ಸಾಮಾನ್ಯವಾಗಿ ರಾಷ್ಟ್ರಗಳು ಸ್ವಾತಂತ್ರ್ಯವನ್ನು ಪಡೆದ ನಂತರವೇ ವಿದೇಶಾಂಗ ನೀತಿ ಆಚರಣೆಗೆ ಬರುತ್ತದೆ. ಆದರೆ ಭಾರತದ ವಿದೇಶಾಂಗ ನೀತಿಯು ಸ್ವಾತಂತ್ರ ಪೂರ್ವದಲ್ಲಿಯೇ ರೂಪಿತಗೊಂಡಿತು ಎನ್ನುವುದು ಗಮನಾರ್ಹವಾದ ಅಂಶ. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಜವಹರ್‌ಲಾಲ್ ನೆಹರೂ ಅವರನ್ನು ವಿದೇಶಾಂಗ ನೀತಿಯ ವಕ್ತಾರರನ್ನಾಗಿ ನೇಮಿಸಿತು. ವಿದೇಶಾಂಗ ನೀತಿ ಮತ್ತು ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಸಾಕಷ್ಟು ಆಸಕ್ತಿ ಮತ್ತು ಪಾಂಡಿತ್ಯವನ್ನು ಹೊಂದಿದ್ದ ನೆಹರೂ ಅವರ ನೇತೃತ್ವದಲ್ಲಿ ಅಖಿಲಭಾರತ ಕಾಂಗ್ರೆಸ್ ಸಮಿತಿಯು ೧೮೮೫ರಿಂದ ೧೯೪೭ರವರೆಗೂ ಅನೇಕ ಸಭೆಗಳನ್ನು ನಡೆಸಿ, ಬ್ರಿಟಿಷ್ ಸರ್ಕಾರದ ವಿದೇಶಾಂಗ ನೀತಿ ಹಾಗೂ ಧೋರಣೆಗಳನ್ನು ಬಲವಾಗಿ ವಿರೋಧಿಸುವ ನಿಲುವಳಿಗಳನ್ನು ಅಂಗೀಕರಿಸಿತು. ಅವುಗಳಲ್ಲಿ ಮುಖ್ಯವಾದವು ವಸಾಹತುಶಾಹಿ ನೀತಿಯನ್ನು ವಿರೋಧಿಸುವುದಾಗಿತ್ತು. ಏಷ್ಯಾ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳ ಸ್ವಾತಂತ್ರ್ಯ ಚಳವಳಿಗಳನ್ನು ಬೆಂಬಲಿಸುವುದಾಗಿತ್ತು. ೧೯೦೪ರಲ್ಲಿ ಟಿಬೆಟ್‌, ಬರ್ಮ, ಆಫ್ಘಾನಿಸ್ತಾನ ಮತ್ತು ಪರ್ಷಿಯಾ ವಿರುದ್ಧ ಬ್ರಿಟಿಷ್ ಸೈನಿಕ ಕಾರ್ಯಾಚರಣೆಯನ್ನು ವಿರೋಧಿಸಿದ್ದು ಮತ್ತು ಅಲ್ಲಿನ ಸ್ವಾತಂತ್ರ್ಯ ಚಳವಳಿಗಳನ್ನು ಬೆಂಬಲಿಸಿದ್ದು ನಿದರ್ಶನಗಳು. ಅದೇ ರೀತಿಯಲ್ಲಿ ಎರಡು ಮಹಾಯುದ್ಧಗಳಲ್ಲಿ ಭಾರತದ ಸೈನಿಕರನ್ನು ಬ್ರಿಟಿಷ್ ಸರ್ಕಾರ ಉಪಯೋಗಿಸಿಕೊಂಡಿದ್ದನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿ ಅದರ ಸಾಮ್ರಾಜ್ಯಶಾಹಿ ನೀತಿಯನ್ನು ವಿರೋಧಿಸಿತು. ವಿಶ್ವಸಂಸ್ಥೆಯ ಸ್ಥಾಪನೆಗೆ ಭಾರತ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿತು. ಭಾರತದ ಪ್ರತಿನಿಧಿಯಾಗಿ ಸರ್‌. ಬೆನಗಲ್‌ರಾವ್ ಅವರು ವಿಶ್ವಸಂಸ್ಥೆಯ ರಚನೆಗೆ ಸಂಬಂಧಿಸಿದಂತೆ ಜರುಗಿದ ಸಮ್ಮೇಳನಗಳಲ್ಲಿ ಹಾಗೂ ಸಂಸ್ಥೆಯ ಪ್ರಣಾಳಿಕೆಯ ರಚನೆಯಲ್ಲಿ ನೀಡಿದ ಕೊಡುಗೆಯು ನಿಜಕ್ಕೂ ಶ್ಲಾಘನೀಯ. ೧೯೪೬ರ ಸೆಪ್ಟೆಂಬರ್ ೭ ರಂದು ಜವಹರಲಾಲ್ ನೆಹರೂ ಅವರು ನೀಡಿದ ರೇಡಿಯೋ ಭಾಷಣದಲ್ಲಿ ಭಾರತದ ವಿದೇಶಾಂಗ ನೀತಿಯ ರೂಪುರೇಖೆಗಳನ್ನು ಹಾಗೂ ಸ್ವತಂತ್ರ ಭಾರತವು ಹೇಗೆ ತನ್ನ ವಿದೇಶಾಂಗ ನೀತಿಯನ್ನು ಅನುಸರಿಸಲಿದೆ ಎನ್ನುವುದರ ಬಗ್ಗೆ ಅರಿವು ಮೂಡಿಸಿದರು. ಅವರ ಈ ಭಾಷಣವು ಅಮೆರಿಕಾ, ರಷ್ಯಾ, ಚೀನಾ ರಾಷ್ಟ್ರಗಳೊಡನೆ ಭಾರತವು ರೂಪಿಸಿಕೊಳ್ಳುವ ಸಂಬಂಧಗಳ ಬಗ್ಗೆಯೂ ಸೂಚನೆಗಳನ್ನು ನೀಡಿತು. ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ನಂತರ ಜವಹರ್‌ಲಾಲ್ ನೆಹರೂ ಅವರು ಪ್ರಧಾನಮಂತ್ರಿ ಪದವಿಯ ಜೊತೆಗೆ ವಿದೇಶಾಂಗ ಖಾತೆಯನ್ನು ತಾವೆ ಖುದ್ದಾಗಿ ನಿಭಾಯಿಸುವ ನಿರ್ಧಾರವನ್ನು ತೆಗೆದುಕೊಂಡರು. ಈ ಕಾರಣಗಳಿಂದಾಗಿ ಮೈಕಲ್ ಬ್ರೆಷಲ್‌ಅವರು ಭಾರತದ ವಿದೇಶಾಂಗ ನೀತಿಯು ನೆಹರೂರವರ ವಿದೇಶಾಂಗ ನೀತಿ ಎಂದು ವರ್ಣಿಸಿದರು.

ವಿದೇಶಾಂಗ ನೀತಿಯ ತತ್ವಗಳು ಹಾಗೂ ಗುರಿಗಳು

ಭಾರತವು ತನ್ನ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ತತ್ವಗಳನ್ನು ಪ್ರತಿಪಾದಿಸಿತು. ಇಂದಿಗೂ ಪ್ರತಿಪಾದಿಸುತ್ತಿದೆ. ಅವುಗಳು ಈ ಕೆಳಗಿನಂತಿವೆ:

. ಅಲಿಪ್ತ ನೀತಿ

ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಕಾಲದಲ್ಲಿಯೇ ವಿಶ್ವಮಟ್ಟದಲ್ಲಿ ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರವು ಆರಂಭಗೊಂಡಿತು. ಬೃಹತ್ ರಾಷ್ಟ್ರಗಳು ತಮ್ಮ ಸಿದ್ಧಾಂತ ಮತ್ತು ಶಕ್ತಿಯನ್ನು ಪ್ರಸರಿಸಲು ಮಿಲಿಟರಿ ಕೂಟಗಳನ್ನು ರಚಿಸಿದವು. ಪ್ರಜಾಪ್ರಭುತ್ವವನ್ನು ಅನುಸರಿಸುವ ಭಾರತ ಅಮೆರಿಕಾದ ನಾಯಕರೊಂದಿಗೆ ಕೈಜೋಡಿಸಿ ಸೋವಿಯತ್ ಒಕ್ಕೂಟವನ್ನು ತಡೆಹಿಡಿಯುವಲ್ಲಿ ಭಾಗಿಯಾಗಬೇಕೆಂದು ಅಮೆರಿಕವು ಒತ್ತಡ ಹೇರಿತು. ನೆಹರೂರವರ ದೃಷ್ಟಿಯಲ್ಲಿ ಭಾರತವು ಬೃಹತ್ ರಾಷ್ಟ್ರಗಳ ಶಕ್ತಿ ಸಮಯದಲ್ಲಿ ಭಾಗಿಯಾಗುವುದು ರಾಷ್ಟ್ರದ ಹಿತಾಸಕ್ತಿ ಹಾಗೂ ಮೌಲ್ಯಗಳ ದೃಷ್ಟಿಯಿಂದ ಸರಿಯಿರಲಿಲ್ಲ. ಈ ಕಾರಣದಿಂದ ಭಾರತ ಅಲಿಪ್ತ ನೀತಿಯನ್ನು ತನ್ನ ವಿದೇಶಾಂಗ ನೀತಿಯ ಮೂಲತತ್ವವೆಂದು ಘೋಷಿಸಿ ಬೃಹತ್‌ ರಾಷ್ಟ್ರಗಳ ಶಕ್ತಿ ಸಮರದಿಂದ ದೂರವಿರುವ ನಿರ್ಧಾರವನ್ನು ಕೈಗೊಂಡಿತು. ನೆಹರೂರವರ ಈ ನಿಲುವು ನೈಜವಾದ ಪ್ರತೀಕವೂ ಆಗಿತ್ತು ಎಂದು ಹಲವರು ವಾದಿಸಿದ್ದಾರೆ. ಅಲಿಪ್ತನೀತಿಯನ್ನು ಅನುಸರಿಸುವುದರ ಮೂಲಕ ಭಾರತ ವಿಶ್ವದ ಜ್ವಲಂತ ಸಮಸ್ಯೆಗಳ ಬಗ್ಗೆ ತನ್ನದೇ ಆದ ಸೈದ್ಧಾಂತಿಕ ಹಾಗೂ ಮೌಲ್ಯಾಧಾರಿತ ನಿಲುವನ್ನು ಹೊಂದುವ ಉದ್ದೇಶವನ್ನು ಹೊಂದಿತ್ತು. ತಂತ್ರಜ್ಞಾನ ಹಾಗೂ ಶಸ್ತ್ರಾಸ್ತ್ರಗಳ ನೆರವನ್ನು ಅಂತರರಾಷ್ಟ್ರೀಯ ಸಮುದಾಯದಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಡೆಯುವ ನಿಟ್ಟಿನಿಂದಲೂ ಅಲಿಪ್ತ ನೀತಿಯು ಸಹಕಾರಿಯಾಗುತ್ತದೆ ಎನ್ನುವುದು ಅಂದಿನ ಪ್ರಧಾನಮಂತ್ರಿ ಜವಹರ್‌ಲಾಲ್ ನೆಹರೂ ಅವರ ನಂಬಿಕೆಯಾಗಿತ್ತು. ಶೀತಲ ಸಮರದ ಯುಗದಲ್ಲಿ ಅಮೆರಿಕಾದಿಂದ ಆರ್ಥಿಕ ನೆರವು ಮತ್ತು ಸೋವಿಯತ್ ಒಕ್ಕೂಟದಿಂದ ಭದ್ರತಾ ನೆರವು ಪಡೆಯುವಲ್ಲಿ ಅಲಿಪ್ತ ನೀತಿಯು ಭಾರತಕ್ಕೆ ಯಶಸ್ಸನ್ನು ತಂದುಕೊಟ್ಟಿತು.

ಅಲಿಪ್ತ ನೀತಿಯನ್ನು ಅನುಸರಿಸುವುದರ ಮೂಲಕ ಭಾರತ ತೃತೀಯ ಜಗತ್ತಿನ ರಾಷ್ಟ್ರಗಳ ನಾಯಕತ್ವವನ್ನು ಹೊಂದುವ ಅಶಯವನ್ನು ಹೊಂದಿತ್ತು. ಮಿಲಿಟರಿ ಬಣಗಳ ಅನುಯಾಯಿಯಾದರೆ ಅದು ಸಾಧ್ಯವಿರಲಿಲ್ಲ ಎನ್ನುವ ಭಾವನೆಯೂ ಭಾರತ ಅಲಿಪ್ತ ನೀತಿಯನ್ನು ಅನುಸರಿಸಲು ಕಾರಣವಾಯಿತು ಎನ್ನುವ ವಾದಗಳೂ ಇವೆ. ಒಟ್ಟಾರೆ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಲಿಪ್ತ ನೀತಿಯನ್ನು ಸ್ವತಂತ್ರ ಭಾರತ ತನ್ನ ವಿದೇಶಾಂಗ ನೀತಿಯು ಮೂಲತತ್ವವನ್ನಾಗಿಸಿಕೊಂಡಿತು. ಹಲವು ಬದಲಾವಣೆಗಳೊಂದಿಗೆ ಅಲಿಪ್ತನೀತಿಯು ಇಂದಿಗೂ ಮುಂದುವರೆಯುತ್ತಿದೆ.

. ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ನೀತಿಗಳ ವಿರೋಧ

ವಸಾಹತುಶಾಹಿತ್ವವನ್ನು ವಿರೋಧಿಸಿ ಸ್ವಾತಂತ್ರ್ಯವನ್ನು ಗಳಿಸಿಕೊಂಡ ಭಾರತ ಸ್ವಾಭಾವಿಕವಾಗಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ನೀತಿಯಗಳನ್ನು ವಿರೋಧಿಸಿತು. ದೆಹಲಿ ಮತ್ತು ಬಾಂಡೂಂಗ್‌ನಲ್ಲಿ ಜರುಗಿದ ಏಷ್ಯಾ ರಾಷ್ಟ್ರಗಳ ಸಮ್ಮೇಳನಗಳಲ್ಲಿ (೧೯೪೯ ಮತ್ತು ೧೯೫೫) ಭಾರತ ತನ್ನ ನಿಲುವನ್ನು ಪ್ರತಿಪಾದಿಸಿತು. ೧೯೫೦ರ ಮತ್ತು ೧೯೬೦ರ ದಶಕಗಳಲ್ಲಿ ಏಷ್ಯಾ ಆಫ್ರಿಕಾ ಖಂಡಗಳಲ್ಲಿನ ರಾಷ್ಟ್ರಗಳ ಸ್ವಾತಂತ್ರ ಸಂಗ್ರಾಮಗಳನ್ನು ಬೆಂಬಲಿಸಿತು. ಇದಕ್ಕೆ ಪೂರಕವಾಗಿ ಅಲಿಪ್ತ ಚಳುವಳಿಯನ್ನು ಸ್ಥಾಪಿಸಿತು ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ನಿಲುವಳಿಗಳನ್ನು ಮಂಡಿಸಿ ಅವುಗಳ ಪರವಾಗಿ ವಾದಿಸಿತು. ಚೀನಾದಲ್ಲಿ ೧೯೪೯ರಲ್ಲಿ ಕ್ರಾಂತಿಯಾಗಿ, ಸಮತಾವಾದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಭಾರತ ಅದನ್ನು ಸಂಪೂರ್ಣವಾಗಿ ಬೆಂಬಲಿಸಿ ಮಾನ್ಯತೆ ನೀಡಿತು. ನೆಹರೂ ಅವರು ೧೯೫೦ರ ದಶಕದಲ್ಲಿಯೇ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸ್ಥಾನ ನೀಡಬೇಕೆಂದು ಪಾಶ್ವಮಾತ್ಯ ರಾಷ್ಟ್ರಗಳನ್ನು ಆಗ್ರಹಪಡಿಸಿದರು.

. ವರ್ಣಭೇದ ನೀತಿ ವಿರೋಧ

ಸ್ವತಂತ್ರ ಭಾರತವು ತಾತ್ವಿಕವಾಗಿ ವರ್ಣಾಧಾರಿತ ನೀತಿಗಳ ಅನುಸರಣೆಗಳನ್ನು ತೀವ್ರವಾಗಿ ವಿರೋಧಿಸಿ ಈ ರೀತಿಯ ಧೋರಣೆಗಳು ವಸಾಹತುಶಾಹಿ, ಸಾಮ್ರಾಜ್ಯಶಾಹಿ ನೀತಿಗಳ ಪ್ರತೀಕ ಎಂದು ತಿರಸ್ಕರಿಸಿತು. ವಿಶೇಷವಾಗಿ ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಸರ್ಕಾರ ಅನುಸರಿಸುತ್ತಿದ್ದ ವರ್ಣಭೇದ ನೀತಿಯನ್ನು (ಅರ್ಪಾರ್ಥೈಡ್‌) ನೆಲ್ಸನ್ ಮಂಡೇಲ ಅವರ ನೇತೃತ್ವದಲ್ಲಿ ಆಫ್ರಿಕನ್ ನ್ಯಾಷನಲ್‌ ಕಾಂಗ್ರೆಸ್ಸ್ ಬಲವಾಗಿ ಖಂಡಿಸಿ ಹಮ್ಮಿಕೊಂಡಿದ್ದ ಚಳುವಳಿಯನ್ನು ಭಾರತವು ಬೆಂಬಲಿಸಿತು. ವರ್ಣಭೇದ ನೀತಿಯು ಅಮಾನವೀಯ. ಅದು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಅದು ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗಿದೆ ಎಂದು ಭಾರತದ ನಾಯಕರು ತಮ್ಮ ವರ್ಣಭೇದ ವಿರೋಧಿ ನೀತಿಯನ್ನು ಸಮರ್ಥಿಸಿಕೊಂಡು ಅದಕ್ಕೆ ವಿಶ್ವಮಟ್ಟದಲ್ಲಿ ಪ್ರಚಾರ ನೀಡಿದತು. ಯಾವುದೇ ಒಂದು ಜನಾಂಗವು, ವಿಶೇಷವಾಗಿ ಬಿಳಿಯರು ವಿಶೇಷ ಸೌಲಭ್ಯಗಳನ್ನು ಹೊಂದುವುದು ತಪ್ಪು ಎಂದು ರಷ್ಯಾ ಮತ್ತು ಅಮೆರಿಕಾದಲ್ಲಿನ ಕಪ್ಪು ಜನಾಂಗಗಳ ದೌರ್ಜನ್ಯಗಳನ್ನು ಭಾರತ ಖಂಡಿಸಿತು.

