ಬಂದಿತು ಇಂದಿರಾಗಾಂಧಿ ಅವರ ಎಮರ್ಜೆನ್ಸಿ : ಮಿಂಚಿತು ಸ್ವಾತಂತ್ರ್ಯ

೧೯೭೫ರ ಜೂನ್ ೨೬ರಂದು ದೇಶದ ತುರ್ತು ಪರಿಸ್ಥಿತಿ ಹೇರಲ್ಪಟ್ಟಿತು. ಪ್ರದಾನಿ ಇಂದಿರಾಗಾಂಧಿ ದೇಶದ ಹಿತದೃಷ್ಟಿಯಿಂದ ಎಮೆರ್ಜೆನ್ಸಿ ಘೋಷಿಸಲಾಗಿದೆಯೆಂದು ತಮ್ಮ ಧೋರಣೆಯನ್ನು ಸಮರ್ಥಿಸಿಕೊಂಡರು. ದೇಶದ ಆರ್ಥಿಕ ಸ್ಥಿತಿ ತೀವ್ರ ಮುಗ್ಗಟ್ಟನ್ನು ಎದುರಿಸತೊಡಗಿದ್ದು ಎಮರ್ಜೆನ್ಸಿಗೆ ಮುಖ್ಯ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತದೆ. ಇದರೊಂದಿಗೆ ರಾಜಕೀಯ ಕಾರಣಗಳೂ ಸೇರಿಕೊಂಡಿವೆ. ಆ ಕಾಲಘಟ್ಟದಲ್ಲಿ ಬಡತನ, ಆಹಾರದ ಕೊರತೆ, ನಿರುದ್ಯೋಗಗಳು ದೇಶವನ್ನು ಕಂಗೆಡಿಸಿದ್ದವು.

ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗಬೇಕೆನ್ನುವ ಘೋಷಣೆ ಮೊಳಗಿತು. ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ ಯುದ್ಧ ಸಾರಿತು. ಬಾಂಗ್ಲಾದೇಶಕ್ಕೆ ಭಾರತ ಬೆಂಬಲ ನೀಡಿತು. ಹೊಸ ರಾಷ್ಟ್ರಕ್ಕೆ ಬಾಂಗ್ಲಾದೇಶ ಎನ್ನುವ ಹೊಸ ಹೆಸರು ಬಂದಿತು.

ಬಾಂಗ್ಲಾದೇಶದ ಪರವಾಗಿ ಪಾಕಿಸ್ತಾನದ ವಿರುದ್ಧ ನಡೆಸಿದ ಯುದ್ಧದಲ್ಲಿ ಭಾರತ ಅಪಾರ ನಷ್ಟ ಅನುಭವಿಸಬೇಕಾಯಿತು. ಯುದ್ಧಾನಂತರ, ಬಾಂಗ್ಲಾ ದೇಶದಿಂದ ಬಂದ ಒಂದು ಕೋಟಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಹೊಣೆ ಸರಕಾರದ ಮೇಲೆ ಬಿದ್ದಿತು. ಸರಕಾರಿ ಅಂಕಿ ಅಂಶಗಳ ಪ್ರಕಾರ ಒಂದು ಕೋಟಿ ಬಾಂಗ್ಲಾ ನಿರಾಶ್ರಿತರು ಭಾರತಕ್ಕೆ ವಲಸೆ ಬಂದರು. ಅವರಿಗೆಲ್ಲ ಆಹಾರ, ವಸತಿ, ಉದ್ಯೋಗ, ಜಮೀನುಗಳನ್ನು ಕಲ್ಪಿಸಿಕೊಡುವ ದುಸ್ಸಾಹಸಕ್ಕೆ ಪ್ರಧಾನಿ ಇಂದಿರಾಗಾಂಧಿ ಕೈ ಹಾಕಿದರು.

ಅದೇ ಸಂದರ್ಭದಲ್ಲಿ ದೇಶದಲ್ಲಿ ತೀವ್ರ ಬರಗಾಲ ಉಂಟಾಗಿತ್ತು. ಆದರಿಂದಾಗಿ ಆಹಾರ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು. ವಿಶ್ವ ಮಾರುಕಟ್ಟೆಯಲ್ಲಿ ಪೆಟ್ರೋಲಿಯಮ್ ಉತ್ಪಾದನೆಗಳ ಬೆಲೆಗಳೂ ನಾಲ್ಕುಪಟ್ಟು ಹೆಚ್ಚಿದ್ದವು.

ದೇಶದ ಸಾಮಾನ್ಯ ಆರ್ಥಿಕ ಸ್ಥಿತಿ ಹದಗೆಟ್ಟಿರುವಾಗ ಗಾಯದ ಮೇಲೆ ಬರೆಯೆಳೆದಂತೆ ಬಾಂಗ್ಲಾ ನಿರಾಶ್ರಿತರ ಹೊರೆ ಬಿದ್ದಂತಾಯಿತು. ಅದರ ಮೇಲೆ ಪಾಕ್ ವಿರೋಧಿ ಯುದ್ಧದ ವೆಚ್ಚವೂ ಹೊರೆಯಾಯಿತು. ಈ ಎಲ್ಲ ಸಂಕಷ್ಟಗಳು ದೇಶದ ಯುವಜನರಲ್ಲಿ ಅತೃಪ್ತಿಯನ್ನು ಸ್ಫೋಟಗೊಳಿಸಿದವು. ಜಯಪ್ರಕಾಶ್ ನಾರಾಯಣ್ ಅವರು ಬಿಹಾರ್ ಮತ್ತು ಗುಜರಾತ್‌ಗಳಲ್ಲಿ ಯುವಜನತೆಯ ಮಿಲಿಟಂಟ್ ಚಳವಳಿಗಳನ್ನು ಸ್ಫೋಟಿಸಿದರು. ಅದು ಜೆ.ಪಿ. ಚಳವಳಿಯೆಂದು ಪ್ರಖ್ಯಾತವಾಯಿತು. ಜೆ.ಪಿ. ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದರು. ಭೂದಾನ ಯಜ್ಞದಂಥ ಗಾಂಧೀವಾದಿ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ರಾಜನೀತಿ’ (state politics) ಬೇಡ ; ‘ಲೋಕನೀತಿ’ (peoples politics) ಬೇಕು ಎನ್ನುವ ವಾದದಲ್ಲಿ ಮುಳುಗಿದ್ದರು.

ಸಮಾಜವಾದಿ ಮುಖಂಡ ಮಧುಲಿಮಯೆ ಅವರು ಜೆ.ಪಿ. ಅವರಿಗೆ ಪುನಃ ರಾಜಕೀಯ ಚಳವಳಿಗೆ ವಾಪಸ್ ಬರಬೇಕು ಎಂದು ಕರೆ ಕೊಟ್ಟರು. ‘ಇಂದಿರಾಗಾಂಧಿಯವರನ್ನು ಎದುರಿಸಿ ನಿಂತು ಹೋರಾಡುವ ತಾಕತ್ತು ನಮ್ಮಲ್ಲಿ ಯಾರಿಗೂ ಇಲ್ಲ. ದೇಶದ ಹಿತದೃಷ್ಟಿಯಿಂದ ನೀವು ಹೋರಾಟಕ್ಕಿಳಿಯಬೇಕು’ ಎಂದು ಮಧುಲಿಮಯೆ ಪತ್ರ ಬರೆದರು.

ಎಮರ್ಜೆನ್ಸಿಯಲ್ಲಿ ವಿವಿಧ ಪಕ್ಷ, ಸಂಘಗಳ ಹತ್ತಾರು ಸಾವಿರ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿಡಲಾಗಿತ್ತು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಪ್ರತಿಭಟನೆಯ ಸ್ವಾತಂತ್ರ್ಯಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು ಪ್ರಧಾನಿ ಇಂದಿರಾ.

ಜೆ.ಪಿ. ಅವರು ಇಂದಿರಾಗಾಂಧಿಯವರೊಂದಿಗೆ ಮಾತುಕತೆ ನಡೆಸಲು ಪ್ರಧಾನಿ ನಿವಾಸಕ್ಕೆ ಹೋದರು. ಪೂರ್ವಭಾವಿಯಾಗಿ ಸಂದರ್ಶನ ಅಪಾಯಿಂಟ್‌ಮೆಂಟ್ ಪಡೆದುಕೊಂಡಿದ್ದ ಜೆ.ಪಿ. ಒಂದು ತಾಸು ಜೆ.ಪಿ. ಅವರನ್ನು ಕಾಯಿಸಿದರು ಪ್ರಧಾನಿ ಇಂದಿರಾ. ತಡವಾಗಿ ಬಂದ ಇಂದಿರಾ ಜೆ.ಪಿ. ಅವರಿಗೆ “ನನಗೆ ತುರ್ತಿನ ಕೆಲಸಗಳಿವೆ. ಮಾತುಕತೆಗೆ ಸಮಯವಿಲ್ಲ. ನಿಮ್ಮ ಆರೋಗ್ಯದ ಬಗೆಗೆ ಕಾಳಜಿ ತೆಗೆದುಕೊಳ್ಳಿ ಎಂದು ಹೇಳುತ್ತಾ ಮರುಮಾತಿಗೆ ಅವಕಾಶವನ್ನೇ ಕೊಡದೆ ಹೊರಟುಬಿಟ್ಟರು.

