ಒಂದು ವಿಶಾಲವಾದ ಪ್ರದೇಶದಲ್ಲಿ ವಾಸಿಸುತ್ತಿದ್ದು ಒಂದೇ ಭಾಷೆ, ಸಂಪ್ರದಾಯ, ಸಂಸ್ಕೃತಿಯನ್ನು ಹೊಂದಿದ ಆಂಧ್ರಪ್ರದೇಶದ ಜನತೆ ಕೆಲವು ಅಪವಾದಗಳನ್ನು ಹೊರತು ಪಡಿಸಿದಂತೆ ದೀರ್ಘಕಾಲಿಕ ರಾಜಕೀಯ ಅನೈಕ್ಯತೆಯನ್ನು ಅನುಭವಿಸಬೇಕಾಗಿ ಬಂದಿತು. ಆದರೂ ಆಂಧ್ರದ ಜನತೆ ಪರಸ್ಪರ ಸಂಬಂಧಗಳಿಲ್ಲದ ಪ್ರತ್ಯೇಕ ದ್ವೀಪಗಳಂತೆ ಬಾಳಲಿಲ್ಲ. ರಾಜಕೀಯ ಚರಿತ್ರೆಯ ಏರಿಳಿತಗಳು ಹೇಗೇ ಇದ್ದರೂ ಅವರ ನಡುಮೆ ಸಾಮೀಪ್ಯವನ್ನು ತರುವ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳಿದ್ದವು.

ಆಂಧ್ರದ ನೆಲದಲ್ಲಿ ಮೂವರು ಮಹಾಕವಿಗಳಿದ್ದರು. ರಾಜಮಹೇಂದ್ರವರಂನಲ್ಲಿ ಆದಿಕವಿ ನನ್ನಯ, ನೆಲ್ಲೂರಿನಲ್ಲಿ ಮಹಾಭಾರತ ಕಾವ್ಯ ರಚಿಸಿದ ತಿಕ್ಕನ, ಭಾಗವತಾಮೃತವನ್ನು ಪಸರಿಸಿದ ತೆಲಂಗಾಣಾ ಕವಿ ಶೇಖರ ಪೋತನ ಇವರೆಲ್ಲ ತೆಲಗು ಜನತೆಯ ಹೃದಯಗಳಲ್ಲಿ ಶಾಶ್ವತವಾಗಿದ್ದಾರಿ.

ಭಾರತದ ಸ್ವಾತಂತ್ರ್ಯಕ್ಕಾಗಿನ ಹೋರಾಟದ ಜೊತೆಯಲ್ಲೇ ಆಂಧ್ರ ಜನತೆಯ ಏಕತೆಗಾಗಿನ ಹೋರಾಟಗಳು ನಡೆದವು. ಬಂಗಾಳದ ವಿಭಜನೆಯ ಕಾಲಕ್ಕೆ ನಡೆದ ಚಳವಳಿಯ ಅನಂತರದಲ್ಲಿ ಭಾಷೆಯ ನೆಲಗಟ್ಟಿನ ಮೇಲೆ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಪ್ರಪ್ರಥಮ ಚಳವಳಿಯು ಆಂಧ್ರದ ಜನತೆಯಿಂದ ಪ್ರಾರಂಭಗೊಂಡುದಾಗಿದೆ.

ಆಂಧ್ರಪ್ರದೇಶದ ಹಿಂದುಳಿದಿರುವಿಕೆ

ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಪ್ರಾಶ್ಚಾತ್ಯ ಮಾದರಿಯ ಶಿಕ್ಷಣ ವ್ಯಾಪಿಸಿದುದು, ಶ್ರೀಮಂತ ರೈತರು, ವ್ಯಾಪಾರಿಗಳು ಹುಟ್ಟಿಕೊಂಡುದು, ಸಾಮಾಜಿಕ ಸುಧಾರಣೆಯ ಅಪೇಕ್ಷೆ ಹೆಚ್ಚಿದುದು, ಜನರ ಜೀವನ ವಿಧಾನದಲ್ಲಿ ಶೀಘ್ರಗತಿಯ ಮಾರ್ಪಾಟುಗಳನ್ನು ತಂದಿತು. ತೆಲಗು ಜನತೆಯನ್ನು ೧೮೮೪ರಲ್ಲಿ ಆರಂಭಗೊಂಡ ಮದ್ರಾಸು ಮಹಾಸಭೆ, ೧೮೮೫ರಲ್ಲು ಪ್ರಾರಂಭಗೊಂಡ ಭಾರತ ರಾಷ್ಟ್ರೀಯ ಕಾಂಗ್ರೆಸ್ ಜಾಗೃತಿಗೊಳಿಸಿದವು. ಆಂಧ್ರದ ಜಿಲ್ಲೆಗಳಲ್ಲಿ ಸ್ವದೇಶಿ ಚಳವಳಿಯು ಪ್ರಾದೇಶಿಕ ಸೃಜನಶೀಲತೆಯನ್ನು ಅಭಿವೃದ್ಧಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೇರಕವಾಯಿತು. ಈ ಕಾರಣಗಳೆಲ್ಲಾ ಆಂಧ್ರದ ಜನತೆಯಲ್ಲಿ ರಾಜಕೀಯ ಜಾಗೃತಿಯು ಮೂಡುವಲ್ಲಿ ಸಹಕರಿಸಿತಲ್ಲದೆ, ಬಂಗಾಳಿಗರೊಂದಿಗೆ, ಮರಾಠಿಗರೊಂದಿಗೆ, ತಮಿಳರೊಂದಿಗೆ ಹೋಲಿಸಿಕೊಂಡಲ್ಲಿ ತಾವು ಅದೆಷ್ಟೋ ಹಿಂದುಳಿದೆದ್ದೇವೆಂಬ ವಾಸ್ತವವನ್ನು ಗ್ರಹಿಸುವಂತೆ ಮಾಡಿದವು. ಸರಕಾರಿ ಉದ್ಯೋಗಶ್ರೇಣಿಯಲ್ಲಿ ತೆಲುಗರಿಗೆ ಇರುವ ವಾಸ್ತವದ ಸ್ಥಾನದ ಬಗೆಗೆ ಅರಿವು ಮೂಡಿಸಿ, ಅದನ್ನು ತಮ್ಮ ಅಭಿವೃದ್ಧಿಯ ಮಾನದಂಡವನ್ನಾತಿ ತಿಳಿಯುವ ಮಟ್ಟಕ್ಕೆ ಬಂದರು.

ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ

ಇಂತಹ ಸ್ಥಿತಿಯಲ್ಲಿ ಅಲ್ಲಲ್ಲಿ ಕೆಲವರು ಮೇಲ್ನೋಟಕ್ಕೆ ಕಾಣಿಸಿಕೊಳ್ಳದೆಯೇ ಆಂಧ್ರ ಪ್ರದೇಶದ ಅಭಿವೃದ್ಧಿಗಾಗಿ ಇರುವ ದಾರಿಗಳನ್ನು ಅನ್ವೇಷಿಸತೊಡಗಿದರು. ಈ ಸಂದರ್ಭದಲ್ಲಿ ೧೯೦೩-೦೪ರಲ್ಲಿ ಗುಂಟೂರು ನಗರದಲ್ಲಿ ಏರ್ಪಾಡಾದ ಯುವಜನ ಸಾಹಿತಿ ಸಮಿತಿಯ ಬಗೆಗೆ ಪ್ರಸ್ತಾಪಿಸುವ ಅಗತ್ಯವಿದೆ. ಈ ಸಂಘಟನೆಯ ಪ್ರಮುಖರಲ್ಲಿ ವೈ. ಗುರ್ನಾಥಂ ಒಬ್ಬರು. ಆಂಧ್ರದ ಏಕೀಕರಣ ಚಳವಳಿಯ ಪ್ರಮುಖರಲ್ಲಿ ಒಬ್ಬರಾಗಿ ಗುರ್ನಾಥಂ ಆಂಧ್ರಪ್ರದೇಶದ ಹಿಂದುಳಿದಿರುವಿಕೆಯ ಕುರಿತಂತೆ ಹಿಂದೂ ದಿನಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

ಅನಂತರದಲ್ಲಿ ಗುಂಟೂರಿನಲ್ಲಿ ಒಬ್ಬ ತಮಿಳು ಸಹಾಯಕ ನಾಯಾಧೀಶರೊಬ್ಬರು ೧೯೧೧ ಸೆಪ್ಟಂಬರನಲ್ಲಿ ತಾನಿರುವ ನ್ಯಾಯಾಲಯಕ್ಕೆ ಜವಾನ ಹುದ್ದೆಗಾಗಿ ತುಂಬಾ ಜನ ತೆಲಗರು ಅರ್ಜಿ ಹಾಕಲಾಗಿದ್ದರೂ, ತಮ್ಮ ಸ್ವಸ್ಥಳವಾದಿ ಕುಂಭಕೋಣಂಗೆ ಸೇರಿದ ಒಬ್ಬ ತಮಿಳನನ್ನು ಆ ಹುದ್ದೆಗಾಗಿ ನೇಮಕಾತಿ ಮಾಡಿಕೊಳ್ಳಲಾಯಿತು. ಈ ಘಟನೆಯು ಸಾಹಿತಿ ಸಮಿತಿಯ ಸದಸ್ಯರಲ್ಲಿ ಆಕ್ರೋಶವನ್ನುಂಟುಮಾಡಿತು. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ತಮಿಳು ಉದ್ಯೋಗಿಗಳಿದ್ದರೆಂಬ ಸಂಗತಿಯನ್ನೂ ಅರಿತುಕೊಂಡರು. ಪ್ರತ್ಯೇಕವಾದ ಆಂಧ್ರರಾಜ್ಯ ವಿಲ್ಲದಿದ್ದಲ್ಲಿ ಪರಿಸ್ಥಿತಿ ಸುಧಾರಿಸುವುದಿಲ್ಲವೆಂಬ ಭಾವನೆ ಉಂಟಾಯಿತು.