. ಶಾಂತಿಯುತ ಸಹಬಾಳ್ವೆಯ ಸಹಕಾರ

ಭಾರತದ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ತತ್ವವೆಂದರೆ ಶಾಂತಿಯುವ ಸಹಬಾಳ್ವೆ ಮತ್ತು ಸಹಕಾರಕ್ಕೆ ಸರ್ಕಾರಗಳು ನೀಡುತ್ತಾ ಬಂದಿರುವ ಬೆಂಬಲ ಮತ್ತು ಅದರ ಬಗ್ಗೆ ಇರುವ ಅಪಾರ ನಂಬಿಕೆ, ವಿಶ್ವಾಸ. ಚರಿತ್ರೆಯಲ್ಲಿ ಕಳಿಂಗ ಯುದ್ಧದ ನಂತರ ಅಶೋಕನು ಶಾಂತಿ ಪ್ರತಿಪಾದನೆ ಮಾಡಿದ್ದು ಮತ್ತು ಮುಖ್ಯವಾಗಿ ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ ಚಳವಳಿಯನ್ನು ಶಾಂತಿಯುತವಾಗಿ ನಡೆಸಿದ್ದು, ಭಾರತದ ವಿದೇಶಾಂಗ ನೀತಿಯ ತತ್ವಕ್ಕೆ ಸ್ಫೂರ್ತಿ ನೀಡಿತು. ಪ್ರಧಾನಮಂತ್ರಿ ನೆಹರೂರವರು ಮೂಲತಃ ಶಾಂತಿ ಪ್ರಿಯರಾಗಿದ್ದು, ಶಾಂತಿಯುತ ಸಹಬಾಳ್ವೆಗೆ ಸಹಜವಾಗಿ ಒತ್ತು ನೀಡಿದರು. ಅಂತಾರಾಷ್ಟ್ರೀಯ ಸಮುದಾಯದೊಡನೆ ಶಾಂತಿ ಮತ್ತು ಸಹಕಾರದಿಂದ ಕೂಡಿದ ಸಂಬಂಧವನ್ನು ಬೆಳೆಸಿಕೊಳ್ಳಲು ಭಾರತ ಮುಂದಾಯಿತು. ಚೀನಾಕ್ಕೆ ಸಂಬಂಧಿಸಿದಂತೆ ನೆಹರೂ ಅವರು ಘೋಷಿಸಿದ ಪಂಚಶೀಲ ತತ್ವವು ಭಾರತದ ತಾತ್ವಿಕ ನಿಲುವನ್ನು ಎತ್ತಿ ಹಿಡಿಯಿತು. ಪಂಚಶೀಲ ತತ್ವದ ಐದು ಅಂಶಗಳೆಂದರೆ,

ಎ. ರಾಷ್ಟ್ರಗಳ ಪ್ರಾದೇಶಿಕ ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಪರಸ್ಪರ ಗೌರವಿಸುವುದು.

ಬಿ.ಪರಸ್ಪರ ಆಕ್ರಮಣ ಮಾಡದಿರುವುದು

ಸಿ. ರಾಷ್ಟ್ರಗಳ ಆಂತರಿಕ ವಿಷಯಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು

ಡಿ. ಪರಸ್ಪರ ಸಹಕಾರ ಮತ್ತು ಸಮಾನತೆ

ಇ. ಶಾಂತಿಯುವ ಸಹಬಾಳ್ವೆ

ಈ ತತ್ವಗಳಿಂದ ಕೂಡಿದ ಪಂಚಶೀಲ ಒಪ್ಪಂದಕ್ಕೆ ಜವಹರಲಾಲ್ ನೆಹರೂ ಮತ್ತು ಚೀನಾದ ಪ್ರಧಾನಿ ಚೌ ಎನ್ ಲಯ್ ಅವರು ೧೯೫೪ರಲ್ಲಿ ಸಹಿ ಹಾಕಿದರು. ಇದಕ್ಕನುಸಾರವಾಗಿ ಭಾರತ ಚೀನಾದೊಡನೆ ತನ್ನ ಸಂಬಂಧವನ್ನು ಬೆಳೆಸಿಕೊಳ್ಳುವ ತತ್ವವನ್ನು ಉಲ್ಲಂಘೀಸಿ ಭಾರತದ ವಿರುದ್ಧ ಆಕ್ರಮಣ ಮಾಡಿತು. ೧೯೬೦ರ ದಶಕದಲ್ಲಿ ಚೀನಾ, ಉತ್ತರ ಪೂರ್ವ ಪ್ರದೇಶಗಳಲ್ಲಿ ಹಸ್ತಕ್ಷೇಪ ಮಾಡಿ ಭಾರತದ ವಿರುದ್ಧ ಅಲ್ಲಿಯ ಯುವ ಪೀಳಿಗೆಯನ್ನು ಎತ್ತಿಕಟ್ಟಿ ಬುಡಮೇಲು ಕೃತ್ಯದಲ್ಲಿ ತೊಡಗಿತು. ೧೯೭೫ ರಲ್ಲಿ ಇಂದಿರಾ ಗಾಂಧಿಯವರು ೧೯೬೨ ರಿಂದ ಸ್ಥಗಿತಗೊಂಡಿದ್ದ ರಾಯಭಾರಿ ಸಂಬಂಧವನ್ನು ಪುನರಾರಂಭಿಸಿದರು. ರಾಜೀವ್ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗ ಚೀನಾಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದಕ್ಕೆ ನಿರ್ಧರಿಸಿದರು. ೧೯೯೦ರ ದಶಕದಲ್ಲಿ ನರಸಿಂಹರಾವ್, ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಗಳಾಗಿದ್ದಾಗ ಚೀನಾ ಪ್ರವಾಸ ಕೈಗೊಂಡು ಆರ್ಥಿಕ, ಸಾಂಸ್ಕೃತಿಕ ಮತ್ತು ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಬಂಧಗಳ ಸುಧಾರಣೆಗೆ ಒತ್ತು ನೀಡಿದರು. ಚೀನಾದ ನಾಯಕರು ಕೂಡ ಭಾರತ ಪ್ರವಾಸವನ್ನು ಕೈಗೊಂಡು ಸಂಬಂಧಗಳ ಸುಧಾರಣೆಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಗಡಿ ವಿವಾದ ಮತ್ತು ಶಕ್ತಿ ಸಮರ ಮುಂದುವರಿದಿದೆ. ಚೀನಾ-ಭಾರತ ನಡುವಿನ ಸಂಬಂಧವನ್ನು ಪೈಪೋಟಿಯಿಂದ ಕೂಡಿದ ಸಹಬಾಳ್ವೆ ಸಂಬಂಧವೆಂದು ಹಲವು ಭದ್ರತಾ ತಜ್ಞರು, ವಿಶೇಷವಾಗಿ ಬ್ರಹ್ಮ ಚಲಾನಿಯವರು ಬಣ್ಣಿಸಿದ್ದಾರೆ.

ಪಾಕಿಸ್ತಾನದೊಡನೆಯೂ ಯುದ್ಧ ರಹಿತ ವಾತಾವರಣದಲ್ಲಿ ಸಮಸ್ಯೆಗಳ ಪರಿಹಾರವನ್ನು ಸಂವಿಧಾನದ ಮೂಲಕ ಹುಡುಕಿಕೊಳ್ಳುವಲ್ಲಿ ನೆಹರೂ ಅವರು ಉತ್ಸುಕರಾಗಿದ್ದರು. ಈ ನಿಟ್ಟಿನಲ್ಲಿ ೧೯೪೯ರಲ್ಲಿ ಮತ್ತು ನಂತರದ ವರ್ಷಗಳಲ್ಲಿ ಯುದ್ಧ ನಿಷೇಧ ಒಪ್ಪಂದವನ್ನು ಪಾಕಿಸ್ತಾನದ ಮುಂದಿಟ್ಟರು. ಆದರೆ ಪಾಕಿಸ್ತಾನಿ ನಾಯಕರು ಕಾಶ್ಮೀರ ಸಮಸ್ಯೆ ಬಗೆಹರಿಯುವವರೆವಿಗೂ ಯುದ್ಧ ನಿಷೇಧ ಒಪ್ಪಂದವು ಸಾಧ್ಯವಿಲ್ಲವೆಂದು ಘೋಷಿಸಿದರು. ಭುಟ್ಟೊ ಅವರು ವಿದೇಶಾಂಗ ಮಂತ್ರಿಯಾಗಿದ್ದಾಗ ಕಾಶ್ಮೀರಕ್ಕಾಗಿ ಭಾರತದೊಡನೆ ಸಾವಿರ ವರ್ಷಗಳ ಯುದ್ಧಕ್ಕೂ ಸಿದ್ಧವೆಂದು ಹೇಳಿದ್ದು ಉಲ್ಲೇಖನೀಯ. ೧೯೬೫ರ ಮತ್ತು ೧೯೭೧ರ ಆಕ್ರಮಣವು ಪಾಕಿಸ್ತಾನದ ಭಾರತ ನೀತಿಯ ಮೂಲ ಉದ್ದೇಶವನ್ನು ತೋರಿಸಿತು. ಆದರೆ ತಾಷ್ಕೆಂಟ್ ಮತ್ತು ಸಿಮ್ಲಾ ಒಪ್ಪಂದಗಳು ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯ ಸಂಧಾನದ ಮೂಲಕ ಬಗೆಹರಿಸುವುದಕ್ಕೆ ಭಾರತ ಬದ್ಧವಾಗಿತ್ತೆನ್ನುವುದನ್ನು ಎತ್ತಿಹಿಡಿಯಿತು. ಈ ಎರಡು ಒಪ್ಪಂದಗಳನ್ನು ಭಾರತದ ಸಂಧಾನ ನೀತಿಮಾರ್ಗಕ್ಕೆ ಲಭಿಸಿದ ತಾತ್ವಿಕ ಜಯವೆಂದು ಪರಿಗಣಿಸಬಹುದು. ವಾಜಪೇಯಿಯವರು ಪಾಕಿಸ್ತಾನದೊಡನೆ ಮಾಡಿಕೊಂಡ ಲಾಹೋರ್‌ಒಪ್ಪಂದವೂ ಭಾರತದ ಸಂಧಾನ ನೀತಿಯ ಮುಂದುವರಿಕೆಯನ್ನು ತೋರಿಸುತ್ತದೆ. ಕಾರ್ಗಿಲ್ ಯುದ್ಧ ಮತ್ತು ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಬೆಂಬಲದಿಂದ ನಡೆಯುತ್ತಿರುವ ಅಲ್ಪಪ್ರಮಾಣದ ಕದನ, ಭಾರತ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಗಳ ನಕಾರಾತ್ಮಕ ಬೆಳವಣಿಗೆಗಳಾಗಿವೆ. ದ್ವಿಪಕ್ಷೀಯ ಸಂಧಾನ ಪ್ರಕ್ರಿಯೆಯೂ ಮುಂದುವರೆದಿದೆ.

