ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಉತ್ಪಾದನಾ ಕ್ರಮಗಳಲ್ಲಿ ಮಹತ್ವದ ಬದಲಾವಣೆಗಳಾದವು. ಒಂದು ಮಿತಿಯಲ್ಲಿ ಕೆಲಸ ಮಾಡಲು ಶಕ್ತನಾಗಿದ್ದ ಕಾರ್ಮಿಕನ ಸ್ಥಾನವನ್ನು ಬೃಹತ್ ಸಾಮರ್ಥ್ಯವಿರುವ ಯಂತ್ರಗಳು ಆಕ್ರಮಿಸಿಕೊಂಡವು. ಪ್ರಾಕೃತಿಕ ಸಂಪನ್ಮೂಲಗಳನ್ನು ತನಗಿಷ್ಟ ಬಂದ ಪ್ರಮಾಣದಲ್ಲಿ ಬಳಸಲು ಮತ್ತು ಆ ವಸ್ತುಗಳನ್ನು ಉಪಭೋಗಕ್ಕಾಗಿ ಉಪಯೋಗಿಸಲು ಇದ್ದ ತೊಡಕನ್ನು ಕೈಗಾರಿಕಾ ಕ್ರಾಂತಿ ಬಗೆಹಗಿಸಿತೆಂದೇ ಹೇಳಬಹುದು. ಈ ಕಾರಣದಿಂದ, ಕೈಗಾರಿಕೀಕರಣ ಹೆಚ್ಚು ಸಂಪತ್ತನ್ನು ಸೃಷ್ಥಿಸುತ್ತದೆ ಮತ್ತು ಇಂತಹ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ ಭಾಗಿಗಳಾಗುವ ಸಮುದಾಯದ ಜನರಿಗೆ ಈ ಸಂಪತ್ತು ದಕ್ಕುವಂತೆ ಮಾಡುತ್ತದೆ ಎಂದು ತಿಳಿಯಲಾಯಿತು. ಸಂಪತ್ತಿನ ಸಹಾಯದಿಂದ ಜನ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದರಿಂದ ಅವರು ಬಡತನ ಅಥವಾ ದಾರಿದ್ರ್ಯದಿಂದಲೂ ಪಾರಾಗಬಹುದು ಎಂಬ ಅಭಿಪ್ರಾಯ ಪಡಲಾಯಿತು. ಹಾಗಾಗಿಯೇ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕಾ ಕ್ರಾಂತಿ ಒಂದು ಮಹತ್ವದ ಘಟನೆ.

ಇಂದು ಕೈಗಾರಿಕಾ ಕ್ರಾಂತಿ ಆರಂಭವಾಗಿ ಎರಡು ಶತಮಾನಗಳೇ ಉರುಳಿವೆ. ಇಂದಿಗೂ ಜಗತ್ತಿನ ಮೂರನೇ ಎರಡಂಶ ಜನ ಬಹಳ ದೀನ ಸ್ಥಿತಿಯಲ್ಲಿಯೇ ಬದುಕುತ್ತಿದ್ದಾರೆ. ವಿಶ್ವಬ್ಯಾಂಕನ ಸಮೀಕ್ಷೆಗಳೇ ಹೇಳುವ ಹಾಗೆ ಜಗತ್ತಿನ ಶೇಕಡ ನಲವತ್ತರಷ್ಟು ಜನ ತೀವ್ರವಾದ ಬಡತನದಲ್ಲಿದ್ದು, ಪೋಷಕಾಂಶಗಳ ಕೊರತೆ, ಹಸಿವು, ಅನಾರೋಗ್ಯ ಮುಂತಾದ ಸಮಸ್ಯೆಗಳಿಂದ ಕಂಗೆಟ್ಟು ಹೋಗಿದ್ದಾರೆ. ಬದುಕಿನ ಕನಿಷ್ಠ ಅವಶ್ಯಕತೆಗಳಾದ ಅನ್ನ, ವಸ್ತ್ರ ಮತ್ತು ವಸತಿಯನ್ನು ಹೊಂದಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಆಫ್ರಿಕಾದ ಹಲವು ದೇಶಗಳಲ್ಲಿ ಹೊಟ್ಟೆಗಿಲ್ಲದೆ ಸಾಯುವವರ ಸಂಖ್ಯೆ, ಅದರಲ್ಲೂ ಮಕ್ಕಳ ಸಾವಿನ ಸಂಖ್ಯೆ ಗಣನೀಯವಾಗಿ ಏರಿದೆ. ಹಾಗೆಂದು ವಿಶ್ವದಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಯೇ ಆಗುತ್ತಿಲ್ಲವೆಂದಿಲ್ಲ. ವಿಶ್ವದ ಎಲ್ಲ ಜನರ ಹಸಿವನ್ನು ನೀಗಿಸಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳನ್ನು ಉತ್ಪಾದಿಸಲಾಗುತ್ತಿದೆ. ಹಲವು ದೇಶಗಳಲ್ಲಿ ಬೇಡಿಕೆ, ಪೂರೈಕೆಗಳ ನಡುವೆ ಸಮತೋಲನ ಉಳಿಸಿಕೊಳ್ಳಲು ಟನ್ನುಗಟ್ಟಲೆ ಆಹಾರ ಸಾಮಗ್ರಿಗಳನ್ನು ಸಮುದ್ರಕ್ಕೆ ಚೆಲ್ಲಲಾಗುತ್ತದೆ. ಹಸಿವು ಬಡತನಗಳಿರುವ ಸರ್ಬಿಯಾ, ಪ್ಯಾಲೆಸ್ಟೈನ್, ಆಫ್ಘಾನಿಸ್ಥಾನದಂತಹ ದೇಶಗಳಲ್ಲೂ ಜನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಹೋರಾಡುತ್ತಿದ್ದಾರೆ. ಇದೊಂದು ರೀತಿಯ ಅಸಂಗತ ಸ್ಥಿತಿಯಾಗಿ ಕಾಣುತ್ತದೆ. ಒಂದು ಕಡೆ ನಮ್ಮ ತಂತ್ರಜ್ಞಾನ, ಬಂಡವಾಳ ಮತ್ತು ಆ ಮೂಲಕ ಮಾನವ ಸಂಪನ್ಮೂಲದ ಬಳಕೆಯಿಂದ ರಾಶಿಗಟ್ಟಲೆ ಆಹಾರ ಧಾನ್ಯಗಳ ಉತ್ಪಾದನೆ ಸಾಧ್ಯವಾಗಿದ್ದರೆ ಇನ್ನೊಂದೆಡೆ ಕಿತ್ತು ತಿನ್ನುವ ಹಸಿವು ಮತ್ತು ಬಡತನ…. ಇವೆಲ್ಲವನ್ನೂ ಗಮನಿಸಿದಾಗ ನಮ್ಮನ್ನು ಸಹಜವಾಗಿ ಕಾಡುವ ಪ್ರಶ್ನೆ ಎಂದರೆ ಯಾವುದು ವಾಸ್ತವ ಮತ್ತು ಯಾವುದು ಭ್ರಮೆ ಎನ್ನುವ ವಿಚಾರವಾಗಿದೆ.

ಮೇಲ್ನೋಟಕ್ಕೆ ಗೋಜಲು ಗೋಜಲಾಗಿರುವ ಈ ಸಮಸ್ಯೆಯನ್ನು ವಿಶ್ಲೇಷಿಸುತ್ತ ಹೋದರೆ ನಮಗೆ ಹಲವು ಸವಾಲುಗಳು ಎದುರಾಗುತ್ತವೆ. ನಮ್ಮ ನಿರಂತರ ಅಭಿವೃದ್ಧಿಯ ಫಲ ಯಾರಿಗೆ ದಕ್ಕಿದೆ? ವಿಶ್ವದಲ್ಲಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಯಾಕೆ ಹೆಚ್ಚುತ್ತಾ ಹೋಯಿತು ? ಅಂತರಾಷ್ಟ್ರೀಯ ದ್ರವ್ಯ ನಿಧಿ, ವಿಶ್ವಬ್ಯಾಂಕ ಮತ್ತು ಅದರ ಸಹ ಸಂಸ್ಥೆಗಳು ಬಡದೇಶಗಳನ್ನು ಬಡತನದಿಂದ ಮುಕ್ತವಾಗಿಸಲು ನಡೆಸುತ್ತಿರುವ ಹರಸಾಹಸಗಳ ಹೊರತಾಗಿಯೂ ಬಡದೇಶಗಳ ಪರಿಸ್ಥಿತಿ ಯಾಕೆ ಸುಧಾರಿಸುತ್ತಿಲ್ಲ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ಈವರೆಗೆ ನಮ್ಮಲ್ಲಿ ಪ್ರಬಲವಾಗಿದ್ದ ನಮ್ಮ ಅಭಿವೃದ್ಧಿಯ ಕುರಿತಾದ ತಿಳುವಳಿಕೆ, ಚಿಂತನೆಗಳ ಬಗ್ಗೆ ಮರು ಚಿಂತನೆ ಅಗತ್ಯ ಎನ್ನುವುದು ಮನದಟ್ಟಾಗುತ್ತದೆ. ಈ ಕಾರಣದಿಂದ ಅಭಿವೃದ್ಧಿಯ ಪರಿಕಲ್ಪನೆಯನ್ನು ಪುನರ್ ವಿಮರ್ಶಿಸಬೇಕಾದ ಅಗತ್ಯ ಕಂಡು ಬರುತ್ತದೆ. ಈ ಪುನರ್ ವಿಮರ್ಶೆಯ ಮೂಲಕ ಅಭಿವೃದ್ಧಿಯ ಉದ್ದೇಶಗಳಾದ ಬಡತನ ನಿರ್ಮೂಲನ, ಆರೋಗ್ಯ, ಅಕ್ಷರಾಭ್ಯಾಸ ಮುಂತಾದ ಮಾನವ ಬದುಕಿನ ಮೂಲಭೂತ ಅವಶ್ಯಕತೆಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಇರುವ ತೊಡಕುಗಳನ್ನು ಬಗೆಹರಿಸಬೇಕಾಗಿದೆ. ಈ ದಿಸೆಯಲ್ಲಿ ಅಭಿವೃದ್ಧಿಯ ಆದ್ಯತೆಗಳನ್ನು ಮತ್ತು ಅಭಿವೃದ್ಧಿಯ ಗುರಿ ಮತ್ತು ದಾರಿಗಳನ್ನು ಗುರುತಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ. ಅರ್ಥಶಾಸ್ತ್ರಜ್ಞರು, ಯೋಜನಾ ಇಲಾಖೆ ಮತ್ತು ಚಿಂತಕರು ಈ ಕುರಿತು ಧನಾತ್ಮಕವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಲು ಇದು ಸಕಾಲ.

