ಅಭಿವೃದ್ಧಿ ಯೋಜನೆ ಭಾರತದ ಅನುಭಾವ (೧೯೫೦-೧೯೯೦)

೧೯೫೦ರಿಂದ ೧೯೯೦ರ ನಡುವೆ ನಾಲ್ಕು ದಶಕಗಳ ಕಾಲಾವಧಿಯನ್ನು ‘ಅಭಿವೃದ್ಧಿ ಯೋಜನಾ ಪರ್ವ’ವೆಂದು ಕರೆದಿದ್ದೇವೆ. ೧೯೯೦ರ ನಂತರದ ಕಾಲಾವಧಿಯನ್ನು ‘ಉದಾರವಾದ-ಸುಧಾರಣಾವಾದ ಪರ್ವ’ ಎಂದು ಕರೆದಿದ್ದೇವೆ. ೧೯೫೦ರಿಂದ ೧೯೯೯೦ರ ನಡುವಿನ ಅಭಿವೃದ್ಧಿ ಯೋಜನಾ ಪರ್ವದ ಕಾಲಾವಧಿಯು ಅವಿಚ್ಛಿನ್ನವಾದುದಾಗಿರಲಿಲ್ಲ. ಈ ಕಾಲಾವಧಿಯನ್ನು ಅನೇಕ ಉಪ ಕಾಲಘಟ್ಟಗಳಾಗಿ ವರ್ಗೀಕರಿಸಿಬಹುದಾಗಿದೆ.

ಅ. ಅಭಿವೃದ್ಧಿ ಯೋಜನಾ ಪರ್ವದ ನೆಹರೂ ಕಾಲಘಟ್ಟ ೧೯೪೭-೧೯೬೪

ಆ. ಅಭಿವೃದ್ಧಿ ಯೋಜನಾ ಪರ್ವದ ಗರೀಬಿ ಹಟಾವೊ ಕಾಲಘಟ್ಟ ೧೯೬೬-೧೯೭೭

ಇ. ಉದಾರವಾದ-ಸುಧಾರಣಾವಾದದ ಪ್ರವೇಶದ ಕಾಲಘಟ್ಟ ೧೯೭೭-೧೯೯೦

ನೆಹರೂ ಕಾಲಘಟ್ಟ (೧೯೪೭-೧೯೬೪)

ಸ್ವಾತಂತ್ರ್ಯಾ ನಂತರದ ಮೂರು ಪಂಚವಾರ್ಷಿಕ ಯೋಜನೆಗಳ ಕಾಲಘಟ್ಟವನ್ನು (೧೯೫೦-೫೧/೧೯೫೫-೫೬, ೧೯೫೫-೫೬/೧೯೬೦-೬೧, ೧೯೬೦-೬೧/೧೯೬೫-೬೬) ಅಭಿವೃದ್ಧಿ ಯೋಜನೆಯ ನೆಹರೂ ಕಾಲಘಟ್ಟ ಎಂದು ಕರೆಯಲಾಗಿದೆ. ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ವಿಚಾರ ಪ್ರಣಾಳಿಕೆ, ರಚನೆ ಮುಂತಾದವುಗಳ ಮೇಲೆ ನೆಹರೂ ಅವರ ಪ್ರಭಾವ ದಟ್ಟವಾಗಿತ್ತು (ಚಕ್ರವರ್ತಿ ೧೯೮೯:೮). ಈ ಕಾಲಾವಧಿಯ ಬಹು ಮುಖ್ಯ ಲಕ್ಷಣವೆಂದರೆ ಅಭಿವೃದ್ಧಿ ಯೋಜನೆ ಬಗ್ಗೆ ಅಂದು ದೇಶದಲ್ಲಿದ್ದ ಬದ್ಧತೆ ಹಾಗೂ ವಿಶ್ವಾಸ. ಈ ಬದ್ಧತೆ ಹಾಗೂ ವಿಶ್ವಾಸದಿಂದಾಗಿ ೧೯೫೦-೬೦ರ ದಶಕದಲ್ಲಿ ಭಾರತೀಯ ಆರ್ಥಿಕತೆಯ ಸಿದ್ಧಿ ಸಾಧನೆ ತೃಪ್ತಿದಾಯವಾಗಿತ್ತು. ಮೊದಲನೆಯ ಪಂಚವಾರ್ಷಿಕ ಯೋಜನೆಯು (೧೯೫೦-೫೧/೧೯೫೫-೫೬) ಒಂದು ಸಣ್ಣ ಪ್ರಮಾಣದ ಪ್ರಯೋಗವಾಗಿತ್ತು. ಆದರೆ ನೆಹರೂ-ಮಹಾಲನೊಬಿಸ್ ವಿಚಾರ ಪ್ರಣಾಳಿಕೆಯ ಚೌಕಟ್ಟಿನಲ್ಲಿ ಎರಡನೆಯ ಪಂಚವಾರ್ಷಿಕ ಯೋಜನೆಯನ್ನು ಸಿದ್ಧ ಮಾಡಲಾಗಿತ್ತು. ಅಭಿವೃದ್ಧಿ ಯೋಜನಾ ಪರ್ವದ ಮೊದಲ ೧೫ ವರ್ಷ (೧೯೫೦-೧೯೬೫)ಗಳು ಅನೇಕ ದೃಷ್ಟಿಯಿಂದ ಅತ್ಯಂತ ಯಶಸ್ವಿ ಕಾಲಘಟ್ಟವಾಗಿತ್ತೆಂದು ಹೇಳಬಹುದು. ಆದರೆ ಅಭಿವೃದ್ಧಿ ಯೋಜನಾ ಪ್ರಕ್ರಿಯೆಯು ಮೂರನೇ ಪಂಚವಾರ್ಷಿಕ ಯೋಜನೆ ಕಾಲಾವಧಿಯಲ್ಲಿ ಅನೇಕ ಆಂತರಿಕ ಹಾಗೂ ಬಾಹ್ಯ ಒತ್ತಡ ಬಿಕ್ಕಟ್ಟು-ಇಕ್ಕಟ್ಟುಗಳನ್ನು ಭಾರತ ಎದುರಿಸಬೇಕಾಯಿತು. ಈ ಒತ್ತಡ ಬಿಕ್ಕಟ್ಟು-ಇಕ್ಕಟ್ಟುಗಳನ್ನು ಚಕ್ರವರ್ತಿಯವರು ಹೀಗೆ ಪಟ್ಟಿ ಮಾಡಿದ್ದಾರೆ.

ಅ. ೧೯೬೨ರಲ್ಲಿ ಭಾರತದ ಮೇಲೆ ಚೀನಾದ ಆಕ್ರಮಣ

ಆ. ೧೯೬೫ರಲ್ಲಿ ಪ್ರಾಕಿಸ್ತಾನ ಆಕ್ರಮಣ

ಇ. ಶತ್ರು ರಾಷ್ಟ್ರಗಳ ಆಕ್ರಮಣದಿಂದಾಗಿ ಭಾರತ ರಕ್ಷಣಾ ವೆಚ್ಚವು ಅಗಾಧವಾಗಿ ಬೆಳೆಯಿತು.

ಈ. ೧೯೬೫-೬೬ ಮತ್ತು ೬೬-೬೭ರ ಸಾಲುಗಳಲ್ಲಿನ ಬರಗಾಲದಿಂದಾಗಿ ಆಹಾರ ಪದಾರ್ಥಗಳ ಆಮುದು ಅಧಿಕವಾದುದು.

ಉ. ಅಮೆರಿಕೆಯ ವಿದೇಶಿ ನೆರವನ್ನು ರದ್ದು ಪಡಿಸಿದ್ದು ಮತ್ತು ಅದರಿಂದಾಗಿ ಉಂಟಾದ ವಿದೇಶಿ ವಿನಿಮಯ ಬಿಕ್ಕಟ್ಟು.

ಊ. ವಿದೇಶಿ ಪಾವತಿ ಶಿಲ್ಕುವಿನಲ್ಲಿ ಉಂಟಾದ ಭಾರಿ ಕೊರತೆಯನ್ನು ಸರಿಪಡಿಸಲು ಕೈಗೊಂಡ ರೂಪಾಯಿಯ ಅಪಮೌಲ್ಯ.

