ಪ್ರಸ್ತುತ ಲೇಖನದಲ್ಲಿ ಸ್ವತಂತ್ರ ಭಾರತದ ೫೦ ವರ್ಷಗಳ ಸಾಮಾಜಿಕ ಹಾಗೂ ರಾಜಕೀಯ ಬದುಕಿನ ಕೆಲವು ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಈ ಲೇಖನದಲ್ಲಿ  ತೋರಿಸಿಕೊಡಬಯಸುವ ಸಮಸ್ಯೆಗಳು ಹಾಗೂ ಅವುಗಳ ಕುರಿತಾದ ವಾಗ್ವಾದಗಳು ತೀರಾ  ಹೋಸದೇನೂ ಅಲ್ಲ. ಆದರೂ ಈ ಸಮಸ್ಯೆಗಳ ಮತ್ತು ಅವುಗಳ ಬಗೆಗಿನ ವಾಗ್ವಾದಗಳ ಪರಿಶೀಲನೆ ಹಾಗೂ ಅವುಗಳ ಕುರಿತ ಕ್ರಿಯಾತ್ಮಕವಾದ ಪ್ರತಿಫಲನ ಇಂದಿನ ನೈತಿಕ-ರಾಜಕೀಯ ಅಗತ್ಯವಾಗಿದೆ. ಈ ದೃಷ್ಟಿಯಿಂದ ಈ ಲೇಖನ ಪರಿಶೀಲಿಸಬಯಸುವ ಸಮಸ್ಯೆಗಳು ಹೀಗಿವೆ;

೧. ಭಾರತದ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ರೂಪುಗೊಂಡ ರಾಷ್ಟ್ರೀಯತೆಯ ತಾತ್ತ್ವಿಕತೆಗೆ ಸಂಬಧಿಸಿದ ಸಮಸ್ಯೆ.

೨.  ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯತೆಯ ಸ್ವರೂಪ ಮತ್ತು ಭಾರತದ ರಾಷ್ಟ್ರೀಯತೆಯನ್ನು ರೂಪುಗೊಳಿಸಿದ ಮೇರು ಮೌಲ್ಯಗಳು ಹಾಗೂ ಅವು ಎದುರಿಸುವ ತೊಡಕುಗಳು.

೩.  ಭಾರತದಲ್ಲಿ ದೇಶ ಹಾಗೂ ಪ್ರದೇಶಗಳ ಸಮಸ್ಯೆ.

ಆಧುನಿಕ ಭಾರತದಲ್ಲಿ ರಾಷ್ಟ್ರೀಯತೆಯ ಸಮಸ್ಯೆಯನ್ನು ಹೀಗೆ ಮುಂದಿಡಬಹುದು. ಸರಳವಾಗಿ ಹೇಳುವುದಾದರೆ ‘ರಾಷ್ಟ್ರೀಯತೆ’ ಎನ್ನುವುದು ಒಂದು ಗುರುತು ಅಥವಾ ಒಂದು ಸಮಬಿಂಬ (ಐಡೆಂಟಿಟಿ). ಚಾರಿತ್ರಿಕವಾಗಿ ನಿರ್ದಿಷ್ಟವಾದ ಸಮಾಜಗಳಲ್ಲಿ ಬದುಕುವ ಭಾರತೀಯರು ವಿಭಿನ್ನ ಬಗೆಯ ಅಸಂಖ್ಯ ಗುರುತು ಗೆರೆಗಳ ಜಾಲದಲ್ಲಿ ಸಿಲುಕಿಕೊಂಡಿರುತ್ತಾರೆ. ಈ ಗುರುತುಗಳು ತಮ್ಮನ್ನು ಪ್ರತಿಬಿಂಬಿಸುತ್ತವೆ ಅಥವಾ ಪ್ರತಿನಿಧಿಸುತ್ತವೆ ಎಂದು ಅವರು ತಿಳಿಯುತ್ತಾರೆ. ಈ ಗುರುತುಗಳಲ್ಲಿ ಕೆಲವರನ್ನು ಅವರು ಬಯಸುತ್ತಾರೆ ಅಥವಾ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುತ್ತಾರೆ.ಮತ್ತೆ ಕೆಲವು ಗುರುತುಗಳು ಆಯಾಚಿತವಾಗಿ ಅವರನ್ನು ಅಂಟಿಕೊಳ್ಳುತ್ತವೆ. ದೇಶ ಅಥವಾ ರಾಷ್ಟ್ರ ಪ್ರದೇಶ, ಜನಾಂಗ,ಸಮುದಾಯ, ಜಾತಿ, ಧರ್ಮ, ಹಾಗೂ ಭಾಷೆ ಇವೇ ಮೊದಲಾದವು ಇಂತಹ ಗುರುತುಗಳಲ್ಲಿ ಕೆಲವು. ಈ ಗುರುತುಗಳಲ್ಲಿ ಕೆಲವು ಅಮೂರ್ತವಾದವುಗಳು ಹಾಗೂ ಅಸ್ಪಷ್ಟವಾದವುಗಳು. ಮತ್ತೆ ಕೆಲವು ಸ್ಪಷ್ಟ ರೂಪವನ್ನು ಹೊಂದಿರುವ ನಿಗದಿತವಾದ ನೆಲೆಗಳಿರುವ ಗುರುತುಗಳಾಗಿವೆ.

ಮೇಲೆ ಸೂಚಿಸಿದ ಹತ್ತು ಹಲವು ಗುರುತುಗಳನ್ನು ನಾವು ಸ್ವತಂತ್ರ ಎಂದು ಪರಿಗಣಿಸಸುವಂತಿಲ್ಲ. ಅವು ಸ್ವೇಚ್ಛೆಯಿಂದ ಗಗನದಲ್ಲಿ ವಿಹರಿಸುವುದಿಲ್ಲ. ಬದಲಾಗಿ ನಿರ್ದಿಷ್ಟ ಸಮಾಜಗಳ ಸನ್ನಿವೇಶ ಹಾಗೂ ಸಂದರ್ಭಗಳಲ್ಲಿ, ಗುರುತಿಸಬಹುದಾದ ಶಕ್ತಿ ಹಾಗೂ ಹಿತಾಸಕ್ತಿಗಳ ಮೂಲಕ ಅವು ವಾಙ್ಮಯಗಳಲ್ಲಿ ನಿರೂಪಿಸಲ್ಪಡುತ್ತವೆ. ಆದ್ದರಿಂದಲೇ ಈ ಗುರುತುಗಳು ಎಲ್ಲ ಕಾಲದಲ್ಲಿಯೂ ಒಂದೇ ರಿತೀಯಾಗಿ ಮಾನ್ಯತೆಯನ್ನು ಪಡೆಯುವುದಿಲ್ಲ. ಸಂದರ್ಭಾನುಸಾರವಾಗಿ ಕೆಲವೊಮ್ಮೆ ಕೆಲವು ಗುರುತುಗಳು ಮುಂದಕ್ಕೆ ಬರುತ್ತವೆ. ಮತ್ತೆ ಕೆಲವು ಗುರುತುಗಳು ಹಿಂದಕ್ಕೆ ಸರಿಯುತ್ತವೆ. ಒಟ್ಟಿನಲ್ಲಿ  ಈ ಪ್ರಕ್ರಿಯೆ ನಿರಂತರವಾಗಿ ಪುನರಾವರ್ತನೆಗೊಳ್ಳುತ್ತವೆ. ತತ್ಪರಿಣಾಮವಾಗಿ ಈ ಗುರುತುಗಳು ಸಂಘಟನೆ ಮತ್ತು ಮರು ಸಂಘಟನೆ ನಡೆಯುತ್ತಲೇ ಇರುತ್ತದೆ.

ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ರಾಷ್ಟ್ರ ಅಥವಾ ರಾಷ್ಟ್ರೀಯತೆಯ ಪ್ರಶ್ನೆಯನ್ನು ಭಾರತದ ಸಂದರ್ಭದಲ್ಲಿ ಪರೀಕ್ಷಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ಮೊದಲೇ ತಿಳಿಸಿದಂತೆ ರಾಷ್ಟ್ರ ಅಥವಾ ರಾಷ್ಟ್ರೀಯತೆ ಎನ್ನುವುದು ನಮ್ಮೊಂದಿಗೆ ಇರುವ, ನಮ್ಮ ಬದುಕಿನಲ್ಲಿ ಇಂದು ಹಾಸು ಹೊಕ್ಕಂತಿರುವ ನಮ್ಮ ಅಸಂಖ್ಯ ಗುರುತುಗಳಲ್ಲಿ ಒಂದು. ಅದು ಮೂಲತಃ ಒಂದು ಸಮುದಾಯದ ಕಲ್ಪನೆ. ‘ಇದು ಭಾರತ’, ‘ನಾವೆಲ್ಲ ಭಾರತೀಯರು’ಎನ್ನುವ ಮಾತುಗಳ ಹಿಂದೆ ಒಂದು ಅಮೂರ್ತವಾದ, ಆದರೆ ಚಾರಿತ್ರಿಕವಾಗಿ ರೂಪುಗೊಂಡ ಸಮುದಾಯದ ಕಲ್ಪನೆ ಇದೆ. ಈ ಕಾರಣದಿಂದಲೇ ಬೆನೆಡಿಕ್ಟ್ ಆಂಡರ್ ಸನ್ ರಾಷ್ಟ್ರೀಯತೆಯ ಕುರಿತಾದ ತನ್ನ ಗ್ರಂಥಕ್ಕೆ ‘ಇಮೇಜಿನ್ಡ್ ಕಮ್ಯೂನಿಟೀಸ್’ (ಕಾಲ್ಪನಿಕ ಸಮುದಾಯಗಳು) ಎನ್ನುವ ಹೆಸರನ್ನು ಕೊಟ್ಟಿದ್ದಾನೆ. ನಮ್ಮ ಉಳಿದ ಇತರ ಗುರುತುಗಳಿಂದ ರಾಷ್ಟ್ರ,ಅಥವಾ ದೇಶ ಎನ್ನುವ ಗುರುತು ಭಾವನಾತ್ಮಕ ನೆಲೆಯಲ್ಲಿ ಕೆಲಸ ಮಾಡುವಂತಹುದು. ರಾಷ್ಟ್ರೀಯತೆಯ ಈ ಭಾವನಾತ್ಮಕ ಆಯಾಮಕ್ಕೆ ಬಹುಮಟ್ಟಿಗೆ ಒಂದು ಬಗೆಯ ಚಾರಿತ್ರಿಕ ಸ್ಮೃತಿಯ ಅಗತ್ಯವಿದೆ. ಸುಖ ದುಃಖಗಳನ್ನು ಸಮನಾಗಿ ಹಂಚಿಕೊಂಡ, ಸಮಾನ ವೈರಿಯ ವಿರುದ್ಧ ದೀರ್ಘಕಾಲದ ಹೋರಾಟ ನಡೆಸಿದ ಚಾರಿತ್ರಿಕ ನೆನಪು ಈ ರಾಷ್ಟ್ರೀಯತೆಯ ಭಾವನಾತ್ಮಕತೆಗೆ ಒಂದು ತಳಹದಿಯನ್ನು ಒದಗಿಸುತ್ತದೆ.

‘ರಾಷ್ಟ್ರೀಯತೆ’ ಒಂದು ಪರಿಕಲ್ಪನೆಯಾಗಿ ಹಾಗೂ ಒಂದು ಆಂದೋಲನವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ರೂಪುಗೊಂಡಂತಹ ಒಂದು ವಿದ್ಯಮಾನವಾಗಿದೆ. ಅದು ಯೂರೋಪಿನಲ್ಲಿ ರೂಪುಗೊಂಡು ಇತರ ಹಲವಾರು ವಿದ್ಯಮಾನಗಳ ಜೊತೆಗೆ ರಾಜಕೀಯ ಹಾಗೂ ಮತೀಯ ಸಂಬಂಧಗಳನ್ನು ಹೊಂದಿದೆ. ಆದ್ದರಿಂದಲೇ ಒಂದು ಪರಿಕಲ್ಪನೆಯಾಗಿ ಅದರ ಚಾರಿತ್ರಿಕ ಬೆಳವಣಿಗೆಗೆ ಕೆಲವು ನಿರ್ದಿಷ್ಟವಾದ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಈ ಕಾರಣದಿಂದಲೇ ಸಮಾನ ಚರಿತ್ರೆ, ಸಮಾನ ಜನಾಂಗೀಯತೆ, ಸಮಾನ ಧರ್ಮ, ಸಮಾನ ಭಾಷೆ, ಸಮಾನ ಸಂಸ್ಕೃತಿ, ಇವೇ ಮೊದಲಾದವುಗಳನ್ನು ರಾಷ್ಟ್ರೀಯತೆಯ ಬೆಳವಣಿಗೆಗೆ ಅಗತ್ಯವಿರುವ ಅಂಶಗಳೆಂದು ಗುರುತಿಸಲಾಗಿದೆ. ಅಲ್ಲದೆ ಚರ್ಚ್ ಮತ್ತು ಅರಸೊತ್ತಿಗೆಯ ನಡುವಿನ ಘರ್ಷಣೆ, ಪುನರುಜ್ಜೀವನ (ರಿನೈಸೆನ್ಸ್), ವೈಜ್ಞಾನಿಕ ಕ್ರಾಂತಿ,ಬಂಡವಾಳವಾದದ ಬೆಳವಣಿಗೆಗೆ, ಜ್ಞಾನಯು (ಎನ್ ಲೈಟನ್  ಮೆಂಟ್) ಮೊದಲಾದ ಆಧುನಿಕ ಚಾರಿತ್ರಿಕ ಬೆಳವಣಿಗೆಗಳು ಯೂರೋಪಿನಲ್ಲಿ ಸೃಷ್ಟಿಸಿದ ಮೌಲ್ಯಗಳು ರಾಷ್ಟ್ರೀಯತೆಯ ಮೌಲ್ಯಗಳು ಆಗಿಬಿಟ್ಟಿವೆ. ಆದ್ದರಿಂದಲೇ ಪ್ರಜಾಪ್ರಭುತ್ವದ ಮತ್ತು ಲೌಕಿಕವಾದ (ಸೆಕ್ಯುಲರಿಸಂ)ಗಳನ್ನು ರಾಷ್ಟ್ರೀಯತೆಯಿಂದ ಬೇರ್ಪಡಿಸಲಾಗದ ಆದರ್ಶಗಳು ಎಂದು ತಿಳಿಯಲಾಗಿದೆ.

