ನ್ಯಾಷನಾಲಿಟಿ : ಆಯಿತು ಕಮಾಡಿಟಿ

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಸಾಹತು ವಿರೋಧಿ ಸತ್ವದೊಂದಿಗೆ ರಾಷ್ಟ್ರೀಯತೆ ಅವಿರ್ಭವಿಸಿತು. ಉತ್ಕೃಷ್ಟ ಧ್ಯೇಯ ಆದರ್ಶಗಳನ್ನು ಜನತೆಯ ಮುಂದಿಟ್ಟಿತು. ಆ ದೃಷ್ಟಿಕೋನದಲ್ಲಿ ಕಲೆ, ಧರ್ಮ, ಸಂಸ್ಕೃರಿ, ತತ್ವಜ್ಞಾನಗಳು ರೂಪುಗೊಂಡವು. ದೇಶದ ಜನತೆಯ ಪ್ರಗತಿಗೆ ಸಾಧಕವಾಗಬಲ್ಲ ರಾಷ್ಟ್ರೀಯತೆ ಅದಾಗಿತ್ತು. ಜಾತಿ, ಧರ್ಮಗಳ ಎಲ್ಲೆ ಮೀರಿ ರಾಷ್ಟ್ರೀಯತೆ ಬೆಳೆದು ನಿಂತಿತು. ಆಗ ಹಳೆಯ ಬಂಡವಾಳಶಾಹಿಪೂರ್ವ ಊಳಿಗಮಾನ್ಯ ರಾಷ್ಟ್ರೀಯ ಕಲ್ಪನೆಗಳು ಹೊಸ ತೇಜಸ್ಸಿನ ರಾಷ್ಟ್ರೀಯತೆಯೊಂದಿಗೆ ಮುಖಾಮುಖಿ ಆದವು. ಹೊಸ ರಾಷ್ಟ್ರೀಯತೆಗೆ ಮುಖ್ಯವಾಗಿ ಎದುರು ನಿಂತದ್ದು ‘ಹಿಂದು ರಾಷ್ಟ್ರೀಯತೆ’, ಅದೇ ರೀತಿ ‘ಮುಸ್ಲಿಮ್ ರಾಷ್ಟ್ರೀಯತೆ’ ಆಗ ಸೆಕ್ಯೂಲರ್ ಸ್ವರೂಪದ ಹೊಸ ರಾಷ್ಟ್ರೀಯತೆಯೊಂದಿಗೆ ಊಳಿಗಮಾನ್ಯ ರಾಷ್ಟ್ರೀಯತೆಗಳು ಘರ್ಷಣೆಗೆ ತೊಡಗಿದ್ದವು.

ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದಲ್ಲಿ ಮೂಡಿಬಂದ ರಾಷ್ಟ್ರೀಯತೆಯ ಮೇಲೆ ಊಳಿಗಮಾನ್ಯ ರಾಷ್ಟ್ರೀಯತೆಗಳಿಂದ ನಡೆದ ದಾಳಿ ಅಷ್ಟೊಂದು ಬರ್ಬರವಾಗಿರಲಿಲ್ಲ. ಊಳಿಗಮಾನ್ಯ ರಾಷ್ಟ್ರೀಯತೆಗಳಿಗೆ ಅಂಥ ಶಕ್ತಿ, ಸಾಮರ್ಥ್ಯಗಳಿರಲಿಲ್ಲ. ಸಂಸ್ಥಾನಾಧಿಪತಿಗಳು, ಬ್ರಿಟಿಷರ ಕೈಗೊಂಬೆ ಅರಸುಗಳ ಪರಿಹಾರಧನ ಸಿಕ್ಕರೆ ಸಾಕು ಎನ್ನುವಂಥ ದಯನೀಯ ಸ್ಥಿತಿಯಲ್ಲಿದ್ದರು. ಅವರ ಆಶ್ರಯದ ‘ಹಿಂದೂ ರಾಷ್ಟ್ರೀಯತೆ’ ಗೆ ತೀವ್ರ ಮುಗ್ಗಟ್ಟುಂಟಾಯಿತು.

ಹಿಂದೂ ರಾಷ್ಟ್ರೀಯತೆಯಲ್ಲಿ ಕರಳುಬಳ್ಳಿಯ ಭಾವನೆಗಳು ಬೆರೆತುಕೊಂಡಿದ್ದವು. ಅದು ಆಗಿನ್ನೂ ಶುದ್ಧ ಲಾಭದ ‘ಸರಕು’ ಆಗಿರಲಿಲ್ಲ. ಊಳಿಗಮಾನ್ಯ ಶಕ್ತಿಗಳು ಪ್ರತಿಯೊಂದನ್ನು ಆರಾಧನೆಗೆ ಒಳಪಡಿಸಿದರೆ ; ಬಂಡವಾಳಶಾಹಿ ಪ್ರತಿಯೊಂದನ್ನು ಸರಕಾಗಿ ಪರಿವರ್ತಿಸುತ್ತದೆ. ಅದೇ ರೀತಿ ರಾಷ್ಟ್ರೀಯತೆಯೂ ಸರಕಾಗಿ ಮಾರ್ಪಾಟುಗೊಳ್ಳತೊಡಗುತ್ತದೆ. ವಸಾಹತು ವಿರೋಧಿ ಹೋರಾಟದ ಗುಣ ಭಾರತದ ರಾಷ್ಟ್ರೀಯತೆಯ ಮುಖ್ಯ ತಿರುಳಾಗಿತ್ತು. ಆ ತಿರುಗಳಿಗೇ ಹೊಡೆತ ಬಿದ್ದಾಗ ರಾಷ್ಟ್ರೀಯತೆ ಗುಪ್ತವಾಗಿ ಸರಕಾಗಿ ಮಾರ್ಪಾಟುಗೊಂಡಿತು. ರಾಷ್ಟ್ರೀಯತೆಗೆ, ನವವಸಾಹತುಶಾಹಿ ಸಾಮ್ರಾಜ್ಯಶಾಹಿಗಳನ್ನು ವಿರೋಧಿಸಲಾರದೆ ತನ್ನ ಧೀರೋದಾತ್ತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಸಾಮ್ರಜ್ಯಶಾಹಿ ಶೋಷಣೆಗೆ ಪ್ರತಿರೋಧ ಒಡ್ಡದ ರಾಷ್ಟ್ರೀಯತೆಗೆ ಆರ್ಭಟ ಜಾಸ್ತಿಯಾಗತೊಡಗುತ್ತದೆ ; ಖಾಲಿ ಕೊಡದಂತೆ ಶಬ್ದ ಮಾಡತೊಡಗುತ್ತದೆ ; ಆರುವ ದೀಪ ಎತ್ತರಕ್ಕೆ ಉರಿಯುವಂತೆ ಉರಿಯತೊಡಗುತ್ತದೆ ; ರಾಷ್ಟ್ರ ರಾಷ್ಟ್ರ ಎನ್ನುವ ಬಡಬಡಿಕೆ ಎಲ್ಲೆಡೆ ಕಿವಿಗಡಚಿಕ್ಕುವಂತೆ ಕೇಳತೊಡಗುತ್ತದೆ. ಅಂತಹ ರಾಷ್ಟ್ರೀಯತೆಯನ್ನು ಸರಕೀಕೃತ ರಾಷ್ಟ್ರೀಯತೆ ಎಂದು ವ್ಯಾಖ್ಯಾನಿಸಬಹುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ಮಿತ್ರಕೂಟ ಸಾಮ್ರಾಜ್ಯಶಾಹಿಗಳು ಅಗಾಧ ಪ್ರಮಾಣದ ಸಂಪತ್ತನ್ನು ಶೇಖರಿಸಿಕೊಂಡಂತೆಯೇ ಭಾರತದ ಬಂಡವಾಳಶಾಹಿ ಸ್ವಾತಂತ್ರ್ಯ ನಂತರದ ಐದು ದಶಕಗಳಲ್ಲಿ ಅಗಾಧ ಸಂಪತ್ತು ಶೇಖರಿಸಿಕೊಡುವ ಸಂದರ್ಭದಲ್ಲಿ ಸರಕೀಕೃತ ರಾಷ್ಟ್ರೀಯತೆ ಪೂರ್ಣಸ್ವರೂಪದಲ್ಲಿ ಅನಾವರಣಗೊಂಡಿತು. ಸೆಕ್ಯುಲರ್ ಇಮೇಜಿನ ಗಾಂಧೀಜಿ ಮತ್ತು ಅಂಬೇಡ್ಕರ್‌ಗಳು ರೂಪಾಂತರಗೊಂಡು ಹಿಂದುತ್ವದ ಸಿಂಬಲ್‌ಗಳಾಗಿರುವುದರ ಆಶ್ಚರ್ಯವನ್ನೂ ನಾವು ಈಗ ಕಾಣಬಹುದಾಗಿದೆ. ಸರಕೀಕೃತ ಭಾರತೀಯ ರಾಷ್ಟ್ರೀಯತೆಯಂತೆಯೇ ಹಿಂದುತ್ವ ಸಹ ಸರಕೀಕರಣಕ್ಕೆ ಒಳಗಾಗಿದೆ. ಹಿಂದುತ್ವದ ಬ್ರಾಂಡ್ ಲಾಭಕಾರಕವಾಗಿ ಪರಿಣಮಿಸಿದೆ.

ಮುಸ್ಲಿಮ್ ಮೂಲಭೂತವಾದ : ಭಾರತದಲ್ಲಿ ರಕ್ಷಣಾತ್ಮಕ ; ಪಾಕಿಸ್ತಾನದಲ್ಲಿ ಆಕ್ರಮಣಾತ್ಮಕ

ಕೋಮುವಾದದ ಘರ್ಷಣೆ ತೀವ್ರಗೊಂಡಂತೆಲ್ಲ ಮೂಲಭೂತವಾದ ಮೊನಚಾಗುತ್ತಾ ಸಾಗುತ್ತದೆ. ನಿರ್ದಿಷ್ಟ ಕೋಮುಗಳಿಗೆ ಒಳಪಟ್ಟ ಜನಸಮುದಾಯಗಳು ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದರೂ ಅವು ಚಲನಶೀಲವಾಗಿರುತ್ತವೆ; ನಿಂತ ನೀರಾಗಿರುವುದಿಲ್ಲ. ಯಾವಾಗ ಕೋಮು ಘರ್ಷಣೆ ತೀವ್ರಗೊಳ್ಳುವುದೋ ಆಗ ಧಾರ್ಮಿಕ ಭಾವನೆ ತನ್ನ ಚಲನಶೀಲತೆಯನ್ನು ಕಳೆದುಕೊಂಡು ಜಡತ್ವದತ್ತ ಸಾಗತೊಡಗುತ್ತದೆ. ಹೀಗೆ ಜಡತ್ವ ಪಡೆದುಕೊಳ್ಳುವ ಪ್ರಕ್ರಿಯೆಯೇ ಮೂಲಭೂತವಾದಲ್ಲಿ ಪ್ರಕಟಗೊಳ್ಳುತ್ತದೆ. ಪ್ರಾಚೀನ ಕಾಲದಲ್ಲಿ, ಮೂಲದಲ್ಲಿ ಏನು ಹೇಳಲಗಿತ್ತೋ, ಏನು ಬೋದಿಸಲಾಗಿತ್ತೋ ಅದೇ ಸತ್ಯ. ನಂತರ ನಡೆದ ಸುಧಾರಣೆಗಳೆಲ್ಲ ಮಿಥ್ಯ ಎನ್ನುವ ವಾದ ಆರಂಭವಾಗುತ್ತದೆ.

ಬಹುಸಂಖ್ಯಾತ ಕೋಮುವಾದ ಆಕ್ರಮಣಕಾರಿಯಾದಷ್ಟೂ ಅಲ್ಪಸಂಖ್ಯಾತ ಕೋಮುವಾದ ರಕ್ಷಣಾತ್ಮಕವಾಗುತ್ತ ಸಾಗುತ್ತದೆ. ರಕ್ಷಣಾತ್ಮಕ ಗುಣದ ಅಲ್ಪಸಂಖ್ಯಾತ ಕೋಮುವಾದ ಸಹ ದುಷ್ಪರಿಣಾಮಕಾರಿಯಾದದ್ದಾಗಿರುತ್ತದೆ. ಈ ಎರಡೂ ಕೋಮುವಾದಗಳು ಜನತೆಯನ್ನು ಪ್ರಜಾಪ್ರಭುತ್ವ ಚಳವಳಿಗೆ ಹೋಗದಂತೆ ತಡೆಹಿಡಿಯುವಂಥವಾಗಿವೆ; ಸಮಾಜದ ಪ್ರಗತಿಗೆ ಎರಡೂ ಕಂಟಕಪ್ರಾಯವಾದವುಗಳಾಗಿವೆ.

ಮುಸ್ಲಿಮ್ ಕೋಮುವಾದ ಭಾರತದಲ್ಲಿ ರಕ್ಷಣಾತ್ಮಕ ಸ್ವರೂಪದಲ್ಲಿದೆ. ಆದರೆ ಪಾಕಿಸ್ತಾನದಲ್ಲಿ ಅದು ಆಕ್ರಮಣಾತ್ಮಕವೂ ಬಹುಸಂಖ್ಯಾತ ಕೋಮುವಾದವೂ ಆಗಿದೆ. ಬಾಂಗ್ಲಾದೇಶದಲ್ಲಿ ಸಹ ಮುಸ್ಲಿಮ್ ಕೋಮುವಾದ ಆಕ್ರಮಣಕಾರಿ ಆಗಿರುವುದನ್ನು ಕಾಣಬಹುದು. ಆ ಎರಡೂ ದೇಶಗಳಲ್ಲಿ ಹಿಂದು ಕೋಮುವಾದ ರಕ್ಷಣಾತ್ಮಕವೂ ಅಲ್ಪಸಂಖ್ಯಾತವೂ ಆದ ಕೋಮುವಾದವಾಗಿದೆ. ಅಲ್ಪಸಂಖ್ಯಾತ ಹಿಂದುಗಳಿಗೆ ಪ್ರಜಾಸತ್ತಾತ್ಮಕ ರಕ್ಷಣೆ ಬೇಕೆಂದು ಹೇಳಿದ ತಸ್ಲೀಮಾ ನಸ್ರೀನ್ ಬಾಂಗ್ಲಾದಿಂದ ಗಡಿಪಾರು ಮಾಡಲ್ಪಟ್ಟಿರುವುದನ್ನು ನೋಡಬಹುದು.

ತುರ್ತಾಗಿ ರಕ್ಷಿಸಲ್ಪಡಬೇಕಾಗಿವೆ : ಸಂವಿಧಾನ ಮತ್ತು ಪ್ರಜಾಪ್ರಭುತ್ವ

ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿ ಪ್ರತಿಭಟನೆ ಮತ್ತು ಹೋರಾಟಗಳು ಧರ್ಮ, ಜಾತಿ, ಭಾಷೆ, ಪ್ರಾದೇಶಿಕತೆಯ ರೂಪಗಳಲ್ಲಿ ವ್ಕಕ್ತಗೊಳ್ಳುತ್ತವೆ. ನಮ್ಮ ದೇಶದಲ್ಲಿ ಸಾಮಾಜಿಕ ಪರಿಸ್ಥಿತಿ ಆಧುನಿಕತೆಯ ಜೊತೆ ಜೊತೆಯೇ ಹಿಂದುಳಿದಿರುವಿಕೆಯೂ ಅಸ್ತಿತ್ವದಲ್ಲಿದೆ. ಅತ್ಯಂತ ಮುಂದುವರಿದ ವೈಜ್ಞಾನಿಕತೆ, ಮಾಹಿತಿ ತಂತ್ರಜ್ಞಾನಗಳ ಹಿರಿಮೆಗಳು ಒಂದೆಡೆ ಇರುವಾಗಲೇ ಕಾಲುಗಳಿಗೆ ಸರಪಳಿ ಬಿಗಿದು ದುಡಿಸಿಕೊಳ್ಳುವ ಗುಲಾಮಿ ಪದ್ಧತಿಯ ಪಳೆಯುಳಿಕೆಗಳ ಉದಾಹರಣೆಗಳೂ ಸಿಗುತ್ತವೆ. ಅತ್ಯಂತ ಮುಂದುವರಿದ ಸಾಫ್ಟ್‌ವೇರ್ ಕಾರ್ಮಿಕ ವರ್ಗ ಒಂದೆಡೆ ಇರುವಾಗಲೇ ಮಲಹೊರುವ ಕಾರ್ಮಿಕರು ತಲೆಯ ಮೇಲೆ ಒಂದು ಸೂರು ಬೇಕೆಂದು ತಮ್ಮ ಮೈಮೇಲೆ ಲಮಲ ಸುರಿದುಕೊಂಡು ಪ್ರತಿಭಟಿಸುವ ದೃಶ್ಯಗಳೂ ಕಣ್ಣಿಗೆ ಕುಕ್ಕುತ್ತವೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಇಂಥ ದ್ವಂದ್ವ ಪರಿಸ್ಥಿತಿಗಳು ಇರಬೇಕಾದರೆ ಸ್ವಾತಂತ್ರ್ಯಪೂರ್ವದಲ್ಲಿ ಅದೆಂಥ ಪರಿಸ್ಥಿತಿಗಳು ನಮ್ ದೇಶದಲ್ಲಿದ್ದಿರಬೇಕೊ ಊಹಿಸಿಕೊಳ್ಳಬಹುದು. ಹಸಿವು, ಅನಕ್ಷರತೆ, ಬರ, ಬಡತನಗಳು ಎಲ್ಲೆಡೆ ತಾಂಡವವಾಡುತ್ತಿದ್ದವು. ವಸಾಹತುಶಾಹಿಯ ಕ್ರೂರ ಶೋಷಣೆ ಅವಕ್ಕೆಲ್ಲ ಮುಖ್ಯ ಕಾರಣವಾಗಿತ್ತು.

ಸ್ವಾತಂತ್ರ್ಯ ಚಳವಳಿಯಲ್ಲಿ ಮುಖ್ಯವಾಗಿ ಎರಡು ಘಟ್ಟಗಳಿವೆ. ಒಮದನೆಯದು ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಎರಡನೆಯದು ೧೯೪೭ರ ನಿರ್ಣಾಯಕ ಸ್ವಾತಂತ್ರ್ಯ ಸಂಗ್ರಾಮ. ಈ ಅವಧಿಯ ಅಂತರ ಒಂದು ಶತಮಾನವಾಗಿದೆ. ೧೮೫೭ರ ಸಿಪಾಯಿ ದಂಗೆಗಿಂತ ಒಂದು ಶತಮಾನ ಮುಂಚೆ ಬ್ರಿಟಿಷ್ ವಸಾಹತುಶಾಹಿಗಳು ಭಾರತವನ್ನು ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡಿತ್ತು. ಈ ಎರಡು ನೂರು ವರ್ಷಗಳ ಅವಧಿಯಲ್ಲಿ ಸ್ವಾತಂತ್ರ್ಯ ಚಳವಳಿ ವಿಕಾಸಗೊಂಡಿತ್ತು. ಎರಡು ಘಟ್ಟಗಳಲ್ಲಿ ಕ್ರಾಂತಿಕಾರಿ ನೆಗೆತಗಳನ್ನು ಸಾಧಿಸಿತು. ಪ್ರಥಮ ಘಟ್ಟದ ಹೋರಾಟಕ್ಕೆ ಪಾಳೇಗಾರಿ ಶಕ್ತಿಗಳು ನೇತೃತ್ವ ನೀಡಿದವು. ಎರಡನೇ ಘಟ್ಟದ ನಿರ್ಣಾಯಕ ಹೋರಾಟಕ್ಕೆ ಬಂಡವಾಳಶಾಹಿ ಶಕ್ತಿಗಳು ನೇತೃತ್ವ ನೀಡಿದವು. ಎರಡನೇ ಘಟ್ಟದ ನಿರ್ಣಾಯಕ ಹೋರಾಟಕ್ಕೆ ಬಂಡವಾಳಶಾಹಿ ಶಕ್ತಿಗಳು ನೇತೃತ್ವ ನೀಡಿದವು.

ಸಿಪಾಯಿ ದಂಗೆಯ ನಂತರ ದಿಲ್ಲಿ ಸಿಂಹಾಸನದ ಮೇಲೆ ವಯೋವೃದ್ಧ ಬಹದ್ದೂರ್ ಶಾ ಜಫರ್‌ನನ್ನು ತಂದು ಪಟ್ಟಕ್ಕೇರಿಸಲಾಯಿತು. ಇದಕ್ಕೆ ತೀರಾಭಿನ್ನವಾಗಿ ಎರಡನೇ ಘಟ್ಟದ ಸ್ವಾತಂತ್ರ್ಯ ಹೋರಾಟದ ನಂತರ ಮೊಗಲ್ ದೊರೆಯ ಬದಲಿಗೆ ಪಾರ್ಲಿಂಮೆಂಟ್ ಅನ್ನು ಅಸ್ತಿತ್ವಕ್ಕೆ ತರಲಾಯಿತು. ಸ್ವಾತಂತ್ರ್ಯ ಚಳವಳಿಗೆ ಕಾಂಗ್ರೆಸ್ ನೇತೃತ್ವದಲ್ಲಿ ಶುದ್ಧ ರಾಜಕೀಯ ಸ್ವರೂಪದ ಆಯಾಮ ಸಿಕ್ಕ ನಂತರವೂ ಇನ್ನೂ ಅನೇಕ ಪಾಳೇಗಾರಿ, ಬುಡಕಟ್ಟು ಶಕ್ತಿಗಳು ತಮ್ಮ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಸ್ವಾತಂತ್ಯ್ರಾಂದೋಲನದಲ್ಲಿ ಭಾಗವಹಿಸಿದ್ದವು. ಹಲವಾರು ಸಂದರ್ಭಗಳಲ್ಲಿ ಭಿನ್ನ ವಿಭಿನ್ನವಾಗಿ ಈ ಶಕ್ತಿಗಳು ಪ್ರತಿಕ್ರಿಯಿಸಿದವು. ಕೆಲವು ಸನ್ನಿವೇಶಗಳಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿಯೂ ಈ ಶಕ್ತಿಗಳು ನಿಂತುಕೊಂಡವು. ಈ ಶಕ್ತಿಗಳಿಂದ ಜಾತಿ, ಜನಾಂಗ, ಭಾಷೆ, ಪ್ರಾದೇಶಿಕ ಸ್ವರೂಪಗಳಲ್ಲಿಯೂ ಪ್ರತಿಭಟನೆಗಳು ಹೊಮ್ಮಿದವು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸುದೀರ್ಘ ಕಾಲದ ಸನ್ಯಾಸಿ ಚಳವಳಿ ಸುಪ್ರಸಿದ್ಧವಾಯಿತು. ಶೋಷಣೆ, ದಬ್ಬಾಳಿಕೆ, ಕ್ರೌರ್ಯಗಳ ವಿರುದ್ಧ ಪ್ರತಿಭಟಿಸಲು ಧರ್ಮಾತೀತ ಸೆಕ್ಯುಲರ್ ರಾಜಕೀಯ ಶಕ್ತಿಗಳ ಕೊರತೆ ಇರುವಾಗ ಜಾತಿ, ಭಾಷೆ, ಬುಡಕಟ್ಟು ಪ್ರಾದೇಶಿಕತೆಗಳನ್ನು ಗುರಾಣಿ ಮಾಡಿಕೊಂಡು ಜನಸಮುದಾಯಗಳು ಹೋರಾಟಕ್ಕಿಳಿಯುತ್ತವೆ.

ಆದರೆ ಸ್ವಾತಂತ್ಯ್ರಾನಂತರದ ಪರಿಸ್ಥಿತಿಗಳಲ್ಲಿ ಜಾತಿ, ಭಾಷೆ, ಬುಡಕಟ್ಟು, ಪ್ರಾದೇಶಿಕ ಶಕ್ತಿ ಭಿನ್ನವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ನೋಡಬಹುದು. ಸ್ವಾತಂತ್ರ್ಯಪೂರ್ವದಲ್ಲಿ ತ್ಯಾಗ ಮನೋಭಾವನೆ ಪ್ರಧಾನವಾಗಿದ್ದರೆ ; ಸ್ವಾತಂತ್ಯ್ರೋತ್ತರ ಸನ್ನಿವೇಶದಲ್ಲಿ ಭೋಗ ಭಾವನೆ ಮನೆ ಮಾಡಿಕೊಂಡಿದೆ.

ಸ್ವಾತಂತ್ಯ್ರಾನಂತರ ಕಾಂಗ್ರೆಸ್, ದೇಶದ ಪ್ರಶ್ನಾತೀತ ಬೃಹತ್ ಶಕ್ತಿಯಾಗಿ ಪ್ರತಿಷ್ಠಾಪನೆಗೊಂಡಿತು. ಕಾಂಗ್ರೆಸ್ಸನ್ನು ಬಂಡವಾಳಶಾಹಿ ಭೂಮಾಲೀಕ ಶಕ್ತಿಗಳು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗುವಂತೆ ವಾಲಿಸಿಕೊಳ್ಳಲಾರಂಭಿಸಿದವು. ಕಾಂಗ್ರೆಸ್ಸಿನ ಈ ಧೋರಣೆಗೆ ದೇಶದ ನಾನಾ ಭಾಗಗಳಿಂದ ಪ್ರತಿಭಟನೆಗಳು ಸಿಡಿಯಲಾರಂಭಿಸಿದವು. ವಿವಿಧ ಜನಸಮುದಾಯಗಳು ಕಾಂಗ್ರೆಸ್ ಸರ್ವಾಧಿಕಾರದ ವಿರುದ್ಧ ಭುಗಿಲೆದ್ದವು. ಭುಗಿಲೆದ್ದ ಶಕ್ತಿಗಳಿಗೆ ಪ್ರಾದೇಶಿಕ ಬಂಡವಾಳಶಾಹಿ ಭೂಮಾಲಕ ಶಕ್ತಿಗಳು ಮುಖಂಡತ್ವ ನೀಡಿದವು. ತಮ್ಮ ವರ್ಗಹಿತಗಳಿಗೆ ಅನುವಾಗುವಂತೆ ಆ ಚಳವಳಿಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ತೊಡಗಿದವು. ಈ ಪ್ರಕ್ರಿಯೆಯಲ್ಲಿ ಒಳಬಂಡಾಯಗಳು ಆ ಚಳವಳಿಗಳಲ್ಲಿ ಸ್ಫೋಟಗೊಂಡವು. ಮುಖ್ಯವಾಗಿ ಇಲ್ಲಿ ಭಾರತ ಪ್ರಭುತ್ವದ ಮೇಲೆ ಸರ್ವಾಧಿಕಾರ ಸ್ಥಾಪಿಸಬೇಕೆನ್ನುವ ಬೃಹತ್ ಬಂಡವಾಳಶಾಹಿ ಹಿತಾಸಕ್ತಿಯ ವಿರುದ್ಧ ನಾನಾ ಶಕ್ತಿಗಳು ಸಿಡಿದೆದ್ದಿರುವುದನ್ನು ಗುರುತಿಸಬೇಕು. ಇದು ಕೇಂದ್ರೀಕರಣ ಮತ್ತು ವಿಕೇಂದ್ರೀಕರಣಗಳ ನಡುವಿನ ಪ್ರಧಾನ ವೈರುಧ್ಯವಾಗಿದೆ.

ಸ್ವಾತಂತ್ಯ್ರಾನಂತರ ಮೂರು ದಶಕಗಳವರೆಗೆ ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷಗಳನ್ನು ಅನುಕಂಪದ ದೃಷ್ಟಿಯಿಂದ ನೋಡುತ್ತಿತ್ತು. ಎಮರ್ಜೆನ್ಸಿಯ ನಂತರ ಪ್ರಾದೇಶಿಕ ಪಕ್ಷಗಳು ಮತ್ತು ಇತರ ವಿರೋಧ ಪಕ್ಷಗಳು ದೇಶ ರಾಜಕೀಯದಲ್ಲಿ ನಿರ್ಧಾರಕ ಪಾತ್ರ ವಹಿಸುವ ಸಾಮರ್ಥ್ಯ ಪಡೆದುಕೊಳ್ಳುವಂತಾದವು. ಅದಕ್ಕೂ ಮುಂಚೆ ಒಮದೇ ಪಕ್ಷ ಕೇಂದ್ರದಲ್ಲಿ ಸರಕಾರ ರಚಿಸುವುದು ಸಂಪ್ರದಾಯವಾಗಿಬಿಟ್ಟಿತ್ತು. ಸಮ್ಮಿಶ್ರ ಸರಕಾರದ ಪರಿಚಯವಿರಲಿಲ್ಲ. ಪ್ರಥಮವಾಗಿ ಜನತಾ ಸರ್ಕಾರ, ಆ ನಂತರ ಬಿ.ಜೆ.ಪಿ. ನೇತೃತ್ವದಲ್ಲಿ ಸಮ್ಮಿಶ್ರ ಹಾಗೂ ಎನ್.ಡಿ.ಎ. ಸರಕಾರಗಳು ಅಸ್ತಿತ್ವಕ್ಕೆ ಬಂದ ಮೇಲೆ ಸಮ್ಮಿಶ್ರ ಸರಕಾರದ ಅನಿವಾರ್ಯತೆಯನ್ನು ಕಾಂಗ್ರೆಸ್‌ ಕಂಡುಕೊಳ್ಳುವಂತಾಯಿತು. ಮೈತ್ರಿಕೂಟ ರಚಿಸಿಕೊಂಡು ಸರಕಾರ ರಚಿಸಲು ಮುಂದಾಯಿತು. ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಈ ಎರಡೂ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಓಲೈಸಲು ಪೈಪೋಟಿ ನಡೆಸತೊಡಗಿದವು. ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವಗಳ ವೈರುಧ್ಯದ ಪರಿಣಾಮವಾಗಿ ಮುಖ್ಯ ರಾಷ್ಟ್ರೀಯ ಪಕ್ಷಗಳು ಮಿತ್ರಪಕ್ಷಗಳಾಗಿ ಹೊರಹೊಮ್ಮುವಂಥ ಪರಿಸ್ಥಿತಿ ಉದ್ಭವಿಸಿತು. ಇಂದಿರಾಗಾಂಧಿಯವರು ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ದ ಪಾಪಕ್ಕೆ ಕಾಂಗ್ರೆಸ್ಸಿಗೆ ಸಿಕ್ಕ ಶಾಶ್ವತ ಶಾಪದಂತೆ ಮೈತ್ರಿಕೂಟದ ರಾಜಕೀಯ ಕಾಣುತ್ತಿದೆ.

ಪ್ರಾದೇಶಿಕ ಪಕ್ಷಗಳ ಮಿತಿಗಳು, ನೇತ್ಯಾತ್ಮಕ ಅಂಶಗಳು ಏನೇ ಇದ್ದರೂ ಅವನ್ನು ಬದಿಗಿರಿಸಿ ಸೂಕ್ಷ್ಮವಾಗಿ ಅವಲೋಕಿಸಬೇಕು. ದೇಶವನ್ನು ಸರ್ವಾಧಿಕಾರದ ಪ್ರಪಾತಕ್ಕೆ ಕೊಂಡೊಯ್ಯಲಾರದಂತೆ ರಾಜಕೀಯವನ್ನು ನಿಯಂತ್ರಿಸುವ ಶಕ್ತಿಗಳಂತೆ ಪ್ರಾದೇಶಿಕ ಪಕ್ಷಗಳು ಗೋಚರಿಸುತ್ತವೆ. ಅವುಗಳ ಈ ಡೈನಾಮಿಸಂ ಅನ್ನು ಗುರುತಿಸದೆ ಹೋದರೆ ತಪ್ಪು ರಾಜಕೀಯ ತೀರ್ಮಾನಗಳತ್ತ ಹೋಗಬೇಕಾಗುತ್ತದೆ.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಅನೇಕ ರೀತಿಯಲ್ಲಿ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳನ್ನು ವಿಶ್ಲೇಷಿಸಬೇಕು.

  • ಸ್ವಾತಂತ್ರ್ಯ ಸಿಕ್ಕುವ ಸಂದರ್ಭದಲ್ಲಿ ವಸಾಹತುಶಾಹಿಗಳು ಮತ್ತು ಕೋಮುವಾದಿ ಶಕ್ತಿಗಳ ಸಂಚಿನಿಂದಾಗಿ ಭಾರತ ಇಬ್ಭಾಗವಾಗಬೇಕಾಯಿತು.ದೇಶದ ಸಮಗ್ರತೆಗೆ ಭಾರೀ ಪೆಟ್ಟುಬಿದ್ದಿತು.
  • ಸ್ವಾತಂತ್ಯ್ರಾನಂತರ ಪ್ರಧಾನಿ ಇಂದಿರಾಗಾಂಧಿಯವರು ೧೯೭೫ರಲ್ಲಿ ದೇಶದ ಮೇಲೆ ಎಮರ್ಜೆನ್ಸಿ ಹೇರಿ ಪ್ರಜಾಪ್ರಭುತ್ವಕ್ಕೆ ಕೋಳ ತೊಡಿಸಿ ಕೈದಿಯನ್ನಾಗಿ ಮಾಡಿದರು.
  • ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂವಿಧಾನವನ್ನೇ ಬುಡಮೇಲು ಮಾಡಲು ಹೊಂಚು ಹಾಕಿದರು. ಅಧ್ಯಕ್ಷ ಮಾದರಿ ವ್ಯವಸ್ಥೆಯನ್ನು ತರಲು ತಂತ್ರ ರೂಪಿಸಿ ವಿಫಲರಾದರು.
  • ಸಂವಿಧಾನದ ಮೇಲೆ ಒಂದೆಡೆ ಕೋಮುವಾದಿ ಶಕ್ತಿಗಳು ನಿರಂತರ ದಾಳಿ ನಡೆಸಿದರೆ ಇನ್ನೊಂದೆಡೆ ಎಡ ತೀವ್ರಗಾಮಿಗಳು ದಾಳಿ ನಡೆಸಲಾರಂಭಿಸಿದವು.
  • ಬಂಡವಾಳಶಾಹಿಗಳು ಸಂವಿಧಾನವನ್ನು ಕೇವಲ ತಮ್ಮ ವರ್ಗದ ಹಿತಕ್ಕೆ ಅನುಗಣವಾಗುವಂತೆ ಬದಲಾಯಿಸಿಕೊಳ್ಳುವ ಹೊಂಚಿನಲ್ಲಿರುವಾಗ ಶೋಷಿತರ ಹಿತ ಕಾಯುವ ಘೋಷಣೆ ಮಾಡುವ ನಕ್ಸಲ್‌ವಾದಿಗಳು ಸಂವಿಧಾನವು ‘ಆಂಟಿ ಪೀಪಲ್ ಕಾನ್ಸಿಟ್ಯೂಷನ್’ ಎಂದು ಉಡಾಫೆ ಮಾಡಲಾರಂಭಿಸಿದರು.
  • ಸಂವಿಧಾನದ ಮೇಲಿನ ದಾಳಿಯ ರೀತಿಯಲ್ಲಿಯೇ ಸಂಸದೀಯ ವ್ಯವಸ್ಥೆಯ ಮೇಲೂ ದಾಳಿಗಳು ನಡೆದಿರುವುದನ್ನು ಕಾಣಬಹುದು. ಸಂಸದೀಯ ವ್ಯವಸ್ಥೆಯ ಮೇಲಿನ ದಾಳಿಗಳೆಲ್ಲ ಸಂವಿಧಾನದ ಮೇಲಿನ ಪರೋಕ್ಷ ದಾಳಿಗಳೇ ಆಗಿವೆ. ದುರಂತವೆಂದರೆ, ಪ್ರಜಾಪ್ರಭುತ್ವವಾದಿಗಳೆನಿಸಿಕೊಂಡವರು, ಬುದ್ಧಿಜೀವಿಗಳೆನಿಸಿಕೊಂಡವರು, ಸಾಹಿತಿಗಳೆನಿಸಿಕೊಂಡವರೂ ಈ ದಾಳಿಯಲ್ಲಿ ಭಾಗಿಗಳಾಗಿರುವುದು. ಇಂದು ಹಿಂದೆಂದಿಗಿಂತ ಹೆಚ್ಚು ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆಗಳ ರಕ್ಷಣೆಯ ಕಾರ್ಯ ನಡೆಯಬೇಕಾಗಿದೆ. ಇಲ್ಲದಿದ್ದರೆ ಸಂವಿಧಾನವನ್ನು ನುಂಗಲು ಬರುತ್ತಿರುವ ರಾಕ್ಷಸನ ಬಾಯಿಗೆ ನಾವೇ ಅದನ್ನು ದೂಡಿದಂತಾಗುತ್ತದೆ.

ಸಂವಿಧಾನ, ಸಂಸತ್ತು, ವಿಧಾನಸಭೆಗಳು ಮತ್ತು ಪ್ರಾದೇಶಿಕ ರಾಜಕೀಯ ಶಕ್ತಿಗಳು ಇವನ್ನೆಲ್ಲ ವಿಮರ್ಶಿಸದೆ, ಜನಪರವಾಗಿಸದೆ, ಒಪ್ಪಿಕೊಳ್ಳಬೇಕೆನ್ನುವುದು ಈ ಮೇಲಿನ ವಿಶ್ಲೇಷಣೆಯ ಅರ್ಥವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯೂನತೆಗಳನ್ನೇ ಮುಂದುಮಾಡಿ ಆ ವ್ಯವಸ್ಥೆಯನ್ನೇ ತಿರಸ್ಕರಿಸುವಂತಾಗಬಾರದು ; ಮುಳ್ಳಿನೊಂದಿಗೆ ಗುಲಾಬಿಯನ್ನೂ ಎಸೆದಂತೆ !

ಬಹುಪಕ್ಷ ರಾಜಕೀಯ ವ್ಯವಸ್ಥೆಯಿಂದಾಗಿ ಪಕ್ಷಾಂತರದ ಪಿಡುಗು ಅಂಟಿಕೊಂಡಿದೆ. ಆದ್ದರಿಂದ ಇಂಗ್ಲೆಂಡ್ ಮಾದರಿಯಲ್ಲಿ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆ ಇರಬೇಕೆನ್ನುವ ವಾದವನ್ನು ಬಿ.ಜೆ.ಪಿ. ಮಂಡಿಸಿತು. ಸಂವಿಧಾನವನ್ನು ಬುಡಮೇಲು ಮಾಡಲು ಹೊರಟ, “ಸಂವಿಧಾನ ಪರಾಮರ್ಶೆ ಆಯೋಗ”ವು ಪ್ರಾದೇಶಿಕ ಮತ್ತು ಸಣ್ಣ ಪುಟ್ಟ ಪಕ್ಷಗಳ ಮೇಲೆ ಕಿಡಿ ಕಾರಿತು ಅದು ಹೀಗೆ ಹೇಳಿತು :

ಒಟ್ಟು ಮತಗಳಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಕನಿಷ್ಠ ಶೇಕಡವಾರು ಮತಗಳನ್ನು ಪಡೆದುಕೊಳ್ಳಲಾರದ ಪಕ್ಷಗಳಿಗೆ ಪಾರ್ಲಿಮೆಂಟ್ ವಿಧಾನಸಭೆಗಳಲ್ಲಿ ಪ್ರವೇಶ ನಿಷೇಧಿಸಬೇಕು. ಹೀಗಾದರೆ ಪಕ್ಷಾಂತರ ಪಿಡುಗನ್ನು ತಡೆಗಟ್ಟಲು ಸಾಧ್ಯ ಮತ್ತು ಪದೇ ಪದೇ ಸರಕಾರಗಳು ಉರುಳಿಬೀಳುವುದನ್ನು ಮತ್ತು ಚುನಾವಣಾ ವೆಚ್ಚಗಳನ್ನು ನಿಯಂತ್ರಿಸಬಹುದು.

ದೇಶದ ಬೃಹತ್ ಬಂಡವಾಳಶಾಹಿ ವರ್ಗಕ್ಕೆ ಈಗ ರಾಜಕೀಯ ಅಧಿಕಾರ ಎರಡೇ ಪಕ್ಷಗಳ ಕೈಗಳಲ್ಲಿ ಧ್ರುವೀಕರಣಗೊಳ್ಳುವುದು ಬೇಕಿದೆ. ಧ್ರುವೀಕೃತ ಎರಡು ಪಕ್ಷಗಳ ನಡುವೆ ಪ್ರಜಾಪ್ರಭುತ್ವದ ಫುಟ್‌ಬಾಲ್ ಆಡಲು ಸರಳವಾಗುತ್ತದೆ ಎನ್ನುವುದು ಆ ವರ್ಗದ ಇಂಗಿತವಾಗಿದೆ.

ಆದರೆ ಭಾರತದ ಮುಕ್ತ ಪ್ರಜಾಪ್ರಭುತ್ವ ವ್ಯವಸ್ಥೆಯು ಬಂಡವಾಳಶಾಹಿಗಳ ಕೇಂದ್ರಿಕೃತ ಆಡಳಿತಕ್ಕೆ ಸವಾಲಾಗಿ ನಿಂತಿದೆ. ಮುಖ್ಯವಾಗಿ ಎಡಪಕ್ಷಗಳು, ಜಾತಿ, ಜನಾಂಗ, ಭಾಷಾಧಾರಿತ ಪಕ್ಷಗಳು ಬಂಡವಾಳಶಾಹೀ ಅಧಿಕಾರದ ಅಣೆಕಟ್ಟೆಯ ಕ್ರೆಸ್ಟ್‌ಗೇಟ್‌ಗಳನ್ನು ಎತ್ತುತ್ತಿವೆ.

ಇಂದಿನ ಜಾಗತೀಕರಣಕ್ಕೆ ಮತ್ತು ಅಂತರಾಷ್ಟ್ರೀಯ ಸೌಖ್ಯ ಸಮುದಾಯಕ್ಕೆ ಒಂದು ದೇಶದ ಮುಕ್ತ ಪ್ರಜಾಪ್ರಭುತ್ವ ವ್ಯವಸ್ಥೆ ಅಸಹನೀಯವಾಗಿ ಪರಿಣಮಿಸಿದೆ. ಹಾಗಾಗಿ ಬೃಹತ್ ಬಂಡವಾಳಶಾಹಿಗಳು ಮತ್ತು ಅಂತರಾಷ್ಟ್ರೀಯ ಸಾಮ್ರಾಜ್ಯಶಾಹಿ ವರ್ಗಗಳಿಂದ ಹೆಚ್ಚು ಫಲ ಅನುಭವಿಸುತ್ತಿರುವ ಮೇಲ್‌ಮಧ್ಯಮವರ್ಗ ‘ಫಲಾನುಭವಿ’ ಮೂಡ್‌ನಲ್ಲಿದೆ. ಅದಕ್ಕೆ ತೀರಾ ವ್ಯತಿರಿಕ್ತವಾಗಿ ಬಡವರು, ರೈತರು, ಕಾರ್ಮಿಕರು, ಬುಡಕಟ್ಟು ಜನ, ಗುಡ್ಡಗಾಡು ಜನ, ದಲಿತ ಸಮುದಾಯಗಳು ಹೆಚ್ಚು ಹೆಚ್ಚು ರಾಜಕೀಯವಾಗಿ ಕ್ರಿಯಾಶೀಲವಾಗಿವೆ.

* * *

ಪದೇ ಪದೇ ಸರಕಾರಗಳು ಉರುಳುವುದರಿಂದ ಚುನಾವಣೆಗಳು ಮೇಲಿಂದ ಮೇಲೆ ನಡೆಯುವಂತಾಗಿ ಸರಕಾರಿ ಬೊಕ್ಕಸಕ್ಕೆ ನೂರಾರು ಕೋಟಿಗಳ ನಷ್ಟ ಉಂಟಾಗುತ್ತದೆ ಎಂದು ಸಂವಿಧಾನ ಪರಾಮರ್ಶೆಯ ಪರಿಣತರು ಹೇಳಿದರು. ಆದರೆ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾದದ್ದು ಯಾರಿಂದ ? ಅಟಲ್‌ ಬಿಹಾರಿ ವಾಜಪೇಯಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನಿಗಳಾಗಿದ್ದರು. ೧೯೯೬ರಿಂದ ೧೯೯೮ರ ಅವಧಿಯಲ್ಲಿ ವಾಜಪೇಯಿ ಸರಕಾರ ೧೨,೫೦೦ ಕೋಟಿ ರೂಪಾಯಿಗಳಷ್ಟು ಭಾರೀ ಮೊತ್ತದ ತೆರಿಗೆ ವಿನಾಯತಿಗಳನ್ನು ಬೃಹತ್ ಬಂಡವಾಳಶಾಹಿಗಳಿಗೆ ನೀಡಿತು. ಹೀಗಿರುವಾಗ ಕೇವಲ ನೂರಾರು ಕೋಟಿಗಳ ಚುನಾವಣಾ ವೆಚ್ಚಗಳ ಮೇಲೆ ಗೂಬೆ ಕೂರಿಸುವುದು ಸರಿಯೆ ?

ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೆರಿಕಾಗಳಂಥ ಶ್ರೀಮಂತ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಕ್ಷೀಣಗತಿಯಲ್ಲಿ ವಿಕಾಸಗೊಂಡಿತು. ಆ ದೇಶದ ಬಂಡವಾಳಶಾಹಿ ವರ್ಗ ಸ್ವಾತಂತ್ರ್ಯ ಸಿಕ್ಕೊಡನೆ ಎಲ್ಲರಿಗೂ ವಯಸ್ಕ ಮತದಾನದ ಹಕ್ಕನ್ನು ನೀಡಲಿಲ್ಲ. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಿಲ್ಲ. ಮರ್ದಿತ ವರ್ಗಗಳ ಮತ್ತು ಜನಸಮುದಾಯಗಳನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡಲಿಲ್ಲ, ಪತ್ರಿಕಾ ಸ್ವಾತಂತ್ರ್ಯ ನೀಡಲಿಲ್ಲ.

ಆದರೆ ಭಾರತದ ಸ್ವಾತಂತ್ರ್ಯದ ಸ್ವರೂಪ ಬೆರಗು ಮೂಡಿಸುವಂಥದ್ದು, ಸಾರ್ವತ್ರಿಕ ಮತದಾನದ ಹಕ್ಕಿನಿಂದ ಹಿಡಿದು ಮರ್ದಿತ ವರ್ಗಗಳ ರಾಜಕೀಯ ಪಕ್ಷಗಳ ಮಾನ್ಯತೆ, ಪತ್ರಿಕಾ ಸ್ವಾತಂತ್ರ್ಯ ಇತ್ಯಾದಿಗಳು ಸ್ವಾತಂತ್ರ್ಯದ ದಿನದಿಂದಲೇ ಚಾಲ್ತಿಗೆ ಬಂದವು.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಗರ್ಭದಲ್ಲಿ ದಾವಾಗ್ನಿ ಅಡಗಿದೆ ; ಅದು ದಿವ್ಯಾಗ್ನಿಯೂ ಹೌದು. ಅದರ ಪ್ರಖರತೆಗೆ, ಅದು ಹುಟ್ಟು ಹಾಕುತ್ತಿರುವ ಶಕ್ತಿಗಳಿಗೆ, ಅದು ತಂದೊಡ್ಡುತ್ತಿರುವ ಸವಾಲುಗಳಿಗೆ ಸರ್ವಾಧಿಕಾರದ ದಾಹದಲ್ಲಿರುವ ಬೃಹತ್ ಬಂಡವಾಳಶಾಹಿ ವರ್ಗ ಬೆಚ್ಚಿಬಿದ್ದಿದೆ. ಜನರಿಗೆ ಯಾವ ಆಶ್ವಾಸನೆಗಳನ್ನು ನೀಡಿ ಅಧಿಕಾರದ ಗದ್ದುಗೆ ಹಿಡಿದಿದೆಯೊ ಆ ಆಶ್ವಾಸನೆಗಳಿಗೆ ದ್ರೋಹವೆಸಗುವ ಕುತಂತ್ರ ಆ ದುಷ್ಟಕೂಟದಲ್ಲಿ ಮನೆ ಮಾಡಿದೆ. ಈ ದುಷ್ಟಕುಟ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲವೆನ್ನುವುದೂ ಗಮನಾರ್ಹ ಅಂಶವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಬಂಡವಾಳಶಾಹಿಗಳಲ್ಲಿ ‘ಉದಾರ ದೃಷ್ಟಿಕೋನ’ ವಿತ್ತು. ಅಂತಾರಾಷ್ಟ್ರೀಯ ‘ಫ್ರೆಂಡ್ಲಿ ಫ್ಯಾಸಿಸಂ’ಗೆ ಪಕ್ಕಾಗಿರುವ ‘ಶುದ್ಧ ಲಾಭಕೋರ ಕೂಟವು’ ಪ್ರಜಾಪ್ರಭುತ್ವದ ಜ್ವಾಲೆಗಳಿಗೆ ಕಂಗೆಟ್ಟಿದೆ. ಹಾಗೆಂದೇ ಸಂವಿಧಾನವನ್ನು ಸಮಾಧಿ ಮಾಡಲು ಅದು ಮುಂದಾಯಿತು. ಇದರ ಆಧಾರದಲ್ಲಿ ‘ಸಂವಿಧಾನ’ವು ಶುದ್ಧ ಲಾಭಕೋರ ಕೂಟಕ್ಕೆ ಅದೆಷ್ಟು ಕಿರುಕುಳ ನೀಡುತ್ತಿರಬೇಕು ಎಂಬುದನ್ನು ಊಹಿಸಿಕೊಳ್ಳಬಹುದು. ‘ಪ್ರಜಾಸತ್ತಾತ್ಮಕ ಉತ್ಕ್ರಾಂತಿ’ಯ ಲಾವಾರಸ, ಆ ಕೂಟದಲ್ಲಿ ಭುಗಿಲು ಸೃಷ್ಟಿಸಿದೆ. ಇದರ ಮೂಲ ಕಾರಣವನ್ನು ಸಂವಿಧಾನದಲ್ಲಿದೆ ಎಂದು ಆ ಕೂಟ ಗುರುತಿಸಿದೆ. ಹಾಗಾಗಿ ಸಂವಿಧಾನ ಮತ್ತು ಮುಕ್ತ ಪಾರ್ಲಿಮೆಂಟರಿ ವ್ಯವಸ್ಥೆ ಎರಡೂ ಲಾಭಕೋರ ಕೂಟದ ಹಿಟ್‌ಲಿಸ್ಟ್‌ನಲ್ಲಿವೆ. ಹೇಳಿದ್ದನ್ನು ಮಾಡಲಾರದ ; ಮಾಡುವುದನ್ನು ಹಿಡನ್ ಅಜಂಡಾದಲ್ಲಿಡುವ ಸಂದಿಗ್ಧ ಸ್ಥಿತಿ ಆ ಕೂಟಕ್ಕೆ ಬಂದೊದಗಿದೆ !

ರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣನ್ ಅವರು ನಮ್ಮ ದೇಶದ ಸಂವಿಧಾನ ಮತ್ತು ರಾಜಕೀಯ ವ್ಯವಸ್ಥೆಯ ವೈಶಿಷ್ಟ್ಯದ ಬಗ್ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಸರಕಾರವನ್ನು ಬದಲಿಸುವ ಸಾಧ್ಯತೆ ಮತ್ತು ಅದಕ್ಕಿರುವ ಸೌಲಭ್ಯವೇ ರಾಜಕೀಯ ಸ್ಥಿರತೆಯಲ್ಲಿ ಒಂದು ಮುಖ್ಯ ಅಂಶ. ಏಕೆಂದರೆ ಜನ ಆಗ ತಾವು ಒಪ್ಪದ ಅಥವಾ ಬಹಳ ದಿನ ಸಹಿಸಿಕೊಳ್ಳಲು ಕಷ್ಟಕರವಾದ ಒಂದು ರಾಜಕೀಯ ಸನ್ನಿವೇಶವನ್ನು ಸಹಿಸಿಕೊಳ್ಳುವುದಕ್ಕೆ ಒಲವು ತೋರುತ್ತಾರೆ.

ಚುನಾಯಿತ ಸರಕಾರ ವಿಶ್ವಾಸದ್ರೋಹಿಯಾದಾಗ ಅದನ್ನು ಬದಲಿಸುವ ಸಾಧ್ಯತೆ, ಸಾಮರ್ಥ್ಯಗಳು ಜನತೆಯ ಕೈಯಲ್ಲಿರುವುದನ್ನೇ ‘ವ್ಯವಸ್ಥೆಯ ಸ್ಥಿರತೆ’ ಎಂದು ವಿನೂತನವಾಗಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ವ್ಯಾಖ್ಯಾನಿಸಿದ್ದಾರೆ. ಪದೇ ಪದೇ ಸರಕಾರಗಳು ಉರುಳಿ ಹೊಸ ಸರಕಾರಗಳು ಅಸ್ತಿತ್ವಕ್ಕೆ ಬರುವ ಪ್ರಕ್ರಿಯೆಯನ್ನು ‘ಅಸ್ಥಿತ ಸರಕಾರ,’ ‘ಅಸ್ಥಿರ ಪ್ರಜಾಪ್ರಭುತ್ವ’ ಎಂದು ವಾದಿಸುವವರಿಗೆ ನಾರಾಯಣನ್ ಅವರ ವ್ಯಾಖ್ಯಾನ ತಿರುಗು ಬಾಣದಂತಿದೆ.

ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರು ಸಂವಿಧಾನದ ಬಗೆಗೆ ಹೇಳಿದ ಮಾತು ಸಹ ಸ್ಮರಣಾರ್ಹ : “ನಾನು ಭಾರತವನ್ನು ಎಲ್ಲ ದಾಸ್ಯ ಮತ್ತು ಆಶ್ರಯದಾತರಿಂದ ಬಿಡುಗಡೆಗೊಳಿಸುವ ಒಂದು ಸಂವಿಧಾನಕ್ಕಾಗಿ ಶ್ರಮಿಸುತ್ತೇನೆ.”

ಅದೇ ರೀತಿ ಖ್ಯಾತ ಚಿಂತಕ ನೋಮ್ ಚಾಮ್‌ಸ್ಕಿ ಪ್ರಜಾತಂತ್ರದಲ್ಲಿ ಜನಸಾಮಾನ್ಯರು ಮೇಲೆದ್ದು ಬರುವಾಗ ‘ಶ್ರೇಷ್ಠರು’ ಹೇಗೆ ಪ್ರತಿಕ್ರಿಯಿಸುತ್ತಾರೆಂದು ಸೊಗಸಾಗಿ ಹೇಳಿರುವುದನ್ನೂ ಇಲ್ಲಿ ಉದಾಹರಿಸಬಹುದು.

ಜನಸಾಮಾನ್ಯರು ಕೇಂದ್ರಸ್ಥಾನಕ್ಕೆ ಬರುವ ಸೂಚನೆಗಳು ಕಂಡಾಗಲೆಲ್ಲಾ ‘ಜನತಂತ್ರದ ತಜ್ಞರು‘ ಬೆಚ್ಚಿ ಹೌಹಾರಿರುವುದುಂಟು. ‘ಶ್ರೇಷ್ಟ ಪ್ರಜಾವರ್ಗ‘ ವೆಂದು ಕರೆಯಿಸಿಕೊಳ್ಳುವ ಜನಸಮುದಾಯ ೧೭ನೆಯ ಶತಮಾನದ ಇಂಗ್ಲೆಂಡಿನಲ್ಲಿ ತರಹದ ಬೆಳವಣಿಗೆಯಿಂದ ಭೀತಿಗೊಳಗಾದರು. ಹಾಗಾಗಿ ಜನಸ್ತೋಮ ಮತ್ತು ಜನರ ಗುಂಪನ್ನು ನಿಯಂತ್ರಿಸಿ ಜನಜಂಗುಳಿಯನ್ನು ಯಜಮಾನರ ಮತ್ತು ಮುಖಂಡರ ಅಧೀನಕ್ಕೆ ಅದನ್ನು (ಜನತಂತ್ರ ವ್ಯವಸ್ಥೆಯನ್ನು) ಒಳಪಡಿಸಬೇಕಾದ್ದು ಅನಿವಾರ್ಯವೆಂದು ಸಾರಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆ ಒಮದು ಭೋರ್ಗರೆಯುವ ಪ್ರಕ್ರಿಯೆಯಾಗಿದೆ. ಬ್ರಿಟಿಷ್ ಅಧಿಪತ್ಯಕ್ಕೂ ಪೂರ್ವದ ಚರಿತ್ರೆಯಲ್ಲಿಯೂ ಅದರ ಬೇರುಗಳಿವೆ. ದೇಶದ ವ್ಯವಸ್ಥೆಯ ‘ಗತಿ’ ಕ್ರಮದಲ್ಲಿ ಪಕ್ಷಗಳು ‘ಸ್ಥಿತಿ’ ಗಳು ಮಾತ್ರ. ಅದೇ ರೀತಿ ಸರ್ಕಾರಗಳು ಸಹ. ಇವೆಲ್ಲಕ್ಕೆ ನೆಲೆಯಾಗಿ ಪ್ರವಹಿಸುತ್ತಿರುವ ಅಮೂರ್ತ ಪ್ರಕ್ರಿಯೆಯನ್ನು ಅವಗಾಹನಿಸಿದರೆ ಅನೇಕ ಸತ್ಯಗಳ ದರ್ಶನವಾಗುತ್ತದೆ. ‘ಸ್ಥಿತಿ’ಯನ್ನೇ ‘ಗತಿ’ ಎಂದುಕೊಳ್ಳುವುದರಿಂದ ಜಡತ್ವ ದೃಷ್ಟಿಯುಂಟಾಗುತ್ತದೆ.

* * *

ಸಂವಿಧಾನದಲ್ಲಿ ಹಸ್ತಕ್ಷೇಪ : ಶಿಕ್ಷೆ

೧೯೭೪ರಲ್ಲಿ ಪ್ರೋಖ್ರಾನ್‌ನಲ್ಲಿ ಬಾಂಬ್ ಪರೀಕ್ಷೆ ನಡೆಸಿದ ಇಂದಿರಾಗಾಂಧಿ ಅವರು ಪಾಕಿಸ್ತಾನದ ವಿರುದ್ಧ ಯುದ್ಧವನ್ನು ನಡೆಸಿದ್ದರು. ಇಡೀ ದೇಶ ತಮ್ಮ ಹತೋಟಿಯಲ್ಲಿರಬೇಕು ಎನ್ನುವ ಅಹಂಕಾರದಿಂದ ೧೯೭೫ರಲ್ಲಿ ದೇಶದ ಮೇಲೆ ಎಮರ್ಜೆನ್ಸಿಯನ್ನು ಹೇರಿದರು. ಸಂವಿಧಾನದ ಮೇಲೆ ದಾಳಿ ನಡೆಸಿ ಭಾರತೀಯರ ಮೂಲಭೂತ ಹಕ್ಕುಗಳನ್ನೆಲ್ಲ ತಮ್ಮ ಕಸ್ಟಡಿಗೆ ತೆಗೆದುಕೊಂಡರು. ೧೯೭೭ರಲ್ಲಿ ಅತಿಯಾದ ಆತ್ಮವಿಶ್ವಾಸದಿಂದ, ಗೆದ್ದೇ ತೀರುವೆನೆಂಬ ಹಮ್ಮಿನಿಂದ ಇಂದಿರಾಗಾಂಧಿಯವರು ಚುನಾವಣೆ ಘೋಷಣೆ ಮಾಡಿದರು. ಆದರೆ ಇಂದಿರಾಗಾಂಧಿ ಅವರನ್ನು ಹೀನಾಯವಾಗಿ ಜನ ಸೋಲಿಸಿದರು ಮತ್ತು ಕಾಂಗ್ರೆಸ್ ಪಕ್ಷವನ್ನೂ ಸೋಲಿಸಿದರು.

ಅದೇ ರೀತಿ ೧೯೯೪ರಲ್ಲಿ ವಾಜಪೇಯಿಯವರು ಪೋಖ್ರಾನ್-೨ ಪರೀಕ್ಷೆ ನಡೆಸಿದರು. ೧೯೯೯ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿದರು. ಇಂದಿರಾಗಾಂಧಿ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಸಂವಿಧಾನವನ್ನು ಬುಡಮೇಲು ಮಾಡಲು ಯತ್ನಿಸಿದರು. ಅದರ ಪರಿಣಾಮವಾಗಿ ೨೦೦೪ ರ ಚುನಾವಣೆಯಲ್ಲಿ ಭಾರೀ ಸೋಲನ್ನು ವಾಜಪೇಯಿ ಅನುಭವಿಸಿದರು. ೧೯೯೪ರ ಚುನಾವಣೆಯಲ್ಲಿ ೧೮೨ ಸ್ಥಾನಗಳನ್ನು ಬಿ.ಜೆ.ಪಿ. ಪಡೆದುಕೊಂಡಿತ್ತು. ನಂತರ ೧೯೯೯ರ ಚುನಾವಣೆಯಲ್ಲಿ ಸಹ ೧೮೨ ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ೨೦೦೪ರಲ್ಲಿ ಕೇವಲ ೧೩೮ ಸ್ಥಾನಗಳನ್ನು ಪಡದು ಕೆಳಕ್ಕೆ ಕುಸಿಯಿತು.

ಇಂದಿರಾಗಾಂಧಿ ಮತ್ತು ವಾಜಪೇಯಿ ಈರ್ವರೂ ಮತದಾರನಿಂದ ಒಂದೇ ರೀತಿಯ ಶಿಕ್ಷೆಗೆ ಒಳಗಾಗಿದ್ದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಭಾರತದ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಈ ಎರಡೂ ಸಂದರ್ಭಗಳು ಕೇವಲ ಕಾಕತಾಳೀಯವಾದವುಗಳಲ್ಲ. ಇಂದಿರಾ ಮತ್ತು ವಾಜಪೇಯಿ ಈರ್ವರೂ ಸಂವಿಧಾನಕ್ಕೆ ಕೈ ಹಾಕಿ ಸುಟ್ಟುಕೊಂಡರು.

೨೦೦೯ರ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಯಿತು. ಅದು ಕೇವಲ ೧೧೬ ಸ್ಥಾನಗಳನ್ನು ಮಾತ್ರ ಪಡೆದುಕೊಂಡಿತು. ಎನ್.ಡಿ.ಎ. ಮೈತ್ರಿಕೂಟಕ್ಕೆ ಒಟ್ಟು ೧೫೯ ಸ್ಥಾನಗಳು ಬಂದವು. ಕಾಂಗ್ರೆಸ್ ನೇತೃತ್ವದ ಯು.ಪಿ.ಎ.ಗೆ ೨೬೨ ಸ್ಥಾನಗಳು ಬಂದವು. ಕಾಂಗ್ರೆಸ್ ಪಕ್ಷ ಏಕೈಕವಾಗಿ ೨೦೬ ಸ್ಥಾನಗಳನ್ನು ಗೆದ್ದದ್ದು ಗಮನಾರ್ಹ. ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಕುಸಿಯುತ್ತಿರುವುದನ್ನು ತಡೆಗಟ್ಟಲು ಬಿಜೆಪಿ ನಾಯಕ ಅದ್ವಾನಿ ಅವರು ಪಾಕಿಸ್ತಾನದ ಪ್ರಥಮ ಪ್ರಧಾನಿ ಮಹ್ಮದ್ ಅಲಿ ಜಿನ್ನಾ ಅವರನ್ನು ಡೆಮಾಕ್ರಾಟ್ ಎಂದು ಹಾಡಿ ಹೊಗಳಿದರು. ಕೋಮುವಾದದ ಘೋಷಣೆಯ ಬದಲಿಗೆ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣದ ವಿಷಯವನ್ನು ಪ್ರಧಾನಗೊಳಿಸಿದರು. ಆದರೂ ಮತದಾರ ತನ್ನ ಪಟ್ಟು ಬಿಡಲಿಲ್ಲ. ೧೯೭೭ರ ಎಮರ್ಜೆನ್ಸಿಯ ನಂತರದ ಚುನಾವಣೆಯಲ್ಲಿ ಸಂವಿಧಾನದ ರಕ್ಷಣೆ ಮತದಾರನಿಗೆ ಗುಪ್ತಮಂತ್ರವಾಗಿತ್ತು. ಅದೇ ರೀತಿ ೨೦೦೪ರ ಚುನಾವಣೆಯಲ್ಲಿ ಸಹ ಸಂವಿಧಾನದ ರಕ್ಷಣೆ ಎನ್ನುವ ಗುಪ್ತಮಂತ್ರವು ಸುಪ್ತವಾಗಿ ಪ್ರವಹಿಸಿತು !

ಸಿಕ್ಕಿರುವ ಸನ್ನಿವೇಶದಲ್ಲಿಯೇ ಸಂವಿಧಾನಕ್ಕೆ ಸೂಕ್ತ ಕಾವಲುಗಾರ ಯಾರಾಗಬಹುದೆಂದು ಮತದಾರ ನೋಡುತ್ತಾರೆ. ಮತದಾರನ ಈ ಧೋರಣೆ ಸದ್ದುಮಾಡದೆ ಸೂಕ್ಷ್ಮವಾಗಿ ಕೆಲಸ ಮಾಡಿದ್ದನ್ನು ಅವಲೋಕಿಸಬಹುದಾಗಿದೆ. ಭ್ರಷ್ಟಾಚಾರ, ಪೋಖ್ರಾನ್, ಪಾಕ್ ವಿರೋಧಿ ಯುದ್ಧ ಏನೆಲ್ಲವನ್ನೂ ಮತದಾರ ಸಹಿಸಿಕೊಂಡ. ಆದರೆ ಸಂವಿಧಾನಕ್ಕೆ ಕೈ ಹಚ್ಚಿದಾಗ ಮಾತ್ರ ಮೌನಕ್ರಾಂತಿಯ ಮೂಲಕ ವಾಜಪೇಯಿ ಸರ್ಕಾರವನ್ನು ಕೆಳಗಿಳಿಸಿದ. ಅಂಥದ್ದ ಮೌನಕ್ರಾಂತಿ ಎಮರ್ಜೆನ್ಸಿಯ ನಂತರ ನಡೆದಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಎಮರ್ಜೆನ್ಸಿಯಲ್ಲಿ ಇಂದಿರಾಗಾಂಧಿ ಅವರು ಲಕ್ಷಾಂತರ ಸಂಖ್ಯೆಯಲ್ಲಿ ತಮ್ಮ ವಿರೋಧಿಗಳನ್ನು ಬಂಧಿಸಿ ಜೈಲಲ್ಲಿ ಕೂಡಿಟ್ಟರು. ಹಾಗಾಗಿ ಸದ್ದುಗದ್ದಲದ ಪ್ರತಿಭಟನೆ ಹೋರಾಟಗಳು ನಡೆದವು. ಆದರೆ ವಾಜಪೇಯಿ ಅವರು ತಮ್ಮ ವಿರೋಧಿಗಳನ್ನು ಬಂಧಿಸಲಿಲ್ಲ. ಆದರೆ ಸದ್ದಿಲ್ಲದೇ ಸಂವಿಧಾನವನ್ನೇ ಬಂಧಿಸಲು ಉಪಕ್ರಮಿಸಿದರು. ಹಾಗಾಗಿ ಸದ್ದಿಲ್ಲದೆಯೇ ಮತದಾರ ಪ್ರತಿಕ್ರಿಯಿಸಿದ ! ಕೇವಲ ಬಿ.ಜೆ.ಪಿ.ಗೆ ಮಾತ್ರ ಮತದಾರ ಶಿಕ್ಷೆ ವಿಧಿಸಲಿಲ್ಲ. ಎನ್.ಡಿ.ಎ. ಜೊತೆಗೆ ಸೇರಿಕೊಂಡಿದ್ದ ಪ್ರಾದೇಶಿಕ ಪಕ್ಷಗಳು ಸಹ ಪರಿತಾಪಕ್ಕೊಳಗಾಗಬೇಕಾಯಿತು. ೧೯೯೯ರ ಚುನಾವಣೆಯಲ್ಲಿ ತೆಲುಗುದೇಶಂ ೨೯ ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ೨೦೦೪ರ ಚುನಾವಣೆಯಲ್ಲಿ ಕೇವಲ ೫ ಲೋಕಸಭಾ ಸ್ಥಾನಗಳನ್ನು ಪಡೆದುಕೊಳ್ಳಬೇಕಾದ ಶೋಚನೀಯ ಸ್ಥಿತಿಗೆ ಒಳಗಾಗಬೇಕಾಯಿತು. ಅದೇ ರೀತಿ ೧೯೯೮ರ ಚುನಾವಣೆಯಲ್ಲಿ ಎನ್.ಡಿ.ಎ. ಕೂಟದ ಜೆ.ಡಿ. ೨೦ ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ೨೦೦೪ರ ಚುನಾವಣೆಯಲ್ಲಿ ಕೇವಲ ೭ ಲೋಕಸಭಾ ಸ್ಥಾನಗಳಿಗೆ ಕುಸಿಯಿತು. ಪ್ರಮಾಣದಲ್ಲಿ ಸಂಖ್ಯಾಬಲ ಕುಸಿಯಲು ಬೇರೆ ಬೇರೆ ಕಾರಣಗಳೂ ಇದ್ದಿರಬಹುದು. ಆದರೆ ಮೇಲೆ ವಿಶ್ಲೇಷಿಸಲ್ಪಟ್ಟಂತೆ ಬಿ.ಜೆ.ಪಿ.ಯ ಜೊತೆಗಿನ ಸಖ್ಯತೆಯೂ ಪ್ರಮುಖ ಕಾರಣಗಳಲ್ಲಿ ಒಂದಾಯಿತು. ನಂತರ ೨೦೦೯ರ ಚುನಾವಣೆಯಲ್ಲಿ ತೆಲುಗುದೇಶಂಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ ೬ ಲೋಕಸಭಾ ಸ್ಥಾನಗಳನ್ನು ಅದು ಪಡೆದುಕೊಂಡಿತು. ತಮಿಳುನಾಡಿನ ಜಯಲಲಿತಾ ಅವರ ಎ.ಐ.ಡಿ.ಎಂ.ಕೆ. ಸಹ ಬಿ.ಜೆ.ಪಿ. ಸಖ್ಯದಿಂದಾಗಿ ಸಂಸತ್ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿತು.

೨೦೦೯ರ ಚುನಾವಣೆ ಬಿ.ಜೆ.ಪಿ. ವಿರುದ್ಧ ಧ್ರವೀಕರಣಗೊಂಡುದಾಗಿತ್ತು. ಯು.ಪಿ.ಎ.ಗೆ ಸ್ಪಷ್ಟ ಜನಾದೇಶ ಸಿಕ್ಕಿತು. ಯು.ಪಿ.ಎ. ಸರಕಾರವನ್ನು ಬೀಳಿಸಿದ ಎಡಪಕ್ಷಗಳನ್ನು ಮತದಾರ ಮೂಲೆಗುಂಪು ಮಾಡಿದ. ೨೦೦೪ರಲ್ಲಿ ಸಿ.ಪಿ.ಐ.(ಎಂ) ೪೩ ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿತ್ತು. ಅಮೆರಿಕಾದೊಂದಿಗೆ ಮನಮೋಹನ್ ಸಿಂಗ್ ಸರ್ಕಾರ ಮಾಡಿಕೊಂಡ ಅಣುಒಪ್ಪಂದವನ್ನು ವಿರೋಧಿಸಿ ಯು.ಪಿ.ಎ. ಸರ್ಕಾರವನ್ನು ಸಿ.ಪಿ.ಐ.(ಎಂ) ನೇತೃತ್ವದ ಎಡಶಕ್ತಿಗಳು ಬೀಳಿಸುವ ಪ್ರಯತ್ನ ಮಾಡಿದವು. ಆಗ ಕಾಂಗ್ರೆಸ್‌ ವಿರೋಧಿ ಮುಲಾಯಂಸಿಂಗ್ ಯಾದವ್ ಅವರ ಪಕ್ಷ ಯು.ಪಿ.ಎ.ಯನ್ನು ರಕ್ಷಿಸಿತು. ಇದಾದ ನಂತರ ನಡೆದ ೨೦೦೯ರ ಚುನಾವಣೆಯಲ್ಲಿ ಸಿ.ಪಿ.ಐ.(ಎಂ) ಕೇವಲ ೧೬ ಲೋಕಸಭಾ ಸ್ಥಾನಗಳಿಗೆ ಕುಸಿಯಬೇಕಾಯಿತು.

ಎಂಬತ್ತರ ದಶಕದಲ್ಲಿ ಭಾರೀ ಪ್ರಮಾಣದಲ್ಲಿ ಹೋರಾಟಗಳು ಸ್ಫೋಟಗೊಂಡಿದ್ದವು. ಅದು ಜನ ಹೋರಾಟಗಳ ದಶಕವಾಗಿತ್ತು. ಎಡ ರಾಜಕೀಯ ವಿಶ್ಲೇಷಕರು ವಿಶೇಷವಾಗಿ ೨೦೦ದ ಇಸವಿಯ ನಂತರದ ದಶಕವನ್ನು ಹೋರಾಟರಹಿತ ದಶಕವೆಂದೂ, ಚಳವಳಿಗಳ ಹಿಂಚಲನೆಯ ದಶಕವೆಂದೂ, ತೀರಾ ಪ್ರತಿಗಾಮಿ ದಶಕವೆಂದೂ ಬಣ್ಣಿಸಿರುವುದಿದೆ.

ಆದರೆ ವಸ್ತುಸ್ಥಿತಿ ಹಾಗಿಲ್ಲ. ನಿಜಕ್ಕೂ ಪ್ರತಿಗಾಮಿ ಶಕ್ತಿಗಳನ್ನು ಮಟ್ಟ ಹಾಕಿದ ದಶಕ ಅದಾಗಿದೆ. ೨೦೦೯ರ ಚುನಾವಣೆಗಳ ಒಳಸುಳಿ, ಸುಪ್ತಕ್ರಾಂತಿ, ಸದ್ದಿಲ್ಲದ ಸಂದೇಶಗಳ ಬಗ್ಗೆ ಇನ್ನೂ ಆಳವಾದ ಮತ್ತು ಸೂಕ್ಷ್ಮವಾದ ಅಧ್ಯಯನ ನಡೆಯುವ ಅಗತ್ಯವಿದೆ.

ಜನತೆ ಗದ್ದಲದ ಹೋರಾಟಗಳನ್ನು ಮಾತ್ರ ತನ್ನ ಅಸ್ತ್ರವಾಗಿಸಿಕೊಂಡಿರುವುದಿಲ್ಲ. ಸದ್ದಿಲ್ಲದ ಸಂವಿಧಾನತ್ಮಕ ಹೋರಾಟಗಳನ್ನು ಸಹ ಅಸ್ತ್ರವಾಗಿರಿಸಿಕೊಂಡಿರುತ್ತದೆ. ೧೯೭೭ರಲ್ಲಿ ಕಾಂಗ್ರೆಸ್ಸಿನ ಇಂದಿರಾಗಾಂಧಿ ಹೇರಿದ ಎಮರ್ಜೆನ್ಸಿಯ ವಿರುದ್ಧ ವಾಜಪೇಯಿ ಅವರನ್ನು ಹೋರಾಟಕ್ಕಿಳಿಸಿದ್ದ ಶಕ್ತಿಯೇ ಈಗ ಬಿ.ಜೆ.ಪಿ.ಯ ವಾಜಪೇಯಿಒ ಅವರ ಪರಿವಾರದ ವಿರುದ್ಧ ಅದೇ ಕಾಂಗ್ರೆಸ್ಸನ್ನು ಹೋರಾಟಕ್ಕಿಳಿಸಿದೆ. ಇದು ನಿಜಕ್ಕೂ ವಿಸ್ಮಯವೇ.