ಕನ್ನಡದ ಮೊದಲ ಕೃತಿಯಾದ ಕವಿರಾಜಮಾರ್ಗದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿ ನದಿಯವರೆಗೂ ತನ್ನ ಮೇರೆಗಳನ್ನು ಹೊಂದಿತ್ತು ಎಂದು ನಮೂದಾಗಿದೆ. ಅಲ್ಲದೆ ಎರಡು ಸಾವಿರ ವರುಷಗಳಿಗೂ ಹೆಚ್ಚಿನ ಚರಿತ್ರೆಯನ್ನು ಹೊಂದಿರುವ ಕರ್ನಾಟಕವು ಸಾಂಸ್ಕೃತಿಕವಾಗಿ ಅಖಂಡವಾದುದು. ಕನ್ನಡದ ರಾಜಮನೆತನಗಳ ಆಳ್ವಿಕೆ ಕನ್ನಡಿಗರನ್ನು ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಒಂದುಗೂಡಿಸಿತ್ತು. ಆದರೆ ಆಂಗ್ಲರು ಭಾರತವನ್ನು ಆಕ್ರಮಿಸಿದಂತೆಲ್ಲಾ ತಮ್ಮ ‘ಒಡೆರು-ಆಳುವ ಧೋರಣೆ’ಯನ್ನು ಪ್ರಯೋಗಿಸುತ್ತಾ ಹೋದರು. ಈ ಮಾತು ಕನ್ನಡ ಮಾತನಾಡುವ ಭೂಪ್ರದೇಶ ಹಾಗೂ ಜನರಿಗೂ ಅನ್ವಯ ಆಗುವಂಥದ್ದು.

೧೭೯೯ರಲ್ಲಿ ಟಿಪ್ಪುಸುಲ್ತಾನನ ಸೋಲಿನೊಂದಿಗೆ ಕನ್ನಡದ ಭೂಪ್ರದೇಶಗಳನ್ನು ಬ್ರಿಟಿಷರು ವಿಭಿನ್ನ ಆಡಳಿತ ಘಟಗಳಲ್ಲಿ ವಿಭಜಿಸಿದರು. ಈ ವಿಭಜನೆಗೆ ಯಾವುದೇ ತಾತ್ವಿಕ ತಳಹದಿ ಇರಲಿಲ್ಲ. ಬದಲಾಗಿ ಆಂಗ್ಲರ ಆಡಳಿತದ ಅನುಕೂಲವೇ ಪ್ರಧಾನವಾಗಿತ್ತು. ಟಿಪ್ಪುವಿನ ಪತನಕ್ಕಾಗಿ ಸಹಕರಿಸಿದ ಮರಾಠರಿಗೂ ಹಾಗೂ ಹೈದರಾಬಾದಿನ ನಿಜಾಮನಿಗೂ ಕೆಲವು ಪ್ರದೇಶಗಳನ್ನು ಹಂಚಿದರು. ಉಳಿದ ಭಾಗವನ್ನು ಮೈಸೂರು ಸಂಸ್ಥಾನದ ಒಡೆಯರಿಗೆ ನೀಡಲಾಯಿತು. ಅಲ್ಲದೆ ಒಂದಷ್ಟು ಭಾಗವನ್ನು ತಮ್ಮ ನೇರವಾದ ಹಿಡಿತಕ್ಕೂ ತೆಗೆದುಕೊಳ್ಳಲಾಯಿತು. ಜಹಗೀರುಗಳ ರೂಪದಲ್ಲೂ ಕೆಲವು ಪ್ರದೇಶಗಳು ಹಂಚಲ್ಪಟ್ಟವು. ಒಟ್ಟಾರೆ ಕನ್ನಡಿಗರು ಭಾಗ-ಉಪವಿಭಾಗಳಾಗಿ ಹತ್ತು-ಹಲವು ಕಡೆಗೆ ಹಂಚಿಹೋದರು. ಈ ಬಗೆಯ ತುಂಡಾದ ವಿಭಾಗಗಳನ್ನು ೨೨ ಎಂದು ಗುರುತಿಸಲಾಗಿದೆ.ಅವು ಈ ರೀತಿಯಾಗಿ ವಿಭಜಿತವಾಗಿದ್ದವು.

೧ . ಮುಂಬಯಿ ಕರ್ನಾಟಕ

೨ . ಮದರಾಸು (ಬ್ರಿಟಿಷ್ ಕರ್ನಾಟಕ)

೩ . ಮೈಸೂರು ಸಂಸ್ಥಾನ

೪ . ಕೊಡಗು

೫ . ಹೈದರಾಬಾದ್ (ನಿಜಾಂ) ಕರ್ನಾಟಕ

೬ . ಹೈದರಾಬಾದ್ ಕರ್ನಾಟಕದ ಜಹಗೀರು (ಕೊಪ್ಪಳ್, ಗದ್ವಾಲ್)

೭ . ಕಂಟೋನ್ಮೆಂಟ್ (ದಂಡು) ಕರ್ನಾಟಕ

೮ . ಕೊಲ್ಹಾಪುರ ಸಂಸ್ಥಾನ

೯ . ಕೊಲ್ಹಾಪುರ ಸಂಸ್ಥಾನದ ಜಹಗೀರುಗಳು

೧೦. ಸಾಂಗ್ಲಿ

೧೧. ಔಂಧ್

೧೨. ಮೀರಜ್ (ಹಿರಿ)

೧೩. ಮೀರಜ್ (ಕಿರಿ)

೧೪. ಕುರಂದವಾಡ (ಹಿರಿ)

೧೫. ಕುರಂದವಾಡ (ಕಿರಿ)

