ದೇಶದ ಬಹಳಷ್ಟು ಭಾಗಗಳಲ್ಲಿ ಭೂಮಾಲೀಕರು ಅಥವಾ ದೊಡ್ಡ ಹಿಡುವಳಿದಾರರು ಪ್ರಬಲರಾಗುತ್ತಾ ಬಂದ ಕಾರಣದಿಂದಾಗಿ ಗ್ರಾಮೀಣಶಾಹಿ ರೂಪಗೊಳ್ಳತೊಡಗಿತು. ಬೃಹತ್ ಪ್ರಮಾಣದ ನೀರಾವರಿ ಸೌಲಭ್ಯ, ಅಧಿಕ ಇಳವರಿಯ ತಳಿಗಳು ಕೃಷಿಯ ವಾಣಿಜ್ಯೀಕರಣ ಮುಂತಾದ ಕ್ರಮಗಳಿಂದ ಬಂಡವಾಳಶಾಹಿ ಬೆಳವಣಿಗೆ ಸುಲಭವಾಯ್ತು. ಹಾಗಾಗಿ ಈ ವರ್ಗ ಕೃಷಿಯಲ್ಲದೇ ಲೇವಾದೇವಿ, ಸಾರಿಗೆ, ವ್ಯಾಪಾರ ಮುಂತಾದ ಕ್ಷೇತ್ರಗಳಿಗೂ ತಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಾ ಬಂದಿತು. ನಿಧಾನವಾಗಿ ಹೂಡಿಕೆಯ ಮೂಲಕ ಆಧುನಿಕ ಉದ್ದಿಮೆರಂಗಗಳಿಗೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಾ ಬಂದ ಒಂದು ಪ್ರಭಾವೀ ಗುಂಪಾಗಿ ದೇಶದ ರಾಜಕೀಯದ ಮೇಲೆಯೂ ಪ್ರಭಾವ ಬೀರುವಷ್ಟು ಸಮರ್ಥರಾಗುತ್ತಾ ಬಂದರು. ದೇಶದ ಬಹುಸಂಖ್ಯಾತ ಜನರು ಹಳ್ಳಿಯಲ್ಲಿದ್ದು, ಇಂತಹ ಶ್ರೀಮಂತ ಭೂಮಾಲೀಕರ ಪ್ರಭಾವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕವಾಗುತ್ತಾ ಹೋಯಿತು. ಹಾಗಾಗಿ ಸಾಮಾಜಿಕ ಅಸಮಾನತೆಗಳಿದ್ದಾಗ ಎಲ್ಲ ವ್ಯತ್ಯಾಸಗಳನ್ನು ಬದಿಗಿರಿಸಿ ಒಂದಾಗುತ್ತಿದ್ದರು. ಹೀಗೆ ಉದ್ಯಮವಲಯ ಮತ್ತು ಕೃಷಿ ವಲಯದಲ್ಲಿ ಒಂದು ಸಣ್ಣ ಶ್ರೀಮಂತ ವರ್ಗದ ಹಿಡಿತ ಬಲವಾಗುತ್ತಾ ಹೋಯಿತು.

ಈ ಮೇಲಿನ ಎರಡು ಪ್ರಮುಖ ವರ್ಗಗಳನ್ನು ಹೊರತುಪಡಿಸಿದರೆ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಪ್ರಭಾವಿಯಾಗಿರುವ ಇನ್ನೊಂದು ವರ್ಗ ಆಡಳಿತಾಶಾಹಿ ಅಥವಾ ನೌಕರಶಾಹಿ. ಸರ್ಕಾರದ ಕಾರ್ಯಕ್ರಮಗಳೆಲ್ಲ ಅನುಷ್ಠಾನವಾಗುವಲ್ಲಿ ಈ ನೌಕರಶಾಹಿಯ ಪಾತ್ರ ಬಹಳ ಪ್ರಮುಖವಾಗಿದ್ದು ಸರ್ಕಾರಗಳು ಬದಲಾದರೂ ನೌಕರಶಾಹಿ ಮಾತ್ರ ಖಾಯಂ ಆಗಿ ಮುಂದುವರಿಯುತ್ತಿದ್ದು ತನ್ನದೇ ಆದ ಪ್ರಬಲ್ಯವನ್ನು ಉಳಿಸಿಕೊಂಡಿದೆ. ನೌಕರಶಾಹಿ ವ್ಯವಸ್ಥೆಯೊಳಗೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಭಿನ್ನತೆಗಳಿವೆಯಾದರೂ ಸಂಘಟಿತ ವರ್ಗವಾಗಿರುವ ಕಾರಣ ಸರಕಾರದ ಮೇಲೆ ಪ್ರಭಾವ ಬೀರಿಯೋ ಒತ್ತಡ ಹೇರಿಯೋ ತನ್ನ ಹಿತಾಸಕ್ತಿಯ್ಯನ್ನು ಕಾಪಾಡಿಕೊಂಡು ಮುಂದುವರಿಯುತ್ತಲೇ ಇದೆ.

ಇದುವರೆಗಿನ ವಿವರಗಳನ್ನು ಸರಿಯೆಂದು ಒಪ್ಪಿಕೊಂಡರೆ ಸಹಜವಾಗಿಯೇ ನಾವೇನೂ ಪ್ರಗತಿ ಸಾಧಿಸಿಲ್ಲವೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಾವು ನಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ಸುಗಳಿಸಿದ್ದೇವೆ. ಬದಲಾಗಿ ಕೆಲವೇ ಜನರಲ್ಲಿ ಹಂಚಿ ಹೋಗಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಬಂಡವಾಳಶಾಹಿಯು ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ನಿಡಿದ ಪ್ರತಿಫಲದಲ್ಲಿ ಅತ್ಯಧಿಕ ಪ್ರಯೋಜನವನ್ನು ಪಡೆದಿದೆ. ಸಂಘಟಿತ ವರ್ಗಗಳು ತಮ್ಮ ಸಂಘಟನಾ ಶಕ್ತಿಯಿಂದ ಬೇಡಿಕೆಗಳ ಬಗ್ಗೆ ಬಂಡವಾಳಶಾಹಿಯ ಮೇಲೆ ಒತ್ತಡ ಹೇರಲು ಶಕ್ತವಾಗಿರುವುದರಿಂದ ಬೇಡಿಕೆ ಈಡೇರಿಸಿಕೊಳ್ಳಲು ಶಕ್ತರಾಗಿದ್ದಾರೆ. ಆದರೆ ಅಸಂಘಟಿತ ಕಾರ್ಮಿಕ ವರ್ಗ ಮಾತ್ರ ಇಂತಹ ಯಾವುದೇ ರೀತಿಯಲ್ಲಿ ತನ್ನ ಸ್ಥಿತಿಯಲ್ಲಿ ಸುಧಾರಣೆ ತರಲು ಶಕ್ತವಾಗುವುದಿಲ್ಲ. ಆದರೆ ಕಾರ್ಮಿಕ ವರ್ಗ ತಮ್ಮ ಶ್ರಮ ಸಂಪತ್ತನ್ನು ಉಳಿಸಿಕೊಂಡು ಅದನ್ನು ಬಂಡವಾಳಶಾಹಿಯ ಬೆಳವಣೆಗೆಯಲ್ಲಿ ವಿನಿಯೋಗಿಸುವ ಹಾಗೆ ನೋಡಿಕೊಳ್ಳಬೇಕಾದರೆ, ಅವರನ್ನು ಕನಿಷ್ಠ ಈಗಿರುವ ಸ್ಥಿತಿಯಲ್ಲಾದರೂ ಉಳಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಉದ್ದಿಮೆರಂಗದ ಯಾವ ಪ್ರಯೋಜನವನ್ನು ಪಡೆಯದೇ ಹೊರಗುಳಿದ ಸಮುದಾಯಕ್ಕೆ ಸರಕಾರ ತನ್ನ ಜನೋಪಯೋಗಿ ನೀತಿಗಳ ಮೂಲಕ ಬದುಕಿನ ಕನಿಷ್ಠ ಅವಶ್ಯಕತೆಗಳು ದೊರೆಯುವಂತೆ ನೋಡಿಕೊಳ್ಳುತ್ತದೆ. ಯಾಕೆಂದರೆ ಕಾರ್ಮಿಕ ವರ್ಗವಿಲ್ಲದೆ ಬಂಡವಾಳಶಾಹಿ ಉಳಿದು ಬೆಳೆಯುವುದಿಲ್ಲ ಎನ್ನುವುದು ಒಂದು ಕಾರಣವಾದರೆ, ಕನಿಷ್ಟ ಅವಶ್ಯಕತೆಗಳಿಗೂ ಕುತ್ತು ಬರುವ ಸಂದರ್ಭ ಸೃಷ್ಟಿಯಾದಾಗ ಅಸ್ತಿತ್ವ ಉಳಿಸಿಕೊಳ್ಳಲು ಕಾರ್ಮಿಕ ವರ್ಗ ಹೋರಾಡಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣದಿಂದಾಗಿ ಭಾರತ ದೇಶದಲ್ಲಿ ಬಂಡವಾಳಶಾಹಿಯ ಪ್ರಭಾವದಲ್ಲಿರುವ ಸರಕಾರ ಆಗಿಂದಾಗ್ಗೆ ಹಿಂದುಳಿದ ವರ್ಗ, ಕೃಷಿಕಾರ್ಮಿಕರಿಗೆ ಮತ್ತಿತರ ಅಸಂಘಟಿತ ವರ್ಗದ ಜನರಿಗೆ ನೀಡುತ್ತಾ ಬಂದ ಸವಲತ್ತುಗಳು ಸಮಾನತೆಯನ್ನು ಸಾಧಿಸುವುದಕ್ಕಿಂತಲೂ ಅಧಿಕವಾಗಿ ಅವರ ಶ್ರಮಿಕ ಸಂಪತ್ತನ್ನು ಉಳಿಸಿಕೊಂಡು ಒಲಿಸಿಕೊಂಡು ಒಂದು ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದಾಗಿದೆ ಎನ್ನಬಹುದು.