. ನಿಶ್ಯಸ್ತ್ರೀಕರಣಕ್ಕೆ ಬಂಬಲ

ಶಾಂತಿ ಸೌಹಾರ್ದತೆಗೆ ಒತ್ತು ನೀಡಿದ ಭಾರತ ನೆಹರೂರವರ ಕಾಲದಲ್ಲಿ ಸಹಜವಾಗಿಯೇ ನಿಶ್ಯಸ್ತ್ರೀಕರಣಕ್ಕೆ ತನ್ನ ಬೆಂಬಲವನ್ನು ಸೂಚಿಸಿತು. ನೆಹರೂರವರು ಆಧುನಿಕತೆಯನ್ನು ಗೌರವಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ರಾಷ್ಟ್ರದ ಅಭಿವೃದ್ಧಿಗೆ ಪೂರಕವೆಂದು ಪರಿಗಣಿಸಿ ಅಣು ಸಂಶೋಧನೆಗೆ ಪ್ರೋತ್ಸಾಹ ನೀಡಿದರೂ ಕೂಡ, ಅವರು ಅಣ್ವಸ್ತ್ರಗಳನ್ನು ತೀವ್ರವಾಗಿ ವಿರೋಧಿಸಿದರು. ಶೀತಲ ಸಮರದ ಕಾಲದಲ್ಲಿ ಅಮೆರಿಕಾ ಮತ್ತು ಸೋವಿಯತ್ ನಾಯಕರಿಗೆ ಪತ್ರಗಳನ್ನು ಬರೆದು ಬೃಹತ್ ರಾಷ್ಟ್ರಗಳು ನಿಶ್ಯಸ್ತ್ರೀಕರಣಕ್ಕೆ ಪ್ರಯತ್ನಿಸಬೇಕೆಂದು ಒತ್ತಾಯಿಸಿದರು. ೧೯೫೪ರಲ್ಲಿ ಅಣ್ವಸ್ತ್ರ ಪ್ರಸರಣೆಯನ್ನು ನಿಷೇಧಿಸಲು ಒಪ್ಪಂದಕ್ಕೆ ಸಹಿಯನ್ನು ಹಾಕಿದರು. ನೆಹರೂರವರ ನಂತರದಲ್ಲಿಯೂ ಭಾರತದ ನಾಯಕರು ನಿಶ್ಯಸ್ತ್ರೀಕರಣವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದವನ್ನು (ಎನ್.ಪಿ.ಟಿ) ಭಾರತವು ತಿರಸ್ಕರಿಸುವುದಕ್ಕೆ ಅದರಲ್ಲಿನ ತಾರತಮ್ಯತೆ ಮತ್ತು ಅಸಮಾನತೆಯಿಂದ ಕೂಡಿದ ಅಂಶಗಳು ಕಾರಣವಾಗಿವೆ. ೧೯೯೮ರಲ್ಲಿ ವಿಸ್ತೃತವಾದ ಅಣ್ವಸ್ತ್ರ ಪ್ರಸರಣ ಒಪ್ಪಂದವನ್ನು (ಸಿ.ಟಿ.ಬಿ.ಟಿ) ಭಾರತ ಎನ್.ಪಿ.ಟಿ.ಯ ವಿಸ್ತರಣೆ ಎಂದು ಪರಿಗಣಿಸಿ ಸಿರಸ್ಕರಿಸಿತು. ಮೂಲತಃ ಭಾರತ ಅಣ್ವಸ್ತ್ರ ರಾಷ್ಟ್ರಗಳು ಅನುಸರಿಸುತ್ತಿರುವ ಅಣು ವಸಾಹತುಶಾಹಿತ್ವ ಹಲವಾರು ಅಣ್ವಸ್ತ್ರವನ್ನು ಹೊಂದಿರಬಹುದು, ಇತರರು ಹೊಂದಿರಬಾರದು ಎನ್ನುವ ನೀತಿಯನ್ನು ತಿರಸ್ಕರಿಸುತ್ತದೆ.

೧೯೭೪ರಲ್ಲಿ ಭಾರತ ಅಣು ಸ್ಪೋಟನೆಯನ್ನು ಕೈಗೊಂಡರೂ, ಇಂದಿರಾ ಗಾಂಧಿ ಅವರು ನಿಶ್ಯಸ್ತ್ರೀಕರಣಕ್ಕೆ ಬದ್ಧರಾಗಿ ಅಣ್ವಸ್ತ್ರಗಳನ್ನು ತಯಾರಿಸುವ ನಿರ್ಧಾರವನ್ನು ಮಾಡಲಿಲ್ಲ. ೧೯೯೮ರಲ್ಲಿ ಎನ್.ಡಿ.ಎ. ಸರ್ಕಾರ ವಾಜಪೇಯಿಯವರ ನೇತೃತ್ವದಲ್ಲಿ ಭಾರತವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿಸಿತು. ಭದ್ರತಾ ಕಾರಣಗಳು ಹಾಗೂ ವಿಶ್ವ ಮಟ್ಟದಲ್ಲಿ ನಿಶ್ಯಸ್ತ್ರೀಕರಣಕ್ಕೆ ಪೂರಕವಾದ ನಿರ್ಧಾರಗಳು ಹೊರಬರದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ತಾವು ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತೆಂದು ವಾಜಪೇಯಿಯವರು ಭಾರತ ಅಣ್ವಸ್ತ್ರ ರಾಷ್ಟ್ರವಾದದ್ದನ್ನು ಸಮರ್ಥಿಸಿಕೊಂಡರು. ಅವರ ಹಿಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರೂ ಕೂಡ ಭಾರತವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿಸುವುದಕ್ಕೆ ೧೯೯೪ರಲ್ಲಿ ಪ್ರಯತ್ನಗಳನ್ನು ಮಾಡಿದ್ದರೆನ್ನುವುದಕ್ಕೆ ಸಾಕಷ್ಟು ಮಾಹಿತಿಗಳು ಲಭ್ಯವಿದೆ. ಆದರೂ ಭಾರತ ಪ್ರಥಮವಾಗಿ ಅಣ್ವಸ್ತ್ರವನ್ನು ಉಪಯೋಗಿಸುವುದಿಲ್ಲ ಎನ್ನುವ ಘೋಷಣೆಯನ್ನು ವಾಜಪೇಯಿ ಸರ್ಕಾರವು ನೀಡಿತು. ಅದಕ್ಕೆ ಯು.ಪಿ.ಎ. ಸರ್ಕಾರವು ಬದ್ಧವಾಗಿರುವುದು ತಾತ್ವಿಕವಾಗಿ ಭಾರತ ಇಂದಿಗೂ ನಿಶ್ಯಸ್ತ್ರೀಕರಣವನ್ನು ಬೆಂಬಲಿಸುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದೆ.

