ಕಾಂಗ್ರೆಸ್ : ನಿಷ್ಕಾಮ ರಾಜಕೀಯ ಮತ್ತು ಸಕಾಮ ರಾಜಕೀಯಗಳ ಹೊಯ್ದಾಟದಲ್ಲಿ

ಗಾಂಧೀಜಿ ದೇಶವನ್ನು ಕೆಳಗಿನಿಂದ ಕಟ್ಟಿದರೆ ಮಾತ್ರ ಭಾರತ ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು. ಅದಕ್ಕೆ ವಿರುದ್ಧವಾಗಿ ನೆಹರೂ ದೇಶವನ್ನು ಮೇಲಿನಿಂದ ಕಟ್ಟಬೇಕೆಂದು ವಾದಿಸಿದರು. ಗಾಂಧೀಜಿ ಅವರದು ನಿಷ್ಕಾಮ ರಾಜಕಾರಣವಾಗಿದ್ದರೆ, ನೆಹರೂ ಅವರದು ಸಕಾಮ ರಾಜಕಾರಣವಾಗಿತ್ತು.

ಗಾಂಧೀಜಿಯ ಗ್ರಾಮ ಸ್ವರಾಜ್ ಯೋಚನೆಯನ್ನು ‘ಬಡತನ ವಿತರಣೆ’ ಎನ್ನುವ ಭಾವದಲ್ಲಿ ನೆಹರೂ ನೋಡಿದರು. ನೆಹರೂ ತಾವು ನಂಬಿದ ಧೋರಣೆಗಳನ್ನು ಕಾರ್ಯಗತಗೊಳಿಸಲು ಪರಿಶ್ರಮಿಸಿದರು.

ಸ್ವಾತಂತ್ಯ್ರಾನಂತರ ದೇಶವನ್ನು ಕಟ್ಟುವಲ್ಲಿ, ಬೆಳೆಸುವಲ್ಲಿ ನೆಹರೂ ಪಾತ್ರ ಬಹುಮುಖ್ಯವಾದುದು. ನೆಹರೂ ಅವರ ಧ್ಯೇಯೋದ್ದೇಶಗಳನ್ನು ಆರ್ಥಿಕ ಸಿದ್ಧಾಂತಗಳನ್ನು ತಾತ್ವಿಕ ಧೋರಣೆಗಳನ್ನು ಭಾರತದ ಬಹಳಷ್ಟು ಮುಖಂಡರು ಟೀಕಿಸಿದ್ದಾರೆ. ಕಮ್ಯುನಿಸ್ಟರು ಮತ್ತು ಸೋಸಿಯಲಿಸ್ಟರು ನೆಹರೂವಾದದ ಮೇಲೆ ತೀವ್ರ ದಾಳಿ ಮಾಡಿದ್ದಾರೆ.

ಅದೇನೇ ಇದ್ದರೂ ನೆಹರೂ ಯೋಜನೆಗಳು ದೇಶಕ್ಕೆ ಫಲಕಾರಿ ಆದವೋ ಇಲ್ಲವೋ ಎನ್ನುವ ಅಂಶ ಮುಖ್ಯವಾಗುತ್ತದೆ.

ನೆಹರೂ ಅವರು ಸ್ವಾತಂತ್ರ್ಯವನ್ನು ದೇಶ ಕಟ್ಟಲು ಬೇಕಾಗುವ ಮುಖ್ಯ ಸಾಧನವೆಂದು ತಿಳಿದುಕೊಂಡಿದ್ದರು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಕ್ಷಣಾತ್ಮಕವಾಗಿ ದೇಶ ಬಲಿಷ್ಠಗೊಂಡರೆ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದರೆ ನವಸಾಮ್ರಾಜ್ಯಶಾಹಿಗಳಿಗೆ ಹೊಸ ರೀತಿಯಲ್ಲಿ ಗುಲಾಮ ದೇಶವಾಗಿ ಮುಂದುವರಿಯಬೇಕಾಗುತ್ತದೆ ಎಂದು ತಮ್ಮ ಭಾಷಣಗಳಲ್ಲಿ ಒತ್ತಿ ಹೇಳುತ್ತಿದ್ದರು. ೧೯೫೫ರ ಜನವರಿಯಲ್ಲಿ ಆವ್ಡಿಯ (avdi) ಕಾಂಗ್ರೆಸ್ ಸಮಾವೇಶದಲ್ಲಿ ನೆಹರೂ

ನಮ್ಮ ಸಮಾಜವನ್ನು ಸಮಾಜವಾದಿ ಮಾದರಿಯತ್ತ ಕೊಂಡೊಯ್ಯಬೇಕು. ಉತ್ಪಾದನಾ ಸಾಧನಗಳೂ ಸಾಮಾಜಿಕ ಒಡೆತನದಲ್ಲಿ ಅಥವಾ ನಿಯಂತ್ರಣದಲ್ಲಿರಬೇಕು. ಉತ್ಪಾದನೆ ತೀವ್ರಗೊಳ್ಳಬೇಕು. ಅದಕ್ಕಾಗಿ ಎಲ್ಲರಿಗೂ ಸಂಪತ್ತಿನಲ್ಲಿ ಹಂಚಿಕೆ ನಡೆಯಬೇಕು. ಈ ಉದ್ದೇಶದಿಂದ ನಮ್ಮ ಯೋಜನೆಗಳು ರೂಪುಗೊಳ್ಳಬೇಕು

ಎಂದು ಹೇಳಿದರು.

ನೆಹರೂ ‘ಸಾಮಾಜಿಕ ಒಡೆತನ’ವನ್ನು ಭಿನ್ನವಾಗಿ ತಿಳಿದುಕೊಂಡಿದ್ದರು. ‘ಸರಕಾರಿ’ ಒಡೆತನವನ್ನೇ ‘ಸಾಮಾಜಿಕ ಒಡೆತನ’ ಎಂದು ತಪ್ಪಾಗಿ ಅರ್ಥೈಸಿದರು. ಸರಕಾರಿ ಒಡೆತನವನ್ನು ಖಾಸಗಿ ಬಂಡವಾಳಶಾಹಿಗಳು ಹೇಗೆ ನಿಯಂತ್ರಿಸುತ್ತಾರೆ, ಹೇಗೆ ಅದರ ಲಾಭವನ್ನೆಲ್ಲ ಹೀರಿಕೊಳ್ಳುತ್ತಾರೆ ಎನ್ನುವುದು ಬೇರೆ ವಿಷಯ. ಖಾಸಗಿ ಬಂಡವಾಳಶಾಹಿಯ ಉದ್ಯಮಗಳ ಬೆಳವಣಿಗೆಯೊಂದಿಗೆ ಸಾರ್ವಜನಿಕ ಉದ್ಯಮಗಳನ್ನೂ ಬೆಳೆಸುತ್ತಾ ಹೋದರೆ ಶ್ರೀಮಂತ ಬಡವರ್ಗಗಳ ನಡುವಿನ ಕಂದಕವನ್ನು ಕಡಿಮೆಗೊಳಿಸುತ್ತಾ ಹೋಗಬಹುದು ಎನ್ನುವುದು ನೆಹರೂ ಆರ್ಥಿಕವಾದವಾಗಿತ್ತು.

