ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ಪಂಡಿತ ಜವಾಹರಲಾಲ್ ನೆಹರೂ ಅವರು ದೇಶದ ಚರಿತ್ರೆಯೊಂದಿಗೆ ಬೆರೆತು ಹೋದ ಅಪೂರ್ವ ವ್ಯಕ್ತಿ. ಹತ್ತು ಹಲವು ಕಾರಣಗಳಿಗಾಗಿ ನೆಹರೂ ವಿಶ್ವದ ಗಮನ ಸೆಳೆದವರು. ಸ್ವಾತಂತ್ರ್ಯ ಸಂಗ್ರಾಮದ ಹೋರಾಟ, ಕಾಂಗ್ರೆಸ್ ಪಕ್ಷದ ನಾಯಕತ್ವ, ದೇಶದ ಅಭಿವೃದ್ಧಿ ಮಾದರಿಯೊಂದನ್ನು ಸಿದ್ಧಪಡಿಸುವ ವಿಷಯ, ಸ್ವಾತಂತ್ರ್ಯ ಸ್ವಾಭಿಮಾನದ ಸ್ಫೂರ್ತಿಯನ್ನು ದೇಶದ ಜನಮಾನಸದಲ್ಲಿ ಮೂಡಿಸುವ ಮಹತ್ಕಾರ್ಯ, ತಟಸ್ಥನೀತಿ, ತೃತೀಯ ವಿಶ್ವ, ಅಲಿಪ್ತ ಚಳವಳಿ… ಮುಂತಾದ ಹತ್ತಾರು ವಿಷಯಗಳಲ್ಲಿ ನೆಹರು ಅವರ ಚಿಂತನೆ ಮೂಡಿಸಿದ ಛಾಪು ಸದಾ ಹಸಿರಾಗಿಯೇ ಉಳಿಯುವಂತಹದು. ಈ ಕಾರಣದಿಂದ ಮೇಲೆ ಉಲ್ಲೇಖಿಸಿದ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಅಧ್ಯಯನ ನೆಹರೂ ಅವರ ವಿಚಾರಧಾರೆಗಳನ್ನು ಚರ್ಚಿಸದೇ ಹೋದರೆ ಅಪೂರ್ಣವೆಂದೇ ಭಾವಿಸಬಹುದಾಗಿದೆ. ನೆಹರೂ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಗ್ರಹಿಸದೇ ಅವರ ವಿಚಾರಗಳ ಬಗ್ಗೆ ಯಾವುದೇ ಒಂದು ನಿಖರ ತೀರ್ಮಾನಕ್ಕೆ ಬರುವುದು ಸಮಂಜಸವಲ್ಲ. ಇದಕ್ಕೆ ಪ್ರಮುಖ ಕಾರಣ ನೆಹರೂ ಪ್ರಸ್ತಾಪಿಸುವ ವಿಚಾರಧಾರೆಗಳು ಕೇವಲ ಪಠ್ಯ ಮಾತ್ರವಲ್ಲ, ಅವು ಒಂದು ನಿದಿಷ್ಟ ಚಾರಿತ್ರಿಕ ಕಾಲ ಘಟ್ಟದಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಪರಿಸ್ಥಿತಿಗೆ, ರಾಜಕೀಯ ಮುತ್ಸದ್ದಿಯೋರ್ವನ ಪ್ರತಿಕ್ರಿಯೆಗಳು ಕೂಡಾ. ಇಂತಹ ಪ್ರತಿಕ್ರಿಯೆಯನ್ನು ಬೇರೆ ಬೇರೆ ರೀತಿಯಲ್ಲಿ ಪರಿಭಾವಿಸಿದ ಕಾರಣದಿಂದಲೇ ಬಹಳಷ್ಟು ರೀತಿಯ ಜೀವನ ಚರಿತ್ರೆಗಳು ನೆಹರೂ ಕುರಿತು ಬರೆಯಲ್ಪಟ್ಟಿವೆ. ಅವುಗಳಲ್ಲಿ ಯಸ್. ಗೋಪಾಲ್ ಅವರು ಮೂರು ಸಂಪುಟಗಳಲ್ಲಿ ಪ್ರಕಟಿಸಿದ ನೆಹರೂ ಜೀವನ ಚರಿತ್ರೆ, ಬಿ.ಆರ್. ನಂದಾ ಅವರು ಬರೆದ, “ದಿ ನೆಹರೂ,” ಝಕಾರಿಯಾ ಅವರ ಸಂಪಾದಿತ ಕೃತಿ “ಎ ಸ್ಟಡೀ ಆಫ್ ನೆಹರೂ,” ಮೈಕೆಲ್ ಬ್ರೆಷರ್ ಅವರ “ನೆಹರೂ; ಎ ಪೊಲಿಟಿಕಲ್ ಬಯಾಗ್ರಫಿ,” ನಾರ್ಮನ್ ಡೊರೊತಿಯವರ “ನೆಹರೂ; ದ ಫಸ್ಟ್ ಸಿಕ್ಸ್ಟೀಯಿಯರ್ಸ್,” ಫ್ರಂಕ್ ಮೊರಾಸ್‌ ಅವರ “ಜವಾಹರಲಾಲ್ ನೆಹರೂ; ಎ ಬಯಾಗ್ರಫಿ,” ಮತ್ತು ಇತ್ತೀಚೆಗೆ ಪ್ರಕಟವಾದ ಜೂಡಿತ್ ಬ್ರೌನ್ ಅವರ “ನೆಹರೂ” ಪ್ರಮುಖವಾದುವು. ಇದಲ್ಲದೇ ನೆಹರೂ ಅವರು ಪ್ರತಿಪಾದಿಸಿದ ವಿವಿಧ ವಿಚಾರಗಳನ್ನು ಚರ್ಚಿಸಿದ ನೂರಾರು ಗ್ರಂಥಗಳಿವೆ. ಉದಾರೀಕರಣದ ನಂತರದ ದಿನಗಳಲ್ಲಿ ಭಾರತ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿ ಮತ್ತು ಬದಲಾವಣೆಗಳ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿಯೂ ನೆಹರೂ ಚಿಂತನೆಗಳ ಬಗ್ಗೆ ಸುದೀರ್ಘ ವಿಶ್ಲೇಷಣೆ ನಡೆಸಲಾಗುತ್ತಿದೆ. ಆಧುನಿಕ ಭಾರತ ನಿರ್ಮಾಣದಲ್ಲಿ ನೆಹರೂ ಅವರು ನೀಡಿದ ಕೊಡುಗೆಯನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಈ ಲೇಖನದಲ್ಲಿ ನೆಹರೂ ಚಿಂತನೆಯ ಪ್ರಮುಖ ಅಂಶಗಳನ್ನು, ನೆಹರೂ ಅವರ ಆಧುನಿಕ ಭಾರತದ ಕಲ್ಪನೆ, ಬಹುಮುಖಿ ಸಂಸ್ಕೃತಿ ಮತ್ತು ರಾಷ್ಟ್ರೀಯ ಅಭಿವೃದ್ಧಿ, ಪಂಚವಾರ್ಷಿಕ ಯೋಜನೆ ಆಧಾರಿತ ಆರ್ಥಿಕ ಅಭಿವೃದ್ಧಿ, ನೆಹರೂ ಮತ್ತು ಜಾತ್ಯಾತೀತತೆ ಹಾಗೂ ನೆಹರೂ ಮತ್ತು ಆಂತರಿಕ ಪ್ರಜಾಪ್ರಭುತ್ವ ಎನ್ನುವ ಐದು ಭಾಗಗಳಲ್ಲಿ ವಿವರಿಸಲಾಗಿದೆ. ಆರನೆಯ ಭಾಗದಲ್ಲಿ ಉಪಸಂಹಾರವನ್ನು ನೀಡಲಾಗಿದೆ.

