ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಾರುಕಟ್ಟೆಗೆ ಪ್ರಧಾನ ಸ್ಥಾನ ಮತ್ತು ಪಾತ್ರವಿರಬೇಕೊ ಅಥವಾ ಪ್ರಭುತ್ವಕ್ಕೆ ಪ್ರಧಾನ ಸ್ಥಾನ ಮತ್ತು ಪಾತ್ರವಿರಬೇಕೊ ಎಂಬ ವಿಷಯವನ್ನು ಕುರಿತ ವಾದ-ವಿವಾದ-ಸಂವಾದಗಳು ಕಳೆದ ೮-೯ ದಶಕಗಳಿಂದ ನಡೆಯುತ್ತ ಬಂದಿವೆ. ಈ ವಾದ-ವಿವಾದ-ಸಂವಾದ ಭಾರತಕ್ಕೆ ಮಾತ್ರ ಸೀಮಿತವಾದ ಸಂಗತಿಯೇನಲ್ಲ. ಇದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಂವಾದವಾಗಿದೆ. ೧೯೧೭ರ ಅಕ್ಟೋಬರ ಕ್ರಾಂತಿಯ ನಂತರ ಅಸ್ತಿತ್ವಕ್ಕೆ ಬಂದ ಸೋವಿಯತ್ ರಷ್ಯಾವು ಪ್ರಭುತ್ವಪ್ರಧಾನ ಸಮಾಜವಾದಿ ವ್ಯವಸ್ಥೆಯನ್ನು ಅಳವಡಿಸಿತು. ೧೯೩೦ರ ವರೆಗೆ ಇಡೀ ವಿಶ್ವದಲ್ಲಿ ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆ ಏಕಮೇವ ಅಭಿವೃದ್ಧಿ ಮಾದರಿಯಾಗಿ ಮೆರೆಯಿತು. ಆದರೆ ೧೯೩೦ರಲ್ಲಿ ಸಂಭವಿಸಿದ “ವಿಶ್ವ ಆರ್ಥಿಕ ಮಹಾ ಮುಗ್ಗಟ್ಟು” ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆಯ ಕಾರ್ಯಕ್ಷಮತೆ, ಪ್ರಸ್ತುತತೆ ಹಾಗೂ ಪ್ರಭಾವ ಕುರಿತಂತೆ ಅನುಮಾನ-ಶಂಕೆಗಳನ್ನು ಹುಟ್ಟು ಹಾಕಿತು. ಇದರೊಂದಿಗೆ ಅಭಿವೃದ್ದಿ ಪ್ರಕ್ರಿಯೆಯಲ್ಲಿ ಮಾರುಕಟ್ಟೆ ಆಧರಿತ ಬಂಡವಾಳಶಾಹಿ ವ್ಯವಸ್ಥೆಗೆ ಪ್ರಧಾನ ಸ್ಥಾನ ಪಾತ್ರವಿರಬೇಕೋ ಅಥವಾ ಪ್ರಭುತ್ವ ಆಧರಿತ ಸಮಾಜವಾದಿ ವ್ಯವಸ್ಥೆಗೆ ಪ್ರಧಾನ ಪಾತ್ರವಿರಬೇಕೊ ಎಂಬುದನ್ನು ಕುರಿತ ಚರ್ಚೆ-ವಿವಾದ ಮುಂಚೂಣಿಗೆ ಬಂದಿತು. ೧೯೩೦ರಲ್ಲಿ ಸಂಭವಿಸಿದ ‘ವಿಶ್ವ ಆರ್ಥಿಕ ಮಹಾ ಮುಗ್ಗಟ್ಟ’ನ್ನು ಮಾರುಕಟ್ಟೆ ಆಧರಿತ ಬಂಡವಾಳಶಾಹಿ ವ್ಯವಸ್ಥೆಯ ವೈಫಲ್ಯದ ಸಂಕೇತವೆಂದು ಬಣ್ಣಿಸಲಾಯಿತು.

ಮಾರುಕಟ್ಟೆ ಮತ್ತು ಪ್ರಭುತ್ವಗಳ ಸಾಪೇಕ್ಷ ಸ್ಥಾನ-ಮಾನ-ಪಾತ್ರಗಳನ್ನು ಕುರಿತ ವಾದ-ವಿವಾದ-ಸಂವಾದಗಳು ಎರಡನೇ ಮಹಾಯುದ್ಧದ ನಂತರ ತೀಕ್ಷ್ಣವಾದವು. ವಸಾಹತುಶಾಹಿ ಸಂಕೋಲೆಗಳಿಂದ ಬಿಡುಗಡೆ ಪಡೆದಿದ್ದ ಅನೇಕ ‘ತೃತೀಯ ಜಗತ್ತಿನ’ ದೇಶಗಳಲ್ಲಿ, ಭಾರತವನ್ನೂ ಸೇರಿಸಿಕೊಂಡು, ಮಾರುಕಟ್ಟೆ-ಪ್ರಭುತ್ವಗಳ ಸಾಪೇಕ್ಷ ಸ್ಥಾನ-ಮಾನ-ಪಾತ್ರಗಳ ನಡುವೆ ಆಯ್ಕೆಯ ಪ್ರಶ್ನೆ ಉದ್ಭವಿಸಿತು. ಹಾಗೆ ನೋಡಿದರೆ ಬಡತನ, ಹಸಿವು, ನಿರುದ್ಯೋಗಗಳಿಂದ ನರಳುತ್ತಿದ್ದ ‘ತೃತೀಯ ಜಗತ್ತಿನ’ ದೇಶಗಳಿಗೆ ‘ಪ್ರಭುತ್ವ ಪ್ರಧಾನ’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೆ ಬೇರೆ ಮಾರ್ಗವಿರಲಿಲ್ಲ. ಇದು ತಾತ್ವಿಕ ಪ್ರಶ್ನೆಗಿಂತ ಮುಖ್ಯವಾಗಿ ಪರಿಸ್ಥಿತಿಯ ಒತ್ತಡದಿಂದ ಉಂಟಾದ ಬೆಳವಣಿಗೆಯಾಗಿತ್ತು. ಏಕೆಂದರೆ ಈ ದೇಶಗಳಲ್ಲಿ ಅಭಿವೃದ್ಧಿಯನ್ನು ನಿರ್ವಹಿಸಬಲ್ಲ ಸಶಕ್ತ ಖಾಸಗಿ ವಲಯವಿರಲಿಲ್ಲ. ಇದರಿಂದಾಗಿ ತೃತೀಯ ಜಗತ್ತಿನ ಅನೇಕ ದೇಶಗಳು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಭುತ್ವಕ್ಕೆ ಪ್ರಧಾನ ಸ್ಥಾನ-ಮಾನ-ಪಾತ್ರ ನೀಡಿದವು. ಜಾಗತಿಕ ಮಟ್ಟದಲ್ಲಿ ೧೯೫೦,೧೯೬೦ ಮತ್ತು ೧೯೭೦ರ ದಶಕಗಳನ್ನು ಒಳಗೊಂಡ ಕಾಲಾವಧಿಯನ್ನು ‘ಪ್ರಭುತ್ವ ಪರ್ವ’ ಎಂದು ವರ್ಣಿಸಬಹುದು. ಈ ಕಾಲಾವಧಿಯಲ್ಲಿ ವಿರಾಟ್ ಪುರುಷನಂತೆ ಬೆಳೆದ ಪ್ರಭುತ್ವವು ಸಮಾಜದ ಎಲ್ಲ ಮುಖಗಳನ್ನೂ ಪ್ರವೇಶಿಸಿತು, ಆವರಿಸಿಕೊಂಡಿತು.

