ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಭಾರತ ಎದುರಿಸಿದ ಸಮಸ್ಯೆಗಳಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಬಹುಮುಖ್ಯವಾದುದು. ದಕ್ಷಿಣ ಆಭರತದ ನಾಲ್ಕು ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳು ಭಾಷೆಯ ಆಧಾರದ ಮೇಲೆ ನಿರ್ಮಾಣಗೊಂಡಂತಹವು. ಇದರರ್ಥ ಜಾತಿ, ವರ್ಗ ಹಾಗೂ ಭೌಗೋಳಿಕ ಹಿತಾಸಕ್ತಿಗಳು ತಟಸ್ಥವಾಗಿದ್ದವು ಎಂದಲ್ಲ. ಇವುಗಳು ರಾಜ್ಯಗಳ ಗಡಿಗಳನ್ನು ನಿರ್ಧರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರಲಿಲ್ಲ ಎಂದಷ್ಟೇ ಹೇಳಬಹುದು. ದಕ್ಷಿಣ ಭಾರತದ ರಾಜ್ಯಗಳು ಭಾಷೆಯ ಆಧಾರದ ಮೇಲೆ ನಿರ್ಮಾಣಗೊಂಡರೂ ಅವುಗಳು ತಮ್ಮ ಏಕೀಕರಣಕ್ಕಾಗಿ ಬಳಸಿದ ಹಾದಿ ಬೇರೆಬೇರೆಯದ್ದು. ಕೇರಳದಲ್ಲಿ ಏಕೀಕರಣಕ್ಕಾಗಿ ನಡೆದ ಚಳವಳಿ ಇತರ ರಾಜ್ಯಗಳಲ್ಲಿ ನಡೆದ ಚಳವಳಿಗಿಂತ ಭಿನ್ನವಾಗಿರುವುದು ಕಂಡುಬರುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ವಿಚಾರವನ್ನು ಮುಂದಿಟ್ಟುಕೊಂಡು ಕೇರಳವನ್ನು ಒಂದು ಗೂಡಿಸುವ ಪ್ರಯತ್ನವನ್ನು ಮಾಡಿದರೆ, ಕೇರಳದ ಎಡಪಂಥೀಯ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಹಾಗೂ ಸುಭದ್ರ ಆರ್ಥಿಕ ತಳಹದಿಯ ಮೇಲೆ ಮಲಯಾಳಿ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರು. ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳ ರಚನೆ ಕುರಿತು ಅನೇಕ ಬಾರಿ ದ್ವಂದ್ವ ನಿಲುವನ್ನು ಹೊಂದಿದ್ದರೂ ಎಡಪಂಥೀಯರು ಈ ಕುರಿತಂತೆ ಸ್ಪಷ್ಟ ನಿಲುವನ್ನು ಹೊಂದಿದ್ದನ್ನು ಕಾಣಬಹುದಾಗಿದೆ. ಏಕೀಕರಣದ ಜೊತೆಜೊತೆಗೆ ಕೇರಳವು ಆರ್ಥಿಕವಾಗಿ ಪ್ರಗತಿಪಥದತ್ತ ಮುನ್ನಡೆಯುವ ಹಾಗೂ ಭಾಷಿಕವಾಗಿ ಭಾರತದ ಇತರ ಭಾಷೆಗಳಿಗೆ ಸರಿಸಮಾನವಾಗಿ ಬೆಳೆಯುವ ಕಾರ್ಯತಂತ್ರವನ್ನು ಎಡಪಂಥೀಯರು ಹೊಂದಿದ್ದರು. ಈ ವಿಚಾರಗಳನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.

ಕೇರಳದಲ್ಲಿ ಏಕೀಕರಣಕ್ಕಾಗಿ ನಡೆದ ಚಳವಳಿಯನ್ನು ‘ಐಕ್ಯ ಕೇರಳ ಚಳವಳಿ’ ಎಂಬುದಾಗಿ ಕರೆಯಲಾಗಿದೆ. ಮಲಯಾಳಂ ಭಾಷೆ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನಗಳು ಇಪ್ಪತ್ತನೆಯ ಶತಮಾನದ ಆರಂಭದಿಂದಲೇ ನಡೆದಿರುವುದನ್ನು ಕಾಣಬಹುದಾಗಿದೆ. ಪ್ರತ್ಯೇಕ ಕೇರಳ ರಾಜ್ಯ ನಿರ್ಮಾ ಸಂದರ್ಭದಲ್ಲಿ ತಿರುವಾಂಕೂರು-ಕೊಚ್ಚಿನ್ ಮತ್ತು ಮಲಬಾರ್ ಪ್ರದೇಶಗಳ ಸಮಸ್ಯೆಗಳೇ ಪ್ರಮುಖವಾಗಿದ್ದವು. ಇವೆಲ್ಲವನ್ನು ಒಟ್ಟು ಸೇರಿಸಿ ಪ್ರತ್ಯೇಕ ಕೇರಳ ರಾಜ್ಯ ನಿರ್ಮಾಣ ಮಾಡುವ ಐಕ್ಯ ಕೇರಳವಾದಿಗಳ ಹೋರಾಟ ದಕ್ಷಿಣ ಭಾರತದ ಇತರ ರಾಜ್ಯಗಳ ಏಕೀಕರಣ ಹೋರಾಟದಂತೆ ಅತ್ಯಂತ ಕುತೂಹಲಕರವಾಗಿದ್ದು, ಹಲವಾರು ತಿರುವುಗಳನ್ನು ಪಡೆದುಕೊಂಡಿರುವಂತದ್ದು. ಭಾಷಾವಾರು ಪ್ರಾಂತ್ಯಗಳ ರಚನೆಯ ಕುರಿತು ಚರ್ಚೆಗಳು ಕಾಣಿಸಿಕೊಂಡ ಆರಂಭದಲ್ಲೇ ಮಲಯಾಳಿಗಳು ಎಚ್ಚೆತ್ತುಕೊಂಡಿದ್ದರು ಬೃಹತ್ ಭಾರತದಲ್ಲಿ ನಾವೆಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತೇವೆಯೋ ಎನ್ನುವ ಆತಂಕ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಮಲಯಾಳಿಗಳಿಗಿತ್ತು. ಹಾಗಾಗಿ ಪ್ರತ್ಯೇಕ ಕೇರಳ ರಾಜ್ಯದ ನಿರ್ಮಾಣ ಆದಷ್ಟು ಬೇಗ ಆಗಬೇಕೆನ್ನುವ ತವಕ, ಮಲಯಾಳಂ ಭಾಷೆಗೆ ಎಲ್ಲ ರೀತಿಯ ಸಾಮರ್ಥ್ಯವನ್ನು ತುಂಬುವ ಪ್ರಯತ್ನ ಹಾಗೂ ಕೇರಳವನ್ನು ಭಾರತದ ಇತರ ರಾಜ್ಯಗಳಂತೆ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಮಲಯಾಳಿ ಜನತೆಯ ಪ್ರಮುಖ ವಿಚಾರವಾಗಿತ್ತು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೮೮೫ರಲ್ಲಿ ಹುಟ್ಟಿಕೊಂಡ ಬಳಿಕ, ಅದು ಭಾರತದ ಪ್ರತಿಯೊಂದು ಪ್ರಾಂತ್ಯದಲ್ಲೂ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯುವ ಹಾಗೂ ಆ ಮೂಲಕ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುವ ಪ್ರಯತ್ನವನ್ನು ಮಾಡಿತು. ೧೯೦೪ರಲ್ಲಿ ಕೇರಳದ ಕೊಜ್ಹಿಕೋಡ್‌ನಲ್ಲಿ ಕಾಂಗ್ರೆಸ್‌ನ ಅಧಿವೇಶನವೊಂದು ನಡೆಯಿತು. ೧೯೦೮ರಲ್ಲಿ ಮಲಬಾರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂದಿತು. ಅಲ್ಲಿಂತ ಕೇರಳದ ನಾನಾ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಕಾಣಿಸಿಕೊಳ್ಳಲಾರಂಭಿಸಿದವು. ೧೯೧೬ ಮತ್ತು ೧೯೧೭ರಲ್ಲಿ ಮಲಬಾರ್ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಗಳು ನಡೆದವು. ತಿರುವಾಂಕೂರು ಮತ್ತು ಕೊಚ್ಚಿನ್ ಗಳಲ್ಲೂ ರಾಜಕೀಯ ಚಟುವಟಿಕೆಗಳು ಕಾಣಿಸಿಕೊಳ್ಳಲಾರಂಭಿಸಿದವು. ತಿರುವನಂತಪುರ ಮತ್ತು ಎರ್ನಾಕುಳಂಗಳಲ್ಲೂ ಕಾಂಗ್ರೆಸ್ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಬ್ರಿಟಿಷ್‌ ಆಳ್ವಿಕೆಯನ್ನು ಕೊನೆಗೊಳಿಸುವುದು ಹಾಗೂ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುವುದು ಈ ಭಾಷೆಯ ಆಧಾರದ ಮೇಲೆ ಕೇರಳ ಪ್ರಾಂತ್ಯ ರಚನೆಯ ಕುರಿತಾದ ಅಭಿಪ್ರಾಯಗಳೂ ಬರತೊಡಗಿದವು.

ನಾಗಪುರದಲ್ಲಿ ೧೯೨ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಭಾಷಾವಾರು ಪ್ರಾಂತ್ಯ ರಚನೆಗೆ ಒಪ್ಪಿತು. ಕಾಂಗ್ರೆಸ್ ಸಂಸ್ಥೆಯು ತನ್ನ ಕಾರ್ಯ ನಿರ್ವಹಣೆಗಾಗಿ ಭಾರತವನ್ನು ಭಾಷಾವಾರು ಆಧಾರದ ಮೇಲೆ ೨೧ ಭಾಗಗಳನ್ನಾಗಿ ವಿಂಗಡಿಸತು. ಅದರಲ್ಲಿ ಕೇರಳ ಪ್ರಾಂತ್ಯ ಕಾಂಗ್ರೆಸ್ ಸಮಿತಿಯೂ ಒಂದು. ಮಲಯಾಳಂ ಭಾಷೆಯನ್ನಾಡುವ ಪ್ರದೇಶಗಳನ್ನು ಕೇರಳ ಎನ್ನುವ ಒಂದು ಘಟಕದಡಿಯಲ್ಲಿ ತಂದು ಪ್ರಾಂತ್ಯವನ್ನು ರಚಿಸಲಾಯಿತು. ಸೈಮನ್ ಕಮಿಷನ್ ಭಾರತಕ್ಕೆ ಬಂದಾಗ ‘ಪ್ರಾಂತ್ಯಗಳನ್ನು ಭಾಷೆಗಳ ಆಧಾರದಲ್ಲಿ ವಿಂಗಡಣೆ ಮಾಡಬೇಕಾದ ಸಮಯ ಬಂದಿದೆ’ ಎಂಬುದಾಗಿ ಕಾಂಗ್ರೆಸ್ ಘೋಷಿಸಿತು. ಇವೆಲ್ಲವೂ ಐಕ್ಯ ಕೇರಳ ಚಳವಳಿಗೆ ಸ್ಫೂರ್ತಿ ನೀಡಿತು. ಕೇರಳದಲ್ಲಿ ಅಸ್ತಿತ್ವಕ್ಕೆ ಬಂದ ಕೇರಳ ಪ್ರಾಂತ್ಯ ಕಾಂಗ್ರೆಸ್ ಸಮಿತಿಯು ಬಲವಾದ ಒಂದು ಉದ್ದೇಶವನ್ನು ಹೊಂದಿತ್ತು. ಅದೇನೆಂದರೆ ಕೇರಳದ ಮೂರು ಪರದೇಶಗಳಲ್ಲಿನ ರಾಜಕೀಯ ಚಟುವಟಿಕೆಗಳನ್ನು ಒಂದೆಡೆಗೆ ತರುವ ಪ್ರಯತ್ನ. ಆ ಮೂರು ಪ್ರದೇಶಗಳೆಂದರೆ ಮಲಬಾರ್, ಕೊಚ್ಚಿನ್ ತಮ್ತು ತಿರುವಾಂಕೂರು. ಈ ಮೂರು ಪ್ರದೇಶಗಳ ಕಾಂಗ್ರೆಸ್ ಪ್ರತಿನಿಧಿಗಳು ೧೯೨೧ರ ಏಪ್ರಿಲ್‌ನಲ್ಲಿ ಒಟ್ಟಾಪ್ಪಾಲಂನಲ್ಲಿ ನಡೆದ ಅಖಿಲ ಕೇರಳ ರಾಜಕೀಯ ಸಮ್ಮೇಳನದಲ್ಲಿ ಭಾಗವಹಿಸಿದರು. ಇದು ಐಕ್ಯ ಕೇರಳ ಚಳವಳಿಯ ಆರಂಬಿಕ ಹೆಜ್ಜೆ. ಅದು ನನಸಾಗಿದ್ದು ೩೫ ವರ್ಷಗಳ ಬಳಿಕ.

