ಭಾಷಾವಾರು ಪ್ರಾಂತ್ಯಗಳ ರಷನೆಯ ಕುರಿತಾದ ಬೇಡಿಕೆಗಳು ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕಾಣಿಸಿಕೊಂಡವು. ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕೋಸ್ಕರ ಭಾರತವನ್ನು ಹಲವಾರು ವಿಭಾಗಗಳನ್ನಾಗಿ ವಿಂಗಡಿಸಿಕೊಂಡರು. ಇದು ಭಾಷಿಕ ನೆಲೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಯಿತು. ಒಂದೇ ಭಾಷೆಯನ್ನಾಡುವ ಜನರು ಭಾಷಿಕ ನೆಲೆಯಲ್ಲಿ ಒಂದುಗೂಡುವ ಪ್ರಯತ್ನಕ್ಕೆ ಮುಂದಾದರು. ಆದರೆ ಬ್ರಿಟಿಷ್ ಸರಕಾರ ಭಾರತದ ಆಂತರಿಕ ಸಮಸ್ಯೆಗಳಿಗೆ ಸ್ಪಂಧಿಸುತ್ತಿರಲಿಲ್ಲ. ಬ್ರಿಟಿಷ್ ಸರಕಾರ ತನಗೆ ಲಾಭವಿದೆ ಎಂದು ಕಂಡುಕೊಂಡ ಪಕ್ಷದಲ್ಲಿ ಸ್ಥಳೀಯ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿತ್ತು. ಭಾರತದ ಜನರು ಅವರವರು ಮಾತನಾಡುವ ಹಾಗೂ ವ್ಯವಹರಿಸುವ ಭಾಷೆಯ ಮೂಲಕವೇ ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಹೀಗಾಗಿ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳು ಏರಿಕೆಯ ರೂಪದಲ್ಲಿ ಕಂಡುಬಂದವು. ಈ ಭಾಷೆಗಳ ಹಿಂದಿದ್ದ ಧೋರಣೆಗಳು ಹಾಗೂ ಅವುಗಳನ್ನು ಬಳಸುತ್ತಿದ್ದ ಜನವರ್ಗ ನಡೆಸುತ್ತಿದ್ದ ರಾಜಕೀಯ ಸ್ವಾರ್ಥದಿಂದ ಕೂಡಿದ್ದಾಗಿದ್ದು, ಬಹುಭಾಷಿಕತೆಯಿಂದ ಕೂಡಿದ್ದ ಭಾರತದಲ್ಲಿ ಸಹಜವಾಗಿಯೇ ವಿರೋಧಗಳನ್ನು ಎದುರಿಸಬೇಕಾಗಿ ಬಂತು. ದಕ್ಷಿಣದ ಎಲ್ಲ ಭಾಷೆಗಳನ್ನು ಒಳಗೊಂಡ ದ್ರಾವಿಡ ರಾಜ್ಯ ನಿರ್ಮಾಣದ ಪ್ರಯತ್ನಗಳು ಈ ಕಾರಣದಿಂದಾಗಿಯೇ ಆರಂಭಗೊಂಡವು. ಭಾಷಾವಾರು ಪ್ರಾಂತ್ಯಗಳ ಬೇಡಿಕೆ ಮೇಲ್ನೋಟಕ್ಕೆ ಸರಳವಾದದ್ದಾಗಿ ಕಂಡುಬಂದರೂ ಅದು ಅತ್ಯಂತ ಸಂಕೀರ್ಣವಾದ ಸಮಸ್ಯೆಯಾಗಿತ್ತು. ನೆಹರೂ ನೇತೃತ್ವದ ಭಾರತ ಸರಕಾರ ಆರಂಭಿಕ ದಿನಗಳಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಕುರಿತು ಸ್ಪಷ್ಟವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾರದೆ ಗೊಂದಲವನ್ನು ಸೃಷ್ಟಿಸಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಕುರಿತು ಸ್ವಾತಂತ್ರ್ಯಪೂರ್ವದಲ್ಲಿ ಹೊಂದಿದ್ದ ಧೋರಣೆಯನ್ನು ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಬದಲಾಯಿಸಿಕೊಂಡಿತು.

ಭಾಷೆಯ ಆಧಾರದ ಮೇಲೆ ಭಾರತವನ್ನು ವಿಭಜಿಸಬೇಕು ಎನ್ನುವ ಧ್ವನಿ ಕೇಳಬರತೊಡಗಿದ್ದು ಸ್ವಾತಂತ್ರ್ಯಾನಂತರದ ಅವಧಿಯಲ್ಲಷ್ಟೇ ಅಲ್ಲ. ವಸಾಹತು ಆಳ್ವಿಕೆಯ ಸಂದರ್ಭದಲ್ಲಿಯೇ ಈ ಕುರಿತ ಚಿಂತನೆಗಳು ಕಾಣಿಸಿಕೊಂಡಿದ್ದವು. ಬ್ರಿಟಿಷ್ ಸರಕಾರ ೧೮೨೯ರಲ್ಲಿ ಬಂಗಾಳ ಪ್ರೆಸಿಡೆನ್ಸಿಯನ್ನು ವಿಸ್ತರಿಸುವ ಕೆಲಸವನ್ನು ಮಾಡಿತು. ಬಂಗಾಳ, ಬಿಹಾರ, ಒರಿಸ್ಸಾ (ಉತ್ಕಲ)ಗಳು ಒಂದೇ ಪ್ರಾಂತ್ಯದಲ್ಲಿ ವಿಲೀನ ಆಗಿದ್ವು. ಅಸ್ಸಾಂ ಪ್ರದೇಶವು ಬಂಗಾಳ ಪ್ರಾಂತ್ಯದ ಅಧಿಕಾರಕ್ಕೆ ಒಳಪಟ್ಟಿದ್ದರೂ ಪ್ರತ್ಯೇಕ ಚೀಪ್ ಕಮೀಷನರ್‌ನೊಬ್ಬನ ಆಳ್ವಿಕೆಗೆ ಒಳಪಟ್ಟಿತು. ಬಂಗಾಳ ಪ್ರಾಂತ್ಯದಲ್ಲಿ ಬಂಗಾಳಿ ಮಾತನಾಡುವವರಲ್ಲದೆ ಇತರ ಭಾಷಿಕರು ಸೇರಿಕೊಂಡಿದ್ದರು. ೧೮೭೪ರಲ್ಲಿ ಬಂಗಾಳ ಪ್ರಾಂತ್ಯದಲ್ಲಿದ್ದ ಸಿಲ್ಹೆಟ್‌ಜಿಲ್ಲೆಯನ್ನು ಬ್ರಿಟಿಷರು ಅಸ್ಸಾಮಿನ ಆಡಳಿತ ಪರಿಧಿಗೆ ಸೇರಿಸಿದರು. ಬ್ರಿಟಿಷರ ಈ ಕ್ರಮದಿಂದ ಅಸ್ಸಾಮಿ ಭಾಷಿಕರು ಮತ್ತು ಬಂಗಾಳಿ ಭಾಷಿಕರು ಅಸಮಾಧಾನಗೊಂಡರು. ಇದು ಭಾಷಾ ಚಳವಳಿಗಳ ಹುಟ್ಟಿಗೆ ಕಾರಣವಾಯಿತು. ಸಿಲ್ಹೆಟಿನ ಬಂಗಾಳಿ ಭಾಷಿಕರು ಮತ್ತೆ ಬಂಗಾಳ ಪ್ರಾಂತ್ಯಕ್ಕೆ ಹಿಂದಿರುಗಲು ಹಾತೊರೆದರು. ಈ ಸಂಬಂಧವಾಗಿ ತಮ್ಮ ಬೇಡಿಕೆಯನ್ನು ಬ್ರಿಟಿಷ್ ಸರ್ಕಾರದ ಮುಂದಿಟ್ಟರು

