ಪ್ರಜಾಪ್ರಭುತ್ವ ಹೊಂದಿರುವ ದೊಡ್ಡ ರಾಷ್ಟ್ರಗಳಲ್ಲಿ ಭಾರತವೂ ಒಂದು. ಸರ್ ಐವರ್‌ ಜೆನ್ನಿಂಗ್ಸ್ ಅವರ ಅಭಿಪ್ರಾಯದಲ್ಲಿ ಒಂದು ರಾಜ್ಯದಲ್ಲಿ ಮೂರು ಸಂದರ್ಭದಲ್ಲಿ ಸಂವಿಧಾನ ರಚನಾ ಸಭೆ ಅಸ್ತಿತ್ವಕ್ಕೆ ಬರುತ್ತದೆ. ಅವುಗಳೆಂದರೆ:

೧. ಮಹಾ ಸಾಮಾಜಿಕ ಕ್ರಾಂತಿ ನಡೆದಾಗ

೨. ವಿದೇಶೀ ನಿಯಂತ್ರಣದಿಂದ ಮುಕ್ತವಾಗಿ ಸ್ವತಂತ್ರ ರಾಜ್ಯವೊಂದು ಅಸ್ತಿತ್ವಕ್ಕೆ ಬಂದಾಗ.

೨. ಚಿಕ್ಕಪುಟ್ಟ ರಾಜಕೀಯ ಘಟಕಗಳು ಒಂದು ಗೂಡಿದಾಗ

ಭಾರತದಲ್ಲಿ ಸಂವಿಧಾನದ ಇತಿಹಾಸವನ್ನು ಗಮನಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಸಂವಿಧಾನ ರಷನಾ ಸಭೆಯ ಬೇಡಿಕೆ ಸ್ವಾತಂತ್ರ್ಯ ಚಳವಳಿಯ ಮತ್ತು ಸ್ವಯಂ ಆಡಳಿತದ ಬೇಡಿಕೆಯ ಭಾಗವೇ ಆಗಿತ್ತು.

ಲಂಡನ್ನಿನಲ್ಲಿ ೧೯೩೦-೩೨ರ ಅವಧಿಯಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತುಗಳಿಗೆ ಭಾರತೀಯರ ವಿರೋಧವಿತ್ತು. ಆ ಸಂದರ್ಭದಲ್ಲಿ ಭಾರತೀಯ ಪ್ರತಿನಿಧಿಗಳೇ ಮುಂದಿನ ರಾಜಕೀಯ ವ್ಯವಸ್ಥೆಯ ರೂಪುರೇಶೆಗಳನ್ನು ಸಿದ್ಧಪಡಿಸಬೇಕೆಂಬ ಬಲವಾದ ಬೇಡಿಕೆಯಿತ್ತು. ೧೯೨೭ರ ಕಾಂಗ್ರೆಸ್ಸಿನ ಬಾಂಬೆ ಸಮ್ಮೇಳನದಲ್ಲಿ ಕೇಂದ್ರ ಹಾಗೂ ಪ್ರಾಂತೀಯ ಶಾಸಕಾಂಗದ ಚುನಾಯಿತ ಸದಸ್ಯರೊಂದಿಗೆ ಸಮಾಲೋಚಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಂವಿಧಾನ ರಚನೆ ಮಾಡಬೇಕೆಂಬ ನಿಲುವಳಿಯನ್ನು ೧೯೨೭ರ ಮೇ ೧೭ರ ಮೇ ೧೭ರಂದು ಮೋತಿಲಾಲ್‌ ನೆಹರೂ ಅವರು ಮಂಡಿಸಿದರು. ಅದನ್ನು ಆಧರಿಸಿ ಕಾಂಗ್ರೆಸ್ ಪಕ್ಷ ೧೯೨೮ರಲ್ಲಿ ಸರ್ವಪಕ್ಷ ಸಭೆಕರೆದು ಮೋತಿಲಾಲ್ ನೆಹರೂ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ವರದಿ ನೆಹರೂ ವರದಿ ಎಂದೇ ಪ್ರಸಿದ್ಧವಾಗಿದೆ.

೧೯೩೮ರ ಹರಿಹರಪುರದಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನ ಹಾಗೂ ೧೯೪೦ರ ರಾಮಗಡ ಸಮ್ಮೇಳನದಲ್ಲಿ ಪ್ರಜಾಪ್ರತಿನಿಧಿಗಳನ್ನು ಹೊಂದಿದ ಸಂವಿಧಾನ ರಚನಾ ಸಭೆಯ ಬಗ್ಗೆ ಪ್ರಸ್ತಾಪಿಸಲಾಯಿತು. ಪ್ರಥಮ ಬಾರಿಗೆ ಬ್ರಿಟಿಷ್ ಸರ್ಕಾರ ಅನೇಕ ಮುಖ್ಯ ಮಿತಿಗಳೊಂದಿಗೆ ರಚನಾ ಸಭೆ ರಚಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದು, ಅದು “ಆಗಸ್ಟ್‌ಆಫರ್ ೧೯೪೦” ಎಂದು ಪ್ರಖ್ಯಾತವಾಗಿದೆ. ೧೯೪೨ರಲ್ಲಿ ಕ್ರಿಪ್ಸ್ ಆಯೋಗ ಭಾರತೀಯರನ್ನೊಳಗೊಂಡ ಸಭೆಯ ರಚನೆಗೆ ಯೋಜನೆ ರೂಪಿಸಿತು. ಆದರೆ ಅದರಲ್ಲಿಯ ನಿಬಂಧನೆಗಳು ಭಾರತೀಯ ನಾಗರೀಕರಿಗೆ ಒಪ್ಪಿಗೆಯಾಗಲಿಲ್ಲ. ಅದೂ ವಿಫಲವಾಯಿತು.

