ದ್ವಿತೀಯ ಜಾಗತಿಕ ಯುದ್ಧದ ನಂತರದಲ್ಲಿ ನಿರ್ವಸಹಾತೀಕರಣದ ಹಾಗೂ ಅದರ ಫಲರೂಪಿಯಾಗಿ ಏಷ್ಯಾ, ಅಫ್ರಿಕಾ ಖಂಡಗಳಲ್ಲಿ ಅನೇಕ ‘ರಾಜ್ಯ’ಗಳ ಸೃಷ್ಟಿಯ ಪ್ರಕ್ರಿಯೆಗಳು ಆರಂಭವಾದವು. ಈ ರಾಜ್ಯಗಳನ್ನು ಲ್ಯಾಟಿನ್‌ ಅಮೆರಿಕ ಖಂಡದ ರಾಜ್ಯಗಳೊಡನೆ ಸಂಕುಲಿಸಿ ‘ತೃತೀಯ ಜಗತ್ತು’ ಎಂದು ಕರೆಯಲಾಯಿತು. ಕೈಗಾರೀಕರಣಗೊಂಡ ಅಥವಾ ಮುಕ್ತ ಮಾರುಕಟ್ಟೆಯನ್ನು ಹೊಂದಿದ ಯುರೋಪಿನ ರಾಜ್ಯಗಳಿಂದ ರೂಪಿತಗೊಂಡ ‘ಪ್ರಥಮ ಜಗತ್ತು’ ಅಲ್ಲದ, ಕೇಂದ್ರೀಕೃತ ಯೋಜಿತ ಸಾಮ್ಯವಾದೀ ‘ದ್ವಿತೀಯ ಜಗತ್ತೂ’ ಅಲ್ಲದ ರಾಜ್ಯಗಳನ್ನು ಈ ಪರಿಕಲ್ಪನೆ ಒಳಗೊಳ್ಳುತ್ತದೆ. ಹೀಗಾಗಿ ಈ ದೇಶಗಳು ಕೈಗೊಳ್ಳಬಹುದಾದ ಅಭಿವೃದ್ಧಿ ಪಥದ ಬಗೆಗಿನ ಪ್ರಶ್ನೆಗಳು ಸಮಾಜ ವಿಜ್ಞಾನಿಗಳಿಗೆ ಒಂದು ಪ್ರಮುಖ ಸವಾಲೂ, ವಿವಾದದ ವಿಷಯವೂ ಆದವು. ೧೯೬೦ರ ದಶಕದ ಮುನ್ನಾ ವರ್ಷಗಳಲ್ಲಿ ‘ಪರಾವಲಂಬನತ್ವ’ ಮತ್ತು ‘ಅಧೀನ ಅಭಿವೃದ್ಧಿ’* ಎಂಬ ಸೈದ್ಧಾಂತಿಕ ಮಾದರಿಗಳು ತೃತೀಯ ಜಗತ್ತಿನ ರಾಷ್ಟರಗಳನ್ನು ಅದ್ಯಯನ ಮಾಡುವುದಕ್ಕೆ ಒಂದು ಶಕ್ತಿಯುತವಾದ ವಿಶ್ಲೇಷಣಾ ನೆಲೆಗಟ್ಟಾಗಿ ತೊಡಗಿಕೊಂಡವು. ಆಗ ಚಾಲ್ತಿಯಲ್ಲಿದ್ದ ‘ಆಧುನೀಕರಣ’ ಮತ್ತು ‘ರಾಜಕೀಯಾತ್ಮಕ ಅಭಿವೃದ್ಧಿ’ ಸಿದ್ಧಾಂತಗಳಿಗೆ ಈ ಮಾದರಿಗಳು ಸವಾಲಾಗಿ ನಿಂತವು. ಪ್ರಥಮ ಜಗತ್ತಿನ ಪ್ರಸ್ತುತ ಇರುವಿಕೆಯು ತೃತೀಯ ಜಗತ್ತಿನ ಭವಿಷ್ಯತ್ತಿನ ಕನ್ನಡಿ ಎಂದು ಪ್ರತಿಪಾದಿಸುತ್ತಿದ್ದ ಈ ಎರಡು ಸಿದ್ಧಾಂತಗಳನ್ನು ಪ್ರಶ್ನಿಸಿದ ಈ ಚೌಕಟ್ಟುಗಳು ತೃತೀಯ ಜಗತ್ತಿನ ವಾಸ್ತವದ ವಿಭಿನ್ನ ಚಿತ್ರಣವನ್ನು ನೀಡಿದವು. ‘ಅಭಿವೃದ್ಧಿಯ’ ಪರಿಕಲ್ಪನೆಗೆ ವಿರುದ್ಧವಾಗಿ ‘ಅಧೀನ ಅಭಿವೃದ್ಧಿ’ ಎಂಬ ಪರಿಕಲ್ಪನೆಯನ್ನು ಮುಂದಿಟ್ಟು, ಅದರಿಂದ ಉದ್ಭವಿಸುವ ‘ಪರಾವಲಂಬನತ್ವ’ದ ಪ್ರಕ್ರಿಯೆಯ ವಿಶ್ಲೇಷಣೆಯಲ್ಲಿ ಈ ಮಾದರಿಗಳು ತೊಡಗಿಕೊಂಡವು. ೧೯೮೦ರ ದಶಕದ ಮಧ್ಯಭಾಗದಿಂದ ಈ ಎರಡೂ ಪರಿಕಲ್ಪನೆಗಳು ಸೈದ್ಧಾಂತಿಕ ಮಾದರಿಗಳು ಅನೇಕ ವಿಮರ್ಶೆ/ಟೀಕೆಗಳನ್ನು ಎದುರಿಸುತ್ತಿವೆಯಾದರೂ ಅವುಗಳ ಕೇಂದ್ರ ನೆಲೆಗಳ ಪುನರಾವಲೋಕನವನ್ನು ಎರಡು ಕಾರಣಗಳಿಗಾಗಿ ಪ್ರಸ್ತುತ ಲೇಖನವು ಕೈಗೊಳ್ಳುತ್ತವೆ. ಒಂದು ಈ ಸಿದ್ಧಾಂತಗಳು ಎತ್ತಿರುವ ಹಲವು ಪ್ರಶ್ನೆಗಳು ಹಾಗೂ ಕಾಳಜಿಗಳು ಪೂರ್ತಿಯಾಗಿ, ಅದರಲ್ಲೂ ಭಾರತದಲ್ಲಿ, ಚರ್ಚೆಗೆ ಒಳಪಟ್ಟಿಲ್ಲವೆಂಬುದು; ಎರಡು-ತೃತೀಯ ಜಗತ್ತನ್ನು ಅರ್ಥೈಸುವಲ್ಲಿ ಈ ಸಿದ್ಧಾಂತಗಳು ಇಂದಿಗೂ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲವೆಂಬುದು. “ಸ್ವಕೇಂದ್ರಿತ” (ಸ್ವಾಯತ್ತ) ಅಭಿವೃದ್ಧಿ ಎಂಬ ಪರಿಕಲ್ಪನೆಯನ್ನು ಕೇಂದ್ರವಾಗಿರಿಸಿಕೊಂಡು ಈ ಲೇಖನವು ‘ಪರಾವಲಂಬನತ್ವ’ ಸಿದ್ಧಾಂತಕಾರರು ತೃತೀಯ ಜಗತ್ತಿನ ಅಭಿವೃದ್ಧಿ/ಅಧೀನ ಅಭಿವೃದ್ಧಿಯ ಸುತ್ತ ಹುಟ್ಟುಹಾಕಿದ ಚರ್ಚೆ, ವಾದ ವಿವಾದಗಳ ಪುನರಾವಲೋಕನವನ್ನು ಮಾಡುತ್ತದೆ.

