ಅತ್ತ ಬಂಡವಾಳ ಶಾಹಿಯೂ ಅಲ್ಲದೆ ಇತ್ತ ಸಂಪೂರ್ಣ ಸಮಾಜವಾದಿಯೂ ಅಲ್ಲದ ಮಧ್ಯಮಮಾರ್ಗದಲ್ಲಿ ಮುನ್ನಡೆಯುತ್ತಿದ್ದ ನಮ್ಮ ನೀತಿಯಲ್ಲಿ ೧೯೯೭ರಿಂದೀಚೆಗೆ ಅದ್ಭುತ ಬದಲಾವಣೆಗಳು ಕಾಣಲಾರಂಭಿಸಿದವು. ಇಂತಹ ಬದಲಾವಣೆಗಳು ನಮ್ಮ ಆರ್ಥಿಕ ಅಗತ್ಯಗಳಿಂದ ಯಾ ಸಾಮಾಜಿಕ ಅನಿವಾರ್ಯತೆಯಿಂದ ಉಂಟಾಗಲಿಲ್ಲ. ಬದಲಿಗೆ ವಿಶ್ವಬ್ಯಾಂಕ, ಐ.ಎಂ.ಎಫ್. ಮತ್ತಿತರ ಸಹಸಂಸ್ಥೆಗಳ ಶರತ್ತುಗಳಿಗನುಸಾರವಾಗಿ ಮತ್ತು ಸದಾ ಬಡದೇಶಗಳನ್ನು ಉಪಯೋಗಿಸುತ್ತಾ ಬಂದ ಶ್ರೀಮಂತ ದೇಶಗಳ ಒತ್ತಾಯಕ್ಕನುಗುಣವಾಗಿ ಆಗಿದೆ. ಈ ಬದಲಾವಣೆಗಳ ಬವಣೆ ಅನುಭವಿಸುವವರು ಬಡತನದಲ್ಲಿರುವ ಜನ.

೧೯೯೨-೯೩ರ ಬಜೆಟ್ ಮಂಡನೆಗೆ ಮೂರ್ನಾಲ್ಕು ದಿನ ಮುಂಚಿತವಾಗಿ ರಾಷ್ಟ್ರೀಯ ದೈನಿಕವೊಂದು ದೇಶದ ವಿತ್ತ ಸಚಿವ ಡಾ.ಮನಮೋಹನ್ ಸಿಂಗ್ ಅವರು ವಿಶ್ವಬ್ಯಾಂಕಿನೊಂದಿಗೆ ಬಜೆಟಗೆ ಸಂಬಂಧಿಸಿದಂತೆ ಪ್ರಮುಖ ವಿಷಯವೊಂದನ್ನು ಚರ್ಚಿಸಿದ್ದು ಅದನ್ನು ಪಾರ್ಲಿಮೆಂಟಿನಲ್ಲಿ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಲಾಯಿತು. ಡಾ.ಮನಮೋಹನ್ ಸಿಂಗ್ ಇಂತಹ ರಹಸ್ಯ ಮಾತುಕತೆಯನ್ನು ಅಲ್ಲಗೆಳೆದರೆ, ಕೊನೆಗೆ (ಮಾಜಿ ಪ್ರಧಾನಿ ಚಂದ್ರಶೇಖರ್, ದೇಶದ ಆಂತರಿಕ ವಿಷಯಗಳಲ್ಲಿ ಪಾಶ್ಚಿಮಾತ್ಯ ದೇಶಗಳ ಮೂಗು ತೂರಿಕೆಗೆ ಅವಕಾಶ ನೀಡದೇ ಅವುಗಳ ಮರ್ಜಿಯನ್ನು ಒಪ್ಪಲು ನಿರಾಕರಿಸಿದ್ದು ಅವರ ಸರಕಾರದ ಪತನಕ್ಕೆ ಕಾರಣವೆನ್ನುವ ಒಂದು ವಾದವೂ ಇದೆ) ಈ ರಹಸ್ಯ ವಿಷಯದ ಕುರಿತ ಪತ್ರದ ಪ್ರತಿಯೊಂದನ್ನು ಸದನದಲ್ಲಿ ಬಹಿರಂಗದಲ್ಲಿ ಪ್ರದರ್ಶಿಸಿದಾಗ ಅನಿರಾರ್ಯವಾಗಿ ವಿಶ್ವಬ್ಯಾಂಕನೊಂದಿಗೆ ಸ್ವರೂಪಾತ್ಮಕ ಹೊಂದಾಣಿಕೆಯ ರೂಪದಲ್ಲಿ ಸಾಲವಾಗಿ ೫೦೦ ಮಿಲಿಯ ಅಮೆರಿಕನ್ ಡಾಲರ್ ಗಳನ್ನು ಪಡೆಯುವ ಕುರಿತ ಡಾ. ಸಿಂಗ್ ತಿಳಿಸಿದರು. ಈ ಸಾಲವನ್ನನ್ನುಸರಿಸಿ ಬರುವ ಶರತ್ತುಗಳೇನು ಎನ್ನುವುದನ್ನು ಡಾ.ಸಿಂಗ್ ಸ್ಪಷ್ಟವಾಗಿ ತಿಳಿಸಲಿಲ್ಲ. ಕಾಲಕ್ರಮೇಣ ನಾವು ಯಾವ ಶರತ್ತುಗಳಿಗೆ ಕತ್ತೊಡ್ಡಿ ಸಾಲ ಪಡೆದಿದ್ದೇವೆ ಮತ್ತು ಈ ಶರತ್ತುಗಳು ಏನೇನು ಎನ್ನುವುದು ಸರ್ಕಾರ ನೇಮಿಸಿದ ವಿವಿಧ ಸಮಿತಿಗಳ ಏಕರೂಪದ ಶಿಫಾರಸ್ಸನ್ನು ನೋಡಿದರೆ ಎಂತಹವರಿಗೂ ತಿಳಿಯುತ್ತದೆ. ಸ್ವರೂಪಾತ್ಮಕ ಹೊಂದಾಣಿಕೆಯ ಆಶಯವಾದ ಹೊಸ ಆರ್ಥಿಕ ನೀತಿಯಿಂದ ದೇಶಕ್ಕೆ ಮತ್ತು ಜನರಿಗೆ ಒಳ್ಳೆಯದೇ ಆಗುತ್ತದೆ ಎನ್ನಲಾಗುತ್ತಿದೆ. ದೇಶ ಮತ್ತು ಜನ ಎಂದರೆ ಯಾರು ? ದಿನವೊಂದರ ಇಪ್ಪತ್ತು ರೂಪಾಯಿಗೂ ಕಡಿಮೆ ಆದಾಯವಿರುವ ದೇಶದ ೮೦% ಜನರೋ ಅಥವಾ ದೇಶದ ೫% ಕ್ಕಿಂತಲೂ ಕಡಿಮೆಯಿರುವ ಶ್ರೀಮಂತರು ಮಾತ್ರವೇ ಎನ್ನುವ ಒಂದು ಪ್ರಶ್ನೆಯೂ ನಮ್ಮ ಮುಂದಿದೆ. ಆರ್ಥಿಕ ಅಭಿವೃದ್ಧಿಗೆ ಇಂತಹ ಕ್ರಮ ತೀರಾ ಅನಿವಾರ್ಯ ಎಂದು ಸರ್ಕಾರ ಹೇಳುತ್ತ ಬಂದಿದೆ. ಇದಕ್ಕೆ ಪುರಾವೆಯಾಗಿ ಅಂಕಿ ಅಂಶಗಳ ಮೂಲಕ ಸಮರ್ಥನೆ ನೀಡಲಾಗುತ್ತದೆ. ೧೯೯೨ ನಂತರ ಹೊಸ ಆರ್ಥಿಕ ನೀತಿಯನ್ವಯ ಸರ್ಕಾರ ಅನುಷ್ಟಾನಗೊಳಿಸಿದ ಕಾರ್ಯಕ್ರಮಗಳನ್ನು ಗಮನಿಸೋಣ:

೧. ರೂಪಾಯಿಯ ಮೌಲ್ಯದಲ್ಲಿ ೨೦%ರಷ್ಟು ಅಪಮೌಲ್ಯ.

೨. ವಿದೇಶಿ ಬಂಡವಾಳ ಹೂಡಿಕೆಯನ್ನು ಪೋಹೊಸ ಕೈಗಾರಿಕಾ ನೀತಿ.

೩. ಖಾಸಗೀ ಉದ್ದಿಮೆ ರಂಗಕ್ಕೆ ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸುವುದರ ಬಗ್ಗೆ ಕಾರ್ಯ ಯೋಜನೆ (ರೋಗಗ್ರಸ್ತವೆಂದು ಪರಿಗಣಿಸಲಾದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕೈಗಾರಿಕಾ ಮತ್ತು ಆರ್ಥಿಕ ಪುನರ್ ನಿರ್ಮಾಣ ನಿಗಮಕ್ಕೆ ಪರಿಶೀಲನೆಗಾಗಿ ವಹಿಸಿ ಬಿಡುವುದು).

೪. ಸಾರ್ವಜನಿಕ ರಂಗದ ಉದ್ದಿಮೆಗಳ ಲಾಭದಾಯಕ ಘಟಕಗಳ ಶೇರು ಬಂಡವಾಳದಲ್ಲಿ ಒಂದು ಭಾಗವನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾದುವುದು.

೬. ದೇಶದ ಖಾಸಗೀ ವಲಯ ಮತ್ತು ಸಾರ್ವಜನಿಕ ರಂಗಗಳಲ್ಲಿ, ಅರ್ಥಿಕ ಬೆಳವಣಿಗೆಯ ಒಂದು ಯೋಜನೆಯಾಗಿ ದಕ್ಷತೆಯನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನಿರ್ಗಮನ ನೀತಿಯನ್ನು ಅನುಷ್ಠಾನಗೊಳಿಸುವುದು.

೭. ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಬ್ಯಾಕಿಂಗ್ ಕ್ಷೇತ್ರದಲ್ಲಿ ಸುಧಾರಣೆಯ ಕಾರ್ಯಕ್ರಮವಾಗಿ ವಿದೇಶಿ ಬ್ಯಾಂಕುಗಳಿಗೆ ನಮ್ಮ ದೇಶದಲ್ಲಿ ವ್ಯವಹಾರ ನಡೆಸಲು ಮುಕ್ತ ಅವಕಾಶ ನೀಡುವುದು.