ಹೀಗೆ ಯೂರೋಪಿನಲ್ಲಿ ಹದಿನಾರನೆಯ ಶತಮಾನದಿಂದೀಚೆಗೆ ಸಂಭವಿಸಿದ ವಿಭಿನ್ನ ಪ್ರಕೃತಿಯ ಪ್ರಗತಿಶೀಲ ವಿದ್ಯಮಾನಗಳು ರಾಷ್ಟ್ರೀಯತೆಯ ಪರಿಕಲ್ಪನೆಗೆ ಒಂದು ನಿರ್ದಿಷ್ಟ ಅರ್ಥವಂತಿಕೆಯನ್ನು ಒದಗಿಸಿಕೊಡುವಲ್ಲಿ ಸಹಾಯಕವಾದವು. ಇದರಿಂದಾಗಿ ಪಾಶ್ಚಿಮಾತ್ಯ ಸಮಾಜಗಳಲ್ಲಿ ರಾಷ್ಟ್ರೀಯತೆಯ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ, ಅದು ಒಳಗೊಳ್ಳಬೇಕಾದ ಮೌಲ್ಯಗಳ ಬಗೆಗೆ ಅಥವಾ ಅದರ ತಾತ್ವಿಕ ರಾಜಕೀಯ ಸ್ವರೂಪದ ಕುರಿತಂತೆ ಬುಡವಲ್ಲಾಡಿಸುವ ತಕರಾರುಗಳು ಹೆಚ್ಚು ಕಮ್ಮಿ ಇಲ್ಲವೆಂದೇ ಹೇಳಬಹುದು.

ಇದಕ್ಕೆ ವ್ಯತಿರಿಕ್ತವಾಗಿ ಧಿರ್ಘಕಾಲದ ವಸಾಹತುಶಾಹಿ ಆಳ್ವಿಕೆಯ ಚಾರಿತ್ರಿಕ ಅನುಭವ ಹೊಂದಿರುವ ಭಾರತದಂತಹ ಪಶ್ಚಿಮೇತರ ಸಮಾಜಗಳಲ್ಲಿ ರಾಷ್ಟ್ರೀಯತೆಯ ಪ್ರಶ್ನೆ ಅನೇಕಾನೇಕ ಅರ್ಥ ನಿರೂಪಣೆಗಳ ಸೆಲೆಯಾಗಿ, ವಿಭಿನ್ನ ಬಗೆಯ ವಾದ ವಾಗ್ವಾದಗಳು ನೆಲೆಬೀಡಾಗಿ, ಒಂದು ಜಟಿಲವಾದ ಸಮಸ್ಯೆಯಾಗಿ ನಮ್ಮನ್ನಿಂದು ಕಾಡುತ್ತಿದೆ. ಭಾರತದಂತಹ ತೃತೀಯ ಜಗತ್ತಿನ ಸಮಾಜಗಳಲ್ಲಿ ರಾಷ್ಟ್ರೀಯತೆಯ ಸಮಸ್ಯೆಯ ಜಟಿಲತೆಗೆ ಕಾರಣಗಳನ್ನು ಹೀಗೆ ಗುರುತಿಸಬಹುದು;

೧. ವಸಾಹತು ಆಳ್ವಿಕೆಯ ಸಾಂಸ್ಕೃತಿಕ ಪ್ರಭುತ್ವದಿಂದಾಗಿ ಸೃಷ್ಟಿಯಾದ ಬೌದ್ಧಿಕ ಅಸಹಾಯಕತೆಯ ಪರಿಸ್ಥಿತಿ.

೨. ವಸಾಹತುಶಾಹಿಯ ಮಧ್ಯಸ್ಥಿಕೆಯಿಂದಾಗಿ ಓರೆಕೋರೆಯಾಗಿ ನಮ್ಮನ್ನು ತಲುಪಿದ ಆಧುನಿಕ ಪಾಶ್ಚಿಮಾತ್ಯ ವಿಚಾರಗಳು.

೩. ಪಶ್ಚಿಮದಿಂದ ಮೂಲಭೂತವಾಗಿ ಭಿನ್ನವಾದ ನಮ್ಮ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಿಸ್ಥಿತಿ.

ವಸಾಹತುಶಾಹಿ ಒಂದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಆಳ್ವಿಕೆ ಮಾತ್ರವಾಗಿರದೆ ಅದು ಮೂಲತಃ ಒಂದು ಬೌದ್ಧಿಕ ಹಾಗೂ ಸಾಂಸ್ಕೃತಿಕ ಪ್ರಭುತ್ವವಾಗಿತ್ತು. ವಸಾಹತುಶಾಹಿಯ ಸಂಕೀರ್ಣ ಸಾಂಸ್ಕೃತಿಕ ಪ್ರಭತ್ವದ  ಸ್ವರೂಪದ ಕುರಿತಂತೆ ಅನೇಕ ಬಗೆಯ ಪಾಂಡಿತ್ಯಪೂರ್ಣ ಅಧ್ಯಯನಗಳು ನಡೆದಿದ್ದು, ಈ ಅಧ್ಯಯನಗಳು ವಸಾಹತುಶಾಹಿಯ ಕುರಿತು ನಮ್ಮ ಅರಿವಿನ ವ್ಯಾಪ್ತಿಯನ್ನು ಹೆಚ್ಚಿಸಿವೆ. ಇದರಿಂದಾಗಿ ವಸಾಹತುಶಾಹಿಯ ಬಗೆಗಿನ ನಮ್ಮ ಸಮಕಾಲೀನ ವಾಗ್ವಾದ ಅತ್ಯಂತ ಪ್ರೌಢವಾಗಿದ್ದು ಅವು ವಸಾಹತುಶಾಹಿಯ ಕುರಿತು ದಂಗುಬಡಿಸುವ ಕೆಲವು ಸತ್ಯಗಳನ್ನು ನಮ್ಮ ಮುಂದೆ ಇರಿಸಿವೆ. ವಸಾಹತುಶಾಹಿಯ ಕುರಿತು ನಡೆದ ವಿಭಿನ್ನ ಸ್ವರೂಪದ ಅಧ್ಯಯನಗಳ ಕುರಿತು ಹಾಗೂ ಅವುಗಳು ತೋರಿಸಿಕೊಡುವ ದರ್ಶನಗಳ ಕುರಿತು ವಿಸ್ತಾರವಾಗಿ ಚರ್ಚಿಸುವುದ ಈ ಲೇಖನದ ವ್ಯಾಪ್ತಿಗೆ ಹೊರತಾದದ್ದಾದರೂ ಈ ಸಂಬಂಧವಾಗಿ ಒಂದೆರಡು ಬಹು ಮುಖ್ಯವಾದ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ.

ವಸಾಹತುಶಾಹಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಲ್ಲಿ ಒಂದು ಪ್ರಶ್ನೆಯನ್ನು ಪ್ರಮುಖವಾಗಿ ಎದುರಿಸುತ್ತೇವೆ. ಅದು ಯಾವುದೆಂದರೆ ಪಶ್ಚಿಮದ ಕೆಲವು ಸಮಾಜಗಳಿಗೆ ಪೂರ್ವದ, ವಿಶೇಷವಾಗಿ ತೃತೀಯ ಜಗತ್ತಿನ ಕೆಲವು ಸಮಾಜಗಳ ಮೇಲೆ ದೀರ್ಘಕಾಲದ, ಈ ಹಿಂದೆಂದೂ ಕಂಡು ಕೇಳರಿಯದ ಯಜಮಾನಿಕೆಯನ್ನು ಹೇರಲು ಸಾಧ್ಯವಾಗಿದ್ದು ಹೇಗೆ ಎನ್ನುವುದು. ವಸಾಹತುಶಾಹಿಯನ್ನು ಸರಿಸಾಟಿಯಿಲ್ಲದ ಒಂದು ಚಾರಿತ್ರಿಕ ವಿದ್ಯಮಾನ ಎಂದು ಪರಿಗಣಿಸಲಾಗದ ಪಕ್ಷದಲ್ಲಿ ಅದರ ಉಗಮ ಮತ್ತು ಬೆಳವಣಿಗೆಯ ಸ್ವರೂಪವನ್ನು ಒಂದು ವಿಸ್ತಾರವಾದ ನಕಾಶೆಯಲ್ಲಿ ಗುರುತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಡ್ವರ್ಡ್‌ ಸೈದ್‌ ಅವರ “ಓರಿಯಂಟಲಿಸಂ’’ ಎನ್ನುವ ಸುಪ್ರಸಿದ್ಧ ಪ್ರಮೇಯ ನಮ್ಮ ಸಹಾಯಕ್ಕೆ ಒದಗಿ ಬರುತ್ತದೆ.

ಎಡ್ವರ್ಡ್‌ ಸೈದ್‌ ತನ್ನ ಓರಿಯಂಟಲಿಸಂ ಎನ್ನುವ ಮಹಾಪ್ರಬಂಧದಲ್ಲಿ ಗುರುತಿಸುವ, ವಿಶ್ಲೇಷಿಸುವ ಹಾಗೂ ಬಣ್ಣಿಸುವ ಸಂಗತಿಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಒಂದು ಅಂಶವನ್ನು ಮೊದಲಿಗೆ ಸ್ಪಷ್ಟಪಡಿಸಬೇಕಾಗುತ್ತದೆ. ಅದೇನೆಂದರೆ ಸೈದ್‌ನ ಓರಿಯಂಟಲಿಸಂ ವಸಾಹತುಶಾಹಿಯ ಕುರಿತು ಇರುವಂತಹುದಲ್ಲ ಅಥವಾ ವಸಾಹತುಶಾಹಿ ಎನ್ನುವ ವಿದ್ಯಮಾನವನ್ನು ವಿಶ್ಲೇಷಿಸುವುದು ಸೈದ್‌ನ ಪ್ರಬಂಧದ ಉದ್ದೇಶವಲ್ಲ. ಆದರೆ ವಸಾಹತುಶಾಹಿಯ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಅದು ಕೆಲವು ಪೌರಾತ್ಯ ದೇಶಗಳ ಮೇಲೆ ಸಾಧಿಸಿದ ಬೌದ್ಧಿಕ ಯುಮಾನಿಕೆಯ ಗಾಢತೆಯನ್ನು ಅರಿಯುವಲ್ಲಿ ಓರಿಯಂಟಲಿಸಂ ನಮ್ಮ ನೆರವಿಗೆ ಬರುತ್ತದೆ.

ಸ್ಥೂಲವಾಗಿ ಹದಿನಾರನೆಯ ಶತಮಾನದಿಂದಿಚೇಗೆ ಪಶ್ಚಿಮ ತನ್ನ ‘ಸ್ವ’ ನಿರೂಪಣೆಯ ನಿಮಿತ್ತವಾಗಿ ತಾನಲ್ಲದ ಪೂರ್ವವನ್ನು ತನಗೆ ವ್ಯತಿರಿಕ್ತವಾಗಿ ತನ್ನ ಪ್ರತಿಬಿಂಬವೆಂಬಂತೆ ಬಣ್ಣಿಸಲು ಉತ್ಪಾದಿಸಿದ ವಿಭಿನ್ನ ಪ್ರಕೃತಿಯ ವಾಙ್ಮಯಗಳ ಮಹಾಪೂರವನ್ನು ಎಡ್ವರ್ಡ್‌ ಸೈದ್‌ ಓರಿಯಂಟಲಿಸಂ ಎಂದು ಕರೆಯುತ್ತಾನೆ. ಸೈದ್ ಓರಿಯಂಟಲಿಸಂ ಎಂದು ಕರೆಯುವ ಪೂರ್ವದ ಬಗೆಗೆ ಪಶ್ಚಿಮ ಕಳೆದ ಕೆಲವು ಶತಮಾನಗಳಲ್ಲಿ ಸೃಷ್ಟಿಸಿದ ವಾಙ್ಮಯ ಪ್ರಪಂಚ ಪೂರ್ವವನ್ನು ನಿರೂಪಿಸುತ್ತಾ, ಅದರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ವಿಶ್ಲೇಷಣೆಯನ್ನು ಮಾಡುತ್ತಾ, ಅದನ್ನು ನಿರ್ವಹಿಸುತ್ತಾ, ಅದರ ಕುರಿತು ಹೇಳಿಕೆಗಳನ್ನು ಕೊಡುತ್ತಾ, ತಾನು ನಿಭಾಯಿಸಬಹುದಾದ ರೀತಿಯಲ್ಲಿ ಪೂರ್ವವನ್ನು ನಿರ್ಮಿಸಿದೆ. ಪೂರ್ವದ ಕುರಿತಾದ ಪಶ್ಚಿಮದ ಜ್ಞಾನೋತ್ಪಾದನೆ ಮತ್ತು ನಿರ್ಮಾಣ ಪೂರ್ವದ ಕುರಿತು ಕೆಲವು ನಿರ್ದಿಷ್ಟವಾದ ಸ್ಟೀರಿಯೋಟೈಪ್‌ಚಿತ್ರಗಳನ್ನು ಸೃಷ್ಟಿಸಿ ಆ ಚಿತ್ರಗಳಲ್ಲಿ ಪೂರ್ವವು ತನ್ನನ್ನು ಸಿಲುಕಿಸಿಕೊಳ್ಳುವಂತೆ ಮಾಡಿದೆ. ಒಟ್ಟಿನಲ್ಲಿ ಇವೆಲ್ಲಾ ಒಂದು ಪೂರ್ವನಿಶ್ಚಿತವಾದ ಯೋಜನೆಯಂತೆ ನಡೆದ ಹಾಗೇ ಕಾಣುತ್ತದೆ. ಸೈದ್‌ನ ಪ್ರಕಾರ ಓರಿಯಂಟಲಿಸಂ ಪೂರ್ವದ ಬಗ್ಗೆ ಪಶ್ಚಿಮದ ಒಂದು ಪ್ರಜ್ಞಾಪೂರ್ವಕ ಮಸಲತ್ತು ಅಲ್ಲದೇ ಇದ್ದರೂ ಗುರುತಿಸಬಹುದಾದ ಒಂದು ತರ್ಕ ಇದರಲ್ಲಿ ಕಾಣುತ್ತದೆ. ಅದೇನೆಂದರೆ ಜ್ಞಾನವೇ ಶಕ್ತಿ (ನಾಲೆಡ್ಜ್‌ಈಸ್‌ಪವರ್‌) ಎನ್ನುವ ತಿಳಿವು ಪಶ್ಚಿಮ ತನ್ನನ್ನು ಅರಿಯುವ ನೆಪದಲ್ಲಿ ತಾನಲ್ಲದ ಪೂರ್ವವನ್ನು ಅರಿಯುವ ಹಾಗೂ ಅರಸುವ ಕ್ರಿಯೆಯಲ್ಲಿ ಪೂರ್ವದ ಬಗೆಗೆ ಜ್ಞಾನವನ್ನು ಉತ್ಪಾದಿಸುತ್ತಾ ಆ ಜ್ಞಾನದ ಆಧಾರದಲ್ಲಿ ಪೂರ್ವದ ಮೇಲೆ ನಿಯಂತ್ರಣವನ್ನು ಸಾಧಿಸಿತು. ಪಶ್ಚಿಮ ಪೂರ್ವದ ಮೇಲೆ ಜ್ಞಾನೋತ್ಪಾದನೆಯ ನೆಲೆಯಲ್ಲಿ ಸಾಧಿಸಿದ ನಿಯಂತ್ರಣದ ಅಂತಿಮ ಹಾಗೂ ಅತ್ಯಂತಿಕ ಫಲಿತಾಂಶವೇ ವಸಾಹತುಶಾಹಿ.

ಪೂರ್ವದ ಕುರಿತು ಕಳೆದ ಕೆಲವು ಶತಮಾನಗಳಲ್ಲಿ ಪಶ್ಚಿಮ ಉತ್ಪಾದಿಸಿದ ಈ ಓರಿಯಂಟಲಿಸ್ಟ್‌ ಜ್ಞಾನದಲ್ಲಿ ಹಲವು ಪ್ರಕಾರಗಳು ಇವೆಯಾದರೂ ಅವುಗಳಲ್ಲಿ ರಾಷ್ಟ್ರೀಯತೆಯ ಬಗೆಗಿನ ಪ್ರಸ್ತುತ ಚರ್ಚೆಗೆ ಅತ್ಯಂತ ಮುಖ್ಯವಾದದ್ದೆಂದರೆ ಪಶ್ಚಿಮ ಪೂರ್ವದ ಕುರಿತು ಒದಗಿಸಿದ ಇತಿಹಾಸ ಕಥನ (ಹಿಸ್ಟೊರಿಯಾಗ್ರಫಿ). ಯಾಕೆಂದರೆ ಉಳಿದೆಲ್ಲಾ ನಿರೂಪಣೆಗಳಿಗಿಂತ ಇತಿಹಾಸ ನಿರೂಪಣೆ ಹೆಚ್ಚು ವ್ಯವಸ್ಥಿತವಾಗಿ ನಡೆಯುವಂತಹುದು ಮತ್ತು ಅದು ಸಮಾಜ ನಿರ್ಮಾಣದಲ್ಲಿ ಅತ್ಯಂತ ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ.

ಪೂರ್ವದ ಕುರಿತು ಪಶ್ಚಿಮ ಉತ್ಪಾದಿಸಿದ ಇತಿಹಾಸ ಕಥನವನ್ನು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ಓರಿಯಂಟಲ್‌ಇತಿಹಾಸ ಕಥನ ಹಾಗೂ ಎರಡನೆಯದು ಯುಟಿಲಿಟೇರಿಯನ್‌ ಅಥವಾ ಕೇಂಬ್ರಿಡ್ಜ್‌ ಇತಿಹಾಸ ಕಥನ.

ಓರಿಯಂಟಲ್‌ ಇತಿಹಾಸ ಕಥನವು ಯೂರೋಪಿನಲ್ಲಿ ಬಂಡವಾಳಶಾಹಿಯ ಬೆಳವಣಿಗೆಯಿಂದಾಗಿ ಉಂಟಾದ ಸಾಮಾಜಿಕ ಹಾಗೂ ಆರ್ಥಿಕ ಏರುಪೇರುಗಳಿಂದಾಗಿ  ಆತಂಕಗೊಂಡ ಕೆಲವು ಐರೋಪ್ಯ ಪಂಡಿತರು ಯೂರೋಪಿಗಿಂತ ಭಿನ್ನವಾದ ಬದುಕೊಂದನ್ನು ಅನ್ವೇಷಿಸುವ ಪ್ರಯತ್ನಗಳ್ಲಲಿ ಉತ್ಪನ್ನಗೊಂಡ ಪೂರ್ವದ ಬಗೆಗಿನ ಇತಿಹಾಸ ಕಥನ. ಪೂರ್ವವನ್ನು ಪಶ್ಚಿಮಕ್ಕಿಂತ ವ್ಯತಿರಿಕ್ತವೆಂಬಂತೆ ಅರಸ ಹೊರಟ ಯೂರೋಪಿನ ಈ ಪಂಡಿತರು ತಮ್ಮ ಊಹಾಪೋಹಗಳಿಗೆ ಅನುಗುಣವಾಗಿಯೇ ಪೂರ್ವವನ್ನು ಗುರುತಿಸಿದರು. ಅಂತೆಯೇ ಅವರಿಗೆ ಕಲುಷಿತ ಯೂರೋಪಿಗೆ ಪ್ರತಿಯಾಗಿ ಪೂರ್ವ ಪರಿಶುದ್ಧವಾಗಿ, ವೈಚಾರಿಕ ಯೂರೋಪಿಗೆ ಬದಲಾಗಿ ಪೂರ್ವ ಭಾವನಾತ್ಮಕವಾಗಿ, ವಿಷಯಾಸಕ್ತ ಯೂರೋಪಿಗೆ ವಿರುದ್ಧವಾಗಿ ಪೂರ್ವ ಆಧ್ಯಾತ್ಮಿಕವಾಗಿ ಗೋಚರಿಸಿತು. ಹೀಗಾಗಿ ಪೂರ್ವದ ಬಗೆಗಿನ ಈ ಪಂಡಿತರ ಕಥೆ ಕಟ್ಟುವಿಕೆಯಲ್ಲಿ ರಂಗುರಂಗಿನ ಅತಿಶಯೋಕ್ತಿಗಳು ಹೇರಳವಾಗಿ ಕಾಣಸಿಗುತ್ತದೆ.

ಓರಿಯಂಟಲ್‌ ಇತಿಹಾಸ ಕಥನ ಪೂರ್ವದ ಬಗೆಗೆ ಒದಗಿಸಿದ ದರ್ಶನಕ್ಕಿಂತ ಕೆಲವು ಅಂಶಗಳಲ್ಲಿ ಭಿನ್ನವಾದದ್ದು ಯುಟಿಲಿಟೇರಿಯನ್‌ ಅಥವಾ ಕೇಂಬ್ರಿಜ್‌ ಇತಿಹಾಸ ಕಥನ. ಒಂದು ರೀತಿಯಲ್ಲಿ ಕೇಂಬ್ರಿಡ್ಜ್‌ ಇತಿಹಾಸ ಕಥನ ನೇರವಾಗಿ ವಸಾಹತುಶಾಹಿಯ ಸೇವಾವೃತ್ತಿಯಲ್ಲಿ ನಿರತವಾದ, ವಸಾಹತುಶಾಹಿ ಪ್ರಭುತ್ವವನ್ನು ನ್ಯಾಯಸಮ್ಮತಗೊಳಿಸುವ ಉದ್ದೇಶದಿಂದ ಹೊರಹೊಮ್ಮಿದ ವಾಙ್ಮಯವೆಂದೇ ಹೇಳಬಹುದು. ಓರಿಯಂಟಲ್‌ ಇತಿಹಾಸ ಕಥನದಂತೆಯೇ ಕೇಂಬ್ರಿಡ್ಜ್‌ಇತಿಹಾಸ ಕಥನ ಪೂರ್ವವನ್ನು ಪಶ್ಚಿಮಕ್ಕೆ ವ್ಯತಿರಿಕ್ತವಾಗಿ ಚಿತ್ರಿಸುತ್ತದೆಯಾದರೂ ಈ ಚಿತ್ರಣದಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಮಾತ್ರವಲ್ಲ ಈ ವ್ಯತ್ಯಾಸಗಳು ರಾಜಕೀಯವಾಗಿ ಬೇರೆ ರೀತಿಯ ನಿಲುವುಗಳನ್ನು ಪ್ರಚೋದಿಸುತ್ತವೆ. ಪೂರ್ವವನ್ನು ಅನಾಗರಿಕ ಹಾಗೂ ಬರ್ಬರ ಎಂದು ಚಿತ್ರಿಸುತ್ತದೆಯಾದರೂ ಈ ಚಿತ್ರಣದಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳಿವೆ: ಮಾತ್ರವಲ್ಲ, ಈ ವ್ಯತ್ಯಾಸಗಳು ರಾಜಕೀಯವಾಗಿ ಬೇರೆ ರೀತಿಯ ನಿಲುವುಗಳನ್ನು ಪ್ರಚೋದಿಸುತ್ತವೆ. ಪೂರ್ವವನ್ನು ಅನಾಗರಿಕ ಹಾಗೂ ಬರ್ಬರ ಎಂದು ಚಿತ್ರಿಸುವ ಕೇಂಬ್ರಿಡ್ಜ್‌ ಇತಿಹಾಸ ನಿರೂಪಣೆ ಪೌರಾತ್ಯ ಸಮಾಜಗಳಲ್ಲಿ ವಸಾಹತುಶಾಹಿಯನ್ನು ಅನಾಗರಿಕ ಸಮಾಜವನ್ನು ನಾಗರಿಕಗೊಳಿಸುವ, ಅವೈಚಾರಿಕ ಬದುಕನ್ನು ವೈಚಾರಿಕಗೊಳಿಸುವ, ಜಡ್ಡುಕಟ್ಟಿದ ಜೀವನ ಕ್ರಮವನ್ನು ಚಲನಶೀಲಗೊಳಿಸುವ, ಸಾಂಪ್ರದಾಯಿಕ ಮೌಢ್ಯದಿಂದ ಸೆರೆಹಿಡಿಯಲ್ಪಟ್ಟ ಜನಸಮುದಾಯಗಳಿಗೆ ಆಧುನಿಕ ಜ್ಞಾನೋದಯದ ವಿಮೋಚನೆಯ ದಾರಿಯನ್ನು ತೋರಿಸುವ, ಶ್ವೇತವರ್ಣಿಯನ ಜವಾಬ್ದಾರಿಯನ್ನು ನಿರ್ವಹಿಸುವ ಪ್ರಗತಿಶೀಲ ವಿದ್ಯಮಾನವೆಂದು ಬಣ್ಣಿಸುತ್ತದೆ. ಜೇಮ್ಸ್‌ಮಿಲ್‌ನ ಹಿಸ್ಟರಿ ಆಫ್‌ ಇಂಡಿಯಾ ಈ ಬಗೆಯ ಇತಿಹಾಸ ನಿರೂಪಣೆಗೆ ಒಂದು ಅತ್ಯುತ್ತಮ ನಿದರ್ಶನ. ಭಾರತದ ಚರಿತ್ರೆಯನ್ನು ‘ಪ್ರಾಚೀನ ಹಿಂದೂ,’ ‘ಮಧ್ಯಕಾಲೀನ ಮುಸ್ಲಿಮ್‌’ ಮತ್ತು ‘ಆಧುನಿಕ ಬ್ರಿಟಿಷ್‌’ ಎನ್ನುವ ಕಾಲ ವಿಂಗಡನೆಗೆ ಒಳಪಡಿಸುವ ಜೇಮ್ಸ್‌ಮಿಲ್‌ಬ್ರಿಟಿಷ್‌ಇಂಡಿಯಾವನ್ನು ಆಧುನಿಕ ಜ್ಞಾನೋದಯದ ಕಾಲವೆಂದೇ ಬಣ್ಣಿಸುತ್ತಾನೆ.