ನೆಹರೂ ಅವರು ಆಧುನಿಕ ಭಾರತ ಕಲ್ಪನೆ

ಆಧುನಿಕತೆಯ ಸಂಕೇತಗಳಾಗಿರುವ ಬೃಹತ್‌ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದಾಗ ಭಾರತವೂ ಕಾಡಾ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದು ಸಾಧ್ಯ ಎನ್ನುವುದನ್ನು ಬಲವಾಗಿ ನಂಬಿದ್ದವರು ನೆಹರೂ. ಹಾಗಾಗಿಯೇ ಸಂಪೂರ್ಣ ಕೈಗಾರಿಕೀಕರಣದ ಬಗ್ಗೆ ಸಂಪೂರ್ಣ ಒಲವು ಹೊಂದಿದ್ದ ನೆಹರೂ, ಇದಕ್ಕೆ ಸೋವಿಯತ್ ಮಾದರಿಯನ್ನು ಅನುಸರಿಸಿದರೆ ಅಭಿವೃದ್ಧಿ ಪಥದಲ್ಲಿನ ಪಯಣ ಸಲೀಸಾಗಬಹುದೆಂದು ತಿಳಿದಿದ್ದರು. ಆದರೂ ಪ್ರಾಯಶಃ ಇಂತಹ ಒಂದು ನಂಬಿಕೆಯಿಂದಾಗಿಯೇ ಅವರು ಭಾರತದ ಅಭಿವೃದ್ಧಿಗೆ ಗಾಂಧೀ ಪ್ರತಿಪಾದಿಸಿದ ಸ್ವಾವಲಂಬಿ, ಗ್ರಾಮ ಆಧಾರಿತ ಸ್ವದೇಶಿ ಮಾದರಿಯನ್ನು ಒಪ್ಪಿಕೊಳ್ಳಲಿಲ್ಲವೇನೋ? ನೆಹರೂ ಅವರು ಭಾರತವನ್ನು ಆದಷ್ಟು ಬೇಗ, ಮುಂದುವರಿದ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸಲು ಉತ್ಸುಕರಾಗಿದ್ದರು. ಯಾವ ಕಾರಣದಿಂದ ಮತ್ತು ಯಾವ ದೌರ್ಬಲ್ಯದ ಕಾರಣದಿಂದ ನಮ್ಮ ದೇಶ ಪರಕೀಯರ ಆಡಳಿತಕ್ಕೆ ಒಳಪಡುವಂತಾಯಿಯೋ ಅಂತಹ ದೌರ್ಬಲ್ಯವನ್ನು ಮೀರಿ ಬಡತನ, ಅನಕ್ಷರತೆ, ಜಾತೀಯತೆಯ ಶಾಪಗಳಿಂದ ದೇಶವನ್ನು ವಿಮೋಚನೆಗೊಳಿಸಬೇಕೆನ್ನುವ ಕನಸುಗಳನ್ನು ನೆಹರೂ ಅವರು ಇಟ್ಟುಕೊಂಡಿದ್ದರು. ನೆಹರೂ ಕನಸಿನ ಬಗ್ಗೆ ಯಾವ ಸಂಶಯವನ್ನು ವ್ಯಕ್ತಪಡಿಸಬಾರದು ಎನ್ನುವ, ನೆಹರೂ ಅನುಸರಿಸಿದ ಮಾರ್ಗ, ಅವರ ತಿಳುವಳಿಕೆ ಮತ್ತು ನಂಬಿಕೆ, ತದನಂತರ ಅವರು ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ಧಿಗಾಗಿ ಕೈಗೊಂಡ ನಿರ್ಧಾರಗಳ ವಿಶ್ಲೇಷಣೆ ನಡೆಸಬಾರದೆಂದೇನಿಲ್ಲ. ಸ್ವಾತಂತ್ರ್ಯ ಬಂದ ೬೦ ವರ್ಷಗಳ ನಂತರ ನೆಹರೂ ಅವರ ಯೋಚನೆಗಳ ಬಗ್ಗೆ ಅವರ ಚಿಂತನೆಗಳ ಬಗ್ಗೆ ಎಲ್ಲಕ್ಕಿಂತ ಮಿಗಿಲಾಗಿ ದೇಶದ ಅಭಿವೃದ್ಧಿಯ ಬಗ್ಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಿ ಬೆಳೆಸುವ ಬಗ್ಗೆ ಒಂದು ನಿರ್ದಿಷ್ಟ ವರ್ಗದಿಂದ ಬರುತ್ತಿರುವ ಟೀಕೆಗಳು ರಾಷ್ಟ್ರೀಯ ಬಾಧ್ಯತೆಯ ಆರೋಗ್ಯ ಪೂರ್ಣ ಅಭಿರುಚಿಇಂದ ಕೂಡಿಲ್ಲವೆಂದು ಹೇಳಬೇಕಾಗುತ್ತದೆ. ಯಾಕೆಂದರೆ ಇಡೀ ಸ್ವಾತಂತ್ರ್ಯ ಚಳವಳಿಯಲ್ಲಿ ನೆಹರೂ ತೊಡಗಿಕೊಂಡ ರೀತಿ, ತೆಗೆದುಕೊಂಡ ನಿರ್ಧಾರಗಳು, ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ದೇಶದ ಮೊದಲು ಪ್ರಧಾನಿಯಾಗಿ ಅವರು ಕಾರ್ಯ ನಿರ್ವಹಿಸಿದ ರೀತಿಯನ್ನು ಗಮನಿಸಿದರೆ ದೇಶದ ಬಗ್ಗೆ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕೆನ್ನುವ ಗಮನಿಸಿದರೆ ದೇಶದ ಬಗ್ಗೆ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕೆನ್ನುವ ಕುರಿತಂತೆ ನೆಹರೂ ಅವರಿಗಿದ್ದ ಉತ್ಸಾಹ, ಉತ್ಸುಕತೆ ಹಾಗೂ ಬದ್ಧತೆಯನ್ನು ಕಾಣಬಹುದೇ ಹೊರತು ಅದು ಎಲ್ಲಿಯೂ ಸಂಶಯಕ್ಕೆ ಎಡೆ ಮಾಡಿಕೊಡುವಂತಿಲ್ಲ.

[1]

ಸ್ವತಂತ್ರ ಭಾರತದ ಚರಿತ್ರೆಯಲ್ಲಿ ದಾಖಲಾಗಿರುವ ನೆಹರೂ ಯುಗ ನವ (ಹೊಸ) ದೇಶವೊಂದು ಪ್ರಗತಿ ಪಥದಲ್ಲಿ ಮುನ್ನಡೆಯಲು ತೋರಿದ ಧೈರ್ಯ, ಉತ್ಸಾಹ, ದೂರದೃಷ್ಟಿಗಳ ಸಂಕೇತ ಕೂಡಾ ಆಗಿದೆ. ಇದಕ್ಕೆ ಪ್ರಮುಖ ಕಾರಣ ನೆಹರೂ ಒಬ್ಬ ಅಭಿವೃದ್ಧಿಪರ ಚಿಂತಕ, ಪ್ರಜಾಪ್ರಭುತ್ವದ ಪ್ರತಿಪಾದಕ, ಒಬ್ಬ ದಾರ್ಶನಿಕ ಮತ್ತು ಇದಕ್ಕಿಂತಲೂ ಮುಖ್ಯವಾಗಿ ಭಾರತೀಯರೆಲ್ಲರಿಗೆ ಉತ್ತಮ ಭವಿಷ್ಯ ನಿರೂಪಿಸಬೇಕು ಎಂದು ಹಂಬಲಿಸಿದ ಓರ್ವ ಮಾನವತಾವಾದಿ. ಈ ಎಲ್ಲ ಅಂಶಗಳಿಂದಾಗ ನೆಹರೂ ನವ ಭಾರತದ ಶಿಲ್ಪಿ ಎಂದು ಇತಿಹಾಸದಲ್ಲಿ ದಾಖಲಾಗಿರುವುದು ಅತಿಶಯೋಕ್ತಿ ಏನಲ್ಲ.

ಭಾರತವು ಪ್ರಗತಿ ಪಥದಲ್ಲಿ ಸಾಗಲು ಯಾವುದೆಲ್ಲ ಅಡ್ಡಿಯಾಗಿದೆಯೋ ಅದೆಲ್ಲವನ್ನು ಕಡೆಗಣಿಸಿ ಮುಂದುವರಿಯುವುದು ಅಗತ್ಯ. ಸಮಾಜದ ಎಲ್ಲರನ್ನು ಜೊತೆಯಾಗಿ ಮುನ್ನಡೆಸುವ ಸಂಕಲ್ಪ ಮಾಡುವ ಮೂಲಕ ಈ ದೇಶವನ್ನು ಮಹಾನ್ ದೇಶವಾಗಿ ಮಾಡಬೇಕು ಎನ್ನುವ ನೆಹರೂ ಮಾತು ಒಂದು ರೀತಿಯಲ್ಲಿ ಅವರ ಇಡೀ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.[2] ರಾಜಕೀಯ ಸ್ವಾತಂತ್ರ್ಯ ಈ ದೇಶ ಕಟ್ಟುವ ಆಂದೋಲನದಲ್ಲಿಯೂ ಚಳವಳಿಯಲ್ಲಿ ಮೊದಲ ಹೆಜ್ಜೆ ಮಾತ್ರ ಎನ್ನುವುದನ್ನು ನೆಹರೂ ತಿಳಿದಿದ್ದರು. ಸ್ವಾತಂತ್ರ್ಯ ಚಳವಳಿಯ ಮೂಲಕ ಸರಿಯಾದ ನೆಲೆ ಕಂಡುಕೊಂಡು ನವಭಾರತದ ರಾಷ್ಟ್ರೀಯತೆ, ಪರಮಪರಾಗತ ಸಮಾಜದಲ್ಲಿದ್ದ ಎಲ್ಲ ಮೇಲು ಕೀಳುಗಳು, ಜಾತಿ ವ್ಯವಸ್ಥೆ, ಪ್ರಾಂತೀಯತೆಯನ್ನು ನಿವಾರಿಸಿಕೊಂಡು ಮುನ್ನಡೆಯಲು (ಸಮಾಜವಾದಿ ಹಿನ್ನೆಲೆಯಲ್ಲಿ ರೂಪುತಳೆದ) ಯೋಜನಾ ಬದ್ಧ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯಗತ್ಯ ಎನ್ನುವುದು ನೆಹರೂ ಚಿಂತನೆಯಾಗಿತ್ತು. ಮಾರ್ಕ್ಸ್ ವಾದಿ ಚಿಂತನೆ ಅದರಲ್ಲಿಯೂ ಸೋವಿಯತ್ ಮಾದರಿಯ ಅಭಿವೃದ್ಧಿ ನೀತಿಗಳು ಮತ್ತು ಗಾಂಧೀಜಿಯವರ ಚಿಂತನೆಗಳ ಪ್ರಭಾವ ನೆಹರೂ ಅವರ ಮೇಲೆ ಬಹಳ ಗಾಢವಾದ ಪರಿಣಾಮವನ್ನು ಬೀರಿದ್ದುವು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹ ಪ್ರಭಾವಗಳ ಹೊಡೆತಕ್ಕೆ ನೆಹರೂ ಚಿಂತನೆ ಎಲ್ಲೂ ಕೊಚ್ಚಿ ಹೋಗಿಲ್ಲ. ಇಂತಹ ಪ್ರಭಾವಗಳನ್ನು ಅಥವಾ ಸೋವಿಯತ್ ಅಭಿವೃದ್ಧಿ ಮಾದರಿ ಮತ್ತು ಗಾಂಧೀಜಿಯವರ ರಾಮರಾಜ್ಯದ ಆಶಯಗಳನ್ನು ತನ್ನದೇ ಆದ ರೀತಿಯಲ್ಲಿ ಗ್ರಹಿಸುವ ಮೂಲಕ ಭಾರತಕ್ಕೊಂದು ಯೋಜನಾ ಬದ್ಧ ಅಭಿವೃದ್ಧಿ ನೀತಿಯನ್ನು ನೆಹರೂ ಸಿದ್ಧಗೊಳಿಸಿದರು. ಸಾಕಷ್ಟು ವೈರುಧ್ಯಗಳಿರುವ, ಅಥವಾ ಪರಂಪರೆಯ ಭಾರವನ್ನು ಹೆಗಲಮೇಲೆ ಹೊತ್ತಿರುವ ಭಾರತೀಯ ವ್ಯವಸ್ಥೆಯಲ್ಲಿ ಇಂತಹ ಅಭಿವೃದ್ಧಿ ಯೋಜನೆಯ ಅನುಷ್ಠಾನ ವಾಸ್ತವದಲ್ಲಿ ಹಲವಾರು ವಿಕಲ್ಪಗಳಿಗೆ ದಾರಿ ಮಾಡಿಕೊಟ್ಟಿರಬಹುದು. ಆದರೆ ಇಂತಹ ಅಭಿವೃದ್ಧಿ ನೀತಿಯನ್ನು ರೂಪಿಸುವುದರ ಹಿಂದಿದ್ದ ದೂರದೃಷ್ಟಿ ಮತ್ತು ದೇಶದ ಜನರ ಬದುಕನ್ನು ಸುಧಾರಿಸಬೇಕೆನ್ನುವ ಆಂತರಿಕ ತುಡಿತ ಒಂದು ರೀತಿಯಲ್ಲಿ ಬಹಳ ನಿಷ್ಕಲ್ಮಷವಾದದ್ದೆಂದೇ ಹೇಳಬಹುದು.

