ನೆಹರೂ ಮತ್ತು ಜಾತ್ಯತೀತತೆ

ಅಭಿವೃದ್ಧಿಯ ಫಲವನ್ನು ಅನುಭವಿಸಲು ಸಮಾಜದಲ್ಲಿ ಶಾಂತಿ, ಸೌಹಾರ್ದವಿರುವುದು ಅಗತ್ಯ. ಹಲವು ಧರ್ಮೀಯರು ನೆಲೆಸಿರುವ ಭಾರತೀಯ ಸಮಾಜದಲ್ಲಿ ಧರ್ಮಗಳ ನಡುವೆ ಸಹನೆ, ಸೌಹಾರ್ದದ ಅಗತ್ಯವನ್ನು ಮನಗಂಡು ಜಾತ್ಯತೀತತೆಯನ್ನು ಪ್ರತಿಪಾದಿಸಲಾಯಿತು. ಪಾಶ್ವಿಮಾತ್ಯ ರಾಷ್ಟ್ರಗಳಲ್ಲಿರುವಂತೆ ಧರ್ಮ ಮತ್ತು ರಾಜಮನೆತನದ ನಡುವಿರುವ ಸಂಬಂಧದ ಹಿನ್ನೆಲೆಯಲ್ಲಿ ಪರಿಭಾವಿಸಲಾದ ಜಾತ್ಯತೀತ ತತ್ವ ಭಾರತೀಯ ಪರಿಸ್ಥಿತಿಯಲ್ಲಿ ಹಲವೊಂದು ವಿಕಲ್ಪಗಳಿವೆ ಎಡೆ ಮಾಡಿಕೊಟ್ಟಿದೆ. ಆದರೆ ಜಾತ್ಯತೀತ ತತ್ವವನ್ನು ಖಾಸಗಿ ನಂಬಿಕೆಯ, ಸಂಪ್ರದಾಯದ ವಿಷಯಗಳ, ಸಾರ್ವಜನಿಕ, ಬೌದ್ಧಿಕ ಚಿಂತನೆ ಮತ್ತು ಆಧುನಿಕ ತಿಳುವಳಿಕೆಗಳ ಮೇಲೆ ಪ್ರಭಾವ ಬೀರಬಾರದು ಎನ್ನುವ ಕಾಳಜಿ ಇತ್ತು. ಈ ವಿಷಯದ ಕುರಿತಂತೆ ನೆಹರೂ ಮತ್ತು ಗಾಂಧೀಜಿಯವರ ವಿಚಾರಗಳು ವಿಭಿನ್ನವಾಗಿದ್ದುವು. ಜಾತ್ಯತೀತ ನಿಲುವುಗಳು ಇಂದು ಬಹಳಷ್ಟು ಚರ್ಚೆಯ ವಸ್ತುವಾಗಿವೆ. ಇದರ ಕುರಿತು ಸಮಾಜ ವಿಜ್ಞಾನಿಗಳು ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ ಮತ್ತು ಇದರ ಮರು ನಿರೂಪಣೆಯ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಲಾಗುತ್ತಿದೆ.

[1] ಆದರೆ ದೇಶದ ನವೋದಯದ ಪೂರ್ವಕಾಲದಲ್ಲಿ ಜಾತ್ಯತೀತತೆಯನ್ನು ಪರಿಕಲ್ಪಿಸುವುದರ ಹಿಂದಿದ್ದ ಉದ್ದೇಶಗಳನ್ನು ಇಂತಹ ಮರು ನಿರೂಪಣೆಯ ಕಾಲದಲ್ಲಿ ಗಮನಿಸಬೇಕಾಗುತ್ತದೆ. ಇದೇ ಉದ್ದೇಶದಿಂದ ನೆಹರೂ ಅವರು ಪ್ರತಿಪಾದಿಸಿದ, ಇಚ್ಛಿಸಿದ ಜಾತ್ಯತೀತೆಯ ಕುರಿತು ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ.

