ಭಾರತ ಉಪಖಂಡದಲ್ಲಿ ಬ್ರಿಟಿಷ್ ಸರ್ಕಾರ ತನ್ನ ಆಡಳಿತದ ಅನುಕೂಲಕ್ಕೋಸ್ಕರ ಹಲವಾರು ಭೂ ಭಾಗಗಳನ್ನು ಒಂದುಗೂಡಿಸುವ ಹಾಗೂ ಏಕರೂಪಗೊಳಿಸುವ ಪ್ರಯತ್ನವನ್ನು ಮಾಡಿತು. ಇದು ‘ಭಾರತ’ ಎನ್ನುವ ದೇಶ ಸ್ಪಷ್ಟ ಗಡಿಗಳೊಂದಿಗೆ ರೂಪುಗೊಳ್ಳುವುದಕ್ಕೆ ಕಾರಣವಾದರೂ, ಆಂತರಿಕವಾಗಿ ಹಲವು ಸಮಸ್ಯೆಗಳ ಹುಟ್ಟಿಗೂ ಎಡೆ ಮಾಡಿಕೊಟ್ಟಿತು. ಬಹುತ್ವದ ನೆಲೆಯಲ್ಲಿ ರೂಪುಗೊಂಡ ಭಾರತದ ಜನಸಮುದಾಯಗಳು ಭಾರತದ ನಿರ್ಮಾಣವನ್ನು ಗೌರವಿಸುವುದರೊಂದಿಗೆ ತಮ್ಮ ಪ್ರತ್ಯೇಕ ಅಸ್ತಿತ್ವದ ಕುರಿತಾಗಿಯೂ ಚಿಂತಿಸತೊಡಗಿದವು. ಈ ಬೆಳವಣಿಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೇ ಕಾಣಿಸತೊಡಗಿತು. ಬ್ರಿಟಿಷ್ ಸರ್ಕಾರ ಭಾರತೀಯರನ್ನು ಮೂರು ಪ್ರೆಸಿಡೆನ್ಸಿಗಳಲ್ಲಿ ವಿಭಾಗಿಸಿರುವುದು ಪ್ರತ್ಯೇಕತೆಯ ಹೋರಾಟಕ್ಕೆ ಕಾರಣವಾಯಿತು. ಬೇರೆ ಬೇರೆ ಭೂ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನವರ್ಗ ತಮ್ಮ ಭಾಷೆ, ನಂಬಿಕೆ ಹಾಗೂ ಆಚರಣೆಗಳ ಮೂಲಕ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಕೊಂಡಿತು. ರಾಜ್ಯಗಳನ್ನು ಏಕೀಕರಣಗೊಳಿಸುವ ಸಾಮರ್ಥ್ಯ ಭಾಷೆಗಷ್ಟೇ ಇದೆ ಎನ್ನುವ ವಿಚಾರ ಸ್ಪಷ್ಟಗೊಂಡ ಹಿನ್ನೆಲೆಯಲ್ಲಿ ಸಂಘಟಿತ ಹೋರಾಟಗಳು ಆರಂಭಗೊಂಡವು. ಗಡಿಗಳನ್ನು ನಿರ್ಧರಿಸುವುದರ ಜೊತೆಜೊತೆಗೆ ಆಯಾ ಭೂ ಪ್ರದೇಶದ ಸಂಸ್ಕೃತಿ, ಚರಿತ್ರೆ ಹಾಗೂ ಸಾಹಿತ್ಯದ ಕಡೆಗೂ ಹೋರಾಟಗಳು ಗಮನಹರಿಸಲಾರಂಭಿಸಿದವು. ತಮಿಳುನಾಡಿನಲ್ಲಿ ನಡೆದ ಏಕೀಕರಣ ಚಳವಳಿ ಇಂತಹ ಹೋರಾಟಗಳಲ್ಲಿ ಪ್ರಮುಖವಾದುದು. ತಮಿಳುನಾಡಿನಲ್ಲಿ ನಡೆದ ಏಕೀಕರಣ ಚಳವಳಿ ರಾಜ್ಯದ ಗಡಿಗಳನ್ನು ನಿರ್ಧರಿಸುವುದರ ಜೊತೆಗೆ ತಮಿಳೀಕರಣ ಪ್ರಕ್ರಿಯೆಯನ್ನು ಗಟ್ಟಿಗೊಳಿಸಿತು. ಈ ವಿಚಾರಗಳನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ.

ತಮಿಳುನಾಡಿನಲ್ಲಿ ಏಕೀಕರಣ ಚಳವಳಿಯು ರಾಜಕೀಯ ಏಕೀಕರಣ ಹಾಗೂ ಸಂಸ್ಕೃತಿಕ ಏಕೀಕರಣ ಎನ್ನುವ ಎರಡು ನೆಲೆಗಳಿಂದ ನಡೆಯಿತು. ದಕ್ಷಿಣ ಭಾರತದ ರಾಜ್ಯಗಳೆಲ್ಲವನ್ನು ಒಂದುಗೂಡಿಸಿ ‘ದ್ರಾವಿಡ ರಾಜ್ಯ’ ನಿರ್ಮಾಣ ಮಾಡಬೇಕೆನ್ನುವ ಪ್ರಯತ್ನ ಆರಂಭಗೊಂಡಿದ್ದು ತಮಿಳುನಾಡಿನಲ್ಲಿ. ತೆಲಗು, ಕನ್ನಡ ಮತ್ತು ಮಲಯಾಳಿ ಭಾಷಿಕರನ್ನು ಒಂದುಗೂಡಿಸುವ ಪ್ರಯತ್ನ ಅದಾಗಿತ್ತು. ಆದರೆ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಭಾಷಿಕರನ್ನು ಹಾಗೂ ಭೌಗೋಳಿಕ ಎಲ್ಲೆಕಟ್ಟುಗಳನ್ನು ಹೊಂದುವ ಹೋರಾಟದಲ್ಲಿತ್ತು. ತಮಿಳುನಾಡಿನಲ್ಲಿ ಆರಂಭಗೊಂಡ ದ್ರಾವಿಡ ರಾಜ್ಯ ನಿರ್ಮಾಣದ ಹೋರಾಟವು ಆರ್ಯರ ವಿರುದ್ಧ ಅಥವಾ ಉತ್ತರ ಭಾರತದ ವಿರುದ್ಧ ಹಾಗೂ ಅದೇ ಸಂದರ್ಭದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧವೂ ಆಗಿತ್ತು. ಆದರೆ ಕೊನೆಗೆ ಅದು ತಮಿಳು ಭಾಷೆಯನ್ನಾಡುವ ಪ್ರದೇಶಗಳಿಗಷ್ಟೇ ಸೀಮಿತವಾಯಿತು.

