ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಭಾರತದಲ್ಲಿ ನಡೆದ ಸ್ವಾತಂತ್ರ್ಯ ಬೆಳವಣಿಗೆ-ರಾಜಕೀಯ ಪ್ರಕ್ರಿಯೆಗೆ ವಿಶ್ವದ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಸ್ವಾತಂತ್ರ್ಯ ಪೂರ್ವದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಸ್ವಾತಂತ್ರ್ಯ ನಂತರದ ರಾಜಕೀಯ ಬೆಳವಣಿಗೆಗಳ ನಡುವೆ ಸಂಬಂಧವಿರುವುದು ವಿಶಿಷ್ಟ ಸಂಗತಿಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯೊಂದು ಭಾರತದಲ್ಲಿ ಇಂದು ಭದ್ರವಾಗಿ ನೆಲೆಗೊಂಡಿದ್ದರೆ ಅದರ ಬುನಾದಿಯು ಸ್ವಾತಂತ್ರ್ಯಪೂರ್ವದ ರಾಜಕೀಯ ಚಳವಳಿಯಲ್ಲೆ ದೊರಕಿತ್ತು ಎಂಬುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಪ್ರಜಾತಂತ್ರವಾಗಿ ಸಂಪ್ರದಾಯವೊಂದು ಅತ್ಯಂತ ವ್ಯವಸ್ಥಿತವಾಗಿ ಸ್ವಾತಂತ್ರ್ಯ ಪೂರ್ವದಲ್ಲೆ ಭಾರತದಲ್ಲಿ ರೂಪಗೊಂಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಎಂಬುದು ಭಾರತದಲ್ಲಿ ಕೇವಲ ರಾಜಕೀಯ ಪಕ್ಷವಾಗಿರಲಿಲ್ಲ. ಅದೊಂದು ರಾಜಕೀಯ ವ್ಯವಸ್ಥೆಯಾಗಿತ್ತು.

ಭಾರತದ ರಾಜಕೀಯ ಬೆಳವಣಿಗೆಯ ಚರಿತ್ರೆಯಲ್ಲಿ ಗುರುತಿಸಬೇಕಾದ ಸಂಗತಿಯೆಂದರೆ, ಅದರ ಪ್ರಜಾತಂತ್ರ ವ್ಯವಸ್ಥೆ. ಎಲ್ಲ ಇತಿ-ಮಿತಿಗಳ ನಡುವೆ ಅದು ಅತ್ಯಂತ ಭದ್ರವಾಗಿ ಭಾರತದಲ್ಲಿ ನೆಲೆಗೊಂಡಿರುವುದು ಇಂದು ಮತ್ತೆ ಮತ್ತೆ ದೃಢವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬದ್ರವಾಗಿ ಕಟ್ಟುವುದರಲ್ಲಿ ಹಾಗೂ ಅದನ್ನು ರಕ್ಷಿಸಿಕೊಳ್ಳುವಲ್ಲಿ ಭಾರತವು ಯಶಸ್ವಿಯಾಗಿದೆ. ಇದು ಭಾರತದ ರಾಜಕಾರಣದ ಬಹುದೊಡ್ಡ ಸಾಧನೆಯಾಗಿದೆ. ಇಪ್ಪತ್ತನೆಯ ಶತಮಾನದ ೫೦-೬೦ರ ದಶಕದಲ್ಲಿ ಭಾರತದಲ್ಲಿನ ಪ್ರಜಾತಂತ್ರ ವ್ಯವಸ್ಥೆಯ ವಿಘಟನೆ ಬಗ್ಗೆ, ಅರಾಜಕತೆ ಉಗಮದ ಬಗ್ಗೆ, ಒಕ್ಕೂಟದ ಚಿತ್ರೀಕರಣದ ಬಗ್ಗೆ ಭವಿಷ್ಯ ನಿಡಿಯುತ್ತಿದ್ದ ವಿದೇಶಿ ವಿದ್ವಾಂಸರಿಗೆ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯು ಗಟ್ಟಿಯಾಗಿ ಬೆಳೆಯುತ್ತಿರುವುದು ಮತ್ತು ಅದು ಬಲಿಷ್ಠವಾಗುತ್ತಿರುವುದು ಬಿಡಿಸಲಾಗದ ಒಗಟಾಗಿರುವಂತೆ ಕಾಣುತ್ತದೆ.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಬೆಳವಣಿಗೆಯ ಮತ್ತೊಂದು ಆಧುನಿಕ ಲಕ್ಷಣವೆಂದರೆ ಅದರ ಒಕ್ಕೂಡ ಫೆಡರಲ್ ಸ್ವರೂಪ ಭಾರತವು ಸ್ವಾತಂತ್ರ್ಯಾನಂತರ ರಾಜಕೀಯವಾಗಿ ಒಂದಾಗಿ ಉಳಿಯುವುದು ಅಸಾಧ್ಯವೆಂದು ನಂಬಿದ್ದವರಿಗೆ ಅದು ತುಂಬಾ ನಿರಾಶೆ ಉಂಟುಮಾಡಿದೆ. ಅದು ‘ಏಕರೆಯಲ್ಲಿ ವೈವಿಧ್ಯತೆ’-‘ವೈವಿಧ್ಯತೆಯಲ್ಲಿ ಏಕತೆ’ಯನ್ನು ಹರಡುತ್ತಿದೆ. ಕೇಂದ್ರ-ರಾಜ್ಯಗಳ ನಡುವಣ ಸಂಬಂಧವನ್ನು ಅದು ಸೂಕ್ಷ್ಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಪಂಜಾಬ್‌ ಸಮಸ್ಯೆಯನ್ನು ಹಾಗೂ ಅಸ್ಸಾಂ ಸಮಸ್ಯೆಯನ್ನು ಅದು ಬಗೆಹರಿಸಿಕೊಂಡ ಬಗೆಯಲ್ಲಿ ಇದನ್ನು ಕಾಣಬಹುದಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರಗಳಿರುವವರೆಗೆ ಇಲ್ಲಿ ಏಕರೆ ಸಾಧ್ಯವೆಂದೂ, ಅವೆರಡೂ ನೆಲೆಗಳಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಘರ್ಷಣೆ ತಪ್ಪಿದ್ದಲ್ಲವೆಂದೂ ಹೇಳಲಾಗುತ್ತಿತ್ತು. ನಿಜ, ಇಂತಹ ಸಮಸ್ಯೆಗಳು ಉದ್ಭವವಾಗುತ್ತಿದೆ. ಆದರೆ ಅತ್ಯಂತ ಪ್ರೌಢಾವಸ್ಥೆ ತಲುಪಿರುವ ಭಾರತದ ರಾಜಕಾರಣವು ಇಂತಹ ಸಮಸ್ಯೆಗಳನ್ನು ಬಹಳ ಎಚ್ಚರಿಕೆಯಿಂದ ಮತ್ತು ಮುತ್ಸದ್ದಿತನದಿಂದ ಬಗೆಹರಿಸಿಕೊಳ್ಳುತ್ತಿದೆ.

ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ರಾಜಕೀಯ ಮುತ್ಸದ್ದಿಗಳಿಗೆ ಹಾಗೂ ಗಣರಾಜ್ಯವನ್ನು ಕಟ್ಟಿದ ರಾಷ್ಟ್ರ ನಿರ್ಮಾಪಕರಿಗೆ ಆಗಸ್ಟ್ ೧೫, ೧೯೪೭ ರಂದು ನಮಗೆ ದೊರೆತದ್ದು ಕೇವಲ ರಾಜಕೀಯ ಸ್ವಾತಂತ್ರ್ಯವೆಂಬುದರ ಅರಿವಿತ್ತು. ಇದನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಹೀಗೆ ವ್ಯಕ್ತಪಡಿಸಿದ್ದರು.

ಜನವರಿ ೧೬, ೧೯೫೦ ರಂದು ನಾವು ರಾಜಕೀಯ ಸ್ವಾತಂತ್ರ್ಯದ ಜಗತ್ತನ್ನು ಪ್ರವೇಶಿಸುತ್ತಿದ್ದೇವೆ. ಆದರೆ ಆರ್ಥಿಕ ಮತ್ತು ಸಾಮಾಜಿಕವಾಗಿ ಅಸಮಾನತೆ ಮುಂದುವರಿಯುತ್ತಿರುವ ದುರಂತ ನಮ್ಮ ಮುಂದಿದೆ.

ಸ್ವಾತಂತ್ರ್ಯಾನಂತರ ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಆದ್ಯತೆಯ ಸಂಗತಿಗಳಾಗುತ್ತವೆ ಎಂಬುದು ಅವರಿಗೆ ತಿಳಿದಿತ್ತು. ೧೯೪೭ರ ಆಗಸ್ಟ್ ೧೫ ರಂದು ದೇಶವನ್ನು ಉದ್ದೇಶಿಸಿ ನುಡಿದ ಭಾಷಣದಲ್ಲಿ ಜವಹರಲಾಲ್ ನೆಹರೂ ದೇಶದ ಮುಂದಿರುವ ನಾಲ್ಕು ಸವಾಲುಗಳನ್ನು ಹೀಗೆ ಗುರುತಿಸಿದ್ದರು.

೧. ಬಡತನ ನಿವಾರಣೆ.

೨. ಅಜ್ಞಾನವನ್ನು ಹೊಡೆದೋಡಿಸುವುದು.

೩. ಅನಾರೋಗ್ಯದ ನಿರ್ಮೂಲನ.

