ಪ್ರಥಮ ಮಹಾಯುದ್ಧ ಮತ್ತು ಭಾರತದ ರಾಷ್ಟ್ರೀಯ ಹೋರಾಟಗಳ ಪ್ರತಿಕ್ರಿಯೆಗಳು

೧೯೧೪ರಲ್ಲಿ ಬ್ರಿಟಿಷರು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದ ಸಂದರ್ಭದಲ್ಲಿ ಬ್ರಿಟಿಷರು ಭಾರತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಯುದ್ಧವನ್ನು ಘೋಷಿಸುವ ಸಂದರ್ಭದಲ್ಲಾಗಲಿ ಅಥವಾ ಯುದ್ಧಕ್ಕೆ ಬಳಸಿಕೊಳ್ಳಲಾಗುವ ಭಾರತೀಯ ಸೈನಿಕರ ಬಗ್ಗೆಯಾಗಲಿ ಅಥವಾ ಭಾರತೀಯರ ಕಂದಾಯ, ಯುದ್ಧದಲ್ಲಿ ವೆಚ್ಚ ಮಾಡುವ ಬಗೆಯಾಗಲಿ ಭಾರತೀಯ ಪ್ರತಿನಿಧಿಗಳೊಂದಿಗೆ ಬ್ರಿಟಿಷರು ಚರ್ಚಿಸಲಿಲ್ಲ. ಸುಮಾರು ಒಂದು ಮಿಲಿಯನ್‌ ಭಾರತೀಯ ಸೈನಿಕರನ್ನು ಬ್ರಿಟಿಷರು ಫ್ರಾನ್ಸ್‌ನಿಂದ ಚೀನಾ ದೇಶಗಳವರೆಗೆ ಇದ್ದ ಪ್ರದೇಶಗಳಿಗೆ ಯುದ್ಧಕ್ಕೆ ಕಳಿಸಿದರು. ಪ್ರತಿ ಹತ್ತು ಭಾರತೀಯ ಸೈನಿಕರಲ್ಲಿ ಒಬ್ಬರು ಈ ಯುದ್ಧದಲ್ಲಿ ಗಾಯಗೊಂಡರು. ಇಲ್ಲವೇ ಮರಣ ಹೊಂದಿದರು. ಯುದ್ಧ ವೆಚ್ಚವೇ ೧೨೭ ಮಿಲಿಯನ್‌ ಪೌಂಡುಗಳಾದವು. ಈ ಸಂದರ್ಭದಲ್ಲಿ ಶೇ. ೩೦ ರಷ್ಟು ಕಂದಾಯವನ್ನು ಭಾರತೀಯರ ಮೇಲೆ ಬ್ರಿಟಿಷರು ಹೇರಿದರು. ಭಾರತೀಯ ರಾಷ್ಟ್ರೀಯವಾದಿಗಳು ಈ ನಿರ್ಧಾರಕ್ಕೆ ಭಿನ್ನಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಉಗ್ರಗಾಮಿ ಕ್ರಾಂತಿಕಾರಿಗಳು ಬ್ರಿಟಿಷರ ಈ ನಿರ್ಧಾರವನ್ನು ಖಂಡಿಸಿದರು. ಈ ಸಮಯದ ಲಾಭ ಮಾಡಿಕೊಂಡು ಜರ್ಮನಿಯ ಸಹಾಯವನ್ನು ಪಡೆಯಬೇಕೆಂದು ಅವರು ತೀರ್ಮಾನಿಸಿದರು. ಕಾಂಗ್ರೆಸ್‌ನವರು ಬ್ರಿಟಿಷರಿಗೆ ಈ ಸಂದರ್ಭದಲ್ಲಿ ಸಹಾಯ ಮಾಡಬೇಕೆಂದರು.

ಭಾರತ ಮತ್ತು ವಿದೇಶಗಳಲ್ಲಿ ಕ್ರಾಂತಿಕಾರಿಗಳ ಚಳವಳಿ

ಭಾರತದಲ್ಲಿ ಕ್ರಿಯಾಶೀಲವಾಗಿದ್ದ ಕ್ರಾಂತಿಕಾರಿ ಚಳವಳಿಯ ಬಗ್ಗೆ ಈಗಾಗಲೇ ಕೆಲವು ವಿವರಗಳನ್ನು ನೀಡಲಾಗಿದೆ. ವಿದೇಶಗಳಲ್ಲಿ ಈ ಚಳವಳಿಯನ್ನು ಸಂಘಟಿಸಿರುವಂತಹ ಅಂಶವು ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ವಿಭಿನ್ನ ಆಯಾಮವನ್ನೇ ನೀಡಿತು. ಯೂರೋಪಿನ ವಿವಿಧ ದೇಶಗಳಲ್ಲಿ, ಮಧ್ಯ ಪ್ರಾಚ್ಯ ದೇಶಗಳಲ್ಲಿ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರತದ ಸ್ವಾತಂತ್ಯ್ರ ಕಹಳೆಗಳನ್ನು ಕ್ರಾಂತಿಕಾರಿಗಳು ಮೊಳಗಿಸಿದರು. ಅಲ್ಲೆಲ್ಲಾ ಭಾರತೀಯರ ಮೇಲಿನ ದೌರ್ಜನ್ಯಗಳ ವಿವರಗಳನ್ನು ಅಲ್ಲಿನ ಜನರಿಗೆ ತಿಳಿಸಿದರು. ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಭಾರತದ ಹೋರಾಟಕ್ಕಾಗಿ ಸಂಗ್ರಹಿಸುವ ಜವಾಬ್ದಾರಿ ಇವರ ಮೇಲಿತ್ತು. ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು, ವರ್ತಕರು ಮತ್ತು ವಲಸೆ ಹೋದ ಭಾರತೀಯ ಕೂಲಿಕಾರರು ಈ ಹೋರಾಟದಲ್ಲಿ ಮುಖ್ಯ ಪಾತ್ರವನ್ನು ವಹಿಸಿದರು. ವಿದೇಶಗಳಲ್ಲಿನ ಪ್ರಗತಿಗಾಮಿ ಹಾಗೂ ಸೋಶಿಯಲಿಸ್ಟ್‌ ಚಳವಳಿಗಳು ಭಾರತೀಯ ಕ್ರಾಂತಿಕಾರಿ ಹೋರಾಟದ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದವು. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ವಿದೇಶಕ್ಕೆ ಬಂದ ಭಾರತೀಯ ಪಡೆಗಳನ್ನು, ಯುದ್ಧ ಕೈದಿಗಳನ್ನು ಹಾಗೂ ಬ್ರಿಟಿಷ್‌ ವಿರೋಧಿಗಳನ್ನು ಕ್ರಾಂತಿಕಾರರ ಹೋರಾಟವು ಸೆಳೆದುಕೊಳ್ಳತೊಡಗಿದವು. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಪ್ರಮುಖವಾಗಿ ಜರ್ಮನಿಯಲ್ಲಿ ಭಾರತೀಯರಿಗೆ ಹಣ ಮತ್ತು ಶಸ್ತ್ರಗಳನ್ನು ಪೂರೈಸುವ ವ್ಯವಸ್ಥೆಯೂ ಆಯಿತು. ಆದರೆ ಇವರ್ಯಾರೂ ಜರ್ಮನಿಯ ಕೈಕೆಳಗಿರಲಿಲ್ಲ.

೧೯೦೫ರಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಶ್ಯಾಮ್‌ ಕೃಷ್ಣವರ್ಮ ಅವರು ಲಂಡನ್ನಿನಲ್ಲಿ “ಇಂಡಿಯಾ ಹೌಸ್‌”ನನ್ನು ಸ್ಥಾಪಿಸಿ ಇದರೊಂದಿಗೆ “ಇಂಡಿಯನ್‌ ಸೋಷಿಯಾಲಜಿಸ್ಟ್‌” ಎನ್ನುವ ನಿಯತಕಾಲಿಕೆಯನ್ನು ಹೊರತಂದರು. ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ನೀಡಲಾಯಿತು. ಇಲ್ಲಿ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕವಾಗಿ ಕ್ರಾಂತಿಕಾರಿ ಹೋರಾಟಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ೧೯೦೭ರ ವೇಳೆಗೆ ನಾಸಿಕ್‌ನಿಂದ ಲಂಡನ್ನಿಗೆ ಬಂದ ವಿ.ಡಿ. ಸಾರ್ವಕರ್ ಅವರ ನಾಯಕತ್ವದಲ್ಲಿ “ಇಂಡಿಯಾ ಹೌಸ್‌”ನ ಕ್ರಾಂತಿಕಾರಿ ಹೋರಾಟವು ತೀವ್ರಗೊಂಡಿತು. ೧೯೦೯ರಲ್ಲಿ ‘ಇಂಡಿಯಾ ಹೌಸ್‌’ನಲ್ಲಿ ತಯಾರಾದ ಮದನ್‌ಲಾಲ್‌ ಧಿಂಗ್ರ ಅವರು ಕರ್ಜನ್‌-ವೈಲಿ ಎನ್ನುವ ಕ್ರೂರ ಬ್ರಿಟಿಷ್‌ ಅಧಿಕಾರಿಯನ್ನು ಹತ್ಯೆ ಮಾಡಿದರು. ಕ್ರಾಂತಿ ಚಟುವಟಿಕೆಗಳು ಮುಂದುವರಿದವು.