ತೆಲಗು ಮತ್ತು ತಮಿಳು ಭಾಷಿಕರ ನಡುವೆ ಹುಟ್ಟಿಕೊಂಡ ಸಮಸ್ಯೆಗಳು ಎರಡೂ ಪ್ರದೇಶಗಳ ಏಕೀಕರಣ ಚಳುವಳಿಯ ಮೂಲ ವಸ್ತುಗಳಾದವು. ಮದ್ರಾಸ್ ರಾಜ್ಯದ ಆಧೀನದಲ್ಲಿದ್ದ ಇವು ಪ್ರತ್ಯೇಕ ಪ್ರತ್ಯೇಕವಾಗಿಯೆ ಗುರುತಿಸಿಕೊಳ್ಳಲು ಪ್ರಯತ್ನಿಸಿದವು. ಈ ಪ್ರಯತ್ನವೇ ಏಕೀಕರಣ ಚಳುವಳಿಯ ರೂಪದಲ್ಲಿ ನಡೆಯಿತು. ತೆಲಗು ಭಾಷಿಕರು ತಮಿಳರ ಆಧೀನದಲ್ಲಿರಲು ಇಷ್ಟಪಡಲಿಲ್ಲ. ಆದರೆ ಮದ್ರಾಸ್ ತೆಲುಗರಿಗೇ ಸೇರಬೇಕೆಂಬ ಬೇಡಿಕೆಯಿತ್ತು. ಇದನ್ನು ತಮಿಳರು ತೀವ್ರವಾಗಿ ವಿರೋಧಿಸಿದರು. ತಮಿಳು ರಾಷ್ಟ್ರೀಯತೆ ಪೆರಿಯಾರ್, ರಾಜಗೋಪಾಲಚಾರಿ, ಅಣ್ಣಾದೊರೈ, ಕಾಮರಾಜ್ ಮುಂತಾದವರ ನಾಯಕತ್ವದಲ್ಲಿ ಹೆಚ್ಚಿನ ಪ್ರಚಾರವನ್ನು ಪಡೆದುಕೊಂಡಿತು. ಇವರೆಲ್ಲರೂ ತಮಿಳು ಭಾಷಿಕರನ್ನು ಒಂದುಗೂಡಿಸುವ ಹಾಗೂ ಬಲಿಷ್ಠ ತಮಿಳುನಾಡನ್ನು ರಚಿಸುವ ಕಾರ್ಯವನ್ನು ತಮ್ಮ ಸಂಘಟನೆಗಳ ಹಾಗೂ ಪಕ್ಷಗಳ ಮೂಲದ ಮಾಡಿದರು.

ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬ್ರಿಟಿಷರ ವಿರುದ್ಧ ೧೮ನೆಯ ಶತಮಾನದ ಆರಂಭದಿಂದಲೇ ಹೋರಾಟಗಳು ಕಾಣಿಸಿಕೊಂಡವು. ತಮಿಳುನಾಡಿನ ಸ್ಥಳೀಯ ನಾಯಕರು (ಪಾಳೆಯಗಾರರು) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸ್ವಾರ್ಥಪೂರಿತ ವಾಣಿಜ್ಯ ನೀತಿಯ ವಿರುದ್ಧ ಹೋರಾಟ ಮಾಡಿದರು. ಆದರೆ ೧೮೦೧ರಲ್ಲಿ ಬ್ರಿಟಿಷರು ತಮಿಳುನಾಡಿನ ಮೇಲೆ ನೇರ ಹಿಡಿತ ಸಾಧಿಸಿದರು. ಇದು ತಮಿಳುನಾಡಿನ ಜನತೆ ರಾಜಕೀಯವಾಗಿ ಎಚ್ಚೆತ್ತುಕೊಳ್ಳುವಂತೆ ಮಾಡಿತು. ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರ ನೀತಿ ಹಾಗೂ ಸರಕಾರವು ಮಿಶನರಿಗಳ ಧಾರ್ಮಿಕ ಚಟುವಟಿಕೆಗಳಿಗೆ ತಡೆಯೊಡ್ಡದಿರುವುದರ ವಿರುದ್ಧ ತಮಿಳುನಾಡಿನಲ್ಲಿ ಸಂಘಟನೆಗಳು ಹುಟ್ಟಿಕೊಂಡವು. ಮದ್ರಾಸ್ ಪ್ರೆಸಿಡೆನ್ಸಿಯ ಆಳ್ವಿಕೆಯ ವಿರುದ್ಧ ತಮಿಳು ಜನತೆ ಹೋರಾಟ ಆರಂಭಿಸಿತು. ಇದು ಸ್ವಾತಂತ್ರ್ಯ ಹೋರಾಟದ ರೂಪದಲ್ಲಿ ಕಂಡು ಬಂದರೂ, ತಮಿಳರ ಸ್ವಾಭಿಮಾನ ಹಾಗೂ ಪ್ರತ್ಯೇಕ ರಾಜ್ಯದ ಕನಸು ಅದರೊಳಗಿದ್ದವು.

