ಚುನಾವಣಾ ವ್ಯವಸ್ಥೆ

ಪ್ರಜಾಪ್ರಭುತ್ವದ ಅಸ್ತಿತ್ವ, ಆಚರಣೆ, ಯಶಸ್ಸು ಚುನಾವಣಾ ವಿಧಾನವನ್ನು ಬಹುವಾಗಿ ಆಧರಿಸಿದೆ. ನಿರ್ಭೀತಿಯಿಂದ ಯಾವ ಒತ್ತಡಗಳಿಗೂ ಒಳಗಾಗದೇ ಮತದಾರ ಮತ ಚಲಾಯಿಸುವಂತಿದ್ದಾಗ ನ್ಯಾಬದ್ಧ ಸರ್ಕಾರ ರಚನೆ ಸಾಧ್ಯ. ಭಾರತದಲ್ಲಿ ಬ್ರಿಟನ್ನಿನ ಮಾದರಿಯ ಸಂಸದೀಯ ಸರ್ಕಾರ ವ್ಯವಸ್ಥೆಯಿದೆ. ಕಾರ್ಯಾಂಗ ಶಾಸಕಾಂಗದ ಭಾಗವಾಗಿದ್ದು ಶಾಸಕಾಂಗಕ್ಕೆ ಜವಾಬ್ದಾರಿಯುತವಾಗಿರುತ್ತದೆ. ಕೇಂದ್ರದಲ್ಲಿಯ ಸಂಸತ್ತು ಜನಪ್ರತಿನಿಧಿಗಳನ್ನು ಒಳಗೊಂಡಿದ್ದು ದ್ವಿಸದನಗಳಿವೆ ಲೋಕಸಭೆ, ರಾಜ್ಯಸಭೆ. ಲೋಕಸಭೆಗೆ ನೇರ ಚುನಾವಣೆ ಹಾಗೂ ರಾಜ್ಯ ಸಭೆಗೆ ಪರೋಕ್ಷ ಚುನಾವಣೆಯಿದೆ. ಲೋಕಸಭೆಯಲ್ಲಿ ಬಹುಮತ ಪಡೆದ ಪಕ್ಷದಿಂದ ಪ್ರಧಾನಮಂತ್ರಿಯನ್ನು ಸೂಚಿಸಲಾಗುತ್ತದೆ. ಈ ಜವಾಬ್ದಾರಿ ವೈಯಕ್ತಿಕವೂ ಸಾಮೂಹಿಕವೂ ಆಗಿದೆ. ಪ್ರತಿಯೊಬ್ಬ ಮಂತ್ರಿ ತನ್ನ ಇಲಾಖೆಯ ಆಗುಹೋಗುಗಳ ಕುರಿತಂತೆ ಸಂಸತ್ತಿಗೆ ಜವಾಬ್ದಾರಿಯಾಗಿರಬೇಕು. ಅಂತೆಯೇ ಮಂತ್ರಿಮಂಡಲ ಸರ್ಕಾರದ ಕಾರ್ಯಗಳಿಗೆ ಸಂಬಂಧ ಪಟ್ಟಂತೆ ಸಾಮೂಹಿಕವಾಗಿ ಲೋಕಸಭೆಗೆ ಜವಾಬ್ದಾರಿಯುತವಾಗಿರುತ್ತದೆ. ಈ ರೀತಿಯಲ್ಲಿ ಭಾರತದಲ್ಲಿ ಜವಾಬ್ದಾರಿಯುತ ಪ್ರಾತಿನಿಧಿಕ ಸರ್ಕಾರ ವ್ಯವಸ್ಥೆಯಿದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳು ಪರೋಕ್ಷವಾಗಿ ಆಯ್ಕೆ ಆದವರೇ.

ಪ್ರತಿನಿಧಿಗಳನ್ನು ಚುನಾಯಿಸುವ ಅಧಿಕಾರ ಪ್ರಜೆಗಳಿಗೆ ಇದೆ. ಸಂವಿಧಾನವು ವಯಸ್ಕ ಮತನಾದಕ್ಕೆ ಅವಕಾಶ ಕಲ್ಪಿಸಿದೆ. ೧೯೧೯ ಹಾಗೂ ೧೯೨೫ರ ಭಾರತ ಸರ್ಕಾರ ಕಾಯ್ದೆಯನ್ವಯವೇ ಬ್ರಿಟಿಷ್‌ ಆಳ್ವಿಕೆಯ ಕಾಲದಿಂದಲೇ ಸೀಮಿತ ಮತದಾನಕ್ಕೆ ಅವಕಾಶವಿತ್ತು. ಸ್ವತಂತ್ರ ಭಾರತ ಸಂವಿಧಾನದ ೩೨೬ನೆಯ ವಿಧಿ ಸಾರ್ವತ್ರಿಕ ವಯಸ್ಕ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ೧೯೫೧-೫೨ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಿಂದಲೇ ಈ ವಿಧಾನ ಜಾರಿಗೆ ಬಂದಿತು. ಈಗ ೧೮ ವರ್ಷ ವಯಸ್ಸಾದವರಿಗೆ ಮತಾಧಿಕಾರವಿದೆ. ಪ್ರಾತಿನಿಧ್ಯದ ವಿಷಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷ ರಕ್ಷಣಾ ಅವಕಾಶವಿದ್ದರೂ ಮತದಾನದ ವಿಷಯದಲ್ಲಿ ‘ಏಕ ಮತದಾರರ’ ಪಟ್ಟಿ ಇದೆ.

