ಸಮಾಜವಾದಿ ಮಾದರಿ ಸಮಾಜದ ನಿರ್ಮಾಣ

ಭಾರತದ ಆರ್ಥಿಕ ಮತ್ತು ರಾಜಕೀಯ ನೀತಿಯ ಉದ್ದೇಶ ದೇಶದಲ್ಲಿ ಸಮಾಜವಾದಿ ಮಾದರಿ ಸಮಾಜದ ನಿರ್ಮಾಣವೆಂಬುದನ್ನು ೧೯೫೪ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಘೋಷಿಸಲಾಯಿತು. ಕಾಂಗ್ರೆಸ್‌ನ ೧೯೫೫ರ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ನೀಡಲಾಯಿತು. ಆರ್ಥಿಕ ನೀತಿಯಲ್ಲಿ ಕೋಮುವಾದಿ ಧೋರಣೆಗೆ ಇದು ಸ್ಪಷ್ಟ ನಿದರ್ಶನವಾಗಿತ್ತು. ಅಭಿವೃದ್ಧಿಯು ಸರ್ಕಾರದ ನಿರ್ದೇಶನದಲ್ಲಿ ಧೋರಣೆಗೆ ಇದು ಸ್ಪಷ್ಟ ನಿದರ್ಶನವಾಗಿತ್ತು. ಅಭಿವೃದ್ಧಿಯು ಸರ್ಕಾರದ ನಿರ್ದೇಶನದಲ್ಲಿ ನಡೆಯಬೇಕೆಂಬುದು ಅಲ್ಲಿನ ರಾಜಕೀಯ ಧೋರಣೆಯಾಗಿತ್ತು. ಆರ್ಥಿಕತೆಯ ನಿರ್ಣಯದ ಸ್ವರೂಪದ ಉದ್ದಿಮೆಗಳನ್ನು ಸರ್ಕಾರದ ನಿಯಂತ್ರಣ ಸಂಪೂರ್ಣವಾಗಿರಬೇಕು ಎಂಬುದು ಅಂದಿನ ನೀತಿಯಾಗಿತ್ತು.

ಭಾರತದ ಆರ್ಥಿಕ ನೀತಿಯನ್ನು ೧೯೯೧ರ ವರೆಗೆ ಸಮಾಜವಾದಿ ಸಿದ್ಧಾಂತವು ನಿರ್ದೇಶಿಸುತ್ತಿತ್ತು. ಅನೇಕ ವಿಷಯಗಳಲ್ಲಿ ಅದು ಯಶಸ್ವಿಯಾಗಿತ್ತು. ಆದರೆ ಅಲ್ಲಿ ಕಾರ್ಯಕ್ಷಮತೆಗೆ ಪೆಟ್ಟು ಬಿದ್ದಿತ್ತು. ‘ಸಮಾಜವಾದಕ್ಕಾಗಿ ಸಮಾಜವಾದ’ ಎಂಬ ಪರಿಸ್ಥಿತಿ ನಿರ್ಮಾನವಾಗಿತ್ತು. ಸಮಾಜವಾದಿ ಸ್ವರೂಪದ ಪಟ್ಟಭದ್ರ ಹಿತಾಸಕ್ತಿಗಳು ಪ್ರಬಲಗೊಂಡವು. ರಾಜಕೀಯವಾಗಿ ೧೯೯೧ರಲ್ಲಿ ಕ್ರಾಂತಿಕಾರದ ಆರ್ಥಿಕ ಧೋರಣೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಜಾಗತೀಕರಣದಿಂದಾಗಿ ಅಂತಾರಾಷ್ಟ್ರೀಯ ಒತ್ತಡವು ತೀವ್ರಗೊಂಡಿತು.

ಒಟ್ಟಾರೆ ಸಮಾಜವಾದಿ ಮಾದರಿ ಸಮಾಜ ನಿರ್ಮಾಣದ ಗುರಿಯು ೧೯೯೧ರಲ್ಲಿ ಕೊನೆಗೊಂಡಿತು. ಖಾಸಗಿ ವಲಯದ ಉದ್ದಿಮೆಗಳಿಗೆ ಹಾಗೂ ವಿದೇಶಿ ಬಂಡವಾಳದ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲಾಯಿತು. ಆರ್ಥಿಕವಾಗಿ ಉದಾರವಾದಿ ನೀತಿಯು ಯಶಸ್ವಿಯಾಗಿದೆ. ಆದರೆ ಬಡತನ, ನಿರುದ್ಯೋಗ, ದುಸ್ಥಿತಿ ಕಡಿಮೆಯಾಗಲಿಲ್ಲ. ಅಸಮಾನತೆಯು ಇಂದು ತೀವ್ರಗೊಂಡಿದೆ. ಕೃಷಿ ಕ್ಷೇತ್ರವು ಮತ್ತೊಮ್ಮೆ ಬಿಕ್ಕಟ್ಟಿಗೆ ಒಳಗಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳತೊಡಗಿದ್ದಾರೆ. ಅದರ ಅಭಿವೃದ್ಧಿ ಗತಿಯು ಕುಂಠಿತಗೊಂಡಿದೆ. ಮಾರುಕಟ್ಟೆ ಪ್ರಣೀತ ಆರ್ಥಿಕ ನೀತಿಯು ಬಡವರಿಗೆ, ದುರ್ಬಲರಿಗೆ ಕುತ್ತಾಗಿ ಪರಿಣಮಿಸಿದೆ.

ಸಮ್ಮಿಶ್ರ ರಾಜಕಾರಣ

ದೇಶದ ಆರ್ಥಿಕ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೂ ಮತ್ತು ರಾಜಕೀಯವಾಗಿ ಉಂಟಾಗುತ್ತಿರುವ ಬದಲಾವಣೆಗಳಿಗೂ ನಡುವೆ ಸಂಬಂಧವಿದೆ. ಜಾಗತೀಕರಣದಲ್ಲಿ ಉದಾರವಾದ, ಖಾಸಗೀಕರಣಗಳ ಹಿನ್ನೆಲೆ ರಾಜಕೀಯ ಪಕ್ಷಗಳ ನಡುವೆ ಇಂದು ಸೈದ್ಧಾಂತಿಕ ಬದ್ಧತೆಯ ಭಿನ್ನತೆಗಳು ಇಲ್ಲವಾಗುತ್ತಿವೆ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ ತರಹ ಕಾಣುತ್ತಿವೆ. ಇಂದು ‘ಏಕ ಪಕ್ಷ’ ರಾಜಕಾರಣವು ಮುಗಿದುಹೋಗಿದೆ. ಒಂದಕ್ಕಿಂತ ಹೆಚ್ಚು ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಒಂದು ಹಂತದಲ್ಲಿ ಕೇಂದ್ರದಲ್ಲಿ ೧೫ಕ್ಕಿಂತಲೂ ಹೆಚ್ಚು ಪಕ್ಷಗಳ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿತ್ತು. ರಾಜಕೀಯ ಪಕ್ಷಗಳು ನಮ್ಮ ಸೈದ್ಧಾಂತಿಕ ಭಿನ್ನತೆಯನ್ನು ಕೈ ಬಿಟ್ಟು ಸರ್ಕಾರ ರಚಿಸಲು ಒಟ್ಟಿಗೆ ಸೇರುವ ಪ್ರವೃತ್ತಿ ಬೆಳೆಸಿಕೊಂಡಿವೆ.

ಉದಾರವಾದಿ-ಜಾಗತೀಕರಣ ಪ್ರಕ್ರಿಯೆಗೂ ಹಾಗೂ ರಾಜಕೀಯವಾಗಿ ಸಮ್ಮಿಶ್ರ ರಾಜಕಾರಣಕ್ಕೈ ಸಂಬಂಧವಿರುವಂತೆ ಕಾಣುತ್ತಿದೆ. ಕಮ್ಯುನಿಸ್ಟ್ ಪಕ್ಷಗಳನ್ನೂ ಸೇರಿಸಿಕೊಂಡು ಇಂದು ಉದಾರವಾದಿ ಆರ್ಥಿಕ ನೀತಿಯನ್ನು ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಂಡು ಬಿಟ್ಟಿವೆ. ಕೇಂದ್ರ ಮ್ತು ರಾಜ್ಯಮಟ್ಟದಲ್ಲಿ ಸಮ್ಮಿಶ್ರ ಸರ್ಕಾರವೆಂಬುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿರುವುದು ಇಂತಹ ಸಮ್ಮಿಶ್ರ ಸರ್ಕಾರಗಳ ರಚನೆಗೆ ಒಂದು ಕಾರಣವಾಗಿರಬಹುದು. ಈ ಬಗೆಯ ರಾಜಕೀಯ ಸನ್ನಿವೇಶದಲ್ಲಿ ಆರ್ಥಿಕ ನೀತಿಗೆ ಸಂಬಂಧಿಸಿದಂತೆ ಉದಾರವಾದವನ್ನು ಅನುಸರಿಸುವುದು ಅನಿವಾರ್ಯವಾಗಿಬಿಟ್ಟಿದೆ.