ಮೊದಲು ನಾವು ಆರ್ಥಿಕ ಅಭಿವೃದ್ಧಿಯ ಕುರಿತು ಇರುವ ಪ್ರಚಲಿತ ವ್ಯಾಖ್ಯೆ ಏನು ? ಅಭಿವೃದ್ಧಿಯನ್ನು ಯಾವೆಲ್ಲಾ ಸಂಕೇತಗಳ ಮೂಲಕ ಗುರುತಿಸಲಾಗುತ್ತಿದೆ ? ಅಭಿವೃದ್ಧಿಗೆ ಉಪಯೋಗವಾಗುವ ಪರಿಕರಗಳಾವುವು ? ಯಾವ ತಾತ್ವಿಕ ತಳಹದಿಯ ಮೇಲೆ ನಮ್ಮ ಪ್ರಚಲಿತ ಅಭಿವೃದ್ಧಿ ನೀತಿಗಳು ರೂಪಿತವಾಗಿವೆ. ಇವುಗಳೊಂದಿಗೆ ಇಂತಹ ಅಭಿವೃದ್ಧಿಯ ನೀತಿಯ ಫಲ ಏನಾಗಿದೆ ? ಎನ್ನುವುದನ್ನು ಚರ್ಚಿಸುವುದು ಅಗತ್ಯವಾಗಿದೆ.

ಆರ್ಥಿಕ ಅಭಿವೃದ್ಧಿ ವ್ಯಾಖ್ಯೆ ಮತ್ತು ಪರಿಕಲ್ಪನೆ

ಆರ್ಥಿಕ ಅಭಿವೃದ್ಧಿ ಎಂದರೆ ಒಂದು ದೇಶದ ತಲಾ ಆದಾಯದಲ್ಲಿ, ದೀರ್ಘಾವಧಿಯಲ್ಲಿ ಏರಿಕೆಯುಂಟಾಗುವ ಒಟ್ಟು ಪ್ರಕ್ರಿಯೆ ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗಿದೆ. ಮೊದಲಿಗೆ ತಲಾ ಆದಾಯ, ದೀರ್ಘಾವಧಿ ಮತ್ತು ಪ್ರಕ್ರಿಯೆಗಳ ಕುರಿತ ಪ್ರಸ್ತಾವನೆಯನ್ನು ಮಾಡಲಾಗಿದೆ. ತಲಾ ಆದಾಯದಲ್ಲಿ ಏರಿಕೆಯಾದಾಗ ಅದು ದೇಶದ ಒಟ್ಟು ಉತ್ಪನ್ನದಲ್ಲಿ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ. ಇಂತಹ ಹೆಚ್ಚುವರಿ ಸಂಪತ್ತು ಜನರಲ್ಲಿ ಹರಿದು ಹೋಗಿ ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ ಜೀವನ ಮಟ್ಟವನ್ನು ಉತ್ತಮವಾಗಿಸುತ್ತದೆ. ಅಂದರೆ ಇದು ತಲಾ ಆದಾಯದಲ್ಲಿನ ಹೆಚ್ಚುವರಿಯಾದ ಆದಾಯ ಜನರಿಗೆ ಹರಿದು ಹೋಗುತ್ತಿದೆ ಎಂಬ ನಂಬಿಕೆಯನ್ನು ಸೂಚಿಸುತ್ತದೆ. ದೀರ್ಘಾವಧಿ ಎಂದರೆ ಮೂರ್ನಾಲ್ಕು ದಶಕಗಳ ಕಾಲ. ಯಾಕೆಂದರೆ ಅಭಿವೃದ್ಧಿ ಎನ್ನುವುದು ಅಲ್ಪಕಾಲೀನವಾಗಿರಬಾರದು; ಅದು ದೀರ್ಘಾವಧಿಯಲ್ಲಿ ಗುರುತಿಸಬೇಕಾದಂತಹುದು ಮತ್ತು ಇಂತಹ ಅಭಿವೃದ್ಧಿ ಕುರಿತ ಚಟುವಟಿಕೆಗಳು ನಿರಂತರವಾಗಿರಬೇಕು. ಒಂದು ದೇಶ ಒಂದೆರಡು ವರ್ಶಗಳ ಕಾಲ ಅಭಿವೃದ್ಧಿಶೀಲವಾಗಿದ್ದು ನಂತರ ಹಿಂದುಳಿದ ದೇಶಗಳ ಸಾಲಿಗೆ ಸೇರಿದ್ದೆಂದು ಪರಿಗಣಿಸುವಂತಿರಬಾರದು. ಅಲ್ಪಕಾಲಾವಧಿಯಲ್ಲಿ ನಾವು ಒಂದು ದೇಶ ಪ್ರಗತಿ ಪಥದತ್ತ ಕಾರ್ಯೊನ್ಮುಖವಾಗಿರುವುದನ್ನು ಕಾಣಬಹುದೇ ಹೊರತು ಅಭಿವೃದ್ಧಿ ಹೊಂದಿತೆಂದು ಹೇಳುವ ಹಾಗಿಲ್ಲ. ಹೀಗೆ ಅಭಿವೃದ್ಧಿ ಒಂದು ಪ್ರಕ್ರಿಯೆ, ಯಾಕೆಂದರೆ ಇಲ್ಲಿ ಅಂತರ್ ಸಂಬಂಧಿಯಾದ ಉತ್ಪಾದನಾ ಪರಿಕರಗಳು ಸಾಮಾನ್ಯ ಮಾದರಿಯಲ್ಲಿ ಒಂದು ನಿಶ್ಚಿತ ಉದ್ದೇಶದ ಈಡೇರಿಕೆಗೋಸ್ಕರ ಕ್ರಿಯಾಶೀಲವಾಗುತ್ತವೆ. ನಾವು ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಇಂತಹ ಉತ್ಪಾದನಾ ಪರಿಕರಗಳನ್ನು ಬಳಸಿ ಕಾರ್ಯೋನ್ಮುಖರಾದಾಗ, ಬಡತನ ನಿರ್ಮೂಲನವಾಗಬೇಕಾದರೆ ಯಾವ ಯಾವ ವಸ್ತುಗಳು ಉತ್ಪಾದನೆಯಾಗಬೇಕೋ ಅವನ್ನು ಉತ್ಪಾದಿಸುತ್ತೇವೆ ಮತ್ತು ಇಂತಹ ವಸ್ತುಗಳು ಬಳಕೆಗೆ ಒದಗಿ ಬಡತನ ನಿರ್ಮೂಲನ ಉದ್ದೇಶ ಸಾಧಿತವಾಗುತ್ತದೆ. ಒಂದು ವೇಳೆ ನಮ್ಮ ಉದ್ದೇಶ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವುದೆಂದಾದರೆ, ಉತ್ಪಾದನಾ ಪರಿಕರಗಳನ್ನು ಬಳಸಿ ಅಧಿಕ ಪ್ರತಿಫಲ ತರುವ ವಸ್ತುಗಳನ್ನು ಉತ್ಪಾದಿಸಿದಾಗ ರಾಷ್ಟ್ರೀಯ ಆದಾಯದಲ್ಲಿ ಏರಿಕೆಯುಂಟಾಗುತ್ತದೆ. ಇಂತಹ ಅಭಿವೃದ್ಧಿ ಸಾಧಿಸುವಾಗ ನಾವು ಗಮನಿಸಬೇಕಾದಂತಹ ಇನ್ನೂ ಕೆಲವು ಅಂಶಗಳಿಗೆ, ಅವುಗಳೆಂದರೆ, ನಾವು ಅಭಿವೃದ್ಧಿಯತ್ತ ಸಾಗುತ್ತಾ ಹೋಗುವಾಗ ಅಭಿವೃದ್ಧಿ ಪೂರ್ವ ಹಂತದಲ್ಲಿ ಬಡತನ ರೇಖೆಗಿಂತ ಕೆಳಗೆ ಇದ್ದ ಜನಸಂಖ್ಯಾ ಪ್ರಮಾಣ ಇಳಿಮುಖವಾಗುತ್ತಾ ಹೋಗಬೇಕು. ಉದಾಹರಣೆಗೆ, ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ ನಲವತ್ತರಷ್ಟು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ನಾವು ಈಗ ಅಭಿವೃದ್ಧಿ ಹೊಂದಲು ಅನುಷ್ಥಾನಗೊಳಿಸುವ ಕಾರ್ಯತಂತ್ರದ ಫಲವಾಗಿ ಬಡತನದ ರೇಖೆಗಿಂತ ಕೆಳಗಿರುವ ಶೇಕಡಾ ನಲವತ್ತರಷ್ಟು ಪ್ರಮಾಣ ಭವಿಷ್ಯತ್ತಿನಲ್ಲಿ ಇಳಿಮುಖವಾಗುತ್ತಾ ಹೋಗಬೇಕು. ಇಲ್ಲವಾದಲ್ಲಿ ಒಂದು ವೇಳೆ ರಾಷ್ಟ್ರೀಯ ಆದಾಯದಲ್ಲಿ ಏರಿಕೆಯಾದರೂ ಅದನ್ನು ಅಭಿವೃದ್ಧಿ ಎಂದು ಕರೆಯಲಾಗದು. ರಾಷ್ಟ್ರೀಯ ಉತ್ಪನ್ನದಲ್ಲಿ ಹೆಚ್ಚಳವಾದಂತೆಯೇ ಜನಸಂಖ್ಯೆಯಲ್ಲಿಯೂ ಅದೇ ಪ್ರಮಾಣದಲ್ಲಿ ಹೆಚ್ಚಳವಾದರೆ ನಾವು ಅದನ್ನು ಆರ್ಥಿಕ ಅಭಿವೃದ್ಧಿ ಎಂದು ಕರೆಯಲಾಗದು. ಆದ್ದರಿಂದ ಹೆಚ್ಚುವರಿ ಏನು ಉತ್ಪಾದನೆಯಾಗುತ್ತದೆ ಅದನ್ನು ಜನಸಂಖ್ಯಾ ಹೆಚ್ಚಳ ಕಬಳಿಸಿ ಬಿಡುವಂತೆ ಆಗಬಾರದು. ಉತ್ಪಾದಿಸಲಾದ ಹೆಚ್ಚುವರಿ ಉತ್ಪಾದನೆ ಆದಷ್ಟು ಸಮಾನವಾಗಿ ವಿತರಣೆಯಾದಾಗ ಅಭಿವೃದ್ಧಿಯಲ್ಲಿ ಹೆಚ್ಚು ಸ್ಥಿರತೆಯೂ ಕಂಡು ಬರುತ್ತದೆ. ಈ ರೀತಿಯಲ್ಲಿ ಅಭಿವೃದ್ಧಿ ಎಂದರೆ, ದೀರ್ಘಾವಧಿಯಲ್ಲಿ ಒಂದು ದೇಶದಲ್ಲಿರುವ ಉತ್ಪಾದನಾ ಪರಿಕರಗಳ ಬಳಕೆಯಾಗಿ, ಅವುಗಳು ಉತ್ಪಾದನೆಯನ್ನು ಹೆಚ್ಚಿಸಿ, ಅಂತಾ ಹೆಚ್ಚಳದ ಪರಿಣಾಮವಾಗಿ ತಲಾ ಆದಾಯ ಮತ್ತು ರಾಷ್ಟ್ರೀಯ ಆದಾಯದಲ್ಲಿ ಏರಿಕೆಯಾಗುವ ಒಟ್ಟು ಪ್ರಕ್ರಿಯೆ. ಅಮರ್ತ್ಯಸೇನ್ ಅವರ ಮಾತಿನಲ್ಲಿ ಹೇಳುವುದಾದರೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವ ಮೂಲಕ ಜನ ಸಾಮಾನ್ಯ ತನಗಿರುವ ಬದುಕುವ ಸ್ವಾತಂತ್ರ್ಯವನ್ನು ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದುವುದಾಗಿದೆ.

ಈ ಹಿಂದೆ ನಾವು ಅಭಿವೃದ್ಧಿಯ ವ್ಯಾಖ್ಯೆಯಲ್ಲಿ ತಿಳಿಸಿದಂತೆ ಒಂದು ಅರ್ಥವ್ಯವಸ್ಥೆ ಅಭಿವೃದ್ಧಿ ಸಾಧಿಸಿರುವುದನ್ನು , ಕೆಲವೊಂದು ಸಂಕೇತಗಳ ಮೂಲಕ ಅರ್ಥೈಸಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ, ಅಭಿವೃದ್ಧಿ ಹೊಂದಿದಾಗ ರಾಷ್ಟ್ರೀಯ ಉತ್ಪನ್ನ ಮತ್ತು ರಾಷ್ಟ್ರೀಯ ಆದಾಯದಲ್ಲಿ ಏರಿಕೆ ಕಂಡು ಬರಬೇಕು. ಅಂದರೆ ಯಾವ ದೇಶದಲ್ಲಿ ತಲಾ ಆದಾಯ ಹೆಚ್ಚಾಗಿದೆಯೋ ಅದು ಅಭಿವೃದ್ಧಿಯನ್ನು ಸಂಕೇತಿಸುತ್ತದೆ. ಅಂದರೆ ಅಲ್ಲಿ ಉತ್ಪಾದನಾ ಪರಿಕರಗಳು ಕ್ರಿಯಾಶೀಲವಾಗಿರುವುದನ್ನು ಕಾಣಬಹುದಾಗಿದೆ. ಇಂತಹ ಕ್ರಿಯಾಶೀಲ ಸ್ಥಿತಿಯಲ್ಲಿ ಭೂಮಿ, ಬಂಡವಾಳ, ಕಾರ್ಮಿಕ ವರ್ಗ ಮತ್ತು ಸಂಘಟನಾ ಶಕ್ತಿ, ಆದಾಯ ರೂಪದಲ್ಲಿ ಪ್ರತಿಫಲ ಪಡೆಯುತ್ತವೆ. ಇಂತಹ ಆದಾಯ ಜನರ ಬಯಕೆಗಳನ್ನು ಈಡೇರಿಸಿಕೊಳ್ಳಲು ವಸ್ತುಗಳನ್ನು, ಯಾ ಸೇವೆಗಳನ್ನು ಒದಗಿಸಿಕೊಡುತ್ತದೆ.

ಎರಡನೆಯದಾಗಿ, ಅಭಿವೃದ್ಧಿ ಹೊಂದಿದ ವ್ಯವಸ್ಥೆಯಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಅಂತರ ಕಡಿಮೆಯಿರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಉತ್ಪಾದನಾ ಪರಿಕರಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೆ ವರ್ಗಾವಣೆಗೊಳ್ಳುತ್ತಲೇ ಇರುತ್ತವೆ. ಅಂದರೆ ಎಲ್ಲಿ ಪ್ರತಿಫಲ ಹೆಚ್ಚಿದೆಯೋ ಅಲ್ಲಿಗೆ ವರ್ಗಾವಣೆಗೊಳ್ಳುತ್ತವೆ. ಇತರ ಉತ್ಪಾದನಾ ಪರಿಕರಗಳೂ ಹೆಚ್ಚು, ಕಡಿಮೆ ಸಮನಾಗಿ ಪ್ರತಿಫಲ ಪಡೆಯುತ್ತವೆ. ಪರಿಣಾಮವಾಗಿ ಆದಾಯದ ಹಂಚಿಕೆಯಲ್ಲಿ ಅಸಮಾನತೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಉಳ್ಳವರ ಮತ್ತು ಇಲ್ಲದವರ ಮಧ್ಯೆ ಇರುವ ಅಸಮತೋಲನ ಅಭಿವೃದ್ಧಿ ಹೊಂದದ ದೇಶಗಳಿಗೆ ಹೋಲಿಸಿದಾಗ ಕಡಿಮೆಯಿರುತ್ತದೆ.

ಮೂರನೆಯದಾಗಿ ಅಭಿವೃದ್ಧಿ ಹೊಂದಿದ ದೇಶದಲ್ಲಿ ಅಗತ್ಯವಿರುವ ಬಂಡವಾಳ ಕಡಿಮೆ ಬಡ್ಡಿಯ ದರದಲ್ಲಿ ಲಭ್ಯವಿರುತ್ತದೆ. ಹೀಗೆ ಲಭ್ಯವಿರುವ ಬಂಡವಾಳವನ್ನು ಬಯಸಿದಾಗ ಉತ್ಪನ್ನ ಹೆಚ್ಚಾಗುತ್ತದೆ. ಇದರಿಂದಾಗಿ ಉತ್ಪಾದನಾ ಪರಿಕರಗಳನ್ನು ಹೊಂದಿರುವವರ ಆದಾಯದಲ್ಲಿಯೂ ಹೆಚ್ಚಳವಾಗುತ್ತದೆ. ಆದಾಯ ಹೆಚ್ಚಾದಾಗ ಉಳಿತಾಯದಲ್ಲೂ ಏರಿಕೆ ಉಂಟಾಗುತ್ತದೆ ಮತ್ತು ಬಂಡವಾಳ ಸಂಚಯನ ಸುಲಭವಾಗುತ್ತದೆ. ಉತ್ಪಾದನೆ ಹೆಚ್ಚಾಗುವ ವೇಳೆ ಕೈಗಾರಿಕೋದ್ಯಮಿಗಳಿಗೆ ಸಿಗುವ ಲಾಭದಲ್ಲಿ ಹೆಚ್ಚಳವಾದುವುದರಿಂದ ಹೂಡಿಕೆಗಾಗಿ ಅಧಿಕ ಬಂಡವಾಳ ಲಭ್ಯವಿರುತ್ತದೆ. ಹೀಗೆ ಬಂಡವಾಳ ಸಂಚಯನ ಬೇಕಾದಷ್ಟು ಪ್ರಮಾಣದಲ್ಲಿ ಆದಾಗ ಬಡ್ಡಿಯ ದರದಲ್ಲಿ ಕಡಿತ ಉಂಟಾಗಿ ಸಾಕಷ್ಟು ಬಂಡವಾಳ ಸುಲಭವಾಗಿ ಲಭ್ಯವಿರುತ್ತದೆ.