೪. ಅವಕಾಶಗಳಲ್ಲಿನ ಅಸಮಾನತೆಯನ್ನು ಹೋಗಲಾಡಿಸುವುದು.

ಇವು ನಾಲ್ಕು ಎಷ್ಟರ ಮಟ್ಟಿಗೆ ಸಾಮಾಜಿಕ-ಆರ್ಥಿಕ ಸಮಸ್ಯೆಗಳಾಗಿದ್ದವೋ ಅಷ್ಟರ ಮಟ್ಟಿಗೆ ಅಥವಾ ಅದಕ್ಕಿಂತ ಹೆಚ್ಚಿಗೆ ವಿಶಾಲಾರ್ಥದಲ್ಲಿ ಅವು ರಾಜಕೀಯ ಸವಾಲುಗಳಾಗಿದ್ದವು.

ಭಾರತದ ರಾಜಕೀಯ ಧುರೀಣರು ಇಂತಹ ಸವಾಲನ್ನು-ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ‘ಯೋಜಿತ ಅಭಿವೃದ್ಧಿ ಮಂತ್ರ’ವನ್ನು ಅಳವಡಿಸಿಕೊಂಡರು. ಪಂಚವಾರ್ಷಿಕ ಅಭಿವೃದ್ಧಿ ಯೋಜನೆಗಳನ್ನು ಏಪ್ರಿಲ್ ೧, ೧೯೪೧ ರಂದು ಆರಂಭಿಸಲಾಯಿತು. ಆರ್ಥಿಕ ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆಯಲ್ಲದೆ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು. ಈ ಕಾರಣಕ್ಕೆ ೧೯೫೬ರಲ್ಲಿ ದೇಶದಲ್ಲಿ ಸಮಾಜವಾದಿ ಮಾದರಿ ಸಮಾಜವನ್ನು ನಿರ್ಮಾಣ ನೀಡುವ ಸಂಕಲ್ಪ ತೊಡಲಾಯಿತು. “ಜನರನ್ನು ಒಳಗೊಳ್ಳುವ ಅಭಿವೃದ್ಧಿ”ಯನ್ನು ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ (೨೦೦೭-೨೦೧೨) ಆದ್ಯತೆಯ ಸಂಗತಿಯನ್ನಾಗಿ ಮಾಡಲಾಗಿದೆ. ವಾಸ್ತವಾಗಿ ಇಂತಹ ಪ್ರಕ್ರಿಯೆ ಒಂದಲ್ಲ-ಒಂದು ರೀತಿಯಲ್ಲಿ ದೇಶದಲ್ಲಿ ನಡೆಯುತ್ತಾ ಬಂದಿದೆ. ಜನರನ್ನು ಒಳಗೊಳ್ಳುವಂತೆ ಅಭಿವೃದ್ಧಿಯನ್ನು, ರಾಜಕಾರಣವನ್ನು ಕಟ್ಟುವಲ್ಲಿ ದೇಶ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಅಥವಾ ವಿಳಪವಾಗಿದೆ ಎಂಬುದು ಬೇರೆಯದೇ ಚರ್ಚೆ.

ರಾಜಕಾರಣದಲ್ಲಿ ಮಹಿಳೆಯರ ಸಹಭಾಗಿತ್ವದ ಪ್ರಶ್ನೆಯು ಇಂದು ಮುಂಚೂಣಿಗೆ ಬಂದಿದೆ. ಶಾಸನಸಭೆ-ಸಂಸತ್ತುಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಂಗತಿಯು ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ರಾಜಕಾರಣ-ಪ್ರಜಾತಂತ್ರ ಹೀಗೆ ಪ್ರೌಢಾವಸ್ಥೆಗೆ ಬಂದಿದೆಯೋ ಅದೇ ರೀತಿ ಮಹಿಳಾ ರಾಜಕಾರಣವೂ ಪ್ರೌಢಾವಸ್ಥೆಗೆ ಬಂದಿದೆ. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದರು. ಈಗ ಪ್ರತಿಭಾಪಾಟೀಲರು ದೇಶದ ರಾಷ್ಟ್ರಪತಿಗಳಾಗಿದ್ದಾರೆ. ಮಹಿಳೆಯರ ಪ್ರಶ್ನೆಗಳು ಕೇವಲ ಮಹಿಳೆಯರ ವ್ಯವಹಾರವಾಗಿ ಉಳಿದಿಲ್ಲ. ಅವು ಸಮಾಜದ ರಾಜಕಾರಣದ ಸಂಗತಿಗಳಾಗಿವೆ.

ತುರ್ತುಪರಿಸ್ಥಿತಿಯಂತಹ (೧೯೭೫-೧೯೭೭) ಆತಂಕವನ್ನು ಗೆದ್ದು ಪ್ರಜಾತಂತ್ರವು ಭಾರತದಲ್ಲಿ ಬಲಿಷ್ಟವಾಗುತ್ತಾ ನಡೆದಿದೆ. ಅದರ ಚರಮಗೀತೆ ಹಾಡಲು ಸಿದ್ಧರಾಗಿದ್ದವು ಇಂದು ಅದರ ಯಶೋಗಾಥೆ ಹಾಡಲು ತಯಾರಾಗುತ್ತಿದ್ದಾರೆ. ಇದು ಭಾರತದ ರಾಜಕೀಯ ಬೆಳವಣಿಗೆಯ ಯಶಸ್ಸಿನ ಕಥೆ.

ಒಟ್ಟಾರೆ ಭಾರತದ ರಾಜಕಾರಣವು ವರ್ಣರಂಜಿತವಾಗಿದೆ, ಸಂಕೀರ್ಣವಾಗಿದೆ, ಗತಿಶೀಲವಾದುದಾಗಿದೆ, ಪ್ರೌಢತೆಯನ್ನು ಪಡೆದಕೊಂಡಿದೆ. ಅದು ಕಳೆದ ೬೦ ವರ್ಷಗಳಲ್ಲಿ (೧೯೪೭-೨೦೦೭) ಅನೇಕ ಏಳು ಬೀಳುಗಳನ್ನು ಕಂಡಿದೆ. ಅದು ಯಶಸ್ಸುಗಳನ್ನು ಕಂಡಿದೆ. ವೈಫಲ್ಯಗಳನ್ನು ಅನುಭವಿಸಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾತಂತ್ರವೆಂಬುದೊಂದೆ ಭಾರತದ ರಾಜಕಾರಣದ ದೊಡ್ಡಸ್ತಿಕೆಯಲ್ಲ. ಅದು ಬಲಿಷ್ಠವಾಗುತ್ತಾ ನಡೆದಿದೆ. ಅದು ಜೀವಂತವಾಗಿದೆ. ಜಾಗೃತ ಸ್ಥಿತಿಯಲ್ಲಿದೆ. ಈ ದೇಶದ ಜವಾಬ್ದಾರಿಯುತ ೭೦-೮೦ ಕೋಟಿ ಮತದಾರರ ವಿಶ್ವಾಸವನ್ನು ಅದು ಗಳಿಸಿಕೊಂಡಿದೆ. ಇದು ಸಣ್ಣ ಸಾಧನೆಯಲ್ಲ. ಈ ದೇಶದ ಚುನಾವಣೆಯಲ್ಲಿ ಶೇ.೫೦ ರಿಂದ ಶೇ.೬೦ ರಷ್ಟು ಮತದಾನ ನಡೆಯುತ್ತದೆ. ಪ್ರಪಂಚದ ಬೇರಾವ ಪ್ರಜಾತಂತ್ರ ವ್ಯವಸ್ಥೆಯಲ್ಲೂ ಇಂತಹ ಪವಾಡ ನಡೆದ ಉದಾಹರಣೆಯಿಲ್ಲ.

ಪ್ರಜಾತಂತ್ರಕ್ಕೆ ಧಕ್ಕೆ ಬರುವ ಸಂಗತಿಗಳು ಕಳೆದ ೬೦ ವರ್ಷಗಳಲ್ಲಿ ಭಾರತದಲ್ಲಿ ಉಂಟಾಗಲೇ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ೧೯೭೫-೧೯೭೭ರವರೆಗೆ ಇದ್ದ ತುರ್ತು ಪರಿಸ್ಥಿತಿಯು ಪ್ರಜಾತಂತ್ರ ವ್ಯವಸ್ಥೆಗೆ ವಿನಾಶಕಾರಿಯಾಗಿತ್ತು. ಆದರೆ ಅದು ಬಹು ಬೇಗ ಪರಿಸಮಾಪ್ತಿಯಾಯಿತು. ಕಳೆದ ೧೫ ವರ್ಷಗಳಿಂದ ಕೋಮುವಾದವು ಪ್ರಬಲಶಕ್ತಿಯಾಗಿ ಬೆಳೆಯುತ್ತಿದೆ. ಇದು ಪ್ರಜಾತಂತ್ರಕ್ಕೆ ದೊಡ್ಡ ಕುತ್ತಾಗಿ ಪರಿಣಮಿಸಿದೆ. ಏಕೆಂದರೆ ಪ್ರಜಾತಂತ್ರವು ಎಲ್ಲರನ್ನು ಒಳಗೊಳ್ಳುವ ಒಂದು ಪ್ರಕ್ರಿಯೆಯಾಗಿದ್ದರೆ ಕೋಮುವಾದವು ಕೆಲವರನ್ನು ಒಳಗೊಳ್ಳುವ ಮತ್ತು ಹಲವರನ್ನು ಹೊರಗೆ ತಳ್ಳುವ ಒಂದು ಪ್ರಕ್ರಿಯೆಯಾಗಿದೆ. ಭಾರತದ ರಾಜಕಾರಣವು ಕೋಮುವಾದದಂತಹ ಕುತ್ತನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಅದರ ಭವಿಷ್ಯ ನಿಂತಿದೆ.