ಎಲ್ಲ ಜಾತಿ, ಧರ್ಮ, ಸಂಸ್ಕೃತಿಗಳ ಸಂಗಮವಾಗಿರುವ ಭಾರತ ದೇಶಕ್ಕೆ ಕೋಮುವಾದ ಬಹಳ ದೊಡ್ಡ ಶತ್ರು ಎನ್ನುವುದನ್ನು ನೆಹರೂ ಮನಗಂಡಿದ್ದರು. ಕೋಮುವಾದದೊಂದಿಗಿನ ಯಾವುದೇ ರಾಜೀ / ಹೊಂದಾಣಿಕೆ ಸ್ವತಂತ್ರ ಭಾರತವನ್ನು ರೂಪಿಸಿದ ಮೂಲತತ್ವಗಳಿಗೆ ಕೊಡಲಿ ಏಟು ಮಾತ್ರವಲ್ಲ ಅದು ಸ್ವಾತಂತ್ರ್ಯದ ಮೂಲ ಆದರ್ಶಗಳಿಗೆ ಅಪಚಾರ ಎಂದು ಹೇಳಿದ್ದರು. ಇಂದು ಜಾತ್ಯತೀತತೆ ಎನ್ನುವ ಶಬ್ದ ಸವಕಲು ನಾಣ್ಯವಾಗಿದೆ. ಇದಕ್ಕೆ ಆಡಳಿತ ನಡೆಸಿದ ಪಕ್ಷಗಳು ಜಾತ್ಯತೀತತೆಯ ಪರಿಕಲ್ಪನೆಯನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗಿರುವುದೇ ಪ್ರಮುಖ ಕಾರಣ. ನೆಹರೂ ಮಾತಿನಂತೆ ಜಾತ್ಯತೀತತೆ ಎಂದರೆ ರಾಜ್ಯಾಂಗ, ಶಿಕ್ಷಣ ಮತ್ತು ರಾಜಕೀಯವನ್ನು ಖಾಸಗೀ ಆಚರಣೆಯ ಅಥವಾ ಖಾಸಗಿ ನಂಬಿಕೆಯಾದ ಧರ್ಮದಿಂದ ದೂರವಿಟ್ಟು ನಿರ್ವಹಿಸುವುದು. ಎಲ್ಲ ಧರ್ಮಗಳೂ ಅವರವರ ನಂಬಿಕೆ, ಶ್ರದ್ಧೆ, ವಿಶ್ವಾಸದ ಮೇಲೆ ನಿಂತಿರುವುದರಿಂದ ಅವರ ಬಗ್ಗೆ ಖಾಸಗಿ ಅಲ್ಲದ ಸ್ತರದಲ್ಲಿ ಪ್ರಸ್ತಾಪ (ಟೀಕೆ / ಆಚರಣೆ) ಸಲ್ಲದು. ಯಾವುದೋ ಒಂದು ಧರ್ಮವನ್ನು ಏಕ ಶಿಲಾ ಮಾದರಿಯ ಒಂದು ವ್ಯವಸ್ಥಿತ ಗುಂಪೆಂದು ಪರಿಗಣಿಸುವುದು, ಯಾವುದೋ ಒಂದು ಧರ್ಮವನ್ನು / ಜಾತಿಯನ್ನು ಶ್ರೇಷ್ಠವೆಂದು ಕಾಣುವುದು ಮತ್ತು ಒಂದನ್ನು ಮತ್ತೊಂದರ ಮೇಲೆ ಎತ್ತಿಕಟ್ಟುವುದು ಅತ್ಯಂತ ನೀಚತನದ ಕೃತ್ಯವಾಗಿರುತ್ತದೆ. ಮಧ್ಯಮ ವರ್ಗದ ಜನರ ಅಸ್ಥಿತರೆಯ ಪರಿಣಾಮವಾಗಿ ಹುಟ್ಟಿಕೊಳ್ಳುವ ಈ ಕೋಮುವಾದದ ಸ್ವರೂಪ ಭಾರತದಂತಹ ದೇಶಗಳಲ್ಲಿ, ಪಡೆದುಕೊಳ್ಳಬಹುದಾದ ‘ಪಾಸಿಸ್ಟ್‌’ ಸ್ವರೂಪಗಳ ಬಗ್ಗೆ ನೆಹರೂ ಹೊಂದಿದ್ದ ಕಳವಳ ವರ್ತಮಾನದ ಭಾರತದಲ್ಲಿ ನಿಜವಾಗುತ್ತಿರುವುದನ್ನು ಗಮನಿಸಬಹುದು. ಕೋಮುವಾದವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡಹುವ ಅಪಾಯವಿರುವುದರಿಂದ, ಜಾತ್ಯತೀತತೆಯನ್ನು ಯಾವ ಬೆಲೆ ತೆತ್ತಾದರೂ ಉಳಿಸಿಕೊಳ್ಳುವುದು ನಾಗರಿಕ ಸಮಾಜದ ಹೊಣೆಯಾಗಿದೆ ಎನ್ನುವ ಕಾಳಜಿ ನೆಹರೂ ಅವರ ಚಿಂತನೆಗಳಲ್ಲಿ ವ್ಯಕ್ತವಾಗಿದೆ. ಅಲ್ಪಸಂಖ್ಯಾತರು ಯಾವುದೇ ಕಾರಣದಿಂದ ನಮ್ಮ ದೇಶದಲ್ಲಿ ಅಭದ್ರತೆಯ ಭಾವನೆಯಿಂದ ನರಳಬಾರದೆನ್ನುವುದನ್ನು ಉಲ್ಲೇಖಿಸಿದ ನೆಹರೂ, ಅಲ್ಪಸಂಖ್ಯಾತರಲ್ಲಿನ ಕೋಮುವಾದ ಕೂಡಾ ಅಪಾಯಕಾರಿ ಎಂದು ಹೇಳುವುದನ್ನು ಮರೆಯಲಿಲ್ಲ. ಈ ಕಾರಣದಿಂದ ಜಾತ್ಯತೀತ ತತ್ವವೊಂದೇ ರಾಷ್ಟ್ರೀಯ ಒಗ್ಗಟ್ಟನ್ನು ಮೂಡಿಸಲು ಸಾಧ್ಯ. ಆರ್ಥಿಕ ಅಭಿವೃದ್ಧಿ ಎಲ್ಲ ರೀತಿಯ ಅಸಮಾನತೆಗಳನ್ನು ತೊಡೆದು ಹಾಕುವ ಹಾಗೆ ಕೋಮುವಾದವನ್ನು ಅಳಿಸಿ ಹಾಕುತ್ತದೆ ಎನ್ನುವ ಅಂಶ ನೆಹರೂ ಚಿಂತನೆಯಲ್ಲಿನ ಸೈದ್ಧಾಂತಿಕ ವೈಕಲ್ಯವನ್ನು ತೋರ್ಪಡಿಸುತ್ತದೆ. ಕೋಮುವಾದದ ವಿರುದ್ಧ ನಡೆಸಬೇಕಾದ ಹೋರಾಟ ರೂಪುಗೊಳ್ಳಬೇಕಾದ ಸೈದ್ಧಾಂತಿಕ ನೆಲೆಗಳು ಮತ್ತು ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ. ಹಾಗಾಗಿ ಕೋಮುವಾದದ ಬಗ್ಗೆ ನೆಹರೂ ಪ್ರಸ್ತಾಪಿಸಿದ ವಿಚಾರಗಳು ಸರಳವಾಗಿ ಸೂತ್ರೀಕರಿಸಲ್ಪಟ್ಟಿರುವುದು ಅನೇಕ ರೀತಿಯ ಟೀಕೆಗಳಿಗೆ ಆಸ್ಪದ ನೀಡಿದೆ. ಈ ಕಾರಣದಿಂದಾಗಿಯೇ ನೆಹರೂ ಪ್ರತಿನಿಧಿಸಿದ ಕಾಂಗ್ರೆಸ್ ಪಕ್ಷ ಕೂಡಾ ಕೋಮುವಾದದ ವಿರುದ್ಧ ವ್ಯವಸ್ಥಿತವಾದ, ಸ್ವರೂಪಾತ್ಮಕವಾದ, ನಿಖರವಾದ ಹೋರಾಟಗಳನ್ನು ರೂಪುಗೊಳಿಸುವಲ್ಲಿ ಸೋತಿದೆ ಎಂದು ಹೇಳಬಹುದು. ಪ್ರಸ್ತುತ ಭಾರತೀಯ ಜನತಾಪಕ್ಷ ಧರ್ಮದ ಆಧಾರದ ಮೇಲೆ ಮತ ವಿಭಜನೆಯನ್ನು ಮಾಡುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸಿದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ವೈಫಲ್ಯವೂ ಬಹುಮಟ್ಟಿಗೆ ಕಾರಣವೆಂದು ಹೇಳಬಹುದಾಗಿದೆ.