‘ಅಧೀನ ಅಭಿವೃದ್ಧಿ’ ಮತ್ತು ‘ಪರಾವಲಂಬನತ್ವ’ ಎಂಬುವು ಏಕಮಾತ್ರ ಏಕರೂಪಿಯಾದಂತಹ ಸಿದ್ಧಾಂತ ಅಥವಾ ಮಾದರಿಗಳಲ್ಲ. ಇವು ಹಿರಿದಾದ ವ್ಯಾಪ್ತಿಯುಳ್ಳ ಒಂದು ವಾದ ಸರಣಿಯಾಗಿರುವುದರಿಂದ ಈ ಚರ್ಚೆಯಲ್ಲಿ ತೊಡಗಿದ/ತೊಡಗಿರುವಂತಹ ವಿದ್ವಾಂಸರನ್ನು ಒಂದು ‘ಸೈದ್ಧಾಂತಿಕ ಧಾರೆ’ಗೆ ಸೇರಿದವರೆಂದು ವರ್ಣಿಸಬಹುದಷ್ಟೆ. ಈ ವಿಚಾರಧಾರೆಯಲ್ಲಿ ಕೆಲವು ಮೂಲಭೂತ ಪರಿಕಲ್ಪನೆಗಳು ಗಟ್ಟಿಯಾಗಿ ಉಳಿದಿದ್ದರೂ, ಉಳಿದವು ಕಾಲಾಂತರದಲ್ಲಿ ಬದಲಾಗುತ್ತಾ ಬಂದಿವೆ. ೧೯೬೦-೭೦ರ ದಶಕಗಳಲ್ಲಿ ತೃತೀಯ ಜಗತ್ತಿನ ವಿದ್ವಾಂಸರಷ್ಟೆ ಅಲ್ಲದೆ ರಾಜಕೀಯ ನಾಯಕರುಗಳೊಡನೆಯೂ ನೇರ ಸಂವಾದಕ್ಕಿಳಿದ ವಸಾಹತೋತ್ತರ ದೇಶಗಳ ಅಭಿವೃದ್ಧಿ ಪಥದ ಬಗೆಗಿನ ಈ ಸಿದ್ಧಾಂತಗಳು ಅಲ್ಲಿನ ವಾಸ್ತವತೆಯ ವರ್ಣನೆ, ವಿಶ್ಲೇಷಣೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪರಿಹಾರೋಪಾಯಗಳನ್ನೂ ಸೂಚಿಸಿದವು. ವಿವಿಧ ಸಮಾಜ ವಿಜ್ಞಾನಗಳಿಂದ ತಮ್ಮ ಪರಿಕಲ್ಪನಾ ಬತ್ತಳಿಕೆಯನ್ನು ಸಮೃದ್ಧಪಡಿಸಿಕೊಂಡ ಈ ಸಿದ್ಧಾಂತಗಳು ಬಲಪಂಥೀಯ ವಾದಿಯಾದ ‘ಆಧುನೀಕರಣ’ದಿಂದ ಹಿಡಿದು ಎಡಪಂಥೀಯವಾದಿಯಾದ ‘ಮಾರ್ಕ್ಸ್‌ವಾದ’- ಈ ಎಲ್ಲದರಿಂದಲೂ ಅನೇಕ ವಿಚಾರಗಳನ್ನು ತನ್ನದಾಗಿಸಿಕೊಂಡಿವೆ. ಹೀಗಾಗಿ ಈ ಸಿದ್ಧಾಂತಗಳು ಸ್ವಾಯತ್ತ ಉಪಶಾಸ್ತ್ರವಾಗಿ ತಮ್ಮನ್ನು ರೂಪಿಸಿಕೊಂಡಿದೆ ಎಂದು ಕೆಲವು ವಿದ್ವಾಂಸರು ವಾದಿಸಿದ್ದಾರೆ.

‘ಪರಾವಲಂಬನತ್ವ’ ಸಿದ್ಧಾಂತವು ತನ್ನ ಬೇರುಗಳನ್ನು ಮಾರ್ಕ್ಸಿಸ್ಟ್‌ ಲೆನಿನಿಸ್ಟ್‌ ವಾದದ ಸಾಮ್ರಾಜ್ಯಶಾಹಿ ಕುರಿತಾದ ತತ್ವಗಳಲ್ಲೂ, ೧೯೩೦-೪೦ರ ದಶಕಗಳಲ್ಲಿ ಲ್ಯಾಟಿನ್‌ ಅಮೆರಿಕ ವಿದ್ವಾಂಸರು ನಡೆಸಿದ ಅಧ್ಯಯನಗಳಲ್ಲೂ ಹೊಂದಿದೆ. ತೃತೀಯ ಜಗತ್ತನ್ನು ವಿಶ್ಲೇಷಿಸುವ ಎರಡು ಬೌದ್ಧಿಕ ಧಾರೆಗಳು ಮಾರ್ಕ್ಸ್‌ ಹಾಗೂ ಲೆನಿನ್ನರಿಂದ ಬಂದಿರುವುದನ್ನು ಕಾಣಬಹುದು. ಮೊದಲನೆಯದು ಶಾಸ್ತ್ರೀಯ/ಸಾಂಪ್ರದಾಯಿಕ ಮಾರ್ಕ್ಸಿಸ್ಟ್‌ ಧೋರಣೆಯಲ್ಲಿ ತೃತೀಯ ಜಗತ್ತನ್ನು ಸಂಶೋಧನೆಗೊಳಪಡಿಸಿದುದು. ಎರಡನೆಯದು ಪಾಲ್‌ಬರಾನ್‌, ಸ್ಪೀಜಿ ಮುಂತಾದವರ ಅಧ್ಯಯನಗಳನ್ನು ಆಧರಿಸಿ, ತೃತೀಯ ಜಗತ್ತಿನ ಅಧೀನ ಅಭಿವೃದ್ಧಿ ಚಾರಿತ್ರಿಕವಾಗಿ ವಿಶಿಷ್ಟವಾದಂತಹ ಪ್ರಕ್ರಿಯೆಯಾದ್ದರಿಂದ ಅದರ ಅಧ್ಯಯನವೂ ವಿಶಿಷ್ಟವೇ ಆಗಿರಬೇಕೆಂದು ಪ್ರತಿಪಾದಿಸಿದುದು. ೧೯೩೦ರ ದಶಕದಲ್ಲಿ ಉಂಟದ ಆರ್ಥಿಕ ಹಿಂಜರಿತ ಲ್ಯಾಟಿನ್‌ಅಮೆರಿಕದ ಮೇಲೆ ಉಂಟುಮಾಡಿದ ಪ್ರಭಾವವು ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ತೃತೀಯ ಜಗತ್ತಿನ ಅವಲಂಬಿತ ಸ್ಥಿತಿಯನ್ನು ಎತ್ತಿ ತೋರಿದವು. ತೃತೀಯ ಜಗತ್ತನ್ನು ಬಣ್ಣಿಸುವಲ್ಲಿ ಅಶಕ್ತವೆಂದು ಪರಿಗಣಿತವಾಗಿದ್ದ ಹಾಬ್ಸನ್‌, ಲೆನಿನ್‌, ಬುಖಾರಿನ್‌ಮುಂತಾದವರ ಹಳೆಯ ಸಾಮ್ರಾಜ್ಯಶಾಹಿ ಸಿದ್ಧಾಂತಗಳಿಂದ ಲ್ಯಾಟಿನ್‌ಅಮೆರಿಕದಲ್ಲಿ ಅಧೀನ ಅಭಿವೃದ್ಧಿಯ ಬಗೆಗೆ ಎರಡು ವಿಚಾರಧಾರೆಗಳು ಹುಟ್ಟಿದವು. ರಾಷ್ಟ್ರವಾದಿ ಮತ್ತು ಕ್ರಾಂತಿಕಾರಿ. ಮೊದಲು ಬಂದ ರಾಷ್ಟ್ರವಾದಿ ವಿಚಾರಧಾರೆಯು ಯುದ್ಧಾನಂತರದಲ್ಲಿ ಹಾಗೂ ರೌಲ್‌ಪ್ರೆಬಿಶ್ಚನ ಸಿದ್ಧಾಂತಗಳಿಗೆ ಅನುವು ಮಾಡಿಕೊಟ್ಟು ‘ಆಮದಿಗೆ ಬದಲಾಗಿ ಕೈಗಾರೀಕರಣ’ವನ್ನು ಅನುಮೋದಿಸಿತು. ರಾಜ್ಯವು ಮಧ್ಯಸ್ಥಿಕೆ ವಹಿಸಿಕೊಳ್ಳುವಂತಿದ್ದಾಗ ‘ಆಮದಿಗೆ ಬದಲಾಗಿ ಕೈಗಾರೀಕರಣ’ ತತ್ವವು ‘ಅಂಚಿ’ನ ರಾಷ್ಟರಗಳನ್ನು ಸ್ವಾಯತ್ತ ಆರ್ಥಿಕ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದೆಂದು ರಾಷ್ಟ್ರೀಯವಾದವನ್ನು ಬಳಸಿಕೊಂಡು ಈ ಚಿಂತನೆಯು ಪ್ರತಿಪಾದಿಸಿತು. ಲ್ಯಾಟಿನ್‌ ಅಮೆರಿಕವನ್ನು ಅಭಿವೃದ್ಧಿಗೊಳಿಸುವಲ್ಲಿ ಐಎಸ್‌ಐ ಹಾಗೂ ರಾಷ್ಟ್ರವಾದಿ ವಿಚಾರಧಾರೆಗಳ ಸೋಲು ಕ್ರಾಂತಿಕಾರಿ ವಿಚಾರಧಾರೆಗೆ ಹಾದಿ ಕಲ್ಪಿಸಿತು. ಎ. ಜಿ. ಫ್ರ್ಯಾಂಕ್‌ ಈ ಧಾರೆಯ ಅತ್ಯಂತ ಪ್ರಸಿದ್ಧ ಪ್ರತಿಪಾದಲಕ. ಬಂಡವಾಳಶಾಹಿಯು ಅಂಚಿನ ರಾಷ್ಟ್ರಗಳ ಅಭಿವೃದ್ಧಿಯ ಹಾದಿಯಲ್ಲಿ ಋಣಾತ್ಮಕ ಪ್ರಭಾವವನ್ನು ಬೀರಿ ಅಧೀನ ಅಭಿವೃದ್ಧಿಯ ಸೃಷ್ಟಿಗೆ ಕಾರಣವಾಗುತ್ತದೆಂದು ವಾದಿಸಿ, ಕ್ರಾಂತಿಯ ಮೂಲಕ ಸೃಷ್ಟಿಗೊಳ್ಳುವ ಸಮಾಜವಾದಿ ರಾಜ್ಯವೊಂದೇ ಈ ರಾಷ್ಟ್ರಗಳಿಗೆ ಉಳಿದಿರುವ ಹಾದಿಯೆಂದು ಈ ವಿಚಾರಧಾರೆ ಪ್ರತಿಪಾದಿಪಾದಿಸುತ್ತದೆ. ಈ ವಿಚಾರಧಾರೆಯನ್ನು ಹತ್ತು ಹಲವು ವಿದ್ವಾಂಸರು ಕೈಗೆತ್ತಿಕೊಂಡು ಸುಸಂಬದ್ಧ ಸಿದ್ಧಾಂತವನ್ನು ರೂಪಿಸಿ ಜಗತ್ತಿನ ಇತರ ಭಾಗಗಳಿಗೂ ಅನ್ವಯಿಸಿ ಅಧ್ಯಯನ ಮಾಡಿದರು.

