ನಾಲ್ಕನೆಯ ಯುದ್ಧದಲ್ಲಿ ಪ್ರಭಾಕರಣ್‌ ಮಾನವರನ್ನೇ ತನ್ನ ರಕ್ಷಣಾಕವಚವನ್ನಾಗಿಟ್ಟುಕೊಂಡು ಹೋರಾಟ ಮಾಡಿದ. ೨೦೦೬ರಲ್ಲಿ ಮಾವಿಲ್‌ಅರು ಎಂಬಲ್ಲಿ ೩೦,೦೦೦ ಜನರಿಗೆ, ನೀರು ನೀಡದೆ ಸತಾಯಿಸಿದ. ಕೊನೆಗೆ ಶ್ರೀಲಂಕಾ ಸರಕಾರ ಸಮಸ್ಯೆಗೆ ಪರಿಹಾರ ನೀಡಿತು. ೨೦೦೯ರಲ್ಲಿ ಪ್ರಭಾಕರನ್‌ ತನ್ನ ಹಿಡಿತದಲ್ಲಿದ್ದ ಲಕ್ಷಾಂತರ ತಮಿಳು ಪ್ರಜೆಗಳನ್ನೇ ತನ್ನ ಸಂಘಟನೆಯ ರಕ್ಷಣೆಗಾಗಿ ಗುರಾಣಿಯಾಗಿಸಿದ. ಈ ಮಾನವ ಗುರಾಣಿಗಳನ್ನು ತನ್ನ ಕೊನೆಯ ದಿನಗಳಲ್ಲಿ ತೀವ್ರವಾಗಿ ಶ್ರೀಲಂಕಾ ಮಿಲಿಟರಿ ವಿರುದ್ಧ ಬಳಸಲು ಪ್ರಯತ್ನಿಸಿದ. ಎಲ್‌.ಟಿ.ಟಿ.ಈ.ಯ ನಾಲ್ಕನೆಯ ಯುದ್ಧವು ಸೋಲಿನತ್ತ ಮುಖ ಮಾಡಿದ ಸಂದರ್ಭದಲ್ಲಿ ಮಾನವ ಗುರಾಣಿಗಳನ್ನಾಗಿಟ್ಟುಕೊಂಡ ೮೦,೦೦೦ ತಮಿಳರನ್ನು ಪ್ರಭಾಕರನ್‌ಬಂಧಮುಕ್ತಿಗೊಳಿಸಿದ. ತಮಿಳರಿಗಾಗಿ ಪ್ರತ್ಯೇಕ ರಾಷ್ಟ್ರವನ್ನು ಕಟ್ಟುವಲ್ಲಿ ದಾಪುಗಾಲು ಹಾಕಿದ್ದ ಪ್ರಭಾಕರನ್‌ಅವನ ಪುತ್ರನೊಂದಿಗೆ ೨೦೦೯ರ ಮೇ ೧೯ ರಂದು ಶ್ರೀಲಂಕಾ ಸರ್ಕಾರದ ಸೈನಿಕರಿಂದ ಹತ್ಯೆಯಾದನು (ಫ್ರಂಟ್‌ಲೈನ್‌, ಜೂನ್‌೧೯, ೨೦೦೯ : ೭).

ಶ್ರೀಲಂಕಾ ಮಿಲಿಟರಿಯು ೨೦೦೯ರ ಜೂನ್‌ವೇಳೆಗೆ ಎಲ್‌.ಟಿ.ಟಿ.ಇ. ಕೈವಶದಲ್ಲಿದ್ದ ೧೫,೦೦೦ ಕಿ. ಮೀ. ಪೂರ್ವ ಭಾಗದ ಭೂಗಡಿಯನ್ನು ವಶಪಡಿಸಿಕೊಂಡಿತು. ಮಿಲಿಟರಿ ಪ್ರಕಾರ ೨೨,೦೦೦ ತಮಿಳು ಗೆರಿಲ್ಲಾಗಳು ಈ ಯುದ್ಧದಲ್ಲಿ ಪ್ರಾಣ ಕಳೆದುಕೊಂಡರೆ ಲಂಕಾ ಸೈನಿಕರ ಸಾವಿನ ಸಂಖ್ಯೆ ೬೨೬೧. ಈ ನಾಲ್ಕನೆಯ ಯುದ್ಧದಲ್ಲಿ ಗಾಯಗೊಂಡ ಲಂಕಾ ಸೈನಿಕರ ಸಂಖ್ಯೆ ೨೯,೫೫೧ (ಮುರಳೀಧರ ರೆಡ್ಡಿ, ಫ್ರಂಟ್‌ಲೈನ್‌, ಜೂನ್‌೧೯, ೨೦೦೫, ಪುಟ ೮) ತಮಿಳು ಇಂಟರ್‌ನೆಟ್‌ಪ್ರಕಾರ ೨೦೦೦ ದಿಂದ ೩೦೦೦ ದಷ್ಟು ನಾಗರಿಕರ ಹೆಣಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು (ಫ್ರಂಟ್‌ಲೈನ್‌ಜೂನ್‌೧೯, ೨೦೦೯ : ೧೨).

ಎಲ್‌.ಟಿ.ಟಿ.ಈ.ಯು ಸಿಂಹಳೀಯರಿಂದಾಗುತ್ತಿದ್ದ ಜನಾಂಗೀಯ ತಾರತಮ್ಯದ ವಿರುದ್ಧ ಅದ್ಭುತ ಮಿಲಿಟರಿ ಹೋರಾಟಗಳನ್ನು ನಡೆಸಿತಾದರೂ ವಿಮೋಚನಾವಾದಿ ರಾಜಕೀಯ ಆದರ್ಶಗಳನ್ನೇನೂ ಕಟ್ಟಲಿಲ್ಲ. ತಮಿಳರ ನರಮೇಧಕ್ಕೆ ಪ್ರತಿಯಾಗಿ ಅದು ಅಮಾಯಕ ಸಿಂಹಳೀಯರ ಮತ್ತು ಮುಸ್ಲಿಮರ ನರಮೇಧ ಆರಂಭಿಸಿತ್ತು. ಕ್ರಮೇಣ ಎಲ್.ಟಿ.ಟಿ.ಈ ವಿರೋಧಿಗಳನ್ನು ದ್ರೋಹಿಗಳೆಂದು ಪ್ರಭಾಕರನ್ ಕೊಲ್ಲಲಾರಂಭಿಸಿದ. ನಂತರ ಅವರೆಲ್ಲರೂ ಪ್ರಭಾಕರನ್ ವಿರೋಧಿಗಳೆಂಬ ಹಣೆಪಟ್ಟಿಯಲ್ಲಿ ಬಂದು ಭ್ರಾತೃಹತ್ಯೆಗಳಿಗೆ ಕಾರಣವಾಯಿತು. ಇದು ಸಂಘಟನೆಯ ವಿನಾಶಕ್ಕೂ ಕಾರಣವಾಯಿತು. ವಿಯೆಟ್ನಾಂನಂಥ ಪುಟ್ಟ ದೇಶ ಸಶಸ್ತ್ರಹೋರಾಟದ ಮೂಲಕ ಬೃಹತ್ ಅಮೆರಿಕಾ ದೇಶವನ್ನು ಓಡಿಸಲು ಸಾಧ್ಯವಾದದ್ದು ಅದಕ್ಕೆ ಸಮಾನತಾ ಸಮಾಜದ ಕನಸಿದ್ದರಿಂದ ‘‘ಎಲ್ಲ ಜನಸಾಮಾನ್ಯರುಮಿತ್ರರು ಆಳುವವರ್ಗಗಳು ಮಾತ್ರ ಶತ್ರುಗಳುಎಂಬ ಸ್ಪಷ್ಟತೆ ಇದ್ದದ್ದರಿಂದ ಸಂಘಟನೆ ಒಳಗೆ ಪ್ರಜಾಪ್ರಭುತ್ವ ವಿದ್ದದ್ದರಿಂದ”ಎಂಬುದನ್ನು ಗಮನಿಸಬಹುದು (ಕುಮಾರ್ ಬುರಡಿಕಟ್ಟಿ,೨೦೦೯).

ನಾಲ್ಕನೆ ಯುದ್ಧದಿಂದಾಗಿ ಮನೆಮಠ ಕಳೆದುಕೊಂಡ ದಿಕ್ಕು ತೋಚದ  ೨,೮೦,೦೦೦ ಜನರಿಗೆ ಪುನರ್ವಸತಿ ಯೋಜನೆ ಮಾಡಲು ರಾಜಪಕ್ಸೆ ಸರಕಾರ ಹೆಣಗುತ್ತಿದೆ. ತಮಿಳು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ೨೯ಕ್ಕೂ ಕ್ಯಾಂಪಗಳ ಮೂಲಕ ಪುನರ್ ವಸತಿ ಕೆಲಸ ಸಾಗುತ್ತಿದ. ಭಾರತವು ತನ್ನ ರಾಷ್ಟ್ರೀಯ ಭದ್ರತೆ ಸಲಹೆಗಾರ ಎಂ.ಕೆ.ನಾರಾಯಣ್ ಮತ್ತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಮೂಲಕ ನಿರಾಶ್ರಿತರಿಗೆ ಪುನರ್ ವಸತಿ ಯೋಜನೆಗೆ ಸಹಾಯವಾಗಲು ರಾಜಕೀಯ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತಿದೆ.