೧೬. ಜಮಖಂಡಿ

೧೭. ಮುಧೋಳ

೧೮. ರಾಮದುರ್ಗ

೧೯. ಅಕ್ಕಲಕೋಟೆ

೨೦. ಜತ್ತ

೨೧. ಸವಣೂರು

೨೨. ಸೊಂಡೂರು

ಈ ಮೇಲಿನ ೨೨ ಭಾಗಗಳಲ್ಲಿನ ಕನ್ನಡಿಗರು ತಮ್ಮದೆ ಆದ ರೀತಿಯಲ್ಲಿ ಗುರುತಿಸಿಕೊಳ್ಳುವುದು ಸಾಧ್ಯವಾಗದ ಮಾತಾಗಿತ್ತು. ಸಾಂಸ್ಕೃತಿಕವಾಗಿ ಕನ್ನಡಿಗರು ‘ಕರ್ನಾಟಕ’ ಎಂಬ ಹೆಸರನ್ನು ಹೊಂದಿದವರಾಗಿದ್ದರೂ ಈ ಘಟ್ಟದಲ್ಲಿ ಅಖಂಡವಾಗಿ ಉಳಿದಿರಲಿಲ್ಲ. ಇತರೆ ಭಾಷೆಗಳನ್ನು ಆಡುತ್ತಿದ್ದವರೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಾದ ತೊಡಕು ಕಾಣಿಸಿಕೊಂಡಿತು. ಮರಾಠಿ (ಮುಂಬಯಿ ಕರ್ನಾಟಕ), ತಮಿಳು (ಮದ್ರಾಸ್ ಅಥವಾ ಬ್ರಿಟಿಷ್ ಕರ್ನಾಟಕ) ಹಾಗೂ ತೆಲಗು ಮತ್ತು ಉರ್ದು ಮಾತನಾಡುವವರ (ಹೈದರಾಬಾದ್ ಸಂಸ್ಥಾನ) ನಡುವೆ ಅಲ್ಪಸಂಖ್ಯಾತರಾಗಿದ್ದ ಕನ್ನಡಿಗರು ಭಾಷಿಕ ದಬ್ಬಾಳಿಕೆಗೆ ಒಳಗಾಗಿದ್ದೂ ಉಂಟು. ಇದರ ಜೊತೆಗೆ ಸಾಂಸ್ಕೃತಿಕವಾದ ಕೀಳರಿಮೆಗಳು ಸಹ ಮೂಡಲಾರಂಭಿಸಿದ್ದವು. ಈ ದಿಸೆಯಲ್ಲಿ ಮತ್ತೆ ಕನ್ನಡಿಗರೆಲ್ಲ ಆಡಳಿತಾತ್ಮಕವಾಗಿ ಒಂದುಗೂಡಲು ಪ್ರಯತ್ರಿಸಿದ್ದೇ ಏಕೀಕರಣ ಚಳವಳಿ. ಭಾಷೆಯ ಆಧಾರದ ಮೇಲೆ ತಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಬೇಕಿದ್ದುದು ಅನಿವಾರ್ಯ ಆಗಿತ್ತು. ಈ ಕೆಲಸವನ್ನು ಆಗುಮಾಡಿಸಿದವರು ಕನ್ನಡದ ಸಾಹಿತಿಗಳು ಮತ್ತು ಕಲಾವಿದರು. ತಮ್ಮ ಕತೆ, ಕವನ, ನಾಟಕ, ಕಾದಂಬರಿ, ವೈಚಾರಿಕ ಬರಹಗಳ ಮೂಲಕ ಕರ್ನಾಟಕತ್ವವನ್ನು ಮೂಡಿಸುವ ಪ್ರಯತ್ನಗಳು ನಡೆದವು. ಈ ಪ್ರಯತ್ನಗಳಿಗೆ ಹಿನ್ನಲೆಯಾಗಿದ್ದು ಪಾಶ್ಚಾತ್ಯ ಸಂಶೋಧಕರ ಹಾಗೂ ವಿದ್ವಾಂಸರ ಕನ್ನಡ-ಕರ್ನಾಟಕತ್ವವನ್ನು ಕುರಿತ ಸಾಧನೆಗಳು. ಅಂದರೆ ಬಿ.ಎಲ್.ರೈಸ್, ಈ.ಪಿ.ರೈಸ, ಫ್ಲೀಟ್, ರೀವ್, ಕಿಟ್ಟಲ್, ಜಿಗ್ಲರ್, ಸಿವೆಲ್ ಮೊದಲಾದ ವಿದ್ವಾಂಸರು ನಾಡಿನ ಸಾಹಿತ್ಯ, ಚರಿತ್ರೆ, ಸಂಸ್ಕೃತಿ ವಿಚಾರಗಳನ್ನು ಕುರಿತು ಉಂಟುಮಾಡಿದ ಅರಿವು. ಈ ಅರಿವು ಮುಂದೆ ಅಧುನಿಕ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಗಳ ಬರಹಗಾರರಿಗೆ ಮಾರ್ಗದರ್ಶನ ಆಯಿತು.

೧೮೫೭ರ ಸಿಪಾಯಿ ದಂಗೆ ಘಟನೆಯು ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ಕೊನೆಗೊಳಿಸಿತು. ೧೮೫೮ರ ಸನ್ನದಿನ ಪ್ರಕಾರ ಭಾರತವು ಬ್ರಿಟನ್ನಿನ ರಾಣಿ ವಿಕ್ಟೋರಿಯಾಳ ನೇರ ಹಿಡಿತಕ್ಕೆ ಒಳಗಾಯಿತು. ಇದರಿಂದಾಗಿ ಬ್ರಿಟಿಷರು ರಾಜಕೀಯ ನೆಲೆಗಳಲ್ಲಿ ಭಾರತವನ್ನು ಅನೇಕ ಸ್ಥಿತ್ಯಂತಗಳಿಗೆ ಒಳಗು ಮಾಡಿದರು. ತುಂಡಾದ ಭಾರತದಲ್ಲಿನ ಭಿನ್ನ ಭಾಷಿಕರು ಅನೇಕ ರೀತಿಯಲ್ಲಿ ಸಾಂಸ್ಕೃತಿಕ ಆಘಾತಗಳಿಗೆ ಒಳಗಾಗಬೇಕಾಯಿತು. ಇಂಥ ಛಿದ್ರತೆಯನ್ನು ಬ್ರಿಟಿಷ್ ಆಳರಸರಲ್ಲಿ ಒಬ್ಬನಾದ ಜಾನ್ ಬ್ರೈಟ್ ಮೊದಲ ಬಾರಿಗೆ ವಿರೋಧಿಸಿದ. ಅಲ್ಲದೆ ಇವನು ಭಾಷೆಯನ್ನೇ ಮೂಲಾಧಾರವನ್ನಾಗಿ ಇಟ್ಟುಕೊಂಡು ಭಾರತವನ್ನು ವಿವಿಧ ಘಟಕಗಳನ್ನಾಗಿ ವಿಭಜಿಸಲು ಸೂಚಿಸಿದ. ಇದನ್ನು ಬಿಟ್ಟರೆ ಮತ್ತೆ ಭಾಷಿಕ ನೆಲೆಯ ಏಕೀಕರಣದ ಕೂಗು ಕಾಣಿಸಿಕೊಂಡದ್ದು ೧೮೭೪ರಲ್ಲಿ, ಅಂದರೆ ಅಸ್ಸಾಮಿ ಭಾಷಿಕರೊಡನೆ ಬಂಗಾಳ ಪ್ರಾಂತ್ಯದ ಸಿಲ್ಹೆಟ್ ಜಿಲ್ಲೆಯವರನ್ನು ಸೇರಿಸಿದಾಗ, ಅಸ್ಸಾಮಿಗಳ ಅಸಮಾಧಾನದೊಂದಿಗೆ ಮೊಟ್ಟಮೊದಲ ಬಾರಿಗೆ ಭಾಷಾ ಚಳವಳಿ ಭಾರತದಲ್ಲಿ ಆರಂಭ ಆಯಿತು. ಬಂಗಾಳ, ಬಿಹಾರ, ಒರಿಸ್ಸಾ (ಉತ್ಕಲ್) ಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತಂದುದು ಈ ಬಗೆಯ ಚಳವಳಿಗಳಿಗೆ ಚಾಲನೆ ಕೊಟ್ಟಿತು.

ಕನ್ನಡ ಮಾತನಾಡುವ ಜನರು ಪ್ರಧಾನವಾಗಿ ಐದು ಆಡಳಿತ ಘಟಕಗಳಲ್ಲಿ ಹರಿದು ಹಂಚಿಹೋಗಿದ್ದರು. ಈ ಐದು ಘಟಕಗಳು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೂ (೧೯೪೭) ಸಹ ಹಾಗೇ ಮುಂದುವರೆದಿದ್ದವು. ಮುಂಬಯಿ (ಬೆಳಗಾಂ, ಧಾರವಾಡ, ಬಿಜಾಪುರ, ಉತ್ತರ ಕನ್ನಡ), ಹೈದರಾಬಾದ್(ಗುಲ್ಬರ್ಗಾ,ರಾಹಚೂರು, ಬೀದರ್), ಮದ್ರಾಸ್ (ದಕ್ಷಿಣ ಕನ್ನಡ, ಬಳ್ಳಾರಿ) ಕರ್ನಾಟಕದ ಕನ್ನಡಿಗರು ಮರಾಠಿ, ತೆಲಗು, ಉರ್ದು, ತಮಿಳು, ಮಲಯಾಳ ಭಾಷಿಕರಿಂದ ಸುತ್ತುವರಿಯಲ್ಪಟ್ಟರು. ಹಳೆಯ ಮೈಸೂರು ಸಂಸ್ಥಾನದ ಒಂಬತ್ತು ಜಿಲ್ಲೆಗಳು (ಬೆಂಗಳೂರು, ಮಂಡ್ಯ, ಕೋಲಾರ, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ) ಹಾಗೂ ಕೊಡಗು ಇನ್ನುಳಿದ ಎರಡು ಘಟಕಗಳಾಗಿದ್ದವು. ಮುಂಬಯಿ ಕರ್ನಾಟಕದ ಭಾಗದವರಿಗೆ ಬೇರೆ ಭಾಷಿಕರ ಒತ್ತಡ, ದಬ್ಬಾಳಿಕೆ ಹೆಚ್ಚಾಗಿತ್ತು. ಅಂದರೆ ಮರಾಠಿ ಭಾಷೆಯ ಪ್ರಭಾವ ಈ ಭಾಗದವರನ್ನು ನಾಡಿನ ಏಕೀಕರಣಕ್ಕಾಗಿ ತೀವ್ರವಾಗಿ ಹಾಗೂ ಮೊಟ್ಟಮೊದಲ ಪ್ರತಿಕ್ರಿಯಿಸುವಂತೆ ಮಾಡಿತು. ಈ ಭಾಗದ ಶೈಕ್ಷಣಿಕ ವಲಯ ಮರಾಠಿಮಯವಾಗಿದ್ದುದರಿಂದ ಕನ್ನಡ ಶಾಲೆಗಳು ತೀವ್ರ ಸ್ಪರ್ಧೆಯನ್ನು ಎದುರಿಸಿದವು. ಶಾಂತಕವಿಗಳಂಥ ಕನ್ನಡ ಮಾಸ್ತರರು ಈ ಭಾಗದಲ್ಲಿ ಮರಾಠಿ ಪ್ರಭಾವವನ್ನು ಮಟ್ಟ ಹಾಕಲು ತಮ್ಮ ನಿರಂತರ ಕಾರ್ಯಕ್ರಮಗಳ ಮುಖೇನ ಪ್ರಯತ್ನಿಸಿದ್ದೂ ಉಂಟು. ಅಲ್ಲದೆ ೧೮೫೬ರ ವೇಳೆಗೆ ಡೆಪ್ಯೂಟಿ ಚೆನ್ನಬಸಪ್ಪ ಅವರು ಶಿಕ್ಷಣ ಅಧಿಕಾರಿಗಳಾಗಿ ಬಂದು ಮುಂಬಯಿ ಕರ್ನಾಟಕದಲ್ಲಿ ಕನ್ನಡದ ಕೆಲಸಗಳಿಗೆ ಚಾಲನೆ ನೀಡಿದರು. ಇವರು ಕನ್ನಡ ಪರವಾದ ಚಳವಳಿಯನ್ನೇ ಹುಟ್ಟುಹಾಕಿದರು. ಅಲ್ಲದೆ ಎಲ್ಲ ಬಗೆಯ ಲೆಕ್ಕ-ಪತ್ರಗಳನ್ನು, ದಾಖಲೆಗಳನ್ನು ಸಹ ಕನ್ನಡದಲ್ಲಿಯೆ ಇರಿಸಲು ಶ್ರಮಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು. ಸಾಮಾನ್ಯವಾಗಿ ಇಲ್ಲಿಂದಲೇ ಕರ್ನಾಟಕದ ಏಕೀಕರಣ ಪರವಾದ ಧ್ವನಿಯನ್ನು ಗುರುತಿಸಲಾಗುತ್ತಿದೆ. ಮರಾಠಿ, ಗುಜರಾತಿ, ಬಂಗಾಳಿ ಭಾಷೆಗಳ ಪರಿಣಾಮವೂ ಸಹ ಮುಂಬಯಿ ಕರ್ನಾಟಕದ ಕನ್ನಡಿಗರನ್ನು ಈ ದೆಸೆಯಲ್ಲಿ ತೀವ್ರವಾಗಿ ಆಲೋಚಿಸುವಂತೆ ಮಾಡಿತ್ತು.

ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ೧೮೯೦ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿಕೊಂಡಿತು. ಭಾಷಾಭಿಮಾನದ ಮೂಲ ಬೀಜಾಂಕುರ ಅದದ್ದು ಈ ಸಂಘದಿಂದಲೇ. ರಾ.ಹ.ದೇಶಪಾಂಡೆ ಅವರಂಥ ಕನ್ನಡಾಭಿಮಾನಿಗಳು ಧಾರವಾಡ ನೆಲದಿಂದ ಈ ಪ್ರಕ್ರಿಯೆಗಳಿಗೆ ಚಾಲನೆ ಕೊಟ್ಟರು. ಅದೇ ರೀತಿಯಲ್ಲಿ ನಾಡು-ನುಡಿ ಚಿಂತನೆಗಳನ್ನು ಹುಟ್ಟು ಹಾಕಲು ಕರ್ನಾಟಕ ಭಾಷೋಜ್ಜೀವಿನಿ ಸಭ ೧೮೯೭ರಲ್ಲು ಹುಟ್ಟಿಕೊಂಡಿತು. ಧಾರವಾಡದಲ್ಲಿ ಮೊಟ್ಟ ಮೊದಲ ಬಾರಿಗೆ ೧೯೦೩ರಲ್ಲಿ ಬೆನಗಲ್ ರಾಮರಾಯರು ಏಕೀಕರಣದ ಕಲ್ಪಣೆಯನ್ನು ಮೂಡಿಸುವ ಭಾಷಣ ಮಾಡಿದರು. ಉತ್ತರ ಕರ್ನಾಟಕ ಹಾಗೂ ಮದ್ರಾಸ ಕರ್ನಾಟಕಗಳ ಒಂದುಗೂಡುವಿಕೆಯ ಅನಿವಾರ್ಯತೆಯ ಬಗೆಗೆ ಕನ್ನಡಿಗರ ಗಮನ ಸೆಳೆದರು. ‘ವಿದ್ಯಾವರ್ಧಕ ಸಂಘ’ ದಿಂದ ಪ್ರಕಟ ಆಗುತ್ತಿದ್ದ ‘ವಾಗ್ಭೂಷಣ’ ಎಂಬ ಮಾಸಿಕವು ನಾಡು-ನುಡಿಗಳ ಬಗೆಗೆ ಕನ್ನಡಿಗರನ್ನು ಆಲೋಚಿಸುವಂತೆ ಪ್ರೇರಣೆ ನೀಡುತ್ತಿತ್ತು. ಈ ಪತ್ರಿಕೆಯಲ್ಲಿ ಆಲೂರ ವೆಂಕಟರಾಯರು (‘ಕನ್ನಡ ಕುಲಪುರೋಹಿತ’ರೆಂದೇ ಖ್ಯಾತಿ ಪಡೆದವರು) ೧೯೦೭ರಲ್ಲಿ (ಫೆಬ್ರವರಿ ಸಂಚಿಕೆ) ಮೊಟ್ಟಮೊದಲ ಬಾರಿಗೆ ‘ಕನ್ನಡಿಗರ ಏಕೀಕರಣ’ವನ್ನು ಕುರಿತು ಬರೆದರು. ಇಂಥ ಹತ್ತು ಹಲವು ಕಾರ್ಯ ಚಟುವಟಿಕೆಗಳು ಮುಂಬಯಿ ಕನ್ನಡಿಗರನ್ನು ಏಕೀಕರಣಕ್ಕೆ ಸಜ್ಜುಗೊಳ್ಳುವಂತೆ ಮಾಡಿದರು,. ಅಲ್ಲದೆ ಇತರೆ ಪ್ರಾಂತ್ಯದವರನ್ನು ಸೆಳೆದುಕೊಳ್ಳುವಂತೆ ಮಾಡಿದ್ದೂ ಉಂಟು.

೧೯೦೫ರ ‘ಬಂಗಾಳ ವಿಭಜನೆ’ಯ ಘಟನೆಯು ಕೇವಲ ಬಂಗಾಳಿಗರನ್ನಷ್ಟೇ ಅಲ್ಲದೆ ಇತರೆ ಭಾಷಾ ಪ್ರೇಮಿಗಳನ್ನು ಸಹ ಜಾಗೃತಗೊಳ್ಳುವಂತೆ ಮಾಡಿತು. ೧೯೧೧ರಲ್ಲಿ ಈ ವಿಭಜನೆ ರದ್ದಾಗಿ ಬಂಗಾಳ ಒಂದುಗೂಡುವವರೆಗೂ ವಿಭಿನ್ನ ರೀತಿಯ ಚಳವಳಿಗಳನ್ನು ಬಂಗಾಳಿಗರು ಹುಟ್ಟು ಹಾಕಿದರು. ಇವುಗಳನ್ನು ಕನ್ನಡಿಗರು ಬಹಳ ಆಪ್ತವಾಗಿ ಗಮನಿಸಿದ್ದೂ ಉಂಟು. ೧೯೦೭ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವೊಂದನ್ನು ಧಾರವಾಡದಲ್ಲಿ ನಡೆಯಿತು. ಇದರಲ್ಲಿ ವಿವಿಧ ಕನ್ನಡ ಪ್ರದೇಶಗಳಲ್ಲಿನ ಸಾಹಿತಿಗಳು, ಪ್ರಕಾಶಕರು ಒಂದೆಡೆ ಸೇರಿ ಪ್ರತಿ ವರ್ಷವು ನಾಡು-ನುಡಿ, ಸಾಹಿತ್ಯ ಸಂಸ್ಕೃತಿ ವಿಚಾರಗಳಿಗೆ ಸಂಬಂಧಿಸಿದ ಪ್ರಕಟನೆಗಳನ್ನು ಹೊರತರುವುದರ ಬಗೆಗೆ ಚಿಂತನೆ ನಡೆಸಿದರು. ಇದರ ಎರಡನೆಯ ಸಭೆ, ಮೈಸೂರು ಸಂಸ್ಥಾನಿಕರ ಅಸಮಾಧಾನದ ನಡುವೆಯೆ ಧಾರವಾಡದಲ್ಲಿ ೧೯೦೮ರಲ್ಲಿ ನಡೆಯಿತು. ಇದರ ನೇತೃತ್ವ ಮತ್ತೆ ಆಲೂರರದೇ ಆಗಿತ್ತು. ಮೂರನೆಯ ಸಭೆಯನ್ನು ಹಠ ತೊಟ್ಟು ಮೈಸೂರು ಸಂಸ್ಥಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಹೀಗಾಗಿ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಈ ಸಭೆ ನಾಲ್ಕು ದಿನಗಳ ಕಾಲ ನಡೆಯಿತು. ಇದರ ಪರಿಣಾಮವೇ ೧೯೧೫ರ ಮೇ ೫ರಂದು ಹುಟ್ಟಿದ ಕರ್ನಾಟಕ ಸಾಹಿತ್ಯ ಪರಿಷತ್ತು (ಮುಂದೆ ಕನ್ನಡ ಸಾಹಿತ್ಯ ಪರಿಷತ್ತು ಆಯಿತು). ಈ ಸಂಸ್ಥೆ ಮುಂದೆ ಪ್ರತಿ ವರ್ಷವೂ “ಛಿದ್ರವಾಗಿದ್ದ” ಕನ್ನಡದ ಭೂಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸತೊಡಗಿತು. ಈ ಸಮ್ಮೇಳನಗಳಲ್ಲಿ ಕನ್ನಡ ಪರವಾದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಇದರಿಂದ ನಾಡಿನ ಏಕೀಕರಣದ ಪ್ರಕ್ರಿಯೆಗೆ ಎಲ್ಲ ಪ್ರದೇಶಗಳ ಕನ್ನಡಿಗರಿಂದಲೂ ಬೆಂಬಲ ದೊರೆಯುವಂತೆ ಆಯಿತು.

೧೯೧೭ರ ವೇಳೆಗೆ ಆಲೂರು ವೆಂಕಟರಾಯರ ‘ಕರ್ನಾಟಕ ಗತವೈಭವ ’ದಂಥ ಕೃತಿಗಳು ಪ್ರಕಟಗೊಂಡವು. ಇದರಿಂದ ಕನ್ನಡಿಗರು ತಮ್ಮದೇ ಆದ ಚರಿತ್ರೆ ಸಂಸ್ಕೃತಿಗಳಿಗಾಗಿ ‘ಕರ್ನಾಟಕತ್ವ’ದ ಪರಿಕಲ್ಪನೆಯನ್ನು ಮೂಡಿಸಿಕೊಂಡು ಕ್ರಿಯಾಶೀಲರಾದರು. ಮುದವೀಡು ಕೃಷ್ಣರಾವ್, ಮುದವೀಡು ವೆಂಕಟರಾವ್, ಕಡಪಾ ರಾಘವೇಂದ್ರರಾವ್, ಆಲೂರು ವೆಂಕಟರಾವ, ಜೋಷಿ ವೆಂಕಟರಾವ, ನರಗುಂಕರ,ರಾಜಪುರೋಹಿತ ಮೊದಲಾದವರು ಈ ಭಾಗದ ಕರ್ನಾಟಕತ್ವದ ಚಳವಳಿಯ ಜೊತೆಗೆ ರಾಷ್ಟ್ರೀಯ ಹೋರಾಟದ ಪ್ರಕ್ರಿಯೆಗೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಏಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣದ ಚಳವಳಿಗಳು ಒಟ್ಟೊಟ್ಟಿಗೆ ಸಾಗಬೇಕಾದ ಅನಿವಾರ್ಯತೆ ಆ ಹೊತ್ತಿನದು. ಮುಂಬಯಿ ಕರ್ನಾಟಕದಲ್ಲಿ ಬಾಲಗಂಗಾಧರ ತಿಲಕರ ಪ್ರಭಾವ ಅದರಲ್ಲೂ ಧಾರವಾಡ ಪರಿಸರದ ಕನ್ನಡಿಗರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಗಂಗಾಧರರಾವ್ ದೇಶಪಾಂಡೆ, ಶ್ರೀನಿವಾಸರಾವ್ ಕೌಜಲಗಿ ಮೊದಲಾದವರು ಈ ಭಾಗದ ಕನ್ನಡಿಗರನ್ನು ರಾಷ್ಟ್ರೀಯ ಹೋರಾಟದಲ್ಲಿ ಲೀನವಾಗುವಂತೆ ಮಾಡಿದ್ದರು. ಇದರ ಜೊತೆಗೆ ಸಂಸ್ಥಾನಿ ಕನ್ನಡಿಗರು ತಮ್ಮದೇ ಆದ ತೊಡಕುಗಳ ನಡುವೆಯೂ ಕನ್ನಡ-ಕರ್ನಾಟಕತ್ವಕ್ಕಾಗಿ ಹಾತೊರೆದರು.

ಏಕೀಕರಣದಂಥ ರಾಜಕೀಯ ಚಳವಳಿಗೆ ಒಂದು ರಾಜಕೀಯವಾದ ಸಂಸ್ಥೆ ಬೇಕಾಗಿತ್ತು. ಇದನ್ನು ಹೊನ್ನಪುರಮಠ ಅವರನ್ನೂ ಒಳಗೊಂಡಂತೆ ಧಾರವಾಡ ಮುಂದಾಳುಗಳು ಕರ್ನಾಟಕ ಸಭಾ (೧೯೧೭) ವನ್ನು ಹುಟ್ಟುಹಾಕಿದರು. ಕನ್ನಡಿಗರ ಕರ್ತವ್ಯ ಎಂಬ ಕೃತಿಯನ್ನು ಪ್ರಕಟಿಸಿದ ಈ ಸಂಸ್ಥೆ ಏಕೀಕರಣಕ್ಕಾಗಿ ಸಭೆ-ಸಮಾರಂಭಗಳನ್ನು ನಡೆಸಿ ಅಭಿಪ್ರಾಯ ಮೂಡಿಸಿದ್ದು ಗಮನಾರ್ಹ.ಇದರಿಂದ ಭಾರತ ರಾಷ್ಟ್ರೀಯ ಕಾಂಗ್ರೆಸನ್ ಅಧಿವೇಶಗಳಲ್ಲೂ ಕರ್ನಾಟಕ ಪ್ರಾಂತ್ಯ ರಚನೆ ಬಗೆಗೆ ಪ್ರಸ್ತಾವಗಳು ಮಂಡಿತವಾಗತೊಡಗಿದವು. ಇದರ ಪರಿಣಾಮವಾಗಿ ೧೯೨೦ರ ನಾಗಪುರ ಕಾಂಗ್ರೆಸ್ ಅಧಿವೇಶದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕಿ.ಪಿ.ಸಿ.ಸಿ.) ಶಾಖೆ ಅಸ್ತಿತ್ವಕ್ಕೆ ಬಂದಿತು. ೨೧ ಭಾಷೆಗಳ ಆಧಾರದ ಮೇಲೆ ಈ ಪ್ರದೇಶ ಕಾಂಗ್ರೆಸ್ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದವು. ಇದಕ್ಕೆ ಮೂಲ ಕಾರಣಕರ್ತರು ಗಾಂಧೀಜಿ ಅವರು. ಈ ನಡುವೆ ಮಾಜಿ ದಿವಾನರಾಗಿದ್ದ ವಿ.ಪಿ.ಮಾಧವರಾವ ಅಧ್ಯಕ್ಷತೆಯಲ್ಲಿ ರಾಜಕೀಯ ಆಡಳಿತಾತ್ಮಕ ವಿಚಾರಗಳ ಮಂಡನೆಗಾಗಿ ಅಖಿಲ ಕರ್ನಾಟಕ ರಾಷ್ಟ್ರೀಯ ಪರಿಷತ್ತು ೧೯೨೦ರಲ್ಲಿ ಅಸ್ತಿತ್ವಕ್ಕೆ ಬಂದಿತು.

೧೯೨೪ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ೨೯ನೇ ಅಧಿವೇಶನವನ್ನು ಬೆಳಗಾಂನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಏಕೀಕರಣ ವಾದಿಗಳು ಅಖಿಲ ಕರ್ನಾಟಕ ಏಕೀಕರಣ ಪರಿಷತ್ತನ್ನು ನಡೆಸಿದರು. ಅಲ್ಲದೆ ಇಲ್ಲಿ ಕರ್ನಾಟಕ ಏಕೀಕರಣ ಸಂಘವೂ ಸಹ ಅಸ್ತಿತ್ವಕ್ಕೆ ಬಂದಿತು. ಶಂಕರರಾವ್ ಜೋಷಿ, ಮಂಗಳವಾಡೆ ಶ್ರೀನಿವಾಸರಾವ ಮೊದಲಾದವರ ಸಹಕಾರಗಳೊಂದಿಗೆ ಕಡಪಾ ರಾಘವೇಂದ್ರರಾಯರು ಬೆಳಗಾಂ ಅಧಿವೇಶನದ ಯಶಸ್ವಿಗೆ ಕಾರಣರಾದರು. ಇಲ್ಲಿ ನಡೆದ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಸರ್.ಸಿದ್ದಪ್ಪ ಕಂಬಳಿ. ಮುಂದೆ ಎರಡು ವರ್ಷಗಳಿಗೊಮ್ಮೆ ಏಕೀಕರಣದ ಸಮ್ಮೇಳನವನ್ನು ನಡೆಸಲು ನಿರ್ದರಿಸಿದ ಈ ಸಮ್ಮೇಳನದಲ್ಲಿ ‘ಕನ್ನಡಿಗನ ಸರ್ವಸ್ವ’ (ಸಂಯುಕ್ತ ಕರ್ನಾಟಕ ಪ್ರಾಂತ) ಎಂಬ ಕೃತಿಯನ್ನು ಸಹ ಬಿಡುಗಡೆ ಮಾಡಲಾಯಿತು. ಹುಯಿಲಗೋಳ ನಾರಾಯಣರಾಯರು ಈ ಸಮ್ಮೇಳನದಲ್ಲಿ ಹಾಡಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…” ಎಂಬ ನಾಡಗೀತೆ ಏಕೀಕರಣಕ್ಕಾಗಿಯೇ ಪ್ರೇರಣೆ ನೀಡಿತು. ಗಾಂಧೀಜಿ ಅವರು ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಅವಶ್ಯಕತೆಯನ್ನು ಬೆಂಬಲಿಸಿದ್ದು ಗಮನಾರ್ಹವಾದುದು.

ಕಾಂಗ್ರೆಸ್ ಹಾಗೂ ಏಕೀಕರಣ ಸಂಘಗಳು ಹೊಸಕೊಪ್ಪ ಕೃಷ್ಣರಾವ್, ಕೌಜಲಗಿ ಶ್ರೀನಿವಾಸರಾವ್, ಚಿಕ್ಕೋಡಿ ಪಂಡಿತರಯಪ್ಪ ಹಾಗೂ ಆರ್.ಆರ್. ದಿವಾಕರ ಅವರುಗಳ ನೇತೃತ್ವದಲ್ಲಿ ನೆಹರೂ ಸಮಿತಿ (೧೯೨೮) ಗೆ ಏಕೀಕರಣದ ಅಹವಾಲುಗಳನ್ನು ಮಂಡಿಸಿದವು. ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯ ಈ ಸಮಿತಿ ಆಂಧ್ರದ ಬಗೆಗೆ ಸ್ಪಷ್ಟವಾಗಿತ್ತೇ ವಿನಃ ಕರ್ನಾಟಕದ ಬಗೆಗೆ ಒಲವು ತೋರಿಸಿರಲಿಲ್ಲ. ಮುಂದೆ ೧೯೨೮-೨೯ರಲ್ಲಿ ಸೈಮನ್ ಕಮಿಷನಗೂ ಸಹ ಏಕೀಕರಣದ ಪ್ರಸ್ತಾವವನ್ನು ಸಲ್ಲಿಸಲಾಯಿತು. ಇದು ಸಹ ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ೧೯೨೧ರಲ್ಲಿ ನಡೆದ ದುಂಡುಮೇಜಿನ ಸಮ್ಮೇಳನದಲ್ಲಿ (ಲಂಡನ್) ನಾಡಿನ ಏಕೀಕರಣದ ಬಗೆಗೆ ಒತ್ತಾಯಿಸಲಾಯಿತು. ಕರ್ನಾಟಕದಿಂದ ಈ ಸಮ್ಮೇಳನದಲ್ಲಿ ಬೆನಗಲ್ ರಾಮರಾವ್, ಬೆನಗಲ್ ಶಿವರಾವ್ ಹಾಗೂ ಮಿರ್ಜಾ ಇಸ್ಮಾಯಿಲರು ಭಾಗವಹಿಸಿದ್ದರು.

ಕರ್ನಾಟಕ, ಆಂಧ್ರ ಹಾಗೂ ಕೇರಳ ರಾಜ್ಯಗಳ ಅಸ್ತಿತ್ವಕಾಗಿ ಜನರ ಚಳವಳಿ ತೀವ್ರವಾಯಿತು. ಸಿಂಧ್ ಹಾಗೂ ಒರಿಸ್ಸಾಗಳು ಈ ವೇಳೆಗಾಗಲೇ ಅಸ್ತಿತ್ವಕ್ಕೆ ಬಂದಿದ್ದುದು ಇನ್ನಷ್ಟು ಹುರುಪು ಹೊಂದುವಂತೆ ಮಾಡಿತ್ತು. ೧೯೩೭ರ ಅಕ್ಟೋಬರ್ ೧೦ರ ದಿನವನ್ನು ಏಕೀಕರನ ದಿನವನ್ನಾಗಿ ಆಚರಿಸಿದ ಕನ್ನಡಿಗರು ಕೇಂದ್ರ ಹಾಗೂ ಪ್ರಾಂತೀಯ ಹಂತಗಳಲ್ಲಿ ಏಕೀಕರಣದ ಸಾಕಾರತೆಗಾಗಿ ಒತ್ತಾಯಿಸಿದ್ದೂ ಉಂಟು. ೧೯೩೮ರ ವೇಳೆಗೆ ಬೆಂಗಳೂರಿನಲ್ಲಿ ಏಕೀಕರಣ ಸಂಘ ಅಸ್ತಿತ್ವಕ್ಕೆ ಬಂದು ಚಳವಳಿಗೆ ಇನ್ನಷ್ಟು ಬೆಂಬಲ ದೊರೆತಂತೆ ಆಯಿತು. ಇದರ ಜೊತೆಗೆ ಕಡಪಾ ರಾಘವೇಂದ್ರರಾವ್, ಶಂ.ಬಾ.ಜೋಷಿ, ಆಲೂರ ವೆಂಕಟರವ್, ಬಿ.ಎಂ. ಶ್ರೀಕಂಠಯ್ಯ, ಅ.ನ. ಕೃಷ್ಣರಾವ್, ತಿ.ತಾ.ಶರ್ಮ, ಗೋವಿಂದ ಪೈ, ವಿ.ಕೃ.ಗೋಕಾಕ್, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ್, ಬಿ.ಶಿವಮೂರ್ತಿ ಶಾಸ್ತ್ರಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮೊದಲಾದವರು ಆ ಹೊತ್ತಿನ ರಾಷ್ಟ್ರೀಯತೆ ಹಾಗೂ ಕರ್ನಾಟಕತ್ವದ ವಿಚಾರಗಳನ್ನು ಕುರಿತು ಬರೆಯಲಾರಂಭಿಸಿದರು. ಇವರು ತಮ್ಮ ಸೃಷ್ಠಿಶೀಲ ಬರಹ ಹಾಗೂ ವೈಚಾರಿಕತೆಯ ಮೂಲಕ ಕನ್ನಡಿಗರನ್ನು ಏಕೀಕರಣದ ಪ್ರಕ್ರಿಯೆಗೆ ಸಜ್ಜುಗೊಳಿಸುವ ದಿಸೆಯಲ್ಲಿ ಮುಂದುವರೆದಿದ್ದರು.

೧೯೪೨ರಲ್ಲಿ ಭಾರತವು ಆಂಗ್ಲರಿಂದ ಮುಕ್ತವಾದ ಮೇಲೆ ಕಾಂಗ್ರೆಸ್, ಕಮ್ಯುನಿಸ್ಟ ಪಕ್ಷಗಳಾದಿಯಾಗಿ ಈ ನಾಡು ಏಕೀಕರಣ ಆಗುವುದರ ಕಡೆಗೆ ಗಮನ ಹರಿಸಿದರು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವು ತನ್ನ ಹಿಂದಿನ ತುರ್ತನ್ನು ವ್ಯಕ್ತಪಡಿಸಲು ಹಿಂದೇಟು ಹಾಕಿತು. ಇದರ ಪರಿಣಾಮವೇ ಏಕೀಕರಣವನ್ನು ಕುರಿತ ಹತ್ತು ಹಲವು ಆಯೋಗಗಳು. ಅವುಗಳಲ್ಲಿ ಎಸ್.ಕೆ.ಧರ್ ಸಮಿತಿ(೧೯೪೮), ಜೆ.ವಿ.ಪಿ ಸಮಿತಿ(೧೯೪೮), ಕೇಳ್ಕರ್ ಸಮಿತಿ ಹಾಗೂ ವಾಂಛೂ ಸಮಿತಿಗಳು(೧೯೫೩) ಪ್ರಮುಖವಾದುವು. ಇವುಗಳಲ್ಲಿ ಯಾವುದೊ ನಾಡಿನ ಏಕೀಕರಣದ ಸಾಕಾರತೆಯ ಬಗೆಗೆ ಸ್ಪಷ್ಟ ನಿಲುವು ತಾಳಲಿಲ್ಲ. ಕಾಂಗ್ರೆಸ್ ಸಮಿತಿಯವರು ಅದರಲ್ಲೂ ಎಸ್.ನಿಜಲಿಂಗಪ್ಪ ಮೊದಲಾದವರು ನೆಹರು ಅವರನ್ನು ಏಕೀಕರಣಕ್ಕಾಗಿ (ಕರ್ನಾಟಕ ಏಕೀಕರಣ ಮಹಾಸಮಿತಿಯ ಮೂಲಕವೂ ಸಹ) ಒತಾಯಿಸುತ್ತಲೇ ಇದ್ದರು. ಆದರೆ ನೆಹರೂ ಅವರು ೧೯೫೨ರ ಅಕ್ಟೋಬರನಲ್ಲಿ ಆಂಧ್ರದ ಪೊಟ್ಟಿ ಶ್ರೀರಾಮಲು ಅವರ ಅಮರಣಾಂತ ಉಪವಾಸದ ಸಾವಿಗೆ ಮಾತ್ರ ಸ್ಪಂದಿಸಿದರು. ಹೀಗಾಗಿ ಎಸ್.ಕೆ. ಧರ್ ಹಾಗೂ ಕೆ.ಎನ್. ವಾಂಛು ಸಮಿತಿಗಲು ಆಂಧ್ರದ ತೆಲುಗರ ಏಕೀಕರಣವನ್ನು (೧೯೫೩) ಮಾತ್ರ ಶಿಫಾರಸ್ಸು ಮಾಡಿ, ಆಗು ಮಾಡಿಸಿದ್ದವು. ಈ ಸಂದರ್ಭದಲ್ಲಿ ಅಂದರೆ ೧೯೫೩ರಲ್ಲಿ ಬಳ್ಳಾಗಿ ಹಳೆಯ ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡಿತು. ಈ ಸಂತಸದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ರಂಜಾನ್ ಸಾಬ್ ಎಂಬುವವರು ದುಷ್ಕರ್ಮಿಗಳ ಅಸಿಡ್ ಬಾಂಬಿಗೆ ಪ್ರಾಣತೆತ್ತದ್ದೂ ಉಂಟು. ಇದರಿಂದ ಮೈಸೂರಿನವರು ಸಹ ಏಕೀಕರಣದ ಪ್ರಕ್ರಿಯೆಗೆ (ಉತ್ತರದವರ ಕೂಗಿಗೆ) ಸ್ಪಂದಿಸುವಂತಾಯಿತು. ಚುನಾವಣೆಗಳಲ್ಲಿ ಆಶ್ವಾಸನೆ ನೀಡಲಾಗಿದ್ದ ಏಕೀಕರಣದ ಆಶ್ವಾಸನೆಯನ್ನು ಕುರಿತು ನೆಹರೂ ಅವರ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ. ಆಂಧ್ರದ ರೀತಿಯಲ್ಲಿಯೆ ಜಕ್ಕಲಿಯಲ್ಲಿ ದೊಡ್ಡಮೇಟಿ ಅಂದಾನಪ್ಪ ಹಾಗೂ ಅದರಗುಂಚಿಯಲ್ಲಿ ಶಂಕರ ಕಲ್ಲನಗೌಡ ಪಾಟೀಲರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು (ಅಕರಾನಿ), ಕಮ್ಯುನಿಸ್ಟ್ ಪಕ್ಷ, ಪ್ರಜಾ ಸಮಾಜವಾದಿ ಪಕ್ಷ ಮೊದಲಾದ ಕಾಂಗ್ರೆಸೇತರ ಪಕ್ಷಗಳು ಸಹ ಈ ಸಂದರ್ಭದಲ್ಲಿ ಒತ್ತಡ ತಂದವು. ಕೊನೆಗೆ ಮಣಿದ ಪ್ರಧಾನಿ ನೆಹರು ಅವರು ೧೯೫೩ರ ಡಿಸೆಂಬರ್ ೨೩ರಂದು ಭಾಷಾವಾರು ಪ್ರಾಂತ್ಯಗಳ ಬಗೆಗೆ ವರದಿ ನೀಡಲು ಆಯೋಗವೊಂದನ್ನು ರಚಿಸಿದರು. ರಾಜ್ಯ ಪುನರ್ವಿಂಗಡಣಾ ಆಯೋಗವೆಂದು ಕರೆಸಿಕೊಂಡ ಈ ಆಯೋಗವನ್ನು ಫಜಲ ಅಲಿ ಆಯೋಗವೆಂತಲೂ ಕರೆಯುತ್ತಾರೆ. ಏಕೆಂದರೆ ಇದರ ಅಧ್ಯಕ್ಷರು ಎಸ್.ಫಜಲ್ ಅಲಿ. ಎಚ್.ಎನ್.ಕುಂಜ್ರು ಮತ್ತು ಕೆ.ಎಂ.ಪಣಿಕ್ಕರ್ ಇಬ್ಬರೂ ಸಮಿತಿಯ ಸದಸ್ಯರಾಗಿದ್ದರು. ಈ ಸಮಿತಿಯ ದೇಶದಾದ್ಯಂತ ಪ್ರವಾಸ ಕೈಗೊಂಡು ಕನ್ನಡದ ಪ್ರದೇಶಗಳನ್ನು, ಏಕೀಕರಣವಾದಿಗಳನ್ನೂ, ಸಂಘ-ಸಂಸ್ಥೆಗಳನ್ನು ಸಂದರ್ಶಿಸಿ ಮಾಹಿತಿ ಪುರಾವೆಗಳನ್ನು ಸಂಗ್ರಹಿಸಿತು. ಹಳೆಯ ಮೈಸೂರು ಹಾಗೂ ಉತ್ತರ ಭಾಗದ ಕನ್ನಡಿಗರ ನಡುವೆಯಿದ್ದ ಪೂರ್ವಗ್ರಹಪೀಡಿತ ಗುಮಾನಿಗಳನ್ನು (ಎರಡು ಕರ್ನಾಟಕಗಳ ಅಸ್ತಿತ್ವ ಬಗೆಗೆ) ಸಹ ಪರಿಶೀಲಿಸಿತು. ಅಂತಿಮವಾಗಿ ಅದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ (೩೦.೯.೧೯೫೫) ನಾಡಿನ ಏಕೀಕರಣದ ವಿಚಾರಗಳಿಗೆ ಮಾನ್ಯತೆ ನೀಡಿತು. ಈ ವರದಿಯು ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಒಪ್ಪಿಗೆ ಪಡೆದು ಕೊನೆಗೆ ಅಂದಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರಪ್ರಸಾದರ ಸಹಿಯೊಂದಿಗೆ ಮಸೂದೆ ಕಾಯಿದೆ ಆಯಿತು. ಈ ಕಾಯಿದೆಯ ಅನ್ವಯ ೧೯೫೬ರ ನವೆಂಬರ ೧ ರಂದು ಕನ್ನಡ ಭೂಪ್ರದೇಶಗಳು ಹಾಗೂ ಕನ್ನಡಿಗರು ಒಂದೇ ಆಡಳಿತದಡಿಗೆ ಬಂದರು. ಏಕೀಕರಣ ಸಾಕಾರತೆಯ ಕುರುಹಾಗಿ ನಾಡು ವಿಶಾಲ ಮೈಸೂರು ರಾಜ್ಯವೆಂದು ಕರೆಸಿಕೊಂಡಿತು.

ಉತ್ತರ ಕರ್ನಾಟಕದವರಿಗೆ ನಾಡು ಕರ್ನಾಟಕ ಎಂದು ಕರೆಸಿಕೊಳ್ಳದಿದ್ದುದರ ಬಗೆಗೆ ಅಸಮಾಧಾನ ಉಂಟಾಯಿತು. ಅಲ್ಲದೆ ಬಹುಪಾಲು ಕನ್ನಡಿಗರು ಚಂದಗಡ, ರಾಯದುರ್ಗ, ಆದವಾನಿ, ಆಲೂರು, ಮಡಕಶಿರ, ಕಾಸರಗೋಡು, ಜತ್, ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ್, ಹೊಸೂರು, ನೀಲಗಿರಿ, ತಾಳವಾಡಿ ಮೊದಲಾದ ಪ್ರದೇಶಗಳಲ್ಲಿಯೆ ಉಳಿದುಬಿಟ್ಟರು. ಇವು ಆಂಧ್ರ, ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಗೆ ಸೇರಿದ ಭಾಗಗಳಾದವು. ಇಂಥ ಅಸಮಾಧಾನವು ಸಹ ಹಾಗೆಯೇ ಉಳಿಯಿತು. ಆದರೆ ನಾಡು ಏಕೀಕರಣವಾದ ೧೧ ವರುಷಗಳ ಅನಂತರ ಡಿ.ದೇವರಾಜ ಅರಸು ಅವರ ಅವಧಿಯಲ್ಲಿ ಮತ್ತೆ ಕರ್ನಾಟಕ ಎಂದು ೧೯೭೩ರ ನವೆಂಬರ ೧ರಂದು ನಾಮಕರಣ ಪಡೆದದ್ದು ಸಮಾಧಾನಕರ ಸಂಗತಿ.

ಈ ಏಕೀಕರಣ ಚಳವಳಿಯು ವಿಭಿನ್ನ ರೀತಿಯ ಹಂತಗಳನ್ನು ದಾಟಿ ಸಾಕಾರಗೊಳ್ಳಲು ನಾಡಿನಾದ್ಯಂತ ಅನೇಕ ವಿದ್ವಾಂಸರು, ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು, ಚಿಂತಕರು, ಸಂಶೋಧಕರು, ಜನಸಾಮಾನ್ಯರು, ವಕೀಲರು ಮೊದಲಾದವರು ತಮ್ಮನ್ನು ತಾವು ತೊಡಗಿಸಿಕೊಂಡು ಸಹಕರಿಸಿದ್ದರು. ಅವರುಗಳಲ್ಲಿ ಎಂ.ಎಚ್. ಕೃಷ್ಣ, ಎಸ್.ಎಸ್. ಬಸವನಾಳ್, ಫ್.ಗು. ಹಳಕಟ್ಟಿ, ಜಿ.ವಿ. ಹಳ್ಳಿಕೇರಿ, ಎಸ್.ಸಿ. ದಾಸಪ್ಪ, ಬಿ.ಎನ್. ದಾತರ್, ಆರ್.ಆರ್. ದಿವಾಕರ್, ಎ. ದೊಡ್ಡಮೇಟಿ, ಶಾಂತವೇರಿ ಗೋಪಾಲಗೌಡ, ಮಾಸ್ತಿ, ಬಿ.ಎಂ.ಶ್ರೀ, ದೇವುಡು, ಬೇಂದ್ರೆ, ಕುವೆಂಪು, ರಾಮಕೃಷ್ಣ ಕಾರಂತ, ಯು. ರಾಮರಾವ್, ಜಿನರಾಜ್ ಹೆಗ್ಗಡೆ, ಎನ್.ಕೆ. ಉಪಾಧ್ಯಾಯ, ಟಿ.ಆರ್. ಚಿಕ್ಕೋಡಿ, ಜಿ.ವಿ.ಸಾಲ್ದಾನಾ, ಡಿ.ವಿ. ಬೆಳವಿ, ಎಂ.ಪಿ. ಪಾಟೀಲ, ಟಿ.ಸುಬ್ರಹ್ಮಣ್ಯಂ, ಎ.ಜೆ. ಮುಧೋಳ, ಸಿದ್ದಪ್ಪ ಕಮ್ಮಾರ, ಕರಮರಕರ್, ಬಿ.ವಿ. ಕಕ್ಕಿಲ್ಲಾಯ, ವೆಂಕಟರಂಗೋಕಟ್ಟಿ, ಚುರಮುರಿ ಶೇಷಗಿರಿರಾವ್, ಜೀರಗೆ ಕಟ್ಟೆ ಬಸಪ್ಪ, ಜಂಗಿನ ಮುರಯ್ಯ್, ಜಯದೇವಿ ತಾಯಿ ಲಿಗಾಡೆ, ಸಿ.ಬಿ.ಮೊಣ್ಣಯ್ಯ, ಸದಾನಂದ ಹೆಗಡೆ, ಪಿಂಟೋ, ಕೆ.ಎಂ.ರಂಗನಾಥ ಮೊದಲಿಯಾರ್, ಬಾಲಗಂಗಾಧರ ಖೇರ್, ನಾ.ಸು. ಹರ್ಡಿಕರ್, ಹರ್ಡೇಕರ್ ಮಂಜಪ್ಪ, ಎಂ. ವಿಶ್ವೇಶ್ವರಯ್ಯ ಮೊದಲಾದವರು ಪ್ರಮುಖರು. ಅಲ್ಲದೆ ಕನ್ನಡಿಗ, ವಿಶ್ವ ಕರ್ನಾಟಕ, ಜಯ ಕರ್ನಾಟಕ, ಕರ್ಮವೀರ, ಕರ್ನಾಟಕ ವೃತ್ತ, ಧನಂಜಯ, ವಿಜಯಿ, ಸತ್ಯಾಗ್ರಹಿ, ಕಾನಾಡ ವೃತ್ತ, ಕನ್ನಡ ಸಹ ಜೀವನ, ಕೊಡಗು, ಶುಭೋದಯ, ಸ್ವದೇಶಾಭಿಮಾನಿ, ಕರ್ನಾಟಕ್ ಮೊದಲಾದ ಪ್ರತ್ರಿಕೆಗಳು, ನಿಯತಕಾಲಿಕೆಗಳು ಕರ್ನಾಟಕತ್ವವನ್ನು ಮೂಡಿಸಿ ನಾಡಿನ ಏಕೀಕರಣವನ್ನು ಆಗು ಮಾಡಿಸಿದವು.