ಪ್ಯಾರಿಸ್‌ ಮತ್ತು ಜಿನಿವಾಗಳಲ್ಲಿ ಮೇಡಂ ಕಾಮಾ ಅವರು ಫ್ರೆಂಚ್‌ ಸೋಷಿಯಲಿಸ್ಟರೊಂದಿಗೆ ಕೈಜೋಡಿಸಿ ಭಾರತೀಯ ಹೋರಾಟಕ್ಕೆ ಸಹಾನುಭೂತಿ ವ್ಯಕ್ತಪಡಿಸಿದರು. ೧೯೦೯ರ ನಂತರ ವೀರೇಂದ್ರನಾಥ ಚಟ್ಟೋಪಾಧ್ಯಾಯ ಅವರು ಬರ್ಲಿನ್‌ ನಗರವನ್ನು ಚಟುವಟಿಕೆಗಳ ಕೇಂದ್ರ ಸ್ಥಳವನ್ನಾಗಿ ಮಾಡಿದರು. “ಇಂಡಿಯನ್‌ ಇಂಡಿಪೆಂಡೆನ್ಸ್‌” ಎನ್ನುವ ಸಂಘಟನೆಯನ್ನು ಈ ಸಂದರ್ಭದಲ್ಲಿ ಅವರು ಹುಟ್ಟುಹಾಕಿದರು. ಬಾಗ್ದಾದ್‌, ಇಸ್ತಾಂಬುಲ್‌, ಪರ್ಷಿಯಾ ಮತ್ತು ಕಾಬೂಲ್‌ಗಳಿಗೆ ಈ ಸಂಸ್ಥೆ ಕ್ರಾಂತಿಕಾರಿಗಳನ್ನು ಕಳಿಸಿ ಅಲ್ಲಿದ್ದ ಭಾರತೀಯ ಪಡೆಗಳ ಮತ್ತು ಯುದ್ಧ ಕೈದಿಗಳ ಮನ ಒಲಿಸಲು ಪ್ರಯತ್ನಿಸಿದರು.

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲೂ ಕ್ರಾಂತಿಕಾರಿಗಳ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು. ತಾರಕನಾಥದಾಸ್‌ ಮತ್ತು ಸೊಹಾನ್‌ಸಿಂಗ್‌ ಬಾಕ್ನಾ ಇವರೊಂದಿಗೆ ದೆಹಲಿಯ ಸ್ಟೀಫನ್‌ ಕಾಲೇಜಿನ ಹರದಯಾಳ್‌ ಸೇರಿಕೊಂಡು ೧೯೧೩ರಲ್ಲಿ “ಗದ್ದರ್‌ ಚಳವಳಿ”ಯನ್ನು ಹುಟ್ಟುಹಾಕಿದರು. ಗದ್ದರ್‌ ಎಂದರೆ ಕ್ರಾಂತಿಕಾರಿ ಎಂದರ್ಥ. ಗದ್ದರ್‌ ಎನ್ನುವ ವಾರಪತ್ರಿಕೆಯನ್ನು ೧೯೧೩ರ ನವೆಂಬರ್‌  ೧ ರಿಂದ ಹೊರತರಲಾಯಿತು. ಉರ್ದು, ಗುರುಮುಖಿ ಹಾಗೂ ಇನ್ನಿತರ ಭಾರತೀಯ ಭಾಷೆಗಳಲ್ಲೂ ಅದರ ಆವೃತ್ತಿಗಳನ್ನು ತರಲಾಯಿತು. ಸೈನ್ಯದ ಜೊತೆಯಲ್ಲಿ ಕೆಲಸ ಮಾಡುವುದು, ಜನವಿರೋಧಿ ಅಧಿಕಾರಿಗಳನ್ನು ಹತ್ಯೆ ಮಾಡುವುದು ಹಾಗೂ ಆಯುಧಗಳನ್ನು ಸಂಗ್ರಹಿಸುವುದು ಇವರ ಕಾರ್ಯಕ್ರಮದ ಉದ್ದೇಶವಾಗಿತ್ತು. ಸ್ಯಾನ್‌ಫ್ರಾನ್ಸಿಸ್ಕೋ ನಗರ ಇವರ ಕೇಂದ್ರವಾಗಿತ್ತು. ಬ್ರಿಟಿಷರ ಎಲ್ಲ ವಸಾಹತುಗಳಲ್ಲಿ (ಭಾರತವನ್ನೂ ಸೇರಿಸಿದಂತೆ) ಏಕಕಾಲದಲ್ಲಿ ಬಂಡಾಯ ಏಳುವಂತೆ ಮಾಡುವುದು ಇವರ ಮುಖ್ಯ ಉದ್ದೇಶವಾಗಿತ್ತು.

ವಿದೇಶಗಳಿಂದ ಕ್ರಾಂತಿಕಾರಿಗಳು ಹೊರತರುತ್ತಿದ್ದ ನಿಯತಕಾಲಿಕೆಗಳು ಭಾರತದ ಸ್ವಾತಂತ್ಯ್ರ ಹೋರಾಟದ ಮಾರ್ಗದರ್ಶಕಗಳಾದವು. ಮೇಡಂ ಕಾಮಾ ಅವರ “ವಂದೇ ಮಾತರಂ,” ಬರ್ಲಿನ್‌ನ ಚಟ್ಟೋಪಾಧ್ಯಾಯ ಅವರ “ತಲ್ವಾರ್,” ಕೆನಡಾದ ವ್ಯಾಂಕೋವರ್‌ನಿಂದ ತಾರಕನಾಥದಾಸ್‌ ಅವರ “ಫ್ರೀ ಹಿಂದೂಸ್ತಾನ್‌,” ಈಗಾಗಲೆ ವಿವರಿಸಲಾದ “ಇಂಡಿಯನ್‌ ಸೋಷಿಯಾಲಜಿಸ್ಟ್‌” ಮತ್ತು “ಗದ್ದರ್‌ ” ಪತ್ರಿಕೆಗಳನ್ನು, ಬ್ರಿಟಿಷರು ಪ್ರತೀಬಾರಿ ಕಸ್ಟಮ್ಸ್‌ ಅಧಿಕಾರಿಗಳ ಮೂಲಕ ಮುಟ್ಟುಗೋಲು ಹಾಕಿಕೊಂಡು ಅವುಗಳು ಭಾರತದೊಳಗೆ ನುಸುಳದಂತೆ ತಡೆಗಟ್ಟಿದ್ದರು.

ಈಗಾಗಲೇ ವಿವರಿಸಿದಂತೆ ಇವರೆಲ್ಲರಿಗೂ ಅಂತಾರಾಷ್ಟ್ರೀಯ ಸೋಷಿಯಲಿಸ್ಟ್‌ ಸಂಘಟನೆಗಳೊಂದಿಗೆ ಸಂಬಂಧಗಳಿದ್ದವು. ಕೃಷ್ಣಶರ್ಮ ಅವರು ಲಂಡನ್ನಿನಲ್ಲಿ ಸಂಘಟಿಸಿದ್ದ ‘ಇಂಡಿಯಾ ಹೌಸ್‌’ನಲ್ಲಿ ಅನೇಕ ಬಾರಿ ಹಿಂಡ್‌ಮ್ಯಾನ್‌ಭಾಷಣ ಮಾಡಿದ್ದರು. ಹಿಂಡ್‌ಮ್ಯಾನ್‌ ಅವರು ಬ್ರಿಟಿಷ್ ‌ಕಾರ್ಕ್ಸಿಸ್ಟ್‌ ಸೋಷಿಯಲ್‌ ಡೆಮಾಕ್ರಟಿಕ್‌ ಫೆಡರೇಷನ್‌ನ ನಾಯಕರಾಗಿದ್ದರು. ೧೯೦೭ರ ಹೊತ್ತಿಗೆ ಮೇಡಂ ಕಾಮಾ ಅವರು ಎರಡನೆಯ ಇಂಟರ್‌ನ್ಯಾಷನಲ್‌ನ ಸ್ಟಟ್‌ಗಾರ್ಟ್‌ ಕಾಂಗ್ರೆಸ್‌ನಲ್ಲಿ ಸ್ವತಂತ್ರ ಭಾರತದ ಧ್ವಜವನ್ನು ಹಾರಿಸಿದ್ದರು. ಅಮೆರಿಕದಲ್ಲಿದ್ದ ಹರದಯಾಳ್‌ ಅವರು ಸ್ಯಾನ್‌ಫ್ರಾನ್ಸಿಸ್ಕೋ ಘಟಕದ “ಆನಾರ್ಕೊ ಸಿಂಡಿಕಲಿಸ್ಟ್‌ ಇಂಡಸ್ಟ್ರೀಯಲ್‌ ವರ್ಕರ್ಸ್‌ ಆಫ್‌ ದಿ ವರ್ಲ್ಡ್‌” ಎನ್ನುವ ಸಂಘಟನೆಯ ಕಾರ್ಯದರ್ಶಿಗಳಾಗಿದ್ದರು. ಕಲ್ಕತ್ತದಿಂದ ಆ ಕಾಲದಲ್ಲಿ (೧೯೧೨) ಪ್ರಕಟವಾಗುತ್ತಿದ್ದ “ಮಾಡರ್ನ್‌ ರಿವ್ಯೂ” ಎನ್ನುವ ನಿಯತಕಾಲಿಕದಲ್ಲಿ ಕಾರ್ಲ್‌‌ಮಾರ್ಕ್ಸ್‌‌ನ ಮೇಲೆ ಲೇಖನವನ್ನು ಬರೆದಿದ್ದರು. ರಷ್ಯಾದ ಅಕ್ಟೋಬರ್‌ ಕ್ರಾಂತಿಯ ನಂತರ ಗದ್ದರ್ ಚಳವಳಿಯಲ್ಲಿದ್ದ ಅನೇಕರು ಎಂ. ಎನ್‌. ರಾಯ್‌ಮೊದಲಾದವರೊಂದಿಗೆ ಭಾರತದಲ್ಲಿ ಕಮ್ಯೂನಿಸ್ಟ್‌ ಹೋರಾಟವನ್ನು ಹುಟ್ಟುಹಾಕಿದರೆನ್ನುವುದು ಗಮನಾರ್ಹವಾಗಿದೆ.