ಪ್ರತ್ಯೇಕ ರಾಜ್ಯದ ನಿರ್ಮಾಣವಾಗಬೇಕೆಂಬ ಬೇಡಿಕೆ ಬರಹರೂಪದಲ್ಲಿ ೧೯೧೧ ಡಿಸೆಂಬರ್ ೧೨ರಲ್ಲಿ ‘ಆಂಧ್ರಕೇಸರಿ’ ಪತ್ರಿಕೆಗೆ ಒಬ್ಬ ಬರಹಗಾರನ ಮೂಲಕ ದಾಖಲಾಯಿತು. ಅದೇ ತಿಂಗಳ ೨೧ನೆ ತಾರೀಖು ‘ದೇಶಾಭಿಮಾನಿ’ ಪತ್ರಿಕೆಯಲ್ಲಿ ಚಲ್ಲಾ ಶೇಷಗಿರಿರಾವ್ ತನ್ನ ಲೇಖನದಲ್ಲಿ ಆ ಭಾವನೆಯನ್ನೇ ಪುನಃ ಪ್ರಸ್ತಾಪಿಸಿದರು. ‘ಕೃಷ್ಣಾ ಪ್ರತ್ರಿಕೆ’ಯೂ ಕೂಡಾ ಆ ಬೇಡಿಕೆಯನ್ನು ಬೆಂಬಲಿಸಿತು.

ನಂತರ ನಿಡದವೋಲುವಿನಲ್ಲಿ ೧೯೧೨ರಲ್ಲಿ ನಡೆದ ಕೃಷ್ಣಾ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಒಟ್ಟು ಆಂಧ್ರದ ಜಿಲ್ಲೆಗಳನ್ನೆಲ್ಲಾ ಸೇರಿಸಿ ಒಂದೇ ಸಭೆಯು ಇರುವುದು ಅಗತ್ಯವೆಂಬ ಭಾವನೆಯನ್ನು ಉಂಟುಮಾಡಲಾಯಿತು. ಇಷ್ಟರಲ್ಲಿ, ಅದಕ್ಕೂ ಮುಂಚೆ ವಿಭಜನೆಗೆ ಗುರಿಯಾದ ಬಂಗಾಲ ರಾಜ್ಯದಿಂದ ಬಿಹಾರ್ ಪ್ರದೇಶವನ್ನು ಬೇರ್ಪಡಿಸಿದ ಸಂದರ್ಭದಲ್ಲಿ ಭಾಷಿಕ ಹೋರಾಟ ಕಂಡುಬಂದಿತು. ೧೯೧೧ ಅಗಸ್ಟ ೧೧ ರಂದು ಭಾರತ ರಾಜ್ಯಗಳ ಕಾರ್ಯದರ್ಶಿಗಳು ಆಕಸ್ಮಿಕವಾಗಿ ಭಾಷಾವಾರು ರಾಜ್ಯ ನಿರ್ಮಾಣದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆ ವಿಷಯವು ೧೯೧೨ರಲ್ಲಿ ಪ್ರಕಟಗೊಂಡು, ರಾಜಕೀಯ ಜಾಗೃತಿ ಹೊಂದಿದ್ದ ಆಂಧ್ರದ ಜನತೆಯಲ್ಲಿ ಸ್ವಂತರಾಜ್ಯದ ಅಭಿಲಾಷೆಯನ್ನು ಮತ್ತಷ್ಟು ಬಲಗೊಳಿಸಿತು. ಅದಲ್ಲದೆ, ಆಂಧ್ರ ರಾಜ್ಯದ ನಿರ್ಮಾಣ ಕುರಿತಾದ ಸಮಸ್ಯೆಗಳನ್ನು ಚರ್ಚಿಸಲು ಆಂಧ್ರ ಮಹಾಸಭೆಯನ್ನು ನಡೆಸಬೇಕೆಂದು ನಿರ್ಣಯಿಸಲಾಯಿತು. ಅದಕ್ಕನುಗುಣವಾಗಿ ಆಂಧ್ರ ಮಹಾಸಭೆಯ ಮೊದಲ ಸಮಾವೇಶವು ೧೯೧೩ರಲ್ಲಿ ಶ್ರೀ ಬಯ್ಯಾ ನರಸಿಂಹಶರ್ಮ ಅವರ ಅಧ್ಯಕ್ಷತೆಯಲ್ಲಿ ಬಾಪಟ್ಲದಲ್ಲಿ ನಡೆಯಿತು. ಆಗ ಆಂಧ್ರರಾಜ್ಯ ನಿರ್ಮಾಣದ ಕುರಿತಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸುವ ಕುರಿತಾಗಿ ಚರ್ಚೆ ನಡೆಯಿತು. ಆ ಸಭೆಯಲ್ಲಿ ರಾಯಲಸೀಮೆಯ ಪ್ರತಿನಿಧಿ ಕೇಶವಪಿಳ್ಳೆ ತಮ್ಮ ಜಿಲ್ಲೆಗಳು ಆಂಧ್ರರಾಜ್ಯ ನಿರ್ಮಾಣದ ಹೋರಾಟಕ್ಕೆ ವಿರುದ್ಧವಾಗಿವೆಯೆಂದು ಸಾರಿದರು. “ಪ್ರತ್ಯೇಕ ರಾಜ್ಯ ನಿರ್ಮಾಣದ ವಿಷಯದ ಕುರಿತು ಜನಾಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ಮಹಾಸಭೆಯಲ್ಲಿ ನಿವೇದಿಸಬೇಕೆಂದು” ಆ ಮಹಾಸಭೆಯು ತೀರ್ಮಾನಿಸಿತು.

ಎರಡನೆಯ ಆಂಧ್ರ ಮಹಾಸಭೆ

ಪ್ರಜಾಭಿಪ್ರಾಹ ಸಂಗ್ರಹಣೆಗಾಗಿ ತೆಲಗು ಮಾತನಾಡುವ ಜಿಲ್ಲೆಗಳಲ್ಲೆಲ್ಲಾ ಬಿರುಸಿನಿಂದ ಪ್ರಚಾರ ನಡೆಯಿತು. ಮುಂದಿನವರ್ಷ ವಿಜಯವಾಡದಲ್ಲಿ ನಡೆದ ಎರಡನೆಯ ಆಂಧ್ರ ಮಹಾಸಭೆಯು ‘ಆಂಧ್ರ ರಾಜ್ಯವು ಅಪೇಕ್ಷಣೀಯ’ವೆಂಬ ನಿರ್ಣಯ ಕೈಗೊಳ್ಳಲಾಯಿತು. ವಿಶಾಖಪಟ್ಟಣದಲ್ಲಿ ೧೯೧೫ರಲ್ಲಿ ನಡೆದ ತೃತೀಯ ಮಹಾಸಭೆಯು ಮತ್ತೊಂದು ಹೆಜ್ಜೆ ಮುಂದಿಟ್ಟು, “ರಾಜ್ಯನಿರ್ಮಾಣವು ಅತ್ಯಗತ್ಯವಾದುದರಿಂದ, ಸರಕಾರವು ಶೀಘ್ರವಾಗಿ ರಾಜ್ಯದ ಏರ್ಪಾಡನ್ನು ಕೈಗೊಳ್ಳಬೇಕು” ಎನ್ನುವ ನಿರ್ಣಯ ಕೈಗೊಳ್ಳುವ ಮಟ್ಟಕ್ಕೆ ತಲುಪಿತು. ನಂತರ ದೇಶವನ್ನು ಭಾಷಾವಾರು ಹಿನ್ನಲೆಯಲ್ಲಿ ಪುನರ್ ನಿರ್ಮಿಸಬೇಕೆಂದು ಕೊರಿ ಒಂದು ಮನವಿ ಪತ್ರವನ್ನು ಆಂಧ್ರ ಮಹಾಸಭೆಯು ೧೯೧೬ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಗೆ ತಲುಪಿಸಿತು. ಇದಕ್ಕನುಗುಣವಾಗಿ ಆಂಧ್ರಪ್ರದೇಶಕ್ಕೆ ಪ್ರತ್ಯೇಕವಾದ ರಾಜ್ಯ ಕಾಂಗ್ರೆಸ್ ಸಮಿತಿಯನ್ನು ರಚಿಸಬೇಕೆಂದು ೧೯೧೭ರ ಕಲ್ಕತ್ತಾ ಕಾಂಗ್ರೆಸ ಮಹಾಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಯಿತು. ಆಯನಿಬೆಸೆಂಟ್ ಮತ್ತು ಗಾಂಧೀಜಿಯವರು ವಿರೋಧಿಸಿದರೂ ಲೋಕಮಾನ್ಯ ತಿಲಕ್, ಡಾ. ಪಟ್ಟಾಭಿಸೀತಾರಮಯ್ಯನವರ ವಾದದಿಂದ ಪ್ರತ್ಯೇಕ ರಾಜ್ಯ ಕಾಂಗ್ರೆಸ್ ನಿರ್ಣಯವು ಅನುಮೋದನೆಗೊಂಡಿತು.

