27.  ಹೆಚ್ಚೇನ ವಂಕಿ ಕೊಡತೇನ

ಕಿಚ್ಚ ಬೆಂಕಯಂಥ ಕೆಂಚನಾಯ್ಕ
ಅಚ್ಚ ಕೊಂಕಿನ ಬಾಲಿ
ಹೆಚ್ಚೇನ ವಂಕಿ ಕೊಡತೇನ ॥

ಸುರಳಿಗೂದಲ ಸುಗುಣಿ ನೀನು
ಸರಳಾಗಿ ಬೇತಲ ತಗದ ಕೊಂಡ
ಎರಳಿ ಹೊಂಟ್ಯ ನಮ್ಮ ಓಣಿ ಹಿಡದs
ನಿನ್ನ ನೋಡಿ ನಿಂತಿದೇನ
ನಾನು ದಂಗಬಡsದ ॥

ಜರದ ಧಡಿ ಸೀರಿ ಉಟ್ಟು
ತರದ ಕುಬಸಾ ತೊಟ್ಟ ಬಾಲಿ
ಕರದೇನಂದರ ಬರವಲ್ಲಿ ನನ್ನ ಹಿಂಬಾಲಿ ॥

ಹೆಚ್ಚೇನ ವಂಕಿ ಕೊಡತೇನ ಬಾಲಿ

ಇಂಚಲದ ಬಂಕನಾಥ ಗೊಮ್ಮಿ ಬಂದೋಗ ॥

* * *

28.  ಚಂದಾಗಿ ಪೂಜಿ ಮಾಡುವೆನೊ

ಗಂಧ ಅಕ್ಷತಿ ಧರಿಸಿ
ಇಂದು ನಮಗ ಗಣಪಯ್ಯ
ಚಂದಾಗಿ ಪೂಜಿ ಮಾಡುವೆನೊ ॥

ಚಾಲ

ಲಂಬೋದರ ನಾ ನಿನ್ನ
ನಂಬುವೆನೊ ಸಭಾದೊಳು
ಶಂಭು ಶಂಕರ ಕೊಡೋ ನಮಗ ಜ್ಞಾನ
ತಾಳ ಮೃದಂಗ ತಂಬೂರಿಯೊಳಗ
ಮಾಡೇವ ನಿಮ್ಮ ಸ್ವವನಾ
ವಾಯಿನಿ ಸಂಗೀತದೊಳು
ಮಾಯಿನ್ನ ಮಾಡೇರಿ ನಿಮ್ಮ
ಗಾಯನ ಹೆಚ್ಚ ನಿಮ್ಮ ವರ್ಣ
ತಪ್ಪಂದ ನಿಮ್ಮ ಗಾಯನ್ನಿ ಮಾಡುವೆ ಒಂದಸವನ
ಚಂದಾಗಿ ಪೂಜಿ ಮಾಡುವೆನೋ
ಗಣಪಯ್ಯ ಬಂದ ವಿಘ್ನವನು ಪರಿಹರಿಸೊ

* * *

29.  ಸೇವೆ ಮಾಡುವೆ ಮನಪೂರ್ಣ

ದೇವಿ ಸರಸ್ವತಿ ನಿನ್ನ ಕವಿಗೆ ನಾ ಮೊದಲಾಗಿ
ಸೇವೆ ಮಾಡುವೆನು ಮನ ಪೂರ್ಣಾ

ಚಾಲ

 

ಮುತ್ತಿನ ನುಡಿಗಳ ನಿನ್ನ
ಚಿತ್ತದಲ್ಲೆ ಇಡವೂತೇನ
ಮತ್ತ ಪ್ರಸನ್ನಾಗ ಏ ತಾಯಿ
ನಾಲಿಗಿ ಮ್ಯಾಲೆ ನಿಂತ ಕೊಡ ವಿದ್ಯೆದ ಬಾಯಿ
ಪರಿಮಳ ಪುಷ್ಪದ ಶಾಲಾ
ವರ ಚರಣಕ್ಕೆ ಧರಿಸುವೆನ
ವರಗಳ ಬೇಡುವೆನ ಮುಗದ ಕೈ
ಪ್ರಾಸ ನಿನ್ನ ಏರಿಸಿ ಬೇಡುವೆನೆ ಭಿಕ್ಷಾಂದೇಹಿ
ಸೇವೆ ಮಾಡುವೆ ನಮನ ಪೂರ್ಣ ಸರಸ್ವತಿಯ
ದೇವಿ ಇಂಚಲಕ ದಯವಾಗ

* * *

30.  ದಯಪೂರ್ಣ ಮಾಡು ನಮ ಮ್ಯಾಲ

ತಾಯೀ ಸರಸ್ವತಿ ನಿನ್ನ ಕವಿಗೆ

ಚಾಲ

ತಾಯಿ ಸರಸ್ವತಿ ಸೇವೆ ಮಾಡುವೆನು
ಸಹಾಯ ಆಗ ಈ ಸಭಾದಲ್ಲಿ
ಸಹಾಯ ಆಗ ಈ ಸಭಾದಲ್ಲಿ ॥
ಚರಣಕೆ ಎರಗಿ ಶರಣ ಮಾಡುವೆನು
ಕರುಣ ಇಡವ್ವ ಭಕ್ತರ ಮ್ಯಾಲಿ
ಬಂದ ವಾಕ್ಯಗೋಳ ಚಂದಾಗಿ ಕೊಡ ತಾಯಿ
ಹೊಂದುವೆ ನಾ ನಿಮ್ಮ ಚರಣದಲಿ
ವಂದನ ಮಾಡುವೆನು ಬಂಧನ ಕಡಿ ತಾಯಿ
ಬಂದ ನಿಂತ ನಾಲಿಗಿ ಮ್ಯಾಲ ॥

ಚಾಲ

ತಾಯಿ ಸರಸ್ವತಿ ನೀನು
ಲಾಲಿಸೆನ್ನ ವಚನವನು
ನಿಂತ ಬೇಡಿ ಕೊಂಬುವೆನು
ಪ್ರಸನ್ನಳಾಗವ್ವ ನೀನು
ಸೇವೆ ಮಾಡುವೆ ನಮನ ಪೂರ್ಣ ಸರಸ್ವತಿಯ
ದಯ ಪೂರ್ಣ ಮಾಡ ನಮ ಮ್ಯಾಲ

* * *

31.  ಶಂಕೆ ಇಲ್ಲದಲೆ ಭಜಿಸುವೆನೊ

ಶಂಕ ಚಕ್ರಾಯುಧದ ಶಂಕರನ ನಂದನನೆ
ಶಂಕೆ ಇಲ್ಲದಲೆ ಭಜಿಸುವೆನೊ ॥

ಚಾಲ

ಪಾರ್ವತಿ ವರಪುತ್ರಾ ನಿನ್ನ
ಪರಿಪರಿಯಿಂದ ಸ್ತುತಿಸುವೆನು
ಪರಿಹರಿಸೊ ವಿಘ್ನವ ಗಣನಾಥಾ
ಹರುಷದಿಂದ ಸ್ಮರಿಸುವೆನು ಈಗ ಏಕದಂತಾ
ವಂದಿಸಿ ಕರಗಳ ಮುಗಿದು
ಬಂದು ಚರಣಕ್ಕೆರಗುವೆನು
ಬಂಧನ ಕಡಿಯೋ ಬಂದಂಥಾ
ದೈವಾಗೊ ಗೌರಿನಂದನ ನನ್ನ ಮ್ಯಾಲಿಟ್ಟು ಚಿತ್ತ ॥
ಶಂಕೆ ಇಲ್ಲದಲೆ ಭಜಿಸುವೆನೊ
ಇಂಚಲದ ಬಂಕನಾಥನ ವರಪುತ್ರ ॥