ಇಡೀ ದೇಶದ ಭವಿಷ್ಯಕ್ಕಾಗಿ ಮಾತುಕತೆಗೆ ಬಂದಿದ್ದ ಜೆ.ಪಿ. ಅವರಿಗೆ ತೀವ್ರ ನಿರಾಶೆ ಮತ್ತು ರೋಷಗಳು ಉಕ್ಕಿದವು. ನಂತರದ ಪರಿಣಾಮವೇ ಜೆ.ಪಿ. ಚಳವಳಿಯಾಗಿತ್ತು. ಜೆ.ಪಿ. “ಇಂದಿರಾಗಾಂಧಿ ದೇಶದ ಸ್ವಾತಂತ್ರ್ಯವನ್ನು ಹರಣ ಮಾಡಿದ್ದಾರೆ. ಆ ಸ್ವಾತಂತ್ರ್ಯವನ್ನು ಪುನಃ ಗಳಿಸಿಕೊಳ್ಳಲು ವಿಶೇಷವಾಗಿ ಯುವಕರು ಸ್ಫೋಟಗೊಳ್ಳಬೇಕು” ಎಂದು ಕರೆ ನೀಡಿದರು. ಇಲ್ಲಿ ಕುತೂಹಲದ ವಿಷಯವೆಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅದೇ ಜೆ.ಪಿ. ಅವರು “ಏ ಆಝಾದಿ ಝೂಟಿ ಹೈ (ಇದು ಸುಳ್ಳು ಸ್ವಾತಂತ್ರ್ಯ)” ಎಂದು ಘೋಷಿಸಿದ್ದರು ಮತ್ತು ನೆಹರೂ ಮತ್ತವರ ಧೋರಣೆಗಳನ್ನು ಸಾರಾಸಗಟು ಪ್ರತಿಭಟಿಸಲಾರಂಭಿಸಿದರು!

ಜೆ.ಪಿ. ಅವರ ಎಮೆರ್ಜೆನ್ಸಿ ವಿರೋಧಿ ಚಳವಳಿಯು ರಾಜಕೀಯವಾಗಿ ಪರಿವರ್ತನೆಗೊಂಡಿತು. ಸ್ವಾತಂತ್ರ್ಯ ಸಿಕ್ಕಿದ್ದು ದೇಶಕ್ಕೆ ಅಲ್ಲ ; ಟಾಟಾ ಬಿರ್ಲಾಗಳಿಗೆ ಎಂದು ವಾದಿಸುತ್ತಿದ್ದ ಕಮ್ಯುನಿಸ್ಟರೂ ಸಹ ಎಮರ್ಜೆನ್ಸಿ ವಿರುದ್ಧದ ಹೋರಾಟಕ್ಕಿಳಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಒಂದೂವರೆ ದಶಕದ ನಂತರ ಕಮ್ಯುನಿಸ್ಟ್ ಪಕ್ಷವು ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಒಪ್ಪಿಕೊಂಡಿತ್ತು.

‘ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’ ಎಂದು ವಾದಿಸುವ ಗುಂಪುಗಳು ನಕ್ಸಲೈಟ್ ಸಿದ್ಧಾಂತದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದವು. ಸಿ.ಪಿ.ಎಂ., ಸಿ.ಪಿ.ಐ., ಸೋಸಿಯಲಿಸ್ಟ್ ಪಕ್ಷಗಳು, ಜನಸಂಘ ಹೀಗೆ ಎಲ್ಲ ಕಾಂಗ್ರೆಸ್ ವಿರೋಧಿ ಶಕ್ತಿಗಳು ಒಂದೇ ವೇದಿಕೆಗೆ ಬಂದವು. ಎಡಶಕ್ತಿಗಳು ಮತ್ತು ಬಲಪ್ರತಿಗಾಮಿ ಶಕ್ತಿಗಳು ದೇಶದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಒಗ್ಗೂಡಿದವು. ಎಡ ಮತ್ತು ಬಲ ಪ್ರತಿಗಾಮಿ ಶಕ್ತಿಗಳು ಪ್ರತ್ಯೇಕವಾಗಿರುವವರೆಗೆ ಕಾಂಗ್ರೆಸ್‌ಗೆ ಸೋಲು ಉಂಟಾಗಿರಲಿಲ್ಲ. ಪ್ರಥಮ ಬಾರಿಗೆ ಕಾಂಗ್ರೆಸ್ ಸೋಲು ಅನುಭವಿಸುವಂತಾಗಿತ್ತು ಎಡ-ಬಲಗಳ ಕೂಟದಿಂದಾಗಿ.

ಅದೇನೇ ಇರಲಿ ಇಮರ್ಜೆನ್ಸಿ ಬಂದುದರಿಂದ, ಸೋಸಿಯಲಿಸ್ಟರು ಮತ್ತು ಕಮ್ಯುನಿಸ್ಟರಲ್ಲಿ ದೇಶದ ಸ್ವಾತಂತ್ರ್ಯದ ಮಹತ್ವದ ಜ್ಞಾನೋದಯ ಉಂಟಾಗುವಂತಹದುದು ಬಹಳ ಮುಖ್ಯ ವಿಷಯವೆನಿಸುತ್ತದೆ.

ಜೆ.ಪಿ. ಮತ್ತು ಲೋಹಿಯಾ ಘರ್ಷಣೆ

ಭಾರತದ ಎರಡನೆಯ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯೂದಿದ ಜೆ.ಪಿ.ಅವರ ಬಗೆಗೆ ಕೆಲವು ವಿಷಯಗಳನ್ನು ಈ ಸಂದರ್ಭದಲ್ಲಿ ಹೇಳಬೇಕೆನಿಸುತ್ತದೆ. ಜೆ.ಪಿ. ಅವರದು ಬಿಹಾರ್ ರಾಜ್ಯದ ಛಪ್ರಾ ಜಿಲ್ಲೆಯ ಸೀತಾಬಡಿಯಾರ ಗ್ರಾಮ. ಇವರದು ಕಾಯಸ್ಥ ಜಾತಿ ಸಮುದಾಯಕ್ಕೆ ಸೇರಿದ ಕುಟುಂಬ. ಇವರ ತಂದೆ ಹರಸುದಯಾಲ್ ನೀರಾವರಿ ಇಲಾಖೆಯ ನೌಕರರಾಗಿದ್ದರು.

ಪಾಟ್ನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ೧೯೨೨ರಲ್ಲಿ ಅಮೆರಿಕಾಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೋದರು. ಆಧ್ಯಯನಕ್ಕಾಗಿ ಐರೋಪ್ಯ ದೇಶಗಳಿಗೂ ಹೋದರು. ವಿದೇಶದಲ್ಲಿ ಮಾರ್ಕ್ಸ್‌ವಾದಿ ಎಂ.ಎನ್.ರಾಯ್ ಅವರ ಸಂಪರ್ಕ ಜೆ.ಪಿ.ಯವರಿಗೆ ಉಂಟಾಯಿತು.

ಜೆ.ಪಿ. ವಿದೇಶಕ್ಕೆ ತೆರಳುವ ಮುನ್ನ ೧೯೨೦ರಲ್ಲಿ ಪ್ರಭಾವತಿ ದೇವಿಯವರೊಂದಿಗೆ ವಿವಾಹವಾದರು. ಕಸ್ತೂರ್‌ಬಾಗಾಂಧಿಯವರ ಅನುಯಾಯಿಯಾಗಿದ್ದರು ಪ್ರಭಾವತಿದೇವಿ. ಪ್ರಭಾವತಿ ದೇವಿಯವರ ತಂದೆ ಬ್ರಿಜ್ ಕಿಶೋರ್ ಪ್ರಸಾದ್. ಇವರೂ ಸಹ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತಮ್ಮ ಪತ್ನಿಯ ಗಾಂಧೀವಾದದ ಧೋರಣೆಗಳನ್ನು ಜೆ.ಪಿ. ಅವರು ವಿರೋಧಿಸುತ್ತಿದ್ದರು. ಹಾಗೆಂದು ಜೆ.ಪಿ. ತಮ್ಮ ವಾದವನ್ನು ಪತ್ನಿಯ ಮೇಲೆ ಹೇರಲಿಲ್ಲ. ಜೆ.ಪಿ. ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವಾಗ, ಅವರ ಪತ್ನಿ ಗಾಂಧೀಜಿಯವರ ಸಬರಮತಿ ಆಶ್ರಮವಾಸಿಗಳಾಗಿದ್ದರು.

ಜೆ.ಪಿ. ಅವರದು ಮೂಲತಃ ಭಾವುಕ ಸ್ವಭಾವ. ಅವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಒಂದು ಪಾರಿವಾಳವನ್ನು ಸಾಕಿದ್ದರು. ಆ ಪಾರಿವಾಳ ಅದಾವುದೋ ಕಾಯಿಲೆಯಿಂದ ಸತ್ತು ಹೋಯಿತು. ಅದಕ್ಕಾಗಿ ಜೆ.ಪಿ. ಎರಡು ದಿನ ಊಟ ಮಾಡಲಾರದೆ ದುಃಖದಲ್ಲಿ ಮುಳುಗಿದರು.

೧೯೫೨ರ ಚುನಾವಣೆಯ ನಂತರ ಜೆ.ಪಿ.ಯವರನ್ನು ನೆಹರೂ, ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸುತ್ತಾರೆ. ಆಗ ಜೆ.ಪಿ. ಹಲವಾರು ಷರತ್ತುಗಳನ್ನು ಒಡ್ಡುತ್ತಾರೆ. ನೆಹರೂ ಮತ್ತು ಜೆ.ಪಿ. ಅವರ ಮಧ್ಯೆ ಒಂದು ಸುತ್ತಿನ ಮಾತುಕತೆಗಳೂ ನಡೆಯುತ್ತವೆ.

೧೯೫೩-೫೪ರಲ್ಲಿ ಕಾನ್‌ಪುರದಲ್ಲಿ ಸೋಸಿಯಲಿಸ್ಟ್ ಪಕ್ಷದ ಸಮ್ಮೇಳನ ನಡೆಯುತ್ತದೆ. ಜೆ.ಪಿ. ಅವರು ವೇದಿಕೆಯ ಮೇಲೆ ಉಪಸ್ಥಿತರಿರುವಾಗ ಲೋಹಿಯಾ ಅವರು “ನಾವು ಜೆ.ಪಿ.ಅವರನ್ನು ಈ ದೇಶದ ಪ್ರಧಾನಿ ಮಾಡಬೇಕೆಂದುಕೊಂಡಿದ್ದೇವೆ. ಆದರೆ ಅವರು ಉಪಪ್ರಧಾನಿ ಪಟ್ಟದ ಆಸೆಗಾಗಿ ನೆಹರೂ ಅವರಿಗೆ ಶರಣು ಹೋಗುತ್ತಿದ್ದಾರೆ” ಎಂದು ಛೇಡಿಸಿದರು.