ಮೌಂಟ್-ಫೋರ್ಡ ಸುಧಾರಣೆಗಳು

ಭಾರತ ದೇಶದ ಆಡಳಿತದ ಸುಧಾರಣೆಯ ಸಂಬಂಧ ಪರಿಶೀಲನೆಗೆ ಭಾರತರಾಜ್ಯ ಕಾರ್ಯದರ್ಶಿ ಮಾಂಟ್ಯೆಗ್ಯೊ ೧೯೧೮ರಲ್ಲು ಭಾರತಕ್ಕೆ ಬಂದಾಗ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟು ಆಂಧ್ರಪ್ರದೇಶದ ಏಕೀಕರಣ ಚಳವಳಿಯಲ್ಲಿದ್ದ ಪ್ರಮುಖರು ರಾಯಭಾರತ್ವ ನಡೆಸಿದರು. ಆಂಧ್ರರಾಜ್ಯವನ್ನು ಪ್ರತ್ಯೇಕವಾಗಿ ಏರ್ಪಡಿಸಬೇಕೆಂಬ ನಿರ್ಣಯವನ್ನು ಸರ್ ಬಯ್ಯಾ ನರಸಿಂಹಶರ್ಮ ೧೯೧೮ರಲ್ಲಿ ಮೊದಲ ಬಾರಿಗೆ ಕೇಂದ್ರ ಶಾಸನ ಮಂಡಲಿಯ ಮುಂದಿಟ್ಟತು. ಈ ಪ್ರಯತ್ನದ ಫಲವಾಗಿ ಭಾಷಾಧಾರಿತ ರಾಜ್ಯದ ಬೇಡಿಕೆಯು ನ್ಯಾಯವಾದುದೆಂದು ಮೌಂಟ್ ಫೋರ್ಡ್ನ ವರದಿಯು ಅಂಗೀಕರಿಸಿತು. ಅದಕ್ಕೆ ತಕ್ಕಂತೆ ೧೯೧೯ ರ ಇಂಡಿಯಾದ ಶಾಸನ ೫೨ (ಎ) ಭಾಗವು ರಾಜ್ಯದ ಶಾಸನಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ ನಿರ್ಣಯ ಕೈಗೊಂಡರೆ, ಸರಕಾರ ಅದಕ್ಕೆ ಒಪ್ಪಬಹುದೆಂಬುದಾಗಿ ರಾಜ್ಯ ವಿಂಗಡಣೆಗೆ ಅವಕಾಶ ಕಲ್ಪಿಸಿತು.

ಈ ಅವಕಾಶದಿಂದಾಗಿ ಕೇಂದ್ರ, ರಾಜ್ಯ ಶಾಸನ ಸಭೆಗಳಲ್ಲಿ ಹಲವು ಸಲ ಆಂಧ್ರದ ಏಕೀಕರಣ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೇಂದ್ರ ಶಾಸನಸಭೆಯಲ್ಲಿ ೧೯೨೨ರಲ್ಲಿ ಒಂದು ಸಲ ಆಂಧ್ರರಾಜ್ಯದ ಕುರಿತಾದಂತೆ ನಿರ್ಣಯವನ್ನು ಅಂಗೀಕರಿಸಲಾಯಿತು.

ಕೇಂದ್ರ ಶಾಸನ ಸಭೆಯಲ್ಲಿ ಮತ್ತೊಮ್ಮೆ ಹರಾಹಗಿರಿ ಜೋಗಯ್ಯ, ಕೌನ್ಸಿಲ್ ಆಪ್ ಸ್ಟೇಟ್ ನಲ್ಲಿ ವೇಮವರಪು ರಾಮಾದಾಸು ಪಂತಲು, ಮದ್ರಾಸು ಶಾಸನಸಭೆಯಲ್ಲಿ ಪಿಲ್ಲಲಮರ್ರಿ ಆಂಜನೇಯಲು ೧೯೨೭ರಲ್ಲಿ ಪ್ರತಿಪಾದಿಸಿದ ಪ್ರತ್ಯೇಕ ರಾಜ್ಯದ ನಿರ್ಣಯಗಳು ಬಹು ಸಂಖ್ಯಾತರ ಬೆಂಬಲಗಳಿಸಿದವು. ಮತ್ತೊಮ್ಮೆ ೧೯೨೮-೪೨ ರ ನಡುವೆ ಮಧ್ಯ ಮದ್ರಾಸು ಶಾಸನಸಭೆ ಇಂತಹ ಮೂರು ನಿರ್ಣಯಗಳನ್ನು ಕೈಗೆತ್ತಿಕೊಂಡಿತು. ೧೯೨೮ರಲ್ಲಿ ಅಖಿಲಪಕ್ಷ ಮಹಾಸಭೆಯ ನಿರ್ಣಯದ ಪ್ರಕಾರ ಪ್ರಕಟಗೊಂಡ ನೆಹರೂ ವರದಿ, ಆಂಧ್ರ ರಾಜ್ಯದ ವಿಭಜನೆಯು ಅತ್ಯಗತ್ಯವೆಂಬುದಾಗಿ ಒತ್ತಿ ಹೇಳಿತು. ಆದರೂ ಆಂಧ್ರದ ರಾಜ್ಯದ ಏರ್ಪಾಡಾಗಲಿಲ್ಲ. ಶಾಸನಸಭೆಯಲ್ಲಷ್ಟೇ ಅಲ್ಲದೆ, ಹೊರಗೂ ಕೂಡ ದಿನದಿನಕ್ಕೂ ಭಾಷಾಧಾರಿತ ರಾಜ್ಯದ ನಿರ್ಮಾಣ ಕುರಿತಂತೆ ಚಳವಳಿಯು ಬಲಗೊಳ್ಳತೊಡಗಿತು. ಈ ಚಳವಳಿಯ ಭಾಗವಾಗಿಯೇ ಆಂಧ್ರ ವಿಶ್ವಕಲಾಪರಿಷತ್ತು ೧೯೧೬ ಏಪ್ರಿಲ್ ೨೬ನೆಯ ತಾರೀಖು ಅಸ್ತಿತ್ವಕ್ಕೆ ಬಂತು.

