44.  ಒಂದಾರ ಹಾಡು ಹಿಂತಾದು

ಎಂದೆಂದ ಹಾಡಿದರ ಮಂದ ಬುದ್ಧಿಗೆ ಎಳಸಿ
ಒಂದಾರ ಹಾಡು ಹಿಂತಾದು

 

ಚಾಲ

ಚಲುವ ಹಾಡ ಮಾಡೇನಂತ
ಉಲವ ಇಲ್ಲದಾಗ ಕಲಸಿ
ಮಲುವು ಬಿದ್ದಂತಾತ ಮುಂದಿಂದರ
ಹುಲಿಯ ಬಣ್ಣಕ ನಕಲಿ ಮಾಡಿಕೋತ
ಮೈ ಸುಟ್ಟು ಕೊಂಡ ನರಿ ॥
ನನ್ನಂಗ ಅನಬೇಕಂತ ಹನ್ನೆರಡ ತಿಂಗಳ ಕಲತಿ
ಇನ್ನುವರಿಗೆ ಸಿಕ್ಕಿಲ್ಲ ಹಾಡಿನ ಜರಿ
ನೀ ಏನಮಾಡಿ ನಿನಗ ಕಲಿಸಿದಂಥವ ಮಳ್ಳ ಕುರಿ
ಅವಲ ಪದಾ ಹಾಡೊನು ಬಾರೊ
ನವಲ ಕುಣದಾಂಗ ಆಗಬೇಕು
ಸಾವಲ ದನಿ ತಗದ ಅಳತೇರಿ
ಹಾಡವರೊಳಗ ಕೇವಲನಸಿಕೊಂಡೆ ಛೀಮಾರಿ

ಏರ

ವಂ ಹಾಂ ಹಿಂ ಬಸಾಪೂರದ ತಂದಿ ಬಸವೇಶನೊಲವಿಂದ

* * *

45.  ಬಿಟ್ಟು ನಾಚಿಕೆಯ ಹೇಳುವೆನೊ

ಕೆಟ್ಟ ಅನಬಾರದಂತ ಇಟ್ಟೊತ್ತ ತಾಳಿನಿ
ಬಿಟ್ಟು ನಾಚಿಕೆಯ ಹೇಳುವೆನೊ ॥

ಚಾಲ

ಭಾಳ ಮಾತ ಹೇಳಬ್ಯಾಡೊ
ಸೂಳಿ ಮಗನ ಬೋಳಿಮಗನ
ಬ್ಯಾಳಿ ತುಡಗಮಾಡಿ ಕಟ್ಟಿದ್ದಿ ಒಲ್ಯ್ಗ
ಅಲ್ಲ ಹೋಗೋ, ಹಲ್ಲ ಬಿಟ್ಟೀನ ನಿಮ್ಮವ್ವನ ಬಲ್ಯ್ಕ
ಸೊಲ್ಲಿಗೊಮ್ಮೆ ಬೇಯತೇನೊ
ಮಲ್ಲಿಗಿ ಹೂವಿನಂಥಾ ಬೇಗಳಾ
ಗುಲ್ಲ ಮಾಡಬ್ಯಾಡ ಕುಂಡ್ರ ಮೂಲ್ಯಾಗ
ನನ್ನ ಹಾಡ ಕೇಳಿ ನಿಮ್ಮಕ್ಕ
ಪ್ರೀತಿ ಬಂದ ಹಾಲ ಕುಡಸ್ಯಾಳಾ ಬಾಲಿ ದೊಡ್ಡ ಥಾಲ್ಯಾಗ

* * *

46.  ಸೋಜಿಗದ ಹೆಣ್ಣ ಯಾರಿವಳೊ

ರಾಜಬೀದಿಯ ಹಿಡಿದ ಮೋಜಿಲೆ ಹೋಗುವಳೊ
ಸೋಜಿಗದ ಹೆಣ್ಣ ಯಾರಿವಳೊ

ಚಾಲ

ಕಾಂತಿಯುಳ್ಳ ನಾರಿ ನಿನ್ನ ಪ್ರಾಂತದೊಳು ಕಾಣಲಿಲ್ಲ
ಭ್ರಾಂತಿ ಬಡದ ನಿಂತೇನ ಹೌವ್ವ ಹಾರಿ
ಏನಂತಿ ಹೇಳ ಈಗ ವಚನಾ ಕೊಡ ವೈಯ್ಯರಿ
ಬಳುಕುತ ನಡುವಿನ ಬಾಲಿ ಕೇಳ ಎಳಿಯ ಪ್ರಾಯದೊಳು
ನಿನ್ನ ಸುಳವ ಕಂಡ ನಿಂತೇನ ಬೆದರಿ
ಅರಗಿಳಿಯೆ ಕೇಳ ನನ್ನ ಮಾತಿನ ಮಧುರಿ

