ವಿದೇಶಿ ವಸ್ತುಗಳ ಬಹಿಷ್ಕಾರವನ್ನು ಸ್ವದೇಶಿ ಆಂದೋಲನಗಾರರು ವಿಶ್ವದಲ್ಲೇ ಖ್ಯಾತಿಗೊಳಿಸಿದರು. ಸಾರ್ವಜನಿಕವಾಗಿ ವಿದೇಶಿ ಬಟ್ಟೆಗಳನ್ನು ಸುಡುವುದು. ವಿದೇಶಿ ವಸ್ತುಗಳನ್ನು ಮಾರುವ ಅಂಗಡಿಗಳಿಗೆ ಬಹಿಷ್ಕಾರ ಹಾಕುವುದು ಬಂಗಾಳದ ಮೂಲೆ ಮೂಲೆಗಳಲ್ಲಿನ ರಾಜಕೀಯ ಬೆಳವಣಿಗೆಯಾಗಿತ್ತು. ಮಹಿಳೆಯರು ವಿದೇಶಿ ಬಳೆಗಳನ್ನು ತೊಡಲು ಮತ್ತು ವಿದೇಶಿ ಪಾತ್ರೆಗಳನ್ನು ಉಪಯೋಗಿಸಲು ನಿರಾಕರಿಸಿದರು. ವಿದೇಶಿ ಬಟ್ಟೆಗಳನ್ನು ಒಗೆಯಲು ಡೋಬಿಗಳು ನಿರಾಕರಿಸಿದರು. ಆಮದಾದ ಸಕ್ಕರೆಯನ್ನು ಪೂಜೆಯಲ್ಲಿ ಬಳಸಲು ಪೂಜಾರಿಗಳು ನಿರಾಕರಿಸಿದಂಥ ಘಟನೆಗಳೂ ನಡೆದವು.

೧೯೦೬ರ ಸೆಪ್ಟೆಂಬರ್ನಲ್ಲಿ ಕಸ್ಟಮ್ಸ್ ವಿಭಾಗದ ಕಮೀಷನರ್ ನ ವರದಿಯೊಂದು ಹೇಳುವಂತೆ ಆಮದಾದ ಹತ್ತಿ ಬಟ್ಟೆಯ ಬೇಡಿಕೆ ಶೇ. ೨೨ರಷ್ಟು ಕಡಿಮೆಯಾಯಿತು. ಆಮದಾದ ಹತ್ತಿಯ ದಾರಕ್ಕೆ ಶೇ. ೪೪ರಷ್ಟು ಬೇಡಿಕೆ ಕಡಿಮೆಯಾದರೆ, ಉಪ್ಪಿನ ಬೇಡಿಕೆ ಶೇ೧೧ರಷ್ಟು ಸಿಗರೇಟಿನ ಬೇಡಿಕೆ ಶೇ. ೫೫ರಷ್ಟು, ಪಾದರಕ್ಷೆಗಳಿಗೆ ಶೇ. ೬೮ರಷ್ಟು ಕಡಿಮೆಯಾಯಿತು. ೧೯೦೫ರಲ್ಲಿ ಈ ಮೇಲಿನ ವಸ್ತುಗಳಿಗಿದ್ದ ಬೇಡಿಕೆಗಳಿಗೆ ಹೋಲಿಸಿದರೆ ಸ್ವದೇಶಿ ಆಂದೋಲನ ಒಂದು ದೊಡ್ಡ ಯಶಸ್ಸೆಂದೇ ನಾವು ತಿಳಿಯಬೇಕಾಗುತ್ತದೆ. ಅಂತಿಮವಾಗಿ ಈ ವಹಿವಾಟಿನ ಲಾಭ ಕಲ್ಕತ್ತಾದ ಮಾರವಾಡಿಗಳಿಗೇ ಆಯಿತು ಎಂದು ಸುಮಿತ್ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ವಿದೇಶಿ ಬಟ್ಟೆಗಳು. ಮಾರಾಟವಾಗದಿದ್ದರೆ ದೇಸಿ ಬಟ್ಟೆಗಳೇ ಅನಿವಾರ್ಯವಾಗುತ್ತದೆ. ದೇಶಿ ಬಟ್ಟೆಗಳ ಉದ್ಯಮವು ಮಾರವಾಡಿಗಳ ಕೈಯಲ್ಲಿತ್ತು ಎಂಬುದನ್ನು ನಾವು ಗಮನಿಸಬೇಕು.

ಕಾರ್ಮಿಕರ ಹೋರಾಟಗಳೂ ಈ ಅವಧಿಯಲ್ಲಿ ಬಹಳ ಸಕ್ರಿಯವಾಗಿದ್ದವು. ಹೌರಾದ ಬರ್ನ್‌ ಸಂಸ್ಥೆಯ ೨೪೭ ಬಂಗಾಳಿ ಕಾರಕೂನರು ಚಳವಳಿಯಲ್ಲಿ ನೇರವಾಗಿ ಭಾಗವಹಿಸಿದರು. ಟ್ರಾಂ ಕೆಲಸಗಾರರು ೧೯೦೫ರ ಅಕ್ಟೋಬರ್‌ ಪೂರ್ಣ ಚಳವಳಿಯಲ್ಲಿ ಭಾಗವಹಿಸಲಿಕ್ಕಾಗಿ ಕೆಲಸಕ್ಕೆ ಗೈರು ಹಾಜರಾದರು. ೧೯೦೬ರ ಜುಲೈ ತಿಂಗಳಲ್ಲಿ ರೈಲ್ವೆ ಯೂನಿಯನ್‌ ಕೂಡ ಚಳವಳಿಯಲ್ಲಿ ಭಾಗವಹಿಸಿ ಕಾರ್ಮಿಕರ ಅಸಂತೋಷವನ್ನು ಹಾಗೂ ಅತೃಪ್ತಿಯನ್ನು ತೋರಿಸಿದವು.

ಸಮಿತಿಗಳ ಹೋರಾಟಗಳು ಸ್ವದೇಶಿ ಚಳವಳಿಯ ಬಹಳ ಮುಖ್ಯ ಲಕ್ಷಣವಾಗಿದೆ. ಸಮಿತಿ ಅಥವಾ ‘ರಾಷ್ಟ್ರೀಯ ಸ್ವಯಂ ಸೇವಕ’ ಚಳವಳಿಯು ಮುಖ್ಯವಾಗಿ ದೈಹಿಕ ಮತ್ತು ನೈತಿಕತೆಯನ್ನು ಕಾಪಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾರತೀಯರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಪ್ರಯತ್ನ ಮಾಡಿತು. ಸಾಂಕ್ರಾಮಿಕ ರೋಗಗಳು ಬರಗಾಲ ಬಂದಾಗ ಈ ಸ್ವಯಂ ಸೇವಕರು ಪ್ರತ್ಯಕ್ಷರಾಗಿ ಸಮಾಜಿಕ ಆಂದೋಲನದಲ್ಲಿ ಭಾಗವಹಿಸಿದರು. ಧಾರ್ಮಿಕ ಸಮಾರಂಭಗಳನ್ನು ಇವರು ಸಂಘಟಿಸಿದರು. ಸ್ವದೇಶಿ ಎನ್ನುವುದನ್ನು ಕರಕುಶಲ ಕಲೆಗಳಲ್ಲಿ, ಶಾಲೆಗಳನ್ನು ತೆರೆಯುವುದರ ಮೂಲಕ, ನ್ಯಾಯಾಲಯ ಹಾಗೂ ಹಾಗೂ ಗ್ರಾಮ ಸಮಾಜಗಳನ್ನು ತೆರೆಯುವುದರ ಮೂಲಕ ಚಳವಳಿಗಾರರು ತೋರಿಸಿಕೊಟ್ಟರು. ೧೯೦೭ರ ಪೊಲೀಸ್‌ ದಾಖಲೆಯ ಪ್ರಕಾರ ಸುಮಾರು ೮,೪೮೫ ಸ್ವಯಂಸೇವಕರು ಪೂರ್ವ ಬಂಗಾಳವೊಂದರಲ್ಲೇ ಇದ್ದರು. ಅಶ್ವಿನಿಕುಮಾರ್‌ ದತ್ತಾ ಅವರ ‘ಬಾರಿಸಲ್‌ ಸ್ವದೇಶಿ ಬಾಂಧವ್‌’ನ ಶಾಖೆಗಳು ೧೦೦೯ರ ವೇಳೆಗೆ ೧೭೫ ಹಳ್ಳಿಗಳಲ್ಲಿದ್ದವು.

ಇಷ್ಟೆಲ್ಲಾ ಹಿನ್ನೆಲೆಯಿದ್ದ ಸ್ವದೇಶಿ ಚಳವಳಿ ಕೂಡ ವಿವಾದಗಳಿಂದ ಮುಕ್ತವಾಗಿಲ್ಲ. ಹಿಂದೂ ಪುನರುತ್ಥಾನವಾದಂಥ ಮೌಲ್ಯಗಳು ಈ ಚಳವಳಿಯ ಆದರ್ಶವಾಗಿತ್ತು. ರಾಜಕಾರಣದೊಂದಿಗೆ ಧರ್ಮವನ್ನು ಬೆರೆಸಿರುವ ತಂತ್ರವು ನೈತಿಕವಾಗಿ ಕಾರ್ಯಕರ್ತರನ್ನು ಆಂದೋಲನದಲ್ಲಿ ತೊಡಗಿಸಿತು ಎಂದು ಚರಿತ್ರೆಕಾರರು ಅಭಿಪ್ರಾಯ ಪಟ್ಟಿದ್ದಾರೆ. ಸ್ವದೇಶಿ ಪ್ರತಿಜ್ಞೆಗಳನ್ನು ದೇವಾಲಯಗಳಲ್ಲಿ ಮಾಡುವುದು, ಪುನರುತ್ಥಾನವಾದಗಳಿಂದ ಪ್ರಭಾವಗೊಂಡ ರಾಷ್ಟ್ರೀಯ ಶಿಕ್ಷಣವನ್ನು ನೀಡುವುದು, ಸಾಂಪ್ರದಾಯಿಕ ಜಾತಿವ್ಯವಸ್ಥೆಗಳು ರೂಪಿಸಿದ “ಸಾಮಾಜಿಕ ಬಹಿಷ್ಕಾರ”ದಂತ ಬಹಿಷ್ಕಾರಗಳನ್ನು (ಬ್ರಿಟಿಷರ ಪರವಿರುವ ಭಾರತೀಯರಿಗೆ) ಹಾಕುವುದು ಮುಂತಾದ ಕ್ರಿಯೆಗಳು ಧಾರ್ಮಿಕ ಅಂಶಗಳಿಂದ ಹೊರತಾಗಿರಲಿಲ್ಲ. ಶಿವಾಜಿ ಉತ್ಸವವನ್ನು ಅಥವಾ ಗಣಪನ ಉತ್ಸವವನ್ನು ಆಚರಿಸುವ ಸಂದರ್ಭಗಳು ಹಿಂದೂ ಪುನರುತ್ಥಾನವಾದಕ್ಕೆ ಪೂರಕವಾಯಿತು. ಅವು ಮುಂದಿನ ದಿನಗಳಲ್ಲಿ ಸಂಘಟಿತ ಶಕ್ತಿಯಾಗಿ ಬೆಳೆಯಲು ಕಾರಣವಾಯಿತು.

