ವಸಾಹತುಶಾಹಿತ್ವದ ಸುಲಿಗೆಯನ್ನು ಕುರಿತ ರಾಷ್ಟ್ರೀಯ ಚಳವಳಿಗಾರರ ಆಲೋಚನೆಯನ್ನು ಅವಲೋಕಿಸುವುದರೊಂದಿಗೆ ಭಾರತದ ಭಾರತದ ಸಂಪತ್ತನ್ನು ಬ್ರಿಟನ್‌ ಹೇಗೆ ಸುಲಿಗೆ ಮಾಡಿತೆಂಬ ವಿಷಯವನ್ನು ಬಹುಮುಖ್ಯವಾಗಿ ಚರ್ಚೆಗೊಳಡಿಸಬೇಕಾಗಿದೆ. ೧೮ನೆಯ ಶತಮಾನದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲುಂಟಾದ ನವೋದಯವು ವಿಶ್ವದ ಇತರ ಭಾಗಗಳಂತೆ ಭಾರತದಲ್ಲಿಯೂ ರಾಷ್ಟ್ರೀಯ ಭಾವನೆಯನ್ನು ಬೆಳೆಸಿತು. ಅಂದಿನ ಹಲವು ರಾಷ್ಟ್ರನಾಯಕರು ಬ್ರಿಟಿಷ್ ‌ಆಡಳಿತ ಕಾಲದ ಆರ್ಥಿಕ ಸುಲಿಗೆಯನ್ನು ಜನರಿಗೆ ಮನದಟ್ಟು ಮಾಡಿದರು. ಭಾರತದ ರಾಷ್ಟ್ರೀಯ ಚಳವಳಿಯು ಇತರ ವಸಾಹತು ರಾಷ್ಟ್ರಗಳ ರಾಷ್ಟ್ರೀಯ ಚಳವಳಿಗಿಂತಲೂ ಆಳವಾದ ಮತ್ತು ದೃಢವಾದ ಬೇರನ್ನು ವಸಾಹತುಶಾಹಿತ್ವದ ಪ್ರಭುತ್ವವು ಸ್ವಪ್ರಯೋಜನಕ್ಕಾಗಿ ಉಪಯೋಗಿಸುವ ವಿಧಾನದ ಸ್ವರೂಪ ಮತ್ತು ಲಕ್ಷಣವನ್ನು ವಸಾಹತುಶಾಹಿತ್ವದ ಹಿನ್ನೆಲೆಯಲ್ಲಿ ಪ್ರಾರಂಭಿಕ ನಾಯಕರು ಗುರುತಿಸಿದ್ದಾರೆ. ಜೊತೆಗೆ ೧೯ನೆಯ ಶತಮಾನದಲ್ಲಿ ಬೆಳವಣಿಗೆಯಾದ ವಸಾಹತುಶಾಹಿತ್ವದ ಆರ್ಥಿಕ ಶೋಷಣೆಯನ್ನೂ ವಿಮರ್ಶಿಸಿದ್ದರು. ಈ ವಿಮರ್ಶೆಯನ್ನು ಸಂಪತ್ತಿನ ಸೋರಿಕೆ ಸಿದ್ಧಾಂತ (ಡ್ರೈನ್‌ ಥಿಯರಿ) ಎಂದು ಕರೆಯುತ್ತಾರೆ. ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಈ ವಿಶ್ಲೇಷಣೆಯು ಪ್ರಾಯಶಃ ಮಹತ್ವದ ಕೊಡುಗೆಯಾಗಿತ್ತು. ನಂತರದ ರಾಷ್ಟ್ರೀಯ ಬೆಳವಣಿಗೆಯ ರಚನೆಯಲ್ಲಿ ಬಹುಮುಖ್ಯ ಭಾಗವಾದ ಜನಪ್ರಿಯ ಭಾಷಣಗಳು, ಕರಪತ್ರಗಳು, ವೃತ್ತಪತ್ರಿಕೆಗಳು, ನಾಟಕಗಳು, ಹಾಡುಗಳು, ಗಾದೆ ಮಾತುಗಳಲ್ಲಿ ವಸಾಹತುಶಾಹಿತ್ವದ ಶೋಷಣೆಯನ್ನು ಪ್ರತಿಬಿಂಬಿಸುತ್ತಿದ್ದವು.

ಆರಂಭಿಕ ನಾಯಕರು ಬ್ರಿಟಿಷ್ ‌ಸಾಮ್ರಾಜ್ಯಶಾಹಿತ್ವದ ನಿಜವಾದ ಸಂಗತಿಯನ್ನು ಅರ್ಥಮಾಡಿಕೊಂಡಿದ್ದರು. ಅದು ಬ್ರಿಟಿಷ್ ‌ಅರ್ಥ ವ್ಯವಸ್ಥೆಗೆ ಭಾರತದ ಆರ್ಥಿಕ ವ್ಯವಸ್ಥೆಯು ಅಧೀನವಾಗಿದ್ದನ್ನು ಗಮನಿಸಿದ್ದರು. ಬ್ರಿಟಿಷ್ ‌ಆಡಳಿತದ ಶೋಷಣೆಯ ನೋಟವನ್ನು ಆರ್ಥಿಕ ಕೈಗಾರಿಕೆ, ವಾಣಿಜ್ಯ ರಚನೆಯಲ್ಲಿ ರೂಪಿಸಿದ್ದರು. ವಸಾಹತುಶಾಹಿತ್ವ ಎನ್ನುವುದು ಒಂದು ಕಚ್ಚಾ ಆಯುಧದಂತೆ ರೂಪಿತವಾಗಿತ್ತು. ಆ ಮೂಲಕ ಲೂಟಿ, ಕಾಣಿಕೆ ಮತ್ತು ವಾಣಿಜ್ಯವನ್ನು ಕ್ರಮಬದ್ಧವಲ್ಲದ ತೊಡಕಾದ ಯಾಂತ್ರಿಕ ಕೌಶಲ್ಯದಿಂದ ನಡೆಸುವುದಾಗಿತ್ತು. ಈ ದೇಶದಲ್ಲಿ ತಮಗನುಕೂಲವಾಗುವಂತೆ ಮುಕ್ತ ವಾಣಿಜ್ಯ ಮತ್ತು ವಿದೇಶೀ ಬಂಡವಾಳವನ್ನು ತೊಡಗಿಸುವುದೇ ಆಗಿತ್ತು. ೧೯ನೆಯ ಶತಮಾನದ ವಸಾಹತುಶಾಹಿತ್ವದ ಸ್ವಭಾವವು ಈ ದೇಶವನ್ನು ಬ್ರಿಟಿಷ್ ‌ಬಂಡವಾಳ ತೊಡಗಿಸುವಿಕೆಯ ಕೇಂದ್ರವನ್ನಾಗಿಸುವುದಾಗಿತ್ತು. ಬ್ರಿಟನ್ನಿನ ನಗರಗಳಲ್ಲಿ ಉತ್ಪಾದನೆಯಾದ ವಸ್ತುಗಳ ಮಾರಾಟಕ್ಕೆ ಮಾರುಕಟ್ಟೆಯನ್ನು ಒದಗಿಸುವ ಮತ್ತು ಕಚ್ಚಾ ಸಾಮಗ್ರಿಗಳನ್ನು, ಆಹಾರ ಧಾನ್ಯಗಳನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಲು ನಿರ್ಮಿಸಿಕೊಂಡ ಪ್ರದೇಶವಾಗಿತ್ತು. ಆದರೂ ಆರಂಭದಲ್ಲಿ ಕಾಂಗ್ರೆಸ್‌ ನಾಯಕರು ಭಾರತವು ತನ್ನ ಆರ್ಥಿಕ ವ್ಯವಸ್ಥೆಯ ಮೇಲೆ ನಿಲ್ಲುವಂತಹ ಭವಿಷ್ಯವನ್ನು ಕಂಡುಕೊಳ್ಳಬೇಕೆಂದು ವರ್ಣರಂಜಿತ ಭಾಷೆಯಲ್ಲಿ ಹೇಳುತ್ತಿದ್ದರು. ಈ ರಾಷ್ಟ್ರೀಯವಾದಿ ಚಿಂತಕರು ಎದೆಗುಂದದೆ ಕಂಠೋಕ್ತ ಮಾತುಗಳಿಂದ ಭಾರತೀಯರು ಬಡತನದಲ್ಲಿದ್ದಾರೆ, ಪ್ರತಿದಿನವೂ ಬಡತನ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದರು. ಭಾರತವು ತನ್ನ ಸ್ವಂತ ಆರ್ಥಿಕ ತಳಹದಿಯ ಮೇಲೆ ನಿಲ್ಲಬೇಕು, ವಿದೇಶಿ ಬಂಡವಾಳದಿಂದಲ್ಲ ಎಂದು ಟೀಕಿಸುತ್ತಿದ್ದರು. ಆದರೂ ಬ್ರಿಟಿಷ್ ‌ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳು ವಿದೇಶಿ ಬಂಡವಾಳದ ಹೂಡಿಕೆಯನ್ನು ಮುಂದುವರಿಸಿದರು. ಸರ್ಕಾರದ ಭದ್ರತೆಗೆ ಕಾನೂನು ಮತ್ತು ಕಾಯಿದೆಗಳನ್ನು ಮುಖ್ಯ ಆಯುಧವಾಗಿ ಉಪಯೋಗಿಸಿದರು. ಜಾನ್‌ ಸ್ಟೂವರ್ಟ್‌ ಮಿಲ್‌ ಮತ್ತು ಆಲ್‌ಫ್ರೆಡ್‌ ಮಾರ್ಷಲ್‌ರಂತವರು ಇಂತಹ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದರು.