ಈ ಎಲ್ಲ ಒತ್ತಡ ಬಿಕ್ಕಟ್ಟು ಅನಿಶ್ಚಿತತೆಗಳಿಂದಾಗಿ ಅಭಿವೃದ್ಧಿ ಯೋಜನಾ ಪ್ರಕ್ರಿಯೆಗೆ ೧೯೬೬ರಲ್ಲಿ ತಾತ್ಕಾಲಿಕ ತಡೆಯೊಡ್ಡಲಾಯಿತು. ಸರ್ಕಾರದ ಸಾರ್ವಜನಿಕ ಬಂಡವಾಳ ಹೂಡಿಕೆಯನ್ನು ಕಡಿತಗೊಳಿಸಲಾಯಿತು.

ಅಭಿವೃದ್ಧಿ ಯೋಜನಾ ಪರ್ವದ ನೆಹರೂ ಘಟ್ಟದಲ್ಲಿ ಕೃಷಿ ವಲಯವನ್ನು ಪ್ರತ್ಯೇಕವಾಗಿ ಬಿಡಲಾಗಿತ್ತು. ಇದರ ಫಲವಾಗಿ ೧೯೬೫ರ ನಂತರ ಕೃಷಿಯ ಸಮಸ್ಯೆಗಳು ಉಲ್ಬಣಗೊಂಡವು. ವರಮಾನ ಮತ್ತು ಸಂಪತ್ತುಗಳ ಮರುವಿತರಣೆ ಬಗ್ಗೆ ಈ ಕಾಲಘಟ್ಟದಲ್ಲಿ ವಿಶೇಷವಾದ ಕ್ರಮಗಳನ್ನೇನು ಕೈಗೊಳ್ಳಲಾಗಲಿಲ್ಲ. ಅರೆಮನಸ್ಸಿನಿಂದ ಕೈಗೊಂಡ ಭೂಸುಧಾರಣೆ, ಗೇಣಿ ಸುಧಾರಣೆ, ಭೂಮಿತಿ ಶಾಸನ ಮುಂತಾದವು ಮಹತ್ತರ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಲಿಲ್ಲ. ವರಮಾನ-ಉತ್ಪನ್ನ-ಉದ್ಯೋಗ ಬಂಡವಾಳ ಮುಂತಾದವುಗಳ ಪ್ರಮಾಣದಲ್ಲಿನ ಏರಿಕೆಯು ವಿತರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ ಎಂದು ಈ ಅವಧಿಯಲ್ಲಿ ನಂಬಲಾಗಿತ್ತು. ಆದರೆ ೬೦ರ ದಶಕದ ಕೊನೆಯ ಹೊತ್ತಿಗೆ ಉತ್ಪನ್ನ ಪೂರೈಕೆಗಳೇ ‘ವಿತರಣೆ’ ಜವಾಬ್ಧಾರಿಯನ್ನು ನಿರ್ವಹಿಸುತ್ತವೆ ಎಂಬುದು ಹುಸಿಯಾಯಿತು. ಅಮರ್ತ್ಯಸೇನರ ಪರಿಭಾಷೆಯಲ್ಲಿ ಹೇಳುವುದಾದರೆ ನೆಹರೂ ಕಾಲಘಟ್ಟದಲ್ಲಿ ‘ಉತ್ಪನ್ನ-ವರಮಾನ-ಉದ್ಯೋಗ-ಬಂಡವಾಳ’ಗಳು ಇರುವುದೇ ಮುಖ್ಯವಾಗಿತ್ತು. ಈ ಕಾಲಘಟ್ಟದಲ್ಲಿ ಉತ್ಪನ್ನ-ವರಮಾನ ಬಂಡವಾಳ ಮುಂತಾದವು ಸರ್ವರಿಗೂ ‘ದೊರೆಗೊಳ್ಳುವುದರ’ ಬಗ್ಗೆ ನಿರ್ಲಕ್ಷ್ಯ ತಳೆಯಲಾಗಿತ್ತು. ಹಾಗೆ ನೋಡಿದರೆ ನೆಹರೂ-ಮಹಾಲನೊಬಿಸ್ ಅಭಿವೃದ್ಧಿ ಯೋಜನಾ ಮಾದರಿಯಲ್ಲಿ ಆಸ್ತಿ-ಸಂಪತ್ತು-ಉತ್ಪಾದನಾ ಸಂಪನ್ಮೂಲಗಳ ಮರುವಿತರಣೆ ಮಾಡಲು ವಿಶೇಷವಾದ ಕಾರ್ಯಕ್ರಮವೆಂಬುದು ಇರಲಿಲ್ಲ. ಖಾಸಗಿ ವಲಯದ ಉತ್ಪಾದನಾ ಚಟುವಟಿಕೆಗಳ ಮೇಲೆ ಹಾಗೂ ಉತ್ಪಾದನಾ ಸಂಪನ್ಮೂಲಗಳ ಖಾಸಗಿ ಮಾಲೀಕತ್ವಗಳ ಮೇಲೆ ನಿಯಂತ್ರಣ ಅಂಕುಶ ಹಾಕುವ ಕಾರ್ಯಕ್ರಮ ಮಾತ್ರ ಅಲ್ಲಿತ್ತು. ಸಮಾನತೆ ಉದ್ದೇಶಕ್ಕೆ ನೆಹರೂ-ಮಹಾಲನೊಬಿಸ್ ಮಾದರಿ ಬದ್ಧವಾಗಿತ್ತು. ಆದರೆ ಅದನ್ನು ಕಾರ್ಯರೂಪಕ್ಕಿಳಿಸುವ ನೇರವಾದ ಕ್ರಮಗಳು ಮಾದರಿಯಲ್ಲಿರಲಿಲ್ಲ. ಅಭಿವೃದ್ಧಿ ಮೂಲಕವೇ ಸಮಾನತೆ ಸಾಧಿಸುವ ಕ್ರಮವನ್ನು ಈ ಮಾದರಿ ಒಳಗೊಂಡಿತ್ತು.

ಗರೀಬಿ ಹಟಾವೊ ಕಾಲಘಟ್ಟ (೧೯೬೬-೧೯೭೭)

೧೯೬೬ರ ನಂತರ, ಅಂದರೆ ನೆಹರೂ ಯುಗದ ಅಂತ್ಯದ ತರುವಾಯ ಭಾರತದಲ್ಲಿ ಅಭಿವೃದ್ಧಿ ಯೋಜನೆಯ ಅನೇಕ ಬದಲಾವಣೆಗಳಿಗೆ ಒಳಗಾಯಿತು. ಮೊದಲ ಮೂರು ಯೋಜನೆಗಳಲ್ಲಿ ಅಲಕ್ಷ್ಯಕ್ಕೆ ಗುರಿಯಾಗಿದ್ದ ಕೃಷಿ ರಂಗಕ್ಕೆ ಈಗ ಆದ್ಯತೆ ಪ್ರಾಪ್ತವಾಯಿತು. ೧೯೬೦ರ ನಂತರ ಹೊಸ ಕೃಷಿ ತಂತ್ರವನ್ನು ಅಳವಡಿಸಿಕೊಳ್ಳಲಾಯಿತು. ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಯಿತು. ಸುಧಾರಿತ ತಳಿಗಳು, ರಸಗೊಬ್ಬರ, ನೀರಾವರಿ, ಬ್ಯಾಂಕು ಸಾಲ ಮುಂತಾದವುಗಳ ಬಾಬ್ತು ಬೃಹತ ಪ್ರಮಾಣದ ಸಹಾಯಧನ, ಒದಗಿಸುವ ಕ್ರಮಗಳು ಜಾರಿಗೆ ಬಂದವು. ಇವೆಲ್ಲ ಬದಲಾವಣೆಗಳ ಪರಿಣಾಮವಾಗಿ ದೇಶದಲ್ಲಿ ‘ಹಸಿರುಕ್ರಾಂತಿ’ ಸಂಭವಿಸಿತು. ೧೯೭೦-೭೧ರ ನಂತರ ದೇಶವು ಆಹಾರದಲ್ಲಿ ಸ್ವಾವಲಂಬಿಯಾಯಿತು.

