ಎರಡನೆಯ ಮಹಾಯುದ್ಧದಲ್ಲಿ ಇಡೀ ವಿಶ್ವವೇ ಕುರುಕ್ಷೇತ್ರವಾಗಿ ಪರಿಣಮಿಸಿತು. ಜಾಗತಿಕ ಮಾರುಕಟ್ಟೆಯ ಮೇಲಿನ ಸರ್ವಾಧಿಪತ್ಯಕ್ಕಾಗಿ ವಸಾಹತುಶಾಹಿ ಸಾಮ್ರಾಜ್ಯವಾದಿಗಳ ಮಧ್ಯೆ ಕದನ ಭುಗಿಲೆದ್ದಿತು. ಪಾಳೇಗಾರಿ ಕಾಲದ ಇಂಗ್ಲೆಂಡ್‌ನಲ್ಲಿ ವಾರ್ ಆಫ್‌ರೋಜಸ್‌ನಲ್ಲಿ ಊಳಿಗಮಾನ್ಯ ದೊರೆಗಳು ಪರಸ್ಪರ ಕಾದಾಡಿ ಸುಟ್ಟು, ಸುಣ್ಣವಾಗಿದ್ದರು. ಅದೇ ರೀತಿ ವಸಾಹತುಶಾಹಿಗಳು ಕಚ್ಚಾಡಿದ್ದರಿಂದ ಗುಲಾಮ ದೇಶಗಳಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ವಿಮೋಚನಾ ಹೋರಾಟಗಳಿಗೆ ಆನೆಬಲ ಬಂದಿತ್ತು. ವಸಾಹತು ಆಳ್ವಿಕೆಯನ್ನು ಕೊನೆಗೊಳಿಸುವ ಕಾಲ ಕೂಡಿ ಬಂದಿತ್ತು. ವಸಾಹತು ದೇಶಗಳಿಗೆ ಸ್ವಾತಂತ್ರ್ಯ ನೀಡಿ ಮರಳಿ ಮನೆಗೆ ಹೋಗುವುದು ಸಾಮ್ರಾಜ್ಯಶಾಹಿಗಳಿಗೆ ಅನಿವಾರ್ಯವಾಯಿತು. ವಸಾಹತುಶಾಹಿಗಳ ದಬ್ಬಾಳಿಕೆಗೆ ಒಳಗಾಗಿದ್ದ ಅನೇಕ ರಾಷ್ಟ್ರಗಳು ಸ್ವಾತಂತ್ರ್ಯದ ಬಾವುಟ ಹಾರಿಸಿ ಜಯಭೇರಿ ಮೊಳಗಿಸಿದವು.

ಹೊಸತಾಗಿ ಸ್ವಾತಂತ್ರ್ಯಗಳಿಸಿದ ಎಲ್ಲ ದೇಶಗಳಲ್ಲಿಯೂ ಪರಿಸ್ಥಿತಿಗಳು ಏಕರೂಪದವಾಗಿರಲಿಲ್ಲ. ದೇಶದೇಶಗಳ ಮಧ್ಯೆ ಭಿನ್ನತೆಗಳಿದ್ದವು. ದೇಶದೊಳಗೂ ಭಿನ್ನತೆಗಳಿದ್ದವು. ಸ್ವಾತಂತ್ರ್ಯ ಹೋರಾಟ ಸಂಘರ್ಷಗಳಲ್ಲೂ ಭಿನ್ನತೆಗಳಿದ್ದವು. ಕೆಲವು ದೇಶಗಳ ಸ್ವಾತಂತ್ರ್ಯ ಹೋರಾಟಗಳಿಗೆ ಸ್ಪಷ್ಟ ದೇಶಪ್ರಜ್ಞೆಯೂ ಮೂಡಿರಲಿಲ್ಲ. ಅವೆಲ್ಲ ಕೇವಲ ತಾತ್ಕಾಲಿಕ ಬಂಡಾಯದ ಲಕ್ಷಣಗಳಾಗಿದ್ದವು.

ಭಾರತವು ಬ್ರಿಟಿಷ್ ಸಂಕೋಲೆಗಳನ್ನು ಕಳಚಿಕೊಂಡಿತು. ಆದರೆ ದೇಶ ಒಡೆಯಿತು. ಇಂಡಿಯಾ ಮತ್ತು ಪಾಕಿಸ್ತಾನಗಳ ಮಧ್ಯೆ ಗೋಡೆಗಳೆದ್ದವು. ಅವಿಭಜಿತ ಭಾರತದ ಪಾಕಿಸ್ತಾನ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಕ್ರಾಂತಿಕಾರಿ ಸ್ವರೂಪವನ್ನು ಪಡೆದುಕೊಂಡಿರಲಿಲ್ಲ. ಹಾಗೆ ನೋಡಿದರೆ ಪಶ್ಚಿಮ ಪಾಕಿಸ್ತಾನಕ್ಕಿಂತ ಪೂರ್ವ ಪಾಕಿಸ್ತಾನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂದಿತ್ತು. ವಂಗಭಂಗ ಚಳವಳಿಯ ಚರಿತ್ರೆ ಅದಕ್ಕಿತ್ತು.

ಪಶ್ಚಿಮ ಪಾಕಿಸ್ತಾನದ ಊಳಿಗಮಾನ್ಯ ಶಕ್ತಿಗಳು ರಾಜಕೀಯ ಮುನ್ನೆಲೆಗೆ ಬಂದವು. ಅಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳಲಿಲ್ಲ, ಧರ್ಮಪ್ರಭುತ್ವ ಸ್ಥಾಪನೆಗೊಂಡಿತು. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೊಂಡಿತು. ಮತ್ತು ಸೆಕ್ಯೂಲರ್‌ತತ್ವಗಳನ್ನು ಆದರ್ಶವನ್ನಾಗಿಸಿಕೊಂಡಿತು. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಭಾರತ ವಿವಿಧ ಅಭಿವೃದ್ಧಿಶೀಲ ಪ್ರದೇಶಗಳನ್ನು ಅಣಿನೆರೆಸಿ ಅಲಿಪ್ತ ಚಳಿವಳಿಯನ್ನು ನಡೆಸಿತು. ಭಾರತದ ವಿದೇಶಾಂಗ ನೀತಿ ಪ್ರಗತಿಪರ ಧೋರಣೆಯುಳ್ಳದ್ದಾಯಿತು.

ಭಾರತದದ್ದು ಬಂಡವಾಳಶಾಹಿ ಪ್ರಭುತ್ವ ಹೌದು : ಆದರೆ ಪಾಶ್ಚಾತ್ಯ ಮಾದರಿಯದ್ದಲ್ಲ

ಭಾರತ ಸ್ವಾತಂತ್ರ್ಯ ಪಡೆಯಿತು. ಬಂಡವಾಳಶಾಹಿ ಹೊಸವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿಕೊಂಡಿತು. ಆದರೆ ಏಕಾಂಗಿಯಾಗಿ ಆ ಮಾಲೀಕತ್ವ ಸಾಧಿಸುವ  ಸಾಮರ್ಥ್ಯ ಭಾರತದ ಬಂಡವಾಳಶಾಹಿಗಳಿಗೆ ಇರಲಿಲ್ಲ. ಯುರೋಪ್‌ನಲ್ಲಿ ಬಂಡವಾಳಶಾಹಿ ವರ್ಗವು ಊಳಿಗಮಾನ್ಯ ವರ್ಗಗಳನ್ನು ಸದೆಬಡಿದು ಅಸ್ತಿತ್ವಕ್ಕೆ ಬಂದದ್ದಾಗಿತ್ತು. ಆರಂಭದಲ್ಲಿ ನೈತಿಕ ಮತ್ತು ಸಾಂಸ್ಕೃತಿಕ ಮುಂದಾಳತ್ವವನ್ನೂ ನೀಡಿತು. ಆದರೆ ಭಾರತದಲ್ಲಿ ಹಾಗಾಗಲಿಲ್ಲ. ಜಾಗತಿಕ ಮಟ್ಟದಲ್ಲಿ ಬಂಡವಾಳಶಾಹಿ ವಸಾಹತುಶಾಹಿಯಾಗಿ ಪರಿವರ್ತನೆಗೊಂಡು ಪ್ರತಿಗಾಮಿ ಗುಣವನ್ನು ಪಡೆದುಕೊಂಡಾಗ ಭಾರತದಲ್ಲಿ ಬಂಡವಾಳಶಾಹಿ ಬೆಳೆಯಿತು. ಭಾರತದ ಊಳಿಗಮಾನ್ಯ ಶಕ್ತಿಗಳ ವಿರುದ್ಧ ನಿರ್ಣಾಯಕ ಹೋರಾಟ ಮಾಡಿ ಅಸ್ತಿತ್ವಕ್ಕೆ ಬರುವ ಸಂದರ್ಭ ಅದಕ್ಕೆ ಉಂಟಾಗಲಿಲ್ಲ. ವಸಾಹತುಶಾಹಿಯ ಬೆಳವಣಿಗೆಯ ಲಾಭಗಳನ್ನು  ಉಠಾಯಿಸಿಕೊಂಡು ಬೆಳೆಯಿತು. ಊಳಿಗಮಾನ್ಯ ಶಕ್ತಿಗಳೊಂದಿಗೆ ಸಖ್ಯತೆಯನ್ನು ಇರಿಸಿಕೊಂಡಿತು.

