೆ ಹೋದದ್ದು ದಿಟವಾದರೂ, ಕಾಲ ಕಾಲಕ್ಕೆ ಅದು ಎಚ್ಚತ್ತು, ದೇಶದ ಆಕ್ರಮಣಕಾರರನ್ನು ನಿಗ್ರಹಿಸಿ, ನಮ್ಮ ಘನತೆ, ಸ್ವಂತಿಕೆಗಳನ್ನು ಅದು ಉಳಿಸಿಕೊಂಡಿದೆ, ಇನ್ನು ಮುಂದೆಯೂ ಉಳಿಸಲಿದೆ ಎಂಬ ಅಭಿಮಾನದ ಹೆಮ್ಮೆಯ ಮಾತುಗಳು ನಮ್ಮಲ್ಲಿ ಆಗಾಗ ಕೇಳಿ ಬರುತ್ತವೆ. ಇದು ರಾಷ್ಟ್ರೀಯತೆಯ ಬಗ್ಗೆ ತಿಳಿಸುವ ಸತ್ಯ ಎನ್ನುವುದಕ್ಕಿಂತ ಅದು ಪ್ರಕಟಗೊಳ್ಳುವ ಒಂದು ಸಾಮಾನ್ಯ ವರಸೆ ಎನ್ನುವುದು ಸೂಕ್ತ. ರಾಷ್ಟ್ರೀಯತೆಯು ಒಂದು ಭಾವನಾತ್ಮಕ ಅಭಿವ್ಯಕ್ತಿಯಾದುದರಿಂದ ಅದು ಅನೇಕ ಆಹ್ಲಾದಕರವಾದ ಚಿತ್ರಣಗಳನ್ನು ಸೃಷ್ಟಿಸಿ ಕಲೆಹಾಕುತ್ತದೆ. ಅವುಗಳ ಸತ್ಯ ನಿಷ್ಠತೆಯನ್ನು ಸ್ಥಾಪಿಸುವುದಕ್ಕಿಂತ, ಅವುಗಳ ಪ್ರಭಾವವನ್ನು ಗ್ರಹಿಸುವುದು ಹೆಚ್ಚು ಸೂಕ್ತ.

ಭಾವುಕತೆಯ ಮಜಲಿನಲ್ಲಿ ರಾಷ್ಟ್ರೀಯತೆಯ ಗುಂಗನ್ನು ಅನುಭವಿಸಿ, ಅಲ್ಲಿಂದ ಸಕಾಲಕ್ಕೆ ಹೊರಬಂದು ವಿಷಯವನ್ನು ಐತಿಹಾಸಿಕ ನೆಲೆಯಲ್ಲಿ ಪರಿಭಾವಿಸಿದಾಗ ಪರಿಭಾವಿಸಿದಾಗ ನಮಗದರ ಬೇರೆ ಬೇರೆ ಸ್ವರೂಪಗಳು ಲಬ್ಧವಾಗುತ್ತವೆ. ‘ರಾಷ್ಟ್ರೀಯತೆ’ಯ ಕಲ್ಪನೆಯು ಆಧುನಿಕತೆಯ ಸಂದರ್ಭದಲ್ಲಿ ಪ್ರಕಟವಾದದ್ದು. ಯುರೋಪಿನಲ್ಲಿ ಹದಿನೆಂಟನೇ ಶತಮಾನದ ಕೊನೆಯ ಭಾಗ ಹಾಗೂ ಹತ್ತೊಂಬತ್ತನೇ ಶತಮಾನಗಳಲ್ಲಿ ಪ್ರಕಟಗೊಂಡು, ಕ್ರಿಯಾಶೀಲವಾಗಿ ಅನೇಕ ರಾಷ್ಟ್ರೀಯತೆಗಳನ್ನು ಸೃಷ್ಟಿಸಿ, ಏಕೀಕರಣಗಳನ್ನು ಸಾಧಿಸಿ, ಯುದ್ಧ, ಕಲಹಗಳನ್ನು ಹುಟ್ಟು ಹಾಕಿ, ಅವುಗಳನ್ನು ಮೀರಿ ಅಥವಾ ಉಪಯೋಗಿಸಿ ಬೆಳೆದದ್ದು. ಫ್ರಾನ್ಸಿನ ಮಹಾಕ್ರಾಂತಿ ಹಾಗೂ ಅದರ ಆದರ್ಶ, ಪರಿಣಾಮಗಳು ಯೂರೋಪಿನಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಿ, ಸೈದ್ಧಾಂತಿಕ ಹಾಗೂ ದೃಷ್ಟಾಂತದ ನೆಲೆಯಲ್ಲಿ ರಫ್ತು ಮಾಡಿತು. ಅಮೆರಿಕದ ಸ್ವಾತಂತ್ರ್ಯ ಯುದ್ಧ ಹಾಗೂ ಅದರ ಪ್ರಜಾತಂತ್ರದ ಆದರ್ಶಗಳೂ ಇದರೊಂದಿಗೆ ಬೆರೆತು ಪ್ರಚಾರ ಪಡೆಯಿತು.

ವಿಪರ್ಯಾಸವೆಂದರೆ, ಇವು ನಡೆದದ್ದು ವಸಾಹತುಶಾಹಿ ಬೆಳವಣಿಗೆಯ ಸಂದರ್ಭದಲ್ಲಿ. ರಾಷ್ಟ್ರೀಯತೆಯ ಹಿರಿಮೆಯನ್ನು ಪ್ರತಿಪಾದಿಸಿ ಸ್ಥಾಪಿಸಿದ ಯುರೋಪಿನ ಈ ರಾಷ್ಟ್ರಗಳು ಜಾಗತಿಕ ಸ್ತರದಲ್ಲಿ ವಸಾಹತುಶಾಹಿ ಶಕ್ತಿಗಳಾಗಿ ಪರಿಣಮಿಸಿ ವಿಜೃಂಭಿಸಿದ್ದು ತಿಳಿದದ್ದೇ. ಭಾರತವು ಕೊನೆಗೂ ಬ್ರಿಟಿಷ್ ‌ಸಾಮ್ರಾಜ್ಯಶಾಹಿಯ ಹೊರೆಯನ್ನು ಹೊತ್ತು ನಡೆಯಬೇಕಾದ ಸಂದರ್ಭಗಳು ಇತಿಹಾಸದ ಪುಟಗಳನ್ನು ಸಾಕಷ್ಟು ಆಕ್ರಮಿಸಿಕೊಂಡಿವೆ. ಭಾರತದ ರಾಷ್ಟ್ರೀಯತೆಯ ಹುಟ್ಟು ಬೆಳವಣಿಗೆಗಳು ಈ ಘಟ್ಟಕ್ಕೆ ಸೇರಿದ್ದು. ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಯಾದಂತೆ, ಅದು ದೇಶದಲ್ಲಿ ಬೇರೂರಲು ಹವಣಿಸಿದಂತೆ, ಭಾರತದ ಬೇರೆ ಬೇರೆ ವರ್ಗಗಳು ವಿಭಿನ್ನ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದವು. ವಸಾಹತುಶಾಹಿ ಪ್ರಕ್ರಿಯೆ ಎಲ್ಲರ ಮೇಲೂ ಒಂದೇ ಪರಿಣಾಮ ಬೀರಲಿಲ್ಲ. ಬ್ರಿಟಿಷರ ವಿಸ್ತರಣಾ ಧೋರಣೆ, ಆಡಳಿತ ನೀತಿಗಳು ಕಾಲಕಾಲಕ್ಕೆ ಬದಲಾಗುತ್ತಿದ್ದುದರಿಂದ ಅವುಗಳ ಹೊರೆ, ಪ್ರಭಾವಗಳು ಒಂದೇ ರೀತಿಯದ್ದಾಗಿರಲಿಲ್ಲ. ಅವುಗಳು ಸೃಷ್ಟಿಸಿದ ಪ್ರಕ್ರಿಯೆಗಳೂ ಒಂದಾಗಿರಲಿಲ್ಲ. ಭಾರತದ ರಾಷ್ಟ್ರೀಯತೆಯನ್ನು ಗ್ರಹಿಸುವ ಸಂದರ್ಭದಲ್ಲಿ ಈ ಸಂಕೀರ್ಣತೆಯನ್ನು ಪರಿಗಣಿಸುವುದು ಅವಶ್ಯ.

ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯ ವಿಸ್ತರಣಾ ಪರ್ವತದಲ್ಲಿ ಸಹಯೋಗ ನಿಗ್ರಹಗಳೆರಡನ್ನೂ ನಾವು ಕಾಣುತ್ತೇವೆ. ವ್ಯಾಪಾರಿಗಳು ಸಾಮ್ರಾಜ್ಯದೊಡೆಯರಾದದ್ದು ಕೇವಲ ಸೈನ್ಯ ಬಲದಿಂದಲ್ಲ. ಅದನ್ನು ಎರವಲು ನೀಡಿದ, ಉಪಯೋಗಿಸಿದ ಚತುರತೆಯಿಂದ, ಕುಟಿಲತೆಯಿಂದ; ಮಿತ್ರ-ಶತ್ರುಗಳನ್ನು ಬೇಕಾದಾಗ, ಬೇಕಾದಲ್ಲಿ ಹುಟ್ಟು ಹಾಕಿ, ಉಪಯೋಗಿಸಿ ಮುಟ್ಟುಹಾಕುವ ಚಾಕಚಕ್ಯತೆಯಿಂದ. ಇದೆಲ್ಲಾ ನಡೆದದ್ದು ಮೊಗಲ್‌ ಸಾಮ್ರಾಜ್ಯ ಒಡೆದು ಪರಿಣಮಿಸಿದ ದೊಡ್ಡ ಸಣ್ಣ ತುಂಡರಸರು ರಾಜಕೀಯ ಪ್ರಭಾವವನ್ನು ಕಸಿದುಕೊಳ್ಳುವ, ಊಳಿಗಮಾನ್ಯ ಶಕ್ತಿಗಳು ಏಳಿಗೆ ಹೊಂದುತ್ತಿರುವ ಕಾಲಘಟ್ಟದಲ್ಲಿ. ಬ್ರಿಟಿಷರು ವ್ಯಾಪಾರಿ ಬಂಡವಾಳಶಾಹಿಯನ್ನು ಪ್ರತಿನಿಧಿಸಿ ಬಂದಿದ್ದರೂ, ರಾಜಪ್ರಭುತ್ವಗಳ ಮುಸ್ಸಂಜೆ ದಿನಗಳಲ್ಲಿ ಬ್ರಿಟಿಷ್ ‌ಸಾಮ್ರಾಜ್ಯ ಸ್ಥಾಪನೆಯನ್ನು ವಿರೋಧಿಸಿದ ಸಂದರ್ಭಗಳು ಭಾರತದ ಇತಿಹಾಸದಲ್ಲಿ ಕಡಿಮೆಯೇನಿಲ್ಲ. ಸಿರಾಜುದ್ದೌಲರಿಂದ ಮೊದಲಾಗಿ, ಹೈದರ್‌, ಟಿಪ್ಪೂ ಸಹಿತ ಅನೇಕರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಇದರ ಬಗ್ಗೆ ಭಾರತೀಯರು ಹೆಮ್ಮೆ ಪಡಬಹುದಾದರೂ ಇದನ್ನು ಪರಿಪಕ್ವ ರಾಷ್ಟ್ರೀಯತೆ ಎಂದು ಪರಿಗಣಿಸುವುದು ತುಸು ಕಷ್ಟ. ಬ್ರಿಟಿಷರ ಬಗ್ಗೆ ಅವರಿಗಿದ್ದ ರೋಷ, ಬ್ರಿಟಿಷರನ್ನು ಹೊರದಬ್ಬಿದ ನಂತರ ಭಾರತವು ಏನಾಗಬೇಕು ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಆಗಿನ ರಾಜಕೀಯ ಸ್ಥಿತಿಯಲ್ಲಿ ಆ ಕಲ್ಪನೆ ಅವರಿಗೆ ಇರುವುದು ಅಸಾಧ್ಯ ಎಂಬ ಮಾತನ್ನೂ ನಾವು ಒಪ್ಪಬೇಕಾಗುತ್ತದೆ. ೧೮೫೭ರ ಮಹಾದಂಗೆಯ ಸ್ಥಿತಿಯೂ ಬಹುತೇಕ ಇದೆ. ಬ್ರಿಟಿಷರನ್ನು ಹೊಡೆದೋಡಿಸಬೇಕು ಎಂಬ ನಿರ್ಧಾರ ಸಿಪಾಯಿಗಳಲ್ಲಿ, ಬ್ರಿಟಿಷರಿಂದ ಘಾಸಿಗೊಂಡ ಅನೇಕ ರಾಜರು, ಜಮೀನ್ದಾರರು, ಮೌಲ್ವಿಗಳು ಇವರೆಲ್ಲರಲ್ಲಿತ್ತು. ಧರ್ಮರಕ್ಷಣೆಯ ಕಹಳೆಯನ್ನು ಹಿಂದೂಗಳೂ ಮುಸ್ಲಿಮರೂ ಮೊಳಗಿಸಿದ್ದರು. ಆದರೆ ಬ್ರಿಟಿಷರನ್ನು ಸಮುದ್ರಕ್ಕೆಸೆಯಲು ಸಾಧ್ಯವಾದಲ್ಲಿ ದೇಶವು ಯಾವ ಪರ್ಯಾಯ ವ್ಯವಸ್ಥೆಯನ್ನು ಒಪ್ಪಬೇಕು ಎಂಬುದರ ಬಗ್ಗೆ ಯಾರೂ ಹೆಚ್ಚಿನ ವಿಚಾರ ಮಾಡಿರಲಿಲ್ಲ. ಮೊಗಲ್‌ ಸಾಮ್ರಾಜ್ಯದ ಮುಗ್ಧ ಪಳಿಯುಳಿಕೆಯಾಗಿದ್ದ ದೆಹಲಿ ಅಥವಾ ಅಲ್ಲಿಯ ಸಾಮ್ರಾಟನೆಂಬ ಬಿರುದನ್ನು ಹೊತ್ತು ಬಸವಳಿದಿದ್ದ ಬಹದೂರ್‌ ಷಾ ೧೮೫೭ ರ ಮಹಾದಂಗೆಗೆ ಒಂದು ಸೈದ್ಧಾಂತಿಕ ನೆಲೆಯನ್ನು ನೀಡಿದವು ಎಂಬ ಮಾತಿದೆ. ಮೊಗಲ್‌ ಸಾಮ್ರಾಜ್ಯದ ಐತಿಹಾಸಿಕ ಮಹತ್ವ ಅದರ ಆ ಇಳಿಗಾಲದಲ್ಲೂ ಜನರ ಮನಸ್ಸಿನಲ್ಲಿ ಬೇರೂರಿತ್ತು. ಸ್ವಂತ ಶಕ್ತಿ, ಸೈನ್ಯ ಇಲ್ಲದಿದ್ದರೂ, ವೃದ್ಧ ಬಹದೂರ್‌ ಷಾನನ್ನು ಸಾಂಕೇತಿಕವಾಗಿ ಭಾರತದ ಸಾಮ್ರಾಟನೆಂದು ಸಿಪಾಯಿಗಳು ಘೋಷಿಸಿದ್ದು ಸಂದರ್ಭಕ್ಕೊಂದು ಐತಿಹಾಸಿಕ ಹೊಳಹನ್ನು ನೀಡಿದ್ದು ಹೌದಾದರೂ, ಮುಂದೆ ಮೊಗಲ್‌ ಸಾಮ್ರಾಜ್ಯವನ್ನು ಮರುಸ್ಥಾಪನೆ ಮಾಡಲಾಗುವುದೆಂದೂ, ಅದು ದೇಶವನ್ನು ಮುನ್ನಡೆಸುತ್ತದೆಂದೂ ಯಾರೂ ಗಂಭೀರವಾಗಿ ಚಿಂತಿಸಲಿಲ್ಲ. ಮೊಗಲ್‌ ಸಾಮ್ರಾಜ್ಯವು ಅಗಲೇ ಅಸ್ತಂಗತವಾಗಿತ್ತು. ೧೮೫೭ ರ ಕಾಲಕ್ಕೆ ದೆಹಲಿಯಲ್ಲಿ ಉಳಿದದ್ದು ಅದರ ಕ್ಷೀಣಹೊಳಪುಗಳು ಮಾತ್ರ. ಅದಕ್ಕೆ ಕಾಯಕಲ್ಪ ನೀಡುವುದು ಸಲ್ಲದ ವಿಕ್ರಮವಾಗಿತ್ತು. ಈ ಕಾರಣದಿಂದಲೇ ೧೮೫೭ರ ಮಹಾದಂಗೆಯನ್ನು ಪೂರ್ಣ ಪ್ರಮಾಣದಲ್ಲಿ ಭಾರತ ರಾಷ್ಟ್ರೀಯ ಹೋರಾಟದೊಳಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸುವುದು ಭಾವುಕತೆಯ ಚೌಕಟ್ಟಿನೊಳಗೆ ಮಾತ್ರ ಸಾಧ್ಯ. ಆಗ ಭಾರತದ ರಾಷ್ಟ್ರೀಯತೆಯು ಆಧುನಿಕ ಘಟ್ಟವನ್ನು ತಲುಪಿರಲಿಲ್ಲ. ಊಳಿಗಮಾನ್ಯ ಸಂದರ್ಭದಲ್ಲಿ ರಾಷ್ಟ್ರೀಯತೆಯನ್ನು ಆರೋಪಿಸಬಹುದೇ ಹೊರತು ಗುರುತಿಸಲು ಕಷ್ಟ. ಅಥವಾ ಅದನ್ನು ಸಾಂಪ್ರದಾಯಿಕ ಸಮಾಜವು ಪರಕೀಯರನ್ನು ನಿರಾಕರಿಸುವ ಕ್ರಮ ಎಂದು ಗ್ರಹಿಸಬಹುದು. ಹೊರಗಿನವರ ಸಂಪರ್ಕ, ದಾಳಿಯನ್ನು ಅನುಭವಿಸಿದ ಎಲ್ಲ ಸಮಾಜಗಳೂ ಬೇರೆ ಬೇರೆ ನಿಟ್ಟಿನಲ್ಲಿ ಇಂತಹ ಪ್ರತಿಕ್ರಿಯೆಯನ್ನು ತೋರಿವೆ.

೧೮೫೭ರ ಮಹಾದಂಗೆಯನ್ನು ತಮ್ಮ ಶಕ್ತಿಯುಕ್ತಿಗಳಿಂದ ದಮನ ಮಾಡಿದ ಬ್ರಿಟಿಷರು ಭಾರತವನ್ನು ಪುನಃ ತಮ್ಮ ಸಂಪೂರ್ಣ ಆಧಿಪತ್ಯಕ್ಕೆ ಒಳಪಡಿಸಿಕೊಂಡರು. ಈಸ್ಟ್‌ ಇಂಡಿಯಾ ಕಂಪೆನಿಯ ಸಾಂಕೇತಿಕ ಆಳ್ವಿಕೆಯನ್ನು ಕೊನೆಗೊಳಿಸಿ ತಮ್ಮ ದೇಶದ ನೇರ ಅಂದರೆ, ಮಹಾರಾಣಿ, ಪಾರ್ಲಿಮೆಂಟಿನ ಒಡೆತನವನ್ನು ಸ್ಥಾಪಿಸಿಕೊಂಡರು. ಇದು ಬ್ರಿಟಿಷ್ ‌ವಸಾಹತುಶಾಹಿಯ ಒಂದು ನೂತನ ಪರ್ವ. ಹಾಗೆಯೇ ಭಾರತದ ರಾಷ್ಟ್ರೀಯತೆಯ ಅಭಿವ್ಯಕ್ತಿಯಲ್ಲೂ ಇದು ಹೊಸ ಮಜಲನ್ನು ಸೃಷ್ಟಿಸಿತು. ಮಹಾದಂಗೆಯನ್ನು ದಮನಿಸಿದ ಕ್ರಮ ಬ್ರಿಟಿಷರ ಶಕ್ತಿ, ಕ್ರೌರ್ಯಗಳನ್ನು ಹೇರಳವಾಗಿ ಪ್ರಕಟಿಸಿತು. ಇದರ ನಂತರ ಇದ್ದ ತುಂಡು ರಾಜತ್ವಗಳು ನಿಷ್ಕ್ರೀಯವಾಗಿ ಬ್ರಿಟಿಷರ ವಿರುದ್ಧ ಸವಾಲೊಡ್ಡುವ ಶಕ್ತಿಯನ್ನು ಕಳಕೊಂಡಿದ್ದೇ ಅಲ್ಲ, ಬ್ರಿಟಿಷ್ ‌ಸಾಮ್ರಾಜ್ಯದ ಕುಲೀನ ಅಡಿಯಾಳುಗಳಾಗಿ ಪರಿವರ್ತನೆಗೊಂಡರು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಿಂದ ಮೊದಲಾಗಿ ಭಾರತವು ಸ್ವಾತಂತ್ರ್ಯ ಪಡೆಯುವ ತನಕ ನಮ್ಮ ರಾಷ್ಟ್ರೀಯ ಶಕ್ತಿಯು ಯುದ್ಧಗಳಲ್ಲಿ ಪ್ರಕಟಗೊಳ್ಳಲಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಜನತೆಯ ಆಕ್ರೋಶಗಳು ಹಿಂಸಾರೂಪವನ್ನು ಪಡೆದರೂ ವಸಾಹತುಶಾಹಿಯ ವಿರುದ್ಧ ಭರತದ ಕ್ಷಾತ್ರ ತೇಜಸ್ಸು ಎದುರಾದದ್ದು ಬಹುತೇಕವಾಗಿ ವೈಯಕ್ತಿಕ ನೆಲೆಯಲ್ಲಿ. ಹಲವು ಕ್ರಾಂತಿಕಾರಿಗಳು ಉದಾತ್ತ ಹಿಂಸಾವಾದವನ್ನು ಪ್ರತಿಪಾದಿಸಿ, ಹುತಾತ್ಮತೆಯನ್ನು ಹಂಬಲಿಸಿ, ಗಳಿಸಿಕೊಂಡ ಗಾಥೆಗಳಲ್ಲಿ.

ಮಹಾದಂಗೆಯು ದಮನಗೊಂಡ ನಂತರ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದ ವರ್ಗ ಇಂಗ್ಲಿಷ್‌ ವಿದ್ಯಾಭ್ಯಾಸವನ್ನು ಸಾಮಾನ್ಯವಾಗಿ ಅಂಗೀಕರಿಸಿ, ಪಾಶ್ಚಾತ್ಯ ರಾಜಕೀಯ, ಆರ್ಥಿಕ ಪ್ರಗತಿ ಸಂಹಿತೆಗಳನ್ನು ಒಪ್ಪಿಕೊಂಡ ಮಧ್ಯಮವರ್ಗ. ಇದು ಬ್ರಿಟಿಷರ ಆಡಳಿತ ನೀತಿಯ ಉಪೋತ್ಪನ್ನ. ವಸಾಹತುಗಳನ್ನು ಗೆದ್ದು ಹತೋಟಿಯಲ್ಲಿ ತರುವ ಕೆಲಸ ಯುದ್ಧ ತಂತ್ರದಿಂದ ಮಾತ್ರ ಅಸಾಧ್ಯ, ಗೆದ್ದುಕೊಂಡವರ ಸಹಯೋಗವನ್ನು ಗಳಿಸಿ ಉಪಯೋಗಿಸುವ ತಂತ್ರವೂ ಅವಶ್ಯ ಎಂಬುದನ್ನು ಸಾಮ್ರಾಜ್ಯಶಾಹಿ ಶಕ್ತಿಗಳು ಮನಗಂಡಿದ್ದವು. ಹೀಗೆ ಪಡೆದ ಸಹಯೋಗಿ ಸಮುದಾಯಗಳಲ್ಲಿ ಇಂಗ್ಲಿಷ್‌ ವಿದ್ಯಾಭ್ಯಾಸದಲ್ಲಿ ತೋಯ್ದು ಪುನೀತರಾದ ಮಧ್ಯಮ ವರ್ಗ ಪ್ರೆಸಿಡೆನ್ಸಿ ಮಹಾನಗರಗಳಾದ ಕಲ್ಕತ್ತಾ, ಮುಂಬಯಿ, ಮದ್ರಾಸುಗಳಲ್ಲಿ ಏಳಿಗೆಯನ್ನು ಕಂಡುಕೊಂಡಿತು. ತಮ್ಮ ಹಾಗೂ ದೇಶದ ಪ್ರಗತಿ ಪಾಶ್ಚಾತ್ಯ ಮೂಲ ಸೈದ್ಧಾಂತಿಕತೆ ಹಾಗೂ ನಿರ್ದೇಶನದಲ್ಲಿ ನಡೆಯಬೇಕೆಂಬ ಇಚ್ಛೆ, ಹಂಬಲಗಳನ್ನಿಟ್ಟುಕೊಂಡ ಈ ವರ್ಗ ಬ್ರಿಟಿಷ್ ‌ಆಳ್ವಿಕೆಯೊಡನೆ ಸೂಕ್ತವಾದ, ಮುಕ್ತವಾದ ಸಂವಾದ ನಡೆಸಲು ಶಕ್ತ ಎಂಬ ನಂಬಿಕೆಯನ್ನು ಇಟ್ಟುಕೊಂಡಿತು. ೧೮೫೮ರಲ್ಲಿ ರಾಣಿ ವಿಕ್ಟೋರಿಯಾ ನೀಡಿದ ಆಶ್ವಾಸನೆಯಂತೆ ಮುಂದೆ ಭಾರತದಲ್ಲಿ ಆಕೆಯ ಆಡಳಿತ ಭಾರತೀಯರ ಆಶೋತ್ತರಗಳನ್ನು ಗೌರವಿಸಿಯೇ ನಡೆಯುವಂಥಾದ್ದು. ಅದಕ್ಕೆ ಧನಾತ್ಮಕವಾಗಿ ಸ್ಪಂದಿಸುವ ಜನ ಭಾರತದಲ್ಲಿ ಅವಶ್ಯವೂ ಆಗಿತ್ತು. ಬಣ್ಣದಲ್ಲಿ ಅಲ್ಲದಿದ್ದರೂ ಧೋರಣೆ, ಮನೋಭಾವಗಳಲ್ಲಿ ಬ್ರಿಟಿಷ್ ‌ಆಳರಸರನ್ನು ಅನುಕರಿಸುವ, ಅನುಸರಿಸುವ ಈ ವರ್ಗ ಲಾರ್ಡ್‌ ಮೆಕಾಲೆಯ ಆಶಯವನ್ನು ಪೂರೈಸುವ ವಾಗ್ದಾನ ಮಾಡುವಂತಿತ್ತು. ಬ್ರಿಟಿಷರು ಇಂಗ್ಲಿಷ್‌ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ವಿಸ್ತರಿಸಿದಂತೆ ಈ ಹೊಸ ಗಣ್ಯ ವರ್ಗ ತಮ್ಮ ಇರವು, ಪ್ರಾಮುಖ್ಯತೆಗಳನ್ನು ಘೋಷಿಸತೊಡಗಿತು. ಅದನ್ನು ಪ್ರತಿಪಾದಿಸುವ ತಮ್ಮ ವಿವಿಧ ಆಕಾಂಕ್ಷೆಗಳನ್ನು ರಾಷ್ಟ್ರೀಯ ಆಕಾಂಕ್ಷೆಗಳನ್ನಾಗಿ ಪ್ರಕಟಪಡಿಸಿತು. ಇದು ಆಧುನಿಕ ರಾಷ್ಟ್ರೀಯತೆಯ ಒಂದು ಮುಖ್ಯ ಅಭಿವ್ಯಕ್ತಿ. ಇಂಗ್ಲಿಷ್‌ ವಿದ್ಯಾಭ್ಯಾಸ ಹಾಗೂ ಪಾಶ್ಚಾತ್ಯ ಜ್ಞಾನಕ್ಕೆ ತೆರೆದುಕೊಂಡ ಈ ಅಢ್ಯ ಸಂಕುಲ ಅರಸಿ ಬಂದ ಜನ ಪ್ರತಿನಿಧಿಗಳಲ್ಲದಿದ್ದರೂ ಜನಮಾನಸದ ಆಶಯ, ದುಮ್ಮಾನಗಳನ್ನು ಸರಕಾರದ ಅರೆಕಿವುಡು ಕಿವಿಗಳಿಗೆ ಮುಟ್ಟಿಸಬಲ್ಲ ಅಧಿಕೃತ ವರ್ಗ ಎಂಬ ನಂಬಿಕೆಯನ್ನು ಗಾಢವಾಗಿ ತಳೆದಿತ್ತು.

