ಮಮತಾ ಬ್ಯಾನರ್ಜಿ : ತೃಣಮೂಲ ಕಾಂಗ್ರಸ್

ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಭಿನ್ನಮತಗದಿಂದಾಗಿ ಪ್ರತ್ಯೇಕ ಪಕ್ಷವನ್ನು ರಚಿಸಿಕೊಂಡರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಪಾರಮ್ಯದೊಡನೆ ಸಂಘರ್ಷಿಸಿ ನಿಂತವರಲ್ಲಿ ಮಮತಾ ಸಹ ಪ್ರಮುಖರು. ಮಹಾರಾಷ್ಟ್ರದಲ್ಲಿ ಪವಾರ್ ಸಿಡಿದುಹೋದಂತೆ ಪಶ್ಚಿಮ ಬಂಗಾಳದಲ್ಲಿ ಮಮತಾ ಕಾಂಗ್ರೆಸ್‌ ನಿಂದ ಸಿಡಿದು ಹೋದರು. ಪವಾರ್ ಮತ್ತು ಮಮತಾ ಅವರ ನಡುವೆ ಮುಖ್ಯವಾದ ಸಾಮ್ಯತೆಯಿದೆ. ಇಬ್ಬರೂ ಕಾಂಗ್ರೆಸ್‌ ನಿಂದ ಹೊರಹೋಗಿ ತಮ್ಮದೇ ಪ್ರತ್ಯೇಕ ಪಕ್ಷ ರಚಿಸಿಕೊಂಡು ಅದೇ ಕಾಂಗ್ರೆಸ್‌ ನೊಂದಿಗೆ ಸೇರಿ ಸರಕಾರದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲು ಹಾಕಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ಶರದ್ ಪವಾರ್ ಅವರ ಎನ್.ಸಿ.ಪಿ.ಗೆ ಮಹಾರಾಷ್ಟ್ರ ಸರಕಾರದಲ್ಲಿ ಪಾಲು ಪಡೆಯಲು ಸಾಧ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಪರ್ಯಾಯವಾಗಿ ಕಾಂಗ್ರೆಸ್ ಮತ್ತು ತೃಣಮೂಲಗಳು ಬಲಿಷ್ಠಗೊಂಡಿಲ್ಲ. ಕೇಂದ್ರದ ಯು.ಪಿ.ಎ. ಸರಕಾರದಲ್ಲಿ ಮಮತಾ ರೇಲ್ವೆ ಮಂತ್ರಿಗಳಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಾರ್ಕ್ಸಿಸ್ಟ್ ಅಧಿಪತ್ಯವನ್ನು ಕೊನೆಗಾಣಿಸಲು ಮಾರ್ಕ್ಸಿಸ್ಟ್ ಸರಕಾರದ ಎಲ್ಲ ವಿರೋಧಿಗಳನ್ನು ಒಂದೆಡೆ ತಂದು ಹೋರಾಟ ಮಾಡುತ್ತಿದ್ದಾರೆ.

ನಕ್ಸಲ್‌ವಾದ : ಈಡೇರದ ಕ್ಷಿಪ್ರಕ್ರಾಂತಿಯ ಕನಸು

ಚೀನಾದಲ್ಲಿ ೧೯೪೮ ರಲ್ಲಿ ಕಮ್ಯುನಿಸ್ಟ್ ಕ್ರಾಂತಿ ನಡೆಯಿತು. ಭಾರತದ ಮೇಲೆ ಅದರ ಪ್ರಭಾವ ಉಂಟಾಯಿತು. ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ತೊಡಗಿದ್ದ ಅನೇಕರಿಗೆ ಸಶಸ್ತ್ರ ಹೋರಾಟದ ಸ್ಫೂರ್ತಿಯನ್ನು ಚೀನ ಕ್ರಾಂತಿ ನೀಡಿತ್ತು. ಚಾರುಮಜುಮ್‌ದಾರ್, ಕಾನು ಸನ್ಯಲ್, ತರಿಮೆಲ ನಾಗಿರೆಡ್ಡಿ ಮುಂತಾದವರು ಚೀನಾ ಮಾದರಿಯಲ್ಲಿ ಸಶಸ್ತ್ರ ಹೋರಾಟಕ್ಕೆ ಕರೆ ಕೊಟ್ಟರು. ತಮ್ಮ ಪಕ್ಷವನ್ನು ಕಮ್ಯುನಿಸ್ಟ್ ಆಫ್ ಇಂಡಿಯಾ (ಮಾರ್ಕ್ಸಿಸ್ಟ್ ಲೆನಿನಿಸ್ಟ್) ಎಂದು ಘೋಷಿಸಿದರು. ಭೂಗತ ಚಟುವಟಿಕೆಗಳಲ್ಲಿ ತೊಡಗಿರುವ ನಕ್ಸಲ್‌ವಾದಿಗಳು ಚುನಾವಣೆಗಳನ್ನು ಬಹಿಷ್ಕರಿಸಿದರು. ಚೀನಾ ಮಾದರಿಯಲ್ಲಿ ಭಾರತದಲ್ಲಿಯೂ ಕ್ಷಿಪ್ರಕ್ರಾಂತಿ ನಡೆಸಬಹುದು ಎನ್ನುವ ವಾದ ಅವರದಾಯಿತು. ಪಾರ್ಲಿಮೆಂಟರಿ ಹೋರಾಟಗಳನ್ನು ಬಿಟ್ಟು ಸಶಸ್ತ್ರ ಹೋರಾಟ ನಡೆಬೇಕೆನ್ನುವ ವಾದವನ್ನು ಮಂಡಿಸಿದರು.

ಪಶ್ಚಿಮ ಬಂಗಾಳದ ನಕ್ಸಲ್ ಬರಿಯಲ್ಲಿ ಸಶಸ್ತ್ರ ಗೆರಿಲ್ಲಾ ಹೋರಾಟ ಪ್ರಥಮಬಾರಿಗೆ ಸ್ಫೋಟಗೊಂಡಿತು. ಆ ಹೋರಾಟಕ್ಕೆ ಚಾರುಮುಜುಮ್‌ದಾರ್ ನೇತೃತ್ವ ನೀಡಿದರು. ಸಶಸ್ತ್ರ ಹೋರಾಟದ ಮೂಲಕ ಮಾವೋ ಮಾದರಿಯಲ್ಲಿ ಭಾರತದಲ್ಲಿ ಕ್ರಾಂತಿ ನಡೆಸಬೇಕು ಎನ್ನುವವರಿಗೆ ‘ನಕ್ಸಲೈಟ್’ ಎನ್ನುವ ಹೆಸರು ಬಂದಿತು. ‘ನಕ್ಸಲ್ ಬರಿ’ ಹಳ್ಳಿಯಿಂದ ‘ನಕ್ಸಲೈಟ್’ ಶಬ್ದ ಹುಟ್ಟಿಕೊಂಡಿತು.

ಚೀನಾದಲ್ಲಿ ಮಾವೋ ನಡೆಸಿದಂತೆ ಕ್ಷಿಪ್ರಗತಿಯಲ್ಲಿ ಕ್ರಾಂತಿ ಜರುಗಿಸಬೇಕೆಂದು ನಕ್ಸಲೈಟರು ಮುನ್ನಡೆದರು. ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಕಮ್ಯುನಿಸ್ಟ್ ಪಕ್ಷಗಳಲ್ಲಿ ತತ್ವ ಭೇದಗಳಿರುವುದನ್ನು ಈಗಾಗಲೇ ವಿವರಿಸಲಾಗಿದೆ.

ಸಿ.ಪಿ.ಐ. (ಎಂ) ರೈತ ಮತ್ತು ಕಾರ್ಮಿಕರ ಸಖ್ಯತೆಯಲ್ಲಿ ವಿವಿಧ ಜನ ಸಮೂಹಗಳನ್ನು ಅಣಿನೆರೆಸಿ ಕ್ರಾಂತಿಕಾರಿ ಚಳವಳಿಯನ್ನು ನಡೆಸಬೇಕು ಎನ್ನುವ ಧೋರಣೆಯನ್ನು ಹೊಂದಿತ್ತು.