ನಂತರದಲ್ಲಿ ಭಾರತ ಸಂವಿಧಾನ ಸಭೆಯ ರಚನೆಯ ವಿಷಯದಲ್ಲಿ ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಲೀಗ್‌ನಡುವಣ ಭಿನ್ನಾಭಿಪ್ರಾಯ ಬಗೆಹರಿಸುವಲ್ಲಿ ಅನೇಕ ಪ್ರಯತ್ನಗಳು ನಡೆದವು. ೧೯೪೨ರ ಭಾರತ ಬಿಟ್ಟು ತೊಲಗಿ ನಿರ್ಣಯದಲ್ಲಿಯೂ ಸಂವಿಧಾನ ರಚನಾಸಭೆಯ ಪ್ರಸ್ತಾಪವಿತ್ತು. ಬ್ರಿಟನ್ನಿನಿಂದ ಕಳಿಸಲ್ಪಟ್ಟ ಕ್ಯಾಬಿನೆಟ್ ಆಯೋಗ ತನ್ನದೇ ಆದ ಪ್ರಸ್ತಾವಗಳನ್ನು ಮುಂದಿಟ್ಟಿತು. ಅದೇ ಪ್ರಸಿದ್ಧಯಾದ ಕ್ಯಾಬಿನೆಟ್ ಮಿಷನ್ ಪ್ಲಾನ್. ಕಾಂಗ್ರಸ್ ಮತ್ತು ಮುಸ್ಲಿಮ್ ಲೀಗ್ ಅದನ್ನು ಸಂಪೂರ್ಣವಾಗಿ ಪ್ರಾರಂಭದಲ್ಲಿ ಒಪ್ಪಿಕೊಳ್ಳದೇ ಇದ್ದರೂ ಅಂತಿಮದಲ್ಲಿ ಒಪ್ಪಿಕೊಂಡವು. ಅದರ ಪರಿಣಾಮವೇ ಸಂವಿಧಾನ ರಚನಾಸಭೆ. ೧೯೩೫ರ ಭಾರತ ಕಾಯ್ದೆಯನ್ವಯ ಸೀಮಿತ ಮತಾಧಿಕಾರದ ಆಧಾರದ ಮೇಲೆ ೩೮೯ ಸದಸ್ಯರನ್ನೊಳಗೊಂಡ ಸಂವಿಧಾನ ರಚನಾಸಭೆ ರಚಿತವಾಯಿತು. ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ೧೯೪೬ರ ಡಿಸೆಂಬರ್ ೬ ರಂದು ಪ್ರಥಮ ಸಭೆ ಸೇರಿತು. ಸಂವಿಧಾನ ರಚನಾಸಭೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಮಿತಿಗಳಲ್ಲಿ ಕೂಲಂಕುಶವಾದ ಚರ್ಚೆಗಳು ನಡೆದವು. ಈ ಸಮಿತಿಗಳ ವರದಿಗಳನ್ನು ಆಧರಿಸಿದ ಸಂವಿಧಾನದ ಕರಡನ್ನು ಸಿದ್ಧಪಡಿಸಲು ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಆದು ಸದಸ್ಯರನ್ನೊಳಗೊಂಡ ಕರಡು ಸಮಿತಿ ರಚಿಸಲಾಯಿತು.

ಸಾಮಾಜಿಕ ನ್ಯಾಯ ದೊರಕಿಸಿಕೊಡುವ ವಿಷಯದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಸಂವಿಧಾನ ರಚನೆಯ ವಿವಿಧ ಸಭೆಯಲ್ಲಿ, ಚರ್ಚೆಯಲ್ಲಿ ಭಾಗವಹಿಸಿದ ರೀತಿ ಅವರ ಪ್ರಾಮಾಣಿಕತೆ, ಕಾನೂನು ಪಾಂಡಿತ್ಯ ಹಾಗೂ ತರ್ಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸಂವಿಧಾನ ಕರಡನ್ನು ಮಂಡಿಸುವಾಗ ಹಾಗೂ ಸಂವಿಧಾನಕ್ಕೆ ಅಂಗೀಕಾರ ದೊರೆಯುವಾಗ ಸಂವಿಧಾನ ಸಭೆಯಲ್ಲಿಯ ಅವರ ಭಾಷಣಗಳು ಉಲ್ಲೇಖಾರ್ಹವಾಗಿವೆ. ಸಂವಿಧಾನ ರಚನೆ ಸಭೆಯಲ್ಲಿ ಕೊನೆಯ ಭಾಷಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಲವತ್ತು ನಿಮಿಷಗಳವರೆಗೆ ನಿರರ್ಗಳವಾಗಿ ಮಾತನಾಡಿದರು. ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಭಾರತೀಯರಲ್ಲಿ ಕೇಳಿಕೊಳ್ಳುತ್ತಾ ಸ್ವಾತಂತ್ರ್ಯ ರಕ್ಷಣೆಗಾಗಿ ಕೊನೆಯ ಹನಿ ರಕ್ತವಿರುವವರೆಗೆ ಹೋರಾಡಬೇಕೆಂದು ತಿಳಿಸಿದರು. ಅವರ ಈ ಭಾಷಣವನ್ನು ಪಂಡಿತ ಜವಹ್ರಲಾಲ್ ನೆಹರೂ ಒಳಗೊಂಡಂತೆ ಇಡೀ ಸಭೆ ಆಸಕ್ತಿಯಿಂದ ಆಲಿಸಿತ್ತು. ಕಿವಿಗಡಚುಕ್ಕುವ ಚಪ್ಪಾಳೆಯ ಸುರಿಮಳೆಯೇ ಆಯಿತು. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ ಈ ವಿಷಯವನ್ನು ಪ್ರಸ್ತಾಪಿಸುತ್ತಾ “ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಆರೋಗ್ಯ ಸರಿ ಇಲ್ಲದಿದ್ದರೂ ತಮ್ಮ ಶ್ರದ್ಧೆ, ಪರಿಶ್ರಮಗಳಿಂದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಗೌರ ತಂದುಕೊಟ್ಟಿದ್ದಾರೆ” ಎಂದು ಶ್ಲಾಷಿಸಿದ್ದಾರೆ.