ಆಧುನಿಕತೆಯನ್ನು ಆಲಂಗಿಸಿದ ವಿದ್ಯಾವಂತ ಗಣ್ಯವರ್ಗ ದೇಶದ ಸನ್ನಿವೇಶಗಳಿಗೆ ಬೇರೆ ಬೇರೆ ರೀತಿಯಲ್ಲಿ ಸ್ಪಂದಿಸಿತು. ಬ್ರಿಟಿಷ್ ‌ಸಾಮ್ರಾಜ್ಯವಾದಿಗಳು ಹಾಗೂ ಯುರೋಪಿನ ಮಿಶನರಿಗಳು ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ವ್ಯವಸ್ಥೆಗಳ ಬಗ್ಗೆ ಮಾಡಿದ ಕಟುಟೀಕೆಗಳು ಎರಡು ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದವು; ಮೊದಲನೆಯದಾಗಿ, ಈ ಟೀಕೆಗಳನ್ನು ಬಹುತೇಕವಾಗಿ ಒಪ್ಪಿಕೊಂಡು ಭಾರತವನ್ನು ಸುಧಾರಣಾ ಮಾರ್ಗದಲ್ಲಿ ಕೊಂಡೊಯ್ಯುವುದು, ಹತ್ತೊಂಬತ್ತನೇ ಶತಮಾನದ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣಾ ಚಳವಳಿಗಳು, ರಾಜಾರಾಮ ಮೋಹನರಾಯ್‌, ಕೇಶಬ್‌ ಚಂದ್ರ ಸೇನ್‌, ಈಶ್ವರಚಂದ್ರ ವಿದ್ಯಾಸಾಗರ ಮೊದಲಾದವರು ಈ ನಿಟ್ಟಿನಲ್ಲಿ ಬದಲಾಗುವ ಭಾರತವನ್ನು ಪರಿಭಾವಿಸಿದರು. ಭಾರತಕ್ಕೆ ಸುಧಾರಣೆ ಅಗತ್ಯ, ಅದು ಪಾಶ್ಚಾತ್ಯರ ಪ್ರಗತಿ ಮಾರ್ಗದಲ್ಲಿ ನಡೆಯಬೇಕೆಂಬ ಧೋರಣೆಯನ್ನು ಹೊಂದಿದ್ದರು. ಹಾಗೆಂದು ಅವರದು ಅಂಧಾನುಕರಣೆಯಲ್ಲ. ಆದರೆ ಯುರೋಪಿನ ವಿವೇಚನಾ ತರಂಗಗಳು ಅವರಿಗೆ ಪ್ರವೃತ್ತಿಯನ್ನು ನೀಡಿದವು. ಇದಕ್ಕೆ ವಿರೋಧವಾಗಿ ನಮ್ಮಲ್ಲಿ ಕೆಲವು ಸಂಪ್ರದಾಯವಾದಿಗಳು ಸವಾಲನ್ನೊಡ್ಡಿದರು. ಪರಕೀಯರಿಂದ ನಾವು ಕಲಿಯಬೇಕಾದ್ದೇನಿಲ್ಲ; ನಮ್ಮ ಶಾಸ್ತ್ರ ಪುರಾಣಗಳಲ್ಲಿರುವುದೆಲ್ಲ ಅಮೂಲ್ಯ, ಪ್ರಶ್ನಾತೀತ; ಸಮಾಜ, ಧರ್ಮಗಳು ಬದಲಾಗುವುದೆಂದರೆ ಅವನತಿಗೀಡಾಗುವುದು, ಶಿಥಿಲಗೊಳ್ಳುವುದು, ಅದನ್ನು ವಿರೋಧಿಸುವುದು ದೇಶ, ಧರ್ಮ ಪ್ರೇಮಿಗಳ ಪ್ರಥಮ ಕರ್ತವ್ಯ ಎಂದು ಪ್ರತಿಪಾದಿಸಿದರು. ಈ ಎರಡು ಪರಸ್ಪರ ವಿರೋಧ ದೃಷ್ಟಿಕೋನಗಳು ತೀವ್ರ ಚರ್ಚೆಯನ್ನು ಸೃಷ್ಟಿಸಿದ್ದು ರಾಷ್ಟ್ರೀಯತೆಯ ಒಂದು ಅಭಿವ್ಯಕ್ತಿ.

ಇದರ ಇನ್ನೊಂದು ಆಯಾಮ ಭಾರತೀಯರು ತಮ್ಮ ಇತಿಹಾಸದ ಹಿರಿಮೆಯನ್ನು ಅರಿತು, ತಮ್ಮ ಶ್ರೇಷ್ಠತೆ, ಶಕ್ತಿಯನ್ನು ತಿಳಿದು ತಮ್ಮ ಬಗ್ಗೆ ಅಭಿಮಾನ ಹೊಂದಲು ತೊಡಗಿದ್ದು. ವಿಲಿಯಂ ಜೋನ್ಸ್‌, ಕೋಲ್‌ಬ್ರೂಕ್‌, ವಿಲ್ಕಿನ್ಸ್‌, ಹೇಮನ್‌ ವಿಲ್ಸನ್, ಹಾಲ್‌ಹೆಡ್‌, ಮ್ಯಾಕ್ಸ್‌ಮುಲ್ಲರ್‌ರಂಥ ಪೌರಸ್ತ್ಯವಾದಿ ಪಂಡಿತರ ಸಂಶೊಧನೆ ಹಾಗೂ ಅವರು ನೀಡಿದ ಉದಾರ ಯೋಗ್ಯತಾ ಪತ್ರಗಳಿಂದ ಪ್ರೇರಣೆ ಪಡೆದು, ಇತಿಹಾಸದಲ್ಲಿ ತಮ್ಮ ಸುವರ್ಣ ಯುಗಗಳನ್ನು ಗುರುತಿಸಿ, ಅಷ್ಟೇನೂ ಹೆಮ್ಮೆ ಪಡಲು ಕಾರಣಗಳೇನೂ ಇಲ್ಲದ ವರ್ತಮಾನ ದಿನಗಳಿಗೆ ಪರಿಹಾರವನ್ನು ಗಳಿಸುವ ಕೆಲಸ ಬಹಳಷ್ಟು ನಡೆಯಿತು. ರಾಷ್ಟ್ರಾಭಿಮಾನವನ್ನು ಸರಬರಾಜು ಮಾಡುವ ಕಾರ್ಯವನ್ನು ಅಭಿಮಾನದಲ್ಲಿ ಸೃಷ್ಟಿಸಿದ ಇತಿಹಾಸವು ಮಾಡಿತು. ವಸಾಹತುಶಾಹಿ ಇತಿಹಾಸವನ್ನು ವಿನೀತರಾಗಿ ತಿರಸ್ಕರಿಸುವ ಸೌಖ್ಯವನ್ನು ಅದು ಕಂಡುಕೊಂಡಿತು. ಇದು ಭಾರತೀಯರಲ್ಲಿ ಒಂದು ರಾಷ್ಟ್ರೀಯತೆಯ ಗುಂಗನ್ನು ಸೃಷ್ಟಿಸಿತು. ತಮ್ಮ ಬಗ್ಗೆ ಶತಮಾನಗಳ ಪಾರಂತಂತ್ರ್ಯವು ಹೇರಿದ ಕೀಳರಿಮೆಯನ್ನು ಕಳೆಯುವುದರಲ್ಲಿ ಸಹಾಯವಾಯಿತು.

ಆದರೆ ರಾಜಕೀಯ ನೆಲೆಯಲ್ಲಿ ಭಾರತದ ಆಧುನಿಕ ರಾಷ್ಟ್ರೀಯತೆಯು ತೀವ್ರವಾಗಿ ಪ್ರಕಟಗೊಂಡದ್ದು ಅದು ಬ್ರಿಟಿಷ್ ‌ವಸಾಹತು ಶಾಹಿಯನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಲು ಶಕ್ತವಾದಾಗ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿಕೊಂಡ ರಾಜಕೀಯ ಸಂಘ ಸಂಸ್ಥೆಗಳು ವಸಾಹತುಶಾಹಿ ವ್ಯವಸ್ಥೆಯೊಡನೆ ಅನೇಕ ನೆಲೆಗಳಲ್ಲಿ ಸಂವಾದ, ಸಂಧಾನಗಳನ್ನು ನಡೆಸಿದವು. ಬ್ರಿಟಿಷ್ ‌ಆಳ್ವಿಕೆಯನ್ನು, ಅದರ ಔದಾರ್ಯವನ್ನು ಮೂಲತಃ ಒಪ್ಪಿ ಅದರಿಂದ ಆದಷ್ಟು ರಿಯಾಯಿತಿಗಳನ್ನು ಭಾರತೀಯರಿಗೆ ಅದರಲ್ಲೂ ವಿದ್ಯಾವಂತರಿಗೆ ಉದ್ಯೋಗಾವಕಾಶ, ಮರ್ಯಾದೆಯನ್ನು ಗಿಟ್ಟಿಸುವಲ್ಲಿ ಪ್ರಯತ್ನಿಸಿದವು. ಇದನ್ನು ಬರೇ ಸ್ವಪ್ರಯೋಜನಾಶಕ್ತಿ ಎನ್ನುವುದು ಸಂಪೂರ್ಣ ಸತ್ಯವಲ್ಲ. ಈ ಸಂಘ ಸಂಸ್ಥೆಗಳ ಧುರೀಣರು ಬಹುತೇಕ ಬ್ರಿಟಿಷರ ರಾಜಕೀಯ ವ್ಯವಸ್ಥೆ, ಸಿದ್ಧಾಂತಗಳನ್ನು ಹಾಗೂ ಅವರ ಪ್ರಗತಿ ಸಂಹಿತೆಯನ್ನು ಒಪ್ಪಿಕೊಂಡಿದ್ದರು. ಬ್ರಿಟನ್‌ ಸಾಧಿಸಿದ ಪಾರ್ಲಿಮೆಂಟಿನ ಹಿರಿಮೆ, ವ್ಯಕ್ತಿ ಸ್ವಾತಂತ್ರ್ಯದ ಅರಿವು ಹಾಗೂ ಮಾನ್ಯತೆ, ಪ್ರಜಾತಂತ್ರದ ಸ್ಥಾಪನೆ, ವಾಕ್‌ ಸ್ವಾತಂತ್ರ್ಯದ ನಿರೂಪಣೆಗಳು ಭಾರತದ ಹಿರಿಯ ರಾಷ್ಟ್ರೀಯ ನಾಯಕರ ಮನ ಸೆಳೆದಿದ್ದವು. ಜಾನ್‌ಲಾಕ್‌, ಎಡ್ಡ್‌ಬರ್ಕ್‌ ಅವರ ಆಲೋಚನೆಗಳನ್ನು ರೂಪಿಸಿದ್ದವು. ಮುಂದೆ ಭಾರತವು ಯಾವ ದೆಸೆಯಲ್ಲಿ ಮುಂದುವರಿಯಬೇಕೆಂಬ ಪ್ರಶ್ನೆಗೆ ಬಹುಪಾಲು ಉತ್ತರವನ್ನು ನೀಡಿದ್ದವು. ಹಾಗೆಯೇ ಬ್ರಿಟನ್‌ನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸಿದ ಬಂಡವಾಳಶಾಹಿ ವ್ಯವಸ್ಥೆ, ಔದ್ಯೋಗಿಕರಣಗಳು ಭಾರತವನ್ನೂ ಅನುಗ್ರಹಿಸಲು ಎಂಬ ನಿಲುವು ಇವರದ್ದಾಗಿತ್ತು.