ಶ್ರೀಲಂಕಾ ರಾಷ್ಟ್ರೀಯವಾದಿಗಳು ಈ ಯುದ್ಧವನ್ನು ಬಣ್ಣಿಸಿದ ಬಗೆ ಭಿನ್ನವಾಗಿದೆ. ಎರಡನೆ ಗಲ್ಫ್ ಯುದ್ಧದ ಪ್ರಾಣ ಕಳೆದುಕೊಂಡ ಇರಾಕಿ ಯೋಧರ ಸಂಕ್ಯೆ ೧,೦೦೦,೦೦೦. ಯು.ಎನ್.ಸಿ.ಆರ್. ಪ್ರಕಾರ ಈ ಸಂಖ್ಯೆ ೪.೭ಮಿಲಿಯನ್ ಜನರು. ಅಂದರೆ ಒಟ್ಟು ಜನಸಂಖ್ಯೆಯ ಶೇ. ೧೬ರಷ್ಟು ಪಕ್ಕದ ದೇಶಗಳಿಗೆ ಓಡಿ ಹೋದವರ ಸಂಖ್ಯೆ ಎರಡು ಮಿಲಿಯನ್ ಗೂ ಅಧಿಕ.ಇಷ್ಟೆಲ್ಲ ಆಗಿದ್ದು ಏಕೆಂದರೆ ಸದ್ದಾಂಹುಸೇನ್ ೧೪೮ ಜನರನ್ನ ಹತ್ಯೆ ಮಾಡಿದನು ಎನ್ನುವ ಕಾರಣಕ್ಕಾಗಿ. ಈ ಸಂದರ್ಭದಲ್ಲಿ ಅರ್ಧ ಮಿಲಿಯನ್ ಮಕ್ಕಳು ಸತ್ತರು. ಆಪ್ಘಾನಿಸ್ತಾನದ ಕತೆಯೂ ಬೇರೇನಲ್ಲ. ಸ್ವಾತ್ ಕಣಿವೆಯಲ್ಲಿ ಒಂದು ಮಿಲಿಯನ್ ಗೂ ಅಧಿಕ ಜನ ನಿರಾಶ್ರಿತರಾದರು. ಸುಮಾರು ೫,೦೦೦ ಜನರು ಹತ್ಯೆಗೊಳಗಾದರು. ಆದರೆ ಈಗಾಗಲೇ ಒಂದು ಲಕ್ಷ ಜನರನ್ನು ಸಾಯಿಸಿದ ಮತ್ತು ಅಂಗ ಊನ ಮಾಡಿದ, ಬಿಲಿಯನ್ ಗಟ್ಟಲೆ ಬೆಲೆಯ ಶ್ರೀಲಂಕಾದ ಆಸ್ತಿಪಾಸ್ತಿಗಳನ್ನು ನಾಶ ಮಾಡಿದ ಹೆಚ್ಚುಕಮ್ಮಿ ಬಹುತೇಕ ತಮಿಳು ಮತ್ತು ಸಂಹಳ ರಾಜಕೀಯ ಕಾರ್ಯಕರ್ತರನ್ನು ಕೊಲ್ಲಿಸಿದ, ಜಾಗತಿಕ ಮಟ್ಟದ ಇಬ್ಬರು ನಾಯಕರನ್ನು ಹತ್ಯೆ ಮಾಡಿದ ಮತ್ತು ಕೊನೆಗೆ, ಎರಡು ಲಕ್ಷ ತಮಿಳರನ್ನು ತನ್ನ ಉಳಿವಿಗಾಗಿ ಮಾನವ ಗುರಾಣಿಯನ್ನಾಗಿ ಮಾಡಿ ಅವರನ್ನು ಒತ್ತೆಯಾಗಿರಿಸಿದ, ಈ ತಮಿಳು ಉಗ್ರರ  ಜೊತೆಗೆ ಶ್ರೀಲಂಕಾ ಸರಕಾರ ಆರು ಬಾರಿ  ಸಂಧಾನ ಮಾಡಿಕೊಳ್ಳಲು ಯತ್ನಿಸಿ ವಿಫಲವಾಗಿದೆ. ಶ್ರೀಲಂಕಾ ಮಿಲಿಟರಿಯ ಬೀಭತ್ಸ ಕೌರ್ಯಗಳನ್ನು ಬಿಂಬಿಸುವವರಿಗೆ ಶ್ರೀಲಂಕಾ ರಾಷ್ಟ್ರೀಯವಾದಿಗಳು ಹೇಳುವ ಮಾತಿದು (ಫ್ರಂಟ್ ಲೈನ್, ಜೂನ್ ೧೯,೨೦೦೯;೭)

ಇತ್ತೀಚೆಗೆ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಹಿಂದ ರಾಜಪಕ್ಸೆ ಎಲ್ಲ ಪಕ್ಷಗಳ ಅದರಲ್ಲಿಯೂ ತಮಿಳರನ್ನು ಪ್ರತಿನಿಧಿಸುವ ಸಂಘಟನೆಗಳೆಲ್ಲ ಒಟ್ಟು ಸೇರಿ ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು. ಯುದ್ಧದ ಸಮಸ್ಯೆಗಳನ್ನು ಪರಿಹರಿಸಲು ವಿಶ್ವಸಂಸ್ಥೆಯಿಂದ ಅನುದಾನವಿನ್ನೂ ಬರದಿದ್ದರೂ ವಿದ್ಯುಚ್ಛಕ್ತಿ, ನೀರು ಮತ್ತು ಟೆಲಿವಿಷನ್ ಗಳನ್ನು ತಮಿಳು ನಿರಾಶ್ರಿತರಿಗೆ ಒದಗಿಸುತ್ತಿರುವುದಾಗಿ ಅವರು ತಿಳಿಸಿದರು. ಪರಿಹಾರ ನಿಧಿಗೆ ಯುದ್ಧದಲ್ಲಿ ಮಡಿದ ಶ್ರೀಲಂಕಾ ಯೋಧರ ತಾಯಂದಿರು, ಬೌದ್ಧಬಿಕ್ಕುಗಳು ದೇಣಿಗೆ ನೀಡಿದರೂ ಕೆಲವು ತಮಿಳು ವಾಣಿಜ್ಯೋದ್ಯಮಿಗಳು ದೇಣಿಗೆ ನಿಡಿಲ್ಲದಿರುವುದಕ್ಕ ವಿಷಾದ ವ್ಯಕ್ತಪಡಿಸಿದರು. ಸೌಹಾರ್ದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಶ್ರೀಲಂಕಾದ ಅಧ್ಯಕ್ಷರು ತಮಿಳು ಮಾತನಾಡುವುದಾದರೆ ಉಳಿದವರಿಗೇಕೆ ಅದು ಸಾಧ್ಯವಿಲ್ಲ? ಹಾಗೆಯೇ ತಮಿಳರಿಗೇಕೆ ಶ್ರೀಲಂಕಾದ ಭಾಷೆ ಕಲಿಯಲು ಸಾಧ್ಯವಿಲ್ಲ’ ಎನ್ನುವ ಶಾಲಾ ಮಾಸ್ತರರೊಬ್ಬರು ಎತ್ತಿದ ಉದಾಹರಣೆಯನ್ನು ಅವರು ನೀಡುತ್ತಾರೆ. ಯುದ್ಧದ ನಂತರ ಒಬ್ಬನೇ ಒಬ್ಬ ತಮಿಳನಿಗೆ ಅವಮಾನವಾಗದಂತೆ, ಒಂದೇ ಒಂದು ತಮಿಳು ಮನೆ ನಾಶವಾಗದಂತೆ ಸೈನ್ಯ ನೋಡಿಕೊಂಡಿತು. ಯುದ್ಧ ಮುಗಿದ ಎರಡು ದಿನಗಳ ಕಾಲ ಆತಂಕ ಇತ್ತೆಂಬುದು ನಿಜವೆಣದರೂ ಅಂತಹದ್ದೇನು ಆಗಲಿಲ್ಲ ಎಂದು ರಾಜಪೆಕ್ಸೆ ವಿವರಿಸಿರುವುದನ್ನು ನೋಡಬಹುದು.( ದಿ ಹಿಂದೂ, ಜುಲೈ ೨೬, ೨೭ ಮತ್ತು ೨೮,೨೦೦೯)

ತಮಿಳು ರಾಷ್ಟ್ರೀಯವಾದಿಗಳ ಮತ್ತು ಹೋರಾಟಗಳ ಬಗ್ಗೆ ಸಹಾನುಭೂತಿ ಇರುವವರ ಹೇಳಿಕೆಯನ್ನು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ಶ್ರೀಲಂಕಾ ಸೇನೆಯ ಈ “ವಿಜಯ”ದ ಹಿಂದೆ ಸರ್ಕಾರಿ ಭಯೋತ್ಪಾದನೆಯಿದೆ… ಅಮೆರಿಕಾದ ಕಟ್ಟಡವೊಂದರಲ್ಲಿ ಭಯೋತ್ಪಾದಕರವಿಮಾನ ದಾಳಿಗೆ ಸಿಕ್ಕಿ ಸಾವಿರಾರು ಅಮೆರಿಕನ್ನರು ಸತ್ತರೆ ರಾಷ್ಟ್ರೀಯ ಶೋಕ ಅಚರಿಸುವ ನಮಗೆ ಪಕ್ಕದಲ್ಲೇ ಸಾವಿರಾರು ತಮಿಳರು ಶ್ರೀಲಂಕಾ ಸರ್ಕಾರದ ದಾಳಿಗರ ಸಿಕ್ಕು ಆಕ್ರಂದನ ಮಾಡುತ್ತಿದ್ದರೂ ಕೇಳಿಸಲಿಲ್ಲವೇಕೆ? …ಶ್ರೀಲಂಕಾದ  ತಮಿಳರ ಪಾಡನ್ನೂ ಗ್ರಹಿಸಲು ಸಾಧ್ಯವಾಗದ ರೀತಿ ನಮ್ಮ ಸಂವೇದನೆಗಳನ್ನು ನಿಯಂತ್ರಿಸುವ ಶಕ್ತಿ ಯಾರದು? (ಕುಮಾರ್ ಬುರಡಿಕಟ್ಟಿ ೨೦೦೯) ತಮಿಳಿ ರಾಷ್ಟ್ರೀಯವಾದಿ ಪರ ಇರುವವರ ಪ್ರಕಾರ ಯುದ್ಧ ಮುಗಿದ ಕೂಡಲೇ ಮಹಿಂದ ರಾಜಪೆಕ್ಸೆಯು ತಮಿಳು ಪ್ರಾಂತ್ಯಗಳೆಂಬ ಪರಿಕಲ್ಪನೆಯನ್ನು ಅಳಿಸಿಬಿಡಲು ನಿರ್ಧರಿಸಿದ್ದಾನೆ.“ಇನ್ನು ಮುಂದೆ ನಮ್ಮ ದೇಶದಲ್ಲಿ ಕೇವಲ ದೇಶಭಕ್ತ ಶ್ರೀಲಂಕನ್ನರು ಇರುತ್ತಾರೆ. ಸಿಂಹಳೀಯರು ಅಲ್ಲ. ತಮಿಳರೂ ಅಲ್ಲ” ಎನ್ನುವ ರಾಜಪೆಕ್ಸೆನ ಹೇಳಿಕೆ ಇನ್ನು ಮುಂದೆ ಸಿಂಹಳ ಮತ್ತು ತಮಿಳು ಎಂಬ ಭಾಷಿಕ ಆಧಾರದ ಪ್ರಾಂತ್ಯ ವಿಭಜನೆ ಇರುವುದಿಲ್ಲ ಎಂಬ ಮಾತನ್ನು ಪುಷ್ಟೀಕರಿಸಿದೆ. ನಿರಾಶ್ರಿತ ಪುನರ್ ವಸತೀಕರಣದ ಬಗ್ಗೆ ತೀವ್ರವಾದ ಟೀಕೆಗಳಿವೆ. ತಮಿಳು ಪ್ರದೇಶಗಳಿಂದ ಒಕ್ಕಲೆಬ್ಬಿಸಲಾದ ೩ಲಕ್ಷಕ್ಕೂ ಹೆಚ್ಚು ಜನರನ್ನು ವವುನಿಯಾ ಪ್ರಾಂತ್ಯದಲ್ಲಿ ನಿರ್ಮಿಸಲಾದ ಶಿಬಿರಗಳಲ್ಲಿ ಪ್ರಾಣಿಗಳಂತೆ ಒಟ್ಟಲಾಯಿತು. ತಮಿಳು ನಿರಾಶ್ರಿತರನ್ನು ಅವರವರ ಪ್ರದೇಶಗಳಿಗೆ ಕಳಿಸುವ ಬದಲಿಗೆ ಸಿಂಹಳೀಯರು ಬಹುಸಂಖ್ಯಾತರು ಇರುವೆಡೆಯಲ್ಲಿ ಇಡಲಾಗುತ್ತಿದೆ. (ಗೌರಿಲಂಕೇಶ್, ಆಗಸ್ಟ್ ೧೨, ೨೦೦೯, ಪುಟ ೧೫). ಪ್ರಭಾಕರನ್ ಸಾವಿನ ನಂತರ ಎಲ್.ಟಿ.ಟಿ.ಈ.ನ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಮತ್ತು ಶಸ್ತ್ರಾಸ್ತ್ರ ಪೂರೈಕೆದಾರಕೆ. ಪದ್ಮನಾಭನ್ ಎಲ್.ಟಿ,ಟಿ.ಈ.ನ ಮುಖ್ಯಸ್ಥನೇಂದು ಬಿಂಬಿಸಲ್ಪಟ್ಟನು. ಆದರೆ ಅವನನ್ನು ಅಂತಾರಾಷ್ಟ್ರೀಯ ಪೋಲಿಸ್ ಪಡೆ ಬಂಧಿಸಿ ವಿಚಾರಣೆ ನಡೆಸುತ್ತಿದೆ.ಸದ್ಯಕ್ಕೆ ತಮಿಳು ರಾಷ್ಟ್ರೀಯ ಹೋರಾಟವು ಬುದಿ ಮುಚ್ಚಿದ ಕೆಂಡದಂತಿದೆ.

