ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದು ಅನೇಕ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಮಸ್ಯೆಗಳೊಡನೆ ತಳುಕು ಹಾಕಿಕೊಂಡಿತ್ತು. ಸ್ವಾತಂತ್ರ್ಯ ಬಂದ ಕೂಡಲೇ ಭಾರತವು ಬಡತನ, ಕೋಮುವಾದ, ಅನಕ್ಷರತೆ, ನಿರುದ್ಯೋಗ, ಜಾತಿವಾದ, ಜನಸಂಖ್ಯಾ ಸ್ಫೋಟ ಮೊದಲಾದ ಸಾಮಾಜಿಕ ಸಮಸ್ಯೆಗಳನ್ನು ಎದುರಿಸತೊಡಗಿತು. ಸ್ವಾತಂತ್ರ್ಯಾನಂತರ ಭಾರತವು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸುವ ಮೊದಲು ಸಾಮಾಜಿಕ ಸಮಸ್ಯೆಗಳೆಂದರೆ ಏನು ಎಂಬುದನ್ನು ಗ್ರಹಿಸಲು ಪ್ರಯತ್ನಿಸಬಹುದು. ಸಾಮಾಜಿಕ ಸಮಸ್ಯೆಗಳೆಂದರೆ, ಯಾವುದೇ ಸಮಾಜ ಅಥವಾ ಗುಂಪು ಸಾಮೂಹಿಕವಾಗಿ ಮಾತ್ರ ಪರಿಹರಿಸಬಹುದಾದ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿದ್ಯಮಾನ ಎನ್ನಬಹುದು ಅಥವಾ ಜನರ ದಿನನಿತ್ಯದ ಸುಗಮ ಬದುಕಿಗೆ ಅಡ್ಡಿಯುಂಟುಮಾಡುವ ಅಥವಾ ಅಡ್ಡ ಪರಿಣಾಮಗಳನ್ನು ಬೀರುವ ಸಮಾಜದ ಪ್ರಗತಿಗೆ ತಡೆಯುಂಟುಮಾಡುವ ಯಾವುದೇ ಸಂದರ್ಭವನ್ನು, ಘಟನೆಗಳನ್ನು ನಾವು ಸಮಾಜದ ಪ್ರಗತಿಗೆ ತಡೆಯುಂಟುಮಾಡುವ ಯಾವುದೇ ಸಂದರ್ಭವನ್ನು, ಘಟನೆಗಳನ್ನು ನಾವು ಸಾಮಾಜಿಕ ಸಮಸ್ಯೆಗಳೆನ್ನಬಹುದು.

ಮರ್ಟನ್‌ ಮತ್ತು ಲಿಸೆಟ್‌ ಅವರ ಪ್ರಕಾರ, “ಯಾವ ನಡವಳಿಕೆಯು ಸಾಮೂಹಿಕವಾಗಿ, ಸ್ವೀಕೃತವಾಗಿರುತ್ತದೆಯೋ ಅಂತಹ ನಡವಳಿಕೆಗಿಂತ ಭಿನ್ನವಾದ ಅಥವಾ ಅಂತಹ ನಡವಳಿಕೆಗಳನ್ನು ಉಲ್ಲಂಘಿಸುವ ನಡವಳಿಕೆಯನ್ನು” ಸಾಮಾಜಿಕ ಸಮಸ್ಯೆ ಎನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಸಾಮಾಜಿಕ ಪರಿಸ್ಥಿತಿಯು ಬಹುಸಂಖ್ಯಾತ ಜನಸಮುದಾಯದ ಜೀವನ ಕ್ರಮದ ಮೇಲೆ ಅನಪೇಕ್ಷಣೀಯವಾದ ಪರಿಣಾಮವನ್ನು ಬೀರುತ್ತಾ, ಅದನ್ನು ಪರಿಹರಿಸಲು ಒಂದು ಸಾಮೂಹಿಕ ಪ್ರಯತ್ನವನ್ನು ಬೇಡುತ್ತದೆಯೋ ಅದನ್ನೇ ಸಮಾಜಿಕ ಸಮಸ್ಯೆ ಎಂದು ಕರೆಯಲಾಗುತ್ತದೆ.

ಸಾಮಾಜಿಕ ಸಮಸ್ಯೆಗಳನ್ನು ಕುರಿತ ಮೇಲಿನ ನಿರ್ವಚನಗಳು ಪರಿಪೂರ್ಣವಾಗಿಲ್ಲ. ಏಕೆಂದರೆ, ಸಾಮಾಜಿಕ ಸಮಸ್ಯೆಗಳನ್ನು ಸಮಗ್ರವಾಗಿ ವಿವರಿಸುವುದು ಕಷ್ಟಸಾಧ್ಯ. ಆದುದರಿಂದ ನಾವು ಸಾಮಾಜಿಕ ಸಮಸ್ಯೆಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಂಡರೆ ಸಾಮಾಜಿಕ ಸಮಸ್ಯೆಗಳನ್ನು ಗ್ರಹಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಬಹುದು. ಆ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಬಹುದು. ಸಾಮಾಜಿಕ ಸಮಸ್ಯೆಗಳು ಎಲ್ಲ ಕಾಲಘಟ್ಟದಲ್ಲಿಯೂ ಆಯಾ ಕಾಲ ಸಂದರ್ಭಕ್ಕನುಗುಣವಾಗಿ ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಸಮಸ್ಯೆಗಳ ಮುಖ್ಯ ಗುಣವೆಂದರೆ ಅವು ಮನುಷ್ಯ ಸಮಾಜದಲ್ಲಿ ಮಾತ್ರ ಕಂಡುಬರುತ್ತವೆ. ಸಾಮಾಜಿಕ ಸಮಸ್ಯೆಗಳು ಸಾಪೇಕ್ಷವಾಗಿರುತ್ತವೆ. ಒಂದು ಸಮಾಜದಲ್ಲಿ ಸಾಮಾಜಿಕ ಸಮಸ್ಯೆ ಎನಿಸಿಕೊಂಡಿರುವುದು ಮತ್ತೊಂದು ಸಮಾಜದಲ್ಲಿ ಸಮಸ್ಯೆಯಾಗದೇ ಹೋಗಿರಬಹುದು. ಯಾವ ಸಾಮಾಜಿಕ ಸಮಸ್ಯೆಯನ್ನೂ ನಾವು ಪ್ರತ್ಯೇಕವಾಗಿ ಅಧ್ಯಯನ ಮಾಡಲು ಸದ್ಯವಿಲ್ಲ. ಏಕೆಂದರೆ, ಇವು ಪರಸ್ಪರ ಸಂಬಂಧವನ್ನು ಹೊಂದಿದ್ದು, ಒಂದರ ಮೇಲೆ ಮತ್ತೊಂದು ಪರಿಣಾಮವನ್ನು ಬೀರುತ್ತದೆ. ಸಾಮಾಜಿಕ ಸಮಸ್ಯೆಗಳ ಮತ್ತೊಂದು ಬಹುಮುಖ್ಯ ಲಕ್ಷಣವೆಂದರೆ, ಅವು ತಮ್ಮ ಮೂಲ ಹುಟ್ಟನ್ನು ಚಾರಿತ್ರಿಕವಾಗಿ ಪಡೆದಿರುತ್ತದೆ. ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ಚಾರಿತ್ರಿಕವಾದ, ಸಾಂಸ್ಕೃತಿಕವಾದ ಹಿನ್ನೆಲೆಯನ್ನು ಹೊಂದಿರುತ್ತದೆ. ಯಾವುದೇ ಸಮಸ್ಯೆಗೆ ಒಂದೇ ಒಂದು ಖಚಿತವಾದ, ನಿರ್ದಿಷ್ಟವಾದ ಕಾರಣವಿರುವುದಿಲ್ಲ. ರಾಜಕೀಯ, ಆರ್ಥಿಕ, ಸಮಾಜಿಕ, ಸಾಂಸ್ಕೃತಿಕ, ಆಡಳಿತಾತ್ಮಕ, ಶಾಸನಾತ್ಮಕ ಹೀಗೆ ಬೇರೆ ಬೇರೆ ಕಾರಣಗಳನ್ನು ಗುರುತಿಸಬಹುದು.