ಆದರೆ ಈ ಶ್ಲಾಘನೆ, ಒಪ್ಪಿಗೆಗಳು ಪ್ರಶ್ನಾತೀತವಾಗಿರಲಿಲ್ಲ. ಬ್ರಿಟನ್‌ ತನ್ನ ದೇಶದಲ್ಲಿ ಏನೇನೆಲ್ಲ ಸಾಧಿಸಿತೋ ಅವುಗಳನ್ನು ತನ್ನ ವಸಾಹತುಗಳಲ್ಲಿ ಮನಃಪೂರ್ವಕವಾಗಿ ಹಂಚಿಕೊಳ್ಳಲು ಹಿಂಜರಿಯಿತು. ಬದಲಾಗಿ ಇಲ್ಲಿ ಆರ್ಥಿಕ ಶೋಷಣೆಯನ್ನು ಸಂಸ್ಥೀಕರಿಸಿತು. ಇಲ್ಲಿನ ಗುಡಿ ಕೈಗಾರಿಕೆಗಳನ್ನು ಅಳಿಸಿ, ಹೊಸ ಕೈಗಾರಿಕೆಗಳನ್ನು ಸ್ಥಾಪಿಸದೆ, ಸ್ಥಳೀಯರಿಗೆ ಅನುವಾಗುವಂತೆ ಬಂಡವಾಳವನ್ನು ಹೂಡದೆ, ಕೃಷಿ ವ್ಯವಸ್ಥೆಯನ್ನು ಕೃಶವಾಗಿಸಿ, ಇಲ್ಲಿನ ಸಂಪತ್ತನ್ನು ಹೀರಿ ತಮ್ಮ ಏಳಿಗೆಯನ್ನು ಸಾಧಿಸುವ ವಿಧಾನಗಳು ಭಾರತದ ಹಿತಕ್ಕೆ ಮಾರಕ ಎಂಬ ಸತ್ಯವನ್ನು ಈ ರಾಷ್ಟ್ರೀಯ ನಾಯಕರು ಹೊರಗಳೆದರು. ಬ್ರಿಟಿಷ್ ‌ಸಾಮ್ರಾಜ್ಯವು ಭಾರತದಲ್ಲಿ ಐಕ್ಯತೆಯನ್ನು ಸ್ಥಾಪಿಸಿ, ಶಾಂತಿಯನ್ನು ಸ್ಥಿರಗೊಳಿಸಿ ಇಲ್ಲಿನ ಸರ್ವಾಂಗೀಣ ಪ್ರಗತಿ, ಏಳಿಗೆಗೆ ಕಾರಣವಾಗಿದೆ ಎಂಬ ವಾದವನ್ನು ತಿರಸ್ಕರಿಸಿ, ಬ್ರಿಟನ್‌ ಭಾರತದಲ್ಲಿ ವಸಾಹತುಶಾಹಿ ಧೋರಣೆಯನ್ನು ಪ್ರಕಟಿಸಿತು; ಅದರಲ್ಲಿ ಸ್ವಹಿತವನ್ನು ಭಾರತದ ಹಿತವನ್ನು ಕಡೆಗಣಿಸಲಾಯಿತು ಎಂಬ ಸತ್ಯವನ್ನು ನಿರೂಪಿಸಿದರು. ವಂದನೀಯ ಬ್ರಿಟನ್‌ ಭಾರತದಲ್ಲಿ ನಿಂದನೀಯ ಕ್ರಮಗಳನ್ನು ಕೈಗೊಂಡಿತು; ಆದುದರಿಂದ ವಸಾಹತುಶಾಹಿ ಒಲವುಗಳು ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಅಸಾಧ್ಯ ಎಂಬ ವಾದವನ್ನು ಮಂಡಿಸಿದರು. ದಾದಾಬಾಯಿ ನವರೋಜಿ, ರೋಮೇಶ್ಚಂದ್ರ ದತ್‌, ಎಂ. ಜಿ. ರಾನಡೆ, ಜಿ. ವಿ. ಜೋಶಿ, ಸುಬ್ರಹ್ಮಣ್ಯ ಅಯ್ಯರ್‌ ಮೊದಲಾದ ರಾಷ್ಟ್ರೀಯವಾದಿಗಳು ಬ್ರಿಟಿಷ್ ‌ಆಳ್ವಿಕೆ ಹಾಗೂ ವಸಾಹತುಶಾಹಿಯ ವಸ್ತ್ರಾಪಹರಣಗೈದು ನಗ್ನವಾಗಿಸಿದರು. ಇಂತಹ ಸೈದ್ಧಾಂತಿಕ ತೀಕ್ಷ್ಣತೆ ಹಾಗೂ ಸ್ಥೈರ್ಯವನ್ನು ತೋರಿದ ಈ ರಾಷ್ಟ್ರೀಯವಾದಿಗಳಿಗೆ “ಮಂದಗಾಮಿ”ಗಳೆಂಬ ಬಿರುದು ಒಪ್ಪುವುದಿಲ್ಲ ಎಂಬ ಬಿಪಿನ್‌ ಚಂದ್ರ ಅವರ ಮಾತು ದಿಟ. ಕಾಂಗ್ರೆಸ್ಸಿನ ಮೊದಲನೆಯ ದಶಕಗಳಲ್ಲಿ ಅದರ ನಾಯಕರು ವಂದನೆ, ಪ್ರಾರ್ಥನೆ, ವಿನಂತಿಗಳನ್ನಷ್ಟೇ ಮಾಡದೆ, ಬ್ರಿಟಿಷ್ ‌ಆಳ್ವಿಕೆಯ ನೈತಿಕ ಬಲವನ್ನು ನಯವಾಗಿ ಕಸಿದುಕೊಂಡರು. ಬ್ರಿಟಿಷ್ ‌ಆಳ್ವಿಕೆ ಭಾರತಕ್ಕೆ ಏಕೆ ಬೇಡ ಎಂಬ ವಾದವನ್ನು ವಿಸ್ತಾರವಾಗಿ, ನಿಸ್ಸಂಕೋಚವಾಗಿ ಮಾಡಿದರು. ಭಾರತದ ರಾಷ್ಟ್ರೀಯತೆಯು ಸೈದ್ಧಾಂತಿಕ ನೆಲೆಯು ಈ ಕಾಲಘಟ್ಟದಲ್ಲಿ ಸಂಪೂರ್ಣತೆ ಪಡೆಯಿತು ಎನ್ನಬಹುದು.

‘ಮಂದಗಾಮಿ’ಗಳು ತೋರಿದ ಸೈದ್ಧಾಂತಿಕ ತೀಕ್ಷ್ಣತೆಯನ್ನು ಗುರುತಿಸಿದ ನಂತರ ನಮ್ಮ ರಾಷ್ಟ್ರೀಯತೆಯ ನವೀನ ಪ್ರಕಟಣೆ ಅದರ ಕಾರ್ಯಾಚರಣೆಯಲ್ಲಿ. ಜನಮಂದಿಗಳ ಭಾಗವಹಿಸುವಿಕೆಯ ಬಗ್ಗೆ ಸಂಶಯ ತಾಳಿದ ಈ ಧುರೀಣರು ಬಹುತೇಕ ಅನುಯಾಯಿಗಳಲ್ಲದ, ಒಲ್ಲದ ನಾಯಕರು. ಇವರ ಭಾಷಣ, ಪ್ರಾರ್ಥನೆಗಳು ಶೀಘ್ರ ಫಲಕಾರಿಯಾಗದ ಕಾರಣ ಇವರ ನಾಯಕತ್ವದ ಬಗ್ಗೆ ತಿರಸ್ಕಾರ ಬೆಳೆದು ‘ತೀವ್ರವಾದಿ’ಗಳ ಜನಪ್ರಿಯತೆಗೆ ಕಾರಣವಾಯಿತು. ಲಾರ್ಡ್‌ ಕರ್ಜನ್‌ನ ವಂಗಭಂಗ ನೀತಿಯೂ ಇದಕ್ಕೆ ಪೂರಕವಾಯಿತು. ರಾಷ್ಟ್ರೀಯತೆಯನ್ನು ತೀವ್ರವಾಗಿ ಕಡೆಗಣಿಸಿ ನಡೆಸಿದ ಈ ಕಾರ್ಯವು ದೇಶದಲ್ಲಿ ಬ್ರಿಟಿಷ್ ‌ವಿರೋಧಿ ಭಾವನೆಗಳನ್ನು ಕೆರಳಿಸಿ ಆಕ್ರೋಶದತ್ತ ದೂಡಿತು. ಸಾಮ್ರಾಜ್ಯಶಾಹಿಯು ಭಾರತೀಯತೆಯನ್ನು ತುಚ್ಛಿಕರಿಸಿದ್ದು, ಬಂಗಾಳವನ್ನು ಆಡಳಿತ ಹಿತದ ನೆವದಲ್ಲಿ ಒಡೆದದ್ದು, ಅಲ್ಲಿನ ಜನಮತವನ್ನು ತಿರಸ್ಕರಿಸಿದ್ದು ಇವೆಲ್ಲ ಮಂದಗಾಮಿಗಳು ಬ್ರಿಟಿಷರ ಬಗ್ಗೆ ಪ್ರಕಟಪಡಿಸಿದ ಕೆಲವು ಸದ್ಭಾವನೆಗಳನ್ನು ಹುಸಿಯಾಗಿಸಿದ್ದಷ್ಟೇ ಅಲ್ಲ, ಅವರನ್ನು ಟೀಕಿಸುತ್ತಿದ್ದ ತೀವ್ರಗಾಮಿಗಳ ತರ್ಕ, ಸಿದ್ಧಾಂತಗಳನ್ನು ಪುಷ್ಟೀಕರಿಸಿದವು. ಬಾಲಗಂಗಾಧರ ತಿಲಕ್‌, ಲಾಲಾ ಲಜಪತರಾಯ್‌, ಬಿಪಿನ್‌ ಚಂದ್ರಪಾಲ್‌ ಮೊದಲಾದವರು ರಾಷ್ಟ್ರೀಯ ರಂಗದಲ್ಲಿ ಪ್ರಬಲರಾದರು. ವಂಗಭಂಗ ಚಳವಳಿಯಲ್ಲಿ ಪ್ರಕಟವಾದ ಸ್ವದೇಶಿ ಹಾಗೂ ಪಾಶ್ಚಾತ್ಯ ವಸ್ತುಗಳ ನಿರಾಕರಣೆಯ ಅಭಿಯಾನವೂ ವಸಾಹತುಶಾಹಿಯನ್ನು ಮುಖಾಮುಖಿಯಾಗಿ, ಜನಪ್ರಿಯ ನೆಲೆಯಲ್ಲಿ ನಡೆಯಿತು. ಸಾರ್ವಜನಿಕ ಸಹಯೋಗವು ರಾಷ್ಟ್ರೀಯತೆಯ ಶಿಷ್ಟ ಅಭಿವ್ಯಕ್ತಿಗೆ ಮಾರಕ ಎಂಬ ಮಂದಗಾಮಿಗಳ ಧೋರಣೆಯನ್ನು ವಂಗಭಂಗ ಚಳವಳಿಯು ತಿರಸ್ಕರಿಸಿತು. ಭಾರತದ ರಾಷ್ಟ್ರೀಯತೆಯು ಬೊಗಳುವುದಷ್ಟೇ ಅಲ್ಲ, ಕಚ್ಚಲೂ ಶಕ್ತ; ಅದು ಕೆಲವರದ್ದೇ ಭಾಷಣಗಳ, ಲೇಖನಿಗಳ ಶಕ್ತಿಯಲ್ಲ. ಅದು ಜನಪ್ರಿಯ ಅಭಿವ್ಯಕ್ತಿಯೂ ಕೂಡ ಎಂಬುದನ್ನು ತೋರಿಸಿಕೊಟ್ಟಿತು. ಇದು ಕಾಂಗ್ರೆಸಿನಲ್ಲಿ ಒಡಕನ್ನು ಸೃಷ್ಟಿಸಿದ್ದು ಸೂರತ್‌ನಲ್ಲಿ ಸ್ಪಷ್ಟವಾಯಿತು.