ನಾಲ್ಕನೆಯದಾಗಿ ದೇಶದ ಒಟ್ಟು ಉತ್ಪನ್ನದಲ್ಲಿ ಕೈಗಾರಿಕಾ ರಂಗದ ಕೊಡುಗೆ ಅಧಿಕವಾಗಿರುವುದು ಕಂಡು ಬರುತ್ತದೆ. ಉದಾಹರಣೆಗೆ ಅಮೆರಿಕಾದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿ ಕ್ಷೇತ್ರದ ಕೊಡುಗೆ ೪% ನಿಂದ ೫%ವರೆಗಿದ್ದರೆ ಭಾರತದಲ್ಲಿ ಇದು ೩೫% ನಿಂದ ೪೦%ರಷ್ಟಿದೆ. ನಾವು ಯಾವುದೇ ದೇಶದ ಅಭಿವೃದ್ಧಿಯ ಮಟ್ಟವನ್ನು ಗಮನಿಸಿದಾಗ ಬಡದೇಶಗಳಲ್ಲಿ ಮೂಲ ಉತ್ಪಾದನಾ ಕ್ಷೇತ್ರಗಳಾದ ಕೃಷಿ, ಗಣಿಗಾರಿಕೆ, ಮೀನುಗಾರಿಕೆ ಮುಂತಾದ ಪ್ರಾಥಮಿಕ ವಲಯಗಳ ಕೊಡುಗೆ ಕೈಗಾರಿಕಾ ರಂಗದ ಕೊಡುಗೆಗಿಂತ ತುಂಬಾ ಕಡಿಮೆಯಿರುವುದು ಕಂಡು ಬರುತ್ತದೆ. ಇವಲ್ಲದೆ ಉದ್ಯೋಗಾವಕಾಶಗಳು ಸೇವಾರಂಗದ ಬೆಳವಣಿಗೆ ಮುಂತಾದ ವಿಷಯಗಳೂ ಅರ್ಥಿಕ ಅಭಿವೃದ್ಧಿಯ ಮಟ್ಟವನ್ನು ಪ್ರತಿಬಿಂಬಿಸುತ್ತವೆ.

ಆರ್ಥಿಕ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ ? ಅಭಿವೃದ್ಧಿಯ ಗತಿ ಹೇಗೆ ಸಾಗುತ್ತದೆ ? ಎನ್ನುವ ಕುರಿತು ಹಲವಾರು ಅರ್ಥಶಾಸ್ತ್ರಜ್ಞರು ತರ್ಕಬದ್ಧವಾದ ವ್ಯಾಖ್ಯೆ ಮತ್ತು ವಿವರಣೆಗಳನ್ನು ನೀಡಿದ್ದಾರೆ. ಇದರಲ್ಲಿ ಕ್ಲಾಸಿಕಲ್ ಮತ್ತು ನಿಯೋ ಕ್ಲಾಸಿಕಲ್ ಅರ್ಥಶಾಸ್ತ್ರಜ್ಞರು ನೀಡಿರುವ ವ್ಯಾಖ್ಯೆ ಮತ್ತು ವಿವರಣೆಗಳು ಹೆಚ್ಚು ಸ್ವೀಕೃತವಾಗಿದ್ದು ಇಂದು ಅನುಷ್ಥಾನದಲ್ಲಿವೆ. ಇಂದು ಜಗತ್ತಿನ ಮುಂದುವರಿದ ರಾಷ್ಟ್ರಗಳು ಇಂತಹ ಅಭಿವೃದ್ಧಿ ನೀತಿಯನ್ನು ಅನುಮೋದಿಸುತ್ತಿದ್ದು ಇಂತಹ ಅಭಿವೃದ್ಧಿ ನೀತಿಯ ಮೂಲಕ ಆರ್ಥಿಕ ಸಮಾನತೆ ಪಡೆಯಬಹುದೆಂದು ಹೇಳಲಾಗುತ್ತಿದೆ.

ಆರ್ಥಿಕ ಅಭಿವೃದ್ಧಿ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನು ಹೀಗೆ ವಿವರಿಸಲಾಗಿದೆ. ಒಂದು ದೇಶದ ಕಾರ್ಮಿಕ ಶಕ್ತಿಯನ್ನು ಬಳಸಿ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಉಳಿದೆಲ್ಲ ಉತ್ಪಾದನಾ ಪರಿಕರಗಳು ತಮ್ಮ ದುಡಿಮೆಗೆ ಒಂದು ನಿಶ್ಚಿತ ಫಲವನ್ನು ಪಡೆಯುತ್ತವೆ. ಕಾರ್ಮಿಕ ಶಕ್ತಿಯ ಅಧಿಕ ದುಡಿತದಿಂದ ಬಳಕೆಗೆ ಬೇಕಾಗುವುದಕ್ಕಿಂತ ಅಧಿಕ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಕಾರ್ಮಿಕ ಶಕ್ತಿ ಅಧಿಕವಾಗಿ ಉತ್ಪಾದಿಸುವುದರಿಂದ ಮತ್ತು ಕಡಿಮೆ ವಸ್ತುವನ್ನು ಬಳಸುವ ಮೂಲಕ ಬಂಡವಾಳ ಸಂಚಯನ ಸಾಧ್ಯವಾಗುತ್ತದೆ. ಈ ರೀತಿ ಬಂಡವಾಳ ಸಂಚಯನ ಕ್ರಿಯೆಯಲ್ಲಿ ತೀವ್ರತೆ ಉಂಟಾಗುವುದು ಕಾರ್ಮಿಕ ಶಕ್ತಿಯ ವರ್ಗೀಕರಣದಿಂದ. ಇದರಿಂದ ಕಾರ್ಮಿಕರ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಯಾಕೆಂದರೆ ಇಂತಹ ವರ್ಗೀಕರಣದಿಂದ ಕಾರ್ವಿಕರು ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗಕ್ಕೆ ವಲಸೆ ಹೋಗುತ್ತಾ ಸಮಯ ವ್ಯರ್ಥವಾಗುವುದಿಲ್ಲ. ಕೆಲಸದಲ್ಲಿ ಪರಿಣತಿಯುಂಟಾಗುತ್ತದೆ ಮತ್ತು ಇಂತಹ ಪರಿಣತಿಯಿಂದ ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತವೆ. ಯಾವ ಮಟ್ಟದಲ್ಲಿ ಕಾರ್ಮಿಕ ಶಕ್ತಿಯ ವರ್ಗೀಕರಣ ಉಂಟಾಗುತ್ತದೆ ಎನ್ನುವುದು ಉತ್ಪಾದಿತ ವಸ್ತುವಿಗಿರುವ ಮಾರುಕಟ್ಟೆ ಮತ್ತು ಬಂಡವಾಳವನ್ನವಲಂಬಿಸಿದೆ. ಕಾರ್ಮಿಕ ಶಕ್ತಿ ಹೆಚ್ಚದಾಗ ಉತ್ಪಾದನೆ ಹೆಚ್ಚಾಗುತ್ತದೆ. ಯಾಕೆಂದರೆ ನಾವು ಕಾರ್ಮಿಕ ಶಕ್ತಿಯಲ್ಲಿ ಹೆಚ್ಚಳ ಉಂಟುಮಾಡಬಹುದೇ ಹೊರತು ಪ್ರಕೃತಿಯಲ್ಲಲ್ಲ. ಹೀಗೆ ಉತ್ಪಾದನೆಯಾದ ವಸ್ತುಗಳು ವಿನಿಮಯದ ಮೂಲಕ ಪ್ರಸರಣ ಹೊಂದುತ್ತವೆ. ಇಂತಹ ಪ್ರಸರಣದಲ್ಲಿ ಕೊಡುಕೊಳ್ಳುವಿಕೆ ಅನಿವಾರ್ಯವಾಗಿರುತ್ತದೆ.

ಲೇಖನದ ಆರಂಭದಲ್ಲಿ ಚರ್ಚಿಸಿದಂತೆ ಬಂಡವಾಳ ಸಂಚಯನವು ಕಾರ್ಮಿಕ ಶಕ್ತಿಯ ವರ್ಗೀಕರಣ ಅಧಿಕವಾದಂತೆ ಉತ್ಪಾದನೆಯೂ ಅಧಿಕವಾಗುತ್ತಾ ಹೋಗುತ್ತದೆ. ಉತ್ಪಾದನೆ ಹೆಚ್ಚಿದಾಗ ಲಾಭಾಂಶ ಹೆಚ್ಚಿ ಬಂಡವಾಳಶಾಹಿಗಳ ಕೈಯಲ್ಲಿ ಸಂಪತ್ತು ಸಂಚಯಿತವಾದಂತೆ ಬಂಡವಾಳ ಲಭ್ಯತೆಯೂ ಅಧಿಕವಾಗುತ್ತದೆ. ಇದು ಕಾರ್ಮಿಕ ಶಕ್ತಿಯ ವರ್ಗೀಕರಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ಕಾರ್ಮಿಕನ ಶಕ್ತಿಯ ವರ್ಗೀಕರಣ ಬಂಡವಾಳ ಸಂಚಯನವಲ್ಲದೆ, ಮಾರುಕಟ್ಟೆಯ ಗಾತ್ರ, ಜನಸಂಖ್ಯಾ ದಟ್ಟಣೆ ಮತ್ತು ವಾಣಿಜ್ಯ ವ್ಯಸಸ್ಥೆ ಇವುಗಳನ್ನೂ ಅವಲಂಬಿಸಿದೆ. ಬಂಡವಾಳ ಹೆಚ್ಚಿದಂತಲ್ಲಾ ಕಾರ್ಮಿಕ ಶಕ್ತಿಯ ವರ್ಗೀಕರಣವೂ ಅಧಿಕವಾಗುತ್ತಾ ಹೋಗುತ್ತದೆ. ಇದೊಂದು ರೀತಿಯಲ್ಲಿ ವರ್ತುಲಾಕೃತಿಯ ಹರವು ಇದ್ದಂತೆ. ಸಂಚಯಿತ ಬಂಡವಾಳದಿಂದ ಕೈಗಾರಿಕಾ ಚಟುವಟಿಕೆಗಳು ಅಧಿಕವಾಗಿ ಹೆಚ್ಚು ಉತ್ಪಾದನೆಯುಂಟಾಗುತ್ತದೆ. ಇದರಿಂದ ಇನ್ನಷ್ಟು ಉತ್ಪಾದನಾ ಪರಿಕರಗಳು ಉತ್ಪಾದನೆಯಲ್ಲಿ ತೊಡಗುತ್ತವೆ ಯಾ ಸಕ್ರಿಯವಾಗುತ್ತವೆ. ಪರಿಣಾಮವಾಗಿ ಅಧಿಕ ಲಾಭ ಉಂಟಾಗುತ್ತದೆ. ಪುನಃ ಬಂಡವಾಳದಾರರ ಸಂಪತ್ತು ಹೆಚ್ಚಿ ಅಂತಹ ಬಂಡವಾಳ ಕೈಗಾರಿಕಾ ವಲಯದ ಗಾತ್ರವನ್ನಲ್ಲದೆ ಅದರ ನೈಪುಣ್ಯತೆಯನ್ನೂ ಅಧಿಕಗೊಳಿಸುತ್ತದೆ.