೧೯೪೭ರಿಂದ ೧೯೯೧ವರೆಗೆ ಭಾರತವು ಪಾಲಿಸುತ್ತಾ ಬಂದ ಆರ್ಥಿಕ ಅಭಿವೃದ್ಧಿ ನೀತಿಗಳಲ್ಲಿ ವ್ಯಾಪಕಮಟ್ಟದ ಬದಲಾವಣೆಗಳಾಗಿವೆ. ಮಿಶ್ರ ಆರ್ಥಿಕ ನೀತಿಯ ಬದಲಾಗಿ ಮುಕ್ತ ಮಾರುಕಟ್ಟೆಯೆಡೆಗೆ ಆಕರ್ಷಿತರಾಗಿದ್ದೇವೆ. ಆರ್ಥಿಕ ಉದಾರೀಕರಣ, ಜಾಗತಿಕರಣ, ಖಾಸಗೀಕರಣ ಮುಂತಾದ ವಿಷಯಗಳು ಅಭಿವೃದ್ಧಿ ಸಾಧಿಸಲು ಅನಿವಾರ್ಯವೆನಿಸುವ ಮಟ್ಟಿಗೆ ಚಲಾವಣೆಯಲ್ಲಿವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಂತಹ ವ್ಯಾಪದ ಚದಲಾವಣೆಗಳಿಗೆ ಮೂಲಭೂತ ಕಾರಣಗಳೇನು? ನಿಜವಾಗಿಯೂ ಉದಾರೀಕರಣ ನೀತಿ ದೇಶದ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸಲ್ಪಡುತ್ತಿದೆಯೇ ಅಥವಾ ೧೯೯೦ರ ದಶಕದವರೆಗಿನ ನೀತಿಗಳಲ್ಲಿನ ಲೋಪ ದೋಷಗಳು ಇಂತಹ ಬದಲಾವಣೆಯನ್ನು ಅನಿವಾರ್ಯ ವಾಗಿಸಿವೆಯೆ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ನಾವು ನಮ್ಮ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಕೆಲವೊಂದು ವಿವರಗಳನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ. ಅದರಂತೆ ಸ್ವಾತಂತ್ರ್ಯ ನಂತರ ನಮ್ಮ ಅಭಿವೃದ್ಧಿ ನೀತಿ ವಿಮರ್ಶೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುರಿತ ಸರಕಾರದ ಧೋರಣೆ, ಅಭಿವೃದ್ಧಿ ನೀತಿಯ ಮೇಲೆ ಉಂಟಾಗಿರಬಹುದಾದ ರಾಜಕೀಯ ಪರಿಣಾಮಗಳೇನು ಮುಂತಾದ ವಿಚಾರಗಳನ್ನು ತಿಳಿಯುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಸ್ವಾತಂತ್ರ್ಯ ನಂತರ ಆರ್ಥಿಕ ಅಭಿವೃದ್ಧಿಯ ಗತಿ ಮತ್ತು ವೇಗವನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗುವ ಒಂದು ಅಂಶ ೧೯೪೭ ರಿಂದ ೧೯೮೦ ರ ಅವಧಿಯಲ್ಲಿ ದಾಖಲಾದ ಪ್ರಮುಖ ಸಾಧನೆಗಳೆಂದರೆ, ಮೊದಲನೆಯದಾಗಿ ಆಹಾರ ಧಾನ್ಯಗಳ ಆಮದು ನಿಂತು ಹೋದದ್ದು, ಎರಡೆನೆಯದಾಗಿ ಕೈಗಾರಿಕಾ ರಂಗದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಮೂರನೆಯದಾಗಿ ಸೇವಾರಂಗದ ಕಾರ್ಯ ನಿರ್ವಹಣೆಯಲ್ಲಿ ಅಭಿವೃದ್ಧಿ. ೧೯೮೦-೯೧ ರ ಅವಧಿಯಲ್ಲಿ ಇಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಅರ್ಥ ವ್ಯವಸ್ಥೆ ನಂತರ ಏಕಾಏಕಿ ಸಂಕಷ್ಟಕ್ಕೆ ಗುರಿಯಾಗಲು ಕಾರಣೆವೇನು ಅನ್ನುವುದು ಮಹತ್ವದ ಪ್ರಶ್ನೆಯಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ಆರೋಪಿಸಲಾಗುತ್ತಿದೆ ಮತ್ತು ಆರ್ಥಿಕ ಚಿಂತಕರಲ್ಲಿಯೂ ಈ ವಿಚಾರದ ಕುರಿತಂತೆ ಅಭಿಪ್ರಾಯ ಭೇದಗಳಿವೆ. ಒಂದು ಗುಂಪಿನ ತಜ್ಞರ ಅಭಿಮತದಂತೆ ಇಂತಹ ತೊಂದರೆಗೆ ಕಾರಣ ಐವತ್ತರ ದಶಕದಿಂದಲೂ ನಾವು ಆರ್ಥಿಕ ಅಭಿವೃದ್ಧಿಯಲ್ಲಿ ಅನುಸರಿಸಿದ ನೀತಿಗಳು ಮತ್ತು ವ್ಯೂಹಗಳಲ್ಲಿನ ದೋಷಗಳು. ಇನ್ನು ಕೆಲವರ ಅಭಿಪ್ರಾಯದಂತೆ ೧೯೮೦ರ ದಶಕದಲ್ಲಿ ಸರ್ಕಾರ ಅರ್ಥವ್ಯವಸ್ಥೆಯನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ. ಇನ್ನು ಒಂದು ಅಭಿಪ್ರಾಯದ ಪ್ರಕಾರ ನಮ್ಮ ಆರ್ಥಿಕ ನೀತಿ ಮತ್ತು ಯೋಜನೆಗಳಲ್ಲಿಯೇ ಮೂಲಭೂತವಾಗಿ ದೋಷಗಳಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣ. ೧೯೯೧ರಲ್ಲಿ ಎದುರಾದ ಆಥಿಕ ಮುಗ್ಗಟ್ಟು ಏಕಾಏಕಿ ಉದ್ಭವಿಸಿದ ಸಮಸ್ಯೆಯಾಗಿ ಕಂಡರೂ ಇದರ ಬೆಳವಣಿಗೆ ೧೯೮೦ರ ದಶಕದುದ್ದಕ್ಕೂ ಆಗಿರುವುದು ಕಂಡುಬರುತ್ತದೆ. ೧೯೮೦ರ ದಶಕದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರಕಾರ ಕೈಗೊಂಡ ಹಲವಾರು ನೀತಿಗಳ ಬಗ್ಗೆ ಟೀಕಾಕರರು ಮಾಡಿದ್ದ ಆರೋಪಗಳು ನಿರಾಧಾರವಾಗಿಲ್ಲ ಎಂದು ತಿಳಿದುಬರುತ್ತದೆ. ೧೯೮೦ರ ದಶಕದಲ್ಲಿ ಹಲವಾರು ರೀತಿಯಲ್ಲಿ ಉತ್ತಮ ಸಾಧನೆಗಳಾಗಿದ್ದರೂ, ಅದರೊಂದಿಗೆ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಕೊರತೆಯ ಪ್ರಮಾಣದಲ್ಲಿ ಏರಿಕೆ, ಸರಕಾರದ ಬಜೆಟ್ ಕೊರೆತ ಮತ್ತು ಬಾಹ್ಯ ಸಾಲದ ಹೊರೆ, ಅಂತರಿಕ ಹಣಕಾಸು ಮಾರುಕಟ್ಟೆಯಲ್ಲಿ ಏರುತ್ತಿದ್ದ ಸಾಲದ ಮೊತ್ತ ಮುಂತಾದ ಸಾರ್ವಜನಿಕ ಋಣದ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಸಮಸ್ಯೆಗಳೂ ಹುಟ್ಟಿಕೊಂಡವು. ಅರ್ಥಿಕ ವ್ಯವಸ್ಥೆಯ ಆರೋಗ್ಯಕ್ಕೆ ಹಾನಿಕಾರಕವಾದಂತಹ ತೊಂದರೆಗಳ ನಿವಾರಣೆಗೆ ಯೋಜನಾ ಆಯೋಗ ಮತ್ತು ಅರ್ಥಿಕ ತಜ್ಞರು ನೀಡುತ್ತಾ ಬಂದ ಸಲಹೆ ಸೂಚನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗೆಯೇ ೧೯೮೦ರ ದಶಕದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳಿಗೆ ಕಠೋರವಾದ ಅರ್ಥಿಕ ಶಿಸ್ತನ್ನು ಪಾಲಿಸಿಕೊಂಡು ಮುಂದುವರೆಯುವುದೇ ಸಾಧ್ಯವಾಗಲಿಲ್ಲ. ದುರ್ಭಲವಾಗಿದ್ದ ಅರ್ಥವ್ಯವಸ್ಥೆಯ ಸ್ಥಿತಿ ಕೊಲ್ಲಿ ಯುದ್ದದಿಂದುಂಟಾದ ತೈಲಬೆಲೆ ಏರಿಕೆ, ಅನಿವಾಸಿ ಭಾರತೀಯರಿಂದ ವಿದೇಶಿ ವಿನಿಮಯ ಠೇವಣಿಗಳ ಮುರು ಪಡೆಯುವಿಕೆ ಹಿಂದೆ ಪಡೆಯುವಿಕೆ, ವಿದೇಶಿ ವಿನಿಮಯದ ಒಳ ಹರಿವಿನಲ್ಲಿ ಗಮನಾರ್ಹ ಇಳಿಕೆ, ರಷ್ಯಾದಲ್ಲಿ ಉಂಟಾದ ಆಂತರಿಕ ಗೊಂದಲಗಳು ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳಿಂದಾಗಿ ಸಂಪೂರ್ಣವಾಗಿ ಹದಗೆಟ್ಟಿತು. ಅರ್ಥ ವ್ಯವಸ್ಥೆಯನ್ನು ಪುನಃಶ್ಚೇತನ ಗೊಳಿಸಲು ದೊಡ್ಡ ಮೊತ್ತದ ವಿದೇಶಿ ವಿನಿಮಯದ ಅಗತ್ಯವಿದ್ದು ಅಂತಾರಾಷ್ಟ್ರೀಯ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್ ಮೊರೆ ಹೋಗುವುದನ್ನು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಶರತ್ತು ಬದ್ದವಾಗಿ ನೀಡುವ ಇಂತಹ ಸಾಲಗಳು ದೇಶದ ಮೇಲೆ ಯಾವ ರೀತಿಯ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದು ಪ್ರಶ್ನಾರ್ಹವಾದ ವಿಚಾರವಾಗಿದೆ. ಉದಾರೀಕರಣ ಕ್ರಮಗಳು ಪ್ರಾರಂಭವಾಗಿ ಸುಮಾರು ವರ್ಷಗಳುರುಳಿವೆ. ಇದರ ಸಾಧಕ ಬಾಧಕಗಳು ಏನೇ ಇದ್ದರೂ ಇದನ್ನು ತಡೆಯುವ ಅಥವಾ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸುವ ಸ್ವಾತಂತ್ರ್ಯ ನಮಗಿಲ್ಲ ಎಂದೇ ಹೇಳಬಹುದು.

ಭಾರತಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹೇಗೆ ಅನುಷ್ಠಾನಕ್ಕೆ ಬರುತ್ತಿದ್ದವು ಅಥವಾ ಅಭಿವೃದ್ದಿ ಕಾರ್ಯಕ್ರಮಗಳು ಯಾವ ರೀತಿಯಲ್ಲಿ ರಾಜಕೀಯವಾಗಿ ಪ್ರೇರಿತವಾಗಿರುತ್ತಿದ್ದುವು ಅನ್ನುವುದನ್ನು ತಿಳಿಯುವುದು ಇಲ್ಲಿ ಅವಶ್ಯಕ. ಮಿಶ್ರ ಅರ್ಥಿಕ ನೀತಿಯನ್ವಯ ನಿರ್ಧರಿತವಾದ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಯೋಜನಾ ಆಯೋಗ ಸಿದ್ಧಗೊಳಿಸಿ, ಅದನ್ನು ಹೇಗೆ ಅಥವಾ ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕೇಂದು ನಿರ್ಧರಿಸುತ್ತದೆ. ಹಾಗಾಗಿ ಯೋಜನಾ ಅಯೋಗದ ಪಾತ್ರ ಮತ್ತು ಜವಾಬ್ದಾರಿ ಬಹಳ ಮಹತ್ವಪೂರ್ಣವಾಗಿದೆ. ದೇಶದ ಪ್ರಧಾನಿ ಈ ಆಯೋಗದ ಅಧ್ಯಕ್ಷರಾಗಿದ್ದು ದೇಶದ ವಿವಿಧ ರಂಗಗಳಲ್ಲಿ ಅನುಭವ ವಿರುವ ತಜ್ಞರನ್ನು ಸರಕಾರ ಸದಸ್ಯರನ್ನಾಗಿ ನಾಮಕರಣ ಮಾಡುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳ ನೀತಿಗಳೂ, ಗೊಂದಲಗಳೂ ಯೋಜನಾ ಆಯೋಗದಂತಹ ತಜ್ಞರಿರುವ ಸಂಸ್ಥೆಯ ಕಾರ್ಯದಕ್ಷತೆಯ ಮೇಲೆ ಪರಿಣಾಮ ಬೀರುವಂತಹ ವಾತಾವರಣವಿದೆ. ೧೯೭೦ ರ ದಶಕದವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಮತ್ತು ರಾಜಕಾರಣಿಗಳಿಗೆ ನಿಶ್ಚಿತವಾದ ಗುರಿ ಮತ್ತು ಒಂದು ಮಟ್ಟದ ದೂರದೃಷ್ಟಿ ಇತ್ತಾದರೂ ತದನಂತರದಲ್ಲಿ ನಾವು ಅಂತಹದೇ ಸ್ಥಿರತೆಯನ್ನು ಕಾಣಲಿಲ್ಲ. ೧೯೭೭ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ಪ್ರಥಮ ಬಾರಿಗೆ ವಿರೋಧ ಪಕ್ಷವೊಂದು ಸರಕಾರ ರಚಿಸಿತು. ಇದುವರೆಗೆ ವಿರೋಧ ಪಕ್ಷದ ಟೀಕೆಗಳಿಗೆ ಗುರಿಯಾಗಿದ್ದ ಅಭಿವೃದ್ದಿ ನೀತಿಗಳು ಕೊಂಚಮಟ್ಟಿಗೆ ಮರುವಿಮರ್ಶೆಗೊಳಪಟ್ಟವು. ಯೋಜನಾ ಆಯೋಗದ ಪುನಾರಚನೆಯಾಗಿ ಅಭಿವೃದ್ಧಿಯ ಆದ್ಯತೆಗಳಲ್ಲೂ ಬದಲಾವಣೆಗಳುಂಟಾದವು. ನಂತರ ಇಂತಹ ಬದಲಾವಣೆಗಳು ಕಾಲಕಾಲಕ್ಕೆ ಸರಕಾರದಲ್ಲಿ ಬದಲಾವಣೆಗಳುಂಟಾದಂತೆ ನದೆದಿವೆ. ಒಟ್ಟಿನಲ್ಲಿ ೧೯೭೦ರವರೆಗೆ ಒಂದು ರೀತಿಯ ರಾಜಕೀಯ ಸ್ಥಿರತೆಯಿದ್ದು ಇಂತಹ ಸ್ಥಿರತೆಗೂ ಅರ್ಥಿಕ ರಂಗದಲ್ಲಿ ಕಂಡು ಬಂದಿರುವಂತಹ ಸ್ಥಿತಿಗೂ ಒಂದು ರೀತಿಯ ಸಂಬಂಧವಿದೆಯೆಂದು ಹೇಳಬಹುದು. ನಂತರದ ದಿನಗಳಲ್ಲಿ ರಾಜಕೀಯ ಏರಿಳಿತಗಳು ಮತ್ತು ಅನಿಶ್ಚಿತತೆಗಳು ಅರ್ಥ ವ್ಯವಸ್ತೆಯ ಕಾರ್ಯ ನಿರ್ವಹಣೆಯ ಮೇಲೆಯೂ ತನ್ನ ಪರಿಣಾಮವನ್ನು ಉಂಟುಮಾಡಿವೆ. ಹಾಗಾಗಿ ನಮ್ಮ ದೇಶದ ಅರ್ಥಿಕ ಅಭಿವೃದ್ದಿಯ ಕುರಿತು ಅಧ್ಯಯನ ನಡೆಸುವಾಗ ರಾಜಕೀಯ ವ್ಯವಸ್ಥೆಯ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿದೆ.