ಕ್ರಾಂತಿಕಾರಿಗಳ ಹೋರಾಟಗಳಲ್ಲಿ ಮೈಲುಗಲ್ಲೆಂದರೆ “ಕೊಮಾಂಗ್‌ತಾರು” ಘಟನೆ. ಕೋಮಾಂಗ್‌ತಾರು ಎನ್ನುವುದು ಕೆನಡಾದಿಂದ ಭಾರತಕ್ಕೆ ಬರುತ್ತಿದ್ದ ಹಡಗಿನ ಹೆಸರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳಲು ಕೆನಡಾದಲ್ಲಿ ನೆಲೆಸಿದ್ದ ಸಾವಿರಾರು ಸಿಖ್‌ ಮತ್ತು ಪಂಜಾಬಿ ಜನರು ರಾಸ್‌ಬಿಹಾರಿ ಬೋಸ್‌, ಸಚಿನ್‌ ಸನ್ಯಾಲ್‌ ಮತ್ತು ಗದ್ದಾರ್‌ ನಾಯಕ ಸಹಾಯದಿಂದ ೧೯೧೪ರ ಸೆಪ್ಟೆಂಬರ್‌ ೨೯ರಂದು ಕಲ್ಕತ್ತಾದಲ್ಲಿ ಇಳಿಯಲು ಪ್ರಯತ್ನಿಸಿದಾಗ ಬ್ರಿಟಿಷ್ ‌ಪೊಲೀಸರು ತಡೆದರು. ತಾಯ್ನಾಡಿಗೆ ಮರಳಿದ ಸಂತಸದಲ್ಲಿದ್ದ ಭಾರತೀಯರು ಇದನ್ನು ಪ್ರತಿಭಟಿಸಿದರು. ಆಗ ಪೊಲೀಸರು ೨೨ ಮಂದಿಯನ್ನು ಗುಂಡಿಟ್ಟು ಕೊಂದರು. ಕ್ರಾಂತಿಕಾರಿ ಸಂದೇಶಗಳನ್ನು ಹೊತ್ತು ತರುತ್ತಿದ್ದ ಭಾರತೀಯರನ್ನು ಮಾರ್ಗದಲ್ಲೇ ತಡೆದು ಬ್ರಿಟಿಷರು ತನ್ನ ಸಾಮ್ರಾಜ್ಯಶಾಹಿ ದಾಹವನ್ನು ತೋರಿತು. ಭಾರತಕ್ಕೆ ೧೯೧೬ರಲ್ಲಿ ಬಂದ ೨೫೦೦ ಭಾರತೀಯರ ಓಡಾಟಕ್ಕೆ ನಿರ್ಬಂಧ ಹಾಕಲಾಯಿತು. ಹಾಗೂ ೪೦೦ ಜನರನ್ನು ಸೆರೆಗೆ ತಳ್ಳಲಾಯಿತು. ಆ ವರ್ಷ ಭಾರತಕ್ಕೆ ಬಂದವರ ಸಂಖ್ಯೆ ೮೦೦೦ ಆಗಿತ್ತು. ೧೯೧೫ರ ಫೆಬ್ರವರಿ ೨೧ ರಂದು ಫಿರೋಜ್‌ಪುರ, ಲಾಹೋರ್‌ ಮತ್ತು ರಾವಲ್ಪಿಂಡಿಗಳಲ್ಲಿ ಏಕಕಾಲದಲ್ಲಿ ಬಂಡಾಯ ಏಳಬೇಕೆಂಬ ಯೋಜನೆ ಕೆಲವು ದೇಶದ್ರೋಹಿಗಳಿಂದ ವಿಫಲವಾಯಿತು. ರಾಸ್‌ಬಿಹಾರಿ ಬೋಸ್‌ ಅವರು ಈ ಸಂದರ್ಭದಲ್ಲಿ ಜಪಾನಿಗೆ ಓಡಿಹೋದರು (ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರು ೧೯೪೦ರ ದಶಕದಲ್ಲಿ ನೇತೃತ್ವ ವಹಿಸಿದ “ಆಜಾದ್‌ ಹಿಂದ್‌ ಫೌಜ್‌”ನ ಹುಟ್ಟಿಗೆ ಜಪಾನಿನಲ್ಲಿ ರಾಸ್‌ಬೋಸರು ಕಾರಣ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು). ಇದೇ ವೇಳೆಗೆ ಪಂಜಾಬಿ ಕ್ರಾಂತಿಗಳು ಬಂಗಾಳದಲ್ಲಿ ಸಕ್ರೀಯವಾಗಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿದ್ದ ಜತಿನ್ ಮುಖರ್ಜಿಯವರನ್ನು ಸಂಪರ್ಕಿಸಿದರು. ಜರ್ಮನಿಯಿಂದ ಆಯುಧಗಳು ಕೈ ಸೇರದ್ದರಿಂದ ಜತಿನ್ ಮುಖರ್ಜಿಯವರ ಸಹಾಯ ಇವರಿಗೆ ಬೇಕಿತ್ತು. ರೈಲು ಮಾರ್ಗಗಳನ್ನು ತಡೆಯುವ, ೧೬ನೆಯ ರಜಪೂತ್‌ ರೈಫಲ್‌ ಪಡೆಯ ಸಹಾಯದಿಂದ ಕಲ್ಕತ್ತಾದ ಫೋರ್ಟ್‌ ವಿಲಿಯಂ ಅನ್ನು ವಶಪಡಿಸಿಕೊಳ್ಳುವ ಪ್ರಯತ್ನವು ಸರಿಯಾದ ಸಂಘಟನೆಯಿಲ್ಲದೆ ವಿಫಲವಾಯಿತು. ೧೯೧೫ರ ಸೆಪ್ಟೆಂಬರ್‌ನಲ್ಲಿ ಒರಿಸ್ಸಾದ ಕಡಲತೀರದ ಗ್ರಾಮಸ್ಥರ ಸಹಾಯದಿಂದ ಬ್ರಿಟಿಷರು ಜತಿನ್‌ರನ್ನು ಕೊಂದರು. ಜನಸಮುದಾಯದಿಂದ ದೂರವಿದ್ದ ಕ್ರಾಂತಿಕಾರಿಗಳ ಕೊನೆಯು ಈ ಕಾರಣಗಳಿಂದಾಗಿ ದುರಂತವಾಗಿದೆ ಎಂಬುದು ಗಮನಾರ್ಹವಾಗಿದೆ. ಉತ್ತಮ ಸಂಘಟನೆಯ ಕೊರತೆಯೇ ಇದಕ್ಕೆ ಕಾರಣವೆಂದು ಅಭಿಪ್ರಾಯಪಡಲಾಗಿದೆ. ೧೯೧೫ರ ಫೆಬ್ರವರಿ ೧೫ ರಂದು ಜಮೆದಾರ್‌ ಚೇಸ್ತಿಖಾನ್‌, ಜಮೆದಾರ್‌ ಅಬ್ದುಲ್‌ಗನಿ ಮತ್ತು ಸುಬೇದಾರ್‌ ದಾವೂದ್‌ ಖಾನ್‌ ಅವರ ನೇತೃತ್ವದಲ್ಲಿ ಪಂಜಾಬಿ ಮುಸ್ಲಿಮ್‌ ೫ನೆಯ ಲೈಟ್‌ ಇನ್‌ಫೆಂಟ್ರಿ ಮತ್ತು ೩೬ನೆಯ ಸಿಖ್‌ ಬೆಟಾಲಿಯನ್‌ಗಳು ಸಿಂಗಪೂರದಲ್ಲಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದವು. ಬಂಡಾಯವನ್ನು ಅಡಗಿಸಿದ ಮೇಲೆ ಬ್ರಿಟಿಷ್ ‌ಸರ್ಕಾರವು ೩೭ ಮಂದಿಯನ್ನು ಕೊಂದಿತು ಹಾಗೂ ೪೧ ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬ್ರಿಟಿಷ್ ‌ಸರಕಾರ ಕ್ರಾಂತಿಕಾರಿಗಳನ್ನು ಅದರಲ್ಲೂ ಉತ್ತರ ಭಾರತದಲ್ಲಿ ಪ್ರಬಲವಾಗಿದ್ದ ಗದ್ದಾರ್‌ ಚಳವಳಿಗಾರರನ್ನು ಹತ್ತಿಕ್ಕಲು “ಡಿಫೆನ್ಸ್‌ ಆಫ್‌ ಇಂಡಿಯಾ ಆಕ್ಟ್‌” (೧೯೧೫)ನ್ನು ತಂದಿತು. ವಿಚಾರಣೆಯೇ ಇಲ್ಲದೆ ಸಾವಿರಾರು ಕ್ರಾಂತಿಕಾರಿಗಳನ್ನು ಬಂಗಾಳ ಮತ್ತು ಪಂಜಾಬ್‌ನಲ್ಲಿಡಲಾಯಿತು. ಮತ್ತು ಉಗ್ರ ಶಿಕ್ಷೆಗೆ ಒಳಪಡಿಸಲಾಯಿತು. ಗದ್ದಾರ್‌ ಚಳವಳಿಗೆ ಸೇರಿದ ೪೬ ಮಂದಿಯನ್ನು ಬ್ರಿಟಿಷ್ ‌ಸರ್ಕಾರವು ನೇಣಿಗೇರಿಸಿದರೆ, ೬೪ ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ನೂರಾರು ಮಂದಿ ಶಂಕಿತ ಸೈನಿಕರಿಗೆ “ಕೋರ್ಟ್‌ ಮಾರ್ಷಲ್‌” ಶಿಕ್ಷೆಯನ್ನು ನೀಡಿತು. ಈ ಹಂತದಲ್ಲಿ ಬ್ರಿಟಿಷರು ಭಾರತೀಯ ಕ್ರಾಂತಿಕಾರಿಗಳನ್ನು ಸದೆಬಡಿದರೂ, ಕ್ರಾಂತಿಯ ಸಂದೇಶ ಮಾತ್ರ ಮುಂದುವರಿಯಿತು. ಮುಂದಿನ ವರ್ಷಗಳಲ್ಲಿ ಭಾರತೀಯರು ನಡೆಸಿದ ಹೋರಾಟಕ್ಕೆ ಅದು ಆಶಾದೀಪವಾಯಿತು.

