ಆಧುನಿಕ ಭಾರತದ ಮುತ್ಸದ್ಧಿಗಳಲ್ಲಿ ಹಾಗೂ ದಲಿತ ಚಳವಳಿಯ ಚರಿತ್ರೆಯಲ್ಲೇ ಅಂಬೇಡ್ಕರ್ ಅಗ್ರಗಣ್ಯರು. ‘ಮಹರ್’ ಆಗಿ ಹುಟ್ಟಿ, ಸತತ ಪರಿಶ್ರಮ ಹಾಗೂ ನಿಷ್ಠೆಯನ್ನು ಮೈಗೂಡಿಸಿಕೊಂಡು ಅಸಾಧಾರಣ ನಾಯಕರಾಗಿ ರೂಪುಗೊಂಡರು. ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ಅಂಬೇಡ್ಕರ್‌ ಅವರು ಗೌತಮ ಬುದ್ಧ, ಮಹಾತ್ಮ ಪುಲೆ, ಕಬೀರ್ ಮತ್ತು ಸಾಹು ಮಹಾರಾಜರಿಂದ ಪ್ರೇರೇಪಿತರಾದರು.

ಅಂಬೇಡ್ಕರ್ ಅವರ ವಿದ್ವತ್ ಹಾಗೂ ಜೀವಮಾನದುದ್ದದ ಅನುಭವವು ಅವರು ಭಾರತೀಯ ಜಾತಿ ವ್ಯವಸ್ಥೆಯನ್ನು ಕುರಿತು ಯೋಚಿಸುವಂತೆ ಮಾಡಿತು. ಭಾರತೀಯರಲ್ಲಿನ ಜಾತಿ ವಿಂಗಡನೆಯು ಅತ್ಯಂತ ತಾರತಮ್ಯ ಹಾಗೂ ನಕಾರಾತ್ಮಕವಾದುದೆಂದು ಅವರು ಮನಗಂಡರು. ಜಾತಿ ವ್ಯವಸ್ಥೆಯು ಮನುಷ್ಯನ ಬುದ್ಧಿವಂತಿಕೆಯನ್ನೇ ಮಂಕುಗೊಳಿಸಿತ್ತು. ಅವರು ಚಾತುರ್ವರ್ಣವನ್ನು ಕುರಿತು, “ಸಹ ಚಟುವಟಿಕೆಯಲ್ಲಿದ್ದ ಮನುಷ್ಯರನ್ನು ಅವಸಾನಗೊಳಿಸಿ, ರೋಗಿಷ್ಠರನ್ನಾಗಿಸಿ ಮತ್ತು ಹೆಳವನನ್ನಾಗಿಸುವ ಒಂದು ವ್ಯವಸ್ಥೆ” ಎಂದಿದ್ದಾರೆ. ಈ ವ್ಯವಸ್ಥೆಯು ಕೆಳವರ್ಗಗಳ ನೇರ ಕ್ರಮ ತೆಗೆದುಕೊಳ್ಳದಂತೆ ಅವರನ್ನು ನಿಸ್ತೇಜಗೊಳಿಸಿತ್ತು ಎಂಬುದು ಅಂಬೇಡ್ಕರ್‌ ಅವರ ನಂಬಿಕೆಯಾಗಿತ್ತು. ಹೀಗಾಗಿಯೇ ಅವರು ಕೆಲ ಸಾಮಾಜಿಕ ಹಾಗೂ ರಾಜಕೀಯ ಕಾರ್ಯತಂತ್ರಗಳನ್ನು, ಶೋಷಿತ ವರ್ಗಗಳು ಶ್ರೇಣೀಕೃತ ಜಾತಿ ವ್ಯವಸ್ಥೆಯ ಸವಾಲುಗಳನ್ನು ಎದುರಿಸಲು ಹೋರಾಟವನ್ನು ರೂಪಿಸಿದರು. ಇವುಗಳನ್ನು ಅಂಬೇಡ್ಕರ್ ಅವರು ತ್ರಿರತ್ನಗಳೆಂದು ಸಂಬೋಧಿಸಬಹುದಾಗಿದೆ. ಅವುಗಳೇ ಸಂಘಟನೆ, ಶಿಕ್ಷಣ ಮತ್ತು ಹೋರಾಟ.

ಅಂಬೇಡ್ಕರ್ ಶಿಕ್ಷಣ ಪ್ರಾಮುಖ್ಯತೆಯನ್ನು ಅರಿತಿದ್ದರು. ಇದು ಅವರ ಸಕಾರಾತ್ಮಕ ಕಾರ್ಯದ ಮೊದಲ ಹಂತವಾಗಿತ್ತು. ಎಲ್ಲಿಯವರೆಗೆ ಶೋಷಿತ ವರ್ಗಗಳು ಹಿಂದೂವಾಗಿಯೇ ಉಳಿಯುವರೋ ಅಲ್ಲಿಯವರೆಗೆ ಸಮಾನತೆಯನ್ನು ಹಿಂದೂ ಸಮಾಜವು ಒಡಗಿಸುವುದಿಲ್ಲವೆಂಬ ಸತ್ಯವನ್ನು ಅಂಬೇಡ್ಕರ್‌ ಅರಿತಿದ್ದರು. ಎಲ್ಲಿ ಸಮಾನತೆಯು ದುರ್ಲಭವಾಗಿದೆಯೋ ಅದನ್ನು ಸಂಘರ್ಷದ ಮೂಲಕ ಪಡೆದುಕೊಳ್ಳಬೇಕು ಎಂದಿದ್ದಾರೆ.

ಶೋಷಿತರು ಶಿಕ್ಷಣದ ನಿರಾಕರಣೆಯಿಂದಾಗಿ ಪ್ರಚಲಿತದಲ್ಲಿದ್ದ ತಾರತಮ್ಯಯುತ ಆಚರಣೆಗಳನ್ನು ಪ್ರಶ್ನಿಸದಂತೆ ವ್ಯವಸ್ಥೆಯು ಅವರನ್ನು ಸತ್ವಹೀನರನ್ನಾಗಿ ಮಾಡಿತ್ತು. ಸಾಂಪ್ರದಾಯಿಕ ಆಚರಣೆಗಳ ಹಿಂದಿನ ವಿಚಾರಗಳನ್ನು ಅರ್ಥೈಸಲು ಶಿಕ್ಷಣದ ಅಗತ್ಯವಿತ್ತು. ಉತ್ತಮ ಸಂವಾದದ ಅಗತ್ಯತೆಯ ಹಿಂದಿರುವ ಶಿಕ್ಷಣದ ಅನಿವಾರ್ಯತೆಯನ್ನು ಅಂಬೇಡ್ಕರ್ ಅರಿತಿದ್ದರು. ಶಿಕ್ಷಣವು ವಿವೇಚನೆಯನ್ನು ಮೂಡಿಸುತ್ತದೆ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಪಿಡಗುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ವಿವೇಚನೆಯನ್ನೇ ಪ್ರತಿಯಾಗಿ, ವೃತ್ತ ಪತ್ರಿಕೆಗಳಲ್ಲಿ ಬರೆಯುವುದಕ್ಕೆ, ಭಿತ್ತಿ ಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಬಳಸಿಕೊಳ್ಳಬಹುದಿದೆ. ಈ ರೀತಿಯಾಗಿ ಸಂಪಾದಿಸಿಕೊಂಡ ಜ್ಞಾನವನ್ನು, ಸಾರ್ವತ್ರಿಕ ಅಭಿಪ್ರಾಯವನ್ನು ಸಂಘಟಿಸುವುದಕ್ಕೆ, ಸುಧಾರಣೆಯ ಬೇಟಿಕೆಯನ್ನು ಪ್ರತಿನಿಧಿಗಳ ಮುಖಾಂತರ ಸರಕಾರಕ್ಕೆ ಮುಟ್ಟಿಸುವುದಕ್ಕೂ ಬಳಸಿಕೊಳ್ಳಬಹುದಾಗಿದೆ. ಶೋಷಿತ ಜನರಿಗೆ ವಿವೇಚನೆಯನ್ನು ಮೂಡಿಸುವ ಏಕ ಮಾತ್ರ ಉದ್ದೇಶಕ್ಕಾಗಿಯೇ ಅಂಬೇಡ್ಕರ್ ‘ಮೂಕನಾಯಕ’ ಎಂಬ ವಾರಪತ್ರಿಕೆಯನ್ನು ೧೯೨೦ರಲ್ಲಿ ಹಾಗೂ ‘ಬಹಿಷ್ಕೃತ ಭಾರತ’ ಎಂಬ ವೃತ್ತ ಪತ್ರಿಕೆಯನ್ನು ೧೯೨೭ರಲ್ಲಿ ಹೊರತಂದರು. ಈ ವೃತ್ತ ಪತ್ರಿಕೆಗಳ ಮೂಲಕ ತುಳಿತಕ್ಕೊಳಗಾದ ಜನರ ಆಶೋತ್ತರಗಳನ್ನು ಹಾಗೂ ಅವರ ಶೋಷಣೆಯ ಬವಣೆಯನ್ನು ವ್ಯಕ್ತಪಡಿಸಲು ಸಾಧ್ಯವಾಯಿತು.

