ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಹಿಂಸೆ

ಇತ್ತೀಚೆಗೆ ಎಲ್ಲರನ್ನೂ ಎಡಬಿಡದೆ ಕಾಡುತ್ತಿರುವ ಸಾಮಾಜಿಕ ಸಮಸ್ಯೆ ಎಂದರೆ, ಮಹಿಳೆಯರ ಮೇಲೆ ಪುರುಷಪ್ರಧಾನ ಸಮಾಜವು ಎಸಗುತ್ತಿರುವ ದೌರ್ಜನ್ಯ ಮತ್ತು ಹಿಂಸೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸೆ ಚಾರಿತ್ರಿಕವಾಗಿ ಉಳಿದು ಬೆಳೆದುಬಂದಿರುವ ಸಾಮಾಜಿಕ ಸಮಸ್ಯೆ. ಸ್ವಾತಂತ್ರ್ಯಾನಂತರ ಭಾರತವು ತನ್ನ ಸಂವಿಧಾನದ ಪ್ರಸ್ತಾವಣೆಯಲ್ಲಿ ಮಹಿಳೆಯರಿಗೂ ಮತ್ತು ಪುರುಷರಿಗೂ ಸಮಾನ ಹಕ್ಕುಗಳನ್ನು ನೀಡಿದರೂ ಸಹ ಮಹಿಳೆಯರ ಮೇಲಿನ ಹಿಂಸೆಯ ಪ್ರಮಾಣವು ಸ್ವಲ್ಪವೂಕಡಿಮೆಯಾಗಿಲ್ಲ. ‘ಹಿಂಸೆ’ ಎನ್ನುವ ಪರಿಕಲ್ಪನೆಯನ್ನು ಕೆಳಕಂಡಂತೆ ನಿರ್ವಹಿಸಬಹುದು.

ವ್ಯಕ್ತಿಗಳಿಗೆ ಉದ್ದೇಶಪೂರ್ವಕವಾಗಿ ಗಾಯಗೊಳಿಸುವ, ತೊಂದರೆಗೊಳಪಡಿಸುವ ಉದ್ದೇಶದಿಂದ ನಡೆಸುವ ಕ್ರಿಯೆಯಾಗಿದೆ. ಯಾವುದೇ ವ್ಯಕ್ತಿಯನ್ನು ಬಪಪ್ರಯೋಗದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ, ಭಾವನಾತ್ಮಕವಾಗಿ ಗಾಯಗೊಳಿಸುವುದು, ಹಿಂಸೆಗೊಳಪಡಿಸುವುದು ಅಥವಾ ಗಾಯಗೊಳ್ಳುವ ಭಯವನ್ನು ನಿರಂತರವಾಗಿರಿಸುವ ಪ್ರಕ್ರಿಯೆಯನ್ನು ಹಿಂಸೆ ಎಂದು ಪರಿಗಣಿಸಬಹುದು.

ಇಂತಹ ಹಿಂಸೆಗೆ ಮಹಿಳೆಯರು ನಿರಂತರವಾಗಿ ಒಳಗಾಗುತ್ತಿದ್ದಾರೆ. ಮಹಿಳೆಯರ ಮೇಲಿನ ಹಿಂಸೆಯ ಹರಹು ಮತ್ತು ವಿಸ್ತಾರ ಯಾವುದೇ ನಾಗರಿಕ ಸಮಾಜವನ್ನು ಘಾಸಿಗೊಳಿಸುತ್ತದೆ. ಮಹಿಳೆಯರ ಮೇಲೆ ಎಸಗುತ್ತಿರುವ ಅಪರಾಧಗಳನ್ನು ಪ್ರಮುಖವಾಗಿ ಮೂರು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಅವು ಯಾವುವೆಂದರೆ ಅಪರಾಧಿ ಹಿಂಸೆ, ಕೌಟುಂಬಿಕ ಹಿಂಸೆ, ಸಾಮಾಜಿಕ ಹಿಂಸೆ ಅಪರಾಧಿ ಹಿಂಸೆಯಲ್ಲಿ ಅತ್ಯಾಚಾರ, ಅಪಹರಣ ಮತ್ತು ಕೊಲೆ ಕಂಡುಬರುತ್ತವೆ. ಕೌಟುಂಬಿಕ ಹಿಂಸೆಯಲ್ಲಿ ವರದಕ್ಷಿಣೆಯ ಸಾವು, ಹೆಂಡತಿಗೆ ಸತತ ಹಿಂಸೆ ನೀಡುವುದು, ಲೈಂಗಿಕ ದುರುಪಯೋಗ, ವಿಧವೆಯರನ್ನು ಅಸಭ್ಯವಾಗಿ ನಡೆಸಿಕೊಳ್ಳುವುದು, ವೃದ್ಧೆಯರ ಅಭದ್ರತೆ ಇತ್ಯಾದಿ.

ಸಾಮಾಜಿಕ ಹಿಂಸೆಯಲ್ಲಿ ಹೆಂಡತಿ ಅಥವಾ ಸೊಸೆಯನ್ನು ಭ್ರೂಣಹತ್ಯೆಗೆ ಒತ್ತಾಯಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗೀಯಾಗಿ ಚುಡಾಯಿಸುವುದು, ಮಹಿಳೆಗೆ ಆಸ್ತಿಯಲ್ಲಿ ಪಾಲನ್ನು ನೀಡಲು ನಿರಾಕರಿಸಿಸುವುದು, ಮಹಿಳೆಯರನ್ನು ಮಾರಾಟಕ್ಕಿಡುವುದು, ಅವರಿಗೆ ಅರಿವಿಲ್ಲದಂತೆ ವೇಶ್ಯಾವಾಟಿಕೆಗೆ ದೂಡುವುದು, ವಿಧವೆಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವುದು, ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ಅವರ ಮೇಲೆ ಆಸಿಡ್‌ ಎರಚುವುದು ಇತ್ಯಾದಿ.

