ಮೇಲೆ ಹೇಳಿದ ಅಂಶಗಳು ಉದಾರೀಕರಣ ಉಂಟುಮಾಡಿದ ಒಟ್ಟು ಸ್ಥಿತಿಯನ್ನು ಹಿಡಿದಿಡುವ ಪ್ರಯತ್ನ ಮಾತ್ರವೇ ಹೊರತು, ವಾಸ್ತವ ಪರಿಸ್ಥಿತಿಯ ಸಂಪೂರ್ಣ ಚಿತ್ರಣವಲ್ಲ. ಉದಾರೀಕರಣದ ನಂತರವೂ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನದಲ್ಲಿ ಅಂತಹ ಏರಿಕೆಯೇನೂ ಆಗಿಲ್ಲ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ಸಂಪತ್ತಿನ ಸೃಷ್ಟಿ, ಸರಕು ಮತ್ತು ಮತ್ತು ಸೇವೆಗಳ ಉತ್ಪಾದನೆಯಂತೂ ಹೆಚ್ಚಾಗಿರುವುದು ನಿಜ. ಆದರೆ ಇಂತಹ ಹೆಚ್ಚಳ ಕೆಲವು ಸೀಮಿತ ವಲಯಗಳಲ್ಲಿ ಉತ್ಪತ್ತಿಯಾಗಿ ಸೀಮಿತ ಜನವರ್ಗಗಳಿಗೆ ಹಂಚಿಕೆಯಾಗಿದೆ. ಈ ರೀತಿಯಲ್ಲಿ ಸೃಷ್ಟಿಯಾದ ಶ್ರೀಮಂತ ವರ್ಗದ ಬೇಡಿಕೆಗಳು ಹೆಚ್ಚಿರುವ ವಿಷಯವನ್ನು ಆಧರಿಸಿ ಇಡೀ ಅರ್ಥವ್ಯವಸ್ಥೆಯ ಬೇಡಿಕೆಯೇ ಇದಾಗಿದೆ ಎಂದು ಹೇಳುವುದು ಸರಿಯಲ್ಲ. ಉದಾಹರಣೆಗೆ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಮೊಬೈಲ್‌ದೂರವಾಣಿ ಬಳಕೆಯಲ್ಲ. ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಿದೆ ಆದರೆ ಈ ಬದಲಾವಣೆಯ ಉತ್ಪಾದಕತೆ ಹಾಗೂ ಬಳಕೆದಾರರ ಉತ್ಪಾದನಾ ಸಾಮರ್ಥ್ಯದ ಮೇಲೆ ಬೀರಿದ ಧನಾತ್ಮಕ ಪರಿಣಾಮದ ಬಗ್ಗೆ ಯೋಚಿಸಿದರೆ, ಇದೊಂದು ಹೇಳಿಕೊಳ್ಳುವ ಭಾರಿ ಸಾಧನೆಯೇ?ಇ ದರಿಂದ ಯಾರಿಗೆ ಎಷ್ಟು ಲಾಭವಾಗಿದೆ? ಉಪಭೋಗಿ, ಆದಾಯ ‘ಪ್ರದರ್ಶನ ಪ್ರವೃತ್ತಿ’ಗೆ ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎನ್ನುವುದನ್ನು ತಿಳಿಯಬೇಕಿದೆ. ಮಾಹಿತಿ ತಂತ್ರಜ್ಞಾನ, ಹಣಕಾಸು ವ್ಯವಹಾರ, ಮನೋರಂಜನೆ, ಪ್ರವಾಸ ಮತ್ತು ಅತಿಥಿ ಸತ್ಕಾರ, ಭೂವ್ಯವಹಾರ ವ್ಯಾಪಾರಿ ಚಟುವಟಿಕೆಗಳಲ್ಲಿ ಒಟ್ಟು ವ್ಯವಹಾರ ವೇಗ ಪಡೆದುಕೊಂಡಿದೆ. ಇಂತಹ ‘ವ್ಯಾಪಾರಿ ನಿದೇಶಿತ’ ಚಟುವಟಿಕೆಗಳಲ್ಲಿ ಭಾರಿ ಬಂಡವಾಳ ಹೂಡಿಕೆಯಾಗಿದ್ದು, ಪ್ರಸರಣದ ವೇಗವೂ ಅಧಿಕವಾಗಿದೆ. ಹೀಗೆ ಅಧಿಕ ಪ್ರಸರಣದ ವೇಗದ ಕಾರಣದಿಂದ ಉತ್ಪತ್ತಿಯಾಗುವ ಲಾಭದ ಪ್ರಮಾಣವು ಅಧಿಕವಾಗಿದೆ. ಯಾರಿಗೆ ಅಧಿಕ ಪ್ರಮಾಣದ ಬಂಡವಾಳ ಮತ್ತು ಅಧಿಕ ಪ್ರಸರಣ ವೇಗವನ್ನು ನಿಯಂತ್ರಿಸುವ ಮತ್ತು ನಿಭಾಯಿಸುವ ಸಾಮರ್ಥ್ಯವಿದೆಯೋ ಅಂತಹ ಜನ ವರ್ಗಕ್ಕೆ ಅಧಿಕ ಲಾಭವಾಗುತ್ತದೆ. ನಾವು ಅಗತ್ಯವಾಗಿ ಗಮನಿಸಲೇಬೇಕಾದ ಅಂಶವೆಂದರೆ ಇಂತಹ ಕ್ರಿಯೆಯನ್ನು ನಿಭಾಯಿಸುವ ಶಕ್ತಿಯಿರುವುದು ಅಧಿಕಾರ, ಹಣ ಅಥವಾ ಇವೆರಡನ್ನೂ ಹೊಂದಿರುವ ಖಾಸಗೀ ಬಂಡವಾಳದಾರರಿಗೆ, ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ‘ಕೈಯಿಂದ ಬಾಯಿಗೆ’ ಬೇಕಾಗುವಷ್ಟು ಆದಾಯ ಹೊಂದಿರುವ, ಅಸ್ತಿತ್ವವುಳಿಸಿಕೊಳ್ಳಲು ಪರದಾಡುವ ಬಹುಪಾಲು ಬಡ ಮತ್ತು ಕೆಳಮದ್ಯಮ ವರ್ಗದ ಜನರಿಗೆ ಉದಾರೀಕರಣದ ಫಲ ತಲುಪಿಲ್ಲ. ಇದೇ ಕಾರಣದಿಂದ ಅನಿಯಂತ್ರಿತ ಮುಕ್ತ ಮಾರುಕಟ್ಟೆಯ ಬೆಳವಣಿಗೆ ಇಡೀ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಯನ್ನು ಕೆಲವೇ ಕೆಲವು ಶ್ರೀಮಂತರ ಕೈಗೆ ವರ್ಗಾಯಿಸುತ್ತಿದೆ. ಇಂತಹ ಆರ್ಥಿಕ ಬೆಳವಣಿಗೆಗಳು ನಾವು ಪ್ರತಿಪಾದಿಸುತ್ತಿರುವ ಸಬಲೀಕರಣ, ಪ್ರಜಾಪ್ರಭುತ್ವ, ಲಿಂಗಸಮಾನತೆ, ಅಧಿಕಾರ ವಿಕೇಂದ್ರಕರಣ, ಇತ್ಯಾದಿ ಪರಿಕಲ್ಪನೆಗಳಿಗೆ ಪೂರಕ ಸನ್ನಿವೇಶ ನಿರ್ಮಾಣ ಮಾಡಲು ಸಹಕಾರಿಯಾಗಿಲ್ಲ. ಆರ್ಥಿಕಾಭಿವೃದ್ಧಿಯ ಅಳತೆಗೋಲಾಗಿರುವ ಈ ಮೊದಲು ಹೇಳಿರುವ ಪರಿಕಲ್ಪನೆಗಳಿಗೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಉದಾರೀಕರಣೋತ್ತರ ಬೆಳವಣಿಗೆಯನ್ನು ನಾವು ಹೇಗೆ ಪ್ರಗತಿ, ಉನ್ನತಿ ಅಥವಾ ಅಭಿವೃದ್ಧಿ ಎಂದು ಗುರುತಿಸಲು ಸಾಧ್ಯ?