‘ಪರಾವಲಂಬನತ್ವ’ ಸಿದ್ಧಾಂತದ ಉಗಮ ಹಾಗೂ ಬೆಳವಣಿಗೆಯನ್ನು ನಾವು ೧೯೬೦ರ ದಶಕದಿಂದ ಹಲವು ಹಂತಗಳಲ್ಲಿ ಗುರುತಿಸಬಹುದಾಗಿದೆ. ಬಲಪಂಥೀಯ ‘ಆಧುನೀಕರಣ’ ಮತ್ತು ಎಡಪಂಥೀಯ ‘ಮಾರ್ಕ್ಸ್‌ವಾದ’ ಇವೆರಡರ ಟೀಕೆಗಳಿಗೆ ಉತ್ತರವಾಗಿಯೂ, ವಸಾಹತೋತ್ತರ ಕಾಲದಲ್ಲಿ ತೃತೀಯ ಜಗತ್ತಿನಲ್ಲಿ ಆದ ಬದಲಾವಣೆಗಳಿಗೆ ಸಂವಾದಿಯಾಗಿಯೂ ಈ ಸಿದ್ಧಾಂತವು ಹಲವು ಬೆಳವಣಿಗೆಗಳನ್ನು ಕಂಡಿತು.

೧೯೬೦ರ ದಶಕದ ಮುನ್ನಾವರ್ಷಗಳಲ್ಲಿನ ಮೊದಲ ಹತವನ್ನು ಮಾರ್ಕ್ಸ್ ವಾದ ಹಾಗೂ ಆಧುನೀಕರಣ ಸಿದ್ಧಾಂತಗಳಿಗಿಂತ ಭಿನ್ನವಾಗಿ ನಿರ್ವಚಿತಗೊಳ್ಳಲು ಹಾಗೂ ನವ ಮಾರ್ಕ್ಸ್‌ವಾದವೆಂಬ ಪರ್ಯಾಯ ದೃಷ್ಟಿಕೋನವನ್ನು ಸೃಷ್ಟಿಸಲು ಮಾಡಿದ ಪ್ರಯತ್ನಗಳಿಂದಾಗಿ ಗುರುತಿಸಬಹುದಾಗಿದೆ. ಈ ದೃಷ್ಟಿಕೋನವನ್ನು ಸೃಷ್ಟಿಸಲು ಮಾಡಿದ ಪ್ರಯತ್ನಗಳಿಂದಾಗಿ ಗುರುತಿಸಬಹುದಾಗಿದೆ. ಈ ದೃಷ್ಟಿಕೋನಕ್ಕೆ ವಿಶಿಷ್ಟವಾದ ಹಲವು ಮೂಲಭೂತ ಪರಿಕಲ್ಪನೆಗಳನ್ನು ಚರ್ಚೆಗಳ ಮೂಲಕ ಸಂಬಂಧಿತ ವಿದ್ವಾಂಸರು ಈ ಹಂತದಲ್ಲಿ ರೂಪಿಸಿದರು.

೧. ಜೋಹಾನ್‌ ಗಾಲ್ಟೂಂಗನ ‘ಸಾಮ್ರಾಜ್ಯಶಾಹಿ ರಾಚನಿಕ ಸಿದ್ಧಾಂತ’ವನ್ನು (Structural Theory of Imperialism) ಬಳಸಿಕೊಂಡು, ವಿಶ್ವವನ್ನು ‘ಕೇಂದ್ರ’ ಅಥವಾ ‘ಮಹಾನಗರಿ’ (Metropole) ಮತ್ತು ‘ಅಧೀನ ಅಭಿವೃದ್ಧಿಗೊಂಡ ಅಂಚಿನ ಪ್ರದೇಶಗಳು’ (Under Developed Peripheral Regions) ಎಂದು ವಿಂಗಡಿಸಲಾಯಿತು. ಜಾಗತಿಕ ಆರ್ಥಿಕತೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದ ಕೈಗಾರಿಕಾ ಕ್ರಾಂತಿಯ ನಂತರ ಮೂಡಿಬಂದ ‘ಅಭಿವೃದ್ಧಿಯ ಮೂರು ರೇಖೆ’ಗಳಿಗೆ ಈ ವಿಂಗಡಣೆಯ ಜಾಡನ್ನು ಶೋಧಿಸಬಹುದು. ಮೊದಲನೆಯ ರೇಖೆ ಪಶ್ಚಿಮ ಯೂರೋಪಿನ ಮೇಲೆ ಹಾದು ಕೈಗಾರಿಕಾ ಬಂಡವಾಳಶಾಹಿಯನ್ನು ಸೃಷ್ಟಿಸಿದರೆ, ಎರಡನಯದು ಮೂಲಭೂತವಾಗಿ ಇದೇ ಕೈಗಾರಿಕಾ ಬಂಡವಾಳಶಾಹಿಯನ್ನು ಸೃಷ್ಟಿಸಿದರೆ, ಎರಡನೆಯದು ಮೂಲಭೂತವಾಗಿ ಇದೇ ಕೈಗಾರಿಕಾ ಆರ್ಥಿಕತೆಯನ್ನು ಹೊಂದಿದ್ದ ಪ್ರದೇಶಗಳ ಮೇಲೆ ಇಲ್ಲಿ ಬಂಡವಾಳಶಾಹಿಯ ನುಸುಳುವಿಕೆ ಸೃಷ್ಟಿಸಿದ್ದು ಭಿನ್ನ ಫಲಿತಾಂಶವನ್ನು ಅಧೀನ ಅಭಿವೃದ್ಧಿ ಹಾಗೂ ಅದರ ಫಲಸ್ವರೂಪವಾಗಿ ‘ಮಹಾನಗರಿ’ಯ ಮೇಲಿನ ‘ಪರಾವಲಂಬನತ್ವ’. ಈ ಮೂರನೆಯ ರೇಖೆಯ ಪರಾವಲಂಬನತ್ವ ವಿದ್ವಾಂಸರ ಮೂಲವಸ್ತುವಾಯಿತು.

೨. ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಎಲ್ಲ ವಿದ್ವಾಂಸರ ಸಾಮಾನ್ಯರ ವಿಶ್ಲೇಷಣಾ ಚೌಕಟ್ಟೆಂದರೆ ‘ರಾಜಕೀಯ ಆರ್ಥಿಕತೆ’ . ಇದು ಕೇವಲ ರಾಜಕೀಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಪರಸ್ಪರ ಸಂವಾದ/ಮುಖಾಮುಖಿ ಮಾತ್ರವಲ್ಲ (ಅನೇಕ ವಿದ್ವಾಂಸರು ಈ ಸೀಮಿತ ಅರ್ಥದಲ್ಲೇ ಉಪಯೋಗಿಸುತ್ತಿದ್ದರೂ); ಅಥವಾ ರಿಕಾರ್ಡೊ/ಆಡಮ್‌ಸ್ಮಿತ್‌ರ ಶಾಸ್ತ್ರೀಯ ರಾಜಕೀಯ ಅರ್ಥಶಾಸ್ತ್ರವೂ ಅಲ್ಲ. ಇದು “ಮಾರ್ಕ್ಸ್‌ಮತ್ತು ಮಾರ್ಕ್ಸಿಸ್ಟರ ಚಿಂತನೆಗಳನ್ನು ಮೂಲಭೂತವಾಗಿ ಅವಲಂಬಿಸಿರುವ ಸೈದ್ಧಾಂತಿಕ ಚೌಕಟ್ಟು. ಇದು ಉತ್ಪನ್ನದ ಸಂಘಟನೆ, ನಿಯಂತ್ರಣಾಶಕ್ತಿಯ ರಚನೆ, ಸಾಮಾಜಿಕ ರಚನಾಸ್ವರೂಪಗಳ ಪರಸ್ಪರ ಛೇದನ ಸಂವಾದವನ್ನೂ ‘ಪರಕೀಯಗೊಳಿಸುವಿಕೆ’ (Alienation) ಮತ್ತು ತಾತ್ವಿಕತೆಯ (Ideology) ಪ್ರಾಮುಖ್ಯವನ್ನೂ ಕೇಂದ್ರವಸ್ತುವನ್ನಾಗಿ ಇರಿಸಿಕೊಂಡದ್ದು. ಮೇಲಾಗಿ ‘ರಾಜಕೀಯ’ ಮತ್ತು ‘ಆರ್ಥಿಕತೆ’ ಇವೆರಡೂ ಚಾರಿತ್ರಿಕವಾಗಿ, ಅಶಾಸ್ತ್ರೀಯವಾಗಿ ರೂಪುಗೊಂಡದ್ದು ಎಂದು ಪರಿಗಣಿಸುತ್ತದೆ.” ಈ ಸೈದ್ಧಾಂತಿಕ ಚೌಕಟ್ಟಿನ ಒಳಗೆ ತೃತೀಯ ಜಗತ್ತಿನ ರಾಜ್ಯಗಳ ಅಧ್ಯಯನಗಳು ನಡೆದದ್ದು. ಒಟ್ಟಾರೆ ನೋಡಿದಾಗ, ಈ ಎಲ್ಲಾ ಅಯಯನಗಳು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ “ಅಂಚಿನ ಅಭಿವೃದ್ಧಿ” ಕುರಿತಾದ ನವಮಾರ್ಕ್ಸ್ ವಾದಿಗೆ ಸಿದ್ಧಾಂತದ ಸೃಷ್ಟಿಗೆ ಕೊಡುಗೆ ಸಲ್ಲಿಸಿದವು.