ಭಾರತದಂತಹ ವಸಾಹತುಶಾಹಿ ಆಡಳಿತಕ್ಕೊಳಪಟ್ಟ ರಾಷ್ಟ್ರಗಳ ಸಮಸ್ಯೆಯ ಮೂಲ ವಸಾಹತುಶಾಹಿ ಆಡಳಿತದಲ್ಲಿರುವುದು ಕಮಡುಬರುತ್ತದೆ. ಸ್ವಾತಂತ್ರ್ಯಾನಂತರದ ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ಒಂದಲ್ಲಾ ಒಂದು ರೀತಿಯಲ್ಲಿ ವಸಾಹತುಶಾಹಿ ಆಡಳಿತದೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಆದುದರಿಂದಲೇ ಭಾರತದ ರಾಜಕೀಯ ವಿಮೋಚನೆಯೊಂದಿಗೆ ಸಾಮಾಜಿಕ ಸಮಸ್ಯೆಗಳು ಬಗೆಹರಿಯಲಿಲ್ಲ. ಅವು ನೇರವಾಗಿ ಸ್ವಾತಂತ್ರ್ಯಾನಂತರದ ಭಾರತದ ಮೇಲೆ ಗಾಢವಾದ ನಕಾರಾತ್ಮಕ ಪರಿಣಾಮಗಳನ್ನು ಬೀರಿರುವುದನ್ನು ಗಮನಿಸಬಹುದು.

ಭಾರತವು ಎದುರಿಸುತ್ತಿರುವ ಸಾಮಾಜಿಕ ಸಮ್ಯೆಗಳ ಪಟ್ಟಿ ಬಹಳ ದೊಡ್ಡದಾಗಿದೆ. ಬಡತನ, ನಿರುದ್ಯೋಗ, ಜನಸಂಖ್ಯಾ ಸ್ಫೋಟ, ಯುವಜನ ಅಶಾಂತಿ, ಬಾಲ ಕಾರ್ಮಿಕರ ಸಮಸ್ಯೆ, ಮಹಿಳೆಯರ ಮೇಲೆ ಜರುಗುವ ಹಿಂಸೆಯ ಸಮಸ್ಯೆ, ಮದ್ಯಪಾನ ಮತ್ತು ಮಾದಕರ ವಸ್ತುಗಳ ಸೇವನೆ, ಅಪರಾಧದ ಹೆಚ್ಚಳ, ಬಾಲಾಪರಾಧ, ಏಡ್ಸ್‌ರೋಗ, ಭಯೋತ್ಪಾದನೆ, ಭ್ರಷ್ಟಾಚಾರ, ಜೀತಗಾರರ ಸಮಸ್ಯೆ, ಕಪ್ಪುಹಣ, ಜಾತಿವಾದ, ಕೋಮುವಾದ, ಅಸ್ಪೃಶ್ಯತೆಯ ಆಚರಣೆ, ಬುಡಕಟ್ಟುಗಳ ನಿರಾಶ್ರಿತತೆ ಹೀಗೆ ನೂರಾರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು.

ಬಡತನ

ಬಡತನವು ವಸಾಹತುಶಾಹಿ ಕಾಲದಿಂದಲೂ ಕಂಡುಬರುತ್ತಿರುವ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ. ಬಡತನವೆಂದರೆ, ಪ್ರಾಥಮಿಕ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲಾಗದ ನಿರ್ದಿಷ್ಟ ಜೀವನಮಟ್ಟವನ್ನು ಕಾಯ್ದುಕೊಳ್ಳಲಾಗದ ಪರಿಸ್ಥಿತಿಯೇ ಆಗಿದೆ. ಜೊತೆಗೆ ಸಾಪೇಕ್ಷವಾಗಿ ಸಮಾಜದ ವಿವಿಧ ಗುಂಪುಗಳ ನಡುವೆ ಕಂಡುಬರುವ ಏರುಪೇರಾಗಿದೆ. ೧೯೯೫ರ ಯೋಜನಾ ಆಯೋಗದ ಪ್ರಕಾರ ಭಾರತದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಸುಮಾರು ಶೇ. ೩೩.೪ರಷ್ಟಿತ್ತು. ಆದರೆ, ಆಹಾರ, ವಸತಿ, ಔಷಧಿ, ಪ್ರಾಥಮಿಕ ಶಿಕ್ಷಣ ಮತ್ತು ಸಾರಿಗೆ ಸೌಲಭ್ಯವನ್ನೂ ಬಡತನದ ಪ್ರಮಾಣ ಅಳೆಯುವ ಮಾನದಂಡನೆಗಳೆಂದು ಸಮಾಜಶಾಸ್ತ್ರಜ್ಞರು ವಾದಿಸುತ್ತಾರೆ. ೧೯೯೫ರ ಅಂಕಿಅಂಶಗಳ ಪ್ರಕಾರ ಭಾರತದ ವಿವಿಧ ರಾಜ್ಯಗಳಲ್ಲಿ ಬಡತನದ ರೇಖೆಗಿಂತ ಕೆಳಗಿರುವವರ ಜನಸಂಖ್ಯೆ ಕೆಳಂಡಂತಿದೆ.