೧೯೦೮-೦೯ರ ವೇಳೆಗೆ ಸ್ವದೇಶಿ ಹೋರಾಟವು ನಿಧಾನವಾಗಿ ತೀವ್ರಗತಿಯನ್ನು ಕಳೆದುಕೊಂಡಿತು. ಬಿಪಿನ್‌ಚಂದ್ರ ಅವರು ಇದಕ್ಕೆ ಕೊಡುವ ಕೆಲವು ಕಾರಣಗಳು ಹೀಗಿವೆ: ಮೊದಲನೆಯದಾಗಿ, ಪೊಲೀಸರು ಚಳವಳಿಯನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿದರು. ಸಾರ್ವಜನಿಕ ಭಾಷಣ ಸಭೆ, ಮೆರವಣಿಗೆ ಹಾಗೂ ಪತ್ರಿಕೆಗಳಿಗೆ ಬ್ರಿಟಿಷರು ನಿಷೇಧವನ್ನು ಹಾಕಿದರು. ಚಳವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಂದ ‘ಡಿಬಾರ್‌’ ಮಾಡಲಾಯಿತು. ಚಳವಳಿಯಲ್ಲಿ ಭಾಗವಹಿಸಿದ ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಯಿತು. ಇಲ್ಲವೇ ಅವರಿಗೆ ದಂಡ ಹಾಕಲಾಯಿತು ಇಲ್ಲವೇ ಲಾಕಪ್‌ಗೆ ಹಾಕಿ ಚಿತ್ರಹಿಂಸೆ ಕೊಡಲಾಯಿತು. ಎರಡನೆಯದಾಗಿ, ಆಂತರಿಕ ಕಲಹಗಳಿಂದಾಗಿ ಸ್ವದೇಶಿ ಚಳವಳಿ ಕುಸಿದು ಹೋಯಿತು. ಮುಖ್ಯವಾಗಿ, ೧೯೦೭ರಲ್ಲಾದ ಕಾಂಗ್ರೆಸ್‌ನ ವಿಭಜನೆ ಇದಕ್ಕೆ ನೇರವಾದ ಕಾರಣವಾಯಿತು. ಹಾಗೆಯೇ ಅಶ್ವಿನಿಕುಮಾರ್‌ ದತ್ತಾ ಮತ್ತು ಕೃಷ್ಣಕುಮಾರ್‌ ಮಿತ್ರಾ ಅವರನ್ನು ಗಡೀಪಾರು ಮಾಡಿದ್ದರಿಂದ, ತಿಲಕರಿಗೆ ೬ ವರ್ಷ ಕಠಿಣ ಸಜೆ ನೀಡಿದ್ದರಿಂದ, ಅಜಿತ್‌ಸಿಂಗ್‌ ಮತ್ತು ಲಜಪತ್‌ರಾಯ್‌ ಇವರನ್ನು ಪಂಜಾಬ್‌ನಿಂದ ಗಡೀಪಾರು ಮಾಡಿದ್ದರಿಂದ, ಚಿದಂಬರ ಪಿಳ್ಳೈ ಅವರನ್ನು ಮದ್ರಾಸಿನಲ್ಲಿ ಹಾಗೂ ಹರೀಸರ್ವೋತ್ತಮ ರಾವ್‌ಅವರನ್ನು ಆಂಧ್ರದಿಂದ ಗಡೀಪಾರು ಮಾಡಿದ್ದರಿಂದ ಚಳವಳಿಯ ಹಾದಿಯೇ ಬದಲಾಯಿತು. ಬಿಪಿನ್‌ಚಂದ್ರಪಾಲ್‌ ಮತ್ತು ಅರವಿಂದ ಘೋಷ್‌ಅವರು ಸಕ್ರೀಯ ರಾಜಕೀಯದಿಂದ ನಿವೃತ್ತರಾದದ್ದೂ ಚಳವಳಿಗೆ ಮಾರಕ ಹೊಡೆತವಾಯಿತು. ಮೂರನೆಯದಾಗಿ, ಸ್ವದೇಶಿ ಚಳವಳಿಯು ಪರಿಣಾಮಕಾರಿಯಾಗಿ ಸಂಘಟಿತವಾಗಿರಲಿಲ್ಲ ಮತ್ತು ಒಂದು ಪಕ್ಷದ ರೀತಿಯ ರಚನೆಯಿರಲಿಲ್ಲ.

ಸಾರ್ವಜನಿಕವಾಗಿ ಜನಾಂದೋಲನದಲ್ಲಿ ಭಾಗವಹಿಸಿದ ಚಳವಳಿಗಾರರು ಈ ಆಂದೋಲನದ ವೈಫಲ್ಯದಿಂದಾಗಿ ೧೯೦೮ರ ವೇಳೆಗೆ ಕ್ರಾಂತಿಕಾರಕ ಭಯೋತ್ಪಾದನೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಂಘಟಿತ ಹೋರಾಟದ ವೈಫಲ್ಯವು ವೈಯಕ್ತಿಕ ‘ಹಿರೋಯಿಸಂ’ನ ಮೂಲಕ ಬ್ರಿಟಿಷರೊಡನೆ ಸೆಣಸಲು ಈ ಕ್ರಾಂತಿಕಾರಿಗಳು ಸನ್ನದ್ಧರಾದರು. ಸ್ವದೇಶಿ ಆಂದೋಲನ ಈ ರೀತಿಯಲ್ಲಿ ಕ್ರಾಂತಿಕಾರಕ ಹೋರಾಟಕ್ಕೆ ಸ್ಫೂರ್ತಿಯಾಯಿತು.

ಕ್ರಾಂತಿಕಾರಕ ಹೋರಾಟಗಳ ಉಗಮ ಮತ್ತು ಸ್ವರೂಪಗಳು

ತಿಲಕರ ತತ್ವಗಳಿಂದ ಪ್ರಭಾವಿತರಾಗಿ ೧೮೯೭ರ ಸುಮಾರಿಗೆ ದಾಮೋದರ ಮತ್ತು ಬಾಲಕೃಷ್ಣ ಚಾಪೇಕರ್‌ ಸಹೋದರರು ಪೂನಾದಲ್ಲಿ ದೌರ್ಜನ್ಯ ಮಾಡುತ್ತಿದ್ದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಕೊಂದ ಚರಿತ್ರೆ ಕಾಂಗ್ರೆಸ್‌ನಲ್ಲಿ ತೀವ್ರಗಾಮಿ ತತ್ವಗಳು ತಳ ಊರುವ ಮೊದಲೇ ಇತ್ತು. ಬ್ರಿಟಿಷರು ನೀಡುತ್ತಿದ್ದ ಶಿಕ್ಷಣವನ್ನು “ರಾಷ್ಟ್ರ-ವಿರೋಧಿ” ಎಂದು ಕರೆದ ಸತೀಶ್‌ಚಂದ್ರ ಮುಖರ್ಜಿ ಅವರು ರಾಷ್ಟ್ರೀಯ ಶಿಕ್ಷಣದ ಪರವಿದ್ದು ಅದಕ್ಕಾಗಿ ಕೆಲಸ ಮಾಡಿದವರು. ದೇಶಿ ಭಾಷೆಗಳಲ್ಲಿ ಶಿಕ್ಷಣವನ್ನು ಜನರಿಗೆ ನೀಡುವುದಕ್ಕಾಗಿ ಮುಂದೆ ಬಂದ ರವೀಂದ್ರನಾಥ ಠಾಗೋರ್‌ಅವರ ಶಾಂತಿನಿಕೇತನವನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು. ೧೯೦೬ರ ವೇಳೆಯಲ್ಲಿ ಅರವಿಂದ ಘೋಷರು ತಾವೇ ಪ್ರಿನ್ಸಿಪಾಲರಾಗಿದ್ದ ಬೆಂಗಾಲ್‌ ನ್ಯಾಷನಲ್‌ ಕಾಲೇಜು ಕೂಡ ದೇಶಪ್ರೇಮವನ್ನು ಹರಡಲು ಭಾರತೀಯ ವಿಜ್ಞಾನಿಗಳನ್ನು, ಚರಿತ್ರೆಕಾರರನ್ನು ಹಾಗೂ ಉದ್ದಿಮೆದಾರರನ್ನು ತಯಾರಿಸುವ ಕೆಲಸ ಮಾಡುತ್ತಿತ್ತು. ಉನ್ನತ ಶಿಕ್ಷಣಕ್ಕಾಗಿ ಬುದ್ಧಿವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಜಪಾನಿಗೆ ಕಳಿಸುವಂತೆ ವ್ಯವಸ್ಥೆ ಕೂಡ ಇತ್ತು. ಅಶ್ವಿನಿಕುಮಾರ್‌ ದತ್ತಾರಂತವರು ರಾಷ್ಟ್ರೀಯ ಹೋರಾಟದ ಜೊತೆಜೊತೆಗೆ ಸಾಮಾಜಿಕ ಅನಿಷ್ಟಗಳಾದ ಜಾತಿಪದ್ಧತಿ, ವರದಕ್ಷಿಣೆ ಪದ್ಧತಿ, ಬಾಲ್ಯವಿವಾಹ ಮುಂತಾದವುಗಳ ವಿರುದ್ಧ ಹೋರಾಟ ಮಾಡಬೇಕೆಂದು ಸಮಿತಿಗಳನ್ನು ರಚಿಸಿದರು. ಈ ಹಿನ್ನೆಲೆಯಲ್ಲಿ ಬೀದಿಗೆ ಬಂದ ವಿದ್ಯಾರ್ಥಿಗಳನ್ನು ಶಾಲಾ ಕಾಲೇಜುಗಳಿಂದ ಡಿಬಾರ್‌ ಮಾಡಲಾಯಿತು. ಅವರನ್ನು ಇರಿಸಿಕೊಂಡ ಶಾಲಾ ಕಾಲೇಜುಗಳಿಗೆ ಅನುದಾನವನ್ನು ಮತ್ತು ಮಾನ್ಯತೆಯನ್ನು ಬ್ರಿಟಿಷರು ರದ್ದುಗೊಳಿಸಿದರು. ವಿದ್ಯಾರ್ಥಿಗಳಿಗೆ ದಂಡವನ್ನು ಹಾಕಲಾಯಿತು ಮತ್ತು ದೈಹಿಕ ಹಿಂಸೆಯನ್ನು ನೀಡಲಾಯಿತು. ಕಲ್ಕತ್ತಾ, ಅಮರಾವತಿ ಮತ್ತು ಕೊಲ್ಹಾಪುರಗಳಲ್ಲಿ ವಿದ್ಯಾರ್ಥಿಗಳಿಗೆ ಚಾಟಿ ಏಟಿನ ರುಚಿ ತೋರಿಸಲಾಯಿತು. ದಮನ ಮಾಡುತ್ತಿದ್ದ ಬ್ರಿಟಿಷರನ್ನು ವಿರೋಧಿಸಲು ೧೯೦೬ರಲ್ಲಿ ಯುಗಾಂತರ ಪತ್ರಿಕೆಯು “ಬಲವನ್ನು ಬಲವೇ ನಿಲ್ಲಿಸುತ್ತದೆ” ಎಂದು ಸಾರ್ವಜನಿಕವಾಗಿಯೇ ಬರೆಯಿತು. ಸಹಜವಾಗಿಯೇ ವಿದ್ಯಾರ್ಥಿಗಳು ಬಾಂಬ್‌, ಪಿಸ್ತೂಲ್‌ಗಳ ಮೂಲಕ ಕ್ರೂರ ಬ್ರಿಟಿಷ್ ‌ಅಧಿಕಾರಿಗಳನ್ನು ಕೊಲ್ಲುವ ಕೆಲಸ ಆರಂಭಿಸಿದರು.

ಕ್ರಾಂತಿಕಾರಿಗಳ ಈ ಹೋರಾಟವು ಬಹಳ ವೈಯಕ್ತಿಕವಾದ ಹೋರಾಟವಾಗಿತ್ತು. ಯಾವುದೇ ರೀತಿಯ ಪೂರ್ವ ಯೋಜನೆ ಮತ್ತು ಸಂಘಟನೆ ಇಲ್ಲದೆ, ಐರಿಷ್‌ ತೀವ್ರವಾದಿಗಳನ್ನು ಮತ್ತು ರಷ್ಯಾದ ನಿಹಿಲಿಷ್ಟರನ್ನು ಆದರ್ಶವಾಗಿಟ್ಟುಕೊಂಡು ದಮನಕಾರಿಗಳಾದ ಒಬ್ಬೊಬ್ಬ ಬ್ರಿಟಿಷ್ ‌ಅಧಿಕಾರಿಯನ್ನು ಸಂಹರಿಸಲು ಭಾರತೀಯ ಕ್ರಾಂತಿಕಾರರು ಸಿದ್ಧರಾದರು. ಪ್ರಮುಖವಾಗಿ ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ರಹಸ್ಯ ಸಂಘಗಳು ಆರಂಭವಾದವು. ಮೇಲ್ನೋಟಕ್ಕೆ ದೈಹಿಕ ಕಸರತ್ತುಗಳನ್ನು ಮಾಡುವ ಗರಡಿಗಳ ರೀತಿಯಲ್ಲಿ ಇಂಥ ಸಂಘಗಳಿದ್ದವು. ಕಲ್ಕತ್ತಾ ಮತ್ತು ಢಾಕ್ಕಾಗಳ “ಅನುಶೀಲನ ಸಮಿತಿ,” ಕಲ್ಕತ್ತಾದ “ಜುಗಾಂತರ,” ಸಾವರ್ಕರ್‌ ಸಹೋದರರ “ಮಿತ್ರ ಮೇಳ” ಇವುಗಳಲ್ಲಿ ಹೆಸರಿಸಬಹುದಾದವು. ವಿನಾಯಕ ದಾಮೋದರ ಸಾವರ್ಕರ್‌ವಿದೇಶಕ್ಕೆ ಹೋದ ಮೇಲೆ ಅವರ ಸಹೋದರ “ಅಭಿನವ ಭಾರತ ಸೊಸೈಟಿ”ಯನ್ನು ಆರಂಭಿಸಿದರು. ಪಶ್ಚಿಮ ಭಾರತದಲ್ಲಿ ಅದರ ಶಾಖೆಗಳು ಬಹಳಷ್ಟಿದ್ದವು.