ಈ ಅವಧಿಯಲ್ಲಿ ಸರ್ಕಾರವು ಅಸ್ತವ್ಯಸ್ತವಾಗಿ ಬೆಳೆಯಿತು. ಪ್ರಭುತ್ವವು ಸರ್ವವ್ಯಾಪಿಯಾಯಿತು. ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಿಸಲಾಯಿತು. ವ್ಯಾಪಾರ ವಾಣಿಜ್ಯ ವ್ಯವಹಾರ ವಹಿವಾಟುಗಳ ಮೇಲೆ ವಿಪರೀತ ನಿಯಂತ್ರಣ ನಿರ್ಬಂಧಗಳನ್ನು ಹೇರಲಾಯಿತು. ನೂರಾರು ಉತ್ಪನ್ನಗಳ ಬೆಲೆಗಳನ್ನು ನಿಯಂತ್ರಣದ ಚೌಕಟ್ಟಿಗೆ ತರಲಾಯಿತು. ವಿದೇಶಿ ಬಂಡವಾಳ ಹೂಡಿಕೆ ಮೇಲೆ ವಿಶೇಷ ನಿಯಂತ್ರಣ ವಿಧಿಸಲಾಯಿತು. ಸುಖಮಾಯ್ ಚಕ್ರವರ್ತಿಯವರು (೧೯೯೪:೮) ಸರಿಯಾಗಿ ಗುರುತಿಸುವಂತೆ ಕಾಲಾವಧಿಯಲ್ಲಿ ಭಾರತವು ‘ಪ್ರಭುತ್ವ ಸರ್ವಾಧಿಕಾರಿ’ ವ್ಯವಸ್ಥೆಯ ರೂಪ ಪಡೆದುಕೊಂಡಿತು. ಆದರೆ ಇದರಿಂದ ಆರ್ಥಿಕತೆಯ ಅರೋಗ್ಯವೇನೂ ಸುಧಾರಿಸಲಿಲ್ಲ. ಪ್ರಭುತ್ವದ ಅಸ್ತವ್ಯಸ್ತ ಬೆಳವಣಿಗೆಯಿಂದಾಗಿ ದೇಶದಲ್ಲಿ ‘ಪರ್ಮಿಟ್-ಲೈಸನ್ಸ್-ದಲ್ಲಾಳಿ ರಾಜ್’ ಸೃಷ್ಟಿಗೊಂಡಿತು. ಸರ್ಕಾರೀಕರಣವು ತೀವ್ರವಾಯಿತು. ಜನಲೋಲುಪತೆ (popilism) ಎಂಬುದು ಪ್ರಭುತ್ವದ ವಿಚಾರ ಪ್ರಣಾಳಿಕೆಯಾಗಿ ಬಿಟ್ಟಿತು.

ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ಸಂಭವಿಸಿದ ಒಂದು ಬಹು ಮುಖ್ಯ ಸೈದ್ಧಾಂತಿಕ ಬದಲಾವಣೆಯೆಂದರೆ ಬಡತನ ನಿವಾರಣೆ ಬಗೆಗಿನ ನೀತಿ ನಿರೂಪಣೆಯಾಗಿದೆ. ೧೯೫೦ರಿಂದಲೂ ಅಭಿವೃದ್ಧಿ ಯೋಜನೆಗಳು ರಾಷ್ಟ್ರೀಯ ವರಮಾನದ (ಜೆ.ಎನ್.ಪಿ.) ಹಾಗೂ ಪ್ರತಿತಲಾ ವರಮಾನದ ಏರಿಕೆಗೆ ಅತಿಯಾದ ಮಹತ್ವ ನೀಡುತ್ತ ಬಂದವು. ಈ ಬಗೆಯ (ಜೆ.ಎನ್.ಪಿ) ಏರಿಕೆಯು ಸಮಾಜವನ್ನು ಕಿತ್ತು ತಿನ್ನುತ್ತಿರುವ ಇತೆರೆ ಸಮಸ್ಯೆಗಳಾದ ಬಡತನ, ಹಸಿವು, ಅಸ್ವಸ್ಥತೆಗಳನ್ನು ನಿವಾರಿಸಿಬಿಡುತ್ತದೆ ಎಂದು ನಂಬಲಾಗಿತ್ತು. ಅಭಿವೃದ್ಧಿಯ ಫಲಗಳು ಮೇಲಿನಿಂದ ಕೆಳಕ್ಕೆ ಹಾಗೂ ಸಮಾಜದ ಎಲ್ಲ ವರ್ಗಗಳಿಗೂ ಹರಿಯುತ್ತದೆ ಎಂದೂ ವಾದಿಸಲಾಯಿತು. ಆದರೆ ಈ ಎಲ್ಲ ನಂಬಿಕೆಗಳು ಹುಸಿಯಾಗಿ ಬಿಟ್ಟವು. ೧೯೫೦-೫೧ ರಿಂದ ೧೯೭೬-೮೦ರ ಕಾಲಾವಧಿಯಲ್ಲಿ ಭಾರತದ ರಾಷ್ಟ್ರೀಯ ವರಮಾನ (ಜೆ.ಎನ್.ಪಿ) ಹಾಗೂ ಪ್ರತಿತಲಾ ವರಮಾನ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದ್ದವು. ಆದರೆ ಇದೇ ಅವಧಿಯಲ್ಲಿ ಬಡತನವೂ, ಹಸಿವೂ, ಅಸ್ವಸ್ಥೆತೆಯೂ ಉಲ್ಬಣಗೊಳ್ಳುತ್ತ ನಡೇಸಿದ್ದವು. ಇವೆರಡರ ನಡುವಿನ ವೈರುಧ್ಯವನ್ನು ಬಗೆಹರಿಸಬೇಕಾಗಿತ್ತು. ಇದಕ್ಕಾಗಿ ೧೯೭೯ರ ದಶಕದ ಕೊನೆಯ ಭಾಗದಲ್ಲಿ ಅಭಿವೃದ್ಧಿ ಯೋಜನಾ ತಂತ್ರವನ್ನೇ ಬದಲಾಯಿಸಲಾಯಿತು. ಬಡತನವನ್ನು, ಹಸಿವನ್ನು, ಅಸ್ವಸ್ಥತೆಯನ್ನು ನೇರವಾಗಿ ಎದುರಿಸಬೇಕು ಎಂಬ ಅರಿವು ೧೯೭೦ರ ದಶಕದ ಪ್ರಾರಂಭದಲ್ಲಿ ಉಂಟಾಯಿತು. ಇದರ ಫಲ ಸ್ವರೂಪವೇ ಬಡತನ ನಿವಾರಣಾ ಕಾರ್ಯಕ್ರಮಗಳು. ಈ ಅವಧಿಯಲ್ಲಿ ಬಡತನದ ರೇಖೆಗಳನ್ನು ಗುರುತಿಸುವುದು, ಬಡವರನ್ನು ಗುರುತಿಸುವುದು, ಹೀಗೆ ಗುರುತಿಸಿದ ಬಡ ಕುಟುಂಬಗಳಿಗೆ ನೆರವು ನೀಡುವುದು ಮುಂತಾದ ಕಾರ್ಯಕ್ರಮಗಳು ಜಾರಿಗೆ ಬಂದವು.

ಆದರೆ ಈ ಮೊದಲೆ ನಾವು ತಿಳಿಸಿರುವಂತೆ ಬಡತನ ನಿವಾರಣೆಯೆಂಬುದು ಕೇವಲ ಜನಲೋಲುಪತಿಯಾಯಿತೆ ವಿನಾ ನಿಜವಾದ ಅರ್ಥದಲ್ಲಿ ಕ್ರಿಯಾರೂಪಕ್ಕಿಳಿಯಲಿಲ್ಲ. ಬಡತನ ನಿವಾರಣಾ ಕಾರ್ಯಕ್ರಮಗಳ ಮೂಲಕ ಸರ್ಕಾರವು ಬಡತನವನ್ನು ‘ಸಹ್ಯ’ವನ್ನಾಗಿ ಮಾಡುವಲ್ಲಿ ಮಾತ್ರ ಯಶಸ್ವಿಯಾಯಿತು. ಬಡತನ ನಿವಾರಣೆ ಕಾರ್ಯಕ್ರಮಗಳು ದಲ್ಲಾಳಿ ವ್ಯವಹಾರದ ಮೂಲವಾದವು. ಸಮಾಜದ ಬಲಿಷ್ಠವರ್ಗದ ಬೇಡಿಕೆಗಳನ್ನು ಈಡೇರಿಸುವಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾದವು. ಆದರೆ ಶ್ರೇಣಿಕೃತ ವ್ಯವಸ್ಥೆಯ ಕೆಳಸ್ತರದಲ್ಲಿನ ಜನವರ್ಗವನ್ನು ಈ ಕಾರ್ಯಕ್ರಮಗಳು ಮುಟ್ಟಲಿಲ್ಲ. ಉದ್ದಿಮೆ-ವ್ಯವಹಾರಗಳ ಮೇಲೆ ತೀವ್ರ ನಿಯಂತ್ರಣ ವಿಧಿಸಲಾಯಿತು. ಬಡತನದ ನಿವಾರಣೆ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿತು.