ದುರ್ಬಲ ಜನರನ್ನು ಸಂಘಟಿಸುವ ಹಿನ್ನೆಲೆಯಲ್ಲಿ ಅವರು ಹಲವಾರು ಸಂಘಟನೆಗಳನ್ನು ಹುಟ್ಟುಹಾಕಿದರು. ಈ ಸಂಘಟನೆಗಳು ಶೋಷಿತರ ಕ್ಷೇಮಾಭಿವೃದ್ಧಿ ಕಾರ್ಯದಲ್ಲೂ ತೊಡಗಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿಯೇ ಮಾರ್ಚ್‌ ೧೯೨೪ರಲ್ಲಿ ಅವರು ‘ಬಹಿಷ್ಕೃತ ಹಿತಕಾರಣಿ ಸಭಾ’ವನ್ನು ಸ್ಥಾಪಿಸಿದರು. ಈ ಸಂಘವು ಚಳವಳಿಯನ್ನು ಸಂಘಟಿಸುವ ಪ್ರಧಾನ ವೇದಿಕೆಯ ಕಾರ್ಯವನ್ನು ನಿರ್ವಹಿಸಿತು. ಅಂಬೇಡ್ಕರ್ ನೇತೃತ್ವದ ಹೋರಾಟ ಈ ಹಾದಿಯಲ್ಲಿ ಪ್ರಾರಂಭವಾಗಿ ದೇವಾಲಯ ಪ್ರವೇಶ ಚಳವಳಿ, ಸಾರ್ವಜನಿಕ ಕೊಳದ ಬಳಕೆ, ಸಾರ್ವತ್ರಿಕ ಸ್ಥಳಗಳ ಬಳಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರವೇಶದ ಅವಕಾಶವನ್ನು ಪಡೆದುಕೊಳ್ಳುವುದರತ್ತ ಸಾಗಿತು. ಇಂತಹ ಪ್ರತಿಭಟನೆ ಚಳವಳಿಗಳು ಸಾರ್ವಜನಿಕ ಮನಸ್ಥಿತಿಯನ್ನು ಪರಿವರ್ತಿಸಲು ವಿಫಲವಾದ ಹಿನ್ನೆಲೆಯಲ್ಲಿ ಅವರಿಗೆ ಮನವರಿಕೆಯಾದ ಸತ್ಯ, ಕಾನೂನಿನ ತಿದ್ದುಪಡಿಯಾಗದ ಹೊರತು ಅಸ್ಪೃಶ್ಯತಾ ನಿವಾರಣೆ ಎಂದಿಗೂ ಸಾಧ್ಯವಿಲ್ಲ. ಇದಕ್ಕೆ ಬೇಕಾಗಿದ್ದುದು ರಾಜಕೀಯ ಇಚ್ಛಾಶಕ್ತಿ ಮಾತ್ರ. ರಾಜಕೀಯ ಇಚ್ಛಾಶಕ್ತಿಯನ್ನು ಸಾಧಿಸಿಕೊಳ್ಳುವಂತ ಏಕಮಾತ್ರ ಮಾರ್ಗ ತಮ್ಮ ಸಮುದಾಯವನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸುವುದರಲ್ಲಿದ್ದಿತು. ಈ ಕಾರಣಕ್ಕಾಗಿಯೇ ದುರ್ಬಲ ವರ್ಗಗಳಿಗೆ ರಾಜಕೀಯ ಪ್ರತಿನಿಧಿತ್ವದ ಬೇಡಿಕೆಯನ್ನು ಅವರು ಪ್ರಸ್ತಾಪಿಸಿದರು. ಇದರ ಮೊದಲ ಪ್ರತಿರೋಧ ಶೋಷಿತ ವರ್ಗಗಳಿಗೆ ಪ್ರತ್ಯೇಕ ಮತಗಟ್ಟೆಗಳ ಹಕ್ಕಿನ ಬೇಡಿಕೆಯನ್ನು ವ್ಯಕ್ತವಾಯಿತು. ಹಿಂದೂ ಜನಾಂಗದೊಳಗೆ ಪ್ರತ್ಯೇಕತೆಯ ಧ್ವನಿ ಅವರನ್ನು ವಿಘಟಿಸುವ ಭೀತಿಯಲ್ಲಿ ಗಾಂಧೀಜಿಯವರು ಇಂತಹ ಒಂದು ಪ್ರಸ್ತಾವನೆಯನ್ನು ಪ್ರಬಲವಾಗಿ ವಿರೋಧಿಸಿದರು. ಈ ತೆರನಾದ ವಾಗ್ವಾದಗಳು ಬಗೆಹರಿಯದೇ ನಿಂತಾಗ ಗಾಂಧಿ ಮತ್ತು ಅಂಬೇಡ್ಕರ್‌ರ ನಡುವೆ ರಾಜಿ ಸೂತ್ರವಾಗಿ ‘ಪೂನಾ ಒಪ್ಪಂದ’ವನ್ನು ೧೯೩೨ರಲ್ಲಿ ಮಾಡಿಕೊಳ್ಳುವುದರ ಮೂಲಕ ಈ ಬಿಕ್ಕಟ್ಟಿಗೆ ತೆರೆ ಎಳೆಯಲಾಯಿತು. ಈ ಒಪ್ಪಂದದ ಅನ್ವಯವಾಗಿ ಅಸ್ಪೃಶ್ಯರಿಗೆ ಜಂಟಿ ಮತಗಟ್ಟೆಗಳನ್ನು ಕಾಯ್ದಿರಿಸಲಾಯಿತು. ಈ ಸನ್ನಿವೇಶದ ತೀಕ್ಷ್ಣ ಪ್ರತಿಕ್ರಿಯೆ ಗಾಂಧೀಜಿಯವರ ಕಣ್ಣು ತೆರೆಯಿಸಿ, ಮುಂದೆ ಅವರು ಪೂರ್ಣ ಪ್ರಮಾಣದಲ್ಲಿ ಇದರ ವಿರುದ್ಧ ಸಮರ ಘೋಷಿಸುವುದಕ್ಕೆ ಕಾರಣವಾಯಿತು.

ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಸದಸ್ಯರಾಗಿ ಹಾಗೂ ಕರಡು ಸಮಿತಿಯ ಅಧ್ಯಕ್ಷರಾಗಿ ಸ್ವತಂತ್ರ ಭಾರತದಲ್ಲಿ, ವಯಸ್ಸು, ಲಿಂಗ, ಜನ್ಮ ಸ್ಥಳ ಆಧಾರಿತವಾದ ತಾರತಮ್ಯದ ವಿರುದ್ಧ ನಿರ್ಬಂದವನ್ನು, ಅಸ್ಪೃಶ್ಯತೆಯ ವಿರುದ್ಧ ನಿರ್ಬಂಧನೆಯನ್ನು ಹಾಗೂ ಸಾರ್ವತ್ರಿಕ ವೃತ್ತಿಯಲ್ಲಿ ಸಮಾನ ಅವಕಾಶವನ್ನು ಸಂವಿಧಾನದ ಮೂಲಭೂತ ಹಕ್ಕುಗಳು ೧೨ರಿಂದ ೩೨ರ ಸಂವಿಧಾನದ ಪರಿಚ್ಛೇದದ ಅಡಿಯಲ್ಲಿ ಖಾಯಂಗೊಳಿಸಿದ್ದಾರೆ. ಅಂತೆಯೇ ಸಮಾಜದ ಸಮಾನ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ಪರಿತಪಿಸಿದ ಸಾಮಾಜಿಕ ಅಸಮರ್ಥತೆಗಾಗಿ ರಕ್ಷಣಾತ್ಮಕ ಸವಲತ್ತಾಗಿ ಇವರುಗಳಿಗೆ ಮೀಸಲಾತಿಯ ಆಸ್ಪದವನ್ನು ಕಲ್ಪಿಸಿದರು.

ಈ ರಕ್ಷಣೆಗಳಿದ್ದಾಗ್ಯೂ ಸ್ವತಂತ್ರ ಭಾರತದ ಅನುಭವಗಳು ಅಂಬೇಡ್ಕರ್ ಅವರ ಆಶಯವನ್ನು ಹುಸಿ ಮಾಡಿದ ಹಿನ್ನೆಲೆಯಲ್ಲಿ, ಹಿಂದೂಗಳ ಮನಸ್ಸನ್ನು ಎಂದಿಗೂ ಪರಿವರ್ತಿಸಲು ಸಾಧ್ಯವಿಲ್ಲ ಎಂಬ ನಿಲುವು ಮನದಟ್ಟಾದಾಗ ಅವರು ಹಿಂದೂ ಧರ್ಮವನ್ನು ನವೆಂಬರ್ ೧೯೫೬ರಲ್ಲಿ ತ್ಯಜಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡಿದ್ದು ಇದ್ದಕ್ಕಿದ್ದಂತೆ ನಿರ್ಧರಿಸಿದ ನಿಲುವೇನಲ್ಲ. ಅದು ಅವರು ಬೌದ್ಧ ಧರ್ಮದ ಬಗ್ಗೆ ತಳೆದಿದ್ದ ಆಳವಾದ ಅಧ್ಯಯನ ಮತ್ತು ಸುದೀರ್ಘವಾದ ಒಲವಿನಿಂದಾಗಿತ್ತು. ಅವರ ಪ್ರಕಾರ ಬೌದ್ಧ ಧರ್ಮವು ಮೂರು ಉದ್ದೇಶಗಳನ್ನು ಪೂರೈಸುತ್ತಿತ್ತು. ನಡವಳಿಕೆಯಲ್ಲಿ ಸಮಾನತೆ, ವೈಜ್ಞಾನಿಕವಾದ ಸುವ್ಯವಸ್ಥೆ, ಶೋಷಣೆ ಮತ್ತು ತಾರತಮ್ಯದ ವಿರುದ್ಧದ ಪರಂಪರಾಗತ ಪ್ರತಿಭಟನೆಯನ್ನು ಅದು ಪ್ರತಿನಿಧಿಸುತ್ತಿತ್ತು.

ಅಕ್ಟೋಬರ್ ೧೪, ೧೯೫೬ರಲ್ಲಿ ಅಂಬೇಡ್ಕರ್‌ ಅವರು ಬೌದ್ಧ ಧರ್ಮವನ್ನು ತಮ್ಮ ಎರಡು ಮಿಲಿಯನ್ ಸಹಚರರೊಂದಿಗೆ ಚರಿತ್ರಾರ್ಹ ನಾಗಪುರದ ಸಮಾರಂಭದಲ್ಲಿ ಬೌದ್ಧ ದೀಕ್ಷೆಯನ್ನು ಸ್ವೀಕರಿಸಿದರು. ೧೯೫೬ರ ಡಿಸೆಂಬರ್ ೬ ರಂದು ಅಂಬೇಡ್ಕರ್ ಅವರ ಜೀವಮಾನದ ಹೋರಾದ ಅವರ ಪರ್ಯವಸಾನದೊಂದಿಗೆ ಅಂತ್ಯವಾಯಿತು.

ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ

ಎಲ್ಲ ಕಾಲಕ್ಕೂ ಸಾಮಾಜಿಕ ಸ್ವರೂಪಗಳ ಉಗಮವನ್ನು ಗುರುತಿಸುವುದು ಅಸಾಧ್ಯ. ಅದರಲ್ಲೂ ಇದು ಭಾರತೀಯ ರಾಷ್ಟ್ರೀಯತೆಗೆ ಕೂಡ ಅನ್ವಯಿಸುತ್ತದೆ. ರಾಷ್ಟ್ರವಿಲ್ಲದೆ ರಾಷ್ಟ್ರೀಯತೆ ಇಲ್ಲ ಎನ್ನುವುದು ತಿಳಿದಂತಹ ಸತ್ಯ. ಹೀಗಾಗಿ ಎಷ್ಟೋ ಸಂದರ್ಭಗಳಲ್ಲಿ ಭಾರತ ಒಂದು ರಾಷ್ಟ್ರವೇ ಅಥವಾ ಕೇವಲ ಒಂದು ಪರಿಕಲ್ಪನೆಯೇ ಎಂಬ ಜಿಜ್ಞಾಸೆಯು ಹುಟ್ಟುತ್ತದೆ. ಕೆಲವು ವಿದ್ವಾಂಸರು ಇಂದಿಗೂ ಭಾರತ ರಾಷ್ಟ್ರವಲ್ಲ, ರಾಷ್ಟ್ರವಾಗಿ ರೂಪಿತವಾಗುತ್ತಿರುವ ಪ್ರಕ್ರಿಯೆಯಲ್ಲೇ ಇನ್ನೂ ಕೂಡ ಇದೆ ಎಂದು ಭಾವಿಸುತ್ತಾರೆ. ಭಾರತದ ಒಂದಾ ಸಮಷ್ಟಿಯೇನಲ್ಲ, ಆದರೆ ಸಮಷ್ಟಿಯಾಗಿ ರೂಪುಗೊಳಿಸಬೇಕಾಗಿದೆ. ಸರ್‌ ಜಾನ್ ಸ್ವ್ಯಾಚಿ ಮತ್ತು ಜಾನ್ ಸೀಲೆ, ಭಾರತ ಒಂದು ರಾಷ್ಟ್ರ ಎನ್ನುವುದನ್ನು ಅಲ್ಲಗಳೆಯುತ್ತಾ ಅದು ಕೇವಲ ಒಂದು ಭೌಗೋಳಿಕ ಸೂಚಕ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯಕತೆಯು ನಾವೆಲ್ಲರೂ ಒಂದು ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಅದು ಮನುಷ್ಯನ ಜೀವನ, ಅಭಿಮಾನ, ಹಿರಿಮೆ, ಕಾರ್ಯಶೀಲತೆ ಮತ್ತು ಅವನ ಏಳಿಗೆಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರೀಯತೆಯು ಎರಡು ಅಲುಗಿರುವ ಖಡ್ಗವಿದ್ದಂತೆ. ಅದು ಏಕಕಾಲದಲ್ಲೇ ಒಂದು ಸಮೂಹದೊಡನೆ ಪ್ರತ್ಯೇಕತೆಯನ್ನು ಹಾಗೂ ಮತ್ತೊಂದು ನಿರ್ದಿಷ್ಟ ಸಮೂಹದೊಡನೆ ಸಂಬಂಧವನ್ನು ಗುರುತಿಸಿಕೊಳ್ಳುವ ಪ್ರಯತ್ನ ಇದರದ್ದಾಗಿರುತ್ತದೆ ಎಂದು ಅಂಬೇಡ್ಕರ್ ವ್ಯಕ್ತಪಡಿಸುತ್ತಾರೆ. ಈ ವಿಚಾರವಾಗಿ ಮುಂದುವರೆದು, ಭಾರತ ರಾಷ್ಟ್ರೀಯತೆಯನ್ನು ಎಂದಿಗೂ ಕೂಡ ಅನುಭವಿಸಲೇ ಇಲ್ಲ ಎಂದು ಭಾವಿಸುತ್ತಾರೆ. ಭಾರತದ ಸಮಸ್ತ ವರ್ಗದ ಜನರಲ್ಲಿ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಮೂಡಿಸುವ ವಿಧಾನವು ಅವರ ರಾಷ್ಟ್ರೀಯತೆಯ ಅರ್ಥೈಸುವಿಕೆಯನ್ನು ನೀಡುತ್ತದೆ. ಈ ಗುರಿಯನ್ನು ಸಾಧಿಸುವ ಹಿನ್ನೆಲೆಯಲ್ಲಿ ಅವರು ಎಲ್ಲ ಸವರ್ಣೀಯ ಹಿಂದೂಗಳು ತಾವು ಅನುಸರಿಸುವ ತಾರತಮ್ಯ ನೀತಿ ಹಾಗೂ ಅಸ್ಪೃಶ್ಯತೆಯ ಆಚರಣೆಯಿಂದ ವಿಮುಕ್ತಿಗೊಳ್ಳಬೇಕು ಎಂಬ ಎಚ್ಚರಿಕೆಯ ಮಾತು ಅವರದ್ದಾಗಿತ್ತು.

ಅಂಬೇಡ್ಕರ್ ಅವರು ಏಕಕಾಲದಲ್ಲೇ ಬಾಹ್ಯ ಪ್ರಾಬಲ್ಯ ಮತ್ತು ಆಂತರಿಕ ದಬ್ಬಾಳಿಕೆಯ ವಿರುದ್ಧ ಸಮರ ಸಾರಬೇಕಾಗಿತ್ತು. ಅವರು ಹೇಳುವಂತೆ ಬ್ರಿಟಿಷರು ಭಾರತೀಯರನ್ನು ಶೋಷಿಸುವುದಕ್ಕೆ ಹೇಗೆ ಹೇಯತೆಯಿಂದ ಹಗೆತನವನ್ನು ವ್ಯಕ್ತಪಡಿಸುತ್ತವೆಯೋ ಹಾಗೆಯೇ ಭಾರತೀಯರು ಸಾವಿರಾರು ವರ್ಷಗಳ ಶೋಷಣೆಯನ್ನು ಅಸ್ಪೃಶ್ಯತೆಯ ಹೆಸರಿನಲ್ಲಿ ಎಸಗಿರುವುದು ಅಷ್ಟೇ ಹೀನವೆಂದು ಆಪಾದಿಸಿದ್ದಾರೆ. ಈ ತೆರನಾದ ಅರ್ಥೈಸಿದ ಪರಿಣಾಮವಾಗಿ ಎಷ್ಟೋ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತದ, ಅವರೊಂದಿಗಿನ ಸಹಕಾರ, ಅದೆಲ್ಲವನ್ನೂ ಕೂಡ ತುಳಿತಕ್ಕೊಳಗಾದ ಜನಾಂಗಗಳಿಗೆ ದಕ್ಕಬೇಕಾಗಿದ್ದ ಹಕ್ಕುಗಳ ಪ್ರಾಪ್ತಿಗಾಗಿ ಅನಿವಾರ್ಯವೆಂದು ಅಂಬೇಡ್ಕರ್‌ ಭಾವಿಸಿದ್ದರು.

ಅಂಬೇಡ್ಕರ್ ಅವರು ಸಾಮಾಜಿಕ, ರಾಜಕೀಯ, ಆರ್ಥಿಕ ಸಮಾನತೆಯ ಜೊತೆಗೆ ಭ್ರಾತೃತ್ವವು ರಾಷ್ಟ್ರೀಯತೆಗೆ ಮೂಲ ಆಧಾರವೆಂಬ ನಂಬಿಕೆಯನ್ನು ಹೊಂದಿದ್ದರು. ರಾಷ್ಟ್ರದ ಬಗೆಗಿನ ಅಭಿಮಾನ ವ್ಯಕ್ತವಾಗುವುದು ಅಲ್ಲಿನ ಜನ ಆತ್ಮಾಭಿಮಾನದಿಂದ ಉಸಿರಾಡಿದಾಗ ಮಾತ್ರ ಎಂಬ ನಂಬಿಕೆ ಅವರದು. ಅವರು ರಾಷ್ಟ್ರೀಯತೆ ಮೂಡಿಸಿದ್ದು ಇದೇ ಸಾಂಕೇತಿಕ ಅರ್ಥದಲ್ಲಿ. ಜನತೆಯ ಸ್ವಾಭಿಮಾನ ದೇಶದ ಸ್ವಾಭಿಮಾನವಾದಾಗ ಮಾತ್ರ ಅದು ರಾಷ್ಟ್ರೀಯತೆಯ ಆಶಯವನ್ನು ಪ್ರತಿಬಿಂಬಿಸುತ್ತದೆ.

ಪಾಶ್ಚಿಮಾತ್ಯ ರಾಜನೀತಿ ಶಾಸ್ತ್ರದ ವಿದ್ವಾಂಸರು ಗೌಣವಾಗಿಸಿದ್ದ ರಾಷ್ಟ್ರದ ಸ್ವತಂತ್ರದ ಅರ್ಥೈಸುವಿಕೆಗೆ ಅಂಬೇಡ್ಕರ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ, ಸ್ವತಂತ್ರ ಎನ್ನುವುದು ರಾಷ್ಟ್ರದ ಜನತೆಯ ಸ್ವಾತಂತ್ರ್ಯವಾಗಬೇಕು ಎಂಬ ಪ್ರಸ್ತಾವವನ್ನು ಮಂಡಿಸಿದರು. ಅವರ ಮೂಲ ಒತ್ತಾಸೆಯೇ ಜನತೆಯ ಸ್ವಾತಂತ್ರ್ಯವಾಗಿತ್ತು. ಏಕೆಂದರೆ ಜನತೆಯ ಸ್ವಾತಂತ್ರ್ಯವನ್ನು ಹೊರತು ಪಡಿಸಿದ ರಾಷ್ಟ್ರೀಯತೆ ಆಂತರಿಕ ಗುಲಾಮಗಿರಿ, ಜೀತ ಹಾಗೂ ವ್ಯವಸ್ಥಿತವಾದಂತಹ ನಿರಂಕುಶತೆಗೆ, ಅದು ಕಡುಬಡವರನ್ನು, ನಿರ್ಗತಿಕರನ್ನು ಬಳಸಿಕೊಳ್ಳುವ ಪರಿಕರವಷ್ಟೇ ಆಗುತ್ತದೆ.