ಪ್ರಾದೇಶಿಕ ಪಕ್ಷಗಳು ಭಾರತದಲ್ಲಿ ಹುಟ್ಟಿಕೊಂಡಿದ್ದರೂ ಅವು ರಾಷ್ಟ್ರೀಯ ಏಕತೆಗೆ ಕುತ್ತು ತರುವ ರೀತಿಯಲ್ಲಿ ವರ್ತಿಸುತ್ತಿಲ್ಲ. ಇದೊಂದು ಬಹುಮುಖ್ಯ ಬೆಳವಣಿಗೆಯಾಗಿದೆ. ಕಾಶ್ಮೀರ, ಅಸ್ಸಾಂ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು ಸಮ್ಮಿಶ್ರ ರಾಜಕಾರಣದ ಪ್ರಕ್ರಿಯೆಯನ್ನು ಅಭ್ಯಸಿಸಬೇಕಾಗಿದೆ.

ತುರ್ತು ಪರಿಸ್ಥಿತಿ

ಭಾರತದ ರಾಜಕೀಯ ಬೆಳವಣಿಗೆಯಲ್ಲಿ ೧೯೭೫ರ ಜುಲೈ ೨೬ ಒಂದು ಕರಾಳ ದಿನ. ಸ್ವಾತಂತ್ರ್ಯೋತ್ತರ ರಾಜಕೀಯ ಬೆಳವಣಿಗೆಯಲ್ಲಿ ೧೯೭೫ರ ಜುಲೈ ೨೬ ಒಂದು ಮೈಲಿಗಲ್ಲು. ಏಕೆಂದರೆ ಅಂದು ಸಂವಿಧಾನದ ೩೫೨ನೆಯ ಕಾಲಂ ಪ್ರಕಾರ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯು ‘ತುರ್ತುಪರಿಸ್ಥಿತಿ’ಯನ್ನು ಘೋಷಿಸಿದರು. ಅದು ಭಾರತದಲ್ಲಿ ಜನತಂತ್ರಕ್ಕೆ ಬಂದ ದೊಡ್ಡ ಕುತ್ತಾಗಿತ್ತು. ಅನೇಕರು ವಿವರಿಸುವಂತೆ ಭಾರತೀಯ ಪ್ರಜಾಪ್ರಭುತ್ವವು ಎದುರಿಸಿದ ಮಹಾಪರೀಕ್ಷೆ ಅದಾಗಿತ್ತು. ಭಾರತೀಯರು ಮಹಾಪರೀಕ್ಷೆಯಲ್ಲಿ ಗೆದ್ದರು. ತುರ್ತು ಪರಿಸ್ಥಿತಿಯನ್ನು ಘೊಷಿಸಿದವರು ೧೯೭೭ರ ಮಾರ್ಚ್‌೧೬ರಂದು ನಡೆದ ಮಹಾಚುನಾವಣೆಯಲ್ಲಿ ಸೋತರು. ಪ್ರಜಾಪ್ರಭುತ್ವವು ದೇಶದಲ್ಲಿ ಅಬಾಧಿತವಾಗಿ ಉಳಿಯಿತು ಎನ್ನುವುದಕ್ಕಿಂತ ಅದು ಶಕ್ತಿಶಾಲಿಯಾಯಿತೆಂದು ಹೇಳಬಹುದು. ಇಪ್ಪತ್ತು ತಿಂಗಳುಗಳ ಕಾಲ ಪ್ರಜಾಪ್ರಭುತ್ವವನ್ನು ದೇಶದಲ್ಲಿ ಅಮಾನತ್ತಿನಲ್ಲಿಡಲಾಗಿತ್ತು.

ಭಾರತದಲ್ಲಿ ಪ್ರಜಾಪ್ರಭುತ್ವವು ಭದ್ರವಾಗಿ ನೆಲೆಯೂರಲು ಸಾಧ್ಯವಿಲ್ಲವೆಂಬ ಭವಿಷ್ಯವಾಣಿ ನುಡಿದವರಿಗೆಲ್ಲ ಪಾಠ ಕಲಿಸುವಂತೆ ಭಾರತೀಯರು ಸರ್ವಾಧಿಕಾರಿ ಆಳ್ವಿಕೆಯನ್ನು ಕೊನೆಗೊಳಿಸಿ ೧೯೭೭ರ ಮಾರ್ಚ್‌ ೧೬ರಂದು ಪ್ರಜಾಪ್ರಭುತ್ವಕ್ಕೆ ಮರುಜೀವ ನೀಡಿದರು. ಭಾರತದ ಸ್ವಾತಂತ್ರ್ಯೋತ್ತರ ರಾಜಕೀಯ ಚರಿತ್ರೆಯಲ್ಲಿ ಇದೊಂದು ‘ಲಿಬರೇಷನ್’ ಎಂಬುದು ಸ್ಪಷ್ಟವಾಯಿತು. ಇಡೀ ವಿಶ್ವದಲ್ಲಿ ಎರಡನೆಯ ಮಹಾಯುದ್ಧದ ನಂತರ ಸ್ವಾತಂತ್ರ್ಯ ಪಡೆದುಕೊಂಡು ಪ್ರಜಾಪ್ರಭುತ್ವವನ್ನು ಅಬಾಧಿತವಾಗಿ ಕಾಪಾಡಿಕೊಂಡು ಸರ್ವಾಧಿಕಾರಿ ಮಿಲಿಟರಿ ಆಳ್ವಿಕೆಗೆ ಅವಕಾಶ ನೀಡದಂತಹ ವ್ಯವಸ್ಥೆಯನ್ನು ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಆಫ್ರಿಕಾಗಳಲ್ಲಿ ಭಾರತವು ಮಾತ್ರ ಉಳಿಸಿಕೊಂಡಿರುವುದು ಕಂಡುಬರುತ್ತದೆ.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರವು ಮೂಲಭೂತ ಹಕ್ಕುಗಳನ್ನು ರದ್ದುಪಡಿಸಿತು. ವಿರೋಧಪಕ್ಷಗಳ ನಾಯಕರನ್ನು ಜೈಲಿಗಟ್ಟಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಪೊಲೀಸ್-ಸೈನ್ಯವನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು.

ತುರ್ತು ಪರಿಸ್ಥಿತಿಯ ಆರಂಬದಲ್ಲಿ ಜನರು ಸೌಮ್ಯವಾಗಿದ್ದರು. ಅದರಿಂದ ಒಳ್ಳೆಯದಾಗುತ್ತದೆಯೆಂದು ನಂಬಿದ್ದರು. ಆ ಸಂದರ್ಭದಲ್ಲಿ ಬಡವರು, ಅಲ್ಪಸಂಖ್ಯಾತರು, ದಲಿತರು, ಆಯ್ದ ಬುದ್ಧಿಜೀವಿಗಳು, ಕಮ್ಯುನಿಸ್ಟ್‌ಪಾರ್ಟಿ ಆಫ್ ಇಂಡಿಯಾ ತುರ್ತುಪರಿಸ್ಥಿತಿಗೆ ಬೆಂಬಲ ನೀಡಿದವು. ಆದರೆ ಜನರ ನಿರೀಕ್ಷೆಗಳು ಹುಸಿಯಾದವು. ತುರ್ತುಪರಿಸ್ಥಿತಿಯು ದೇಶದಲ್ಲಿ ಉಸಿರುಕಟ್ಟಿಸುವ ವಾತಾವರಣವನ್ನು ಸೃಷ್ಟಿಸಿತು. ಪೊಲೀಸ್‌ರಾಜ್ ನಿರ್ಮಾಣವಾಯಿತು.

ಜನರು ನಿಧಾನವಾಗಿ ಪ್ರತಿಭಟನೆಯನ್ನು ತೋರತೊಡಗಿದರು. ಜನರ ಪ್ರತಿಭಟನೆಯನ್ನು ಹತ್ತಿಕ್ಕುವುದು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಒಲ್ಲದ ಮನಸ್ಸಿನಿಂದಲೇ ಸರ್ಕಾರವು ಚುನಾವಣೆಯನ್ನು ಘೋಷಿಸಿತು. ದಿನಾಂಕ ೧೯೭೭ರ ಮಾರ್ಚ್‌೧೬ರಂದು ನಡೆದ ಚುನಾವಣೆಯಲ್ಲಿ ಇಂದಿರಾಗಾಂಧಿ ಸೋತರು. ಅಲ್ಲಿಗೆ ತುರ್ತುಪರಿಸ್ಥಿತಿಯ ಪರ್ವಕೊನೆಗೊಂಡಿತು. ಸರ್ವಾಧಿಕಾರಿಗಳಿಗೆ ಜನರು ಬುದ್ದಿ ಕಲಿಸಿದರು. ಮೂಲಭೂತ ಹಕ್ಕುಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸಂವಿಧಾನದ ಪಾವಿತ್ರ್ಯವನ್ನು ಮತ್ತೊಮ್ಮೆ ಪುನರ್ ಪ್ರತಿಷ್ಠಾಪಿಸಲಾಯಿತು. ಇಡೀ ಜಗತ್ತಿಗೆ ಭಾರತವು ಪ್ರಜಾಪ್ರಭುತ್ವಕ್ಕೆ ತನ್ನ ಬದ್ಧತೆಯನ್ನು ಸಿದ್ಧಮಾಡಿತೋರಿಸಿತು.

ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಭಿವೃದ್ಧಿಗೆ ಅತ್ಯಂತ ಸೂಕ್ತವಾದುದೆಂದು ಭಾರತವು ಜಗತ್ತಿಗೆ ತೋರಿಸಿಕೊಟ್ಟಿದೆ. ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ನಡುವೆ ಪರಸ್ಪರ ಪೂರಕ ಸಂಬಂಧವಿರುವುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಸರ್ವಾಧಿಕಾರಿ ಪ್ರಭುತ್ವವು ಜನಪರವಾಗಿರಲು ಸಾಧ್ಯವಿಲ್ಲ. ತನ್ನೆಲ್ಲ ಮಿತಿಗಳೊಂದಿಗೆ ಪ್ರಜಾಪ್ರಭುತ್ವವು ಭಾರತದಲ್ಲಿ ಬಡವರ-ದಲಿತರ-ಮಹಿಳೆಯರ ಆಸೆ-ಆಕಾಂಕ್ಷೆಗಳನ್ನು ನಿಧಾನವಾಗಿಯಾದರೂ ಈಡೇರಿಸುತ್ತಿದೆ.

ಕೋಮುವಾದಿ ರಾಜಕಾರಣ

ಕೋಮುವಾದ, ಕೋಮುವಾದಿ ರಾಜಕಾರಣ, ಕೋಮುವಾದಿ ರಾಜಕೀಯ ಪಕ್ಷಗಳು-ಇವೆಲ್ಲಾ ಸ್ವಾತಂತ್ರ್ಯೋತ್ತರ ಭಾರತದ ವೈಶಿಷ್ಟ್ಯವೇನಲ್ಲ. ಇದರ ಬೇರುಗಳನ್ನು ಸ್ವಾತಂತ್ರ್ಯ ಪೂರ್ವಕಾಲದ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಬಹುದಾಗಿದೆ. ಇಪ್ಪತ್ತನೆಯ ಶತಮಾನದ ೧೯೬೦-೭೦ರ ದಶಕದಲ್ಲಿ ತಣ್ಣಗಾಗಿದ್ದ ಕೋಮುವಾದವು ೧೯೯೦ರ ದಶಕದಲ್ಲಿ ತೀವ್ರ ರೀತಿಯಲ್ಲಿ ಸ್ಫೋಟಗೊಂಡಿದೆ. ಭಾರತದ ರಾಜಕಾರಣ-ಸಮಾಜ ಇಂದು ಎದುರಿಸುತ್ತಿರುವ ಬಹುದೊಡ್ಡ ಗಂಡಾಂತರವೆಂದರೆ ಕೋಮುವಾದವಾಗಿದೆ. ಇದು ಧರ್ಮ ನಿರಪೇಕ್ಷತೆಯನ್ನು ಸರ್ವಧರ್ಮ ಸಮಭಾವವನ್ನು ಅರ್ಥಹೀನವನ್ನಾಗಿಸುತ್ತಿದೆ.

ಕೋಮುವಾದವೆಂದರೇನು?

ಇದೊಂದು ವಿಚಾರಪ್ರಣಾಳಿಕೆಯಾಗಿದೆ. ಈ ವಿಚಾರಧಾರೆಯ ಪ್ರಕಾರ ಭಾರತದಲ್ಲಿ ಅನೇಕ ಧರ್ಮಗಳಿವೆ. ಅವುಗಳ ಹಿತಾಸಕ್ತಿಗಳು ಪರಸ್ಪರ ವಿರುದ್ಧವಾಗಿವೆ ಎಂಬುದು ಇಲ್ಲಿನ ನಂಬಿಕೆ. ಕೋಮುವಾದವೆಂಬುದೊಂದು ನಂಬಿಕೆ. ಅಂತಹ ನಂಬಿಕೆ ಮೂಲಕವೇ ಸಮಾಜವನ್ನು ರಾಜಕಾರಣವನ್ನು, ಆರ್ಥಿಕತೆಯನ್ನು ಪರಿಭಾವಿಸಿಕೊಳ್ಳಲಾಗುತ್ತಿದೆ. ಈ ಬಗೆಯ ನಂಬಿಕೆ ಸಿದ್ಧಾಂತ ನಿರ್ವಚನಗಳ ಮೂಲಕ ರಾಜಕೀಯ ಸಂಘಟನೆ ಮಾಡುವುದೇ ಕೋಮುವಾದ. ಸೈದ್ಧಾಂತಿಕವಾಗಿ ಕೋಮುವಾದವು ಜನಾಂಗೀಯ ವಾದಕ್ಕೆ ಸಮವಾದುದಾಗಿದೆ.

ಕೋಮುವಾದಿ ವಿಚಾರಪ್ರಣಾಳಿಕೆ ಮತ್ತು ಕೋಮುವಾದಿ ಹಿಂಸೆಗಳ ನಡುವೆ ಸಂಬಂಧವಿದೆ ಕೋಮುವಾದದ ಮುಖ್ಯ ಸಂಗತಿಯೆಂದರೆ ಕೋಮುವಾದಿ ವಿಚಾರ ಪ್ರಣಾಳಿಕೆಯ ಪ್ರಚಾರ ಮತ್ತು ಅಂತಹ ಯೋಜನಾ ಪ್ರಕ್ರಿಯೆಯನ್ನು ಹುಟ್ಟುಹಾಕುವುದು. ಕೋಮು ಸಂಘರ್ಷವು ರೋಗದ ಲಕ್ಷಣವಾಗಿದೆ. ಕೋಮುವಾದಿ ವಿಚಾರಪ್ರಣಾಳಿಕೆಯಿಲ್ಲದೆ ಕೋಮುಘರ್ಷಣೆ ಹಿಂಸೆ ಇರಲು ಸಾಧ್ಯವಿಲ್ಲ. ಆದರೆ ಕೋಮುವಾದಿ ಘರ್ಷಣೆಯಿಲ್ಲದೆ ಕೋಮುವಾದಿ ಪ್ರಣಾಳಿಕೆಯು ಅಸ್ತಿತ್ವದಲ್ಲಿರಬಹುದು. ಸಾಮಾನ್ಯವಾಗಿ ಕೋಮುವಾದಿ ವಿಚಾರ ಪ್ರಣಾಳಿಕೆಯನ್ನು ನಿರ್ಲಕ್ಷಿಸಿ ಮಾಧ್ಯಮಗಳು ಹಾಗೂ ರಾಜಕಾರಣಗಳು ಕೋಮುವಾದಿ ಘರ್ಷಣೆಯನ್ನು ದೊಡ್ಡ ರೋಗವನ್ನಾಗಿ ಬಿಂಬಿಸುತ್ತಿವೆ. ಕೋಮುವಾದಿಗಳ ಮುಖ್ಯಕಾರ್ಯವೆಂದರೆ ಕೋಮುವಾದಿ ಪ್ರಣಾಳಿಕೆಯ ಪ್ರಚಾರವನ್ನು ಪ್ರಚೋದಿಸುವುದಾಗಿರುತ್ತದೆ. ಜನರನ್ನು ಕೋಮುವಾದಿಗಳನ್ನಾಗಿ ಮಾಡುವ ಕೆಲಸಲ್ಲಿ ಕೋಮುವಾದಿಗಳು ನಿರತರಾಗಿರುತ್ತಾರೆ. ಜನರು ಸ್ವತಃ ಕೋಮು ಘರ್ಷಣೆಗಳಿಗೆ ಇಳಿಯುವುದಿಲ್ಲ.

ಧರ್ಮನಿರಪೇಕ್ಷತೆ ಎಂದರೇನು?

ಧರ್ಮನಿರಪೇಕ್ಷತೆ ಅಥವಾ ಸರ್ವ ಧರ್ಮ ಸಮಾಭಾವವೆಂಬುದು ಭಾರತವು ಅನೂಚಾನವಾಗಿ ನಂಬಿಕೊಂಡು ಬಂದಿರುವ ಮೌಲ್ಯವಾಗಿದೆ. ನಮ್ಮ ಸಂವಿಧಾನದಲ್ಲಿ ಅದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಧರ್ಮ ನಿರಪೇಕ್ಷ ಸಮಾಜ ರಾಜಕಾರಣವನ್ನು ಕಟ್ಟುವುದನ್ನು ಒಂದು ಕಾಯಕವೆಂದು ಭಾರತ ತಿಳಿದುಕೊಂಡಿದೆ.