ಆದರೆ ೧೯೭೦ರ ನಂತರ ಪ್ರಭುತ್ವ ಪ್ರಧಾನ ಸಮಾಜದ ವ್ಯವಸ್ಥೆ ಸವಾಲುಗಳನ್ನು, ಬಿಕ್ಕಟ್ಟುಗಳನ್ನು ಎದುರಿಸತೊಡಗುತು. ಪ್ರಭುತ್ವದ ಕಾರ್ಯಕ್ಷಮತೆ ಬಗ್ಗೆ, ಆಡಳಿತ ಯಂತ್ರದ ರಾಕ್ಷಸಾಕಾರಿ ಸ್ವರೂಪದ ಬಗ್ಗೆ ಹಾಗೂ ‘ಅಧಿಕಾರಶಾಹಿ-ರಾಜಕಾರಣಿ-ವ್ಯಾಪಾರಗಾರ’ ನಡುವಿನ ದಲ್ಲಾಳಿ ಸ್ವರೂಪದ (Rent Seeking) ಸಂಬಂಧಗಳ ಬಗ್ಗೆ ತೀಕ್ಷ್ಣವಾದ ಟೀಕೆ-ಟಿಪ್ಪಣೆಗಳು ಮಂಡಿತವಾಗತೊಡಗಿದವು. ತಾನೇ ಸೃಷ್ಠಿಸಿಕೊಂಡಿದ್ದ ಬ್ರಹ್ಮರಾಕ್ಷಸ ಸ್ವರೂಪಿ ಬೃಹತ್ ಅಧಿಕಾರಶಾಹಿ ಆಡಳಿತ ಯಂತ್ರದ ಭಾರದಿಂದ ಒತ್ತಡದಿಂದ ಪ್ರಭುತ್ವವು ಶಿಥಿಲಗೊಳ್ಳತೊಡಗಿತು. ೧೯೮೦ರ ದಶಕದಲ್ಲಿ ಪ್ರಭುತ್ವ ಪ್ರಧಾನ ಸಮಾಜವಾದಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದ ದೇಶಗಳಿಗೆಲ್ಲ ನಾಯಕ ಮಣಿಯಂತಿದ್ದ ಸೋವಿಯಟ್ ರಷ್ಯಾ ಒಕ್ಕೂಟ ವಿಘಟನೆಗೆ ಒಳಗಾಗಿತು. ಪ್ರಭುತ್ವ ಪ್ರಧಾನ ಸಮಾಜವಾದಿ ವ್ಯವಸ್ಥೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಅಳವಡಿಸಿಕೊಂಡಿದ್ದ ದೇಶಗಳೆಲ್ಲ ಸುಧಾರಣಾವಾದದ ಮೊರೆ ಹೋದವು. ರಷ್ಯಾದಲ್ಲಿ ಮೈಕೆಲ್ ಗೂರ್ಬಚೆವ್ ಮತ್ತು ಚೀನಾದಲ್ಲಿ ಡೆಂಗ್ ಜಿಯೊ ಪೆಂಗ್ ಅವರು ಮಾರುಕಟ್ಟೆ ಪ್ರಧಾನ ವ್ಯವಸ್ಥೆಗೆ ಪರವಾದ ಸುಧಾರಣಾವಾದವನ್ನು ಜಾರಿಗೊಳಿಸಿದರು. ಒಂದು ವಿಶಿಷ್ಟ ಬಗೆಯ ಮಿಶ್ರ ಆರ್ಥಿಕ ವ್ಯಸಸ್ಥೆಯನ್ನು ಅಳವಡಿಸಿಕೊಂಡಿದ್ದ ಭಾರತವೂ ಸಹ ಸುಧಾರಣಾ ವಾದವನ್ನು ತಬ್ಬಿಕೊಳ್ಳತೊಡಗಿತು. ಹೀಗೆ ೧೯೮೦ರ ದಶಕದಲ್ಲಿ ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆಯ ಬಿರುಗಾಳಿ ಪ್ರಾರಂಭವಾಯಿತು. ಪ್ರಭುತ್ವದ ಸ್ಥಾನ-ಮಾನ-ಪಾತ್ರಗಳು ಕಡಿತಕ್ಕೆ ಒಳಗಾದವು. ಈ ಪ್ರಕ್ರಿಯೆಯನ್ನು-ಬೆಳವಣಿಗೆಯನ್ನು ‘ಉದಾರವಾದಿ ಪರ್ವ’ ಎಂದು ಬಣ್ಣಿಸಬಹುದು.

ಆದರೆ ೧೯೯೦ ದಶಕದ ಮಧ್ಯಭಾಗದಲ್ಲಿ ಅಂದರೆ, ಇಂದು ಉದಾರವಾದ-ಸುಧಾರಣಾವಾದ-ಮಾರುಕಟ್ಟೆ ಪ್ರಧಾನತೆ ಮುಂತಾದ ಹೊಸ ಬೆಳವಣಿಗೆಗೆಳ ಕ್ಷಮತೆ, ಅಗತ್ಯ ಹಾಗೂ ಅವುಗಳ ಸ್ವಯಂಪೋಷಿತ ಗುಣಗಳ ಬಗ್ಗೆ ಮೂಲಭೂತ ಪ್ರಶ್ನೆಗಳು ಉದ್ಭವವಾಗತೊಡಗಿವೆ. ಏಕೆಂದರೆ ಪ್ರಭುತ್ವದ ಶಿಥಿಲತೆ ಹಾಗೂ ಮಾರುಕಟ್ಟಿಯ ಪ್ರಾಬಲ್ಯದಿಂದಾಗಿ ‘ಸುಧಾರಣಾವಾದ್’, ‘ಉದಾರವಾದ’ಗಳನ್ನು ಅಳವಡಿಸಿಕೊಂಡ ಅನೇಕ ದೇಶಗಳಲ್ಲಿ ಬಿಕ್ಕಟ್ಟುಗಳು ಉದ್ಭವಿಸತೊಡಗಿದವು. ಈ ಬಿಕ್ಕಟ್ಟು-ಮುಗ್ಗಟ್ಟುಗಳು ಹಾಗೂ ಸುಧಾರಣಾ ವಾದ – ಉದಾರವಾದ ಸಮಾಜದ ಬಡವರ, ವಂಚಿತರ, ನಿರ್ಲಕ್ಷ್ಯಕ್ಕೆ ಒಳಗಾದ ಜನವರ್ಗಗಳಿಗೆ ಮೃತ್ಯುಪ್ರಾಯವಾಗತೊಡಗಿದವು.

ಈ ಎಲ್ಲ ಬೆಳವಣಿಗೆ ಪರಿಣಾಮವಾಗಿ ಇಂದು ಪ್ರಭುತ್ವದ ಸ್ಥಾನ-ಮಾನ-ಪ್ರಾತ್ರಗಳನ್ನು ಕಡಿತಗೊಳಿಸಿದ್ದು ಹಾಗೂ ಮಾರುಕಟ್ಟೆಗೆ ಪ್ರಧಾನ ಸ್ಥಾನ-ಮಾನ-ಪಾತ್ರಗಳನ್ನು ನೀಡಿದ್ದು ಸೂಕ್ತವೊ-ಅಲ್ಲವೊ ಎಂಬುದರ ಮರುಚಿಂತನೆ ಪ್ರಾರಂಭವಾಗಿದೆ. ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆಯು ಪ್ರಭುತ್ವಪ್ರಧಾನ ಸಮಾಜವಾದಿ ವ್ಯವಸ್ಥೆಗಿಂತ ಎಷ್ಟರಮಟ್ಟಿಗೆ ಉತ್ತಮ-ಶ್ರೇಷ್ಠ ? ಒಂದು ಶ್ರೇಣಿಕೃತ ಸಮಾಜದಲ್ಲಿ ಮಾರುಕಟ್ಟೆ ಶಕ್ತಿಗಳಿಗೆ ಪ್ರಧಾನ ಸ್ಥಾನ-ಮಾನ-ಪಾತ್ರ ದೊರಕಿದರೆ ಅವು ಸೃಷ್ಥಿಸಭುದಾದ ವಿಕಾರಗಳು ಯಾವ ಬಗೆಯವು ? ಪ್ರಭುತ್ವಪ್ರಧಾನ ವ್ಯವಸ್ಥೆಯಿಂದ ಮಾರುಕಟ್ಟೆ ಪ್ರಧಾನ ವ್ಯವಸ್ಥೆಗೆ ನಡೆಯುತ್ತಿರುವ ಪರಿವರ್ತನೆ ಸೃಷ್ಥಿಸುವ ಅನಿಷ್ಟಗಳನ್ನು ಸಮಾಜದ ಯಾವ ವರ್ಗ ಭರಿಸಬೇಕು ? ಒಂದು ಸಮಾಜದ ಎಲ್ಲ ಅಗತ್ಯಗಳನ್ನೂ ಮಾರುಕಟ್ಟೆಗಳು ಪೂರೈಸಬಲ್ಲುವೆ ? ಈ ಬಗೆಯ ಪ್ರಶ್ನೆಗಳು, ಶಂಕೆಗಳು, ಅನುಮಾನಗಳು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಪ್ರಭುತ್ವ-ಮಾರುಕಟ್ಟೆಗಳನ್ನು ಕುರಿತ ಚರ್ಚೆ ಇಂದು ಹೆಚ್ಚು ಸೂಕ್ಷ್ಮವೂ, ಸಂಕೀರ್ಣವೂ ಆಗತೊಡಗಿದೆ. ವಾಸ್ತವಾಗಿ ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಪ್ರಭುತ್ವ ಪ್ರಧಾನ ಸಮಾಜವಾದಿ ವ್ಯವಸ್ಥೆಗಳು ಸ್ವಯಂಪೂರ್ಣ ವ್ಯವಸ್ಥೆಗಳೇನಲ್ಲ. ಇವೆರಡರ ನಡುವೆ ಆಯ್ಕೆಗೆ ಅವಕಾಶವಿದೆ ಎಂಬುದರ ಬಗ್ಗೆ ಅನುಮಾನವಿದೆ. ಏಕೆಂದರೆ ಇವತ್ತಾಗಲಿ ಅಥವಾ ಎಂದಾದರೂ ಆಗಲಿ ಪರಿಶುದ್ಧವಾದ ‘ಮಾರುಕಟ್ಟೆ ವ್ಯವಸ್ಥೆ’ ಅಥವಾ ‘ಪ್ರಭುತ್ವ ವ್ಯವಸ್ಥೆ’ ಎಂಬುದು ಇರಲಿಲ್ಲ ಮತ್ತು ಇಲ್ಲ. ಮಾರುಕಟ್ಟೆ ವೈಫಲ್ಯವಿದ್ದಂತೆ ಪ್ರಭುತ್ವ ವೈಫಲ್ಯವಿದೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಅನಿಷ್ಟಗಳಿರುವಂತೆ ಪ್ರಭುತ್ವ ಪ್ರಧಾನ ವ್ಯವಸ್ಥೆಯಲ್ಲೂ ಅನಿಷ್ಟಗಳಿವೆ.