ಬ್ರಿಟಿಷರು ಶೋಷಿತ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳನ್ನು ಗಳಿಸಿಕೊಡಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ನಂಬಿದ್ದರು. ಬ್ರಿಟಿಷರು ಸವರ್ಣೀಯ ಹಿಂದೂಗಳಿಗಿಂತ ಭಿನ್ನವೇನಲ್ಲ, ಹಾಗಾಗಿಯೆ ಸವರ್ಣೀಯ ಹಿಂದೂಗಳು ಹಾಗೂ ಬ್ರಿಟಿಷ್ ಸರ್ಕಾರದ ವಿರುದ್ಧ ರಾಜಕೀಯ ಮತ್ತು ಸಾಮಾಜಿಕ ಹಕ್ಕಿಗಾಗಿ ಸಮರಕ್ಕೆ ಮುಂದಾದರು. ಅಂಬೇಡ್ಕರ್ ಅವರಿಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಪ್ರಾಮುಖ್ಯತೆ ತಿಳಿದೇ ಇತ್ತು. ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವಿಲ್ಲದಿರುವ ರಾಜಕೀಯ ಸ್ವಾತಂತ್ರ್ಯ ಜನತೆಗೆ ಮಾರಕ ಎಂಬುದು ಅವರ ನಿಲುವಾಗಿತ್ತು.

ರಾಷ್ಟ್ರೀಯತೆಯ ಮೂಲ ಸಂವೇದನೆಯಲ್ಲಿ ದೇಶದ ಭಾವೈಕ್ಯತೆಯು ಕೇವಲ ರಾಜಕೀಯಕ್ಕೆ ಸಂಬಂಧಿಸಿದರೆ ಸಾಮಾಜಿಕವಾಗಿಯೂ ಅತೀ ಪ್ರಮುಖವಾದುದ್ದಾಗಿದೆ. ಎಲ್ಲ ವರ್ಗಗಳ ಜನತೆಯ ಒಡಂಬಡಿಕೆ ಇಲ್ಲದ ರಾಷ್ಟ್ರೀಯತೆಯು ಕೇವಲ ‘ಗುಂಪುಗಾರಿಕೆ’, ‘ಸಂಕುಚಿತತೆ’ ಹಾಗೂ ‘ಕೋಮುವಾದ’ವಾಗಿ ಪರಿಣಮಿಸಿ ಅದು ರಾಷ್ಟ್ರೀಯತೆಯ ಸ್ಫೂರ್ತಿ ಮತ್ತು ರಾಷ್ಟ್ರೀಯತೆಯ ಆಶಯವನ್ನು ನಿಗ್ರಹಿಸುತ್ತದೆ.

ಅಂಬೇಡ್ಕರ್ ಅವರು ಪ್ರಾಂತೀಯವಾದ, ಭಾಷಾವಾರುವಾದ, ಜಾತೀಯತೆ ಹಾಗೂ ಜನಾಂಗೀಯವಾದದ ವಿರುದ್ಧ ಸಂಘರ್ಷವನ್ನು ಘೋಷಿಸಿದರು. ಇವುಗಳನ್ನು ಅವರು ರಾಷ್ಟ್ರೀಯತೆಯ ಭಾವೈಕ್ಯತೆಗೆ ಮಾರತ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರ ಅರ್ಥೈಕೆಯಲ್ಲಿ “ರಾಷ್ಟ್ರೀಯತೆಯ ನಿರೀಕ್ಷಣೆಯು ಕೇವಲ ಗುಲಾಮಿದೇಶ ಒಂದರ ವಿಮೋಚನೆ ಮಾತ್ರವಲ್ಲ ಅದು ಅಲ್ಲಿನ” ಸಮಸ್ತ ಪ್ರಜೆಗಳ ಹಾಗೂ ತುಳಿತಕ್ಕೊಳಗಾದ ಜನರ ವಿಮೋಚನೆಯಲ್ಲಿ ಒಂದು ಮುಕ್ತ ರಾಷ್ಟ್ರವನ್ನು ಪ್ರತಿಬಿಂಬಿಸುತ್ತದೆ.”

ಅಂಬೇಡ್ಕರ್ ಅವರು ಮುಖ್ಯವಾಹಿನಿಯ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಂಡಿಲ್ಲ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರ ರಾಜಕೀಯ ದೃಷ್ಟಿಕೋನಗಳೇನಿತ್ತು ಎನ್ನುವ ಮಾಹಿತಿಗಳ ಬಗ್ಗೆ ಕೆಲವು ವಿವರಗಳನ್ನು ಇಲ್ಲಿ ನೀಡಲಾಗಿದೆ. ಕೆಲವು ವಿದ್ವಾಂಸರು ಅಂಬೇಡ್ಕರ್ ಅವರನ್ನು “ರಾಷ್ಟ್ರ ವಿರೋಧಿ” ಎಂದು ಪರಿಗಣಿಸಲು ಅವರು ಸೈಮನ್ ಆಯೋಗದೊಂದಿಗೆ ಸಹಕರಿಸಿದ್ದೇ ಕಾರಣವಾಗಿದೆ ಎಂದು ವಾದಿಸಿದ್ದಾರೆ. ಆದರೆ ಅಂಬೇಡ್ಕರ್ ಅವರ ನಿಲುವು ಮತ್ತು ವಾದ ಜನತೆಯ ಮೇಲೆ ಅವರಿಗಿದ್ದ ಬದ್ಧತೆ ಇವರು ಆಯೋಗದೊಂದಿಗೆ ಸಹಕರಿಸಿದ್ದ ಸಮರ್ಥನೀಯವಾಗಿಯೇ ಕಂಡುಬರುತ್ತದೆ.

ಗಾಂಧೀಜಿಯವರ ‘ನಾಗರಿಕ ಕಾನೂನು ಭಂಗ ಚಳವಳಿ’, ‘ದೇಶಬಿಟ್ಟು ತೊಲಗಿ ಚಳವಳಿ’, “ಬೇಜವಾಬ್ದಾರಿಯುತ ನೀತಿ” ಎಂದು ಅಂಬೇಡ್ಕರ್ ಅರ್ಥೈಸಿದ್ದಾರೆ. ಇದಕ್ಕೆ ಕಾರಣ, ಜಪಾನಿ ಮತ್ತು ಜರ್ಮನಿಯ ಸೈನ್ಯವು ಭಾರತದ ಕದತಟ್ಟಿ ನಿಂತ ಸಮಯದಲ್ಲಿ, ಚಳವಳಿಗಳಿಂದ ಶಿಥಿಲಗೊಳ್ಳುತ್ತಿದ್ದ ಆಂತರಿಕ ಕಾನೂನು ವ್ಯವಸ್ಥೆಯು ಈ ಸಂದರ್ಭದಲ್ಲಿ ಹೊಸ ಅಧಿಪತ್ಯಗಳ ಯಜಮಾನಿಗೆ ಅನುವು ಮಾಡಿಕೊಟ್ಟಂತಾಗುತ್ತಿತ್ತು. ಇದೇ ಕಾರಣಕ್ಕಾಗಿಯೇ ಅಂಬೇಡ್ಕರ್ ಅನುಯಾಯಿಗಳು ಈ ಸಂದರ್ಭದ ಈ ತೆರನಾದ ರಾಷ್ಟ್ರೀಯ ಚಳವಳಿಗಳಿಂದ ದೂರವೇ ಉಳಿದ್ದರು. ಇದೂ ಕೂಡ ಹಲವು ವಿದ್ವಾಂಸರು ಅಂಬೇಡ್ಕರ್ ದೇಶಭ್ರಷ್ಟ ಹಾಗೂ ರಾಷ್ಟ್ರೀಯ ವಿರೋಧಿ ಎಂದು ಪರಿಗಣಿಸಲು ಕಾರಣವಾಗಿದೆ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ಅಂಬೇಡ್ಕರ್ ವಿರೋಧಿಸಿದ್ದು ಅಪ್ರಾಪ್ತ ಸಮಯದಲ್ಲಿ ಅದೂ ಕೂಡ ಜಪಾನಿಯರು ಮತ್ತು ಜರ್ಮನಿಯರು ಭಾರತದ ಬಾಗಿಲುಗಳನ್ನು ಬಡಿಯುತ್ತಿದ್ದಾಗ ದೇಶ ಅನುಸರಿಸುತ್ತಿದ್ದ ಮಾರ್ಗವನ್ನಷ್ಟೆ. ಈ ಸಂದರ್ಭದಲ್ಲಿ ಬ್ರಿಟಿಷರನ್ನು ದೇಶದಿಂದ ಹೊರಹಾಕುವ ಚಳವಳಿಯು ಕೇವಲ ಮತ್ತೊಂದು ದೇಶದ ಸಾಮ್ರಾಜ್ಯಶಾಹಿ ನಮ್ಮ ಮೇಲೆ ಆಧಿಪತ್ಯ ಸಾಬೀತು ಮಾಡಿಕೊಳ್ಳುವುದೇ ಆಗಿತ್ತು.

ಅಂಬೇಡ್ಕರ್ ರಾಷ್ಟ್ರೀಯ ಚಳವಳಿಯಲ್ಲಿ ಪಾಲುಗೊಳ್ಳದಿದ್ದರೂ ಇವರು ಅದರ ಪರವಾಗಿಯೇ ಇದ್ದರು. ೧೯೩೦ರ ಉಪ್ಪಿನ ಚಳವಳಿಯ ಸಂದರ್ಭದಲ್ಲಿ, ಕಾಡಿನ ಸತ್ಯಾಗ್ರಹ ಇಡೀ ದೇಶಾದ್ಯಂತ ಏರ್ಪಟ್ಟಾಗ, ಮಹಾರಾಷ್ಟ್ರದ ಕೋಲಾರ ಜಿಲ್ಲೆಯ ಚಿರ್ನಾರ್ ನಲ್ಲಿಯೂ ಸಂಭವಿಸಿದ ಪರಿಣಾಮವಾಗಿ ಗೋಲಿಬಾರ್, ಸಾಮೂಹಿಕ ದಸ್ತಗಿರಿ ಹಾಗೂ ಸಾವು ನೋವುಗಳು ಸಂಭವಿಸಿದವು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ೧೯೩೧ರ ಮಾರ್ಚ್‌ನಲ್ಲಿ ಮುಂದಾದರು. ಚಿರ್ನಾರ್ ವಿಚಾರಣೆಯ ಸಂದರ್ಭದಿಂದ ಈ ದೇಶದ ಜನತೆ ಅಂಬೇಡ್ಕರ್ ಅವರ ದೇಶೀ ವಿಧೇಯತೆಯ ಮಾನ್ಯತೆಯನ್ನು ಪರಿಗಣಿಸಿದ್ದಾರೆ.