* * *

32.  ಮನ್ನಿಸರಿ ಎನ್ನ ಮಾತು

ಶ್ಯಾಣೆರಿಗೆ ಕರ ಮುಗಿವೆ ಮನ್ನಿಸರಿ ಎನ್ನ ಮಾತು
ಪನ್ನಗಾಧರನ ಭಜನಿಯನು

ಚಾಲ

ಅಳದ ಆರಗುಣ ಬಿಡಬೇಕು ನೀ
ಕಳದ ಮೂಠಮಲ ತೊಳಿಬೇಕು
ಒಳಗ ಹೊರಗ ಒಂದಿರಬೇಕು
ತಿಳಿಯ ನೀರಿನ್ಹಾಂಗ ನಿರ್ಮಳವಿರಬೇಕು
ಚರ್ಮ ತೊಳದರ ಕರ್ಮ ಹೋಗುವದೇನು
ವರ್ಮ ಮಾಡಿಯೇನ ಸುಡಬೇಕು
ಧರ್ಮಗುಣ ನಿನ್ನಲ್ಲೆಯಿದ್ದರ ನಾಚಿಕಿ ಹಿಡಬೇಕು
ಗುರು ಚರಣಕ ನಂಬಿಕಿಯಿರಬೇಕು
ಬಲ್ಲ ಹಿರಿಯರು ಹೇಳಿದ್ದು ಅರಿಬೇಕು
ಧರೆಯೊಳು ಇಂಚಲ ಊರ ಹೊಕ್ಕು
ಹರ ಬಂಕನಾಥನ ಪದ ದೊರಿಬೇಕು

ಏರ

ಪಂ ಬಂ ಮಾಡಿದರ ಮುನ್ನ
ಮುಕ್ತಿಯನು ಕೊಡವುವನು ॥

* * *

33.  ಹ್ಯಾವಕ ಬೀಳುವರು ಜನರು

ಕವಿಯ ಮಾಡುವೆನೆಂದು
ಹ್ಯಾವಕ ಬೀಳುವರು ಜನರು
ಸವಿಯು ಒಳಗಿಂದು ತಿಳದಿಲ್ಲಾ ॥

ಚಾಲ

ಪ್ರಾಸಯುಕ್ತ ಪದಾ ಮಾಡಿ
ತ್ರಾಸದಾಗ ತೂಗಿದ್ಹಾಂಗ
ರಾಸ ಇಡಬೇಕೆಣಿಸಿ ಅಕ್ಷರ
ಹೆಚ್ಚು ಕಮ್ಮಿ ಬಗಳ ಬಾರದ ಮಜಕೂರ
ಎಲ್ಲಾರು ಮಾಡೋರು ಕವಿ ಬಲ್ಲವರಂತ
ಮನಿಮನಿಗೆ ಎಲ್ಯೋ ಎನೋ ಉಳದ ಕವೀಶ್ವರಾ
ಪೃಥ್ವಿ ಮ್ಯಾಲೆ ಲಕ್ಷಕೊಬ್ಬ ಶಾಣ್ಯಾ ಚತುರಾ ॥
ಆಸಿಹಂತಾ ಕವಿ ಮಾಡಿ ಹಾಡತೇವಂತ್ಹೇಳತಾರು
ಕುದರೀಗೆ ಸರಿಯೇನೊ ಚಯ್ ಟಗರಾ
ಥೋಡೆ ಬುದ್ಧಿ ಕಡಿಮೆ ಕವಿಯವರ ಬಾಯಿ ಹಗರಾ ॥

ಏರ

ಸಂ ವಂ ತಿಂ ಇಂಚಲದ ಶಿವ ಬಂಕನಾಥ ವಲದಿಲ್ಲಾ

 