೧೮೭೦-೧೯೦೫ರ ವರ್ಷಗಳಲ್ಲಿನ ಬ್ರಿಟಿಷ್ ‌ಆಡಳಿತದ ಆರ್ಥಿಕ ವಿಶ್ಲೇಷಣೆಯನ್ನು ಭಾರತೀಯರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಮತ್ತು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದಾರೆ. ಅವರಲ್ಲಿ ಮೂರು ಜನರು ಮಹತ್ವದ ವ್ಯಕ್ತಿಗಳು. ೧೮೨೫ರಲ್ಲಿ ಜನಿಸಿದ ದಾದಾಬಾಯಿ ನವರೋಜಿ ಅವರು ಪ್ರಮುಖ ವಾಣಿಜ್ಯೋದ್ಯಮಿಯಾಗಿ ಜೀವನ ಪ್ರಾರಂಭಿಸಿ ತಮ್ಮ ಇಡೀ ಜೀವನವನ್ನು ಮತ್ತು ಸಂಪತ್ತನ್ನು ಭಾರತದ ರಾಷ್ಟ್ರೀಯ ಚಳವಳಿಗಾಗಿ ಅರ್ಪಿಸಿದರು. ಮತ್ತೊಬ್ಬ ಪ್ರಮುಖರಾದ ರಮೇಶ್‌ ಚಂದ್ರದತ್‌ ಅವರು ನಿವೃತ್ತ ಐ.ಸಿ.ಎಸ್‌. ಅಧಿಕಾರಿಯಾಗಿದ್ದರು. ಅವರು ‘ದಿ ಎಕನಾಮಿಕ್‌ ಹಿಸ್ಟರಿ ಆಫ್‌ ಇಂಡಿಯಾ’ ಎಂಬ ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ೧೭೭೫ರಿಂದ ೨೦ನೆಯ ಶತಮಾನದವರೆಗಿನ ವಸಾಹತುಶಾಹಿ ಆಡಳಿತದ ಸಂಪೂರ್ಣ ಆರ್ಥಿಕ ಶೋಷಣೆಯನ್ನು ದಾಖಲೆ ಸಹಿತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಈ ನಾಯಕರು ಜೊತೆಗೆ ಜಿ.ವಿ. ಜೋಷಿ, ಜಿ ಸುಬ್ರಮಣ್ಯ ಅಯ್ಯರ್, ಜಿ.ಕೆ. ಗೋಖಲೆ, ಪೃಥ್ವೀಸ್‌ ಚಂದ್ರರಾಯ್‌ ಮತ್ತು ಇತರ ನೂರಾರು ರಾಜಕೀಯ ಮುಖಂಡರು ಮತ್ತು ಪತ್ರಕರ್ತರು ವಸಾಹತು ಆರ್ಥಿಕ ನೀತಿಯನ್ನು ಆರ್ಥಿಕ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದಾರೆ. ಅವರು ಈ ಸಂದರ್ಭದಲ್ಲಿ ಬ್ರಿಟಿಷ್ ‌ಆಡಳಿತದ ಸ್ವರೂಪ ಮತ್ತು ಉದ್ದೇಶವನ್ನು ಮೂಲ ಪ್ರಶ್ನೆಯಾಗಿ ಎತ್ತಿದ್ದಾರೆ. ಭಾರತವನ್ನು ಕಚ್ಚಾ ವಸ್ತುಗಳನ್ನು ಒದಗಿಸುವ ದೇಶವನ್ನಾಗಿ, ತಮ್ಮ ಉತ್ಪಾದನೆಯ ಮಾರುಕಟ್ಟೆಯನ್ನಾಗಿ, ವಿದೇಶಿ ಬಂಡವಾಳವನ್ನು ಹೂಡಲು ತಕ್ಕ ಕ್ಷೇತ್ರವಾಗಿ ಪರಿವರ್ತಿಸುವುದೇ ಬ್ರಿಟಿಷರಿಗಿದ್ದ ಉದ್ದೇಶ ಎಂಬುದನ್ನು ಪ್ರಾರಂಭಿಕ ನಾಯಕರು ಚೆನ್ನಾಗಿ ಮನಗಂಡಿದ್ದರು. ಬ್ರಿಟಿಷ್ ‌ನೀತಿಯು ಉದ್ದೇಶ ಪೂರ್ವಕವಾಗಿ ಇಲ್ಲಿನ ಸಂಪತ್ತನ್ನು ಬರಿದು ಮಾಡುವುದಾಗಿತ್ತು. ಪಾಶ್ಚಾತ್ಯ ಸರಕುಗಳ ರಫ್ತಿನಿಂದಾಗಿ ಭಾರತೀಯ ಕುಶಲ ಕೈಗಾರಿಕೆಗಳು ನಾಶವಾದವು. ಜೊತೆಗೆ ಸಾಮ್ರಾಜ್ಯಶಾಹಿ ವ್ಯವಸ್ಥೆಯು ಭಾರತೀಯರಿಗೆ ಅಗತ್ಯವಾದ ಆಡಳಿತ ವ್ಯವಸ್ಥೆಯನ್ನು ರೂಪಿಸಲಿಲ್ಲ. ಬ್ರಿಟಿಷರಿಗೆ ಅನ್ವಯವಾಗದ ಅನೇಕ ಕಾಯಿದೆ ಕಾನೂನುಗಳನ್ನು ಭಾರತೀಯರ ಮೇಲೆ ಹೇರಲಾಗಿದ್ದಿತು. ಅವರ ಅನುಭವ ಮತ್ತು ಅಧ್ಯಯನ ಎರಡೂ ಸೇರಿ ಅವರು ಅರ್ಥಶಾಸ್ತ್ರರಲ್ಲವಾದರೂ ಭಾರತದ ಬಡತನವನ್ನು ಅವರು ವ್ಯಾಖ್ಯಾನಿಸಿದ ರೀತಿ ಅಪಾರ ಮನ್ನಣೆ ಪಡೆದಿದೆ. ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಅವರು ಬರೆದ ಹಲವು ಲೇಖನಗಳು, ಭಾಷಣಗಳು ‘ಪಾವರ್ಟಿ ಆಂಡ್‌ ಅನ್‌ ಬ್ರಿಟಿಷ್ ‌ರೂಲ್‌ ಇನ್‌ ಇಂಡಿಯಾ’ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಬ್ರಿಟಿಷ್ ‌ಆಳ್ವಿಕೆಯನ್ನು ಅವರು ಆರ್ಥಿಕವಾಗಿ ವಿಶ್ಲೇಷಣೆ ಮಾಡುತ್ತಾ ಭಾರತದ ಬಡತನ ಮತ್ತು ಆರ್ಥಿಕ ಹಿಂದುಳಿಯುವಿಕೆ ಸ್ಥಳೀಯ ಪರಿಸ್ಥಿತಿಯಲ್ಲಿ ಅಂತರ್ಗವಾಗಿಲ್ಲ, ಆದರೆ ಭಾರತದಿಂದ ಸಂಪತ್ತು ಮತ್ತು ಬಂಡವಾಳವನ್ನು ಕೊಳ್ಳೆ ಹೊಡೆಯುತ್ತಿದ್ದ ವಸಾಹತುಶಾಹಿಯ ಆಡಳಿತವೇ ಅದಕ್ಕೆ ಕಾರಣವೆಂದು ಅವರು ತೋರಿಸಿಕೊಟ್ಟರು. ಇದೇ ಮುಂದೆ ಅವರ ‘ಸಂಪತ್ತಿನ ಸೋರಿಕೆ’ ಅಥವಾ ‘ಡ್ರೈನ್‌ ಆಫ್‌ ವೆಲ್ತ್‌’ ಸಿದ್ಧಾಂತವೆಂದು ಪ್ರಸಿದ್ಧವಾಗಿದೆ. ದಾದಾಬಾಯಿ ನವರೋಜಿಯವರು “ವಿದೇಶಿ ಬಂಡವಾಳವು ಭಾರತದ ಸಂಪನ್ಮೂಲಗಳನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸುತ್ತದೆ” ಎನ್ನುತ್ತಾರೆ. ಅದೇ ರೀತಿ ಹಿಂದೂಸ್ತಾನ್‌ ರಿವ್ಯೂ ಪತ್ರಿಕೆಯ ಸಂಪಾದಕೀಯದಲ್ಲಿ ವಿದೇಶಿ ಬಂಡವಾಳ ಪದ್ಧತಿಯು ಅಂತಾರಾಷ್ಟ್ರೀಯ ವಿನಾಶವನ್ನು ಸೂಚಿಸುತ್ತದ ಎಂದಿದೆ. ಇವರ ಸಮಕಾಲೀನರಾದ ನ್ಯಾಯವಾದಿ ಮಹದೇವ ಗೋವಿಂದ ರಾನಡೆಯವರು ಸಂಪೂರ್ಣ ಭಾರತೀಯ ಆಧುನಿಕ ಕೈಗಾರಿಕೆಗಳ ಬೆಳವಣಿಗೆಯ ಮೌಲ್ಯಗಳನ್ನು ಕುರಿತು ಯೋಚಿಸಿದ್ದರು. ದಾದಾಬಾಯಿ ನವರೋಜಿಯವರು ಗಮನಿಸಿದಂತೆ ಭಾರತೀಯರು ಜೀತಗಾರರಾಗಿದ್ದಾರೆ. ಅವರು ಅಮೆರಿಕನ್‌ ಗುಲಾಮರಿಗಿಂತ ಕೆಳಮಟ್ಟದಲ್ಲಿದ್ದಾರೆ. ಏಕೆಂದರೆ ಕೊನೆಯ ಪಕ್ಷ ಅಮೆರಿಕನ್ನರು ಗುಲಾಮರನ್ನು ಅವರ ಒಡೆಯರು ತಮ್ಮ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ಬ್ರಿಟಿಷ್ ‌ಆಡಳಿತವು ದಿನದಿನವೂ ಅಧಿಕವಾಗುತ್ತಿರುವ ವಿದೇಶಿ ಆಕ್ರಮಣ ಎಂದು ಅವರು ಘೋಷಿಸಿದರು. ಅದು ದೇಶವನ್ನು ನಿಧಾನವಾಗಿಯಾದರೂ ಸಂಪೂರ್ಣ ನಾಶ ಮಾಡುತ್ತಿದೆ ಎಂದು ತೋರಿಸಿಕೊಟ್ಟರು. ಭಾರತದ ಪರಂಪರಾಗತ ಕುಶಲ ಕೈಗಾರಿಕೆಗಳನ್ನು ನಾಶ ಮಾಡಿದುದಕ್ಕೆ ಬ್ರಿಟಿಷ್ ‌ಆರ್ಥಿಕ ನೀತಿಗಳನ್ನು ಮೊದಲಿನ ರಾಷ್ಟ್ರೀಯವಾದಿಗಳು ಕಟುವಾಗಿ ಟೀಕಿಸಿದರು. ಅವರಲ್ಲಿ ಅನೇಕರು ವಿದೇಶಿ ಬಂಡವಾಳವನ್ನು ಹೂಡುವುದಕ್ಕಾಗಿ ಭಾರತೀಯ ರೈಲ್ವೆ ಪ್ಲಾಂಟೇಶನ್‌ಗಳು ಮತ್ತು ಕೈಗಾರಿಕೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದನ್ನು ವಿರೋಧಿಸಿದರು. ಅದು ಭಾರತೀಯ ಬಂಡವಾಳಗಾರರನ್ನು ತುಳಿಯುವುದಕ್ಕೆ ಭಾರತದ ಅರ್ಥ ವ್ಯವಸ್ಥೆಯ ಮತ್ತು ರಾಜಕೀಯದ ಮೇಲೆ ಬ್ರಿಟಿಷ್ ‌ಹತೋಟಿಯನ್ನು ಹೆಚ್ಚು ಮಾಡುವುದಕ್ಕೆ ದಾರಿ ಮಾಡುತ್ತದೆ ಎಂದು ಅವರು ಭಾವಿಸಿದ್ದರು. ವಿದೇಶಿ ಬಂಡವಾಳವನ್ನು ಉಪಯೋಗಿಸುವುದು ಈ ಪೀಳಿಗೆಗೆ ಮಾತ್ರವಲ್ಲದೆ ಮುಂದೆ ಬರಲಿರುವ ತಲೆಮಾರಿನವರೆಗೂ ತೀವ್ರವಾದ ಆರ್ಥಿಕ ಹಾಗೂ ರಾಜಕೀಯ ಅಪಾಯವನ್ನು ಒಡ್ಡುತ್ತವೆ ಎಂಬುದು ರಾಷ್ಟ್ರೀಯವಾದಿಗಳ ನಂಬಿಕೆಯಾಗಿತ್ತು. ಬ್ರಿಟಿಷರು ತುಂಬಾ ಚಾಣಾಕ್ಷತೆಯಿಂದ ಭಾರತೀಯರನ್ನು ಕಾಫಿ, ರಬ್ಬರ್‌, ನೀಲಿ, ಚಹ ಮುಂತಾದ ತೋಟಗಳಲ್ಲಿಯೂ, ಕಲ್ಲಿದ್ದಲು ಗಣಿಗಳಲ್ಲಿಯೂ ಬಹು ಕಡಿಮೆ ವೇತನಕ್ಕೆ ದುಡಿಸಿಕೊಳ್ಳತೊಡಗಿದರು. ನವರೋಜಿಯವರು ಹೇಳುವಂತೆ “ಭಾರತೀಯರು ತಮ್ಮ ತಾಯ್ನಾಡಿನಲ್ಲಿಯೇ ಗುಲಾಮರಾಗಿದ್ದಾರೆ” ಹಾಗೆಯೇ ಭಾರತದಲ್ಲಿ ವಿದೇಶಿಯರು ತೊಡಗಿಸಿರುವ ಬಂಡವಾಳದ ಉದ್ದೇಶ ಭಾರತದ ಅಭಿವೃದ್ಧಿಗೋಸ್ಕರವಲ್ಲ, ಅದು ಅವರ ಸ್ವಪ್ರಯೋಜನಕ್ಕಾಗಿಯೇ ಇದೆ ಎಂದಿದ್ದಾರೆ.