ಸಾಮಾನ್ಯವಾಗಿ  ಪ್ರಭುತ್ವದ ಮೇಲೆ ಮಾಲೀಕತ್ವ ಸಾಧಿಸುವ ವರ್ಗವು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದಬ್ಬಾಳಿಕೆ ಮಾಡುವ ಶಕ್ತಿಗಳನ್ನು ಪ್ರಧಾನ ಅಸ್ತ್ರಗಳನ್ನಾಗಿಸಿಕೊಳ್ಳುತ್ತದೆ. ಆದರೆ ಭಾರತದ ಪ್ರಭುತ್ವ ಐತಿಹಾಸಿಕ ಕಾರಣಗಳಿಂದಾಗಿ ಸಂಕಿರ್ಣ ಸ್ವರೂಪವನ್ನು ಪಡೆದುಕೊಂಡಿತು. ಬಂಡವಾಳಶಾಹಿ ವರ್ಗ ಸ್ಪಷ್ಟವಾಗಿ ತನ್ನ ಸರ್ವಾಧಿಕಾರತ್ವವನ್ನು ಘೋಷಿಸಲಿಲ್ಲ ಮತ್ತು ಜನತೆಯ ಮೇಲೆ ಹೇರಲಿಲ್ಲ. ಬಂಡವಾಳಶಾಹಿಯು ಪ್ರಭುತ್ವದ ಮೇಲಿನ ಮಾಲೀಕತ್ವದಲ್ಲಿ ಮುಂಚೂಣಿ ವರ್ಗವಾಗಿದ್ದರೂ ಅದು ವಿವಿಧ ವರ್ಗದೊಂದಿಗೆ ಅಧಿಕಾರ ಹಂಚಿಕೊಂಡರೂ ಉಳಿದ ವರ್ಗಗಳ ಮತ್ತು ದುಡಿಯುವ ವರ್ಗಗಳ ಅಧಿಕಾರಗಳನ್ನು ಮತ್ತು ಅವುಗಳನ್ನು ರಕ್ಷಿಸುವ ಕಾನೂನುಗಳನ್ನು ರದ್ದುಗೊಳಿಸಲಿಲ್ಲ.

ಹಾಗಾಗಿ ದೇಶದ ಬಂಡವಾಳಶಾಹಿ ವರ್ಗ ಊಳಿಗಮಾನ್ಯ ವರ್ಗ ಮಾತ್ರವಲ್ಲದೆ ಉಳಿದ ವರ್ಗಗಳೊಂದಿಗೂ ಅಧಿಕಾರದ ಹಂಚಿಕೆ ಮಾಡಿಕೊಳ್ಳುವ ಮೂಲಕ ಪ್ರಭುತ್ವದ ಆಳ್ವಿಕೆಯಲ್ಲಿ ­ಸಿಂಹಪಾಲು ಪಡೆಯತೊಡಗಿತು. ವಿವಿಧ ವರ್ಗಗಳೊಂದಿಗೆ ಬಂಡವಾಳಶಾಹಿ ಅನುಪಾತಾತ್ಮಕ ಸಂಬಂಧ ಇರಿಸಿಕೊಂಡಿತು. ಹಾಗಾಗಿ ಫಲಾನುಭವಿ ವರ್ಗಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದಾಗಲೆಲ್ಲ ರಾಜಕೀಯ ಸಂಘರ್ಷಗಳು ಸೃಷ್ಟಿಯಾಗತೊಡಗಿದವು.

ಪ್ರಜಾಪ್ರಭುತ್ವ ಶಕ್ತಿಗಳು ಮಿತಿಗಳು : ಸ್ಫೋಟಗೊಂಡ ಬ್ರಾಹ್ಮಣ ವಿರೋಧಿ ಚಳವಳಿಗಳು

ಪ್ರಜಾಪ್ರಭುತ್ವ ಶಕ್ತಿಗಳು ಮತ್ತು ಎಡ ಶಕ್ತಿಗಳು ಜಾತಿ, ವರ್ಣ ಹಾಗೂ ಅಸ್ಪೃಶ್ಯತೆಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಜಾತಿ ಆಧಾರಿತ ಚಳವಳಿಗಳು ಬೆಳೆಯಲು ಅವಕಾಶಗಳುಂಟಾದವು. ಅದೇ ರೀತಿ ಅಸ್ಪೃಶ್ಯತೆಯನ್ನು ಪ್ರತಿಭಟಿಸಿ ದಲಿತ ಚಳವಳಿಗಳು ತಲೆಯೆತ್ತಿದವು.

ಬಂಡವಾಳಶಾಹಿ ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ಜಾತಿ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ. ಆದ್ದರಿಂದ ಪ್ರಜಾಸತ್ತಾತ್ಮಕ ಸ್ವರೂಪದಲ್ಲಿ ಪ್ರಕಟಗೊಳ್ಳಬೇಕಾಗಿದ್ದ ಸಾಮಾಜಿ, ಆರ್ಥಿಕ, ರಾಜಕೀಯ ಸಮಸ್ಯೆಗಳು ಜಾತಿ, ಬುಡಕಟ್ಟು ಹಾಗೂ ಧಾರ್ಮಿಕ ಸ್ವರೂಪದ ಚಳವಳಿಗಳಾಗಿ ಪ್ರಕಟಗೊಳ್ಳತೊಡಗಿದವು.