ಸಂವಿಧಾನದ ರಚನೆಯ ಸಮಯದಲ್ಲಿ ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಸಮಿತಿಯು ಸ್ವತಂತ್ರ ಚುನಾವಣೆಯನ್ನು ಮೂಲಭೂತ ಹಕ್ಕನ್ನಾಗಿಸಬೇಕೆಂಬ ಶಿಫಾರಸ್ಸು ಮಾಡಿತು. ಆದರೆ ಸಂವಿಧಾನ ರಚನಾ ಸಭೆಯ ಚುನಾವಣೆಯನ್ನು ಮೂಲಭೂತ ಹಕ್ಕನ್ನಾಗಿಸಲು ಒಪ್ಪಿಕೊಳ್ಳಲಿಲ್ಲ. ಸಂವಿಧಾನದ ಹದಿನೈದನೆಯ ಭಾಗದಲ್ಲಿ ೩೨೪ರಿಂದ ೩೨೯ರ ವರೆಗಿನ ವಿಧಿಗಳು ಚುನಾವಣೆಗೆ ಸಂಬಂಧಿಸಿದೆ.

ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ವಿಷಯಗಳಿಗೂ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸೇರಿವೆ. ಚುನಾವಣೆಯಲ್ಲಿ ಏಕರೂಪತೆ ತರುವ ಸಂವಿಧಾನಕರ್ತರ ಉದ್ದೇಶವಿಲ್ಲಿ ಸ್ಪಷ್ಟವಾಗುತ್ತದೆ. ಸಂಯುಕ್ತ ವ್ಯವಸ್ಥೆ ಹೊಂದಿರುವ ಅಮೆರಿಕೆಯಲ್ಲಿ ಈ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಭಾರತದಲ್ಲಿ ಚುನಾವಣಾ ವ್ಯವಸ್ಥೆಯ ಮೂರು ಪ್ರಕ್ರಿಯೆಗಳನ್ನು ಬೇಪ್ಪಡಿಸಲಾಗಿದೆ.

೧. ಚುನಾವಣಾ ಕ್ಷೇತ್ರಗಳ ವಿಂಗಡಣೆಯ ಕಾರ್ಯವನ್ನು ಕ್ಷೇತ್ರ ವಿಂಗಡಣಾ ಆಗೋಗ ನಿರ್ವಹಿಸುತ್ತದೆ.

೨. ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಕಾರ್ಯ.

೩. ಚುನಾವಣಾ ವಿವಾದಗಳನ್ನು ಬಗೆಹರಿಸುವುದು ನ್ಯಾಯಾಂಗದ ಜವಾಬ್ದಾರಿ.

ಚುನಾವಣೆಯ ನಿರ್ದೇಶನ, ನಿಯಂತ್ರಣ, ಮೇಲ್ವಿಚಾರಣೆಯ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಮತದಾರರ ಪಟ್ಟಿಯ ಸಿದ್ಧತೆ, ಎಲ್ಲ ರಾಜ್ಯಗಳಲ್ಲಿಯೂ ಪ್ರತಿವರ್ಷ ಈ ಮತದಾರರ ಪಟ್ಟಿಯ ಪರಿಷ್ಕರಣೆ, ರಾಜ್ಯ ಸರ್ಕಾರದೊಂದಿಗೆ ಪರಾಮರ್ಶಿಸಿ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥನ ನೇಮಕಾತಿ, ಇತರ ಅಧಿಕಾರಿಗಳ ನೇಮಕಾತಿ, ಅಭ್ಯರ್ಥಿಯ ಅರ್ಹತೆ ಅನರ್ಹತೆಯ ಪರಿಶೀಲನೆ, ಮುಂತಾದ ಮಹತ್ವದ ಕಾರ್ಯಗಳನ್ನು ನಿರ್ವಹಿಸುವ ಆಯೋಗ ಗುರುತರ ಜವಾಬ್ದಾರಿಯನ್ನು ಹೊಂದಿದೆ. ನಿರ್ಭೀತಿಯಿಂದ ಆಯೋಗದ ಸದಸ್ಯರು ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ಸಂವಿಧಾನವು ಅವರಿಗೆ ನ್ಯಾಯಾಧೀಶರಿಗೆ ನೀಡಲಾದ ರಕ್ಷಣೆಯನ್ನು ನೀಡಿದೆ. ರಾಜ್ಯಮಟ್ಟ, ಜಿಲ್ಲಾ ಮಟ್ಟ, ಚುನಾವಣಾ ಕ್ಷೇತ್ರಗಳ ಮಟ್ಟದಲ್ಲಿ ಚುನಾವಣಾ ಆಯೋಗದ ನಿರ್ದೇಶನ ಹಾಗೂ ನಿಯಂತ್ರಣದಲ್ಲಿ ಚುನಾವಣೆಗೆ ಸಂಬಂಧಿಸಿದ ಕಾರ್ಯಗಳನ್ನು ವಿವಿಧ ಅಧಿಕಾರಿ ವರ್ಗ ನಿರ್ವಹಿಸುತ್ತದೆ. ಈ ರೀತಿಯಲ್ಲಿ ಸಂಸತ್ತು, ರಾಜ್ಯ ಶಾಸಕಾಂಗಗಳು, ರಾಷ್ಟ್ರಾಧ್ಯಕ್ಷ ಹಾಗೂ ಉಪರಾಷ್ಟ್ರಾಧ್ಯಕ್ಷರ ಚುನಾವಣೆಗೆ ಸಂವಿಧಾನಾತ್ಮಕ ಚುನಾವಣೆಯನ್ನು ರಾಜ್ಯ ಸರ್ಕಾರ ನಡೆಸುತ್ತದೆ.

ಚುನಾವಣಾ ಪ್ರಕ್ರಿಯೆ ಅಧಿಕೃತ ರಾಷ್ಟ್ರಾಧ್ಯಕ್ಷರ ಘೋಷಣೆಯಿಂದ ಪ್ರಾರಂಭವಾಗಿ ಚುನಾಯಿತ ಅಭ್ಯರ್ಥಿಗಳ ಘೋಷಣೆಯವರೆಗೆ ವಿವಿಧ ಹಂತಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ (೨೦೦೭) ಲೋಕಸಭೆಗೆ ೧೪ ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ೧೯೫೦ರಲ್ಲಿ ಜಾರಿಗೆ ಬಂದಿರುವ ಪ್ರಜಾಪ್ರತಿನಿಧಿ ಕಾಯ್ದೆಗೆ ಅನೇಕ ತಿದ್ದುಪಡಿಗಳಾಗಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ಉದ್ಭವಿಸುವ ಸಮಸ್ಯೆಗಳ ಅಧಯ್ಯನಕ್ಕಾಗಿ ಸಮಿತಿಗಳು ಆಯೊಗಗಳ ರಚನೆಯಾಗಿದೆ. ಅವುಗಳ ಹಲವು ಶಿಫಾರಸ್ಸುಗಳು ಜಾರಿಗೆ ಬಂದಿದೆ. “ಚುನಾವಣಾ ಆಚಾರ ಸಂಹಿತೆಯೂ” ಅಸ್ತಿತ್ವದಲ್ಲಿವೆ.