ಲಕ್ನೋ ಒಪ್ಪಂದ ಮತ್ತು ಹೋಂ ರೂಲ್ ಚಳವಳಿ

ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತಿತರ ಲಿಬರಲ್‌ ನಾಯಕರು ಬ್ರಿಟಿಷರ ಜೊತೆ ಕೈ ಜೋಡಿಸಿ ಜರ್ಮನಿಯನ್ನು ಸೋಲಿಸಬೇಕೆಂಬ ನಿರ್ಧಾರವನ್ನು ತೆಗೆದುಕೊಂಡರು. ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡುವ ಮೂಲಕ ಬ್ರಿಟಿಷರಿಂದ ಕೆಲವು ಸುಧಾರಣೆಗಳನ್ನು ಕಾಂಗ್ರೆಸ್‌ ಬಯಸಿತು. ಸ್ವರಾಜ್ಯವನ್ನು ಗಳಿಸಿಕೊಳ್ಳುವುದಕ್ಕಾಗಿ ಭಾರತೀಯರು ಬ್ರಿಟಿಷ್ ‌ಸೈನ್ಯವನ್ನು ಸೇರುವುದು ಸೂಕ್ತವಾದುದು ಎಂದು ಭಾವಿಸತೊಡಗಿದರು. ಇದೇ ವೇಳೆಗೆ ಹರಿದು ಹಂಚಿಹೋಗಿದ್ದ ಕಾಂಗ್ರೆಸ್‌ನ ಐಕ್ಯ ಮತ್ತೊಮ್ಮೆ ಆಗಬೇಕು ಹಾಗೂ ಕಾಂಗ್ರೆಸ್‌ ಮುಸ್ಲಿಮ್‌ ಲೀಗ್‌ ಜೊತೆ ಜೊತೆಯಾಗಿ ಬ್ರಿಟಿಷ್ ‌ರ ವಿರುದ್ಧ ಹೋರಾಟ ಮಾಡಬೇಕೆನ್ನುವ ಆಕಾಂಕ್ಷೆ ಜನರಲ್ಲಿ ಬೆಳೆಯತೊಡಗಿತು. ಈ ನಿಟ್ಟಿನಲ್ಲಿ ೧೯೧೬ರಲ್ಲಿ ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಲೀಗ್‌ನ ನಡುವೆ ಕೆಲವು ಸಾಮಾನ್ಯ ಅಂಶಗಳ ಕಾರ್ಯಕ್ರಮವನ್ನು ಚರ್ಚಿಸಲಾಯಿತು. ಮತ್ತು ಒಟ್ಟಿಗೆ ಕೆಲಸ ಮಾಡುವ ಯೋಜನೆಯನ್ನು ಮಾಡಲಾಯಿತು. ಇದನ್ನು “ಲಕ್ನೋ ಒಪ್ಪಂದ” ಎಂದು ಕರೆಯುತ್ತಾರೆ. ಮೌಲಾನಾ ಆಜಾದ್‌ರಂತವರು ಇದರಲ್ಲಿ ತೊಡಗಿಸಿಕೊಂಡಿದ್ದರೂ ತಿಲಕರ ಬೆಂಬಲ ಈ ಒಪ್ಪಂದಕ್ಕಿತ್ತು. ಹಿಂದೂ-ಮುಸ್ಲಿಮ್‌ ಒಗ್ಗಟ್ಟಿನಲ್ಲೇ ಈ ದೇಶಕ್ಕೆ ಭವಿಷ್ಯವಿರುವುದು ಎಂದು ತಿಲಕರು ನಂಬಿದ್ದರಿಂದ ಕಾಂಗ್ರೆಸ್‌ ಮುಸ್ಲಿಮ್‌ ಲೀಗ್‌ನ ನಡುವಿನ ಒಪ್ಪಂದಕ್ಕೆ ಶಕ್ತಿಮೀರಿ ಶ್ರಮಿಸಿದರು. ಈ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಕೊಡಮಾಡಿದ “ಪ್ರತ್ಯೇಕ ಮತದಾನದ” ಸವಲತ್ತಿಗೆ ತಿಲಕರು ಬೆಂಬಲಿಸಿದರು. ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಲೀಗ್ ಜಂಟಿಯಾಗಿ “ಇಂಡಿಯನ್‌ ಕೌನ್ಸಿಲ್‌”ಅನ್ನು ರದ್ದು ಮಾಡಬೇಕು; ಕೇಂದ್ರ ಮತ್ತು ಪ್ರಾಂತೀಯ ಶಾಸಕಾಂಗದಲ್ಲಿ ಚುನಾಯಿತರಾದವರ ಸಂಖ್ಯೆ ೪/೫ರಷ್ಟಿರಬೇಕು; ಪ್ರಾಂತೀಯ ಸರಕಾರಗಳ ದಿನನಿತ್ಯದ ವ್ಯವಹಾರಗಳಲ್ಲಿ ಕೇಂದ್ರವು ತಲೆಹಾಕಬಾರದು ಎನ್ನುವ ರೀತಿಯ ಅನೇಕ ಬೇಡಿಕೆಗಳನ್ನು ಸರಕಾರದ ಮುಂದಿರಿಸಿತು. ಹಿಂದೂ-ಮುಸ್ಲಿಮರ ಒಗ್ಗಟ್ಟಿನ ಸಂಕೇತವನ್ನಾಗಿ ಲಕ್ನೋ ಒಪ್ಪಂದವನ್ನು ನೋಡಲಾಗಿದೆ.

ಹೋಂ ರೂಲ್‌ ಚಳವಳಿಯು ನಮಗೆ ಮುಖ್ಯವಾಗುವುದು ಏಕೆಂದರೆ ಅದು ತಿಲಕರನ್ನು ಮತ್ತು ಉಳಿದ ತೀವ್ರವಾದಿ ಕಾಂಗ್ರೆಸ್ಸಿಗರನ್ನು ಮತ್ತೆ ಮನೆಗೆ ಸೇರಿಸುವಂಥ ಸನ್ನಿವೇಶವನ್ನು ಸೃಷ್ಟಿಸಿತು. ಆ ಮೂಲಕ ಮುಂದೆ ಕಾಂಗ್ರೆಸ್‌ ಮತ್ತು ಮುಸ್ಲಿಮ್‌ ಲೀಗ್‌ ಕೆಲವು ಸಾಮಾನ್ಯ ಅಂಶಗಳ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಒಂದು ವೇದಿಕೆಯಾಗಿ ಪರಿವರ್ತಿತಲಾಯಿತು.