ಬ್ರಿಟಿಶರ ಕೈಗೊಂಬೆಯಾಗಿದ್ದ ಹೈದ್ರಾಬಾಸ್ ನಿಜಾಮ್ ಪ್ರಭುತ್ವದ ವಿರುದ್ಧ ಕಮ್ಯುನಿಸ್ಟ್ ಪಕ್ಷದ ಪಿ.ಸುಂದರಯ್ಯನವರ ನೇತೃತ್ವದಲ್ಲಿ ಕೃಷಿಕೂಲಿಕಾರರು, ಬಡರೈತರು ಸಶಸ್ತ್ರ ಹೋರಾಟ ನಡೆಸಿದರು. ಅದರಲ್ಲಿ ಭಾಗಶಃ ಯಶಸ್ಸನ್ನೂ ಗಳಿಸಿದರು.

ಆಗ ಕಮ್ಯುನಿಸ್ಟ್ ಪಕ್ಷವು ಸಶಸ್ತ್ರ ಹೋರಾಟವನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿತು ಮತ್ತು ಜನತೆಯ ಸ್ವಾತಂತ್ರ್ಯ ಹೋರಾಟದ ಪರಿಣಾಮವಾಗಿ ಸಿಕ್ಕಿರುವ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ಉಪಯೋಗಿಸಿಕೊಂಡು ವರ್ಗ ಹಾಗೂ ಸಮೂಹಗಳನ್ನು ಸಂಘಟಿಸಬೇಕು ಎನ್ನುವ ತೀರ್ಮಾನ ಕೈಗೊಂಡಿತು. ಸಶಸ್ತ್ರ ಹೋರಾಟವನ್ನು ಸ್ಥಗಿತಗೊಳಿಸದಿದ್ದರೆ ಇನ್ನೂ ಸಾವಿರಾರು ಕ್ರಾಂತಿಕಾರಿಗಳು ವ್ಯರ್ಥವಾಗಿ ಬಲಿಯಾಗಬೇಕಾಗುತ್ತಿತ್ತು.

ಸಶಸ್ತ್ರ ಹೋರಾಟವನ್ನು ದೇಶದ ಒಂದು ಚಿಕ್ಕ ಪ್ರದೇಶದಲ್ಲಿ ನಡೆಸಿದರೆ ಸೇನೆ ಅದನ್ನು ಧ್ವಂಸಗೊಳಿಸುತ್ತದೆ. ಇಡೀ ದೇಶಮಟ್ಟದಲ್ಲಿ ತಾಳ್ಮೆಯಿಂದ ಜಾಗೃತಿಯಿಂದ ಜನಸಂಘಟನೆ ಮಾಡಿದಾಗ ಕ್ರಾಂತಿ ಯಾವ ಸ್ವರೂಪದಲ್ಲಿ ಜರುಗಬೇಕೆನ್ನುವುದು ನಿರ್ಧಾರವಾಗಲು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಿತು ಅವಿಭಜಿತ ಕಮ್ಯುನಿಸ್ಟ್ ಪಕ್ಷ.

ನಂತರ ಸಂಸದೀಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ದೇಶೀಯ ಬಂಡವಾಳಶಾಹಿಯ ಗುಣಸ್ವರೂಪದ ಬಗೆಗೆ ಭಿನ್ನಾಭಿಪ್ರಾಯಗಳು ಮೂಡಿದವು. ಆಗ ಸಿ.ಪಿ.ಐ. ಮತ್ತು ಸಿ.ಪಿ.ಐ (ಎಂ) ಎಂದು ಪಕ್ಷ ವಿಭಜನೆಗೊಂಡಿತು. ನಂತರ ೧೯೬೭ ರಲ್ಲಿ ಸಿ.ಪಿ.ಐ. (ಎಂ)ನಿಂದ ಚಾರು ಮಜುಮ್‌ದಾರ್ ಮತ್ತು ಕಾನು ಸನ್ಯಲ್ ಹೊರಬಂದು ಸಿ.ಪಿ.ಐ. (ಎಂಎಲ್‌) ಪಕ್ಷವನ್ನು ಘೋಷಿಸಿಕೊಂಡರು. ಆ ಪಕ್ಷ ಪಾರ್ಲಿಮೆಂಟರಿ ಹೋರಾಟಗಳು ನಿರರ್ಥಕ ಎಂದು ಹೇಳಿತು. ಸಶಸ್ತ್ರ ಹೋರಾಟವನ್ನು ಮುಂದುವರಿಸಿದರೆ ಮಾತ್ರ ಭಾರತದಲ್ಲಿ ಚೀನಾ ಮಾದರಿ ಕ್ರಾಂತಿ ಸಂಭವಿಸಲು ಸಾಧ್ಯ ಎಂದು ವಾದಿಸಿತು.

೧೯೬೭ ಮೇ ೨೫ರಂದು ಪಶ್ಚಿಮ ಬಂಗಾಲದ ನಕ್ಸ್‌ಲ್‌ಬರಿ ಗ್ರಾಮದಲ್ಲಿ ಭೂವಿವಾದಕ್ಕೆ ಸಂಬಂಧಿಸಿ ರೈತನೋರ್ವನ ಮೇಲೆ ದಾಳಿ ನಡೆಯುತ್ತದೆ. ದಾಳಿ ನಡೆಸಿದ ಜಮೀನ್ದಾರನ ಮೇಲೆ ಪ್ರತಿ ದಾಳಿ ನಡೆಯುತ್ತದೆ. ಆಗ ಜಮೀನ್ದಾರಿ ವರ್ಗದ ವಿರುದ್ಧ ಸಶಸ್ತ್ರ ಹೋರಾಟ ಬೇಡ, ತೆಲಂಗಾಣದಲ್ಲಿ ಸಶಸ್ತ್ರ ಹೋರಾಟದ ಅನುಭವ ಸಿಕ್ಕಿದೆ. ಸಾವಿರಾರು ಕ್ರಾಂತಿಕಾರಿಗಳು ವ್ಯರ್ಥ ಸಾವನಪ್ಪಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಜಮೀನ್ದಾರಿವರ್ಗದ ವಿರುದ್ಧ ಹೋರಾಟ ಕೊಂಡೊಯ್ಯಬೇಕು ಎಂದು ಪಕ್ಷದಲ್ಲಿ ಬಹುಮತ ಅಭಿಪ್ರಾಯ ಮೂಡುತ್ತದೆ. ಹಾಗಾಗಿ ಚಾರುಮಜುಮ್‌ದಾರ್ ಮತ್ತಿತರರು ಸಿ.ಪಿ.ಎಂ. ಪಕ್ಷದಿಂದ ಹೊರಬರುತ್ತಾರೆ.

ನಕ್ಸಲ್ ಚಳವಳಿಯನ್ನು ಗೆರಿಲ್ಲಾ ಹೋರಾಟದೊಂದಿಗೆ ಸಂಯೋಜಿಸಿ ನೋಡುವುದು ಸಾಮಾನ್ಯವಾಗಿದೆ. ಗೆರಿಲ್ಲಾ ಸಶಸ್ತ್ರ ಹೋರಾಟಗಳು ನಸೆದಲ್ಲೆಲ್ಲ ನಕ್ಸಲ್ ಚಳವಳಿ ಎಂದು ಹೇಳಲು ಬರುವುದಿಲ್ಲ. ಇಂದು ಅನೇಕ ಭಯೋತ್ಪಾದಕ ಸಂಘಟನೆಗಳೂ ಗೆರಿಲ್ಲಾ ಸಶಸ್ತ್ರ ಯುದ್ಧ ತಂತ್ರಗಳನ್ನು ಅನುಸರಿಸುತ್ತಿವೆ. ಆ ಭಯೋತ್ಪಾದಕರು ಮಾರ್ಕ್ಸ್‌ವಾದಿಗಳಲ್ಲ. ಅಷ್ಟು ಮಾತ್ರವಲ್ಲ. ಮಾರ್ಕ್ಸ್‌ವಾದದ ಬದ್ಧ ಶತ್ರುಗಳೂ ಆಗಿದ್ದಾರೆ.