ಒರಿಸ್ಸಾ ರಾಜ್ಯದಲ್ಲಿ ಶೇ. ೪೪.೭, ಬಿಹಾರದಲ್ಲಿ ೪೦.೮, ಮಧ್ಯಪ್ರದೇಶದಲ್ಲಿ ೩೬.೭, ಉತ್ತರ ಪ್ರದೇಶದಲ್ಲಿ ೩೫.೧, ತಮಿಳುನಾಡು ೩೨.೮ ಹೀಗೆ ಭಾರತದ ಬಡತನದ ರೇಖೆಯ ಪ್ರಮಾಣ ಪ್ರಪಂಚದ ಅತಿ ಬಡರಾಷ್ಟ್ರಗಳಲ್ಲಿ ಇರುವಂತೆಯೇ ಇದೆ. ಯೋಜನಾ ಆಯೋಗದ ಇತ್ತೀಚಿನ ಅಂಕಿಅಂಶಗಳು ಹೇಳುವ ಪ್ರಕಾರ ನಮ್ಮ ದೇಶದಲ್ಲಿ ೩೨೦ ಮಿಲಿಯನ್‌ಬಡವರು ವಾಸಿಸುತ್ತಿದ್ದಾರೆ. ಇದರಲ್ಲಿ ಶೇ. ೧೦ ರಷ್ಟು ಜನರು ಕಡುದಾರಿದ್ರ್ಯದ ಬದುಕನ್ನು ನಡೆಸುತ್ತಿದ್ದಾರೆ. ಈ ಅಂಕಿಅಂಶಗಳ ಕುರಿತು ಯೋಜನಾ ಆಯೋಗದ ತಜ್ಞರಲ್ಲಿ ಮತ್ತು ಇತರ ಅರ್ಥಶಾಸ್ತ್ರಜ್ಞರ ನಡುವೆ ಒಮ್ಮತವಿಲ್ಲ. ಆದರೂ ಒಟ್ಟಾರೆಯಾಗಿ ಹೇಳುವುದಾದರೆ ಭಾರತವು ಅತೀವ ಬಡತನದಿಂದ ನರಳುತ್ತಿರುವ ರಾಷ್ಟ್ರವಾಗಿದೆ. ಬಡತನವು ನಮ್ಮ ದೇಶದ ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ.

ಬಡತನಕ್ಕೆ ಸಾಮಾಜಿ, ಆರ್ಥಿಕ ಮತ್ತು ರಾಜಕೀಯ ಕಾರಣಗಳನ್ನು ಸಮಾಜಶಾಸ್ತ್ರಜ್ಞರು ಗುರುತಿಸುತ್ತಾರೆ. ಸಾಮಾಜಿಕ ಕಾರಣಗಳಲ್ಲಿ ಜಾತಿಪದ್ಧತಿ, ಲಿಂಗ ಪೂರ್ವಗ್ರಹ, ಕೋಮುವಾದ ಮತ್ತು ಪ್ರಾಂತೀಯ ವಾದಗಳು ನೆರವಾಗಿ ಸಾಮಾಜಿಕ ಬಡತನಕ್ಕೆ ಕಾರಣವಾಗಿದೆ. ಹೇಗೆಂದರೆ, ಜಾತಿಪದ್ಧತಿಯು ಬಹುಸಂಖ್ಯಾತ ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ನ್ಯಾಯವಾಗಿ ದೊರಕಬೇಕಾದ ನೈಸರ್ಗಿಕ ಸಂಪತ್ತಿನಿಂದ ವಂಚಿಸಿದೆ. ಪುರೋಹಿತಶಾಹಿ ಮತ್ತು ಪ್ರಬಲ ಜಾತಿಗಳು ಅಸಂಖ್ಯಾತ ಜಾತಿ ಸಮುದಾಯಗಳನ್ನು ಭೂಒಡೆತನದಿಂದ ದೂರವಿಟ್ಟವು. ಪರಿಣಾಮವಾಗಿ ಭೂರಹಿತ ಸಮುದಾಯಗಳು ನಿರಂತರವಾದ ಬಡತನದಲ್ಲಿ ನರಳುವಂತಾಯಿತು. ಸ್ವಾತಂತ್ರ್ಯಾನಂತರವೂ ಕೂಡ ಜಾತಿವಾದವು ಸ್ವಲ್ಪವೂ ಬದಲಾಗದೆ ಹಾಗೆಯೇ ಉಳಿದುಕೊಂಡು ಬಂದಿದೆ. ಹೊಸ ವಿದ್ಯಮಾನವೆಂಬಂತೆ ಕಳೆದೆರಡು ದಶಕಗಳಲ್ಲಿ ಕೋಮುವಾದವು ತೀವ್ರತರವಾಗಿ ಹಬ್ಬಿ ಅಲ್ಪಸಂಖ್ಯಾತ ಸಮುದಾಯಗಳನ್ನು ನಾಗರಿಕ ಅವಕಾಶಗಳಿಂದ ವಂಚಿಸಿ ಅವುಗಳನ್ನು ಬಡತನದಲ್ಲಿಯೇ ಉಳಿಯುವಂತೆ ಮಾಡಲು ಪ್ರಯತ್ನಿಸುತ್ತಿದೆ. ಪ್ರಾಂತೀಯವಾದದ ಪ್ರಾಬಲ್ಯದಿಂದಾಗಿ ಗಡಿಪ್ರದೇಶಗಳನ್ನು ನಿರ್ಲಕ್ಷಿಸಿ ಬಡತನದ ರೇಖೆಯ ಪ್ರಮಾಣವು ಈ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಆರ್ಥಿಕ ಕಾರಣಗಳೂ ಬಡತನದ ಪ್ರಮಾಣವನ್ನು ಹೆಚ್ಚುತ್ತಿವೆ. ಚಾರಿತ್ರಿಕವಾಗಿ ನೋಡಿದಾಗ ಬ್ರಿಟಿಷರ ಆಡಳಿತವು ಭಾರತದ ಗೃಹ ಕೈಗಾರಿಕೆಗಳನ್ನು ನಾಶ ಮಾಡಿದ್ದರಿಂದ ಬಡತನದ ಪ್ರಮಾಣವು ಜಾಸ್ತಿಯಾಯಿತು. ಸ್ವಾತಂತ್ರ್ಯಾನಂತರ ಕೈಗಾರೀಕರಣ ಮತ್ತು ಕೃಷಿಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ನಮ್ಮ ಸರ್ಕಾರಗಳು ವಿಫಲವಾದವು. ಕೃಷಿ ಅಭಿವೃದ್ಧಿಗಾಗಿ ಅಥವಾ ಗ್ರಾಮೀಣ ಅಭಿವೃದ್ಧಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಆಡಳಿತದ ಭ್ರಷ್ಟಾಚಾರ ಮತ್ತು ವೈಜ್ಞಾನಿಕ ಯೋಝನೆಗಳಿಂದ ಜಾರಿಗೆ ಬರಲಿಲ್ಲ. ಬಡತನದ ಪ್ರಮಾಣವು ಜಾಸ್ತಿಯಾಗುತ್ತಲೇ ಹೋಯಿತು. ೧೯೯೨ರ ನಂತರ ಬಡತನ ಮತ್ತು ಬಡತನಕ್ಕೆ ಸಂಬಂಧಪಟ್ಟ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿವೆ. ೧೯೯೨ರಲ್ಲಿ ಭರತ ಸರ್ಕಾರವು ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳನ್ನು ಅಳವಡಿಸಿಕೊಂಡಿತು. ಅಲ್ಲಿಯವರೆಗೆ ಮೇಲ್ನೋಟಕ್ಕಾದರೂ ಸಮಾಜವಾದಿ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಹೊಂದಿದ ಭಾರತ ಬಂಡವಾಳಶಾಹಿ ರಾಷ್ಟ್ರವಾಗಿ ಪರಿವರ್ತನೆಗೊಂಡಿತು. ಈ ನೀತಿಯಿಂದಾಗಿ ಕೃಷಿಕ್ಷೇತ್ರವು ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಸಿಕ್ಕಿ ರೈತರು ತಮ್ಮ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಬೀಜ ಮತ್ತು ಗೊಬ್ಬರಗಳಿಗೆ ನೀಡುವಂತಾಯಿತು. ಮೊದಲಿನಿಂದಲೂ ಇರುವ ಜನಪ್ರಿಯ ಗಾದೆ ಮಾತಿನಂತೆ, ಭಾರತೀಯ ರೈತ ಸಾಲದಲ್ಲಿಯೇ ಹುಟ್ಟಿ, ಸಾಲದಲ್ಲಿಯೇ ಬೆಳೆದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬರುವಂತಾಯಿತು. ಮಹಾರಾಷ್ಟ್ರದ ವಿದರ್ಭ ಪ್ರದೇಶ, ಕರ್ನಾಟಕ, ಆಂಧ್ರ ಹೀಗೆ ಭಾರತದಾದ್ಯಂತ ರೈತರ ಆತ್ಮಹತ್ಯಾ ಸರಣಿಯು ಕಂಡುಬರುತ್ತಿದೆ. ಬಡತನದ ತಾರ್ಕಿಕ ಅಂತ್ಯವೆಂಬಂತೆ ಕಂಡುಬರುತ್ತಿರುವ ರೈತರ ಆತ್ಮಹತ್ಯೆಯು ಭಾರತದ ಸ್ವಾತಂತ್ರ್ಯಾನಂತರದ ಬಡತನದ ಪ್ರಮಾಣವನ್ನು ತಿಳಿಸಲು ಪ್ರಮುಖ ಮಾನದಂಡವಾಗಿದೆ.