* * *

ಅರವಿಂದ ಘೋಷರು ರಾಜಕೀಯ ಸನ್ಯಾಸ ತೆಗೆದುಕೊಂಡು ಪಾಂಡಿಚೇರಿಗೆ ಹೋದ ಬಗ್ಗೆ ಹಾಗೂ ಲಜಪತರಾಯ್‌ ಅವರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕಾಂಗ್ರೆಸ್ಸಿನ ವಿಭಜನೆಯ ನಂತರ ಹೋದ ಬಗ್ಗೆ ಈಗಾಗಲೇ ವಿವರಿಸಲಾಗಿದೆ. ‘ದೇಶದ್ರೋಹ’ದ ಆಪಾದನೆಯನ್ನು ಹೊತ್ತು ಬರ್ಮಾದ ಮಾಂಡಲೆ ಜೈಲಿನಲ್ಲಿ ೬ ವರ್ಷ ಸಜೆ ಮುಗಿಸಿ ಹೊರಬಂದ ಬಾಲಗಂಗಾಧರ್‌ ತಿಲಕರ ಮನಸ್ಸಿನಲ್ಲಿದ್ದ ವಿಚಾರಗಳಲ್ಲಿ ಪ್ರಮುಖವಾದುದು ಭಾರತದ ರಾಷ್ಟ್ರೀಯ ಹೋರಾಟವನ್ನು ಚುರುಕುಗೊಳಿಸುವುದು. ಈ ಕಾರಣಕ್ಕಾಗಿ ಅವರು ಮತ್ತು ಅವರ ಹಿಂಬಾಲಕರು ಕಾಂಗ್ರೆಸ್ಸಿಗೆ ಮರಳುವುದು ಅನಿವಾರ್ಯವಾಗಿತ್ತು. ೧೯೦೭ರ ನಂತರ ಕಾಂಗ್ರೆಸ್‌ನ ಚಟುವಟಿಕೆ ಮಂದವಾಗುತ್ತಿದ್ದುದನ್ನು ಗಮನಿಸಿದ ಕೆಲವು ಮಂದಗಾಮಿ ನಾಯಕರು ಕೂಡ ತಿಲಕರು ಕಾಂಗ್ರೆಸ್ಸಿಗೆ ಮರಳಬೇಕೆಂದು ಬಯಸಿದರು. ಆಗ ತಾನೆ ಕಾಂಗ್ರೆಸ್ಸಿಗೆ ಸೇರಿದ್ದ ಆನಿಬೆಸೆಂಟ್‌ ಅವರ ಮೂಲಕ ಇವರೆಲ್ಲಾ ತಿಲಕರು ಕಾಂಗ್ರೆಸ್ಸಿಗೆ ಬರುವಂತೆ ಒತ್ತಾಯಿಸಿದರು.

೧೮೯೩ರಲ್ಲಿ ತನ್ನ ರಾಜಕೀಯ ಜೀವನವನ್ನು ಇಂಗ್ಲೆಂಡಿನಲ್ಲಿ ಆರಂಭಿಸಿದ ಆನಿಬೆಸೆಂಟ್‌ ಅವರು ತಮ್ಮ ಥಿಯಾಸಾಫಿಕಲ್‌ ಚಳವಳಿಯ ಮೂಲಕ ಖ್ಯಾತರಾದವರು. ೧೯೦೭ರ ವೇಳೆಗೆ ಮದ್ರಾಸ್‌ನ ಅಡ್ಯಾರ್‌ನಲ್ಲೂ ಅವರು ತಮ್ಮ ಥಿಯಾಸಾಫಿಕಲ್‌ ಸೊಸೈಟಿಯನ್ನು ಆರಂಭಿಸಿದರು. ಸಾವಿರಾರು ಅಭಿಮಾನಗಳು ಬೆಸೆಂಟರ ಆದರ್ಶಗಳಾದ ಮುಕ್ತ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಮುಂತಾದ ವಿಚಾರಗಳಿಂದ ಆಕರ್ಷಿತರಾಗಿದ್ದರು. ಇಂಗ್ಲೆಂಡಿನ ಕಬಂಧಬಾಹುಗಳಿಂದ ಮುಕ್ತವಾಗಲು ಯಾವತ್ತೂ ಹವಣಿಸುತ್ತಿದ್ದ ಐರ್ಲೆಂಡಿನ ಮಹಿಳೆಯಾದ ಬೆಸೆಂಟ್‌ ಅವರು ಐರ್ಲೆಂಡಿನ ರಾಜಕೀಯ ಹೋರಾಟದ ಮಾದರಿಯನ್ನು ಇಲ್ಲಿಯೂ ಅನುಷ್ಠಾನಗೊಳಿಸಲು ಯತ್ನಿಸಿದರು. ಐರ್ಲೆಂಡಿನಲ್ಲಿ ಖ್ಯಾತವಾಗಿದ್ದ ಹೋಂ ರೂಲ್ ಚಳವಳಿಯ ಮಾದರಿಯನ್ನು ಭಾರತದಲ್ಲೂ ಪ್ರಯೋಗಿಸಲು ಮುಂದಾದರು. ಇದಕ್ಕೆ ಅವರಿಗೆ ಕಾಂಗ್ರೆಸ್ಸಿನ ಸಹಕಾರವೂ ಬೇಕಿತ್ತು ಮತ್ತು ತೀವ್ರಗಾಮಿಗಳ ಬೆಂಬಲವೂ ಬೇಕಿತ್ತು. ಆದ್ದರಿಂದ ಅವರು ತಿಲಕ್‌ ಮತ್ತಿತರ ತೀವ್ರಗಾಮಿಗಳನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಕೆಂದು ಒತ್ತಾಯ ಮಾಡಿದರು. ಆದರೆ ೧೯೧೪ರ ಡಿಸೆಂಬರ್‌ನ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಫಿರೋಜ್‌ಷಾ ಮೆಹ್ತಾ, ಮುಂಬೈನ ಮಂದಗಾಮಿ ನಾಯಕರು ಹಾಗೂ ಬಂಗಾಳದ ಕೆಲವು ಮಂದಗಾಮಿ ನಾಯಕರು ತಿಲಕರು ಕಾಂಗ್ರೆಸ್ಸಿಗೆ ಬರುವುದನ್ನು ಬಲವಾಗಿ ವಿರೋಧಿಸಿ ಸಫಲರಾದರು.

೧೯೧೫ರ ಆರಂಭದಿಂದ ಕೊನೆಯವರೆಗೂ ಹೋಂ ರೂಲ್‌ ಹೋರಾಟವನ್ನು ಬಲಪಡಿಸುವಲ್ಲಿ ಬೆಸೆಂಟ್‌ ಅವರು ಮುತುವರ್ಜಿ ವಹಿಸಿದರು. ನ್ಯೂ ಇಂಡಿಯಾ ಮತ್ತು ಕಾಮನ್‌ವ್ಹೀಲ್‌ ಎನ್ನುವ ಪತ್ರಿಕೆಗಳನ್ನು ಹೊರತಂದು ಜನಜಾಗೃತಿ ಉಂಟುಮಾಡಲು ಪ್ರಯತ್ನಿಸಿದರು. ತಿಲಕರೂ ಇದೇ ಹಾದಿಯಲ್ಲಿ ಮುಂದುವರಿಯುವುದರ ಜೊತೆ ಜೊತೆಯಾಗಿಯೇ ಒಡೆದ ಕಾಂಗ್ರೆಸ್‌ ಮತ್ತೆ ಒಂದಾಗುವುದರ ಬಗ್ಗೆ ಪ್ರಸ್ತಾಪಿಸತೊಡಗಿದರು. ಅಂತೂ ಕೊನೆಗೆ ಅಂದರೆ ೧೯೧೫ರ ಡಿಸೆಂಬರ್‌ನ ಕಾಂಗ್ರೆಸ್‌ ಅಧಿವೇಶನವು ತಿಲಕ್‌ ಮತ್ತಿತರ ತೀವ್ರಗಾಮಿ ನಾಯಕರನ್ನು, ಕಾರ್ಯಕರ್ತರನ್ನು ಕಾಂಗ್ರೆಸ್ಸಿಗೆ ಅಧಿಕೃತವಾಗಿ ಆಹ್ವಾನಿಸಿತು. ಫಿರೋಜ್‌ಷಾ ಮೆಹ್ತಾ ಅವರ ನಿಧನದಿಂದಾಗಿ ಅವರ ಹಿಂಬಾಲಕರು ತಮ್ಮ ಧ್ವನಿಯನ್ನು ಕಳೆದುಕೊಂಡದ್ದೂ ತಿಲಕರ ಮರುಪ್ರವೇಶಕ್ಕೆ ಸಹಾಯವಾಯಿತು. ಹೋಂ ರೂಲ್‌ಚಳವಳಿಯನ್ನು ತನ್ನ ಅಧಿಕೃತ ಚಳವಳಿಯನ್ನಾಗಿ ಕಾಂಗ್ರೆಸ್‌ ೧೯೧೬ರ ಸೆಪ್ಟೆಂಬರ್‌ನ ಒಳಗಾಗಿ ಮಾಡದಿದ್ದರೆ ಅದನ್ನು ತಾನೇ ಆರಂಭಿಸುವುದಾಗಿ ಬೆಸೆಂಟ್‌ ಅವರು ಘೋಷಿಸಿದರು.