ಯಾವ ವ್ಯವಸ್ಥೆಯೂ ಪರಿಪೂರ್ಣವಾಗಿರದು. ಅದರಲ್ಲೂ ಭಾರತದಂತಹ ಮಹಾನ್ ರಾಷ್ಟ್ರದಲ್ಲಿ ಹೊಸ ಹೊಸ ಸಮಸ್ಯೆಗಳು ಹುಟ್ಟುತ್ತಲೇ ಇರುತ್ತವೆ. ಸಮಾಧಾಣದ ಸಂಗತಿಯೆಂದರೆ ಭಾರತದಲ್ಲಿ ಚುನಾವಣೆಗಳು ಹೆಚ್ಚು ಹೆಚ್ಚು ಪ್ರಜಾಸತ್ತಾತ್ಮಕವಾಗುತ್ತಿವೆ. ಮತದಾರರಲ್ಲಿ ರಾಜಕೀಯ ಅರಿವು ಮೂಡಿಸುತ್ತಿವೆ. ಭಾರತದ ಮತದಾರ ತನ್ನ ಮತಚಲಾವಣೆಯಿಂದ ರಾಜನೀತಿಜ್ಞರನ್ನು ದಿಗ್ಭ್ರಮೆಗೊಳಿಸುತ್ತಿದ್ದಾನೆ.

ಸಂಯುಕ್ತ ವ್ಯವಸ್ಥೆ

೧೯೩೦ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿಯೇ ಭಾರತದಲ್ಲಿ ಸಂಯುಕ್ತ ವ್ಯವಸ್ಥೆ ರಚಿಸುವ ಚರ್ಚೆನಡ ಯಿತು. ೧೯೩೫ರ ಭಾರತ ಸರ್ಕಾರ ಕಾಯ್ದೆಯಲ್ಲಿ ಅದನ್ನು ಅಳವಡಿಸಿದರೂ ದ್ವಿತೀಯ ಮಹಾಯುದ್ಧದ ಕಾರಣದಿಂದಾಗಿ ಸಂಪೂರ್ಣವಾಗಿ ಈ ವ್ಯವಸ್ಥೆ ಜಾರಿಗೆ ಬರಲಿಲ್ಲ. ಸಂವಿಧಾನ ರಚನಾ ಸಭೆಯು ಕೇಂದ್ರ ರಾಜ್ಯಗಲ ಅಧಿಕಾರ ವಿಭಜನೆಯ ತತ್ವರೂಪಿಸಲು ಯೂನಿಯನ್ ಪವರ್‌ಸಮಿತಿಯನ್ನು ರಚಿಸಿತು. ಪರಿಣಾಮವೇ ಇಂದು ಇರುವ ಸಂಯುಕ್ತ ಸರ್ಕಾರ ವ್ಯವಸ್ಥೆ.

ಅಗತ್ಯಗಳಿಗೆ ತಕ್ಕಂತೆ ಏಕಾತ್ಮಕ ಅಥವಾ ಸಂಯುಕ್ತವಾಗುವ ವ್ಯವಸ್ಥೆ, ಅರೆ ಸಂಯುಕ್ತ ವ್ಯವಸ್ಥೆ, ಸಹಕಾರಿ ಸಂಯುಕ್ತ ವ್ಯವಸ್ಥೆ ಎಂದು ಮುಂತಾಗಿ ಕರೆಸಿಕೊಳ್ಳುವ ಭಾರತದ ವ್ಯವಸ್ಥೆಯಲ್ಲಿ ಪ್ರಬಲ ಕೇಂದ್ರ ಸರ್ಕಾರವಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸ್ವಾತಂತ್ರ್ಯಾ ನಂತರ ಭಾರತ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು: ರಾಷ್ಟ್ರವಿಭಜನೆ, ನಿರಾಶ್ರಿತ ಸಮಸ್ಯೆ, ಆಹಾರ ಸಮಸ್ಯೆ, ಆಂತರಿಕ ಗಲಭೆಗಳು, ಕಾನೂನು ಸುವ್ಯವಸ್ಥೆ ಸ್ಥಾಪಿಸುವ ಸಮಸ್ಯೆ ಮುಂತಾದವುಗಳ ಪರಿಣಾಮವೇ ಬಲಯುತ ಕೇಂದ್ರ ಸರ್ಕಾರ.