ಆಧುನೀಕರಣ ಸಿದ್ಧಾಂತದ ವಿಮರ್ಶೆಯಿಂದ ಮೂಡಿಬಂದ ಮತ್ತೊಂದು ಲಕ್ಷಣವೆಂದರೆ ‘ಯುರೋಪ್‌ಕೇಂದ್ರಿತ’ ಮಾದರಿಗಳ ನಿರಾಕರಣೆ. ಈ ನಿರಾಕರಣೆಯ ಸಂವಾದಿಯಾದ ಹೊಸ ‘ಜಾಗತಿಕ ವ್ಯವಸ್ಥೆ’ ಸಿದ್ಧಾಂತಗಳು ಮತ್ತು ‘ಆಫ್ರಿಕಾ ಕೇದ್ರಿತ,’ ‘ಏಷ್ಯಾ ಕೇಂದ್ರಿತ,’ ‘ಲ್ಯಾಟಿನ್‌ಅಮೆರಿಕ ಕೇಂದ್ರೀತ’ ಮಾದರಿಗಳ ರಚನೆಯಾದದ್ದು. ಅಂಚಿನ ಪ್ರದೇಶಗಳ ನಿರ್ದಿಷ್ಟ ಚಾರಿತ್ರಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಲಕ್ಷಣಗಳನ್ನು ಗಮನಕ್ಕೆ ತಂದುಕೊಂಡದ್ದು, ಅವುಗಳಿಗೆ ತಮ್ಮ ವಿಶ್ಲೇಷಣಾ ಚೌಕಟ್ಟಿನಲ್ಲಿ ಮೂಲಭೂತ ಸ್ಥಾನ ನೀಡಿದ್ದು ಈ ಮಾದರಿಗಳ ವಿಶೇಷ.

ತೃತೀಯ ಜಗತ್ತನ್ನು ‘ಹಿಂದುಳಿದ,’ ‘ಜಡ’ ಹಾಗೂ ‘ಸಾಂಪ್ರದಾಯಿಕ’ ಎಂದು ಅರ್ಥೈಸಿ ಬಂಡವಾಳಶಾಹಿಯ ಒಳನುಗ್ಗುವಿಕೆಯನ್ನು ಪರಿಹಾರವನ್ನಾಗಿ ಸೂಚಿಸಿದ “ಕೆಳ ಜಿನುಗುವಿಕೆ” (Trickle Down), “ದ್ವಿ-ಆರ್ಥಿಕತೆ” (Dual Economics) ಮುಂತಾದ ಸಿದ್ಧಾಂತಗಳನ್ನು ತಿರಸ್ಕರಿಸಿ ಎ. ಜಿ. ಫ್ರ್ಯಾಂಕ್‌ ‘ಅಧೀನ ಅಭಿವೃದ್ಧಿ’ಯನ್ನು ಪರಿಭಾವಿಸಿಕೊಂಡರು. ತೃತೀಯ ಜಗತ್ತಿನ ಪ್ರಸ್ತುತ ಆರ್ಥಿಕಸ್ಥಿತಿ ಎಲ್ಲಾ ಆರ್ಥಿಕ ವ್ಯವಸ್ಥೆಗಳೂ ಸಾಗಿ ಹೋಗಲೇಬೇಕಾದ ಒಂದು ಚಾರಿತ್ರಿಕ ಘಟ್ಟವನ್ನು ಪ್ರತಿನಿಧಿಸುತ್ತದೆಂಬ ಹಾಗೂ ಇಂದಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ಹಿಂದೊಮ್ಮೆ ಈ ಘಟ್ಟದಲ್ಲಿ ಇದ್ದುವೆಂದು ಪ್ರತಿಪಾದಿಸುತ್ತಿದ್ದ ಸಿದ್ಧಾಂತವನ್ನು ತಿರಸ್ಕರಿಸಿ ತೃತೀಯ ಜಗತ್ತಿನ ಪ್ರಸ್ತುತ ಸ್ಥಿತಿಯು ಒಂದು ವಿಶಿಷ್ಟ ಚಾರಿತ್ರಿಕ ವಿದ್ಯಮಾನವೆಂದೂ ವಸಾಹತೀಕರಣ/ಬಂಡವಾಳೀಕರಣವು ತೃತೀಯ ಜಗತ್ತಿನ ಒಳನುಗ್ಗಿರುವುದರಿಂದ ಸೃಷ್ಟಿಗೊಂಡ ವಿರೂಪಿತ, ದಿಗ್ಭಂಧಿತ ಬೆಳವಣಿಗೆ ಎಂದೂ ಫ್ರ್ಯಾಂಕ್‌ಗುರುತಿಸುತ್ತಾರೆ. ಯಾರ ಬಂಡವಾಳಶಾಹಿ ಶಕ್ತಿಯು ಕೇಂದ್ರದಲ್ಲಿ ಅಭಿವೃದ್ಧಿಯನ್ನು ಸೃಷ್ಟಿಸುತ್ತದೋ ಅದೇ ಶಕ್ತಿಯು ಅಂಚಿನಲ್ಲಿ ಅಧೀನ ಅಭಿವೃದ್ಧಿಯನ್ನು ಸೃಷ್ಟಿಸುತ್ತದೆ ಅಂದರೆ ಈ ಎರಡೂ ಸ್ಥಿತಿಗಳು ಒಂದೇ ಬಂಡವಾಳಶಾಹಿ ವ್ಯವಸ್ಥೆಯ ಪರಿಣಾಮಗಳು. ಹೀಗಾಗಿ ‘ಅದೀನ ಅಭಿವೃದ್ಧಿ’ಗೆ ಕಾರಣ ಜಾಗತಿಕ ಆರ್ಥಿಕತೆಯಿಂದ ಪ್ರತ್ಯೇಕವಾಗಿ ಇದ್ದದ್ದಲ್ಲ; ಬದಲಾಗಿ ಅದರೊಳಗೆ ಅಸಮಾನವಾಗಿ ಒಂದಾದದ್ದು/ಸಂಯೋಜಿತಗೊಂಡದ್ದು. ಆದ್ದರಿಂದ ತೃತೀಯ ಜಗತ್ತಿನ ಅಭಿವೃದ್ಧಿ ಪಥವು ಮೂಲಭೂತವಾಗಿ ಬೇರೆಯಾದದ್ದು; ಅಭಿವೃದ್ಧಿಗೆ ಇರುವುದು ಏಕಮಾತ್ರ ಮಾರ್ಗ ಎನ್ನುವುದು ತಪ್ಪು ಕಲ್ಪನೆ.