. ವಿಶ್ವಸಂಸ್ಥೆಯಲ್ಲಿ ನಂಬಿಕೆ

ಈ ಹಿಂದೆಯೇ ತಿಳಿಸಿರುವಂತೆ, ಭಾರತವು ವಿಶ್ವಸಂಸ್ಥೆಯ ರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಹಾಗಾಗಿ, ಸ್ವತಂತ್ರ ಭಾರತವು ವಿಶ್ವಸಂಸ್ಥೆಯನ್ನು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮಹತ್ವದ ಪಾತ್ರಧಾರಿಯೆಂದು ಪರಿಗಣಿಸಿ, ಅದರ ಮೂಲಕ ವಿಶ್ವಶಾಂತಿ ಮತ್ತು ತೃತೀಯ ಜಗತ್ತಿನ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಿತು. ತಮಗೆ ವಿಶ್ವಸಂಸ್ಥೆಯಲ್ಲಿದ್ದ ನಂಬಿಕೆ ಮತ್ತು ನಿಷ್ಪಕ್ಷಪಾತತೆಯಿಂದಾಗಿಯೇ ನೆಹರೂರವರು ಕಾಶ್ಮೀರ ಸಮಸ್ಯೆಯನ್ನು ಅಲ್ಲಿಗೆ ಕೊಂಡೊಯ್ಯುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ ಭದ್ರತಾ ಮಂಡಳಿಯಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ನೇರವಾಗಿ ಪಾಕಿಸ್ತಾನದ ಪರವಾಗಿ ವರ್ತಿಸಿದ್ದರಿಂದ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಬೇಕಾಯಿತು. ವಿಶ್ವಸಂಸ್ಥೆಯಲ್ಲಿ ಶಕ್ತಿ ರಾಜಕೀಯ ಕಾಣಿಸಿಕೊಂಡರೂ, ಭಾರತ ಸಾಮಾನ್ಯ ಸಭೆಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿ ವಸಾಹತುಶಾಹಿಯ ನಿರ್ಮೂಲನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿತು. ೧೯೭೦ರ ದಶಕದಲ್ಲಿ ಇಂದಿರಾಗಾಂಧಿ ಅವರು ನೂತನ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಸ್ಥಾಪನೆಗೆ ಸಂಬಂಧಿಸಿದ ನಿಲುವಳಿಯನ್ನು ವಿಶ್ವಸಂಸ್ಥೆ ಅಂಗೀಕರಿಸುವಂತೆ ಮಾಡುವಲ್ಲಿ ಸಫಲರಾದರು. ಅದರ ಫಲವಾಗಿ ಉತ್ತರ ದಕ್ಷಿಣ ಸಂವಾದವು ಆರಂಭಗೊಂಡಿತು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಅಸಹಕಾರ ಮತ್ತು ಸ್ವಾರ್ಥಗಳಿಮದಾಗಿ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯು ಇಂದಿಗೂ ಅಸಮಾನತೆಯಿಂದ ಕೂಡಿದೆ. ಜಾಗತೀಕರಣವು ಅಸಮಾನತೆಯನ್ನು ಹೆಚ್ಚಿಸಿದೆ.

ವಿಶ್ವಸಂಸ್ಥೆಯು ಹಿಂದೂ ಮಹಾಸಾಗರವನ್ನು ಶಾಂತಿವಲಯವನ್ನಾಗಿ ಘೋಷಿಸುವ ನಿರ್ಧಾರವನ್ನು (೧೯೭೦) ಭಾರತದ ಒತ್ತಡ ಹಾಗೂ ಪ್ರಯತ್ನಗಳ ಫಲವಾಗಿ ಕೈಗೊಂಡಿತು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆಯೂ ಕೂಡ, ಬೃಹತ್ ರಾಷ್ಟ್ರಗಳು ಸಹಕರಿಸಲಿಲ್ಲ. ಭಾರತವು ಅಣ್ವಸ್ತ್ರಗಳ ಉಪಯೋಗವು ಮಾನವಕುಲದ ವಿರುದ್ಧದ ಅಕ್ಷಮ್ಯ ಅಪರಾಧವೆನ್ನುವ ನಿಲುವಳಿಯನ್ನು ವಿಶ್ವಸಂಸ್ಥೆಯು ಅಂಗೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ನಿಶ್ಯಸ್ತ್ರೀಕರಣ ಅನುಷ್ಠಾನಕ್ಕೆ ಬರದಿರುವುದಕ್ಕೆ ಅಣ್ವಸ್ತ್ರ ರಾಷ್ಟ್ರಗಳೇ ಕಾರಣ.

ಶೀತಲಸಮರೋತ್ತರದ ಯುಗದಲ್ಲಿ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಾಗಿರುವ ಬದಲಾವಣೆಗಳನ್ನು ಗಮನಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆಯನ್ನು ವಿಸ್ತರಿಸಬೇಕೆಂದು ಹಾಗೂ ಅದರಲ್ಲಿ ಜರ್ಮನಿ, ಜಪಾನ್, ತೃತೀಯ ಜಗತ್ತಿನ ಪ್ರಾತಿನಿಧ್ಯತೆಯನ್ನು ಭಾರತ, ನೈಜೇರಿಯಾ ಮತ್ತು ಬ್ರೆಜಿಲ್, ಅರ್ಜೆಂಟೈನಾ ರಾಷ್ಟ್ರಗಳಿಗೆ ನೀಡಬೇಕೆನ್ನುವ ಸಲಹೆ ಹಾಗೂ ಒತ್ತಡ ತರುತ್ತಿರುವ ರಾಷ್ಟ್ರಗಳ ಬಣಗಳ ಮುಂಚೋಣಿಯಲ್ಲಿ ಭಾರತವು ಸೇರಿದೆ. ಖಾಯಂ ಸದಸ್ಯತ್ವ ಸ್ಥಾನಕ್ಕೆ ಅರ್ಹವೆನ್ನುವುದಕ್ಕೆ ರಾಷ್ಟ್ರದ ಭೌಗೋಳಿಕ ವಿಸ್ತ್ರೀರ್ಣ, ಜನಸಂಖ್ಯೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಗಳಲ್ಲಿ ೧೯೫೦ರ ದಶಕದಿಂದಲೂ ಸಕ್ರಿಯವಾಗಿ ಪಾಲ್ಗೊಂಡಿರುವುದನ್ನು ಹಾಗೂ ಇತ್ತೀಚಿನ ವರ್ಷಗಳಲ್ಲಿ ಅಣ್ವಸ್ತ್ರ ಸ್ಥಾನವನ್ನು ಪಡೆದಿರುವುದನ್ನು ಮುಂದಿಟ್ಟು ಭಾರತದ ನಾಯಕರು ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

. ತೃತೀಯ ಜಗತ್ತಿಗೆ ಪ್ರಾಮುಖ್ಯತೆ

ಭಾರತದ ವಿದೇಶಾಂಗ ನೀತಿಯು ತೃತೀಯ ಜಗತ್ತಿನ ರಾಷ್ಟ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಿಗೆ ಆಧ್ಯತೆಯನ್ನು ನೀಡುವ ಗುರಿಯನ್ನು ನೆಹರೂರವರ ಕಾಲದಲ್ಲಿಯೇ ತೆಗೆದುಕೊಂಡಿತು. ದೆಹಲಿಯಲ್ಲಿ ಜರುಗಿದ ಏಷ್ಯಾ-ಆಫ್ರಿಕಾ ರಾಷ್ಟ್ರಗಳ ಸಭೆ (೧೯೪೯), ಬಾಂಡುಂಗ್‌ಸಭೆ (೧೯೫೫) ಅಲಿಪ್ತ ಚಳುವಳಿಯ ಸ್ಥಾಪನೆ (೧೯೬೧) ಭಾರತದ ತೃತೀಯ ಜಗತ್ತಿನ ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸಬೇಕೆನ್ನುವುದು ಭಾರತದ ಗುರಿಯಾಗಿತ್ತು. ಹಲವು ವಿಶ್ಲೇಷಕರು ಬಣ್ಣಿಸಿರುವಂತೆ ಇದರಿಂದಾಗಿ ಭಾರತ-ಚೀನಾ ನಡುವೆ ತೃತೀಯ ಜಗತ್ತಿನ ನಾಯಕತ್ವಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿಯೂ ಪೈಪೋಟಿ ಆರಂಭವಾಯಿತು. ಆದರೆ ಅಲಿಪ್ತ ಚಳುವಳಿಯಲ್ಲಿ ಚೀನಾ ಭಾಗಿಯಾಗಿಲ್ಲದ ಕಾರಣ ಉಭಯ ರಾಷ್ಟ್ರಗಳು ತಮ್ಮದೇ ಆದ ರೀತಿಯಲ್ಲಿ ತೃತೀಯ ಜಗತ್ತಿನ ವಿಷಯಗಳಿಗೆ ಸಂಬಂಧಿಸಿದಂತೆ ವರ್ತಿಸಿದವು. ಈಗಾಗಲೇ ಪ್ರಸ್ತಾಪಿಸಿರುವಂತೆ, ಹಿಂದೂ ಮಹಾಸಾಗರಕ್ಕೆ ಹಾಗೂ ಅಂತರರಾಷ್ಟ್ರೀಯ ಆರ್ಥಿಕ ಸಮಾನತೆ ಮತ್ತು ನ್ಯಾಯಕ್ಕೆ ಸಂಬಂಧಿಸಿದಂತೆ ಇಂದಿರಾಗಾಂಧಿ ಅವರು ತೃತೀಯ ಜಗತ್ತಿನ ರಾಷ್ಟ್ರಗಳ ಪರವಾದ ನೀತಿಯನ್ನು ಅನುಸರಿಸಿದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತವು ಹಿಂದಿನ ತೃತೀಯ ಜಗತ್ತಿನ ಮಿತ್ರರಾಷ್ಟ್ರಗಳನ್ನು ಕಡೆಗಣಿಸಲಾರಂಭಿಸಿದೆ. ವಿಶ್ವರಾಜಕಾರಣದಲ್ಲಿ ಮುಂದುವರೆದ ರಾಷ್ಟ್ರಗಳೊಡನೆ, ವಿಶೇಷವಾಗಿ ಅಮೆರಿಕಾದೊಡನೆ ಸಂಬಂಧವನ್ನು ಸುಧಾರಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಿದೆ. ೨೧ನೆಯ ಶತಮಾನದಲ್ಲಿ ತನ್ನ ಆರ್ಥಿಕ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನದ ಬಲದಿಂದ ಬೃಹತ್ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ ಎನ್ನುವ ಟೀಕೆಗಳು ಅಭಿಪ್ರಾಯಗಳು ಮೂಡಿಬರುತ್ತಿವೆ. ಹಲವು “ತೃತೀಯ ಜಗತ್ತಿನ” ನಾಯಕರು ಭಾರತದ ಇತ್ತೀಚಿನ ಒಲವುಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲಾರಂಭಿಸಿದ್ದಾರೆ. ಈ ರೀತಿಯ ಭಾವನೆಗಳು ಆಗಿಂದಾಗ್ಗೆ ವ್ಯಕ್ತವಾಗುತ್ತಿದ್ದರೂ, ಭಾರತದ ನಾಯಕರು ತಮ್ಮ ವಿದೇಶಾಂಗ ನೀತಿಯಲ್ಲಿ ಸಮತೋಲನವನ್ನು ಬೃಹತ್ ರಾಷ್ಟ್ರಸ್ಥಾನದ ಬಯಕೆ ಮತ್ತು “ತೃತೀಯ ಜಗತ್ತಿನ” ಮಿತ್ರ ರಾಷ್ಟ್ರಗಳ ಅಭ್ಯುದಯ ಕಾಪಾಡಿಕೊಂಡು ಹೋಗುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನುವುದು ಹಲವರ ವಾದವಾಗಿದೆ.