ಬಡತನವನ್ನು ಹೋಗಲಾಡಿಸಲು ಇರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಇಚ್ಚಾಶಕ್ತಿ ಇರುವ ಸರ್ಕಾರಗಳು ಸದ್ಯಕ್ಕೆ ಆಡಳಿತದಲ್ಲಿಲ್ಲ. ಪ್ರತಿಯೊಂದು ಸರ್ಕಾರವೂ ಪಕ್ಷಾತೀತವಾಗಿ ಬಹುರಾಷ್ಟ್ರೀಯ ಕಂಪನಿ ಪ್ರೇರಿತ ಬಂಡವಾಳಶಾಹಿ ನೀತಿಯನ್ನೇ ಅನುಸರಿಸುತ್ತಿವೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಸರ್ಕಾರ ರೂಪಿಸುತ್ತಿರುವ ಯೋಜನೆಗಳು ಮತ್ತು ಭಯಾನಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಈಗಾಗಲೇ ವಿಶೇಷ ಆರ್ಥಿಕ ವಲಯಗಳಿಗೆ ಕೇಂದ್ರ ಸರ್ಕಾರವು ಅನುಮತಿಯನ್ನು ನೀಡಿದ್ದು, ಅದರಿಂದ ಉಂಟಾಗಬಹುದಾದ ಸಾಮಾಜಿಕ ಪರಿಣಾಮಗಳನ್ನು ಊಹಿಸಲು ಅಸಾಧ್ಯ. ನಿರುದ್ಯೋಗವು ಬಡತನದ ಒಂದು ಪ್ರಮುಖ ಅಂಶವೇ ಆಗಿರುವುದರಿಂದ ಮತ್ತು ಇವೆರಡೂ ಪರಸ್ಪರ ಸಂಬಂಧ ಹೊಂದಿರುವುದರಿಂದ ಅವುಗಳನ್ನು ಪ್ರತ್ಯೇಕವಾಗಿ ಚರ್ಚಿಸುವ ಅಗತ್ಯವಿಲ್ಲ.

ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟವನ್ನು ಕುರಿತು ಸಮಾಜಶಾಸ್ತ್ರಜ್ಞರಲ್ಲಿ ಎರಡು ಬಗೆಯ ಅಭಿಪ್ರಾಯಗಳಿವೆ. ಮೊದಲನೆಯದಾಗಿ, ಜನಸಂಖ್ಯಾ ಹೆಚ್ಚಳವು ಸಮಸ್ಯೆಯೇ ಅಲ್ಲವೆಂದು ಅದರಿಂದಾಗಿ ದುಡಿಯುವ ಕೈಗಳ ಸಂಖ್ಯೆಯು ಜಾಸ್ತಿಯಾಗುತ್ತದೆ ಎನ್ನುವ ದೃಷ್ಟಿಕೋ. ಮತ್ತೊಂದು ದೃಷ್ಟಿಕೋನವು ಜನಸಂಖ್ಯೆ ಹೆಚ್ಚಳವನ್ನು ಎದುರಿಸಬೇಕಾದ ಬೃಹತ್‌ ಸಾಮಾಜಿಕ ಸಮಸ್ಯೆ ಎಂದು ಭಾವಿಸುತ್ತದೆ. ಭಾರತದ ಜನಸಂಖ್ಯಾ ಸ್ಫೋಟವನ್ನು ಗಮನಿಸಿದರೆ ಎರಡನೆಯ ಅಭಿಪ್ರಾಯವೇ ಸಮಂಜಸವಾಗಿದೆ. ೨೦೦೧ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯು ಅಷ್ಟಿದೆ. ಜನಸಂಖ್ಯಾ ಸ್ಫೋಟವು ಬೀರಿರುವ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ಕೆಳಕಂಡಂತೆ ಗ್ರಹಿಸಬಹುದು. ಒಂದು ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ೨೫ ಮಿಲಿಯನ್‌ ಜನರು ವಸತಿಹೀನರಾಗಿದ್ದಾರೆ. ೧೭೧ ಮಿಲಿಯನ್ ಜನ ಸುರಕ್ಷಿತ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ೨೯೦ ಮಿಲಿಯನ್‌ ವಯಸ್ಕರರು ಅನಕ್ಷರಸ್ಥರಾಗಿದ್ದಾರೆ. ಶೇ. ೫೩ರಷ್ಟು ೫ ವರ್ಷದ ಒಳಗಿನ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ವಿಶ್ವಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು ೧೩೫ನೆಯ ಸ್ಥಾನದಲ್ಲಿದೆ. ಈ ಎಲ್ಲ ಪರಿಣಾಮಗಳಿಗೆ ಜನಸಂಖ್ಯಾ ಸ್ಫೋಟವನ್ನೇ ನೇರವಾಗಿ ಹೊಣೆ ಮಾಡಲು ಸಾಧ್ಯವಿಲ್ಲವಾದರೂ ಅದು ಪ್ರಮುಖ ಕಾರಣವೆಂಬ ಅಭಿಪ್ರಾಯವನ್ನಂತೂ ಅಲ್ಲಗಳೆಯಲು ಸಾಧ್ಯವಿಲ್ಲ.