೧೮೭೬ರಲ್ಲಿ ಒರಿಯಾ ಭಾಷಿಕ ಪ್ರದೇಶಗಳನ್ನು ಒಂದು ಮಾಡಬೇಕೆಂಬ ಮನವಿಯನ್ನು ಒರಿಯಾ ಭಾಷಿಕರು ಸಲ್ಲಿಸಿದರು. ಒರಿಸ್ಸಾದಲ್ಲಿ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಬಿಹಾರಿಗಳು ತಮ್ಮದೇ ಆದ ಪ್ರತ್ಯೇಕ ಪ್ರಾಂತ್ಯವೊಂದರ ಬೇಡಿಕೆಯನ್ನು ೧೮೯೬ರಲ್ಲಿ ಮಂಡಿಸಿದರು. ಬಂಗಾಳಿ, ಒರಿಯಾ ಭಾಷೆಗಳನ್ನು ಆಡುತ್ತಿದ್ದ ಬಂಗಾಳ ಪ್ರೆಸಿಡೆನ್ಸಿಯಲ್ಲಿ ಹಿಂದಿಯನ್ನೇ ಮಾತನಾಡುತ್ತಿದ್ದ ಬಿಹಾರಿಗಳು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಹಾಗಾಗಿ ತಮ್ಮನ್ನು ಬಂಗಾಳದಿಂದ ಪ್ರತ್ಯೇಕಿಸಿ ಬೇರೆ ಪ್ರಾಂತ್ಯವನ್ನೇ ರಚಿಸಬೇಕೆಂದು ಬೇಡಿಕೆಯನ್ನು ಮುಂದಿಟ್ಟರು. ೧೯೦೩ರ ಹೊತ್ತಿಗೆ ಒರಿಯಾಗಳು ‘ಉತ್ಕಲ ಐಕ್ಯ ಪರಿಷತ್’ ಎನ್ನುವ ಸಂಘಟನೆಯೊಂದನ್ನು ಕಟ್ಟಿದರು. ಉತ್ತರ ಭಾರತದಲ್ಲಿ ಭಾಷೆಯ ಆಧಾರದ ಮೇಲೆ ನಡೆಯುತ್ತಿದ್ದ ಚಳವಳಿಗಳ ಸಂದರ್ಭದಲ್ಲಿಯೇ ದಕ್ಷಿಣ ಭಾರತದಲ್ಲೂ ಚಳವಳಿಗಳು ಕಾಣಿಸಿಕೊಂಡವು. ೧೮೮೪ರಲ್ಲಿ ಆರಂಭಗೊಂಡ ‘ಮದ್ರಾಸು ಮಹಾಸಭೆ’, ೧೮೯೦ರಲ್ಲಿ ಧಾರವಾಡಲ್ಲಿ ಹುಟ್ಟಿಕೊಂಡ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಮುಂತಾದವು ಆಯಾ ಪ್ರದೇಶದ ಜನತೆಯನ್ನು ಜಾಗೃತಗೊಳಿಸಿದವು.

ಭಾಷಾವಾರು ಪ್ರಾಂತ್ಯಗಳ ರಚನೆಯ ಕುರಿತಾಗಿ ಮಾತನಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರರೆಂದರೆ ಬಾಲಗಂಗಾಧರ ತಿಲಕರು. ಅವರು ತಮ್ಮ ಮರಾಠಿ ಪತ್ರಿಕೆ ‘ಕೇಸರಿ’ಯಲ್ಲಿ ೧೮೯೧ರ ನವೆಂಬರ್‌೧೭ರಂದು ಈ ರೀತಿ ಬರೆದರು:

ಭಾರತದ ಈಗಿರುವ ಆಡಳಿತಾತ್ಮಕ ವಿಭಾಗಗಳು ಚಾರಿತ್ರಿಕ ಕಾರಣಗಳಿಂದಾಗಿ ರೂಪುಗೊಂಡಿರುವಂತವು. ಅವು ಆಯಾ ಸಂದರ್ಭಕ್ಕನುಗುಣವಾಗಿ ರಚನೆಯಾದಂತವು. ಈ ವಿಭಾಗಗಳನ್ನು ಭಾಷಾವಾರು ಹಿನ್ನೆಲೆಯಲ್ಲಿ ರಾಜ್ಯಗಳನ್ನಾಗಿ ರಚಿಸಿದರೆ, ಪ್ರತಿಯೊಂದು ರಾಜ್ಯವೂ ತನ್ನತನವನ್ನು ಉಳಿಸಿಕೊಂಡು ಬೆಳೆಯಲು ಸಾಧ್ಯ. ಅಲ್ಲಿನ ಜನರು ಮತ್ತು ಭಾಷೆಯ ಅಭಿವೃದ್ಧಿಯೂ ಸಾಧ್ಯವಾಗಬಹುದು.

ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಬಂಗಾಳವು ಮುಂಚೂಣಿಯಲ್ಲಿದ್ದದ್ದು ಹಾಗೂ ಬಂಗಾಳಿ ಭಾಷೆ ಭಾರತದಾದ್ಯಂತ ಹೊಂದಿದ್ದ ಪ್ರಭಾವವನ್ನರಿತ ಬ್ರಿಟಿಷರು ಅದನ್ನು ಮಟ್ಟಹಾಕುವ ಉದ್ದೇಶದಿಂದ ೧೯೦೫ರಲ್ಲಿ ಬಂಗಾಳವನ್ನು ವಿಭಜಿಸಿದರು. ಬಂಗಾಳವನ್ನು ಭಾಷಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಜನಸಂಖ್ಯೆಯ ಅಧಾರದ ಮೇಲೆ ವಿಭಜಿಸಿ ಬಂಗಾಳಿಗಳನ್ನು ಅವರದೇ ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನಾಗಿ ಮಾಡಿ, ಅವರ ಸಾಮರ್ಥ್ಯವನ್ನು ಕುಗ್ಗಿಸಲಾಯಿತು. ಪೂರ್ವ ಬಂಗಾಳಕ್ಕೆ ಢಾಕಾ ರಾಜಧಾನಿಯಾದರೆ ಪಶ್ವಿಮ ಬಂಗಾಳಕ್ಕೆ ಕಲ್ಕತ್ತಾ ರಾಜಧಾನಿಯಾಯಿತು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪೂರ್ವ ಬಂಗಾಳವನ್ನು ಹಿಂದೂಗಳಿರುವ (ಬಂಗಾಳಿ, ಬಿಹಾರಿ, ಒರಿಯಾ) ಪಶ್ಚಿಮ ಬಂಗಾಳದಿಂದ ಬೇರ್ಪಡಿಸುವ ಹಾಗೂ ಈ ವಿಭಜನೆಯನ್ನು ಮತೀಯ ಹಿನ್ನೆಲೆಯಲ್ಲಿ ಮಾಡುವ ಪ್ರಯತ್ನವನ್ನು ಬ್ರಿಟಿಷ್ ಸರಕಾರ ಮಾಡಿತು. ಇದು ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯನ್ನು ಜಾರಿಗೆ ತಂದಿರುವ ರೀತಿ. ವೈಸರಾಯ್ ಲಾರ್ಡ್‌ ಕರ್ಜನ್‌ನ ಪ್ರಕಾರ, ಬಂಗಾಳವನ್ನು ಈಗಾಗಲೇ ಮಟ್ಟ ಹಾಕದಿದ್ದರೆ, ಮುಂದೊಂದು ದಿನ ಅವರು ಬಲಿಷ್ಠವಾಗಿ ಬೆಳೆದು ಆತಂಕ ಒಡ್ಡಬಲ್ಲ ಶಕ್ತಿಯಾಗಿ ರೂಪುಗೊಳ್ಳುವುದು ಖಂಡಿತ. ಬ್ರಿಟಿಷರ ಈ ಕ್ರಮ ಅಸ್ಸಾಮು, ಬಂಗಾಳಿ, ಬಿಹಾರಿ ಮತ್ತು ಓರಿಯಾ ಭಾಷಿಕರೆಲ್ಲರಲ್ಲೂ ಚಿಂತೆಗೀಡು ಮಾಡಿ ಉಗ್ರರೂಪದ ಚಳವಳಿಗೆ ನಾಂದಿಯಾಯಿತು. ಬಿಹಾರಿ ಮತ್ತು ಒರಿಯಾ ಭಾಷಿಕರು ಪ್ರತ್ಯೇಕ ರಾಜ್ಯ ನಿರ್ಮಾಣಕ್ಕಾಗಿ ಚಳವಳಿ ಆರಂಭಿಸಿದರು. ವಿಭಜನೆಯನ್ನು ವಿರೋಧಿಸಿ ಸ್ವದೇಶಿ ಚಳವಳಿ ಭಾರತದಾದ್ಯಂತ ಹಬ್ಬಿತು. ಬಂಗಾಳ ವಿಭಜನೆಯ ಪ್ರೇರಣೆಯಿಂದಾಗಿ ಆಂಧ್ರದಲ್ಲಿ ತೆಲುಗು ಭಾಷಿಕರು “ಆಂಧ್ರ ಮಹಾಸಭೆ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಮರಾಠಿ, ಕನ್ನಡ, ತಮಿಳು ಹಾಗೂ ಇನ್ನಿತರ ಭಾಷಿಕರು ರಚನಾತ್ಮಕ ಚಟುವಟಿಕೆಗಳನ್ನು ಆರಂಭಿಸಿದರು. ೧೯೧೬ರಲ್ಲಿ ಕನ್ನಡ ಭಾಷಿಕರು “ಕರ್ನಾಟಕ ಸಭೆ”ಯನ್ನು ಹುಟ್ಟುಹಾಕಿದರು. ಮಹಾರಾಷ್ಟ್ರದಲ್ಲಿ ಜ್ಯೋತಿಭಾ ಫುಲೆ, ತಮಿಳುನಾಡಿನಲ್ಲಿ ಪೆರಿಯಾರ್ ಹಾಗೂ ಜಸ್ಟೀಸ್‌ ಪಕ್ಷ ಹೊಸ ಚಿಂತನೆಗಳನ್ನು ಹುಟ್ಟುಹಾಕಿ, ಬ್ರಾಹ್ಮಣೇತರ ವರ್ಗಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದರು. ಭಾಷಾವಾರು ಏಕೀಕರಣ ಚಳವಳಿಗಳಿಗೆ ಈ ಚಿಂತನೆಗಳು ಪ್ರೇರಣೆಯಾದವು.

೧೯೨೦ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನ ಭಾಷಾವಾರು ಪ್ರಾಂತರಚನೆ ಹಿನ್ನೆಲೆಯಲ್ಲಿ ಪ್ರಮುಖವಾದದ್ದು. ಭಾಷೆಯನ್ವಯ ಪ್ರಾಂತೀಯ ಕಾಂಗ್ರೆಸ್‌ ಕಮಿಟಿಗಳನ್ನು ರಚಿಸುವಂತೆ ಅಧಿವೇಶನದಲ್ಲಿ ಒತ್ತಾಯಿಸಲಾಯಿತು. ಈ ಹಿನ್ನೆಲೆಯಲ್ಲಿ ೨೧ ಪ್ರಾಂತೀಯ ಕಾಂಗ್ರೆಸ್ ಕಮಿಟಿಗಳನ್ನು ರಚಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ, ಆಂದ್ರಪ್ರದೇಶ ಕಾಂಗ್ರೆಸ್ ಸಮಿತಿ, ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಸಮಿತಿ ಮುಂತಾದವು ಈ ಹಿನ್ನೆಲೆಯಲ್ಲಿ ರಚನೆಗೊಂಡವು. ೧೯೨೦ರ ಅಧಿವೇಶನದಲ್ಲಿ ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸುವುದಕ್ಕೆ ಗಾಂಧಿಯವರು ಸಮ್ಮತಿಸಿದರು. ೧೯೧೭ ಲಕ್ನೋ ಕಾಂಗ್ರೆಸ್‌ ಸಭೆಯಲ್ಲಿ ಗಾಂಧಿಯವರು ಭಾಷಾವಾರು ಪ್ರಾಂತ್ಯ ರಚನೆಯ ಪರವಾಗಿರಲಿಲ್ಲ. ೧೯೨೦ರಿಂದ ಕಾಂಗ್ರೆಸ್‌ ಭಾಷೆಯ ಆಧಾರದ ಮೇಲೆ ಪ್ರಾದೇಶಿಕ ಗಡಿಗಳನ್ನು ನಿರ್ಧರಿಸಬೇಕೆಂಬ ಧೋರಣೆಯನ್ನು ಹೊಂದಿತ್ತು. ೧೯೧೮ರಲ್ಲಿ ಸಂವಿಧಾನ ಪರಿಷ್ಕರಣೆಯ ಸಲುವಾಗಿ ಭಾರತಕ್ಕೆ ಬಂದ ಮಾಂಟೆಗೋ-ಚೆಮ್ಸ್‌ಫರ್ಡ್‌ಸಮಿತಿಯು ಭಾರತವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿತ್ತು. ಮೌಂಟ್‌ಫರ್ಡ್‌ವರದಿಯು ೧೯೨೦ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನದ ತೀರ್ಮಾನಗಳಿಗೆ ಪೂರಕವಾಗಿಯೇ ಇತ್ತು. ಎಲ್ಲೆಲ್ಲಿ ಪುನರ್ವಿಂಗಡಣೆ ಅವಶ್ಯಕವೋ ಅಲ್ಲಿ ಜನರ ಒಪ್ಪಿಗೆಯನ್ನು ಪಡೆಯುವುದು ಅವಶ್ಯಕ ಎಂಬುದಾಗಿ ವರದಿಯಲ್ಲಿ ತಿಳಿಸಲಾಯಿತು.