. ಕಾಮನ್‌ವೆಲ್ತ್ ಒಕ್ಕೂಟದ ಮುಂದುವರೆದ ಸದಸ್ಯತ್ವ

ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದ ನಂತರ ಬ್ರಿಟಿಷ್ ಕಾಮನ್‌ವೆಲ್ತ್ ಒಕ್ಕೂಟದಲ್ಲಿ ಮುಂದುವರೆಯಬೇಕೇ ಬೇಡವೇ ಎನ್ನುವ ಜಿಜ್ಞಾಸೆ ಭಾರತದ ನಾಯಕರನ್ನು ಕಾಡಿದರೂ ಕೂಡ, ಅಂತಿಮವಾಗಿ ನೆಹರೂ ಅವರು ಸದಸ್ಯತ್ವವನ್ನು ಮುಂದುವರೆಸುವ ನಿರ್ಧಾರವನ್ನು ಕೈಗೊಂಡರು. ಅವರ ದೃಷ್ಟಿಯಲ್ಲಿ, ಕಾಮನ್‌ವೆಲ್ತ್ ನಲ್ಲಿ ಮುಂದುವರೆದು ಅದನ್ನು ಬಿಳೀ ಜನಾಂಗದ ಜನರ ಒಕ್ಕೂಟದಿಂದ ಬಹುಜನಾಂಗೀಯ ಒಕ್ಕೂಟವನ್ನಾಗಿ ಮಾಪಾಡು ಮಾಡುವುದು ಮತ್ತು ಆ ಪ್ರಕ್ರಿಯೆಗೆ ಭಾರತ ನಾಯಕತ್ವವನ್ನು ನೀಡುವುದು ಮುಖ್ಯವಾಗಿತ್ತು. ಭಾರತವು ಈ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ೧೯೭೦ರ ದಶಕದಿಂದೀಚೆಗೆ ಕಾಮನ್‌ವೆಲ್ತ್ ನಲ್ಲಿ ಏಷ್ಯಾ-ಆಫ್ರಿಕಾ ರಾಷ್ಟ್ರಗಳ ಸಂಖ್ಯೆಯು ಹೆಚ್ಚಾಗಿದೆ. ವೈಯಕ್ತಿಕವಾಗಿ, ಭಾರತಕ್ಕೆ ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲಾಭಗಳೂ ಉಂಟಾಗಿವೆ. ಭಾರತದ ಮೂಲದವರೇ ಆದ ಶ್ರೀದತ್‌ರಾಂಫಾಲ್ ಅವರು ಹಿಂದೆ ಕಾಮನ್‌ವೆಲ್ತ್‌ನ ಮಹಾಕಾರ್ಯದರ್ಶಿಯಾಗಿ ಉತ್ತಮ ಕೆಲಸ ನಿಭಾಯಿಸಿದರು.

. ಪ್ರಾದೇಶಿಕ ಸಹಕಾರಕ್ಕೆ ಬೆಂಬಲ

ಪ್ರಾದೇಶಿಕ ಸಹಕಾರಕ್ಕೆ ಸಂಬಂಧಿಸಿದಂತೆ ನೆಹರೂ ಅವರ ಕಾಲದಿಂದಲೂ, ಭಾರತ ಬೆಂಬಲ ನೀಡುತ್ತಲೇ ಬಂದಿದೆ. ದಕ್ಷಿಣ ಏಷ್ಯಾ ‌ಪ್ರದೇಶಕ್ಕೆ ಅನ್ವಯಿಸುವಂತೆ ಸಾರ್ಕ್‌ಸಂಸ್ಥೆಯು ಬಾಂಗ್ಲಾದೇಶದ ಪ್ರಯತ್ನದಿಂದ ಅಸ್ತಿತ್ವಕ್ಕೆ ಬಂದಿದ್ದರೂ, ದಕ್ಷಿಣ ಏಷ್ಯಾ ಪ್ರದೇಶದ ರಾಷ್ಟ್ರಗಳ ನಡುವೆ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತಿತರೇ ಸಹಕಾರವನ್ನು ವೃದ್ಧಿಸುವಲ್ಲಿ ಭಾರತ ನಿರ್ಣಾಯಕ ಪಾತ್ರವನ್ನು ನಿಭಾಯಿಸುತ್ತಿದೆ. ಸಾರ್ಕ್ ಪ್ರದೇಶವನ್ನು ಮುಕ್ತ ವ್ಯಾಪಾರ ಕ್ಷೇತ್ರವನ್ನಾಗಿಸುವಲ್ಲಿ ಭಾರತ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಜೊತೆಯಲ್ಲಿಯೇ ೧೯೯೦ರ ದಶಕದಿಂದ ಭಾರತ ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳೊಡನೆ ಆಸಿಯಾನ್ ವ್ಯಾಪಾರ ವಾಣಿಜ್ಯ ಸಂಬಂಧವನ್ನು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಲಾರಂಭಿಸಿದೆ. ಆದರೆ ಆಫ್ರಿಕಾ ಖಂಡದ ಮತ್ತು ಲ್ಯಾಟಿನ್ ಅಮೆರಿಕಾ ಪ್ರದೇಶದ ದೇಶಗಳನ್ನು ಕಡೆಗಣಿಸಿದೆ. ಈ ಪ್ರದೇಶಗಳೊಡನೆ ಸಹಕಾರವನ್ನು ಬೆಳೆಸಿಕೊಳ್ಳುವ ಬಗ್ಗೆ ಸರ್ಕಾರ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು.

ವಿದೇಶಾಂಗ ನೀತಿಯ ಮೌಲ್ಯಮಾಪನ

ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳು ಹಾಗೂ ಗುರಿಗಳ ಬಗ್ಗೆ ಗಮನಹರಿಸಿದರೆ ಅವುಗಳ ಪಾಲನೆ ಹೆಚ್ಚಿನ ಮಟ್ಟಿಗೆ ಸಮರ್ಪಕವಾಗಿದೆ ಎನಿಸುತ್ತದೆ. ೧೯೫೦ರ ಮತ್ತು ೧೯೬೦ರ ದಶಕದಲ್ಲಿ ವಸಹಾತುಶಾಹಿ ಹಾಗೂ ಸಾಮ್ರಾಜ್ಯಶಾಹಿ ವಿರೋಧ ತತ್ವಕ್ಕೆ ವ್ಯಾಪಕ ಬೆಂಬಲ ಮತ್ತು ಪುರಸ್ಕಾರ ಸಿಕ್ಕಿತು. ಏಷ್ಯಾ-ಆಫ್ರಿಕಾ ಪ್ರದೇಶಗಳ ರಾಷ್ಟ್ರಗಳ ನಾಯಕರೇ ತಿಳಿಸಿರುವಂತೆ ಭಾರತದ ತಾತ್ವಿಕ ಮತ್ತು ಇತರೇ ಬೆಂಬಲವು ಅವರ ಗುರಿಸಾಧನೆಯನ್ನು ಸುಲಭಗೊಳಿಸಿತು. ವಿಶ್ವಸಂಸ್ಥೆಯೂ ಕೂಡ ಭಾರತವನ್ನು ತನ್ನ ಬಹುತೇಕ ಕಾರ್ಯಕ್ರಮಗಳನ್ನು ಭಾಗಿಯನ್ನಾಗಿಸಿಕೊಂಡಿತು. ಕೋರಿಯಾ ಯುದ್ಧದ ನಂತರದಲ್ಲಿ ಅಲ್ಲಿನ ಶಾಂತಿ ಪ್ರಕ್ರಿಯೆಯಲ್ಲಿ ಮತ್ತು ಸಾಮಾನ್ಯ ಸಭೆಯ ವಸಾಹತು ನಿರ್ಮೂಲನಾ ಸಮಿತಿಯಲ್ಲಿ, ಇಂಡೋ ಚೀನಾ ಪ್ರದೇಶಕ್ಕೆ ಸಂಬಂಧಿಸಿದ ಶಾಂತಿ ಸ್ಥಾಪನಾ ಪ್ರಕ್ರಿಯೆಯಲ್ಲಿ ವಿಶ್ವಸಂಸ್ಥೆಯು ಭಾರತವನ್ನು ಸಕ್ರಿಯವಾಗಿ ಬಳಸಿಕೊಂಡಿತು. ಅಂತಾರಾಷ್ಟ್ರೀಯ ಸಂಬಂಧಗಳ ಪ್ರತಿಷ್ಟಿತ ತಜ್ಞ ಹೆಡ್ಲಿಬುಲ್‌ ಅವರು ವಿಶ್ಲೇಷಿಸಿದಂತೆ “ನೆಹರೂ ಅವರ ಕಾಲದಲ್ಲಿ ಭಾರತ ಬಲಶಾಲೀ ರಾಷ್ಟ್ರವಾಗಿಲ್ಲದಿದ್ದರೂ, ಪ್ರಭಾವಶಾಲಿ ರಾಷ್ಟ್ರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪಾತ್ರವನ್ನು ನಿಭಾಯಿಸಿತು”.