ಅವರ ಸ್ವಾತಂತ್ರ್ಯ ಚಳವಳಿಯ ವಿರೋಧವು, ರಾಜಕೀಯ ಸ್ವಾತಂತ್ರ್ಯವು ನಿಶ್ಚಿತವಾಗಿ ಸಾಮಾಜಿಕ ಹಾಗೂ ಆರ್ಥಿಕ ವಿಮೋಚನೆಯನ್ನೇನು ತರುವುದಿಲ್ಲವೆಂಬ ನಂಬಿಕೆಯಿಂದಷ್ಟೇ ರೂಪಿತವಾಗಿತ್ತು. ಹೀಗಾಗಿಯೇ, ಒಂದು ರಾಷ್ಟ್ರದ ಒಳಗೆ ಸಾಮಾಜಿಕ ಆರ್ಥಿಕ ವಿಮೋಚನೆ, ಸಮಾನತೆ ಮತ್ತು ಭ್ರಾತೃತ್ವವು, ರಾಜಕೀಯ ಸ್ವಾತಂತ್ರ್ಯಕ್ಕೆ ಅತ್ಯಂತ ಪ್ರಾಥಮಿಕವಾಗಿತ್ತು. ಆದರೆ ಭಾರತದ ಆಳುವ ಮೇಲ್ವರ್ಗ ಹೋರಾಡುತ್ತಿದದ್ದು ಇಲ್ಲಿನ ಗುಲಾಮಿ ವರ್ಗದವರು ಆಳುವ ಸ್ವಾತಂತ್ರ್ಯಕಷ್ಟೇ ಸೀಮಿತವಾದಂತಿತ್ತು. ಅವರಿಗೆ ಸ್ವಾತಂತ್ರ್ಯ ಬೇಕಿದ್ದದು ತಮಗಿಂತ ಉತ್ಕೃಷ್ಟವೆಂದುಕೊಂಡಿದ್ದ ವಿದೇಶಿ ಯಜಮಾನಿ ಜನಾಂಗದಿಂದ. ಅದರ ಪರ್ಯಾಯವಾಗಿ ಆಳುವ ಸಂತತಿಯಾಗಿ ತಾವು ಯಜಮಾನಿಕೆಯನ್ನು ಸಾಧಿಸಬೇಕಿತ್ತಷ್ಟೆ. ವರ್ಗ ಸಂಘರ್ಷದ ಮೇಲೆ ಆಧಾರಿತವಾದ ರಾಜಕೀಯ ಕಾರ್ಯಾಚರಣೆಯು ತಮ್ಮ ಉದ್ದೇಶವನ್ನೆಂದಿಗೂ ಈಡೇಸದು ಎಂಬುದನ್ನು ಆಳುವ ವರ್ಗ ತಿಳಿದುಕೊಳ್ಳುಷ್ಟು ಸಮರ್ಥವಾಗಿತ್ತು. ಇಂತಹ ಸಂದರ್ಭದಲ್ಲಿ ಆಳಿಸಿಕೊಳ್ಳುವ ವರ್ಗದವರನ್ನು ದಾರಿ ತಪ್ಪಿಸುವ ಏಕಮಾತ್ರ ಸಾಧನವಾಗಿ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಏಕತೆಯೆಂಬ ಭಾವನೆಯ ದಾಳ ಪರಿಣಾಮಕಾರಿಯಾಗಿದ್ದವು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರಿಗೆ ತನ್ನ ಸಮುದಾಯದ ವಿಮೋಚನೆಯು ರಾಜಕೀಯ ಸ್ವಾತಂತ್ರ್ಯಕ್ಕಿಂತ ಮಹತ್ವಪೂರ್ಣವಾಗಿತ್ತು. ಇದು ಅಂಬೇಡ್ಕರ್ ಅನುಯಾಯಿಗಳು ಸ್ವಾತಂತ್ರ್ಯ ಹೋರಾಟದಿಂದ ದೂರವುಳಿದರೇಕೆ ಎಂಬುದನ್ನು ವಿವರಿಸುತ್ತದೆ.

ರಕ್ಷಣಾ ಸಿದ್ಧಾಂತ ಅಥವಾ ಸಂರಕ್ಷಿತವಾದ

ಸಂರಕ್ಷಣೆಯ ಮೂಲ ಉದ್ದೇಶಕ್ಕೆ ಹಿಂದೂ ಸಾಮಾಜಿಕ ವ್ಯವಸ್ಥೆಯೊಳಗೆ ಆಳವಾಗಿ ಬೇರೂರಿದ್ದ ಅಸಮಾನತೆಯ ಶ್ರೇಣಿಯು ಕಾರಣವಾಗಿದೆ. ಇದು ನಿಶ್ಚಿತವಾಗಿ ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ವಿರೋಧವಾಗಿದೆ. ಈ ಶ್ರೇಣೀಕೃತ ಅಸಮಾನತೆಗೆ ಪ್ರತಿರೋಧವಾಗಿ ರಾಜಕೀಯ ಸಂರಕ್ಷಣೆಯನ್ನು ನೀಡುವುದರ ಮೂಲಕ ಶಾಸನ ಸಭೆ, ಕಾರ್ಯಾಲಯ ಹಾಗೂ ಸಾರ್ವಜನಿಕ ಸೇವೆಯಲ್ಲಿ ಕನಿಷ್ಟಮಟ್ಟದ ಪ್ರಾತಿನಿಧಿತ್ವದ ಬದ್ಧತೆಯನ್ನು ಒದಗಿಸಿದಂತಾಗುತ್ತದೆ ಎಂಬುದು ಅಂಬೇಡ್ಕರ್ ಅಭಿಪ್ರಾಯ. ಈ ತೆರನಾದ ರಕ್ಷಣಾತ್ಮಕ ವ್ಯವಸ್ಥೆಯನ್ನು ಅಸ್ಪೃಶ್ಯರಿಗೆ ಒದಗಿಸದಿದ್ದಲ್ಲಿ ಬಹುಸಂಖ್ಯಾತ ಹಿಂದೂ ಕೋಮುವಾದಿಗಳೇ ಶಾಸನಸಭೆ, ಕಾರ್ಯಾಲಯ ಹಾಗೂ ಆಡಳಿತವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ಅತಿಮುಖ್ಯವಾದಂತಹ ರಾಜ್ಯದ ಅಧಿಕಾರಯುತ ಸಂಸ್ಥೆಗಳು ಅವರ ಹಿಡಿತಕ್ಕೆ ಒಳಗಾಗುತ್ತದೆ. ಆಗ ಅವರು ಅಲ್ಪಸಂಖ್ಯಾತ ಹಿಂದೂ ಕೋಮುವಾದಿಗಳು ಸಂಭವಿಸುತ್ತಾರೆ.

ಅಂಬೇಡ್ಕರ್‌ರಿಗೆ ಕೆಳವರ್ಗದವರನ್ನು ಉತ್ತಮ ಗುಣಮಟ್ಟಕ್ಕೆ ಕೊಂಡೊಯ್ಯುವುದೇ ಸಮಾನತೆಯ ಪ್ರತೀಕವಾಗಿತ್ತು. ವಿಮೋಚನೆಗಳಿಸಿಕೊಳ್ಳುವುದೇ ಅಸ್ಪೃಶ್ಯರ ಗಂಭೀರವಾದ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಬಹುಸಂಖ್ಯಾತರ ಕೈಯಿಂದ ವಿಮುಕ್ತಿಯನ್ನು ಅಲ್ಪಸಂಖ್ಯಾತರು ಹೊಂದುವುದು ಸಮಾನತೆಯನ್ನು ಗಳಿಸಿದಾಗ ಮಾತ್ರ ಸಾಧ್ಯವಾಗುತ್ತದೆ.

ಅಂಬೇಡ್ಕರ್‌ರ ಪ್ರಕಾರ ಅಸ್ಪೃಶ್ಯತೆಯು ಧಾರ್ಮಿಕ ವ್ಯವಸ್ಥೆಯನ್ನೇ ಮೀರಿದ್ದು. ಅದು ಗುಲಾಮಗಿರಿಯ ಹಾಗೆ ಒಂದು ಆರ್ಥಿಕ ವ್ಯವಸ್ಥೆ ಕೂಡ ಹೌದು. ಅದು ಒಂದು ಆರ್ಥಿಕ ವ್ಯವಸ್ಥೆಯಾಗಿ ಬಹುತೇಕ ಜನವರ್ಗಗಳ ಶೋಷಣೆಯನ್ನು ಸಕ್ರಮಗೊಳಿಸುತ್ತದೆ. ಅಸ್ಪೃಶ್ಯತೆಯು ಆರ್ಥಿಕ ಶೋಷಣೆಯನ್ನು ನಿಯಂತ್ರಿಸಲಾಗದ ಮತ್ತು ಶಮ ಮಾಡಲಾಗದ ಒಂದು ವ್ಯವಸ್ಥೆಯಾಗಿದೆ. ಅಸ್ಪೃಶ್ಯತೆಯ ಶಾಶ್ವತವಾಗಿಸುವುದರಿಂದ ಆರ್ಥಿಕ ಉಪಯೋಗವನ್ನು ಪಡೆದುಕೊಳ್ಳಲು ಹಿಂದೂ ಜಾತಿ ಪದ್ಧತಿಗೆ ಕಾರಣವಾಗಿದೆ. ಶೋಷಿತ ವರ್ಗಗಳನ್ನು ಶಾಸನಸಭೆ, ಕಾರ್ಯಾಲಯ ಹಾಗೂ ಸಾರ್ವಜನಿಕ ಸೇವೆಯಲ್ಲಿ ಮೀಸಲಾಯಿತ ಧ್ವನಿಯನ್ನು ಎತ್ತಿದಾಗಲೆಲ್ಲ ಆಳುವ ವರ್ಗವು ಸದಾ ಆ ಕೂಗನ್ನು ರಾಷ್ಟ್ರೀಯತೆಯ ಆತಂಕವಾಗಿ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯತೆಗಾಗಿ ವಿಶೇಷ ಸವಲತ್ತುಗಳನ್ನು ತ್ಯಾಗ ಮಾಡುವುದರ ಬದಲಾಗಿ ರಾಷ್ಟ್ರೀಯತೆಯನ್ನು ತಮ್ಮ ಹಕ್ಕು ಬಾಧ್ಯತೆಗಳನ್ನು ರಕ್ಷಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಅಂಬೇಡ್ಕರ್‌ರಿಗೆ ತುಳಿತಕ್ಕೊಳಗಾದ ವರ್ಗಗಳಿಗೆ ಮೀಸಲಾತಿಯ ಬೇಡಿಕೆಯು ಸೂಕ್ತವಾದ ಬೇಡಿಕೆಯೇ ಆಗಿತ್ತು. ಅದು ಆಳುವ ವರ್ಗದ ಅಧಿಕಾರವನ್ನು ನಿಯಂತ್ರಿಸುತ್ತದೆ ಎಂದು ಅವರು ಭಾವಿಸಿದ್ದಾರೆ.