ಸಾಮಾಜಿ, ಆರ್ಥಿಕ, ರಾಜಕೀಯ ಮುಗ್ಗಟ್ಟುಗಳು, ಜಾತಿ ವ್ಯವಸ್ಥೆಯ ಮುಗ್ಗಟ್ಟುಗಳ ಸ್ವರೂಪವನ್ನು ಪಡೆದುಕೊಂಡವು. ಹಿಂದುಳಿದ ಆರ್ಥಿಕ ಸ್ಥಿತಿಯಲ್ಲಿ, ಔದ್ಯಮಿಕ ಬೆಳವಣಿಗೆಯ ನ್ಯೂನತೆಯಲ್ಲಿ, ಜಡಗೊಂಡ ಉತ್ಪಾದನಾ ಸಂಭಂಧಗಳಲ್ಲಿ ಪ್ರ;ತಿಭಟನೆಗಳು ಮತ್ತು ಚಳವಳಿಗಳು ಧಾರ್ಮಿಕ ಹಾಗೂ ಜಾತಿ ಮುಖವಾಡಗಳನ್ನು ಹಾಕಿಕೊಂಡು ಪ್ರತ್ಯಕ್ಷವಾಗುತ್ತವೆ ಎನ್ನುವ ಮಾತು ಭಾರತದ ಅನೇಕ ಚಳವಳಿಗಳಿಗೆ ಅನ್ವಯಿಸುತ್ತದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವಯಂ ಆಡಳಿತದ ಬೇಡಿಕೆ ಇಟ್ಟಾಗ ಮದ್ರಾಸ್ ಪ್ರಾಂತ್ಯದಿಂದ ವಿರೋಧಗಳು ಬಂದವು. ಕಾಂಗ್ರೆಸ್‌ನಲ್ಲಿ ಮುಖಂಡರಾಗಿದ್ದ ಟಿ.ಎಮ್. ನಾಯರ್ ಮತ್ತು ಪಟ್ಟಿ ತ್ಯಾಗರಾಯ ಚೆಟ್ಟಿಯವರು ಪಕ್ಷ ತೃಜಿಸಿ ಹೊರಬಂದು ‘ನಾನ್ ಬ್ರಾಹ್ಮಿನ್ ಮ್ಯಾನಿಕಫೆಸ್ಟೋ’ ಅನ್ನು ತಂದರು. ಭಾರತೀಯರು ಇನ್ನೂ ಸ್ವಯಂ ಆಡಳಿತಕ್ಕೆ ತಯಾರಾಗಿಲ್ಲ. ಒಂದು ವೇಳೆ ಸ್ವಯಂ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟರೆ ದೇಶ ‘ಬ್ರಾಹ್ಮಣ ಸರ್ವಾಧಿಕಾರ’ ಕ್ಕೆ ಒಳಪಡುವ ಅಪಾಯವಿದೆ ಎಂದು ಅವರು ಬ್ರಿಟಿಷ್ ಆಡಳಿತಕ್ಕೆ ಮನವಿ ಕೊಟ್ಟರು. ಇದು ನಡೆದದ್ದು ೧೯೧೬ ರಲ್ಲಿ.

೧೮೫೭ರಲ್ಲಿ ನಡೆದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಮುಖಂಡತ್ವ ವಹಿಸಿದ್ದ ಮುಸ್ಲಿಮ್ ಸಮುದಾಯವು ಕಾಂಗ್ರೆಸ್ ಮುಖಂಡತ್ವದ ಅಂತಿಮಘಟ್ಟದ ಸ್ವಾತಂತ್ರಯ ಚಳವಳಿಯಿಂದ ಹಿಂದೆ ಸರಿದಿತ್ತು. ಒಂದು ವೇಳೆ ದೇಶಕ್ಕೆ ಸ್ವಾತಂತ್ರಯ ಸಿಕ್ಕರೆ ಅದು ಕೇವಲ ಹಿಂದುಗಳಿಗೆ ಸಿಕ್ಕ ಸ್ವಾತಂತ್ರ್ಯವಾಗುತ್ತದೆ, ಮುಸ್ಲಿಮರು ಎರಡನೆಯ ದರ್ಜೆಯ ಪ್ರಜೆಗಳಾಗಿ ಬಾಳಬೇಕಾದ ಅಪಾಯವಿದೆ, ಅದಕ್ಕಾಗಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಬೇಕು ಎನ್ನುವ ಪ್ರಚಾರ ನಡೆದಿತ್ತು.

ಇಂಥ ಪ್ರಚಾರಗಳ ಹಿಂದೆ ಬ್ರಿಟಿಷರ ಕುಮ್ಮಕ್ಕು, ಪ್ರೇರಣೆ, ಪ್ರೋತ್ಸಾಹಗಳು ಅಡಗಿದ್ದವು. ಆದರೂ ಅಂಥ ಅಭಿಪ್ರಾಯಗಳು ಸೃಷ್ಟಿಯಾಗುವಂಥ ವಾತಾವರಣ ಇದ್ದುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ತನ್ನನ್ನು ಬಹುರಾಷ್ಟ್ರೀಯ, ಬಹುಜನಾಂಗೀಯ, ಬಹುಸಂಸ್ಕೃತಿಯ ಪಕ್ಷ ಎಂದು ಬಿಂಬಿಸಿಕೊಳ್ಳುವಲ್ಲಿ ಸೋತಿತ್ತು ಎನ್ನುವುದನ್ನು ಅಲ್ಲಗೆಳೆಯಲಾಗುವುದಿಲ್ಲ.

ಭಾರತದ ಮುಂದುವರಿದ ಶೂದ್ರ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳು ಬೇರೆ. ಅದೇ ರೀತಿ ಅಸ್ಪೃಶ್ಯರ ಸಮಸ್ಯೆಗಳು ಬೇರೆ ಸ್ವರೂಪದ್ದಾಗಿವೆ. ಈ ಹಿನ್ನಲೆಯಲ್ಲಿ ಮುಖ್ಯವಾಗಿ ಪಂಜಾಬಿನ ಅಕಾಲಿ ಚಳವಳಿ ಮತ್ತು ಅದರ ರಾಜಕೀಯ, ತಮಿಳುನಾಡಿನ ದ್ರಾವಿಡ ಚಳವಳಿ ಮತ್ತು ಅದರ ರಾಜಕೀಯಗಳನ್ನು ಗುರುತಿಸಬಹುದಾಗಿದೆ. ಇನ್ನುಳಿದಂತೆ ದಲಿತ ಮತ್ತು ಬುಡಕಟ್ಟು, ಗುಡ್ಡಗಾಡು ಜನರು, ಆದಿವಾಸಿ ಚಳವಳಿಗಳನ್ನು ಬೇರೆ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕು. ಮುಂದುವರಿದ ಶೂದ್ರ ಜಾತಿಗಳು ತಮ್ಮ ರಾಜಕೀಯದ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ದಲಿತ ಬುಡಕಟ್ಟು, ಆದಿವಾಸಿಗಳು ತಮ್ಮ ಕನಿಷ್ಠ ಬದುಕಿಗಾಗಿ, ಸಮಾಜ ತಮ್ಮನ್ನೂ ಮನುಷ್ಯರು ಎಂದು ಪರಿಗಣಿಸಬೇಕು ಎನ್ನುವ ಇರಾದೆಯಿಂದ ಹೋರಾಡುತ್ತಿದ್ದವು.

ಈ ಸಮಸ್ಯೆಗಳನ್ನೆಲ್ಲ ನಿಭಾಯಿಸುವಂಥ ಸಮಗ್ರ ಕಾರ್ಯಸೂಚಿ ಆಗ ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ.

ಚಳವಳಿಯಾಗಿದ್ದ ಕಾಂಗ್ರೆಸ್ ಪಕ್ಷವಾಗಿ ಪರಿವರ್ತನೆಗೊಂಡಿತು

ಸ್ವಾತಂತ್ರ್ಯ ಚಳವಳಿ ನಡೆಯುವಾಗ ಕಾಂಗ್ರೆಸ್‌ಗೆ ಪಕ್ಷದ ಗುಣಸ್ವಭಾವಗಳಿರಲಿಲ್ಲ. ಅದಕ್ಕೆ ತನ್ನದೇ ಆದ ನಿರ್ದಿಷ್ಟ ಸಿದ್ಧಾಂತವಿರಲಿಲ್ಲ. ಭಿನ್ನ ವಿಚಾರಧಾರೆ, ಭಿನ್ನ ಸಿದ್ಧಾಂತ, ಭಿನ್ನ ತತ್ವಗಳ ಸದಸ್ಯರು ಕಾಂಗ್ರೆಸ್‌ನಲ್ಲಿದ್ದರು. ಮುಖ್ಯವಾಗಿ ಕಮ್ಯುನಿಷ್ಟರು ಮತ್ತು ಸೋಸಿಯಲಿಸ್ಟರು ಕಾಂಗ್ರೆಸ್ ಒಳಗಿದ್ದುಕೊಂಡೇ ಹೊರಗೆ ತಮ್ಮ ಪಕ್ಷದ, ಪ್ರಚಾರ, ಚಳವಳಿ, ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಅದೇ ರೀತಿ ಹಿಂದುತ್ವವಾದಿಗಳು ಕಾಂಗ್ರೆಸ್‌ನಲ್ಲಿದ್ದರು. ಬ್ರಿಟಿಷ್ ವಸಾಹತುಶಾಹಿಯನ್ನು ದೇಶದಿಂದ ತೊಲಗಿಸುವ ಚಳವಳಿಗೆ ಕಾಂಗ್ರೆಸ್ ವೇದಿಕೆಯಾಗಿತ್ತು. ಹಾಗಾಗಿ ಕಾಂಗ್ರೆಸ್ ಎನ್ನುವುದು ಸ್ವಾತಂತ್ರಪೂರ್ವದಲ್ಲಿ ಒಂದು ಚಳವಳಿಯಾಗಿತ್ತು. ಸ್ವಾತಂತ್ರನಂತರ ಅದು ಒಂದು ಪಕ್ಷವಾಗಿ ಪರಿವರ್ತನೆಗೊಳ್ಳತೊಡಗಿತು.