ದಾದಾಬಾಯಿ ನವರೋಜಿಯವರು ಬ್ರಿಟಿಷರು ಭಾರತದ ಸಂಪತ್ತನ್ನು ಹೀರುತ್ತಿದ್ದಾರೆ ಎಂಬ ವಿಚಾರವನ್ನು ಸ್ಪಷ್ಟಪಡಿಸಲು ಅಪಾರ ಪ್ರಮಾಣದ ಅಂಕಿ ಸಂಖ್ಯೆಗಳನ್ನು ಸರ್ಕಾರಿ ಮೂಲಗಳಿಂದಲೇ ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ೧೮೭೦ರಲ್ಲಿಯೇ ಈ ಕಾರ್ಯ ಕೈಗೊಂಡ ನವರೋಜಿಯವರು ಆ ಕಾಲದ ಶಾಸನಾನುವರ್ತಿ ಮುಖಂಡರಲ್ಲೇ ಪ್ರಮುಖರು. ಈ ಮೂಲಕ ಬ್ರಿಟಿಷ್ ‌ಶೋಷಣೆಯ ನಾನಾಮುಖಗಳನ್ನು ಜನರಿಗೆ ತಿಳಿಯಪಡಿಸಿದರು. ಬ್ರಿಟಿಷ್ ‌ಶೋಷಣೆಯ ಭೀಕರ ರೂಪವನ್ನು ಚಿತ್ರಿಸುವ ಅವರ ಹೇಳಿಕೆಗಳನ್ನು ನೋಡಬಹುದು. ಭಾರತದ ಸಂಪತ್ತು ಇಲ್ಲಿಂದ ಹೊರಕ್ಕೆ ಹರಿದು ಹೋಗುತ್ತಿದೆ ಎಂಬುದು ಭಾರತದ ಬಂಡವಾಳ ಮತ್ತು ಸಂಪತ್ತಿನ ಬಹುಭಾಗವನ್ನು ಒಂದೇ ಸಮವಾಗಿ ಬ್ರಿಟನ್ನಿಗೆ ಕಳುಹಿಸಲಾಗುತ್ತಿತ್ತು. ಅದು ಸಾಲಗಳಿಗೆ ತೆತ್ತ ಬಡ್ಡಿಯ ರೂಪದಲ್ಲಿ, ರೈಲ್ವೆ ಬಂಡವಾಳದ ಬಡಡಿ ಹಾಗೂ ಇಲ್ಲಿ ೧೮೫೭ರ ಸಿಪಾಯಿ ದಂಗೆಗೆ ಮೊದಲು ಇದು ಭಾರತೀಯ ರಾಜಾದಾಯದ ಶೇ. ೧೦ ರಿಂದ ೧೩ ಇದ್ದುದು, ೧೯೦೦ರ ವೇಳೆಗೆ ಶೇ. ೨೪ಕ್ಕೆ, ೧೯೨೧ ರಲ್ಲಿ ಶೇ. ೪೦ಕ್ಕೆ ಏರಿ, ೧೯೩೮-೩೯ಕ್ಕೆ ಶೇ. ೩೬ಕ್ಕೆ ಬಂದಿತ್ತು. ಈ ಶೇಕಡಾವಾರಿನಿಂದ ಮೊತ್ತ ಎಷ್ಟು ಎಂಬುದನ್ನು ನೋಡಿದರೆ ೧೮೭೪-೭೫ರಲ್ಲಿ ೧ ಕೋಟಿ ೫ ಲಕ್ಷ ಪೌಂಡು ಇದ್ದುದು ೧೮೯೫ರಲ್ಲಿ ೨ ಕೋಟಿ ೮೮ ಲಕ್ಷಗಳನ್ನು ಮುಟ್ಟಿತು. ರೂಪಾಯಿ ಇದ್ದುದು ಅನಂತರ ೧೫ ರೂಪಾಯಿ ಎಂದು ಪರಿಗಣಿತವಾಯಿತು. ಬ್ರಿಟನ್‌, ಭಾರತವನ್ನು ಆರ್ಥಿಕವಾಗಿ ಸುಲಿಗೆ ಮಾಡುತ್ತಿರುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ಖಚಿತವಾದ ರೂಪದಲ್ಲಿ ಸಂಪತ್ತಿನ ಹರಿವು ತೋರಿಸುತ್ತಿತ್ತು. ಅದನ್ನು ವಿರೋಧಿಸಿ ದಾದಾಬಾಯಿ ನವರೋಜಿಯವರು ಸಾಮ್ರಾಜ್ಯಶಾಹಿ ಅರ್ಥನೀತಿಯ ತಿರುಳನ್ನು ಕೆದಕಿ ಪ್ರಶ್ನಿಸಿದರು. ಭಾರತದಲ್ಲಿ ಜನರ ಜೀವನಕ್ಕೆ ಆಸ್ತಿಪಾಸ್ತಿಗಳಿಗೆ ಭದ್ರತೆಯಿದೆ ಎನ್ನುವುದು ಕೇವಲ ಕಲ್ಪನೆ. ಭಾರತದ ಸಂಪತ್ತು ಸುರಕ್ಷಿತವಾಗಿಲ್ಲ, ನಿಜವಾಗಿಯೂ ಸುರಕ್ಷಿತವಾಗಿರುವುದು ಉತ್ತಮ ರೀತಿಯಲ್ಲಿ ಭದ್ರವಾಗಿರುವುದು ಇಂಗ್ಲೆಂಡು. ಒಂದು ವರ್ಷಕ್ಕೆ ೩,೦೦,೦೦೦ ಪೌಂಡು ಅಥವಾ ೪,೦೦,೦೦,೦೦೦ ಪೌಂಡುಗಳಂತೆ ಯಾವ ಯೋಜನೆಯೂ ಇಲ್ಲದೆ ಸುರಕ್ಷಿತವಾಗಿ ಇಲ್ಲಿಂದ ಕೊಂಡೊಯ್ಯುತ್ತಿದೆ. ಭಾರತದ ಲಕ್ಷಾಂತರ ಜನರಿಗೆ ಇಂದು ಜೀವನವೆಂದರೆ ಕೇವಲ ಅರೆ ಹೊಟ್ಟೆ ಅಥವಾ ಉಪವಾಸ ಅಥವಾ ಕ್ಷಾಮ ಮತ್ತು ರೋಗ. ತಾವು ಬಂದುದ್ದರಿಂದ ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿವಿಲ್‌ ಮತ್ತು ಮಿಲಿಟರಿ ಅಧಿಕಾರಿಗಳ ವೇತನಗಳ ಮತ್ತು ನಿವೃತ್ತಿ ವೇತನಗಳ ರೂಪದಲ್ಲಿ ಹರಿದು ಹೋಗುತ್ತಿದೆ ಎಂದು ತೋರಿಸಿಕೊಟ್ಟರು. ೧೮೩೮ರಲ್ಲಿ ಈ ವಿಚಾರವನ್ನು ಕುರಿತು ಅಧ್ಯಯನ ಮಾಡಿದ ಮಾಂಟೆಗೂಮರಿ ಮಾರ್ಟಿನ್‌ ಎಂಬಾತ ತನ್ನ ‘ಈಸ್ಟರ್ನ್‌ ಇಂಡಿಯಾ’ ಎಂಬ ಪುಸ್ತಕದ ಪೀಠಿಕೆಯಲ್ಲಿ ಬ್ರಿಟಿಷರು ಭಾರತದಿಂದ ಪ್ರತಿವರ್ಷ ಹೀರುತ್ತಿರುವ ಈ ೩೦ ಲಕ್ಷ ಪೌಂಡುಗಳು ಅಪಾರ ಮೊತ್ತವಾಗುತ್ತದೆ ಅಥವಾ ಸ್ವಲ್ಪ ಕಡಿಮೆ ದರದಲ್ಲಿ ೨೦ ಲಕ್ಷ ಪೌಂಡು ಐವತ್ತು ವರ್ಷಗಳಲ್ಲಿ ೮೪,೦೦,೦೦,೦೦೦ ಪೌಂಡುಗಳಷ್ಟು ಅಪಾರ ಮೊತ್ತವಾಗುತ್ತದೆ. ಒಬ್ಬ ಕೂಲಿಗಾರನ ದಿನಗೂಲಿ ಎರಡರಿಂದ ಮೂರು ಪೆನ್ನಿಯಷ್ಟಿರುವ ಭಾರತದ ಮೇಲೆ ಅದರ ಪರಿಣಾಮ ಎಷ್ಟು ಕಠೋರವಾಗಿರಬಹುದು ಎಂದು ಪ್ರಶ್ನಿಸಿದ್ದಾರೆ? ಕಾನೂನು ಮತ್ತು ಸುವ್ಯವಸ್ಥೆಗಳು ಸಮರ್ಪಕವಾಗಿ ನೆಲೆಗೊಂಡಿವೆ ಎಂಬುದನ್ನು ತೋರಿಸಲು ಬ್ರಿಟಿಷರು ಪ್ರಯತ್ನಿಸಿದರು. ದಾದಾಬಾಯಿ ನವರೋಜಿಯವರ ಒಂದು ಹೇಳಿಕೆಯಿದೆ : ‘ದಯವಿಟ್ಟು ಬೆನ್ನ ಮೇಲೆ ಹೊಡೆ, ಹೊಟ್ಟೆಯ ಮೇಲೆ ಬೇಡ’ ಎಂಬುದಾಗಿ. ದೇಶೀಯ ದಬ್ಬಾಳಿಕೆಯಲ್ಲಿ ಜನರು ಆಗಾಗ ಬೆನ್ನ ಮೇಲೆ ವಲ್ಪ ಮಟ್ಟಿನ ಹೊಡೆತವನ್ನು ಅನುಭವಿಸುತ್ತಿದ್ದರೂ ತಾವು ಉತ್ಪಾದಿಸಿದುದನ್ನು ತಾವೇ ಇಟ್ಟುಕೊಂಡು ತಿನ್ನುತ್ತಾರೆ. ಬ್ರಿಟಿಷ್ ‌ಇಂಡಿಯನ್‌ ದಬ್ಬಾಳಿಕೆಯಲ್ಲಾದರೂ ವ್ಯಕ್ತಿ ಶಾಂತಿಯಿಂದಿದ್ದಾನೆ. ಅವನಿಗೆ ಹಿಂಸೆಯಲ್ಲಿ ಅವನ ಜೀವನಾಧಾರ ಕಣ್ಣಿಗೆ ಕಾಣದಂತೆ ಶಾಂತಿಯುತವಾಗಿ ಸೂಕ್ಷ್ಮವಾಗಿ ಕೊಚ್ಚಿ ಹೋಗುತ್ತಿದೆ. ಅವನು ಶಾಂತಿಯಿಂದಲೇ ಉಪವಾಸ ಮಾಡುತ್ತಾನೆ ಮತ್ತು ಶಾಂತಿಯಿಂದಲೇ ನಾಶವಾಗುತ್ತಿದ್ದಾನೆ. ಕಾನೂನು ಸುವ್ಯವಸ್ಥೆ ಮಾತ್ರ ಅವನ ಪಾಲಿಗಿದೆ ಎಂದಿದ್ದಾರೆ. ಬ್ರಿಟಿಷ್ ‌ವಸಾಹತುಶಾಹಿ ಆಡಳಿತವು ಭಾರತದ ಸಂಪತ್ತನ್ನು ಸುಲಿಗೆ ಮಾಡಲು ಹಲವಾರು ರೀತಿಯ ಮಾರ್ಗೋಪಾಯಗಳನ್ನು ಕಂಡುಕೊಂಡಿತ್ತು. ಅವುಗಳಲ್ಲಿ ಕೆಲವನ್ನು ಇಲ್ಲಿ ಚರ್ಚಿಸಲಾಗಿದೆ.