ಖೋಮೇನಿವಾದಿಗಳು, ಬಿನ್‌ಲಾಡೆನ್‌ವಾದಿಗಳು ಮಾರ್ಕ್ಸ್‌ವಾದಿಗಳನ್ನು ಇಸ್ಲಾಮ್ ಧರ್ಮದ ಪರಮಶತ್ರುಗಳೆಂದು ಕರೆಯುತ್ತಾರೆ;. ಗೆರಿಲ್ಲಾ ಸಶಸ್ತ್ರ ಯುದ್ಧ ತಂತ್ರವು, ಯಾವುದೇ ಉದ್ದೇಶಕ್ಕಾಗಿ ರೂಪುಗೊಳ್ಳುವ ಹೋರಾಟದ ಭಾಗವಾಗಿ ಬರುವಂಥದ್ದು ; ಕೇವಲ ನಕ್ಸಲ್‌ವಾದಿ ಹೋರಾಟಕ್ಕೆ ಸೀಮಿತಗೊಂಡಂಥದ್ದಲ್ಲ.

ಹಂಪೆಯ ಸಮೀಪದಲ್ಲಿಯ ಕುಮ್ಮಟದುರ್ಗದ ಕುಮಾರರಾಮ ಸಹ ಗೆರಿಲ್ಲಾ ಯುದ್ಧ ತಂತ್ರಗಳನ್ನು ಅನುಸರಿಸುತ್ತಿದ್ದ. ಗುಡ್ಡಗಾಡು ಪ್ರದೇಶವಾದುದರಿಂದ ಅಂಥ ಯುದ್ಧ ತಂತ್ರಗಳಿಗೆ ಅಲ್ಲಿ ಅವಕಾಶವಿತ್ತು. ಬುಡಕಟ್ಟು ಜನರಲ್ಲಿಯ ಆತ್ಮಾಹುತಿ ನಂಬಿಕೆ ಗೆರಿಲ್ಲಾ ಯುದ್ಧಪಡೆಗಳಲ್ಲಿ ಅದ್ಭುತ ಶಕ್ತಿ ಆವೇಶಗೊಳ್ಳುವಂತೆ ಮಾಡುತ್ತದೆ. ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಗೆರಿಲ್ಲಾ ಯುದ್ಧ ತಂತ್ರಗಳನ್ನು ಅನುಸರಿಸುತ್ತಿದ್ದ. ಹೀಗೆ ಅನೇಕ ಉದಾಹರಣೆಗಳನ್ನು ನೀಡಬಹುದು. ಎಲ್ಲ ಗೆರಿಲ್ಲಾ ಹೋರಾಟಗಳಿಗೂ ಒಂದೇ ತೆರೆನಾದ ಧ್ಯೇಯೋದ್ದೇಶಗಳಿರುವುದಿಲ್ಲ. ಕ್ರಾಂತಿಕಾರಿ ಮತ್ತು ಪ್ರತಿಕ್ರಾಂತಿಕಾರಿ ಗುಣಸ್ವಭಾವಗಳನ್ನು ಪಡೆದ ಭಿನ್ನ ಹೋರಾಟಗಳಾಗಿರುತ್ತವೆ. ಅಷ್ಟು ಮಾತ್ರವಲ್ಲ, ಒಂದು ಕಮ್ಯುನಿಸ್ಟ್ ಪಕ್ಷ ನಡೆಸುವ ಗೆರಿಲ್ಲಾ ಯುದ್ಧದ ಉದ್ದೇಶ ಮತ್ತು ಭಯೋತ್ಪಾದಕ ಸಂಘಟನೆ ನಡೆಸುವ ಗೆರಿಲ್ಲಾ ಯುದ್ಧದ ಉದ್ದೇಶಗಳು ಭಿನ್ನವಾಗಿರುವಂತವೂ ಆಗಿರುತ್ತವೆ.

ತೆಲಂಗಾಣ ಸಶಸ್ತ್ರ ಹೋರಾಟ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿಯೇ ನಡೆಯಿತು. ಆದರೆ ನಂತರದಲ್ಲಿ ಹುಟ್ಟಿಕೊಂಡ ಚಾರುಮಜುಮ್‌ದಾರ್ ನೇತೃತ್ವದ ನಕ್ಸಲ್ ಹೋರಾಟ ತೆಲಂಗಾಣ ಹೋರಾಟದ ತತ್ವಗಳಿಗೆ ತೀರಾ ಭಿನ್ನವಾದ ರೀತಿಯಲ್ಲಿ ನಡೆಯಿತು.

ಚಾರುಮಜುಮ್‌ದಾರ್, ಮುಖ್ಯವಾಗಿ ಅನ್ಹಿಲೇಶನ್ (annihilation) ತತ್ವವನ್ನು ಆಧರಿಸಿ ಸಶಸ್ತ್ರ ಹೋರಾಟವನ್ನು ನಡೆಸಬೇಕೆಂದು ವಾದಿಸಿದರು. ಶತ್ರು ವರ್ಗದ ಬಿಡಿವ್ಯಕ್ತಿ ಅಥವಾ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಚಳವಳಿಯನ್ನು ಬಲಿಷ್ಠಗೊಳಿಸಲು ಸಾಧ್ಯ ಎಂದು ಹೇಳುತ್ತದೆ. ಆ ತತ್ವ. ನಕ್ಸಲ್ ಚಟುವಟಿಕೆಗಳು ಬಹುತೇಕವಾಗಿ ಭೂಗತವಾಗಿ ನಡೆಯುವುದರಿಂದ ವಿಶಾಲ ಜನಸಮುದಾಯದೊಳಗೆ ಬೆರೆತು ಜನತೆಯನ್ನು ಸಂಘಟಿಸುವುದು ಅವರಿಗೆ ಅಸಾಧ್ಯವಾಗಿದೆ. ಪ್ರಜಾಪ್ರಭುತ್ವ ಚಳವಳಿಯ ಮುನ್ನೆಲೆಗೆ ಜನತೆಯನ್ನು ಕೊಂಡೊಯ್ಯುವ ಶಕ್ತಿಗಳ ಅಭಾವದಿಂದಾಗಿ ಕೋಮುವಾದಿ ಶಕ್ತಿಗಳಲು ಅದರ ದುರ್ಲಾಭವನ್ನು ಉಠಾಯಿಸಿಕೊಳ್ಳುವಂತಾಗಿದೆ. ಜನತೆಯನ್ನು ಕೋಮುವಾದಿಗಳ ಪಾಡಿಗೆ ಬಿಟ್ಟು ಸಕ್ರಿಯ ಕ್ರಾಂತಿಕಾರಿಗಳು ಅಡವಿ ಸೇರಿದರು ಎನ್ನುವ ಪರಿಸ್ಥಿತಿ ನಕ್ಸಲೀಯರದು. ಆಗ ನಿಷ್ಕ್ರೀಯ ಜನತೆ ; ಸಕ್ರಿಯ ನಾಯಕ ಎನ್ನುವ ವಾತಾವರಣ ನಿರ್ಮಾಣಗೊಂಡು ವೈಯಕ್ತಿಕ ದುಸ್ಸಾಹಸಗಳ ಯೋಚನೆಗಳು ಮಿಂಚತೊಡಗುತ್ತವೆ.

ಬ್ರಾಹ್ಮಣ ವಿರೋಧಿ ದ್ರಾವಿಡ ಚಳವಳಿ : ತಮಿಳುನಾಡು ರಾಜಕಾರಣ

ತಮಿಳುನಾಡಿನಲ್ಲಿ ಹುಟ್ಟಿಕೊಂಡ ದ್ರಾವಿಡ ಚಳವಳಿಯು ದ್ರಾವಿಡ ಸ್ಥಾನದ ಬೇಡಿಕೆಯನ್ನಿಟ್ಟಿತು. ಕುತೂಹಲಕರ ಸಂಗತಿ ಏನೆಂದರೆ ಆ ದ್ರಾವಿಡ ಸ್ಥಾನದಲ್ಲಿ ಕನಾಟಕ, ಆಮದ್ರ, ಕೇರಳ ಭಾಷಾ ಪ್ರದೇಶಗಳನ್ನೂ ಸೇರಿಸಿಕೊಳ್ಳಲಾಗಿತ್ತು. ಆಶ್ಚರ್ಯವೇನೆಂದರೆ ಆ ಮೂರೂ ಭಾಷಿಕರಿಗೆ ದ್ರಾವಿಡ ಸ್ಥಾನಕ್ಕೆ ನಿಮ್ಮ ಸಮ್ಮತಿ ಇದೆಯೇ ಎಂದು ಸೌಜನ್ಯಕ್ಕಾಗಿಯಾದರೂ ತಮಿಳರು ಕೇಳಿರಲಿಲ್ಲ. ದ್ರಾವಿಡ ಭಾಷೆಗಳಿಗೆಲ್ಲ ತಮಿಳೇ ಮೂಲ ಲೀಡರ್ ಎನ್ನುವಂತೆ ಪ್ರತ್ಯೇಕ ರಾಷ್ಟ್ರ ದ್ರಾವಿಡಸ್ಥಾನವನನ್ನು ಘೋಷಿಸಲಾಗಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬ್ಗ ಸಹ ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿತ್ತು. ಪಂಜಾಬ್‌ನಲ್ಲಿ ಸಿಖ್ ಸಮುದಾಯ ಬಹು ಸಂಖ್ಯಾತವಾಗಿತ್ತು. ಆ ರೀತಿಯಲ್ಲಿ ತಮಿಳುನಾಡಿನಲ್ಲಿ ಯಾವುದೇ ಒಂದು ಜಾತಿ ಸಮುದಾಯ ಬಹಸಂಖ್ಯಾತವಾಗಿರಲಿಲ್ಲ.