ಉದಾರವಾದದ ಪ್ರವೇಶ (೧೯೭೭-೧೯೯೦)

೧೯೮೦ರ ದಶಕದಲ್ಲಿ ವಿಶ್ವಾದ್ಯಂತ ಅನೇಕ ಬದಲಾವಣೆಗಳು ಸಂಭವಿಸಿದವು. ಪ್ರಭುತ್ವವಾದಿ ಸಮಾಜವಾಗಿ ರಾಷ್ಟ್ರಗಳು ಅನೇಕ ಬಿಕ್ಕಟ್ಟು ಇಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಸೋವಿಯಟ್ ರಷ್ಯಾ ಸಂಘಟನೆಯು ವಿಘಟನೆಗೆ ಒಳಗಾಯಿತು. ರಷ್ಯ ಮತ್ತು ಪೂರ್ವ ಯುರೋಪಿನ ಅನೇಕ ದೇಶಗಳು ಮಾರುಕಟ್ಟೆ ವ್ಯವಸ್ಥೆಯನ್ನು ತಬ್ಬಿಕೊಳ್ಳತೊಡಗಿದವು. ಚೀನಾವು ದೊಡ್ಡ ಪ್ರಮಾಣದಲ್ಲಿ ಮುಕ್ತಮಾರುಕಟ್ಟೆ-ಮುಕ್ತ ವ್ಯಾಪಾರ ನೀತಿಗಳನ್ನು ಅಳವಡಿಸಿಕೊಂಡಿತು.

೧೯೮೦ರ ದಶಕದ ಪ್ರಾರಂಭದಲ್ಲೇ ಉದಾರವಾದಿ ನೀತಿ ತಬ್ಬಿಕೊಂಡಿದ್ದ ಪೂರ್ವ ಏಷ್ಯಾದ ದೇಶಗಳು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದವು. ಮಾರುಕಟ್ಟೆ ವ್ಯವಸ್ಥೆಗೆ ಮತ್ತೊಮ್ಮೆ ಶುಕ್ರದೆಸೆ ತಿರುಗಿತು. ಈ ಬಗೆಯ ಜಾಗತಿಕ ಬೆಳವಣಿಗೆಯಿಂದ ಭಾರತವು ಅಲಾಯದವಾಗಿರಲು ಸಾಧ್ಯವಿರಲಿಲ್ಲ.

ಭಾರತದಲ್ಲಿ ಪ್ರಭುತ್ವ ಪ್ರಧಾನ ಅಭಿವೃದ್ಧಿ ಯೋಜನೆಯು ಸಾಕಷ್ಟು ವೈಫಲ್ಯವನ್ನು ಅನುಭವಿಸಿತ್ತು. ನಮ್ಮ ಆರ್ಥಿಕತೆಯು ನಿಯಂತ್ರಣ-ನಿರ್ಬಂಧ ಹತೋಟಿಗಳಿಂದ ಉಸಿರುಕಟ್ಟಿ ಏದುಸಿರು ಬಿಡುತ್ತಿತ್ತು. ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿದ್ದ ಬದಲಾವಣೆಗಳನ್ನು ಗಮನಿಸಿ ತಜ್ಞರು ಉದಾರವಾದ ನೀತಿಗಳನ್ನು, ಮುಕ್ತ ಮಾರುಕಟ್ಟೆ ನೀತಿಗಳನ್ನು ಅಳವಡಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ತಂದರು. ಸನ್ನಿವೇಶ ಮತ್ತು ಸಂದರ್ಭಗಳ ಒತ್ತಡಕ್ಕೆ ಸಿಲುಕಿದ ಸರ್ಕಾರವು ಸಾವಕಾಶವಾಗಿ ಉದ್ದಿಮೆ-ವ್ಯಾಪಾರ ರಂಗದಲ್ಲಿ ನಿಯಂತ್ರಣ-ನಿರ್ಬಂಧಗಳನ್ನು ಸಡಿಲಿಸತೊಡಗಿತು. ೧೯೮೦ರ ದಶಕದಲ್ಲಿ ಹೀಗೆ ಉದಾರವಾದ ನಮ್ಮ ಆರ್ಥಿಕತೆಯನ್ನು ಪ್ರವೇಶಿಸಿತು.

ಈ ಮಧ್ಯೆ ನಮ್ಮ ಆರ್ಥಿಕತೆಯು ೧೯೮೦ರ ದಶಕದಲ್ಲಿ ಅನೇಕ ಗಂಡಾಂತರಗಳಿಗೆ ಸಿಲುಕಿತು. ಈ ಎಲ್ಲ ಗಂಡಾಂತರಗಳು ೧೯೯೦ರ ಹೊತ್ತಿಗೆ ಗಂಭೀರ ಸ್ವರೂಪ ತಳೆದುಬಿಟ್ಟಿತು. ಈ ಗಂಡಾಂತರಗಳಿಂದ ಹೊರಬರಲು ನೆರವು ನೀಡಲು ವಿಶ್ವಬ್ಯಾಂಕು ಮತ್ತು ಐಎಂಎಫಗಳು ಮುಂದೆ ಬಂದವು. ಆದರೆ ಆ ನೆರವು ಅನೇಕ ಶರತ್ತುಗಳಿಂದ ಕೂಡಿತ್ತು.

೧೯೮೦ರ ದಶಕದಲ್ಲಿ ದೇಶ ಎದುರಿಸಿದ ಗಂಡಾಂತರಗಳು ಹೀಗಿದ್ದವು:

೧. ಕೇಂದ್ರ ಸರ್ಕಾರದ ಕೊಶೀಯ ಕೊರತೆಯು ೧೯೭೦ರ ದಶಕದಲ್ಲಿ ಜಿ.ಡಿ.ಪಿ.ಯ ಶೇ. ೪ರಷ್ಟಿದ್ದುದು ೧೯೮೦ರ ದಶಕದ ಮೊದಲ ಭಾಗದಲ್ಲಿ ಜಿ.ಡಿ.ಪಿ.ಯ ಶೇ.೬.೩ಕ್ಕೆ ಏರಿತು. ೧೯೮೦ರ ದಶಕದ ಕೊನೆಯ ಭಾಗದಲ್ಲಿ ಕೊಶೀಯ ಕೊರತೆಯು ಜಿ.ಡಿ.ಪಿ.ಯ ಶೇ.೮.೩ ಕ್ಕೆ ತಲುಪಿ ದೇಶವನ್ನು ಬಿಕ್ಕಟ್ಟಿಗೆ ಸಿಲುಕಿಸಿಬಿಟ್ಟಿತು.

೨. ಈ ಕೊಶೀಯ ಕೊರತೆಯನ್ನು ತುಂಬಲು ಸರ್ಕಾರವು ಆಂತರಿಕವಾಗಿ ಬೃಹತ್ ಪ್ರಮಾಣದಲ್ಲಿ ಸಾಲವೆತ್ತಬೇಕಾಯಿತು. ಕೇಂದ್ರ ಸರ್ಕಾರದ ಆಂತರಿಕ ಸಾಲವು ೧೯೮೦-೮೧ರಲ್ಲಿ ಜಿಡಿಪಿಯ ಶೇ.೩೫ರಷ್ಟಿದ್ದುದು ೧೯೯೦-೯೧ರಲ್ಲಿ ಅದು ಜಿ.ಡಿ.ಪಿ.ಯ ಶೇ. ೫೩ಕ್ಕೆ ಏರಿತು. ಈ ಆಂತರಿಕ ಸಾಲಕ್ಕೆ ನೀಡುವ ವಾರ್ಷಿಕ ಬಡ್ಡಿಯು ೧೯೮೦-೮೧ರಲ್ಲಿ ಕೇಂದ್ರದ ಒಟ್ಟು ವೆಚ್ಚದ ಶೇ.೧೦ರಷ್ಟಿದ್ದುದು ೧೯೯೦-೯೧ರಲ್ಲಿ ಅದು ಶೇ.೨೦ಕ್ಕೇರಿತು.