ನೆಹರೂ ಮತ್ತು ಆಂತರಿಕ ಪ್ರಜಾಪ್ರಭುತ್ವ

ಪ್ರಸಿದ್ಧ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಅವರ ಅಭಿಪ್ರಾಯದಂತೆ ಪ್ರಜಾಪ್ರಭುತ್ವ ಬೇರುಗಳು ಗಟ್ಟಿಯಾಗಿ ಬೇರೂರಿರುವ ಸಮಾಜದಲ್ಲಿ ಅಭಿವೃದ್ಧಿಯ ಪ್ರಸರಣವೂ ವ್ಯಾಪಕವಾಗಿರುತ್ತದೆ. ಬರಗಾಲ ಪೀಡಿತ ಪ್ರದೇಶಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಬಾಂಗ್ಲಾ ದೇಶಕ್ಕಿಂತ ಭಾರತದಲ್ಲಿ ಬರಗಾಲ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆ. ಇಂತಹ ನಿರ್ವಹಣೆಯ ಕಾರಣದಿಂದ ಜನರ ನೋವುಗಳು, ಸಂಕಟಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ. ಬಾಂಗ್ಲಾ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಪ್ರಜಾತಂತ್ರದ ನೆಲೆ ಬಹಳ ಗಟ್ಟಿಯಾಗಿದೆ ಎಂದೇ ಹೇಳಬಹುದು. ಆದರೆ ಇಂತಹ ಪ್ರಜಾತಾಂತ್ರಿಕ ನೆಲೆ ಗಟ್ಟಿಯಾಗುವುದರ ಹಿಂದೆ ಹಲವಾರು ರಾಜಕೀಯ ಮುತ್ಸದ್ದಿಗಳ ಚಿಂತನೆ, ಶ್ರಮ ಮತ್ತು ತ್ಯಾಗ ಬಲಿದಾನಗಳಿವೆ ಎನ್ನುವುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಹತ್ತು ಹಲವು ಕಾರ್ಯಯೋಜನೆಗಳನ್ನು ನೆಹರೂ ರೂಪಿಸಿದ್ದಾರೆ, ಕಾರ್ಯಗತಗೊಳಿಸಿದ್ದಾರೆ. ಯೋಜನೆಗಳ ಪರಿಕಲ್ಪನೆ ಮತ್ತು ಅನುಷ್ಠಾನದ ಮಧ್ಯೆ ಇರುವ ಅಂತರಗಳ ಕಾರಣದಿಂದ ಕೆಲವಾರು ಬಾರಿ ಗೊಂದಲಗಳಿಗೆ ದಾರಿಯಾಗಿದ್ದರೂ ಅವುಗಳ ಅಂತಿಮ ಉದ್ದೇಶ ಗೊಂದಲಗಳಾಗಿರಲಿಲ್ಲ ಎನ್ನುವುದಂತೂ ಸ್ಪಷ್ಟ. ಈ ದೃಷ್ಟಿಯಿಂದ ಆಂತರಿಕ ಪ್ರಜಾತಂತ್ರಿಕ ವ್ಯವಸ್ಥೆಯನ್ನು ತಳಮಟ್ಟದಲ್ಲಿ ಬೆಳೆಸುವ ಕುರಿತಂತೆ ಅನುಸರಿಸಲಾದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