ಸೈಮನ ಕಮಿಷನ್

ಸಂವಿಧಾನದ ಸುಧಾರಣೆಯ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸೈಮನ್ ಕಮಿಷನ್ ಭಾರತಕ್ಕೆ ಬಂದಾಗ ಪ್ರತ್ಯೇಕ ಆಂಧ್ರರಾಜ್ಯದ ಏರ್ಪಾಡಿಗೆ ನೂತನ ಸಂವಿಧಾನದಲ್ಲಿ ಅವಕಾಶ ಕಲ್ಪಿಸಬೇಕೆಂದು ಕೋರಿ ಆಂದೋಲನ ನಡೆಯಿತು. ಆದರೂ ಫಲ ಸಿಕ್ಕಲಿಲ್ಲ. ಬೊಬ್ಬಿಲಿರಾಜಾ ೧೯೩೧ರಲ್ಲಿ ಎರಡನೆಯ ಡುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿ ಪ್ರತ್ಯೇಕ ಆಂಧ್ರರಾಜ್ಯ ಬೇಕೇಬೇಕೆಂದು ಕೋರಿದರು. ಆದರೆ ೧೯೩೫ರ ಕಾಲಘಟ್ಟದ ಭಾರತ ಸರಕಾರದ ಶಾಸನದನ್ವಯವೇ “ಒರಿಯಾ ಮಾತನಾಡುವ ಜನತೆಗಾಗಿ ಪ್ರತ್ಯೇಕ ಒರಿಸ್ಸಾ ರಾಜ್ಯವನ್ನು, ‘ಸಿಂಧಿ’ ಮಾತನಾಡುವ ಜನತೆಗಾಗಿ ಸಿಂಧುರಾಜ್ಯವನ್ನು” ಎರ್ಪಡಿಸಿದ ಬ್ರಿಟಿಷ ಸರಕಾರವು ಆಂಧ್ರದ ಜನತೆಯ ಕೋರಿಕೆಯನ್ನು ನಿರ್ಲಕ್ಷಿಸಿತು. ಆ ಶಾಸನದನ್ವಯ ೧೯೩೭ರಲ್ಲಿ ನಡೆದ ಚುನಾವಣೆಗಳಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಭಾಗವಹಿಸಿ, ಮದ್ರಾಸು ರಾಜ್ಯದಲ್ಲಿ ಅಧಿಕಾರಕ್ಕೆ ಬಂದುದರಿಂದ ಆಂಧ್ರದ ಜನತೆಯ ಸ್ವಂತ ರಾಜ್ಯದ ಬಯಕೆಯು ಮತ್ತೊಮ್ಮೆ ಭುಗಿಲೆದ್ದಿತು. ನೆಹರೂ ಅವರ ಅಧ್ಯಕ್ಷತೆಯಲ್ಲಿ ೧೯೩೮ರಲ್ಲಿ ಕಲ್ಕತ್ತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಮಾವೇಶದಲ್ಲಿ ಭಾಷಾಧಾರಿತ ತತ್ವದ ಹಿನ್ನಲೆಯಲ್ಲಿ ರಾಜ್ಯಗಳನ್ನು ಏರ್ಪಡಿಸಬೇಕೆಂದೂ, ಅದಕ್ಕೆ ಬೇಕಾದ ನಿರ್ಣಯಗಳನ್ನು ಶಾಸನಸಭೆಗಳಲ್ಲಿ ಕೈಗೊಳ್ಳಬೇಕೆಂದು ತೀರ್ಮಾನಿಸಿತು.

ಈ ನಿರ್ಣಯದ ಪ್ರಕಾರ ೧೯೩೮ರ ಮಾರ್ಚನಲ್ಲಿ ಮದ್ರಾಸು ಶಾಸನಸಭೆಯು ಆಂಧ್ರ, ತಮಿಳುನಾಡು, ಕರ್ನಾಟಕ, ಕೇರಳ ಪ್ರದೇಶಗಳನ್ನು ಭಾಷಾಧಾರಿತ ರಾಜ್ಯಗಳನ್ನಾಗಿ ವಿಂಗಡಿಸಬೇಕೆಂಬ ಸರ್ವಾನುಮತದ ನಿರ್ಣಯ ಕೈಗೊಂಡಿತು. ಆದರೆ, ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ನಿರ್ಮಾಣದ ಕುರಿತು ವಿರೋಧಾಭಿಪ್ರಾಯವಿದ್ದ ಮದ್ರಾಸು ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಜಾಜಿಯವರು ಪ್ರತ್ಯೇಕ ರಾಜ್ಯ ವಿಂಗಡನೆಯು ಯಾವುದಕ್ಕೂ ಪ್ರಯೋಜನಕಾರಿಯಲ್ಲವೆಂಬುದಾಗಿ ಭಾರತದ ರಾಜ್ಯಗಳ ಕಾರ್ಯದರ್ಶಿಯವರಿಗೆ ರಾಜ್ಯಪಾಲರ ಮೂಲಕ ರಹಸ್ಯ ಸಮಾಚಾರವನ್ನು ಕಳುಹಿಸಿದರು. ಆ ಅಭಿಪ್ರಾಯದ ಮೇರೆಗೆ ರಾಜ್ಯವಿಂಗಡಣೆಗೆ ಭಾರತದ ರಾಜ್ಯಗಳ ಕಾರ್ಯದರ್ಶಿ ನಿರಾಕರಿಸಿದರು.

ರಾಯಲಸೀಮೆಯ ಮಹಾಸಭೆ

ಆಂಧ್ರಪ್ರದೇಶದ ಜಿಲ್ಲೆಗಳಿಗಿಂತಲೂ ರಾಯಲಸೀಮೆಯ ಜಿಲ್ಲೆಗಳಲ್ಲಿ ರಾಜಕೀಯ ಚಟುವಟಿಕೆಗಳು ನಿಧಾನಗತಿಯಲ್ಲಿ ಪ್ರಾರಂಭಗೊಂಡಿದ್ದವು. ಮೊದಲಿಗೆ ೧೯೦೭ರಲ್ಲಿ ಆರಂಭವಾದ ದತ್ತಮಂಡಲಗಳ ಯುವಕರ ಸಾಮಾಜಿಕ ಸಭೆಯ ಹೆಸರಿನಲ್ಲಿ ಸ್ವಲ್ಪಕಾಲ ವಾರ್ಷಿಕ ಸಭೆಗಳು ಮಾತ್ರ ನಡೆದವು. ಈ ಸಂಘದ ಏಳನೆಯ ವಾರ್ಷಿಕ ಸಭೆಯಲ್ಲಿ ಬಾಪಟ್ಲ್ ಆಂಧ್ರ ಮಹಾಸಭೆಯು ಚರ್ಚಿಸಿದ, “ಆಂಧ್ರರಾಜ್ಯ ನಿರ್ಮಾಣದ” ವಿಷಯದ ಕುರಿತು ಚರ್ಚೆ ನಡೆಸಲಾಯಿತು. ಆ ಸಂದರ್ಭದಲ್ಲಿ ಶ್ರೀಯುತ ಕೇಶವಪಿಳ್ಳೆ, ಜಿ.ಲಕ್ಷ್ಮಣರೆಡ್ಡಿ ಮೊದಲಾದವರು ಪ್ರತ್ಯೇಕ ಆಂಧ್ರರಾಜದ ನಿರ್ಮಾಣವನ್ನು ವಿರೋಧಿಸಿದರು. ಅದಕ್ಕೆ ಮುಂದೆ ನಿರ್ಮಾಣಗೊಳ್ಳಲಿರುವ ಆಂಧ್ರರಾಜ್ಯದಲ್ಲಿನ ಸರ್ಕಾರಿ ನಾಯಕತ್ವದ ಕುರಿತು ಪೂರ್ವಾಗ್ರಹಗಳು ಇದ್ದವು. ಅದೇನೇ ಇರಲಿ, ಆಂಧ್ರಮಹಾಸಭಾದ ನಾಯಕರು ರಾಯಲಸೀಮೆಯ ಆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಆಂಧ್ರಪ್ರದೇಶದ ಏಕೀಕರಣದ ಕುರಿತಂತೆ ಸ್ವಲ್ಪ ಮಟ್ಟಿನ ಬೆಂಬಲ ದೊರೆಯುವಲ್ಲಿ ಯಶಸ್ಸು ದೊರೆಯಿತು. ಅದರ ಕಾರಣಕ್ಕಾಗಿಯೇ ೧೯೧೫, ೧೯೧೬ರಲ್ಲಿ ನಡೆದ ಕರ್ನೂಲು ಜಿಲ್ಲೆಯ ಮಹಾಸಭೆಗಳು, ೧೯೧೬ರಲ್ಲಿ ನಡೆದ ಕಡಪ ಜಿಲ್ಲೆಯ ಮಹಾಸಭೆಗಳು, ಪ್ರತ್ಯೇಕ ಆಂಧ್ರರಾಜ್ಯದ ಚಳವಳಿಯ ಆಶಯಗಳನ್ನು ಸಂಪೂರ್ಣವಾಗಿ ಬೆಂಬಲಿಸಿದವು.

ರಾಯಲಸೀಮೆಯ ಜನರ ಅತೃಪ್ತಿಯು ೧೯೩೦ರ ದಶಕದಲ್ಲಿ ಮತ್ತೊಮ್ಮೆ ಪ್ರಕಟಗೊಂಡಿತು. ಆಂಧ್ರ ರಾಜ್ಯದ ಏರ್ಪಾಡಿಗೆ, ರಾಯಲಸೀಮೆಯ ಜಿಲ್ಲೆಗಳಿಗೆ ಆಂಧ್ರ ವಿಶ್ವವಿದ್ಯಾಲಯದ ಪರಿಧಿಯನ್ನು ವಿಸ್ತರಿಸಲು ಅಂಗೀಕರಿಸಿ ೧೯೩೪ರಲ್ಲಿ ಮದ್ರಾಸಿನಲ್ಲಿ ಪ್ರಥಮ ರಾಯಲಸೀಮೆಯ ಮಹಾಸಭೆಯನ್ನು ನಡೆಸಿದರು.