ಈ ಹಿಂಸೆಯ ಪಟ್ಟಿಯನ್ನು ನೋಡಿದರೆ ಭಾರತೀಯ ಪುರುಷಪ್ರಧಾನ ಸಮಾಜದ ಕ್ರೌರ್ಯ ಮತ್ತು ಮಹಿಳೆಯ ಶೋಚನೀಯ ಪರಿಸ್ಥಿತಿಯ ಅರಿವಾಗುತ್ತದೆ. ಮಹಿಳೆಯರ ಮೇಲಿನ ಹಿಂಸೆಯ ಅಂಕಿ ಅಂಶಗಳನ್ನು ಕೇಂದ್ರ ಗೃಹ ಇಲಾಖೆ ಮತ್ತು ಪೊಲೀಸ್‌ ರೀಸರ್ಚ್‌ ಬ್ಯೂರೋ, ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಗಳು ಕಲೆಹಾಕಿವೆ. ೧೯೯೦ ರಿಂದ ೧೯೯೪ರವರೆಗೆ ನಡೆಸಿದ ಸಂಶೋಧನೆಯಲ್ಲಿ ಪ್ರತಿದಿನವೂ ಮಹಿಳೆಯರ ಮೇಲೆ ಜರುಗುತ್ತಿರುವ ಹಿಂಸೆಯ ಪ್ರಮಾಣ ಹೆಚ್ಚುತ್ತಿರುವುದು ಕಂಡುಬರುತ್ತದೆ. ಉದಾಹರಣೆಗೆ ಈ ವರ್ಷಗಳಲ್ಲಿ ಪ್ರತಿವರ್ಷವೂ ೧೧ ಸಾವಿರ ಅತ್ಯಾಚಾರಗಳು, ೨೧ ಸಾವಿರ ಲೈಂಗಿಕ ಪ್ರಕರಣಗಳು, ೧೨ ಸಾವಿರ ಅಪಹರಣಗಳು, ಚಿತ್ರಹಿಂಸೆಯ ೨೦ ಸಾವಿರ ಪ್ರಕರಣಗಳು, ೧೦ ಸಾವಿರ ಚುಡಾಯಿಸುವ ಪ್ರಕರಣಗಳು ದಾಖಲಾಗಿವೆ. ಇನ್ನೂ ಸರಳವಾಗಿ ಮಹಿಳೆಯರ ಮೇಲಿನ ಹಿಂಸೆಯ ಪ್ರಮಾಣವನ್ನು ಕೆಳಕಂಡಂತೆ ಲೆಕ್ಕ ಹಾಕಬಹುದು.

ಭಾರತದಲ್ಲಿ ಪ್ರತಿ ೪೭ ನಿಮಿಷಕ್ಕೊಂದು ಅತ್ಯಾಚಾರ, ೪೪ ನಿಮಿಷಕ್ಕೊಂದು ಚುಡಾಯಿಸುವ ಪ್ರಕರಣ, ೨೫ ನಿಮಿಷಕ್ಕೊಂದು ಲೈಂಗಿಕ ಹಲ್ಲೆ, ೯೦ ನಿಮಿಷಕ್ಕೊಂದು ವರದಕ್ಷಿಣೆ ಸಾವು, ೪೪ ನಿಮಿಷಕ್ಕೊಂದು ಅಪಹರಣ ಜರುಗುತ್ತವೆ. ಮಹಿಳೆಯರ ಮೇಲಿನ ಇಂತಹ ಹಿಂಸೆಗೆ ಕೆಳಕಂಡ ಕಾರಣಗಳನ್ನು ಗುರುತಿಸಬಹುದು.

ಪುರುಷಪ್ರಧಾನ ಸಮಾಜದ ಮೌಲ್ಯಗಳು, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ, ಮಹಿಳೆಯರ ವಿರುದ್ಧ ನಿರಂತರ ಪ್ರತೀಕಾರ ಪ್ರಚಾರ, ಪುರುಷಪ್ರಧಾನ ಸಮಾಜೀಕರಣ, ಆರ್ಥಿಕ ಮತ್ತು ಕೌಟುಂಬಿಕ ಒತ್ತಡ, ಮಹಿಳೆಯರ ಮೇಲಿನ ಹಿಂಸೆಯ ಸ್ವೀಕೃತ ಮೌಲ್ಯವಾಗಿರುವುದು, ಮಹಿಳಾ ಜಾಗೃತಿಯ ಕೊರತೆ, ಆರ್ಥಿಕ ಮತ್ತು ನಾಗರಿಕ ಸಂಪತ್ತಿನಿಂದ ಮಹಿಳೆಯರನ್ನು ವಂಚಿಸಿರುವುದು ನಿರಂತರವಾಗಿ ಪುರುಷನ ಮೇಲೆ ಅವಲಂಬಿತವಾಗಿರುವ ಪರಿಸ್ಥಿತಿಯನ್ನು ಹುಟ್ಟುಹಾಕಿರುವುದು, ವಿವಾಹ, ಕುಟುಂಬ, ಮಕ್ಕಳನ್ನು ಹಡೆಯುವುದು ಇತ್ಯಾದಿ ವಿಚಾರಗಳನ್ನು ಸಾಮಾಜಿಕ ಮೌಲ್ಯವಾಗಿ ರೂಪಿಸಿ ಕಡ್ಡಾಯವಾಗಿ ಮಹಿಳೆಯು ಅದನ್ನು ಪಾಲಿಸಲೇಬೇಕೆಂಬ ಒತ್ತಾಯಕ್ಕೊಳಪಡಿಸಿರುವುದು. ಕೌಟುಂಬಿಕವಾಗಿ ಯಾವುದೇ ಬಗೆಯ ತೊಂದರೆಯುಂಟಾದರೂ ಮಹಿಳೆಯನ್ನು  ಅದಕ್ಕೆ ಹೊಣೆಗಾರಳನ್ನಾಗಿ ಮಾಡಿ ಶಿಕ್ಷಿಸುವುದು. ಶಾಸನದ ಅಸಮರ್ಪಕ ಜಾರಿ ಇತ್ಯಾದಿ.

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸೆಯನ್ನು ಹೋಗಲಾಡಿಸಲು ಶಾಶ್ವತವಾದ, ನಿರಂತರವಾದ ಪ್ರಯತ್ನದ ಅಗತ್ಯವಿದೆ. ಪಿತೃಪ್ರಧಾನ ಮೌಲ್ಯಗಳನ್ನು ಹಂತ ಹಂತವಾಗಿ ದುಬರ್ಲಗೊಳಿಸಿ ಮಹಿಳೆಯ ಹಕ್ಕುಗಳನ್ನು ಸದೃಢಗೊಳಿಸಬೇಕಾಗುತ್ತದೆ. ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗವನ್ನು ಹೊಂದಲು ಪ್ರೋತ್ಸಾಹಿಸುವುದರ ಜೊತೆಗೆ ಮಕ್ಕಳನ್ನು ಪೋಷಿಸುವ ಕೇಂದ್ರಗಳನ್ನು ತೆರೆಯಬೇಕಾಗುತ್ತದೆ. ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಿ ಅಲ್ಲಿ ನ್ಯಾಯಾಧೀಶರು, ವಕೀಲರು ಮತ್ತು ಇಡೀ ನ್ಯಾಯ ವ್ಯವಸ್ಥೆಗೆ ಲಿಂಗ ಸಂವೇದನೆಯನ್ನೂ ಮೂಡಿಸುವ ಅಗತ್ಯವಿದೆ.