ಯುದ್ಧದ ನಂತರದ ನಡೆದ ಆಶ್ಚರ್ಯಕರ ರಾಜಕೀಯ ವಿದ್ಯಮಾನದಲ್ಲಿ ಜನರನ್ನು ಪೊನೆಸ್ಕಾ ಅವರು ರಾಜಪೆಕ್ಸೆಯ ವಿರುದ್ಧ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕಾಗಿ ಸ್ಪರ್ಧಿಸಿದರು. ವಾರ್ ಹೀರೋ ಇಮೇಜಿನ ಫೊನೆಸ್ಕಾ ಅವರಿಗೆ ತಮಿಳು ರಾಷ್ಟ್ರೀಯ ಒಕ್ಕೂಟವು ಬೆಂಬಲಿಸಿದರೆ ರಾಜಪೆಕ್ಸೆ ಅವರಿಗೆ ಎಲ್ ಟಿ,ಟಿ,ಈ. ವಿರೋಧಿ ತಮಿಳು ಸಂಘಟನೆಗಳು ಬೆಂಬಲ ನೀಡುತ್ತವೆ. ತಮಿಳರಿಗೆ ತಮಿಳು ರಾಷ್ಟ್ರೀಯ ಹೋರಾಟವನ್ನು ಅಡಿಮೇಲು ಮಾಡಿದ ಫೊನೆಸ್ಕಾ ಅಥವಾ ರಾಜಪೆಕ್ಸೆ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆಮಾಡಬೇಕಾದ ಅನಿರ್ವಾತೆ ಬಂದಿರುವುದು ರಾಜಕೀಯ ವಿಪರ್ಯಾಸಗಳಲ್ಲೊಂದು. ಅಂತಿಮವಾಗಿ. ೨೦೧೦ರ ಜನವರಿಯಲ್ಲಿ ೨೬ ರಂದು ನಡೆದ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಮಹಿಂದ ರಾಜಪೆಕ್ಸೆ ವಿಜೇತರಾಗುತ್ತಾರೆ. ಅವರ ಆಯ್ಕೆ ಹಣ ಮತ್ತು ತೋಳ್ಬಲಗಳಿಂದಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಲು ಸಿದ್ದವಾಗಿರುವ ಫೊನೆಸ್ಕಾ ಅವರು ಜೀವಭಯದಿಂದ ಆಸ್ಟೇಲಿಯಾದಲ್ಲಿ ನೆಲೆಸಲು ಸಿದ್ದ ಮಾಡಿಕೊಳ್ಳುತ್ತಿರುವುದು ವಾರ್ ಹೀರೋನಾ ದುರಂತವೇ ಆಗಿದೆ.

ದೇಶಬಿಟ್ಟು ಓಡಿ ಹೋಗಲಾಗದೆ ಇದೀಗ ಶ್ರೀಲಂಕಾ ಮಿಲಟರಿಯ ಕೋರ್ಟ್ ಮಾರ್ಷಲ್ ತನಿಕೆಗೆ ನಿವೃತ್ತ ಜನರಲ್ ಫೊನೆಸ್ಕಾ ಅವರನ್ನು ಗುರಿಪಡಿಸಲಾಗದೆ. ಸೇನಾ ಸಮವಸ್ತ್ರವನ್ನು ಧರಿಸಿಕೊಂಡೇ ರಾಜಕಾರಣ ಮಾಡಿದ  ಹಾಗೂ ರಕ್ಷಣಾ ಖರೀದಿ ವ್ಯವಹಾರದಲ್ಲಿ  ಅವ್ಯವಹಾರ ಮಾಡಿದ ಆರೋಪಗಳನ್ನು ಮಹಿಂದ ರಾಜಪೆಕ್ಸೆ ಸರ್ಕಾರವು ಫೊನೆಸ್ಕಾ ಅವರ ವಿರುದ್ಧ ಮಾಡಿದೆ. ೨೦೧೦ರ ಮಾರ್ಚ್‌ನಲ್ಲಿ  ಕೋರ್ಟ್ ಮಾರ್ಷಲ್ ವಿಚಾರಣೆಯನ್ನು ಫೊನೆಸ್ಕಾ ಅವರು ಎದುರಿಸುತ್ತುರುವುದು ಮತ್ತು ಕೆನಡಾದಿಂದ ತಮಿಳು ಸಮುದಾಯದ ನಾಯಕ ಡೇವಿಡ್ ಪೂಪಲಪಿಳ್ಳೈಅವರು ತಮಿಳು ಮೈತ್ರಿಕೂಟವು (ಟಿ.ಎನ್.ಎ) ಶ್ರೀಲಂಕಾದಲ್ಲಿ ತಮಿಳರಿಗೆ ಪ್ರತ್ಯೇಕ ತಾಯ್ನಾಡು. ಸ್ವಯಂ ನಿರ್ಣಯದ ಹಕ್ಕು, ಅವರ ಅಸ್ತಿತ್ವ ಸಂರಕ್ಷಣೆ ಹಾಗೂ ೧೮ನೆಯ ಶತಮಾನದ ಭಾರತದಿಂದ ಶ್ರೀಲಂಕಾಕ್ಕೆ ವಲಸೆ ಬಂದತಮಿಳರಿಗೆ ನಾಗರಿಕತ್ವ ಹಕ್ಕು ನೀಡಿದಂತೆ ತನ್ನ ನಾಲ್ಕು ತತ್ವಗಳಿಗೆ ಬದ್ಧವಾಗಿದೆ ಎಂದು ಘೋಷಿಸಿರುವುದು ತಮಿಳು ಹಾಗೂ ಶ್ರೀಲಂಕಾದ ಧ್ರೂವೀಕರಣಗೊಂಡ ರಾಜಕಾರಣಕ್ಕೆ ಒಂದು ಹೊಸ ಹೆಜ್ಜೆಯಾಗಿದೆ( ದಿಹಿಂದೂ, ಮಾರ್ಚ್ ೧೨,೧೭,೨೦೧೦; ಪ್ರಜಾವಾಣಿ ಮಾರ್ಚ್ ೧೫,೧೯, ೨೦೧೦).

ಭಾರತದ ಪ್ರಜಾಪ್ರಭುತ್ವ ವ್ಯಸ್ಥೆಯನ್ನು ಒಪ್ಪಿಕೊಂಡು ಸಂವಿಧಾನದ ಅಡಿಯಲ್ಲಿ ರಾಜಕೀಯ ಐಡೆಂಟಿಟಿಗಾಗಿ ಹೋರಾಟ ಮಾಡುತ್ತಿರುವ ಚಳವಳಿಗಳಲ್ಲಿ ಮುಖ್ಯವಾಗಿದ್ದವು ಯಾವುದೆಂದರೆ ಗೂರ್ಖಾಲ್ಯಾಂಡ್, ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟ, ಜಾರ್ಖಡ್ ಹೋರಾಟ, ಛತ್ತಿಸ್ ಗಢ ಹೋರಾಟ, ಉತ್ತರಾಂಚಲ ಹೋರಾಟ ಇತ್ಯಾದಿ. ಈ ಪಥದಲ್ಲಿ ಕೆಲವು ಚಳವಳಿಗಳು ಉಗ್ರಗಾಮಿ ಮಾರ್ಗವನ್ನು ತುಳಿದುದ್ದುಂಟು. ಇವುಗಳಲ್ಲಿ ಮೊದಲೆರಡು ಹೋರಾಟಗಳು ತೀವ್ರಗತಿಯನ್ನು ಪಡೆದುಕೊಂಡರೂ ಅವು ಸಫಲವಾಗಲಿಲ್ಲ. ಉಳಿದ ಹೋರಾಟಗಳು ಸಫಲವಾಗಿವೆ. ಇವು ಭಾರತದ ಒಕ್ಕೂಟದಲ್ಲಿ ಪ್ರತ್ಯೇಕ ರಾಜ್ಯಗಳಾಗಿ ಭಾರತದ ಸಂವಿಧಾನದ ಪರಿಧಿಯೊಳಗೆ ಕೆಲಸವನ್ನು ನಿರ್ವಹಿಸುತ್ತಿವೆ.