೧೯೫೦-೬೦ರ ದಶಕಗಳಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಿರ ಹಾಗೂ ದಕ್ಶವಾದ ಸರಕಾರಗಳಿದ್ದುದರಿಂದ ಯೋಜನಾ ಆಯೋಗ ಹೆಚ್ಚು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸರಕಾರಗಳಿಗೆ ಯೋಜನೆಯ ಮತ್ತು ಆದ್ಯತೆಗಳ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದುದರಿಂದ ಯೋಜನಾ ಆಯೋಗ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿತ್ತು. ಇಂತಹ ಆರೋಗ್ಯ ಪೂರ್ಣ ವಾತಾವರಣ ಅರವತ್ತರ ದಶಕದ ಕೊನೆಯ ದಿನಗಳಲ್ಲಿ ಬದಲಾಗುತ್ತ ಬಂದಿತು. ಪ್ರಮುಖ ರಾಜಕೀಯ ಪಕ್ಷ ಮತ್ತು ದೀರ್ಘಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ತನ್ನ ಪಕ್ಷದೊಳಗಿನ ಆಂತರಿಕ ಒತ್ತಡಗಳಿಂದಾಗಿ ಕೂಡಾ ಅದುವರೆಗೆ ಅನುಸರಿಸುತ್ತಾ ಬಂದ ನೀತಿಗಳನ್ನು ಮುಂದುವರೆಸುವುದು ಕಷ್ಟವಾಯ್ತು. ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಯ ಕುರಿತಂತೆ ಹಲವು ಅಭಿಪ್ರಾಯಗಳು ಧ್ವನಿತವಾಗುತ್ತ ಬಂದವು. ದೇಶ ಎದುರಿಸಿದ ಆದ್ಯತೆಯ ಕುರಿತಂತೆ ಹಲವು ಅಭಿಪ್ರಾಯಗಳು ಧ್ವನಿತವಾಗುತ್ತ ಬಂದವು. ದೇಶ ಎದುರಿಸಿದ ಬರ ಮತ್ತು ವಿದೇಶಿ ವಿನಿಮಯ ಸಮಸ್ಯೆಯ ನಿಭಾವಣೆಗೆ ವಿವಿಧ ಮಾದರಿಯ ಪರಿಹಾರಗಳು ಸೂಚಿತವಾದವು. ಇಂತಹ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿಯೇ ಯೋಜನಾ ಆಯೋಗ ಹಿಂದಿದ್ದ ದೃಢತೆಯಿಂದ ಮುಂದುವರೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಸರಿಯಾಗಿ ನೆರವು ನೀಡಲು ಒಪ್ಪಿದ್ದ ರಾಷ್ಟ್ರಗಳು ನೆರವಿನ ಪ್ರಮಾಣದಲ್ಲಿ ಕಡಿತವುಂಟು ಮಾಡಿದವು. ರೂಪಾಯಿಯ ಅಪಮೌಲ್ಯ ಮಾಡಿ ರಫ್ತು ಹೆಚ್ಚಿಸಿ ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಕ್ರಮಕೈಗೊಳ್ಳಲಾಯಿತಾದರೂ ಇಂತಹ ಕ್ರಮಗಳೂ ನಿರೀಕ್ಷಿತ ಫಲ ನೀಡಲಿಲ್ಲ. ಪಂಚವಾರ್ಷಿಕ ಯೋಜನೆಗಳನ್ನು ಮೂರು ವರ್ಷಗಳವರೆಗೆ ಸ್ಥಗಿತಗೊಳಿಸಲಾಯಿತು. ಒಂದರ್ಥದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಿಗಿತಗೊಂಡವು. ಇಂತಹ ಸಮಸ್ಯೆಗಳಿಂದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲು ಒಂದು ದಶಕವೇ ಬೇಕಾಯಿತು. ೧೯೬೯ರಲ್ಲಿ ಹಿಂದಿದ್ದ ದೃಡತೆ ಮರಳಿ ಬರಲಿಲ್ಲ. ಇದಕ್ಕೆ ಅನುಗುಣವಾಗಿಯೇ ಅಲ್ಲಿಯವರೆಗೆ ಪಾಲಿಸಿಕೊಂಡು ಬರುತ್ತಿದ್ದ ನಿಷ್ಠುರ ನೀತಿಯನ್ನು ಕೈ ಬಿಟ್ಟು ‘ಗರೀಬಿ ಹಟಾವೋ’ ಇತ್ಯಾದಿ ಇಪ್ಪತ್ತಂಶಗಳ ಕಾರ್ಯಕ್ರಮಗಳ ಮೂಲಕ ಅಲ್ಪಾವಧಿಯಲ್ಲಿ ಜನಪ್ರಿಯತೆ ನೀಡಬಲ್ಲ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ರೂಪಿಸತೊಡಗಿತು. ಈ ಹಂತದಲ್ಲಿ ಕಾಂಗ್ರೆಸ್ ವಿಭಜನೆಯಾಯಿತು. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಸರಕಾರ ರಚನೆ ಮಾಡಿದವು. ಈ ರೀತಿಯ ಬೆಳವಣಿಗೆಗಳು ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯಲು ನೆರವು ನೀಡಬಲ್ಲ ಜನಪ್ರಿಯವಾದ ಅಭಿವೃದ್ಧಿ ನೀತಿಯ ಕುರಿತು ಯೋಚಿಸುವಂತೆ ಮಾಡಿದವು. ಹಾಗಾಗಿ ಅಲ್ಲಿಂದೀಚೆಗೆ ಸರಕಾರಗಳು ಉದ್ಯಮ ಅಥವಾ ಸಂಪತ್ತು ಸೃಷ್ಟಿಸುವಂತಹ ಕಾರ್ಯಕ್ರಮಗಳಿಗೆ ಬದಲಾಗಿ ವೋಟ್ ಬ್ಯಾಂಕ್ ಸೃಷ್ಟಿಸುವಂತಹ ಕಾರ್ಯಕ್ರಮಗಳಿಗೆ ಮಹತ್ವ ನೀಡುತ್ತ ಬಂದವು. ೧೯೭೨ರಲ್ಲಿ ಶ್ರೀಮತಿ ಇಂದಿರಾಗಾಂಧಿ ‘ಗರೀಬಿ ಹಟಾವೋ’ ಘೋಷಣೆಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿ ವಿಜಯಿಯಾದರೂ, ಪ್ರತಿಯೊಂದು ರಾಜಕೀಯ ಪಕ್ಷಗಳು ಮತ ಸೆಳೆಯಬಲ್ಲ ಜನಪ್ರಿಯ ಕಾರ್ಯಕ್ರಮಗಳೇ ರಾಷ್ಟ್ರೀಯ ಅಭಿವೃದ್ಧಿ ನೀತಿ ಎನ್ನುವ ಮಟ್ಟ ಮುಟ್ಟಿದರು. ಯೋಜನಾ ಆಯೋಗ ಕೂಡಾ ಹಿಂದಿನ ಮಹತ್ವವನ್ನು ಕಳೆದುಕೊಂಡು ಸರಕಾರದ ಪ್ರಣಾಳಿಕೆಯನ್ನು ಅನುಷ್ಥಾನಗೊಳಿಸುವ ವ್ಯವಸ್ಥೆಯಾಯಿತು. ಹೀಗಾಗಿ ಸಹಾಯಧನ ಪದ್ದತಿ, ಬಡತನ ನಿರ್ಮೂಲನಕ್ಕಾಗಿ ಕಾರ್ಯಕ್ರಮ ರೂಪಿಸುವುದು ಮುಂತಾದ ಕಾರ್ಯಕ್ರಮಗಳು ಮಹತ್ವ ಪಡೆದವು. ದೂರದೃಷ್ಟಿಯುಳ್ಳ ರಾಷ್ಟ್ರೀಯ ಹಿತವನ್ನು ಗಮನದಲ್ಲಿರಿಸಿಕೊಂಡು ತಯಾರಿಸಬೇಕಾದಂತಹ ನಿರ್ದಿಷ್ಟ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಯಾವ ಸರಕಾರಗಳು ಯೋಚಿಸುವ ಗೋಜಿಗೆ ಹೋಗಲಿಲ್ಲ.

ಹೀಗೆ ಅರವತ್ತರ ದಶಕದ ಕೊನೆಯವರೆಗೆ ಮಂದಗತಿಯಲ್ಲಾದರೂ ಒಂದು ರೀತಿಯಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾರ್ಯಕ್ರಮಗಳು ಕೊಂಚ ಸಮಯ ಗೊಂದಲವುಂಟಾದರೂ ಮತ್ತೆ ಎಪ್ಪತ್ತರ ದಶಕದ ಕೊನೆಯವರೆಗೆ ಮುಂದುವರೆಯುತ್ತಾ ಬಂದವು.