ಉದಾರೀಕರಣದ ನಂತರ ಚುನಾವಣೆಗಳಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ವಿಶ್ಲೇಷಿಸಿದಾಗ ಅಭಿವೃದ್ಧಿಯ ಕುರಿತು ಅಥವಾ ಆರ್ಥಿಕ ನೀತಿಗಳ ಕುರಿತು ಬಹುಸಂಖ್ಯಾತ ಜನ ತೀವ್ರ ಅಸಂತೋಷದಿಂದಿರುವ ವಿಷಯ ಬಹಿರಂಗವಾಗಿದೆ. ಚುನಾವಣಾ ಫಲಿತಾಂಶಗಳಲ್ಲಿ ಪ್ರಮುಖವಾಗಿ ಆಂಧ್ರಪ್ರದೇಶದಲ್ಲಿ ವಿಶ್ವಬ್ಯಾಂಕಿನ ಪ್ರಜಾಪ್ರಭುತ್ವ ಸರ್ಕಾರದ ಆಡಳಿತ ನಿರ್ದೇಶಕ, ಆರ್ಥಿಕ ಉದಾರೀಕರಣದ ಪ್ರತಿಪಾದಕ ಮತ್ತು ಮಾಧ್ಯಮಗಳಲ್ಲಿ ಆಡಳಿತ, ಅಭಿವೃದ್ಧಿ ನೀತಿಗಳ ವಿಷಯದಲ್ಲಿ ಮಹಾ ಮುತ್ಸದ್ದಿಯೆಂದು ಕರೆಯಿಸಿಕೊಂಡಿದ್ದ ಆಂಧ್ರಪ್ರದೇಶದ ಚಂಬ್ರಬಾಬು ನಾಯ್ಡು ಅವರು ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದದ್ದು ಮತ್ತು ‘ಭಾರತ ಬೆಳಗುತ್ತಿದೆ,’ ‘ಜಾಗತಿಕ ಆರ್ಥಿಕ ಚೈತನ್ಯವಾಗಿ’ ಭಾರತ ರೂಪುಗೊಳ್ಳುತ್ತಿದೆ ಎನ್ನುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ ಅಂದಿನ ಎನ್‌.ಡಿ.ಎ. ಸರಕಾರದ ಬಗ್ಗೆ ದೇಶದ ಜನ ನೀಡಿದ ಮತಾಭಿಪ್ರಾಯ, ಉದಾರೀಕರಣ ವಾಸ್ತವಿಕವಾಗಿ ಈ ದೇಶದ ಜನರ ಬದುಕಿನಲ್ಲಿ ಮೂಡಿದ ಪರಿಣಾಮ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿಯಲಾಗುತ್ತಿದೆ.