ರಾಜಕೀಯವಾಗಿ ಕೇರಳದ ವಿವಿಧ ಪ್ರದೇಶಗಳನ್ನು ಒಂದುಗೂಡಿಸುವ ಪ್ರಯತ್ನಗಳು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸಾಮಾಜಿಕವಾಗಿ ಕೇರಳವು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಅದು ಜಾತಿ, ಧರ್ಮ ಮತ್ತು ಸಮುದಾಯ ಕೇಂದ್ರಿತ ಸಮಸ್ಯೆಗಳಾಗಿದ್ದವು. ಬ್ರಿಟಿಷರ ವಿಭಜಿಸಿ ಆಳುವ ನೀತಿಗೆ ಕೇರಳವು ಒಂದು ಪ್ರಮುಖ ವೇದಿಕೆಯಾಯಿತು. ಯಾವುದೇ ಸಣ್ಣಪುಟ್ಟ ಘಟನೆಗಳೂ ಮತೀಯ ರೂಪವನ್ನು ಪಡೆದುಕೊಳ್ಳಲಾರಂಭಿಸಿದವು. ಹಿಂದೂ-ಮುಸ್ಲಿಮ್ ಎನ್ನುವ ಕಂದರವನ್ನು ಬ್ರಿಟಿಷ್‌ ಸರಕಾರ ನಿರ್ಮಿಸಿತು. ಇದಕ್ಕೆ ೧೯೨೧ ಮಾಪಿಳ್ಳೆ ಹೋರಾಟ ಉತ್ತಮ ಉದಾಹರಣೆಯಾಗಿದೆ. ಇದು ಮಲಬಾರ್ ಜಿಲ್ಲೆಯಲ್ಲಿ ಮಾಪಿಳ್ಳೆ ಗೇಣಿದಾರರು (ಮುಸ್ಲಿಮರು) ಜಮೀನ್ದಾರರ ವಿರುದ್ಧ ನಡೆಸಿದ ಹೋರಾಟ. ಗೇಣಿಯ ವಿಚಾರವೇ ಮುಖ್ಯವಾಗಿದ್ದ ಈ ಹೋರಾಟ, ತನ್ನದಲ್ಲದ ವಿಚಾರದಲ್ಲಿ ಹಿಂಸಾತ್ಮಕ ರೂಪ ಪಡೆದು ಮತೀಯ ಹೋರಾಟವಾಗಿ ಪರಿವರ್ತನೆಗೊಂಡಿತು.

ಕೇರಳದ ಜನತೆಯನ್ನು ಒಂದುಗೂಡಿಸುವುದು ಅಲ್ಲಿನ ನಾಯಕರುಗಳಿಗೆ ಸವಾಲಿನ ಕೆಲಸವಾಗಿತ್ತು. ಕೇರಳದಲ್ಲಿ ವರ್ಣಾಧಾರಿತ ಸಮಾಜದ ಕಟ್ಟುಪಾಡುಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದವು. ಸಾಮಾಜಿಕ ಶ್ರೇಣಿಯಲ್ಲಿ ನಂಬೂದಿರಿ ಬ್ರಾಹ್ಮಣರು ಅತಿ ಶ್ರೇಷ್ಠರೆನಿಸಿಕೊಂಡಿದ್ದರು. ಅವರ ನಂತರದ ಸ್ಥಾನದಲ್ಲಿ ನಾಯರ್‌ಗಳಿದ್ದರು. ಈಳವರು, ಪುಲಯ, ಪರಯ, ಕುರುವ ಮುಂತಾದವರು ಸಮಾಜದ ಕೆಳಸ್ತರದವರಾಗಿದ್ದು ಇವರಿಗೆ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ಇದು ಕಾಂಗ್ರೆಸ್‌ನ ಚಟುವಟಿಕೆಗಳಿಗೆ ದೊಡ್ಡ ತಡೆಯಾಗಿತ್ತು. ಈ ಜಾತಿ ಅಸಮಾನತೆಯನ್ನು ಹೋಗಲಾಡಿಸಲು ಅದು ವೈಕಂ ಮತ್ತು ಗುರುವಾಯೂರುಗಳಲ್ಲಿ ಸತ್ಯಾಗ್ರಹ ನಡೆಸಿತು. ಈ ಎರಡು ಸ್ಥಳಗಳಲ್ಲಿದ್ದ ದೇವಾಲಯಗಳಿಗೆ ಕ್ರಮವಾಗಿ ೧೯೨೪ ಹಾಗೂ ೧೯೩೧ರಲ್ಲಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ಕಲ್ಪಿಸಲಾಯಿತು. ಗಾಂಧಿಜೀಯವರ ಹರಿಜನೋದ್ಧಾರ ಕಾರ್ಯಕ್ರಮಗಳು ಕೇರಳದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದವು. ಸಮಾಜದ ಕೆಳಸ್ತರದ ಜನರ ದೇವಾಲಯ ಪ್ರವೇಶ ಕಾರ್ಯಕ್ರಮದ ನೇತೃತ್ವವನ್ನು ಅಂದು ಕಾಂಗ್ರೆಸಿಗರಾಗಿದ್ದ ಮತ್ತು ಮುಂದೆ ಕಮ್ಯುನಿಸ್ಟರಾದ ಪಿ. ಕೃಷ್ಣ ಪಿಳ್ಳೆ, ಯು. ಗೋಪಾಲ ಮೆನನ್, ಎ.ಕೆ. ಗೋಪಾಲನ್, ಮುಂತಾದವರು ವಹಿಸಿದರು. ಒಡೆದು ಹೋದ ಮನಸ್ಸುಗಳನ್ನು ಒಂದುಗೂಡಿಸುವುದು ಅಂದಿನ ತುರ್ತಾಗಿತ್ತು. ನಾರಾಯಣ ಗುರುಗಳ ಪ್ರಯತ್ನ ಈ ನಿಟ್ಟಿನಲ್ಲಿ ಪ್ರಮುಖವಾದದ್ದು. ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ, ಈ ಭೂಮಿ ಎಲ್ಲರಿಗೂ ಸಂಬಂಧಿಸಿದ್ದು, ಎಲ್ಲರಿಗೂ ಸಮಾನ ಹಕ್ಕಿದೆ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಈಳವರು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಶಾಸಕಾಂಗ ಸಭೆಯಲ್ಲಿ ನಾಯರ್‌ಗಳಿಗಿಂತ ಹೆಚ್ಚಿನ ಸ್ಥಾನವನ್ನು ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದವು. ಕಾಂಗ್ರೆಸ್‌ ನೊಳಗಿನ ಸಮಾಜವಾದಿಗಳು (ಮುಂದೆ ಇವರೇ ಕೇರಳದ ಕಮ್ಯುನಿಸ್ಟ್ ಪಕ್ಷದ ಮುಖಂಡರಾದರು) ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಹೋರಾಟ ನಡೆಸಿದರು. ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಿರುವಾಂಕೂರು ಮತ್ತು ಕೊಚ್ಚಿನ್‌ಗಳಲ್ಲಿ ತನ್ನ ಪ್ರಭಾವವನ್ನು ಸ್ಪಲ್ಪಮಟ್ಟಿಗೆ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು. ೧೯೩೮ರ ಹರಿಪುರ ಅಧಿವೇಶನದ ಬಳಿಕ ಕಾಂಗ್ರೆಸ್ ದೇಶೀಯ ಸಂಸ್ಥಾನಗಳ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡುವುದರಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಂಡಿತು. ಜವಾಬ್ದಾರಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಕೆಲಸ ಆಯಾ ಸಂಸ್ಥಾನದ ಜನರದ್ದು ಎನ್ನುವ ನಿಲುವಿಗೆ ಕಾಂಗ್ರೆಸ್ ಬಂತು. ಇದರಿಂದಾಗಿ ೧೯೩೮ರಲ್ಲಿ ತಿರುವಾಂಕೂರು ರಾಜ್ಯ ಕಾಂಗ್ರೆಸ್ ಹಾಗೂ ಕೊಚ್ಚಿನ್ ರಾಜ್ಯ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದವು.