ನೆಹರೂ ಅವರ ಚಿಂತನೆ, ಸಾಧನೆ ಮತ್ತು ರಾಜಕೀಯ ಮುತ್ಸದ್ದಿತನವನ್ನು ವಿಮರ್ಶಾತ್ಮಕವಾಗಿ ನೋಡಿದರೆ ಅವರ ರಾಜಕೀಯ ನಿರ್ಧಾರಗಳಲ್ಲಿನ ಲೋಪಗಳ ಹೊರತಾಗಿಯೂ ಸಮಕಾಲೀನ ರಾಜಕೀಯ ನಾಯಕರಲ್ಲಿ ಅವರು ಮೊದಲಿಗರಾಗಿಯೇ ನಿಲ್ಲುತ್ತಾರೆ. ದೇಶ ಕಟ್ಟುವ ಕೆಲಸದಲ್ಲಿ ದೇಶದ ಜನರ ಸಹಭಾಗಿತ್ವವನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ಪಡೆದರೆ ಸಾಕೆನ್ನುವ ನೆಹರೂ ನಂಬಿಕೆ ಜನಾಂದೋಳನದ ಮೂಲಕ ಅಥವಾ ಜನಪರ ಚಳವಳಿಗಳ ಮೂಲಕ ದೇಶ ಕಟ್ಟುವ ಗಾಂಧೀಜಿಯವರ ಚಿಂತನೆಗಿಂದ ಭಿನ್ನವಾಗಿತ್ತು. ಹಿಂಸಾತ್ಮಕವಾದ, ಆವೇಶಭರಿತ, ಹೋರಾಟದ ಮೂಲಕವಾದರೂ ಗುರಿ ಸಾಧಿಸುವುದೇ ಮುಖ್ಯವಾಗಬೇಕೆಂದು ನಂಬಿದ್ದ ಸುಭಾಸ್‌ಚಂದ್ರ ಬೋಸ್‌ ಅವರಂತಹ ನಾಯಕರಿಗಿಂತ ನೆಹರೂ ತರಹದ ನಾಯಕತ್ವ ಹೆಚ್ಚು ಪ್ರಸ್ತುತವಾದದ್ದು ಎನ್ನುವ ನಂಬಿಕೆಯಿಂದ ನೆಹರೂ ಕಾಂಗ್ರೆಸ್ ನಾಯಕರಾಗಿ ಮುಂದುವರಿಯುವಂತಾಯಿತು. ಹಾಗೆ ನೋಡಿದರೆ ಕ್ರಾಂತಿಕಾರಿ ಮಾರ್ಗಗಳ ಬಗ್ಗೆ ಒಲವಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ಮಹಿಳಾ ನಾಯಕರಿಗಿಂತಲೂ ಸೌಮ್ಯವಾದಿಯಾಗಿದ್ದ ಶ್ರೀಮತಿ ಸರೋಜಿನಿ ನಾಯ್ಡು ಅವರಂತಹವರು ಗಾಂಧೀಜಿಯವರಿಗೆ ಪ್ರಿಯರಾಗಿದ್ದರು. ಒಟ್ಟಿನಲ್ಲಿ ಗಾಂಧೀಜಿಯವರಿಗೆ ಹತ್ತಿರದಲ್ಲಿದ್ದು ಬೆಳೆದರೂ ಗಾಂಧಿತ್ವಕ್ಕೆ ನೆಹರೂ ತುಂಬಾ ಹತ್ತಿರವಾಗಲಿಲ್ಲ ಎನ್ನುವ ಅಭಿಪ್ರಾಯವಿದೆ. ಜನರಿಗೆ ಮಾತಿನ ಮೂಲಕ ಭಾಷಣದ ಮೂಲಕ ಸಂದೇಶ ಕೊಡುವ ಉತ್ಸಾಹದಷ್ಟೇ ಮಹತ್ವವನ್ನು ಜನರೊಂದಿಗಿದ್ದು ಅವರನ್ನು ಚಳವಳಿಯ ಭಾಗವಾಗಿ ಬೆಳೆಸುವ ಮತ್ತು ಅಂತಹ ಚಳವಳಿಯ ಮೂಲಕ ಸಾಮಾಜಿಕ ಪರಿವರ್ತನೆಯನ್ನು ತರುವ ದಿಟ್ಟತನ ನೆಹರೂ ಅವರಿಂದ ನಡೆಯಲಿಲ್ಲವೆಂದು ಹೇಳಬಹುದು. ಈ ಕಾರಣದಿಂದಾಗಿಯೇ ಸಾಮಾಜಿಕ ಪರಿವರ್ತನೆಯ ಕಾರ್ಯ ನಿರೀಕ್ಷಿತವಾದ ಮಟ್ಟದಲ್ಲಿ ಆಗಲಿಲ್ಲವೆನ್ನಬಹುದು.