ಧರ್ಮ ನಿರಪೇಕ್ಷತೆಯನ್ನು ಸಮಾಜದಲ್ಲಿ ಬೇರೂರುವಂತೆ ಮತ್ತು ಜನಮಾನಸದಲ್ಲಿ ರಕ್ತಗತವಾಗುವಂತೆ ಮಾಡುವಲ್ಲಿ ಭಾರತವು ವಿಫಲವಾಗಿದೆ. ಸ್ವಾತಂತ್ರ್ಯ ನಂತರ ಇದರ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಳೆಯಲಾಯಿತು. ಇದರ ಪರಿಣಾಮವಾಗಿ ಕೋಮುವಾದವು ವಿಸ್ತೃತವಾಗಿ ದೇಶಾದ್ಯಂತ ೧೯೯೦ರ ನಂತರ ಸ್ಪೋಟಗೊಂಡಿತು. ಧರ್ಮನಿರಪೇಕ್ಷತೆಯೆಂಬುದು ಸರ್ಕಾರದ ರಾಜಕೀಯ ನೀತಿಯಾಗಿದೆ. ಇದರ ಪ್ರಕಾರ ಸರ್ಕಾರವು ಎಲ್ಲ ಧರ್ಮಗಳಿಗೂ ಸಾರ್ವಜನಿಕವಾಗಿ ಸಮಾನ ಗೌರವ ನೀಡುವ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ ಧರ್ಮನಿರಪೇಕ್ಷತೆಯನ್ನು-ಸಾರ್ವಜನಿಕ ಸಂಸ್ಕೃತಿಯನ್ನು ರೂಪಿಸುವ ಕೆಲಸವನ್ನು ಸರ್ಕಾರವು ಮಾಡಲಿಲ್ಲ. ಧಾರ್ಮಿಕತೆ ಬಗ್ಗೆ ಜನರಲ್ಲಿ ವಿಮರ್ಶಾತ್ಮಕ ಮತ್ತು ಅನುಮಾನಾತ್ಮಕ ಮನೋಭಾವವನ್ನು ಅದು ಬೆಳೆಸಲಿಲ್ಲ. ಇದೊಂದು ಸ್ವಾತಂತ್ರ್ಯೋತ್ತರ ರಾಜಕಾರಣದ ಮಹಾವೈಫಲ್ಯವಾಗಿದೆ.

ಕೋಮುವಾದವು ಕರಾಳರೂಪದಲ್ಲಿ ಬೆಳೆಯುತ್ತಿರುವಂತೆ ಕಂಡರೂ, ಕೋಮುವಾದಿ ರಾಜಕೀಯ ಪಕ್ಷಗಳು ಕ್ರಿಯಾಶೀಲವಾಗಿದ್ದರೂ ಭಾರತವು ಮೂಲಭೂತವಾಗಿ ಬಹುಸಂಸ್ಕೃತಿ- ಬಹುಧರ್ಮೀಯ ರಾಷ್ಟ್ರವಾಗಿದೆ. ಭಾರತದಲ್ಲಿ ಕೋಮುವಾದವು ಒಂದು ದುಷ್ಟಶಕ್ತಿಯಾಗಿ ಬೆಳೆಯುತ್ತಿದ್ದರೂ ಕೋಮುವಾದಿ ವಿಚಾರ ಪ್ರಣಾಳಿಕೆಗೆ ವಿಸ್ಕೃತನೆಲೆ ಭಾರತದಲ್ಲಿ ದೊರೆತಿತ್ತು. ಕೋಮುವಾದಿ ಪಕ್ಷಗಳು ಇಂದು ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಅದರ ಅರ್ಥ ಜನರು ಕೋಮುವಾದಿಗಳಾಗಿದ್ದಾರೆ ಎಂದು ತಿಳಿಯಬಾರದು. ಸ್ಥಳೀಯ ಮತ್ತು ಸದ್ಯದ ರಾಜಕೀಯ ವೈಫಲ್ಯದಿಂದ ಭ್ರಮನಿರಸನಗೊಂಡ ಜನರು ಕೋಮುವಾದ ಪಕ್ಷಗಳನ್ನು ಆರಿಸಬಹುದೆಂಬವಾದವು ಇದೆ. ಆದ್ದರಿಂದ ಭಾರತವು ಮೂಲಭೂತವಾಗಿ ಧರ್ಮನಿರಪೇಕ್ಷ ಸಮಾಜವಾಗಿದೆ.

ದಲಿತ ರಾಜಕಾರಣ

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಾವಧಿಗಳಲ್ಲಿ ಭಾರತದ ರಾಜಕಾರಣದ ಬೆಳವಣಿಗೆಯಲ್ಲಿ ದಲಿತ ಜನ ದಮುದಾಯದ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಮುದಾಯವು ಮಹತ್ವದ ಪಾತ್ರ ನಿರ್ವಹಿಸಿದೆ. ಭಾರತದ ಸಾಮಾಜಿಕ ವ್ಯವಸ್ಥೆಯು ಮೂಲಭೂತವಾಗಿ ಶ್ರೇಣೀಕೃತವಾದುದು. ಅಲ್ಲಿ ಅಸ್ಪಶ್ಯರು ಮತ್ತು ಸ್ಪೃಶ್ಯರು ಎಂಬ ಭೇದ-ಭಾವ ಆಚರಣೆಯಲ್ಲಿದೆ. ಈ ಬಗೆಯ ವರ್ಗೀಕರಣದ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ನಿರ್ದಿಷ್ಟ ಭಾಗಗಳಲ್ಲಿ ಅವರು ಜೀವಿಸುವಂತಹ ವ್ಯವಸ್ಥೆಯನ್ನು ರೂಪಿಸಲಾಯಿತು. ಎಲ್ಲ ಬಗೆಯ ಸಾಮಾಜಿಕ-ಆರ್ಥಿಕ ಹಕ್ಕುಗಳಿಂದ ಹಾಗೂ ನಾಗರಿಕ ಹಕ್ಕುಗಳಿಂದ ಅವರು ವಂಚಿತರಾಗಿದ್ದರು. ಸ್ಪೃಶ್ಯ-ಅಸ್ಪೃಶ್ಯ ವರ್ಗೀಕರಣಕ್ಕೆ ಧಾರ್ಮಿಕ ವಿವರಣೆಯನ್ನು ನೀಡಲಾಯಿತು.

ಭಾರತದ ಚರಿತ್ರೆಯಲ್ಲಿ ಇಂತಹ ಅಮಾನವೀಯ ಆಚರಣೆ-ಸಿದ್ಧಾಂತಗಳ ವಿರುದ್ಧ ಚಳವಳಿಗಳು ನಡೆದ ನಿದರ್ಶನಗಳು ನಮಗೆ ದೊರೆಯುತ್ತವೆ. ಆದರೆ ನಿಜಕ್ಕೂ ಈ ಜನ ವರ್ಗದ ಸಂಘಟನೆ ಮತ್ತು ಹಕ್ಕುಗಳ ಒತತ್ತಾಯದ ಕಾರ್ಯವು ವ್ಯವಸ್ಥಿತವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ಆರಂಭವಾಯಿತೆನ್ನಬಹುದು. ವಿದೇಶಗಳಲ್ಲಿ ಶಿಕ್ಷಣ ಪಡೆದು ಬಂದಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಜಕೀಯವಾಗಿ ಪರಿಶಿಷ್ಟ ಜಾತಿಯ ಜನರ ಸಮಸ್ಯೆಯನ್ನು ಎತ್ತಿಕೊಂಡರು.

ಗಾಂಧೀಜಿಯರ ಹರಿಜನ ಸುಧಾರಣೆಯನ್ನು ಅಂಬೇಡ್ಕರ್ ತಿರಸ್ಕರಿಸಿದರು. ಸ್ವಾತಂತ್ರ್ಯಾ ನಂತರ ದಲಿತ ರಾಜಕಾರಣವು ದೇಶದ ವಿವಿಧ ಭಾಗಗಳಲ್ಲಿ ಉಗ್ರರೂಪ ತಳೆಯಿತು. ಮಹಾರಾಷ್ಟ್ರದಲ್ಲಿ ದಲಿತ್ ಪ್ಯಾಂಥರ್ ಎಂಬ ಪಂಥ ಹುಟ್ಟಿಕೊಂಡಿರು. ಇಂದು ಪರಿಶಿಷ್ಟ ಜಾತಿಯ ಜನರು ತಮ್ಮನ್ನು ತಾವು ದಲಿತರೆಂದು ಕರೆದುಕೊಳ್ಳಲು ಬಯಸುತ್ತಾರೆ. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯು ಅನೇಕ ಹೋರಾಟಗಳನ್ನು ನಡೆಸಿತು. ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಲ್ಲಿಯೂ ಈ ಬಗೆಯ ಬೆಳವಣಿಗೆಯನ್ನು ಗಮನಿಸಬಹುದು.

ಈ ಜನ ಸಮೂಹದ ಅಭಿವೃದ್ಧಿಗಾಗಿ ಸಂವಿಧಾನಾತ್ಮಕವಾಗಿ ಅವರಿಗೆ ಉದ್ಯೋಗ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೀಸಲಾತಿ ಸೌಲಭ್ಯಗಳನ್ನು ಒಡಗಿಸಲಾಯಿತು. ಈ ಜನ ಸಮೂಹದ ರಕ್ಷಣೆಗಾಗಿ ಅನೇಕ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಗಾಂಧೀಜಿ, ಅಂಬೇಡ್ಕರ್‌, ಪೆರಿಯಾರ್, ಜ್ಯೋತಿಬಾಪುಲೆ ಮುಂತಾದವರ ಪ್ರಯತ್ನ ಮತ್ತು ಹೋರಾಟದ ಫಲವಾಗಿ ದಲಿತರ ಬದುಕು ಸಾಕಷ್ಟು ಉತ್ತಮಗೊಂಡಿದೆ.