ಹೊಸ ಆರ್ಥಿಕ ನೀತಿ ವಾಸ್ತವಿಕವಾಗಿ ಮತ್ತು ತಾತ್ವಿಕವಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲತತ್ವಗಳಾಗಿರುವ ಸಾಮಾಜಿಕ ಸುರಕ್ಷೆ, ಅಧಿಕಾರ, ವಿಕೇಂದ್ರೀಕರಣ, ದುಡಿಯುವ ವರ್ಗಗಳ ಮತ್ತು ದುರ್ಬಲ ವರ್ಗಗಳ ಹಿತರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ನಿರುತ್ಸಾಹ ಧೋರಣೆಯನ್ನು ಹೊಂದಿದೆ. ಮೂಲಭೂತವಾಗಿ ಮಾರುಕಟ್ಟೆಯಾಧಾರಿತ ಮುಕ್ತ ಆರ್ಥಿಕ ನೀತಿಯ ಚೌಕಟ್ಟಿನಲ್ಲಿ ನಿಂತಿರುವ ಹೊಸ ಆಲೋಚನಾ ಕ್ರಮ ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತದೆ. ಆದರೆ ಅಸಮಾನ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಮೇಲಿರುವ ಜನರನ್ನು ಸಮಾನವಾಗಿ ಪರಿಗಣಿಸಿದಾಗಲೂ ಭೇದ ಭಾವ ಮೂಡಿದಂತೆಯೇ ಆಗುತ್ತದೆ. ಎಲ್ಲಿ ಶೋಷಿತರು, ಮಹಿಳೆಯರು, ಸಮಸ್ಯೆಗಳಲ್ಲಿರುತ್ತಾರೋ ಅಂತಹವರಿಗೆ ಹೆಚ್ಚು ಸಹಾಯ ಮತ್ತು ಅವಕಾಶಗಳನ್ನು ನೀಡಬೇಕಾಗುತ್ತದೆ. ಸಮಾನತೆಯನ್ನುವುದನ್ನು ‘ಸಂಕೀರ್ಣ’ ಅಥವಾ ‘ಸೀಮಿತ’ ವಾಚ್ಯಾರ್ಥದಲ್ಲಿ ಗ್ರಹಿಸದೆ ಅದರ ಹಿಂದಿರುವ ಇಂಗಿತವನ್ನು ಗ್ರಹಿಸಬೇಕಾಗುತ್ತದೆ. ಆದರೆ ‘ನವ ಅರ್ಥಶಾಸ್ತ್ರ’ ವ್ಯಕ್ತಿಯ ಒಳಿತು ಕೆಡುಕುಗಳ ಜವಾಬ್ದಾರಿಯನ್ನು ಅವರವರ ಶಕ್ತಿ ಸಾಮರ್ಥ್ಯಗಳಿಗೆ ಆರೋಪಿಸುವ ಮೂಲಕ, ಸಾಮಾನ್ಯ ಜನರ ದುಃಖ, ದುಮ್ಮಾನಗಳ ಬಗ್ಗೆ ಮೌನವಾಗಿದ್ದು ಬಿಡುತ್ತದೆ. ಉದ್ಯಮ ವಲಯಕ್ಕೆ ಈ ಧೋರಣೆಯನ್ನು ಅನ್ವಯಿಸಿದಾಗ ಅದು ಸರಿ ಸುಮಾರು ಸಮರ್ಥನೀಯವೇ ಆಗುತ್ತದೆ. ಯಾಕೆಂದರೆ ಎಲ್ಲ ಉದ್ಯಮಗಳೂ ಒಂದು ನಿರ್ದಿಷ್ಟ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ ಈಗಷ್ಟೇ ಉತ್ಪಾದನೆ ಆರಂಭಿಸುತ್ತದೆ. ಅದಕ್ಕೆ ತನ್ನ ಅಸ್ತಿತ್ವವವನ್ನು ಕಾಡುವ ಚರಿತ್ರೆ ಇರುವುದಿಲ್ಲ. ಉದಾರೀಕರಣದ ನಂತರ ವ್ಯಾಪಾರ ಮತ್ತು ಕೈಗಾರಿಕಾ ವಲಯಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿರುವುದರ ಹೊರತಾಗಿಯೂ ಬಾಕಿಯಿರುವ ತೆರಿಗೆ, ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಮರುಪಾವತಿಸಬೇಕಾಗಿದ್ದ ಸಾಲ, ಇತ್ಯಾದಿಗಳನ್ನು ವಸೂಲು ಮಾಡಲು ಸರಕಾರ ವಿಫಲವಾಗಿರುವುದನ್ನು ಗಮನಿಸಬಹುದು. ಮೂಲಭೂತ ಸೌಲಭ್ಯ ಒದಗಿಸಲು, ದೊಡ್ಡ ದೊಡ್ಡ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಅಂತರರಾಷ್ಟ್ರೀಯ ವಲಯದಿಂದ ದೊಡ್ಡ ಮೊತ್ತದ ಬಂಡವಾಳವನ್ನು ಪಡೆಯಲಾಗಿದೆ. ಇದನ್ನು ಪಡೆಯುವ ಹಂತದಲ್ಲಿ ‘ಕಮಿಷನ್‌,’ ಸತ್ಕಾರ, ‘ಪರಿಣಿತ ಮಾರ್ಗದರ್ಶನ’ ಇತ್ಯಾದಿಗಳು ಹೇಗೆ ಬಡಜನತೆಯ ಹೆಗಲ ಹೊರೆಯಾಗಿದೆ ಎನ್ನುವುದನ್ನು ೨೦೦೬ನೇ ಇಸ್ವಿಯಲ್ಲಿ ನೊಬೆಲ್‌ಪಾರಿತೋಷಕ ಪಡೆದ ಬಾಂಗ್ಲಾದೇಶದ ಆರ್ಥಿಕ ತಜ್ಞ ಮಹಮದ್‌ ಯೂನಸ್‌ ತಮ್ಮ ಆತ್ಮಕಥೆಯಲ್ಲಿ ವಿವರಿಸುತ್ತಾರೆ. ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಂದ ಮತ್ತು ಆ ವಲಯದಿಂದ ಬರಬೇಕಾದ ತೆರಿಗೆ, ಸುಂಕ ಮತ್ತಿತರ ರಾಜಸ್ವ ವಸೂಲಾತಿಯಲ್ಲಿನ ಅದಕ್ಷತೆಯಿಂದ ವಿತ್ತೀಯ ಕೊರತೆಯು ಏರುತ್ತಿದೆ. ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಸಂಪನ್ಮೂಲವು ಅದಕ್ಷ ಮತ್ತು ಸಂವೇದನಾ ಶೀಲತೆಯಿಲ್ಲದೆ ಸರಕಾರಿ ವ್ಯವಸ್ಥೆಯ ಕಾರಣದಿಂದ ಸಮಾಜದ ಕೆಳಸ್ತರಗಳನ್ನು ತಲುಪುವಲ್ಲಿ ಸೋಲುತ್ತದೆ. ಇದರ ಪರಿಣಾಮವಾಗಿ ವಿತ್ತೀಯ ಕೊರತೆಯಲ್ಲಿ ಏರಿಕೆಯ ಮತ್ತು ಬಾಹ್ಯ ಪಾವತಿಗಳ (External Internal Payments) smsfye dESdಸಮಸ್ಯೆ ದೇಶದ ಸರಕಾರ ಮತ್ತು ಸಂಘಟಿತ ವಲಯದ ಮೇಲೆ ಒತ್ತಡಉಂಟು ಮಾಡುತ್ತದೆ. ಆದರೆ ಇಂತಹ ಒತ್ತಡ ಅಂತಿಮವಾಗಿ, ಅಸಂಘಟಿತ ವಲಯ ದುರ್ಬಲವರ್ಗಗಳಿಗೆ ವರ್ಗಾಯಿಸಲ್ಪಡುತ್ತದೆ. ಸಂಘಟಿತ ವಲಯ ತನ್ನ ಸಮಸ್ಯೆಗಳ ಬಗ್ಗೆ, ಅವಶ್ಯಕತೆಗಳ ಬಗ್ಗೆ ಹಾಗೂ ತನ್ನ ಅಸ್ತಿತ್ವದ ಪ್ರಶ್ನೆಯ ಬಗ್ಗೆ ಒಂದು ಸಂಘಟಿತ ಹೋರಾಟ ಮಾಡುತ್ತದೆ. ಹಾಗಾಗಿ ಈ ವಲಯದ ಸಮಸ್ಯೆಗಳು ಅಸಂಘಟಿತ ವಲಯದ ಸಮಸ್ಯೆಗಳಂತೆ ಸೂಕ್ಷ್ಮಸ್ತರಗಳಲ್ಲಿ ಕೌಟುಂಬಿಕ ಅಥವಾ ವ್ಯಕ್ತಿಯ ಮೇಲೆ ಆಘಾತಕಾರೀ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಭಾರತದ ಅರ್ಥವ್ಯವಸ್ಥೆಯಲ್ಲಿ ಇಂದು ತಲೆಯತ್ತುತ್ತಿರುವ ಕೋಮುವಾದ, ಜಾತಿ ಸಂಘರ್ಷ ಮಹಿಳಾ ಶೋಷಣೆ, ದುರ್ಬಲ ವರ್ಗಗಳ ಮೇಲಿನ ದಬ್ಬಾಳಿಕೆಗಳು ಇವೆಲ್ಲದರ ಹಿಂದೆಯೂ ಆರ್ಥಿಕ ನೀತಿಗಳ ಪರಿಣಾಮವಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಪ್ರಜಾಪ್ರಭುತ್ವ ಮಾದರಿಯ ಸರಕಾರಗಳಲ್ಲಿ ಅಸ್ಥಿರತೆ, ಗೊಂದಲಗಳು ಉಂಟಾಗಿರುವುದು ಸಹಜ, ಅದರಲ್ಲಿಯೂ ಭಾರತದಂತಹ ಬಹುರೂಪ ಬಹುಜಾತಿಗಳಿರುವ ದೇಶದಲ್ಲಿ ವಿವಿಧ ರೀತಿಯ ಅಸ್ಮಿತೆಯ ನೆಲೆಯಲ್ಲಿ ಸಮುದಾಯ ಸಂಘಟಿತವಾಗಿ ಪ್ರಜಾಪ್ರಾತಿನಿಧ್ಯ ವಿಕೃತಿಗೊಳಗಾಗುವ ಅಪಾಯಗಳಿವೆ. ಇದರಿಂದ ಸ್ಥಿರತೆಯ ಹುಡುಕಾಟವೇ ಮುಖ್ಯವಾಗಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ಮೂಲೆಗೊತ್ತಲ್ಪಡುವ ಪ್ರಮೇಯ ಉಂಟಾಗುವುದು. ಇಂತಹ ಬೆಳವಣಿಗೆಗಳನ್ನು ಉದಾರೀಕರಣದ ನಂತರ ಕಂಡುಬರುವ ರಾಜಕೀಯ ವಲಯದಲ್ಲಿ ಕಾಣಬಹುದಾಗಿದೆ. ನಿಜವಾದ ಅಪಾಯವಿರುವುದು ಈ ಪರಿಸ್ಥಿತಿಯಲ್ಲಿ ಅಲ್ಲ. ಬದಲಿಗೆ ಇಂತಹ ಗೊಂದಲದ ವಾತಾವರಣವನ್ನು ಅಂತಾರಾಷ್ಟ್ರೀಯ ವ್ಯಾಪಾರಿ ಸಮುದಾಯ ಮತ್ತು ಮುಂದುವರಿದ ದೇಶಗಳು ಅವರ ಅನುಕೂಲಕ್ಕಾಗಿ ಬಳಸಿಕೊಳ್ಳುವುದರಲ್ಲಿ. ಪ್ರಪಂಚದ ಬಹಳಷ್ಟು ಕಡೆ ಆರ್ಥಿಕ ಉದಾರೀಕರಣದ ಬಗ್ಗೆ ಬಹುಪಾಲು ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಂತಹ ವಿರೋಧ ಒಂದು ಸಂಘಟಿತ ರೂಪದಲ್ಲಿ ವ್ಯಕ್ತವಾಗದೆ ಚದುರಿ ಹೋಗಿರುವುದರಿಂದ, ಸ್ವೀಕೃತವಲ್ಲದ ಒಂದು ನೀತಿಯ ಮುಂದುವರಿಕೆಯನ್ನು ತಡೆಯಲಾಗುತ್ತಿಲ್ಲ.