ಪ್ರಸ್ತುತ ಪ್ರಬಂಧದಲ್ಲಿ ಕಳೆದ ೬೦ ವರ್ಷಗಳಲ್ಲಿ (೧೯೪೭-೨೦೦೭) ಭಾರತವು ಅನುಭವಿಸಿದ ರಾಜಕೀಯ ಬೆಳವಣಿಗೆಯ ಮುಖ್ಯ ಸಂಗತಿಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಈ ದೇಶದ ರಾಜಕೀಯ ಬೆಳವಣಿಗೆ ಚರಿತ್ರೆಯನ್ನು ಚರ್ಚಿಸುವುದು ಪ್ರಸ್ತುತ ಪ್ರಬಂಧದ ಉದ್ದೇಶವಾಗಿದೆ. ಪ್ರಸ್ತಾವನೆ ಮತ್ತು ಸಮಾರೋಪವನ್ನು ಬಿಟ್ಟು ಪ್ರಬಂಧವನ್ನು ೧೨ ಭಾಗಗಳಲ್ಲಿ ಕಟ್ಟಲಾಗಿದೆ.

ಮೊದಲನೆಯ ಭಾಗದಲ್ಲಿ ಸ್ವಾತಂತ್ರ್ಯಾಪೂರ್ವ ಕಾಲಾವಧಿಯ ರಾಜಕೀಯ ಬೆಳವಣಿಗೆಯನ್ನು ಸ್ಥೂಲವಾಗಿ ಚರ್ಚಿಸಲಾಗಿದೆ. ಈ ಚರ್ಚೆಯು ಸ್ವಾತಂತ್ರ್ಯೋತ್ತರ ಕಾಲಾವಧಿಯ ರಾಜಕೀಯ ಬೆಳವಣಿಗೆಯ ಕುರಿತು ಚರ್ಚೆಗೆ ಅಗತ್ಯವಾದ ಒಂದು ಭೂಮಿಕೆಯನ್ನು ಒದಗಿಸುತ್ತದೆ. ಎರಡನೆಯ ಭಾಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ೧೫ನೆಯ ಆಗಸ್ಟ್, ೧೯೪೭ನೇ ಮಹತ್ವವನ್ನು ಗುರುತಿಸಲಾಗಿದೆ. ಪ್ರಬಂಧದ ಮೂರನೆಯ ಭಾಗದಲ್ಲಿ ಭಾರತವು ಗಣರಾಜ್ಯವಾದ ಪರಿ ಹಾಗೂ ಅದರ ಸಂವಿಧಾನದ ಮೂಲ ಲಕ್ಷಣಗಳನ್ನು ಹಿಡಿದಿಡಲಾಗಿದೆ.

ಯೋಜಿತ ಅಭಿವೃದ್ಧಿಯನ್ನು ಭಾರತವು ಆಯ್ಕೆ ಮಾಡಿಕೊಂಡ ರಾಜಕೀಯ ನಿರ್ಣಯವನ್ನು ನಾಲ್ಕನೆಯ ಭಾಗದಲ್ಲಿ ಚರ್ಚಿಸಲಾಗಿದೆ. ಐದನೆಯ ಭಾಗದಲ್ಲಿ ಭಾರತದ ಸಮಾಜವಾದಿ ರಾಜಕಾರಣದ ಪ್ರಕ್ರಿಯೆಯನ್ನು ವಿಮರ್ಶಿಸಲಾಗಿದೆ. ಆರನೆಯ ಭಾಗದಲ್ಲಿ ರಾಜಕೀಯ ಪಕ್ಷಗಳ ಬೆಳವಣಿಗೆ, ಅವುಗಳ ನಡುವಣ ಸಂಬಂಧ, ರಾಜಕೀಯ ಕಾರ್ಯಕರ್ತರ ತರಬೇತಿ ಇತ್ಯಾದಿಗಳನ್ನು ಚರ್ಚಿಸಲಾಗಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯನ್ನು ಉಂಟು ಮಾಡಿದ ತರ್ತು ಪರಿಸ್ಥಿತಿಯ-ಏಳು ಬೀಳುಗಳನ್ನು ಏಳನೆಯ ಭಾಗದಲ್ಲಿ ವಿವರಿಸಲಾಗಿದೆ. ಕೋಮುವಾದಿ ರಾಜಕಾರಣದ ಬೆಳವಣಿಗೆ, ಪರಿಣಾಮಗಳು ಎಂಟನೆಯ ಭಾಗದಲ್ಲಿ ವಿಷಯ ವಸ್ತುವಾಗಿದೆ. ಈ ದೇಶದ ಶೇ. ೨೫ರಷ್ಟಿರುವ ದಲಿತರು ಅನುಚಾನವಾಗಿ ಅನುಭವಿಸಿಕೊಂಡು ಬಂದಿರುವ ಅಸ್ಪೃಶ್ಯತೆ ತಾರತಮ್ಯ-ದುಸ್ಥಿತಿಗಳನ್ನು ಒಂಬತ್ತನೆಯ ಭಾಗದಲ್ಲಿ ಮಂಡಿಸಲಾಗಿದೆ. ಮಹಿಳಾ ರಾಜಕಾರಣದ ಪ್ರಕ್ರಿಯೆಯು ಹತ್ತನೆಯ ಭಾಗದ ವಿಷಯ ವಸ್ತುವಾಗಿದೆ. ಹನ್ನೊಂದನೆಯ ಭಾಗದಲ್ಲಿ ವಿಕೇಂದ್ರೀಕರಣ ಮತ್ತು ಸ್ವಯಂ ಮಾರ್ಗದರ್ಶಿ ವ್ಯವಸ್ಥೆಯ ಪ್ರಯೋಗವನ್ನು ಕುರಿತಂತೆ ಚರ್ಚಿಸಲಾಗಿದೆ. ಕೊನೆಯ ಹನ್ನೆರಡನೆಯ ಭಾಗದಲ್ಲಿ ಮೂರನೆಯ ಸಹಸ್ರಮಾನದ ಮುನ್ನೋಟವನ್ನು ಹಿಡಿದಿಡಲಾಗಿದೆ. ಸಮಾರೋಮ ಭಾಗದಲ್ಲಿ ಇಡೀ ಪ್ರಬಂಧದ ಮುಖ್ಯ ತಥ್ಯಗಳನ್ನು ಸಾರಾಂಶ ರೂಪದಲ್ಲಿ ಮಂಡಿಸಲಾಗಿದೆ.

ಸ್ವಾತಂತ್ರ್ಯಪೂರ್ವ ರಾಜಕೀಯ ಬೆಳವಣಿಗೆಗಳು

ಸ್ವಾತಂತ್ರ್ಯಪೂರ್ವದ ರಾಜಕೀಯ ಬೆಳವಣಿಗೆಯೆಂದರೆ ಸ್ವಾತಂತ್ರ್ಯ ಹೋರಾಟದ ಸಾಹಸ ಗಾಥೆಯೇ ಆಗಿದೆ. ಭಾರತೀಯ ರಾಷ್ಟ್ರೀಯ ಚಳವಳಿಯು ಮೂಲತಃ ಪ್ರಾತಿನಿಧಿಕ ಪ್ರಜಾತಂತ್ರ ಮತ್ತು ನಾಗರಿಕ ಸ್ವಾತಂತ್ರ್ಯವೆಂಬ ಎರಡು ಸ್ತಂಬಗಳನ್ನು ಆಧರಿಸಿಕೊಂಡಿತ್ತು. ಇವೆರಡೂ ಮೌಲ್ಯಗಳು ಭಾರತೀಯ ರಾಜಕೀಯ ಚಿಂತನೆಯ ಅವಿಭಾಜ್ಯ ಅಂಗವಾಗುವ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯ ಹೋರಾಟ ಅನುಭವವು ನಿರ್ಣಾಯಕ ಪಾತ್ರವನ್ನು ವಹಿಸಿತು. ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಭಾರತವು ಪ್ರತಿಪಾದಿಸಿಕೊಂಡು ಬಂದಿದೆ.

