ವಾಜಪೇಯಿ : ಪೋಖ್ರಾನ್ ರಾಜಕಾರಣ

೧೯೯೦ ರಿಂದ ಬಿ.ಜೆ.ಪಿ. ಹೆಚ್ಚೆಚ್ಚು ಹರಳುಗಟ್ಟಿಕೊಳ್ಳಲಾರಂಭಿಸಿತು. ೧೯೯೬ರ ಹೊತ್ತಿಗೆ ಅದರ ಬೆಳವಣಿಗೆ ಬಹಳಷ್ಟು ನಿಧಾನಗತಿಗೊಳಗಾಯಿತು. ಪಕ್ಷದ ಬೆಳವಣಿಗೆಯ ಗತಿಯನ್ನು ತೀವ್ರಗೊಳಿಸಲು ನಾನಾ ತಂತ್ರ, ವ್ಯೂಹಗಳನ್ನು ಬಿ.ಜೆ.ಪಿ. ರೂಪಿಸಿಕೊಂಡಿತು. ಪಕ್ಷದ ಬೆಳವಣಿಗೆಯಲ್ಲಿ ಕ್ಷಿಪ್ರತೆಯನ್ನುಂಟುಮಾಡಲು ಬಿ.ಜೆ.ಪಿ. ತಹತಹಿಸಿತು. ಬಿ.ಜೆ.ಪಿ. ಬತ್ತಳಿಕೆಯುಲ್ಲಿದ್ದ ಕೋಮುವಾದಿ ಅಸ್ತ್ರಗಳು ಒಂದೊಂದಾಗಿ ಮುಗಿಯುತ್ತ ಬಂದಿದ್ದರೂ ಸಹ ಏಕಪಕ್ಷೀಯವಾಗಿ ಸರ್ಕಾರ ರಚಿಸುವ ಸಾಮರ್ಥ್ಯ ಬಿ.ಜೆ.ಪಿ.ಗೆ ಪ್ರಾಪ್ತಿಯಾಗಿರಲಿಲ್ಲ. ರಾಜಕೀಯವಾಗಿ ಹತಾಶಗೊಂಡಿದ್ದ ಬಿ.ಜೆ.ಪಿ. ಹೊಸ ರಾಜಕೀಯ ಅಸ್ತ್ರಗಳಿಗಾಗಿ ತವಕಿಸುತ್ತಿತ್ತು. ಆಗ ಅದಕ್ಕೆ ಹೊಳೆದದ್ದೇ ‘ಪೋಖ್ರಾನ್’ ಪೋಖ್ರಾನ್ ಮರಳುಗಾಡಿನಲ್ಲಿ ಅಣ್ವಸ್ತ್ರ ಪರೀಕ್ಷೆ ಮಾಡಲು ಮುಂದಾಯಿತು.

ಸದಾ ಯುದ್ಧಭೀತಿ ಇರುವಂತೆ ನೋಡಿಕೊಳ್ಳುವ ಮೂಲಕ ಆಡಳಿತ ಮುಂದುವರಿಸುವುದು ಪಾಕ್ ಮುಸ್ಲಿಮ್ ಕೋಮುವಾದಿಗಳ ಧೋರಣೆ. ಇಡೀ ದೇಶವನ್ನು ಬಡತನಕ್ಕೆ ನೂಕಿ ಮಿಲಿಟರಿಯಲ್ಲಿ ಶ್ರೀಮಂತಿಕೆಯನ್ನು ತೋರಿಸುವ ಪಾಕಿಸ್ತಾನದ ತಂತ್ರವನ್ನು ಭಾರತದಲ್ಲಿ ಬಿ.ಜೆ.ಪಿ. ಅಳವಡಿಸಿಕೊಳ್ಳಲು ಮುಂದಾಯಿತು.,

ವಿಶ್ವದೆಲ್ಲೆಡೆ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಚಳವಳಿ ನಡೆದಿತ್ತು. ಅಲಿಪ್ತ ಧೋರಣೆ ಭಾರತದ ಪ್ರಧಾನ ವಿದೇಶಾಂಗ ನೀತಿಯಾಗಿತ್ತು. ರಾಜೀವ್ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಚಳವಳಿಯನ್ನು ಒಂದು ಹಂತಕ್ಕೆ ಕೊಂಡೊಯ್ದಿದ್ದರು. ಸಮಸ್ತ ನ್ಯೂಕ್ಲಿಯರ್ ಅಸ್ತ್ರಗಳನ್ನು ಒಮ್ಮೆಗೇ ನಾಶ ಮಾಡಲು ಸಾಧ್ಯವಿಲ್ಲವೆಂದಾದರೆ ಹಂತ ಹಂತವಾಗಿಯಾದರೂ ಮಾಡಿ ಎನ್ನುವ ಒತ್ತಾಯವನ್ನು ನ್ಯೂಕ್ಲಿಯರ್ ಅಸ್ತ್ರಗಳನ್ನು ಹೊಂದಿದ್ದ ದೇಶಗಳ ಮೇಲೆ ಒತ್ತಾಯ ಹೇರಿದ್ದರು. ಅದಕ್ಕಾಗಿ ಜಾಗತಿಕ ಸಭೆಗಳನ್ನು ನಡೆಸಿದ್ದರು. ಈ ಹಿನ್ನಲೆಯಲ್ಲಿ ರಾಜೀವ್‌ಗಾಂಧಿ ಅವರ ಚೀನಾ ಭೇಟಿ ಅತ್ಯಂತ ಮಹತ್ವದ್ದಾಗಿತ್ತು.

೧೯೭೪ರಲ್ಲಿ ಪೋಖ್ರಾನ್‌ನಲ್ಲಿ ಇಂದಿರಾಗಾಂಧಿ ಸರಕಾರ ಸಹ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆ ನಡೆಸಿತ್ತು. ಆಗ ಇಂದಿರಾಗಾಂಧಿ, ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಮತ್ತು ವೈಜ್ಞಾನಕ ಸಂಶೋಧನೆಯ ಉದ್ದೇಶಕ್ಕಾಗಿ ಬಾಂಬ್ ಪರೀಕ್ಷೆ ಮಾಡಲಾಗಿದೆಯೆಂದು ರಾಜಕೀಯ ಚಾಣಾಕ್ಷತನದ ಹೇಳಿಕೆ ನೀಡಿದ್ದರು. ಆ ನಂತರ ಬಂದ ಯಾವ ಸರ್ಕಾರಗಳೂ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆಗೆ ಕೈ ಹಾಕಿರಲಿಲ್ಲ.

ಆದರೆ ವಾಜಪೇಯಿ ಅವರು ೧೯೯೮ರಲ್ಲಿ ಪ್ರಧಾನಿಯಾದ ಕೆಲವೇ ವಾರಗಳಲ್ಲಿ ಪೋಖ್ರಾನ್‌ನಲ್ಲಿ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆಯನ್ನು ಅಬ್ದುಲ್ ಕಲಾಮ್ ಅವರ ನೇತೃತ್ವದಲ್ಲಿ ನಡೆಸಿದರು. “ಪೋಖ್ರಾನ್ ಪರೀಕ್ಷೆ ಪಾಕಿಸ್ತಾನ ಮತ್ತು ಚೀನಾಗಳ ವಿರುದ್ಧ” ಎಂದೂ ಘೋಷಿಸಿದರು ವಾಜಪೇಯಿ. “ಕೇವಲ ಪಾಕಿಸ್ತಾನದ ವಿರುದ್ಧ” ಎಂದು ವಾಜಪೇಯಿ ಹೇಳದಿರುವುದು ಇಲ್ಲಿ ಗಮನಾರ್ಹ. ಆ ಸಂದರ್ಭದಲ್ಲಿ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡೀಸ್ ಅವರು “ಚೀನಾ ಭಾರತದ ಪ್ರಥಮ ಶತ್ರು” ಎಂದು ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಆರ್.ಎಸ್.ಎಸ್. ಮುಖವಾಣಿ ‘ಪಾಂಚಜನ್ಯ’ ಪತ್ರಿಕೆ ನೇರವಾಗಿ”ಪಾಕ್ ಮೇಲೆ ನ್ಯೂಕ್ಲಿಯರ್ ದಾಳಿಗೆ ಭಾರತ ಸಜ್ಜು ಎನ್ನುವುದಕ್ಕೆ ಪೋಖ್ರಾನ್ ಪರೀಕ್ಷೆ ಅರ್ಥಗರ್ಭಿವಾಗಿದೆ” ಎಂದು ಬರೆಯಿತು. ಭಾರತದೊಂದಿಗೆ ಚೀನಾ ನಂಬರ್ ಒನ್ ಶತ್ರು” ಎಂದು ಹೇಳಿದ್ದು ರಾಜಕೀಯ ಚಾಣಾಕ್ಷತನದಿಂದ ಕೂಡಿರಲಿಲ್ಲ. ಆಗ ಚೀನಾ ನೇರವಾಗಿ ಪಾಕಿಸ್ತಾನದೊಂದಿಗೆ ಕೈ ಜೋಡಿಸಿತು. ಪಾಕಿಸ್ತಾನದಲ್ಲಿ ಚೀನಾ ಸಹಕಾರದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ, ಪರೀಕ್ಷೆಗಳು ತೀವ್ರಗೊಂಡವು

ಹೀಗೆ ಭಾರತದ ಹಿಂದುಗಳಲ್ಲಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸಲು ಅಂತಾರಾಷ್ಟ್ರೀಯ ನೀತಿಯನ್ನು ವಾಜಪೇಯಿ ಸರಕಾರ ಬಲಿ ಕೊಟ್ಟಿತು. ಪೋಖ್ರಾನ್ ಪರೀಕ್ಷೆ ಕಾರ್ಗಿಲ್ ಯುದ್ಧಕ್ಕೆ ನಾಂದಿಯೂ ಆಯಿತು.

ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯನ್ನು ಯಾವುದೇ ದೇಶದ ವಿರುದ್ಧ ನಡೆಸಿದ್ದಲ್ಲ. ಬದಲಿಗೆ ಶಾಂತಿಗಾಗಿ, ವೈಜ್ಞಾನಿಕ ಸಂಶೋಧನೆಗಳಿಗಾಗಿ ನಡೆಸಿರುವಂಥದ್ದು ಎಂದು ವಾಜಪೇಯಿ ಅವರು ಹೇಳಿದ್ದರೆ ಚೀನಾ ಮತ್ತು ಪಾಕಿಸ್ತಾನಗಳ ಮಿಲಿಟರಿಕೂಟ ರೂಪುಗೊಳ್ಳುತ್ತಿರಲಿಲ್ಲ. ದೇಶದ ಭದ್ರತೆ ರಕ್ಷಣೆಗಳನ್ನೂ ಲೆಕ್ಕಿಸದೆ ಕೇವಲ ಬಿ.ಜೆ.ಪಿ.ಯ ಬೆಳವಣಿಗೆಯೊಂದನ್ನೇ ಗಮನದಲ್ಲಿರಿಸಿಕೊಂಡು ವಾಜಪೇಯಿ ಅಂಥ ಅಪಾಯಕಾರಿ ಹೇಳಿಕೆ ನೀಡಿದ್ದರು.

ಪಾಕ್‌ಗೆ ವಾಜಪೇಯಿ ಬಸ್ : ಕಾರ್ಗಿಲ್‌ಗೆ ಪಾಕ್ ಸೈನಿಕರು !

ಬಿ.ಜೆ.ಪಿ. ಸರಕಾರ ಯಾವ ಉದ್ದೇಶಕ್ಕಾಗಿ ಚೀನಾ ಮತ್ತು ಪಾಕಿಸ್ತಾನಗಳು ಭಾರತದ ಪ್ರಥಮ ಶತ್ರುಗಳು ಎಂದು ಹೇಳಿತ್ತೋ ಅದು ಫಲ ನೀಡಿತ್ತು. ದೇಶದ ಹಿತದೃಷ್ಟಿಯಿಂದ ಅದು ದುಷ್ಫಲವಾಗಿತ್ತು. ಪಾಕಿಸ್ತಾನವೊ ಅಣ್ವಸ್ತ್ರ ಪರೀಕ್ಷೆಯನ್ನು ಆರಂಭಿಸಿತು. ಪಾಕಿಸ್ತಾನದಲ್ಲಿ ಚುನಾಯಿತ ಸರಕಾರವಿರಲಿಲ್ಲ. ಮಿಲಿಟರಿಯ ದುರ್ಬಳಕೆಯಿಂದ ಚುನಾಯಿತ ಸರಕಾರವನ್ನು ಪತನಗೊಳಿಸಿ ಜನರಲ್ ಮುಷ್ರಫ್ ಅವರು ಅಧಿಕಾರ ಕಬಳಿಸಿಕೊಂಡಿದ್ದರು. ಮುಷರಫ್ ಸಹ ಯುದ್ಧಭೀತಿಯ ಅವಕಾಶಕ್ಕಾಗಿ ಕಾಯುತ್ತಿದ್ದರು. ಪಾಕ್ ಜನತೆಯಲ್ಲಿ ಭಾರತದ ಬಗ್ಗೆ ಭಯ ಹುಟ್ಟಿಸಲು ಮುಷರಫ್‌ಗೆ ಬೇಕಾದುದನ್ನು ವಾಜಪೇಯಿ ಉಣಬಡಿಸಿದರು.

ಎರಡೂ ದೇಶಗಳ ಮಧ್ಯೆ ತೀವ್ರ ವಾಗ್ದಾಳಿಗಳು ನಡೆಯಲಾರಂಭಿಸಿದವು. ಸಸ್ತ್ರಾಸ್ತ್ರ ಸ್ಪರ್ಧೆಗಳು ಬಹಿರಂಗವಾಗಿ ನಡೆದವು. ಆಗ ಪ್ರಧಾನಿ ವಾಜಪೇಯಿ ಅವರು ಪಾಕಿಸ್ತಾನದ ಲಾಹೋರ್‌ಗೆ ಬಸ್ ಮೂಲಕ ಶಾಂತಿಯಾತ್ರೆ ಘೋಷಿಸಿದರು.

ವಾಜಪೇಯಿ ಅವರ ಬಸ್ ಲಾಹೋರ್ ಕಡೆಗೆ ಪ್ರಯಾಣ ಮಾಡುತ್ತಿರುವಾಗಲೇ ಪಾಕಿಸ್ತಾನದಿಂದ ಸೈನಿಕರು ಭಾರತದ ಕಾರ್ಗಿಲ್ ಬೆಟ್ಟಗಳತ್ತ ಹಿಂಡುಹಿಂಡಾಗಿ ಪ್ರಯಾಣಿಸುತ್ತಿದ್ದರು. ಶಾಂತಿ ಮಾತುಕತೆಗಳು ಫಲಿಸಲಿಲ್ಲ. ಇದ್ದಕ್ಕಿದ್ದಂತೆ ಪ್ರಧಾನಿ ವಾಜಪೇಯಿ ಅವರು “ಕಾಶ್ಮೀರದ ಕಾರ್ಗಿಲ್ ಪ್ರದೇಶವನ್ನು ಪಾಕ್ ಸೈನಿಕರು ಆಕ್ರಮಿಸಿಕೊಂಡಿದ್ದಾರೆ. ಶತ್ರು ಸೈನಿಕರನ್ನು ಒದ್ದೋಡಿಸಲು ಯುದ್ಧವನ್ನು ನಡೆಸಲಾಗುತ್ತದೆ ” ಎಂದು ಘೋಷಿಸಿದರು.

ಕಾರ್ಗಿಲ್ ಯುದ್ಧ ಆರಂಭವಾಯಿತು. ಭಾರತದ ಸೈನಿಕರ ಚಿಂತಾಜನಕ ಸ್ಥಿತಿಯನ್ನು ಸವಿವರವಾಗಿ ಅಮೆರಿಕಾದ ‘ಟೈಮ್ಸ್’ ಪತ್ರಿಕೆ ವರದಿ ಮಾಡಿತು. ಕಾರ್ಗಿಲ್ ಯುದ್ಧ ಅತ್ಯಂತ ಎತ್ತರದ ಪ್ರದೇಶದ ಬೆಟ್ಟಗಳಲ್ಲಿ ಆರಂಭವಾಗಿತ್ತು. ಅದಕ್ಕೂ ಮುಂಚೆ ಇಡೀ ವಿಶ್ವದಲ್ಲಿ ಅಷ್ಟೊಂದು ಎತ್ತರದ ಪ್ರದೇಶದಲ್ಲಿ ಯುದ್ಧ ನಡೆದ ಉದಾಹರಣೆಯಿರಲಿಲ್ಲ. ಕಡಿದಾದ ಎತ್ತರದ ಬೆಟ್ಟಗಳ ಮೇಲೆ ಪಾಕ್ ಸೈನಿಕರು ತಿಂಗಳುಗಳ ಹಿಂದೆಯೇ ಬಂದು ಬಂಕರ್‌ಗಳನ್ನು ರಚಿಸಿಕೊಂಡು ಕುಳಿತಿದ್ದರು. ವರ್ಷಗಟ್ಟಲೆ ಯುದ್ಧ ನಡೆದರೂ ಸಾಲುವಷ್ಟು ಆಹಾರ ಸಾಮಗ್ರಿ, ಮದ್ಯಪಾನೀಯ, ಶಸ್ತ್ರಸ್ತ್ರ ಇತ್ಯಾದಿಗಳನ್ನೆಲ್ಲ ಸಂಗ್ರಹಿಸಿಕೊಂಡಿದ್ದರು.

ಭಾರತದ ಸೈನಿಕರು ಬೆಟ್ಟಗಳ ಕೆಳ ಪ್ರದೇಶದಲ್ಲಿ ನಿಂತು ಯುದ್ಧ ಮಾಡಬೇಕಿತ್ತು. ಭಾರತದ ಸೈನಿಕರು ಕಾರ್ಗಿಲ್ ಬೆಟ್ಟಗಳನ್ನು ಹತ್ತಿ ಮೇಲೇರುವ ಪ್ರಯತ್ನ ಮಾಡಿದೊಡನೆ ಬೆಟ್ಟಗಳ ತುದಿಯಲ್ಲಿದ್ದ ಪಾಕ್ ಸೈನಿಕರು ಮೇಲಿನಿಂದ ದಾಳಿ ನಡೆಸುತ್ತಿದ್ದರು. ಭಾರತೀಯ ಸೈನಿಕರು ಹುಳುಹುಪ್ಪಡಿಗಳಂತೆ ಉದುರಿಬೀಳುತ್ತಿದ್ದರು. ಸತ್ತ ಭಾರತೀಯ ಸೈನಿಕರಲ್ಲಿ ಎಲ್ಲ ಧರ್ಮೀಯರೂ ಇದ್ದರು.

ಆದರೆ ಬಿ.ಜೆ.ಪಿ. ಸೈನ್ಯವನ್ನು ಕೋಮುಮಯಗೊಳಿಸುವ ಕೃತ್ಯಕ್ಕೆ ಕೈ ಹಾಕಿತು. ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಸೈನಿಕರ ಬಿಡಾರಗಳಿಗೆ ರಾಖಿಗಳನ್ನು ಒಯ್ದು ಕಟ್ಟಿದರು ಇದರಿಂದ ಹಿಂದುಯೇತರ ಸೈನಿಕರು ಮುಜುಗರಕ್ಕೆ ಒಳಗಾದರು. ಅವರು ಪರಕೀಯ ಭಾವನೆಗೆ ತುತ್ತಾದರು. ಬಿ.ಜೆ.ಪಿ.ಯ ಕಾರ್ಯಕ್ರಮಗಳಿಗೆ ಸೇನೆಯ ಉನ್ನತ ಅಧಿಕಾರಿಗಳನ್ನು ಆಹ್ವಾನಿಸಿದರು. ಅಧಿಕಾರಿಗಳ ಬೃಹತ್ ಕಟೌಟ್‌ಗಳನ್ನು ನಿಲ್ಲಿಸಿದರು. ಸ್ವಾತಂತ್ಯ್ರಾನಂತರ ಇಂಥ ದೃಶ್ಯ ಪ್ರಪ್ರಥಮವಾಗಿ ಕಾಣಿಸಿಕೊಂಡಿತು. ಇದರಿಂದಾಗಿ ಸೇನೆಯ ಸೆಕ್ಯೂಲರ್ ಸ್ವರೂಪಕ್ಕೆ ಭಾರೀ ಪೆಟ್ಟು ಬಿದ್ದಿತು.