ಭಾರತದ ಗಣರಾಜ್ಯ ವ್ಯವಸ್ಥೆಯಲ್ಲಿಯೇ ನಡೆಯುತ್ತಿರುವ ಪ್ರತ್ಯೇಕ ರಾಜ್ಯ ಹೋರಾಟಗಳ ಸ್ವರೂಪವು ಹೆಚ್ಚು ಕಡಿಮೆ ಒಂದೇ ಬಗೆಯವು. ಇವು ಸ್ಥಳೀಯರ ಮತ್ತು ಹೊರಗಿನವರ ನಡುವಿನ ಸಂಘರ್ಷ ಎಂದು ಬಿಂಬಿಸಲ್ಪಟ್ಟು ಸ್ಥಳೀಯರ ಸ್ವಾಯತ್ತೆಗಾಗಿ ಮತ್ತು ಹಕ್ಕುಗಳಿಗಾಗಿ ರೂಪುಗೊಮಡ ಹೋರಾಟಗಳು. ಭಾಷಾವಾರು ಆಧಾರಿತ ರಾಜ್ಯಗಳಿಂದ ಈ ಪ್ರದೇಶಗಳು ಆಯಾ ರಾಜ್ಯಗಳ ಅಧಿಕಾರಸ್ಥರ ಮತ್ತು ಬಹುಸಂಖ್ಯಾತರಿಂದ ಶೋಷಣೆಗೆ ಒಳಪಟ್ಟವು ಎನ್ನುವ ಸಿದ್ಧಾಂತದ ಆಧಾರದ ಮೇಲೆ ಮತ್ತು ಭಾರತದ ಸಂವಿಧಾನದ ಪ್ರಕಾರ ಭಾರತದ ಗಣರಾಜ್ಯದಲ್ಲಿ ಮತ್ತೊಂದು ರಾಜ್ಯವನ್ನು ಪಡೆಯಬೇಕೆನ್ನುವ ಹಕ್ಕಿನ ಆಧಾರದ ಮೇಲೆ ಈ ಹೋರಾಟಗಳು ರೂಪುಗೊಂಡಿದ್ದವು. ಪ್ರಸ್ತುತ ಸಂದರ್ಭದಲ್ಲಿ ಜಾರ್ಖಂಡ ಮತ್ತು ಕೊಡಗು ಪ್ರತ್ಯೇಕ ರಾಜ್ಯ ಹೋರಾಟದ ಕೆಲವು ಮಜಲುಗಳನ್ನು ಇಲ್ಲಿ ಚರ್ಚಿಸಲಾಗುವುದು, ಆ ಮೂಲಕ ಇಂತಹ ಹೋರಾಟಗಳ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

* * *

ಬಿಹಾರ್ ರಾಜ್ಯದ ಬಹುಮುಖ್ಯ ಪ್ರದೇಶವಾದ ಚೋಟಾನಾಗಾಪುರ ಮತ್ತು ಸಂತಾಲ ಪರಗಣ ಪ್ರದೇಶಗಳನ್ನು ಜಾರ್ಖಂಡ್ ಎಂದು ಗುರುತಿಸಲಾಗುತ್ತಿತ್ತು. ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಈ ಪ್ರದೇಶದಲ್ಲಿ ಬಹುಸಂಖ್ಯಾತರು. ಬಹುತೇಕವಾಗಿ ಇವರೆಲ್ಲ ಮೂಲತಃ ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಶಿಕ್ಷಣ ಹಾಗೂ ಆಧುನಿಕತೆಗಳ ಪ್ರಭಾವದಿಂದಾಗಿ ೧೯೩೦ ಮತ್ತು ೧೯೪೦ರ ದಶಕಗಳಲ್ಲಿಯೇ ತಮ್ಮದೆ ರಾಜ್ಯವನ್ನು ಕಟ್ಟಿಕೊಳ್ಳುವ ಆಕಾಂಕ್ಷೆಯನ್ನು ಇಟ್ಟುಕೊಂಡ ಸಮುದಾಯಗಳು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ವಿದ್ಯಾಭ್ಯಾಸ ಮುಗಿಸಿ ಹೊರಬಂದ ಜೈಪಾಲ್ ಸಿಂಗ್ ಅವರು ೧೯೫೦ರಲ್ಲಿ ಪ್ರತ್ಯೇಕ ರಾಜ್ಯವನ್ನು ಪಡೆಯಲು ಜಾರ್ಖಂಡ್ ಪಾರ್ಟಿಯನ್ನು ಸ್ಥಾಪಿಸಿದರು. ೧೯೫೨ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪಕ್ಷವು ಚೋಟಾನಾಗಪುರದಲ್ಲಿ ೫೨ ಸೀಟುಗಳನ್ನು ಗಳಿಸಿ ಬಿಹಾರ ವಿಧಾನಸಭೆಯಲ್ಲಿ ಪ್ರಮುಖವಾದ ವಿರೋಧಪಕ್ಷವಾಗಿ ಕಾರ್ಯ ನಿರ್ವಹಿಸಿತು.

ಆರಂಭದಲ್ಲಿ ಬುಡಕಟ್ಟು ಜನರಿಗೆ ಮಾತ್ರ ಜಾರ್ಖಂಡ್‌ ಎನ್ನುತ್ತಿದ್ದವರು ನಂತರದ ದಿನಗಳಲ್ಲಿ ಬುಡಕಟ್ಟೇತರ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟವನ್ನು ತೀವ್ರಗೊಳಿಸಿದರು. ಆದರೆ ಜಾರ್ಖಂಡ್‌ಗೆ ಒಂದು ಸಾಮಾನ್ಯ ಭಾಷೆ ಇಲ್ಲವೆಂಬ ಕಾರಣ ನೀಡಿ ಭಾಷಾವಾರು ಪ್ರಾಂತ್ಯಗಳ ಪುನರ್‌ವಿಂಗಡನಾ ಸಮಿತಿಯು ಜಾರ್ಖಂಡ್‌ರಾಜ್ಯಕ್ಕೆ ಪ್ರತ್ಯೇಕ ರಾಜ್ಯವನ್ನು ನೀಡಲು ನಿರಾಕರಿಸಿತು. ನಂತರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೈಪಾಲ್‌ಸಿಂಗ್‌ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸೇರಿದು. ಪ್ರತ್ಯೇಕ ತೆಲಂಗಾಣ ಹೋರಾಟ ಮಾಡುತ್ತಿದ್ದ ಚಳವಳಿಯ ನಾಯಕತ್ವ ವಹಿಸಿದ್ದ ಡಾ. ಚೆನ್ನಾರೆಡ್ಡಿ ಅವರು ಕೂಡ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸೇರಿ, ನಂತರ ಕಾಂಗ್ರೆಸ್‌ ಮೂಲಕ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದದ್ದನ್ನು ನಾವು ಗಮನಸಿಬಹುದು. ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಅಷ್ಟಾಗಿ ಒಲವಿಲ್ಲದಿದ್ದ ಕಾಂಗ್ರೆಸ್‌ ಪ್ರತ್ಯೇಕ ರಾಜ್ಯಕ್ಕಾಗಿ ನಡೆಸುತ್ತಿದ್ದ ಹೋರಾಟಗಳು ಹೊಸ ಸಮಸ್ಯೆಗಳನ್ನು ಸೃಷ್ಟಿಸಬಹುದೆಂಬ ಆತಂಕವೂ ಇದ್ದಿದ್ದರಿಂದ ಈ ಬಗೆಯ ಬೆಳವಣಿಗೆಗಳು ನಡೆದವು ಎನ್ನಬಹುದು.