ದೇಶದ ಅರ್ಥವ್ಯವಸ್ಥೆ ೧೯೮೦ರ ದಶಕದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಂಡಿತು. ಸರಕಾರ ಆಂತರಿಕವಾಗಿ ಬಂಡವಾಳ ಸಂಚಯಿಸುವ ಅಗತ್ಯ ನೀತಿಗೆ ಗಮನ ಹರಿಸಲಿಲ್ಲ. ಬದಲಾಗಿ ವಿಸ್ತರಣಾ ನೀತಿಯನ್ನು ಅನುಸರಿಸುತ್ತಾ ಹೋಯಿತು. ಹಣಕಾಸಿನ ಪ್ರಸರಣದ ಪ್ರಮಾಣದಲ್ಲಿ ಏರಿಕೆಯುಂಟಾಗುತ್ತಾ ಹೋಯಿತು. ಸಾಲ ರೂಪದಲ್ಲಿ ಪಡೆದ ಹಣವನ್ನು ಜನಪ್ರಿಯ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಯಿತು. ರಫ್ತು ಪ್ರಮಾಣದಲ್ಲಿ ಇಳಿತವಾಗಿ ಆಮದಿಗೆ ಪಾವತಿಸಲು ಬೇಕಾದ ವಿದೇಶಿ ವಿನಿಮಯದಲ್ಲಿ ಕೊರತೆ ಕಂಡು ಬಂದಿತ್ತು. ಬಳಕೆದಾರರ (ಭೋಗ ಸಾಮಗ್ರಿಗಳು) ಸಾಮಗ್ರಿಗಳ ಉತ್ಪಾದನೆಗಾಗಿ ವಿದೇಶಿ ತಂತ್ರಜ್ಞಾನ ಮತ್ತು ಬಂಡವಾಳವನ್ನು ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು. ೧೯೮೦ರ ದಶಕದ ಪ್ರಾರಂಭದ ದಿನಗಳಲ್ಲಿಯೇ ಆರ್ಥಿಕ ವಲಯದಲ್ಲಿ ಅರ್ಥ ವ್ಯವಸ್ಥೆಯನ್ನು ಸರಕಾರದ ನಿಯಂತ್ರಣದಿಂದ ಮುಕ್ತವಾಗಿರಿಸಬೇಕು ಮತ್ತು ಆ ಮೂಲಕ ಖಾಸಗೀ ಉದ್ಯಮರಂಗದ ಅತ್ಯುತ್ತಮ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಇಂತಹ ಮುಕ್ತ ಅಥವಾ ನಿಯಂತ್ರಣವಿಲ್ಲದ ಮಾರುಕಟ್ಟೆ ನೀತಿಯಾಧಾರಿತ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಇದುವರೆಗೆ ಸಾಧ್ಯವಾಗದ್ದನ್ನು ಸಾಧಿಸಬಹುದೆನ್ನುವ ಅಂಶವನ್ನು ಚಲಾವಣೆಗೆ ಬಿಡಲಾಯಿತು. ರಾಜೀವ ಗಾಂಧಿ ಅಧಿಕಾರಕ್ಕೆ ಬಂದಾಗ, ಇಂದಿರಾಗಾಂಧಿಯವರಿಂದ ಪ್ರಾರಂಭಗೊಂಡ ಕೆಲವು ಉದಾರೀಕರಣ ಕಾರ್ಯಕ್ರಮಗಳು ಮುಂದುವರಿಯುತ್ತಾ ಚುರುಕುಗೊಂಡವು. ಹೊಸ ಆರ್ಥಿಕ ನೀತಿ ಎನ್ನುವ ಹೆಸರಿನೊಂದಿಗೆ ಇಂತಹ ಬದಲಾವಣೆ ಚಲಾವಣೆಗೆ ಬಂದಿತು. ಪ್ರಾರಂಬಿಕ ಹಂತದಲ್ಲಿ ಅಭಿವೃದ್ಧಿಯ ದರಗಳಲ್ಲಿ ಏರಿಕೆ ಕಂಡು ಬಂದು ಭಾರತೀಯ ಅರ್ಥವ್ಯವಸ್ಥೆ ಹೊಸಹಾದಿಯಲ್ಲಿ ಹೊಸ ಹುರುಪಿನಿಂದ ನಡೆಯುತ್ತಿದೆ ಎನ್ನುವ ಭರವಸೆ (ಭ್ರಮೆ)ಯನ್ನು ಮೂಡಿಸಿತು. ಕೈಗಾರಿಕಾರಂಗದಲ್ಲಿ ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳ ದಾಖಲಾದವು, ಇಂತಹ ಹೆಚ್ಚಳದೊಂದಿಗೆ ಬಜೆಟ್ ಕೊರತೆ ಮತ್ತು ಸಾರ್ವಜನಿಕ ವೆಚ್ಚ ಅಧಿಕವಾಗುತ್ತ ಬಂದವು. ಈ ರೀತಿಯಲ್ಲಿ ಅಧಿಕವಾಗುತ್ತಾ ಬಂದ ಸಾರ್ವಜನಿಕ ವೆಚ್ಚವನ್ನು ಅಧಿಕವಾಗುತ್ತ ಸರಿದೂಗಿಸುವ ಸೂಕ್ತ ಕ್ರಮವನ್ನು ಮಾತ್ರ ನಿರೂಪಿಸಲಾಗಿರಲಿಲ್ಲ. ಸಾಮಾನ್ಯವಾಗಿ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ಅನುಸರಿಸುವ ಕ್ರಮವೆಂದರೆ ಅಧಿಕ ತೆರಿಗೆ ಸಂಗ್ರಹಿಸುವುದು. ಆದರೆ ಹೊಸ ಆರ್ಥಿಕ ನೀತಿಯನ್ವಯ ವ್ಯಾಪಾರ ಮತ್ತು ಉದ್ದಿಮೆಗಳ ಮೇಲೆ ತೆರಿಗೆಗಳಲ್ಲಿ ಕಡಿತ ಮಾಡಿರುವ ಕಾರಣ ಕೊರತೆಯ ಪ್ರಮಾಣ ಅಗಾಧವಾಗಿ ಏರುತ್ತಲೇ ಹೋಯಿತು. ಇಂತಹ ಕೊರತೆಯನ್ನು ಸಾರ್ವಜನಿಕ ಸಾಲ ಎತ್ತುವ ಮೂಲಕ ಸರಿ ಹೊಂದಿಸಲು ಪ್ರಯತ್ನಿಸಲಾಯಿತು. ಇಂತಹ ಸಾರ್ವಜನಿಕ ಸಾಲ ಮರುಪಾವತಿಸುವ ಸಂದರ್ಭದಲ್ಲಿಯೇ ಅನೀರಿಕ್ಷಿತ ಸಮಸ್ಯೆಗಳೆದುರಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಯಿತು. ಸರಕಾರದ ಖರ್ಚಿನ ಅಥವಾ ವೆಚ್ಚದ ಬಾಬತ್ತಿನಲ್ಲಿ ಎರಡು ವಿಧಗಳಿದ್ದು ಒಂದು ಬಂಡವಾಳ ರೀತಿಯದು, ಎರಡನೆಯದು ಸಾಮಾನ್ಯ ರೀತಿಯದು. ಸಾಮಾನ್ಯ ರೀತಿಯ ಖರ್ಚು, ಅನುತ್ಪಾದಕ ಚಟುವಟಿಕೆಗಳ ಕುರಿತಾಗಿರುವುದರಿಂದ ಇದು ಹಣದುಬ್ಬರ, ಬಜೆಟ ಕೊರತೆ ಮುಂತಾದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತಲೇ ಹೋಗುತ್ತದೆ. ೧೯೮೦ರ ದಶಕದಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದರ ಕುರಿತಂತೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಕೈಗಾರಿಕಾ ರಂಗದ ಸಾಧನೆಗೆ ಮೂಲ ಕಾರಣ ಆಮದು ಪ್ರೋತ್ಸಾಹಕ ನೀತಿಯನ್ನು ಅನುಸರಿಸಿದ್ದೇ ಆಗಿತ್ತು. ಆಮದು ಪ್ರೋತ್ಸಾಹಕ ನೀತಿಯನ್ನು ಅನುಸರಿಸಿದ್ದರಿಂದ ಕೈಗಾರಿಕಾ ರಂಗದಲ್ಲಿ ಉತ್ಪಾದನೆಯೇನೋ ಹೆಚ್ಚಳವಾಯಿತು. ಆದರೆ ವಿದೇಶಿ ವಿನಿಮಯ ಪಾವತಿ ಸಮಸ್ಯೆ ಮಾತ್ರ ಉಲ್ಬಣಗೊಳ್ಳುತ್ತಾ ಹೋಯಿತು. ಹೀಗಾಗಿ ನಮ್ಮ ರಫ್ತಿಗಿಂತ ಆಮದಿನ ಪ್ರಮಾಣದಲ್ಲಿ ಹೆಚ್ಚಳವಾಗಿ ದೊಡ್ಡ ಮೊತ್ತದ ವಿದೇಶಿ ವಿನಿಮಯ ಪಾವತಿಸಬೇಕಾದಂತಹ ಸಂದರ್ಭ ಸೃಷ್ಟಿಯಾಯಿತು. ಈ ಕೆಳಗಿನ ಕೋಷ್ಠಕದಲ್ಲಿ ನೀಡಿರುವ ಪಾವತಿ ಖಾತೆಯಲ್ಲಿನ ಶಿಲ್ಕನ್ನು ಗಮನಿಸಿದಾಗ ಮೇಲೆ ಹೇಳಿದ ವಿವರಗಳು ಹೆಚ್ಚು ಸ್ಪಷ್ಟವಾಗುತ್ತವೆ.