. ಸಹಾಯಕ ಸೈನ್ಯ ಪದ್ಧತಿ

ಈ ಪದ್ಧತಿಯನ್ನು ರಾಬರ್ಟ್‌ಕ್ಲೈವ್‌ನ ಕಾಲದಿಂದ ಅನಂತರದ ಎಲ್ಲ ಗವರ್ನರ್‌ ಮತ್ತು ಗವರ್ನರ್‌ ಜನರಲ್‌ಗಳು ಭಾರತದಲ್ಲಿ ಒಂದಲ್ಲ ಒಂದು ರೂಪದಲ್ಲಿ ಬಳಸಿದ್ದಾರೆ. ಸಹಾಯಕ ಸೈನ್ಯ ಪದ್ಧತಿಯ ಪ್ರಕಾರ ಬ್ರಿಟಿಷ್ ‌ಸೈನ್ಯದ ಬಾಬತ್ತಿಗಾಗಿ ಈ ಕರಾರಿಗೆ ಒಳಗಾದ ರಾಜ್ಯಗಳು ತಮ್ಮ ತಮ್ಮ ರಾಜ್ಯದ ಒಂದು ಭಾಗ ಪ್ರದೇಶವನ್ನು ಕಂಪನಿಗೆ ವಹಿಸಿಕೊಡಬೇಕು. ಅದಕ್ಕೆ ಪ್ರತಿಯಾಗಿ ಅಲ್ಲಿನ ಶಾಂತಿ ಮತ್ತು ಸುಭದ್ರತೆಯ ಜವಾಬ್ದರಿ ಬ್ರಿಟಿಷ್ ‌ಕಂಪನಿಗೆ ಸೇರಿದುದು. ಅದಕ್ಕಾಗಿ ಕಂಪನಿ ತನ್ನ ಸೈನ್ಯವನ್ನು ಅಂತಹ ರಾಜ್ಯಗಳಲ್ಲಿ ನೆಲೆಗೊಳಿಸುವುದು. ಬ್ರಿಟಿಷ್ ‌ಆಡಳಿತಾವಧಿಯಲ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ೧೭೯೯ರಲ್ಲಿ ಮೈಸೂರಿನ ಒಡೆಯರನ್ನು ಪುನಃ ಅಧಿಕಾರಕ್ಕೆ ತಂದಾಗ ವಾರ್ಷಿಕ ೨೪ ಲಕ್ಷ ರೂ. ಸಹಾಯಕ ಸೈನ್ಯ ಪದ್ಧತಿಯ ಪೊಗದಿ ಕೊಡಬೇಕಾಗಿತ್ತು. ಅಂದಿನ ಮೈಸೂರು ಸಂಸ್ಥಾನದ ಒಟ್ಟು ಆದಾಯ ಒಂದು ಕೋಟಿಯನ್ನೂ ಮುಟ್ಟುತ್ತಿರಲಿಲ್ಲ. ಹೀಗಾಗಿ ದೇಶೀಯ ಸಂಸ್ಥಾನಗಳು ತಮ್ಮ ಆದಾಯವನ್ನು ಮೀರಿ ಬ್ರಿಟಿಷರಿಗೆ ಕಪ್ಪಕಾಣಿಕೆ ಕೊಡುತ್ತಿದ್ದವು. ಇದು ಆ ಸ್ಥಾನಗಳ ಅರ್ಥ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಿತ್ತು. ೧೮೦೨ರಲ್ಲಿ ೨ನೆಯ ಬಾಜೀರಾಯ ಆರು ಸಾವಿರ ಬ್ರಿಟಿಷ್ ‌ಸೇನೆಯನ್ನು ಇಟ್ಟುಕೊಳ್ಳಲು ಒಪ್ಪಿ, ವರ್ಷಕ್ಕೆ ೨೬ ಲಕ್ಷ ರೂಪಾಯಿ ಆದಾಯ ನೀಡುವ ಪ್ರದೇಶಗಳನ್ನು ವಹಿಸಿಕೊಟ್ಟಿದ್ದನು.

. ಹೋಂ ಚಾರ್ಜಸ್

ಹೋಂ ಚಾರ್ಜಸ್‌ ಎಂಬುದರಲ್ಲಿ ಭಾರತೀಯ ರಾಜ್ಯಾದಯದ ಒಂದು ಪಾಲನ್ನು ಬ್ರಿಟನ್‌ ವೆಚ್ಚ ಮಾಡುತ್ತಿತ್ತು. ಇದರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಮೂಲಧನದ ಮೇಲಿನ ಬಡ್ಡಿಯಾಗಿ ೬. ೩ ಲಕ್ಷ ಪೌಂಡ್‌ಗಳೂ ಸೇರಿತ್ತು. ಕಂಪನಿಯ ಇತರ ಸಲಗಳನ್ನು ಭಾರತ ಸರ್ಕಾರದ ಸಾಲವಾಗಿ ಪರಿವರ್ತಿಸಿದ ಮೇಲೆ ಅವರ ಬಡ್ಡಿಗಳು ಇದಕ್ಕೆ ಸೇರಿದವು. ೧೮೭೪ರಲ್ಲಿ ಕಂಪನಿಯ ಮೂಲಧನದ ಮರುಪಾವತಿಗಾಗಿ ಎತ್ತಿದ ಸಾಲ ೪೫ ಲಕ್ಷ ಪೌಂಡ್‌ಗಳ ಮೇಲಿನ ಬಡ್ಡಿ ವ್ಯವಹಾರದ ಜೊತೆಗೆ ರೈಲ್ವೆ ಹಾಗೂ ನೀರಾವರಿಗಾಗಿ ಎತ್ತಿದ ಸಾಲಗಳ ಬಡ್ಡಿ, ಬ್ರಿಟಿಷ್ ‌ಅಧಿಕಾರಿಗಳ ನಿವೃತ್ತಿ ವೇತನ, ರಜಾ ಸಂಬಳ ಇತ್ಯಾದಿ ಅದೇ ರೀತಿ ಮಿಲಿಟರಿ ಅಧಿಕಾರಿಗಳದ್ದು ಭಾರತದಲ್ಲಿ ಬಳಸಲು ಇಂಗ್ಲೆಂಡಿನಲ್ಲಿ ಕೊಂಡ ವಸ್ತುಗಳ ಬೆಲೆ ಹೀಗೆ ಹಲವು ಬಾಬ್ತುಗಳನ್ನು ಕೂಡಿಸಲಾಗಿತ್ತು. ೧೮೫೮ರಲ್ಲಿ ಕಂಪನಿ ಭಾರತದಿಂದ ಪಡೆಯುತ್ತಿದ್ದ ಕಪ್ಪ ೧೫ ಕೋಟಿ ಪೌಂಡ್‌. ಇದರ ಜೊತೆಗ ತಾನು ಕೈಗೊಂಡ ಎಲ್ಲ ಯುದ್ಧಗಳ ವೆಚ್ಚವನ್ನು ಭಾರತೀಯ ರಾಜ್ಯಾದಾಯದಿಂದ ಸರಿದೂಗಿಸುತ್ತಿತ್ತು.

. ಕೃಷಿ

ಭಾರತದಲ್ಲಿ ಬ್ರಿಟಿಷ್ ‌ಆಳಿತದ ಪ್ರಾರಂಭಿಕ ಹಂತದಲ್ಲಿ ಭಾರತದ ಹತ್ತಿ ಬಟ್ಟೆಯ ಕೈಗಾರಿಕೆಯ ನಾಶ, ಕೈಗಾರಿಕೆಯಿಂದ ವ್ಯವಸಾಯಕ್ಕೆ ಕಾರ್ಮಿಕ ವರ್ಗದ ಪರಿವರ್ತನೆ, ವ್ಯವಸಾಯದಲ್ಲಿಯೇ ಆಹಾರ ಧಾನ್ಯಕ್ಕಿಂತ ವಾಣಿಜ್ಯ ಬೆಳೆಗಳನ್ನು ಬೆಳಯುವ ಒಲವು ಇನ್ನಿತರ ಹಲವು ಬದಲಾವಣೆಗಳು ಕೃಷಿ ಕ್ಷೇತ್ರದಲ್ಲಿ ಮೂಡಿಬಂದವು. ಭೂಕಂದಾಯವನ್ನು ನಗದು ರೂಪದಲ್ಲಿ ಕೊಡಬೇಕಾಗಿ ಬಂದುದರಿಂದ ರೈತರು ತಮ್ಮ ವಾರ್ಷಿಕ ಬೆಳೆಯಲ್ಲಿ ಗಣನೀಯ ಭಾಗವನ್ನು ಭೂಕಂದಾಯ ಕೊಡಲು ಹಣ ಪಡೆಯುವ ಉದ್ದೇಶದಿಂದ ತಾವು ಬೆಳೆದ ಆಹಾರ ಧಾನ್ಯಗಳನ್ನು ಮಾರಬೇಕಾಗಿತ್ತು. ಇಂತಹ ಬ್ರಿಟಿಷ್ ‌ನೀತಿಯಿಂದಗಿ ಕೃಷಿಕರು ಅನೇಕ ವೇಳೆ ಕಂದಾಯ ಕಟ್ಟುವುದಕ್ಕೊ ತನ್ನ ನಿತ್ಯ ಜೀವನವನ್ನು ನಡೆಸುವುದಕ್ಕೂ ಸಾಹುಕಾರನಿಂದ ಸಾಲ ಪಡೆಯಬೇಕಾಗಿತ್ತು. ವಾಣಿಜ್ಯ ವರ್ಗಗಳು ದೊಡ್ಡ ದೊಡ್ಡ ಕೈಗಾರಿಕಾ ಉದ್ಯಮವನ್ನು ಪ್ರಾರಂಭಿಸಲು ಸಾಕಷ್ಟು ಸಂಪನ್ಮೂಲಗಳನ್ನಾಗಲಿ ಅಥವಾ ಧೈರ್ಯೋತ್ಸಾಹಗಳನ್ನಾಗಲಿ ಹೊಂದಿರಲಿಲ್ಲ. ವ್ಯಾಪಾರಿಗಳು ತಮ್ಮ ಚಟುವಟಿಕೆಗಳನ್ನು ಸ್ಥಳೀಯ ವ್ಯಾಪಾರ, ದಲ್ಲಾಳಿ ಕೆಲಸ ಮಾಡುವುದು, ಚಿಲ್ಲರೆ ಅಂಗಡಿ ತೆರೆಯುವುದು ಮತ್ತು ದೇಶೀಯ ವ್ಯವಹಾರ ಇವುಗಳಿಗೆ ಮಾತ್ರ ಸೀಮಿತಗೊಂಡಿದ್ದರು. ಬ್ರಿಟಿಷರು ಆರಂಭದಲ್ಲಿ ಈ ದೇಶವನ್ನು ತಮ್ಮ ಅನುಕೂಲಕ್ಕಾಗಿ ನಿರ್ದಯತೆಯಿಂದ ಶೋಷಿಸಿದರು.