ಅಸ್ಪೃಶ್ಯತೆಯ ಮೇಲೆ ಹರಿದ ಚಾರಿತ್ರಿಕ ದುರ್ಬಲತೆ, ರಕ್ಷಣಾತ್ಮ ಕತೆಯ ವಿಕಾಸವು ಪ್ರತ್ಯುತ್ತರವಾಗಿದೆ. ಶೋಷಿತ ವರ್ಗಗಳಿಗೆ ಹೀನಾಯ ಸ್ಥಿತಿ ವ್ಯಕ್ತಪಡಿಸಿದ ಕಾರಣಕ್ಕಾಗಿ ಅಂಬೇಡ್ಕರರು ಶೋಷಿತವರ್ಗವು ಹಿಂದೂ ಸಮುದಾಯದಿಂದ ಸಂಪೂರ್ಣವಾಗಿ ಭಿನ್ನ ಎಂದು ವರ್ಗೀಕರಿಸುವ ಬೇಡಿಕೆಗೆ ಕಾರಣವಿದೆ. ಅವರು ಅಸ್ಪಶ್ಯರನ್ನು ಹಿಂದೂಯೇತರ ಜಾತಿಗಾಗಿ, ಪ್ರತಿಹಿಂದೂಗಳು ಅಥವಾ ಹಿಂದೂ ಪ್ರತಿರೂಪವಾಗಿ ನಾಮಾಂಕಿತಗೊಳಿಸಲು ಸೂಚಿಸಿದರು. ಅಸ್ಪೃಶ್ಯರುಗಳನ್ನು ಹಿಂದೂಗಳಿಗಿಂತ ಪ್ರತ್ಯೇಕ ಬದುಕನ್ನು ಹೊಂದಿರುವರು ಎಂದು ಸ್ಪಷ್ಟೀಕರಿಸಿದರು. “ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುವಂತೆ ಬೇರಾರು ನಿವಾರಿಸಲು ಸಾಧ್ಯವಿಲ್ಲ, ನಮಗೆ ರಾಜಕೀಯ ಅಧಿಕಾರ ಲಭ್ಯವಾಗದ ಹೊರತು ನಾವು ಅವುಗಳನ್ನು ಸುಧಾರಿಸಲು ಸಾಧ್ಯವಿಲ್ಲ… ಶೋಷಿತ ವರ್ಗಗಳುಪವಾಡಕ್ಕಾಗಿ ಅನುಗಾಲದಿಂದಲೂ ಕಾದಿದ್ದಾರೆ” ಎಂದು ಅವರು ಭಾವಿಸಿದ್ದರು. ಪ್ರತ್ಯೇಕ ಮತಗಟ್ಟೆಗಳ ಪರವಾಗಿ ಅಂಬೇಡ್ಕರ್ ಬೆಂಬಲವನ್ನು ವ್ಯಕ್ತಪಡಿಸಿದರು. ಪ್ರತ್ಯೇಕ ಮತದಾನದ ವ್ಯವಸ್ಥೆಯು ಎರಡು ಮತದಾನದ ಹಕ್ಕನ್ನು ನೀಡುತ್ತದೆ. ಒಂದೆಡೆ ಮೀಸಲು ಕ್ಷೇತ್ರದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಇದು ವ್ಯಕ್ತಪಡಿಸುತ್ತದೆ.

ಮತೀಯ ತೀರ್ಪು ಶೋಷಿತ ವರ್ಗಗಳಿಗೆ ಪ್ರತ್ಯೇಕ ಮತಗಟ್ಟೆಗಳ ಆಶಯವನ್ನು ೧೯೩೨ರಲ್ಲಿ ಮ್ಯಾಕ್ ಡೊನಾಲ್ಡ್ ಅವರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಶೋಷಿತರಿಗೆ ನೀಡಲಾದ ೨ನೆಯ ಮತದಾನದ ಹಕ್ಕನ್ನು ‘ಬೆಲೆ ಕಟ್ಟಲಾಗದ ಸೌಲಭ್ಯ’ ಎಂದು ಬಣ್ಣಿಸಿದರು. ಈ ಸೌಲಭ್ಯವು ಅಸ್ಪೃಶ್ಯರ ಬಗ್ಗೆ ಉದಾಸೀನತೆ ಹಾಗೂ ಶೋಷಣೆಯ ವಿರುದ್ಧ ರಕ್ಷಣೆಯಾಗಿಯೂ ಹಾಗೂ ಸವರ್ಣೀಯ ಹಿಂದೂ ಪ್ರತಿನಿಧಿಗಳು ಅಸ್ಪೃಶ್ಯರ ಮತಗಳ ಮೇಲೆ ಅವಲಂಬಿತರನ್ನಾಗಿ ಮಾಡುತ್ತಿತ್ತು. ಆದರೆ ಪೂನಾ ಒಪ್ಪಂದವು ಅಂಬೇಡ್ಕರ್‌ಕಟ್ಟಿದ ಆತ್ಮ ನಿರ್ಬಲ ಚಳವಳಿಗೆ ಶಾಶ್ವತ ಅಂತ್ಯವನ್ನು ನೀಡಿತು. ಪೂನಾ ಒಪ್ಪಂದವು ಗಾಂಧಿ ಮತ್ತು ಅಂಬೇಡ್ಕರ್ ರ ನಡುವೆ ರಾಜಿಸೂತ್ರವಾಗಿ ಅಸ್ಪೃಶ್ಯರಿಗೆ ಮೀಸಲು ಸ್ಥಾನಗಳನ್ನು ಮತ್ತು ಜಂಟಿ ಮತದಾನದ ಹಕ್ಕನ್ನು ನೀಡುವ ಒಡಂಬಡಿಕೆಯಾಯಿತು. ಅಂಬೇಡ್ಕರರು ಸದಾ ಅಭದ್ರತೆಯ ಆತಂಕದಲ್ಲಿ ಮುಳುಗಿದ್ದರು. ಈ ಕಾರಣಕ್ಕಾಗಿಯೇ ಬ್ರಿಟಿಷರ ಅಧಿಕಾರ ಹಸ್ತಾಂತರಕ್ಕೆ ಮುನ್ನ ಅಸ್ಪೃಶ್ಯರಿಗೆ ಸಂವಿಧಾನಾತ್ಮಕವಾದ ರಕ್ಷಣೆಯನ್ನು ನೀಡುವಂತೆ ಆಗ್ರಹಿಸಿದರು. ಹೊಸ ಸಂವಿಧಾನದಲ್ಲಿ “ಶೋಷಿತ ವರ್ಗಗಳಿಗೆ ಸಾಮಾನ್ಯ ಮಾನವೀಯ ಬದುಕಿನ ಹಕ್ಕುಗಳು, ವಿಮೋಚನೆಯನ್ನು ಒದಗಿಸಿಕೊಡುವ ಹಿನ್ನೆಲೆಯಲ್ಲಿ ಪ್ರತ್ಯೇಕ ಮತಗಟ್ಟೆಗಳು ಮತ್ತು ಇನ್ನಿತರರಿಗೆ ರಕ್ಷಣಾ ನಿಯಮಗಳನ್ನು ಪುನರ್‌ಸ್ಥಾಪಿಸುವಂತೆ ಅಂಬೇಡ್ಕರ್‌ಆಗ್ರಹಿಸಿದರು.”

ಜಂಟಿ ಮತಗಟ್ಟೆಗಳ ವ್ಯವಸ್ಥೆಯು ಬಹಳ ಸುಲಭವಾಗಿ ಶೋಷಿತ ವರ್ಗದ ಅಭ್ಯರ್ಥಿಗಳನ್ನು ನಿಗ್ರಹಿಸಬಹುದಿತ್ತು. ಏಕೆಂದರೆ ಬಹುಸಂಖ್ಯಾತ ಸವರ್ಣೀಯ ಹಿಂದೂಗಳಿಗಿಂತ ಶೋಷಿತ ವರ್ಗದ ಅಭ್ಯರ್ಥಿಯ ಅಲ್ಪಸಂಖ್ಯಾತ ಬೆಂಬಲವನ್ನು ಹೊಂದಿರುವ ಹಿನ್ನೆಲೆಯಲ್ಲಿ ಇದು ಸಾಧ್ಯವಾಗುತ್ತದೆ ಎಂಬುದನ್ನು ಅಂಬೇಡ್ಕರ್ ವ್ಯಕ್ತಪಡಿಸಿದರು. ಇಷ್ಟೇ ಅಲ್ಲದೆ ಕ್ರಮೇಣವಾಗಿ ಸವರ್ಣೀಯ ಹಿಂದೂಗಳು ಎಂದಿಗೂ ಕೂಡ ಅಸ್ಪೃಶ್ಯ ಅಭ್ಯರ್ಥಿಯನ್ನು ಬೆಂಬಲಿಸುವುದೇ ಇಲ್ಲ ಎಂದು ಅವರು ನಂಬಿದ್ದರು. ಸವರ್ಣೀಯ ಹಿಂದೂಗಳು ಅಸ್ಪೃಶ್ಯ ಮತದಾರರಿಗಿಂತಲೂ ಸಂಖ್ಯೆಯಲ್ಲಿ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ. ಈ ತೆರನಾದ ಸಂದರ್ಭದಲ್ಲಿ ಅಸ್ಪೃಶ್ಯ ಅಭ್ಯರ್ಥಿಯೊಬ್ಬನ ಆಯ್ಕೆ ಸದಾ ಮೇಲ್ವರ್ಗದವರ ಕೃಪೆಯಲ್ಲಿತ್ತು. ಈ ಹಿನ್ನೆಲೆಯಲ್ಲಿಯೇ ಅಸ್ಪೃಶ್ಯರಿಗೆ ಅಂಟಿಕೊಂಡಿರುವ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವ ಏಕಮಾತ್ರ ಮಾರ್ಗವಾಗಿ ಅವರು ಪ್ರತ್ಯೇಕ ಮತಗಟ್ಟೆಗಳ ಬೇಡಿಕೆಯನ್ನು ಮುಂದಿಟ್ಟರು ಎನ್ನುವುದು ಗಮನಾರ್ಹ.