ಮೌಂಡ್‌ಫರ್ಡ್‌ ವರದಿಯು ಸ್ವೀಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾಷೆಯ ಆಧಾರದ ಮೇಲೆ ಪ್ರಾಂತಿಕ ಸಮಿತಿಗಳನ್ನು ರಚಿಸಿಕೊಂಡ ಮೇಲೆ, ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು ಪಂಡಿತ್ ಮೋತಿಲಾಲ್ ನೆಹರೂ ಅವರ ನೇತೃತ್ವದಲ್ಲಿ ೧೯೨೮ರಲ್ಲಿ “ನೆಹರೂ ಸಮಿತಿಯನ್ನು” ನೇಮಿಸಲಾಯಿತು. ಇದು ವರ್ಷಪಕ್ಷ ಸಮ್ಮೇಳನದ ಸರ್ವಸಮ್ಮತ ನಿರ್ಣಯವಾಗಿತ್ತು. ನೆಹರೂ ಸಮಿತಿಯು ಭಾಷಾವಾರು ಪ್ರಾಂತ್ಯರಚನೆಯ ಪರವಾಗಿತ್ತು. ಅದರ ಪ್ರಕಾರ, ಜನ ಸಮೂಹಕ್ಕೆ ಅರ್ಥವಾಗುವ ಭಾಷೆಯಲ್ಲಿ ದೇಶದ ರಾಜಕೀಯ ಮತ್ತು ವ್ಯವಹಾರಗಳ್ನು ನಡೆಸುವುದು ಅತ್ಯವಶ್ಯಕ. ಒಂದು ಭಾಷಿಕ ಪ್ರದೇಶದಲ್ಲಿ ಭಾಷೆಯು ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಹಿತ್ಯಗಳೊಡನೆ ಸಂಬಂಧ ಪಡೆದಿರುತ್ತದೆ ಮತ್ತು ಈ ಎಲ್ಲ ಅಂಶಗಳೂ ಪ್ರಾಂತ್ಯದ ಸರ್ವತೋಮುಖ ಪ್ರಗತಿಗೆ ಕಾರಣವಾಗುತ್ತದೆ. ೧೯೨೮ರಲ್ಲಿ ಲಕ್ನೋದಲ್ಲಿ ನಡೆದ ಸರ್ವಪಕ್ಷ ಪರಿಷತ್ತು ಹಾಗೂ ಕಲ್ಕತ್ತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನವು ನೆಹರೂ ಸಮಿತಿಯ ವರದಿಯನ್ನು ಪರಿಶೀಲಿಸಿ ಅಂಗೀಕರಿಸಿತು. ಆಂಧ್ರ, ಉತ್ಕಲ್‌(ಒರಿಸ್ಸಾ) ಸಿಂಧ್‌ಮತ್ತು ಕರ್ನಾಟಕ ಪ್ರಾಂತ್ಯಗಳನ್ನು ರಚಿಸಬೇಕೆಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಸೈಮನ್ ಆಯೋಗದೊಡನೆ ಭಾಷಾವಾರು ಪ್ರಾಂತ್ಯ ರಚನೆ ಸಂಬಂಧವಾಗಿ ಸಹಕರಿಸದಿರಲು ಕರೆ ನೀಡಿತ್ತು. ಸೈಮನ್‌ಆಯೋಗವು ತನ್ನ ಮುಂದೆ ಸಾಕ್ಷಿ ನೀಡಿದ ಪ್ರಾಂತ್ಯಗಳ ರಚನೆಯ ಬಗ್ಗೆ ವರದಿ ನೀಡಿತು. ಕನ್ನಡಿಗರು ಈ ಸಂದರ್ಭದಲ್ಲಿ ಸಾಕ್ಷಿ ನೀಡಲಿಲ್ಲ. ಸಾಕ್ಷಿ ನೀಡಿದ ಸಿಂಧ್ ಮತ್ತು ಒರಿಸ್ಸಾ ಭಾಷಿಕರ ಪ್ರಾಂತ್ಯಗಳ ರಚನೆ ೧೯೩೭ರಲ್ಲಿ ಆಯಿತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ನೆಹರು ನೇತೃತ್ವದ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾಂಗ್ರೆಸ್ ಭಾಷಾವಾರು ಪ್ರಾಂತ್ಯ ರಚನೆಯ ಕುರಿತಾದ ತನ್ನ ಧೋರಣೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡಿತು. ಸ್ವಾತಂತ್ರ್ಯ ಪೂರ್ವದಲ್ಲಿ ಭಾಷಾವಾರು ಪ್ರಾಂತ್ಯ ರಚನೆಗೆ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಆದರೆ ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಅದು ದ್ವಿತೀಯ ಆದ್ಯತೆಯ ವಿಷಯವಾಯಿತು. ಇದಕ್ಕೆ ಹಲವಾರು ಕಾರಣಗಳೂ ಇದ್ದವು. ಭಾರತದ ವಿಭಜನೆ ಮೂಲ ಕಾರಣವಾಯಿತು. ಇದು ಆಡಳಿತಾತ್ಮಕ, ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಹುಟ್ಟು ಹಾಕಿತು. ಇದರಿಂದಾಗಿ ತೀವ್ರತರವಾದ ಆರ್ಥಿಕ ಬಿಕ್ಕಟ್ಟು ಹಾಗೂ ಭದ್ರತೆಯ ಸಮಸ್ಯೆಗಳು ತಲೆದೋರಿದವು. ದೇಶದ ಏಕತೆ ಮತ್ತು ಭದ್ರತೆ ತಕ್ಷಣದ ತುರ್ತುಗಳಾಗಿ ಕಂಡುಬಂದವು. ಕಾಶ್ಮೀರ ಸಮಸ್ಯೆ ತಲೆದೋರಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದಂತಹ ಪರಿಸ್ಥಿತಿ ನರ್ಮಾಣಗೊಂಡಿತು. ಹೀಗಾಗಿ ಭಾರತ ಸರಕಾರ ರಾಷ್ಟ್ರೀಯ ಏಕತೆಯನ್ನು ಕಾಪಾಡುವುದಕ್ಕೆ ಹಾಗೂ ಶಾಂತಿ ಸುವ್ಯವಸ್ಥೆಗೆ ಮೊದಲ ಆದ್ಯತೆಯನ್ನು ನೀಡಿತು. ಆ ಸಂದರ್ಭದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸುವ ಕೆಲಸವನ್ನು ಆರಂಭಿಸಿದರೆ ದೇಶದಲ್ಲಿ ಏಕತೆಗೆ ಭಂಗವುಂಟಾಗಬಹುದೆಂಬ ಭೀತಿ ನೆಹರೂ ಮತ್ತು ಕಾಂಗ್ರೆಸಿನ ಇತರ ನಾಯಕರಿಗಿತ್ತು. ಭಾಷಾವಾರು ಪ್ರಾಂತ್ಯಗಳನ್ನು ರಚಿಸಿದರೆ ಅದರಿಂದ ಭಾಷಾವಾರು ವೈಮನಸ್ಸುಗಳು ಉಂಟಾಗಿ ಆಡಳಿತ ನಡೆಸಲು ಕಷ್ಟವಾಗಬಹುದೆಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾವಿಸಿತ್ತು. ೧೯೪೭ರ ನವೆಂಬರ್ ೨೭ರಂದು ನೆಹರೂ ಅವರು ಭಾಷೆಯ ಪ್ರಶ್ನೆಯ ಕುರಿತು ಮಾತನಾಡುತ್ತಾ ಮೊದಲ ವಿಷಯ ಮೊದಲು ಬರಬೇಕು ಎಂದರು. ಅವರ ಪ್ರಕಾರ “ಮೊದಲ ವಿಷಯವೆಂದರೆ ಅದು ದೇಶದ ಏಕತೆ ಮತ್ತು ಭದ್ರತೆಗೆ ಸಂಬಂಧಿಸಿದ್ದು.” ಕಾಂಗ್ರೆಸ್ ನಾಯಕರ ಪ್ರಕಾರ ಭಾಷಾವಾರು ಪ್ರಂತ್ಯಗಳ ರಚನೆಗೆ ಕೆಲವು ವರ್ಷ ಕಾಯಬೇಕಾಗುತ್ತದೆ. ಅದು ದೇಶದ ಆಂತರಿಕ ಸಮಸ್ಯೆಯಾಗಿದ್ದು, ಬಾಹ್ಯ ಸಮಸ್ಯೆಗೆ ಮೊದಲು ಆದ್ಯತೆ ನೀಡಬೇಕಾಗುತ್ತದೆ. ಭಾರತೀಯರೆಲ್ಲರೂ ಮೊದಲು ಭಾರತವನ್ನು ಒಪ್ಪಿಕೊಂಡು ನೆಮ್ಮದಿಯಿಂದಿರಬೇಕು ಹಾಗೂ ದೇಶದ ಏಕತೆಗಾಗಿ ದುಡಿಯಬೇಕೆಂದು ನೆಹರೂ ನೇತೃತ್ವದ ಸರಕಾರ ಕರೆ ನೀಡಿತು. ಆದರೆ ಕಾಂಗ್ರೆಸ್‌ನ ಈ ನಿರ್ಧಾರ ತೆಲುಗು, ತಮಿಳು, ಕನ್ನಡ, ಮಲಯಾಳಿ, ಮರಾಠಿ ಮುಂತಾದ ಭಾಷಿಕರ ವಲಯದಲ್ಲಿ ತೀವ್ರ ಅಸಮಾಧಾನವನ್ನುಂಟುಮಾಡಿತು. ಈ ಎಲ್ಲ ಭಾಷಿಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದರು. ಇದರ ಪರಿಣಾಮವಾಗಿ ೧೯೪೮ರ ಜೂನ್ ೧೭ರಂದು ಅಲಹಾಬಾದ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಸ್. ಕೆ. ಧರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಲಾಯಿತು. ಇದನ್ನು ‘ಧರ್‌ಸಮಿತಿ’ ಎಂದು ಹೆಸರಿಸಲಾಯಿತು.