ಇಂದಿಗೂ ಬಹುಪಾಲು ಜನರಿಗೆ ಆಧಾರವಾಗಿರುವ ಕೃಷಿಕ್ಷೇತ್ರವಂತೂ ಉದಾರೀಕರಣದ ನಂತರ ತತ್ತರಿಸಿ ಹೋಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ರೈತರು ನಿರಂತರ ಆತ್ಮಹತ್ಯೆಗೆ ಶರಣಾಗುತ್ತಿರುವ ಕರುಣಾಜನಕ ಪರಿಸ್ಥಿತಿ ಇದೆ. ಪ್ರಧಾನಿ ಮನಮೋಹನ ಸಿಂಗ್‌ ಅವರ ‘ವಿದರ್ಭ ಪ್ಯಾಕೇಜ್‌’ ರೈತರ ಆತ್ಮಹತ್ಯೆಯನ್ನು ತಡೆಯಲು ಸಮರ್ಥವಾಗಿಲ್ಲ. ಸೂಕ್ಷ್ಮ ಮನಸ್ಸಿನ ಅಮಾಯಕ ರೈತಾಪಿ ಜನ ದೇಶಕ್ಕೆ ಅನ್ನ ನೀಡಿ ತಾವು ಮಾತ್ರ ವಿಷ ಸೇವಿಸುವಂತಹ ಒಂದು ದಾರುಣ ಪರಿಸ್ಥಿತಿ, ನಮ್ಮ ದೇಶದ ಪಾರ್ಲಿಮೆಂಟ್‌ಮತ್ತು ರಾಜ್ಯದ ವಿಧಾನ ಸಭೆಗಳ ಗೋಡೆಯನ್ನು ದಾಟಿ ಒಳಗಿರುವ ಜನಪ್ರತಿನಿಧಿಗಳನ್ನು ತಲುಪುತ್ತಿಲ್ಲ. ಕೃಷಿ ವಲಯದ ಸಮಸ್ಯೆಗಳಿಗೆ ವಾಣಿಜ್ಯ ಜಗತ್ತು ನೀಡುತ್ತಿರುವ ಪರಿಹಾರಗಳಂತೂ ಇನ್ನೂ ಗಾಬರಿ ಹಿಡಿಸುವ ಹಾಗಿವೆ. ಕೃಷಿ ವಲಯಕ್ಕೆ ಅನ್ವಯಿಸಬಹುದಾದ “ಒಪ್ಪಂದ (ಕ್ರಮಗಾರಿಕೆ) ಬೇಸಾಯದಂತಹ” ನೀತಿಯನ್ನು ಅನ್ವಯಿಸಿದರೆ ಅದರಿಂದ ರೈತರ ಪರಿಸ್ಥಿತಿ ಇನ್ನೂ ಹದಗೆಡಬಹುದು ಎನಿಸುತ್ತದೆ. ರೈತರ ಆತ್ಮಹತ್ಯೆಯ ಬಗ್ಗೆ ಇದುವರೆಗೆ ನಡೆದಿರುವ ಯಾವ ಅಧ್ಯಯನಗಳೂ ರೈತರ ಆತ್ಮಹತ್ಯೆಯ ಹಿಂದಿರುವ ಕಾರಣಗಳನ್ನು ಸರಿಯಾಗಿ ಗ್ರಹಿಸಿಲ್ಲ. ಈ ಕಾರಣಕ್ಕಾಗಿಯೇ ಈ ಸಮಸ್ಯೆಯ ಗಂಭೀರತೆಯ ಬಗ್ಗೆ ನೀಡಬೇಕಾಗಿರುವ ಗಮನ ನೀಡಿಲ್ಲವೆಂದೇ ಹೇಳಬೇಕಾಗುತ್ತದೆ.

ವ್ಯಾವಹಾರಿಕ ಮತ್ತು ವ್ಯಾಪಾರಿ ಜಗತ್ತು ಕೃಷಿ ವಲಯಕ್ಕೆ ತಂದೊಡ್ಡುತ್ತಿರುವ ಮತ್ತೊಂದು ಅಪಾಯ ‘ವಿಶೇಷ ಆರ್ಥಿಕ ವಲಯಗಳ’ ರೂಪದಲ್ಲಿದೆ. ಈ ವಿಶೇಷ ಆರ್ಥಿಕ ವಲಯದ ಹಿಂದೆ ಗುಪ್ತ ಕಾರ್ಯಸೂಚಿಗಳೇನಾದರೂ ಇರಬಹುದು ಎನ್ನುವ ರೀತಿಯಲ್ಲಿ ಇದಕ್ಕೆ ಸಂಬಂಧಿಸಿದ ಬೆಳವಣಿಗೆಗಳು ನಡೆಯುತ್ತಿವೆ. ಕೃಷಿ ನಮ್ಮ ದೇಶದಲ್ಲಿ ಬರೀ ಉದ್ಯೋಗ ಮಾತ್ರವಲ್ಲ ಅದು ಒಂದು ವಿಶಿಷ್ಟವಾದ ಸಂಸ್ಕೃತಿ ಕೂಡಾ ಆಗಿದೆ. ಹಾಗಾಗಿ ಕೃಷಿ ರಂಗವನ್ನು ಬರೀ ನಾಣ್ಯಗಳ ಮೂಲಕ ಅಳೆಯುವುದು ಸರಿಯಲ್ಲ. ಕೃಷಿಯೊಂದಿಗೆ ನಮ್ಮ ಸಂಸ್ಕೃತಿಯೂ ಬೆರೆತುಕೊಂಡಿದೆ. ಇಂತಹ ಸೂಕ್ಷ್ಮವನ್ನು ಅರಿಯದೆ ಬರೀ ಪರಿಹಾರದ ಹಣ, ವಿದೇಶಿ ವಿನಿಮಯ ಮತ್ತು ಬೃಹತ್‌ ಆರ್ಥಿಕ ಶಕ್ತಿಯಾಗುವತ್ತ ಓಟ ಎನ್ನುವ ಅಮದಿತ ಬುದ್ಧಿವಂತಿಕೆಯನ್ನು ಬದಿಗಿಟ್ಟು ಯೋಚನೆ ಮಾಡಬೇಕು. ವಿಶೇಷ ಆರ್ಥಿಕ ವಲಯದ ನೆಪದಲ್ಲಿ ರೈತರ ಬದುಕಿನೊಂದಿಗೆ ಆಟವಾಡುವುದು ಸರಿಯಲ್ಲ. ಏನೇ ಸಂಪತ್ತನ್ನು ಗಳಿಸಿದರೂ ಅದರ ಅಂತಿಮ ಉದ್ದೇಶ ಒಂದು ಸುಖೀ ಸಮಾಜದ ನಿರ್ಮಾಣವೇ ಹೊರತು ಬರೀ ಹಣಗಳಿಕೆ ಮಾತ್ರವಲ್ಲ.