ಕಾಂಗ್ರೆಸ್ಸಿನ ಬಹುತೇಕ ಮುಖಂಡರು ಸಾಮೂಹಿಕ ಚಳವಳಿಗಳ ನೇತಾರರಾಗಿ ಹೊಮ್ಮಿದರು. ಆದರೆ ಪಕ್ಷ ಸಂಘಟನೆಯಲ್ಲಿ ವಿಫಲರಾದರು. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನೊಳಗಿದ್ದ ಕಮ್ಯುನಿಷ್ಟರು ಪಕ್ಷ ಸಂಘಟನೆಯಲ್ಲಿ ನಿಷ್ಣಾತರಾದರು. ಆದರೆ ಕಾಂಗ್ರೆಸ್ ಮುಖಂಡರಂತೆ ಕಮ್ಯುನಿಷ್ಟರು ರಾಷ್ಟ್ರಮಟ್ಟದ ಸ್ವಾತಂತ್ರ ಹೋರಾಟಗಾರರಾಗಿ ಮಿಂಚಲಿಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಬಲಿಷ್ಠವಾದ ಕಮ್ಯುನಿಸ್ಟ್ ಚಳವಳಿಗಳನ್ನು ಕಟ್ಟಿ ಬೆಳೆಸಿದರು. ಅವೆಲ್ಲ ಆಯಾ ಪ್ರಾಂತ್ಯಗಳಿಗೇ ಸೀಮಿತವಾದವು. ಕಾಂಗ್ರೆಸ್ ಪಕ್ಷವು ಶೋಷಿತ ವರ್ಗದ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡಲಿಲ್ಲ. ಬ್ರಿಟಿಶ್ ವಿರೋಧಿ ರಾಷ್ಟ್ರೀಯ ಚಳವಳಿಗಳಿಗೆ ಕಾಂಗ್ರೆಸ್ ಹೆಚ್ಚಿನ ಗಮನ ನೀಡಿತು. ಈ ಕಾರಣದಿಂದ ಆ ಪಕ್ಷದಲ್ಲಿ ಅನೇಕ ರಾಷ್ಟ್ರೀಯ ಮುಖಂಡರು ಹೊರಹೊಮ್ಮಲು ಸಾಧ್ಯವಾಯಿತೆನಿಸುತ್ತದೆ. ಕಮ್ಯುನಿಸ್ಟ್ ಮುಖಂಡರು ತತ್ವಬದ್ಧ, ಶೋಷಿತ ವರ್ಗಗಳ ಪರ ಕಠೋರ ಹೋರಾಟಗಳನ್ನು ನಡೆಸಿದರು. ಅವರು ಕೈಗೊಂಡ ವರ್ಗ ಸಂಘರ್ಷದ ಹೋರಾಟಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೆಲೆನಿಂತು ಮಾಡುವಂಥವಾಗಿದ್ದವು. ಉದಾಹರಣೆಗೆ ತೆಲಂಗಾಣ ರೈತರ ಸಶಸ್ತ್ರ ಹೋರಾಟ, ಕಾರ್ಮಿಕ ರೈತ ವರ್ಗಗಳಿಗೆ ಸಿಗುವ ಸ್ವಾತಂತ್ರ ಮಾತ್ರ ನೈಜ ಸ್ವಾತಂತ್ರ ಇಲ್ಲದಿದ್ದರೆ ಅದು ಬಂಡವಾಳಶಾಹಿ ಭೂಮಾಲೀಕ ವರ್ಗಗಳಿಗೆ ಸಿಗುವ ಸ್ವಾತಂತ್ರ ಎನ್ನುವ ತಿಳುವಳಿಕೆ ಕಮ್ಯುನಿಸ್ಟರದಾಗಿತ್ತು.

ಆದರೆ ಕಾಂಗ್ರೆಸ್ ಧೋರಣೆ ಬೇರೆಯಾಗಿತ್ತು. ಬ್ರಿಟಿಶರನ್ನು ದೇಶಬಿಟ್ಟು ತೊಲಗಿಸುವುದು ಅದರ ಮುಖ್ಯ ಗುರಿಯಾಗಿತ್ತು. ‘ಬ್ರಿಟಿಶ್ ಹಠಾವ್’ ಅಜೆಂಡಾಕ್ಕೆ ಯಾರೇ ಕೈಗೂಡಿಸಲಿ ಅವರನ್ನೆಲ್ಲ ಕಾಂಗ್ರೆಸ್ ತನ್ನೊಳಕ್ಕೆ ಕರೆದುಕೊಳ್ಳುತ್ತಿತ್ತು. ಆದರೆ ಸ್ವಾತಂತ್ರನಂತರ ಅದೇ ಧೋರಣೆಯನ್ನು ಮುಂದುವರೆಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲಲ. ಬೇರೆ ಪಕ್ಷದ ಸಂವಿಧಾನವನ್ನು ಒಪ್ಪಿಕೊಂಡವರಿಗೆ ಕಾಂಗ್ರೆಸ್ ಸದಸ್ಯತ್ವ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.

ಸರ್ದಾರ್ ಪಟೇಲ್ ಕಾಂಗ್ರೆಸ್ ಸಂವಿಧಾನ ಮತ್ತು ಕಾರ್ಯಕ್ರಮಗಳಿಗೆ ಹಲವು ತಿದ್ದುಪಡಿಗಳನ್ನು ತಂದರು. ಅದರ ಪರಿಣಾಮವಾಗಿ ಸೋಸಿಯಲಿಸ್ಟರಿಗೆ ಕಾಂಗ್ರೆಸ್ ಬಲಪಂಥೀಯ ಪಕ್ಷವಾಗಿ ಕಾಣಿಸತೊಡಗಿತು. ಸೋಷಿಯಲಿಸ್ಟರು ಕಾಂಗ್ರೆಸ್ ನಿಂದ ಸಿಡಿದು ಹೊರಬರುವಂತಾಯ್ತು.

ಕಾಂಗ್ರೆಸ್ ಒಳಗೇ ನೆಹರೂ ಎಡಪಂಥೀಯರಾಗಿಯೂ, ಸರ್ದಾರ್ ಪಟೇಲ್ ಬಲಪಂಥೀಯರಾಗಿಯೂ ಕಾಣಿಸತೊಡಗಿದರು. ಸ್ವಾತಂತ್ರಾನಂತರ ಕಾಂಗ್ರೆಸ್ ಏಕರೂಪದ ಪಕ್ಷವಾಗಿ ರೂಪುಗೊಂಡಿತೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಆದರೆ ಹಳೆಯ ಗುಣದಿಂದಾಗಿ ಅದು ಸಾಧ್ಯವಾಗಲಿಲ್ಲ. ವಿಭಿನ್ನ ಉದ್ದೇಶ, ತತ್ವ, ಹಿತಾಸಕ್ತಿಗಳ ಮೈತ್ರಿಕೂಟದ ಅವಶೇಷಗಳು ಅದಕ್ಕೆ ಅಂಟಿಕೊಂಡಿದ್ದವು.

ನೆಹರೂ ಮತ್ತು ಪಟೇಲ್ : ಘರ್ಷಣೆಗಳು

ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ಮಹಾತ್ಮ ಗಾಂಧೀಜಿ ಅವರು, ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂದು ಸಲಹೆಯಿತ್ತರು. ಕಾಂಗ್ರೆಸ್ ತತ್ವಗಳಲ್ಲಿ ನಂಬಿಕೆ ಇರುವವರು ‘ಭಾರತೀಯ ಲೋಕ ಸೇವಕ ಸಂಘ’ ಎನ್ನುವ ಸಂಘಟನೆ ರಚಿಸಿಕೊಳ್ಳಬೇಕೆನ್ನುವ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯಿತು.