ಆಂಧ್ರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಪ್ರಾಂತ್ಯಗಳ ನಿರ್ಮಾಣ ಹಾಗೂ ಅದರಿಂದಾಗುವ ಆಡಳಿತಾತ್ಮಕ ಪರಿಣಾಮಗಳ ಕುರಿತು ವರದಿ ಮಾಡುವುದು ಧರ್ ಸಮಿತಿಯ ಕೆಲಸವಾಗಿತ್ತು. ಸಮಿತಿಯು ಪ್ರಶ್ನಾವಳಿಯೊಂದನ್ನು ಸಿದ್ಧಪಡಿಸಿ ತನ್ನ ಪ್ರವಾಸ ಕೈಗೊಂಡಿತು. ಪ್ರಶ್ನಾವಳಿಯಲ್ಲಿದ್ದ ಕೆಲವು ಪ್ರಮುಖ ಪ್ರಶ್ನೆಗಳೆಂದರೆ ಆಂಧ್ರ, ಕರ್ನಾಟಕ, ಕೇರಳ, ಮಹಾರಾಷ್ಟ್ರಗಳನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ನಿರ್ಮಿಸಬೇಕೇ? ಹೊಸ ಪ್ರಾಂತ್ಯದ ಗಡಿಗಳು ಯಾವುವಾಗಿರಬೇಕು? ಪ್ರಾಂತ್ಯದಲ್ಲಿ ಸೇರಿಸಬೇಕೆನ್ನುವ ಜಿಲ್ಲೆ, ತಾಲೂಕುಗಳು ಯಾವುದು? ಶಾಸನ ಸಭೆ, ಉಚ್ಚ ನ್ಯಾಯಾಲಯ, ಕಂದಾಯ, ಪೊಲೀಸ್ ಇಲಾಖೆಗಳು ಇರಬೇಕೆ? ಈ ಮುಂತಾದ ೨೦ ಪ್ರಶ್ನೆಗಳಿದ್ದವು. ಆಯೋಗವು ತರಾತುರಿಯಲ್ಲಿ ಕೆಲಸ ಮಾಡಿತು. ಪ್ರಶ್ನೆಗಳಿಗೆ ಉತ್ತರ ತಲುಪಲು ಕೇವಲ ೨೮ ದಿನಗಳು ಮಾತ್ರ ಇದ್ದವು. ಆಯೋಗವು ವಿಶಾಖ ಪಟ್ಟಣ, ಮದ್ರಾಸ್, ಮಧುರೆ, ಕಲ್ಲಿಕೋಟೆ, ಮಂಗಳೂರು, ಕೊಯಮತ್ತೂರು, ನಾಗಪುರ, ಹುಬ್ಬಳ್ಳಿ, ಪುಣೆ, ಮುಂಬಯಿಗಳಿಗೆ ಭೇಟಿ ನೀಡಿ ಮಾಹಿತಿ ಗ್ರಹಿಸಿತು. ಧರ್ ಸಮಿತಿಯು ೧೯೪೮ರ ಡಿಸೆಂಬರ್ ೧೦ ರಂದು ತನ್ನ ವರದಿಯನ್ನು ಸಲ್ಲಿಸಿತು. ತನ್ನ ವರದಿಯಲ್ಲಿ ಅದು ಭಾಷಾವಾರು ಪ್ರಂತ್ಯಗಳ ರಚನೆಯನ್ನು ಮುಂದಿನ ಹತ್ತು ವರ್ಷಗಳವರೆಗೆ ಮುಂದೂಡಬೇಕೆಂದು ತಿಳಿಸಿತು. ಒಂದು ವೇಳೆ ಭಾಷಾವಾರು ಪ್ರಾಂತ್ಯಗಳ ಈ ಕೆಳಕಂಡ ರಚನೆಯ ಕುರಿತು ಆಲೋಚಿಸುವುದಿದ್ದರೆ, ಆ ಪ್ರಾಂತ್ಯಗಳು ಈ ಕೆಂಳಕಂಡ ಅಂಶಳನ್ನು ಹೊಂದಿರಬೇಕೆಂದು ತಿಳಿಸಿತು. ಅವುಗಳೆಂದರೆ: ಉತ್ತಮ ಭೌಗೋಳಿಕ ಪರಿಸರ, ಆರ್ಥಿಕ ಸ್ವಾವಲಂಬನೆ, ಆಡಳಿತಾತ್ಮಕ ಅನುಕೂಲತೆಗಳು, ಭವಿಷ್ಯದ ಅಭಿವೃದ್ಧಿಗೆ ಬೇಕಾದಷ್ಟು ಸಂಪನ್ಮೂಲ ಹಾಗೂ ಗಡಿ ಪ್ರದೇಶಗಳಲ್ಲಿ ಹೊಂದಾಣಿಕೆ. ಹೊಸ ರಾಜ್ಯ ರಚನೆಯು ಬಹುಸಂಖ್ಯಾತರ ಅನುಕೂಲಕ್ಕಾಗಿ ಆಗಬಾರದು, ಅದರಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗುವಂತಿರಬಾರದು ಎನ್ನುವ ಆಶಯವಿತ್ತು.

