ಆಂಧ್ರದ ಎನ್.ಟಿ.ಆರ್. ಸರಕಾರ : ಸಿನಿಮಾ ರಾಜಕೀಯದ ಭ್ರಮನಿರಸನ

ಆಂದ್ರಪ್ರದೇಶ ರಾಜ್ಯವು ಅಕ್ಟೋಬರ್ ೧೯೫೩ರಂದು ಅಸ್ತಿತ್ವಗೊಂಡಿತು. ನಂತರ ನವಂಬರ್ ೧೯೫೬ರಲ್ಲಿ ತೆಲಂಗಾಣ ಪ್ರದೇಶವನ್ನು ಸೇರ್ಪಡೆ ಮಾಡಲಾಯಿತು. ನಿಜಾಮ್ ಆಡಳಿತಕ್ಕೆ ಒಳಪಟ್ಟಿದ್ದ ತೆಲಂಗಾಣ ತೀರಾ ಹಿಂದುಳಿದ ಪ್ರದೇಶ, ಸಾಕ್ಷರತೆ, ಆರ್ಥಿಕತೆ, ಮೂಲ ಸೌಕರ್ಯ ಎಲ್ಲದರಲ್ಲೂ ಕರಾವಳಿ ಆಂಧ್ರಕ್ಕಿಂತ ಹಿಂದುಳಿದ ಪ್ರದೇಶ.

ನಿಜಾಮ್ ಕಾಲದಲ್ಲಿ ಚಾಲ್ತಿಯಲ್ಲಿದ್ದ ಮುಲ್ಕಿ ಕಾನೂನು (ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ) ಜಾರಿಯಾಗಬೇಕೆನ್ನುವ ಬೇಡಿಕೆ ಮುಂದಿಟ್ಟು ಹೋರಾಟ ನಡೆಸಲಾಯಿತು. ಭಾಷೆ ಒಂದೇ ಆದರೂ ಕರಾವಳಿ ಆಂಧ್ರ ಮತ್ತು ತೆಲಂಗಾಣ ಪ್ರದೇಶಗಳ ನಡುವೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಂದಕಗಳಿವೆ. ಅಲ್ಲಿ ಜಾತಿ ರಾಜಕೀಯ ಮನೆ ಮಾಡಿದೆ. ಕಮ್ಮ ಜಾತಿ ರಾಜಕೀಯ ಮತ್ತು ರೆಡ್ಡಿ ಜಾತಿ ರಾಜಕೀಯದ ನಡುವೆ ಘರ್ಷಣೆಗಳಿವೆ.

ನಿಜಾಮ್ ಸರಕಾರದ ವಿರುದ್ಧ ತೆಲಂಗಾಣ ರೈತರ ಸಶಸ್ತ್ರ ಹೋರಾಟ ನಡೆಸಿದ ಮಹಾನ್ ಕಮ್ಯುನಿಸ್ಟ್ ನಾಯಕ ಪಿ. ಸುಂದರಯ್ಯ, ಆಂಧ್ರದಲ್ಲಿ ಜನಪ್ರಿಯ ನಾಯಕರಾಗಿದ್ದರು. ಕಮ್ಯುನಿಸ್ಟ್ ಪಕ್ಷವನ್ನು ಪ್ರಬಲ ವಿರೋಧಿ ಪಕ್ಷವನ್ನಾಗಿ ಬೆಳೆಸಿದ್ದರು. ನಂತರದ ಸ್ಥಿತ್ಯಂತರಗಳಲ್ಲಿ ಆ ಪಕ್ಷ ತನ್ನ ಪ್ರಭಾವ ಕಳೆದುಕೊಂಡಿತು. ನಕ್ಸಲ್ ಚಳವಳಿಯ ಪ್ರಭಾವ ಗಣನೀಯವಾಗತೊಡಗಿತು.

ಎಂಬತ್ತರ ದಶಕದಲ್ಲಿ ಎನ್.ಟಿ.ಆರ್. ರಾಜಕೀಯ ರಂಗವೇದಿಕೆಯ ಮೇಲೆ ಪ್ರತ್ಯಕ್ಷವಾದರು. ತಮಿಳುನಾಡಿನಲ್ಲಿ ಚಿತ್ರನಟ ಎಂ.ಜಿ.ಆರ್. ರೀತಿ ಎನ್.ಟಿ.ರಾಮರಾವ್ ಆಂಧ್ರದಲ್ಲಿ ಭಾರೀ ಜನಪ್ರಿಯ ನಟರಾಗಿದ್ದರು. ಆವರು ತಮ್ಮ ಚಿತ್ರಗಳಲ್ಲಿ ರಾಮ, ಕೃಷ್ಣ, ಕರ್ಣ ಮುಂತಾದ ಪೌರಾಣಿಕ ಪಾತ್ರಗಳ ಮೂಲಕ ಜನಮನ ಗೆದ್ದ ನಾಯಕರಾಗಿದ್ದರು. ಸಿನಿಮಾ ಪ್ರಭಾವಳಿಯನ್ನು ರಾಜಕೀಯ ಪ್ರಭಾವಳಿಯನ್ನಾಗಿ ಪರಿವರ್ತಿಸಿಕೊಂಡು ‘ಸ್ವಾಭಿಮಾನಿ ಆಂಧ್ರ’ ಮತ್ತು ‘ಸ್ವಾಭಿಮಾನಿ ತೆಲುಗು’ ಎನ್ನುವ ಘೋಷಣೆಗಳೊಂದಿಗೆ ರಾಜಕೀಯ ಪ್ರವೇಶ ಮಾಡಿದರು. ಆ ಸಂದರ್ಭದಲ್ಲಿ ಆಂಧ್ರದ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಳ್ಳಲ್ಪಟ್ಟಿತ್ತು. ಕಮ್ಯುನಿಸ್ಟ್ ಪಕ್ಷಗಳು ಪರ್ಯಾಯ ಶಕ್ತಿಗಳಾಗುವ ಸಾಮರ್ಥ್ಯ ಹೊಂದಿರಲಿಲ್ಲ. ಹೊಸ ಪ್ರಾದೇಶಿಕ ಪಕ್ಷಕ್ಕೆ ಪರಿಸ್ಥಿತಿ ಹದವಾಗಿತ್ತು.

ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಯಿಂದ ಲಕೋಟೆ ಕಳಿಸಿಕೊಡುತ್ತಿತ್ತು. ಆ ಲಕೋಟೆಯಲ್ಲಿ ಯಾರ ಹೆಸರಿರುತ್ತಿತ್ತೋ ಅವರು ಮುಖ್ಯಮಂತ್ರಿಗಳಾಗುವಂಥ ನಾಚಿಕೆಗೇಡಿನ ರಾಜಕೀಯ ವಾತಾವರಣ ಆವರಿಸಿಕೊಂಡಿತ್ತು. ಮೂರು ತಿಂಗಳು, ಆರು ತಿಂಗಳಿಗೊಬ್ಬ ಮುಖ್ಯಮಂತ್ರಿ ಬದಲಾಗುತ್ತಾರೆ ಕಾಂಗ್ರೆಸ್‌ನಲ್ಲಿ, ಅದೂ ದಿಲ್ಲಿಯಿಂದ ಬರುವ ಅದೃಷ್ಟದ ಲಕೋಟೆಯ ಆಧಾರದಲ್ಲಿ ಎಂದು ಜನ ಮಾತಾಡಿಕೊಳ್ಳುವಂತಾಗಿತ್ತು.

ಆಗ ಎನ್.ಟಿ.ಆರ್. ಅವರ ‘ಸ್ವಾಭಿಮಾನಿ ತೆಲುಗು’ ಘೋಷಣೆಯ ತೆಲುಗು ದೇಶಂ ಪಕ್ಷ ಜನರನ್ನು ಆಕರ್ಷಿಸಿತು. ಬಂಡವಾಳಶಾಹಿ, ಭೂಮಾಲೀಕ ಹಿತಾಸಕ್ತಿಗಳನ್ನು ಮುಖ್ಯವಾಗಿಸಿಕೊಂಡಿದ್ದ ತೆಲುಗುದೇಶಂ ಪಕ್ಷ ಆಂಧ್ರ ಪ್ರದೇಶದಲ್ಲಿ ಸರಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಎನ್.ಟಿ.ಆರ್. ತೀರಿಕೊಂಡ ನಂತರ ಅವರ ಅಳಿಯ ಚಂದ್ರಬಾಬುನಾಯ್ಡು ತೆಲುಗು ದೇಶಂ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ನಂತರದ ಕಾಲಾವಧಿಯಲ್ಲಿ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಜೊತೆಗೆ ತೆಲುಗು ದೇಶಂ ಪಾಲುದಾರ ಪಕ್ಷವಾಯಿತು.

ಸಿನೆಮಾ ಮತ್ತು ರಾಜಕೀಯ ಇವರೆಡರ ಕಾಕ್‌ಟೇಲ್ ಪಾಲಿಟಿಕ್ಸ್‌ನಲ್ಲಿ ಆಂಧ್ರವು ತಮಿಳುನಾಡನ್ನು ಹೋಲುತ್ತದೆ. ಇತ್ತೀಚೆಗೆ ಖ್ಯಾತ ಚಲನಚಿತ್ರನಟ ಚಿರಂಜೀವಿ ಎನ್.ಟಿ. ರಾಮರಾವ್ ಥರ ಹೊಸಪಕ್ಷ ‘ಪ್ರಜಾರಾಜ್ಯಮ್’ ಅನ್ನು ಕಟ್ಟಿದ್ದಾರೆ. ಚಿರಂಜೀವಿ ಭಾಷಣ ಮಾಡಲು ನಿಂತರೆ ಲಕ್ಷಾಂತರ ಜನ ಮುಗಿಬಿದ್ದು ಸೇರುತ್ತಾರೆ. ಆದರೆ ಅವರೆಲ್ಲ ಚಿರಂಜೀವಿಗೆ ಓಟು ಹಾಕುವುದಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ತೀರಾ ಗೌಣವೆನ್ನುವ ಬೆರಳೆಣಿಕೆಯ ವಿಧಾನಸಭಾ ಸ್ಥಾನಗಳಲ್ಲಿ ಮಾತ್ರ ಪ್ರಜಾರಾಜ್ಯಮ್ ಗೆದ್ದಿದೆ.