೧೮೫೨ರಲ್ಲಿ ಮದ್ರಾಸನಲ್ಲಿ ಮದ್ರಾಸ್ ಸ್ಥಳೀಯ ಸಂಘ ಹುಟ್ಟಿಕೊಂಡಿತು. ಇದು ಕಂಪನಿಯ ವಾಣಿಜ್ಯ ಮತ್ತು ಧಾರ್ಮಿಕ ನೀತಿಗಳನ್ನು ವಿರೋಧಿಸಿತು. ೧೮೫೩ರ ಹೊತ್ತಿಗೆ ಈ ಸಂಘವು ತನ್ನ ವ್ಯಾಪ್ತಿಯನ್ನು ಮದ್ರಾಸನ ಹೊರಗಡೆಗೂ ವಿಸ್ತರಿಸಿಕೊಂಡಿತು. ಕುಡಲೂರು, ತಿರುಚಿನಾಪಳ್ಳಿ, ಸೇಲಂ ಹಾಗೂ ತಿರುನೆಲ್ ವೇಲಿಗಳಲ್ಲಿ ಇದರ ಪ್ರಭಾವ ಕಂಡುಬಂತು. ಆದರೆ ಈ ಸಂಘವು ತನ್ನ ಆಂತರಿಕ ಸಮಸ್ಯೆಗಳಿಂದಾಗಿ ಬ್ರಿಟಿಷ್ ವಿರುದ್ಧದ ತನ್ನ ನಿಲುವುಗಳನ್ನು ಪ್ರತಿಪಾದಿಸುವಲ್ಲಿ ಸೋತಿತು. ೧೮೮೪ರಲ್ಲಿ “ಮದ್ರಾಸ್ ಮಹಾಜನ ಸಭೆ” ಎನ್ನುವ ಸಂಘಟನೆಯೊಂದು ಆರಂಭಗೊಂಡಿತು. ಮದ್ರಾಸಿನ ಜನರ ಸಮಸ್ಯೆಗಳನ್ನು ಬ್ರಿಟಿಷ್ ಸರಕಾರದ ಗಮನಕ್ಕೆ ನೇರವಾಗಿ ತರುವುದು ಈ ಸಭೆಯ ಉದ್ದೇಶವಾಗಿತ್ತು. ಹಿಂದಿನ ಮದ್ರಾಸ್ ಸ್ಥಳೀಯ ಸಂಘದಲ್ಲಿ ಸರಕಾರದ ಅಧಿಕಾರಿಗಳು ಇದ್ದಿದ್ದರಿಂದಾಗಿ ಮದ್ರಾಸಿನ ಜನತೆಯ ಸಮಸ್ಯೆಗಳನ್ನು ನೇರವಾಗಿ ಬ್ರಿಟಿಶ್ ಸರಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ಈ ಸಭೆಯು ತಮಿಳುನಾಡಿನಲ್ಲಿ ಸಂಘಟಿತ ರಾಜಕೀಯ ಚಟುವಟಿಕೆಗಳ ಆರಂಭಕ್ಕೆ ನಾಂದಿ ಹಾಡಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸನಂತೆ ಇದೂ ವಾರ್ಷಿಕ ಅಧಿವೇಶನಗಳನ್ನು ನಡೆಸುತ್ತಿತ್ತು. ನಿಧಾನವಾಗಿ ಮದ್ರಾಸನಿಂದ ಹೊರಗಡೆಗೂ ಇದರ ವ್ಯಾಪ್ತಿ ವಿಸ್ತರಿಸಿಕೊಂಡಿತು. ಪ್ರಾಂತೀಯ ಸಮ್ಮೇಳನಗಳು ನಡೆಯಲಾರಂಭಿಸಿದವು.

ಮದ್ರಾಸ್ ಪ್ರಾಂತೀಯ ಸಮ್ಮೇಳನಗಳು ಮದ್ರಾಸ್ ನಗರದಲ್ಲಿ ಐದು ಬಾರಿ ನಡೆದವು. ನಂತರ ಕುಂಭಕೋಣಂ, ಕೊಯಮತ್ತೂರು, ಮಧುರೈ, ಉತ್ತರ ಆರ್ಕಾಟ್, ತಂಜಾವೂರು ಮುಂತಾದ ಜಿಲ್ಲಾ ಕೇಂದ್ರಗಳಲ್ಲೂ ಸಮ್ಮೇಳನಗಳು ನಡೆದವು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಹ ತನ್ನ ರಾಷ್ಟ್ರೀಯ ಹೋರಾಟದ ಕೆಲಸವನ್ನು ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ನಡೆಸುತ್ತಿತ್ತು. ಸ್ವದೇಶಿ ಹೋರಾಟದ ಸಂದರ್ಭದಲ್ಲಿ ಈ ಸಭೆಯು ತಮಿಳುನಾಡಿನಾದ್ಯಂತ ಚುರುಕಿನಿಂದ ಕೆಲಸ ಮಾಡಿತು. ಸ್ವದೇಶಿ ಕಲ್ಪನೆಯ ಪ್ರತ್ಯೇಕ ರಾಜ್ಯ ಬೇಡಿಕೆ ಹುಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು ಜನರನ್ನು ಸಾಮಾಜಿಕವಾಗಿ ಒಂದುಗೂಡಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಹಾಗೆ ಮಾಡಿತು.

ತಮಿಳುನಾಡಿನಲ್ಲಿ ಸಾಮಾಜಿಕ ಸುಧಾರಣಾ ಕಾರ್ಯಗಳು ಹತ್ತೊಂಬತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ಕಂಡುಬಂದವು. ಇದು ತಮಿಳು ಭಾಷಿಕರಲ್ಲಿ ಜಾಗೃತಿ ಉಂಟು ಮಾಡುವಂತೆ ಮಾಡಿತು. ಶ್ರೇಣೀಕೃತ ಸಮಾಜ ರಚನೆಯ ವಿರುದ್ಧ ಹಾಗೂ ಬ್ರಾಹ್ಮಣ ಸಮುದಾಯದ ವಿರುದ್ಧ ಹೋರಾಟಗಳು ಕಾಣಿಸಿಕೊಂಡವು. ಆಧುನಿಕತೆಯ ಲಾಭವನ್ನು ಪಡೆದುಕೊಂಡ ಬ್ರಾಹ್ಮಣವರ್ಗವು ಬ್ರಾಹ್ಮಣೇತರ ವರ್ಗಗಳ ಮೇಲೆ ಸವಾರಿ ಮಾಡಲಾರಂಭಿಸಿದ್ದೆ ಬ್ರಾಹ್ಮಣೇತರ ವರ್ಗಗಳ ಹೋರಾಟಕ್ಕೆ ಕಾರಣವಾಯಿತು. ಆರಂಭದಲ್ಲಿ ಜಿ.ಸುಬ್ರಹ್ಮಣ್ಯ ಅಯ್ಯರ್, ಟಿ.ಮಾಧವರಾವ್, ಸೋಮಸುಂದರಂ ಚೆಟ್ಟಿ ಮೊದಲಾದವರು ಹಿಂದೂ ಸಮಾಜದ ಅನಿಷ್ಟ ಪದ್ದತಿಗಳನ್ನು ವಿರೋಧಿಸಿ, ಅವುಗಳಿಂದ ಜನರನ್ನು ಹೊರತರುವ ಪ್ರಯತ್ನ ಮಾಡಿದರು. ತಮಿಳುನಾಡಿನಾದ್ಯಂತ ಸಾರ್ವಜನಿಕ ಸಭೆಗಳನ್ನು ನಡೆಸಿ, ಒಂದು ಪರ್ಯಾಯ ಶಕ್ತಿ ರೂವುಗೊಳ್ಳುವಂತೆ ಮಾಡಿದರು. ೧೯೧೪ರಲ್ಲಿ ಬ್ರಾಹ್ಮಣೇತರ ವರ್ಗದ ವಿದ್ಯಾರ್ಥಿಗಳಿಗಾಗಿ ‘ದಿ ದ್ರವೀಡಿಯನ್ ಹೋ’ ಎನ್ನುವ ವಸತಿ ನಿಲಯವನ್ನು ನಟೇಶ್ ಮೊದಲಿಯಾರ್ ಎನ್ನುವವರು ಸ್ಥಾಪಿಸಿದರು. ೧೯೧೬ರಲ್ಲಿ ‘ಸೌತ್ ಇಂಡಿಯನ್ ಪೀಪಲ್ಸ್ ಅಸೋಸಿಯೇಷನ್’ ಎನ್ನುವ ಸಂಸ್ಥೆ ಹುಟ್ಟಿಕೊಂಡು ದ್ರಾವಿಡ ಚಳವಳಿಗೆ ಸ್ಪಷ್ಟ ರೂಪವನ್ನು ಕೊಟ್ಟಿತು. ಈ ಸಂಸ್ಥೆ ಮುಂದೆ ‘ಜಸ್ಟೀಸ್ ಪಾರ್ಟಿ’ ಎನ್ನುವ ಹೆಸರನ್ನು ಪಡೆದುಕೊಂಡಿತು.