ಯಾವುದೇ ಒಂದು ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಯಾಗಬೇಕಾದರೆ ಅದರಲ್ಲಿ ಜನರ ಸಹಭಾಗಿತ್ವ ಅತ್ಯಂತ ಅಗತ್ಯ. ಜನರ ಸಹಭಾಗಿತ್ವ ಇರಬೇಕಾದರೆ ಇಡೀ ಪರಿವರ್ತನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವ ಸಾಂಸ್ಥಿಕ ವ್ಯವಸ್ಥೆಗಳು ಅಗತ್ಯ. ಆದರೆ ನೆಹರೂರವರ ಆಡಳಿತಾವಧಿಯಲ್ಲಿ ಶೋಷಿತ, ಅಲಕ್ಷಿತ ಮತ್ತು ದಮನಿತ ವರ್ಗದ ಜನರು ಭಾಗವಹಿಸುವಂತಹ ಒಂದು ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಾಗಲಿ ಸರಕಾರದಲ್ಲಾಗಲಿ ತುಂಬಾ ಸೀಮಿತ ಮಟ್ಟದಲ್ಲಿತ್ತು. ಆ ಕಾರಣದಿಂದ ಜನ ನೆಹರೂ ಭಾಷಣದಿಂದ ರೋಮಾಂಚಿತರಾಗುತ್ತಿದ್ದರೂ, ದೇಶಕ್ಕಾಗಿ ದುಡಿಯಲು ಸಿದ್ಧರಾಗಿದ್ದರು. ಆದರೆ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು, ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಗೊಂದಲಗಳಿದ್ದವು ಎನ್ನಬಹುದು. ಇದರ ಪರಿಣಾಮವಾಗಿ ಸರಕಾರ ಮತ್ತು ಜನರ ನಡುವಿರುವ ಅಂತರ ಬೆಳೆಯುತ್ತ ಹೋಯಿತು. ಕಾಲಕ್ರಮೇಣ ಸರಕಾರದ ಕಾರ್ಯಾಂಗ ಮತ್ತು ಸರಕಾರದ ಫಲಾನುಭವಿಗಳಾದ ಪ್ರಜೆಗಳು ಅಧಿಕಾರಶಾಹಿಯ ಮೂಲಕ ಸಂಬಂಧವಿರಿಸಿಕೊಳ್ಳುವಂತಹ ಒಂದು ವಿಚಿತ್ರ ಸನ್ನಿವೇಶ ನಿರ್ಮಾಣವಾಯಿತು.

ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸಮುದಾಯ ಅಭಿವೃದ್ಧಿ ಯೋಜನೆಗಳಂತಹ ಸಮುದಾಯ ಪಾಲ್ಗೊಳ್ಳುವಿಕೆಗೆ ಬಹಳಷ್ಟು ಅವಕಾಶವಿದ್ದ ಕಾರ್ಯಕ್ರಮಗಳಲ್ಲಿ ಕೂಡಾ ಜನರನ್ನು ತೊಡಗಿಸಿಕೊಳ್ಳುವಂತೆ ಮಾಡಲು ನೆಹರೂ ವಿಫಲರಾದರು. ಇಂತಹ ಒಂದು ಬೃಹತ್ ಯೋಜನೆಯನ್ನು ನೆಹರೂ ಅಂತಹ ನಾಯಕರು ಅಧಿಕಾರಶಾಹಿಯನ್ನು ಅವಲಂಭಿಸಿ ಮಾಡುವಂತಾಯಿತು. ಈ ಹಿಂದೆ ನೆಹರೂ ಅವರ ರಾಜಕೀಯ ನಾಯಕತ್ವಕ್ಕೆ ಸಂಪೂರ್ಣ ಸಹಕಾರ ನೀಡುವ ದೊಡ್ಡ ಜನಸಮುದಾಯವನ್ನು ಸಿದ್ಧಗೊಳಿಸುತ್ತಿದ್ದ ಗಾಂಧೀಜಿ ಅಥವಾ ಸರದಾರ್ ಪಟೇಲ್ ಅವರು ಇಲ್ಲದೇ ಹೋದದ್ದು ನೆಹರೂ ಅವರಿಗೆ ದೊಡ್ಡ ಕೊರತೆಯಾಯಿತು. ಕಾಂಗ್ರೆಸ್ ಪಕ್ಷ ನೆಹರೂ ಚಿಂತನೆಯ ವೇಗಕ್ಕೆ ಹೆಜ್ಜೆ ಹಾಕುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ನೆಹರೂ ಸರಕಾರವನ್ನು ಮುನ್ನಡೆಸುವ ಬಹಳಷ್ಟು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು ಪಕ್ಷವನ್ನು ಬೆಳೆಸುವ, ಸಮಗ್ರವಾಗಿ ಮುನ್ನಡೆಸುವ ನಾಯಕರಿಲ್ಲದೆ ಹೋದದ್ದು ದೇಶದ ದೃಷ್ಟಿಯಿಂದಲೂ ಕೊರತೆಯೇ ಆಯಿತು. ಇಂತಹ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಹೊಸ ಸವಾಲುಗಳನ್ನು ಎಸೆಯಲಾರಂಭಿಸಿದುವು. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಾಗ ಸಹಜವಾಗಿಯೆ ಕೆಲವೊಂದು ಅಪಕ್ವವಾದ ನಿರ್ಧಾರಗಳಾದುವು. ರಾಷ್ಟ್ರೀಯ ಸಮಗ್ರತೆಯನ್ನು ಕ್ಷೀಣಿಸುವ, ಬಡವ ಶ್ರೀಮಂತರ ನಡುವಿನ ಅಂತರ ನಿವಾರಿಸುವ, ಭ್ರಷ್ಟಾಚಾರ, ಪಕ್ಷಪಾತ, ಇತ್ಯಾದಿ ವಿಷಯಗಳಲ್ಲಿ ನೆಹರೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಫಲರಾದ ಸಂದರ್ಭಗಳೂ ಬಂದುವು.