ತಿಲಕರು ಯಾವುದೇ ರೀತಿಯ ಷರತ್ತುಗಳನ್ನು ಕಾಂಗ್ರೆಸ್ಸಿನ ಮುಂದಿಡದೆಯೇ ತನ್ನ ಕಾರ್ಯಕ್ರಮಗಳನ್ನು ಆರಂಭಿಸಿದರು. ೧೯೧೬ರ ಏಪ್ರಿಲ್‌ನಲ್ಲಿ ಹೋಂ ರೂಲ್‌ಲೀಗ್‌ನ ಮುಂಬೈ ಪ್ರಾಂತ್ಯದ ಮಹಾಧಿವೇಶನವನ್ನು ಬೆಳಗಾಂನಲ್ಲಿ ಉದ್ಘಾಟಿಸಿಯೇ ಬಿಟ್ಟರು. ೧೯೧೬ರ ಸೆಪ್ಟೆಂಬರ್‌ವರೆಗೂ ಕಾಯಲಿಕ್ಕೆ ಸಿದ್ಧವಿಲ್ಲದ ಬೆಸೆಂಟ್‌ ಅವರ ಅನುಯಾಯಿಗಳು (ಉದಾಹರಣೆಗೆ ಜಮುನಾದಾಸ್‌ ದ್ವಾರಕದಾಸ್‌, ಇಂದೂಲಾಲ್‌ ಯಾಗ್ನಿಕ್‌ ಮೊದಲಾದವರು) ಕೂಡ ತಮ್ಮ ಕಾರ್ಯಕ್ರಮವನ್ನು ಬೆಸೆಂಟರ ಅನುಮತಿಯೊಂದಿಗೆ ಆರಂಭಿಸಿಯೇ ಬಿಟ್ಟರು. ಬೆಸೆಂಟರ ಥಿಯಾಸಾಫಿಲ್ ಸೊಸೈಟಿಯ ಅನುಯಾಯಿಯಾದ ಅರುಂಡೇರ್‌ ಅವರು ಹೋಂ ರೂಲ್‌ ಲೀಗ್‌ಗಳನ್ನು ನೋಡುತ್ತೇವೆ. ತಿಲಕರ ನೇತೃತ್ವದ ಲೀಗ್‌ ಕರ್ನಾಟಕ, ಮಹಾರಾಷ್ಟ್ರ (ಮುಂಬೈ ನಗರವನ್ನು ಹೊರತುಪಡಿಸಿ), ಮಧ್ಯಪ್ರಾಂತ್ಯ, ಬೇರಾರ್‌ ಪ್ರದೇಶಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದ್ದರೆ, ಬೆಸೆಂಟ್‌ ನೇತೃತ್ವದ ಲೀಗ್‌ ಭಾರತದ ಉಳಿದ ಭಾಗಗಳಲ್ಲಿ ಕಾರ್ಯಾಚರಣೆಯನ್ನು ಮಾಡುವ ಇರಾದೆಯನ್ನು ಹೊಂದಿತ್ತು. ಈ ರೀತಿ ಎರಡೆರಡು ಹೋಂ ರೂಲ್‌ ಲೀಗ್‌ಗಳಿರುವುದೇಕೆ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ತಿಲಕರ ಕೆಲವು ಅನುಯಾಯಿಗಳಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ. ಹಾಗೆಯೇ ನನ್ನ ಕೆಲವು ಅನುಯಾಯಿಗಳಿಗೆ ತಿಲಕರನ್ನು ಕಂಡರೆ ಇಷ್ಟವಿಲ್ಲ” ಎಂದು ಬೆಸೆಂಟ್‌ ಅವರು ವಿವರಣೆ ನೀಡಿರುವುದು ಅರ್ಥಪೂರ್ಣವಾದುದು.

ತಿಲಕರು “ಸ್ವರಾಜ್ಯ” ಅಥವಾ “ಹೋಂ ರೂಲ್‌” ಕಲ್ಪನೆಯನ್ನು ಭಾಷಾವಾರು ಪ್ರಾಂತ್ಯಗಳ ರಚನೆಗೂ ವಿಸ್ತರಿಸಿದರೆಂದು ಬಿಪಿನ್‌ಚಂದ್ರ ಅವರು ಬರೆದಿದ್ದಾರೆ. “ಇಂಗ್ಲಿಷರು ತಮ್ಮ ಜನರಿಗೆ ಫ್ರೆಂಚ್‌ನಲ್ಲಿ ಕಲಿಸುತ್ತಾರೆಯೇ?, ಜರ್ಮನ್ನರು ತಮ್ಮವರಿಗೆ ಇಂಗ್ಲಿಷ್‌ನಲ್ಲಿ ಕಲಿಸುತ್ತಾರೆಯೇ? ಅಥವಾ ಟರ್ಕರು ತಮ್ಮವರಿಗೆ ಫ್ರೆಂಚ್‌ನಲ್ಲಿ ಕಲಿಸುತ್ತಾರಾ?” ಎನ್ನುವ ಪ್ರಶ್ನೆಯೊಂದಿಗೆ ಭಾಷಾವಾರು ಪ್ರಾಂತ್ಯದ ಹಾಗೂ ಭಾರತೀಯ ದೇಶಿ ಭಾಷೆಗಳ ರಾಜ್ಯ ಸ್ವರೂಪಕ್ಕೆ ನಾಂದಿಯಾಗುವ ಬಗೆಗಳ ಬಗ್ಗೆ ಚರ್ಚಿಸುತ್ತಾರೆ. ಬ್ರಾಹ್ಮಣೇತರ ರಾಜಕೀಯದ ಬಗ್ಗೆ ಅವರು ಅಷ್ಟೇನೂ ಉತ್ಸುಕರಾಗಿರಲಿಲ್ಲ. ತಿಲಕರ ಪ್ರಕಾರ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ನಡುವಿನ ಮಧ್ಯೆ ಭಿನ್ನತೆಗಳಿರುವುದಕ್ಕಿಂತ ಹೆಚ್ಚಾಗಿ ಶಿಕ್ಷಣವನ್ನು ಹೊಂದಿದ ಮತ್ತು ಹೊಂದದವರ ನಡುವಿನ ಭಿನ್ನತೆಗಳೇ ಪ್ರಧಾನವಾಗಿವೆ. ಬ್ರಾಹ್ಮಣರು ಶಿಕ್ಷಣವನ್ನು ಪಡೆದಿದ್ದರಿಂದಲೇ ಉನ್ನತ ಸ್ಥಾನಗಳಿಗೆ ಹೋಗುವಂತಾಯಿತು ಎನ್ನುವುದು ಮುಖ್ಯವಾಗಬೇಕೆ ವಿನಾ ಬ್ರಾಹ್ಮಣೇತರರ ಬಗ್ಗೆ ಸಹಾನುಭೂತಿ ಮತ್ತು ಬ್ರಾಹ್ಮಣರ ಬಗ್ಗೆ ತುಚ್ಛತೆಯನ್ನು ತೀವ್ರವಾಗಿ ಖಂಡಿಸಿದ ಅವರು “ದೇವರು ಅಸ್ಪಶ್ಯತೆಯನ್ನು ಸಹಿಸಿಕೊಳ್ಳುವುದಾದರೆ ನಾನು ದೇವರ ಅಸ್ತಿತ್ವವನ್ನೇ ನಂಬುವುದಿಲ್ಲ” ಎಂದು ಸಾರಿದರು. ಈ ಹಿನ್ನೆಲೆಯಲ್ಲಿ ಮರಾಠಿ ಭಾಷೆಯಲ್ಲಿ ಆರು ಕರಪತ್ರಗಳನ್ನು ಮತ್ತು ಇಂಗ್ಲಿಷ್‌ನಲ್ಲಿ ಎರಡು ಕರಪತ್ರಗಳನ್ನು ಹೊರತಂದರು. ಅವುಗಳ್ಲಲಿ ೪೭,೦೦೦ಕ್ಕೂ ಹೆಚ್ಚು ಕರಪತ್ರಗಳು ಈ ಸಂದರ್ಭದಲ್ಲಿ ಮಾರಾಟವಾದವು.

೧೯೧೬ರ ಜುಲೈ ೨೩ ರಂದು ತಿಲಕರ ೬೬ನೆಯ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಾರ್ವಜನಿಕರು ಅವರ ಹೋರಾಟಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು. ಅದೇ ದಿನ ಬ್ರಿಟಿಷ್ ‌ಸರಕಾರ ಅವರನ್ನು ಬಂದಿಸಿತು. ಮಹಮ್ಮದ್‌ ಅಲಿ ಜಿನ್ನಾ ನೇತೃತ್ವದ ವಕೀಲರು ಮ್ಯಾಜಿಸ್ಟ್ರೇಟ್‌ ಕೋರ್ಟ್‌‌ನಲ್ಲಿ ತಿಲಕರ ಪರವಾಗಿ ವಾದಿಸಿ ಸೋತರೂ, ಹೈಕೋರ್ಟ್‌‌ನಲ್ಲಿ ಗೆಲುವು ಸಾಧಿಸುತ್ತಾರೆ. ಇದು “ಹೋಂ ರೂಲ್‌ ಚಳವಳಿಗೆ ಸಂದ ಜಯ” ಎಂದು ಗಾಂಧೀಜಿಯವರು ಹೊರಡುಸುತ್ತಿದ್ದ ಯಂಗ್‌ ಇಂಡಿಯಾ ಅಭಿಪ್ರಾಯಪಟ್ಟಿತು. ಅಗಾಧ ಹೋರಾಟವಾಗಿ ಬೆಳೆದ ಈ ಚಳವಳಿಯು ಸ್ವಾತಂತ್ರ್ಯ ಹೋರಾಟವನ್ನು ಚುರುಕುಗೊಳಿಸಿತು. ೧೯೧೭ರ ಏಪ್ರಿಲ್‌ ವೇಳೆಗೆ ತಿಲಕರ ಲೀಗ್‌ನ ಸದಸ್ಯರ ಸಂಖ್ಯೆ ೧೪,೦೦೦ ಆಗಿತ್ತು.