ಅಂಬೇಡ್ಕರ್ ಅವರಿಗಿದ್ದ ಸಾಮಾಜಿಕ ನ್ಯಾಯದ ಬಗೆಗಿನ ದೃಷ್ಟಿಯಿಂದ, ಅಸ್ಪೃಶ್ಯರ ಹಿತಾಸಕ್ತಿಯನ್ನು ಪೋಷಿಸುವ ಕಾರಣದಿಂದ, ಭಾರತೀಯ ಸಂವಿಧಾನದಲ್ಲಿ ಅವರೇ ಮೂಲತಃ ಅಸ್ಪೃಶ್ಯರ ಸಮಸ್ಯೆಗಳಿಗೆ ಪರಿಹಾರವನ್ನು ಹಾಗೂ ಅವರುಗಳಿಗೆ ಅಗತ್ಯವಾದ ಪೋಷಣೆಯನ್ನು ತರುವ ಉದ್ದೇಶದಿಂದ ಅಂಬೇಡ್ಕರರು ಸಂವಿಧಾನ ಸಭೆಯ ಸದಸ್ಯರಾಗಿ ಪ್ರವೇಶಿಸಿದರು. ಅವರು ಅಸ್ಪೃಶ್ಯರು, ಅಲ್ಪಸಂಖ್ಯಾತರು ಎಂದು ಘೋಷಿಸಲು ತೀವ್ರವಾದ ಪ್ರಯತ್ನವನ್ನು ಮಾಡಿದರು. ಸಂವಿಧಾನಾತ್ಮಕವಾಗಿ ಅಸ್ಪೃಶ್ಯ ವರ್ಗದವರಿಗೆ ವಾರ್ಷಿಕ ನಿಶ್ಚಿತ ಹುದ್ದೆಗಳನ್ನು ತೆರದಿಡುವುದು, ವಯೋಮಿತಿ ಸಡಿಲಿಕೆ, ಪರೀಕ್ಷಾ ಶುಲ್ಕದ ಸಡಿಲಿಕೆ ಮತ್ತು ಸಂವಿಧಾನದ ನಿಬಂಧನೆಗಳನ್ನು ಅನುಷ್ಠಾನಗೊಳಿಸಲು ಪರಿಶಿಷ್ಟ ಜಾತಿ ಅಧಿಕಾರಿಗಳನ್ನು ನೇಮಿಸುವುದು ಇವರ ಪ್ರಯತ್ನದ ಆಶಯವಾಗಿತ್ತು. ಸಂವಿಧಾನದ ೭ನೆಯ ಪರಿಚ್ಛೇಧದ ಅಡಿಯಲ್ಲಿ ಅಸ್ಪೃಶ್ಯತೆಯ ಆಚರಣೆಯ ವಿರುದ್ಧದ ನಿರ್ಬಂಧ ಮತ್ತು ಮೀಸಲಾತಿ ನೀತಿ ಇವೇ ಅಂಬೇಡ್ಕರ್ ಸಂಘರ್ಷದ ಕೊಡುಗೆ ಎಂದು ಹೇಳಬಹುದು.

ಆಧುನಿಕೋತ್ತರ ಕಾಲಘಟ್ಟದಲ್ಲಿ ಮೀಸಲಾತಿಯ ನೀತಿಯ ವಿಶೇಷವಾಗಿ ಚರ್ಚೆಗೆ ಒಳಗಾಗಿದೆ. ಮೀಸಲಾತಿ ಪರ ವಿಚಾರವಾದಿಗಳು, ಅಸ್ಪೃಶ್ಯರು ತಾವು ಅನುಭವಿಸಿದ ಚರಿತ್ರಾರ್ಹ ಶೋಷಣೆಯ ಹಿನ್ನೆಲೆಯಲ್ಲಿ ಅವರುಗಳಿಗೆ ಒದಗಿಸಿರುವ ಮೀಸಲಾತಿಯನ್ನು “ತಾರತಮ್ಯತೆಯ ಪರಿಹಾರ”ವೆಂಬ ವಿಶೇಷ ಪದದಿಂದ ವ್ಯಾಖ್ಯಾನಿಸಿದರು. ಜಾತಿವ್ಯವಸ್ಥೆಯ ಸಾಮಾಜಿಕ ವ್ಯಸನವು ಪರೀಕ್ಷವಾಗಿ ಆಚರಣೆಯಲ್ಲಿ ಮುಂದುವರೆದಿರುವ ಈ ಸಂದರ್ಭಗಳಲ್ಲಿ ಮೀಸಲಾತಿ ನೀತಿಯು ಪ್ರಸ್ತುತವಾಗಿ ಕಂಡುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಮೀಸಲಾತಿಯು ಮತ ಕ್ರೊಢೀಕರಣದ ಒಂದು ರಾಜಕೀಯ ವಿದ್ಯಮಾನವಾಗಿರುವುದರಿಂದ ಹೆಚ್ಚು ಕಡಿಮೆ ಮೀಸಲಾತಿ ನೀತಿಯನ್ನು ಎಲ್ಲ ಸರ್ಕಾರಗಳು ಅನುಸರಿಸುತ್ತಾ ಬಂದಿವೆ.

ಅಂಬೇಡ್ಕರ್ ಅವರ ಕೊಡುಗೆಗಳು

ಅಂಬೇಡ್ಕರ್ ಶೋಷಿತ ವರ್ಗದ ವಿಮೋಚನಾಕಾರಕರಾಗಿ ಅತ್ಯಂತ ಉತ್ಕೃಷ್ಟ ಸೇವೆಯನ್ನು ಸಲ್ಲಿಸಿದ್ದಾರೆ. ಅವರುಗಳಿಗೆ ಸಾಮಾಜಿಕ ಸಮಾನತೆಯನ್ನು ಒದಗಿಸಿಕೊಡುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಸಂವಿಧಾನದ ಕಡರನ್ನು ರಚಿಸುವಲ್ಲಿ ಅವರ ಸೇವೆ ಶ್ಲಾಘನೀಯ. ಅವರು ತಮ್ಮ ಜೀವಮಾನದ ಪರಿಶ್ರಮವನ್ನು ಜಾತಿವ್ಯವಸ್ಥೆಯ ಅನ್ಯಾಯ ಮತ್ತು ಅಸಮಾನತೆಯ ಸಂಘರ್ಷದಲ್ಲಿ ಪರಿತಪಿಸಿದರು. ಹಿಂದೂ ಸಮಾಜದ ಸಮಗ್ರ ಏಳಿಗೆ ಹಾಗೂ ಸುಧಾರಣೆಗಾಗಿ ಪಣತೊಟ್ಟು ನಿಂತರು. ಅಸ್ಪೃಶ್ಯರಿಗೆ ಶತಮಾನಗಳಿಂದಲೂ ವಂಚಿತವಾಗಿದ್ದ ಕೆಲವು ಮೂಲಭೂತ ಮಾನವೀಯ ಹಕ್ಕುಗಳನ್ನು ಒದಗಿಸಿ ಕೊಡುವಲ್ಲಿ ಅವರು ದೃಢಪ್ರಯತ್ನವನ್ನು ಮಾಡಿದರು. ಸಾರ್ವತ್ರಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಪೃಶ್ಯರ ಸಮಸ್ಯೆ ಜಾಗೃತಿಯ ಪರಿಭಾಷೆ ವ್ಯಕ್ತವಾಗುವಲ್ಲಿ ಇವರೇ ಮುಖ್ಯವಾಗಿ ಕಾರಣರು.