ಬ್ರಾಹ್ಮಣ ವಿರೋಧಿ ಚಳವಳಿಯ ನೆಲೆಗಟ್ಟಿನಲ್ಲಿ ಪ್ರತ್ಯೇಕ ದ್ರಾವಿಡಸ್ಥಾನದ ಘೋಷಣೆ ಅಲ್ಲಿ ಕೇಳಿ ಬಂದಿತು. ಆರಂಭದಲ್ಲಿ ಅಲ್ಲಿ ಜಸ್ಟಿಸ್ ಪಾರ್ಟಿ ಹುಟ್ಟಿಕೊಂಡಿತು. ೧೯೧೦ರಲ್ಲಿ ಮದ್ರಾಸ್ ಲೆಜೆಸ್ಲೇಟಿವ್ ಕೌನ್ಸಿಲ್‌ನಲ್ಲಿ ಬ್ರಾಹ್ಮಣೇತರರಿಗೆ ಮೀಸಲಾತಿ ಬೇಕು ಎನ್ನುವ ಚಳವಳಿ ಆರಂಭವಾಯಿತು.

ಕೇಶವಪಿಳ್ಳೆ ಅವರು ತಮಿಳುನಾಡಿನಲ್ಲಿ ಕಾಂಗ್ರೆಸ್ ರಾಷ್ಟ್ರೀಯವಾದಿ ಮುಖಂಡರಾಗಿದ್ದರು. ಮದ್ರಾಸ್ ಪ್ರಾವಿನ್ಸ್ ಲೆಜಿಸ್ಲೇಟಿವ್ ಕೌನ್ಸಿಲ್‌ನಲ್ಲಿ ಬ್ರಾಹ್ಮಣೇತರರಿಗೆ ೩೬ ಸ್ಥಾನಗಳನ್ನು ಮಿಸಲಿಡಬೇಕೆಂದು ಒತ್ತಾಯಿಸಿದರು. ಆಗ ಮದ್ರಾಸ್ ಪ್ರಾವಿನ್ಸ್‌ಗೆ ಗವರ್ನರ್ ಆಗಿದ್ದ ಲಾರ್ಡ್‌ ವೆಲಿಂಗ್‌ಟನ್, ಬ್ರಾಹ್ಮಣೇತರರಿಗೆ ಸ್ಥಾನಗಳನ್ನು ಮೀಸಲಿಡುವುದಾಗಿ ಹೇಳಿದರು.

ತಮಿಳುನಾಡಿನಲ್ಲಿ ಬ್ರಾಹ್ಮಣರನ್ನು ಮೂರು ವಿಧಗಳಲ್ಲಿ ವಿಂಗಡಿಸಲಾಗಿತ್ತು. ಕನ್ಸರ್ವೇಟಿವ್ ಬ್ರಾಹ್ಮಣ, ನ್ಯಾಷನಲಿಸ್ಟ್ ಬ್ರಾಹ್ಮಣ ಮತ್ತು ಮಾಡರೇಟ್ ಬ್ರಾಹ್ಮಣ. ಈ ಮೂರು ಥರದ ಬ್ರಾಹ್ಮಣರೂ , ಬ್ರಾಹ್ಮಣೇತರರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದರು. ಆ ಕಾರಣಕ್ಕಾಗಿ ಬ್ರಾಹ್ಮಣ ವಿರೋಧಿ ಚಳವಳಿಯು ತಮಿಳುನಾಡಿನಲ್ಲಿ ದಟ್ಟಗೊಳ್ಳತೊಡಗಿತು.

ಬ್ರಾಹ್ಮಣೇತರರಾಗಿದ್ದ ಕಾಂಗ್ರೆಸ್ ರಾಷ್ಟ್ರೀಯವಾದಿ ಮುಖಂಡ ಕೇಶವಪಿಳ್ಳೆ ಮತ್ತು ಹೈಕೋರ್ಟ್ ವಕೀಲರಾಗಿದ್ದ ಟಿ.ಎ.ರಾಮಲಿಂಗಮ್ ಚೆಟ್ಟಿಯಾರ್‌ ಸೇರಿ, ‘ಮದ್ರಾಸ್ ಪ್ರೆಸಿಡೆನ್ಸಿ ಅಸೋಸಿಯೇಷನ್’ ಎನ್ನುವ ಸಂಘಟನೆಯನ್ನು ಆರಂಭಿಸಿದರು. ಇದು ಬ್ರಾಹ್ಮಣೇತರರಿಗೆ ವೇದಿಕೆಯಾಯಿತು.

೧೯೪೪ರಲ್ಲಿ ಪೆರಿಯಾರ್ ಮತ್ತು ಅಣ್ಣಾದುರೈ ಇಬ್ಬರೂ ಸೇರಿ ದ್ರಾವಿಡ ಕಝಗಮ್ (ಡಿ.ಕೆ.) ಪಕ್ಷವನ್ನು ಸ್ಥಾಪಿಸಿದರು. ೧೯೪೯ರಲ್ಲಿ ಅದು ವಿಭಜನೆಗೊಂಡಿತು. ಆ ನಂತರ ಅಣ್ಣಾದೊರೈ ಅವರು ದ್ರಾವಿಡ ಮುನ್ನೇತ್ರ ಕಝಗಮ್ (ಡಿ.ಎಂ.ಕೆ.) ಪಕ್ಷವನ್ನು ಘೋಷಿಸಿದರು.

ಅಣ್ಣಾದುರೈಯವರು ಜಸ್ಟಿಸ್ ಪಾರ್ಟಿ ಮತ್ತು ಪೆರಿಯಾರ‍್ಗಳ ಧೋರಣೆಗಳಿಗೆ ವಿರುದ್ಧವಾಗಿ ವಸಾಹತುಶಾಹಿ ವಿರೋಧಿ ನಿಲುವನ್ನು ತೆಗೆದುಕೊಂಡರು ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಪರವಾದ ನಿಲುವನ್ನು ತೆಗೆದುಕೊಂಡರು. ಅನ್ಣಾದುರೈ ಸಮೂಹಚುಂಬಕ ಮಾತುಗಾರರಾಗಿದ್ದರು. ತಮಿಳು ಭಾಷೆಯನ್ನು ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯಬಲ್ಲವರೂ ಆಗಿದ್ದರು. ಅಣ್ಣಾದುರೈ ಅವರು ಎಂ. ಕರುಣಾನಿಧಿ ಮತ್ತು ಎಂ.ಜಿ. ರಾಮಚಂದ್ರನ್ ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ತಮಿಳು ಸಾಮಾನ್ಯ ಜನಕ್ಕೆ ಸ್ಪಂದಿಸುವ ರೀತಿಯ ಸಿನಿಮಾಗಳನ್ನು ನಿರ್ಮಿಸಲಾರಂಭಿಸಿದರು. ಅದೇ ರೀತಿ ನಾಟಕ, ಕರಪತ್ರ, ಪತ್ರಿಕೆಗಳನ್ನು ಆರಂಭಿಸಿದರು.