ಕಂಪನಿಯು ತನ್ನ ಆಡಳಿತದ ಪ್ರದೇಶಗಳಲ್ಲಿ ಜಾರಿಗೆ ತಂದಿದ್ದ ಭೂ ಕಂದಾಯ ಪದ್ಧತಿಗಳಲ್ಲಿ ಯಾ ವಿಧವಾದ ಪದ್ಧತಿಯೇ ಆಗಲಿ ಗ್ರಾಮಾಂತರ ಪ್ರದೇಶದ ಕೃಷಿ ವ್ಯವಸ್ಥೆಯಲ್ಲಿ ಕ್ರಾಂತಿಯುಂಟಾಗಿ ಕಂಪನಿ ಆಡಳಿತದ ಕೊನೆಯ ಅವಧಿಯ ಹೊತ್ತಿಗಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ದೇಶದ ಉತ್ಪನ್ನಕ್ಕೇನೂ ಸಹಾಯಕವಾಗದೆ ಬಹುತೇಕ ಸುಲಿಗೆಯ ಮನೋಭಾವದ ಒಂದು ಮಧ್ಯಸ್ಥಿಕೆ ಪ್ರಭಾವ ಮಡಬಹುದಾದ ಜನತೆಯ ಗುಂಪು ಉಗಮವಾಗಿತ್ತು. ಈ ಹೊಸ ವರ್ಗವು ವ್ಯವಸಾಯಿಕ ಸಾಲದ ಮೇಲಿನ ಬಡ್ಡಿಯಿಂದಲೂ ಮತ್ತು ಭೂಮಿಯಿಂದ ಸಲ್ಲುತ್ತಿದ್ದ ಗುತ್ತಿಗೆಯಿಂದಲೂ ಜೀವನ ಮಾಡುತ್ತಿದ್ದರೂ ಕೂಡ ಅದು ಕೃಷಿಯ ಗುಣಮಟ್ಟವನ್ನು ಹೆಚ್ಚಿಸಲು ಅಥವಾ ಸುಧಾರಿಸಲು ಯಾವ ರೀತಿಯ ಅನುಕೂಲವೂ ಆಗಿರಲಿಲ್ಲ. ಬ್ರಿಟಿಷ್ ‌ಆಡಳಿತದಲ್ಲಿ ಕೃಷಿಕನಿಗೆ ಭೂ ಮಾಲೀಕನ ಮತ್ತು ಸಾಲ ಕೊಟ್ಟ ಸಾಹುಕಾರನ ದಬ್ಬಾಳಿಕೆಯಿಂದ ಯಾವ ವಿಧವಾದ ರಕ್ಷಣೆಯೂ ದೊರಕುತ್ತಿರಲಿಲ್ಲ. ನೀಲಿ, ಚಹ, ಕಾಫಿ ತೋಟಗಳಲ್ಲಿಯೂ ಸಹ ಸ್ವಲ್ಪ ಭಾರತೀಯ ಬಂಡವಾಳವು ಹೂಡಿತ್ತಾದರೂ ವಿದೇಶೀಯರ ಮಾಲೀಕತ್ವ ಮತ್ತು ಮೇಲ್ವಿಚಾರಣೆಯಲ್ಲಿದ್ದವು.

ರಮೇಶ್‌ ಚಂದ್ರ ದತ್ತರು ಬ್ರಿಟಿಷರ ಶೋಷಣೆಯ ಬಗ್ಗೆ ಬರೆಯುತ್ತ ಬ್ರಿಟನ್‌ ಭಾರತದ ಆಹಾರ ಧಾನ್ಯಗಳನ್ನು ರಫ್ತು ಮಾಡುವುದರಿಂದ ದೇಶದಲ್ಲಿ ಅಭಾವವು ಪ್ರಾಪ್ತವಾಗಿ ಬೆಲೆ ಏರಿತು ಎಂದು ಹೇಳಿದರು. ಈ ಕ್ರಮದ ಮುನ್ನಡೆಯನ್ನು ನೋಡುವುದು ನಮಗೇನು ಜ್ಞಾನದಾಯಕವಾಗದೆ, ಸ್ವಲ್ಪ ಯಾತನದಾಯಕವಾಗಿದೆ ಎಂದು ಬರೆದರು. ಪ್ರತಿವರ್ಷವೂ ಬ್ರಿಟನ್ನಿಗೆ ಹೋಗುತ್ತಿರುವ ಸುಲಿಗೆ ರೂಪದ ಈ ಹಣವನ್ನು ಭಾರತದ ಆದಾಯದಿಂದ ನೇರವಾಗಿ ಪಡೆಯಲಾಗುತ್ತಿದೆ. ಭಾರತದ ಆದಾಯದ ಬಹುದೊಡ್ಡ ಭಾಗವು ಭೂಕಂದಾಯ ರೂಪದಿಂದ ಭೂಮಿಯಿಂದಲೇ ಪಡೆಯಲಾಗುತ್ತಿದೆ. ಈ ಭೂ ಕಂದಾಯವನ್ನು ದಕ್ಷಿಣ ಭಾರತದಲ್ಲಿ ನೇರವಾಗಿ ರೈತರಿಂದಲೂ, ಉತ್ತರ ಭಾರತದ್ಲಿ ಭೂಮಾಲೀಕರಿಂದಲೂ ವಸೂಲಿ ಮಾಡಲಾಗುತ್ತಿದೆ. ಇದನ್ನೆಲ್ಲ ಸಾಗುವಳಿ ಮಾಡುವ ರೈತರು ತಮ್ಮ ಭೂಕಂದಾಯ ಅಥವಾ ಗೇಣಿ ಮೊಬಲಗನ್ನು ಕಡಿಮೆ ಭೂಮಿಯಲ್ಲಿ ಬೆಳೆದ ಉತ್ಪನ್ನಗಳ ಒಂದು ಡೊಡ್ಡ ಭಾಗವನ್ನು ಮಾರಿ ಕೊಡುತ್ತಿದ್ದರು. ಅವರು ತಮ್ಮ ಸ್ವಂತ ಉಪಯೋಗಕ್ಕೆ ಸಾಕಷ್ಟನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿ ರೈತರು ಒತ್ತಾಯದಿಂದ ಮಾರಲೇಬೇಕಾಗಿ ಬಂದ ಉತ್ಪನ್ನಗಳನ್ನು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಕೊಳ್ಳುತ್ತಿದ್ದರು. ಹೀಗೆ ಬ್ರಿಟಿಷರೇ ಇನ್ನೊಂದು ರೀತಿಯಲ್ಲಿ ಮಧ್ಯವರ್ತಿಗಳಿಂದ ಶೋಷಣೆಗೆ ಪ್ರಚೋದನೆ ನೀಡುತ್ತಿದ್ದರು.

. ಕುಶಲ ಕಸಬುದಾರರು

ಭಾರತದಲ್ಲಿ ಗ್ರಾಮೀಣ ಕೈಗಾರಿಕೆಳಿಗೂ ಕೃಷಿಗೂ ಒಂದು ತೆರನಾದ ಸಂಬಂಧ ಬಹುಕಾಲದಿಂದ ನಡೆದು ಬಂದಿತ್ತು. ಆದರೆ ಗೃಹ ಕೈಗಾರಿಕೆಗಳ ಉದ್ಯಮಗಳು ಸೇರಿದಂತೆ ಸ್ಥಳೀಯ ಉತ್ಪಾದನಾ ವಿಧಾನ ನಶಿಸಿದುದರಿಂದಾಗಿ ಅಥವಾ ತೀವ್ರವಾದ ಏರುಪೇರನ್ನು ಕಂಡುದರಿಂದಾಗಿ ಆ ಸಂಬಂಧ ಕಡಿದು ಹೋಗುತ್ತ ಬಂದಿತು. ಲಕ್ಷಾಂತರ ಬೇಸಾಯಗಾರರಿಗೆ ಅವರ ನೆಲವನ್ನು ಇಲ್ಲವಾಗಿಸಿತ್ತು. ಈ ಎರಡು ಕಾರಣಗಳೂ ಕೂಡಿ ಒಂದು ಬಗೆಯ ಅನಿರ್ಬಂಧಿತ ಕೂಲಿಗಾರ ವರ್ಗ ಹೆಚ್ಚುವುದಕ್ಕೆ ದಾರಿ ಮಾಡಿದವು. ಈ ಕೂಲಿಗಾರರಿಗೆ ದಿನದ ಸಂಬಳದ ಆಧಾರದ ಮೇಲೆ ಕೆಲಸ ಮಾಡುವುದನ್ನು ಬಿಟ್ಟರೆ ಬೇರೆ ಜೀವನೋಪಾಯವೇ ಇರಲಿಲ್ಲ. ಗ್ರಾಮದಲ್ಲಿ ಬಹುತೇಕ ಕೃಷಿಕರು ಅವರ ಜೀವನದ ಎಲ್ಲ ಅಗತ್ಯವನ್ನು ಪೂರೈಸುತ್ತ ಜೀವನ ಸಾಗಿಸುತ್ತಿದ್ದ ಕಸುಬುಗಾರರು, ಸೇಗಾರರು, ಆಡಳಿತಗಾರರು ಎಲ್ಲರೂ ಒಂದಾಗಿ ಬಾಳುತ್ತಿದ್ದರು. ನೇಗಿಲು, ಬಂಡಿ ಮುಂತಾದ ಮರಗೆಲಸಕ್ಕೆ ಬಡಗಿ, ಮಡಕೆ ಮಾಡುವ ಕುಂಬಾರ, ಅಲಗು ಮಚ್ಚು ಮುಂತಾದ ಕಬ್ಬಿಣದ ಕೆಲಸ ಮಾಡುವ ಕಮ್ಮಾರ, ಚಿನ್ನ, ಬೆಳ್ಳಿ ಒಡವೆ ಮಾಡುವ ಅಕ್ಕಸಾಲಿಗ, ಚರ್ಮದ ಕೆಲಸಕ್ಕೆ ಚರ್ಮಗಾರ ಇವರು ಕಸುಬುಗಾರರು. ಅಗಸ, ನಾಯಿಂದ, ಪಾಠ ಹೇಳುವ ಉಪಾಧ್ಯಾಯ, ಮಳೆ ಲಗ್ನ ಇತ್ಯಾದಿ ಜ್ಯೋತಿಷ್ಯ ವಿಚಾರ ತಿಳಿಸಲು ಜೋಯಿಸ ಸೇವೆಗಾರರು, ಪಟೇಲ, ಶ್ಯಾನುಭೋಗ, ತೋಟಿ, ತಳವಾರ, ನೀರುಗಂಟಿ ಆಡಳಿತಗಾರರು, ಹಲವೆಡೆ ಒಬ್ಬ ಹಲವು ವೃತ್ತಿಗಳನ್ನು ನೋಡಿಕೊಳ್ಳುತ್ತಿದ್ದ, ಮತ್ತೆ ಹಲವೆಡೆ ಒಬ್ಬ ಕಸಬುಗಾರ ಅಥವಾ ಸೇವೆಗಾರ ಹಲವು ಗ್ರಾಮಗಳಿಗೆ ಸೇರಿದವನು. ಕೆಲವು ಗ್ರಾಮಗಳಲ್ಲಿ ನೇಯ್ಗೆಯನೂ ಇರುತ್ತಿದ್ದ. ರೈತ ಕೃಷಿಯೊಂದಿಗೆ ಪಶುಪಾಲನೆ ನಡೆಸುತ್ತಿದ್ದ. ರೈತ ಹೆಂಗಸರು ಮತ್ತು ಇತರ ಹೆಂಗಸರು ಹತ್ತಿಯ ಮೂಲು ತೆಗೆಯುತ್ತಿದ್ದರು. ಈ ನೂಲು ಸಂತೆಯಲ್ಲಿ ಮಾರಾಟವಾಗುತ್ತಿತ್ತು ಅಥವಾ ಗ್ರಾಮದ ನೇಕಾರರಿಂದ ನಿರ್ದಿಷ್ಟ ಕೂಲಿ ದರದಲ್ಲಿ ಬಟ್ಟೆಯಾಗುತ್ತಿತ್ತು.