೮. ಎಲ್ಲ ಆಮುದುಗಳನ್ನೂ ಮುಕ್ತಗೊಳಿಸುವುದು.

೯. ಯಾವುದೇ ಅಡೆತಡೆಗಳಿಲ್ಲದೆ ನಿರಾಂತಕಿತ ನಿರ್ಯಾತ ನೀತಿಯನ್ನು ಪಾಲಿಸುವುದು.

೧೦.ಮಾರುಕಟ್ಟೆ ಸ್ನೇಹದ ಕ್ರಮವನ್ನು ಅನುಸರಿಸುವುದು ಮತ್ತು ಸರ್ಕಾರದ ಹಸ್ತಕ್ಷೇಪವನ್ನು ನಿಲ್ಲಿಸುವುದು.

ಹೊಸ ಆರ್ಥಿಕ ನೀತಿ ಅಥವಾ ಅರ್ಥಿಕ ಸುಧಾರಣೆಗಳು ಅನುಷ್ಠಾನಗೊಂಡ ಎರಡು ವರ್ಷಗಳ ನಂತರ ನಮ್ಮ ದೇಶದ ಪ್ರಗತಿಯನ್ನು ಏನೇನು ಸುಧಾರಣೆಗಳಾಗಿವೆ ಮತ್ತು ಸುಧಾರಣೆಗಳ ಪರಿಣಾಮ ಯಾವ ರೀತಿಯಾಗಿವೆ ಎನ್ನುವುದನ್ನು ಸರ್ಕಾರವೇ ಹೊರಡಿಸಿದ ವರದಿಗಳ ಅಧಾರದ ಮೇಲೆ ಗಮನಿಸಬಹುದಾಗಿದೆ ಮತ್ತು ಅವುಗಳ ಸತ್ಯಾಸತ್ಯತೆಯನ್ನು ವಿಮರ್ಶಿಸಬಹುದಾಗಿದೆ.

೧೯೮೦ರಿಂದಲೂ ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳಾದ ಹಣದುಬ್ಬರ, ಚಾಲ್ತಿ ಖಾತೆಯಲ್ಲಿನ ಕೊರತೆಯ ಹೆಚ್ಚಳ, ತೊಂದರೆಗಳಿಗೆಲ್ಲಾ ಮೂಲಕಾರಣವಾಗಿದ್ದ ಸರ್ಕಾತಿ ನೀತಿಯಲ್ಲಿನ ಸೂಕ್ತ ಬದಲಾವಣೆ, ೧೯೯೦-೯೧ರಲ್ಲಿ ರಾಷ್ಟ್ರೀಯ ಉತ್ಪಾದನೆಯ ೮.೪ರಷ್ಟಿದ್ದ ಬಜೆಟ ಕೊರತೆಯನ್ನು ೧೯೯೧-೯೨ರಲ್ಲಿ ೫.೭% ಕ್ಕೆ ಮತ್ತು ೧೯೯೩-೯೪ರಲ್ಲಿ ೪.೭% ಇಳಿಸುವಲ್ಲಿ ಸರ್ಕಾರದ ಯಶಸ್ಸು, ಕೈಗಾರಿಕಾ ನೀತಿಯನ್ನು ನವೀಕರಿಸುವ ಮೂಲಕ ಕೈಗಾರಿಕಾ ಲೈಸೆನ್ಸಿಂಗನಲ್ಲಿ ಉದಾರೀಕರಣ, ಖಾಸಗೀ ವಲಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ, ವಿದೇಶೀ ತಂತ್ರಜ್ಞಾನ ಪಡೆಯುವಲ್ಲಿದ್ದ ತೊಡಕುಗಳನ್ನು ನಿವಾರಿಸುವ ಮೂಲಕ ಉತ್ಪಾದಕತೆಯ ವೃದ್ಧಿಗಾಗಿ ಮುಕ್ತ ವಾತವರಣದ ನಿರ್ಮಾಣ-ಇವೆಲ್ಲದರ ಪರಿಣಾಮವಾಗಿ ದಕ್ಷತೆಗೆ ಇನ್ನೊಂದು ಹೆಸರಾಗಿರುವ ಖಾಸಗೀ ವಲಯದಲ್ಲಿ ಉತ್ಪಾದಕ ಚಟುವಟಿಕೆಗಳು ತೀವ್ರಗೊಂಡಿವೆ. ಈ ಹಿಂದೆ ರಫ್ತು ಮತ್ತು ಕೃಷಿ ನೀತಿಗೆ ಸರ್ಕಾರ ಹೆಚ್ಚಿನ ರಕ್ಷಣೆ ನೀಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ವ್ಯಾಪಾರೀ ವಲಯದ ಆಮದನ್ನು ನಿರ್ಬಂಧಿಸುವ ಮೂಲಕ ವ್ಯಾಪಾರೀ ವಲಯದ ಹಿತಸಕ್ತಿಗಳನ್ನು ಹತ್ತಿಕ್ಕಲಾಗುತ್ತಿತ್ತು. ಉದಾರೀಕರಣದ ನಂತರ ವ್ಯಾಪಾರ ಮತ್ತು ವಿನಿಮಯ ದರ ಪದ್ಧತಿಯನ್ನು ಸರ್ಕಾರ ಸಡಿಲಗೊಳಿಸುವ ಮೂಲಕ ವಿಶ್ವಮಾರುಕಟ್ಟೆಯಲ್ಲಿ ಸ್ಪರ್ದಿಸಬಲ್ಲಂತಹ ಉತ್ಪನ್ನಗಳನ್ನು ನೀಡುವಷ್ಟು ನೈಪುಣ್ಯ ಪೂರ್ಣ ತಂತ್ರಗಾರಿಕೆಯನ್ನು ಪಡೆದಿರುತ್ತೇವೆ. ಈ ಹಿಂದೆ ವಿದೇಶಿ ಬಂಡವಾಳ ನೀತಿಯನ್ನು ಸಡಿಲಗೊಳಿಸುವ ಮೂಲಕ ನಾವು ವಿದೇಶೀ ಬಂಡವಾಳ ಹೆಚ್ಚು ಹೆಚ್ಚು ಹರಿದು ಬರುವಂತೆ ಮಾಡಿದ್ದೇವೆ. ಬಂಡವಾಳದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ವಿಶ್ವಮಾರುಕಟ್ಟೆಯಲ್ಲಿ ಸ್ಪರ್ಧಿಸಬಲ್ಲಂತಹ ಉತ್ಪನ್ನಗಳನ್ನು ನೀಡುವಷ್ಟು ನೈಪುಣ್ಯ ಪೂರ್ಣ ತಂತ್ರಗಾರಿಕೆಯನ್ನು ಪಡೆದಿರುತ್ತೇವೆ. ಈ ಹಿಂದೆ ವಿದೇಶೀ ಬಂಡವಾಳ ಹೂಡಿಕೆಗೆ ಇದ್ದಂತಹ ಸರ್ಕಾರಿ ಹಾಗೂ ಅಧಿಕಾರಿಶಾಹೀ ವ್ಯವಸ್ಥೆಯಲ್ಲಿನ ಗೊಂದಲ, ತೊಂದರೆಗಳನ್ನು ನಿವಾರಿಸಲಾಗಿದೆ. ತೆರಿಗೆ ಸುಧಾರಣಾ ಕಾರ್ಯಕ್ರಮಗಳನ್ನು ಡಾ.ಚೆಲ್ಲಯ್ಯ ಸಮಿತಿಯ ವರದಿಯ ಆಧಾರದಲ್ಲಿ ಜಾರಿಗೊಳಿಸಲಾಗುತ್ತಿದೆ. ಶೇರು ಮಾರುಕಟ್ಟೆಯ ನಿರ್ವಾಹಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಮತ್ತು ನಿಯಂತ್ರಿಸಲು ಸೆಕ್ಯೂರಿಟೀಸ್ ಎಕ್ಸಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಅಸ್ತಿತ್ವಕ್ಕೆ ಬಂದ ಮ್ಯೂಚುವಲ್ ಫಂಡಗಳಿಗೆ ಹಣ ಹೂಡಲು ಮತ್ತು ತೊಡಗಿಸಲು ಹಸಿತು ನಿಶಾನೆ ತೋರಿಸಲಾಗಿದೆ. ಸಾರ್ವಜನಿಕ ರಂಗದ ಉದ್ದಿಮೆಗಳಿಗೆ ಸರ್ಕಾರದ ಬೊಕ್ಕಸದಿಂದ ಹರಿದು ಬರುವ ಹಣವನ್ನು ನಿಲ್ಲಿಸಿ ಅವನ್ನು ಸ್ವಯಂ ಸಂಪನ್ಮೂಲ ನೆಲೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಒಂದೊಮ್ಮೆ ಯಾವುದೇ ಸರ್ಕಾರೀ ರಂಗದ ಉದ್ದಿಮೆ ನಷ್ಟದಿಂದ ಯಾ ಸಂಚಿತ ನಷ್ಟದಿಂದ್ ಬಳಲುತ್ತಿದ್ದರೆ, ಅದನ್ನು ನಿಧಾನವಾಗಿ ಸಾಯಲುಬಿಡುವ ಯಾ ಖಾಸಗೀ ವಲಯಕ್ಕೆ ಮಾರಿ ಬಿಡುವ ನಿರ್ಧಾರ ಮಾಡಲಾಗುತ್ತದೆ. ಕಾನೂನಿನಲ್ಲಿ ಸೂಕ್ತ ಮಾರ್ಪಾಡು ತರುವ ಮೂಲಕ ರೋಗಗ್ರಸ್ತ ಉದ್ದಿಮೆಗಳನ್ನು ಬಿ.ಐ.ಎಫ್.ಆರ್.ಗೆ (ಬ್ಯೂರೋ ಆಫ್ ಇಂಡಸ್ಟ್ರಿಯಲ್ ಎಂಡ್ ಫೈನ್ಯಾನ್ಷಿಯಲ್ ರೀಕನ್ ಸ್ಟ್ರಕ್ಷನ್) ಶಿಫಾರಸಿಗಾಗಿ ವಹಿಸಿ ಕೊಡಲಾಗುವುದು.. ಇತ್ಯಾದಿ…