ಯುದ್ಧನಿರತ ಭಾರತೀಯ ಸೈನಿಕರಿಗೆ ಆಧುನಿಕ ಉಪಕರಣಗಳ ಕೊರತೆ ಇದ್ದುದು ಮಾಧ್ಯಮಗಳಲ್ಲಿ ಬಹಿರಂಗಗೊಂಡಿತು. ಪಾಕ್ ಸೈನಿಕರಿಗೆ ಸರಿಸಮ ಯುದ್ಧ ಮಾಡಲು ಬೇಕಾದ ಅನುಕೂಲತೆಗಳನ್ನು ಕಲ್ಪಿಸಿ ಕೊಡುವುದಕ್ಕೇ ಸರ್ಕಾರ ಗಮನ ನೀಡಲಿಲ್ಲ. ಆದರೆ ಭಾವಾವೇಶದ ಯುದ್ಧ ಪರ ಪ್ರಚಾರಕ್ಕೆ ಆದ್ಯತೆ ನೀಡಿತು. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿದವು. ಹಿಂದು-ಮುಸ್ಲಿಮ್-ಕ್ರೈಸ್ತ ಸೈನಿಕರ ಶವಪೆಟ್ಟಿಗೆಗಳ ಮೆರವಣಿಗೆಯನ್ನು ಜನತೆ ಆತಂಕದ ಕಣ್ಣುಗಳಿಂದ ವೀಕ್ಷಿಸಿತು. ನಂತರ ಶವಪೆಟ್ಟಿಗೆ ಖರೀದಿಯಲ್ಲಿ ಅವ್ಯವಹಾರ ನಡೆದಿದೆಯೆನ್ನುವ ಹಗರಣ ಉಂಟಾಯಿತು.

ಪಾಕ್ ಸೈನಿಕರು ದೇಶದ ಒಳಕ್ಕೆ ನುಸುಳಿ ಅಷ್ಟು ಭಾರೀ ಪ್ರಮಾಣದ ಯುದ್ಧ ತಯಾರಿ ಮಾಡಿಕೊಳ್ಳುವವರೆಗೆ ಸರಕಾರ ಏನು ಮಾಡುತ್ತಿತ್ತು ? ದೇಶದ ಬೇಹುಗಾರಿಕೆ ದಳಗಳು ಏನು ಮಾಡುತ್ತಿದ್ದವು ? ಎನ್ನುವ ಪ್ರಶ್ನೆಗಳು ಬೃಹದಾಕಾರವಾಗಿ ಬೆಳೆದು ನಿಂತವು.

ಆ ಪ್ರಶ್ನೆಗಳಿಗೆ ವಾಜಪೇಯಿ ಸರಕಾರ, “ಬೇಹುಗಾರಿಕೆ ಸಂಸ್ಥೆಗಳ ವೈಫಲ್ಯ” ಎನ್ನುವ ಸಮಜಾಯಿಷಿ ನೀಡಿತು. ಆದರೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಸುರೀಂದರ್ ಸಿಂಗ್, ಬ್ರಿಗೇಡಿಯರ್ ಬಯಲುಗೊಳಿಸಿದ ಸತ್ಯ ಸ್ಫೋಟಕವೂ ಹೃದಯವಿದ್ರಾವಕವೂ ಆಗಿತ್ತು. ಬೇಹುಗಾರಿಕೆ ದಳಗಳು, ಗುಪ್ತಚರ ಸಂಸ್ಥೆಗಳು ಸತತವಾಗಿ ಸರ್ಕಾರಕ್ಕೆ ನೀಡಿದ ಮಾಹಿತಿಗಳ ದಾಖಲೆಗಳನ್ನು ಬಹಿರಂಗಗೊಳಿಸಿದರು ಸುರೀಂದರ್ ಸಿಂಗ್. ಸೇನಾ ಮುಖ್ಯಸ್ಥರುಗಳಿಗೆ, ರಕ್ಷಣಾ ಸಚಿವಾಲಯ ಮತ್ತು ಪ್ರಧಾನಿಗಳಿಗೆ ಕಾರ್ಗಿಲ್‌ನಲ್ಲಿ ಪಾಕ್ ಸೈನ್ಯಿಕರು ನುಸುಳಿದ್ದುದರ ಮಾಹಿತಿಗಳ ಸರಮಾಲೆಯೇ ಅದರಲ್ಲಿ ಇತ್ತು. ಆದರೆ ಅವನ್ನೆಲ್ಲ ಮುಚ್ಚಿಡಲಾಗಿತ್ತು. ಪಾಕಿಸ್ತಾನಕ್ಕೆ ಬಸ್ ಯಾತ್ರೆ ಕೈಗೊಳ್ಳುವ ದಿನದಂದೂ ಸಹ ಕಾರ್ಗಿಲ್‌ನಲ್ಲಿ ಶತ್ರು ಸೈನಿಕರು ನುಸುಳಿದ ಮಾಹಿತಿ ಇದ್ದುದನ್ನು ಬಹಿರಂಗಗೊಳಿಸಿದ್ದರು ಬ್ರಿಗೇಡಿಯರ್ ಸುರೀಂದರ್ ಸಿಂಗ್ !

೧೯೮೯ರಿಂದ ೧೯೯೯ರವರೆಗಿನ ದಶಕವು ವಿಚಿತ್ರ ರಾಜಕೀಯ ತಲ್ಲಣಗಳಿಂದ ಕೂಡಿದುದಾಗಿತ್ತು. ಅದು ರಾಜಕೀಯ ಕ್ಷಿಪ್ರಪಲ್ಲಟಗಳ ದಶಕವೂ ಆಗಿತ್ತು. ಸರಕಾರಗಳ ಸತತ ಬದಲಾವಣೆಗಳ ದಶಕವೂ ಆಗಿತ್ತು. ಅದೇ ರೀತಿ ಸತತ ಮಧ್ಯೆಂತರ ಚುನಾವಣೆಗಳ ದಶಕವೂ ಆಗಿತ್ತು. ಆ ದಶಕದಲ್ಲಿ ನಡೆದ ಚುನಾವಣೆಗಳು ಮತ್ತು ಅಸ್ತಿತ್ವಕ್ಕೆ ಬಂದ ಸರಕಾರಗಳು ಈ ಕೆಳಗಿನಂತಿವೆ.

ಚುನಾವಣೆಗಳು

ಸರ್ಕಾರಗಳು

ನವೆಂಬರ್ ೧೯೮೯ ೧.ವಿ.ಪಿ.ಸಿಂಗ್ ಸರಕಾರ (೧೯೮೯ ರಿಂದ ೧೯೯೦)
೨.ಚಂದ್ರಶೇಖರ್ ಸರಕಾರ (೫ ತಿಂಗಳುಗಳ ಸರಕಾರ
ಮೇ ೧೯೯೧ ೧. ನರಸಿಂಹರಾವ್ ಸರಕಾರ (೫ ವರ್ಷಗಳ ಅವಧಿ)
೧೯೯೬ ೧.ಎ.ಬಿ. ವಾಜಪೇಯಿ ಸರ್ಕಾರ (೧೩ ದಿನಗಳ ಅವಧಿ)
೨. ಎಚ್.ಡಿ.ದೇವೇಗೌಡ ಸರಕಾರ (೧ ವರ್ಷ)
೩. ಐ.ಕೆ. ಗುಜ್ರಾಲ್ ಸರಕಾರ (೧ ವರ್ಷದ ಅವಧಿ)
ಫೆಬ್ರವರಿ ೧೯೯೮ರ ಚುನಾವಣೆ ಎ.ಬಿ.ವಾಜಪೇಯಿ ಸರಕಾರ (೧ ವರ್ಷದೊಳಗೆ ಸರಕಾರ ಉರುಳಿತು)
ಏಪ್ರಿಲ್ ೧೯೯೯ರ ಚುನಾವಣೆ ಎ.ಬಿ.ವಾಜಪೇಯಿ (೫ ವರ್ಷಗಳ ಅವಧಿಯನ್ನು ಸರಕಾರ ಪೂರ್ಣಗೊಳಿಸಿತು)

ಗರಿಗೆದರಿದ ಬಿ.ಜೆ.ಪಿ. ಮತ್ತು ರಾಷ್ಟ್ರ ರಾಜಕಾರಣ

ಜನತಾ ಸರಕಾರದಿಂದ ಜನಸಂಘದ ಗುಂಪು ಹೊರಬಂದು ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ.) ಎನ್ನುವ ಹೆಸರಿನ ಪಕ್ಷವನ್ನು ರಚಿಸಿಕೊಂಡಿತು. ೧೯೮೪ರಲ್ಲಿ ಬಿ.ಜೆ.ಪಿ. ಪಾರ್ಲಿಮೆಂಟಿನಲ್ಲಿ ಕೇವಲ ಎರಡು ಸ್ಥಾನಗಳನ್ನು ಹೊಂದಿತ್ತು. ಜನಸಂಘ ಮತ್ತು ಆರ್.ಎಸ್.ಎಸ್.ಗಳ ತತ್ವಸಿದ್ಧಾಂತಗಳಿಗೆ ಕಾಯಕಲ್ಪ ಮಾಡದೆ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವುದನ್ನು ಬಿ.ಜೆ.ಪಿ. ಕಂಡುಕೊಂಡಿತು. ಆರ್.ಎಸ್.ಎಸ್. ಮುಖ್ಯವಾಗಿ ಗಾಂಧೀವಾದವನ್ನು ವಿರೋಧಿಸುತ್ತಿತ್ತು. ಆದರೆ ೧೯೮೦ರಲ್ಲಿ ಬಿ.ಜೆ.ಪಿ. ಅಧ್ಯಕ್ಷ ಎ.ಬಿ.ವಾಜಪೇಯಿಯವರು ಗಾಂಧೀವಾದವನ್ನು ಬಿ.ಜೆ.ಪಿ. ಅಪ್ಪಿಕೊಂಡಿದೆಯೆಂದು ಘೋಷಿಸಿದರು. ಗಾಂಧೀವಾದದ ಮಾತುಗಳ ಅಬ್ಬರ ಜಾಸ್ತಿಯಾದಾಗ ಹಿಂದುತ್ವವಾದದ ಧ್ವನಿಯ ವಾಲ್ಯೂಮ್ ಅನ್ನು ಕಡಿಮೆಗೊಳಿಸಿದರು. ೧೯೮೦ರಿಂದ ೧೯೮೬ರವರೆಗೆ ಎ.ಬಿ. ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಬಿ.ಜೆ.ಪಿ. ಗಾಂಧೀವಾದದ ಮಾತುಗಳ ಮೂಲಕ ಜನಸಮೂಹದ ಮಧ್ಯ ಪ್ರವೇಶಿಸಿತು. ಕೆಲವು ಬುದ್ಧಿಜೀವಿಗಳು, ವಾಜಪೇಯಿ ಯವರನ್ನು ‘ಸೌಮ್ಯವಾದಿ’ ಎಂದು ವ್ಯಾಖ್ಯಾನಿಸಿದ್ದು ಈ ಕಾರಣಕ್ಕಾಗಿ. ಮತ್ತೆ ಕೆಲವರು ಈ ವಾದವನ್ನು ‘ಸಾಫ್ಟ್ ಹಿಂದುತ್ವ’ ಎಂದು ವ್ಯಾಖ್ಯಾನಿಸಿದರು. ಆಗ ಬಿ.ಜೆ.ಪಿ. ಹಳ್ಳಿಯ ಬಡವರು, ಬುಡಕಟ್ಟುಜನ, ಹರಿಜನ, ಗಿರಿಜನ ಮುಂತಾದವರ ಬೇಡಿಕೆಗಳನ್ನು ಎತ್ತಿಕೊಂಡು ರಾಜಕೀಯ ಚಟುವಟಿಕೆಗಳನ್ನು ನಡೆಸಲಾರಂಭಿಸಿತು. ನಗರದ ಕೊಳಚೆ ಪ್ರದೇಶಗಳ ಜನರನ್ನು ತಲುಪಿತು. ಕಾಂಗ್ರೆಸ್ಸಿನ ವೋಟ್‌ಬ್ಯಾಂಕ್ ಅನ್ನು ಬಿ.ಜೆ.ಪಿ. ಪ್ರವೇಶಿಸಿತು. ೧೯೮೧ರಲ್ಲಿ ಎಲ್.ಕೆ. ಅದ್ವಾನಿ ಅವರು ಬಿ.ಜೆ.ಪಿ.ಗೆ ಅಧ್ಯಕ್ಷರಾದರು. ಆಗ ಪಕ್ಷ ಹಠಾತ್ ರೂಪಾಂತರಕ್ಕೊಳಗಾಯಿತು. ಬಿ.ಜೆ.ಪಿ. ಅಹಿಂಸೆಯ ಗಾಂಧೀಜಿಯ ವಾದವನ್ನು ಗಾಳಿಗೆ ತೂರಿತು.

ಎಲ್.ಕೆ. ಅದ್ವಾನಿಯವರು, ನಮಗೆ ಬಂಡವಾಳವಾದ ಮತ್ತು ಸಮಾಜವಾದ ಎರಡೂ ಬೇಡ ಮಾನವತಾವಾದ ಬೇಕು ಎಂದು ಘೋಷಿಸಿದರು. ದೀನ್ ದಯಾಳ್ ಉಪಾಧ್ಯಾಯರ ಇಂಟಿಗ್ರಲ್ ಹ್ಯೂಮಿನಿಸಂ (integral humanism) ಅನ್ನು ಬಿ.ಜೆ.ಪಿ.ಯ ಅಧಿಕೃತವಾದ ಎಂದು ಹೇಳಿದರು. ಈ ಘೋಷಣೆಯ ಮೂಲಕ ವಿಶೇಷವಾಗಿ ಮಧ್ಯಮ ವರ್ಗ ಮತ್ತು ಜಾತಿಗಳ ಮಧ್ಯೆ ಪ್ಕಷ ಪ್ರವೇಶಿಸಿತು. ಬಾಬರಿ ಮಸೀದಿಯ ವಿವಾದವನ್ನು ಗುರಿಯಾಗಿಸಿಕೊಂಡು ಮುಸ್ಲಿಮ್ ಸಮುದಾಯದ ವಿರುದ್ಧ ಭಾವನೆಗಳನ್ನು ಕೆರಳಿಸಲಾರಂಭಿಸಿತು. ಅದ್ವಾನಿ ಹಳೆಯ ನೆನೆಗುದಿಗೆ ಬಿದ್ದಿದ್ದ ಅಪ್ರಸ್ತುತ ಕೋಮು ವಿಷಯಗಳನ್ನು ಕೈಗೆತ್ತಿಕೊಂಡು ಉದ್ವೇಗದ ಘೋಷಣೆಗಳನ್ನು ಕೂಗಲಾರಂಭಿಸಿದರು. ಮೀನಾಕ್ಷಿಪುರಮ್ ಮತಾಂತರ ಘಟನೆಯನ್ನು ಬಳಸಿಕೊಂಡು ಹಿಂದುತ್ವ ಭಾವನೆಗಳನ್ನು ಜಾಗೃತಗೊಳಿಸುವ ಕೆಲಸ ನಡೆಸಿದರು. ವಿಶ್ವಹಿಂದು ಪರಿಷತ್ ಬಿ.ಜೆ.ಪಿ.ಯ ಅಂಗಸಂಸ್ಥೆಯಾಗಿ ಕೆಲಸ ಮಾಡಲಾರಂಭಿಸಿತು. ಅದೇರೀತಿ ವಿ.ಹೆಚ್.ಪಿ.ಯ ಕಾರ್ಯಗಳನ್ನು ಬಿ.ಜೆ.ಪಿ. ರಾಜಕೀಯಕರಣಗೊಳಿಸಲಾರಂಭಿಸಿತು. ೧೯೮೯ರಲ್ಲಿ ಪಾಲಂಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಾಬರಿ ಮಸೀದಿಯ ಬಗ್ಗೆ ಅಜೆಂಡಾವನ್ನು ಬಿ.ಜೆ.ಪಿ. ಅಂಗೀಕರಿಸಿತು.

ಇಂದಿರಾಗಾಂಧಿ ಅವರ ಹತ್ಯೆಯ ಅನುಕಂಪದಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದ ರಾಜೀವ್‌ಗಾಂಧಿ ಸರಕಾರ ಕೋಮುವಾದದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಿಲ್ಲ. ಬದಲಿಗೆ ಹಿಂದು ಮತ್ತು ಮುಸ್ಲಿಮ್ ಎರಡೂ ಕೋಮುವಾದಗಳಿಗೆ ಬೆಳೆಯಲು ಅವಕಾಶ ಮಾಡಿಕೊಟ್ಟಿತು.

ಶಹಬಾನು ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮುಸ್ಲಿಮ್ ಕೋಮುವಾದಿಗಳು ಪ್ರತಿಭಟನೆ ನಡೆಸಿದರು. ಮುಸ್ಲಿಮ್ ಕೋಮುವಾದಿಗಳನ್ನು ಓಲೈಸಲು ಪಾರ್ಲಿಮೆಂಟಿನಲ್ಲಿ ವಿಶೇಷ ಕಾನೂನು ರೂಪಿಸುವ ಮೂಲಕ ಸುಪ್ರೀಮ್ ಕೋರ್ಟಿನ ತೀರ್ಪು ಅನೂರ್ಜಿತಗೊಳ್ಳುವಂತೆ ರಾಜೀವ್‌ ಗಾಂಧಿ ಮಾಡಿದರು. ಅದೇ ರೀತಿ ಹಿಂದು ಕೋಮುವಾದಿಗಳ ಒತ್ತಾಯಕ್ಕೆ ಮಣಿದು ವಿವಾದಿತ ಬಾಬರಿ ಮಸೀದಿ ಬೀಗವನ್ನು ರಾಜೀವ್ ಗಾಂಧಿ ತೆಗೆಸಿದರು. ಶಹಬಾನು ಪ್ರಕರಣದಲ್ಲಿ ರಾಜೀವ್ ಸರಕಾರ ಮುಸ್ಲಿಮ್ ಕೋಮುವಾದಿಗಳನ್ನು ಓಲೈಸಿದ ವಿಷಯವನ್ನು ಹಿಂದುತ್ವವಾದಿಗಳು ಸಮರ್ಥವಾಗಿ ಬಳಸಿಕೊಂಡರು. ಈ ಎಲ್ಲ ಚಟುವಟಿಕೆಗಳಿಂದಾಗಿ ಬಿ.ಜೆ.ಪಿ. ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದ ಜನಸಮೂಹಗಳ ಬೆಂಬಲವನ್ನು ಪಡದುಕೊಳ್ಳುವಂತಾಯಿತು.

ಸೆಕ್ಯುಲರಿಸಂ ಮೇಲೆ ಅಸ್ತ್ರ ಪ್ರಯೋಗ

೧೯೮೬ರಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ ಸೆಕ್ಯೂಲರಿಸಂ ಮೇಲೆ ತನ್ನ ಅಸ್ತ್ರ ಪ್ರಯೋಗ ಮಾಡಿತು. ಸೆಕ್ಯೂಲರಿಸಂ ಅನ್ನು ‘ಹುಸಿ ಜಾತ್ಯತೀತವಾದ’ (ಸ್ಯುಡೊಸೆಕ್ಯುಲರಿಸಂ) ಎಂದು ವ್ಯಾಖ್ಯಾನಿಸಿತು. ಇಂಥ ಶಬ್ದ ಪ್ರಯೋಗವನ್ನು ಬಿ.ಜೆ.ಪಿ. ಪ್ರಥಮವಾಗಿ ಮಾಡಿತು. ಅಸ್ವಾನಿಯವರು ಮುಸ್ಲಿಮರನ್ನು ಓಲೈಸುವವರನ್ನು ಸ್ಯುಡೋಸೆಕ್ಯೂಲರಿಸ್ಟ್‌ಗಳೆಂದು ಲೇವಡಿ ಮಾಡಿದರು. ಸ್ಯುಡೊಸೆಕ್ಯೂಲರಿಸಂ ಅಂತರಂಗದಲ್ಲಿ ಮೈನಾರಿಟಿಸಂ ಅಡಗಿದೆಯೆಂದೂ ಹೇಳಿದರು. ಪ್ರಜಾಪ್ರಭುತ್ವ ಎಂದರೆ ಮೆಜಾರಿಟಿಸಮ್ಮೋ? ಅಥವಾ ಮೈನಾರಿಟಿಸಮ್ಮೋ ? ಎಂದು ಅವರು ಬಹಿರಂಗ ಸವಾಲು ಹಾಕಿದರು. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಮಧ್ಯಮ ಜಾತಿಗಳ ಸಮುದಾಯಗಳು ಸೆಕ್ಯೂಲರಿಸಂನ ಈ ವ್ಯಾಖ್ಯಾನಗಳಿಂದ ಚಕಿತರಾದರು. ಹೊಸ ವ್ಯಾಖ್ಯಾನ ಕೇಳಿದವರಂತೆ ಅವರೆಲ್ಲ ಆಶ್ಚರ್ಯಕ್ಕೊಳಗಾದರು. ಅದ್ವಾನಿಯವರ ವಾದದಲ್ಲಿ ಸತ್ಯಾಂಶವಿದೆಯೆಂದು ಚರ್ಚಿಸಲಾರಂಭಿಸಿದರು. ಭಾರತದ ರಾಜಕೀಯದಲ್ಲಿ ದಶಕಗಳಿಂದ ದಾಳಿಗೊಳಗಾಗದೆ ಇದ್ದ ‘ಸೆಕ್ಯೂಲರಿಸಂ’ ಶಬ್ದದ ಮೇಲೆ ‘ಸ್ಯುಡೊಸೆಕ್ಯೂಲರಿಸಂ’ ಮತ್ತು ‘ಮೈನಾರಿಟಿಸಂ’ ಶಬ್ದಗಳು ಸರ್ಪಾಸ್ತ್ರಗಳಂತೆ ಎರಗಿಬಿದ್ದಿದ್ದವು.

“ಪ್ರಜಾಪ್ರಭುತ್ವ ಎಂದರೆ ಮೆಜಾರಿಟಿಗೆ ಮಾನ್ಯತೆ ಇರಬೇಕೆಂದು ಅರ್ಥ. ವಿಪರ್ಯಾಸವೆಂದರೆ ಇಲ್ಲಿ ಮೈನಾರಿಟಿಗೆ ಮಾನ್ಯತೆ ಇದೆ. ಮೈನಾರಿಟಿ ಪ್ರಾಶಸ್ತ್ಯ ಹೇಗೆ ಪ್ರಜಾಪ್ರಭುತ್ವ ಆಗಲು ಸಾಧ್ಯ ? ಪ್ರಜಾಪ್ರಭುತ್ವ ನಿಜವಾಗುವುದು ವಿಶಾಲ ಹಿಂದುಗಳಿಗೆ ಪ್ರಾಧಾನ್ಯತೆ ಸಿಕ್ಕಾಗ ಮಾತ್ರ . ಅಂದರೆ ಪ್ರಜಾಪ್ರಭುತ್ವ ಎಂದರೆ ಹಿಂದುತ್ವ; ಹಿಂದುತ್ವ ಎಂದರೆ ಪ್ರಜಾಪ್ರಭುತ್ವ” ಎಂದು ಎಲ್.ಕೆ. ಅದ್ವಾನಿ ವ್ಯಾಖ್ಯಾನಿಸಿದರು. ಮುಂದುವರಿದು “ಮೈನಾರಿಟಿಸಂ ಅನ್ನು ಒಪ್ಪಿಕೊಳ್ಳುವವರನ್ನು ಮಾತ್ರ ಸೆಕ್ಯೂಲರಿಸ್ಟ್ ಎನ್ನುತ್ತಾರೆ. ಮೆಜಾರಿಟಿಸಂ ಅನ್ನು ಒಪ್ಪಿಕೊಳ್ಳುವವರನ್ನು ಕಮ್ಯುನಲಿಸ್ಟ್ ಎಂದು ಆರೋಪಿಸುತ್ತಾರೆ. ಇದು ಯಾವ ನ್ಯಾಯ ? ಮೆಜಾರಿಟಿಸಂ ಅನ್ನು ಒಪ್ಪಿಕೊಂಡಾಗ ಮಾತ್ರವೇ ಸೆಕ್ಯೂಲರಿಸಂಗೆ ನಿಜವಾದ ಅರ್ಥ ಬರುತ್ತದೆ” ಎಂದು ಎಲ್.ಕೆ. ಅದ್ವಾನಿ ಅವರು ವ್ಯಾಖ್ಯಾನಿಸಿದರು.

ಎಡಶಕ್ತಿಗಳಿಂದ ಅಲಕ್ಷಿಸಲ್ಪಟ್ಟ ರಾಷ್ಟ್ರೀಯ ಭಾವನೆ

ಸ್ವಾತಂತ್ರ್ಯ ಚಳವಳಿಯಲ್ಲಿ ಉಕ್ಕಿಬಂದ ರಾಷ್ಟ್ರಾಭಿಮಾನವು ವಸಾಹತುಶಾಹಿ ವಿರೋಧಿ ಚಳವಳಿಯ ಫಲಶ್ರುತಿಯಾಗಿತ್ತು. ಯುರೋಪ್ ಚರಿತ್ರೆಕಾರರು, ಭಾರತಕ್ಕೆ ತನ್ನದೇ ಅದ ಇತಿಹಾಸ ಎನ್ನುವುದು ಇಲ್ಲ ಎಂದು ಭಾರತೀಯರು ತಮ್ಮ ದೇಶದ ಆಡಳಿತವನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲದವರು ಎಂದೂ ಬರೆಯುತ್ತಿದ್ದರು.

ಅದಕ್ಕೆ ವಿರುದ್ಧವಾಗಿ ಭಾರತಕ್ಕೆ ಚರಿತ್ರೆ ಇದೆ ಮತ್ತು ತನ್ನದೇ ಉಜ್ವಲ ಇತಿಹಾಸ ಎನ್ನುವುದಿದೆ ಎನ್ನುವ ವಾದಗಳು ಚರ್ಚೆಯ ಮುನ್ನೆಲೆಗೆ ಬಂದವು. ಕೈಗಾರಿಕಾ ಆರ್ಥಿಕತೆಯನ್ನು ಸಾಧಿಸಿದ ಹೊಸ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಜವಾಹರಲಾಲ್ ನೆಹರೂ ‘ಡಿಸ್ಕವರಿ ಆಫ್ ಇಂಡಿಯಾ’ ಎನ್ನುವ ಪುಸ್ತಕ ಬರೆದರು. ಭಾರತೀಯ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಬೆಳವಣಿಗೆಗಳನ್ನು ವಿಶ್ಲೇಷಿಸಿದರು. ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಸೆಣಸುತ್ತಿರುವ ಭಾರತದ ಚಿತ್ರಣವನ್ನು ಅದರಲ್ಲಿ ನೀಡಿದರು. ಸ್ವಾಮಿ ವಿವೇಕಾನಂದ, ಭಾರತದ ಆಧ್ಯಾತ್ಮಿಕ ಹಿರಿಮೆ ಗರಿಮೆಗಳನ್ನು ಪಾಶ್ಚಾತ್ಯರು ಬೆರಗಾಗುವಂತೆ ಹೇಳಿದರು. ಕಮ್ಯುನಿಸ್ಟ್ ಮತ್ತು ಸಮಾಜವಾದಿ ಚಳವಳಿಗಾರರು ವರ್ಣ ಮತ್ತು ಜಾತಿ ವ್ಯವಸ್ಥೆಗಳ ವಿರುದ್ಧ ಹಿಂದೂ ಧರ್ಮದ ಮೌಢ್ಯತೆಗಳ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುತ್ತಾ ಬಂದರು. ಆದರೆ ಸ್ವಾತಂತ್ರ್ಯ ಹೋರಾಟದ ಕಿಚ್ಚಿನಲ್ಲಿ ಬೆಂದು ತಯಾರಾಗಿ ಬಂದ’ರಾಷ್ಟ್ರೀಯ ಭಾವನೆ’ ಯನ್ನು ಎಡಶಕ್ತಿಗಳು ಜನಪರ ಚಳವಳಿಯೊಂದಿಗೆ ಬೆಸೆಯುವುದರ ಕಡೆಗೆ ಅಷ್ಟೊಂದು ಗಮನ ನೀಡಲಿಲ್ಲವೆಂದರೆ ತಪ್ಪಾಗಲಿಕ್ಕಿಲ್ಲ.

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಮೂಡಿಬಂದ ಗಾಂಧೀವಾದ, ವಿವೇಕಾನಂದರ ಫಿಲಾಸಫಿ, ‘ಅಂಬೇಡ್ಕರ‍್ವಾದ’ ಇವುಗಳಲ್ಲಿ ಹುದುಗಿದ್ದ ಎಡತತ್ವಗಳು ಕಮ್ಯುನಿಸ್ಟ್ ಚಳವಳಿಯ ಸೈದ್ಧಾಂತಿಕ ಚರ್ಚ್‌ಯ ಮಟ್ಟಕ್ಕೇ ಸೀಮಿತಗೊಂಡವು. ಅದರ ನಿತ್ಯದ ಹೋರಾಟದಲ್ಲಿ ಪ್ರಚಾರ ಘೋಷಣೆಗಳಲ್ಲಿ ಅವು ಬೆರೆಯಲಿಲ್ಲ. ಭಾರತೀಯ ತತ್ವಜ್ಞಾನದೊಳಗಿನ ಭೌತವಾದೀ ತತ್ವ ಸಿದ್ಧಾಂತಗಳಿಗೂ ಈ ಮೇಲಿನ ಮಾತು ಅನ್ವಯಿಸುತ್ತದೆ. ಚಾರ್ವಾಕ, ಕಣಾದ, ಬುದ್ಧ, ಸಾಂಖ್ಯ, ಬಸವ ಮುಂತಾದ ತತ್ವಗಳಲ್ಲಿ ಹುದುಗಿದ್ದ ಕ್ರಾಂತೀಕಾರೀ ತತ್ವಗಳು ಕಮ್ಯುನಿಸ್ಟ್ ಚಳವಳಿಯಲ್ಲಿ ಉನ್ನತ ಮಟ್ಟದ ಭೌದ್ಧಿಕ ಚರ್ಚೆಗೆ ಮಾತ್ರ ಸೀಮಿತಗೊಂಡವು.

ಸ್ವಾತಂತ್ರ್ಯನಂತರ ಆ ರಾಷ್ಟ್ರೀಯ ಭಾವನೆಯನ್ನು ಹೊಸ ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಹಾಯವಾಗುವಂತೆ ಸಂಸ್ಕರಿಸುವ ಶಕ್ತಿ ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲಿಲ್ಲ. ಅದು ಆ ಪಕ್ಷದ ವರ್ಗ ಗುಣದ ಮಿತಿಯಾಗಿತ್ತು. ಹಾಗಾಗಿ ‘ರಾಷ್ಟ್ರೀಯ ಭಾವನೆ’ ಜನಸಂಘದ ಕೈಯೊಳಗೆ ಆಶ್ರಯ ಪಡೆದುಕೊಳ್ಳುವಂತಾಯಿತು. ಅದರ ಪರಿಣಾಮವಾಗಿ ‘ರಾಷ್ಟ್ರೀಯ ಭಾವನೆಯು’ ‘ಹಿಂದುತ್ವದ ಭಾವನೆ’ ಯ ಮಟ್ಟಕ್ಕೆ ಸಂಕುಚಿತಗೊಳಿಸಲ್ಪಟ್ಟಿತು. ಝಾನ್ಸಿರಾಣಿ, ಕಿತ್ತೂರು ಚನ್ನಮ್ಮ, ಭಗತ್‌ಸಿಂಗ್, ಚಂದ್ರಶೇಖರ್ ಆಝಾದ್ ಮುಂತಾದವರು ರಾಷ್ಟ್ರೀಯ ಭಾವಣೆಯ ಪ್ರತೀಕಗಳಾಗುವ ಬದಲು ಹಿಂದುತ್ವ ಭಾವನೆಯ ಪ್ರತೀಕಗಳಾಗುವಂತಾಯಿತು.

ಮಂಡಲ್ ಚಳವಳಿ : ಹಿಂದುತ್ವ ಹೆಪ್ಪುಗಟ್ಟಿದ ಸಂದರ್ಭ

ಮೀಸಲಾತಿ ವಿರೋಧಿ ಚಳವಳಿ ಭಾರತದಲ್ಲಿ ಭುಗಿಲೆದ್ದಿತು. ಮಂಡಲ್ ಆಯೋಗದ ಶಿಫಾರಸ್ಸುಗಳು ಜಾರಿಯಾಗಬಾರದೆಂದು ಮೇಲು ಹಾಗೂ ಮಧ್ಯಮ ಜಾತಿಯ ವಿದ್ಯಾರ್ಥಿ ಯುವಜನರು ಆಹುತಿಯಾಗತೊಡಗಿದರು. ‘ಪ್ರತಿಭಾವಂತರಿಗೆ ಪುರಸ್ಕಾರ’ ಎನ್ನುವ ವಾದವನ್ನು ಬಿ.ಜೆ.ಪಿ. ರಾಜಕೀಯವಾಗಿ ಬಳಸಿಕೊಂಡಿತು. ೧೯೮೦ ರಿಂದ ೯೦ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಹಿಂದುತ್ವವಾದ ನಡೆಸಿದ ಭಿನ್ನ ವಿಭಿನ್ನ ಚಟುವಟಿಕೆ ಚಳವಳಿಗಳ ಪರಿಣಾಮವಾಗಿ ಅದು ಹೆಪ್ಪುಗಟ್ಟಿಕೊಳ್ಳುವಂತಾಯಿತು. ವಿಶೇಷವಾಗಿ ೧೯೯೦ ಹಿಂದುತ್ವಕ್ಕೆ ಸುವರ್ಣ ವರ್ಷವಾಗಿ ಪರಿಣಮಿಸಿತು. ಅದರ ಕನಸುಗಳು ಸಾಕಾರಗೊಂಡ ವರ್ಷ ಅದಾಗಿತ್ತು. ಮುಂಚೆ ಹಿಂದುತ್ವ, ಆರ್.ಎಸ್.ಎಸ್. ಎಂದರೆ ಹಿಂಜರಿಯುತ್ತಿದ್ದ ಜನ ವಿಭಾಗಗಳೆಲ್ಲ ಬಹಿರಂಗವಾಗಿ ಅವುಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡವು.

ಉನ್ನತ ಹುದ್ದೆಗಳಲ್ಲಿದ್ದು ನಿವೃತ್ತರಾದ ಅಧಿಕಾರಿಗಳು, ನ್ಯಾಯಾಧೀಶರು, ನಿವೃತ್ತ ಮಿಲಿಟರಿ ಅಧಿಕಾರಿಗಳು, ಬುದ್ಧಿಜೀವಿಗಳ ಒಂದು ಭಾಗ ಬಿ.ಜೆ.ಪಿ.ಯ ವೇದಿಕೆಯ ಮೇಲೆ ಬಂದು ನಿಂತುಕೊಂಡರು.

ರಥಯಾತ್ರೆಯ ರಣೋತ್ಸಾಹದಲ್ಲಿ ಬಂದ ಎಲ್.ಕೆ. ಅದ್ವಾನಿ ಅವರನ್ನು ಸ್ವಾಗತಿಸಲು ದೇಶದ ಬೃಹತ್ ಬಂಡವಾಳಶಾಹಿ ಬಿರ್ಲಾ ರೆಡ್ ಕಾರ್ಪೆಟ್ ಹಾಸಿ ನಿಂತಿದ್ದರು. ಕಲಕತ್ತಾದಲ್ಲಿ ಬಿರ್ಲಾ ಜೊತೆಗೆ ಬಂಡವಾಳಶಾಹಿಗಳ ಒಂದು ಗುಂಪು ಒಡದುಕೊಂಡು ಬಂದು ಬಿ.ಜೆ.ಪಿ.ಯೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದು ಚಾರಿತ್ರಿಕ ಘಟನೆಯಾಯಿತು.

ಕ್ಯಾಪಿಟಲಿಸ್ಟ್ ಓಲೈಕೆ : ಕಾಂಗ್ರೆಸ್ – ಬಿ.ಜೆ.ಪಿ.ಗಳ ಮೇಲಾಟ

ಬೃಹತ್ ಬಂಡವಾಳಶಾಹಿಗಳ ಮನ ಒಲಿಸಲು ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಎರಡೂ ಪಕ್ಷಗಳು ಪ್ರಯತ್ನಿಸತೊಡಗಿದವು. ಬಿ.ಜೆ.ಪಿ. ಪರ ವಾಲಿದ್ದ ಉದ್ಯಮಪತಿಗಳನ್ನು ಆಕರ್ಷಿಸಲು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಹೊಸ ಆರ್ಥಿಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರು. ಆಗ ಬೃಹತ್ ಉದ್ಯಮಪತಿಗಳಿಗೆ ಹೊಸ ತಂತ್ರವೊಂದು ಕೈಗೆ ಸಿಕ್ಕಂತಾಯಿತು. ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಎರಡೂ ಪಕ್ಷಗಳ ಹೆಗಲುಗಳ ಮೇಲೆ ಕೈ ಹಾಕಿಕೊಂಡಿದ್ದರೆ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಳ್ಳಬಹುದೆನ್ನುವುದನ್ನು ಬೃಹತ್ ಬಂಡವಾಳಶಾಹಿ ಕಂಡುಕೊಂಡ. ದೇಶದ ಗುತ್ತೇದಾರಿ ಬಂಡವಾಳಶಾಹಿಗಳ ಸಂಪತ್ತು ಕ್ರೋಢೀಕರಣದ ಮೇಲೆ ಇದ್ದ ನಿರ್ಬಂಧನೆಗಳನ್ನು ತೆಗೆದು ಹಾಕುವ ಅಂಶಗಳನ್ನು ೧೯೯೧ರ ಚುನಾವಣಾ ಪ್ರಣಾಲಿಕೆಯಲ್ಲಿ ಬಿ.ಜೆ.ಪಿ. ಘೋಷಿಸಿತು. ಗುತ್ತೇದಾರಿ ಬಂಡವಾಳ ಶಾಹಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಿಕೊಡುವ ಮಸೂದೆಯನ್ನು ನರಸಿಂಹರಾವ್ ಸರಕಾರ ಪಾರ್ಲಿಮೆಂಟ್‌ನಲ್ಲಿ ಮಂಡಿಸಿತು. ಆಗ ಬಿ.ಜೆ.ಪಿ. ಅದಕ್ಕೆ ತನ್ನ ಪೂರ್ಣ ಸಮ್ಮತಿಯನ್ನು ನೀಡಿತು. ಬಿ.ಜೆ.ಪಿ. ಮುಖಂಡರಾದ ಎಲ್.ಕೆ.ಅದ್ವಾನಿ ಮತ್ತು ಜಸ್ವಂತ್ ಸಿಂಗ್ ಅವರು “ನಾನು ಈವರೆಗೆ ಹೇಳುತ್ತ ಬಂದುದನ್ನು ಈಗ ಕಾಂಗ್ರೆಸ್ ಅನುಷ್ಠಾನಗೊಳಿಸುತ್ತಿದೆ” ಎಂದು ಹೇಳಿದರು. “ಲಿಬರಲೈಜೇಷನ್ ಮತ್ತು ಬಹರಾಷ್ಟ್ರೀಯ ಕಂಪನಿಗಳನ್ನು ಬಿ.ಜೆ.ಪಿ. ಸ್ವಾಗತಿಸುತ್ತದೆ” ಎಂದರು ಎಲ್.ಕೆ.ಅದ್ವಾನಿ ಅವರು. ಅದೇ ರಿತಿ ಬ್ಯಾಂಕ್ ಮತ್ತು ವಿಮಾ ಕಂಪನಿಗಳ ಖಾಸಗೀಕರಣವನ್ನು ಬಿ.ಜೆ.ಪಿ. ಘೋಷಿಸಿತು.

ಎಂ.ಆರ್.ಟಿ.ಪಿ. ಕಾನೂನಿಗೆ ತಿದ್ದುಪಡಿ ತಂದು ಗುತ್ತೇದಾರಿ ಬಂಡವಾಳಶಾಹಿಗಳ ಬಂಡವಾಳದ ಮಿತಿಯನ್ನು ೧೦೦ ಕೋಟಿಗಳಿಂದ ೧೦೦೦ ಕೋಟಿಗಳಿಗೆ ಏರಿಸಲಾಯಿತು. ಅದೇ ರೀತಿ ಸಾರ್ವಜನಿಕ ವಲಯವನ್ನು (ಪಬ್ಲಿಕ್ ಸೆಕ್ಟರ್) ಅಶಕ್ತಗೊಳಿಸುವ ಕಾನೂನುಗಳು ಬಂದವು. ಸಾರ್ವಜನಿಕ ಕ್ಷೇತ್ರ ಉದ್ಯಮಗಳಿಂದ ಬಂಡವಾಳವನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಯಿತು. ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಅಧಿಕಾರಕ್ಕೆ ಬಂದಾಗ ಬಂಡವಾಳ ಹಿಂದೆಗೆದುಕೊಳ್ಳುವುದಕ್ಕಾಗಿಯೇ ಮಂತ್ರಿಮಂಡಲದಲ್ಲಿ ಒಂದು ಪ್ರತ್ಯೇಕ ಸಚಿವ ಖಾತೆಯೇ ಸೃಷ್ಟಿಯಾಯಿತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಅರಣ್ ಶೌರಿ ಆ ಖಾತೆಗೆ ಮಂತ್ರಿಗಳಾಗಿದ್ದರು.

ಕೋಮುವಾದ ಮತ್ತು ಸಾಮ್ರಾಜ್ಯವಾದ

ಕೋಮುವಾದ ಭಾರತದಲ್ಲಿ ತಲೆಯೆತ್ತುವುದಕ್ಕೆ ದೇಶದ ಒಳಗಿನ ಪರಿಸ್ಥಿತಿಗಳು ಮಾತ್ರ ಕಾರಣವಾಗಿರಲಿಲ್ಲ. ಅಂತಾರಾಷ್ಟ್ರೀಯ ಪರಿಸ್ಥಿತಿಗಳೂ ಅದಕ್ಕೆ ನೀರೆರೆದವು. ಜನಾಂಗೀಯವಾದ ಕೋಮುವಾದಗಳು, ಮೂಲಭೂತವಾದಗಳು, ಅರೆಫ್ಯಾಸಿವಾದಗಳು ವಿಶ್ವದೆಲ್ಲೆಡೆ ಹೊಸ ಶಬ್ದಾಡಂಬರಗಳಲ್ಲಿ ಚರ್ಚೆಯಾಗಲಾರಂಭಿಸಿದ್ದವು. ಜರ್ಮನಿಯಲ್ಲಿ ಹಿಟ್ಲರ್ ಅಭಿಮಾನಿಗಳು ಹುಟ್ಟಿಕೊಂಡರು. ‘ಜರ್ಮನ್ ಕ್ರಿಶ್ಚನ್ ಡೆಮಾಕ್ರಾಟ್ಸ್’ ಎನ್ನುವ ಸಂಘಟನೆ ತನ್ನ ದೇಶೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕ್ರಿಶ್ಚನ್ ಡೆಮಾಕ್ರಾಟ್ಸ್ ಸಂಘಟನೆ ಕರೆ ಕೊಟ್ಟಿತು. ಭಾರತದಲ್ಲಿ ಎ.ಬಿ. ವಾಜಪೇಯಿ ಅವರು “ಮುಸ್ಲಿಮರು ಭಾರತೀಯರಾಗಬೇಕು” ಎಂದು ಕರೆ ಕೊಡುವುದಕ್ಕೆ ಹತ್ತು ವರ್ಷಗಳ ಮುಂಚೆಯೇ ಜರ್ಮನಿಯ ಫಾಸಿಸ್ಟರಾದ ಕ್ರಿಶ್ಚನ್ ಡೆಮಾಕ್ರಾಟರು ವಾಜಪೇಯಿಯವರ ವರಸೆಯಲ್ಲಿ ಮಾತನಾಡಿದ್ದರು ! ಅಮೆರಿಕಾದ ಅಧ್ಯಕ್ಷ ರೇಗನ್, ಬ್ರಿಟನ್ ಅಧ್ಯಕ್ಷೆ ಥ್ಯಾಚರ್ ಜನಾಂಗೀಯ ಹಾಗೂ ಮೂಲಭೂತವಾದಗಳಿಗೆ ರೆಕ್ಕೆಪುಕ್ಕವನ್ನು ಕಲ್ಪಿಸಿಕೊಟ್ಟರು.

೧೯೮೧ರಿಂದ ೧೯೮೯ರವರೆಗೆ ರೇಗನ್ ಕಾಲ ವಿಚ್ಛಿದ್ರಕ ಹಾಗೂ ಪ್ರಗತಿ ವಿರೋಧಿ ಶಕ್ತಿಗಳ ಮೇಲಾಟದ ಕಾಲ ಎಂದು ವ್ಯಾಖ್ಯಾನಿಸಿದರೆ ತಪ್ಪಿಲ್ಲ. ಇಟಲಿಯಲ್ಲಿ ನಾಜಿವಾದಿ ಮುಸಲೋನಿಯ ಆರಾಧನೆ ಆರಂಭವಾಯಿತು. ಮುಸಲೋನಿಯ ಆರಾಧಕ ಫಿನಿಯನ್ನು ರಾಜಕೀಯ ಮುತ್ಸದ್ದಿ ಎಂದು ಬಣ್ಣಿಸಲಾಯಿತು. ಇಸ್ರೇಲ್ ಯಹೂದಿಗಳು ಪ್ಯಾಲಿಸ್ತೇನ್ ಮುಸ್ಲಿಮರ ಮೇಲೆ ದಾಳಿ ಮಾಡುವಂತೆ ಅಮೆರಿಕಾ ಅಧ್ಯಕ್ಷ ರೇಗನ್ ಪ್ರಚೋದಿಸಿದರು ಮತ್ತು ಹೇರಳ ಶಸ್ತ್ರಾಸ್ತ್ರ ಮತ್ತು ಅಮೆರಿಕಾ ಸೇನಾ ಪಡೆಗಳನ್ನು ಇಸ್ರೇಲ್‌ಗೆ ಕಳಿಸಿಕೊಟ್ಟರು. ಲಿಬಿಯಾದ ಅಧ್ಯಕ್ಷ ಗಡಾಫಿಯ ನಿವಾಸದ ಮೇಲೆ ಅಮೆರಿಕಾದ ಯುದ್ಧ ವಿಮಾನಗಳು ದಾಳಿ ನಡೆಸಿದವು. ಯುರೋಪಿನ ಸಮಾಜವಾದಿ ರಾಷ್ಟ್ರಗಳಲ್ಲಿ ಜನಾಂಗೀಯವಾದ ತಲೆಯೆತ್ತಿತು. ಝೆಕ್ ಮತ್ತು ಸ್ಲಾವ್ ಜನಾಂಗಗಳ ಮಧ್ಯೆ ಘರ್ಷಣೆ ತೀವ್ರಗೊಂಡಿತು.

ಫ್ರೆಂಚ್ ಕ್ರಾಂತಿಯನ್ನು ತಲೆಬುಡಮಾಡುವಾಗ ಪ್ರಥಮವಾಗಿ ಹುಟ್ಟಿಕೊಂಡ ಬಲಪ್ರತಿಗಾಮಿವಾದದ ಬೀಜಗಳು ಎಲ್ಲೆಡೆ ಪುನಃ ಮೊಳಕೆಯೊಡೆಯಲಾರಂಭಿಸಿದವು. ರೇಗನ್ ಸಾರಥ್ಯದಲ್ಲಿ, ಸೋವಿಯತ್ ರಷ್ಯಾದ ಪತನಕ್ಕೆ ಬೇಕಾದ ಪೂರ್ವಸಿದ್ಧತೆಗಳೆಲ್ಲ ನಡೆಯತೊಡಗಿದವು. ಷಿಯಾ ಮತ್ತು ಸುನ್ನಿಗಳ ಕದನಕ್ಕೆ ಪವಿತ್ರಸ್ಥಳ ಮಕ್ಕಾ ಕರ್ಬಲಾ ಆಗಿ ಪರಿವರ್ತನೆಗೊಂಡಿತು. ಮುಸ್ಲಿಮ್ ಪವಿತ್ರ ಸ್ಥಳಕ್ಕೆ ರಕ್ತಾಭಿಷೇಕವಾಯಿತು. ಜನಾಂಗೀಯವಾದ, ಮೂಲಭೂತವಾದಗಳು “ಹೃದಯರಹಿತ ಜಗತ್ತಿನ ಹೃದಯ”ದಂತೆ ಧುತ್ತೆನ್ನತೊಡಗಿದವು.

ಎರಡನೇ ಮಹಾಯುದ್ಧದ ನಂತರದ ಮೂರು ದಶಕಗಳಲ್ಲಿ ವಿಶೇಷವಾಗಿ ಅಮೆರಿಕಾ ಮತ್ತು ಬ್ರಿಟನ್‌ಗಳಲ್ಲಿ ಬಂಡವಾಳ ಅಗಾಧ ಪ್ರಮಾಣದಲ್ಲಿ ಶೇಖರಣೆಗೊಂಡಿತ್ತು. ಜೊತೆಗೆ ಅಗಾಧ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಅಗಾಧ ಪ್ರಮಾಣದ ಬಂಡವಾಳಗಳು ಒಂದೆಡೆ ಶೇಖರಣೆಗೊಂಡಾಗ ಫ್ಯಾಸಿಸಂಗೆ ಅಗಾಧ ಪ್ರಮಾಣದ ರಕ್ತದ ಬಲಿ ಬೇಕಾಗುತ್ತದೆ.

ಫ್ರೆಂಡ್ಲಿ ಫಾಸಿಸಂ : ಅಂತಾರಾಷ್ಟ್ರೀಯ ಸೌಖ್ಯ ಸಮುದಾಯ

ಎರಡನೆಯ ಮಹಾಯುದ್ಧದ ನಂತರದಲ್ಲಿ ವಸಾಹತುಶಾಹಿಗಳು ನವವಸಾಹತುಸಾಹಿಗಳಾಗಿ ಪರಿವರ್ತನೆಗೊಂಡರು. ವಿವಿಧ ದೇಶಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡು ಅಲ್ಲಿ ಮಿಲಿಟರಿಯನ್ನಿಟ್ಟು ರಾಜಕೀಯ ಅಧಿಕಾರ ನಡೆಸುತ್ತ ಆರ್ಥಿಕವಾಗಿ ಸುಲಿಗೆ ಮಾಡುವುದನ್ನು ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ವಶಪಡಿಸಿಕೊಳ್ಳಲಾಗಿದ್ದ ಆಯಾ ದೇಶಗಳಿಗೆ ರಾಜಕೀಯ ಸ್ವಾತಂತ್ರ್ಯ ನೀಡಿ ಪರೋಕ್ಷವಾಗಿ ಆರ್ಥಿಕ ಶೋಷಣೆ ಮಾಡುವುದನ್ನು ನವವಸಾಹತುಶಾಹಿ ಎನ್ನಲಾಗುತ್ತದೆ. ಇದು ಸ್ಥೂಲ ವ್ಯಾಖ್ಯಾನ.

ವಸಾಹತುಗಳಾಗಿದ್ದ ದೇಶಗಳು ಸ್ವತಂತ್ರಗೊಂಡ ಮೇಲೆ ಅವನ್ನು ಆರ್ಥಿಕವಾಗಿ ಶೋಷಣೆ ಮಾಡಲು ನವವಸಾಹತುಶಾಹಿ ಸಾಮ್ರಾಜ್ಯಶಾಹಿಗಳು ನಾನಾ ಮಾರ್ಗಗಳನ್ನು ಅನುಸರಿಸತೊಡಗಿದರು. ಕೇವಲ ಮಿಲಿಟರಿ ಬಲವೊಂದರಿಂದಲೇ ವಿಶ್ವಮಟ್ಟದ ಶೋಷಣೆ ನಡೆಸುವುದು ಸಾಧ್ಯವಿಲ್ಲ ಎನ್ನುವುದು ಅವರಿಗೆ ಗೊತ್ತು. ಮಿಲಿಟರಿ ಬಲವನ್ನು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅವು ಬಳಸುತ್ತವೆ. ಒಂದು ದೇಶದ ಪ್ರಭುತ್ವ ಕಣ್ಣೆದುರು ಕಾಣುತ್ತಿರುತ್ತದೆ. ಆದರೆ ಈಗ ನವವಶಹತುಶಾಹಿ ಸನ್ನಿವೇಶದಲ್ಲಿ ವಿಶ್ವಪ್ರಭುತ್ವ ಅದೃಶ್ಯವಾಗಿರುತ್ತದೆ. ಪ್ರಭುತ್ವಕ್ಕೆ ಇರಬೇಕಾದ ಮಿಲಿಟರಿ ಬಲ ಮತ್ತು ಮಿಲಿಟರಿಯೇತರ (non co-ercieve) ಬಲಗಳನ್ನು ಹೊಂದಿರುತ್ತದೆ. ಅದರ ಮಿಲಟರಿ ಬಲದ ಶಕ್ತಿಗಳು ಬಹುತೇಕವಾಗಿ ಕಣ್ಣಿಗೆ ಕಾಣಿಸುತ್ತಿರುತ್ತವೆ. ಆದರೆ ಮಿಲಿಟರಿಯೇತರ ಶಕ್ತಿಗಳು ಅಗೋಚರವಾಗಿರುತ್ತವೆ. ವಿಶೇಷವಾಗಿ ಭಾರತದಂಥ ಅಭಿವೃದ್ಧಿಶೀಲ ದೇಶಗಳೊಳಗಿನ ಬಂಡವಾಳಶಾಹಿ ಮತ್ತು ಊಳಿಗಮಾನ್ಯ ಶಕ್ತಿಗಳನ್ನು ತಮ್ಮ ಆರಾಧಕರನ್ನಾಗಿಸಿಕೊಳ್ಳಲು ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿಗಳು ಸತತವಾಗಿ ಪ್ರಯತ್ನಿಸುತ್ತವೆ. ಎರಡನೆಯ ಮಹಾಯುದ್ಧದಲ್ಲಿ ಫಾಸಿಸಂ ವಿರುದ್ಧ ಹೋರಾಡಿದ ಮತ್ತು ಆ ವಾದವನ್ನು ಅತ್ಯಂತ ಕ್ರೂರ ಎಂದು ವ್ಯಾಖ್ಯಾನಿಸಿದ ಅಮೆರಿಕಾ ಮತ್ತದರ ಮಿತ್ರಕೂಟ ಹೊಸ ಸನ್ನಿವೇಶದಲ್ಲಿ ಹೊಸ ಮುಖವಾಡದೊಂದಿಗೆ ನವಘಾಸೀವಾದವನ್ನು ಹರಿಬಿಡಲಾರಂಭಿಸಿತು. ಸಾಮ್ರಾಜ್ಯಶಾಹಿ ದೇಶಗಳ ಒಳಗೇ ಘಾಸೀವಾದ ಹೊಸ ಪರಿಭಾಷೆ, ವ್ಯಾಖ್ಯಾನಗಳೊಂದಿಗೆ ತೇಲಾಡುತ್ತಿರುವುದನ್ನು ಕಾಣಬಹುದು. ಮೂರನೇ ಜಗತ್ತಿನ ರಾಷ್ಟ್ರಗಳಲ್ಲಿ ಬಹುಸಂಖ್ಯಾತ ಕೋಮುವಾದ, ರಾಷ್ಟ್ರೀಯ ಭಾವೋದ್ವೇಗ, ಭಯೋತ್ಪಾದನೆ, ಪ್ರಾಕ್ಸಿವಾರ್, ರೇಸಿಸಂ, ಮಿಲಿಟರಿ ಪ್ರಭುತ್ವ, ಧಾರ್ಮಿಕ ಪ್ರಭುತ್ವ, ವರ್ಣಶ್ರೇಷ್ಠತೆ ಮುಂತಾದವುಗಳನ್ನು ಮಿಲಿಟರಿಯೇತರ ಶಕ್ತಿಗಳನ್ನಾಗಿ ಪ್ರಯೋಗಿಸುತ್ತಿದೆ. ಅಣ್ವಸ್ತ್ರಗಳಿಗಿಂತ ಪರಿಣಾಮಕಾರಿಯಾಗಿ ಈ ಅಸ್ತ್ರಗಳು ಸಾಮ್ರಾಜ್ಯಶಾಹಿಗಳ ಸೇವೆ ಮಾಡುತ್ತಿವೆ. ಈ ವಿಚ್ಛಿದ್ರಕ ವಾದಗಳ ಪರವಾಗಿರುವ ಶಕ್ತಿಗಳನ್ನೆಲ್ಲ ಸೇರಿಸಿಕೊಂಡು ಅದಕ್ಕೆ ‘ಅಂತರಾಷ್ಟ್ರೀಯ ಸೌಖ್ಯ ಸಮುದಾಯ’ ಎನ್ನುವ ಹೆಸರು ಕೊಟ್ಟಿದೆ. ಅದಕ್ಕೆ ಅಮೆರಿಕದ ಸಾರಥ್ಯವಿರುವುದನ್ನು ಕಾಣಬಹುದು. ಆ ಸೌಖ್ಯ ಸಮುದಾಯದಲ್ಲಿ ವಾಜಪೇಯಿ, ಅದ್ವಾನಿಗಳು ಸದಸ್ಯತ್ವ ಪಡೆದುಕೊಂಡರು.