ಈ ಬೆಳವಣಿಗೆ, ಬದಲಾವಣೆಗಳ ಇನ್ನೊಂದು ಆಯಾಮ ಭಾರತದಲ್ಲಿ ಬೆಳೆದ ಕ್ರಾಂತಿವಾದ, ವಸಾಹತುಶಾಹಿಯು ದುಷ್ಟಶಕ್ತಿ. ಅದನ್ನು ನಯಮಾತುಗಳಿಂದ ಹೊಡೆದೋಡಿಸಲು ಅಸಾಧ್ಯ. ಅದಕ್ಕೆ ಉದಾತ್ತವಾದ ಹಿಂಸಾಚರಣೆಯನ್ನು ಒಪ್ಪಿಕೊಂಡ ಕ್ರಾಂತಿಯ ಅವಶ್ಯ; ರಕ್ತ ತರ್ಪಣ ಅನಿವಾರ್ಯ, ಹುತಾತ್ಮರು ಅಗತ್ಯ ಎಂಬ ವಿಚಾರಗಳನ್ನು ಕ್ರಾಂತಿಕಾರಿಗಳು ಪ್ರತಿಪಾದಿಸಿದರು. ಇಟಲಿಯ ಕ್ರಾಂತಿಕಾರಿ ಮಜಿನಿ ಮೊದಲಾದವರಿಂದ ಪ್ರಭಾವಿತರಾದ ಇವರು ಕೆಲವೊಮ್ಮೆ ಧಾರ್ಮಿಕ ಪ್ರತೀಕಗಳನ್ನು ಮುಂದಿಟ್ಟು, ೧೮೫೭ರ ಉದಾತ್ತ ಹಿಂಸಾಚರಣೆಯನ್ನು ಪ್ರೇರಣೆಯಾಗಿಸಿಕೊಂಡು ವಸಾಹತುಶಾಹಿ ಶಕ್ತಿಯನ್ನು ದೇಶ-ವಿದೇಶಗಳಲ್ಲಿ ನಿಗ್ರಹಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಭೂಗತ ಸಂಘಟನೆಗಳ ಮೂಲಕ ಸಾಂಕೇತಿಕವಾಗಿ ಜನ ವಿರೋಧಿ ಅಧಿಕಾರಿಗಳ ಹತ್ಯೆಗೈದು, ಪ್ರಭುತ್ವದ ವಿರುದ್ಧ ಗೆರಿಲ್ಲಾ ಯುದ್ಧವನ್ನು ಸಾರಿ, ಹಲವೊಮ್ಮೆ ಆತ್ಮಾರ್ಪಣೆಗೈದು, ಅದರ ಮೂಲಕ ದೇಶಪ್ರೇಮವನ್ನು ಉದ್ದೀಪನಗೊಳಿಸುವುದು ಕ್ರಾಂತಿಕಾರಿಗಳ ಕಾರ್ಯ ವೈಖರಿಯಾಗಿತ್ತು. ಇದು ದೇಶದ ತರುಣ ಪೀಳಿಗೆಯನ್ನು ರಾಷ್ಟ್ರ ಪ್ರೇಮ ಹಾಗೂ ರಾಷ್ಟ್ರಕ್ಕೋಸ್ಕರ ಪರಮಾತ್ಯಾಗವನ್ನು ಮಾಡುವತ್ತ ಕೊಂಡೊಯ್ದಿತು. ಇದರಲ್ಲಿ ವೈಯಕ್ತಿಕ ವಿಜಯಕ್ಕಿಂತ ಆದರ್ಶಗಳ ವಿಜಯವೇ ಮುಖ್ಯ ಎಂಬ ವಿಚಾರವನ್ನು ಪ್ರತಿಪಾದಿಸಲಾಯಿತು. ರಾಷ್ಟ್ರೀಯ ಚಳವಳಿಯಲ್ಲಿ ಈ ಆದರ್ಶವಾದ ಕೆಲವೊಮ್ಮೆ ಅನಾವಶ್ಯಕ ಮಾನವ ಸಂಪನ್ಮೂಲಗಳ ವ್ಯರ್ಥ ವೆಚ್ಚಗಳಿಗೆ ಕಾರಣವಾಯಿತು ಎಂಬ ಟೀಕಾತ್ಮಕ ಮಾತುಗಳು ಕೇಳಿಬಂದರೂ, ಇದು ರಾಷ್ಟ್ರೀಯತೆಯ ಭಾವನಾತ್ಮಕ ಪ್ರಕಟಣೆಯ ಉದಾತ್ತ ಸ್ವರೂಪ, ಇದು ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿತು ಎಂಬುದು ನಿರ್ವಿವಾದ.

ರಾಷ್ಟ್ರೀಯ ಚಳವಳಿಯ ಸಾರಥ್ಯವನ್ನು ಗಾಂಧೀಜಿಯವರು ವಹಿಸಿಕೊಂಡದ್ದು ಅದರ ಗತಿಯನ್ನು ಸಂಪೂರ್ಣ ಬದಲಾಯಿಸಿತು ಎನ್ನುವ ಮಾತು ಬಹುಪಾಲು ಸತ್ಯ. ವಸಾಹತುಶಾಹಿಯನ್ನು ನಿಗ್ರಹಿಸಲು ಸೈದ್ಧಾಂತಿಕವಾಗಿ ಹೊಸತನ್ನೆಲ್ಲವನ್ನು ಹೇಳಿಲ್ಲ. ಆದರೆ ಅದರ ಕಾರ್ಯ ವೈಖರಿಗಳಲ್ಲಿ ಬಹಳಷ್ಟು ಬದಲಾವಣೆಗಳು ಬಂದಿತು. ಬ್ರಿಟಿಷ್ ‌ಆಳ್ವಿಕೆಯನ್ನು ನೈತಿಕ ನೆಲೆಯಲ್ಲಿ ಖಂಡಿಸಬೇಕು ಎಂಬ ವಿಚಾರ ‘ಮಂದವಾದಿ’ಗಳೂ ಮನಗಂಡಿದ್ದರು. ಆದರೆ ಇದಕ್ಕೆ ಸಾಮೂಹಿಕ ನೆಲೆಯಲ್ಲಿ ಸಹಯೋಗ, ಸಹಭಾಗಿತ್ವ ಅವಶ್ಯ; ರಾಷ್ಟ್ರೀಯ ಚಳವಳಿಯು ಜನಪರ ಚಳವಳಿಯಾದರಷ್ಟೇ ಸಾಲದು, ಅದು ಜನರ ಸಕ್ರಿಯ ಚಳವಳಿಯಾಗಬೇಕು ಎಂಬ ನಿಲುವು ಗಾಂಧೀಜಿಯವರದ್ದು. ಸಾಮೂಹಿಕ ಚಳವಳಿಯು ಅಶಿಸ್ತಿನ ಆಕರವಾಗಬಹುದು. ಅದನ್ನು ಧೀಮಂತ ಧುರೀಣತ್ವವು ನಿಯಂತ್ರಣದಲ್ಲಿಡಲು ಸೋಲಬಹುದು ಎಂಬ ‘ಮಂದಗಾಮಿ’ಗಳ ಆತಂಕವನ್ನು ನಿವಾರಿಸಲೆನ್ನುವಂತೆ ಗಾಂಧೀಜಿಯವರು ತಮ್ಮ ಸಾಮೂಹಿಕ ಚಳವಳಿಗಳನ್ನು ‘ಅಹಿಂಸೆ’, ‘ಸತ್ಯಾಗ್ರಹ’ಗಳ ಚೌಕಟ್ಟಿನಲ್ಲಿ ಪ್ರತಿಪಾದಿಸಿದ್ದು, ಇದು ರಾಷ್ಟ್ರೀಯತೆಯ ಪ್ರಕಟಣೆಗೆ ಒಂದು ನೈತಿಕ ಬಲವನ್ನಷ್ಟೇ ಅಲ್ಲ, ಸಾಮ್ರಾಜ್ಯಶಾಹಿ ಶಕ್ತಿಗೆ ಒಂದು ನೈತಿಕ ಬಲದಲ್ಲಿ ಗೆಲ್ಲಲು ಸಾಧ್ಯ ಎಂಬ ನಂಬಿಕೆ, ಧೈರ್ಯಗಳು ಇದರಲ್ಲಿ ಪ್ರಕಟವಾಗುತ್ತದೆ. ಬ್ರಿಟಿಷ್ ‌ಸಾಮ್ರಾಜ್ಯಶಾಹಿಯು ಭಾರತದ ಹಿತಕ್ಕೆ ಕುತ್ತಾಗಿ ಪರಿಣಮಿಸಿದ್ದು ಸತ್ಯ; ಆದರೆ ಬ್ರಿಟಿಷರು ತಮ್ಮ ದೇಶದಲ್ಲಿ ಬೆಳೆಸಿದ ಪ್ರಜಾಪ್ರಭುತ್ವದ ಸಂಪ್ರದಾಯ, ವ್ಯಕ್ತಿ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯಗಳು ಭಾರತಕ್ಕೆ ಅನುಕರಣೀಯ; ಇಂತಹ ರಾಷ್ಟ್ರದೊಡನೆ ನೈತಿಕ ಬುನಾದಿಯಲ್ಲಿ ವ್ಯವಹಾರ ಸಾಧ್ಯ ಎಂಬ ಭಾವನೆ ಗಾಂಧೀಜಿಯವರ ಸತ್ಯಾಗ್ರಹ ಚಳವಳಿಯ ಹಿಂದಿತ್ತು. ಇದು ಕಾಂಗ್ರೆಸ್‌ ಈವರೆಗೆ ನಡೆದ ದಾರಿಯಿಂದ ಭಿನ್ನವಾಗಿರಲಿಲ್ಲ. ನಮ್ಮ ರಾಷ್ಟ್ರೀಯತೆಯ ಅಭಿವ್ಯಕ್ತಿ ದೇಶದ ಸಮಗ್ರ ಜಾಗೃತಿಯನ್ನು ಪ್ರತಿಬಿಂಬಿಸತಕ್ಕದ್ದು ಎಂಬುದು ಗಾಂಧೀ ತತ್ವದ ತಿರುಳು. ಈ ಜಾಗೃತಿಯು ನಮ್ಮ ಸಾಮಾಜಿಕ, ಆರ್ಥಿಕ, ಧಾರ್ಮಿಕ ರಂಗಗಳನ್ನು ಒಳಗೊಂಡಿರಬೇಕು; ಇದು ಪ್ರತಿ ವ್ಯಕ್ತಿಯ ಆಂತರಿಕ ವಿಕಸನ, ಮನಸ್ಥೈರ್ಯ ಹಾಗೂ ಆತ್ಮಶಕ್ತಿಯನ್ನು ಬೆಳೆಸಿ ಪ್ರಕಟಿಸಬೇಕು; ದೇಶದ ಎಲ್ಲ ಜನರನ್ನು ಒಟ್ಟುಗೂಡಿಸಿ, ಅವರ ಶಕ್ತಿಯನ್ನು ವೈಯಕ್ತಿಕ ಹಾಗೂ ರಾಷ್ಟ್ರೀಯ ನೆಲೆಯಲ್ಲಿ ಚಾಲನೆಗೊಳಿಸಬೇಕು ಎಂಬುದು ಗಾಂಧೀಜಿಯವರ ತತ್ವ ಹಾಗೂ ತಂತ್ರ. ಸೈದ್ಧಾಂತಿಕ ನೆಲೆಯಲ್ಲಿ ಈ ರಾಷ್ಟ್ರೀಯವಾದ ಒಂದು ಪರಿಷ್ಕಾರವಾದರೆ ಕಾರ್ಯಕ್ರಮದ ಸ್ತರದಲ್ಲಿ ಇದು ಆವಿಷ್ಕಾರ. ಈ ಕಾರಣದಿಂದಲೇ ಭಾರತದ ರಾಷ್ಟ್ರೀಯ ಚಳವಳಿಗೆ ಒಂದು ಹೊಸತನ. ನೈತಿಕ ಸ್ಥೈರ್ಯ ದೊರಕಿದ್ದು.