೧೯೬೭ರ ಹೊತ್ತಿಗೆ ಅನೇಕ ಬುಡಕಟ್ಟು ಪಾರ್ಟಿಗಳು ಮತ್ತು ಚಳವಳಿಗಳು ಜಾರ್ಖಂಡ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಕ್ಕಾಗಿ ಹೋರಾಟಗಳನ್ನೂ ಮಾಡುತ್ತಿದ್ದವು. ಅವುಗಳಲ್ಲಿ ಮುಖ್ಯವಾಗಿ ತಲೆ ಎತ್ತಿ ನಿಂತಿದ್ದು ಜಾರ್ಖಂಡ್‌ ಮುಕ್ತಿ ಮೋರ್ಛಾ (ಜೆ.ಎಂ.ಎಂ.) ೧೯೭೨ರಲ್ಲಿ ಶಿಬು ಸೊರೆನ್‌ ಅವರು ವಿದ್ಯುಕ್ತವಾಗಿ ಜಾರ್ಖಂಡ್‌ ಮುಕ್ತಿ ಮೋರ್ಚಾವನ್ನು ಆರಂಭಿಸುತ್ತಾರೆ. ಒಟ್ಟು ಜನಸಂಖ್ಯೆ ಶೇ. ೨.೩ರಷ್ಟಿದ್ದ ಬುಡಕಟ್ಟೇತರ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟವನ್ನು ಅವರು ತೀವ್ರಗೊಳಿಸುತ್ತಾರೆ. ಈ ಕಾರಣಕ್ಕಾಗಿ ಉತ್ತರ ಬಿಹಾರದಲ್ಲಿ ಬುಡಕಟ್ಟು ಹಾಗೂ ಬುಡಕಟ್ಟೇತರ ಸಮುದಾಯಗಳು ಒಂದಾಗಿ ಇತ್ತೀಚೆಗೆ ಬಂದ ‘‘ವಲಸಿಗರ” ನಡುವಿನ ಹೋರಾಟವೆಂಬುದು ಪ್ರತ್ಯೇಕ ರಾಜ್ಯ ಹೋರಾಟಗಾರರಿಂದ ಬಿಂಬಿಸಲ್ಪಟ್ಟ ತಂತ್ರಗಾರಿಕೆ. ಭಾರತದ ಬಹುತೇಕ ಪ್ರತ್ಯೇಕ ರಾಜ್ಯ ಹೋರಾಟಗಳಲ್ಲಿ “ಮೂಲನಿವಾಸಿ ಮತ್ತು ವಲಸಿಗರ” ನಡುವಿನ ಸಂಘರ್ಷದ ಮಾದರಿಗಳನ್ನು ಗಮನಿಸಬಹುದಾಗಿದೆ. ಈ ರೀತಿಯ ಸಂಘರ್ಷಗಳ ಮಾದರಿಗಳನ್ನು ಬಹುತೇಕ ಸಂದರ್ಭಗಳಲ್ಲಿ ಪ್ರತ್ಯೇಕ ರಾಜ್ಯಗಳಿಂದಾಗಿ ಹೋರಾಟ ಮಾಡುತ್ತಿರುವವರು ತಮ್ಮ ಹೋರಾಟದ ಗೆಲುವಿಗಾಗಿ ಬಳಸಿಕೊಂಡ ತಂತ್ರವಾಗಿದೆ. ಕರ್ನಾಟಕದ ಕೊಡಗಿನಲ್ಲಿಯೂ ಪ್ರತ್ಯೇಕವಾದಿಗಳು “ಮೂಲನಿವಾಸಿ” ಮತ್ತು “ವಲಸಿಗರ” ನಡುವಿನ ಹೋರಾಟವೆಂದು ತಮ್ಮ ಹೋರಾಟವನ್ನು ೧೯೯೦ರ ದಶಕದಲ್ಲಿ ಬಿಂಬಿಸಿದ್ದರು. ಕೊಡಗಿನಲ್ಲಿ ಜಾರ್ಖಂಡ್‌ಹೋರಾಟದ ತಂತ್ರ ಫಲಿಸದಿದ್ದರು ಜಾರ್ಖಂಡ್‌ನಲ್ಲಿ ಮಾತ್ರ ಆ ತಂತ್ರವು ಯಶಸ್ವಿಯಾಯಿತು. ಜಾರ್ಖಂಡ್‌ ಮುಕ್ತಿ ಮೋರ್ಛಾಗೆ ಬುಡಕಟ್ಟೇತರ ಸಮುದಾಯಗಳ ಬಡವರು ಮತ್ತು ಕಮ್ಯುನಿಸ್ಟರು ಬೆಂಬಲಿಸಿದರು. ಆದರೆ, ನಂತರದ ಹಂತದಲ್ಲಿ ಕಮ್ಯುನಿಸ್ಟರು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡರು. ಹೀಗಾಗಿ ಜಾರ್ಖಂಡ್‌ ಹೋರಾಟವು ‘ವರ್ಗ’ ಹೋರಾಟದ ಹಾದಿಯನ್ನು ತುಳಿಯದೆ ‘ಬುಡಕಟ್ಟು’ ಹೋರಾಟದ ಮಾರ್ಗವನ್ನು ತುಳಿಯಿತು. ಬಹು ಸಂಸ್ಕೃತಿಗಳುಳ್ಳ ಈ ಬುಡಕಟ್ಟುಗಳು ಒಂದು ರಾಜಕೀಯ ಕಾರಣಕ್ಕಾಗಿ  ಅನೇಕ ಬಾರಿ ಒಗ್ಗಟ್ಟನ್ನು ಪ್ರದರ್ಶಿಸಿದವು. ಈ ಕಾರಣಕ್ಕಾಗಿ ಅನೇಕ ಬಾರಿ ಒಗ್ಗಟ್ಟನ್ನು ಪ್ರದರ್ಶಿಸಿದವು. ಈ ಕಾರಣಕ್ಕಾಗಿ ೧೯೯೬ರಲ್ಲಿ ಭಾರತ ಸರ್ಕಾರವು ಜಾರ್ಖಂಡ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನವನ್ನು ನೀಡಿತು. ಇದೇ ಸಂದರ್ಭದಲ್ಲಿ ಛತ್ತೀಸ್‌ಗಡಕ್ಕೆ ಮತ್ತು ಉತ್ತರಾಂಚಲಕ್ಕೆ ಕೂಡ ಆಯಾ ನೆಲದಲ್ಲಿ ನಡೆದ ಹೋರಾಟಗಳ ಕಾರಣಗಳಿಂದಾಗಿ ಪ್ರತ್ಯೇಕ ರಾಜ್ಯದ ಸ್ಥಾನಮಾನವನ್ನು ಭಾರತ ಸರ್ಕಾರವು ನೀಡಿತು.

* * *

ಕೊಡಗನ್ನು ಸುಮಾರು ೨೫೦ ವರ್ಷಗಳ ಕಾಲ ಆಳಿದ ಹಾಲೇರಿ ಅರಸರಿಂದ ಕೊಡಗು ರಾಜ್ಯವನ್ನು  ಬ್ರಿಟಿಷರು ೧೮೩೪ರಲ್ಲಿ ವಶಪಡಿಸಿಕೊಂಡು ೧೯೪೭ರವರೆಗೆ ನೆರವಾಗಿ ತಮ್ಮ ಪ್ರತಿನಿಧಿಗಳ ಮೂಲಕ ಆಳಿದರು. ೧೯೪೭ ರಿಂದ ೧೯೫೨ರವರೆಗೆ ಸ್ವತಂತ್ರ ಭಾರತ ಸರಕಾರದ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಕೊಡಗಿನ ರಾಜ್ಯಭಾರ ಮುಂದುವರಿಯಿತು. ೧೯೫೨ ರಿಂದ ೧೯೫೬ರವರೆಗೆ ಕಾಂಗ್ರೆಸ್‌ ನೇತೃತ್ವದಲ್ಲಿ ಸಿ. ಎಂ. ಪೂಣಚ್ಚ ಅವರು ಕೊಡಗು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದರು. ಕಾಂಗ್ರೆಸ್‌ ನೇತೃತ್ವದ ಹೋರಾಟದಲ್ಲಿ ಪೂಣಚ್ಚ ಅವರ ರೀತಿಯಲ್ಲಿ ಸಕ್ರಿಯವಾಗಿ ಹೋರಾಟ ಮಾಡಿದ್ದ ಹಿರಿಯ ರಾಜಕಾರಣಿ ಪಿ. ಐ. ಬೆಳ್ಳಿಯಪ್ಪ ಅವರಿಗೆ ಸಹಜವಾಗಿಯೇ ಕಾಂಗ್ರೆಸ್‌ನ ಮುಖ್ಯಸ್ಥರಾಗಿ ಮುಖ್ಯಮಂತ್ರಿಯಾಗುವ ಹಂಬಲವಿತ್ತು. ರಾಜಕಾರಣದ ವಿವಿಧ ಬೆಳವಣಿಗೆಯಿಂದ ಅದು ಪೂಣಚ್ಚ ಅವರ ಕೈಗೆ ಹೋಗುವುದು ಖಚಿತವಾಗಿ ಬೆಳ್ಳಿಯಪ್ಪನವರು ‘ಪ್ರತ್ಯೇಕ ಪಾರ್ಟಿ”ಯನ್ನು ಸ್ಥಾಪಿಸಿದರು. ಕರ್ನಾಟಕದ ಏಕೀಕರಣದ ಕಾವು ಹೆಚ್ಚಿದ್ದ ಸಂದರ್ಭ ಅದು. ಕೊಡಗು ಕರ್ನಾಟಕದೊಂದಿಗೆ ವಿಲೀನ ಆಗಬೇಕೆಂದು ಆ ಸಂದರ್ಭದಲ್ಲಿ ಕಾಂಗ್ರೆಸ್‌ಬಯಸಿತ್ತು. ಸಹಜವಾಗಿಯೇ ಬೆಳ್ಳಿಯಪ್ಪನವರು ಅದನ್ನು ವಿರೋಧಿಸಿ ಕೊಡಗು ಪ್ರತ್ಯೇಕ ರಾಜ್ಯವಿರಬೇಕೆಂದು ವಾದಿಸಿದರು. ಕೂರ್ಗ್ ಲೆಜಿಸ್ಲೇಟಿವ್‌ ಅಸೆಂಬ್ಲಿಯಲ್ಲಿ ಪ್ರತ್ಯೇಕ ಪಾರ್ಟಿ ತನ್ನ ಏಳು ಮಂದಿ ಸದಸ್ಯರೊಂದಿಗೆ ಪ್ರಮುಖ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೂ ಭಾಷಾವಾರು ಪ್ರಾಂತ್ಯದ ಪುನರ್‌ವಿಂಗಡನೆಯ ಸಂದರ್ಭದಲ್ಲಿ ಕೊಡಗನ್ನು ಕರ್ನಾಟಕದೊಂದಿಗೆ ವಿಲೀನ ಮಾಡಲು ಕಾಂಗ್ರೆಸ್‌ ೧೭ ಜನ ಸದಸ್ಯರೊಂದಿಗೆ ಬೆಳ್ಳಿಯಪ್ಪನವರೂ ಸೇರಿದಂತೆ ಅವರ ಪಾರ್ಟಿಯ ೫ ಮಂದಿ ಸದಸ್ಯರು ಶಾಸನಭೆಯಲ್ಲಿ ಒಪ್ಪಿದರು. ಅಂತಿಮವಾಗಿ ಕೊಡಗು ಶಾಸನಸಭೆಯಲ್ಲಿದ್ದ ೨೪ ಸದಸ್ಯರ ಪೈಕಿ ೨೨ ಸದಸ್ಯರು ವಿಲೀನ ಪ್ರಕ್ರಿಯೆಗೆ ಅಧಿಕೃತವಾಗಿ ಒಪ್ಪಿದರು. ನಂತರದ ದಿನಗಳಲ್ಲಿ ಸಿ. ಎಂ. ಪೂಣಚ್ಚ ಅವರು ಕೇಂದ್ರ ಸರ್ಕಾರದಲ್ಲಿ ರೈಲ್ವೆ ಮಂತ್ರಿಗಳಾಗಿ, ನಂತರ ಮಧ್ಯಪ್ರದೇಶ ಹಾಗೂ ಒರಿಸ್ಸಾಗಳ ರಾಜ್ಯಪಾಲರಾಗಿ ಕಾಂಗ್ರೆಸ್‌ನ ಜವಾಬ್ದಾರಿ ವಹಿಸಿದರು.