ಇಡೀ ಪ್ರಪಂಚದಲ್ಲಿ ಭಾರತ ಜನಸಂಖ್ಯಾ ಯೋಜನೆಯನ್ನು ಹಮ್ಮಿಕೊಂಡ ಮೊದಲ ರಾಷ್ಟ್ರವಾಗಿದೆ. ಜನಸಂಖ್ಯಾ ಯೋಜನೆ ಎಂದರೆ, ಜನಸಂಖ್ಯಾ ಬೆಳವಣಿಗೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವ ಯೋಜನೆಯಾಗಿದೆ. ಆದರೂ ಜನಸಂಖ್ಯಾ ಯೋಜನೆ ಮತ್ತು ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವಲ್ಲಿ ಭಾರತೀಯ ಸಮಾಜವು ವಿಫಲವಾಗಿದೆ ಎನ್ನಬಹುದು. ಇದಕ್ಕೆ ಆರ್ಥಿಕ, ರಾಜಕೀಯ, ಸಾಮಾಜಿಕ ಕಾರಣಗಳ ಯೋಜನಾ ಪದ್ಧತಿಯನ್ನು ವಿರೋಧಿಸುತ್ತಾರೆ. ಕೋಮುವಾದಿಗಳು ತಮ್ಮ ಧರ್ಮದ ಜನಸಂಖ್ಯೆಯು ಕಡಿಮೆಯಾಗುವುದರಿಂದ ಅದಕ್ಕೆ ಅಪಾಯವಿದೆ ಎಂದು ಅವೈಜ್ಞಾನಿಕ ವಾದವನ್ನು ಮಂಡಿಸುತ್ತಾ, ಜನಸಂಖ್ಯಾ ನಿಯಂತ್ರಣಕ್ಕೆ ತಡೆಯೊಡ್ಡಿದ್ದಾರೆ. ಸಾಂಸ್ಕೃತಿಕವಾಗಿ ಪುರುಷಪ್ರಧಾನ  ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಮಕ್ಕಳನ್ನು ಪಡೆಯುವುದು ಪುರುಷತ್ವ ಮತ್ತು ಪರಿಪೂರ್ಣ ಮಹಿಳೆಯ ಸಂಕೇತವಾಗಿದೆ. ಇಂತಹ ಸಾಂಸ್ಕೃತಿಕ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣ ಸಾಧ್ಯವಿಲ್ಲದಂತಾಗಿದೆ. ಇದಕ್ಕೆ ಪೂರಕವಾಗಿ ಮತಬ್ಯಾಂಕ್‌ಗಳ ರಾಜಕಾರಣ ಮಾಡುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಸರ್ಕಾರಗಳು ಜನಸಂಖ್ಯಾ ನಿಯಂತ್ರಣಕ್ಕೆ ರಾಜಕೀಯ ಇಚ್ಛಾಶಕ್ತಿಯುಳ್ಳ ದಿಟ್ಟ ಪ್ರಯತ್ನಗಳನ್ನು ಕೈಗೊಂಡಿಲ್ಲ. ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಚೀನಾ ದೇಶದ ಉದಾಹರಣೆಯು ಮಾದರಿಯಾಗಿದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಅನಕ್ಷರತೆ

ಸ್ವಾತಂತ್ರ್ಯಾನಂತರದ ಭಾರತದ ಪ್ರಗತಿಗೆ ಅನಕ್ಷರತೆಯು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ ಎಂದು ಭಾವಿಸಲಾಗಿದೆ. ಯುನೆಸ್ಕೋ ವ್ಯಾಖ್ಯಾನದ ಪ್ರಕಾರ ಅಕ್ಷರಸ್ಥನೆಂದರೆ, ತನ್ನ ದಿನನಿತ್ಯದ ಜೀವನದಲ್ಲಿ ಸರಳವಾದ ವಾಕ್ಯಗಳನ್ನು ರಚಿಸುವ, ಓದುವ, ಬರೆಯುವ ವ್ಯಕ್ತಿ ೧೯೯೧ರ ಭಾರತದ ಜನಗಣತಿ ಆಯೋಗವು ವಿವರಿಸುವಂತೆ, ಓದು ಬರೆಯುವುದರ ಜೊತೆಗೆ ಭಾರತದ ಯಾಉದಾದರೂ ಒಂದು ಭಾಷೆಯನ್ನು ಅರ್ಥಮಾಡಿಕೊಳ್ಳುವವನನ್ನು ಅಕ್ಷರಸ್ಥ ಎಂದು ಕರೆಯಲಾಗುತ್ತದೆ. ಯಾರು ಓದಲು ಮತ್ತು ಬರೆಯಲು ಸಾಧ್ಯವಿಲ್ಲವೋ ಅವರನ್ನು ಅನಕ್ಷರಸ್ಥರೆಂದು ಕರೆಯಲಾಗುತ್ತದೆ.

೧೯೯೧ರ ಜನಗಣತಿಯ ಪ್ರಕಾರ ಭಾರತದಲ್ಲಿ ಶೇ. ೪೭.೮೯ ಜನ ಅನಕ್ಷರಸ್ಥರಾಗಿದ್ದರು. ಅಂದರೆ, ಸುಮಾರು ೪೮೨ ಮಿಲಿಯನ್‌ ಜನ ಅನಕ್ಷರಸ್ಥರಾಗಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಭಾರತವು ಅನಕ್ಷರಸ್ಥ ರಾಷ್ಟ್ರಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದಿದೆ. ಅನಕ್ಷರತೆಯ ಪ್ರಮಾಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳೂ, ಆದಿವಾಸಿ ಗುಂಪುಗಳೂ, ಮಹಿಳೆಯರೂ ಅಕ್ಷರ ವಂಚಿತ ಸಮುದಾಯವಾಗಿದ್ದಾರೆ. ಆದುದರಿಂದಲೇ ಅನಕ್ಷರತೆಗೆ ಕೇವಲ ರಾಜಕೀಯ, ಆರ್ಥಿಕ ಕಾರಣವಲ್ಲದೆ, ಜಾತಿ, ಧರ್ಮ ಮೊದಲಾದ ಸಾಮಾಜಿಕ ಕಾರಣಗಳೂ ಇವೆ.

ಸಾಮಾನ್ಯವಾಗಿ ಜನಸಂಖ್ಯಾ ಸ್ಫೋಟ, ನಿಷ್ಕ್ರೀಯ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ, ಬಡತನ ಪರಿಣಾಮವಾಗಿ ಬಾಲ ಕಾರ್ಮಿಕ ಸಮಸ್ಯೆ, ಪಂಚವಾರ್ಷಿಕ ಯೋಜನೆಗಳಲ್ಲಿ ಶಿಕ್ಷಣವನ್ನು ಕಡೆಗಣಿಸುತ್ತಿರುವ ವಿಧಾನ, ರಾಷ್ಟ್ರೀಯ ಶಿಕ್ಷಣ ನೀತಿಯ ಕೊರತೆ ಅನಕ್ಷರತೆಗೆ ಪ್ರಮುಖ ಕಾರಣಗಳಾಗಿವೆ.

