1. ಪ್ರಾರ್ಥನೆ

ಆಗ ಬಸವಣ್ಣ ತಾನು
ದೇವಲೋಕನ ಬಿಟ್ಟs
ಮಾನವ ಲೋಕಕ ಇಳದಾನೊ ॥

ಮಾದರಸ ಮಾದಲಾಂಬಿ
ಎಂಬsವರ ಉದರದಲ್ಲಿ
ಉತ್ಪನ್ನ ಆದಾನೊ ಬಸವೇಸೂರಾ
ಹೊಟ್ಟೆ ಬಿಟ್ಟು ಬರುವಾಗ
ಅಂತಾನೊ ಹರಹರಾ ॥

ಮಾದಲಾಂಬಿ ಎಬ್ಬಸೊತಾನಾ
ಮಾರಿನಿತ್ತ ನೋಡ ತಾನೊ
ಹುಟ್ಟಿದಾಂವ ಮುಟ್ಟವಲ್ಲೊ ಜನಿsವಾರಾ
ಕೈಲಾಸದಿಂದ ಇಳದ ಬಂದಾನೊ ಈಶ್ವರಾ
ಕುಂತ ಹೊತೀಗಿ ಓದಿದಾನs ಬಸವೇಸೂರಾ
ಬೇಡಿದ ಪದಾರ್ಥವ ನೀಡಿದಾನೊ ॥

ಆಗ ಬಸವಣ್ಣ ತಾನು
ದೇವಲೋಕನ ಬಿಟ್ಟು
ಮಾನವ ಲೋಕಕ ಇಳದಾನೊ ॥

* * *

2. ಸ್ಥಿರವಿಲ್ಲ ನನ್ನ ಮನದಾಗ

ಹಣವಿಲ್ಲ ಅಂತ ಅನಬ್ಯಾಡ
ತಿರುವ ನನ ಕಡೆ ಮಾರಿ
ಸಿರಿವಂತಿ ನಿನ್ನ ನೋಡಿ
ಸ್ಥಿರವಿಲ್ಲs ನನ್ನ ಮನದಾಗ ॥

ನಿನ್ನ ನೇತ್ರಗಳೆರಡು
ಕಮಲದ ಮಗ್ಗಿ ಅರಳಿsದಂಗ
ಸೂತ್ರದ ಗೊಂಬಿ ಹಂಗ ನಿನ್ನ ದೇಹ
ಹೋಗಿ ನೋಡಿ ಬನ್ನಿ
ಯಾತ್ರಾಗೇನ ಕಸರಿಲ್ಲ ಛಾಯಾ ॥

ಮುದ್ದು ಮುಖದ ಬಾಲಿ ನೀನು
ಮುದ್ದು ಕೊಡುವೆನು ಸದ್ದೆ ಬಾರಾ
ಬುದ್ಧಿವಂತಿ ತೆರೀತೇನ ಬಾಯ
ಹೇ ಪ್ರಾಣಸಖಿ
ಕದ್ದ ಕದ್ದ ಮಾಡ ಕಾಮನ ಕತೆಯ
ಕೂಡಿದರ ಸುರವುತೇನ ಹಣವ ನಿನ್ನ ಉದ್ದ ॥

ತಿರುವ ನನ ಕಡೆ ಮಾರಿ
ಸಿರಿವಂತಿ ನಿನ ನೋಡಿ
ಸ್ಥಿರವಿಲ್ಲ ನನ್ನ ಮನದಾsಗ

* * *

3. ತೊಗರಿಯ ಲೆಕ್ಕ ಮರತಾಳೊ

ಮಧುರ ಮಾತಿನ ಚೆದುರಿ ಯಾವೂರವಳೊ
ನದರಿಗಿ ಬಿದ್ದಾsಳೊ ಸಂತ್ಯಾಗ
ಚೆದರ ಸುದ್ದಾ ನೋಡಿ ನಕ್ಕ ॥

ಇದರ ನಿಂತ ಮಾತನಾಡಿ
ಬೆದರಿದೆರಳಿ ನೋಟದಂತ ಕಣ್ಣ
ಅದರ ಸುತ್ತ ದೀಪದಾಂಗ
ಕೆಂಪಗ ತೊಂಡಿ ಹಣ್ಣ
ರೂಪ ನೋಡಿ ತಾಪವೇರಿ
ಗಪ್ಪ ನಿಂತರ ಮುಚ್ಚತಾವ ಕಣ್ಣ
ಹೊಡದಂಗ ಆತ ಮನಮಥನ ಬಾಣಾs ॥