ಕೇರಳದಲ್ಲಿ ಎಡಪಂಥವು ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣ ಚಳವಳಿ ಇವುಗಳೆರಡರಲ್ಲೂ ನಿರ್ಣಾಯಕ ಪಾತ್ರ ವಹಿಸಿತು. ಮಲಯಾಳಂ ಭಾಷೆ ಮಾತನಾಡುವ ಪ್ರದೇಶಗಳನ್ನು ಒಂದು ಗೂಡಿಸುವ ಕೆಲಸ ಮಾಡಿದವರಲ್ಲಿ ಕಮ್ಯುನಿಷ್ಟರು ಪ್ರಮುಖರು ಎನ್ನುವುದು ಎಡವಾದಿ ಚಳವಳಿಗಾರರ ಸ್ಪಷ್ಟ ನಿಲುವು. ಅವರು ಬ್ರಿಟಿಷರನ್ನು ಹಾಗೂ ದೇಶೀಐ ಸಂಸ್ಥಾನಿಕರನ್ನು ಒಂದೇ ರೀತಿ ವಿರೋಧಿಸಿದರು. ಕಾಂಗ್ರೆಸಿಗರ ರೀತಿ ಇವರು ದ್ವಂದ್ವ ನಿಲುವನ್ನು ಹೊಂದಿರಲಿಲ್ಲ. ಅದೇ ರೀತಿ ಕೇರಳದ ಏಕೀಕರಣಕ್ಕೆ ವೈಭವದ ಚರಿತ್ರೆಗಳನ್ನಾಗಲಿ, ಪ್ರಭುತ್ವದ ಸಂಕೇತಗಳನ್ನಾಗಲಿ ಬಳಸಿಕೊಳ್ಳಲಿಲ್ಲ. ಆರಂಭದಲ್ಲಿ ಕಾಂಗ್ರೆಸ್ ಜೊತೆಗೆ ಸಮಾಜವಾದಿಗಳೆಂದು ಗುರುತಿಸಿಕೊಂಡಿದ್ದ ಎಡವಾದಿಗಳು ೧೯೨೯ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಹುಟ್ಟುಹಾಕಿದರು. ತಿರುವಾಂಕೂರು ಮತ್ತು ಕೊಚ್ಚಿನ್‌ ರಾಜ್ಯಗಳ ವಿರುದ್ಧ ಕಮ್ಯುನಿಷ್ಟರು ಹೋರಾಟ ಮಾಡಿದರು. ರೈತರು ಮತ್ತು ಕಾರ್ಮಿಕರನ್ನು ಎಡಪಂಥೀಯರು ಸಂಘಟಿಸುವ ಕ್ರಮವನ್ನು ಕಾಂಗ್ರೆಸ್‌ನವರು ಪ್ರಬಲವಾಗಿ ವಿರೋಧಿಸಿದರು. ಕೇರಳವನ್ನು ಶ್ರಮಿಕ ವರ್ಗದ ಮೂಲಕ ಕಾಣುವ ಹಾಗೂ ಆ ವರ್ಗದ ಹಿತಾಸಕ್ತಿಯನ್ನು ಕಾಪಾಡುವಂಥ ನೂತನ ಕೇರಳ ರಾಜ್ಯ ನಿರ್ಮಾಣ ಮಾಡುವ ಕನಸನ್ನು ಎಡಪಂಥೀಯರು ಹೊಂದಿದ್ದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ತಿರುವಾಂಕೂರು ಸಂಸ್ಥಾನದಲ್ಲಿ ೧೯೪ರಲ್ಲಿ ನಡೆದ ಪುನ್ನಪ್ರ-ವಯಲಾರ್ ಹೋರಾಟ. ಈ ಹೋರಾಟ ಕಾರ್ಮಿಕರ ಶೋಷಣೆಯ ವಿರುದ್ಧ, ಅಸ್ಪಶ್ಯತೆಯ ವಿರುತದ್ದ ಹಾಗೂ ಸಾಮಾಜಿಕ ನ್ಯಾಯದ ಪರವಾಗಿತ್ತು. ತಿರುವಾಂಕೂರು ಸಂಸ್ಥಾನದ ದಿವಾನ ಸಿ.ಪಿ. ರಾಮಸ್ವಾಮಿ ಅಯ್ಯರ್ ಅವರು ಎಡಪಂಥೀಯರಾದ ಕೃಷ್ಣ ಪಿಳ್ಳೆ, ಕೆ.ಸಿ. ಜಾರ್ಜ್‌, ಸುಗತನ್ ಮುಂತಾದವರ ಸಾಮಾಜಿಕ ನ್ಯಾಯದ ಹೋರಾಟಗಳನ್ನು ವಿರೋಧಿಸುತ್ತಿದ್ದರು. ಅವರು ೧೯೪೬ರಲ್ಲಿ ತಿರುವಾಂಕೂರನ್ನು ಭಾರತದಿಂದ ಪ್ರತ್ಯೇಕಿಸಿ ಸ್ವತಂತ್ರ ದೇಶವನ್ನಾಗಿ ಮಾಡಿ ಅಮೆರಿಕ ಮಾದರಿಯ ಆಡಳಿತ ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದರು. ಆ ಸಂದರ್ಭದಲ್ಲಿ ಎಲ್ಲರ ಸಹಾಯದೊಂದಿಗೆ ಪುನಪ್ರ ಮತ್ತು ವಯಲಾರ್ ಪ್ರದೇಶದ ಕಾರ್ಮಿಕರು ದಿವಾನ ರಾಮಸ್ವಾಮಿ ಅಯ್ಯರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದರು. ಹೋರಾಟ ಹಿಂಸಾತ್ಮಕ ರೂಪ ಪಡೆಯಿತು. ಕೊನೆಗೂ ದಿವಾನ ರಾಮಸ್ವಾಮಿ ಅಯ್ಯರ್ ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಯಿತು. ೧೯೪೭ರ ಆಗಸ್ಟ್ ೧೫ರ ಮುನ್ನವೇ ತಿರವಾಂಕೂರು ರಾಜ್ಯವು ಭಾರತದಲ್ಲಿ ವಿಲೀನಗೊಮಡಿತು. ೧೯೪೮ರ ಅಕ್ಟೋಬರ್‌ನಲ್ಲಿ ಅಲ್ಲಿ ಜವಾಬ್ದಾರಿ ಸರಕಾರ ಸ್ಥಾಪನೆಗೊಂಡಿತು. ಎಡಪಂಥೀಯರ ನೆರವಿನಿಂದ ಕಾರ್ಮಿಕರು ನಡೆಸಿದ ಈ ಹೋರಾಟ ಮುಂದೆ ಏಕೀಕೃತ ಕೇರಳದ ನಿರ್ಮಾಣಕ್ಕೆ ದಾರಿಯನ್ನು ಸುಗಮಗೊಳಿಸಿತು. ದೇಶೀಯ ಸಂಸ್ಥಾನಗಳ ಆಳ್ವಿಕೆಯನ್ನು ಕೊನೆಗೊಳಿಸಬೇಕೆನ್ನುವ ಎಡಪಂಥೀಯರ ಹೋರಾಟಕ್ಕೆ ಸಂದ ಜಯ ಇದಾಗಿತ್ತು. ದುಡಿಯುವ ವರ್ಗಗಳ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯ ಇವೆರಡೂ ಸಾಧ್ಯವಾಗುವುದು ಪ್ರಭುತ್ವ ಕೊನೆಗೊಂಡಾಗ ಎನ್ನುವುದು ಎಡಪಂಥೀಯರ ಸ್ಪಷ್ಟ ನಿಲುವಾಗಿತ್ತು. ಈ ಕಾರಣಕ್ಕಾಗಿಯೇ ಅವರು ಬ್ರಿಟಿಷ್ ಸರಕಾರವನ್ನು ಹಾಗೂ ದೇಶೀಯ ಸಂಸ್ಥಾನಗಳನ್ನು ಸಮಾನವಾಗಿ ವಿರೋಧಿಸಿದರು. ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಹಾಗೂ ಕಮ್ಯುನಿಷ್ಟ್ ಪಕ್ಷ ಇವೆರಡೂ ಭಿನ್ನ ನೆಲೆಗಳಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿಕೊಂಡು ಹೋದವು.