ಅಪರಾಧ

ಭಾರತದಲ್ಲಿ ಅಪರಾಧವು ಒಂದು ಬೃಹತ್‌ಸಾಮಾಜಿಕ ಸಮಸ್ಯೆಯಾಗಿ ಬೆಳೆದಿರುವುದನ್ನು ಕೆಳಗಿನ ಅಂಕಿಅಂಶಗಳು ತೋರಿಸುತ್ತವೆ.

೧೯೯೪ರಲ್ಲಿ ನ್ಯಾಷನಲ್ ಕ್ರೈಮ್‌ ರಿಕಾರ್ಡ್ಸ್‌ ಬ್ಯೂರೋ ಹೊರತಂದಿರುವ ಅಂಕಿಅಂಶಗಳಂತೆ ಭಾರತದಲ್ಲಿ ಒಂದು ದಿವಸದ ಅವಧಿಯಲ್ಲಿ ಜರುಗುವ ಅಪರಾಧಗಳ ಪ್ರಮಾಣವು ಹೀಗಿದೆ. ೮೩೨ ಕಳ್ಳತನಗಳು, ೨೫೮ ದೊಂಬಿ, ೬೬ ದರೋಡೆ, ೩೩೩ ಮನೆಗಳ್ಳತನ, ೨೯೯೧ ಇತರ ಅಪರಾಧಗಳು ಜರುಗುತ್ತವೆ. ಈ ಪ್ರಮಾಣವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವುದನ್ನು ಗಮನಿಸಬಹುದು. ಅಪರಾಧವನ್ನು ಕೆಳಕಂಡಂತೆ ವಿವರಿಸಬಹುದು.

ಅಪರಾಧವೆಂದರೆ, ಉದ್ದೇಶಪೂರ್ವಕವಾಗಿ ಕಾನೂನಿನ ಉಲ್ಲಂಘನೆಯ ಕ್ರಿಯೆಯಲ್ಲಿ ತೊಡಗುವುದು. ಮತ್ತೊಂದು ನಿರ್ವಚನದ ಪ್ರಕಾರ ಕಾನೂನಿನಿಂದ ಬಹಿಷ್ಕೃತವಾದ, ಸಮಾಜದ ಮೇಲೆ ಅಪಾಯಕಾರಿಯಾದ ಪರಿಣಾಮಗಳನ್ನು ಉಂಟುಮಾಡುವ, ಕಾನೂನಿನಿಂದ ಶಿಕ್ಷೆಗೆ  ಒಳಪಡುವ, ಯಾವುದೇ ಕ್ರಿಯೆಯಾದರೂ ಅಪರಾಧ ಎಂದೆನಿಸಿಕೊಳ್ಳುತ್ತದೆ. ಒಟ್ಟಾರೆಯಾಗಿ, ಅಪರಾಧ ಚಟುವಟಿಕೆಯು ಕೆಳಕಂಡ ಲಕ್ಷಣ ಹೊಂದಿರುತ್ತದೆ. ಕಾನೂನಿನ ಉಲ್ಲಂಘನೆ, ಉದ್ದೇಶಪೂರ್ವಕ ಕ್ರಿಯೆ, ಸಮಾಜಕ್ಕೆ ಅಪಾಯ ಉಂಟುಮಾಡುವ ಗುಣ, ಕಾನೂನಿಂದ ಶಿಕ್ಷೆಗೊಳಪಡುವ ಚಟುವಟಿಕೆಯಾಗಿರುತ್ತದೆ.

ಅಪರಾಧಿ ಚಟುವಟಿಕೆಗಳು ಕೆಲವೊಮ್ಮೆ ಪ್ರತಿಭಟನಾತ್ಮಕ ಗುಣಗಳನ್ನೂ ಒಳಗೊಂಡಿರುವ ಸಾಧ್ಯತೆ ಇರುತ್ತದೆ. ಅವುಗಳಿಗೆ ಜನಪರ ಆಶಯ ಇದ್ದರೂ ಅಂತಹ ಚಟುವಟಿಕೆಗಳು ಅಸ್ತಿತ್ವದಲ್ಲಿರುವ ಸಂವಿಧಾನಾತ್ಮಕ ಕಾನೂನುಗಳನ್ನು ಉಲ್ಲಂಘಿಸಿದರೆ ಅದನ್ನೂ ಕೂಡ ಪ್ರಭುತ್ವವು ಅಪರಾಧಿ ಚಟುವಟಿಕೆ ಎಂದು ಪರಿಗಣಿಸುತ್ತದೆ.

ಅಪರಾಧಿ ಚಟುವಟಿಕೆಗಳು ಇತರ ಸಾಮಾಜಿಕ ಸಮಸ್ಯೆಗಳಿಗಿಂತ ಅಪರಾಧವು ಸ್ವಲ್ಪಮಟ್ಟಿಗೆ ಭಿನ್ನವಾದ ಕಾರಣವನ್ನು ಹೊಂದಿರುತ್ತದೆ. ಅದೇನೆಂದರೆ ಇಲ್ಲಿ ಅಪರಾಧಿಯ ವ್ಯಕ್ತಿಗತ ಮತ್ತು ಮಾನಸಿಕ ಕಾರಣಗಳು ಕೂಡ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಸಾಮಾಜೀಕರಣ, ಕೌಟುಂಬಿಕ ವಾತಾವರಣ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಉದ್ರೇಕಕಾರಿ ಪರಿಣಾಮವನ್ನುಂಟುಮಾಡಿ ಅಪರಾಧವನ್ನೆಸಗಲು ಪ್ರೇರೇಪಿಸುತ್ತವೆ.

