೧೯೭೦ರ ದಶಕದಲ್ಲಿ ಆರಂಭಗೊಂಡ ಮೂರನೆಯ ಹಂತದಲ್ಲಿ ಪರಾವಲಂಬನತ್ವ ಸಿದ್ಧಾಂತವು ಪ್ರಮುಖ ಬದಲಾವಣೆಗಳನ್ನು ಕಂಡಿತು. ಈ ಬದಲಾವಣೆಗಳಿಗೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ, ೧೯೬೦ರ ದಶಕದ ಕೊನೆಯ, ೧೯೭೦ರ ದಶಕದ ಮೊದಲ ವರ್ಷಗಳಲ್ಲಿ ಸಮಾಜ ವಿಜ್ಞಾನಗಳಲ್ಲಿ ಕಂಡುಬಂದಂತಹ ಬದಲಾವಣೆಗಳು .ಈ ಅವದಿಯಲ್ಲಿ ಚರ್ಯಮೂಲತತ್ವದ(ಬಿಹೇವಿಯರಿಸಮ್) ಪ್ರಭಾವವು ಕಡಿಮೆಯಾಗಿದ್ದು ಯೂರೋಪಿನ ಮಾರ್ಕ್ಸ್‌ವಾದಿ ಲೇಖಕರು ರಾಜ್ಯದ ಬಗೆಗಿನ ಮಾರ್ಕ್ಸ್ ವಾದಿ ಅಧ್ಯಯನಗಳಲ್ಲಿ ಅದುವರೆಗಿನ ಕಾಣದಿದ್ದ ಮೊನಚನ್ನು ಮಿಲಿಬ್ಯಾಂಡ್, ಪುಲಾಂಟ್ಯಾಸ್, ಲಕ್ಲಾವ್ ಮುಂತಾದವರ ಬರಹಗಳು ತಂದುಕೊಟ್ಟವು. ‘ಉತ್ಪಾದನಾ ಪದ್ಧತಿ’.ಒಂದು ವಿಶ್ಲೇಷಣಾ ಮಾದರಿಯ ಮತ್ತೆ ಪ್ರಾಧಾನ್ಯವನ್ನು ಕಂಡಿತು. ಎರಡನೆಯ ಕಾರಣವೆಂದರೆ ಅಲ್ಲಿಯವರೆಗಿನ ಪರಾವಲಂಬನತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ಅನೇಕ ತೃತೀಯ ಜಗತ್ತಿನ ರಾಜ್ಯಗಳು –ಬ್ರೆಜಿಲ್, ನೈಜೀರಿಯಾ, ದಕ್ಷಿಣ ಕೊರಿಯಾ, ಭಾರತ ಇತ್ಯಾದಿ ಕೈಗಾರಿಕೀಕರಣದ ಪ್ರಕ್ರಿಯೆಯನ್ನು ಕಂಡದ್ದು . ಈ ಬೆಳವಣಿಗೆಯ ಅಂಚಿನ ರಾಜ್ಯಗಳಲ್ಲಿ ಕೈಗಾರಿಕೀಕರಣದ/ಆರ್ಥಿಕ ಅಭಿವೃದ್ಧಿಯ ಸಾಧ್ಯತೆ ಮತ್ತು ಅವುಗಳ ವಿವಿಧ ರೂಪುಗಲ ಬಗ್ಗೆಯೂ ಅವನ್ನು ಸಾಧ್ಯವಾಗಿಸುವಲ್ಲಿ, ಮುನ್ನಡೆಸುವಲ್ಲಿ ರಾಜ್ಯದ ಪಾತ್ರದ ಬಗೆಗೂ ಅನೇಕ ವಾದವಿವಾದಗಳನ್ನು ಎಡ-ಬಲ ಪಂಥೀಯ ವಿದ್ವಾಂಸರಲ್ಲಿ ಹುಟ್ಟುಹಾಕಿತು.

ಮೊದಲಿಗೆ ಪರಾವಲಂಬನತ್ವ ವಿದ್ವಾಂಸರು ಈ ಬದಲಾವಣೆಗಳಿಗೆ ಉತ್ತರವಾಗಿ ತಮ್ಮ ‘ಗತಿರಹಿತ’ ಮಾದರಿಯ ಜಾಗದಲ್ಲಿ “ಪರಾವಲಂಬಿ ಬಂಡವಾಳಶಾಹೀ ಕೈಗಾರಿಕೀಕರಣ” ಅಥವಾ “ಪರಾವಲಂಬೀ ಪುನರುತ್ಪಾದನೆ” ಎಂಬ ಮಾದರಿಯನ್ನು ಬದಲಾವಣೆ ಮಾಡುವಷ್ಟಕ್ಕೆ ಮಾತ್ರ ಸೀಮಿತಗೊಳಿಸಿದರು. ಉದಾಹರಣೆಗೆ, ಲ್ಯಾಟಿನ್ ಅಮೆರಿಕಾ ಖಂಡದಲ್ಲಾದ ಬದಲಾವಣೆಗಳನ್ನು ಗಮನದಲ್ಲಿಸಿಕೊಂಡು ತೃತೀಯ ಜಗತ್ತಿನ ರಾಷ್ಟ್ರಗಳ ಬರಿಯ ಬಂಡವಾಳ ಉತ್ಪನ್ನಗಳ ರಫ್ತುದಾರರಾಗಿದ್ದಂತಹ ನೂತನ ಶ್ರಮವಿಭಜನಾ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬಂದಿದೆ ಎಂದು ಪ್ರ್ಯಾಂಕ್ ಒಪ್ಪಿಕೊಂಡರು. ಆದರೆ ಈ ಬೆಳವಣಿಗೆಯು ಒಂದು ಶತಮಾನದ ಹಿಂದೆ ಯೂರೋಪಿನಲ್ಲಾದಂತೆ ಸ್ವಾಯತ್ತ ಕೈಗಾರಿಕಾಭಿವೃದ್ಧಿ, ಬಲಿಷ್ಟ ಸ್ವದೇಶಿ ಬೂರ್ಜ್ವಾಸಿ ಮತ್ತು ಆಂತರಿಕ ಮಾರುಕಟ್ಟೆಗಳ ಅಭಿವೃದ್ಧಿಗೆ ಆಸ್ಪದ ಮಾಡಿಕೊಡುವುದಿಲ್ಲ. ಮಾಡಿಕೊಡುವುದಕ್ಕೆ ಸಾಧ್ಯವೂ ಇಲ್ಲ ಎಂದು ಪ್ರತಿಪಾದಿಸಿದರು. ಅಂಚಿನಲ್ಲಿ ಸೃಷ್ಟಿಯಾದ ಮಿಗುತಾಯ ಅಲ್ಲಿಯೇ ತೊಡಗಿಸಲ್ಪಡದೆ ಕೇಂದ್ರಕ್ಕೆ ಸಾಗಿಸಲ್ಪಡುತ್ತದೆ;ಅಷ್ಟೇ ಅಲ್ಲ, ಈ ವ್ಯವಸ್ಥೆಯ ಪುನರುತ್ಪಾದನೆಗೆ ರಾಜಕೀಯ ಚೌಕಟ್ಟೊಂದನದನು ನಿರ್ಮಿಸಿಕೊಡುವ ಸ್ಥಳೀಯ ವರ್ಗಗಳು ಈ ಹಂತದಲ್ಲಿಯೂ ಪ್ರಬಲ ಕೇಂದ್ರ ಏಕಾಧಿಪತ್ಯದ ಬಂಡವಾಳ, ಅಂಚಿನ ಅಧೀನ ಸಹವರ್ತಿಗಳು, ಊಳಿಗಮಾನ್ಯ ಶಕ್ತಿಗಳು ಹಾಗೂ ದಲ್ಲಾಳಿ ಬೂರ್ಜ್ವಾಸಿ ಇವುಗಳನ್ನೊಳಗೊಂಡ ಅಂತರಾಷ್ಟ್ರೀಯ ವರ್ಗ ಮೈತ್ರಿಕೂಟದ ಅಂಗವಾಗಿಯೇ ಉಳಿದಿರುತ್ತವೆ. ೧೯೭೦ರ ದಶಕದಲ್ಲಿ ಲ್ಯಾಟಿನ್ ಅಮೆರಿಕಾ ರಾಜ್ಯಗಳು ಮಿಲಿಟರಿ ನಿರಂಕುಶತ್ವಕ್ಕೆ ತಿರಿಗಿದ್ದನ್ನು ಬಂಡವಾಳದ ವೃದ್ದಿ-ಸಂಚಯದಲ್ಲಿ ಕಂಡುಬಂದ ಬಿಕ್ಕಟ್ಟಿಗೆ ಪ್ರತಿಕ್ರಿಯೆಯನ್ನಾಗಿ ಫ್ರ್ಯಾಂಕ್ ನೋಡುತ್ತಾರೆ. ಪ್ರಜಾತಾಂತ್ರಿಕ ಅಥವಾ ಇನ್ನಿತರ ರಾಜಕೀಯ ವ್ಯವಸ್ಥೆಗಳು ವಿದೇಶಿ ಅಥವಾ ಸ್ವದೇಶಿ ಬಂಡವಾಳದ ಅಗತ್ಯವನ್ನು ಪೊರೈಸದೇ ಹೋದಾಗ ನಿರಂಕುಶತ್ವದ ಜಾಗವನ್ನು ತುಂಬುತ್ತದೆ. ಕೇವಲ ರಾಜ್ಯದ್ದಷ್ಟೇ ಅಲ್ಲದೆ ಸಮಾಜದ ಎಲ್ಲ ಅಂಗಗಳನ್ನು ಒಳಗೊಂಡಂತಹ ಇಂತಹ ಮಿಲಿಟರೀಕರಣವು ತೃತೀಯ ಜಗತ್ತಿನ ರಾಷ್ಟ್ರಗಳನ್ನು ಒಂದೊಂದಾಗಿ ಕಬಳಿಸುತ್ತಿದೆ.