ಭಾರತದ ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ರೂಪುಗೊಂಡ ರಾಷ್ಟ್ರೀಯವಾದಿ ಇತಿಹಾಸ ನಿರೂಪಣೆ (ನ್ಯಾಷನಲಿಸ್ಟ್‌ಹಿಸ್ಟೋರಿಯೋಗ್ರಫಿ) ಭಾರತವನ್ನು ಒಂದು ರಾಷ್ಟ್ರವಾಗಿ ಪರಿಕಲ್ಪಸುವ ಹಾಗೂ ಕಟ್ಟುವ ಉದ್ದೇಶವನ್ನು ಇರಿಸಿಕೊಂಡಿತ್ತಾದರೂ ಈ ಉದ್ದೇಶ ನಿರ್ವಹಣೆಗೆ ಅದು ಬಳಸಿಕೊಂಡ ಬೌದ್ಧಿಕ ಪರಿಕರಗಳು ಹಾಗೂ ಸಂಪನ್ಮೂಲಗಳು ಮೇಲೆ ಸೂಚಿಸಿದ ಇತಿಹಾಸ ನಿರೂಪಣೆಗಳಿಂದಲೇ ಬಂದಿವೆ. ಭವ್ಯ ಭಾರತದ ಇತಿಹಾಸ ನಿರೂಪಣೆಗೆ ಅಗತ್ಯವಿರುವ ಎಲ್ಲ ಪರಿಕರಗಳನ್ನು ಈ ರಾಷ್ಟ್ರೀಯವಾದಿ ಇತಿಹಾಸಕಾರರಿಗೆ ಓರಿಯಂಟಲ್‌ಇತಿಹಾಸ ನಿರೂಪಣೆ ಒದಗಿಸಿತು. ಅಂತೆಯೇ  ಕೇಂಬ್ರೀಜ್‌ ಇತಿಹಾಸ ನಿರೂಪಣೆ ಅವರಿಗೆ ಚರಿತ್ರೆಯ ಕಾಲವಿಂಗಡನೆಯ ವಿಧಾನವನ್ನು ಬೋಧಿಸಿತು. ಒಟ್ಟಿನಲ್ಲಿ ರಾಷ್ಟ್ರೀಯತೆಯ ಕಲ್ಪನೆ, ನಿರೂಪಣೆ ಹಾಗೂ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ‘ಇತಿಹಾಸ’ ಸಂಬಂಧಿ ಚಟುವಟಿಕೆ ಭಾರತದಂತಹ ವಸಾಹತು ಆಳ್ವಿಕೆಗೆ ಗುರಿಯಾದ ಸಮಾಜಗಳಲ್ಲಿ ಅತ್ಯಂತ ಸಮಸ್ಯಾತ್ಮಕವಾಗಿ ಕಂಡುಬರುತ್ತದೆ.

ಇತಿಹಾಸ ನಿರೂಪಣೆಗೆ ಸಂಬಂಧಿಸಿದ ಮೇಲಿನ ನಿರೂಪಣೆಯನ್ನು ವಸಾಹತು ಆಳ್ವಿಕೆಗೆ ಗುರಿಯಾದ ಭಾರತದಂತಹ ಪೌರಾತ್ಯ ಸಮಾಜಗಳಲ್ಲಿ ರಾಷ್ಟ್ರೀಯತೆಯ ಪ್ರಶ್ನೆಯನ್ನು ಸಮಸ್ಯೆಗೆ ಒಳಪಡಿಸುವ ದೃಷ್ಟಿಯಿಂದ ನೀಡಲಾಗಿದೆ. ರಾಷ್ಟ್ರೀಯತೆ ಎನ್ನುವುದು ಬಹುಮುಖ್ಯವಾಗಿ ಇತಿಹಾಸ ನಿರೂಪಣೆ ಮತ್ತು ನಿರ್ಮಾಣದ ನೆಲೆಯ್ಲಿ ನಡೆಯುವ ಚಟುವಟಿಕೆಯಾದ್ದರಿಂದ ಭಾರತದಂತಹ ಪೂರ್ವದ ಸಮಾಜಗಳಲ್ಲಿ ಅದು ಅತ್ಯಂತ ತ್ರಾಸದಾಯಕವಾದ, ವಿಭಿನ್ನ ಬಗೆಯ ವಿಷಮ ಪ್ರತಿಶೋಧಗಳಿಂದ ಕೂಡಿದ ಹಾಗೂ ಕ್ಲಿಷ್ಟವಾದ ಬಗೆಹರಿಸಲಾಗದ ತಕರಾರುಗಳನ್ನೊಳಗೊಂಡ ಸಮಸ್ಯಾ ಭೂಮಿಕೆಯಾಗಿ ಕಂಡುಬರುತ್ತದೆ. ಹಾಗಾಗಿ ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ನಾವು ನಿಸ್ಸಂದೇಹದಿಂದ ಒಪ್ಪಿಕೊಂಡಿರುವ ನಮ್ಮ ಪ್ರಮೇಯ ಪ್ರಮಾಣಗಳನ್ನು ಇಂದು ಮರು ಪರಿಶೀಲಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಬೆನೆಡಿಕ್ಟ್‌ ಆಂಡರ್‌ಸನ್‌ ಅವರ ‘ರಾಷ್ಟ್ರಗಳು ಕಾಲ್ಪನಿಕ ಸಮುದಾಯಗಳು’ ಎನ್ನುವ ಪ್ರಮೇಯವನ್ನು ಸಮಸ್ಯೆಗೆ ಗುರಿಪಡಿಸಬಹುದು. ರಾಷ್ಟ್ರದ ಕಲ್ಪನೆ ನಮ್ಮ ಉಳಿದೆಲ್ಲ ಸಾಮುದಾಯಿಕ ಸಮಸ್ಯೆಗೆ ಕಲ್ಪನೆಗಳಿಗಿಂತ ಹೆಚ್ಚು ಅಮೂರ್ತವಾದ ಕಲ್ಪನೆ ಎನ್ನುವ ಅರ್ಥದಲ್ಲಿ ಅದರ ಕಾಲ್ಪನಿಕತೆಯ ಆಯಾಮವನ್ನು ಒಂದು ಪರಿಮಿತಿಯಲ್ಲಿ ಒಪ್ಪಿಕೊಳ್ಳಬಹುದಾದರೂ, ರಾಷ್ಟ್ರ ಎನ್ನುವ ಕಾಲ್ಪನಿಕ ಸಮುದಾಯಕ್ಕೆ ಒಂದು ನಿರ್ದಿಷ್ಟವಾದ ಚಾರಿತ್ರಿಕ ನೆಲೆಗಟ್ಟು ಇರುತ್ತದೆ. ರಾಷ್ಟ್ರದ ಕಲ್ಪನೆಯ ರೂಪುರೇಷೆಗಳನ್ನು ನಿರೂಪಿಸುವಲ್ಲಿ ಗುರುತಿಸಬಹುದಾದ ಕೆಲವು ಚಾರಿತ್ರಿಕ ವಿದ್ಯಮಾನಗಳು ಹಾಗೂ ಮತೀಯ ಒಲವು-ನಿಲುವುಗಳು ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ರಾಷ್ಟ್ರೀಯತೆಯ ವಾಗ್ವಾದಗಳಲ್ಲಿ ಚಾರಿತ್ರಿಕ ವಿದ್ಯಮಾನಗಳ, ಸಾಮಾಜಿಕ ಸಂಘ ಸಂಸ್ಥೆಗಳ ಹಾಗೂ ಅವುಗಳ ಹಿಂದೆ ಕೆಲಸ ಮಾಡುವ ಮತೀಯ ನೆಲೆಗಳ ನಿಷ್ಕರ್ಷೆ ಬಹುಮುಖ್ಯವಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿಯೇ ಆಂಡರ್‌ಸನ್‌ರ ರಾಷ್ಟ್ರಗಳು ಕಾಲ್ಪನಿಕ ಸಮುದಾಯಗಳು ಎನ್ನುವ ಪ್ರಮೇಯವನ್ನು ಜಿಜ್ಞಾಸೆಗೆ ಒಳಪಡಿಸುತ್ತಾ ಪಾರ್ಥ ಚಟರ್ಜಿಯವರು “ಹೂಸ್ ಇಮೇಜಿನ್ಡ್‌ ಕಮ್ಯುನಿಟೀಸ್” (ಯಾರ ಕಾಲ್ಪನಿಕ ಸಮುದಾಯಗಳು) ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಾರೆ.

* * *

ಭಾರತದಲ್ಲಿ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಉಗಮಗೊಂಡು ೨೦ನೆಯ ಶತಮಾನದ ಪೂರ್ವಾರ್ಧದಲ್ಲಿ ವಿಕಾಸ ಹೊಂದಿದ ರಾಷ್ಟ್ರೀಯವಾದಿ ವಾಙ್ಮಯದಲ್ಲಿ ರಾಷ್ಟ್ರೀಯತೆಯ ಸ್ವರೂಪ ನಿಷ್ಕರ್ಷೆಗೆ ಸಂಬಂಧಿಸಿದಂತೆ ಎರಡು ವಿಭಿನ್ನ ಬಗೆಯ ತಾತ್ವಿಕ ರಾಜಕೀಯ ನಿಲುವುಗಳನ್ನು ಗುರುತಿಸಬಹುದು. ಅವುಗಳಲ್ಲಿ ಮೊದಲನೆಯದನ್ನು ಸ್ಥೂಲವಾಗಿ ಕಾಂಗ್ರೆಸ್‌ ರಾಷ್ಟ್ರೀಯತೆ ಎಂದು ಕರೆಯಬಹುದು. ಭಾರತದ ರಾಷ್ಟ್ರೀಯವಾದಿ ವಾಙ್ಮಯದಲ್ಲಿ ಈ ಎರಡು ಪರಸ್ಪರ ಭಿನ್ನವಾದ ವಿಚಾರಧಾರೆಗಳು ಕೆಲವೊಮ್ಮೆ ಒಂದು ಇನ್ನೊಂದರ ಹಾಗೆ ಕಂಡುಬರುತ್ತದೆ. ಮತ್ತೆ ಕೆಲವೊಮ್ಮೆ ಒಂದು ಇನ್ನೊಂದನ್ನು ಅವಲಂಬಿಸಿದಂತೆ ಭಾಸವಾಗುತ್ತದೆ. ಅದರ ಈ ಎರಡೂ ವಿಚಾರಧಾರೆಗಳು ತಾವು ಒಳಗೊಳ್ಳುವ ನೈತಿಕ ರಾಜಕೀಯ ಮೌಲ್ಯಗಳ ನೆಲೆಯಲ್ಲಿ ಮೂಲಭೂತವಾಗಿ ಬೇರೆಯಾದವುಗಳಾಗಿದ್ದು ಅವುಗಳ ಮಧ್ಯೆ ಸಾಗರದಷ್ಟು ಅಂತರವಿದೆ.

ಭಾರತದ ರಾಷ್ಟ್ರೀಯತೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ರಾಷ್ಟ್ರೀಯತೆ ಒಂದು ಉದಾರವಾದ ನಿಲುವನ್ನು ತಳೆಯುತ್ತದೆ. ಅದು ಭಾರತವನ್ನು ಮೂಲತಃ ಒಂದು ಕೂಡುವಿಕೆ ಎಂದು ಗ್ರಹಿಸುತ್ತದೆ. ವಿಭಿನ್ನ ಸಂಸ್ಕೃತಿಗಳ, ವಿಭಿನ್ನ ಜನಾಂಗಗಳ, ವಿವಿಧ ಜಾತಿ, ಭಾಷೆ, ಮತ, ಪಂಥಗಳ ತಂಗುದಾಣವೆಂದು ಭಾರತವನ್ನು ಪರಿಭಾವಿಸುವ ಕಾಂಗ್ರೆಸ್‌ರಾಷ್ಟ್ರೀಯತೆ ಈ ವಿಭಿನ್ನ ಸಮಬಿಂಬಗಳ ನಡುವೆ ಶಾಂತಿಯುತ ಪ್ರಜಾಸತ್ತಾತ್ಮಕ ಕೊಡುಕೊಳ್ಳುವಿಕೆಯ ಸಂಬಂಧವನ್ನು ಒಂದು ಬಗೆಯ ಆಶಾವಾದದಲ್ಲಿ ಗ್ರಹಿಸುತ್ತದೆ. ಪಂಡಿತ ಜವಾಹರಲಾಲ್‌ ನೆಹರೂ ಅವರ ‘ವಿವಿಧತೆಯಲ್ಲಿ ಏಕತೆ’ (ಯುನಿಟಿ ಇನ್‌ ಡ್ರೈವರ್ಸಿಟಿ) ಕಾಂಗ್ರೆಸ್‌ ರಾಷ್ಟ್ರೀಯತೆಯ ಔದಾರ್ಯಪೂರ್ಣ ಬಹುರೂಪಿ ರಾಷ್ಟ್ರೀಯತೆಯ ನಿಲುವಿಗೆ ಅತ್ಯಂತ ಸೂಕ್ತವಾದ ಉದಾಹರಣೆಯಾಗಿದೆ. ಈ ವಿವಿಧತೆಯಲ್ಲಿ ಏಕತೆ ಎನ್ನುವ ಪರಿಕಲ್ಪನೆಯನ್ನು ಒಂದು ಚಾರಿತ್ರಿಕ ವಾಸ್ತವದ ನಿರೂಪಣೆ ಎನ್ನುವುದಕ್ಕಿಂತಲೂ ಮಿಗಿಲಾಗಿ ಅದೊಂದು ಆಶಾವಾದವಾಗಿ, ಆಕಾಂಕ್ಷೆಯಾಗಿ, ಸಾಧಿಸಬೇಕಾದ ಗುರಿಯಾಗಿ ನಮ್ಮ ಮುಂದೆ ನಿಲ್ಲುತ್ತದೆ.