ಆಂಧ್ರದ ಜನತೆಗೆ, ಸಿನೆಮಾ ಮತ್ತು ವಾಸ್ತವ ಬೇರೆ ಬೇರೆ ಎನ್ನುವ ಅರಿವು ನಿಧಾನವಾಗಿ ಆಗಿದೆ. ಎನ್.ಟಿ.ಅರ್. ಸರ್ಕಾರದಲ್ಲಿ ‘ರಾಮರಾಜ್ಯ’ದ ಪವಾಡ ನಡೆಯದಿದ್ದುದನ್ನು ಸಾಕ್ಷಾತ್ ನೋಡಿದ ತೆಲುಗು ಜನತೆ ಈ ವಿಷಯದಲ್ಲಿ ತಮಿಳುನಾಡಿನ ಜನತೆಗಿಂತ ಆಂಧ್ರದ ಜನತೆ ಹೆಚ್ಚು ಜಾನ ಮತದಾರರು ಎನ್ನಿಸಿಕೊಂಡಿದ್ದಾರೆ.

ಎಚ್.ಡಿ.ದೇವೇಗೌಡ : ಜೆ.ಡಿ.(ಎಸ್) – ಬಿ.ಜೆ.ಪಿ. ಮತ್ತು ಕರ್ನಾಟಕ

ಎಚ್.ಡಿ. ದೇವೇಗೌಡರದು ಕರ್ನಾಟಕದ ರಾಜಕೀಯದಲ್ಲಿ ಬಹುಮುಖ್ಯ ಪಾತ್ರ. ಕರ್ನಾಟಕದಲ್ಲಿ ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಎಚ್.ಡಿ. ದೇವೇಗೌಡರ ಪರಿಶ್ರಮ ಗಣನೀಯವಾದುದು.

ಕರ್ನಾಟಕದಲ್ಲಿ ಜನತಾ ಸರಕಾರ ಅಸ್ತಿತ್ವಕ್ಕೆ ಬಂದಾಗ ಯಾರು ಮುಖ್ಯಮಂತ್ರಿಗಳಾಗಬೇಕು ಎನ್ನುವ ಪ್ರಶ್ನೆ ಎದುರಾಯಿತು. ಆಗ ಎಚ್.ಡಿ. ದೇವೇಗೌಡ, ಎಸ್.ಆರ್. ಬೊಮ್ಮಾಯಿ ಮತ್ತು ಕ್ರಾಂತಿರಂಗದ ಎಸ್. ಬಂಗಾರಪ್ಪ ಅವರ ಹೆಸರುಗಳು ಸ್ಫರ್ಧೆಯಲ್ಲಿದ್ದವು. ರಾಜೀಸೂತ್ರದ ಆಮದು ಅಭ್ಯರ್ಥಿಯಾಗಿ ರಾಮಕೃಷ್ಣ ಹೆಗಡೆಯವರು ಬಂದರು. ಆ ನಂತರದ ಜನತಾ ಪಕ್ಷಚ ಆಡಳಿತಾವಧಿಯಲ್ಲಿ ದೇವೇಗೌಡರು ಮುಖ್ಯಮಂತ್ರಿಗಳಾದರು. ಅದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಪ್ರಧಾನಿಯಾಗುವ ಅವಕಾಶವೂ ಅವರ ಮುಂದೆ ಬಂದಿತು.

ಆಗ ಜ್ಯೋತಿಬಸು ಪ್ರಧಾನಿ ಆಗಬೇಕಾಗಿತ್ತು. ಆದರೆ ಸಿ.ಪಿ.ಐ.(ಎಂ) ಪಾಲಿಟ್ ಬ್ಯೂರೋ ತಮ್ಮ ಪಕ್ಷದ ಅಭ್ಯರ್ಥಿ ಪ್ರಧಾನಿ ಆಗುವುದಿಲ್ಲ ಮತ್ತು ಪಕ್ಷ ಹೊರಗಿನಿಂದ ಬೆಂಬಲಿಸುತ್ತದೆ ಎಂದು ಹೇಳಿತು. ಹಾಗಾಗಿ ಎಚ್.ಡಿ. ದೇವೇಗೌಡರು ಭಾರತದ ಪ್ರಧಾನಮಂತ್ರಿಗಳಾಗಲು ಸಾಧ್ಯವಾಯಿತು.

ತೀರಾ ಸಾಮಾನ್ಯ ರೈತ ಕುಟುಂಬದಿಂದ ಬಂದ ದೇವೇಗೌಡರು ಪ್ರಧಾನಿಯಾದದ್ದು ಗಮನಾರ್ಹ ಸಂಗತಿ. ದಕ್ಷಿಣ ಭಾರತದಿಂದ ಕಾಂಗ್ರೆಸ್ಸೇತರ ವ್ಯಕ್ತಿಯೊಬ್ಬರು ಪ್ರಧಾನಿಯಾದ ಕೀರ್ತಿ ದೇವೇಗೌಡರದು. ದೇವೇಗೌಡರು ಮಾಜಿ ಪ್ರಧಾನಿಗಳಾದ ಮೇಲೆ ಕರ್ನಾಟಕದಲ್ಲಿ ಜನತಾದಳ (ಸೆಕ್ಯುಲರ್) ಪಕ್ಷವನ್ನು ವಿಶಾಲ ಜನಸಮುದಾಯಗಳ ತಳಹದಿಯಲ್ಲಿ ಕೊಂಡೊಯ್ಯಲು ಸಾಧ್ಯವಿದ್ದಿತು. ಕರ್ನಾಟಕದಲ್ಲಿ ಜನತಾದಳಕ್ಕೆ ವಿಶಾಲ ತಳಹದಿ ಸಿಗಲು ಶ್ರಮಿಸಿದ ಅನೇಕ ನಾಯಕರುಗಳು ಮತ್ತು ದೇವೇಗೌಡರ ಮಧ್ಯೆ ಭಿನ್ನಾಭಿಪ್ರಾಯಗಳುಂಟಾದವು.

ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರೊಂದಿಗೆ ದೇವೇಗೌಡರ ಭಿನ್ನಾಭಿಪ್ರಾಯ ಉಂಟಾಯಿತು. ಜನತಾದಳ ಒಡೆಯಿತು. ಜೆ.ಡಿ.(ಎಸ್) ಮತ್ತು ಜೆ.ಡಿ.(ಯು)ಗಳೆಂದು ಎರಡು ಗುಂಪುಗಳಾದವು. ಆ ನಂತರ ಎಂ.ಪಿ. ಪ್ರಕಾಶ್ ಮತ್ತು ಸಿದ್ಧರಾಮಯ್ಯ ಅವರೊಂದಿಗೆ ಸಹ ದೇವೇಗೌಡರ ಭಿನ್ನಾಭಿಪ್ರಾಯ ಉಂಟಾಯಿತು.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್) ಮೈತ್ರಿಕೂಟದ ಸರಕಾರ ಅಸ್ತತ್ವಕ್ಕೆ ಬಂದಿತು. ಧರ್ಮಸಿಂಗ್ ಮುಖ್ಯಮಂತ್ರಿಗಳಾದರು.

ಧರ್ಮಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆ.ಡಿ.(ಎಸ್) ಹಿಂತೆಗೆದುಕೊಂಡಿತು. ಬಿ.ಜೆ.ಪಿ. ಸಖ್ಯದೊಂದಿಗೆ ಸರಕಾರ ರಚಿಸಲು ಮುಂದಾಯಿತು. ಆಗ ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಅನೇಕ ಜೆ.ಡಿ.(ಎಸ್) ನಾಯಕರು ಅತೃಪ್ತಿಯಿಂದ ಕಾಂಗ್ರೆಸ್‌ಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ಈಗ ರಾಜ್ಯದಲ್ಲಿ ಜೆ.ಡಿ. (ಎಸ್) ಚಿಕ್ಕ ಗುಂಪಾಗಿ ಉಳಿದುಕೊಂಡಿದೆ. ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಮೆರೆದ ಜನತಾ ಪರಿವಾರ ಒಡೆದ ಕನ್ನಡಿಯಂತಾಗಿದೆ.

ರಾಜ್ಯದಲ್ಲಿ ಜನತಾದಳದ ಜನಸಮೂಹದ ನೆಲೆಯನ್ನು ಬಿ.ಜೆ.ಪಿ. ಆವರಿಸಿಕೊಳ್ಳುತ್ತಾ ಬೆಳೆಯುತ್ತಿದೆ. ಬಿ.ಜೆ.ಪಿ.ಯ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾರೆ ಮತ್ತು ದಕ್ಷಿಣ ಭಾರತದ ಪ್ರಥಮ ಬಿ.ಜೆ.ಪಿ.ಯ ಮುಖ್ಯಮಂತ್ರಿಗಳೂ ಆಗಿದ್ದಾರೆ.

೧೯೮೯-೯೯ :ರಾಜಕೀಯ ತಲ್ಲಣಗಳ ದಶಖ ; ವಿ.ಪಿ. ಸಿಂಗ್ ಮಂಡಲ್ ರಾಜಕೀಯ

೧೯೮೭ರ ನಂತರ ೧೯೮೯ರಿಂದ ಒಂದು ದಶಕದವರೆಗಿನ ದೇಶದ ರಾಜಕೀಯ ವಿದ್ಯಮಾನಗಳಲ್ಲಿ ಭಿನ್ನ ಸ್ವರೂಪದ ತಲ್ಲಣಗಳುಂಟಾದವು. ೧೯೮೭ರ ಮುಂಚೆ ರಾಜೀವ್‌ಗಾಂಧಿ ಅವರಿಗಿದ್ದ ‘ಮಿಸ್ಟರ್ ಕ್ಲೀನ್’ ಇಮೇಜನ್ನು ಬೋಫೋರ್ಸ್ ಗನ್‌ಗಳು ಸ್ಫೋಟಗೊಳಿಸಿದ್ದವು. ಸ್ವೀಡನ್ ದೇಶದ ಬೋಫೋರ್ಸ್ ಕಂಪನಿಯ ಶಸ್ತ್ರಾಸ್ತ್ರ ಖರೀದಯಲ್ಲಿ ೬೦ ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆಯೆಂದು ಸ್ವೀಡನ್ ರೇಡಿಯೋ ಬಿತ್ತರಿಸಿತು.