* * *

34.  ತಾನೆ ತಾನಾಗಿ ಅರಿಬೇಕ

ಮಾನದಿಂದ ಘನ ಜ್ಞಾನವಂತರ ಕೇಳಿ
ತಾನೆ ತಾನಾಗಿ ಅರಿಬೇಕು

ಚಾಲ

ಹಿಡಿ ಸಾಧು ಸಂತರ ಹಾದಿ
ಸುಳ್ಳ ಓದೋದಿ ಕಲತಿದಿಯೋ
ಮಾಯ ಮಡವಿನೊಳು ಕಡಕೊಂಡು ಬಿದ್ದಿ
ನನಗ ಬಂದಿತ ಕೇಳ ಮಾಯದ ನಿದ್ದಿ
ಯೋಗಿ ಜನಕ ಮಾಡಬೇಕ ಶರಣ
ಅಂದವಗಿಲ್ಲ ಮರಣ ಹೀಂಗ ಶಾಸ್ತರ ಶಾಸ್ತರ
ನಮ್ಮ ಹಾಡ ಬಂಗಾರದ ತೂಕ ಹಿರಿದ ಹೊಸತರ ॥
ಕೇಳಿದ ಪದ ಆಗಿ ಆನಂದ ಆನಂದ
ಗುರು ಶಿಷ್ಯರ ಆಗಬೇಕ ಬಂದಾ ಕೇಳಿ ಬಂದಾ

ಏರ

ತಾಂ ತಾಂ ಆಂ ಇಂಚಲದ ಭೂನಾಥನ ಪಾದ ದೊರಿಬೇಕು

* * *

35.  ಈಶ್ವರನ ಮಹಾತ್ಮೆ ಒಬ್ಬರಿಗೆ ತಿಳಿದಿಲ್ಲ

ತತ್ವಜ್ಞಾನಿಗಳೆಲ್ಲಾ ತತ್ವದೊಳಗ ಇರುವ
ಪರತ್ವಗೆಡಹಿದರು ಜನರೆಲ್ಲಾ ॥

ಚಾಲ

ಸುತ್ತಮುತ್ತಯಿರುವ ಜನರು
ತಮ್ಮ ತಮ್ಮವರೊಳಗ ಒಂದಾಗಿ
ಹಿತವಾಗಿ ಪ್ರಪಂಚ ಮಾಡಿ ಮೂಢ
ಯತಿ ಮಾನ್ಯಗಳ ಪಾದಗತಿ ಮರತಿ ಮೂಢ
ಸುಮ್ಮನ ದಿನಗಳ ದಮ್ಮಿಲಿ
ಒಮ್ಮಿಂದ ಕಳಿಯಬ್ಯಾಡಾ
ಸತಿಸುತರೊಡಗೂಡಿ ಮರಿಯ ಬ್ಯಾಡ
ದಿನಗೋಳ ಬಹಳ ನಾಜೂಕ ಬಂದಾವ ತಿಳಿಯೊ ಮೂಢಾ
ಪರ ಉಪಕಾರ ಮಾಡಿ ಪರಮೇಶ್ವರನ ಕಾಣೊ ಅತಿ ದವಡಾ
ಬಂಕನಾಥನ ಚರಣವು ಹಿಡಿ ಹಿಡಿ ಮರೆಯಬೇಡಾ