ಬೆಸೆಂಟರ ಹೋಂ ರೂಲ್‌ಲೀಗ್‌ನ ಶಾಖೆಗಳ ಸಂಖ್ಯೆ ೨೦೦ಕ್ಕೂ ಹೆಚ್ಚಿತ್ತು. ಅರುಂದೇಲ್‌, ಸಿ. ಪಿ. ರಾಮಸ್ವಾಮಿ ಅಯ್ಯರ್‌ ಮತ್ತು ಬಿ. ಪಿ. ವಾಡಿಯಾ ಮೊದಲಾದವರ ಸಹಕಾರದಿಂದ ಬೆಸೆಂಟ್‌ ಅವರು ಚಳವಳಿಯ ನಾಯಕತ್ವ ವಹಿಸಿದರು. ತಿಲಕರ ಲೀಗ್‌ನ ಸದಸ್ಯರ ಸಂಖ್ಯೆಗೆ ಹೋಲಿಸಿದರೆ ಬೆಸೆಂಟರ ಲೀಗ್‌ನ ಸದಸ್ಯರ ಸಂಖ್ಯೆ ಕಡಿಮೆಯೇ. ೧೯೧೭ರ ಮಾರ್ಚ್‌ ಹೊತ್ತಿಗೆ ಸದಸ್ಯರ ಸಂಖ್ಯೆ ೭,೦೦೦ ಆಗಿತ್ತು. ಥಿಯಾಸಾಫಿಕಲ್‌ ಸೊಸೈಟಿಯ ಸದಸ್ಯರು ಮಾತ್ರವಲ್ಲದೇ ಅಲಹಾಬಾದ್‌ನ ಜವಾಹರ್‌ಲಾಲ್‌ ನೆಹರೂ, ಕಲ್ಕತ್ತಾದ ವಿ. ಚಕ್ರವರ್ತಿ ಮತ್ತು ಜೆ. ಬ್ಯಾನರ್ಜಿ ಇವರಂಥವರೂ ಹೋಂ ರೂಲ್‌ ಚಳವಳಿಯಲ್ಲಿ ಪಾಲ್ಗೊಂಡರು.

ರಾಜಕೀಯ ತಿಳುವಳಿಕೆಯನ್ನು ನೀಡುವ ಮೂಲಕ ಹೋಂ ರೂಲ್‌ ಚಳವಳಿಯ ಆಂದೋಲನ ಮುಂದುವರಿಯಿತು. ಈ ನಿಟ್ಟಿನಲ್ಲಿ ರಾಜಕೀಯದ ಮೇಲೆ ಚರ್ಚೆಗಳಾದವು. ರಾಷ್ಟ್ರೀಯ, ರಾಜಕೀಯಕ್ಕೆ ಸಂಬಂಧಿಸಿದ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ವಿದ್ಯಾರ್ಥಿಗಳಿಗೆ ರಾಜಕೀಯ ಶಿಕ್ಷಣ ನೀಡುವ ಯೋಜನೆ ತಯಾರಾಯಿತು. ಕರಪತ್ರಗಳನ್ನು ಮುದ್ರಿಸಿ ಹಂಚಲಾಯಿತು. ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಲೇ ಇವರು ಸ್ಥಳೀಯ ಸರಕಾರಗಳಲ್ಲಿ ಪಾಲ್ಗೊಂಡರು. ಚಳವಳಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಇಂಗ್ಲಿಷ್‌ನಲ್ಲಿ ಪ್ರಕಟವಾದ ೨೬ ಕರಪತ್ರಗಳ ಮೂಲಕ ಮೂರು ಲಕ್ಷ ಪ್ರತಿಗಳನ್ನು ಈ ಹಿನ್ನೆಲೆಯಲ್ಲಿ ಹಂಚಲಾಯಿತು. ಆಶ್ಚರ್ಯ ಎನ್ನುವಂತೆ ಬಹಳ ಜನರು ಮುಖ್ಯವಾಗಿ ಕಾಂಗ್ರೆಸ್‌ನ ಜಡತ್ವದಿಂದ ನೊಂದ ಮಂದಗಾಮಿಗಳೂ ಹೋಂ ರೂಲ್‌ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲಕ್ನೋ ಕಾಂಗ್ರೆಸ್‌ನ ಅಧಿವೇಶನದಲ್ಲಿ ಕೈಗೊಂಡ ಕಾಂಗ್ರೆಸ್‌ ಮುಸ್ಲಿಮ್‌ಲೀಗ್‌ ಸಮನ್ವಯ ಸಮಿತಿಯ ಕಾರ್ಯಕ್ರಮಗಳ ಹಿಂದೆ ಹೋಂ ರೂಲ್‌ ಚಳವಳಿಯ ಪರಿಣಾಮವಿದ್ದಿತು.

* * *

ಒಂದು ಕಡೆ ತಿಲಕರ ನೇತೃತ್ವದ ಹೋಂರೂಲ್‌ ಚಳವಳಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದರೆ ಇನ್ನೊಂದು ಕಡೆಯಿಂದ ಬೆಸೆಂಟರ ಹೋಂ ರೂಲ್‌ಲೀಗ್‌ ಬ್ರಿಟಿಷ್ ‌ಸರಕಾರವನ್ನು ಆಕ್ರಮಣ ಮಾಡುತ್ತಿತ್ತು. ತಿಲಕರನ್ನು ಏಕಾಏಕಿ ಬಂಧಿಸಿ ಮುಖಭಂಗ ಮಾಡಿಕೊಂಡ ಬ್ರಿಟಿಷ್ ‌ಸರಕಾರ ಮತ್ತೊಮ್ಮೆ ೧೯೧೭ರ ಜೂನ್‌ನಲ್ಲಿ ಬೆಸೆಂಟರನ್ನು ವಾಡಿಯಾ ಮತ್ತು ಅರುಂದೇಲ್‌ ಅವರೊಂದಿಗೆ ಬಂಧಿಸಿತು. ಇದಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಯೂ ನಡೆಯಿತು. ಪರಿಣಾಮವಾಗಿ, ಸರ್‌. ಎಸ್‌. ಸುಬ್ರಹ್ಮಣ್ಯ ಅಯ್ಯರ್‌ ಅವರು ತಮ್ಮ “ನೈಟ್‌ಹುಡ್‌” ಪ್ರಶಸ್ತಿಯನ್ನು ಬ್ರಿಟಿಷರಿಗೆ ಹಿಂದಿರುಗಿಸಿದರು. ಇದರೊಂದಿಗೆ ಮಂದಗಾಮಿ ನಾಯಕರಾದ ಮನದಮೋಹನ ಮಾಳವೀಯ, ಸುರೇಂದ್ರನಾಥ ಬ್ಯಾನರ್ಜಿ ಮತ್ತು ಜಿನ್ನಾ ಅವರು ಹೋಂ ರೂಲ್‌ನ ಸದಸ್ಯತ್ವವನ್ನು ಸ್ವೀಕರಿಸಿ ಬೀದಿಗಿಳಿದರು. ೧೯೧೭ರ ಜುಲೈ ೨೮ ರಂದು ನಡೆದ ಅಖಿಲ ಭಾರತ ಕಾಂಗ್ರೆಸ್‌ನ ಸಭೆಯಲ್ಲಿ ಬೆಸೆಂಟ್‌ ಮತ್ತಿತರರನ್ನು ಸರಕಾರವು ಬಂಧಮುಕ್ತಗೊಳಿಸುವವರೆಗೆ ಅಸಹಕಾರ ಚಳವಳಿಯನ್ನು ಕೈಗೆತ್ತಿಕೊಳ್ಳಬೇಕೆಂದು ತಿಲಕರು ಸಲಹೆ ಮಾಡಿದರು. ಈ ಸಲಹೆಯನ್ನು ಸಭೆ ಅಂಗೀಕರಿಸಿತು. ಮಿಲಿಯಟ್ಟಲೆ ಜನರ ಸಹಿಗಳನ್ನು ಬೆಸೆಂಟರ ಪರವಾಗಿ, ಅಸಹಕಾರ ಹೋರಾಟದ ಪರವಾಗಿ ಸಂಗ್ರಹಿಸುವ ಕೆಲಸ ಭರದಿಂದ ಆರಂಭಗೊಂಡಿತು. ಜನಪರವಾದ ಹೋರಾಟದಿಂದ ತಲ್ಲಣಗೊಂಡ ಬ್ರಿಟಿಷ್ ‌ಸರಕಾರ ಕೆಲವು ಸವಲತ್ತುಗಳನ್ನು ಭಾರತೀಯರಿಗೆ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ೧೯೧೭ರ ಆಗಸ್ಟ್‌ ೨೦ ರಂದು ಭಾರತ ಸರಕಾರದ ಕಾರ್ಯದರ್ಶಿ ಮಾಂಟೆಗೋ “ಹೌಸ್‌ ಆಫ್‌ ಕಾಮನ್ಸ್‌” ದಲ್ಲಿ ಭಾರತೀಯರಿಗೆ ಅನೇಕ ಬಗೆಯ ಸವಲತ್ತುಗಳನ್ನು ನೀಡುವ ಗೊತ್ತುವಳಿಯನ್ನು ಮಂಡಿಸಿದನು. ಅದಕ್ಕೆ ಪಾರ್ಲಿಮೆಂಟ್‌ ಒಪ್ಪಿಗೆ ನೀಡಿತು. ಮಾಂಟೆಗೋನ ‘ಸುಧಾರಣೆ’ಗಳಲ್ಲಿ ಪ್ರಮುಖವಾದುದು ಯಾವುದೆಂದರೆ ಆಡಳಿತಾತ್ಮಕ ಹುದ್ದೆಗಳಲ್ಲಿ ಭಾರತೀಯರಿಗೆ ಆದ್ಯತೆಯನ್ನು ನೀಡುವುದು. ಬ್ರಿಟಿಷ್ ‌ಸಾಮ್ರಾಜ್ಯದ ಭಾಗವಾಗಿಯೇ “ಜವಾಬ್ದಾರಿ ಸಹಕಾರ”ವನ್ನು ಸ್ಥಾಪಿಸಲು ಸ್ಥಳೀಯ ಸಂಸ್ಥೆಗಳಿಗೆ ಪ್ರಾಧಾನ್ಯತೆಯನ್ನು ನೀಡುವುದು ಕೂಡ ಮಾಂಟೆಗೋ ಸುಧಾರಣೆಯ ಮುಖ್ಯ ಅಂಶವಾಗಿತ್ತು. ೧೯೦೯ರಲ್ಲಿ ಲಾರ್ಡ್‌ ಮಾರ್ಲೆಯು ಯಾವುದೇ ಕಾರಣಕ್ಕೂ ಮಿಂಟೊ-ಮಾರ್ಲೆ ಸುಧಾರಣೆಯು “ಸ್ಥಳೀಯ ಸರಕಾರಗಳನ್ನು ಸ್ಥಾಪಿಸುವ ಹಿನ್ನೆಲೆಯಲ್ಲಿ ಸುಧಾರಣೆ ಮಾಡುತ್ತಿಲ್ಲ” ಎಂದಿದ್ದನು. ಆದರೆ ೧೯೧೭ರ ಸುಧಾರಣೆಯಲ್ಲಿ ಅದು ಸಾಧ್ಯವಾಯಿತು. ಸ್ಥಳೀಯ ಸರಕಾರಗಳನ್ನು ಸರಕಾರವೇ ಪ್ರೋತ್ಸಾಹಿಸುವಂತಹ ವಾತಾವರಣ ನಿರ್ಮಾಣವಾದದ್ದು ಜನಪರವಾದ ಹೋರಾಟಗಳಿಂದಲೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ಎಲ್ಲ ಜಂಜಾಟಗಳ ಮಧ್ಯೆ ೧೯೧೭ರ ಸೆಪ್ಟೆಂಬರ್‌ ತಿಂಗಳಲ್ಲಿ ಬೆಸೆಂಟರ ಬಿಡುಗಡೆ ಆಯಿತು. ಆ ಹೊತ್ತಲ್ಲಿ ಬೆಸೆಂಟರು ಜನಪ್ರಿಯತೆಯ ತುತ್ತ ತುದಿಯಲ್ಲಿದ್ದರು. ತಿಲಕರ ಸಲಹೆಯ ಮೇರೆಗೆ ಬೆಸೆಂಟರನ್ನು ೧೯೧೭ರ ಡಿಸೆಂಬರ್‌ನಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಹಾಧಿವೇಶನದ ಅಧ್ಯಕ್ಷರನ್ನಾಗಿ ಮಾಡಲಾಯಿತು.