ಭಾರತ ಸಂವಿಧಾನವು ಕೇಂದ್ರ ಪಟ್ಟಿ, ರಾಜ್ಯಪಟ್ಟಿ ಹಾಗೂ ಸಮವರ್ತಿ ಪಟ್ಟಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳು ಕಾನೂನು ಮಾಡಬಹುದಾದ ವಿಷಯಗಳನ್ನು ನಿರೂಪಿಸಿದೆ. ಉಳಿದ ಶೇಷಾಧಿಕಾರವನ್ನು ಕೇಂದ್ರಕ್ಕೆ ನೀಡಿದೆ. ಆದ್ದರಿಂದ ಈ ವ್ಯವಸ್ಥೆಯನ್ನು ಏಕೀಕೃತ ಎಂಬುದಾಗಲೀ ಅಥವಾ ಮಾದರಿ ಸಂಯುಕ್ತವ್ಯವಸ್ಥೆ ಎಂಬುದಾಗಲೀ ಅತಿರೇಕದ ಅಭಿಪ್ರಾಯಗಳಾಗಿವೆ. ಕೆ.ಸಿ. ವ್ಹೇರ್ ಹೇಳುವಂತೆ ಇದನ್ನು “ಕೇಂದ್ರಿಕೃತ ಸಂಯುಕ್ತ ವ್ಯವಸ್ಥೆ” ಎನ್ನಬಹುದು. ರಾಷ್ಟ್ರದ ಅಖಂಡತೆಯ ದೃಷ್ಟಿಯಿಂದ ಕೆಲ ಸಂದರ್ಭಗಳಲ್ಲಿ ಇದರ ಅನಿವಾರ್ಯತೆಯೂ ಉಂಟಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಬಂಧ ಸುಧಾರಣೆಗಾಗಿ ರಾಜ ಮನ್ನಾರ್ ಆಯೋಗ, ಸರ್ಕಾರಿಯಾ ಆಯೋಗಗಳ ರಚನೆ ಮಾಡಲಾಯಿತು. ಅವು ಮಾಡಿರುವ ಶಿಫಾರಸ್ಸುಗಳು ಅಧ್ಯಯನ ಯೋಗ್ಯ ಹಾಗೂ ಆಚರಣಾ ಯೋಗ್ಯವಾಗಿವೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಸಂಯುಕ್ತ ವ್ಯವಸ್ಥೆಯ ಮೇಲೆ, ಕೇಂದ್ರ ರಾಜ್ಯಗಳ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿವೆ. ಉದಾಹರಣೆಗೆ ಪ್ರಾದೇಶಿಕ ಪಕ್ಷಗಳ ಹೆಚ್ಚುತ್ತಿರುವ ಪ್ರಾಮುಖ್ಯತೆ ಹಾಗೂ ಕೇಂದ್ರದಲ್ಲಿ ಅವುಗಳ ಬಹುಮುಖ ಪ್ರಭಾವದಿಂದಾಗಿ ಸಮ್ಮಿಶ್ರ ಸರ್ಕಾರ ವ್ಯವಸ್ಥೆ ಹೆಚ್ಚು ಕಡಿಮೆ ಸಾಮಾನ್ಯವಾಗುತ್ತಿರುವುದು.

ಧರ್ಮ ನಿರಪೇಕ್ಷತೆ

ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಧರ್ಮನಿರಪೇಕ್ಷತೆಯ ತತ್ವವನ್ನು ಅತ್ಯಂತ ವಿವರವಾಗಿ ಚರ್ಚಿಸಲಾಯಿತು. ನೆಹರೂ ಅವರು ಯಾವ ರಾಜ್ಯದಲ್ಲಿ ಎಲ್ಲಾ ಧಮ್ಮ ಹಾಗೂ ಸಂಸ್ಕೃತಿಗಳಿಗೆ ಮುಕ್ತ ವಾತಾವರಣವಿದ್ದು, ರಾಜ್ಯವು ಅವುಗಳಿಗೆ ರಕ್ಷಣೆ ನೀಡುತ್ತದೆಯೋ ಅದುವೇ ಧರ್ಮ ನಿರಪೇಕ್ಷಿತ ರಾಜ್ಯ ಮತ್ತು ಸಹನೆ ಸಹಕಾರದ ವಾತಾವರಣ ಅಂತಹ ರಾಜ್ಯದಲ್ಲಿರುತ್ತದೆ ಎಂದು ಅಭಿಪ್ರಾಯಪಟ್ಟರು. ಎಷ್ಟೆಲ್ಲಾ ಚರ್ಚೆ ನಡೆದು ಸಂವಿಧಾನದ ವಿವಿಧ ವಿಧಿಗಳಲ್ಲಿ ಈ ತತ್ವ ಹಾಸುಹೊಕ್ಕಾಗಿದ್ದರೂ ‘ಸೆಕ್ಯುಲರ್’ ಎಂಬ ವಿಧಿಗಳಲ್ಲಿ ಸಂವಿಧಾನಕ್ಕೆ ಸೇರ್ಪಡೆಯಾದದ್ದು ೧೯೭೬ರ ೪೨ನೆಯ ತಿದ್ದುಪಡಿಯ ಮೂಲಕ. ಧಾರ್ಮಿಕ ರಾಷ್ಟ್ರಗಳಿಂದ ಸುತ್ತುವರಿದಿದ್ದರೂ ಭಾರತ ಸರ್ವಧರ್ಮಗಳನ್ನು ಸಮಭಾವದಿಂದ ನೋಡುವ ರಾಷ್ಟ್ರವಾಗಿದೆ.

ಭಾರತ ಸಂವಿಧಾನವು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಇಲಾಖೆಯನ್ನು ರದ್ದುಮಾಡಿತು. ಸಂವಿಧಾನದ ಪೀಠಿಕೆಯಲ್ಲಿ ರಾಜ್ಯಾಧಿಕಾರದ ಮೂಲವೆಂದು ದೇವರು ಎಂಬ ಪದವನ್ನು ಬಳಸದೆಯೆ ಜನತೆ ಎಂಬ ಪದವಿದ್ದರೂ ಪ್ರಮಾಣವಚನ ಸ್ವೀಕರಿಸುವಾಗ ಆ ಪದದ ಬಳಕೆಯನ್ನು ಕಡ್ಡಾಯ ಮಾಡಿಲ್ಲ. ಸಂವಿಧಾನದಲ್ಲಿ ರಾಜಧರ್ಮದ ಕಲ್ಪನೆಯಿಲ್ಲ. ಧಾರ್ಮಿಕ ಸ್ವಾತಂತ್ರ್ಯ (ವಿಧಿ ೨೫)ದ ಹಕ್ಕು ಅತ್ಯಂತ ವಿಶೇಷವಾದುದು. ಏಕೆಂದರೆ ಜಪಾನ್, ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ನೀಡದೆ ಇರುವ ಧರ್ಮ ಪ್ರಸಾರದ ಸ್ವಾತಂತ್ರ್ಯವನ್ನು ಇದು ಒಳಗೊಂಡಿದೆ. ಈ ರೀತಿಯ ಹಕ್ಕನ್ನು ಕೇವಲ ವಿಶ್ವ ಸಂಸ್ಥೆಯ ಮಾನವೀಯ ಹಕ್ಕುಗಳಲ್ಲಿ ಕಾಣಬಹುದು.