ಕೃಷ್ಣಸ್ವಾಮಿ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಐಯ್ಯಂಗಾರ್, ಕೆ.ಎಂ. ಮುನ್ಶಿ, ಸೈಯರ್ ಅಹ್ಮದ್ ಸಾದುಲ್ಲಾ, ಸರ್ ಬಿ.ಆರ್. ಮಿಟ್ಟರ್ ಮತ್ತು ಡಿ.ಪಿ. ಝೈತಾನ್ ಕರಡು ಸಮಿತಿಯ ಸದಸ್ಯರಾಗಿದ್ದರು. ೧೪೧ ದಿನಗಳಲ್ಲಿ ಕರಡು ಸಮಿತಿಯು ಕರಡು ಸಂವಿಧಾನವನ್ನು ಸಿದ್ಧಪಡಿಸಿತು. ಸಂವಿಧಾನ ರಚನಾಸಭೆ ೧೯೪೯ರ ನವೆಂಬರ್ ೨೬ರಂದು ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದನ್ನು ಸಿದ್ಧಪಡಿಸಿತು. ಸಂವಿಧಾನ ರಚನಾಸಭೆ ತನ್ನ ಕಾರ್ಯಪೂರೈಸಲು ತೆಗದಕೊಂಡ ಅವಧಿ ಮೂರು ವರ್ಷಕ್ಕಿಂತಲೂ ಕಡಿಮೆ. ೨ ವರ್ಷ, ೧೧ ತಿಂಗಳು ೧೭ ದಿನಗಳನ್ನು ಈ ಸಭೆಯು ಸಂವಿಧಾನ ರಚನೆಯನ್ನು ಮಾಡಲು ತೆಗೆದುಕೊಂಡಿತು.

ಸಂವಿಧಾನ ರಚನಾ ಸಭೆಯ ರಚನೆಯ ವಿಷಯದಲ್ಲಿ ಅನೇಕ ಟೀಕೆಗಳಿವೆ. ಕಾಂಗ್ರೆಸ್‌ನ ಪಾಬಲ್ಯ, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು, ಕಾನೂನು ತಜ್ಞರ ಯಜಮಾನಿಕೆ, ಪ್ರಾತಿನಿಧ್ಯ ಕೊರತೆ, ಪರೋಕ್ಷ ಆಯ್ಕೆಯಿಂದಾಗಿ ಪರಜಾಸತ್ತಾತ್ಮಕವಾಗಿಲ್ಲವಿರುವುದು ಮುಂತಾದ ಟೀಕೆಗಳಿವೆ. ಆದರೆ ಸಂವಿಧಾನ ರಚನಾಸಭೆಯ ಕಾರ್ಯವಿಧಾನ, ಸದಸ್ಯರ ಪ್ರಾಮಾಣಿಕತೆ, ನಿಷ್ಠೆ, ರಾಷ್ಟ್ರ ಹಿತದ ಕುರಿತ ಕಳಕಳಿ ಪ್ರಶ್ನಾತೀತವಾದದ್ದು ಎಂಬುದು ನಿಸ್ಸಂದೇಹ. ವಿವಿಧ ಸರ್ಕಾರಗಳ ಕಾರ್ಯ ವಿಧಾನಗಳಲ್ಲಿ ಇದ್ದ ಅನುಭವ, ಜ್ಞಾನ, ಆಳ್ವಿಕೆಯ ಪರಂಪರೆಯ ಭಂಡಾರಗಳನ್ನೆಲ್ಲ ಬಳಸಿಕೊಂಡು ಭಾರತದ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಸೂಕ್ತ ವ್ಯವಸ್ಥೆಯೊಂದನ್ನು ನೀಡಲು ಸಂವಿಧಾನ ರಚನಾಕಾರರು ಪ್ರಯತ್ನಿಸಿದರು. ಈ ಕಾರಣದಿಂದಾಗಿಯೇ ಭಾರತ ಸಂವಿಧಾನದಲ್ಲಿ ಜಗತ್ತಿನ ವಿವಿಧ ಸಂವಿಧಾನಗಳ ಅಂಶಗಳನ್ನು ಕಾಣಬಹುದಾಗಿದೆ. ಕೆಲವರು ಭಾರತ ಸಂವಿಧಾನವನ್ನು ‘ಎರವಲುಗಳ ಕಂತೆ’ ಎಂದು ಟೀಕಿಸಿದ್ದಾರೆ. ಗ್ರಾನ್‌ವಿಲ್ಲೆ ಆಸ್ಟಿನ್ (೧೯೯೯)ಸಂವಿಧಾನ ರಚನಾಸಭೆ ಯಾವ ವ್ಯವಸ್ಥೆಯ ನಕಲನ್ನೂ ಮಾಡದೆ ಅತಿ ಜಾಣತನದಿಂದ ಇತರ ಸಂವಿಧಾನಗಳ ಆಯ್ದ ಭಾಗಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮಾರ್ಪಡಿಸಿದೆ ಎಂದಿರುವುದು ಒಪ್ಪಿಕೊಳ್ಳ ಬಹುದಾದ ಹೇಳಿಕೆಯಾಗಿದೆ.

ಜೆ.ಡಬ್ಯ್ಲೂ ಗಾರ್ನರ್‌ ಹೇಳವಂತೆ ಲಿಖಿತ ಸಂವಿಧಾನ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.

೧. ಪ್ರಜೆಗಳ ನಾಗರಿಕ ಹಾಗೂ ರಾಜಕೀಯ ಹಕ್ಕುಗಳು ಮತ್ತು ಆ ಹಕ್ಕುಗಳನ್ನು ಅನುಭವಿಸಲು ಅನುವು ಮಾಡಿಕೊಡುವಂತೆ ಸರ್ಕಾರದ ಅಧಿಕಾರದ ಮೇಲಿನ ಮಿತಿಗಳು.

೨. ಸರ್ಕಾರದ ಸಂಘಟನೆ, ಅಧಿಕಾರ, ಆಡಳಿತ ನಿಯಮ ಮತ್ತು ಮತದಾರ ವರ್ಗಕ್ಕೆ ಸಂಬಂಧಿಸಿದ ವಿಧಿಗಳು.