* * *

೧೯೧೭ರ ಜನಾಂದೋಲನದ ತೀವ್ರತೆಯು ೧೯೧೮ರ ವೇಳೆಗೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದಿತು. ಅಸಹಕಾರ ಚಳವಳಿಯನ್ನು ತೀವ್ರಗೊಳಿಸಬೇಕೆನ್ನುವ ಹೋಂರೂಲ್‌ ಲೀಗ್‌ನ ಕೂಗು ಕಡಿಮೆಯಾಗತೊಡಗಿದವು. ೧೯೧೮ರಲ್ಲಿ ಪ್ರಕಟವಾದ ಮಾಂಟೆಗೋ ಸುಧಾರಣೆಯ ಅಂಶಗಳ ಬಗ್ಗೆ ಕಾಂಗ್ರೆಸ್‌ನ ಒಳಗಿನ ಭಿನ್ನಭಿನ್ನ ವರ್ಗಗಳು ಭಿನ್ನವಾಗಿ ಪ್ರತಿಕ್ರಿಯಿಸಲು ಆರಂಭಿಸಿದವು. ಇದು ರಾಷ್ಟ್ರೀಯವಾದಿಗಳ ನಡುವೆ ಬಿರುಕನ್ನುಂಟುಮಾಡಿತು. ಕೆಲವರು ಈ ಸುಧಾರಣೆಯನ್ನು ಒಪ್ಪಿಕೊಂಡರೆ, ಮತ್ತೆ ಕೆಲವರು ಅದನ್ನು ತಿರಸ್ಕರಿಸಿದರು. ಅನಿಬೆಸೆಂಟ್‌ ಅವರು ಕೂಡ ಬೇರೆ ಬೇರೆ ರೀತಿಯಾಗಿ ಇದನ್ನು ವಿಶ್ಲೇಷಿಸಿ ಒಂದು ರೀತಿಯ ಗೊಂದಲವನ್ನು ನಿರ್ಮಿಸಿದರು. ಬ್ರಿಟಿಷರ ವಿರುದ್ಧ ತೀವ್ರವಾದ ಪ್ರತಿಭಟನೆಯ ಅಗತ್ಯವಿಲ್ಲ ಎಂದು ಒಂದು ಕಡೆ ಹೇಳಿದರೆ, ಮತ್ತೊಮ್ಮೆ ಹೋಂ ರೂಲ್‌ಲೀಗ್‌ನ ಕಿರಿಯ ಸಹೋದ್ಯೋಗಿಗಳ ಒತ್ತಾಯದ ಮೇರೆಗೆ ಪ್ರತಿಭಟನೆಯ ಅಗತ್ಯವಿದೆಂದದ್ದನ್ನು ಬಿಪಿನ್‌ಚಂದ್ರ ಅವರು ದಾಖಲಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರಂತೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲದಲ್ಲೇ ಮುಳಿಗಿದರು. ವೇಲೆಂಟೈನ್‌ ಚಿರೋಲ್‌ ಎಂಬ ಆಂಗ್ಲ ವಿದ್ವಾಂಸ ಇಂಡಿಯನ್‌ ಅನ್‌ರೆಸ್ಟ್‌ ಎನ್ನುವ ಕೃತಿಯಲ್ಲಿ ಭಾರತೀಯರನ್ನು ಅವಹೇಳನ ಮಾಡಿದರು ಎನ್ನುವ ಕಾರಣಕ್ಕಾಗಿ ತಿಲಕರು ಇಂಗ್ಲೆಂಡಿನಲ್ಲಿ ಚಿರೋಲ್‌ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದ ಹಿನ್ನೆಲೆಯಲ್ಲಿ ತಿಲಕರು ಇಂಗ್ಲೆಂಡಿನಲ್ಲಿ ಚಿರೋಲ್‌ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದ ಹಿನ್ನೆಲೆಯಲ್ಲಿ ತಿಲಕರು ಇಂಗ್ಲೆಂಡಿಗೆ ಹೋದರು. ಜನಾಂದೋಲನ ತೀವ್ರವಾಗುತ್ತಿದ್ದ ಹೊತ್ತಿನಲ್ಲಿ ಬೆಸೆಂಟರಿಗೆ ನಾಯಕತ್ವ ನೀಡಲು ಒಂದು ಕಡೆಯಲ್ಲಿ ಸಾಧ್ಯವಾಗಿರಲಿಲ್ಲ. ಅದೇ ಹೊತ್ತಿಗೆ ತಿಲಕರೂ ಇಂಗ್ಲೆಂಡಿಗೆ ಹೋದ ಕಾರಣಕ್ಕಾಗಿ ಜನಾಂದೋಲನವು ತೀವ್ರತೆಗೊಳ್ಳುವ ಮೊದಲೇ ತನ್ನ ಪ್ರಕರತೆಯನ್ನು ಕಳೆದುಕೊಂಡಿತು. ಸಮರ್ಥ ನಾಯಕತ್ವವಿಲ್ಲದ ಕಾಂಗ್ರೆಸ್‌ನ ರಾಷ್ಟ್ರೀಯ ಹೋರಾಟಕ್ಕೆ ಈ ಕಾರಣಗಳಿಂದಾಗಿ ಹಿನ್ನಡೆ ಉಂಟಾಯಿತು. ಇಂಥ ಸಂದರ್ಭದಲ್ಲಿ ಈಗಾಗಲೇ ಭಾರತೀಯರಿಗಾಗಿ ದಕ್ಷಿಣ ಆಫ್ರಿಕಾದಲ್ಲಿ ಹೋರಾಟ ಮಾಡಿ ದೊಡ್ಡ ಹೆಸರು ಮಾಡಿದ್ದ ಮೋಹನದಾಸ ಕರಮಚಂದ್ರ ಗಾಂಧಿಯವರು ಭಾರತದ ರಾಷ್ಟ್ರೀಯ ಹೋರಾಟಕ್ಕೆ ಒಂದು ಹೊಸ ಆಯಾಮವನ್ನು ನೀಡಿ ಕಾಂಗ್ರೆಸ್ಸಿನ ಹೋರಾಟವನ್ನು ಮುಂದುವರಿಸಿದರು.