ದೇಶದ ಪ್ರಥಮ ಚುನಾವಣೆಯಲ್ಲಿ ಡಿ.ಎಂ.ಕೆ. ಸ್ಫರ್ಧಿಸಲಿಲ್ಲ. ಆ ನಂತರದ ೧೯೫೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೨೦೫ ಸ್ಥಾನಗಳಲ್ಲಿ ಕೇವಲ ೧೫ ಸ್ಥಾನಗಳನ್ನು ಮಾತ್ರ ಡಿ.ಎಂ.ಕೆ. ಗೆದ್ದಿತು. ಆಗ ಕೇಂದ್ರ ಸರಕಾರ ಪ್ರತ್ಯೇಕತಾವಾದಿ ಪಕ್ಷಗಳನ್ನು ನಿಷೇದಿಸುವ ಯೋಜನೆಯನ್ನು ಮಾಡತೊಡಗಿತ್ತು. ತಮಿಳು ಜನತೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಸ್ಪಂದಿಸಲಿಲ್ಲ. ಈ ವಾಸ್ತವವನ್ನು ಮನಗಂಡ ಡಿ.ಎಂ.ಕೆ. ಜನಾಂಗೀಯ ವಾದವನ್ನು ಕೈಬಿಟ್ಟಿತು. ಆಗ ಜನರಿಂದ ಭಾರೀ ಬೆಂಬಲ ಡಿ.ಎಂ.ಕೆ. ಪಕ್ಷಕ್ಕೆ ಸಿಕ್ಕಿತು. ಅದೇ ಸಂದರ್ಭದಲ್ಲಿ ಕೇಂದ್ರ ಸರಕಾರ ಹಿಂದಿಯನ್ನು ಹೇರಿತು. ಹಿಂದಿ ವಿರೋಧಿ ಚಳವಳಿಯಲ್ಲಿ ಡಿ.ಎಂ.ಕೆ. ಬಲಿಷ್ಠ ಪಕ್ಷವಾಗಿ ಹೊಮ್ಮಿತು. ಅಣ್ಣಾದೊರೈ, ಕರುಣಾನಿಧಿ ಮತ್ತು ಎಂ.ಜಿ.ಆರ್. ಈ ಮೂವರೂ ಏಕಕಾಲದಲ್ಲಿ ಚಿತ್ರರಂಗ ಮತ್ತು ರಾಜಕೀಯ ಎರಡೂ ಕಡೆ ಅನಭಿಷಕ್ತ ದೊರೆಗಳಾದರು.

ತಮಿಳುನಾಡಿನ ಮರ್ದಿತ ಜಾತಿ ಸಮುದಾಯಗಳ ಜಾನಪದ ನಾಯಕರ ಕಥನ ಕಾವ್ಯಗಳನ್ನಾಧರಿಸಿದ ಸಿನಿಮಾಗಳನ್ನು ನಿರ್ಮಿಸಿದರು. ಆ ಚಿತ್ರಕಥೆಗಳನ್ನು ವರ್ತಮಾನದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಳವಡಿಸಿದರು. ಎಂ.ಜಿ.ಆರ್. ಅವರ ವ್ಯಕ್ತಿತ್ವದಲ್ಲಿ ತಮ್ಮ ಆರಾಧ್ಯ ದೈವೀ ನಾಯಕರನ್ನು ಮರ್ದಿತ ಸಮುದಾಯಗಳು ಕಾಣತೊಡಗಿದವು.

ಆ ಜನ ಸಮುದಾಯಗಲು ಸಬಾಲ್ಟರ‍್ನ ವರ್ಗಗಳಾಗಿದ್ದವು. ಅವುಗಳ ಅಧ್ಯಾತ್ಮ ಶಿಷ್ಟ ಸ್ವರೂಪದ್ದಾಗಿರಲಿಲ್ಲ. ಸೈದ್ಧಾಂತೀಕರಿಸಲ್ಪಟ್ಟಿರಲಿಲ್ಲ. ಅದನ್ನು ಸಬಾಲ್ಟರ‍್ನರ ವರ್ಗಗಳ ಅಸೈದ್ಧಾಂತೀಕೃತ ತತ್ವ ಎಂದು ಸಮಾಜಶಾಸ್ತ್ರೀಯ ದೃಷ್ಟಿಕೋನದಲ್ಲಿ ವ್ಯಾಖ್ಯಾನಿಸಬಹುದು.

ತಮಿಳು ಮರ್ದಿತ ಜನ ಸಮುದಾಯಗಳ ಕೆಲವು ಜಾನಪದ ನಾಯಕರ ಹೆಸರುಗಳನ್ನು ಉದಾಹರಿಸಬಹುದು. ಮಧುರೈ ವೀರನ್, ಮುತ್ತುಪುಟ್ಟನ್ ಮತ್ತು ಕಥವರಾಯನ್ ಈ ದೈವೀ ನಾಯಕರ ಪ್ರಾತ್ರಗಳನ್ನೆಲ್ಲ ಸಿನಿಮಾಗಳಲ್ಲಿ ಎಂ.ಜಿ.ಆರ್. ಮಾಡಿದರು. ಎಂ.ಜಿ.ಆರ್ ಅವರಲ್ಲಿ ಯಕ್ಷಿಣೀ ಶಕ್ತಿ ಅಡಗಿದೆ ಎಂದೂ ಆತ ದೈವಾಂಶ ಸಂಭೂತ ಎಂದೂ ಪ್ರಚಾರ ಮಾಡಲಾಯಿತು.

ಎಂ.ಜಿ.ಆರ್. ಮುಖ್ಯಮಂತ್ರಿಯೂ ಆದರು. ಅವರ ಆಡಳಿತದಲ್ಲಿ ಕಾರ್ಮಿಕರ ಹೋರಾಟಗಳನ್ನು ಪೊಲೀಸ್ ಶಕ್ತಿಯಿಂದ ಹತ್ತಿಕ್ಕಲಾಯಿತು. ರೈತ ಮತ್ತು ಕಾರ್ಮಿಕ ವರ್ಗಗಳಿಗೆ ಮೂಲಭೂತ ಕಲ್ಯಾಣವನ್ನು ಒದಗಿಸಿಕೊಡಬಲ್ಲ ಯಾವುದೇ ಯೋಜನೆಗಳನ್ನು ಎಂ.ಜಿ.ಆರ್. ಸರಕಾರ ರೂಪಿಸಲಿಲ್ಲ. ಆದರೂ ಎಂ.ಜಿ.ಆರ್. ಜನಪ್ರಿಯ ಮುಖ್ಯಮಂತ್ರಿಯಾಗಿದ್ದರು. ಜನರಿಂದ ಚುನಾಯಿತರಾಗುತ್ತಲೇ ಇದ್ದರು. ಅವರು ಸತ್ತಾಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಅನೇಕರು ಆತ್ಮಹತ್ಯೆ ಮಾಡಿಕೊಂಡರು.

ಜನಪರ ಧೋರಣೆಗಳನ್ನು ಅನುಸರಿಸಲಾರದೆ ಇದ್ದಾಗಲೂ ಜನಪ್ರಿಯ ಸರಕಾರ ನೀಡುವುದು ಸಾಧ್ಯ ಎನ್ನುವುದನ್ನು ತಮಿಳುನಾಡು ರಾಜಕೀಯದಲ್ಲಿ ಕಾಣಬಹುದು. ನಂತರದ ವರ್ಷಗಳಲ್ಲಿ ಡಿ.ಎಂ.ಕೆ. ಪಕ್ಷವು ಇಬ್ಭಾಗವಾಯಿತು. ಎಂ. ಕರುಣಾನಿಧಿ ಅವರು ಡಿ.ಎಂ.ಕೆ.ಯ ನಾಯಕತ್ವವನ್ನು ವಹಿಸಿಕೊಂಡರೆ ಎ.ಐ.ಡಿ.ಎಂ.ಕೆ.ಯ ನಾಯಕತ್ವವನ್ನು ಮಾಜಿ ಚಲನಚಿತ್ರ ನಾಯಕಿ ಜಯಲಲಿತಾ ಅವರು ವಹಿಸಿಕೊಂಡರು. ಕಳೆದ ಎರಡು ದಶಕಗಳಲ್ಲಿ ಡಿ.ಎಂ.ಕೆ. ಮತ್ತು ಎ.ಐ.ಡಿ.ಎಂ.ಕೆ. ಗಳೆರಡೇ ಒಂದೋ ಆಡಳಿತ ಪಕ್ಷವಾಗಿ ಅಥವಾ ವಿರೋಧ ಪಕ್ಷವಾಗಿ ತಮಿಳುನಾಡಿನಲ್ಲಿ ಮಿಂಚುತ್ತಿವೆ. ಹಾಗೆಯೇ ರಾಷ್ಟ್ರ ರಾಜಕಾರಣದಲ್ಲಿ ಈ ಎರಡು ಪಕ್ಷಗಳಲ್ಲಿ ಒಂದು ನ್ಯಾಷನಲ್ ಡೆಮೋಕ್ರೆಟಿಕ್ ಆಲಯನ್ಸ್ (ಎನ್.ಡಿ.ಎ.) ಪರವಾಗಿದ್ದರೆ, ಇನ್ನೊಂದು ಯುನೈಟೆಡ್ ಪ್ರೋಗ್ರೆಸಿವ್ ಆಲಯನ್ಸ್ (ಯು.ಪಿ.ಎ.) ಪರವಾಗಿರುತ್ತದೆ. ಪಿ.ಎಂ.ಕೆ. ರೀತಿಯ ಸಣ್ಣಪುಟ್ಟ ರಾಷ್ಟ್ರೀಯ ತಮಿಳು ಪಕ್ಷಗಳೂ ಅಲ್ಲಲ್ಲಿ ತಮ್ಮ ಪ್ರಭಾವ ಉಳಿಸಿಕೊಂಡಿವೆ.