ಭಾರತ ರಾಷ್ಟ್ರೀಯ ಕಾಂಗ್ರೆಸ್ ೧೯೩೭ರ ಚುಣಾವಣೆಗಳಲ್ಲಿ ಗೆಲವು ಸಾಧಿಸಿ, ಮದ್ರಾಸು ಪ್ರಾಂತ್ಯದಲ್ಲಿ ಅಧಿಕಾರವನ್ನು ಕೈವಶಮಾಡಿಕೊಳ್ಳಲಾಗಿ, ಪ್ರತ್ಯೇಕ ರಾಜ್ಯ ನಿರ್ಮಾಣದ ಆಸೆಯು ಹೆಚ್ಚಾಯಿತು. ಆಗಿನ ಆಂಧ್ರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶ್ರೀ ಪಟ್ಟಭಿಸೀತಾರಾಮಯ್ಯನವರು ರಾಯಲಸೀಮೆಯ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಆಂಧ್ರ ರಾಜ್ಯದ ನಿರ್ಮಾಣದ ಪ್ರತಿಪಾದನೆಗೆ ರಾಯಲಸೀಮೆಯ ಜನಪ್ರತಿನಿಧಿಗಳ ಬೆಂಬಲಕ್ಕಾಗಿ ಪ್ರಯತ್ನಿಸಿದರು. ಆದರೆ ಅವರದಕ್ಕೆ ವಿಮುಖರಾಗಿರುವಂತೆ ಕಂಡುಬಂತು. ಇಷ್ಟರಲ್ಲಿ ರಾಜಾಜೀ, ಮತ್ತೊಬ್ಬ ತಮಿಳಿನ ಮಂತ್ರಿ ಟಿ.ಎಸ್.ಎಸ್.ರಾಜನ್ ಆಂಧ್ರ ರಾಜ್ಯದ ನಿರ್ಮಾಣವನ್ನು ವಿರೋಧಿಸಿ ಭಾಷಣ ಮಾಡಿದರು. ರಾಯಲಸೀಮೆಯ ಜನತೆಯ ಪ್ರತ್ಯೇಕತಾವಾದದ ಧೋರಣೆಯ ಕುರಿತು ತಮಿಳು ಕಾಂಗ್ರೆಸ್ ನಾಯಕ ಶ್ರೀ ಸತ್ಯಮೂರ್ತಿಯವರು ಕೂಡಾ ಸಹಾನುಭೂತಿ ತೋರಿಸುತ್ತಿದ್ದಾರೆಂಬ ಸುದ್ಧಿ ಕೇಳಿ ಬಂತು.

ಶ್ರೀಭಾಗ್ ಒಪ್ಪಂದ

ಇಂತಹ ವಾತಾವರಣದಲ್ಲಿ ಆಂಧ್ರಮಹಾಸಭೆಯ ರಜತಮಹೋತ್ಸವವು ೧೯೩೭ ಅಕ್ಟೋಬರನಲ್ಲಿ ವಿಜಯವಾಡದಲ್ಲಿ ನಡೆಯಿತು. ಹೊಸದಾಗಿ ಏರ್ಪಡಲಿರುವ ಭಾಷಾಧಾರಿತ ರಾಜ್ಯದಲ್ಲಿ ರಾಯಲಸೀಮೆಯ ಜಿಲ್ಲೆಗಳ ಹಿತಾಶಕ್ತಿಯನ್ನು ಕಾಯ್ದುಕೊಳ್ಳಲು ಹಾಗೂ ಪ್ರತ್ಯೇಕ ರಕ್ಷಣೆಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸುವುದಕ್ಕಾಗಿ ಈ ಸಭೆಯಲ್ಲಿನ ಕಾಶೀನಾಥುನಿ ನಾಗೇಶ್ವರರಾವ್ ಅವರ ನಿವಾಸಭವನವಾದ ‘ಶ್ರೀಭಾಗ್’ ನಲ್ಲಿ ಸಮಾವೇಶಗೊಂಡು, ಪ್ರತ್ಯೇಕ ಆಂಧ್ರದಲ್ಲಿ ರಾಯಲಸೀಮೆಗೆ ಸಂಬಂಧಿಸಿದಂತೆ ಒಪ್ಪಂದವೊಂದಕ್ಕೆ ಬಂದರು. ೧೯೩೭ರ ಈ ‘ಶ್ರೀ ಭಾಗ್ ಒಪ್ಪಂದದ’ ಪ್ರಕಾರ

೧. ಆಂಧ್ರ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಎರಡು ಸ್ನಾತಕೋತ್ತರ ಕೇಂದ್ರಗಳನ್ನು ಕ್ರಮವಾಗಿ ವಿಶಾಖಪಟ್ಟಣ ಮತ್ತು ಅನಂತಪುರದಲ್ಲಿ ಸ್ಥಾಪಿಸುವುದು.

೨. ಕೃಷಿ ನೀರಾವರಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ರಾಯಲಸೀಮೆಯ ಅಗತ್ಯತೆಯನ್ನು ಪ್ರಥಮ ಆದ್ಯತೆಯಾಗಿ ನೆರವೇರಿಸಬೇಕು.

೩. ಜನಸಂಖ್ಯೆಯ ಆಧಾರವನ್ನು ಪರಿಗಣಿಸದೆಯೇ ರಾಜ್ಯದ ಆಡಳಿತದಲ್ಲಿ ಎಲ್ಲ ಜಿಲ್ಲೆಗಳಿಗೂ ಸಮಾನ ಪ್ರಾತಿನಿಧ್ಯವಿರಬೇಕು.

೪. ರಾಜ್ಯದ ರಾಜಧಾನಿ ಇಲ್ಲವೆ ಉಚ್ಚನ್ಯಾಯಾಲಯವು ಎಲ್ಲಿರಬೇಕೆಂಬುದರ ಕುರಿತು ರಾಯಲಸೀಮೆಯ ಜನತೆಯ ಅಭಿಮತವೇ ಅಂತಿಮವಾಗಿರುತ್ತದೆ.

ಅನಂತರ ೧೯೩೮ರಲ್ಲಿ ಕಾಂಗ್ರೆಸ್ ನಾಯಕರ ಧೋರಣೆಯು ಬದಲಾಯಿತು. ಕೇಂದ್ರದಲ್ಲಿಯೂ ಸಹ ಕಾಂಗ್ರೆಸ ಅಧಿಕಾರ ಹಿಡಿಯುತ್ತಿದ್ದಂತೆ ಪ್ರತ್ಯೇಕ ರಾಜ್ಯದ ಏರ್ಪಾಡಿನ ಸಮಸ್ಯೆಯನ್ನು ಪರಿಷ್ಕರಿಸಲಾಗುತ್ತದೆಂದು ಭರವಸೆ ನೀಡಲಾಯಿತು. ಮೊದಲಿಗೆ ಸ್ವಾತಂತ್ರ್ಯ ನಂತರ ರಾಜ್ಯ ನಿರ್ಮಾಣವೆಂಬುದಾಗಿ ಘೋಷಿಸಲಾಯಿತು. ಆದರೆ ಸ್ವಾತಂತ್ರ್ಯ ಬರಲಾಗಿ ಹೊಸ ಬಗೆಯ ವಾದಗಳು ಕೇಳಿಬಂದವು. ಭಾಷಾಧಾರಿತ ರಾಜ್ಯದ ಆಕಾಂಕ್ಷೆಯು ರಾಷ್ಟ್ರೀಯ ಭಾವೈಕ್ಯತೆಗೆ ವಿರೋಧವಾದದ್ದು ಎಂದು ಹೇಳಲು ಆರಂಭಿಸಿದರು. ನೆಹರೂ, ಪಟೇಲ್ ರಂತಹ ಕಾಂಗ್ರೆಸನ್ ಹಿರಿಯ ನಾಯಕರು ದೇಶವು ಅದೆಷ್ಟೋ ಪ್ರಮುಖ ಸಮಸ್ಯಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆಯೆಂದೂ, ಆದಕಾರಣ ಆ ಸಮಸ್ಯೆಗಳಿಗೇ ಮೊದಲ ಆದ್ಯತೆಯೆಂಬುದಾಗಿ ಸಾರಿದರು.