ನಂತರ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಕೊಡಗು ಪ್ರತ್ಯೇಕ ರಾಜ್ಯ ಆಗಬೇಕೆಂದು ವಿವಿಧ ಸಂಘಟನೆಗಳು ಬೇಡಿಕೆ ಇಡುತ್ತಿದ್ದವು. ೧೯೯೧ರಲ್ಲಿ ಪ್ರವರ್ಧಮಾನಕ್ಕೆ ಬಂದ ಸಂಘಟನೆ ಲಿಬರೇಶನ್‌ ವಾರಿಯರ್ಸ್‌ ಆಫ್‌ ಕೂರ್ಗ್‌ (ಲೀವಾಕ್‌) ಇವುಗಳಲ್ಲಿ  ಪ್ರಮುಖವಾದುದು. ಈ ಸಂಘಟನೆ ಆರಂಭದಲ್ಲಿ ದಲಿತರನ್ನು, ಬುಡಕಟ್ಟು ಜನರನ್ನು, ಭೂ ಮಾಲೀಕರನ್ನು ಹಾಗೂ ಮತ್ತಿತರ ಮೂಲನಿವಾಸಿಗಳನ್ನು  ಸಂಘಟಿಸಿ ಅವುಗಳ ಹಕ್ಕುಗಳಿಗಾಗಿ ಹೋರಾಟ ಮಾಡುವ ಉದ್ದೇಶವನ್ನು ಹೊಂದಿತ್ತು. ಈ ಹೋರಾಟವು ಹಿಂಸಾತ್ಮಕವಾದ ಹಾದಿಯನ್ನು ತುಳಿಯುವ ಸೂಚನೆ ಸಿಕ್ಕಿ ಅದು ಸರ್ಕಾರ ನೇರ ದೃಷ್ಟಿಗೆ ಬಿದ್ದಾಗ ಈ ಸಂಘಟನೆಯು ವಿಪತ್ತಿಗೆ ಸಿಲುಕಿತು. ಈ ಸಂದರ್ಭದಲ್ಲಿ ಲೀವಾಕ್‌ನ ನಾಯಕರು ೧೯೯೫ರಲ್ಲಿ ಕೊಡಗು ರಾಜ್ಯ ಮುಕ್ತಿಮೋರ್ಚಾ (ಕೆ. ಆರ್‌. ಎಂ. ಎಂ.)ಅನ್ನು ಸ್ಥಾಪಿಸಿ ತಮ್ಮ ಸಂಘಟನೆಯ ಕೆಲಸವನ್ನು ಮುಂದುವರಿಸಿದರು.

ಬಹುತೇಕ ಪ್ರತ್ಯೇಕ ರಾಜ್ಯಗಳ ಹೋರಾಟಗಳಲ್ಲಿ ಪ್ರಧಾನ ಪಾತ್ರವಹಿಸುವ “ಸ್ಥಳೀಯ ಎಲೈಟ್‌ಗಳ” ಮಾದರಿಯಲ್ಲಿ ಕೊಡಗಿನ ಜಮೀನ್ದಾರಿ ಪಂಗಡಗಳು ಈ ಹೋರಾಟವನ್ನು ಬೆಂಬಲಿಸಿದವು. ಕರ್ನಾಟಕದ ಏಕೀಕರಣ ಪೂರ್ವದಲ್ಲಿತ್ತು ಎಂದು ಭಾವಿಸಲಾದ “ಆದರ್ಶ ರಾಜ್ಯವನ್ನು” ಮತ್ತು “ರಾಮರಾಜ್ಯವನ್ನು” ಮತ್ತೊಮ್ಮೆ ಪ್ರತಿಷ್ಠಾಪಿಸಿ ಕೊಡಗಿನ ಸಂಸ್ಕೃತಿಯನ್ನು “ಕರ್ನಾಟಕದ ಸಾಮ್ರಾಜ್ಯಶಾಹಿಗಳಿಂದ” “ವಿಮೋಚನೆ” ಮಾಡಬೇಕೆಂದು ಕೊಡಗಿನ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರು. ಈ ಸಂದರ್ಭದಲ್ಲಿ ಹತ್ತಾರು ಸಾವಿರ ಜನರ ಸಮಾವೇಶಗಳನ್ನು ಕೆ. ಆರ್. ಎಂ. ಎಂ. ಸಂಘಟಿಸಿತು. ದೆಹಲಿ ಚಲೋ ಎನ್ನುವಂತಹ ಜಾಥಾಗಳನ್ನು ಈ ಸಂಘಟನೆಯು ಹಮ್ಮಿಕೊಂಡಿತ್ತು. ಜಾರ್ಖಂಡ್‌ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಮಾದರಿಯಾಗಿದ್ದ “ಮೂಲನಿವಾಸಿ ಮತ್ತು ವಲಸೆಗಾರರ ನಡುವೆ ಇರಲೇಬೇಕು” ಎಂಬಂತಹ ಸಂಘರ್ಷದ ತಂತ್ರವನ್ನು ಕೊಡಗಿನ ಮಣ್ಣಿನಲ್ಲಿಯೂ ಅನುಸರಿಸಲಾಯಿತು. ಕೊಡಗಿನಲ್ಲಿ ಮಲೆಯಾಳಿ ವರ್ತಕರನ್ನು /ಸಮುದಾಯಗಳನ್ನು ಪ್ರಮುಖವಾಗಿ ವಲಸೆಗಾರರೆಂದು ಬಿಂಬಿಸಿ ಕೊಡಗಿನ ಎಲ್ಲ ಅಧೋಗತಿಗೆ ಈ ವಸಲೆಗಾರರೆಲ್ಲ ಕಾರಣ ಎಂದು ಘೋಷಿಸಿ “ಕೊಡವ ರಾಷ್ಟ್ರೀಯತೆಯನ್ನು” ಈ ಸಂಘಟನೆಯು ಉದ್ದೀಪಿಸಿತು. ಸ್ವತಃ ಜಾರ್ಖಂಡ್‌ ಮುಕ್ತಿ ಮೋರ್ಛಾದ ನಾಯಕರಾದ ಶಿಬು ಸೊರೆನ್‌ ಅವರು ಈ ಬೃಹತ್‌ ಸಮಾವೇಶಗಳಲ್ಲಿ ಪಾಲ್ಗೊಂಡರು.

ಕೊಡಗು ಪ್ರತ್ಯೇಕ ರಾಜ್ಯವಾಗಬೇಕೆಂದು ಆಶಯವಿಟ್ಟುಕೊಂಡಿದ್ದ ಕರ್ನಾಟಕ ವಿಮೋಚನಾ ರಂಗದಂತಹ ಮಾರ್ಕ್ಸಿಸ್ಟ್‌ಲೆನಿನಿಸ್ಟ್‌ತೀವ್ರ ಎಡವಾದಿಗಳು ಭಾರತದ ಬಹುತೇಕ ಕಡೆ ನಡೆಯುತ್ತಿರುವ ಪ್ರತ್ಯೇಕ ರಾಜ್ಯ ಚಳವಳಿಗಳಿಗೆ ಬೆಂಬಲಿಸುತ್ತಿರುವುದು ಗಮನಾರ್ಹವಾಗಿದೆ. ನಂತರದ ವರ್ಷಗಳಲ್ಲಿ ಕೊಡಗಿನ ಪ್ರತ್ಯೇಕವಾದಿಗಳು ಭೂಮಾಲೀಕರ ಮತ್ತು ಪ್ರಬಲ ಜಾತಿಗಳ ಪರವಾದ ಧೋರಣೆಗಳನ್ನು ಬೆಂಬಲಿಸಿದ್ದರಿಂದ ಕರ್ನಾಟಕ ವಿಮೋಚನಾ ರಂಗವು ಕೊಡಗಿನ ಪ್ರತ್ಯೇಕ ರಾಜ್ಯದ ಸಕ್ರಿಯ ಹೋರಾಟದಿಂದ ದೂರ ಸರಿಯಿತು.

ಪ್ರತ್ಯೇಕ ರಾಜ್ಯ ಹೋರಾಟವು ತೀವ್ರಗತಿಯಲ್ಲಿ ಮುಂದುವರೆಯುತ್ತಿದ್ದಾಗ ಕೊಡಗಿನ ಹಿಂದುಳಿದ ವರ್ಗಗಳು ಮತ್ತು ದಲಿತರ ಒಕ್ಕೂಟಗಳು “ಕೊಡಗು ಪ್ರಜಾವೇದಿಕೆ” ಎಂಬ ಹೆಸರಿನ ಸಂಘಟನೆಯಡಿಯಲ್ಲಿ ಪ್ರತ್ಯೇಕ ರಾಜ್ಯ ವಿರೋಧಿ ಹೋರಾಟವನ್ನು ಆರಂಭಿಸಿದವು. ಪ್ರತ್ಯೇಕ ರಾಜ್ಯಕ್ಕಾಗಿ ಕೊಡಗಿನಲ್ಲಿ ಭೂಮಾಲೀಕ ಶಕ್ತಿಗಳು ಬೆಂಬಲ ನೀಡುತ್ತಿರುವುದನ್ನು ಈ ಸಂಘಟನೆ ತೀವ್ರವಾಗಿ ವಿರೋಧಿಸಿತು. ಏಕೀಕರಣ ಪೂರ್ವದಲ್ಲಿ ಪ್ರಬಲ ಜಾತಿಗಳಿಗೆ ಕೊಡಗಿನ ನೆಲದಲ್ಲಿ “ರಾಮರಾಜ್ಯವಿತ್ತೇ” ವಿನಹ ಕೆಳವರ್ಗ/ಕೆಳಜಾತಿಗಳಿರಲಿಲ್ಲ ಎಂದು ಕೊಡಗು ಪ್ರಜಾವೇದಿಕೆ ಹೇಳಿಕೆಗಳನ್ನು ನೀಡಿತು. ಕರ್ನಾಟಕದ ಏಕೀಕರಣದ ಬಳಿಕ ಕೊಡಗಿನ ಕೆಳಜಾತಿಗಳಿಗೆ ಮತ್ತು ದಲಿತರಿಗೆ ಮುಕ್ತಿ ಹಾಗೂ ಸಂಚಲನೆ ಬಂದಿದೆ ಎಂದು ಪ್ರಜಾವೇದಿಕೆಯು ವಾದಿಸಿತು. ಕೊಡಗಿನ ಜಮೀಜ್ದಾರ ಮತ್ತು ಬ್ರಿಟಿಷ್‌ ಪ್ಲಾಂಟರ್‌ಗಳು ೧೯ನೆಯ ಶತಮಾನದಲ್ಲಿ ವಾಣಿಜ್ಯೀಕರಣಗೊಂಡ ನೂರಾರು ಎಕರೆಗಳ ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿಕೆಲಸಕ್ಕೆಂದು ಎಳೆದುಕೊಂಡು ಬಂದ ಜನರೇ ಇಂದು ವಲಸೆಗಾರರೆಂದು ದೂಷಣೆಗೊಳಗಾದವರು ಮತ್ತು ಹಲ್ಲೆಗೊಳಗಾದವರು ಎಂದು ಪ್ರಜಾವೇದಿಕೆ ಘೋಷಣೆ ಮಾಡಿತು. ಸ್ವತಂತ್ರ ಭಾರತದಲ್ಲಿ ಅವರಿಗೆಲ್ಲರಿಗೂ ಎಲ್ಲರಂತೆ ಸ್ವಾತಂತ್ರ್ಯ ಬಂದಿದೆ ಮತ್ತು ಅವರು ಎಲ್ಲ ಭಾರತೀಯರಂತೆ ಅವಕಾಶ ಪಡೆಯಲು ಯತ್ನಿಸುವಾಗ ಅವರನ್ನೇಕೆ ವಲಸೆಗಾರ ಎಂದು ದೂಷಿಸಬೇಕೆಂದು ಪ್ರಜಾವೇದಿಕೆಯು ಪ್ರಶ್ನಿಸಿತು. ಈ ಮೂಲಕ ಪ್ರಜಾವೇದಿಕೆ ಪ್ಲಾಂಟೇಶನ್‌ಕಾರ್ಮಿಕರ ಸಹಾನುಭೂತಿ ಪಡೆಯಿತು. ಸಹಜವಾಗಿಯೇ ಕಮ್ಯುನಿಸ್ಟ್‌ಪಾರ್ಟಿ ಆಫ್‌ಇಂಡಿಯಾ (ಮಾರ್ಕ್ಸಿಸ್ಟ್‌) ಪ್ರಜಾವೇದಿಕೆಗೆ ಬೆಂಬಲವನ್ನು ಸೂಚಿಸಿತು. ನಂತರದ ದಿನಗಳಲ್ಲಿ ಕನ್ನಡ ಶಕ್ತಿ ಕೇಂದ್ರದಂತಹ ಕನ್ನಡಪರ ಸಂಘಟನೆಗಳು, ಕನ್ನಡ ಹೋರಾಟಗಾರರು ಕೊಡಗು ಕರ್ನಾಟಕದ ಅವಿಭಾಜ್ಯ ಅಂಗವೆಂದು ಕೊಡಗು ಪ್ರಜಾವೇದಿಕೆಯ ಕೂಡ ಸಹಸ್ರಾರು ಜನರ ಸಮಾವೇಶಗಳನ್ನು ಸಂಘಟಿಸಿತು.