೩. ಸರ್ಕಾರದ ಅಧಿಕೃತ ಬದಲಾವಣೆಯ ಪ್ರಕ್ರಿಯೆ.

ಭಾರತ ಸಂವಿಧಾನದಲ್ಲಿ ಮೇಲ್ಕಂಡ ಅಂಶಗಳು ಅಡಕವಾಗಿರುವುದನ್ನು ಕಾಣಬಹುದು. ಭಾರತದ ಜನತೆಗೆ ಸಂವಿಧಾನ ಕರ್ತರು ಒಂದು ಆಚರಣಾ ಯೋಗ್ಯ ಕೈಪಿಡಿಯನ್ನು ನೀಡಿರುವುದಲ್ಲಿ ಯಾವುದೇ ಸಂದೇಹವಿಲ್ಲ. ೧೯೫೦ರ ಜನವರಿ ೧೬ ರಂದು ಸಂವಿಧಾನ ಜಾರಿಗೆ ಬಂದಿತು. ಈ ದಿನವನ್ನು ಗಣರಾಜ್ಯ ದಿನವಾಗಿ ರಾಷ್ಟ್ರದ್ಯಂತ ಆಚರಿಸಲಾಗುತ್ತದೆ. ಮೂಲ ಸಂವಿಧಾನದಲ್ಲಿ ಪೀಠಿಕೆ, ೨೨ ಭಾಗಗಳಲ್ಲಿ ೩೯೫ ವಿಧಿಗಳು ಹಾಗೂ ೮ ಪರಿಶಿಷ್ಟಗಳಿದ್ದವು. ೨೦೦೭ ರಲ್ಲಿ ೨೬ ಭಾಗಗಳು ಹಾಗೂ ೧೨ ಪರಿಶಿಷ್ಟಗಳಿವೆ.

* * *

ಗಾತ್ರದಲ್ಲಿ ಅತಿ ದೊಡ್ಡ ಸಂವಿಧಾನವೆಂಬ ಹೆಗ್ಗಳಿಗೆ ಪಾತ್ರವಾಗಿರುವ ಭಾರತ ಸಂವಿಧಾನ ಬೆಳೆಯುತ್ತಲೇ ಇರುವುದು ಅದರ ವಿಶಿಷ್ಟತೆಯ, ಜೀವಂತಿಕೆಯ ಲಕ್ಷಣವಾಗಿದೆ. ಪ್ರಾರಂಭದಲ್ಲಿ ಮೂಲ ಸಂವಿಧಾನ ದೊಡ್ಡದಾಗಲು ಹಲವಾರು ಕಾರಣಗಳಿದ್ದವು; ಸಂವಿಧಾನಗಳ ಪರಂಪರೆ; ಸ್ವಾತಂತ್ರ್ಯ ಬಂದಾಗ ಇದ್ದ ಪ್ರಕ್ಷುಬ್ಧ ಸ್ಥಿತಿ; ತುರ್ತು ಪರಿಸ್ಥಿತಿ ನಿಭಾಯಿಸಲು ಬಲಿಷ್ಠ ಸರ್ಕಾರದ ಅಗತ್ಯ ವೈವಿಧ್ಯತೆಯನ್ನಾಧರಿಸಿ ಸಂಯುಕ್ತ ವ್ಯವಸ್ಥೆಗೆ ಅವಕಾಶ ಕಲ್ಪಿಸುವುದು; ರಾಷ್ಟ್ರದ ಐಕ್ಯತೆ ಅಖಂಡತೆಯ ದೃಷ್ಟಿಯಿಂದ ಏಕ ಸಂವಿಧಾನ ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ರಚನೆ, ಅಧಿಕಾರ ವ್ಯಾಪ್ತಿಯ ನಿರೂಪಣೆ; ಬಹುಭಾಷಿಕ ರಾಷ್ಟ್ರವಾದ್ದರಿಂದ ಅಧಿಕೃತ ಭಾಷೆಗಳ ಉಲ್ಲೇಖ; ಕೆಲವು ಸಂಯುಕ್ತ ಘಟಕಗಳ ವಿಶಿಷ್ಟ್ಯತೆಗಳಿಂದಾಗಿ ಅವುಗಳಿಗೆ ವಿಶೇಷ ವಿಧಿಗಳ: ಸಂವಿಧಾನದ ಉದ್ದೇಶಗಳು ಸಂವಿಧಾನದ ಉದ್ದೇಗಳ ಈಡೇರಿಕೆಗಾಗಿ ಸರ್ಕಾರ ಕಾರ್ಯನಿರ್ವಹಿಸಲು ಮಾರ್ಗಸೂಚಿಯಾಗಿ ರಾಜ್ಯ ನಿರ್ದೇಶಕ ತತ್ವಗಳು; ಸರ್ಕಾರದ ಅಧಿಕಾರದ ಮೇಲಿನ ಮಿತಿಯಾಗಿ ಪ್ರಜೆಗಳ ಸ್ವಾತಂತ್ರ್ಯ ಹಕ್ಕುಗಳನ್ನು ಒಳಗೊಂಡ ಮೂಲಭೂತ ಹಕ್ಕುಗಳು ಇನ್ನು ಮುಂತಾದ ಕಾರಣಗಳಿಂದಾಗಿ ಸಂವಿಧಾನ ರಚನಾಕಾರರು ದೀರ್ಘವಾದ ಸಂವಿಧಾನ ನೀಡುವ ಒತ್ತಾಸೆಗೊಳಗಾದರು. ನಂತರದಲ್ಲಿ ಅಗತ್ಯಕ್ಕೆ ಅನುಗುಣವಾಗಿ, ಸಂವಿಧಾನದ ಉದ್ದೇಶಗಳ ಈಡೇರಿಕೆಯ ದೃಷ್ಟಿಯಿಂದಾಗಿ ತಿದ್ದುಪಡಿಗಳ ಮೂಲಕ ಸಂವಿಧಾನ ಬೆಳೆಯಿತು. ಬೆಳೆಯುತ್ತಲೇ ಇದೆ. ಉದಾಹರಣೆಗೆ, ಮೂಲಭೂತ ಕರ್ತವ್ಯಗಳ ಸೇರ್ಪಡೆ; ಬಹುಪಕ್ಷ ಪದ್ಧತಿ ತಂದೊಡ್ಡಿದ ಸಮಸ್ಯೆಗಳಿಂದಾಗಿ ಪಕ್ಷಾಂತರ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯ; ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ಪಟ್ಟಿಗಳಲ್ಲಿ ಉಂಟಾದ ಘರ್ಷಣೆ. ಈ ರೀತಿಯಲ್ಲಿ ಸಂವಿಧಾನ ಗಾತ್ರ ದೊಡ್ಡದಾಗಿರಲು ಭಾರತದ ಅಂದಿನ ಹಾಗೂ ಇಂದಿನ ಪರಿಸ್ಥಿತಿಗೆ ಸಹಜವೆನಿಸುತ್ತದೆ.

ಭಾರತದ ಸಂವಿಧಾನದಲ್ಲಿ ಸ್ಥಿರತೆಯೊಂದಿಗೆ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿಯೇ ಸಂವಿಧಾನ ರಚನಾಕಾರರು ಏಕರೂಪದ ತಿದ್ದುಪಡಿ ವಿಧಾನವನ್ನು ನೀಡದೇ ಕಠಿಣತೆ ಮತ್ತು ನಮ್ರತೆಯ ಮಿಶ್ರಣವನ್ನಾಗಿಸಿದ್ದಾರೆ. ಇದು ಅವರ ದೂರದೃಷ್ಟಿಯ ಸೂಚಕ. ಯಾವುದೇ ಸಂವಿಧಾನ ಉತ್ತಮವೆನಿಸಿಕೊಳ್ಳಬೇಕಾದರೆ ಸ್ಥಿರವ್ಯವಸ್ಥೆ ನೀಡುವುದರೊಂದಿಗೆ ಬದಲಾದ ಪರಿಸ್ಥಿತಿಗಳು ತಂದೊಡ್ಡುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಹಾಯಕವಾಗಿರಬೇಕು. ಸಮಾಜ ನಿಂತ ನೀರಲ್ಲ. ಅದರ ಅಗತ್ಯಗಳು ಮತ್ತು ನಿರೀಕ್ಷೆಯಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಸರ್ಕಾರದ ವ್ಯವಸ್ಥೆ ಅದರೊಂದಿಗೆ ಹೊಂದಿಕೊಳ್ಳಬೇಕಾದರೆ ಅತಿ ಕಠಿಣ ಸಂವಿಧಾನವಿದ್ದರೆ ಸಾಧ್ಯವಾಗದು.

ತಿದ್ದುಪಡಿಗೆ ಅವಕಾಶ ನೀಡದ ಸಂವಿಧಾನವನ್ನು ರಾಜನೀತಿಜ್ಞರು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ. ತಿದ್ದುಪಡಿಗೆ ಅವಕಾಶವನ್ನೇ ನೀಡದ ಸಂವಿಧಾನವು ಸಂವಿಧಾನ ರಚನಾಕಾರರು ತಪ್ಪನ್ನೇ ಮಾಡದವರು ಎಂಬ ಕಲ್ಪನೆಯನ್ನು ಆಧರಿಸಿದೆ ಎಂದು ಗಾರ್ನರ್ ಎನ್ನುವ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. “ಸಂವಿಧಾನ ರಚನಾ ಸಭೆಯಲ್ಲಿ ನೆಹರೂ ಅವರು ಸಂವಿಧಾನ ರಚನಾ ಸಭೆ ಮುಂಬರುವ ಪೀಳಿಗೆಯನ್ನು ಬಂಧನದಲ್ಲಿಡಬಾರದು…. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುವಂತ ಸಂವಿಧಾನವನ್ನು ಜನತೆಗೆ ನೀಡಬೇಕು” ಎಂಬ ಆಶಯವನ್ನು ಅವರು ವ್ಯಕ್ತಪಡಿಸಿರುವುದನ್ನು ಗಮನಿಸಬಹುದು.

ಸ್ವಿಡ್ಜರ್‌ಲ್ಯಾಂಡಿನಲ್ಲಿರುವ ಪ್ರಜಾನಿರ್ಧಾರದ ವಿಧಾನವಾಗಲೀ ಅಥವಾ ಅಮೆರಿಕೆಯಲ್ಲಿರುವ ಸಮ್ಮೇಳನ ವಿಧಾನವಾಗಲೀ ಸಂವಿಧಾನ ರಚನಾಕಾರರಿಗೆ ಒಪ್ಪಿಗೆಯಾಗಲಿಲ್ಲ. ಅಷ್ಟೇ ಅಲ್ಲ ೪೫ನೆಯ ತಿದ್ದುಪಡಿಯ ಮೂಲಕವೂ ಪ್ರಜಾನಿರ್ಧಾರದ ವಿಧಾನವನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವ ವಿಫಲ ಪ್ರಯತ್ನವೂ ನಡೆಯಿತು. ಜನರನ್ನು ಪ್ರತಿನಿಧಿಸುವ ಚುನಾಯಿತ ಸಂಸತ್ತಿಗೆ ಸಂವಿಧಾನವನ್ನು ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸುವ ಅಧಿಕಾರಿಗಳಿರಬೇಕು ಎಂಬ ಅಭಿಲಾಷೆಯೊಂದಿಗೆ ವಿಷಯದ ಪ್ರಾಮುಖ್ಯತೆ ಆಧಾರದ ಮೇಲೆ ತಿದ್ದುಪಡಿ ವಿಧಾನವನ್ನು ತೂಪಿಸಲಾಯಿತು. ೨೬೮ನೆಯ ವಿಧಿಯ ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಅಧಿಕಾರ ನೀಡಿದೆ.

ಸಂಸತ್ತು ಸರಳ ಬಹುಮತದೊಂದಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನಿರ್ದೇಶಿತವಾಗಿ ತಿದ್ದುಪಡಿ ತರಬಹುದು. ರಾಜ್ಯ ಶಾಸಕಾಂಗಗಳು ಸರಳ ಬಹುಮತದೊಂದಿಗೆ ಕಾನೂನು ಮಾಡುವಂತೆಯೇ ಸಂವಿಧಾನದಲ್ಲಿ ಕೆಲಭಾಗದಲ್ಲಿ ತಿದ್ದುಪಡಿ ತರಬಹುದು. ಕೆಲವು ವಿಧಿಗಳಿಗೆ ಅಗತ್ಯವಿದೆ. ಇಂತಹ ವಿಷಯದಲ್ಲಿ ಸಂಸತ್ತಿನ ಪ್ರತಿ ಸದನದಲ್ಲೂ ೨/೩ ರಷ್ಟು ಬಹುಮತ ಅಗತ್ಯವಿದೆ. ಇಂತಹ ವಿಷಯದಲ್ಲಿ ಸದನಗಳ ನಡುವೆ ಭಿನ್ನಾಭಿಪ್ರಾಯ ಬಂದರೆ ಜಂಟಿ ಅಧಿವೇಶನಕ್ಕೆ ಅವಕಾಶವಿಲ್ಲ. ಕೊನೆಯದಾಗಿ, ಅತಿ ಕಠಿಣ ವಿಧಾನವೆಂದರೆ ಸಂಸತ್ತಿನ ಎರಡು ಸದನಗಳಲ್ಲಿ ೨/೩ ರಷ್ಟು ಬಹುಮತ ಹಾಗೂ ೧/೨ಕ್ಕೆ ಕಡಿಮೆಯಿಲ್ಲದಷ್ಟು ರಾಜ್ಯಗಳ ಒಪ್ಪಿಗೆ ಪಡೆಯುವುದಾಗಿದೆ. ಸಂವಿಧಾನ ತಿದ್ದುಪಡಿಗೆ ಸಂವಿಧಾನ ನಿಗದಿಪಡಿಸಿದ ಯಾವುದೇ ವಿಧಾನವನ್ನು ಅನುಸರಿಸಲು ರಾಷ್ಟ್ಟಪತಿಯ ಒಪ್ಪಿಗೆ ಕಡ್ಡಾಯವಾಗಿದೆ.

ಈ ಮೇಲಿನ ಎಲ್ಲ ವಿಧಾನಗಳನ್ನು ಬಳಸಿ ಸಂವಿಧಾನದಲ್ಲಿ ತಿದ್ದುಪಡಿಗಳಾಗಿವೆ. ಸಂವಿಧಾನದ ಆಚರಣೆಯಲ್ಲಿ ಉದ್ಭವಿಸಿದ ವಿವಿಧ ಸಮಸ್ಯೆಗಳಿಂದಾಗಿ ಅವುಗಳನ್ನು ಪರಿಹರಿಸಿಕೊಳ್ಳಲು ಕಾಲದಿಂದ ಕಾಲಕ್ಕೆ ಸಂವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಮೂಲಭೂತ ಹಕ್ಕು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ನಡುವಿನ ಘರ್ಷಣೆ, ಕೇಂದ್ರ ರಾಜ್ಯಗಳ ಅಧಿಕಾರಗಳ ವಿಷಯದಲ್ಲಿ ಘರ್ಷಣೆ, ಸಂವಿಧಾನದ ಮೂಲ ಧ್ಯೇಯೋದ್ದೇಶ ಜಾರಿಯಲ್ಲಿರುವ ಅಡೆತಡೆ ನಿವಾರಣೆಯ ಸಮಸ್ಯೆ, ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳ ಸದಸಯರ ಅನರ್ಹತೆಯ ಪ್ರಶ್ನೆ, ತುರ್ತುಪರಿಸ್ಥಿತಿ ಘೋಷಣೆ ಅಧಿಕಾರದ ಪ್ರಯೋಗದಿಂದುಂಟಾದ ಸಮಸ್ಯೆ, ರಾಷ್ಟ್ರಪತಿ ಪ್ರಧಾನಮಂತ್ರಿಯ ಸಂಬಂಧ ಮುಂತಾದ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ತಿದ್ದುಪಡಿ ತರಲಾಗಿದ್ದರೂ ಸಮಸ್ಯೆಗಳು ತಾತ್ಕಾಲಿಕ ಪರಿಹಾರ ಕಂಡಿವೆಯೇ ಹೊರತು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಇದರಿಂದಾಗಿ ಸಮಗ್ರ ಸಂವಿಧಾನ ಪರಾಮರ್ಶೆಯ ಪ್ರಯತ್ನ ನಡೆಯಿತು.

ಸಂವಿಧಾನ ಪರಾಮರ್ಶೆ

ಸಂವಿಧಾನ ಪರಾಮರ್ಶೆಯ ಚರ್ಚೆ ಸಂವಿಧಾನ ಜಾರಿಗೆ ಬಂದ ಪ್ರಥಮ ದಶಕದಿಂದಲೇ ಪ್ರಾರಂಭವಾಯಿತು. ಪ್ರತಿ ತಿದ್ದುಪಡಿಯೂ ಒಂದು ದೃಷ್ಟಿಯಿಂದ ಪಾರ್ಶ್ವಿಕ ಪರಾಮರ್ಶೆಯೇ ಆಗಿದೆ. ಸಂವಿಧಾನ ಜಾರಿಗೆ ಬಂದು ಎರಡು ವರ್ಷ ಕಳೆಯುವ ಮೊದಲೇ ೧೯೫೧ರಲ್ಲಿ ಪ್ರಥಮ ತಿದ್ದುಪಡಿ ಮಸೂದೆ ಮಂಡಿತವಾಯಿತು. ಆ ಸಂದರ್ಭದಲ್ಲಿ ನೆಹರೂ ಅವರು “ಸಂವಿಧಾನ ಸಜೀವವಾಗಿರಬೇಕಾದರೆ ಅದು ಬೆಳೆಯುತ್ತಿರಬೇಕು, ಹೊಂದಿಕೊಳ್ಳುವಂತಿರಬೇಕು, ಅನನ್ಯವಾಗಿರಬೇಕು, ಬದಲಾಯಿಸುವಂತಿರಬೇಕು” ಎಂದು ಹೇಳಿದರು. ಸಂಸತ್ತಿನ ತಿದ್ದುಪಡಿ ಸಮಗ್ರವಾದುದೇ ಅಥವಾ ಅದರ ಮೇಲೆ ನ್ಯಾಯಾಂಗದ ನಿಯಂತ್ರಣವಾಗಿರಬೇಕೆ? ಇದ್ದರೆ ಎಷ್ಟಿರಬೇಕು? ಎಂಬೆಲ್ಲ ವಿಷಯಗಳ ಚರ್ಚೆ ನಡೆಯುತ್ತಲೇ ಇತ್ತು.