ಬ್ರಿಟಿಷ್ ‌ಆಳ್ವಿಕೆಯಿಂದುಂಟಾದ ಅತ್ಯಂತ ಮುಖ್ಯವಾದ ಪರಿಣಾಮಗಳಲ್ಲಿ ಒಂದು ಅಧಿಕವಾಗಿ ನಗರಗಳಲ್ಲೂ ಗ್ರಾಮಗಳಲ್ಲೂ ಇದ್ದ ಗೃಹ ಕೈಗಾರಿಕೆಗಳ ಅವನತಿ ಮತ್ತು ವಿನಾಶ. ಭಾರತದ ಮಾರುಕಟ್ಟೆಗೂ ಅಗ್ಗವಾದ ಯಂತ್ರ ನಿರ್ಮಿತವಾದ ವಸ್ತುಗಳನ್ನು ಭಾರೀ ಪ್ರಮಾಣದಲ್ಲಿ ಹರಿಯಿಸಲಾಯಿತು. ಅದರ ಹಿಂದೆಯೇ ಸ್ಥಳೀಯ ಕೈಕಸಬುಗಳು ಕ್ಷಯಿಸಿದವು. ಸ್ಥಳೀಯ ಕೈಗಾರಿಕೆಗಳ ನಾಶ ಮತ್ತು ಇತರ ಕ್ಷೇತ್ರಗಳಲ್ಲಿ ವೃತ್ತಿಗಳ ಅಭಾವದಿಂದಾಗಿ ಲಕ್ಷಾಂತರ ಕಸುಬುದಾರರು ವ್ಯವಸಾಯ ವೃತ್ತಿಗೆ ಮುತ್ತಿಕೊಂಡರು. ನಂತರ ಭೂಮಿಯನ್ನು ಅವಲಂಬಿಸಿದ ಜನರ ಒತ್ತಡ ಹೆಚ್ಚಾಯಿತು.

. ವ್ಯಾಪಾರಲೇವಾದೇವಿ

೧೭-೧೮ನೆಯ ಶತಮಾನದ ಭಾರತದ ಅರ್ಥವ್ಯವಸ್ಥೆಯಲ್ಲಿ ಲೇವಾದೇವಿಗಾರರು ಪ್ರಮುಖ ಪಾತ್ರ ವಹಿಸಿದರು. ವ್ಯಾಪಾರದ ಜೊತೆಗೆ ಸೈನ್ಯಕ್ಕೆ ಸರಕು ಸಾಮಗ್ರಿಗಳ ಸರಬರಾಜನ್ನು ವಹಿಸಿಕೊಳ್ಳುವ ಅವಕಾಶಗಳು ಹೆಚ್ಚು ಹೆಚ್ಚಾಗಿ ದೊರೆತು ಹಣವಂತರು ಬಲಿಷ್ಠರಾದರು. ಇಂತಹ ಶ್ರೀಮಂತರು ಕಂದಾಯ ತೆರಿಗೆಗಳನ್ನು ಮುಂಗಡವಾಗಿ ತಾವೇ ಒಟ್ಟಾಗಿ ನೀಡಿ ವಸುಲಿಯ ಹಕ್ಕನ್ನು ಪಡೆಯುತ್ತಿದ್ದರು. ಬಂಗಾಳದಲ್ಲಿ ಜಗತ್ ಸೇಠ್ ಕುಟುಂಬವು ನಾಣ್ಯ ಮುದ್ರಿಸುವ ಟಂಕಸಾಲೆಯನ್ನು ನಡೆಸುತ್ತಿತ್ತು . ೧೮ನೆಯ ಶತಮಾನದ ಮೊದಲ ಭಾಗದಲ್ಲಿ ಸೂರತ್ ನ ಅಬ್ದುಲ್ ಗಪೂರ್ ಎಂಬ ವರ್ತಕ ಈಸ್ಟ್ ಇಂಡಿಯಾ ಕಂಪನಿಗೆ ಸರಿಸಮವಾಗಿ ವಿದೇಶಿ ವ್ಯಾಪಾರ ನಡೆಸುತ್ತಿದ್ದ. ಅವನ ೨೦ ಹಡಗುಗಳು ಅರಬ್ ದೇಶಗಳೊಂದಿಗೆ ವ್ಯಾಪಾರ ನಡೆಸುತ್ತಿದ್ದವು ಗುಜರಾತಿನ ವರ್ತಕರು ತಮಿಳುನಾಡಿನ ವರ್ತಕರು ಆಗ್ನೇಯ ಏಷ್ಯಾ ದೇಶಗಳೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಕೃಷಿ ಉತ್ಪಾದನೆಯಲ್ಲಿ ಆದ ಬದಲಾವಣೆಗಳಿಂದಾಗಿ ರೈತನ ತೀವ್ರ ಬಡತನ ಮತ್ತೆ ಸಾಲಕ್ಕಾಗಿ ಸಾಹುಕಾರನ ಬಳಿಗೆ ಹೋಗುವಂತೆ ಮಾಡಿತ್ತು. ಬರಗಾಲ, ಪ್ರವಾಹ, ಕ್ಷಾಮ, ಮುಂತಾದ ಸಮಯಗಳಲ್ಲಿ ಸಾಹುಕಾರನ ಆಶ್ರಯ ಪಡೆಯದೆ ಅವನಿಗೆ ಬೇರೆ ಮಾರ್ಗವಿರಲಿಲ್ಲ. ಹೊಸದಾಗಿ ಜಾರಿಗೆ ಬಂದ ನ್ಯಾಯಾಂಗ ವ್ಯವಸ್ಥೆಯನ್ನು ಆಡಳಿತ ಯಂತ್ರವನ್ನು ತನಗೆ ತಕ್ಕಂತೆ ಬಳಸಿಕೊಳ್ಳುವಲ್ಲಿ ಈ ಸಾಹುಕಾರರು ಪ್ರಮುಖರಾಗಿದ್ದರು. ಈ ಮಧ್ಯವರ್ತಿಗಳಿಗೆ ಸರಕಾರವು ಸಹಾಯ ಮಾಡುತ್ತಿತ್ತು. ಏಕೆಂದರೆ ಅವರಿಲ್ಲದೆ, ಕಂದಾಯವನ್ನು ಕಾಲಕ್ಕೆ ಸರಿಯಾಗಿ ಸಂಗ್ರಹಿಸುವುದಾಗಿ, ಕೃಷಿ ವಸ್ತುಗಳನ್ನು ರಫ್ತು ಮಾಡಲು ಬಂದರುಗಳಿಗೆ ತರುವುದಕ್ಕಾಗಲಿ ಸಾಧ್ಯವೇ ಇರಲಿಲ್ಲ. ಬೆಳೆದ ವಾಣಿಜ್ಯ ಬೆಳೆಗಳನ್ನು ಮೊದಲನೆಯ ಸಾರಿ ರಫ್ತಿಗಾಗಿ ಸಂಗ್ರಹಿಸಿ ತರುವುದಕ್ಕೂ ಕೂಡ ಸರಕಾರವೂ ಸಾಹುಕಾರನನ್ನು ಅವಲಂಬಿಸಿತ್ತು. ಆದ್ದರಿಂದ ಕಾಲಕ್ರಮದಲ್ಲಿ ಗ್ರಾಮೀಣ ಅರ್ಥ ವ್ಯವಸ್ಥೆಯಲ್ಲಿ ಸಾಹುಕಾರನು ಪ್ರಧಾನವಾದ ಸ್ಥಾನವನ್ನು ವಹಿಸಲು ಪ್ರಾರಂಭಿಸಿದುದರಲ್ಲಿ ಆಶ್ವರ್ಯವೇನಿಲ್ಲ. ಜಮೀನ್ದಾರಿ, ರೈತ್ವಾರಿ ಪದ್ಧತಿಗಳೆರಡರಲ್ಲಿಯೂ ಭೂಮಿಯು ಭಾರಿ ಪ್ರಮಾಣದಲ್ಲಿ ವಾಸ್ತವವಾಗಿ ಕೃಷಿ ಮಾಡುತ್ತಿದ್ದ ರೈತರ ಕೈಗಳಿಂದ ಸಾಹುಕಾರರು, ವರ್ತಕರು, ಅಧಿಕಾರಿಗಳು ಮತ್ತು ಶ್ರೀಮಂತ ಕೈಗೆ ವರ್ಗಾವಣೆ ಹೊಂದಿತು. ಇದರಿಂದ ರಾಷ್ಟ್ರದಾದ್ಯಂತ ಭೂಸ್ವಾಮ್ಯವು ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ.