ವಾಲರ್ ಸ್ಟೈನ್‌ರು, ತೃತೀಯ ಜಗತ್ತಿನಲ್ಲಿ .ಕೈಗಾರಿಕೀಕರಣ ಕಂಡುಬಂದುದಕ್ಕೆ ಪ್ರತಿಕ್ರಿಯೆಯಾಗಿ ಪರಾವಲಂಬಿ ಪುನರುತ್ಪಾದನೆಯನ್ನು ಪರಿಕಲ್ಪನೆಯನ್ನು ಸಮರ್ಥಿಸುತ್ತಲೇ,ಅವಲಂಬಿತ ರಾಜ್ಯಗಳು ಒಂದು ಗುಂಪಿನಿಂದ ಮತ್ತೊಂದು ಗುಂಪಿಗೆ (ಅಂಚಿನಿಂದ ಉಪ-ಅಂಚಿಗೆ, ಉಪ-ಅಂಚಿನಿಂದ ಕೇಂದ್ರಕ್ಕೆ) ನೆಲೆ ಬದಲಾಯಿಸುವುದಕ್ಕೆ ‘‘ಸೀಮಿತ ಸಾಧ್ಯತೆ”ಗಳಿವೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಈ ಸಾಧ್ಯತೆಗಳನ್ನು ಅವರು ತೃತೀಯ ರಾಜ್ಯಗಳಿಗೆ ಲಭ್ಯವಿರುವ ಮೂರ “ತಂತ್ರ”ಗಳ ಮೂಲಕ ವಿವರಿಸುತ್ತಾರೆ.

ಮೊದಲನೆಯದು “ಅವಕಾಶ ಸ್ವಾಧೀನತೆ”-ವಿಶ್ವ ಮಾರುಕಟ್ಟೆಯು ಸಂಕುಚಿತಗೊಳ್ಳುತ್ತಿರುವ ಸಮಯದಲ್ಲಿ ತಾತ್ಕಾಲಿಕವಾಗಿ ಕೇಂದ್ರವು ರಾಜಕೀಯ-ಆರ್ಥಿಕ ದುರ್ಬಲತೆಯನ್ನು ಕಂಡಾಗ ಬಲಿಷ್ಟವಾದ ಅಂಚಿನ ರಾಜ್ಯಗಳು ಅಕ್ರಮವಾಗಿ ಐ.ಎಸ್.ಐ.ಯನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ. ೧೯ನೆಯ ಶತಮಾನದಾದ್ಯಂತ ರಷ್ಯಾ, ಇಟಲಿಗಳು, ೧೯೩೦ರ ದಶಕದ ಮೆಕ್ಸಿಕೊ, ಬ್ರೆಜಿಲ್ ಗಳು ಈ ‘ತಂತ್ರ’ದ ಉದಾಹರಣೆಗಳು. ಈಗಾಗಲೇ ಸ್ಥಿರಗೊಂಡ ಕೈಗಾರಿಕಾ ಕ್ಷೇತ್ರವಿದ್ದು ಅನುಕೂಲಕರ ಸಮಯದಲ್ಲಿ ವಿಸ್ತರಿಸಿಕೊಳ್ಳಬಹುದಾದಂತಹ, ಆದರೆ ತೊದರೆಗಳಿರುವಂತಹ, ರಾಜ್ಯಗಳಿಗೆ ಮಾತ್ರ ಈ ಸಾಧ್ಯತೆ ಇದೆ. ಏಕೆಂದರೆ ಯಂತ್ರಗಳ ಹಾಗೂ ತಂತ್ರಜ್ಞಾನದ ಆಮದಿನಿಂದ ಮಾತ್ರ ಉಪ ಅಂಚಿನ ರಾಜ್ಯಗಳು ಕೈಗಾರಿಕೀಕರಣಗೊಳ್ಳಲು ಸಾಧ್ಯ; ಈ ಸ್ಥಿತಿಯಲ್ಲಿ ಐ.ಎಸ್. ಐ ಬಹುಸಾರಿ ಭಾರತದಲ್ಲಾದಂತೆ ಕೇವಲ ಪರಾವಲಂಬನೆಯ ಹೊಸ ಮಾದರಿಗಳನ್ನು ಹಳೆಯದರ ಜಾಗದಲ್ಲಿರಿಸಲು ಮಾತ್ರ ಶಕ್ತರಾಗಿರುತ್ತದೆ. ಆಂತರಿಕವಾಗಿ ಕೂಡ ಮೇಲಿನ ಸಾಧ್ಯತೆಯ ಬಳಕೆಗೆ ಒಂದು ಹೊಸ ರಾಷ್ಟ್ರೀಯವಾದಿ ವರ್ಗಮೈತ್ರಿಕೂಟದ ಅವಶ್ಯಕತೆ ಇರುತ್ತದೆ. ಇದುವರೆಗೂ ಯಾವ ತೃತೀಯ ಜಗತ್ತಿನ ರಾಷ್ಟ್ರವೂ ಪಶ್ಚಿಮದ ಮೇಲಿನ ತನ್ನ ಅವಲಂಬನೆಯಿಂದ  ಹೊರಬರುವಲ್ಲಿ ಯಶಸ್ವಿಯಾಗಿಲ್ಲ. ಈ ಸಮಸ್ಯೆಯು “ತಡ”ವಾಗಿ ಕೈಗಾರಿಕೀಕರಣಗೊಂಡ ರಾಜ್ಯಗಳ ವಿಷಯದಲ್ಲಂತೂ ಬಹಳ ಗಂಭೀರವಾದದ್ದು.

ಎರಡನೆಯ ತಂತ್ರ “ಆಹ್ವಾನ”ದ್ದು – ಈ ಮಾದರಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಕೆಲ ನಿರ್ದಿಷ್ಟ ಕೈಗಾರಿಕಾವಲಯಗಳ ಅಭಿವೃದ್ಧಿಗೋ ಅಥವಾ ಕೈಗಾರಿಕಾ ತಳಹದಿಯ ನಿರ್ಮಾಣಕ್ಕೆ ಸರ್ಕಾರಗಳು ಆಹ್ವಾನಿಸುತ್ತವೆ. ಮೊದಲ ತಂತ್ರಕ್ಕೆ ವಿರುದ್ಧವಾಗಿ ಈ ಸಾಧ್ಯತೆ ಬಳಕೆಯಾಗುವುದು ತನ್ನ ಪ್ರಭಾವಲಯದ ವಿಸ್ತರಣೆಯಲ್ಲಿ ತೊಡಗಿದಂತಹ ಕೇಂದ್ರಕ್ಕೆ, ಸ್ವಸಾಮರ್ಥ್ಯದಿಂದ ಕೈಗಾರಿಕೀಕರಣಗೊಳ್ಳಲಾಗದ ರಾಜ್ಯಗಳು ಆಹ್ವಾನ ನೀಡಿದಾಗ.ಈ ತಂತ್ರದಲ್ಲಿ ನೆರವು ಹಾಗೂ ತಂತ್ರಜ್ಞಾನದ ಲಭ್ಯತೆಯ ಅನುಕೂಲವಿದ್ದಾಗ್ಯೂ ಮೊದಲ ತಂತ್ರಕ್ಕೆ ಹೋಲಿಸಿ ನೋಡಿದರೆ ಅತಿಥೇಯ ರಾಜ್ಯಗಳು ಕೆಳಮಟ್ಟದ ಕೈಗಾರಿಕೀಕರಣವನ್ನು ಮಾತ್ರ ಕಾಣಲು ಶಕ್ಯವಾಗಿ ಅನೇಕ ಬಾರಿ ದೀರ್ಘಕಾಲೀನ ಅವಲಂಬನೆಯ ಅನುಭವಕ್ಕೆ ಗುರಿಯಾಗುತ್ತದೆ. ಕೇವಲ ಪ್ರಬಲ ರಾಜ್ಯಗಳಷ್ಟೇ ಬಹುರಾಷ್ಟ್ರೀಯ ಕಂಪನಿಗಳೊಡನೆ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯವಹರಿಸಲು ಸಾಧ್ಯ.

ಮೂರನೆ ತಂತ್ರ ‘‘ಸ್ವಾವಲಂಬನೆ”ಯದ್ದು.ಇದು ಸಾಂಪ್ರದಾಯಿಕ/ಶಾಸ್ತ್ರೀಯ ಬ್ರಿಟಿಷ್ ಮಾದರಿಗೆ ಹತ್ತಿರವಾಗಿದ್ದರೂ ಅತ್ಯಂತ ಕಡಿದಾದದ್ದು  ಎಂಬುದನ್ನು ಭಾರತ, ವಾಂಜಾನಿಯಾ ಮೊದಲಾದ ದೇಶಗಳು ಸ್ವಾನುಭವದಿಂದ ಕಂಡುಕೊಂಡಿವೆ. ಸಮಾಜವಾದೀ ರೂಪುಗಳನ್ನು (ಸಮಾಜವಾದವೇ ಅಲ್ಲದಿದ್ದರೂ) ಅನುಸರಿಸುವುದು ಈ ಹಾದಿಯನ್ನು ಸುಲಭಗೊಳಿಸುವಂತೆ ತೋರುವುದಿಲ್ಲ. ಎಂತಿದ್ದರು ಈ ಎಲ್ಲ ತಂತ್ರಗಳನ್ನು ಕೇವಲ ಬಲಿಷ್ಟ ರಾಜ್ಯಗಳಷ್ಟೇ ಅದೂ ಇನ್ನಿತರ ಉಪ-ಅಂಚಿನ ರಾಜ್ಯಗಳ ಹಿತಾಸಕ್ತಿಗೆ ಮಾರಕವಾಗಿಯೇ ಅನುಸರಿಸಲು ಸಾಧ್ಯ, ಅಲ್ಲದೆ ಅಂತಿಮ ವಿಶ್ಲೇಷಣೆಯಲ್ಲಿ ಇದುವರೆವಿಗೂ ಒಂದು ಅಂಚಿನ ರಾಜ್ಯವು ಕೇಂದ್ರಸ್ಥಾನವನ್ನು ಪಡೆದಿರುವ ಉದಾಹರಣೆ ಇಲ್ಲ; ಏನಿದ್ದರೂ ಸಣ್ಣಪುಟ್ಟ ಬದಲಾವಣೆಗಳು ಮಾತ್ರ ಸಾಧ್ಯವಿರುವಂತೆ ಕಂಡುಬಂದಿದೆ.