ಇದರಿಂದಾಗಿ ಆಂಧ್ರಪ್ರದೇಶದಲ್ಲಿ ಆಂದೋಲನಗಳು ಅಧಿಕವಾಗತೊಡಗಿದವು. ಸಂವಿಧಾನದಲ್ಲಿ ಆಂಧ್ರ ರಾಜ್ಯದ ಏರ್ಪಾಡಿಗೆ ಅವಕಾಶ ಕಲ್ಪಿಸಬೇಕೆಂದು ಎಲ್ಲೆಡೆಯಿಂದಲೂ ಒತ್ತಡ ಹೇರಲಾಯಿತು. ಈ ಒತ್ತಡಕ್ಕೆ ಮಣಿದು, ಭಾಷಾಧಾರಿತ ರಾಜ್ಯಗಳ ನಿರ್ಮಾಣದಿಂದಾಗುವ ಒಳಿತು ಕೆಡಕುಗಳನ್ನು ಪರಿಶೀಲಿಸಿ ತಕ್ಕ ಶಿಫಾರಸ್ಸುಗಳನ್ನು ನೀಡಲು ಕೇಂದ್ರಸರ್ಕಾರವು ೧೯೪೮ರಲ್ಲಿ ಧರ್ ಸಮಿತಿಯನ್ನು ನೇಮಿಸಿತು.

ಧರ್ ಸಮಿತಿ

ಧರ್ ಸಮಿತಿ ಪ್ರವಾಸದಲ್ಲಿ ಮದ್ರಾಸ ನಮಗೇ ಸೇರಬೇಕೆಂದು ಟಂಗೂಟೂರಿ ಪ್ರಕಾಶಂ ಅವರು ಹಟ ಹಿಡಿದರೆ, ಆಂಧ್ರದಲ್ಲಿ ಏರ್ಪಾಡೇ ಅಪಾಯಕಾರಿಯಾದುದೆಂದು ರಾಯಲಸೀಮೆಯ ಮಹಾಸಭೆಯ ಅಧ್ಯಕ್ಷರಾದ ನೀಲಂ ಸಂಜೀವರೆಡ್ಡಿಯವರು ವಾದಿಸಿದರು. ವಾಸ್ತವವಾಗಿ ಭಾಷಾಧಾರಿತ ರಾಜ್ಯಗಳಿಗೆ ವಿರೋಧವಾಗಿದ್ದ ಧರ್ ಗೆ ಈ ಸಂದರ್ಭಗಳು ಅನುಕೂಲಕರವಾಗಿದ್ದವು. ಆಂಧ್ರ ರಾಜ್ಯವು ಸ್ವಯಂ ಆಡಳಿತ ನಡೆಸಲು ಸಾಧ್ಯವಾಗದೆಂದು, ಆಂಧ್ರ ರಾಜ್ಯದ ಏರ್ಪಾಡು ನಿರರ್ಥಕವೆಂದು ಪ್ರತಿಪಾದಿಸಿದ. ಭಾರತವನ್ನು ಎಂದಿಗೂ ಭಾಷಾಧಾರಿತವಾಗಿ ವಿಂಗಡಿಸಕೂಡದೆಂದು ಸಹ ಧರ್ ಸಮಿತಿ ವರದಿ ಪ್ರತಿಪಾದಿಸಿತು.

ಈ ವರದಿ ಕಾಂಗ್ರೆಸವಾದಿಗಳಲ್ಲಿ ತೀವ್ರವಾದ ಅಸಮಾಧಾನವನ್ನುಂಟುಮಾಡಿತು. ಅಲ್ಲದೆ ೧೯೪೮ರಲ್ಲಿ ಜಯಪುರದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮತ್ತೊಂದು ಪರಿಶೀಲನಾ ಸಮಿತಿಯನ್ನು ನೇಮಿಸಿತು. ಜವಹರಲಾಲ್ ನೆಹರೂ, ವಲ್ಲಭಬಾಯಿ ಪಟೇಲ್, ಆಗಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಟ್ಟಾಭಿ ಈ ಸಮಿತಿಯ ಸದಸ್ಯರಾಗಿದ್ದರು. ಇದೇ ಜೆ.ವಿ.ಪಿ. ಸಮಿತಿ. ಈ ಘಟಾನುಘಟಿಗಳ ಸಮಿತಿಯು ೧೯೪೯ರಲ್ಲಿ ಭಾರತ ದೇಶವನ್ನು ಭಾಷಾಧಾರಿತವಾಗಿ ವಿಂಗಡಿಸುವುದನ್ನು ಮುಂದೂಡಿದರೂ, ಆಂಧ್ರ ರಾಜ್ಯದ ನಿರ್ಮಾಣದ ಸಮಸ್ಯೆಯನ್ನು ಮಾತ್ರ ಪ್ರತ್ಯೇಕ ದೃಷ್ಟಿಕೋನದಿಂದ ಪರಿಷ್ಕರಿಸಬೇಕೆಂಬುದಾಗಿ ಶಿಫಾರಸ್ಸು ಮಾಡಿತು. ಆದರೆ ಆಂಧ್ರದ ಜನತೆ ಮದ್ರಾಸ ನಗರದ ಬಗೆಗೆ ತಮ್ಮ ಹಕ್ಕುಗಾರಿಕೆಯನ್ನು ಬಿಡಬೇಕೆಂದು ಹೇಳಲಾಯಿತು. ನಂತರ ಆಂಧ್ರ ರಾಜ್ಯದ ಕಾಂಗ್ರೆಸ್ ವಿಜಯವಾಡದಲ್ಲಿ ಸಮಾವೇಶಗೊಂಡು ಜಿ.ವಿ.ಪಿ ವರದಿಯನ್ನು ಅಂಗೀಕರಿಸಿತು. ಆದರೆ, ಆಂಧ್ರ ತಮಿಳರ ನಡುವೆ ಏರ್ಪಟ್ಟ ಗೊಂದಲವನ್ನು ಕೇಂದ್ರ ಸರಕಾರವು ಒಂದು ನೆಪವಾಗಿ ಸ್ವೀಕರಿಸಿ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ವಿದಾಯ ಹೇಳುತ್ತಾ ೧೯೫೦ರ ಜನವರಿ ೧೬ರಂದು ಪ್ರಕಟನೆಯೊಂದನ್ನು ಜಾರಿಗೊಳಿಸಿತು. ನಂತರ ೧೯೫೧ ರಲ್ಲಿ ಆಂಧ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಪ್ರತ್ಯೇಕ ಆಂಧ್ರ ರಾಜ್ಯದ ನಿರ್ಮಾಣದ ಪರವಾಗಿರುವವರಿಗೆ ಹಾಗೂ ಅವರ ಬೆಂಬಲಿಗರಿಗೆ ಅದು ಪ್ರಧಾನ ಅಸ್ತ್ರವಾಯಿತು.

೧೯೫೧-೫೨ರ ಸಾಮಾನ್ಯ ಚುನಾವಣೆಗಳು

೧೯೫೧-೫೨ರಲ್ಲಿ ನಡೆದ ಸಾಮಾನ್ಯ ಚುನಾವಣೆಗಳಲ್ಲಿ ಆಂಧ್ರಪ್ರದೇಶದ ಭಾಗಗಳೆಂದು ಗುರುತಿಸಲಾಗುತ್ತಿದ್ದ ಎಲ್ಲೆಡೆ ರಾಜಕೀಯ ಪಕ್ಷಗಳು ಪ್ರತ್ಯೇಕ ಆಂಧ್ರ ರಾಜ್ಯದ ಗುರಿಸಾಧನೆಯನ್ನು ಒಂದು ಅಂಶವನ್ನಾಗಿ ಘೋಷಿಸಿ ಸ್ಪರ್ಧಿಸಿದವು. ಮುಖ್ಯವಾಗಿ ಕಮ್ಯುನಿಸ್ಟ ಪಕ್ಷವು ಆಂಧ್ರ ರಾಜ್ಯದ ನಿರ್ಮಾಣವು ಅತ್ಯಂತ ಪ್ರಧಾನ ಅಂಶವೆಂದೂ, ತಕ್ಷಣ ಸಮಸ್ಯೆಯೆಂದು ಜನತೆಯ ಮುಂದಿಟ್ಟಿತು. ಅದು “ವಿವಾದ ರಹಿತವಾದ ೧೧ ಜಿಲ್ಲೆಗಳು, ಮೂರು ತಾಲೂಕುಗಳೊಂದಿಗೆ ಕೂಡಲೇ ರಾಜ್ಯವನ್ನು ಏರ್ಪಡಿಸಬೇಕೆಂದು” ಘೋಷಿಸಿತು.