ಇದರ ಪರಿಣಾಮ ನೆಹರೂ ಕಾಲದಲ್ಲಿ ಅಷ್ಟಾಗಿ ಗೋಷರಿಸಲಿಲ್ಲ. ಇದಕ್ಕೆ ಪ್ರಮುಖ ಕಾರಣ ಆ ತಲೆಮಾರಿನ ರಾಜಕೀಯ ನಾಯಕತ್ವಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹಿನ್ನೆಲೆಯಿತ್ತು, ದೇಶವನ್ನು ಕಟ್ಟಬೇಕೆನ್ನುವ ಸಂಕಲ್ಪವಿತ್ತು. ಜನರ ಅಗತ್ಯಗಳಿಂದ ಭಿನ್ನವಾಗಿದ್ದರೂ ಚಳವಳಿಗಳನ್ನು ಮುಂದುವರಿಸದೇ ಹೋದರೂ ಗಿರಿ ಮತ್ತು ಉದ್ದೇಶಗಳು ಜನ ಕಲ್ಯಾಣದಿಂದ ವಿಮುಖವಾಗಿರಲಿಲ್ಲ. ಆದರೆ ನೆಹರೂ ಪರಂಪರೆಯ ಉತ್ತರಾಧಿಕಾರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಶ್ರೀಮತಿ ಇಂದಿರಾಗಾಂಧಿಯವರು ಜನ ಸಮುದಾಯದ ಅಗತ್ಯವನ್ನು ತಿಳಿಯುವ ಸಾಹಸ ಮಾಡುವ ಬದಲಿಗೆ ಜನರಿಗೆ ಅಲ್ಪಾವಧಿಯಲ್ಲಿ ಸಮಾಧಾನ ನೀಡಬಲ್ಲ ‘ಗರೀಬಿ ಹಟಾವೊ’ದಂತಹ ಆಕರ್ಷಕ ಘೋಷಣೆಗಳನ್ನು ನೀಡಿದರು. ಪ್ರಾಯಶಃ ‘ಗರೀಬಿ ಹಟಾವೋ’ ನೆಹರೂ ಯುವ ಅಂತ್ಯವಾಗಿದ್ದರೂ ಆ ಯುಗದ ಸಂಕೇತವಾಗಿದೆಯೇನೋ ಎನಿಸುತ್ತದೆ.

ನೆಹರೂ ಅಧಿಕಾರದಲ್ಲಿರುವ ವೇಳೆಯಲ್ಲಿ ದೇಶವನ್ನು ಮುನ್ನಡೆಸಬಲ್ಲ ಎರಡನೆಯ, ಮೂರನೆಯ ಸಾಲಿನ ನಾಯಕರನ್ನು ಬೆಳೆಸುವಲ್ಲಿ ಎಡವಿದರು. ಚುನಾವಣಾ ರಾಜಕೀಯದಲ್ಲಿ ಜನರ ಒಲವುಗಳಿಸುವ ಜನರ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಜನರ ಚಿಂತನಾ ವಿಧಾನವನ್ನು ಪ್ರಭಾವಿಸುವ ಕಾರ್ಯಕ್ರಮಗಳು ಬಹಳ ಅಗತ್ಯ. ನೆಹರೂ ಸರಕಾರದ ನಾಯಕತ್ವ ವಹಿಸಿದ ನಂತರದ ದಿನಗಳಲ್ಲಿ ಪಕ್ಷದೊಳಗೆ ನಡೆದ ವಿದ್ಯಮಾನಗಳಿಂದಾಗಿ ಕಾಂಗ್ರೆಸ್ ಪಕ್ಷ ಎಲ್ಲೋ ಒಂದು ಕಡೆ ಹಿಂದಿನ ಬಿಗುವು ಕಳೆದುಕೊಂಡಿತು ಎಂದು ಹೇಳಬಹುದು. ಯಾವ ಪಕ್ಷ ಜನ ಮಾನಸವನ್ನು ಮುಟ್ಟಲು ಅವರೊಂದಿಗೆ ಬೆಳೆಯುವಲ್ಲಿ ಸೋಲುತ್ತದೆಯೋ ಅಂತಹ ಸಂದರ್ಭಗಳಲ್ಲಿ ಚುನಾವಣೆಯನ್ನು ಗೆಲ್ಲುವ ಗಿಮಿಕ್‌ಗಳಿಗೆ ಶರಣಾಗಬೇಕಾಗುತ್ತದೆ. ಈ ಕಾರಣದಿಂದಾಗಿ ನೆಹರೂ ಆರಂಭಿಸಿದ ಮಿಶ್ರ ಆರ್ಥಿಕ ನೀತಿಯಿಂದ ಅವರದೇ ಪಕ್ಷ ವಿಮುಖವಾಗುತ್ತಾ ಬಂದು ಇಂದು ಸಂಪೂರ್ಣ ಬಂಡವಾಳಶಾಹಿ ಆಡಳಿತ ಮಾದರಿಯಾಗಿ ಪರಿವರ್ತನೆ ಹೊಂದುತ್ತಲಿದೆ. ಉಂಟಾಗಿರುವ ಆರ್ಥಿಕ ಉದಾರೀಕರಣ ಫಲಾನುಭವ ಕೆಲವೇ ವರ್ಗಗಳಲ್ಲಿ ಹಂಚಿಹೋಗಿ ಬಹುಪಾಲು ಜನ ಬದುಕಿನ ಕನಿಷ್ಠ ಅವಶ್ಯಕತೆಗಳಿಗೂ ಪರದಾಡುಂವತಾಗಿದೆ.