ಸ್ವಯಂಸೇವಾ ಸಂಸ್ಥೆಗಳನ್ನು ಲಿಂಗ ಸಮಾನತೆಯ ಪ್ರಚಾರವನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಉಚಿತ ಕಾನೂನಿನ ನೆರವು, ಅಪಾಯದ ಸಂದರ್ಭದಲ್ಲಿ ತುರ್ತು ರಕ್ಷಣಾ ಕ್ರಮ ಕೈಗೊಳ್ಳಲು ಸರಿಯಾದ ತರಬೇತಿಯುಳ್ಳ ಒಂದು ಸಾಮಾಜಿಕ ಸೈನ್ಯದ ಅವಶ್ಯಕತೆಯೇ ಇದೆ. ಇಡೀ ಭಾರತೀಯ ಸಮಾಜಕ್ಕೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ದೊಡ್ಡ ಪ್ರಮಾಣದಲ್ಲಿ ಲಿಂಗ ಸಂವೇದನೆಯನ್ನು ಮೂಡಿಸುವ ಅಗತ್ಯವಿದೆ. ಇಲ್ಲವಾದಲ್ಲಿ ನಮ್ಮ ಸಮಾಜವು ಮಹಿಳೆಯರ ಜೊತೆಗೆ ತನ್ನನ್ನು ಸಂಪೂರ್ಣವಾಗಿ ನಾಶಪಡಿಸಿಕೊಳ್ಳಲಿದೆ.

ಕೋಮುವಾದ

ಹೆಚ್ಚುತ್ತಿರುವ ಕೋಮುವಾದ ಮತ್ತು ಕೋಮುವಾದಿ ಸಂಬಂಧಿ ಹಿಂಸೆಯು ಭಾರತದಾದ್ಯಂತ ಬಹುಸಂಖ್ಯಾತರ ಮತ್ತು ಅಲ್ಪಸಂಖ್ಯಾತರ ನಡುವೆ ಒಂದು ಬಗೆಯ ಸಾಮಾಜಿಕ ಹಾಗೂ ಮಾನಸಿಕ ಬಿರುಕನ್ನುಂಟುಮಾಡಿದೆ. ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ನಿರಂತರವಾದ ಅಭದ್ರತೆಯ ಭಯದಿಂದ ನರಳುವಂತಾಗಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ಹಬ್ಬುತ್ತಿರುವ ಕೋಮುವಾದ. ಕೋಮುವಾದವೆಂದರೆ ಸಮಾಜದ ವಿವಿಧ ಧಾರ್ಮಿಕ ಸಮುದಾಯಗಳ ನಡುವಿನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಿನ್ನತೆಗಳನ್ನು ಗೌರವಿಸದೆ ಭಿನ್ನತೆಯನ್ನೇ ಬಹುಸಂಖ್ಯಾತ ಧರ್ಮದ ವಿರುದ್ಧ ಇರುವ ಅಂಶವೆಂದು ಪರಿಗಣಿಸುವುದು.

ಇತರ ಧರ್ಮಗಳ ವಿರುದ್ಧ ಉದ್ದೇಶಪೂರ್ವಕವಾಗಿ ಹಿಂಸೆ ಮತ್ತು ಶತ್ರುತ್ವವನ್ನು ಜನಸಮುದಾಯದಲ್ಲಿ ಪ್ರಚೋದಿಸುವುದು ಕೋಮುವಾದದ ಸ್ವರೂಪವಾಗಿದೆ. ಇದು ಅಂತಿಮವಾಗಿ ಕೊಲೆ, ದೊಂಬಿ, ಲೂಟಿ, ಮಹಿಳೆಯರ ಮೇಲೆ ಹಿಂಸೆ ಇವುಗಳಲ್ಲಿ ಕೊನೆಗೊಳ್ಳುವಂತೆ ನೋಡಿಕೊಳ್ಳುವುದು ಇದರ ಅಜಂಡವಾಗಿದೆ. ಇದನ್ನು ಕೋಮುವಾದ ಅಥವಾ ಕೋಮುವಾದಿ ಸಿದ್ಧಾಂತವೆಂದು ಸಮಾಜಶಾಸ್ತ್ರಜ್ಞರು ವಿವರಿಸುತ್ತಾರೆ. ಕೋಮುವಾದವನ್ನು ಅನೇಕ ರೀತಿಗಳಲ್ಲಿ ಜಾರಿಗೆ ತರಲಾಗುತ್ತದೆ. ಉದಾಹರಣೆಗೆ ರಾಜಕೀಯ ಕೋಮುವಾದ, ಧಾಮಿರ್ಕ ಕೋಮುವಾದ ಮತ್ತು ಆರ್ಥಿಕ ಕೋಮುವಾದ ಇತ್ಯಾದಿ.

ರಾಜಕೀಯ ಕೋಮುವಾದ ಎಂದರೆ, ಭಾರತದ ಸಕಲ ಸಮಸ್ಯೆಗಳಿಗೂ ಅಲ್ಪಸಂಖ್ಯಾತರೇ ಕಾರಣ ಎನ್ನುವುದು. ಅವರ ರಾಜಕೀಯ ಬೆಳವಣಿಗೆಯಿಂದ ದೇಶಕ್ಕೆ ಗಂಡಾಂತರವಿದೆ ಎಂದು ಹಾಗೂ ಬಹುಸಂಖ್ಯಾತರನ್ನು ಗೆಲ್ಲಿಸುವುದರಿಂದಲೇ ದೇಶವನ್ನು ರಕ್ಷಿಬಹುದೆಂಬ ಹುಸಿ ಮೂಲಭೂತವಾದಿ ದೇಶಪ್ರೇಮದ ಭಾವನೆಯನ್ನು ಮತಗಳಿಕೆಗಾಗಿ ಹರಡುವುದು.

ಧಾರ್ಮಿಕ ಕೋಮುವಾದ ಎಂದರೆ, ಅನ್ಯ ಧಮ್ದ ಅದರಲ್ಲಿಯೂ ಅಲ್ಪಸಂಖ್ಯಾತ ಧರ್ಮದ ಪ್ರತಿಯೊಂದು ಚಟುವಟಿಕೆಯನ್ನು ದೇಶದ್ರೋಹಿ ಚಟುವಟಿಕೆ ಎಂದು ವ್ಯಾಖ್ಯಾನಿಸುತ್ತಾ ಅಥವಾ ಅವರನ್ನು ಅನ್ಯರೆಂದು ವಿವರಿಸಿ ಅವರ ಮೇಲೆ ನಡೆಸುವ ದೈಹಿಕ ಹಲ್ಲೆ, ಕೊಲೆ, ದೊಂಬಿ, ಲೂಟಿಯನ್ನು ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದು.

ಆರ್ಥಿಕ ಕೋಮುವಾದವೆಂದರೆ, ಅಲ್ಪಸಂಖ್ಯಾತ ಧರ್ಮಗಳ ವ್ಯಾಪಾರಿ ಮಳಿಗೆಗಳನ್ನೂ, ಕೈಗಾರಿಕಾ ಕೇಂದ್ರಗಳನ್ನೂ, ಮಾರುಕಟ್ಟೆ ಪ್ರದೇಶಗಳನ್ನೂ ಗುರಿಯಿಟ್ಟು ನಾಶ ಮಾಡುವುದು, ಧರ್ಮದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವುದು.