೧೯೯೩ರ ಮೇ ೩೧ರಂದು ವಿಶ್ವಬ್ಯಾಂಕ ಅಧ್ಯಕ್ಷರಿಗೆ ನಮ್ಮ ದೇಶದ ವಿತ್ತ ಸಚಿವ ಡಾ.ಮನಮೋಹನ್ ಸಿಂಗ್ ಅವರು ಬರೆದ ಪತ್ರದಲ್ಲಿ ಮೊಟ್ಟಮೊದಲ ಬಾರಿಗೆ ಸ್ವರೂಪಾತ್ಮಕ ಹೊಂದಾಣಿಕೆಗಳು ನಿರೀಕ್ಷಿತ ಫಲ ನೀಡುತ್ತಿಲ್ಲ ಎನ್ನುವುದನ್ನು ಚಿಕಿತ್ಸೆಯ ರೋಗ ನಿವಾರಕ ಫಲಕ್ಕಿಂತ ಅನ್ಯ ತೊಂದರೆಗಳೇ ಅಧಿಕವಾಗಿದ್ದು ಹೇಗೆ ಇದು ಪಕ್ಕೆಗೆ ಚುಚ್ಚುವ ಮುಳ್ಳುಗಳಾಗಿವೆ ಎನ್ನುವುದನ್ನೂ ಒಪ್ಪಿಕೂಂಡಿದ್ದಾರೆ. ಈ ಎಲ್ಲ ವಿಷಯಗಳನ್ನು ಅವಲೋಕಿಸಿದಾಗ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ. ಅದೆಂದರೆ ಯಾವ ಹಾನಿಯನ್ನು ತಪ್ಪಿಸಲಿಕ್ಕಾಗಿ ನಾವು ಶರತ್ತು ಬದ್ಧ ಸಾಲ ಪಡೆಯಲು ಆರ್ಥಿಕ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದೆವೋ ಎರಡು ವರ್ಷಗಳ ನಂತರವೂ ನಮ್ಮ ದೇಶ ಸಂಭಾವ್ಯ ದುರಂತವನ್ನು ಮೀರಿ ಬೆಳೆಯಲಿಲ್ಲ. ಅದರ ಬದಲು ಋಣಭಾರದಿಂದ ಕುಗ್ಗು ಹೋಗಿದೆ. ೧೯೯೪-೯೫ರಲ್ಲಿ ಸಾಲ ಮರುಪಾವತಿ ಪ್ರಾರಂಭವಾದರೆ ಮತ್ತೆ ನಾವು ವಿಶ್ವಬ್ಯಾಂಕನಿಂದ ಸಾಲ ಪಡೆಯಬೇಕಾಗಿ ಬರಬಹುದೇನೋ? ಈ ವಿಷಯಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳ ಪುರಾವೆಗಳನ್ನು ನೀಡುತ್ತಿವೆ. ವ್ಯಾಪಾರ ಮತ್ತು ಪಾವತಿ ನೀತಿ ಸುಧಾರಣೆಯ ಮೂಲಕ ನಾವು ಪೋರಫ್ತು, ಡಾಲರುಗಳಲ್ಲಿ ಅಂತಹ ಹೆಚ್ಚಳವನ್ನೇನೂ ಉಂಟುಮಾಡಿಲ್ಲ. ೧೯೯೪-೯೫ರಲ್ಲಿ ನಮ್ಮ ಸಾಲ ಮರುಪಾವತಿ ಪ್ರಾರಂಭವಾಗುವ ವೇಳೆಗೆ ಡಾಲರು ಮೌಲ್ಯದಲ್ಲಿ ಸಾಧಿಸಬೇಕಾಗಿರುವ ರಫ್ತು ಹೆಚ್ಚಳ ಕನಿಷ್ಟ ೧೫%ರಷ್ಟು ಏರಿಕೆಯಾಗಬೇಕಿದೆ. ಆದರೆ ಸದ್ಯದ ಹೆಚ್ಚಳ ಶೇಕಡಾ ೧ ಮಾತ್ರ. ೧೯೯೦-೯೧ಕ್ಕೆ ಹೋಲಿಕೆಯಾಗಿ ಕಳೆದ ವರ್ಷಾಂತ್ಯಕ್ಕೆ ಹೋಲಿಸಿದಾಗ ರಫ್ತು ನಿರೀಕ್ಷಿತ ಮಟ್ಟಕ್ಕಿಂತ ೨೦% ಚಾಲ್ತಿ ಖಾತೆಯ ಕೊರತೆ ಅದೇ ಪಂಚವಾರ್ಷಿಕ ಯೋಜನೆ ಅವಧಿಯ ಸರಾಸರಿ ಪ್ರತಿಶತಕ್ಕಿಂತ ಕಡಿಮೆಯಾಗಿಲ್ಲ ಎನ್ನುವುದು ಪರಿಸ್ಥಿತಿಯ ವಿಷಮತೆ ಕಡಿಮೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಬಾಹ್ಯ ಸಾಲಗಳ ಒತ್ತಡ ಹೆಚ್ಚುತ್ತಿದ್ದು ೧೯೯೪-೯೫ರ ವೇಳೆಗೆ ಮತ್ತೊಂದು ಸಾಲ ಸಂಕಟ ಪ್ರಾರಂಭವಾಗುವ ಎಲ್ಲ ಸೂಚನೆಗಳೂ ಸ್ಪಷ್ಟವಾಗಿವೆ. ಒಟ್ಟು ಉತ್ಪನ್ನಗಳ ಶೇಕಡಾವಾರು ಪ್ರಮಾಣದಲ್ಲಿ ಸರ್ಕಾರದ ಕಂದಾಯ ಕೊರತೆ ೧೯೯೦-೯೧ರಲ್ಲಿ ಮತ್ತೆ ೧೯೯೨-೯೩ರಲ್ಲಿ ಆರನೆಯ ಯೋಜನಾಂತ್ಯದಲ್ಲಿ ಯಾವ ರೀತಿಯಲ್ಲೂ ಕಡಿಮೆಯಾಗಿಲ್ಲ. ಬಜೆಟ ಕೊರತೆಯಲ್ಲಿ ಕಡಿತ ಉಂಟು ಮಾಡಿರುವುದು ಬಂಡವಾಳ ಖರ್ಚುಗಳಲ್ಲಿ ತೀವ್ರ ಇಳಿತ ಮಾಡುವ ಮೂಲಕವೇ ಆಗಿದೆ. ಈ ರೀತಿ ಬಂಡವಾಳ ಖರ್ಚಿನಲ್ಲಿ ಕಡಿತ ಮಾಡುವ ಮೂಲಕ ಅಲ್ಪಕಾಲಿಕವಾಗಿ ಹಣದುಬ್ಬರ ಕಡಿಮೆಯಾಗಿ ಬೆಲೆ ಏರಿಕೆಯಲ್ಲಿ ಇಳಿಕೆ ಕಂಡುಬಂದು ಒಳ್ಳೆಯದಾದಂತೆ ಕಾಣಬಹುದು. ಆದರೆ ಸರ್ಕಾರಿ ರಂಗಗಳಾದ ಶಿಕ್ಷಣ, ಅಭಿವೃದ್ಧಿ, ಆರೋಗ್ಯ ಮುಂತಾದ ಕ್ಷೇತ್ರಗಳು ಇದರಿಂದಾಗಿ ಕಂಗೆಟ್ಟಿವೆ. ಅಂದರೆ ಇಂತಹ ಅಲ್ಪಾವಧಿ ಪರಿಣಾಮ ಉಂಟುಮಾಡಲು ದೇಶದ ಬಡಜನರ ಹಿತಾಸಕ್ತಿಗಳನ್ನು ನಿರ್ದಯವಾಗಿ ಬಲಿಗೊಡಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟು ಉತ್ಪಾದನಾ ಪ್ರಮಾಣ ಕಡಿಮೆಯಾಗುವ ಅಪಾಯವಿದೆ. ದೇಶದ ಕೈಗಾರಿಕಾರಂಗದ ಉತ್ಪಾದನೆಯನ್ನು ತೆಗೆದುಕೊಂಡರೆ ೧೯೯೨-೯೩ರಲ್ಲಿ ಕೇವಲ ಶೇಕಡಾ ೧ರಷ್ಟು ವೃದ್ಧಿಯಾಗಿದೆ. ೧೯೯೦-೯೧ಕ್ಕೆ ಹೋಲಿಕೆಯಾಗಿ ಅಂದರೆ ಹೊಸ ಆರ್ಥಿಕ ನೀತಿಯನ್ವಯ ನಿರೀಕ್ಷಿಸುವ ಮಟ್ಟಕ್ಕಿಂತ ೧೬% ಕಡಿಮೆಯಾಗಿದೆ. ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ರಾಷ್ಟ್ರೀಯ ಮಂಡಳಿ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ೧೯೯೩-೯೫ರಲ್ಲಿ ಬಂಡವಾಳ ಹೂಡಿಕೆಯಲ್ಲಿ ನಿರುತ್ಸಾಹದ ವಾತಾವರಣೆವೇ ಕಂಡುಬರಲಿದೆ. ಇದರ ಪರಿಣಾಮವಾಗಿ ಖಾಸಗೀ ವಲಯದಲ್ಲಿ ಉತ್ಪಾದನಾ ಪ್ರಮಾಣ, ಉದ್ಯೋಗಾವಕಾಶಗಳು ಹೆಚ್ಚುವ ಸೂಚನೆಗಳಿಲ್ಲ. ಅತ್ತ ಸಾರ್ವಜನಿಕ ರಂಗದಲ್ಲಿಯೂ ಹೊಸ ಯೋಜನೆಯಿಂದಾಗಿ ಬಂಡವಾಳ ಹೂಡಿಕೆಯಲ್ಲಿ ಕಡಿತ, ನಿರ್ಗಮನ ನೀತಿ, ಖಾಸಗೀಕರಣ, ರೋಗಗ್ರಸ್ತ ಉದ್ಯಮಗಳ ಮುಚ್ಚುವಿಕೆ ಮುಂತಾದ ಕ್ರಮಗಳಿಂದ ಒಟ್ಟು ಉತ್ಪಾದನೆ ಮತ್ತು ಉದ್ಯೋಗಗಳ ಅವಕಾಶದಲ್ಲಿ ಕುಸಿತ ಮುಂತಾದ ಪರಿಣಾಮಗಳಾಗುವುದರಿಂದ ಸ್ವರೂಪಾತ್ಮಕ ಹೊಂದಾಣಿಕೆಯ ಪರಿಣಾಮ ಯಾರ ಮೇಲೆ ಆಗುತ್ತದೆ ಎನ್ನುವುದು ಸುಸ್ಪಷ್ಟ.