೩. ೧೯೮೦ರ ದಶಕದ ಮೊದಲ ಭಾಗದಲ್ಲಿ ವಿದೇಶಿ ಪಾವತಿಯ ಚಾಲ್ತಿಖಾತೆಯಲ್ಲಿನ ಕೊರತೆಯು ಜಿ.ಡಿ.ಪಿ.ಯ ಶೇ. ೧.೩ರಷ್ಟಿದ್ದುದು ೧೯೮೦ರ ದಶಕದ ಕೊನೆಯ ಭಾಗದಲ್ಲಿ ಅದು ಶೇ.೩.೩ಕ್ಕೇರಿತು.

೪. ವಿದೇಶಿ ಪಾವತಿಯ ಚಾಲ್ತಿಯಲ್ಲಿನ ಕೊರತೆ ತುಂಬಲು ಸರ್ಕಾರವು ವಿದೇಶಿಗಳಿಂದ ಅಪಾರ ಸಾಲ ತರಬೇಕಾಯಿತು. ೧೯೮೦-೮೧ರಲ್ಲಿ ವಿದೇಶಿ ಸಾಲವು ದೇಶದ ಜಿಡಿಪಿಯ ಶೇ. ೧೨ರಷ್ಟಿದ್ದುದು ೧೯೯೦-೯೧ರಲ್ಲಿ ಅದು ಜಿಡಿಪಿಯ ಶೇ. ೨೩ಕ್ಕೇರಿತು.

ಹೀಗೆ ೧೯೮೦ರ ದಶಕದ ಪ್ರಾರಂಭದಿಂದಲೂ ಆರ್ಥಿಕತೆಗೆ ಎರಗಿದ್ದ ಕೊರತೆ-ಅಸಮತೋಲನ-ಅಶಿಸ್ತು-ಅಸ್ವಸ್ಥೆತೆಗಳು ಮುಂದೆ ೧೯೯೦ರಲ್ಲಿ ಸಂಭವಿಸಿದ ಕೊಲ್ಲಿ ಯುದ್ಧದಿಂದಾಗಿ ಉಲ್ಬಣಗೊಂಡವು. ಆರ್ಥಿಕತೆಯು ತೀವ್ರ ಸಂಕಷ್ಟಕ್ಕೆ ಒಳಗಾಯಿತು. (ನಯ್ಯಾರ್ ೧೯೯೩:೬೪೦).

ಈ ಎಲ್ಲ ಸಂಕಷ್ಟ-ಬಿಕ್ಕಟ್ಟುಗಳು, ಗಂಡಾಂತರಗಳು ದಿಡೀರನೆ ಉದ್ಬವಿಸಿದ ಸಮಸ್ಯೆಗಳೇನಲ್ಲ. ಏಕೆಂದರೆ ೧೯೮೦ರಿಂದಲೂ ದೇಶದ ಸಾರ್ವಜನಿಕ ಹಣಕಾಸು ವ್ಯವಹಾರವನ್ನು ತುಂಬಾ ಅಶಿಸ್ತಿನಿಂದ ಹಾಗೂ ಬೇಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬರಲಾಗಿತ್ತು. ಸರ್ಕಾರದ ವೆಚ್ಚ ಹಾಗೂ ಆದಾಯಗಳ ನಿರ್ವಹಣೆಯಲ್ಲಿ ಸರ್ಕಾರವು ವಿವೇಕ-ವಿವೇಚನೆಯನ್ನು ಗಾಳಿಗೆ ತೂರಿ ಬಿಟ್ಟಿತು. ಉದಾರವಾದ ನೀತಿಯಿಂದಾಗಿ ಆಮುದು ತೀವ್ರವಾಗಿ ಬೆಳೆಯತೊಡಗಿತು. ಸರ್ಕಾರವು ತನ್ನ ವೆಚ್ಚವನ್ನು ಸಾಲ ತಂದು ಭರಿಸತೊಡಗಿತು. ವಿದೇಶಿ ಸಾಲದ ಮೂಲಕ ಚಾಲ್ತಿ ಖಾತೆಯ ಕೊರತೆಯನ್ನು ತುಂಬಿದರೆ ಆಂತರಿಕ ಸಾಲದಿಂದ ಕೊಶೀಯ ಕೊರತೆಯನ್ನು ತುಂಬಲು ತೊಡಗಿತು. ಈ ಎಲ್ಲ ಅವ್ಯವಸ್ಥೆಯಿಂದ ಹಣಕಾಸು ವ್ಯವಹಾರ ಅಶಿಸ್ತಿನಿಂದ ಕಂಗೆಟ್ಟು ಹೋಯಿತು.

ಈ ಎಲ್ಲ ಅವ್ಯವಸ್ಥೆ, ಅಶಿಸ್ತು, ಅಸಮತೋಲನ, ಅನಿಶ್ಚಿತತೆ ಹಾಗೂ ಅದಕ್ಷತೆಗಳಿಂದ ದೇಶವನ್ನು-ಆರ್ಥಿಕತೆಯನ್ನು ಸಂರಕ್ಷಿಸಲು ಉದಾರವಾದ ಸುಧಾರಣಾವಾದಗಳೇ ಪರಿಹಾರ ಎಂದು ಸರ್ಕಾರವು ಭಾವಿಸಿತು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಬಗೆಯ ಚಿಂತನೆ ಪ್ರಾರಂಭವಾಗಿತ್ತು. ವಿಶ್ವಬ್ಯಾಂಕು ಹಾಗೂ ಐಎಂಎಫಗಳು ಉದಾರವಾದ, ಮುಕ್ತ ವ್ಯಾಪಾರ, ಮಾರ್ಕೆಟ್ಟೀಕರಣ, ಜಾಗತೀಕರಣಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಡ ಹೇರತೊಡಗಿದವು. ೧೯೮೦ರ ದಶಕದಲ್ಲಿ ಸರ್ಕಾರದ ವಿವೇಚನಾರಹಿತ ಹಣಕಾಸು ನೀತಿ ಹಾಗೂ ಹಣಕಾಸು ಅಶಿಸ್ತುಗಳು ೧೯೯೦ರಲ್ಲಿ ಉದಾರವಾದ ನೀತಿಯಲ್ಲಿ ಪರ್ಯಾವಸಾನ ಹೊಂದಿದವು.

ಉದಾರವಾದಿ ಪರ್ವ

೧೯೮೦ರ ದಶಕದಲ್ಲಿ ನಮ್ಮ ಆರ್ಥಿಕತೆಯನ್ನು ಪ್ರವೇಶಿಸಿದ ಉದಾರವಾದಿ ಅಭಿವೃದ್ಧಿ ವಿಚಾರ ಪ್ರಣಾಳಿಕೆ ೧೯೯೧ರಲ್ಲಿ ಪೂರ್ಣರೂಪ ತಳೆದು ಜಾರಿಗೆ ಬಂದಿತು. ‘ರಾವ್-ಸಿಂಗ್’ ನೇತೃತ್ವದ ಸರ್ಕಾರವು ೧೯೯೭ರ ಜುಲೈನಲ್ಲಿ ‘ಹೊಸ ಆರ್ಥಿಕ ನೀತಿ’ಯನ್ನು ಜಾರಿಗೆ ತಂದಿತು. ಇದರೊಂದಿಗೆ ಭಾರತವು ಮಾರ್ಕೆಟ್ಟೀಕರಣ, ಖಾಸಗೀಕರಣ, ಮುಕ್ತ ವ್ಯಾಪಾರ, ವಿದೇಶಿ ಬಂಡವಾಳದ ಮುಕ್ತ ಪ್ರವೇಶ ಮುಂತಾದ ಪ್ರಕ್ರಿಯೆಗಳನ್ನು ಒಳಗೊಂಡ ‘ಜಾಗತೀಕರಣ’ ನೆಲೆಯನ್ನು ಪ್ರವೇಶಿಸಿತು. ಈ ಬಗೆಯ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲು ಬಾಹ್ಯ ಶಕ್ತಿಗಳ ಒತ್ತಡಗಳೂ ಕಾರಣವಾಗಿದ್ದವು ಮತ್ತು ಆಂತರಿಕವಾಗಿ ಇಂತಹ ಕ್ರಮಗಳಿಗೆ ದೇಶವು ಸಿದ್ಧವಾಗಿತ್ತು.

ಹೊಸ ಆರ್ಥಿಕ ನೀತಿಯು ಎರಡು ಅಂಗಗಳನ್ನು ಒಳಗೊಂಡಿತ್ತು.