ಈ ಚರ್ಚೆಗಳು ‘ಪರಾವಲಂಬೀ ಪುನರುತ್ಪಾದನೆ’ಯ ಸಿದ್ಧಾಂತವನ್ನು ಅನೇಕ ರಾಜ್ಯಗಳಿಗೆ ಅಳವಡಿಸಿ ಅಧ್ಯಯನ ನಡೆಸಲು ವಿದ್ವಾಂಸರನ್ನು ಪ್ರೇರೇಪಿಸಿತು. ಉದಾಹರಣೆಗೆ, ಫುರ್ಟಾಡೋ ಅವರು ಬ್ರೆಜಿಲ್ ನ ಕೈಗಾರಿಕೀಕರಣದ ಮೂಲೊತ್ತೇಜಕ, ಅದರ ಪ್ರಕ್ರಿಯೆ ಹಾಗೂ ಸ್ವಭಾವ ಪ್ರಕೃತಿಗಳು ಬ್ರಿಟನ್ನಿನದಕ್ಕಿಂತ ಭಿನ್ನವಾಗಿದ್ದವೆಂದು ತೋರಿಸುತ್ತಾರೆ. ಬ್ರಿಜಿಲ್ ನಲ್ಲಿ ಹೆಚ್ಚುತ್ತಿದ್ದ ರಫ್ತು (ಅದರಲ್ಲೂ ಕಾಫಿ ಬೆಳೆ) ಮೂಲ ಉತ್ತೇಜಕವಾಗಿದ್ದು ಐ.ಎಸ್.ಐ. ನಂತರದ ಬೆಲವಣಿಗೆಯಾಗಿತ್ತು. ಹೀಗಾಗಿ ಅಲ್ಲಿ ಸ್ವಾಯತ್ತ ಕೈಗಾರಿಕೀಕರಣ ಸಾಧ್ಯವಾದದ್ದು ಐ.ಎಸ್.ಐ. ನಿಂದಲ್ಲ; ಬದಲಾಗಿ ಕೇಂದ್ರದ ತಾತ್ಕಾಲಿಕ ಅಶಕ್ತತೆಯಿಂದಾಗಿ. ಈ ಸಂದರ್ಭದಲ್ಲಿ ಕೆನ್ಯಾ ಬಗೆಗಿನ ಕಾಲಿನ್ ಲೆಯ್ ಬರವಣಿಗೆ (೧೯೭೪), ಉಗಾಂಡಾ ಬಗೆಗಿನ ಮುಮ್ದಾನಿಯವರ ಅಧ್ಯಯನ (೧೯೭೬), ಆಗ್ನೇಯ ಏಷಿಯಾದ ನೂತನ ಕೈಗಾರಿಕೀಕರಣಶೀಲ ಆರ್ಥಿಕತೆಗಳ ರಫ್ತು ಆಧಾರಿತ ಉತ್ಪನ್ನ ವ್ಯವಸ್ಥೆಯನ್ನು ಕುರಿತಾದ ಅಧ್ಯಯನಗಳನ್ನು ಇಲ್ಲಿ ಹೆಸರಿಸಬಹುದು.

ಪರಾವಲಂಬನ ಸಿದ್ಧಾಂತದ ಈ ಹಂತದ ‘ರಾಜ್ಯ’ ಪರಿಕಲ್ಪನೆಯನ್ನು ಹಂಜಾ ಅಲವಿಯವರು ಸ್ಪಷ್ಟವಾಗಿ ಸಂಗ್ರಹಿಸಿದ್ದಾರೆ. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಒಂದು ‘ಸರ್ವಕಾಲಿಕ/ದೇಶಿಕ’ ಸಿದ್ಧಾಂತದ ರಚನೆ ಅಸಾಧ್ಯವೆಂದು ವಾದಿಸುತ್ತಾ ಬಂಡವಾಳಶಾಹಿಯು ಅಂಚು ಮತ್ತು ಕೇಂದ್ರಗಳಲ್ಲಿ ಬೇರೆ ಬೇರೆಯಾಗಿ ರುತ್ತದೆಂದೂ, ಅವೆರಡು ಒಂದೇ ವ್ಯವಸ್ಥೆಯ ಭಾಗಗಳೆಂದು ನೋಡುವುದು ತಪ್ಪೆಂದೂ, ಅಲವಿ ಪ್ರತಿಪಾದಿಸುತ್ತಾರೆ. ಈ ದಿಸೆಯಲ್ಲಿ ‘ಅಂಚಿನ ಬಂಡವಾಳಶಾಹಿ’ ಎಂಬ ಪರಿಕಲ್ಪನೆಯನ್ನು ಮುಂದಿಟ್ಟು ಅದರ ಆಧಾರದ ಮೇಲೆ ವಸಾಹತೋತ್ತರ ಸಮಾಜಗಳ ‘ರಾಜ್ಯ’ದ ಬಗ್ಗೆ ಹೊಸ ಸಿದ್ಧಾಂತವೊಂದನ್ನು ಮಂಡಿಸುತ್ತಾರೆ. ವಸಾಹತೋತ್ತರ ರಾಜ್ಯವು ಯೂರೋಪಿನ ರಾಜ್ಯಕ್ಕಿಂತ  ಭಿನ್ನವಾದದ್ದು.ಅದೊಂದು “ಅತಿಯಾಗಿ ಬೆಳೆದ” ಸಾಪೇಕ್ಷವಾಗಿ ಸ್ವಾಯತ್ತವಾದ , ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಬಂಡವಾಳದ ನಡುವಿನ ಮಧ್ಯವರ್ತಿ ಎಂದು ನಿರ್ವಚಿಸುತ್ತಾರೆ.‘ಸಾರ್ವದೇಶಿಕ’ ಸಿದ್ಧಾಂತ ಗಳನ್ನು ಕಟ್ಟುವ ಮುನ್ನ ಪ್ರತಿರಾಜ್ಯವನ್ನು ಪ್ರತ್ಯೇಕವಾಗಿ ಅಧ್ಯಯನಿಸಬೇಕಾದ ಅಗತ್ಯವಿದೆಯೆಂದು ನಂಬಿದ ಅಲವಿ ವಸಾಹತೋತ್ತರ ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಈ ಸಿದ್ಧಾಂತವನ್ನು ಅನ್ವಯಿಸಿ, ಅಶಕ್ತ ರಾಜಕೀಯ ನಾಯಕತ್ವ ರಾಹಿತ್ಯಗಳಿಂದಾಗಿ ಬಹುಪಾಲು ತೃತೀಯ ಜಗತ್ತಿನ ರಾಜ್ಯಗಳು ಅಧಿಕಾರಶಾಹಿ-ಮಿಲಿಟರಿ ಅಲ್ಪ ಜನಾಧಿಪತ್ಯದೆಡೆಗೆಸಾಗಿದವು ಎಂದು ವಿಶ್ಲೇಷಿಸುತ್ತಾರೆ. ಆದಾಗ್ಯೂ ‘ರಾಚನಿಕ ವಿಧಾಯಕ’ದ ಒಂದು ಕಲ್ಪನೆ ಅವರ ಅಧ್ಯಯನಗಳಲ್ಲಿ ಹಾಸುಹೊಕ್ಕಾಗಿರುವುದರಿಂದಲೇ ಆಲವಿಯವರನ್ನು ಅಧೀನ ಅಭಿವೃದ್ಧಿ ವಿಚಾರಧಾರೆಯ ಪ್ರತಿಪಾದಕರಾಗಿ ಗುರುತಿಸಬಹುದು. ಪ್ರತಿ ಅವಲಂಬಿತ ರಾಜ್ಯದ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ಮೇಲಿನ ಅವಲಂಬನಾ ಸ್ವರೂಪ ಹಾಗೂ ವಿಸ್ತಾರದ ಸರಿಯಾದ ಗ್ರಹಿಕೆಗೆ ಆಯಾ ರಾಜ್ಯದ ಪ್ರತ್ಯೇಕ ಅಧ್ಯಯನದ ಅವಶ್ಯಕತೆ ಇದೆ ಎಂದು ಇತ್ತಿಹೇಳಿದ್ದು ಅಲವಿಯವರ ಪ್ರಮುಖ ಕಾಣಿಕೆಯಾಗಿದೆ. ಇತರ ಅನೇಕರಂತೆ ಆ ಗ್ರಹಿಕೆಯನ್ನು ಇಷ್ಟಬಂದ ಹಾಗೆ ತೆಗೆದುಕೊಳ್ಳಲಾಗುವುದಿಲ್ಲ ಎಂಬುದರ ಸ್ವಷ್ಟ ಕಲ್ಪನೆ ಇವರಿಗಿತ್ತು. ಅಂದರೆ ‘ಅಖಂಡ’ವು (The Whole) ‘ಖಂಡ’ಗಳ (Its Parts) ಸ್ವರೂಪವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂಬುದು. ಭಾರತೀಯ ಉಪಖಂಡದ ರಾಜ್ಯಗಳ ವೈವಿಧ್ಯತೆಯನ್ನಿಲ್ಲಿ ಉದಾಹರಣೆಯನ್ನಾಗಿ ನೋಡಬಹುದು. ಭಾರತದಲ್ಲಿ ನಾಗರಿಕ ಸಂಸ್ಥೆಗಳ, ರಾಜಕೀಯ ಪಕ್ಷ ಹಾಗೂ ನಾಯಕರುಗಳ ಪ್ರಾಬಲ್ಯ ಮಿಲಿಟರಿಗಿಂತ ಹೆಚ್ಚಾಗಿರುವುದರಿಂದ ಉಪಖಂಡದ ಇತರ ರಾಜ್ಯಗಳ ಮಾದರಿ ಇಲ್ಲಿ ಕಂಡುಬರುವುದಿಲ್ಲ.