ಶ್ರೀಲಂಕಾದ “ಸಿಂಹಗಳ ವಿರುದ್ಧ ಎಲ್‌. ಟಿ. ಟಿ. ಈ. “ಹುಲಿಗಳ” ಹೋರಾಟ ನಡೆಯುತ್ತಿದ್ದರೆ ಕೊಡಗಿನಲ್ಲಿ ಸಿಂಹಗಳ ಗೈರು ಹಾಜರಿಯಲ್ಲಿ ಹುಲಿಯ ಚಿತ್ರಗಳು ಲಿಬರೇಶನ್ ವಾರಿಯರ್ಸ್ ಆಫ್‌ಕೂರ್ಗ್‌ನ ಸಂಘಟನೆಯಲ್ಲಿ ರಾರಾಜಿಸುತ್ತಿದ್ದರು. ಎಲ್‌. ಟಿ.ಟಿ.ಈ.ನಿಂದ ಸ್ಫೂರ್ತಿಗೊಂಡಂತೆ ಬೀಗುತ್ತಿದ್ದ ಈ ಸಂಘಟನೆಯು ತೀವ್ರ ಎಡವಾದಿಗಳ ಅನುಕಂಪವನ್ನೂ ಗಳಿಸಿತ್ತು. ಹುಲಿಯ ಲಾಂಛನವಾಗಿಟ್ಟುಕೊಂಡ ಎಲ್‌.ಟಿ.ಟಿ.ಈ ತಮಿಳು ಪ್ಲಾಂಟೇಶನ್‌ ಕಾರ್ಮಿಕರ ಕೂಲಿಗಳ ದಮನಿತರ ಪರ ನಿಂತು ಗರ್ಜಿಸುತ್ತಿದ್ದರೆ, ಕೊಡಗಿನಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟಡುತ್ತಿದ್ದವರು ಹುಲಿಯ ಚಿತ್ರವನ್ನಿಟ್ಟುಕೊಂಡು ಎಸ್ಟೇಟ್‌ ಮಾಲೀಕರನ್ನು, ಮೇಲ್ಜಾತಿಗಳನ್ನು ಹಾಗೂ ಅವರ ಹಿತಾಸಕ್ತಿಯನ್ನು ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತಾ, ಎಸ್ಟೇಟ್‌ಕೂಲಿ ಕಾರ್ಮಿಕರ, ಕೆಳವರ್ಗಗಳ, ಕೆಳಜಾತಿಗಳ ಮತ್ತು ಬುಡಕಟ್ಟುಗಳ ಜನರ ಹಕ್ಕುಗಳನ್ನು ದಮನಿಸುವ ಇಲ್ಲವೆ ಮೂಲೆಗೆ ಸರಿಸಲು ಪ್ರಯತ್ನಿಸಿದ್ದನ್ನು ಪ್ರತ್ಯೇಕ ರಾಜ್ಯ ವಿರೋಧಿ ಹೋರಾಟಗಾರರು ಟೀಕಿಸಿದ್ದನ್ನು ಗಮನಿಸಬಹುದು.

ಕೊಡಗಿನ ಪ್ರತ್ಯೇಕ ರಾಜ್ಯದ ಹೋರಾಟವು ಆರಂಭದಲ್ಲಿ ಜಾರ್ಖಂಡ್‌ ಪ್ರತ್ಯೇಕ ರಾಜ್ಯ ಹೋರಾಟದ ಮಾದರಿಯಲ್ಲಿ ಬುಡಕಟ್ಟು-ದಲಿತ-ಹಿಂದುಳಿದ ಸಮುದಾಯಗಳನ್ನು ಒಳಗೊಳ್ಳುವ ಪ್ರಯತ್ನವನ್ನು ಮಾಡಿತು. ಆದರೆ ಈ ಹೋರಾಟವು ತನ್ನ ಹಾದಿಯನ್ನು ಬದಲಿಸಿ ಕೊಡಗಿನ ಬಲಾಢ್ಯ ಸಮುದಾಯಗಳ ಭೂಮಾಲೀಕಪರ ಧೋರಣೆ ವಹಿಸಿದ್ದೇ ಇದರ ಹಿನ್ನಡೆಗೆ ಕಾರಣವೆನ್ನಬಹುದು. ಭಾರತದ ಬಹುತೇಕ ಪ್ರತ್ಯೇಕ ರಾಜ್ಯಗಳ ಹೋರಾಟಗಳಲ್ಲಿ ಕೂಡ ಆಂತರಿಕ ಬಿಕ್ಕಟ್ಟುಗಳಿದ್ದರೂ ಅವುಗಳನ್ನು ಮೀರುವ ಪ್ರಯತ್ನಗಳಲ್ಲಿ ಬಹುತೇಕ ನಾಯಕರು ಸಫಲರಾದರು. ಕೊಡಗಿನ ಮಟ್ಟಿಗೆ, ಕೆಳಜಾತಿ-ದಲಿತರ ಒಕ್ಕೂಟದ ಪ್ರಬಲವಾದ ಪ್ರತ್ಯೇಕ ರಾಜ್ಯ ವಿರೋಧಿ ಹೋರಾಟಗಳಿಂದಾಗಿ ಕೊಡಗಿನ ಪ್ರತ್ಯೇಕ ರಾಜ್ಯ ಹೋರಾಟವು ೨೦೦೦ದ ಹೊತ್ತಿಗೆ ನೇಪಥ್ಯಕ್ಕೆ ಸರಿಯಿತು. ಈ ಸಂದರ್ಭದಲ್ಲಿ ಕೆ. ಆರ್. ಎಂ. ಎಂ. ಎನ್ನುವ ಹೆಸರನ್ನು ಬದಲಿಸಿ ಕೂರ್ಗ್‌ ನ್ಯಾಶನಲ್‌ ಕೌನ್ಸಿಲ್‌ (ಸಿ.ಎನ್‌.ಸಿ.)ಎನ್ನುವ ಹೊಸ ಸಂಘಟನೆಯನ್ನು ಅದರ ನೇತಾರರು ಆರಂಭಿಸಿದರು. ಕೊಡಗಿನ ಪ್ರಬಲ ಭೂಹಿಡುವಳಿ ಸಮುದಾಯವಾದ ಕೊಡವರಿಗೆ “ಸ್ವಾಯತ್ತತೆ” ನೀಡಿ, ಅವರ “ಜನಾಂಗೀಯ” ಹಿತಾಸಕ್ತಿಗಳನ್ನು ಕಾಪಾಡಲು “ಕೊಡವ ಲ್ಯಾಂಡ್‌”ನ ಬೇಡಿಕೆಯನ್ನು ಸಿ.ಎನ್.ಸಿ.ಯು ಮಂಡಿಸಿದೆ. ಜನಾಂಗೀಯವಾಗಿ ನಶಿಸಿ ಹೋಗುವ ಹಂತದಲ್ಲಿರುವ ಕೊಡವ ಜನಾಂಗಕ್ಕೆ ಸಂವಿಧಾನಬದ್ಧವಾದ ವಿಶೇಷ ಹಕ್ಕುಗಳನ್ನು ಮತ್ತು ಮೀಸಲಾತಿಗಳನ್ನು ನೀಡಬೇಕೆಂದು ಈ ಸಂಘಟನೆ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಾಡುತ್ತಿದೆ. ಪ್ರಸ್ತುತ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆಯನ್ನು  ಕೈಬಿಟ್ಟಿರುವ ಸಿ.ಎನ್‌.ಸಿ.ಯು ಕೊಡಗಿನ ಜನಸಂಖ್ಯೆಯ ಸುಮಾರು ಶೇ. ೧೫ರಷ್ಟು ಸಂಖ್ಯೆಯಲ್ಲಿರುವ ಕೊಡವರ ಜನಾಂಗೀಯ ಹಕ್ಕುಗಳನ್ನು ಉಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿದೆ. ೧೯೯೦ರ ದಶಕದಲ್ಲಿ ತೀವ್ರವಾಗಿದ್ದ ಪ್ರತ್ಯೇಕ ರಾಜ್ಯ ಬೇಡಿಕೆಯ ಹೋರಾಟದ ಸ್ವರೂಪವು ೨೦೦೦ರ ದಶಕದಲ್ಲಿ ಬಹುತೇಕವಾಗಿ ಹಿನ್ನೆಲೆಗೆ ಸರಿಸಿದೆ.