ಆದರೆ ೨೦ನೆಯ ಶತಮಾನದ ೮೦ರ ದಶಕದಲ್ಲಿ ರಾಜಕಾರಣದ ಸ್ವರೂಪವು ತೀವ್ರ ಬದಲಾಯಿತು. ಬಹುಜನ ಸಮಾಜ ಪಕ್ಷವು ಭಾರತೀಯ ರಾಜಕಾರಣದ ವಿನ್ಯಾಸವನ್ನು ತಲೆಕೆಳಗೆ ಮಾಡಿತು. ಕಾನ್ಶಿರಾಮ್ ಹಾಗೂ ಮಾಯಾವತಿ ಅವರ ನೇತೃತ್ವದಲ್ಲಿ ದಲಿತ ರಾಜಕಾರಣವು ವಿಶಿಷ್ಟ ನೆಲೆಯನ್ನು ಪಡೆದುಕೊಂಡಿತು. ರಾಜಕೀಯ ಅಧಿಕಾರ ಹಿಡಿಯುವ ನೆಲೆಯುಂದ ಇವರು ರಾಜಕಾರಣ ನಡೆಸಿದರು. ಕಾನ್ಶಿರಾಮ್ ಮತ್ತು ಮಾಯಾವತಿ ಜೋಡಿ ನಡೆಸಿದ ದಲಿತ ರಾಜಕಾರಣದ ಪ್ರಯತ್ನದ ಫಲವಾಗಿ ಮಾಯಾವತಿ ಅವರು ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಹೊರಬಂದಿದ್ದಾರೆ. ಕೇಂದ್ರ ಸರ್ಕಾರವು ಇಂದು ದಲಿತ ರಾಜಕಾರಣವನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿಲಿಲ್ಲ.

ದಲಿತರ ಹೋರಾಟದ ಫಲವಾಗಿ ಅವರ ಬದುಕು ಇಂದು ಸುಧಾರಿಸುತ್ತಿದೆ. ಈ ಬಗೆಯ ಸುಧಾರಣೆಗೆ ಗಾಂಧೀಜಿ, ಅಂಬೇಡ್ಕರ್ ಮುಂತಾದವರ ಕಾಣಿಕೆ ಎಷ್ಟಿದೆಯೋ ಅಷ್ಟೇ ಪಾತ್ರ ದಲಿತ ಸಂಘಟನೆಗಳೂ ನಿರ್ವಹಿಸಿವೆ. ರಾಜಕಾರಣದ ದೃಷ್ಟಿಯಿಂದಲಂತೂ ದಲಿತರು ಇಂದು ಅಸ್ಪೃಶ್ಯರಾಗಿ ಉಳಿದಿಲ್ಲ. ಸಾಮಾಜಿಕವಾಗಿ ಅದು ಉಳಿದಿದ್ದರೆ ಅದು ಪ್ರಚ್ಛನ್ನವಾಗಿದೆ. ಅಸ್ಪೃಶ್ಯತೆಯನ್ನು ಅನುಭವಿಸಿದವರಿಗಿಂತ ಅದನ್ನು ಹೇರಿದ ಜನವರ್ಗಕ್ಕೆ ಒಂದು ರೀತಿಯ ಅಪರಾಧದ ಭಾವನೆ ಇಂದು ಮೂಡಿದೆ.

ಮಹಿಳಾ ರಾಜಕಾರಣ

ಭಾರತೀಯ ಸಮಾಜದ ಸರಿಸುಮಾರು ಅರ್ಧದಷ್ಟಿರುವ ಮಹಿಳೆಯರು ನಮ್ಮ ಸಂದರ್ಭದಲ್ಲಿ ಎಲ್ಲ ಬಗೆಯ ದುಸ್ಥಿತಿಯಿಂದ ನರಳುತ್ತಿದ್ದಾರೆ. ಮಹಿಳೆಯರ ಸಾಮಾಜಿಕ ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಯತ್ನಗಳು ನಡೆದವು ಬಾಲ್ಯ ವಿವಾಹದ ರದ್ಧತಿ, ಮರುವಿವಾಹದ ಶಾಸನ, ವಿಧವಾವಿವಾಹ ಶಾಸನ, ಸತಿ ಪದ್ಧತಿ ವಿರುದ್ಧ ಶಾಸನ ಮುಂತಾದ ಕ್ರಮಗಳು ಮಹಿಳೆಯರ ಬದುಕನ್ನು ಗುರಿಯಾಗಿಟ್ಟುಕೊಂಡವು. ಗಾಂಧೀಜಿ ನೇತೃತ್ವದಲ್ಲಿ ಭಾರತೀಯ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಿಳಿದರು. ಅದರ ಅನುಭವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ನಂತರ ಮಹಿಳಾ ರಾಜಕಾರಣವು ಹೆಚ್ಚಿನ ವಿಸ್ತೃತತೆಯನ್ನು ಮತ್ತು ನಿಶಿತತೆಯನ್ನು ಪಡೆದುಕೊಂಡಿತು.

ಮಹಿಳೆಯರಿಗೆ ಯಾವ ಷರತ್ತುಗಳಿಲ್ಲದ ರೀತಿಯಲ್ಲಿ ಪುರುಷರಿಗೆ ಸಮಾನವಾದ ಮತದಾನ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಯಿತು. ಬಹುಪತ್ನಿತ್ವವನ್ನು ಹಿಂದೂಧರ್ಮೀಯರಿಗೆ ನಿಷೇಧಿಸಲಾಯಿತು. ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗಿಗಳಾಗುವಂತೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಉಂಟಾದ ಅನೇಕ ಬೆಳವಣಿಗೆ ಹಾಗೂ ದೇಶದಲ್ಲಿ ಮೊಳಕೆಯೊಡೆಯುತ್ತಿದ್ದ ಮಹಿಳಾ ಚಳವಳಿಯ ಒತ್ತಾಯದ ಫಲವಾಗಿ ೧೯೭೪ರಲ್ಲಿ ಸರ್ಕಾರವು ಮಹಿಳೆಯರ ಸ್ಥಿತಿಗತಿ ಕುರಿತಂತೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ನೇಮಿಸಿತು. ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ‘೧೯೭೫’ ಮಹಿಳಾ ವರ್ಷವಾಗಿ ಘೋಷಿಸಲಾಯಿತು. ಮುಂದೆ ೧೯೭೫-೧೯೮೫ ಮಹಿಳಾ ದಶಕವಾಯಿತು. ಮಹಿಳೆಯರ ಬದುಕು ವಿಷಾದನೀಯವಾಗಿದೆಯೆಂಬುದು ಮೊದಲ ಬಾರಿಗೆ ೧೯೭೫ರಲ್ಲಿನ ‘ಟುವರ್ಡ್ಸ್‌ ಈ ಕ್ವಾಲಿಟಿ’ ಅವರಿಯಿಂದ ತಿಳದುಬಂದಿತು. ಭಾರತ ಸರ್ಕಾರವು ಭಾರತದ ಶ್ರೇಷ್ಠ ಸಮಾಜ ವಿಜ್ಞಾನಿಗಳನ್ನು ಮತ್ತು ಸ್ತ್ರೀವಾದಿಗಳನ್ನು ಒಳಗೊಂಡಂತೆ ರಚಿಸಿದ ಸಮಿತಿಯ ವರದಿಯು ‘ಟುವರ್ಡ್ಸ್‌ಈಕ್ವಾಲಿಟಿ’ ಎಂದೇ ಪ್ರಸಿದ್ಧಿಯಾಗಿದೆ.

ನಗರ ಪ್ರದೇಶದಲ್ಲಿ ಮಹಿಳೆಯರು ವೈಯಕ್ತಿಕ ನೆಲೆಯಲ್ಲಿ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು. ಮಹಿಳಾ ಅಧ್ಯಯನವು ಜ್ಞಾನ ಶಿಸ್ತುವಿನ ಸ್ಥಾನ ಪಡೆಯಿತು. ೧೯೯೨ರಲ್ಲಿನ ೭೩ ಮತ್ತು ೭೪ನೆಯ ಸಂವಿಧಾನ ತಿದ್ದುಪಡಿಯಲ್ಲಿ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಶೇ.೩೩ ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡುವ ಶಾಸನವನ್ನು ರೂಪಿಸಲಾಯಿತು. ದೆಹಲಿ ಮಾನುಷಿ ಪತ್ರಿಕೆ, ಮಹಾರಾಷ್ಟ್ರದಲ್ಲಿ ಡಾ. ಮೇಧಾ ಪಾಟ್ಕರ್ ಅವರ ಸಂಘಟನೆ, ಗುಜರಾತಿನಲ್ಲಿ ಸೇವಾ ಸಂಸ್ಥೆ ಮುಂತಾದವು ಮಹಿಳಾ ರಾಜಕಾರಣಕ್ಕೆ ಅತ್ಯಂತ ಗೌರವಯುತ ಸ್ಥಾನವನ್ನು ಒದಗಿಸಿಕೊಟ್ಟಿತು.