ಕಾಂಗ್ರೆಸ್ ಪ್ರಧಾನವಾಗಿ ಗಾಂಧೀಜಿ ಅವರ ತಾತ್ವಿಕ ಧೋರಣೆಗಳನ್ನು ಅನುಸರಿಸುತ್ತಿತ್ತಾದರೂ ಭಿನ್ನ ದೃಷ್ಟಿಕೋನ, ತತ್ವಸಿದ್ಧಾಂತಗಳವರಿಗೂ ಮುಕ್ತ ಅವಕಾಶ ಕಾಂಗ್ರೆಸ್‌ನಲ್ಲಿತ್ತು. ಕಮ್ಯುನಿಸ್ಟರು, ಸೋಸಿಯಲಿಸ್ಟರು, ಮತ್ತಿತರಿಗೆ ಕಾಂಗ್ರೆಸ್ ಸಾಮಾನ್ಯ ವೇದಿಕೆಯಾಗಿತ್ತು.

ಕಮ್ಯುನಿಸ್ಟರು ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳಬಹುದಾಗಿತ್ತು. ಪ್ರತ್ಯೇಕವಾಗಿ ತಮ್ಮ ಪಕ್ಷದ ಸಂಘಟನೆಯನ್ನೂ ಮಾಡಿಕೊಳ್ಳಬಹುದಾಗಿತ್ತು. ಅದೇ ರೀತಿ ಸೋಸಿಯಲಿಸ್ಟರಿಗೂ ಅವಕಾಶವಿತ್ತು.

ಕಾಂಗ್ರೆಸ್ ಸಕಲ ವೈರುಧ್ಯಗಳನ್ನೂ ತೆಕ್ಕೆಯಲ್ಲಿರಿಸಿಕೊಂಡು ಸ್ವಾತಂತ್ರ ಸಂಗ್ರಾಮದಲ್ಲಿ ತೊಡಗಿತ್ತು. ಕಾಂಗ್ರೆಸ್‌ನಲ್ಲಿ ಇಂದಿಗೂ ಅದರ ಹಳೆಯ ಗುಣದ ಪಳೆಯುಳಿಕೆಗಳನ್ನು ಕಾಣಬಹುದು. ಹಾಗಾಗಿಯೇ ಅದಕ್ಕೆ ರಾಷ್ಟ್ರೀಯ ಧೋರಣೆಯ ಸ್ವರೂಪ ಅಂಟಿಕೊಂಡು ಬಂದಿದೆ. ಕಾಂಗ್ರೆಸ್ಸನ್ನು ಕೋಮುವಾದಿ ಪಕ್ಷವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇಂದಿಗೂ ಉಳಿದುಕೊಂಡು ಬಂದಿರುವುದು ಅ ಕಾರಣದಿಂದಾಗಿಯೇ.

ಕಾಂಗ್ರೆಸ್ ನಿಂದ ಕಮ್ಯುನಿಷ್ಟರು ಮತ್ತು ಸೋಸಿಯಲಿಸ್ಟರು ಹೊರಹೋದ ಮೇಲೆ ಅದರ ಎಡ ಧೋರಣೆಗೆ ಭಾರೀ ಪೆಟ್ಟು ಬಿದ್ದಿತು. ಆದರೂ ಸಹ ಕಾಂಗ್ರೆಸ್ ಅಲ್ಪಸಂಖ್ಯಾತರ ಆಸ್ಪೃಶ್ಯರ, ಹಿಂದುಳಿದವರ ಪಕ್ಷ ಎನ್ನುವ ಇಮೇಜನ್ನು ಕಾಯ್ದುಕೊಂಡು ಬಂದಿತು. ಪಕ್ಷ ತೊರೆದುಹೋದ ಸೋಸಿಯಲಿಸ್ಟರ ಮತ್ತು ಕಮ್ಯುನಿಸ್ಟರ ಎಷ್ಟೋ ಘೋಷಣೆಗಳನ್ನು ತನ್ನವನ್ನಾಗಿಸಿಕೊಂಡು ಕಾಂಗ್ರೆಸ್ ಮುಂದುವರಿಯಿತು.

ಸ್ವಾತಂತ್ರಪೂರ್ವದಲ್ಲಿ ಕಾಂಗ್ರೆಸ್‌ಗೆ ಒಂದು ರೀತಿಯ ಯಕ್ಷಿಣಿ ಶಕ್ತಿ ಇತ್ತು. ಅದು ಗಾಂಧೀಜಿ ಅವರ ನೇತೃತ್ವದಿಂದ ಸಾಧ್ಯವಾಗಿತ್ತು. ಆನಂತಗರ ನೆಹರೂ ನೇತೃತ್ವದಲ್ಲಲಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಂಡಿತು. ನೆಹರೂ ಮತ್ತು ಸರದಾರ್ ಪಟೇಲ್ ರ ನಡುವೆ ಪರಸ್ಪರ ವೈರುಧ್ಯಗಳು ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿದ್ದವು.

ನೆಹರೂ – ಕಾಂಗ್ರೆಸ್‌ನಲ್ಲಿ ಎಡಶಕ್ತಿಗಳು ಮುಂದುವರಿದುಕೊಂಡು ಹೋಗಲಿ ಎನ್ನುವ ವಾದಕ್ಕೆ ಬೆಂಬಲಿಸಿದರು.

ಪಟೇಲ್ – ಬೇರೆ ಪಕ್ಷದವರಿಗೆ ಕಾಂಗ್ರೆಸ್‌ನಲ್ಲಿ ಸದಸ್ಯತ್ವ ಬೇಡವೇಂದು ಪಟ್ಟು ಹಿಡಿದರು

ನೆಹರೂ – ಆಸ್ತಿಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಸೇರಿಸಬೇಕೆನ್ನುವುದರತ್ತ ಒಲವು ಹೊಂದಿರಲಿಲ್ಲ.

ಪಟೇಲ್ – ಆಸ್ತಿಹಕ್ಕು ಮೂಲಭೂತ ಹಕ್ಕು ಆಗಲೇಬೇಕೆಂದು ಪಟ್ಟುಹಿಡಿದರು.

ನೆಹರೂ – ರಾಜ, ನವಾಬ ಜಮೀನ್ಧಾರರಿಗೆ ಪರಿಹಾರಧನ ನೀಡದೆಯೇ ರಾಜಸ್ವವನ್ನು ವಶಪಡಿಸಿಕೊಳ್ಳುವುದಕ್ಕೆ ಒಲವು ತೋರಿದರು.

ಪಟೇಲ್ – ರಾಜರು, ನವಾಭ, ಜಮೀನ್ದಾರರು, ಉನ್ನತ ಅಧಿಕಾರಶಾಹಿಗಳಿಗೆ ಪರಿಹಾರಧನ ನೀಡಲೇಬೇಕು ಎಂದು ಪಟ್ಟುಹಿಡಿದರು.

ಇಂಥ ಅನೇಕ ವಿಷಯಗಳಲ್ಲಿ ನೆಹರೂ ಮತ್ತು ಪಟೇಲ್ ಅವರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಇದರ ಪರಿಣಾಮ ಪಕ್ಷದ ಮೇಲೆ ಉಂಟಾಯಿತು. ಅದೇ ರೀತಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಂಬಂಧಗಳ ಮೇಲೂ ಪರಿಣಾಮ ಉಂಟಾಯಿತು.

ಸರ್ದಾರ ಪಟೇಲ್ ಬಲವಾದಿಗಳಾಗಿದ್ದರು. ನೆಹರೂ ಎಡವಾದಿಗಳಾಗಿದ್ದರು. ಪಟೇಲ್ ತತ್ವಸಿದ್ಧಾಂತಗಳಿಗಾಗಿ ಆತ್ಮತ್ಯಾಗಕ್ಕೂ ಸಿದ್ಧರಾದವರಾಗಿದ್ದರು. ನೆಹರೂ ಎಡ ಸೈದ್ಧಾಂತಿಕವಾದಿಗಳಾಗಿದ್ದರೂ ‘ಫ್ಲೆಕ್ಸಿಬಲ್’ ಆಗಿದ್ದರು ಪಟೇಲ್ ಅದಕ್ಕೆ ವಿರುದ್ಧವಾಗಿ ಕಠಿಣವಾದಿಯಾಗಿ ಉಕ್ಕಿನ ಮನುಷ್ಯ ಎಂದು ಖ್ಯಾತಿ ಗಳಿಸಿದ್ದರು.

ಪಟೇಲ್ ಅವರ ನಿಷ್ಠುರತೆ, ಪ್ರಾಮಾಣಿಕತೆ, ತತ್ವಬದ್ಧತೆಗಳಿಗೆ ಒಂದು ಉದಾಹರಣೆ ನೀಡಬಹುದು.

ಮಧ್ಯಂತರ ಸರಕಾರದಲ್ಲಿ ವಲ್ಲಭಭಾಯಿ ಪಟೇಲ್ ಉಪಪ್ರಧಾನಿಯಾಗಿದ್ದಾಗ ನಡೆದ ಪ್ರಸಂಗವದು. ಪಟೇಲ್ ಅವರ ಮಗ ದಯಾಭಾಯೀ ಪಟೇಲ್ ದಿನಪತ್ರಿಕೆ ಆರಂಭಿಸುವುದಕ್ಕೋಸ್ಕರ ಸಾರ್ವಜನಿಕ ಷೇರುಗಳನ್ನು ಸಂಗ್ರಹಿಸಲಾರಂಭಿಸುತ್ತಾರೆ. ಆಗ ಮಾಧ್ಯಮದವರು ಪಟೇಲ್‌ಗೆ ‘ನಿಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನಲ್ಲವೆ ನಿಮ್ಮ ಮಗ ?’ ಎಂದು ಪ್ರಶ್ನಿಸುತ್ತಾರೆ.

ಪಟೇಲರಿಗೆ ಆ ವಿಷಯ ತಿಳಿದಿರುವುದಿಲ್ಲ. ಅವರು ಕ್ರೋಧಗೊಂಡು “ಅವನು ಇಂದಿನಿಂದ ನನ್ನ ಮಗನೇ ಅಲ್ಲ” ಎಂದು ಘೋಷಿಸುತ್ತಾರೆ. ಅಂದಿನಿಂದ ಅವರ ಚಿಕಿತ್ಸೆಯಲ್ಲಿ ಸಹಾಯ ಮಾಡಲು ಆಸ್ಪತ್ರೆಯಲ್ಲಿ ಅವರ ಮಗಳು ಇರುತ್ತಾಳೆ.

ಪಟೇಲ್ ಅವರ ಮಗ ದಯಾಭಾಯೀ ಪಟೇಲ್ ಅವರು ತಂದೆಯನ್ನು ಕೊನೆಗಾಲದಲ್ಲಿ ನೋಡಬೇಕೆನ್ನುವ ಒತ್ತಾಸೆಗೊಳಗಾಗುತ್ತಾರೆ. ಆಸ್ಪತ್ರೆಗೆ ಬರುತ್ತಾರೆ. ತನ್ನ ಭೇಟಿಯಿಂದ ತಂದೆ ಮತ್ತಷ್ಟು ಆಘಾತಗೊಂಡು ಮುಂಚೆಯೇ ನಿಧನಗೊಂಡಾರು ಎನ್ನು ಭಯ ಆತನನ್ನು ಕಾಡುತ್ತದೆ. ತನ್ನ ಸಹೋದರಿಯನ್ನು ಹೊರಕ್ಕೆ ಕರೆಸಿ ತಂದೆಯ ಅಪ್ಪಣೆ ಕೇಳಿ ಬಾ ಎಂದು ಕಳಿಸುತ್ತಾರೆ. ಆಕೆ ಹೋಗಿ “ದಯಾ” ಎನ್ನುತ್ತಿದ್ದಂತೆಯೇ ಪಟೇಲ್‌ರ ಮುಖ ಕೋಪಾಗ್ನಿಯಿಂದ ಕೆಂಪಾಗುತ್ತದೆ. ಮಾತಾಡಲು ಶಕ್ತಿಯಿರುವುದಿಲ್ಲ. ಬೇಡ ಬೇಡ ಎನ್ನುವಂತೆ ಮುಖವನ್ನು ಮಾತ್ರ ಹೊರಳಿಸುತ್ತಾರೆ…. ದಯಾ ನಿರೀಕ್ಷಿಸಿದಂತೆಯೇ ತಂದೆ ಕೊನೆಯುಸಿರೆಳೆಯುತ್ತಾರೆ. ದಯಾ ತನ್ನ ಮುಖ ನೋಡಿದೊಡನೆ ತಂದೆ ಆಘಾತಗೊಂಡು ಸಾಯಬಹುದು ಎಂದುಕೊಂಡಿದ್ದ. ಆದರೆ ಪಟೇಲ್ ದಯಾನ ಹೆಸರು ಕೇಳಿದೊಡನೆ ಕೊನೆಯುಸಿರೆಳೆದರು. ಮಗನ ಹೆಸರು ಕೇಳದಿದ್ದರೆ ಇನ್ನೂ ಕೆಲ ಘಂಟೆಗಳು, ಕೆಲ ದಿವಸಗಳವರೆಗೆ ಪಟೇಲ್ ದೇಹದಲ್ಲಿ ಉಸಿರಾಟ ನಡೆಯುತ್ತಿತ್ತೇನೋ!

ಈ ವಿಷಯದಲ್ಲಿ ಪಟೇಲ್ ಮತ್ತು ನೆಹರೂ ಮಧ್ಯೆ ಅಗಾಧ ವ್ಯತ್ಯಾಸವಿತ್ತು. ನೆಹರೂ ತಮ್ಮ ಮಗಳು ಇಂದಿರಾಗಾಂಧಿ ಅವರನ್ನು ರಾಜಕೀಯಕ್ಕೆ ತರುವ ಮೂಲಕ ವಂಶಪಾರಂಪರ್ಯ ರಾಜಕೀಯಕ್ಕೆ ನಾಂದಿ ಹಾಡಿದರು. ೧೯೫೮ರಲ್ಲಿ ಇಂದಿರಾಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರು.

ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್. ಪಟೇಲ್ ಅವರು ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಮಾತಾಡುತ್ತಾ, “ನನ್ನನ್ನೂ ಒಳಗೊಂಡಂತೆ ಇಂದಿನ ಬಹುತೇಕ ರಾಜಕಾರಣಿಗಳು ನೆಹರೂವಾದಿಗಳು; ಗಾಂಧೀವಾದಿಗಳಲ್ಲ. ನೆಹರೂ ವಂಶಪಾರಂಪರ್ಯದ ರಾಜಕೀಯ ಮಾಡಿದರು ಗಾಂಧೀಜಿ ಮಾಡಲಿಲ್ಲ. ಹಾಗಾಗಿ ನಾವ್ಯಾರು ಗಾಂಧೀವಾದಿಗಳಲ್ಲ ಕಾಂಗ್ರೆಸ್ಸಿನವರನ್ನೂ ಒಳಗೊಂಡಂತೆ…” ಎಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರಥಮ ಚುನಾವಣೆ : ಜನತೆಯ ಹಬ್ಬವಾಯಿತು

ಭಾರತದ ಜನತೆ ಪ್ರಥಮ ಸಾರ್ವತ್ರಿಕ ಚುನಾವಣೆಯನ್ನು ಯಾವ ರೀತಿಯಿಂದ ಸ್ವಾಗತಿಸಿತು ಎಂದು ನೋಡುವುದು ಅನೇಕ ದೃಷ್ಟಿಗಳಿಂದ ಬಹುಮುಖ್ಯವಾಗುತ್ತದೆ. ಏಕೆಂದರೆ ಕಾಂಗ್ರೆಸ್‌ ನಿಂದ ಸಿಡಿದು ಹೋದ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳು ದೇಶಕ್ಕೆ ಸಿಕ್ಕ ಆಗಸ್ಟ್ ಹದಿನೈದರ ಸ್ವಾತಂತ್ರ್ಯವನ್ನು ‘ಝೂಟಿ ಆಜಾದ್’, ಖೊಟ್ಟಿ ಸ್ವಾತಂತ್ರ್ಯ, ವಿದೇಶಿ ಶೋಷಕರಿಂದ ಸ್ವದೇಶೀ ಶೋಷಕರಿಗೆ ಆದ ಅಧಿಕಾರ ಹಸ್ತಾಂತರ ಇತ್ಯಾದಿಯಾಗಿ ಹೇಳತೊಡಗಿದ್ದವು.

ಆದರೆ ಇಡೀ ಭಾರತದ ಜನತೆಯ ಮನಸ್ಸು ಬೇರೆಯೇ ಆಗಿತ್ತು. ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯವನ್ನು ಜನಸಾಮಾನ್ಯರು ಸ್ವಾಗತಿಸಿದರು. ತಮ್ಮ ಬದುಕಿನ ಭಾಗ್ಯದ ಬಾಗಿಲು ತೆರೆಯಿತು ಎಂದು ಸಂಭ್ರಮಗೊಂಡರು. ೧೯೫೧-೫೨ರಲ್ಲಿ ದೇಶದಲ್ಲಿ ಪ್ರಥಮ ಚುನಾವಣೆ ಜರುಗಿತು. ಬ್ರಿಟಿಶ್ ಸಾಮ್ರಾಜ್ಯಶಾಹಿಗಳು, ಭಾರತ ಎಂದೆಂದಿಗೂ ಗುಲಾಮತನದಲ್ಲಿರಬೇಕಾದ ದೇಶ ಎಂದು ಹೇಳುತ್ತಿದ್ದರು. ಸ್ವತಃ ಅದು ತನ್ನನ್ನು ತಾನು ಆಳಿಕೊಳ್ಳಲಾರದು ಎಂದು ಎಲ್ಲೆಡೆ ಪ್ರಚಾರ ಮಾಡುತ್ತಿದ್ದರು. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವುದು ದುಸ್ಸಾಧ್ಯ, ಜಾತಿಜಾತಿಗಳ ಮಧ್ಯೆ, ವರ್ಣ ವರ್ಣಗಳ ಮಧ್ಯೆ, ಪ್ರದೇಶ ಪ್ರದೇಶಗಳ ಮಧ್ಯೆ ಭಾರೀ ಕೋಲಾಹಲಗಳು ನಡೆದು ದೇಶ ಛಿದ್ರವಿಚ್ಛಿದ್ರಗೊಂಡು ಹೋಗುತ್ತದೆ ಎಂದು ಹೇಳುತ್ತಿದ್ದರು. ಅದಕ್ಕಾಗಿ ‘ಹೋಮ್‌ರೂಲ್’ ಅನ್ನು ವಿರೋಧಿಸಿ ಬ್ರಿಟಿಷರ ಆಳ್ವಿಕೆಯೇ ಮುಂದುವರಿಯಬೇಕೆಂದು ಭಾರತದ ಅನೇಕ ಜಾತಿ, ಪಂಗಡ, ಪ್ರದೇಶ, ಗುಡ್ಡಗಾಡುಗಳ ಸಂಘಟನೆಗಳು ಹಾಗೂ ಸಂಸ್ಥೆಗಳಿಂದ ಬಂದ ಪತ್ರಗಳನ್ನು ಪ್ರದರ್ಶಿಸುತ್ತಿದ್ದರು.

ಆದರೆ ಪ್ರಥಮ ಸಾರ್ವತ್ರಿಕ ಚುನಾವಣೆ ಸಾಮ್ರಾಜ್ಯಶಾಹಿಗಳ ಆಶಯಕ್ಕೆ ತಣ್ಣೀರೆರಚಿತು. ದೇಶ ವಿಭಜನೆಯ ಆಘಾತವಾಗಿತ್ತು. ಕೋಮುಜ್ವಾಲೆ ಭುಗಿಲುಗೊಂಡಿತ್ತು. ಅನೇಕ ಸಂಸ್ಥಾನ, ಪ್ರಾಂತ, ಪ್ರದೇಶ, ಗುಡ್ಡಗಾಡುಗಳು ಅಖಂಡ ಭಾರತದಿಂದ ಪ್ರತ್ಯೇಕವಾಗಲು ಚೀರಾಡುತ್ತಿದ್ದವು.

ಅಂಥ ಸೂಕ್ಷ್ಮ ಹಾಗೂ ಸಂಕೀರ್ಣ ಪರಿಸ್ಥಿತಿಯಲ್ಲಿ ಪ್ರಥಮ ಚುನಾವಣೆ ನಡೆದ ರೀತಿ ಇಡೀ ವಿಶ್ವವನ್ನೇ ಹುಬ್ಬೇರಿಸುವಂತೆ ಮಾಡಿತು. ಕೆಲವೆಡೆ ಬೆರಳೆಣಿಕೆಯ ಹಿಂಸಾಚಾರ ಗಲಭೆಗಳನ್ನು ಹೊರೆತುಪಡಿಸಿದರೆ ಇಡೀ ದೇಶದಲ್ಲಿ ಚುನಾವಣೆ ಶಾಂತಿಯುವಾಗಿ ನಡೆಯಿತು. ಅಷ್ಟು ಮಾತ್ರವಲ್ಲ, ದೇಶದ ಒಟ್ಟು ಮತದಾನ ಶೇ. ೪೬.೬ರಷ್ಟು ಆಯಿತು. ಆಗ ದೇಶದಲ್ಲಿದ್ದ ನಿರಕ್ಷರಿಗಳ ಸಂಖ್ಯೆ ನೋಡಿದರೆ ಈ ಪ್ರಮಾಣದ ಮತದಾನ ಆಗಲಿಕ್ಕಿಲ್ಲ ಎನ್ನುವ ನಿರೀಕ್ಷೆ ರಾಜಕೀಯ ವಲಯದ ಪಂಡಿತರಿಗಿತ್ತು. ಗಮನಾರ್ಹ ಸಂಗತಿಯೆಂದರೆ, ಆ ಚುನಾವಣೆಯಲ್ಲಿ ಶೇ. ೪೦ರಷ್ಟು ಮಹಿಳೆಯರು ಮತ ಚಲಾಯಿಸಿದ್ದು.

ಗ್ರಾಮೀಣ ಮಹಿಳೆಯರು ಸಾಲಂಕೃತರಾಗಿ ಮತದಾನ ಮಾಡಲು ಬಂದು ಸಾಲುಗಟ್ಟಿ ನಿಂತುಕೊಂಡಿದ್ದರು. ಮನೆ ಮುಂದೆ ರಂಗೋಲಿಗಳನ್ನು ಹಾಕಿದ್ದರು. ತಮಗೆ ಸಿಕ್ಕಿದ ಓಟಿನ ಅಧಿಕಾರವನ್ನು ಸಡಗರ ಸಂಭ್ರಮಗಳಿಂದ ಸ್ವಾಗತಿಸಿದರು. ಪ್ರಥಮ ಸಾರ್ವತ್ರಿಕ ಚುನಾವಣೆಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಟ್ಟ ಮುಖ್ಯ ಚುನಾವಣಾಧಿಕಾರಿ ಸುಕುಮಾರ್ ಸೇನ್ ವಿದೇಶಗಳಿಂದಲೂ ಪ್ರಶಂಸಿಸಲ್ಪಟ್ಟರು. ಅನೇಕ ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಚುನಾವಣೆ ನಡೆಸಲು ಪರಿಣತ ಮಾರ್ಗದರ್ಶನಕ್ಕಾಗಿ ಸುಕುಮಾರ್ ಸೇನರನ್ನು ಆಹ್ವಾನಿಸಿದವು.

ಆ ಚುನಾವಣೆಯಲ್ಲಿ ನೆಹರೂ ೪೦,೦೦೦ ಕಿ.ಮೀ. ಸಂಚರಿಸಿ ಪ್ರಚಾರ ಕೈಗೊಂಡರು. ಮೂರೂವರೆ ಕೋಟಿ ಜನರು ನೆಹರೂ ಭಾಷಣಗಳನ್ನು ಕೇಳಿದರು.

ನೆಹರೂ : ” ಈ ಚುನಾವಣೆ ಸೆಕ್ಯೂಲರ್ ಶಕ್ತಿಗಳು ಮತ್ತು ಕೋಮುವಾದಿ ಶಕ್ತಿಗಳ ಮಧ್ಯದ ಕದನ” ಎಂದು ಘೋಷಿಸಿದರು. ಸೆಕ್ಯೂಲರಿಸಂ ಅನ್ನು ಚುನಾವಣೆಯ ಪ್ರಮುಖ ಪ್ರಶ್ನೆಯನ್ನಾಗಿ ಜನತೆಯ ಮುಮದೆ ಮಂಡಿಸಿದರು. ಪ್ರಥಮ ಸಾರ್ವತ್ರಿಕ ಚುನಾವಣೆಗಳಲ್ಲಿ ವಿವಿಧ ಪಕ್ಷಗಳು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಪಡೆದುಕೊಂಡ ಸ್ಥಾನಗಳು ಹಾಗೂ ಒಟ್ಟು ಶೇಕಡವಾರೂ ಮತಗಳ ವಿವರಗಳು ಈ ಕೆಳಗಿನಂತಿವೆ.

ಪಕ್ಷಗಳು

ಲೋಕಸಭೆಯಲ್ಲಿ ಗಳಿಸಿದ ಸ್ಥಾನಗಳು

ವಿ.ಸಭೆಯಲ್ಲಿ ಗಳಿಸಿದ ಸ್ಥಾನಗಳು

ಶೇಕಡವಾರು ಮತಗಳು

ಭಾರತ ರಾಷ್ಟ್ರೀಯ ಕಾಂಗ್ರೆಸ್

೩೬೪

೨೨೪೮

೪೫%

ಸಿ.ಪಿ.ಐ ಮತ್ತು ಕಮ್ಯುನಿಸ್ಟ್ ಬೆಂಬಲಿತ

೨೩

೧೪೭

೪.೬

ಸೋಷಿಯಲಿಸ್ಟ್ ಪಕ್ಷ

೧೨

೧೨೫

೧೦.೬%

ಕೆ.ಎಂ.ಪಿ.ಪಿ.

೫.೮%

ಜನಸಂಘ

೩.೧%

ಹಿಂದುಮಹಾಸಭಾ

೮೫

೪%

ಆರ್‌ಆರ್‌ಪಿ (ರಾಮರಾಜ್ಯ ಪರಿಷತ್‌)

೨.೩%

ಇತರೆ ಪಕ್ಷಗಳು

೩೦

೨೭೩

೧೨%

ಸ್ವತಂತ್ರ ಅಭ್ಯರ್ಥಿಗಳು ೪೧ ೩೨೫ ೧೫.೮%

ಹರಿದು ಬಂದ ಜನಬೆಂಬಲ : ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿಲ್ಲದ ವಿರೋಧ ಪಕ್ಷಗಳು

ಭಾರತದ ಅನೇಕ ವಿರೋಧ ಪಕ್ಷಗಳಿಗೆ ಸ್ವಾತಂತ್ರ್ಯ ಪೂರ್ವಕಾಲದ ಇತಿಹಾಸವಿದೆ. ಹಾಗಾಗಿ ಆ ಎಲ್ಲ ವಿರೋಧಿ ಶಕ್ತಿಗಳಿಗೂ ಸಹ ಭಾರತದ ಮತದಾರ ಮನ್ನಣೆ ನೀಡಿದ. ಹಾಗೆ ಮಾಡುವ ಮೂಲಕ ತಾನು ಒಬ್ಬ ಸಮರ್ಥ ಪ್ರಜಾಪ್ರಭುತ್ವವಾದಿ ಎನ್ನುವುದನ್ನೂ ತೋರಿಸಿಕೊಟ್ಟ. ಆದರೆ ವಿರೋಧ ಪಕ್ಷಗಳಿಗೆ ಜನತೆ ನೀಡಿದ ಬೆಂಬಲವನ್ನು ವಿರೋಧ ಪಕ್ಷಗಳ ನಾಯಕರು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದನ್ನು ನೋಡಬಹುದಾಗಿದೆ. ತಮಗೆ ಸಿಕ್ಕ ಜನತೆಯ ಬೆಂಬಲವನ್ನು ವಿರೋಧ ಪಕ್ಷಗಳು ಅಂದೂ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ ಇಂದಿಗೂ ಸಹ ಬಳಸಿಕೊಳ್ಳುವ ಸಾಮರ್ಥ ಅವುಗಳಲ್ಲಿ ಇಲ್ಲ. ಇದು ಒಂದು ರೀತಿಯ ರಾಜಕೀಯ ಅಭಾಸದಂತೆ ತೋರುತ್ತದೆ.

ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ೧೯೫೧-೫೨ರಲ್ಲಿ ನಡೆದಾಗ ವಿರೋಧ ಪಕ್ಷಗಳು ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆದುಕೊಂಡವು.

ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳಲ್ಲಿ ವಿವಿಧ ಚುನಾವಣೆಗಳಲ್ಲಿ ವಿರೋಧ ಪಕ್ಷಗಳು ಗೆದ್ದುಕೊಂಡ ಸ್ಥಾನಗಳ ಶೇಕಡವಾರು ಅಂಕಿ ಅಂಶಗಳು ಈ ಕೆಳಗಿನಂತಿವೆ.

ಪಾರ್ಲಿಮೆಂಟ್

೧೯೫೨ರ ಚುನಾವಣೆಯಲ್ಲಿ ೨೬% ಸ್ಥಾನಗಳು
೧೯೫೭ರ ಚುನಾವಣೆಯಲ್ಲಿ ೨೫% ಸ್ಥಾನಗಳು
೧೯೬೨ರ ಚುನಾವಣೆಯಲ್ಲಿ ೨೮% ಸ್ಥಾನಗಳು
ವಿಧಾನಸಭೆಗಳು
೧೯೫೨ರ ಚುನಾವಣೆಯಲ್ಲಿ ೩೨% ಸ್ಥಾನಗಳು
೧೯೫೭ರ ಚುನಾವಣೆಯಲ್ಲಿ ೩೫% ಸ್ಥಾನಗಳು
೧೯೬೨ರ ಚುನಾವಣೆಯಲ್ಲಿ ೪೦% ಸ್ಥಾನಗಳು

ವಿಪಕ್ಷಗಳು ಅನೇಕವಿದ್ದರೂ ಕಾಂಗ್ರೆಸ್ಸನ್ನು ಅಲುಗಾಡಿಸುವ ಶಕ್ತಿ ಅವಕ್ಕೆ ಬರಲಿಲ್ಲ. ರಾಜಕೀಯ ಅಧಿಕಾರ ಇಂಗ್ಲೆಂಡ್, ಅಮೆರಿಕಾಗಳಂಥ ಶ್ರೀಮಂತ ದೇಶಗಳಲ್ಲಿ ಎರಡು ಪಕ್ಷಗಳಲ್ಲಿ ಧ್ರುವೀಕರಣಗೊಂಡಿತ್ತು. ಆ ರೀತಿಯಲ್ಲಿ ಭಾರತದಲ್ಲಿ ಧ್ರುವೀಕರಣಗೊಳ್ಳಲಿಲ್ಲ. ವಿರೋಧ ಪಕ್ಷಗಳ ಅಸಾಮರ್ಥ್ಯ ಕಾಂಗ್ರೆಸ್ಸಿನ ರಾಜಕೀಯ ಏಕಾಧಿಪತ್ಯಕ್ಕೆ ದಾರಿ ಮಾಡಿಕೊಟ್ಟಿತು. ಒಂದು ರೀತಿಯಲ್ಲಿ ನಮ್ಮ ವ್ಯವಸ್ಥೆಯ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಅನೇಕ ದಶಕಗಳವರೆಗೆ ಕಾಂಗ್ರೆಸ್ಸಿಗೆ ವರದಾನವಾಗಿ ಪರಿಣಮಿಸಿತು.