ತಮಿಳುನಾಡಿನ ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣ ಚಳವಳಿಯಲ್ಲಿ ಜಸ್ಟೀಸ್ ಪಾರ್ಟಿಯು ಮಹತ್ವದ ಪಾತ್ರವನ್ನು ವಹಿಸಿತು. ತಮಿಳುನಾಡಿನಲ್ಲಿ ಬ್ರಾಹ್ಮಣೇತರ ವರ್ಗಗಳನ್ನು ಒಂದುಗೂಡಿಸಿ, ಸ್ವಾಭಿಮಾನದ ಕಿಚ್ಚನ್ನು ಪಸರಿಸಿದ ಖ್ಯಾತಿ ಈ ಪಕ್ಷದ್ದು. ತಮಿಳು ಜನತೆ ಹಾಗೂ ತಮಿಳು ಭಾಷೆಗಾಗಿ ಈ ಪಕ್ಷ ಹೋರಾಟ ಮಾಡಿತು. ಸರ್.ಎಂ.ತ್ಯಾಗರಾಜನ್, ಟಿ.ಎಂ.ನಾಯರ್ ಮುಂತಾದವರು ಈ ಪಕ್ಷದ ರೂವಾರಿಗಳು. ಬ್ರಾಹ್ಮಣೇತರ ವರ್ಗಗಳಿಗೆ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ನ್ಯಾಯ ಒದಗಿಸಿಕೊಡುವುದು ಇದರ ಉದ್ದೇಶವಾಗಿತ್ತು. ಜಸ್ಟೀಸ್, ದ್ರಾವಿಡಿಯನ್ ಮುಂತಾದ ಪತ್ರಿಕೆಗಳು ದ್ರಾವಿಡ ಜನರ ಹಿತಾಸಕ್ತಿಗಳನ್ನು ಬಿಂಬಿಸುತ್ತಿದ್ದವು. ದ್ರಾವಿಡ ರಾಜ್ಯದ ಉದ್ದೇಶವನ್ನು ತಮಿಳುನಾಡಿನಾದ್ಯಂತ ಪ್ರಚಾರ ಮಾಡಿದವು.

ದ್ರಾವಿಡ ರಾಜ್ಯದ ಕನಸನ್ನು ಹೊತ್ತು, ತಮಿಳುನಾಡಿನ ಜನತೆಯ ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಾಗಿ ದುಡಿದವರಲ್ಲಿ ‘ಪೆರಿಯಾರ್’ ಎಂದೇ ಖ್ಯಾತರಾದ ಇ.ವಿ.ರಾಮಸ್ವಾಮಿ ನಾಯ್ಕರ್ ಅವರು ಪ್ರಮುಖರು. ಪೆರಿಯಾರರು ಆರಂಭದಲ್ಲಿ ಕಾಂಗ್ರಸನೊಂದಿಗೆ ನಿಕಟ ಕೆಲಸ ಮಾಡಿದ್ದರು. ಆದರೆ ಕಾಂಗ್ರೆಸ್ ಪಕ್ಷದೊಳಗಿನ ಬ್ರಾಹ್ಮಣ ಯಜಮಾನಿಕೆ ಅವರನ್ನು ಆ ಪಕ್ಷದಿಂದ ದೂರ ಮಾಡಿತು. ೧೯೨೫ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ದ್ರಾವಿಡ ಜನರ ಅಭಿವೃದ್ಧಿಗಾಗಿ ‘ಆತ್ಮಗೌರವ ಚಳವಳಿ’ಯನ್ನು ಹುಟ್ಟುಹಾಕಿದರು. ವೈದಿಕ ಧರ್ಮವನ್ನು ಕಟುವಾಗಿ ಟೀಕಿಸಿ, ಅದರ ಗೊಡ್ಡು ಸಂಪ್ರದಾಯಗಳನ್ನು ಜನರು ವಿರೋಧಿಸಬೇಕೆಂದು ಕರೆ ನೀಡಿದರು. ೧೯೩೭ರಲ್ಲಿ ಸಿ.ರಾಜಗೋಪಾಲ ಚಾರಿಯವರು ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿದಾಗ, ಪೆರಿಯಾರ್ ನೇತೃತ್ವದ ತಮಿಳು ಪ್ರೇಮಿಗಳು ಕಾಂಗ್ರೆಸ ಧೋರಣೆಯನ್ನು ತಮಿಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ದಾಳಿ ಎಂಬುದಾಗಿ ಪರಿಗಣಿಸಿ ತೀವ್ರ ಪ್ರತಿಭಟನೆ ನಡೆಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಬ್ರಾಹ್ಮಣಪರ ನೀತಿಯನ್ನು ಹಾಗೂ ತಮಿಳುನಾಡಿನಲ್ಲಿದ್ದ ಬ್ರಾಹ್ಮಣವರ್ಗದ ಧೋರಣೆಯನ್ನು ವಿರೋಧಿಸಲು ಪ್ರತ್ಯೇಕ ದ್ರಾವಿಡ ರಾಜ್ಯದ ನಿರ್ಮಾಣವಾಗಬೇಕೆನ್ನುವ ಕರೆಯನ್ನು ಪೆರಿಯಾರ್ ನೀಡಿದರು. ೧೯೩೮ರಲ್ಲಿ ಜಸ್ಟೀಸ್ ಪಕ್ಷದ ಅಧ್ಯಕ್ಷರಾದ ಪೆರಿಯಾರ್ ತಮಿಳುನಾಡನ್ನು ಬ್ರಿಟಿಷ ಆಡಳಿತಕ್ಕೊಳಪಟ್ಟ ಒಂದು ಪ್ರತ್ಯೇಕ ರಾಜ್ಯವನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ೧೯೩೯ರಲ್ಲಿ ದ್ರಾವಿಡನಾಡು ಸಮ್ಮೇಳನವನ್ನು ಪೆರಿಯಾರ್ ಸಂಘಟಿಸಿದರು. ತಮಿಳು, ತೆಲಗು, ಕನ್ನಡ, ಮಲಯಾಳಿ ಮುಂತಾದ ದ್ರಾವಿಡ ಭಾಷೆಯನ್ನಾಡುವ ಜನರನ್ನು ಒಟ್ಟು ಸೇರಿಸಿ ದ್ರಾವಿಡ ರಾಜ್ಯ ನಿರ್ಮಾಣ ಮಾಡಬೇಕೆನ್ನುವುದು ಪೆರಿಯಾರ್ ಅವರ ಮಹದಾಸೆಯಾಗಿತ್ತು.