ವರದಕ್ಷಿಣೆ, ಮಾನಭಂಗ, ದೌರ್ಜನ್ಯ, ಲೈಂಗಿಕ ಹಿಂಸೆ ವಿರುದ್ಧ ಇಂದು ಕಾನೂನುಗಳಿವೆ. ಮಹಿಳೆಯರ ಸಮಸ್ಯೆಗಳು ಇಂದು ಕೇವಲ ಮಹಿಳೆಯರ ಸಮಸ್ಯೆಗಳಾಗಿ ಉಳಿದಿಲ್ಲ. ಅವು ಭಾರತದ ಸಮಾಜಿಕ-ರಾಜಕೀಯ ಸಮಸ್ಯೆಯಾಗಿವೆ. ಭಾರತೀಯ ರಾಜಕಾರಣದಲ್ಲಿ ಮಹಿಳೆಯರ ಸ್ಥಾನಮಾನವನ್ನು ಉತ್ತಮ ಪಡಿಸುವ ದಿಶೆಯಲ್ಲಿ ಸರಿಯಾದ ಕೆಲಸ ನಡೆಯಲಿಲ್ಲ. ಆದರೆ ಈಗಾಗಿರುವ ಸುಧಾರಣೆ ಕಡಿಮೆಯೇನಲ್ಲ.

ಆದರೂ ಇಂದು ಲಿಂಗ ಅನುಪಾತವು ಮಹಿಳೆಯರಿಗೆ ವಿರುದ್ಧವಾಗಿದೆ. ಎಳೆ ಮಕ್ಕಳಿಗೆ ಸಂಬಂಧಿಸಿದ ಲಿಂಗ ಅನುಪಾತವು ೨೦೦೭ ರಲ್ಲಿ ತೀವ್ರವಾಗಿ ಕುಸಿದಿದೆ. ಹೆಣ್ಣು ಭ್ರೂಣ ಹತ್ಯೆ ಸಮಸ್ಯೆ ಭೂತಾಕಾರವಾಗಿದೆ. ಇವೆಲ್ಲವೂ ಇಂದು ಲಿಂಗ ಸಮಾನತೆ ನೆಲೆಯಿಂದ ‘ಸ್ವಾಯತ್ತತೆ’ ‘ಸಬಲೀಕರಣ’ದ ನೆಲೆಗೆ ಸಾಗಿದೆ. ಭಾರತದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸುವಾಗ ಮಹಿಳಾ ರಾಜಕಾರಣವನ್ನು ನಿರ್ಲಕ್ಷಿಸುವುದು ಸರಿಯಲ್ಲ.

ಜನರಿಗೆ ಅಧಿಕಾರ ಪಂಚಾಯತ್ ರಾಜ್ ವ್ಯವಸ್ಥೆ

ಸ್ವಾತಂತ್ರ್ಯೋತ್ತರ ಭಾರತೀಯ ರಾಜಕಾರಣದಲ್ಲಿ ಉಂಟಾದ ಬಹುಮುಖ್ಯ ಬೆಳವಣಿಗೆಯೆಂದರೆ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ದೊರೆತದ್ದಾಗಿದೆ. ಎರಡು ಹಂತದ ಒಕ್ಕೂಟ ವ್ಯವಸ್ಥೆಯು ಇಂದು ಮೂರು ಹಂತದ ಒಕ್ಕೂಟ ವ್ಯವಸ್ಥೆಯಾಗಿ. ಸಂವಿಧಾನದ ೭೩ ಮತ್ತು ೭೪ ನೆಯ ತಿದ್ದುಪಡಿಗಳ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನವನ್ನು ಒದಗಿಸಿದವು.

‘ತಳಮಟ್ಟ ರಾಜಕಾರಣ’ವೆಂಬ ಪರೊಭಾವನೆಯು ಇಂದು ಹುಟ್ಟಿಕೊಂಡಿದೆ. ಗ್ರಾಮಗಳ ಮಟ್ಟದಲ್ಲಿ ಜನರು ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂಬುದು ವಿಕೇಂದ್ರೀಕರಣದ ಮೂಲ ಸಂಬಂಧವಾಗಿದೆ. ಇಂದು ನಮ್ಮ ದೇಶದಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಂ ಪಂಚಾಯಿತಿ.

ಆಡಳಿತ ಹಾಗೂ ಅಭಿವೃದ್ಧಿಯಲ್ಲಿ ಜನರನ್ನು ತೊಡಗಿಸಿಕೊಳ್ಳುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಗ್ರಾಮ ಸಭೆ’ ಎಂಬ ಸಂಸ್ಥೆಯನ್ನು ಸೃಷ್ಟಿಸಲಾಗಿದೆ. ಗ್ರಾಮಸಭೆಯು ನೇರ ಪ್ರಜಾಪ್ರಭುತ್ವಕ್ಕೆ ಉದಾಹರಣೆಯಾಗಿದೆ. ಗ್ರಾಮದ ಎಲ್ಲ ಮತದಾರರು ಗ್ರಾಮಸಭೆಯ ಸದಸ್ಯರಾಗಿರುತ್ತಾರೆ. ಗ್ರಾಮಮಟ್ಟದಲ್ಲಿ ಅಭಿವೃದ್ಧಿ ಯೋಜನೆಯು ಗ್ರಾಮಸಭೆಯಲ್ಲಿ ಅನುಮೋದನೆಯಾಗಬೇಕು.

ಜಿಲ್ಲಾಮಟ್ಟದಲ್ಲಿ ಸಮಗ್ರ ಜಿಲ್ಲಾ ಯೋಜನೆ ರೂಪಿಸುವ ಜವಾಬ್ದಾರಿಯನ್ನು ‘ಜಿಲ್ಲಾ ಯೋಜನಾ ಸಮಿತಿ’ಗೆ ವಹಿಸಿಕೊಡಲಾಗಿದೆ. ಇದೊಂದು ಚುನಾಯಿತ ಹಾಗೂ ಸಂವಿಧಾನಾತ್ಮಕ ಸಂಸ್ಥೆಯಾಗಿದೆ.

ಪಂಚಾಯತ್‌ರಾಜ್ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಮಹಿಳೆಯರಿಗೆ ಮೀಸಲಾತಿ ಸೌಲಭ್ಯ ಒದಗಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸು ಸಂಪನ್ಮೂಲ ವಿವರಣೆಯನ್ನು ನಿರ್ವಹಿಸಲು ರಾಷ್ಟ್ರಮಟ್ಟದಲ್ಲಿ ಕೇಂದ್ರ ಹಣಕಾಸು ಆಯೋಗವಿದ್ದರೆ ರಾಜ್ಯಮಟ್ಟದಲ್ಲಿ ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ನಡುವೆ ಹಣಕಾಸು ಸಂಪನ್ಮೂಲ ವಿವರಣೆಯನ್ನು ನಿರ್ವಹಿಸಲು ರಾಜ್ಯ ಹಣಕಾಸು ಆಯೋಗವಿದೆ.

ವಿಕೇಂದ್ರೀಕರಣವು ಇಂದು ಕೇವಲ ಅಧಿಕಾರಕ್ಕೆ ಮಾತ್ರ ಮೀಸಲಾಗಿಲ್ಲ. ಅದು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆಯೂ ನಡೆದಿದೆ. ಅಧಿಕಾರವು ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ಮಾತ್ರ ನೆಲೆಗೊಂಡಿರಬಾರದು. ಅದು ಗ್ರಾಮ ಮಟ್ಟದಲ್ಲಿ ಜನರ ವಶದಲ್ಲಿರಬೇಕು ಎಂಬುದು ವಿಕೇಂದ್ರೀಕರಣದ ಮೂಲ ಸಿದ್ಧಾಂತವಾಗಿದೆ.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಬೆಳವಣಿಗೆಯಲ್ಲಿ ಪಂಚಾಯಿತಿ ರಾಜ್ಯ ವ್ಯವಸ್ಥೆ ಅಸ್ತಿತ್ವಕ್ಕೆ ಬಂದದ್ದು ತುಂಬಾ ಮಹತ್ವದ ಸಂಗತಿಯಾಗಿದೆ. ಗ್ರಾಮೀಣ ಅಭಿವೃದ್ಧಿಯೆಂಬುದು ೧೯೯೦ರ ದಶಕದ ನಂತರ ತೀವ್ರಗೊಂಡಿದೆ. ಗ್ರಾಮ ಪಂಚಾಯಿತಿಗಳು ಗ್ರಾಮೀಣ ಮಟ್ಟದಲ್ಲಿ ಮೂಲಭೂತ ಅಗತ್ಯಗಳಾದ ರಸ್ತೆ ನಿರ್ಮಾಣ, ಕುರಿಯುವ ನೀರು, ಪ್ರಾಥಮಿಕ ಶಾಲೆ, ಆರೋಗ್ಯ ಮುಂತಾದ ಸಂಗತಿಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿವೆ. ಭಾರತದ ರಾಜಕೀಯ ವ್ಯವಸ್ಥೆಯು ಇಂದು ರಾಜ್ಯ ಸಭೆ / ಲೋಕಸಭೆಯಿಂದ ಆರಂಭಿಸಿ ಗ್ರಾಮಸಭೆವರೆಗೆ ಹರಡಿಕೊಂಡಿದೆ. ಈ ಬಗೆಯ ವಿಕೇಂದ್ರೀಕರಣ ಪ್ರಕ್ರಿಯೆಯ ಮೂಲಕ ‘ದಿಲ್ಲಿ’ ದರ್ಬಾರು ಎಷ್ಟು ಮುಖ್ಯವೋ ಹಳ್ಳಿಯ ಸಭೆಯು ಅಷ್ಟೇ ಮುಖ್ಯ ಎಂಬುದನ್ನು ಭಾರತವು ತೋರಿಸಿಕೊಟ್ಟಿದೆ. ಸ್ಥಳೀಯ ಮಟ್ಟದ ಅಭಿವೃದ್ಧಿ ಚಟುವಟಿಕೆಗಳನ್ನು ಸ್ಥಳೀಯ ಸಂಸ್ಥೆಗಳ ನಿರ್ವಹಿಸುವಂತಾಗಬೇಕು. ಆಗ ಮಾತ್ರ ಗಾಂಧೀಜಿ ಅವರ ಕನಸಾದ ಗ್ರಾಮ ಸ್ವರಾಜ್ಯದ ಆಶಯಕ್ಕೆ ಗೌರವ ನೀಡಿದಂತಾಗುತ್ತದೆ.