೧೯೬೦ರ ದಶಕದ ಮಧ್ಯಭಾಗದಿಂದ ೧೯೭೦ರ ದಶಕದ ಮುನ್ನಾ ವರ್ಷಗಳನ್ನು ಎರಡನೇ ಹಂತವೆಂದು ಗುರುತಿಸಬಹುದಾಗಿದೆ. ಫ್ರ್ಯಾಂಕ್‌, ಇಮ್ಮ್ಯಾನ್ಯುಯೆಲ್‌ ವಾಲರ್‌ಸ್ಟೈನ್‌ ಹಾಗೂ ಸಮೀರ್‌ ಅಮೀನ್‌ ಮುಂತಾದವರ ಅಂಚಿನ ಪ್ರದೇಶಗಳ ಅಧೀನ ಅಭಿವೃದ್ಧಿ ಕುರಿತಾದ ಅನೇಕ ಚಾರಿತ್ರಿಕ ಅಧ್ಯಯನಗಳು ಹೊರಬಂದದ್ದು ಈ ಹೊಂತದಲ್ಲಿಯೇ. ಈ ವಿಚಾರಧಾರೆಯ ‘ಸುವರ್ಣ ಕಾಲ’ ಎಂದು ಗುರುತಿಸಬಹುದಾದ ಈ ಹಂತದಲ್ಲಿ ಪರಾವಲಂಬನತ್ವ ಸಿದ್ಧಾಂತಕ್ಕೆ ವಿಶ್ವವ್ಯಾಪಿ ಮನ್ನಣೆ ಸಿಕ್ಕಿ ಆಧುನೀಕರಣ ಸಿದ್ಧಾಂತದ ಏಕಾಧಿಪತ್ಯಕ್ಕೆ ಧಕ್ಕೆಯಾಯಿತು. ‘ಅಧೀನ ಅಭಿವೃದ್ಧಿ’ ಪರಿಕಲ್ಪನೆಯನ್ನು ಲ್ಯಾಟಿನ್‌ ಅಮೆರಿಕದ ಸಂದರ್ಭದಲ್ಲಿರಿಸಿ ಫ್ರ್ಯಾಂಕ್‌, ೧೯ ಹಾಗೂ ೨೦ನೆಯ ಶತಮಾನದ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ತೆಯನ್ನು ಹಿಡಿತದಲ್ಲಿರಿಸಿಕೊಂಡಿದ್ದ ವಸಾಹತುಸಾಹಿ ಹಾಗೂ ನವವಸಾಹತುಶಾಹಿ ವ್ಯವಸ್ಥೆಗಳು ಹೇಗೆ ಬ್ರೆಜಿಲ್‌, ಅರ್ಜೆಂಟೈನಾ ಮುಂತಾದ ದೇಶಗಳ ಒಳನುಗ್ಗಿ ಅವುಗಳ ಆರ್ಥಿಕತೆಯನ್ನು ‘ಪರಾವಲಂಬಿತ’ಗೊಳಿಸಿದವು ಎಂಬುದನ್ನು ಚಿತ್ರಿಸುತ್ತಾರೆ. ಸಕ್ಕರೆ, ಮರ, ಖನಿಜ, ಕಡೆಗೆ ಕಾಫಿ ಇತ್ಯಾದಿ ಎಲ್ಲ ಉತ್ಪನ್ನಗಳ ಮಾರುಕಟ್ಟೆ ಅಪಾರ ಏರುಪೇರುಗಳನ್ನು ಕಂಡರೂ ಅವು ಯೂರೋಪಿನಲ್ಲಾದಂತೆ, ಆಂತರಿಕ ಮಾರುಕಟ್ಟೆಯ ಸುತ್ತ ಬೆಳೆದ ಪ್ರಗತಿಶೀಲ ಕೈಗಾರಿಕಾ ಬೂರ್ಜ್ವಾಸಿಯ ಬೆಳವಣಿಗೆಗೆ ದಾರಿ ಮಾಡಿಕೊಡಲಿಲ್ಲ. ಬದಲಾಗಿ ವಸಾಹತುಶಾಹಿ ಸನ್ನಿವೇಶದಲ್ಲಿ ರಫ್ತು ಆಧಾರಿತ ಅಭಿವೃದ್ಧಿ ಹಾಗೂ ವಿದೇಶಿ ಬಂಡವಾಳದ ಅವಲಂಬನೆ ಈ ರಾಜ್ಯಗಳ ಮೂಲ ಲಕ್ಷಣಗಳಾಗಿ ಬೆಳೆದು ವಸಾಹತೋತ್ತರ ಕಾದಲ್ಲಿಯೂ ಹಾಗೆಯೇ ಉಳಿದವು. ಇದರಿಂದಾಗಿ ಅಧೀನ ಅಭಿವೃದಧಿಯು ಕರಾವಳಿ ಒಳನಾಡುಗಳು ಮತ್ತು ದೂರದ ಒಳಪ್ರದೇಶಗಳ ನಡುವೆ ‘ಕೇಂದ್ರ / ಮಹಾನಗರಿ-ಉಪಗ್ರಹ’ಗಳ (Metropole-Satellite) ಸರಪಣಿಯಾದ ಸಂಬಂಧವನ್ನು ಬೆಳೆಸಿತು. ಈ ಸಂಬಂಧವು ಹುಟ್ಟುಹಾಕಿದ್ದು ಊಳಿಗಮಾನ್ಯ ವ್ಯವಸ್ಥೆಯನ್ನಲ್ಲ, ಅಧೀನ ಅಭಿವೃದ್ಧಿಯನ್ನು. ಇದರ ಪ್ರಮುಖ ರೂಪ ಬೃಹತ್  ಎಸ್ಟೇಟ್‌ಗಳು ಆಗಿತ್ತು. ಕೇಂದ್ರವು ದುರ್ಬಲಗೊಂಡಾಗ ಅಂಚಿನಲ್ಲಿ ಅಷ್ಟಿಷ್ಟು ಅಭಿವೃದ್ಧಿ ಕಂಡುಬರುತ್ತಾದರೂ (೧೯೩೦ರ ಆರ್ಥಿಕ ಹಿಂಸರಿತದ ಸಂದರ್ಭದಲ್ಲಾದಂತೆ), ಒಮ್ಮೆ ಕೇಂದ್ರವು ಶಕ್ತಿಯನ್ನು ಒಗ್ಗೂಡಿಸಿಕೊಂಡೊಡನೆಯೇ ತನ್ನ ಕಪಿಮುಷ್ಟಿಯನ್ನು ಪುನರ್‌ಸ್ಥಾಪಿಸುತ್ತದೆ ಎಂದು ಫ್ರ್ಯಾಂಕ್‌ ವಾದಿಸುತ್ತಾರೆ. ಅವರ ಪ್ರಕಾರ ವಿದೇಶಿ ಬಂಡವಾಳವು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಪ್ರದೇಶಗಳೇ ಇಂದು ಅತ್ಯಂತ ಅರೆ ಅಭಿವೃದ್ಧಿಗೊಂಡವುಗಳು. ಇದರಂತೆ ಇದರ ವಿರುದ್ಧವೂ ಅಷ್ಟೇ ಸತ್ಯ.

ಎರಡನೇ ಮಹಾಯುದ್ಧದವರೆವಿಗೂ ಸ್ವಾಯತ್ತ ಅಭಿವೃದ್ಧಿ ಕೇವಲ ಪಶ್ಚಿಮ ಯುರೋಪಿಗೆ ಮಾತ್ರ ಸೀಮಿತವಾಗಿದ್ದು, ತದನಂತರ ಮೂಡಿಬಂದ ಜಾಗತಿಕ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯು ಅಂತಹ ಬೆಲವಣಿಗೆಯನ್ನು ವಸಾಹತುಗಳಲ್ಲಿ ಅಡ್ಡಿಪಡಿಸಿ ಕುಂಠಿತ ಅಥವಾ ವಿಕೃತಗೊಳಿಸಿತೆಂದು ಮಾರ್ಕ್ಸಿಸ್ಟ್‌ವಿದ್ವಾಂಸರು ಭಾವಿಸಿದ್ದರು. ಇಸಿಎಲ್‌ಇ (ECLE) ಸುಧಾರಣಾ ವಿಚಾರಧಾರೆ ಮತ್ತು ಐ.ಎಸ್.ಐ. (ISI)ಗಳ  ಸೋಲು ಕೂಡ ಈ ವಾದವನ್ನೇ ಪುಷ್ಟೀಕರಿಸಿದ್ದವು. ಈ ಸಂದರ್ಭದಲ್ಲಿ ಫ್ರ್ಯಾಂಕ್‌‘ಗತಿರಾಹಿಸ್ಯ’ (Stagnationist) ಸಿದ್ಧಾಂತವನ್ನು ಮಂಡಿಸಿದರು. ಈ ಸಿದ್ಧಾಂತದ ಪ್ರಕಾರ ಅಂತರರಾಷ್ಟ್ರೀಯ ಶ್ರಮವಿಭಜನಾ ಮಾದರಿಯಲ್ಲಿ ಅಧೀನ ಅಭಿವೃದ್ಧಿಯ ದೇಶಗಳು ಕಚ್ಚಾವಸ್ತುಗಳ ನಿರಂತರ ಪೂರೈಕೆದಾರರಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ.