ಸಾಮಾಜಿಕ ಕೋಮುವಾದವೆಂದರೆ, ಅಲ್ಪಸಂಖ್ಯಾತ ಜನರಿಗೆ ವಾಸಸ್ಥಳ ನೀಡದಿರುವುದು. ಅವರ ಮಕ್ಕಳಿಗೆ ಶಿಕ್ಷಣ ಕೇಂದ್ರಗಳಲ್ಲಿ ಪ್ರವೇಶ ನಿರಾಕರಿಸುವುದು, ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಅರ ಧಾರ್ಮಿಕ ಆಚರಣೆಗಳನ್ನು ಕೀಳೆಂದು ಪ್ರತಿಪಾದಿಸಿ ತುಚ್ಛೀಕರಿಸುವುದು.

ಈಗ ಕೋಮುವಾದವನ್ನು ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿದ ಮೇಲೆ ಸ್ವಾತಂತ್ರ್ಯಾನಂತರದ ಭಾರತವು ಕೋಮುವಾದದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. ೧೯೯೫ರ ಧಾರ್ಮಿಕ ಜನಗಣತಿಯ ಪ್ರಕಾರ ಭಾರತದಲ್ಲಿ ಹಿಂದೂಗಳೆಂದು ಕರೆಯಲ್ಪಡುವ ಜಾತಿಗಳ ಗುಂಪು ಶೇ. ೮೨.೪೧ ರಷ್ಟಿದೆ. ಮುಸ್ಲಿಮರು ಶೇ.೧೨.೧೨ರಷ್ಟಿದ್ದಾರೆ. ಕ್ರಿಶ್ಚಿಯನ್ನರು ಶೇ.೨.೪೦ ರಷ್ಟಿದ್ದಾರೆ. ಬೌದ್ಧರು ಶೇ. ೦.೬೯ರಷ್ಟಿದ್ದು, ಜೈನರು ಶೇ. ೦.೪೪ರಷ್ಟಿದ್ದಾರೆ.

ಭಾರತ ಒಂದು ಬಹುರೂಪಿ ಸಮಾಜವಾಗಿದೆ. ಸಂವಿಧಾನದ ಪ್ರಕಾರ ಜಾತ್ಯತೀತ ಸಮಾಜವಾದಿ ಗಣರಾಜ್ಯವಾಗಿದೆ. ಆದರೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಇಡೀ ಭಾರತದಲ್ಲಿ ಕೋಮುವಾದವು ವಿಷದಂತೆ ಹಬ್ಬತೊಡಗಿದೆ. ಸ್ವಾತಂತ್ರ್ಯ ಬಂದ ಕೂಡಲೇ ಭಾರತವು ಎದುರಿಸಿದ ಮೊಟ್ಟಮೊದಲ ತೀವ್ರ ಸಾಮಾಜಿಕ ಸಮಸ್ಯೆ ಎಂದರೆ ಕೋಮುವಾದ. ೧೯೪೬-೪೮ವರೆಗೆ ಭೀಕರವಾದ ಕೋಮು ಗಲಭೆಗಳು ಏರ್ಪಟ್ಟವು. ಸ್ವಲ್ಪಮಟ್ಟಿಗೆ ೧೯೫೦ ರಿಂದ ೧೯೬೩ರವರೆಗೆ  ಕೋಮುಶಾಂತಿಯನ್ನು ಕಾಣಬಹುದಾಗಿತ್ತು. ಮತ್ತೊಮ್ಮೆ ೧೯೮೪ರಲ್ಲಿ ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಹತ್ಯೆಗೊಳಗಾದಾಗ ಅಲ್ಪಸಂಖ್ಯಾತ ಸಿಖ್ಖರ ಮಾರಣಹೋಮ ನಡೆಸಲಾಯಿತು. ಆದರೆ, ಕೋಮುವಾದವು ತನ್ನ ತೀವ್ರ ರೂಪವನ್ನು ಪಡೆದುಕೊಂಡದ್ದು ೧೯೯೨ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಹಿಂದೂ ಕೋಮುವಾದಿಗಳು ಧ್ವಂಸಗೊಳಿಸುವುದರ ಮೂಲಕ. ಹಿಂದೂ ತೀವ್ರವಾದಿಗಳು ರಾಷ್ಟ್ರಾದ್ಯಂತ ಹಿಂದೂ ಕೋಮು ಭಾವನೆಗಳನ್ನು ಪ್ರಚೋದಿಸಿ ಮಸೀದಿಯ ನಾಶಕ್ಕೆ ಕಾರಣರಾದರು. ಇದಕ್ಕೆ ಪ್ರತಿಯಾಗಿ ಮುಸ್ಲಿಮ್ ತೀವ್ರವಾದಿಗಳು ಪ್ರತಿಕ್ರಿಯೆ ನೀಡಿದ್ದು ಹಿಂಸೆಯ ಮೂಲಕ ಎನ್ನುವುದು ಗಮನಾರ್ಹವಾಗಿದೆ. ಹಿಂದೂ ಕೋಮುವಾದದಷ್ಟೇ ಮುಸ್ಲಿಮ್‌ಕೋಮುವಾದವು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

೧೯೯೨ರ ಡಿಸೆಂಬರ್‌ ೬ ರಂದು ಉಂಟಾದ ಕೋಮುಗಲಭೆಗಳಲ್ಲಿ ಸಾವಿನ ಪ್ರಮಾಣವು ಕೆಳಕಂಡಂತಿದೆ. ಸುಮಾರು ೧೦೬೦ ಜನರು ೫ ದಿನಗಳ ಅವಧಿಯಲ್ಲಿ ಕೊಲ್ಲಲ್ಪಟ್ಟರು ಎಂದು ಹೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ೨೩೬ ಜನ, ಕರ್ನಾಟಕದಲ್ಲಿ ೬೪, ಆಸ್ಸಾಂನಲ್ಲಿ ೭೬, ರಾಜಸ್ತಾನದಲ್ಲಿ ೩೦ ಮತ್ತು ಪಶ್ಚಿಮ ಬಂಗಾಳದಲ್ಲಿ ೨೦ ಜನ ಹತ್ಯೆಗೊಳಗಾದರು.