ಈ ಬಗೆಯ ಉಭಯ ವ್ಯವಸ್ಥೆಗಳಲ್ಲೂ ಇರುವ ಇತಿ-ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಮರ್ತ್ಯಸೆನ್, ಮೆಹಬೂಬ್-ಉಲ್-ಹಕ್, ಜೀನ್ ಡ್ರಿಜ್ ಮುಂತಾದವರು ಪ್ರಭುತ್ವ, ಮಾರುಕಟ್ಟೆ ಸುಧಾರಣಾವಾದ, ಸಾರ್ವಜನಿಕವಲಯ, ಖಾಸಗೀಕರಣ ಮುಂತಾದ ಸಂಗತಿಗಳ ಗಡಿರೇಖೆಗಳನ್ನು ಮೀರಿದ ನೆಲಗಳಲ್ಲಿ ಅಭಿವೃದ್ಧಿ ಕ್ರಿಯಾಶೀಲವಾಗಿರುತ್ತದೆ ಎಂಬ ವಿಚಾರವನ್ನು ಪ್ರತಿಪಾದಿಸತೊಡಗಿದ್ದಾರೆ. ವಿಶ್ವಬ್ಯಾಂಕಿನ ೧೯೯೭ರ ವಿಶ್ವ ಅಭಿವೃದ್ಧಿ ವರದಿಯಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಪ್ರಭುತ್ವದ ಪಾತ್ರ ತುಂಬಾ ಮಹತ್ವವಾದುದು ಎಂಬ ಅಂಶವನ್ನು ಪ್ರತಿಪಾದಿಸಲಾಗಿದೆ (ವಿಶ್ವಬ್ಯಾಂಕ ೧೯೯೭ ಪು.೧೯). ಇಂದು ವಾದ-ವಿವಾದ-ಸಂವಾದಗಳು ಪ್ರಭುತ್ವ ಪ್ರಧಾನವಾಗಿರಬೇಕೊ ಅಥವಾ ಮಾರುಕಟ್ಟೆ ಪ್ರಧಾನವಾಗಿರಬೇಕೋ ಎಂಬ ನೆಲೆಯನ್ನು ಮೀರಿ ಸಾಗಿವೆ. ಪ್ರಭುತ್ವವಾಗಲಿ ಅಥವಾ ಮಾರುಕಟ್ಟೆಯಾಗಲಿ ಇಂದು ಮುಖ್ಯವಾಗಿರುವ ಪ್ರಶ್ನೆಯೆಂದರೆ ಅವು ಜನಮುಖಿಯಾಗಿವೆಯೆ, ಸಮಾಜಮುಖಿಯಾಗಿವೆಯೆ ಎಂಬುದಾಗಿದೆ. ಸಮಾಜದಿಂದ, ಜನರಿಂದ ವಿಮುಖವಾದ ಪ್ರಭುತ್ವವು ಮಾರುಕಟ್ಟೆಯಷ್ಟೇ ಅನಿಷ್ಟಕಾರವೂ, ಅಮಾನುಷವೂ, ಅಮೂರ್ತವೂ ಆಗಿಬಿಡಬಹುದು. ಆದ್ದರಿಂದ ಇಂದು ಪ್ರಶ್ನೆ ಪ್ರಭುತ್ವ ಮತ್ತು ಮಾರುಕಟ್ಟೆಗಳ ನಡುವಿನ ಆಯ್ಕೆಗಷ್ಟೆ ಸೀಮಿತಗೊಂಡಿಲ್ಲ.

ಭಾರತವು ೧೯೫೦ರ ದಶಕದಲ್ಲಿ ಪ್ರಭುತ್ವಪ್ರಧಾನ ವ್ಯವಸ್ಥೆಯನ್ನು ಒಪ್ಪಿಕೊಂಡು, ಅಭಿವೃದ್ಧಿ ಯೋಜನೆಯನ್ನು ಅಳವಡಿಸಿಕೊಂಡು ಅಭಿವೃದ್ಧಿ ಪಥದಲ್ಲಿ ತನ್ನ ಪಯಣವನ್ನು ಪ್ರಾರಂಭಿಸಿತು. ಆದರೆ ಭಾರತವು ೧೯೯೦ರ ದಶಕದಲ್ಲಿ ಅಭಿವೃದ್ಧಿ ಯೋಜನೆ ಪಥದಿಂದ ವಿಮುಖವಾಗತೊಡಗಿತು. ಇಂದು ಭಾರತವು ಉದಾರವಾದಿ ಅಭಿವೃದ್ಧಿ ತಂತ್ರವನ್ನು ತಬ್ಬಿಕೊಳ್ಳತೊಡಗಿದೆ. ಇಂದು ಭಾರತವು ಪರಿವರ್ತನೆಯ ಸಂಧಿ ಕಾಲದಲ್ಲಿದೆ. ಇಂದು ಭಾರತವು ಹೂರಳು ದಾರಿಯಲ್ಲಿದೆ. ಅಭಿವೃದ್ಧಿ ಯೋಜನಾ ಪ್ರಕ್ರಿಯೆಯ ದಾರಿಯನ್ನು ತೊರೆದು ಉದಾರವಾದಿ ಅಭಿವೃದ್ಧಿ ಪ್ರಕ್ರಿಯೆಯ ದಾರಿಯನ್ನು ಹಿಡಿಯಲು ತೊಡಗಿದೆ.

ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿ ಯೋಜನೆ ಪ್ರಕ್ರಿಯೆಯಿಂದ ಉದಾರವಾದ ಅಭಿವೃದ್ಧಿ ಪ್ರಕ್ರಿಯೆಗೆ ಭಾರತವು ಸಾಗಿ ಬಂದ ಪರಿಯನ್ನು ಚಾರಿತ್ರಿಕವಾದಿ ಪರಿಭಾವಿಸಲು ಪ್ರಯತ್ನಿಸಲಾಗಿದೆ. ಚಾರಿತ್ರಿಕ ವಿಧನದಲ್ಲಿ ವಿಷಯವನ್ನು ಮಂಡಿಸಲು ಮತ್ತು ಮಥಿಸಲು ಪ್ರಯತ್ನಿಸಲಾಗಿದೆ. ನಿರ್ದಿಷ್ಟವಾಗಿ ಈ ಸಂಪ್ರಬಂಧದ ಉದ್ದೇಶಗಳು ಹೀಗಿವೆ:

೧. ೧೯೫೦ರ ದಶಕದ ಪ್ರಾರಂಭದಲ್ಲಿ ಅಭಿವೃದ್ಧಿಯನ್ನು ತ್ರೀವ್ರಗತಿಯಲ್ಲಿ ಹಾಗೂ ಶೀಘ್ರಾತಿಶೀಘ್ರದಲ್ಲಿ ಸಾಧಿಸಿಕೊಳ್ಳುವುದಕ್ಕಾಗಿ ಭಾರತವು ಅಭಿವೃದ್ಧಿ ಯೋಜನೆಗಳನ್ನು ಅಳವಡಿಸಿಕೊಂಡಿದ್ದು ಸರಿ ತಾನೆ! ಭಾರತವು ಅಭಿವೃದ್ಧಿ ಯೋಜನೆ ಪಥವನ್ನು ಹಿಡಿಯಲು ಕಾರಣವಾದ ಸಂಗತಿಗಳಾವುವು ? ಭಾರತವು ಅಭಿವೃದ್ಧಿ ಯೋಜನೆ ದಾರಿಯನ್ನು ಆಯ್ಕೆ ಮಾಡಲು ಕಾರಣವಾದ ಆಂತರಿಕ ಅಂಶಗಳಾವವು ಮತ್ತು ಬಾಹ್ಯ ಸಂಗತಿಗಳಾವುವು ? ನೆಹರೂ-ಮಹಲನೊಬಿಸ್ ಮಾದರಿ ಸ್ವರೂಪ ಯಾವ ಬಗೆಯದು ? ಸೋವಿಯಟ್ ಮಾದರಿಗೂ ಮತ್ತು ಭಾರತೀಯ ಮಾದರಿಗೂ ಇದ್ದ ವ್ಯತ್ಯಾಸಗಳಾವುವು ? ಅಭಿವೃದ್ಧಿ ಯೋಜನೆಯಲ್ಲಿ ಗಾಂಧೀಜಿ ವಿಚಾರಧಾರೆಗೆ ಅವಕಾಳವಿತ್ತೆ ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತಗಳನ್ನು ಹುಡುಕುವುದು ಈ ಬರಹದ ಒಂದು ಉದ್ದೇಶವಾಗಿದೆ. ಪ್ರಬಂಧದ ಮೊದಲ ಭಾಗದಲ್ಲಿ ಇದನ್ನು ಕೂಲಂಕಷವಾಗಿ ಚರ್ಚಿಸಲಾಗಿದೆ.

೨. ಅಭಿವೃದ್ಧಿ ಯೋಜನಾ ಪಥದಲ್ಲಿ ಸಾಗಿ ಬಂದ ಭಾರತದ ಅನುಭವವೇನು ? ೧೯೫೦-೯೦ರ ವರೆಗಿನ ಅಭಿವೃದ್ಧಿ ಯೋಜನಾ ಪರ್ವದಲ್ಲಿ ಭಾರತವು ಎದುರಿಸಿದ ಬಿಕ್ಕಟ್ಟುಗಳಾವುವು ? ಈ ಅವಧಿಯಲ್ಲಿ ಉಂಟಾದ ಬದಲಾವಣೆಗಳಾವುವು ? ಗರೀಬಿ ಹಟಾವೊ ಕಾರ್ಯಕ್ರಮವನ್ನು ಅಭಿವೃದ್ಧಿ ಯೋಜನೆಗಳಿಗೆ ಹೇಗೆ ಸಂಯೋಜಿಸಲಾಯಿತು? ಮುಂತಾದ ಸಂಗತಿಗಳನ್ನು ವಿಶ್ಲೇಷಿಸುವುದು ಈ ಪ್ರಬಂಧದ ಉದ್ದೇಶವಾಗಿದೆ. ಇದನ್ನು ಪ್ರಬಂಧದ ಎರಡನೆಯ ಭಾಗದಲ್ಲಿ ಮಂಡಿಸಲಾಗಿದೆ.

೩. ೧೯೯೦ರ ನಂತರ ಪ್ರಣಾಳಿಕೆ ಯಾವುದು? ಹೊಸ ಆರ್ಥಿಕ ನೀತಿಯ ನೀತಿಯ ಅಂಗೋಪಾಂಗಗಳಾವುವು? ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಭುತ್ವವು ಪ್ರಧಾನವಾಗಿರಬೇಕೋ ಅಥವಾ ಮಾರುಕಟ್ಟೆ ಪ್ರಧಾನವಾಗಿರಬೇಕೋ ? ಇವೆರಡರ ನಡುವಿನ ಸಮನ್ವಯ ಹೇಗೆ ? ಮುಂತಾದ ಸಂಗತಿಗಳನ್ನು ಸೂಕ್ಷ್ಮವಾಗಿ ಪರಿಶಿಲಿಸುವುದು ಪ್ರಸ್ತುತ ಅಧ್ಯಯನದ ಮತ್ತೊಂದು ಉದ್ದೇಶವಾಗಿದೆ. ಇದನ್ನು ಮೂರನೇ ಭಾಗದಲ್ಲಿ ನೀಡಲಾಗಿದೆ.

ಪ್ರಬಂಧದ ಈ ಭಾಗದಲ್ಲಿ ಭಾರತವು ಅಭಿವೃದ್ಧಿ ಯೋಜನೆಯನ್ನು, ಪ್ರಭುತ್ವ ಪ್ರಧಾನ ಸಮಾಜವಾದಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಪ್ರಕ್ರಿಯೆಯನ್ನು ವಿವರಿಸಲಾಗಿದೆ. ಅಭಿವೃದ್ಧಿ ಯೋಜನೆಯನ್ನು ಅಳವಡಿಸಿಕೊಳ್ಳಲು ಕಾರಣವಾದ ಸೈದ್ಧಾಂತಿಕ ನೆಲೆಗಳನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

೧೯೪೭ರ ಅಗಸ್ಟ್ ೧೫ರಂದು ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತು. ೧೯೯೭ರಲ್ಲಿ ಭಾರತವು ತಾನು ಗಳಿಸಿದ ಸ್ವಾತಂತ್ರ್ಯದ ಸುವರ್ಣ ಜಯಂತಿಯನ್ನು ಆಚರಿಸಿತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತದ ಮುಂದೆ ಅನೇಕ ಸವಾಲುಗಳಿದ್ದವು. ಅವುಗಳಲ್ಲಿ ಅಭಿವೃದ್ಧಿಯು ಮಹತ್ವದ ಸವಾಲಾಗಿತ್ತು. ಸ್ವಾತಂತ್ರ್ಯ ಬಂದ ಗಳಿಗೆಯಲ್ಲಿ ಜವಹರಲಾಲ್ ನೆಹರೂ ಅವರು ಮಾಡಿದ ‘ವಿಧಿಯೊಂದಿಗೆ ಮಾಡಿಕೊಂಡ ಗೊತ್ತುಪಾಡು’ ಎಂಬ ಪ್ರಸಿದ್ಧ ಭಾಷಣದಲ್ಲಿ ಭಾರತ ಎದುರಿಗಿದ್ದ ಸವಾಲುಗಳನ್ನು ಹೀಗೆ ಗುರುತಿಸಿದ್ದರು.

೧. ಬಡತನದ ನಿವಾರಣೆ ೨. ಮೌಢ್ಯದ ಉಚ್ಛಾಟನೆ ೩. ರೋಗ-ರುಜಿನಗಳ ಪರಿಹಾರ ೪. ಅವಕಾಶಗಳಲ್ಲಿನ ಅಸಮಾನತೆಯನ್ನು ತೊಡೆಯುವುದು ಈ ಎಲ್ಲ ಸವಾಲುಗಳು ಅಭಿವೃದ್ಧಿಗೆ ಸಂಬಂಧಿಸಿದ್ದವು. ಆದ್ದರಿಂದ ಭಾರತವು ಅಭಿವೃದ್ಧಿಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅಯ್ಕೆಯ ಕೆಲಸ ಸುಲಭದ್ದಾಗಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ಸಂದರ್ಭದಲ್ಲಿ ಅದರ ಮುಂದೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಎರಡು ದಾರಿಗಳಿದ್ದವು.