ರಾಜೀವ್‌ ಗಾಂಧಿ ಅವರು ವಿ.ಪಿ.ಸಿಂಗ್ ಅವರನ್ನು ಅರ್ಥಮಂತ್ರಿಯನ್ನಾಗಿ ಮಾಡಿದ್ದರು ಆಗ ವಿ.ಪಿ.ಸಿಂಗ್ ಅವರು ದೇಶದ ಬೃಹತ್ ಬಂಡವಾಳಶಾಹಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಿ ‘ರೇಡ್‌ರಾಜ’ ಎಂದು ಖ್ಯಾತರಾಗಿದ್ದರು. ರಾಜೀವ್ ಗಾಂಧಿ ಅವರ ಆಪ್ತ ಸ್ನೇಹಿತರಾಗಿದ್ದ ಖ್ಯಾತ ಹಿಂದಿ ಚಲನಚಿತ್ರ ನಟ ಅಮಿತಾಬ್ ಬಚ್ಚನ್ ಅವರ ಮನೆಯ ಮೇಲೂ ತೆರಿಗೆ ದಾಳಿಯನ್ನು ವಿ.ಪಿ.ಸಿಂಗ್ ನಡೆಸಿದರು. ಆಗ ರಾಜೀವ್ ಗಾಂಧಿ ಅವರು ವಿ.ಪಿ.ಸಿಂಗ್ ಅವರನ್ನು ಅರ್ಥ ಖಾತೆಯಿಂದ ತೆಗೆದು ರಕ್ಷಣಾ ಖಾತೆಗೆ ಹಾಕಿದರು. ಆಗ ಬೋಫೋರ್ಸ್ ಹಗರಣ ಅವರ ಗಮನಕ್ಕೆ ಬಂದಿತು. ಆ ಹಗರಣವನ್ನು ಬಯಲುಗೊಳಿಸುವುದಾಗಿ ರಾಜೀವ್ ಅವರಿಗೆ ವಿ.ಪಿ.ಸಿಂಗ್ ಹೆದರಿಸಿದರು.

ಇಂದಿರಾ ಗಾಂಧಿ ಅವರ ಕಾಲದಿಂದಲೂ ವಿ.ಪಿ. ಸಿಂಗ್, ನೆಹರೂ ಕುಟುಂಬಕ್ಕೆ ನಿಷ್ಠೆ ತೋರುತ್ತಾ ಬಂದವರಾಗಿದ್ದರು. ಇಂದಿರಾ ಅವರ ಹತ್ಯೆಯ ನಂತರದ ರಾಜೀವ್ ಸರ್ಕಾರದಲ್ಲಿ ಅವರು ಜನಪ್ರಿಯತೆಯನ್ನು ಗಳಿಸಿಕೊಂಡರು. ಮಾಧ್ಯಮಗಳು, ಕಾಂಗ್ರೆಸ್ಸಿನ ಬುಧ್ಧಿಜೀವಿಗಳು ವಿ.ಪಿ.ಸಿಂಗ್ ಅವರನ್ನು ಮೆಚ್ಚಿಕೊಳ್ಳತೊಡಗಿದರು.

ರಾಜೀವ್ ಗಾಂಧಿ ಅವರು ವಿ.ಪಿ.ಸಿಂಗ್ ಅವರನ್ನು ಪಕ್ಷದಿಂದ ೧೯೮೭ರ ಏಪ್ರಿಲ್ ೧೬ರಂದು ಉಚ್ಛಾಟಿಸಿದರು. ಶಾಬಾನು ಪ್ರಕರಣದ ಸಂದರ್ಭದಲ್ಲಿ ತೀವ್ರ ಚರ್ಚೆಗೆ ಈಡಾಗಿದ್ದ ಆರಿಫ್ ಮೊಹ್ಮದ್‌ಖಾನ್‌ರೊಂದಿಗೆ ಸೇರಿಕೊಂಡ ಸಿಂಗ್ ಅವರು ‘ಜನಮೋರ್ಚಾ’ ಎನ್ನುವ ಪಕ್ಷ ಆರಂಭಿಸಿದರು. ಆ ಸಂದರ್ಭದಲ್ಲಿಯೇ ‘ಜನತಾದಳ’ ಉದಯವಾಯಿತು. ಜನತಾಪಕ್ಷ, ಜನಮೋರ್ಚಾ, ಲೋಕದಳ ಮತ್ತು ಕಾಂಗ್ರೆಸ್ (ಎಸ್) ಪಕ್ಷಗಳು ವಿಲೀನಗೊಂಡು ಜನತಾದಳವಾಯಿತು.

೧೯೮೯ರ ನವೆಂಬರ್ ೧೮ರಂದು ದೆಹಲಿಯಲ್ಲಿ ಜನತಾಪಕ್ಷದ ಸಭೆ ನಡೆಯಿತು. ನಾಲ್ಕು ಪಕ್ಷಗಳು ವಿಲೀನಗೊಂಡು ಜನತಾದಳ ಎನ್ನುವ ಹೊಸ ಪಕ್ಷ ರಚಿಸಿಕೊಳ್ಳುವುದರ ಬಗೆಗೆ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಕರ್ನಾಟಕದ ಎಚ್.ಡಿ.ದೇವೇಗೌಡ ಮತ್ತು ವೈಜನಾಥ್ ಪಾಟೀಲ್ ಅವರ ನೇತೃತ್ವದ ಒಂದು ಗುಂಪು ವಿಲೀನಕ್ಕೆ ವಿರೋಧಿಸಿತು. ವಿಲೀನದ ಪರವಾಗಿದ್ದ ಜೀವರಾಜ್ ಆಳ್ವ ಅವರು ಪ್ರತಿಭಟನೆಯ ಗೊತ್ತುವಳಿಯನ್ನು ಓದುತ್ತಿದ್ದ ವೈಜನಾಥ್ ಪಾಟೀಲ್ ಅವರ ಮೇಲೆ ಹಲ್ಲೆಗೆ ಮುಂದಾದರು. ಆಗ ಚಂದ್ರಶೇಖರ್ “ನಮ್ಮದು ಸರ್ವಾಧಿಕಾರಿ ಪಕ್ಷವಲ್ಲ. ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರಬೇಕು. ವೈಜನಾಥ ಪಾಟೀಲ್ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿ” ಎಂದು ಹೇಳಿದರು. ಆಗಲೂ ಆಳ್ವ ಸುಮ್ಮನಾಗದಿದ್ದಾಗ ವಿಲೀನವಿರೋಧಿಗಳು ಆಳ್ವ ಅವರ ಮೇಲೆ ಪ್ರತಿದಾಳಿ ನಡೆಸಿ ಸುಮ್ಮನಾಗಿಸಿದರು.

[1] ದೇವೇಗೌಡರು ವಿಲೀನಕ್ಕೆ ವಿರೋಧಿಸಿ ತಮ್ಮದು ಎಸ್.ಜೆ.ಪಿ. (ಸಮಜವಾದಿ ಜನತಾಪಕ್ಷ) ಎಂದು ಘೋಷಿಸಿಕೊಂಡು ಹೊರಬಂದರು. ಕರ್ನಾಟಕ ರಾಜ್ಯ ಎಸ್.ಜೆ.ಪಿ.ಗೆ ವೈಜನಾಥ್ ಪಾಟೀಲ್ ಅಧ್ಯಕ್ಷರಾದರು. ಆಗ ಚಂದ್ರಶೇಖರ್ ಅವರು ಲೋಕದಳದೊಂದಿಗೆ ತಮ್ಮನ್ನು ಗುರುತಿಸಿಕೊಂಡರು. ಬೋಫೋರ್ಸ್‌ ಹಗರಣವನ್ನಿಟ್ಟುಕೊಂಡು ಸಿಂಗ್ ಅವರು ಕಾಂಗ್ರೆಸ್ ವಿರೋಧಿ ಪ್ರಚಾರಾಂದೋಲನ ಆರಂಭಿಸಿದರು. ಮುಂಬೈ ಟ್ರೇಡ್ ಯೂನಿಯನ್ ಲೀಡರ್ ದತ್ತಾ ಸಾಮಂತ್ ಮತ್ತು ಮಹಾರಾಷ್ಟ್ರದ ರೈತ ಚಳವಳಿಗಾರ ಶರದ್ ಜೋಷಿ ಮುಂತಾದವರು ವಿ.ಪಿ.ಸಿಂಗ್ ಅವರ ಆಂದೋಲನಕ್ಕೆ ಬೆಂಬಲಿಸಿದರು. ಅದೇ ರೀತಿ ಹಿಂದಿ ಭಾಷಾ ರಾಜ್ಯಗಳ ರೈತ ಮುಖಂಡರು ಸಿಂಗ್ ಆಂದೋಲನವನ್ನು ಬೆಂಬಲಿಸಿದರು. ದೇವಿಲಾಲ್ ಅವರು ವಿ.ಪಿ.ಸಿಂಗ್ ಅವರತ್ತ ವಾಲಿದರು.

ನವೆಂಬರ್ ೧೯೮೯ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಏಳು ಪಕ್ಷಗಳು ಸೇರಿ ನ್ಯಾಷನಲ್‌ ಫ್ರಂಟ್ ಅನ್ನು ರಚಿಸಿಕೊಂಡವು. ನ್ಯಾಷನಲ್‌ ಫ್ರಂಟ್‌ಗೆ ೧೪೬, ಬಿಜೆಪಿಗೆ ೮೬, ಮತ್ತು ಎಡಪಕ್ಷಗಳಿಗೆ ೫೨ ಸ್ಥಾನಗಳು ದೊರೆತವು. ೧೯೮೯ರ ಡಿಸೆಂಬರ್ ೨ ರಂದು ವಿ.ಪಿ.ಸಿಂಗ್ ನ್ಯಾಷನಲ್ ಫ್ರಂಟ್‌ನಿಂದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ದೇವಿಲಾಲ್ ಉಪಪ್ರಧಾನಿಯಾದರು. ಅಲ್ಪಾವಧಿಯಲ್ಲಿಯೇ ಉಪಪ್ರಧಾನಿ ಹುದ್ದೆಯಿಂದ ದೇವಿಲಾಲ್ ಅವರು ಇಳಿಯಬೇಕಾಯಿತು. ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿ ರಾಷ್ಟ್ರಪತಿಗಳಿಗೆ ಬರೆಯಲಾಗಿದ್ದ ಪತ್ರದ ವಿವಾದದಿಂದಾಗಿ ದೇವಿಲಾಲ್ ಅಧಿಕಾರ ಬಿಡಬೇಕಾಯಿತು. ಆಗ ದೇವಿಲಾಲ್ ಅವರು ದೆಹಲಿಯಲ್ಲಿ ಭಾರೀ ಸಂಖ್ಯೆಯ ರೈತರ ರ‍್ಯಾಲಿಯನ್ನು ನಡೆಸಿದರು. ಆ ಸಂದರ್ಭದಲ್ಲಿ ವಿ.ಪಿ.ಸಿಂಗ್ ಅವರು ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಮಂಡಲ್ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದರು. ಜನಮನದ ಗಮನ ಸಹಜವಾಗಿಯೇ ಮಂಡಲ್ ವರದಿಯತ್ತ ತಿರುಗಿತು. ಇಂದಿರಾಗಾಂಧಿ ಅವರ ಕಾಲದಲ್ಲಿಯೇ ಈ ವರದಿ ಬಂದುದಾಗಿತ್ತು. ಇಂದಿರಾ ಅವರು ಆ ವರದಿಯನ್ನು ಕೋಲ್ಡ್ ಸ್ಟೋರೇಜ್‌ಗೆ ಎಸೆದಿದ್ದರು.

ಮಂಡಲ್ ಆಯೋಗದ ಶಿಫಾರಸ್ಸುಗಳು ಅವೈಜ್ಞಾನಿಕವಾಗಿವೆ ಎಂದು ಎಡಪಕ್ಷಗಳೂ ಹೇಳಿದವು. ಸೂಕ್ತ ಮಾರ್ಪಾಡುಗಳೊಂದಿಗೆ ಮಾತ್ರ ಆ ವರದಿಯನ್ನು ಜಾರಿಗೊಳಿಸಬಹುದು ಎಂದು ಅವು ಹೇಳಿದವು. ವರದಿಯನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸುವುದಕ್ಕೆ ಮುಂಚೆ ತಮ್ಮೊಂದಿಗೆ ಪ್ರಧಾನಿ ವಿ.ಪಿ.ಸಿಂಗ್ ಚರ್ಚಿಸಬೇಕಿತ್ತು ಎಂದು ಎಡಪಕ್ಷಗಳು ಆಕ್ಷೇಪಿಸಿದವು.

ಬಿ.ಜೆ.ಪಿ.ಯು ಮಂಡಲ್ ವರದಿಯ ವಿರುದ್ಧ ಉದ್ದೇಕಕಾರಿ ಚಳವಳಿಯನ್ನೇ ಆರಂಭಿಸಿತು. ಅನೇಕ ವಿದ್ಯಾರ್ಥಿಗಳು, ಯುವಕರು ಆತ್ಮಾಹುತಿ ಮಾಡಿಕೊಳ್ಳತೊಡಗಿದರು. ಬಿ.ಜೆ.ಪಿಯ ಈ ಚಳವಳಿಗೆ ಮೇಲುಸ್ತರದ ಜನಸಮುದಾಯಗಳಿಂದ ಅಪಾರ ಬೆಂಬಲ ಸಿಕ್ಕಿತು. ಜನಬೆಂಬಲವನ್ನು ನೋಡಿದ ಬಿ.ಜೆ.ಪಿ. ನ್ಯಾಷನಲ್ ಫ್ರಂಟ್‌ಗೆ ನೀಡಿದ್ದ ಬೆಂಬಲ ಹಿಂಪಡೆದುಕೊಂಡು ಆಂದೋಲನ ಮುಂದುವರಿಸಬೇಕೆನ್ನುವ ತೀರ್ಮಾನಕ್ಕೆ ಬಂದಿತು. ೧೯೯೦ ಅಕ್ಟೋಬರ್ ೧ ರಂದು ಭಾರತದ ಸರ್ವೋಚ್ಛ ನ್ಯಾಯಾಲಯ ಮಂಡಲ್ ವರದಿ ಜಾರಿಗೆ ತಡೆಯಾಜ್ಞೆ ನೀಡಿತು. ಮಂಡಲ್ ವಿರೋಧಿ ಚಳವಳಿಯ ಹೀರೋ ಆಗಿ ಬಿ.ಜೆ.ಪಿ. ಹೊರಹೊಮ್ಮಿತು.

ಮಂಡಲ್ ಹೋರಾಟದ ಬಿಸಿಯನ್ನು ಆರಲು ಬಿಡಲಾರದೆ ಎಲ್.ಕೆ. ಅದ್ವಾನಿ ಅವರು ರಥಯಾತ್ರೆಯನ್ನು ಆರಂಭಿಸಿದರು. ಗುಜರಾತಿನ ಸೋಮನಾಥದಿಂದ ಈ ಆರಂಭಗೊಂಡ ರಥಯಾತ್ರೆ ೬೦೦೦ ಮೈಲುಗಳನ್ನು ಸುತ್ತಿ ಬಿಹಾರನ ಸಮಷ್ಟಿಪುರಕ್ಕೆ ಬಂದಿತು ಆಗ ಅದ್ವಾನಿ ಅವರನ್ನು ಬಂಧಿಸಲಾಯಿತು. ಬಂಧನದ ನೆಪವೊಡ್ಡಿ ನ್ಯಾಷನಲ್ ಫ್ರಂಟ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿ.ಜೆ.ಪಿ.ಯು ವಾಪಸ್ ಪಡೆದುಕೊಂಡಿತು.

೧೯೮೯ರ ಚುನಾವಣೆಯಲ್ಲಿ ಮಿತ್ರ ಪಕ್ಷಗಳ ಕೂಟವಾಗಿದ್ದ ನ್ಯಾಷನಲ್ ಫ್ರಂಟ್ ಮತ್ತು ಬಿ.ಜೆ.ಪಿ.ಯ ಮಧ್ಯೆ ಚುನಾವಣಾ ಹೊಂದಾಣಿಕೆ ಏರ್ಪಟ್ಟಿತ್ತು. ಕಾಂಗ್ರೆಸ್ ಅನ್ನು ನೇರವಾಗಿ ವಿರೋಧಿಸುವ ಉದ್ದೇಶದಿಂದ ೮೫ ಕ್ಷೇತ್ರಗಳಲ್ಲಿ ನ್ಯಾಷನಲ್ ಫ್ರಂಟ್ ಮತ್ತು ಬಿ.ಜೆ.ಪಿ. ಅಭ್ಯರ್ಥಿಗಳು ಮುಖಾಮುಖಿಯಾಗಬಾರದೆನ್ನುವ ಒಪ್ಪಂದ ಮಾಡಿಕೊಳ್ಳಲಾಯಿತು. ನ್ಯಾಷನಲ್ ಫ್ರಂಟ್ ಜೊತೆಗಿನ ಈ ಚುನಾವಣಾ ಸ್ಥಾನಗಳ ಹೊಂದಾಣಿಕೆಯಿಂದಾಗಿ ಬಿ.ಜೆ.ಪಿ. ಹೆಚ್ಚಿನ ಲಾಭ ಪಡೆದುಕೊಂಡು ಬೆಳೆಯಲು ಅನುಕೂಲವಾಯಿತು.

ರಾಜೀವ್ ಗಾಂಧಿ ರಾಜಕೀಯ : ಸಿಡಿದು ನಿಂತ ಚಂದ್ರಶೇಖರ್

ಸೋಸಿಯಲಿಸ್ಟ್ ಪಕ್ಷದೊಳಗೆ ಕಾಂಗ್ರೆಸ್ ಬಗೆಗೆ ಮೃದು ಧೋರಣೆಯಿದ್ದ ಗುಂಪು ಅಶೋಕ್ ಮೆಹ್ತಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿತು. ಮೆಹ್ತಾ ಅವರೊಂದಿಗೆ ಯುವನಾಯಕರಾಗಿದ್ದ ಚಂದ್ರಶೇಖರ್, ಮೋಹನ್ ಧಾರಿಯಾ, ಕೃಷ್ಣಕಾಂತ್, ಮುಂತಾದವರು ಕಾಂಗ್ರಸ್‌ಗೆ ಹೋದರು. ಕಾಂಗ್ರೆಸ್‌ನಲ್ಲಿ ಚಂದ್ರಶೇಖರ್ ಅವರು ಸಮಾಜವಾದಿ ಧೋರಣೆಯ ಯುವ ಜನರ ಗುಂಪನ್ನು ರೂಪಿಸಿದರು. ಆ ಗುಂಪಿಗೆ ‘ಯಂಗ್‌ಟರ್ಕ್ಸ್’ ಎನ್ನುವ ಹೆಸರಾಯಿತು.