ರಾಷ್ಟ್ರೀಯ ಚಳವಳಿಯ ಮುಖ್ಯವಾಹಿನಿಯಲ್ಲಿ ಗಾಂಧೀಜಿಯವರ ಪ್ರಭಾವವು ಹೆಚ್ಚಾಗಿತ್ತು ಎಂಬುದು ಅವರ ಜನಪ್ರಿಯತೆಯ ನಿದರ್ಶನ. ಅವರ ಕಾರ್ಯಕ್ರಮ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಒಪ್ಪದವರೂ ಅವರ ಜನಪ್ರಿಯತೆಯನ್ನು ಅಲ್ಲಗಳೆಯಲು ಅಶಕ್ತರಾಗಿದ್ದರು. ಆದರೂ ಈ ಕಾಲಘಟ್ಟದಲ್ಲಿ ಗಾಂಧೀ ಮಾರ್ಗವನ್ನು ಬಿಟ್ಟು ತಮ್ಮದೇ ಆದ ವೈಖರಿಯಲ್ಲಿ ರಾಷ್ಟ್ರೀಯತೆಯನ್ನು ಪ್ರಕಟಪಡಿಸಿದವರು ಅನೇಕರು. ಸುಭಾಷ್‌ಚಂದ್ರ ಬೋಸರು ಜರ್ಮನಿ ಜಪಾನ್‌ಗಳ ಸಹಕಾರದಿಂದ ಬ್ರಿಟಿಷ್ ‌ಅಧಿಪತ್ಯವನ್ನು ಕೊನೆಗೊಳಿಸಲು ರಾಷ್ಟ್ರೀಯ ಸೈನ್ಯವನ್ನು ಕಟ್ಟಿ ಮಲಯಾ, ಬರ್ಮಾ ಮಾರ್ಗದಲ್ಲಿ ಮುನ್ನುಗ್ಗಿ ಸಿಂಹನಾದ ಮಾಡಿದ್ದು ಒಂದು ಪ್ರಮುಖ ಘಟನೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ‌ಸಾಮ್ರಾಜ್ಯವನ್ನು ನಿಗ್ರಹಿಸಲು ಈ ಉದಾತ್ತ ವೀರಾವೇಶ ಎಷ್ಟರ ಮಟ್ಟಿಗೆ ಶಕ್ತವಾಗಿತ್ತು ಎಂಬುದು ಮುಜುಗರದ ಪ್ರಶ್ನೆ. ಕ್ರಾಂತಿಕಾರಿಗಳ ವಿಚಾರ ವೈಖರಿಗಳಂತೆ ಇದು ವಿಜಯದ ವಾಸ್ತವ ಕಲ್ಪನೆಯ ಮೇಲೆ ಕಟ್ಟಿದ ಕಾರ್ಯಕ್ರಮವಲ್ಲ. ತಮ್ಮ ವೀರಾವೇಶದ ಪ್ರಕಟಣೆಯು ರಾಷ್ಟ್ರಪ್ರೇಮವನ್ನು ಬೆಳಗಿಸಲು ಸಾಧ್ಯ. ಅದರಿಂದ ಜನಸಾಮಾನ್ಯರು ಸಾಮ್ರಾಜ್ಯಶಾಹಿ ಶಕ್ತಿಯನ್ನು ಧಿಕ್ಕರಿಸಲು ಸಾಧ್ಯ ಎಂಬ ಭಾವನೆ ಸುಭಾಷ್‌ಚಂದ್ರ ಬೋಸರದ್ದು. ಇದು ಮುಂದೆ ಐ.ಎನ್.ಎ. ಧುರೀಣರನ್ನು ಕೆಂಪುಕೋಟೆಯಲ್ಲಿ ವಿಚಾರಣೆಗೊಳಪಡಿಸುವಾಗ ಭಾರತವಿಡೀ ಸಿಡಿದೆದ್ದ ವ್ಯಗ್ರ ಅನುಕಂಪದಲ್ಲಿ ಪ್ರಕಟಗೊಂಡಿತು. ಇದೇ ಭಾವನೆ ದೇಶದ ನೌಕಾನೆಲೆಗಳಲ್ಲಿ ಭುಗಿಲೆದ್ದ ದಂಗೆಗಳಲ್ಲಿ ವ್ಯಕ್ತವಾಯಿತು.

ಅಂದರೆ, ಭಾರತದ ರಾಷ್ಟ್ರೀಯತೆ ಅಥವಾ ಅದರ ವಿವಿಧ ಅಭಿವ್ಯಕ್ತಿಗಳು ಸಂಪೂರ್ಣವಾಗಿ ಗಾಂಧೀತತ್ವಗಳ ಮೇಲೆ ಹೊಂದಿರಲಿಲ್ಲ. ಕೆಲವೊಮ್ಮೆ ಸೈದ್ಧಾಂತಿಕ ನೆಲೆಯಲ್ಲಿ ಹಿಂಸಾಮಾರ್ಗವನ್ನು ಅಂಗೀಕರಿಸಲಾಗಿತ್ತು. ಇದಕ್ಕೆ ಭಗವದ್ಗೀತೆಯಲ್ಲಿ ಪ್ರೇರಣೆಯನ್ನು ಪಡೆಯಲಾಗಿತ್ತು. ಇತಿಹಾಸದಲ್ಲಿ ಆದರ್ಶಗಳನ್ನು ಹುಡುಕಲಾಗಿತ್ತು. ಇನ್ನು ಕೆಲವೊಮ್ಮೆ ಸಂದರ್ಭಗಳ ಒತ್ತಡಗಳಿಂದ ಅಹಿಂಸಾ ಮಾರ್ಗವನ್ನು ನಿರಾಕರಿಸಲಾಗಿತ್ತು. ರೈತದಂಗೆಗಳು, ಗುಡ್ಡಗಾಡಿನ ಜನತೆಯು ಪ್ರಭುತ್ವದ ವಿರೋಧವಾಗಿ ತೋರಿದ ಆಕ್ರೋಶ, ಆಗಾಗ ಹೊರಹೊಮ್ಮಿದ ಕಾರ್ಮಿಕ ವರ್ಗದ ಅಶಾಂತಿ, ಇವು ಸಂದರ್ಭಕ್ಕನುಗುಣವಾಗಿ ಹಿಂಸೆಯತ್ತ ವಾಲಿದ್ದು ಸರ್ವೇಸಾಮಾನ್ಯ. ಆದರೆ ಬ್ರಿಟಿಷರೊಡನೆ ನೇರ ವ್ಯವಹಾರ ನಡೆಸಿದ ರಾಷ್ಟ್ರೀಯ ಶಕ್ತಿಗಳು ಹಾಗೂ ಘಟಕಗಳು ಸೈದ್ಧಾಂತಿಕವಾಗಿ ಅಥವಾ ತಮ್ಮ ಕಾರ್ಯಕ್ರಮದ ಅಂಗವಾಗಿ ಹಿಂಸಾಮಾರ್ಗವನ್ನು ಪ್ರಕಟಿಸಲಿಲ್ಲ. ಇದು ಪ್ರಭುತ್ವದೊಡನೆ ನಡಸಿದ ವ್ಯವಹಾರ, ಚರ್ಚೆ, ಸಂಧಾನಗಳ ಒಟ್ಟು ಅಭಿವ್ಯಕ್ತಿಗೆ ಪೂರಕವಾಗಿತ್ತು. ಹಿಂಸೆಯನ್ನು ಸೈದ್ಧಾಂತಿಕವಾಗಿ ಅಂಗೀಕರಿಸಿದಾಗ ಪ್ರಭುತ್ವದೊಡನೆ ಸಂವಾದ ಅಸಾಧ್ಯವಾಗುತ್ತದೆ. ಇದು ಕಾಂಗ್ರೆಸ್‌ ಕೇಂದ್ರಿತ ರಾಷ್ಟ್ರೀಯ ಚಳವಳಿಯ ಶಕ್ತಿ ಅಥವಾ ಮಿತಿ ಎಂದು ಹೇಳಲಾಗಿದೆ.

ಭಾರತದ ರಾಷ್ಟ್ರೀಯತೆಯ ಹಾಗೂ ಸ್ವಾತಂತ್ರ್ಯ ಚಳವಳಿಗಳನ್ನು ಕೇವಲ ಕಾಂಗ್ರೆಸ್‌ ಅಥವಾ ಮುಸ್ಲಿಮ್‌ ಲೀಗ್‌ಗಳಂಥ ಸಂಸ್ಥಗಳ ಅಥವಾ ರಾಷ್ಟ್ರೀಯ ಗಣ್ಯ ಸಂಕುಲದ ವಿಚಾರ ಪರಾಕ್ರಮಗಳ ಸಂಹಿತೆಗಳ ಚೌಕಟ್ಟಿನಲ್ಲಿ ಸಾಮಾನ್ಯವಾಗಿ ನೋಡಲಾಗಿದೆ. ಇದನ್ನು ಒಂದು ಬೃಹತ್‌ ಕಥೆಯ ಮಾದರಿಯಲ್ಲಿ ಹೆಣೆಯಲಾಗಿದೆ. ಭಾರತದ ಸ್ವಾತಂತ್ರ್ಯಪೂರ್ವ ಘಟ್ಟದಲ್ಲಿ ಇದನ್ನು ಬಹುತೇಕವಾಗಿ ಬ್ರಿಟಿಷ್ ‌ಇತಿಹಾಸಕಾರರು ತಮ್ಮ ದೃಷ್ಟಿಕೋನದಲ್ಲಿ ನೋಡಿ, ಇಲ್ಲಿನ ರಾಷ್ಟ್ರೀಯತೆಯ ಅಪ್ರಬುದ್ಧತೆಯನ್ನು ಹೆಚ್ಚಾಗಿ ಪ್ರತಿಪಾದಿಸಿದರು. ರಾಷ್ಟ್ರೀಯತೆಯು ಭಾರತೀಯರು ಪಾಶ್ಚಾತ್ಯರಿಂದ ಕಲಿತ ಪಾಠ; ಬ್ರಿಟಿಷ್ ‌ಆಡಳಿತ ಹಾಗೂ ಅದು ಇಲ್ಲಿ ನೀಡಿದ ಪ್ರಗತಿಯ ದೇಣಿಗೆಯ ಫಲ ಎಂಬ ನಿಲುವನ್ನು ಪ್ರಕಟಿಸಿದರು. ಭಾರತೀಯರು ಈ ವಿಚಾರದಲ್ಲಿ ಬ್ರಿಟಿಷರ ವಿದ್ಯಾರ್ಥಿಗಳೇ ಎಂಬ ವಿಚಾರ ವಸಾಹತುಶಾಹಿಯ ಹಿರಿಮೆ ಹಾಗೂ ಪ್ರಗತಿಶೀಲತೆಯನ್ನು ಸಾರುವ ಸಾಧನವಾಯಿತು. ಭಾರತೀಯರ ರಾಷ್ಟ್ರೀಯ ಪ್ರತಿಕ್ರಿಯೆಯು ಇದಕ್ಕೆ ವ್ಯಕ್ತವಾದದ್ದು ಬೇರೆ ಬೇರೆ ವಿಧದಲ್ಲಿ. ಸ್ವಾತಂತ್ರ್ಯ ಚಳವಳಿಯ ಬಗ್ಗೆ ನೇರವಾಗಿ ರಾಷ್ಟ್ರೀಯ ಇತಿಹಾಸಕಾರರು ಬರೆದದ್ದು ೧೯೪೭ರ ನಂತರವೇ. ಅಪೂರ್ಣ ಕಥೆಯನ್ನು ಬರೆಯಲು ಇರುವ ಮುಜುಗರ ಅಥವಾ ಬರೆಯುವ ಸಂದರ್ಭದಲ್ಲಿ ವಸಾಹತುಶಾಹಿಯ ವಿರೋಧವನ್ನು ಕಟ್ಟಿಕೊಳ್ಳುವ ಸಾಧ್ಯತೆ ಅಥವಾ ಅನಿವಾರ್ಯತೆ, ಇವುಗಳಿಂದಾಗಿ ಭಾರತದ ವೃತ್ತಿಪರ ಇತಿಹಾಸಕಾರರು ಅದರ ಗೋಜಿಗೆ ಹೋಗಲೇ ಇಲ್ಲ. ಆದರೆ ಪರೋಕ್ಷವಾಗಿ, ಸಾಕಷ್ಟು ತೀಕ್ಷ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವ ತಂತ್ರವನ್ನು ಅಳವಡಿಸಿಕೊಂಡರು. ಹಿಂದೆ, ಅಂದರೆ ಪ್ರಾಚೀನ ಅಥವಾ ಮಧ್ಯಕಾಲೀನ ಭಾರತದಲ್ಲಿ ವಿದೇಶ ಆಕ್ರಮಣಕಾರರನ್ನು ವಿರೋಧಿಸಿದ ಪರಾಕ್ರಮಿಗಳನ್ನು ಚಂದ್ರಗುಪ್ತ ಮೌರ್ಯ, ಪೃಥ್ವಿರಾಜ, ರಾಣಾ ಪ್ರತಾಪ, ಶಿವಾಜಿ ಮೊದಲಾದವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ವಿವರಿಸಿದರು. ಅಂದು ವಿದೇಶೀಯರನ್ನು ನಿಗ್ರಹಿಸುವ ಶಕ್ತಿ ನಮ್ಮಲ್ಲಿದೆ ಎಂದಾಗ, ಪಾಶ್ಚಾತ್ಯರನ್ನು ವಿರೋಧಿಸುವ ಶಕ್ತಿ ಹಾಗ ಮನಃಸ್ಥೈರ್ಯ ಇಂದೂ ಇದೆ ಎಂಬ ಧ್ವನಿಯನ್ನು ಪ್ರಕಟಿಸಿದರು. ಹಾಗೆಯೇ, ನಮ್ಮ ಇತಿಹಾಸ ಪುಟಗಳಲ್ಲಿ ಮೆರೆದ ಅನೇಕ ಅಂಶಗಳನ್ನು ವಸಾಹತುಶಾಹಿಯ ವಿರುದ್ಧ ನಯರೂಪದಲ್ಲಿ ಮುಂದಿಟ್ಟರು. ಉದಾಹರಣೆಗಾಗಿ, ಕೆ. ಪಿ. ಜಯಸ್ವಾಲ್‌, ರಾಧಾಕುಮುದ ಮುಖರ್ಜಿ, ನೀಲಕಂಠ ಶಾಸ್ತ್ರಿ ಮೊದಲಾದವರು ವಿವರಿಸಿದ ಭಾರತದ ಪ್ರಜಾಪ್ರಭುತ್ವದ, ಗ್ರಾಮಾಡಳಿತದ ಪರಂಪರೆ ಅಥವಾ ಮುಖರ್ಜಿಯವರು ಚಿತ್ರಿಸಿದ ಪ್ರಾಚೀನ ಭಾರತದ ವಿದ್ಯಾಲಯ-ವಿಶ್ವವಿದ್ಯಾಲಯಗಳು ಅಥವಾ ಹಿಂದೆ ಭಾರತೀಯರು ಸ್ಥಾಪಿಸಿದ ಸಾಂಸ್ಕೃತಿಕ ವಸಾಹತುಗಳು ಅಥವಾ ಪ್ರಾಚೀನ ಭಾರತದಲ್ಲಿ ಬೆಳೆದು ಬಂದ ವಿಜ್ಞಾನ ಇತ್ಯಾದಿಗಳು ಬ್ರಿಟಿಷರು ಭರತದಲ್ಲಿ ಪ್ರಗತಿಯ ಏಕಮೇವ ಹರಿಕಾರರು ಎಂಬ ಮಾತನ್ನು ಪ್ರಶ್ನಿಸಿದುವು. ಭಾರತೀಯರು ಹಿಂದೆ ಸಾಧಿಸಿದ ವಿಕ್ರಮಗಳು ಅವರಲ್ಲಿ ಇಂದೂ ಇರುವ ಯೋಗ್ಯತೆ ಎಂಬುದನ್ನು ಸ್ಥಾಪಿಸಿದವು. ಭಾರತದ ಸ್ವಾತಂತ್ರ್ಯಾ ನಂತರ ಇತಿಹಾಸ ರಚನೆಯಲ್ಲಿ ರಾಷ್ಟ್ರೀಯತೆಯ ಪ್ರಕಟಣೆಯು ಮುಕ್ತ ರೀತಿಯಲ್ಲಿ ನಡೆಯಿತು. ಸಾಮ್ರಾಜ್ಯಶಾಹಿಯ ವಕ್ತಾರರು ಹಿಂದೆ ಸರಿದು, ಸ್ವಾತಂತ್ರ್ಯ ಚಳವಳಿಯ ವೀರಯೋಧರು ಇತಿಹಾಸ ಸಂಪುಟಗಳಲ್ಲಿ ವಿಜೃಂಭಿಸಿದರು.