ಏರ

ಪಂ ಗಂಜಂ ಈಶ್ವರನ ಮಹಾತ್ಮೆ
ಒಬ್ಬರಿಗೆ ತಿಳದಿಲ್ಲಾ ॥

* * *

36.  ದೂರೈತೊ ತಮ್ಮಾ ಗೆದೆಯುವುದಾ

ಮೂರ ಹಾಡೋದರೊಳಗ ತೀರಿತ ನಿನ ಸಂತಿ
ಯಾರಿಗೇರ ಒಂದ ಹಾಡಂತಿ ॥

ಚಾಲ

ಅರಿಯದವರ ಮುಂದ ಬಹಳ ಹೆಮ್ಮಿ ಮಾಡಿ ತೋರಸತಿ
ಗೋರ ಬಿಟ್ಟು ಒಂದು ಅರದಾಕಲ್ತಾ
ಜಿಗದಾಡತಿದ್ದಿ ಪೂರಾ ಬಂತೊ ಈಗ ನಿನ್ನ ಸುತ್ತಾ
ಹೆಂತಾ ಹುಲಿ ಮುಂದ ನಿಂತ ಅತ್ತ ಮಾತಾಡಿದರೆ
ಒಂದ ಬೇತ ಮಾಡತತಿ ತಿನಬೇಕಂತ
ಅದರಂತ ಸೋತ ಬಿದ್ದ ಹೋಗತೇರಿ ತುರ್ತು ಅತ್ತಾ ॥
ಹೋಳಿ ಹುಣ್ಣಿವಿ ಸವಿ ಕೂಳ ತಿಂದ ಬಹಳ ಉಮೇದ
ತಾಳಲಾರದ ತಾಳಗೆಟ್ಟ ಹಾಡತಿ ಕಂಡಂತಾ
ತಾಳದೊಳಗ ಹೇಳಿದರ ನಿನಿಗೇನ ಗೊತ್ತಾ

ಏರ

ಯಾರಿಗೇರ ಒಂದ ಹಾಡಂತಿ ಸಭಾದಾಗ
ದೂರೈತೋ ತಮ್ಮಾ ಗೆದೆಯುವದಾ

* * *

 

37.  ಹದ್ದಿಗೆ ಸರ್ಪ ಈಡೇನೊ

ಬಿದ್ದ ಹಾಡೇವು ನಾವು ಜಿದ್ದ ಮಾಡಲಿ ಬ್ಯಾಡ
ಉದ್ದ ಆದದ್ದು ಮುರಿಯುವದು ॥

ಚಾಲ

ಹಮ್ಮ ಬಂದ ಹರಿ ಬ್ರಹ್ಮಾದಿಗಳೆಲ್ಲಾ
ತಮ್ಮ ತಮ್ಮೊಳು ನಾಚ್ಯಾರು
ಕಮ್ಯಾವ ನೀ ಏನ ಬಲ್ಲ್ಯೊ ಈ ಸಾರು
ಒಮಿಂದೊಮ್ಮೆ ಈವಿಟ ಹಾಡವರು
ಬ್ರಮಾಬಡದ ನಿಂತಿ ಯಾಕೆ ನೀ ದೂರ
ತಮ್ಮಾ ಇದ ಒಮ್ಮೆ ಹೇಳತೇನ ಹುಸಿಯಾರು
ಆಗಿನ್ಹಾಂಗ ಬೇಗಳ ಪದ
ಈಗ ಬೆಯ್ಯೋ ಹಾಂಗ ಕಾಣತತಿ
ಬೇಗ ನಿನ್ನ ಮೂಗ ಕೊಯ್ಯವರು
ತೂಗಿ ನೋಡೊ ಜಾಣಾ ಪಾಯಾ ಪ್ರಾಸಗಳಕ್ಷರ ॥
ಬಾಗತೆಲಿ ಹೋಗಯಿನ್ನ ಮರತಿ ಇದರಾಗ ಫೇರು
ಮುಗಳ ನಗಿ ನಗತಾರ ಜನರು
ಜಗಳ ಬ್ಯಾಡ ಬೊಗಳಿ ಹಿಂತ ಹಾಡ ಮಾಡಿ ತೋರು

ಏರ

ಉಂ ಆಂ ಮುಂ ಇಳಿವೊಗಳ
ಹದ್ದಿಗೆ ಸರ್ಪ ಈಡೇನೊ                                                                                            ॥

* * *

38.  ಕದ್ದಲೆ ಎಲ್ಲೊ ಕಲ್ತಬಂದಿ

ತಿದ್ದಿಪದ ಮಾಡಕ್ಕಿ ಬುದ್ದಿ ನಿನಗೆಲ್ಲೀದೊ
ಕದ್ದಲೆ ಎಲ್ಲೊ ಕಲ್ತಬಂದಿ

ಚಾಲ

ನಿನ್ನೊಳಗ ನೀ ಶಾಣ್ಯಾನಾದಿ
ನನ್ನ ಹಾಂಗ ಯಾರೂ ಇಲ್ಲ ಅಂದಿ
ಹನ್ನೆರಡ ತಿಂಗಳಾತಿ ಹಾಡ ಮಾಡಿದಿ
ನಿನ್ನ ಸರಿ ಕುನ್ನಿ ಅಳತತಿ ಏನ ತೋರಿದಿ
ಅಲ್ಲೆ ಇಲ್ಲೆ ಬಲ್ಲವರ್ಹಂತ್ಯಾಕ
ಇಲ್ಲದ ನುಡಿ ಒಂದ ಕಲಕೊಂಡಿ
ಹಾಡೊ ಹಿಂತಾವ ಹೆಂತಾವ ಸುಮ್ಮನ ಬರಕೊಂಡಿ
ನೀ ಕಲತಿಲ್ಲ ಬಲತಿಲ್ಲ
ನಿಲ್ಲತೀಯ ಗೇಣಸಿ ತೆಲಿ ಕೆರಕೊಂಡಿ

ಏರ

ತಂ ಬಂ ಕಂ ಈ ಹಾಡಾ ಖುದ್ದ ಮಾಡಿಲ್ಲೊ ಮಂದೀವು                                       ॥

* * *

39.  ಹೇಳ್ತಿ ಮಂದೀಗಿ ಕರಕರದು ನಿನ್ನ ಹಾಡಾ

ಬೆಳತನಕ ಗೇನಸಿದಿ ಅಳತಿ ಮಾಡಿದಿ ಹಾಡಾ ಹೇಳ್ತಿ
ಮಂದೀಗಿ ಕರಕರದು

ಚಾಲ

ಅರೇದವರ ಮುಂದ ದೊಡ್ಡ ಹಿರ್ಯಾನ್ಹಾಂಗ ಹೇಳತಿಯೊ
ಗೋರ ಬಿಟ್ಟ ಮಾಡಿನ್ನಂತಿ ಪದಾ
ಸುಡಗಾಡ ಸಂತಿಯವರ ಕೇಳಬೇಕೊ ಹಿಂತಾದ
ಅವೇನ ಬಲ್ಲವು ನಿಮ್ಮ ಹುಡುಗೋರು
ಉಪ್ಪುಖಾರಾ ತಿಳಿಯಾಣಿಲ್ಲ
ಹಾಡ ಅಂದ್ರ ತಿಳಿಯೊಣಿಲ್ಲ
ಹಾಡ ಅಂದ್ರ ತಿಳಿಯೊಣಿಲ್ಲ
ಹಾಡ ಅಂದ್ರ ಹಿಗ್ಗತಾವ ಬಂದಾ
ಕಲಕೋತಾವ ನೀ ಹೆಂತಾದ ಕಲಸಿದಾಂತಾದಾ
ಪ್ಯಾಲಿ ಹುಡಗುರು ಮುಂದ ನೀನು
ಬಲ್ಲವನ್ಹಾಂಗ ಗುಲ್ಲ ಮಾಡಿ
ಹಲ್ಲತಿಂದ ಹೇಳ್ತಿ ತಪ್ಪಿದ್ದಾ
ಅಲಲಲ ಅಂತಾವ ತಿಳೀದುಲ್ಲ ಹಿಂದ ಮುಂದ ॥

 

ಏರ

ಹೇಳತಿ ಮಂದಿಗಿ ಕರಕರದು ನಿನ ಹಾಡಾ
ಹುಳತ ಗುರಿಯಳ್ಳಯಿದ್ದಾಂಗ ॥

* * *

40.  ಕೋಳಿ ಹಾಂಗ ಕಾಲ ಕೆದರುವಿಯೊ

ಹೇಳವರ ಇಲ್ಲ ನಿನಗ ಗೀಳ ಪದಗಳ ಮಾಡಿ
ಕೋಳಿ ಹಾಂಗ ಕಾಲ ಕೆದರುವಿಯೊ

ಚಾಲ

ಚಂದಾಗಿ ಹಾಡಿರೆಂತ ಮಂದಿ ಒಳಗ ತಂದ ನಿಲ್ಲಿಸಿದಿ
ಅಂದ ತರಸೊ ಅವರ ತಪ್ಪತಾರು
ಹಿಂದ ಮುಂದ ಆಗಿ ನಿನ್ನ ಮಾರಿ ನೋಡತಾರು ॥
ಜೀವದಾಗ ಸನಮಂತಿಲ್ಲಾ ಏನ ಮಾಡ್ಯಾವಪ್ಪಾ
ಎದಿ ಡವ ಡವ ಅಂತ ಬೆವತಾರು
ತಗದ ನೋಡ್ರಿ ಬಗಲ ಗೂಡ ಹೋಗ್ತಾವ ನೀರು
ಮುಗುವೆನ ಕಯ್ಯ ನಗಬೇಡರೆಣ್ಣಾ
ಅಗದಿ ಖರೆ ಆದ ಮಾತ ನಂದು
ಬಿಗಿ ಬಂತಂತ ಉಸರುಗಳುತಾರು
ಅವರಿಗೆ ಬರದಿರ ಏನ ಮಾಡ್ಯಾರಪ್ಪ ಕೆಲಸವರು

ಏರ

ಕೊಂ ಹಾಂ ಕಾಂ ಕೆಂಬೆಕ್ಕ ಬಂದ್ರ ಮಾಳಿಗಿ ಹತ್ತಿ ನೋಡುವಿಯೊ ॥

* * *

41.  ಹಿಂಗ್ಯಾಕ ತಪ್ಪ ಕಲಸೀದಿ

ರಂಗಾಗಿ ಬಂದಿದ್ದ ಹ್ಯಾಂಗ ಹಾಡುವರಂತ
ಹಿಂಗ್ಯಾಕ ತಪ್ಪ ಕಲಸೀದಿ ॥

ಚಾಲ

 

ಹಗಲರಾತ್ರಿ ನಿನ್ನ ಮಾತ
ದಗದ ಬಿಟ್ಟ ಕೇಳಿದಾರು
ಬುಗನೆ ಸುರಿಸಿ ಮಾಡಿದಿ ಬೇತಾ
ಅವೇನ ಬಲ್ಲವು ಒಗದತ್ತ ಬೀಳತಾವ ಕೊಟ್ಟ ಚಿತ್ತ
ಉಮೇದ ಕೊಡತಿ ಅವರಿಗೆ ನಿಮ್ಮ ಸರಿ ಯಾರಿಲ್ಲಂತ
ಉಮೇದ ಬಂದ ಹಾಡತಾವ ನಗತ
ನಿಮ್ಮ ಬುದ್ಧಿ ಹೆಚ್ಚ ಅತಿ ನಮ್ಮ ಮಗನಕಿಂತಾ
ರೀತಿಲೆ ಮಾತಾಡಬೇಕೊ ಯಾತಕ್ಕ
ಹಾಡುವಿಯೊ ಕಡಕ ಕೂತ ಜನಕ ಬರಬೇಕ ಸನಮಂತ
ಹಾಡನ್ನು ಹಂಗ ಸೋತ ಒಂದ ಪದಾ ಹೇಳೊ ಹಿತಾ

ಏರ

ಹಿಂ ತೆಂ ಕಂ ನಿನ್ನ ಹೆಣಕ ಹಾಂಗ ದುಡದಾರ ವರಸಾತಿ ॥

* * *

42.  ದೀಪ ಲಯವಾಗಿ ಹೋಗುವದು

ಪಾಪ ಮಾಡಲಿ ಬೇಡ ವ್ಯಾಪಿಸಿತ್ತ ನಿನ್ನ ಮೈಯ್ಯ
ದೀಪ ಲಯವಾಗಿ ಹೋಗುವದು ॥

ಚಾಲ

ಹಿಂದಿನ ಕರ್ಮಾ ನೋಡಣ್ಣಾ ನೀನು
ಮಂದ್ಯಾಗ ಹುಟ್ಟಿ ಬಂದೆಂಣ್ಣಾ
ತಂದೆ ತಾಯಿ ಬಂದು ಬಳಗವು ನಂದೆಂದು
ಬಂದಿನೊಳಗ ಸಿಕ್ಕು ನೊಂದು ಬಳಲುವಿಯೋ ॥
ಎಲ್ಲಾರು ಸಾಯುದು ನೋಡು ನೀನು
ಅಲ್ಲಿ ಅದನ ಮರಿಬೇಡ
ಬಲ್ಲಿದ ಬಡವನು ನಿಲ್ಲದೆ ಹೋಗುವನು ॥
ಕುಲ್ಲ ಮನುಜ ನಿಶ್ಚಯ ಇಲ್ಲೆ ಇರುವಿ ಏನು ॥
ಹೀನ ಗುಣವ ಜಜ್ಜಿ ವಡಿಯೊ ನೀನು
ದಾನ ಧರ್ಮ ಮಾಡಿ ಪಡಿಯೋ
ಅನಾಥ ಜನರಿಗೆ ಅನ್ನ ದಾನವ ಮಾಡಿ
ಸ್ವಾಮಿ ಬಂಕೇಶನ ಚನ್ನಾಗಿ ಒಲಿಸಯ್ಯ ॥

ಏರ

ದಿಂ ಬಂ ಹೊಂ ಇದ ತಿಳಿದು ಕಪ್ಪಗೊರಳನ
ಮೊರಿಗೊಳ್ಳೊ ॥

* * *

43.  ಹಾಡತಾವ ಹಾಡಾ ಹುಡಹುಡಕಿ

ಯಾವದ ಹಾಡೂನಂತ ಅವನ್ನೇನ ಕೇಳತಿ
ಹಾಡತಾವ ಹಾಡ ಹುಡಹುಡಕಿ ॥

ಚಾಲ

ಬಿಂಕಮಾಡಿ ಹೇಳತಿದ್ದಿ ತರಕ ನಿನ್ನಿಂದಾಗವಲ್ಲದ
ಮೂರ್ಖ ಏನ ಬಲ್ಯೊ ಇದರ ತೂಕಾ
ಸುಳ್ಳೆ ಹಾಡಿನ ಮುರಕ ಮಾಡತೇರಿ ವಣಾ ಡೊಂಕಾ ॥
ಮಧುರ ವಾಕ್ಯಗಳ ನಮ್ಮ
ಅಧರೀಲೆ ಮುತ್ತ ಸುರಿದಾಂಗ
ಚದುರತನದಿ ಕವಿ ಕೇಳ್ಬೆಕಾ
ನಿನ್ನಂಥಾ ಹೇಡಿ ಒದರಿದರೇನ ಆಗುವುದಿಲ್ಲ ಚೊಕ್ಕಾ
ಗೊಂಡಿನಿಶಾನಿ ಹಚ್ಚಿ ನಾವು ಖಂಡಿತವಾಗಿ ಹಾಡತೇವು
ಪಂಡಿತರೆಲ್ಲಾ ಕೇಳಿ ಅಂತರ ಟೀಕಾ
ಇಂಚಲ ಪದಗಳ ದುಂಡಮುತ್ತಾ ಬಂಗಾರದ ಬಾಣಾ

ಏರ

ಹಾಂ ಹಾಂ ಹುಂ ನಿನ ಎದಿಯ
ಡವಡವ ಅಂತೊ ಮಿಡಿ ಮಿಡಿಕಿ ॥

* * *