ಜಾಗತಿಕ ಮಟ್ಟದಲ್ಲಿ ಭಾರತದಂತಹ ಸ್ವತಂತ್ರ ರಾಷ್ಟ್ರಗಳು ನೆಮ್ಮದಿಯಿಂದ ಬದುಕಲು ಅಗತ್ಯವಾದ ಅಂತಾರಾಷ್ಟ್ರೀಯ ಭೂಮಿಕೆಯೊಂದರ ಅಗತ್ಯವನ್ನು ನೆಹರೂ ಮನಗಂಡಿದ್ದರು. ಬಹಳಷ್ಟು ಕಾಲ ವಸಾಹತು ಆಡಳಿತದ ಕಪಿಮುಷ್ಟಿಯಲ್ಲಿ ಸಿಲುಕಿ ಮುಕ್ತವಾದ ರಾಷ್ಟ್ರಗಳು ಮತ್ತೆ ಅಂತಹ ಯಾವ ದಾಸ್ಯಕ್ಕೂ ಒಳಗಾಗಬಾರದು ಎನ್ನುವ ರಾಜಕೀಯ ಸೂಕ್ಷ್ಮ ಬಹುಶಹ ನೆಹರೂ ಅವರಿಗಲ್ಲದೇ ಬೇರೆ ಯಾರಿಗೂ ಹೊಳೆದಿರಲಿಲ್ಲ ಎನ್ನಬಹುದೇನೋ? ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟಗಳಿಂದ ಸಮಾನ ದೂರವನ್ನು ಕಾಯ್ದುಕೊಂಡಿರುವುದರ ಜೊತೆಗೆ ದೇಶದ ಆಂತರಿಕ ವಿಷಯಗಳ್ಲಿ ಯಾರಿಗೂ ಮೂಗು ತೂರಿಸುವ ಅವಕಾಶವಿರದ ರೀತಿಯಲ್ಲಿ ದೇಶವನ್ನು ಮುನ್ನಡೆಸಿದ ರಾಜಕೀಯ ಮುತ್ಸದ್ದಿಯಾಗಿ ಕೂಡಾ ನಾವು ನೆಹರೂ ಅವರನ್ನು ಅರ್ಥ ಮಾಡಿಕೊಳ್ಳಬಹುದು. ಬಾಹ್ಯ ಶಕ್ತಿಗಳು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತಿರಬೇಕಾದರೆ ದೇಶದ ಅರ್ಥವ್ಯವಸ್ಥೆಯನ್ನು ಸ್ವಾವಲಂಬಿಯೂ, ಸಮರ್ಥವೂ ಆದ ರೀತಿಯಲ್ಲಿ ಕಟ್ಟಬೇಕಿತ್ತು. ಈ ಉದ್ದೇಶದಿಂದಲೇ ನೆಹರೂ ಆಧುನಿಕ ಕೈಗಾರಿಕೆಗಳು ನವಭಾರತದ ದೇಗುಲಗಳು ಎಂದು ಹೇಳಿರಬಹುದು. ಬೃಹತ್ ಉದ್ದಿಮೆಗಳನ್ನು ಸರಕಾರದ ಒಡೆತನದಲ್ಲಿ ಪ್ರಾರಂಭಿಸುವುದರೊಂಗೇನೆ ಖಾಸಗಿ ಉದ್ಯಮಶೀಲತೆಯ ಬೆಳವಣಿಗೆಗೆ ಖಾಸಗಿ ವಲಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಉತ್ತೇಜನ ನೀಡಲಾಯಿತು. ಅಲಿಪ್ತ ಚಳವಳಿಗೆ ಬಲ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟವನ್ನು ಬಲಗೊಳಿಸುವುದರ ಹಿಂದೆಯೂ ಬಹಳ ಬುದ್ಧಿವಂತಿಕೆಯ, ದೂರಾಲೋಚನೆಯ ಚಿಂತನೆ ಇದೆ. ಅದರೊಂದಿಗೆ ದೀರ್ಘಾವಧಿಯಲ್ಲಿ ದೇಶ ಸ್ವಂತ ಬಲದ ಮೇಲೆ ನಿಲ್ಲುವಂತೆ ಮಾಡಲು ಆಂತರಿಕವಾಗಿ ‘ಕೃಷಿ’ ಮತ್ತು ಉದ್ಯಮ ರಂಗದ ಬೆಳವಣಿಗೆಗೆ ಸೂಕ್ತ ಬುನಾದಿಯನ್ನು ನಿರ್ಮಿಸಲಾಯಿತು. ಒಟ್ಟಾರೆಯಾಗಿ ಈ ಎಲ್ಲ ಸಾಧನೆಗಳು ದೇಶದ ಜನರಿಗೆ ಒಂದು ರೀತಿಯ ನೈತಿನ ಸ್ಥೈರ್ಯವನ್ನು, ಆತ್ಮ ವಿಶ್ವಾಸವನ್ನು ಉಂಟುಮಾಡಿದ್ದು ಸುಳ್ಳೇನಲ್ಲ. ಎರಡು ಶತಮಾನಗಳಿಗೂ ಅಧಿಕ ಕಾಲ ವಸಾಹತುಶಾಹಿಯ ನೆರಳಿನಲ್ಲಿದ್ದ ಸಮಾಜವೊಂದನ್ನು ಮುನ್ನಡೆಸಲು ದೇಶದ ಮೊದಲ ಪ್ರಧಾನಿ ಮಾಡಿದ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯವೇ.

ಬಹುಮುಖಿ ಸಂಸ್ಕೃತಿ ಮತ್ತು ರಾಷ್ಟ್ರೀಯ ಅಭಿವೃದ್ಧಿ

ರಾಷ್ಟ್ರ ನಿರ್ವಚನೆಯ ವಿವಿಧ ಹಂತದಲ್ಲಿ ‘ರಾಷ್ಟ್ರದ ಕಲ್ಪನೆ’ ವಸಾಹತುಶಾಹಿಗಳು ನಡೆಸಿದ ಹುನ್ನಾರಕ್ಕೆ ಬಲಿಯಾಗಿ ಒಂದು ನಿರ್ದಿಷ್ಟ ರೂಪದಲ್ಲಿ ವ್ಯಾಖ್ಯಾನಿತವಾಯಿತು. ಇಂತಹ ರಾಷ್ಟ್ರದ ಪರಿಕಲ್ಪನೆಯಲ್ಲಿ ಆಧುನಿಕತೆಗೆ ಬಹುಬೇಗ ಸ್ಪಂಧಿಸಿದ ಬಹುಮುಖೀ ಸಂಸ್ಕೃತಿಯ ಒಂದು ಪದರಕ್ಕೆ ಸೇರಿದ ಜನವರ್ಗದ ಅಭಿಪ್ರಾಯ, ಆಸಕ್ತಿಗಳು ಇಡೀ ದೇಶದ ಅಭಿಪ್ರಾಯ ಆಸಕ್ತಿಗಳು ಕೂಡಾ ಎನ್ನುವ ರೀತಿಯ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳಣಿಗೆಗಳಾದುವು. ಗಾಂಧೀಜಿಯವರ ರಾಜಕೀಯ ರಂಗಪ್ರವೇಶದ ನಂತರ ಇಂತಹ ಒಂದು ಮಿತಿಯನ್ನು ದಾಟಿ ರಾಷ್ಟ್ರೀಯತೆ ಕಲ್ಪನೆ ವಿಸ್ತಾರವಾಗುತ್ತಾ ಹೋಯಿತ. ಇದರ ಪರಿಣಾಮಗಳಿಂದಾಯಿತು. ಸ್ವಾತಂತ್ರ್ಯ ಪಡೆದ ನಂತರವೂ ಈ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ರಾಜಕೀಯ ಸ್ವಾತಂತ್ರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಮತ್ತು ಆರ್ಥಿಕ ಅಭಿವೃದ್ಧಿಯ ಫಲದಲ್ಲಿ ಪಾಲು ಪಡೆಯುವ ಹಕ್ಕು ಎಲ್ಲ ವರ್ಗದ ಜನರಿಗೆ ದೊರಕಿಸಿಕೊಡುವುದು ಅಗತ್ಯವಾಗಿತ್ತು. ಇದು ಸ್ವಾತಂತ್ರ್ಯ ಭಾರತದ ರಾಜೀಯ ನಾಯಕತ್ವದ ಮುಂದಿದ್ದ ಬಹಳ ದೊಡ್ಡ ಸವಾಲುಗಳಲ್ಲಿ ಒಂದಾಗಿತ್ತು. ಇಂತಹ ಸಂಕೀರ್ಣ ವಿಷಯಗಳ ಬಗ್ಗೆ ನೆಹರೂ ನಾಯಕತ್ವದ ಸರಕಾರ ಸಕಾರಣವಾಗಿ ಸ್ಪಂಧಿಸಿರುವುದು ಒಂದು ಮಹತ್ವಪೂರ್ಣ ಸಂಗತಿಯೇ ಸರಿ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಮಹಿಳೆಯರು, ದಲಿತರು, ಆದಿವಾಸಿಗಳು ಹೀಗೆ ಬಹಭಾಷೆಯ, ಬಹು ಸಂಸ್ಕೃತಿಯ ಜನ ಸಮುದಾಯ ಪಾಲ್ಗೊಳ್ಳುವ ಅವಕಾಶ ಉಂಟುಮಾಡಿರುವುದರ ಬಗೆಗೆ ಕೆಲವೊಂದು ವಿಚಾರಗಳನ್ನು ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ.