ಏರ

ಸೋಜಿಗದ ಹೆಣ್ಣ ಯಾರಿವಳೊ ಎಲೆ ಬಾಲಿ
ಮೂರು ಜಗದೊಳು ಸರಿಯಿಲ್ಲಾ

* * *

47.  ಭಾರಕ ಬಂದ ಹೆಣ್ಣ ನೀನು

ಭಾರಕ ಬಂದ ಹೆಣ್ಣ ನೀನು ಮುರಕಾಮಾಡಿ ಹೋಗಬ್ಯಾಡ
ಎರಕದ ಗೊಂಬಿ ನಡುವಿನಲ್ಲಿ ವಡ್ಡ್ಯಾಣ
ಮೆಲ್ಲಕ ಮೆಲ್ಲಕ ಹೆಜ್ಜಿ ಚೆಲ್ಲಿ
ಗುಲ ಗುಲ ಗೆಜ್ಜಿ ನುಡಿಸಿ ಪಿಲ್ಲಿ
ಕಾಲುಂಗರ ಕಾಲಲ್ಲಿ ಪೈಜಾಣ
ಚಿನ್ನದಾರ ಚೌಕ ಕಾಳಿನ ಚಂದ್ರಕಾಳಿ ಸೀರಿನುಟ್ಟು
ತಾಟ ನೀಟ ಘಾಟ ಮಾಡಿ ಹೊಂಟಿ ಗರ್ತಿ                                                                       ॥

ಒಪ್ಪುವಂಥ ಪಪ್ಪಳಿ ಕುಬಸದಮ್ಯಾಗ ಕುಶಲ ಮಗ್ಗಿ ತಗಿಸಿ
ಸೊಗಸದಿಂದ ಅಗಸಿಯೊಳಗ ನಿಂತ ನಗತಿ
ಏನ ನೆಟ್ಟನ ಮೂಗ, ಬಿಟ್ಟ ಕಣ್ಣು ಹಂಚಿ ಬಟ್ಟು
ಹಲ್ಲ ಗಲ್ಲ ಹವಳದುಟಿ
ಹಂಚಿ ಬಟ್ಟಿನ ಕಲಿ ನಿನಗ ಒಪ್ಪತೈತಿ                                                                                ॥

ಈಬತ್ತಿ ಪಟ್ಟಾ ಕುಂಕುಮ ಬಟ್ಟ
ಕುಡಿ ಹುಬ್ಬ ಕುಶಲ ಕನ್ನಡಿ ಹಿಡಿದ ಕಾಡಿಗಿ ಹಚ್ಚಿ
ಮೆಚ್ಚ ಮಾಡತಿ
ಗಿಡಗನ ಮಾರಿ ಹಂತಾ ಪೋರಿ
ದಡಗ ದಿಡಗ ಬಂದ ಕ್ಯಾರ
ನಡಗಿ ನಡುತೀಯ ನವಲ ಕುಣದಂಗ ॥
ಹೂವ ಕಾಯಿ ಮಗ್ಗಿ ಜಗ್ಗಿ ಗಿಡಬಾಗಿ ಮುಂದ ಟೊಂಗಿ
ಊಚ ಮಾವಿನಹಣ್ಣ ಬಹಳ ಸಂವಿ ಅತಿ
ಹಸ್ತ ಪಾದ ಹೊಟ್ಟೆ ತಿಳಪ ನಿನ್ನ ರೂಪ ಬ್ಯಾಂಗಡಿ ಹೊಳಪ
ಏನ ಕೆಂಪ ಪೋರಿ ನಿನ್ನ ಮೈ ಬಣ್ಣ                                                                           ॥