೧. ಆರ್ಥಿಕತೆಯಲ್ಲಿ ಸಮಸ್ಥಿತಿಯನ್ನು ಸ್ಥಾಪಿಸುವುದು (Structural Parity)

೨. ರಾಚನಿಕ ಹೊಂದಾಣಿಕೆ ಕಾರ್ಯಕ್ರಮ (Structural Adjustment Programme)

ಆರ್ಥಿಕತೆಯಲ್ಲಿ ಸಮಸ್ಥಿತಿಯನ್ನು ಸ್ಥಾಪಿಸುವುದು ಜಾಗತೀಕರಣ ಪ್ರಕ್ರಿಯೆಯ ಮೊದಲ ಹಂತವಾದರೆ ರಾಚನಿಕ ಹೊಂದಾಣಿಕೆ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಎರಡನೆಯ ಹಂತ. ಆದರೆ ಅನೇಕ ಸಂದರ್ಭದಲ್ಲಿ ಈ ಅನುಕ್ರಮವನ್ನು ಪಾಲಿಸಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಭಾರತದ ಸಂದರ್ಭದಲ್ಲೇ ಹೇಳುವುದಾದರೆ ಸಮಸ್ಥಿತಿ ಸ್ಥಾಪಿಸುವ ಹಾಗೂ ರಾಚನಿಕ ಹೊಂದಾಣಿಕೆ ಕಾರ್ಯಕ್ರಮಗಳು ಏಕಕಾಲಕ್ಕೆ ಜಾರಿಗೆ ಬಂದುದನ್ನು ಕಾಣುತ್ತೇವೆ. ಈ ಹೊಸ ಪ್ರಕ್ರಿಯೆಯು ಕೆಳಕಂಡ ಅಂಶಗಳನ್ನು ಒಳಗೊಂಡಿತ್ತು.

೧. ಸಾರ್ವಜನಿಕ ವಲಯದಲ್ಲಿರುವ ಉದ್ದುಮೆಗಳನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸುವುದು.

೨. ಸರಕು ಸೇವೆಗಳ ಬೆಲೆಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ಪೂರ್ಣವಾಗಿ ರದ್ದುಪಡಿಸುವುದು.

೩. ವಿದೇಶಿ ಖಾಸಗಿ ಬಂಡವಾಳದ ಪ್ರವೇಶಕ್ಕೆ ಮುಕ್ತ ನಿಯಂತ್ರಣರಹಿತ ಅವಕಾಶ.

೪. ಲೈಸೆನ್ಸ್ ನೀತಿ, ಏಕಸ್ವಾಮ್ಯ ನಿಯಂತ್ರಣ ಕ್ರಮ, ಸ್ಥಾನೀಕರಣ ನೀತಿಗಳನ್ನು ಸಡಿಲಿಸುವುದು ಮತ್ತು ಸಾವಕಾಶವಾಗಿ ರದ್ದುಪಡಿಸುವುದು.

೫. ಆಹಾರ, ರಸಗೊಬ್ಬರ, ಅಡುಗೆ ಅನಿಲ, ನೀರಾವರಿ, ತಳಿಗಳು, ಬ್ಯಾಂಕ ಸಾಲ ಮುಂತಾದವುಗಳ ಬಾಬ್ತು ಸಹಾಯಧನವನ್ನು ತಗ್ಗಿಸುವುದು ಮತ್ತು ಸಾವಕಾಶವಾಗಿ ನಿಲ್ಲಿಸುವುದು.

೬. ಆಮುದು-ರಫ್ತು ವ್ಯಾಪಾರವನ್ನು ಮುಕ್ತವಾಗಿ ನಡೆಸಲು ಅವಕಾಶ ನೀಡುವುದು.

೭. ಬಂಡಬಾಳ ಹೂಡಿಕೆ, ಉತ್ಪಾದನಾ ತಂತ್ರ, ಸ್ಥಳದ ಆಯ್ಕೆ, ಉತ್ಪನ್ನದ ಆಯ್ಕೆ ಮುಂತಾದವುಗಳನ್ನು ಮಾರುಕಟ್ಟೆ ಶಕ್ತಿಗಳ ವಶಕ್ಕೆ ವಹಿಸಿಕೊಡುವುದು.

೮. ಬಹುರಾಷ್ಟ್ರೀಯ ಖಂಡಾಂತರ ರಾಷ್ಟ್ರೀಯ ಕಂಪನಿಗಳಿಗೆ ಮುಕ್ತ ಅವಕಾಶ.

ಇವೆಲ್ಲ ಹೊಸ ಆರ್ಥಿಕ ನೀತಿಯ ಬಹುಮುಖ್ಯ ಲಕ್ಷಣಗಳಾಗಿವೆ. ಈಗ ನಮಗೆ ಎದುರಾಗುವ ಪ್ರಶ್ನೆ: ಬದಲಾದ ಸನ್ನಿವೇಶದಲ್ಲಿ ಅಂದರೆ ಉದಾರವಾದ ಪರ್ವದಲ್ಲಿ ಪ್ರಭುತ್ವವಾದಿ ಅಭಿವೃದ್ಧಿ ಯೋಜನೆಗೆ ಸ್ಥಾನವೆಲ್ಲಿದೆ ?

ಏನನ್ನು ಉತ್ಪಾದಿಸಬೇಕು, ಹೇಗೆ ಉತ್ಪಾದಿಸಬೇಕು ಮತ್ತು ಯಾರಿಗಾಗಿ ಉತ್ಪಾದಿಸಬೇಕು ಎಂಬ ಪ್ರಶ್ನೆಗಳನ್ನು ಮಾರುಕಟ್ಟೆ ವಶಕ್ಕೆ ಒಪ್ಪಿಸುವ ವ್ಯವಸ್ಥೆಯಲ್ಲಿ ಯೋಜನೆಗೆ, ಪ್ರಭುತ್ವದ ನಿರ್ದೇಶನದಲ್ಲಿ ನಡೆಯುವ ಪ್ರಕ್ರಿಯೆಗೆ ಅವಕಾಶವೇ ಇರುವುದಿಲ್ಲ. ಇಂದು ಭಾರತದಲ್ಲಿ ಅಭಿವೃದ್ಧಿ ಯೋಜನೆ ತನ್ನ ಪಾತ್ರ, ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಸರ್ಕಾರದ ಬಜೆಟ್, ಸರ್ಕಾರದ ನಿರ್ದೇಶನ, ಸರ್ಕಾರದ ಹೂಡಿಕೆ ಮುಂತಾದವು ಬಹುರಾಷ್ಟ್ರೀಯ ಕಂಪನಿಗಳೆದುರಿಗೆ ಮಾರುಕಟ್ಟೆ ಶಕ್ತಿಗಳೆದುರಿಗೆ ಗುಬ್ಬಚ್ಚಿಯಂತಾಗಿ ಬಿಟ್ಟಿವೆ. ಬದಲಾದ ಸನ್ನಿವೇಶದಲ್ಲಿ ಕಾರ್ಯಕ್ಷಮತೆ ಪೈಪೋಟಿ, ಲಾಭ, ಮಾರುಕಟ್ಟೆ ಮುಂತಾದವುಗಳಿಂದ ತುಂಬಿದ ಪರಿಭಾಷೆ ಚಾಲ್ತಿಗೆ ಬಂದಿದೆ. ಇಲ್ಲಿ ಪ್ರಭುತ್ವದ ಪಾತ್ರಕ್ಕೆ, ಸಮಾನತೆಗೆ, ಬಡತನದ ನಿವಾರಣೆ ಮುಂತಾದವುಗಳಿಗೆ ಸ್ಥಾನವಿರಲಿಲ್ಲ. ಉದಾರೀಕರಣ ನೀತಿಯನ್ನು ಅನುಸರಿಸಿ ಅದ್ಭುತ ಯಶಸ್ಸನ್ನು ಪಡೆದ ಪೂರ್ವ ಏಷ್ಯಾ ದೇಶಗಳ ನಿದರ್ಶನವನ್ನು ನಮ್ಮ ಮುಂದೆ ನಿಲ್ಲಿಸಲಾಗುತ್ತಿದೆ. ಆದರೆ ೧೯೬೦ರ ದಶಕದಲ್ಲೇ ಉದಾರೀಕರಣ ನೀತಿಯನ್ನು ಅಳವಡಿಸಿಕೊಂಡು ಹೀನಾಯ ವೈಫಲ್ಯ ಅನುಭವಿಸಿದ ಲ್ಯಾಟಿನ್ ಅಮೆರಿಕಾ ದೇಶಗಳ ನಿದರ್ಶನವನ್ನು ಇಲ್ಲಿ ಮರೆಮಾಚಲಾಗುತ್ತಿದೆ. ಒಂದು ಕಡೆ ಉದಾರೀಕರಣದ ಯಶಸ್ಸಿನ ಗಾಥೆ-ಇನ್ನೊಂದು ಕಡೆ ವೈಫಲ್ಯದ ಪಾಠ. ಈ ಹಿನ್ನಲೆಯಲ್ಲಿ ಭಾರತವು ಹೇಗೆ ಉದಾರೀಕರಣವನ್ನು ನಿಭಾಯಿಸುತ್ತದೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಭುತ್ವ ಪ್ರಧಾನವೋ ಮಾರುಕಟ್ಟೆ ಪ್ರಧಾನವೋ?