ನೆಹರೂ ಅವರು ದೇಶದ ಆರ್ಥಿಕ ಬುನಾದಿಗೆ ಅತ್ಯವಶ್ಯ ಬೇಕಾಗಿದ್ದ ಮೂಲಭೂತ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆ ರೂಪಿಸಿದರು. ಅದಕ್ಕಾಗಿ ಬೇಕಾಗುವ ಆರ್ಥಿಕ ಸಹಾಯವನ್ನು ಅಮೆರಿಕಾ, ಇಂಗ್ಲೆಂಡ್‌ಗಳಿಗೆ ಕೇಳಿದರು. ಭಾರತ ಆರ್ಥಿಕವಾಗಿ ಭದ್ರಗೊಳ್ಳುವುದು ಆ ಸಾಮ್ರಾಜ್ಯಶಾಹಿ ದೇಶಗಳಿಗೆ ಬೇಕಿರಲಿಲ್ಲ. ಅವು ಸಹಾಯ ನೀಡಲು ನಿರಾಕರಿಸಿದವು. ಆಗ ಸೋಸಿಯಲಿಸ್ಟ್ ದೇಶ ರಷ್ಯಾ ಸಹಾಯ ಹಸ್ತ ಚಾಚಿತು. ಅದರಿಂದಾಗಿ ಭಿಲಾಯಿ ಉಕ್ಕಿನ ಕಾರ್ಖಾನೆಯಂಥ ಅನೇಕ ಕಾರ್ಖಾನೆಗಳು ತಲೆಯೆತ್ತಲು ಸಾಧ್ಯವಾಯಿತು. ಕೇವಲ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಸಾಲದು, ಅವನ್ನು ನಡೆಸುವ ಪರಿಣತರೂ ತಯಾರಾಗಬೇಕು, ಅದಕ್ಕಾಗಿ ತಾಂತ್ರಿಕ ಸಂಶೋಧನಾಲಯಗಳನ್ನು ಆರಂಭಿಸಲಾಯಿತು. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು, ವಿಜ್ಞಾನ ಸಂಶೋಧನಾ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

ರೂಪಿಸಿದ ಯೋಜನೆಗಳು ವಿಳಂಬ ರೋಗಕ್ಕೆ ತುತ್ತಾಗಬಾರದೆಂದು ಪಂಚವಾರ್ಷಿಕ ಯೋಜನೆಗಳನ್ನು ನೆಹರೂ ರೂಪಿಸಿದರು. ಔದ್ಯಮಿಕ ರಂಗದಂತೆಯೇ ಕೃಷಿ ರಂಗದಲ್ಲಿ ಸುಧಾರಣೆಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಯಿತು.

ಭಾರತ ಒಂದು ಬಲಿಷ್ಠ ದೇಶವಾಗಿ ರೂಪುಗೊಳ್ಳುತ್ತಾ ಹೋಗಬೇಕಾಗಿದೆ. ದೇಶ ಎಲ್ಲ ರಂಗಗಳಲ್ಲಿ ಬಿಲಿಷ್ಠವಾದಂತೆ ಸ್ವಾತಂತ್ರ್ಯದ ಬೇರುಗಳು ಆಳಕ್ಕಿಳಿಯುತ್ತ ಹೋಗುತ್ತವೆ ಎಂದು ಹೇಳುತ್ತಿದ್ದುದನ್ನು ಕೃತಿಯಲ್ಲಿ ತರಲು ನೆಹರೂ ಪರಿಶ್ರಮಿಸಿದರು. ಕಾಂಗ್ರೆಸ್, ಬಂಡವಾಳಶಾಹಿಗಳನ್ನು ಒಂದು ತೆಕ್ಕೆಯಲ್ಲಿಟ್ಟುಕೊಂಡಿರುವಾಗಲೇ, ಇನ್ನೊಂದು ತೆಕ್ಕೆಯಲ್ಲಿ ಹಳ್ಳಿಯ ಬಡವರು, ದಲಿತರು, ಬುಡಕಟ್ಟು ಜನ ಮತ್ತು ನಗರದ ಕೊಳೆಗೇರಿ ನಿವಾಸಿಗಳನ್ನು ಹಿಡಿದುಕೊಂಡಿತ್ತು. ಕಾಂಗ್ರೆಸ್ ಎಂದರೆ ಸಾಮಾನ್ಯರ, ಬಡವರ ಪಕ್ಷ ಎನ್ನುವಂತಾಯಿತು. ಕಾಂಗ್ರೆಸ್ ಭಾರತವನ್ನು ವಿಶಿಷ್ಟ ಸಮಾಜವಾದದೆಡೆಗೆ ಕೊಂಡೊಯ್ಯುವ ಹರಿಕಾರ ಎನ್ನುವಂತೆ ಬಿಂಬಿಸಲ್ಪಟ್ಟಿತು.

ಆದರೆ ನೆಹರೂ ದೃಷ್ಟಿಕೋನದ ನೀತಿ ಧೋರಣೆಗಳನ್ನು ಕಾರ್ಯಗತಗೊಳಿಸಲು ಸೂಕ್ತವಾದ ಸ್ವಯಂಪ್ರೇರಿತ ಜನತಾ ಅಂಗಸಂಸ್ಥೆಗಳನ್ನು ಹುಟ್ಟು ಹಾಕಲಿಲ್ಲ. ತಮ್ಮ ವಾದ ಸಿದ್ಧಾಂತಗಳನ್ನು ಕೊಂಡೊಯ್ಯುವ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಬೆಳೆಸಲಿಲ್ಲ. ನೆಹರೂ ತಮ್ಮ ನೀತಿ ಮತ್ತು ಧೋರಣೆಗಳನ್ನು ಜನರ ಮೂಲಕ ಅನುಷ್ಠಾನಕ್ಕೆ ತರುವ ಯೋಚನೆ ಮಾಡಲಿಲ್ಲ. ಬದಲಾಗಿ ಸರಕಾರಿ ನೌಕರಶಾಹಿ, ಅಧಿಕಾರಶಾಹಿಗಳ ಮೂಲಕ ಸುಧಾರಣೆಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದರು. ಹೀಗಾಗಿ ಅನೇಕ ಯೋಜನೆಗಳು ಮುಗ್ಗರಿಸಿದವು. ಮುಖ್ಯವಾಗಿ ಸಹಕಾರಿ ರಂಗ ಯಶಸ್ವಿಯಾಗಲಿಲ್ಲ. ಅದೇ ರೀತಿ ಸಾರ್ವಜನಿಕ ರಂಗದ ಕೈಗಾರಿಕೆಗಳಲ್ಲಿ ಸಮರ್ಥ ಮ್ಯಾನೇಜ್‌ಮೆಂಟ್ ಇಲ್ಲದಂತಾಗಿ ಮುಗ್ಗಟ್ಟು ಎದುರಿಸುವಂತಾದವು.

ಕೃಷಿಗೆ ಸಂಬಂಧಿಸಿದ ಯೋಜನೆ ಭೂ ಸುಧಾರಣೆ ಪರಿಣಾಮಕಾರಿಯಾಗಿ ಅಗದೆ ಹೋದುದರಿಂದ ಕೃಷಿ ಸಂಬಂಧಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಖಾಸಗಿ ಬಂಡವಾಳಶಾಹಿಗಳು ಸಾರ್ವಜನಿಕ ಕೈಗಾರಿಕೆ ಮತ್ತು ಇತರೆ ಉದ್ದಿಮೆಗಳನ್ನು ಸ್ಪ್ರಿಂಗ್‌ಬೋರ್ಡ್‌ ಮಾಡಿಕೊಂಡು ಮೇಲಕ್ಕೆ ಜಿಗಿದವು. ಗಾಂಧೀಜಿ ಬದುಕಿದ್ದಿದ್ದರೆ ನೆಹರೂ ಸಮಾಜವಾದದ ವಿರುದ್ಧ ದೇಶವ್ಯಾಪಿ ದೊಡ್ಡ ಆಂದೋಲನವನ್ನೇ ಮಾಡುತ್ತಿದ್ದರೇನೋ, ಆ ಮಾತು ಬೇರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಆರ್ಥಿಕ ಪಂಡಿತರು ರಾಜಕೀಯ ಮುತ್ಸದ್ದಿಗಳು ನೆಹರೂ ಪಾಲಿಸಿಗಳನ್ನೂ ಅವುಗಳ ಆರ್ಥಿಕ ಸಾಧನೆಗಳೋನ್ನೂ ವಿಸ್ಮಯದಿಂದ ನೋಡಿದರು. ಮುಂದುವರಿದ ಅನೇಕ ರಾಷ್ಟ್ರಗಳು, ಮೂರನೆಯ ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕವಾಗಿ ಟೇಕ್‌ಆಫ್ ಆಗುವಾಗ ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳನ್ನು ಗೌಣವಾಗಿ ಕಂಡ ಉದಾಹರಣೆಗಳೇ ಹೆಚ್ಚು. ವರ್ಕಿಂಗ್ ಡೆಮಾಕ್ರಸಿ ಮುಖ್ಯವೋ ಅಥವ ಟಾಕಿಂಗ್ ಡೆಮಾಕ್ರಸಿ ಮುಖ್ಯವೋ ಎಂದು ಸಮಾಜವಾದಿ ರಾಷ್ಟ್ರಗಳು ವಾದ ಮಡಿದ ಉದಾಹರಣೆಗಳಿದ್ದವು. ನೆಹರೂ ಒಮ್ಮೆ ಹೀಗೆ ಹೇಳಿದರು.

ನನ್ನ ಮೃದು ಸ್ವಭಾವ, ಸೌಜನ್ಯತೆಗಳನ್ನು ಅನೇಕರು ದೌರ್ಬಲ್ಯಗಳೆಂದು ಟೀಕಿಸುವವರಿದ್ದಾರೆ. ಅವರ ದೃಷ್ಟಿಯಲ್ಲಿ ನಾನು ‘ಸ್ಟ್ರಾಂಗ್ ಮ್ಯಾನ್‘ ಅಲ್ಲ. ನಮ್ಮ ದೇಶದ ಪರಿಸ್ಥಿತಿ ಭಿನ್ನವಾಗಿದೆ. ವಿವಿಧ ರಾಷ್ಟ್ರೀಯುತೆ, ಭಾಷೆ, ಸಂಸ್ಕೃತಿ, ಜನಸಮುದಾಯಗಳಿಂದ ಕೂಡಿದ ಮಹಾನ್ ಭಾರತಕ್ಕೆ ನಾಗರಿಕ ಹಕ್ಕುಗಳನ್ನು, ವೈಯಕ್ತಿಕ ಹಕ್ಕುಗಳನ್ನು ಗೌರವಿಸುವ ಸದಾ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಕಟಿಬದ್ಧವಾಗಿರುವ ನಾಯಕ ಬೇಕು ; ವೈವಿಧ್ಯಮಯ ಜನತೆ, ಸಂಸ್ಕೃತಿ, ಸಿದ್ಧಾಂತ, ವಾದಗಳ ಮೇಲೆ ದರ್ಪದ ಕಾಲೂರಿ ಮೆಟ್ಟಿ ನಿಲ್ಲುವ ಸರ್ವಾಧಿಕಾರಿ ಬೇಕಾಗಿಲ್ಲ.

ಆ ನಂತರದ ಕಾಲಘಟ್ಟದಲ್ಲಿ ಇಂದಿರಾಗಾಂಧಿ ಅವರು ದೇಶದ ಮೇಲೆ ಎಮರ್ಜೆನ್ಸಿ ಹೇರಿ ಸರ್ವಾಧಿಕಾರಿಯಾದಾಗ, ನೆಹರೂ ಅಂದು ಹೇಳಿದ ಮಾತುಗಳು ಅವರ ಮಗಳಿಗೇ ಅನ್ವಯವಾಗುವಂಥ ವಿಪರ್ಯಾಸ ಉಂಟಾಯಿತು.

ನೆಹರೂ, ಕಾಮರಾಜ್ ಮತ್ತು ಕಾಂಗ್ರೆಸ್

ನೆಹರೂ ಅವರ ಪ್ರಜಾಸತ್ತಾತ್ಮಕ ಧೋರಣೆಗಲು ದೇಶದಲ್ಲಿ ಆಡಳಿತ ಮತ್ತು ರಾಜಕತೆಗಳನ್ನು ಕಾಯ್ದುಕೊಂಡು ಬಂದವು. ಆದರೆ ಇಂದಿರಾ ಅವರ ಕೇವರ ಎರಡು ವರ್ಷಗಳ ಸರ್ವಾಧಿಕಾರ ಇಡೀ ದೇಶವನ್ನು ಅರಾಜಕತೆ ಮತ್ತು ಅನಾಡಳಿತಗಳತ್ತ ನೂಕಿತು. ನೆಹರೂ ಕೇಂದ್ರಿಕರಣದ ಪರವಾಗಿದ್ದರೂ ಸಹ ಅದು ಪ್ರಜಾಸತ್ತಾತ್ಮಕ ಎಲ್ಲೆಯನ್ನು ಮೀರಿದ್ದಾಗಿರಲಿಲ್ಲ. ಆದರೆ ಇಂದಿರಾಗಾಂಧಿ ಅವರ ಅತಿಕೇಂದ್ರೀಕರಣದಿಂದ ಸ್ವತಃ ಕಾಂಗ್ರೆಸ್ ಪಕ್ಷವೇ ದುರ್ಬಲಗೊಳ್ಳುವಂತಾಯಿತು. ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳು ಬೆದರು ಬೊಂಬೆಗಳಂತಾಗಬೇಕಾಯಿತು. ರಾಜ್ಯಗಳ ಜನತೆಯ ಸ್ವಾಭಿಮಾನವನ್ನು ಕೆರಳಿಸುವಂಥ “ಲಕೋಟೆ ಮುಖ್ಯಮಂತ್ರಿಗಳು” ಹೈಕಮಾಂಡ್‌ನಿಂದ ಬರತೊಡಗಿದರು. ಇದರಿಂದಾಗಿ ಹೊಸ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳಲು ಅವಕಾಶ ಉಂಟಾಯಿತು.

ಕಾಂಗ್ರೆಸ್ ಪಕ್ಷ ನೆಹರೂ ಕಾಲದಲ್ಲಿಯೇ ಆಶಕ್ತಗೊಂಡಿತ್ತು. ಅನೇಕ ಬಾರಿ ನೆಹರೂ ಪಕ್ಷದ ಸಭೆಗಳಲ್ಲಿ ಆ ವಿಷಯವನ್ನು ಪ್ರಸ್ತಾಪಿಸಿದ್ದರು. ನೆಹರೂ ಮಾಸ್‌ಲೀಡರ್ ಆಗಿದ್ದರು. ಸ್ಟೇಟ್ಸ್‌ಮನ್ ಆಗಿದ್ದರು.ಆದರೆ ಪಕ್ಷ ಸಂಘಟಕರಾಗಿರಲಿಲ್ಲ. ದೇಶದ ಪ್ರಧಾನಿಯಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲಿಪ್ತ ಚಳವಳಿಯ ನಾಯಕರಾಗಿ ಮಿಂಚಿದ ನೆಹರೂ ಪಕ್ಷದ ಅಧ್ಯಕ್ಷ ಸ್ಥಾನ ನಿರ್ವಹಿಸುವಲ್ಲಿ ಸೋತರು. ಕಾಂಗ್ರೆಸ್‌ನಲ್ಲಿ ಜನಪ್ರಿಯ ಮಾಸ್‌ಲೀಡರ್‌ಗಳು ಪಕ್ಷ ಸಂಘಟಕರಾಗಿರಲಿಲ್ಲ ; ಪಕ್ಷ ಸಂಘಟಕರು ಜನಪ್ರಿಯ ಮಾಡ್‌ಲೀಡರ್‌ಗಲಾಗಿರಲಿಲ್ಲ.

* * *

೧೯೫೦ ಆಗಸ್ಟ್ ೨೯ರಂದು ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಪುರುಷೋತ್ತಮ್ ದಾಸ್ ಟಂಡನ್ ೧೩೦೬ ಮತಗಳನ್ನು ಪಡೆದು ಗೆದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಕೃಪಲಾನಿ ೧೦೯೨ ಮತ ಪಡೆದು ಸೋತರು. ಆಗ ಕೃಪಲಾನಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ‘ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ’ ಯನ್ನು ಘೋಷಿಸಿದರು. ಟಂಡನ್ ಮತ್ತು ನೆಹರೂ ಧೋರಣೆಗಳಲ್ಲಿ ಹೊಂದಾಣಿಕೆಯಿರಲಿಲ್ಲ. ಟಂಡನ್ ಬಲಪಂಥೀಯರಾಗಿದ್ದರೆ, ನೆಹರೂ ಎಡಪಂಥೀಯರಾಗಿದ್ದರು. ಟಂಡನ್ ಅವರು ಪಕ್ಷದ ತೀರ್ಮಾನಗಳನ್ನು ಸರಕಾರ ಅನುಷ್ಠಾನಗೊಳಿಸಬೇಕು ; ಪ್ರತಿಯೊಂದು ವಿಷಯವೂ ಪಕ್ಷದ ಉಸ್ತುವಾರಿಯಲ್ಲಿ ತೀರ್ಮಾನಗೊಳ್ಳಬೇಕು ಎಂದು ವಾದಿಸಿದರು.

ಟಂಡನ್ ಪಾಲಿಸಿಗಳನ್ನು ಮುಂದಿಟ್ಟುಕೊಂಡು ಹೋದರೆ ಕಾಂಗ್ರೆಸ್ ದಿವಾಳಿಯೇಳುತ್ತದೆ ಎಂದರು ನೆಹರೂ. ಪಕ್ಷಕ್ಕೆ ನಾನು ಬೇಕೋ ಅಥವಾ ಟಂಡನ್ ಬೇಕೋ ಎನ್ನುವ ಸವಾಲು ಹಾಕಿದರು ನೆಹರೂ. ಆಗ ಟಂಡನ್ ರಾಜೀನಾಮೆ ಕೊಡಬೇಕಾಯಿತು. ನೆಹರೂ ಪ್ರಧಾನಿಯಾಗಿದ್ದೂ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ನೆಹರೂ ಅವರಿಗೆ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲ. ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖಂಡರು ನೀಡುವ ಅಭಿಪ್ರಾಯಗಳ ಆಧಾರದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳತೊಡಗಿದರು. ಹಾಗಾಗಿ ಅನೇಕ ಸೂಕ್ಷ್ಮವೂ, ಸಂಕೀರ್ಣವೂ ಆದ ವಿಷಯಗಳ ಬಗ್ಗೆ ನೆಹರೂ ಎಡವಬೇಕಾಯಿತು. ಇದರಿಂದಾಗಿ ಅನೇಕ ರಾಜ್ಯಗಳಲ್ಲಿ ಪಕ್ಷ ತೀವ್ರ ರಾಜಕೀಯ ಹಿನ್ನಡೆಗೆ ಒಳಗಾಗುವಂತಾಯಿತು.

ಆಗ ಕಾಮರಾಜ್ ಅವರು ಪಕ್ಷದ ಪುನಶ್ಚೇತನಕ್ಕೆ ಒಂದು ಯೋಜನೆಯನ್ನು ಮುಂದಿಟ್ಟರು. ಅದು ‘ಕಾಮರಾಜ್ ಪ್ಲಾನ್’ ಎಂದು ಪ್ರಸಿದ್ಧವಾಯಿತು. ಕೇಂದ್ರ ಸಂಪುಟದಲ್ಲಿದ್ದ ಅನೇಕ ಪ್ರಭಾವಿ ಮಂತ್ರಿಗಳು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟ ಪಕ್ಷದ ಸಂಘಟನೆಗೆ ತೊಡಗಬೇಕು ಎನ್ನುವುದು ಕಾಮರಾಜ್ ಪ್ಲಾನ್ ಆಗಿತ್ತು.

ಅದರಂತೆ ಸುಮಾರು ೩೦೦ ಮಂತ್ರಿಗಳ, ಮುಖ್ಯಮಂತ್ರಿಗಳ ರಾಜೀನಾಮೆ ಪತ್ರಗಳು ಪ್ರಧಾನಿ ನೆಹರೂ ಅವರ ಕೈ ಸೇರಿದವು. ಅದರಲ್ಲಿ ಹನ್ನೆರಡು ಜನರ ರಾಜೀನಾಮೆ ಪತ್ರಗಳನ್ನು ನೆಹರೂ ಅಂಗೀಕರಿಸಿದರು. ಮೊರಾರ್ಜಿ ದೇಸಾಯಿ, ಲಾಲ್ ಬಹದ್ದೂರ್ ಶಾಸ್ತ್ರಿ, ಎಸ್.ಕೆ. ಪಾಟೀಲ್, ಬಿ.ಗೋಪಾಲರೆಡ್ಡಿ, ಕೆ.ಎಲ್. ಶ್ರೀ ಮಾಲಿ ಮುಂತಾದ ಜನಪ್ರಿಯ ನಾಯಕರು ಆ ಹನ್ನೆರಡು ಜನರಲ್ಲಿದ್ದರು.

ಕಾಮ್‌ರಾಜ್ ೧೯೬೪ ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾದರು. ಆಗ ನೆಹರೂ ಅವರು ಪಾರ್ಶ್ವವಾಯು ಪೀಡಿತರಾದರು. ಅದೇನೇ ಮಾಡಿದರೂ ಕಾಂಗ್ರೆಸ್‌ಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜೀನಾಮೆ ಕೊಟ್ಟು, ಪಕ್ಷ ಸಂಘಟನೆಗಾಗಿ ಸಿದ್ಧವಾಗಿದ್ದ ಮೊರಾರ್ಜಿ ದೇಸಾಯಿ ಮುಂತಾದವರಿಗೆ ಪಕ್ಷದ ಸಂಘಟನಾ ಜವಾಬ್ದಾರಿಗಳನ್ನು ಕೊಡಲಿಲ್ಲ. ಪಕ್ಷದ ಸಂಘಟನೆಯ ಪ್ರಶ್ನೆ ಹಾಗೆಯೇ ಉಳಿಯಿತು.

ಪ್ರಜಾ ಸೋಸಿಯಲಿಸ್ಟ್ ಪಾರ್ಟಿಯ ಆಂತರಿಕ ತುಮುಲಗಳು : ನೆಹರೂಗೆ ಜೆ.ಪಿ. ಸವಾಲುಗಲು

ಸಮಾಜವಾದಿ ಮುಖಂಡ ಜಯಪ್ರಕಾಶ್ ನಾರಾಯಣ್ ಅವರಿಗೆ ಜನಚುಂಬಕ ಶಕ್ತಿಯಿತ್ತು. ರಾಷ್ಟ್ರ ಮಟ್ಟದ ಮುಖಂಡರಲ್ಲಿ ನೆಹರೂ ಬಿಟ್ಟರೆ ಜೆ.ಪಿ.ಯವರೇ ಜನಾಕರ್ಷಕ ನಾಯಕರಾಗಿದ್ದರು. ಜೆ.ಪಿ.ಯವರೊಂದಿಗೆ ಜನಸಮೂಹಕ್ಕೆ ನಾಯಕತ್ವ ನೀಡುವ ಗುಣವುಳ್ಳ ಮುಖಂಡರ ಗುಂಪೇ ಇತ್ತು. ಆಚಾರ್ಯ ನರೇಂದ್ರದೇವ, ಆಚ್ಯುತ ಪಟವರ್ಧನ್, ಅಶೋಕ್ ಮೆಹ್ತಾ, ಡಾ. ರಾಮಮನೋಹರ ಲೋಹಿಯಾ, ಎಸ್.ಎಂ. ಜೋಷಿ ಮುಂತಾದವರು ಪ್ರಮುಖ ಸಮಾಜವಾದಿ ಮುಖಂಡರಾಗಿದ್ದರು.

ಈ ಸಮಾಜವಾದಿಗಳು, ದೇಶಕ್ಕೆ ಸ್ವಾತಂತ್ರ್ಯ ದೊರೆತ ರೀತಿಯನ್ನೇ ಅಲ್ಲಗಳೆದರು. ಮೌಂಟ್ ಬ್ಯಾಟನ್ ಪ್ಲಾನ್ ಅನ್ನು ಅವರು ವಿರೋಧಿಸಿದರು. ಅವರು ದೇಶ ವಿಭಜನೆಯನ್ನು ವಿರೋಧಿಸಿದರು. ಮಾತುಕತೆಯ ಮೂಲಕ ಹಸ್ತಾಂತರಗೊಂಡ ಸ್ವಾತಂತ್ರ್ಯಕ್ಕೆ ಅರ್ಥವಿದೆಯೇ ಎಂದು ಸಮಾಜವಾದಿಗಳು ಪ್ರಶ್ನಿಸಿದರು.

ಪ್ರಜಾ ಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲು ಮತ್ತು ಮಧ್ಯಂತರ ಸರಕಾರದಲ್ಲಿ ಅಧಿಕಾರ ಪಡೆಯಲು ಸಮಾಜವಾದಿಗಳು ನಿರಾಕರಿಸಿದರು. ಜೆ.ಪಿ. ಅವರು ಕಾಂಗ್ರೆಸ್ ಅನ್ನು ಬಲಪಂಥೀಯ ಪಕ್ಷ ಎಂದು ವ್ಯಾಖ್ಯಾನಿಸಿದರು. ನೆಹರೂ ಸಮಾಜವಾದ ಸೋಗಲಾಡಿತನದ್ದು ಎಂದು ಲೇವಡಿ ಮಾಡಿದಲರು. ಯಾವ ಬಂಡವಾಳಶಾಹಿ ವರ್ಗವನ್ನು ನಾಶ ಮಾಡಿ ಸಮಾಜವಾದ ಬರಬೇಕಾಗಿದೆಯೋ ಅದಕ್ಕಾಗಿ ಬಂಡವಾಳಶಾಹಿಗಳ ಸಹಾಯುವನ್ನು ನೆಹರೂ ಯಾಚಿಸುತ್ತಿದ್ದಾರೆ ಎಂದು ಜೆ.ಪಿ. ಅವರು ಕುಟುಕಿದರು. ಆದರೆ ಇನ್ನೋರ್ವ ಸಮಾಜವಾದಿ ಮುಖಂಡ ಆಚಾರ್ಯ ನರೇಂದ್ರದೇವ ಅವರು ಕಾಂಗ್ರೆಸ್ ಅನ್ನು ಆ ರೀತಿ ಸಾರಾಸಗಟು ವಿರೋಧಿಸುವುದು ಸರಿಯಲ್ಲ ಎಂದು ವಾದಿಸಿದರು. ಸಮಾಜವಾದಿಗಳು ಕಾಂಗ್ರೆಸ್ ತೊರೆದು ಪ್ರತ್ಯೇಕ ವಿರೋಧಪಕ್ಷವಾಗಿ ಸೆಣಸಬೇಕೆನ್ನುವ ಚರ್ಚೆ ಪಕ್ಷದಲ್ಲಿ ನಡೆದಾಗ ನರೇಂದ್ರದೇವ ಕಾಂಗ್ರೆಸ್ ತೊರೆಯುವುದು ಸರಿಯಲ್ಲವೆಂದು ಸಲಹೆ ನೀಡಿದರು. ಆದರೂ ಕೊನೆಗೆ ೧೯೪೮ರಲ್ಲಿ ಸಮಾಜವಾದಿಗಳು ಕಾಂಗ್ರೆಸ್ ತೊರೆದು ಹೊರಬಂದರು. ಪ್ರಜಾ ಸೋಸಿಯಲಿಸ್ಟ್ ಪಾರ್ಟಿಯನ್ನು (ಪಿ.ಎಸ್.ಪಿ.) ಘೋಷಿಸಿದರು.

೧೯೫೧-೫೨ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯ ಮುಖಂಡರೆಲ್ಲ ಸೋತರು. ಲೋಕಸಬೇಯಲ್ಲಿ ಪಿ.ಎಸ್.ಪಿ. ಕೇವಲ ೧೨ ಸ್ಥಾನಗಳನ್ನು ಗಳಿಸಿತು. ೧೯೫೩ರಲ್ಲಿ ಪಿ.ಎಸ್.ಪಿ. ಯ ಬೆತಲ್ ಸಮ್ಮೇಳನದಲ್ಲಿ ಕಾಂಗ್ರೆಸ್ ಜೊತೆಗಿನ ಸಂಬಂಧದ ಕುರಿತು ಕಾವೇರಿದ ಚರ್ಚೆಗಳು ನಡೆದವು. ಆಗ ಆಶೋಕ್ ಮೆಹ್ತಾ ಅವರು ಕಾಂಗ್ರೆಸ್ ಜೊತೆ ಸಹಕಾರದಿಂದ ಇರಬೇಕು ; ವಿಷಯಾಧಾರಿತ ಬೆಂಬಲವನ್ನು ಕೊಡಬೇಕು. ಅದೇ ವೇಳೆಗೆ ನಮ್ಮ ಸೈದ್ಧಾಂತಿಕತೆಯ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಬೇಕೆಂದರು. ಮುಂದುವರಿದು ಅವರು,

ಭಾರತ ಹಿಂದುಳಿದ ದೇಶ, ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶ. ಅಪಾರ ಪ್ರಮಾಣದ ಅಭಿವೃದ್ಧಿ ಹೊಂದಬೇಕಿರುವ ದೇಶ; ಕಾಂಗ್ರೆಸ್ಸನ್ನು ಸಾರಾಸಗಟಾಗಿ ವಿರೋಧಿಸಿದರೆ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಹೀಗೆ ಮಾಡುವುದರಿಂದ ಕೇವಲ ಕಾಂಗ್ರೆಸ್‌ಗೆ ಮಾತ್ರ ಉಪಯೋಗವಾಗುತ್ತದೆಂದು ತಿಳಿಯಬಾರದು ; ಸಮಾಜವಾದಿ ಪಕ್ಷದ ಉಳಿವಿಗೂ ಹೀಗೆ ಮಾಡುವುದು ಅತ್ಯವಶ್ಯ.

ಎಂದರು ಹೀಗೆ ಮಾಡದಿದ್ದರೆ ತಮ್ಮ ಪಕ್ಷಕ್ಕೆ ಜನತೆ ಮನ್ನಣೆ ನಿಡುವುದಿಲ್ಲ ಎನ್ನುವ ವಾದವನ್ನು ಮೆಹ್ತಾ ಅವರು ಮಂಡಿಸಿದರು. ಈ ವಾದವನ್ನು ಲೋಹಿಯಾ ಅವರು ತೀವ್ರ ಅಸಹನೆಯಿಂದ ವಿರೋಧಿಸಿದರು. ಕಾಂಗ್ರೆಸ್ಸನ್ನು ಸಾರಾಸಗಟು ವಿರೋಧಿಸುವುದರಿಂದ ಮಾತ್ರ ಸಮಾಜವಾದಿ ಪಕ್ಷ ಬೆಳೆಯುತ್ತದೆ. ಸಮಾಜವಾದಿ ಪಕ್ಷ ಕೇವಲ ಕಾನೂನು ಚೌಕಟ್ಟಿನ ಶಾಂತಿಯುತ ಚಳವಳಿಗಳ ಮೂಲಕವಷ್ಟೇ ಕಾಂಗ್ರೆಸ್ ಅನ್ನು ವಿರೋಧಿಸುತ್ತಿದೆ. ಅದರ ಬದಲು ಕಾನೂನು ಚೌಕಟ್ಟಿನ ಹೊರಗೆ ನಿಂತು ಮಿಲಿಟೆಂಟ್ ಹೋರಾಟಗಳನ್ನು ಮಾಡಬೇಕು ಎಂದು ವಾದಿಸಿದರು. ಲೋಹಿಯಾವಾದಕ್ಕೆ ಬಹುಮತ ಸಿಕ್ಕಿತು. ಆದರೂ ಪಕ್ಷ ಚೇತರಿಸಿಕೊಳ್ಳಲಿಲ್ಲ. ಜನಸಮೂಹ ದಲ್ಲಿ ಪಿ.ಎಸ್.ಪಿ.ಯು ವ್ಯಾಪಕವಾಗಿ ಪಸರಿಸಲಿಲ್ಲ. ವೈಯಕ್ತಿಕವಾಗಿ ನೆಹರೂ ಅವರನ್ನು ಅದೇ ರೀತಿ ಕಾರ್ಯಕ್ರಮಾತ್ಮಕವಾಗಿ ಕಾಂಗ್ರೆಸ್ಸನ್ನು ಟೀಕಿಸಿದಷ್ಟೂ ಪಿ.ಎಸ್.ಪಿ. ಸೊರಗತೊಡಗಿತು. ಅದು ಜನರಿಂದ ದೂರವಾಗತೊಡಗಿತು.

ತಮ್ಮನ್ನು ಕಟುವಾಗಿ ಟೀಕಿಸುತ್ತಿದ್ದ ಸಮಾಜವಾದಿಗಳ ಬಗ್ಗೆ ನೆಹರೂ ಕಠೋರ ನಿಲುವನ್ನು ಹೊಂದಿರಲಿಲ್ಲ. ಸಮಾಜವಾದಿಗಳು ಕಾಂಗ್ರೆಸ್ ತೊರೆದು ಹೋದಮೇಲೆ ನೆಹರೂ ತಮ್ಮ ಪಕ್ಷದಲ್ಲಿ ಏಕಾಂಗಿ ಸಮಾಜವಾದಿಯಂತಾಗಿದ್ದರು. ಕಾಂಗ್ರೆಸ್ ಒಳಗೆ ಬಲಪಂಥೀಯರ ಸಂಖ್ಯೆ ಬಹಳ ಇತ್ತು. ಪಕ್ಷದ ಒಳಗಿನ ಬಲಪಂಥೀಯರಿಂದ ಮತ್ತು ಪಕ್ಷದ ಹೊರಗಿನ ಸಮಾಜವಾದಿಗಳಿಂದ ಹೀಗೆ ಎರಡೂ ಕಡೆಯಿಂದ ವಾಗ್ದಾಳಿಯನ್ನು ಎದುರಿಸುತ್ತಿದ್ದರು ನೆಹರೂ. “ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳೋಣ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ನೀವೆಲ್ಲ ಪಕ್ಷದೊಳಗೆ ಬನ್ನಿ” ಎಂದು ಜಯಪ್ರಕಾಶ್ ನಾರಾಯಣ್ ಅವರಿಗೆ ನೆಹರೂ ಆಹ್ವಾನ ನೀಡಿದರು. ಆಗ ನೆಹರೂ ಅವರಿಗೆ ಜೆ.ಪಿ. ಅವರು ೧೪ ಅಂಶಗಳ ಷರತ್ತುಗಳನ್ನು ಮುಂದಿಟ್ಟರು. ಆ ಷರತ್ತುಗಳು ಈ ಕೆಳಗಿನಂತಿವೆ.

೧. ಸಂವಿಧಾನಕ್ಕೆ ತಿದ್ದುಪಡಿ
ಅ. ಸಾಮಾಜಿಕ ಬದಲಾವಣೆಗಳನ್ನು ಅನುಲಕ್ಷಿಸಿ ಸಂವಿಧಾನದಲ್ಲಿರುವ ಆರ್‌ಟಿಕಲ್‌ಗಳನ್ನು ರದ್ದುಪಡಿಸುವುದು.
ಆ. ರಾಜಮನೆತನದವರಿಗೆ ಮತ್ತು ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ರಾಜಧನವನ್ನು ರದ್ದುಗೊಳಿಸುವುದು.

೨. ಆಡಳಿತಾತ್ಮಕ ಸುಧಾರಣೆಗಳು
ಅ. ರಾಜಕೀಯ ಅಧಿಕಾರಿಗಳ ಮತ್ತು ಆಡಳಿತಾತ್ಮಕ ಅಧಿಕಾರಿಗಳ ವಿಕೇಂದ್ರಿಕರಣವನ್ನು ಆಡಳಿತದ ಎಲ್ಲ ಹಂತಗಳಲ್ಲಿ ಜಾರಿಗೆ ತರುವುದು.
ಆ. ಕಾನೂನು ಮತ್ತು ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವುದು.
ಇ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತಹ ವ್ಯವಸ್ಥೆಯನ್ನು ಜಾರಿಗೆ ತರುವುದು.

೩. ಅ. ಭಾಷಾವಾರು, ಆರ್ಥಿಕ ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಆಡಳಿತವನ್ನು ಪುನರ್‌ರೂಪಿಸುವುದು. ಪಾರ್ಲಿಮೆಂಟಿನಿಂದ ನೇಮಕಗೊಂಡ ಕಮಿಷನ್‌ನ ಸಹಾಯದಿಂದ ಮೇಲ್ಕಂಡ ಸುಧಾರಣೆಗಳನ್ನು ಅನುಷ್ಠಾನಗೊಳಿಸುವುದು.
ಆ. ಹಣಕಾಸಿನ ಮಿತವ್ಯಯವನ್ನು ಸ್ಥಾಪಿಸಲು ಹಲವು ಭಾಷಾವಾರು ರಾಜ್ಯಗಳಿಗೆ ಅನ್ವಯವಾಗುವಂತೆ ಪ್ರಾದೇಶಿಕ ರಾಜ್ಯಪಾಲರನ್ನು, ಉಚ್ಛ ನ್ಯಾಯಾಲಯಗಳನ್ನು ಹಾಗೂ ಇತರ ಉನ್ನತ ಸಂಸ್ಥಗಳನ್ನು ಮತ್ತು ನಾಗರಿಕ ಸೇವಾ ಆಯೋಗಗಳನ್ನು ನೇಮಿಸುವುದು.

೪.ಅ. ಆರ್ಥಿಕ ಅಸಮಾನತೆ ಮತ್ತು ಶೋಷಣೆಗಳನ್ನು ಕೊನೆಗಾಣಿಸಲು ಭೂಮಿಯನ್ನು ಪುನರ್‌ಹಂಚಿಕೆ ಮಾಡುವುದು ; ಭೂ ರಹಿತ ಕೃಷಿ ಕಾರ್ಮಿಕರಿಗೆ ಮತ್ತು ಬಡ ರೈತರಿಗೆ ಸೌಲಭ್ಯಗಳನ್ನು ನೀಡುವುದು.
ಆ. ಕಾನೂನಿನ ಮೂಲಕ ಬಡ ಜನತೆಯ ಮೇಲೆ ದೌರ್ಜನ್ಯ ಮಾಡುವುದನ್ನು ತಡೆಯುವುದು.
ಇ. ರೈತಾಪಿ ಜನರ ಆಸ್ತಿ ಪಾಸ್ತಿಗಳನ್ನು ಖಾಯಂಗೊಳಿಸುವಂತಹ ಮಸೂದೆಗಳನ್ನು ಜಾರಿಗೆ ತರುವುದು.
ಈ. ಭೂಮಾಲೀಕತ್ವದ ಅಳಿದುಳಿದಿರುವ ಪಳೆಯುಳಿಕೆಗಳನ್ನು ನಿರ್ಮೂಲನೆ ಮಾಡುವುದು.
ಉ. ಗ್ರಾಮೀಣ ಆರ್ಥಿಕತೆಯನ್ನು ಸಹಕಾರಿ ಆರ್ಥಿಕತೆಯನ್ನಾಗಿ ಮಾಡುವ ಸ್ಥಿತ್ಯಂತರಗಳನ್ನು ಶೀಘ್ರವೇ ಜಾರಿಗೆ ತರುವುದು. ಆ ಮೂಲಕ ವಿವಿಧ ಉದ್ದೇಶಗಳನ್ನು ಈಡೇರಿಸುವ ಸಹಕಾರಿ ಸಂಘಗಳನ್ನು ಬಲಪಡಿಸುವುದು.
ಊ. ಕೃಷಿಗೆ ಸಾಲ ಮತ್ತಿತರ ಸೌಲಭ್ಯಗಳನ್ನು ರಾಜ್ಯವು ಒದಗಿಸುವಂತೆ ಕಾರ್ಯಕ್ರಮವನ್ನು ರೂಪಿಸುವುದು. ಈ ಕಾರ್ಯಕ್ರಮಗಳನ್ನು ಸಹಕಾರಿ ಸಂಘಗಳ ಮೂಲಕ ಅನುಷ್ಠಾನಗೊಳಿಸುವುದು.
ಋ. ಯಾರೋ ಒಬ್ಬ ಮಧ್ಯವರ್ತಿಯ ಜೊತೆಗೆ ಸರ್ಕಾರವು ಸಾಧ್ಯವಾದಷ್ಟು ಮಟ್ಟಿಗೆ ವ್ಯವಹಾರವನ್ನು ಇಟ್ಟುಕೊಳ್ಳಕೂಡದು. ಆದರೆ ಸಹಕಾರಿ ಸಂಘಗಳು ಅಥವಾ ಪಂಚಾಯತ್‌ಗಳ ಮೂಲಕ ಯಾವುದೇ ಗುಂಪಿನೊಂದಿಗೆ ಸರ್ಕಾರವು ಸಂಬಂಧಗಳನ್ನು ಇಟ್ಟುಕೊಳ್ಳುವುದರಲ್ಲಿ ಆಕ್ಷೇಪವಿಲ್ಲ. ಭೂ ಕಂದಾಯವನ್ನು ಸಂಗ್ರಹಿಸುವಂತಹ ವಿಚಾರಗಳಲ್ಲಿ ಸರ್ಕಾರವು ಈ ಬಗೆಯಲ್ಲಿ ಸಹಕಾರಿ ಸಂಘಗಳ ಅಥವಾ ಪಂಚಾಯತ್‌ಗಳ ಮೂಲಕ ಜನರನ್ನು ತಲುಪುವಂತಹ ವ್ಯವಸ್ಥೆಯನ್ನು ಮಾಡಬಹುದು.

೫. ಪೈಸಾರಿ ಜಾಗಗಳನ್ನು ಭೂರಹಿತರಿಗೆ ವಿತರಿಸಲು ಭೂರಹಿರ ಕೃಷಿ ಕೂಲಿಕಾರರನ್ನು ಮೇಲೆತ್ತಲು ಗ್ರಾಮ ಪಂಚಾಯತಿ ಮತ್ತಿತರ ಸಂಸ್ಥೆಗಳ ಮೂಲಕ ಸುಧಾರಣೆಗಳನ್ನು ಕೈಗೊಳ್ಳುವುದು. ಬಂಡವಾಳಿಗರ ಕೃಷಿ ಸಾಗುವಳಿಗೆ ಪೈಸಾರಿ ಜಾಗಗಳನ್ನು ಯಾವ ಕಾರಣಕ್ಕೂ ನೀಡಬಾರದು.

೬. ಬ್ಯಾಂಕುಗಳನ್ನು ಮತ್ತು ವಿಮಾ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವುದು.

೭. ರಾಜ್ಯದ ಉದ್ದಿಮೆಗಳನ್ನು ಉತ್ತೇಜಿಸುವುದು.

೮. ವಿವಿಧ ಉದ್ದಿಮೆಗಳ ಆಯ್ದು ಪ್ಲಾಂಟ್‌ಗಳ ಮಾಲೀಕತ್ವವನ್ನು ರಾಜ್ಯ ಅಥವಾ ಸಹಕಾರಿ ಸಂಘಗಳು ಅಥವಾ ಸ್ವಾಯುತ್ತ ಸಂಸ್ಥೆಗಳು ಅಥವಾ ಕಾರ್ಮಿಕರ ಕೌನ್ಸಿಲ್‌ಗಳು ಹೊಂದುವುದು ಮತ್ತು ಇಂತಹ ಪ್ಲಾಂಟ್‌ಗಳನ್ನು ನಡೆಸುವುದು. ಸಾರ್ವಜನಿಕ ಉದ್ದಿಮೆಗಳಿಗೆ ಸಲಹೆ ಸೂಚನೆ ನೀಡಲು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ತರಲು ತಂತ್ರಜ್ಞರನ್ನು ಮತ್ತು ಮೇಲ್ವಿಚಾರಕರನ್ನು ಪ್ರೋತ್ಸಾಹಿಸುವುದು.

೯. ಯೂನಿಯನ್ ಷಾಪ್‌ಗಳ ಆಧಾರದಲ್ಲಿ ಕೇಂದ್ರಿಕೃತ ಕಾರ್ಮಿಕ ಸಂಘಗಳನ್ನು ಸಂಘಟಿಸುವುದು. ಇದರಿಂದಾಗಿ ಇಂತಹ ಸಂಘಗಳು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರುತ್ತವೆ.

೧೦. ಪ್ರಮುಖ ಖನಿಜ ಸಂಪತ್ತನ್ನು ಹೊಂದಿರುವ ಕಲ್ಲಿದ್ದಲು ಮತ್ತು ಉಳಿದ ಗಣಿಗಳನ್ನು ರಾಷ್ಟ್ರೀಕರಣಗೊಳಿಸುವುದು.

೧೧. ಸಾರ್ವಜನಿಕ ಉದ್ದಿಮೆಗಳಲ್ಲಿ ಕಾರ್ಮಿಕರು ಆಡಳಿತದ ಮೇಲ್ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು.

೧೨. ಬೃಹತ್ ಮತ್ತು ಸಣ್ಣ ಕೈಗಾರಿಕೆಗಳ ನಡುವಿನ ಅಂತರಗಳನ್ನು ಗುರುತಿಸುವುದು. ಈ ಮೂಲಕ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹಿಸುವುದು ಮತ್ತು ಅವುಗಳನ್ನು ಆ ಮೂಲಕ ರಕ್ಷಿಸುವುದು.

೧೩. ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ನಿವಾರಿಸಲು ಆದ್ಯತೆಯ ವಿಚಾರವಾಗಿ ಸರ್ಕಾರಿ ಸೇವೆಯಲ್ಲಿರುವವರ ಹೆಚ್ಚಿನ ವೇತನಗಳನ್ನು ಮತ್ತು ಸೌಲಭ್ಯಗಳನ್ನು ಕಡಿತಗೊಳಿಸುವುದು.

೧೪. ಸ್ವದೇಶಿಯ ಸ್ಫೂರ್ತಿಯನ್ನು ಉತ್ತೇಜಿಸುವುದು ಮತ್ತು ಪ್ರತಿಯೊಬ್ಬರ ಬದುಕಿನಲ್ಲಿ ಅದನ್ನು ಹಾಸುಹೊಕ್ಕಾಗುವಂತೆ ಮಾಡುವುದು.

ಜೆ.ಪಿ. ಅವರ ೧೪ ಷರತ್ತುಗಳು ನೆಹರೂ ಮತ್ತು ಜೆ.ಪಿ. ಅವರ ಮಧ್ಯೆ ಚರ್ಚೆ ಮತ್ತು ವಾದಗಳಲ್ಲಿ ಇತ್ಯರ್ಥಗೊಳ್ಳದೆ ಹಾಗೇ ಉಳಿದವು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮ್ರಾಜ್ಯಶಾಹಿಗಳ ನವವಸಾಹತುವಾದದ ವಿರುದ್ಧದ ತಮ್ಮ ಹೋರಾಟಕ್ಕೆ ಜೆ.ಪಿ. ಅವರ ಸಹಕಾರವನ್ನು ನೆಹರೂ ಬಯಸಿದರು. ಅದೇ ರೀತಿ ಎರಡು ಸೂಪರ್ ಪವರ್‌ಗಳನ್ನು (ಸಾಮ್ರಾಜ್ಯಶಾಹಿ ದೇಶಗಳ ಕೂಡ ಮತ್ತು ಕಮ್ಯುನಿಸ್ಟ್ ದೇಶಗಳ ಕೂಟ) ವಿರೋಧಿಸಿ ನಡೆಸುತ್ತಿರುವ ಅಲಿಪ್ತ ಚಳವಳಿಗೆ ಬೆಂಬಲ ಕೋರಿದರು. ಆದರೆ ನೆಹರೂ ಮತ್ತು ಜೆ.ಪಿ. ಅವರ ಮಧ್ಯೆ ಸಹಮತ ಅಂಕುರಿಸಲಿಲ್ಲ.

ಇತ್ತ ಪಿ.ಎಸ್.ಪಿ. ತೀರಾ ಅಶಕ್ತ ಪಕ್ಷವಾಗತೊಡಗಿತು. ಜೆ.ಪಿ. ಅವರು ರಾಜಕೀಯ ವ್ಯವಸ್ಥೆಯ ಬಗೆಗೇ ನಿರಾಶಾಭಾವನೆ ತಾಳತೊಡಗಿದರು. ಭಾರತ ದೇಶಕ್ಕೆ ಪಕ್ಷ ರಾಜಕೀಯ ಸೂಕ್ತವಾದುದಲ್ಲ ಎಂದು ಹೇಳಿದರು. ೧೯೫೪ರಲ್ಲಿ ಜೆ.ಪಿ. ರಾಜಕೀಯದಿಂದ ನಿವೃತ್ತಿಯಾಗಿ ಭೂದಾನ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಘೋಷಿಸಿದರು. ೧೯೫೬ರಲ್ಲಿ ಸಮಾಜವಾದಿ ಪ್ರಮುಖ ಮುಖಂಡರಲ್ಲೊಬ್ಬರಾದ ಆಚಾರ್ಯ ನರೇಂದ್ರದೇವ ತೀರಿಕೊಂಡರು.

೧೯೫೫ರಲ್ಲಿ ಡಾ. ಲೋಹಿಯಾ ಅವರು ಪಿ.ಎಸ್.ಪಿ.ಯನ್ನು ತೊರೆದು ಪ್ರತ್ಯೇಕವಾಗಿ ಸೋಸಿಯಲಿಸ್ಟ್ ಪಾರ್ಟಿಯನ್ನು ಘೋಷಿಸಿದರು. ೧೯೬೩ರಲ್ಲಿ ಆಶೋಕ್ ಮೆಹ್ತಾ ರಾಷ್ಟ್ರೀಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡು ಕಾಂಗ್ರೆಸ್ ಸೇರಿದರು. ಹೋಗುವಾಗ ಪಿ.ಎಸ್.ಪಿ.ಯ ಶೇ. ೩೦ರಷ್ಟು ಸದಸ್ಯರನ್ನು ತಮ್ಮೊಂದಿಗೆ ಕರೆದೊಯ್ದರು.