ಕಾಶ್ಮೀರದ ತಲ್ಲಣ : ಷೇಕ್ ಅಬ್ದುಲ್ಲಾ

ಆಧುನಿಕ ಶಿಕ್ಷಣ ಪಡೆದುಕೊಂಡಿದ್ದ ಷೇಕ್ ಅಬ್ದುಲ್ಲಾ ತಮ್ಮ ತವರು ರಾಜ್ಯ ಕಾಶ್ಮೀರದಲ್ಲಿ ಸ್ವಾತಂತ್ರ್ಯ ಚಳವಳಿ ನಡೆಸಲು ಬಂದರು. ಅವರ ಹೋರಾಟದ ಆರಂಭದ ಒಂದು ಉದಾಹರಣೆಯನ್ನು ನೋಡಬಹುದು.

ಹಿಂದೂ ಸಮಾಜದಿಂದ ಬಹಿಷ್ಕೃತಗೊಂಡಿದ್ದ ಮಹಿಳೆ ಸತ್ತಿರುತ್ತಾಳೆ. ಆ ಶವದ ಅಂತ್ಯಕ್ರಿಯೆಯನ್ನು ಹಿಂದೂಗಳು ಮಾಡದೇ ವೀಕ್ಷಕರಾಗಿ ನಿಂತಿರುತ್ತಾರೆ. ಅದೇ ರೀತಿ ತಮ್ಮ ಧರ್ಮಕ್ಕೆ ಆ ಕ್ರಿಯೆ ವಿರೋಧವಾದುದು ಎಂದು ಮುಲ್ಲಾಗಳು ಮಾತನಾಡುತ್ತಿರುತ್ತಾರೆ. ಆಗ ಷೇಕ್ ಅಬ್ದುಲ್ಲಾ ಒಬ್ಬರೇ ಆ ಶವವನ್ನು ಹೊತ್ತೊಯ್ದು ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇಂತಹ ಚಟುವಟಿಕೆಗಳಿಂದ ಷೇಕ್ ಅಬ್ದುಲ್ಲಾ ಅವರು ಮುಸ್ಲಿಂ ಮತ್ತು ಹಿಂದೂ ಎರಡೂ ಸಮುದಾಯಗಳಿಗೆ ನಾಯಕರಾಗಿ ಬೆಳೆಯುವಂತಾಗುತ್ತಾರೆ.

ದೇಶ ವಿಭಜನೆಯಾದೊಡನೆ ಪಾಕಿಸ್ತಾನಿ ಸೈನಿಕರು ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಬರುತ್ತಾರೆ. ಕಾಶ್ಮೀರದ ರಾಜಾ ಹರಿಸಿಂಗ್ ಓಡಿ ಹೋಗಿ ದಿಲ್ಲಿಯಲ್ಲಿ ಕೂಡುತ್ತಾರೆ. ಆಗ ಷೇಕ್ ಅಬ್ದುಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಕಟ್ಟಿಕೊಂಡು ಪಾಕ್ ಸೈನಿಕರ ವಿರುದ್ಧ ಹೋರಾಡತೊಡಗುತ್ತಾರೆ.

ಕಾಶ್ಮೀರದ ಮೇಲೆ ದಾಳಿ ಮಾಡಿದ ಪಾಕ್ ಸೈನಿಕರಿಗೆ ಸಹಾಯ ಮಾಡಲು ಎಲ್ಲ ವಿದೇಶಾಂಗ ಕಾನೂನುಗಳನ್ನು ಗಾಳಿಗೆ ತೂರಿ ಅಮೆರಿಕಾ ತನ್ನ ಸೈನಿಕರನ್ನು ಕಳುಹಿಸಿ ಕೊಡುತ್ತದೆ. ನಂತರ ಭಾರತದ ಮಿಲಿಟರಿ ಬರುತ್ತದೆ. ನೆಹರೂ ಮತ್ತು ಷೇಕ್ ಅಬ್ದುಲ್ಲಾ ನಡುವೆ ಮಾತುಕತೆ ನಡೆಯುತ್ತದೆ. ಪಾಕಿಸ್ತಾನ ಷೇಕ್ ಅಬ್ದುಲ್ಲಾರನ್ನು ಕೋಮುವಾದಿ ನೆಲೆಯಲ್ಲಿ ಆಹ್ವಾನಿಸುತ್ತದೆ. ಆಗ ಷೇಕ್ ಅಬ್ದುಲ್ಲಾ ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಭಾಗ ಎಂದು ಘೋಷಿಸುತ್ತಾರೆ. ಕಾಶ್ಮೀರ ಭಾರತದಲ್ಲಿದ್ದರೂ ಪ್ರತ್ಯೇಕ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಒಪ್ಪಂದವಾಗುತ್ತದೆ. ಸಂವಿಧಾನದ ೩೭೦ನೇ ಕಲಮ್‌ನಲ್ಲಿ ಈ ಬಗೆಗೆ ಎಲ್ಲ ವಿವರಗಳಿವೆ. ನಂತರದ ದಿನಗಳಲ್ಲಿ ಷೇಕ್ ಅಬ್ದುಲ್ಲಾ ಅವರ ಮಗ ಫರೂಕ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಗಳಾದರು. ತೀರಾ ಇತ್ತೀಚೆಗೆ ಫರೂಕ್ ಅಬ್ದುಲ್ಲಾ ಅವರ ಮಗ ಓಮರ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದೆಹಲಿ ರಾಜಕಾರಣದ ಜೊತೆ ನಿರಂತರ ಸಂಬಂಧಗಳೊಂದಿಗೆ ಈ ಪಕ್ಷವು ರಾಜಕಾರಣ ಮಾಡುತ್ತದೆ.

ಪಂಜಾಬ್ : ಭಿಂದ್ರನ್‌ವಾಲೆ ಭಯೋತ್ಪಾದನೆ ಮತ್ತು ಅಕಾಲಿ ರಾಜಕೀಯ

[1]

ಬಹುಸಂಖ್ಯಾತ ಕೋಮುವಾದವನ್ನು ತುಷ್ಟಿಗೊಳಿಸತೊಡಗಿದರೆ ಅದು ‘ಫಾಸಿಸಂ’ ಆಗಿ ಪರಿಣಮಿಸುತ್ತದೆ.; ಅದೇ ರಿತಿ ಅಲ್ಪಸಂಖ್ಯಾತ ಕೋಮುವಾದವನ್ನು ತುಷ್ಟಿಗೊಳಿಸತೊಡಗಿದರೆ ಅದು ‘ಸೆಪರೇಟಿಸಂ’ ಆಗಿ ಪರಿವರ್ತನೆಗೊಳ್ಳುತ್ತದೆ ಎನ್ನುವ ಮಾತು ಅಕಾಲಿಕದಳಕ್ಕೆ ಅನ್ವಯವಾಗುವಂಥದ್ದು.

ಸಿಖ್ ಸಮುದಾಯ ಸಮಗ್ರವಾದುದು ಎನ್ನುವಂತೆ ಅಕಾಲಿಗಳು ಪ್ರಚಾರ ಮಾಡುತ್ತಾರೆ. ಆದರೆ ಸಿಖ್ ಸಮುದಾಯದ ಒಳಗೇ ಅಸ್ಪೃಶ್ಯರಿದ್ದಾರೆ. ದೊಡ್ಡ ಜಮೀನುದಾರರು ಮತ್ತು ಶ್ರೀಮಂತ ರೈತರು. ಅಕಾಲಿ ದಳವನ್ನು ರಚಿಸಿಕೊಂಡು ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಸ್ವಾತಂತ್ರ್ಯಪೂರ್ವದಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ.

ಅಕಾಲಿಗಳಿಗೆ ವಿರುದ್ಧವಾಗಿ ದಲಿತ ಸಿಖ್ಖರು ಮತ್ತು ಕೆಳಜಾಗಿ, ವರ್ಗಗಳ ಸಿಖ್ಖರು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳಿಗೆ ಬೆಂಬಲಿಸುತ್ತ ಬಂದಿದ್ದನ್ನು ಕಾಣಬಹುದು. ವಿಶೇಷವಾಗಿ ೧೯೪೭ರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಹೆಚ್ಚು ಒತ್ತು ಕೊಡಲಾರಂಭಿಸಿದರು. ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿ ಮಾರ್ಪಾಟಾದುದು ಅಕಾಲಿಗಳಿಗೆ ಕುಮ್ಮಕ್ಕು ನೀಡಿದಂತಾಯಿತು.

ಪಂಜಾಬಿನಲ್ಲಿ ಕೋಮುವಾದ ತ್ರಿಕೋನ ಸ್ವರೂಪದ್ದು. ಹಿಂದು, ಮುಸ್ಲಿಮ್ ಮತ್ತು ಸಿಖ್, ಈ ಮೂರೂ ಕೋಮುಗಳ ಮಧ್ಯೆ ಸಾಮರಸ್ಯದ ಕೊರತೆ ಬಹುಕಾಲದಿಂದ ಇದ್ದುಕೊಂಡು ಬಂದಿದೆ.

ಧರ್ಮ ಮತ್ತು ಪ್ರಭುತ್ವಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುವುದು ಅಕಾಲಿಗಳ ಮೂಲಭೂತವಾದವಾಗಿದೆ. ಅಕಾಲಿ ಪಕ್ಷ ಪಂಜಾಬಿನಲ್ಲಿರುವ ೭೦೦ ಗುರುದ್ವಾರಗಳನ್ನು ತನ್ನ ರಾಜಕೀಯಕ್ಕೆ ಕಾರಸ್ಥಾನಗಳನ್ನು ಮಾಡಿಕೊಂಡಿತು. ಅಕಾಲಿ ಪ್ರಭಾವವನ್ನು ತಗ್ಗಿಸಲು ಹಿಂದು ಕೋಮುವಾದಕ್ಕೆ ಕಾಂಗ್ರೆಸ್ ಪಕ್ಷ ಪ್ರಚೋದನೆ ನೀಡಿದ ಉದಾಹರಣೆಗಳಿವೆ.

ಅಕಾಲಿಗಳ ಒಳಗೇ ಭಿನ್ನಾಭಿಪ್ರಾಯಗಳು, ಒಳಬಣಗಳು ಆರಂಭವಾದವು. ಒಂದು ಗುಂಪು ಇನ್ನೊಂದು ಗುಂಪಿಗಿಂತ ಹೆಚ್ಚು ತೀವ್ರಗಾಮಿ ಎಂದು ತೋರಿಸಿಕೊಳ್ಳುವ ಪ್ರವೃತ್ತಿ ತಲೆದೋರಿತು. ಭಯೋತ್ಪಾದನೆಗೆ ಎಡೆ ಮಾಡಿಕೊಡಲು ಇದೂ ಮುಖ್ಯ ಕಾರಣಗಳಲ್ಲಿ ಒಂದಾಯಿತು.

ಪಂಜಾಬನ್ನು ಭಾಷೆಯ ಆಧಾರದಲ್ಲಿ ಇಬ್ಭಾಗ ಮಾಡಲಾಯಿತು. ಹಿಂದಿ ಭಾಷಿಕರ ಪ್ರದೇಶವನ್ನು ಹರ‍್ಯಾಣ ರಾಜ್ಯವನ್ನಾಗಿ ಮಾಡಲಾಯಿತು. ಅಖಿಲ ಭಾರತ ಅಕಾಲಿ ಸಭೆಗೆ ಎಸ್.ಜಿ.ಪಿ.ಸಿ. (ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ) ಮುಖ್ಯ ಮಾರ್ಗದರ್ಶಕ ಸಮಿತಿಯಾಗಿರುತ್ತದೆ. ಇದು ಸಿಖ್ ರಾಜಕೀಯ ಮತ್ತು ಧರ್ಮಗಳ ಸಂಬಂಧ ಮತ್ತು ರಾಜಕೀಯಕ್ಕಿಂತ ಧರ್ಮ ಮೇಲು ಎನ್ನುವ ಪ್ರತಿಪಾದನೆ ಅಕಾಲಿದಳದ್ದು. ಅಕಾಲಿದಳ ೧೯೬೭ರಲ್ಲಿ ಜನಸಂಘದ ಮೈತ್ರಿಯೊಂದಿಗೆ ಸರಕಾರ ರಚಿಸಿತು. ನಂತರ ೧೯೭೭ರಲ್ಲಿ ಜನತಾ ಪಕ್ಷದೊಂದಿಗೆ ಸೇರಿ ಸರಕಾರ ರಚಿಸಿತು. ೧೯೮೦ರಲ್ಲಿ ನಡೆದ ಚುನಾವಣೆಯಲ್ಲಿ ಸೋತಿತು. ಅಕಾಲಿ ದಳ ಕೇವಲ ೨೬.೯% ಮತಗಳನ್ನು ಪಡೆದುಕೊಂಡಿತು. ಬಹಳಷ್ಟು ಸಿಖ್ಖರು ಅಕಾಲಿದಳವನ್ನು ತಿರಸ್ಕರಿಸಿದರು. ಜನ ಸಮುದಾಯದ ತಳಹದಿಯನ್ನು ಕಳೆದುಕೊಂಡ ಅಕಾಲಿದಳ ಭಯೋತ್ಪಾದನೆಯೆಡೆಗೆ ತಿರುಗಿತು.

೧೯೮೧ರಲ್ಲಿ ಸಿಖ್ ಧರ್ಮ ಮುಖ್ಯಸ್ಥ ಸಂತ ಲೊಂಗೊವಾಲ್ ನೇತೃತ್ವದಲ್ಲಿ ಪ್ರಧಾನಮಂತ್ರಿಗಳಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಆನಂದಪುರ ಸಾಹಿಬ್ ಗೊತ್ತುವಳಿಗಳು ಕೋಮುವಾದಿ ಆಧಾರದಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಗಳನ್ನು ಒಳಗೊಂಡಿದ್ದವು. ಪ್ರತ್ಯೇಕ ಕರೆನ್ಸಿಯ ಬೇಡಿಕೆಯೂ ಆ ಪಟ್ಟಿಯಲ್ಲಿತ್ತು. ಭಯೋತ್ಪಾದನೆ ಘೋಷಣೆಯೊಂದಿಗೆ ಭಿಂದ್ರನ್‌ವಾಲೆ ಅಕಾಲಿ ಆಖಾಡಕ್ಕೆ ಇಳಿದ, ಕೊಲೆ, ಸುಲಿಗೆ, ಲೂಟಿಗಳನ್ನು ನಡೆಸತೊಡಗಿದೆ. ಯೋಜಿತ ಪ್ರತ್ಯೇಕಕ ರಾಷ್ಟ್ರಕ್ಕೆ ಖಲಿಸ್ಥಾನ ಎಂದು ಹೆಸರಿಟ್ಟ. ಭಿಂದ್ರನ್‌ವಾಲೆ ಅಮೆರಿಕಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡು ಬಂದ, ತನ್ನ ಸಹಚರರಿಗೂ ತರಬೇತಿ ನೀಡಿಸಿದ. ಅಮೆರಿಕದಿಂದ ಖಲಿಸ್ಥಾನಗಳಿಗೆ ಆಧುನಿಕ ರೈಫಲ್‌ಗಳು ಸರಬರಾಜಾದವು.