ಭಾರತೀಯ ರಾಷ್ಟ್ರೀಯತೆಯನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಿ ವಿವರಿಸಿದವರು ಮಾರ್ಕ್ಸಿಸ್ಟರು. ಎಂ. ಎನ್. ರಾಯ್‌ ಅವರು ಇಲ್ಲಿನ ರಾಷ್ಟ್ರೀಯತೆಯನ್ನು ಬೂರ್ಜ್ವಾ ಪ್ರಕ್ರಿಯೆ ಎಂದು ವಿವರಿಸಿದರು. ಭಾರತವು ಊಳಿಗಮಾನ್ಯ ಪದ್ಧತಿಯಿಂದ ಬಹುತೇಕ ಹೊರಬಂದು ಬಂಡವಾಳಶಾಹಿ ಪ್ರಪಂಚಕ್ಕೆ ಕಾಲಿಟ್ಟು, ಅಲ್ಲಿ ಪ್ರವರ್ಧಮಾನಕ್ಕೆ ಬಂದ ಹೊಸವರ್ಗದ ಆಶೋತ್ತರಗಳನ್ನು ಪ್ರಕಟಿಸಿದ್ದೇ ರಾಷ್ಟ್ರೀಯತೆಯ ನೆಲೆ ಎಂಬ ವಾದ ಅವರದು. ರಜನಿ ಪಾಮ್‌ದತ್‌, ಎ. ಆರ್‌. ದೇಸಾಯಿ ಮೊದಲಾದವರೂ ಈ ಚೌಕಟ್ಟಿನಲ್ಲಿ ಭಾರತದ ರಾಷ್ಟ್ರೀಯ ಚಳವಳಿಯನ್ನು ವಿವರಿಸಿದರು. ಇದನ್ನು ಚಳವಳಿಯ ಇತಿಮಿತಿ ಎಂದು ವಾದಿಸಿ, ಬಂಡವಾಳ ಶಾಹಿಯ ಆಧಿಪತ್ಯ ಇತರ ಸಾಮಾನ್ಯ ವರ್ಗಗಳನ್ನು ರಾಷ್ಟ್ರೀಯತೆಯ ಪ್ರಕಟಣೆಯಿಂದ ದೂರವಿರಿಸಿತು, ಅವುಗಳು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಎಡೆಗೊಡಲಿಲ್ಲ ಎಂಬ ಟೀಕೆಯನ್ನು ಮಾಡಿದರು. ಭಾರತದ ರಾಷ್ಟ್ರೀಯತೆಯ ಧುರೀಣರು ಬಂಡವಾಳಶಾಹಿಗೆ ಒತ್ತೆಯಾಳಾಗಿದ್ದರು ಎಂಬ ಟೀಕೆ, ರಾಷ್ಟ್ರೀಯ ಚಳವಳಿಯನ್ನು ವರ್ಗ ಸಂಘರ್ಷದ ದೃಷ್ಟಿಕೋನದಲ್ಲಿ ನೋಡುವ ಪ್ರವೃತ್ತಿಯಿಂದ ಬಂದದ್ದು. ಈ ದೃಷ್ಟಿಕೋನ ಐತಿಹಾಸಿಕವಾಗಿ ಎಷ್ಟು ಸತ್ಯ. ವಿಶ್ಲೇಷಣಾ ಸಾಧನವಾಗಿ ಎಷ್ಟು ನಂಬಲಾರ್ಹ ಅಥವಾ ಭಾರತದ ಸನ್ನಿವೇಶದಲ್ಲಿ ಎಷ್ಟು ಪ್ರಸ್ತುತ ಎಂಬ ಚರ್ಚೆ ಮಾರ್ಕ್ಸಿಸ್ಟರೊಳಗೆ ಅಥವಾ ಅವರ ವಿರೋಧಿಗಳೊಳಗೆ ನಡೆದೇ ಇದೆ. ಆದರೆ ಮಾರ್ಕ್ಸಿಸ್ಟ್‌ ಸೈದ್ಧಾಂತಿಕ ನೆಲೆಯೊಳಗೂ ಈ ವಿಚಾರವನ್ನು ನಿಷ್ಠುರವಾಗಿ ವಿಶ್ಲೇಷಿಸಲಾಗಿದೆ. ಬಿಪಿನ್‌ಚಂದ್ರ ಅವರು ಭಾರತದ ರಾಷ್ಟ್ರೀಯತೆಯನ್ನು ಬಂಡವಾಳಶಾಹಿಯ ಯಜಮಾನ್ಯದಲ್ಲಿ ನಡೆಯಿತಾದರೂ, ರಾಷ್ಟ್ರೀಯ ನಾಯಕರು ವರ್ಗ ನೆಲೆಯಲ್ಲಿ ಸಂಕುಚಿತ ಭಾವನೆಗಳನ್ನಿಟ್ಟುಕೊಳ್ಳದೆ, ರಾಷ್ಟ್ರದ ಸಮಗ್ರ ಸಂವೇದನೆಯನ್ನು ತೋರುವ ಪ್ರಯತ್ನ ಮಾಡಿದರು, ರಾಷ್ಟ್ರಹಿತದ ವಕ್ತಾರರಾದರು ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಅಂದರೆ, ರಾಷ್ಟ್ರೀಯತೆಯ ವರ್ಗ ವಿಶ್ಲೇಷಣೆಯು ವರ್ಗಹಿತದ ಅನ್ವೇಷಣೆಯಾಗಬಾರದು; ರಾಷ್ಟ್ರ ಚಳವಳಿಯ ಸನ್ನಿವೇಶದಲ್ಲಿ ಇದು ರಾಷ್ಟ್ರಹಿತವನ್ನು ಪ್ರತಿನಿಧೀಕರಿಸಿತು ಎಂಬುದು ಬಿಪಿನ್‌ ಚಂದ್ರರ ಅಭಿಮತ. ‘ವರ್ಗ ಯಜಮಾನ್ಯ’ದ ವಿಚಾರಗಳನ್ನು ಭಾರತದ ರಾಷ್ಟ್ರೀಯತೆಗೆ ಅಳವಡಿಸುವಲ್ಲಿ ಇವರು ಆಂಟೋನಿಯೋ ಗ್ರಾಂಸಿ ಅವರ ಸೈದ್ಧಾಂತಿಕ ಲಹರಿಗಳಿಂದ ಪ್ರಭಾವಿತರಾಗಿದ್ದಾರೆ.

೧೯೬೦ರ ದಶಕದಲ್ಲಿ ಪ್ರಪಂಚ ಶೀತಲ ಯುದ್ಧದ ಗುಂಗಿನಲ್ಲಿದ್ದ ಸಂದರ್ಭದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ. ಮಾರ್ಕ್ಸಿಸ್ಟ್‌ ವಿಚಾರಧಾರೆಯನ್ನು ವಿರೋಧಿಸುವುದು ಧರ್ಮ ಯುದ್ಧಕ್ಕೆ ಸಮನಾಗಿತ್ತು. ಅದರ ಪ್ರಭಾವದಿಂದ ಅನೇಕ ಇತಿಹಾಸಕಾರರು ಈ ಸೈನ್ಯಕ್ಕೆ ಸೇರ್ಪಡೆಗೊಂಡರು. ಭಾರತದ ಇತಿಹಾಸ ರಚನೆಯ ಸಂಬಂಧ ಹುಟ್ಟಿದ ಪಂಥ ‘ಕ್ಯಾನ್‌ಬೆರಾ ಪಂಗಡ’ ಎಂಬ ಅನಧೀಕೃತ ಹೆಸರಿನಲ್ಲಿ ಸ್ವಲ್ಪ ಕಾಲ ವಿಜೃಂಭಿಸಿತು. ಮಾಕ್ಸ್‌ವಾದವು ಹಮ್ಮಿಕೊಂಡ ವರ್ಗ ವಿಚಾರ, ವಿಶ್ಲೇಷಣೆಗಳು ಯುರೋಪ್‌ ಜನ್ಯ; ಅದು ಭಾರತಕ್ಕೆ ಹೊಂದಿಕೊಳ್ಳುವುದಿಲ್ಲ; ಭಾರತದ ಇತಿಹಾಸವನ್ನು ಭಾರತದ ಸ್ವಂತ ಸಾಮಾಜಿಕ ಅಥವಾ ರಾಜಕೀಯ ವಸ್ತುಸ್ಥಿತಿ, ವೈಖರಿಗಳ ಮೂಲಕ ಅರ್ಥೈಸಬೇಕು ಎಂಬುದು ಅವರ ವಾದ. ಆ ಪ್ರಕಾರ ಭಾರತದ ಜಾತಿ ಪದ್ಧತಿ ಹಾಗೂ ಅದರ ಕಾರ್ಯಾಚರಣೆಯ ದೃಷ್ಟಿಯಿಂದ ಇಲ್ಲಿನ ರಾಷ್ಟ್ರೀಯತೆಯನ್ನು ವಿಶ್ಲೇಷಿಸಿದರು. ಅನಿಲ್‌ಸೀಲ್, ಬ್ರೂಮ್‌ಫೀಲ್ಡ್‌, ಕ್ರಿಸ್ಟೀನ್‌ ಡಾಬಿನ್‌, ಯುಜೀನ್‌ ಇರ್ಶಿಕ್‌, ಡಿ.ಎ.ಲೋ. ಮುಂತಾದವರು ಭಾರತದ ರಾಷ್ಟ್ರೀಯತೆಯನ್ನು ಸಮಗ್ರ ದೃಷ್ಟಿಯಲ್ಲಿ ನೋಡದೆ, ಬಂಗಾಲ, ಮುಂಬಯಿ ಹಾಗೂ ಮದ್ರಾಸು ಪ್ರೆಸಿಡೆನ್ಸಿಯಲ್ಲಿ ಉಚ್ಚ ಜಾತಿವರ್ಗಗಳು ಏಳಿಗೆ ಹೊಂದಿ, ಬ್ರಿಟಿಷರೊಡನೆ ರಾಜಕೀಯ ಪ್ರಭಾವವನ್ನು ಹಂಚಿಕೊಳ್ಳಲು ನಡೆಸಿದ ಸನ್ನಾಹ, ಪೈಪೋಟಿಗಳ ಅಭಿವ್ಯಕ್ತಿ ಎಂದು ವ್ಯಾಖ್ಯಾನಿಸಿದರು. ಈ ಚೌಕಟ್ಟಿನಲ್ಲಿ ಪ್ರೆಸಿಡೆನ್ಸಿ ಸ್ತರದ ಭಾರತದ ರಾಷ್ಟ್ರೀಯತೆಯನ್ನು ವಿವರಿಸಿ ಪ್ರಭಾವಿ ಪುಸ್ತಕಗಳನ್ನು ಬರೆದರು. ಮಾರ್ಕ್ಸಿಸ್ಟರನ್ನು ನಿಗ್ರಹಿಸುವ ನೆವದಲ್ಲಿ ಭಾರತದ ರಾಷ್ಟ್ರೀಯತೆಯನ್ನು ಪ್ರೆಸಿಡೆನ್ಸಿಗಳಲ್ಲಿ ಶಿಷ್ಟ ಜಾತಿಗಳ ಆಕಾಂಕ್ಷೆಗಳಿಗೆ ಸೀಮಿತಗೊಳಿಸಿದರು.