ಜಸ್ಟೀಸ್ ಪಕ್ಷವು ೧೯೪೪ರಲ್ಲಿ ಪೆರಿಯಾರ್ ಅವರ ಆಶಯದಂತೆ ದ್ರಾವಿಡ ಕಜಗಂ ಪಕ್ಷವಾಗಿ ಗುರುತಿಸಿಕೊಂಡಿತು. ಇದು ದ್ರಾವಿಡ ರಾಜ್ಯದ ನಿರ್ಮಾಣಕ್ಕಾಗಿ ಉಗ್ರ ಹೋರಾಟಗಳನ್ನು ನಡೆಸಿತು. ದ್ರಾವಿಡ ಕಜಗಂ ಪಕ್ಷವು ಬ್ರಿಟಿಷ ಸರಕಾರವನ್ನು ಹಾಗೂ ಬ್ರಾಹ್ಮಣ ಹಿಡಿತದ ಸಾಮಾಜಿಕ ವ್ಯವಸ್ಥೆಯನ್ನು ಸಮಾನವಾಗಿ ವಿರೋಧಿಸಿತು. ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಸಂದರ್ಭದಲ್ಲಿ ಪಾಕಿಸ್ತಾನ ಮಾದರಿಯಲ್ಲಿ ಪ್ರತ್ಯೇಕ ದ್ರಾವಿಡನಾಡು ಅಸ್ತಿತ್ವಕ್ಕೆ ಬರಬೇಕೆಂದು ಪೆರಿಯಾರ್ ಒತ್ತಾಯಿಸಿ ಹೋರಾಟ ಮಾಡಿದರು. ಇದು ತಮಿಳುನಾಡಿನ ಸಂಸ್ಕೃತದ ಹಿಡಿತದಿಂದ ಮುಕ್ತಗೊಳಿಸುವ ಪ್ರಯತ್ನವನ್ನು ಮಾಡಿದರು. ಇದು ತಮಿಳುನಾಡಿನ ಸಾಂಸ್ಕೃತಿಕ ಏಕೀಕರಣದ ಪ್ರಯತ್ನಗಳಾಗಿ ಕಂಡುಬರುತ್ತವೆ. ರಾಜಕೀಯ ಏಕೀಕರಣಕ್ಕಿಂತಲೂ ಸಾಂಸ್ಕೃತಿಕ ಏಕೀಕರಣ ಮೊದಲು ಆಗಬೇಕಾದ ಕೆಲಸ ಎನ್ನುವುದು ಸುಧಾರಣಾವಾದಿಗಳ ನಿಲುವಾಗಿತ್ತು. ದ್ರಾವಿಡ ಕಜಗಂ ಪಕ್ಷವು ತಮಿಳುನಾಡಿನಾದ್ಯಂತ ತನ್ನ ಶಾಖೆಗಳನ್ನು ತೆರೆದು ತಮಿಳು ರಾಷ್ಟ್ರೀಯತೆಯನ್ನು ಬೆಳೆಸುವ ಕೆಲಸವನ್ನು ಮಾಡಿತು. ತಮಿಳು ರಾಷ್ಟ್ರೀಯತೆ ಬೆಳೆಯುತ್ತಿದ್ದ ಸಂದರ್ಭದಲ್ಲಿಯೇ ತೆಲಗು ಭಾಷಿಕರು ಪ್ರತ್ಯೇಕ ಆಂಧ್ರಪ್ರದೇಶದ ಬೇಡಿಕೆಯನ್ನಿಟ್ಟು ಹೋರಾಟ ಆರಂಭಿಸಿದರು. ಇವೆರಡೂ ಒಟ್ಟೊಟ್ಟಿಗೆ ನಡೆದವು.