ಆಡಳಿತವು ರಷ್ಯನ್‌ ರೀತಿಯಲ್ಲಿದ್ದರೆ ಅದನ್ನು ಎದುರಿಸಲು ರಷ್ಯಾದ ಕ್ರಾಂತಿಕಾರಕ ಮಾರ್ಗವನ್ನೇ ತುಳಿಯಬೇಕು ಎಂದು ತಿಲಕರು “ಕೇಸರಿ”ಯಲ್ಲಿ ಬರೆದರು. ಆ ಕಾಲದ ಕ್ರಾಂತಿಕಾರರಿಗೂ ರಷ್ಯಾದ ಹೋರಾಟಗಾರರ ಬಗ್ಗೆ ತೀವ್ರ ಕುತೂಹಲವಿತ್ತು. ಅರವಿಂದ ಘೋಷರಂತೂ ಮಾರ್ಕ್ಸ್‌ಹೇಳಿದ “ಪ್ರೊಲಿಟರಿಯೇಟ್‌”’ (ಕೆಳವರ್ಗದ ಕಾರ್ಮಿಕರು) ವರ್ಗವನ್ನು ಕಾಂಗ್ರೆಸ್‌ ಸೇರಿಸಿಕೊಂಡರೆ ಕ್ರಾಂತಿ ಮಾಡಬಹುದು ಎಂದು ನಂಬಿದ್ದರು. ಹೇಮಚಂದ್ರ ಕುನುಂಗೊ ಅವರು ಮಿಲಿಟರಿ ತರಬೇತಿ ಪಡೆಯಲಿಕ್ಕೆ ವಿದೇಶಕ್ಕೆ ಹೋಗಿ ಬಂದಿದ್ದರು. ಪ್ಯಾರಿಸ್‌ನಲ್ಲಿದ್ದ ರಷ್ಯಾ ಮೂಲದವನೊಬ್ಬನ ಮುಖಾಂತರ ಅವರು ಮಿಲಿಟರಿ ಹಾಗೂ ರಾಜಕೀಯ ತರಬೇತಿ ಪಡೆದರು. ೧೯೦೮ರಲ್ಲಿ ಅವರು ಭಾರತಕ್ಕೆ ಮರಳಿದ ನಂತರ ಧಾರ್ಮಿಕ ಶಾಲೆ ಮತ್ತು ಒಂದು ಬಾಂಬ್‌ ಕಾರ್ಖಾನೆಯನ್ನು ಕಲ್ಕತ್ತಾದಲ್ಲಿ ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಕೆನಡಿಯ ಹಲ್ಲೆಯ ಪ್ರಕರಣದಲ್ಲಿ ಅರವಿಂದ ಘೋಷರೂ ಸೇರಿದಂತೆ ನಾಲ್ವರು ಬಂಧನಕ್ಕೊಳಗಾದರು. ಈ ಸಂದರ್ಭದಲ್ಲಿ ವಿಕೃತ ಮನೋಧರ್ಮದ ಕ್ರೂರಿ ಮ್ಯಾಜಿಸ್ಟ್ರೇಟ್‌ರೆಂಗ್ಸ್‌ ಫೋರ್ಜ್‌ ಇವರಿಂದ ತಪ್ಪಿಸಿಕೊಂಡ. ಇಬ್ಬರು ಅಮಾಯಕ ಬಿಳಿಯ ಮಹಿಳೆಯರು ಇವರ ಬಾಂಬಿಗೆ ಆಹುತಿಯಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಕಿ ಆತ್ಮಹತ್ಯೆ ಮಾಡಿಕೊಂಡರೆ ಖುದಿರಾಂ ಬೋಸ್‌ರಿಗೆ ನೇಣು ಹಾಕಲಾಯಿತು.

ಮಹಾರಾಷ್ಟ್ರದ ನಾಸಿಕ್, ಮುಂಬೈ ಮತ್ತು ಪೂನಾಗಳಲ್ಲಿ ಬಾಂಬ್‌ತಯಾರಿಕೆ ನಡೆಯುತ್ತಿತ್ತು. ನಾಸಿಕ್‌ನಲ್ಲಿ ವೈಸರಾಯ್‌ ಸ್ವಲ್ಪದರಲ್ಲೇ ತನ್ನ ಪ್ರಾಣ ಉಳಿಸಿಕೊಂಡನು. ನಾಸಿಕ್‌ನ ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟನನ್ನು ಕ್ರಾಂತಿಕಾರಿಗಳು ಗುಂಡಿಟ್ಟುಕೊಂದರು. ಧಿಂಗ್ರನನ್ನು ನಂತರ ನೇಣಿಗೆ ಹಾಕಲಾಯಿತು. ಮದ್ರಾಸ್‌ ಪ್ರಾಂತ್ಯದಲ್ಲಿ ಚಿದಂಬರಂ ಪಿಳ್ಳೈ ಅವರು ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ತಿರುನಲ್ವೇಲಿಯಲ್ಲಿ ಗೋಲಿಬಾರ್‌ಗೆ ಆಜ್ಞೆ ಮಾಡಿದ ಬ್ರಿಟಿಷ್ ‌ಅಧಿಕಾರಿಯನ್ನು ಭಾರತ ಮಾತಾ ಅಸೋಸಿಯೇಷನ್‌ನ ವಾಂಚಿ ಅಯ್ಯರ್‌ ಕೊಲೆ ಮಾಡಿದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ವಿಫಲರಾದ ಇವರು ಆತ್ಮಹತ್ಯೆ ಮಾಡಿಕೊಂಡರು. ಪಂಜಾಬ್‌ನಲ್ಲಿ ೧೮೫೭ರ ದಂಗೆಯ ೫೦ನೇ ವರ್ಷಾಚರಣೆಯ ಸಂದರ್ಭದಲ್ಲಿ ಕ್ರಾಂತಿಕಾರರು ಚಚ್ಚಿದರು. ರಾವಲ್ಪಿಂಡಿಯಲ್ಲಿ ದಂಗೆಗಳಾದವು. ಈ ಹೋರಾಟವು ಅಜಿತ್‌ಸಿಂಗ್‌ ಮತ್ತವರ ಸಂಗಡಿಗರಾದ ಆಗಾ ಹೈದರ್‌ ಮತ್ತು ಸೈಯದ್‌ ಹೈದರ್‌ ರಿಜಾ ಇವರ ನೇತೃತ್ವದಲ್ಲಿ ನಡೆಯಿತು. ಪರಿಣಾಮವಾಗಿ ಅಜಿತ್‌ಸಿಂಗ್ ಮತ್ತು ಲಜಪತ್‌ರಾಯ್‌ ಅವರನ್ನು ಗಡೀಪಾರು ಮಾಡಲಾಯಿತು.

ಡೆಹ್ರಾಡೂನ್‌ನಲ್ಲಿ ಕಾರಕೂನರಾಗಿದ್ದ ರಾಸ್‌ಬಿಹಾರಿ ಬೋಸ್‌ಅವರು ಬಂಗಾಳ ಮತ್ತು ಪಂಜಾಬ್‌ನ ಕ್ರಾಂತಿಕಾರಿಗಳ ಕೊಂಡಿಯಾಗಿದ್ದರು. ಲಿಬರ್ಟಿ ಮತ್ತು ಜುಗಾಂತರ ಎನ್ನುವ ಕ್ರಾಂತಿಕಾರಿ ಪತ್ರಿಕೆಗಳ ಮೂಲಕ ಕ್ರಾಂತಿಕಾರಕ ಚಟುವಟಿಕೆಗಳ ಸಂಪ್ರದಾಯವನ್ನು ಮುಂದುವರಿಸಿದರು.

ಕೆಲವು ಕ್ರಾಂತಿಕಾರರು ಯುರೋಪ್‌ಗೆ ಹೋಗಿ ಬ್ರಿಟಿಷ್ ‌ವಿರೋಧಿ ರಾಷ್ಟ್ರಗಳ ಸಹಾಯದಿಂದ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ತರುವ ಯೋಜನೆ ಹಾಕಿದರು. ಆ ಮೂಲಕ ಭಾರತದ ಕ್ರಾಂತಿಕಾರಿಗಳು ತಮ್ಮ ಚಟುವಟಿಕೆಗಳನ್ನು ಬಿರುಸಿನಿಂದ ಮಾಡುವ ಯೋಜನೆ ಇದಾಗಿತ್ತು. ಲಂಡನ್ನಿನಲ್ಲಿ ತಮ್ಮ ಚಟುವಟಿಕೆಗಳನ್ನು ಇಟ್ಟುಕೊಂಡ ಪ್ರಮುಖರಲ್ಲಿ ಶ್ಯಾಮ್‌ ಕೃಷ್ಣವರ್ಮಾ, ವಿ. ಡಿ. ಸಾವರ್ಕರ್‌ ಮತ್ತು ಲಾಲಹರದಯಾಳ್‌ ಇವರನ್ನು ಹೆಸರಿಸಬಹುದು. ಮ್ಯಾಡಮ್‌ ಕಾಮಾ ಮತ್ತು ಅಜಿತ್‌ಸಿಂಗ್‌ ಇವರು ಕೂಡ ಈ ನಿಟ್ಟಿನಲ್ಲಿ ಹೆಸರಿಸಬಹುದಾದ ಕ್ರಾಂತಿಕಾರಿಗಳು. ಎಲೆಮರೆಯಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ ಅನೇಕ ಕ್ರಾಂತಿಕಾರಿಗಳು ಕತ್ತಲಲ್ಲಿ ಕರಗಿ ಹೋಗಿದ್ದುಂಟು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರವನ್ನು ಈ ಕ್ರಾಂತಿಗಳು ವಹಿಸಿದ್ದರೂ ಅವರ ವಿಚಾರಗಳು ಜನಸಾಮಾನ್ಯರನ್ನು ತಲುಪಲೇ ಇಲ್ಲ. ಪಿತೂರಿ ಮೊಕದ್ದಮೆಗಳ ಮೂಲಕ, ದಂಡಗಳನ್ನು ಹಾಕುವ ಮೂಲಕ ಬ್ರಿಟಿಷರು ಕ್ರಾಂತಿಕಾರಿಗಳನ್ನು ಸದೆಬಡಿದರು. ಒಂದು ಸಾಮಾನ್ಯವಾದ ಅಜೆಂಡಾ ಮತ್ತು ಕೇಂದ್ರ ನಾಯಕತ್ವದ ಕೊರತೆ ಕೂಡ ಕ್ರಾಂತಿಕಾರಿ ಚಟುವಟಿಕೆ ಬಲಹೀನವಾಗಲು ಕಾರಣವಾಯಿತು. ಮುಖ್ಯವಾಗಿ ಇವು ರಹಸ್ಯೆ ಸಂಘಗಳಾಗಿದ್ದರಿಂದ ಜನರಿಂದ ದೂರ ಇದ್ದವು. “ಸಮಿತಿಗಳು” ಮಧ್ಯಮವರ್ಗದ ಬುದ್ಧಿಜೀವಿಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರೂ ಕಾರ್ಮಿಕರು ಮತ್ತು ರೈತರಿಂದ ಅವು ದೂರ ಉಳಿದವು. ಮಂದಗಾಮಿ ರಾಜಕಾರಣಿಗಳಂತೂ ಸಾರ್ವಜನಿಕವಾಗಿಯೇ ಈ ರೀತಿಯ “ಅಸಂವಿಧಾನಾತ್ಮಕ” ಹೋರಾಟಗಳನ್ನು ಟೀಕಿಸಿದರು. ತೀವ್ರವಾದಿ ಕಾಂಗ್ರೆಸ್ಸಿಗರಿಗೂ ಕ್ರಾಂತಿಕಾರಿ ಹೋರಾಟಗಳು ನುಂಗಲಾರದ ತುಪ್ಪವಾಗಿತ್ತು. ಈ ಎಲ್ಲ ಬಲಹೀನತೆ ಮತ್ತು ಹಿನ್ನಡೆಗಳ ನಡುವೆ ಕ್ರಾಂತಿಕಾರಿಗಳ ಈ ಹೋರಾಟ ಆಧುನಿಕ ಭಾರತದ ಇತಿಹಾಸದ ಮೈಲುಗಲ್ಲುಗಳೆಂದರೆ ತಪ್ಪಾಗಲಾರದು. ೧೯೦೮ರಿಂದ ೧೯೧೮ರ ಅವಧಿಯಲ್ಲಿ ೧೮೬ ಕ್ರಾಂತಿಕಾರಿಗಳು ಮರಣ ದಂಡನೆಯನ್ನು ಅನುಭವಿಸಿದರು, ಇಲ್ಲವೇ ಕಠಿಣ ಶಿಕ್ಷೆಯನ್ನು ಅನುಭವಿಸಿದರು.