ಅಲವಿಯವರ ಅಧ್ಯಯನವು ತೃತೀಯ ಜಗತ್ತಿನಲ್ಲಿ ‘ರಾಜ್ಯ’ದ ಪ್ರಾಧಾನ್ಯವನ್ನು ಸೂಚಿಸಿದಷ್ಟೇ ಅಲ್ಲದೆ ಅನೇಕ ಎಂಪೆರಿಕಲ್ ಅಧ್ಯಯನಗಳಿಗೆ ಒಂದು ಮುಖ್ಯವಾದ ಆರಂಭ ಬಿಂದುವನ್ನು ನೀಡಿತು. ಜೆ.ಸೌಲ್ ರವರು ಅಲವಿಯವರ ಸಿದ್ಧಾಂತವನ್ನು ಕೆಲ ಮುಖ್ಯ ಮಾರ್ಪಾಡುಗಳೊಡನೆ ಆಪ್ರಿಕಾ ಸಂದರ್ಭದಲ್ಲಿರಿಸಿ ನೋಡುತ್ತಾರೆ. ಟಾಂಜಾನಿಯಾ ಮುಂತಾದ ರಾಷ್ಟ್ರಗಳಲ್ಲಿ ಭೂಮಾಲೀಕ ಮತ್ತು ಕೈಗಾರಿಕಾ ಬೂರ್ಜ್ವಾಸಿಗಳು ಪ್ರಬಲವಾಗಿ ಬೆಳೆಯದೆ ಇದ್ದದ್ದು ಏಕಪಕ್ಷ ವ್ಯವಸ್ಥೆಯಲ್ಲಿನ ರಾಜಕೀಯ ನಾಯಕರು ರಾಜ್ಯದ ಸಾಧನಗಳ ಮೇಲೆ ಪ್ರಾಬಲ್ಯ ಹೊಂದಲು ಸಾಧ್ಯ ಮಾಡಿಕೊಟ್ಟಿದ್ದನ್ನು ವಿವರಿಸುತ್ತಾರೆ. ಇಲ್ಲಿ ಅಧಿಕಾರಶಾಹಿ-ಮಿಲಿಟರಿ ಅಲ್ಪಜನಾಧಿಪತ್ಯವು ನಿಧಾನವಾಗಿಯಾದರೂ ಖಚಿತವಾಗಿ ಬೆಳೆಯುತ್ತಿರುವುದನ್ನು  ಗುರುತಿಸುತ್ತಾರೆ ಜೇಮ್ಸ್ ಪೆಟ್ರಾಸ್ ಲ್ಯಾಟಿನ್ ಅಮೆರಿಕಾದ ರಾಜ್ಯ ಮತ್ತು ವರ್ಗ ಕುರಿತ ತಮ್ಮ ವಿಶ್ಲೇಷಣೆಯಲ್ಲಿ ಪರಾವಲಂಬನತ್ವ ಸಿದ್ಧಾಂತದ ನಿರ್ಧಾರಾತ್ಮಕತೆಯನ್ನು (Deterministic) ವಿರೋಧಿಸುತ್ತಾರೆ. ಪರಾವಲಂಬನತ್ವ ಸಿದ್ಧಾಂತ ಪ್ರತಿಷ್ಠಾಪಿಸಿದ ಎರಡು ಅತೀರೆಕಗಳಾದ  ನವವಸಾಹತು ಮತ್ತು ಕ್ರಾಂತಿಕಾರಿ – ಸಮಾಜವಾದಿ ಮಾದರಿಗಳ ನಡುವೆ ಅನೇಕ ಸಾಧ್ಯತೆಗಳಿವೆಯಂದೂ ಅವುಗಳ ಅಸ್ತಿತ್ವದಲ್ಲಿ ಕೂಡ ಇವೆಯೆಂದೂ ಹೇಳುತ್ತಾರೆ. ಉದಾಹರಣೆಗೆ ರಾಷ್ಟ್ರವಾದಿ ಬೂರ್ಜ್ವಾ ಅಭಿವೃದ್ಧಿ ವಾದ, ರಾಷ್ಟ್ರವಾದಿ ಪಾಪ್ರ್ಯಲಿಸ್ಟ್ ತಂತ್ರ ಇತ್ಯಾದಿಗಳನ್ನು ಹೆಸರಿಸುತ್ತಾರೆ. ಇಲ್ಲಿ ಬಾಹ್ಯ ಅವಲಂಬನತ್ವವನ್ನು ನಿರಾಕರಿಸದೆಯೆ ರಾಜ್ಯ, ವರ್ಗಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ಪೆಟ್ರಾಸ್ ನೀಡಿದ್ದಾರೆ.

ರಾಜ್ಯ, ವರ್ಗಗಳ ಮೇಲಿನ ಈ ಹೆಚ್ಚಿನ ಆಸಕ್ತಿಯ ‘ಉತ್ಪಾದನಾ ಪದ್ಧತಿ’ಯನ್ನು ಆಧರಿಸಿದ ವಿಶ್ಲೇಷಣಾ ಮಾದರಿಯ ಬಳಕೆಗೆ ಸಮಾನಾಂತರವಾಗಿಯೇ ಮೂಡಿಬಂತು. ಈ ಆಸಕ್ತಿ ಬಾಹ್ಯಕ್ಕಿಂತ ಆಂತರಿಕವಾದಂತಹ ವ್ಯಾಖ್ಯಾತ್ಮಕ ಅಂಶಗಳ ಕಡೆಗೆ ಗಮನ ಹರಿಸುವಂತೆ ಮಾಡಿತು. ಈ ರೂಪಾಂತರಗಳು ೧೯೭೦ರ ದಶಕದ ಕೊನೆಗೆ ಅನೇಕ ವ್ಯಾಖ್ಯಾನ ವಿಧಾನಗಳಿಗೆ ಜನ್ಮ ವಿತ್ತವು. ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ರಾಜ್ಯದ  ಮಧ್ಯಸ್ತಿಕೆ, ಆ ಮಧ್ಯಸ್ತಿಕೆಯ ಪರಿಣಾಮವಾಗಿ ಆದಂತಹ ಆರ್ಥಿಕ ಅದರಲ್ಲೂ ಕೈಗಾರಿಕೀಕರಣದ ಅಭಿವೃದ್ಧಿ-ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು ಈ ಹೊಸ ವಿಧಾನಗಳು ನೆರವಾದವು. ಲ್ಯಾಟಿನ್ ಅಮೇರಿಕಾದಲ್ಲಿ ರಾಜ್ಯ ಬಂಡವಾಳಶಾಹಿ ಮತ್ತು ಅಧಿಕಾರಶಾಹಿ ಪರಿಕಲ್ಪನೆಗಳ ಸುತ್ತ ಚರ್ಚೆಗಳು ನಡೆದವು. ರಾಜ್ಯ ಬಂಡವಾಳಶಾಹಿಯನ್ನು ಬೃಹತ್ ರಾಜ್ಯವಲಯ ಮತ್ತು ಮಧ್ಯವರ್ತಿಕೆಗಳಿಗೆ ಸಮವೆಂದು ಪರಿಗಣಿಸಿದರೆ, ಅಧಿಕಾರಶಾಹಿಯನ್ನು ಐ.ಎಸ್.ಐ.ನ ಬಿಕ್ಕಟ್ಟು ಮತ್ತು ಮಿಲಿಟರಿ ಆಳ್ವಿಕೆಯಲ್ಲಿ ಹೆಚ್ಚಿದ ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಪ್ರತಿಕ್ರಿಯೆಯಾಗಿ ನೋಡಲಾಯಿತು. ಈ ಹಲವಾರು ರೂಪಗಳು ತಮ್ಮ ತಳಹದಿಯನ್ನು ‘ಸಂಬಂಧಿತ ಪರಾವಲಂಬೀ ಅಭಿವೃದ್ಧಿ’ ಮತ್ತು ರಾಜ್ಯದ ತ್ರಿವಿಧ ಮೈತ್ರಿಕೂಟ ಮುಂತಾದ ವರ್ಗ ಮೈತ್ರಿಕೂಟಗಳಲ್ಲೂ ಸ್ಥಳೀಯ ಬಂಡವಾಳ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಹೊಂದಿದೆ.  ಅಧಿಕಾರಶಾಹಿ ಮತ್ತು ಉನ್ನತ ಆರ್ಥಿಕಾಭಿವೃದ್ಧಿ ಮಟ್ಟಗಳು ಪರಸ್ಪರ ಪೂರಕವೇ ಎಂಬ ಚರ್ಚೆಯನ್ನು ಈ ವಿಶ್ಲೇಷಣೆಗಳು ಮುಂದಿಟ್ಟವು. ಈ ಚರ್ಚೆಯು ಭಾರತದಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಗೊಂಢಾಗ ಪ್ರತಿಧ್ವನಿ ಕಂಡುಕೊಂಡದ್ದನ್ನು ಇಲ್ಲಿ ಪ್ರಸ್ತಾಪಿಸಬಹುದು.