ಬಂಡವಾಳವನ್ನು ನಾಲ್ಕು ಉದ್ದೇಶಗಳಿಗೆ ಬಳಸಲಾಗುತ್ತದೆ.

೧. ಸಮಾಜದ ಬಳಕೆಗೆ ಮತ್ತು ಇತರ ಉಪಯೋಗಕ್ಕೆ ಬೇಕಾಗುವ ಕಚ್ಚಮಾಲುಗಳನ್ನು ಪಡೆಯಲು ಅಥವಾ ಉತ್ಪಾದಿಸಲು, ಉದಾ: ಕೃಷಿಕ್ಷೇತ್ರದಲ್ಲಿನ ಉತ್ಪಾದನೆಗೆ, ಮೀನುಗಾರಿಕೆ, ಗಣಿಗಾರಿಕೆ, ಮುಂತಾದ ಶೇಖರಣಾ ಚಟುವಟಿಕೆಗಳಿಗೆ.

೨. ಕಚ್ಚಾಮಾಲುಗಳನ್ನು ಸಿದ್ಧ ವಸ್ತುಗಳಾಗಿ ಮಾರ್ಪಾಡಿಸಲು, ಉದಾಹರಣೆಗೆ ಉತ್ಪಾದನಾ ಕಾರ್ಯಗಳಿಗೆ.

೩. ಉತ್ಪಾದಿಸಿದ ವಸ್ತುಗಳನ್ನು ಉತ್ಪಾದನಾ ಕೇಂದ್ರದಿಂದ ಅವು ಮಾರಾಟವಾಗುವ ಸ್ಥಳಗಳಿಗೆ ಕೊಂಡೊಯ್ಯಲು ಉದಾಹರಣೆಗೆ ಸಾರಿಗೆ, ವಿಮೆಯಂತಹ ಪೂರಕ ಚಟುವಟಿಕೆಗಳಿಗೆ.

೪.ಉತ್ಪನ್ನಗಳನ್ನು ಅವುಗಳ ಬಳಕೆದಾರರಿಗೆ ತಲುಪಿಸಲು, ಉದಾಹರಣೆಗೆ ವಸ್ತು ಅಥವಾ ಸೇವೆಯ ನಿರ್ವಹಣಾ ಜಾಲ ನಿರ್ವಹಣೆಗೆ.

ಮೇಲೆ ವಿವರಿಸಿದ ನಾಲ್ಕು ಉದ್ದೇಶಗಳಿಗೆ ಬಂಡವಾಳದ ಉಪಯೋಗವಾದಂತೆ ಕಾರ್ಮಿಕ ಶಕ್ತಿಯೂ ಉಪಾಯೋಗಿಸಲ್ಪಡುತ್ತದೆ. ಕಾರ್ಮಿಕ ಶಕ್ತಿ ಈ ರೀತಿ ಉಪಯೋಗಿಸಲ್ಪಟ್ಟಾಗ ಅಂತಹ ವಸ್ತುಗಳ ಮೌಲ್ಯ ವೃದ್ಧಿಯಾಗುತ್ತದೆ. ಕಾರ್ಮಿಕ ಶಕ್ತಿಯ ಉತ್ಪಾದನಾ ಸಾಮರ್ಥ್ಯ ವೇತನ ನಿಧಿಯನ್ನವಲಂಬಿಸಿದೆ. ವೇತನ ನಿಧಿಯು ಉಳಿತಾಯ ಮಾಡಬೇಕೆನ್ನುವ ತುಡಿತವನ್ನವಲಂಬಿಸಿದೆ. ಉಳಿತಾಯದ ಮೇಲೆ ದೊರಕುವ ಪ್ರತಿಫಲವಾದ ಬಡ್ಡಿ ಸಂಚಯಿತವಾಗುತ್ತಾ ಹೋದಂತೆ ಸಂಪತ್ತು ವೃದ್ಧಿಯಾಗುತ್ತದೆ. ಇದು ಒಂದು ಸಾಮೂಹಿಕ ಕ್ರಿಯೆಯಾದಾಗ ದೇಶದಲ್ಲಿ ಉತ್ಪಾದಕತೆ ಹೆಚ್ಚುತ್ತದೆ. ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಇಂತಹ ಸಾಮೂಹಿಕ ಕ್ರಿಯೆಯಲ್ಲಿ ವ್ಯಕ್ತಿಗತ ಲಾಭ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವೆ ಸಮತೋಲನವನ್ನು ಅದೃಶ್ಯದ ಹಸ್ತ ತಾನಾಗಿಯೇ ನಿಯಂತಿಸುತ್ತದೆ. ಕಾರ್ಮಿಕ ಶಕ್ತಿ, ಬಂಡವಾಳ ಸಂಚಯನ, ಉತ್ಪಾದಕತೆ, ವಾಣಿಜ್ಯ ವಹಿವಾಟಿನ ಬೆಳವಣಿಗೆ, ಅಧಿಕ ಲಾಭ, ಸಾಮಾಜಿಕ ಅಭಿವೃದ್ಧಿ ಹೀಗೆ ಆರ್ಥಿಕ ಅಭಿವೃದ್ಧಿ ತನ್ನಿಂತಾನೇ ಆಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಹಿತಾಶಕ್ತಿಯನ್ನು ಹೀಗೆ ಕಾಯ್ದುಕೊಳ್ಳಬೇಕೆಂದು ಎಲ್ಲರಿಗಿಂತ ಹೆಚ್ಚಾಗಿ ತಿಳಿದಿರುತ್ತಾನೆ. ಆದ್ದರಿಂದ ಸರ್ಕಾರ ವ್ಯಕ್ತಿಗಳ ಚಟುವಟಿಗಳನ್ನು ನಿಯಂತಿಸಲು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿತುವುದಿಲ್ಲ ಎನ್ನುವುದು ಶಾಸ್ತ್ರೀಯ ಅರ್ಥಶಾಸ್ತ್ರದ ಗ್ರಹೀತ.

ಇವತ್ತು ಜಗತ್ತಿನ ಅಭಿವೃದ್ಧಿ ಹೊಂದಿದ ಮುಂದುವರಿದ ದೇಶಗಳು, ಅಭಿವೃದ್ದಿಶೀಲ ದೇಶಗಳಿಗೆ ಹೇಳುತ್ತಿರುವ ವಿಶ್ವ ಮಾರುಕಟ್ಟೆ, ಜಾಗತೀಕರಣ, ಮುಕ್ತ ಅರ್ಥವ್ಯವಸ್ಥೆಗಳೆಲ್ಲವೂ ಈ ಶಾಸ್ತ್ರೀಯ ಅರ್ಥಶಾಸ್ತ್ರ ಪಾತಳಿಯ ಮೇಲೇಯೇ ನಿಂತಿರುವಂತದ್ದಾಗಿದೆ. ಇಂತಹ ತತ್ವವನ್ನು ಆಧರಿಸಿದ ಅಭಿವೃದ್ಧಿ ನೀತಿಯನ್ನು ಅನುಸರಿಸುವ ಮೂಲಕ ಒಂದೇ ನೆಗೆತಕ್ಕೆ ಯಾವುದೇ ದೇಶ ಅಭಿವೃದ್ಧಿ ಹೊಂದುವುದು ಕಷ್ಟವೆಂದೇ ಹೇಳಬಹುದು. ಬದಲಾಗಿ ಈ ಕೆಲಸ ಹಂತ ಹಂತವಾಗಿ ಮುಂದುವರಿದು ಅಂತಿಮವಾಗಿ ಅಭಿವೃದ್ಧಿಯ ಮಟ್ಟವನ್ನು ತಲುಪಬಹುದು. ಡಬ್ಲ್ಯೂ ಡಬ್ಲ್ಯೂ. ರಾಸ್ತೋವ್ ನ ಪ್ರಕಾರ ಎಲ್ಲ ದೇಶಗಳು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಈ ಕೆಳಗಿನ ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ.

  • ಪಾರಂಪರಿಕ ಸಮಾಜ
  • ಮೇಲೆರುವುದರ ಪೂರ್ವದ ಹಂತ
  • ಮೇಲೇರುವ ಹಂತ
  • ಪೂರ್ಣತೆಯತ್ತ ಚಲನೆಯ ಹಂತ
  • ಅಧಿಕ ಸಾಮೂಹಿಕ ಬಳಕೆಯ ಹಂತ

ಅಭಿವೃದ್ಧಿ ಕುರಿತಾದ ಈ ತತ್ವಗಳು ಮಾತು ವ್ಯಾಖ್ಯೆಗಳಿಂದ ಸ್ಪಷ್ಟವಾಗುವ ಮುಖ್ಯವಾದ ಅಂಶಗಳೆಂದರೆ ಉತ್ಪಾದನಾ ಪರಿಕರಗಳನ್ನು ದುಡಿಸಿಕೊಂಡು ಉತ್ಪಾದನೆಗಳನ್ನು ಹೆಚ್ಚಿಸುವುದು, ಉತ್ಪಾದನಾ ಪರಿಕರಗಳನ್ನು ದುಡಿಸಿಕೊಳ್ಳುವಾಗ ಉತ್ಪಾದನೆಯ ಪ್ರಮಾಣವನ್ನು ಅಧಿಕಗೊಳಿಸಲು ನಾವು ಉತ್ಪನ್ನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಇಂತಹ ತಂತ್ರಜ್ಞಾನವು ಆವಿಷ್ಕಾರದ ಫಲ. ಆವಿಷ್ಕಾರ ಸಾಧ್ಯವಾಗುವುದು ಕಾರ್ಮಿಕ ಶಕ್ತಿಯ ವರ್ಗೀಕರಣದಿಂದ. ಕಾರ್ಮಿಕ ಶಕ್ತಿಯ ವರ್ಗೀಕರಣ ಸಾಧ್ಯವಾಗುವುದು ಬಂಡವಾಳ ಸಂಚಯನದಿಂದ. ಬಂಡವಾಳ ಸಂಚಯನ ಸಾಧ್ಯವಾಗುವುದು ಕಾರ್ಮಿಕ ವರ್ಗದ ಶ್ರಮದಿಂದ ಹಾಗೂ ಬಳಕೆಯ ಖರ್ಚನ್ನು ಕಡಿಮೆ ಮಾಡುವುದರಿಂದ.