ಭಾರತದಲ್ಲಿನ ಐಡೆಂಟಿಟಿಯ ಹೋರಾಟಗಳು ಇಪ್ಪತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಬಹಳ ಪ್ರಬಲವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಬಗೆಯ ಐಡೆಂಟಿಟಿಯ ಹೋರಾಟಗಳು ಮುಂದುವರಿಯುತ್ತಿದ್ದರೂ ಹಿಂದಿನ ತೀವ್ರತೆಗಳು ಒಮ್ಮೊಮ್ಮೆ ಕಾಣಿಸಿಕೊಳ್ಳುವುದುಂಟು. ೨೦೦೯ರ ಅಂತ್ಯದಲ್ಲಿ ಹಾಗೂ ೨೦೧೦ರಲ್ಲಿ ಕಾಣಿಸಿಕೊಂಡ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ತೆಲಂಗಾಣ ಹೋರಾಟವು ಭಾರತದ ರಾಜಕಾರಣವನ್ನೇ ಅಲ್ಲೋಲಕಲ್ಲೋಲ ಮಾಡಿತು. ಹೋರಾಟದ ತೀವ್ರವಾದ ಒತ್ತಡದಿಂದ ತಾತ್ವಿಕವಾಗಿ ಅಧಿಕಾರರೂಢ ಯು.ಪಿ.ಎ. ಸಂಯುಕ್ತ ಸರ್ಕಾರವು ತೆಲಾಂಗಾಣ ಪ್ರತ್ಯೇಕ ರಾಜ್ಯದ ಪ್ರಸ್ತಾವವನ್ನು ಅಂಗೀಕರಿಸುವ ನಿರ್ಧಾರ ಮಾಡಿದೆ. ಇದರಿಂದಾಗಿ ತೆಲಂಗಾಣೇತರ ಪ್ರದೇಶಗಳ ಜನರು ತಮ್ಮ ಉಗ್ರ ಹೋರಾಟದಿಂದ ವಿಶಾಲಾಂದ್ರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣದ ಜನರು, ವಿದ್ಯಾರ್ಥಿಗಳು ಹಾಗೂ ರಾಜಕಾರಣಿಗಳು ಆಗ್ರಹಿಸುತ್ತಿದ್ದಾರೆ. ಇದರಿಂದ ಸಂಕಷ್ಟಕ್ಕೀಡಾದ ಸಂಯುಕ್ತ ಸರ್ಕಾರವು ಮುಜುಗರಗೊಂಡು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ತಾನು ನೀಡಿದ ಒಪ್ಪಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ರಾಜ್ಯ ಹಾಗೂ ಪ್ರತ್ಯೇಕ ರಾಜ್ಯ ವಿರೋಧಿ ಹೋರಾಟಗಳು ತೀವ್ರಗೊಂಡಿವೆ. ಇದರಿಂದ ಸ್ಫೂರ್ತಿಗೊಂಡ ವಿದರ್ಭದ ಹೋರಾಟಗಾರರು ಮಹಾರಾಷ್ಟ್ರದಲ್ಲಿ ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದರೆ, ಗೂರ್ಖಾ ಹೋರಾಟಗಾರರು ಪಶ್ಚಿಮ ಬಂಗಾಳದಲ್ಲಿ ಪ್ರತ್ಯೇಕ ಗೂರ್ಖಾ ಲ್ಯಾಂಡಿಗಾಗಿ ಬೀದಿಗಿಳಿದಿದ್ದಾರೆ. ಸಂಧಾನ ಮತ್ತು ಹೋರಾಟಗಳು ಜೊತೆಜೊತೆಯಲ್ಲಿ ಸಾಗುತ್ತಿವೆ. ನಾಗಾಲ್ಯಾಂಡ್‌ಮತ್ತು ಮೀಜೊರಾಂಗಳಲ್ಲಿ ವಿಮೋಚನಾ ಚಳವಳಿಗಳು ಬೂದಿಮುಚ್ಚಿದ ಕೆಂಡದಂತಿರುವಾಗಲೇ ಅಸ್ಸಾಂನ ವಿಮೋಚನೆಗಾಗಿ ಹೋರಾಡುತ್ತಿರುವ ಉಲ್ಫಾ ಸಂಘಟನೆಯ ಮುಖ್ಯಸ್ಥರನ್ನು ಭಾರತ ದೇಶದ ಭದ್ರತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಸರ್ಕಾರವು ಬಂಧಿಸಿದೆ. ಕಳೆದ ದಶಕದಿಂದೀಚೆಗೆ ಉಲ್ಫಾ ಸಂಘಟನೆಯ ವಿಮೋಚನಾ ಹೋರಾಟದಿಂದಾಗಿ ನೂರಾರು ಜನರ ನರಮೇಧದ ಘಟನೆಗಳು ಇನ್ನು ಹಸಿಹಸಿಯಾಗಿರುವಾಗಲೇ ಅದರ ಸೇನಾನಿಗಳು ಬಂಧನಕ್ಕೊಳಗಾಗಿರುವುದು ಈ ಹೋರಾಟದ ಒಂದು ಹೊಸ ಆಯಾಮವಾಗಿದೆ.

ಪ್ರಾದೇಶಿಕ ಐಡೆಂಟಿಟಿಗಳಿಗಿಂತ ಸಾಮೂದಾಯಿಕ/ಜಾತಿ/ಪಂಗಡ/ಧಾರ್ಮಿಕ ಐಡೆಂಟಿಟಿಗಳು ಇತ್ತೀಚೆಗೆ ಪ್ರಬಲವಾಗಿ ಬೆಳೆಯುತ್ತಿರುವುದನ್ನು ನಾವು ನೋಡಬಹುದು. ಅನೇಕ ಬಾರಿ ಈ ಬಗೆಯ ಐಡೆಂಟಿಟಿಗಳ ಹೋರಾಟಗಳು ಪರಸ್ಪರ ಘರ್ಷಣೆಗಳಿಗೆ ಮತ್ತು ಆಂತರಿಕ ಕಲಹಗಳಿಗೆ ಕಾರಣವಾಗಿ ಪ್ರಜಾಪ್ರಭುತ್ವೀಯ ನೆಲೆಗಳಲ್ಲಿ ಈ ಬಗೆಯ ಐಡೆಂಟಿಟಿ ಹೋರಾಟಗಳು ಮುಂದುವರಿಯಬೇಕೆಂಬ ಆಶಯ ಮತ್ತು ಆದರ್ಶಗಳು ಅನೇಕ ಬಾರಿ ವಾಸ್ತವವಾಗಿರುವುದಿಲ್ಲವೆಂಬ ಅಂಶಗಳು ಗಮನಾರ್ಹವಾಗಿವೆ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಹಕ್ಕುಗಳಿಗಾಗಿ ಆರಂಭವಾದ ಅನೇಕ ಹೋರಾಟಗಳು ಬಹುವಿನ್ಯಾಸಗಳುಳ್ಳ ಸ್ಥಾಪಿತ ವ್ಯವಸ್ಥೆಯ ವಿವಿಧ ಮಜಲುಗಳನ್ನು ಅರ್ಥ ಮಾಡಿಕೊಳ್ಳಲು ಕೆಲವು ಬಾರಿ ಮುಗ್ಗರಿಸುವುದರಿಂದಾಗಿ ಅನೇಕ ಬಾರಿ ಅವುಗಳಿಗೆ ದಡ ಸೇರಲಾಗುವುದಿಲ್ಲ. ಈ ರೀತಿಯ ಮುಗ್ಗರಿಸುವಿಕೆಗೆ ಹೋರಾಟಗಳ ಹೊರಗಿನ ಶಕ್ತಿಗಳು ಕಾರಣವಾಗಿರುವುದರ ಜೊತೆಗೆ ಹೋರಾಟದ ಆಂತರಿಕ ವೈರುಧ್ಯರಗಳೂ ಕಾರಣವಾಗಿರುತ್ತವೆ. ಸಂಯುಕ್ತ ಭಾರತದ ಪ್ರಜಾಪ್ರಭುತ್ವೀಯ ಆದರ್ಶಗಳನ್ನು ಸ್ಥಾಪಿತ ಅಧಿಕಾರ ವಲಯಗಳು ವಶಹೋತ್ತರ ಕಾಲಘಟ್ಟದಲ್ಲಿ ಬದಿಗಿರಿಸಿದ್ದರಿಂದ ಮೂಲೆಗೊತ್ತಲ್ಪಟ್ಟ ವಲಯಗಳು ತಮ್ಮ ಅತಂತ್ರ ಸ್ಥಿತಿಗಳಿಂದ ಹೊರಬರಲು ಹಕ್ಕೊತ್ತಾಯಗಳನ್ನು ಮಾಡುತ್ತಿರುತ್ತವೆ. ಭಾರತದ ಸಂದರ್ಭದಲ್ಲಿ ಅನೇಕ ಬಾರಿ ಶೋಷಣೆಗೊಳಪಟ್ಟವರು ಹಕ್ಕೊತ್ತಾಯಗಳನ್ನು ಮಾಡುವ ಬದಲು ಶೋಷಕ ವರ್ಗವೇ ಶೋಷಣೆಗೊಳಪಟ್ಟವರಂತೆ ಹಕ್ಕೊತ್ತಾಯಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿರುವುದರಿಂದ ಅಂತಹ ಹೋರಾಟಗಳು ಜನರ ಹೋರಾಟಗಳಾಗಿ ಯಶಸ್ಸನ್ನು ಪಡೆಯಲು ವಿಫಲವಾಗುತ್ತವೆ. ಕಳೆದ ಇನ್ನೂರು ವರ್ಷಗಳ ಚರಿತ್ರೆಯನ್ನು ಅವಲೋಕಿಸುವುದಾದರೆ ಹಕ್ಕೊತ್ತಾಯದ ಬೆಳವಣಿಗೆಗಳು ಭಾರತದ ರಾಜಕೀಯ ಚರಿತ್ರೆಯಲ್ಲಿ ಹಾಸುಹೊಕ್ಕಿವೆ. ವಸಾಹತುಪೂರ್ವಕಾಲ, ವಸಾಹತುಕಾಲ, ವಸಾಹತೋತ್ತರ ಕಾಲಘಟ್ಟಗಳಲ್ಲಿ ನಡೆದ ರಾಜಕೀಯ ವಿಪ್ಲವಗಳ ಪ್ರಕ್ರಿಯೆಗಳ ಹೆಜ್ಜೆಗಳು ಬೇರೆ ಬೇರೆ ಸ್ವರೂಪಗಳಲ್ಲಿ ಇಂದಿಗೂ ಮುಂದುವರಿಯುತ್ತಿರುವುದು ಗಮನಾರ್ಹವಾಗಿದೆ.