ಬಂಡವಾಳ ಸಂಚಯನದ ಸ್ಥಿತಿಯಲ್ಲಿ ೧೯೯೦-೯೧ರ ಅವಧಿಯಲ್ಲಿ ಗೋಚರಿಸಿದ ಏರಿಕೆ ತದನಂತರದ ವರ್ಷಗಳಲ್ಲಿ ಕಡಿಮೆಯಾಗುತ್ತಾ ಬಂದಿದೆ. ಅಂತೆಯೇ ರಾಷ್ಟ್ರೀಯ ಉತ್ಪನ್ನದಲ್ಲಿ ಉಳಿತಾಯದ ಪ್ರಮಾಣ ಕೂಡ ಇದ್ದು ೧೯೯೦-೯೧ ರಲ್ಲಿ ೨೩.೭೧ ಶೇಕಡಕ್ಕೆ ಏರಿಕೆಯಾಗಿದ್ದು ಕಂಡು ಬರುತ್ತದೆ. ಆದರೆ ಇಂತಹ ಏರಿಕೆಯ ದರದಲ್ಲಿ ಮುಂದುವರೆಗೆಯೂ ಇಳಿಯುತ್ತಾ ಬಂದು ೧೯೯೩-೯೪ ರಲ್ಲಿ ೨೦.೨% ರಷ್ಟಾಗಿತ್ತು. ಉಳಿತಾಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಪ್ರಮುಖ ವಿಷಯವೆಂದರೆ ಖಾಸಗೀ ರಂಗದ ಉದ್ದಿಮೆಗಳ ಸಾಮಾನ್ಯ ಜನರು ಮಾಡುತ್ತಿದ್ದ ಉಳಿತಾಯದಲ್ಲಿ ಇಳಿಕೆ ಕಂಡು ಬಂದಿದೆ. ಇಂತಹ ಪರಿಣಾಮಗಳಿಗೆ ಖಾಸಗೀಕರಣಕ್ಕೆ ಮಹತ್ವವೇ ಮುಂತಾದ ಹೊಸ ಆರ್ಥಿಕ ನೀತಿಗಳೂ ಕಾರಣವಾಗಿವೆ. ಒಟ್ಟಿನಲ್ಲಿ ಮುಗ್ಗರಿಸಿದ್ದ ನಮ್ಮ ಅರ್ಥವ್ಯವಸ್ಥೆ ನಿಧಾನ ಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಆದರೆ ೧೯೮೦ರ ದಶಕದಲ್ಲಿ ನಾವು ಇರಿಸಿಕೊಂಡಿದ್ದ ಗುರಿಗಳಿಗಿಂತ ಉಳಿತಾಯದ ಪ್ರಮಾಣದಲ್ಲಿ ನಿರುತ್ಸಾಹಕ ವಾತಾವರಣ, ವಿದೇಶೀ ಬಂಡವಾಳದ ಮೇಲೆ ಅತೀ ಅವಲಂಬನೆ ಮುಂತಾದ ಅಂಶಗಳನ್ನು ಗಮನಿಸಿದಾಗ ಗುರಿಸಾಧನೆ ಸಾಧ್ಯವೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಹೊಸ ಆರ್ಥಿಕ ನೀತಿ ಪ್ರತಿಪಾದಿಸುವ ಮಹತ್ವದ ಅಂಶಗಳಲ್ಲಿ ಸರಕಾರದ ಹಸ್ತಕ್ಷೇಪ ಕಡಿಮೆಯಾಗಬೇಕು ಎನ್ನುವುದು ಒಂದಾಗಿದೆ. ಉತ್ಪಾದನಾ ರಂಗಗಳಲ್ಲಿ ಸರಕಾರ ತನ್ನ ಪಾತ್ರವನ್ನು ಅದಷ್ಟು ಮಿತಿಗೊಳಿಸಿ ವಲಯ ಸಕ್ರಿಯವಾಗಲು ಅವಕಾಶ ನೀಡಬೇಕೆನ್ನುವುದು ಉದಾರ ಆರ್ಥಿಕ ನೀತಿಯ ಮೂಲತತ್ವ ಕೂಡ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಇಂತಹ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಶರತ್ತುಗಳನ್ನು ವಿಧಿಸುತ್ತದೆ. ರಷ್ಯಾದ ಅರ್ಥ ವ್ಯವಸ್ಥೆ ಕುಸಿದು ಬಿದ್ದ ನಂತರ ಅಭಿವೃದ್ಧಿಗೆ ಜೀನಿವಾದ ಮಾರ್ಗವೇ ಮುಕ್ತ ಅರ್ಥವ್ಯವಸ್ಥೆ ಅಥವಾ ಜಾಗತೀಕರಣ ಎನ್ನುವ ವಾದ ಪ್ರಬಲವಾಗಿ ಕೇಳಿಬರುತ್ತಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಬೇಕಾದಂತಹ ಬಂಡವಾಳ ಮತ್ತು ತಂತ್ರಜ್ಞಾನವನ್ನು ಅಪಾರವಾಗಿ ಹೊಂದಿರುವ ಮುಂದುವರಿದ ರಾಷ್ಟ್ರಗಳು ಹೇಳುವುದನ್ನು ಬಡದೇಶಗಳು ಕೇಳಲೇಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಮುಂದುವರಿದ ರಾಷ್ಟ್ರಗಳು ತಮ್ಮಲ್ಲಿರುವ ಎಲ್ಲಾ ಅವಕಾಶಗಳನ್ನು ವ್ಯಯಿಸಿವೆ. ಹಾಗಾಗಿ ಮುಂದುವರಿದ ಶ್ರೀಮಂತ ದೇಶಗಳಿಗೆ ತಮ್ಮ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು ಮತ್ತು ಬಂಡವಾಳ ವಿನಿಯೋಗಿಸುವ ಅವಕಾಶ ಪಡೆಯಲು ಅಭಿವೃದ್ಧಿಶೀಲ ದೇಶದೊಳಕ್ಕೆ ಪ್ರವೇಶಿಸದೇ ಅನ್ಯ ಮಾರ್ಗವಿಲ್ಲದಂತಾಗಿದೆ. ಹಾಗಾಗಿ ಆರ್ಥಿಕ ಉದಾರೀಕರಣ ಅಂತಹ ದೇಶಗಳಿಗೆ ಅನಿವಾರ್ಯವಾಗಿದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಹಾಗೂ ಅರ್ಥ ವ್ಯವಸ್ಥೆಯಲ್ಲಿ ಸರಕಾರದ ಪಾತ್ರ ಅಥವಾ ಜವಾಬ್ದಾರಿ ಹೇಗಿದೆ ತಿಳಿಯೋಣ. ಸರಕಾರ ಹಲವಾರು ರೀತಿಯ ಕಾನೂನು ಕಾಯಿದೆಗಳ ಅಥವಾ ಶಾಸನಾತ್ಮಕ ಕ್ರಮಗಳ ಮೂಲಕ ಖಾಸಗೀ ರಂಗದ ಅರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಹಲವಾರು ರೀತಿಯ ಉತ್ಪಾದಕ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುತ್ತದೆ. ಅರ್ಥಾತ್ ಸಾರ್ವಜನಿಕ ರಂಗದ ಉದ್ದಿಮೆಗಳು ಸರಕಾರದ ಒಡೆತನಕ್ಕೆ ಸೇರದವುಗಳಾಗಿವೆ. ಆರ್ಥಿಕ ಉದಾರೀಕರಣ ಪ್ರತಿಪಾದಿಸುವ ತತ್ವವೇನೆಂದರೆ ಭಾರತದಂತಹ ದೇಶದಲ್ಲಿ ಸರಕಾರ ಶಾಸನಾತ್ಮಕ ತೊಡಕುಗಳನ್ನು ನಿವಾರಿಸಿ ಖಾಸಗಿ ರಂಗದ ಕಾರ್ಯ ದಕ್ಷತೆಗೆ ಸಂಪೂರ್ಣ ಅವಕಾಶ ಮಾಡಿಕೊಡಬೇಕು. ಸರಕಾರ ನಡೆಸುವ ಉದ್ದಿಮೆಗಳು ನಷ್ಟವನ್ನು ಅನುಭವಿಸುತ್ತಿರುವುದರಿಂದ ಅವನ್ನು ಖಾಸಗಿಯವರಿಗೆ ಮಾರಿ ಬರುವ ಹಣವನ್ನು ಸರಕಾರದ ಬಜೆಟ್ ಕೊರತೆ ತುಂಬಲು ಬಳಸಿಕೊಳ್ಳಬೇಕು. ಸರಕಾರ ತನ್ನ ಆದಾಯದ ಮೂಲಗಳಿಗಿಂತ ಹೆಚ್ಚು ವೆಚ್ಚ ಮಾಡುವ ಪರಿಪಾಠವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ವಾದಗಳು ಬಹಳ ಆಕರ್ಷಕ ಮತ್ತು ಸತ್ಯವಾದಂತಹವುಗಳು ಎನಿಸುತ್ತದೆ. ಇದರೆ ಹಿಂದಿರುವ ಬಂಡವಾಳಶಾಹಿ (ಚಿಂತನೆ) ಉದ್ದೇಶ ಜನಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ೧೯೯೧ರಲ್ಲಿ ವಿಶ್ವ ಬ್ಯಾಂಕ ಮತ್ತು ಅಂತರಾಷ್ಟ್ರೀಯ ದ್ರವ್ಯ ನಿಧಿಯಿಂದ ಸಾಲ ಪಡೆದಾಗ ಅವರು ವಿಧಿಸಿದ ಹಲವು ಶರತ್ತುಗಳಲ್ಲಿ ಸರಕಾರ ಬಜೆಟ್ ಕೊರತೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಆದಾಯಕ್ಕನುಗುಣವಾಗಿ ವೆಚ್ಚ ಮಾಡಬೇಕೆನ್ನುವುದು ಪ್ರಮುಖವಾಗಿದೆ. ೧೯೯೧ ರಿಂದೀಚೆಗಿನ ಕೊರತೆಯನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗಿದೆ. ೧೯೯೦-೯೧೦ರಲ್ಲಿ ರಾಷ್ಟ್ರೀಯ ಉತ್ಪನ್ನದ ೮.೪% ಇದ್ದ ಕೊರತೆಯ ಪ್ರಮಾಣ ೧೯೯೪-೯೫ರಲ್ಲಿ ೬.೭% ಕ್ಕೆ ಇಳಿದಿವೆ. ೧೯೯೫-೯೬ರ ಬಜೆಟ್ ಈ ಕೊರತೆಯ ಮಟ್ಟವನ್ನು ೫.೫% ರಷ್ಟಕ್ಕೆ ಮಿತಿಗೊಳಿಸುವ ಗುರಿಹೊಂದಿವೆ. ಇಲ್ಲಿ ಕೊರತೆಯ ಮೂಲವಾಗಿರುವ ಸರಕಾರ ಆದಾಯದ ಮತ್ತು ಖರ್ಚಿನಲ್ಲಿ ಎರಡು ವಿಧಗಳಿವೆ. ಒಂದು ಸಾಮಾನ್ಯ ಖರ್ಚು, ಕಾನೂನು ಶಿಸ್ತುಪಾಲನೆ, ಆಡಳಿತ ವೆಚ್ಚ ಮುಂತಾದ ನೇರ ಪ್ರತಿಫಲವಿಲ್ಲದ ಉದ್ದೇಶಗಳಿಗೆ ಆಗುತ್ತದೆ. ಎರಡನೆಯದು ಬಂಡವಾಳ ಖರ್ಚು, ಕೃಷಿ ಉದ್ದಿಮೆ ಸ್ಥಾಪನೆ, ಉದ್ಯೋಗವಕಾಶ ಸೃಷ್ಟಿ, ಮುಂತಾದ ಉದ್ದೇಶಗಳಿಗಾಗುತ್ತದೆ. ಹಾಗಾಗಿ ಸಾರಾಸಗಟಾಗಿ ಸರಕಾರ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ನಿರುಪಯುಕ್ತ ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಬಡಜನರ ಸಂಖ್ಯೆ ಅಧಿಕವಾಗಿರುವ ನಮ್ಮ ದೇಶದಲ್ಲಿ ಅವರಿಗೆ ಆದಾಯ ಗಳಿಸಿಕೊಡಲು ಸರಕಾರ ಬಂಡವಾಳ ಖರ್ಚುಗಳನ್ನು ಮಾಡುವುದು ಅನಿವಾರ್ಯುವಾಗುತ್ತದೆ. ಹಾಗಾಗಿ ಬಂಡವಾಳ ಖರ್ಚು ಸಮಾಜದ ಕೆಳಸ್ತರದ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ನೀಡುವಂತಹ ರೀತಿಯ ಖರ್ಚಾಗಿದೆ. ಹಾಗಾಗಿ ಸರಕಾರದ ಖರ್ಚು ಅಥವಾ ಕೊರತೆಯ ಮೂಲ ಕಾರಣ ತಿಳಿದು ಅದು ಸಾಮಾನ್ಯ ಖರ್ಚಾಗಿದ್ದರೆ ಮಾತ್ರ ಅದು ಅಪ್ರಯೋಜಕ ಅಥವಾ ನಿರುಪಯುಕ್ತ ಎಂದು ಹೇಳಬಹುದೇ ಹೊರತು ಬಂಡವಾಳ ಖರ್ಚಾದಾಗ ಹಾಗೆ ಹೇಳುವ ಹಾಗಿಲ್ಲ. ೧೯೯೧-೯೨ರ ನಂತರದಲ್ಲಿ ನಮ್ಮ ಬಜೆಟ ಕೊರತೆಯ ಪ್ರಮಾಣದಲ್ಲಿ ಇಳಿಮುಖವಾಗಿರುವುದೇ ಒಂದು ದೊಡ್ಡ ಸಾಧನೆಯೆಂದು ಹೇಳಲಾಗುತ್ತಿದೆ. ಆದರೆ ಈ ಕೊರತೆಯ ಪ್ರಮಾಣದ ಇಳಿಕೆಗೆ ಮುಖ್ಯ ಕಾರಣ ಸರಕಾರದ ಬಂಡವಾಳ ಖರ್ಚನ್ನು ಕಡಿಮೆಮಾಡಿ ಉತ್ಪಾದಕ ಚಟುವಟಿಕೆಗಳಿಗೆ ಹರಿದು ಹೋಗುತ್ತಿರುವ ಹಣದ ಪ್ರಮಾಣವನ್ನು ತಡೆದುದೇ ಆಗಿದೆ. ಇನ್ನೊಂದೆಡೆ ಸಾಮಾನ್ಯ ಆಡಳಿತಾತ್ಮಕ ಖರ್ಚುಗಳು ಏರುತ್ತಲೇ ಇವೆ. ಇಂತಹ ಉದ್ದೇಶಗಳಿಗೆ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಬದಲು ನಾವು ಸಾಲ ಪಡೆಯುತ್ತಲಿದ್ದೇವೆ. ನಮ್ಮ ಆದಾಯದ ಬಹುಪಾಲು ಹಣ ಬಡ್ಡಿ ಪಾವತಿಸಲು ವಿನಿಯೋಗವಾಗುತ್ತಿದೆ. ಇದು ಪ್ರತಿವರ್ಷ ಏರುತ್ತಲೇ ಇದೆ. ಇನ್ನೊಂದೆಡೆ ತೆರಿಗೆಯ ಆದಾಯದಲ್ಲಿ ಇಳಿತವುಂಟಾಗುತ್ತಲಿದೆ. ೧೯೯೦-೯೧ರಲ್ಲಿ ರಾಷ್ಟ್ರೀಯ ಉತ್ಪನ್ನದ ೧೦.೮% ರಷ್ಟಿದ್ದ ತೆರಿಗೆ ಆದಾಯ ೧೯೯೪-೯೫ ರಲ್ಲಿ ೯.೬% ಇಳಿದಿದೆ. ಬಜೆಟ ಕೊರತೆಯಲ್ಲಿ ಸರಕಾರಗಳಿಗೆ ನೀಡುವ ಸಂಪನ್ಮೂಲದ ಪ್ರಮಾಣದಲ್ಲಿ ಕಡಿತವುಂಟು ಮಾಡಲಾಗಿದೆ. ಇದರ ಪರಿಣಾಮವಾಗಿ ರಾಜ್ಯ ಸರಕಾರಗಳು ಕೃಷಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿಧಾನಗೊಳಿಸುತ್ತದೆ. ೧೯೯೦-೯೧ರಲ್ಲಿ ಇದು ೪.೫% ರಷ್ಟಾಗಿದೆ. ಹಾಗಾಗಿ ಸರಕಾರ ಬಜೆಟ್ ಕೊರತೆ ಕಡಿಮೆ ಮಾಡಲು ಅನುಸರಿಸಿದ ಮಾರ್ಗಗಳು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಹಿತಾಸಕ್ತಿಗೆ ಮಾರಕವಾಗಿದೆ. ಇಂತಹ ನೀತಿಗಳ ಪರಿಣಾಮ ತಿಳಿದು ಬರಲು ಕೊಂಚ ಕಾಲಾವಕಾಶ ಬೇಕಾಗಬಹುದು.

ಸಾರ್ವಜನಿಕ ರಂಗದಲ್ಲಿ ಉದ್ದಿಮೆಗಳು ತೆರಿಗೆದಾರರಿಂದ ಸಂಗ್ರಹವಾಗುವ ಕೋಟಿಗಟ್ಟಲೆ ಹಣವನ್ನು ತಿಂದು ಯಾವ ಪ್ರತಿಫಲವನ್ನು ನೀಡುತ್ತಿಲ್ಲ ಎನ್ನುವ ವಾದವಿದೆ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಇಂತಹ ಉದ್ದಿಮೆಗಳು ದೇಶದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯವಾಗಿದೆ. ಖಾಸಗಿ ರಂಗ ಇಂತಹ ಉದ್ದಿಮೆಗಳಲ್ಲಿ ಹಣ ತೊಡಗಿಸಲು ಸಾಧ್ಯವಿಲ್ಲದಂತಹ ಸಮಯದಲ್ಲಿ ಇದನ್ನು ಕೈಗಿತ್ತಿಕೊಂಡು ದಕ್ಷವಾಗಿ ನಡೆಸಿಕೊಂಡು ಬಂದಿದೆ. ಇಂತಹ ಉದ್ದಿಮೆಗಳು ನಷ್ಟ ಅನುಭವಿಸಲು ಪ್ರಮುಖ ಕಾರಣ ಅರ್ಥ ಮೂಲವಾಗಿಲ್ಲದೇ ಬೇರೆಯೇ ಆಗಿದೆ. ಹೀಗೆ ಈ ಉದ್ಯಮಗಳ ಕಳಪೆ ನಿರ್ವಹಣೆಗೆ ರಾಜಕೀಯ ಹಸ್ತಕ್ಷೇಪ ಮತ್ತು ಖಾಸಗೀ ಉದ್ದಿಮೆರಂಗದ ಕರಾಮತ್ತುಗಳು ಕಾರಣವಾಗಿದೆ. ಇಂದು ಇಂತಹ ಉದ್ದಿಮೆಗಳ ಶೇರುಗಳನ್ನು ಸಾರ್ವಜನಿಕರಿಗೆ ಮಾರುವ ಸನ್ನಿವೇಶವಿದೆ. ಈ ಸಾರ್ವಜನಿಕ ರಂಗದ ಉದ್ದಿಮೆಗಳ ಆಸ್ತಿಯ ನಿಜವಾದ ಮೌಲ್ಯ ಪುಸ್ತಕದಲ್ಲಿ ನಮೂದಿಸಿರುವುದಕ್ಕಿಂತ ಹಲವಾರು ಪಟ್ಟು ಜಾಸ್ತಿಯಿದೆ. ತಮಾಷೆಯೆಂದರೆ ಮುಖಬೆಲೆಗೆ ಅಥವಾ ದಾಖಲಿತ ಬೆಲೆಗೆ ಅವುಗಳನ್ನು ಮಾರಲು ಹೊರಟಾಗಲೂ ಖರೀದಿಗಾಗೇ ಇಲ್ಲದಂತಹ ಸಂದರ್ಭವಿದೆ. ಕಾರಣ ಸರಕಾರ ಸಾರ್ವಜನಿಕ ರಂಗದ ಕಂಪನಿಗಳ ಶೇರುಗಳನ್ನು ಮಾರಾಟಮಾಡಿ ಸಂಪನ್ಮೂಲ ಕ್ರೋಢಿಕರಿಸಲು ಹೊರಟಿರುವ ವಿಚಾರ ಈಗಾಗಲೇ ಎಲ್ಲ ವಲಯಗಳಲ್ಲೂ ಗೊತ್ತಿರುವುದರಿಂದ ಖಾಸಗೀ ಉದ್ಯಮ ರಂಗ ಶೇರುಗಳ ಬೆಲೆಯಲ್ಲಿ ಇನ್ನೂ ಇಳಿತವುಂಟಾಗುವುದನ್ನು ನಿರೀಕ್ಷಿಸುತ್ತದೆ. ಸಾರ್ವಜನಿಕ ರಂಗದ ಶೇರುಗಳನ್ನು ಹೀಗೆ ಬಿಕರಿ ಮಾಡುವುದರಿಂದ ಆಗಬಹುದಾದ ಇನ್ನೊಂದು ಅಪಾಯವೆಂದರೆ, ದೇಶದ ಹಿತದೃಷ್ಟಿಯಿಂದ ಹುಟ್ಟಿಕೊಂಡ ಇಂತಹ ಉದ್ದಿಮೆಗಳ ಶೇರುಗಳು ವಿದೇಶಿಯರ ಪಾಲಾಗುವ ಸಾಧ್ಯತೆಗಳಿವೆ. ಜಾಗತೀಕರಣ, ಮುಕ್ತಮಾರುಕಟ್ಟೆ ಅಥವಾ ಉದಾರ ಆಥಿಕತೆಯ ಪರಿಣಾಮ ಹಿತಕಾರಿಯಾಗುವಂತೆ ಕಾಣಿಸುತ್ತಿಲ್ಲ.

ಹಿಂದಿನ ಸರಕಾರ ಆರ್ಥಿಕ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸುತ್ತಿದ್ದ ರಾಜಕೀಯ ಪಕ್ಷಗಳೆಲ್ಲ ಸೇರಿ ರಚಿಸಿಕೊಂಡ ಸಂಯುಕ್ತ ರಂಗ ಸರಕಾರ ೧೯೯೬ ಜೂನ್ ನಿಂದ ಅಧಿಕಾರ ನಡೆಸಿದೆ. ಯಾವ ಆರ್ಥಿಕ ಕಾರ್ಯಕ್ರಮಗಳನ್ನು ಈಗ ಅಧಿಕಾರದಲ್ಲಿರುವ ಪಕ್ಷಗಳು ಟೀಕಿಸುತ್ತಿದ್ದವೋ, ಅಂತಹವರೇ ಇಂದು ಉದಾರೀಕರಣವನ್ನು ಕಾಂಗ್ರೆಸ್ ಸರ್ಕಾರದ ಬೆಂಬಲದೊಂದಿಗೆ ಮುಂದುವರಿಸಿಕೊಂಡು ಹೋಗಬೇಕಾಗಿರುವುದು ರಾಜಕೀಯ ದುರಂತವಾಗಿದೆ. ಮುಕ್ತ ಅರ್ಥ ವ್ಯವಸ್ಥೆಯ ಬಗ್ಗೆ ಒಲವಿರುವ ಚಿದಂಬರಂ ಅರ್ಥ ಸಚಿವರಾಗಿ ಮುಂದುವರೆದಿದ್ದರು. ೧೯೯೬-೯೭ ಸಾಲಿನ ಮುಂಗಡ ಪತ್ರ ಹಿಂದಿನ ಕಾಂಗ್ರೆಸ ಸರಕಾರದ ಉದಾರೀಕರಣ ನೀತಿಯ ಮುಂದುವರಿಕೆಯಾಗಿದೆ. ಇತ್ತಿಚೀನ ಯು.ಪಿ.ಎ ಸರ್ಕಾರದ ಆಶಯವೂ ಇದೇ ಆಗಿರುವುದರಿಂದ ಆರ್ಥಿಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಬದಲಾವಣೆಗಳೇನು ಕಾಣುತ್ತಿಲ್ಲ. ಆದರೂ ಕೆಲವೊಂದು ಘಟಕ ಪಕ್ಷಗಳ ಅಥವಾ ಸಹಪಕ್ಷಗಳ ಒತ್ತಾಯದ ಮೇರೆಗೆ ಜನೋಪಯೋಗಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ರಾಜಕೀಯ ಅನಿಶ್ಚಿತತೆ ಮುಂದುವರಿದಿದ್ದು ಅನಿವಾರ್ಯವಾಗಿ ಈ ಗೊಂದಲ ಅರ್ಥವ್ಯವಸ್ಥೆಯ ಮೇಲೂ ತನ್ನ ಪರಿಣಾಮ ಬೀರಿದೆ. ದೇಶದ ಶೇರು ಮಾರುಕಟ್ಟೆ ಕುಸಿಯುತ್ತಿದ್ದು, ವಿದೇಶಿ ಬಂಡವಾಳ ಸಂಗ್ರಹಿಸಲು ವಿಫಲ ಪ್ರಯತ್ನಗಳು ಮುಂದುವರಿಯುತ್ತಲಿವೆ.

* * *

ರೂಪಾಂತರ ಮತ್ತು ಸ್ಥಿತ್ಯಂತಗಳ ನಡುವೆ ಭಾರತದ ಆರ್ಥಿಕ ಅಭಿವೃದ್ಧಿ

ಭಾರತೀಯ ಅರ್ಥವ್ಯವಸ್ಥೆಯಲ್ಲಿ, ಆರ್ಥಿಕ ಉದಾರೀಕರಣದ ಫಲವಾಗಿ ಬಹಳಷ್ಟು ಬದಲಾವಣೆಗಳು ಕಳೆದ ೨೫ ವರ್ಷಗಳಲ್ಲಿ ಆಗಿ ಹೋಗಿದೆ. ಇಂತಹ ಬದಲಾವಣೆಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳು ಹೇಗೆ ಸ್ವೀಕರಿಸಿವೆ, ಹೇಗೆ ಎದುರಿಸಿವೆ ಮತ್ತು ಅವುಗಳ ಮೌಲ್ಯಮಾಪನವೇನಾದರೂ ನಡೆದಿದೆಯೋ, ನಡೆಯುವ ಅವಶ್ಯಕತೆ ಇದೆಯೋ ಎನ್ನುವ ಅಂಶಗಳ ಬಗ್ಗೆ ಸಂವಾದ, ಚರ್ಚೆ ಅಗತ್ಯ ಮತ್ತು ಅಪೇಕ್ಷಣೀಯವೆನಿಸುತ್ತದೆ.

ಇಂದಿನ ಕಾಲ ಘಟ್ಟದಲ್ಲಿ ಉದಾರೀಕರಣ ಯಾಕಾಗಿ, ಯಾವ ಕಾರಣದಿಂದ ನಡೆಯಿತು ಎನ್ನುವ ಚರ್ಚೆಯಂತೂ ಅಪ್ರಸ್ತುತವೆನಿಸಿಬಿಟ್ಟಿದೆ. ಬದಲಾವಣೆ ಎನ್ನುವ ಏಕಮುಖ ಮಾರ್ಗದಲ್ಲಿ ಈಗಾಗಲೇ ಆಗಿಹೋದ ಘಟನಾವಳಿಗಳನ್ನು ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಯೋಜನೆಗಳನ್ನು ಅಳಿಸಿ ಹಾಕುವುದು ಸಾಧ್ಯವಿಲ್ಲ. ಆದರೆ ಇಂತಹ ಘಟನಾವಳಿಗಳು ಅನುಸರಿಸಿದ ಕಾರ್ಯ ತಂತ್ರಗಳು ಮತ್ತು ಅವು ಉಂಟುಮಾಡಿದ ಪರಿಣಾಮಗಳನ್ನು ಹೆಚ್ಚು ಜನಹಿತವಾಗುವಂತೆ ಬದಲಾಯಿಸಿಕೊಳ್ಳುವ ದೃಷ್ಟಿಯಿಂದ ಮುಂದಿನ ಕಾರ್ಯ ಯೋಜನೆ ರೂಪಿಸಿಕೊಳ್ಳುವುದು ಅಗತ್ರ್ಯ. ಈ ಕಾರಣದಿಂದಾಗಿಯೇ ಆರ್ಥಿಕ ವಲಯದಲ್ಲಿ ಈ ಕುರಿತ ಚರ್ಚೆ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಉದಾರೀಕರಣ ಅಥವಾ ೧೯೯೦ರಿಂದ ನಂತರದ ಅವಧಿಯಲ್ಲಿ ಆಗಿರುವ ಬದಲಾವಣೆಗಳು ಮತ್ತು ಅವು ಉಂಟು ಮಾಡಿರಬಹುದಾದ ಪರಿಣಾಮಗಳ ಬಗ್ಗೆ ಪರ, ವಿರೋಧ ವಾದಗಳಿರುವುದು ಸಹಜ. ಇಂತಹ ವಾದಗಳು ತಮ್ಮನ್ನು ಸಮರ್ಥಿಸಿಕೊಳ್ಳಲು ಲಭ್ಯವಿರುವ ಮಾಹಿತಿಯನ್ನು ತರ್ಕದ, ಸರಮಾಲೆಯನ್ನಾಗಿ ಬಹಳ ಜಾಣ್ಮೆಯಿಂದಲೇ ಪರಿವರ್ತಿಸುತ್ತವೆ. ಆದರೆ ಅಂತರ ತರ್ಕದ ಜಾಣ್ಮೆವಾದಗಳನ್ನು ಗೆಲ್ಲುವ ಬದಲಿಗೆ ನಮ್ಮ ವಾಸ್ತವ ಮತ್ತು ವಿಲ್ಪದ ದರ್ಶನ ಮಾಡಿಸುವಂತಿರಬೇಕು.

ಪ್ರಚಲಿತ ಸಮಯ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳ ಬಗೆಗೆ ನಾವು ಮೂರು ರೀತಿಯ ಅಭಿಪ್ರಾಯಗಳನ್ನು ಗಮನಿಸಬಹುದಾಗಿದೆ. ಮೊದಲನೆಯದು ಉದಾರೀಕರಣವನ್ನು ಸಮರ್ಥಿಸುತ್ತಾ ಹೋಗುತ್ತದೆ. ಇದು ಉದಾರೀಕರಣ ಮತ್ತು ಅದರಿಂದ ಉಂಟಾದ ಬದಲಾವಣೆಯ ಬಗ್ಗೆ ಸಹಮತ ವ್ಯಕ್ತಪಡಿಸುತ್ತದೆ. ಮಾತ್ರವಲ್ಲದೆ ಉದಾರೀಕರಣದ ನಂತರ ಆಗಿರುವ ಬದಲಾವಣೆಯ ಬಗ್ಗೆ ಈ ವಾದಕ್ಕೆ ಒಂದು ರೀತಿಯ ಸಂಭ್ರಮವಿದೆ. ಆರ್ಥಿಕ ದಿವಾಳಿಯ ಅಂಚಿಗೆ ಬಂದಿದ್ದ ನಮ್ಮ ವ್ಯವಸ್ಥೆ ಉದಾರೀಕರಣ ನೀತಿಯನ್ನು ಅನುಸರಿಸಿದ ಕಾರಣದಿಂದಾಗಿ ಒಂದು ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುತ್ತಿದೆ. ಈ ವರ್ಗದ ಅಭಿಪ್ರಾಯದಂತೆ ದೀರ್ಘಕಾಲದವರೆಗೆ ಸರಕಾರದ ನಿಯಂತ್ರಣದಿಂದಾಗಿ ಇಡೀ ಅರ್ಥ ವ್ಯವಸ್ಥೆಯೇ ಜಡ್ಡು ಗಟ್ಟಿಹೋಯಿತು. ಅಧಿಕಾರಶಾಹಿಯ ಎಗ್ಗಿಲ್ಲದ ದುರಾಡಳಿತದಿಂದ ಉದ್ಯಮಶೀಲ ಮನೋವೃತ್ತಿಯು ದಮನಿತವಾಗಿ ನಿರುಪಯುಕ್ತವಾಗಿ ಬಿಟ್ಟಿತ್ತು. ಈ ಎಲ್ಲಾ ಕಾರಣಗಳಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ತೂಕಡಿಸುತ್ತಾ ಕಾಲೆಳೆಯುತ್ತಾ ಮುಂದುವರೆದಿತ್ತು. ಸ್ವಾತಂತ್ರ್ಯ ನಂತರದಿಂದ ಸರಾಸರಿ ೩.೫% ದರವನ್ನು ಮೀರಿರಲಿಲ್ಲ. ಉದಾರೀಕರಣದ ನಂತರದ ದಿನಗಳಲ್ಲಿ ಈ ಸ್ಥಿತಿಗಿಂತ ಸಂಪೂರ್ಣ ಭಿನ್ನವಾದ ಭಾರತದ ಬಿತ್ರಣವನ್ನು ನಾವು ಈಗ ಕಾಣುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಭಾರತ ೨೦೨೦ರ ಹೊತ್ತಿಗೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎನ್ನುವ ಅಭಿಪ್ರಾಯವನ್ನು ನಿಸ್ಸಂಶಯವಾಗಿ ಅನುಮೋದಿಸುತ್ತಿದೆ. ಆದರೆ ಇಂತಹ ವಾದಗಳನ್ನು ಮತ್ತು ಸಮರ್ಥನೆಗಳನ್ನು ನಾವು ಬರೀ ಭಾರತೀಯ ಆರ್ಥಿಕ ವ್ಯವಸ್ಥೆಯ ಒಂದು ಕಾಲ ಘಟ್ಟದ ಪರಿಸ್ಥಿತಿಯನ್ನಾಗಿ ಮಾತ್ರ ನೋಡದೆ, ಇದರ ಆಚೆ ಈಚೆ, ಹಿಂದೆ ಮುಂದೆಯೂ ದೃಷ್ಟಿ ಬೀರಿ ವಿಷಯ ಗ್ರಹಣ ಮಾಡಬೇಕಾಗಿದೆ. ಆ ವಿಷಯವನ್ನು ಸಧ್ಯ ಪಕ್ಕಕ್ಕಿರಿಸಿ ಆರ್ಥಿಕ ಉದಾರೀಕರಣದ ಸಂಭ್ರಮಾಚರಿಸುವವರು ತಮ್ಮ ಈ ಕ್ಷಣದ ಸಮಾಧಾನಕ್ಕೆ ಸಂಭ್ರಮಕ್ಕೆ ಮುಂದೊಡ್ಡುತ್ತಿರುವ ಸಮರ್ಥನೆಗಳ ಬಗ್ಗೆ ದೃಷ್ಟಿ ಹರಿಸೋಣ.

ಆರ್ಥಿಕ ಉದಾರೀಕರಣ ಎನ್ನುವುದು ನಮ್ಮ ಮುಂದಿರುವ ದಾಗಿ ಮಾತ್ರವಲ್ಲ ಗುರಿಯೂ ಆಗೆದೆ. ಈಗಾಗಲೇ ಜಾಗತಿಕ ಅರ್ಥ ವ್ಯವಸ್ಥೆ ಅಸ್ತಿತ್ವದಲ್ಲಿದ್ದು ವಿಶಾಲವಾಗಿ ಬೆಳೆದಿರುವ ಅಂತಹ ವ್ಯವಸ್ಥೆಯನ್ನು ಅದರಿಂದ ಬೇರ್ಪಡಿಸುವುದು ಅಸಾಧ್ಯ ಮಾತ್ರವಲ್ಲ ಅಂತಹ ಕ್ರಮ ಮೂರ್ಖತನದ್ದೂ ಆಗಿದೆ. ಹಾಗಿರುವಾಗ ನಾವು ಈ ಬದಲಾವಣೆಯನ್ನು ಭಾರತದಲ್ಲಿ ಜನರ ಜೀವನಮಟ್ಟ ಸುಧಾರಿಸುವ ದೃಷ್ಟಿಯಿಂದ ಸಮರ್ಥವಾಗಿ ದುಡಿಸಿಕೊಳ್ಳಬೇಕೇ ಹೊರತು ಅದನ್ನು ತಡೆಯಬಾರದು. ಯಾವುದು ಕೆಟ್ಟದ್ದೂ ಅಲ್ಲ ಪೂರ್ಣ ಒಳ್ಳೆಯದೂ ಅಲ್ಲ. ಒಂದು ವ್ಯವಸ್ಥೆಯನ್ನು ನಾವು ಎಷ್ಟು ಶ್ರದ್ಧೆಯಿಂದ ಮತ್ತು ಜನಪರ ಕಾಳಜಿಯಿಂದ ದುಡಿಸಿಕೊಳ್ಳುತ್ತೇವೆ ಎನ್ನುವ ವಿಷಯ ಮುಖ್ಯವಾದಾಗ ಇತರ ದೇಶಗಳಂತೆ ನಾವೂ ಕೂಡಾ ಮುಂದುವರಿಯಬಹುದು.

ಕೈಗಾರೀಕರಣದ ಪ್ರಭಾವದಿಂದ ಎಲ್ಲರಿಗೆ ಅನ್ನ, ಮನೆ, ಉದ್ಯೋಗ ಮುಂತಾದ ಅವಶ್ಯಕತೆಗಳನ್ನು ಪೂರೈಸುವ ಮೂಲಕ ನಾವು ಸಾಕಷ್ಟು ಮುಂದೆ ಬಂದಿದ್ದೇವೆ. ಆರೋಗ್ಯ, ಶಿಕ್ಷಣ, ತಂತ್ರಜ್ಞಾನದಂತಹ ರಂಗಗಳಲ್ಲಿ ಜಗತ್ತಿನ ಇತರ ದೇಶಗಳ ಹುಬ್ಬೇರಿಸುವಶ್ಟು ಮಟ್ಟಿಗೆ ನಮ್ಮ ದೇಶ ಸಾಧನೆ ಮಾಡಿದೆ. ಮಾಹಿತಿ ತಂತ್ರಜ್ಞಾನದಲ್ಲಂತೂ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ಮಾತ್ರವಲ್ಲ ಈ ರಂಗದ ಅಪರಿಮಿತ ಸಾಧನೆಯ ಪರಿಣಾಮವಾಗಿ ಸಾಕಷ್ಟು ದೊಡ್ಡ ಪ್ರಮಾಣದ ವಿದೇಶಿ ಬಂಡವಾಳ ಹರಿದು ಬಂದಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿರುವ ಸತ್ಯ ನಮ್ಮ ಕಣ್ಣ ಮುಂದಿದೆ. ಇಂತಹ ಬದಲಾವಣೆಗಳು ಆಗುವ ಸಮಾಜದಲ್ಲಿ ಅರ್ಥವ್ಯವಸ್ಥೆಯಲ್ಲಿ, ಕೆಲಮಟ್ಟಿನ ತಲ್ಲಣಗಳು, ಏರಿಳಿತಗಳು ಆಗುವುದು ಸಹಜ ಆದರೆ ಅಂತಹ ತಲ್ಲಣ, ಏರಿಳಿತಗಳನ್ನು ನಿಯಂತ್ರಿಸಿ ಮುಂದುವರಿಯುವ ಬಗ್ಗೆ ಯೋಚಿಸಬೇಕೇ ಹೊರತು, ಬದಲಾವಣೆಯಿಂದ ಪಲಾಯನ ಮಾಡಲು ಅವು ಕಾರಣಗಳಾಗಬಾರದು. ಜಗತ್ತಿನಲ್ಲಿ ಸಂಪೂರ್ಣ ಪ್ರತ್ಯೇಕವಾಗುಳಿದು ಮುನ್ನಡೆ ಸಾಧಿಸಿದ ಯಾವ ದೇಶವು ನಮಗೆ ಕಾಣಸಿಗುವುದಿಲ್ಲ.

೧೯೫೦ ರಿಂದ೧೯೮೦ ರವರೆಗೂ ಸಾಂಪ್ರದಾಯಿಕ ಮನೋಧರ್ಮ ಪ್ರೇರಿತ ರಕ್ಷಣಾತ್ಮಕ ಮಾದರಿಯ ಆರ್ಥಿಕ ಅಭಿವೃದ್ಧಿ ನೀತಿಯನ್ನು ಅನುಸರಿಸಿದ ಕಾರಣ ದೊಡ್ಡ ರೀತಿಯ ಬದಲಾವಣೆಗಳು ಆಗಲಿಲ್ಲ. ಈ ಅವಧಿಯಲ್ಲಿ ರಾಷ್ಟ್ರೀಯ ಉತ್ಪನ್ನದಲ್ಲಿ ೩% ರಿಂದ ೫% ರಷ್ಟು ಬೆಳವಣಿಗೆಯನ್ನು ಭಾರತೀಯ ಅರ್ಥ ವ್ಯವಸ್ಥೆ ದಾಖಲಿಸಿತು. ನಿಧಾನಗತಿಯ ಈ ಬೆಳವಣಿಗೆಯ ದರವನ್ನು ‘ಹಿಂದೂ ಅಭಿವೃದ್ಧಿ ದರ’ವೆಂದು ಕರೆಯಲಾಗುತ್ತಿದೆ. ಉದಾರೀಕರಣದ ತರುವಾಯ ಆರ್ಥಿಕ ಚಟುವಟಿಕೆಗಳು ಉತ್ಕರ್ಷಗೊಂಡ ಪರಿಣಾಮವಾಗಿ ಅಭಿವೃದ್ಧಿಯ ದರದಲ್ಲಿ ಗಮನಾರ್ಹ ಏರಿಕೆಯಾಗಿ ಅರ್ಧ ಶೇಕಡಾ ೮೯ರಷ್ಟು ಏರಿಕೆಯಾಗಿದೆ. ಇದೊಂದು ಗಮನಾರ್ಹ ಸಾಧನೆಯೇ ಸರಿ.

ವಿದೇಶಿ ವಿನಿಮಯದ ಕೊರತೆಯಿಂದ ಬಹುಪಾಲು ದಿವಾಳಿಯ ಅಂಚಿಗೆ ಬಂದಿದ್ದ ಪರಿಸ್ಥಿತಿ ಇವತ್ತು ಸಂಪೂರ್ಣ ಬದಲಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯದ ಸಂಗ್ರಹವಿದೆ. ಪಾಲು ಬಂಡವಾಳ ವಿದೇಶಿ ಹಣಕಾಸು ಸಂಸ್ಥೆಗಳಿಗೆ ದ್ವಿತೀಯ ಮಾರುಕಟ್ಟೆಯಲ್ಲಿ ಹೂಡಿಕೆಗ ಅವಕಾಶ ಮತ್ತು ಅನಿವಾಸೀ ಭಾರತೀಯರು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಕಲ್ಪಿಸಿರುವ ಅವಕಾಶಗಳೇ ಕಾರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತೆ ಸುಭದ್ರವಾಗಿದೆ. ಆರ್ಥಿಕ ಶಿಸ್ತು ಪಾಲಿಸುವುದು ಅನಿವಾರ್ಯವಾಗಿರುವ ಕಾರಣದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದೆಂಗಿಂತಲೂ ಹೆಚ್ಚು ಶಿಸ್ತು ಬದ್ಧವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿವೆ ಎಂದು ಹೇಳಲಾಗುತ್ತಿದೆ.

ದೇಶಿ ಸೇವಾ ರೂಪದ ಉತ್ಪನ್ನಗಳ ರಫ್ತು ಗಮನಾರ್ಹವಾಗಿ ಏರಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಆಗಿರುವ ಕ್ರಾಂತಿಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ೧೯೯೦-೯೧ರಲ್ಲಿ ೪.೬ ಬಿಲಿಯನ್ ಡಾಲರ್ ರಫ್ತು ೨೦೦೧-೦೨ರಲ್ಲಿ ೨೦.೩ ಬಿಲಿಯನ್ ಡಾಲರಗಳಿಗೆ ಹೆಚ್ಚಿದೆ. ೧೯೯೩-೯೪ರಲ್ಲಿ ೦.೩ ಬಿಲಿಯನ್ ಡಾಲರಗಳಷ್ಟಿದ್ಧ ಮಾಹಿತಿ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ರಫ್ತು ೨೦೦೧-೦೨ ನೇ ವ್ಯಾಪಾರ ಸಾಲಿನಲ್ಲಿ ೭.೨ ಬಿಲಿಯನ್ ಡಾಲರಗಳಷ್ಟಾಗಿದೆ. ನಿರ್ಬಂಧ ಮತ್ತು ನೇರ ವಿದೇಶಿ ಹೂಡಿಕೆಗೆ ಅವಕಾಶ ದೊರಿತಿರುವ ಕಾರಣದಿಂದ ಇಂತಹ ಬದಲಾವಣೆ ಸಾಧ್ಯವಾಗಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಚಾಲ್ತಿ ಖಾತೆ ಮತ್ತು ಬಂಡವಾಳ ಖಾತೆಗೆ ರೂಪಾಯಿಯ ಪರಿವರ್ತನೆಯ ಕುರಿತಂತೆ ಬದಲಾದ ನೀತಿಯ ಕಾರಣದಿಂದ ಮೇ ೨೦೦೩ ರ ಅಂತ್ಯಕ್ಕೆ ವಿದೇಶಿ ವಿನಿಮಯದ ಮೊತ್ತ ಸುಮಾರು ೭೯ ಬಿಲಿಯನ್‌ ಡಾಲರ್‌ಗಳಷ್ಟಿತ್ತು. ಬಾಹ್ಯ ಸಾಲಗಳ ನಿರ್ವಹಣೆಯೂ ಉತ್ತಮವಾಗಿಯೇ ಇದೆ. ೧೯೯೧ ರಲ್ಲಿ ರಾಷ್ಟ್ರೀಯ ಉತ್ಪನ್ನದ ೧.೯ ಶೇಕಡಾದಷ್ಟಿದ್ದ ಅಲ್ಪಾವಧಿ ಸಾಲದ ಹೊರೆ ೨೦೦೨ರಲ್ಲಿ ೦.೬ ಶೇಕಡಾಕ್ಕೆ ಇಳಿದಿತ್ತು. ಇದೇ ರೀತಿಯಲ್ಲಿ ಒಟ್ಟು ವಿದೇಶಿ ಸಾಲ ೨೮.೭% ರಾಷ್ಟ್ರೀಯ ಉತ್ಪಾದನೆಯಿಂದ ೨೦.೯% ರಾಷ್ಟ್ರೀಯ ಉತ್ಪಾದನೆಯಿಂದ ೨೦.೯% ಕ್ಕೆ ಬಂದಿದೆ. ಈ ಬದಲಾವಣೆಗಳ ಕಾರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಾಗಿದೆ. ಹೀಗಾಗಿ ವಿಶ್ವ ಇಂದು ಭಾರತವನ್ನು ಭವಿಷ್ಯತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಪರಿಗಣಿಸುತ್ತಿದೆ.

ಕೈಗಾರಿಕೆ ಲೈಸನ್ಸ್‌ ನೀತಿಯನ್ನು ಬದಲಾಯಿಸಿ ಅಗತ್ಯವಾಗಿರುವ ಕಾನೂನು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಏಕಸ್ವಾಮ್ಯ ಮತ್ತು ವ್ಯಾಪಾರ ನಿರ್ಬಂಧ ಕಾಯಿದೆಯನ್ನು ೧೯೯೧-೯೨ರಲ್ಲಿ ಪರಿಷ್ಕರಿಸುವ ಮೂಲಕ ಕೈಗಾರಿಕ ರಂಗದಲ್ಲಿ ಬೃಹತ್‌ ಉದ್ಯಮಗಳು ರೂಪುಗೊಳ್ಳುವುದನ್ನು ಪ್ರೋತ್ಸಾಹಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯದ ಉದ್ಯಮಗಳು ನಮ್ಮ ದೇಶದಲ್ಲಿ ಬೆಳೆಯಬೇಕಾದರೆ ದೊಡ್ಡ ಮಟ್ಟದ ಉದ್ದಿಮೆಗಳು ರೂಪುಗೊಳ್ಳಲು ಸರ್ಕಾರದ ಪ್ರೋತ್ಸಾಹ ಅಗತ್ಯ. ಟಾಟಾ ಸ್ಟೀಲ್ಸ್‌ ನಂತಹ ಉದ್ದಿಮೆ ದೊಡ್ಡ ವಿದೇಶಿ ಕಂಪನಿಗಳನ್ನು ಖರೀದಿಸಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಂತಹ ಬೆಳವಣಿಗೆ ನಡೆದಿರುವುದು ದೇಶದ ಘನತೆಯನ್ನು ಹೆಚ್ಚಿಸಿದೆ.

ದೇಶದ ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ಆರ್ಥಿಕ ಉದಾರೀಕರಣದ ವೇಗವನ್ನು ಹೆಚ್ಚಿಸಲು ಸಹಾಯಕವಾಗುವ ತೆರಿಗೆ, ಹಣಕಾಸು, ವ್ಯಾಪಾರ, ಇಂಧನ ಮುಂತಾದ ವಲಯಗಳಲ್ಲಿ ಸೂಕ್ತ ನೀತಿ ನಿಯಮ ಹಾಗೂ ಹಲವಾರು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಬ್ಯಾಂಕಿಂಗ್‌, ತೆರಿಗೆ ನೀತಿ, ಸಣ್ಣ ಉದ್ಯಮ ವಲಯ ಮುಂತಾದ ವಲಯಗಳಲ್ಲಿ ಅನಗತ್ಯ ಔಪಚಾರಿಕ ಕಾನೂನುಗಳನ್ನು ನಿವಾರಿಸಿ, ಆ ವಲಯಗಳ ಕಾರ್ಯದಕ್ಷತೆಯನ್ನು ಹೆಚ್ಚು ಮಾಡಲಾಗಿದೆ. ಆದರೆ ಆರ್ಥಿಕ ಸುಧಾರಣೆಯನ್ನು ಮುಂದುವರಿಸದೇ ಹೋದಲ್ಲಿ ಈಗಾಗಲೇ ಆಗಿರುವ ಬದಲಾವಣೆಗಳ ಫಲ ಸಾಕಷ್ಟು ಪ್ರಮಾಣದಲ್ಲಿ ದೊರೆಯದೇ ಹೋಗುವ ಸಂಭವವೂ ಇದೆ.

ಸರಕಾರಿ ಸ್ವಾಮ್ಯದ ಕಂಪನಿಗಳ ಶೇರುಬಂಡವಾಳವನ್ನು ಖಾಸಗೀ ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಜಡವಾಗಿದ್ದ ಸರಕಾರಿ ಉದ್ಯಮ ಎಚ್ಚೆತ್ತುಕೊಳ್ಳುವಂತೆ ಮಾಡಲಾಗಿದೆ. ಮಾತ್ರವಲ್ಲ ಇಂತಹ ಕ್ರಮದ ಮೂಲಕ ಅಂದಾಜು ೨ ಬಿಲಿಯನ್‌ಡಾಲರ್‌ಗಳಷ್ಟು ಹಣ ಸರಕಾರಿ ಬೊಕ್ಕಸಕ್ಕೆ ಹರಿದು ಬಂದಿದೆ. ಇಂತಹ ಸಂಪನ್ಮೂಲಗಳನ್ನು ಮೂಲಭೂತ ಸೌಕರ್ಯವೃದ್ಧಿಯಂತಹ ಉದ್ದೇಶಗಳಿಗೆ ಉಪಯೋಗಿಸುವ ಮೂಲಕ ಖಾಸಗೀಕರಣದ ಫಲ ಜನ ಸಾಮಾನ್ಯರಿಗೂ ವರ್ಗಾಯಿಸಿದಂತಾಗಿದೆ.

ದೂರಸಂಪರ್ಕ ವಲಯದಲ್ಲಿಯಂತೂ ಒಂದು ದೊಡ್ಡ ಕ್ರಾಂತಿಯೇ ನಡೆದುಹೋಗಿದೆ ಎಂದರೂ ತಪ್ಪಾಗಲಾರದು. ೧೯೯೪-೯೫ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ಟೆಲಿಕಾಂ ನೀತಿಯ ಪರಿಣಾಮವಾಗಿ ಈ ವಲಯದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ಮಾಡಲಾಗಿದೆ. ಈ ವಲಯದ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸಲು ರಾಷ್ಟ್ರೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಉತ್ಪನ್ನ ಸೇವೆಯ ವಿಧಿ ವಿಧಾನ, ಬೆಲೆ ನಿರ್ಣಯ ಇತ್ಯಾದಿ ವಿಷಯಗಳ ಮೇಲುಸ್ತುವಾರಿ ನಡೆಸುತ್ತಿದ್ದು ಬಳಕೆದಾರರಿಗೆ ಅನ್ಯಾಯವಾಗದಂತೆ ಜಾಗರೂಕತೆ ವಹಿಸುತ್ತಿದ್ದು ಈವರೆಗಿನ ಇದರ ಕಾರ್ಯವೈಖರಿ ಸಮಾಧಾನಕರವಾಗಿಯೇ ಇದೆ. ಅತಿ ಕಡಿಮೆ ವೆಚ್ಚದಲ್ಲಿ  ಜನ ಸಾಮಾನ್ಯರಿಗೂ ದೂರ ಸಂಪರ್ಕ ಒದಗಿಸುವುದು ಸರ್ಕಾರದ ಉದ್ದೇಶ ೨೦೦೨ನೆಯ ಇಸ್ವಿಯ ಅಂತ್ಯದಲ್ಲಿ ಸ್ಥಿರ ದೂರವಾಣಿ ಸಂಪರ್ಕಗಳ ಶೇ. ೮೦ ಸಾರ್ವಜನಿಕ ವಲಯದ ಬಿ.ಎಸ್‌.ಎನ್‌.ಎಲ್‌ ಒದಗಿಸಿದರೆ, ಮೊಬೈಲ್‌ಸಂಪರ್ಕಗಳ ಶೇಕಡಾ ೭೫ ರಷ್ಟು ಖಾಸಗಿ ವಲಯಗಳು ಒದಗಿಸಿವೆ.

ದೇಶದ ಎಲ್ಲ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಯೋಜನೆಗಳು ಬೆಳಕು ಕಂಡಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ೬೦೦೦ ಕಿ. ಮೀ. ಉದ್ದ ‘ಸುವರ್ಣ ಚತುಷ್ಕೋಣ’ ರಸ್ತೆಯ ನಿರ್ಮಾಣಕ್ಕೆ ಕೈಹಾಕಿದ್ದು ಒಂದು ಮಹತ್ವದ ಯೋಜನೆಯಾಗಿದೆ. ಅದೇ ರೀತಿಯಲ್ಲಿ ದೇಶದ ಉತ್ತರ ಪೂರ್ವ ರಾಜ್ಯಗಳನ್ನು ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುವ ೭೩೯೯ ಕಿ. ಮೀ. ಉದ್ದದ ರಸ್ತೆಯ ನಿರ್ಮಾಣವು ಪ್ರಗತಿಯಲ್ಲಿದೆ. ೧೯೯೦ರವರೆಗೆ ಕೇವಲ ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿಂಗ್‌ವಲಯ ಉದಾರೀಕರಣದ ನಂತರದ ದಿನಗಳಲ್ಲಿ ಮರು ಹುಟ್ಟು ಪಡೆದಿದೆ ಎಂದರೆ ತಪ್ಪಾಗಲಾರದು. ಈ ಹಿಂದಿನ ಅನಗತ್ಯ ಸರಕಾರಿ ನಿಯಂತ್ರಣ, ಸಾಂಸ್ಥಿಕ ತೊಡಕುಗಳು ನಿವಾರಣೆಯಾಗಿ ಬ್ಯಾಂಕಿಂಗ್‌ವಲಯ ಒಂದು ಸ್ವಾಯತ್ತ ಮಾರುಕಟ್ಟೆ ಸಂವೇದಿ ರೀತಿಯಲ್ಲಿ ಸಮರ್ಥವಾಗಿ ಕೆಲಸ ಮಾಡುವ ಮೂಲಕ ಲಾಭಗಳಿಕೆಯ ದೃಷ್ಟಿಯಿಂದ ಹೊಸರೀತಿಯ ವ್ಯಾಪಾರ ವಹಿವಾಟುಗಳಿಗೆ ಪಾದಾರ್ಪಣೆ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆತರೆ ಬ್ಯಾಂಕುಗಳಿಗೆ ಲಾಭವು ಸಿಗುತ್ತದೆ. ಖಾಸಗೀ ವಲಯದ ಬ್ಯಾಂಕುಗಳ ಸೇವೆಯನ್ನು ಸರಿಗಟ್ಟುವ ರೀತಿಯ್ಲಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದು ಇದರಿಂದ ದೇಶದ ಅರ್ಥವ್ಯವಸ್ಥೆಗೆ ಲಾಭವಾಗಿದೆ. ವಿಮಾವಲಯದಲ್ಲಿಯೂ ಇದೇ ರೀತಿಯ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ದೀರ್ಘಕಾಲ ಜಡವಾಗಿದ್ದ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಕುಂಭಕರ್ಣ ಗ್ರಾಹಕರ ಪಾಲಿಗೆ ವರದಾನವಾಗಿದೆ.

ಆರ್ಥಿಕ ಸುಧಾರಣೆಯ ನಂತರ ಕೃಷಿ ಮತ್ತು ಸಮಾಜ ಕಲ್ಯಾಣ ಕಾರ್ಯಗಳು ಹಿನ್ನೆಡೆಯನ್ನು ಅನುಭವಿಸಿವೆ ಎಂದು ಹೇಳಲಾಗುತ್ತದೆಯಾದರೂ ಇದಕ್ಕೆ ಸೂಕ್ತಪರ್ಯಾಯಗಳನ್ನು ಕಲ್ಪಿಸಲಾಗಿದೆ .ಅಸಂಘಟಿತ ವಲಯದಲ್ಲಿ ಉದ್ಯಮ ಶೀಲಮನೋಭಾವ ಬೆಳೆಸಿಕೊಳ್ಳುವ ಮೂಲಕ ಸ್ವ ಉದ್ಯೋಗ ಕಂಡುಕೊಳ್ಳಲು ತಾಂತ್ರಿಕ ಮತ್ತು ಹಣಕಾಸಿನ ನೆರವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಪುಟಾಣಿ ಸಾಲ ಯೋಜನೆಗಳು ದಕ್ಷಿಣ ಭಾರತದಲ್ಲಿ ಹಳ್ಳಿ ಹಳ್ಳಿಯನ್ನು ತಲುಪಿ ದುರ್ಬಲ ವರ್ಗಗಳಿಗೆ ಸುಲಭವಾಗಿ ಹಣಕಾಸಿನ ನೆರವು ದೊರೆಯುವಂತೆ ಆಗಿದೆ ಕರ್ನಾಟಕ. ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಉತ್ತಮ ಫಲಿತಾಂಶವನ್ನು ನೀಡಿದೆ. ಸ್ಥಳೀಯ ಸಮಸ್ಯೆ ಸಂಪನ್ಮೂಲಗಳ ಬಗ್ಗೆ ಅರಿವಿರುವ ಮತ್ತು ಜನರನ್ನು ಅಭಿವೃಧಿಯಲ್ಲಿ ಪಾಲುದಾರರನ್ನಾಗಿಸುವಂತೆ ಮಾಡಲು ಸರಕಾರೇತರ ಸಂಸ್ಥೆಗಳ ಸಹಯೋಗವನ್ನು ಕೋರಲಾಗಿದೆ. ಸರಕಾರೇತರ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಮಾನ್ಯತೆ ಅಭಿವೃದ್ಧಿ ಕಾರ್ಯಗಳಲ್ಲಿ ಮೂರನೆಯ ವಲಯಮೊಂದನ್ನು ಗುರುತಿಸಿದಂತಾಗಿದೆ. ಈ ಬೆಳವಣಿಗೆಯಿಂದ ಹಲವಾರು ಕಾರ್ಪೋರೇಟ್ ಸಂಸ್ಥೆಗಳು ಸಮಾಜ ಅಭಿವೃದ್ಧಿ ಕಾರ್ಯಗಳಲ್ಲಿ  ತಮ್ಮನ್ನು ತೊಡಗಿಸಿಕೊಳ್ಳುವುದು ಸಾಧ್ಯವಾಗಿದೆ. ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಕೇವಲ ಸರಕಾರವನ್ನೇ ಅವಲಂಭಿಸಿ ಬಿಡುವ ಪ್ರವೃತ್ತಿಯಲ್ಲಿ ನಿಧಾನವಾಗಿಯಾದರೂ ಬದಲಾವಣೆಯಾಗುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆಯಾಗಿದೆ. ಇಷ್ಟರ ಹೊರತಾಗಿಯೂ ಕೇಂದ್ರ ಸರಕಾರ ಆಹಾರ ಭದ್ರತೆಯ ಹಕ್ಕು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ದುಡಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅನಗತ್ಯ ಅಂಜುಕುಳಿತನದಿಂದ ಹೊರಬಂದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸ್ಪರ್ಧಿಸುವ ಲಕ್ಷಣಗಳನ್ನು ಭಾರತೀಯ ಅರ್ಥವ್ಯವಸ್ಥೆ ಮೈಗೂಡಿಸಿಕೊಳ್ಳುತ್ತಿರುವುದಕ್ಕೆ ಉದಾರೀಕರಣವೇ ಕಾರಣವಾಗಿದೆ. ಆರ್ಥಿಕ ಉದಾರೀಕರಣವನ್ನು ಸಮರ್ಥಿಸುವ ಮೇಲಿನವಾದ ಸರಣಿಯನ್ನು ನಿರಾಕರಿಸುವ ಇನ್ನೊಂದು ವಾದವನ್ನು ಪರಿಶೀಲಿಸಲು ಪ್ರಯತ್ನಿಸಬಹುದಾಗಿದೆ ಮತ್ತು ಯಾವ ನೆಲೆಯಲ್ಲಿ ಮೇಲಿನ ಸಮರ್ಥನೆಗಳು ಸ್ವೀಕಾರರ್ಹವಲ್ಲವೆಂದು ತಿಳಿಯಬಹುದಾಗಿದೆ.

ಉದಾರೀಕರಣದ ಸಮರ್ಥಕರು ಮುಂದಿರಿಸುವ ವಾದಗಳು ಅಂಶಿಕ ಸತ್ಯವಾಗಿದ್ದು, ವಾಸ್ತವ ಚಿತ್ರಣ ಇದಕ್ಕಿಂತ ಭಿನ್ನವಾಗಿದೆ, ಎಂದು ಆರ್ಥಿಕ ಸುಧಾರಣೆಯ ಕರಾಳ ಮುಖವನ್ನು ಸಾರ್ವಜನಿಕ ತಿಳುವಳಿಕೆಯಿಂದ ಮರೆಮಾಚಲಾಗುತ್ತದೆ. ಅರ್ಥವ್ಯವಸ್ಥೆಯಲ್ಲಿ ಸ್ವರೂಪಾತ್ಮಕ ಬದಲಾವಣೆಗಳು ಆದಮೇಲೆ ದೇಶದ ಅರ್ಥವ್ಯವಸ್ಥೆ ಸುಭದ್ರ ತಳಪಾಯದಿಂದ ದೂರವಾಗಿ ಜಾಗತಿಕ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಗಳ ಹಿಡಿತಕ್ಕೆ ಜಾರಿಹೋಗಿದೆ. ಇದರಿಂದ ನಮ್ಮ ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಯಾವ ಸಾಮಾಜಿಕ ಆರ್ಥಿಕ ನೀತಿಗಳು ರುಪುಗೊಳ್ಳಬೇಕಿತ್ತೋ ಅದು ಇಂದು ಸಾಧ್ಯವಾಗುತ್ತಿಲ್ಲ. ನಮ್ಮ ಕೈಗಾರಿಕಾ ನೀತಿ, ಆರ್ಥಿಕ ನೀತಿ ವಿದೇಶಾಂಗ ನೀತಿ ಇವೆಲ್ಲವೂ ಜಾಗತಿಕ ಅರ್ಥವ್ಯವಸ್ಥೆಯ ಮರ್ಜಿಗನುಗುಣವಾಗಿ ನಡೆಯುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಶಿಖರದಲ್ಲಿರುವ ಅಮೇರಿಕಾದ ಮುಂದಾಳತ್ವದ ಮುಂದುವರಿದ ರಾಷ್ಟ್ರಗಳು ಈ ಜಾಗತಿಕ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಯಾಗಿದೆ. ಯಾವುದು ಅಭಿವೃದ್ದಿ, ಯಾವುದು ಅಭಿವೃದ್ಧಿಯಲ್ಲ,ಅಭಿವೃದ್ಧಿಯ ಗುರಿ ಮತ್ತು ಗತಿಯನ್ನು ನಿಯಂತ್ರಿಸಲು ತಾವು ನೀಡುವ ಮಾರ್ಗದರ್ಶನವೇ ನಿರ್ಣಾಯಕ ವಾಗಬೇಕು ಎನ್ನುವ “ವಾಷಿಂಗ್ ಟನ್ ಕಾನ್ಸೆಸ್” ರರೀತಿಯ ವಾದಗಳು ಮಿಕ್ಕಳಿದವರ ಅಭಿಪ್ರಾಯಗಳನ್ನು ಕಡೆಗಾಣಿಸಿ  ಮುನ್ನುಗ್ಗುತ್ತಿವೆ.ಇಂತಹ ಒಂದು ಮಹಾಚಿಂತನೆ ಬುದ್ದವಂತರ ರಾಜಕೀಯ ಚಿಂತಕರ, ಮಾಧ್ಯಮದವರ ಚಾವಡಿಯಲ್ಲಿ ನಿರಂತರ ಚಲಾವಣೆಯಲ್ಲಿರುವಂತೆ ಮಾಡಲಾಗಿದೆ. ಹೀಗಾಗಿ ಸಮಾಜದ ಅಂಚಿನಲ್ಲಿರುವ ಅಹವಾಲು ಅರಣ್ಯರೋದನವಾಗಿದೆ. ಗಂಭೀರವಾದ ವಾಸ್ತವ ಪರಿಸ್ಥಿತಿ, ಬಡತನ ಹಿಂಸೆ ಸಾಮಾಜಿಕ ಅನ್ಯಾಯಗಳ ಅವಗಣನೆ ಮತ್ತು ‘ಜಾಣಕುರುಡು’ ಹಿಂಸಾತ್ಮಕ ಹೋರಾಟ ಹಾಗೂ ಧಾರ್ಮಿಕ ಮೂಲಭೂತವಾದಗಳಿಗೆ ಕಾವು ಕೊಡುತ್ತಿದೆ. ಈ ವರ್ಗವು ತನ್ನ ವಾದಗಳಿಗೆ ಸಮರ್ಥನೆಯಾಗಿ ದಾಖಲಿಸುತ್ತಿರುವ ವಿಷಯಗಳು ಈ ಕೆಳಗಿನಂತಿವೆ

೧. ಕೃಷಿ ಕ್ಷೇತ್ರದ ನಿಧಾನಗತಿಯ ಬೆಳವಣಿಗೆ ಕೃಷಿಯನ್ನೇ ಅವಲಂಬಿಸಿದ ಬಹುಪಾಲು ಜನರ ಬದುಕಿನಲ್ಲಿ ಹಿಂದೆಂದೂ ಕಾಣದ ರೀತಿಯ ತಲ್ಲಣ ಉಂಟಾಗಿರುವುದು.

೨. ವಿದೇಶಿ ಹೂಡಿಕೆಗೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಗೆ ಹೋಲಿಸಿದರೆ ಹರಿದು ಬರುತ್ತಿರುವ ವಿದೇಶಿ ಬಂಡವಾಳ ನೀರಿಕ್ಷಿತ ಮಟ್ಟದಲ್ಲಿ ಇಲ್ಲದಿರುವುದು.

೩. ಉದ್ಯೋಗದ ಪ್ರಮಾಣದಲ್ಲಿ ಆಗುತ್ತಿರುವ ಕುಸಿತ ಮತ್ತು ಪಲ್ಲಟಗಳು ಸಂಘಟಿತ ವಲಯದಲ್ಲಿ ಉದ್ಯೋಗವಕಾಶಗಳು ತೀವ್ರ ಮಟ್ಟದಲ್ಲಿ ಕುಸಿಯುತ್ತಿದ್ದ, ಅಸಂಘಟಿತ ವಲಯದಲ್ಲಿ ತಾತ್ಕಾಲಿಕ, ‘ಪಾತರಗಿತ್ತಿ’ ಮಾದರಿಯ ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು.

೪. ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಕ ಕ್ರಮಗಳು ನಿರೀಕ್ಷಿತ ಮಟ್ಟದ ತೆರಿಗೆ ಆದಾಯವನ್ನಾಗಲಿ ಬೆಳವಣಿಗೆಯನ್ನಾಗಲಿ ತರಲು  ಯಶಸ್ವಿಯಾಗಲಿಲ್ಲ.

೫. ಮೂಲಭೂತ ಸೌಕರ್ಯ ಸುಧಾರಣೆಯಲ್ಲಿ ನಿರುತ್ಸಾಹದಾಯಕ ಖಾಸಗಿ ಪಾಲುದಾರಿಕೆ.

೬. ಸಾರ್ವಜನಿಕ ರಂಗದಲ್ಲಿ ಹೂಡಿಕೆಯನ್ನು ಕಡಿತಗೊಳಿಸಿದಾಗಲೂ ವಿತ್ತೀಯ ಕೊರತೆಯ ಪ್ರಮಾಣ ಏರುತ್ತಲೇ ಹೋಗುತ್ತಿದ್ದು,ಕಂದಾಯ ಖಾತೆಯಲ್ಲಿ ಕೊರತೆಯುಂಟಾಗಿ ತೆರಿಗೆಯ ಹೊರೆ ಮುಂದುವರೆಯುತ್ತಾ ಹೋಗುತ್ತಿದ್ದ, ಭವಿಷ್ಯದಲ್ಲಿಯೂ ಜನರ ಮೇಲೆ ಕರಭಾರ ಬೀಳಲಿದೆ.

೭. ಅರ್ಥವ್ಯವಸ್ಥೆ ವಿವಿಧ ವಲಯಗಳ ನಡುವೆ ಅಸಮತೋಲನ ಮುಂದುವರಿದ್ದು ಕೈಗಾರಿಕೆ ಮತ್ತು ಕೃಷಿ ವಲಯದ ಉತ್ಪಾದನೆ ಕುಸಿಯುತ್ತಾ ಮುಂದುವರಿದಿದೆ. ಆದರೆ ಸೇವಾ ಕ್ಷೇತ್ರದಲ್ಲಿ ಬೆಳವಣಿಗೆಯ ದರ ಅಧಿಕವಾಗುತ್ತ ಹೋಗುತ್ತಿದೆ.

೮. ಇಂದಿಗೂ ಶೇಕಡಾ ೬೦ರಷ್ಟು ಜನ ಕೃಷಿವಲಯವನ್ನು ಅವಲಂಭಿಸಿದ್ದು ,ಬೇರೆಲ್ಲಿಗೂ ಸ್ಥಳಾಂತರಗೊಳ್ಳಲು ಯಾವ ಉದೋಗಕ್ಕೂ ಪಲ್ಲಟಗೊಳ್ಳಲು ಸಾಧ್ಯವಾಗದಿರುವ ರೈತಾಪಿ ಜನರ ಸ್ಥಿತಿ ಚಿಂತಾಜನಕವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ನಿರಂತರ ಮುಂದುವರಿಯುತ್ತಿದೆ.

೯. ಸರಕಾರಿ ನಿಯಂತ್ರಣ, ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆ, ಹೊಸ ತಂತ್ರಜ್ಞಾನಧಾರಿತ ಮತ್ತು ಸೀಮಿತ ವೃತ್ತಿ ನಿರತ ವ್ಯವಹಾರಜ್ಞರಿಂದಲೇ ನಡೆಯುವ ಬಹುಪಾಲು ವಾಣಿಜ್ಯ ವಹಿವಾಟುಗಳು ಹಲವಾರು ಹಗರಣಗಳಿಗೆ ದಾರಿಮಾಡಿಕೊಡುತ್ತಿರುವ ಅಂಶ ಆರ್ಥಿಕ ಸದೃಢತೆಯ ದೃಷ್ಟಿಯಿಂದ ಉತ್ತಮ ಲಕ್ಷಣವಲ್ಲ.

೧೦. ಹೆಚ್ಚುತ್ತಿರುವ ಪ್ರಾದೇಶಿಕ ಅಸಮಾನತೆಗಳು, ರಾಜ್ಯಗಳು ನಡುವಿನ ವ್ಯತ್ಯಾಸಗಳಿಂದಾಗಿ ದೇಶದೊಳಗೆ ಹರಿದು ಬಂದ ವಿದೇಶಿ ಬಂಡವಾಳ ಆಯ್ದ ಕೆಲವೊಂದು ರಾಜ್ಯಗಳತ್ತ ಮಾತ್ರ ಹರಿಯುತ್ತಿದೆ. ಹೀಗಾಗಿ ಅಸಮಾನತೆ ಇನ್ನೂ ಹೆಚ್ಚುತ್ತಾ ಹೋಗುತ್ತಿದೆ.

೧೧. ಉದ್ಯಮ ರಂಗದ ಒಟ್ಟು ಹೂಡಿಕೆಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ತಿಳಿದು ಬರುತ್ತಿದೆ. ೧೯೯೭-೯೮ರಲ್ಲಿ ರಾಷ್ಟ್ರೀಯ ಉತ್ಪನ್ನದ ಶೇಕಡಾ ೯ ರಷ್ಟಿದ್ದು ಹೂಡಿಕೆಯ ಪ್ರಮಾಣ ೨೦೦೩-೦೪ರಲ್ಲಿ ಶೇಕಡಾ ೫.೬ ಕ್ಕೆ ಕುಸಿದಿದೆ.

೧೨.ಆಹಾರ ಪದಾರ್ಥಗಳ ದಾಸ್ತಾನು ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತಿದ್ದು ವಿತರಣೆಯಲ್ಲಿ ಇಳಿಕೆಯಾಗುತ್ತಿದೆ. ಇದರಿಂದ ಸಮಾನ್ಯ ಜನರ ಖರೀದಿಸುವ ಸಾಮರ್ಥ್ಯ ಕುಂಠಿತವಾಗುತ್ತಿದೆ ಎಂದು ತಿಳಿಯಲಾಗಿದೆ.

೧೩. ಮಾಹಿತಿ ತಂತ್ರಜ್ಞಾನ ರಂಗದಲ್ಲಿ ದೊಡ್ಡ ಮೊತ್ತದ ಸಂಬಳವಿರುವ ಕೆಲಸಗಳು ಸೃಷ್ಟಿಯಾಗುತ್ತಿರುವುದರ ಹೊರತಾಗಿಯೂ ನಿರುದ್ಯೋಗದ ಪ್ರಮಾಣದಲ್ಲಿ ಅಧಿಕ ಪ್ರಮಾಣದ ಏರಿಕೆಯಾಗುತ್ತಿದೆ.

೧೪. ಬಹಳಷ್ಟು ದೊಡ್ಡ ಪ್ರಮಾಣದ ವಿದೇಶೀ ವಿನಿಮಯವನ್ನು ಅದರ ಗಳಿಕೆಯ ವೆಚ್ಚಕ್ಕಿಂತಲೂ ಕಡಿಮೆ ಆದಾಯ ನೀಡುವ ಖಜಾನೆ ಹುಂಡಿಗಳಲ್ಲಿ ತೊಡಗಿಸಲಾಗಿದೆ. ಇದು ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.

೧೫. ಆದಾಯ ಗಳಿಕೆಯ ಸಾಮರ್ಥ್ಯ ಮತ್ತು ವಾಸ್ತವ ಆದಾಯದ ವಿಷಯದಲ್ಲಿ ದೇಶದ ಜನರ ನಡುವೆ ಇರುವ ವ್ಯತ್ಯಾಸ ಅತ್ಯಂತ ವೇಗವಾಗಿ ಏರುತ್ತಿದೆ. ಬಡವ ಶ್ರೀಮಂತರ ನಡುವಿನ ಈ ವ್ಯತ್ಯಾಸದಿಂದಾಗಿ ಸಾಮಾಜಿಕ ಸಂತುಲನದಲ್ಲಿ ವ್ಯತ್ಯಯಗಳುಂಟಾಗುತ್ತಿದೆ.