ಪಾವತಿ ಖಾತೆಯಲ್ಲಿನ ಶಿಲ್ಕು

ಒಟ್ಟು ರಾಷ್ಟ್ರ ಉತ್ಪನ್ನದ ಶೇಕಡಾವಾರುಗಳಲ್ಲಿ

ವರ್ಷ

ರಫ್ತು

ಆಮದು

ವ್ಯಾಪಾರ ಶಿಲ್ಕು

ರಫ್ತು

ಆಮದು

ವ್ಯಾಪಾರ ಶಿಲ್ಕು

೧೯೮೦-೮೧ ೬೭೧೧ ೧೨೫೪೯ ೫೮೩೮ ೪.೫ ೬.೨ ೪.೩
೧೯೮೧-೮೨ ೭೮೦೬ ೧೩೬೦೮ ೫೮೦೨ ೪.೯ ೮.೫ ೩.೬
೧೯೮೨-೮೩ ೮೮೦೩ ೧೪೨೯೩ ೫೪೬೦೨ ೪.೯ ೮.೦ ೩.೧
೧೯೮೩-೮೪ ೬೭೭೧ ೧೫೮೩೧ ೬೦೬೦ ೪.೭ ೭.೬ ೨.೬
೧೯೮೪-೮೫ ೧೧೭೪೪ ೧೭೧೩೪ ೫೩೯೦ ೫.೧ ೭.೪ ೨.೩
೧೯೮೫-೮೬ ೧೦೯೮೫ ೧೯೬೫೮ ೮೭೬೩ ೪.೨ ೭.೫ ೩.೩
೧೯೮೬-೮೭ ೧೨೪೫೨ ೨೦೦೯೬ ೭೬೪೪ ೪.೩ ೬.೯ ೨.೬
೧೯೮೭-೮೮ ೧೫೬೭೪ ೨೨೨೪೪ ೬೫೭೦ ೪.೭ ೬.೭ ೨.೦
೧೯೮೮-೮೯ ೨೦೨೩೨ ೨೮೨೩೫ ೮೦೦೩ ೫.೧ ೭.೧ ೨.೦
೧೯೮೯-೯೦ ೨೭೬೮೧ ೩೪೫೧೬ ೭೭೩೫ ೬.೧ ೭.೮ ೧.೭
೧೯೯೦-೯೧ ೩೨೫೫೩ ೪೩೧೯೩ ೧೦೬೪೦ ೬.೦ ೮.೧ ೨.೦
೧೯೯೧-೯೨ ೪೪೦೪೨ ೪೨೮೫೧ ೩೮೦೫ ೭.೨ ೭.೯ ೦.೨
೧೯೯೨-೯೩ ೫೩೩೫೧ ೬೨೯೨೩ ೯೫೭೨ ೭.೬ ೯.೦ ೧.೪
೧೯೯೩-೯೪ ೪೯೧೮೨ ೫೧೪೭೭ ೨೨೯೫

ಪಾವತಿ ಖಾತೆ ಕೊರತೆ ಅಗಾಧವಾಗಿ ಬೆಳೆಯುತ್ತ ಬಂದ ಪರಿಣಾಮ ಹೆಚ್ಚು ಮೊತ್ತದ ವಿದೇಶಿ ಸಾಲವನ್ನು ಪಡೆಯುವುದು ಅನಿವಾರ್ಯವಾಯಿತು. ಇದರಿಂದಾಗಿ ವಿದೇಶಿ ಸಾಲದ ಹೊರೆಯು ಅಧಿಕವಾಯಿತು. ಹಳೆಸಾಲಗಳ ಮರುಪಾವತಿಗಾಗಿ ಹೊಸಸಾಲ ಪಡೆಯುವುದು ಅನಿವಾರ್ಯವಾಯಿತು. ಇಂತಹ ಸಂದರ್ಭದಲ್ಲಿ ವಿಶ್ವಬ್ಯಾಂಕಿನ ಅಭಿವೃದ್ಧಿ ವರದಿ ಭಾರತದ ಅರ್ಥ ವ್ಯವಸ್ಥೆಯ ಸುಧಾರಣೆಗಾಗಿ ರೂಪಾಯಿಯ ಅಪಮೌಲ್ಯಕ್ಕೆ ಶಿಫಾರಸು ಮಾಡಿತು. ಇಂತಹ ವರದಿ ಪ್ರಕಟವಾದ ಕೂಡಲೇ ವಿದೇಶಿ ವಿನಿಮಯ ಖಾತೆಯಲ್ಲಿದ್ದ ಠೇವಣಿಯನ್ನು ಠೇವಣಿದಾರರು ಹಿಂದೆ ಪಡೆಯಲಾರಂಭಿಸಿದ್ದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತು.

ಹೀಗಾಗಿ ಒಂದಾರದೊಂದರ ಮೇಲಂತೆ ಬಂದೆರಗಿದ ಆರ್ಥಿಕ ಸಮಸ್ಯೆಗಳನ್ನೆದುರಿಸಲು ದೊಡ್ಡ ಮೊತ್ತದೆ ಆರ್ಥಿಕ ಸಹಾಯ ಅಗತ್ಯವಾಗಿ, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಅನಿವಾರ್ಯವಾಯಿತು.

ವಿದೇಶಿ ಸಾಲ ಕೆಳಗಿನಂತಿದೆ

ವರ್ಷ (ಮಾರ್ಚ ೨೧ ಕ್ಕೆ ಕೊನೆಯಾಗುವಂತೆ)

ಸಾಲದ ಮೊತ್ತ (ಕೋಟಿ ರೂ.ಗಳಲ್ಲಿ)

೧೯೮೯ ೮೯.೮೨೬
೧೯೯೦ ೧೦೯೧೬೭
೧೯೯೧ ೧೩೬೬೧೫
೧೯೯೨ ೨೧೯೧೯೨
೧೯೯೩ ೨೪೭೦೨೬
೧೯೯೪ ಸೆಪ್ಟಂಬರ್ ವರೆಗೆ ೨೪೨೬೭೩

ಆರ್ಥಿಕ ಉದಾರೀಕರಣ ಮತ್ತು ಸ್ವರೂಪಾತ್ಮಕ ಹೊಂದಾಣಿಕೆಗಳನ್ನು ಅನುಷ್ಠಾನಗೊಳಿಸುವ ಮೊದಲಿನ ರಾಜಕೀಯ ಪರಿಸ್ಥಿತಿಯೂ ಬಹಳ ಸಂವೇದನಾತ್ಮಕವಾಗಿತ್ತು ಮತ್ತು ಒಂದು ರೀತಿಯ ಅಸ್ಥಿರತೆಯಿಂದ ಕೂಡಿತ್ತು. ಇಂತಹ ಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ಪಿ.ವಿ.ನರಸಿಂಹರಾವ್ ನೇತ್ರತ್ವದ ಅಲ್ಪಮತದ ಕಾಂಗ್ರೆಸ್ ಸರಕಾರದ ಮುಂದುವರಿಕೆ ಅನಿವಾರ್ಯವಾಗಿತ್ತು. ಉದಾರೀಕರಣ ನೀತಿಯನ್ನು ಅನುಷ್ಠಾನಗೊಳಿಸಲು ಡಾ. ಮನಮೋಹನ ಸಿಂಗ್ ರಂತಹ ವಿತ್ತ ಮಂತ್ರಿಯೂ ನಮಗೆ ಅನಿವಾರ್ಯವಾದರು. ಉದಾರೀಕರಣ ನೀತಿಯ ಕುರಿತಂತೆ ಈಗಾಗಲೇ ಚರ್ಚೆ ನಡಿಸಿರುವುದರಿಂದ, ಉದಾರೀಕರಣ ಭಾರತದಲ್ಲಿ ನೀಡಿದಂತಹ ಫಲಗಳ ಕುರಿತು ತಿಳಿಯಲು ಪ್ರಯತ್ನಿಸಲಾಗಿದೆ. ಉದಾರೀಕರಣ ಉಂಟು ಮಾಡಿದ ಪವಾಡಗಳ ಕುರಿತು ಸರಕಾರ ಏನೇ ಹೇಳಿಕೊಂಡರು ಅದನ್ನು ಯಥಾವತ್ತಾಗಿ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಕೊಂಚ ಮಟ್ಟಿಗಿನ ಬದಲಾವಣೆಗಳು ಐದು ವರ್ಷಗಳ ಅವಧಿಯಲ್ಲಿ ಆಗಿರಬಹುದು. ನೀರಿಕ್ಷ್ತಿತ ಫಲ ದೊರೆತಿಲ್ಲವೆಂದೇ ಹೇಳಲಾಗುತ್ತದೆ . ವಿದೇಶಿ ವ್ಯಾಪಾರ ಮತ್ತು ಹೂಡಿಕೆ ನೀತಿ ಮತ್ತು ರಾಷ್ಟ್ರೀಯ ಉತ್ಪಾದನಾ ರಂಗದಲ್ಲಿ ಉಂಟಾಗಿದೆ ಎನ್ನಲಾದ ಬದಲಾವಣೆಗಳ ಕುರಿತು ಪ್ರಮುಖವಾಗಿ ಚರ್ಚಿಸಬಹುದಾಗಿದೆ.