ದೇಶ ಸ್ವಾತಂತ್ರ್ಯವಾದ ನಂತರದ ದಿನಗಳಲ್ಲಿ ಬಹುಭಾಷೆಯ, ಬಹು ಸಂಸ್ಕೃತಿಯ ಜನರ ಮನದಲ್ಲಿ ನಾವೊಂದು ದೇಶಕ್ಕೆ ಸೇರಿದವರು ಎನ್ನುವ ಭಾವನೆಯನ್ನು ಬೆಳೆಸುವ ದಿಸೆಯಲ್ಲಿ ನೆಹರೂ ಅವರ ಪರಿಶ್ರಮವಿದೆ. ದೇಶದ ಸಮಗ್ರತೆಗೆ ಧಕ್ಕೆಯುಂಟಾಗುವಂತಹ ಸನ್ನಿವೇಶಗಳು ಎದುರಾದಾಗ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ನೆಹರೂ ಎಡವಲಿಲ್ಲ. ಕಾಶ್ಮೀರದ ವಿಷಯದಲ್ಲಿ ನೆಹರೂ ನಿರ್ಧಾರ ಸರಿಯಾಗಿಲ್ಲವೆನ್ನುವ ಟೀಕಾಕಾರರ ಮಾತಿನಲ್ಲಿಯೂ ಹುರುಳಿಲ್ಲವೆಂದೇ ಹೇಳಬಹುದು. ಯಾಕೆಂದರೆ ಅಂದಿನ ಚಾರಿತ್ರಿಕ ಕಾಲಘಟ್ಟದಲ್ಲಿ ಯಾವ ರಾಜಕೀಯ ಮುತ್ಸದ್ದಿಯೂ, ನೆಹರೂ ನಿರ್ಧಾರಕ್ಕಿಂತ ಭಿನ್ನವಾದ ನಿಲುವು ತಳೆಯುವುದು ಸಾಧ್ಯವಿರಲಿಲ್ಲವೆನ್ನುವುದು ಸರಳ ಸತ್ಯ. ೨೧ನೇ ಶತಮಾನದಲ್ಲಿ ನಿಂತು ೧೯೪೭ರ ನಿರ್ಧಾರವನ್ನು ವಿಮರ್ಶೆ ಮಾಡುವುದು ಸಾಧುವಲ್ಲವೆಂದೇ ಹೇಳಬಹುದು. ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಂಡು ಸದೃಢ ರಾಷ್ಟ್ರವಾಗಿ ಭಾರತವನ್ನು ಬೆಳೆಸಲು ನೆಹರೂ ಅನುಸರಿಸಿದ ಪಂಚವಾರ್ಷಿಕ ಯೋಜನೆಯನ್ನು ಆಧರಿಸಿದ ಅಭಿವೃದ್ಧಿ ನೀತಿ ಪ್ರಶಂಸಾರ್ಹವಾದದ್ದು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶದ ಒಳಗೆ ಮತ್ತು ಹೊರಗಿನ ಆಗುಹೋಗುಗಳನ್ನು ಗಮನಿಸಿದಾಗ, ಸವಾಲುಗಳನ್ನು ಎದುರಿಸಿ ಬೆಳೆಯಲು ಸರಕಾರದ ನಿಯಂತ್ರಣದ ಮೂಲಕ ಸಾಮಾಜಿಕ ಆರ್ಥಿಕ ಬದಲಾವಣೆಯನ್ನು ತರುವುದು ಅತ್ಯಂತ ಅಪೇಕ್ಷಣೀಯವಾದ ಕ್ರಮವಾಗಿತ್ತು ಮತ್ತು ಇಂತಹ ನಿಟ್ಟಿನಲ್ಲಿ ದೃಢವಾಗಿ ಮುನ್ನಡೆಯುವ ಮೂಲಕ ಒಂದು ರೀತಿಯ ರಾಜಕೀಯ ಸ್ಥಿರತೆಗೆ ಮತ್ತು ಆರ್ಥಿಕ ಪ್ರಗತಿಗೆ ನಾಂದಿ ಹಾಡಿದಂತಾಯಿತು. “ನಾವು ಒಂದು ಅಪಾಯಕಾರಿ ಸನ್ನಿವೇಶದಲ್ಲಿದ್ದೇವೆ, ಇಂತಹ ಪರಿಸ್ಥಿತಿಯನ್ನು ದಾಟಿ ಮುನ್ನಡೆಯ ಬೇಕಿದ್ದರೆ ನಾವು ಸದೃಢವಾಗಿರುವುದು ಮತ್ತು ಒಗ್ಗಟ್ಟಾಗಿರುವುದು ಅಗತ್ಯ ಮತ್ತು ಅನಿವಾರ್ಯ” ಎನ್ನುವ ನೆಹರೂ ಅವರ ಅಭಿಪ್ರಾಯವೂ ಇದನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ.

ರಾಷ್ಟ್ರೀಯ ಮಟ್ಟದಲ್ಲಿ ಪ್ರಸರಿಸಿದ ಸ್ವಾತಂತ್ರ್ಯ ಚಳವಳಿಯ ಪರಂಪರೆಯನ್ನು ನೆಹರೂ ಸ್ವಾತಂತ್ರ್ಯಾನಂತರ ದಿನಗಳಲ್ಲಿಯೂ ಉಳಿಸಿಕೊಂಡು, ಅದರ ಮಹತ್ವ ಜನರಿಗೆ ತಿಳಿಯುವಂತೆ ಮಾಡಿರುವುದು ಕೂಡಾ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಹೆಜ್ಜೆ ಎಂದೇ ಹೇಳಬಹುದು. ಆನಂತರ ನಡೆದ ಮೂರು ಸಾರ್ವಜನಿಕ ಚುನಾವಣೆಗಳಲ್ಲಿ ಭಾಗವಹಿಸಿದ ನೆಹರೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಹತ್ವ ತಂದುಕೊಟ್ಟರು. ನಮ್ಮ ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನದಲ್ಲಿ ಇಂದಿಗೂ ಚುನಾವಣೆಗಳು ಸೂಕ್ತರೀತಿಯಲ್ಲಿ ನಡೆಯುತ್ತಿಲ್ಲ. ಅಲ್ಲಿನ ರಾಜಕೀಯದ ಮೇಲೆ ಮತೀಯವಾದಿಗಳ ಮತ್ತು ಮಿಲಿಟರಿಯ ಹಿಡಿತವನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಪ್ರಬುದ್ಧವಾಗಿದೆ. ಇಂತಹ ಬೆಳವಣಿಗೆಗೆ ನಮ್ಮ ರಾಜಕೀಯ ನಾಯಕರ ಅದರಲ್ಲಿಯೂ ನಂತರದ ದಿನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಹಿರಿಯ ಕಾಂಗ್ರೆಸ್ ನಾಯಕರ ಅನನ್ಯವಾದ ಅನುಭವ ಮತ್ತು ದೂರದರ್ಶಿತ್ವದ ಫಲವಾಗಿದೆ. ಚುನಾವಣಾ ರಾಜಕೀಯ, ಪ್ರಜಾಪ್ರಭುತ್ವದ ಮೌಲ್ಯಗಳು ನಿರಂತರವಾಗಿ ಚಲಾವಣೆಯಲ್ಲಿದ್ದಾಗ ಮಾತ್ರ ಪೂರ್ಣ ಸ್ವರಾಜ್ಯದ ಬಗ್ಗೆ ಯೋಚಿಸಬಹುದೇ ಹೊರತು ಇಲ್ಲವಾದಲ್ಲಿ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ. ಯಾವ ಬೆಲೆಯನ್ನು ತೆತ್ತಾದರೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎನ್ನುವುದು ನೆಹರೂ ಪ್ರತಿಪಾದನೆಯಾಗಿತ್ತು. ನೆಹರೂ ನಾಯಕತ್ವದ ಮೇಲೆ ದೇಶದ ಜನ ಅಗಾಧ ವಿಶ್ವಾ ವ್ಯಕ್ತಪಡಿಸಿದಾಗಲೂ ನೆಹರೂ ಈ ನಂಬಿಕೆಯನ್ನು ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ.[3] ಸದ್ಯದ ಪರಿಸ್ಥಿತಿಯಲ್ಲಿ ಜಾತಿ, ಧರ್ಮ, ಪ್ರಾದೇಶಿಕತೆಯಂತಹ ಸೂಕ್ಷ್ಮ ವಿಚಾರಗಳ ಮೂಲಕ ಜನರನ್ನು ಭಾವೋದ್ವೇಗಕ್ಕೆ ಒಳಪಡಿಸಿ ಸರಕಾರಿ ಖಜಾನೆಯ ಕೀಲಿಕೈ ಪಡೆಯಲು ರಾಜಕೀಯ ಪಕ್ಷಗಳು ಅನುಸರಿಸುವ ಕಾರ್ಯತಂತ್ರವನ್ನು ನೋಡಿದರೆ ನೆಹರೂ ಯುಗದ ಹಿರಿಮೆಯ ಬಗ್ಗೆ ಹೆಮ್ಮೆ ಮೂಡಿದರೆ ಆಶ್ವರ್ಯವಿಲ್ಲ. ಅಧಿಕಾರ ರಾಜಕೀಯ ನಾಯಕರನ್ನು ಭ್ರಷ್ಟರಾಗಿಸುತ್ತದೆ ಎನ್ನುವ ಮಾತಿಗೆ ನೆಹರೂ ಅಪವಾದವಾಗುಳಿದರು ಮಾತ್ರವಲ್ಲ. ರಾಜಕೀಯ ಅಧಿಕಾರವನ್ನು ದೇಶದಲ್ಲಿ ಜಾತ್ಯಾತೀತತೆ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಯೋಜನೆಗಳ ಜಾರಿಗೆ ಬಳಸುವ ಮೂಲಕ ದೇಶಕ್ಕೆ ಒಂದು ಉತ್ತಮ ಭವಿಷ್ಯ ನಿರ್ಮಿಸಲು ಶ್ರಮಿಸಿದರು. ಪ್ರಜಾಪ್ರಭುತ್ವ ಪಠಗಳನ್ನು ದೇಶದಲ್ಲಿ ಮತ್ತು ತಾನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ನಲ್ಲಿಯೂ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದನ್ನೂ ತಿಳಿಯಬಹುದು. ಮಾತ್ರವಲ್ಲ ಸ್ವತಂತ್ರ ನ್ಯಾಯಾಂಗ, ನಿರ್ಭೀತ ಪತ್ರಿಕೋದ್ಯಮ ಪ್ರಜಾಪ್ರಬೂತ್ವ ವ್ಯವಸ್ಥೆ ಅಗತ್ಯವೆಂದು ನಂಬಿದ್ದ ನೆಹರೂ ಅಂತಹ ತಿಳುವಳಿಕೆಯನ್ನು ಸಮಾಜದ ಸರ್ವಸ್ತರಗಳಲ್ಲಿಯೂ ಮೂಡುವಂತೆ ಯತ್ನಿಸಿರುವುದನ್ನು ಅವರ ಮಾತು ಮತ್ತು ಅವರ ಕಾರ್ಯಕ್ರಮಗಳಿಂದ ನಾವು ತಿಳಿದುಕೊಳ್ಳಬಹುದಾಗಿದೆ. ಈ ದೇಶದ ಜನ ಸಾಮಾನ್ಯರ ಬಗ್ಗೆ ನೆಹರೂ ಅವರಿಗಿದ್ದ ಗೌರವ, “ಈ ದೇಶದ ಜನಸಾಮಾನ್ಯರ ತಿಳುವಳಿಕೆಯೇ ನನ್ನ ಧರ್ಮ”[4] ಎನ್ನುವ ಮಾತಿನಲ್ಲಿ ವ್ಯಕ್ತವಾಗಿದೆ. “ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವದ ಬೀಜಾಂಕುರವಾಗಿ ಅದು ಹೆಮ್ಮರವಾಗಿ ಬೆಳೆಯಬೇಕು. ಸದ್ಯಕ್ಕೆ ಪ್ರಜಾಪ್ರಭುತ್ವ ನಮ್ಮ ಸಮಾಜದಲ್ಲಿ ಈಗಷ್ಟೆ ಬೇರೂರಿದ ಸಣ್ಣ ಗಿಡವಾಗಿದ್ದು ನಮ್ಮ ವಿವೇಷನೆ ಮತ್ತು ಬುದ್ಧಿವಂತಿಕೆಯಿಂದ ಅದನ್ನು ಜತನದಿಂದ ಕಾಪಾಡಬೇಕಾಗಿದೆ. ಆದಾಗ್ಯೂ ನಮ್ಮ ದೇಶದ ಜನರು ತಮ್ಮನ್ನು ತಾವು ಆಳಿಕೊಳ್ಳುವಷ್ಟು ಪ್ರಬುದ್ಧರು” ಎನ್ನುವ ನೆಹರೂ ಅವರ ಅಭಿಪ್ರಾಯ ಇಂದಿನ ರಾಜಕೀಯ ನಾಯಕರ ಚುನಾವಣಾ ಉದ್ದೇಶದಿಂದ ನೀಡಿದ ಹೇಳಿಕೆಯಂತಲ್ಲ. ಬದಲಿಗೆ ರಾಜಕೀಯ ಮುತ್ಸದ್ದಿಯೋರ್ವನ, ದೇಶದ ಬಗ್ಗೆ, ದೇಶದ ಜನರ ಬಗ್ಗೆ ನಂಬಿಕೆ ಗೌರವಗಳಿರುವ ಮಾನವೀಯ ಕಾಳಜಿಗೆ ಇರುವ ದಾಶನಿಕನ ಮಾತಿನಂತಿದೆ.

ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲ ಸಾಂಸ್ಥಿಕ ವ್ಯವಸ್ಥೆಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ನಿರೂಪಿತವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ತನ್ಮೂಲಕ ಬೆಳೆಯಬೇಕು ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಈ ಕಾರಣದಿಂದಾಗಿಯೇ, ಸಹಕಾರಿ ಸಂಸ್ಥೆಗಳು, ಪಂಚಾಯತ್‌ ರಾಜ್ ವ್ಯವಸ್ಥೆ ಮತ್ತು ಸಮುದಾಯದ ಅಭಿವೃದ್ಧಿ ಯೋಜನೆಯಂತಹ ವಿಷಯಗಳು ನೆಹರೂ ಅವರಿಗೆ ಪ್ರಿಯವಾಗಿದ್ದುವು. ಭಾರತದಂತಹ ಬಹುಮುಖಿ ಸಂಸ್ಕೃತಿಯಿರುವ ನಾಡಿನಲ್ಲಿ ಈ ರೀತಿಯ ವಿಕೇಂದ್ರೀಕರಣ ಬಹಳ ಮುಖ್ಯ, ಮಾತ್ರವಲ್ಲ ಬಲವಂತದಿಂದ ಏಕಶಿಲಾ ಮಾದರಿಯ ಕ್ರಮಗಳನ್ನು ಮೇಲಿನಿಂದ ಹೇರಿದರೆ ಒಡಕುಗಳು ಮತ್ತು ಹಿಂಸಾಚಾರಕ್ಕೂ ದಾರಿಯಾದೀತೆನ್ನುವ ನೆಹರೂ ಅವರ ಮಾತು ಇಂದಿಗೂ ಪ್ರಸ್ತುತವೇ ಆಗುಳಿದಿದೆ. ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಕೂಡಾ ನೆಹರೂ ಚಿಂತನೆ ಇದಕ್ಕಿಂತ ಭಿನ್ನವಾಗಿರಲಿಲ್ಲ. ಯೋಜನಾಬದ್ಧ ಕ್ರಮದಿಂದ ನಾವು ಅಭಿವೃದ್ಧಿಯನ್ನು ಶೀಘ್ರವಾಗಿ ಸಾಧಿಸಲು ಕಷ್ಟಕರವಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆಗೆ ಇದು ಸಾರ್ಥಕ ನೆಪವಾಗುವುದರಲ್ಲಿ ಅನುಮಾನವಿಲ್ಲ ಎನ್ನುವ ಅವರ ನಂಬಿಕೆ ಸರಿಯಾದದ್ದೇ ಆಗಿದೆ. ಎಲ್ಲ ಚಿಂತನೆಗಳನ್ನು ಹೃದಯದಿಂದ ಮಾಡದೇ ಬುದ್ಧಿಯಿಂದ ಮಾಡುವ ಮೂಲಕ ಅಂಧಶ್ರದ್ಧೆ, ಮೂಢನಂಬಕೆಗಳಿಂದ ದೂರ ಉಳಿದು ಎಲ್ಲ ವಿಚಾರಗಳ ಒಳಿತು, ಕೆಡುಕು, ಗುಣಾವಗುಣಗಳ ವಿವೇಚನೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುವ ನೆಹರೂ ಸ್ವಭಾವ ಆದರ್ಶಪ್ರಾಯವೆಂದೇ ಹೇಳಬಹುದು.

ಪಂಚವಾರ್ಷಿಕ ಯೋಜನೆ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿ

ಬಂಡವಾಳ ಆಧಾರಿತ ಅಭಿವೃದ್ಧಿ ಮಾದರಿಯ ವಿಶ್ವವ್ಯವಸ್ಥೆಯ ಒಂದು ಭಾಗವಾಗಿ ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭಾರತೀಯ ಅರ್ಥವ್ಯವಸ್ಥೆಯನ್ನು, ಸಂಪೂರ್ಣ ಬೇರ್ಪಡಿಸಿ ಹೊಸ ದಿಕ್ಕಿನಲ್ಲಿ ನಡೆಸುವುದು ಹೆಚ್ಚು ಕಡಿಮೆ ಅಸಾಧ್ಯವಾದ ವಿಷಯವಾಗಿತ್ತು. ದೇಶ ಸ್ವತಂತ್ರ್ಯ ಪಡೆದ ನಂತರ ಕೂಡಾ ನಮಗಿಷ್ಟವಾದ ಅಭಿವೃದ್ಧಿ ಮಾದರಿಯನ್ನು ಆಯ್ಕೆ ಮಾಡುವ ‘ತಾತ್ವಿಕ’ ಆಯ್ಕೆ ನಮ್ಮ ಮುಂದಿದ್ದರೂ, ವಾಸ್ತವಿಕವಾಗಿ ಮತ್ತು ಪ್ರಾಯೋಗಿಕವಾಗಿ ಇದು ಅಸಾಧ್ಯವಾಗಿತ್ತು. ಅಂದಿನ ಪರಿಸ್ಥಿತಿಯಲ್ಲಿ ವಸಾಹತುಶಾಹಿ, ಸಾಮ್ರಾಜ್ಯಶಾಹಿ ಶಕ್ತಿಗಳು ವಿಶ್ವದ ಇತರ ಬಡದೇಶಗಳ ಶ್ರಮದಿಂದ ಕಟ್ಟಿದ ಬಂಡವಾಳಶಾಹಿ ವ್ಯವಸ್ಥೆಗಿಂತ ತನ್ನ ಜನರ ಬೆವರಿನಿಂದ ಕಟ್ಟಿದ ಸಮಾಜವಾದಿ ಮಾದರಿ ನೆಹರೂ ಅವರಿಗೆ ಹಿಡಿಸಿತು. ಹಾಗಂತ ಅವರು ಇರಲಿಲ್ಲ. ಬಂಡವಾಳ ಆಧಾರಿತ ಉತ್ಪಾದನಾ ಕ್ರಮಗಳನ್ನು ಅದನ್ನು ಆಧರಿಸಿದ ಉದ್ಯಮಪತಿಗಳ ಕೊಡುಗೆ ಮತ್ತು ಆಸಕ್ತಿಯನ್ನು ಸಂಪೂರ್ಣ ಕಡೆಗಣಿಸುವ ಸ್ಥಿತಿಯಲ್ಲಿ ನೆಹರೂ ಅವರು ಇರಲಿಲ್ಲ. ಬಂಡವಾಳ ಆಧಾರಿತ ಉತ್ಪಾದನಾ ಕ್ರಮಗಳನ್ನು ಪೋಷಿಸುವ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ಶುಚಿಗೊಳಿಸುವುದು ಎಂದರೆ ದೊಡ್ಡ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಂತೆಯೇ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಮಗ್ಗುಲಿನಿಂದ ನೋಡಿದರೂ ವಿಶ್ವ ಆರ್ಥಿಕ ನೀತಿಯ ಆಯ್ಕೆ ಅಂದಿನ ಅಗತ್ಯ ಮತ್ತು ಅನಿವಾರ್ಯತೆ ಕೂಡಾ ಆಗಿತ್ತು.