ಕೊನೆಯ ಮಾತು

ನೆಹರೂ ಬಂಡವಾಳ ಆಧಾರಿತ ಅಭಿವೃದ್ಧಿ ನೀತಿಯನ್ನು ಮತ್ತು ಸಮಾಜವಾದಿ ಸಿದ್ಧಾಂತದ ತಳಹದಿಯ ಮೇಲೆ ನಿರೂಪಿತವಾದ ಸರ್ಕಾರಿ ನೇತೃತ್ವದಲ್ಲಿ ನಡೆದ ಬೃಹತ್‌ ಕೈಗಾರೀಕರಣವನ್ನು ಒಳಗೊಂಡ ಮಿಶ್ರ ಆರ್ಥಿಕ ನೀತಿಯನ್ನು ಆಯ್ಕೆ ಮಾಡಿದರು. ಮೇಲ್ನೋಟಕ್ಕೆ ಇಂತಹ ಒಂದು ನಿರ್ಧಾರ ಕೈಗೊಳ್ಳುವ ಮೂಲಕ ನೆಹರೂ ಬಂಡವಾಳಶಾಹಿಯನ್ನು ಮತ್ತು ಸಮಾಜವಾದಿಗಳನ್ನು ಸಮಾಧಾನ ಪಡಿಸಿದರು ಎಂದೆನಿಸಿದರೂ ಅದು ಹಾಗಾಗಲೇ ಇಲ್ಲ. ವಾಸ್ತವಿಕವಾಗಿ ನೆಹರೂ ಈ ಎರಡೂ ಗುಂಪುಗಳ ಟೀಕೆಗೆ ಒಳಗಾಗಬೇಕಾಯಿತು ಅನಿಸುತ್ತದೆ. ಆರ್ಥಿಕ ಉದಾರೀಕರಣದ ನಂತರ ಕಾಂಗ್ರೆಸ್ ಪಕ್ಷ ಮತ್ತು ಬಲಪಂಥೀಯ ಪಕ್ಷಗಳ ನಡುವಿನ ಸೈದ್ಧಾಂತಿಕ ವ್ಯತ್ಯಾಸದ ಗೆರೆಗಳು ಮಾಯವಾಗಿ ಬಿಟ್ಟನಂತರ, ನೆಹರೂ ಅಭಿವೃದ್ಧಿ ನೀತಿಗಳು ಆರ್ಥಿಕ ಅಭಿವೃದ್ಧಿಯ ನಾಗಾಲೋಟಕ್ಕೆ ಕಡಿವಾಣ ಹಾಕಿದುವು ಎನ್ನುವ ಟೀಕೆಯನ್ನು ಬಹಳ ಸಲೀಸಾಗಿಯೇ ಮಾಡಲಾಗುತ್ತಿದೆ. ಅತ್ತ ಅಲಿಪ್ತ ನೀತಿ, ತಟಸ್ಥ ಧೋರಣೆ, ತೃತೀಯ ಜಗತ್ತಿನ ದೇಶಗಳಲ್ಲಿ ಒಗ್ಗಟ್ಟು ಎಂದೆಲ್ಲ ಶ್ರಮವಹಿಸಿದರೂ, ನೆಹರೂ ಸಿದ್ಧಾಂತಗಳು ಬಂಡವಾಳಶಾಹಿ ಶಕ್ತಿ ಭಾರತದಲ್ಲಿ ಬೆಳೆಯಲು ನೆಹರೂ ಅಭಿವೃದ್ಧಿ ನೀತಿಯಲ್ಲಿನ ದೋಷಗಳೇ ಕಾರಣ ಎನ್ನುವ ಮಾತು ಎಡ ಪಂಥೀಯರಿಂದ ಬರುತ್ತಿದೆ. ಇಂತಹ ಟೀಕೆಗಳನ್ನು ಎದುರಿಸುತ್ತಲೇ ನೆಹರೂ ಚಿಂತನೆ ಮುಂದಿಡಬಹುದಾದಂತಹ ಕೆಲವು ಮಹತ್ವದ ವಿಷಯಗಳೂ ಇವೆ. ನೆಹರೂ ಬದುಕಿನ ಕಾಲಘಟ್ಟದಲ್ಲಿ, ಯಾವ ಒತ್ತಾಯ, ಒತ್ತಡದ ನಡುವೆ ಅವರು ಇಂತಹ ನಿರ್ಧಾರ ಕೈಗೊಂಡರು ಮತ್ತು ಅಂತಹ ನಿರ್ಧಾರಗಳ ಹಿಂದಿದ್ದ ಆಶಯ, ಆಕಾಂಕ್ಷೆಗಳ ವಿಮರ್ಶೆಗಳು ಮುಖ್ಯವೆನಿಸುತ್ತದೆ. ಪ್ರಾಯಶಃ ಟೀಕೆಗಳನ್ನು ಮೇಲೆ ಉಲ್ಲೇಖಿಸಿದ ವಿಷಯಗಳ ಹಿನ್ನೆಲೆಯಲ್ಲಿ ನೋಡಿದರೆ ನೆಹರೂ ಚಿಂತನೆಯ ಪ್ರಸ್ತುತತೆಯ ಮಹತ್ವ ಮತ್ತು ಅಭಿವೃದ್ಧಿ ಚಿಂತನೆಯ ವಾಗ್ವಾದವನ್ನು ಮುಂದುವರಿಸಲು ಸಾಧ್ಯವಾಗಬಹುದು. ಅವು ನೀಡಬಹುದಾದ ಕೊಡುಗೆಗಳ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಬಹುದು.