ವಿದೇಶಿ ವ್ಯಾಪಾರ ಮತ್ತು ಹೂಡಿಕೆ ನೀತಿ

ವಿದೇಶಿ ತಂತ್ರಜ್ಞಾನ ಮತ್ತು ವಿದೇಶಿ ಬಂಡವಾಳಕ್ಕೆ ನಮ್ಮ ಅರ್ಥ ವ್ಯವಸ್ಥೆಯನ್ನು ತೆರೆದಿಡುವ ವಿಚಾರ ವಿವಾದಾತ್ಮಕವೇ ಆಗಿದೆ. ದೇಶೀ ಉದ್ದಿಮೆಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುಣಮಟ್ಟದಲ್ಲಿ ಉತ್ಕೃಷ್ಟತೆ ಸಾಧಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದೇ ಮೊದಲಾದ ಕಾರಣಗಳಿಗಾತಿ ದೇಶಿ ಮಾರುಕಟ್ಟೆಯನ್ನು ಅನಿಯಂತ್ರಣಗೊಳಿಸುವುದು ಲಾಭದಾಯಕವೆಂದು ವಾದಿಸಲಾಗಿದೆ ಇಂತಹ ಕ್ರಮಗಳಿಂದ ನಮ್ಮ ದೇಶದ ಕೈಗಾರಿಕೆಗಳು ಸ್ಪರ್ಧಾತ್ಮಕತೆಯನ್ನು ಮೈಗೂಡಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲು ವಹಿವಾಟು ನಡೆಸಲು ಶಕ್ತವಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಕೈಗಾರಿಕಾ ರಂಗಕ್ಕೆ ವಿದೇಶೀ ಬಂಡವಾಳ ಹರಿದು ಬರುವುದು ನಮ್ಮ ಅರ್ಥ ವ್ಯವಸ್ಥೆಗೆ ಸಹಕಾರಿ ಎಂದು ನಂಬಲಾಗಿದೆ. ೧೯೯೧ರಲ್ಲಿ ಒಂದು ಬಿಲಿಯನ್ ಡಾಲರಗಳಿದ್ದ ವಿದೇಶಿ ವಿನಿಮಯ ೨೦೦೬ರಲ್ಲಿ ೭೩ ಬಿಲಿಯನ ಡಾಲರಗಳಾಗಿದ್ದು ಇದೊಂದು ಸರ್ವಕಾಲಿಕ ದಾಖಲೆಯಾಗಿದೆ. ವಾಸ್ತವವಾಗಿ ಇಂತಹ ಹೆಚ್ಚಳ ನಮ್ಮ ಗಳಿಕೆಯಾಗಿರದೆ ಸಾಲ ಅಥವಾ ಬಂಡವಾಳ ರೂಪದಲ್ಲಿದೆ. ಇಂತಹ ವಿದೇಶಿ ವಿನಿಮಯವನ್ನು ನಂಬಿ ವಹಿವಾಟು ನಡೆಸುವುದು ಅಪಾಯಕಾರಿ ಕೂಡ. ಏಕೆಂದರೆ ಈ ವಿದೇಶಿ ವಿನಿಮಯ ಯಾವುದೇ ಸಂದರ್ಭದಲ್ಲಿ ದೇಶದಿಂದ ಹೊರಹರಿಯಬಹುದಾಗಿದೆ. ಒಂದು ವೇಳೆ ಅದು ಇನ್ನೊಂದು ಸಂಕಷ್ಟಕ್ಕೆ ದಾರಿಯಾಗಬಹುದು. ಈ ಕೆಳಗಿನ ಕೋಷ್ಠಕವನ್ನು ನೋಡಿದಾಗ ಈ ವಿಷಯ ಸ್ಪಷ್ಟವಾಗಿ ಅರಿವಾಗುತ್ತದೆ.

ವಿದೇಶಿ ಬಂಡವಾಳ

೧೯೯೨೯೩

೧೯೯೩೯೪

೧೯೯೪೯೫

 

ಮೊತ್ತ ()

ಒಟ್ಟು ಹೂಡಿಕೆಯ ಶೇಕಡ

ಮೊತ್ತ ಹೂಡಿಕೆಯ ಶೇಕಡ

ಒಟ್ಟು ಹೂಡಿಕೆಯ ಶೇಕಡ

ಮೊತ್ತ

ಒಟ್ಟು

ನೇರ ಹೂಡಿಕೆ ೩೪೧ ೭೮.೭ ೬೨೦ ೧೫.೧ ೧೩೮೧ ೨೬.೮
ಹೂಡಿಕೆ ಪತ್ರಗಳ ಮುಖಾಂತರ ಹುಡಿಕೆ * ೯೨ ೨೧.೩ ೩೪೯೦ ೪೮.೯ ೨೫೮೧ ೭೩.೨
ಒಟ್ಟು ೪೩೩ ೧೦೦ ೪೧೧೦ ೧೦೦ ೪೫೯೫ ೧೦೦

* ಪೋರ್ಟ ಪೋಲಿಯೋ ಇನ್ವೆಸ್ಟ್ ಮೆಂಟ್

(ಅ) ಮಿಲಿಯನ್ ಡಾಲರಗಳಲ್ಲಿ

ಆಧಾರ ಭಾರತೀಯ ರಿಸರ್ವ ಬ್ಯಾಂಕಿನ ವಾರ್ಷಿಕ ವರದಿ ಲೈನ್ ಪತ್ರಿಕೆ. ಡಿಸೆಂಬರ ೨೯.೧೯೯೫ರಲ್ಲಿ ಪ್ರಕಟವಾದಂತೆ

ಮೇಲೆ ಹೇಳಿದ ವಿದೇಶಿ ವಿನಿಮಯ ಗಳಿಕೆ ಹಲವು ಸಮಸ್ಯೆಗಳಿಗೆ ಮೂಲವಾಗಿರುತ್ತದೆ. ಮೊದಲನೆಯದಾಗಿ ವಾಣಿಜ್ಯ ಸಾಲದಂತಹ ಮೂಲಗಳಿಂದ ಹಣದ ಮೇಲೆ ಬಡ್ಡಿ ಸಹಿತ ಅಸಲು ಮರುಪಾವತಿಸಬೇಕಾಗುತ್ತದೆ. ಹಾಗಾಗಿ ಸಧ್ಯದ ಮಟ್ಟಿಗೆ ವಿದೇಶಿ ವಿನಿಮಯಗಳಿಸಿದರೂ ನಂತರದಲ್ಲಿ ಹೆಚ್ಚು ಮೊತ್ತದ ಹಣ ದೇಶದಿಂದ ಹೊರಹರಿಯುತ್ತದೆ. ಎರಡನೆಯದು ಬಂಡವಾಳ ಸಕ್ರಿಯಗೊಳ್ಳುವ ರೀತಿ ಉಂಟು ಮಾಡಬಹುದಾದ ಸಮಸ್ಯೆ. ಇದನ್ನು ಈ ರೀತಿಯಲ್ಲಿ ವಿವರಿಸಬಹುದಾಗಿದೆ. ವಿದೇಶಿ ಬಂಡವಾಳ ಎರಡು ರೂಪದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಸಕ್ರಿಯವಾಗುತ್ತದೆ. ಒಂದು ಪ್ರತ್ಯಕ್ಷವಾಗಿ ಅಥವಾ ನೇರವಾಗಿ ತೊಡಗಿಸಿಕೊಳ್ಳುವುದರ ಮೂಲಕ. ಉದಾಹರಣೆಗೆ ಹೊಸ ಉತ್ಪಾದಕ ರಂಗದಲ್ಲಿ ವಿದೇಶಿ ಬಂಡವಾಳದ ಬಳೆಕೆ. ಇನ್ನೊಂದು ಈಗಾಗಲೇ ಅಸ್ತಿತ್ವದಲ್ಲಿರುವ ಭಾರತೀಯ ಕಂಪನಿಗಳ ಶೇರು ಮತ್ತು ಸಾಲಪತ್ರಗಳಲ್ಲಿ ತೊಡಗಿಸಲಾಗುವ ವಿದೇಶಿ ಬಂಡವಾಳ. ಈ ರೀತಿಯ ಬಂಡವಾಳ ಬಹಳ ಅಪಾಯಕಾರಿಯಾದದ್ದು, ಯಾಕೆಂದರೆ ಇಂತಹ ಬಂಡವಾಳದ ಮೇಲೆ ಸಿಗುವ ಲಾಭಾಂಶ ವಿದೇಶೀ ವಿನಿಮಯಕ್ಕೆ ಪರಿವರ್ತಿತವಾಗಿ ದೇಶದಿಂದ ಹೊರ ಹರಿಯುತ್ತದೆ, ಮತ್ತು ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತ ಬಂದಾಗ ಇಂತಹ ಹೂಡಿಕೆ ದೇಶದಿಂದ ಹೊರ ಹರಿಯಲಾರಂಭಿಸಿದರೆ ಇಡೀ ಅರ್ಥ ವ್ಯವಸ್ಥೆ ಕುಸಿಕು ಹೋಗುವ ಅಪಾಯವಿದೆ. ಈ ಮೊದಲು ಕೋಷ್ಠಕವನ್ನು ಗಮನಿಸಿದರೆ, ನಮ್ಮ ದೇಶಕ್ಕೆ ಹರಿದು ಬಂದಿರುವ ವಿದೇಶಿ ವಿನಿಮಯದಲ್ಲಿ ಹೆಚ್ಚು ಪಾಲು ಈ ರೀತಿಯದ್ದಾಗಿರುವುದು ಕಂಡುಬರುತ್ತದೆ. ನೇರವಾಗಿ ಹೂಡಲ್ಪಟ್ಟ ಬಂಡವಾಳದಲ್ಲಿಯೂ ತೊಡಕುಗಳಿವೆ. ಇಂತಹ ಬಂಡವಾಳ ಆಸ್ತಿಗಳಲ್ಲಿ ಹೂಡಲ್ಪಟ್ಟಿರುವ ಕಾರಣ ಸರಕಾರ ಅವಶ್ಯಕತೆಯಿದ್ದಾಗ ಇದನ್ನು ಬಳಸುವ ಸ್ಥಿತಿಯಲ್ಲಿರುವುದಿಲ್ಲ. ಮೂರನೆಯದಾಗಿ ವಿದೇಶಿ ವಿನಿಮಯದಿಂದ ಹೊರ ಮತ್ತು ಒಳ ಹರಿವುಗಳಲ್ಲಿ ಏರಿಳಿತವಿದ್ದಾಗ ಅದು ಸ್ವದೇಶದ ಹಣದ ಮೇಲೆ ಅಥವಾ ಹಣದ ಮೌಲುಅದ ಮೇಲೆ ಪ್ರಭಾವ ಬೀರುವ ಮೂಲಕ ಸ್ವದೇಶಿ ವಿನಿಮಯಕ್ಕೆ ಅಪಾಯಕ್ಕೀಡು ಮಾಡಬಹುದಾಗಿದೆ. ತೈಲ ಉತ್ಪಾದನೆಯ ದೇಶಿಯ ಮೂಲಗಳಲ್ಲಿ (ಭಾರತದಲ್ಲಿ ಲಭ್ಯವಿತುವ ತೈಲ ಉತ್ಪಾದನೆ) ೧೯೮೮ ಇಳಿತ ಉಂಟಾಗಿರುವ ಸಂಭವವಿದೆ. ಅಂತಹ ಸಂದರ್ಭದಲ್ಲಿ ಕಚ್ಚಾ ತೈಲ ಆಮದಿನಿಂದಾಗಿ ಇನ್ನೂ ಹೆಚ್ಚಿನ ವಿದೇಶಿ ವಿನಿಮಯ ಬಳಕೆಯಾಗಬುದಾದಂತಹ ಸಾಧ್ಯತೆ ಇದೆ. ವಿದೇಶಿ ಸಾಲಗಳಲ್ಲಿ ಬಹುಪಾಲು ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮರುಪಾವತಿಸಬೇಕಾಗಿದೆ. ವಿದೇಶಿ ಬಂಡವಾಳ ಮತ್ತು ಅನಿವಾಸಿ ಭಾರತೀಯರ ಖಾತೆಗಳಲ್ಲಿರುವ ಹಣ ಹಿಂದಕ್ಕೆ ಪಡೆಯಲ್ಪಟ್ಟು ದೇಶದಿಂದ ಹೊರಹರಿದರೆ ಪರಿಸ್ಥಿತಿ ಮತ್ತೆ ನಮ್ಮನ್ನು ೧೯೯೧ ರ ಸ್ಥಿತಿಗೆ ನೂಕಬಹುದಾಗಿದೆ.