ಕಳೆದ ಸುಮಾರು ೫೦ ವರ್ಷಗಳ ಕಾಲಾವಧಿಯಲ್ಲಿ ಭಾರತದ ಆರ್ಥಿಕತೆ, ಅಭಿವೃದ್ಧಿ ಯೋಜನೆ ಮೂಲಕ ಪ್ರಯಾಣವನ್ನು ಪ್ರಾರಂಭಿಸಿ ಇಂದು ಉದಾರವಾದಿ ಪ್ರಕ್ರಿಯೆ ಹಂತಕ್ಕೆ ಬಂದು ನಿಂತಿದೆ. ಜಾಗತಿಕ ಮಟ್ಟದಲ್ಲೂ ಸಹ ಇದೇ ಬಗೆಯ ಬದಲಾವಣೆಗಳು ನಡೆದಿವೆ. ಹಾಗೆ ನೋಡಿದರೆ ಭಾರತವು ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಅನುಭವಿಸಿದ ಅಭಿವೃದ್ಧಿ ಗತಿಶೀಲತೆಯು ಜಾಗತಿಕ ಮಟ್ಟದಲ್ಲಿ ಉಂಟಾದ ಬದಲಾವಣೆಗಳಿಂದ ಭಿನ್ನವಾಗಿಲ್ಲ. ಇಡೀ ವಿಶ್ವವೇ ಅಭಿವೃದ್ಧಿ ಯೋಜನೆ ಹಾಗೂ ಪ್ರಭುತ್ವ ಪ್ರಧಾನತೆಯನ್ನು ಅಳವಡಿಸಿಕೊಳ್ಳುತ್ತಿದ್ದಾಗ ಭಾರತವೂ ಅದೇ ದಾರಿಯನ್ನು ಹಿಡಿಯಿತು. ಇಂದು ಇಡೀ ವಿಶ್ವ, ಮಾರುಕಟ್ಟೆ ವ್ಯವಸ್ಥೆ ಕಡೆಗೆ ಸಾಗುತ್ತಿರುವಾಗ ಭಾರತವೂ ಅದೇ ದಾರಿಯಲ್ಲಿ ನಡೆದಿದೆ.

ಆದರೆ ಹೊಸ ಆರ್ಥಿಕ ನೀತಿ ಹಾಗೂ ಅದರ ಅಂಗೋಪಾಂಗಗಳಾದ ಜಾಗತೀಕರಣ, ಖಾಸಗೀಕರಣ, ಮಾರ್ಕೆಟ್ಟೀಕರಣಗಳ ಯಶಸ್ಸಿನ ಬಗ್ಗೆ ಇಂದು ಅನುಮಾನಗಳು ವ್ಯಕ್ತವಾಗತೊಡಗಿವೆ. ಮಾರುಕಟ್ಟೆ ವ್ಯವಸ್ಥೆ ವರಮಾನ ಮತ್ತು ಸಂಪತ್ತಿನ ವಿತರಣೆಗೆ, ಸಂಬಂಧಿಸಿದಂತೆ ಉಂಟು ಮಾಡಬಹುದಾದ ಪರಿಣಾಮಗಳ ಬಗ್ಗೆ ಆತಂಕಗಳು ವ್ಯಕ್ತವಾಗತೊಡಗಿವೆ. ಅತ್ಯಂತ ಸುಗಮವಾಗಿ ಪ್ರಭುತ್ವ ಪ್ರಧಾನ ಅಭಿವೃದ್ದಿ ಯೋಜನೆ ಸ್ಥಳದಲ್ಲಿ ಮಾರುಕಟ್ಟೆ ಪ್ರಧಾನ ಉದಾರವಾದಿ ನೀತಿಯನ್ನು ಜಾರಿಗೆ ತರಲಾಯಿತು.

ಸೈದ್ಧಾಂತಿಕವಾಗಿ ಇಂದು ವಿಶ್ವದ ಯಾವುದೇ ದೇಶದಲ್ಲೂ ಶುದ್ಧ ಮಾರುಕಟ್ಟೆ ಪ್ರಧಾನ ವ್ಯವಸ್ಥೆಯಾಗಲಿ ಅಥವಾ ಪ್ರಭುತ್ವಪ್ರಧಾನ ವ್ಯವಸ್ಥೆಯಾಗಲಿ ಅಸ್ತಿತ್ವದಲ್ಲಿಲ್ಲ. ಮಾರುಕಟ್ಟೆ ಪ್ರಧಾನ ವ್ಯವಸ್ಥೆಗೆ ಮಾದರಿ ಎನಿಸಿಕೊಂಡಿರುವ ಅಮೆರಿಕೆಯಲ್ಲಿ ಒಟ್ಟು ರಾಷ್ಟ್ರೀಯ ವರಮಾನದ ಶೇ.೩೬ರಷ್ಟು ಸರ್ಕಾರದ ಕಾಣಿಕೆಯಾಗಿದೆ. ಅಂದ ಮೇಲೆ ಪ್ರಭುತ್ವದ ಹಸ್ತಕ್ಷೇಪವಿಲ್ಲದೆ ಮಾರುಕಟ್ಟೆಯೇ ಸಂಪೂರ್ಣವಾಗಿ ಆರ್ಥಿಕತೆಯನ್ನು ನಿರ್ವಹಿಸುವ ಉದಾಹರಣೆ ನಮಗೆ ದೊರೆಯುವುದಿಲ್ಲ. ಮಾರುಕಟ್ಟೆ ದಕ್ಷತೆಯಿಂದ ಹಾಗೂ ಜನ ಪರವಾಗಿ ಕೆಲಸ ಮಾಡಲು ಅದರ ಮೇಲೆ ಪ್ರಭುತ್ವದ ಅಂಕುಶ ಅಗತ್ಯವಾಗುತ್ತದೆ.

ಇದೇ ರೀತಿ ಆಸ್ಕರ್ ಲ್ಯಾಂಜ್, ಮೈಕೆಲ್ ಕೆಲೆಂಕಿ ಮುಂತಾದವರು ವಾದಿಸುವಂತೆ ಪ್ರಭುತ್ವ ಪ್ರಧಾನ ವ್ಯವಸ್ಥೆಯಲ್ಲಿ ಸಂಪನ್ಮೂಲಗಳ ದಕ್ಷ ವಿನಿಯೋಗಕ್ಕೆ ಮಾರುಕಟ್ಟೆ ನಿರ್ದೇಶನದ ಅಗತ್ಯವಿದೆ. ಒಟ್ಟರೆ ಇಂದು ಹೆಚ್ಚಿನ ವಿದ್ವಾಂಸರು ಹಾಗೂ ತಜ್ಞರು ಪ್ರತಿಪಾದಿಸುತ್ತಿರುವ ವಿಚಾರವೆಂದರೆ ಬಂಡವಾಳಶಾಹಿ ಮಾರುಕಟ್ಟೆ ಪ್ರಧಾನ ವ್ಯವಸ್ಥೆಯಲ್ಲಿ ಪ್ರಭುತ್ವದ ಹಸ್ತಕ್ಷೇಪದ ಅಗತ್ಯವಿದೆ ಹಾಗೂ ಸಮಾಜವಾದಿ ಪ್ರಭುತ್ವ ಪ್ರಧಾನ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಹಸ್ತಕ್ಷೇಪದ ಅಗತ್ಯವಿದೆ.