ಕಾರ್ಮಿಕ ಪಾಲುಗೊಳ್ಳುವಿಕೆಯ ದರದಲ್ಲಿ ಇಳಿಕೆ, ನೌಕರವರ್ಗ ಗಳಿಸುತ್ತಿರುವ ಆದಾಯದ ನಡುವೆ ಇರುವ ವ್ಯತ್ಯಾಸ ಏರುತ್ತಿರುವುದು, ಸಣ್ಣ ಜನವರ್ಗ ದೇಶದ ಸಂಪತ್ತಿನ ದೊಡ್ಡ ಭಾಗದ ಮೇಲೆ ಹಿಡಿತ ಹೊಂದಿರುವುದು, ಬಡತನದ ತೀವ್ರತೆ ಹೆಚ್ಚಾಗುತ್ತಿರುವುದು, ಅಧಿಕಾರದ ಕೇಂದ್ರಗಳು ಜನತಾಂತ್ರಿಕ ವ್ಯವಸ್ಥೆಯಿಂದ ನಿಧಾನವಾಗಿ ಬಂಡವಾಳ ನಿಯಂತ್ರಿತ ವ್ಯವಸ್ಥೆಯ ಕಡೆಗೆ, ಅವ್ಯಕ್ತ ರೀತಿಯ್ಲಲಿ ವರ್ಗಾವಣೆ ಹೊಂದುತ್ತಿರುವುದು, ಬಹುಪಾಲು ಜನರ ಸಂಕಟದ ವಗ್ಗೆ ಮಾಧ್ಯಮಗಳಿಗೆ, ಆಡಳಿತ ವ್ಯವಸ್ಥೆಗೆ ನಿರಾಸಕ್ತಿ, ದುರ್ಬಲ ವರ್ಗಗಳ ಸಮಸ್ಯೆಗಳ ಬಗ್ಗೆ ಗಮನ ಕಡಿಮೆಯಾಗುತ್ತಿರುವದುಉ, ಬದುಕಿನ ಸರ್ವ ರಂಗಗಳೂ ವ್ಯಾಪಾರೀಕರಣಕ್ಕೆ ಅಪಾಯಗಳ ಬಗ್ಗೆ ಸಮರ್ಥ ರೀತಿಯ ವಾದಗಳನ್ನು ಮುಂದಿಡಲಾಗಿದೆ.

ಮೇಲಿನ ಎರಡರ ಹೊರತಾದ ಮೂರನೆಯ ವರ್ಗವೊಂದಿದೆ. ಇದು ಯಾವುದರ ಬಗ್ಗೆಯೂ ಗಂಭೀರವಾಗಿ ಯೋಚಿಸುವುದೇ ಇಲ್ಲ. ಬದಲಾವಣೆಯನ್ನುವುದು ಅನಿವಾರ್ಯ ಅದರ ಹಿಂದೆ ಮುಂದೆ ಯೋಚಿಸುವುದರಿಂದ ಏನೂ ಲಾಭವಿಲ್ಲ. ಅದರಿಂದ ಹೇಗೆ ಪ್ರಯೋಜನ ಪಡೆಯುವುದು ಎಂದಷ್ಟೇ ಚಿಂತಿಸುತ್ತದೆ. ಅರ್ಥಶಾಸ್ತ್ರಜ್ಞ ಕೇನ್ಸ್‌ ಹೇಳುವಂತೆ

ನಾವು ದೀರ್ಘಾವಧಿ ಪರಿಣಾಮಗಳ ಬಗೆಗೆ ಹೆಚ್ಚು ಚಿಂತಿತರಾಗಿಲ್ಲ, ಯಾಕೆಂದರೆ ದೀರ್ಘಾವಧಿಯಲ್ಲಿ ನಾವಿರುವುದಿಲ್ಲ. ನಾವು ಬದುಕುವುದು ಅಲ್ಪಾವಧಿಯಲ್ಲಿ ಮಾತ್ರ ಹಾಗಾಗಿ ನಾವು ಅಲ್ಪಾವಧಿಯ ಬಗ್ಗೆ ಮಾತ್ರ ಚಿಂತಿತರಾಗಿದ್ದೇವೆ.

ಎನ್ನುವುದನ್ನು ಸಂಭ್ರಮಿಸುವ ಈ ವರ್ಗ ಗೆದ್ದ ಎತ್ತಿನ ಬಾಲಹಿಡಕೊಂಡು ದಡ ಸೇರುವ ಮನೋಭಾವದವರು.

ಆರ್ಥಿಕ ಅಭಿವೃದ್ಧಿಯ ಬದಲಾಗುತ್ತಿರುವ ವಾಙ್ಮಯಗಳು ಯಾವುದೋ ಒಂದು ದಿಕ್ಕಿನಲ್ಲಿ ನಿರ್ದಿಷ್ಟ ಜಾಗದಲ್ಲಿ ಮುನ್ನಡೆಯುತ್ತಿವೆ. ಇಂತಹ ದಿಕ್ಕು, ಗತಿ ಮತ್ತು ವೇಗಗಳನ್ನು ನಿಯಂತ್ರಿಸುವ ಒಂದು ಗುಂಪು ಇದ್ದೇ ಇದೆ. ಎಲ್ಲವೂ ನಿರೀಕ್ಷೆಯಂತೆ ನಡೆಯದೇ ಹೋದರೂ ಬಹುಪಾಲು ಬದಲಾವಣೆಗಳು ಒಂದು ವರ್ಗದ ಹಿತಾಸಕ್ತಿಗೆ ಪೂರಕವಾಗಿ  ನಡೆಯುತ್ತಿರುವುದಂತೂ ಸತ್ಯ. ಇಂತಹ ಬದಲಾವಣೆಗಳ ವಿಸ್ತಾರ ಮತ್ತು ವ್ಯಾಪ್ತಿ ಬಹುಜನರ ಹಿತಾಸಕ್ತಿಗಳನ್ನು ಒಳಗೊಂಡು ಎಲ್ಲ ಜನವರ್ಗವನ್ನು ತಮ್ಮೊಟ್ಟಿಗೆ ಕರೆದುಕೊಂಡು ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅದಿಕಾರ ವಿಕೇಂದ್ರೀಕರಣ, ಪ್ರಜಪ್ರಭುತ್ವ ವ್ಯವಸ್ಥೆಯ ಆರೋಗ್ಯ ಪೂರ್ಣ ಬೆಳವಣಿಗೆ, ಸಮಾಜದ ಸ್ವಾಸ್ಥ್ಯ ಮತ್ತು ದೃಢತೆಯನ್ನು ನಿಯಂತ್ರಿಸುವ ಮತ್ತು ನಿರ್ಧರಿಸುವ ಮೂಲಧಾತುವಾಗಿರುವ ಶಿಕ್ಷಣ ಮತ್ತು ಆರೋಗ್ಯವನ್ನು ಎಲ್ಲರಿಗೆ ಕಡ್ಡಾಯವಾಗಿ ವಿತರಿಸುವ ವ್ಯವಸ್ಥೆ ಮಾನವ ಹಕ್ಕು ರಕ್ಷಣೆ, ಇತ್ಯಾದಿಗಳು ಅತ್ಯಗತ್ಯ. ಮಾರುಕಟ್ಟೆ ಆಧಾರಿತ ವ್ಯವಸ್ಥೆಯಾಗಿರಬಹುದು ಅಥವಾ ಸರಕಾರ ನಿಯಂತ್ರಿಸುವ ವ್ಯವಸ್ಥೆಯಾಗಿರಬಹುದು. ಆದರೆ ಅದು ಮಾನವ ಕಲ್ಯಾಣ ಕೇಂದ್ರೀತ ವ್ಯವಸ್ಥೆಯಾಗಿರುವುದು ಅತ್ಯಂತ ಪ್ರಮುಖವಾಗಿದೆ. ಈಗ ಆಗಿರುವ ಸುಧಾರಣೆ ಈ ಉದ್ದೇಶದಿಂದ ಎಷ್ಟು ಹತ್ತಿರ ಅಥವಾ ದೂರವಿದೆ ಎನ್ನುವುದರ ಆಧಾರದ ಮೇಲೆ ಆರ್ಥಿಕ ಸುಧಾರಣೆಯ ಮೌಲ್ಯಮಾಪನ ಆಗಬೇಕಿದೆ.

ತನ್ನ ವ್ಯಾಪಾರಿ ಉದ್ದೇಶದ ಈಡೇರಿಕೆಗೆ ಸರಿಹೊಂದುವ ರೀತಿಯಲ್ಲಿ ಜಾಗತಿಕ ವಿದ್ಯಮಾನಗಳನ್ನು ವಿನ್ಯಾಸಗೊಳಿಸುವ ಅಮೆರಿಕದ ಅರ್ಥವ್ಯವಸ್ಥೆಯ ಹಿಂದಿರುವುದು ಬೃಹತ್‌ ಪ್ರಮಾಣದ ಖಾಸಗೀ ಉದ್ಯಮವಲಯ. ಅಮೆರಿಕದ ಇಡೀ ವ್ಯವಸ್ಥೆಯ ಮೇಲೆ ಇಂತಹ ಖಾಸಗಿ ಉದ್ಯಮ ವಲಯ ಹೊಂದಿರುವ ಪ್ರಭಾವ ಗಾಢವಾದದ್ದು. ಮುಕ್ತ ಮಾರುಕಟ್ಟೆ, ಖಾಸಗೀಕರಣ ಮತ್ತು ಯಾವುದೇ ರೀತಿಯ ಸರಕಾರದ ಹಸ್ತಕ್ಷೇಪವನ್ನು ಖಡಾ ಖಂಡಿತವಾಗಿ ನಿರಾಕರಿಸುವ ಅಲ್ಲಿನ ಖಾಸಗೀ ಉದ್ಯಮವಲಯ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ವಾಣಿಜ್ಯದ ವಿಶ್ವರೂಪದರ್ಶನವನ್ನೇ ನೀಡಿದೆ. ಈ ಕಾರಣದಿಂದಾಗಿಯೇ ಅಮೆರಿಕ ಇಂತಹ ಉದ್ಯಮ ವಲಯದ ಹಿತಾಸಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಕಾಪಾಡುವ ಕೆಲಸವನ್ನು ಬಹಳ ಶ್ರದ್ಧೆಯಿಂದಲೇ ಮಾಡುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಪೌರೋಹಿತ್ಯದಲ್ಲಿ ನಡೆಯುತ್ತಿರುವ ಜಾಗತೀಕರಣದ ನಂತರ ವಿಶ್ವಾದ್ಯಂತ ಬಂಡವಾಳದ ಹರಿವು ತಂತ್ರಜ್ಞಾನದ ನೆರವಿನೊಂದಿಗೆ ವೇಗ ಪಡೆಯುತ್ತಾ ಮನಬಂದಲ್ಲಿಗೆ ಹರಿಯುತ್ತಿದೆ.

೧೯೭೦ರ ದಶಕದ ಅಂತ್ಯದಿಂದ ಆರಂಭಗೊಂಡ ಹಣಕಾಸು ಸಲಕರಣೆಗಳ ಮೂಲಕ ಬೆಳೆಯಲಾರಂಭಿಸಿದ ಅರ್ಥವ್ಯವಸ್ಥೆ ನೈಜ ಉತ್ಪಾದನೆಯ ನಿರೀಕ್ಷೆಯನ್ನಾಧರಿಸಿ ಸಂಪತ್ತು ಸೃಷ್ಟಿಸುವ ಕೆಲಸವನ್ನು ಮಾಡಲಾರಂಭಿಸಿತು. ಈ ಕಾರಣದಿಂದಾಗಿಯೇ ಬಹಳ ದೊಡ್ಡ ಮಟ್ಟದಲ್ಲಿ ಹಣಕಾಸು ಸಂಸ್ಥೆಗಳು ಹುಟ್ಟಿ ಬೆಳೆಯಲಾರಂಭಿಸಿದವು. ಹಣಕಾಸು ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ನಿರ್ವಹಿಸಲು ದೊಡ್ಡ ಪ್ರಮಾಣದ ವಿಮಾ ಕಂಪನಿಗಳೂ ಅಸ್ತಿತ್ವಕ್ಕೆ ಬಂದವು.

ಆರ್ಥಿಕ ಉದಾರೀಕರಣದ ನಂತರದಲ್ಲಿ ಅಮೆರಿಕ ಪ್ರಣೀತ ಉತ್ಪಾದನಾ ವ್ಯವಸ್ಥೆ ಲಾಭಗಳಿಸಿದ್ದು ಸತ್ಯವೇ. ಆದರೆ ಲಾಭದ ಅತಿಯಾಸೆಯಿಂದ ವಿಶ್ವಾಸಾರ್ಹತೆ ಮತ್ತು ಸಾಲ ಹಿಂತಿರುಗಿಸಲು ಶಕ್ತರಲ್ಲದವರಿಗೂ ಅತ್ಯಧಿಕ ಪ್ರಮಾಣದಲ್ಲಿ ಸಾಲ ನೀಡಲು ಹಣಕಾಸು ಸಂಸ್ಥೆಗಳು ತುದಿಗಾಲಲ್ಲಿ ನಿಂತವು. ಇಂತಹ ಒಂದು ಬೆಳವಣಿಗೆ ಪ್ರಮುಖವಾಗಿ ಗೃಹಸಂಬಂಧಿ ವಲಯದಲ್ಲಿ ಹೆಚ್ಚಾಗಿ ಕಂಡುಬಂದಿತು. ಲಾಭದ ಆಸೆಯಿಂದ ಪ್ರಪಂಚದ ಬೇರೆ ಬೇರೆ ಕಡೆಯಿಂದ ಅಮೆರಿಕದ ಅರ್ಥವ್ಯವಸ್ಥೆಗೆ ಹಣ ಹರಿದು ಬರಲಾರಂಭಿಸಿತು. ಗೃಹ ನಿರ್ಮಾಣವನ್ನಾಧರಿಸಿದ ಇತರ ವಲಯದ ಉದ್ಯಮಗಳೂ ಬಹಳ ವೇಗವಾಗಿ ಬೆಳೆಯುತ್ತವೆ ಎಂದು ನಿರೀಕ್ಷಿಸಲಾಯಿತು. ಇದರ ಪರಿಣಾಮವಾಗಿ ಶೇರುಪೇಟೆಯಲ್ಲಿ ಶೇರುಗಳ ಬೆಲೆಯಲ್ಲಿ ಏರಿಕೆ ದಾಖಲಾಯಿತು. ಲಾಭದ ನಿರೀಕ್ಷೆಯಿಂದ ಬಹಳಷ್ಟು ಜನ ಜೀವನದ ಉಳಿತಾಯವನ್ನು ಶೇರು ಪತ್ರಗಳಲ್ಲಿ ಹೂಡಲಾರಂಭಿಸಿದರು. ಮೂಲಭೂತವಾಗಿ ವಿಶ್ವಾಸಾರ್ಹವಲ್ಲದ ಮತ್ತು ಸಾಲ ಮರುಪಾವತಿಸುವ ಆರ್ಥಿಕ ಚೈತನ್ಯವಿಲ್ಲದವರಿಗೆ ನೀಡುವ ಸಾಲಕ್ಕೆ ಮೂಲ ಕಾರಣವೇ ಅಧಿಕ ಬಡ್ಡಿಯದರ. ಅಧಿಕ ಬಡ್ಡಿಯ ಸೆಳೆತವೇ ಒಂದು ಗಂಡಾಂತರಕಾರಿ ಕ್ರಮ. ಯಾಕೆಂದರೆ ಒಂದೊಮ್ಮೆ ಸಾಲ ಪಡೆದವನು ಮರುಪಾವತಿಸಲು ಸಾಧ್ಯವಿಲ್ಲದಿದ್ದರೆ ಅತ್ತ ಬಡ್ಡಿಯೂ ಇಲ್ಲ; ಇತ್ತ ನೀಡಿದ ಸಲದ ಮೂಲವೂ ಇಲ್ಲವಾಗುವಂತಹ ಅಪಾಯವಿದೆ. ಇಂತಹ ಅಪಾಯದ ಕುರಿತಂತೆ ಎಚ್ಚರಿಸುವ ಶಾಸನಾತ್ಮಕ ಕ್ರಮಗಳು ಮುಕ್ತ ಅರ್ಥವ್ಯಸ್ಥೆಯಲ್ಲಿ ಬಿಗುವು ಕಳೆದುಕೊಂಡಿರುವ ಕಾರಣ ಸಲೀಸಾಗಿ ಕೇಳಿದವರಿಗೆಲ್ಲ ಸಾಲ ನೀಡಲಾಯಿತು. ಇನ್ನೊಂದೆಡೆ ಸಾಲ ನೀಡಿಕೆಗೆ ಸಂಬಂಧಿಸಿದಂತೆ ಉಂಟಾಗಬಹುದಾದ ವಿಪತ್ತುಗಳನ್ನು ನಿಭಾಯಿಸುವ ಹೊಣೆಯನ್ನು ವಿಮಾ ಕಂಪನಿಗಳಿಗೆ ವಹಿಸಲಾಯಿತು. ಇನ್ನೊಂದು ಪ್ರಮುಖ ವಿಸ್ಮಯವೆಂದರೆ ಸಾಲ ನೀಡಿಕೆಗೆ ಆಧಾರವಾಗಿ ನೀಡಲಾಗುವ ಅಡಮಾನ ಪತ್ರಗಳನ್ನು ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಹಣ ಹೂಡಲು ಮುಕ್ತವಾಗಿರಿಸಲಾಯಿತು. ಇದರ ಒಟ್ಟು ಪರಿಣಾಮವೆಂದರೆ ಸಾಲ ನೀಡುವಾಗ ಸಾಲದ ಮರುಪಾವತಿಸುವ ಸಾಮರ್ಥ್ಯ ಮತ್ತು ಸಾಲದ ಬಗೆಗಿನ ಭದ್ರತೆಯ ವಿಷಯಗಳಿಗಿಂತ ಲಾಭದ ಪ್ರಶ್ನೆ ಮುಖ್ಯವಾಯಿತು. ಮಾತ್ರವಲ್ಲ ಸಾಲಕ್ಕೆ ನೀಡಿದ ಭದ್ರತೆಯನ್ನು (ಭದ್ರತೆಯೇ ಅಭದ್ರತೆಯ ನೆರಳಲ್ಲಿದ್ದುಕೊಂಡು) ಆಸ್ತೀಕರಿಸಿ ಹೂಡಿಕೆದಾರರಿಗೆ ಬಿಕರಿಮಾಡಲಾಯಿತು. ಲಂಗು ಲಗಾಮಿಲ್ಲದ ಬಂಡವಾಳ ವಿಸ್ತರಣೆಯ ಈ ಕ್ರಮ ಮೊದಮೊದಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಂಡುಬಂತಾದರೂ ಒಂದು ಹಂತದ ನಂತರ ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಬೆಳೆಯಲಾರಂಭಿಸಿದವು. ಇಂತಹ ಒಂದು ಬೆಳವಣಿಗೆ ೨೦೦೭ರ ನಂತರ ಆರಂಭವಾಗಿ ೨೦೦೮-೨೦೦೯ರ ಮಧ್ಯ ಭಾಗದವರೆಗೆ ಅತ್ಯಂತ ತೀವ್ರವಾಗಿ ಅಮೆರಿಕದ ಅರ್ಥವ್ಯವಸ್ಥೆಯನ್ನು ಅಲುಗಾಡಿಸಿ ಬಿಟ್ಟಿತು.

ಸುಲಭವಾಗಿ ಸಾಲ ದೊರೆಯುತ್ತದೆಂದು ಸಾಲ ಪಡೆದವರೆಲ್ಲರೂ ನಿರೀಕ್ಷಿತ ರೀತಿಯಲ್ಲಿ ಸಂಪಾದನೆ ಮಾಡಲು ಅಸಾಧ್ಯವಾದಾಗ ಸಾಲ ಮರುಪಾವತಿಸಲು ಸೋತರು. ಸಾಲ ವಾಪಸು ಬರದಿದ್ದಾಗ ಬ್ಯಾಂಕುಗಳಲ್ಲಿ ನಗದು ಕಡಿಮೆಯಾಗಿ ಹೋಯಿತು. ಠೇವಣಿದಾರರ ಹಣ ಹಿಂತಿರುಗಿಸುವುದು ಬ್ಯಾಂಕುಗಳಿಗೆ ಕಷ್ಟವಾಯಿತು. ಅತ್ತ ಇಂತಹ ವಿಪತ್ತು ನಿರ್ವಹಿಸುವ ಹೊಣೆ ಹೊತ್ತ ವಿಮಾ ಕಂಪನಿಗಳು ನಿರೀಕ್ಷಿಸಿದಕ್ಕಿಂತ ಅಧಿಕ ಪ್ರಮಾಣದಲ್ಲಿ ಗಂಡಾಂತರಗಳು ಸಂಭವಿಸಿದ್ದರಿಂದ ಸಾಲ ನೀಡಿದ ಬ್ಯಾಂಕುಗಳ ವಿಪತ್ತು ನಿರ್ವಹಿಸಲು ವಿಮಾ ಕಂಪನಿಗಳಿಗೆ ಸಾಧ್ಯವಾಗಲಿಲಲ. ಇನ್ನೊಂದೆಡೆ ಸಾಲವಾಧಾರಿತ (ಆಸ್ತೀಕರಿಸಿದ) ಅಥವಾ ಅಡಮಾನ ಪತ್ರದ ಆಧಾರಿತ ಹೂಡಿಕೆ ಪತ್ರಗಳ ಮುಖ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿ ಶೇರುಮಾರುಕಟ್ಟೆ ಕುಸಿತಕಂಡಿತು. ಒಂದಕ್ಕೊಂದು ಬೆಸೆದುಕೊಂಡು ಅಂತರ್‌ಸಂಬಂಧಿಯಾದ ಆರ್ಥಿಕ ಚಟುವಟಿಕೆಗಳು ಕುಸಿಯತೊಡಗಿತು. ಮುಕ್ತ ಅರ್ಥವ್ಯವಸ್ಥೆಯ ಪ್ರಬಲ ಪ್ರತಿಪಾದಕನಾಗಿದ್ದ ಅಮೆರಿಕ ಕೊನೆಗೂ ಸಾರ್ವಜನಿಕರ ತೆರಿಗೆ ಹಣವನ್ನು ಉಪಯೋಗಿಸಿ ಮರ್ಯಾದೆ ಉಳಿಸಿಕೊಳ್ಳಬೇಕಾದ ಪ್ರಸಂಗ ಬಂದಿತು. ಇನ್ನೊಂದೆಡೆ ಚೀನಾ ಮತ್ತು ಭಾರತದಂತಹ ಏಷ್ಯಾದ ರಾಷ್ಟ್ರಗಳು ಇಂತಹ ಆರ್ಥಿಕ ಕುಸಿತದ ನಡುವೆಯೂ ಸಾವರಿಸಿಕೊಂಡು ಮುನ್ನಡೆಯುತ್ತಿವೆ.

ಆರ್ಥಿಕ ಕುಸಿತದಿಂದ ಭಾರತದೊಳಗೆ ಬರುವ ಬಂಡವಾಳದ ಒಳಹರಿವು ಕಡಿಮೆಯಾಗಿದೆ. ಕೊಲಲಿ ರಾಷ್ಟ್ರಗಳಿಂದ ಬರುತ್ತಿರುವ ವಿದೇಶಿ ವಿನಿಮಯದಲ್ಲಿ ಇಳಿಕೆಯಾಗಿದೆ. ಅಲ್ಲದೆ ರಫ್ತು ಆಧಾರಿತ ಉದ್ದಿಮೆಗಳನ್ನು ಅವಲಂಭಿಸಿದ ಕೈಗಾರಿಕೆಗಳ ವಹಿವಾಟಿನಲ್ಲಿ ಕುಸಿತ ಕಂಡಿದೆಯಾದರೂ ಭಾರತವು ಪ್ರಪಾತಕ್ಕೆ ಉರುಳಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿರುವ ವೈವಿಧ್ಯತೆ. ಇಂದಿಗೂ ಶೇ. ೭೨ರಷ್ಟು ಜನ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಡತನವನ್ನು ಒಪ್ಪಿಕೊಂಡು ಬದುಕುವುದು ಭಾರತದ ಜನರಿಗೆ ಅಮೆರಿಕನ್ನರಷ್ಟು ಕಷ್ಟವಲ್ಲ. ಪರಿಣಿತರ ಎಲ್ಲಾ ಲೆಕ್ಕಾಚಾರಗಳನ್ನು ಹೊರಗಿಟ್ಟು, ಶೇರುಪೇಟೆಯ ‘ಗೂಳಿ’ ಮತ್ತು ‘ಕರಡಿಗಳು’ ಭಾರತದ ಅರ್ಥವ್ಯವಸ್ಥೆಗೆ ಪ್ರವೇಶಿಸಲಾಗಲಿಲ್ಲ. ಈ ವ್ಯವಸ್ಥೆಯ ಹೃದಯ ಭಾಗಗಳಿಗೆ ಪ್ರಾದೇಶಿಕ ಮತ್ತು ಪಾರಂಪರಿಕ ಉತ್ಪಾದನಾ ವ್ಯವಸ್ಥೆಯ ಸೊಗಡಿರುವುದನ್ನು ಕಾಣಬಹುದು. ಇದನ್ನು ಇದುವರೆಗೆ ಒಂದು ವಿಭಿನ್ನ ದೌರ್ಬಲ್ಯವೆಂದು ಪರಿಗಣಿಸಲಾಗಿತ್ತು. ಆದರೆ ಇಂತಹ ವಿಭಿನ್ನತೆ ದೌರ್ಬಲ್ಯವಲ್ಲ, ಬದಲಿಗೆ ಅದು ಭಾರತದ ಸಾಮರ್ಥ್ಯವೆನ್ನುವುದನ್ನು ಸದ್ಯದ ಆರ್ಥಿಕ ಕುಸಿತ ಕಲಿಸಿಕೊಟ್ಟಿದೆ. ಭಾರತೀಯ ಬ್ಯಾಂಕುಗಳು ಅನುಸರಿಸುತ್ತಿರುವ ನಿಯಮಗಳು, ಸಾಲಿಗರ ವಿಶ್ವಾಸಾರ್ಹತೆಗೆ ನೀಡುತ್ತಿರುವ ಪ್ರಾಮುಖ್ಯ, ಹಣದ ಉಪಯೋಗ ಮತ್ತು ಉತ್ಪಾದಕತೆಯ ಮಹತ್ವ, ನಮ್ಮ ಬ್ಯಾಂಕುಗಳನ್ನು ರಕ್ಷಿಸಿವೆ. ಪ್ರಾಯಶಃ ಮೊದಲನೆಯ ಬಾರಿಗೆ ಪಶ್ಚಿಮದ ದೇಶಗಳಿಗೆ ಪೂರ್ವದ ಕಡೆಯೂ ನೋಡಬೇಕಿದೆ, ಅಲ್ಲಿಯೂ ಕಲಿಯಬೇಕಿರುವ ಕೆಲವು ಅಂಶಗಳಿವೆ ಎಂದು ಮನವರಿಕೆಯಾಗಿದೆ. ಅಭಿವೃದ್ಧಿ ಎನ್ನುವುದು ಏಕಮುಖವಾದುದಲ್ಲ, ಬದಲಿಗೆ ಇದರೊಳಗೆ ಬಹುರೂಪಿ ಚಿಂತನೆಗಳೂ ಇರಲು ಸಾಧ್ಯ ಮತ್ತು ಅಭಿವೃದ್ಧಿ ಕುರಿತ ಅನೇಕಾಂತ ವಾದಕ್ಕೆ ಸದ್ಯದ ಆರ್ಥಿಕ ಕುಸಿತ ಮುನ್ನುಡಿಯಾಗಬಹುದು.

ಭಾರತೀಯ ಅರ್ಥವ್ಯವಸ್ಥೆಯ ಮೂಲ ವಿನ್ಯಾಸದ ಹಿಂದಿರುವ ಗ್ರಹೀತಗಳು, ಅದನ್ನು ರೂಪಿಸಿದ ಅಗತ್ಯ ಮತ್ತು ಅನಿವಾರ್ಯತೆಗಳನ್ನು ವಿಶ್ಲೇಷಿಸುವುದು ಭವಿಷ್ಯದ ದೃಷ್ಟಿಯಿಂದ ತುರ್ತಾಗಿ ಜರುಗಬೇಕಾದ ಕ್ರಮವಾಗಿದೆ. ಭಾರತಕ್ಕೆ ತನ್ನದೇ ಆದ ಚಾರಿತ್ರಿಕ ಪರಂಪರೆಗಳಿವೆ, ಭಾರತದೊಳಗೆ ನೂರಾರು ಆರ್ಥಿಕ ವಿನ್ಯಾಸಗಳಿವೆ ಮತ್ತು ಅವುಗಳನ್ನು ಆಧರಿಸಿದ ಸಾಂಸ್ಕೃತಿಕ ಆಯಾಮಗಳಿವೆ. ಬಹುಮಟ್ಟಿಗೆ ಭಾರತ ಉಪಖಂಡದ ಇಂತಹ ವಿಭಿನ್ನ ಸಂಸ್ಕೃತಿಗಳಿಗೆ ಜೀವಧಾರೆಯಾಗಿ ಭೂಮಿಯನ್ನು ಅವಲಂಭಿಸಿದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿವೆ. ಪಶ್ಚಿಮದ ಯಾಜಮಾನ್ಯವಿರುವ ಶಿಕ್ಷಣ, ತತ್ವಜ್ಞಾನಗಳ ಹಿಂದಿರುವ ರಾಜಕೀಯ ಉದ್ದೇಶಗಳನ್ನು ಸರಿಯಾಗಿ ಗ್ರಹಿಸುವ ಮೂಲಕ ಅರಿವಿನ ಹೊಸ ಪರಂಪರೆಯನ್ನು ಆರಂಭಿಸಬೇಕಿದೆ. ಇಂತಹ ಕೆಲಸ ಆರಂಭವಾಗಬೇಕಾದರೆ ಭಾರತದ ಸಂವಿಧಾನಿಕ ಚೌಕಟ್ಟಿನಲ್ಲಿ ಸಮುದಾಯದ ಭಾಗೀದಾರಿಕೆಯೊಂದಿಗೆ ಈ ಕುರಿತಂತೆ ಸಂವಾದಗಳು ನಡೆಯಬೇಕಿದೆ. ಇಂತಹ ಸಂವಾದದ ಅಗತ್ಯವನ್ನು ಮನಗಾಣುವುದು ಮತ್ತು ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುವ ಚೈತನ್ಯವನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲಿನ ಕೆಲಸವಾಗಿದೆ.