ಅಭಿವೃದ್ಧಿ ಮಾದರಿಯನ್ನು ಆಯ್ಕೆ ಮಾಡುವ ಸಮಯದಲ್ಲಿ ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ಬದಿಗಿರಿಸಿ, ಭಾರತದ ಒಳಗೆ ಮತ್ತು ಹೊರಗೆ ಇದ್ದ ಪರಿಸ್ಥಿತಿಯನ್ನು ಗಮನಿಸಿ ನೆಹರೂ ಒಂದು ನಿರ್ಧಾರಕ್ಕೆ ಬಂದಿದ್ದರು. ಬಂಡವಾಳ ಕೇಂದ್ರಿತ ಅಭಿವೃದ್ಧಿಯನ್ನು ನೆಹರೂ ಎಂದೂ ಒಪ್ಪಿಕೊಳ್ಳಲಿಲ್ಲ. ಇಂತಹ ಅಭಿವೃದ್ಧಿಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎನ್ನುವ ತಿಳುವಳಿಕೆಗೆ ಬದ್ಧರಾಗಿದ್ದ ನೆಹರೂ ಸಮಾಜವಾದಿ ಚಿಂತನೆಗಳ ಬಗ್ಗೆ ಒಲವಿದ್ದ ನಾಯಕರು, ಕಾಂಗ್ರೆಸ್ ಪಕ್ಷದೊಳಗಿದ್ದ ಸಮಾಜವಾದಿ ಗುಂಪಿನ ಪ್ರತಿನಿಧಿಯಾಗಿದ್ದ ನೆಹರೂ ತಮ್ಮ ಜೀವನದುದ್ದಕ್ಕೂ ಈ ಮೂಲ ತಿಳುವಳಿಕೆಗಿಂದ ದೂರ ಸರಿಯಲಿಲ್ಲ. ಸಮಾಜವಾದಿ ಸಿದ್ಧಾಂತಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಅನುಷ್ಠಾನಗೊಳಿಸುವ ಮೂಲಕ ಸಾಮಾಜಿಕ ಪರಿವರ್ತನೆ ಮತ್ತು ಆರ್ಥಿಕ ಸುಧಾರಣೆ ತರುವ ನೆಹರೂ ಉದ್ದೇಶಗಳು ಸಂಪೂರ್ಣ ಸಫಲವಾಗದಿರಬಹುದು. ಆದರೆ ಜನಮಾನಸದಲ್ಲಿ ಸಮಾಜವಾದಿ ಚಿಂತನೆಯ ಕುರಿತಂತೆ ಸುಧಾರಣಾವಾದಿ ಮನೋಭಾವವನ್ನು ಬೆಳೆಸುವಲ್ಲಿ ನೆಹರೂ ಯಶಸ್ವಿಯಾದರು ಎಂದು ಹೇಳಬಹುದು. ಸಮಾಜವಾದದ ಬಗ್ಗೆ ಸಮಾಜ ವಿಜ್ಞಾನಿಗಳಂತೆ ನಿಖರವಾದ ವ್ಯಾಖ್ಯಾನವನ್ನು ನೆಹರೂ ಎಂದೂ ಮಾಡಿದವರಲ್ಲ. ಸಮಾದವಾದ ಒಟ್ಟು ಆಶಯಗಳನ್ನು ಕೇಂದ್ರವಾಗಿರಿಸಿ ಸಮಾಜವಾದವೆನ್ನುವುದು ಸಮಾನತೆ ಮತ್ತು ಸಮಾನ ಅವಕಾಶಗಳು, ಸಮಾಜಿಕ ನ್ಯಾಯ, ವೈಜ್ಞಾನಿಕ ವಿಧಾನಗಳ ಮೂಲಕ ಸೃಷ್ಟಿಯಾದ ಸಂಪತ್ತಿನ ಸಮಾನ ಹಂಚಿಕೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ನಿವಾರಿಸುವುದು ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಇವೇ ಮುಂತಾದುವು ನೆಹರೂ ಪ್ರಣೀತ ಸಮಾಜವಾದವಾಗಿದೆ. ಮಾತ್ರವಲ್ಲದೆ ಸಂಪತ್ತಿನ ಸಂಚಯವೂ ಮನೋಭಾವನೆಯನ್ನು ನಿವಾರಿಸುವುದು, ಲಾಭಗಳಿಕೆಗೆ ಹೆಚ್ಚಿನ ಮಹತ್ವ ನೀಡದಿರುವುದು, ಸಹಕಾರ, ಸಹಬಾಳ್ವೆ, ಸಹಯೋಗವನ್ನು ಧ್ವಂಸ ಮಾಡುವ ರೀತಿಯ ಸ್ಪರ್ಧಾತ್ಮಕತೆಯನ್ನು ಪಡೆಯುವುದು ಮತ್ತು ದೀರ್ಘಾವಧಿಯಲ್ಲಿ ವರ್ಗ ಪ್ರಭೇದಗಳನ್ನು ನಿವಾರಿಸಿ, ನಿರ್ದಿಷ್ಟ ವರ್ಗದ ಯಜಮಾನಿಕೆಯನ್ನು ನಿವಾರಿಸುವುದು ಸಮಾಜವಾದದ ಉದ್ದೇಶವಾಗಬೇಕು. ಆದರೆ ಸಂಪತ್ತಿನ ಹಂಚಿಕೆಗಿಂತಲೂ ಮೊದಲು ಸಮುದಾಯದ ಸ್ವಾಮ್ಯತ್ವದಲ್ಲಿ ಸರಕಾರದ ನಿಯಂತ್ರಣದ ಮೂಲಕ ಉತ್ಪಾದನಾ ಪರಿಕರಗಳನ್ನು ಯೋಗ್ಯ ರೀತಿಯಲ್ಲಿ ದುಡಿಸಿಕೊಂಡು ಸಂಪತ್ತಿನ ಉತ್ಪಾದನೆಯಾಗಬೇಕಿದೆ. ಸಂಪತ್ತಿನ ಮರು ಹಂಚಿಕೆಯೂ ಸಮಾನ ಹಂಚಿಕೆಯ ಪ್ರಶ್ನೆಗಿಂತಲೂ ಮೊದಲು ಸಂಪತ್ತಿನ ಸೃಷ್ಟಿಯಾಗದಿದ್ದರೆ ಹಂಚಿಕೆ ಮಾಡುವುದು ಏನನ್ನು ಎನ್ನುವುದು ನೆಹರೂ ಎತ್ತಿದ ಪ್ರಶ್ನೆ. ಸಮಾಜವಾದಿ ಚಿಂತನೆಯ ನೆಲೆಗಟ್ಟಿನಲ್ಲಿ ರೂಪು ತಳೆಯುವ ಎಲ್ಲ ಯೋಜನೆಗಳು ಒಂದು ರೀತಿಯ ನಿರಂತರ ಪ್ರಕ್ರಿಯೆಯಾಗಿ ಮುಂದುವರಿಯಬೇಕು, ಬದಲಿಗೆ ಈ ಯೋಜನೆಗಳು ಬಿಡಿಬಿಡಿಯಾಗಿ ಘಟನೆಗಳಾಗಿ ರೂಪು ತೆಳೆದರೆ ಉಪಯೋಗವಿಲ್ಲ. ಸಮಾಜ ಪ್ರಗತಿ ಹೊಂದುತ್ತ ಹೋದಂತೆ ಸಮುದಾಯದ ಆದ್ಯತೆ, ಗತಿ ಮತ್ತು ವೇಗವನ್ನು ನಿರ್ಧರಿಸಬೇಕು. ಯಾವುದೇ ಕಾರಣಕ್ಕೂ ನಮ್ಮ ಯೋಜನೆಗಳು, ನಮ್ಮ ಚಿಂತನೆಯ ಚೌಕಟ್ಟು ಬೆಳವಣಿಗೆಗೆ ಪೂರಕವಾಗಿರಬೇಕೆ ಹೊರತು ಅಡ್ಡಿಯಾಗುವಂತಿರಬಾರದು ಎನ್ನುವುದು ನೆಹರೂ ಅವರ ನಂಬಿಕೆಯಾಗಿತ್ತು. ಒಟ್ಟಿನಲ್ಲಿ ಶಿಸ್ತುಬದ್ಧವಾದ ರೀತಿಯಲ್ಲಿ ಹಂತ ಹಂತವಾಗಿ ನಮ್ಮ ಯೋಜನೆಗಳು ಅನುಷ್ಠಾನಗೊಳ್ಳುತ್ತ, ಅನುಭವದ ಬೆಳಕಲ್ಲಿ ಪರಿಷ್ಕರಣೆ ಹೊಂದುತ್ತ ಪಾರಂಪರಿಕ ಸಮಾಜದ ದೋಷಗಳನ್ನು ನಿವಾರಿಸಿ ಸ್ವರೂಪಾತ್ಮಕವಾಗಿ ಬದಲಾವಣೆಯಾಗುತ್ತ ಮುನ್ನಡೆಯಬೇಕು. ಸಮಾಜವಾದಿ ಚಿಂತನೆಯ ಜೀವಧಾತುಗಳಾಗಿ ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜ ಕಾರ್ಯನಿರ್ವಹಿಸಬೇಕು. ಯಾವುದೇ ಅಭಿವೃದ್ಧಿ ಮತ್ತು ಬದಲಾವಣೆಯ ಬಗ್ಗೆ ಬಹು ಜನರ ಅಭಿಪ್ರಾಯ ಪ್ರಮುಖವಾಗಬೇಕು. ಬಹುಮತಕ್ಕೆ ತಲೆಬಾಗಿ ಅದರಂತೆ ಅಭಿವೃದ್ಧಿ ಕಾರ್ಯಗಳು ಮುಂದುವರಿಯಬೇಕೆ ಹೊರತು ಒತ್ತಾಯದಿಂದ ಯಾರ ಮೇಲೆ ಏನನ್ನೂ ಹೇರುವುದು ಸರಿಯಲ್ಲ. ಇಂತಹ ಅಭಿಪ್ರಾಯ ಸಹಮತ ಮೂಡುವುದು ಅಸಾಧ್ಯವಾದರೆ ತಡವಾದರೆ ತಾಳ್ಮೆ ವಹಿಸುವುದು ಅಗತ್ಯ. ಅಧಿಕಾರದಲ್ಲಿರುವವರು ಮತ್ತು ಸಮುದಾಯದ ಜನವರ್ಗ ಜೊತೆ ಜೊತೆಯಾಗಿ ಹೆಜ್ಜೆ ಹಾಕಬೇಕು. ಇಂತಹ ಒಂದು ಮಹತ್ಕಾರ್ಯದಲ್ಲಿ ಅಭಿವೃದ್ಧಿಯ ವೇಗ, ಬದಲಾವಣೆಯ ವೇಗ, ಕಡಿಮೆಯಾದರೂ ತಾಳ್ಮೆ ವಹಿಸಿ ದೇಶವನ್ನು ಮುನ್ನಡೆಸುವ ಸಂಯಮವಿರಬೇಕು. ರಾಜಕೀಯ ನಾಯಕತ್ವ ಸಮಸ್ಯೆಗೆ ಪ್ರತಿಸ್ಪಂದಿಸುವ ವೇಗದಲ್ಲಿ ಇಡೀ ಸಮುದಾಯ ಸ್ಪಂದಿಸುವುದು ಸಾಧ್ಯವಿಲ್ಲ. ಸಂಕೀರ್ಣ ಸಾಮಾಜಿಕ ವ್ಯವಸ್ಥೆ ಯಾವಾಗಲೂ ನಿಧಾನವಾಗಿ ಬದಲಾವಣೆಯನ್ನು ಹೊಂದುತ್ತದೆ ಎನ್ನುವ ಸೂಕ್ಷ್ಮಗಳನ್ನು ನಾವು ನೆಹರೂ ಚಿಂತನೆಯಲ್ಲಿ ಗುರುತಿಸಬಹುದು. ಸಾಮಾಜಿಕ ಸಹಮತದವಿಲ್ಲದೆ ಯಾವ ಯೋಜನೆಯನ್ನಾದರೂ ಬಲವಂತವಾಗಿ ಹೇರುವುದರಿಂದ ಆದಂತಹ ಅಪಾಯಗಳ ಬಗ್ಗೆ ಇತಿಹಾಸ ಕಲಿಸುವ ಪಾಠಗಳನ್ನು ಎಚ್ಚರದಿಂದ ಗಮನಿಸಬೇಕೆನ್ನುವ ನೆಹರೂ ಚಿಂತನೆ ರಾಜಕೀಯದ ಸೂಕ್ಷ್ಮ ಒಳನೋಟಗಳನ್ನು ನೀಡುತ್ತದೆ. ಸಾರ್ವಜನಿಕ ಚುನಾವಣೆಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದರೂ ತಮ್ಮ ಪಕ್ಷಕ್ಕೆ ಮತ ನೀಡಿದ ಮತದಾರರ ಒಟ್ಟು ಪ್ರತಿಶತ ಸಂಖ್ಯೆಯನ್ನು ಗಮನಿಸಿ ಒಟ್ಟು ಮತದಾರರಲ್ಲಿ ಬಹಳಷ್ಟು ಜನ ತಮ್ಮ ನಿಲುವಿಗೆ ಸಹಮತ ಹೊಂದಿಲ್ಲವೆನ್ನುವ ರಾಜಕೀಯ ಸೂಕ್ಷ್ಮ ನೆಹರೂ ತಿಳಿದುಕೊಂಡಿದ್ದರಿಂದ ನೆಹರೂ ಸ್ವತಂತ್ರ ಭಾರತ ಕಂಡ ರಾಜಕೀಯ ಮುತ್ಸದ್ದಿಯಾಗಿದ್ದಾರೆ. ಇಂತಹ ಸೂಕ್ಷ್ಮಗಳನ್ನು ಈ ರೀತಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸ್ಪಂದಿಸುವ ಗುಣಗಳನ್ನು ಎರಡನೆಯ ತಲೆಮಾರಿನ ನಾಯಕರಲ್ಲಿ ನಾವು ಕಾಣಲು ಸಾಧ್ಯವಾಗಿಲ್ಲ. ಇಂತಹ ರಾಜಕೀಯ ಸೂಕ್ಷ್ಮಗಳನ್ನು ನೆಹರೂ ಅವರ ದೊಡ್ಡ ದೌರ್ಬಲ್ಯವೆಂದು ಕೂಡಾ ಕರೆಯಲಾಗಿತ್ತು. ಆದರೆ ಬಹುಮುಖೀ ಸಂಸ್ಕೃತಿಯ ಈ ದೇಶದಲ್ಲಿ ಎಲ್ಲ ಸಮುದಾಯಗಳ ಭಾವನೆ ಅಭಿಪ್ರಾಯಗಳನ್ನು ಗೌರವಿಸುವುದು, ದೇಶದ ಒಳಿತನ್ನು ಕೇಂದ್ರವಾಗಿಸಿಕೊಂಡು ಸಹಮತಕ್ಕೆ ಬರುವ ಮೂಲಕವೇ ಮುನ್ನಡೆಯಬೇಕು ಎನ್ನುವುದು ನೆಹರೂ ಅವರ ಅಚಲ ವಿಶ್ವಾಸವಾಗಿತ್ತು. ಒತ್ತಡ, ಬಲಪ್ರಯೋಗದ ಮೂಲಕ ಮೂಡುವ ಸಹಮತ ಸಮಾಜದಲ್ಲಿ ಸ್ಫೋಟಕ ಸ್ಥಿತಿಯನ್ನು ಉಂಟುಮಾಡುವುದಲ್ಲದೆ ಅಸ್ಥಿರತೆಯನ್ನು ಹುಟ್ಟು ಹಾಕುತ್ತದೆ. ಗುರಿಯಷ್ಟೇ ದಾರಿಯೂ ಮುಖ್ಯ ಎನ್ನುವ ಗಾಂಧೀಜಿಯವರ ನಂಬಿಕೆಯನ್ನು ಹಂಚಿಕೊಂಡ ನೆಹರು ತಮ್ಮನ್ನು ಬಲಿಷ್ಠ ನಾಯಕನೆಂದು ಪರಿಗಣಿಸದಿದ್ದರೂ ಚಿಂತೆಯಿಲ್ಲ ದೇಶ ಬಲಿಷ್ಠವಾಗುಳಿದರೆ ಸಾಕು ಎನ್ನುವ ನಿಲುವಿಗೆ ಅಂಟಿಕೊಂಡವರು.

ಸೋವಿಯತ್ ದೇಶ ಯೋಜನಾ ಆಯೋಗದ ಮೂಲಕ ತಯಾರಿಸುವ ಅಭಿವೃದ್ಧಿಯ ನೀಲ ನಕ್ಷೆಯನ್ನು ಪಂಚವಾರ್ಷಿಕ ಯೋಜನೆಗಳ ಮೂಲಕ ಅನುಷ್ಠಾನಗೊಳಿಸಿ ಸಾಧಿಸಿದ ಪ್ರಗತಿಯಿಂದ ನೆಹರು ಗಾಢವಾಗಿ ಪ್ರಭಾವಿತರಾಗಿದ್ದರು. ಇಂತಹ ಪ್ರಭಾವ ಗಾಂಧೀಜಿಯವರ ಆರ್ಥಿಕ ಚಿಂತನೆಯನ್ನು ಒಪ್ಪಿಕೊಳ್ಳುವಲ್ಲಿಯೂ ನೆಹರೂ ಅವರಿಗೆ ತಡೆಯಾಗಿದೆಯೇನೊ ಎನ್ನುವ ಸಂಶಯ ಮೂಡುವಷ್ಟು ದಟ್ಟವಾಗಿದೆ. ಪಶ್ಚಿಮದ ದೇಶಗಳ ಅಭಿವೃದ್ಧಿಯನ್ನು ಅಥವಾ ಆಧುನಿಕತೆಯನ್ನು ಮಾನದಂಡವಾಗಿ ನೆಹರೂ ಪ್ರಜ್ಞೆ ಸ್ವೀಕರಿಸಿದ ಕಾರಣವೆ ಕೈಗಾರಿಕೀಕರಣದ ಕಡೆಗೆ, ಆಧುನಿಕತೆಗೆ ವೈಜ್ಞಾನಿಕ ಚಿಂತನೆಯೊಂದೇ ಮೂಲ ಮಂತ್ರವೆನ್ನುವ ನಿರ್ಣಯಕ್ಕೆ ಬಂದಿರಲು ಸಾಧ್ಯ. ಮಾತ್ರವಲ್ಲ ದೇಶೀಯ ಕೈಗಾರಿಕಾ ವಲಯದ ಉದ್ಯಮ ಶೀಲರನ್ನು ದುಡಿಸಿಕೊಳ್ಳುವ ಅವಕಾಶವನ್ನೂ ನೆಹರೂ ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಹಾಗಾಗಿಯೆ ದೇಶ ಮುಂದುವರಿಯಬೇಕಿದ್ದರೆ ಅಭಿವೃದ್ಧಿ ಹೊಂದಬೇಕಿದ್ದರೆ ಬೃಹತ್ ಉದ್ಯಮಗಳು ಅನಿವಾರ್ಯವೆನ್ನುವ ನಿಲುವಿಗೆ ಅಂಟಿಕೊಂಡರು. ಭಾರತದಲ್ಲಿ ಸಂಪತ್ತಿನ ಉತ್ಪಾದನೆಯಾಗದೆ ಬರೀ ಬಡತನವನ್ನೆ ಹಂಚಲು ಸಾಧ್ಯವಿಲ್ಲ ಎನ್ನುವ ಅಚಲ ವಿಶ್ವಾಸ ಹೊಂದಿದ ನೆಹರೂ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ವಲಯದ ಬೆಳವಣಿಗೆ, ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಕೈಗಾರಿಕಾ ವಲಯದ ಅಭಿವೃದ್ಧಿಗೆ ಮಹತ್ವವನ್ನು ನೀಡಿದರು. ಬೃಹತ್ ಯೋಜನೆಗಳನ್ನು ಸ್ಥಾಪಿಸುವುದರಿಂದ ಕೃಷಿ ವಲಯ, ಸಣ್ಣ ಕೈಗಾರಿಕಾ ವಲಯ, ಸಾಮಾಜಿಕ ವಲಯಗಳಲ್ಲಿ ಬದಲಾವಣೆಗಳನ್ನು ತರಬಹುದು ಎಂದು ನಂಬಿದ್ದರು. ಯಾವಾಗ ದೇಶದ ಜನರಿಗೆ ಉದ್ಯೋಗ, ಉತ್ಪಾದನೆಯ ಪ್ರಯೋಜನವಾಗುತ್ತದೆಯೋ ಆಗ ಮೂಢ ನಂಬಿಕೆಗಳು, ಜಾತಿಯ ಸಮಸ್ಯೆ, ಪ್ರಾದೇಶಿಕ ಅಸಮಾನತೆ, ಬಡವ ಶ್ರೀಮಂತರ ನಡುವಿನ ವ್ಯತ್ಯಾಸಗಳು ಎಲ್ಲ ಮರೆಯಾಗುತ್ತದೆ ಎಂದು ತಿಳಿದಿದ್ದರು. ಹೀಗಾಗಿಯೇ ನೆಹರೂ ಅವರಿಗೆ ಕೈಗಾರೀಕರಣದ ಬಗ್ಗೆ ಒಲವು ಹೊಂದಿದ್ದ ವಿಶ್ವೇಶ್ವರಯ್ಯನವರಂತಹ ಅಭಿವೃದ್ಧಿ ಪರ ತಂತ್ರಜ್ಞರು ಭವಿಷ್ಯದ ಆಶಾಕಿರಣವಾಗಿ ಕಂಡರು. ಮುಂದುವರಿದ ದೇಶಗಳ ಸಹಯೋಗದೊಂದಿಗೆ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಭಾಕ್ರಾನಂಗಲ್‌ನಂತಹ ನೀರಾವರಿ ಯೋಜನೆಗಳು ರೂಪು ತಳೆದುವು. ನೆಹರೂ ಅವರ ನಂಬಿಕೆಯೇನೊ ಹುಸಿಯಾಗಲಿಲ್ಲ. ಸಂಪತ್ತಿನ ಸೃಷ್ಟಿಯಾಯಿತು. ಉತ್ಪಾದನೆಯ ಪ್ರಮಾಣದಲ್ಲಿ ಏರಿಕೆಯೂ ಆಯಿತು. ಆದರೆ ಪಾರಂಪರಿಕ ಸಮಾಜದಲ್ಲಿದ್ದ ಸಮಸ್ಯೆಗಳು ಮರೆಯಾಗಲಿಲ್ಲ. ಬದಲಿಗೆ ಅಭಿವೃದ್ಧಿಯ ಪ್ರಯೋಜನ ಕೆಲವೊಂದು ನಿಶ್ಚಿತ ಜನವರ್ಗಗಳಿಗೆ ಹರಿದು ಹೋಯಿತು. ಪಾರಂಪರಿಕ ಸಮಾಜದಲ್ಲಿ ಇದ್ದ ಸಾಮಾಜಿಕ, ಆರ್ಥಿಕ ಅಸಮಾನತೆಗಳು ಮುಂದುವರಿದವು. ನೆಹರೂ ಅವರೇ ಗುರುತಿಸಿದ ಹಾಗೆ ದೇಶದಲ್ಲಿನ ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ಜನ ಸಾರ್ವಜನಿಕ ಚುನಾವಣೆಗಳಲ್ಲಿ ಒಂದೋ ನೆಹರೂ ಅವರ ನೇತೃತ್ವದ ಕಾಂಗ್ರೆಸ್ ಪಕ್ಷದ ತತ್ವದ ಸಿದ್ಧಾಂತಗಳಿಗಿಂತ ಪ್ರಭಾವಿತರಾಗಲಿಲ್ಲ ಅಥವಾ ಅದರೊಂದಿಗೆ ಸಹಮತ ವ್ಯಕ್ತಪಡಿಸಲಿಲ್ಲ. ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳು ಜನರ ಮಧ್ಯೆ ಹೆಚ್ಚು ಜನಪ್ರಿಯವಾಗತೊಡಗಿದುವು. ಅದರಲ್ಲಿಯೂ ಹೆಚ್ಚು ವಿದ್ಯಾವಂತರು ಮತ್ತು ವಿಚಾರವಂತರಿರುವ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಯಾವ ಕಾರಣದಿಂದ ಜನರ ಮನಸ್ಸಿಗೆ ಹತ್ತಿರವಾಗಲಿಲ್ಲ ಎನ್ನುವುದು ಗಂಭೀರ ಚಿಂತನೆಗೆ ಹಚ್ಚುವ ವಿಚಾರವಾಯಿತು.

