ಕಮ್ಯುನಿಸ್ಟ್ ಚಳವಳಿ : ಭಿನ್ನಾಭಿಪ್ರಾಯಗಳ ಸಂಕೋಲೆಗಳು

ಕಮ್ಯುನಿಸ್ಟ್ ಪಕ್ಷವು ೧೯೩೬ರಿಂದ ಕಾಂಗ್ರೆಸ್ ಒಳಗಿದ್ದುಕೊಂಡೇ ಚಟುವಟಿಕೆಗಳನ್ನು ನಡೆಸುತ್ತಿತ್ತು. ೧೯೪೫ರಲ್ಲಿ ಕಾಂಗ್ರೆಸ್‌ ನಿಂದ ಆಚೆಗೆ ಬಂದಿತು. ವಿಶೇಷವಾಗಿ ೧೯೪೨ರಿಂದ ೧೯೪೫ರ ಅವಧಿಯಲ್ಲಿ ಕಮ್ಯುನಿಸ್ಟ್ ಚಳವಳಿ ಗಣನೀಯ ಬೆಳವಣಿಗೆಯನ್ನು ಸಾಧಿಸಿತು.

ಕಮ್ಯುನಿಸ್ಟ್ ಪಕ್ಷವು ಅನೇಕ ದೇಶಪ್ರೇಮಿ, ಕ್ರಾಂತಿಕಾರಿ, ತ್ಯಾಗಬಲಿದಾನಗಳಿಗೆ ಒಡ್ಡಿಕೊಂಡ ಮುಖಂಡರು ಮತ್ತು ಕಾರ್ಯಕರ್ತರನ್ನು ಸೃಷ್ಟಿಸಿತು. ಪಿ. ಸುಂದರಯ್ಯ, ಬಸವಪುನ್ನಯ್ಯ, ನಂಬೂದರಿಪಾದ್, ಎ.ಕೆ.ಗೋಪಾಲನ್, ಬಿ.ಟಿ.ರಣಧಿವೆ. ಪಿ.ಸಿ.ಜೋಷಿ, ಜ್ಯೋತಿಬಸು, ಅಜಯ್‌ಘೋಷ್, ಎಸ್.ಎ.ಡಾಂಗೆ ಅಂತಹ ಕಮ್ಯುನಿಸ್ಟ್ ಮುಖಂಡರ ಹೆಸರುಗಳನ್ನು ಇಲ್ಲಿ ಹೇಳಬಹುದು. ಸಮಾಜವಾದಿ ಪಕ್ಷದ ಒಳಗೆ ಭಿನ್ನಾಭಿಪ್ರಾಯಗಳು ತಲೆದೋರಿದಂತೆಯೇ ಕಮ್ಯುನಿಸ್ಟ್ ಪಕ್ಷದ ಒಳಗೂ ಭಿನ್ನಾಭಿಪ್ರಾಯಗಳು ತೀವ್ರಗೊಂಡವು.

ಸ್ವತಂತ್ರಗೊಂಡ ಭಾರತದ ಪ್ರಭುತ್ವ ವ್ಯವಸ್ಥೆಯ ಗುಣಸ್ವರೂಪದ ಬಗೆಗೆ, ಕಾಂಗ್ರೆಸ್ ಸರಕಾರದ ಬಗೆಗೆ ನಿರ್ದಿಷ್ಟವಾದ ನಿಲುವು ತೆಗೆದುಕೊಳ್ಳಲು ಕಮ್ಯುನಿಸ್ಟ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಪ್ರಭುತ್ವದ ಬಗೆಗೆ ಇರುವ ಧೋರಣೆಯಲ್ಲಿ ಕ್ಷಿಪ್ರ ಬದಲಾವಣೆಗಳನ್ನು ಮಾಡತೊಡಗಿತು. ಅಷ್ಟೇ ಅಲ್ಲ, ಒಮ್ಮೆ ‘ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ನಿಜವದ ಸ್ವಾತಂತ್ರ್ಯ’ ಎಂದು ಹೇಳಿದರೆ ಅಲ್ಪ ಸಮಯದಲ್ಲಿಯೇ ಅದಕ್ಕೆ ವಿರುದ್ಧವಾಗಿ ‘ಭಾರತಕ್ಕೆ ಖೊಟ್ಟಿ ಸ್ವಾತಂತ್ರ್ಯ ಸಿಕಿದೆ’ ಎಂದು ಹೇಳುವ ಎಡಬಿಡಂಗಿತನವನ್ನು ಪ್ರದರ್ಶಿಸಿತು. ತನ್ನ ನಿಲುವಿನಲ್ಲಿ ಅದಕ್ಕೆ ಸ್ಪಷ್ಟತೆಯಿರಲಿಲ್ಲ. ಹೀಗಾಗಿ ಜನತೆ ಸಿ.ಪಿ.ಐ. ಹೇಳಿಕೆಗಳ ಬಗೆಗೆ ಗಲಿಬಿಲಿಗೆ ಒಳಗಾಗುವಂತಾಯಿತು. ಇನ್ನೊಂದೆಡೆ ಸಿ.ಪಿ.ಐ. ಪಕ್ಷ ತಾತ್ವಿಕ ಗೊಂದಲಗಳ ಗೂಡಾಯಿತು. ಒಳ ಭಿನ್ನಾಭಿಪ್ರಾಯಗಳು ತಳಮಳಗೊಳ್ಳತೊಡಗಿದವು ; ತಾರಕಕ್ಕೇರಿದವು. ಸಿ.ಪಿ.ಐ. ತನ್ನ ಮೂಲಭೂತ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದನ್ನು ಈ ಕೆಳಗಿನ ಉದಾಹರಣೆಗಳ ಸಮೇತ ವಿವರಿಸಬಹುದು.

೧೯೪೭ರ ಸೆಪ್ಟೆಂಬರ್‌ನಲ್ಲಿ “ಭಾರತಕ್ಕೆ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯ” ಎಂದು ಘೋಷಿಸಿತು. ಮತ್ತು “ಪ್ರಗತಿಪರ ಶಕ್ತಿಗಳೆಲ್ಲ ನೆಹರೂ ಧೋರಣಗಳಿಗೆ ಬೆಂಬಲಿಸಿ ಪ್ರತಿಗಾಮಿಯಾದ ಸಾಮ್ರಾಜ್ಯಶಾಹಿ ಮತ್ತು ಕೋಮುವಾದಿ ಶಕ್ತಿಗಳನ್ನು ವಿರೋಧಿಸಬೇಕು” ಎಂದು ಕರೆ ಕೊಟ್ಟಿತು. ನಂತರ ೧೯೪೭ರ ಡಿಸೆಂಬರ್‌ನಲ್ಲಿ “ಭಾರತದ ಸ್ವಾತಂತ್ರ್ಯ ಖೊಟ್ಟಿಯಾಗಿದೆ ಮತ್ತು ೧೫ನೇಯ ಆಗಸ್ಟ್ ರಾಷ್ಟ್ರೀಯ ವಿದ್ರೋಹದ ದಿನವಾಗಿದೆ, ಕಾಂಗ್ರೆಸ್ ಪಕ್ಷ ಸಾಮ್ರಾಜ್ಯಶಾಹಿ ಶಕ್ತಿಗಳ, ಪಾಳೇಗಾರಿ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ, ಜವಾಹರಲಾಲ್ ನೆಹರೂ ಸಾಮ್ರಾಜ್ಯಶಾಹಿಗಳ ಕೈಗೊಂಬೆಯಾಗಿದ್ದಾರೆ, ಭಾರತದ ಸಂವಿಧಾನ ಗುಲಾಮಶಾಹಿಯ ಗ್ರಂಥವಾಗಿದೆ” ಎಂದು ಘೋಷಿಸಿತು. ಮುಂದುವರಿದು ಸಿ.ಪಿ.ಐ. ಹೀಗೆ ಕರೆಕೊಟ್ಟಿತು : “ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಪಾಳೇಗಾರಿ ವಿರೋಧಿ ಹೋರಾಟಗಳನ್ನು ಮುಂದುವರಿಸುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ (armed struggle) ನಡೆಸಬೇಕು” ಎಂದು ಕರೆ ಕೊಟ್ಟಿತು.

೧೯೪೮ರ ಫೆಬ್ರವರಿಯಲ್ಲಿ ಸಿ.ಪಿ.ಐ. ಎರಡನೆಯ ಸಮ್ಮೇಳನ ಕಲಕತ್ತಾದಲ್ಲಿ ನಡೆಯಿತು. ಬಿ.ಟಿ.ರಣಧಿವೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆ ಸಮ್ಮೇಳನದಲ್ಲಿ ಈ ಕೆಳಗಿನಂತೆ ನಿರ್ಣಯ ಕೈಗೊಳ್ಳಲಾಯಿತು:

ಕಾಂಗ್ರೆಸ್ ದುರಾಡಳಿತದಿಂದ ಜನತೆ ರೊಚ್ಚಿಗೆದ್ದಿದೆ. ಆಗಸ್ಟ್ ೧೫ರ ಸ್ವಾತಂತ್ರ್ಯದ ಬಗೆಗೆ ಭ್ರಮನಿರಸನ ಉಂಟಾಗಿದೆ. ಜನತೆಯ ವಸಾಹತುಶಾಹಿ ವಿರೋಧಿ ಹೋರಾಟಕ್ಕೆ ಕಾಂಗ್ರೆಸ್ ದ್ರೋಹವೆಸಗಿದೆ. ಆದ್ದರಿಂದ ಪಕ್ಷ ನಿಜ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟಕ್ಕೆ ಕರೆ ಕೊಡುತ್ತದೆ ಮತ್ತು ತೆಲಂಗಾಣ ರೈತರ ಸಶಸ್ತ್ರ ಹೋರಾಟವನ್ನು ಮುಂದುವರಿಸಬೇಕು.

ಈ ನಿರ್ಣಯದಂತೆ ಅನೇ ಕಡೆ ಎಡಸಾಹಸವಾದಿ ಕೃತ್ಯಗಳಿಗೆ ಸಿ.ಪಿ.ಐ. ಕೈ ಹಾಕಿತು. ತೆಲಂಗಾಣದಲ್ಲಿ ರೈತರ ಕೈಗೆ ನಾಡ ಬಂದೂಕುಗಳನ್ನು ಕೊಟ್ಟು ಶಸ್ತ್ರಸಜ್ಜಿತ ಮಿಲಿಟರಿಯ ವಿರುದ್ಧ ಹೋರಾಡಲು ಅಣಿಗೊಳಿಸಿತು. ಬಿ.ಟಿ. ರಣಧಿವೆ ಅವರ ಮುಖಂಡತ್ವದಲ್ಲಿ ಪಕ್ಷ, ತೆಲಂಗಾಣದಲ್ಲಿ ಸಶಸ್ತ್ರ ಹೋರಾಟಕ್ಕೆ

[1] ಕರೆ ಕೊಟ್ಟಿತು. ಆನೆ-ಆಡುಗಳ ನಡುವಿನ ಕಾಳಗದಂತೆ ಕಾಣಿಸಿತು. ಆ ಹೋರಾಟ. ಒಂದೆಡೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧ ತರಬೇತಿ ಪಡೆದ ದೊಡ್ಡ ಸೈನ್ಯ ಇನ್ನೊಂದೆಡೆ ಅಮಾಯ ರೈತ ಹೋರಾಟಗಾರರು ! ಮೊದಲು ಆ ರೈತರ ಹೋರಾಟ ನಿಜಾಮ್ ಸರಕಾರದ ವಿರುದ್ಧ ಸ್ಫೋಟಗೊಂಡಿತ್ತು. ನಿಜಾಮ್ ಬಲಕ್ಕೆ ಸಡ್ಡು ಹೊಡೆಯುವ ತಾಕತ್ತು ತೆಲಂಗಾಣ ರೈತರಲ್ಲಿತ್ತು. ಆದರೆ ಬೃಹತ್ ಭಾರತದ ಮಿಲಿಟರಿಯ ವಿರುದ್ಧ ನಿಲ್ಲುವ ಶಕ್ತಿ ಅದಕ್ಕಿರಲಿಲ್ಲ. ಆದರೂ ಪಕ್ಷ ಸಶಸ್ತ್ರ ಹೋರಾಟಕ್ಕೆ ಕರೆ ಕೊಟ್ಟಿತು. ಸಾವಿರಾರು ಕ್ರಾಂತಿಕಾರಿ ಹೋರಾಟಗಾರರ ಮಾರಣಹೋಮ ನಡೆಯಿತು. “ಸೈನಿಕರೆಲ್ಲ ಹತವಾಗಿ ಸೇನಾಧಿಪತಿಯ ಸರದಿ ಬಂದಿತು” ಎನ್ನುವಂಥ ಪರಿಸ್ಥಿತಿ ಎದುರಾಯಿತು. ಕೊನೆ ಘಳಿಗೆಯಲ್ಲಿ ಸಶಸ್ತ್ರ ಹೋರಾಟವನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ರೈತರ ಮಾರಣಹೋಮದ ಜವಾಬ್ದಾರಿಯನ್ನು ಕೇವಲ ನೆಹರೂ ಸರಕಾರದ ಮಿಲಿಟರಿಯ ಮೇಲೆ ಹೊರಸಲಾಯಿತು. ಪಕ್ಷ ತನ್ನ ಜವಾಬ್ದಾರಿಯನ್ನು ಮುಚ್ಚಿಟ್ಟಿತು.

ಕಮ್ಯುನಿಸ್ಟ್ ಪಕ್ಷ ೧೯೪೯ರ ಮಾರ್ಚ್ ೯ರಂದು ರಾಷ್ಟ್ರಮಟ್ಟದಲ್ಲಿ ರೈಲ್ವೆ ಮುಷ್ಕರಕ್ಕೆ ಕರೆ ಕೊಟ್ಟಿತು. ಕಾರ್ಮಿಕರು ಆ ಕರೆಗೆ ಸ್ಪಂದಿಸಲಿಲ್ಲ. ಹೋರಾಟ ಸಂಪೂರ್ಣ ವಿಫಲವಾಯಿತು. ಪಕ್ಷದ ಕಲಕತ್ತಾ ಸಮ್ಮೇಳನದಲ್ಲಿ ತೀರ್ಮಾನಿಸಿದಂತೆ ಅನೇಕ ಕಡೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿತು. ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವುದರಿಂದ, ಪಾರ್ಲಿಮೆಂಟರಿ ಹೋರಾಟಗಳಿಂದ ಕ್ರಾಂತಿ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಪಕ್ಷದಲ್ಲಿ ದಟ್ಟವಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ಅನೇಕ ರಾಜ್ಯಗಳಲ್ಲಿ ಸಿ.ಪಿ.ಐ. ನಿಷೇಧಿಸಲ್ಪಟ್ಟಿತು. ಜನದೂರವೂ ಆಗತೊಡಗಿತು. ಬಿ.ಟಿ.ರಣಧಿವೆ ಅವರ ಧೋರಣೆಗಳ ಬಗ್ಗೆ ಪಕ್ಷದ ಒಳಗೆ ಟೀಕೆಗಳು ತೀವ್ರಗೊಳ್ಳತೊಡಗಿದವು. ಪಕ್ಷದ ಸದಸ್ಯತ್ವ ಭಾರೀ ಪ್ರಮಾಣದಲ್ಲಿ ಕುಸಿಯಿತು. ಸಿ.ಪಿ.ಐ.ನಲ್ಲಿ ೯೦,೦೦೦ ಸದಸ್ಯರಿದ್ದರು. ೧೯೫೧ರಲ್ಲಿ ಅದು ೧೮,೦೦೦ಕ್ಕೆ ಕುಸಿಯಿತು.

೧೯೫೧ರಲ್ಲಿ ಅಜಯ್ ಘೋಷ್ ಸಿ.ಪಿ.ಐ.ನ ಪ್ರಧಾನ ಕಾರ್ಯದರ್ಶಿಯಾದರು. ರಷ್ಯಾದ ಸ್ಟಾಲಿನ್ ಮಾರ್ಗದರ್ಶನದಲ್ಲಿ ಪಕ್ಷ ಹೊಸ ಧೋರಣೆ, ತಂತ್ರ ಕಾರ್ಯಸೂಚಿಗಳನ್ನು ರೂಪಿಸಿತು.

ಸ್ಟಾಲಿನ್ ಪ್ರಣೀತ ಹೊಸ ಕಾರ್ಯಕ್ರಮಕ್ಕೂ ಭಾರತದ ವಾಸ್ತವಸ್ಥಿತಿ ಅರ್ಥವಾಗಲಿಲ್ಲ. ರೈತ-ಕಾರ್ಮಿಕ ವರ್ಗಗಳ ಮತ್ತು ದೇಶದ ಜನತೆಯ ನಾಡಿ ಹಿಡಿದುಕೊಳ್ಳಲು ಸಿ.ಪಿ.ಐ.ಗೆ ಸಾಧ್ಯವಾಗಲಿಲ್ಲ. ಪಕ್ಷದ ಹೊಸ ಕಾರ್ಯಕ್ರಮವು “ಭಾರತ ಇನ್ನೂ ವಸಾಹತು ದೇಶವಾಗಿಯೇ ಉಳಿದಿದೆ” ಎಂದು ಘೋಷಿಸಿತು. ಮುಂದುವರಿದು “ಆಗಸ್ಟ್ ೧೫ ರಾಷ್ಟ್ರ ವಿದ್ರೋಹದ ದಿನ” ಎಂದು ಸಾರಿತು. “ಭಾರತದ ಬಂಡವಾಳಶಾಹಿಗಳು ಸಾಮ್ರಾಜ್ಯಶಾಹಿಗಳ ಏಜೆಂಟರು” ಎಂದು ವಿಶ್ಲೇಷಿಸಿತು. “ಭಾರತ ಸರಕಾರ ಪಾಳೇಗಾರೀ ಶಕ್ತಿಗಳ ಪ್ರತಿನಿಧಿಯಾಗಿದೆ. ದೊಡ್ಡ ಬಂಡವಾಳಶಾಹಿ ವರ್ಗ ಸಾಮ್ರಾಜ್ಯಶಾಹಿಗಳೊಂದಿಗೆ ಕೈಗೂಡಿಸಿದೆ” ಎಂದು ಹೇಳಿತು.

ಭಾರತದಲ್ಲಿರುವುದು ಪ್ರಜಾಪ್ರಭುತ್ವ ಅಲ್ಲ, ಪೊಲೀಸ್ ಸರಕಾರ ಎಂದು ಹೇಳಿತು. “ಪರಿಸ್ಥಿತಿ ಹೀಗಿದ್ದರೂ ಸಹ ಜನ ಕ್ರಾಂತಿಗೆ ಮುಂದಾಗುತ್ತಿಲ್ಲ. ಅದಕ್ಕಾಗಿ ಕ್ರಿಯಾಯೋಜನೆ ಬೇರೆ ಮಾಡಬೇಕು. ಸಶಸ್ತ್ರ ಕ್ರಾಂತಿಯ ಅಜೆಂಡಾವನ್ನು ಭವಿಷ್ಯದ ದಿನಗಳಿಗೆ ಷಿಪ್ಟ್ ಮಾಡಬೇಕು. ಸದ್ಯ ಪಾರ್ಲಿಮೆಂಟರ೪ಇ ಹೋರಾಡಗಳಿಗೆ ಪಕ್ಷದ ಚಟುವಟಿಕೆಗಳನ್ನು ಸೀಮಿತಗೊಳಿಸಬೇಕು

ಎನ್ನುವ ತೀರ್ಮಾನವನ್ನು ಸಿ.ಪಿ.ಐ. ಕೈಗೊಂಡಿತು. ತೆಲಂಗಾಣ ಸಶಸ್ತ್ರ ಚಳವಳಿಯನ್ನು ಹಿಂತೆಗೆದುಕೊಂಡಿದ್ದರಿಂದ ಸಿ.ಪಿ.ಐ. ಮೇಲೆ ಹೇರಲ್ಪಟ್ಟಿದ್ದ ನಿಷೇದವನ್ನು ನೆಹರೂ ಸರ್ಕಾರ ಹಿಂದೆಗೆದುಕೊಂಡಿತು.

ಪ್ರತಮ ಸಾರ್ವತ್ರಿಕ ಚುನಾವಣೆಯಲ್ಲಿ ಸಿ.ಪಿ.ಐ. ಭಾಗವಹಿಸಿತು. ತನ್ನ ಪ್ರಭಾವ ಇರುವೆಡೆ ಮಾತ್ರ ಸೀಮಿತ ಸ್ಥಾನಗಳಿಗೆ ಸ್ಪರ್ಧಿಸಿತ್ತು. ಕೇರಳ, ಆಂಧ್ರಪ್ರದೇಶ ಮತ್ತು ಪ.ಬಂಗಾಳದಲ್ಲಿ ಮಾತ್ರ ಪ್ರಬಲವಾಗಿತ್ತು. ಹಿಂದಿ ಪ್ರಾಂತಗಳಲ್ಲಿ ಕಮ್ಯುನಿಸ್ಟ್ ಪ್ರಭಾವ ಇರಲಿಲ್ಲ. ೬೧ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿ ಅದರಲ್ಲಿ ೨೩ ಸ್ಥಾನಗಳನ್ನು ಗೆದ್ದುಕೊಂಡಿತು. ಶೇ. ೪.೬ರಷ್ಟು ಮತಗಳನ್ನು ಪಡೆದುಕೊಂಡಿತು. ಸಂಸತ್ತಿನಲ್ಲಿ ಅತಿದೊಡ್ಡ ವಿರೋಧ ಪಕ್ಷವಾಯಿತು ಸಿ.ಪಿ.ಐ.

ಚುನಾವಣೆಯಿಂದ ಚುನಾವಣೆಗೆ ಕಮ್ಯುನಿಸ್ಟ್ ಪಕ್ಷ ತನ್ನ ಬಲವನ್ನು ವೃದ್ಧಿಸಿಕೊಳ್ಳತೊಡಗಿತು. ೧೯೫೭ರ ಚುನಾವಣೆಯಲ್ಲಿ ೨೭ ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ೮.೯೨% ಮತಗಳನ್ನು ಗಳಿಸಿತು.

೧೯೫೭ರಲ್ಲಿ ಕೇರಳದಲ್ಲಿ ಪ್ರಥಮ ಕಮ್ಯುನಿಸ್ಟ್ ಸರಕಾರವನ್ನು ರಚಿಸಿತು. ಇಡೀ ವಿಶ್ವದಲ್ಲಿಯೇ ಪ್ರಥಮ ಚುನಾಯಿತ ಕಮ್ಯುನಿಸ್ಟ್ ಸರಕಾರ ಅದಾಗಿತ್ತು. ಯಾವ ಕಮ್ಯುನಿಸ್ಟ್ ದೇಶದಲ್ಲಿಯೂ ಚುನಾವಣೆಗಳು ನಡೆದಿರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ ವಿಷಯ.

ಸಿ.ಪಿ.ಐ. ೧೯೬೨ರ ಚುನಾವಣೆಯಲ್ಲಿ ೨೯ ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿತು. ೯.೯೪% ಮತಗಳನ್ನು ಗಳಿಸಿತ್ತು. ಆಂಧ್ರ, ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಸಿ.ಪಿ.ಐ. ಪ್ರಬಲ ಪಕ್ಷವಾಗಿ ಎದ್ದು ಬಂದಿತು. ಸಂಸತ್ತಿನಲ್ಲಿ ಸಿ.ಪಿ.ಐ. ಸದಸ್ಯರ ಚರ್ಚೆ, ಭಾಷಣ, ಮಾತು, ಕೃತಿಗಳು ಆದರ್ಶನೀಯವಾಗಿ ತೋರತೊಡಗಿದವು. ಪಾರ್ಲಿಮೆಂಟರಿ ಹೋರಾಟಗಳ ಪ್ರಭಾವ ಮತ್ತು ಅದರ ಮಹತ್ವ ಸಿ.ಪಿ.ಐ.ನ ಅನುಭವಕ್ಕೆ ಬರತೊಡಗಿತು.

ಶಸ್ತ್ರಗಳು ಮಾತ್ರವಲ್ಲ ; ಪಾರ್ಲಿಮೆಂಟೂ ಸಹ ಅಸ್ತ್ರವಾಗಬಲ್ಲದು ಎಂದು ಕಮ್ಯುನಿಸ್ಟ್‌ರಿಗೆ ಅನಿಸತೊಡಗಿತು. ದೇಶದ ಅನೇಕ ಬುದ್ಧಿಜೀವಿಗಳು ಸಿ.ಪಿ.ಐ. ಪರ ವಾಲಿದರು. ಪಕ್ಷದ ಸದಸ್ಯತ್ವ ಸಂಖ್ಯೆ ಏರತೊಡಗಿತು. ರೈತ, ಕಾರ್ಮಿಕ ವರ್ಗಗಳೊಂದಿಗೆ ಇತರೇ ಜನ ಸಮೂಹಗಳು ಸಿ.ಪಿ.ಐ. ಕಡೆಗೆ ಆಕರ್ಷಿಸಲ್ಪಡಲಾರಂಭಿಸಿದವು.

ಪಾರ್ಲಿಮೆಂಟ್‌ನಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಸಿ.ಪಿ.ಐ. ಮಾತ್ರ ಇತ್ತು. ದೇಶದೆಲ್ಲೆಡೆ ಕಮ್ಯುನಿಸ್ಟ್ ಪಕ್ಷ ಪ್ರಚಾರಕ್ಕೆ ಬಂದಿತು. ಕಾಂಗ್ರೆಸ್ ನಂತರ ಈ ದೇಶವನ್ನು ಕಮ್ಯುನಿಸ್ಟರೇ ಆಳುವುದು ಎಂದು ಸಾಮಾನ್ಯ ಜನ ಮಾತಾಡಿಕೊಳ್ಳಲಾರಂಭಿಸಿದರು. ಆದರೆ ಈ ಇಮೇಜು ಸಿ.ಪಿ.ಐ.ಗೆ ಬಹಳ ಕಾಲ ಉಲಿಯಲಿಲ್ಲ. ಪಕ್ಷದ ಒಳಗೆ ಮೂಲಭೂತ ವಿಷಯಗಳಿಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳು ಸುಪ್ತವಾಗಿದ್ದವು. ಅವು ಬೂದಿಮುಚ್ಚಿದ ಕೆಂಡದಂತಿದ್ದವು. ಗಾಳಿ ತಗುಲಿದಾಗ ಪ್ರಜ್ವಲಿಸತೊಡಗಿದವು.

ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ನಿಜವೋ ಸುಳ್ಳೋ ಎನ್ನುವ ವಿಷಯ ಸಂಪೂರ್ಣವಾಗಿ ಪಕ್ಷದೊಳಗೆ ಇತ್ಯರ್ಥಗೊಂಡಿರಲಿಲ್ಲ. ಹಾಗೆಯೇ ಪ್ರಭುತ್ವದ ಮೇಲೆ ಒಡೆತನ ಸಾಧಿಸಿರುವ ಆಳುವ ವರ್ಗಗಳ ಬಗೆಗೂ ಒಮ್ಮತದ ನಿರ್ಣಯ ಮೂಡಿರಲಿಲ್ಲ.

೧೯೪೭ರ ಆಗಸ್ಟ್ ೧೫ ರ ಸ್ವಾತಂತ್ರ್ಯ ‘ನಿಜ ಸ್ವಾತಂತ್ರ್ಯ’ ಎಂದು ಒಪ್ಪಿಕೊಳ್ಳಲು ಸಿ.ಪಿ.ಐ. ಎಂಟು ವರ್ಷಗಳನ್ನು ತೆಗೆದುಕೊಂಡಿತು. ಅದೇ ರೀತಿ ಭಾರತದ ಬಂಡವಾಳಶಾಹಿವರ್ಗ ಸಾಮಾಜ್ರಶಾಹಿಗಳ ದಲ್ಲಾಳಿ ಆಗಿರದೆ ಸ್ವತಂತ್ರವಾಗಿದೆ ಎಂದು ಒಪ್ಪಿಕೊಳ್ಳಲು ಹದಿನೇಳು ವರ್ಷಗಳನ್ನು ತೆಗೆದುಕೊಂಡಿತು. ಈ ಪ್ರಶ್ನೆಯ ಆಧಾರದಲ್ಲಿಯೇ ಸಿ.ಪಿ.ಐ. ಇಬ್ಬಾಗವಾಗಬೇಕಾಯಿತು.

೧೯೫೩ರಲ್ಲಿ ಮಧುರೈ ಸಮ್ಮೇಳನದಲ್ಲಿ ಭಾರತ ಸರಕಾರ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ. ಆದರೂ ಅಂತರಂಗದಲ್ಲಿ ಸಾಮ್ರಾಜ್ಯಶಾಹಿಪರ ವಾಲಿಕೆ ಇದೆ ಎಂದು ನಿರ್ಣಯ ತೆಗೆದುಕೊಂಡಿತು. ೧೯೫೧ರಲ್ಲಿ ಪಾಲಘಾಟ್ ಸಮ್ಮೇಳನದಲ್ಲಿ ೧೯೪೭ರ ಆಗಸ್ಟ್ ೧೫ರ ಸ್ವಾತಂತ್ರ್ಯ ‘ಖೊಟ್ಟಿ’ ಅಲ್ಲ ‘ನಿಜ’ವಾದುದು ಎಂದು ಒಪ್ಪಿಕೊಂಡಿತು. ಭಾರತದ ಪ್ರಭುತ್ವ ಸಾಮ್ರಾಜ್ಯಶಾಹಿಗಳ ಕೈಗೊಂಬೆಯಾಗಿಲ್ಲ ;ಸ್ವತಂತ್ರವಾಗಿದೆ ಎಂದು ನಿರ್ಣಯ ತೆಗೆದುಕೊಂಡಿತು.

ಕಮ್ಯುನಿಸ್ಟರ ಭಿನ್ನಾಭಿಪ್ರಾಯಗಳು :

ಪ್ರಜಾಸತ್ತಾತ್ಮಕ ರಂಗ ಹಾಗೂ ರಾಷ್ಟ್ರೀಯರಂಗಗಳ ನಡುವಿನ ಸಂಘರ್ಷ

ದೇಶದಲ್ಲಿ ಬಂಡವಾಳಶಾಹಿ ವರ್ಗ ಆರ್ಥಿಕ ಬೆಳವಣಿಗೆಯನ್ನು ಮಾಡುತ್ತಿದೆ. ಆದರೆ ಅದಕ್ಕಾಗಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಆದ್ದರಿಂದ ‘ಪ್ರಜಾಸತ್ತಾತ್ಮಕ’ ರಂಗವನ್ನು ಕಟ್ಟಬೇಕು, ಈ ರಂಗಕ್ಕೆ ಎಡಶಕ್ತಿಗಳ ನೇತೃತ್ವ ಇರಬೇಕು ಮತ್ತು ಈ ರಂಗ ಕಾಂಗ್ರೆಸ್ ವಿರೋಧಿ ಆಗಿರಬೇಕೆಂದೇನೂ ಇಲ್ಲ. ಕಾಂಗ್ರೆಸ್ ಒಳಗಿನ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ರಂಗಕ್ಕೆ ಸೆಳೆದುಕೊಳ್ಳುವ ಕೆಲಸವೂ ನಡೆಯಬೇಕು ಎಂದು ಬಣ ವಾದಿಸಿತು. ಇನ್ನೊಂದು ಬಣ ‘ರಾಷ್ಟ್ರೀಯ ರಂಗ’ ವನ್ನು ಕಟ್ಟಬೇಕು ಎಂದು ಹೇಳಿತು. ಆ ರಂಗವನ್ನು ಕಾರ್ಮಿಕ ವರ್ಗ ಅಥವಾ ಎಡಶಕ್ತಿಗಳೇ ಮುನ್ನಡೆಸಬೇಕು ಎನ್ನುವ ಕಟ್ಟಳೆಯೇನೂ ಇರಕೂಡದು ಎಂದು ವಾದಿಸಿತು.

೧೯೫೮ರಲ್ಲಿ ಅಮೃತಸರ ಸಮ್ಮೇಳನದಲ್ಲಿ ಸಮಾಜವಾದವನ್ನು ತರಲು ಹಿಂಸಾಮಾರ್ಗ ಅನುಸರಿಸುವ ಅಗತ್ಯವಿಲ್ಲ. ಪಾರ್ಲಿಮೆಂಟರಿ ಮಾರ್ಗಗಳಿಂದ ಸಮಾಜವಾದಿ ಕ್ರಾಂತಿಯನ್ನು ನಡೆಸಬಹುದು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ ಸಮಾಜವಾದಿ ಸರಕಾರ ಅಸ್ತಿತ್ವಕ್ಕೆ ಬಂದರೆ ಆಗ ಅದನ್ನು ವಿರೋಧಿಸುವ ಬಂಡವಾಳಶಾಹಿ ಮತ್ತು ಪಾಳೇಗಾರಿ ಶಕ್ತಿಗಳಿಗೆ ಸಹ ವಿರೋಧಿಸುವ ಅವಕಾಶವನ್ನು ನೀಡಬೇಕು. ಬಂಡವಾಳಶಾಹಿ ಸರಕಾರ ಕಮ್ಯುನಿಸ್ಟರಿಗೆ ಪ್ರತಿಭಟಿಸಲು ಹೋರಾಡಲು ಅವಕಾಶ ಮಾಡಿಕೊಟ್ಟಂತೆ ಕಮ್ಯುನಿಸ್ಟರೂ ಅಂಥ ಮುಕ್ತ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎನ್ನುವ ನಿರ್ಣಯವನ್ನು ಕೈಗೊಳ್ಳಲಾಯಿತು. ೧೯೬೧ರ ವಿಜಯವಾಡ ಸಮ್ಮೇಳನದಲ್ಲಿ ಕಾಂಗ್ರೆಸ್ ಜೊತೆಗೆ ವಿರ-ಸರಸಗಳ ಸಂಬಂಧವಿರಿಸಿಕೊಳ್ಳಬೇಕೆನ್ನುವ ನಿರ್ಣಯವನ್ನು ಕೈಗೊಳ್ಳಲಾಯಿತು. ಕಾಂಗ್ರೆಸ್ಸಿನ ಪ್ರಗತಿಪರ ಧೋರಣೆಗಳನ್ನು ಬೆಂಬಲಿಸುವಾಗಲೇ ಅದರ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಬೇಕು ಎಂದು ತೀರ್ಮಾನಿಸಲಾಯಿತು. ಈ ಎಲ್ಲ ತಾಕಲಾಟಗಳು ಕುಲುಕಾಟಗಳು ೧೯೬೪ರಲ್ಲಿ ತೀವ್ರ ಸ್ವರೂಪ ಪಡೆದುಕೊಂಡವು. ೧೯೬೪ರಲ್ಲಿ ಸಿ.ಪಿ.ಐ. ವಿಭಜನೆ ಆಯಿತು. ಪಕ್ಷದ ಒಳಗೆ ಎಡವಾದಿಗಳೆಂದು ಗುರುತಿಸಲ್ಪಟ್ಟ ಬಣ ಹೊ ಹೋಗಿ ಸಿ.ಪಿ.ಐ (ಎಂ) ಎಂದು ಪ್ರತ್ಯೇಕ ಪಕ್ಷವನ್ನು ಘೋಷಿಸಿತು. ‘ಬಲ’ ಮತ್ತು ‘ಮಧ್ಯಮ’ ವಾದಿಗಳೆಂದು ಗುರುತಿಸಲ್ಪಟ್ಟ ಬಣ ಸಿ.ಪಿ.ಐ.ನಲ್ಲಿಯೇ ಮುಂದುವರಿಯಿತು. ಪಕ್ಷದೊಳಗೆ ಸಶಸ್ತ್ರ ಕ್ರಾಂತಿಗಾಗಿ ತಹತಹಿಸುತ್ತಿದ್ದ ಎಡ ತೀವ್ರಗಾಮಿಗಳು ಸಿ.ಪಿ.ಐ. (ಎಂ) ಜೊತೆಗೆ ಸೇರಿಕೊಂಡರು. ಸಿ.ಪಿ.ಐ. ‘ನ್ಯಾಷನಲ್ ಫ್ರಂಟ್ ‘ ಕಟ್ಟಬೇಕೆಂದು ಘೋಷಿಸಿತು. ಪಕ್ಷ ವಿಭಜನೆಯಾದರೂ ಸಹ ಸಿ.ಪಿ.ಐ ಮತ್ತು ಸಿ.ಪಿ.ಎಂ.ಗಳು ಮೈತ್ರಿಕೂಟ ರಚಿಸಿಕೊಂಡವು. ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿ ಸರಕಾರ ರಚಿಸಿದವು. ಇಂದಿಗೂ ಎಡರಂಗದಲ್ಲಿ (ಲೆಫ್ಟ್‌ಫ್ರಂಟ್) ಸಿ.ಪಿ.ಐ. ಮತ್ತು ಸಿ.ಪಿ.ಐ (ಎಂ) ಎರಡೂ ಮುಂದುವರಿದುಕೊಂಡು ಬಂದಿವೆ. ರಾಜಕೀಯವಾಗಿ ಮತ್ತು ಲೋಕಸಭಾ ವಿಧಾನ ಸಭಾ ಸ್ಥಾನಗಳ ದೃಷ್ಟಿಯಲ್ಲಿ ಸಿ.ಪಿ.ಐ. (ಎಂ) ಪ್ರಬಲ ಪಕ್ಷವಾಗಿ ಬೆಳೆಯುತ್ತ ಹೋಯಿತು. ಅದೇ ಪ್ರಮಾಣದಲ್ಲಿ ಸಿ.ಪಿ.ಐ. ಗೆ ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ನೆಹರೂ ನೇತೃತ್ವದಲ್ಲಿ ‘ಅವಡಿ ಸಮಾಜವಾದವನ್ನು’ ಕಾಂಗ್ರೆಸ್ ಪ್ರಚಾರ ಮಾಡುತ್ತಿತ್ತು. ಕೇರಳದಲ್ಲಿ ಅಸ್ತಿತ್ವಕ್ಕೆ ಬಂದ ನಂಬೂದರಿಪಾದ್ ನೇತೃತ್ವದ ಕಮ್ಯುನಿಸ್ಟ್ ಸರಕಾರವು ನೆಹರೂ ಅವರ ಎಡಧೋರಣೆಗಳನ್ನು ಕಾರ್ಯಗತಗೊಳಿಸುವ ಸರಕಾರವಾಗಿ ಜನರ ಕಣ್ಣಲ್ಲಿ ಕಾಣತೊಡಗಿತು. ನೆಹರೂ ಎಡಧೋರಣೆಗಳನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಗಳೇ ಪಾಲಿಸುತ್ತಿರಲಿಲ್ಲ. ಕಾಂಗ್ರೆಸ್ಸಿಗರಿಗೆ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ದೊಡ್ಡ ಸವಾಲಾಗಿ ಪರಿಣಮಿಸಿತು. ಕೇವಲ ಕೇರಳ ರಾಜ್ಯ ರಾಜಕೀಯಕ್ಕೆ ಮಾತ್ರ ಅದು ಸಂಬಂಧಿಸಿದ್ದಾಗಿರಲಿಲ್ಲ. ಇಡೀ ರಾಷ್ಟ್ರದ ಗಮನ ಅದರ ಮೇಲಿತ್ತು. ಕೇರಳದ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸುವುದಕ್ಕೆ ಕಾಂಗ್ರೆಸ್ ಕೈ ಹಾಕಿತು. ಆ ಕಾಲಘಟ್ಟದಲ್ಲಿ ಉದ್ಭವಿಸಿದ ಭಾರತ-ಚೀನಾ ಗಡಿ ವಿವಾದವನ್ನು ದೇಶದೊಳಗಿನ ಕಮ್ಯುನಿಸ್ಟ್ ಚಳವಳಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಬಳಸಿಕೊಂಡಿತು. ಭಾರತದ ಕಮ್ಯುನಿಸ್ಟರು ‘ಚೀನಾ ಏಜೆಂಟರು’ ಎನ್ನುವ ಪ್ರಚಾರವನ್ನು ಮಾಡಲಾಯಿತು. ಕಮ್ಯುನಿಸ್ಟ್ ನೇತೃತ್ವದ ಸಮಾಜವಾದಿ ಚಳವಳಿಗೆ ಪ್ರತಿಯಾಗಿ ನೆಹರೂ ‘ಅವಡಿ ಸಮಾಜವಾದ’ವನ್ನು ಮಂಡಿಸಿದ್ದರು. ಆ ನಂತರ ಅದೇ ರೀತಿ ಇಂದಿರಾಗಾಂಧಿ ‘ಗರೀಬಿ ಹಠಾವೊ’ ಘೋಷಣೆಯನ್ನು ಕೊಟ್ಟರು. ನಂತರದ ಬೆಳವಣಿಗೆಗಳದು ಪ್ರತ್ಯೇಕ ವಿಷಯ.

ನಂಬೂದಿರಿಪಾದ್ : ಕಮ್ಯುನಿಸ್ಟರು ಮತ್ತು ಕೇರಳ ರಾಜಕಾರಣ

ಇ.ಎಮ್.ಎಸ್. ನಂಬೂದಿರಿಪಾದ್ ಅವರ ನೇತೃತ್ವದಲ್ಲಿ ವಿಶ್ವದಲ್ಲಿಯೇ ಪ್ರಪ್ರಥಮ ಚುನಾಯಿತ ಕಮ್ಯುನಿಸ್ಟ್ ಸರಕಾರ ಕೇರಳದಲ್ಲಿ ಅಸ್ಥಿತ್ವಕ್ಕೆ ಬಂದಿತು. ವಿದೇಶಗಳಲ್ಲಿ ಕಮ್ಯುನಿಸ್ಟ್ ಕ್ರಾಂತಿಗಳು ನಡೆದಿದ್ದವು. ಕಮ್ಯುನಿಸ್ಟ್ ಸರ್ಕಾರಗಳೂ ರಚನೆಗೊಂಡಿದ್ದವು. ಆದರೆ ಆ ಕಮ್ಯುನಿಸ್ಟ್ ಸರಕಾರಗಳಿಗೆ ಚುನಾವಣೆ ನಡೆಸುವ ಧೈರ್ಯವಿರಲಿಲ್ಲ ; ಈಗಲೂ ಇಲ್ಲ.

ನಂಬೂದಿರಿಪಾದ್ ಮತ್ತು ಎ.ಕೆ.ಗೋಪಾಲನ್ ಅವರನ್ನು ನಡೆದಾಡುವ ದೈವಾಂಶಸಂಭೂತರೆಂದು ಕೇರಳದ ಜನತೆ ಭಾವಿಸಿಕೊಂಡಿತ್ತು. ನೆಹರೂಗೆ ಕಮ್ಯುನಿಸ್ಟ್ ದಿಗ್ವಿಜಯ ನಡುಕ ಹುಟ್ಟಿಸಿತು. ಕೇರಳ ಉಳಿದ ರಾಜ್ಯಗಳಿಗೆ ಮಾದರಿಯಾದರೆ ಹೇಗೆ ಎಂದು ನೆಹರೂ ಹೆದರಿದರು. ವಾಮಮಾರ್ಗ ಅನುಸರಿಸಿ ಚುನಾಯಿತ ನಂಬೂದಿರಿಪಾದ್ ಸರಕಾರವನ್ನು ಉರುಳಿಸುವ ಕುಕೃತ್ಯ ನಡೆಸಿದರು. ನಂಬೂದಿರಿಪಾದ್ ಬ್ರಾಹ್ಮಣ ಜಾತಿಗೆ ಸೇರಿದವರು. ಅಷ್ಟು ಮಾತ್ರವಲ್ಲ. ದೊಡ್ಡ ಜಮೀನುದಾರರೂ ಆಗಿದ್ದರು. ಮೊದಲು ತಮ್ಮ ಜಮೀನುಗಳನ್ನು ಬಡವರಿಗೆ ಹಂಚಿ ನಂತರ ಹೋರಾಕ್ಕಿಳಿದಿದ್ದರು ಅವರು.

ಎ.ಕೆ.ಗೋಪಾಲನ್ ಅವರದು ಸಾಮಾನ್ಯ ಬಡವರ್ಗದಿಂದ ಎದ್ದುಬಂದ ಮಹಾನ್ ವಕ್ತಿತ್ವ. ಈ ಇಬ್ಬರ ಸಂಯೋಗ ಕೇರಳ ಜನಮಾನಸದಲ್ಲಿ ಹೊಸಯುಗ ಪ್ರವರ್ತಕ ಪ್ರಜ್ಞೆಯನ್ನು ದಟ್ಟಗೊಳಿಸುವಂತೆ ಮಾಡಿತು. ಆಳುವ ವರ್ಗಗಳಲ್ಲಿ ಆತ್ಮ ಪರಿವರ್ತನೆ ಮಾಡಬಲ್ಲಂಥ ಯಕ್ಷಿಣೀ ಶಕ್ತಿ ಈ ನಾಯಕದ್ವಯರಲ್ಲಿತ್ತು.

ಗಾಂಧೀಜಿಯಲ್ಲಿ ಕಮ್ಯುನಿಸಂ ಸಿದ್ಧಾಂತವನ್ನು ದರಕ ಹೊಯ್ದರೆ ಎಂಥ ವ್ಯಕ್ತಿತ್ವ ಅವಿಷ್ಕಾರಗೊಳ್ಳುತ್ತದೊ ಅಂಥ ಅಪರೂಪದ ವ್ಯಕ್ತಿತ್ವ ನಂಬೂದರಿಪಾದ್ ಅವರದಾಗಿತ್ತು. ಭಾರತದಲ್ಲಿ ಕಮ್ಯುನಿಸ್ಟ್ ಕ್ರಾಂತಿ ನಡೆದು ಆ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೂ ಮುಕ್ತ ಚುನಾವಣೆಗಳನ್ನು ನಡೆಸಬೇಕೆನ್ನುವ ವಾದ ನಂಬೂದಿರಿಪಾದ್ ಅವರದು. ಸ್ವತಂತ್ರ ಭಾರತವು ಬಂಡವಾಳಶಾಹಿ ವರ್ಗಗಳ ಮುಖಂಡತ್ವದಲ್ಲಿ ಮುನ್ನಡೆಯುತ್ತಿರುವಾಗ ಕಮ್ಯುನಿಸ್ಟ್ ಸರ್ಕಾರ ಬಂದಾಗ ಬಂಡವಾಳಶಾಹಿಗಳಿಗೂ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎನ್ನುವ ಧೋರಣೆಯುಳ್ಳವರಾಗಿದ್ದರು ನಂಬೂದರಿಪಾದ್. ಕ್ರಾಂತಿಯ ನಂತರದ ಸಾಂಸ್ಕೃತಿಕ ಕ್ರಾಂತಿಯೂ ಸಹ ಪ್ರಜಾಪ್ರಭುತ್ವ ಮೌಲ್ಯಗಳನ್ನಾಧರಿಸಿ ನಡೆಯಬೇಕು ಎನ್ನುವ ಧೋರಣೆ ಅವರದಾಗಿತ್ತು.

ಕೇರಳದಲ್ಲಿ ಸಂಯುಕ್ತ ಸರ್ಕಾರಗಳ ಸಂಪ್ರದಾಯವಿದೆ. ಎಡರಂಗ ಮತ್ತು ಬಲರಂಗಗಳ ನಡುವೆ ಪೈಪೋಟಿ ಇರುತ್ತದೆ. ಇದರೊಂದಿಗೆ ಕ್ರಿಶ್ಚಿಯನ್ ಸಮುದಾಯದ ಪ್ರಭಾವ ಹೆಚ್ಚಿರುವ ಕೇರಳ ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಕೇರಳ ರಾಜಕೀಯದಲ್ಲಿ ಪ್ರಭಾವಿಯಾಗಿವೆ. ಇತ್ತೀಚೆಗೆ ಅಬ್ದುಲ್ ನಾಸೀರ್ ಮದನಿಯ ಪೀಪಲ್ಸ್ ಡೆಮೋಕ್ರೆಟಿಕ್ ಪಾರ್ಟಿ (ಪಿ.ಡಿ.ಪಿ.) ಎನ್ನುವ ಪಕ್ಷವು ಕೇರಳ ಮುಸ್ಲಿಮರ ನಡುವೆ ಪ್ರಬಲವಾಗಿರುವುದನ್ನು ಗಮನಿಸಬಹುದು.

ಜ್ಯೋತಿಬಸು : ಕಮ್ಯುನಿಸ್ಟರು ಮತ್ತು ಪಶ್ಚಿಮ ಬಂಗಾಳ ರಾಜಕಾರಣ

೧೯೭೭ರ ಜೂನ್ ೨೧ರಂದು ಜ್ಯೋತಿಬಸು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ನಂತರ ೨೩ ವರ್ಷಗಳ ಕಾಲ ಅಂದರೆ ೨೦೦೦ದ ನವೆಂಬರ್ ೬ರವರೆಗೆ ಮುಖ್ಯಮಂತ್ರಿಗಳಾಗಿದ್ದರು.

ಕಾಂಗ್ರೆಸ್ಸಿನ ಸಿದ್ಧಾರ್ಥ ಶಂಕರ್ ರೇ ಬಸುಗಿಂತ ಮುಂಚೆ ಮುಖ್ಯಮಂತ್ರಿಗಳಾಗಿದ್ದರು. ಅವರು, “ಬಸು ಆಡಳಿತಾವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಯಾಗಲಿಲ್ಲ. ಅವರು ತಮ್ಮ ಅಧಿಕಾರವನ್ನು ಕಾರ್ಮಿಕರ ಸಂಘಟನೆಗಳನ್ನು ಬೆಳೆಸಲು, ಉಳಿಸಲು ಬಳಸಿಕೊಂಡರು” ಎನ್ನುವ ಮಾತು ಹೇಳಿದರು.

ರೇ ಅವರ ಈ ಮಾತುಗಳು ಬಸು ಅವರ ಕೀರ್ತಿಯನ್ನು ಹೆಚ್ಚಿಸುವಂಥವು. ಏಕೆಂದರೆ ಮುಖ್ಯಮಂತ್ರಿಯಾದವನ ಪ್ರಥಮ ಕರ್ತವ್ಯವೆಂದರೆ ರಾಜ್ಯದ ಜನತೆಯ ಹಿತ ಕಾಯುವುದು. ಅದೂ ಅಲ್ಲದೆ ಬಸು ಒಪ್ಪಿಕೊಂಡ ಮೌಲ್ಯ ಸಿದ್ಧಾಂತಗಳೂ ಸಹ ಕಾರ್ಮಿಕ ವರ್ಗದ ಹಿತಾಸಕ್ತಿಗೆ ಸಂಬಂಧಿಸಿದಂತವು. ಮುಖ್ಯಮಂತ್ರಿ ಎಂದರೆ ವ್ಯಾಪಾರಿ ಅಲ್ಲ. ರಾಜ್ಯದ ಬಜೆಟ್ ಕೊರತೆಯದಾಗಿದ್ದರೇ ಅದು ಜನಪರ ಆಗಿರಲು ಸಾಧ್ಯ. ಉಳಿಕೆಯಾದಾದರೆ ಜನರಿಗೆ ಅನ್ಯಾಯವಾಗಿದೆ ಎಂದರ್ಥವಲ್ಲವೆ?

ಸಿದ್ಧಾರ್ಥ ಶಂಕರ್ ರೇ ಅವರು ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಹುಟ್ಟಡಗಿಸಲು ಮಾಡಬಾರದ್ದನ್ನೆಲ್ಲ ಮಾಡಿದವರು. ಅರೆಫ್ಯಾಸಿಸ್ಟ್ ದಾಳಿಯನ್ನು ನಡೆಸಿದವರು. ಕಾರ್ಮಿಕ ಸಂಘಟನೆಗಳನ್ನು ಛಿದ್ರವಿಚ್ಛಿದ್ರಗೊಳಿಸಲು ಅವರು ಸಕಲ ಯತ್ನ ಮಾಡಿದರು.

ಕಾಂಗ್ರೆಸ್ಸಿನ ದಾಳಿಯಿಂದಾಗಿ ಬಂಗಾಳದಲ್ಲಿ ಎಡಶಕ್ತಿಗಳು ಇನ್ನಷ್ಟು ಗಟ್ಟಿಯಾಗಲು ಸಾಧ್ಯವಾಯಿತು. ಆಳವಾಗಿ ಬೇರುಬಿಡಲೂ ಸಾಧ್ಯವಾಯಿತು. ನಗರ ಪ್ರದೇಶಗಳಲ್ಲಿದ್ದ ಅನೇಕ ಕಾರ್ಮಿಕರು ಭೂಗತರಾಗಲು ಹಳ್ಳಿಗಾಡುಗಳನ್ನು ಹೊಕ್ಕರು. ಅಲ್ಲಿ ಅವರು ಬಡರೈತರು, ಕೂಲಿಕಾರರು, ಬುಡಕಟ್ಟು ಜನಗಳೊಂದಿಗೆ ಬೆರೆತರು. ಅವರನ್ನು ಪ್ರಜಾಸತ್ಮಾತ್ಮಕ ಚಳವಳಿಯ ಸೆಳವಿಗೆ ಎಳೆತಂದರು. ಬಂಗಾಳದ ಕಾರ್ಮಿಕರು ಆಗ ಹಳ್ಳಿಗಳಿಗೆ ಹೋಗಿ ರೈತರೊಂದಿಗೆ ಕೂಡಿ ಹೋರಾಟ ಹುಟ್ಟು ಹಾಕಿರುವುದೇ ಎಡರಂಗ ಸರಕಾರದ ಭದ್ರ ಬುನಾದಿಯ ಗುಟ್ಟು.

೧೯೪೬-೪೭ ರಲ್ಲಿ ಬಂಗಾಲದಲ್ಲಿ ನಡೆದ ತೇಭಾಗ (ಫಸಲಿನಲ್ಲಿ ಹೆಚ್ಚಿನ ಭಾಗ ಕೇಳುವ ಕೃಷಿ ಕಾರ್ಮಿಕರ ಹೋರಾಟ) ಚಳವಳಿಯ ಹಿನ್ನಲೆಯೂ ಇತ್ತು. ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ದಬ್ಬಾಳಿಕೆಗೆ ಎದೆಯೊಡ್ಡಿ ನಡೆದ ಹೋರಾಟಗಳಲ್ಲಿ ಜ್ಯೋತಿಬಸು ಅವರ ಪಾತ್ರ ಅಪಾರವಾದುದು.

ಕಮ್ಯುನಿಸ್ಟ್ ಪಕ್ಷ ಕಾರ್ಯಕ್ರಮ ಹೇಳುವ ಕಾರ್ಮಿಕ ಮತ್ತು ರೈತರ ಐಕ್ಯತೆ ಬೇರೆಡೆಗಿಂತ ಹೆಚ್ಚು ಅರ್ಥಪೂರ್ಣವಾಗಿ ಆದದ್ದು ಬಂಗಾಳದಲ್ಲಿ ಮಾತ್ರ. ಇವತ್ತಿಗೂ ಭಾರತದಲ್ಲಿ ಪ್ರಜಾಪ್ರಭುತ್ವ ಚಳವಳಿಗೆ ದೃಢ ನೆಲೆಗಟ್ಟು ಇಲ್ಲದಂತಾಗಿರಲು ಕಾರಣ ಈ ಐಕ್ಯತೆಯ ಕೊರತೆಯ ಆಗಿದೆ. ಆದರೆ ಅಂಥ ಒಂದು ಐಕ್ಯತೆಯನ್ನು ಸಾಧಿಸಲು ಬಂಗಾಳಕ್ಕೆ ಸಾಧ್ಯವಾಯಿತು. ಬಂಗಾಳದ ಕಮ್ಯುನಿಸ್ಟ್ ಚಳವಳಿಗೆ ಜ್ಯೋತಿಬಸು ಅವರ ಕೊಡುಗೆ ಮಹತ್ತರವಾದುದು. ಜ್ಯೋತಿಬಸು ಅವರಿಗೆ ಕಮ್ಯುನಿಸ್ಟ್ ಪ್ರೇರಣೆ ಸಿಕ್ಕಿದ್ದು ಭಾರತದಲ್ಲಿ ಅಲ್ಲ ; ಇಂಗ್ಲೆಂಡಿನಲ್ಲಿ !

ಪೂರ್ವ ಬಂಗಾಳದ ನಾರಾಯಣ ಗಂಜ್ ಜಿಲ್ಲೆಯ ಬರೂಡಿ ಗ್ರಾಮದಲ್ಲಿ ಡಾ. ನಿಶಿಕಾಂತ್ ಬಸು ವೈದ್ಯರಾಗಿರುತ್ತಾರೆ. ಪತ್ನಿ ಹೇಮಲತಾ. ಇವರಿಬ್ಬರ ಮಗ ಜ್ಯೋತಿಬಸು. ಇವರ ಈ ಹುಟ್ಟೂರು ಈಗ ಭಾರತದಲ್ಲಿಲ್ಲ, ಬಾಂಗ್ಲಾ ದೇಶದಲ್ಲಿದೆ.

ಕಲಕತ್ತಾ ಹಿಂದು ಕಾಲೇಜ್‌ನಲ್ಲಿ ಇಂಗ್ಲಿಷ್ ಆನರ್ಸ್‌ ಪಡೆದುಕೊಂಡು ಬ್ಯಾರಿಸ್ಟರ್ ಪದವಿ ಪಡೆಯಲು ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್‌ಗೆ ಹೋದರು. ಇಂಗ್ಲೆಂಡ್‌ನಲ್ಲಿ ಹೆರಾಲ್ಡ್ ರಸ್ಕಿನ್ ಅವರ ಅರ್ಥಶಾಸ್ತ್ರದ ಉಪನ್ಯಾಸಗಳನ್ನು ಕೇಳಿ ಸಮಾಜವಾದಿ ಚಿಂತನೆಯ ಪ್ರೇರಣೆಗಳನ್ನು ಪಡೆದುಕೊಂಡರು.

ಆಗ ಇಂಗ್ಲೆಂಡ್‌ನಲ್ಲಿದ್ದ ರಜನಿಪಾಮೆ ದತ್ ಅವರ ಸಂಪರ್ಕದಿಂದಾಗಿ ಇಂಗ್ಲೆಂಡಿನ ಕಮ್ಯುನಿಸ್ಟ್ ಪಾರ್ಟಿಯ ಸಾಮೀಪ್ಯ ಪಡೆದುಕೊಂಡರು. ಕಮ್ಯುನಿಸ್ಟ್ ನಾಯಕ ಭೂಪೇಶ್ ಗುಪ್ತಾ ಸಹ ಆಗ ಬಸು ಅವರಿಗೆ ಕಾಮ್ರೇಡ್ ಆದರು.

ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವವನ್ನು ಬಸು ಕೋರಿದರು. ಆದರೆ ಅದರ ಮುಖಂಡ ಜನರಲ್ ಹಾರಿ ಪಾಲಿಟ್, “ಇಲ್ಲಿ ಸದಸ್ಯತ್ವ ಪಡದುಕೊಳ್ಳುವುದು ಬೇಡ. ನೇರವಾಗಿ ಭಾರತಕ್ಕೆ ಹೋಗಿ ಅಲ್ಲಿಯ ಪಕ್ಷದ ಸದಸ್ಯತ್ವ ಪಡೆದುಕೊಳ್ಳಿ” ಎಂದು ಸಲಹೆ ನೀಡಿದರು.

ಇಂಗ್ಲೆಂಡ್‌ನಿಂದ ಮರಳಿ ಬಂದ ಬಸು ಕಲಕತ್ತಾದ ಹೈಕೋರ್ಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸುವುದಕ್ಕಿಂತ ಮೊದಲು ಕಮ್ಯುನಿಸ್ಟ್ ಪಕ್ಷ ಸದಸ್ಯತ್ವ ಪಡೆದುಕೊಂಡರು. ರೇಲ್‌ರೋಡ್ ವರ್ಕರ್ಸ್ ಯೂನಿಯನ್‌ಗೆ ಮುಖಂಡರಾಎ ಬಸು ೧೯೪೬ರಲ್ಲಿ ಆರಂಭಗೊಂಡ ತೇಭಾಗ ರೈತ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಹನ್ನೊಂದು ಬಾರಿ ಶಾಸಕರಾಗಿ ಅವರು ಆಯ್ಕೆಗೊಂಡರು. ಅ೯೫೨ ರಿಂದ ೧೯೭೧ರವರೆಗೆ ಸತತವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಗೊಂಡರು ಬಸು. ೧೯೭೧ರಲ್ಲಿ ಕಾಂಗ್ರೆಸ್ ಸರ್ವಾಧಿಕಾರಿ ದಾಳಿ ನಡೆಸಿತು. ಬಸು ಅವರ ಕ್ಷೇತ್ರದ ಬೂತ್‌ಗಳನ್ನು ವಶಪಡಿಸಿಕೊಂಡಿತು. ಇದನ್ನು ಪ್ರತಿಭಟಿಸಿ ಬಸು ತಮ್ಮ ಆಭ್ಯರ್ಥಿತನವನ್ನು ವಾಪಸ್ ಪಡೆದುಕೊಂಡರು. ನಂತರ ೧೯೭೭ ರಿಂದ ಅ೯೯೬ರವರೆಗೆ ಐದು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಗೊಂಡರು.

ಆ ಸಂದರ್ಭದಲ್ಲಿ ಬಸು ಹತ್ತು ದಿವಸ ಹಗಲು ಮತ್ತು ರಾತ್ರಿ ಅಸೆಂಬ್ಲಿಯಲ್ಲಿಯೇ ಇದ್ದರು! ದೇಶದ ಯಾವ ಅಸೆಂಬ್ಲಿಯಲ್ಲಿಯೂ ನಡೆದಿರದ ಐತಿಹಾಸಿಕ ಘಟನೆ ಪಶ್ಚಿಮ ಬಂಗಾಳದ ಅಸೆಂಬ್ಲಿಯಲ್ಲಿ ನಡೆಯಿತು.

ಕಾರ್ಮಿಕ ಹೋರಾಟಗಳು ಆಡಳಿತ ಸರಕಾರದ ಎದೆ ನಡುಗಿಸತೊಡಗಿದ್ದವು. ಬಸು ಅವರನ್ನು ಬಂಧಿಸಲಾರದೆ ಆ ಹೋರಾಟಗಳನ್ನು ನಿಯಂತ್ರಿಸುವುದು ಕಷ್ಟವೆನಿಸಿತು. ಬಸು ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿದರು. ಸಿದ್ಧಾರ್ಥ ಶಂಕರ್ ರೇ ಸರಕಾರದ ಪೊಲೀಸರು. ಅದೇ ರೀತಿ ಸದನದ ಒಳಗೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವುದಿತ್ತು. ಬಸು ಸದನದ ಒಳಗಿದ್ದರೆ ಅಷ್ಟು ಸಲೀಸಾಗಿ ನಿರ್ಣಯಗಳನ್ನು ಕೈಗೊಳ್ಳಲಾಗುವುದಿಲ್ಲವೆಂದು ಅರಿತ ಆಡಳಿತ ಸರಕಾರ ಬಸು ಅವರನ್ನು ಏನಾದರೂ ಮಾಡಿ ಬಂಧಿಸಿ ಜೈಲಲ್ಲಿ ಕೂಡಿಡುವಂತೆ ಪೊಲೀಸರಿಗೆ ಸೂಚಿಸಿತು.

ಬಸು ಎಷ್ಟೋ ಸಂದರ್ಭಗಳಲ್ಲಿ ಭೂಗತರಾದದ್ದು ಇತ್ತು. ಆದರೆ ಆ ಸಂದರ್ಭದಲ್ಲಿ ಭೂಗತರಾದರೆ ಅಸೆಂಬ್ಲಿಯ ಒಳಗೆ ಜನರ ಹೋರಾಟಗಳ ಆಶಯಗಳಿಗೆ ವಿರುದ್ಧವಾಗಿ ನಿರ್ಣಯಗಳಾಗುವ ಸಾಧ್ಯತೆ ಇತ್ತು. ಭೂಗತ ಚಟುವಟಿಕೆಗಳಲ್ಲಿ ಪಳಗಿದ್ದ ಬಸು ಸದನದ ಚಟುವಟಿಕೆಗಳಲ್ಲೂ ಪಳಗಿದ್ದರು. ಅಸೆಂಬ್ಲಿಯಲ್ಲಿಯೇ ಭೂಗತರಾಗುವ ಹೊಸ ತಂತ್ರದ ಅವಿಷ್ಕಾರ ಬಸು ಅವರಿಂದ ಆಯಿತು.

ಅಧಿವೇಶನ ಆರಂಭಗೊಂಡಿತು. ಅಂದು ಹೇಗೋ ಮಾಡಿ ಅಸೆಂಬ್ಲಿಯ ಒಳಕ್ಕೆ ಹೊಕ್ಕುಬಿಟ್ಟರು. ಹೊರಗೆ ಹೋಗುತ್ತಲೇ ಪೊಲೀಸರು ಬಂಧಿಸುವುದು ಗ್ಯಾರಂಟಿ ಎನ್ನುವುದು ಗೊತ್ತಾಯಿತು. ಅಸೆಂಬ್ಲಿಯ ಒಳಗೆ ಬಂದು ಪೊಲೀಸರು ಬಂಧಿಸುವಂತಿರಲಿಲ್ಲ. ಸಂವಿಧಾನದತ್ತ ಈ ಹಕ್ಕನ್ನು ಉಪಯೋಗಿಸಿಕೊಂಡ ಬಸು ಸತತ ಹತ್ತು ದಿನಗಳ ಕಾಲ ಅಸೆಂಬ್ಲಿಯಲ್ಲಿಯೇ ಬಿಡಾರ ಹೂಡಿದರು. ಬಸು ಅವರ ಪತ್ನಿ ಊಟ, ಬಟ್ಟೆ ತಂದುಕೊಟ್ಟು ಹೋಗುತ್ತಿದ್ದರು. ಅಸೆಂಬ್ಲಿಯ ಒಳ ಹೋರಾಟದ ಕ್ಲೈಮ್ಯಾಕ್ಸ್‌ನಂತೆ ತೋರುತ್ತಿತ್ತು ಆ ದೃಶ್ಯ..

೧೯೬೨ರಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಐ.)ದ ನ್ಯಾಷನಲ್ ಕೌನ್ಸಿಲ್‌ನಿಂದ ೩೨ ಜನ ಹೊರ ಬಂದು ಹೊಸ ಕಮ್ಯುನಿಸ್ಟ್ ಪಕ್ಷವನ್ನು (ಸಿ.ಪಿ.ಎಂ.)ರಚಿಸಿದರು. ಆಗ ಪ್ರಥಮ ಪಾಲಿಟ್ ಬ್ಯೂರೋದಲ್ಲಿ ೯ ಜನರಿದ್ದರು. ಅವರನ್ನು ‘ನವರತ್ನ’ ಗಳೆಂದು ಕರೆಯಲಾಗುತ್ತಿತ್ತು.ಬಸು ಕೂಡ ಒಂದು ರತ್ನವಾಗಿದ್ದರು. ಕೊನೆಯ ರತ್ನವೊಂದು ಉಳಿದುಕೊಂಡಿತ್ತು. ಜನವರಿ ೨೦೧೦ರಲ್ಲಿ ಅದೂ ಹೋಯಿತು…

೧೯೭೭ರಲ್ಲಿ ಸಿ.ಪಿ.ಐ. (ಎಂ) ನೇತೃತ್ವದ ಎಡರಂಗ ಸರಕಾರವನ್ನು ಬಂಗಾಳದಲ್ಲಿ ಸ್ಥಾಪಿಸಿದ ಬಸು ಮತ್ತೆ ಹೊರಳಿ ನೋಡಲೇ ಇಲ್ಲ. ೨೦೦೦ ಇಸವಿಯಲ್ಲಿ ಆರೋಗ್ಯ ಸಹಕರಿಸುತ್ತಿಲ್ಲವೆನ್ನುವ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾವನ್ನು ತಾವಾಗಿಯೇ ಬುದ್ಧದೇವ್ ಭಟ್ಟಾಚಾರ್ಯರಿಗೆ ಬಿಟ್ಟುಕೊಟ್ಟರು. ಜ್ಯೋತಿಬಸು ೧೯೯೬ರಲ್ಲಿ ಪ್ರಧಾನಿ ಆಗಬಹುದಿತ್ತು. ಬಸು ಅವರು ಪ್ರಧಾನಿಯಾಗುವುದನ್ನು ಬೇರೆ ಯಾರೂ ತಪ್ಪಿಸಲಿಲ್ಲ. ಸ್ವತಃ ಸಿ.ಪಿ.ಐ. (ಎಂ) ಪಕ್ಷವೇ ಅದನ್ನು ತಪ್ಪಿಸಿತು. ಅದಕ್ಕಾಗಿ ಅದು ನಂತರ ಪಶ್ಚಾತ್ತಾಪ ಪಟ್ಟುಕೊಂಡಿತು. ಬಸು ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಪ್ರಧಾನಿಪಟ್ಟವನ್ನು ತಿರಸ್ಕರಿಸಿದರು. ಈ ವಿಷಯದಲ್ಲಿ ಪಕ್ಷ ತಪ್ಪು ತೀರ್ಮಾನ ಕೈಗೊಂಡಿತು ಎಂದು ಬಸು ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಹಾಗೆ ಹೇಳುವಾಗ ಅವರ ಮುಖದಲ್ಲಿ ಪ್ರಧಾನಿಯಾಗಲಿಲ್ಲವಲ್ಲ ಎನ್ನುವ ಛಾಯೆಯಿತ್ತು…ಅವರಂಥವರನ್ನು ಪ್ರಧಾನಿಯಾಗಿ ಪಡೆಯುವ ಅದೃಷ್ಟ ಭಾರತ ಮಾತೆಗೆ ಇರಲಿಲ್ಲ… ಈಗ ಸಿ.ಪಿ.ಐ. (ಎಂ) ಪಾಲಿಟ್ ಬ್ಯೂರೋದಲ್ಲಿರುವ ಯುವ ನಾಯಕರಿಗೂ ಬಸು ತಲೆಮಾರಿನವರಿಗೂ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರುವುದು ಎದ್ದು ತೋರುತ್ತಿದೆ.

ಒಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಅಗಾಧ ವ್ಯತ್ಯಾಸಗಳಿವೆ. ಸಿ.ಪಿ.ಐ.(ಎಂ) ಕಾರ್ಯಕ್ರಮದಲ್ಲಿ ಹೇಳುವಂತೆ ರಾಷ್ಟ್ರೀಯ ಬೂರ್ಜ್ವಾಗಳ ಹಿಡಿತದಲ್ಲಿರುವ ಪ್ರಭುತ್ವಕ್ಕೆ ಸದಾ ವಿರುದ್ಧವಾಗಿದ್ದರೆ ಮಾತ್ರ ಕ್ರಾಂತಿಕಾರಿತ್ವವನ್ನು ಉಳಿಸಿಕೊಂಡು ಹೋಗಲು ಸಾಧ್ಯ ಎನ್ನುವ ತಳೀವಳಿಕೆ ಇರುವಂತೆ ಕಾಣುತ್ತದೆ. ಒಮ್ಮೆ ಕೇಂದ್ರದಲ್ಲಿ ಅಧಿಕಾರ ನಡೆಸಿಬಿಟ್ಟರೆ ಉಳಿದ ಪಕ್ಷಗಳಂತೆ ಸಿ.ಪಿ.ಐ.(ಎಂ.) ಸಹ ಬೆತ್ತಲಾಗಬೇಕಾಗುತ್ತದೆನ್ನುವ ಎಡ ಭಯ ಪಾಲಿಟ್ ಬ್ಯೂರೋವನ್ನು ಕಾಡುತ್ತಿರುವಂತೆ ತೋರುತ್ತದೆ. ೧೯೬೨ರಲ್ಲಿ ಸಿ.ಪಿ.ಐ. ನಿಂದ ಹೊರಬಂದಾಗ ಯಾವುದನ್ನು “ಪರಿಷ್ಕರಣವಾದ” ಎಂದರೊ ಅದೀಗ ಮೈಲಿಗೆಯಂತೆ ಸಿ.ಪಿ.ಐ (ಎಂ.)ನ್ನು ಕಾಡತೊಡಗಿದೆ. ಪಾರ್ಲಿಮೆಂಟರಿ ಹೋರಾಟ ಅಸ್ತ್ರವಾಗಬೇಕೊ ಅಂತಿಮ ಗುರಿಯಾಗಬೇಕೋ ಎನ್ನುವ ತಾಕಲಾಟಗಳಲ್ಲಿ ಬಸು ಪ್ರಧಾನಿ ಆಗದೆ ಹೋದರು.

 


[1] ತೆಲಂಗಾಣ ಸಶಸ್ತ್ರ ಹೋರಾಟಕ್ಕೆ ಸಂಬಂಧಿಸಿದ ವಿವರಗಳನ್ನು ಪ್ರಸ್ತುತ ಕೃತಿಯ ೨೫೭-೨೭೪ರ ಪುಟಗಳಲ್ಲಿ ಚರ್ಚಿಸಲಾಗಿದೆ – ಸಂ.