ಫೆಡ್ರಿಕ್ ಏಂಜೆಲ್ಸ್ ಮತ್ತು ಕಾರ್ಲ್‌ಮಾರ್ಕ್ಸ್‌ ಹೇಳಿದಂತೆ ವಸಾಹತುಶಾಹಿ ಬ್ರಿಷಿ ಆಡಳಿತವು ಭಾರತದಲ್ಲಿ ಎರಡು ಬಗೆಯ ಪರಿಣಾಮಗಳನ್ನು ಉಂಟುಮಾಡಿತು. ಮೊದಲನೆಯದು ವಿನಾಶಾತ್ಮಕವಾದುದಾದರೆ ಎರಡನೆಯದು ವಿಧಾಯಾತ್ಮಕವಾದುದು. ಈ ದೇಶದ ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ವಸಾಹತುಶಾಹಿಯು ಸಂಕೋಲೆಯಾಗಿ ಪರಿಣಮಿಸಿತ್ತು. ಭಾರತವನ್ನು ಕೇವಲ ಕಚ್ಚಾಮಾಲನ್ನು ರಫ್ತು ಮಾಡುವ ಮಾರುಕಟ್ಟೆಯನ್ನಾಗಿ ಮಾಡಲಾಯಿತು. ಈ ಬಗೆಯ ಕ್ರಮಗಳು ಆರ್ಥಿಕತೆಯ ಮೇಲೆ ವಿನಾಶಾತ್ಮಕ ಪರಿಣಾಮ ಬೀರಿದವು. ಇದಕ್ಕೆ ಸಮಾನಾಂತರವಾಗಿ ವಸಾಹತುಶಾಹಿ ಆಡಳಿತವು ಅನೇಕ ಬಗೆಯ ಅನುಕೂಲಗಳನ್ನು ಒದಗಿಸಿತು. ಸಾರಿಗೆ-ಸಂಪರ್ಕ ವ್ಯವಸ್ಥೆಯು ತೀವ್ರ ಪ್ರಗತಿ ಸಾಧಿಸಿಕೊಂಡಿತು. ಸಮಾನತೆಯನ್ನು ಆಧರಿಸಿದ ನ್ಯಾಯಾಂಗ ವ್ಯವಸ್ಥೆಯು ಇಲ್ಲಿ ಅಸ್ತಿತ್ವಕ್ಕೆ ಬಂದಿತು. ನಾಗರಿಕ ಹಕ್ಕುಗಳನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಜನರಿಗೆ ಒದಗಿಸಲಾಯಿತು. ಚುನಾವಣೆ-ಮತದಾನ-ಶಾಸನ ಸಭಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಲಾಯಿತು. ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಥಮ ಬಾರಿಗೆ ಇದೇ ಭಾರತವನ್ನು ಒಂದು ಆಡಳಿತದ ತೆಕ್ಕೆಗೆ ತರುವಲ್ಲಿ ವಸಾಹತುಶಾಹಿ ಆಡಳಿತ ಯಶಸ್ವಿಯಾಯಿತು. ಸಾಮಾನ್ಯ-ಏಕರೂಪಿ ಶಿಕ್ಷಣ ವ್ಯವಸ್ಥೆಯು ದೇಶದಲ್ಲಿ ಅಸ್ತಿತ್ವಕ್ಕೆ ಬಂದಿತು. ಭಾರತವು ಒಂದು ರಾಷ್ಟ್ರವಾಗಿ ರೂಪುಗೊಳ್ಳಲು ವಸಾಹತುಶಾಹಿ ಆಡಳಿತವು ಅಪ್ರತ್ಯಕ್ಷವಾಗಿ ನೆರವಾಯಿತು.

ವಸಾಹತುಶಾಹಿ ವಿರುದ್ಧ ಸಂಘಟಿಸಿದ್ದ ಸ್ವಾತಂತ್ರ್ಯ ಹೋರಾಟದ ಮಹತ್ವವಾದ ಲಕ್ಷಣವೆಂದರೆ ಅದರ ಜನತಾಂತ್ರಿಕ ಸ್ವರೂಪ. ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಸೈದ್ಧಾಂತಿಕ ನೆಲೆಗಟ್ಟಿತ್ತು. ಒಂದು ಆರ್ಥಿಕ ಅಭಿವೃದ್ಧಿ ಮೀಮಾಂಸೆ ಇತ್ತು. ಹೋರಾಟದ ಸಂದರ್ಭದಲ್ಲಿ ಗಳಿಸಿಕೊಂಡ ಅನುಭವವು ಸ್ವಾತಂತ್ರ್ಯಾನಂತರ ಭಾರತದಲ್ಲಿ ಪ್ರಗತಿಗಾಮಿ ರಾಜಕಾರಣವನ್ನು ಪ್ರಜಾತಂತ್ರ, ಜಾತ್ಯತೀತತೆ, ಸಮಾನತೆ, ನಾಗರಿಕ ಹಕ್ಕುಗಳ ಆಧಾರದ ಮೇಲೆ ಕಟ್ಟಲು ಉಪಯೋಗಕ್ಕೆ ಬಂದಿತು.

ಸ್ವಾತಂತ್ರ್ಯಪೂರ್ವ ಕಾಲಾವಧಿಯ ರಾಜಕೀಯ ಬೆಳವಣಿಗೆಯ ಮುಖ್ಯ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಬಹುದು.

  • ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಬದ್ಧತೆ.
  • ಆಧುನಿಕ ಆರ್ಥಿಕ ಅಭಿವೃದ್ಧಿ.
  • ಅಸಮಾನತೆಯ, ದಬ್ಬಾಳಿಕೆಯ, ಶೋಷಣೆಯ ನಿವಾರಣೆ.
  • ಪ್ರಾತಿನಿಧಿಕ ಜನತಾಂತ್ರಿಕ ರಾಜಕೀಯ ವ್ಯವಸ್ಥೆ.
  • ಸ್ವತಂತ್ರ ವಿದೇಶಿ ನೀತಿ.
  • ಏಕತೆ-ವೈವಿಧ್ಯತೆಯ ಚೌಕಟ್ಟಿನಲ್ಲಿ ರಾಷ್ಟ್ರವೊಂದರ ನಿರ್ಮಾಣ.
  • ಅಂತಾರಾಷ್ಟ್ರೀಯತೆಯ ಮೌಲ್ಯಕ್ಕೆ ಬದ್ಧತೆ.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಬೆಳವಣಿಗೆಯು ಸ್ವಾತಂತ್ರ್ಯ ಪೂರ್ವದ ರಾಜಕೀಯ ಬೆಳವಣಿಗೆ ವಿಸ್ಕೃತ ಚೌಕಟ್ಟಿನಲ್ಲೇ ರೂಪುಗೊಂಡಿದೆ. ಮತ್ತು ಅದು ಅದೇ ರೀತಿಯ ಮುಂದುವರಿದಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಸ್ವಾತಂತ್ರ್ಯಪೂರ್ವದ ರಾಷ್ಟ್ರೀಯ ಹೋರಾಟದ ಮೌಲ್ಯಗಳನ್ನು ಸ್ವಾತಂತ್ರ್ಯಾನಂತರವೂ ತಮ್ಮ ನೀತಿಯಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.

ಸ್ವಾತಂತ್ರ್ಯ: ಆಗಸ್ಟ್ ೧೫, ೧೯೪೭

ಆಗಸ್ಟ್ ೧೫, ೧೯೪೭ – ಸ್ವತಂತ್ರ ಭಾರತದ ಮೊದಲ ದಿನ. ಇಡೀ ದೇಶವು ಅತ್ಯಂತ ಸಂಭ್ರಮದಿಂದ ಮತ್ತು ಉತ್ಸಾಹದಿಂದ ಆ ದಿನವನ್ನು ದೇಶವು ಆಚರಿಸಿತು. ಅನೇಕ ತಲೆಮಾರುಗಳ ದೇಶ ಭಕ್ತಿಗಳ ಪ್ರಾಣತ್ಯಾಗದ ಫಲವಾಗಿ ಸ್ವಾತಂತ್ರ್ಯ ಲಭಿಸಿತು. ಆಗಸ್ಟ್‌೧೪, ೧೯೪೭ರ ರಾತ್ರಿ ಸಂವಿಧಾನ ಸಭೆಯನ್ನು ಉದ್ದೇಶಿಸಿ ನೆಹರೂ ಮಾಡಿದ ಚಾರಿತ್ರಿಕ ಭಾಷಣದಲ್ಲಿ ಜನರ ಭಾವನೆಗೆ ಶಬ್ದಗಳ ರೂಪ ನೀಡಿದ್ದರು. ಅವರ ಪ್ರಕಾರ,

ಸ್ವಾತಂತ್ರ್ಯದ ದಿನವು ಕೇವಲ ಸಂಭ್ರಮದ-ಉತ್ಸಾಹದ-ಅದ್ದೂರಿಯ ದಿನ ಮಾತ್ರವಾಗಿರಲಿಲ್ಲ. ಅದೊಂದು ದುಃಖದ, ಸಂತಾಪದ ದಿನವೂ ಆಗಿತ್ತು.  ದೇಶವು ಇಬ್ಭಾಗವಾಗಿತ್ತು. ಕೋಮು ಗಲಭೆಯಲ್ಲಿ ಸಾವಿರಾರು ಮುಗ್ಧ ಜೀವಿಗಳ ಜೀವ ಹರಣವಾಗಿತ್ತು. ನಿರಾಶ್ರಿತರ ಸಮಸ್ಯೆ ಉದ್ಭವಿಸಿತು.

ರಾಜ ಸಂಸ್ಥಾನಗಳ ವಿಲೀನ

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶ ಎದುರಿಸಿದ ಮಹತ್ವದ ಸವಾಲೆಂದರೆ ದೇಶದ ಬದ್ಧ ರಾಜಸ್ಥಾನಗಳನ್ನು ವಿಲೀನಗೊಳಿಸುವುದಾಗಿತ್ತು. ಇಡೀ ದೇಶದ ಶೇ. ೪೦ ರಷ್ಟು ವಿಸ್ತೀರ್ಣವು ೬೬ ಚಿಕ್ಕ-ದೊಡ್ಡ ರಾಜ ಸಂಸ್ಥಾನಗಳ ವಶದಲ್ಲಿತ್ತು. ಈ ರಾಜ ಸಂಸ್ಥಾನಗಳಲ್ಲಿ ಕೆಲವು ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸಿದವು. ಭಾರತದ ಒಕ್ಕೂಟದೊಳಗೆ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ರಾಜಸಂಸ್ಥಾನಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಈ ದಿಶೆಯಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ಕಾಶ್ಮೀರದ ಸಮಸ್ಯೆ ಉದ್ಭವಿಸಿತು. ಹೈದರಾಬಾದ್ ನಿಜಾಮನು ತನ್ನ ಸಂಸ್ಥಾನದ ಸ್ವತಂತ್ರ ಅಸ್ತಿತ್ವವನ್ನು ಘೋಷಿಸಿದನು. ಸರ್ಕಾರವು ಸೈನಿಕ ಕಾರ್ಯಚರಣೆ ಮೂಲಕ ನಿಜಾಮ ಸಂಸ್ಥಾನವನ್ನು ಒಕ್ಕೂಟದಲ್ಲಿ ವಿಲೀನಗೊಳಿಸಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲರ ಪಾತ್ರ ನಿರ್ಣಾಯಕವಾಗಿತ್ತು.

ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದ ಮುಂದಿದ್ದ ಬಹು ದೊಡ್ಡ ರಾಜಕೀಯ ಸವಾಲೆಂದರೆ ದೇಶದ ಏಕತೆಯನ್ನು ಕಾಪಾಡುವುದು. ದೇಶದಲ್ಲಿ ನೂರಾರು ಭಾಷೆಗಳಿದ್ದವು. ಅನೇಕ ಧರ್ಮಗಳಿದ್ದವು. ಬುಡಗಟ್ಟು ಜನ ಸಮುದಾಗಳಿದ್ದವು. ಈ ಬಗೆಯ ವೈವಿಶ್ಯತೆ ಮತ್ತು ಬಹುತ್ವಗಳನ್ನು ಒಪ್ಪಿಕೊಂಡೇ ದೇಶವು ತನ್ನ ಏಕತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು. ರಾಜಸಂಸ್ಥಾನಗಳನ್ನು ಭಾರತ ಗಣರಾಜ್ಯದಲ್ಲಿ ವಿಲೀನಗೊಳಿಸಿದಂತೆ ೧೯೫೬ರಲ್ಲಿ ಭಾಷಾವಾರು ಪ್ರಾಂತಗಳನ್ನು ರಚಿಸುವುದರ ಮೂಲಕ ಭಾಷಾ ಸಮಸ್ಯೆಗಳನ್ನು ಅದು ಬಗೆಹರಿಸಿಕೊಂಡಿತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನೆಹರೂ, ಪಟೇಲ್, ಅಂಬೇಡ್ಕರ್, ರಾಜೇಂದ್ರ ಪ್ರಸಾದ್, ಮೌಲಾನ್ ಆಜಾದ್, ಕೃಪಲಾನಿ, ಲೋಹಿಯಾ ಮುಂತಾದ ಮುತ್ಸದ್ದಿಗಳಿದ್ದರು. ಅಂತಹವರ ನಾಯಕತ್ವದಲ್ಲಿ ದೇಶದ ಆರಂಭದಲ್ಲಿನ ಸಮಸ್ಯೆಗಳನ್ನು ಪ್ರಜಾತಂತ್ರ ಮಾದರಿಯಲ್ಲಿ ಬಗೆಹರಿಸಿಕೊಂಡಿತು. ಇಡೀ ವಿಶ್ವದಲ್ಲಿ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವು ಮೂಡಿತು.

ಭಾರತದ ಸಂವಿಧಾನ (೧೯೫೦)

ಸ್ವಾತಂತ್ರ್ಯೋತ್ತರ ಕಾಲಾವಧಿಯ ಭಾರತದ ರಾಜಕೀಯ ಬೆಳವಣಿಗೆಯಲ್ಲಿ ಬಹುದೊಡ್ಡ ದೇಶದ ಮೈಲಿಗಲ್ಲು ಎಂದರೆ ೧೯೫೦ರಲ್ಲಿ ಅದು ಒಪ್ಪಿಕೊಂಡ ಸಂವಿಧಾನ. ೧೯೫೦ರ ಜನವರಿ ೨೬ರಂದು ಭಾರತವು ಸಂವಿಧಾನವನ್ನು ಒಪ್ಪಿಕೊಂಡಿತು. ಅಂದಿನಿಂದ ಜನವರಿ ೨೬ರನ್ನು ಭಾರತದ ‘ಗಣರಾಜ್ಯದಿನ’ವೆಂದು ಆಚರಿಸಲಾಗುತ್ತದೆ. ಇದಕ್ಕೆ ಪೂರ್ವದಲ್ಲಿ ಅಂದರೆ ೧೯೩೦ರ ಜನವರಿ ೨೬ರಂದು ಭಾರತೀಯರು ಸ್ವಾತಂತ್ರ್ಯದ ಪ್ರಮಾಣ ತೆಗೆದುಕೊಂಡಿದ್ದರು. ಸಂವಿಧಾನ ರಚನೆಯ ಪ್ರಕ್ರಿಯೆಯು ೧೯೫೦ ಕ್ಕೆ ಮೊದಲೆ ಆರಂಭಗೊಂಡಿತ್ತು. ಸ್ವಾತಂತ್ರ್ಯ ಪೂರ್ವ ಕಾಲಾವಧಿಯಿಂದಲೂ ಸಂವಿಧಾನ ರಚನೆಯ ಪ್ರಕ್ರಿಯೆ ನಡೆಯುತ್ತ ಬಂದಿತ್ತು. ಸಂವಿಧಾನ ರೂಪಿಸುವ ದಿಶೆಯಲ್ಲಿ ಪ್ರಯತ್ನಗಳು ೧೯೩೦-೪೦ರ ದಶಕದಲ್ಲೇ ಆರಂಬಗೊಂಡವು. ಭಾರತಕ್ಕೆ ಜವಾಬ್ದಾರಿ ಸರ್ಕಾರವನ್ನು ನೀಡಬೇಕೆಂಬ ಬೇಡಿಕೆ ಅಂದು ಹುಟ್ಟಿಕೊಂಡಿತು. ಬಾಲ ಗಂಗಾಧರ ತಿಲಕ್ ಮತ್ತು ಆನಿಬೆಸೆಂಟ್ ಅವರ ‘ಹೋಮ್‌ರೂಲ್ ಚಳವಳಿಯನ್ನು ಆರಂಭಿಸಿದರು. ಚುನಾಯಿತ ಪ್ರಾತಿನಿಧಿಕ ಶಾಸನಾಂಗ ಸಭೆಗಳನ್ನು ರೂಪಿಸುವಂತೆ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದರು.

ಸಂವಿಧಾನ ಸಭೆಯನ್ನು ರಚಿಸುವಂತೆ ಸ್ವಾತಂತ್ರ್ಯ ಪೂರ್ವದಲ್ಲೇ ಸರ್ಕಾರದ ಮೇಲೆ ಒತ್ತಡವಿತ್ತು. ಸಂವಿಧಾನ ಸಭೆಯು ೧೯೪೬ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅದರ ಮೊದಲು ಅಧಿವೇಶವು ೧೯೪೬ರ ನವೆಂಬರ್ ೨೦ ರಂದು ನಡೆಯಬೇಕೆಂದು ನಿರ್ಧರಿಸಲಾಯಿತು. ಆದರೆ ಅದರ ಮೊದಲು ಅಧಿವೇಶನವು ೧೯೪೬ ರ ಡಿಸೆಂಬರ್ ೯ ರಂದು ನಡೆಯಿತು. ಸ್ವಾತಂತ್ರ್ಯ ಭಾರತದ ಉದಯದ ಪ್ರಕ್ರಿಯೆ ಅಂದಿನಿಂದ ಆರಂಭವಾಯಿತೆಂದು ಹೇಳಬಹುದು. ಸಂವಿಧಾನ ಸಭೆಯು ಸಂಪೂರ್ಣವಾಗಿ ಭಾರತೀಯ ಪ್ರತಿನಿಧಿಗಳಿಂದ ಕೂಡಿತ್ತು. ಅದರ ಮೊದಲ ಅಧಿವೇಶನದಲ್ಲಿ ೨೦೭ ಸದಸಯರು ಭಾಗವಹಿಸಿದ್ದರು. ಡಾ. ರಾಜೇಂದ್ರ ಪ್ರಸಾದ್ ಅವರನ್ನು ಅದರ ಖಾಯಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ೧೯೪೭ರ ಆಗಸ್ಟ್ ೧೫ ರಂದು ಸಂವಿಧಾನ ಸಭೆಯು ಸಾರ್ವಭೌಮ ಸಂಸ್ಥೆಯಾಯಿತು. ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ಕಾರ್ಯ ನಿರ್ವಹಿಸಿದರು.

ಸಂವಿಧಾನದ ಮೂಲ ಚೌಕಟ್ಟು

ದೇಶದಲ್ಲಿ ಕಾನೂನುಗಳನ್ನು ಹೇಗೆ ರಚಿಸಬೇಕು ಎಂಬುದಕ್ಕೆ ಸಂವಿಧಾನವು ನಿಯಮಗಳನ್ನು ರೂಪಿಸಿಕೊಟ್ಟಿತು. ದೇಶಕ್ಕೆ ಪ್ರಜಾತಂತ್ರ ಸಂಸದೀಯ ಸರ್ಕಾರವನ್ನು ಅದು ಒದಗಿಸಿ ಕೊಟ್ಟಿತು. ಅದು ಮೂಲಭೂತ ಹಕ್ಕುಗಳನ್ನು ಮತ್ತು ನಿರ್ದೇಶನ ತತ್ವಗಳನ್ನು ಒಳಗೊಂಡಿದೆ.