ಅಭಿವೃದ್ಧಿಯ ಈ ವ್ಯಾಖ್ಯೆಯು ದೋಷಮುಕ್ತವಾದುದಲ್ಲ ಎನ್ನುವುದಕ್ಕೆ ವಾಸ್ತವಿಕವಾಗಿ ನಮಗೆ ಬಹಳಷ್ಟು ಉದಾಹರಣೆಗಳು ದೊರೆಯುತ್ತವೆ. ರಾಷ್ಟ್ರೀಯ ಆದಾಯ ಅಥವಾ ತಲಾ ಆದಾಯ ಅಧಿಕವಿರುವ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನುವುದು ನಿಖರವಾದ ವ್ಯಾಖ್ಯೆಯಲ್ಲ. ಉದಾಹರಣೆಗೆ, ಕೌವೈತ್ ದೇಶದಲ್ಲಿನ ತಲಾ ಆದಾಯ ಅಧಿಕವಾಗಿದ್ದರೂ ನಾವದನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಪರಿಗಣಿಸುವುದಿಲ್ಲ. ರಾಷ್ಟ್ರೀಯ ಆದಾಯ ಅಧಿಕವಿದ್ದಾಗಲೂ ತಲಾ ಆದಾಯ ನಿಜವಾಗಿ ಕಡಿಮೆಯಿರಬಹುದು. ಇದಕ್ಕೆ ಕಾರಣ ಸಂಪತ್ತಿನ ಕ್ರೋಢಿಕರಣ ಕೆಲವೇ ವರ್ಗಗಳಲ್ಲಿ ಆಗಿರುವುದು. ಅಭಿವೃದ್ಧಿ ಹೊಂದಲು ಹಂತಗಳು ಎಲ್ಲ ದೇಶಗಳಿಗೂ ಏಕರೂಪದಲ್ಲಿರಲು ಸಾಧ್ಯವಿಲ್ಲ. ಯಾಕೆಂದರೆ ಅಭಿವೃದ್ಧಿ ದೇಶದ ವಿವಿಧ ಸಂಪನ್ಮೂಲಗಳನ್ನು ಅವಲಂಬಿಸಿದೆ. ಕೆಲವೊಂದು ದೇಶಗಳಂತೂ ರಾಸ್ತೋವ್ ಹೇಳಿರುವ ಹಂತಗಳನ್ನು ಹಾದು ಹೋಗಿಯೇ ಇಲ್ಲ. ಉದಾಹರಣೆಗೆ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಾ, ನ್ಯೂಜಿಲೆಂಡ, ಆಸ್ಟ್ರೇಲಿಯಾ…. ಇತ್ಯಾದಿ ದೇಶಗಳು ಕ್ಲಾಸಿಕಲ್ ಅರ್ಥಶಾಸ್ತ್ರಜ್ಞರು ಹೇಳುವ ಅಭಿವೃದ್ಧಿ ನೀತಿಯಿಂದ ಮತ್ತು ಅದರ ಅನುಷ್ಠಾನದಿಂದ ರಾಷ್ಟ್ರೀಯ ಆದಾಯದಲ್ಲಿ ತಲಾ ಆದಾಯದಲ್ಲಿ ಏರಿಕೆಯಾಗಿ ಜನರಿಗೆ ಮೊದಲಿಗಿಂತಲೂ ಹೆಚ್ಚು ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ ಮತ್ತು ಅವರು ಸುಖದಿಂದ ಇರಬಹುದು ಎಂಬಿತ್ಯಾದಿ ವಿವರಣೆಗಳು ಸರಿಯಲ್ಲ. ಅಭಿವೃದ್ಧಿ ಎನ್ನುವುದು ಕೇವಲ ಅರ್ಥಿಕ ಕಲ್ಯಾಣವಾಗಲೀ ಸಾಮಾಜಿಕ ಏಳಿಗೆಯಾಗಲೀ ಅಲ್ಲ. ಯಾಕೆಂದರೆ ಪ್ರಚಲಿತ ನಾವಂದುಕೊಂಡಿರುವ ಮತ್ತು ಸಾಧಿಸಬಯಸುತ್ತಿರುವ ಅಭಿವೃದ್ಧಿಯ ಮಾದರಿ, ಹಲವಾರು ರೀತಿಯ ಅಪಾಯಕಾಗಿ ಸಮಸ್ಯೆಗಳಿಗೆ ದಾದಿ ಮಾಡಿಕೊಟ್ಟಿದೆ. ಅಭಿವೃದ್ಧಿ ಸಂಪತ್ತು ಸೃಷ್ಠಿಸುವುದು ಮಾತ್ರವಲ್ಲದೇ ಸಾಮಾಜಿಕ ಸಂಸ್ಥೆಗಳ ಮೇಲೆ ಜನರ, ಅಭ್ಯಾಸ, ನಂಬಿಕೆ, ಮೌಲ್ಯಗಳ ಮೇಲೆ, ಆಗಾಧವಾದ ಪರಿಣಾಮವನ್ನುಂಟುಮಾಡುತ್ತದೆ. ಆದಾಯದ ಅಸಮರ್ಪಕ ವಿತರಣೆ ಸಮಾಜದ ವಿವಿಧ ವರ್ಗಗಳ ಮಧ್ಯೆ, ಒತ್ತಡವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಕೂಡ ಸಂಪತ್ತಿನ ಅಸಮರ್ಪಕ ವಿತರಣೆಯು ದೇಶಗಳ ಮಧ್ಯೆ, ಪ್ರಾಂತ್ಯಗಳ ಮಧ್ಯೆ ಪೈಪೋಟಿಯನ್ನು ನರ್ಮಿಸಿದೆ. ನಿಜ ಸ್ಥಿತಿ ಹೀಗಿರುವಾಗ ಅಭಿವೃದ್ಧಿಯ ಸಂಕೇತಗಳಾದ ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಳ ಮತ್ತು ತಲಾ ಆದಾಯದಲ್ಲಿ ಏರಿಕೆಯುಂಟಾದಾಗ ಸುಖ ಸಮೃದ್ಧಿ ಒದಗಿ ಬರುತ್ತದೆ ಎನ್ನುವುದು ವಾಸ್ತವಿಕತೆಗೆ ದೂರವಾದ ಹೇಳಿಕೆಯಾಗಿದೆ. ಅರ್ಥಶಾಸ್ತ್ರದ ಮೂಲ ಆಶಯವಾದ ಮನುಷ್ಯನ ಬಯಕೆಯನ್ನು ಈಡೇರಿಸುವ ಮೂಲಕ ತೃಪ್ತಿ ಹೆಚ್ಚಿಸುವ ಉದ್ದೇಶ ಏನಿದೆಯೋ, ಅದಕ್ಕಿಂತ ಅಭಿವೃದ್ಧಿಯ ಕುರಿತ ವಸ್ತುಸ್ಥಿತಿ ತೀರಾ ಭಿನ್ನವಗಿದೆ. ತಲಾ ಆದಾಯ ಮತ್ತು ರಾಷ್ಟ್ರೀಯ ಆದಾಯದಲ್ಲಿ ಏರಿಕೆಯಾದಾಗಲೂ ಇದು ಗಂಭೀರ ತೆರನಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಕೊಲಂಬಿಯಾ ದೇಶಾದ ಕುರಿತಾದ ಅಂತರಾಷ್ಟ್ರೀಯ ವರದಿಯಲ್ಲಿ ಹೇಳುವಂತೆ ಆರ್ಥಿಕ ಬೆಳವಣಿಗೆಯ ಕುರಿತಾದ ಅತೃಪ್ತಿಗೆ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ, ಬಡವ ಶ್ರೀಮಂತರ ನಡುವಿನ ಅಂತರದ ಹೆಚ್ಚಳ, ಹಳ್ಳಿ ಮತ್ತು ಪಟ್ಟಣದ ಜನರ ಆದಾಯದಲ್ಲಿ ಅಸಮತೋಲನ ಮುಂತಾದವು ಕಾರಣವಾಗಿ ಇದರಿಂದ ಹೆಚ್ಚು ಪ್ರಮಾಣದ ಜನ ಬಡತನ ರೇಖೆಗಿಂತ ಕೆಳಗೆ ಕುಸಿಯುತ್ತಿರುವುದು ದಾಖಲಾಗಿದೆ. ಅಭಿವೃದ್ಧಿಯ ವೇಗವನ್ನು, ಪ್ರಮಾಣವನ್ನು ಹೆಚ್ಚಿಸಿದಂತೆಲ್ಲ ಮೇಲಿನ ಸಮಸ್ಯೆಗಳು ಪೂರ್ತಿ ಬಗೆಹರಿಯುವ ಬದಲು ಸಮಸ್ಯೆಯ ತೀವ್ರತೆ ಅಧಿಕವಾಗುತ್ತ ಹೋಗುತ್ತಲಿದೆ. ಈ ಕಾರಣದಿಂದಾಗಿ ಅಭಿವೃದ್ಧಿಯ ಸ್ವಭಾವ ಮತ್ತು ಪ್ರಕ್ರಿಯೆಯಲ್ಲಿ ಬದಲಾವಣೆಯ ಅಗತ್ಯವಿದೆ. ಪಾಕಿಸ್ತಾನ ಸರಕಾರದ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಂತೆ ಅಭಿವೃದ್ಧಿಯೆನ್ನುವುದು ಬಡತನ, ಪೌಷ್ಠಿಕ ಆಹಾರದ ಕೊರತೆ, ಹಸಿವು, ರೋಗ, ಅನಕ್ಷರತೆ, ಅಸಮಾನತೆ ಮುಂತಾದವುಗಳ ಮೇಲಿನ ಸಮರವಾಗಬೇಕು. ನಾವಂದುಕೊಂಡಿರುವ ರಾಷ್ಟ್ರೀಯ ಉತ್ಪನ್ನ ಹೆಚ್ಚಿದಾಗ ಬಡತನ ಮಾಯವಾಗಲಿದೆ ಎನ್ನುವ ನಂಬಿಕೆ ತಿರುವು ಮುರುವಾಗಬೇಕು. ಬಡತನದ ಮೇಲೆ ಸಾರುವ ನಿರಂತರ ಸಮರ ಯಶಸ್ವಿಯಾದಾಗ ರಾಷ್ಟ್ರೀಯ ಉತ್ಪನ್ನ ತಾನೇ ತಾನಾಗಿ ಹೆಚ್ಚುತ್ತದೆ. ತೃತೀಯ ಜಗತ್ತಿನ ರಾಷ್ಟ್ರಗಳ ಉತ್ಪನ್ನದಲ್ಲಿ ೧೯೬೦ರಿಂದೀಚೆಗೆ ಶೇಕಡಾ ಐವತ್ತರಷ್ಟು ಅಭಿವೃದ್ಧಿಯಾಗಿದ್ದರೂ ಮೂರನೇ ಎರಡಂಶ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಆದಾಯ ವಿತರಣೆಯಲ್ಲಿ ಅಸಮತೋಲನ ಹಿಂದೆಂದಿಗಿಂತಲೂ ಅಧಿಕವಾಗಿದೆ. ಜಾಗತಿಕ ಮಟ್ಟದಲ್ಲಿಯೂ ಇದೇ ತೆರನಾದ ಅಭಿವೃದ್ಧಿಯ ಫಲ ಉಳ್ಳವರ ಪಾಲಿಗೆ ದಕ್ಕಿದೆ. ಇಲ್ಲದವರು ಇನ್ನೂ ಬಡವರಾಗಿದ್ದಾರೆ. ಇದರಿಂದ ದೇಶದೊಳಗೆ, ದೇಶದೊಳಗಿನ ವಿವಿಧ ಸಾಮಾಜಿಕ ವರ್ಗಗಳೊಳಗೆ ಅತೃಪ್ತಿ ಪ್ರಕ್ಷುಬ್ಧತೆ ಹುಟ್ಟಿಕೊಂಡಿದೆ. ನಾವು ಸಾಧಿಸಿದ ಇದುವರೆಗಿನ ಅಭಿವೃದ್ಧಿಯನ್ನು ಗಮನಿಸಿದಾಗ ಕಂಡು ಬರುವ ಅಂಶಗಳೆಂದರೆ:

೧. ತಲಾ ಆದಾಯದಲ್ಲಿ ಶೇಕಡಾ ೩.೫ರ ಪ್ರಮಾಣದಲ್ಲಿ ವೃದ್ಧಿಯಾಗುತ್ತಲಿರುವಾಗ ಬಡಜನರ ಆದಾಯದಲ್ಲಿ ತೀವ್ರ ಪ್ರಮಾಣದ ಇಳಿಮುಖ ಕಂಡುಬರುತ್ತಿದೆ.

೨. ಅಧಿಕ ಪ್ರಮಾಣದಲ್ಲಿ ಸಂಪತ್ತು ಸೃಷ್ಠಿಯಾಗಿರುವುದು ಸತ್ಯ.

೩. ಬಡಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿ ಅವಶ್ಯಕವಾದರೂ, ಇಂತಹ ಅಭಿವೃದ್ಧಿ ಬಡಜನರ ಸ್ಥಿತಿಯನ್ನು ಖಂಡಿತ ಸುಧಾರಿಸುತ್ತದೆ ಎಂದು ಹೇಳಲಾಗುವುದಿಲ್ಲ.

೪. ಮಾನವ ಸಂಪನ್ಮೂಲ ಕೇಂದ್ರಿತ ಉತ್ಪಾದನಾ ಕ್ರಮಗಳನ್ನು ಅನುಸರಿಸಿದ ಅಭಿವೃದ್ಧಿಯ ದರದಲ್ಲಿ ಏರಿಕೆಯಿದ್ದಾಗ ಮಾತ್ರ ಶೇಕಡಾ ೪೦ರಷ್ಟು ಕಡುಬಡತನವಿರುವ ಜನರ ಆದಾಯದಲ್ಲಿ ಏರಿಕೆ ಕಂಡು ಬಂದಿದೆ.

ಇಲ್ಲಿ ನಮಗೆ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮಲ್ಲಿ ರಾಷ್ಟ್ರೀಯ ಉತ್ಪನ್ನ ಮತ್ತು ತಲಾ ಆದಾಯದಲ್ಲಿ ಹೆಚ್ಚಳ ಉಂಟುಮಾಡುವುದರಿಂದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಇದೆ. ಬಡದೇಶಗಳಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಅಧುನಿಕ ತಂತ್ರಜ್ಞಾನ ಮತ್ತು ಬಂಡವಾಳವನ್ನು ಒದಗಿಸಿಕೊಡಬೇಕು; ಇದನ್ನು ಬಳಸಿಕೊಂಡು ಬಡದೇಶಗಳು ಉತ್ಪಾದನೆ ಹೆಚ್ಚಿಸಿ, ತಲಾ ಆದಾಯ ಹೆಚ್ಚಿಸಿ ಅಭಿವೃದ್ಧಿ ಹೊಂದುವುದು ಸಾಧ್ಯ ಎಂಬ ನಂಬಿಕೆ ಕೆಲಸ ಮಾಡುತ್ತಿದೆ. ಆದರೆ ಮಹಾಯುದ್ಧದ ನಂತರದಲ್ಲಿ ಸುಮಾರು ಐದು ದಶಕಗಳಷ್ಟು ಕಾಲ ನಿರಂತರ ನಡೆದ ಈ ಅಭಿವೃದ್ಧಿಯ ಪ್ರಯತ್ನಗಳ ಹೊರತಾಗಿಯೂ ಹಸಿವು ಅನಕ್ಷರತೆ, ಪೌಷ್ಠಿಕಾಂಶದ ಕೊರತೆಯಿಂದ ಜನ ಕಂಗೆಟ್ಟಿದ್ದಾರೆ, ಮಿಲಿಯನಗಟ್ಟಲೆ ಹಣವನ್ನು ಸಾಲವಾಗಿ ಪಡೆದು, ತಂತ್ರಜ್ಞಾನವನ್ನು ಎರವಲು ಪಡೆದು ಬಡದೇಶಗಳು ಅಭಿವೃದ್ಧಿ ಹೊಂದಲು ಮಾಡಿದ ಎಲ್ಲ ಸಾಹಸಗಳ ಹೊರತಾಗಿಯೂ ಅವರ ಪರಿಸ್ಥಿತಿಯಲ್ಲಿ ಬಹಳ ದೊಡ್ಡ ಬದಲಾವಣೆ ಆಗಿಲ್ಲ. ಆದರೆ ಶ್ರೀಮಂತ ರಾಷ್ಟ್ರಗಳು ಮಾತ್ರ ಎಂದಿನಂತೆ ಸಂಪತ್ತಿನಲ್ಲಿ ಮುಳುಗಿ ಹೋಗಿವೆ. ಬೇಡಿಕೆಯನ್ನು ಸರಿದೂಗಿಸಲು ಟನ್ನುಗಟ್ಟಲೆ ಆಹಾರವನ್ನು ಸಮುದ್ರಕ್ಕೆ ಚೆಲ್ಲಿತ್ತಿವೆ. ಹೀಗಾಗಿ ಅಭಿವೃದ್ಧಿ ಎಂದರೆ, ಅಭಿವೃದ್ಧಿ ಹೊಂದಿದ ದೇಶಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ತಂತ್ರಜ್ಞಾನ ವರ್ಗಾವಣೆ ಮಾಡಲು, ಬಡದೇಶಗಳ ಮಾನವ ಸಂಪನ್ಮೂಲ ಬಳಕೆ ಮೂಲಕ ಸಾಧಿಸಿದ ಪ್ರಗತಿಯನ್ನುಳಿಸಿಕೊಳ್ಳಲು ಹೂಡಿದ ಒಂದು ಉಪಾಯವಾಗಿದೆ ಎನ್ನುವ ಟೀಕೆಯು ಚಾಲ್ತಿಯಲ್ಲಿದೆ. ಉತ್ಪಾದಿತವಾಗಿರುವ ವಸ್ತುಗಳು, ಅಂತಹ ಉದ್ದೇಶಕ್ಕೆ ಬಳಕೆಯಾದಾಗ ಮಾತ್ರ ಅದಕ್ಕೆ ಮೌಲ್ಯವಿದೆ ಹೊರತು ದುಡ್ಡಿದ್ದವರಿಗೆ ಸೇರಿದಾರ ಅಲ್ಲ. ಉತ್ಪಾದನೆಯಾದ ವಸ್ತು ಮತ್ತು ಸರಕುಗಳು ಸಮಾನವಾಗಿ ವಿತರಣೆಯಾಗಿ ಸಂಪತ್ತಿನ ಸಮಾನ ಹಂಚಿಕೆಯಾಗಿ, ಬಡತನ ಸಿರಿತನ ನಡುವಿನ ಅಂತರ ಕಡಿಮೆಯಾಗಿ ಒಂದು ರೀತಿಯ ಸಾಮಾಜಿಕ ಸ್ಥಿರತೆ, ಆರ್ಥಿಕ ಸಮಾನತೆ, ಆರ್ಥಿಕ ಏಳಿಗೆಯಾದರೆ ಮಾತ್ರ ಅದನ್ನು ಅಭಿವೃದ್ಧಿ ಎನ್ನಬಹುದು.