ಧರ್ ಆಯೋಗದ ವರದಿಯು ಆಂಧ್ರ, ಕರ್ನಾಟಕ ಮತ್ತು ಕೇರಳಗಳಲ್ಲಿ ಭಾಷಾವಾರು ಪ್ರಾಂತ ರಚನೆಗೆ ಇದ್ದ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಿತು. ಆಂಧ್ರ ಪ್ರದೇಶದಲ್ಲಿ ಕರಾವಳಿ ಪ್ರದೇಶ ಮತ್ತು ರಾಯಲಸೀಮೆ, ಕರ್ನಾಟಕದಲ್ಲಿ ಬ್ರಿಟಿಷ್ ಕರ್ನಾಟಕ ಮತ್ತು ಮೈಸೂರು ಸಂಸ್ಥಾನ, ಕೇರಳದಲ್ಲಿ ಕೊಚ್ಚಿ, ತಿರುವಾಂಕೂರು ಸಂಸ್ಥಾನಗಳು ಮತ್ತು ಮದ್ರಾಸ್ ಅಧಿಪತ್ಯದ ಭಾಗಗಳಲ್ಲಿರುವ ಭಿನ್ನಾಭಿಪ್ರಾಯಗಳು ಭಾಷಾವಾರು ಪ್ರಾಂತ್ಯ ರಚನೆಗೆ ತೊಡಕಾಗಿರುವುದನ್ನು ಆಯೋಗವು ವಿವರಿಸಿತು. ಧರ್ ಆಯೋಗದ ವರದಿಯು ದಕ್ಷಿಣ ಭಾರತದಾದ್ಯಂತ ಕಟುವಾಗಿ ಟೀಕೆಗೆ ಒಳಗಾಯಿತು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಈ ವರದಿಯನ್ನು ರದ್ದುಪಡಿಸುವಂತೆ ತೀವ್ರ ಪ್ರತಿಭಟನೆಗಳು ನಡೆದವು. ಈ ಪ್ರಾಂತ್ಯಗಳಲ್ಲಿ ಏಕೀಕರಣ ಚಳವಳಿ ತೀವ್ರವಾಗಿ ನಡೆಯಿತು. ಕೇವಲ ಭಿನ್ನಾಭಿಪ್ರಾಯಗಳನ್ನಷ್ಟೆ ಎತ್ತಿ ತೋರಿಸಿದ ಧರ್ ಸಮಿತಿಯನ್ನು ಕಟುವಾಗಿ ವಿರೋಧಿಸಲಾಯಿತು. ಇದರ ಪರಿಣಾಮವಾಗಿ ಜಯಪುರಲ್ಲಿ ೧೯೪೮ರ ಡಿಸೆಂಬರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ತ್ರಿಮೂರ್ತಿ ಸಮಿತಿಯನ್ನು ನೇಮಿಸಲಾಯಿತು.

ತ್ರಿಮೂರ್ತಿ ಸಮಿತಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ ಮತ್ತು ಜವಾಹರಲಾಲ್ ನೆಹರೂ ಅವರಿದ್ದರು. ಈ ಸಮಿತಿಯನ್ನು ‘ಜೆ.ವಿ.ಪಿ. ಸಮಿತಿ’ ಎಂಬುದಾಗಿ ಕರೆಯಲಾಗಿತ್ತು. ಧರ್ ಆಯೋಗದ ವರಧಿಯನ್ನು ಪರಿಶೀಲಿಸಿ ವರದಿ ಮಾಡುವುದು ಹಾಗೂ ಭಾಷಾವಾರು ಪ್ರಾಂತ್ಯ ರಚನೆಯ ಸಾಧ್ಯತೆಗಳ ಕುರಿತು ಮಾಹಿತಿ ನೀಡುವುದು ಈ ಸಮಿತಿಯ ಕೆಲಸವಾಗಿತ್ತು. ಈ ಸಮಿತಿಯು ೧೯೪೯ರ ಏಪ್ರಿಲ್ ೧ ರಂದು ತನ್ನ ವರದಿಯನ್ನು ಸಲ್ಲಿಸಿತು. ಭಾಷಾವಾರು ಪ್ರಾಂತ ರಚನೆಯ ಅಗತ್ಯತೆಯನ್ನು ಜೆ.ವಿ.ಪಿ. ಸಮಿತಿ ಒಪ್ಪಿದರೂ, ಸದ್ಯಕ್ಕೆ ಅದು ಸಾಧ್ಯವಿಲ್ಲವೆಂದು ತೀರ್ಮಾನಿಸಿತು. ಧರ್ ಆಯೋಗದ ಕೆಲವು ನಿರ್ಣಯಗಳನ್ನೆ ಇದು ಎತ್ತಿಹಿಡಿಯಿತು. ಕೇರಳ ಮತ್ತು ಕರ್ನಾಟಕಗಳಿಗೆ ಸಂಬಂಧಿಸಿದಂತೆ ಭಾಷಾವಾರು ಪ್ರಾಂತ್ಯ ರಚನೆ ಸಮಸ್ಯೆಗಳಿಂದ ಕೂಡಿದೆ ಎಂದು ತಿಳಿಸಿತು. ಆದರೆ ಆಂಧ್ರ ಪ್ರದೇಶದ ನಿರ್ಮಾಣಕ್ಕೆ ತನ್ನ ಒಲವು ತೋರಿಸಿತು. ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಜೆ.ವಿ.ಪಿ. ವರದಿಯ ವಿರುದ್ಧ ಪ್ರತಿಭಟನೆಗಳು ನಡೆದವು. ಭಾಷಿಕ ಚಳವಳಿಗಳಲ್ಲಿ ನಿರತರಾಗಿದ್ದ ತೆಲುಗು, ಕನ್ನಡ, ಮಲೆಯಾಳಂ, ಗುಜರಾತಿ ಮತ್ತು ಮರಾಠಿ ಭಾಷಿಕರಿಗೆ ಕಾಂಗ್ರೆಸ್ಸಿನ ಮಂದಗತಿ ಧೋರಣೆ ಹಿಡಿಸಲಿಲ್ಲ.