೧೯೭೧ರಲ್ಲಿ ಅನೇಕ ರಾಜ್ಯಗಳ ಪಿ.ಎಸ್.ಪಿ.ಯ ಪ್ರಮೂಕ ಮುಖಂಡರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರು. ಅದರಲ್ಲಿ ಮುಖ್ಯವಾದವರು :

ಆಂದ್ರಪ್ರದೇಶ ಟಿ. ಪ್ರಕಾಶಂ
ಕೇರಳ ಪಟ್ಟವರ್ ಚನ್ನು ಪಿಳ್ಳೆ
ಬಿಹಾರ್ ಮಹಾಮಾಯಾ ಪ್ರಸಾದ್
ಪಶ್ಚಿಮ ಬಂಗಾಳ ಪಿ.ಸಿ.ಘೋಷ್

ಲೋಹಿಯಾ ತಮ್ಮ ಜೀವನದ ಕೊನೆಗಾಲದಲ್ಲಿ ಹಿಂದು ಬಲಪಂಥೀಯರೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ವಿರುದ್ಧದ ಹೋರಾಟ ಮುಂದುವರಿಸಲು ಪ್ರಯತ್ನಿಸಿದರು. ಲೋಹಿಯಾ ಅವರ ಸಮಾಜವಾದಿ ಪಕ್ಷಕ್ಕೆ ಸಂಸತ್ತಿನಲ್ಲಿ ಗಣನೀಯ ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

೧೯೫೭ರ ಚುನಾವಣೆಯಲ್ಲಿ ಅದು ೮ ಸ್ಥಾನಗಳನ್ನು ಗಳಿಸಿದರೆ, ೧೯೬೨ರ ಚುನಾವಣೆಯಲ್ಲಿ ೬ ಸ್ಥಾನಗಳನ್ನು ಗಳಿಸಿತು. ೧೯೬೭ರ ಚುನಾವಣೆಯಲ್ಲಿ ೨೩ ಸ್ಥಾನಗಳನ್ನು ಗಳಿಸುವಲ್ಲಿ ಅದು ತೃಪ್ತಿಪಟ್ಟುಕೊಳ್ಳಬೇಕಾಯಿತು. ೧೯೬೭ರಲ್ಲಿ ಲೋಹಿಯಾ ಅವರು ಕೊನೆಯುಸಿರೆಳೆದರು. ಸಮಾಜವಾದಿ ಪಕ್ಷ ೧೯೭೧ರ ಅವಧಿಯಲ್ಲಿ ಕೇವಲ ಶೇ. ೨.೪ರಷ್ಟು ಮತಗಳನ್ನು ಮಾತ್ರ ಪಡೆಯುವುದಕ್ಕೆ ಸೀಮಿತಗೊಂಡಿತು.

ಕಾಂಗ್ರೆಸ್‌ ಗಿಂತ ಸಮಾಜವಾದಿ ಪಕ್ಷ ಸೈದ್ಧಾಂತಿಕತೆಯಲ್ಲಿ ಮತ್ತು ಕಾರ್ಯಕ್ರಮದಲ್ಲಿ ಭಿನ್ನವಾದುದು ಎಂದು ಜನಕ್ಕೆ ತೋರಿಸಿಕೊಡುವಲ್ಲಿ ಲೋಹಿಯಾ ಸೋತರು. ನೆಹರೂ ಸಮಾಜವಾದ, ಜೆ.ಪಿ. ಸಮಾಜವಾದ ಮತ್ತು ಲೋಹಿಯಾ ಸಮಾಜವಾದದಲ್ಲಿ ಜನ ಭಿನ್ನತೆಗಳನ್ನು ಕಾಣಲಿಲ್ಲ.

ಈ ಸಂದರ್ಭದಲ್ಲಿ ಖ್ಯಾತ ಕಮ್ಯುನಿಸ್ಟ್ ನಾಯಕ ಬಿ.ಟಿ.ರಣಧಿವೆ ಅವರ ಒಮದು ಮಾತು ಸ್ಮರಣಾರ್ಹ. ನೆಹರೂ ಅವರನ್ನು ಮತ್ತು ಅವರ ಧೋರಣೆಗಳನ್ನು ಸಾರಾಸಗಟಾಗಿ ವಿರೋಧಿಸಿದ ಪಕ್ಷಗಳಿಗೆ ಬೆಳೆಯಲು ಸಾಧ್ಯವಾಗಲಿಲ್ಲ. ಆಗ ಜನರಿಗೆ, ನೆಹರೂ ಕುರಿತಾದ ಟೀಕೆಗಳು ಬಡವರ ಬಗೆಗಿನ, ಸಮಾಜವಾದಿ ಆಶಯಗಳ ಬಗೆಗಿನ ಟೀಕೆಗಳಂತೆ ಕೇಳಿಸುತ್ತಿದ್ದವು ಎಂದು ರಣಧಿವೆ ಅವರು ಅಭಿಪ್ರಾಯಪಟ್ಟಿರುವುದನ್ನು ಗಮನಿಸಬಹುದು.

ಲೋಹಿಯಾ ಅವರು “ಇತಿಹಾಸ ಚಕ್ರ” ಎನ್ನುವ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಮುಖ್ಯವಾಗಿ ಇತಿಹಾಸದ ಗತಿಕ್ರಮದ ವಿಶ್ಲೇಷಣೆಯನ್ನು ಮಾಡಿದ್ದಾರೆ. ಇತಿಹಾಸ ಚಕ್ರಗತಿಯಲ್ಲಿ ತಿರುಗುತ್ತದೆ. ಮೇಲೆ ಇದ್ದುದು ಕೆಳಗೆ ಬರುತ್ತದೆ ; ಅದೇ ರೀತಿ ಕೆಳಗೆ ಇದ್ದದು ಮೇಲೆ ಹೋಗುತ್ತದೆ ಎಂದು ತರ್ಕಿಸಿದ್ದಾರೆ.

ಮಾರ್ಕ್ಸ್ ಇತಿಹಾಸದ ಕುರಿತು ಮಾಡಿದ ವಿಶ್ಲೇಷಣೆಗೆ ಅದು ವಿರುದ್ಧವಾಗಿತ್ತು. ಮಾರ್ಕ್ಸ್‌ ಅವರು ಇತಿಹಾಸವು ಸ್ಪೈರಲಕ್ (spiral) ಗತಿಕ್ರಮದಲ್ಲಿ ವಿಕಾಸಗೊಳ್ಳುತ್ತ ಸಾಗುತ್ತದೆ ಎಂದು ವಿಶ್ಲೇಷಿಸಿದ್ದರು. ಕುತೂಹಲದ ಸಂಗತಿಯೆಂದರೆ ಇತಿಹಾಸದ ‘ಚಕ್ರಗತಿ’ ಯ ಗ್ರಹಿಕೆಗೂ ವೈದಿಕ ಜ್ಞಾನದ ಇತಿಹಾಸ ಗ್ರಹಿಕೆಗೂ ಮೂಲಭೂತ ಹೋಲಿಕೆಗಳಿವೆ. ಲೋಹಿಯಾ ಅವರ ಇತಿಹಾಸ ಚಕ್ರ ಎನ್ನುವ ಪುಸ್ತಕವನ್ನು ಕನ್ನಡದ ಖ್ಯಾತ ನವ್ಯ ಕವಿ ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಭಾಷಾಂತರಿಸಿದರು. ಅಡಿಗರು ಬಲಪಂಥೀಯ ಜನಸಂಘವನ್ನು ಪ್ರತಿನಿಧಿಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಲೋಹಿಯಾ ಅವರು ಜನಸಂಘದೊಂದಿಗೆ ಅದಕ್ಕೂ ಹಿಂದೆ ರಾಜಕೀಯ ಮೈತ್ರಿ ಮಾಡಿಕೊಂಡಿದ್ದರು. ಈ ಎಲ್ಲ ಸಂಗತಿಗಳು ಆಧ್ಯಯನಕ್ಕೆ ಒಳಪಡಿಬೇಕಾದಂಥವು.