ಬೃಹತ್ ಉದ್ದಿಮೆಗಳಿಗೆ ಮತ್ತು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಎಲ್ಲ ದಾರಿಗಳನ್ನೂ ಸುಗಮಗೊಳಿಸುವ ಅತ್ಯುತ್ಸಾಹದಲ್ಲಿ ದೇಶದ ಬಹುಪಾಲು ಜನರನ್ನು ಪೋಷಿಸುತ್ತಿರುವ ಸಹಕಾರಿ ರಂಗ ಮತ್ತು ಸಣ್ಣ ಉದ್ದಿಮೆದಾರರನ್ನು ಸರಕಾರ ಮರೆತೇ ಬಿಟ್ಟಿದೆ. ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯೋಗದ ದೃಷ್ಟಿಯಿಂದ ಹೆಚ್ಚು ಲಾಭದಾಯಕವೆನಿಸುವ ಈ ವಲಯವನ್ನು ಕಡೆಗಣಿಸಲಾಗಿದೆ. ದೇಶೀಯ ತಂತ್ರಜ್ಞಾನ ಬಳಸಿ ಕಡಿಮೆ ಬಂಡವಾಳ ವಿನಿಯೋಗಿಸುವ ಇವು ಆದಾಯ ವಿತರಣೆಯಲ್ಲಿ ಹೆಚ್ಚು ಸಮಾನತೆಯನ್ನು ಕಾಯ್ದುಕೊಂಡಿವೆ. ಈ ರಂಗಕ್ಕೆ ತೊಡಕಾಗಿರುವ ಲೈಸನ್ಸ್ ವ್ಯವಸ್ಥೆಯನ್ನು ತೆಗೆದುಹಾಕಿಲ್ಲ. ಉದಾರೀಕರಣದ ಬಗೆಗಿನ ಚರ್ಚೆಯಲ್ಲಿ ಯೋಜನಾ ಆಯೋಗದ ಮಾಜಿ ಸದಸ್ಯೆ ಡಾ.ಎಲ್.ಸಿ.ಜೈನ್ ಅವರು ಅಂದಂತೆ ಆರ್ಥಿಕ ಉದಾರೀಕರಣದ ಎಲ್ಲಾ ಕಸರತ್ತುಗಳನ್ನು ಮಾಡಿಯೂ ನಮ್ಮ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ ಎನ್ನುವುದನ್ನು ವಿಷದಪಡಿಸುವ ಇನ್ನೊಂದು ಅಂಶವೆಂದರೆ ನಾವು ವಿದೇಶಿ ಹೂಡಿಕೆದಾರರ ದೃಷ್ಟಿಯಲ್ಲಿ ಮತ್ತು ವಿದೇಶಿ ಬ್ಯಾಂಕುಗಳ ದೃಷ್ಟಿಯಲ್ಲಿ ಉದಾರೀಕರಣ ಪೂರ್ವ ಅವಧಿಯಲ್ಲಿದ್ದದ್ದಕ್ಕಿಂತ ಹೆಚ್ಚಿನ ಅಂಕಗಳನ್ನು ಋಣನಿರ್ಧಾರಕ ವಿಷಯದಲ್ಲಿ ಪಡೆಯದಿರುವುದು. ವಿದೇಶಿ ಬಂಡವಾಳಗಾರರು ಜಾಗತಿಕ ಬ್ಯಾಂಕ್, ದ್ರವ್ಯನಿಧಿಗಳ ಸಾಲ ಪಡೆದ ದೇಶಗಳ ಮೇಲೆ ಉಂಟುಮಾಡಬಹುದಾದ ಅಂತಿಮ ಪರಿಣಾಮದ ಕುರಿತು ಹೆಚ್ಚು ಆಸಕ್ತಿ ಹೊಂದಿರುತ್ತಾರೆಯೇ ಹೊರತು ಅದನ್ನು ನಾವು ಉಪಯೋಗಿಸಿ ಹೇಗೆ ಕಾರ್ಯ ನಿರ್ವಹಿಸುತ್ತೇವೆ ಎಂಬುದರಲ್ಲಲ್ಲ. ವಿಶ್ವಬ್ಯಾಂಕಿನ ಉದಾರೀಕರಣ ಕ್ರಮವನ್ನು ಪಾಠ ಓದಿದ ರೀತಿಯಲ್ಲಿ ಅನುಷ್ಠಾನ ಮಾಡುವ ಮೊದಲು ಅರ್ಥವ್ಯವಸ್ಥೆಯನ್ನು ಅಧ್ಯಯನ ಮಾಡಿ ಅದಕ್ಕೆ ಸೂಕ್ತವಾಗಿ ಸ್ಪಂದಿಸುವ ಕ್ರಮ ತೆಗೆದುಕೊಳ್ಳುವ ಗೋಜಿಗೇ ನಾವು ಹೋಗಿಲ್ಲ. ಇಂತಹ ಸ್ವರೂಪಾತ್ಮಕ ಹೊಂದಾಣಿಕೆಯ ಕಾರ್ಯಕ್ರಮಗಳು ಯಾವಾಗಲು ಬಿಸಿಲ್ಗುದುರೆಯ ಬೆನ್ನ ಹತ್ತುತ್ತವೆಯೇ ಹೊರತು ಇದುವರೆಗೆ ಎಲ್ಲೂ ಉತ್ತಮ ಸ್ಥಿತಿಯನ್ನು ಉಂಟು ಮಾಡಿದ ದಾಖಲೆಗಳಿಲ್ಲ. ನಮ್ಮ ಋಣ ನಿರ್ಧಾರಕ ಅಂಶಗಳನ್ನು ನಿರ್ಧರಿಸುವ ಸಂಸ್ಥೆಗಳ ರಾಜಕೀಯ ಪರಿಸ್ಥಿತಿ, ಹೂಡಿಕೆ ನಿರ್ವಹಣೆ, ರಫ್ತು ಆದಾಯ, ಉಳಿತಾಯ ಮುಂತಾದ ಅಂಶಗಳ ಆಧಾರದ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತವೆಯೇ ಹೊರತು ನಾವು ವಿಧೇಯರಾಗಿ ಜಾರಿ ಮಾಡುವ ಯೋಜನೆಗಳನ್ನು ಆಧರಿಸಿ ಅಲ್ಲ.

ನಮ್ಮ ಅರ್ಥವ್ಯವಸ್ಥೆಯನ್ನು ಉದಾರೀಕರಣದ ನಂತರ ಅಪಾಯದಿಂದ ರಕ್ಷಿಸಿದ್ದು ಕೃಷಿಕ್ಷೇತ್ರ ಮಾತ್ರ ಉತ್ತಮ ಮುಂಗಾರು ಹಣದುಬ್ಬರ ಕಡಿಮೆಯಾಗಲು ಪ್ರಮುಖ ಕಾರಣ ೧೯೯೦-೯೧ ಹೋಲಿಸಿದರೆ ೧೯೯೨-೯೩ ಶೇಕಡಾ ೩ರಷ್ಟು ಅಧಿಕ ಉತ್ಪಾದನೆಯಿದೆ. ಮಾತ್ರವಲ್ಲ ಸದ್ಯದ ಪರಿಸ್ಥಿತಿಯಲ್ಲಿ ಮುಂಬರುವ ವರ್ಷ ಕೂಡಾ ಇಷ್ಟೇ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಕೃಷಿ ಉತ್ಪನ್ನಗಳ ಮತ್ತು ಕೃಷಿ ಆಧಾರಿತ ಕೈಗಾರಿಕಾ ಉತ್ಪನ್ನಗಳ ಹಾಗೂ ಕೃಷಿ ಆಧಾರಿತ್ ಕೈಗಾರಿಕಾ ಉತ್ಪನ್ನ ಸಂಬಂಧಿ ಹಣದುಬ್ಬರ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತದೆ. ಉದಾರೀಕರಣ ನೀತಿಯಲ್ಲಿ ಉತ್ತಮ ಫಲಿತಾಂಶ ನೀಡಿದ ಒಂದೇ ಒಂದು ಅಂಶವೆಂದರೆ ಸರಿಯಾದ ಪ್ರಮಾಣದಲ್ಲಿ ಅಪಮೌಲ್ಯೀಕರಣಗೊಂಡ ರೂಪಾಯಿ ಹಣದುಬ್ಬರ ತಡೆಹಿಡಿಯಲು ಸಫಲವಾದದ್ದು.

ವಸ್ತು ಸ್ಥಿತಿ ಗಮನಿಸಿದರೆ ನಮಗೆ ಮನದಟ್ಟಾಗುವ ಅಂಶಗಳೆಂದರೆ, ನಾವು ನಿರೀಕ್ಷಿತ ಫಲಿತಾಂಶವನು ಪಡೆಯಲು ವಿಫಲರಾಗಿದ್ದೇವೆ, ಮಾನವ ಸಂಪನ್ಮೂಲ ಅಧಿಕವಾಗಿರುವ ನಮ್ಮ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ವಿದೇಶಿ ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆಯಿಂದಾಗಿ ಈಗಾಗಲೇ ತೊಂದರೆಗೀಡಾಗಿವೆ. ಉದ್ಯೋಗಾವಕಾಶಗಳಲ್ಲಿ ತೀರಾ ಇಳಿತವುಂಟಾಗಿದೆ. ಶ್ರೀಮಂತ ವರ್ಗಕ್ಕೆ ತೆರಿಗೆ ಕಡಿತ ಮುಂತಾದ ಪೋತ್ಸಾಹಕ ಕ್ರಮ ನೀಡುತ್ತಿದ್ದೇವೆ. ಪಡಿತರ, ಆಹಾರ ಮತ್ತಿತರ ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಇವೆ.