ರಾಷ್ಟ್ರೀಯ ಉತ್ಪಾದನಾ ರಂಗದ ನಿರ್ವಹಣೆ

೧೯೯೦ ರಲ್ಲಿ ನಡೆದ ಉದಾರೀಕರಣದ ತರುವಾಯ ರಾಷ್ಟ್ರೀಯ ಉತ್ಪನ್ನದಲ್ಲಿ ಒಂದು ರೀತಿಯ ಚೇತರಿಕೆ ಕಂಡುಬಂದಿರುವುದನ್ನು ಗಮನಿಸಬಹುದಾಗಿದೆ. ೧೯೯೧ ರಿಂದ ೧೯೯೫-೯೬ ರ ವರೆಗಿನ ಉತ್ಪಾದನೆಗೆ ಸಂಬಂಧಿಸಿದ ಅಂಕಿ ಅಂಶಗಳು ಈ ಕೆಳಗಿನಂತಿವೆ.

ರಾಷ್ಟ್ರೀಯ ಉತ್ಪಾದನಾ ದರ

ವರ್ಷ

ಬೆಳವಣಿಗೆಯ ದರ

೧೯೯೧-೯೨ ೦.೯%
೧೯೯೨-೯೩ ೪.೧%
೧೯೯೩-೯೪ ೪.೪%
೧೯೯೪-೯೫ ೫.೩%
೧೯೯೫-೯೬ ೬.೦% ಅಂದಾಜಿಸಲ್ಪಟ್ಟಂತೆ

ಮೂಲ: ಸಿ.ಟಿ.ಕುರಿಯನ್ ಸ್ಟೆಡಿ ರಿಕವರಿಫ್ರಂಟ್ ಲೈನ್ ಜನವರಿ ೧೨, ೧೯೯೬.

ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಪರಿಣಾಮ ಎಂದು ಕಂಡು ಬಂದರೂ ಹಿಂದಿನ ದಶಕಕ್ಕೆ ಹೋಲಿಸಿದರೆ, ಅರ್ಥ ವ್ಯವಸ್ಥೆ ೧೯೮೦ರ ದಶಕದಲ್ಲಿ ಅನುಭವಿಸುತ್ತಿದ್ದ ತೊಂದರೆಗಳಿಗಿಂತ ಚೇತರಿಸಿಕೊಂಡಿದೆ ಎಂದಷ್ಟೇ ಹೇಳಬಹುದು. ೧೯೯೫-೯೬ ರ ವರ್ಷಕ್ಕೆ ಅಂದಾಜಿಸಲಾಗಿರುವ ಶೇಕಡಾ ಆರರ ಬೆಳವಣಿಗೆ ದರವನ್ನು ಮುಂದಿನ ಕೆಲವರ್ಷಗಳ ಮಟ್ಟಿಗಾದರೂ ಉಳಿಸಿಕೊಂಡು ಮುಂದುವರಿಯುವುದು ಸಾಧ್ಯವಾದರೆ ಅದೊಂದು ಉತ್ತಮ ಫಲಿತಾಂಶವಾಗಬಹುದಾಗಿದೆ. ಆರ್ಥಿಕ ಉದಾರೀಕರಣದ ನಂತರದ ವರ್ಷಗಳಲ್ಲಿ ಉತ್ತಮ ಮುಂಗಾರಿನಿಂದ ಕೃಷಿರಂಗದ ಉತ್ಪಾದನೆ ಹೆಚ್ಚಿದ್ದು ಆಹಾರ ಧಾನ್ಯ ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಇದೆ. ಆದರೆ ವಿಚಿತ್ರವೆಂದರೆ ಬಡಜನರ ಕೊಳ್ಳುವ ಸಾರ್ಮರ್ಥ್ಯದಲ್ಲಿ ಕಡಿತವಾಗಿರುವುದು ಕಂಡು ಬರುತ್ತದೆ. ಇದು ಉತ್ಪಾದನೆ ಹೆಚ್ಚಳವಾಗಿದ್ದರೂ ಸರಿಯಾಗಿ ವಿತರಣೆಯಾಗಿಲ್ಲವೆನ್ನುವ ಅಂಶವನ್ನು ವಿಷದಪಡಿಸುತ್ತದೆ. ಕೈಗಾರಿಕಾ ರಂಗದ ಉತ್ಪಾದನೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು ಕಂಡು ಬರುತ್ತದೆ. ಆದರೆ ಹಣದುಬ್ಬರ ಮತ್ತು ವಿದೇಶಿ ಸಾಲದ ಪ್ರಮಾಣಗಳನ್ನು ಗಮನದಲ್ಲಿರಿಸಿ ನೋಡಿದರೆ ಈ ಸಾಧನೆಯಿಂದ ತೃಪ್ತಿಪಟ್ಟುಕೊಳ್ಳಲಾಗದು.

ಒಂದು ದೇಶದ ಅರ್ಥ ವ್ಯವಸ್ಥೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಿದ್ದರೆ ಬಂಡವಾಳ ಸಂಚಯನ ಸಾಧ್ಯವಾಗಬೇಕು. ಅಂದರೆ ಒಟ್ಟು ಉತ್ಪಾದನಾ ಪರಿಕರಗಳು ಸಕ್ರಿಯವಾಗಿ ಹೆಚ್ಚುವರಿ ಸಂಪತ್ತು ಉತ್ಪಾದನೆಯಾಗುತ್ತದೆ. ಹೀಗೆ ಸಂಚಯಿತವಾದ ಬಂಡವಾಳ ಈ ಕೆಳಗಿನಂತಿದೆ.

ವರ್ಷ

ಒಟ್ಟು ರಾಷ್ಟ್ರೀಯ ಉತ್ಪಾದನೆಯ ಶೇಕಡಾವಾರುಗಳಲ್ಲಿ

೧೯೮೫-೯೧ ೨೭.೧%ಸ್
೧೯೯೧-೯೨ ೨೩.೬%
೧೯೯೨-೯೩ ೨೨.೦%
೧೯೯೩-೯೪ ೨೦.೪%

ಆಧಾರ : ಸಿ.ಟಿ.ಕುರಿಯನ್. ‘ಎ ಸ್ಟೆಡಿ ರಿಕವರಿ’ ಫ್ರಂಟ್ ಲೈನ್, ಜನವರಿ ೧೨,೧೯೯೬.