ಮೂರನೆಯ ಸಹಸ್ರಮಾನದಲ್ಲಿ ಭಾರತ: ಒಂದು ಮುನ್ನೋಟ

ಇಂದು ಮೂರನೆಯ ಸಹಸ್ರಮಾಣದಲ್ಲಿ ಭಾರತವು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಶ್ವದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಸ್ವಾತಂತ್ರ್ಯೋತ್ತರ ಕಾಲಾವಧಿಯಲ್ಲಿ ರಾಜಕೀಯವಾಗಿ ಭಾರತದ ಸಾಧನೆ ಅದ್ವಿತೀಯವಾದುದಾಗಿದೆ. ಆದರೆ ಅಲ್ಲಿ ವೈಫಲ್ಯಗಳೂ ಇವೆ. ಅನೇಕ ಗಂಡಾಂತರಗಳನ್ನು ಅದು ಎದುರಿಸಿದೆ. ಆದರೆ ಮೂರನೆಯ ಸಹಸ್ರಮಾನದಲ್ಲಿ ಭಾರತವನ್ನು ಜಾಗತಿಕಮಟ್ಟದಲ್ಲಿ ಯಾರೂ ನಿರ್ಲಕ್ಷಿಸುವಂತಿಲ್ಲ. ಅಂತಹ ಹೆಮ್ಮೆಯ ಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಅದು ಪಡೆದುಕೊಂಡಿದೆ.

ನಿಜ, ದೇಶದಲ್ಲಿ ಬಡತನ ತೀವ್ರವಾಗಿದೆ. ಅಸಮಾನತೆಯನ್ನು ನಿವಾರಿಸುವುದು ಭಾರತಕ್ಕೆ ಸಾಧ್ಯವಾಗಿಲ್ಲ. ಭ್ರಷ್ಟಾಚಾರ ವ್ಯಾಪಕವಾಗಿದೆ. ನಿರುದ್ಯೋಗವನ್ನು ತೊಡೆದುಹಾಕುವುದು ಭಾರತಕ್ಕೆ ಸಾಧ್ಯವಾಗಿಲ್ಲ. ಪ್ರಾದೇಶಿಕ ಅಸಮಾನತೆಯಿದೆ. ಮಹಿಳೆಯರು ಅನೇಕ ಬಗೆಯ ತಾರತಮ್ಯದಿಂದ ನರಳುತ್ತಿದ್ದಾರೆ. ಜಾತೀಯತೆ, ಅಸ್ಪೃಶ್ಯತೆ, ಮೂಢನಂಬಿಕೆಗಳು ಜನರನ್ನು ಇನ್ನೂ ಕಾಡುತ್ತಿವೆ. ಇದು ಕೇವಲ ಒಂದು ಮುಖ ಮಾತ್ರ. ಈ ಸಂಗತಿಗಳನ್ನು ಮುಖ್ಯವಾಗಿಟ್ಟುಕೊಂಡು ನಾವು ನಿರಾಶರಾಗುವ ಅಗತ್ಯವಿಲ್ಲ. ಭಾರತದ ರಾಜಕೀಯ ಬೆಳವಣಿಗೆಗೆ ಮತ್ತೊಂದು ಮುಖವಿದೆ ಅದು ಅದರ ಸಾಧನೆಯ ಭಾಗ.

ರಾಷ್ಟ್ರೀಯ ಐಕ್ಯತೆ ಮತ್ತು ಏಕತೆ

ಕಳೆದ ೬೦ ವರ್ಷಗಳ ಭಾರತದ ಬಹುದೊಡ್ಡ ಸಾಧನೆಯೆಂದರೆ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಅದು ರಾಷ್ಟ್ರೀಯ ಏಕತೆಯನ್ನು ಕಾಯ್ದುಕೊಂಡಿದೆ. ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ಈ ದೇಶದ ವೈವಿಧ್ಯತೆಯು ಅದರ ಏಕತೆಗೆ ಭಂಗತರುವ ರೀತಿಯಲ್ಲಿ ಭಾಷೆ, ಧರ್ಮ, ಪ್ರಾಂತ ಮುಂತಾದ ಸಂಗತಿಗಳು ಏಕತೆಗೆ ಗಂಡಾಂತರವೊಡ್ಡುವ ರೀತಿಯಲ್ಲಿವೆ. ಆದರೆ ಭಾರತವು ಇಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಿದೆ. ಇಂದು ಅನೇಕ ಪ್ರಾದೇಶಿಕ ಪಕ್ಷಗಳು ರಾಜ್ಯಮಟ್ಟದಲ್ಲಿ ಅಧಿಕಾರದಲ್ಲಿವೆ. ಇದರಿಂದ ರಾಷ್ಟ್ರೀಯ ಏಕತೆಗೆ ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ. ಕೋಮುವಾದವು ದೇಶದಲ್ಲಿ ತಲೆ ಎತ್ತಿದೆ. ಕೋಮುಘರ್ಷಣೆಗಳು ನಡೆಯುತ್ತಿವೆ. ಧರ್ಮದ ಹೆಸರಿನಲ್ಲಿ ಜನರ ಹತ್ಯೆಗಳು ನಡೆಯುತ್ತಿವೆ. ಆದರೆ ಭಾರತವು ಇವೆಲ್ಲವನ್ನು ರಾಜಕೀಯವಾಗಿ ನಿರ್ವಹಿಸುತ್ತಿದೆ. ಒಂದು ರಾಷ್ಟ್ರವಾಗಿ ಅದು ಬೆಳೆಯುತ್ತಿದೆ.

ಜನತಾಂತ್ರಿಕ ರಾಜಕೀಯ ವ್ಯವಸ್ಥೆ

ಭಾರತದ ಮತ್ತೊಂದು ರಾಜಕೀಯ ಸಾಧನೆಯೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ್ದಾಗಿದೆ. ಪ್ರಪಂಚದಲ್ಲಿ ಬೃಹತ್ ಪ್ರಜಾಪ್ರಭುತ್ವವೆಂಬುದು ಮಾತ್ರವೇ ಭಾರತದ ಹೆಗ್ಗಳಿಕೆಯಲ್ಲ. ಪ್ರಜಾಪ್ರಭುತ್ವವು ದೇಶದಲ್ಲಿ ಗಟ್ಟಿಯಾಗುತ್ತಿದೆ. ಇದು ಬಹಳ ಮುಖ್ಯ. ತುರ್ತು ಪರಿಸ್ಥಿತಿಯಂತಹ ಸರ್ವಾಧಿಕಾರಿ ಪ್ರವೃತ್ತಿಯನ್ನು ಹತ್ತಿಕ್ಕುವಲ್ಲಿ ದೇಶ ಯಶಸ್ವಿಯಾಗಿದೆ. ನಾಗರಿಕ ಸ್ವಾತಂತ್ರ್ಯವನ್ನು ತುಂಬಾ ಎಚ್ಚರಿಕೆಯಿಂದ ಕಾಯ್ದುಕೊಂಡು ಬರಲಾಗಿದೆ. ಇಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಿದೆ. ಜನತೆಯಲ್ಲಿ ರಾಜಕೀಯ ಪ್ರಜ್ಞೆ ಬೆಳೆಯುತ್ತಿದೆ. ರಾಜಕೀಯ ಪ್ರೌಢಿಮೆಯನ್ನು ಅನೇಕ ಸಂದರ್ಭಗಳಲ್ಲಿ ಜನರು ಮೆರೆದಿದ್ದಾರೆ. ತುರ್ತು ಪರಿಸ್ಥಿತಿಗೆ ಕಾರಣವಾಗಿದ್ದ ರಾಜಕೀಯ ಪಕ್ಷವನ್ನು ಅದು ಸೋಲಿಸಿದೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಇಳಿಸುವುದು ಅದಕ್ಕೆ ಸಾಧ್ಯವಾಗಿದೆ. ಚುನಾವಣೆಯ ಮಹತ್ವವನ್ನು ಜನರು ಅರಿತುಕೊಂಡಿದ್ದಾರೆ.