ಆಫ್ರಿಕಾದಲ್ಲಿ ಸ್ಥಳೀಯ ಭೂಮಾಲೀಕವರ್ಗ ಮತ್ತು ಕೈಗಾರಿಕಾ ಬೂರ್ಜ್ವಾಸಿಗಳು ಸೃಷ್ಟಿಗೊಳ್ಳದಿದ್ದುದು ಏಕಪಕ್ಷ  ಪದ್ಧತಿ ಅಥವಾ ಸೈನ್ಯದ ಮೂಲಕ ರಾಜ್ಯದ ಎಲ್ಲ ಸಾಧನಗಳನ್ನು ಹಿಡಿತದಲ್ಲಿರಿಸಿಕೊಂಡಿದ್ದ ‘ಅಧಿಕಾರಶಾಹಿ ಬೂರ್ಜ್ವಾಸಿ’ ಅಥವಾ ‘ಆಪ್ರಿಕಾ ಬೂರ್ಜ್ವಾಸಿ’ ಯೆಡೆಗೆ ವಿದ್ವಾಂಸರ ಗಮನ ಹರಿಯುವಂತೆ ಮಾಡಿತು. ಕೆಲ ರಾಷ್ಟ್ರಗಳಲ್ಲಿ ಈ ವರ್ಗವು ಆರ್ಥಿಕ ಮುನ್ನಡೆಯ ದಯಾಳು ಹರಿಕಾರನಾದರೆ, ಮಿಕ್ಕೆಡೆ ವಿದೇಶಿ ಬಂಡವಾಳದ ಸಹಾಯದೊಂದಿಗೆ ಸ್ವಹಿತವನ್ನು ಕಾಪಾಡಿಕೊಳ್ಳುವ ಶಕ್ತಯಾಯಿತು. ಯೂರೋಪಿನಲ್ಲಿ ವಸಾಹತುಶಾಹಿ ಬಂಡವಾಳಶಾಹಿಯ ವ್ಯವಸ್ಥೆಯ ಉಗಮಕ್ಕೆ ನೇರ ಕಾರಣವಾಗಿದ್ದಂತಹ ಊಳಿಗಮಾನ್ಯ  ವ್ಯವಸ್ಥೆ  ಆಫ್ರಿಕಾದಲ್ಲಿ ಕಂಡುಬರದ ಕಾರಣ, ಬಂದುತ್ವ ಜಾಲವನ್ನಾಧರಿಸಿದ ಒಂದು ವಿಶಿಷ್ಟ “ಆಫ್ರಿಕಾ ಉತ್ಪಾದನಾ ಪದ್ಧತಿ” ಯನ್ನು ಗುರುತಿಸಬಹುದೇ ಎಂಬ ಚರ್ಚೆಯೂ ಮೂಡಿಬಂತು. ಆಗ್ನೇಯ ಏಷ್ಯಾದ ಸಂದರ್ಭದಲ್ಲಿ ಕೈಗಾರಿಕೀಕರಣವನ್ನು ರಫ್ತು ಹಾಗೂ ವಿದೇಶಿ ಬಂಡವಾಳವನ್ನು ಆಧರಿಸಿದ ರಾಜ್ಯ ಬಂಡವಾಳಶಾಹಿಯ ಫಲವಾಗಿ ನೋಡಲಾಗಿದೆ.

ಮ್ಯಾಕ್ಸೀಸ್ಟ್ ಸೈದ್ಧಾಂತಿಕ ಸಂಪ್ರದಾಯದೊಳಗೆ ವರ್ಗ, ರಾಜ್ಯಗಳ ಚರ್ಚೆ ಹೆಚ್ಚು ಶಕ್ತಿಶಾಲಿಯಾಗಿ ಹಿಂದಿರುಗಿದ್ದನ್ನು ಮೇಲಿನ ಚರ್ಚೆಗಳು ತೋರಿಸುತ್ತವೆ. ೧೯೮೦ರ ಬಿಲ್ವಾರೆನ್ ಮೊದಲಾದವರ ಪರಾವಲಂಬನತ್ವ ಸಿದ್ಧಾಂತದ ಮೇಲಿನ ಟೀಕೆಗಳು ಅಧೀನ ಅಭಿವೃದ್ಧಿಯ ಲಿಪೋತಿಥೇಸ್‌ಗೆ ಪರ್ಯಾಯವಾಗಿ ಮೂಡಿದ ಮಾರ್ಕ್ಸಿಸ್ಟ್‌ ವಾದಗಳನ್ನು ಪ್ರತಿನಿಧಿಸುತ್ತವೆ. ವಾರೆನ್‌ ಪ್ರಕಾರ ಯಶಸ್ವೀ ಬಂಡವಾಳಶಾಹಿ ಬೆಳವಣಿಗೆಯ (ಅಂದರೆ ಕೈಗಾರೀಕರಣದ) ಸಾಧ್ಯತೆಗಳು ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಎದುರಿಗೆ ಇದ್ದು, ಅದಕ್ಕೆ ಇರುವ ಅಡಚಣೆಗಳು ಸಾಮ್ರಾಜ್ಯಶಾಹಿ ಸಂಬಂಧಗಳಿಂದ ಉದ್ಭವವಾಗಿರದೆ ತೃತೀಯ ಜಗತ್ತಿನ “ಆಂತರಿಕ ವೈರುಧ್ಯ”ಗಳಿಂದಲೇ ಉಂಟಾದದ್ದು. “ಸಾಂಪ್ರದಾಯಿಕ” ಮಾದರಿಯ ರಾಷ್ಟ್ರೀಯ ಬೂರ್ಜ್ವಾಸಿಯಿಲ್ಲದ ಸಂದರ್ಭದಲ್ಲಿ ರಾಜ್ಯವೇ, ಅಂತಹ ಒಂದು ವರ್ಗ ಸ್ವಾಯತ್ತವಾಗಿ ಮೂಡಿಬರುವವರೆಗೆ, ಆ ಕೆಲಸವನ್ನು ನಿರ್ವಹಿಸುತ್ತದೆ. ಈ ವಾದವು ಕಾರ್ಡೊಸೊ, ಈವಾನ್ಸ್‌, ಲೆಯ್‌ಮುಂತಾದವರ ಪ್ರತಿಪಾದನೆಗಳಿಗೆ ಹತ್ತಿರವಾದದ್ದು. ಹೀಗಾಗಿ ರಾಜ್ಯದ ಕುರಿತಾಗಿ ಒಂದು ನಿರ್ದಿಷ್ಟ ಸಿದ್ಧಾಂತವೊಂದನ್ನು ಈ ಹಂತವು ರೂಪಿಸುತ್ತದೆಂದು ಅನೇಕರು ನಿರೀಕ್ಷಿಸಿದರೂ, ಅದು ವಿಫಲವಾಯಿತೆನ್ನುವುದು ವಾರೆನ್‌ರ ಈ ಮಧ್ಯಸ್ಥಿಕೆಯಿಂದಾಗಿ ಸ್ಪಷ್ಟವಾಗುತ್ತದೆ.