ಅದಾದ ಒಂದು ವರ್ಷದಲ್ಲಿಯೇ ಮಹಾರಾಷ್ಟ್ರದಲ್ಲಿ ಸರಣಿ ಬಾಂಬುಗಳು ಸ್ಫೋಟಿಸಲ್ಪಟ್ಟವು. ಈ ಹಿಂಸಾಚಾರಕ್ಕೆ ಮುಸ್ಲಿಮ್‌ಕೋಮುವಾದವು ಒಂದಲ್ಲ ಒಂದು ರೀತಿಯಲ್ಲಿ  ಪೂರಕವಾಗಿ ಕೆಲಸ ಮಾಡಿತು. ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ಉಂಟಾದ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಮ್‌ ತೀವ್ರವಾದಿಗಳು ಮಹಾರಾಷ್ಟ್ರದಲ್ಲಿನ ಹಿಂಸಾಚಾರಕ್ಕೆ ಇಂಬುಕೊಟ್ಟರು. ಈ ಹಿಂಸಾಚಾರದಲ್ಲಿ ಹಿಂದೂ ಮುಸ್ಲಿಮರೆನ್ನದೆ ೨೦೦ ಜನ ಕೊಲ್ಲಲ್ಪಟ್ಟರು. ಸಾಮಾನ್ಯವಾಗಿ ಈ ಕೋಮುಗಲಭೆಗಳು ಸಾಮಾನ್ಯ ಜನರನ್ನು ಅವರ ದಿನನಿತ್ಯದ ಬದುಕನ್ನು ದುರ್ಭರಗೊಳಿಸುತ್ತವೆ. ಈ ಕೋಮುಗಲಭೆಗಳಿಂದ ಆಂತರಿಕ ಭದ್ರತೆಯ ದುರ್ಬಲವಾಗಿ ಅದರಿಂದ ದೇಶವನ್ನು ರಕ್ಷಿಸಲು ನಿರಂತರವಾಗಿ ಪೊಲೀಸ್‌ಮತ್ತು ಸೈನ್ಯವನ್ನು ಬಳಸಬೇಕಾಗುತ್ತದೆ. ಅಭಿವೃದಧಿಗೆ ಮೀಸಲಿಟ್ಟ ಹಣವನ್ನು ಅನಗತ್ಯವಾದ ಇಂತಹ ಗಲಭೆಗಳಿಂದ ರಕ್ಷಿಸಿಕೊಳ್ಳಲು ಬಳಸಬೇಕಾಗುತ್ತದೆ. ಸಮಾಜಶಾಸ್ತ್ರಜ್ಞರು ಕೆಳಕಂಡ ಕಾರಣಗಳನ್ನು ಗುರುತಿಸುತ್ತಾರೆ. ಅವು ಯಾವುವೆಂದರೆ: ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಪೇಕ್ಷ ವಂಚನೆ, ಸಾಮಾಜಿಕ ಒತ್ತಡ, ಚಾರಿತ್ರಿಕ, ಷಟ್ಟಭದ್ರ ಹಿತಾಸಕ್ತಿ ಮೊದಲಾದವು.

ತಾನೇತಾನಾಗಿ ಜನಸಾಮಾನ್ಯರು ಕೋಮುಗಲಭೆಗಳನ್ನು ಉಂಟುಮಾಡುವುದಿಲ್ಲ. ಷಟ್ಟಭದ್ರ ಹಿತಾಸಕ್ತಿಗಳು ಯಾವುದಾದರೂ ಸಾಂಸ್ಕೃತಿಕ ಸಂದರ್ಭವನ್ನು ನೆಪವಾಗಿಟ್ಟುಕೊಂಡು ಅಂತಹ ಸಂದರ್ಭದಲ್ಲಿ ಕೋಮುಗಲಭೆಯನ್ನು ಪ್ರಚೋದಿಸುತ್ತಾರೆ. ಕೆಲವೊಮ್ಮೆ ವ್ಯಾಪಾರಿ ಸ್ಥಳಗಳನ್ನು ವಶಪಡಿಸಿಕೊಳ್ಳಲು ಕೋಮುಗಲಭೆಯನ್ನು ಹುಟ್ಟುಹಾಕಲಾಗುತ್ತದೆ. ಉದಾಹರಣೆಗೆ ರಾಮನಗರದಲ್ಲಿ ಸ್ವಾತಂತ್ರ್ಯ ಬಂದ ನಂತರ ನಡೆದಿರುವ ಎಲ್ಲಾ ಕೋಮುಗಲಭೆಗಳು ರೇಷ್ಮೆಗೂಡಿನ ಮಾರುಕಟ್ಟೆ ಮತ್ತು ಮಾರಾಟಕ್ಕೆ ಸಂಬಂಧಿಸಿವೆ.

ಕೋಮುಗಲಭೆಗಳನ್ನು ತಡೆಗಟ್ಟಲು ಸಮಾಜವಿಜ್ಞಾನಿ ಮತ್ತು ಚರಿತ್ರಕಾರರಾದ ಬಿಪನ್‌ಚಂದ್ರ ಅವರು, ದೀರ್ಘಾವಧಿ ಹಾಗೂ ಅಲ್ಪಾವಧಿಯ ಯೋಜನೆಗಳನ್ನು ಸೂಚಿಸಿದ್ದಾರೆ. ದೀರ್ಘಾವಧಿ ಯೋಜನೆಗಳಲ್ಲಿ ಮೊದಲನೆಯದೆಂದರೆ, ಎಲ್ಲ ಹಂತಗಳಲ್ಲಿಯೂ ಕೋಮುವಾದಿಕರಣವನ್ನು ನಿಷ್ಫಲಗೊಳಿಸುವುದು. ಕೋಮುವಾದಿಗಳು ಹಬ್ಬಿಸುವ ಸುಳ್ಳುಗಳನ್ನು ಗುರುತಿಸಿ ಅವುಗಳ ವಾಸ್ತವ ಪರಿಚಯವನ್ನು ಜನರಿಗೆ ಮಾಡಿಕೊಳ್ಳುವುದು. ಕೋಮುವಾದದ ಹಿಂದೆ ಅಡಗಿರುವ ಪಟ್ಟಭದ್ರ ಹಿತಾಸಕ್ತಿಗಳ ರಾಜಕಯ ಆಕಾಂಕ್ಷೆಗಳನ್ನು, ಆರ್ಥಿಕ, ಸಾಮಾಜಿಕ ಮೂಲಗಳನ್ನು ಜನರೆದುರು ತೆರೆದಿಟ್ಟು ಜಾಗೃತಿ ಮೂಡಿಸುವುದು.

ಎರಡನೆಯದಾಗಿ, ಸಮಾಜದ ಗಣ್ಯವರ್ಗ ಮತ್ತು ರಾಜಕೀಯ ವ್ಯಕ್ತಿಗಳು ಕೋಮುವಾದದ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು. ಕೋಮುವಾದವನ್ನು ಹಬ್ಬಿಸುವ ಮಾಧ್ಯಮಗಳನ್ನು ಹತೋಟಿಯಲ್ಲಿಡುವುದು. ನಾಗರಿಕ ಸಮಾಜದಲ್ಲಿ ಕೋಮುವಾದಿ ಭಾವನೆಗಳನ್ನು ಕೆರಳಿಸುವ ಸಂವಿಧಾನವಿರೋಧಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವುದು. ನಿರುದ್ಯೋಗ, ಬಡತನ ಮೊದಲಾದವುಗಳನ್ನು ಪರಿಹರಿಸಿ ಜನರು ತಮ್ಮ ನಿಜವಾದ ಸಮಸ್ಯೆಗಳಿಗೆ ಕೋಮುವಾದದಲ್ಲಿ ಪರಿಹಾರ ಹುಡುಕಲು ಪ್ರಯತ್ನಿಸುವುದನ್ನು ತಪ್ಪಿಸುವುದು.