ನಮ್ಮ ಸಂವಿಧಾನದ ಮುಖ್ಯವಾದ ರಾಜಕೀಯ ಮಹತ್ವದ ಲಕ್ಷಣವೆಂದರೆ ವಯಸ್ಕರ ಮತದಾನ. ದೇಶವು ೧೯೨೦ರಿಂದಲೂ ವಯಸ್ಕ ಮತದಾನವನ್ನು ಒತ್ತಾಯಿಸುತ್ತಾ ಬಂದಿತ್ತು. ಸಾಮಾನ್ಯ ಜನರ ವಿವೇಕದಲ್ಲಿ ಸಂವಿಧಾನ ಸಭೆಗೆ ನಂಬಿಕೆಯಿತ್ತು. ಅದರಿಂದಲೇ ನೇರ ವಯಸ್ಕರ ಮತದಾನಕ್ಕೆ ಸಂವಿಧಾನದಲ್ಲಿ ಅವಕಾಶ ನೀಡಲಾಯಿತು. ಸ್ವಾತಂತ್ರ್ಯ ಪ್ರಾಪ್ತವಾಗುವವರೆಗೆ ಮತದಾನದ ಹಕ್ಕು ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಮತದಾನಕ್ಕೆ ಆಸ್ತಿ ಮತ್ತು ಶಿಕ್ಷಣವನ್ನು ಅಗತ್ಯ ಗುಣಗಳನ್ನಾಗಿ ನಿಗದಿಪಡಿಸಲಾಗಿತ್ತು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. ೧೫ ರಷ್ಟು ಜನರಿಗೆ ಮಾತ್ರ ಮತದಾನದ ಹಕ್ಕಿತ್ತು. ಆದರೆ ಈಗ ಎಲ್ಲರನ್ನು ಒಳಗೊಳ್ಳುವ ರೀತಿಯ ಮತದಾನದ ಹಕ್ಕನ್ನು ಸಂವಿಧಾನವು ನೀಡಿತು.

ಸಂವಿಧಾನದ ಪೀಠಿಕಾ ಭಾಗ

ಸಂವಿಧಾನದ ಹಿಂದಿನ ಚಾಲಕ ಶಕ್ತಿ, ಅದರ ಸಿದ್ದಾಂತ, ಅದರ ಸಾರವನ್ನು ಅದರ ಪೀಠಿಕಾ ಭಾಗದಲ್ಲಿ ನಾವು ಕಾಣಬಹುದು. ಸಂವಿಧಾನದ ಪೀಠಿಕಾ ಭಾಗವು ನೆಹರೂ ಅವರು ರೂಪಿಸಿದ್ದು, ಸಂವಿಧಾನದ ಉದ್ದೇಶಗಳ ವರದಿಯನ್ನು ಆಧರಿಸಿತ್ತು. ಅದರ ಮುಖ್ಯ ಪಾಠವು ಹೀಗಿದೆ:

ನಾವು ಭಾರತದ ಜನತೆ ಪವಿತ್ರವಾಗಿ ನಿರ್ಣಯಿಸಿದಂತೆ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾತಂತ್ರ ಗಣರಾಜ್ಯವಾಗಿ ಕಟ್ಟಿದ್ದೇವೆ ಮತ್ತು ಅದರ ನಾಗರಿಕರಿಗೆ ನ್ಯಾಯವನ್ನು-ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ, ಸ್ವಾತಂತ್ರ್ಯವನ್ನು-ಚಿಂತನೆಯ, ಅಭಿವ್ಯಕ್ತಿಯ, ನಂಬಿಕೆಯ ಆರಾಧನೆಯ, ಸಮಾನತೆಯನ್ನು-ಸ್ಥಾನಮಾನದಲ್ಲಿ, ಅವಕಾಶದಲ್ಲಿ ಒದಗಿಸಲಾಗುತ್ತದೆ. ಹಾಗೂ ಅವರಲ್ಲಿ ವ್ಯಕ್ತಿ ಗೌರವವನ್ನು ಮತ್ತು ರಾಷ್ಟ್ರೀಯತೆಯ ಏಕತೆ ಹಾಗೂ ಅಖಂಡತೆಯನ್ನು ದೃಢೀಕರಿಸಲು ಭ್ರಾತೃತ್ವವನ್ನು ಘೋಷಿಸಲಾಗುತ್ತದೆ.

ಜನರು ತಮಗೆ ತಾವೆ ಕೊಟ್ಟುಕೊಂಡ ಮತ್ತು ಅವರೇ ರಚಿಸಿರುವ ಸಂವಿಧಾನ ಇದು. ಪೀಠಿಕಾ ಭಾಗದಲ್ಲಿ ನಾಲ್ಕು ಮಹಾ ಮೌಲ್ಯಗಳಾದ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮೊದಲು ಸ್ಥಾನವನ್ನು ‘ನ್ಯಾಯ’ಕ್ಕೆ ನೀಡಲಾಗಿದೆ. ಅದರಲ್ಲೂ ರಾಜಕೀಯಕ್ಕಿಂತ ಸಾಮಾಜಿಕ, ಆರ್ಥಿಕ ನ್ಯಾಯಕ್ಕೆ ಆದ್ಯತೆ ನೀಡಲಾಗಿದೆ. ಇದು ಪ್ರಜ್ಞಾಪೂರ್ವಕವಾಗಿ ರೂಪಿಸಿರುವ ಪೀಠಿಕಾ ಭಾಗವಾಗಿದೆ. ಭಾರತದ ಸಂವಿಧಾನದ ಮೂಲಭೂತ ತತ್ವವೆಂದರೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವಾಗಿದೆ.

ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನ ತತ್ವ

ಗ್ರಾನ್ ವಿಲ್ಲೇ ಆಸ್ಮೀನ್ ಹೇಳಿರುವಂತೆ ಸಾಮಾಜಿಕ ಕ್ರಾಂತಿಗೆ ಬದ್ಧತೆಯ ಸಾರವು ಸಂವಿಧಾನದ ಮೂರು ಮತ್ತು ನಾಲ್ಕನೆಯ ಭಾಗದಲ್ಲಿ ಅಂದರೆ ಮೂಲಭೂತ ಹಕ್ಕುಗಳಲ್ಲಿ ಮತ್ತು ನಿರ್ದೇಶನ ಮಾಡುವಲ್ಲಿ ಅಡಗಿದೆ. ಇವು ಸಂವಿಧಾನದ ಆತ್ಮಸಾಕ್ಷಿಯಾಗಿದೆ.

ಮೂಲಭೂತ ಹಕ್ಕುಗಳಿಗೂ ಮತ್ತು ರಾಜ್ಯ ನಿರ್ದೇಶನ ತತ್ವಗಳಿಗೂ ನಡುವೆ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ಮೊದಲನೆಯದು ನ್ಯಾಯಾಂಗದ ನಿರ್ವಚನಕ್ಕೆ ಒಳಗಾಗಿದ್ದರೆ, ಎರಡನೆಯದು ನ್ಯಾಯಾಂಗದ ನಿರ್ವಚನಕ್ಕೆ ಅತೀತವಾಗಿದೆ.

ಇದರಿಂದ ಎರಡನೆಯದು ಮುಖ್ಯವಲ್ಲವೆಂದು ಭಾವಿಸುವುದು ತಪ್ಪಾಗುತ್ತದೆ. ಮಾನವ ಹಕ್ಕುಗಳ ಜಾಗತಿಕ ಘೋಷಣೆಯಲ್ಲೂ ಹಕ್ಕುಗಳನ್ನು ನಾಗರಿಕ-ರಾಜಕೀಯವೆಂದೂ ಮತ್ತು ಆರ್ಥಿಕ-ಸಾಮಾಜಿಕವೆಂದೂ ವಗೀಕರಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಮೊದಲನೆಯ ಪ್ರಕಾರದ ಹಕ್ಕುಗಳನ್ನು ಮೂಲಭೂತ ಹಕ್ಕುಗಳ ಭಾಗದಲ್ಲಿ ಸೇರಿದ್ದರೆ ಎರಡನೆಯ ಪ್ರಕಾರದ ಹಕ್ಕುಗಳನ್ನು ರಾಜ್ಯ ನಿರ್ದೇಶನ ತತ್ವಗಳ ಭಾಗದಲ್ಲಿ ಸೇರಿಸಿದೆ.

ಭಾರತದ ಸಂವಿಧಾನವು ಲಿಖಿತವಾಗಿದ್ದರೆ ಬ್ರಿಟನ್ನಿನ ಸಂವಿಧಾನವು ಅಲಿಖಿತವಾದುದಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಹಕ್ಕುಗಳನ್ನು, ಹಕ್ಕುಗಳ ಘೋಷಣೆಯನ್ನು, ಮೊದಲು ಸರ್ಕಾರವನ್ನು ಜನರು ಒತ್ತಾಯಿಸುತ್ತಿದ್ದರು. ಅದರಂತೆ ಅವುಗಳನ್ನು ಲಿಖಿತ ರೂಪದಲ್ಲಿ ಸಂವಿಧಾನದ ಮೂಲಕ ಜನರು ಪಡೆದುಕೊಂಡರು.

ಮೂಲಭೂತ ಹಕ್ಕುಗಳು ಏಳು. ಅವುಗಳೆಂದರೆ ಸಮಾನತೆ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುಗಳು, ಆಸ್ತಿಯ ಹಕ್ಕು ಮತ್ತು ಸಂವಿಧಾನಾತ್ಮಕ ಪರಿಹಾರದ ಹಕ್ಕು.

ಪೀಠಿಕಾ ಭಾಗ, ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶನ ತತ್ವಗಳ ಒಟ್ಟು ಸಾರವೆಂದರೆ ಸಮಾನತೆಯಿಂದ ಕೂಡಿದ ಸಮಾಜವನ್ನು ಕಟ್ಟುವುದು ಸಂವಿಧಾನದ ಮೂಲ ಉದ್ದೇಶವಾಗಿದೆಯೆಂಬುದಾಗಿದೆ.