. ಕೈಗಾರಿಕೆ

ಭಾರತದಲ್ಲಿ ಕೈಗಾರಿಕೆಗಳು ವಿದೇಶಿ ಬಂಡವಾಳ ಹಾಗೂ ವಿದೇಶಿ ಮಾಲೀಕತ್ವದಲ್ಲಿ ಪ್ರಾರಂಭವಾದವು. ೧೯ನೆಯ ಶತಮಾನದ ಕೊನೆಯವರೆಗೂ ಕೈಗಾರಿಕೆಗಳಲ್ಲಿ ಭಾರತೀಯ ಬಂಡವಾಳವು ಪಾಲುಗೊಳ್ಳಲಿಲ್ಲ. ಗಣಿಗಳೂ ಕೂಡ ಸಂಪೂರ್ಣವಾಗಿ ವಿದೇಶೀಯರ ಕೈಯಲ್ಲಿದ್ದವು. ನೀಲಿ, ಚಹ ಮತ್ತು ಕಾಫಿ ತೋಟಗಳು, ಕಲ್ಲಿದ್ದಲು, ಬಂಗಾರ, ಮ್ಯಾಂಗನೀಸ್‌ ಗಣಿ ಉದ್ಯಮ ಮತ್ತು ಗೋಣಿನಾರಿನ ಸರಕುಗಳ ಕೈಗಾರಿಕೆ ಈ ಎಲ್ಲ ಕೈಗಾರಿಕೆಗಳೂ ವಿದೇಶೀಯರ ಏಕಸ್ವಾಮಿತ್ವದಲ್ಲಿದ್ದುದರಿಂದ ಕೈಗಾರಿಕಾ ವಲಯದಲ್ಲಿ ಭಾರತೀಯ ಬಂಡವಾಳವನ್ನು ಹೂಡಲು ಹೆಚ್ಚಾಗಿ ಅವಕಾಶವೇ ಇರಲಿಲ್ಲ. ಭಾರತೀಯ ಬಂಡವಾಳಗಾರನ ಕೈಯಲ್ಲಿದ್ದ ಮಹತ್ವದ ಕೈಗಾರಿಕೆ ಎಂದರೆ ಹತ್ತು ಬಟ್ಟೆಯ ಗಿರಣಿ ಕೈಗಾರಿಕೆಯೊಂದೆ, ಹತ್ತಿ ಬಟ್ಟೆಯ ಕೈಗಾರಿಕೆಯಲ್ಲಿ ಶೇ. ೯೯ ಭಾಗ ಭಾರತೀಯ ಬಂಡವಾಳವೇ ಆಗಿದ್ದರೂ ಆ ಕೈಗಾರಿಕೆಯ ಬೆಳವಣಿಗೆಯ ಮೊದಲ ಹಂತದಲ್ಲಿ ಎಲ್ಲಾ ಗಿರಣಿ ಮ್ಯಾನೇಜರ್‌ಗಳು, ಹಲವಾರು ಇಲಾಖೆಗಳ ಮುಖ್ಯಸ್ಥರೂ ಕೂಡ ಲ್ಯಾಂಕ್‌ಷೈರ್‌ ನಗರದಿಂದ ಬಂದವರಾಗಿದ್ದರು. ೧೮೭೯ ರ ವೇಳೆಗೆ ಭಾರತದಲ್ಲಿ ೪೫೬ ಹತ್ತಿ ಮಿಲ್ಲುಗಳಿದ್ದವು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೆಣಬಿನ ಮಿಲ್ಲುಗಳು ಯೂರೋಪಿಯನ್ನರ ಒಡೆತನದಲ್ಲಿ ಆರಂಭವಾದವು. ಇವು ೧೮೮೦ ರ ಅವಧಿಯಲ್ಲಿ ಯಾವುದೇ ಹೊಸ ಕೈಗಾರಿಕೆಗಳನ್ನು ಆರಂಭಿಸಲಿಲ್ಲವಾದರೂ ಮೊದಲು ಪ್ರಾರಂಭವಾದಂತಹ ಕೈಗಾರಿಕೆಗಳಿಗೆ ನೋಂದಣಿ ಮಾಡುವಂತಹ ಕಾರ್ಯ ಗಣನೀಯವಾಗಿ ಹೆಚ್ಚಿತು. ಹೀಗಾಗಿ ಕೈಗಾರಿಕೆಗಳಲ್ಲಿಯೇ ಹತ್ತಿ ಮಿಲ್ಲುಗಳ ವಿಸ್ತರಣೆಯು ಆಶ್ವರ್ಯಗೊಳಿಸುವಂತಿತ್ತು. ೧೮೯೪-೯೫ರಲ್ಲಿ ಹತ್ತಿ ಮಿಲ್ಲುಗಳ ಸಂಖ್ಯೆ ೧೪೪ಕ್ಕೇರಿತು. ಅದೇ ರೀತಿ ಸೆಣಬಿನ ಮಿಲ್ಲುಗಳು ೨೯, ಕಲ್ಲಿದ್ದಲು ಗಣಿಗಳು ೧೨೩ ಪ್ರಾರಂಭವಾದವು. ಮ್ಯಾಂಚಸ್ಟರ್‌ ಹಾಗೂ ಲ್ಯಾಂಕ್‌ಷೈರ್‌ ನಗರದ ವಾಣಿಜ್ಯೋದ್ಯಮಗಳು ಬ್ರಿಟನ್‌ಪಾರ್ಲಿಮೆಂಟಿನ ಮೂಲಕ ಭಾರತ ಸರ್ಕಾರದ ಮೇಲೆ ಒತ್ತಡವನ್ನು ತಂದು ಭಾರತದ ಹತ್ತಿ ಗಿರಣಿಯ ಕೈಗಾರಿಕೆಯನ್ನು ನಾಶ ಮಾಡಲು ತನ್ನ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನ ನಡೆಸಿದವು. ೧೮೬೯ರಲ್ಲಿ ಇದನ್ನೇ ಇನ್ನೊಂದು ಹಾಸ್ಯಾಸ್ಪದ ರೀತಿಯಲ್ಲಿ ಮುಂದುವರೆಸಲಾಯಿತು. ಆ ವರ್ಷ ಆಮದಾದ ಹತ್ತಿ ಬಟ್ಟೆಗಳ ಮೇಲೆ ಹಾಕಿದ ವರಮಾನ ಕಂದಾಯವನ್ನು ಸಮತೋಲನ ಮಾಡುವುದಕ್ಕೆ ಭಾರತದಲ್ಲಿಯೇ ಗಿರಣಿಗಳಿಂದ ತಯಾರಾದ ಬಟ್ಟಯೆ ಮೇಲೆ ಶೇ. ೩ / ಯಷ್ಟು ಸಮತೂಕ ತರುವ ಸುಂಕವನ್ನು ಹೇರಲಾಯಿತು. ಇಂಗ್ಲೆಂಡಿನ ತಯಾರಿಕೆಗಾರರು ತಮ್ಮ ಲಾಭಕ್ಕೆ ಭಾರತವನ್ನು ಅದರ ಮಾರುಕಟ್ಟೆಗಳ ಮುಖಾಂತರವೇ ಶೋಷಿಸಲು ಅವಕಾಶ ಒದಗುವಂತೆ ಈ ಸುಂಕವನ್ನು ಭಾರತದಲ್ಲಿ ಹೇರಲಾಯಿತು.

. ವಾಣಿಜ್ಯ

ಭಾರತ ಸರಕಾರದ ವಾಣಿಜ್ಯ ನೀತಿಯು ಇಂಗ್ಲೆಂಡಿನ ಒಟ್ಟು ಕೈಗಾರಿಕೆಯ ಹಿತಾಸಕ್ತಿಗಳಿಂದ ರೂಪಿತವಾಗಿತ್ತು. ಏಕೆಂದರೆ ಅವು ಭಾರತದಲ್ಲಿಯೇ ಬೆಳೆದು ಬರುತ್ತಿದ್ದ ಹತ್ತಿಬಟ್ಟೆ ಗಿರಣಿ ಕೈಗಾರಿಕೆಯ ಪ್ರಗತಿಯನ್ನು ಅತ್ಯಂತ ಭೀತಿಯಿಂದ ವೀಕ್ಷಿಸುತ್ತಿದ್ದವು. ವಸಾಹತುಶಾಹಿಯ ಒತ್ತಡಕ್ಕೆ ಸಿಕ್ಕಿ ಭಾರತ ಜಗತ್ತಿನ ಮಾರುಕಟ್ಟೆಯೊಂದಿಗೆ ಸೇರಿಕೊಂಡಿತು. ಆದರೆ ಅಲ್ಲಿಯೂ ಅದರದ್ದು ಅಧೀನಸ್ಥಾನವೇ ಆಗಬೇಕಾಯಿತು. ಔದ್ಯೋಗಿಕ ಕ್ರಾಂತಿಯಲ್ಲಿ ಕಾಲಿಟ್ಟ ಇಂಗ್ಲೆಂಡಿಗೆ ಕಚ್ಚಾವಸ್ತುಗಳ ಬೇಡಿಕೆ ಅಧಿಕವಾಯಿತು. ಜೊತೆಗೆ ಸಿದ್ಧಗೊಳಿಸಿದ ವಸ್ತುಗಳಿಗೆ ಮಾರುಕಟ್ಟೆಗಳು ಅತ್ಯವಶ್ಯವಾದವು. ಭಾರತ ಉಪಖಂಡದಲ್ಲಿ ಪ್ರಾಂತ್ಯಗಳ ಸ್ವಾಧೀನ ಹಾಗೂ ಅವುಗಳ ಸಂಘಟನೆಯಾದ್ದರಿಂದ ಬ್ರಿಟಿಷರ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿಗೊಂಡಿತು. ಇಂಗ್ಲೆಂಡಿನ ಅತ್ಯಾಧುನಿಕ ಯಂತ್ರಗಳಲ್ಲಿ ತಯಾರಾಗಿ ಇಲ್ಲಿಗೆ ಮಾರಾಟಕ್ಕೆ ಬಂದ ಹೊಳಪಿನ ವಸ್ತುಗಳ ಮುಂದೆ ಭಾರತದ ಹಳೆಯ ಮಾದರಿಯ ತಯಾರಿಕೆಯ ವಸ್ತುಗಳು ಸ್ಪರ್ಧಿಸಲಾರದಾದವು. ೧೮ನೆಯ ಶತಮಾನದ ಕೊನೆಯ ವೇಳೆಗೆ ಭಾರತದ ವಾಣಿಜ್ಯ ವ್ಯವಸ್ಥೆಯು ಎಲ್ಲ ಹಂತಗಳಲ್ಲಿಯೂ ಪತನಗೊಳ್ಳತೊಡಗಿತು. ಹೀಗಾಗಿ ಬ್ರಿಟಿಷ್ ‌ದೇಶವು ವಾಣಿಜ್ಯ ನೀತಿಯ ಮೂಲಕ ಭಾರತವನ್ನು ಸಂಪೂರ್ಣವಾಗಿ ಸುಲಿಗೆ ಮಾಡಿತು.

. ಸಾರಿಗೆ

ಭಾರತದ ಆಂತರಿಕ ಸಂಪರ್ಕ ಹಾಗೂ ಸಾರಿಗೆ ವ್ಯವಸ್ಥೆಯಲ್ಲಾದ ಬದಲಾವಣೆಯು ಬ್ರಿಟನ್ನಿನ ಸಾಮ್ರಾಜ್ಯಶಾಹಿಗಳ ಹಿತಾಸಕ್ತಿಯನ್ನು ಅವಲಂಬಿಸಿದ್ದವು. ಭಾರತದ ಆರ್ಥಿಕ ಬೆಳವಣಿಗೆಯನ್ನು ಕಿಂಚಿತ್ತೂ ಗಮನದಲ್ಲಿಟ್ಟುಕೊಂಡಿರಲಿಲ್ಲ. ರೈಲು ದಾರಿಗಳ ರಚನಾ ವಿಧಾನ ಹಾಗೂ ಸಾರಿಗೆ ದರಗಳ ನಿಗದಿ ಇವು ಬ್ರಿಟಿಷ್ ‌ವ್ಯಾಪಾರಕ್ಕೆ ಮಾತ್ರ ಅನುಕೂಲಕರವಾಗಿದ್ದವು. ಅಂದರೆ ಭಾರತದ ರಫ್ತು ಆಮದು ಇವು ಮಾತ್ರವೇ ಸರಿಹೊಂದಿಕೊಂಡಿದ್ದವು. ದೇಶದ ಆಂತರಿಕ ವ್ಯಾಪಾರ ಹಾಗೂ ಭಾರತದ ಆರೋಗ್ಯಕರ ಕೈಗಾರಿಕಾ ಪ್ರಗತಿ ಇವುಗಳಿಗೆ ವಿರೋಧವಾಗಿದ್ದವು. ಸಾರಿಗೆ ದರಗಳು ದೂರದ ರೇವು ಪಟ್ಟಣಕ್ಕೆ ಕೊಡಬೇಕಾದ ದರಕ್ಕಿಂತ ದೇಶದಲ್ಲಿಯೇ ಎರಡು ನಗರಗಳ ನಡುವಣ ದರಕ್ಕಿಂತ ಶೇ. ೫೦ ಕಡಿಮೆ ಇದ್ದಿತು. ಇದಲ್ಲದೆ ಈ ದೇಶದಲ್ಲಿಯೇ ಸಾರಿಗೆಯ ಸಾಧನಗಳ ತಯಾರಿಕೆಯ ಕೈಗಾರಿಕೆಯನ್ನು ಸ್ಥಾಪಿಸಲು ಅವಕಾಶ ಕೊಡುತ್ತಿರಲಿಲ್ಲ. ರೈಲು ಮಾರ್ಗಗಳಲ್ಲಿಯೇ ೧೮೮೦ರಿಂದ ಬಹಳ ತ್ವರಿತವಾದ ಹೆಚ್ಚುವರಿಯು ಕಂಡುಬಂದಿತು. ೧೮೭೮-೭೯ರಿಂದ ೧೮೮೦-೯೦ರವರೆಗಿನ ಹನ್ನೊಂದು ವರ್ಷಗಳಲ್ಲಿ ರೈಲ್ವೆ ಮಾರ್ಗದ ಉದ್ದವು ೧೮೧೨ ಮೈಲಿಯಿಂದ ೧೬,೪೦೪ ಮೈಲಿಗಳಿಗೆ ಏರಿತು.