ಇತರ ಕೆಲ ಹಕ್ಕುಗಳೂ ಧರ್ಮನಿರಪೇಕ್ಷತೆಯ ತತ್ವವನ್ನು ಎತ್ತಿ ಹಿಡಿದಿದೆ. ೨೬ನೆಯ ವಿಧಿ ಧಾರ್ಮಿಕ ಸಂಘ ಸಂಸ್ಥೆ ಸ್ಥಾಪಿಸಿಕೊಳ್ಳುವ ಸ್ವಾತಂತ್ರ್ಯ ನೀಡಿದೆ. ೧೪ನೆಯ ವಿಧಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ವಿಧಿಸುತ್ತದೆ. ೧೫ನೆಯ ವಿಧಿ ಮತಧರ್ಮದ ಆಧಾರದ ಮೇಲೆ ಬೇಧಭಾವವನ್ನು ನಿಷೇಧಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆಯಿದ್ದು (ವಿಧಿ ೨೧) ಅಲ್ಪ ಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಹಕ್ಕನ್ನು ೩೦ನೆಯ ವಿಧಿ ನೀಡುತ್ತದೆ.

ಸಾಮಾನ್ಯ ಏಕಮತದಾರರ ಪಟ್ಟಿ ವಿಧಿ (೩೫) ಹಾಗೂ ಸಾರ್ವತ್ರಿಕ ವಯಸ್ಕ ಮತದಾನ (ವಿಧಿ ೩೨೬) ಸಹ ಸಂವಿಧಾನದಲ್ಲಿ ಧಮ್ಮ ನಿರಪೇಕ್ಷತೆಯ ತತ್ವ ಯಾವ ರೀತಿಯಲ್ಲಿ ಹಾಸುಹೊಕ್ಕಾಗಿದೆ ಎಂಬುದನ್ನು ತಿಳಿಯಪಡಿಸುತ್ತದೆ.

ಭಾರತವು ಬಹುಧರ್ಮೀಯ ರಾಷ್ಟ್ರವಾಗಿರುವುದರಿಂದ ಅನೇಕ ಸಂದರ್ಭಗಳಲ್ಲಿ ರಾಜ್ಯವು ಮತಧರ್ಮದ ವಿಷಯದಲ್ಲಿ ತಟಸ್ಥ ಧೋರಣೆ ತಳೆಯುವುದು ಸಾಧ್ಯವಾಗದು. ಸಾರ್ವಜನಿಕ ಹಿತದೃಷ್ಟಿಯಿಂದ, ಶಾಂತಿ ಪಾಲನೆಯ ದೃಷ್ಟಿಯಿಂದ, ರಕ್ಷಣಾ ದೃಷ್ಟಿಯಿಂದ ಮತಧರ್ಮದ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಲೇಬೇಕಾಗುತ್ತದೆ. ಈ ಕಾರಣಗಳಿಂದಾಗಿಯೇ ಕೆಲವರು ಭಾರತದಲ್ಲಿರುವುದು “ಸುಡೋ ಸೆಕ್ಯುಲರಿಸಂ” ಅಂದರೆ ಮಿಥ್ಯಾಧರ್ಮನಿರಪೇಕ್ಷತೆ ಎಂದು ವಾದಿಸುತ್ತಾರೆ. ಆದರೆ ಈ ಬಗೆಯ ಮಧ್ಯ ಪ್ರವೇಶ ಯಾವುದೇ ಧರ್ಮದ ಮೇಲಿನ ವಿಶೇಷ ಒಲವಿನಿಂದಲ್ಲ ಎಂಬುದು ಗಮನಿಸಬೇಕಾದ ಅಂಶ. ಹಾಗಾಗಿ ಪಾಶ್ವಿಮಾತ್ಯ ದೃಷ್ಟಿಕೋನದಿಂದ ಭಾರತದ ವ್ಯವಸ್ಥೆಯಲ್ಲಿ ಕುಂದು ಕಂಡರೂ ಭಾರತದಲ್ಲಿ ಸರ್ವಧರ್ಮ ಸಮಭಾವದ ತತ್ವವನ್ನು ಸಂವಿಧಾನ ಎತ್ತಿಹಿಡಿದಿದೆ ಎಂಬುದು ನಿಶ್ಚಿತ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿಯ ಐತಿಹಾತಿಕ ಪರಿಸ್ಥಿತಿಗೆ ಅನುಗುಣವಾಗಿ ಹುಟ್ಟಿಕೊಂಡ ವಿಚಾರವೊಂದನ್ನು ಅದೇ ಅರ್ಥದಲ್ಲಿ ಭಾರತಕ್ಕೆ ಅನ್ವಯಿಸುವುದು ಅರ್ಥಹೀನವಾಗುತ್ತದೆ.

ಸಾಮಾಜಿಕ ನ್ಯಾಯ

ಭಾರತ ಸಂವಿಧಾನವು ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿ ಹಿಡಿಯುತ್ತದೆ. ಸಂವಿಧಾನದ ಪೀಠಿಕೆಯಲ್ಲಿಯೇ ಈ ಶ ಪ್ರಸ್ತಾಪಿತವಾಗಿದೆ. ಅದಕ್ಕೆ ಪೂರಕವಾಗಿ ಸಂವಿಧಾನದ ಮೂರನೆಯ ಮತ್ತು ನಾಲ್ಕನೆಯ ಭಾಗದಲ್ಲಿಯ ಅನೇಕ ವಿಧಿಗಳು ಸಾಮಾಜಿಕ ನ್ಯಾಯ ಸ್ಥಾಪನೆಯ ಉದ್ದೇಶ ಹೊಂದಿವೆ.