ಅಂಬೇಡ್ಕರ್ ಅವರು ಅಪಾರ ಜ್ಞಾನವನ್ನು ಸಂಪಾದಿಸಿ ತಾವು ಜೀವಿಸುತ್ತಿದ್ದ ಸಮಾಜದೊಳಗೆ ತಲೆದೋರಿದ ಅನ್ಯಾಯವನ್ನು ಪ್ರಶ್ನಿಸಿದರು. ಅವರಿಗೆ ಮನವರಿಕೆಯಾದ ವಿಷಯವೆಂದರೆ ಅಸ್ಪೃಶ್ಯರನ್ನು ಹೊರತುಪಡಿಸಿ ಬೇರಾರೂ ತಮ್ಮ ವ್ಯಸನಗಳನ್ನು ಪರಿಹರಿಸಲಾರರು. ಸಾಕಷ್ಟು ರಾಜಕೀಯ ಪ್ರಾತಿನಿಧಿತ್ವದ ಮೂಲವೇ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಅವರ ನಂಬಿಕೆಯಾಗಿತ್ತು. ಶೋಷಿತ ವರ್ಗದವರಿಗೆ ನಾಯಕತ್ವದ ಹಾಗೂ ಸಂಘಟನೆಯ ಕೊರತೆಯಿತ್ತು. ಈ ಸಂದರ್ಭದಲ್ಲಿ ಶೋಷಿತ ವರ್ಗಗಳು ಅಂಬೇಡ್ಕರ್‌ಅವರಿಂದ ಆ ಕೊರತೆಯನ್ನು ನಿವಾರಿಸಿಕೊಂಡಿತು. ಅಂಬೇಡ್ಕರ್ ಅವರು ಆಶಾಕಿರಣವಾಗಿ, ಜ್ಞಾನಜ್ಯೋತಿಯಾಗಿ ವಿವೇಚನೆ ತುಂಬಿ ವೃತ್ತಪತ್ರಿಕೆ, ಗ್ರಾಮೀಣ ಮತ್ತು ಸಾಂಸ್ಕೃತಿಕ ವೇದಿಕೆಗಳನ್ನು ಹಾಗೂ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಅಸ್ಪೃಶ್ಯರನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡಿದರು. ಈ ಉದ್ದೇಶದಿಂದಲೇ ಅವರು ಡಿಪ್ರೆಸ್ಟ್ ಕ್ಲಾಸ್ ಇನ್‌ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ೧೯೨೪ರಲ್ಲಿ ಹಾಗೂ “ಸ್ವರಾಜ್ ಸಮತಾ ಸಂಘ”ವನ್ನು ೧೯೨೭ರಲ್ಲಿ ಸ್ಥಾಪಿಸಿದರು. ಬ್ರಿಟಿಷ್‌ ಭಾರತದ ಸರ್ಕಾರದಲ್ಲಿ ನಿರಂತರವಾಗಿ ಅವರು ರಾಜಕೀಯ ಪ್ರಾನಿಧ್ಯಕ್ಕಾಗಿ ಆಗ್ರಹಿಸಿದರು. ಅವರು ದುರ್ಬಲ ವರ್ಗದವರಿಗೆ ವಿದ್ಯಾಭ್ಯಾಸದ ಅಗತ್ಯವನ್ನು ಅರಿತುಕೊಂಡವರಾಗಿದ್ದರು. ಇದಕ್ಕಾಗಿಯೇ ಅವರು ಕಾಲೇಜುಗಳ ಜಾಲವನ್ನೇ ಸ್ಥಾಪಿಸಿ ಪೀಪಲ್ಸ್‌ ಎಜ್ಯುಕೇಶನ್ ಸೊಸೈಟಿ ಎಂದು ನಾಮಕರಣವನ್ನು ಮಾಡಿದರು. ಇದರ ಅಂಗಸಂಸ್ಥೆಯಾಗಿ ಹಲವಾರು ವಿದ್ಯಾರ್ಥಿನಿಲಯಗಳನ್ನು ಕೂಡ ಸ್ಥಾಪಿಸಿದರು.

ಅಂಬೇಡ್ಕರ್ ಅವರು ೧೯೨೭ ರಲ್ಲಿ “ಬಹಿಷ್ಕೃತ ಭಾರತ” ಎಂಬ ವೃತ್ತಪತ್ರಿಕೆಯನ್ನು ಹೊರತಂದರು. ಶೋಷಿತ ವರ್ಗಗಳ ಸಮಸ್ಯೆಯನ್ನು ಪ್ರತಿಬಿಂಬಿಸಲು ಹಾಗೂ ಸುಧಾರಣೆಗೆ ಪ್ರೇರಕವಾಗಿ ವೃತ್ತಿಪತ್ರಿಕೆಯೊಂದರ ಅವಶ್ಯಕತೆಯನ್ನು ಕಂಡರು. ತಮ್ಮ ಸಮುದಾಯದ ಜನಸಂಖ್ಯಾಧಾರಿತ ಪ್ರಾತಿನಿಧಿತ್ವವನ್ನು ಗಳಿಸಿಕೊಡುವುದು ಅವರ ಮುಖ್ಯ ಕಾಳಜಿಯಾಗಿತ್ತು. ಸಾರ್ವಜನಿಕ ಸ್ಥಳಗಳು ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಮುಕ್ತಗೊಳಿಸುವ ಪ್ರಯತ್ನದಲ್ಲಿ ಅವರು ವಿಫಲರಾದಾಗ, ಪ್ರತ್ಯೇಕ ಮತಗಟ್ಟೆಗಳ ಭೇಟಿಕೆಯನ್ನು ೧೯೨೭ರಲ್ಲಿ ಮುಂದಿಟ್ಟರು. ೧೯೩೨ರಲ್ಲಿ ಪ್ರತ್ಯೇಕ ಮತಗಟ್ಟೆಗಳ ಆಶಯ ಸ್ವಲ್ಪಮಟ್ಟಿಗೆ ಸಾಕ್ಷಾತ್ಕಾರಗೊಂಡದ್ದು, ಗಾಂಧೀಜಿಯವರು ಜಂಟಿ ಮತಗಟ್ಟೆಗಳ ಹಾಗೂ ಮೀಸಲು ಸ್ಥಾನಗಳನ್ನು ಒಪ್ಪಿದಾಗ, ಅಸ್ಪೃಶ್ಯರಿಗಾಗಿ ಸಾಮಾಜಿಕ ಸಮಾನತೆಯ ಅವರ ನಿರಂತರ ಕೂಗು ಕಿವಿಗೂಡಿದಾಗ, ಪ್ರಥಮ ಬಾರಿಗೆ ೧೯೩೦ರ ಮಧ್ಯಂತರದಲ್ಲಿ ಅವರು ಹಿಂದೂ ಧರ್ಮವನ್ನು ತ್ಯಾಗ ಮಾಡುವುದರ ಬಗ್ಗೆ ಚಿಂತಿಸತೊಡಗಿದರು. ಅಕ್ಟೋಬರ್ ೧೯೩೫ರ ನಾಸಿಕ್‌ನಲ್ಲಿ ಜರುಗಿದ ಶೋಷಿತ ವರ್ಗಗಳ ಪ್ರಾಂತೀಯ ಸಮ್ಮೇಳನದಲ್ಲಿ ಅವರು “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ” ಎಂದು ಘಂಟೋಘೋಷವಾಗಿ ನುಡಿದರು. ಅವರ ಹಿಂದೂ ಧರ್ಮವನ್ನು ಪರಿತ್ಯಜಿಸುವ ಆಸೆ ಕೈಗೂಡಿದ್ದು. ಇದಾದ ಎರಡು ದಶಕದ ನಂತರ. ೧೯೫೬ರ ಅಕ್ಟೋಬರ್‌ನಲ್ಲಿ ನಾಗಪುರದ ಸಾರ್ವತ್ರಿಕ ಸಮಾರಂಭದಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಗಮನಾರ್ಹವಾಗಿದೆ.

ಶೋಷಿತವರ್ಗದವರು ಸಾಮಾನ್ಯವಾಗಿ ಕಾರ್ಮಿಕರಾದ್ದರಿಂದ ಅವರ ಏಳಿಗೆಗಾಗಿ ಪರಿಶ್ರಮಿಸಲು ‘ಸ್ವತಂತ್ರ ಕಾರ್ಮಿಕ ಪಕ್ಷ’ವನ್ನು ೧೯೩೫ರಲ್ಲಿ ಕಟ್ಟಿದರು. ಕೆಲವು ಕಾಲ ಮುಂಬೈನ ಶಾಸನ ಸಭೆಯ ವಿರೋಧ ಪಕ್ಷದಲ್ಲಿಯೂ ಕಾರ್ಯ ನಿರ್ವಹಿಸಿದರು. ೧೯೪೬ರ ನವೆಂಬರ್‌ನಲ್ಲಿ ಬಂಗಾಳದಿಂದ ಸಂವಿಧಾನ ಸಭೆಗೆ ಆಯ್ಕೆಗೊಂಡು ತಮ್ಮ ಭಾಷಣವೊಂದರಲ್ಲಿ “ಸಮಗ್ರ ಭಾರತ”ಕ್ಕಾಗಿ ಕರೆ ನೀಡಿದರು. ೧೯೪೭ರ ಆಗಸ್ಟ್ ನಲ್ಲಿ ಸಂವಿಧಾನ ಸಭೆ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಅವರ ಅತ್ಯಮೂಲ್ಯವಾದ ರಾಜಕೀಯ ಕೊಡುಗೆ ಸಂವಿಧಾನದಲ್ಲಿ ವ್ಯಕ್ತಗೊಳ್ಳುತ್ತದೆ. ಕರಡು ಸಮಿತಿಯ ಅಧ್ಯಕ್ಷರಾಗಿ ಹಲವು ಹಂತಗಳಲ್ಲಿ ಸಂವಿಧಾನ ರಚನೆಯ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಅವರ ಪರಿಶ್ರಮ, ಕೊಡುಗೆ ಹಾಗೂ ಉಪಯುಕ್ತತೆಯ ಹಿನ್ನೆಲೆಯಲ್ಲಿ ಅವರನ್ನು “ಸಂವಿಧಾನ ಶಿಲ್ಪಿ” ಎಂದು ಗೌರವಿಸಿದಲಾಗಿದೆ. ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ಸಂವಿಧಾನವು ಶಾಸನ ಸಭೆ ಹಾಗೂ ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಪ್ರಾತಿನಿಧಿತ್ವ ಒದಗಿಸುವ ಕಟ್ಟೆಚ್ಚರವನ್ನು ಒಳಪಡಿಸಲು ಮರೆಯಲಿಲ್ಲ. ಅಂತೆಯೇ ಅವರುಗಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಿದರು. ಭಾರತೀಯ ಸಂವಿಧಾನವು ಅಸ್ಪೃಶ್ಯಾಷರಣೆಯನ್ನು ನಿರ್ಬಂಧಿಸಿದೆ ಹಾಗೂ ಸರ್ಕಾರಿ ಅಧಿಕಾರಿಯೊಬ್ಬರನ್ನು ಅವರ ಕ್ಷೇಮಾಭಿವೃದ್ಧಿಗಾಗಿ ನೇಮಿಸುವ ಪೂರಕ ವಿಧಿಯನ್ನು ಅದು ಒಳಗೊಂಡಿದೆ. ಹೀಗೆ ನವಭಾರತದ ನಿರ್ಮಾತೃರಾಗಿ, ಸಮಾನತೆಯ ಶಿಲ್ಪಿಯಾಗಿ ಆಧುನಿಕ ಭಾರತವನ್ನು ಅಂಬೇಡ್ಕರ್ ಅವರು ಅನಾವರಣಮಾಡಿದರು.