ಕಂಚಿಕಾಯಿಯಂತ ಕುಚ
ಮಿಂಚತಾವ ಎರಡು ಗಲ್ಲ
ಅಂಚ ರೇಶ್ಮಿ ಜುಳಕ
ನೀ ಬಂದರ ಆಗೋದು ನನಗ ಸಂತೋಷ

ಮಧುರ ಮಾತಿನ ಚೆದುರಿ ಯಾವೂರವಳೊ
ನೆದರಿಗಿ ಬಿದ್ದಾಳೊ ಸಂತ್ಯಾಗ
ನನ ಕಂಡ ತೊರಗಿಯ ಲೆಕ್ಕ ಮರತಾಳೊ ॥

* * *

4. ಉಂಡಿ ಕೊಂಡಕೊಂಡ

ಬಡವ ಅಂತ ಹೀಗಳಿ ಬ್ಯಾಡ
ಅಯ್ಯೋ ಅನಬ್ಯಾಡ ಬಾಲಿ
ದೈವ ನನಮ್ಯಾಲ ಇರಲಿ
ಪೈ ನಿನಗೊಂದ ಕೊಡತೇನ ॥

ನನ್ನ ಸಂಗಾಟs ಬಂದರ ನಂದು
ಲಂಗಟಾ ಒತ್ತೆ ಇಡತೇನ
ಊರಾಗ ಅದಾರ ಸಾವಕಾsರ
ಬೇಡಿದಂಗ ರೂಪಾಯಿ ಕೊಡತಾsರ ॥

ಇಟಗೊ ಬಂಗಾರ ಥಾಟ
ಹತ್ತುವೆಲ್ಲ ಹತ್ತೊತ್ತಿ ಇಟ್ಟ
ಮಾತು ನಿನಗ ಹೇಳತೇನ
ಪುತಳಿಸರಾ ಮಾಡಸ್ತೇನ ಒಂದ
ಕಿಂವ್ಯಾಗ ವಾಲಿ ಜೋಡ ಮಾಡಸ್ತೇನ ಪಾಡ

ಪೈ ನಿನಗೊಂದ ಕೊಡತೇನ
ಎಲೆ ಹುಡುಗಿ
ಬೈ ಮಂಗದ ಉಂಡಿ ಕೊಂಡ ಕೊಡ

* * *

 

5. ಬೀದಿಲಿ ಹೊಂಟಿ ನಗನಗತ

ಕ್ಯಾದಿಗಿ ಹೊಡಿ ಹಂಗ
ಸ್ವಾದ ಸುವಾಸದ ಹೆಣ್ಣ
ಬೀದೀಲಿ ಹೊಂಟಿ ನಗನಗತ ॥

ಕಟ್ಟಾsಣಿ ಗುಂಡಿನೊಳಗೆ
ಪುಟ್ಟದಳದ ಪುತಳಿಸರ
ರತನದಂತ ಏಕಾವಳಿ ಹಾಕಿದಾಳೊ
ಹಿಂಗ ಪದುಮವ ಕಾಡಿಗಿ ತೀಡಿದಾಳೊ
ಹಣಿ ಮ್ಯಾಲ ಕುಂಕುಮ ಬಟ್ಟ ಇಟ್ಟಿದಾಳೊ ॥

ಚಂದದ ಹೆಣ್ಣ ಕಂಡೆsನಪ್ಪ
ದೊರತಾಳೇನೊ ನನಗ ಇವಳ
ಜರದ ಸೆರಗಿಲೆ ಸಿಂಬಿ ಮಾಡಿ
ನೀರ ತರವಳೊ ॥

ಬೀದಿಲೀ ಹೊಂಟಿ ನಗನಗತ
ಎಲೆ ಹುಡಗಿ
ಮಾರ್ಯಾಳ ಗಂಭೀರನ ಕೂಡ ಮುದ್ದಾsಡ

* * *

6. ದೈವಾನಕ ನಾನು ಬಡವಲ್ಲ

ಸೌಗೇಡಿ ಹೋಗ ಅಂದಾಗ
ಸೌಗೇಡಿ ಅನುಬ್ಯಾಡ ಒಯ್ಯುವೆನು ಸದರಿಗಿ ನಾನು
ದೈವಾನಕ ನಾನು ಬಡವಲ್ಲ ॥

ಕೂಡುವೇನ ಸೂರ್ಯಾದರಾಗಲಿ ಹೊಲಮನಿ
ಹುಡುಗಿ ನಿನ್ನ ಬಿಡೋದಿಲ್ಲ
ಪಾಡ ನೋಡಿ ಬಡಿತೆನಗಿ ಭ್ರಾತಿ ॥

ಸಡಗರದಿಂದ ವಸ್ತಾ ಒಡವಿ
ಇಡ ನೀನು ಏನಂತಿ
ಯಾವುದರೇನು ಕಡಿಮಿಲ್ಲ ॥

ಹ್ಯಾಂವಾ ಬಿಟ್ಟ ಒಡಗೂಡ
ಜೀಂವೊದ ಹೊರತ
ಏನ ಬೇಡತಿ ಬೇಡ ॥

ದೈವಾನಕ ನಾನು ಬಡವಲ್ಲ
ನನ್ನ ಹುಡಗಿ
ಮಾರ್ಯಾಳ ಬಸವಣ್ಣ ನನಗೆ ಒಲದಾನ ॥

* * *

7.  ಮದವಿ ಗಂಡನ್ನ ಮರತಾಳೊ

ಚಿಗರಿ ಮಾಟದ ಹೆಣ್ಣ
ಇದರೀಗಿ ಬಂದರ
ಬಾಣ ಬಡದಾಂಗಾತೊ ಎದಿಯಾಗ ॥

ಸಂಸೆದ ಹೆಣ್ಣ ನೀನು
ದಾಂವಸಿ ಬಂದ ಕೇಳತೇನ
ಗಾಂವಸಾಲವಸ್ತಿ ಮಾಡ ಇಂದ
ಭೂಮ್ಯಾಗ್ಯಾರು ಇಲ್ಲ ಕೂಡಿ ಬಂತ ಸಂದ ॥

ಕೊಟ್ಟೆನಂದರ ಕೈಯಾಗಿಲ್ಲಾ
ಬಿಟ್ಟೇನಂದರ ಮರ್ಜಿ ಇಲ್ಲ
ಸಿಟ್ಟ ಬಂದರೆ ಬಡಿವಲ್ಲೆ ಒಂದ
ಹಸದಂವಗ ಊಟ ಮಾಡಸ
ಕೀರ್ತಿ ಆಗಲಿ ನಿಂದ ॥

ಬಂದಾಳ ಮಾರ್ಯಾಳ ಬಜಾರಕ
ಆ ಹುಡುಗಿ ಸಿದ್ದಪ್ಪನ್ನ ನೋಡಿ
ಮದವಿ ಗಂಡನ್ನ ಮರತಾಳೊ ॥

* * *

 

8.  ಬಂದ ಕರಿಯಲಿ ಬ್ಯಾಡ

ಮಂದಮತಿ ನಮ್ಮನ್ನ
ಬಂದ ಕರಿಯಲಿ ಬ್ಯಾಡs
ಗಂಧ ಕಾಂವಿದೊ ನಮ್ಮ ಧ್ಯಾಸ ॥

ಕುಸ್ತಿ ಮ್ಯಾಗ ಪ್ರೀತಿ ಬಾಳ
ಕುಸಿ ಬಂದ ತಾಲೀಮದೊಳಗ
ಕುಶ್ಯಾಲದಿಂದ ಮಾಡತೇವ ಶಕ್ತಿs ॥

ಬ್ಯಾಡ ಹೋಗ ಅದರ ಕುಸಲಾ
ತಿನಸಬೇಕ ಕಂತಿ
ಚೆಂದದಿಂದ ಕೂಡ ತಾಯ ತಂದಿ ॥

ಗಂಧ ಕ್ಯಾಂವಿ ಹಚ್ಚಲೆಂತ
ಬಿಟ್ಟ ಬಿಟ್ಟದಾರ ಕೇಳ ಸತಿ
ಬಾಳ ಮಂದ್ಯಾಗ ಕರದೆಂದರ
ಆದಿ ಫಜೀತಿ ॥

ಗಂಧ ಕಾಂವಿದು ನಮ್ಮ ಧ್ಯಾಸ
ಎಲೆ ಹುಡುಗಿ
ಮಾರ್ಯಾಳ ಬಸವಣ್ಣನ ಹೋಗಿ ಬರ್ತೇವ ॥

* * *

9.  ಎಂದು ಮೈನರೆದೆ ಎಲೆ ಬಾಲಿ

ಚೆಂದಾದ ತೋಳಿಗಿ
ಮುಂದ ಹೆಸರ ಬಳಿಯಿಟ್ಟ
ಎಂದು ಮೈನೆರದೆ ಬಲುಜಾಣೆ ॥

ಹಡ್ಡದ ತೆಳಗ ತೋಡೆ ಇಟ್ಟ
ಬಡ್ಡಿ ಎತ್ತಾಕ ಬರ್ತಿದ್ಯ ಬಾಲಿ
ದೊಡ್ಡಾವರಂತ ಅಂಜಿದೇನ ನಾರಿ ॥

ಕುತನಿ ಕುಬಸಮ್ಯಾಲ ಹೊಳೆವ
ರತನಹಾರ ಏಕಾsವಳಿ
ಒತನದಾರಗ ಕೊಟ್ಟಾರ ಒಯ್ಯರಿ ॥

ನಾನು ಬಡವಂತ
ತೆಗಿಯಬ್ಯಾಡ ಜಗಳ
ನೋಡ ನನ್ನs ಮಾರಿ ॥

ಎಂದ ಮೈನೆರದೆ ಬಲುಜಾಣಿ
ನಿನ ಕಂಡs
ಹೊಂದಬೇಕಂತ ಕೆಣಕಿದೇನ ॥

ಎಂದ ಮೈನೆರದೆs ಎಲೆ ಬಾಲಿ
ಮಾರ್ಯಾಳ ಬಸವಣ್ಣಗ
ಒಮ್ಮೆ ಬಂದ್ಹೋಗ ॥

* * *

10.  ಬೇಕಾದ್ದಾದರ ಬಿಡಾಂವಲ್ಲ

ಚೆಕ್ಕಿ ಆದೇನ ಒಣಗಿ
ತೆಕ್ಕಿ ಹಾಯುವೆ ನಾನು
ದಕ್ಕಿ ತಿಂದsರ ಚಿಂತಿಲ್ಲ ॥

ಕನಸಿನೊಳಗ ಬಂದ ನೀನು
ಮನಸಿನೊಳಗ ಕರದಂಗಾತು
ಕೈ ಹಿಡಿದು ಜಗ್ಗಿ ಹೊಡೆದಂಗ ಜೋಲಿ
ಅಡರಾಸಿ ನೋಡುವದರೊಳಗ ಇದ್ದಿಲ್ಲ ಬದಿಯಲಿ ॥

ತಾಳಲಾರದ ಜೀಂವ ನಂದು
ತೋಳ ತೊಡಿಯಾಗ ಇಟಗೊಂಡು
ಹೋಳ ಮೈಯಿಲೆ ಬೀಳತೇನs ಹೊರಳಿ
ಸುಳ್ಳಲ್ಲ ಜಾಣಿ ನಿನ್ನಾಣೆ ಹೇಳಾವಲ್ಲ ಕಾಲಿ ॥

ಕೆಂಪ ರೂಪಾ ಕಂಡ ನನಗ
ಜಂಪ ಹತ್ತಾಣಿಲ್ಲ ರಾತ್ರಿ
ಸಂಪ ಆಗೋದಿಲ್ಲ ನೋಡಿದರ ॥

ದಕ್ಕಿ ತಿಂದರ ಚಿಂತಿಲ್ಲ
ನಿನ್ನ ಸಲುವಾಗಿ ಬೇಕಾದ್ದಾದರ ಬಿಡಾಂವಲ್ಲ
ಮಾರ್ಯಾಳ ಬಸವಣ್ಣನ ದಯಾನನ ಮ್ಯಾಲ ॥

* * *

11.  ಗುಲ್ಲ ಕೊಡತೇನ ಎಡ ಬಲಕ

ಭಲರೇ ಜಾಣಿ ನನ್ನ
ಹಲ್ಲ ಮುರಸವರೇನ
ನಲ್ಲೆಯರ ಗಲ್ಲ ಕಚ್ಚುವೆನು ॥

ನಡದರ ನಡಿಯಲಿ ಖಟ್ಲೆ
ಒಡದರ ಒಡಿಯಲಿ ಸಾಕ್ಷಿ
ಬಡದರ ಬಡಿವಲ್ಲ ಪೊಲೀಸ ॥

ಒಳಗಿಂದೊಳಗ ನೂರಾರ ರೂಪಾಯಿ
ಕೊಡೊ ಉಮ್ಮೇದವಾರ
ಅಲ್ಲಿಂದತ್ತ ಫಜೀತಿ ನಾರಿ ॥

ಹಚ್ಚತೇನ ಪರಾರಿ ಸೀರಿ
ಹಳ್ಳ ಒಗದ ಹಂಚ ಚೂರಾ ಚೂರಾ
ಅಬರೂಕಂಜಿ ತಿರಗ್ಯಾಡ ಊರೂರಾ ॥

ಬಂದರ ಚೊಲೋದಾತ ಗೆಣತಿ
ಹಚ್ಚತೇನಿ ನಿಮ್ಮನಿಗಿ ಬೆಂಕಿ
ಜೀಂವದ ಖಬರಿಲ್ಲs ನನಗೀಗ ॥

ಈಗಿಂದೀಗ ಪಾಸಿ ಕೊಡವಲ್ಲ
ಇಂಗ್ರೇಜಿ ಸರಕಾರ
ನಲ್ಲೆಯರ ಗಲ್ಲ ಕಚ್ಚುವೆನ ಕ್ಯಾರೆಣ್ಣಿ
ಗುಲ್ಲ ಕೊಡತೇನ ಎಡ ಬಲಕ

* * *

12.  ಉಂಡಿಲ್ಲ ಮಾರಿ ತೊಳದಿಲ್ಲ

ಕಳೆವಂತಿ ನಿನ ಕಂಡ
ಉಳಿವಲ್ಲದ ನನ ಜೀಂವ
ಚಳಿ ಹತ್ತಿ ಜರದ ಬೀಳುವೆನ ॥

ಜರದ ಕುಬ್ಬಸದೊಳಗ ಮಲಿ
ತೊರದ ನಿಗರಿ ನಿಂತಿದಾವ
ಹಿರದ ಪ್ರಾಯ ಬಾರದ ಬಂದsತಿ ॥

ಏ ಹೆಣ್ಣ ನೀನು ನೆರದ
ಮೂರು ನಾಕ ತಿಂಗಳಾತ
ತಿಂಗಳ ದಿನ ಆತ ನಿನ್ನ
ಅಂಗಳದಾಗ ನಾ ಸುಳದಾಡತೇನ ॥

ಮಂಗಳವಾರ ದಿನ ಭಾಗೋಡಿ ಸಂತಿ
ಆ ದಾರಿಯೊಳಗ ನಿನ್ನ
ಮಂಗಳಿಸಿ ಓದರ ಏನ ಮಾಡತಿ ॥

ಎಲ್ಲೆಲ್ಲಿ ಹೋದಲ್ಲಿ ನೀನು
ಅಲ್ಲಲ್ಲಿ ನಾನು ದುಂಬಾಲ ಬಿದ್ದ
ಇಲ್ಲದ್ದ ಮಾಡಿ ಒಡದೇನ ಸತಿ
ಬಾಳ ಮಂದ್ಯಾಗ ಕರದ್ಯಂದರ ಆದಿ ಫಜೀತಿ ॥

ಚಳಿ ಹತ್ತಿ ಜರದ ಬೀಳತೇನ
ನಿನ ಕಂಡ
ಉಂಡಿಲ್ಲ ಮಾರಿ ತೊಳದಿಲ್ಲs ॥

* * *

13.  ಕೊಡತೇನ ಹರಕ ಪಡಿಕೊಂದ

 

ಆಡಮುಟ್ಟ ಕಡಿಮಿಯ ಹೆಣ್ಣ
ಹಿಡಿ ನನ್ನ ಹಿಡತsವ
ಇಡತೀನ ನಿನ್ನ ದೂರೋದ ॥

ಒಳ್ಳೆದಲ್ಲ ಹುಚ್ಚರಂಡಿ
ಒಳ್ಳೆ ಹುಡುಗನ ಅಬರು ಕಳದಿ
ಕೆಟ್ಟರ ನಿನ್ನ ದಸೀಂದ ಕೆಡತೇನ
ಹಿತ್ತಲದಾಗ ಕುಳ್ಳ-ಗಿಳ್ಳ ಒಟ್ಟಿ ಕೋಡತೇನ ॥

ಸಾಲ ಅದರ ಅಟ್ಟs ಹೋತು
ಹೊಲಾ ಮಾರಿ ಬರತೇನ
ಟರಾವ ಗಿರಾವ ಹೇಳತೇನ
ಕರಾರ ಪತ್ರ ಬರಕೊಡತೇನ ॥

ಸೀರಿ ಹರದ ಪರಾರಿ ಹಚ್ಚಿ
ಮೋಜಾ ನೋಡತೇನ
ಇಡತೀನ ನಿನ್ನ ದೂರೋದ
ನಾ ನಿನಗ ಕೊಡತsನ ಹರಕ ಪಡಿಕೊಕೊಂದ ॥

* * *