ತಮಿಳುನಾಡಿನಲ್ಲಿ ನಡೆದ ಇನ್ನೊಂದು ಮಹತ್ವದ ಘಟನೆಯೆಂದರೆ ೧೯೪೯ರಲ್ಲಿ ಸಿ.ಎನ್. ಅಣ್ಣಾದೊರೈ ಅವರ ನೇತೃತ್ವದ ‘ದ್ರಾವಿಡ ಮುನ್ನೇತ್ರ ಕಜಗಂ’ (ಡಿ.ಎಂ.ಕೆ) ಎಂಬ ಹೆಸರಿನ ಹೊಸ ಪಕ್ಷ ಹುಟ್ಟಿಕೊಂಡಿದ್ದು. ಪೆರಿಯಾರ್ ನೇತೃತ್ವದ ದ್ರಾವಿಡ ಕಜಗಂ ಪಕ್ಷದಲ್ಲಿ ಭಿನ್ನಮತ ಹುಟ್ಟಿಕೊಂಡು ಅದೇ ಪಕ್ಷದೊಳಗಿನ ಗುಂಪೊಂದು ಸಿ.ಎನ್. ಅಣ್ಣಾದೊರೈ ಅವರ ನೇತೃತ್ವದಲ್ಲಿ ಈ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿತು. ಡಿ.ಎಂ.ಕೆ ಯು ಬ್ರಾಹ್ಮಣ ವಿರೋಧಿ, ಉತ್ತರ ಭಾರತ ವಿರೋಧಿ ಹಾಗೂ ಆರ್ಯನ್ನರ ವಿರೋಧಿ ಪಕ್ಷವಾಗಿತ್ತು. ಎಂ.ಜಿ. ರಾಮಚಂದ್ರನ್, ಕೆ.ಆರ್. ರಾಮಸ್ವಾಮಿ, ಎಸ್.ಎಸ್. ರಾಜೇಂದ್ರನ್, ಎಂ. ಕರುಣಾನಿಧಿ, ಎಮ್.ವಿ. ನಟರಾಜನ್ ಮುಂತಾದವರು ದ್ರಾವಿಡ ಮುನ್ನೇತ್ರ ಕಜಗಂ ಪಕ್ಷವನ್ನು ಬೆಂಬಲಿಸಿದರು. ಪೆರಿಯಾರ್ ಮತ್ತು ಅಣ್ಣಾದೊರೈ ಇವರ್ ಮಧ್ಯದ ಭಿನ್ನಾಭಿಪ್ರಾಯದ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿತು. ೧೯೫೧-೫೨ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷವು ಜಯ ಗಳಿಸಿ ಸಿ. ರಾಜಗೋಪಾಲಚಾರಿಯವರು ಮುಖ್ಯಮಂತ್ರಿಗಳಾದರು. ಕಾಂಗ್ರೆಸ ಪಕ್ಷವು ದ್ರಾವಿಡ ಚಳವಳಿಯನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನವನ್ನು ಮಾಡಿದಾಗ ಪೆರಿಯಾರ್ ಅವರು ಆ ಪ್ರಕ್ರಿಯೆಗೆ ಬಿಂಬಲ ನೀಡಿದರು. ಹಾಗಾಗಿ ದ್ರಾವಿಡ ಮುನ್ನೇತ್ರ ಕಜಗಂ ದ್ರಾವಿಡ ಚಳವಳಿಯನ್ನು ತನ್ನದಾಗಿಸಿಕೊಳ್ಳುವ ಪ್ರಯತ್ಯ ಮಾಡಿತು. ೧೯೫೦ರ ದಶಕದಲ್ಲಿ ಪೆರಿಯಾರ್ ಅವರು ‘ದ್ರಾವಿಡ ರಾಜ್ಯ’ದ ಬೇಡಿಕೆಯನ್ನು ಕೈಬಿಟ್ಟು ತಮಿಳು ಭಾಷಿಕರಿರುವ ಪ್ರತ್ಯೇಕ ತಮಿಳುನಾಡಿನ ಸ್ಥಾಪನೆಗಾಗಿ ಹೋರಾಡಿದರು. ‘ದ್ರಾವಿಡ ನಾಡು’ ಸ್ಥಾಪನೆ ವಿಚಾರವನ್ನು ಮುಂದೆ ಕೈಗೆತ್ತಿಕೊಳ್ಳಲಾಗುವುದೆಂದು ತಿಳಿಸಿದರು. ತಮಿಳುನಾಡು, ತಮಿಳುಭಾಷೆ ಹಾಗೂ ತಮಿಳು ಜನತೆಯ ಪರವಾಗಿರುವ ಪಕ್ಷಕ್ಕೆ ಪೆರಿಯಾರ್ ಬೆಂಬಲ ಸೂಚಿಸಿದರು. ಕಾಂಗ್ರೆಸ ಪೆರಿಯಾರ್ ಅವರ ಈ ವಿಚಾರವನ್ನು ಸರಿಯಾಗಿ ಬಳಸಿಕೊಂಡಿತು.

ಸಾಂಸ್ಕೃತಿಕ ಹಿನ್ನಲೆಯಲ್ಲಿ ಬ್ರಾಹ್ಮಣೇತರ ಸಮುದಾಯದ ದ್ರಾವಿಡ ರಾಜ್ಯದ ಕಲ್ಪನೆಯ ಜೊತೆ ಜೊತೆಗೆ ರಾಜಕೀಯವಾಗಿ ಮದ್ರಾಸ್ ರಾಜ್ಯದೊಳಗೆ ಅನೇಕ ರೀತಿಯ ಬೆಳವಣಿಗೆಗಳು ಕಂಡುಬಂದವು. ನಾಗಪುರದಲ್ಲಿ ೧೯೨೦ರಲ್ಲಿ ನಡೆದ ಕಾಂಗ್ರಸ್ ಅಧಿವೇಶನದ ಪ್ರಕಾರ ಭಾರತವನ್ನು ೨೧ ಭಾಗಗಳನ್ನಗಿ ವಿಂಗಡಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಅದರಲ್ಲಿ ಮದ್ರಾಸ್ (ತಮಿಳು) ಪ್ರಾಂತ್ಯವೂ ಒಂದು. ಪ್ರಾಂತ್ಯಗಳನ್ನು ಭಾಷೆಯ ಆಧಾರದ ಮೇಲೆ ವಿಂಗಡಣೆ ಮಾಡಬೇಕೆಂದು ಕಾಂಗ್ರೆಸ ಒತ್ತಾಯಿಸಿತು. ೧೯೧೮ರಲ್ಲಿ ಮೌಂಟ್-ಫರ್ಡ್ ವರದಿಯು ಭಾಷಾವಾರು ಪ್ರಾಂತ್ಯಗಳ ರಚನೆಯ ಕುರಿತಾದ ವರದಿ ನೀಡಿತ್ತು. ಆದರೆ ೧೯೫೦ರ ದಶಕದವರೆಗೂ ಭಾಷಾವಾರು ಪ್ರಂತ್ಯಗಳ ರಚನೆಯ ಕುರಿತಾದ ಹೋರಾಟಗಳು ನಿರಂತರವಾಗಿ ನಡೆದುಕೊಂಡೆ ಬಂದವು. ಈ ಕುರಿತಾಗಿ ಅನೇಕ ಆಯೋಗಗಳೂ ರಚನೆಗೊಂಡವು.