* * *

ಭಾರತೀಯ ಆರ್ಥಿಕ ಅಭಿವೃದ್ಧಿ : ೧೯೪೭-೧೯೮೦

ಐದು ಶತಮಾನಗಳಷ್ಟು ಕಾಲ ಸಾಮ್ರಾಜ್ಯಶಾಹಿ ಆಡಳಿತಕ್ಕೊಳಪಟ್ಟ ನಮ್ಮ ದೇಶದಲ್ಲಿ ಬಡತನ, ಸಾಮಾಜಿಕ ಆರ್ಥಿಕ ಅಸಮಾನತೆಯೇ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯ ಸ್ವಾತಂತ್ರ್ಯಾ ನಂತರ ನಮ್ಮ ಮುಂದಿದ್ದ ಗುರಿಯಾಗಿತ್ತು. ಇಂತಹ ಜಟಿಲವಾದ ಸಮಸ್ಯೆಗಳಿಗೆ ಅಭಿವೃದ್ಧಿ ನೀತಿಯೊಂದನ್ನು ರೂಪಿಸಿಕೊಂಡು ಹೆಚ್ಚುವರಿ ಸಂಪತ್ತನ್ನು ಸೃಷ್ಟಿಸಿ ಅದರ ವಿತರಣೆ ಮಾಡುವ ಮೂಲಕ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದು ಸಾಧ್ಯವಿತ್ತು. ಆರ್ಥಿಕ ಸಮಾನತೆ ಸಾಧಿಸಿದಾಗ ಮಿಕ್ಕುಳಿದ ಸಮಸ್ಯೆಗಳ ಪರಿಹಾರ ಸುಲಭ ಸಾಧ್ಯವಾಗುತ್ತದೆ. ಯಾಕೆಂದರೆ ಸಾಮಾಜಿಕ ಅಸಮಾನತೆ ಬಡತನ ಮುಂತಾದ ಸಮಸ್ಯೆಗಳೆಲ್ಲ ಬಹುಪಾಲು “ಅರ್ಥಮೂಲ”ವಾಗುವಂತಹವುಗಳೇ ಎಂದು ನಂಬಲಾಗಿತ್ತು. ನಾವು ಸ್ವಾತಂತ್ರ್ಯ ಗಳಿಸಿದ ಕಾಲಕ್ಕೆ ಆರ್ಥಿಕ ಅಭಿವೃದ್ಧಿ ಗುರಿ ಸಾಧನೆಗೆ ಎರಡು ಮಾರ್ಗಗಳಿದ್ದುವು. ಒಂದು ಮುಕ್ತ ಆರ್ಥಿಕ ಅಭಿವೃದ್ಧಿ ನೀತಿ ಅಥವಾ ಬಂಡವಾಳಶಾಹಿ ವ್ಯವಸ್ಥೆ. ಎರಡನೆಯದು ಸರಕಾರದ ನಿಯಂತ್ರಣಕ್ಕೊಳಪಟ್ಟ ಯೋಜನಾಧಾರಿತ ನಿಯಂತ್ರಿತ ಅಭಿವೃದ್ಧಿ ನೀತಿ, ಮೊದಲನೆಯ ಮಾರ್ಗವನ್ನನುಸರಿಸಿ ಯಶಸ್ವಿಯಾದ ದೇಶಗಳಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಮುಂತಾದ ದೇಶಗಳಿದ್ದರೆ, ಎರಡನೇ ಮಾರ್ಗವನ್ನನುಸರಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಿದ ದೇಶಗಳಲ್ಲಿ ರಷ್ಯಾ, ಚೀನಾ, ಕ್ಯೂಬಾ ಪ್ರಮುಖವಾಗಿದ್ದವು.

ಮುಕ್ತ ಅರ್ಥವ್ಯವಸ್ಥೆಯ ಬಂಡವಾಳಶಾಹಿ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ, ಸರಕಾರದ ಹಸ್ತಕ್ಷೇಪವಿಲ್ಲದೆ ಖಾಸಗೀ ರಂಗ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿ ಸಂಪತ್ತು ಸೃಷ್ಟಿಸಿ ಮರು ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸುವುದು. ಇಂತಹ ಅಭಿವೃದ್ಧಿಯ ನೀತಿಗೆ ಅರ್ಥಶಾಸ್ತ್ರಜ್ಞ ಆಡಂ ಸ್ಮಿತ್ ರಂತಹ ಪ್ರಮುಖ ‘ಶಾಸ್ತ್ರೀಯ ಅರ್ಥಶಾಸ್ತ್ರಜ್ಞರ’ ಚಿಂತನೆ ಆಧಾರವಾಗಿತ್ತು. ಇದರಂತೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಹಿತಾಶಕ್ತಿಯನ್ನು ಗಮನದಲ್ಲಿರಿಸಿ ತನ್ನನ್ನು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಸ್ತು ಮತ್ತು ಸೇವೆಯನ್ನು ಉತ್ಪಾದಿಸ್ತುತ್ತಾನೆ. ಹೀಗೆ ಬಹುಪಾಲು ಜನ ಕಾರ್ಯಪ್ರವೃತ್ತರಾದಾಗ ಒಂದು ದೇಶ ಅಥವಾ ಪ್ರದೇಶ ಮುಂದುವರಿಯುವುದು ಸಾಧ್ಯವಾಗುತ್ತದೆ.

ಯೋಜನಾಧಾರಿತ ನಿಯಂತ್ರಿತ ಅಭಿವೃದ್ಧಿ ನೀತಿಯ ಪ್ರಮುಖ ಲಕ್ಷಣವೆಂದರೆ, ದೇಶದ ಎಲ್ಲಾ ಉತ್ಪಾದನಾ ಪರಿಕರಗಳನ್ನು ಸರ್ಕಾಗಳು, ಸರ್ಕಾರದ ಆಸ್ತಿಯೆಂದು ಪರಿಗಣಿಸಿ, ಬಹುಪಾಲು ಜನರ ಹಿತವನ್ನು ದೃಷ್ಟಿಯಲ್ಲಿರಿಸಿ ಕೇಂದ್ರಿಯ ಯೋಜನಾ ಆಯೋಗ ನಿರ್ಧಾರ ಮಾಡುವ ವಸ್ತುಗಳನ್ನು ಯಾ ಸೇವೆಯನ್ನು ಉತ್ಪಾದಿಸಿ, ಇದರ ವಿತರಣೆ ಮಾಡುವುದಾಗಿದೆ. ೧೯೧೬ ರ ವರೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಷ್ಯಾ ಇಂತಹ ಅಭಿವೃದ್ಧಿ ನೀತಿಯನ್ನನುಸರಿಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿತು. ೧೯೩೦ರ ದಶಕದಲ್ಲಿ ಪಶ್ಚಿಮದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕುಸಿತ ಉಂಟಾಗಿದ್ದ ಸಮಯದಲ್ಲೂ ರಷ್ಯಾ ನಿರಂತರವಾಗಿ ರಾಷ್ಟ್ರೀಯ ಉತ್ಪನ್ನದಲ್ಲಿ ಹೆಚ್ಚಳ ಸಾಧಿಸುತ್ತಾ ಬಂದಿತ್ತು. ಮುಗ್ಗರಿಸಿದ್ದ ಬಂಡವಾಳಶಾಹಿ ಸುಧಾರಣೆಗೆ ಸರಕಾರದ ಮಧ್ಯಪ್ರವೇಶ ಅಗತ್ಯ ಮತ್ತು ಅನಿವಾರ್ಯ ಎನ್ನುವುದನ್ನು ಪಶ್ಚಿಮದ ದೇಶಗಳು ತಾತ್ವಿಕವಾಗಿ ಒಪ್ಪಿಕೊಂಡವು. ಭಾರತದ ವಿಷಯದಲ್ಲಿ ಯಾವುದೇ ನೀತಿ ಸರಿಯಾಗಿ ಅನುಷ್ಠಾನಗೊಳ್ಳಲು ಸರಕಾರದ ಪರಿಣಾಮಕಾರೀ ನಿಯಂತ್ರಣ ಅಗತ್ಯವೆಂದು ತಿಳಿಯಲಾಗಿತ್ತು.