ಆಂಧ್ರ ಪ್ರಾಂತ್ಯ ರಚನೆಗೆ ಒತ್ತಾಯ ಅಧಿಕವಾಗಿದ್ದರಿಂದಾಗಿ ಕಾಂಗ್ರೆಸ್ ಪೇಚಾಟಕ್ಕೆ ಸಿಲುಕಿತು. ೧೯೫೧ರಿಂದ ಆಂಧ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯಲಾರಂಭಿಸಿದವು. ಕಾಂಗ್ರೆಸ್ ಧೋರಣೆಯಿಂದ ಬೇಸತ್ತ ಆಂಧ್ರ ಚಳವಳಿಗಾರ ಪೊಟ್ಟಿ ಶ್ರೀರಾಮುಲು ಅವರು ೧೯೫೨ರ ಅಕ್ಟೋಬರ್ ೧೯ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ೫೮ ದಿನಗಳ ಉಪವಾಸದ ಬಳಿಕ ೧೯೫೨ರ ಡಿಸೆಂಬರ್ ೧೫ರಂದು ಅವರು ನಿಧನರಾದರು. ಅವರ ಮರಣ ಆಂದ್ರ ಹಾಗೂ ಇನ್ನಿತರ ಪರದೇಶಗಳಲ್ಲಿ ಉಗ್ರ ಚಳವಳಿ ಕಾಣಿಸಿಕೊಳ್ಳುವುದಕ್ಕೆ ಕಾರಣವಾಯಿತು. ೧೯೫೨ರ ಡಿಸೆಂಬರ್ ೧೯ ರಂದು ಮದ್ರಾಸ್ ನಗರವನ್ನು ಹೊರತುಪಡಿಸಿ ಆಂಧ್ರ ರಚನೆಗೆ ಸರಕಾರವು ಒಪ್ಪಿದೆ ಎನ್ನುವ ವಿಚಾರ ಪ್ರಕಟವಾಯಿತು. ಆಂಧ್ರ ರಚನೆಗೆ ಒಪ್ಪಿಗೆ ನೀಡಿದ ದಿನದಂತೆ, ಆಂಧ್ರ ರಾಜ್ಯ ನಿರ್ಮಾಣದ ಕುರಿತು ಸಮಗ್ರ ವರದಿ ನೀಡಲು ಸರಕಾರವು ಕೆ.ಎನ್. ವಾಂಚೂ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತು. ಇದು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳೆರಡಕ್ಕೂ ಪ್ರಮುಖವಾದದ್ದಾಗಿತ್ತು. ಏಕೆಂದರೆ ಬಳ್ಳಾರಿ ಜಿಲ್ಲೆ ಯಾವ ರಾಜ್ಯಕ್ಕೆ ಸೇರಬೇಕೆನ್ನುವ ಚರ್ಚೆ ನಡೆಯುತ್ತಿತ್ತು. ವಾಂಚೂ ಸಮಿತಿ ಈ ನಿಟ್ಟಿನಲ್ಲೂ ಕೆಲಸ ಮಾಡುತ್ತಿತ್ತು. ೧೯೫೩ರ ಫೆಬ್ರವರಿ ೭ ರಂದು ಸಮಿತಿ ತನ್ನ ವರದಿಯನ್ನು ಸಲ್ಲಿಸಿತು. ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸುವುದಕ್ಕೆ ಬಳ್ಳಾರಿ ಜಿಲ್ಲೆಯ ಕನ್ನಡ ಭಾಷೆಯನ್ನಾಡುವ ಜನರ ವಿರೋಧವಿದೆ ಎಂದು ವರದಿಯಲ್ಲಿ ತಿಳಿಸಿತು. ಬಳ್ಳಾರಿ ಪ್ರಶ್ನೆ ಬಗೆಹರಿಯದೆ ಇದ್ದುದರಿಂದ ೧೯೫೩ರ ಏಪ್ರಿಲ್ ೨೧ರಂದು ಎಲ್.ಎಸ್. ಮಿಶ್ರಾ ಆಯೋಗವನ್ನು ರಚಿಸಲಾಯಿತು. ಮಿಶ್ರಾ ಆಯೋಗವು ಬಳ್ಳಾರಿಯು ಮೈಸೂರು ಪ್ರಾಂತ್ಯಕ್ಕೆ ಸೇರುವುದು ಉಚಿತ ಎಂದು ವರದಿಯಲ್ಲಿ ತಿಳಿಸಿತು. ವಾಂಚೂ ವರದಿ ಹಾಗೂ ಮಿಶ್ರಾ ವರದಿಗಳನ್ವಯ ೧೯೫೩ ಸೆಪ್ಟೆಂಬರ್ ೧೪ ರಂದು ರಾಷ್ಟ್ರಪತಿಗಳು ಆಂಧ್ರರಾಜ್ಯ ನಿರ್ಮಾಣದ ವಿಧೇಯಕಕ್ಕೆ ಒಪ್ಪಿಗೆ ನೀಡಿದರು. ಅದರಂತೆ ೧೯೫೩ರ ಅಕ್ಟೋಬರ್ ೧ರಂದು ಆಂಧ್ರಪ್ರದೇಶವು ರಚನೆಗೊಂಡಿತು. ಬಳ್ಳಾರಿ ಹಾಗೂ ಇನ್ನಿತರ ಕನ್ನಡ ಪ್ರದೇಶಗಳು ಮೈಸೂರಿಗೆ ಸೇರಿಕೊಂಡವು. ಆಂಧ್ರ ರಾಜ್ಯವು ನಿರ್ಮಾಣಗೊಂಡ ಬಳಿಕ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಏಕೀಕರಣಕ್ಕಾಗಿ ಚಳವಳಿಗಳು ತೀವ್ರಗೊಂಡವು.

ಕೇಂದ್ರ ಸರ್ಕಾರವು ರಾಜ್ಯಗಳ ಪುನರ್ವಿಂಗಡಣೆಗಾಗಿ ಸಮಿತಿಯೊಂದನ್ನು ನೇಮಿಸುವುದು ಅನಿವಾರ್ಯವಾಯಿತು. ಅದೇ ಪ್ರಕಾರ ೧೯೫೩ರ ಡಿಸೆಂಬರ್ ೨೯ರಂದು ಫಜಲ್ ಆಲಿ ಅವರ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ರಚಿಸಲಾಯಿತು. ಈ ಆಯೋಗದಲ್ಲಿ ಅಧ್ಯಕ್ಷರಾಗಿ ಫಜಲ್ ಆಲಿ, ಸದಸ್ಯರಗಿ ಹೃದಯನಾಥ ಕುಂಜ್ರೂ ಮತ್ತು ಕೆ.ಎಂ. ಪಣಿಕ್ಕರ್ ಅವರಿದ್ದರು. ೧೯೫೫ರ ಜೂನ್ ೩೦ರ ಒಳಗೆ ವರದಿ ನೀಡುವಂಥೆ ಆಯೋಗಕ್ಕೆ ಸೂಚಿಸಲಾಯಿತು. ಆಯೋಗವು ದೇಶದಾಸ್ಯಂತ ಪ್ರವಾಸ ಕೈಗೊಂಡು, ೧೯೫೫ರ ಸೆಪ್ಟೆಂಬರ್ ೩೦ ರಂದು ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಅದನ್ನು ಸಾರ್ವಜನಿಕರ ಅವಗಾಹನೆಗೆ ೧೯೫೫ರ ಅಕ್ಟೋಬರ್ ೧೦ ರಂದು ತರಲಾಯಿತು. ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ವಿರುದ್ಧ ಮರಾಠಿ ಮತ್ತು ಕನ್ನಡ ಭಾಷಿಕರ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದವು. ಮರಾಠಿಗರು ಬೆಳಗಾವಿಯನ್ನು ಕನ್ನಡ ಪ್ರದೇಶಕ್ಕೆ ಸೇರಸಿದ್ದರ ವಿರುದ್ದ ಪ್ರತಿಭಟನೆ ನಡೆಸಿದರು. ಅದೇ ರೀತಿ ಎರಡು ವರ್ಷಗಳ ಹಿಂದೆ ಮೈಸೂರಿಗೆ ಸೇರಿದ್ದ ಬಳ್ಳಾರಿ ಜಿಲ್ಲೆಯ ಮೂರು ತಾಲೂಕುಗಳು, ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಮೈಸೂರಿನಿಂದ ಹೊರಗುಳಿದವು. ಫಜಲ್ ಆಲಿ ವರದಿಯಲ್ಲಿ ಬಳ್ಳಾರಿ ಹಾಗೂ ಇತರ ಪ್ರದೇಶಗಳನ್ನು ಆಂಧ್ರಕ್ಕೆ ಸೇರಿಸುವ ಹಾಗೂ ಕಾಸರಗೋಡನ್ನು ಕೇರಳಕ್ಕೆ ಸೇರಿಸುವ ಪ್ರಸ್ತಾಪವಿತ್ತು. ಇದರ ವಿರುದ್ಧ ಕರ್ನಾಟಕದಲ್ಲಿ ಉಗ್ರ ಪ್ರತಿಕ್ರಿಯೆಗಳು ಕಂಡಬಂದವು. ಬಳ್ಳಾರಿ ಮತ್ತು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯ ಮಾಡಲಾಯಿತು. ವರದಿಯ ಕುರಿತು ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆದು, ೧೯೫೬ರ ಜನವರಿ ೧೯ರಂದು ರಾಜ್ಯ ಪುನರ್ವಿಂಗಡಣೆಯ ಕುರಿತು ಭಾರತ ಸರಕಾರವು ಮಸೂದೆಯೊಂದನ್ನು ಸಿದ್ಧಮಾಡಿ, ಅದನ್ನು ೧೯೫೬ರ ಮಾರ್ಚ್‌೧೯ರಂದು ಪ್ರಕಟಿಸಿತು. ಈ ಮಸೂದೆಯಲ್ಲಿ ೧೪ ರಾಜ್ಯಗಳ ಹಾಗೂ ೭ ಕೇಂದ್ರಾಡಳಿತ ಪ್ರದೇಶಗಳ ರಚನೆಯ ವಿವರಗಳು ಅಡಗಿದ್ದವು. ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯು ಮೈಸೂರು ರಾಜ್ಯದೊಳಗೆ ಸೇರಿಕೊಂಡರೂ ಕಾರಗೋಡು ಕೇರಳದ ಪಾಲಾಯಿತು. ಗಡಿ ಪ್ರದೇಶದ ಕೆಲವು ಭಾಗಗಳು ಆಯಾ ರಾಜ್ಯಗಳ ಬೇಡಿಕೆಯಿದ್ದರೂ ಅವುಗಳೊಳಗೇ ಸೇರಿಕೊಳ್ಳಲಿಲ್ಲ. ಇದು ಎಲ್ಲ ರಾಜ್ಯಗಳೂ ಅನುಭವಿಸಿದ ನೋವಾಗಿತ್ತು. ಒಂದು ಪರದೇಶವನ್ನು ಪಡೆದುಕೊಂಡರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗಿತ್ತು.