ಸಿಖ್ ಜನಾಂಗದ ಉದ್ಧಾರಕ್ಕಾಗಿ ಖಲಿಸ್ಥಾನ ಹೋರಾಟ ಎಂದು ಹೇಳತೊಡಗಿದ ಭಿಂದ್ರನ್ ವಾಲೆ. ಆದರೆ ೧೯೮೧ರಿಂದ ೧೯೮೪ರ ಅವಧಿಯಲ್ಲಿ ೧೦,೦೦೦ಕ್ಕೂ ಹೆಚ್ಚು ಸಿಖ್ಖರನ್ನು ಅವನೇ ಕೊಂದು ಹಾಕಿದ. ೧೯೮೧ರಿಂದ ೧೯೯೩ರ ಅವಧಿಯಲ್ಲಿ ಖಲಿಸ್ಥಾನೀ ಉಗ್ರಗಾಮಿಗಳು ಒಟ್ಟು ೧೧,೭೦೦ ಜನರನ್ನು ಹತ್ಯೆಗೈದಿದ್ದರು. ಅದರಲ್ಲಿ ಸಿಖ್ಖರೇ ಅಧಿಕ ಸಂಖ್ಯೆಯಲ್ಲಿ ಸತ್ತಿದ್ದರು.

ಆಪರೇಷನ್ ಬ್ಲೂಸ್ಟಾರ್ ಮೂಲಕ ಭಿಂದ್ರನ್‌ ವಾಲೆ ಮತ್ತವನ ಸಹಚರರನ್ನು ಗೋಲ್ಡನ್ ಟೆಂಪಲ್‌ನಲ್ಲಿ ಸೈನಿಕರು ಕೊಂದು ಹಾಕಿದರು. ೧೯೮೪ರ ಜೂನ್ ೩ ರಂದು ಭಾರತ ಸರಕಾರದ ಸೈನಿಕರು ಗೋಲ್ಡನ್ ಟೆಂಪಲ್ ಅನ್ನು ಸುತ್ತುವರಿದರು. ಭಿಂದ್ರನ್ ವಾಲೆ ಹತ್ತಿರ ಆಧುನಿಕ ಶಸ್ತ್ರಾಸ್ತ್ರಗಳಿದ್ದುದರಿಂದ ಪೂರ್ಣಪ್ರಮಾಣದ ಯುದ್ಧವೇ ಅಲ್ಲಿ ನಡೆಯಿತು. ಸಿಖ್ಖರ ಪ್ರಾರ್ಥನಾ ಮಂದಿರ ರಕ್ತಸಿಕ್ತವಾಯಿತು. ಗೋಪುರಗಳಿಗೆ ಬುಲೆಟ್‌ಗಳು ಕಲೆಗಳನ್ನುಂಟು ಮಾಡಿದವು. ೧೯೮೪ರ ಅಕ್ಟೋಬರ್ ೩೧ ರಂದು ಪ್ರಧಾನಿ ಇಂದಿರಾಗಾಂಧಿಯವರನ್ನು ಖಲಿಸ್ಥಾನವಾದಿಗಳು ಹತ್ಯೆಗೈದರು. ಅಂಗರಕ್ಷಕರಾಗಿದ್ದ ಸಿಖ್ ಸೈನಿಕರೇ ಇಂದಿರಾಗಾಂಧಿಯವರನ್ನು ಹತ್ಯೆ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ದೆಹಲಿಯಲ್ಲಿ ಸಿಖ್ ಸಮುದಾಯದ ಮೇಲೆ ಕೋಮುದಾಳಿ ನಡೆಯಿತು.

ಅಕಾಲಿದಳ ಅಧ್ಯಕ್ಷ ಲೋಂಗೋವಾಲ್ ಮತ್ತು ಅವನ ಸಹಚರರನ್ನು ಬಂಧಿಸಲಾಯಿತು. ಪಂಜಾಬ್‌ನಲ್ಲಿ ಭಯೋತ್ಪಾದಕ ಕೃತ್ಯಗಳು ಮುಂದುವರಿದವು. ರಾಜೀವ ಗಾಂಧಿ ಸರಕಾರ ಅಸ್ತಿತ್ವಕ್ಕೆ ಬಂದಿತು. ೧ನೇ ನವೆಂಬರ್ ೧೯೮೪ರಂದು ಪ್ರಧಾನಿಯಾಗಿ ರಾಜೀವ್ ಪ್ರಮಾಣವಚನ ಸ್ವೀಕರಿಸಿದರು.

೧೯೮೫ರಲ್ಲಿ ಹೆಚ್.ಎಸ್. ಲೋಂಗೋವಾಲ ಮತ್ತು ಇತರ ಅಕಾಲಿ ನಾಯಕರನ್ನು ಜೈಲಿನಿಂದ ಮುಕ್ತಗೊಳಿಸಲಾಯಿತು. ರಾಜೀವ್ ಗಾಂಧಿ ಮತ್ತು ಲೋಮಗೋವಾಲ ಮಾತುಕತೆಗಳು ನಡೆದವು. ಇಂದಿರಾ ಹತ್ಯೆಯ ನಂತರ ಸಿಖ್ ಸಮುದಾಯದ ಮೇಲೆ ನಡೆದ ನವೆಂಬರ್ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಯಿತು. ಜೈಲಿನಿಂದ ಹೊರಬಂದ ಅಕಾಲಿ ನಾಯಕರ ಮಧ್ಯ ಒಮ್ಮತ ಉಳಿದಿರಲಿಲ್ಲ. ಲೋಂಗೋವಾಲ ಮತ್ತು ಸರಕಾರದ ನಡುವೆ ಗುಪ್ತ ಮಾತುಕತೆ ನಡೆಯಿತು. ೧೯೮೫ರಲ್ಲಿ ರಾಜೀವ್ ಮತ್ತು ಲೋಂಗೋವಾಲ ಪಂಜಾಬ್ ಒಪ್ಪಂದಕ್ಕೆ ಸಹಿ ಹಾಕಿದರು. ಪಂಜಾಬ್‌ನಲ್ಲಿ ಚುನಾವಣೆಗಳು ಘೋಷಿಸಲ್ಪಟ್ಟವು. ಲೋಂಗೋವಾಲ, ಸಿಖ್ ಸಮುದಾಯ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ಕೊಟ್ಟರು. ಉಗ್ರಗಾಮಿಗಳು ಲೋಂಗೋವಾಲರನ್ನು ಕೊಂದರು. ಆದರೂ ಚುನಾವಣೆಗಳು ನಿಗದಿತ ಕಾಲಕ್ಕೇ ನಡೆದವು. ೬೬% ಮತದಾನವಾಯಿತು. ಅಕಾಲಿಗಳು ಸಂಪೂರ್ಣ ಬಹುಮತ ಪಡೆದರು. ಸುರ್ಜಿತ್‌ಸಿಂಗ್ ಬರ್ನಾಲ ಮುಖ್ಯಮಂತ್ರಿಯಾದರು.

ಪಂಜಾಬ್ ಜನತೆ ಉಗ್ರಗಾಮಿಗಳನ್ನು ಸದೆಬಡಿಯಲು ಕೆ.ಪಿ.ಎಸ್. ಗಿಲ್‌ಗೆ ಸಂಪೂರ್ಣ ಸಹಕಾರ ನೀಡಿದರು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಗದ್ದಾರ ಪಕ್ಷ ಪಂಜಾಬ್‌ನಲ್ಲಿ ದೇಶಪ್ರೇಮಿ ಹೋರಾಟಗಳನ್ನು ನಡೆಸಿತ್ತು. ಅದೇ ರೀತಿ ಕಮ್ಯುನಿಸ್ಟರ ಸೆಕ್ಯುಲರ್‌ವಾದಗಳು ಪಂಜಾಬ್ ಅನ್ನು ಉಗ್ರವಾದಿಗಳ ಕುತ್ತಿನಿಂದ ಪಾರುಮಾಡಿದವು. ಉಗ್ರವಾದ, ಪ್ರತ್ಯೇಕವಾದ, ಕೋಮುವಾದಗಳನ್ನು ಹೇಗೆ ಹುಟ್ಟಡಗಿಸಬೇಕೆನ್ನುವುದನ್ನು ಪಂಜಾಬ್ ಬೆಳವಣಿಗೆಗಳಿಂದ ಕಲಿತುಕೊಳ್ಳಬಹುದಾಗಿದೆ.

 


[1] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ೫೮೦-೫೮೩ರ ಪುಟಗಳಲ್ಲಿ ಚರ್ಚಿಸಲಾಗಿದೆ – ಸಂ.