ಶಿಕ್ಷಣದಲ್ಲಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೋಮುವಾದಿಗಳ ಕೈವಾಡವನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ವಸ್ತುನಿಷ್ಠವಾದ ವಾಸ್ತವ ಸಾಮಾಜಿಕ ಶಿಕ್ಷಣ ನೀಡುವುದು. ಪೊಲೀಸರು ಮತ್ತು ಸೈನ್ಯ ಯಾವುದೇ ಸಂದರ್ಭದಲ್ಲಿಯೂ ಭಾರತದ ಎಲ್ಲ ಪ್ರಜೆಗಳನ್ನು ಸಮಾನವಾಗಿ ರಕ್ಷಿಸುವ ಹೊಣೆಯನ್ನು ಹೊತ್ತುಕೊಳ್ಳುವಂತೆ ಮಾಡುವುದು. ಏಕೆಂದರೆ, ಪೊಲೀಸರು ಮತ್ತು ಸೈನ್ಯ ಕೋಮುವಾದದ ಪ್ರಭಾವಕ್ಕೊಳಗಾದರೆ ದಮನಿತ ವರ್ಗಗಳ ದಮನ ಮತ್ತೆ ತೀವ್ರವಾಗುತ್ತದೆ. ದೇಶ ತನ್ನ ಅಭಿವೃದ್ಧಿಯನ್ನು ಕೋಮುವಾದದ ಹಿಂಸೆಗೆ ಬಲಿ ಕೊಡಬೇಕಾಗುತ್ತದೆ.

ಅಲ್ಪಾವಧಿ ಪರಿಹಾರಗಳೆಂದರೆ, ಕೋಮುಗಲಭೆಗಳು ಉಂಟಾದ ಸಂದರ್ಭದಲ್ಲಿ ಎಲ್ಲಾ ಧರ್ಮದ ನಾಯಕರನ್ನು ಸೇರಿಸಿ, ರಾಜಕಾರಣಿಗಳನ್ನು ಸೇರಿಸಿ  ಶಾಂತಿ ಸಮಿತಿಗಳನ್ನು ರಚಿಸುವುದು. ಕಟ್ಟುನಿಟ್ಟಾಗಿ ಪೊಲೀಸರು ಮತ್ತು ಸೈನ್ಯ ಜಾತ್ಯಾತೀತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನಸಾಮಾನ್ಯರನ್ನು ಒಗ್ಗೂಡಿಸಿ ಕೋಮುವಾದಿಗಳನ್ನು ಗುರುತಿಸಿ ಬೇರ್ಪಡಿಸುವಂತೆ ನೋಡಿಕೊಂಡಲ್ಲಿ ಭಾರತವನ್ನು ಕೋಮುವಾದದ ಗಂಡಾಂತರದಿಂದ ತಪ್ಪಿಸಬಹುದು ಎಂದು ಸಮಾಜವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳು

ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳು ರಾಷ್ಟ್ರೀಯ ಆಯೋಗಗಳ ಪ್ರತಿ ವರ್ಷದ ವರದಿಯನ್ನು ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಪರಿಶಿಷ್ಟ ಜಾತಿಗಳ ಮೇಲೆ ಹೆಚ್ಚುತ್ತಿರುವ ಹಿಂಸೆ ಮತ್ತು ದೌರ್ಜನ್ಯದ ಚಿತ್ರಣವು ಕಂಡುಬರುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ಜನರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳುವುದು, ಅವರ ಮೇಲೆ ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಹಲ್ಲೆ ನಡೆಸುವುದು ಕಂಡುಬರುತ್ತದೆ. ಪ್ರಬಲ ಜಾತಿಗಳು ಮತ್ತು ಪುರೋಹಿತಶಾಹಿಗಳು ಪರಿಶಿಷ್ಟ ಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ಎಸುಗುವುದು, ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವುದು, ಸಾರ್ವಜನಿಕವಾಗಿ ಅವಮಾನಪಡಿಸುವುದು, ಪರಿಶಿಷ್ಟ ಜಾತಿಯವರು ವಾಸಿಸುವ ಸ್ಥಳಗಳಿಗೆ ನುಗ್ಗಿ ದಾಂದಲೆ ಎಬ್ಬಿಸುವುದು, ಸಾರ್ವಜನಿಕ ಸ್ಥಳಗಳನ್ನು ಬಳಸುವ ಹಕ್ಕಿಗೆ ಅಡ್ಡಿಯುಂಟು ಮಾಡುವುದು, ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ, ಮಾಧ್ಯಮಗಳಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಉದ್ಯೋಗ ದೊರೆಯದಿರುವ ಪರಿಸ್ಥಿತಿಯನ್ನು ಉಂಟುಮಾಡುವುದು, ಶಾಲಾ ಕಾಲೇಜುಗಳಲ್ಲಿ ಮೀಸಲಾತಿಯ ಸೌಲಭ್ಯದಿಂದ ಬಂದವರೆಂದು ರಾಗಿಂಗ್‌ ಮಾಡುವುದು ಹೀಗೆ ಪರಿಶಿಷ್ಟ ಜಾತಿಗಳು ಅತ್ಯಂತ ಹೀನಾಯವಾದ ಪರಿಸ್ಥಿತಿಯನ್ನು ಜೀವಿಸುವ ಒತ್ತಾಯಕ್ಕೊಳಗಾಗಿವೆ.

ಪರಿಶಿಷ್ಟ ಜಾತಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಕೆಳಕಂಡ ಅಂಕಿಅಂಶಗಳು ದೃಢೀಕರಿಸುತ್ತವೆ. ೧೯೫೫ರಲ್ಲಿ ಪರಿಶಿಷ್ಟ  ಜಾತಿ ಮೇಲೆ ೧೮೦ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. ೧೯೬೦ರ ವೇಳೆಗೆ ಪ್ರಕರಣಗಳ ಸಂಖ್ಯೆ ೫೦೯ನ್ನು ತಲುಪಿತ್ತು. ೧೯೯೭ರವರೆಗೆ ಪ್ರಕರಣಗಳು ೧೮,೩೩೬ ರಷ್ಟಾಗಿದ್ದವು. ೧೯೯೨ರಲ್ಲಿ ಪ್ರಕರಣಗಳ ಸಂಖ್ಯೆ ೨೪,೯೨೨ಕ್ಕೆ ಏರಿತ್ತು. ೧೯೯೪ರಲ್ಲಿ ಪ್ರಕರಣಗಳ ಸಂಖ್ಯೆಯು ೩೩,೯೦೮ಕ್ಕೆ ಏರಿತ್ತು. ೧೯೭೭ರಲ್ಲಿ ಬಿಹಾರದ ಬೆಲ್ಚಿ ಗ್ರಾಮದ ಘಟನೆ, ಕರ್ನಾಟಕದ ಕಂಬಾಲಪಲ್ಲಿಯಲ್ಲಿ ದಲಿತರ ಸಾಮೂಹಿಕ ದಹನ, ಮಹಾರಾಷ್ಟ್ರದ ಖೈರ್ಲಂಜಿ ಹತ್ಯಾಕಾಂಡ ಮೊದಲಾದವು. ಪರಿಶಿಷ್ಟ ಜಾತಿಗಳ ಮೇಲೆ ನಡೆದ ಅನಾಗರಿಕ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ.