ಕಾಂಗ್ರೆಸ್‌ ರಾಷ್ಟ್ರೀಯವಾದಿ ನಿಲುವಿನ ಅತ್ಯಂತ ಮುಖ್ಯವಾದ ಕಾಣ್ಕೆಯೆಂದರೆ ಅದು ಭಾರತದಲ್ಲಿ ರಾಷ್ಟ್ರೀಯತೆಯ ಕಲ್ಪನೆಗೆ ಒದಗಿಸಬಯಸಿದ ಪ್ರಾಪಂಚಿಕ ನೆಲೆಗಟ್ಟು (ಸೆಕ್ಯುಲರ್‌ ಫೌಂಡೇಶನ್‌). ಕಾಂಗ್ರೆಸ್‌ ರಾಷ್ಟ್ರೀಯತೆಯ ರಾಷ್ಟ್ರದ ಪರಿಕಲ್ಪನೆ ಮೂಲತಃ ಒಂದು ಪ್ರಜಾಸತ್ತಾತ್ಮಕವಾದ ಪ್ರಾಪಂಚಿಕ ಲೋಕದೃಷ್ಟಿಯ (ಸೆಕ್ಯುಲರ್‌ ವರ್ಲ್ಡ್‌ ವ್ಯೂ) ಮೇಲೆ ನಿಂತಿರುವುದರಿಂದಲೇ ಅದನ್ನು ಹಿಂದೂ ಪುನರುತ್ಥಾನವಾದಿ ರಾಷ್ಟ್ರೀಯತೆಗಿಂತ ಮೂಲಭೂತವಾಗಿ ಬೇರೆಯಾಗಿ ಗ್ರಹಿಸಬೇಕಾಗುತ್ತದೆ. ಹಾಗೆ ನೋಡಿದರೆ ಕಾಂಗ್ರೆಸ್‌ರಾಷ್ಟ್ರೀಯತೆಯ ನಿರೂಪಣೆಯಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಚಾರ, ಪ್ರತಿಮೆ ಹಾಗೂ ಪ್ರತೀಕಗಳು ಹೇರಳವಾಗಿವೆ. ಹಾಗಾಗಿ ಅದರ ಲೌಕಿಕ ರಾಷ್ಟ್ರೀಯತೆಯನ್ನು ಧಾರ್ಮಿಕತೆ ಮೆರೆದಾಡುವ ವಾಙ್ಮಯವೆಂದೇ ಗುರುತಿಸಲಾಗಿದೆ. ಆದರೆ ಕಾಂಗ್ರೆಸ್‌ರಾಷ್ಟ್ರೀಯತೆ ಧರ್ಮ ಅಥವಾ ಧಾರ್ಮಿಕತೆಯನ್ನು ಒಂದು ಸಾಮಾಜಿಕ ವಸ್ತು ಸತ್ಯವಾಗಿ ಅಥವಾ ಒಂದು ಪ್ರಾಪಂಚಿಕ ವಾಸ್ತವವಾಗಿ ಮಾತ್ರ ಗಹಿಸುತ್ತದೆ ಮತ್ತು ಅದರ ಇರುವಿಕೆಯನ್ನು ಗೌರವ ಪೂರ್ವಕವಾಗಿ ಮಾನ್ಯ ಮಾಡುತ್ತದೆ ಹಾಗೂ ಅವು ಸೃಷ್ಟಿಸುವ ಸಾಮಾಜಿಕ ಸಮಬಿಂಬಗಳನ್ನು ಪುರಸ್ಕರಿಸುತ್ತದೆ ಎನ್ನುವುದನ್ನು ಎಚ್ಚರಿಕೆಯಿಂದ ಗುರುತಿಸಬೇಕಾಗುತ್ತದೆ.

ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್‌ ರಾಷ್ಟ್ರೀಯತೆಯ ಲೌಕಿಕವಾದಿ (ಸೆಕ್ಯುಲರ್‌) ನಿಲುವಿನಲ್ಲಿ ಒಡಕುಗಳು ಮತ್ತು ಅಸ್ಪಷ್ಟತೆಗಳು ಇಲ್ಲವೆಂದಲ್ಲ. ಕಾಂಗ್ರೆಸ್‌ ರಾಷ್ಟ್ರೀಯತೆಯ ಲೌಕಿಕ ದೃಷ್ಟಿ ಹಲವಾರು ಬಗೆಯ ಗೊಂದಲಗಳಿಂದ ಕೂಡಿದ್ದರಿಂದ ಅದರ ಸಾಮಾಜಿಕ ರಾಜಕೀಯ ನಿಲುವುಗಳಲ್ಲಿ ವಿಭಿನ್ನ ಬಗೆಯ ಆಂತರಿಕ ಪ್ರತಿಷೇಧಗಳು ಸ್ಪಷ್ಟವಾಗಿಯೇ ಕಣ್ಣಿಗೆ ಕಾಣುತ್ತದೆ. ಖ್ಯಾತ ಇತಿಹಾಸಕಾರ ಬಿಪಿನ್‌ಚಂದ್ರ ತಮ್ಮ ‘ಕೊಲೊನಿಯಲಿಸಂ ಆಂಡ್‌ ನ್ಯಾಷನಲಿಸಂ ಇನ್‌ಮಾಡರ್ನ್‌ ಇಂಡಿಯಾ’ (ಆಧುನಿಕ ಭಾರತದಲ್ಲಿ ವಸಾಹತುಶಾಹಿ ಮತ್ತು ರಾಷ್ಟ್ರೀಯತೆ) ಎನ್ನುವ ತಮ್ಮ ಪುಸ್ತಕದಲ್ಲಿ ಈ ಕುರಿತು ಬರೆಯುತ್ತಾರೆ. ಅವರು ತಿಳಿಸುವಂತೆ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯವಾದಿ ನಿಲುವು ಒಂದು ವಿಶಿಷ್ಟ ಬಗೆಯಾದ ಲೌಕಿಕವಾದ ದೃಷ್ಟಿಕೋನದಿಂದ ಪ್ರಭಾವಿತವಾಗಿದ್ದರೂ, ಅದು ಚಾಲ್ತಿಗೆ ತಂದ ರಾಷ್ಟ್ರೀಯವಾದಿ ರಾಜಕಾರಣದಲ್ಲಿ ಹಿಂದೂ ಧಾರ್ಮಿಕ ಅಂಶಗಳು ವಿಜೃಂಭಿಸಿದ್ದರಿಂದ ಕಾಂಗ್ರೆಸ್‌ ರಾಷ್ಟ್ರೀಯತೆಯ ಲೌಕಿಕವಾದವು ಗೊಂದಲಮಯವಾಗಿ ಕಾಣಿಸುತ್ತದೆ. ಆದ್ದರಿಂದಲೇ ಮದನ ಮೋಹನ ಮಾಲವೀಯರಂತಹ ಕಟ್ಟಾ ಹಿಂದೂವಾದಿಗಳೇ ಏಕಕಾಲದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಹಾಗೂ ಹಿಂದೂ ಮಹಾಸಭಾಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಅಥವಾ ಮಾಲವೀಯರಂತಹ ಇತರ ಅನೇಕರಿಗೆ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಹಿಂದೂ ಮಹಾಸಭಾಕ್ಕೆ ಅಥವಾ ಹಿಂದೂ ಮಹಾಸಭಾದಿಂದ ರಾಷ್ಟ್ರೀಯ ಕಾಂಗ್ರೆಸ್‌ಗೆ ನಿರಾಯಾಸವಾದ ಆಗಮನ ನಿರ್ಗಮನ ಸಾಧ್ಯವಾಯಿತು. ಆದ್ದರಿಂದಲೇ ರಾಷ್ಟ್ರೀಯ ಕಾಂಗ್ರೆಸ್‌ಪ್ರತಿಪಾದಿಸಿದ ಲೌಕಿಕವಾದೀ ರಾಷ್ಟ್ರೀಯತೆಗೆ ಆ ಕಾಲದಲ್ಲಿ ಪ್ರಭಾವಶಾಲಿಯಾಗಿ ಮೇಲೆದ್ದು ಬರುತ್ತಿದ್ದ ವಿಭಿನ್ನ ಬಗೆಯ ಕೋಮುವಾದಿ ರಾಜಕಾರಣವನ್ನು (ವಿಶೇಷವಾಗಿ ಹಿಂದೂ-ಮುಸ್ಲಿಮ್‌ ವೈಮನಸ್ಸಿನ ನೆಲೆಯ ಕೋಮುವಾದವನ್ನು) ನಿರ್ಣಾಯಕವಾಗಿ ಎದುರಿಸಲು ಸಾಧ್ಯವಾಗಲಿಲ್ಲ ಎನ್ನಬಹುದು. ಹಾಗಾಗಿ ರಾಷ್ಟ್ರೀಯ ಕಾಂಗ್ರೆಸ್ಸಿನ ಲೌಕಿಕವಾದಿ ರಾಷ್ಟ್ರೀಯತೆಗೆ ಪರ್ಯಾಯವಾಗಿ ಸಾಂಸ್ಕೃತಿಕ ರಾಷ್ಟ್ರೀಯವಾದಿ ನೆಲೆಯ ಹಿಂದುತ್ವ ಹೆಚ್ಚು ಪ್ರವರ್ಧಮಾನಕ್ಕೆ ಬರುವಂತಾಯಿತು. ಭಾರತದ ಪ್ರಸ್ತುತ ಸಂದರ್ಭದಲ್ಲಿ ಹಿಂದುತ್ವದ ಏರುತ್ತಿರುವ ಜನಪ್ರಿಯತೆಯನ್ನು ಒಂದು ರೀತಿಯಲ್ಲಿ ಲೌಕಿಕವಾದಿ ರಾಷ್ಟ್ರೀಯತೆಯ ಹಿನ್ನಡೆಯೆಂದೇ ತಿಳಿಯಬಹುದು.

* * *

ಸ್ವತಂತ್ರ ಭಾರತದಲ್ಲಿ ರಾಷ್ಟ್ರೀಯತೆಯ ಸಮಸ್ಯೆಯನ್ನು ಪ್ರಮುಖವಾಗಿ ಲೌಕಿಕವಾದಿ ನೆಲೆಯ ರಾಷ್ಟ್ರೀಯತೆ ಹಾಗೂ ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯ ನಡುವಿನ ತಾತ್ವಿಕ ರಾಜಕೀಯ ತಿಕ್ಕಾಟದಲ್ಲಿ ಗುರುತಿಸಬಹುದು. ಲೌಕಿಕವಾದಿ ನೆಲೆಯ ರಾಷ್ಟ್ರೀಯತೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿಶೇಷವಾಗಿ ಕಾಂಗ್ರೆಸ್‌ ರಾಷ್ಟ್ರೀಯತೆಯ ನಾಯಕತ್ವದಲ್ಲಿ ಮಥನಗೊಂಡು ಬಂದಂತಹುದಾಗಿದ್ದು, ಅದರ ತಾತ್ವಿಕ ರಾಜಕೀಯ ರೂಪರೇಷೆಗಳನ್ನು ಭಾರತದ ಸಂವಿಧಾನದ ಮೌಲಿಕ ಸ್ವರೂಪದಲ್ಲಿ ಕಂಡುಕೊಳ್ಳಬಹುದು. ಭಾರತದ ಸಂವಿಧಾನದಲ್ಲಿ ಬಿಂಬಿತವಾಗಿರುವ ಈ ಲೌಕಿಕವಾದಿ ರಾಷ್ಟ್ರೀಯತೆ ತನ್ನೆಲ್ಲಾ ಆಂತರಿಕ ಒಡಕು ಹಾಗೂ ಅಸ್ಪಷ್ಟತೆಗಳ ನಡುವೆಯೂ ಭಾರತವನ್ನು ಮೂಲತಃ ಒಂದು ಬಹುಸಾಂಸ್ಕೃತಿಕ ಸಮಾಜವನ್ನಾಗಿ ಪರಿಗಣಿಸಿ ಅದರ ಬಹುರೂಪತೆಯನ್ನು ಉಳಿಸಿ ಬೆಳೆಸುವ ಕಡೆಗೆ ತನ್ನ ಗಮನವನ್ನು ಇರಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಂದು ಹಿಂದುತ್ವ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆ ಮೂಲತಃ ಬಹುರೂಪಿಯಾದ ಭಾರತೀಯ ಸಮಾಜವನ್ನು ತನ್ನ ಕಪೋಲಕಲ್ಪಿತ ಹಿಂದೂ ನಾಗರಿಕತೆಯ ಏಕಸೂತ್ರದಲ್ಲಿ ಪೋಣಿಸಲು ಬಯಸುತ್ತದೆ. ಭಾರತದಲ್ಲಿ ಸಂವಿಧಾನ ಪ್ರಣೀತ ಲೌಕಿಕವಾದಿ ರಾಷ್ಟ್ರೀಯತೆ ಹಾಗೂ ವಿಶೇಷವಾಗಿ ಹಿಂದುತ್ವ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆಯ ನಡುವಿನ ತಿಕಕಾಟ ಮೂಲತಃ ಈ ಎರಡು ರಾಷ್ಟರೀಯವಾದಿ ನಿಲುವುಗಳು ಪ್ರತಿಪಾದಿಸುವ ವಿಭಿನ್ನ ಬಗೆಯ ಮೌಲ್ಯಗಳ ನಡುವಿನ ತಿಕ್ಕಾಟವೇ ಆಗಿದೆ.

ಭಾರತದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನು ಕಾಣುತ್ತಿರುವ ಲೌಕಿಕವಾದಿ ರಾಷ್ಟ್ರೀಯತೆಯ ಅತ್ಯಂತ ನಡುವಿನ ಅರಿವೆಂದರೆ ಧರ್ಮ ಹಾಗೂ ರಾಜಕಾರಣಗಳು ಎರಡೂ ಪ್ರತ್ಯೇಕ ಘಟಕಗಳು ಎನ್ನುವುದು. ಧರ್ಮ ಹಾಗೂ ರಾಜಕಾರಣಗಳ ನಡುವೆ ಅತ್ಯಂತ ಸೂಕ್ಷ್ಮವಾದ ಕೆಲವೊಮ್ಮೆ ಅಸ್ಪಷ್ಟವಾದ, ಆದರೆ ಅತ್ಯಂತ ಮಹತ್ವಪೂರ್ಣವಾದ ಪ್ರತ್ಯೇಕತೆಯ ಗೆರೆಯನ್ನು ಎಳೆಯಲು ಪ್ರಯತ್ನಿಸುವ ಲೌಕಿಕವಾದಿ ರಾಷ್ಟ್ರೀಯತೆ ಆ ಮೂಲಕ ರಾಜಕೀಯವನ್ನು ಧಾರ್ಮಿಕ ಹಿತಾಸಕ್ತಿಗಳಿಂದ ಮುಕ್ತವಾದ ವೇದಿಕೆಯನ್ನಾಗಿ ಗ್ರಹಿಸುತ್ತದೆ. ಲೌಕಿಕವಾದಿ ರಾಷ್ಟ್ರೀಯತೆ ರಾಜಕಾರಣಕ್ಕೆ ಒದಗಿಸಲು ಯತ್ನಿಸುವ ಸ್ವಾಯತ್ತತೆ, ರಾಜ್ಯಕ್ಕೆ ವಿಭಿನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳ ನಡುವೆ ನಿರಪೇಕ್ಷವಾಗಿ ಆದರೆ ಕ್ರಿಯಾತ್ಮಕವಾಗಿ ಮಧ್ಯಸ್ಥಿಕೆ ವಹಿಸುವ ಅವಕಾಶವನ್ನು ಒದಗಿಸುತ್ತದೆ. ಭಾರತದಂತಹ ಬಹುಸಾಂಸ್ಕೃತಿಕ ಸಮಾಜದಲ್ಲಿ ರಾಜ್ಯ ವಿಭಿನ್ನ ಹಿತಾಸಕ್ತಿಗಲ ನಡುವೆ ಸಮಜಾಯಿಸಿಕೆ ನಡೆಸುವ, ವಿವಾದಗಳನ್ನು ನ್ಯಾಯಯುತವಾಗಿ ಪರಿಹರಿಸುವ, ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಮಾಡುವ ವಿಶೇಷವಾದ ಜವಾಬ್ದಾರಿಯನ್ನು ನಿರ್ವಹಿಸಬೇಕಾದ್ದರಿಂದ ‘ರಾಜಕಾರಣ’ದ ಸ್ವಾಯತ್ತತೆಯನ್ನು ಲೌಕಿಕವಾದಿ ರಾಷ್ಟ್ರೀಯತೆ ವಿಶೇಷವಾಗಿ ಪ್ರತಿಪಾದಿಸುತ್ತದೆ. ಹೀಗಾಗಿ ಧರ್ಮ ಹಾಗೂ ರಾಜಕಾರಣಗಳ ನಡುವಿನ ಪ್ರತ್ಯೇಕತೆಯ ಕಲ್ಪನೆ ಅದಕ್ಕೆ ತುಂಬಾ ಮುಖ್ಯವಾಗುತ್ತದೆ. ಅಂದರೆ ಲೌಕಿಕವಾದಿ ರಾಷ್ಟ್ರೀಯತೆಯ ಧರ್ಮ ಹಾಗೂ ರಾಜಕಾರಣಗಳ ಪ್ರತ್ಯೇಕತೆಯ ಅರಿವಿನ ಹಿಂದೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಮೌಲ್ಯಗಳು ಕೆಲಸ ಮಾಡುತ್ತಿವೆ ಎನ್ನಬಹುದು. ಆದ್ದರಿಂದ ಅನೇಕತೆಯ ಅರಿವಿನಲ್ಲಿ ರೂಪುಗೊಂಡ ಪ್ರಜಾಪ್ರಭುತ್ವದ ಕಲ್ಪನೆ, ಸಾಮಾಜಿಕ ಅಸಮಾನತೆ ಹಾಗೂ ವೈಪರೀತ್ಯಗಳ ಸಂದರ್ಭದಲ್ಲಿ ಮೂಡಿಬಂದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಕಲ್ಪನೆಗಳನ್ನು ಲೌಕಿಕವಾದಿ ರಾಷ್ಟ್ರೀಯತೆಯ ಮೇರುಮೌಲ್ಯಗಳೆಂದು ಪರಿಗಣಿಸಬಹುದು.

‘ಹಿಂದುತ್ವ’ ಈಗಾಗಲೇ ಸೂಚಿಸಿದಂತೆ ಭಾರತದಲ್ಲಿ ಲೌಕಿಕವಾದಿ ರಾಷ್ಟ್ರೀಯತೆ ಹಾಗೂ ಅದು ಪ್ರತಿನಿಧಿಸುತ್ತಿರುವ ಮೌಲ್ಯಗಳಿಗೆ ನೇರವಾಗಿ ಸವಾಲನ್ನು ಎಸೆಯುತ್ತಿರುವ, ಇತ್ತೀಚೆಗೆ ಪ್ರಭಾವಶಾಲಿಯಾಗಿ ಮೇಲೆದ್ದು ಬಂದಿರುವ ಸಾಂಸ್ಕೃತಿಕ ರಾಷ್ಟ್ರೀಯವಾದಿ ದೃಷ್ಟಿಕೋನವಾಗಿದೆ. ಹಾಗೆ ನೋಡಿದರೆ ಒಂದು ಸ್ಪಷ್ಟವಾದ ರಾಷ್ಟ್ರೀಯವಾದಿ ಅರಿವಾಗಿ ಹಿಂದುತ್ವದ ಬೇರುಗಳನ್ನು ಭಾರತದ ರಾಷ್ಟ್ರೀಯ ಹೋರಾಟದ ಚರಿತ್ರೆಯಲ್ಲಿಯೇ ಕಂಡುಕೊಳ್ಳಬಹುದು. ಹಾಗಾಗಿ ಗೆರೆ ಹಾಕಿದಂತೆ ಅದನ್ನು ರಾಷ್ಟ್ರೀಯ ಕಾಂಗ್ರೆಸ್‌ನ ಲೌಕಿಕವಾದಿ ರಾಷ್ಟ್ರೀಯತೆಗಿಂತ ಪ್ರತ್ಯೇಕಿಸಿ ನೋಡುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಇದಕ್ಕೆ ಕಾಂಗ್ರೆಸ್‌ನ ಲೌಕಿಕವಾದಿ ರಾಷ್ಟ್ರೀಯತೆಯಲ್ಲಿ ಅಡಕವಾಗಿರುವ ಅಸ್ಪಷ್ಟತೆಯೇ ಪ್ರಮುಖ ಕಾರಣವೆನ್ನಬಹುದು. ಈ ಕುರಿತು ಒಂದೆರಡು ಅಂಶಗಳನ್ನು ಈ ಮೊದಲೇ ಪ್ರಸ್ತಾಪಿಸಲಾಗಿದೆ. ಅಂದರೆ ಒಂದು ರಾಷ್ಟ್ರೀಯವಾದಿ ಅರಿವಾಗಿ ಹಿಂದುತ್ವದ ಬೇರುಗಳನ್ನು ವಿವೇಕಾನಂದರ ಭಾರತದ ಪಾರಮಾರ್ಥಿಕ ಶ್ರೇಷ್ಠತೆಯ ಕಲ್ಪನೆಯಲ್ಲಿ, ಬಂಕಿಮಚಂದ್ರರ ವಿಚಾರಗಳಲ್ಲಿ, ಅರವಿಂದರ ಸಾಂಸ್ಕೃತಿಕ ರಾಷ್ಟ್ರೀಯವಾದಿಗಳಿಂದಾಗಲಿ ಅಥವಾ ಹಿಂದುತ್ವವಾದವೆಂದು ಬಗೆಯುವಂತಿಲ್ಲ. ಒಂದು ರಾಷ್ಟ್ರೀಯವಾದಿ ಸಿದ್ಧಾಂತವಾಗಿ ಹಿಂದುತ್ವಕ್ಕೆ ಒಂದು ತಾತ್ವಿವಿಕ ನೆಲೆಗಟ್ಟನ್ನು ಒದಗಿಸಿದವರಲ್ಲಿ ಸರ್ವಪ್ರಥಮರೆಂದರೆ ವಿನಾಯಕ ದಾಮೋದರ ಸಾವರ್ಕರ್‌. ಸಾವರ್ಕರ್‌ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಅಥವಾ ಹಿಂದುತ್ವಕ್ಕೆ ಒಂದು ತಾತ್ವಿಕ ರಾಜಕೀಯ ಸ್ವರೂಪವನ್ನು ಒದಗಿಸಿದರು. ‘ಹಿಂದುತ್ವ’ ಎನ್ನುವ ಪದವನ್ನು ಮೊಟ್ಟಮೊದಲ ಬಾರಿಗೆ (ಇಂದು ಅದನ್ನು ನಾವು ಬಳಸುವ ಅರ್ಥದಲ್ಲಿ)ಪ್ರಯೋಗಿಸಿದವರೂ ಅವರೇ. ಸಾವರ್ಕರರ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಲ್ವಲ್ಕರ್‌, ಮಹಾರಾಷ್ಟ್ರ ಧಾರಣ ಸಮಿತಿ, ಭಾರತೀಯ ಜನ ಸಂಘದ ದೀನ ದಯಾಳು ಉಪಾಧ್ಯಾಯ ಮೊದಲಾದವರಿಂದ ಅದು ಪ್ರವರ್ಧಮಾನಕ್ಕೆ ಬಂದು, ಇಂದು ಅದು ಲೌಕಿಕವಾದಿ ರಾಷ್ಟ್ರೀಯತೆಗೆ ಸೆಡ್ಡು ಹೊಡೆದು ನಿಂತಿದೆ.

ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯ ತನ್ನ ವಾದವನ್ನು ‘ಹಿಂದುತ್ವ’ ಹಿಂದೂ ನಾಗರಿಕತೆಯ ಕಲ್ಪನೆಯ ಆಧಾರದಲ್ಲಿ ಮುಂದಿಡುತ್ತದೆ. ಹಿಂದುತ್ವದ ಪ್ರಕಾರ ಹಿಂದೂ ಎನ್ನುವುದು ಒಂದು ಧರ್ಮ ಅಥವಾ ಧಾರ್ಮಿಕತೆಯ ಸಂಕೇತವಾಗಿರದೆ ಅದು ಒಂದು ನಾಗರಿಕತೆಯ ಅಥವಾ ಜೀವನಕ್ರಮದ ಗುರುತಾಗಿದೆ. ಹಿಂದೂ ಎನ್ನುವ ನಾಗರಿಕತೆ ಹಿಂದುತ್ವದ ಪ್ರಕಾರ ಚಾರಿತ್ರಿಕವಾಗಿ ರೂಪುಗೊಂಡ ಒಂದು ಜೀವನ ಕ್ರಮ. ಇತರ ಸಿಮೆಟಿಕ್‌ ಧಾರ್ಮಿಕ ಪರಂಪರೆಗಳಿಗಿಂತ ಭಿನ್ನವಾಗಿ ಬೆಳೆದು ಬಂದಿರುವ ಹಿಂದೂ ನಾಗರಿಕತೆ ತನ್ನ ಮೂಲ ಸ್ವಭಾವದಲ್ಲಿಯೇ ಅತ್ಯಂತ ಪ್ರಜಾಸತ್ತಾತ್ಮಕವಾದದ್ದು, ಅನೇಕತೆಯನ್ನು ಒಳಗೊಳ್ಳುವಂತಹದ್ದು ಹಾಗೂ ಬಹುತ್ವವನ್ನು ಮಾನ್ಯ ಮಾಡುವಂತಹದ್ದು. ಒಬ್ಬ ದೇವರು, ಒಂದು ಧರ್ಮಗ್ರಂಥ, ಒಬ್ಬ ಪ್ರವಾದಿ ಎನ್ನುವ ಸಿಮೆಟಿಕ್‌ ಧಾರ್ಮಿಕ ಪರಂಪರೆಗಿಂತ ಶ್ರೇಷ್ಠವಾದ ಅದರ ಸಾಂಸ್ಕೃತಿಕ ಮೌಲ್ಯಗಳು, ಹಿಂದುತ್ವದ ಪ್ರಕಾರ ಭಾರತದಲ್ಲಿ ರಾಷ್ಟ್ರೀಯತೆಗೆ ಸೂಕ್ತವಾದ ಸಾಂಸ್ಕೃತಿಕ ಸತ್ವವನ್ನು ಬಹು ಸಾಂಸ್ಕೃತಿಕ ಸಮಾಜವನ್ನಾಗಿ ಪರಿಗಣಿಸಿ ಅದರ ಬಹುರೂಪತೆಯನ್ನು ಉಳಿಸಿ ಬೆಳೆಸುವ ಕಡೆಗೆ ತನ್ನ ಗಮನವನ್ನು ಇರಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಂದು ಹಿಂದುತ್ವ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆ ಮೂಲತಃ ಬಹುರೂಪಿಯಾದ ಭಾರತೀಯ ಸಮಾಜವನ್ನು ತನ್ನ ಕಪೋಲಕಲ್ಪಿತ ಹಿಂದೂ ನಾಗರಿಕತೆಯ ಏಕಸೂತ್ರದಲ್ಲಿ ಪೋಣಿಸಲು ಬಯಸುತ್ತದೆ. ಭಾರತದಲ್ಲಿ ಸಂವಿಧಾನ ಪ್ರಣೀತ ಲೌಕಿಕವಾದಿ ರಾಷ್ಟ್ರೀಯತೆ ಹಾಗೂ ವಿಶೇಷವಗಿ ಹಿಂದುತ್ವ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆಯ ನಡುವಿನ ತಿಕ್ಕಾಟ ಮೂಲತಃ ಈ ಎರಡು ರಾಷ್ಟ್ರೀಯವಾದಿ ನಿಲುವುಗಳು ಪ್ರತಿಪಾದಿಸುವ ವಿಭಿನ್ನ ಬಗೆಯ ಮೌಲ್ಯಗಳ ನಡುವಿನ ತಿಕ್ಕಾಟವೇ ಆಗಿದೆ.

ಭಾರತದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನು ಕಾಣುತ್ತಿರುವ ಲೌಕಿಕವಾದಿ ರಾಷ್ಟ್ರೀಯತೆಯ ಅತ್ಯಂತ ನಡುವಿನ ಅರಿವೆಂದರೆ ಧರ್ಮ ಹಾಗೂ ರಾಜಕಾರಣಗಳು ಎರಡೂ ಪ್ರತ್ಯೇಕ ಘಟಕಗಳು ಎನ್ನುವುದು. ಧರ್ಮ ಹಾಗೂ ರಾಜಕಾರಣಗಳ ನಡುವೆ ಅತ್ಯಂತ ಸೂಕ್ಷ್ಮವಾದ ಕೆಲವೊಮ್ಮೆ ಅಸ್ಪಷ್ಟವಾದ, ಆದರೆ ಅತ್ಯಂತ ಮಹತ್ವಪೂರ್ಣವಾದ ಪ್ರತ್ಯೇಕತೆಯ ಗೆರೆಯನ್ನು ಎಳೆಯಲು ಪ್ರಯತ್ನಿಸುವ ಲೌಕಿಕವಾದಿ ರಾಷ್ಟ್ರೀಯತೆ ಆ ಮೂಲಕ ರಾಜಕೀಯವನ್ನು ಧಾರ್ಮಿಕ ಹಿತಾಸಕ್ತಿಗಳಿಂದ ಮುಕ್ತವಾದ ವೇದಿಕೆಯನ್ನಾಗಿ ಗ್ರಹಿಸುತ್ತದೆ. ಲೌಕಿಕವಾದಿ ರಾಷ್ಟ್ರೀಯತೆ ರಾಜಕಾರಣಕ್ಕೆ ಒದಗಿಸಲು ಯತ್ನಿಸುವ ಸ್ವಾಯತ್ತತೆ, ರಾಜ್ಯಕ್ಕೆ ವಿಭಿನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳ ನಡುವೆ ನಿರಪೇಕ್ಷವಾಗಿ ಆದರೆ ಕ್ರಿಯಾತ್ಮಕವಾಗಿ ಮಧ್ಯಸ್ಥಿಕೆ ವಹಿಸುವ ಅವಕಾವನ್ನು ಒದಗಿಸುತ್ತದೆ. ಭಾರತದಂತಹ ಬಹುಸಾಂಸ್ಕೃತಿಕ ಸಮಾಜದಲ್ಲಿ ರಾಜ್ಯ ವಿಭಿನ್ನ ಹಿತಾಸಕ್ತಿಗಳ ನಡುವೆ ಸಮಜಾಯಿಷಿಕೆ ನಡೆಸುವ, ವಿವಾದಗಳನ್ನು ನ್ಯಾಯಯುತವಾಗಿ ಪರಿಹರಿಸುವ, ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಮಾಡುವ ವಿಶೇಷವಾದ ಜವಾಬ್ದಾರಿಯನ್ನು ನಿರ್ವಹಿಸಬೇಕಾದ್ದರಿಂದ ‘ರಾಜಕಾರಣ’ದ ಸ್ವಾಯತ್ತತೆಯನ್ನು ಲೌಕಿಕವಾದಿ ರಾಷ್ಟ್ರೀಯತೆ ವಿಶೇಷವಾಗಿ ಪ್ರತಿಪಾದಿಸುತ್ತದೆ. ಹೀಗಾಗಿ ಧರ್ಮ ಹಾಗೂ ರಾಜಕಾರಣಗಳ ನಡುವಿನ ಪ್ರತ್ಯೇಕತೆಯ ಕಲ್ಪನೆ ಅದಕ್ಕೆ ತುಂಬಾ ಮುಖ್ಯವಾಗುತ್ತದೆ. ಅಂದರೆ ಲೌಕಿಕವಾದಿ ರಾಷ್ಟ್ರೀಯತೆಯ ಧರ್ಮ ಹಾಗೂ ರಾಜಕಾರಣಗಳ ಪ್ರತ್ಯೇಕತೆಯ ಅರಿವಿನ ಹಿಂದೆ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಮೌಲ್ಯಗಳು ಕೆಲಸ ಮಾಡುತ್ತಿವೆ ಎನ್ನಬಹುದು. ಆದ್ದರಿಂದ ಅನೇಕತೆಯ ಅರಿವಿನಲ್ಲಿ ರೂಪುಗೊಂಡ ಪ್ರಜಾಪ್ರಭುತ್ವದ ಕಲ್ಪನೆ, ಸಾಮಾಜಿಕ ಅಸಮಾನತೆ ಹಾಗೂ ವೈಪರಿತ್ಯಗಳ ಸಂದರ್ಭದಲ್ಲಿ ಮೂಡಿಬಂದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯಕಲ್ಪನೆಗಳನ್ನು ಲೌಕಿಕವಾದಿ ರಾಷ್ಟ್ರೀಯತೆಯ ಮೇರುಮೌಲ್ಯಗಳೆಂದು ಪರಿಗಣಿಸಬಹುದು.

‘ಹಿಂದುತ್ವ’ ಈಗಾಗಲೇ ಸೂಚಿಸಿದಂತೆ ಭಾರತದಲ್ಲಿ ಲೌಕಿಕವಾದಿ ರಾಷ್ಟ್ರೀಯತೆ ಹಾಗೂ ಅದು ಪ್ರತಿನಿಧಿಸುತ್ತಿರುವ ಮೌಲ್ಯಗಳಿಗೆ ನೇರವಾಗಿ ಸವಾಲನ್ನು ಎಸೆಯುತ್ತಿರುವ, ಇತ್ತೀಚೆಗೆ ಪ್ರಭಾವಶಾಲಿಯಾಗಿ ಮೇಲೆದ್ದು ಬಂದಿರುವ ಸಾಂಸ್ಕೃತಿಕ  ರಾಷ್ಟ್ರೀಯವಾದಿ ದೃಷ್ಟಿಕೋನವಾಗಿದೆ. ಹಾಗೆ ನೋಡಿದರೆ ಒಂದು ಸ್ಪಷ್ಟವಾದ ರಾಷ್ಟ್ರೀಯವಾದಿ ಅರಿವಾಗಿ ಹಿಂದುತ್ವದ ಬೇರುಗಳನ್ನು ಭಾರತದ ರಾಷ್ಟ್ರೀಯ ಹೋರಾಟದ ಚರಿತ್ರೆಯಲ್ಲಿಯೇ ಕಂಡುಕೊಳ್ಳಬಹುದು. ಹಾಗಾಗಿ ಗೆರೆ ಹಾಕಿದಂತೆ ಅದನ್ನು ರಾಷ್ಟ್ರೀಯ ಕಾಂಗ್ರೆಸ್‌ನ ಲೌಕಿಕವಾದಿ ರಾಷ್ಟ್ರೀಯತೆಗಿಂತ ಪ್ರತ್ಯೇಕಿಸಿ ನೋಡುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಇದಕ್ಕೆ ಕಾಂಗ್ರೆಸ್‌ನ ಲೌಕಿಕವಾದಿ ರಾಷ್ಟ್ರೀಯತೆಯಲ್ಲಿ ಅಡಕವಾಗಿರುವ ಅಸ್ಪಷ್ಟತೆಯೇ ಪ್ರಮುಖ ಕಾರಣವೆನ್ನಬಹುದು. ಈ ಕುರಿತು ಒಂದೆರಡು ಅಂಶಗಳನ್ನು ಈ ಮೊದಲೇ ಪ್ರಸ್ತಾಪಿಸಲಾಗಿದೆ. ಅಂದರೆ ಒಂದು ರಾಷ್ಟ್ರೀಯವಾದಿ ಅರಿವಾಗಿ ಹಿಂದುತ್ವದ ಬೇರುಗಳನ್ನು ವಿವೇಕಾಣದರ ಭಾರತದ ಪಾರಮಾರ್ಥಿಕ ಶ್ರೇಷ್ಠತೆಯ ಕಲ್ಪನೆಯಲ್ಲಿ, ಬಂಕಿಮಚಂದ್ರರ ವಿಚಾರಗಳಲ್ಲಿ, ಅರವಿಂದರ ಸಾಂಸ್ಕೃತಿಕ ರಾಷ್ಟ್ರೀಯವಾದಿಗಳಿಂದಾಗಲೀ ಅಥವಾ ಹಿಂದುತ್ವವಾದಿಗಳಿಂದಾಗಲಿ ಕರೆಯುವಂತಿಲ್ಲ. ಯಾಕೆಂದರೆ ಹಿಂದೂಪರತೆಯನ್ನು ಹಿಂದುತ್ವವಾದವೆಂದು ಬಗೆಯುವಂತಿಲ್ಲ. ಒಂದು ರಾಷ್ಟ್ರೀಯವಾದಿ ಸಿದ್ಧಾಂತವಾಗಿ ಹಿಂದುತ್ವಕ್ಕೆ ಒಂದು ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರಲ್ಲಿ ಸರ್ವಪ್ರಥಮರೆಂದರೆ ವಿನಾಯಕ ದಾಮೋದರ ಸಾವರ್ಕರ್‌. ಸಾವರ್ಕರ್‌ಅವರು ಭಾರತದ ಸ್ವಾತತ್ರ್ಯ ಹೋರಾಟದ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಅಥವಾ ಹಿಂದುತ್ವಕ್ಕೆ ಒಂದು ತಾತ್ವಿಕ ರಾಜಕೀಯ ಸ್ವರೂಪವನ್ನು ಒದಗಿಸಿದರು. ‘ಹಿಂದುತ್ವ’ ಎನ್ನುವ ಪದವನ್ನು ಮೊಟ್ಟಮೊದಲ ಬಾರಿಗೆ (ಇಂದು ಅದನ್ನು ನಾವು ಬಳಸುವ ಅರ್ಥದಲ್ಲಿ)ಪ್ರಯೋಗಿಸಿದವರೂ ಅವರೇ. ಸಾವರ್ಕರರ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಲ್ವಲ್ಕರ್‌, ಮಹಾರಾಷ್ಟ್ರ ಧಾರಣ ಸಮಿತಿ, ಭಾರತೀಯ ಜನ ಸಂಘದ ದೀನ ದಯಾಳು ಉಪಾಧ್ಯಾಯ ಮೊದಲಾದವರಿಂದ ಅದು ಪ್ರವರ್ಧಮಾನಕ್ಕೆ ಬಂದು, ಇಂದು ಅದು ಲೌಕಿಕವಾದಿ ರಾಷ್ಟ್ರೀಯತೆಗೆ ಸೆಡ್ಡು ಹೊಡೆದು ನಿಂತಿದೆ.

ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯ ತನ್ನ ವಾದವನ್ನು ‘ಹಿಂದುತ್ವ’ ಹಿಂದೂ ನಾಗರಿಕತೆಯ ಕಲ್ಪನೆಯ ಆಧಾರದಲ್ಲಿ ಮುಂದಿಡುತ್ತದೆ. ಹಿಂದುತ್ವದ ಪ್ರಕಾರ ಹಿಂದೂ ಎನ್ನುವುದು ಒಂದು ಧರ್ಮ ಅಥವಾ ಧಾರ್ಮಿಕತೆಯ ಸಂಕೇತವಾಗಿರದೆ ಅದು ಒಂದು ನಾಗರಿಕತೆಯ ಅಥವಾ ಜೀವನಕ್ರಮದ ಗುರುತಾಗಿದೆ. ಹಿಂದೂ ಎನ್ನುವ ನಾಗರಿಕತೆ ತನ್ನ ಮೂಲ ಸ್ವಭಾವದಲ್ಲಿಯೇ ಅತ್ಯಂತ ಪ್ರಜಾಸತ್ತಾತ್ಮಕವಾದದ್ದು, ಅನೇಕತೆಯನ್ನು ಒಳಗೊಳ್ಳುವಂತಹದ್ದು ಹಾಗೂ ಬಹುತ್ವವನ್ನು ಮಾನ್ಯ ಮಾಡುವಂತಹದ್ದು. ಒಬ್ಬ ದೇವರು, ಒಂದು ಧರ್ಮಗ್ರಂಥ, ಒಬ್ಬ ಪ್ರವಾದಿ ಎನ್ನುವ ಸಿಮೆಟಿಕ್‌ಧಾರ್ಮಿಕ ಪರಂಪರೆಗಿಂತ ಶ್ರೇಷ್ಠವಾದ ಅದರ ಸಾಂಸ್ಕೃತಿಕ ಮೌಲ್ಯಗಳು, ಹಿಂದುತ್ವದ ಪ್ರಕಾರ ಭಾರತದಲ್ಲಿ ರಾಷ್ಟ್ರೀಯತೆಗೆ ಸೂಕ್ತವಾದ ಸಾಂಸ್ಕೃತಿಕ ಸತ್ವವನ್ನು ಒದಗಿಸಬಲ್ಲದು. ಲೌಕಿಕವಾದಿ ರಾಷ್ಟ್ರೀಯತೆಯನ್ನು ಅಲ್ಪಸಂಖ್ಯತರನ್ನು ಪೂಸಿ ಹೊಡೆಯುವ, ಸಾಂಸ್ಕೃತಿಕ ಮೌಲ್ಯಗಳ ಸ್ಪರ್ಶವಿಲ್ಲದ ಪೊಳ್ಳು, ಲೌಕಿಕವಾದಿ ರಾಷ್ಟ್ರೀಯವಾದ ಎಂದು ಗೇಲಿ ಮಾಡುವ ಹಿಂದುತ್ವ, ಭಾರತದಲ್ಲಿ ‘ಹಿಂದೂ’ ಜೀವನಕ್ರಮದ ಶ್ರೇಷ್ಠವಾದ ಸಾಂಸ್ಕೃತಿಕ ಮೌಲ್ಯಗಳ ಮೇಲುಸ್ತುವಾರಿಕೆಯಲ್ಲಿ ಇತರ ಬದುಕಿನ ಕ್ರಮಗಳನ್ನು ಸಂಯೋಜಿಸುವ, ಸಂಘಟಿಸುವ ಹಾಗೂ ಒಳಗೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

ಭಾರತವೆನ್ನುವ ಹಿಂದೂ ರಾಷ್ಟ್ರವನ್ನು ಮಾತೃಭೂಮಿಯಾಗಿ, ಪಿತೃಭೂಮಿಯಾಗಿ ಅಥವಾ ಪುಣ್ಯಭೂಮಿಯಾಗಿ ಪರಿಭಾವಿಸುವ ಹಿಂದುತ್ವಕ್ಕೆ ಸಾವರ್ಕರರ ‘ರಾಜಕೀಯವನ್ನು ಹಿಂದುಗೊಳಿಸಿ ಹಾಗೂ ಹಿಂದೂವನ್ನು ಬಲಗೊಳಿಸಿ’ ಎನ್ನುವ ಉದ್ಗಾರ ಮಂತ್ರ ಸದೃಶವಾಗಿದೆ. ಈ ಅರ್ಥದಲ್ಲಿ ಧರ್ಮ ಹಾಗೂ ರಾಜಕೀಯದ ಪ್ರತ್ಯೇಕತೆಯ ನೆಲೆಯಲ್ಲಿ ನಿಂತ ಲೌಕಿಕವಾದಿ ರಾಷ್ಟ್ರೀಯವಾದಿ ರಾಷ್ಟ್ರೀಯತೆಗೆ ಅದು ಪರ್ಯಾಯವಾಗಿ ಕಾಣಿಸುತ್ತದೆ. ಒಂದೇ ರಾಷ್ಟ್ರ, ಒಂದೇ ಜನಾಂಗ ಹಾಗೂ ಒಂದೇ ಸಂಸ್ಕೃತಿಯ ಅದರ ಏಕ ಘನಾಕಾರದ ಖಚಿತ ರಾಷ್ಟ್ರೀಯತೆಯ ಒಲವು ಅದರ ತೋರಿಕೆಯ ಸರ್ವಧರ್ಮ ಸಮಭಾವದ ಬಗೆಗಿನ ನಿಲುವಿನ ಹೊರತಾಗಿಯೂ ಪ್ರಜಾಸತ್ತಾತ್ಮಕವಾದ ಮೌಲ್ಯಗಳಿಗೆ ವ್ಯತಿರಿಕ್ತವಾದದ್ದು. ಎಲ್ಲವನ್ನೂ ಒಳಗೊಳ್ಳುವ ಅನೇಕತೆಯ ವಿವಿಧ ಸ್ವರಗಳಿಗೆ ಅವಕಾಶ ನೀಡುವ ಅದರ ಔದಾರ್ಯದ ರೂಪ ಒಂದು ಮುಖವಾಡ ಅಷ್ಟೇ. ಮೂಲತಃ ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಾಮಾಜಿಕ ನ್ಯಾಯದ ಕಾಳಜಿಗಳಿಗೆ ಅದರ ನಿಲುವು ಒಲವುಗಳು ಪ್ರತಿಕೂಲವಾದವುಗಳು. ಸ್ವತಂತ್ರ ಭಾರತದ ೬೦ ವರ್ಷಗಳಲ್ಲಿ ಹಿಂದುತ್ವದ ರಾಜಕೀಯ ಸಹಯೋಗಿಗಳಾದ ಭಾರತೀಯ ಜನಸಂಘ ಹಾಗೂ ಭಾರತೀಯ ಜನತಾಪಕ್ಷಗಳ ಟ್ರಾಕ್‌ದಾಖಲೆಗಳು ಮೇಲಿನ ಮಾತುಗಳಿಗೆ ನಿದರ್ಶನಗಳಾಗಿವೆ.

ಹಿಂದುತ್ವದ ರಾಷ್ಟ್ರೀಯತೆಯ ಕಲ್ಪನೆ ನಾವು ಈಗಾಗಲೇ ಚರ್ಚಿಸಿದಂತೆ ಒಂದು ಏಕಘನಾಕಾರದ, ಉರುಟಾದ ಸಮಾಜವೊಂದನ್ನು ಸೃಷ್ಟಿಸುವ ಕಡೆಗೆ ತನ್ನ ಗಮನವನ್ನು ಇರಿಸಿಕೊಂಡಿದೆ. ಭಾರತೀಯ ಸಮಾಜದ ಏರುಪೇರುಗಳನ್ನು ತಟ್ಟಿ ಸಮ ಮಾಡಿ ಓರೆಕೋರೆಗಳನ್ನು ತಿದ್ದಿ ತೀಡುವ ಅದರ ಹಿಂದೂ ಪುನರುತ್ಥಾನವಾದಿ ರಾಷ್ಟ್ರೀಯವಾದ ಅತ್ಯಂತ ಅಪ್ರಜಾಸತ್ತಾತ್ಮಕವಾದದ್ದು ಹೌದಾದರೂ ರಾಷ್ಟ್ರೀಯತೆಯ ಸ್ವರೂಪದ ಬಗೆಗಿನ ನಮ್ಮ ಚರ್ಚೆಗೆ ಅದು ಮುಂದಿಡುವ ಒಂದು ಪ್ರಮೇಯ ಮೂಲ ಜಿಜ್ಞಾಸೆಯ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು. ಈ ಪ್ರಮೇಯವನ್ನು ಹೀಗೆ ಸ್ಥೂಲವಾಗಿ ನಮೂದಿಸಬಹುದು. ರಾಷ್ಟ್ರ ಎನ್ನುವುದು ಕೇವಲ ಒಂದು ರಾಜಕೀಯ ಕೂಡುವಿಕೆ ಮಾತ್ರವಲ್ಲ; ಕೇವಲ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಬುನಾದಿಯಲ್ಲಿ ಕಟ್ಟಲ್ಪಟ್ಟ ರಾಷ್ಟ್ರ ಬಹುಕಾಲ ಉಳಿದುಕೊಳ್ಳಲಾರದು ಹಾಗೂ ಸಂಕಟದ ಸಂದರ್ಭಗಳಲ್ಲಿ ವಿಘಟನೆಗೊಳ್ಳದೆ ತಲೆ ಎತ್ತಿ ನಿಲ್ಲಲಾರದು. ರಾಷ್ಟ್ರ ಅರ್ಥಪೂರ್ಣವಾಗಿ ತನ್ನನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಅದಕ್ಕೆ ಪ್ರಮುಖವಾದ ಕೆಲವು ಸಾಂಸ್ಕೃತಿಕ ಆಶಯಗಳ ಅಗತ್ಯವಿದೆ. ತನ್ನ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಸಂವೇದನಾಶೀಲವಾದ ಜನಸಮುದಾಯ ಮಾತ್ರ ಒಂದು ಸಶಕ್ತವಾದ ಹಾಗೂ ಸ್ವಾವಲಂಬಿಯಾದ ರಾಷ್ಟ್ರವನ್ನು ಸಂಘಟಿಸಬಲ್ಲದು. ಹಿಂದುತ್ವ ಮುಂದಿಡುವ ಈ ಸಂಸ್ಕೃತಿವಾದ ರಾಷ್ಟ್ರೀಯತೆಯ ಸ್ವರೂಪದ ಜಿಜ್ಞಾಸೆಗೆ ಅತ್ಯಂತ ಮುಖ್ಯವಾದದ್ದು. ಕಾಂಗ್ರೆಸ್‌ರಾಷ್ಟ್ರೀಯತೆ ರೂಪುಗೊಳಿಸಿದ ರಾಜಕೀಯ ರಾಷ್ಟ್ರೀಯತೆಗೆ ಇದು ಒಂದು ಪ್ರಬಲವಾದ ಪ್ರತಿಕ್ರಿಯೆಯೂ ಹೌದು.

ಹಿಂದುತ್ವದ ಈ ಸಂಸ್ಕೃತಿನಿಷ್ಠ ರಾಷ್ಟ್ರೀಯತೆಯ ತರ್ಕವನ್ನು ರಾಷ್ಟ್ರದ ಉಳಿವಿನ ಬಗ್ಗೆ ಚಿಂತಿಸುವ ಎಲ್ಲರೂ ಗಮನಿಸಬೇಕಾದುದ್ದಾಗಿದೆ. ಆದರೆ ಹಿಂದುತ್ವ ಭಾರತದ ಯಜಮಾನ ಸಂಸ್ಕೃತಿಯೊಂದನ್ನು ಭಾರತದ ಒಟ್ಟಾರೆ ಸಂಸ್ಕೃತಿ ಎಂದು  ಬಗೆದು ಅದರ ಆಧಾರದಲ್ಲಿ ಇತರ ಕಿರು ಸಂಸ್ಕೃತಿಗಳನ್ನು ಪುನರ್‌ಸಂಘಟಿಸುವ ಕೆಲಸವನ್ನು ಮಾಡುತ್ತಿದೆ. ಅಷ್ಟು ಮಾತ್ರವಲ್ಲದೆ ಅದು ಈ ಯಜಮಾನ ಸಂಸ್ಕೃತಿಯ ಮೇಲುಸ್ತುವಾರಿಕೆಯಲ್ಲಿ ಇತರ ಸಂಸ್ಕೃತಿಗಳನ್ನು ಮೂಲೆಪಾಲು ಮಾಡುವ, ಯಜಮಾನ ಸಂಸ್ಕೃತಿಗೆ ಈ ಸಂಸ್ಕೃತಿಗಳನ್ನು ಅಡಿಯಾಳನ್ನಾಗಿಸುವ ಹುನ್ನಾರದಲ್ಲಿ ಸಕ್ರೀಯವಾದ ಪಾಲುದಾರನಾಗಿದೆ. ಹಾಗಾಗಿ ಅದರ ಸಂಸ್ಕೃತಿನಿಷ್ಠ ವಾದವನ್ನು ಎರಡು ಮೊನಚುಗಳಿರುವ ಆಯುಧವೆಂದು ಪರಿಭಾವಿಸಿ ಅದರ ಬಗ್ಗೆ ನಿರಂತರವಾಗಿ ಎಚ್ಚರದಿಂದಿರಬೇಕಾಗುತ್ತದೆ.