ಸಂವಿಧಾನದ ೧೪ ಮತ್ತು ೧೫ನೆಯ ವಿಧಿಗಳಲ್ಲಿ ಸಮಾನತೆಯ ತತ್ವವಿದೆ. ಮತರ್ಧ, ಲಿಂಗ, ಜಾತಿ, ಹುಟ್ಟು ಸ್ಥಳಗಳ ಆಧಾರದ ಮೇಲೆ ಭೇದ ಭಾವ ಮಾಡಬಾರದು ಎಂದಿದೆ. ೧೯೫೧ರಲ್ಲಿ ತರಲಾದ ಪ್ರಥಮ ತಿದ್ದುಪಡಿಯು ಸಮರ್ಥನೀಯ ಆಧಾರದ ಮೇಲೆ ರಕ್ಷಣಾ ಭೇಧಭಾವಕ್ಕೆ ಅವಕಾಶ ಕಲ್ಪಿಸಿದೆ. ಅದನ್ನು ಹೊರತುಪಡಿಸಿ ಸಾರ್ವಜನಿಕ ನೇಮಕಾತಿಯಲ್ಲಿ ಸಮಾನ ಅವಕಾಶವನ್ನು ವಿಧಿ ೧೬ ನೀಡುತ್ತದೆ. ಸಾಮಾಜಿಕ ನ್ಯಾಯಸ್ಥಾಪನೆಯ ದೃಷ್ಟಿಯಿಂದ ಭೇದಭಾವ ಮಾಡಬಹುದಾಗಿದೆ. ಸಂವಿಧಾನದ ೧೭ನೆಯ ವಿಧಿ ಅಸ್ಪೃಷ್ಯತೆಯನ್ನು ನಿರ್ಷೇಇಸಿದೆ. ಅದನ್ನು ಆಧರಿಸಿ ೧೯೫೫ರಲ್ಲಿ ಅಸ್ಪೃಶ್ಯತೆಯನ್ನು ಅಪರಾಧವೆಂದು ಪರಿಗಣಿಸುವ ಕಾಯ್ದೆ ೧೯೭೬ರಲ್ಲಿ ತಿದ್ದುಪಡಿಯಾಗಿ ನಾಗರಿಕ ಹಕ್ಕುಗಳ ಕಾಯ್ದೆ ಎಂದು ಜಾರಿಯಲ್ಲಿದೆ. ಮಹಿಳೆಯರ ಮತ್ತು ಮಕ್ಕಳ ಮಾರಾಟ ನಿಷೇಧ (ವಿಧಿ ೨೩, ೨೪) ಆಧರಿಸಿ ಜಾರಿಗೆ ಬಂದ ವಿವಿಧ ಕಾಯ್ದೆಗಳು, ಅಲ್ಪಸಂಖ್ಯಾತರ ಹಿತ ರಕ್ಷಣೆ ವಿಧಿ ೩೦, ರಾಜ್ಯ ನಿರ್ದೇಶಕ ತತ್ವಗಳಾದ ೨೯,೪೦ ರಿಂದ ೪೭ರವರೆಗಿನ ವಿಧಿಗಳು ಸಾಮಾಜಿಕ ನ್ಯಾಯ ಸ್ಥಾಪನೆಯ ಉದ್ದೇಶ ಹೊಂದಿವೆ.

ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ, ಆರೋಗ್ಯವರ್ಧನೆ, ಅಂಗವಿಕಲರು ವೃದ್ಧರು ಅಸಮರ್ಥರಿಗೆ ಧನಸಹಾಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಶೋಷಣೆಯಿಂದ ಮುಕ್ತಿ, ಅದೇ ರೀತಿಯಲ್ಲಿ ಸಂವಿಧಾನದ ೩೩೦, ೩೩೫, ೩೩೮ನೆಯ ವಿಧಿಗಳು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಧ್ಯೇಯ ಹೊಂದಿರುವುದ ಸ್ಪಷ್ಟವಾಗುತ್ತದೆ.

ಆಯೋಗ ಈ ದಿಶೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ೩೪೦ನೆಯ ವಿಧಿ ಹಿಂದುಳಿದ ವರ್ಗಗಳ ಆಯೋಗ ಸ್ಥಾಪನೆಯನ್ನು ತಿಳಿಸುತ್ತದೆ. ಅದಕ್ಕನುಗುಣವಾಗಿ ೧೯೭೮ರಲ್ಲಿ ಮಂಡಲ ಆಯೋಗದ ರಚನೆಯಾಗಿತ್ತು. ಅದಲ್ಲದೆ ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಮಾನವೀಯ ಹಕ್ಕುಗಳ ಆಯೋಗಗಳೂ ಈ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈ ರೀತಿಯ ಸಂವಿಧಾನದ ವಿವಿಧ ಭಾಗಗಳಲ್ಲಿಯ ವಿಧಿಗಳನ್ನು ಆಧರಿಸಿ ಸರ್ಕಾರ ಕಾನೂನುಗಳ ಮೂಲಕ, ವಿವಿಧ ಆಯೋಗಗಳ ಮೂಲಕ ಸಾಮಾಜಿಕ ನ್ಯಾಯ ಸ್ಥಾಪನೆಗೆ ಕೆಲಸ ಮಾಡುತ್ತಿದೆ.

ನ್ಯಾಯಾಂಗ ವ್ಯವಸ್ಥೆ

ಕೇವಲ ಸಂವಿಧಾನವಿದ್ದರೆ ಸಾಲದು ಅದಕ್ಕೆ ಅರ್ಥ ವಿವರಣೆ ನೀಡಿ ಅದನ್ನು ಆಚರಣಾ ಯೋಗ್ಯವನ್ನಾಗಿ ಮಾಡುದ ನ್ಯಾಯಿಕ ವ್ಯವಸ್ಥೆಯೂ ಅಗತ್ಯವಾಗಿದೆ. ಸಂವಿಧಾನ ರಚನಕಾರರು ಸ್ವತಂತ್ರ, ನಿಷ್ಪಕ್ಷಪಾತ ನ್ಯಾಯಾಂಗದ ರಚನೆಗೆ ಅವಕಾಶ ಕಲ್ಪಿಸಿದ್ದಾರೆ. ಭಾರತ ಏಕರೂಪ ನ್ಯಾಯಾಂಗ ವ್ಯವಸ್ಥೆ ಹೊಂದಿದೆ. ಸಂಯುಕ್ತ ವ್ಯವಸ್ಥೆ ಇರುವುದರಿಂದ ಸರ್ವೋಚ್ಚ ನ್ಯಾಯಾಲಯ ಸಂವಿಧಾನಿಕ ವ್ಯವಸ್ಥೆಯ ಅವಶ್ಯಕ ಅಂಗವೇ ಆಗಿದೆ. ನ್ಯಾಯಾಂಗದ ರಚನೆ, ಅಧಿಕಾರ ವ್ಯಾಪ್ತಿಯ ಬಗೆಗೆ ಸಂವಿಧಾನ ತಿಳಿಸುತ್ತದೆ. ಅಲ್ಲದೇ ಸಂವಿಧಾನದ ೩೨ನೆಯ ವಿಧಿ ಸರ್ವೋಚ್ಛ ನ್ಯಾಯಾಂಗಕ್ಕೆ ಮೂಲಭೂತ ಹಕ್ಕುಗಳ ರಕ್ಷಕನನ್ನಾಗಿಸಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಈ ಹಕ್ಕುಗಳ ಉಲ್ಲಂಘನೆ ಮಾಡದಿರುವಂತೆ ನ್ಯಾಯಾಂಗ ತಡೆಯಬಹುದಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾನೂನು ಅಥವಾ ಕಾರ್ಯಾಂಗದ ಕ್ರಿಯೆಯನ್ನು ಸಂವಿಧಾನಬಾಹಿರ ಎಂದು ಘೋಷಿಸಿ ರದ್ದುಗೊಳಿಸುವ ಅಧಿಕಾರವೂ ನ್ಯಾಯಾಂಗಕ್ಕೆ ಇದೆ. ಸಂವಿಧಾನಾತ್ಮಕ ಪರಿಹಾರದ ಹಕ್ಕು ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಅಲ್ಲಾಡಿ ಕೃಷ್ಣಸ್ವಾಮಿ ಅವರು ಹೇಳುವಂತೆ “ಭಾರತದ ಸರ್ವೋಚ್ಚ ನ್ಯಾಯಾಲಯ ಜಗತ್ತಿನ ಯಾವುದೇ ನ್ಯಾಯಾಲಯಕ್ಕಿಂತ ಹೆಚ್ಚಿನ ಅಧಿಕಾರ ಪಡೆದಿದೆ”. ಕೇಂದ್ರ-ರಾಜ್ಯಗಳ ವಿವಾದ ಬಗೆಹರಿಸುವಲ್ಲಿ ಮೂಲ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕಿದೆ.

೧೯೭೭ರ ನಂತರ ನ್ಯಾಂಗದ ಕಾಯ್ಯವಿಧಾನದಲ್ಲಿ ಗಣನೀಯ ಬದಲಾವಣೆ ಕಂಡುಬಂದಿತು. ಭಕ್ಷಿ ಅವರು ಅಭಿಪ್ರಾಯ ಪಡುವಂತೆ ತುರ್ತು ಪರಿಸ್ಥಿತಿಯಲ್ಲಿ ನೀಡಲಾದ ಕೆಲವು ತೀರ್ಪುಗಳು ನ್ಯಾಯಾಂಗದ ಖ್ಯಾತಿಗೆ ಕಳಂಕಕಾರಕವಾಗಿದ್ದವು. ನ್ಯಾಯಾಂಗ ತನ್ನ ನ್ಯಾಯಬದ್ಧತೆ ಉಳಿಸಿಕೊಳ್ಳಲು ಹೊಸದಾರಿ ಕಂಡುಕೊಂಡಿತು. ಅದೇ ನ್ಯಾಯಾಂಗದ ಕಾರ್ಯಶೀಲತೆ ಎನ್ನಬಹುದು. ಈ ಹಿಂದೆ ನ್ಯಾಯಾಂಗ ಕೆಲವು ಕಾನೂನುಗಳಿಗೆ ಶುಷ್ಕ ಕಾನೂನುಬದ್ಧ ವಿವರಣೆ ನೀಡುತ್ತಿದೆ. ಕಾಲಕ್ರಮೇಣ ಜನರ ನಿರೀಕ್ಷೆಗೆ ಅನುಗುಣವಾಗಿ ಅದರ ಸಾಂಪ್ರದಾಯಿಕ ನಿಲುವು ಬದಲಾಗಿ ಜನಪರ ನ್ಯಾಯಾಂಗವಾಯಿತು. ಮೂಲಭೂತ ಹಕ್ಕುಗಳಿಗೆ ಉದಾರವಾದ ಅರ್ಥ ವಿವರಣೆ ನೀಡಿ ಅವುಗಳ ವ್ಯಾಪ್ತಿಯನ್ನು ಹೆಚ್ಚಿಸಿತು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪರಿಗಣಿಸಲು ಪ್ರಾರಂಭಿಸಿತು. ತಾನೇ ಸ್ವತಃ ಆಸಕ್ತಿ ತಳೆದು ಸಂವಿಧಾನದ ಧ್ಯೇಯೋದ್ಧೇಶಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ವಿವಿಧ ಬಗೆಯ ಅನ್ಯಾಯಗಳಿಗೆ ಸ್ಪಂಧಿಸಿತು. ಮಾನವೀಯ ಹಕ್ಕುಗಳ ಜಾತಿಗಾಗಿ ಸಾರ್ವಜನಿಕ ಕಾನೂನು ಬೆಳೆಯಲು ಕಾರಣವಾಯಿತು. ಲಿಂಗಾಧಾರಿತ ನ್ಯಾಯ, ಸಾಮಾಜಿಕ ನ್ಯಾಯ ನೀಡಲು ಯತ್ನಿಸಿತು. ಶಾಸಕಾಂ, ಕಾರ್ಯಾಂಗಗಳ ಕಾರ್ಯರೀತಿ ಸಂವಿಧಾನಾತ್ಮಕವಾಗಿರುವಂತೆ ನೋಡಿಕೊಳ್ಳುವಲ್ಲಿ ಹೆಚ್ಚು ಕಾರ್ಯಶೀಲವಾಯಿತು. ಈ ರೀತಿ ಅಧಿಕಾರದ ದುರುಪಯೋಗ ತಡೆಯುವಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯ ವಿಷಯದಲ್ಲಿ ಯಶಸ್ವಿಯಾದರೂ ಅಪರಾಧಿ ನ್ಯಾಯ ನೀಡಿಕೆ ಸುಧಾರಣೆ, ಕಾರಾಗೃಹ ಸುಧಾರಣೆ, ಬಡತನದಿಂದ ಮುಕ್ತಿ, ವ್ಯಾಪಕ ಆರ್ಥಿಕ ಬದಲಾವಣೆ ತರುವಂತಹ ವಿಷಯಗಳಲ್ಲಿ ಯಶ ಕಾಣಲಿಲ್ಲ. ಏಕೆಂದರೆ, ಈ ಎಲ್ಲ ವಿಷಯಗಳು ನ್ಯಾಯಾಂಗದ ನೇರ ಕಾರ್ಯವ್ಯಾಪ್ತಿಗೆ ಬರುವ ವಿಷಯಗಳಲ್ಲ. ಸರ್ಕಾರದ ಎಲ್ಲ ಅಂಗಗಳೂ ಕೈ ಜೋಡಿಸಿದರೆ ಮಾತ್ರ ಈ ಸಮಸ್ಯೆಗಳ ನಿವಾರಣೆ ಸಾಧ್ಯ.

ನ್ಯಾಯಾಂಗದ ಕ್ರಿಯಾಶೀಲತೆಯ ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಿತು. ಅದು ಚರ್ಚೆಗೆ ಗ್ರಾಸವಾಯಿತು. ಅಧಿಕಾರದ ವಿಷಯದಲ್ಲಿ ನ್ಯಾಯಾಂಗ ಶಾಸಕಾಂಗಗಳ ನಡುವೆ, ನ್ಯಾಯಾಂಗ ಕಾರ್ಯಾಂಗಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಅಧಿಕಾರ ಪ್ರತ್ಯೇಕತೆಯ ತತ್ವವನ್ನು ನ್ಯಾಯಾಂಗ ಉಲ್ಲಂಘಿಸುತ್ತಿದೆ ಎಂಬ ಟೀಕೆಯೂ ಕೇಳಿಬಂದಿತು. ನ್ಯಾಯಾಂಗವೂ ಆಂತರಿಕವಾಗಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಅದಕ್ಷತೆ, ಅಸಾಮರ್ಥ್ಯ, ವಿಳಂಬ, ದುಬಾರಿ ನ್ಯಾಯ ನೀಡಿಕೆ, ವಿವಿಧ ಹಂತಗಳಲ್ಲಿ-ಪೊಲೀಸ್ ಸಾಕ್ಷಿ, ಕಕ್ಷಿದಾರ ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರ, ನ್ಯಾಯಾಧೀಶರ ವೈಯಕ್ತಿಕ ಜೀವನ ಮೌಲ್ಯಗಳನ್ನೇ ಸಂವಿಧಾನಾತ್ಮಕವೆಂದು ಬಿಂಬಿಸುವ, ಸಮರ್ಥಿಸುವ ಮನೋಭಾವ ಈ ಎಲ್ಲ ಸಮಸ್ಯೆಗಳನ್ನು ಗುರುತಿಸಲಾಗಿದೆ. ಪರಿಹಾರವೆಲ್ಲಿ? ಸುಧಾರಣೆ ಎಲ್ಲಿಂದ ಬರಬೇಕು? ಯಾರು ತರಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸುಲಭದ್ದಲ್ಲ.

ಈ ಮೇಲಿನ ಅಂಶಗಳು ನ್ಯಾಯಾಂಗದಲ್ಲಿ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳುತ್ತವೆ. ಸುಧಾರಣೆ ತುರ್ತು ಅಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಯತ್ನಗಳೂ ನಡೆದಿವೆ ಆದರೂ ಅವುಗಳು ಸಮರ್ಪಕವಾಗಿಲ್ಲ. ಲೋಕ ಅದಾಲತ್ ಸ್ಥಾಪನೆ ಸುಧಾರಣೆಯತ್ತ ಒಂದು ಹೆಜ್ಜೆಯಾಗಿದೆ. ಜವಾಬ್ದಾರಿ ಖಚಿತ ಪರಿಸುವುದು ಹಾಗೂ ಪಾರದರ್ಶಕತೆಯ ತತ್ವದ ಆಚರಣೆ ಅಗತ್ಯವಾಗಿದೆ.

ಈ ರೀತಿಯಲ್ಲಿ ವಿವಿಧ ಧ್ಯೇಯೋದ್ದೇಶಗಳನ್ನು ಹೊಂದಿರುವ ಭಾರತ ಸಂವಿಧಾನ ಅನೇಕ ಇತಿಮಿತಿಗಳಲ್ಲಿ ಆಚರಣೆಯಲ್ಲಿದೆ. ಸಂವಿಧಾನದಲ್ಲಿಯ ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಕೆಲವೊಂದು ಯಶ ಕಂಡಿವೆ. ಆದರೆ ಸಾಗಬೇಕಾದ ದಾರಿ ಬಹಳಷ್ಟಿದೆ.