ಮುಖ್ಯವಾಗಿ ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸೆಗೆ ಜಾತಿಪದ್ಧತಿ, ಅಸ್ಪೃಶ್ಯತೆ, ಪುರೋಹಿತಶಾಹಿ ಮೌಲ್ಯಗಳು, ಪರಂಪರಾನುಗತ ಬಲಿಪಶುತನ, ಪರಿಶಿಷ್ಟ ಜಾತಿಗಳ ಬಡತನ ಮತ್ತು ಅಸಹಾಯಕತೆ, ಭೂರಹಿತತೆ, ಸಾರ್ವಜನಿಕ ಸಂಪತ್ತಿನಿಂದ ವಂಚನೆಗೊಳಗಾಗಿರುವುದು, ಆಡಳಿತದಲ್ಲಿ  ಸರಿಯಾದ ಪ್ರಾತಿನಿಧ್ಯವಿಲ್ಲದಿರುವುದು, ಪ್ರಬಲ ಜಾತಿಯ ಆಡಳಿತಶಾಹಿಯಿಂದ ಪ್ರಾಮಾಣಿಕ ಪ್ರಯತ್ನವಿಲ್ಲದೆ ಇರುವುದು, ಭ್ರಷ್ಟಾಚಾರ, ಅನಾಯಕತ್ವ, ಸಾಮಾಜಿಕ ಚಳವಳಿಗಳ ನಿಷ್ಕ್ರೀಯತೆ, ಸರ್ಕಾರಗ ಮೇಲೆ ಪ್ರಬಲ ಜಾತಿಯ ಹಿಡಿತ ಮತ್ತು ಓಟ್‌ ಬ್ಯಾಂಕ್‌ ರಾಜಕಾರಣ ಇತ್ಯಾದಿ ಅಂಶಗಳು ಕಾರಣವಾಗಿವೆ.

ಇದರಿಂದಾಗಿ ಭಾರತದ ದಲಿತ ಸಮುದಾಯ ನಿರಂತರ ಅಭದ್ರತೆಯಲ್ಲಿ ಮತ್ತು ದೌರ್ಜನ್ಯದಲ್ಲಿ ಬದುಕುತ್ತಿದೆ. ಅವರು ದಿನನಿತ್ಯದ ಬದುಕನ್ನು ಸುಗುಮವಾಗಿ ಸಾಗಿಸದೆ ಕಡಿಮೆ ವೇತನದಲ್ಲಿ ಇತರರು ಮಾಡಲು ಹಿಂಜರಿಯುವ ದೈಹಿಕ ಶ್ರಮದ ಕೆಲಸಗಳಲ್ಲಿ ಭಾಗಿಯಾಗಬೇಕಾಗಿದೆ ಮತ್ತು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಅಮಾನವೀಯ ಕೃತ್ಯಗಳಿಗೆ ಪರಿಶಿಷ್ಟ ಜಾತಿಯ ಮಹಿಳೆಯರು ಬಲಿಪಶುಗಳಾಗಿದ್ದಾರೆ. ಇವೆಲ್ಲವೂ ಸಂವಿಧಾನದ ಪ್ರಸ್ತಾವನೆ ಮತ್ತು ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ, ಅದರ ಸ್ಪಷ್ಟ ಉಲ್ಲಂಘನೆಯೂ ಆಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜಕೀಯ,  ಆರ್ಥಿಕ, ಶಾಸನಾತ್ಮಕ, ಸಾಮಾಜಿಕ, ಸಾಂಸ್ಕೃತಿ ಕ್ರಮವನ್ನು ಅಮೂಲಾಗ್ರವಾಗಿ ಕೈಗೊಳ್ಳದೆ ಹೋದರೆ ಭಾರತದ ಪರಿಶಿಷ್ಟ ಜಾತಿಗಳ ಸಮುದಾಯದ ಭವಿಷ್ಯವು ಏಕಕಾಲದಲ್ಲಿ ಹಿಂಸಾತ್ಮಕವೂ, ಸಂಘರ್ಷಾತ್ಮಕವೂ ಆಗಿ ಭಾರತೀಯ ಸಮಾಜ ನಿರಂತರ ಸಮಸ್ಯೆಗೆ ಒಳಗಾಗುವ ಸಂಭವವಿದೆ.

ಪರಿಶಿಷ್ಟ ಜಾತಿಗಳದ್ದು ಒಂದು ರೀತಿಯ ಸಮಸ್ಯೆಯಾದರೆ, ಪರಿಶಿಷ್ಟ ಬುಡಕಟ್ಟುಗಳ ಸಮಸ್ಯೆ ವಿಭಿನ್ನವಾಗಿದೆ. ೧೯೯೧ರ ಜನಗಣತಿಯ ಪ್ರಕಾರ ಭಾರತದಲ್ಲಿ ೬೭.೬೭ ಮಿಲಿಯನ್‌ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಈ ಜನಸಂಖ್ಯೆಯು ಇಂಗ್ಲೆಂಡಿನ ಒಟ್ಟು ಜನಸಂಖ್ಯೆಗೆ ಸಮಾನವಾಗಿದೆ. ಒಟ್ಟಾರೆಯಾಗಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. ೮.೦೮ರಷ್ಟು ಬುಡಕಟ್ಟು ಜನರಿದ್ದಾರೆ. ಬುಡಕಟ್ಟು ಜನಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಕೆಳಕಂಡಂತೆ ಪಟ್ಟಿ ಮಾಡಬಹುದು.

ಭೂರಹಿತತೆ ಅಥವಾ ಭೂಒಡೆತನವಿದ್ದರೂ ಅದು ಆರ್ಥಿಕವಾಗಿ ಲಾಭದಾಯಕವಾಗಿಲ್ಲದೆ ಇರುವುದು, ಸಾಕ್ಷರತೆಯ ಪ್ರಮಾಣ ಅತ್ಯಂತ ಕಡಿಮೆ ಇದೆ ಅಂದರೆ ಶೇ. ೧೭.೭ರಷ್ಟಿರುವುದು ಇದಕ್ಕೆ ಮುಖ್ಯವಾದ ಕಾರಣವಾಗಿದೆ. ಬುಡಕಟ್ಟು ಜನಗಳಿಗೆ ಸೇರಿದ ಭೂಮಿಯನ್ನು ಕಂಟ್ರ್ಯಾಕ್ಟರ್‌ಗಳು ಮತ್ತು ರಾಜಕೀಯ ಗಣ್ಯವರ್ಗ ವಶಪಡಿಸಿಕೊಂಡಿದೆ. ಜಮೀನುದಾರರು, ದಲ್ಲಾಳಿಗಳು, ಅಬಕಾರಿ, ರೆವಿನ್ಯೂ ಮತ್ತು ಪೊಲೀಸ್‌ಅಧಿಕಾರಿಗಳು ಪರಿಶಿಷ್ಟ ಬುಡಕಟ್ಟುಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎನ್ನುವ ವರದಿಗಳು ಹೇರಳವಾಗಿವೆ.