ಆರ್ಥಿಕವಾಗಿ ಜನರ ಬದುಕು ಉತ್ತಮವಾಗುತ್ತಾ ನಡೆದಿದೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಜನರ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ದೇಶವು ಪ್ರಯತ್ನಿಸುತ್ತಿದೆ. ಮಹಿಳೆಯರ, ದಲಿತರ, ಬಡವರ ಸಮಸ್ಯೆಗಳ ನಿವಾರಣೆಗೆ ವಿಶೇಷ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮೂರನೆಯ ಸಹಸ್ರಮಾನದಲ್ಲಿ ಅತಿ ಹೆಚ್ಚು ಬಡತನವಿರುವ ರಾಷ್ಟ್ರವಾಗಿ ಭಾರತ ನರಳುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬಡತನದ ಪ್ರಮಾಣವು ತೀವ್ರವಾಗಿ ಕಡಿಮೆಯಾಗುತ್ತಿದೆ.

ಆರ್ಥಿಕ ಅಭಿವೃದ್ಧಿ

ಆರ್ಥಿಕವಾಗಿ ದೇಶವು ಸಬಲವಾಗಿದೆ, ಸಮೃದ್ಧವಾಗಿದೆ, ಸ್ವಾವಲಂಬಿಯಾಗಿದೆ. ರಾಜಕೀಯ ಸ್ಥಿರತೆಯನ್ನು, ಭದ್ರತೆಯನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗಿದೆ. ಈ ದಿಶೆಯದಲ್ಲಿ ಇಂದು ಭಾರತವು ‘ಜನರನ್ನು ಒಳಗೊಳ್ಳುವ ಅಭಿವೃದ್ಧಿ’ಯನ್ನು ಸಾಧಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದೆ. ಮಾನವ ಅಭಿವೃದ್ಧಿ ದೃಷ್ಟಿಯಿಂದ ಜಾಗತಿಕವಾಗಿ ಭಾರತ ಸ್ಥಾನ ಕೆಳಮಟ್ಟದಲ್ಲಿದೆ. ಆದರೆ ೧೯೫೦ರಿಂದ ದೇಶದಲ್ಲಿ ಸಾಕ್ಷರತೆ ಪ್ರಮಾಣ ಏರಿಕೆಯಾಗುತ್ತಿದೆ. ಆರೋಗ್ಯದ ಮಟ್ಟ ಸುಧಾರಿಸುತ್ತಿದೆ. ಜನರ ಜೀವನಾಯುಷ್ಯ ಉತ್ತಮಗೊಂಡಿದೆ. ಭಾರತವು ಒಂದು ಬಿಲಿಯನ್‌ ಪ್ರಜೆಗಳ ದೇಶವಾಗಿರುವಂತೆ ಅದು ಆರ್ಥಿಕವಾಗಿ ಒಂದು ಟ್ರಿಲಿಯಲ್ ರೂಪಾಯಿ ವರಮಾನದ ರಾಷ್ಟ್ರವಾಗಿದೆ.

ಮೂರನೆಯ ಸಹಸ್ತಮಾನದಲ್ಲಿ ಭಾರತವು ಜಾಗತಿಕವಾಗಿ ಮಹತ್ವದ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಅದು ನಾಯಕನ ಪಾತ್ರ ನಿರ್ವಹಿಸಬೇಕಾಗಿದೆ.

ಸಮಾರೋಪ

ಸ್ವಾತಂತ್ರ್ಯೋತ್ತರ ಕಾಲಾಧಿಯಲ್ಲಿ ಭಾರತವು ರಾಜಕೀಯವಾಗಿ ಒಂದು ಪ್ರೌಢ ದೇಶವಾಗಿ ರೂಪುಗೊಂಡಿದೆ. ಪ್ರಸ್ತುತ ಪ್ರಬಂಧದಲ್ಲಿ ೧೯೪೭ರಿಂದ ೨೦೦೭ರ ವರೆಗಿನ ೬೦ ವರ್ಷಗಳ ಕಾಲಾವಧಿಯಲ್ಲಿ ಉಂಟಾದ ಅನೇಕ ರಾಜಕೀಯ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಇದೊಂದು ಸ್ಥೂಲ ಸಮೀಕ್ಷೆಯಾಗಿದೆ. ರಾಜಕೀಯವಾಗಿ ಬಹಳ ಮುಖ್ಯವಾದ ಸಂಗತಿಗಳನ್ನು ಮಾತ್ರ ಇಲ್ಲಿ ಗುರುತಿಸುವುದು ಸಾಧ್ಯವಾಗಿದೆ. ವಿಶ್ವದಲ್ಲಿ ಭಾರತವು ಇಂದು ಪರಮಾಣು ಶಕ್ತಿ ರಾಷ್ಟ್ರವಾಗಿ ಮಹತ್ವದ ಸ್ಥಾನ ಪಡೆದಿದೆ.

ಯೋಜನೆಗಳ ಮೂಲಕ ಅಭಿವೃದ್ಧಿಯನ್ನು ಆರಂಭಿಸಿದ ಭಾರತವು ಇಂದು ಮುಕ್ತ ಆರ್ಥಿಕ ನೀತಿಗಳ ಮೂಲಕ ಅಭಿವೃದ್ಧಿಯನ್ನು ನಿರ್ವಹಿಸುವ ಹಂತಕ್ಕೆ ಬಂದಿದೆ. ಹತ್ತು ಪಂಚವಾರ್ಷಿಕ ಯೋಜನೆಗಳನ್ನು ಮುಗಿಸಿ ಇಂದು ಭಾರತವು ಹನ್ನೊಂದನೆಯ ಯೋಜನೆಯನ್ನು ಅದು ಪ್ರವೇಶಿಸಿದೆ. ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಅದು ಸದಸ್ಯತ್ವವನ್ನು ಅದರ ಕೀರ್ತಿ ಅದರ ನೂರು ಕೋಟಿಗೂ ಮಿಕ್ಕಿದ ಜನತೆಗೆ ಸಲ್ಲಬೇಕು.

ಟಿಪ್ಪಣಿ

ಪರಾಮರ್ಶನ ಸೂಚಿಯಲ್ಲಿ ನೀಡಲಾದ ವಿದ್ವಾಂಸರು ಸಮಾನವಾಗಿ ಭಾರತೀಯ ಸಮಾಜ, ಆರ್ಥಿಕತೆ ಮತ್ತು ರಾಜಕಾರಣ ಕುರಿತಂತೆ ಒತ್ತಿ ಹೇಳಿರುವ ಸಂಗತಿಯೆಂದರೆ ಅದರ ಪ್ರಜಾಪ್ರಭುತ್ವ ವ್ಯವಸ್ಥೆ. ಇಂದು ಭಾರತವು ತನ್ನ ಸ್ವಾತಂತ್ರ್ಯೋತ್ಸವದ ವಜ್ರಮಹೋತ್ಸವವನ್ನು ಆಚರಿಸುತ್ತಿದೆ (೧೯೫೭-೨೦೦೭) ಇನ್ನು ಮೂರು ವರ್ಷಗಳ ನಂತರ ಅದು ಅದರ ಪ್ರಜಾಪ್ರಭುತ್ವದ ವಜ್ರ ಮಹೋತ್ಸವವನ್ನು (೧೯೫೦-೨೦೧೦) ಆಚರಿಸಿಕೊಳ್ಳುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯು ಭಾರತದಲ್ಲಿ ಭದ್ರವಾಗಿರುವುದು ಮತ್ತು ಗಟ್ಟಿಯಾಗುತ್ತಾ ನಡೆದಿರುವುದು ವಿದ್ವಾಂಸರಿಗೆ ಪವಾಡದಂತೆ ಕಂಡಿದೆ-ಒಗಟಿನಂತೆ ಕಂಡಿದೆ. ಮಹಾಚುನಾವಣೆಯಲ್ಲಿ ಸರಿಸುಮಾರು ೫೦ ರಿಂದ ೫೫ ಕೋಟಿ ಜನರು ಮತ ಚಲಾಯಿಸುತ್ತಾರೆ ಎಂಬುದೇ ಒಂದು ಅದ್ಭುತ.

ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಅದು ಅಭಿವೃದ್ಧಿ ಯೋಜನೆಯ ಪ್ರಯೋಗವನ್ನು ನಡೆಸಿದೆ. ಒಕ್ಕೂಟ ವ್ಯವಸ್ಥೆಯು ಆಬಾಧಿತವಾಗಿ ನಡೆದಿದೆ. ಸರ್ವಾಧಿಕಾರಿ ಆಳ್ವಿಕೆಯನ್ನು ಸ್ಥಾಪಿಸಲು ನಡೆದ ಪ್ರಯತ್ನವನ್ನು ಭಾರತವು ವಿಫಲಗೊಳಿಸಿದೆ.

ನಿಜ, ಪ್ರಜಾಪ್ರಭುತ್ವದ ವ್ಯಾಪ್ತಿ ಸೀಮಿತವಾದುದಾಗಿದೆ. ಅದು ಎಲ್ಲರನ್ನು ಒಳಗೊಳ್ಳುವಂತೆ ಮಾಡುವ ಬಗ್ಗೆ ಚಿಂತನೆ-ಪ್ರಯೋಗ ನಡೆದಿದೆ. ನಮ್ಮದು ಎಲ್ಲರನ್ನು ಒಳಗೊಳ್ಳುವ ಪ್ರಜಾಪ್ರಭುತ್ವವಾಗುವತ್ತ ಸಾಗುತ್ತಿದೆ.