ನಮ್ಮ ಅಭಿವೃದ್ಧಿ ನೀತಿಯನ್ನು ರೂಪಿಸುವಾಗ ನಮ್ಮ ಮುಂದೆ ಅಮೇರಿಕಾ ಮಾದರಿಯ ಅಭಿವೃದ್ಧಿ ನೀತಿ ಮತ್ತು ರಷ್ಯಾ ಮಾದರಿಯ ಅಭಿವೃದ್ಧಿ ನೀತಿ, ಇದ್ದು ಇವೆರಡರಲ್ಲಿ ಯಾವುದನ್ನಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಇಂತಹ ಆಯ್ಕೆ ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಾಗಿಲ್ಲ ಹಾಗೂ ಸರಳವಾಗಿಯೂ ಇಲ್ಲ. ಪಾಶ್ಚಿಮಾತ್ಯ ಮಾದರಿಯ ಶಿಕ್ಷಣ ಪಡೆದು, ಹಲವಾರು ವಿಚಾರಗಳಲ್ಲಿ ಅವರಿಂದ ಪ್ರಭಾವಿತರಾಗಿದ್ದ ನಮ್ಮ ರಾಜಕೀಯ ನಾಯಕರ ಮೇಲೆ ಮುಕ್ತ ಅರ್ಥ ವ್ಯವಸ್ಥೆಯ ಪ್ರಭಾವ ಅಧಿಕವಾಗಿತ್ತು. ನಮ್ಮ ದೇಶದಲ್ಲಿ ನಿಧಾನವಾಗಿ ಬೇರೂರುತ್ತಾ ಬಂದಿದ್ದ ಉದ್ಯಮಪತಿಗಳೂ ಮುಕ್ತ ಅರ್ಥ ವ್ಯವಸ್ಥೆಯ ಕಡೆಗೆ ವಾಲಿದ್ದು ಸಹಜವಾಗಿತ್ತು. ಹೊಸದಾಗಿ ಸ್ವಾತಂತ್ರ್ಯ ಪಡೆದ ನಮ್ಮ ದೇಶದಲ್ಲಿ ಬಂಡವಾಳ ಸಕ್ರಿಯಗೊಳ್ಳಲು ವಿಫುಲವಾದ ಅವಕಾಶಗಳಿದ್ದವು. ಇಂತಹ ಅವಕಾಶಗಳನ್ನು ದೇಶೀಯ ಬಂಡವಾಳಶಾಹಿ ಕಳೆದುಕೊಳ್ಳಲು ಸಿದ್ಧವಾಗಿರಲಿಲ್ಲ. ಬಂಡವಾಳದ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಸರಕಾರದ ರಕ್ಷಣೆ ಮತ್ತು ಸಹಾಯ ಅಗತ್ಯವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಂತಹ ಪ್ರಕ್ರಿಯೆಗಳು ಪ್ರಮುಖವಾಗಿದ್ದು ಪ್ರತಿಯೊಂದು ಚುನಾವಣೆಗಳಲ್ಲೂ ಬಹಶ ದೊಡ್ಡ ಮೊತ್ತದ ಹಣದ ಚಲಾವಣೆಯಾಗುತ್ತದೆ. ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ಇಂತಹ ದೊಡ್ಡ ಮೊತ್ತದ ಹಣ ಒದಗಿಸುವ ಸಾಮರ್ಥ್ಯ ಉದ್ಯಮಪತಿಗಳಿಗೆ ಬಿಟ್ಟರೆ ಮಿಕ್ಕುಳಿದ ವರ್ಗಗಳಿಗೆ ಸಾಧ್ಯವಾಗಿರುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಗಳೂ ಬಂಡವಾಳಶಾಹಿ ಸರ್ಕಾರಗಳ ಮೇಲೆ ಪ್ರಭಾವ ಬೀರುವ ಮೂಲಕ ತಮಗನುಕೂಲವಾದ ವಾತಾವರಣ ನಿರ್ಮಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಮುಕ್ತ ವ್ಯವಸ್ಥೆಯ ಇಂತಹ ಪ್ರಭಾವದ ಹೊರತಾಗಿಯೂ ಜವಹರಲಾಲ್ ನೆಹರೂ ಅವರಂತಹ ನಾಯಕರಿಗೆ ಸಮಾಜವಾದೀ ಒಲವುಗಳಿದ್ದು, ರಷ್ಯಾದಲ್ಲಿ ಅನುಷ್ಠಾನಗೊಂಡ ಪಂಚವಾರ್ಷಿಕ ಯೋಜನೆಗಳು ಸಾಧಿಸಿದ ಅದ್ಭುತ ಪ್ರಗತಿಯ ಬಗೆಗೂ ಒಲವಿತ್ತು. ಸಮಾಜವಾದೀ ರಾಷ್ಟ್ರ ನಿರ್ಮಾಣ ಸಾಧನೆಗೆ ಪಂಚವಾರ್ಷಿಕ ಯೋಜನೆಗಳಂತಹ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಸಹಕಾರಿಯಾಗಬಲ್ಲವೆಂದು ನೆಹರೂ ಅವರಂತಹ ಜನನಾಯಕರು ತಿಳಿದಿದ್ದರು. ಈ ಕಾರಣದಿಂದಾಗಿ ಯಾವುದಾದರೊಂದು ನೀತಿಗೆ ಬದ್ದವಾಗಿ ಅಭಿವೃದ್ಧಿ ನೀತಿಯನ್ನೇ ರೂಪಿಸುವುದು ಸಾಧ್ಯವಾಗದೇ ಎರಡೂ ನೀತಿಗಳನ್ನು ಒಪ್ಪಿಕೊಂಡು ಸಮ್ಮಿಶ್ರ ಆರ್ಥಿಕ ನೀತಿಯನ್ನು ರೂಪಿಸಲಾಯಿತು. ಇದರಂತೆ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗೀ ವಲಯಗಳನ್ನು ಗುರುತಿಸಲಾಯಿತು. ಸಾರ್ವಜನಿಕ ರಂಗದಲ್ಲಿ ಬೃಹತ್ ಪ್ರಮಾಣದ ಉದ್ದಿಮೆಗಳು ಸಾರಿಗೆ ಮತ್ತು ಸಂಪರ್ಕ, ರಕ್ಷಣೆ ಮುಂತಾದ ಸ್ವರೂಪಾತ್ನಕ ಉತ್ಪಾದಕ ಚಟುವಟಿಕೆಗಳಿದ್ದರೆ ಮಿಕ್ಕುಳಿದುದನ್ನು ಖಾಸಗೀ ವಲಯದಲ್ಲಿ ಸೇರಿಸಿ ಬಿಡಲಾಯಿತು. ದೇಶದ ಹಿತದೃಷ್ಟಿಯಿಂದ, ಖಾಸಗಿ ವಲಯ ಕಾರ್ಯ ನಿರ್ವಹಿಸುವಂತೆ ಕೆಲವೊಂದು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಯಿತು. ವಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಶಕ್ತಿಗಳು ಯಾ ಕಾರಣಗಳು ಕೆಲಸ ಮಾಡಿವೆ. ಮಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿರುವ ಅಂಶಗಳು ಈ ಕೆಳಗಿನಂತಿವೆ.

೧. ೧೯೪೭ರ ಸಮಯದಲ್ಲಿ ನಮ್ಮ ದೇಶದಲ್ಲಿನ ಬಂಡವಾಳಶಾಹಿ ಉದ್ದಿಮೆರಂಗದಲ್ಲಿ ಆಗತಾನೇ ಬೆಳೆಯುವ ಹಂತದಲ್ಲಿದ್ದು ಬೃಹತ್ ಉದ್ದಿಮೆಗಳಲ್ಲಿ ತೊಡಗಿಕೊಳ್ಳುವಷ್ಟು ಪ್ರಬಲವಾಗಿರಲಿಲ್ಲ.

೨. ಹೆಚ್ಚಿನ ಬೃಹತ್ ಉದ್ಯಮಗಳು ಸ್ವರೂಪಾತ್ಮಕ ರೀತಿಯಲ್ಲಿದ್ದು ಅಲ್ಪಕಾಲದಲ್ಲಿ ಲಾಭದಾಯಕವಲ್ಲದ ಮತ್ತು ಪ್ರತ್ಯಕ್ಷವಾಗಿ ಪ್ರತಿಫಲ ನೀಡದಿರುವಂತಹ ರೀತಿಯವು ಆಗಿದ್ದವು. ಉದಾಹರಣೆಗೆ ಸಾರಿಗೆ, ಸಂಪರ್ಕ, ರೈಲ್ವೆ, ವಿದ್ಯುತ್ ಶಕ್ತಿ ಇತ್ಯಾದಿ.

೩. ಖಾಸಗೀ ಉದ್ಯಮ ವಲಯವನ್ನು ವಿದೇಶಿ ಉದ್ಯಮಗಳ ಸ್ಪರ್ದೆಯಿಂದ ರಕ್ಷಿಸುವುದು ಅಗತ್ಯವಾಗಿತ್ತು. ಯಾಕೆಂದರೆ ಅತ್ಯುತ್ತಮ ಮಟ್ಟದ ತಾಂತ್ರಿಕತೆಯನ್ನು ಬಳಸಿಕೊಂಡು ಉತ್ಪಾದನೆ ಮಾಡುವ ಮುಂದುವರಿದ ದೇಶಗಳ ಕೈಗಾರಿಕೆಗಳೊಂದಿಗೆ ಪೈಪೋಟಿ ನಡೆಸುವ ಶಕ್ತಿ ನಮ್ಮ ದೇಶದ ಕೈಗಾರಿಕೆಗಳಿಗಿರಲಿಲ್ಲ. ಆದ್ದರಿಂದ ವಿದೇಶಿ ಉತ್ಪನ್ನಗಳನ್ನು ದೇಶೀಯ ಮಾರುಕಟ್ಟೆ ಪ್ರವೇಶಿಸದಂತೆ ತಡೆಯುವ ಶಾಸನಾತ್ಮಕ ಕ್ರಮಗಳು ಅಗತ್ಯವಾಗಿದ್ದು, ಖಾಸಗೀ ವಲಯ ಇಂತಹ ನಿಯಂತ್ರಣ ವ್ಯವಸ್ಥೆಯನ್ನು ಬೆಂಬಲಿಸಿದವು.

೪. ಉದ್ಯೋಗಾವಕಾಶಗಳ ಸೃಷ್ಟಿಯ ದೃಷ್ಟಿಯಿಂದಲೂ ಸಾರ್ವಜನಿಕ ರಂಗದ ಮಹತ್ವದ ಪಾತ್ರವಹಿಸಬೇಕಿತ್ತು. ಭಾರತದಂತಹ ಮಾನವ ಸಂಪನ್ಮೂಲ ಅಧಿಕವಾಗಿರುವ ದೇಶದಲ್ಲಿ ಖಾಸಗಿ ವಲಯವೊಂದೇ ಉದ್ಯೋಗ ಸೃಷ್ಟಿಸುವುದು ಸಾಧ್ಯವಿಲ್ಲ. ಅಲ್ಲದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಚಲಿತವಿದ್ದ ಇನ್ನೊಂದು ಅಂಶ ಸಾಮಾಜಿಕ ಸಮಾನತೆ ಮತ್ತು ಅನಕ್ಷರತೆಯ ನಿರ್ಮೂಲನ. ಹಿಂದುಳಿದ ಮತ್ತು ಬಡವರ್ಗದ ಜನರಿಗೆ ಸಾಮಾಜಿಕ ನ್ಯಾಯವೊದಗಿಸುವಲ್ಲಿ (ಕೈಗಾರಿಕೀಕರಣದಲ್ಲಿ ಸರಕಾರ ಸಕ್ರಿಯವಾಗುವುದರ ಮೂಲದ ಅರ್ಥಾರ್ಥ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ) ಸರ್ಕಾರಿ ಸ್ವಾಮ್ಯದ ಉದ್ದಿಮೆರಂಗ ಪ್ರಮುಖ ಪಾತ್ರ ವಹಿಸಬೇಕಿತ್ತು.

ಮಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿದ ಅಂಶಗಳಲ್ಲಿ ಒಂದು, ಏಷ್ಯಾ ಖಂಡದಲ್ಲಿ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಲಿದ್ದ ರಷ್ಯಾದಂತಹ ದೇಶದಿಂದ ಭಾರತವು ಸಂಪೂರ್ಣವಾಗಿ ಹೊರಗುಳಿಯಬೇಕಾದರೆ ಬಂಡವಾಳಶಾಹಿ ವರ್ಜಿಗೆ ಮಣೆ ಹಾಕಲೇಬೇಕಾಗಿತ್ತು. ಆಗ ತಾನೇ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಇಂತಹ ಹಂಗು ಬೇಕಾಗಿರಲಿಲ್ಲ. ಹಾಗಾಗಿ ರಷ್ಯಾದೊಂದಿಗೆ ಆರ್ಥಿಕ ಸಂಬಂಧ ಸ್ಥಾಪಿಸಿಕೊಳ್ಳುವ ಮೂಲಕ ಒಂದು ರೀತಿಯ ಸಮತೋಲನ ಉಳಿಸಿಕೊಳ್ಳಲು ಪ್ರಯತ್ನಿಸಲಾಯಿತು. ಎರಡನೆಯದಾಗಿ, ಆರ್ಥಿಕ ಅಭಿವೃದ್ಧಿಯ ಅನುಷ್ಠಾನ ಒಂದು ನಿರ್ದಿಷ್ಟ ಚೌಕಟ್ಟನ್ನು ಬಯಸುತ್ತದೆ. ಈಗಾಗಲೇ ಅಭಿವೃದ್ಧಿ ಹೊಂದಿದ ಪಶ್ಚಿಮದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿದ್ದ ಮಾದರಿಯ ಚೌಕಟ್ಟುಗಳನ್ನೇ ನಮ್ಮ ದೇಶದಲ್ಲಿಯೂ ಸ್ವೀಕರಿಸಲಾಯಿತು. ಇವೆಲ್ಲಕಿಂತಲೂ ಮುಖ್ಯವಾಗಿ ಸಮಾಜವಾದಿ ತತ್ವಗಳ ಬಗ್ಗೆ ಜವಾಹರಲಾಲ್ ನೆಹರೂ ಅವರಿಗಿದ್ದ ಆಕರ್ಷಣೆಯೂ ಅಭಿವೃದ್ಧಿ ನೀತಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಒಟ್ಟಿನಲ್ಲಿ ಎರಡು ಪ್ರಮುಖ ವಿಚಾರಧಾರೆಗಳಿಂದ ಪ್ರೇರಿತವಾದ ಮಿಶ್ರ ಆರ್ಥಿಕ ನೀತಿಯನ್ನು ಪಂಚವಾರ್ಷಿಕ ಯೋಜನಾಧಾರಿತ ಕಾರ್ಯಕ್ರಮಗಳ ಮೂಲಕ ಅನುಷ್ಠಾನಕ್ಕೆ ತರಲು ನಿರ್ಧಿರಿಸಲಾಯಿತು.

ಸ್ವಾತಂತ್ರ್ಯ ನಂತರದ ಅರವತ್ತು ವರ್ಷಗಳು ಸಂದಿವೆ, ಹತ್ತು ಪಂಚವಾರ್ಷಿಕ ಯೋಜನೆಗಳು ಅನುಷ್ಠಾನಗೊಂಡಿವೆ. ಹಲವಾರು ಚುನಾಯಿತ ಸರ್ಕಾರಗಳು, ಸಮಾಜವಾದೀ ಸಮಾಜ ನಿರ್ಮಾಣ ಮಾಡಲು ಪ್ರಯತ್ನಗಳನ್ನು ನಡೆಸಿವೆ. ಭಾರತ ಸರ್ಕಾರದ ಅಭಿವೃದ್ಧಿ ಪ್ರಯತ್ನಗಳು ನೀಡಿರಬಹುದಾದ ಪ್ರತಿಫಲದ ಬಗ್ಗೆ ಯೋಚಿಸಿದರೆ ಮೇಲ್ನೋಟಕ್ಕೆ ಬಹಳಷ್ಟು ಬದಲಾವಣೆಗಳು ಸುಧಾರಣೆ ಆದಂತೆ ಕಂಡುಬಂದರೂ ವಾಸ್ತವಿಕವಾಗಿ ಇಂತಹ ಪ್ರತಿಫಲ ಕೆಲವೇ ವರ್ಗಗಳಲ್ಲಿ ಹರಿದು ಹೋಗಿ, ಕೆಳವರ್ಗದ ಜನರಂತೂ ಯಾವ ಪ್ರಯೋಜನವನ್ನು ಪಡೆಯಲಿಲ್ಲವೆಂದೇ ಹೇಳಬಹುದು. ಹಾಗಾಗಿ ನಿರುದ್ಯೋಗ, ಬಡತನ, ಅನಕ್ಷರತೆ, ಮೂಲಭೂತ ಸೌಕರ್ಯಗಳಿಲ್ಲದ ಹಳ್ಳಿಗಳ ಸಮಸ್ಯೆ ಅಭಿವೃದ್ಧಿ ಹೆಸರಲ್ಲಿ ಮೂಲೆಗುಂಪಾಗುತ್ತಿರುವ ಜನರ ಸಂಖ್ಯೆ ಮತ್ತು ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿರುವ ಪರಿಸರ ಸಂಬಂಧಿ ಪ್ರಶ್ನೆಗಳು ಪ್ರಸ್ತುತವಾಗಿವೆ ಮತ್ತು ಇಂತಹ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಕಂಡು ಹಿಡಿಯಬೇಕಾದ್ದು ಅಗತ್ಯವಾಗಿದೆ. ನಮ್ಮ ಮುಂದಿರುವ ಇಂತಹ ಸವಾಲುಗಳಿಗೆ ಅರ್ಥಶಾಸ್ತ್ರೀಯ ಮಿತಿಯೊಳಗೆ ಉತ್ತರ ಹುಡುಕಿದರೆ ಸೂಕ್ತ ಉತ್ತರ ಅಥವಾ ಪರಿಹಾರ ಸಿಗುವುದು ಕಷ್ಟ. ಯಾಕೆಂದರೆ ಒಂದು ಸಮಾಜದಲ್ಲಿ ಆರ್ಥಿಕ ಯೋಜನೆಗಳು ಕೇವಲ ಅರ್ಥಶಾಸ್ತ್ರೀಯ ಚೌಕಟ್ಟಿನಲ್ಲಿ ಮಾತ್ರ ಅನುಷ್ಟಾನಗೊಳ್ಳುವುದಿಲ್ಲ. ಬದಲಿಗೆ ಸಾಮಾಜಿಕ, ರಾಜನೈತಿಕ ಪ್ರಭಾವಕ್ಕೊಳಪಟ್ಟು ಅನುಷ್ಠಾನಗೊಳ್ಳುತ್ತವೆ. ಈ ಕಾರಣದಿಂದಾಗಿ ಒಂದು ನಿರ್ದಿಷ್ಟ ಆರ್ಥಿಕ ನೀತಿಯ ಪರಿಣಾಮ ಬೇರೆ ಬೇರೆ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗಳಲ್ಲಿ ವಿಭಿನ್ನ ರೀತಿಯ ಪರಿಣಾಮಗಳನ್ನು ನೀಡುತ್ತದೆ. ಇದೇ ಕಾರಣದಿಂದಾಗಿ ಅಮೇರಿಕಕ್ಕೆ ಅಥವಾ ಜಪಾನಿಗೆ ಸೂಕ್ತವೆನಿಸುವ ಆರ್ಥಿಕ ನೀತಿ ಭಾರತಕ್ಕೆ ಸೂಕ್ತವಾಗಲೇ ಬೇಕಾಗಿಲ್ಲ. ಸಂಕ್ಷಿಪ್ತವಾಗಿ ಹೇಳುವುದಿದ್ದರೆ ನಮ್ಮ ಆರ್ಥಿಕ ವ್ಯವಸ್ಥೆಯ ನೀರಸ ಪರಿಣಾಮಗಳಿಗೆ ಸಾಮಾಜಿಕ ಮತ್ತು ರಾಜನೈತಿಕ ಹಿನ್ನಲೆಯಲ್ಲೂ ಸೂಕ್ತ ಉತ್ತರ ಹುಡುಕುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ. ಈ ದಿಸೆಯಲ್ಲಿ ಈ ಲೇಖನವು ಮೇಲ್ಕಂಡ ವಿಚಾಗಳನ್ನು ಚರ್ಚಿಸುವ ಉದ್ದೇಶವನ್ನು ಹೊಂದಿದೆ.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಮತ್ತು ಪ್ರಭಾವಶಾಲಿಯಾಗಿರುವ ವರ್ಗಗಳ ಕುರಿತು ತಿಳಿಯೋಣ. ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ರೂಪುಗೊಳ್ಳುವಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಿದ ಉದ್ದಿಮೆದಾರರ ಮತ್ತು ವ್ಯಾಪಾರಿ ವರ್ಗದ ಹಿತಾಸಕ್ತಿಯ ಕುರಿತು ಹಿಂದೆಯೇ ಪ್ರಸ್ತಾಪಿಸಲಾಗಿದೆ. ಈ ಲಾಬಿಯ ಆಶಯದಂತೆ ಆಮದು ಕಡಿತಗೊಳಿಸುವುದು, ದೇಶಿಯ ಮಾರುಕಟ್ಟೆಗೆ ಶಾಸನಾತ್ಮಕ ಕ್ರಮಗಳ ಮೂಲಕ ರಕ್ಷಣೆ ಒದಗಿಸುವುದು, ಅರ್ಥವ್ಯವಸ್ಥೆಯ ಸ್ವರೂಪಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಬೃಹತ್ ಉದ್ಯಮಗಳಲ್ಲಿ ಸರಕಾರ ಬಂಡವಾಳ ಹೂಡುವುದು ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡಿತು. ಖಾಸಗೀ ವಲಯದ ಕೈಗಾರಿಕೆಗಳ ಬೆಳವಣಿಗೆಯನ್ನು ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಕಂಡು ಶಾಸನಗಳಲ್ಲಿ ರೂಪಿಸಲಾಗಿತ್ತಾದರೂ ಇಂತಹ ಕ್ರಮಗಳ ಅನುಷ್ಠಾನವಾದದ್ದು ಅಪರೂಪವೆಂದೇ ಹೇಳಬೇಕು. ಖಾಸಗಿ ರಂಗ ಕೆಲವೇ ಕುಟುಂಬಗಳ ಮಾಲಿಕತ್ವಕ್ಕೆ ಸೀಮಿತವಾಯಿತು. ಖಾಸಗಿ ಉದ್ದಿಮೆಗಳು ತಮ್ಮಲ್ಲಿದ್ದ ಸಂಪತ್ತಿನ ಬಲದಿಂದ ತಾವೆಸಗಿದ ಅರ್ಥಿಕ ಅಪರಾಧಗಳನ್ನು ಸಕ್ರಮಗೊಳಿಸುತ್ತಾ ಬಂದವು. ಖಾಸಗೀ ಉದ್ದಿಮೆಗಳಲ್ಲಿ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳು ಬೃಹತ ಪ್ರಮಾಣದ ಶೇರು ಬಂಡವಾಳ ಹೊಂದಿದ್ದರೂ ಅವುಗಳನ್ನು ರಾಷ್ಟ್ರೀಯ ಹಿತಾಸಕ್ತಿಗಳಿಗನುಸಾರವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ನಮ್ಮ ಸರಕಾರಗಳು ಯಶಸ್ವಿಯಾಗಲಿಲ್ಲ. ಮಾತ್ರವಲ್ಲ ಖಾಸಗೀ ವಲಯದಲ್ಲಿ ನಷ್ಟ ಅನುಭವಿಸುವ ಅಥವಾ ರೋಗಗ್ರಸ್ಥ ಉದ್ದಿಮೆಗಳನ್ನು ಸರಕಾರದ ಮಡಿಲಿಗೆಸೆದು ಉದ್ಯಮಪತಿಗಳು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಪರಿಪಾಠವಾಯಿತು. ಒಟ್ಟಿನಲ್ಲಿ ಕೈಗಾರಿಕಾ ವಲಯದಲ್ಲಿ ಖಾಸಗೀ ಉದ್ದಿಮೆಗಳು ಸ್ವಂತ ಹಿತಾಸಕ್ತಿಗಳನ್ನೇ ಪ್ರಧಾನ ಗುರಿಯಾಗಿಸಿಕೊಂಡು ಬಂಡವಾಳಶಾಹಿ ಬೆಳವಣಿಗೆಗೆ ಸಹಕರಿಸಿದವು. ಉದ್ದಿಮೆರಂಗದ ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ ಸಣ್ಣ ಉದ್ದಿಮೆಗಳ ಸಂಖ್ಯೆಯಲ್ಲಿ ಆದಂತಹ ಹೆಚ್ಚಳ. ಮೇಲ್ನೋಟಕ್ಕೆ ಅಭಿವೃದ್ಧಿಯ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎನಿಸಿದರೂ ವಾಸ್ತವವಾಗಿ ಹಾಗಿಲ್ಲ. ಕಾರಣ ಇಂತಹ ಸಣ್ಣ ಉದ್ದಿಮೆಗಳು ನವ ಉದ್ಯಮಪತಿಗಳಿಂದ ಅಥವಾ ಉದ್ಯಮ ಸಂಪರ್ಕವಿಲ್ಲದ ಜನರಿಂದ ಪ್ರಾರಂಭಿಸಿದಂತಹ ಉದ್ದೆಮೆಗಳಾಗಿರದೆ, ಬೃಹತ ಕೈಗಾರಿಕೆಗಳ ಉಪಯೋಗಕ್ಕಾಗಿ ಅಸ್ತಿತ್ವಕ್ಕೆ ಬಂದವುಗಳಾಗಿದ್ದವು. ಕಾರ್ಮಿಕ ಕಾನೂನಿನಿಂದ ವಿನಾಯತಿ ಸುಂಕ ಮಾತ್ತು ತೆರಿಗೆ ವಿನಾಯತಿ, ಸಹಾಯಧನ ಮುಂತಾದ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಲು ಹುಟ್ಟಿನಿಂದ ನಾಮಕಾವಸ್ತೆ ಉದ್ದಿಮೆಗಳಾಗಿವುದನ್ನು ಕಾಣಬಹುದಾಗಿದೆ. ಹಾಗಾಗಿ ಸಣ್ಣ ಉದ್ಯಮ ವಲಯದ ಕಾರ್ಯ ನಿರ್ವಹಣೆ ಕುರಿತು ಸಮಾಧಾನ ಪಡುವ ಹಾಗಿಲ್ಲ.