ಸಂವಿಧಾನದ ಆಚರಣೆಯಲ್ಲಿ ಉಂಟಾದ ಅನೇಕ ವಿವಾದಾಂಶಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಕಂಡುಬಂದ ಕೊರತೆಯನ್ನು ನಿವಾರಿಸಲು ಕೇಂದ್ರ ರಾಜ್ಯಗಳ ಆಡಳಿತಾತ್ಮಕ ಸಂಬಂಧಗಳ ಸುಧಾರಣೆಗಾಗಿ ‘ಆಡಳಿತ ಸುಧಾರಣಾ ಆಯೋಗ,’ ಪಕ್ಷಾಂತರ ಸಮಸ್ಯೆ ಪರಿಹಾರಕ್ಕಾಗಿ ‘ವೈ. ಬಿ. ಚೌಹಾಣ್ ಸಮಿತಿ,’ ೧೯೮೩ರ ‘ಆರ್.ಎಸ್. ಸರ್ಕಾರಿಯಾ ಆಯೋಗ’ ಇವುಗಳಲ್ಲದೇ ಅನೇಕ ಸಂಸದೀಯ ಸಮಿತಿಗಳನ್ನು ರಾಜಕೀಯ ವ್ಯವಸ್ಥೆಯಲ್ಲಿಯ ಸಮಸ್ಯೆಗಳ ನಿವಾರಣೆಗಾಗಿ ‘ಕಾನೂನು ಆಯೋಗ’ ಅನೇಕ ಶಿಫಾರಸ್ಸುಗಳನ್ನು ಮಾಡಿತು.

ಇಡೀ ಸಂವಿಧಾನವನ್ನು ಹೊಸ ದೃಷ್ಟಿಯಿಂದ ನೋಡಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ಸ್ವರ್ಣಸಿಂಗ್ ಸಮಿತಿಯು ಅರ್ಥಕಳೆದುಕೊಂಡಿರುವ ಸಂವಿಧಾನದ ಅನೇಕ ವಿಧಿಗಳನ್ನು ರದ್ದುಗೊಳಿಸುವಂತೆಯೂ, ಪೀಠಿಕೆಯಿಂದ ಹಿಡಿದು ಸಂವಿಧಾನದ ವಿವಿಧ ಭಾಗಗಳಲ್ಲಿ ತಿದ್ದುಪಡಿಗಳನ್ನು ಶಿಫಾರಸ್ಸು ಮಾಡಿತು. ೧೯೭೬ರಲ್ಲಿ ತರಲಾದ ೪೨ನೆಯ ತಿದ್ದುಪಡಿ ಸಂವಿಧಾನದ ಸ್ವರೂಪವನ್ನೇ ಬದಲಾಯಿಸುವಷ್ಟು ವ್ಯಾಪಕವಾಗಿತ್ತು. ನಂತರದಲ್ಲಿ ೪೪ನೆಯ ತಿದ್ದುಪಡಿಯನ್ನು ಈ ವ್ಯಾಪಕ ಬದಲಾವಣೆಯನ್ನು ರದ್ದುಗೊಳಿಸಿ ಸಂವಿಧಾನವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಉದ್ದೇಶದಿಂದ ಅಂಗೀಕರಿಸಲಾಯಿತು.

ಈ ರೀತಿಯಲ್ಲಿ ಸಂವಿಧಾನದ ಐದು ದಶಕಗಳಿಗೂ ಮೀರಿದ ಇತಿಹಾಸದಲ್ಲಿ ಸಂವಿಧಾನವನ್ನು ಕಾರ್ಯಶೀಲವನ್ನಾಗಿರಿಸಲು ಬಹಳಷ್ಟು ಪ್ರಯತ್ನಗಳು ನಡೆದವು. ೧೩ನೆಯ ಸಾರ್ವತ್ರಿಕ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ನ್ಯಾಶನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್.ಡಿ.ಎ.). ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಯವರು ಸಂವಿಧಾನ ಪರಾಮರ್ಶೆಯ ಉದ್ದೇಶದಿಂದ ನಿವೃತ್ತ ನ್ಯಾಯಮೂರ್ತಿ ಎಮ್.ಎನ್. ವೆಂಕಟಾಚಲಯ್ಯ ಅವರ ನೇತೃತ್ವದಲ್ಲಿ ೧೦ ಸದಸ್ಯರನ್ನು ಒಳಗೊಂಡ ಸಂವಿಧಾನ ಪರಾಮರ್ಶೆಯ ಆಯೋಗವನ್ನು ಒಂದು ವರ್ಷದ ಅವಧಿಗಾಗಿ ೨೦೦೦ರ ಫೆಬ್ರವರಿ ೨೩ರಂದು ನಿಯಮಿಸಿದರು. ಆಯೋಗದ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಯಿತು. ಈ ಆಯೋಗ ಎಮ್.ಎನ್. ವೆಂಕಟಾಚಲಯ್ಯ ಆಯೋಗವೆಂದೇ ಹೆಸರುವಾಸಿಯಾಗಿದೆ.

ಸ್ವಾತಂತ್ರ್ಯಾನಂತರ ೫೦ ವಷ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕ್ಷೇತ್ರಾನುಭವದ ನಾಲ್ಕು ಪ್ರಮುಖ ಪಾಥಗಳನ್ನು ಗಮನದಲ್ಲಿರಿಸಿ ಸಂವಿಧಾನ ಪರಾಮರ್ಶೆಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಅವುಗಳೆಂದರೆ:

೧. ಅಭಿವೃದ್ಧಿ ಆರ್ಥಿಕ ಸ್ಥಿರತೆಯ ಅಗತ್ಯವಿದೆ.