ಕೆಲವೊಮ್ಮೆ ವ್ಯಕ್ತಿಯು ತನ್ನ ಗುರಿಯನ್ನು ಈಡೇರಿಸಿಕೊಳ್ಳಲು ವಿಫಲನಾದಾಗ ಅಪರಾಧ ಚಟುವಟಿಕೆಯಲ್ಲಿ ತೊಡಗಬಹುದು. ಜೊತೆಗೆ ತನ್ನ ಗುರಿಯನ್ನು ಮುಟ್ಟಲು ಸ್ವೀಕೃತ ಸಾಮಾಜಿಕ ಮೌಲ್ಯಗಳನ್ನು ಧಿಕ್ಕರಿಸಿ ಅಪಮಾರ್ಗಗಳನ್ನು ಹಿಡಿಯುವ ಸಾಧ್ಯತೆ ಇರುತ್ತದೆ. ಅಪರಾಧ ಚಟುವಟಿಕೆಗಳು ಬಡರಾಷ್ಟ್ರಗಳಲ್ಲಿ ಬಹುತೇಕ ಬಡತನ ಮತ್ತು ನಿರುದ್ಯೋಗ ಇವುಗಳಿಂದ ಸಂಭವಿಸುವುದನ್ನು ಗುರುತಿಸಲಾಗಿದೆ. ಅಪರಾಧಗಳನ್ನು ಯಾವುದೇ ಒಂದು ವರ್ಗದ ಜನರಲ್ಲದೆ, ಬಡವರು ಶ್ರೀಮಂತರು ಎಂಬ ಭೇದವಿಲ್ಲದೆ ಅಪರಾಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಶ್ರೀಮಂತರು, ಗಣ್ಯವರ್ಗದವರು ಕಾನೂನನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡು ಇತರರ ಕಣ್ಣಿಗೆ ಸ್ವೀಕೃತ ಕ್ರಿಯೆಯಂತೆ ತೋರಿ ಮರೆಮಾಚಿದ ಅಪರಾಧಿ ಕೃತ್ಯಗಳಲ್ಲಿ ತೊಡಗುತ್ತಾರೆ. ಇಂತಹ ಅಪರಾಧವನ್ನು ‘‘ಬಿಳಿ ಪಟ್ಟಿಯ ಅಪರಾಧಗಳೆಂದು” ಕರೆಯಲಾಗುತ್ತದೆ. ಕೆಲವು ಬಗೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಪರಾಧಗಳು ಭಾರತದಲ್ಲಿ ಚಾಲ್ತಿಯಲ್ಲಿವೆ. ಜಾತಿ ಪದ್ಧತಿಯ ಆಚರಣೆಯೂ ಅದರಲ್ಲಿಯೂ ಅಸ್ಪೃಶ್ಯತಾ ಆಚರಣೆಯು ಇಂತಹ ಅಪರಾಧದಲ್ಲಿ ಪ್ರಮುಖವಾದುದು.

ಅಪರಾಧವನ್ನು ಹತೋಟಿಗೆ ತರಲು ಬಿಗಿಯಾದ ಕಾನೂನುಗಳು ಮತ್ತು ಸುಧಾರಣಾ ಕ್ರಮಗಳನ್ನು ಸೂಚಿಸಲಾಗುತ್ತದೆ. ಆದರೆ, ಕೇವಲ ಇದರಿಂದ ಅಪರಾಧಿಗಳನ್ನು ಶಿಕ್ಷಿಸಬಹುದೇ ಹೊರತು  ಅಪರಾಧವನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲ ಸಾಧ್ಯವಿಲ್ಲ. ಅಪರಾಧವನ್ನು ತಡೆಗಟ್ಟಬೇಕಾದರೆ ಆರ್ಥಿಕ ಅಸಮಾನತೆಯನ್ನು, ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸುವುದು ಅಗತ್ಯವೆಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ

ಕೆಲವು ದಶಕಗಳ ಹಿಂದೆ ಮದ್ಯಪಾನ ಹಾಗೂ ಮಾದಕ ವಸ್ತುಗಳ ದುರುಪಯೋಗವನ್ನು ನೈತಿಕ ಸಮಸ್ಯೆ ಎಂದು ಪರಿಗಣಿಸಲಾಗಿತ್ತು. ಅದು ವ್ಯಕ್ತಿಯೊಬ್ಬನ ಸಾಮಾಜಿಕ ಬೇಜವಾಬ್ದಾರಿತನದ ದ್ಯೋತಕವೆಂದು ಭಾವಿಸಲಾಗುತ್ತಿತ್ತು. ಆದರೆ, ಈಗ ಮದ್ಯಪಾನವು ಕೇವಲ ನೈತಿಕ ಸಮಸ್ಯೆಯಾಗದೇ ಸಾಮಾಜಿಕ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ.

ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗವನ್ನು ಸಮಾಜಶಾಸ್ತ್ರಜ್ಞರು ಈ ರೀತಿಯಲ್ಲಿ ವಿವರಿಸಿದ್ದಾರೆ. ಎಲ್ಲ ಔಷಧಿಗಳಲ್ಲಿಯೂ ವೈದ್ಯರು ನಿಗದಿಪಡಿಸಿದ ಪ್ರಮಾಣದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಅಂಶವಿರುವ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ, ಅವುಗಳನ್ನು ಔಷಧೀಯ ಗುಣಗಳಿಗಾಗಿ ಬಳಸದೆ ಉನ್ಮಾದ, ಮನರಂಜನೆ ಮತ್ತು ಉನ್ಮತ್ತತೆಗಾಗಿ ಬಳಸಿದರೆ ಅದು ದುರುಪಯೋಗವವೆಂದೆನಿಸಿಕೊಳ್ಳುತ್ತದೆ.

ಈ ದುರುಪಯೋಗದ ಪ್ರಮಾಣವು ಅತಿಯಾದಾಗ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವೆಯು ಸಮಾಜಿಕ ಸಮಸ್ಯೆಯಾಗಿ ಪರಿವರ್ತನೆ ಹೊಂದುತ್ತದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಕೊಳ್ಳತೊಡಗಿದೆ. ಆದುದರಿಂದಲೇ ಇದು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿದೆ. ಏಕೆಂದರೆ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯನ್ನು ದುರ್ಬಲನನ್ನಾಗಿಸುವುದಲ್ಲದೆ ಆತನ ನರವ್ಯವಸ್ಥೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ ಆತನ ದುಡಿಮೆಯ ಶಕ್ತಿಯನ್ನು ಕಸಿದುಕೊಂಡು ನೈತಿಕ ಅಧಃಪತನಕ್ಕೆ ದೂಡುತ್ತದೆ. ಇದರಿಂದಾಗಿ ವ್ಯಕ್ತಿಯ ಜೊತೆಗೆ ಸಮಾಜವು ಅವನತಿಯ ಹಾದಿಯನ್ನು ಹಿಡಿಯುತ್ತದೆ.

ಭಾರತದಲ್ಲಿ ಮದ್ಯಸೇವನೆಯ ಪ್ರಮಾಣವನ್ನು ಗಮನಿಸಿದಾಗ ಈ ಸಮಸ್ಯೆಯ ಗಂಭೀರತೆಯ ಅರ್ಥವಾಗುತ್ತದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಮಂಡಳಿಯ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಶೇ. ೨೦ ರಿಂದ ಶೇ. ೨೫ ರಷ್ಟು ಜನ ಮದ್ಯಪಾನಿಗಳಾಗಿದ್ದಾರೆ. ೨೦ ವರ್ಷಗಳಿಗಿಂತ ಹಿಂದೆ ಪ್ರತಿ ೩೦೦ ಜನಕ್ಕೆ ಒಬ್ಬ ಮದ್ಯಪಾನಿಯಿದ್ದರೆ ಈಗ ಪ್ರತಿ ೨೦ ರಲ್ಲಿ ಒಬ್ಬ ಮದ್ಯಪಾನಿ ಕಾಣಿಸಿಕೊಳ್ಳುತ್ತಾನೆ. ದಿನದಿಂದ ದಿನಕ್ಕೆ ಮದ್ಯಪಾನದ ಚಟದಾಸರ ಸಂಖ್ಯೆ ಹೆಚ್ಚುತ್ತಲೇ ಇದೆ.