ಭಾರತದ ಅರ್ಥ ವ್ಯವಸ್ಥೆಯಲ್ಲಿ ಪ್ರಬಲವಾದ ಇನ್ನೊಂದು ವರ್ಗ ಶ್ರೀಮಂತ ಭೂಮಲೀಕರಿದ್ದು, ಕೃಷಿ ಪ್ರಧಾನವಾದ ದೇಶದಲ್ಲಿ ಹೆಚ್ಚು ಸಂಖ್ಯೆಯ ಜನ ಜೀವನಾಧರಕ್ಕಾಗಿ ಕೃಷಿಯನ್ನವಲಂಬಿಸಿದ್ದರು. ಭೂಮಿಯ ಒಡೆತನ ಮಾತ್ರ ಕೆಲವೇ ಜನರಲ್ಲಿ ಅಥವಾ ಕೆಲವೇ ವರ್ಗದ ಜನರಲ್ಲಿ ಕೇಂದ್ರಿಕೃತವಾಗಿದೆ. ಹೀಗೆ ಭೂಮಾಲೀಕರಾಗಿದ್ದು, ಗೇಣಿ ವಸೂಲಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಬಂಡವಾಳ ಸಂಚಯನ ಸಾಧ್ಯವಾಗಿ ಆಭಿವೃದ್ಧಿಯ ಹಂತದಲ್ಲಿ ಸೇವಾರಂಗ, ಆಡಳಿತಕ್ಷೇತ್ರ ರಾಜಕೀಯ ಮುಂತಾದೆಡೆ ಸೃಷ್ಟಿಯಾದ ಹೊಸ ಹೊಸ ಅವಕಾಶಗಳನ್ನುಪಯೋಗಿಸಿಕೊಳ್ಳಲು ಸಾಧ್ಯವಾಯಿತು. ಸಣ್ಣ ಹಿಡುವಳಿದಾರರಿಗೆ ಮತ್ತು ಗೇಣಿದಾರರಿಗೆ ಭೂಮಸೂದೆಯಂತಹ ಪ್ರಗತಿಪರ ಕಾರ್ಯಕ್ರಮಗಳು ಕೊಂಚ ಮಟ್ಟಿಗೆ ಪ್ರಯೋಜನವುಂಟು ಮಾಡಿರುವುದನ್ನು ಒಪ್ಪಬಹುದು. ಕೃಷಿಕ್ಷೇತ್ರದ ಪ್ರಗತಿಗೆ ಸರಕಾರ ಕೊಡ ಮಾಡಿದ ಸವಲತ್ತುಗಳು ಸಣ್ಣ ರೈತರಿಗಿಂತಲೂ ದೊಡ್ಡ ಜಮೀನುದಾರರಿಗೆ ದೊಡ್ಡ ರೀತಿಯ ಪ್ರಯೋಜನವುಂಟು ಮಾಡಿದವು. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮತ್ತು ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯಾಗುತ್ತ ಬಂದಾಗ ದೊಡ್ಡ ರೈತರು ಆರ್ಥಿಕವಾಗಿ ಹೆಚ್ಚು ಹೆಚ್ಚು ಬೆಳೆಯಲಾರಂಭಿಸಿದರು. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕತೆಗೆ ದೊಡ್ಡ ಹಿಡುವಳಿಯಿದ್ದಷ್ಟು ಅಧಿಕ ಲಾಭವಿದ್ದುದರಿಂದ ಶ್ರೀಮಂತರಾದ ಭೂಮಾಲಿಕರು ಸಣ್ಣ ರೈತರ ಜಮೀನುಗಳನ್ನು ಆಕರ್ಷಕ ಬೆಲೆಗೆ ಕೊಂಡುಕೊಳ್ಳಲು ಶುರುಮಾಡಿದರು. ಹೀಗಾಗಿ ಆರ್ಥಿಕ ಕಾರಣಗಳಿಂದಾಗಿ ಸಣ್ಣ ಹಿಡುವಳಿದಾರರು ತಮ್ಮ ಜಮೀನುಗಳನ್ನು ಶ್ರೀಮಂತ ರೈತರಿಗೆ ಮಾರಿ ಪಟ್ಟಣಕ್ಕೆ ವಲಸೆ ಹೋದರು ಅಥವಾ ಕೃಷಿ ಕಾರ್ಮಿಕರಾಗಿ ಸೇರಿಕೊಂಡರು. ಇನ್ನು ಕೃಷಿಯನ್ನವಲಂಬಿಸಿದ ಕೂಲಿಕಾರ್ಮಿಕರು ಮತ್ತು ಕುಶಲಕರ್ಮಿಗಳು ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಾ ಬಂದಂತೆ ಕೂಲಿ ಕಾರ್ಮಿಕರಾದರು ಅಥವಾ ಪಟ್ಟಣಕ್ಕೆ ವಲಸೆ ಹೋಗಲಾರಂಭಿಸಿದರು. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಸರಕಾರ ನೀಡಿದ ಸವಲತ್ತುಗಳು ಆರ್ಥಿಕವಾಗಿ ಸಶಕ್ತರಾಗಿದ್ದ ರೈತರಿಗೆ ಮಾತ್ರ ಹರಿದುಬರಲು ಶಕ್ತವಾಯಿತು. ಕೃಷಿಯನ್ನವಲಂಭಿಸಿದ ಕೂಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಶ್ರೀಮಂತ ರೈತರೊಂದಿಗೆ ಸಾಲಿಗ ಮಾಲಿಕ ಸಂಬಂಧ ಮಾತ್ರ ಹೊಂದಿದ್ದು ಅವರೊಂದಿಗೆ ಹೊಂದಿಕೊಂಡು ಯಾ ಅವರು ಮರ್ಜಿಗನುಗುಣವಾಗಿ ಬದುಕುತ್ತಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಕಂಡು ಬರುವ ಕೃಷಿಕರ ಸಂಖ್ಯೆ ಅಪಾರವೆನಿಸಿದರೂ ಭೂಮಾಲಿಕತ್ವ ಹೊಂದಿದ್ದು ಇದರಿಂದ ಪ್ರಯೋಜನ ಪಡೆಯುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಿದೆ. ಬಹು ಸಂಖ್ಯಾತರಾಗಿರುವ ಕೃಷಿ ಕಾರ್ಮಿಕರಾಗಲೀ, ಕೂಲಿಕಾರ್ಮಿಕರಾಗಲೀ ಸಂಘಟಿತರಾಗಿಲ್ಲಿ. ಇದಕ್ಕೆ ಪ್ರಮುಖ ಕಾರಣ, ತಮ್ಮೆಲ್ಲ ಅವಶ್ಯಕತೆಗಳಿಗೆ ಶ್ರೀಮಂತ ಭೂಮಾಲಿಕರನ್ನೇ ಅವಲಂಭಿಸಿಕೊಂಡಿರುವುದು, ಅನಕ್ಷರತೆ, ಸಾಮಾಜಿಕ ಅಸಮಾನತೆಯೆ ಮುಂತಾದವುಗಳಾಗಿವೆ. ಹಾಗಾಗಿ ಬಹುಸಂಖ್ಯೆಯಲ್ಲಿದ್ದರೂ ಇವರು ಸಾಮಾಜಿಕವಾಗಿ ಅಥವಾ ರಾಜಕೀಯವಾಗಿ ಸಂಘಟಿತ ಹೋರಾಟ ನಡೆಸಲು ಶಕ್ತರಾಗಿಲ್ಲ.