ಮಲೆಯಾಳಂ ಮಾತನಾಡುವ ಪ್ರದೇಶಗಳನ್ನು ಒಂದು ಗೂಡಿಸುವ ಪ್ರಯತ್ನ ರಾಜಕೀಯ ನೆಲೆಯಲ್ಲಿ ಒಂದು ರೀತಿಯಲ್ಲಿ ನಡೆಯುತ್ತಿದ್ದರೆ, ಇದಕ್ಕೆ ಪೂರಕವಾಗಿ ಇಲ್ಲವೆ ಸ್ವತಂತ್ರವಾಗಿ ಐಕ್ಯ ಕೇರಳ ಹೋರಾಟ ಕೇರಳಾದಾದ್ಯಂತ ನಡೆಯುತ್ತಿತ್ತು. ಅನೇಕ ಕವಿಗಳು, ಬರಹಗಾರರು ತಮ್ಮ ಬರಹಗಳ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದರು. ಭಾಷೆಯ ಆಧಾರದ ಮೇಲೆ ಮಲೆಯಾಳಿಗಳನ್ನು ಒಂದುಗೂಡಿಸುವುದು, ಭೌಗೋಳಿಕವಾಗಿ ಒಂದು ಕೇರಳವನ್ನು ರಚಿಸುವುದು, ರಾಜಕೀಯವಾಗಿ ಹರಿದು ಹಂಚಿಹೋಗಿರುವ ಅಂದರೆ, ತಿರುವಾಂಕೂರು, ಕೊಚ್ಚಿನ್ ಹಾಗೂ ಬ್ರಿಷಿ ಮಲಬಾರ್ ಪ್ರದೇಶಗಳನ್ನು ಒಂದುಗೂಡಿಸಿ ಒಂದು ಆಡಳಿತ ವ್ಯವಸ್ಥೆಯೊಳಗೆ ತರುವುದು- ಈ ಮುಂತಾದ ಪ್ರಯತ್ನಗಳು ನಿರಂತರವಾಗಿ ನಡೆದವು. ದಾಕ್ಷಾಯಿಣಿ ವೇಲಾಯುಧನ್ ಎನ್ನುವ ಐಕ್ಯ ಕೇರಳ ಚಳವಳಿಯ ಪ್ರಮುಖ ಹೋರಾಟಗಾರ್ತಿ. ಕೇರಳ ಮೊದಲು ಒಂದು ಆಡಳಿತ ವ್ಯಾಪ್ತಿಯೊಳಗೆ ಬರಬೇಕೆನ್ನುವ ಅಭಿಪ್ರಾಯ ಹೊಂದಿದ್ದರು. ತಿರುವಾಂಕೂರಿನ ದಕ್ಷಿಣ ಭಾಗದಲ್ಲಿ ತಮಿಳು ಭಾಷೆಯನ್ನಾಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದಕ್ಕೆ ಐಕ್ಯ ಕೇರಳವಾದಿಗಳ ಭಾಷಿಕ ನೆಲೆಯಲ್ಲಿ ಕೇರಳವನ್ನು ನಿರ್ಮಿಸುವ ಪ್ರಯತ್ನಕ್ಕೆ ತಡೆಯಾಗಿ ಪರಿಣಮಿಸಿತು. ಅದೇ ರೀತಿ ತಿರುವಾಂಕೂರು ರಾಜ್ಯ, ಕೊಚ್ಚಿನ್ ರಾಜ್ಯ ಮತ್ತು ಬ್ರಿಟಿಷ್ ಮಲಬಾರ್‌ನಲ್ಲಿದ್ದ ಮಲಯಾಳಿ ಜನರನ್ನು ಒಂದುಗೂಡಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಹಾಗೂ ಹಿಂದೂ-ಮುಸ್ಲಿಮ್ ಎನ್ನುವ ಕೋಮುಭಾವನೆಗಳು ಈ ಪ್ರಯತ್ನಕ್ಕೆ ಅಡ್ಡಿಯಾಗಿದ್ದವು. ಹೀಗಾಗಿ ರಾಷ್ಟ್ರೀಯತೆ ಎನ್ನುವ ಕಲ್ಪನೆಯೇ ಅಪಾಯಕಾರಿಯಾಗಿ ಕಾಣಿಸಿಕೊಳ್ಳಲಾರಂಭಿಸಿತು. ಎಡಪಂಥೀಯರು ಇದನ್ನು ಬಹಿರಂಗವಾಗಿ ಪ್ರಚಾರಮಾಡತೊಡಗಿದರು. ‘‘ಐಕ್ಯ ಕೇರಳ’ ಪರಿಕಲ್ಪನೆಯನ್ನು ಜಾತಿ, ಧರ್ಮ ಮತ್ತು ಪುರಾಣಗಳ ಹಿನ್ನೆಲೆಯಿಂದ ವ್ಯಾಖ್ಯಾನಿಸುವುದನ್ನೂ ಎಡಪಂಥೀಯರು ವಿರೋಧಿಸಿದರು. ಕೇರಳಿಯನ್ನರು ಎನ್ನುವ ಸಮುದಾಯ ಕಲ್ಪನೆಯನ್ನು ಮೂಡಿಸುವ, ಅಭಿವೃದ್ಧಿಯನ್ನು ಗುರಿಯನ್ನಾಗಿಸಿದ ಹೋರಾಟಕ್ಕೆ ಎಡಪಂಥೀಯರು ಚಾಲನೆ ನೀಡಿದರು.