ಮದ್ರಾಸ್‌ ಶಾಸನಸಭೆಯಲ್ಲಿನ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳ ಬಲಾಬಲ ಹೀಗಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ೪೦, ಕಮ್ಯುಸಿಸ್ಟರು ೪೧, ಕೃಷಿಕಾರ್ ಲೋಕ ಪಾರ್ಟಿ ೧೫, ಕಿಸಾನ್ ಮಜ್ದೂರ್ ಪ್ರಜಾಪಕ್ಷವು ೨೦, ಸೋಷಿಯಲಿಸ್ಟ್ ಪಕ್ಷವು ೬, ಸ್ವತಂತ್ರ ಅಭ್ಯರ್ಥಿಗಳು ೧೮ ಸ್ಥಾನಗಳಲ್ಲಿ ಆಯ್ಕೆಯಾದರು.

ಶಾಸನಸಭೆಯನ್ನು ಪ್ರವೇಶಿಸಿದ ಕೂಡಲೇ ಆಂಧ್ರ ಕಮ್ಯುನಿಸ್ಟ್ ಸದಸ್ಯರು ಹಾಗೂ ಐಕ್ಯಸಂಘಟನೆಯ ಸ್ವತಂತ್ರ್ಯ ಸದಸ್ಯರು ಪ್ರತ್ಯೇಕ ರಾಜ್ಯ ನಿರ್ಮಾಣದ ಅಗತ್ಯತೆಯನ್ನು ಪದೇಪದೇ ಸಾರತೊಡಗಿದರು. ಸಭೆಯಲ್ಲಿ ಸಿಕ್ಕ ಪ್ರತಿ ಅವಕಾಶವನ್ನು ಉಪಯೋಗಿಸಿಕೊಂಡು ಸಂಯುಕ್ತ ಮದ್ರಾಸ ರಾಜ್ಯದಿಂದಾಗಿ ಎಷ್ಟೊಂದು ಅನರ್ಥಗಳುಂಟಾಗುತ್ತವೆಂದು ವಿವರಿಸತೊಡಗಿದರು. ಈ ಸಂಯುಕ್ತ ಮದ್ರಾಸ ರಾಜ್ಯದ ಶಾಸನಸಭೆಯಲ್ಲಿ ಆಂಧ್ರದ ಕಮ್ಯುನಿಸ್ಟ್ ಸದಸ್ಯರು ತೆಲುಗಿನಲ್ಲಿಯೇ ಮಾತನಾಡಬೇಕೆಂದು ಕಮ್ಯುನಿಸ್ಟ ಪಕ್ಷವು ನಿರ್ಣಯಿಸಿತು. ಈ ಬಗೆಯ ಕ್ರಿಯೆಗಳೆಲ್ಲ ಆಂಧ್ರದ ಜನತೆಯಲ್ಲಿ ಆಂಧ್ರ ರಾಜ್ಯ ನಿರ್ಮಾಣದ ಜಾಗೃತಿಯನ್ನು ಮೂಡಿಸುವಲ್ಲಿ ಸಹಾಯಕವಾದವು.

ಶ್ರೀ ನಿಲಂ ಸಂಜೀವರೆಡ್ಡಿಯವರ ಪ್ರೋತ್ಸಾಹದಿಂದಾಗಿ ರಾಯಲಸೀಮೆಗೆ ಸೇರಿದ ೨೧ ಜನ ಕಾಂಗ್ರೆಸ್, ಶಾಸನಸಭೆಯ ಸ್ವತಂತ್ರ ಅಭ್ಯರ್ಥಿಗಳು ಪ್ರಧಾನಿ ನೆಹರೂ ಅವರಿಗೆ ಪ್ರತ್ಯೇಕ ಆಂಧ್ರ ರಾಜ್ಯದ ನಿರ್ಮಾಣವನ್ನು ಮುಂದೂಡಬೇಕೆಂದು ಮನವಿ ಪತ್ರವೊಂದನ್ನು ಕಳುಹಿಸಿಕೊಟ್ಟರು. ಮತ್ತೆ ಕೆಲವರು ಮದ್ರಾಸ್ ಇಲ್ಲದ ರಾಜ್ಯ ಬೇಡವೆಂದರು. ಮತ್ತೊಂದೆಡೆ ಕಾಂಗ್ರೆಸ್ ನಾಯಕರಾದ ಸ್ವಾಮಿ ಸೀತಾರಾಂ ಅವರು ಆಂಧ್ರ ರಾಜ್ಯದ ಏರ್ಪಾಡಿಗಾಗಿ ಸತ್ಯಾಗ್ರಹ ಪ್ರಾರಂಭಿಸಿ ಅಗಸ್ಟ್ ೧೫, ೧೯೫೨ ರಿಂದ ೩೫ ದಿನಗಳ ಕಾಲ ಏಕಪ್ರಕಾರವಾಗಿ ನಿರಾಹಾರ ದೀಕ್ಷೆ ಮಾಡಿದರು.

ಪೊಟ್ಟಿ ಶ್ರೀರಾಮುಲು ಅವರ ಆತ್ಮಾಹುತಿ

ಅ ನಂತರ ಗಾಂಧೀಜಿಯವರ ಅನುಯಾಯಿಗಳಲ್ಲಿ ಒಬ್ಬರಾದ ಶ್ರೀ ಪೊಟ್ಟಿ ಶ್ರಿರಾಮುಲು ಅವರು ೧೯೫೨ ಅಕ್ಟೋಬರನಲ್ಲಿ ಪ್ರತ್ಯೇಕ ಆಂಧ್ರ ಸಾಧನೆಗಾಗಿ ಅಮರಣಾಂತ ಉಪವಾಸ ವೃತ ಕೈಗೊಂಡರು. ಶೀಘ್ರ ಆಂಧ್ರ ರಾಜ್ಯವನ್ನು ಏರ್ಪಡಿಸಿ, ಶ್ರೀರಾಮುಲು ಅವರ ಪ್ರಾಣವನ್ನು ರಕ್ಷಿಸಬೇಕೆಂದು ಆಂಧ್ರ ಪ್ರದೇಶದಲ್ಲಿ ಆಂದೋಲನ ಆರಂಭಗೊಂಡಿತು. ನವೆಂಬರ್ ಕಳೆದು, ಡಿಸೆಂಬರ್ ತಿಂಗಳು ಕಾಲಿಡುತ್ತಿದ್ದಂತೆಯೇ ಆಂಧ್ರದಾದ್ಯಂತ ಚಳವಳಿ ತೀವ್ರಗೊಂಡಿತು. ಆಂಧ್ರದ ಎಲ್ಲ ಪಟ್ಟಣ ಪ್ರದೇಶಗಳಲ್ಲಿಯೂ ಶ್ರೀರಾಮುಲು ಅವರ ದೀಕ್ಷೆಗೆ ಸಹಾನುಭೂತಿ ಪ್ರಕಟಿಸಿ, ಕೇಂದ್ರ ಸರ್ಕಾರದ ವಿರುದ್ಧ ನಿರಶನ ಸೂಚಿಸಿ ಹರತಾಳಗಳನ್ನು ನಿರ್ವಹಿಸಲಾಯಿತು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ, ಚಳವಳಿಗೆ ದುಮುಕಿ ಆಂಧ್ರ ರಾಜ್ಯದ ಸಾಧನೆಗಾಗಿ ತಮ್ಮ ಪಾತ್ರ ನಿರ್ವಹಿಸಿದರು.

ಆಂಧ್ರದಾದ್ಯಂತ ಭುಗಿಲೆದ್ದ ತೀವ್ರವಾದ ಆಂದೋಲನಕ್ಕೆ ಭಾರತ ಸರಕಾರವು ಹೆದರಿ, ಡಿಸೆಂಬರ್ ೯ ರಂದು ಪ್ರಧಾನಿ ನೆಹರೂ “ಮದ್ರಾಸ ನ ಪ್ರಮೇಯವೇ ಇಲ್ಲದಂತೆ ಆಂಧ್ರದ ಜನತೆ ವಿವಾದರಹಿತ ಪ್ರದೇಶಗಳೊಂದಿಗೆ ರಾಜ್ಯವನ್ನು ಏರ್ಪಡಿಸುವಂತೆ ಕೋರಿದರೆ” ಆಂಧ್ರ ರಾಜ್ಯದ ಏರ್ಪಾಡಿಗೆ ಯಾವುದೇ ಆಕ್ಷೇಪವಿಲ್ಲವೆಂಬುದಾಗಿ ಪ್ರಕಟಿಸಿದರು. ನೆಹರೂ ಅವರ ಅಸ್ಪಷ್ಟ ಪ್ರಕಟನೆಯು ಪೊಟ್ಟಿ ಶ್ರೀ ರಾಮುಲು ಅವರ ಪ್ರಾಣವನ್ನು ರಕ್ಷಿಸಲಾಗಲಿಲ್ಲ. ಡಿಸೆಂಬರ್ ೧೫ ರಂದು ೫೮ ದಿನಗಳ ನಿರಾಹಾರ ದೀಕ್ಷೆಯ ನಂತರ ಶ್ರೀರಾಮುಲು ಅವರು ನಿಧನರಾದರು.

ಇದರಿಂದಾಗಿ ಆಂಧ್ರದ ಜನತೆಯ ಕ್ರೋಧಾಗ್ನಿಯ ಕಟ್ಟೆಯೊಡೆಯಿತು. ಕರಾವಳಿ, ರಾಯಲಸೀಮೆ ಎಂಬ ಪ್ರಾದೇಶಿಕ ಭೇದವಿಲ್ಲದೆ ಪ್ರತ್ಯೇಕ ಆಂಧ್ರ ರಾಜ್ಯದ ಘೋಷಣೆಯು ಮುಗಿಲು ಮುಟ್ಟಿತು. ರಾಜ್ಯದಲ್ಲಿನ ಎಲ್ಲ ನಗರ-ಪಟ್ಟಣಗಳು ಸಂಪೂರ್ಣ ಹರತಾಳವನ್ನು ಆಚರಿಸಿದವು. ಆಂಧ್ರಪ್ರದೇಶದ ಮಟ್ಟಿಗೆ ಸರಕಾರಿ ಆಡಳಿತವು ನಿಯಂತ್ರಣ ಕಳೆದುಕೊಂಡಿತು. ಆಂಧ್ರಪ್ರದೇಶದ ಚರಿತ್ರೆಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಜನತೆ ಹೋರಾಟಕ್ಕೆ ಧುಮುಕಿತು. ಕಟ್ಟಕಡೆಗೆ ೧೯೫೨ರ ಡಿಸೆಂಬರ್ ೧೯ ರಂದು ಮದ್ರಾಸನ್ನು ಹೊರತು ಪಡಿಸಿ, ವಿವಾದರಹಿತ ಭಾಗಗಳೊಂದಿಗೆ ಆಂಧ್ರ ರಾಜ್ಯದ ಸ್ಥಾಪನೆಗೆ ಸರಕಾರವು ಪ್ರಯತ್ನಿಸುತ್ತದೆಂಬುದಾಗಿ ನೆಹರೂ ಅವರು ಪ್ರಕಟಿಸಿದರು. ರಾಜ್ಯದ ಏರ್ಪಾಡಿಗೆ ಇರುವ ಸಮಸ್ಯೆಗಳನ್ನು ವಿವರವಾಗಿ ಪರಿಶೀಲಿಸುವುದಕ್ಕಾಗಿ ನ್ಯಾಯಮೂರ್ತಿ ಕೆ.ಎನ್.ವಾಂಛೂ ಅವರನ್ನು ಕೇಂದ್ರ ಸರಕಾರವು ನೇಮಿಸಿತು.

ನ್ಯಾಯಮೂರ್ತಿಗಳಾದ ವಾಂಛೂ ಅವರನ್ನು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಭೇಟಿಯಾಗಿ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಮ್ಯುನಿಸ್ಟ್ ಪಕ್ಷವು ಆಂಧ್ರ ರಾಜಧಾನಿಯು ಆಂಧ್ರಪ್ರದೇಶದ ಹೃದಯಭಾಗಗಳೆಂದು ಗುರುತಿಸಲಾಗುತ್ತಿದ್ದ ಪ್ರದೇಶದಲ್ಲಿಯೇ ಇರಬೇಕೆಂದೂ, ವಿಜಯವಾಡವು ಅದಕ್ಕೆ ಅನುಕೂಲವಾದ ಸ್ಥಳವೆಂದು ವಾದಿಸಿತು. ಕೃಷಿಕಾರ ಲೋಕ ಪಾರ್ಟಿಯು ತಿರುಪತಿ ಆಂಧ್ರಪ್ರದೇಶದ ರಾಜಧಾನಿಯಾಗಬೇಕೆಂದು ಸೂಚಿಸಿತು. ಪ್ರಜಾಸೋಷ್ಯಲಿಸ್ಟ್ ಪಕ್ಷದ ನಾಯಕರು ಮದ್ರಾಸನ್ನೇ ತಾತ್ಕಾಲಿಕ ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕೆಂದು ವಾದಿಸಿದರು. ವಾಂಛೂ ಕಮಿಟಿಯ ವರದಿಯೂ ೧೯೫೩ರಲ್ಲಿ ಭಾರತ ಸರಕಾರದ ಕೈಸೇರಿತು.

ಆನಂತರ ಪ್ರಧಾನಿ ನೆಹರೂ ಅವರು ಮಾರ್ಚ ೨೫ರಂದು ಹೇಳಿಕೆಯೊಂದನ್ನು ನೀಡಿ, ೧೯೫೩ ಅಕ್ಟೋಬರ್ ೧ ರಂದು ವಿವಾದರಹಿತ ಪ್ರದೇಶಗಳನ್ನೊಳಗೊಂಡಂತೆ ಆಂಧ್ರ ರಾಜ್ಯವು ನಿರ್ಮಾಣಗೊಳ್ಳಲಿದೆಯೆಂದು, ರಾಜಧಾನಿಯನ್ನು ಮದ್ರಾಸನಲ್ಲಿಯೇ ಉಳಿಸುವ ಪ್ರಮೇಯವೇ ಇಲ್ಲವೆಂದು, ಯಾವ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕೆಂಬ ತೀರ್ಮಾನವನ್ನು ಆಂಧ್ರದ ಶಾಸನಸಭೆಯ ಸದಸ್ಯರೇ ಕೈಗೊಳ್ಳಬೇಕೆಂದು ಸ್ಪಷ್ಟಪಡಿಸಿದರು.

ನೆಹರೂ ಅವರ ಹೇಳಿಕೆಯ ಪ್ರಕಾರ ೧೯೫೩ ಜೂನ ೫ ರಂದು ಆಂಧ್ರ ಶಾಸನ ಸಭೆಯ ಸದಸ್ಯರ ಪ್ರತ್ಯೇಕ ಸಮಾವೇಶ ನಡೆಯಿತು. ಐದು ದಿನಗಳ ಕಾಲ ಬಿರುಸಿನಿಂದ ನಡೆದ ಚರ್ಚೆಗಳ ನಂತರ, ಕರ್ನೂಲು ನಗರವನ್ನು ರಾಜಧಾನಿಯನ್ನಾಗಿ ಇರಿಸಿಕೊಳ್ಳಬೇಕೆನ್ನುವ ತೀರ್ಮಾನವು ಅಂಗೀಕಾರವಾಯಿತು. ಅಲ್ಲದೆ, ಹೊಸ ರಾಜ್ಯದ ನಿರ್ಮಾಣಕ್ಕಾಗಿ ಭಾರತ ಸರಕಾರವು ಸಿ.ಎಂ.ತ್ರಿವೇದಿಯವರನ್ನು ವಿಶೇಷಾಧಿಕಾರಿಯನ್ನಾಗಿ ನೇಮಿಸಿತು. ಅವರಿಗೆ ಸಲಹೆ ಸೂಚನೆಗಳನ್ನು ನೀಡಲು ನೀಲಂ ಸಂಜೀವರೆಡ್ಡಿ ಮತ್ತು ತೆನ್ನೇಟಿ ವಿಶ್ವನಾಥಂ ಅವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. ಅಂತಿಮವಾಗಿ ಕರ್ನೂಲು ರಾಜಧಾನಿಯಾಗಿ, ಸಿ.ಎಂ.ತ್ರಿವೇದಿಯವರು ರಾಜ್ಯಪಾಲರಾಗಿ, ಟಂಗುಟೂರಿ ಪ್ರಕಾಶಂ ಪಂತುಲು ಮುಖ್ಯಮಂತ್ರಿಯಾಗಿ, ನೀಲಂ ಸಂಜೀವರೆಡ್ಡಿಯವರು ಉಪಮುಖ್ಯಮಂತ್ರಿಯಾಗಿ ೧೯೫೩ ಅಕ್ಟೋಬರ್ ೧ನೇ ತಾರೀಖು ಆಂಧ್ರ ರಾಜ್ಯವು ಆವಿರ್ಭವಿಸಿತು. ಭಾರತವು ಸ್ವಾತಂತ್ರ್ಯಗಳಿಸಿದ ನಂತರ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಆವಿರ್ಭವಿಸಿದ ಮೊಟ್ಟಮೊದಲ ಭಾಷಾಧಾರಿತ ರಾಜ್ಯವೆಂದರೆ ಆಂಧ್ರಪ್ರದೇಶವಾಗಿದೆ.