ದೇಶ ಸ್ವತಂತ್ರವಾದ ಸಂದರ್ಭದಲ್ಲಿ ಇದ್ದ, ಹಲವು ಅವಕಾಶಗಳು ಮತ್ತು ಎಲ್ಲ ಮಿತಿಗಳ ಹೊರತಾಗಿಯೂ ದೇಶದ ಮೊದಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಜವಾಹರ್ ಲಾಲ್ ನೆಹರೂ ಅವರ ಸಾಧನೆ ಚಿರಕಾಲ ಸ್ಥಾಯಿಯಾಗಿ ಉಳಿಯುವಂತಹದ್ದು. ಈ ಮೊದಲು ಉಲ್ಲೇಖಿಸಿದಂತೆ ದೇಶದ ಬಗ್ಗೆ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ಅನುಷ್ಠಾನಗೊಳಿಸಲು ದೃಢಸಂಕಲ್ಪ ಹೊಂದಿದ್ದ ನೆಹರೂ ಅವರು ಭಾರತದ ಮೊದಲ ಪ್ರಧಾನಿಯಾದದ್ದು ಎಲ್ಲ ರೀತಿಯಿಂದಲೂ ಉತ್ತಮ ಆಯ್ಕೆಯೇ, ನೆಹರೂ ಆತ್ಮ ಚರಿತ್ರೆ ಬರೆದ ಜೆಫ್ರಿ ಟೈಸನ್ ಹೇಳಿದ ಹಾಗೆ ನೆಹರೂ ಚಿಂತನೆ ಬೇರೆ ರೀತಿ ಇರುತ್ತಿದ್ದರೆ ಭಾರತದ ಸ್ವರೂಪವೂ ಬೇರೆಯಾಗಿರುತ್ತಿತ್ತು ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಮುಖವಾಗಿ ದೇಶದ ಆಂತರಿಕ ಮತ್ತು ವಿದೇಶಿ ನೀತಿಗಳನ್ನು ಬಹಳ ಎಚ್ಚರಿಕೆಯಿಂದ ಮತ್ತು ಚಾಕಚಕ್ಯತೆಯಿಂದ ನೆಹರೂ ನಿರೂಪಿಸಿದ ರೀತಿ ಯಾವ ಮಗ್ಗುಲಿನಿಂದ ನೋಡಿದರೂ ಮೆಚ್ಚಿಕೊಳ್ಳಬೇಕಾದ ಅಂಶವೇ ಸರಿ. ನೆಹರೂ ಒಬ್ಬ ರಾಜಕೀಯ ಮುತ್ಸದ್ದಿ ಮಾತ್ರವಲ್ಲಿ ಅವರೊಬ್ಬ ಮಹಾನ್ ಮಾನವತಾವಾದಿಯೂ ಹೌದು. ಭಾರತೀಯ ಸಂವಿಧಾನ ರಚನಾ ಸಭೆಯಲ್ಲಿ ಅವರು ವ್ಯಕ್ತಪಡಿಸಿದಂತೆ “ಕೆಲವೊಂದು ಸಹ ನಾವು ಪಕ್ಷಕ್ಕಿಂತ ಮೇಲಾಗಿ ದೇಶದ ಮಟ್ಟದಲ್ಲಿ, ಅಥವಾ ಕೆಲವೊಂದು ವೇಳೆ ಈ ಮನುಕುಲದ ಹಿತವನ್ನು ಗಮನಿಸಿ ಯೋಚಿಸಬೇಕಾಗುತ್ತದೆ” ಎನ್ನುವ ಮಾತುಗಳಲ್ಲಿ ಅವರ ಉದಾತ್ತ ಚಿಂತನೆ ಪ್ರತಿಫಲಿತವಾಗಿದೆ.

 


[1] ನೋಡಿ: ಆಶೀಶ್ ನಂದಿಯವರು ತುಷಾ ಮಿಟ್ಟಲ್ ಅವರೊಂದಿಗೆ ನಡೆಸಿರುವ ಸಂದರ್ಶನ “ದಿ ಮಿಡ್ಲ್ ಕ್ಲಾಸ್ ವಾಂಟ್ಸ್ ಡೆವಲಪ್‌ಮೆಂಟ್ ಬ್ಯಾಕ್ಡ್ ಬೈ ಅಥಾರಿಟೇರಿಯನಿಸಂ” ತೆಹಲ್ಕಾ ವಾರಪತ್ರಿಕೆ, ಜೂನ್ ೨೯- ಜುಲೈ ೦೫ ೨೦೦೮, ಪು. ೨೨-೨೪