ಆದಾಗ್ಯೂ ನೆಹರೂ ತಾವು ಬಲವಾಗಿ ನಂಬಿದ ತತ್ವಗಳ ಬಗ್ಗೆ ಅಭಿವೃದ್ಧಿ ನೀತಿಯ ಬಗ್ಗೆ, ಸ್ವತಂತ್ರ ಭಾರತವನ್ನು ಮುನ್ನಡೆಸಬೇಕಾದ ದಾರಿಯ ಬಗ್ಗೆ ಅವರಿಗಿದ್ದ ನಿಖರತೆಯ ಕಾರಣದಿಂದ ಮಹಾತ್ಮಗಾಂಧಿ ಅವರನ್ನು ಇಷ್ಟಪಟ್ಟರೋ ಅಥವಾ ನೆಹರೂ ಅವರಿಗಿದ್ದ ನಾಯಕತ್ವದ ಗುಣ ಮತ್ತು ಅಖಿಲ ಭಾರತ ಮಟ್ಟದಲ್ಲಿ ಅವರಿಗಿದ್ದ ಪ್ರಭಾವ ವಲಯ ಅವರಿಗೆ ಪ್ರಧಾನಿ ಪಟ್ಟವನ್ನು ನೀಡಿತೋ ಹೇಳಲಾಗದು.

ಸ್ವತಂತ್ರ ಭಾರತದ ಅಭಿವೃದ್ಧಿ ಯೋಜನೆಗಳಲ್ಲಿ ಕೃಷಿ ಮತ್ತು ಕೈಗಾರಿಕೆಗೆ ಮಹತ್ವ, ಸಾರ್ವಜನಿಕ ವಲಯದಲ್ಲಿ ಬೃಹತ್ ಉದ್ಯಮಗಳ ಪ್ರಾರಂಭ ಮತ್ತು ಇಡೀ ಅಭಿವೃದ್ಧಿಯ ಕಾರ್ಯಸೂಚಿಯನ್ನು ಮಿಶ್ರ ಅರ್ಥ ವ್ಯವಸ್ಥೆಯ ಚೌಕಟ್ಟಿನ ಒಳಗೆ ಪಂಚವಾರ್ಷಿಕ ಯೋಜನೆಗಳ ಮೂಲಕ ಅನುಷ್ಠಾನಗೊಳಿಸುವ ಮೂಲಕ ದೇಶ ಕಟ್ಟುವ ದಿಸೆಯಲ್ಲಿ ಮುನ್ನಡೆದ ನೆಹರೂ ಧೈರ್ಯ ಅಪರೂಪದ್ದೆ ಸರಿ. ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು ಹಂತಹಂತವಾಗಿ ತಮಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಸೃಜಿಸುವ ಮೂಲಕ ಸ್ವಾವಲಂಭಿಗಳಾಗುವುದು ಮಾತ್ರವಲ್ಲ ಸಮಾಜದ ಅಭಿವೃದ್ಧಿಗಾಗಿ ಸರಕಾರಕ್ಕೆ ಸಂಪನ್ಮೂಲಗಳನ್ನು ಒದಗಿಸಿಕೊಡುವ ಕೆಲಸವನ್ನೂ ಮಾಡಬೇಕೆನ್ನುವುದು ನೆಹರೂ ಅವರ ಮನದಿಂಗಿತವಾಗಿತ್ತು. ಈ ದಿಸೆಯಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸೋತುಹೋದರೆ ಅವುಗಳ ಮುಂದುವರಿಕೆಯ ಬಗ್ಗೆ ಮರುಚಿಂತನೆಯ ಅಗತ್ಯವನ್ನೂ ನೆಹರೂ ಒತ್ತಿ ಹೇಳಿದ್ದರು. ೧೯೫೬ರಲ್ಲಿ ತಯಾರಿಸಲಾದ ಕೈಗಾರಿಕಾ ನೀತಿಯನ್ನು ಕರಡನ್ನು ಸಿದ್ಧಪಡಿಸುವ ಸಮಯದಲ್ಲಿ ನೆಹರೂ ಈ ವಿಷಯಗಳನ್ನು ವಿಷದವಾಗಿ ಚರ್ಚಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳು ಸಾರ್ವಜನಿಕ ಸಂಪತ್ತಿನ ಸದ್ವಿನಿಯೋಗವಾಗಬೇಕು; ಯಾವುದೇ ರಾಜಕೀಯ ಒತ್ತಡಗಳಿಗೆ, ಬಾಹ್ಯ ಶಕ್ತಿಗಳ ಬೆದರಿಕೆಗೆ ಬಗ್ಗದ ಸ್ವಾವಲಂಬಿ, ಸ್ವಾಭಿಮಾನಿ, ಸದೃಢ ಭಾರತ ನಿರ್ಮಾಣ ಎಲ್ಲ ಯೋಜನೆಗಳ, ಯೋಚನೆಗಳ ಹಿಂದಿನ ಪ್ರಮುಖ ಉದ್ದೇಶ ಇಂತಹ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಆದರಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಸುವ ಕುರಿತಂತೆ ನೆಹರೂ ಅವರು ಯೋಚಿಸಿದ ಫಲವಾಗಿ ಹಲವಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಯಿತು. ಇಂದು ಅಂತಹ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಗುಣಮಟ್ಟದ ತಂತ್ರಜ್ಞರನ್ನು, ವಿಜ್ಞಾನಿಗಳನ್ನು, ಚಿಂತಕರನ್ನು ತಯಾರಿ ಮಾಡಿವೆ. ವಸಾಹತುಶಾಹಿ ಆಡಳಿತ ವ್ಯವಸ್ಥೆಯಿಂದ ಸ್ವಾತಂತ್ರ ರಾಷ್ಟ್ರವಾದ ಭಾರತ ಕೇವಲ ೬೦ ವರ್ಷಗಳಲ್ಲಿ ಈ ಮಟ್ಟಕ್ಕೆ ಬಂದಿದೆಯೆಂದಾದರೆ ನೆಹರೂ ಅವರ ಚಿಂತನೆ ಮತ್ತು ಅವರ ನಾಯಕತ್ವದಲ್ಲಿ ಅನುಷ್ಠಾನಗೊಂಡ ಅಭಿವೃದ್ಧಿ ಯೋಜನೆಗಳು ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು.[1] ನೆಹರೂ ಜವಾಹರ್‌ಲಾಲ್ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನುಳಿಸಿ ಮಾಡಿದ ‘ಟ್ರಸ್ಟ್ ವಿತ್ ಡೆಸ್ಟಿನಿ” ಎನ್ನುವ ಶೀರ್ಷಿಕೆಯ ಭಾಷಣ ೧೫.೮.೧೯೪೭ ನೋಡಿ: (www.forham.edu/halsal/mod/1947/nehru.html) ಮತ್ತು ನೆಹರೂ ಜವಾಹರಲಾಲ್‌, ೧೯೭೦. ಸ್ಪೀಚಸ್ ಆಫ್ ನೆಹರೂ, ಸಂಪುಟ ಮೂರು (ಮರು ಮುದ್ರಣ) ನವದೆಹಲಿ.

[2] ನೆಹರೂ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳಿಂದ ಈ ಅಂಶ ದೇಶದ ಅಭಿವೃದ್ಧಿಯ ಬಗೆಗಿನ ನೆಹರೂ ಅವರ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ತಿಳಿಯಪಡಿಸುವ ಹಾಗಿದೆ. ವಿವರಗಳಿಗೆ ನೋಡಿ: ನೆಹರೂ “ಲೆಟರ್ಸ್ ಟು ಚೀಫ್ ಮಿನಿಸ್ಟರ್ಸ್,” ಸ್ಪೀಚಸ್ ಆಫ್ ನೆಹರೂ, ಸಂಪುಟ ಮೂರು, ನವದೆಹಲಿ, ೧೯೪೭-೬೪.

[3] ಕಾರಂಜಿಯಾ ಆರ್. ಕೆ. ದಿ ಫಿಲಾಸಫಿ ಆಫ್ ನೆಹರೂ, ಲಂಡನ್, ೧೯೬೬

[4] ಗೋಪಾಲ್ ಯಸ್, ೧೯೭೦, ಜವಾಹರ್ ಲಾಲ್ ನೆಹರೂ-ಎ ಬಯಾಗ್ರಫಿ, ಸಂಪುಟ ೩, ಲಂಡನ್‌,