ಆಗ ಜೆ.ಪಿ. ಅವರು ಎದ್ದು ಬಂದು ಬೃಹತ್ ಸಭೆಯ ಮುಂದೆ ಗಳಗಳನೆ ಅಳುತ್ತಾ ರಾಜಕೀಯ ಸನ್ಯಾಸವನ್ನು ಘೋಷಿಸಿದರು. ಆ ನಂತರವೇ ಅವರು ವಿನೋಭಾ ಬಾವೆ ಅವರ ಭೂದಾನಯಜ್ಞ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಒಂದು ವೇಳೆ ಜೆ.ಪಿ. ಅವರು ಸನ್ಯಾಸವನ್ನು ಸ್ವೀಕರಿಸದಿದ್ದಿದ್ದರೆ ಭಾರತದ ರಾಜಕೀಯ ಭವಿಷ್ಯ ಭಿನ್ನವಾಗಿರುತ್ತಿತ್ತೇನೋ!

ಅಕ್ಟೋಬರ್ ೧೧, ೧೯೦೨ರಲ್ಲಿ ಜನಿಸಿದೆ ಜೆ.ಪಿ. ಅಕ್ಟೋಬರ್ ೮, ೧೯೭೯ರಂದು ಕೊನೆಯುಸಿರೆಳೆದರು. ಜೆ.ಪಿ. ಅವರು, ಕಾಂಗ್ರೆಸ್ ಸೇರಲು ನೆಹರೂ ಅವರ ಮುಂದೆ ಮಂಡಿಸಿದ್ದ ೧೪ ಅಂಶಗಳನ್ನು ಕಾಂಗ್ರೆಸ್ ತನ್ನ ಜನಪ್ರಿಯ ಯೋಜನೆಗಳಿಗಾಗಿ ಬಳಸಿಕೊಂಡಿತು. ಎಮರ್ಜೆನ್ಸಿಯಲ್ಲಿ ಇಂದಿರಾಗಾಂಧಿಯವರು ತಂದೆ ಇಪ್ಪತ್ತು ಅಂಶಗಳ ಕಾರ್ಯಕ್ರಮ ಜೆ.ಪಿ. ಅವರ ೧೪ ಅಂಶಗಳ ಕಾರ್ಯಕ್ರಮದ ಪ್ರಭಾವದಿಂದ ಮೂಡಿ ಬಂದಿದ್ದವು.

ರಾಜಕೀಯ ಪನರ್ವಸತಿಯ ಕೂಟವಾದ ಜನತಾ ಪಾರ್ಟಿ

ಎಮರ್ಜೆನ್ಸಿಯಲ್ಲಿ ಬಂಧಿತರಾಗಿದ್ದ ಮುಖಂಡರು ಬಿಡುಗಡೆಗೊಂಡು ಹೊರಬಂದರು. ಜನತೆಯ ಮುಂದೆ ಅವರೆಲ್ಲ ಹೀರೊಗಳಾಗಿದ್ದರು. ಚುನಾವಣೆಗಳನ್ನು ಪ್ರಧಾನಿ ಇಂದಿರಾ ಘೋಷಿಸಿದರು. ಕಾಂಗ್ರೆಸ್ (ಓ), ಜನಸಂಘ, ಭಾರತೀಯ ಲೋಕದಳ (ಬಿಎಲ್‌ಡಿ) ಮತ್ತು ಸೋಸಿಯಲಿಸ್ಟ್ ಪಾರ್ಟಿಗಳು ಸೇರಿ ಒಂದಾಗಿ ಹೊಸ ಜನತಾ ಪಾರ್ಟಿಯನ್ನು ಘೋಷಿಸಿದವು. ಕಾಂಗ್ರೆಸ್‌ ನಿಂದ ಹೊರಬಂದ ಜಗಜೀವನ್‌ರಾಮ್, ಹೆಚ್.ಎನ್. ಬಹುಗುಣ, ನಂದಿನಿ ಸತ್‌ಪತಿ ಮುಂತಾದವರು ಸೇರಿ ಕಾಂಗ್ರೆಸ್ ಫಾರ್ ಡೆಮಾಕ್ರಸಿ (ಸಿ.ಎಫ್.ಡಿ.) ರಚಿಸಿಕೊಮಡರು. ಸಿ.ಪಿ.ಐ. (ಎಂ), ಡಿ.ಎಂ.ಕೆ. ಮತ್ತು ಅಕಾಲಿದಳ ಪಕ್ಷಗಳು ಜನತಾ ಪಕ್ಷದೊಂದಿಗೆ ಕೂಡಿಕೊಂಡು ಕಾಂಗ್ರೆಸ್ ವಿರೋಧಿ ರಂಗವನ್ನು ರಚಿಸಿಕೊಂಡವು. ಜನತಾ ಪಕ್ಷದ ನೇತೃತ್ವದ ಕೂಟ ಒಟ್ಟು ೫೪೨ ಸ್ಥಾನಗಳಲ್ಲಿ ೩೩೦ ಸ್ಥಾನಗಳನ್ನು ಗೆದ್ದುಕೊಂಡಿತು.

ಕಾಂಗ್ರೆಸ್ ೧೫೪ ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಚುನಾವಣೆಯಲ್ಲಿ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಈರ್ವರೂ ಸೋತರು. ಆ ಚುನಾವಣೆಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಷ್ಟೊಂದು ಪೆಟ್ಟು ಬೀಳಲಿಲ್ಲ. ಕರ್ನಾಟಕದಲ್ಲಿ ದೇವರಾಜ ಅರಸರ ನೇತೃತ್ವದ ಕಾಂಗ್ರೆಸ್ ತನ್ನ ಪ್ರಭಾವವನ್ನು ಉಳಿಸಿಕೊಂಡಿತು.

ಮೊರಾರ್ಜಿ ದೇಸಾಯಿ, ಚರಣ್‌ಸಿಂಗ್ ಮತ್ತು ಜಗಜೀವನ್‌ರಾಮ್ ಈ ಮೂವರಲ್ಲಿ ಯಾರು ಪ್ರಧಾನಿ ಆಗುವುದು ಎನ್ನುವ ವಿಷಯ ಜೆ.ಪಿ. ಮತ್ತು ಕೃಪಲಾನಿಯವರ ಮುಂದೆ ಬಂದಿತು. ಆಗ ಮೊರಾರ್ಜಿ ದೇಸಾಯಿ ಅವರ ಹೆಸರು ಸೂಚಿಸಲ್ಪಟ್ಟಿತು. ಮೊರಾರ್ಜಿ ದೇಸಾಯಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೊಡನೆ, ಇಡೀ ದೇಶ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ತೀರ್ಪು ನೀಡಿದೆ. ಅದಕ್ಕಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯ ಸರಕಾರಗಳನ್ನೆಲ್ಲ ಕೆಳಗಿಳಿಸಿ ಹೊಸತಾಗಿ ಚುನಾವಣೆ ನಡೆಸಬೇಕು ಎಂದಿತು ಮೂರಾರ್ಜಿ ಸರಕಾರ.

ಕಾಂಗ್ರೆಸ್ ಮತ್ತು ಅದವರ ಮಿತ್ರ ಪಕ್ಷಗಳು ನಡೆಸುತ್ತಿದ್ದ ಒಂಬತ್ತು ರಾಜ್ಯ ಸರಕಾರಗಳನ್ನು ರದ್ದುಗೊಳಿಸಿ ಅಲ್ಲೆಲ್ಲ ಚುನಾವಣೆ ಘೋಷಿಸಲಾಯಿತು. ಉತ್ತರ ಭಾರತದ ರಾಜ್ಯಗಳಲ್ಲಿ ಜನತಾ ಪಾರ್ಟಿ ಗೆದ್ದು ಬಂದಿತು. ವಿಶೇಷವಾಗಿ ಉತ್ತರ ಭಾರತದಲ್ಲಿ ಶ್ರೀಮಂತ ಹಾಗೂ ಮಧ್ಯಮ ರೈತರು ಮತ್ತು ಮಧ್ಯಮ ಜಾತಿಗಳು ಜನತಾ ಪಾರ್ಟಿಗೆ ಗ್ರಾಮೀಣ ನೆಲೆಗಟ್ಟನ್ನು ಒದಗಿಸಿದವು. ಇದರಿಂದಾಗಿ ಅಸ್ಪೃಶ್ಯರ ಮೇಲೆ ದಬ್ಬಾಳಿಕೆಗಳು ಹೆಚ್ಚಾಗತೊಡಗಿದವು. ಗ್ರಾಮೀಣ ಪ್ರದೇಶದ ಹಿಂದುಳಿದವರು, ನಗರದ ಅಲ್ಪ ಸಂಖ್ಯಾತರು, ದಲಿತ ಹಾಗೂ ಬುಡಕಟ್ಟು ಸಮುದಾಯಗಳು ಕಾಂಗ್ರೆಸ್‌ನಲ್ಲಿ ತಮ್ಮ ಕ್ಷೇಮವನ್ನು ಕಂಡುಕೊಳ್ಳತೊಡಗಿದವು.

ಜನತಾ ಅಧಿಕಾರಾವಧಿಯಲ್ಲಿ ಗ್ರಾಮೀಣ ಭಾಗ ಅಕ್ಷರಶಃ ರಣಾಂಗಣವಾಗಿ ಪರಿಣಮಿಸಿತು. ಎಮರ್ಜೆನ್ಸಿಯಲ್ಲಿ ಸಾಲ ನೀಡುವ ಸಾಹುಕಾರರ ಸಾಲಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಜನತಾ ಸರಕಾರ, ಇಂದಿರಾಗಾಂಧಿಯ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ ಎಂದು ಗ್ರಾಮೀಣ ಲೇವಾದೇವಿಗಾರರು ಘೋಷಿಸಿದರು. ತಮ್ಮಿಂದ ಮುಟ್ಟುಗೋಲು ಹಾಕಿಕೊಳ್ಳಲ್ಪಟ್ಟಿದ್ದ ಸಾಲಗಳನ್ನು ಪುನಃ ವಸೂಲು ಮಾಡಲಾರಂಭಿಸಿದರು ಸಾಹುಕಾರರು. ಸಾಹುಕಾರರು ಒತ್ತೆ ಹಾಕಿಕೊಂಡಿದ್ದ ಜಮೀನುಗಳನ್ನು ಎಮರ್ಜೆನ್ಸಿಯಲ್ಲಿ ದಲಿತರಿಗೆ ಬಿಡಿಸಿಕೊಡಲಾಗಿತ್ತು. ಈಗ ಅವನ್ನೆಲ್ಲ ಸಾಹುಕಾರರು ಮರುಆಕ್ರಮಣ ಮಾಡಿ ವಶಪಡಿಸಿಕೊಳ್ಳಲಾರಂಭಿಸಿದರು. ಬಿಹಾರದ ಬೆಲ್ಚಿಯಲ್ಲಿ ಜುಲೈ ೧೯೭೭ರಲ್ಲಿ ದಲಿತರ ಸಾಮೂಹಿಕ ಕಗ್ಗೊಲೆಗಳು ನಡೆದಿದ್ದು ಇಂಥ ಕಾರಣಗಳಿಗಾಗಿ.

ಎಮರ್ಜೆನ್ಸಿ ವಿರುದ್ಧದ ಹೋರಾಟದಲ್ಲಿ ಅದರಲ್ಲಿಯೂ ೧೯೭೭ರ ಚುನಾವಣಾ ಪ್ರಚಾರದಲ್ಲಿ ಜನತಾ ಪಕ್ಷ ಭೂ ಸುಧಾರಣೆ ಮತ್ತು ಕೃಷಿ ಕಾರ್ಮಿಕರ ಕೂಲಿ ಹೆಚ್ಚಳಕ್ಕಾಗಿ ವಿಶೇಷ ಒತ್ತು ಕೊಟ್ಟಿತ್ತು. ಅಧಿಕಾರ ಕೈಗೆ ಬಂದಾಗ ಆ ಎರಡೂ ಅಂಶಗಳನ್ನು ಕಸದ ಬುಟ್ಟಿಗೆ ಎಸೆಯಿತು ಮೊರಾರ್ಜಿಯವರ ಸರಕಾರ.

ಜನತಾ ಸರಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ವಿದೇಶಾಂಗ ಮಂತ್ರಿಯಾಗಿದ್ದರು. ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ಕೂಟದ ಪರವಾಗಿ ಭಾರತದ ವಿದೇಶಾಂಗ ನೀತಿಯನ್ನು ಪರಿವರ್ತಿಸಿದರು ವಾಜಪೇಯಿ. ಜನತಾ ಸರಕಾರದ ಅವಧಿ ಅಲ್ಪಕಾಲದ್ದಾಗಿದ್ದರೂ ವಿದೇಶಾಂಗ ನೀತಿಯ ಮೇಲೆ ಬಹು ದೀರ್ಘ್‌ಕಾಲ ದುಷ್ಪರಿಣಾಮ ಬೀರುವಂಥ ಧೋರಣೆಗಳನ್ನು ತೆಗೆದುಕೊಂಡಿತು.

ಹೊರನೋಟಕ್ಕೆ ಜನತಾ ಪಾರ್ಟಿ ಒಂದೇ ಪಕ್ಷದಂತೆ ಕಾಣುತ್ತಿತ್ತು. ಆದರೆ ಒಳಗೆ ವಿವಿಧ ಪಕ್ಷ, ವಿವಿಧ ವ್ಯಕ್ತಿ, ವಿವಿಧ ಕೂಟ, ಬಣಗಳ ಕಲಸುಮೇಲೋಗರವಾಗಿತು. ಯಾರಿಗೂ ಯಾರ ಮೇಲೂ ಹಿಡಿತವಿರಲಿಲ್ಲ. ಜನಸಂಘ ತೊಂಬತ್ತು ಎಂ.ಪಿ.ಗಳನ್ನು ಹೊಂದಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್.), ಸೇನಾ ನೇಮಕಾತಿ, ಪೊಲೀಸ್ ನೇಮಕಾತಿಗಳಲ್ಲಿ ಪ್ರಭಾವ ಬೀರಲಾರಂಭಿಸಿತು.

ಜನತಾಪಕ್ಷಕ್ಕೆ ಸೆಕ್ಯುಲರ್ ಇಮೇಜ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಗ್ರಾಮೀಣ ದಲಿತರು, ನಗರದ ಅಲ್ಪಸಂಖ್ಯಾತರು, ಇತರೆ ಹಿಂದುಳಿದವರು ಜನತಾಪಕ್ಷದಲ್ಲಿ ವಿಶ್ವಾಸ ಇಡಲು ಸಾಧ್ಯವಾಗಲಿಲ್ಲ. ಜಯಪ್ರಕಾಶ್ ನಾರಾಯಣ್‌ರಂಥ ‘ಸಂಪೂರ್ಣ ಕ್ರಾಂತಿ’ ವಾದಿಗಳ ಹಸ್ತಸ್ಪರ್ಶವೂ ಜನತಾ ಪಕ್ಷಕ್ಕೆ ‘ಪರುಷಮಣಿ’ ಯಾಗಿ ಪರಿಣಮಿಸಲಿಲ್ಲ ! ವಾಜಪೇಯಿ ಮತ್ತಿತರ ಜನಸಂಘದವರು ಜನತಾಪಾರ್ಟಿ ಮತ್ತು ಆರ್.ಎಸ್.ಎಸ್. ಎರಡೂ ಕಡೆ ಎರಡೆರಡು ಸದಸ್ಯತ್ವ ಹೊಂದಿದ್ದು ವಿವಾದವಾಯಿತಗು. ಆಗ ಜನಸಂಘ ಜನತಾಪಾರ್ಟಿಯಿಂದ ಹೊರಬಂದಿತು. ಮೊರಾರ್ಜಿ ದೇಸಾಯಿ ಬಹುಮತ ಸಾಬೀತುಗೊಳಿಸುವ ಸಾಧ್ಯತೆಯಿಲ್ಲದಂತಾಗಿ ೧೯೭೯ರ ಜುಲೈ ೧೫ರಂದು ರಾಜೀನಾಮೆ ನೀಡಿದರು.

ವಾದರ ನಂತರ ಚರನ್‌ಸಿಂಗ್ ಅವರು ಕಾಂಗ್ರೆಸ್ ಹೊರಬೆಂಬಲದಿಂದ ಸರಕಾರ ರಚಿಸಲು ಮುಂದಾದರು. ಆಗ ಇಂದಿರಾಗಾಂಧಿ ಅವರು ಎಮರ್ಜೆನ್ಸಿ ಅವಧಿಯ ಅಪರಾಧಗಳೆಂದು ತಮ್ಮ ಮೇಲೆ ಹೂಡಲಾಗಿದ್ದ ಎಲ್ಲ ಕೇಸ್‌ಗಳನ್ನು ಕೈಬಿಡಬೇಕು ಮತ್ತು ಅದಕ್ಕಾಗಿ ರೂಪಿಸಲ್ಪಟ್ಟ ವಿಶೇಷ ಕೋರ್ಟ್‌ಗಳನ್ನು ರದ್ದುಪಡಿಸಬೇಕು ಎನ್ನುವ ಬೇಡಿಕೆ ಇಟ್ಟರು. ಅದಕ್ಕೆ ಚರಣ್‌ಸಿಂಗ್ ಒಪ್ಪಲಿಲ್ಲ. ಇಂದಿರಾ ಬೆಂಬಲ ನೀಡಲು ಒಪ್ಪಲಿಲ್ಲ. ಆಗ ರಾಷ್ಟ್ರಪತಿ ಮಧ್ಯಂತರ ಚುನಾವಣೆಗಳನ್ನು ಘೋಷಿಸಿದರು. ಜನವರಿ ೧೯೮೦ರ ಸಾರ್ವತ್ರಿಕ ಚುನಾವಣೆಗಳಲ್ಲಿ ೫೨೯ ಲೋಕಾಸಭಾ ಸ್ಥಾನಗಳಲ್ಲಿ ಇಂದಿರಾ ನೇತೃತ್ವದ ಕಾಂಗ್ರೆಸ್ ೩೫೩ ಸ್ಥಾನಗಳನ್ನು ಗೆದ್ದು ಜಯಭೇರಿ ಬಾರಿಸಿತು.

ಎಮರ್ಜೆನ್ಸಿ ನಂತರದ ರಾಜಕೀಯ ಧ್ರುವೀಕರಣ : ಪ್ರಾದೇಶಿಕ ಪಕ್ಷಗಳ ಸಂಚಲನ

ಬ್ರಿಟಿಶರು ಇಡೀ ಭಾರತವನ್ನು ತಮ್ಮ ವಸಾಹತು ಮಾಡಿಕೊಂಡ ಮೇಲೆಯೇ ಒಂದು ಕೇಂದ್ರಿಕೃತ ರಾಷ್ಟ್ರವಾಗಿ ಭಾರತ ಹೊಮ್ಮಲು ಸಾಧ್ಯವಾಯಿತು ಎನ್ನುವ ತಿಳುವಳಿಕೆ ಬಹಳ ಮಿತಿಗಳಿಂದ ಕೂಡಿರುವಂಥದ್ದು ಎನಿಸುತ್ತದೆ.

ಇತಿಹಾಸದಲ್ಲಿ ಇಡೀ ಭಾರತ ಏಕಾಧಿಪತ್ಯಕ್ಕೆ ಈಡಾಗಿರದೇ ಇರಬಹುದು. ಭಾರತದ ಆರ್ಧಭಾಗ ಒಬ್ಬ ಚಕ್ರವರ್ತಿಯ ಅಧಿಪತ್ಯಕ್ಕೆ ಒಳಗಾಗಿದ್ದಾಗ ಇನ್ನರ್ಧ ಇನ್ನೋರ್ವ ಚಕ್ರವರ್ತಿಯ ಅಧಿಪತ್ಯಕ್ಕೆ ಒಳಗಾಗಿದ್ದ ಉದಾಹರಣೆಯನ್ನು ಇತಿಹಾಸದಲ್ಲಿ ಕಾಣುತ್ತೇವೆ. ಉತ್ತರ ಭಾರತಕ್ಕೆ ಸಾಮ್ರಾಟ್ ಹರ್ಷವರ್ಧನ ಚಕ್ರವರ್ತಿಯಾಗಿರುವಾಗ ದಕ್ಷಿಣ ಭಾರತಕ್ಕೆ ಪುಲಿಕೇಶಿ ಚಕ್ರವರ್ತಿಯಾಗಿದ್ದ. ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸುವ ಪ್ರಯತ್ನಗಳು ನಡೆದಾಗಲೆಲ್ಲ ಪ್ರಾದೇಶಿಕ ರಾಜ್ಯ, ಸಂಸ್ಥಾನಗಳಿಂದ ಪ್ರತಿರೋಧಗಳು ಸ್ಫೋಟಗೊಂಡ ಉದಾಹರಣೆಗಳನ್ನು ಇತಿಹಾಸದಲ್ಲಿ ನೋಡಬಹುದು.

ಇತಿಹಾಸದಲ್ಲಿ ಎರಡು ರೀತಿಯ ಪ್ರಕ್ರಿಯೆಗಳು ಪರಸ್ಪರ ವಿರುದ್ಧವಾಗಿ ಸತತ ನಡೆಯುತ್ತಿದ್ದವು. ಒಂದು ಕಾಲ ಘಟ್ಟದಲ್ಲಿ ಕೇಂದ್ರೀಕರಣ ಆರಂಭಗೊಂಡರೆ ಇನ್ನೊಂದು ಕಾಲಘಟ್ಟದಲ್ಲಿ ವಿಕೇಂದ್ರೀಕರಣ ಆರಂಭಗೊಳ್ಳುತ್ತಿತ್ತು. ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಮಧ್ಯೆ ಸದಾ ವೈರುಧ್ಯವಿರುತ್ತಿತ್ತು.

ಏಕಾಧಿಪತ್ಯದ ಸಾಮ್ರಾಜ್ಯಶಾಹಿ ವಿರುದ್ದದ ಚಳವಳಿಗಳು ಅನೇಕಬಾರಿ ಆಧ್ಯಾತ್ಮಿಕ ಸ್ವರೂಪದಲ್ಲಿ ಹೊಮ್ಮಿದ ಉದಾಹರಣೆಗಳು ಹೇರಳವಾಗಿವೆ. ಸಿಖ್‌ಧಾರ್ಮಿಕ ಪಂಥದ ಚಳವಳಿ ಮತ್ತು ಇತರೆ ಭಕ್ತಿ ಚಳವಳಿಗಳನ್ನು ಈ ಸಂದರ್ಭದಲ್ಲಿ ಉದಾಹರಿಸಬಹುದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಪ್ರಧಾನಿ ನೆಹರೂ ಕೇಂದ್ರೀಕೃತ ‘ಆಧುನಿಕ ಸಾಮ್ರಾಜ್ಯ’ವನ್ನು ಸ್ಥಾಪಿಸಲು ಪ್ರಯತ್ನಿಸಿದರು. ಅದಕ್ಕೆ ತೀವ್ರ ಪ್ರತಿರೋಧಗಳು ಅನೇಕ ಪ್ರಾಂತಗಳಿಂದ ಸ್ಫೋಟಗೊಂಡವು. ಈ ಪ್ರತಿಭಟನೆಗಳು ಅತ್ಯಂತ ತೀವ್ರ ಸ್ವರೂಪದಲ್ಲಿ ಸ್ಫೋಟಗೊಂಡವು.

ಪಂಜಾಬಿನ ಅಕಾಲಿಗಳು, ದ್ರಾವಿಡ ಚಳವಳಿಗಾರರು ಪ್ರತ್ಯೇಕ ರಾಷ್ಟ್ರದ ಘೋಷಣೆ ಕೊಟ್ಟದನ್ನು ಇಲ್ಲಿ ಗಮನಿಸಬೇಕು. ಅದೇ ರೀತಿ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲೂ ಪ್ರತ್ಯೇಕತಾ ಬೇಡಿಕೆ ಭುಗಿಲೆದ್ದದ್ದನ್ನು ಕಾಣಬಹುದು.

[1]

ಕೇಂದ್ರೀಕರಣದ ವಿರುದ್ಧ ಸಮರ, ಸವಾಲುಗಳು ದುರಾದಂತೆಯೇ ಪ್ರತ್ಯೇಕತೆಯ ವಿರುದ್ಧವೂ ದಂಡಪ್ರಯೋಗಗಳಾಗಿರುವುದನ್ನು ಕಾಣಬಹುದು. ಈ ಎರಡು ಪ್ರಕ್ರಿಯೆಗಳ ಮಧ್ಯೆ ಹಗ್ಗದೆಳದಾಟ ನಡೆಯುತ್ತ ಬಂದಿರುವುದನ್ನು ಈ ಮೇಲಿನ ಉದಾಹರಣೆ, ವಿಶ್ಲೇಷಣೆಗಳಿಂದ ಕಂಡುಕೊಳ್ಳಬಹುದಾಗಿದೆ. ಇತಿಹಾಸ ಕಾಲದಿಂದಲೂ ಕೇಂದ್ರೀಕರಣದ ವಿರುದ್ಧ ಹೋರಾಟಗಳು ನಡೆದುಕೊಂಡು ಬಂದಿವೆ. ಆ ಹೋರಾಟದ ಬೇರುಗಳು ಕಾಲಕಾಲಕ್ಕೆ ಭಿನ್ನ ಸ್ವರೂಪದ ಹೋರಾಟಗಳನ್ನು ಹೊಮ್ಮಿಸುತ್ತಿವೆ.

ಬ್ರಿಟಿಶ್ ವಸಾಹತು ಕೇಂದ್ರೀಕರಣದ ವಿರುದ್ಧ, ನೆಹರೂ ಕೇಂದ್ರೀಕರಣದ ವಿರುದ್ಧ, ಅದೇ ರೀತಿ ಇಂದಿರಾ ಸರ್ವಾಧಿಕಾರದ ವಿರುದ್ಧ ಪ್ರಾದೇಶಿಕ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಏಕಾಧಿಪತ್ಯವು ಸದಾ ಶಕ್ತಿಯುತವಾಗಿರುವುದಿಲ್ಲ. ಪ್ರಾದೇಶಿಕ ಶಕ್ತಿಗಳು ಅದರ ಆಶಕ್ತ ಅಂಶಗಳನ್ನು ಬಳಸಿಕೊಂಡು ಅಧಿಕಾರದ ಚೌಕಾಶಿ ನಡೆಸುತ್ತಾ ಬಂದಿರುವುದನ್ನು ಕಾಣಬಹುದು. ಇತ್ತೀಚೆಗೆ ಮೂರು ದಶಕಗಳಿಮದ ಈ ಪ್ರಕ್ರಿಯೆ ತೀವ್ರಗೊಂಡಿದೆ.

ದೇಶದ ರಾಜಧಾನಿ ದಿಲ್ಲಿಗೆ ಮೈತ್ರಿಕೂಟದ ಸರಕಾರದ ಅನುಭವವೇ ಇರಲಿಲ್ಲ. ಪ್ರಪ್ರಥಮ ಬಾರಿಗೆ ಎಮರ್ಜೆನ್ಸಿಯ ನಂತರ ಮೈತಿಕೂಟ ಸರಕಾರ ಅಸ್ತಿತ್ವಕ್ಕೆ ಬಂದಿತು. ಇಂದಿನ ಯು.ಪಿ.ಎ. ಮತ್ತು ಎನ್.ಡಿ.ಎ. ಎರಡೂ ಫ್ರಂಟ್‌ಗಳ ಮೂಲ ಬೀಜಗಳು ೧೯೭೭ರಲ್ಲಿ ಹುಟ್ಟಿದ ಜನತಾಪಾರ್ಟಿಯಲ್ಲಿ ಸಿಗುತ್ತವೆ.

ನೆಹರೂ ಆರ್ಥಿಕವಾದವು ಗ್ರಾಮೀಣ ಕೃಷಿಯಲ್ಲಿ ಬಂಡವಾಳಶಾಹೀಕರಣವನ್ನು ಉಂಟು ಮಾಡಿತು. ಅದೇ ರೀತಿ ಪ್ರಾದೇಶಿಕವಾಗಿ ಬಂಡವಾಳಶಾಹಿಗಳು ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಆದರೆ ಭಿನ್ನ ರಾಜ್ಯಗಳಲ್ಲಿ ಭಿನ್ನ ವಿಭಿನ್ನ ಪರಿಸ್ಥಿತಿಗಳು ಇದ್ದವು. ಜಾತಿ, ಭಾಷೆ, ಸಂಸ್ಕೃತಿ, ಭೌಗೋಳಿಕ ಸನ್ನಿವೇಶಗಳು ಎಲ್ಲ ಭಿನ್ನವಾಗಿದ್ದವು. ಆ ಎಲ್ಲ ವಿಭಿನ್ನತೆಗಳಿಗೆ, ಬೇಡಿಕೆಗಳಿಗೆ ಸ್ಪಂದಿಸಬಲ್ಲ ಏಕೈಕ ಪಕ್ಷ ಹುಟ್ಟುವುದು ಸಾಧ್ಯವಿರಲಿಲ್ಲ. ಹಾಗಾಗಿ ಪ್ರಾದೇಶಿಕ ಮಟ್ಟದಲ್ಲಿ ಅನೇಕ ಬಂಡವಾಳಶಾಹಿ ಭೂಮಾಲೀಕ ಪಕ್ಷಗಳು ಗಟ್ಟಿಗೊಳ್ಳತೊಡಗಿದವು. ಕೆಲವೆಡೆ ಹೊಸತಾಗಿ ಹುಟ್ಟಲಾರಂಭಿಸಿದವು. ಮುಂಚಿನಿಂದ ಇದ್ದುಕೊಂಡು ಬಂದಿದ್ದ ಅನೇಕ ಪ್ರಾದೇಶಿಕ ಪಕ್ಷಗಳು ಕಾಲಕ್ಕೆ ತಕ್ಕಂತೆ ತಮ್ಮನ್ನು ಪರಿಷ್ಕರಿಸಿಕೊಂಡವು ; ಹೊಸ ಪೋಷಾಕುಗಳೊಂದಿಗೆ ಪಗಡೆಯಾಟಕ್ಕೆ ಕೂತುಕೊಂಡವು.

ಮಾಯಾವತಿ ಬಿ.ಎಸ್.ಪಿ. : ದಲಿತ-ಶೂದ್ರರ ಕುರುಕ್ಷೇತ್ರ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡ ಮೇಲೆ ಮುಲಾಯಮ್‌ಸಿಂಗ್ ಅವರ ನೇತೃತ್ವದ ಸಮಾಜವಾದಿ ಪಕ್ಷ ಮುನ್ನೆಲೆಗೆ ಬಂದಿತು. ಸಮಾಜವಾದಿ ಪಕ್ಷ ಠಾಕೂರ್‌ಗಳ ಪಕ್ಷ ಎನ್ನುವ ಭಾವನೆ ದಲಿತ ಸಮುದಾಯದಲ್ಲಿ ಸೃಷ್ಟಿಯಾಗತೊಡಗಿತು. ಭೂಸುಧಾರಣೆ ಮತ್ತು ಕೃಷಿಕಾರ್ಮಿಕರ ಕೂಲಿ ಹೆಚ್ಚಳದಂಥ ಮಜೂಲಭೂತ ಬೇಡಿಕೆಗಳ ಕಡೆಗೆ ಮುಲಾಯಮ್ ಗಮನ ಹರಿಸಲಿಲ್ಲ.

ಎಂಬತ್ತದ ದಶಕದಲ್ಲಿ ಕಾನ್ಯೀರಾಮ್ ಅವರು ಬಹುಜನ ಸಮಾಜಪಾರ್ಟಿಯನ್ನು ಹುಟ್ಟುಹಾಕಿದರು. ಮಾಯಾವತಿಯವರು ಜನಪ್ರಿಯ ನಾಯಕಿಯಾಗಿ ಬೆಳೆದರು. ಆರಂಭದಲ್ಲಿ ಬಿ.ಎಸ್.ಪಿ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಐಕ್ಯತೆಯ ಘೋಷಣೆ ನೀಡಿತು. ಬ್ರಾಹ್ಮಣ ವಿರೋಧಿ ಮಾತುಗಳನ್ನೂ ಆಡಿತು. ನಂತರದಲ್ಲಿ ರಾಜಕೀಯದ ಬೆಳವಣಿಗೆಗೆ ಅನುಗುಣವಾಗುವಂತೆ ಅವಕಾಶವಾದಿ ರಾಜಕೀಯ ಧೋರಣೆಗಳನ್ನು ಅನುಸರಿಸತೊಡಗಿತು.

ಅಧಿಕಾರಕ್ಕೆ ಬರುವುದೊಂದನ್ನೇ ಗುರಿಯಾಗಿಸಿಕೊಂಡಿತು. ಗ್ರಾಮೀಣ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುವವರು ಠಾಕೂರ್‌ಗಳಾಗಿದ್ದರು. ಬ್ರಾಹ್ಮಣರು ಆ ವ್ಯವಸ್ಥೆಯ ಧಾರ್ಮಿಕ ಪೋಷಕರಾಗಿದ್ದರು. ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಬ್ರಾಹ್ಮಣರೊಂದಿಗೆ ಮಾಯಾವತಿ ಮೈತ್ರಿ ಮಾಡಿಕೊಂಡರು. ಕಾಂಗ್ರೆಸ್ ಪಕ್ಷ ದಲಿತರಿಗಾಗಿ ಎಸ್‌ಸಿ-ಎಸ್‌ಟಿ ಸೆಲ್ ಅನ್ನು ರಚಿಸಿದೆ. ಅದೇ ಥರದಲ್ಲಿ ಬಿ.ಎಸ್.ಪಿ.ಯಲ್ಲಿ ‘ಬ್ರಾಹ್ಮಣ ಸೆಲ್’ ಅನ್ನು ರಚಿಸಲಾಯಿತು. ಈಗ ಉತ್ತರ ಪ್ರದೇಶದಲ್ಲಿ ರಾಜಕೀಯವು ದಲಿತ ಮತ್ತು ಠಾಕೂರ್‌ಗಳ ಧ್ರುವೀಕರಣದ ಮೇಲೆ ನಿಂತುಕೊಂಡಿದೆ. ಬಿ.ಎಸ್.ಪಿ. ತನ್ನ ಪ್ರಭಾವವನ್ನು ಮಧ್ಯಪ್ರದೇಶ ಮತ್ತು ಪಂಜಾಬ್‌ಗಳಿಗೂ ವಿಸ್ತರಿಸಿಕೊಳ್ಳತೊಡಗಿದೆ.

ಇಡೀ ದೇಶದಲ್ಲಿಯೇ ಅತಿ ಹೆಚ್ಚು ಪರಿಶಿಷ್ಟ ಜಾತಿಯವರು ಉತ್ತರ ಪ್ರದೇಶದಲ್ಲಿದ್ದಾರೆ. ಹಾಗಾಗಿ ಅಲ್ಲಿ ದಲಿತರ ಪಕ್ಷ ರಾಜಕೀಯವಾಗಿ ಪ್ರಬಲವಾಗಲು ಸಾಧ್ಯವಾಗಿದೆ ಎನ್ನುವ ವಿಶ್ಲೇಷಣೆಗಳಿವೆ. ಅಲ್ಲಿ ದಲಿತರು ಶೇ. ೨೬ರಷ್ಟು ಇದ್ದಾರೆನ್ನುವ ಅಂದಾಜು ಇದೆ. ಉಳಿದ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ದಲಿತರು ಇಲ್ಲ.

ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ರಾಷ್ಟ್ರೀಯ ಜನತಾದಳದ ಮುಖಂಡರು. ಬಹುಸಂಖ್ಯಾತವಾಗಿರುವ ಯಾದವ ಸಮುದಾಯ ಮತ್ತು ಮುಸ್ಲಿಮ್ ಸಮುದಾಯಗಳನ್ನು ತಳಹದಿ ಮಾಡಿಕೊಂಡು ಲಾಲೂ ಪ್ರಸಾದ್ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲಿಯೂ ದಲಿತ ಮತ್ತು ಶೂದ್ರ ಜಾತಿಗಳ ಮಧ್ಯೆ ಘರ್ಷಣೆಗಳಿವೆ. ಹಾಗಾಗಿ ರಾಮ್ ವಿಲಾಸ್ ಪಾಸ್ವಾನ್ ದಲಿತ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಮಾಯಾವತಿ ಥರ ಕ್ಲಿಕ್ ಆಗಲು ಅವರಿಗೆ ಸಾಧ್ಯವಾಗಲಿಲ್ಲ.

ಮಾಯಾವತಿ ಏಕಕಾಲದಲ್ಲಿಯೇ ಗಾಂಧೀವಾದ, ಮಾರ್ಕ್ಸ್‌ವಾದ, ಲೋಹಿಯಾವಾದಗಳ ಮೇಲೆ ದಾಳಿ ಆರಂಭಿಸಿದರು. ಆ ಎಲ್ಲ ವಾದಗಳನ್ನು ಹೇಳಿಕೊಂಡು ಬಂದ ಮುಖಂಡರು ದಲಿತರಿಗೆ ದ್ರೋಹ ಮಾಡಿದ್ದಾರೆ ಎಂದು ಸತತ ಪ್ರಚಾರ ಮಾಡುವ ಮೂಲಕ ಮುಲಾಯಂ, ಲಾಲೂ, ಪಾಸ್ವಾನ್ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ರ ಮೇಲೆ ರಾಜಕೀಯ ಸೈದ್ಧಾಂತಿಕ ದಾಳಿ ನಡೆಸಿದರು ; ಯಶಸ್ವಿಯೂ ಆದರು.

ತಮಿಳುನಾಡಿನಲ್ಲಿ ಎಂ.ಜಿ.ಆರ್. ಅವರು ಸಬಾಲ್ಟರನ ವರ್ಗಗಳ ನಾಯಕರಾಗಿ ಬಿಂಬಿತಗೊಂಡರು. ಆದರೆ ಆ ವರ್ಗಗಳ ಅಭಿವೃದ್ಧಿಗಾಗಿ ಅವರು ಶ್ರಮಿಸಲಿಲ್ಲ. ಮಾಯಾವತಿಯವರೂ ಸಹ ದಲಿತ ನಾಯಕಿಯಾಗಿ ಬಿಂಬಿತಗೊಂಡಿದ್ದಾರೆ. ಆದರೆ ದಲಿತರ ಮೂಲಭೂತ ಏಳ್ಗೆ, ಆಭ್ಯುದಯಗಳಿಗೆ ಆದ್ಯತೆಯನ್ನು ಮಾಯಾವತಿ ನೀಡುತ್ತಿಲ್ಲ. ಮಾಯಾವತಿಯವರ ಸರ್ಕಾರದಲ್ಲಿ ಉತ್ತರಪ್ರದೇಶದ ಪರಿಶಿಷ್ಟ ಜಾತಿಯ ವ್ಯಕ್ತಿ ಸವರ್ಣೀಯರ ಮೇಲ ಅಟ್ರಾಸಿಟಿ ಕೇಸ್ ಹಾಕುವುದು ದುಸ್ತರವಾಗಿದೆ. ಆರೋಪ ಸುಳ್ಳು ಎಂದು ಕೋರ್ಟ್‌‌ನಲ್ಲಿ ಸಾಬೀತಾದರೆ ಕೇಸ್ ಹಾಕಿದ ದಲಿತನಿಗೆ ಶಿಕ್ಷೆ ಆಗುವಂಥ ಕಾನೂನಿನ ತಿದ್ದುಪಡಿಯನ್ನು ಅಲ್ಲಿ ತರಲಾಗಿದೆ. ಸವರ್ಣೀಯರ ಓಲೈಕೆಗಾಗಿ ಮಾಯಾವತಿಯವರು ಈ ಕಾನೂನು ತಂದಿದ್ದಾರೆ ಎನ್ನುವ ಆರೋಪವು ಅವರ ಮೇಲಿದೆ. ದಲಿತರಲ್ಲದ ಮುಖ್ಯಮಂತ್ರಿಗಳಿರುವ ರಾಜ್ಯಗಳಲ್ಲಿಯೇ ದಲಿತರಿಗೆ ಸಾಪೇಕ್ಷವಾಗಿ ಹೆಚ್ಚಿನ ಕಾನೂನು ರಕ್ಷಣೆ ಇರುವಂತ ಪರಿಸ್ಥಿತಿ ಉಂಟಾಗಿದೆ.

ಕೇಂದ್ರದ ಕಿವುಡುತನ : ಅಸ್ಸಾಮ್ ಘರ್ಜನೆ

ಅಸ್ಸಾಮ್ ಬರಡು ನಾಡಲ್ಲ. ಅನೇಕ ಸಂಪನ್ಮೂಲಗಳ ಪ್ರದೇಶ. ಕಚ್ಚಾ ತೈಲ, ವಿಶ್ವವಿಖ್ಯಾತ ಅಸ್ಸಾಮ್ ಚಹ, ಗುಣಮಟ್ಟದ ತೇಗದ ಕಟ್ಟಿಗೆಗಳು ಎಲ್ಲೆಡೆ ಬೇಡಿಕೆಯುಳ್ಳಂಥವು. ಅಸ್ಸಾಮ್‌ನಲ್ಲಿಯ ಉತ್ಪಾದನೆಗಳಿಂದ ಕೇಂದ್ರದ ಬೊಕ್ಕಸಕ್ಕೆ ಗಣನೀಯ ಪ್ರಮಾಣದಲ್ಲಿ ಹಣ ಹರಿದು ಹೋಗುತ್ತಿತ್ತು. ಆದರೆ ಅದೇ ರೀತಿ ಪ್ರತಿಯಾಗಿ ಕೇಂದ್ರದಿಂದ ಅಸ್ಸಾಮ್‌ಗೆ ಫಂಡ್ ವಿತರಣೆಗೊಳ್ಳುತ್ತಿರಲಿಲ್ಲ. ಕೇಂದ್ರ ಸರಕಾರ ಸತತವಾಗಿ ಅಸ್ಸಾಮ್ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತ ಬಂದಿತ್ತು. ಅಸ್ಸಾಮಿನ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಬದುಕುಗಳು ಬಡವಾಗತೊಡಗಿದವು. “ಸಂಪತ್ತು ರಾಜ್ಯದ್ದು ; ಷೋಕಿ ಕೇಂದ್ರದ್ದು ” ಎನ್ನುವಂಥ ಭಾವನೆ ಅಸಾಮಿಗಳಲ್ಲಿ ಹರಡಿಕೊಂಡಿತ್ತು.

ಇದರೊಂದಿಗೆ ಬೆಂಗಾಲಿಗಳ ಆದಿಪತ್ಯ ಅಸ್ಸಾಮಿನಲ್ಲಿ. ಶಾಲೆ, ಕಾಲೇಜು, ಸರ್ಕಾರಿ ಕಛೇರಿಗಳಲ್ಲೆಲ್ಲ ಬಂಗಾಲಿ ಬಾಬುಗಳದೇ ಕಾರುಬಾರು. ಅಸ್ಸಾಮ್ ಮಾತನಾಡುವವರನ್ನು ‘ಅಲ್ಪಮತಿ’ ಎನ್ನುವಂತೆ ನೋಡತೊಡಗಿದ್ದರು ಬೆಂಗಾಲಿಗಳು.

ಅಸ್ಸಾಮ್ ಲ್ಯಾಂಡ್‌ಲಾರ್ಡ್‌‌ಗಳು ಬಂಗಾಲಿ ರೈತರನ್ನು ಕೃಷಿ ಮಾಡಲು ಕರೆಸಿಕೊಳ್ಳುವುದು ಶತಮಾನಗಲ ಸಂಪ್ರದಾಯ. ಅಸ್ಸಾಮಿನ್ಲ್ಲಿ ಹೆಚ್ಚು ಜನ ಬುಡಕಟ್ಟುಗಳಿಗೆ ಸೇರಿದವರು. ಬಂಗಾಲಿಗಳಂತೆ ಅವರು ಕೃಷಿಯಲ್ಲಿ ನಿಷ್ಣಾತರಲ್ಲ.

ಇದರೊಂದಿಗೆ ಮುಂಚಿನ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ದಿಂದ ೧೯೫೦ರಿಂದ ಅಕ್ರಮ ಗಡಿ ನುಸುಳುವಿಕೆ ನಡೆಯುತ್ತಿತ್ತು. ಪಾಕ್‌ಬಾಂಗ್ಲಾ ಯುದ್ಧ ಸಮಯದಲ್ಲಿ ನುಸುಳುವಿಕೆ ತೀವ್ರಗೊಂಡಿತು. ಈ ಎಲ್ಲ ಕಾರಣಗಳಿಂದಾಗಿ ಅಸ್ಸಾಮ್‌ನಲ್ಲಿ ಬಂಗಾಲಿಗಳ ಪ್ರಮಾಣ ಶೇ. ೩೪ ರಷ್ಟಾಯಿತು. ಬಂಗಾಲಿಗಳಲ್ಲಿ ಭಾರತಸ ಪಶ್ಚಿಮ ಬಂಗಾಳದವರು ಮತ್ತು ಬಾಂಗ್ಲಾದೇಶದಿಂದ ಬಂದವರು ಸೇರಿಕೊಂಡಿದ್ದರು. ಮತದಾರರ ಪಟ್ಟಿಯಲ್ಲಿ ವಲಸಿಗ ಬಂಗಾಲಿಗಳ ಹೆಸರುಗಳನ್ನು ತೆಗೆದು ಹಾಕಿದ ಮೇಲೆಯೇ ಚುನಾವಣೆ ನಡೆಸಬೇಕೆಂದು ಒತ್ತಾಯಿಸಲು ೧೯೭೯ರಲ್ಲಿ ಅಸ್ಸಾಮ್ ವಿದ್ಯಾರ್ಥಿ ಸಂಘಟನೆ ಹುಟ್ಟಿಕೊಂಡಿತು. ಪ್ರಪುಲ್‌ಕುಮಾರ್ ಮಹಂತ ನೇತೃತ್ವದಲ್ಲಿ ಅಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್ (ಎ.ಎ.ಎಸ್.ಯು) ಚಳವಳಿ ಭುಗಿಲೆದ್ದಿತು. ಅದೇ ಸಂದರ್ಭದಲ್ಲಿ ಅಸ್ಸಾಮ್‌ಗಣ ಸಂಗ್ರಾಮ ಪರಿಷತ್ ಸಹ ಹೋರಾಟಕ್ಕೆ ಕೈಗೂಡಿಸಿತು.

ಈ ಹೋರಾಟದಲ್ಲಿ ಹಿಂದುತ್ವವಾದಿಗಳು ಮುಸ್ಲಿಮ್ ಬಂಗಾಲಿಗಳ ವಿರುದ್ಧ ಹೋರಾಟವನ್ನು ತಿರುಗಿಸಲು ಯತ್ನಿಸಿದರು. ಬೋಡೊ ಮತ್ತು ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್. ಅಸ್ಸಾಮ್ (ಯು.ಎಲ್.ಎಫ್.ಎ.)ತೀವ್ರವಾದಿಗಳು ಪ್ರತ್ಯೇಕ ರಾಷ್ಟ್ರದ ಘೋಷಣೆ ಕೊಟ್ಟವು. ಅಸ್ಸಾಮ್‌ನಲ್ಲಿ ಆರಂಭಗೊಂಡ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಕೇಂದ್ರ ಸರಕಾರ ಕೂಡಲೇ ಸ್ಪಂದಿಸಿದ್ದರೆ ೩೦೦೦ ಜನರು ಸಾಯಬೇಕಾಗಿರಲಿಲ್ಲ.

ವಿದ್ಯಾರ್ಥಿ ಮುಖಂಡ ಮಹಂತ ಮುಖ್ಯಮಂತ್ರಿಯಾದರು. ಅಲ್ಲಿ ಅಸ್ಸಾಮಿ ಭಾಷೆ ಆಡಳಿತ ಭಾಷೆಯಾಯಿತು. ಸ್ವಾಭಿಮಾನದ ವಾತಾವರಣ ಸೃಷ್ಟಿಯಾಯಿತು. ಅಸ್ಸಾಮ್ ಚಳವಳಿ, ‘ಪ್ರತ್ಯೇಕ ರಾಷ್ಟ್ರ’ ದ ವಿಚ್ಛಿದ್ರಕಾರಿಗಳಿಗೆ ಸೊಪ್ಪು ಹಾಕದೆ ದೇಶದ ಸಮಗ್ರತೆಗೆ ಸಾಕ್ಷಿಯಾಗಿ ನಿಂತಿತು. ನಂತರದ ವರ್ಷಗಳಲ್ಲಿ ಅಸ್ಸಾಮಿನ ಅಧಿಕಾರವು ಪುನಃ ಕಾಂಗ್ರೆಸ್‌ನ ಕೈಗೆ ಬಂದಿತು.

ಮರಾಠಿಯನ್ನು ನುಂಗಿದ ಬಾಂಬೆ : ತಲೆಯೆತ್ತಿದ ಬಾಳಾಠಾಕ್ರೆ

ಪ್ರಧಾನಿ ಜವಾಹರ‍್ಲಾಲ್ ನೆಹರೂ ಅವರಿಗೆ ಬಾಂಬೆಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಉದ್ದೇಶವಿದ್ದಿತು. ಬಾಂಬೆ ಪ್ರಾಂತವನ್ನು ವಿಭಜನಗೊಳಿಸಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ರಚಿಸುವ ಬೇಡಿಕೆ ನೆಹರೂ ಮುಂದೆ ಬಂದಿತು. ಮುಂಬೈ ನಗರವನ್ನು ಮರಾಠಿಗಳು ಮತ್ತು ಗುಜರಾತಿಗಳು ಈರ್ವರೂ ತಮ್ಮ ರಾಜ್ಯಕ್ಕೆ ರಾಜಧಾನಿಯಾಗಬೇಕೆಂದು ಒತ್ತಾಯಿಸುತ್ತಿದ್ದರು.

೧೯೪೮ರಲ್ಲಿಯೇ ಭಾಷಾವಾರು ಪ್ರಾಂತಗಳ ಆಯೋಗವನ್ನು (ಲಿಂಗ್ವಿಸ್ಟಿಕ್ ಪ್ರಾವಿನ್ಸ್ ಕಮೀಷನ್) ಜಸ್ಟಿಸ್ ಎಸ್.ಕೆ.ಧರ್ ನೇತೃತ್ವದಲ್ಲಿ ರಚಿಸಲಾಗಿತ್ತು.

ಭಾಷಾವಾರು ಪ್ರಾಂತಗಳಿಗಾಗಿ ಜನತೆ ಇಟ್ಟಿದ್ದ ಬೇಡಿಕೆಗೆ ಪೂರಕವಾಗಿ ಧರ್ ಆಯೋಗ ಸ್ಪಂದಿಸಲಿಲ್ಲ. ವ್ಯತಿರಿಕ್ತ ಅಭಿಪ್ರಾಯಗಳನ್ನು ನೀಡಿತು. ಆಗ ಜೆ.ವಿ.ಪಿ. ಕಮಿಟಿಯನ್ನು ರಚಿಸಲಾಯಿತು. ಜೆ.ವಿ.ಪಿ. ಎಂದರೆ ಜವಾಹರ್‌ಲಾಲ್, ವಲ್ಲಭ್‌ಬಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ ಈ ಮೂವರನ್ನು ಒಳಗೊಂಡ ಸಮಿತಿ.

ಜೆ.ವಿ.ಪಿ. ಕಮಿಟಿ ಸಹ ಭಾಷಾವಾರು ಪ್ರಾಂತಗಳ ರಚನೆಯ ಅವಶ್ಯಕತೆ ಸದ್ಯಕ್ಕೆ ಇಲ್ಲ ಎಂದು ವರದಿ ನೀಡಿತು. ದೇಶದ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಬೇಕು. ಭವಿಷ್ಯದ ದಿನಗಳಲ್ಲಿ ಅವಶ್ಯಕತೆಗನುಗುಣವಾಗಿ ಭಾಷಾವಾರು ಪ್ರಾಂತಗಳ ರಚನೆಗೆ ಕೈ ಹಾಕಬಹುದು ಎಂದು ಜೆ.ವಿ.ಪಿ. ಸಮಿತಿ ಅಭಿಪ್ರಾಯಪಟ್ಟಿತು. ಆಗ ಭಾರೀ ಜನಾಂದೋಲನಗಳು ಸ್ಫೋಟಗೊಂಡವು. ಭಾಷಾವಾರು ಪ್ರಾಂತಗಳ ರಚನೆಗೆ ಪಟ್ಟು ಹಿಡಿದವು. ಆಗ ಕೇಂದ್ರ ಸರಕಾರ, ರಾಜ್ಯ ಪುನರ್‌ಸಂಘಟನಾ ಆಯೋಗವನ್ನು (State reorganising Committee) ರಚಿಸುವ ಅನಿವಾರ್ಯತೆಗೆ ಒಳಗಾಯಿತು ಆಗ ಫಜಲ್ ಅಲಿ ಆಯೋಗ ೧೯೫೩ರಲ್ಲಿ ರಚಿಸಲ್ಪಟ್ಟಿತು.

ಮಹಾರಾಷ್ಟ್ರ ಏಕೀಕರಣ ಆಗಬೇಕು ಮತ್ತು ಮುಂಬೈ ಮಹಾರಾಷ್ಟ್ರದ ರಾಜಧಾನಿ ಆಗಬೇಕು ಎಂದು ಮರಾಠಿ ಭಾಷಿಕರು ಉಗ್ರಸ್ವರೂಪದ ಹೋರಾಟ ನಡೆಸಿದರು. ೧೯೫೬ರ ಜನವರಿಯಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಎಂಬತ್ತು ಜನ ಮುಂಬೈ ನಗರ ಒಂದರಲ್ಲಿಯೇ ಬಲಿಯಾದರು. ಮುಂಬೈ ನಗರದಲ್ಲಿ ಮರಾಠಿ ಭಾಷಿಕರು ಆಗ ೪೨.೮% ಇದ್ದರು.

ನೆಹರೂ ಯೋಜನೆಗಳು ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚು ಒತ್ತು ಕೊಡುವಂಥವಾಗಿದ್ದವು. ಕೃಷಿ ರಂಗದಲ್ಲಿ ಗ್ರಾಮೀಣ ಯುನಜನತೆಗೆ ವಿಪುಲ ಅವಕಾಶಗಳು ಸೃಷ್ಟಿಯಾಗಲಿಲ್ಲ. ಹಾಗಾಗಿ ನಗರ ಮತ್ತು ಗ್ರಾಮೀಣ ವೈರುಧ್ಯತೆ ತೀವ್ರಗೊಳ್ಳುವಂತಾಯಿತು.

ಆ ಸಂಕೀರ್ಣ ಪರಿಸ್ಥಿತಿಯಲ್ಲಿ ಭಾಷಾವಾರು ಪ್ರಾಂತ ರಚನೆಯ ಹೋರಾಟದಲ್ಲಿ “ಮಣ್ಣಿನ ಮಕ್ಕಳ” ವಾದದ ಬೀಜಗಳು ಮೊಳೆತವು. ಆ ವಾದದ ಬೇರಿನಲ್ಲಿ ಶಿವಸೇನೆ ಹುಟ್ಟಿಕೊಂಡಿತು. ಭಾಷಾ ಚಳವಳಿ ಒಂದು ಪ್ರಜಾಸತ್ತಾತ್ಮಕ ಚಳವಳಿಯಾಗಿ ಬೆಳೆಯಲು ಮಣ್ಣಿನ ಮಕ್ಕಳವಾದ ಮತ್ತು ಜಾತಿ ಆಧಾರಿತ ಲ್ಯಾಂಡ್‌ಲಾರ್ಡ್ ವರ್ಗಗಳು ಅಡ್ಡಗಾಲು ಹಾಕಿದವು.

ಬಾಳಾಠಾಕ್ರೆ ಅವರು ಪ್ರಜಾಸತ್ತಾತ್ಮಕ ಭಾಷಾ ಹೋರಾಟಗಾರರಾಗಿ ಹೊಮ್ಮುವ ಬದಲು ಮಣ್ಣಿನ ಮಕ್ಕಳ (ಸನ್ಸ್ ಆಫ್ ದಿ ಸಾಯಿಲ್) ಹೋರಾಟಗಾರರಾಗುವ ವಿಪರ್ಯಾಸ ಉಂಟಾಯಿತು.

ಮುಂಬೈಯಲ್ಲಿ ಚಲನಚಿತ್ರ ಉದ್ಯಮ ಬೇರು ಬಿಟ್ಟಿದ್ದರಿಂದಾಗಿ ಮರಾಠಿ ಚಿತ್ರರಂಗ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದ ಚಿತ್ರೋದ್ಯಮದಲ್ಲಿ ಮರಾಠಿ ಚಿತ್ರರಂಗ ಹೀರೋ ಪಟ್ಟವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮರಾಠಿ ಚಿತ್ರರಂಗದಲ್ಲಿ ಎಂ.ಜಿ.ಆರ್., ರಾಜಕುಮಾರ್, ಎನ್.ಟಿ.ಆರ್.ಗಳಂಥ ಪ್ರಾದೇಶಿಕ ಭಾಷಾ ಹೀರೋಗಳು ಹುಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಹಿನ್ನಲೆಯಲ್ಲಿ ಹಿಂದಿ ಮುಂಬೈಯನ್ನು ನುಂಗಿತು ಎಂದು ವಿಶ್ಲೇಷಿಸಿದರೆ ತಪ್ಪಿಲ್ಲ. ಮಹರಾಷ್ಟ್ರದ ರಾಜಕಾರಣದಲ್ಲಿ ಶರದ್ ಪವಾರ್ ಪಾತ್ರ ಬಹುಮುಖ್ಯವಾದದು. ರಾಜೀವ್‌ಗಾಂಧಿಯವರನ್ನು ಎಲ್.ಟಿ.ಟಿ.ಈ. ಗಳು ಹತ್ಯೆ ಮಾಡಿದ ನಂತರ ಶರದ್ ಪವಾರ್ ಪ್ರಧಾನಿ ಆಗಬೇಕಾಗಿತ್ತು. ಆದರೆ ನೆಹರೂ ಕುಟುಂಬದ ಆಪ್ತವಲಯಕ್ಕೆ ಪಿ.ವಿ.ನರಸಿಂಹರಾವ್ ಹೆಚ್ಚು ಹತ್ತಿರವಾಗಿದ್ದರು ಮತ್ತು ನಿಷ್ಠರಾಗಿದ್ದರು. ಮಹಾರಾಷ್ಟ್ರ ಶ್ರೀಮಂತ ಕೃಷಿಕರು ಮತ್ತು ಸಕ್ಕರೆ ಕಾರ್ಖಾನೆಗಳ ಬೆಂಬಲ ಶರದ್ ಪವಾರ್ ಅವರಿಗಿತ್ತು. ಸಮುದಾಯದ ಪ್ರಾಬಲ್ಯ ಮತ್ತು ಲಾಬಿಗಳ ಬೆಂಬಲ ಇರುವಂಥವರು ನಿಷ್ಠೆ ತೋರಲು ಸಾಧ್ಯವಿಲ್ಲವೆನ್ನುವ ತಿಳುವಳಿಕೆಯಿಂದಾಗಿ ಪವಾರ್‌ಗೆ ಪ್ರಧಾಲನಿ ಪಟ್ಟ ತಪ್ಪಿತು. ಪವಾರ್ ಅವರಲ್ಲಿ ಉಂಟಾದ ಈ ಅತೃಪ್ತಿಯೇ ನ್ಯಾಶನಲ್ಲ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ.) ಹುಟ್ಟಿಗೆ ಕಾರಣವಾಯಿತು. ಇಂದಿಗೂ ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ. ಮತ್ತು ಕಾಂಗ್ರೆಸ್‌ ಗಳು ಸಮಬಲದ ಪಕ್ಷಗಳಾಗಿವೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ.ನಲ್ಲಿ ಎನ್.ಸಿ.ಪಿ. ಕೂಡ ಪಾಲ್ಗೊಂಡಿದೆ.

 


[1] ಇದರ ಬಗ್ಗೆ ವಿವರಗಳನ್ನು ಪ್ರಸ್ತುತ ಕೃತಿಯ ೫೭೭-೫೮೦ರ ಪುಟಗಳಲ್ಲಿ ಚರ್ಚಿಸಲಾಗಿದೆ – ಸಂ.