ಯೋಜಿತ ಅಭಿವೃದ್ಧಿ

ಭಾರತದ ಸ್ವಾತಂತ್ರ್ಯೋತ್ತರ ರಾಜಕೀಯ ಬೆಳವಣಿಗೆಯ ಬಹು ಮುಖ್ಯ ಆಯಾಮವೆಂದರೆ ಅದು ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲಿ ಅಳಡವಡಿಸಿಕೊಂಡ ಯೋಜನಾತಂತ್ರ. ಇದು ಭಾರತದ ಬಹು ಮುಖ್ಯ ರಾಜಕೀಯ ವಿಶಿಷ್ಟತೆಯಾಗಿದೆ. ಎರಡನೆಯ ಮಹಾಯುದ್ಧದ ನಂತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ಎರಡು ವಿಕಲ್ಪಗಳು ಭಾರತದ ಎದುರಿಗಿದ್ದವು. ಒಂದನೆಯದು ಅಮೆರಿಕಾ ಮಾದರಿಯ ಬಂಡವಾಳಶಾಹಿ ಮಾರುಕಟ್ಟೆ ಪ್ರಣೀತ ಅಭಿವೃದ್ಧಿ ತಂತ್ರ. ಎರಡನೆಯದು, ರಷ್ಯನ್ ಮಾದರಿಯ ಸಮಾಜವಾದಿ ಸರ್ಕಾರ ಪ್ರಣೀತ ಅಭಿವೃದ್ಧಿ ತಂತ್ರ. ಭಾರತವು ಇವೆರಡೂ ಮಾದರಿಗಳನ್ನು ಬಿಟ್ಟು ಮೂರನೆಯ ಮಾದರಿಯೊಂದನ್ನು ಅಳವಡಿಸಿಕೊಂಡಿತು. ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಇದೊಂದು ವಿಶಿಷ್ಟ ನಿರ್ಣಯವಾಗಿದೆ. ಭಾರತವು ಅಳವಡಿಸಿಕೊಂಡ ಅಭಿವೃದ್ಧಿ ಮಾದರಿಯು ಮಿಶ್ರ ಆರ್ಥಿಕತೆ ಮಾದರಿಯಾಗಿತ್ತು. ಮಾರುಕಟ್ಟೆ ಶಕ್ತಿ ಹಾಗೂ ಸರ್ಕಾರದ ವಲಯಗಳಿಗೆ ಅವಕಾಶವಿರುವ ವ್ಯವಸ್ಥೆ ಅದಾಗಿತ್ತು. ಮಾರುಕಟ್ಟೆ ಶಕ್ತಿ ಹಾಗೂ ಸರ್ಕಾರದ ವಲಯಗಳಿಗೆ ಅವಕಾಶವಿರುವ ವ್ಯವಸ್ಥೆ ಅದಾಗಿತ್ತು. ಖಾಸಗಿ ವಲಯ ಹಾಗೂ ಸಾರ್ವಜನಿಕ ವಲಯಗಳೆರಡಕ್ಕೂ ಅವಕಾಶವಿರುವ ವ್ಯವಸ್ಥೆಯೇ ಮಿಶ್ರ ಆರ್ಥಿಕ ವ್ಯವಸ್ಥೆ.

ಮಿಶ್ರ ಆರ್ಥಿಕ ವ್ಯವಸ್ಥೆಯೊಳಗೆ ಭಾರತವು ಯೋಜಿತ ಅಭಿವೃದ್ಧಿ ತಂತ್ರವನ್ನು ಅಳವಡಿಸಿಕೊಂಡಿದ್ದು ಅದರ ವಿಶೇಷತೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಯೋಜಿತ ಅಭಿವೃದ್ಧಿಯನ್ನು ಅಳವಡಿಸಿಕೊಂಡು ಬಹು ದೊಡ್ಡ ಪ್ರಯೋಗವನ್ನು ಭಾರತ ನಡೆಸಿತು. ಯೋಜಿತ ಅಭಿವೃದ್ಧಿಯ ಅಗತ್ಯವನ್ನು, ಸರ್ಕಾರದ ಕ್ರಿಯಾಶೀಲ ಪಾತ್ರವನ್ನು ಭಾರತದಲ್ಲಿ ಮುತ್ಸದ್ದಿಗಳು ಸ್ವಾತಂತ್ರ್ಯ ಪೂರ್ವದಲ್ಲೇ ಗುರುತಿಸಿದ್ದರು. ಎಂ.ಜಿ. ರಾನಡೆ, ದಾದಾಬಾಯಿ ನವರೋಜಿ, ಸರ್.ಎಂ. ವಿಶ್ವೇಶ್ವರಯ್ಯ, ಜವಹರಲಾಲ್ ನೆಹರೂ ಮುಂತಾದವರೂ ಯೋಜಿತ ಅಭಿವೃದ್ಧಿಯ ಅಗತ್ಯವನ್ನು ಪ್ರತಿಪಾದಿಸುತ್ತಿದ್ದರು. ನೆಹರೂ ಅವರ ಅಧ್ಯಕ್ಷತೆಯಲ್ಲಿ ೧೯೩೮ರಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತ್ತು.

ಸ್ವಾತಂತ್ರ್ಯಾನಂತರದ ೧೯೫೦ರ ಮಾರ್ಚ್‌೧೫ ರಂದು ಯೋಜನಾ ಆಯೋಗವನ್ನು ಸ್ಥಾಪಿಸಲಾಯಿತು. ಮೊದಲು ಪಂಚವಾರ್ಷಿಕ ಯೋಜನೆಯನ್ನು ೧೯೫೧ರ ಏಪ್ರಿಲ್ ಒಂದರಂದು ಉದ್ಘಾಟಿಸಲಾಯಿತು. ಇಂದು ನಾವು ಹತ್ತು ಪಂಚವಾರ್ಷಿಕ ಯೋಜನೆಗಳನ್ನು ಮುಗಿಸಿ ಹನ್ನೊಂದನೆಯ ಯೋಜನೆಯ ಅವಧಿಗೆ (೨೦೦೭-೨೦೧೨) ಕಾಲಿರಿದಿದ್ದೇವೆ.

ರಾಜಕೀಯ ಬೆಳವಣಿಗೆ ಕೃಷಿಯಿಂದ ಭಾರತದ ಅಭಿವೃದ್ಧಿ ಚರಿತ್ರೆಯನ್ನು ಮೂರು ಭಾಗಗಳಲ್ಲಿ ಚರ್ಚಿಸಬಹುದಾಗಿದೆ.

೧. ನೆಹರೂ ಪ್ರಣೀತ ಅಭಿವೃದ್ಧಿ ಕಾಲಘಟ್ಟ: ೧೯೫೧-೧೯೬೫

೨. ಆರ್ಥಿಕ ಹಿಂಜರಿತ-ಮಹಾ ಬಿಕ್ಕಟ್ಟಿನ ಕಾಲಘಟ್ಟ: ೧೯೬೫-೧೯೯೧

೩. ಆರ್ಥಿಕ ಸುಧಾರಣೆ-ಉದಾರವಾದಿ ಆರ್ಥಿಕತೆ: ೧೯೯೧ರ ನಂತರ

. ನೆಹರೂ ಪ್ರಣೀತ ಅಭಿವೃದ್ಧಿ (೧೯೫೧-೧೯೬೫)

ಯೋಜನಾ ಆಯೋಗದ ಅಧ್ಯಕ್ಷರಾಗಿದ್ದ ಪ್ರಧಾನಿ ನೆಹರೂ ಮತ್ತು ಆಯೋಗದ ಉಪಾಧ್ಯಕ್ಷರಾಗಿದ್ದ ಪಿ,ಸಿ. ಮಹಾಲನೊಬಿಸ್ ಅವರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾದರಿಯೊಂದನ್ನು ರೂಪಿಸಿದ್ದರು. ಅದು ನೆಹರೂ – ಮಹಾಲನೊಬಿಸ್ ಮಾದರಿಯೆಂದು ಜನಜನಿತವಾಗಿದೆ. ಈ ಮಾದರಿಯ ಆಧಾರದಲ್ಲಿ ಎರಡನೆಯ ಪಂಚವಾರ್ಷಿಕ ಯೋಜನೆಯನ್ನು ೧೯೫೬ರಲ್ಲಿ ರೂಪಿಸಲಾಯಿತು. ಅದರಲ್ಲಿ ಭಾರಿ ಉದ್ದಿಮೆಗಳಿಗೆ ಆದ್ಯತೆ ನೀಡಲಾಯಿತು. ಬಂಡವಾಳ ಸರಕುಗಳ ಉತ್ಪಾದನೆಗೆ ಮೊದಲು ಪ್ರಾಶಸ್ತ್ರವನ್ನು ನೀಡಲಾಯಿತು. ಒಂದು ರೀತಿಯಲ್ಲಿ ಹೇಳಬೇಕೆಂದರೆ ೧೯೫೧-೧೮೬೫ರ ಅವಧಿಯಲ್ಲಿ ರಾಷ್ಟ್ರದ ಕೈಗಾರಿಕಾ ವಲಯಕ್ಕೆ ಸಂಬಂಧಿಸಿದಂತೆ ಬೃಹತ್ ಅಡಿಪಾಯವನ್ನು ನಿರ್ಮಿಸಲಾಯಿತು. ಕಬ್ಬಿಣ ಮತ್ತು ಉಕ್ಕು ಉದ್ಯಮಗಳು, ಬಾರಿ ಯಂತ್ರೋಪಕರಣಗಳ ಸ್ಥಾವರ, ರಕ್ಷಣಾ ಉದ್ದಿಮೆಗಳು ಮುಂತಾದವು ಈ ಅವಧಿಯಲ್ಲಿ ರೂಪುಗೊಂಡವು. ಆ ಅವಧಿಯಲ್ಲಿ ಅಭಿವೃದ್ಧಿಯನ್ನು ನಿರ್ದೇಶಿಸಿದ ಬಹು ಮುಖ್ಯ ರಾಜಕೀಯ ನಿರ್ಣಯವೆಂದರೆ ಆಮದು ಮಾಡಿಕೊಳ್ಳಬೇಕಾದಂತಹ ಬಂಡವಾಳ ಸರಕು-ಯಂತ್ರೋಪಕರಣಗಳನ್ನು ದೇಶದಲ್ಲೇ ಸ್ವಂತ ಉತ್ಪಾದಿಸಬೇಕು ಎಂಬುದಾಗಿತ್ತು. ‘ಸ್ವಾವಲಂಬನೆ’ ಎಂಬುದು ಇಲ್ಲಿನ ಮೂಲತತ್ವವಾಗಿತ್ತು.