ಇಂದಿರಾಗಾಂಧಿ ಅವರು ದೇಶದ ಮೇಲೆ ಎಮರ್ಜೆನ್ಸಿ ಹೇರಿದ್ದನ್ನು ಚಂದ್ರಶೇಖರ್ ಕಟುವಾಗಿ ವಿರೋಧಿಸಿದರು. ‘ಯಂಗ್ ಟರ್ಕ್ಸ್’ ಗಳನ್ನೆಲ್ಲ ಚಂದ್ರಶೇಖರ್ ಅವರು ಒಂದೆಡೆ ಔತಣಕೂಟದ ನೆಪದಲ್ಲಿ ಸೇರಿಸಿದರು. ಆ ಸಭೆಯನ್ನು ಉದ್ದೇಶಿಸಿ ಜಯಪ್ರಕಾಶ್ ನಾರಾಯಣ ಅವರು ಭಾಷಣ ಮಾಡುವಂತೆ ವ್ಯವಸ್ಥೆ ಮಾಡಿದ್ದರು. ಆ ಸಭೆಯಲ್ಲಿ ಜೆ.ಪಿ. ಅವರು ನ್ಯಾಯಾಂಗ ಮತ್ತು ಮಿಲಿಟರಿಗಳನ್ನು ಇಂದಿರಾಗಾಂಧಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರ ಬಹುಮತ ನಿಡಿ ಆಯ್ಕೆ ಮಾಡುವ ಸರ್ಕಾರಕ್ಕೆ ಸರ್ವಾಧಿಕಾರವಿರುವುದಿಲ್ಲ. ಸರಕಾರ ಸಂವಿಧಾನದ ಸೆಕ್ಯುಟಿರಿಗಾರ್ಡ್‌ ಮಾತ್ರ ಎಂದು ಭಾವೋದ್ವೇಗದಿಂದ ಹೇಳಿದರು. ಜೆ.ಪಿ. ಅವರನ್ನು ಅಂದೇ ರಾತ್ರಿ ಪೊಲೀಸರು ಬಂಧಿಸಿದರು. ಜೆ.ಪಿ. ಬಂಧನದ ಸುದ್ದಿ ತಿಳಿಯುತ್ತಲೇ ಚಂದ್ರಶೇಖರ್ ಉಟ್ಟಬಟ್ಟೆಯ ಮೇಲೇ ಪೊಲೀಸ್ ಠಾಣೆಗೆ ಹೋದರು. ಜೆ.ಪಿ. ಅವರನ್ನು ಬಿಡಿ ಎಂದು ಚಂದ್ರಶೇಖರ್ ಗುಡುಗಿದರು. ಆಗ ಪೊಲೀಸರು “ನಿಮ್ಮ ಬಂಧನಕ್ಕೂ ಅರೆಸ್ಟ್ ವಾರೆಂಟ್ ಇದೆ” ಎಂದು ಹೇಳಿ ಚಂದ್ರಶೇಖರ್ ಅವರನ್ನೂ ಬಂಧಿಸಿದರು !

ಚಂದ್ರಶೇಖರ್ ಅವರದು ತಲೆಬಾಗುವ ಸ್ವಭಾವವಾಗಿರುವುದಿಲ್ಲ. ಅಂಥ ಸ್ವಾಭಿಮಾನಿಗಳನ್ನು ಇಂದಿರಾಗಾಂಧಿ ದೂರವಿಡುತ್ತಿದ್ದರು. ಹಾಗಾಗಿ ದೀರ್ಘಕಾಲ ಕಾಂಗ್ರೆಸ್‌ನಲ್ಲಿದ್ದೂ ಚಂದ್ರಶೇಖರ್ ಯಾವುದೇ ಅಧಿಕಾರ, ಮಂತ್ರಿಗಿರಿಯಿಲ್ಲದೆ ಇದ್ದರು. ಅವರ ಮೌನ, ತಾಳ್ಮೆಗಳು ಜೆಪಿ ಅವರ ಬಂಧನದ ನಂತರ ಸ್ಫೋಟಗೊಂಡವು.

* * *

ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ಕಾಂಗ್ರೆಸ್ ಸರ್ಕಾರ ರಚಿಸಲು ಮುಂದೆ ಬರಲಿಲ್ಲ. ಆಗ ಜನತಾದಳ ವಿಭಜನೆಯಾಯಿತು. ಚಂದ್ರಶೇಖರ್ ಅವರ ನೇತೃತ್ವದಲ್ಲಿ ೫೮ ಜನ ಸಿಡಿದು ಹೊರಬಂದರು. ಆಗ ಚಂದ್ರಶೇಖರ್ ಎಸ್.ಜೆ.ಪಿ.ಯೊಂದಿಗೆ ತಮ್ಮ ಗುಂಪನ್ನು ವಿಲೀನಗೊಳಿಸಿ ಸರ್ಕಾರ ರಚನೆಗೆ ಮುಂದಾದರು. ಆಗ ರಾಜೀವ್ ಗಾಂಧಿ ಚಂದ್ರಶೇಖರ್ ಸರ್ಕಾರಕ್ಕೆ ಬಾಹ್ಯ ಬೆಂಬಲ ಸೂಚಿಸಿದರು.

೧೯೯೦ರ ನವೆಂಬರ್ ೧೦ರಂದು ಚಂದ್ರಶೇಖರ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ ರಾಜೀವ್‌ಗಾಂಧಿ ಅವರು ಚಂದ್ರಶೇಖರ್ ಅವರನ್ನು ತಮ್ಮ ಕೈಗೊಂಬೆ ಮಾಡಿಕೊಳ್ಳಲು ಪ್ರಯತ್ನಿಸಿದರು. ತಾವು ಹೇಳಿದಂತೆ ಕುಣಿಯಲು ಒತ್ತಾಯಿಸಿದರು. ತಮಿಳು ನಾಡಿನಲ್ಲಿದ್ದ ಡಿ.ಎಂ.ಕೆ. ಸರ್ಕಾರವನ್ನು ಉರುಳಿಸುವಂತೆ ಹೇಳಿದರು. ಯಾವ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಮರ್ಜೆನ್ಸಿ ವಿರುದ್ಧ ಹೋರಾಟ ಮಾಡಿದ್ದರೋ ಅದೇ ಸರ್ವಾಧಿಕಾರಿ ಕೃತ್ಯವನ್ನು ಸೆಸಗುವ ರಾಜಕೀಯ ಅನಿವಾರ್ಯತೆಗೆ ಒಳಗಾದರು ಚಂದ್ರಶೇಖರ್. ಅಕ್ರಮವಾಗಿ ಡಿ.ಎಂ.ಕೆ. ಸರ್ಕಾರವನ್ನು ಉರುಳಿಸಿದ ಕೆಲವೇ ದಿನಗಳ ನಂತರ ರಾಜೀವ್ ಗಾಂಧಿ ಚಂದ್ರಶೇಖರ್ ಮುಂದ ಮತ್ತೊಂದು ಬೇಡಿಕೆಯನ್ನಿಟ್ಟರು. ಆ ಬೇಡಿಕೆ ಹರ್ಯಾಣ ಸರ್ಕಾರವನ್ನು ಉರುಳಿಸುವುದಾಗಿತ್ತು. ಆಗ ಚಂದ್ರಶೇಖರ್ ರಾಜೀವ್ ಗಾಂಧಿ ಅವರತ್ತ ಕೆಂಗಣ್ಣಿನಿಂದ ನೋಡಿ ಮೌನವಾಗಿ ಎದ್ದು ಹೋಗುತ್ತಾರೆ. ಅಲ್ಲಿಂದ ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸುತ್ತಾರೆ. ಅಂದಿಗೆ ಚಂದ್ರಶೇಖರ್ ಸರ್ಕಾರ ಐದು ತಿಂಗಳುಗಳ ಅವಧಿಯನ್ನೂ ಮುಗಿಸಿರುವುದಿಲ್ಲ. ಎರಡು ತಿಂಗಳುಗಳ ನಂತರ ಸಾರ್ವತ್ರಿಕ ಚುನಾವಣೆಗಳು ಘೋಷಿಸಲ್ಪಟ್ಟವು.

೧೯೯೧ರ ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿಗೆ ರಾಜೀವ್ ಗಾಂಧಿ ಆಗಮಿಸಿದರು. ಪೆರಂಬೂದೂರಿನಲ್ಲಿ ಭಾಷಣಕ್ಕೆ ಆಗಮಿಸಿದಾಗ ಎಲ್.ಟಿ.ಟಿ.ಈ. ಉಗ್ರಗಾಮಿಗಳು ಮಧು ಎನ್ನುವ ಯುವತಿ ‘ಮಾನವ ಬಾಂಬ್’ ಆಗಿ ರಾಜೀವ್‌ಅವರನ್ನು ಬರ್ಬರವಾಗಿ ಹತ್ಯೆಗೈದಳು.

ರಾಜೀವ್ ಸಾವಿನ ಅನುಕಂಪದಲ್ಲಿ ಕಾಂಗ್ರೆಸ್ ೨೩೨ ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿತು. ಪಿ.ವಿ.ನರಸಿಂಹರಾವ್ ಸರಕಾರ ರಚಿಸಿದರು. ಬ ಹುಮತಕ್ಕಾಗಿ ಕೆಲವು ಮತಗಳು ನರಸಿಂಹರಾವ್ ಅವರಿಗೆ ಬೇಕಾಗಿರುತ್ತವೆ.

ಚಂದ್ರಶೇಖರ್ ಅವರ ನೇತೃತ್ವದಲ್ಲಿ ಎಸ್.ಜೆ.ಪಿ. ಸಭೆ ನಡೆಯಿತು. ಎಸ್.ಜೆ.ಪಿ. ಸರ್ಕಾರದ ಪತನಕ್ಕೆ ಕಾರಣವಾದ ಕಾಂಗ್ರೆಸ್‌ಗೆ ಬೆಂಬಲಿಸಬಾರದು ಎಂದು ನಿರ್ಣಯ ತೆಗೆದುಕೊಳ್ಳುತ್ತದೆ. ಹಾಸನ ಸಂಸತ್ ಕ್ಷೇತ್ರದಿಂದ ಎಸ್.ಜೆ.ಪಿ.ಯಿಂದ ಆಯ್ಕೆಯಾಗಿದ್ದ ದೇವೇಗೌಡರೂ ಆ ಸಭೆಯಲ್ಲಿರುತ್ತಾರೆ. ನಿರ್ಣಯಕ್ಕೆ ಒಮ್ಮತದ ಸಹಿಯನ್ನೂ ಹಾಕಿರುತ್ತಾರೆ. ಆದರೆ ತಮ್ಮ ಪಕ್ಷದ ನಿರ್ಣಯಕ್ಕೆ ವಿರುದ್ಧವಾಗಿ ಪಿ.ವಿ. ನರಸಿಂಹರಾವ್ ಸರ್ಕಾರಕ್ಕೆ ತಮ್ಮ ಮತ ಹಾಕುತ್ತಾರೆ. ಆ ನಂತರ ರಾಜಕೀಯ ಅಸ್ಥಿರತೆ ಉಂಟಾಗಬಾರದೆನ್ನುವ ಕಾರಣಕ್ಕೆ ನರಸಿಂಹರಾವ್ ಸರ್ಕಾರಕ್ಕೆ ಬೆಂಬಲ ನೀಡಿದೆ ಎಂದು ದೇವೇಗೌಡರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು.

ಪಿ.ವಿ.ನರಸಿಂಹರಾವ್ : ಸರ್ಕಾರ ಸ್ಥಿರ ; ಸಮಾಜ ಅಸ್ಥಿರ !

ಪಿ.ವಿ. ನರಸಿಂಹರಾವ್ ಮತ್ತು ಚಂದ್ರಶೇಖರ್ ಅವರ ಅಲ್ಪಾವಧಿ ಅಸ್ಥಿರ ಸರಕಾರಗಳ ನಂತರ ನರಸಿಂಹರಾವ್ ಸರಕಾರರ ಅಸ್ತಿತ್ವಕ್ಕೆ ಬಂದಿತು. ರಾಜೀವ್ ಕಗ್ಗೊಲೆಯ ಅನುಕಂಪದ ಅಲೆಯಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಬೃಹತ್ ಪಕ್ಷವಾಗಿ ಹೊಮ್ಮಿತು. ಹಾಗಾಗಿ ಐದು ವರ್ಷಗಳ ಅವಧಿಯವರೆಗೆ ಸರಕಾರ ಅಸ್ತಿತ್ವದಲ್ಲಿರಲು ಸಾಧ್ಯವಾಯಿತು. ರಾಜೀವ್ ಹತ್ಯೆಯ ಶಾಕ್‌ನಲ್ಲಿದ್ದರು. ಸೋನಿಯಾಗಾಂಧಿ. ರಾಜೀವ್ ಕುಟುಂಬದ ಆಪ್ತಕೂಟದ ಸದಸ್ಯರಾಗಿದ್ದರು ನರಸಿಂಹರಾವ್. ನರಸಿಂಹರಾವ್ ಅವರು ಮೌನವನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡರು. ವಿವಾದಾತ್ಮಕ ಹೇಳಿಕೆಗಳನ್ನು ಅವರು ನೀಡುತ್ತಿರಲಿಲ್ಲ. ವಿವಾದಗಳುಂಟಾದಾಗ ಪ್ರತಿಕ್ರಿಯೆ ನೀಡದೆ ಮೌನ ವಹಿಸುತ್ತಿದ್ದರು. ಹವಾಲಾ ಹಗರಣದಲ್ಲಿ ನರಸಿಂಹರಾವ್ ಅವರು ಆರೋಪಿಗಳಾದರು. ನರಸಿಂಹರಾವ್ ಸಂಪುಟದ ಸಚಿವರುಗಳ ಮೇಲೆಯೂ ಭ್ರಷ್ಟಾಚಾರದ ಆರೋಪಗಳಾದವು. ವಿದೇಶಿ ವಿನಿಮಯ ಕಾನೂನಿನ ನಿಯಮಾವಳಿಗಳನ್ನು ನರಸಿಂಹರಾವ್ ಮತ್ತವರ ಸಹೋದ್ಯೋಗಿಗಳು ಉಲ್ಲಂಘಿಸಿದ ಆರೋಪಗಳಾದವು. ಇವೆಲ್ಲ ಆರ್ಥಿಕ ಭ್ರಷ್ಟಾಚಾರಗಳಾಗಿದ್ದವು. ಇದಕ್ಕಿಂತ ಅಪಾಯಕಾರಿಯಾದ ಕೋಮುಸಾಮರಸ್ಯವನ್ನು ಧ್ವಂಸಗೊಳಿಸುವ ಶಕ್ತಿಗಳನ್ನು ನರಸಿಂಹರಾವ್ ಅವರು ನಿಯಂತ್ರಿಸಲಿಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಅಲ್ಪಸಂಖ್ಯಾತರ ಹಿತ ಕಾಯುವ ಪಕ್ಷ ಎನ್ನುವ ಇಮೇಜ್ ಪಡೆದುಕೊಂಡು ಬಂದಿತ್ತು. ಆ ಇಮೇಜ್‌ಗೆ ಭಾರೀ ಪೆಟ್ಟು ಬಿದ್ದಿತು ನರಸಿಂಹರಾವ್ ಸರ್ಕಾರದಲ್ಲಿ.

೧೯೯೨ರಲ್ಲಿ ಅದ್ವಾನಿಯವರ ರಥಯಾತ್ರೆ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸುವಲ್ಲಿ ಅಂತಿಮಗೊಂಡಿತು. ಇಡೀ ದೇಶದ ಜನತೆ ಬಾಬ್ರಿ ಮಸೀದಿಯು ಹಿಂದು ಕರಸೇವಕರಿಂದ ಧ್ವಂಸಗೊಳ್ಳುವುದನ್ನು ಟಿ.ವಿ.ಯಲ್ಲಿ ವೀಕ್ಷಿಸಿತು ; ಪ್ರಧಾನಿ ನರಸಿಂಹರಾವ್ ಸಹ ವೀಕ್ಷಿಸಿದರು. ಅದ್ವಾನಿ ಅವರ ರಥಯಾತ್ರೆಯ ತೀವ್ರತೆ ಗೊತ್ತಿದ್ದರೂ ನರಸಿಂಹರಾವ್ ಅವರು ಮೌನ ವಹಿಸಿದ್ದರು.

ಬಾಬ್ರಿ ಮಸೀದಿಯ ಧ್ವಂಸ ದೇಶವಿಭಜನೆಯ ಕೃತ್ಯಕ್ಕೆ ಸಮನಾದುದಾಗಿತ್ತು. ದೇಶವಿಭಜನೆಯ ನಂತರ ಹಿಂದು ಮತ್ತು ಮುಸ್ಲಿಮ್ ಕೋಮುಗಳ ಸಾಮರಸ್ಯಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ದೇಶದ ಕೋಮು ಸೌಹಾರ್ದತೆಯನ್ನು ಅಸ್ಥಿರಗೊಳಿಸಲು ನೇರ ಕಾರಣೀಭೂತರಾದರು ನರಸಿಂಹರಾವ್. ನರಸಿಂಹರಾವ್, ತಾವೇ ಕೊನೆಯ ಕಾಂಗ್ರೆಸ್ ಪ್ರಧಾನಿಯಾಗಬಯಸಿದ್ದಾರೆ ಎನ್ನುವ ಟೀಕೆಗಳೂ ರಾಜಕೀಯ ವಲಯದಲ್ಲಿ ಕೇಳಿ ಬಂದವು.

ಮಸೀದಿ ಧ್ವಂಸ: ತಪ್ಪಿತು ಬಿಜೆಪಿ ಲೆಕ್ಕಾಚಾರ

ಬಾಬ್ರಿ ಮಸೀದಿ ಧ್ವಂಸದ ನಂತರ ಇಡೀ ದೇಶದ ಹಿಂದುಗಳೆಲ್ಲ ಕೋಮುವಾದಿಗಳಾಗಿ ಪರಿವರ್ತನೆಗೊಂಡುಬಿಡುತ್ತಾರೆನ್ನುವ ಆಶಯ ವಾಜಪೇಯಿ ಮತ್ತು ಅದ್ವಾನಿಯವರಿಗೆ ಇತ್ತೇನೋ. ಆದರೆ ಅದು ಹಾಗಾಗಲಿಲ್ಲ. ೧೯೯೬ರ ಚುನಾವಣೆಯಲ್ಲಿ ಬಿ.ಜೆ.ಪಿ. ಕೇವಲ ೧೬೧ ಸ್ಥಾನಗಳನ್ನು ಪಡೆದುಕೊಂಡಿತು. ಅದಕ್ಕಿಂತ ಮುಂಚೆ ೧೯೯೧ರ ಚುನಾವಣೆಯಲ್ಲಿ ಬಿ.ಜೆ.ಪಿ. ೧೨೦ ಸ್ಥಾನಗಳನ್ನು ಪಡೆದುಕೊಂಡಿತ್ತು. ಕೇವಲ ೪೧ ಸ್ಥಾನಗಳು ಮಾತ್ರ ಹೆಚ್ಚಿಗೆ ಬಂದಿದ್ದವು.

ನರಸಿಂಹರಾವ್ ನೇತೃತ್ವದಲ್ಲಿ ಕಾಂಗ್ರೆಸ್ ೧೪೦ ಸ್ಥಾನ ಗಳಿಸಿತು. ೧೯೯೧ರ ಚುನಾವಣೆಯಲ್ಲಿ ಕಾಂಗ್ರೆಸ್ ೨೩೨ ಸ್ಥಾನಗಳನ್ನು ಪಡೆದುಕೊಂಡಿತು. ಬಹುಮತ ಪ್ರದರ್ಶಿಸುವ ಸಾಮರ್ಥ್ಯ ಇಲ್ಲದಿದ್ದರೂ ವಾಜಪೇಯಿ ಅವರು ಸರಕಾರ ರಚಿಸಲು ಮುಂದೆ ಬಂದರು. ಬಿ.ಜೆ.ಪಿ.ಯ ಪ್ರಥಮ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನವನ್ನು ೧೯೯೬ರ ಮೇ ೧೬ ರಂದು ಸ್ವೀಕರಿಸಿದರು. ಬಹುಮತ ಪ್ರದರ್ಶಿಸಲು ಸಾಧ್ಯವಾಗದೆ ಅವರು ಕೇವಲ ಹದಿಮೂರು ದಿನಗಳಲ್ಲಿ ರಾಜೀನಾಮೆಯನ್ನು ಸಲ್ಲಿಸಿದರು.

ದೇವೇಗೌಡ ಮತ್ತು ಗುಜ್ರಾಲ್ ಸರ್ಕಾರಗಳು

ಮತ್ತೆ ಹಳೆಯ ಆಟ ಶುರುವಾಗುತ್ತದೆ. ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಸರಕಾರಗಳಂತೆ ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ಅವರು ಯುನೈಟೆಡ್ ಫ್ರಂಟ್‌ನಿಂದ ಅಲ್ಪಾವಧಿಯ ಪ್ರಧಾನಮಂತ್ರಿಗಳಾದರು.

ವಾಜಪೇಯಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟೊಡನೆ ಯುನೈಟೆಡ್ ಫ್ರಂಟ್‌ಗೆ ಸರ್ಕಾರ ರಚಿಸಲು ಅವಕಾಶ ಸಿಕ್ಕಿತು. ಆಗ ಸಿ.ಪಿ.ಎಂ. ಪಕ್ಷದ ಜ್ಯೋತಿಬಸು ಅವರ ಹೆಸರು ಪ್ರಧಾನಿ ಸ್ಥಾನಕ್ಕೆ ಮೇಲ್ ಪಂಕ್ತಿಯಲ್ಲಿ ಬಂದಿತು. ಆದರೆ ಸಿ.ಪಿ.ಐ.ಎಂ. ಪಕ್ಷದ ಪಾಲಿಟ್ ಬ್ಯೂರೊ, ಜ್ಯೋತಿಬಸು ತಮ್ಮ ಪಕ್ಷದ ಪ್ರಧಾನಿ ಆಗುವುದಿಲ್ಲವೆಂದು ಹೇಳಿತು ಮತ್ತು ಯುನೈಟೆಡ್ ಫ್ರಂಟ್ ಸರ್ಕಾರಕ್ಕೆ ಬೆಂಬಲ ನೀಡಿದರೂ ಅದರಲ್ಲಿ ಭಾಗಿಯಾಗುವುದಿಲ್ಲವೆಂದೂ ಹೇಳಿತು. ಪಕ್ಷವನ್ನು ಮೇಲಿನಿಂದ ಕಟ್ಟಬೇಕು ಎನ್ನುವ ಲೆನಿನ್‌ವಾದಿ ಸಿದ್ಧಾಂತವನ್ನು ಸಿ.ಪಿ.ಎಂ. ಮರೆತುದರಿಂದಾಗಿ ಜ್ಯೋತಿಬಸು ಪ್ರಧಾನಿ ಆಗದೆ ಹೋದರು. ಸಿ.ಪಿ.ಎಂ.ಗೆ ಎಡ ಭಯ (Left fearness) ಕಾಡಾಟದಿಂದಾಗಿ ಅಂಥ ತೀರ್ಮಾನ ಪ್ರಕಟಗೊಂಡಿತು. ಈ ಸಂದರ್ಭದಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೇವಲ ಹತ್ತು ತಿಂಗಳುಗಳ ಒಳಗೇ ಅಂದರೆ ೧೯೯೭ರ ಮಾರ್ಚ್‌ ೩೦ರಂದು ದೇವೇಗೌಡರ ಸರಕಾರ ಪತನಗೊಂಡಿತು. ಈ ಹಿಂದೆ ಚಂದ್ರಶೇಖರ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ತೆಗೆದುಕೊಂಡಂತೆಯೇ ಕಾಂಗ್ರೆಸ್ ಪಕ್ಷ ದೇವೇಗೌಡ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ತೆಗೆದುಕೊಂಡಿತು. ಆದರೆ ಕಾಂಗ್ರೆಸ್ ಸರಕಾರ ರಚಿಸಲು ಮುಂದಾಗುವುದಿಲ್ಲ ಪುನಃ ಯುನೈಟೆಡ್ ಫ್ರಂಟ್‌ಗೆ ಬೆಂಬಲ ನೀಡುವುದಾಗಿ ಹೇಳಿ ಐ.ಕೆ. ಗುಜ್ರಾಲ್ ಸರಕಾರಕ್ಕೆ ಬೆಂಬಲಿಸಿತು. ಗುಜ್ರಾಲ್ ಸರಕಾರ ಸಹ ಒಂದು ವರ್ಷದ ಅವಧಿಯನ್ನೂ ಪೂರ್ಣಗೊಳಿಸುವುದಿಲ್ಲ. ೧೯೯೮ರ ಫೆಬ್ರವರಿಯಲ್ಲಿ ಮತ್ತೆ ಚುನಾವಣೆಗಳು ಘೋಷಿಸಲ್ಪಟ್ಟವು.

ವಾಜಪೇಯಿ : ಶೈನಿಂಗ್ ಇಂಡಿಯಾ ; ಸೋನಿಯಾ : ಆಮ್ ಆದ್‌ಮೀ

ಐ.ಕೆ. ಗುಜ್ರಾಲ್ ಅವರ ಸರಕಾರ ಉರುಳಿದ ನಂತರ ಫೆಬ್ರವರಿ ೧೯೯೮ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಬಿ.ಜೆ.ಪಿ.ಗೆ ೧೮೨ ಸ್ಥಾನಗಳು ಲಭಿಸಿದವು. ೧೯೯೮ರ ಚುನಾವಣೆಗಿಂತ ೨೧ ಸ್ಥಾನಗಳನ್ನು ಅದು ಹೆಚ್ಚಿಗೆ ಪಡೆದುಕೊಂಡಿತು. ಸೆಕ್ಯೂಲರ್ ಇಮೇಜ್ ಇಟ್ಟುಕೊಂಡ ತೆಲಗುದೇಶಂ, ಎ.ಐ.ಎ.ಡಿ.ಎಂ.ಕೆ. ಮತ್ತು ತೃಣಮೂಲ ಕಾಂಗ್ರೆಸ್‌ಗಳೊಂದಿಗೆ ಕೂಡಿಕೊಂಡು ವಾಜಪೇಯಿಯವರು ಸರಕಾರ ರಚಿಸಿದರು.

ನ್ಯಾಷನಲ್ ಫ್ರಂಟ್ ಮತ್ತು ಯುನೈಟೆಡ್ ಫ್ರಂಟ್‌ಗಳ ಅಸ್ಥಿರ ಸರ್ಕಾರಗಳಿಂದ ಜನತೆ ಭ್ರಮನಿರಸನಗೊಂಡಿತ್ತು. ನರಸಿಂಹರಾವ್ ಅವರು, ಕಾಂಗ್ರೆಸ್ ಹೊಂದಿದ್ದ ಓಟ್ ಬ್ಯಾಂಕನ್ನು ಬಹಳಷ್ಟು ಹಾಳು ಮಾಡಿದ್ದರು. ಹಿಂದುಳಿದವರು, ಅಲ್ಪಸಂಖ್ಯಾತರು ಕಾಂಗ್ರೆಸ್ ಮೇಲೆ ವಿಶ್ವಾಸವಿರಿಸಲು ಅಂಥ ಸನ್ನಿವೇಶದಲ್ಲಿ ಹಿಂದೆ ಮುಂದೆ ನೋಡತೊಡಗಿದ್ದರು. ಬಿ.ಜೆ.ಪಿ. ಏಕೈಕ ಬೃಹತ್ ಪಕ್ಷವಾಗಿ ಹೊಮ್ಮಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಬಿ.ಜೆ.ಪಿ.ಯ ಹಿಂದುವಾದಿ ಘೋಷಣೆಗಳು ಇನ್ನೂ ಮುಂದೆ ಒಂದು ಮಿತಿಗೆ ಬಂದು ನಿಂತುಕೊಂಡಿದ್ದವು. ಕಾಂಗ್ರೆಸ್‌ಗೆ ಮಾತ್ರ ಏಕಪಕ್ಷದ ಸರ್ಕಾರವನ್ನು ನೀಡಿದ ಇತಿಹಾಸವಿತ್ತು. ಕಾಂಗ್ರೆಸ್ ರೀತಿಯಲ್ಲಿಯೇ ಏಕಪಕ್ಷದ ಸರ್ಕಾರವನ್ನು ನೀಡುವ ಅಭಿಲಾಷೆ ಬಿ.ಜೆ.ಪಿ.ಯದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಕೇವಲ ಒಂದೇ ವರ್ಷದಲ್ಲಿ ಎ.ಐ.ಎ.ಡಿ.ಎಂ.ಕೆ.ಯ ಜಯಲಲಿತಾ ಅವರು ವಾಜಪೇಯಿ ಅವರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡರು. ಪುನಃ ಏಪ್ರಿಲ್ ೧೯೯೯ರ ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆದವು. ಬಿ.ಜೆ.ಪಿ. ಮೈತ್ರಿಕೂಟಕ್ಕೆ ೨೯೬ ಸ್ಥಾನಗಳು ಲಭಿಸಿದವು. ಶೇಕಡವಾರು ಮತಗಳಿಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಲಿಲ್ಲ. ಬಿ.ಜೆ.ಪಿ. ಮೈತ್ರಿಕೂಟ ಕೇವಲ ೧.೨% ಹೆಚ್ಚಿನ ಮತ ಗಳಿಸಿತು. ಈ ಸಂದರ್ಭದಲ್ಲಿ ಸೋನಿಯಾಗಾಂಧಿಯವರು ರಾಜಕೀಯ ಪ್ರವೇಶ ಮಾಡಿದ್ದು ವಿಶೇಷ ವಿದ್ಯಮಾನವಾಯಿತು. ಸೋನಿಯಾ ಅವರು ಕರ್ನಾಟಕದ ಬಳ್ಳಾರಿ ಮತ್ತು ಉತ್ತರಪ್ರದೇಶದ ರಾಯ್‌ಬರೇಲಿ ಎರಡೂ ಕ್ಷೇತ್ರಗಳಿಂದ ಆಯ್ಕೆಯಾದರು.

ಜನತೆ ಸೋನಿಯಾ ಬಗ್ಗೆ ಕಾಯ್ದು ನೋಡುವ ಧೋರಣೆ ತೋರಿತು. ಆ ಸನ್ನಿವೇಶದಲ್ಲಿ ಜನತಗೆ ಕಾಂಗ್ರೆಸ್‌ಗೆ ಹೊಸ ಕಾಯಕಲ್ಪವನ್ನು ನಿರೀಕ್ಷಿಸುತ್ತಿತ್ತು. ನೆಹರೂ ಕುಟುಂಬದ ಸದಸ್ಯರ ಮುಖಂಡತ್ವವನ್ನಷ್ಟೇ ಜನತೆ ಬಯಸಿರಲಿಲ್ಲ; ಜನತೆ ಹಿಂದುವಾದೀ ಬಿ.ಜೆ.ಪಿ.ಗೆ ಪರ್ಯಾಯವಾಗಿ ಸೆಕ್ಯೊಲರ್ ಮುಖಂಡತ್ವವನ್ನೂ ಬಯಸಿತು. ಹಾಗಾಗಿ ಸೋನಿಯಾಗಾಂಧಿ ಅವರಿಗೆ ದಿಡೀರ್ ಬೆಂಬಲ ಸಿಗಲಿಲ್ಲ. ನರಸಿಂಹರಾವ್ ಅವರ ನೇತೃತ್ವದಲ್ಲಿ ೧೯೯೮ರ ಚುನಾವಣೆಯಲ್ಲಿ ಕಾಂಗ್ರೆಸ್ ೧೪೭ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಡೆದುಕೊಂಡಿತು. ೧೯೯೯ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೧೩೪ ಸ್ಥಾನಗಳು ಮಾತ್ರ ದೊರೆತವು. ಆಗ ಕಾಂಗ್ರೆಸ್‌ನಲ್ಲಿ “ಸೋನಿಯಾ ಬಂದರೂ ಏನೂ ಚಮತ್ಕಾರ ನಡೆಯಲಿಲ್ಲ” ಎನ್ನುವ ಟೀಕೆ ಸೋನಿಯಾಗಾಂಧಿ ಅವರ ವಿರುದ್ಧ ಕೇಳಿ ಬಂದಿತು. ಒಂದು ವೇಳೆ ಸೋನಿಯಾಗಾಂಧಿ ಅವರು ಬಾರದೆ ನರಸಿಂಹರಾವ್ ಅವರ ನೇತೃತ್ವದಲ್ಲಿಯೇ ಚುನಾವಣೆಗಳನ್ನು ಎದುರಿಸಿದ್ದಿದ್ದರೆ ಎರಡಂಕಿಯ ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಪಡೆದುಕೊಳ್ಳುತ್ತಿತ್ತೇನೋ. ಸೋನಿಯಾಗಾಂಧಿ ಅವರ ಎಂಟ್ರಿ ನಿಧಾನವೂ, ನಿರ್ಧಾರಕವೂ ಆಗಿತ್ತು. ಸೋನಿಯಾಗಾಂಧಿ ಅವರ ಸುಪ್ತಶಕ್ತಿಯನ್ನು ಬೇಗ ಗ್ರಹಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್ ಕೋಟರಿಗೆ (Coterie). ಕುತೂಹಲದ ಸಂಗತಿ ಏನೆಂದರೆ ಸೋನಿಯಾಗಾಂಧಿ ಶಕ್ತಿಯನ್ನು ಕಾಂಗ್ರೆಸ್‌ ಗಿಂತ ಬಿ.ಜೆ.ಪಿ.ಯೇ ಹೆಚ್ಚು ಅರ್ಥ ಮಾಡಿಕೊಂಡಿದ್ದುದು! ವಾಜಪೇಯಿ ಮತ್ತು ಅದ್ವಾನಿ ಅವರು ತಮ್ಮೆಲ್ಲ ಶಕ್ತಿಯನ್ನು ಸೋನಿಯಾ ವಿರೋಧಿ ಘೋಷಣೆಗಳಿಗೇ ಮುಡುಪಾಗಿರಿಸಿದರು ‘ವಿದೇಶಿ ಸೋನಿಯಾ ‘ ಎನ್ನುವುದು ವಾಜಪೇಯಿ ಅವರ ನಿತ್ಯದ ಜಪವಾಯಿತು.

ಸೋನಿಯಾಗಾಂಧಿ ಅವರ ರಂಗಪ್ರವೇಶ ಅತ್ಯಂತ ಕ್ಲುಪ್ತ ಕಾಲದಲ್ಲಿ ಆಯಿತು. ೧೯೯೭ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಪ್ಲೀನರಿ ಸೆಷನ್‌ನಲ್ಲಿ ಸೋನಿಯಾಗಾಂಧಿ ಭಾಗವಹಿಸಿದಾಗ ಅವರಿನ್ನೂ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯೆ ಮಾತ್ರವಾಗಿದ್ದರು. ೧೯೯೮ರಲ್ಲಿ ಎ.ಐ.ಸಿ.ಸಿ. ಸದಸ್ಯರಾದರು. ಆನಂತರ ಕಾಂಗ್ರೆಸ್ ಅಧ್ಯಕ್ಷರಾದರು. ಕಾಂಗ್ರಸ್ ಇತಿಹಾಸದಲ್ಲಿ ಸತತವಾಗಿ ಒಂದು ದಶಕ ಕಾಲ ಅಧ್ಯಕ್ಷರಾಗಿ ಮುಂದುವರಿದವರು ಸೋನಿಯಾಗಾಂಧಿ ಮಾತ್ರ. ೧೯೯೯ರ ಚುನಾವಣೆಯಲ್ಲಿ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಸೋನಿಯಾಗಾಂಧಿ ಅವರ ಹದಿಮೂರನೆಯ ಲೋಕಸಭೆಗೆ ವಿಪಕ್ಷ ನಾಯಕಿಯಾದರು.

ವಾಜಪೇಯಿ ಅವರು ‘ಶೈನಿಂಗ್ ಇಂಡಿಯಾ’ ಎನ್ನುವ ಘೋಷಣೆಯ ಮೂಲಕ ತಮ್ಮ ಸರಕಾರದ ಹೆಗ್ಗಳಿಕೆಯ ಪ್ರಚಾರ ಆರಂಭಿಸಿದರು. ಅದಕ್ಕೆ ಪ್ರತಿಯಾಗಿ ಸೋನಿಯಾಗಾಂಧಿ ಅವರು ‘ಅಮ್ ಆದ್‌ಮೀ ಕೋ ರೋಷನಿ ನಹಿ’ ಎನ್ನುವ ಘೋಷನೆ ನೀಡಿದರು.

ಬಿ.ಜೆ.ಪಿ.ಯ ವಿರುದ್ಧದ ಶಕ್ತಿಗಳು ದಿಕ್ಕಿಗೊಂದು ಎನ್ನುವಂತಾಗಿದ್ದವು. ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ಬಿ.ಜೆ.ಪಿ. ವಿರೋಧಿ ಶಕ್ತಿಗಳೆಲ್ಲ ಯು.ಪಿ.ಎ.ಯಲ್ಲಿ ಧ್ರುವೀಕರಣಗೊಂಡವು. ಬಿ.ಜೆ.ಪಿ. ಬೆಳವಣಿಗೆಯ ಅಪಾಯವನ್ನರಿತ ಎಡಪಕ್ಷಗಳು ಕಾಂಗ್ರೆಸ್ಸೇತರ ಫ್ರಂಟ್ ಪ್ರಯೋಗಗಳನ್ನು ಬದಿಗಿರಿಸಿ ಯು.ಪಿ.ಎ. ಬಗೆಗೆ ಮೃದುಧೋರಣೆ ತಳೆದವು. ಈ ಧೋರಣೆ ಮುಂದೆ ೨೦೦೪ರ ಚುನಾವಣೆಯಲ್ಲಿ ಯು.ಪಿ.ಎ. ಸರ್ಕಾರಕ್ಕೆ ಬಾಹ್ಯಬೆಂಬಲವಾಗಿ ಪರಿವರ್ತನೆಗೊಂಡಿತು.

ಬಿ.ಜೆ.ಪಿ.ಯ ಬಲವರ್ಧನೆಯನ್ನು ಗಮನಿಸಿ ಸಿ.ಪಿ.ಎಂ. ಕಾರ್ಯದರ್ಶಿಗಳಾಗಿದ್ದ ಇ.ಎಂ.ಎಸ್. ನಂಬೂದರಿ ಪಾದರು “ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಎರಡನ್ನೂ ವಿರೋಧಿಸುವ ಧೋರಣೆ ಕೈಬಿಟ್ಟು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು” ಎಂದು ೧೯೯೨ರಲ್ಲಿಯೇ ಹೇಳಿದ್ದರು ಆಗ ಸಿ.ಪಿ.ಎಂ.ನ ನಿಲುವು ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಎರಡೂ ಶಕ್ತಿಗಳನ್ನು ವಿರೋಧಿಸುವುದಾಗಿತ್ತು. ಪಕ್ಷದ ನಿಲುವಿಗೆ ವಿರುದ್ಧವಾದ ಹೇಳಿಕೆ ನೀಡಿದ್ದಕ್ಕಾಗಿ ನಂಬೂದರಿ ಪಾದರನ್ನು ಸಿ.ಪಿ.ಎಂ. ಪಕ್ಷದ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಯಿತು. ನಂಬೂದರಿಪಾದ್ ಹೇಳಿದಾಗಲೇ ಸಿ.ಪಿ.ಎಂ. ತನ್ನ ನಿಲುವು ಬದಲಿಸಿಕೊಂಡಿದ್ದರೆ ಬಿ.ಜೆ.ಪಿ. ಬೃಹತ್ ಶಕ್ತಿಯಾಗಿ ಬೆಳೆಯುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿತ್ತೇನೋ. ಆದರೆ ತಡವಾಗಿಯಾದರೂ ಸಿ.ಪಿ.ಎಂ. ತನ್ನ ನಿಲುವು ಬದಲಿಸಿಕೊಂಡಿತು. ಕಾಂಗ್ರೆಸ್ ಜೊತೆ ಸೇರಿ ಬಿ.ಜೆ.ಪಿ. ಕೂಟವನ್ನು ವಿರೋಧಿಸುವ ನಿಲುವು ತೆಗೆದುಕೊಂಡಿತು.

 


[1] ಈ ಘಟನೆಯ ವಿವರವಾದ ವರದಿ ೧೯೮೯ರ ನವೆಂಬರ್ ೧೯ರಂದು ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ದೈನಿಕದಲ್ಲಿ ಪ್ರಕಟವಾಯಿತು.