ಕಾಂಗ್ರೆಸ್ವಿಭಜನೆ (೧೯೦೭)

೧೯೦೫ರವರೆಗೆ ಮಂದಗಾಮಿಗಳು ಕಾಂಗ್ರೆಸ್ಸಿನ ಮೇಲೆ ಹಿಡಿತವನ್ನಿಟ್ಟುಕೊಂಡಿದ್ದರೆಂದು ಈಗಾಗಲೇ ವಿವರಿಸಿದ್ದೇನೆ. ಸ್ವದೇಶಿ ಆಂದೋಲನ ಮತ್ತು ಬಂಗಾಳ ವಿಭಜನೆ ವಿರುದ್ಧದ ಹೋರಾಟದಲ್ಲಿ ತೀವ್ರಗಾಮಿಗಳು ಕಾಂಗ್ರೆಸ್ಸಿನೊಳಗೆ ಪ್ರಮುಖ ಶಕ್ತಿಯಾಗಲು ಸಾಧ್ಯವಾಯಿತು. ಇನ್ನೊಂದರ್ಥದಲ್ಲಿ ಮಂದಗಾಮಿಗಳ ಹಿಡಿತ ಸಡಿಲವಾಗತೊಡಗಿದವು. ಜನಸಾಮಾನ್ಯರನ್ನು ಮುಟ್ಟುವಲ್ಲಿ ಇವರು ವಿಫಲರಾದರು. ಮಂದಗಾಮಿಗಳ ಕಾರ್ಯಕ್ರಮಗಳೂ ಜನರನ್ನು ತಟ್ಟಲಿಲ್ಲ. ಸ್ವದೇಶಿ ಮತ್ತು ಬಹಿಷ್ಕಾರದಂಥ ಹೋರಾಟಗಳಲ್ಲಿ ಇವರು ಜನನಾಯಕರಾಗಲಿಲ್ಲ. ಅನೇಕ ಸುಧಾರಣೆಗಳಿಗಾಗಿ ಇವರು ಬ್ರಿಟಿಷರನ್ನು ಬೇಡಿಕೊಂಡರೂ ಅದು ಅಂತಹ ಪರಿಣಾಮವನ್ನು ಉಂಟುಮಾಡಲಿಲ್ಲ.

ಮಂದಗಾಮಿಗಳು “ಮಾದರೀ ಹೋರಾಟ”ದ ಆದರ್ಶದಲ್ಲಿ ಸಾಗುತ್ತಿದ್ದರೂ ಬ್ರಿಟಿಷರು ಕಾಂಗ್ರೆಸ್ಸನ್ನು ಹಂಗಿಸುವುದನ್ನು ನಿಲ್ಲಿಸಲಿಲ್ಲ. “ದೇಶ ದ್ರೋಹದ ಕಾರ್ಖಾನೆ” ಎಂದು ಬ್ರಿಟಿಷರು ಕಾಂಗ್ರೆಸ್ಸನ್ನು ಅವಹೇಳನ ಮಾಡಿತು. ೧೯೦೩ರಲ್ಲಿ ಕರ್ಜನ್ ಹೇಳುವಂತೆ ಅವನ ಅವಧಿಯಲ್ಲಿ ಕಾಂಗ್ರೆಸ್ಸನ್ನು “ಷಂಡ”ನನ್ನಾಗಿ ಮಾಡುವುದೇ ಆಗಿತ್ತು. ಕಾಂಗ್ರೆಸ್ಸಿನ ಅಧ್ಯಕ್ಷರು ೧೯೦೪ರಲ್ಲಿ ಅವನ ಭೇಟಿಗೆ ಹೋದಾಗ ಭೇಟಿಯನ್ನು ನಿರಾಕರಿಸಿ ಅವಮಾನ ಮಾಡಿದನು.

ಬ್ರಿಟಿಷರಿಗೆ ಈ ಸಂದರ್ಭದಲ್ಲಿ ಮುಖ್ಯವಾದದ್ದು ಕಾಂಗ್ರೆಸ್ಸನ್ನು ಹೇಗಾದರೂ ಬಲಹೀನವಾಗಿ ಮಾಡುವುದಾಗಿತ್ತು. ಮಂದಗಾಮಿಗಳ ಮತ್ತು ತೀವ್ರಗಾಮಿಗಳ ನಡುವಿನ ಭಿನ್ನಾಭಿಪ್ರಾಯಗಳೇ ಅವರ ದಾಳಗಳಾದವು. ತೀವ್ರಗಾಮಿಗಳನ್ನು ಉಗ್ರವಾಗಿ ಶಿಕ್ಷಿಸುವುದರ ಮೂಲಕ ಮಂದಗಾಮಿಗಳ ಮೇಲೆ ಸರಕಾರವು ಮಾನಸಿಕ ಒತ್ತಡವನ್ನು ಹಾಕಿತು. ಬ್ರಿಟಿಷರು ಕೆಲವೊಂದು ಸುಧಾರಣೆಗಳನ್ನು ಮಾಡುವ ಷರತ್ತಿನ ಹಿನ್ನೆಲೆಯ್ಲಲೇ ಮಂದಗಾಮಿಗಳು ತೀವ್ರಗಾಮಿಗಳಿಂದ ದೂರ ಸರಿಯಲು ಆರಂಭಿಸಿದರು. ಒಮ್ಮೆ ತೀವ್ರಗಾಮಿಗಳನ್ನು ಸದೆ ಬಡಿಯಲು ಆರಂಭಿಸಿದ ನಂತರ ಕಾಂಗ್ರೆಸ್ಸಿನ ವಕ್ತಾರರಾಗಬಹುದಾಗಿದ್ದ ಮಂದಗಾಮಿಗಳನ್ನು ಸರಕಾರ ನಿರ್ಲಕ್ಷಿಸಿತು. ಮಂದಗಾಮಿಗಳಾಗಲಿ ಅಥವಾ ತೀವ್ರಗಾಮಿಗಳಾಗಲಿ ಬ್ರಿಟಿಷರ ಕುಟಿಲತೆಯನ್ನು ಅರ್ಥಮಾಡಿಕೊಂಡು ರಾಜಕಾರಣ ಮಾಡುವಲ್ಲಿ ವಿಫಲರಾದರೆಂದು ಬಿಪಿನ್‌ಚಂದ್ರ ಅವರು ವಿವರಿಸಿದ್ದಾರೆ.

ವೈಸರಾಯ್‌ ಆಗಿದ್ದ ಮಿಂಟೊ ಮತ್ತು ಸರಕಾರದ ಕಾರ್ಯದರ್ಶಿಯಾಗಿದ್ದ ಜಾನ್‌ಮಾರ್ಲೆ ಶಾಸಕಾಂಗದ ಬಗ್ಗೆ ಸುಧಾರಣೆ ಮಾಡುವ ಸಂದರ್ಭದಲ್ಲಿ ಮಂದಗಾಮಿಗಳನ್ನು ಮಾತ್ರ ೧೯೦೬ರಲ್ಲಿ ಮಾತುಕತೆಗೆ ಆಹ್ವಾನಿಸಿತು. ಮತ್ತೊಂದೆಡೆ ಬ್ರಿಟಿಷರು ತೀವ್ರಗಾಮಿ ಹೋರಾಟವನ್ನು ಸದೆ ಬಡಿಯುತ್ತಿದ್ದಾರೆಂದು ಗೊತ್ತಿದ್ದು ಗೊತ್ತಿಲ್ಲದಂತೆ ಮಂದಗಾಮಿಗಳು ಮಾತುಕತೆಗೆ ಒಪ್ಪಿದರು. ಇದು ಕಾಂಗ್ರೆಸ್ಸಿನ ವಿಭಜನೆಗೆ ಮುಖ್ಯ ಕಾರಣವಾಯಿತು.

೧೯೦೫-೦೭ರಲ್ಲಿ ಸ್ವದೇಶಿ ಆಂದೋಲನದ ತೀವ್ರಗತಿಯಲ್ಲಿ ಮುನ್ನಡೆದಿತ್ತು. ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. ಈ ಆಂದೋಲನವನ್ನು ಭಾರತದಾದ್ಯಂತ ಹರಡಬೇಕೆಂದು ತೀವ್ರಗಾಮಿಗಳು ವಾದಿಸಿದರೆ, ಆಂದೋಲನವು ಬಂಗಾಳಕ್ಕೆ ಸೀಮಿತವಾಗಿರಬೇಕೆಂದು ಮಂದಗಾಮಿಗಳು ಬಯಸಿದರು.

ಕಲ್ಕತ್ತಾದಲ್ಲಿ ೧೯೦೬ರ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದ ಅಧ್ಯಕ್ಷತೆಯ ಬಗ್ಗೆ ವಿವಾದ ಆರಂಭವಾಯಿತು. ಎರಡು ಬಣಗಳಲ್ಲೂ ಪೈಪೋಟಿ ಉಂಟಾಯಿತು. ಕೊನೆಗೆ ದಾದಾಭಾಯಿ ನವರೋಜಿ ಅವರು ಒಮ್ಮತದ ಅಧ್ಯಕ್ಷರಾದರು. ಸ್ವದೇಶಿ, ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ ಮತ್ತು ಸ್ವರಾಜ್ಯಗಳ ಮೇಲಿನ ನಿರ್ಣಯಗಳನ್ನು ವಿವಾದಗಳ ನಡುವೆಯೇ ಅಂಗೀಕಾರ ಮಾಡಲಾಯಿತು. ಈ ರ್ನಿಯಗಳ ಸ್ವರೂಪದ ಬಗ್ಗೆ ೧೯೦೭ರಲ್ಲಿ ಪೂರ್ಣ ಪ್ರಮಾಣದ ಚರ್ಚೆಯಾಯಿತು. ಈ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮಂದಗಾಮಿಗಳು ಅಡ್ಡಗಾಲು ಹಾಕಿದ್ದರಿಂದ ಅವರನ್ನು ಕಾಂಗ್ರೆಸ್ಸಿನಿಂದ ದೂರ ತಳ್ಳಬೇಕೆಂದು ಬಹುತೇಕ ತೀವ್ರವಾದಿಗಳು ಅಭಿಪ್ರಾಪಟ್ಟರು. ಕಳೆದ ಇಪ್ಪತ್ತು ವರ್ಷಗಳಿಂದ ಜೋಪಾನವಾಗಿ ಕಟ್ಟಿ ಬೆಳೆಸಿದ ಕಾಂಗ್ರೆಸ್‌ ಇವತ್ತು ತೀವ್ರಗಾಮಿಗಳ ಕೈಯಲ್ಲಿ ಸಿಕ್ಕಿ ನಲುಗಿಹೋಗುವುದರ ಬಗ್ಗೆ ಮಂದಗಾಮಿಗಳು ಚಿಂತಿಸಿ, ತೀವ್ರಗಾಮಿಗಳಿಂದ ದೂರ ಇರುವ ತೀಮಾನಕ್ಕೆ ಬಂದರು. ಅರವಿಂದ ಘೋಷರು ತೀವ್ರವಾದಿಗಳ ಪರವಾಗಿ ಹಾಗೂ ಫಿರೋಜ್‌ಷಾ ಮೆಹ್ತಾ ಅವರು ಮಂದಗಾಮಿಗಳ ಪರ ಲಾಬಿ ಮಾಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಗೋಖಲೆಯವರು ನೀಡಿದ ಹೇಳಿಕೆ ಮಹತ್ವದ್ದಾಗಿದೆ. ‘ತೀವ್ರಗಾಮಿಗಳಿಗೆ ಸರಕಾರದ ಹಿಂದಿರುವ ದೈತ್ಯಶಕ್ತಿಯ ಅರಿವಿಲ್ಲ. ತೀವ್ರಗಾಮಿಗಳು ಹೇಳಿದ್ದನ್ನು ಕಾಂಗ್ರೆಸ್‌ ಪಾಲಿಸಿದರೆ ಬ್ರಿಟಿಷರು ಕೇವಲ ಐದು ನಿಮಿಷಗಳಲ್ಲಿ ಎಲ್ಲರನ್ನೂ ಹೊಸಕಿ ಬಿಡುವರು” ಎಂದು ಗೋಖಲೆ ಅಭಿಪ್ರಾಯಪಟ್ಟರು. ಮಿಂಟೊ ಮಾರ್ಲೆ ಅವರ ಮೂಲಕ ರಾಜಕೀಯ ಮತ್ತು ಆಡಳಿತ ಅಧಿಕಾರವನ್ನು ಬ್ರಿಟಿಷರೊಂದಿಗೆ ಪಾಲು ಪಡೆಯುವ ಉತ್ಸಾಹವನ್ನು ಮಂದಗಾಮಿಗಳು ತೋರಿಸಿದ್ದರು. ತೀವ್ರವಾದಿಗಳ ಒತ್ತಡದಿಂದ ಬ್ರಿಟನ್ನಿನ ಲೇಬರ್ ಸರಕಾರಕ್ಕೆ ಮುಜುಗರ ತರಬಹುದೆಂದೂ ನಂಬಿದ್ದರು. ಕಾಂಗ್ರೆಸ್‌ ಈ ರೀತಿಯಲ್ಲಿ ಹಿನ್ನಡೆ ಸಾಧಿಸುತ್ತಿದ್ದರೂ ತಿಲಕರಿಗೆ ಮತ್ತು ಗೋಖಲೆಯವರಿಗೆ ಕಾಂಗ್ರೆಸ್‌ನ ವಿಭಜನೆ ಬೇಕಿರಲಿಲ್ಲ. ಆದರೆ ಇಬ್ಬರಿಗೂ ಅರವಿಂದ ಘೋಷರನ್ನಾಗಲಿ ಅಥವಾ ಮೆಹ್ತಾ ಅವರನ್ನಾಗಲಿ ಸಮಾಧಾನ ಮಾಡುವ ಶಕ್ತಿ ಉಳಿದಿರಲಿಲ್ಲ.