ಅದು ೧೮೯೯-೧೯೦೦ರಲ್ಲಿ ಇನ್ನೂ ಏರುತ್ತಾ ೨೩,೭೬೩ ಮೈಲಿಗಳನ್ನು ಮುಟ್ಟಿತು. ಹಾಗೂ ೧೯೦೫-೧೯೦೬ರಲ್ಲಿ ೨೮,೬೦೪ ಮೈಲಿಗಳಷ್ಟಾಗಿತ್ತು. ೧೮. ೯ರಲ್ಲಿ ಸಾಗಿಸಿದ ೧೬ ಮಿಲಿಯನ್‌ ಪ್ರಯಾಣಿಕರಿಗೆ ಬದಲಾಗಿ ೧೯೦೬ ರಲ್ಲಿ ೨೭೧ ಮಿಲಿಯನ್‌ ಪ್ರಯಾಣಿಕರನ್ನು ಸಾಗಿಸಿತು. ಈ ವೇಳೆಗೆ ರೈಲು ಮಾರ್ಗಗಳ ಮೇಲೆ ಹೂಡಿದ ಬಂಡವಾಳದ ಮೇಲೆ ಶೇಕಡ. ಸುಮಾರು ೬೦ ರಷ್ಟು ನಿವ್ವಳ ಆದಾಯ ಕೊಡಲು ಶಕ್ತವಾದವು.

ಸಾರಿಗೆ ಸಂಪರ್ಕದಂತೆಯೇ ದೇಶದ ದೂರ ಸಂಪರ್ಕ ವ್ಯವಸ್ಥೆಯಲ್ಲಿ ತಂತಿ ವ್ಯವಸ್ಥೆಯು ಪ್ರಮುಖ ಪಾತ್ರವನ್ನು ವಹಿಸಿತು. ೧೮೭೦-೭೧ ರಿಂದ ೧೯೧೦-೧೯೧೧ರವರೆಗಿನ ಅವಧಿಯಲ್ಲಿ ಈ ದೇಶದ ತಂತಿ ವ್ಯವಸ್ಥೆಯು ೧೪ ಪಟ್ಟು ಸಂಖ್ಯೆಯಲ್ಲಿ ಏರಿದ್ದಲ್ಲದೆ ಅವು ಕಳುಹಿಸಿದ ತಂತಿ ಸುದ್ದಿಗಳ ಸಂಖ್ಯೆ ೨೨ ಪಟ್ಟು ಹೆಚ್ಚಾಯಿತು. ಅಂದರೆ ೧೮೭೦-೭೧ ರಲ್ಲಿ ೫,೭೭,೦೦೦ ಮತ್ತು ೧೯೧೦-೧೧ ರಲ್ಲಿ ೧೩,೦೯೦,೦೦೦ ಸಾವಿರಕ್ಕೆ ಏರಿತು. ಇದೇ ಕಾಲಾವಧಿಯಲ್ಲಿಯೇ ದೇಶದ ಅಂಚೆ ಸೌಲಭ್ಯಗಳೂ ಕೂಡ ವಿಸ್ತರಿಸಲ್ಪಟ್ಟವು. ಈ ರೀತಿಯಾದ ಸೌಲಭ್ಯಗಳಿಂದಾಗಿ ಬ್ರಿಟಿಷರಿಗೆ ಭಾರತದ ಆಡಳಿತವನ್ನು ತಮ್ಮ ನಿಯಂತ್ರದಲ್ಲಿಡಲು ಸುಲಭವಾಯಿತು.

. ಶಿಕ್ಷಣ

ಭಾರತೀಯ ಶಿಕ್ಷಣವೂ ವಸಾಹತುಶಾಹಿ ಸ್ವರೂಪದಿಂದ ಕೂಡಿತ್ತು. ಆಧುನಿಕ ಕೈಗಾರಿಕೆಯ ಉದಯ ಮತ್ತು ವಿಕಾಸಕ್ಕೆ ಮೂಲ ಅಗತ್ಯವಾದ ಆಧುನಿಕ ತಾಂತ್ರಿಕ ಶಿಕ್ಷಣವನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಿತು. ಭಾರತೀಯ ಭಾಷೆಗಳ ಸ್ಥಾನದಲ್ಲಿ ಇಂಗ್ಲಿಷ್‌ನ್ನು ಶಿಕ್ಷಣ ಮಾಧ್ಯಮವಾಗಿ ಮಾಡಿದರು. ಇದು ಸಮಾನ್ಯ ಜನರಲ್ಲಿ ಶಿಕ್ಷಣ ಪ್ರಸಾರಕ್ಕೆ ತಡೆಯುಂಟು ಮಾಡಿತ್ತು. ಶಿಕ್ಷಣ ಪಡೆದವರಿಗೂ, ಪಡೆಯದ ಸಾಮಾನ್ಯ ಜನಕ್ಕೂ ನಡುವೆ ಅಗಾಧವಾದ ಭಾಷೆಯ ಮತ್ತು ಸಂಸ್ಕೃತಿಯ ಕಂದಕವನ್ನು ನಿರ್ಮಿಸಿತು. ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಒದಗಿಸಲು ಸರಕಾರವು ನಿರಾಕರಿಸಿತ್ತು. ಕ್ರಮೇಣ ಶಿಕ್ಷಣ ಮಟ್ಟಗಳನ್ನು ಅತ್ಯಂತ ಕೆಳಮಟ್ಟಕ್ಕೆ ತಗ್ಗಿಸಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾರಿ ಪ್ರಮಾಣದಲ್ಲಿ ಶುಲ್ಕವನ್ನು ತೆರಬೇಕಾಗಿತ್ತು. ಶಿಕ್ಣವು ಪ್ರಸ್ತುತಃ ಮಧ್ಯಮ ವರ್ಗ ಹಾಗೂ ಮೇಲುವರ್ಗದ ಜನರ ಮತ್ತು ನಗರ ಹಾಗೂ ಪಟ್ಟಣ ನಿವಾಸಿಗಳಿಗೆ ಮೀಸಲಾದ ವಿಷಯವಾಯಿತು. ಇದೇ ವೇಳೆಯಲ್ಲಿ ಬ್ರಿಟಿಷರು ರಾಷ್ಟ್ರೀಯತೆಯ ಆಹ್ವಾನದ ನೀತಿಯನ್ನು ನಿಷ್ಕ್ರೀಯವಾಗಿ ಉಳಿಸಲಿಲ್ಲ. ಬೆಳೆಯುತ್ತಿದ್ದ ರಾಷ್ಟ್ರೀಯತೆಯ ಆಹ್ವಾನವನ್ನು ಎದುರಿಸಲು, ಬ್ರಿಟಿಷರು ಹೆಚ್ಚು ಹೆಚ್ಚಾಗಿ ‘ಒಡೆದು ಆಳು’ ಎಂಬ ನೀತಿಯನ್ನು ಅನುಸರಿಸಿದರು. ಜಾತೀಯತೆ ಮತ್ತು ಮತೀಯತೆಯನ್ನು ಸಕ್ರೀಯವಾಗಿ ಪ್ರೋತ್ಸಾಹಿಸಿದರು. ಅದು ಸಾಮಾಜಿಕ ಪ್ರಗತಿವಿರೋಧಿ ಶಕ್ತಿಗಳನ್ನು ಬಲಪಡಿಸಿತು.

ಬ್ರಿಟಿಷ್ ‌ಆಡಳಿತದ ಶೋಷಣೆಯನ್ನು ಭಾರತೀಯರು ಟೀಕಿಸಿ ಬರೆದರು. ಆ ಮೂಲಕ ಭಾರತದ ರಾಷ್ಟ್ರೀಯ ಚಳವಳಿಯಲ್ಲಿ ಜಾಗೃತಿ ಮೂಡಿಸಿದರು. ಬ್ರಿಟಿಷ್ ‌ರಿಂದ ರಾಜಕೀಯ ಹಕ್ಕುಗಳನ್ನು ಕೇಳುವ, ರಾಜಕೀಯ ಶಕ್ತಿ ಮತ್ತು ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸಿದರು. ದಾದಾಬಾಯಿ ನವರೋಜಿಯವರು ೧೯೦೪ರ ಅಂತಾರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ಸಿನಲ್ಲಿ ಭಾರತದ ಸಂಪತ್ತಿನ ಹೀರಿಕೆಯ ಬಗ್ಗೆ ಗಮನ ಸೆಳೆದರು. ಬ್ರಿಟಿಷರು ಭಾರತವನ್ನು ಇತರ ವಸಾಹತುಗಳಂತೆ ನಡೆಸಿಕೊಂಡು ಸ್ವಯಂ ಸರಕಾರದ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. ೧೯೦೫ರಲ್ಲಿ ಬನಾರಸ್‌ ಅಧಿವೇಶನದಲ್ಲಿ ಭಾರತದ ಇಂದಿನ ಆರ್ಥಿಕ ಸ್ಥಿತಿಗೆ ಸ್ವಯಂ ಸರಕಾರದ ರಚನೆಯೇ ಪರಿಹಾರವೆಂದು ಮುಚ್ಚು ಮರೆಯಿಲ್ಲದೆ ಪ್ರತಿಪಾದಿಸಿದರು. ನವರೋಜಿಯವರು ೧೯೦೬ರ ಕಲ್ಕತ್ತ ಕಾಂಗ್ರೆಸ್‌ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಮಾತನಾಡುತ್ತ ರಾಷ್ಟ್ರೀಯ ಚಳವಳಿಯ ಗುರಿ ಸ್ವರಾಜ್ಯ ಸ್ಥಾಪನೆ ಮಾಡಿ, ಬ್ರಿಟಿಷ್ ‌ವಸಾಹತುಶಾಹಿತ್ವದಿಂದ ದೂರ ಉಳಿಯುವುದೇ ದಾರಿ ಎಂದರು.

ಒಟ್ಟಿನಲ್ಲಿ ಕಾಂಗ್ರೆಸ್ಸಿನ ಆರಂಭಿಕ ನಾಯಕರು ಮಾಡಿದ ಬ್ರಿಟಿಷ್ ‌ಸಂಪತ್ತಿನ ಸೋರಿಕೆಯ ಅಧ್ಯಯನಗಳನ್ನು ಸಮಗ್ರವಾಗಿ ಪರಿಗಣಿಸಿದಾಗ ಅವು ಅಂದು ರಾಷ್ಟ್ರೀಯ ಚಳವಳಿಯ ಮೇಲೆ ಮಹತ್ವದ ಪರಿಣಾಮ ಬೀರಿರುವುದನ್ನು ಗಮನಿಸಬಹುದು. ದೇಶದ ಬಡತನಕ್ಕೆ, ದಾರಿದ್ರ್ಯಕ್ಕೆ ಬ್ರಿಟಿಷ್ ಆಡಳಿತವೇ ಕಾರಣ ಎಂದು ಎತ್ತಿ ತೋರಿಸಿದ್ದರು. ಆ ಮೂಲಕ ಬ್ರಿಟಿಷ್ ‌ವಿರೋಧಿ ಚಳವಳಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಈ ವಾದಗಳು ಸ್ಫೂರ್ತಿಯಾಯಿತು. ಅವರು ರೂಪಿಸಿದ ಸಂಪತ್ತಿನ ಹೀರಿಕೆ (ಡ್ರೈನ್‌ಆಫ್ ವೆಲ್ತ್‌) ಸಿದ್ಧಾಂತ ಮುಂದಿನ ಹಂತಗಳ ಕಾಂಗ್ರೆಸ್‌ ಮಂದಗಾಮಿಗಳ ನೇತೃತ್ವದ ಚಳವಳಿಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಕಾಯಿದೆಪಾಲನೆ, ಶಿಸ್ತು-ಶಾಂತಿ ಮುಂತಾದ ಕಾರಣಗಳಿಗಾಗಿ ಬ್ರಿಟಿಷ್ ಆಡಳಿತದತ್ತ ಒಲುಮೆಯಿದ್ದವರಿಗೂ ಬ್ರಿಟಿಷರ ನಿಜವಾದ ಉದ್ದೇಶಗಳನ್ನು ಈ ಮೂಲಕ ತಿಳಿಯಲು ಸಾಧ್ಯವಾಯಿತು.