೧. ಪಶ್ಚಿಮದ, ಅಮೇರಿಕೆಯ ಭೂಭಾಗದಲ್ಲಿದ್ದ ದೇಶಗಳು ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ಅಳವಡಿಸಿಕೊಂಡಿದ್ದ ಹಾಗೂ ಆ ದಿಶೆಯಲ್ಲಿ ಯಶಸ್ವಿಯೂ ಆಗಿದ್ದ ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ಅಭಿವೃದ್ಧಿ ಪಥ.

೨. ಸೋವಿಯಟ್ ರಷ್ಯಾ, ಪೂರ್ವ ಯೂರೋಪಿನ ದೇಶಗಳು ಅಳವಡಿಸಿಕೊಂಡಿದ್ದ ಹಾಗೂ ಆ ದಿಶೆಯಲ್ಲಿ ಯಶಸ್ವಿಯೂ ಆಗಿದ್ದ ಪ್ರಭುತ್ವ ಪ್ರಧಾನ ಸಮಾಜವಾದಿ ವ್ಯವಸ್ಥೆ.

ಅಭಿವೃದ್ಧಿ ತಂತ್ರಕ್ಕೆ ಸಂಬಂಧಿಸಿದಂತೆ ಇವೆರಡು ವಿಕಲ್ಪಗಳು ಭಾರತದ ಎದುರಿಗಿದ್ದವು. ಇವೆರಡೂ ಅಭಿವೃದ್ಧಿ ಪಥಗಳಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ವೈಚಾರಿಕ-ಸೈದ್ಧಾಂತಿಕ ಸಂಕಥನಗಳು ರೂಪುಗೊಂಡಿದ್ದವು. ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆಯನ್ನು ಕುರಿತಂತೆ ನವ ಅಭಿಜಾತ ಅರ್ಥಶಾಸ್ತ್ರವು ಒಂದು ಸುಸಂಬಂಧ-ಸುಸಂಘಟಿತ ಸಿದ್ಧಾಂತವನ್ನು ಕಟ್ಟಿತ್ತು. ಉತ್ಪಾದನಾ ವ್ಯವಸ್ಥೆ ಹಾಗೂ ಉತ್ಪಾದನಾ ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿರ್ವಹಣೆ ಖಾಸಗಿ ವ್ಯಕ್ತಿಗಳು-ಮಾರುಕಟ್ಟೆ ಶಕ್ತಿಗಳ ನಿರ್ದೇಶನದಲ್ಲಿ ಅತ್ಯಂತ ಸಮರ್ಥವಾಗಿ ನಡೆಯಬಲ್ಲದು ಎಂದು ನವ ಅಭಿಜಾತ ಅರ್ಥಶಾಸ್ತ್ರ ಪ್ರತಿಪಾದಿಸಿತು. ಆಡಂಸ್ಮಿತ್ ನ ‘ಅಗೋಚರಶಕ್ತಿ’ ಹಾಗೂ ‘ಮಾನವನ ಸ್ವಾರ್ಥಪರ ಹಿತಾಸಕ್ತಿಗಳಲ್ಲಿ ಸಮಾಜದ ಹಿತಾಶಕ್ತಿಗಳೂ ಅಡಗಿವೆ’ ಎಂಬ ವಿಚಾರಗಳು, ಜಾನಲಾಕ್, ಬೆಂಥಹಾಮ್, ಡೆಂಬಿಡಹೂಮ್ ಮುಂತಾದ ರಾಜ್ಯಶಾಸ್ತ್ರ ಚಿಂತಕರ ವಿಚಾರಗಳಿಂದ ಪ್ರೇರಣೆ ಪಡೆದು ನವ ಅಭಿಜಾತ ಅರ್ಥಶಾಸ್ತ್ರವು ಮಾರುಕಟ್ಟೆ ವ್ಯವಸ್ಥೆ-ಬಂಡವಾಳಶಾಹಿ ವಿಚಾರ ಪ್ರಣಾಳಿಕೆಯನ್ನು ರಚಿಸಿತು. ಮಾರುಕಟ್ಟೆಯ ಅವಿಭಾಜ್ಯ ಅಂಗವಾದ ‘ಬೆಲೆಯಂತ್ರ’ವು ಕೊರತೆಯಿಂದ ಕೂಡಿರುವ ಉತ್ಪಾದನಾ ಸಂಪನ್ಮೂಲಗಳನ್ನು ಪರಸ್ಪರ ಪೈಪೋಟಿ ನಡೆಸುತ್ತಿರುವ ಚಟುವಟಿಕೆಗಳ ನಡುವೆ ಸೂಕ್ತವಾಗಿ, ಸಮರ್ಥವಾಗಿ ವಿತರಿಸುವ ಕೆಲಸವನ್ನು ನಿರ್ವಹಿಸುತ್ತದೆ ಎಂದು ಇಲ್ಲಿ ವಾದಿಸಲಾಯಿತು. ಉತ್ಪಾದನಾ ಚಟುವಟಿಕೆಗಳು ಹಾಗೂ ಉತ್ಪಾದನಾ ಸಂಪನ್ಮೂಲಗಳು ಖಾಸಗಿ ಮಾಲೀಕತ್ವದಲ್ಲಿರಬೇಕು ಮತ್ತು ಮಾರುಕಟ್ಟಿ ಶಕ್ತಿಗಳ ನಿರ್ದೇಶನದಲ್ಲಿ ಕ್ರಿಯಾಶೀಲವಾಗಿರಬೇಕು ಎಂಬುದು ಮಾರುಕಟ್ಟೆ, ಪ್ರಣೀತ ಬಂಡವಾಳ ವ್ಯವಸ್ಥೆಯ ಮೂಲ ಸಿದ್ಧಾಂತವಾಗಿತ್ತು.

ಅಭಿವೃದ್ಧಿ ಪ್ರಕ್ರಿಯೆಯು ಎರಡು ಅಧಾರ ಸ್ತಂಭಗಳೆಂದರೆ ಉತ್ಪಾದನಾ ವ್ಯವಸ್ಥೆ ಹಾಗೂ ಉತ್ಪಾದನಾ ಸಂಪನ್ಮೂಲಗಳು. ಮಾರುಕಟ್ಟೆಯಲ್ಲಿ ಕ್ರಿಯಾಶೀಲವಾಗಿರುವ ಅಗೋಚರ ಶಕ್ತಿಗಳಾದ ಬೇಡಿಕೆ-ನೀಡಿಕೆಗಳ ಪರಸ್ಪರ ಸಂಬಂಧಗಳಿಂದ ಒಡಮೂಡಿದ ಬೆಲೆಯಂತ್ರವು ಉತ್ಪಾದನಾ ವ್ಯವಸ್ಥೆಯನ್ನು, ಉತ್ಪಾದನಾ ಸಂಪನ್ಮೂಲಗಳನ್ನು, ಆಸ್ತಿ ಮಾಲೀಕತ್ವವನ್ನು, ಅಭಿವೃದ್ಧಿ ಪ್ರಕ್ರಿಯೆಯನ್ನು ನಿರ್ವಹಿಸುವ ಬಗೆಯನ್ನೇ ಮಾರುಕಟ್ಟೆ ಪ್ರಧಾನ ಬಂಡವಾಳಶಾಹಿ ವ್ಯವಸ್ಥೆಯೆಂದು ಕರೆಯಬಹುದು (ಶ್ರೀನಿವಾಸಮೂರ್ತಿ ೧೯೭೨:೫೭). ಇದಕ್ಕೆ ಪ್ರತಿಯಾಗಿ ಉತ್ಪಾದನಾ ವ್ಯವಸ್ಥೆ, ಉತ್ಪಾದನಾ ಸಂಪನ್ಮೂಲಗಳು, ಆಸ್ತಿಯ ಮಾಲೀಕತ್ವ, ಅಭಿವೃದ್ಧಿ ಪ್ರಕ್ರಿಯೆ ಮುಂತಾದವುಗಳ ನಿರ್ವಹಣೆ ಜವಾಬ್ದಾರಿ ಸಂಪೂರ್ಣವಾಗಿ ಪ್ರಭುತ್ವದ ವಶದಲ್ಲಿರುವ ಬಗೆಯನ್ನು ಪ್ರಭುತ್ವಪ್ರಧಾನ ಸಮಾಜವಾದಿ ವ್ಯವಸ್ಥೆ ಎಂದು ಕರೆಯಬಹುದು. ಪ್ರಭುತ್ವ ಪ್ರಧಾನ ವ್ಯವಸ್ಥೆಯಲ್ಲಿ ಒಂದೊ ಮಾರುಕಟ್ಟೆ ಇರುವುದೇ ಇಲ್ಲ. ಇದ್ದರೂ ಸಹ ಅದು ಕೇವಲ ಪ್ರಭುತ್ವದ ನೇರ ನಿಯಂತ್ರಣ ಹಾಗೂ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುತ್ತದೆ.

