ವಿಶ್ವಬ್ಯಾಂಕನ ಘೋಷಿತ ಉದ್ದೇಶಗಳು

೧. ಉತ್ಪಾದಕ ಉದ್ದೇಶಗಳಿಗಾಗಿ ಬಂಡವಾಳ ಹೂಡಿಕೆ ಹೆಚ್ಚಿಸಿ ತನ್ಮೂಲಕ ಸದಸ್ಯ ರಾಷ್ಟ್ರಗಳ ಪುನರುತ್ಥಾನ ಅಥವಾ ಪುನರ್ ನಿರ್ಮಾಣ ಸಾಧಿಸುವುದು.

೨. ವಿದೇಶಿ ಬಂಡವಾಳ ಹೂಡಿಕೆಯನ್ನು ಪೋಅಭಿವೃದ್ಧಿ ಕಾರ್ಯವನ್ನು ಉತ್ಕರ್ಷಿಸುವಂತೆ ಮಾಡುವುದು. ಇಂತಹ ಕಾರ್ಯಗಳನ್ನು ಸಾಧಿಸಲು ಅನುಸರಿಸುವ ವಿಧಾನಗಳೆಂದರೆ, ಬ್ಯಾಂಕ್ ಯಾ ಖಾಸಗೀ ಬಂಡವಾಳ ಹೂಡಿಕೆದಾರರು ವಿದೇಶಗಳಲ್ಲಿ ಬಂಡವಾಳ ಹೂಡಿದಾಗ ಅದಕ್ಕೆ ಭದ್ರತೆಯ ದೃಷ್ಟಿಯಿಂದ ಖಾತರಿ ನೀಡುವುದು (ಗ್ಯಾರಂಟಿ ನೀಡುವುದು) ಅಥವಾ ಅಂತಹ ಬಂಡವಾಳ ಹೂಡಿಕೆಯಲ್ಲಿ ಬ್ಯಾಂಕ ಕೂಡಾ ಭಾಗವಹಿಸುವುದು. ದೀರ್ಘಾವಧಿ ಬಂಡವಾಳ ಹೂಡಿಕೆಯನ್ನು ಪೋತ್ಸಾಹಿಸುವ ಮೂಲಕ ಉತ್ಪಾದನೆಯನ್ನು ವೃದ್ಧಿಸಿ ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು. ಅಲ್ಲದೆ ಈ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ವಿದೇಶೀ ವ್ಯಾಪಾರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಾಯ ನೀಡುವುದು.

೩. ಯುದ್ಧ ಕಾಲದ ಅರ್ಥವ್ಯವಸ್ಥೆಯನ್ನು ಶಾಂತಿಕಾಲದ ಅರ್ಥವ್ಯವಸ್ಥೆಯಾಗಿ ಪರಿವರ್ತಿಸಲು ಸಹಕರಿಸುವುದು.

ದ್ರವ್ಯನಿಧಿ ಮತ್ತು ಜಾಗತಿಕ ಬ್ಯಾಂಕ್ ಯಾವುದೆ ಖಾಸಗೀ ರಂಗದೊಂದಿಗೆ ಅಥವಾ ಖಾಸಗೀ ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುವುದಿಲ್ಲ. ಸರಕಾರಗಳೊಂದಿಗೆ ಮಾತ್ರ ವ್ಯವಹರಿಸುತ್ತವೆ. ಮೇಲ್ನೋಟಕ್ಕೆ ಇವುಗಳ ಉದ್ದೇಶಗಳು ಆಕರ್ಷಕವಾಗಿ ಕಂಡುಬಂದರೂ ಅಂತಿಮ ಗುರಿ ಘೋಷಿತ ಉದ್ದೇಶಗಳಿಗಿಂತ ಬೇರೆಯೇ ಆಗಿದೆ ಎನ್ನುವುದು ಈ ಎರಡೂ ಸಂಸ್ಥೆಗಳು ಪ್ರಾರಂಭದ ದಿನದಿಂದ ಇದುವರೆಗೆ ಅನುಸರಿಸುತ್ತಾ ಬಂದ ಸಹಾಯ ಯೋಜನೆಗಳಿಂದ ತಿಳಿದು ಬರುತ್ತದೆ. ೧೯೭೮ರ ವಿಶ್ವ ಅಭಿವೃದ್ಧಿ ವರದಿ ದಿಗ್ಭ್ರಮೆ ಹುಟ್ಟಿಸುವ ಸತ್ಯವನ್ನು ಹೊರತಂದಿತು. ಅದೆಂದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನಿಗದಿ ಮಾಡಿದ ಗುರಿಯನ್ನು ೧೯೮೫ ರೊಳಗಿನ ಕಾಲಾವಧಿಯಲ್ಲಿ ಸಾಧಿಸಿದರೂ ಮತ್ತು ಅಭಿವೃದ್ಧಿ ಪ್ರಯತ್ನಗಳು ಅದೇ ವೇಗದಲ್ಲಿ ತದನಂತರ ಹದಿನೈದು ವರ್ಷಗಳಷ್ಟು ಕಾಲ ಮುಂದುವರಿದರೂ ಜಗತ್ತಿನಲ್ಲಿ ಇನ್ನೂ ೬೦೦ ಮಿಲಿಯನ್ ಜನ ಬಡತನದಲ್ಲಿಯೇ ಉಳಿಯಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ವಿಶ್ವಬ್ಯಾಂಕ್ ಸಮೂಹ ನೀಡುತ್ತಿರುವ ಸಾಲ/ಸಹಾಯದ ಮೊತ್ತ ಅಧಿಕ ಪ್ರಮಾಣದ್ದೆನಿಸಿದರೂ ವಾಸ್ತವಿಕವಾಗಿ ಬಡದೇಶಗಳಿಂದ ಶ್ರೀಮಂತರಿಗೆ ಹರಿದು ಹೋಗುವ ಹಣವೇ ಅಧಿಕವಿದೆ ಎಂದರೆ ನಂಬುವುದು ಕಷ್ಟ. ಆದರೆ ಇದು ನಿಜಸ್ಥಿತಿ. ಇದರಿಂದಾಗಿ ಉತ್ಪಾದನೆಯಲ್ಲಿ ವೃದ್ಧಿಯಾದರೂ ಬಡದೇಶಗಳ ಜನರ ಜೀವನ ಮಟ್ಟ ಸುಧಾರಣೆಯಾಗುತ್ತಿಲ್ಲ ಎಂದರೆ ಶ್ರೀಮಂತ ರಾಷ್ಟ್ರಗಳ ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆಗೆ ಬಡರಾಷ್ಟ್ರಗಳು ಬಲಿಪಶುಗಳಾಗುತ್ತಲಿವೆ. ಶ್ರೀಮಂತ ದೇಶಗಳು ಈಗಾಗಲೇ ಸಾಧಿಸಿದ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಇಂತಹ ಕ್ರಮ ಅನಿವಾರ್ಯ. ಬಹಳಷ್ಟು ದೇಶಗಳ ಅರ್ಥಶಾಸ್ತ್ರಜ್ಞರಿಗೆ ಈ ಕಟು ಸತ್ಯದ ಅರಿವಿದ್ದರೂ ಶ್ರೀಮಂತ ರಾಷ್ಟ್ರಗಳನ್ನು ಎದುರು ಹಾಕಿಕೊಳ್ಳುವ ಹಾಗಿಲ್ಲ. ಏಕೆಂದರೆ ವ್ಯಾಪಾರ ವ್ಯವಸ್ಥೆ, ತಂತ್ರಜ್ಞಾನ, ರಾಜಕೀಯನೀತಿ, ಮಿಲಿಟರಿಬಲ ಮುಂತಾದವುಗಳ ಮೂಲದ ಬಡರಾಷ್ಟ್ರಗಳನ್ನು ಹಾಳುಗೆಡಹಬಲ್ಲ ಸಾಮರ್ಥ್ಯ ಶ್ರೀಮಂತ ರಾಷ್ಟ್ರಗಳಿಗೆ ಕರತಲಾಮಲಕವಾಗಿದೆ. ಮಾತ್ರವಲ್ಲ ಆರ್ಥಿಕ ನೀತಿಗಳಿಗೆ ಪೂರಕವಾದ ರಾಜಕೀಯ, ಸಾಂಸ್ಕೃತಿಕ ನೀತಿಗಳನ್ನು ಅನುಸರಿಸಿ ಬಡದೇಶಗಳು ಯಾವ ಕಾರಣಕ್ಕೂ ಇದರಿಂದ ನುಸುಳಿ ಹೋಗದಂತೆ ಎಚ್ಚರ ವಹಿಸಲಾಗುತ್ತದೆ. ಹೀಗೆ ಬಡರಾಷ್ಟ್ರಗಳಿಗೆ ಇದು ಅಳಿವು ಉಳಿವಿನ ಪ್ರಶ್ನೆ. ಉಳಿದವರಿಗೆ ಸಾಲ ಮತ್ತು ಮಾರುಕಟ್ಟೆಯನ್ನು ಪ್ರತಿಪಾಧಿಸುವ ಶ್ರೀಮಂತ ರಾಷ್ಟ್ರಗಳು ಯಾವ ಕಾರಣಕ್ಕೂ ಬಡ ದೇಶಗಳ ಉತ್ಪನ್ನಗಳನ್ನು ತಮ್ಮ ದೇಶದೊಳಗೆ ಬಿಡುವುದಿಲ್ಲ. ಒಟ್ಟಿನಲ್ಲಿ ಬಡರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳ ಕಾರುಬಾರಿಗೆ ಬಡದೇಶದ ಜನರಾಗಲೀ, ಸರ್ಕಾರವಾಗಲೀ ನಿರ್ಬಂಧ ಹೇರಬಾರದು ಎನ್ನುವ ವಾದ ಯಾವ ತಾತ್ವಿಕ ಹಿನ್ನೆಲೆಯೂ ಇಲ್ಲದ ದರ್ಪದ ವಾದವಾಗಿದೆ. ಇಲ್ಲವಾದಲ್ಲಿ ದಶಕಗಳ ಅಭಿವೃದ್ಧಿಯ ನಂತರವೂ ಜನ ಹಸಿವಿನಿಂದ ಸಾಯುವ ಪರಿಸ್ಥಿತಿ ಯಾಕೆ ನಿರ್ಮಾಣವಾಗುತ್ತಿದೆ ? ಇಂತಹ ಅಭಿವೃದ್ಧಿ ನೀತಿ ಎಷ್ಟು ಜಳ್ಳೆಂದರೆ ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ಏಕರೂಪದ ಪರಿಹಾರೋಪಾಯಗಳನ್ನು ಸೂಚಿಸಲಾಗುತ್ತಿದೆ. ಅದು ಆಫ್ರೀಕಾವಿರಲಿ, ಪೂರ್ವ ಏಷ್ಯವಿರಲಿ, ಲ್ಯಾಟಿನ ಅಮೆರಿಕಾವಿರಲಿ ಅಭಿವೃದ್ಧಿ ಹೊಂದಲು ಒಂದೇ ತೆರನಾದ ನೀತಿಯನ್ನು ಅನುಸರಿಸುವಂತೆ ಹೇಳಲಾಗುತ್ತದೆ. ಇಂತಹ ಅಭಿವೃದ್ಧಿ ನೀತಿಯನ್ನು ಘೋಷಿಸುವಾಗ, ಅದಕ್ಕೆ ಅಗತ್ಯವಿರುವ ಬಂಡವಾಳ ತಂತ್ರಜ್ಞಾನದೊಂದಿಗೆ, ಹೇರಲಾಗುವ ವಿವಿಧ ರೀತಿಯ ಶರತ್ತುಗಳಂತೂ ಬಡರಾಷ್ಟ್ರಗಳ ಕೈಯನ್ನು ಕಟ್ಟಿಹಾಕುತ್ತದೆ. ಹಣ ಸಹಾಯ ಪಡೆಯುವ ದೇಶಗಳು ಸಮಸ್ಯೆ, ಸಂಪನ್ಮೂಲಗಳನ್ನು ಗಮನಿಸಿ, ನಿಷ್ಪಕ್ಷಪಾತವಾಗಿ ಯಾವುದೇ ಪೂರ್ವಾಗ್ರಹವಿಲ್ಲದೇ, ದೇಶದ ಅಭಿವೃದ್ಧಿಯೊಂದನ್ನು ಮಾತ್ರ ಗಮನದಲ್ಲಿರಿಸಿ ಪರಿಹಾರ ಸೂಚಿಸಲಾಗುತ್ತದೆ ಎನ್ನುವುದು ಸಂಪೂರ್ಣ ಸತ್ಯವಲ್ಲ.

ವಿಶ್ವಬ್ಯಾಂಕ್ ಸಮೂಹಗಳ ಇಂತಹ ಹೇಳಿಕೆಗಳು ಸತ್ಯಕ್ಕೆ ದೂರವಾದ ವಿಚಾರ ಎನ್ನುವುದನ್ನು ಡೇವಿಸನ್ ಬುಧೂ ಅವರು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯಂತೆ ೧೯೮೨ ರಿಂದ೧೯೯೦ ರವರೆಗೆ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕನ್ ಅಸಂಬದ್ಧ ಯೋಜನೆಗಳಿಂದಾಗಿ ವರ್ಷಕ್ಕಿಂತ ಕೆಳವಯಸ್ಸಿನ ೭೦ ಮಿಲಿಯ ಮಕ್ಕಳು ಸಾವನ್ನಪ್ಪಿದ್ದಾರೆ. ಸಾಲ ನೀಡುವಾಗ ವಿಧಿಸಲಾಗುವ ಶರತ್ತುಗಳಿಂದಾಗಿ ಅಪಾರ ಹಾನಿಗೊಳಗಾದ ಅಭಿವೃದ್ಧಿಶೀಲ ಸಾಲದ ಹೊರೆಯಡಿ ಹೆಣಗಾಡುತ್ತಾ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತಲೇ ಇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ದ್ರವ್ಯನಿಧಿ ಮತ್ತು ಜಾಗತಿಕ ಬ್ಯಾಂಕ ತನ್ನ ಸಹ ಸಂಸ್ಥೆಗಳೊಂದಿಗೆ ಅಭಿವೃದ್ಧಿಗಿಂತಲೂ ಹೆಚ್ಚಾಗಿ, ಅಭಿವೃದ್ಧಿ ಕಾರ್ಯಗಳನ್ನು ಪೋನೆಪದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ, ಶ್ರೀಮಂತ ದೇಶಗಳ ತಂತ್ರಜ್ಞಾನ ವರ್ಗಾಯಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಲಿವೆ. ಇದರೆ ಪರಿಣಾಮವಾಗಿ ಅಭಿವೃದ್ಧಿ ಹೊಂದಲು ಹೆಣಗಾಡುತ್ತಿರುವ ರಾಷ್ಟ್ರಗಳು ತಮ್ಮ ದುಡಿಮೆಯ ಫಲವನ್ನು ಶಕ್ತ ರಾಷ್ಟ್ರಗಳಿಗೆ ವರ್ಗಾಯಿಸಿ ತಾವು ಮಾತ್ರ “ಏನಾದರೇನು ರಾಗಿ ಬೀಸುವುದು ತಪ್ಪಲಿಲ್ಲ” ಎನ್ನುವಂತೆ ಯಥಾ ಪ್ರಕಾರ ಹಸಿವು, ಬಡತನ ನಿರುದ್ಯೋಗದಂತಹ ಸಮಸ್ಯೆಗಳಿಂದ ಭಾದಿತ್ವಾಗಿವೆ.

ಅಂತರಾಷ್ಟ್ರೀಯ ಹಣಕಾಸು ನಿಗಮ ತೃತೀಯ ಜಗತ್ತಿನ ರಾಷ್ಟ್ರಗಳ ಸಮಸ್ಯೆ ಪರಿಹರಿಸಲು ಸಹಕರಿಸುವ ಬದಲಾಗಿ ವಿದೇಶಿ ಬಂಡವಾಳ ಹೂಡಿಕೆಯನ್ನು ವೃದ್ಧಿಸುವ ಸಂಸ್ಥೆಯಾಗಿದೆ. ೧೯೫೬ರಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಹಣಕಾಸು ನಿಗಮದ ಮುಖ್ಯ ಉದ್ದೇಶ ಬಡರಾಷ್ಟ್ರಗಳಲ್ಲಿನ ಖಾಸಗೀ ವಲಯದಲ್ಲಿ ಅಲ್ಲಿನ ಸರಕಾರದ ಯಾವುದೇ ರೀತಿಯ ಖಾತರಿ ಪಡೆಯದೆ, ವಿದೇಶಿ ಬಂಡವಾಳವನ್ನು ಹೂಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವುದು. ಈ ರೀತಿಯಲ್ಲಿ ಖಾಸಗೀ ಬಂಡವಾಳದಾರರಿಗೆ, ಬಡದೇಶಗಳ ಫಲವತ್ತಾದ ಖಾಸಗೀ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡುವುದು, ಹೀಗೆ ಈ ಸಂಸ್ಥೆ ಹೂಡಿಕೆ ಅವಕಾಶಗಳನ್ನು ಮತ್ತು ಬಂಡವಾಳದಾರರನ್ನು ಒಟ್ಟಾಗಿಸುವ ಮೂಲಕ ಅಧುನಿಕ ತಂತ್ರಜ್ಞಾನ ಬಳಸಿ ಉತ್ಪಾದನೆಯನ್ನು ಮತ್ತು ಬಂಡವಾಳದಾರರನ್ನು ಒಟ್ಟಾಗಿಸುವ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿ ಉತ್ಪಾದನೆಯನ್ನು ಹೆಚ್ಚಾಗಿಸುತ್ತದೆ. ಇಂತಹ ಬಂಡವಾಳ ಹೂಡಿಕೆ ಕೈಗಾರಿಕಾ ರಂಗಕ್ಕೆ ಮಾತ್ರ ಸೀಮಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಅಭಿವೃದ್ಧಿಶೀಲ ದೇಶಗಳಲ್ಲಿ ಸ್ವರೂಪಾತ್ಮಕ ಬದಲಾವಣೆ ತರಲೂ ಸಹಾಯ ಮಾಡುತ್ತಿದೆ.

ಖಾಸಗಿ ಬಂಡವಾಳ ಸಂಸ್ಥೆಯಂತೆ ಕಾರ್ಯವೆಸಗುವ ನಿಗಮ ಬಂಡವಾಳ ಹೂಡುವಾಗ ಮತ್ತು ಸಾಲ ನೀಡುವಾಗ ಬಹಳಷ್ಟು ಎಚ್ಚರ ವಹಿಸುತ್ತದೆ. ಒಟ್ಟು ಬಂಡವಾಳದ ಶೇಕಡಾ ೫೦ರಷ್ಟು ಮಾತ್ರ ವಿದೇಶೀ ಸಹಾಯ ರೂಪದಲ್ಲಿ ದೊರೆಯುತ್ತದೆ. ಉಳಿದರ್ಧ ಬಡದೇಶದ ಹೂಡಿಕೆದಾರರಿಂದ ಪೂರೈಸಬೇಕು. ಯೋಜನೆಯಲ್ಲಿನ ಲಾಭಾವಕಾಶ, ನಷ್ಟದ ಅಪಾಯ ಮುಂತಾದ ವಿಷಯಗಳನ್ನು ಗಮನದಲ್ಲಿರಿಸಿ ಬಡ್ಡಿಯ ದರವನ್ನು ನಿರ್ಧರಿಸಲಾಗುತ್ತದೆ. ತಾನು ನೀಡುವ ಸಾಲವನ್ನು ಬಂಡವಾಳವಾಗಿ ಪರಿವರ್ತಿಸುವ ಸ್ವಾತಂತ್ರ್ಯ ನಿಗಮಕ್ಕೆ ಇರುತ್ತದೆ. ಉದ್ಯಮದಲ್ಲಿ ಬಳಸಲ್ಪಡುವ ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಯ ಮೇಲೂ ಅದಕ್ಕೆ ಹತೋಟಿ ಇರುತ್ತದೆ. ಮೇಲ್ನೋಟಕ್ಕೆ ಬಡದೇಶಗಳ ಪಾಲಿಗೆ ವರದಾಯನೆನ್ನಿಸಬಹುದಾದ ಈ ಸಂಸ್ಥೆ ಶ್ರೀಮಂತ ದೇಶಗಳ ಹಿತಾಶಕ್ತಿಯನ್ನು ಕಾಯುವ ಕೆಲಸದಿಂದ ನಿಯತ್ತಿನಿಂದ ಮಾಡುತ್ತಿದೆ. ಜಾಗತಿಕ ಬ್ಯಾಂಕ್ ಮತ್ತು ದ್ರವ್ಯನಿಧಿ ಬಡದೇಶಗಳ ಸರಕಾರಗಳಿಗೆ ಶರತ್ತುಬದ್ಧ ಸಹಾಯ ನೀಡುವ ಮೂಲಕ ಶ್ರೀಮಂತ ದೇಶಗಳ ಉತ್ಪನ್ನಗಳಿಗೆ, ತಂತ್ರಜ್ಞಾನ ಬಳಕೆಗೆ ಅವಕಾಶ ಒದಗಿಸಿದರೆ ಅಂತರಾಷ್ಟ್ರೀಯ ಹಣಕಾಸು ನಿಗಮ ಶ್ರೀಮಂತ ದೇಶಗಳ ಖಾಸಗೀ ಬಂಡವಾಳದಾರರಿಗೆ ಹಣ ತೊಡಗಿಸಲು ಅವಕಾಶ ಮಾಡಿಕೊಡುತ್ತದೆ.

ದ್ರವ್ಯನಿಧಿ, ಜಾಗತಿಕ ಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಗಮ ಮತ್ತಿತರ ಸಹಸಂಸ್ಥೆಗಳ ಒಟ್ಟು ಕಾರ್ಯಾಚರಣೆಯನ್ನು ಕೂಲಂಕುಷವಾಗಿ ಅಭ್ಯಸಿಸಿದಾಗ ನಮಗೆ ವಿಷದವಾಗುವ ಅಂಶಗಳೆಂದರೆ:

೧. ಬಡದೇಶಗಳು ಶ್ರೀಮಂತ ರಾಷ್ಟ್ರಗಳು ಇರುವ ಮಟ್ಟಕ್ಕೆ ಮೇಲೆರುವುದು ಅತ್ಯಗತ್ಯ ಮತ್ತು ಅನಿವಾರ್ಯ.

೨. ಈ ರೀತಿಯಲ್ಲಿ ಮೇಲೇರಬೇಕಾದರೆ ಯಾ ಅಭಿವೃದ್ಧಿ ಹೊಂದಬೇಕಾದರೆ ಬಂಡವಾಳ, ತಂತ್ರಜ್ಞಾನ, ಸಂಪನ್ಮೂಲ ಅವಶ್ಯಕ.

೩. ಬಡದೇಶಗಳಲ್ಲಿ ಸಂಪನ್ಮೂಲವಿದೆ, ಸಂಪನ್ಮೂಲವನ್ನು ಯೋಗ್ಯವಾಗಿ ಬಳಸಬೇಕಾದರೆ ಶಿಕ್ಷಣ ಮತ್ತು ತಾಂತ್ರಿಕ ಪರಿಣತಿಯನ್ನು ನೀಡಬೇಕಾಗುತ್ತದೆ. ಯಾವ ರೀತಿಯ ಶಿಕ್ಷಣ ಮತ್ತು ತಾಂತ್ರಿಕ ಪರಿಣತಿ ನೀಡುವುದರಿಂದ ಸಂಪನ್ಮೂಲವನ್ನು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಬಹುದೆನ್ನುವುದನ್ನು ಮುಂದುವರಿದ ರಾಷ್ಟ್ರಗಳೇ ಹೇಳುತ್ತವೆ.

೪. ಬಡದೇಶಗಳಲ್ಲಿ ಬಂಡವಾಳ ಮತ್ತು ತಂತ್ರಜ್ಞಾನದ ಕೊರತೆ ಕಂಡುಬರುತ್ತದೆ.

೫. ಶ್ರೀಮಂತ ರಾಷ್ಟ್ರಗಳು ತಮ್ಮಲ್ಲಿರುವ ತಂತ್ರಜ್ಞಾನವನ್ನು ಬಡದೇಶಗಳಿಗೆ ವರ್ಗಾಯಿಸುತ್ತವೆ. ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅವಶ್ಯಕವಿರುವ ಬಂಡವಾಳವನ್ನೂ ಪೂರೈಸುತ್ತವೆ.

೬. ಇಂತಹ ತಂತ್ರಜ್ಞಾನವನ್ನು ಬಳಸುವಾಗ ಮತ್ತು ಬಂಡವಾಳವನ್ನು ಉಪಯೋಗಿಸುವಾಗ ನಿರೀಕ್ಷಿತ ಫಲವನ್ನು ಪಡೆಯಲು ಶ್ರೀಮಂತ ದೇಶಗಳು ವಿಧಿಸುವ ಶರತ್ತುಗಳನ್ನು ಪಾಲಿಸಬೇಕು.

೭. ಅಭಿವೃದ್ಧಿ ಎನ್ನುವುದು ನಿರಂತರವಾದದ್ದರಿಂದ ಹೆಚ್ಚು ಹೆಚ್ಚು ಬಂಡವಾಳ ಮತ್ತು (ಶ್ರೀಮಂತ ದೇಶಗಳು ಕಂಡುಹಿಡಿಯುವ) ಹೊಸ ಹೊಸ ತಂತ್ರಜ್ಞಾನವನ್ನು ಬಳಸುತ್ತ ಹೋಗುತ್ತಿರಬೇಕು.

ತಂತ್ರಜ್ಞಾನವನ್ನು ಅಥವಾ ಬಂಡವಾಳವನ್ನು (ಸಾಲರೂಪದಲ್ಲಿ ಅಥವಾ ಸಹಾಯದ ರೂಪದಲ್ಲಿ) ಪಡೆಯುವೆ ದೇಶಗಳು ಅವುಗಳನ್ನು ತಮಗೆ ಹಿತವೆನಿಸುವ ರೂಪದಲ್ಲಿ ಉಪಯೋಗಿಸಲು ಬರುವುದಿಲ್ಲ ಎಂಬುದನ್ನು ಗಮನಿಸಬೇಕು. ಅವುಗಳೊಂದಿಗೆ ಹಲವಾರು ಶರತ್ತುಗಳನ್ನು ವಿಧಿಸಲಾಗುತ್ತದೆ. ಈ ಶರತ್ತುಗಳನ್ನು ವಿಧಿಸಲು ಕಾರಣವೇನು ಎನ್ನುವುದನ್ನೂ ಹೇಳಲಾಗುತ್ತದೆ. ಈ ಸಂಸ್ಥೆಗಳು ಬಡದೇಶಗಳಿಗೆ ಸಾಲ ರೂಪದಲ್ಲಿ ಸಹಾಯ ಮಾಡುವಾಗ ವಿಧಿಸುವ ಅಭಿವೃದ್ಧಿಯೋಜಿತ ಶರತ್ತುಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ನಾವಿಲ್ಲಿ ಮಾಡಬಹುದು. ಅದಕ್ಕೂ ಮೊದಲು ಸ್ವರೂಪಾತ್ಮಕ ಹೊಂದಾಣಿಕೆ ಎಂದರೇನು? ಅದರ ಘೋಷಿತ ಉದ್ದೇಶಗಳೇನು ? ಎನ್ನುವುದನ್ನೂ ನಾವು ಅರಿತಿರಬೇಕಾಗುತ್ತದೆ.

ಸ್ವರೂಪಾತ್ಮಕ ಹೊಂದಾಣಿಕೆ (ಸ್ಟ್ರಕ್ಚರಲ್ ಎಡ್ಜಸ್ಟಮೆಂಟ್ ಪಾಲಸಿ)

ವಿಶ್ವಬ್ಯಾಂಕ ಸಮೂಹ ಬೋಧಿಸುವ ಹೊಸ ಆರ್ಥಿಕ ನೀತಿಗೆ ಎರಡು ಮುಖಗಳಿರುತ್ತವೆ ಮತ್ತು ಅವು ಎರಡು ಸ್ತರಗಳಲ್ಲಿ ಅನುಷ್ಠಾನಗೊಳ್ಳುತ್ತವೆ ಅದರಲ್ಲಿ ಒಂದು, ಒಟ್ಟು ಅರ್ಥವ್ಯವಸ್ಥೆಯಲ್ಲಿ ಅಲ್ಪಕಾಲೀನ ಸ್ಥಿರತೆ ಕಾಯ್ದಕೊಳ್ಳಲು ಅನುಸರಿಸಲಾಗುವ ಕ್ರಮಗಳು. ಎರಡು, ಇಂತಹ ಅಲ್ಪಕಾಲೀನ ಸ್ಥಿರತೆಯನ್ನು ಅನುಸರಿಸಿಕೊಂಡು ಬರುವ ಸ್ವರೂಪಾತ್ಮಕ ಹೊಂದಾಣಿಕೆಗಳು, ೧೯೮೦ರ ದಶಕದ ಮೊದಲಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಕ್ರಮಗಳ ಉದ್ದೇಶ ಸಂಕೀರ್ಣವಾದುದಾಗಿದ್ದು ಅದು ಮೂಲಭೂತವಾಗಿ ಪಾವತಿ ಖಾತೆಯ ಕೊರತೆಯನ್ನು ಕಡಿಮೆ ಮಾಡುವುದಾಗಿತ್ತು. ಆದರೆ ಇಂತಹ ಅಲ್ಪಕಾಲೀನ ಆಥಿಕ ಸ್ಥಿರತಾ ಕಾರ್ಯಕ್ರಮಗಳು ಸಾಲಿಗ ದೇಶಗಳ ಋಣಭಾರದ ತೀವ್ರತೆಯನ್ನು ಅಧಿಕವಾಗಿಸಿ ಹೊಸದೊಂದು ಸಮಸ್ಯೆಯನ್ನು ಸೃಷ್ಟಿಸಿದುವು. ಈ ಹೊಸ ಸಮಸ್ಯೆಗೆ ಒಂದು ಪರಿಹಾರೋಪಾಯವನ್ನು ಕಂಡು ಹಿಡಿಯುವುದು ಅನಿವಾರ್ಯವಾಯಿತು. ಈ ಮೊದಲು ಅಮೇರಿಕಾದ ಖಜಾನೆ ಕಾರ್ಯದರ್ಶಿಯಾಗಿದ್ದ ಜೀಮ್ಸ್ ಬೆಕರ್ ಈ ಸಮಸ್ಯೆಯನ್ನು ಪರಿಹರಿಸಲು ಸ್ವರೂಪಾತ್ಮಕ ಯೋಜನೆಯೊಂದನ್ನು ರೂಪಿಸಿದರು. ಇದನ್ನು ‘ಬೆಕರ್ ಯೋಜನೆ’ ಎಂದು ಕರೆಯಲಾಯಿತು. ಬೆಕರ್ ಯೋಜನೆಯಂತೆ ಸಾಲ ಪಡೆಯುವ ದೇಶಗಳ ಮೇಲೆ ೧೯೮೫ರ ನಂತರ ಹೊಸ ಶರತ್ತುಗಳನ್ನು ಹೇರಲಾಯಿತು ಮತ್ತು ಈ ಶರತ್ತುಗಳನ್ನು ಸ್ವರೂಪಾತ್ಮಕ ಹೊಂದಾಣಿಕಾ ಕಾರ್ಯಕ್ರಮ ಎಂದು ಕರೆಯಲಾಯಿತು. ಅಭಿವೃದ್ಧಿ ಸಾಧಿಸಲು ವಿಶ್ವಬ್ಯಾಂಕ/ದ್ರವ್ಯನಿಧಿ ಪ್ರತಿಪಾದಿಸುವ ಅಥವಾ ವಿಧಿಸುವ ಅಲ್ಪಕಾಲೀನ ಅತ್ಯಂತ ಪರಿಣಾಮಕಾರೀ ಯೋಜನೆಗಳೆಂದು ಇವುಗಳನ್ನು ಘೋಷಿಸಲಾಯಿತು. ಈ ಎರಡೂ ಯೋಜನೆಗಳಲ್ಲಿದ್ದ ಕಾರ್ಯಕ್ರಮಗಳು ಈ ಕೆಳಗಿನಂತಿವೆ.

. ೧೯೮೦ರ ಪ್ರಾರಂಭದಲ್ಲಿದ್ದ ಆರ್ಥಿಕ ಸ್ಥಿರತೆ ನೀಡುವ ಉದ್ದೇಶದ ಯೋಜನೆಗಳಲ್ಲಿದ್ದ ಕಾರ್ಯಕ್ರಮಗಳ ವಿವರಗಳು ಹೀಗಿವೆ:

೧. ಹಣದ ಅಪಮೌಲ್ಯೀಕರಣ.

೨. ಬಜೆಟನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸರ್ಕಾರಿ ವೆಚ್ಚದಲ್ಲಿ ತೀವ್ರ ಕಡಿತ (ಸಾಮಾಜಿಕ ರಂಗದಲ್ಲಿ ಸರ್ಕಾರ ಮಾಡಬೇಕಾದ ವೆಚ್ಚಗಳು, ಸರ್ಕಾರಿ ನೌಕರರಿಗೆ ನೀಡಬೇಕಿರುವ ಭತ್ತೆ ಮತ್ತಿತರ ಖರ್ಚು ವೆಚ್ಚಗಳೂ ಸೇರಿದಂತೆ ತೀವ್ರ ಕಡಿತ ಮಾಡಬೇಕಾಗಿರುತ್ತದೆ)

೩. ಬೆಲೆ ನಿಯಂತ್ರಣ ಮತ್ತು ಸಹಾಯಧನ ಪದ್ಧಿತಿ ರದ್ದು ಮಾಡುವ ಮೂಲಕ ಮಾರುಕಟ್ಟೆ ಅನಿಯಂತ್ರಣಗೊಳಿಸುವುದು.

೪. ಸಂಬಳ, ಕೂಲಿಯನ್ನು ಕಡಿಮೆಗೊಳಿಸುವ ಮೂಲಕ ನೌಕರ ವರ್ಗದ ಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುವುದು.

. ಸ್ವರೂಪಾತ್ಮಕ ಹೊಂದಾಣಿಕೆ ಯೋಜನೆಯಲ್ಲಿರುವ ವಿವಿಧ ಕಾರ್ಯಕ್ರಮಗಳು

೧. ಸ್ವಯಂತಾಂತ್ರಿಕ ವ್ಯಾಪಾರೀ ವ್ಯವಸ್ಥೆಯನ್ನು ನೆಲೆಗೊಳಿಸುವ ಉದ್ದೇಶದಿಂದ ದೇಶೀಯ ಉದ್ದಿಮೆಗಳಿಗೆ ಒದಗಿಸಿದ ರಕ್ಷಣಾ ಕವಚವನ್ನು ಬಿಚ್ಚುವುದರ ಮೂಲಕ ದೇಶಿಯ ಉದ್ದಿಮೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವುದು.

೨. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ವಯಂತಾಂತ್ರಿಕವಾಗಿಸುವುದು. ರಾಜ್ಯಗಳ ನಿಯಂತ್ರಣದಲ್ಲಿರುವ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿರುವ ಬ್ಯಾಂಕಿಂಗ್ ಸಂಸ್ಥೆಗಳ ಖಾಸಗೀಕರಣ. ಇದರಿಂದಾಗಿ ಹಣಕಾಸು ನೀತಿಯ ಮೇಲೆ ಕೇಂದ್ರಿಯ ಬ್ಯಾಂಕನ ಹತೋಟಿ ತಪ್ಪಿ ಹೋಗಿ ಬಡ್ಡಿಯ ದರ ಮಾರುಕಟ್ಟೆ ನಿಯಂತ್ರಿಕ ವ್ಯವಸ್ಥೆಯಿಂದ ನಿರ್ಧಾರವಾಗುವ ಹಾಗಾಗುತ್ತದೆ.

೩. ಆದಾಯದ ದೃಷ್ಟಿಯಿಂದ ಏನೇನೋ ಲಾಭದಾಯಕವಲ್ಲದ ಯಾ ಖರ್ಚಿನ ಬಾಬತ್ತುಗಳಾದ ಶಿಕ್ಷಣ, ಆರೋಗ್ಯ ಮತ್ತು ಪೋಷಕಾಂಶ ಒದಗಿಸುವ ಸಮುದಾಯ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಕೈ ಬಿಡುವುದರ ಮೂಲಕ ಬೊಕ್ಕಸದಲ್ಲಿ ಅಧಿಕ ಮಟ್ಟದ ಶಿಲ್ಕು ನಿಲ್ಲಿಸುವಂತೆ ಮಾಡುವುದು.

೪. ಸರ್ಕಾರೀ ಒಡೆತನಕ್ಕಿಂತಲೂ ಖಾಸಗೀ ದೊರೆಗಳು ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಬ್ಯಾಂಕ ಮತ್ತು ಉದ್ದಿಮೆಗಳ ಖಾಸಗೀಕರಣ..

೫. ಸರ್ಕಾರೀ ಒಡೆತನದ ಸಂಸ್ಥೆಗಳ ಪುನರುಜ್ಜೀವನ ಇದರ ಹಿಂದಿರುವ ಉದ್ದೇಶ ಅನಗತ್ಯ ಖರ್ಚು ವೆಚ್ಚವನ್ನು ಕಡಿತಗೊಳಿಸಿ ವೆಚ್ಚ ಕಡಿತವನ್ನು ಸರ್ಕಾರೀ ಯೋಜನೆಗಳಲ್ಲಿ ಅನುಷ್ಠಾನಗೊಳಿಸುವುದು (ಈ ಅಂಶವನ್ನು ಜಾರಿಗೊಳಿಸುವಾವ ಹೆಚ್ಚಿರುವ ನೌಕರ ವರ್ಗವನ್ನು ಮನೆಗಟ್ಟುವುದೂ ಸೇರಿದೆ).

೬. ತೆರಿಗೆ ಸುಧಾರಣಾ ಕ್ರಮಗಳ ಮೂಲಕ ಮಧ್ಯಮ ವರ್ಗದ ಜನರ ತೆರಿಗೆ ಹೊರೆಯನ್ನು ಹೆಚ್ಚಾಗಿಸುವುದು. ಸಣ್ಣ ಉದ್ದಿಮೆಗಳನ್ನು ಮತ್ತು ಕೃಷಿ ಉತ್ಪಾದಕರನ್ನು ತೆರಿಗೆ ಮಿತಿಯೊಳಗೆ ತರುವುದು.

೭. ಬಡತನ ನಿವಾರಣಾ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವುದು.

ವಿಶ್ವಬ್ಯಾಂಕ್ ಮತ್ತು ದ್ರವ್ಯ ನಿಧಿಯು ಸ್ವರೂಪಾತ್ಮಕ ಹೊಂದಾನಿಕೆಯನ್ವಯ ಜಾರಿಗೊಳಿಸಲಾಗುವ ಕಾರ್ಯಕ್ರಮಗಳ ಘೋಷಿತ ಉದ್ದೇಶಗಳು ಹೀಗಿವೆ.

ಕಾರ್ಯಕ್ರಮಗಳ ಘೋಷಿತ್ ಉದ್ದೇಶ

೧. ಹಣದ ಅಪಮೌಲ್ಯ : ಇದು ಹಣದ ಆಂತರಿಕ ಮೌಲ್ಯವನ್ನು ಇಳಿಮುಖವಾಗಿಸುವುದರಿಂದಾಗಿ ದೇಶದ ರಫ್ತಿನಲ್ಲಿ ಗಣನೀಯ ಪ್ರಮಾಣದ ಏರಿಕೆಯುಂಟಾಗುತ್ತದೆ ಮತ್ತು ಅಂದಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಉಂಟಾಗುತ್ತದೆ.

೨. ರಫ್ತು ವೃದ್ಧೀಕರಣ : ವಿದೇಶಿ ಸಾಲಗಳನ್ನು ಮರು ಪಾವತಿಸಲು ಬೇಕಾಗಿರುವ ಧನರಾಶಿಯ ಸಂಪಾದನೆ (ಸಂಚಯನ).

೩. ಸರ್ಕಾರೀ ವೆಚ್ಚದಲ್ಲಿ ಕಡಿತ : ಸರ್ಕಾರೀ ವೆಚ್ಚದಲ್ಲಿ ಕಡಿತ ಮಾಡುವುದರಿಂದ, ಕಡಿತ ಮಾಡಿದ ಪ್ರಮಾಣದಷ್ಟು ಹಣ ಸಾರ್ವಜನಿಕರಲ್ಲಿ ಕಡಿಮೆಯಾಗಿ ಅಷ್ಟು ಪ್ರಮಾಣದಲ್ಲಿ ಬೇಡಿಕೆಯಲ್ಲಿ ಇಳಿಮುಖ ಉಂಟಾಗುತ್ತದೆ. ಪರಿಣಾಮವಾಗಿ ಬೆಲೆಯೇರಿಕೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

೪. ಖಾಸಗೀಕರಣ : ಸರ್ಕಾರೀ ರಂಗದ ಉದ್ದಿಮೆಗಳು ರೋಗಗ್ರಸ್ತವಾಗಿದ್ದು ದೇಶದ ಬಹುಪಾಲು ಹಣವನ್ನು ಪೋಲುಮಾಡುತ್ತಿದೆ. ಆದ್ದರಿಂದ ಅಧಿಕ ಲಾಭ, ದಕ್ಷತೆ ಮತ್ತು ಕಾರ್ಯಕ್ಷಮತೆಯುಳ್ಳ ಖಾಸಗೀರಂಗಕ್ಕೆ ಇಂತಹ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ವಹಿಸಿಕೊಡುವುದು.

೫. ಅನಿರ್ಬಂಧಿತ ಆಮುದು ನೀತಿ : ಅನಿರ್ಬಂಧಿತ ಆಮದು ಇದ್ದಾಗ ಅಂತರಾಷ್ಟ್ರೀಯ ಗುಣ ಮಟ್ಟದ ವಸ್ತುಗಳು ದೇಶಿಯ ಮಾರುಕಟ್ಟೆಗೆ ಹರಿದು ಬರುತ್ತವೆ. ಆಗ ದೇಶೀಯಾ ಉತ್ಪಾದಕರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿ ಬರುವುದರಿಂದ ದೇಶೀಯ ಉತ್ಪನ್ನಗಳ ಗುಣಮಟ್ಟದಲ್ಲಿ ವೃದ್ಧಿ ಉಂಟಾಗುತ್ತದೆ. ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಲಭ್ಯವಾಗುತ್ತವೆ.

೬. ಬಡ್ಡಿಯ ದರದಲ್ಲಿ ಹೆಚ್ಚಳ : ಬೆಲೆ ಏರಿಕೆಯನ್ನು ತಡೆಗಟ್ಟುವುದು ತನ್ಮೂಲಕ ಹಣದುಬ್ಬರವನ್ನು ನಿಯಂತ್ರಿಸುವುದು.

ವಿದೇಶಿ ಸಾಲದ ಒತ್ತಡ, ಪಾವತಿ ಸಮಸ್ಯೆ, ಹಣದುಬ್ಬರ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ದೇಶ ತನ್ನ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯಾ ಹಣ ಸಹಾಯ ಪಡೆಯಲು ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕನ್ನು ಸಂಪರ್ಕಿಸಿದರೆ ಬ್ಯಾಂಕ ತನ್ನಲ್ಲಿರುವ ವಿಶ್ವದ ಶ್ರೇಷ್ಥರಾದ ಆರ್ಥಿಕ ತಜ್ಞರನ್ನು ಆ ದೇಶಕ್ಕೆ ಕಳುಹಿಸಿ ಸಮಸ್ಯೆಯನ್ನು ಆಮೂಲಾಗ್ರವಾಗಿ ಅಭ್ಯಸಿಸಿ ಪರಿಹಾರೋಪಾಯವನ್ನು ಸೂಚಿಸುತ್ತದೆ. ಹಣ ಸಹಾಯ ಪಡೆಯುವ ದೇಶ ವಿಶ್ವಬ್ಯಾಂಕ ದ್ರವ್ಯನಿಧಿ ಸೂಚಿಸಿದ ರೀತಿಯಲ್ಲಿ ಸಾಲದ ಹಣವನ್ನು ಉಪಯೋಗಿಸಿಕೊಂಡು ಅರ್ಥ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.

ಮೊದಲಿಗೆ ೧೯೯೧ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ವಿಶ್ವಬ್ಯಾಂಕ ಅಥವಾ ದ್ರವ್ಯನಿಧಿಯ ಯಾವ ಶರತ್ತಿಗೂ ದೇಶ ತಲೆಬಾಗುವ ಪ್ರಮೇಯ ಇಲ್ಲವೆಂದು ಹೇಳಿದರೂ ಸಾಲ ಪಡೆಯಲಾಗುವ ವಿಷಯವನ್ನು ಅಲ್ಲಗಳೆಯಲಿಲ್ಲ. ಆದರೆ ಎರಡು ವರ್ಷಗಳ ತರುವಾಯ ಈಗ ಎಲ್ಲವೂ ಬಟ್ಟಬಯಲಾಗಿದೆ. ಸ್ವರೂಪಾತ್ಮಕ ಹೊಂದಾಣಿಕೆಯ ಎಲ್ಲ ಅಂಶಗಳನ್ನೂ ಒಳಗೊಂಡಿರುವುದು ಅಲ್ಲದೆ ಅದಕ್ಕೆ ಸಂಬಂಧಿಸಿದ ಎಲ್ಲ ಶರತ್ತುಗಳಿಗೂ ನಾವು ತಲೆಬಾಗಿರುವುದು ಸ್ಪಷ್ಟವಾಗಿದೆ.

ಸ್ವರೂಪಾತ್ಮಕ ಹೊಂದಾಣಿಕೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅನುಭವ

ಅಭಿವೃದ್ಧಿ ಹೊಂದಲು ಪ್ರಯತ್ನಿಸುತ್ತಿರುವ ಬಡದೇಶಗಳಿಗೆ ಸಾಲ ರೂಪದ ಆರ್ಥಿಕ ಸಹಾಯ ನೀಡುವ ವಿಶ್ವಬ್ಯಾಂಕ, ದ್ರವ್ಯನಿಧಿಗಳ ಇಂತಹ ಸಾಲದ ಉಪಯೋಗಕೆ ವಿಧಿಸುವ ಶರತ್ತುಗಳು ಪ್ರಪಂಚದ ಎಲ್ಲ ಕಡೆಯಲ್ಲಿ ಒಂದೇ ತೆರನಾಗಿರುತ್ತವೆ. ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ತರುವ ಕಾರ್ಯಕ್ರಮಗಳಿಗಿರುವ ಉದ್ದೇಶಗಳೆಂದರೆ:

೧. ತತ್ಕಾಲೀನವಾಗಿ ಅಥವಾ ಅಲ್ಪಾವಧಿಯಲ್ಲಿ ಬಾಧಿಸುತ್ತಿರುವ ಪಾವತಿ ಸಮಸ್ಯೆಯಲ್ಲಿ ಸಮತೋಲನ ಸಾಧಿಸುವುದು.

೨. ಹಣದುಬ್ಬರದ ಒತ್ತಡ ಕಡಿಮೆ ಮಾಡಿ ಹಣದ ಮೌಲ್ಯದಲ್ಲಾಗುವ ಕುಸಿತವನ್ನು ತಡೆಯುವುದು.

ಇಂತಹ ಗುರಿಯನ್ನು ಸಾಧಿಸಲು ಹಣಕಾಸು ನೀತಿ, ಹಣದ ಅಪಮೌಲ್ಯೀಕರಣ ಮುಂತಾದವುಗಳನ್ನು ಬಳಸಲಾಗುತ್ತದೆ. ಇಲ್ಲಿ ಸ್ಥಳೀಯ ಆರ್ಥಿಕ ಪರಿಸ್ಥಿತಿಯ ಅಧ್ಯಯನಕ್ಕಾಗಲಿ, ಉತ್ಪಾದನಾವೃದ್ಧಿಯ ಇತರ ಕ್ರಮಗಳಿಗಾಗಲೀ ಯಾವ ಮಹತ್ವವನ್ನೂ ನೀಡಲಾಗುವುದಿಲ್ಲ. ಆದ್ದರಿಂದ ಇಂತಹ ಕ್ರಮಗಳು ಆರ್ಥಿಕ ಪುನಶ್ಚೇತನ ನೀಡುವ ಬದಲು ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತವೆ.

ಭಾರತೀಯ ಅರ್ಥವ್ಯವಸ್ಥೆ ಮತ್ತು ೧೯೮೦ರ ನಂತರದ ಹೊಸ ಆರ್ಥಿಕ ನೀತಿ

ಹಲವಾರು ದಶಕಗಳಷ್ಟು ಕಾಲ ಬ್ರಿಟಿಷ್ ಆಡಳಿತಕ್ಕೊಳಪಟ್ಟ ಭಾರತದಲ್ಲಿ ಬಹುಪಾಲು ಬಡತನ ತಾಂಡವವಾಡುತ್ತಿತ್ತು. ಸ್ವತಂತ್ರ ಭಾರತದ ನಿರ್ಮಾಪಕರೆಲ್ಲರೂ ಇಂತಹ ಬಡತನದಿಂದ ದೇಶವನ್ನು ಮುಕ್ತಗೊಳಿಸುವ ಕುರಿತು (ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು) ಕನವರಿಸಿದ್ದರು ಮತ್ತು ಆ ದಿಸೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಆದರೆ ಹಸಿವಿನಿಂದ ಮುಕ್ತವಾದ ಭಾರತ ಇಂದಿನವರೆಗೂ ಉದಯವಾಗಲೇ ಇಲ್ಲ.

೧೯೫೧ರಲ್ಲಿ ಕಾರ್ಯ ಆರಂಭಿಸಿದ ಯೋಜನಾ ಆಯೋಗ ಆರ್ಥಿಕ ಅಭಿವೃಧಿಯನ್ನು ಯಾವ ಮಾದರಿಯಲ್ಲಿ ಸಾಧಿಸಬಹುದೆನ್ನುವ ಕುರಿತು ಅಧ್ಯಯನ ನಡೆಸಿತು.

ಸಮಾಜವಾದೀ ಸಿದ್ದಾಂತವನ್ನು ಅನುಸರಿಸುತ್ತ ಬಂದ ಸೋವಿಯತ್ ಒಕ್ಕೂಟ ಪಂಚವಾರ್ಷಿಕ ಯೋಜನೆಗಳ ಮೂಲಕ ಅದ್ಭುತ ಪ್ರಗತಿ ಸಾಧಿಸಿದ್ದು, ಜವಾಹರಲಾಲ್ ನೆಹರೂ ಅವರ್ ಗಮನ ಸೆಳೆಯಿತು. ಮಾತ್ರವಲ್ಲ ಹಲವಾರು ತಜ್ಞರೂ ಇಂತಹ ಮಾದರಿಯ ಬಗ್ಗೆ ಒಲವು ತೋರಿದ್ದರು. ಆದರೆ ನಮ್ಮಲ್ಲಿ ಸೋವಿಯತ್ ದೇಶಕ್ಕಿಂತ ಭಿನ್ನವಾದ ಯೋಜನಾ ಆಧಾರಿತ ಅಭಿವೃದ್ಧಿ ಮಾದರಿಯನ್ನು ಒಪ್ಪಿಕೊಳ್ಳಲಾಯಿತು. ಇಂತಹ ಅಭಿವೃದ್ಧಿ ಮಾದರಿಯನ್ನು ಮಿಶ್ರ ಆರ್ಥಿಕ ನೀತಿಯೆಂದು ಕರೆಯಲಾಯಿತು. ಇದರ ಪ್ರಕಾರ ಸಾರ್ವಜನಿಕ ರಂಗ ಮತ್ತು ಖಾಸಗೀ ರಂಗಗಳೆರಡೂ ಜೊತೆಜೊತೆಯಾಗಿ ಅಸ್ತಿತ್ವದಲ್ಲಿದ್ದು ದೇಶೀಯ ಉತ್ಪಾದನೆ ಹೆಚ್ಚಿಸಲು ಕಾರ್ಯಪ್ರವೃತ್ತವಾಗುತ್ತವೆ. ಅಪಾರ ಬಂಡವಾಳ ಬಯಸುವ, ರಾಷ್ಟ್ರೀಯ ಮಹತ್ವವಿರುವ ಪ್ರಮುಖ ಉದ್ದಿಮೆಗಳನ್ನು ಖಾಸಗೀ ರಂಗದಲ್ಲಿ ಸೇರಿಸಲಾಯಿತು. ದೇಶದ ಅಭಿವೃದ್ಧಿಗೆ ಅಪೂರ್ವ ಕೊಡುಗೆ ನೀಡಲಿರುವ ಸಹಕಾರೀ ರಂಗಕ್ಕೂ ಆಸ್ಪದ ನೀಡಲಾಯಿತು. ಇಂತಹ ‘ಯೋಜನಾಬದ್ಧ ಬೆಳವಣಿಗೆ ಮಾದರಿ’ ಪ್ರಜಾಪ್ರಭುತ್ವ ರೀತಿಯಲ್ಲಿದ್ದು ಜನರ ಆಶಯಗಳನ್ನು ಪ್ರತಿಫಲಿಸುವಂತಿತ್ತು. ಅಭಿವೃದ್ಧಿ ನೀತಿಯಲ್ಲಿ ಎಲ್ಲ ರಂಗಗಳ ಸಮತೋಲಿತ ಬೆಳವಣಿಗೆಗೆ ಒತ್ತು ನೀಡಲಾಗಿತ್ತು. ಈ ಯೋಜನಾ ಮಾದರಿಯ ಹೊರತಾಗಿಯೂ ನಮ್ಮ ಅರ್ಥ ವ್ಯವಸ್ಥೆ ಯಾವುದೇ ಸಿದ್ದಾಂತಕ್ಕೆ ಬದ್ಧವಾಗಿರದೇ ಅತ್ತ ಬಂಡವಾಳಶಾಹಿಯೂ ಅಲ್ಲದೆ ಇತ್ತ ಸಮಾಜವಾಗಿಯೂ ಅಲ್ಲದ ರೀತಿಯಲ್ಲಿ ಗೊತ್ತುಗುರಿಯಿಲ್ಲದ ಸಾಗುವ ನೌಕೆಯಂತೆ ಸಾಗುತ್ತಿದೆ. ಯಾಕೆಂದರೆ ನಾವು ಯೋಜನಾಬದ್ಧ ಅಭಿವೃದ್ಧಿ ನೀತಿಯನ್ನು ಅನುಸರಿಸುವಾಗ, ಬಂಡವಾಳಶಾಹೀ ಒಲವಿನ ಖಾಸಗೀ ವಲಯಕ್ಕೂ ಆಸ್ಪದ ನೀಡಿದ್ದೇವೆ. ಸಮಾಜವಾದೀ ಸಿದ್ದಾಂತವನ್ನಾಧರಿಸಿ ಸರ್ಕಾರೀ ನಿಯಂತ್ರಣದಲ್ಲಿರುವ ಸಾರ್ವಜನಿಕ ರಂಗದ ಉದ್ದಿಮೆಗಳ ವಿಷಯದಲ್ಲಿಯೂ ಗಟ್ಟಿಯಾಗಿ ಯಾವುದೇ ನೀತಿಗೆ ಸದಾ ಅಂಟಿಕೊಂಡಿಲ್ಲ: ಮಾತ್ರವಲ್ಲ ಮುಕ್ತ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಪಶ್ಚಿಮದ ದೇಶಗಳ ಒತ್ತಡಕ್ಕೆ ಮಣಿಯುವ ಮೂಲಕ ಪರಸ್ಪರ ತದ್ವಿರುದ್ಧವಾಗಿ ವರ್ತಿಸುತ್ತಾ ಬಂದಿದ್ದೇವೆ. ಇಂತಹ ವಿರೋಧಾಭಾಸಗಳು ಆಗಿಂದಾಗ್ಗೆ ಕಾಣಸಿಗುತ್ತವೆ. ಹೀಗೆ ವಿಭಿನ್ನ ಗುರಿಗಳನ್ನು ಸಾಧಿಸುವಲ್ಲಿ ಭಾರತದ ಯೋಜನಾ ಆಯೋಗ ಯಶಸ್ವಿಯಾಗಲಿಲ್ಲ. ಮಾತ್ರವಲ್ಲ ನಾವು ಅತ್ತ ಬಂಡವಾಳಶಾಹಿಯೂ ಅಲ್ಲದ ಇತ್ತ ಸಮಾಜವಾದಿಯೂ ಅಲ್ಲದ ಮೂರನೇ ತಂತ್ರವನ್ನಳವಡಿಸಿಕೊಂಡ ಒಂದು ರೀತಿಯ ತ್ರಿಶಂಕು ಸ್ತಿತಿಯಲ್ಲಿದ್ದೇವೆ. ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಭೌಗೋಳಿಕವಾಗಿ ವೈವಿಧ್ಯಮಯವಾದ ಭಾರತ, ಸ್ವಾತಂತ್ರ್ಯ ನಂತರದ ನಾಲ್ಕೂವರೆ ದಶಕಗಳ ನಂತರವೂ ಬಡದೇಶವಾಗಿಯೇ ಉಳಿದಿದೆ. ದೇಶದ ಒಟ್ಟು ಜನಸಂಖ್ಯೆಯ ೪೦% ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ಭಾರತವು ಸಾಧಿಸಬೇಕಾಗಿರುವುದು ಇನ್ನೂ ಬಹಳಷ್ಟಿರುವುದನ್ನು ಇದು ಸೂಚಿಸುವುದು ಸತ್ಯವಾಗಿದ್ದರೂ ಬಡತನ, ಹಸಿವು ಮಾತ್ರ ಇನ್ನೂ ದೊಡ್ದ ಸಮಸ್ಯೆಯಾಗಿ ಬೆಳೆಯುತ್ತಲೇ ಇವೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸವಲತ್ತುಗಳಿಲ್ಲದೆ ಹುಟ್ಟುವ ಬಹುಪಾಲು ಮಕ್ಕಳು ಸಾಯುತ್ತಿವೆ. ಮೂರನೇ ಎರಡಂಶ ಜನ ಇಂದಿಗೂ ಶುದ್ಧವಾದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಅರ್ಧದಷ್ಟು ಹಳ್ಳಿಗಳು ಇಂದಿಗೂ ಉತ್ತಮ ರಸ್ತೆಗಳನ್ನು ಪಡೆದಿಲ್ಲ. ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಮೂರನೇ ಒಂದಂಶ ಮಕ್ಕಳು ಬಾಲಕಾರ್ಮಿಕರಾಗಿ ದುಡುಯುತ್ತಿದ್ದಾರೆ. ದೇಶದ ನಾಳಿನ ಪ್ರಜೆಗಳು ವಿದ್ಯಾಭ್ಯಾಸ ವಂಚಿತರಾಗುತ್ತಿದ್ದರೆ, ಪೌಢರಲ್ಲಿ ಮೂರನೇ ಎರಡಂಶ ಜನ ಅನಕ್ಷರಸ್ಥರು. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಗರೀಬೀ ಹಟಾವೋ, ಅಂತ್ಯೋದ್ಯ, ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಜವಾಹರ್ ರೋಜಗಾರ್ ಯೋಜನೆ, ಇಪ್ಪತ್ತು ಅಂಶಗಳ ಆರ್ಥಿಕ ಕಾರ್ಯಕ್ರಮ ಮುಂತಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಭಿವೃದ್ಧಿ ಸಾಧಿಸಲು ಪೂರಕ ಕ್ರಮವಾಗಿ ಬ್ಯಾಂಕು ರಾಷ್ಟ್ರೀಕರಣ, ಭೂ ಮಸೂದೆ ಜಾರಿಯಂತಹ ದಿಟ್ಟವಾದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಬಡಜನರ ಒಟ್ಟು ಕಲ್ಯಾಣ ಸಾಧಿಸಲು ಅನುಷ್ಟಾನಗೊಳಿಸಲಾದ ಯೋಜನೆಗಳ ಫಲವಾಗಿ ಆರೋಗ್ಯ, ವಸತಿ, ಶಿಕ್ಷಣ, ರಸ್ತೆ, ಸಂಪರ್ಕ, ವಿದ್ಯುತ್ ಮುಂತಾದ ಕ್ಷೇತ್ರಗಳಲ್ಲಿ ಕೊಂಚ ಪ್ರಗತಿ ಕಂಡು ಬಂದಿದೆ. ದೇಶದ ಬಡಜನರ ಒಟ್ಟು ಅವಶ್ಯಕತೆಗಳನ್ನು ಗಮನಿಸಿದರೆ ಇಂತಹ ಸಾಧನೆ ನಗಣ್ಯವೆನಿಸಿವೆ. ಇಂತಹ ಯೋಜನೆಗಳು ಅನುಷ್ಠಾನವಾಗುವ ಸಂದರ್ಭದಲ್ಲಿ ಬಹಳಷ್ಟು ಸಂಪನ್ಮೂಲ ಮಾರ್ಗ ಮಧ್ಯದಲ್ಲಿ ಇಂಗಿ ಹೋಗುತ್ತಿದೆ. ಇದರಿಂದಾಗಿ ಮಧ್ಯವರ್ತಿಗಳು ಫಲಾನುಭವಿಗಳಿಗಿಂತಲೂ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಇದು ಜನೋಪಯೋಗಿ ಯೋಜನೆಗಳ ಮಾತಾಯಿತು. ಇನ್ನು ಆರ್ಥಿಕ ಅಭಿವೃದ್ಧಿಯ ಫಲ ಜನ ಸಾಮಾನ್ಯರಿಗೆ ದೊರೆತಿದೆಯೋ ಇಲ್ಲವೋ ಎನ್ನುವ ಕುರಿತು ಬಹಳಷ್ಟು ಚರ್ಚೆ ನಡೆಯುತ್ತಿದೆ. ಅಭಿವೃದ್ಧಿಯ ಫಲದಲ್ಲಿ ಹೆಚ್ಚಿನಂಶವನ್ನು ಉಳ್ಳವರೇ ಪಡೆದರೆ ಬಡವರಿಗೆ ಅಥವಾ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಇದರ್ ಪ್ರಯೋಜನ ಕಡಿಮೆ ದೊರಕುತ್ತಿದೆ. ಅಭಿವೃದ್ಧಿ ಹೊಂದಿದ ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ, ಹರ್ಯಾಣ, ಗುಜರಾತಗಳಲ್ಲಿ ಕೂಡಾ ಒಟ್ಟು ಉತ್ಪನ್ನ, ಆದಾಯದಲ್ಲಿ ಬಹಳಷ್ಟು ಹೆಚ್ಚಳವಾಗಿದ್ದರೂ ಬಹಳಷ್ಟು ಕಾರಣಗಳಿಂದಾಗಿ ಇದು ಬಡವರಿಗೆ ಹರಿದುಹೋಗಿಲ್ಲ. ಸಾಮಾನ್ಯವಾಗಿ ಕೃಷಿಕ್ಷೇತ್ರದಲಾಗುವ ಹೆಚ್ಚುವರಿ ಉತ್ಪಾದನೆ ಸಣ್ಣ ರೈತರ ಮತ್ತು ಕೃಷಿಕಾರ್ಮಿಕರ ಆದಾಯ ವೃದ್ಧಿಸುತ್ತದೆಯಾದರೂ ಪಂಜಾಬ್, ಹರ್ಯಾಣ, ಮತ್ತು ಗುಜರಾತಗಳಲ್ಲಿ ಹೀಗಾಗಿಲ್ಲ್, ಕಾರಣ, ಇಲ್ಲಿ ಉತ್ಪಾದನೆ ಹೆಚ್ಚಿಸಲು

೧. ಕೃಷಿ ಕಾರ್ಮಿಕರ ಬದಲಿಗೆ ಕಾರ್ಮಿಕರ ಶ್ರಮ ಉಳಿಸುವ ಯಂತ್ರಗಳ ಬಳಕೆಯಾಗಿದೆ.

೨. ಅತ್ಯಧಿಕ ಉತ್ಪಾದನೆ ದೊಡ್ಡ ರೈತರ ಮುತುವರ್ಜಿ ಮತ್ತು ಸ್ವಂತ ಶ್ರಮದ ಮೂಲಕ ಆಗಿದೆ.

೩. ಸಣ್ಣ ಮತ್ತು ಬಡ ರೈತರಿಗೆ ಅನನುಕೂಲಕರವಾದ ವಾತಾವರಣ ನಿರ್ಮಾಣದಿಂದಾಗಿ, ಅವರು ಕೃಷಿ ಕ್ಷೇತ್ರದಿಂದ ಹೊರಬಂದು ಕೂಲಿ ಕಾರ್ಮಿಕರಾಗಬೇಕಾಗಿದೆ.

೪. ಗ್ರಾಮೀಣ ಪ್ರದೇಶದ ಕರಕುಶಲಕರ್ಮಿಗಳ ಮತ್ತು ಗುಡಿಕೈಗಾರಿಕೆಯನ್ನು ಅವಲಂಬಿಸಿದ್ದ ಜನ, ಕಾರ್ಮಿಕ ಮಾರುಕಟ್ಟೆಗೆ ಬರುವಂತಾಗಿದೆ.

ಇದು ಕೃಷಿಕ್ಷೇತ್ರದಲ್ಲಿನ ಬೆಳವಣಿಗೆಯಾದರೆ ಬೃಹತ್ ಬಂಡವಾಳ ಕೇಂದ್ರಿತ, ಕಾರ್ಮಿಕ ಶಕ್ತಿ ಉಳಿತಾಯದ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾರಂಭ ಮಾಡಿದ ಉಧ್ಯಮಗಳಿಂದಾಗಿ ಅನ್ಯ ಕ್ಷೇತ್ರದಲ್ಲಿನ ಪಾರಂಪರಿಕ ಕೈಗಾರಿಕೆಗಳು, ಸ್ಥಳೀಯ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದ ಅಭಿವೃದ್ಧಿಯೊಂದಿಗೆ ಆರ್ಥಿಕ ಅಸಮಾನತೆ ಹೆಚ್ಚುತ್ತಾ ಹೋಯಿತು. ೧೯೭೦ರ ದಶಕದ ಮಧ್ಯಭಾಗದಲ್ಲಿ ಕಂಡು ಬಂದಂತೆ ದೇಶದ ೨೫%ರಷ್ಟಿರುವ ಶ್ರೀಮಂತ ಜನ ಒಟ್ಟು ಉತ್ಪನ್ನದ ೫೦% ಭಾಗವನ್ನು ಅನುಭವಿಸುತ್ತಿದ್ದರೆ ಕೆಳಸ್ತರದ ೨೫% ಜನ ಒಟ್ಟು ಉತ್ಪನ್ನದ ೭%ವನ್ನು ಪಡೆಯುತ್ತಿದ್ದರು. ಆದರೆ ಗ್ರಾಮೀಣ ಭಾರತದಲ್ಲಿ ಆರ್ಥಿಕ ಅಸಮಾನತೆಯೊಂದಿಗೆ ಸಾಮಾಜಿಕ ಅಸಮಾನತೆ ಕೂಡಾ ಒಂದು ಭೀಕರ ಸಮಸ್ಯೆಯಾಗಿದೆ. ಎಲ್ಲ ರಂಗಗಳಲ್ಲಿ ದಲಿತ ವರ್ಗ ಶತಮಾನಗಳಿಂದಲೂ ಮೂಲೆಗುಂಪಾಗಿಸಲ್ಪಟ್ಟು ಮೇಲ್ವರ್ಗದವರ ದಬ್ಬಾಳಿಕೆಗೊಳಗಾಗಿದೆ. ಆರ್ಥಿಕ ಅಸಮಾನತೆಯೊಂದಿಗೆ, ಸಾಮಾಜಿಕ ಅಸಮಾನತೆಯೂ ಸೇರಿ ಸಮಸ್ಯೆಯು ಇನ್ನಷ್ಟು ಜಟಿಲವಾಗಿದೆ. ಉಧ್ಯಮ ವಲಯಗಳಲ್ಲಿ ನಾವು ಸಾಧಿಸಿದ ಪ್ರಗತಿ, ಬೃಹದಾಕಾರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳು, ಅಂತರಾಷ್ಟ್ರೀಯ ಆಗುಹೋಗುಗಳ ಭಾರತದ ಮೇಲಣ ಪರಿಣಾಮಗಳಿಂದಾಗಿ ‘ಭೀಮನ ಹೊಟ್ಟಿಗೆ ಕಾಸಿನ ಮಜ್ಜಿಗೆಯಾಯಿತು’. ಸ್ವಾತಂತ್ರ್ಯಾ ನಂತರದ ಒಟ್ಟು ಅಭಿವೃದ್ಧಿ ಯೋಜನೆಗಳ ಸ್ವರೂಪ, ಅವುಗಳ ಅನುಷ್ಠಾನ ಮತ್ತು ಅದರ ಪ್ರತಿಫಲ ಇವನ್ನು ಗಮನಿಸುವಾಗ ಈ ಕೆಳಗಿನ ಚಿತ್ರಣ ಸಿಗುತ್ತದೆ :

೧. ನಮ್ಮ ಅಭಿವೃದ್ಧಿ ಯೋಜನೆಯ ಸಿದ್ಧಾಂತ ಮತ್ತು ಭೂಮಿಕೆ ಯಾವುದೊಂದು ನಿರ್ದಿಷ್ಟತೆಯಿಲ್ಲದ ಕಾರಣ ಬಿಗುವು ಕಳಕೊಂಡಿರುವುದು.

೨. ಅಭಿವೃದ್ಧಿ ಯೋಜನೆಯ ಸ್ವರೂಪವನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸಿದವರ ಮೇಲೆ ಪಾಶ್ಚಿಮಾತ್ಯರ ಅಭಿವೃದ್ಧಿ ನೀತಿಯ ಪ್ರಭಾವ ಮುಖ್ಯವಾಗಿದ್ದುದು.

೩. ಅಭಿವೃದ್ಧಿ ಯೋಜನೆಗಳ ಫಲ ಶ್ರೀಮಂತರಿಗೆ ಹೆಚ್ಚು ದೊರೆತು, ಬಡಜನರಿಗೆ ಕೊಂಚ ಮಾತ್ರ ಹರಿದು ಬಂದದ್ದು.

೪. ಅಭಿವೃದ್ಧಿ ಯೋಜನೆಯಲ್ಲಿನ ಸ್ವರೂಪಾತ್ಮಕ ದೌರ್ಬಲ್ಯಗಳು ಸಾಮಾಜಿಕ ಅಸಮತೋಲನವನ್ನು ಭೇದಿಸಿ ಸಮಾಜದ ಎಲ್ಲ ವರ್ಗಗಳನ್ನು ಮುಟ್ಟುವಲ್ಲಿ ಯಶಸ್ಸು ಸಾಧಿಸಬಹುದು.

೫. ಅಭಿವೃದ್ಧಿ ಯೋಜನೆಗಳಲ್ಲಿ, ಆರ್ಥಿಕ ಧೋರಣೆಗಳ ಮೇಲಿನ ರಾಜಕೀಯ ಪ್ರಭಾವ ಒತ್ತಡಗಳಿಂದಾಗಿ ನಿರಂತರತೆ ಇಲ್ಲದಿರುವುದು.

೬. ಅಲ್ಪ ಸ್ವಲ್ಪ ಪ್ರಗತಿ ಸಾಧಿಸಲು ಸಹಾಯಕವಾಗಿದ್ದು ಸಾರ್ವಜನಿಕ ರಂಗದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಸರ್ಕಾರದ ಸಹಾಯಕವಾಗಿದ್ದು ಸಾರ್ವಜನಿಕ ರಂಗದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಸರ್ಕಾರದ ಜನೋಪಯೋಗಿ ಉದ್ದೇಶಗಳಿಗಾಗಿ ಬಂಡವಾಳ ಹೂಡಿಕೆ, ಆರೋಗ್ಯ, ವಿದ್ಯಾಭ್ಯಾಸ, ಸಂಚಾರ ಮತ್ತು ಸಂಪರ್ಕ ಉದ್ದೇಶಗಳಿಗಾಗಿ ಸರ್ಕಾರಿ ಖಜಾನೆಯ ಹಣ ವಿನಿಯೋಗದಿಂದಾಗಿ ಅಲ್ಪಸ್ವಲ್ಪ ಪ್ರಗತಿ ಸಾಧ್ಯವಾಗಿರುವುದು.