ಇತ್ತೀಚಿನ ಒಂದು ಗ್ರಂಥದಲ್ಲಿ ಈ ಚಾರಿತ್ರಿಕವಾದ ಸರಣಿಯನ್ನು ಫ್ರ್ಯಾಂಕ್‌ ಏಷಿಯಾ ಖಂಡಕ್ಕೆ ಅಳವಡಿಸಿದ್ದಾರೆ. ಅದಿನ ಅಭಿವೃದ್ಧಿಯ ಬೇರುಗಳನ್ನು ಅಧ್ಯಯನ ಮಾಡುವುದಕ್ಕಾಗಿ ೧೫-೧೬ನೆಯ ಶತಮಾನಗಳತ್ತ ದೃಷ್ಟಿಹಾಯಿಸಲಾಗಿದೆ. ೧೪೦೦-೧೮೦೦ರ ಅವಧಿಯ ಜಾಗತಿಕ ಅಭಿವೃದ್ಧಿ ಇತಿಹಾಸವು ಏಷ್ಯಾದ ಅದರಲ್ಲೂ ಭಾರತ ಮತ್ತು ಚೀನಾಗಳ ಸಾಪೇಕ್ಷ ಆರ್ಥಿಕ ಪ್ರಾಬಲ್ಯವನ್ನೂ ಯುರೋಪಿನ ನಿರ್ಬಲತೆಯನ್ನೂ ಬಳಕಿಗಿಡುತ್ತದೆ. ಮುಖ್ಯವಾಗಿ ತನ್ನ ಹೆಚ್ಚು ದಕ್ಷ, ಕಡಿಮೆ ಖರ್ಚಿನ ವಸ್ತ್ರ ಕೈಗಾರಿಕೆ ಹಾಗೂ ಕಾಳುಮೆಣಸಿನ ರಫ್ತಿನ ಆಧಾರದ ಮೇಲೆ ಭಾರತವು ಈ ಅವಧಿಯಲ್ಲಿ ಯುರೋಪಿನೊಡನೆ ಕೆಲಮಟ್ಟಿಗೆ ಪಶ್ಚಿಮ ಏಷಿಯಾದೊಡನೆ ಬ್ಯಾಲೆನ್ಸ್‌ ಆಫ್‌ ಟ್ರೇಡ್‌ ಸರ್‌ಪ್ಲಸ್‌ ಅನ್ನು ಹೊಂದಿತ್ತಲ್ಲದೆ ಮಧ್ಯಪೂರ್ವ ದೇಶಗಳೊಡನೆ ಅಕ್ಕಿ, ಬೇಳೆ, ತರಕಾರಿ, ಎಣ್ಣೆಗಳ ವ್ಯಾಪಾರದಲ್ಲಿ ಚಿನ್ನ-ಬೆಳ್ಳಿಗಳನ್ನು ಬದಲಾಗಿ ಪಡೆಯುತ್ತಿತ್ತು. ೧೪೦೦ರ ಸುಮಾರಿಗೆ ನಡೆದ ವಿಶ್ವವಿಸ್ತರಣೆಯಿಂದ ಮೊದಲಿಗೆ ಮತ್ತು ಹೆಚ್ಚಾಗಿ ಏಷ್ಯಾಗೆ ಸಹಾಯವಾಯಿತೇ ವಿನಃ  ಯೂರೋಪ್‌, ಆಫ್ರಿಕಾ, ಅಮೆರಿಕಾಗಳಿಗೆ ಅಲ್ಲ. ಆದರೆ ೧೭೫೦ರ ಸುಮಾರಿಗೆ ಏಷಿಯಾದ ದೀರ್ಘ, ಚಕ್ರೀಯ ಆರ್ಥಿಕ ವಿಸ್ತರಣೆಗೆ ಕೊನೆ ಬಂದು ಪಶ್ಚಿಮದ ಔನ್ನತ್ಯ ಆರಂಭಗೊಂಡಿತು. ಜನಸಂಖ್ಯಾ ಹೆಚ್ಚಳ ಹಾಗೂ ಆರ್ಥಿಕ ಸಾಮಾಜಿಕ ಧ್ರುವೀಕರಣದಿಂದಾಗಿ ಏಷಿಯಾದಲ್ಲಿ ಸಂಪನ್ಮೂಲಗಳ ಮೇಲಿನ ಒತ್ತಡ ಹೆಚ್ಚಿದಂತೆಲ್ಲಾ ಉತ್ಪತ್ತಿಯೂ ವ್ಯಾಪಾರವೂ ಕ್ಷಯಗೊಂಡು, ತಳದಲ್ಲಿ ಬೇಡಿಕೆ ಕಡಿಮೆಯಾಗಿ ಅಗ್ಗದ ಶ್ರಮದ ಲಭ್ಯತೆ ಹೆಚ್ಚಾಗುತ್ತಾ ಬಂತು. ಇಂತಹ ಸನ್ನಿವೇಶದಲ್ಲಿ ಕೆಲ ಯೂರೋಪಿಯನ್ನರು ಏಷಿಯಾದ ಆರ್ಥಿಕತೆಯ ಹೆಗಲೇರುವಲ್ಲಿ ಸಫಲರಾದರು. ಮುಂದೆ ಕಾಣಬಂದ ನೂತನ ಕೈಗಾರೀಕರೀಕರಣಶೀಲ ಆರ್ಥಿಕತೆಗಳು ಕೈಗೊಂಡ ನೀತಿಗಳಾದ ಮೊದಲಿಗೆ ಐ.ಎಸ್‌.ಐ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ರಫ್ತಿಗೆ ಹೆಚ್ಚು ಹೆಚ್ಚು ಪ್ರಾಧಾನ್ಯ ಇವುಗಳನ್ನು ಇವರು ಅನುಸರಿದರು. ಅಂದಿನ ಸಂದರ್ಭಕ್ಕನುಗುಣವಾಗಿ ಜನಸಂಖ್ಯೆ ಸಂಪನ್ಮೂಲಗಳ ಬೇಡಿಕೆ ಸರಬರಾಜಿಗೆ ತಕ್ಕಂತೆ ಯೂರೋಪಿಯನ್ನರು ಅನೇಕ ಶ್ರಮವುಳಿಕೆಯ, ಶಕ್ತಿ ಉತ್ಪಾದನಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದರು. ಇವು ಅವರನ್ನು ಏಷ್ಯಾಗಿಂತ ಉತ್ತಮ ಸ್ಥಿತಿಯಲ್ಲಿರಿಸಿತು. ಮಾರ್ಕ್ಸ್‌ ಮತ್ತು ವೆಬರ್‌ರ ವಾದಗಳಿಗೆ ಪ್ರತಿಯಾಗಿ ಫ್ರ್ಯಾಂಕ್‌ರ ವಾದ ಹೀಗಿದೆ-ಜಾಗತಿಕ ಅಭಿವೃದ್ಧಿ ಇತಿಹಾಸದಲ್ಲಿ ಯೂರೋಪಿನ ಈ ಹೊಸ ಭಾಗವಹಿಸುವಿಕೆಯು ಜುಡಾಯಿಸಂ ಅಥವಾ ಗ್ರೀಸ್‌ನಿಂದ ಪೂರ್ವಾರ್ಜಿತವಾಗಿ ಪಡೆದಂತಹ ಯಾವುದೇ ಅಸಾಧಾರಣ ವೈಚಾರಿಕತೆಯಿಂದ ಸಾಧ್ಯವಾದದ್ದಲ್ಲ; ಅಷ್ಟೇ ಅಲ್ಲ, ಯೂರೋಪಿಯನ್ನರು ಬಂಡವಾಳಶಾಹಿಯನ್ನಾಗಲಿ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯನ್ನಾಗಲಿ ಸೃಷ್ಟಿಸಲೂ ಇಲ್ಲ. ಜಾಗತಿಕ ಆರ್ಥಿಕ ವ್ಯವಸ್ಥೆ ‘ಕೇಂದ್ರ’ವು ೧೯ನೆಯ ಶತಮಾನದ ಅಂತ್ಯಾನಂತರದವರೆವಿಗೂ ಪಾಶ್ಚಾತ್ಯ ದಿಕ್ಕಿಗೆ ಸಾಗಿರಲಿಲ್ಲ. ಫ್ರ್ಯಾಂಕ್‌ರ ಪ್ರಕಾರ ೧೭೫೭ರ ಹೊತ್ತಿಗಾಗಲೇ ಭಾರತದ ಹಿನ್ನಡೆ ಆರಂಭವಾಗಿ ಬಿಟ್ಟಿತ್ತು; ಇದು ಪಶ್ಚಿಮದ ಮುನ್ನಡೆಗೆ ಸಹಕಾರಿಯೂ ಆಯಿತು.

ಇಮ್ಯಾನ್ಯುಯೆಲ್‌ ವಾಲರ್‌ಸ್ಟೈನ್‌ರ ಪ್ರಮುಖ ಕೊಡುಗೆಯೆಂದರೆ ರಾಜ್ಯಗಳ ಒಳಗೆ ಮತ್ತು ನಡುವೆ ಅಸಮಾನತೆಯನ್ನು ಸೃಷ್ಟಿಸುವ ಮತ್ತು ಪುನರುತ್ಪಾದಿಸುವ ‘ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ’ಯ ಪರಿಕಲ್ಪನೆ ಹಾಗೂ ಅದರ ಘಟ್ಟಗಳ ಗುರುತಿಸುವಿಕೆ. ಫ್ರ್ಯಾಂಕ್‌ರಂತೆ ‘ಮಿಗುತಾಯ ಮೌಲ್ಯ’ (Surplus Value) ಹಾಗೂ ‘ವರ್ಗ’ಗಳಂತಹ ಮಾರ್ಕಿಸ್ಟ್‌ಸಿದ್ಧಾಂತಗಳನ್ನು ತಿರಸ್ಕರಿಸಿ, ವ್ಯಾಪಾರದ ಮೂಲಕ “ಅಸಮಾನ ವಿನಿಮಯ” ಎಂಬ ಅಘಿರಿ ಎಮ್ಯಾನ್ಯುಯೆಲ್‌ರ ಪರಿಕಲ್ಪನೆಯನ್ನು ಬಳಸುತ್ತಾರೆ. ವ್ಯಾಪಾರಾಧಾರಿತ ಆಧುನಿಕ ಜಾಗತಿಕ ವ್ಯವಸ್ಥೆಯು ತನ್ನ ವ್ಯಾಪ್ತಿ ವಿಸ್ತರಣೆಯಿಂದಾಗಿ ಬಂಡವಾಳಶಾಹಿ ಪೂರ್ವ ಸಾಮ್ರಾಜ್ಯಗಳನ್ನು ನಾಶ ಮಾಡಿ, ಇನ್ನಿತರ ಸಣ್ಣಪುಟ್ಟ ವ್ಯವಸ್ಥೆಗಳನ್ನು ತನ್ನೊಳಗೆ ಅರಗಿಸಿಕೊಳ್ಳುತ್ತ ‘ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ’ಯ ನಿರ್ಮಾಣಕ್ಕೆ ಕಾರಣವಾಯಿತು. ಅಸಮಾನ ವಿನಿಮಯದಿಂದಾಗಿ ‘ಅವಲಂಬಿತ ಬಂಡವಾಳಶಾಹಿ’ಯನ್ನು ಸೃಷ್ಟಿಸಿ ಕೇಂದ್ರವು ಮಿಗುತಾಯ ಮುಟ್ಟುಗೋಲನ್ನು ಸಾಧ್ಯವಾಗಿಸಿಕೊಳ್ಳುವುದೇ “ಬಲಿಷ್ಟ ರಾಜ್ಯ”ಗಳ ಶಕ್ತಿಯ ಮೂಲ. ಈ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ಅಂಚಿನ ನಡುವೆ ಒಂದು ಅಸಮಾನ ಅಂತರರಾಷ್ಟ್ರೀಯ ಶ್ರಮವಿಭಜನೆಯನ್ನು ಸೃಷ್ಟಿಸಿ ಈ ವ್ಯವಸ್ಥೆಗೊಳಪಟ್ಟ ಎಲ್ಲ ರಾಜ್ಯಗಳಿಗೂ ಒಂದು ಶ್ರೇಣೀಕೃತ ಸ್ಥಳವನ್ನು ನಿರ್ವಹಿಸುತ್ತದೆ. ವಾಲರ್‌ಸ್ಟೈನ್‌ ಈ ಮಾದರಿಯಲ್ಲಿ  ‘ಉಪ-ಅಂಚು’ ಎಂಬ ರಾಜ್ಯಗಳ ಪಂಗಡವನ್ನೂ ಸೇರಿಸುತ್ತಾರೆ. ಈ ರಾಜ್ಯಗಳು –ಭಾರತವೂ ಸೇರಿದಂತೆ ಹಿಂದೆ ಕೇಂದ್ರದ ಸ್ಥಾನದಲ್ಲಿದ್ದು ಈಗ ಹಿನ್ನಡೆ ಕಂಡಿರುವುಂಥವುಗಳೋ ಅಥವಾ ಈಗ ಮುನ್ನಡೆ ಕಾಣುತ್ತಿರುವ ಅಂಚಿನ ರಾಜ್ಯಗಳೋ ಆಗಿದ್ದು ಕೇಂದ್ರ ಹಾಗೂ ಅಂಚಿನ ನಡುವೆ “ಆಘಾತ ತಡೆ”ಗಳಾಗಿ (Buffer) ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯು ಸಂಪೂರ್ಣ ಧ್ರುವೀಕರಣಗೊಳ್ಳದಂತೆ ದೃಢಪಡಿಸುವ ಮಧ್ಯವರ್ತಿಗಳಾಗಿ ಪಾತ್ರವಹಿಸುತ್ತವೆ. ಈ ಸಿದ್ಧಾಂತಗಳನ್ನು ಆಫ್ರಿಕಾಕಕ್ಕೆ ಅನ್ವಯಿಸಿ, ಗುಲಾಮ ವ್ಯಾಪಾರ, ರಫ್ತು ಕೇಂದ್ರೀತ ಹಣದ ಬೆಳೆಗಳ ಉತ್ಪತ್ತಿ, ಖನಿಜಗಳ ಶೋಷಣೆ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಚಟುವಟಿಕೆಗಳಿಂದಾಗಿ ೧೯೯೦ರ ದಶಕದ ಸುಮಾರಿಗೆ ಆಫ್ರಿಕಾ ಖಂಡವು ಯೂರೋಪಿನ ‘ಹಿತ್ತಲಾಗಿ’ ಬಿಡಬಹುದೆಂದು ಇವರು ವಾದಿಸುತ್ತಾರೆ. ಇದಕ್ಕಿರುವ ಒಂದೇ ಪರ್ಯಾಯವೆಂದರೆ ಸಮಾಜವಾದಿ ಕ್ರಾಂತಿ.

ಅಂಚಿನ ಸಂಯೋಜನಾ ಪ್ರಕ್ರಿಯೆಯ ವಿಶ್ವೇಷಣೆಯನ್ನು ವಾಲರ್‌ಸ್ಟ್ರೈನ್‌ ಭಾರತೀಯ ಉಪಖಂಡಕ್ಕೂ ವಿಸ್ತರಿಸುತ್ತಾರೆ. ೧೭೫೦ರ ಹಿಂದೆ ಹಿಂದೂ ಮಹಾಸಮುದ್ರ ವಲಯವು ಯುರೋಪ್‌ ಕೇಂದ್ರಿತ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಪರಿಧಿಯಿಂದಾಚೆಯಿದ್ದು ೧೭೫೦-೧೮೫೦ರ ಅವಧಿಯಲ್ಲಿ ಈ ವ್ಯವಸ್ಥೆಯ ಹಿಡಿತಕ್ಕೆ ಇತರ ಅನೇಕ ವಲಯಗಳೊಡನೆ ಸಿಲುಕಿತು. ಈ ಸಂಯೋಜನಾ ಪ್ರಕ್ರಿಯೆಯು ಉತ್ಪನ್ನ ಪ್ರಕ್ರಿಯೆಗಳ ಪುನರ್‌ರಚನೆಯನ್ನು ಒಳಗೊಂಡಿತ್ತು. ಈ ಪುನರ್‌ರಚನೆಯ ಕರ್ತೃ ಯಾವುದೇ ವಸಾಹತುಶಾಹಿ ರಾಜ್ಯವಾಗಿರದೆ ಒಂದು ಸಾಮ್ರಾಜ್ಯಶಾಹಿ ವ್ಯಾಪಾರ ಸಂಸ್ಥೆಯಾಗಿದ್ದಿತು. ೧೭೫೦ರ ಪೂರ್ವದಲ್ಲಿ ಭಾರತವು ಯೂರೋಪಿನೊಡನೆ ದೀರ್ಘಾತರ ವ್ಯಾಪಾರದಲ್ಲಿ ಪ್ರಮುಖ ಪಾತ್ರಧಾರಿಯಾಗಿತ್ತೆಂಬ ಕೆ.ಎಂ. ಪಣಿಕ್ಕರ್‌ ಮುಂತಾದವರ ವಾದ ಅಥವಾ ೧೭೫೦ರ ನಂತರ ಭಾರತವು “ಸ್ವಾವಲಂಬಿ ಹಳ್ಳಿಗಳ” ತವರಿಗೆ ಬದಲಾಗಿ ಆ ಹೊತ್ತಿಗಾಗಲೇ “ಸ್ವದೇಶಿ ಬಂಡವಾಳಶಾಹಿ”ಯ ಅಖಾಡವಾಗಿತ್ತು ಎಂಬ ವಾದ-ಇವೆರಡಕ್ಕೂ ವಿರುದ್ಧ ದಿಕ್ಕಿನಲ್ಲಿ ವಾಲರ್‌ಸ್ಟ್ರೈನ್ ಸಾಗುತ್ತಾರೆ. ಇವರ ಪ್ರಕಾರ ೧೭೫೦ರ ನಂತರ ಭಾರತವು ಒಂದು ಗುಣಾತ್ಮಕವಾದ ಬದಲಾವಣೆಯನ್ನು ಕಾಣುತ್ತದೆ. ಅದು ಉತ್ಪನ್ನದಾರರ ಶೋಷಣೆಯನ್ನಾಧಿರಿಸಿದ ರಫ್ತಿಗಾಗಿ ಇಂಡಿಗೊ, ಕಚ್ಚಾ ರೇಷ್ಮೆ, ಒಪಿಯಮ್‌, ಕಚ್ಚಾ ಹತ್ತಿ ಇವೇ ಮುಂತಾದ ಹಣದ ಬೆಳೆಗಳ ವಿಸ್ತರಣೆ ಹಾಗೂ ಭೂಸುಂಕ ವ್ಯವಸ್ಥೆಯ ಮರು ಆಯೋಜನೆಗಳನ್ನು ಒಳಗೊಂಡಿತ್ತು. ಚೀನಾ ವ್ಯಾಪಾರ (ಚೈನಾ ಟ್ರೇಡ್‌) ಮತ್ತು ಫ್ರಾನ್ಸನೊಡನೆಯ ವೈರತ್ವ ಇವೇ ಮುಂತಾದ ಬಾಹ್ಯ ಕಾರಣಗಳಿಂದಾಗಿ ಸ್ಥಾಪನೆಗೊಂಡ ವಸಾಹತುಶಾಹಿ ರಾಜ್ಯ ಉಪಖಂಡದ ಮೇಲಿನ ಹಿಡಿತವನ್ನು ಕೇವಲ ಗಟ್ಟಿಗೊಳಿಸಿ ವಿಸ್ತರಿಸಿತಷ್ಟೆ.

ಸಮೀರ್‌ಮತ್ತು ಅಮೀನ್ ರ ವಿಚಾರಗಳು ಮೇಲಿನವಕ್ಕೆ ಬಹು ಹತ್ತಿರವಾಗಿದ್ದರೂ ಅವುಗಳಂತೆ ‘ಇದಮಿತ್ಥಂ’ ಎಂಬ ಪ್ರವೃತ್ತಿಯದ್ದಲ್ಲ. ಇದರಿಂದಾಗಿ ಅಮೀನ್ ರು ಎರಡನೇ ಹಾಗೂ ಮೂರನೇ ಹಂತಗಳ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಾ ಆಂತರಂಗಿಕ ಬದಲಾವಣೆಗಳ ಮೇಲೆ ಹೆಚ್ಚು ಒತ್ತು ನೀಡುತ್ತಾರೆ. ಫ್ರ್ಯಾಂಕ್ ರ ವಿಚಾರಗಳಿಗೆ ಬದಲಾಗಿ ಅಮೀನ್ ರು ಅಂಚಿನ ರಾಷ್ಟ್ರಮಿಮೋಚನಾ ಚಳವಳಿಗಳು, ವಸಾಹತುಶಾಹಿ ಹಾಗೂ ಪ್ರಾಥಮಿಕ ಉತ್ಪಾದನಾ ವ್ಯವಸ್ಥೆಯ ಶೋಷಣೆಯನ್ನು ಅವಲಂಬಿಸಿದ ಸಾಮ್ರಾಜ್ಯಶಾಹಿಯನ್ನು ಒಂದು ಸ್ವಾಯತ್ತ ಆರ್ಥಿಕ ಅಭಿವೃದ್ಧಿ ಪ್ರಾರಂಭವಾಗಬಹುದಾದಂತಹ ಅಂತರರಾಷ್ಟ್ರೀಯ ಶ್ರಮವಿಭಜನೆಯತ್ತ ಕೊಂಡೊಯ್ದವೆಂದು ವಾದಿಸುತ್ತಾರೆ. ತಮ್ಮ ನವವಸಹತುಶಾಹಿ ಕುರಿತಾದ ಚಿಂತನೆಯಲ್ಲಿ ‘ರಾಜ್ಯ’ ಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಅಂಮೀನ್ ರು ಘಾನ, ಐವರಿಕೋಸ್ಟ್ ಮುಂತಾದ ದೇಶಗಳು ಬೇರೆ ಬೇರೆ ಅಭಿವೃದ್ಧಿ ಪಥಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೇಗೆ ವಿಶಿಷ್ಟ ನವವಸಾಹತುಶಾಹಿ ಮಾದರಿಗಳ ಸೃಷ್ಟಿಗೆ ಕಾರಣವಾದವು ಎಂಬುದನ್ನು ಚಿತ್ರಿಸುತ್ತಾರೆ. ಆದರೂ ಈ ಬೆಳವಣಿಗೆಗಳ ಪರಿಣಾಮವಾಗಿ ಹುಟ್ಟಿದ ಕೈಗಾರಿಕೀಕರಣವು ಈ ವಲಯಗಳ ಕೈಗಾರಿಕಾ ಬೂರ್ಜ್ವಾಸಿಯನ್ನು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ “ಕಿರಿಯ ಪಾಲುದಾರ”ರನ್ನಾಗಷ್ಟೇ ಮಾಡಿ ಹಳೆಯ ವಸಾಹತುಶಾಹಿ ವ್ಯೆವಸ್ಥೆಗೇ ಹಿಂದಿರುಗುವಂತೆ ಮಾಡಿತು. ಹಳೆಯ ಉಳಿಗಮಾನ್ಯ ವ್ಯವಸ್ಥೆ ಮತ್ತು ದಲ್ಲಾಳಿ ಬಂಡವಾಳಶಾಹಿಗಳು ಸಾಮ್ರಾಜ್ಯಶಾಹಿಯಲ್ಲಿ ಹಿಡಿದಿದ್ದ ಜಾಗವನ್ನು ಈ ನೂತನ ಸ್ಥಳೀಯ ಬಂಡವಾಳದಾರರು ತುಂಬಿದರೇ ವಿನಹ ಈ ನೂತನ ವ್ಯವಸ್ಥೆಯ ಒಡೆಯರು ಇವರಾಗಲಿಲ್ಲ. ಅಂಚಿನ ರಾಜ್ಯಗಳು ಸ್ವಾಯತ್ತ ಅಭಿವೃದ್ಧಿಗೆ ಅಸಮರ್ಥವಾಗಿದ್ದು ಅವುಗಳ ಆಡಳಿತ ಗುಂಪುಗಳು-ರಾಜಕೀಯ ಅಥವಾ ಮಿಲಿಟರಿ-ಕೇವಲ ವಿದೇಶಿ ಪ್ರಭುತ್ವದ ಏಜೆಂಟರಂತೆ ವರ್ತಿಸುತ್ತವೆಂದು ಪರಾವಲಂಬನತ್ವ ಸಿದ್ಧಾಂತದ ಈ ಹಂತದಲ್ಲಿ ಭಾವಿಸಲಾಗಿತ್ತು.