೧೯೩೮ರ ಮಾರ್ಚನಲ್ಲಿ ಮದ್ರಾಸು ಶಾಸನ ಸಭೆಯಲ್ಲಿ ಆಂಧ್ರ, ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಪ್ರದೇಶಗಳನ್ನು ಭಾಷಾಧಾರಿತ ರಾಜ್ಯಗಳನ್ನಾಗಿ ವಿಂಗಡಿಸಬೇಕೆನ್ನುವ ನಿರ್ಣಯ ಕೈಗೊಳ್ಳಲಾಯಿತು. ಅಂದಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಜಗೋಪಾಲಚಾರಿಯವರು ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ವಿರೋಧಿಸಿದರು. ಇದು ಹೋರಾಟಕ್ಕೆ ಹಿನ್ನಡೆಯನ್ನುಂಟು ಮಾಡಿತು. ಪ್ರತ್ಯೇಕ ಆಂಧ್ರದ ನಿರ್ಮಾಣವನ್ನು ಕೆಲವು ತಮಿಳಿನ ಮಂತ್ರಿಗಳು ವಿರೋಧಿಸಿದರು. ಮದ್ರಾಸ್ ತೆಲಗು ಮತ್ತು ತಮಿಳು ಭಾಷಿಕರಿಗೆ ಕೇಂದ್ರ ಸ್ಥಾನವಾಗಿತ್ತು. ಏಕೆಂದರೆ ತೆಲಗು ಭಾಷಿಕರ ಹಲವಾರು ಪ್ರದೇಶಗಳು ಹೈದರಾಬಾದಿನ ನಿಜಾಮರ ಅಧೀನದಲ್ಲಿದ್ದವು. ಮದ್ರಾಸ್ ರಾಜ್ಯದೊಳಗಿರಲು ತೆಲಗು ಭಾಷಿಕರು ಇಷ್ಟಪಡಲಿಲ್ಲ. ಮದ್ರಾಸ್ ಶಾಸನ ಸಭೆಯಲ್ಲಿ ಆಂಧ್ರ ನಾಯಕರು ತೆಲುಗಿನಲ್ಲಿಯೆ ಮಾತನಾಡತೊಡಗಿದರು.

ಹೀಗಾಗಿ ತೆಲಗು ಮತ್ತು ತಮಿಳು ಭಾಷಿಕರು ಮದ್ರಾಸ್ ರಾಜ್ಯದೊಳಗೆ ಪ್ರತ್ಯೇಕ ಪ್ರತ್ಯೇಕವಾಗಿಯೆ ಗುರುತಿಸಿಕೊಳ್ಳಲಾರಂಭಿಸಿದರು. ಸಂಯುಕ್ತ ಮದ್ರಾಸ್ ರಾಜ್ಯದಿಂದಾಗಿ ಆಗುವ ಅನರ್ಥಗಳ ಬಗ್ಗೆ ಸಂಯುಕ್ತ ಮದ್ರಾಸ್ ರಾಜ್ಯದ ಶಾಸನಸಭೆಯಲ್ಲಿ ಆಂಧ್ರದ ನಾಯಕರುಗಳು ವಿವರಿಸಿ, ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಮುಂದಿಟ್ಟರು. ಮದ್ರಾಸ್ ರಾಜ್ಯ ಸರಕಾರ ಮತ್ತು ಭಾರತ ಸರಕಾರಗಳೆರಡನ್ನೂ ಆಂಧ್ರದ ನಾಯಕರು ಟೀಕಿಸಿದರು. ಭಾಷಾವಾರು ಪ್ರಾಂತ್ಯಗಳ ರಚನೆಗೆ ಮೊದಲ ಆದ್ಯತೆ ನೀಡಿದ್ದ ಕಾಂಗ್ರೆಸ್, ಸ್ವಾತಂತ್ರ್ಯ ಬಂದು ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಅದೇ ಸಮಸ್ಯೆಗೆ ದ್ವಿತೀಯ ಆದ್ಯತೆ ನೀಡಿತು.

ಆಂಧ್ರಪ್ರದೇಶದ ನಿರ್ಮಾಣ ವಿಳಂಬವಾಗುತ್ತಿರುವುದಕ್ಕೆ ಹಾಗೂ ಕಾಂಗ್ರೆಸನ ಧೋರಣೆಯನ್ನು ವಿರೋಧಿಸಿ ಪೂಟ್ಟಿರಾಮಲು ಅವರು ಆವರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ೧೯೫೨ರ ಡಿಸೆಂಬರ ೧೫ರಂದು ನಿಧನರಾದರು. ಇದು ಆಂಧ್ರರಾಜ್ಯದ ಬೇಡಿಕೆ ಉಗ್ರರೂಪವನ್ನು ಪಡೆಯುವಂತೆ ಮಾಡಿ, ನೆಹರೂ ನೇತೃತ್ವದ ಸರಕಾರ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಒಪ್ಪುವಂತೆ ಮಾಡಿತು. ಮದ್ರಾಸ್ ಆಂಧ್ರದ ರಾಜಧಾನಿಯಾಗುವುದಿಲ್ಲ ಹಾಗೂ ಅದು ತಮಿಳುನಾಡಿಗೆ ಸೇರುತ್ತದೆ ಎನ್ನುವ ತೀರ್ಮಾನವನ್ನು ನೆಹರೂ ಪ್ರಕಟಿಸಿದರು. ಏಕೆಂದರೆ ಮದ್ರಾಸ್ ಇಲ್ಲದ ಆಂಧ್ರರಾಜ್ಯ ಬೇಡ ಎನ್ನುವ ಕೂಗು ಇತ್ತು. ಕೊನೆಗೂ ಅಕ್ಟೋಬರ್ ೧೯೫೩ರಲ್ಲಿ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂದಿತು. ಹೀಗಾಗಿ ತೆಲಗು ಭಾಷೆಯನ್ನಾಡುವ ಪ್ರದೇಶಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟವು. ಏಕಕಾಲದಲ್ಲಿ ತಮಿಳು ಭಾಷೆಯನ್ನಾಡುವ ಪ್ರದೇಶಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟವು. ಏಕಕಾಲದಲ್ಲಿ ತಮಿಳು ಭಾಷೆಯನ್ನಾಡುವ ಪ್ರದೇಶಗಳು ಸೇರಿ ಮದ್ರಾಸ್ ರಾಜ್ಯದೊಳಗೆ ತಮಿಳುನಾಡು ಅಸ್ತಿತ್ವಕ್ಕೆ ಬಂದಿತು. ಆ ಸಂದರ್ಭದಲ್ಲಿ ಸಿ.ರಾಜಗೋಪಾಲಚಾರಿಯವರು ಮುಖ್ಯಮಂತ್ರಿಯಾಗಿದ್ದರು. ೧೯೫೩ರ ಅಕ್ಟೋಬರ್ ೨೫ರಂದು ಸೇಲಂ ನಲ್ಲಿ ತಮಿಳುನಾಡಿನ ರಾಜಕೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಸಿ.ರಾಜಗೋಪಾಲಚಾರಿ, ಪಿ.ಸುಬ್ಬರಾಯನ್, ಕೆ.ಕಾಮರಾಜ್ ಮುಂತಾದವರು ಭಾಗವಹಿಸಿದರು. ೧೯೫೪ರ ಏಪ್ರಿಲನಲ್ಲಿ ಸಿ.ರಾಜಗೋಪಾಲಚಾರಿಯವರು ರಾಜೀನಾಮೆ ನೀಡಿ, ಕೆ.ಕಾಮರಾಜ್ ಅವರು ೧೯೫೪ ರ್ ಏಪ್ರೀಲ್ ೧೩ರಂದು ತಮಿಳುನಾಡಿನ ಮುಖ್ಯಮಂತ್ರಿಯಾದರು. ಆ ಸಂದರ್ಭದಲ್ಲಿ ಪೆರಿಯಾರ್ ಅವರು ಕಾಮರಾಜ್ ಅವರಿಗೆ ಬೆಂಬಲ ಸೂಚಿಸಿದರು. ಏಕೆಂದರೆ ಕಾಮರಾಜ್ ಅವರು ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದವರಾಗಿದ್ದರು.