ಈ ಜಾಡಿನ ಹೊಸ ಆವೃತ್ತಿಯಾಗಿ ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡದ್ದು ‘ಕೇಂಬ್ರಿಜ್‌ ಪಂಥ’. ರಾಷ್ಟ್ರೀಯತೆಯನ್ನು ಅಧಿಕಾರಗ್ರಹಣಕ್ಕಾಗಿ ನಡೆಯುವ ಸ್ಪರ್ಧೆ ಎಂಬ ನೆಲೆಯಲ್ಲಿ ವಿವರಿಸಿದರು. ಅಧಿಕಾರ ಮೋಹ, ದಾಹಗಳು ನಮ್ಮಲ್ಲಿ ತಳವೂರಿದ ಜಾಯಮಾನ; ‘ರಾಜಕೀಯದಲ್ಲಿ ಕಂಗೊಳಿಉವ ಸೈದ್ಧಾಂತಿಕತೆಗಳು ಅಧಿಕಾರ ಮೋಹವನ್ನು ಮರೆಮಾಚಲು ಇರುವ ರಮ್ಯ ಮುಖವಾಡಗಳು’ ಎಂಬ ಲೂಯಿಸ್‌ ನೇಮಿಯರ್‌ನ ವಾದವನ್ನು ಅನುಮೋದಿಸುವ ಕೇಂಬ್ರಿಜ್‌ ಪಂಥದ ಇತಿಹಾಸಕಾರರು, ಅದಿಕಾರಕ್ಕಾಗಿ ನಡೆಯುವ ಪೈಪೋಟಿ ಸ್ಥಳೀಯ ಸ್ತರದಲ್ಲಿ ಮೊದಲಾಗಿ ರಾಜ್ಯ, ರಾಷ್ಟ್ರಮಟ್ಟಗಳಿಗೆ ಆರೋಪಹಣಗೊಳ್ಳುವ ಪ್ರಕ್ರಿಯೆಯನ್ನು ರಾಷ್ಟ್ರೀಯತೆಯ ವಿವಿಧ ಪ್ರಕಟಣೆಗಳೊಂದಿಗೆ ಸಮೀಕರಿಸಿದರು. ಅನಿಲ್‌ಸೀಲ್‌, ಡೇವಿಡ್‌ ವಾಷ್‌ಬ್ರೂಕ್‌, ಕ್ರಿಸ್ಟೋಫರ್‌ ಬೇಕರ್‌, ಜೂಡಿತ್‌ ಬ್ರೌನ್‌ ಮೊದಲಾದ ಇತಿಹಾಸಕಾರರು ಈ ಚೌಕಟ್ಟಿನಲ್ಲಿ ಭಾರತದ ರಾಷ್ಟ್ರೀಯತೆಯನ್ನು ವಿಶ್ಲೇಷಿಸಿದರು. ಭಾರತಕ್ಕೊಂದು ಸಮಗ್ರ ರಾಷ್ಟ್ರೀಯತೆಯನ್ನು ಪರಿಗಣಿಸದೆ, ಸ್ಥಳೀಯ ಅಥವಾ ಪ್ರಾದೇಶಿಕ ನೆಲೆಯಲ್ಲಿ ಅದನ್ನು ಗುರುತಿಸಿ, ಅದರ ಪ್ರಕಟಣೆಗಳು ಅಧಿಕಾರ ಪ್ರೇರಿತ ಸ್ವಪ್ರಯೋಜನಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ವಾದ ರಾಷ್ಟ್ರೀಯತೆಯ ಭವ್ಯತೆಯನ್ನು ಮೊಟಕುಗೊಳಿಸುವ ಕಾರ್ಯವನ್ನು ಮಾಡುತ್ತದೆ; ಅದರ ಆದರ್ಶಗಳನ್ನು ತಿರಸ್ಕರಿಸುತ್ತದೆ. ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಅಧಿಕಾರ ಮೋಹವನ್ನೆಲ್ಲಿ ಕಾಣೋಣ ಎಂಬ ಸಂಶಯವನ್ನು ಈ ಇತಿಹಾಸಕಾರರು ವಿಶ್ಲೇಷಿಸುವಲ್ಲಿ ಇವರು ಪ್ರಯತ್ನಿಸಿದ್ದಾರೆ.

ಎಂಬತ್ತರ ದಶಕದಲ್ಲಿ ರಾಷ್ಟ್ರೀಯತೆಯನ್ನು ಟೀಕಾತ್ಮಕವಾಗಿ ವಿವರಿಸಿದ ಇನ್ನೊಂದು ಪಂಗಡ ‘ಸಬಾಲ್ಟರ್ನ್‌ ಇತಿಹಾಸಕಾರ’ರದ್ದು. ಆಗಲೇ ಪ್ರಚಲಿತವಾಗಿದ್ದ ಕೆಳಸ್ತರದ ಇತಿಹಾಸ ರಚನೆಯ ಗೀಳು ಇತಿಹಾಸದ ವ್ಯಾಪ್ತಿಯನ್ನು ವೃದ್ಧಿಸಿತ್ತು. ಪ್ರಭಾವಶಾಲಿಗಳೇ ಇತಿಹಾಸ ಪುಟಗಳಲ್ಲಿ ಬಿಡಾರ ಹೂಡುವ ಅಧಿಕಾರ ಹೊಂದಿದ್ದಾರೆ ಎಂಬ ವಿಚಾರವನ್ನು ನಿರಾಕರಿಸಿ, ಸಾಮಾನ್ಯ ಜನ ವರ್ಗಗಳ ಇತಿಹಾಸವನ್ನು ರಚಿಸುವ ಕಾಯಕ ಪ್ರಜಾಪ್ರಭುತ್ವದ ವಿಜಯದ ದ್ಯೋತಕ ಎಂದು ತಿಳಿಯಬಹುದು. ‘ಸಬಾಲ್ಟರ್ನ್‌’ ಪಂಗಡವನ್ನು ರೂಪಿಸಿ ಅದರ ಸಾರಥ್ಯವನ್ನು ನಡೆಸಿದ ರಣಜಿತ್‌ ಗುಹಾ ಅವರು ಭಾರತೀಯ ರಾಷ್ಟ್ರೀಯತೆಯ ಕಥನವನ್ನು ಪ್ರಭಾವಿ ವರ್ಗದ ಸರ್ವಸ್ವಾಮ್ಯತೆಯಿಂದ ಬಿಡಿಸಿ ಸಾಮಾನ್ಯವರ್ಗದ ಸೃಷ್ಟಿಯಾಗಿ ಪರಿಭಾವಿಸುವ ಪಣ ತೊಟ್ಟರು. ಈ ತನಕ ರಾಷ್ಟ್ರೀಯ ಚಳವಳಿಯ ಬಹುತೇಕ ಧುರೀಣ ನೆಲೆಯಲ್ಲೇ ನಡೆದು, ಇತರರು ಈ ಜಾಣರನ್ನು ಮುಗ್ಧರಾಗಿ ಅಥವಾ ಮೋಹಿತರಾಗಿ ಹಿಂಬಾಲಿಸಿದರು ಎಂದು ಉದ್ಧರಿಸಲಾಗಿದೆ. ಆದರೆ, ಅನೇಕ ಬಾರಿ ಸಾಮಾನ್ಯ ಜನ ತಮ್ಮ ಸ್ವಂತ ನೆಲೆಯಲ್ಲೇ ರಾಷ್ಟ್ರೀಯತೆಯ ಸಮಗ್ರ ಚಿತ್ರಣ ದೊರಕಲು ಸಾಧ್ಯ ಎಂಬುದು ಸಬಾಲ್ಟರ್ನ್‌ ಇತಿಹಾಸಕಾರರ ಅಭಿಪ್ರಾಯ. ಇದರಿಂದ ಭಾರತದ ರಾಷ್ಟ್ರೀಯತೆಯು ಕೆಲವು ವಕ್ತಾರರ ರಾಷ್ಟ್ರೀಯತೆಯಾಗಿ ಉಳಿಯದೇ ನಿಜವಾದ ಸಮಗ್ರತೆಯನ್ನು ಪಡೆಯುತ್ತದೆ ಎಂದರ್ಥ. ಆದರೆ ಈ ವಾದವು ರಾಷ್ಟ್ರೀಯತೆಯ ಸಮಗ್ರ ಚಿತ್ರಣವನ್ನು ಛಿದ್ರಗೊಳಿಸುತ್ತದೆ ಎಂಬ ಟೀಕೆಯೂ ಕೇಳಿ ಬಂತು. ಸಾಮಾನ್ಯ ಜನರ ಇತಿಹಾಸವನ್ನು ಸಮಗ್ರ ಇತಿಹಾಸವಾಗಿ ಹೊಸೆಯುವ ಸವಾಲು ಇದ್ದೇ ಇದೆ. ಇದು ಸಮರ್ಪಕವಾಗಿ ನಡೆದಿಲ್ಲ ಎಂಬ ಮಾತ್ರಕ್ಕೆ ಅದು ತಿರಸ್ಕಾರ ಯೋಗ್ಯವಲ್ಲ ಎಂಬ ಪ್ರತಿವಾದವೂ ಇದೆ. ಚರ್ಚೆ ನಡೆದೇ ಇದೆ.

ಭಾರತದ ರಾಷ್ಟ್ರೀಯತೆ ಹಾಗೂ ಚಳವಳಿಗಳು ಬೇರೆ ಬೇರೆ ವಿಧವಾಗಿ ವ್ಯಕ್ತಗೊಂಡಿದೆ. ಇದು ವಸಾಹತುಶಾಹಿಯ ವಿವಿಧ ಅವತಾರ ಹಾಗೂ ಅದು ವಿವಿಧ ವರ್ಗಗಳನ್ನು ತಲುಪಿದ ಕ್ರಮಗಳ ಮೇಲೆ ಹೊಂದಿಕೊಂಡಿದೆ. ಆ ಕಾರಣದಿಂದಲೇ ಅದರ ಬಗ್ಗೆ ಪ್ರತಿಕ್ರಿಯೆಗಳೂ ಬೇರೆ ಬೇರೆಯಾಗಿ ಪರಿಣಮಿಸಿದವು. ಆದರೆ ಇತಿಹಾಸ ರಚನೆಯಲ್ಲಿ ಕೆಲವು ಯಜಮಾನ್ಯಗಳು ಮೆರೆಯುತ್ತವೆ. ಇದರಿಂದಾಗಿ ಕೆಲವು ಚಿತ್ರಣಗಳಿಗೆ ಪ್ರಾಶಸ್ತ್ಯ ದೊರೆಯುತ್ತದೆ. ಇದು ಇತಿಹಾಸದ ಪ್ರಮುಖವಾಹಿನಿಯಾಗಿ ಪರಿಣಮಿಸುತ್ತದೆ. ಇತಿಹಾಸ ಪಠ್ಯಪುಸ್ತಕಗಳಲ್ಲಿ ರಾರಾಜಿಸುತ್ತದೆ. ಜನತೆಯ ಸಾಮಾನ್ಯ ಅನುಮೋದನೆಯನ್ನು ಗಳಿಸುತ್ತದೆ. ಆದರೆ ಬದಲಾಗುವ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ಇತಿಹಾಸದ ಸತ್ಯ ಅಥವಾ ಅದರ ಅಭಿವ್ಯಕ್ತಿಗಳ ಬಗ್ಗೆ ಹೊಸ ಪ್ರಶ್ನೆಗಳನ್ನೆತ್ತುತ್ತವೆ. ಇದರಿಂದಾಗಿ ಇತಿಹಾಸದ ಪುನಾರಚನೆಯಾಗುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ರಾಷ್ಟ್ರೀಯತೆಯ ಕುರಿತು ನಡೆಯುವ ಎಲ್ಲ ಚರ್ಚೆಗಳೂ ಈ ಅರ್ಥದಲ್ಲಿ ಮುಗಿಯದ ಎಂದು ಹೇಳಬಹುದಾಗಿದೆ.