ನೆಹರೂ ಅವರ ವಿದೇಶಾಂಗ ನೀತಿ ಮುಖ್ಯ ನ್ಯೂನತೆಯೆಂದರೆ ಅದು ಬಾಹ್ಯ ಮೂಲ್ಯದ ಬೆದರಿಕೆಗಳು ಹಾಗೂ ಶಸ್ತ್ರಾಸ್ತ್ರಗಳ ಅವಶ್ಯಕತೆಯನ್ನು ನಿರ್ಲಕ್ಷಿಸಿದ್ದು. ಭದ್ರತಾ ಸವಾಲುಗಳನ್ನು ಸಂಧಾನದ ಮೂಲಕ ಎದುರಿಸುವುದು ನೆಹರೂ ಅವರ ನೀತಿಯಾಗಿತ್ತು. ಪಾಕಿಸ್ತಾನಕ್ಕೆ ಅವರು ಸೂಚಿಸಿದ ಯುದ್ಧ ನಿಷೇಧ ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಚೀನಾದ ಮೂಲದಿಂದ ರಾಜಕೀಯವಾಗಿ ಸವಾಲು ಮೂಡಲಿದೆ, ಆದರೆ ಅದು ಲಿಮಿಟರಿ ರೂಪದಲ್ಲಲ್ಲ ಎನ್ನುವ ಭಾವನೆಯನ್ನು ನೆಹರೂ ಅವರು ಅನೇಕ ಬಾರಿ ಪ್ರಕಟಿಸಿದ್ದರು. ಆದರೆ ೧೯೬೨ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ, ಅವರ ಆದರ್ಶವಾದ ಕಲ್ಪನೆಗೆ ತೀವ್ರವಾದ ಪೆಟ್ಟುಬಿದ್ದಿತು. ತಮ್ಮ ಚೀನಾನೀತಿಯ ನ್ಯೂನತೆಗಳನ್ನು ಅವರು ತಮ್ಮ ಲೇಖನ “ಇಂಡಿಯಾ ಆಂಡ್‌ ದಿ ವರ್ಲ್ಡ್‌: ಫಾರಿನ್ ಅಫೇರ್ಸ್”ದಲ್ಲಿ (ನ್ಯೂಯಾರ್ಕ್‌ ಏಪ್ರಿಲ್ ೧೯೬೮) ಒಪ್ಪಿಕೊಂಡು ಭವಿಷ್ಯದಲ್ಲಿ ಭದ್ರತಾ ನೀತಿಗೆ ಸೂಕ್ತ ಮಹತ್ವವನ್ನು ಕೊಡುವ ನಿರ್ಧಾರವನ್ನು ಪ್ರಕಟಿಸಿದರು. ಅವರ ಕಾಲದಲ್ಲಿಯೇ ನಿಯೋಜನೆಗೊಂಡ ಭದ್ರತಾ ಯೋಜನೆಯು ಅವರ ತರುವಾಯ ಅನುಷ್ಟಾನಕ್ಕೆ ಬಂದಿತು.

ಭಾರತದ ಪ್ರಧಾನ ಮಂತ್ರಿಯಾಗಿ ಇಂದಿರಾಗಾಂಧಿ ಅವರು ನೈಜವಾದದ ಚೌಲಟ್ಟಿನಲ್ಲಿ ವಿದೇಶಾಂಗ ನೀತಿಯನ್ನು ರೂಪಿಸುವುದಕ್ಕೆ ಹಾಗೂ ಕಾರ್ಯರೂಪಕ್ಕೆ ತರುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಭದ್ರತಾ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಪ್ರಕ್ರಿಯೆಗಳನ್ನು ಜಾರಿಗೊಳಿಸಿದರು. ದೇಶದ ಭದ್ರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೋವಿಯತ್ ಒಕ್ಕೂಟದೊಡನೆ ಮೈತ್ರಿ ಸಹಕಾರ ಒಪ್ಪಂದವನ್ನು ಮಾಡಿಕೊಂಡು, ಅದರಲ್ಲಿ ರಕ್ಷಣಾ ಅವಶ್ಯಕತೆಗೆ ಸಂಬಂಧಿಸಿದ ಅಂಶವನ್ನು ವಿಧಿ ಒಂಬತ್ತರಲ್ಲಿ ಮೂಡಬರುವಂತೆ ಮಾಡಿದರು. ವಿರೋಧ ಪಕ್ಷದವರು ಈ ರೀತಿಯ ರಕ್ಷಣಾ ಅಂಶವನ್ನು ದ್ವಿಪಕ್ಷೀಯ ಒಪ್ಪಂದದಲ್ಲಿ ಸೇರಿಸುವುದರಿಂದ ಅಲಿಪ್ತ ನೀತಿಯ ಉಲ್ಲಂಘನೆಯಾಗಿದೆ ಎಂದು ಟೀಕಿಸಿದಾಗ, ಅದನ್ನು ಸಮರ್ಥಿಸಿಕೊಂಡು ಅದು ಅಲಿಪ್ತ ನೀತಿಯ ಚಲನಶೀಲತೆಯ ಹಾಗೂ ನೂತನ ಸಂಪ್ರದಾಯದ ಪ್ರತೀಕ ಎಂದು ಬಣ್ಣಿಸಿದರು. ಸೋವಿಯತ್ ಒಕ್ಕೂಟದ ಮಿಲಿಟರಿ ನೆರವಿನ ಅಂಶದಿಂದಲೇ ಭಾರತ ಪಾಕಿಸ್ತಾನ ಯುದ್ಧದಲ್ಲಿ (೧೯೭೧) ಅಮೆರಿಕಾ ಪಾಕಿಸ್ತಾನದ ಪರವಾಗಿ ನೇರ ಹಸ್ತಕ್ಷೇಪ ಮಾಡಲಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಬಾಂಗ್ಲಾದೇಶದ ವಿಮೋಚನೆಯ ಅಸ್ತಿತ್ವಕ್ಕೆ ಕಾರಣರಾಗಿ ಇಂದಿರಾಗಾಂಧಿ ಅವರು ಪ್ರಾದೇಶಿಕ ಶಕ್ತಿ ಸಮತೋಲನ ಭಾರತದ ಪರವಾಗಿ ಮೂಡಿಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ಹಿಂದೆಯೇ ತಿಳಿಸಿದಂತೆ ೧೯೬೮ರಲ್ಲಿ ಭಾರತವು ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದವನ್ನು ತಿರಸ್ಕರಿಸಿದ್ದು ಮತ್ತು ೧೯೭೪ರಲ್ಲಿ ಅಣು ಸ್ಫೋಟನೆಯನ್ನು ನಡೆಸಿದ್ದು ಭಾರತದ ಭದ್ರತೆಯನ್ನು ಬಲಪಡಿಸುವ ದೃಷ್ಟಿಯಿಂದ ಇಂದಿರಾಗಾಂಧಿ ಅವರು ಕೈಗೊಂಡ ಹಲವು ಪ್ರಮುಖ ನಿರ್ಧಾರಗಳು.