ನೆಹರೂ – ಮಹಾಲನೊಬಿಸ್ ಮಾದರಿ ಯೋಜನಾ ತಂತ್ರದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಅಲ್ಲಿ ವರಮಾನ ವರ್ಧನೆಯನ್ನು ಸಮಾನತೆ ಉದ್ದೇಶದೊಂದಿಗೆ ಸಂಯೋಜಿಸಲಾಗಿತ್ತು. ಕೃಷಿ, ಉದ್ದಿಮೆ, ವಿಜ್ಞಾನ ತಂತ್ರಜ್ಞಾನ, ಮೂಲ ಸೌಲಭ್ಯ ಮುಂತಾದ ಕ್ಷೇತ್ರದಲ್ಲಿ ದೇಶವು ಅದ್ಭುತ ಪ್ರಗತಿಯನ್ನು ಸಾಧಿಸಿಕೊಂಡಿತು.

. ಆರ್ಥಿಕ ಹಿಂಜರಿತ-ಮಹಾ ಬಿಕ್ಕಟ್ಟು (೧೯೬೫-೧೯೯೧)

ದೇಶವು ೧೯೬೦ರ ದಶಕದ ಮಧ್ಯಭಾಗದಲ್ಲಿ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ದೇಶವು ಅಳವಡಿಸಿಕೊಂಡಿದ್ದ ಅಭಿವೃದ್ಧಿ ಮಾದರಿ ಟೀಕೆಗೊಳಗಾಯಿತು. ಕೃಷಿ ಕ್ಷೇತ್ರದಲ್ಲಿ ತೀವ್ರ ಬಿಕ್ಕಟ್ಟು ಉಂಟಾಯಿತು. ಕೃಷಿ ಉತ್ಪನ್ನದಲ್ಲಿ ಶೇ. ೨೦ರ ಕುಸಿತ ಉಂಟಾಯಿತು. ಹಣದುಬ್ಬರ ತೀವ್ರಗೊಂಡಿತು. ವಿದೇಶಿ ವಿನಿಮಯ ನಿಧಿಯ ಕೊರತೆ ತೀವ್ರವಾಯಿತು. ಈ ಬಿಕ್ಕಟ್ಟು ಎಷ್ಟು ತೀವ್ರವಾಗಿತ್ತೆಂದರೆ ಸರ್ಕಾರವು ತಾತ್ಕಾಲಿಕವಾಗಿ ‘ಯೋಜನೆ’ಯನ್ನು ಸ್ಥಗಿತಗೊಳಿಸಬೇಕಾಯಿತು. ಯೋಜನೆಗೆ ೧೯೬೬-೧೯೬೯ರ ರವರೆಗೆ ರಜೆ ನೀಡಲಾಯಿತು.

ದೇಶವು ಸಂಕಷ್ಟದಿಂದ ಬಿಡುಗಡೆಯನ್ನು ೧೯೭೦ರಲ್ಲಿ ಸಾಧಿಸಿಕೊಂಡಿತು. ಆದರೆ ಅಭಿವೃದ್ಧಿಯು ಅನೇಕ ಸಂಕೋಲೆಗಳಿಂದ ನರಳುತ್ತಿತ್ತು. ಖಾಸಗಿ ವಲಯದ ಮೇಲೆ ತೀವ್ರ ನಿಯಂತ್ರಣವಿತ್ತು. ವಿದೇಶಿ ಬಂಡವಾಳದ ಪ್ರವೇಶವನ್ನು ನಿಷೇಧಿಸಲಾಗಿತ್ತು. ಲೈಸನ್ಸ್ ಪರ್ಮಿಟ್ ರಾಜ್ ಜಾರಿಯಲ್ಲಿತ್ತು. ಮಿಶ್ರ ಆರ್ಥಿಕ ವ್ಯವಸ್ಥೆಯು ಬಿಕ್ಕಟ್ಟು ಎದುರಿಸಿತೊಡಗಿತು. ಸಾರ್ವಜನಿಕ ವಲಯದ ಉದ್ದಿಮೆಗಳು ತೀವ್ರ ನಷ್ಟ ಅನುಭವಿಸತೊಡಗಿದವು. ಅಲ್ಲಿ ಉತ್ಪಾದಕತೆ ನೆಲ ಕಚ್ಚಿತ್ತು.

ಸಾರ್ವಜನಿಕ ಹಣಕಾಸು ನಿರ್ವಹಣೆ ವಿಫಲಗೊಂಡಿತ್ತು. ಕೋಶೀಯ ಕೊರತೆಯು ನಿರ್ವಹಿಸಲಾರದ ಸ್ಥಿತಿ ತಲುಪಿತ್ತು. ಯಾವ ಸ್ಥಿತಿ ನಿರ್ಮಾಣಗೊಂಡಿದ್ದವೆಂದರೆ ದೇಶವು ಆಮದು ಬಿಲ್ಲನ್ನು ಪಾವತಿಸಲು ೨೦ ಟನ್ ಚಿನ್ನವನ್ನು ಮಾರಾಟ ಮಾರಬೇಕಾಯಿತು. ಒಂದು ರೀತಿಯಲ್ಲಿ ಸರ್ಕಾರವು ‘ದಿವಾಳಿ’ಯಾಗುವ ಹಂತವನ್ನು ೧೯೯೦ರಲ್ಲಿ ತಲುಪಿತು.

. ಆರ್ಥಿಕ ಸುಧಾರಣೆ-ಉದಾರವಾದಿ ಆರ್ಥಿಕತೆ (೧೯೯೧ರ ನಂತರ)

ದೇಶದ ಅಭಿವೃದ್ಧಿ ಇತಿಹಾಸರಲ್ಲಿ ೧೯೯೧ ಒಂದು ಮೈಲಿಗಲ್ಲು. ನೆಹರೂ ಮಹಾಲನೊಬಿಸ್ ಮಾದರಿಯನ್ನು ಬಿಟ್ಟು ಉದಾರವಾದಿ-ಮುಕ್ತ ಆರ್ಥಿಕ ನೀತಿಯನ್ನು ಭಾರತವು ೧೯೯೧ರಲ್ಲಿ ಅಳವಡಿಸಿಕೊಂಡಿತು. ವಿದೇಶಿ ಬಂಡವಾಳಕ್ಕೆ ಪ್ರವೇಶ ನೀಡಲಾಯಿತು. ಖಾಸಗಿ ಉದ್ದಿಮೆಗಳ ಹೂಡಿಕೆಗೆ ಅವಕಾಶ ನೀಡಲಾಯಿತು. ಎಲ್ಲ ಬಗೆಯ ನಿರ್ವಂಧಗಳನ್ನು ತೊಡೆದುಹಾಕಲಾಯಿತು. ಕೋಶೀಯ ಕೊರತೆಯನ್ನು ನಿಯಂತ್ರಿಸಲಾಯಿತು. ಜಾಗತೀಕರಣ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಸುಧಾರಣೆ ಕಾರ್ಯಕ್ರಮವು ಶೀಘ್ರವಾಗಿ ಫಲ ನೀಡತೊಡಗಿತು. ಲೈಸನ್ಸ್-ಪರ್ಮಿಟ್ ರಾಜ್‌ಗೆ ಕೊನೆ ಹಾಡಲಾಯಿತು.

ಜಾಗತಿಕ ಮಟ್ಟದಲ್ಲಿ ದೇಶವು ಮತ್ತೊಮ್ಮೆ ಎದೆಯೆತ್ತಿ ನಿಲ್ಲುವಂತಾಯಿತು. ಎಲ್ಲ ರಾಜಕೀಯ ಪಕ್ಷಗಳೂ ಅಭಿವೃದ್ಧಿ ತಂತ್ರದಲ್ಲಿನ ಬದಲಾವಣೆಗೆ ಒಮ್ಮತ ಸೂಚಿಸಿದವು. ಯೋಜಿತ ಅಭಿವೃದ್ಧಿ ಪತನವು ಕೊನೆಗೊಂಡು ಉದಾರವಾದಿ ನೀಡಿಯ ಪರ್ವವು ಆರಂಭಗೊಂಡಿತು. ಇದು ನೆಹರೂ ಪ್ರಣೀತ ಆರ್ಥಿಕ ನೀತಿಗೆ ಪ್ರತಿವಾದ ಮಾರುಕಟ್ಟೆ ಪ್ರಣೀತ ಆರ್ಥಿಕ ನೀತಿಯಾಗಿತ್ತು.