ಮದ್ಯಪಾನ ಸೇವನೆಗಿಂತ ಅತಿ ಗಂಭೀರವಾದ ಸಮಸ್ಯೆಯೆಂದರೆ ಮಾದಕ ವಸ್ತುಗಳ ದುರುಪಯೋಗ ಮತ್ತು ಚಟದಾಸತ್ವ. ಒಂದು ಅಂದಾಜಿನ ಪ್ರಕಾರ ಭಾರತವೊಂದರಲ್ಲೇ ಸರಿಸುಮಾರು ೧೦ ರಿಂದ ೧೫ ಲಕ್ಷ ಹೆರಾಯಿನ್‌ಚಟದಾಸರು ಕಂಡುಬರುತ್ತಾರೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೦೦ ಕೋಟಿಯಿಂದ ೧೨೫ ಕೋಟಿಯಷ್ಟು ಮಾದಕ ವಸ್ತುಗಳು ಪ್ರತಿ ತಿಂಗಳು ಮಾರಾಟವಾಗುತ್ತವೆ. ಆದರೆ, ವಾಸ್ತವದಲ್ಲಿ ಈ ಮಾರಾಟವು ಅಂಕಿಅಂಶಗಳಿಗಿಂತ ಜಾಸ್ತಿ ಪ್ರಮಾಣದಲ್ಲಿ ಇರುವ ಸಾಧ್ಯತೆಯೂ ಇಲ್ಲದಿಲ್ಲ. ಮಾದಕ ವಸ್ತುವು ಒಂದು ರಾಸಾಯನಿಕ ವಸ್ತುವಾಗಿದ್ದು, ಇದು ವ್ಯಕ್ತಿಯ ಮೇಲೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ದುಷ್ಪರಿಣಾಮವನ್ನು ಬೀರುತ್ತದೆ. ನರಮಂಡಲ ಹಾಗೂ ದೈಹಿಕ ರಚನೆ ಮತ್ತು ಅದರ ಕಾರ್ಯಗಳ ಮೇಲೆ ಮಾದಕ ವಸ್ತು ಬೀರುವ ಪರಿಣಾಮವು ಅಪಾಯಕಾರಿಯಾದುದು. ಇದು ಮನರಂಜನೆಗೆ ತೀವ್ರವಾದ ಕಾಯಿಲೆಗಳಿಗೆ ಎಂದು ಆರಂಭವಾಗಿ ಅಂತ್ಯದಲ್ಲಿ ವ್ಯಕ್ತಿಯೊಬ್ಬನನ್ನು ಮಾದಕ ವಸ್ತುಗಳ ಚಟದಾಸನನ್ನಾಗಿ ಪರಿವರ್ತಿಸುತ್ತದೆ.

ಮಾದಕ ವಸ್ತುಗಳ ಮತ್ತು ಮದ್ಯಪಾನದ ದುರುಪಯೋಗಕ್ಕೆ ಸಮಾಜಶಾಸ್ತ್ರಜ್ಞರು ಕೆಳಕಂಡ ಕಾರಣಗಳನ್ನು ನೀಡುತ್ತಾರೆ. ಅವು ಯಾವುವೆಂದರೆ, ಒತ್ತಡ ಮತ್ತು ಖಿನ್ನತೆ ನಿವಾರಣೆಗಾಗಿ, ಕುತೂಹಲಕ್ಕಾಗಿ ಏಕತಾನತೆ ನಿವಾರಣೆ, ರೋಮಾಂಚಕಾರಿ ಅನುಭವಕ್ಕಾಗಿ, ಆತ್ಮವಿಶ್ವಾಸ ಪಡೆಯಲು, ಗೆಳೆಯರ ಗುಂಪಿನಲ್ಲಿ ಬೆರೆಯಲು, ಸಾಮಾಜಿಕ ಮೌಲ್ಯಗಳನ್ನು ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿಭಟಿಸಲು, ಲೈಂಗಿಕ ಅನುಭವ ಪಡೆಯಲು, ನಿದ್ರಾಹೀನತೆಯಿಂದ ಪಾರಾಗಲು, ಒಂಟಿತನವನ್ನು ನೀಗಲು; ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಪುಕ್ಕಲುತನ ಮತ್ತು ಸಾಮಾಜಿಕ ಅಸ್ಥಿರತೆಯಿಂದ ದೂರಾಗಲು, ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗ ಆರಂಭವಾಗುತ್ತದೆ.

ಮಾದಕ ವಸ್ತು ಒಂದು ದೇಶದ ಯುವಜನತೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಚಾರಿತ್ರಿಕ ಉದಾಹರಣೆಯೊಂದನ್ನು ನೀಡಬೇಕೆಂದರೆ, ಹಿಟ್ಲರ್‌ನ ನೇತೃತ್ವದ ಜರ್ಮನಿಯು ಯುದ್ಧದಲ್ಲಿ ಸೋಲಲು ನಾಜೀ ಸೈನಿಕರು ಮಾದಕ ವಸ್ತುಗಳ ಚಟದಾಸರಾಗಿದ್ದುದೂ ಪ್ರಮುಖ ಕಾರಣವೆಂದು ಕೆಲವು ಚರಿತ್ರೆಕಾರರು ಹೇಳುತ್ತಾರೆ. ಡ್ರಗ್‌ಮಾಫಿಯಾ ಯಾವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಕೆಲವು ಲ್ಯಾಟಿನ್‌ ಅಮೆರಿಕನ್‌ ದೇಶಗಳಲ್ಲಿ ಇಡೀ ದೇಶದ ಆಡಳಿತವನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುವಷ್ಟು ಅದು ಪ್ರಬಲವಾಗಿ ಬೆಳೆದಿದೆ. ಭಾರತದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಡ್ರಗ್ಸ್‌ಸೇವಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಾ ಭಾರತದ ಯುವಜನತೆಯ ಭವಿಷ್ಯದ ಕನಸುಗಳನ್ನು ಹೊಸಕಿ ಹಾಕುತ್ತಿದೆ. ವಿಶ್ವಸಂಸ್ಥೆಯು ೧೯೯೦ರಲ್ಲಿ ಮಾದಕ ವಸ್ತುಗಳ ದುರುಪಯೋಗದ ಸಮಸ್ಯೆಯ ಗಂಭೀರತೆಯನ್ನು ಅರಿತು ಪ್ರಾದೇಶಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಂತಗಳಲ್ಲಿ ಇದನ್ನು ತಡೆಗಟ್ಟುವ ಯೋಜನೆಗಳನ್ನು ರೂಪಿಸಿತ್ತು. ಆದರೂ ಕೂಡ ನಿರಂತರವಾದ ಸಾಮಾಜಿಕ ಶಿಕ್ಷಣ, ಜನಜಾಗೃತಿ, ಜನಸಹಭಾಗಿತ್ವದ ಮೂಲಕವೇ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಪರಿಹರಿಸಲು ಸಾಧ್ಯ.