ಭಾರತದಲ್ಲಿ ಈ ವಾದಸರಣಿ-ಅದರಲ್ಲೂ ಎರಡನೆ ಹಂತದ ಆಲೋಚನೆಗಳನ್ನು ಬಳಸಿಕೊಂಡವರಲ್ಲಿ ಇಬ್ಬರನ್ನು ಹೆಸರಿಸಬಹುದಾಗಿದೆ. ಎ. ಕೆ. ಬಾಗ್ಚಿಪಾಲ್ ಬರಾನ್ ರ  ವಿಚಾರಗಳನ್ನು ಬಳಸಿಕೊಂಡು ‘ಮಾಂದ್ಯತೆ’ ಎಂಬ ಪರಿಕಲ್ಪನೆಯನ್ನು ಏಷಿಯಾದ ಇಂಡೋನೇಷಿಯಾ, ಭಾರತ, ಚೀನಾ ರಾಷ್ಟ್ರಗಳ ಅಧೀನ ಅಭಿವೃದ್ಧಿಯನ್ನು ವಿಶ್ಲೇಷಿಸಲು ಅಳವಡಿಸಿಕೊಂಡಿದ್ದಾರೆ. ವಸಾಹತೀಕರಣದ ಅವದಿಯಲ್ಲಿ ಬೆಳೆದಂತಹ ಮಾಂದ್ಯತೆಯನ್ನು ತೃತೀಯ ಜಗತ್ತಿನ ರಾಜ್ಯಗಳು ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗದ ಅಸಮರ್ಥತೆ ಎಂದು ಇವರು ನಿರ್ವಚಿಸುತ್ತಾರೆ. ವಸಾಹತುಶಾಹಿಯು  ಬಳಕೆಗೆ ತಂದ ಶೋಷಣೆಯ ವಿಧಾನಗಳಿಂದ ದುರ್ಬಲಗೊಂಡ ಸಾಮಾಜಿಕ -ರಾಜಕೀಯ ರಚನೆಗಳೇ ಅಲ್ಲದೆ ಮುಂದುವರಿದ ಬಂಡವಾಳಶಾಹಿ ರಾಜ್ಯಗಳ ಪ್ರಭುತ್ವವು ತೃತೀಯ ರಾಜ್ಯಗಳ  ಆಯ್ಕೆಗಳ ಪರಧಿಯನ್ನು ನಿರಂತರವಾಗಿ ಸಂಕುಚಿತಗೊಳಿಸುವುದೂ ಈ ಮಾಂದ್ಯತೆಗೆ ಕಾರಣವಾಗುತ್ತದೆ. ವಸಾಹತುಗಲ್ಲಿ ಶ್ರಮದ ಶೋಷಣೆ ಮತ್ತು ಅ-ಕೈಗಾರಿಕೀಕರಣ ಹಾಗೂ ಜಾಗತಿಕ ವ್ಯವಸ್ಥೆಯಲ್ಲಿ ತೃತೀಯ ರಾಷ್ಟ್ರಗಳು ಎದುರಿಸುವಂತಹ ಅಸಮಾನ ಪರಸ್ಪರಾವಲಂಬನೆಯ ಜಾಲ-ಇವುಗಳಲ್ಲಿ ಬಾಗ್ಚಿಯವರ ಅಧ್ಯಯನ ಕೇಂದ್ರ ನೆಲೆಯನ್ನಾಗಿರಿಸಿಕೊಂಡಿದೆ. ರಂಜಿತ್ ಸಾವುರವರು ವಸಾಹತುಶಾಹಿಮತ್ತು ನವವಸಾಹತುಶಾಹಿ ಅವದಿಗಳಲ್ಲಿನ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಸ್ಪರ್ಧಾತ್ಮಕ ಮಾರುಕಟ್ಟೆಯ ನಿಯಮಗಳನ್ನೊಳಗೊಂಡ ‘ಅಸಮಾನ ವಿನಿಮಯ’ ವ್ಯವಸ್ಥೆಯನ್ನು ವಿಶ್ಲೇಷಿಸಿದ್ದಾರೆ. ಚಾರಿತ್ರಿಕವಾಗಿ ಈ ಪ್ರಕ್ರಿಯೆಯನ್ನು ವಿಶ್ಲೇಷಿಸುತ್ತಿರುವಂತೆಯೇ ‘ಮಹಾನಗರಿ’ಯಲ್ಲಿನ ರಾಜ್ಯಗಳಲ್ಲಿ ೧೯೬೦-೭೦ರ ದಶಕಗಳಲ್ಲಿ ಕಂಡುಬಂದ ಬಂಡವಾಳಶಾಹಿಯ ಬಿಕ್ಕಟ್ಟು ಮತ್ತು ಆ ಬಿಕ್ಕಟ್ಟು ಭಾರತದಂತಹ ಅಂಚಿನ ರಾಜ್ಯಗಳ ಮೇಲೆ ಬೀರಿದ ಪ್ರಭಾವ- ಇವುಗಳನ್ನು ತಮ್ಮ ಅಧ್ಯಯನದ ವಸ್ತುವನ್ನಾಗಿಸಿಕೊಂಡಿದ್ದಾರೆ. ಈ ಅಧ್ಯಯನಗಳು ಭಾರತ ಬ್ರಿಟನ್ ನೊಂದಿಗೆ ಮುಖ್ಯವಾಗಿ ಮತ್ತು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯೊಂದಿಗೆ ಹೊಂದಿದ್ದ ವಸಾಹತುಶಾಹಿ ಸಂಬಂಧದ ಬಗೆಗಿನ ನಮ್ಮ ಅರ್ಥವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

 


* ‘ಅಂಡರ್‌ ಡೆವಲಪ್‌ಮೆಂಟ್‌’ ಪರಿಕಲ್ಪನೆಯನ್ನು “ಅಲ್ಪ ಅಭಿವೃದ್ಧಿ” ಎಂದು ಸಮಾನ್ಯವಾಗಿ ಅನುವಾದ ಮಾಡಲಾಗಿದ್ದರೂ ಒಟ್ಟಾರೆ  ಪರಾವಲಂಬನತ್ವ ವಿಚಾರಧಾರೆಯನ್ನು ಗಮನದಲ್ಲಿರಿಸಿಕೊಂಡು “ಅಧೀನ ಅಭಿವೃದ್ಧಿ” ಎಂದು ಅನುವಾದಿಸಲಾಗಿದೆ. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ತೃಈಯ ಜಗತ್ತಿ “ಸ್ವ-ಅಧೀನ”ವಾದಂತಹ ಅಭಿವೃದ್ಧಿಯನ್ನು ಕಾಣಲು ಅದರ ಪರಾವಲಂಬಿತ ಸ್ಥಾನ ಅವಕಾಶ ಮಾಡಿಕೊಡುವುದಿಲ್ಲ ಎಂಬ ಹಿರಿದಾದ ಅರ್ಥವ್ಯಾಪ್ತಿಯನ್ನು ಈ ಪದವು ಸೂಚಿಸುತ್ತದೆ ಎಂದು ಆಶಿಸಲಾಗಿದೆ.