೨. ಅಭಿವೃದ್ಧಿಯ ಕೆಳಹಂತದವರೆಗೆ ತಲುಪಬೇಕಾದರೆ ಮಾನವನ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು.

೩. ಯಾವುದೇ ಏಕ ನೀತಿ ಪಾಲನೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸಮಗ್ರ ದೃಷ್ಟಿಕೋನದ ಅಗತ್ಯವಿದೆ.

೪. ಸಂಸ್ಥೆಗಳು ‌ಪ್ರಮುಖವೇ ಆದರೂ ಸುಸ್ಥಿರ ಅಭಿವೃದ್ಧಿ ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡಿರಬೇಕು ಹಾಗೂ ಬದಲಾದ ಪರಿಸ್ಥಿತಿಗೆ ಪ್ರತಿಕ್ರಿಯಿಸುವಂತಿರಬೇಕು.

ಸರ್ಕಾರೇತರ ಸಂಸ್ಥೆಗಳು, ಇನ್ನಿತರ ವಿವಿಧ ಸಂಸ್ಥೆಗಳು, ವಿಶೇಷಜ್ಞರು, ಸಾಮಾನ್ಯ ಪ್ರಜೆಗಳಿಂದ ಸಂವಿಧಾನ ಪರಾಮರ್ಶೆಯ ಸಮಿತಿ ವಿವಿಧ ಮಾಧ್ಯಮಗಳನ್ನು ಬಳಸಿ ಅಭಿಪ್ರಾಯ ಸಂಗ್ರಹಿಸಿತು.

ಆಯೋಗದ ಮನವಿಗೆ ಪ್ರತಿಯಾಗಿ ಸುಮಾರು ೨೦,೦೦೦ ಪತ್ರಗಳು, ೨೧೨ ಸಂಶೋಧನಾತ್ಮಕ ಪ್ರಬಂಧಗಳು, ೨,೩೫೦ ಸೂಚನೆಗಳು ಬಂದವು. ಸುಮಾರು ೧೩೧ ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ಅಭಿಪ್ರಾಯ ತಿಳಿಸಿದವು.

ಸಂವಿಧಾನ ರಚನಾಕಾರರ ದೂರದೃಷ್ಟಿ, ಧ್ಯೇಯೋದ್ದೇಶಗಳನ್ನು ಗಮನದಲ್ಲಿರಿಸಿ ಕೆಲ ಮುಖ್ಯ ಕ್ಷೇತ್ರಗಳನ್ನು ಪರಾಮರ್ಶೆಗಾಗಿ ಗುರುತಿಸಲಾಯಿತು. ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವುದು, ರಾಜಕೀಯ ಸ್ಥಿರತೆ, ಜವಾಬ್ದಾರಿತನವನ್ನು ತರುವುದು, ರಾಜಕೀಯ ಜೀವನಮಟ್ಟ ಸುಧಾರಣೆ, ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ, ಸಾಮಾಜಿಕ ಆರ್ಥಿಕ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಾಧಿಸುವುದು, ಕೇಂದ್ರ-ರಾಜ್ಯ ಸಂಬಂಧ ಸುಧಾರಣೆ ಮೂಲಭೂತ ಹಕ್ಕುಗಳ ವಿಸ್ತರಣೆ, ಕರ್ತವ್ಯಗಳ ಪರಿಣಾಮಕಾರಿತ್ವ ಹೆಚ್ಚಿಸುವುದು, ಸಾರ್ವಜನಿಕ ಲೆಕ್ಕ ಪತ್ರ ಶೋಧನೆಯ ತಂತ್ರಗಳು, ವಿಕೇಂದ್ರೀಕರಣ, ಆಡಳಿತ ವ್ಯವಸ್ಥೆಯ ಸುಧಾರಣೆ ಮುಂತಾದ ವಿಷಯಗಳನ್ನು ಚರ್ಚಿಸಿದ ಆಯೋಗ ೧೯೭೭ ಪುಟಗಳ ಸುಧೀರ್ಘವಾದ ೧೧ ಅಧ್ಯಾಯಗಳ ವರದಿಯನ್ನು ೨೦೦೨ರಲ್ಲಿ ಸಲ್ಲಿಸಿತು. ಈ ವರದಿ ಅನೇಕ ಸೂಕ್ತ ಶಿಫಾರಸ್ಸುಗಳನ್ನು ಮಾಡಿದೆ. ಅವುಗಳ ಕುರಿತ ಚರ್ಚೆ ನಡೆಯುತ್ತಿದೆಯಾದರೂ ಆಚರಣೆಗೆ ತರುವ ಪ್ರಯತ್ನಗಳು ನಡೆಯುತ್ತಿಲ್ಲ, ನಡೆಯಬೇಕಾಗಿದೆ.

ಭಾರತ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತವಾಗಿರುವ ಧ್ಯೇಯೋದ್ದೇಶಗಳಾದ ಪ್ರಜಾ ಸತ್ತಾತ್ಮಕ ವ್ಯವಸ್ಥೆ, ಧರ್ಮನಿರಪೇಕ್ಷತೆ, ಸಾಮಾಜಿಕ ಆರ್ಥಿಕ ನ್ಯಾಯಗಳನ್ನು ಗಮನದಲ್ಲಿರಿಸಿ ಐದು ಅಂಗಗಳನ್ನಿಲ್ಲಿ ಚರ್ಚಿಸಲಾಗಿದೆ.

೧. ಚುನಾವಣಾ ವ್ಯವಸ್ಥೆ

೨. ಸಂಯುಕ್ತ ವ್ಯವಸ್ಥೆ

೩. ಧರ್ಮನಿರಪೇಕ್ಷತೆ

೪. ಸಾಮಾಜಿಕ ನ್ಯಾಯ

೫. ನ್ಯಾಯ ನೀಡಿಕೆಯ ವ್ಯವಸ್ಥೆ