೧೯೪೭ರಲ್ಲಿ ಮಲಬಾರಿನ ತ್ರಿಚ್ಚೂರಿನಲ್ಲಿ ‘ಐಕ್ಯ ಕೇರಳ ಕಲೋತ್ಸವಮ್’ ಎನ್ನುವ ಸಮಾರಂಭ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಐಕ್ಯ ಕೇರಳವಾದಿಯಾದ ಕೆ. ಕೇಳಪ್ಪನ್ ಅವರು ವಹಿಸಿದರು. ಸಮಾರಂಭದ ಉದ್ಘಾಟನೆಯನ್ನು ಕೊಚ್ಚಿನ್ ರಾಜ್ಯದ ಮಹಾರಾಜರು ಮಾಡಿದರು. ಉದ್ಘಾಟನಾ ಭಾಷಣ ಮಾಡುತ್ತಾ ಮಹಾರಾಜರು ಜವಾಬ್ದಾರಿ ಸರಕಾರದ ಕಡೆಗೆ ಒಲವು ತೋರಿಸಿದರು. ಐಕ್ಯ ಕೇರಳ ಸಮಿತಿಯ ಹೋರಾಟಕ್ಕೆ ಕೊಚ್ಚಿ ಸಂಸ್ಥಾನವು ಸಹಕಾರ ನೀಡುವುದೆಂಬ ಆಶ್ವಾಸನೆಯನ್ನು ನೀಡಿದರು. ಮಲಯಾಳಿ ಪ್ರದೇಶಗಳು ಒಂದುಗೂಡುವುದಾದರೆ ಕೊಚ್ಚಿ ಸಂಸ್ಥಾನವು ಅವುಗಳಲ್ಲಿ ಒಂದಾಗುವುದಕ್ಕೆ ಹಿಂಜರಿಯದು ಎಂಬುದಾಗಿ ತಿಳಿಸಿದರು. ಅಧ್ಯಕ್ಷ ಭಾಷಣ ಮಾಡಿದ ಕೆ. ಕೇಳಪ್ಪನ್ ಅವರು ಗೋಕರ್ಣದಿಂದ ಕನ್ಯಾಕುಮಾರಿಯವರೆಗಿನ ನಾಡು ಕೇರಳಕ್ಕೆ ಸೇರಿದ್ದು ಎಂಬುದಾಗಿ ಸಾರಿದರು. ಅವರ ಭಾಷಣದ ಸಾರಾಂಶ ಹೀಗಿದೆ:

ತೆಂಕಣ ಕಡಲೇ ಗಡಿಯಾದ ಕನ್ಯಾಕುಮಾರಿಯಿಂದ ಗೋಕರ್ಣ ಪರ್ಯಂತದ ಪಡು (ಪಶ್ಚಿಮ) ಕರಾವಳಿಯ ನಾಡಿಗೆ ಕೇರಳ ಎಂಬುದು ಕೇರಳ ಮಹಾತ್ಮ ಎಮಬ ಪುರಾಣದಲ್ಲಿಯೇ ಹೇಳಲಾದ ಹೆಸರು. ಪೂರ್ವದಲ್ಲಿ ಪರ್ವತ ಶ್ರೇಣಿ, ಪಶ್ಚಿಮದಲ್ಲಿ ಸಾಗರವೇ ಗಡಿಗಳಾದ ನಾಡು ಏಕರೀತಿಯ ಆಚಾರ ವ್ಯವಹಾರಗಳ ಜನಸಮೂಹವನ್ನು ಹೊಂದಿದೆ.

ಕೇಳಪ್ಪನ್ ಅವರು ಕೇರಳವನ್ನು ಪರಶುರಾಮನ ಕ್ಷೇತ್ರ ಎಂಬುದಾಗಿ ಕರೆದು, ಪರಶುರಾಮ ಸೃಷ್ಟಿ ಪುರಾಣಕತೆಯನ್ನು ಐಕ್ಯ ಕೇರಳ ಚಳವಳಿಯೊಂದಿಗೆ ಜೋಡಿಸುವ ಪ್ರಯತ್ನ ಮಾಡಿದರು. ಅವರ ಈ ಪ್ರಯತ್ನಕ್ಕೆ ಕರ್ನಾಟಕ ಏಕೀಕರಣ ಹೋರಾಟಗಾರರು ಪ್ರಬಲವಾದ ವಿರೋಧವನ್ನು ವ್ಯಕ್ತಪಡಿಸಿದರು. ತುಳುನಾಡಿನಲ್ಲೂ ಇದೇ ರೀತಿಯ ವಿರೋಧ ವ್ಯಕ್ತವಾಯಿತು.

ಕೇರಳದ ಎಡಪಂಥೀಯ ಕೇಳಪ್ಪನ್ ಅವರ ಹಾಗೂ ಕೊಚ್ಚಿನ್ ಮಹಾರಾಜರ ಹೇಳಿಕೆಗಳನ್ನು ಬಲವಾಗ ವಿರೋಧಿಸಿದರು. ಅವರಲ್ಲಿ ಇ.ಎಂ.ಎಸ್. ನಂಬೂದಿರಿಪಾಡ್, ಕೃಷ್ಣ ಪಿಳ್ಳೆ, ಆರ್. ಸುಗತನ್ ಮುಂತಾದವರು ಪ್ರಮುಖರು. ಕೃಷ್ಣಪಿಳ್ಳೆ ಅವರು ಪರಶುರಾಮ ಸೃಷ್ಟಿ ಪುರಾಣವನ್ನು ಐಕ್ಯ ಕೇರಳ ಸಮ್ಮೇಳದಲ್ಲಿ ಉಲ್ಲೇಖಿಸಿದ್ದನ್ನು ಹಾಗೂ ಆ ಮೂಲಕ ಕೇರಳದ ಗಡಿಗಳನ್ನು ಸೂಚಿಸಿರುವುದನ್ನು ಟೀಕಿಸಿದರು. ಪರಶುರಾಮ ಸೃಷ್ಟಿ ಪುರಾಣವು ಯಾವ ಸಮುದಾಯವನ್ನು ಪ್ರತಿನಿಧಿಸುತ್ತದೆ ಹಾಗೂ ಅದರಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಜಾಗವಿದೆಯೇ ಎನ್ನುವ ಪ್ರಶ್ನೆಯನ್ನು ಕೃಷ್ಣ ಪಿಳ್ಳೆ ಹಾಗೂ ಇ.ಎಂ.ಎಸ್. ನಂಬೂದರಿಪಾಡ್ ಮುಂದಿಟ್ಟರು. ಕೇರಳಿಯಾರ್ ಅಥವಾ ಕೇರಳಿಯನ್ನರನ್ನು ಒಂದುಗೂಡಿಸಲು ಈ ರೀತಿಯ ಪುರಾಣಗಳಿಂದ ಸಾಧ್ಯವಿಲ್ಲ. ಅದು ಕೇವಲ ಮೇಲ್ವರ್ಗ ಅಥವಾ ಮೇಲ್ಜಾತಿಯವರನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯಬಹುದಷ್ಟೆ ಎಂಬುದಾಗಿ ಎಡಪಂಥೀಯರು ಎಚ್ಚರಿಸಿದರು. ಕೇರಳದಲ್ಲಿ ಎಲ್ಲ ಸಮುದಾಯಗಳನ್ನು ಒಂದುಗೂಡಿಸಲು ಹಾಗೂ ಅಭಿವೃದ್ಧಿಯತ್ತ ಕೊಂಡೊಯ್ಯಲು ಒಂದು ಸಮುದಾಯ ಚಳವಳಿಯ ಅನಿವಾರ್ಯತೆ ಇದೆ ಎಂಬುದಾಗಿ ಎಡಪಂಥೀರು ಮನಗಂಡರು:

ಇ.ಎಂ.ಎಸ್. ನಂಬೂದಿರಿಪಾಡ್ ಅವರು ಕೇರಳದ ಎಡಪಂಥೀಯರಲ್ಲಿ ಪ್ರಮುಖರು. ಅವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿದ್ದರು. ನಂತರ ಭಾರತದ ಕಮ್ಯುನಿಸ್ಟ್ ಚಳವಳಿಯ ಅತ್ಯಂತ ಮಹತ್ವದ ನಾಯಕರಾಗಿ ಬೆಳೆದರು. ಅವರು ಐಕ್ಯ ಕೇರಳವಾದಿಗಳ ಪರುರಾಮ ಸೃಷ್ಟಿ ಪುರಾಣದ ಬಳಕೆ, ಮಧ್ಯಕಾಲೀನ ಕೇರಳದ ಪೆರುಮಾಳ್ ಅರಸರ ವೈಭವಯುತ ಚಿತ್ರಣ ಮುಂತಾದವುಗಳನ್ನು ವಿರೋಧಿಸಿದರು. ಕೇರಳದ ಶ್ರೀಮಂತಿಕೆ, ಸಂಸ್ಕೃತಿಯನ್ನು ಪುರಾಣ ಹಾಗೂ ಚರಿತ್ರೆಯ ಮೂಲಕ ಪ್ರಚಾರ ಪಡಿಸುವುದನ್ನು ಅವರು ವಿರೋಧಿಸಿದರು. ಅವರ ಪ್ರಕಾರ ಕೇರಳದ ಐಕ್ಯ ಕೇರಳ ಚಳವಳಿ ಮಹಾರಾಜರ ಕೃಪಾಕಟಾಕ್ಷದಲ್ಲಿ ನಡೆಯುತ್ತಿದೆ ಹಾಗೂ ಊಳಿಗಮಾನ್ಯ ಹಿತಾಸಕ್ತಿಗಳು ಇದರಿಂದಾಗಿ ಗಟ್ಟಿಗೊಳ್ಳುತ್ತಿವೆ. ಹಾಗಾಗಿ ಅವರು ಇನ್ನಿತರ ಸಮಾನ ಮನಸ್ಕ ಎಡಪಂಥೀಯರೊಂದಿಗೆ ಚರ್ಚಿಸಿ ಕೇರಳಿಯನ್ನರ ಐಕ್ಯತೆಗೆ ಹಾಗೂ ಅಭಿವೃದ್ಧಿಗೆ ವೇದಿಕೆಯೊಂದನ್ನು ನಿರ್ಮಿಸಿಕೊಂಡರು. ರೈತರು, ಕಾರ್ಮಿಕರು, ಹಾಗೂ ಇನ್ನಿತರ ಬಡವ ಹಾಗೂ ನಿರುದ್ಯೋಗಿ ಜನತೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಹಾಗೂ ಜಾತಿ, ಧರ್ಮ, ಊಳಿಗಮಾನ್ಯತೆಯ ಹಿಡಿತದಿಂದ ಮಲಯಾಳಿಗಳನ್ನು ಬಿಡಿಸುವುದು ಈ ವೇದಿಕೆಯ ಉದ್ದೇಶವಾಗಿತ್ತು. ಆ ಮೂಲಕ ಐಕ್ಯ ಕೇರಳದ ನಿರ್ಮಾಣ ಸಾಧ್ಯ ಎಂಬುದಾಗಿ ಇ.ಎಂ.ಎಸ್. ನಂಬೂದಿರಿಪಾಡ್ ನಂಬಿದ್ದರು. ಸಮಾನತೆ, ಸ್ವಾತಂತ್ರ್ಯ, ಅಭಿವೃದ್ಧಿಯಿಂದ ಕೂಡಿದ ಹೊಸ ಕೇರಳವನ್ನು ನಿರ್ಮಿಸುವುದು ಒಂದು ಪರ್ಯಾಯ ವೇದಿಕೆಯಾಗಿ ಕೇರಳದಲ್ಲಿ ಕಾಣಿಸಿಕೊಮಡಿತು. ಇದನ್ನು ‘ಮಾವೀಲಿನಾಡು’ ಎಂಬುದಾಗಿ ಕರೆಯಲಾಯಿತು.

ಐಕ್ಯ ಕೇರಳಕ್ಕಾಗಿನ ಹೋರಾಟದ ಸುತ್ತ ಈ ರೀತಿಯ ಹಲವಾರು ಚರ್ಚೆಗಳು ಕಾಣಿಸಿಕೊಂಡವು. ಬಲಪಂಥೀಯರು, ಎಡಪಂಥೀಯರು, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ, ಸಮಾಜವಾದಿ ಬಣ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಇವೆಲ್ಲವೂ ಕೇರಳವನ್ನು ಭಾಷೆಯ ಆಧಾರದ ಮೇಲೆ ಒಂದುಗೂಡಿಸುವ ಪ್ರಯತ್ನ ಮಾಡಿದರೂ, ಬಳಸಿದ ಹಾದಿ ಬೇರೆ ಬೇರೆಯದು. ಐಕ್ಯ ಕೇರಳ ಸಮ್ಮೇಳನಗಳು ಅನೇಕ ಬಾರಿ ನಡೆದವು. ೧೯೪೯ರಲ್ಲಿ ಪಾಲ್ಗಾಟ್‌ನಲ್ಲಿ ಹಾಗೂ ೧೯೫೪ರಲ್ಲಿ ಕೋಜ್ಹಿಕೋಡ್‌ನಲ್ಲಿ ಐಕ್ಯ ಕೇರಳ ಸಮ್ಮೇಳನಗಳು ನಡೆದವು. ಈ ಸಮ್ಮೇಳನಗಳಲ್ಲಿ ಏಕೀಕೃತ ಕೇರಳವನ್ನು ರಚಿಸುವುದರ ಕುರಿತು ಚರ್ಚಿಸಲಾಯಿತು. ೧೯೫೪ರ ಸಮ್ಮೇಳನದಲ್ಲಿ ಮಲಬಾರ್ ಮತ್ತು ತಿರುವಾಂಕೂರು-ಕೊಚ್ಚಿನ್‌ಗಳನ್ನೊಳಗೊಂಡ ಕೇರಳ ರಾಜ್ಯ ನಿರ್ಮಾಣ ಮಾಡಿ, ಅದರಲ್ಲಿ ಭಾಷಾ ಏಕತೆ, ಆರ್ಥಿಕಾಭಿವೃದ್ಧಿ ಹಾಗೂ ಉತ್ತಮ ಸರಕಾರ ಇರುವುದರ ಬಗೆಗೂ ಚರ್ಚಿಸಲಾಯಿತು. ಮಲಬಾರ್, ತಿರುವಾಂಕೂರು ಮತ್ತು ಕೊಚ್ಚಿನ್‌ಗಳೊಂದಿಗೆ ನೀಲಗಿರಿ ಪ್ರದೇಶದ ಕುಡಲೂರು ಮತ್ತು ಉದಕಮಂಡಲ ಜಿಲ್ಲೆಗಳನ್ನೂ ಸೇರಿಸುವಂತೆ ಒತ್ತಾಯಿಸಲಾಯಿತು. ಆ ಸಂದರ್ಭದಲ್ಲಿಯೇ ದಕ್ಷಿಣ ಭಾರತದ ಎಲ್ಲ ಭಾಷಿಕರಿಗೂ ಸಂಬಂಧಿಸಿದ ದಕ್ಷಿಣದ ರಾಜ್ಯ ಅಥವಾ ಪಶ್ಚಿಮ ಕರಾವಳಿ ರಾಜ್ಯ ನಿರ್ಮಾಣದ ಚರ್ಚೆಗಳೂ ನಡೆಯುತ್ತಿದ್ದವು. ಇ.