೧೯೦೭ ಡಿಸೆಂಬರ್‌ ೨೬ರಂದು ಸೂರತ್‌ ಅಧಿವೇಶನ ಇವರಿಗೆ ತಮ್ಮ ತಮ್ಮ ನಿರ್ಣಯಗಳನ್ನು ತರುವ ವೇದಿಕೆಯಾಯಿತು. ಬಹಳಷ್ಟು ಉದ್ವೇಗಗೊಂಡಿದ್ದ ತೀವ್ರಗಾಮಿಗಳು ಕಲ್ಕತ್ತಾ ಅಧಿವೇಶನದಲ್ಲಿ ಮಂಡಿತವಾಗಿದ್ದ ನಾಲ್ಕು ನಿರ್ಣಯಗಳನ್ನು ಮಂದಗಾಮಿಗಳು ವಿಫಲಗೊಳಿಸುತ್ತಾರೆಂದು ನಂಬಿದ್ದರು. ತೀವ್ರಗಾಮಿಗಳ ಕುಹಕ ಮತ್ತು ತಿರಸ್ಕಾರದ ನುಡಿಗಳಿಂದ ಮಂದಗಾಮಿಗಳು ಬಹಳ ನೊಂದಿದ್ದರು. ಹೇಗಾದರೂ ನಿರ್ಣಯಗಳನ್ನು ಅಂಗೀಕಾರ ಮಾಡಲು ಮಂದಗಾಮಿಗಳನ್ನು ತೀವ್ರಗಾಮಿಗಳು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ರಾಸ್‌ಬಿಹಾರಿ ಬೋಸ್‌ ಅವರ ಆಯ್ಕೆಗೆ ಈ ಇವರು ತೀವ್ರ ವಿರೋಧ ಒಡ್ಡಿದರು. ಸೂರತ್‌ ಅಧಿವೇಶನಕ್ಕೆ ಬಂದಿದ್ದ ೧೬೦೦ ಮಂದಿ ಪ್ರತಿನಿಧಿಗಳಲ್ಲಿ ಗೊಂದಲ ಉಂಟಾಗಿ ಪ್ರತಿನಿಧಿಗಳು ಬೊಬ್ಬೆ ಹೊಡೆಯಲು ಶುರು ಮಾಡಿದರು. ಈ ಸಂದರ್ಭದಲ್ಲಿ ಅನೇಕರಿಗೆ ಏಟುಗಳು ಬಿದ್ದವು. ಕುರ್ಚಿಗಳಲ್ಲಿ ಪರಸ್ಪರ ಬಡಿದಾಡಿಕೊಂಡರು. ಯಾರೋ ಅಪರಿಚಿತರು ವೇದಿಕೆಯ ಮೇಲಿದ್ದ ಫಿರೋಜ್‌ಷಾ ಮೆಹ್ತಾ ಮತ್ತು ಸುರೇಂದ್ರನಾಥ ಬ್ಯಾನರ್ಜಿಯವರ ಮೇಲೆ ಹಲ್ಲೆ ಮಾಡಿದರು. ಕೊನೆಗೆ ಪೊಲೀಸರು ಬಂದು ಶಾಂತಿಯ ವಾತಾವರಣ ಕಲ್ಪಿಸಿದರು. ಕೊನೆಗೂ ಇಲ್ಲಿ ಗೆದ್ದವರು ಬ್ರಿಟಿಷರೆಂದೇ ಬಿಪಿನ್‌ಚಂದ್ರ ಬರೆಯುತ್ತಾರೆ. ಸೂರತ್‌ನಲ್ಲಿ ಕಾಂಗ್ರೆಸ್ಸಿನ ಅವಸಾನವಾಯಿತೆಂದು ಹಾಗೂ ಅದು ಬ್ರಿಟಿಷರ ಜಯವೆಂದು ಮಿಂಟೋನು ಮಾರ್ಲೆಗೆ ಪತ್ರ ಬರೆದದ್ದು ಈಗ ಇತಿಹಾಸ.

ಕಾಂಗ್ರೆಸ್ಸಿನ ಅವಸಾನ ೧೯೦೭ರಲ್ಲಿ ಸ್ಪಷ್ಟವಾಗುವ ಹೊತ್ತಿಗೆ ಬ್ರಿಟಿಷರು ತೀವ್ರಗಾಮಿಗಳ ಮೇಲೆ ಕ್ರೂರವಾಗಿ ಹಲ್ಲೆ ಮಾಡತೊಡಗಿದರು. ತೀವ್ರಗಾಮಿ ಪತ್ರಿಕೆಗಳನ್ನು ಮುಚ್ಚಲಾಯಿತು. ಅವರ ನಾಯಕರಾದ ತಿಲಕರನ್ನು ಆರು ವರ್ಷಗಳ ಸೆರೆಮನೆವಾಸಕ್ಕಾಗಿ ಮಾಂಡಲೆಗೆ ಕಳಿಸಲಾಯಿತು. ಈ ಹಿಂದೆ ವಿವರಿಸಿದಂತೆ ಅರವಿಂದ ಘೋಷರು “ಪಿತೂರಿ ಮೊಕದ್ದಮೆ”ಯಲ್ಲಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ಮೇಲೆ ರಾಜಕೀಯ ಸನ್ಯಾಸ ತೆಗೆದುಕೊಂಡು ಅವರು ಪಾಂಡಿಚೇರಿಯಲ್ಲಿ ನೆಲೆಸಿದರು. ಬಿಪಿನ್‌ ಚಂದ್ರಪಾಲ್‌ ರಾಜಕೀಯದಿಂದ ನಿವೃತ್ತರಾದರು. ೧೯೦೮ಕ್ಕೆ ಬ್ರಿಟನ್ನಿಗೆ ಹೋಗಿ ಅಲ್ಲಿಂದ ೧೯೦೯ರಲ್ಲಿ ವಾಪಸ್ಸು ಬಂದ ಲಾಲಾ ಲಜಪತ್‌ರಾಯ್‌ ಅಮೆರಿಕ ಪ್ರವಾಸದ ಸಿದ್ಧತೆಯಲ್ಲಿದ್ದರು. ತೀವ್ರವಾದಿಗಳ ಸೋಲು ವಿಹಿತವಾಗಿತ್ತು. ೧೯೦೯ರಲ್ಲಿ ಅರವಿಂದ ಘೋಷರು, “ನಾನು ಜೈಲಿಗೆ ಹೋದಾರ ಇಡೀ ದೇಶವೇ ವಂದೇ ಮಾತರಂ ಎನ್ನುತ್ತಿತ್ತು. ದೇಶವನ್ನು ಕಟ್ಟುವ ಛಲ ಅದರಲ್ಲಿತ್ತು. ಜೈಲಿನಿಂದ ನಾನು ವಾಪಸ್ಸು ಬಂದಾಗ ಕಂಡದ್ದು ಭೀಕರ ಮೌನ ಮಾತ್ರ” ಎಂದದ್ದು ಗಮನಾರ್ಹವಾದುದು. ತೀವ್ರಗಾಮಿಗಳ ಹಿನ್ನಡೆಯೊಂದಿಗೆ ಕೊಂಚಕಾಲ ಮೌನವನ್ನು ನಾವು ನೋಡಬಹುದಾದರೂ ೧೯೧೪ರಲ್ಲಿ ತಿಲಕರ ಬಿಡುಗಡೆಯ ನಂತರ ರಾಜಕೀಯ ಚಟುವಟಿಕೆಳು ಒಮ್ಮೆಗೆ ಬಿರುಸಾದದ್ದು ಸ್ವಾತಂತ್ರ್ಯ ಚಳವಳಿಯ ಗಟ್ಟಿ ಹೋರಾಟದ ಸಂಕೇತಗಳಾಗಿವೆ.

ಮಿಂಟೊಮಾರ್ಲೆ ಸುಧಾರಣೆ ಮತ್ತು ಬಂಗಾಳದ ವಿಭಜನೆ ರದ್ಧತಿ

ಬ್ರಿಟಿಷರಿಗೆ ಕೇವಲ ಕಾಂಗ್ರೆಸ್ಸನ್ನು ಮಾತ್ರ ಒಡೆಯುವುದು ಮುಖ್ಯವಾಗಿರಲಿಲ್ಲ. ಇದರೊಂದಿಗೆ ಹಿಂದು-ಮುಸ್ಲಿಮರನ್ನು ಒಡೆಯುವುದು ಅವರ ಕಾರ್ಯಸೂಚಿಯಲ್ಲಿತ್ತು. ತೀವ್ರಗಾಮಿಗಳನ್ನು ಮತ್ತು ಮಂದಗಾಮಿಗಳನ್ನು ಬೇರ್ಪಡಿಸಿದ ಮೇಲೆ ರಾಷ್ಟ್ರೀಯ ಚಳವಳಿಯನ್ನು ಬಲಹೀನಗೊಳಿಸಲು ಅವರಿಗಿದ್ದ ಮಾರ್ಗ ಎಂದರೆ ಮುಸ್ಲಿಮರನ್ನು ತುಷ್ಟೀಕರಿಸುವುದು. ೧೯೦೫ರಲ್ಲಿ ಕೆಲವು ಮುಸ್ಲಿಮರು ಆಗಾಖಾನ್‌ ನೇತೃತ್ವದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಸ್ಥಾನವನ್ನು ಮೀಸಲು ಚುನಾವಣೆಯ ಸಂದರ್ಭದಲ್ಲಿ ಕೊಡಬೇಕು ಎಂದು ಮನವಿ ಮಾಡಿದ್ದನ್ನು ಬ್ರಿಟಿಷರು ತಕ್ಷಣವೇ ಒಪ್ಪಿದರು. ೧೯೦೯ರಲ್ಲಿ ಜಾರಿಗೆ ಬಂದ “ಮಿಂಟೋ-ಮಾರ್ಲೆ ಸುಧಾರಣೆಯಲ್ಲಿ” ಈ ನಿರ್ಣಯವನ್ನು ಅಧಿಕೃತವಾಗಿ ಸೇರಿಸಲಾಯಿತು.

ಗವರ್ನರ್‌ ಜನರಲ್‌ನ ಎಕ್ಸಿಕ್ಯುಟಿವ್‌ ಕೌನ್ಸಿಲ್ ಮತ್ತು ಪ್ರಾಂತೀಯ ಎಕ್ಸಿಕ್ಯುಟಿವ್‌ ಕೌನ್ಸಿಲ್‌ಗೆ ಒಬ್ಬ ಭಾರತೀಯನನ್ನು ನೇಮಕ ಮಾಡಲಾಯಿತು. ಸರಕಾರದ ಅಧಿಕಾರಿಗಳೇ ಈ ಎಲ್ಲಾ ಸಮಿತಿಗಳಲ್ಲಿ ಹೆಚ್ಚಾಗಿರುತ್ತಿದ್ದರು. ಕೇಂದ್ರದ ೬೦ ಜನ ಸದಸ್ಯರಲ್ಲಿ ೨೭ ಮಂದಿ ಬ್ರಿಟಿಷ್ ‌ಅಧಿಕಾರಿಗಳೇ ಇದ್ದರು. ಸರಕಾರೇತರ ಪ್ರತಿನಿಧಿಗಳ ಸಂಖ್ಯೆಯು ಪ್ರಾಂತೀಯ ಸಭೆಗಳಲ್ಲಿ ಹೆಚ್ಚಿದ್ದರೂ, ಸರಕಾರದಿಂದ ನಾಮಕರಣ ಹೊಂದಿದ ಪ್ರತಿನಿಧಿಗಳು ಸರಕಾರಿ ಸದಸ್ಯರೊಂದಿಗೆ ಸಾಮಾನ್ಯವಾಗಿ ಚುನಾಯಿತ ಪ್ರತಿನಿಧಿಗಳ ನಿರ್ಣಯಗಳನ್ನು ಸೋಲಿಸುತ್ತಿದ್ದರು. ಮೂರು ಬಗೆಯ ಮತದಾರ ವರ್ಗವನ್ನು ಸರಕಾರ ಅನುಷ್ಠಾನಗೊಳಿಸಿತು.

೧. ಸಾಮಾನ್ಯ : ಇದರಲ್ಲಿ ಸರಕಾರೇತರ ಪ್ರತಿನಿಧಿಗಳಿರುತ್ತಿದ್ದರು.

೨. ವರ್ಗ : ಇದರಲ್ಲಿ ಮುಸ್ಲಿಮರು, ಭೂಮಾಲೀಕರು ಮತ್ತು ಯೂರೋಪಿಯನ್‌ ಬಂಡವಾಳಶಾಹಿಗಳಿರುತ್ತಿದ್ದರು.

೩. ವಿಶೇಷ : ಇದರಲ್ಲಿ ವಿಶ್ವವಿದ್ಯಾಲಯ ಮತ್ತು ಚೇಂಬರ್‌ ಆಫ್‌ ಕಾಮರ್ಸ್‌ನ ಪ್ರತಿನಿಧಿಗಳಿರುತ್ತಿದ್ದರು.

ಸಾಮಾನ್ಯ ವರ್ಗವನ್ನು ಸ್ಥಳೀಯ ಸಂಸ್ಥೆಗಳು, ಭೂಮಾಲೀಕರು, ವ್ಯಾಪಾರಿಗಳು ಮತ್ತು ವಿಶ್ವವಿದ್ಯಾನಿಲಯಗಳು ಚುನಾಯಿಸುತ್ತಿತ್ತು.

ಶಾಸಕಾಂಗದ ಕಾರ್ಯಾಧಿಕಾರಿಗಳಿಗೆ ಬಹಳ ಮಿತಿಗಳಿದ್ದವು. ಅಲ್ಲಿ ಸೈನ್ಯ ಮತ್ತು ದೇಶಿ ಸಂಸ್ಥಾನಗಳಿಗೆ ಸಂಬಂಧಪಟ್ಟಂತಹ ವಿಚಾರಗಳ ಚರ್ಚೆಗಳನ್ನು ಮಾಡುವ ಹಾಗಿರಲಿಲ್ಲ. ಪಾರ್ಲಿಮೆಂಟ್‌ ಸ್ವರೂಪದ ಸರಕಾರವನ್ನು ತರುತ್ತೇವೆ ಎಂದು ಮಂದಗಾಮಿಗಳಿಗೆ ಆಶ್ವಾಸನೆ ನೀಡಿದ ಬ್ರಿಟಿಷರು ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ. ಮಿಂಟೊ-ಮಾರ್ಲೆಯ ಕಾರ್ಯಸೂಚಿ ಪ್ರಕಾರ ಯಾವುದೇ ಕಾರಣ ಕೊಡದೆ ಯಾವುದೇ ಪ್ರತಿನಿಧಿಯ ಸದಸ್ಯತ್ವವನ್ನು ರದ್ದು ಮಾಡಬಹುದಾಗಿತ್ತು. ಸಂಕುಚಿತಗೊಂಡ ಮತದಾನ ಪದ್ಧತಿ, ಮುಸ್ಲಿಮ್‌ ತುಷ್ಠೀಕರಣ ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾದವು. ಬಹಳ ಮಂದಿ ಸದಸ್ಯರಿಗೆ ಕಾಂಗ್ರೆಸ್ಸಿನ ಮೇಲಿದ್ದ ವಿಶ್ವಾಸವೇ ನಾಶವಾಯಿತು. ಆ ಹೊತ್ತಿಗೆ ಬಲಹೀನವಾಗಿದ್ದ ತೀವ್ರವಾದಿಗಳು ಮಂದಗಾಮಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಶಾಲವಾದ ತಳಹದಿಯಲ್ಲಿ ಹರಡುತ್ತಿದ್ದ ರಾಷ್ಟ್ರೀಯ ಚಳವಳಿಯನ್ನು ಬ್ರಿಟಿಷರು ಮುಸ್ಲಿಮರನ್ನು ತುಷ್ಟೀಕರಣ ಮಾಡುವುದರೊಂದಿಗೆ ತಮ್ಮ “ಒಡೆದು ಆಳುವ ನೀತಿ”ಯನ್ನು ಮತ್ತೊಮ್ಮೆ ಜಾರಿಯಲ್ಲಿ ತಂದರು.

ಬ್ರಿಟಿಷರ ಕುಟಿಲತೆಯಿಂದ ಭಾರತೀಯರು ರೋಸಿ ಹೋದರು. ಕೋಪದ ಕಟ್ಟೆ ಒಡೆಯುವ ಮೊದಲು ಭಾರತೀಯರನ್ನು ಸಮಾಧಾನ ಮಾಡಲು ೧೯೧೧ರಲ್ಲಿ ಲಾರ್ಡ್‌ ಹಾರ್ಡಿಂಜ್‌ನು ಬಂಗಾಳದ ವಿಭಜನೆಯನ್ನು ರದ್ದುಗೊಳಿಸಿದನು. ಬಿಹಾರ ಮತ್ತು ಓರಿಸ್ಸಾವನ್ನು ಬಂಗಾಳದಿಂದ ಬೇರ್ಪಡಿಸಿ ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದನು. ಅಸ್ಸಾಂ ಅನ್ನು ಕೂಡ ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಲಾಯಿತು. ದೇಶದ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಲಾಯಿತು. ಆದರೆ ೧೯೦೮ರಲ್ಲಿ ಕ್ರಿಮಿನಲ್‌ ತಿದ್ದುಪಡಿ ಕಾನೂನು ಮತ್ತು ೧೯೧೦ರ ವೃತ್ತಪತ್ರಿಕೆಗಳ ಕಾಯ್ದೆಗಳನ್ನು ಕ್ರಾಂತಿಕಾರಿಗಳನ್ನು ಬಗ್ಗು ಬಡಿಯಲಿಕ್ಕಾಗಿಯೇ ಅನುಷ್ಠಾನಕ್ಕೆ ತರಲಾಯಿತು.

ಕೋಮುವಾದದ ಉಗಮ ಮತ್ತು ಬೆಳವಣಿಗೆ

ಭಾರತೀಯ ರಾಷ್ಟ್ರೀಯ ಹೋರಾಟಕ್ಕೆ ಒಂದು ಸ್ವರೂಪ ಬಂದದ್ದೇ ೧೯ನೇ ಶತಮಾನದ ಎರಡನೆಯ ಭಾಗದಲ್ಲಿ. ಹಿಂದೂ ಮತ್ತು ಮುಸ್ಲಿಮ್‌ ಎನ್ನುವ ಭೇದ ಸೃಷ್ಟಿಯಾದದ್ದೇ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಬ್ರಿಟಿಷರು ಭಾರತಕ್ಕೆ ಬಂದು ಆಧಿಪತ್ಯ ಆರಂಭಿಸುವ ಮೊದಲು ಹಿಂದೂ-ಮುಸ್ಲಿಮರ ನಡುವೆ ಅಂತಹ ಅಸಹನೆಗಳಿರಲಿಲ್ಲ. ೧೮೫೭ರ ದಂಗೆಯ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರು ಜೊತೆ ಜೊತೆಯಾಗಿಯೇ ಬ್ರಿಟಿಷರ ವಿರುದ್ಧ ಹೋರಾಡಿದರು. ಹಿಂದೂ ಮುಸ್ಲಿಮರಿಗೆ ಇದ್ದ ಸಾಮಾನ್ಯ ಶತ್ರುವಾದ ಬ್ರಿಟಿಷರ ಜಂಘಾಬಲ ಉಡುಗಿ ಹೋದದ್ದೇ ಇಲ್ಲ.

೧೮೫೭ರಲ್ಲಿ ಎದ್ದ “ಬಂಡಾಯ”ವನ್ನು ಹತ್ತಿಕ್ಕಿದ ಮೇಲೆ ಬ್ರಿಟಿಷರು ಬಂಡಾಯದ ನೇತೃತ್ವ ವಹಿಸಿದ ಮುಸ್ಲಿಮ್‌ ನಾಯಕರ ಮೇಲೆ ದೌರ್ಜನ್ಯ ಮಾಡಲು ಆರಂಭಿಸಿದರು. ದಂಗೆಯ ಸಂದರ್ಭದಲ್ಲಿ ೨೭,೦೦೦ಕ್ಕೂ ಮುಸ್ಲಿಮರನ್ನು ದೆಹಲಿ ಒಂದರಲ್ಲೇ ಬ್ರಿಟಿಷರು ನೇಣಿಗೆ ಹಾಕಿದರು. ಈ ಹಿನ್ನೆಲೆಯಲ್ಲಿ ಬ್ರಿಟಿಷರಿಗೆ ಮುಸ್ಲಿಮರೆಂದರೆ ಭಯ-ಹೆದರಿಕೆ ಎರಡೂ ಇತ್ತು.

ಮುಖ್ಯವಾಗಿ ೧೮೭೦ರ ನಂತರದ ಸ್ವಾತಂತ್ರ್ಯ ಹೋರಾಟದ ವಿಧಗಳು ಬ್ರಿಟಿಷರಿಗೆ ತಲೆನೋವಾಗಿದ್ದವು. ಏಕರೂಪಿಯಾದ ಬೃಹತ್‌ ರಾಷ್ಟ್ರೀಯ ಹೋರಾಟಗಳು ಬ್ರಿಟಿಷರ ದಿನನಿತ್ಯದ ಆಡಳಿತದ ಸಮಸ್ಯೆಯಾಗಿತ್ತು. ಹೀಗಾಗಿ ಬ್ರಿಟಿಷರಿಗೆ ರಾಷ್ಟ್ರೀಯ ಹೋರಾಟವನ್ನು ತನ್ನ ಸಾಮ್ರಾಜ್ಯಶಾಹಿ ಲಾಭಗಳಿಗಾಗಿ ಒಡೆಯುವುದು ಅನಿವಾರ್ಯವಾಯಿತು. ಧರ್ಮಗಳನ್ನು ಅವರು ಒಡೆದರು. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ, ಬ್ರಾಹ್ಮಣ-ಬ್ರಾಹ್ಮಣೇತರರ ನಡುವೆ, “ಉಚ್ಚ ಜಾತಿ-ಕೀಳು ಜಾತಿ”ಗಳ ನಡುವೆ, ಉರ್ದು-ಹಿಂದಿ ಭಾಷೆಗಳ ನಡುವೆ (ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ) ಬ್ರಿಟಿಷರು ತಮ್ಮ “ಒಡೆದು ಆಳುವ ನೀತಿ”ಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದರು. ಅವರೆಲ್ಲ ಪರಸ್ಪರ ಅಪನಂಬಿಕೆ, ಅಸಹನೆ ಮತ್ತು ದ್ವೇಷದಿಂದ ಪರಸ್ಪರ ಹೋರಾಟ ಮಾಡುವ ವಾತಾವರಣವು ಉದ್ದೇಶರ್ಪೂಕವಾಗಿಯೇ ಸೃಷ್ಟಿಯಾಯಿತು. ಇವುಗಳಲ್ಲಿ ಮುಖ್ಯವಾಗಿ ಹಿಂದು-ಮುಸ್ಲಿಮ್‌ ಸಂಘರ್ಷಗಳು ರಾಷ್ಟ್ರೀಯ ಹೋರಾಟಕ್ಕೆ ಧಕ್ಕೆಯನ್ನು ತಂದವು.

ಮುಸ್ಲಿಮ್‌ ಕೋಮುವಾದದ ಬೀಜಾಂಕುರಕ್ಕೂ ಮತ್ತು ಸೈಯ್ಯದ್‌ ಅಹಮದ್ಖಾನ್‌ ಅವರಿಗೂ ಬಿಡಿಸಲಾಗದ ಸಂಬಂಧವಿದೆ. ಬಹಳ ಆಧುನಿಕವಾದ ಶಿಕ್ಷಣವನ್ನು ಪಡೆದು ಆ ಹಿನ್ನೆಲೆಯಲ್ಲೇ ಸಂಪ್ರದಾಯವಾದಿ ಮೌಲ್ಯಗಳನ್ನು ಎದುರು ಹಾಕಿಕಡು, ಖುರಾನ್‌ಗೆ ಹೊಸ ವಿಶ್ಲೇಷಣೆಗಳನ್ನು ಕೊಟ್ಟ ವ್ಯಕ್ತಿ ಇವರು. ಆರಂಭದಲ್ಲಿ ಹಿಂದೂ-ಮುಸ್ಲಿಮರ ಐಕ್ಯತೆಯ ಬಗ್ಗೆ ಗೌರವವಿಟ್ಟುಕೊಂಡ ಖಾನ್‌ ಅವರು ಅಲಿಘರ್‌ನಲ್ಲಿ “ಮಹಮ್ಮದ್‌ನ್‌ ಆಂಗ್ಲೋ-ಓರಿಯಂಟಲ್‌ ಕಾಲೇಜ”ನ್ನು ಸ್ಥಾಪಿಸುವ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರಿಂದ ಧಾರಾಳವಾಗಿ ದೇಣಿಗೆಗಳನ್ನು ಪಡೆದದ್ದೂ ಉಂಟು. ಆದರೆ ರಾಷ್ಟ್ರೀಯ ಕಾಂಗ್ರೆಸ್ಸಿನ ಬೆಳವಣಿಗೆಯ ಸಂದರ್ಭದಲ್ಲಿ ಇವರಿಗೆ ಮುಸ್ಲಿಮರಿಗೆ ತಕ್ಕ ಪ್ರಾತಿನಿಧ್ಯ ದೊರಕಿಲ್ಲವೆಂದು ಸೈಯ್ಯದ್‌ ಅಹಮದ್‌ಖಾನ್‌ ಆಕ್ರೋಶಗೊಂಡರು. ಇದಕ್ಕೆ ಮುಸ್ಲಿಮ್‌ ಜಮೀನ್ದಾರರ ಕುಮ್ಮಕ್ಕೂ ಇತ್ತು. ಬ್ರಿಟಿಷರು ಕೂಡ ಬುದ್ಧಿಪೂರ್ವಕವಾಗಿಯೇ ಸೈಯ್ಯದ್‌ ಅಹಮದ್‌ಖಾನ್‌ರನ್ನು ಬೆಂಬಲಿಸಿದರು. ಈ ಕಾರಣಕ್ಕಾಗಿಯೇ ಆತ ಹಿಂದೂಗಳ ಅಪೇಕ್ಷೆಗಳೇ ಬೇರೆ ಹಾಗೂ ಮುಸ್ಲಿಮರ ಅಪೇಕ್ಷೆಗಳೇ ಬೇರೆ ಎಂದು ವಾದಿಸತೊಡಗಿದರು. ಈ ಕಾರಣಕ್ಕಾಗಿಯೇ ಇವರು ಬ್ರಿಟಿಷರನ್ನು ನೇರವಾಗಿಯೇ ವಹಿಸಿಕೊಂಡು ಬನಾರಸ್‌ನ ರಾಜಾ ಶಿವಪ್ರಸಾದ್‌ರಂಥವರೊಂದಿಗೆ ಕಾಂಗ್ರೆಸ್ಸಿಗೆ ಪ್ರತಿ ಚಳವಳಿಯನ್ನು ಹುಟ್ಟುಹಾಕಲು ಕಾರಣರಾದರು. ಒಂದು ವೇಳೆ ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗುವ ಪ್ರಸಂಗ ಬಂದರೆ ಖಂಡಿತವಾಗಿಯೂ ಬಲಾಢ್ಯರಾಗಿರುವ ಹಿಂದೂಗಳು, ಮುಸ್ಲಿಮರ ಮೇಲೆ ಹತೋಟಿ ಸಾಧಿಸುತ್ತಾರೆಂದು ಇವರು ಬಲವಾಗಿ ನಂಬಿದ್ದರು. ಈ ಕಾರಣಕ್ಕಾಗಿ ಮುಸ್ಲಿಮರಿಗೆ ಕಾಂಗ್ರೆಸ್ಸನ್ನು ಸೇರಬಾರದೆಂದು ತಾಕೀತು ಮಾಡಿದರು. ಬದ್ರುದ್ದೀನ್‌ ತ್ಯಾಬ್ಜಿಯಂತ ಕಾಂಗ್ರೆಸ್‌ ನಾಯಕರಿಗೆ ಕಾಂಗ್ರೆಸ್‌ ಬಿಡಲೂ ಒತ್ತಾಯವನ್ನೂ ಮಾಡಿದರು.

ಸೈಯದ್‌ ಅಹಮದ್‌ಖಾನ್‌ ಅವರ ವಾದಗಳು ಬಹಳಷ್ಟು ಸಂಕುಚಿತವಾಗಿತ್ತು. ದಿನನಿತ್ಯದ ಸಮಾಜಿಕ, ಆರ್ಥಿಕ ಬದುಕಿನಲ್ಲಿ ಹಿಂದೂ-ಮುಸ್ಲಿಮರ ಬವಣೆಗಳು ಒಂದೇ ಆಗಿದ್ದವು. ಒಬ್ಬ ಬಂಗಾಳಿ ಮುಸ್ಲಿಮ್‌ಗೂ ಹಾಗೂ ಬಂಗಾಳಿ ಹಿಂದೂವಿಗೂ ಇರುವ ಸಾಮ್ಯತೆ ಸಂಬಂಧಗಳನ್ನು ಒಬ್ಬ ಬಂಗಾಳಿ ಮುಸ್ಲಿಮ್‌ ಹಾಗೂ ಒಬ್ಬ ಪಂಜಾಬಿ ಮುಸ್ಲಿಮ್‌ ನಡುವೆ ಕಾಣಲು ಸಾಧ್ಯವಿಲ್ಲ ಎಂಬುದಾಗಿ ಬಿಪಿನ್‌ ಚಂದ್ರ ಬರೆಯುತ್ತಾರೆ. ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರಿಬ್ಬರೂ ಬ್ರಿಟಿಷ್ ‌ಅರಸರಿಂದ ದಬ್ಬಾಳಿಕೆಗೆ ಒಳಪಟ್ಟಿದ್ದಾರೆ ಎನ್ನುವ ಅಂಶವೇ ಮುಖ್ಯವಾಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ವಸ್ತುಸ್ಥಿತಿ ಹೀಗಿದ್ದರೂ, ಬದ್ರುದ್ದೀನ್‌ ತ್ಯಾಬ್ಜಿ, ಆರ್‌. ಎಂ. ಸಯಾನಿ, ಎ. ಭೀಂಜಿ ಮತ್ತು ಮಹಮದ್‌ಅಲಿ ಜಿನ್ನಾ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಹೋರಾಟದ ಅವಿಭಾಜ್ಯ ಅಂಗವಾಗಿದ್ದರು.

ಕೋಮುವಾದವು ಬಲಗೊಳ್ಳಲು ಆ ಕಾಲದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚರಿತ್ರೆಯ ವಿಭಾಗಗಳು (ಪಿರಿಯಡೈಸೇಶನ್‌) ಮುಖ್ಯ ಕಾರಣಗಳಾಗಿವೆ. ಬ್ರಿಟಿಷ್ ‌ಚರಿತ್ರೆಕಾರರು ಭಾರತದ ಚರಿತ್ರೆಯನ್ನು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಎಂದು ವಿಭಜಿಸಿದರು ಪ್ರಾಚೀನ ಭಾರತವನ್ನು “ಹಿಂದೂ ಯುಗ” ಎಂದು ಕರೆದರು (ಆ ಕಾಲವವನ್ನು “ಸುವರ್ಣಯುಗ”ಎಂದು ನಂತರದ ದಿನಗಳಲ್ಲಿ ರಾಷ್ಟ್ರೀಯವಾದಿ ಹಾಗೂ ಕೋಮುವಾದಿ ಚರಿತ್ರೆಕಾರರು ಕರೆದರು). ಮಧ್ಯಕಾಲೀನ ಯುಗವನ್ನು “ಕತ್ತಲ ಯುಗ” ಅಥವಾ “ಮುಸ್ಲಿಮ್‌ ಯುಗ” ಎಂದು ಕರೆದು ಪ್ರಖ್ಯಾತಗೊಳಿಸಿದರು. ಟರ್ಕರು, ಅಪ್ಘನ್ನರು ಹಾಗೂ ಮೊಗಲರು ಈ ಕಾಲದಲ್ಲೇ ಭಾರತವನ್ನು ಆಳಿದ್ದರು ಎನ್ನುವುದು ಗಮನಾರ್ಹವಾಗಿದೆ. ನಂತರದ ಯುಗವನ್ನು ಅವರು “ಕ್ರಿಶ್ಚಿಯನ್‌ ಯುಗ” ಎಂದು ಕರೆಯದೆ “ಆಧುನಿಕ ಯಗ” ಎಂದರು. ದೌರ್ಜನ್ಯ ಮಾಡುತ್ತಿದ್ದ ಕತ್ತಲ ಯುಗದಿಂದ ಭಾರತೀಯರನ್ನು ಪಾರುಮಾಡಿದ ಯುಗವೆಂದು “ಆಧುನಿಕ ಯುಗ”ವನ್ನು ಅರ್ಥೈಸಲಾಗಿತ್ತು. ಎಲ್ಲ ಕಾಲದಲ್ಲೂ ಕೆಳವರ್ಗದವರನ್ನು ಹಿಂದೂ-ಮುಸ್ಲಿಮರು ಎನ್ನುವ ಭೇದವಿಲ್ಲದೆ ಆಳುವ ವರ್ಗಗಳು ದೌರ್ಜನ್ಯ ಮಾಡಿರುವ ಅಂಶಗಳನ್ನು ಬೇಕೆಂದೇ ಕೈ ಬಿಟ್ಟರು. ಈ ಕಾರಣದಿಂದಾಗಿಯೇ ‘ಹಿಂದೂ ಸಂಸ್ಕೃತಿ’ ಮತ್ತು ‘ಮುಸ್ಲಿಮ್‌ ಸಂಸ್ಕೃತಿ’ಗಳು ಉದ್ಭವವಾಗಿ ಕೋಮುವಾದವು ಬಲಿಷ್ಠವಾಗಲು ಸಹಾಯವಾಯಿತು.

ಧಾರ್ಮಿಕ ಚಳವಳಿಗಳು ಕೋಮುವಾದವನ್ನು ಪ್ರಚಾರ ಮಾಡಲು ಕಾರಣವಾದವು. ಹೆಚ್ಚು ಕಡಿಮೆ ಎಲ್ಲ ಹಿಂದೂ ಧಾರ್ಮಿಕ ಸುಧಾರಣಾವಾದಿಗಳು (ಮುಖ್ಯವಾಗಿ “ಆರ್ಯ ಸಮಾಜ”ದ ದಯಾನಂದ ಸರಸ್ವತಿ) ಪ್ರಾಚೀನ ಕಾಲದಲ್ಲಿ ‘ಸುವರ್ಣಯುಗ’ವನ್ನು ಕಂಡರು. ವಿಶಾಲ ಹೃದಯಿಯಾದ ಸ್ವಾಮಿ ವಿವೇಕಾನಂದರು ಕುಡ ಭಾರತದ ಸಂಸ್ಕೃತಿಯ ಭವ್ಯತೆಯನ್ನು ಕುರಿತು ಮಾತಾಡುವಾಗ ಇದೇ ಹಾದಿಯನ್ನು ತುಳಿದರು. ಇದೇ ರೀತಿ ಮುಸ್ಲಿಮರು ತಮ್ಮ ಚರಿತ್ರೆಯನ್ನು ಕಟ್ಟಿಕೊಂಡ ಸಂದರ್ಭದಲ್ಲಿ ಪಶ್ಚಿಮ ಏಷ್ಯಾದ ಸಂಪ್ರದಾಯಗಳನ್ನು ನೆನೆದರು. ಅಲ್ಲಿನ ಚರಿತ್ರೆಯ ಘಟನೆಗಳನ್ನು ಪವಿತ್ರ ಎಂದು ಭಾವಿಸತೊಡಗಿದರು. ಹೀಗಾಗಿ ಧಾರ್ಮಿಕ ಸುಧಾರಣೆಗಳು ಎರಡು ಭಿನ್ನ ಮಾರ್ಗದಲ್ಲಿ ಸಾಗಿದವು. ಆದ್ದರಿಂದ ಇಪ್ಪತ್ತನೇ ಶತಮಾನದ ಆದಿಯಲ್ಲಿ ಧರ್ಮಯುದ್ಧವನ್ನು ಮಾಡಲು ಈ ಎರಡು ಧರ್ಮಗಳ ನಾಯಕರೆನಿಸಿಕೊಂಡವರು ಸಿದ್ಧರಾದರು.

ಭಾರತದ ಆರಂಭದ ರಾಜಕಾರಣವು ಜಾತ್ಯತೀತ (ಸೆಕ್ಯುಲರ್‌) ಹಿನ್ನೆಲೆಯಲ್ಲಿ ಮುಂದುವರಿಯಲಿಲ್ಲ ಎನ್ನುವ ಅಭಿಪ್ರಾಯವಿದೆ. ಉಗ್ರಗಾಮಿ ಹೋರಾಟಗಾರರು ಕೂಡ ಪ್ರಾಚೀನ ಭಾರತದ ಚರಿತ್ರೆಯನ್ನು ಈ ದೇಶದ ಹಿರಿಮೆಯನ್ನು ಹಾಡಿ ನಲಿದಾಡಲಿಕ್ಕೆ ಮಾತ್ರ ಉಪಯೋಗಿಸಿಕೊಂಡರು. ಭಾರತ ದೇಶವೆಂದರೆ ಅದು ಹಿಂದೂ ದೇಶವೆಂದು, ಭಾರತೀಯ ಸಂಸ್ಕೃತಿ ಎಂದರೆ ಅದು ಹಿಂದೂ ಧರ್ಮವೆಂದೇ ಬಗೆದರು. ಹಿಂದೂ ಧರ್ಮ ಎಂದರೆ ಅದು “ಆರ್ಯ” ಧರ್ಮವೇ ಆಗಿತ್ತು. ಅರವಿಂದ ಘೋಷರು ಭಾರತವನ್ನು “ತಾಯಿ” ಎಂದೂ, ರಾಷ್ಟ್ರೀಯತೆಯನ್ನು “ಧರ್ಮ” ಎಂದದ್ದೂ ಇಲ್ಲಿ ಗಮನಾರ್ಹವಾಗಿದೆ. ಕಾಳಿಯ ಎದುರು “ಪ್ರತಿಜ್ಞೆ”ಗಳನ್ನು ತೆಗೆದುಕೊಳ್ಳುವುದು ಮತ್ತು ಗಂಗೆಯಲ್ಲಿ ಮುಳುಗಿ “ಪವಿತ್ರ”ರಾಗುವುದನ್ನು ಚಾಚುತಪ್ಪದೆ ಈ ಕ್ರಾಂತಿಕಾರಿಗಳು ಅನುಸರಿಸುತ್ತಿದ್ದರು. ಶಿವಾಜಿ ಉತ್ಸವಗಳಾಗಲಿ ಅಥವಾ ಗಣಪತಿ ಉತ್ಸವಗಳಾಗಲಿ ಇವುಗಳಿಂದ ಹೊರತಾಗಲಿಲ್ಲ. ಇದು ಕೇವಲ ಹಿಂದೂ ಧರ್ಮದ ಸಾಂಸ್ಕೃತಿಕ ಗುರುತು ಎನ್ನುವುದಕ್ಕಿಂತ ಹೆಚ್ಚಾಗಿ ಹಿಂದೂ ಬದ್ಧ ಜಾತಿಗಳ ಗುರುತಾಗಿದ್ದವು. ಈ ಕಾರಣಗಳಿಂದಾಗಿಯೇ ಶಿವಾಜಿ ಮತ್ತು ರಾಣಾಪ್ರತಾಪರನ್ನು ಹಾಡಿ ಹೊಗಳುವಾಗ ಮೊಗಲರಾಗಲಿ ಅಥವಾ ಮುಸ್ಲಿಮ್‌ ಅರಸರಾಗಲಿ “ರಾಷ್ಟ್ರವಿರೋಧಿಗಳಾಗುತ್ತಿದ್ದರು” ಇಲ್ಲವೇ “ವಿದೇಶಿಯರಾಗುತ್ತಿದ್ದರು”. ಮುಸ್ಲಿಮರು ಈ ದೇಶದ ಭಾಗವೇ ಎನ್ನುವುದನ್ನು ಈ ಚರಿತ್ರೆ ಒಪ್ಪಿಕೊಳ್ಳಲಿಲ್ಲ. ಇದರರ್ಥ ಉಗ್ರಗಾಮಿ ಕ್ರಾಂತಿಕಾರಿಗಳೆಲ್ಲರೂ “ಮುಸ್ಲಿಮ್‌ ವಿರೋಧಿ” ಎಂದೋ ಅಥವಾ “ಕೋಮುವಾದಿಗಳೆಂದೋ” ತಿಳಿಯಬೇಕಾಗಿಲ್ಲ. ಅದರ ಬದಲು ತಿಲಕರನ್ನು ಸೇರಿಸಿಕೊಂಡು ಇವರೆಲ್ಲರೂ ಹಿಂದೂ-ಮುಸ್ಲಿಮ್‌ ಐಕ್ಯತೆಗೆ ಬದ್ಧರಾಗಿದ್ದರು. ಹೆಚ್ಚು ಕಡಿಮೆ ಇವರೆಲ್ಲರೂ ಆಧುನಿಕರು ಮತ್ತು ಪ್ರಗತಿಗಾಮಿಗಳಾಗಿದ್ದರು. ಇವರೆಲ್ಲರೂ ಯೂರೋಪ್‌ನಲ್ಲಿ ನಡೆದಿದ್ದ ಕ್ರಾಂತಿಕಾರಿಗಳಿಂದ ಪ್ರಭಾವಿತರಾಗಿದ್ದರು. ಇವರ ನಡವಳಿಕೆಗಳು ಸೆಕ್ಯುಲರ್‌ ಆಗಿದ್ದರೂ ಬ್ರಿಟಿಷ್ ‌ಪರ ವ್ಯಕ್ತಿಗಳು ಇದರಿಂದ ಅನಪೇಕ್ಷಿಯತವಾದ ಲಾಭಗಳನ್ನು ಮಾಡಿಕೊಂಡು, ಹಿಂದು ಮುಸ್ಲಿಮರ ನಡುವೆ ಭೇದಗಳನ್ನು ಹುಟ್ಟಿಸುವಲ್ಲಿ ಸಫಲರಾದರು. ಈ ಕಾರಣದಿಂದಲೇ ಅನೇಕ ವಿದ್ಯಾವಂತ ಮುಸ್ಲಿಮರು ರಾಷ್ಟ್ರೀಯ ಹೋರಾಟದಲ್ಲಿ ಭಾಗಿಗಳಾಗಿರಲಿಲ್ಲ. ಬದಲಿಗೆ ಇವರು ಪ್ರತ್ಯೇಕವಾಗಿಯೇ ಉಳಿದರು. ಇಷ್ಟೆಲ್ಲ ಹಿನ್ನೆಲೆಯಿದ್ದರೂ ಬ್ಯಾರಿಸ್ಟರ್‌ ಅಬ್ದುಲ್‌ ರಸೆಲ್‌, ಹಸ್ರತ್‌ ಮೊಹಾನಿ ಇವರು ಸ್ವದೇಶಿ ಆಂದೋಲನದಲ್ಲಿ ಭಾಗವಹಿಸಿದರು ಮತ್ತು ಜಿನ್ನಾರಂತವರು ರಾಷ್ಟ್ರೀಯ ಕಾಂಗ್ರೆಸ್ಸಿನ ಚಳವಳಿಯಲ್ಲಿ ಪಾಲ್ಗೊಂಡರು.

ಆಗಾಖಾನ್‌, ಢಾಕ್ಕಾದ ನವಾಬ ಸಮೀಉಲ್ಲಾ ಮತ್ತು ನವಾಬ ಮೊಹಿಸಿನ್‌ ಉಲ್‌ ಮುಲ್ಕ್‌ ಇವರುಗಳಿಂದ ೧೯೦೬ರಲ್ಲಿ ಆರಂಭವಾದ “ಆಲ್‌ ಇಂಡಿಯಾ ಮುಸ್ಲಿಮ್ ಲೀಗ್‌” ಒಂದು ಹೊಸ ಬಗೆಯ ಕೋಮುವಾದವನ್ನು ಹರಡಿತು. ಸ್ವಾರ್ಥಿಗಳಾದ ಕೆಲವು ವಿದ್ಯಾವಂತ ಮುಸ್ಲಿಮರು, ಪ್ರತಿಗಾಮಿಗಳಾದ ಮುಸ್ಲಿಮ್‌ ಜಮೀನ್ದಾರರು ಹಾಗೂ ಮುಸ್ಲಿಮ್‌ ಉಚ್ಚಜಾತಿಗಳಿಗೆ ಸೇರಿದ ಜನರು ಮುಸ್ಲಿಮ್‌ ಲೀಗ್‌ ಮೂಲಕ ಬಂಗಾಳದ ವಿಭಜನೆಯನ್ನು ಬೆಂಬಲಿಸಿದ್ದು ಮತ್ತು ಮುಸ್ಲಿಮ್‌ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಪ್ರತ್ಯೇಕ ಮೀಸಲಾತಿ ಬೇಕೆಂದು ಪ್ರತಿಯಾಗಿ ಬ್ರಿಟಿಷರಿಗೆ ಮನವಿ ಮಾಡಿದರು. ಇಂಥಹ ಅವಕಾಶವನ್ನೇ ಕಾಯುತ್ತಿದ್ದ ಬ್ರಿಟಿಷರು “ಮುಸ್ಲಿಮ್‌ ಹಿತಾಸಕ್ತಿ”ಗಳನ್ನು ಕಾಯಲು ಕಂಕಣ ತೊಟ್ಟರು. ಪರಿಣಾಮವಾಗಿ ಮುಸ್ಲಿಮ್‌ ಲೀಗ್ ಬ್ರಿಟಿಷರನ್ನು ಬೆಂಬಲಿಸುವುದರೊಂದಿಗೆ ಕಾಂಗ್ರೆಸ್‌ನ ಪ್ರಜಾಪ್ರಭುತ್ವೀಯ ಹೋರಾಟವನ್ನು ನಿರ್ಲಕ್ಷ್ಯ ಮಾಡಿತು.

ಇಪ್ಪತ್ತನೇ ಶತಮಾನದ ಎರಡನೆಯ ದಶಕದ ವೇಳೆಯಲ್ಲಿ ಟರ್ಕಿಯು ಇಟಲಿ ಮತ್ತು ಬಾಲ್ಕನ್‌ ರಾಷ್ಟ್ರಗಳ ಜೊತೆಗೆ ತನ್ನ ಉಳಿವಿಗಾಗಿ ಯುದ್ಧ ಮಾಡಲೇಬೇಕಾಗಿತ್ತು. ಆ ಕಾಲದಲ್ಲಿ ಪ್ರಬಲವಾಗಿದ್ದ ಏಕೈಕ ಮುಸ್ಲಿಮ್‌ ಶಕ್ತಿ ಎಂದೇ ಟರ್ಕಿಯನ್ನು ಪರಿಗಣಿಸಲಾಗಿತ್ತು. ಮುಸ್ಲಿಮರ ಪವಿತ್ರ ಸ್ಥಳಗಳು ತುರ್ಕಿಸ್ಥಾನದಲ್ಲಿದ್ದವು ಎಂಬುದು ಇಲ್ಲಿ ಮುಖ್ಯ. ೧೮೫೭ರ ವರೆಗೆ ಮೊಗಲ್ ಚಕ್ರವರ್ತಿಯು ಭಾರತದ ಮುಸ್ಲಿಮರಿಗೆ “ಇಮಾದ್‌” ಆಗಿದ್ದನು. ಅವನು ಮುಸ್ಲಿಮರ ರಾಜಕೀಯ ಹಾಗೂ ಧಾರ್ಮಿಕ ಮುಖ್ಯಸ್ಥನಾಗಿದ್ದನು. ಯಾವಾಗ ರಷ್ಯಾವು ತುರ್ಕಿಯನ್ನು ಆಕ್ರಮಿಸುವ ತವಕ ತೋರಿತೋ ಆಗ ಬ್ರಿಟಿಷರು ಟರ್ಕಿಯನ್ನು ಕಾಪಾಡಲು ಮುಂದಾದರು. ಈ ಮೂಲಕ ಮುಸ್ಲಿಮರ ವಿಶ್ವಾಸವನ್ನು ಗಳಿಸಿಕೊಳ್ಳಲು ಪ್ರಯತ್ನ ಮಾಡಿತು. ಹಾಗೆಯೇ “ಮುಸ್ಲಿಮ್‌ ಜಾಗತೀಕರಣ”ವನ್ನು (ಪಾನ್‌ಇಸ್ಲಾಂ) ಈ ಮೂಲಕ ಬ್ರಿಟಿಷರು ಪ್ರೋತ್ಸಾಹಿಸಿದರು. ಆದರೆ ಸ್ವಲ್ಪ ಕಾಲದಲ್ಲೇ ಬ್ರಿಟಿಷರು ತುರ್ಕಿಯ ವಿರುದ್ಧ ಹೋರಾಡುವ ಪ್ರಸಂಗ ಬಂದಾಗ ಭಾರತದ ರಾಷ್ಟ್ರೀಯವಾದಿಗಳು ಅದನ್ನು ತೀವ್ರವಾಗಿ ವರೋಧಿಸಿದರು. ಬ್ರಿಟಿಷ್ ‌ವಿರೋಧಿ-ಸಾಮ್ರಾಜ್ಯಶಾಹಿ ವಿರೋಧಿ ಭಾವನೆಗಳು ಮುಸ್ಲಿಮ್‌ ಹೋರಾಟವು ರಾಷ್ಟ್ರೀಯ ಹೋರಾಟದ ಹಾದಿಯಲ್ಲಿ ಮುಂದುವರಿಯಲು ಪ್ರೇರೇಪಿಸಿದವು. ಯುವ ಮುಸ್ಲಿಮರೆಲ್ಲಾ ಈ ಕಾರಣದಿಂದಗಿ ಕಾಂಗ್ರೆಸ್ಸನ್ನು ಸೇರಿದರು. ೧೯೧೨ ರಿಂದ ೧೯೨೪ರ ವರೆಗಿನ ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಲು ಮುಸ್ಲಿಮ್‌ ಲೀಗ್‌ನ ನಾಯಕರು ಸಂಪೂರ್ಣವಾಗಿ ಅಶಕ್ತರಾದರು. ಆದರೆ ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿ ಕೋಮುವಾದದ ಬೀಜ ಬೆಳೆದು ನಿಂತಿತು.