ಮಾರುಕಟ್ಟೆ ಪ್ರಧಾನ ವ್ಯವಸ್ಥೆಯು ಉಂಟುಮಾಡುವ ವರಮಾನದ ವಿತರಣೆಯಲ್ಲಿನ ಅಸಮಾನತೆ, ಸಮಾಜೋ-ಆರ್ಥಿಕ ಬಾಹ್ಯ ಪರಿಣಾಮಗಳು ಸಾಮಾಜಿಕ ವೆಚ್ಚ, ಸಾಮಾಹಿಕ ಸರಕುಗಳ ನಿರ್ವಹಣೆ ಮುಂತಾದ ವಿಕೃತಿ ವಿಕಾರಗಳನ್ನು ಸರಿಪಡಿಸಲು ಪ್ರಭುತ್ವದ ಅಗತ್ಯವಿದೆ. ಅದೇ ರೀತಿ ಪ್ರಭುತ್ವಪ್ರಧಾನ ವ್ಯವಸ್ಥೆಯು ಉಂಟುಮಾಡುವ ಹಣಕಾಸು ನಿರ್ವಹಣೆಯಲ್ಲಿನ ಅಶಿಸ್ತು, ಅದಕ್ಷತೆ, ಸಂಪನ್ಮೂಲಗಳ ಅಪವ್ಯಯ, ರಾಕ್ಷಾಸಾಕಾರಿ ಅಧಿಕಾರಶಾಹಿ, ಕಾಲ ವಿಳಂಬ ಮುಂತಾದ ವಿಕೃತಿ ವಿಕಾರಗಳನ್ನು ಸರಿಪಡಿಸಲು ಮಾರುಕಟ್ಟೆ ವ್ಯವಸ್ಥೆಯ ಹಸ್ತಕ್ಷೇಪವು ಅಗತ್ಯವಾಗುತ್ತಿದೆ.

ವಿಶ್ವಬ್ಯಾಂಕಿನ ೧೯೯೭ರ ಅಭಿವೃದ್ಧಿ ವರದಿಯಲ್ಲಿ ಸರಿಯಾಗಿ ಗುರುತಿಸಿರುವಂತೆ ಉದಾರವಾದಿ ಪ್ರವಾಹದಲ್ಲಿ ಅಭಿವೃದ್ಧಿಯೋಜನೆ, ಪ್ರಭುತ್ವದ ಪಾತ್ರವನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಸಾಧ್ಯವಿಲ್ಲ. ಪ್ರಭುತ್ವದ ವೈಫಲ್ಯವನ್ನು ಕುರಿತಂತೆ ಭಾರತದ ನಿದರ್ಶನದ ಬಗ್ಗೆ ಮಾತನಾಡುತ್ತ ಅಮರ್ತ್ಯಸೇನ್ ಹೀಗೆ ಹೇಳುತ್ತಾರೆ.

ಮಾರ್ಕೆಟ್ಟೀಕರಣ-ಉದಾರೀಕರಣ ಕುರಿತ ಚರ್ಚೆಯಲ್ಲಿ ಪ್ರಭುತ್ವ ಪ್ರಧಾನವಾಗಿರಬೇಕೊ ಅಥವಾ ಮಾರುಕಟ್ಟೆ ಪ್ರಧಾನವಾಗಿರಬೇಕೊ ಎಂಬ ಸಂಗತಿಗೆ ಅತಿ ಹೆಚ್ಚಿನ ಗಮನ ನೀಡಿ, ನಿಜವಾದ ಮಹತ್ವರವಾದ ಅಂಶವನ್ನು ಚರ್ಚೆಯ ಚೌಕಟ್ಟಿನಿಂದ ಹೊರಗಿಡಲಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ ನಿಜ ಸಂಗತಿಯೇನೆಂದರೆ ಕೆಲವು ಕ್ಷೇತ್ರದಲ್ಲಿ ಪ್ರಭುತ್ವದ ಪಾತ್ರ ನಿಕೃಷ್ಟವಾಗಿದೆ. ಉದಾರಣೆಗೆ ಮೂಲಶಿಕ್ಷಣ, ಪ್ರಾಥಮಿಕ ಆರೋಗ್ಯಗಳಿಗೆ ಸಂಬಂಧಿಸಿದಂತೆ ಪ್ರಭುತ್ವವು ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ನಾವು ಉದಾರೀಕರಣದ ಗಡಿಯಾಚೆಗೆ ಚರ್ಚೆಯನ್ನು ಒಯ್ಯಬೇಕಾಗಿದೆ. ಮಾರುಕಟ್ಟೆಯು ಬೇಕು. ಆದರೆ ಮಾರುಕಟ್ಟೆಯಾಚೆಗಿನ ಸಂಗತಿಗಳ ನಿರ್ವಹಣೆ ಬಗ್ಗೆ ನಾವು ಯೋಚಿಸಬೇಕು.

ಉಪಸಂಹಾರ

ಈ ಪ್ರಬಂಧದಲ್ಲಿ ಭಾರತವು ಸ್ವಾತಂತ್ರ್ಯಾ ನಂತರ ೧೯೫೦ ರಿಂದ೨೦೦೮ ರ ಅವಧಿಯಲ್ಲಿ ಅಭಿವೃದ್ಧಿ ತಂತ್ರ ಕುರಿತಂತೆ ಉಂಟಾದ ಪಲ್ಲಟಗಳನ್ನು ಚರ್ಚಿಸಲಾಗಿದೆ. ಪ್ರಭುತ್ವ ಪ್ರಣೀತ ಅಭಿವೃದ್ಧಿ ತಂತ್ರವನ್ನು ಮಾರುಕಟ್ಟೆ-ಪ್ರಣೀತ ಅಭಿವೃದ್ಧಿ ತಂತ್ರದ ಎದುರಿಗಿಟ್ಟು ತುಲನಾತ್ಮಕವಾಗಿ ವಿಶ್ಲೇಷಣೆ ಮಾಡಲಾಗಿದೆ.

೧೯೫೦ರಲ್ಲಿ ಅಳವಡಿಸಿಕೊಂಡ ಪ್ರಭುತ್ವ ಪ್ರಣೀತ ಅಭಿವೃದ್ಧಿ ತಂತ್ರವು ಒಟ್ಟಾರೆ ಸೋವಿಯತ್ ರಷ್ಯಾದ ಮಾದರಿಯ ಅನುಕರಣೆಯಾಗಿರಲಿಲ್ಲವೆಂಬುದನ್ನು ಇಲ್ಲಿ ತೋರಿಸಲಾಗಿದೆ. ಭಾರತವು ಈ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರದಲ್ಲಿ ಮಹಾದೇವ ಗೋವಿಂದ ರಾನಡೆ, ಸರ್.ಎಂ.ವಿಶ್ವೇಶ್ವರಯ್ಯ ಮುಂತಾದವರ ವಿಚಾರಗಳು ಅಂತರ್ಗತ ಗೊಂಡಿರುವುದನ್ನು ಇಲ್ಲಿ ಗುರುತಿಸಲಾಗಿದೆ.

ಪ್ರಭುತ್ವ ಪ್ರಣೀತ ಅಭಿವೃದ್ಧಿ ತಂತ್ರವು ೧೯೭೦ರ ದಶಕದಲ್ಲಿ ಹೇಗೆ ‘ಅಧಿಕಾರಶಾಹಿಯ’ ಒತ್ತಡಕ್ಕೆ ಸಿಕ್ಕು ದೇಶದಲ್ಲಿ ಸಮಸ್ಯೆಗಳನ್ನು ಉಂಟುಮಾಡಿತು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಅದೇ ರೀತಿ ಉದಾರವಾದಿ ಪರ್ವವು ಹೇಗೆ ‘ಅಭದ್ರತೆಯನ್ನು’ ಉಂಟು ಮಾಡಬಲ್ಲದು ಎಂಬುದನ್ನು ತೋರಿಸಿಕೊಡಲಾಗಿದೆ. ಪ್ರಭುತ್ವ ಮಾರುಕಟ್ಟೆ ವ್ಯವಸ್ಥೆಗಳನ್ನು ಪರಸ್ಪರ ವಿರುದ್ಧವಾದವು ಎಂದು ಪರಿಗಣಿಸುವುದಕ್ಕೆ ಪ್ರತಿಯಾಗಿ ಅವು ಪರಸ್ಪರ ಪೂರಕವೆಂದು ಪರಿಭಾವಿಸುವ ಅಗತ್ಯವನ್ನು ಪ್ರಬಂಧದ ಕೊನೆಯ ಭಾಗದಲ್ಲಿ ಹೇಳಲಾಗಿದೆ.