ಪರಿಶಿಷ್ಟ ಬುಡಕಟ್ಟುಗಳ ಮೇಲೆ ನಡೆಯುತ್ತಿರುವ ಹಿಂಸೆಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗಿರುವುದು ಭಾರತ ಸರ್ಕಾರ ಹೊರ ಹಾಕಿರುವ ಅಂಕಿಅಂಶಗಳಿಂದ ತಿಳಿದುಬರುತ್ತದೆ. ೧೯೯೨ರಲ್ಲಿ ೪,೩೦೬ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. ೧೯೯೪ರ ವೇಳೆಗೆ ಈ ಪ್ರಕರಣಗಳ ಸಂಖ್ಯೆಯು ೫,೦೧೯ಕ್ಕೇರಿತ್ತು.

ಬಹುತೇಕ ಬುಡಕಟ್ಟುಗಳು ಕೈಗಾರಿಕಾ ಕೇಂದ್ರದಿಂದ ದೂರ ವಾಸಿಸುತ್ತಿರುವುದರಿಂದ ಅವರಿಗೆ ಕೈಗಾರಿಕೆ ಮತ್ತು ಸಾರಿಗೆ ಸಂಪರ್ಕ ವಲಯಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ. ಸುರಕ್ಷಿತ ಕುಡಿಯುವ ನೀರು, ಉತ್ತಮ ಶಿಕ್ಷಣ ಬಹುತೇಕ ಬುಡಕಟ್ಟುಗಳಿಗೆ ಎಟುಕದ ವಿಚಾರವಾಗಿದೆ. ಸಾಲ, ಅನಕ್ಷರತೆ, ಜೀತಗಾರಿಕೆ, ಗುಣಪಡಿಸಲಾಗದ ಕಾಯಿಲೆಗಳು ಬುಡಕಟ್ಟುಗಳನ್ನು ಘಾಸಿಗೊಳಿಸುತ್ತಿವೆ. ಇದರ ಜೊತೆಗೆ ಬುಡಕಟ್ಟುಗಳು ನಿರಂತರವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದು ಚಾರಿತ್ರಿಕವಾಗಿ ಕಂಡುಬಂದಿರುವ ವಿಚಾರ. ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬುಡಕಟ್ಟುಗಳು ೧೮ನೆಯ ಶತಮಾನದಿಂದಲೂ ಒಂದಲ್ಲಾ ಒಂದು ಬಗೆಯ ಹೋರಾಟವನ್ನು ತೊಡಗಿಕೊಂಡಿವೆ.

೧೯೭೨ರಲ್ಲಿ ಬಿಹಾರ,  ಆಂಧ್ರಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌, ಅರುಣಾಚಲಪ್ರದೆಶ, ಅಸ್ಸಾಂ ಮೊದಲಾದ ಕಡೆ ಬುಡಕಟ್ಟು, ದಂಗೆಗಳು ಕಂಡುಬಂದವು. ೧೯ನೆಯ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಮಿಜೋ, ಕೋಲ್‌, ಮುಂಡಾ, ಡಾಫ್ಲಾ, ಖಾಸಿ, ಗಾರೋ, ಖಚಾರಿ, ಸಂತಾಲ ಮೊದಲಾದ ಬುಡಕಟ್ಟುಗಳು ಹೋರಾಟ ನಡೆಸಿದರು. ಸ್ವಾತಂತ್ರ್ಯಾನಂತರ ಬುಡಕಟ್ಟು ಜನರು ನಾಲ್ಕು ರೀತಿಯ ಚಳವಳಿಗಳಲ್ಲಿ ತೊಡಗಿರುವುದನ್ನು ಸಮಾಜ ವಿಜ್ಞಾನಿಗಳು ಗುರುತಿಸುತ್ತಾರೆ.

ರಾಜಕೀಯ ಸ್ವಾಯತ್ತತೆಗಾಗಿ ಅಥವಾ ರಾಜ್ಯಸ್ಥಾಪನೆಗಾಗಿ ನಡೆಯುತ್ತಿರುವ ಚಳವಳಿಗಳುನಾಗ, ಮಿಜೋ, ಜಾರ್ಖಂಡ್‌, ರೈತಾಪಿ ಸ್ವರೂಪದ ಚಳವಳಿಗಳು, ಅರಣ್ಯ ಭೂಮಿ ಚಳವಳಿಗಳು, ಧಾರ್ಮಿಕ, ಸಾಂಸ್ಕೃತಿಕ ಚಳವಳಿಗಳು. ಈ ರೀತಿಯ ಚಳವಳಿಗಳು ಬುಡಕಟ್ಟುಗಳ ಸಮಸ್ಯೆಗಳನ್ನು ಸಾರ್ವಜನಿಕ ವಲಯದಲ್ಲಿ ಮತ್ತು ರಾಜಕಾರಣದಲ್ಲಿ ಚರ್ಚೆಯ ವಿಷಯವನ್ನಾಗಿಸಿವೆ ಮತ್ತು ಸರ್ಕಾರ ಮತ್ತು ಆಡಳಿತದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೂ ಪರಿಶಿಷ್ಟ ಬುಡಕಟ್ಟುಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರಗಳು ತೋರುತ್ತಿರುವ ಕಾಳಜಿಯು ಕಡಿಮೆ ಎಂದೇ ಹೇಳಬಹುದು. ಶಿಕ್ಷಣ, ಆರೋಗ್ಯ, ಕೌಶಲ್ಯಗಳ ತರಬೇತಿ, ಅನಗತ್ಯ ಶಾಸನಗಳ ರದ್ಧತಿ, ಭೂಒಡೆತನ, ಅಭಿವೃದ್ಧಿ ಕಾರ್ಯಕ್ರಮಗಳ ಪ್ರಾಮಾಣಿಕ ಜಾರಿ, ಆಡಳಿತಶಾಹಿಯ ಕಿರುಕುಳ ತಪ್ಪಿಸುವಿಕೆ, ಸ್ವಯಂಸೇವಾ ಸಂಸ್ಥೆಗಳ  ಸಕ್ರೀಯ ಸಕಾರಾತ್ಮಕ ಕೆಲಸ ಬುಡಕಟ್ಟುಗಳ ಸಮಸ್ಯೆಯನ್ನು ಪರಿಹರಿಸಲು ಇರುವ ಮಾರ್ಗಗಳಾಗಿವೆ. ಇವುಗಳೊಂದಿಗೆ ಸ್ವಾತಂತ್ರ್ಯಾನಂತರ ಭಾರತೀಯ ಸಮಾಜವು ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ, ನಗರೀಕರಣ ಮೊದಲಾದ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.