ಈ ರೀತಿಯ ಎರಡು ಅಭಿವೃದ್ಧಿ ಪಥಗಳು ಭಾರತದ ಎದುರಿಗಿದ್ದವು. ಈ ಎರಡು ಅಭಿವೃದ್ಧಿ ತಂತ್ರಗಳಲ್ಲಿ ಒಂದನ್ನು ಭಾರತವು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಭಾರತವು ಪ್ರಭುತ್ವಪ್ರಧಾನ ಸಮಾಜವಾದಿ ಅಭಿವೃದ್ಧಿ ಪಥವನ್ನು ಆಯ್ದುಕೊಂಡಿತು. ಈ ಬಗೆಯ ಪ್ರಭುತ್ವಪ್ರಧಾನ ಮುಖ್ಯ ಲಕ್ಷಣವೆಂದರೆ ಅಭಿವೃದ್ಧಿ ಯೋಜನೆಗಳು.

ಅಭಿವೃದ್ಧಿ ಯೋಜನೆ ಭಾರತೀಯ ಪರಂಪರೆ

ಪ್ರಭುತ್ವಪ್ರಧಾನ ಸಮಾಜವಾದಿ ವ್ಯವಸ್ಥೆಯ ಅವಿಭಾಜ್ಯ ಅಂಗ ಅಭಿವೃದ್ಧಿ ಯೋಜನೆ. ೧೯೫೦ರಲ್ಲಿ ಅಭಿವೃದ್ಧಿ ಯೋಜನೆ ಪಥದಲ್ಲಿ ಭಾರತದ ಪಯಣವು ಪ್ರಾರಂಭವಾಯಿತು. ಅಭಿವೃದ್ಧಿ ಯೋಜನೆಯನ್ನು ಭಾರತವು ಒಂದು ತಂತ್ರವಾಗಿ ಅಳವಡಿಸಿಕೊಳ್ಳಲು ಅನೇಕ ಕಾರಣಗಳಿದ್ದವು. ಕೆಲವು ಬಾಹ್ಯ ಕಾರಣಗಳಿದ್ದವು ಮತ್ತು ಕೆಲವು ಆಂತರಿಕ ಕಾರಣಗಳಿದ್ದವು. ವಾಸ್ತವವಾಗಿ ಭಾರತವು ಅಭಿವೃದ್ಧಿ ಯೋಜನಾ ತಂತ್ರವನ್ನು ಅಳವಡಿಸಿಕೊಳ್ಳಲು ಆಂತರಿಕ ಶಕ್ತಿಗಳ ಒತ್ತಡ ಪ್ರಭಾವವು ಬಾಹ್ಯ ಶಕ್ತಿಗಳ ಪ್ರಭಾವಗಳಿಗಿಂತ ಹೆಚ್ಚು ತೀಕ್ಷಣವಾಗಿದ್ದವು.

ಅಭಿವೃದ್ಧಿ ಯೋಜನೆ ಬಗ್ಗೆ ಹಾಗೂ ಅಭಿವೃದ್ಧಿಯ ಮಹಾಕ್ರಿಯೆಯಲ್ಲಿ ಪ್ರಭುತ್ವಕ್ಕೆ ಪ್ರಧಾನ ಸ್ಥಾನ, ಮಾನ, ಪಾತ್ರವಿರಬೇಕು ಎಂಬುದರ ಬಗ್ಗೆ ಚಿಂತನ-ಮಂಥನಗಳು ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಪ್ರಾರಂಭವಾಗಿದ್ದವು. ಆದರೆ ಅದಕ್ಕೆ ಕ್ರಿಯಾಶೀಲರೂಪ ಸ್ವಾತಂತ್ರ್ಯಾನಂತರ ಪ್ರಾಪ್ತವಾಯಿತು. ಅಭಿವೃದ್ಧಿ-ಯೋಜನೆ ಬಗ್ಗೆ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸರ್ಕಾರದ ಪ್ರಭುತ್ವದ ಕ್ರಿಯಾಶೀಲ ಪಾತ್ರದ ಬಗ್ಗೆ ಚಿಂತನ-ಮಂಥನ ಭಾರತದಲ್ಲಿ ೧೯ನೇ ಶತಮಾನದ ಕೊನೆಯ ಭಾಗದಲ್ಲೇ ಪ್ರಾರಂಭವಾಗಿದ್ದನ್ನು ಸುಖಮಾಯ್ ಚಕ್ರವರ್ತಿ (೧೯೮೯:೧೦-೧೧,೧೯೯೨:೪೫) ಗುರುತಿಸಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತವು ಅಳವಡಿಸಿಕೊಂಡ ಅಭಿವೃದ್ಧಿ ಯೋಜನಾ ತಂತ್ರದ ಮೂಲ ಎಳೆಗಳನ್ನು ಸೆಲೆಗಳನ್ನು ಚಕ್ರವರ್ತಿಯವರು ೧೯ನೇ ಶತಮಾನದ ಕೊನೆಯ ದಶಕಗಳಲ್ಲಿ ಭಾರತೀಯ ಆರ್ಥಿಕತೆ ಕುರಿತು ಮಹಾದೇವ-ಗೋವಿಂದ ರಾನಡೆಯವರು ಬರೆದ ಪ್ರಬಂಧಗಳಲ್ಲಿ ಗುರುತಿಸುತ್ತಾರೆ. ಭಾರತದಂತಹ ಸಮಾಜದಲ್ಲಿ ಪ್ರಭುತ್ವವೇ ನೇರವಾಗಿ ಕೈಗಾರಿಕೀಕರಣ ಕಾರ್ಯಕ್ರಮ ಕೈಗೊಳ್ಳಬೇಕು ಎಂಬುದು ರಾನಡೆಯವರ ಖಚಿತ ನಿಲುವಾಗಿತ್ತು. ರಾನಡೆಯವರ ಈ ನಿಲುವಿಗೆ ಸರ್.ವಿ.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಲ್ಲಿ ಕ್ರಿಯಾಶೀಲ ರೂಪ ನೀಡಿದ್ದರು. ೨೦ನೇ ಶತಮಾನದ ಆದಿಭಾಗದಲ್ಲಿ ರಾನಡೆಯವರ ವಿಚಾರಧಾರೆಯನ್ನು ಪಿ.ಎ.ವಾಡಿಯಾ, ಜೆ.ವಿ.ಜೋಷಿ ಮುಂತಾದವರು ಭಿನ್ನ ನೆಲೆಗಳಲ್ಲಿ ಮುಂದುವರಿಸಿದರು. ಮುಕ್ತ ವ್ಯಾಪಾರ, ಮಾರುಕಟ್ಟೆ ಶಕ್ತಿಗಳು ಹಾಗೂ ಪ್ರಭುತ್ವದ ಪಾತ್ರ ಕನಿಷ್ಟವಾಗಿರುವ ಸನ್ನಿವೇಶ ಸೃಷ್ಠಿ ಮಾಡಬಹುದಾದ ಅಸಮಾನತೆ ಅಂತರಗಳ ಬಗ್ಗೆ ಇವರೆಲ್ಲರಿಗೂ ಅರಿವಿತ್ತು. ಇವರೆಲ್ಲರೂ ಗುರುತಿಸಿದ್ದ ಭಾರತದ ಆರ್ಥಿಕ ಸಮಸ್ಯೆಗಳ ಸ್ವರೂಪಕ್ಕೂ ಮತ್ತು ಆ ಸಮಸ್ಯೆಗಳಿಗೆ ಅವರು ಕಂಡುಕೊಂಡಿದ್ದ ಪರಿಹಾರಗಳಿಗೂ ಸ್ವಾತಂತ್ರ್ಯಾನಂತರ ಭಾರತವು ಎದುರಿಸುತ್ತಿರುವ ಸಮಸ್ಯೆಗಳಿಗೂ ಮತ್ತು ಅದು ಅಳವಡಿಸಿಕೊಂಡಿದ್ದ ಅಭಿವೃದ್ಧಿ ತಂತ್ರಕ್ಕೂ ಮೂಲಭೂತ ವ್ಯತ್ಯಾಸಗಳೇನಿರಲಿಲ್ಲ. ಈ ವಿದ್ವಾಂಸರು ೧೯೬೦ರ ದಶಕದಲ್ಲಿ ಲ್ಯಾಟಿನ್ ಅಮೆರಿಕದಲ್ಲಿ ಪ್ರಬಲ ಸಿದ್ದಾಂತದ ರೂಪ ಪಡೆದ ಅಸಮ ವಿನಿಮಯದ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲೇ ಚಿಂತನೆ ನಡೆಸಿದ್ದರು. ಪರಾವಲಂಬನೆ ಸಿದ್ಧಾಂತದ ಮೂಲ ಎಳೆಗಳನ್ನು ಚಕ್ರವರ್ತಿಯವರು ಪಿ.ಎ.ವಾಡಿಯಾರವರ ೧೯೨೦ರ ದಶಕದ ಬರಹಗಳಲ್ಲಿ ಗುರುತಿಸಿದ್ದಾರೆ. ಮುಕ್ತ ವ್ಯಾಪಾರ ವ್ಯವಹಾರಗಳು ಹೇಗೆ ಅಸಮ ವಿನಿಮಯಕ್ಕೆ ಎಡೆಮಾಡಿಕೊಡುತ್ತವೆ ಹಾಗೂ ಈ ಅಸಮ ವಿನಿಮಯ ಎಂಥಹ ವಿಕೃತಿಗಳನ್ನು ಸೃಷ್ಟಿಸಿ ಬಿಡುತ್ತವೆ ಎಂಬುದರ ಬಗ್ಗೆ ಪಿ.ಎ.ವಾಡಿಯಾರವರು ೧೯೨೦ರ ದಶಕದಲ್ಲೇ ಚಿಂತನೆ ನಡೆಸಿದ್ದರು ಮತ್ತು ಆ ವಿಚಾರಗಳನ್ನು ಒಳಗೊಂಡ ಸಂಪ್ರಬಂಧ ಪ್ರಕಟಿಸಿದ್ದರು.