ಭಾರತದ ರಾಷ್ಟ್ರ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಹೋಗುವುದರ ಜೊತೆಯಲ್ಲಿಯೇ ತೃತೀಯ ಜಗತ್ತಿನ ಶಾಂತಿ ಮತ್ತು ಅಭಿವೃದ್ಧಿಯೂ ಇಂದಿರಾಗಾಂಧಿ ಅವರ ಪ್ರಮುಖ ಕಾಳಜಿಯಾಗಿತ್ತು. ಹಿಂದೂ ಮಹಾಸಾಗರವನ್ನು ಶಾಂತಿವಲಯವನ್ನಾಗಿ ವಿಶ್ವಸಂಸ್ಥೆಯು ೧೯೭೦-೭೧ರಲ್ಲಿ ಘೋಷಿಸುವ ನಿಲುವಳಿ ಮತ್ತು ನೂತನ ಅಂತಾರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ನಿಲುವಳಿ (೧೯೭೪) ಹಾಗೂ ಅವುಗಳ ಅಂಗೀಕಾರದಲ್ಲಿ ಭಾರತದ, ವಿಶೇಷವಾಗಿ ಇಂದಿರಾಗಾಂಧಿ ಅವರ ಪಾತ್ರ ನಿರ್ಣಾಯಕವಾಗಿತ್ತು. ಶೀತಲ ಸಮರದ ಅಂತ್ಯವು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಚಾರಿತ್ರಿಕ ಬದಲಾವಣೆಗಳನ್ನು ತಂದಿತು. ಅವುಗಳಲ್ಲಿ ಪ್ರಮುಖವಾದವು ಸೋವಿಯತ್ ಒಕ್ಕೂಟದ ಪತನ, ಸಮಾಜವಾದದ ಕುಸಿಯುವಿಕೆ ಮತ್ತು ಅದರ ಜೊತೆಯಲ್ಲಿಯೇ ಮೂಡಿಬಂದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಅಲೆಗಳನ್ನು ಈ ಸಂದರ್ಭದಲ್ಲಿ ಗುರುತಿಸಬಹುದು. ಭಾರತವು ಈ ಕಾಲಘಟ್ಟದಲ್ಲಿ ತನ್ನ ವಿದೇಶಾಂಗ ನೀತಿಯಲ್ಲಿ ಹಲವು ಗಮನಾರ್ಹ ಬದಲಾವಣೆಗಳನ್ನು ನರಸಿಂಹರಾವ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಮಾಡಿಕೊಂಡಿತು. ಅವುಗಳಲ್ಲಿ ಮುಖ್ಯವಾದವು ಸೋವಿಯತ್‌ ಒಕ್ಕೂಟದ ಉತ್ತರಾಧಿಕಾರಿ ರಷ್ಯಾದೊಂದಿಗೆ ತನ್ನ ಸಾಂಪ್ರದಾಯಿಕ ಸಂಬಂಧಗಳನ್ನು ಮುಂದುವರೆಸುತ್ತಲೇ, ಅಮೆರಿಕಾದೊಡನೆ ಮೈತ್ರಿ ಮತ್ತು ಸಹಕಾರವನ್ನು ಹೆಚ್ಚಿಸಿಕೊಳ್ಳುವುದಾಗಿತ್ತು. ನರಸಿಂಹರಾವ್ ಅವರು ಜಾಗತೀಕರಣ ಅಲೆಯ ವಾಸ್ತವತೆಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಆರ್ಥಿಕ ಮತ್ತು ವಾಣಿಜ್ಯ ನೀತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿದರು. ವಿದೇಶಿ ಬಂಡವಾಳವನ್ನು, ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಆಹ್ವಾನಿಸುವುದು, ಆಂತರಿಕವಾಗಿ ಕೈಗಾರಿಕೆಗಳನ್ನು ಖಾಸಗೀಕರಣಕ್ಕೆ ಒಳಪಡಿಸುವುದು, ಆರ್ಥಿಕ ನೀತಿಯ ಮುಖ್ಯ ಗುರಿಗಳಾದವು. ಸರಕಾರದ ಈ ನೀತಿಗಳು ನವವಸಾಹತುಶಾಹಿಯನ್ನು ಸ್ವಾಗತಿಸುವುದಾಗಿದೆ. ಇದು ಭಾರತದ ಸಾಂಪ್ರದಾಯಿಕ ಧೋರಣೆಗೆ ವಿರುದ್ಧವಾಗಿದೆ ಎನ್ನುವ ಟೀಕೆಗಳು ಸಹಕವಾಗಿ ಮೂಡಿಬಂದವು. ಜಾಗತೀಕರಣವು ಭಾರತದ ಅಭಿವೃದ್ಧಿಗೆ ಪೂರಕವೇ ಮಾರಕವೇ ಎನ್ನುವ ಬಗ್ಗೆ ಚರ್ಚೆ ಮುಂದುವರೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ನಾಯಕರು ಜಾಗತೀಕರಣ ನಕಾರಾತ್ಮಕ ಪರಿಣಾಮಗಳ ಬಗ್ಗೆ ಗಂಭೀರವಾಗಿ ಅವಲೋಕಿಸಿ ಆರ್ಥಿಕ, ವಾಣಿಜ್ಯ ನೀತಿಗಳಲ್ಲಿ ಸೂಕ್ತ ಮಾರ್ಪಾಡು ಮಾಡಿಕೊಳ್ಳುವ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.

ಅಮೆರಿಕಾದೊಡನೆ ಆರ್ಥಿಕ ಮತ್ತು ಭದ್ರತಾ ಸಂಬಂಧವನ್ನು ಬೆಳೆಸಿಕೊಳ್ಳಬೇಕೆನ್ನುವ ಕಾತುರದಿಂದ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾತ್ವಿಕವಾಗಿ ತನ್ನ ವಿದೇಶಾಂಗ ನೀತಿಯ ಗುರಿಗಳನ್ನು ರಾಜಿ ಮಾಡಿಕೊಂಡಿದೆ. ಇರಾಕ್, ಇರಾನ್ ಮತ್ತು ಇಸ್ರೇಲ್ ಪ್ಯಾಲೆಸ್ಟೇನಿಯನ್ನರ ಸಮಸ್ಯೆಯ ವಿಷಯಗಳಿಗೆ ಸಂಬಂಧಿಸಿದಂತೆ ಬಾರತವು ಅಮೆರಿಕಾ ಪರ ನೀತಿಯನ್ನು ಅನುಸರಿಸುತ್ತಿದೆ. ಇರಾಕ್ ಯುದ್ಧದಲ್ಲಿ ಅಮೆರಿಕಾ ಪರವಾಗಿ ಸೈನಿಕರನ್ನು ಕಳಿಸುವ ನಿರ್ಧಾರವನ್ನು ವಾಜಪೇಯಿ ಸರ್ಕಾರ ತೆಗೆದುಕೊಳ್ಳುವುದರಲ್ಲಿ ಉತ್ಸುಕವಾಗಿತ್ತು ಮತ್ತು ಪ್ರಸ್ತುತ ಡಾ. ಮನಮೋಹನ್ ಸಿಂಗ್ ಸರ್ಕಾರ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ದೇಶದ ಭದ್ರತೆ ವಿಷಯದಲ್ಲಿ ರಾಜಿಮಾಡಿಕೊಳ್ಳಲಿದೆ ಎಂದು ಎಡಪಕ್ಷಗಳು ಹಾಗೂ ಬುದ್ಧಿಜೀವಿಗಳು ಸರ್ಕಾರದ ವಿದೇಶಾಂಗ ನೀತಿಯನ್ನು ಬಲವಾಗಿ ಟೀಕಿಸುತ್ತಿದ್ದಾರೆ. ಅಂತರ ರಾಷ್ಟ್ರೀಯ ವ್ಯವಸ್ಥೆಯನ್ನು ಏಕಧೃವ ವ್ಯವಸ್ಥೆ (ಯೂನಿಪೋಲಾರ್) ಎಂದು ಅಮೆರಿಕಾದ ನಾಯಕರು ಘೋಷಿಸುವುದನ್ನು ತಾತ್ವಿಕವಾಗಿ ಭಾರತ ತಿರಸ್ಕರಿಸಿದ್ದರೂ, ಅದನ್ನು ಬಹುಧೃವ ವ್ಯವಸ್ಥೆಯನ್ನಾಗಿಸುವುದರಲ್ಲಿ (ಮಲ್ಟಿ ಪೋಲಾರ್) ದೇಶದ ನಾಯಕರು ನಿರೀಕ್ಷಿತ ರೀತಿಯಲ್ಲಿ ವರ್ತಿಸಿಲ್ಲ. ಚೀನಾ, ರಷ್ಯಾ, ಯೂರೋಪಿಯನ್ ಒಕ್ಕೂಟ ಹಾಗೂ ಲ್ಯಾಟಿನ್ ಅಮೆರಿಕನ್ ಪ್ರದೇಶದ ರಾಷ್ಟ್ರಗಳೊಡನೆ ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ನಿರಂತರ ಸಂಪರ್ಕವನ್ನು ಬೆಳೆಸಿಕೊಳ್ಳಬೇಕಾಗಿದೆ. ೨೧ನೆಯ ಶತಮಾನದಲ್ಲಿ ಭಾರತ ಒಂದು ಪ್ರತಿಷ್ಠಿತ ರಾಷ್ಟ್ರವಾಗಿ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಪಾತ್ರವನ್ನು ನಿಭಾಯಿಸಬೇಕಾದರೆ ತನ್ನ ಸಾರ್ವಭೌಮತ್ವವನ್ನು ಮತ್ತು ಪರಮಾಧಿಕಾರವನ್ನು ಕಾಪಾಡಿಕೊಂಡು ವಿದೇಶಾಂಗ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ರಾಷ್ಟ್ರ ಹಿತಾಸಕ್ತಿಗನುಗುಣವಾಗಿ ಸ್ವತಂತ್ರವಾಗಿ ತೆಗೆದುಕೊಳ್ಳಬೇಕು.