ಎಂ.ಎಸ್. ನಂಬೂದಿರಿಪಾಡ್‌ ಅವರು ಈ ಪ್ರಯತ್ನಗಳಿಂದ ಮಲಯಾಳಿ ಭಾಷಿಕರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ, ಮಲಯಾಳಿಗಳು ಇನ್ನೊಬ್ಬರ ಅಧೀನದಲ್ಲಿಯೇ ಇರಬೇಕಾಗಿ ಬಂದೀತು ಎಂಬುದಾಗಿ ತಿಳಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಏಕೀಕೃತ ಕೇರಳಕ್ಕಾಗಿ ಚಳವಳಿಗಳು ಬಿರುಸಿನಿಂದ ನಡೆದವು. ಭಾಷಾಧಾರಿತ ರಾಜ್ಯಗಳ ನಿರ್ಮಾಣ ಕುರಿತು ಚರ್ಚೆಗಳು ಭಾರತದಾದ್ಯಂತ ಆರಂಭಗೊಂಡ ಅನೇಕ ಆಯೋಗಗಳು ರಚನೆಗೊಂಡವು. ಆದರೆ ನೆಹರೂ ನೇತೃತ್ವದ ಕೇಂದ್ರ ಸರಕಾರ ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ರಚಿಸುವ ಕೆಲಸಕ್ಕೆ ದ್ವತೀಯ ಆದ್ಯತೆಯನ್ನು ನೀಡಿ, ದೇಶದ ಏಕತೆ ಮತ್ತು ಸುಭದ್ರತೆಗೆ ಮೊದಲು ಆದ್ಯತೆ ನೀಡಿತು. ಇದು ರಾಜ್ಯಗಳಲ್ಲಿ ಕಾಂಗ್ರೆಸ್‌ ವಿರೋಧಿ ನಿಲುವುಗಳ ಹುಟ್ಟಿಗೂ ಕಾರಣವಾಯಿತು. ಕೇರಳದಲ್ಲಿ ಏಕೀಕರಣ ಹೋರಾಟಕ್ಕೆ ಹಾದಿಯನ್ನು ಸುಗಮಗೊಳಿಸಿದ ಇನ್ನೊಂದು ಘಟನೆಯೆಂದರೆ ಕೊಚ್ಚಿನ್ ಮತ್ತು ತಿರುವಾಂಕೂರು ರಾಜ್ಯಗಳು ೧೯೪೯ರ ಜುಲೈ ೧ ರಂದು ತಿರುವಾಂಕೂರು-ಕೊಚ್ಚಿನ್ ರಾಜ್ಯವಾಗಿ ಒಬ್ಬ ರಾಜಪ್ರಮುಖನ ನೇತೃತ್ವದಲ್ಲಿ ಒಂದಾಗಿದ್ದು. ೧೯೫೩ರ ಡಿಸೆಂಬರ್ ೨೯ರಂದು ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ಕೇಂದ್ರ ಸರಕಾರವು ರಚಿಸಿದ ಮೇಲೆ ಭಾರತದ ಎಲ್ಲ ಭಾಷಿಕರ ಕನಸು ನನಸಾಗುವ ದಿನ ಹತ್ತಿರವಾಯಿತು. ಈ ಸಮಿತಿಯಲ್ಲಿ ಫಜಲ್‌ಆಲಿ, ಹೃದಯನಾಥ ಕುಂಜ್ರೂ ಮತ್ತು ಕೆ.ಎಂ. ಪಣಿಕ್ಕರ್ ಇವರಿದ್ದರು. ಈ ಆಯೋಗವು ಮಲಬಾರ್ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾದ ಕಾಸರಗೋಡನ್ನು ತಿರುವಾಂಕೂರು-ಕೊಚ್ಚಿನ್ ರಾಜ್ಯದೊಳಗೆ ಸೇರಿಸುವ ಹಾಗೂ ತಮಿಳು ಭಾಷಿಕರಿರುವ ಹಳೆಯ ತಿರುವಾಂಕೂರು ರಾಜ್ಯದ ದಕ್ಷಿಣ ಪ್ರದೇಶವನ್ನು (ಕನ್ಯಾಕುಮಾರಿ ಜಿಲ್ಲೆಯ ತಾವೊಲಾ, ಅಗಸ್ತೇಶ್ವರಂ, ಕಾಲ್ಕುಲಂ ಮತ್ತು ವಿಲಾವಾನ್‌ಕೋಡ್ ತಲೂಕುಗಳು ಹಾಗೂ ಚೆನ್‌ಕೊಟೈನ ಕೆಲವು ಭಾಗ) ತಿರುವಾಂಕೂರು-ಕೊಚ್ಚಿನ್‌ನಿಂದ ಬೇರ್ಪಡಿಸಿ ಮದ್ರಾಸ್ ರಾಜ್ಯಕ್ಕೆ ಸೇರಿಸುವ ನಿರ್ಧಾರ ತೆಗೆದುಕೊಂಡಿತು. ಆಯೋಗದ ಈ ಕರಮಕ್ಕೆ ಕರ್ನಾಟಕದಿಂದ ಸಾಕಷ್ಟು ವಿರೋಧಗಳು ಎದುರಾದವು. ಕರ್ನಾಟಕದ ಅವಿಭಾಜ್ಯ ಅಂಗವಾದ ಕಾಸರಗೋಡನ್ನು ಕೇರಳಕ್ಕೆ ಸೇರಿಸಿದ ಆಯೋಗದ ಕ್ರಮವನ್ನು ಕರ್ನಾಟಕ ವಿರೋಧಿಸಿತಾದರೂ, ಕಾನೂನಿಗೆ ತಲೆಬಾಗಬೇಕಾಯಿತು. ೧೯೫೬ರ ನವೆಂಬರ್ ೧ ರಂದು ತಿರುವಾಂಕೂರು, ಕೊಚ್ಚಿನ್, ಮಲಬಾರ್ ಮತ್ತು ಕಾಸರಗೋಡುಗಳನ್ನು ಒಳಗೋಂಡು ನೂತನ ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಐಕ್ಯ ಕೇರಳದ ಮೊದಲ ಸರಕಾರ ಇ.ಎಂ.ಎಸ್. ನಂಬೂದಿರಿಪಾಡ್ ಅವರ ನೇತೃತ್ವದಲ್ಲಿ ೧೯೫೭ರಲ್ಲಿ ಅಧಿಕಾರಕ್ಕೆ ಬಂದಿತು. ಇದು ಭಾರತದಲ್ಲಿ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದ ಮೊದಲ ಕಮ್ಯುನಿಷ್ಟ್ ಸರಕಾರ ಎನ್ನುವುದು ಗಮನಾರ್ಹ.