೧೯೮೦-೯೦ರ ದಶಕಗಳಲ್ಲಿ ಪರಾವಲಂಬನತ್ವ ಸಿದ್ಧಾಂತವು ನವ ಉದಾರವಾದದ ಉತ್ಕರ್ಷ ಹಾಗೂ ವಾಮಪಂಥದ ಇಳಿಕೆಗಳೊಡನೆ ಸೆಣಸಬೇಕಾಯಿತು. ನವ ಉದಾರವಾದಿ ವಿದ್ವಾಂಸರು ಹಾಗೂ ನಾಯಕರು ಅಂಚಿನ ರಾಜ್ಯಗಳ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವೆಂದು ಸೂಚಿಸಿದ ಸ್ಪ್ರಕ್ಚರಲ್ ಅಡ್ಜಸ್ಟ್ಮೆಂಟ್‌ ಪ್ರೋಗ್ರಾಮ್‌ (ಸ್ಯಾಪ್‌ SAP) ರಾಜ್ಯದ ಹಿಂಜರಿತ ಮತ್ತು ಆರ್ಥಿಕತೆಯ ತೆರೆಯುವಿಕೆ ಇವೇ ಮೊದಲಾದ ನೀತಿಗಳನ್ನು ಪರಾವಲಂಬನತ್ವ ಸಿದ್ಧಾಂತಗಳು ತಿರಸ್ಕರಿಸಿದರು. ನವ ಉದಾರವಾದಿ ಸಿದ್ಧಾಂತಕ್ಕೆ ಪ್ರತಿಯಾಗಿ, ತೃತೀಯ ರಾಜ್ಯಗಳ “ಸಾಲ ಬಿಕ್ಕಟ್ಟು” ಆಂತರಿಕ ಕಾರಣಗಳಿಂದ ಉದ್ಭವಿಸಿದ್ದಲ್ಲವೆಂದೂ ಬಾಹ್ಯದ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಏರುಪೇರುಗಳಿಂದ ಸೃಷ್ಟಿಯಾದದ್ದು ಎಂದು ಇವರು ವಿವರಿಸಿದರು. ೧೯೬೦ರ ದಶಕದ ಕಡೆಯ ವರ್ಷಗಳ ಹೊತ್ತಿಗಾಗಲೇ ಹೆಚ್ಚಿದ ಸ್ಪರ್ಧೆ ಮತ್ತು ಶೀತಲ ಸಮರದಿಂದಾದ ಮಿಲಿಟರಿ ಖರ್ಚುಗಳಿಂದಾಗಿ ಮುಂದುವರೆದ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕತೆಯು ಜಡತೆಯನ್ನು ಕಂಡಿತ್ತು. ೧೯೭೦ರ ದಶಕದ ತೈಲ ದರಗಳ ಹೆಚ್ಚಳ, ನಿರುದ್ಯೋಗ, ಆತೃಪ್ತಿಕರ ಸ್ವ-ಅಭಿವೃದ್ಧಿ ಹಣದುಬ್ಬರ, ಹಣದ ಕೊರತೆ ಇತ್ಯಾದಿಗಳಿಗೆ ಹೊಂದಿಕೊಳ್ಳುವುದು ಈ ರಾಷ್ಟ್ರಗಳಿಗೆ ಕಷ್ಟವಾಯಿತು. ಸ್ಯಾಪ್‌ ನೀತಿಗಳು, ಅದರಲ್ಲೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಈ ಬಿಕ್ಕಟ್ಟಿಗೆ ಪರಿಹಾರವನ್ನಾಗಿ ನೋಡಲಾಯಿತು. ಮೇಲಿನ ಬದಲಾವಣೆಗಳು ೧೯೭೦ರ ದಶಕದ ಕಡೆಯಲ್ಲಿ ಅಂಚಿನ ರಾಜ್ಯಗಳು ಮಿತಿಮೀರಿ ಸಾಲ ಮಾಡುವಂತೆ ನಿರ್ಬಂಧಿಸಿದವು. ಇಷ್ಟೇ ಅಲ್ಲದೆ ೧೯೭೩ ಹಾಗೂ ೧೯೭೫ರಲ್ಲಿ ತೈಲ ದರಗಳು ದ್ವಿಗುಣಗೊಂಡಿದ್ದು, ಅದರ ಫಲವಾಗಿ ಸೃಷ್ಟಿಯಾದ ಆರ್ಥಿಕ ಹಿಂಜರಿತ ಇವುಗಳು ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಹೇರಳವಾಗಿ “ಪೆಟ್ರೋಡಾಲರ್‌”ಗಳನ್ನು ತಂದುಕೊಟ್ಟಿತು. ಈ ಹಣದ ಬಹುಪಾಲು ಅಂಚಿನ, ಮುಖ್ಯವಾಗಿ ಲ್ಯಾಟಿನ್‌ಅಮೆರಿಕದ ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಸಗಿ, ಅಲ್ಪಾವಧಿಯ ಅಲ್ಪ ಬಡ್ಡಿಯ ಸಾಲವಾಗಿ ಸರ್ಕಾರಿ ಗ್ಯಾರಂಟಿಯೊಡನೆ ತೊಡಗಿಸಲ್ಪಟ್ಟಿತು. ಆರ್ಥಿಕ ಹಿಂಜರಿತದ ಪರಿಣಾಮವಾಗಿ ವ್ಯಾಪಾರದ ತರ್ಕವೂ ಪ್ರಾಥಮಿಕ ಉತ್ಪನ್ನ ಆಧಾರಿತ ದೇಶಗಳ ವಿರುದ್ಧವಾಗಿದ್ದು ಸಾಲ ತೆಗೆದುಕೊಳ್ಳುವುದನ್ನೇ ಆಕರ್ಷಣೀಯಗೊಳಿಸಿತು. ಹೀಗಾಗಿ ವಿದೇಶಿ ಸಾಲ ಮತ್ತು ಅದರಿಂದ ಉತ್ಪನ್ನವಾದ ೧೯೮೦ರ ದಶಕದ ತೀವ್ರ ಆರ್ಥಿಕ ಬಿಕ್ಕಟ್ಟೇ ಅನೇಕ ತೃತೀಯ ರಾಜ್ಯಗಳ ಮೇಲೆ ಸ್ಯಾಪ್‌ಅನ್ನು ಹೇರಳು ಸಾಧ್ಯ ಮಾಡಿದ್ದು ಎಂದು ಪರಾವಲಂಬನತ್ವ ಸಿದ್ಧಾಂತಿಗಳು ವಾದಿಸುತ್ತಾರೆ. ಈ ವಿಶ್ಲೇಷಣೆಯ ತಿರುಳು ಇದು ಬ್ರಿಟನ್‌, ಫ್ರಾನ್ಸ್‌, ಯು.ಎಸ್‌ಎ. ಮತ್ತಿತರ ಕೈಗಾರಿಕಾ ರಾಷ್ಟ್ರಗಳಂತೆ ಈ ಸಾಲಗಾರ ರಾಷ್ಟ್ರಗಳು ಸ್ಯಾಪ್‌ಅನ್ನು ಸ್ವ ಇಚ್ಛೆಯಿಂದಾಗಲಿ ಯಾವುದೋ ಸೈದ್ಧಾಂತಿಕ ನಿಲುವಿನಿಂದಾಗಲಿ ಕೈಗೆತ್ತಿಕೊಂಡಿದ್ದಲ್ಲ. ಬದಲಾಗಿ, ಐ.ಎಂ.ಎಫ್‌., ಯು.ಎಸ್‌.ಎ.ಐ.ಡಿ. (IMF, USAID) ಸಂಸ್ಥೆಗಳು ಮತ್ತು ಖಾಸಗಿ ಬಹುರಾಷ್ಟ್ರೀಯ ಬ್ಯಾಂಕುಗಳು ಸಾಲ ನೀಡಲಿಕ್ಕೆ “ಕಡ್ಡಾಯ” ಮತ್ತು ಖಾಸಗೀಕರಣವನ್ನು ನಿಬಂಧನೆಗಳಾಗಿಸಿದ್ದು ಇದಕ್ಕೆ ಕಾರಣ. ಹೀಗಾಗಿ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಬದಲಾವಣೆಗಳಿಗನುಗುಣವಾಗಿ ತಮ್ಮ ಆರ್ಥಿಕತೆಯನ್ನು ರೂಪಿಸಲು ಕೇಂದ್ರಕ್ಕೆ ಅನುವು ಮಾಡಿಕೊಟ್ಟರೆ, ಅಂಚಿನ ರಾಜ್ಯಗಳಿಗೆ ಅದೊಂದು ಹೇರಲ್ಪಟ್ಟ ವ್ಯವಸ್ಥೆಯಾಗಿದ್ದು ಅವುಗಳ ಆರ್ಥಿಕ ವ್ಯವಸ್ಥೆಗಳನ್ನು ರಫ್ತು ಆಧಾರಿತಗೊಳಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಹೊಸ ಮಾರುಕಟ್ಟೆಗಳ ಸೃಷ್ಟಿಯ ಮೂಲಕ ಲಾಭ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿತು.

ಪರಾವಲಂಬನತ್ವ ಸಿದ್ಧಾಂತವು ಅನೇಕ ರೀತಿಗಳಲ್ಲಿ ತೃತೀಯ ಜಗತ್ತಿನ ಅಭಿವೃದ್ಧಿ ಪ್ರಕ್ರಿಯೆಯನ್ನು ವಿಶ್ಲೇಷಿಸುವಲ್ಲಿ ವಿಫಲವಾಗಿದೆ ಎಂದು, ಅದರ ಪ್ರತಿಪಾದಕರೂ ಸೇರಿದಂತೆ, ಬಹುಪಾಲು ವಿದ್ವಾಂಸರು ಒಪ್ಪುತ್ತಾರೆ. ಅದರ ಕೆಲವು ಮೂಲಭೂತ ಪರಿಕಲ್ಪನೆಗಳು ಪ್ರಶ್ನಿಸಲ್ಪಟ್ಟಿರುವುದರಿಂದ ಅದನ್ನು ಅನೇಕ ಮಾರ್ಪಾಡುಗಳಿಗೆ ಒಳಪಡಿಸಬೇಕಿದೆ.

ಮೊದಲನೆಯದಾಗಿ ರಾಜಕೀ-ಆರ್ಥಿಕ ಬದಲಾವಣೆಗಳನ್ನು ವಿಶ್ಲೇಷಿಸುವಲ್ಲಿ ಈ ಸಿದ್ಧಾಂತವು “ಆಂತರಿಕ”ಕ್ಕಿಂತ “ಬಾಹ್ಯ” ಕಾರಣಗಳಿಗೆ ಹೆಚ್ಚು ಮಹತ್ವ ನೀಡಿರುವದು. ಬಾಹ್ಯ ಕಾರಣಗಳಾದ ವಾಣಿಜ್ಯ ಅವನತಿ, ಅಸಮಾನ ವಿನಿಮಯ, ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಬಂಡವಾಳದ ಹರಿವು ಇತ್ಯಾದಿಗಳಿಗೆ ಹೆಚ್ಚು ಮಹತ್ವ ನೀಡಿ ಆಂತರಿಕ ನಿರ್ದಿಷ್ಟತೆಗಳನ್ನು ವರ್ಗ ಸಂಘರ್ಷಗಳನ್ನೂ ಬಹುಮಟ್ಟಿಗೆ ಕಡೆಗಣಿಸಲಾಯಿತು. ಇಲ್ಲಿ ಸಂಘರ್ಷವಿರುವುದು ವಿವಿಧ ರಾಜ್ಯಗಳ ವರ್ಗಗಳ ನಡುವೆಯೇ ಹೊರತು ಒಂದು ರಾಜ್ಯದ ಒಳಗಿನ ವರ್ಗಗಳ ನಡುವೆ ಅಲ್ಲ. ರಾಜ್ಯ, ವರ್ಗಗಳಿಗೆ ಈ ಸೈದ್ಧಾಂತಿಕ ಚೌಕಟ್ಟು ೧೯೭೦-೮೦ರ ದಶಕಗಳಲ್ಲಿ  ಹೆಚ್ಚಿನ ಮನ್ನಣೆ ನೀಡಲಾರಂಭಿಸಿದರೂ ಮೇಲಿನ ನ್ಯೂನ್ಯತೆಯನ್ನು ಸರಿಪಡಿಸಲಿಲ್ಲ. ಹೀಗಾಗಿ ೧೯೭೦ರ ದಶಕದ ಕೊನೆಗಾಗಲೇ, ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯ ದೆಸೆಯಿಂದಾಗಿ “ಆಶಾಭಂಗ”ಗೊಂಡ ಅಥವಾ “ತಡೆಯಲ್ಪಟ್ಟ” ತೃತೀಯ ಜಗತ್ತಿನ ಅಭಿವೃದ್ಧಿಯನ್ನು ಕುರಿತಾದ ಒಂದು “ತೀವ್ರವಾದಿ ಸಂಪ್ರದಾಯವಾದಿ” ಎಂಬ ಪಟ್ಟವನ್ನು ಪರಾವಲಂಬನತ್ವ ಸಿದ್ಧಾಂತ ಪಡೆದಾಗಿತ್ತು. ಆದರೆ ಈ ಪರಿಕಲ್ಪನೆಗಳನ್ನು ಅನೇಕ ಕಡೆ ಪರೀಕ್ಷೆಗೆ ಒಳಪಡಿಸಿದ ರಾಜಕೀಯ ಶಾಸ್ತ್ರಜ್ಞರು ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ತೊಡಗಿಹೋದ ರಾಜ್ಯಗಳು, ನಿರೀಕ್ಷೆಗೆ ವಿರುದ್ಧವಾಗಿ, ಬಹುಬೇಗ ಅಭಿವೃದ್ಧಿಗೊಳಪಟ್ಟಿದ್ದನ್ನು ದಾಖಲಿಸಿದ್ದಾರೆ. ಹೀಗೆ ಪರಾವಲಂಬನತ್ವ ಸಿದ್ಧಾಂತ ಪ್ರೇರಿತ ಅನೇಕ ಅಧ್ಯಯನಗಳು ಉಪಯುಕ್ತವಾಗಿದ್ದರೂ ‘ಜಡ’ ಮಾದರಿಗಳನ್ನು ಮುಂದಿಡುವ ಮೂಲಕ ಅಭಿವೃದ್ಧಿ ಪಂಥಗಳ ಸಮರ್ಥ ಚಿತ್ರಣವನ್ನು ನೀಡುವಲ್ಲಿ ಸೋತವು.

ಇದೆಲ್ಲದರ ಪರಿಣಾಮವಾಗಿ ಈ ಸಿದ್ಧಾಂತವು ಕೇವಲ ಅಂತರರಾಷ್ಟ್ರೀಯ ಸ್ಥಿತಿಗತಿಯ ಬಗ್ಗೆ ತನ್ನ ಗಮನವನ್ನು ಹರಿಸಿತೇ ವಿನಃ ರಾಜ್ಯದ ರೂಪಗಳು, ಆಳುವ ವರ್ಗದ ಆಂತರಿಕ ವೈರುಧ್ಯಗಳು ಹಾಗೂ ಪ್ರತಿ ರಾಜ್ಯದ ‘ಒಳ’ ತೋಟಿಗಳನ್ನು ಹಿಡಿದಿಡುವಲ್ಲಿ ಅಸಮರ್ಥವಾಯಿತು. ವರ್ಗಗಳು, ವರ್ಗ ಸಂಘರ್ಷಗಳನ್ನು ಬದಿಗಿರಿಸಿದ್ದರಿಂದ ಆಳುವ ಬೂರ್ಜ್ವಾಸಿಯ ಒಳಗಿನ ಒಡಕುಗಳನ್ನು ಮಾತ್ರ ಪ್ರಮುಖವಾಗಿಸಿ ಇನ್ನಿತರ ಸಾಮಾಜಿಕ ವೈರುಧ್ಯಗಳನ್ನು ಅಲಕ್ಷಿಸಿತು. ಒಂದು ಪ್ರಗತಿಶೀಲ ಬೂರ್ಜ್ವಾಸಿಯ ಮೇಲೆ ದೃಢಭರವಸೆಯನ್ನಿರಿಸಿ, ಆಳುವ ಬೂರ್ಜ್ವಾಸಿಯ ದಲ್ಲಾಳಿ ಅಥವಾ ಇನ್ನಿತರ ಸ್ವಭಾವದ ಅಧ್ಯಯನಕ್ಕೇ ಮೀಸಲಾಗಿ ಇನ್ನಿತರ ವರ್ಗಗಳು ಅಲಕ್ಷ್ಯಕ್ಕೆ ಗುರಿಯಾದವು. ದಲ್ಲಾಳಿ ಹಾಗೂ ದೇಶಭಕ್ತ ಬೂರ್ಜ್ವಾಸಿಯ ನಡುವಿನ ವ್ಯತ್ಯಾಸವನ್ನೂ ಪರಾವಲಂಬನತ್ವ ಸಿದ್ದಾಂತವು ತಾತ್ವಿಕ ನೆಲೆಗಟ್ಟಿನಿಂದ ನೋಡಿತೆ ಹೊರತು ವರ್ಗಾಧಾರಿತವಾಗಿ ಅಲ್ಲ.

ಈ ಸಮಸ್ಯೆಗೆ ಹತ್ತಿರದ ಸಂಬಂಧ ಹೊಂದಿದ್ದು “ರಾಜಕೀಯ” ಮತ್ತು “ಆರ್ಥಿಕ”ಗಳಿಗೆ ದೊರೆತ ಸಾಪೇಕ್ಷವಾದಂತಹ ಮಹತ್ವ. ಆಧುನೀಕರಣ ಸಿದ್ಧಾಂತವನ್ನು ಟೀಕಿಸುವಾಗ ಪರಾವಲಂಬನತ್ವ ದೃಷ್ಟಿಕೋನಕ್ಕೆ ಇದ್ದ ಪ್ರಮುಖ ಕಾರ್ಯವೆಂದರೆ ಅಧೀನ ಅಭಿವೃದ್ಧಿ ಯಾವ ರೀತಿಯಲ್ಲಿ ಮತ್ತು ಯಾತಕ್ಕಾಗಿ ತೃತೀಯ ಜಗತ್ತಿನ ಮೂಲ ಲಕ್ಷಣವಾಯಿತು ಎಂಬುದನ್ನು ವಿವರಿಸುವುದಾಗಿತ್ತು. ಅಧೀನ ಅಭಿವೃದ್ಧಿಯ ಮೂಲ ಬಂಡವಾಳಶಾಹಿಯ ನುಗ್ಗುವಿಕೆಯಲ್ಲಿದೆ ಎಂಬುದನ್ನು ಸ್ಥಾಪಿಸುವ ಭರದಲ್ಲಿ ಆರ್ಥಿಕ ನೆಲೆಯನ್ನು ಬಿಟ್ಟು ಇನ್ನಿತರ ನೆಲೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ಸಿದ್ಧಾಂತವು ಮುಂದಾಗಲೇ ಇಲ್ಲ. ನೂತನ ರಾಜ್ಯಗಳ ರಾಜಕೀಯ ವ್ಯವಸ್ಥೆಯ ಅಧ್ಯಯನದ ಮೂಲಕ ನೇರವಾಗಿ ತಮ್ಮ ವ್ಯಾಖ್ಯಾನವನ್ನು ಸಾಬೀತುಪಡಿಸುವುದು ಸಾಧ್ಯವಿಲ್ಲದುದು ಒಂದು ಕಡೆಯಾದರೆ, ರಾಜಕೀಯ ವ್ಯವಸ್ಥೆಯನ್ನು ತಮ್ಮ ಅಧ್ಯಯನದ ವ್ಯಾಪ್ತಿಯಲ್ಲಿ ತರುವುದು ಇದುವರೆಗೆ ಪರಿಹರಿಸಿದ ಅನೇಕ ಸಮಸ್ಯೆಗಳನ್ನು ಪರಿಚಯಿಸುವುದು ಇನ್ನೊಂದೆಡೆ. ಉದಾಹರಣೆಗೆ, ರಾಜ್ಯದ ವಿವಿಧ ಮಾದರಿಗಳ ವಿಚಾರ. ಹೀಗಾಗಿ ಅಂಚಿನ ಬಂಡವಾಳಶಾಹಿ ರಾಜ್ಯಗಳಲ್ಲಿನ ‘ರಾಜಕೀಯ’ ಮತ್ತು ‘ಆರ್ಥಿಕ’ ನೆಲೆಗಟ್ಟುಗಳ ನಡುವಿನ ಸಂಬಂಧದ ಕುರಿತಾದ ಪ್ರಶ್ನೆಗಳನ್ನು ಕೇಳುವುದು ಅನಗತ್ಯವಾಗಿ ಕಂಡಿತು. ಈ ವಿದ್ವಾಂಸರು ತಮ್ಮ ಮೂಲ ಚೌಕಟ್ಟು “ರಾಜಕೀಯ ಆರ್ಥಿಕತೆ” ಎಂದು ಹೇಳಿಕೊಂಡರೂ ಅಲ್ಲಿ ಕೇವಲ “ಆರ್ಥಿಕತೆ”ಯೇ ಉಳಿದು “ರಾಜಕೀಯ”ವು ನಗಣ್ಯವಾಗಿ ಮತ್ತೊಂದು ರೀತಿಯ ಆರ್ಥಿಕ ಕಡಿತಕ್ಕೆ ದಾರಿ ಮಾಡಿಕೊಟ್ಟಿತು. ಅಧೀನ ಅಭಿವೃದ್ಧಿ ಸಿದ್ಧಾಂತಕ್ಕೆ ತನ್ನದೇ ಆದ ರಾಜಕೀಯ ಸಿದ್ಧಾಂತವೇ ಇರಲಿಲ್ಲ. ಇದರಿಂದಾಗಿ ರಾಜ್ಯದ ಪರಿಕಲ್ಪನೆ ಅಪೂರ್ಣ ಸಿದ್ಧಾಂತೀಕರಣಕ್ಕೊಳಗಾಗಬೇಕಾಗಿ ಬಂದಿತು. ೧೯೭೦ರ ದಶಕದ ಪ್ರಾರಂಭದಲ್ಲಿ, ಅದರಲ್ಲೂ “ಉತ್ಪಾದನಾವಾದಿ”ಗಳು ಉತ್ಪಾದನಾ ಪದ್ಧತಿಗಳ ಮಹತ್ವವನ್ನು  ಮತ್ತೆ ಬೆಳಕಿಗೆ ತಂದಾಗಲೇ ವರ್ಗನಿರ್ಮಾಣದ ಸ್ವರೂಪ ಹಾಗೂ ರಾಜ್ಯದ ಪಾತ್ರದ ಬಗೆಗೆ ಈ ಸಿದ್ಧಾಂತ ಗಮನಹರಿಸಲು ಆರಂಭಿಸಿದ್ದು. ಆಗಲೂ ಸಹ ಕೆಲವು ರಾಜ್ಯಗಳ ಅಧ್ಯಯನಗಳ ಆಧಾರದ ಮೇಲೆ “ಅವಲಂಬಿತ ರಾಜ್ಯ”ದ ಬಗೆಗಿನ ವಿವರಣಾತ್ಮಕ ಮಾದರಿಗಳು ಹೊರಬಂತೆ ವಿನಹ ಒಂದು ಸುಸಂಬದ್ಧ ಸಿದ್ಧಾಂತದ ರಚನೆಯಲ್ಲ.