ಅಂತರಾಷ್ಟ್ರೀಯ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್ ಅಥವಾ ಜಾಗತಿಕ ಬ್ಯಾಂಕ್

ಅಭಿವೃದ್ಧಿಯ ಕುರಿತು ವ್ಯೂಹಾತ್ಮಕವಾಗಿ ಯೋಚಿಸುವ ಮತ್ತು ಅದರ ವಿನ್ಯಾಸವನ್ನು ರೂಪಿಸುವ ಕೆಲಸವನ್ನು ಜಗತ್ತಿನ ಪ್ರಬಲ ಆರ್ಥಿಕ ಶಕ್ತಿ ಕೇಂದ್ರಗಳು ಬಹಳ ಎಚ್ಚರಿಕೆಯಿಂದ ಮತ್ತು ನಾಜೂಕಿನಿಂದ ನಿರ್ಮಿಸುತ್ತಿವೆ. ಇಂತಹ ವಿನ್ಯಾಸ ನಿರ್ಮಿತಿ ಕೇಂದ್ರ ಹೆಚ್ಚು ಕ್ರಿಯಾಶೀಲವಾಗಿರುವುದು ಅಭಿವೃದ್ಧಿಶೀಲ ದೇಶಗಳ ಸರಕಾರಗಳಿಗೆ ಸಹಕಾರ ನೀಡುವ ಹಣಕಾಸು ಸಂಸ್ಥೆಗಳ ಮೂಲಕ. ಈ ದಿಸೆಯಲ್ಲಿ ಅಂತರಾಷ್ಟ್ರೀಯ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ ಅಥವಾ ಜಾಗತಿಕ ಬ್ಯಾಂಕ್ ಮುಂಚೂಣಿಯಲ್ಲಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನ ಎರಡನೆಯ ವಿಶ್ವಯುದ್ಧದ ಗರಿಷ್ಠ ಪ್ರಯೋಜನ ಪಡೆದ ದೇಶವಾಗಿದೆ. ಯುದ್ಧಕಾಲದಲ್ಲಿ ಈ ದೇಶ ರಕ್ಷಣಾ ಸಾಮಗ್ರಿ ಉತ್ಪಾದಿಸಿ ಯುದ್ಧ ನಿರತ ದೇಶಗಳಿಗೆ ಪೂರೈಸುವ ಮೂಲಕ ಈ ದೇಶದ ಉದ್ಯಮವಲಯ ಸಂಪತ್ತು ಕ್ರೋಢಿಕರಿಸಿತು. ಆದರೆ ಕ್ರೋಢಿಕೃತ ಸಂಪತ್ತು ಜಡವಾಗಿದ್ದರೆ ಅದರಿಂದ ಯಾರಿಗೆ ಏನೂ ಲಾಭವಿಲ್ಲ. ಮತ್ತೊಂದು ಕಡೆ ಯುದ್ಧದಿಂದ ಜರ್ಝರಿತವಾಗಿದ್ದ ಹಲವಾರು ದೇಶಗಳು ತಮ್ಮ ಇಡೀ ಅರ್ಥ ವ್ಯವಸ್ಥೆಯನ್ನು, ಸಾಮಾಜಿಕ ವಲಯವನ್ನು ಪುನರ್ರಚಿಸಬೇಕಾಗಿತ್ತು. ಈ ಹಂತದಲ್ಲಿ ಅಮೆರಿಕ ಯುದ್ದದಿಂದ ಕಂಗೆಟ್ಟಿದ್ದ ದೇಶಗಳ ನೆರವಿಗೆ ಬಂದಿತು. ಈ ಹಂತದಲ್ಲಿ ಮುಂದುವರಿದ ದೇಶಗಳ ವಸಾಹತುಗಳಾಗಿದ್ದ ಬಹಳಷ್ಟು ದೇಶಗಳು ಸ್ವಾತಂತ್ರ್ಯವನ್ನನುಭವಿಸಿ ಸುಖೀ ರಾಷ್ಟ್ರ ನಿರ್ಮಿಸುವ ಹುರುಪಿನಲ್ಲಿದ್ದುವು. ಇಂತಹ ಒಂದು ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ಮುಂದಾಳತ್ವದಲ್ಲಿ ಈ ಎರಡು ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ಮೇಲ್ನೋಟಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ ಸ್ವಾಯತ್ತ ಸಂಸ್ಥೆ ಎಂದು ಕಂಡಿಬಂದರೂ ವಾಸ್ತವ ಸ್ಥಿತಿ ಹಾಗಿಲ್ಲ. ಇದುವರೆಗಿನ ಚರಿತ್ರೆಯನ್ನು ಅರ್ಥ ಮಾಡಿಕೊಂಡರೆ ಅಮೆರಿಕ ಯಾವ ರೀತಿಯಲ್ಲಿ ತನ್ನ ಮೂಗಿನ ನೇರಕ್ಕೆ ಇಡೀ ವಿಶ್ವಸಮುದಾಯವನ್ನು ಪಳಗಿಸುವ ಕೆಲಸ ಮಾಡುತ್ತಿದೆಯೆನ್ನುವುದು ತಿಳಿದು ಬರುತ್ತದೆ.

ಅಂತರಾಷ್ಟ್ರೀಯ ದ್ರವ್ಯನಿಧಿ, ಸದಸ್ಯ ರಾಷ್ಟ್ರಗಳ ಪಾವತಿ ಸಮತೋಲನ ಕಾಯ್ದಕೊಳ್ಳಲು ಮತ್ತು ಇದಕ್ಕೆ ಸಂಬಂಧಿಸಿದಂತೆ ಅಲ್ಪಾವಧಿ ಸಮಸ್ಯೆಗಳ ಮೂಲ ದೀರ್ಘಾವಧಿ ಬೆಳವಣಿಗೆಯ ಮೇಲೂ ಅವಲಂಬಿತವಾಗಿರುವುದರಿಂದ ಅರ್ಥ ವ್ಯವಸ್ಥೆ ಸಮರ್ಥವಾಗಿ ಅಭಿವೃದ್ಧಿ ಹೊಂದಬೇಕಾಗಿರುವುದು ಅವಶ್ಯಕ. ಆದ್ದರಿಂದ ಬಂಡವಾಳ ತೊಡಗಿಸಿ ತಾಂತ್ರಿಕತೆಯನ್ನು ಉಪಯೋಗಿಸಿ ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯದಲ್ಲಿ ಏರಿಕೆಯನ್ನುಂಟುಮಾಡುವುದು ವಿಶ್ವಬ್ಯಾಂಕನ ಮುಖ್ಯ ಉದ್ದೇಶ. ಆ ಎರಡೂ ಸಂಸ್ಥೆಗಳ ಘೋಷಿತ ಉದ್ದೇಶಗಳು ಹೀಗಿವೆ:

ಅಂತಾರಾಷ್ಟ್ರೀಯ ಹಣಕಾಸು ನಿಗಮದ ಘೋಷಿತ ಉದ್ದೇಶಗಳು

೧. ಅಂತರಾಷ್ಟ್ರೀಯ ಹಣಕಾಸು ವಿಚಾರ ಸಂಬಂಧಿ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಸಹಕಾರ ಸಾಧಿಸಲು ಒಂದು ಸೂಕ್ತ ವೇದಿಕೆಯನ್ನೊದಗಿಸುವುದು.

೨. ಅಂತರಾಷ್ಟ್ರೀಯ ವ್ಯಾಪಾರವನ್ನು ವೃದ್ಧಿಸುತ್ತಾ ಸಮತೋಲನವನ್ನು ಕಾಯ್ದುಕೊಂಡು, ಸದಸ್ಯ ರಾಷ್ಟ್ರಗಳ ಉತ್ಪಾದನೆ ಹೆಚ್ಚಾಗಲು, ತಲಾ ಆದಾಯ ಹೆಚ್ಚಾಗಲು ಸಹಾಯ ಮಾಡುವುದು.

೩. ಸದಸ್ಯ ರಾಷ್ಟ್ರಗಳ ಹಣದ ವಿನಿಮಯ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಸ್ಪರ್ಧೆಯಿಂದಾಗಿ ವಿನಿಮಯ ದರದಲ್ಲಿ ಉಂಟಾಗುವ ಸವಕಳಿಯನ್ನು ತಡೆಗಟ್ಟುವುದು.

೪. ವ್ಯಾಪಾರ ಸಂಬಂಧಿ ವಿನಿಮಯದಲ್ಲಿರುವ ತೊಂದರೆಯನ್ನು ನಿವಾರಿಸಿವುದು ಮತ್ತು ಬಹುಮುಖಿ ವ್ಯಾಪಾರ ಮತ್ತು ಪಾವತಿಯನ್ನು ಸಾಧ್ಯವಾಗಿಸುವುದು. ಸದಸ್ಯ ರಾಷ್ಟ್ರಗಳಿಗೆ ವ್ಯಾಪಾದ ಸಂಬಂಧಿ ಪಾವತಿ ಸಮಸ್ಯೆಗಳೆದುರಾದಾಗ ಅವರಿಗೆ ಅಂತರಾಷ್ಟ್ರೀಯ ದ್ರವ್ಯನಿಧಿಯಿಂದ ಸಾಲ ಒದಗಿಸುವುದು. ಇದರಿಂದಾಗಿ ಸದಸ್ಯ ದೇಶಗಳು ಸಮಸ್ಯೆಗಳೆದುರಾದಾಗ ಕಂಗಾಲಾಗದೆ ಅಭಿವೃದ್ಧಿ ಕಾರ್ಯಗಳತ್ತ ನಿಗಾ ವಹಿಸಲು ಸಾಧ್ಯವಾಗುವುದು.

೫. ಅಂತರಾಷ್ಟ್ರೀಯ ಪಾವತಿ ಸಮಸ್ಯೆಯ ಕುರಿತು ಅವಧಿ ಮತ್ತು ಮೊತ್ತವನ್ನು ಕಡಿಮೆಗೊಳಿಸಿ ಸದಸ್ಯ ರಾಷ್ಟ್ರಗಳು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸಹಕರಿಸುವುದು.