ಐಡೆಂಟಿಟಿ ಸಮಸ್ಯೆಗಳನ್ನು ಗುರುತಿಸಿ ಅಥವಾ ಅನನ್ಯತೆಯ ಸಮಸ್ಯೆಗಳೆಂದು ಕನ್ನಡದಲ್ಲಿ ವಿಶ್ಲೇಷಿಸಲಾಗುತ್ತಿದೆ. ಐಡೆಂಟಿಟಿಯನ್ನು ಅಸ್ಮಿತೆ ಎಂದೂ ಕರೆಯುವುದುಂಟು. ಪ್ರಸ್ತುತ ಭಾರತದಲ್ಲಿ ಗುರುತಿನ ಚಳವಳಿಗೆ ಸಂಬಂಧಪಟ್ಟಂತೆ ಅನೇಕ ಬಗೆಯ ಹೋರಾಟಗಳು ಮತ್ತು ಚಳವಳಿಗಳು ನಡೆಯುತ್ತಿವೆ. ಸ್ವಾತಂತ್ರೋತ್ತರ ಭಾರತದಲ್ಲಿ ಇದನ್ನು ಬಹಳ ಮುಖ್ಯವಾದ ಸಮಸ್ಯೆಯೆಂದೇ ಪರಿಗಣಿಸಲಾಗಿದೆ. ಮಹಿಳಾ ಚಳವಳಿ, ದಲಿತ ಚಳವಳಿ, ರೈತ ಚಳವಳಿ ಮತ್ತು ಈ ನಿಟ್ಟಿನಲ್ಲಿ ಇರುವ ಇತರ ಚಳವಳಿಗಳನ್ನು ಈ ಹಿನ್ನೆಲೆಯಲ್ಲಿ ನಾವು ಗುರುತಿಸಬಹುದು. ಭಾರತದ ಹೊರಗಡೆ ಕೂಡ ಈ ಬಗೆಯ ಹೋರಾಟಗಳನ್ನು ನೋಡಬಹುದು.

ಪ್ರಸ್ತುತ ಅಧ್ಯಯನದಲ್ಲಿ ರಾಜಕೀಯ ಐಡೆಂಟಿಟಿ ಅಥವಾ ಗುರುತುಗಳ ಬಗ್ಗೆ ಇರುವಂತಹ ವಿಶ್ಲೇಷಣೆಗಳ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇವು ಅನೇಕ ಬಗೆಯಲ್ಲಿ. ರಾಜಕೀಯ ಹೋರಾಟಗಳು ಎಂದು ಬಿಂಬಿಸಲ್ಪಟ್ಟರೂ ಈ ಹೋರಾಟಗಳಲ್ಲಿ ಸಾಮಾಜಿಕ, ಧಾರ್ಮಿಕ, ಜನಾಂಗೀಯ ಪ್ರಶ್ನೆಗಳು ಪ್ರಧಾನವಾಗಿರುವುದನ್ನು ನಾವು ಗಮನಿಸಬಹುದು. ಜನಾಂಗ/ಧರ್ಮದ ಐಡೆಂಟಿಟಿ ಬೇರೆ ಬೇರೆ ಕಾರಣಗಳಿಂದ ಬಲಿಷ್ಠವಾಗುತ್ತಿರುವ ಸಂದರ್ಭದಲ್ಲಿ ಈ ಬಗೆಯ ಹೋರಾಟಗಳು ತಮ್ಮ ಸ್ವಾಯತ್ತತೆಯನ್ನು ಸ್ಥಾಪಿಸಲು ಅಥವಾ ಹಕ್ಕೊತ್ತಾಯವನ್ನು ಮಾಡಲು ತಮ್ಮ ಜನಾಂಗ/ಧರ್ಮ ಅಥವಾ ಅವೆರಡು ಅಂಶಗಳು ಬಲವಾಗಿರುವ ಭೂ ಪ್ರದೇಶಗಳನ್ನು “ವಿಮೋಚನೆ” ಮಾಡಲು ಆರಂಭಿಸುತ್ತವೆ. ಅವುಗಳಲ್ಲಿ ಕೆಲವು ಭಾರತದಿಂದಲೇ “ವಿಮೋಚನೆಯಾಗಲು” ಪ್ರಯತ್ನಿಸಿದರೆ ಉಳಿದವು ಭಾರತದ ಭಾಷಾವಾರು ಪ್ರಾಂತ್ಯದಿಂದ ವಿಮೋಚನೆ ಹೊಂದಿ ಭಾರತ ಗಣರಾಜ್ಯ ವ್ಯವಸ್ಥೆಯಲ್ಲೇ ಮುಂದುವರಿಯಲು ಯತ್ನಿಸುತ್ತವೆ. ೧೯೪೭ರಲ್ಲಿ ಬ್ರಿಟಿಷ್‌ಭಾರತವು ಇಬ್ಭಾಗ ಆದ ದಿನದಿಂದಲೇ ರಾಜಕೀಯ ಗುರುತುಗಳಿಗಾಗಿ ಹೋರಾಟಗಳು ಆರಂಭವಾಗಿರುವುದನ್ನು ನಾವು ಗಮನಿಸಬಹುದು. ಭಾರತದ ವಿಭಜನೆಯ ನಂತರ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಪಾಕಿಸ್ತಾನ ಎಂದು ಕರೆಯಲಾಯಿತು. ಈ ಹಿನ್ನೆಲೆಯಲ್ಲಿ ಪೂರ್ವ ಬಂಗಾಳ ಕೂಡ ಪಾಕಿಸ್ತಾನದ ರಾಜಕೀಯ ಭೂಪಟದಲ್ಲಿ ಬಂದಿತು. ೧೯೪೮ರಲ್ಲಿ ಭಾರತ ಸರ್ಕಾರವು ಗೃಹಮಂತ್ರಿಗಳಾಗಿದ್ದ ವಲ್ಲಭಬಾಯಿ ಪಟೇಲ್‌ಅವರ ನೇತೃತ್ವದಲ್ಲಿ ನಡೆಸಿದ “ಪೊಲೀಸ್ ಕಾರ್ಯಾಚರಣೆ”ಯಲ್ಲಿ ಭಾರತ ಹಾಗೂ ಪಾಕಿಸ್ತಾನದೊಡನೆ ಸ್ವತಂತ್ರವಾಗದೆ ಯಥಾಸ್ಥಿತಿಯಲ್ಲಿದ್ದ ಹೈದರಾಬಾದ್‌ಸಂಸ್ಥಾನವನ್ನು ಭಾರತದ “ಆಂತರಿಕ ಭದ್ರತೆಯ” ಹಿನ್ನೆಲೆಯಲ್ಲಿ ವಶಪಡಿಸಿಕೊಂಡಿತು. ೧೯೭೧ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಅವಿಭಾಜ್ಯ ಅಂಗವಾಗಿದ್ದ ಪೂರ್ವ ಬಂಗಾಳವು ಪಾಕಿಸ್ತಾನದಿಂದ “ವಿಮೋಚನೆಗೊಂಡು” ಬಾಂಗ್ಲಾ ದೇಶವಾಗಿ ಉದಯಿಸಿತು. ಈ ವಿಮೋಚನ ಹೋರಾಟಕ್ಕೆ ಆಗಿನ ಪ್ರಧಾನಮಂತ್ರಿಗಳಾಗಿದ್ದ  ಇಂದಿರಾಗಾಂಧಿ ಅವರ ಸರ್ಕಾರದ ಬೆಂಬಲವಿತ್ತು. ಭಿನ್ನ ಭಿನ್ನ ಕಾರಣಗಳಿಗಾಗಿ ಪಾಕಿಸ್ತಾನವು ಬಂಗಾಳವನ್ನು ಕಳೆದುಕೊಂಡಿದ್ದಕ್ಕೆ ಭಾರತವೇ ಹೊಣೆ ಎಂದು ಭಾವಿಸಿತು. ತನ್ನ ಮಿತ್ರ ಪ್ರಾಂತ್ಯವಾಗಿದ್ದ ಹೈದರಾಬಾದ್‌ ಸಂಸ್ಥಾನವನ್ನು ಭಾರತ ಸರ್ಕಾರವು ವಶಪಡಿಸಿಕೊಂಡಿದ್ದರಿಂದ ಪಾಕಿಸ್ತಾನದ ಆಕ್ರೋಶವು ಇನ್ನೂ ಹೆಚ್ಚಿತು. ಈ ಕಾರಣಕ್ಕಾಗಿ ಅದು ಭಾರತದ ವಿರುದ್ಧ ಸತತವಾಗಿ ತಗಾದೆಗಳನ್ನು ತೆಗೆಯುತ್ತಿರುತ್ತದೆ. ಹಾಗೆಯೇ ಕಾಶ್ಮೀರದ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಗಾದೆ ತೆಗೆದು ಆ ಸಮಸ್ಯೆ ಜೀವಂತವಾಗಿರುವಂತೆ ಪಾಕಿಸ್ತಾನವು ನೋಡಿಕೊಳ್ಳುತ್ತಿದೆ. ನಂತರದ ದಿನಗಳಲ್ಲಿ ಭಾರತದಲ್ಲಿ ಅನೇಕ ಕಡೆಗಳಲ್ಲಿ  ದಂಗೆಗಳು, ವಿಧ್ವಂಸಕ ಕೃತ್ಯಗಳು ನಡೆದಾಗ ಭಾರತದ ಆಡಳಿತ ಮತ್ತು ವಿರೋಧ ಪಕ್ಷಗಳು ಅನೇಕ ಭಾರಿ ಈ ಕೃತ್ಯಗಳಿಗೆಲ್ಲ ಪಾಕಿಸ್ತಾನವೇ ಕಾರಣ ಎಂಬುದನ್ನು ಸಾರಿ ಸಾರಿ ಹೇಳುವ ಪ್ರಯತ್ನವನ್ನು ಮಾಡಿರುವುದನ್ನು ನಾವು ಗಮನಿಸಬಹುದಾಗಿದೆ. ಈ ಬಗೆಯ ವಿದ್ವಂಸಕ ಕೃತ್ಯಗಳು ಭಾರತದ ಐಡೆಂಟಿಟಿಗೆ ಮಾರಕ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳು ನಿರ್ವಸಾಹತೀಕರಣಗೊಂಡ ದಿನದಿಂದ ಶೀತಲ ಸಮರದ ಕೊನೆಯದಿನದವರೆಗೂ ಹಾಗೂ ಶೀತಲಸಮರೋತ್ತರ ದಿನಗಳಲ್ಲಿಯೂ ತನ್ನ ದಾಯಾದಿ ಕಲಹಗಳನ್ನು ಮುಂದುವರಿಸಿವೆ.

ಪಾಕಿಸ್ತಾನವು ಸೇಡಿನ  ಕ್ರಮವಾಗಿ ಭಾರತದಲ್ಲಿ ಅರಾಜಕತೆ ಹುಟ್ಟುಹಾಕುತ್ತಿದೆ ಎನ್ನುವ ವಾದವೂ ಇದೆ. ಪಾಕಿಸ್ತಾನವು ಮುಸ್ಲಿಮ್‌ಜನಸಂಖ್ಯೆಯನ್ನು ಬಹುಸಂಖ್ಯೆಯಲ್ಲಿ ಹೊಂದಿರುವುದರಿಂದ ಭಾರತದಲ್ಲಿನ ಮುಸ್ಲಿಮರು ಮುಸ್ಲಿಮ್‌ಭ್ರಾತೃತ್ವದಡಿಯಲ್ಲಿ ಒಟ್ಟಾಗಿ ದೇಶದ  ಅನೈಕ್ಯತೆಗೆ ಕಾರಣಕರ್ತರಾಗುತ್ತಾರೆ ಹಾಗೂ ಇದರಿಂದಾಗಿ ಭಾರತದ ಬಹುಸಂಖ್ಯಾತರಾದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಚಾರವನ್ನು  ಹಿಂದೂ ರಾಜಕೀಯ ಸಾಂಸ್ಕೃತಿಕ ಸಂಘಟನೆಗಳು ಭಾರತದಲ್ಲಿ ಬಲವಾಗಿ ನಂಬಿವೆ. ಹಿಂದುತ್ವದ ಅಜೆಂಡಾ ಈ ಕಾರಣದಿಂದಲೇ ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ೧೯೪೭ರಿಂದಿಚೇಗೆ ಭಾರತದ ಲಿಬರಲ್‌ ರಾಜಕೀಯ ಪಕ್ಷಗಳು ಅದರಲ್ಲಿಯೂ ಕಾಂಗ್ರೆಸ್ ಕೂಡ ಭಾರತದ ರಾಜಕಾರಣದಲ್ಲಿ ಭದ್ರವಾಗಿ ನೆಲೆಯೂರಿ ‘‘ಭಾರತೀಯ” ಎನ್ನುವ ಹೆಸರಿನಡಿಯಲ್ಲಿಯೇ ಹಿಂದೂ ಕಾರ್ಡನ್ನು ಅಲ್ಲಲ್ಲಿ ಬಳಸಿದ್ದು ಕಂಡುಬರುತ್ತದೆ. ಇದನ್ನು ಭಾರತೀಯ ಜನತಾ ಪಕ್ಷದಷ್ಟು ನೇರವಾಗಿ ಬಳಸದಿದ್ದರೂ ಸಂದರ್ಭ ಬಂದಾಗಲೆಲ್ಲ ಲಿಬರಲ್ ಆಗಿ ಬಳಸಿದ್ದುಂಟು. ಭಾರತದ ಸಂವಿಧಾನದ ಆಶಯದಂತೆ ಚುನಾಯಿತ ಸರ್ಕಾರಗಳು ಬಾರತದ ಸಂಯುಕ್ತ ಸರ್ಕಾರ ಎಂದು ಪ್ರಜಾಪ್ರಭುತ್ವೀಯ ನೆಲೆಗಳಲ್ಲಿ ಕಾರ್ಯ ನಿರ್ವಹಿಸದೆ ಕೇಂದ್ರ ಸರ್ಕಾರ ಎಂದು ಹೆಚ್ಚೆಚ್ಚು ಅಧಿಕಾರಗಳನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡು ಅವುಗಳನ್ನು ಚಲಾಯಿಸುತ್ತಿರುವವುದರಿಂದ ಭಾರತದ ಸಂಯುಕ್ತ ಗಣರಾಜ್ಯ ವ್ಯವಸ್ಥೆಗೆ  ಧಕ್ಕೆ ಬಂದಿದೆ. ಹಿಂದೀ ವಲಯಗಳ ಕೇಂದ್ರಬಿಂದು ವಾದ ದೆಹಲಿಯಲ್ಲೇ ಎಲ್ಲ ಬಗೆಯ ರಾಜಕೀಯ ಶಕ್ತಿಗಳು ಕೇಂದ್ರೀಕೃತವಾಗಿದ್ದರಿಂದ ಬಹುಭಾಷೆ ಮತ್ತು ಸಂಸ್ಕೃತಿಯುಳ್ಳ ಸಮುದಾಯಗಳು/ರಾಜ್ಯಗಳು ಮೂಲೆಗೆ ಸರಿಯಲ್ಪಟ್ಟಿವೆ. “ವಿವಿಧತೆಗಳಲ್ಲಿ ಏಕತೆ” ಎನ್ನುವ ನೆಹರೂ ಅವರ ನೋಟವನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರಜಾಪ್ರಭುತ್ವದ ಮೂಲ ಆಶಯವಾದ  ಬಹುತ್ವದ ನೆಲೆಗಳನ್ನು ಸ್ಥಾಪಿತ ಹಿತಾಸಕ್ತಿಗಳು ನಾಶ ಮಾಡುತ್ತಿವೆ. ಆಮೂಲಕ ರಾಜಕೀಯ ಮತ್ತು ಆರ್ಥಿಕ ಶಕ್ತಿಗಳ ವಿಕೇಂದ್ರೀ ಕರಣಕ್ಕೆ ದೆಹಲಿಯಲ್ಲಿರುವ ರಾಜಕೀಯ ಶಕ್ತಿಗಳು ಅವಕಾಶಗಳನ್ನು ನೀಡಲಿಲ್ಲ. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವೀಯ ದೇಶದ  ಉಸ್ತುವಾರಿಕೆಯನ್ನು  ಹಲವಾರು ಬಾರಿ ಹೊತ್ತಿರುವ ಆಖಿಲ ಬಾರತೀಯ ವ್ಯಾಪಕ ಇರಿವ ರಾಜಕೀಯ ಪಕ್ಷಗಳು ಇಂದಿಗೂ “ಹೈಕಮಾಂಡಿನ” ನಿರ್ದೇಶನವನ್ನು ಪಡೆಯುತ್ತಿರುತ್ತವೆ. ಶಕ್ತಿ ಕೇಂದ್ರಗಳು ತಮ್ಮ ಉಳಿವಿನ ಲಾಭಕ್ಕಾಗಿ ಬಳಸಿಕೊಳ್ಳಲು ಮತ್ತು ತಾವು ಗಳಿಸಿದ ಅಧಿಕಾರಗಳನ್ನು ಉಳಿಸಿಕೊಳ್ಳಲು ಮಾತ್ರ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಆಶಯಗಳನ್ನು ಮಾರುಕಟ್ಟೀಕರಣ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ. ಹೀಗಾಗಿ ಭಾರತದಲ್ಲಿ ರಾಜಕೀಯ ಅಧಿಕಾರದ ಧ್ರುವೀಕರಣ ಹೆಚ್ಚಿನ ಸಂದರ್ಭಗಳಲ್ಲಿ ಆದರ್ಶವಾಗಿಯೇ ಉಳಿದಿದೆ. ಇವುಗಳ ಪರಿಣಾಮವೋ ಎನ್ನುವಂತೆ ೧೯೭೦ರ ದಶಕದಿಂದ ಪ್ರಬಲವಾಗುತ್ತಿರುವ ಪ್ರಾದೇಶಿಕ ನೆಲೆಗಳು ಭಾಷೆ, ಜನಾಂಗ, ಸಂಸ್ಕೃತಿ ಇತ್ಯಾದಿ  ಹೆಸರಿನಲ್ಲಿ ಬಲಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮ ಸಮುದಾಯಗಳನ್ನು, ಪ್ರದೇಶಗಳನ್ನು, ಭಾಷೆಗಳನ್ನು, ಬಹುಸಂಸ್ಕೃತಿಗಳನ್ನು ಉಳಿಸಿ, ಬೆಳೆಸಲು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಐಡೆಂಟಿಟಿ ಕೇಂದ್ರೀಕೃತವಾದ ವಿಮೋಚನಾ ಹೋರಾಟಗಳು ಸಕ್ರಿಯವಾಗಿ. ಈಬಗೆಯ ಕೆಲವು ಹೋರಾಟಗಳು ಭಾರತ ದೇಶದಿಂದಲೇ ತಮ್ಮ ಸಮುದಾಯ/ ಪ್ರದೇಶ ಹೊರ ಹೋಗಬೇಕೆಂದು ಹವಣಿಸುತ್ತಿವೆ. ಉಳಿದ ಇಂತಹ ಹೋರಾಟಗಳು ಈಗಾಗಲೇ ಭಾರತದ ಸಂವಿಧಾನದ ಆಶಯದಂತೆ ರಚಿತವಾಗಿರುವ ಭಾಷಾವಾರು ಪ್ರಾಂತ್ಯಗಳಿಂದ ಹೊರಬಂದು ತಮ್ಮ ತಮ್ಮ ನೂತನ ರಾಜ್ಯಗಳನ್ನು ಭಾರತದ ಸಂವಿಧಾನದಡಿಯಲ್ಲಿಯೇ ಪಡೆದುಕೊಳ್ಳಲು ಶ್ರಮಿಸುತ್ತಿವೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೊದಲನೆ ಬಗೆಯ ಹೋರಾಟಗಳು ಭಾರತದ ಸಾರ್ವಭೌಮತ್ವವನ್ನೇ ಪ್ರಶ್ನೆ ಮಾಡುವಂತಹದ್ದು. ಈ ಹೋರಾಟಗಳು ಭಾರತದಿಂದ “ವಿಮೋಚನೆಗೊಳ್ಳಲು” ಹಪಹಪಿಸುವಂತಹವು. ಎರಡನೆಯ ಬಗೆಯ ರಾಜಕೀಯ ಐಡೆಂಟಿಟಿ ಹೋರಾಟಗಳ ಮುಖ್ಯ ಲಕ್ಷಣಗವೆಂದರೆ ಇವು ಭಾರತದ ಪರಮಾಧಿಕಾರವನ್ನು ಮತ್ತು ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತವೆ. ಇವು ಭಾರತದ ಸಂವಿಧಾನ ಮಿತಿಯೊಳಗೆ ಭಾರತ ಸರ್ಕಾರದ ಪ್ರಾಂತ್ಯಗಳಿಂದ “ವಿಮೋಚನೆ” ಪಡೆಯಲು ಹೋರಾಟ ಮಾಡುತ್ತಿರುತ್ತವೆ.

ಪ್ರಸ್ತುತ ಲೇಖನದ ಒಂದನೆಯ ಭಾಗದಲ್ಲಿ ಭಾರತದಿಂದ ವಿಮೋಚನೆ ಪಡೆಯಬೇಕೆಂದು ಹೋರಾಡಿದ/ ಹೋರಾಡುತ್ತಿರುವ ಸಮುದಾಯ / ಪ್ರದೇಶಗಳ ಬಗ್ಗೆ ಚರ್ಚೆಯನ್ನು ಮಾಡಲಾಗಿದೆ. ಭಾರತದ ಯಾವುದೋ ಒಂದು ಭಾಷಾವಾರು ಪ್ರಾಂತ್ಯದಿಂದ ಹೊರಬಂದು ‘ಪ್ರತ್ಯೇಕ ರಾಜ್ಯ’ವೆಂದು ಘೋಷಿಸಿಕೊಳ್ಳಲು ಸಫಲರಾಗಿರುವ/ಯತ್ನಿಸುತ್ತಿರುವ ಸಂಘಟನೆಗಳ ಐಡೆಂಟಿಟಿ ರಾಜಕೀಯದ ಬಗ್ಗೆ ಚರ್ಚಿಸುವ ಪ್ರಯತ್ನವನ್ನು ಈ ಲೇಖನದ ಎರಡನೆಯ ಭಾಗದಲ್ಲಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಐಡೆಂಟಿಟಿ ರಾಜಕಾರಣದ ಹಾಗೂ ಅದಕ್ಕೆ ಸಂಬಂಧಿಸಿದ ವಿಮೋಚನೆ ಹೋರಾಟಗಳ ಸ್ವರೂಪದಕುರಿತು ಚರ್ಚೆಯನ್ನು ವಿಶೇಷವಾಗಿ ಮಾಡಲು ಪ್ರಯತ್ನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವುಗಳಿಗೆ ಸಂಬಂಧಿಸಿದ ಹೋರಾಟಗಳ ವಿವರಗಳನ್ನು ಅಲ್ಲಲ್ಲಿ ಚರ್ಚಿಸಲಾಗಿದೆ.

ಸ್ವತಂತ್ರ ಭಾರತದಿಂದ ವಿಮೋಚನೆ ಹೊಂದಬೇಕೆಂದು ಹಕ್ಕೊತ್ತಾಯಗಳನ್ನು ಮಂಡಿಸುತ್ತಿರುವ ಸಂಘಟನೆಗಳು ಬಹಳ ಮುಖ್ಯವಾಗಿ ಜಮ್ಮು ಕಾಶ್ಮೀರ, ನಾಗಾಲ್ಯಾಂಡ್, ಮಿಜೋರಾಂ, ಪಂಜಾಬ್ ಮುಂತಾದ ಪ್ರದೇಶಗಳಲ್ಲಿ ಮಾಡುತ್ತಿರುವ ಹೋರಾಟಗಳು ೧೯೮೦ರ ದಶಕದಿಂದೀಚೆಗೆ ತೀರ ಸಕ್ರಿಯವಾಗಿ.ತಮಿಳು ರಾಷ್ಟ್ರೀಯತೆ ಕೂಡ ಇದರಲ್ಲಿ ಮುಖ್ಯವಾದರೂ ಇದೂ ಭಾರತ ಮತ್ತು ಶ್ರೀಲಂಕಾ ರಾಷ್ಟ್ರಗಳ ನಡುವಿನ ಸಂಕೀರ್ಣ ಸಂಬಂಧಗಳ ನಡುವೆ ತಾನು ವಿಮೋಚನೆಗೊಳ್ಳುವ ತವಕವನ್ನು ವ್ಯಕ್ತಪಡಿಸುತ್ತಿವೆ. ಜಮ್ಮು ಕಾಶ್ಮೀರದ ರಾಜಕೀಯ ಹೋರಾಟಗಳ ಬಗ್ಗೆ ಬಹಳಷ್ಟು ಮಾಹಿತಿಗಳು ಲಭ್ಯವಿರುವುದರಿಂದ ಈ ಲೇಖನದಲ್ಲಿ ಅದರ ವಿಮೋಚನಾ ಹೋರಾಟದ ಸ್ವರೂಪವನ್ನಷ್ಟೇ ಕೊಡಲಾಗಿದೆ. ಉಳಿದಂತೆ ನಾಗಾಲ್ಯಾಂಡ್, ಮಿಜೋರಾಂ, ಪಂಜಾಬ್ ತಮಿಳಿನ ವಿಮೋಚನೆ ಪ್ರಶ್ನೆಗಳ ವಿವರಗಳನ್ನು ಪ್ರಸ್ತುತ ಲೇಖನದಲ್ಲಿ ನೀಡಲು ಯತ್ನಿಸಲಾಗಿದೆ .ಪ್ರಾತಿನಿಧಿಕವಾಗಿ ಪ್ರಬಲವಾಗಿದ್ದ / ಪ್ರಬಲವಾಗಿರುವ ಹೋರಾಟಗಳ ಸ್ವರೂಪಗಳನ್ನು ಮಾತ್ರ ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ. ಹೋರಾಟಗಳ ರೂಪ ಮತ್ತು ಅವು ಪ್ರಬಲವಾಗಿರುವ ಪ್ರದೇಶಗಳುಭಾರತದ ಬೇರೆ ಬೇರೆ ಭೂ ಭಾಗಗಳಲ್ಲಿ ಇದ್ದರೂ ಅವುಗಳ ಸ್ವರೂಪದಲ್ಲಿರುವ ಸಾಮಾನ್ಯ ಅಂಶಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ. ಆ ಮೂಲಕ ಐಡೆಂಟಿಟಿ ಮತ್ತು ವಿಮೋಚನಾ ಹೋರಾಟಗಳ ಸ್ವರೂಪಗಳನ್ನು ಅರ್ಥಮಾದಿಕೊಳ್ಳಲು ಪ್ರಯತ್ನಪಡಲಾಗಿದೆ.

ಭಾರತದಿಂದ ವಿಮೋಚನೆ ಪಡೆಯಲು ನಡೆಯುತ್ತಿರುವ ರಾಜಕೀಯ ಹೋರಾಟಗಳು ಐಡೆಂಟಿಟಿ ಹೋರಾಟಗಳಲ್ಲಿ ಮುಖ್ಯವಾದವು ಜಮ್ಮು ಮತ್ತು ಕಾಶ್ಮೀರ  ಹೋರಾಟಗಳು, ನಾಗಾಲ್ಯಾಂಡ್ ಮತ್ತು ಮಿಜೋರಾಂ ಹೋರಾಟಗಳು, ಖಲಿಸ್ತಾನ ಹೋರಾಟಗಳು, ತಮಿಳು ಪ್ರತ್ಯೇಕವಾದಿ ಹೋರಾಟಗಳು ಮುಖ್ಯವಾಗಿವೆ. ಕಾಶ್ಮೀರದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೂ ಅವರು ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂ ರಾಜರ ಆಳ್ವಕೆಗೆ ಒಳಪಟ್ಟಿದ್ದಹಿನ್ನೆಲೆಯಲ್ಲಿ ತಮ್ಮ ಐಡೆಂಟಿಟಿ ಹೋರಾಟವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಭಾರತದ ಗಣರಾಜ್ಯವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸಿತು. ಆದರೆ ಅಲ್ಲಿನ ಬಹುಸಂಖ್ಯಾತ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳು ಭಿನ್ನ ಹಾದಿಗಳನ್ನು ತುಳಿದವು. ಅವುಗಳಲ್ಲಿನ ಒಂದು ಗುಂಪು ಪಾಕಿಸ್ತಾನದ ಜೊತೆಗೆ ಸೇರಲು ತವಕಿಸಿತು. ಈ ಕಾರಣಕ್ಕಾಗಿ ಅವರಿಗೆ ಪಾಕಿಸ್ತಾನದ ಬೆಂಬಲವು ದೊರೆತಿದೆ. ಇನ್ನೊಂದು ಗುಂಪು ಕಾಶ್ಮೀರವು ಭಾರತ ಅಥವಾ ಪಾಕಿಸ್ತಾನದ ಅಡಿಯಾಲಾಗದೆ ಅದು ಸ್ವತಂತ್ರವಾಗಿರಬೇಕೆಂದು ಹೋರಾಟ ಮಾಡುತ್ತಿದೆ . ಮಗದೊಂದು ಗುಂಪು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಸರಕಾರದ ನಿಲುವನ್ನು ಸದಾ ಸ್ವಾಗತಿಸುತ್ತಿದೆ. ಈ ಕಾರಣಕ್ಕಾಗಿ ಭಾರತದ ಮಿಲಿಟರಿ ಪಡೆಗಳು ಜಮ್ಮು ಕಾಶ್ಮೀರದಲ್ಲಿ ಬೇರು ಬಿಟ್ಟಿರುತ್ತವೆ. ಮಿಲಿಟರಿ ಪಡೆಗಳು ದೌರ್ಜನ್ಯ ಮಾಡುತ್ತಿವೆ ಎಂದು ಸ್ಥಳೀಯ ಸಂಘಟನೆಗಳು ಒತ್ತಾಯಿಸಿದಾಗ ಅವು ವಾಪಸ್ಸಾಗುತ್ತವೆ. ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಆರಂಭವಾದಾಗ ಅವುಗಳು ಪ್ರತ್ಯಕ್ಷವಾಗುತ್ತವೆ. ಹೀಗಾಗಿ ಕಾಶ್ಮೀರದಲ್ಲಿ ಪ್ರಕ್ಷುಬ್ಧತೆ ಹೆಚ್ಚಾಗಿದೆ. ರಾಜಕೀಯ ಕ್ಷೋಭೆಗಳು ಆಗಾಗ್ಗೆ ಕಾಶ್ಮೀರದಲ್ಲಿ ಈ ಐಡೆಂಟಿಟಿಯ ಕಾರಣಗಳಿಗಾಗಿ ಕಾಣಿಸಿಕೊಳ್ಳುತ್ತಿವೆ.

* * *

ಭಾರತವು ವಿಭಜನೆ ಆಗುವ ಪೂರ್ವದಲ್ಲೇ ಸ್ವತಂತ್ರ ರಾಷ್ಟ್ರವೊಂದರ ಕಲ್ಪನೆಯನ್ನು ಇಟ್ಟುಕೊಂಡು ಹೋರಾಟ ಮಾಡಿದ ಘಟನೆಗಳನ್ನು ನಾಗಾಲ್ಯಾಂಡಿನಲ್ಲಿ ನಾವು ನೋಡಬಹುದು ಭಾರತದ ವಿಭಜನೆ ಸಂದರ್ಭದಲ್ಲಿ ನಾಗಾಲ್ಯಾಂಡ್ ಸ್ವತಂತ್ರ ರಾಷ್ಟ್ರವಾಗಿ ಹೊರಬರಬಹುದೆಂದು ಬ್ರಿಟಿಷರು ಆಶ್ವಾಸನೆ ನೀಡಿದ್ದರು ಬದಲಾದ ರಾಜಕೀಯ ವಿದ್ಯಮಾನಗಳಿಂದ ನಾಗಾಲ್ಯಾಂಡ್ ಭಾರತದ ಸಂಯುಕ್ತ ರಾಷ್ಟ್ರ ವ್ಯವಸ್ಥೆಯಲ್ಲಿ ಗುರುತಿಸಿಕೊಳ್ಳಬೇಕಾಯಿತು.

ಬಹುತೇಕ ಬುಡಕಟ್ಟು ಹಾಗೂ ರೈತಾಪಿ ಜನರೇ ಪ್ರಧಾನವಾಗಿದ್ದ ನಾಗಾಲ್ಯಾಂಡ್ ನಲ್ಲಿ ವಸಾಹತುಕಾಲದಲ್ಲಿ ಕ್ರಿಶ್ಚಿಯನ್ ಮಿಶನರಿಗಳ ಪ್ರಭಾವ ತೀವ್ರವಾಗಿತ್ತರು. ಪರಿಣಾಮವಾಗಿ ಅಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯ ಹೆಚ್ಚಳವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ನೋಡಬಹುದು ೧೯೪೭ರ ಸಂದರ್ಭದಲ್ಲೇ ನಾಗಾಲ್ಯಾಂಡ್ ಕೂಡ ಸ್ವತಂತ್ರ ದೇಶವಾಗಿ ಹೊರಹೊಮ್ಮುವ ಆಸೆಯನ್ನಿಟ್ಟುಕೊಂಡು ಸ್ಥಳೀಯ ನಾಯಕತ್ವಕ್ಕೆ ಭ್ರಮನಿರಸನವಾಯಿತು. ಹೀಗಾಗಿ ೧೯೫೦ರ ದಶಕದಲ್ಲಿ ಎ.ಝೆಡ್. ಫಿಜೋ ಅವರ ನೇತೃತ್ವದಲ್ಲಿ  ಸಶಸ್ತ್ರ ಬಂಡಾಯವು ನಾಗಾಲ್ಯಾಂಡಿನ ವಿಮೋಚನೆಗಾಗಿ ಹೋರಾಟ ಆರಂಭವಾಯಿತು. ಆದರೆ ಭಾರತ ಸರಕಾರ ಈ ಪ್ರತಿಭಟನೆಗಳನ್ನು ಮಟ್ಟಹಾಕಿ ೧೯೫೬ರ ವೇಳೆಗೆ ಶಾಂತಿ ಮತ್ತು ವ್ಯವಸ್ಥೆಯನ್ನು ಪ್ರತಿಷ್ಠಾಪಿಸಿತು. ನಂತರದ ದಿನಗಳಲ್ಲಿ ನೆಹರೂ ಅವರ ನೇತೃತ್ವದ ಕೇಂದ್ರ ಸರಕಾರವು ನಾಗಾಲ್ಯಾಂಡಿಗೆ ಸಾಂಸ್ಕೃತಿಕ ಸ್ವಾಯತ್ತತೆಯನ್ನು ನೀಡಬಹುದೇ ವಿನಹ ರಾಜಕೀಯ ಸ್ವಾಯತ್ತತೆಯನ್ನಲ್ಲ. ಎಂದು ಸ್ಪಷ್ಟಪಡಿಸಿತು. ಆದರೂ, ನಂತರದ ದಿನಗಳಲ್ಲಿ ಸ್ವಲ್ಪ ಸ್ವಲ್ಪ ರಾಜಕೀಯ ಸ್ವಾಯತ್ತತೆಯನ್ನು ಕೇಂದ್ರ ಸರಕಾರವು ನೀಡಿದ್ದನ್ನು ಗಮನಿಸಬಹುದಾಗಿದೆ. ಇಷ್ಟೆಲ್ಲದರ ನಡುವೆಯೂ ನಾಗಾ ಬಂಡುಕೋರರು ಚೀನಾ,ಪಾಕಿಸ್ತಾನ ಮತ್ತು ಬರ್ಮಾಗಳಿಂದ ತರಬೇತಿ ಪಡೆದು ನಿರಂತರವಾಗಿ ಭಾರತ ಸರಕಾರದ ವಿರುದ್ಧ ನಾಗಾಲ್ಯಾಂಡಿನ ವಿಮೋಚನೆಗಾಗಿ ಹೋರಾಟ ಮಾಡುತ್ತಿದ್ದಾರೆ ಭಾರತದ ಸೈನ್ಯ ಅವರ ವಿಮೋಚನಾ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕುತ್ತ ಬಂದಿದೆ. ನಾಗಾ ಐಡೆಂಟಿಟಿಯನ್ನು ಭಾರತದ ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಕಾಯ್ದುಕೊಳ್ಳುವುದು ಎಂದು ಭಾರತ ಸರಕಾರವು ಸಲಹೆ ಮಾಡಿದೆ. ಆದರೆ ಭಾರತದ ಭೂಪಟದಲ್ಲಿ ನಾಗಾಲ್ಯಾಂಡಿನಲ್ಲಿ ಐಡೆಂಟಿಟಿ ಹೋರಾಟದ ಕಾವು ಇನ್ನು ಇರುವುದನ್ನು ನಾವು ಗಮನಿಸಬಹುದು.

* * *

ಮಿಜೋರಾಂ ಪ್ರದೇಶಗಳಲ್ಲಿ ಕೂಡ ಈ ಬಗೆಯ ಹೋರಾಟಗಳಿರುವುದನ್ನು ನಾವು ನೋಡಬಹುದು. ಮಿಜೋರಾಂನ ಸನ್ನಿವೇಶವು ನಾಗಾಲ್ಯಾಂಡಿನ ಸನ್ನಿವೇಶಕ್ಕಿಂತ ಬೇರೆಯೇನಲ್ಲ. ಭಾರತದಿಂದ ಹೊರಗಿಳಿಯಬೇಕೆಂದಿದ್ದ ಮಿಜೋರಾಂನ ಬಂಡುಕೋರರಿಗೆ ೧೯೪೭ರಲ್ಲಿ ಬ್ರಿಟಿಷ್ ಅಧಿಕಾರಿಗಳೇ ಪರೋಕ್ಷವಾಗಿ ಸಹಾಯ ಮಾಡಿದರು ಎನ್ನುವ ಮಾತಿದೆ.೧೯೫೦ರ ದಶಕದಲ್ಲಿ ತೀವ್ರವಾಗಿದ್ದ ಮಿಜೋರಾಂನ ವಿಮೋಚನಾ ಚಳವಳಿಯ ಚಲನಶೀಲತೆಗೆ ಮೂರು ಕಾರಣಗಳಿದ್ದವು. ೧೯೫೯ರಲ್ಲಿ ಮಿಜೋರಾಂ ಪ್ರದೇಶದಲ್ಲಿ ಅತಿವೃಷ್ಟಿಯಾದ ಸಂದರ್ಭದಲ್ಲಿ ಅಸ್ಸಾಂ ಸರಕಾರವು ಕೈಗೆತ್ತಿಕೊಂಡ ಪರಿಹಾರ ಕಾರ್ಯಕ್ರಮಗಳು ಜನವಿರೋಧಿಯಾಗಿದ್ದವು ಎನ್ನುವುದು ಇದಕ್ಕೆ ಮೊದಲನೆಯ ಕಾರಣವಾಗಿದೆ. ಅಸ್ಸಾಮಿ ಭಾಷೆಯನ್ನು ಮಿಜೋರಾಂನ ಜನರ ಮೇಲೆ ಹೇರಿ ದಬ್ಬಾಳಿಕೆ ಮಾಡುತ್ತಿದ್ದದು ಎರಡನೆಯ ಮುಖ್ಯ ಕಾರಣವಾಗಿದೆ. ಲಾಲ್ಡೆಂಗಿನ ಸಮರ್ಥ ನಾಯಕತ್ವ ಮಿಜೋರಾಂ ನ್ಯಾಶನಲ್ ಫ್ರಾಂಟ್ ಗೆ (ಏಂ.ಎನ್.ಎಫ್.) ಸಿಕ್ಕಿದ್ದು ಮೂರನೆ ಮುಖ್ಯ ಕಾರಣವಾಗಿದೆ. ಪೂರ್ವ ಬಂಗಾಳಿ ಮತ್ತು ಚೀನಾದಿಂದ ಮಿಲಿಟರಿ ತರಬೇತಿ ಹೊಂದಿದ ಎಂ.ಎನ್.ಎಫ್.ನ ಹೋರಾಟಗಾರರು ಬಂಡಾಯವೆಂದ್ದು ೧೯೬೬ರಲ್ಲಿ ಭಾರತದಿಂದ ಸ್ವತಂತ್ರವನ್ನು ಹೋದಿದ್ದೇವೆ ಎಂದು ಘೋಷಿಸಿಕೊಂಡಿತು, ಆದರೆ ಭಾರತ ಸರಕಾರವು ಈ ಹೋರಾಟವನ್ನು ಉಗ್ರವಾಗಿ ಹತ್ತಿಕ್ಕಿತು. ಪರಿಣಾಮವಾಗಿ ಬಂಡುಕೋರರು ಪೂರ್ವ ಬಂಗಾಳಕ್ಕೆ ಓಡಿ ಹೋದರು. ನಂತರದ ವರ್ಷಗಳಲ್ಲಿ ಅಲ್ಲಲ್ಲಿ ಬಂಡಾಯ ಕಾಣಿಸಿಕೊಂಡರೂ ಅದು ಅಷ್ಟು ತೀವ್ರವಾಗಿರಲಿಲ್ಲ. ಮುಂದಿನ ರಾಜಕೀಯ ಬೆಳವಣಿಗೆಗೆ ಹೆಜ್ಜೆಯಾಗಿ ಕೇಂದ್ರಾಡಳಿತ ಪ್ರದೇಶವಾಗಿದ್ದ ಮಿಜೋರಾಂನ್ನು ಪ್ರತ್ರೇಕ ರಾಜ್ಯವನ್ನಾಗಿ ೧೯೮೬ರಲ್ಲಿ ಭಾರತ ಸರಕಾರವು ಘೋಷಿಸಿತು. ೧೯೮೭ರಲ್ಲಿ ಲಾಲ್ಡೆಂಗ್ ಅವರು ಭಾರತದ ಗಣರಾಜ್ಯ ವ್ಯವಸ್ಥೆಯಲ್ಲಿಯೇ ಮಿಜೋರಾಂನ ಮುಖ್ಯಮಂತ್ರಿಗಳಾಗಿ ಚುನಾಯಿತರಾದರು.

* * *

ಸಿಖ್ಖರು ಭಾರತದಿಂದ ವಿಮೋಚನೆ ಹೊಂದಿ ಖಲಿಸ್ತಾನವನ್ನು ಸ್ಥಾಪನೆ ಮಾಡಬೇಕೆಂದು ೧೯೭೦-೮೦ರ ದಶಕದಲ್ಲಿ ಮಾಡಿದ ಹೋರಾಟಗಳು ರಕ್ತಸಿಕ್ತವಾಗಿದ್ದವು. ಭಾರತದ ಗೋಧಿಯ ಕಣಜವೆಂದೆ ಬಿಂಬಿಸಲಾದ ಪಂಜಾಬ್ ರಕ್ತಸಿಕ್ತವಾಗಲಿಕ್ಕೆ ಸಖ್ ಪ್ರತ್ಯೇಕವಾದಿಗಳಷ್ಟೇ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಸ್ವಾರ್ಥ ರಾಜಕಾರಣ ಮತ್ತು ದೂರದೃಷ್ಟಿತ್ವದ ಕೊರತೆ ಮುಖ್ಯ ಕಾರಣವಾಗಿದೆ.

೧೯೪೮೭ರ ಮೊದಲು ಪಂಜಾಬ್ ಪ್ರಾಂತ್ಯದಲ್ಲಿ ಹಿಂದುಗಳು ಮತ್ತು ಸಖ್ ಗಳು ಒಂದು  ಐಡೆಂಟಿಟಿಯಾಗಿ ಮತ್ತು ಮುಸ್ಲಿಂ ಐಡೆಂಟಿಟಿ ಇನ್ನೊಂದು ಪ್ರಮುಖ ಐಡೆಂಟಿಟಿಯಾಗಿ ಕೋಮುವಾದಿ ನೆಲೆಯಲ್ಲಿ ಸಂಘರ್ಷವನ್ನು ಮಾಡುತ್ತಿದ್ದವು. ೧೯೪೭ರ ನಂತರದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಒಂದಾಗಿ ರಾಜಕೀಯ ಮಾಡುತ್ತಿದ್ದ ಹಿಂದುಗಳು ಮತ್ತು ಸಿಖ್‌ಗಳು ಸ್ವಾತಂತ್ರ್ಯ ನಂತರ ಸಿಕ್ಕಿದ ಅಧಿಕಾರಕ್ಕಾಗಿ ಪರಸ್ಪರ ಮಸಲತ್ತನ್ನು ನಡೆಸಲು ಆರಂಭಿಸಿದವು. ಸಹಜವಾಗಿ ಎಂಬಂತೆ ಸಿಖ್ ಗುರುತನ್ನು ಪ್ರಭಾವಿಯಾಗಿಸಲು ಅಕಾಲಿಗಳು ಪ್ರಯತ್ನಪಡತೊಡಗಿದವು. ಈಕಾರಣಕ್ಕಾಗಿ ಸಿಖ್ ಹೋರಾಟ ಕೋಮುವಾದಿ ಹಾದಿಯನ್ನು ತುಳಿಯಿತು. ಉಳಿದವರಿಂದ ತಿಳಿತಕ್ಕೊಳಗಾದವರು, ಅನ್ಯಾಯಕ್ಕೊಳಗಾದವರು, ಚಿತ್ರಹಿಂಸೆಗೆ ಒಳಗಾದವರು ಮತ್ತು ಬಲಿಪಶುಗಳಾದವರು ಎಂಬ ಆಶಯದ ಹಿನ್ನೆಲೆಯಲ್ಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಸಿಖ್ ಐಡೆಂಟಿಟಿ ತಲೆ ಎತ್ತಲು ಆರಂಭಿಸಿತು. ಈ ಬಗೆಯ ಐಡೆಂಟಿಟಿ ಹೋರಾಟದ ಹೆಜ್ಜೆ ಕಾಲದಿಂದ ಕಾಲಕ್ಕೆ ಬದಲಾಯಿತು ಮತ್ತು ಪ್ರಭಾವಶಾಲಿಯಾಯಿತು. ಈಹೋರಾಟದ ಸಫಲತೆಗಾಗಿ ಅನೇಕ ವಿಚಾರಗಳನ್ನು ಸೈದ್ಧಾಂತೀಕರಿಸಲಾಯಿತು. ಬ್ರಾಹ್ಮಣ ದೌರ್ಜನ್ಯವು ಸಖ್ಖರ ಐಡೆಂಟಿಟಿಗೆ ಮತ್ತು ಧರ್ಮಕ್ಕೆ ಸತತವಾದ ಪ್ರಹಾರ ಮಾಡುತ್ತಿದ್ದದ್ದರಿಂದ ಅದರ ವಿರುದ್ಧ ಸಿಖ್ಖರು ಆಕ್ರೋಶ ವ್ಯಕ್ತಪಡಿಸತೊಡಗಿದರು.ಹಾಗೆಯೇ ದೆಹಲಿಯನ್ನು ಅಧಿಕಾರದ ಕೆಂದ್ರವಾಗಿರಿಸಿದ ಕಾಂಗ್ರೆಸ್ ನ ಅದರಲ್ಲಿಯೂ  ಹಿಂದುಗಳ, ಇನ್ನೂ ಪ್ರಮುಖವಾಗಿ ನೆಹರು ಅವರ ಪ್ರಾಬಲ್ಯಕ್ಕೆ ಸಿಖ್ಖರು ಸವಾಲು ಹಾಕಲು ಆರಂಭಿಸಿದರು. ಶಿರೋಮಣಿ ಗುರುದ್ವಾರ ಪ್ರದೇಶ ಕಮಿಟಿಯ (ಎಸ್.ಜಿ.ಪಿ.ಸಿ.) ನೇತೃತ್ವದ ಮಾಸ್ಟರ್ ತಾರಾಸಿಂಗ್ ಅವರು ೧೯೫೩ರ ಸುಮಾರಿಗೆ ಸಿಖ್ಖರ ಪ್ರತಿನಿಧೀಕರಣಕ್ಕೆ ಒತ್ತಾಯ ಮಾಡತೊಡಗಿದರು.

೧೯೬೦ರ ದಶಕದ ರಾಜಕೀಯ ವಿದ್ಯಮಾನಗಳನ್ನು ಅಭ್ಯಾಸ ಮಾಡುತ್ತಿದ್ದ ಬಲದೇವರಾಜ್‌ನಾಯರ್ ಅವರು ೧೯೬೬ರಲ್ಲಿ ಪ್ರಕಟಿಸಿದ ಲೇಖನವೊಂದರಲ್ಲಿ, ಸಿಖ್ಖರು ದೇಶದ ಜನಸಂಖ್ಯೆಯಲ್ಲಿ ಶೇ. ೨ರಷ್ಟಿದ್ದರೂ ಭಾರತದ ಸೇನೆಯಲ್ಲಿ ಶೇ. ೨೦ ರಷ್ಟು, ಇದರೆರಡರಷ್ಟು ಸಖ್ಯೆಯಲ್ಲಿ ಐ.ಎ.ಎಸ್‌. ಹುದ್ದೆಗಳಲ್ಲಿ, ಶಾಸಕಾಂಗ ಸಭೆಗಳಲ್ಲಿ ಮತ್ತು ಕಾಂಗ್ರೆಸ್‌ಪಕ್ಷದ ಪ್ರಮುಖ ಹುದ್ದೆಗಳಲ್ಲಿಇರುವುದನ್ನು ಉಲ್‌ಏಖಿಸಿರುವುದು ಗಮನಾರ್ಹವಾಗಿದೆ. ಸಬಲೀಕರಣಗೊಂಡ ಸಮುದಾಯವು ಮತ್ತಷ್ಟು ಮಗದಷ್ಟು ಹಕ್ಕುಗಳಿಗಾಗಿ ಒತ್ತಾಯ ಮಾಡುತ್ತಿರುವುದು ಪ್ರಬಲ ಐಡೆಂಟಿಟಿ ಹೊಂದಿದ ಸಮುದಾಯಗಳ ಮುಖ್ಯ ಆಶಯವಾಗಿರುವುದು ಇಲ್ಲಿ ಸ್ಪಷ್ಟವಾಗುತ್ತ ಹೋಗುತ್ತದೆ.

ಸಿಖ್ಖರ ಕೋಮುವಾದದ ರಾಜಕಾರಣ ಅತಿರೇಕಕ್ಕೆ ಹೋಗುತ್ತಿದ್ದಾಗ ಕಾಂಗ್ರೆಸ್‌ಪಕ್ಷವು ಅದನ್ನೊಂದು ಸವಾಲಾಗಿ ಸ್ವೀಕರಿಸದೆ, ಸಿಖ್ಖರ ಈ ಬಗೆಯ ಕೋಮು ರಾಜಕಾರಣದೊಂದಿಗೆ ಮೈತ್ರಿ ಮಾಡಿಕೊಂಡಿತು. ಪರಿಣಾಮವಾಗಿ, ಪಂಜಾಬ್‌ನಲ್ಲಿ ಕಂಡರಿಯದ ರೀತಿಯಲ್ಲಿ ಹಿಂದೂ ಕೋಮುವಾದವು ಪ್ರಬಲಗೊಂಡಿತು. ಸೆಕ್ಯುಲರಿಸಂ ಮಾತನಾಡುತ್ತಿದ್ದ ಕಮ್ಯುನಿಸ್ಟ್‌ಪಕ್ಷ ಕೂಡ ೧೯೬೪ರ ಚುನಾವಣೆಯ ಸಂದರ್ಭದಲ್ಲಿ ಸಿಖ್‌ ರಾಜಕಾರಣದೊಂದಿಗೆ ಮೈತ್ರಿ ಮಾಡಿಕೊಂಡಿದ್ದನ್ನು ನಾವು ಗಮನಿಸಬಹುದಾಗಿದೆ. ಇದರ ಮುಂದಿನ ಬೆಳವಣಿಗೆಯಾಗಿ ಹಿಮದಿ ಮತ್ತು ಪಂಜಾಬಿ ಭಾಷಿಕರ ನಡುವೆ ಜಿದ್ದಾಜಿದ್ದು ನಡೆಯಿತು. ಪರಿಣಾಮವಾಗಿ ಇಲ್ಲಿ ಕೂಡ ಹಿಂದೂ ಮತ್ತು ಪಂಜಾಬಿ ಕೋಮುವಾದಗಳು ಹೊಸ ಬಗೆಯ ಘರ್ಷಣೆಗಳಿಗೆ ನಾಂದಿ ಮಾಡಿಕೊಟ್ಟವು. ಪಂಜಾಬಿ ಮಾತನಾಡುವವರ ಪ್ರದೇಶ ಪಂಜಾಬ್‌ ಎಂದು, ಹಿಂದಿ ಮಾತನಾಡುವವರ ಪ್ರದೇಶ ಹರಿಯಾಣವೆಂದು ಬಿಂಬಿಸಲು ಸಿಖ್‌ ಮತ್ತು ಹಿಂದೂ ಸಂಘಟನೆಗಳು ಪ್ರಯತ್ನಿಸಿದವು. ಚಂಡೀಘಡವನ್ನು ಪಂಜಾಬ್‌ಹಾಗೂ ಹರಿಯಾಣದವರು ಹಂಚಿಕೊಂಡಿದ್ದು ನಂತರದ ಬೆಳವಣಿಗೆ.

ಅಕಾಲಿ ದಳದ ಕೋಮುವಾದವನ್ನು ಮತ್ತು ಅದರ ಪ್ರಭಾವವನ್ನು ತಡೆಯಲೋ ಎನ್ನುವಂತೆ ಸಿಖ್ಖರ ಇನ್ನೊಂದು ಕೋಮು ಸಂಘಟನೆ ಭಿಂಡ್ರನ್‌ವಾಲೆಯ ನೇತೃತ್ವದಲ್ಲಿ ಕಾಂಗ್ರೆಸ್‌ನ ಗ್ಯಾನಿಜೈಲ್‌ ಸಿಂಗ್‌ ಅವರ ಆಶೀರ್ವಾದದೊಂದಿಗೆ ತಲೆ ಎತ್ತಿ ನಿಂತಿತು. ಅಕಾಲಿಗಳ ಪ್ರಭಾವವು ಕಾಂಗ್ರೆಸ್‌ನ ಎಣಿಕೆಯಂತೆ ಕಡಿಮೆಯಾದರೂ ಭಿಂಡ್ರನ್‌ವಾಲೆ ಮಾತ್ರ ತ್ರಿವಿಕ್ರಮನಂತೆ ಬೆಳೆದು ಭಸ್ಮಾಸುರನ ಅಪರಾವತಾರವಾದ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳದ ಈತ ತನ್ನ ವಿರೋಧಿಗಳನ್ನು ಹತ್ಯೆಗೈಯ್ದನು. ಸಿಖ್ಖರ ಇನ್ನೊಂದು ಪಂಥವಾದ ನಿರಾಂಕರಿ ಪಂಥದ ಮುಖ್ಯಸ್ಥನನ್ನು ಭಿಂಡ್ರನ್‌ವಾಲೆ ಕೊಲೆ ಮಾಡಿಸಿದನು. ೧೯೮೧ರ ಹೊತ್ತಿಗೆ ಭಿಂಡ್ರನ್ವಾಲೆಯ ಟೀಕಾಕಾರರಾಗಿದ್ದ ಲಾಲಜಗತ್‌ ನಾರಾಯಣ್‌ ಅವರನ್ನೂ ಭಿಂಡ್ರನ್‌ವಾಲೆ ಹತ್ಯೆಗೈದ. ಆಶ್ಚರ್ಯವೆಂದರೆ ಅವನಿಂದ ಹತ್ಯೆಗೊಳಗಾದವರಲ್ಲಿ ಬಹುಸಂಖ್ಯಾತರು ಸಿಖ್ಖರೇ ಆಗಿದ್ದು ವಿಪರ್ಯಾಸದ ಸಂಗತಿಯಾಗಿದೆ. ಪ್ರಭಾಕರನ್‌ ನೇತೃತ್ವದ ಎಲ್‌.ಟಿ.ಟಿ.ಈ. ಕೂಡ ಭಿನ್ನಮತೀಯ ತಮಿಳರನ್ನು ಹತ್ಯೆಗೈದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ೧೯೮೩ರ ಸುಮಾರಿಗೆ ಪಂಜಾಬ್ ಸರಕಾರದಲ್ಲಿ ಡಿ.ಐ.ಜಿ. ಆಗಿ ಸೇವೆ ಸಲ್ಲಿಸುತ್ತಿದ್ದ ಸಿಖ್‌ ಸಮುದಾಯಕ್ಕೆ ಸೇರಿದ ಎ. ಎಸ್‌. ಅತ್ವಾಲ್‌ ಅವರು ಸುವರ್ಣ ದೇವಾಲಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಭಿಂಡ್ರನ್‌ವಾಲೆ ಹಿಂಬಾಲಕರ ಕೈಯಲ್ಲಿ ಹತ್ಯೆಗೊಳಗಾದರು. ೧೯೮೩ರ ಹೊತ್ತಿಗೆ ಪ್ರತ್ಯೇಕ ಸಿಖ್‌ ರಾಷ್ಟ್ರದ ಕನಸು ಕಂಡು ಭಿಂಡ್ರನ್‌ವಾಲೆ ಮತ್ತು ಅವನ ಸಂಗಡಿಗರು ಭಿನ್ನಮತೀಯ ಹಿಂದೂಗಳನ್ನು ಹುಡುಕಿ ಕೊಂದರು. ಸಿಖ್ಖರ ಸಾರ್ವಭೌಮತ್ವಕ್ಕಾಗಿ ಹಾತೊರೆಯುತ್ತಿದ್ದ ಭಿಂಡ್ರನ್‌ವಾಲೆ ಅನುಯಾಯಿಗಳು ಶಸ್ತ್ರಾಸ್ತ್ರಗಳನ್ನು ಸುವರ್ಣ ದೇವಾಲಯಕ್ಕೆ ಸಾಗಿಸಿ ಅದನ್ನೇ ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡರು. ಇಷ್ಟೆಲ್ಲ ಪರಿಸ್ಥಿತಿಯ ನಡುವೆಯೂ ಅಕಾಲಿಗಳು ಭಿಂಡ್ರನ್‌ವಾಲೆಯ ಜೊತೆ ಸಮಾನ ಮನಸ್ಸಿನಿಂದ ಸಮಾನ ರಾಜಕೀಯ ಸಿದ್ಧಾಂತವನ್ನು ಅನುಸರಿಸುತ್ತ ಜೊತೆಗೂಡಿ ಕೆಲಸ ಮಾಡಿದರು.

ಪಂಜಾಬ್‌ನಲ್ಲಿ ಇಷ್ಟೆಲ್ಲ ರಕ್ತಸಿಕ್ತ ರಾಜಕೀಯ ಪ್ರಜಾಪ್ರಭುತ್ವೀಯ ನೆಲೆಯ ಎಲ್ಲೆ ಮೀರುತ್ತಿದ್ದರೂ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿ ಅವರು ಮೂರು ವರ್ಷಗಳ ಕಾಲ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಫಲರಾಗಲಿಲ್ಲ. ಭಿಂದ್ರನ್‌ವಾಲೆ ಜೊತೆಗೆ ಮಾಡಿದ ಯಾವುದೇ ಸಂಧಾನಗಳು ಯಶಸ್ಸಾಗಲಿಲ್ಲ. ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಸಿಖ್ಖರು ಮತ್ತು ಪಾಕಿಸ್ತಾನವು ಭಿಂಡ್ರನ್‌ವಾಲೆಯ ವಿಮೋಚನಾ ಹೋರಾಟವನ್ನು ಬೆಂಬಲಿಸಿತು. ಈ ಸಂದರ್ಭದಲ್ಲಿ ಪಂಜಾಬ್‌ನ ಪೊಲೀಸ್‌ಮಹಾನಿರ್ದೇಶಕರಾಗಿದ್ದ ಕೆ. ಪಿ.ಎಸ್‌. ಗಿಲ್‌ಅವರ ನೇತೃತ್ವದಲ್ಲಿ ಸರಕಾರವು ತೀವ್ರವಾದ ಉಗ್ರಗಾಮಿ ಹೋರಾಟವನ್ನು ಮತ್ತು ರಕ್ತಸಿಕ್ತ ಸಿಖ್ಖರ ರಾಜಕೀಯದಾಟವನ್ನು ಮಣಿಸಲು ತೀರ್ಮಾನ ತೆಗೆದುಕೊಂಡಿತು. ಪರಿಣಾಮವಾಗಿ ‘ಅಪರೇಶನ್‌ ಬ್ಲೂ ಸ್ಟಾರ್‌” ಎಂದೇ ಖ್ಯಾತಗೊಂಡ ಪಂಜಾಬ್‌ ಪೊಲೀಸರ ಕಾರ್ಯಾಚರಣೆಯ ಮೂಲಕ ಪೊಲೀಸ್‌ಪಡೆ ಅಮೃತಸರದ ಸುವರ್ಣ ಮಂದಿರಕ್ಕೆ ಲಗ್ಗೆಯಿಟ್ಟು ಅದರಲ್ಲಿ ಅಡಗಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಉಗ್ರವಾದಿಗಳನ್ನು ನಾಶ ಮಾಡಿತು. ೧೯೮೪ರ ಜೂನ್‌೩ ರಿಂದ ೫ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಭಿಂಡ್ರನ್‌ವಾಲೆಯನ್ನು ಪೊಲೀಸರು ಹತ್ಯೆ ಮಾಡಿದರು. ಈ ಘಟನೆ ಸಿಖ್ಖರ ಧಾರ್ಮಿಕ ಭಾವನೆಯನ್ನು ಉದ್ದೀಪಿಸಿತು. ಆ ಸಮುದಾಯವು ಅದರಲ್ಲಿಯೂ ಮುಖ್ಯವಾಗಿ ಆ ಸಮುದಾಯದ ತೀವ್ರವಾದಿಗಳು ಈ ಘಟನೆಯಿಂದಾಗಿ ಮತ್ತಷ್ಟು ಕ್ರೋಧಗೊಂಡರು. ಇದು ೧೯೮೪ರಲ್ಲಿ ನಡೆದ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಹತ್ಯೆಯಲ್ಲಿ ಕೊನೆಗೊಂಡಿತು.

ಇದರ ಪರಿಣಾಮವಾಗಿ ಸಿಖ್ಖರ ಮೇಲೆ ಭಾರತದ ಉದ್ದಗಲಕ್ಕೂ ಅವ್ಯಾಹತವಾದ ಹಲ್ಲೆಗಳಾದವು. ಸಿಖ್ಖರ ಕೊಲೆ ಸುಲಿಗೆಗಳಾದವು. ಇತ್ತೀಚೆಗೆ ಭಾರತದ ಪ್ರಧಾನಮಂತ್ರಿಯಾದ ಮನಮೋಹನ  ಸಿಂಗ್‌ಅವರು ಸಿಖ್ಖರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಹೇಳಿಕೆ ನೀಡಿ, ಸಿಖ್ಖರನ್ನು ಸಾಂತ್ವಾನಗೊಳಿಸಲು ಪ್ರಯತ್ನಿಸಿದ್ದನ್ನು ನಾವು ಗಮನಿಸಬಹುದು. ಅಂತಿಮವಾಗಿ ೧೯೮೮ರಲ್ಲಿ ನಡೆದ “ಬ್ಲ್ಯಾಕ್‌ ಥಂಡರ್‌ ಅಪರೇಶನ್‌”ನ ಮೂಲಕವಾಗಿ ಸುವರ್ಣ ಮಂದಿರದ ಒಳಗಿನ ತೀವ್ರಗಾಮಿಗಳನ್ನು ಅಂತಿಮವಾಗಿ ಮೂಲೋಚ್ಛಾಟನೆ ಮಾಡಲಾಯಿತು. ಇದರೊಂದಿಗೆ ಸಿಖ್ಖರ ಖಲೀಸ್ತಾನ ಹೋರಾಟವು ಹಿನ್ನೆಲೆಗೆ ಸರಿಯಿತು.

* * *

ತಮಿಳು ಪ್ರತ್ಯೇಕ ಹೋರಾಟಕ್ಕೂ, ತಮಿಳು ರಾಷ್ಟ್ರೀಯತೆಗೂ ಹಾಗೂ ತಮಿಳುನಾಡಿನ ಭಾಷಿಕ ಹೋರಾಟಕ್ಕೂ ನೇರ ಸಂಬಂಧವಿದೆ. ಈ ಹೋರಾಟಗಳನ್ನು ತಮಿಳು ರಾಷ್ಟ್ರೀಯ ಹೋರಾಟ ಎಂದು ಕರೆಯುತ್ತಾರೆ. ತಮಿಳರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎನ್ನುವ ದಿ ಲಿಬರೇಷನ್‌ಟೈಗರ್ಸ್‌ಆಫ್‌ತಮಿಳ್‌ಈಳಂ (ಎಲ್‌.ಟಿ.ಟಿ.ಈ) ಶ್ರೀಲಂಕಾದಲ್ಲಿ ಹೋರಾಟ ಮಾಡಿದ್ದರೂ / ಮಾಡುತ್ತಿದ್ದರೂ ವಾಸ್ತವಿಕವಾಗಿ ಅದು ಭಾರತದ ಹಾಗೂ ವಿಶ್ವದ ಮೂಲೆಮೂಲೆಯಲ್ಲಿ ವಾಸಿಸುತ್ತಿರುವ ತಮಿಳರ ಭಾವನಾತ್ಮಕ ಪ್ರಶ್ನೆಯಾಗಿತ್ತು /ಪ್ರಶ್ನೆಯಾಗಿದೆ. ಮೇಲ್ನೋಟಕ್ಕೆ ಇದು ಶ್ರೀಲಂಕಾದಲ್ಲಿ ತಮಿಳರ ಸ್ಥಾನಮಾನಕ್ಕೆ ಸಂಬಂಧಿಸಿದ ಹೋರಾಟ ಎಂದು ಕಂಡರೂ ತಮಿಳು ರಾಷ್ಟ್ರೀಯವಾದಿಗಳ ದೃಷ್ಟಿಯಲ್ಲಿ ಭಾರತದಲ್ಲಿರುವ ತಮಿಳುನಾಡಿನ ಮತ್ತು ಶ್ರೀಲಂಕಾದಲ್ಲಿರುವ ತಮಿಳು ಪ್ರದೇದ ತಮಿಳು ಜನರನ್ನೊಳಗೊಂಡ ಭಾವನಾತ್ಮಕವಾದ ಮತ್ತು ರಾಜಕೀಯವಾದ ಒಂದೇ ಒಂದು ಹೋರಾಟವಾಗಿದೆ. ಅದೇ ತಮಿಳು ವಿಮೋಚನಾ ಹೋರಾಟ. ಅದನ್ನೇ ತಮಿಳರ ಸ್ವಾತಂತ್ರ್ಯ ಹೋರಾಟ ಎಂದೂ ವಿಶ್ಲೇಷಿಸುವುದುಂಟು.

೧೯ ಮತ್ತು ೨೦ನೆಯ ಶತಮಾನದಲ್ಲಿ ಶ್ರಿಲಂಕಾದಲ್ಲಿ ರುವ ಟೀ ಪ್ಲಾಂಟೇಶನ್‌ಗಳಲ್ಲಿ ಕೂಲಿಕಾರರಾಗಿ ಕೆಲಸ ಮಾಡಲು ತಮಿಳರನ್ನು ಎಳೆದೊಯ್ಯಲಾಯಿತು ಮತ್ತು ಕೆಲವು ಸಂದರ್ಭಗಳಲ್ಲಿ ಕೊರೆಯ್ಯಲಾಯಿತು. ಪ್ಲಾಂಟೇಶನ್ ಮಾಲೀಕ ವ್ಯವಸ್ಥೆಯು ಮತ್ತು ಪ್ರಮುಖವಾಗಿ ಶ್ರಿಲಂಕಾದ ಅಧಿಕಾರಶಾಹಿ ವ್ಯವಸ್ಥೆಯ ತಮಿಳರಿಗೆ ಸಮಾನ ಸ್ಥಾನಮಾನವನ್ನು ನೀಡದೆ ಅವರ ಆತ್ಮಗೌರವಕ್ಕೆ ದಶಕಗಳಿಂದ ಹಾನಿಯನ್ನುಂಟು ಮಾಡಿತು. ಸಭ್ಯ ರೀತಿಯಲ್ಲಿ ತಮಿಳರ ಮಾನವೀಯ ಹಕ್ಕುಗಳಿಗಾಗಿ ಮನವಿ ಸಲ್ಲಿಸಿದವರ ಮೇಲೆ ಶ್ರೀಲಂಕಾದ ಅಧಿಕಾರ ವ್ಯವಸ್ಥೆ ದಾರುಣವಾಗಿ ಹಲ್ಲೆ ಮಾಡಿತು. ಶಾಂತರೀತಿಯಲ್ಲಿ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದ ತಮಿಳರನ್ನು ಶ್ರೀಲಂಕಾ ಆಡಳಿತವು ಉಗ್ರವಾಗಿ ಹತ್ತಿಕ್ಕಿತು.

ಶ್ರೀಲಂಕಾದಲ್ಲಿ ಶೇ. ೬೯ರಷ್ಟಿರುವ ಬೌದ್ಧ ಮತೀಯರು ಬಹುಸಂಖ್ಯಾತರಾದ ಸಿಂಹಳೀಯರು. ಶ್ರೀಲಂಕಾದಲ್ಲಿ ಸಿಂಹಳಿ ಭಾಷಿಕರ ಸಂಖಯೆ ಶೇ. ೭೫. ಉಳಿದಂತೆ ತಮಿಳರು ಅತಿದೊಡ್ಡ ಅಲ್ಪಸಂಖ್ಯಾತರು. ಟೀ. ತೋಟದ ಕೆಲಸದ ಹೊರತಾಗಿಯೂ ತಮಿಳರು ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಬಂದು ನೆಲೆಯೂರಿದ್ದುಂಟು. ಎಲ್ಲ ಬ್ರಿಟಿಷ್‌ವಸಾಹತುಗಳಲ್ಲಿ ಸಾಮಾನ್ಯವಾಗಿ ಕಂಡುಬಂದಂತೆ ಸಿಂಹಳೀಯರು ಮತ್ತು ತಮಿಳರ ನಡುವಿನ ವೈಮನಸ್ಸನ್ನು ಬ್ರಿಟಿಷರು ಕಡಿಮೆ ಮಾಡಲು ಪ್ರಯತ್ನಿಸಲಿಲ್ಲ (ಜನಶಕ್ತಿ, ಜೂನ್‌೭, ೨೦೦೯: ೮-೯). ೧೯೪೮ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೊಡನೆ ಅಧಿಕಾರ ಹಿಡಿದ ಸಿಂಹಳೀಯರಿಗೆ ತಮಿಳರನ್ನು ಸಮಾನವಾಗಿ ಕಂಡು, ಜೊತೆಗೆ ಕರೆದೊಯ್ಯಬೇಕೆಂಬ ಉದಾರ ಭಾವನೆ ಬರಲೇ ಇಲ್ಲ. ಅದರ ಬದಲಾಗಿ ಸರ್ಕಾರ, ಸೇನೆ, ಬೌದ್ಧ ಬಿಕ್ಕುಗಳು… ತಮಿಳರಿಗೆ ಹಿಂಸೆ ನೀಡಲು ಆರಂಭಿಸಿದರು. ತಮಿಳರನ್ನು ತುಳಿಯುವ ಹೊಸ ಕಾನೂನುಗಳನ್ನೇ ಜಾರಿಗೆ ತಂದರು. (ಗೌರಿಲಂಕೇಶ್, ಜೂನ್‌೩, ೨೦೦೯ : ೧೦).

೧೯೫೬ ಮತ್ತು ೧೯೫೮ರಲ್ಲಿ ನಡೆದ ತಮಿಳರ ಪ್ರತಿಭಟನೆಯನ್ನು ಸರಕಾರ ಹತ್ತಿಕ್ಕಿತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ೧೯೭೨ರ ಸಂವಿಧಾನದ ತಿದ್ದುಪಡಿಯಲ್ಲಿ ಸಿಂಹಳ ದೇಶದ ಅಧಿಕೃತ ಭಾಷೆ ಶ್ರಿಲಂಕಾ ಭಾಷೆ ಮತ್ತು ಬೌದ್ಧಧರ್ಮ ಪ್ರಧಾನಧರ್ಮ ಎಂದು ಘೋಷಣೆ ಮಾಡಿ ಸರಕಾರವು ತಮಿಳು ಭಾಷೆ/ಸಂಸ್ಕೃತಿಗಳಿಗೆ ನೀಡಬೇಕಾದ ಗೌರವ ಮತ್ತು ಸ್ಥಾನಮಾನವನ್ನು ನೀಡಲಿಲ್ಲ. ಈ ಮೂಲಕ ಅವರಿಗೆ ಪ್ರಾದೇಶಿಕ ಸ್ವಯತ್ತತೆಯನ್ನು ನೀಡದೆ ಅವಮಾನ ಮಾಡಿತು. ೧೯೮೧ ಮತ್ತು ೧೯೮೩ರಲ್ಲಿ ನಡೆದ ಬೃಹತ್ ಪ್ರಮಾಣದ ಸ್ವಾಭಿಮಾನಿ ತಮಿಳರ ಪ್ರತಿರೋಧಗಳನ್ನು ಸರಕಾರ ದಮನಿಸಿತು. ಆರಂಭದಲ್ಲಿ ಪ್ರಾಬಲ್ಯದಲ್ಲಿದ್ದ ತಮಿಳು ಯುನೈಟೆಡ್‌ ಲಿಬರೇಶನ್  ಫ್ರಾಂಟ್ (ಟುಲ್ಫ್‌) ನತರ ಆಂತರಿಕ ಭಿನ್ನಮತಗಳಿಂದಾಗಿ ಕವಲೊಡೆಯಿತು. ತನ್ನೆಲ್ಲ ಸಹೋದರ ಸಂಘಟನೆಗಳನ್ನೆಲ್ಲ ನಾಶಮಾಡಿ, ಮುಂದಿನ ದಿನಗಳಲ್ಲಿ ಅವುಗಳ ನಾಯಕರನ್ನೆಲ್ಲ ಹತ್ಯೆ ಮಾಡಿ, ಎಲ್.ಟಿ.ಟಿ.ಈ. ತಮಿಳರನ್ನು ರಕ್ಷಿಸುವ ಏಕಮೇವ ಸಂಘಟನೆಯಾಗಿ ಹೊರಹೊಮ್ಮಿತು. ಹಾಗೆಯೇ ಬರಹಗಾರರಾದ ನೀಳಮ ತರುಚಲ್ವಂ, ಲೋಗನಾಥನ್‌, ಕೇತೀಶ್ವರನ್‌, ಲಕ್ಷ್ಮಣ್‌ಕದೀರ್‌ಗಮರ್‌, ರಾಬರ್ಟ್‌ತಂಗರಾಜನ್‌ಮೊದಲಾದವರನ್ನು ಹಾಗೂ ಪದ್ಮನಾಭ, ಅಮೃತಲಿಂಗಂ, ಯೋಗೇಶ್ವರನ್‌, ಸಾಮಿತಂಬಿ ಮತ್ತು ಮುಂತಾದ ತಮಿಳು ಹೋರಾಟಗಾರರನ್ನು ಸೈದ್ಧಾಂತಿಕ ಭಿನ್ನಮತಗಳಿಂದಾಗಿ ಎಲ್‌. ಟಿ.ಟಿ.ಈ. ಹತ್ಯೆ ಮಾಡಿತು. ಹೀಗೆ ಭಿನ್ನಮತಗಳಿಂದಾಗಿ ಸತ್ತವರ ಸಂಖ್ಯೆ ೪೦೦ಕ್ಕೂ ಹೆಚ್ಚು (ಜನಶಕ್ತಿ, ಜೂನ್‌೭, ೨೦೦೯ : ೯).

ಪ್ರತ್ಯೇಕ ರಾಜ್ಯ ಪಡೆಯಲು ಸಶಸ್ತ್ರ ವಿಮೋಚನಾ ಹೋರಾಟ ಬಿಟ್ಟರೆ ಉಳಿದ ಮಾರ್ಗಗಳಿಲ್ಲ ಎಂದು ಎಲ್‌.ಟಿ.ಟಿ.ಈ. ಘೊಷಿಸಿತು. ಉಳಿದ ಮಾರ್ಗಗಳನ್ನು ಯೋಚಿಸುವುದು ತಮಿಳರಿಗೆ ದ್ರೋಹ ಮಾಡಿದಂತೆ ಎಂಬ ಉಗ್ರವಾದದೊಂದಿಗೆ ಎಲ್‌.ಟಿ.ಟಿ.ಈ. ಬೆಳೆಯಿತು. ತನ್ನ ಶೋಷಣೆಯ ಮುಖವನ್ನು ಮುಚ್ಚಿಕೊಂಡ ಶ್ರೀಲಂಕಾ ಸರ್ಕಾರವು ಎಲ್. ಟಿ.ಟಿ.ಈ. ನ ಉಗ್ರ ಸಂಕುಚಿತ ರಾಷ್ಟ್ರೀಯತೆಯ ಹೋರಾಟದ ತಪ್ಪುಗಳನ್ನಷ್ಟೇ ದೊಡ್ಡವರು ಮಾಡಿ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ತಮಿಳರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ ಇತರ ತಮಿಳು ನಾಯಕರನ್ನು ದಮನಿಸಿತು. ಪ್ರಭಾಕರನ ಉಗ್ರವಾದಕ್ಕೆ ಇಂಬು ನೀಡಿದ್ದು ಭಾರತದ ವಿದೇಶಾಂಗ ನೀತಿ. ಶೀತಲ ಯುದ್ಧದ  ಸಂದರ್ಭದಲ್ಲಿ ಅಮೆರಿಕದ ಮಿತ್ರ ಪಾಕಿಸ್ತಾನದ ಸಹಾಯದಿಂದ ತಮಿಳು ಉಗ್ರರನ್ನು ಸದೆಬಡಿಯಲು ಶ್ರೀಲಂಕಾ ಆರಂಭಿಸಿತ್ತು. ಈ ಸಂದರ್ಭದಲ್ಲಿ ಭಾರತವು ಎಲ್‌.ಟಿ.ಟಿ.ಈ.ಗೆ ತನ್ನ ಬೆಂಬಲ ನೀಡಿ, ತನ್ನ ಸಮುದ್ರ ಪ್ರದೇಶದಲ್ಲಿ ಅದಕ್ಕೆ ಬೇಕಾದ ಎಲ್ಲ ಸಹಾಯವನ್ನು ಭಾರತ ಸರಕಾರ ಮಾಡಿತು. ತಮಿಳುನಾಡು ಮುಖ್ಯಮಂತ್ರಿ ಎಂ. ಜಿ. ರಾಮಚಂದ್ರನ್‌ ಅವರು ನೇರವಾಗಿ ಈ ಸಂಘಟನೆಗೆ ಸಹಾಯ ಹಸ್ತವನ್ನು ನೀಡಿದರು. ೧೯೭೨ರಲ್ಲಿ ಟ್ಯಾಮಿಲ್‌ನ್ಯೂ ಟೈಗರ್ಸ್‌ ಎಂದು ಕರೆದುಕೊಂಡಿದ್ದ ಪ್ರಭಾಕರನ್‌ ಸಂಘಟನೆ ೧೯೭೬ರಲ್ಲಿ ಎಲ್‌.ಟಿ.ಟಿ.ಈ. ಹೆಸರಿನಿಂದ ಖ್ಯಾತವಾಗಿ ೧೯೮೫ರ ಹೊತ್ತಿಗೆ ತಮಿಳರ ಏಕಮೇವ ನಾಯಕನಾಗಿ ಹೊರಹೊಮ್ಮಿದ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಬೆಂಬಲದ ಕುರಿತು ಶ್ರೀಲಂಕಾ ಸರಕಾರವು ತಕರಾರು ಮಾಡಿದರೂ ಭಾರತ ತನ್ನ ಬೆಂಬಲವನ್ನು ಎಲ್‌.ಟಿ.ಟಿ.ಈ.ಗೆ ನಿರಂತರವಾಗಿ ನೀಡಿತು. ಶ್ರೀಲಂಕಾ ಸರಕಾರ ಪಾಕಿಸ್ತಾನಿ ಸೈನಿಕರನ್ನು ತಮಿಳು ಉಗ್ರರನ್ನು ಮಣಿಸಲು ಆರಂಭಿಸಿದ ಸಂದರ್ಭದಲ್ಲಿ ಸಹಜವಾಗಿ ತಮಿಳು ಉಗ್ರರು ಭಾರತದೆಡೆಗೆ ಸಹಾಯಕ್ಕಾಗಿ ನೋಡತೊಡಗಿದರು. ತನ್ನ ಆಂತರಿಕ ವಿದ್ಯಮಾನಕ್ಕೆ ಭಾರತ ಮೂಗು ತೂರಿಸುವುದು ಶ್ರೀಲಂಕಾಕ್ಕೆ ಇಷ್ಟವಾದ ಸಂಗತಿಯಾಗಿರಲಿಲ್ಲ. ಆದರೂ, ರಾಜೀವ್ಗಾಂಧಿ ಅವರು ಶಾಂತಿಪಡೆ (ಇಂಟರ್‌ನ್ಯಾಶನಲ್‌ ಪೀಸ್‌ಕೀಪಿಂಗ್‌ ಪೋರ್ಸ್‌) ಯನ್ನು ಶ್ರೀಲಂಕಾಕ್ಕೆ ಕಳುಹಿಸಿದಾಗ ಪಾಕಿಸ್ತಾನಿ ಪಡೆಗಳು ಅಲ್ಲಿಂದ ನಿರ್ಗಮಿಸಿದವು. ಈ ಸಂದರ್ಭದಲ್ಲಿ ಎಲ್‌.ಟಿ.ಟಿ.ಈ. ಮತ್ತು ಶ್ರೀಲಂಕಾದ ಜೊತೆಗೆ ಭಾರತ ಒಂದು ರೀತಿಯಲ್ಲಿ ರಾಜೀಸಂಧಾನ ಮಾಡಿತು. ಶ್ರೀಲಂಕಾ ಸರಕಾರ ಮತ್ತು ಇಂಡಿಯಾದ ಶಾಂತಿಪಡೆಗಳು ಎಲ್‌. ಟಿ.ಟಿ.ಈ.ಗೆ ಕೊಟ್ಟಷ್ಟೆ ಪ್ರಾಮುಖ್ಯತೆಯನ್ನು ಇವರ ಸಂಘಟನೆಗಳಿಗೂ ನೀಡಬೇಕೆಂದವು. ಆ ಮೂಲಕ ತಮಿಳು ಪ್ರಾಂತ್ಯಗಳ ಉಸ್ತುವಾರಿಕೆಯನ್ನು ಎಲ್ಲ ತಮಿಳು ಸಂಘಟನೆಗಳಿಗೆ ವರ್ಗಾಯಿಸಲು ತೀರ್ಮಾನಿಸಿದವು. ಈ ಪ್ರಸ್ತಾವಕ್ಕೆ ಪ್ರಭಾಕರನ್‌ ಒಪ್ಪಲಿಲ್ಲ. ತಮಿಳು ಹೋರಾಟದಲ್ಲಿ ತಮ್ಮದು ನಿರ್ಣಾಯಕ ಪಾತ್ರವಾಗಿರುವುದರಿಂದ ತಮಿಳು ಪ್ರಾಂತ್ಯಗಳ ಉಸ್ತುವಾರಿಕೆಯನ್ನು ತಮಗೆ ನೀಡಬೇಕಂದು ಅವನು ಆಗ್ರಹ ಮಡಿದನು. ಶಾಂತಿಯ ಪಡೆಯು ಪ್ರಭಾಕರನ ಈ ಸೂತ್ರವನ್ನು ನಿರಾಕರಿಸಿತು. ಪರಿಣಾಮವಾಗಿ ಶಾಂತಿಪಡೆ ಮತ್ತು ಎಲ್.ಟಿ.ಟಿ.ಈ. ನಡುವೆ ಘರ್ಷಣೆಯುಂಟಾಯಿತು. ಎಲ್‌. ಟಿ.ಟಿ.ಈ. ಗೆ ಬೆಂಬಲ ನೀಡಲೆಂದು ಬಂದ ಪಡೆ ೧೯೮೭ರಲ್ಲಿ ತಮಿಳರ ತೀವ್ರ ವಿರೋಧದಿಂದಾಗಿ ಭಾರತಕ್ಕೆ ವಾಪಸ್ಸಾಯಿತು. ನಂತರ ನಡೆದ ವಿದ್ಯಮಾನಗಳಿಂದಾಗಿ ೧೯೯೧ರಲ್ಲಿ ಎಲ್ಲ.ಟಿ.ಟಿ.ಈ. ಆತ್ಮಾಹುತಿ ದಳದಿಂದಾಗಿ ರಾಜೀವ್‌ಗಾಂಧಿ ಅವರ ಹತ್ಯೆಯಾಯಿತು. (ಅಗ್ನಿ, ಮೇ ೨೮, ೨೦೦೯ : ೧೦-೧೧)

೧೯೮೫-೮೯ರ ನಡುವೆ ಮಾಡಿದ ಮುಖ್ಯ ಕದನವನ್ನು ಮೊದಲ ಯುದ್ಧವೆಂದು, ೧೯೯೦-೯೫ರಲ್ಲಿ ನಡೆದ ಯುದ್ಧವನ್ನು ಎರಡನೇ ಯುದ್ಧವೆಂದು, ೧೯೯೦-೯೫ರಲ್ಲಿ ನಡೆದ ಯುದ್ಧವನ್ನು ಎರಡನೇ ಯುದ್ಧವೆಂದು, ೧೯೯೫-೨೦೦೦ ದವರೆಗೂ ನಡೆದ ಕದನವನ್ನು ಮೂರನೇ ಯುದ್ಧವೆಂದು ಹಾಗೂ ೨೦೦೬-೨೦೦೯ರವರೆಗೆ ನಡೆದ ಯುದ್ಧವನ್ನು ನಾಲ್ಕನೆಯ ಯುದ್ಧವೆಂದು ಕರೆಯುತ್ತಾರೆ. ನಾಲ್ಕನೆಯ ಯುದ್ಧ ನಿರ್ಣಾಯಕವಾದ ಯುದ್ಧವೇ ಆಯಿತು. ೧೯೮೦ರಿಂದ ೨೦೦೯ರವರೆಗೆ ೩೦ ಸಾವಿರದಷ್ಟು ತಮಿಳು ಗೆರಿಲ್ಲಾಗಳು ಈಳಂಗಾಗಿ ಪ್ರಾಣತೆತ್ತರು. ಸತ್ತ ಲಂಕಾ ಸೈನಿಕರ ಸಂಖ್ಯೆಯೂ ಕಡಿಮೆಯೇನಿಲ್ಲ.

ಎಲ್‌.ಟಿ.ಟಿ.ಈ. ೧೯೯೩ರಲ್ಲಿ ಶ್ರೀಲಂಕಾ ಪ್ರಧಾನಿ ಪ್ರೇಮದಾಸ ಅವರನ್ನು ಹತ್ಯೆ ಮಾಡಿತು. ಆದರೆ, ೧೯೯೯ರಲ್ಲಿ ಶ್ರೀಲಂಕಾ ಅಧ್ಯಕ್ಷ ಚಂದ್ರಿಕ  ಕುಮಾರತುಂಗ ಅವರ ಹತ್ಯೆಗೆ ವಿಫಲ ಯತ್ನ ಮಾಡಿತು. ೧೯೯೬ರಲ್ಲಿ  ಆತ್ಮಹತ್ಯಾ ದಳದಿಂದ ಸೆಂಟ್ರಲ್‌ ಬ್ಯಾಂಕ್‌ ಪ್ರದೇಶವನ್ನು ಸ್ಫೋಟಿಸಿದ್ದರಿಂದ ೧೦೦ ಜನರು ಮೃತರಾದರು ಮತ್ತು ೧೪೦೦ ಮಂದಿ ಗಾಯಗೊಂಡಿತು. ಅದೇ ವರ್ಷ ಮಿಲಿಟರಿ ಕ್ಯಾಂಪ್‌ನ ಮೇಲೆ ಆತ್ಮಹತ್ಯಾದಳದ ಆಕ್ರಮಣದಿಂದ ೧೦೦೦ಕ್ಕೂ ಅಧಿಕ ಸೈನಿಕರು ಹತ್ಯೆಯಾದರು. ಅದೇ ವರ್ಷ ಕೊಲೊಂಬೊ ರೈಲು ನಿಲ್ದಾಣ ಸ್ಫೋಟದಿಂದ ೭೦ ಮಂದಿ ಮೃತರಾದರು. ೧೯೯೮ರಲ್ಲಿಯೂ ಆತ್ಮಹತ್ಯಾದಳದಿಂದ ೧೦೦೦ ಸೈನಿಕರು ಪ್ರಾಣ ಕಳೆದುಕೊಂಡರು. ಅದೇ ವರ್ಷ ಕ್ಯಾಂಡಿಯ ಬುದ್ಧನ ದೇವಾಲಯದ ಮೇಲಿನ ಆಕ್ರಮಣದ ಸಂದರ್ಭದಲ್ಲಿ ೧೭ ಮಂದಿ ಮೃತಪಟ್ಟರು. (ಫ್ರಂಟ್‌ಲೈನ್‌, ಜೂನ್‌೧೮ ೨೦೦೯: ೧೮-೧೯). ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಿತು.

೨೦೦೪ರಲ್ಲಿ ತೀವ್ರವಾದ ಭಿನ್ನಾಭಿಪ್ರಾಯಗಳಿಂದಾಗಿ ಎಲ್.ಟಿ.ಟಿ.ಈ.ನಿಂದ ಬಂಡೆದ್ದ ಲೆಫ್ಟಿನೆಂಟ್‌ ಕರುಣಾ ಶ್ರೀಲಂಕಾ ಸರಕಾರದ ಕೈಜೋಡಿಸಿದ್ದು ನಾಲ್ಕನೆಯ ಯುದ್ಧದ ವಿಶೇಷ. ಲಂಡನ್ನಿನಲ್ಲಿದ್ದ ಎಲ್‌. ಟಿ. ಟಿ.ಈ. ನ ರಾಜಕೀಯ ಸಲಹೆಗಾರ ಬಾಲಸಿಂಗಂ ೨೦೦೫ರಲ್ಲಿ ತೀರಿಹೋದದ್ದು ನಾಲ್ಕನೆಯ ಯುದ್ಧದಲ್ಲಿ ಎಲ್‌. ಟಿ. ಟಿ. ಈ. ಹಿಮ್ಮೆಟ್ಟಲು ಕಾರಣವಾಯಿತು. ೨೦೦೫ರಲ್ಲಿ ಶ್ರೀಲಂಕಾ ಸರಕಾರದ ಅಧ್ಯಕ್ಷೀಯ ಸ್ಥಾನಕ್ಕೆ ಪ್ರತಿಸ್ಪರ್ಧಿಸಿದದ ಮಹಿಂದ ರಾಜಪಕ್ಸ ಎಲ್‌. ಟಿ. ಟಿ. ಈ. ನ ನಿರ್ನಾಮವೇ ತನ್ನ ಗುರಿ ಎಂದು ಚುನಾವಣೆಯಲ್ಲಿ ಘೋಷಿಸಿದ. ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ತಾನಾಡಿದಂತೆ ನಡೆದುಕೊಂಡ. ತನ್ನ ಸಹೋದರ ಗೋತಬಯಾನನ್ನು ರಕ್ಷಣ ಕಾರ್ಯದರ್ಶಿಯಾಗಿ ನೇಮಿಸಿ ಲೆಫ್ಟಿನೆಂಟ್‌ ಜನರಲ್‌ ಶರತ್‌ ಫೊನೆಸ್ಕಾನ ಜೊತೆ ಸೇರಿ ವ್ಯೂಹವನ್ನು ರಚಿಸಿದನು. ೨೦೦೮ರಲ್ಲಿ ಮಿಲಿಟರಿ ಕಾರ್ಯಾಚರಣೆಗೆಂದು ೧೬೬ ಬಿಲಿಯನ್‌ ಅನ್ನು ಸರಕಾರ ತೆಗೆದಿಟ್ಟರೆ ೨೦೦೯ರಲ್ಲಿ ಮಿಲಿಟರಿ ಖರ್ಚಿಗಾಗಿ ೧೭೭ ಬಿಲಿಯನ್‌ ಮೊತ್ತವನ್ನು ಶ್ರೀಲಂಕಾ ತೆಗೆದಿಟ್ಟಿತು. ಈ ಬಿಲಿಯನ್‌ಗಳ ಮುಂದೆ ಪ್ರಪಂಚದೆಲ್ಲೆಡೆ ಹರಡಿರುವ ತಮಿಳುರು ಎಲ್‌. ಟಿ.ಟಿ.ಈ.ಗೆ ನೀಡಿದ್ಧ ಕೋಟಿ ಕೋಟಿ ದೇಣಿಗೆಗಳ ಆಟ ನಡೆಯಲಿಲ್ಲ.

ನಾಲ್ಕನೆಯ ಯುದ್ಧದ ಸಂದರ್ಭದಲ್ಲಿ ಎಲ್‌.ಟಿ.ಟಿ.ಈ. ಯ ಪರವಾಗಿ ಮೊದಲಿನಿಂದಲೂ ಸಹಾನೂಭೂತಿ ಇಟ್ಟುಕೊಂಡಿದ್ದ ಕರುಣಾನಿಧಿ ಮತ್ತು ಅವರ ಡಿ.ಎಂ.ಕೆ. ಸರಕಾರವು ಕಾಂಗ್ರೆಸ್‌ ನೇತೃತ್ವದ ಯು.ಪಿ.ಎ. ಸರ್ಕಾರಕ್ಕೆ ತಮಿಳರ ಪರವಾಗಿ ಶ್ರೀಲಂಕಾದ ಮಿಲಿಟರಿ ಕಾರ್ಯಾರಚರಣೆಯ ವಿರುದ್ಧ ಪ್ರವೇಶಿಸಲು ಮಾಡಿದ ಮನವಿ ಫಲಕಾರಿಯಾಗಲಿಲ್ಲ. ೨೦೦೯ರವರೆಗೂ ಎಲ್‌.ಟಿ.ಟಿ.ಟಿ.ಈ ಅನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕಿ ಜಯಲಲಿತಾ ಇದ್ದಕ್ಕಿದ್ದಂತೆ ಎಲ್.ಟಿ.ಟಿ.ಈ. ಹೋರಾಟದ ಪರ ತಮಿಳುನಾಡಿನಾದ್ಯಂತ ಮತ್ತು ಹೊರಗಡೆ ಒತ್ತಡ ತಂದಿದ್ದು ಒಂದು ವಿಶೇಷವೇ. ಎಲ್‌. ಟಿ. ಟಿ. ಈ. ಬಗ್ಗೆ ಎಲ್ಲ ಸಂದರ್ಭಗಳಲ್ಲಿಯೂ ಸಾರ್ವಜನಿಕವಾಗಿ ಸಹಾನುಭೂತಿ ತೋರಿಸಿದ್ದ ವೈಕೋ ಅವರು ಎಲ್.ಟಿ.ಟಿ.ಈ ಪರವಾಗಿ ಭಾರತ ಸರ್ಕಾರ ಮಧ್ಯೆ ಪ್ರವೇಶಿಸಲು ಎಂದಿನಂತೆ ಭಾವನಾತ್ಮಕವಾಗಿ ಒತ್ತಾಯಿಸಿದರು. ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳು ಈ ಬಗೆಯ ಒತ್ತಡಗಳನ್ನು ಹೇರಲು ೨೦೦೯ರಲ್ಲಿ ನಡೆಯುತ್ತಿದ್ದ ಸಾರ್ವತ್ರಿಕ ಲೋಕಸಭಾ ಚುನಾವಣೆಯೂ ಕಾರಣವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.