ಇಲ್ಲಿನ ಮತ್ತೊಂದು ಮೂಲಭೂತ ಸಮಸ್ಯೆಯೆಂದರೆ “ಅಖಂಡ”ವು (ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ) ಅದರ “ಖಂಡ”ಗಳ (ಅಂಗರಾಜ್ಯಗಳು) ಮೊತ್ತಕ್ಕಿಂತ ಹೆಚ್ಚು ಎಂದು ಈ ವಿದ್ವಾಂಸರು ನಂಬಿದ್ದರಿಂದ ಖಂಡಗಳ ಪ್ರತ್ಯೇಕ ಅಧ್ಯಯನಕ್ಕೆ ಮಹತ್ವವೇ ಇಲ್ಲವೆಂದು ತಿಳಿದು ಈ ಖಂಡಗಳು ಯಾವುದೇ ಪ್ರತ್ಯೇಕತೆಯನ್ನು ಉಳಿಸಿಕೊಳ್ಳದೆ ಕೇವಲ ಅಖಂಡದ ಭಾಗಗಳಂತೆ ವರ್ತಿಸುತ್ತವೆ ಎಂದು ನಿರ್ಧರಿಸಿದುದು. ಈ ಪರಿಕಲ್ಪನೆಯು ಖಂಡಗಳು ತಮ್ಮ ಅಸ್ತಿತ್ವವನ್ನು ಅಖಂಡದ ಅನುವರ್ತಿತ ಲಕ್ಷಣಗಳಲ್ಲೇ ಗುರುತಿಸಿಕೊಳ್ಳಲು ಒತ್ತಾಯಿಸುತ್ತದೆಯಾದ್ದರಿಂದ ಇದೊಂದು ಔಪಚಾರಿಕ ವಾದವಾಗಿಬಿಡುತ್ತದೆ. ಹೀಗಾಗಿ ‘ಸಾರ್ವದೇಶಿಕ/ಕಾಲಿಕ ಸಿದ್ಧಾಂತ’ವೊಂದನ್ನು ರೂಪಿಸಹೊರಟ ಆಧುನೀಕರಣದ ಸಿದ್ಧಾಂತದ ಜಾಡನೇ ಪರಾವಲಂಬನತ್ವ ಸಿದ್ಧಾಂತವೂ ಹಿಡಿದು ತಾನೂ ಅನುಭವಾತ್ಮಕ ವಾಸ್ತವವನ್ನು ಹಿಡಿದಿಡುವಲ್ಲಿ ಸೋತಿತು. “ಪರಾವಲಂಬನತ್ವ” ಪರಿಕಲ್ಪನೆಯ ನಿರ್ದಿಷ್ಟ ನಿರ್ವಚನ ಹಾಗೂ ಅದರ ಗುಣಲಕ್ಷಣಗಳ ಸ್ಪಷ್ಟ ಚಿತ್ರಗಳ ಕೊರತೆಯಿಂದಲೇ ಈ ಎಲ್ಲ ಸಮ್ಯೆಗಳು ಸೃಷ್ಟಿಗೊಂಡದ್ದು. ಆ ಕೊರತೆಯ ಫಲವಾಗಿ ಕೊನೆಗೆ ಸಿಕ್ಕಿದ್ದು ಒಂದು ವರ್ತುಲಕರ್ತ. ಯಾವ ದೇಶಗಳು ಸ್ವಾಯತ್ತ ಅಭಿವೃದ್ಧಿಯನ್ನು ಸಾಧಿಸಲು ಅಸಮರ್ಥವೋ ಅವು ಪರಾವಲಂಬಿಗಳು; ಈ ಅಸಮರ್ಥತೆ ಅವುಗಳ ಪರಾವಲಂಬನೆಯಿಂದ ಬಂದದ್ದು-ಪರಾವಲಂಬನತ್ವ ಸಿದ್ಧಾಂತದ ವಿವಿಧ ರೂಪಗಳು ಈ ವರ್ತುಲದೊಳಗೆ ಸಿಕ್ಕಿ ಹೋಗುತ್ತವೆ.

ಇಷ್ಟಾಗಿಯೂ ತೃತೀಯ ಜಗತ್ತಿನ ರಾಷ್ಟ್ರಗಳ ಅಭಿವೃದ್ಧಿ ಸಂಬಂಧಿತ ಚರ್ಚೆಗೆ ಪರಾವಲಂಬನತ್ವ ಸಿದ್ಧಾಂತವು ಬಹುಮುಖ್ಯ ಕೊಡುಗೆಯನ್ನು ಸಲ್ಲಿಸಿದೆ. ಯೂರೋಪಿನ ಅನುಭವಗಳ ಆಧಾರದ ಮೇಲೆಯೇ ತೃತೀಯ ಜಗತ್ತನ್ನು ವ್ಯಾಖ್ಯಾನಿಸಿದ ಸಾಂಪ್ರದಾಯಿಕ ಮಾರ್ಕ್ಸ್‌ವಾದಕ್ಕೆ ಈ ಸಿದ್ಧಾಂತವು ಒಂದು ಗಣನೀಯ ತಿದ್ದುಪಡಿಯನ್ನು ತರಲೆತ್ನಿಸಿತು. ಅಂಚಿನಲ್ಲಿನ ಅಧೀನ ಅಭಿವೃದ್ಧಿಯ ಚಾರಿತ್ರಿಕತೆಯನ್ನು ವಿಶ್ಲೇಷಿಸುವ ಮೂಲಕ ಪಾಶ್ಚಾತ್ಯ ದೇಶಗಳು ಅನುಸರಿಸಿದ ಅಭಿವೃದ್ಧಿ ಮಾರ್ಗವು, ಇಂದಿನ ಅಂತರರಾಷ್ಟ್ರೀಯ ಸಂದರ್ಭದಲ್ಲಿ, ವಸಾಹತೋತ್ತರ ದೇಶಗಳಿಗಾಗಲಿ “ತಡವಾಗಿ ಅಭಿವೃದ್ಧಿ”ಗೊಂಡ ದೇಶಗಳಿಗಾಗಲಿ ಲಭ್ಯವಿಲ್ಲವೆಂದು ಈ ಸಿದ್ಧಾಂತ ಸ್ಪಷ್ಟವಾಗಿ ತೋರಿಸಿತು. ಅಭಿವೃದ್ಧಿ ಪಥವು ಏಕರೇಖಾತ್ಮಕವಾದದ್ದೂ ಪೂರ್ವನಿಶ್ಚಿತವಾದದ್ದೂ ಆಗಿರದೆ ಆಯಾ ದೇಶವು ತನ್ನ ಸಂದರ್ಭ, ಅಗತ್ಯಗಳಿಗೆ ತಕ್ಕಂತೆ ರೂಪಿಸಿಕೊಳ್ಳಬೇಕಾಗುತ್ತದೆ. ಇದು ಭಾರತದ ಇಂದಿನ ಸ್ಥಿತಿಗೆ ಬಹಳ ಪ್ರಸ್ತುತವಾದದ್ದು. ಅಷ್ಟೇ ಅಲ್ಲದೆ ಈ ಸಿದ್ಧಾಂತವು ಮತ್ತೊಮ್ಮೆ ಸಮಾಜ ವಿಜ್ಞಾನಗಳು ಹೇಗೆ ವಾಸ್ತವತೆಯ ಆಧಾರದ ಮೇಲೆ ತಮ್ಮ ಸೈದ್ಧಾಂತಿಕ ಮಾದರಿಗಳು, ಸಾಧನಗಳನ್ನು ರೂಪಿಸಿಕೊಳ್ಳದೆ ಯೂರೋಪ್‌ಕೇಂದ್ರೀತವಾಗಿ ಅಲ್ಲಿನ ಅನುಭವದ ಮೇಲೆ ಕಟ್ಟಿದ ಮಾದರಿಗಳನ್ನು ಎಲ್ಲೆಡೆಯೂ ಹೇರಲು ಪ್ರೇರೇಪಿಸುತ್ತಿವೆ ಎಂಬುದನ್ನು ಪ್ರದರ್ಶಿಸಿದೆ.