ಈ ಎಲ್ಲ ವಿದ್ವಾಂಸರು ರೂಪಿಸಿದ್ದ ಅಭಿವೃದ್ಧಿ ಚಿಂತನೆಗೆ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯಾನಂತರ ಭಾರತದಲ್ಲಿ ಕ್ರಿಯಾಶೀಲ ರೂಪ ನೀಡಿದರು. ಸರ್.ಎಂ.ವಿ. ಅವರ ಚಿಂತನೆ ಹಾಗೂ ಅವರು ಪ್ರಭುತ್ವದ ನೆರವಿನೊಂದಿಗೆ ಅನುಷ್ಠಾನಗೊಳಿಸಿದ್ದ ಕೈಗಾರಿಕೀಕರಣ ಪ್ರಯೋಗದಿಂದ ನೆಹರು ತುಂಬಾ ಪ್ರಭಾವಿತರಾಗಿದ್ದರು. ಆದ್ದರಿಂದಲೇ ಸರ್.ಎಂ.ವಿ ಅವರನ್ನು ನೆಹರೂ ಅವರು ‘ಭಾರತೀಯ ಅಭಿವೃದ್ಧಿ ಯೋಜನೆಯ ಪಿತಾಮಹ’ಎಂದು ಕರೆದರು. ಅಭಿವೃದ್ಧಿ ಯೋಜನಾ ತಂತ್ರವನ್ನು ಮತ್ತು ಪ್ರಭುತ್ವಪ್ರಧಾನ ವ್ಯವಸ್ಥೆಯನ್ನು ಭಾರತವು ಅಳವಡಿಸಿಕೊಳ್ಳುವಲ್ಲಿ ‘ಬಾಹ್ಯ’ ಒತ್ತಡಗಳಿಗಿಂತ ‘ಆಂತರಿಕ’ ಒತ್ತಡಗಳೇ ಹೆಚ್ಚು ಕಾರಣವಾಗಿದ್ದವು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಭುತ್ವಕ್ಕೆ ಪ್ರಧಾನ ಸ್ಥಾನ-ಮಾನ-ಪಾತ್ರವಿರಬೇಕು ಎಂಬುದರ ಬಗ್ಗೆ ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಒಮ್ಮತಾಭಿಪ್ರಾಯ ಮೂಡಿತ್ತು.

ನೆಹರೂ-ಮಹಾಲನೊಬಿಸ್ ಅಭಿವೃದ್ಧಿ ಯೋಜನಾ ವರದಿ

೧೯೪೦ರ ದಶಕದಿಂದಲೂ ಭಾರತಕ್ಕೆ ವಿಶಿಷ್ಟವಾದ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಲು ಜವಹರಲಾಲ್ ನೆಹರೂ ಮತ್ತು ಪ್ರಶಾಂತ ಚಂದ್ರ ಮಹಾಲನೊಬಿಸ್ ಅವರು ಪ್ರಯತ್ನಿಸಿದ್ದರು. ೧೯೩೮ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಂ. ನೆಹರೂ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯೊಂದನ್ನು ರಚಿಸಿತ್ತು. ಇವರಿಬ್ಬರೂ ಕೈಗಾರಿಕೀಕರಣ ಅಧುನೀಕರಣಗಳಲ್ಲಿ ಅಚಲವಾದ ನಂಬಿಕೆ ಇಟ್ಟಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಇವರಿಬ್ಬರಿಗೂ ಅತಿಶಯವಾದ ಆಸಕ್ತಿ ಮತ್ತು ಬದ್ದತೆ ಇತ್ತು. ಅಭಿವೃದ್ಧಿಯಲ್ಲಿ ಪ್ರಭುತ್ವಕ್ಕೆ ಪ್ರಧಾನ ಪಾತ್ರವಿರಬೇಕು ಎಂಬುದರ ಬಗ್ಗೆ ಇವರಿಬ್ಬರಲ್ಲಿ ಸಹಮತವಿತ್ತು.

೧೯೫೦ರ ದಶಕದಲ್ಲಿ ಭಾರತವು ಅಳವಡಿಸಿಕೊಂಡ ಅಭಿವೃದ್ಧಿ ಯೋಜನಾ ಮಾದರಿಯು ಸೋವಿಯಟ್ ರಷ್ಯಾದ ಮಾದರಿಯ ನೇರ ಅನುಕರಣೆ ಎಂಬ ಅಭಿಪ್ರಾಯವೊಂದು ಚಾಲ್ತಿಯಲ್ಲಿದೆ. ಆದರೆ ಇದನ್ನು ಒಪ್ಪುವುದು ಸಾಧ್ಯವಿಲ್ಲ. ನಿಜ, ಇವೆರಡೂ ಅಭಿವೃದ್ಧಿ ಯೋಜನಾ ಮಾದರಿಗಳ ನಡುವೆ ಸಮಾನ ಅಂಶಗಳು ಸಾಕಷ್ಟಿವೆ. ಆದರೆ ಭಾರತೀಯ ಅಭಿವೃದ್ಧಿ ಯೋಜನಾ ಮಾದರಿಯನ್ನು ‘ಸೋವಿಯತ್ ಮಾದರಿ’ಯಿಂದ ಪೂರ್ಣ ಸ್ವಂತಂತ್ರವಾಗಿ ಬೆಳೆಸಲಾಗಿದೆ ಎಂದು ಸುಖಮಾಯ್ ಚಕ್ರವರ್ತಿ ಮತ್ತು ಟಿ. ಕೃಷ್ಣಕುವಾರ್ ಅವರು ವಾದಿಸಿದ್ದಾರೆ. ಅಭಿವೃದ್ಧಿ ಯೋಜನೆ ಕುರಿತಂತೆ ‘ಸೋವಿಯತ್ ಮಾದರಿ’ ಹಾಗೂ ‘ಭಾರತೀಯ ಮಾದರಿ’ಗಳು ಏಕರೂಪವಾದ ಸೈದ್ಧಾಂತಿಕ ನೆಲೆಗಳನ್ನು ಹೊಂದಿದ್ದವು. ಇವೆರಡೂ ಮಾದರಿಗಳು ಭಾರಿ ಬಂಡವಾಳ ಸರಕುಗಳ ವಲಯಕ್ಕೆ ಪ್ರಧಾನ ಆದ್ಯತೆ ನೀಡಿದ್ದವು. ಇವೆರಡೂ ಮಾದರಿಗಳು ಕ್ಷಿಪ್ರ ಕೈಗಾರಿಕೀಕರಣಕ್ಕೆ ಬದ್ದವಾಗಿದ್ದವು. ಇವೆಲ್ಲವು ನಿಜ.

ಆದರೆ ಮಹಾಲನೊಬಿಸ್ ರವರು ಭಾರತೀಯ ಯೋಜನಾ ಮಾದರಿಯನ್ನು ಸ್ವತಂತ್ರವಾಗಿ ಅಭಿವೃದ್ದಿ ಪಡಿಸಿದರು. ಕೇಂದ್ರಿಕೃತ ಸರ್ವಾಧಿಕಾರಿ ಅಭಿವೃದ್ಧಿ ಯೋಜನಾ ಮಾದರಿ ಬಗ್ಗೆ ನೆಹರೂ ಅವರಿಗೆ ಅಸಮಾಧಾನವಿತ್ತು. ಇದೇ ರೀತಿ ನೆಹರೂ ಮತ್ತು ಮಹಾಲನೊಬಿಸ್ ಅವರಿಗೆ ಪ್ರಭುತ್ವದ ಮಧ್ಯಸ್ಥಿಕೆರಹಿತ ಬಂಡವಾಳಶಾಹಿ ವ್ಯವಸ್ಥೆಯು, ಬಡತನವೂ ಅಸಮಾನತೆಯೂ ತೀವ್ರವಾಗಿರುವ ಭಾರತಕ್ಕೆ ಸೂಕ್ತವಲ್ಲ ಎಂಬುದರ ಬಗ್ಗೆ ಖಚಿತವಾದ ನಿಲುವು ಇತ್ತು. ಪಾಶ್ಚಾತ್ಯ ಹಾಗೂ ಪೌರಾತ್ಯ ದೇಶಗಳ ನಡುವಿನ ಸಂಬಂಧಗಳು ಘರ್ಷಣಾತ್ಮಕವಾಗಿವೆ ವಿನಾ ಸೌಹಾರ್ದಾತ್ಮಕವಾಗಿಲ್ಲ ಎಂಬುದರ ಅರಿವು ಅವರಿಬ್ಬರಿಗೂ ಇತ್ತು. ಇದೇ ಕಾರಣಕ್ಕೆ ಅವರಿಬ್ಬರು ವಿಶ್ವದಲ್ಲಿ ‘ಮೂರನೇ ಬಣ’ ವೊಂದರ ಅಲಿಪ್ತ ದೇಶಗಳ ಕೂಟವೊಂದರ ಅಗತ್ಯವನ್ನು ಮನಗಂಡಿದ್ದರು.

ನೆಹರೂ-ಮಹಾಲನೊಬಿಸ್ ಅಭಿವೃದ್ಧಿ ಯೋಜನಾ ಮಾದರಿಯನ್ನು ಮಹಾಲನೊಬಿಸ್ ಅವರು ಹೀಗೆ ವರ್ಣಿಸಿದ್ದಾರೆ.

“ಪ್ರಜೆಗಳಿಗೆ ಸಮಾಜೋ-ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಮೂಲಭೂತ ಹಕ್ಕುಗಳನ್ನು ಒದಗಿಸುವಂತಹ ಮುಕ್ತ ಹಾಗೂ ಜನತಾಂತ್ರಿಕ ಸಮಾಜವನ್ನು ನಿರ್ಮಿಸುವುದು ನಮ್ಮ ಉದ್ದೇಶ. ಇಲ್ಲಿ ಪ್ರಭುತ್ವವು ಜನಪರವಾಗಿರಬೇಕು. ಈ ಉದ್ದೇಶವನ್ನು ಈಡೇರಿಸಿಕೊಳ್ಳಲು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಭುತ್ವವು ನಿಯಂತ್ರಿಸುವ, ನಿಯೋಜಿಸುವ ಮತ್ತು ಸಂಯೋಜಿಸುವ ಕಾರ್ಯವನ್ನು ಮಾಡಬೇಕು. ಭಾರಿ ಉದ್ದಿಮೆಗಳು, ಗಣಿಗಾರಿಕೆ, ಸಾರ್ವಜನಿಕ ಸಾರಿಗೆ, ರಕ್ಷಣಾ ಉದ್ದಿಮೆಗಳು ಮುಂತಾದವುಗಳ ಮಾಲೀಕತ್ವ ಪ್ರಭುತ್ವದ ವಶದಲ್ಲಿರಬೇಕು. ಒಟ್ಟಾರೆ ಉತ್ಪಾದನೆ, ಅನುಭೋಗ, ವಿತರಣೆ, ವ್ಯಾಪಾರ, ಸಾಮಾಜಿಕ ಸೇವೆಗಳು, ಬಂಡವಾಳ ಹೂಡಿಕೆ ಮುಂತಾದವುಗಳನ್ನು ಪ್ರಭುತ್ವವು ನಿಯಂತ್ರಿಸಬೇಕು” ಎಂಬುದನ್ನು ಒಳಗೊಂಡಿರಲಿಲ್ಲ ಭಾರತವು ಅಳವಡಿಸಿಕೊಂಡಿದ್ದ “ನೆಹರೂ-ಮಹಾಲನೊಬಿಸ್ ಅಭಿವೃದ್ಧಿ ಯೋಜನಾ ಮಾದರಿ”ಯು ಗಾಂಧೀಜಿ ವಿಚಾರಧಾರೆಯಿಂದ ಸಂಪೂರ್ಣವಾಗಿ ಅಲಾಯದವಾಗಿತ್ತು. ಈ ಅಭಿವೃದ್ಧಿ ಯೋಜನಾ ಮಾದರಿಯ ನೆಹರೂರವರ್ ‘ಆಧುನೀಕರಣ’ ವಿಚಾರ ಪ್ರಣಾಳಿಕೆಯನ್ನು ಅಡಿಪಾಯವನ್ನಾಗಿ ಹೊಂದಿತ್ತು. ಈ ಕಾರಣಕ್ಕೆ ಸುಖಮಾಯ್ ಚಕ್ರವರ್ತಿಯವರು ನೆಹರೂ ಅವರನ್ನು ಆಧುನೀಕರಣ ವಿಚಾರ ಪ್ರಣಾಳಿಕೆಯ ‘ಅಧ್ವರ್ಯರು’ ಎಂದು ಕರೆದಿದ್ದಾರೆ. ವಸ್ತುನಿಷ್ಠ, ನೈತಿಕ ನಿರಪೇಕ್ಷ ಬೈಭವೋಪೇತ ಆಧುನೀಕರಣ ಸಂಕಥನದ ಸಂವಿಧಾನದೊಳಗೆ ವ್ಯಕ್ತಿನಿಷ್ಥ ನೈತಿಕವಾದಿ ಅಭಾವನಿಷ್ಠ ಗಾಂಧೀಜಿ ಅಭಿವೃದ್ಧಿ ಮಾದರಿಗೆ ಅವಕಾಶವಿರಲಿಲ್ಲ. ಆದರೆ ಮಹಾಲನೊಬಿಸ್ ರವರು ತಮ್ಮ ಅಭಿವೃದ್ಧಿ ಯೋಜನಾ ಮಾದರಿಯಲ್ಲಿ ‘ಸನ್ನ ಪ್ರಮಾಣದ ಹಾಗೂ ಗುಡಿ ಕೈಗಾರಿಕೆ’ಗಳನ್ನು ಸಂಯೋಜಿಸುವ ಪ್ರಯತ್ನ ಮಾಡಿದ್ದರು. ಏಕೆಂದರೆ ಜನಸಂಖ್ಯಾಭರಿತ ಭಾರತದಲ್ಲಿ ಉದ್ಯೋಗ ಒದಗಿಸಲು ಇದು ಅನಿವಾರ್ಯವಾಗಿತ್ತು. ಆ ಮಟ್ಟಿಗೆ ನೆಹರೂ-ಮಹಾಲನೊಬಿಸ್ ಅಭಿವೃದ್ಧಿ ಯೋಜನಾ ಮಾದರಿಯಲ್ಲಿ ಗಾಂಧೀಜಿ ಗೋಚರಿಸುತ್ತಿದ್ದರು.