* * *

48.  ಸ್ತ್ರೀಯಳೆ ನಿನ್ನ ಬುದ್ಧಿ

ತಿರಸ್ಕರಿಸಿ ಬಿಟ್ಟಾರ ಸ್ತ್ರೀಯಳೆ ನಿನ್ನ ಬುದ್ಧಿ
ಸ್ಥಿರವಿಲ್ಲ ಅಂತ ಬಹು ಜನರು ॥

ಚಾಲ

ಹೀಂಗ ಶಾಸ್ತ್ರಾ ಹೇಳತಾರು ಹೆಂಗಸರ ಬುದ್ಧಿ ಸ್ಥಿರವಲ್ಲಾ
ಮಂಗ್ಯಾನ್ಹಾಂಗ ಒಳಗ ತಿರಗತತಿ
ಅತಿ ಉತ್ತಮಾದರು ಅಂಗಜನಾಟಕ ಬಲು ಪ್ರೀತಿ ॥

ಹೆಣ್ಣಿನಬರು ಕಡಿಮಿ ಅಂತ
ಮಾನ್ಯ ಮಾನ್ಯರು ಹೇಳತಾರು
ಏನ ಬಲ್ಲರು ಜನರು ಒಳಗಿನ ರೀತಿ
ಏನೇನು ಜರಾ ಸ್ವಲ್ಪ ಮುಟ್ಟಿದರಾತು ಮಾಣ ಕ್ಷತಿ ॥

ಗಂಡಸನ ಒಂದ ಹೆಂಗಸ ಮುಟ್ಟಿದರ
ಅಕಿ ಅಬರು ಹೋಗತತಿ
ಗಂಡಸ ಮುಟ್ಟಿದರಂತು ತೀರಿ ಹೋತು ॥
ಎರಡುದರಾಗ ಅಬರು ಕಮ್ಮ ಅಕಿದ ಹೋಗಿರತೈತಿ ॥

ಏರ

ಸ್ಥಿಂ ಅಂ ಬಂ ಜಂ ಹೇಳುವರು ಅಸ್ಥಿರ ವರ್ಣ
ಯಾವತ್ತು

* * *

49.  ನಾರಿ ತಾವರಿಗೆ ಸಾಮ್ಯ ಕೊಡುವರು

ಭುವನದೊಳಗ್ಹೇಳುವರು
ವಿವರ ತಿಳಿಯದೆ ನಾರಿ ತಾವರಿಗೆ ಸಾಮ್ಯ ಕೊಡುವರು

ಚಾಲ

ಹದಿನಾರ ವರುಷದ ಮದವೇರಿ ಪುರುಷನು
ಹದಬಂದು ನಿನ್ನ ಕೇಳಿಶ್ಯಾನು
ಸುದತೇರನ್ನಾಳಿಯೆಂದು ಬೆಳಿಸ್ಯಾನು
ವದನಕ ಕಮಲ ಸಾದೃಶ್ಯವ ಕೊಟ್ಟಾನು
ಇದಿಮಾಯಿ ಹೆಂಗಸ ಕೇಳ ನೀನು ॥

ಆದ ಹಿಗ್ಗಿ ಮದಿವ್ಯಾದ ಗಂಡಗಾದಿ ಹೀನ
ಮೂಗ ತೊಗಲ ನೋಡು ಕಣ್ಣ ಪಿಚ್ಚ ಪುಂಜಿ ಹೇಸಿ ಹೆಣ್ಣು ॥
ಸೋಗ ಬಿಡ ಬಾಯ ಕೊಳಚಿ ಗಲ್ಲದ
ತೊಗಲ ನಿಂದು ಹಣ್ಣು
ಡೂಗ ನಡದ ಗತಿ ಹೋದ ಮ್ಯಾಗ ಇಲ್ಲ ಏನು
ಬಾಗಿ ನಡದಿ ಆಗ ತಿಳದಿ ನೀನು
ನಾರಿ ನಿನ್ನ ಭೋಗ ಯಾರಿಗಿ ಬೇಕ ಹೋಗ ನೀನು

ಏರ

ತಾಂ ಸಾಂ ಕೊಂ ತಮ್ಮ ಪ್ರಾಯಾ ಅವರಿಗೆ ಮೀರಿ ನಿಂತಾಗ ॥

* * *

 

50.  ರಂಗದುಟಿ ರತನದಂಥವಳೇ

ಶ್ರಿಂಗಾರದ ಕರಿಮಿಯ
ಭಂಗಾರದ ಬಳಿನಿಟ್ಟ
ರಂಗದುಟಿ ರತನದಂಥವಳೇ

ಚಾಲ

ತೋಳ ತೊಡಿಗಳು ಸಣ್ಣ
ಬಹಳ ಸೂಕ್ಷ್ಮದ ಹೆಣ್ಣ
ಹೇಳಲಾರೆ ನಿನ್ನ ಚೆಲ್ವಿಕಿ
ಏಕಾಏಕಿ ಕೇಳಲಾರದೆ ಬಂತ ಬವಳೀಕಿ
ಇಂದ್ರಲೋಕದಾಗ ಸುಂದ್ರಿ ರಂಭಿಗತಿ ಕಾಣಸ್ತೀಯೆ
ಸುಂದ್ರತನಕ ಮೆಚ್ಚಿದೀನಿ ಚಂದ್ರಮುಖಿ
ನೀ ಬಂದ್ರ ಬಂಕನಾಥಗ ಎರಗುವ ಸಖಿ ॥
ರಂಗದುಟಿ ರತನದಂಥವಳೇ
ನಿನ್ನ ಕಂಡು ಅಂಗಜನ ಬಾಣ ಬಡದೀತು

* * *

51.  ವರಶ್ರೇಷ್ಠ ಬಾಣ ಹೊಡೆದಾನ

ಹರಿ ಹರಗ ಬಿಟ್ಟಿಲ್ಲಾ ಭರದಿಂದ ಮನ್ಮಥನು
ವರ ಶ್ರೇಷ್ಠ ಬಾಣ ಹೊಡೆದಾನು

ಚಾಲ

ಟೀಕ ಮಾಡಿ ಟಿಕ್ಕೆ ಕಟ್ಟಿ
ಜೋಕ ಮಾಡಿ ಹೋಗುವಾಗ
ಡಾಕ ಬಡಿತ ಎನ್ನ ಎದಿಯಾಗ
ಭಪ್ಪರೆ ಬಂಗಾರ ಬಾಕಿನಂಥಾ ಹೆಣ್ಣ ಹಿತ್ತಲದಾಗ ॥

ಚಂದರಕಾಳಿ ಸೀರಿನುಟ್ಟು
ಚಂದಾದ ಕುಪ್ಪಸತೊಟ್ಟು
ಮಂದಿವೊಳಗ ಹಾದ ಹೋಗುವಾಗ
ನಿನ್ನ ಕಂಡು ನಿಂದರಲಾರದ ಬಿದ್ದೇನ ಕಟ್ಟಿ ತೆಳಗ ॥

ವರಶ್ರೇಷ್ಠ ಬಾಣಾ ಹೊಡದಾನ
ಹರಿ ಅಜನು ಪರಿವಿಲ್ಲದ ನಾರಿ ಬಯಸಿದನು ॥

* * *

52.  ತುಪ್ಪದಂಥವಳ ಬಯ್ಯಬ್ಯಾಡ

ಕಪ್ಪಿಗಾಶವ ಮಾಡಿ ಒಪ್ಪತ್ತಾನಿಂತೇನ
ತುಪ್ಪದಂಥವಳ ಬಯ್ಯಬ್ಯಾಡ ॥

ಚಾಲ

ಬಾಯಿಗೆ ಬಂದಾಂಗ ಬಯ್ಯವಲ್ಲಿ
ಮಾಯ ನಿನ್ನ ಮ್ಯಾಲೆ ಹುಡುಗಿ
ನ್ಯಾಯ ಮಾಡಬ್ಯಾಡ ಬಂದ ಕೂಡ
ನಿನ ತಕ್ಕ ಪುರುಷನಿಲ್ಲಂತ ಮರಿಜಿ ಮುರಿಬ್ಯಾಡ
ಭಂಗಾರದ ಗುಡಿವೊಳಗ
ಲಿಂಗ ಕಲ್ಲಿಂದಿರತೈತಿ
ಹಾಂಗ ನಿನ್ನ ಮನಸ್ಸಿಗೆ ತಿಳದ ನೋಡ
ನಿನ್ನ ತಕ್ಕ ಪುರುಷ ಅಂತ ಅಂಗಸಂಗವನ್ನು ಮಾಡ ॥
ತುಪ್ಪದಂಥವಳೇ ಬಯ್ಯಬ್ಯಾಡ ಎಲೆ ಹುಡಗಿ
ಕಪ್ಪಿಯ ಕಿಂವಿಗೆ ಮರುಳಾದೆ ॥

* * *

53.  ಪಂಟ ಹೇಳಬ್ಯಾಡ ಸುಂದರಿ

ಎಷ್ಟು ಹೇಳಿದರು ನಿನ್ನ ಬಿಟ್ಟವನು ನಾನಲ್ಲಾ
ಪಂಟ ಹೇಳ ಬ್ಯಾಡ ಸುಂದರಿ ॥

ಚಾಲ

ಯಾಕ ಇಕ್ಕೆ ನಿಮ್ಮವ್ವ ನಮ್ಮಕ್ಕ
ಸೋದರ ಸೊಸಿ ಆಗಬೇಕ ನೀ ನನಗ
ಬಂದಾಳಂತ ಬರೋಸ ಮಾಡಿ
ಬಾಯಿ ತಗದು ಕೇಳತೇನ
ಬರದಿರ ಸತ್ತಾಯಿಲ್ಲ ನಿನ್ನ ಮ್ಯಾಗ ॥

ಹೆಂತ ವಟ್ಟ ಮೈ ಮುಟ್ಟ ಬಿದ್ದಿ ಗಂಟ
ಒಂದಿನರ ಧೀರ ಹಿಡಿ ಮನದಾಗ
ವಡಕ ಬಾಯಿಂದ ವಾಳಿ ಗಂಡಸ
ಯಾರ ಮುಂದ ಹೇಳಿ ಅಂತ
ಇದರಿಂದ ಹಾರತೈತಿ ಎದಿಯಾಗ
ಪಂಟ ಹೇಳ ಬ್ಯಾಡ ಸುಂದರಿ
ನಾ ನಿನ್ನ ಬಿಟ್ಟರುದಾನ್ಹಾಂಗ ನಿನ ಸೀರಿ

* * *

54.  ಅಗಸ್ಯಾಗ ನಿನ್ನ ಹುಗಸೇನ

ವಟ್ಟಗೇಡಿ ಮೂಳಾ ಖೊಟ್ಟಿ ಮಾತಾಡಬ್ಯಾಡೊ
ರಟ್ಟಿ ಕಟ್ಟಿ ನಿನ್ನ ಬಡಿಸುವೆನೊ ॥

ಚಾಲ

ಚದುರ ಕೇಳ ನನ್ನ ಇದರ ಬಂದ ಸೀರಿ
ಪದರ ಹಿಡದ ಜಗ್ಗುವದಿಲ್ಲಾ
ಮಧುರ ಮಾತಿಲೆ ಒದರಿ ಹೇಳುವೆನೋ
ಇದರವೊಳಗ ಏನು ಸುಖವಿಲ್ಲ
ಧೀರ ನನ್ನ ಗಂಡ ಶೂರ ಊರಾಗ
ಮಾರಿ ನೋಡಿದರ ಉಳಿಯಾಕಿಲ್ಲಾ
ಪಾರ ಕೇಳೊ ನಿಂದ ಸೂರಿ ಆದೀತು
ಯಾರ ಏನ ಉಳಸವರಿಲ್ಲಾ ॥

ಚಾಲ

ಊರಾಗ ತಿರಗತಿ ಡೌಲ ಬಹಳ
ಮಂದೀ ರುಮಾಲ ಧೋತರಗೋಳ
ನಿನ್ನ ಹೆಣತಿ ಅಳತಾಳೊ ಗಳಗಳಾ
ಉಪಾಸ ಸಾವತಾವ ಮಕ್ಕಳಾ
ಮನ್ಯಾಗ ನೋಡೇನಂದ್ರ ಇಲ್ಲ ಕರಿ ತಳಾ
ಬಲ್ಲಿನ್ಹೋಗೊ ನಿನ್ನ ಎಲ್ಲಾ ಬಡ್ಡತಾಳಾ
ರಟ್ಟಿ ಕಟ್ಟಿ ಬಡಿಸುವೆನೋ
ಸೂಳಿಭಾಂವಿ ಅಗಸ್ಯಾಗ ನಿನ್ನ ಹುಗಸೇನೊ

* * *

55.  ಅಂಗಿ ಮ್ಯಾಲ ಅಂಗಿ ತೊಟ್ಟ

ಅಂಗಿ ಮ್ಯಾಲಂಗಿಯ ತೊಟ್ಟ
ಬಂಗಾರದ ಖಡೆನಿಟ್ಟ
ಶೃಂಗಾರದ ಕುದರಿ ಕುಣಿಸುತ್ತಾ

ಚಾಲ

ಕುದರಿ ಮ್ಯಾಲೆ ಕುಂತಿದ್ದವ್ವ
ಚದುರ ನದರಿಗೆ ನಟ್ಟ ಬಂದ
ಸದರ ಶುದ್ಧ ಕಾಣಸ್ತಾನ ಯಾವೂರ ಧನಿ
ಇವನ ಕಣ್ಣ ಹುಬ್ಬ ಮಾವಿನ ಹೋಳಿನಂಥಾವು
ಮೂಗ ಸಂಪಿಗಿ ತೆನಿ
ಬಹಳ ಮದಿ ನೋಡಿದರ
ಬರಷಣ ಆದಿತಂತೇನ ಪುರುಷನ
ವರ್ಣ ಏನ ಹೇಳಲಿ
ಅರಷಿಣ ತೆನಿ ತೆನಿ
ಇಂಥವ ಸಿಕ್ಕರ ಬಾಳೆ ಬದಕ ಎಲ್ಲ
ಸೂರಿ ಮಾಡುವೆನ ಮನಿ ಮನಿ ॥

ಚಾಲ

ಶೃಂಗಾರದ ಕುದರಿ ಕುಣಿಸುತ್ತ
ಸೂಳಿಭಾಂವಿ ಒಡಿಯ ಕಲ್ಮೇಶನ ಗುಡಿಮುಂದ ॥

 

 

 

* * *
56. 
ಕೊಡಿಯ ನೆರಳಾಗ ನಿಂತಿದ್ದ

ಧಡಿಯಧೋತರ ಹೊತ್ತ
ಮಡಿಯ ಪರಕಾಳಿ ಉಟ್ಟ
ಕೊಡಿಯ ನೆರಳಾಗ ನಿಂತಿದ್ದ ॥

ಚಾಲ

ಪುರುಷನ ನೋಡಿದರ ಏನ ಶುದ್ಧ
ಹುಣವಿ ಚಂದ್ರಾಮ ಹೊಂಟಾಗಾತಿ
ಎಲ್ಲರ ಒಳಗ ಕಾಣಸ್ತಾನ ಚಡತಿ
ವರುಷ ದಿನ ಹೋದೇನ ನಾನು
ಪುರುಷನ ಬೆನ್ನ ಹತ್ತಿ ॥

ಕರೆವ್ವಗ ನಾನು ಬೇಡಿ ಕೊಂಡೆ
ಕಬ್ಬಿನ ಹಂದ್ರ ಹಾಕೇನಂತ
ಗಬ್ಬದ ಬ್ಯಾಟಿ ಮಾಡೇನು ಇಟ್ಟ ಭಕ್ತಿ
ಸುಂದ್ರ ಬಂದರ ಇಂದ ಎನಗ
ಕೈಲಾಸ ದೊರತಾಂಗಾತಿ ॥

ಏರ

ಕೊಡಿಯ ನೆರಳಾಗ ನಿಂತಿದ್ದ
ಸೂಳಿಭಾಂವಿ ಒಡಿಯ ಕಲ್ಮೇಶನ ಗುಡಿಮುಂದ ॥

* * *

57.  ಚೊಕ್ಕ ಬಂಗಾರದ ಖಡೆನಿಟ್ಟ

ಲಕ್ಕಿಪೈರಣ ತೊಟ್ಟ ನಕ್ಕ ಓಣಿಲೆ ಹೊಂಟ
ಚೊಕ್ಕ ಬಂಗಾರ ಖಡೆನಿಟ್ಟ ॥

ಚಾಲ

 

ಇಸ್ತ್ರಿ ಮಾಡಿದ ಕೋಟ ತೊಟ್ಟ
ಮೇಸ್ತ್ರಿ ಯಾವೂರಾಂವ ತಂಗಿ
ಕೇಸರಿ ಗಂಧ ಹಚ್ಚಿದ ಹಣಿಮ್ಯಾಗ
ಬೆಳಗಾಂವಿ ನಾಡೊಳಗ ಸರಿ ಇಲ್ಲ ಇವನಾಂಗ
ಮಜಲೀ ನೊಳಗ ಹಾದ ಹೋದಾ
ಖಜೀಲ ಆತೆ ನೋಡಿ ಜೀವಾ
ಬಿಜಲಿ ಬತ್ತಿ ಹೊಳದಾಂಗ ಆತ ನನಗ
ಗುಜಾರಿಮಾಪುರ ಆಡತೀನ ಸರಿ ಗೆಣತೀರೊಳಗ
ಚೊಕ್ಕ ಬಂಗಾರದ ಖಡೆನಿಟ್ಟಿ ಸೂಳಿಭಾಂವಿತಕ್ಕ
ಪುರುಷಗ ಬರಹೇಳ ॥

* * *