ಕೇಂದ್ರ ಸರಕಾರದ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗಾಗಿ ಸಲ್ಲಿಲಾಯಿತು. ಮಸೂದೆಯು ೧೯೫೬ರ ಆಗಸ್ಟ್ ೩೧ರಂದು ರಾಷ್ಟ್ರಪತಿಗಳ ಸಹಿಯೊಂದಿಗೆ ಅಂಗೀಕರಿಸಲ್ಪಟ್ಟಿತು. ಇದರ ಪ್ರಕಾರ ಪುನರ್ವಿಂಗಡಣೆಗೊಂಡ ರಾಜ್ಯಗಳೆಲ್ಲವೂ ೧೯೫೬ರ ನವೆಂಬರ್ ೧ ರಂದು ಅಸ್ತಿತ್ವಕ್ಕೆ ಬಂದವು. ಮೈಸೂರು ರಾಜ್ಯ ಎಂಬುದಾಗಿ ಹೆಸರಿಸಲ್ಪಟ್ಟ ಕನ್ನಡ ನಾಡು, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಈ ರೀತಿಯಾಗಿ ತಮ್ಮ ಏಕೀಕರಣಕ್ಕಾಗಿ ೧೯೫೬ರವರೆಗೆ ಕಾಯಬೇಕಾಗಿ ಬಂತು. ಆದರೆ ಆಂಧ್ರಪ್ರದೇಶವು ೧೯೫೩ರಲ್ಲಿಯೇ ಪ್ರತ್ಯೇಕ ರಾಜ್ಯವಾಗಿ ರಚನೆಗೊಂಡಿತ್ತು. ದಕ್ಷಿಣ ಭಾರತದ ರಾಜ್ಯಗಳೆಲ್ಲವೂ ಭಾಷೆಯ ಆಧಾರದಲ್ಲಿ ಪ್ರತ್ಯೇಕಗೊಂಡವು. ಆದರೆ ಈ ಒಪ್ಪಿಗೆಯೊಳಗೆ ವಿರೋಧಗಳು ಇದ್ದವು. ಆ ವಿರೋಧಗಳು ಏಕೀಕರಣೋತ್ತರ ಸಂದರ್ಭದಲ್ಲಿ ಗಡಿ ಸಮಸ್ಯೆಗಳ ರೂಪದಲ್ಲಿ ಕಾಣಿಸಿಕೊಂಡವು.

ಭಾಷಾವಾರು ಪ್ರಾಂತ್ಯಗಳ ರಚನೆ ಸ್ವಾತಂತ್ರ್ಯೋತ್ತರ ಭಾರತದ ಬಹುದೊಡ್ಡ ಸಾಧನೆ. ಅದೊಂದು ವಿಶಿಷ್ಟ ರಯೋಗ ಹಾಗೂ ಪ್ರಯತ್ನವೂ ಹೌದು. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತ ಹಾಗೂ ರಾಜಕೀಯ ನಡೆಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂಬುದನ್ನು ಕಂಡುಕೊಳ್ಳಲಾಯಿತು. ಭಾಷೆಯ ಆಧಾರದ ಮೇಲೆ ರಾಜ್ಯಗಳ ರಚನೆಯಾದ ಕಾರಣ ಆಯಾ ರಾಜ್ಯದ ಶಿಕ್ಷಣ, ಆಡಳಿತ, ನ್ಯಾಯಾಂಗ ಕೆಲಸ ಕಾರ್ಯಗಳ ಮಾಧ್ಯಮ ಅಲ್ಲಿಯ ಮಾತೃಭಾಷೆಯೇ ಆಗುವುದಕ್ಕೆ ಸಾಧ್ಯವಾಯಿತು. ಇದರಿಂದಾಗಿ ಪ್ರತಿಯೊಬ್ಬರು ತಮ್ಮದೇ ಭಾಷೆಯಲ್ಲಿ ವ್ಯವಹರಿಸಿ, ಆಡಳಿತದಲ್ಲಿ ಭಾಗಿಗಳಾಗುವುದಕ್ಕೆ ಸಾಧ್ಯವಾಯಿತು ಹಾಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೂ ಸಾಧ್ಯವಾಯಿತು. ಭಾಷಾವಾರು ಪ್ರಾಂತ್ಯಗಳ ರಚನೆ ಮಾಡುವಾಗ ಭಾಷೆಯನ್ನು ಒಂದು ಶಕ್ತಿಯನ್ನಾಗಿ ಅಥವಾ ಸಿದ್ಧಾಂತವನ್ನಾಗಿ ನೋಡಲಾಯಿತು. ಭಾಷೆ ಆಯಾ ಪ್ರದೇಶದೊಂದಿಗೆ ಬೆಸೆದುಕೊಂಡಿರುತ್ತದೆ. ಈ ಕಾರಣದಿಂದಾಗಿಯೇ ಭಾಷೆಯ ಆಧಾರದ ಮೇಲೆ ರಾಜ್ಯಗಳು ರಚನೆಯಾಗಬೇಕೆಂಬ ಬೇಡಿಕೆ ಹುಟ್ಟಿಕೊಂಡಿತು. ಬೇಡಿಕೆಯ ಈಡೇರಿಕೆಗೆ ಹಲವಾರು ಸಮಸ್ಯೆಗಳಿದ್ದವು. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅನೇಕ ಆಯೋಗಗಳು ರಚನೆಗೊಂಡವು. ಕೊನೆಗೂ ಕೆಲವೊಂದು ಅತೃಪ್ತಿಗಳ ನಡುವೆಯೂ ಭಾಷಾವಾರು ಹಿನ್ನೆಲೆಯಲ್ಲಿಯೇ ರಾಜ್ಯಗಳು ರಚನೆಗೊಂಡವು.