ಸಾಂಸ್ಕೃತಿಕವಾದ ತಮಿಳುನಾಡು ರಚನೆಗೊಂಡಿದ್ದರೂ, ರಾಜಕೀಯವಾಗಿ ಅದು ಪೂರ್ಣಗೊಂಡಿದ್ದು ೧೯೫೬ರಲ್ಲಿಯೆ. ಮದ್ರಾಸ್ ರಾಜ್ಯದ ಅಧೀನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲೂಕುಗಳು ೧೯೫೬ರಲ್ಲಿ ಕರ್ನಾಟಕಕ್ಕೆ ಸೇರಿಕೊಂಡವು. ಮದ್ರಾಸ್ ರಾಜ್ಯದ ಬಹುಮುಖ್ಯ ಭಾಗವಾಗಿದ್ದ ಮಲಬಾರ್ ಪ್ರಾಂತ್ಯ ೧೯೫೬ರಲ್ಲಿ ಕೇರಳದೊಂದಿಗೆ ಸೇರಿಕೊಂಡಿತು. ತಿರುವಾಂಕೂರು-ಕೊಚ್ಚಿನ ರಾಜ್ಯದ ಭಾಗವಾಗಿದ್ದ ಹಳೆಯ ತಿರುವಾಂಕೂರಿನ ದಕ್ಷಿಣ ಭಾಗಗಳಾದ ಕನ್ಯಾಕುಮಾರಿ ಜಿಲ್ಲೆಯ ತಾವೊಲಾ, ಅಗಸ್ತೇಶ್ವರಂ, ಕಾಲ್ಕುಲಂ ಮತ್ತು ವಿಲಾವಾನ್ ಕೋಡ್ ತಾಲೂಕುಗಳು ಮತ್ತು ಚೆನ್ ಕೊಟೈನ್ ಕೆಲವು ಭಾಗ ತಮಿಳುನಾಡಿನೊಂದಿಗೆ ಸೇರಿಕೊಂಡಿತು. ಈ ಎಲ್ಲ ಗಡಿ ಹೊಂದಾಣಿಕೆಗಳು ರಾಜ್ಯ ಪುನರ ವಿಂಗಡಣಾ ಆಯೋಗದ ತಿರ್ಮಾನದಂತೆ ಆದವು. ಹೀಗಾಗಿ ೧೯೫೬ ನವೆಂಬರ ೧೧ರಂದು ತಮಿಳುನಾಡು ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಅದು ಪೂರ್ಣ ಪ್ರಮಾಣದಲ್ಲಿ ೧೯೫೬ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಹೀಗೆ ತಮಿಳುನಾಡಿನ ಏಕೀಕರಣ ಚಳವಳಿಯು ಬ್ರಾಹ್ಮಣ ವಿರೋಧಿಯಾಗಿ, ಉತ್ತರ ಭಾರತ ವಿರೋಧಿಯಾಗಿ ಹಾಗೂ ಸುಧಾರಣಾ ಚಳವಳಿಯಾಗಿ ನಡೆಯಿತು. ಆಂಧ್ರಪ್ರದೇಶವು ಭಾಷೆಯ ಆಧಾರದ ಮೇಲೆ ಪ್ರತ್ಯೇಕಗೊಂಡು ನೂತನ ರಾಜ್ಯವಾದಾಗ, ತಮಿಳುನಾಡು ತಮಿಳು ಭಾಷಿಕರ ರಾಜ್ಯವಾಗಿ ರೂಪುಗೊಂಡಿತು. ಆದರೆ ಅದು ಮದ್ರಾಸ್ ರಾಜ್ಯವಾಗಿಯೆ ಗುರುತಿಸಿಕೊಂಡಿತ್ತು. ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳು ೧೯೫೬ರ್ ನವೆಂಬರ ೧ ರಂದು ಅಸ್ತಿತ್ವಕ್ಕೆ ಬಂದಾಗ ತಮಿಳುನಾಡು ಅನೇಕ ಪ್ರದೇಶಗಳನ್ನು ಕಳೆದುಕೊಳ್ಳಬೇಕಾಯಿತು. ಗಡಿ ಹೊಂದಾಣಿಕೆಯೊಂದಿಗೆ ಅಧುನಿಕ ತಮಿಳುನಾಡು ರೂಪುಗೊಂಡಿದ್ದು ೧೯೫೬ ರಲ್ಲಿ. ಪೆರಿಯಾರ್, ಅಣ್ಣಾದೊರೈ ಮುಂತಾದವರು ನಡೆಸಿದ ದ್ರಾವಿಡ ಚಳವಳಿಯ ಫಲವಾಗಿ ತಮಿಳುನಾಡು ಬಲಿಷ್ಠವಾಗಿ ರೂಪುಗೊಂಡಿತು. ತಮಿಳು ಭಾಷೆಯು ತಮಿಳೀಕರಣ ಪ್ರಕ್ರಿಯೆಯಿಂದಾಗಿ ರಾಜಕೀಯ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಪಡೆದುಕೊಂಡಿತು. ತಮಿಳುನಾಡಿನ ರಾಜಕೀಯ ಪಕ್ಷಗಳು ಅಲ್ಲಿನ ಜನತೆ, ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರಧಾನ ವಿಚಾರವನ್ನಾಗಿಟ್ಟುಕೊಂಡು ಹೋರಾಟ ಮಾಡಿದ್ದರಿಂದಾಗಿ, ಅಲ್ಲಿನ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿಕೊಂಡವು.