ಭಾಷಾಂತರ ಎಂದರೇನು?

ಒಂದು ಭಾಷೆಯಲ್ಲಿರುವ ವಿಷಯ ಸಾಮಗ್ರಿಯನ್ನು ಇನ್ನೊಂದು ಭಾಷೆಗೆ ಯಥಾವತ್ತಾಗಿ ಕೊಂಡೊಯ್ಯುವ ಪ್ರಕ್ರಿಯೆಗೆ ಭಾಷಾಂತರ (ಟ್ರಾನ್ಸ್‌ಲೇಷನ್) ಎನ್ನುತ್ತಾರೆ. ಅನುವಾದ, ತರ್ಜುಮೆ, ಕನ್ನಡಿಸುವುದು ಇವೇ ಮೊದಲಾದ ಪದಗಳನ್ನು ಪರ್ಯಾಯವಾಗಿ ಬಳಸುವುದುಂಟು. ಯಾವ ಭಾಷೆಯಿಂದ ಭಾಷಾಂತರ ಮಾಡಲಾಗುತ್ತದೆಯೋ ಅದನ್ನು ಮೂಲಭಾಷೆ (SL) ಎಂದೂ ಯಾವ ಭಾಷೆಯಿಂದ ಭಾಷಾಂತರ ಮಾಡಲಾಗುತ್ತದೆಯೊ ಅದನ್ನು ಉದ್ದಿಷ್ಪ ಭಾಷೆ ಅಥವಾ ಲಕ್ಷ್ಯ ಭಾಷೆ (TL) ಎಂದೂ ಕರೆಯುತ್ತಾರೆ. ಈ ರೀತಿ ಭಾಷಾಂತರ ಪ್ರಕ್ರಿಯೆಗೆ ಒಳಗಾಗುವ ಸಾಮಗ್ರಿ ಬರವಣಿಗೆಯದಾಗಿರ ಬಹುದು, ಆಡುಮಾತಿನ ರೂಪದಲ್ಲಿರಬಹುದು ಅಥವಾ ಸಂಕೇತಗಳಿಂದ ಕೂಡಿರಬಹುದು.

ಕೇವಲ ಆಡುಮಾತುಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವವರವನ್ನು ದುಭಾಷಿ (ದ್ವಿಭಾಷಿ) ಅಥವಾ ಇಂಟರ್ ಪ್ರಿಟರ್ ಎಂದು ಕರೆಯುವುದುಂಟು. ಭಾಷಾಂತರ ಮಾಡಬೇಕಾದರೆ ಮೂಲ ವನ್ನು ಓದಿ, ಮಥನ ಮಾಡಿಕೊಂಡು, ಇನ್ನೊಂದು ಭಾಷೆಯಲ್ಲಿ ಯಥಾವತ್ತಾಗಿ ಹೀಗೆ ಬರೆಯಬೇಕೆಂದು ಆಲೋಚಿಸಿ ಕೆಲಸಮಾಡುವ ಅವಕಾಶ ಇರುವುದರಿಂದ ಅದು ಹೆಚ್ಚು ನಿರ್ದಿಷ್ಟವಾಗಿರುತ್ತದೆ. ಹಾಗಿರಬೇಕಾದುದು ಅಪೇಕ್ಷಣೀಯ ಕೂಡ. ಆದರೆ ದುಭಾಷಿಗಳ ಕೆಲಸದಲ್ಲಿ ಅಷ್ಟೊಂದು ವ್ಯವಧಾನವಿರುವುದಿಲ್ಲ. ಏಕೆಂದರೆ ಅವರು ಬೇರೆ ಬೇರೆ ವ್ಯಕ್ತಿಗಳು ಪರಸ್ಪರ ಗೊತ್ತಾಗದ ಭಾಷೆಗಳಲ್ಲಿ ಸಂಭಾಷಣೆ ನಡೆಸಬೇಕಾಗಿ ಬಂದಾಗ ಅಂಥವರ ನಡುವೆ ಸಂಪರ್ಕಸೇತುವೆಯಾಗಿ ಕೆಲಸ ಮಾಡುತ್ತಾರೆ. ಆಡುಮಾತಿನ ಜೊತೆಯಲ್ಲಿ ವ್ಯವಹರಿಸಬೇಕಾಗಿರುವುದ ರಿಂದಾಗಿ ದುಭಾಷಿಗಳು ಮಾಡುವ ಅನುವಾದದಲ್ಲಿ ಅರ್ಥೈಸುವಿಕೆ, ತಮ್ಮದೇ ಮಾತುಗಳಲ್ಲಿ ವ್ಯಾಖ್ಯಾನಿಸಿ ಅಥವಾ ವಿಶ್ಲೇಷಿಸಿ ಹೇಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವರು ಭಾಷಾಂತರಕಾರರ ಹಾಗೂ ದುಭಾಷಿಗಳ ಕೆಲಸದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ವೆಂದು ಭಾವಿಸಿದರೆ ಇನ್ನೂ ಕೆಲವರು ಇವರಿಬ್ಬರ ಕೆಲಸದ ಸ್ವರೂಪದಲ್ಲಿ ವ್ಯತ್ಯಾಸವನ್ನು ಕಂಡುಕೊಳ್ಳುತ್ತಾರೆ.

ಭಾಷಾಂತರವನ್ನು ಸೀಮಿತವಾದ ವ್ಯಾಪ್ತಿಯಲ್ಲಿ ಮತ್ತು ವಿಸ್ತೃತ ವ್ಯಾಪ್ತಿ ಯಲ್ಲಿ ಪರಿಗಣಿಸುವುದುಂಟು. ಒಂದು ಭಾಷೆಯಲ್ಲಿ ನೀಡಲಾಗಿರುವ ಮಾಹಿತಿಯನ್ನು ಮೂಲದ ಆಶಯಕ್ಕೆ ಧಕ್ಕೆ ಬರದಂತೆ ಯಥಾವತ್ತಾಗಿ ಇನ್ನೊಂದು ಭಾಷೆಗೆ ವರ್ಗಾಯಿಸುವುದನ್ನು ಸೀಮಿತವಾದ ಇಲ್ಲವೇ ನಿಷ್ಕೃಷ್ಟವಾದ ಅರ್ಥದಲ್ಲಿ ಭಾಷಾಂತರ ಎನ್ನುತ್ತಾರೆ. ಇಂತೆಯೇ ಒಂದು ಬರೆವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಸ್ಪಷ್ಟವಾದ ಎದ್ದುಕಾಣುವಂತಹ ಪ್ರೇರಣೆ ಪ್ರಭಾವಗಳು ಇದ್ದಲ್ಲಿ ಅಂತಹ ಬರೆವಣಿಗೆಯನ್ನು ವಿಸ್ತಾರವಾದ ಅರ್ಥದಲ್ಲಿ ಭಾಷಾಂತರದ ವ್ಯಾಪ್ತಿಯಲ್ಲಿ ಪರಿಗಣಿಸುವುದುಂಟು. ಪ್ರಾಚೀನ ಕಾಲದಲ್ಲಿ ಲೇಖಕರು ತಾವು ಓದಿದ, ಕೇಳಿದ ಹಲವಾರು ಮೂಲ ಆಕರಗಳನ್ನು ಆಧರಿಸಿ ಅವುಗಳನ್ನು ತಮಗೆ ಅಗತ್ಯವಾದಷ್ಟು ಪ್ರಮಾಣದಲ್ಲಿ, ಅನುಕೂಲ ವಾಗುವಷ್ಟರಮಟ್ಟಿಗೆ ಉಪಯೋಗಿಸಿಕೊಂಡು ತಮ್ಮ ಕೃತಿಗಳಲ್ಲಿ ಸೇರಿಸಿ ಕೊಳ್ಳುತ್ತಿದ್ದರು. ಇಲ್ಲವೇ ತಮ್ಮ ಕೃತಿ ರಚನೆ ಮಾಡುತ್ತಿದ್ದರು. ಇಂತಹ ಪ್ರಾಚೀನ ಕೃತಿಗಳಲ್ಲಿ ಭಾಷಾಂತರಕ್ಕೆ ಸಂಬಂಧಪಟ್ಟ ಅಂಶಗಳನ್ನು ಕುರಿತು ಅಧ್ಯಯನ ನಡೆಸುವುದು ಕುತೂಹಲಕರವಾಗಿರುತ್ತದೆ.

ಭಾಷಾಂತರ ಏಕೆ?

ಭಾಷಾಂತರವಿಲ್ಲದೆ ಯಾವ ಚಟುವಟಿಕೆಯೂ ನಡೆಯಲಾಗದು ಎನ್ನುತ್ತಾನೆ ಬೇಟ್ಸ್. ಆತನ ಅಭಿಪ್ರಾಯದಂತೆ ಮಾನವನ ಅನುಭವ ಭಾವ, ತಂತ್ರ ಹಾಗೂ ಚಿಂತನೆಗಳನ್ನು ಆಧರಿಸಿರುತ್ತದೆ. ಭಾವಗಳು ಪ್ರೀತಿ, ಭಯ, ಆತಂಕ, ಕಾತರತೆ, ಜುಗುಪ್ಸೆ ಇತ್ಯಾದಿ ವಿಶ್ವಾದ್ಯಂತ ಸಾರ್ವತ್ರಿಕವಾಗಿದ್ದು ಅವುಗಳ ಸ್ವಭಾವದಲ್ಲಿ ದೇಶ ದೇಶಗಳ, ಜನಾಂಗಗಳ ಭಾಷೆಗಳ ನಡುವೆ ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಚಿಂತನೆಯ ವಿಧಾನ ಹಾಗೂ ಅವುಗಳನ್ನು ಅಭಿವ್ಯಕ್ತಿಪಡಿಸುವ ತಂತ್ರಗಳು ರೀತಿ ನೀತಿಗಳು ಬದಲಾಗುತ್ತವೆ. ಒಂದು ಜನಾಂಗದಲ್ಲಿ ಅಥವಾ ಭಾಷೆಯಲ್ಲಿ ಕಲಾತ್ಮಕವಾಗಿ ಒಟ್ಟಾರೆ ಮನುಷ್ಯ ಕುಲದ ಸಹಜ ಸಂವೇದನೆಗೆ ಉಪಯುಕ್ತವಾಗಿ ಇರುವಂತೆ ಪ್ರಕಟವಾಗುವ ಯಾವುದೇ ಸಾಹಿತ್ಯ ಅಥವಾ ಜ್ಞಾನವಿಚಾರಗಳು ಉಳಿದೆಲ್ಲ ಜನಾಂಗಗಳ ಭಾಷೆಗಳ ಸಂಸ್ಕೃತಿಗಳ ಪಾಲಿಗೆ ಅಷ್ಟೇ ಅಸಾಧ್ಯ ವಾಗಿರುತ್ತವೆ, ಉಪಯುಕ್ತ ವೆನಿಸುತ್ತದೆ. ಭಾಷೆಯ ಬಂಧನವನ್ನು ಕಳಚಿ ಭಾವವನ್ನು ಅಥವಾ ಅಗತ್ಯ ಮಾಹಿತಿಯನ್ನು ಇನ್ನೊಂದು ಭಾಷಾ ಬಾಂಧವರಿಗೆ ಪರಿಚಯ ಮಾಡಿಸುವಲ್ಲಿ ಭಾಷಾಂತರ ವಿಶೇಷ ಪಾತ್ರ ನಿರ್ವಹಿಸುತ್ತವೆ. ಸಾಹಿತ್ಯ ಸಾಧನೆಗಾಗಿ ಅಥವಾ ಜ್ಞಾನದಾಹವನ್ನು ತಣಿಸಲು ಬೇರೆ ಬೇರೆ ಭಾಷೆಗಳನ್ನು ಕಲಿಯಲೇಬೇಕಾದ ಅನಿವಾರ್ಯತೆಯನ್ನು ದೂರಮಾಡಿ ದೇಶ ದೇಶಗಳ ನಡುವೆ, ಸಂಸ್ಕೃತಿಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಭಾಷಾಂತರ ಕಾರರನ್ನು ‘ಸಾಂಸ್ಕೃತಿಕ ರಾಯಭಾರಿ’ ಎಂದು ಕರೆಯುವುದು ಸೂಕ್ತವಾಗಿಯೇ ಇದೆ.

ಪ್ರಪಂಚದಲ್ಲಿ ಭಾಷೆಗಳು ಅಸಂಖ್ಯಾತವಾಗಿವೆ. ಇವುಗಳ ಸಂಖ್ಯೆಯನ್ನು ನಿರ್ದಿಷ್ಟವಾಗಿ ಲೆಕ್ಕಹಾಕುವುದು ಕಷ್ಟಸಾಧ್ಯವಾದರೂ, ವಿಶ್ವದಲ್ಲಿರುವ ಭಾಷೆ ಹಾಗೂ ಉಪಭಾಷೆಗಳ ಸಂಖ್ಯೆ 2,796 ಎಂಬುದು ಒಂದು ಅಂದಾಜು. ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷೆಗಳಲ್ಲಿ ಹೆಚ್ಚು ಜನ ಬಳಸುವ ಭಾಷೆಗಳೂ ಉಂಟು, ಕಡಿಮೆ ಜನರಿಂದ ಬಳಕೆಯಾಗುವ ಭಾಷೆಗಳೂ ಇವೆ. ಭೌಗೋಳಿಕ, ಜನಾಂಗಿಕ, ಸಾಂಸ್ಕೃತಿಕ, ಸಾಮಾಜಿಕ ಕಾರಣಗಳಿಂದ ವಿವಿಧ ಭಾಷೆಗಳ ಅಸ್ತಿತ್ವವನ್ನು ನಾವು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟು. ಅಂದ ಮೇಲೆ ಇಡೀ ಪ್ರಪಂಚದಲ್ಲಿ ಒಂದೇ ಭಾಷೆ ಇರಬೇಕು ಅಥವಾ ಕೇವಲ ವ್ಯವಹಾರಗಳನ್ನು ನಡೆಸಿಕೊಂಡು ಹೋಗಬೇಕು ಎಂಬುದು ಅಸಾಧ್ಯದ ಮಾತಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬೇರೆ ಬೇರೆ ಜನಗಳ ನಡುವೆ ಪರಸ್ಪರ ತಿಳಿವಳಿಕೆಯನ್ನು ಉಂಟುಮಾಡುವುದು, ಸೌಹಾರ್ದಕ್ಕೆ ದಾರಿ ಮಾಡಿಕೊಡು ವುದು ಭಾಷಾಂತರವೇ. ಭಾಷೆಗಳ ನಡುವಣ ಗೋಡೆಯನ್ನು ನಿವಾರಿಸಿ ಭಾವ ಸಂವಹನಕ್ಕೆ ಅದು ಸುಲಭವಾಗಿ ದಾರಿ ಮಾಡಿಕೊಡುತ್ತದೆ.

ಇಂದಿನ ಜನಜೀವನದ ರೀತಿನೀತಿಗಳು ಕ್ಲಿಷ್ಟವಾಗುತ್ತಿವೆ. ಕಾಲ ಮತ್ತು ದೇಶಗಳ ದೃಷ್ಟಿಯಿಂದ ನಿರಂತರವಾಗಿ ಸಂಕುಚಿಸುತ್ತಿರುವ ಇಂದಿನ ಪ್ರಪಂಚದಲ್ಲಿ ಮನುಷ್ಯನ ಅವಶ್ಯಕತೆಗಳು ಅನಿವಾರ್ಯತೆಗಳು ಬಾಧ್ಯತೆಗಳು ಬೇಕಾದಷ್ಟಿವೆ. ಅನೇಕ ದೈನಂದಿನ ವಿಷಯಗಳ ಬಗೆಗೆ ತಕ್ಕಷ್ಟು ತಿಳುವಳಿಕೆ ಇಲ್ಲದೇ ಹೋದಲ್ಲಿ ಇವತ್ತಿನ ಬದುಕು ದುರ್ಬರವಾಗುವುದರಲ್ಲಿ ಸಂದೇಹ ವಿಲ್ಲ. ಹಾಗಾಗಿ ನಮ್ಮ ನಾಗರಿಕ ಬದುಕಿನಲ್ಲಿ ನೀವು ಸ್ಪಂದಿಸಲೇಬೇಕಾದ ಅನೇಕ ವಿಷಯಗಳಿರುತ್ತವೆ. ‘ಮಾಹಿತಿಗಾಗಿ ಹಸಿವು’ ಇಂದಿನ ಪ್ರಜ್ಞಾವಂತನಾದ ನಾಗರಿಕರ ಆದ್ಯಲಕ್ಷಣ ಗಳಲ್ಲೊಂದು. ಈ ಬಗೆಯ ತೀವ್ರ ಚಟುವಟಿಕೆಯ ಹಿನ್ನೆಲೆಯಲ್ಲಿ ಭಾಷೆ ಮತ್ತು ಭಾಷಾಂತರಗಳ ಬೆಳವಣಿಗೆಗೆ ಹೊಸ ಹೊಸ ಆಯಾಮಗಳು ದೊರೆತಿರುವು ದನ್ನು ನಾವು ಲಕ್ಷಿಸಬಹುದು (ಆರೋರ, 1995: 98).

ಇಂದಿನ ಪ್ರಪಂಚ ಕಾಲದ ಮತ್ತು ದೇಶಗಳ ದೃಷ್ಟಿಯಿಂದ ಕಿರಿದಾಗುತ್ತಿದೆ. ಭೌಗೋಳಿಕ ಎಲ್ಲೆಕಟ್ಟುಗಳನ್ನು ದಾಟಿ ಮನುಷ್ಯರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬಲ್ಲರು. ಅಂತೆಯೇ ತಮ್ಮ ಹಿಂದಿನ ಜ್ಞಾನ ವಿಜ್ಞಾನ ಗಳನ್ನು ಅಧ್ಯಯನಮಾಡಿ ಅವುಗಳ ಮೂಲಕ ಕಾಲದಿಂದ ಕಾಲಕ್ಕೆ ಸಾಗಬಲ್ಲರು. ದೈನಂದಿನ ಜೀವನದ ಹಲವಾರು ನಡೆನುಡಿಗಳಲ್ಲಿ- ಉದಾಹರಣೆಗೆ ಕಛೇರಿ, ಬ್ಯಾಂಕು ವ್ಯವಹಾರಗಳು ಮಾರುಕಟ್ಟೆ, ಪತ್ರಿಕೆಗಳು ಮತ್ತು ಮಾಧ್ಯಮಗಳು ಮುಂತಾದವು – ಭಾಷೆ ಹಾಗೂ ಭಾಷಾಂತರಗಳ ಪಾತ್ರ ಇರುವುದನ್ನು ನೋಡ ಬಹುದು. ಇಂದು ಮಾನವ ವಿಶ್ವಮಾನವನಾಗಬೇಕಾದ ನಿಟ್ಟಿನಲ್ಲೂ ಭಾವಾತ್ಮಕ ಏಕತೆಯನ್ನು ಕೊಂಡುಕೊಳ್ಳುವ ಹಾದಿಯಲ್ಲಿ ಭಾಷಾಂತರ ಮಹತ್ವ ಪೂರ್ಣ ವಾದ ಕೆಲಸ ಮಾಡುತ್ತದೆ.

ಇಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾಷಾಂತರಕಾರರಿಗೆ ತಮ್ಮದೇ ಆದ ಮೂಲ ಪ್ರೇರಣೆಗಳಿರುತ್ತವೆ. ಈ ಮಾತನ್ನು ಗಮನಿಸಿ: “ತಾವು ಕಂಡ ಸೊಗಸನ್ನು ಉಂಡ ರುಚಿಯನ್ನು ಇನ್ನೊಬ್ಬರಿಗೆ ಹಂಚಿಕೊಡ ಬಯಸುವುದು ವಿಶಿಷ್ಟಬಗೆಯ ಸಹೃದಯದ ಲಕ್ಷಣಗಳಲ್ಲೊಂದು. ಯಾವುದಾದರೂ ಉತ್ಕೃಷ್ಟವಾದ ಮೂಲ ಕೃತಿಯನ್ನು ಸೃಜನಶೀಲ ಪ್ರತಿಭೆ ಉಳ್ಳಂತಹ ಸಹೃದಯ ಓದಿದಾಗ ಆ ಆನಂದದ ಧಾರೆಯನ್ನು ತನ್ನಲ್ಲಿ ಅಡಗಿಸಿಟ್ಟುಕೊಳ್ಳಲಾರ. ತನ್ನ ಆಸ್ವಾಧನೆಯ ಫಲವನ್ನು ಬಿಸಿ ಬಿಸಿಯಾಗಿ ಬೇರೆಯವರಿಗೆ ಹಂಚುವ ತತ್ಪರತೆ ಅವನಲ್ಲಿ ಮನೆಮಾಡುತ್ತದೆ. ಉತ್ಕೃಷ್ಟ ಕೃತಿಗಳ ಭಾಷಾಂತರದ ರೂಪದಲ್ಲಿ ಇಂಥ ತತ್ಪರತೆ ಆಗಾಗ್ಗೆ ಕೃತ ಕೃತ್ಯತೆಯನ್ನು ಪಡೆಯುವುದುಂಟು”.

ಭಾಷಾಂತರ ಕಲೆಯೆ ಅಥವಾ ವಿಜ್ಞಾನವೇ?

ಭಾಷಾಂತರ ಕಲೆಯೂ ಹೌದೂ, ವಿಜ್ಞಾನವೂ ಹೌದು. ಏಕೆಂದರೆ ಭಾಷಾಂತರಕಾರರ ಪಾಲಿಗೆ ಕಲಾವಿದರ ಸ್ವಾತ್ರಂತ್ಯವೂ ಇರುತ್ತದೆ, ವಿಜ್ಞಾನಿ ಅಥವಾ ಶಾಸ್ತ್ರಜ್ಞರ ಪಾಲಿಗೆ ಇರಬೇಕಾದ ಕಟ್ಟುಪಾಡುಗಳೂ ಇರುತ್ತವೆ. ಒಂದು ಒಳ್ಳೆಯ ಕೃತಿಯ ಭಾಷಾಂತರ ಎಂದರೆ ಕೇವಲ ಪದಕ್ಕೆ ಪದ ಇಟ್ಟುಕೊಂಡು ಹೋಗುವ ಶುಷ್ಕ ಕ್ರಿಯೆಯಲ್ಲ. ಭಾಷಾಂತರದಲ್ಲಿ ಮೂಲದ ಭಾವ ಇಳಿದುಬರುವಂತೆಯೇ ಭಾಷೆಯ ಸೊಗಸು, ಸೊಗಡು ಮೈವೆತ್ತಿ ಬರಬೇಕು. ತನ್ನ ಕೆಲಸ ಓದುಗರ ಪಾಲಿಗೆ ಸುಲಭಗ್ರಾಹ್ಯವಾಗುವಂತೆ ಮಾಡಬೇಕಾದರೆ ಭಾಷಾಂತರಕಾರರು ಮೂಲದ ಸಪ್ಪೆ ಪ್ರತಿರೂಪವನ್ನು ತಂದರೆ ಸಾಲದು. ಅದರಲ್ಲಿ ಜೀವನವನ್ನು ತುಂಬಬೇಕು. ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಆದ್ದರಿಂದಲೇ ಭಾಷಾಂತರಕಾರರಿಗೆ ಕವಿಯ, ಕಲಾವಿದರ, ಲೇಖಕರ ಹೃದಯ ಇರಬೇಕೆಂದು ಹೇಳುವುದು.

ಆದರೆ ಸ್ವಾತಂತ್ರ್ಯ ಇದೆಯೆಂದು ಭಾಷಾಂತರಕಾರರು ತಮಗೆ ಇಷ್ಟಬಂದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಮೂಲವನ್ನು ಸರಿಯಾಗಿ ಗ್ರಹಿಸಿ ಮೂಲ ಲೇಖಕನ ಜಾಡಿನಲ್ಲಿಯೇ ಸಾಗಬೇಕು. ಅವರ ಕೆಲಸ ನಿರ್ದಿಷ್ಟವಾಗಿರಬೇಕು, ಕರಾರುವಾಕ್ಕಾಗಿರಬೇಕು. ವಿಜ್ಞಾನ ವಸ್ತುನಿಷ್ಠವಾದರೆ ಕಲೆ ವ್ಯಕ್ತಿನಿಷ್ಠವಾದದ್ದು. ಭಾಷಾಂತರವನ್ನು ‘ಕಲಾತ್ಮಕ ವಿಜ್ಞಾನ’ ಅಥವಾ ‘ವೈಜ್ಞಾನಿಕ ಕಲೆ’ ಎಂಬ ವರ್ಗಕ್ಕೆ ಸೇರಿಸಬಹುದು. ಭಾಷಾಂತರಕಾರರಿಗೆ ಹೆಜ್ಜೆಹೆಜ್ಜೆಗೂ ತಾವು ಮಾಡುತ್ತಿರುವ ಕೆಲಸದ ಅಂದರೆ ಇನ್ನೊಬ್ಬ ಲೇಖಕರನ್ನು ತಾನು ಅನುವಾದಿಸುತ್ತಿರುವೆನೆಂಬ ವಿಚಾರವಾಗಿ ಪ್ರಜ್ಞೆ ಇರಬೇಕಾದುದು ಅವಶ್ಯಕವಾದುದರಿಂದ ಭಾಷಾಂತರವನ್ನು ಪ್ರಜ್ಞಾಪೂರ್ವಕ ಕಲೆ ಎಂದು ಕೂಡ ಕರೆಯಬಹುದು.

ಭಾಷಾಂತರಕಾರ ಹಾಗೂ ದುಭಾಷಿಯ ಅರ್ಹತೆಗಳು

ಭಾಷಾಂತರಕಾರರು ಹಾಗೂ ದುಭಾಷಿಗಳು ಅನೇಕ ವಿಶಿಷ್ಟ ಅರ್ಹತೆಗಳನ್ನು ಹೊಂದಿರಬೇಕಾದುದು ತುಂಬಾ ಅವಶ್ಯಕ. ಭಾಷಾಂತರಕಾರರು ಮೂಲಭೂತ ವಾಗಿ ಓದುಗರು, ಸಹೃದಯ ಓದುಗರು; ಅಂತೆಯೇ ಅವರು ವಿಮರ್ಶಕರು ಕೂಡ. ಒಂದು ಕೃತಿಯ ಗುಣಾವಗುಣಗಳನ್ನು ಕುರಿತು ಸಾಕಷ್ಟು ಚೆನ್ನಾಗಿ ಪರ್ಯಾಲೋಚಿಸಿದ ಅನಂತರ ಅವರು ಅದನ್ನು ಅನುವಾದಕ್ಕಾಗಿ ಕೈಗೆತ್ತಿ ಕೊಳ್ಳುತ್ತಾರೆ. ವಿಮರ್ಶಕರ ರೀತಿಯಲ್ಲಿ ಕೃತಿಯೊಂದರ ಎಳೆ ಎಳೆಯನ್ನು ಬಿಡಿಸಿ ಅದಕ್ಕೆ ಬೆಲೆಕಟ್ಟುವ ಕೆಲಸ ಮಾಡದೇ ಹೋದರೂ ಕೃತಿ ಆಳಕ್ಕಿಳಿದು ಆಸ್ವಾದಿಸದೇ ಅವರು ಅದನ್ನು ಬೇರೊಂದು ಭಾಷೆಗೆ ಸಮರ್ಥವಾಗಿ ಒಯ್ಯಲು ಸಾಧ್ಯವಾಗುವುದಿಲ್ಲ. ಒಳ್ಳೆಯ ಭಾಷಾಂತರಕಾರರು ಒಳ್ಳೆಯ ಲೇಖಕರೂ ಆಗಿರಬೇಕಾದ್ದು ಅಪೇಕ್ಷಣೀಯ. ಹೀಗಾಗಿ ಸಮರ್ಥ ಭಾಷಾಂತರಕಾರರಲ್ಲಿ ಓದುಗ, ಸಹೃದಯ, ವಿಮರ್ಶಕ ಮತ್ತು ಲೇಖಕ ಇವರೆಲ್ಲ ಮೇಳವಿಸಿರುತ್ತಾರೆ.

ಭಾಷಾಂತರಕಾರರು ತಾವು ವ್ಯವಹರಿಸುತ್ತಿರುವ ಎರಡೂ ಭಾಷೆಗಳ ಮೇಲೆ ಪ್ರಭುತ್ವ ಸಂಪಾದಿಸಿರಬೇಕು. ಮೂಲಭಾಷೆ ಮತ್ತು ಉದ್ದಿಷ್ಟ ಭಾಷೆ ಎರಡರಲ್ಲೂ ಅವರು ಪಳಗಿರಬೇಕು. ಸಾಧಾರಣವಾಗಿ ಅನುವಾದಗಳು ಮಾತೃಭಾಷೆಯಿಂದ ಬೇರೆ ಭಾಷೆಗಳಿಗೆ ನಡೆಯುವುದಕ್ಕಿಂತಲೂ ಬೇರೆ ಭಾಷೆಗಳಿಂದ ಮಾತೃಭಾಷೆಗೆ ನಡೆಯುವುದು ಹೆಚ್ಚು. ಕಾರಣವೇನೆಂದರೆ ಒಬ್ಬ ಬರಹಗಾರರಿಗೆ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಮಾತಿನ ಮರ್ಮಗಳು ಚೆನ್ನಾಗಿ ಪರಿಚಯವಾಗಿರುತ್ತವೆ. ವಿವಿಧ ರೂಪಗಳು, ಭಂಗಿಗಳು ಸೂಕ್ಷ್ಮವಾದ ವಿಚಾರಗಳನ್ನು ಸಮರ್ಥವಾಗಿ ಹೇಳುವ ಅಭಿವ್ಯಕ್ತಿ ಸಾಮರ್ಥ್ಯ ಆ ಭಾಷೆಯಲ್ಲೇ ಅವರಿಗೆ ಹೆಚ್ಚಾಗಿ ಸಿದ್ದಿಸಿರುವುದು. ಹಾಗಾಗಿ ಇತರ ಭಾಷೆಗಳಿಂದ ಮಾತೃಭಾಷೆ ಇಲ್ಲವೇ ಆಡು ಭಾಷೆಗೆ ಮಾಡುವ ಅನುವಾದ ಹೆಚ್ಚು ಯಶಸ್ವಿಯಾಗಿರುತ್ತದೆ. ಮಾತೃಭಾಷೆಯಿಂದ ಬೇರೆ ಭಾಷೆಗಳಿಗೆ ಅನುವಾದ ಮಾಡುವುದು ನಮ್ಮ ಸ್ವಂತ ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಸಾರಕ್ಕೆ ಅವಶ್ಯಕವೆನಿಸಿದರೂ ಯಶಸ್ಸಿನ ಪ್ರಮಾಣ ಸೀಮಿತವಾಗಿರುತ್ತದೆ. ಭಾಷಾಂತರ ಕಾರರಿಗೆ ತಾವು ಅನುವಾದ ಮಾಡುತ್ತಿರುವ ಮೂಲ ಭಾಷೆಯ ಬಗ್ಗೆ ಸಮಗ್ರವಾಗಿ ಹಾಗೂ ವಿಮರ್ಶನ ಗುಣವುಳ್ಳ ವ್ಯಾವಹಾರಿಕ ತಿಳುವಳಿಕೆ ಇರಬೇಕು. ಹಾಗೂ ಉದ್ದಿಷ್ಟ ಭಾಷೆಯ ಬಗೆಗೆ ಭಾಷಿಕ ಹಾಗೂ ಸಾಂಸ್ಕೃತಿಕ ಪರಿಚಯ ಆಮೂಲಾಗ್ರವಾಗಿ ಇರಬೇಕು. ಭಾಷಾಂತರಕಾರರಲ್ಲಿ ಸೃಜನಾತ್ಮಕ ಪ್ರತಿಭೆ, ತೀಕ್ಷ್ಣ ವಿಮರ್ಶಾತ್ಮಕ ದೃಷ್ಟಿ ಮತ್ತು ಭಾಷಾ ಪ್ರಭುತ್ವಗಳ ಸಂಗಮ ಏರ್ಪಟ್ಟಿರಬೇಕು.

ಭಾಷಾಂತರಕಾರರಿಗೆ ಭಾಷೆಯ ಮೇಲೆ ಎಲ್ಲಾ ಬಗೆಯ ಹತೋಟಿ ಇರುವುದರೊಂದಿಗೆ ವಿಷಯ ಪರಿಜ್ಞಾನ ಚೆನ್ನಾಗಿ ಇರಬೇಕು. ಏಕೆಂದರೆ ಮೂಲ ಲೇಖಕರು ತಮ್ಮ ಆಸಕ್ತಿಯ ವಿಷಯ ತೆಗೆದುಕೊಂಡು ತನಗೆ ಅನುಕೂಲ ವೆನಿಸಿದ ಸಾಹಿತ್ಯ ಪ್ರಕಾರದಲ್ಲಿ (ಗದ್ಯ, ಪದ್ಯ, ನಾಟಕ ಇತ್ಯಾದಿ) ಕೆಲಸ ಮಾಡಬಲ್ಲರು. ಆದರೆ ಭಾಷಾಂತರಕಾರರಿಗೆ ಆಯ್ಕೆಯ ಸ್ವಾತಂತ್ರ್ಯ ಕಡಿಮೆ. ವೃತ್ತಿ ಭಾಷಾಂತರಕಾರರು ಅನೇಕ ವೇಳೆ ಹಲವಾರು ವಿಷಯಗಳನ್ನೂ ಕುರಿತಂತೆ ಕೆಲಸ ಮಾಡಬೇಕಾಗುತ್ತದೆ. ಇಲ್ಲದೇ ಹೋದರೆ ಅಚಾತುರ್ಯ ಉಂಟಾಗ ಬಹುದು. ವಿಷಯ ಪರಿಜ್ಞಾನವಿಲ್ಲದೆ ‘ಮಕ್ಖೀಕಾ ಮಕ್ಖೀ’ ಭಾಷಾಂತರ ಮಾಡಿದರೆ ಅನೇಕ ವೇಳೆ ಹಾಸ್ಯಾಸ್ಪದವಾಗಬಹುದು. ಈ ಮುಂದೆ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ನೋಡಿ : (ಬಾಕ್ಸ್)

ಪ್ರಯೋಗ ಕ್ಷೇತ್ರ ಅನುವಾದ () ಅನುವಾದ ()
Hard Cash ಅರ್ಥಶಾಸ್ತ್ರ-ವಾಣಿಜ್ಯ ಗಟ್ಟಿಹಣ ನಗದುಹಣ
Bad debt –” ಕೆಟ್ಟಸಾಲ ವಸೂಲಾಗದ ಸಾಲ
Share prices –” ಪಾಲು ಬೆಲೆಗಳು ಷೇರು ಬೆಲೆಗಳು
Consumex –” ಬಳಕೆದಾರ ಸಂಬಂಧವಾದ ಕನ್ಸೂಮೆಕ್ಸ್
Press Conference ಪತ್ರಿಕೋದ್ಯಮ ಮುದ್ರಾಣಾಲಯ – ಸಮ್ಮೇಳನ ಪತ್ರಿಕಾಗೋಷ್ಠಿ
Air Traffic ಸಾಮಾನ್ಯ ಪದ ಗಾಳಿ ಸಂಚಾರ ವಾಯುಯಾನ
Achilles’heel ಗ್ರೀಕ್ ಪುರಾಣ ಅಖಿಲೀಸನ ಹಿಮ್ಮಡಿ ಮರ್ಮಸ್ಥಾನ, ದೌರ್ಬಲ್ಯ
Gordian knot ಗಾರ್ಡಿಯನ್ನನ ಗಂಟು ಕಗ್ಗಂಟು
Herculean task ಹರ್ಕ್ಯೂಲಿಸ್ನನ ಕಾರ್ಯ ಭಗೀರಥ ಪ್ರಯತ್ನ
Stock Exchange ವಾಣಿಜ್ಯ ದಾಸ್ತಾನು ವಿನಿಮಯ ಷೇರು ವಿನಿಮಯ
Radial tyre ಇಂಜಿನಿಯರಿಂಗ್ ಕೇಂದ್ರಾಪಸಾರಿಚಕ್ರ ರೇಡಿಯಲ್ ಟೈರ್
Top Seed ಕ್ರೀಡಾ ಜಗತ್ತು ಉತ್ತಮದರ್ಜೆಯ- ಅಗ್ರಶ್ರೇಯಾಂಕದ-
    ಬೀಜ ಆಟಗಾರ

ಒಳ್ಳೆಯ ಭಾಷಾಂತರಕಾರರು ಪೂರ್ವಗ್ರಹ ಮುಕ್ತರಾಗಿರಬೇಕು. ಅಂದರೆ ತಾವು ಅನುವಾದಿಸುತ್ತಿರುವ ಕೃತಿಯ ಬಗೆಗೇ ಆಗಲಿ, ಅದರ ಲೇಖಕನ ಬಗೆಗೇ ಆಗಲಿ ಅವನು ಮುಂಚೆಯೆ ಒಂದು ಬಗೆಯ ಅಭಿಪ್ರಾಯವನ್ನು ರೂಪಿಸಿ ಕೊಂಡು ಕೆಲಸ ಮಾಡಬಾರದು. ಕೃತಿಯ ವಿಷಯ ವಸ್ತುವಾಗಲಿ ಲೇಖಕನ ನಿಲುವು ಧೋರಣೆಗಳಾಗಲೀ ಭಾಷಾಂತರಕಾರರಿಗೆ ಸರಿದೋರದೆ ಹೋದರೂ ಅವರು ತಮ್ಮ ನಿಲುವು ಧೋರಣೆಗಳನ್ನು ಹೇರಬಾರದು, ಲೇಖಕರ ಹಾದಿ ಯಲ್ಲಿಯೇ ನಡೆಯಬೇಕು. ಇದನ್ನು ಸಾಧಿಸುವ ಸಲುವಾಗಿ ಭಾಷಾಂತರಕಾರರು ಸ್ವನಿರಾಕರಣ ಮತ್ತು ಸ್ವವಿಲೋಪನ ಎಂಬ ಗುಣಗಳನ್ನು ಮೈಗೂಡಿಸಿ ಕೊಂಡಿರಬೇಕು. ಅಂದರೆ ಭಾಷಾಂತರಕಾರರು ತಮ್ಮತನವನ್ನು ಬದಿಗಿಟ್ಟು ಭಾಷಾಂತರದ ಕೆಲಸ ಮಾಡಬೇಕು. ತಮ್ಮ ಸ್ವಂತ ಪ್ರತಿಭೆಯನ್ನು, ಸಾಮರ್ಥ್ಯ ವನ್ನು ಮೆರೆಯುವ ಸಲುವಾಗಿ ಭಾಷಾಂತರವನ್ನು ಸಾಧನವನ್ನಾಗಿ ಮಾಡಿಕೊಳ್ಳ ಬಾರದು. ಅವರು ತಮ್ಮನ್ನು ತಾವು ಇಲ್ಲವಾಗಿಸಿಕೊಂಡು, ಶೂನ್ಯವಾಗಿರಿಸಿ ಕೊಂಡು ಭಾಷಾಂತರದ ಕೆಲಸಕ್ಕೆ ತೊಡಗಬೇಕು. ಭಾಷಾಂತರಕಾರರು ತಮ್ಮ ತನವನ್ನು ಎಷ್ಟರಮಟ್ಟಿಗೆ ದೂರವಿಟ್ಟಿರಬಲ್ಲರೋ, ಎಷ್ಟರಮಟ್ಟಿಗೆ ತಮ್ಮನ್ನು ತಾವು ಇಲ್ಲವಾಗಿಸಿಕೊಳ್ಳಬಲ್ಲರೋ ಅಷ್ಟರಮಟ್ಟಿಗೆ ಭಾಷಾಂತರ ಹೆಚ್ಚು ಯಶಸ್ವಿ ಯೆನಿಸುತ್ತದೆ.

ಭಾಷಾಂತರಕಾರರಿಗೆ ನಿಮಜ್ಜನ ಚಾತುರ್ಯ ಮತ್ತು ಲಘಿಮಾಕೌಶಲ ಎಂಬ ಗುಣಗಳು ಇರಬೇಕು. ಅಂದರೆ ಅವರು ತಾವು ಅನುವಾದಿಸುವ ಕೃತಿಯಲ್ಲಿ ಆಳಕ್ಕೆ ಮುಳುಗುಹಾಕಿ, ಅದರ ತಳವನ್ನು ಮುಟ್ಟಬೇಕು. ಅದರ ಆಂತರ್ಯವನ್ನು ಸ್ಪರ್ಶಿಸಿ ಒಳದನಿಯನ್ನು ಅರ್ಥಮಾಡಿಕೊಳ್ಳಬೇಕು. ಅನಂತರ ಹಾಗೆಯೆ ಅಲ್ಲಿ ತನ್ಮಯರಾಗಿ ಕೂರದೆ ಮೇಲೆದ್ದುಬಂದು ಅದನ್ನು ವಸ್ತುನಿಷ್ಠ ದೃಷ್ಟಿಯಿಂದ ಅನುವಾದ ಮಾಡಬೇಕು. ವಿಲಮೊವಿಟ್ಸ್ ಎಂಬ ವಿದ್ವಾಂಸರ ಮಾತಿನಂತೆ ಭಾಷಾಂತರ ಪರಕಾಯ ಪ್ರವೇಶವಿದ್ದಂತೆ. ಭಾಷಾಂತರಕಾರರಿಗೆ ಅಗತ್ಯವಾದ ಇನ್ನೆರಡು ಗುಣಗಳೆಂದರೆ ಗ್ರಹಣಶಕ್ತಿ ಮತ್ತು ಅಭಿವ್ಯಕ್ತಿ ಸಾಮರ್ಥ್ಯ. ಮೊದಲನೆಯದಾಗಿ ತಾವು ಓದಿದ್ದನ್ನು ಅವರು ಸರಿಯಾಗಿ ಗ್ರಹಿಸಬೇಕು. ಭಾಷೆಯ ಬಳಕೆ ತುಂಬ ಸೂಕ್ಷ್ಮವಾಗಿರುವುದರಿಂದ ಯಾವುದೇ ಉಕ್ತಿಯ ಸರಿಯಾದ – ಲೇಖಕ ಅಥವಾ ಬಳಸುವವರು ಉದ್ದೇಶಪಡುವ – ಅರ್ಥ ಗ್ರಹಿಸುವುದು ಯಾವಾಗಲೂ ಸುಲಭದ ಕೆಲಸವಲ್ಲ. ಅನೇಕ ವೇಳೆ ಆಡುವುದು ಒಂದು, ಅರ್ಥ ಇನ್ನೊಂದು ಆಗಿರುತ್ತದೆ. ಸಂದರ್ಭಾನುಸಾರವಾಗಿ ಅರ್ಥಗಳು ಬದಲಾಗುತ್ತವೆ. ಕೋಶಾರ್ಥ ಒಂದಾದರೆ ಲಕ್ಷ್ಯಾರ್ಥ ವ್ಯಂಗ್ಯಾರ್ಥಗಳು ಬೇರೆ ಬೇರೆಯಾಗಿರಬಹುದು. ಈ ಎಲ್ಲ ಸೂಕ್ಷ್ಮಗಳನ್ನು ಭಾಷಾಂತರ ಕಾರರು ಗ್ರಹಿಸಬೇಕು. ಗ್ರಹಿಸಿದ ನಂತರ ಉದ್ದಿಷ್ಟಭಾಷೆಯಲ್ಲಿ ಮೂಲಕ್ಕೆ ತಕ್ಕಂತಹ ಅನುವಾದವನ್ನು ಮಾಡಬೇಕು. ಜೇಬಿನಲ್ಲಿ ಸಾಕಷ್ಟು ಹಣವಿದ್ದು ಎಲ್ಲಿ, ಎಷ್ಟನ್ನು ಏಕೆ, ಹೇಗೆ ಖರ್ಚುಮಾಡಬೇಕೆಂಬ ವಿವೇಚನೆ ಮತ್ತು ಶಿಸ್ತು ಇದ್ದರೆ ಬದುಕು ಹಸನಾಗುವುದಿಲ್ಲವೆ, ಹಾಗೆಯೇ ಭಾಷಾಂತರಕಾರಿಗೆ ಎರಡೂ ಭಾಷೆಗಳ ಮೇಲೆ ಸಾಕಷ್ಟು ಪ್ರಭುತ್ವವಿದ್ದರೆ ಮೂಲದ ಎಳೆ ಎಳೆಯನ್ನು ಬಿಡಿಸಿ ಅರ್ಥಮಾಡಿ ಕೊಳ್ಳಬಲ್ಲರು. ಅಂತೆಯೇ ತಮ್ಮ ವಿಶಿಷ್ಟ ಭಾಷಾಶಕ್ತಿಯಿಂದ, ವಿವೇಚನೆಯಿಂದ ಉದ್ದಿಷ್ಟ ಭಾಷೆಯ ಓದುಗರಿಗೆ ಅಪ್ಯಾಯಮಾನವಾಗುವಂತೆ ಭಾಷಾಂತರ ಮಾಡಬಲ್ಲರು. ಈ ಹಿನ್ನೆಲೆಯಲ್ಲೇ ಭಾಷಾಂತರವನ್ನು ಒಂದು ಅನುಸೃಷ್ಟಿ ಅಥವಾ ಮರುಸೃಷ್ಟಿ ಎಂದು ಕರೆಯಬಹುದು. ಭಾಷಾಂತರ ಸೃಜನಾತ್ಮಕವಾಗಿರ ಬೇಕೆಂಬ ಆಶಯದಿಂದ ಅದನ್ನು ಟ್ರಾನ್ಸ್‌ಕ್ರಿಯೇಶನ್ ಅಂದರೆ ಸೃಜನಾತ್ಮಕ ಭಾಷಾಂತರ ಎಂದು ಸಹ ಕರೆಯುವವರುಂಟು.

ದುಡಿಮೆಯ ಬಗ್ಗೆ ಒಲವು ಮತ್ತು ಶ್ರಮಸಹಿಷ್ಣುತೆ ಭಾಷಾಂತರಕಾರ ರಿಗಿರಬೇಕಾದ ಮತ್ತೆರಡು ಗುಣಗಳು. ಏಕೆಂದರೆ ಮೂಲ ಲೇಖಕರು ತಾವು ಚಿಂತಿಸಿದ ಕ್ಷೇತ್ರದಲ್ಲಿ, ತಮಗೆ ಇಷ್ಟ ಬಂದ ವಸ್ತುವನ್ನು ಆಯ್ದುಕೊಂಡು, ತಮ್ಮ ಇಚ್ಛೆಗನುಗುಣವಾಗಿ ಕೃತಿಯನ್ನು ಬೆಳಸಿರುತ್ತಾರೆ. ಕನಿಷ್ಠ ಸೃಜನಾತ್ಮಕ ಭಾಷಾಂತರಗಳಿಗಂತೂ ಈ ಮಾತು ಹೆಚ್ಚಾಗಿ ಅನ್ವಯಿಸುತ್ತದೆ. ಮೂಲ ಲೇಖಕರ ಹೆಜ್ಜೆಯಲ್ಲೇ ಹೆಜ್ಜೆಹಾಕಿಕೊಂಡು ಹೋಗಬೇಕಾಗಿರುವುದರಿಂದ ಭಾಷಾಂತರಕಾರರಿಗೆ ತಮ್ಮ ಕೆಲಸದ ಮೇಲೆ ತುಂಬ ಒಲವಿರಬೇಕು, ತುಂಬ ತಾಳ್ಮೆ ಅವರಿಗೆ ಅಗತ್ಯ. ಭಾಷಾಂತರ ಮಾಡುವವರು ಪ್ರತಿಭಾಸಂಪನ್ನರಾಗಿರ ಬೇಕು; ಅದು ಖಂಡಿತ ಸೋಮಾರಿಗಳ ಕೆಲಸವಲ್ಲ. ಶಿಸ್ತಿನ ಸಿಪಾಯಿಯಂತೆ ಭಾಷಾಂತರಕಾರರು ನಿಯಮಿತವಾಗಿ, ಕರಾರುವಾಕ್ಕಾಗಿ ತಮ್ಮ ಕೆಲಸ ಮಾಡಿ ಕೊಂಡು ಹೋದರೆ ಮಾತ್ರ ಒಳ್ಳೆಯ ಭಾಷಾಂತರ ಸಾಧ್ಯ. “ಭಾಷಾಂತರಕಾರರು ಸಮಶ್ರುತಿ ಮಾಡಿಟ್ಟ ವೀಣೆಯಂತಿದ್ದು, ಮೂಲದ ಮಿಡಿತಕ್ಕೆ ಸರಿಯಾಗಿ ಸ್ಪಂದಿಸಬೇಕು. ಇದು ಸಾಧ್ಯವಾಗುವುದು ಪ್ರತಿಭೆ, ವಿದ್ವತ್ತು, ವಿನಯ, ವ್ಯತ್ಪತ್ತಿ, ಅಭ್ಯಾಸ, ತಾಳ್ಮೆ, ಶ್ರಮಸಹಿಷ್ಣುತೆ, ಲೋಕಾನುಭವ, ಅನನ್ಯ ಶಾಸ್ತ್ರ ಸಂಸ್ಕೃತಿಯ ಜ್ಞಾನ ಇವುಗಳೆಲ್ಲ ಮೇಳವಿಸಿರುವ ಪ್ರತಿಭಾವಂತರು ಈ ಕಾರ್ಯವನ್ನು ಕೈಗೊಂಡಾಗ. ಯಾರ ಭಾಷಾಂತರದಲ್ಲಿ ಈ ಗುಣಗಳ ಪ್ರಭಾವ ಗೋಚರಿ ಸುತ್ತದೆಯೋ ಅವರೇ ಆದರ್ಶ ಭಾಷಾಂತರಕಾರ. ಏಕೆಂದರೆ ಭಾಷಾಂತರವೇ ಭಾಷಾಂತರಕಾರರ ಅರ್ಹತೆಯ ಓರೆಗಲ್ಲು”.

ಭಾಷಾಂತರಕಾರರ ಸಾಧನ ಸಾಮಗ್ರಿಗಳು

ಭಾಷಾಂತರಕಾರರು ತಾನು ವ್ಯವಹರಿಸುತ್ತಿರುವ ಎರಡು ಭಾಷೆಗಳಲ್ಲಿ ಮಾತ್ರವಲ್ಲದೆ ತಾವು ಕೈಗೆತ್ತಿಕೊಂಡಿರುವ ವಿಷಯದಲ್ಲೂ ತಕ್ಕಷ್ಟು ಪರಿಜ್ಞಾನ ಹೊಂದಿರಬೇಕಾದುದು ಅಪೇಕ್ಷಣೀಯ ಹಾಗೂ ಅನಿವಾರ್ಯ. ಹಾಗಾಗಿ ಅವರಿಗೆ ತನ್ನ ಪ್ರತಿಭೆ, ಬುದ್ದಿಶಕ್ತಿ, ಪರಿಶ್ರಮ, ವ್ಯವಹಾರಜ್ಞಾನ ಮೊದಲಾದ ವೈಯಕ್ತಿಕ ಹಾಗೂ ಮಾನಸಿಕ ಸಾಮಗ್ರಿಗಳೇ ಅಲ್ಲದೆ ಹಲವಾರು ಭೌತ ಪರಿಕರಗಳೂ ಮುಖ್ಯವಾಗಿ ಬೇಕಾಗುತ್ತದೆ. ಸೃಜನಾತ್ಮಕ ಲೇಖಕರಿಗೆ ಹೋಲಿಸಿದರೆ ಭಾಷಾಂತರ ಕಾರರಿಗೆ ಇವುಗಳ ಅಗತ್ಯ ಹೆಚ್ಚಾಗಿರುವುದರಿಂದ ಇವುಗಳನ್ನು ಭಾಷಾಂತರಕಾರರ ಸಾಧನಸಾಮಗ್ರಿಗಳು ಅಥವಾ ‘ಟ್ರಾನ್ಸ್ ಲೇಟರ್ಸ್‌ ಕಿಟ್’ ಎಂದು  ಕರೆಯುತ್ತಾರೆ. ಇವುಗಳಲ್ಲಿ ಮುಖ್ಯವಾದ ಕೆಲವೆಂದರೆ ಕೋಶಗಳು, ವಿಶ್ವಕೋಶಗಳು, ವಾರ್ಷಿಕ ಪುಸ್ತಕಗಳು, ಭಾಷಾಂತರ ಮಾಡುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಆಕರ ಗ್ರಂಥಗಳು ಹಾಗೂ ಸಹಾಯಗ್ರಂಥಗಳು, ಮೂಲ ಹಾಗೂ ಉದ್ದಿಷ್ಟ ಭಾಷೆಯ ವ್ಯವಹಾರಿಕ ವ್ಯಾಕರಣಗಳು, ಬರವಣಿಗೆ ಮಾರ್ಗದರ್ಶಿಗಳು. ಕೋಶಗಳಲ್ಲಿ ಏಕಭಾಷಾ ಕೋಶಗಳು, ದ್ವಿಭಾಷಾಕೋಶಗಳು, ಬಹುಭಾಷಾ ಕೋಶಗಳು, ವ್ಯತ್ಪತ್ತಿಕೋಶಗಳು, ಉಚ್ಚಾರಣ ಕೋಶಗಳು, ನಾಮವಾಚಿ ಕೋಶಗಳು, ವಿವರಣ ಕೋಶಗಳು, ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳು, ವಿವರಣ ಪದಕೋಶಗಳು ಮೊದಲಾಗಿ ಇರುತ್ತವೆ. ಭಾಷಾಂತರಕಾರರಿಗೆ ನೆರವಾಗುವ ಅನೇಕ ಬಗೆಯ ಪಾರಿಭಾಷಿಕ ಸಮಾನ ಪದಗಳ ಕೋಶಗಳು ಹಲವಾರು ಇವೆ. ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ಕೋಶಗಳು ಲಭ್ಯವಾಗುತ್ತವೆ. ಹಾಗೆಯೆ ವಿಶ್ವಕೋಶಗಳಲ್ಲಿ ಸಾಮಾನ್ಯ ವಿಶ್ವಕೋಶಗಳು, ವಿಷಯ ವಿಶ್ವಕೋಶಗಳು ಬಗೆಬಗೆಯಾಗಿ ದೊರಕುತ್ತವೆ. ಭಾಷಾಂತರಕಾರರು ತಮ್ಮ ಅವಶ್ಯಕತೆಗನು ಗುಣವಾಗಿ ಇವುಗಳನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ. ಕೆಲವು ವೇಳೆ ಸುಲಭವಾಗಿ ಹತ್ತಿರದಲ್ಲಿ ದೊರಕುವ ವಿಷಯತಜ್ಞ ಸಂಪನ್ಮೂಲ ವ್ಯಕ್ತಿಗಳಿದ್ದರೆ ಅವರೊಂದಿಗೆ ಪರಾಮರ್ಶೆ ಮಾಡುವುದರಿಂದ ಭಾಷಾಂತರ ಹೆಚ್ಚು ಸಮರ್ಪಕವಾಗುತ್ತದೆ. ಒಂದು ಮಾತು: ಕೋಶಗಳು ಭಾಷಾಂತರಕಾರರಿಗೆ ನೆರವು ನೀಡುವ ಸಾಧನೆಗಳೇ ಹೊರತು ಅವನನ್ನೂ ಅವನ ಬರವಣಿಗೆಯನ್ನು ನಿಯಂತ್ರಿಸುವ ಸಾಧನೆಗಳಾಗಬಾರದು. ಕೋಶಗಳ ನೆರವಿನಿಂದ ಹಾಗೂ ಹೀಗೂ ಮಾಡುವ ಭಾಷಾಂತರ ಸತ್ವಹೀನವಾಗುತ್ತದೆ, ಅಪಹಾಸ್ಯಕ್ಕೀಡಾಗುತ್ತದೆ. ಪದಗಳ ಸರಿಯಾದ ವ್ಯವಹಾರಿಕ ಮೌಲ್ಯ ಅರಿಯದೆ ಕೋಶದ ತೆಕ್ಕೆಗೆ ಬಿದ್ದು ಭಾಷಾಂತರ ಮಾಡಿದರೆ ಅನೇಕ ವೇಳೆ ಆಭಾಸವಾಗುತ್ತದೆ ಎಂಬುದನ್ನು ಭಾಷಾಂತರಕಾರರು ಯಾವಾಗಲೂ ನೆನಪಿನಲ್ಲಿಡಬೇಕು.

ಕೆಲವು ಪ್ರಮುಖ ಏಕಭಾಷಾ ಕೋಶಗಳು Oxford Dictionary, Chambers Dictionary, Collins Dictonary, Random House Dictionary, ಕನ್ನಡ ನಿಘಂಟು, ಸಿರಿಗನ್ನಡ ಕನ್ನಡ ಅರ್ಥಕೋಶ, ಮಾನಕ ಹಿಂದೀ ಕೋಶ.
ಕೆಲವು ಪ್ರಮುಖ ದ್ವಿಭಾಷಾಕೋಶಗಳು ಮೈಸೂರು ವಿಶ್ವವಿದ್ಯಾಲಯ ಇಂಗ್ಲಿಶ್-ಕನ್ನಡ ನಿಘಂಟು, Kittel’s Kannada English Dictionary, Bharadwaja’s Dictionary (English-Kannada)  M.V. Jambunathan’s Hindi-Kannada Dictionary, Bhargava’s English-Hindi, Hindi-English Dictiona ries, Monier William’s English-Samskrit, Samskrit-English Dictionaries.

ಭಾಷಾಂತರ ಎರಡನೆ ದರ್ಜೆಯ ಬರವಣಿಗೆಯೆ?

ಒಂದು ಉತ್ತಮ ಭಾಷಾಂತರವನ್ನು ಸಿದ್ಧಪಡಿಸಬೇಕಾದರೆ ಅಗತ್ಯವಾದ ಅರ್ಹತೆಗಳು, ಅನುಸರಿಸಬೇಕಾದ ವಿಧಿವಿಧಾನಗಳು ನೀತಿನಿಯಮಗಳು ಇವನ್ನೆಲ್ಲ ನೋಡಿದಾಗ ಭಾಷಾಂತರ ಮಾಡುವುದಾದರೂ ಏಕೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಭಾಷೆಗಳ ಹಾಗೂ ಭಾಷಾಂತರಕಾರರ ಮಿತಿಗಳ ದೆಸೆಯಿಂದಾಗಿ ಕೆಲವು ವೇಳೆ ಮೂಲ ಮೂಲವೇ ಭಾಷಾಂತರ ಭಾಷಾಂತರವೇ ಎಂದು ಮೂಗೆಳೆಯಲು ಅವಕಾಶವಿರುವುದರಿಂದ ಭಾಷಾಂತರ ಕೆಲಸ ಎರಡನೆಯ ದರ್ಜೆಯ ಸಾಹಿತ್ಯ ಸೃಷ್ಟಿ ಎಂದು ಹಗುರವಾಗಿ ನೋಡುವವರಿದ್ದಾರೆ. ಆದರೆ ಬದಲಾಗಿ ಸ್ವತಃ ಸಾಹಿತ್ಯರಚನೆ ಮಾಡುವುದು ಹೆಚ್ಚು ಶ್ರೇಯಸ್ಕರವಲ್ಲವೇ ಎನಿಸದಿರದು. ಅದೇನೋ ಸರಿಯೇ. ಆದರೆ ಮೂಲ ಕೃತಿಯ ರಚನೆಯ ಹಿಂದಿರುವ ಪ್ರೇರಣೆಗಳು ಬೇರೆ, ಅನುವಾದ ರಚನೆಯ ಹಿಂದಿರುವ ಪ್ರೇರಣೆಗಳು ಬೇರೆ ಎಂಬುದನ್ನು ಮರೆಯಬಾರದು. ಹೊಸದಾಗಿ ಕಂಡುಂಡ ಸೊಬಗನ್ನು ಬೇರೆಯವರಿಗೆ ಹಂಚುವ ನಿರ್ವ್ಯಾಜವಾದ ತತ್ಪರತೆ ಭಾಷಾಂತರದಲ್ಲಿ ಕಂಡುಬರುತ್ತದೆ. ದೊಡ್ಡ ದೊಡ್ಡ ಪ್ರತಿಭಾನ್ವಿತರಾದ ಅನೇಕ ಲೇಖಕರು ವಾಸ್ತವವಾಗಿ ಭಾಷಾಂತರಕ್ಕೆ ಕೈಹಾಕಿರುವುದು ಈ ತತ್ಪರತೆ ಯಿಂದಲೇ. ಕನ್ನಡ ಸಾಹಿತ್ಯದಲ್ಲಿ ದಿಗ್ಗಜ ಲೇಖಕರೆನಿಸುವವರಲ್ಲಿ ಅನೇಕ ಮಂದಿ- ಉದಾಹರಣೆಗೆ ಬಿ.ಎಂ.ಶ್ರೀ- ಉತ್ತಮ ಭಾಷಾಂತರಕಾರರೂ ಹೌದು. ಬಿ.ಎಂ.ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ಸಂಗ್ರಹದ ಕವನಗಳಾಗಲಿ, ಕುವೆಂಪುರವರ ‘ಬೊಮ್ಮನ ಹಳ್ಳಿಯ ಕಿಂದರಜೋಗಿ’ಯಂಥ ನೀಳ್ಗವನವಾಗಲಿ ಷೇಕ್ಸ್‌ಪಿಯರ್ ಭಾಷಾಂತರ ಅಥವಾ ರೂಪಾಂತರಗಳಾಗಲಿ ಮೂಲ ಕೃತಿಗಳೆನಿಸುವುದಿಲ್ಲವೆ? ಅಂದಮೇಲೆ ಮೂಲವೊಂದರ ಸೊಬಗನ್ನು ತಮ್ಮದೇ ಮಾತಿನಲ್ಲಿ, ತಮ್ಮದೇ ರೀತಿಯಲ್ಲಿ, ತಮ್ಮವರಿಗೆ ಉಣಬಡಿಸುವುದು ಒಂದು ಬಗೆಯ ಸಾರ್ಥಕತೆಯನ್ನು, ಕೃತಕತ್ಯತೆಯನ್ನು, ಮುದವನ್ನು ಅನುವಾದಕರಿಗೆ ನೀಡುತ್ತದೆ. ಯಾವುದೇ ಒಂದು ಸಾಹಿತ್ಯ ರಚನೆಯಲ್ಲಿ ಸ್ವತಂತ್ರ ಸೃಷ್ಟಿಯ ಗಂಗೆಯೂ ಪ್ರೇರಣೆ ಪ್ರಭಾವಗಳ ಯಮುನೆಯೂ ಅನುವಾದ ಸರಸ್ವತಿಯೂ ಒಟ್ಟಿಗೆ ಸಂಭ್ರಮದಿಂದ ಹರಿದಾಗಲೇ ಅದ್ಭುತವಾದ ಸಾಹಿತ್ಯ ತ್ರಿವೇಣಿ ಸಂಗಮವಾಗುತ್ತದೆ. ಅಂಥ ಸಾಹಿತ್ಯ ಬೆಳೆಯು ವುದರಲ್ಲಿ ಜನಮನ್ನಣೆ ಪಡೆಯುವು ದರಲ್ಲಿ ಯಾವುದೇ ಸಂದೇಹವಿರುವುದಿಲ್ಲ. ಹಾಗಾಗಿಯೇ ಭಾಷಾಂತರ ಎರಡನೆ ದರ್ಜೆಯ ಬರವಣಿಗೆ ಅಲ್ಲ, ಎರಡನೆಯ ದರ್ಜೆಯ ಪ್ರತಿಭೆಯಿರುವವರು ಮಾತ್ರ ಕೈಗೆತ್ತಿಕೊಳ್ಳುವ ಕೆಲಸ ಅಲ್ಲ. ಕೆಲವು ಮಂದಿ ಕೆಟ್ಟ ಭಾಷಾಂತರಗಳಿಂದ ಭಾಷಾಂತರ ಕ್ಷೇತ್ರಕ್ಕೆ ಅಪಖ್ಯಾತಿ ಬರಬಹುದೇನೋ. ಆದರೆ ಮೂಲತಃ ಬರೆಯುವ ಕೃತಿಗಳೆಲ್ಲ ಉತ್ತಮವೆನಿಕೊಳ್ಳ ಬಲ್ಲವೆ? ಅದಕ್ಕೂ ಮೊದಲನೆ ದರ್ಜೆಯ ಪ್ರತಿಭೆಯ ಅವಶ್ಯಕತೆಯುಂಟು. ಮೂಲ ಲೇಖಕರು ಹಾಗೂ ಭಾಷಾಂತರಕಾರರಲ್ಲಿರಬೇಕಾದ ಪ್ರತಿಭೆಯ ಸ್ವರೂಪ ಬೇರೆ, ಅವರ ಮಾರ್ಗಗಳು ಬೇರೆ ಅಷ್ಟೆ. ಹಾಗಾಗಿ ನುರಿತ ಲೇಖಕರು, ಒಳ್ಳೆಯ ಲೇಖನಶಕ್ತಿ ಪಡೆದಿರುವವರು ಭಾಷಾಂತರ ಕ್ಷೇತ್ರದಲ್ಲಿ ಕೃಷಿ ಮಾಡಬೇಕು.

ಭಾಷಾಂತರದ ತತ್ವಗಳು ಎಂದರೇನು?

ಭಾಷಾಂತರದ ಕೆಲಸವನ್ನು ನಿಷ್ಕೃಷ್ಟವಾದ ತಳಹದಿಯ ಮೇಲೆ ಮಾಡಲು ಸಾಧ್ಯವೇ? ಇದಕ್ಕೆ ಸ್ಪಷ್ಟವಾಗಿ ನೀತಿನಿಯಮಗಳ ಚೌಕಟ್ಟು ಉಂಟೇ? ತತ್ವ-ಸಿದ್ಧಾಂತಗಳ ಸಂಗತಿ ಇವೆಯೇ? ಅವುಗಳ ಇತಿಮಿತಿಗಳೇನು? – ಈ ಬಗೆಯ ಪ್ರಶ್ನೆಗಳು ಬಹಳ ಕಾಲದಿಂದ ಜಿಜ್ಞಾಸೆಯನ್ನು ಉಂಟುಮಾಡುತ್ತಲೇ ಬಂದಿವೆ. ಭಾಷೆ ಸಾಹಿತ್ಯಗಳು ಎಷ್ಟು ಹಳೆಯವೊ, ಪ್ರಾಯಃ ಭಾಷಾಂತರ ಸಹ ಅಷ್ಟೆ ಹಳೆಯದು. ಅಂದಿನಿಂದ ಮೊದಲುಗೊಂಡು ಇಂದಿನವರೆಗೆ ಬಹಳಷ್ಟು ಮಂದಿ ಬಹಳಷ್ಟು ರೀತಿಯಲ್ಲಿ ತಮಗೆ ಹೇಗೆ ಉಪಯುಕ್ತವೋ, ಅನುಕೂಲಕರವೋ ಹಾಗೆ ಭಾಷಾಂತರದ ಕೆಲಸ ಮಾಡುತ್ತಾ ಬಂದಿದ್ದಾರೆ. ಕೆಲವರು ತಾವು ಅನುಸರಿಸಿದ ವಿಧಾನಗಳನ್ನು ಕುರಿತು ಸ್ವಲ್ಪ ಮಟ್ಟಿಗೆ ಚರ್ಚೆ-ಸಮರ್ಥನೆ-ತೃಪ್ತಿ-ಅಸಮಾಧಾನ ವ್ಯಕ್ತಪಡಿಸಿದ್ದಾರಾದರೂ ತಮ್ಮ ಕಡೆಯಿಂದ ಏನೂ ಹೇಳದೆ ಭಾಷಾಂತರದ ಕೆಲಸ ಮಾಡಿರುವಂತಹ ಮಂದಿಯೆ ಹೆಚ್ಚು. ಭಾಷಾಂತರ ವಿಫುಲವಾಗಿ ನಡೆಯಿತೆ ಹೊರತು ಭಾಷಾಂತರದ ಬಗೆಗೆ ವ್ಯವಸ್ಥಿತವಾದ ಶಾಸ್ತ್ರೀಯ ಹಾಗೂ ತಾತ್ವಿಕ ಚಿಂತನೆ ನಡೆಯಲಿಲ್ಲ. ಭಾಷಾಂತರ ಮೀಮಾಂಸೆ ಬೆಳೆಯಲಿಲ್ಲ.

ಆಧುನಿಕ ಮಾನವನ ದೃಷ್ಟಿ ಎಲ್ಲವನ್ನೂ ವೈಜ್ಞಾನಿಕ ಪರೀಕ್ಷೆಗೆ, ಪ್ರಯೋಗ ಗಳಿಗೆ ಒಳಪಡಿಸುವತ್ತ ಒಲವು ತೋರುತ್ತ ಬಂದ ಹಾಗೆಲ್ಲ ಎಲ್ಲ ಕ್ಷೇತ್ರಗಳಲ್ಲೂ ಸೈದ್ಧಾಂತಿಕ ಮತ್ತು ತಾತ್ತ್ವಿಕ ವಿವೇಚನೆಗಳಿಗೆ ಪುನಶ್ಚೇತನ ಒದಗಿತು. ಭಾಷಾಂತರ ಸಾಹಿತ್ಯವನ್ನು ಈ ಬಗೆಯ ಪರೀಕ್ಷೆಗೆ ಒಳಪಡಿಸಲೆತ್ನಿಸಿದಾಗ ಎದುರಾದ ಪರಿಸ್ಥಿತಿಯ ಸ್ವರೂಪ ಥಿಯೋಡರ್ ಸೆವೊರಿ ಕಂಡುಕೊಂಡ ವೈಷಮ್ಯ ಯುಗ್ಮ ಅಥವಾ ವಿರುದ್ಧ ಜೋಡಿಗಳಲ್ಲಿ ಕಂಡುಬರುತ್ತದೆ. ಈ ಜೋಡಿಗಳು ಹೀಗಿವೆ.

1. ಭಾಷಾಂತರ ಮೂಲದ ಪದಗಳನ್ನು ಕೊಡಬೇಕು > < ಅದು ಮೂಲದ ಭಾವನೆಗಳನ್ನು ಕೊಡಬೇಕು.

2. ಭಾಷಾಂತರ ಮೂಲಕೃತಿಯಂತೆಯೆ ಓದಿಸಿಕೊಂಡು ಹೋಗಬೇಕು > ಅದು ಅನುವಾದದಂತೆ ಓದಿಸಿಕೊಂಡು ಹೋಗಬೇಕು.

3. ಭಾಷಾಂತರ ಮೂಲದ ಶೈಲಿಯನ್ನು ಪ್ರತಿಬಿಂಬಿಸಬೇಕು > < ಅದರಲ್ಲಿ ಅನುವಾದಕರದೇ ಆದ ಶೈಲಿಯಿಂಬೇಕು > < ಅದು ಭಾಷಾಂತರಕಾರನ ಸಮಕಾಲೀನ ಕೃತಿಯಂತೆ ಓದಿಸಿಕೊಳ್ಳಬೇಕು.

4. ಭಾಷಾಂತರ ಮೂಲದ ಸಮಕಾಲೀನ ಕೃತಿಯಂತೆ ಓದಿಸಿಕೊಳ್ಳಬೇಕು > < ಅದು ಭಾಷಾಂತರಕಾರನ ಸಮಕಾಲೀನ ಕೃತಿಯಂತೆ ಓದಿಸಿಕೊಳ್ಳಬೇಕು.

5. ಭಾಷಾಂತರಕ್ಕೆ ಏನನ್ನೂ ಸೇರಿಸಿಬಾರದು, ಅದರಿಂದ ಏನನ್ನೂ ಬಿಡಬಾರದು >   < ಭಾಷಾಂತರದಲ್ಲಿ ಏನು ಬೇಕಾದರೂ ಸೇರಿಸಬಹುದು, ಅದರಿಂದ ಏನನ್ನು ಬೇಕಾದರೂ ಬಿಡಬಹುದು.

6. ಗದ್ಯದ ಭಾಷಾಂತರ ಗದ್ಯದಲ್ಲೆ ಇರಬೇಕು > < ಪದ್ಯದ ಭಾಷಾಂತರ ಪದ್ಯದಲ್ಲೆ ಇರಬೇಕು.

ಈ ಪರಸ್ಪರ ವಿರುದ್ಧದ ಹೇಳಿಕೆಗಳನ್ನು ನೋಡಿದರೆ ಭಾಷಾಂತರಕ್ಕೆ ಯಾವುದೇ ಸ್ಪಷ್ಟವಾದ, ನಿರ್ದಿಷ್ಟವಾದ ನಿಯಮಗಳನ್ನು ರೂಪಿಸುವುದು ಕಷ್ಟ ಸಾಧ್ಯವೆನಿಸುತ್ತದೆ. ಇದು ತತ್ವಗಳಿಗೆ ಹಾಗೂ ಸಿದ್ಧಾಂತಗಳಿಗೆ ಹೊರತಾದ ಕ್ಷೇತ್ರವೇನೋ ಎಂಬ ಭಾವನೆ ಸಹ ಉಂಟಾಗಬಹುದು. ಆದರೆ ವಸ್ತುಸ್ಥಿತಿ ಹಾಗಲ್ಲ. ಇಂಥ ಅನೇಕ ವಿರೋಧಗಳ ನಡುವೆಯೂ ಕೆಲವು ತತ್ವಗಳನ್ನು, ನಿಯಮಗಳನ್ನು ಕಂಡುಕೊಂಡು ಅವು ಮುಂದೊಡ್ಡುವ ಭಿನ್ನ ಭಿನ್ನ ಸವಾಲುಗಳ ನಡುವೆಯೆ ಒಂದು ಮಧ್ಯಮ ಮಾರ್ಗವನ್ನು ಅನುಸರಿಸಿ ಯಶಸ್ಸುಗಳಿಸುವುದೇ ಇಲ್ಲಿಯ ಸೊಗಸು.

ಐತಿಹಾಸಿಕ ನೋಟ

ಭಾಷಾಂತರಕ್ಕೆ ಸಿದ್ಧಾಂತವನ್ನು ರೂಪಿಸಲು ಹೊರಟ ಮೊದಲಿಗರಲ್ಲಿ ಒಬ್ಬನಾದ ಫ್ರಾನ್ಸಿನ್ ಎಟಿಯನ್ ಡೋಲೆ (1509-46) ಐದು ತತ್ವಗಳನ್ನು ಮುಂದಿಟ್ಟಿದ್ದಾನೆ.

1. ಭಾಷಾಂತರಕಾರರು ಮೂಲ ಲೇಖಕರ ಭಾವ ಮತ್ತು ಅರ್ಥವನ್ನು ಪೂರ್ಣವಾಗಿ ಅರಿಯಬೇಕು. ಮೂಲದಲ್ಲೇನಾದರೂ ಅಸ್ಪಷ್ಟತೆಯಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವ ಸ್ವಾತಂತ್ರ್ಯ ಅವರಿಗಿರುತ್ತದೆ.

2. ಭಾಷಾಂತರಕಾರರಿಗೆ ಮೂಲ ಭಾಷೆ ಮತ್ತು ಉದ್ದಿಷ್ಟಭಾಷೆ ಇವೆರಡರ ಆಮೂಲಾಗ್ರ ತಿಳಿವಳಿಕೆಯಿರಬೇಕು.

3. ಭಾಷಾಂತರಕಾರರು ಪದಕ್ಕೆ ಪದವಿಟ್ಟು ಅನುವಾದ ಮಾಡುವುದನ್ನು ಕೈಬಿಡಬೇಕು.

4. ಭಾಷಾಂತರಕಾರರು ಸಾಮಾನ್ಯ ಬಳಕೆಯಲ್ಲಿರುವ ಮಾತುಗಳನ್ನೇ ಉಪಯೋಗಿಸಿಕೊಳ್ಳಬೇಕು.

5. ಭಾಷಾಂತರ ಪದಗಳನ್ನು ಸೂಕ್ತವಾಗಿ ಆಯ್ಕೆ ಮಾಡಿ ಅವುಗಳನ್ನು ಸೂಕ್ತವಾದ ಕ್ರಮದಲ್ಲಿ ಜೋಡಿಸಿ ಮೂಲಕ್ಕೆ ತಕ್ಕಂತಹ ಅನುವಾದ ಸಿದ್ಧಪಡಿಸಬೇಕು.

ಡೋಲೆಯ ಅಭಿಪ್ರಾಯಗಳನ್ನು ಪ್ರಖ್ಯಾತ ಹೋಮರ್ ಭಾಷಾಂತರಕಾರ ಜಾರ್ಜ್ ಚಾಪ್‌ಮನ್ (1559-1634) ಅನುಮೋದಿಸಿದ್ದಾನೆ (ಬ್ಯಾಸ್ ನೆಟ್-ಮೆಕ್‌ಗೀರ್, 1980: 54-55). ಮೂಲದ ‘ಆತ್ಮವನ್ನು’ ಸ್ಪರ್ಶಿಸ ಬೇಕೆಂದು ಚಾಪ್‌ಮನ್ ಆಗ್ರಹಿಸುತ್ತಾನೆ. ಸರ್ ಜಾನ್‌ಡೆನ್ ಹ್ಯಾಮ್ (1615-69) ಎಂಬಾತ ಅಂದು ಹೆಚ್ಚು ಪ್ರಚಲಿತವಾಗಿದ್ದ ಕಾವ್ಯ ಭಾಷಾಂತರದ ವಿಚಾರವಾಗಿ ಆಡಿರುವ ಮಾತುಗಳು ಹೀಗಿವೆ.

“ಭಾಷೆಯಿಂದ ಭಾಷೆಗೆ ಬದಲಾಯಿಸಿಬಿಟ್ಟರೆ ಭಾಷಾಂತರಕಾರರ ಕೆಲಸ ಅಲ್ಲಿಗೆ ಮುಗಿದ ಹಾಗಾಗುವುದಿಲ್ಲ. ಅವರು ಕಾವ್ಯವನ್ನು ಕಾವ್ಯರೂಪಕ್ಕೆ ತರಬೇಕು. ಕಾವ್ಯದ ಬನಿ ಎಷ್ಟು ಸೂಕ್ಷ್ಮವಾಗಿರುತ್ತದೆಂದರೆ ಒಂದು ಭಾಷೆ ಯಿಂದ ಇನ್ನೊಂದು ಭಾಷೆಗೆ ಬಗ್ಗಿಸಿದಾಗ ಆ ಬನಿ ಆವಿಯಾಗಿ ಹೋಗುತ್ತದೆ. ಕಳೆದು ಹೋದದ್ದಕ್ಕೆ ಪೂರಕವಾಗಿ ಹೊಸತತ್ವ ಸೇರಿಸದೆ ಹೋದಲ್ಲಿ ಭಾಷಾಂತರ ಜೀವಚ್ಛವ ಆಗುತ್ತದೆ” (ಸೆವೊರಿ, 1968-7980).

ಅಬ್ರಹಾಂ ಕೌಲೆ (1918-67) ಎಂಬ ವಿದ್ವಾಂಸ ಭಾಷಾಂತರದಲ್ಲಿ ವಾಸ್ತವವಾಗಿ ಇಷ್ಟಬಂದದ್ದನ್ನು ಸೇರಿಸುವ, ಕೈ ಬಿಡುವ ಅಥವಾ ಬದಲಾವಣೆ ಮಾಡುವ ಸ್ವಾತಂತ್ರ್ಯ ಇರಬೇಕೆಂದು ಪ್ರತಿಪಾದಿಸುತ್ತಾನೆ. ಅನುವಾದಕರಿಗೆ ಗರಿಷ್ಠ ಸ್ವಾತಂತ್ರ್ಯ ಇರಬೇಕೆಂದು ಪ್ರತಿಪಾದಿಸುತ್ತಾನೆ. ಅನುವಾದಕರಿಗೆ ಗರಿಷ್ಠ ಸ್ವಾತಂತ್ರ್ಯ ಇರಬೇಕೆಂದು ಪ್ರತಿಪಾದಿಸುವವರ ಮುಂಚೂಣಿಯಲ್ಲಿ ಕೌಲೆ ಬರುತ್ತಾನೆ. ಭಾಷಾಂತರವನ್ನು ಪ್ರತಿಪಾದಿಸಿದಾಗ ಭಾವಾನುವಾದ ಮತ್ತು ಅನುಕರಣೆ ಎಂದು ವಿಭಾಗ ಮಾಡುವ ಜಾನ್ ಡ್ರೈಡನ್ (1631-1700) ಭಾವಾನುವಾದದ ಪಕ್ಷಪಾತಿ. ಕವಿಯನ್ನು ಭಾಷಾಂತರಿಸುವವರು ಕವಿಗಳೇ ಆಗಿರಬೇಕೆಂಬುದು ಅವನ ವಾದ. ಮೂಲ ಲೇಖಕರ ಆಂತರ್ಯದೊಡನೆ ಭಾಷಾಂತರಕಾರರು ಅದರೊಟ್ಟಿಗೆ ತಮ್ಮ ಯುಗದ ಸೌಂದರ್ಯ ಮೀಮಾಂಸೆ ಗನುಗುಣವಾಗಿ ಕೆಲಸ ಮಾಡಬೇಕೆನ್ನುತ್ತಾನೆ. ಕಲಾವಿದರು ತಮ್ಮ ಕಲಾಕೃತಿ ಯನ್ನು ಮೂಲವ್ಯಕ್ತಿ ಅಥವಾ ವಸ್ತುವಿನ ಪಡಿಯಚ್ಚಿನಂತೆ ಮಾಡುವ ಹಾಗೆ ಭಾಷಾಂತರಕಾರರು ಮೂಲದ ಪ್ರತಿರೂಪವೆನಿಸುವ ಅನುವಾದವನ್ನು ಸೃಷ್ಟಿಸಬೇಕೆನ್ನುತ್ತಾನೆ. ಅಲೆಕ್ಸಾಂಡರ್ ಪೋಪ್ (1688-1744) ಡ್ರೈಡನ ನನ್ನೇ ಹೆಚ್ಚು ಕಡಿಮೆ ಅನುಸರಿಸುತ್ತಾನೆ. ಅನುವಾದ ಹೆಚ್ಚು ಸುಂದರವಾಗ ಬಹುದಾದರೆ ಮೂಲಕ್ಕೆ ಅಲ್ಪ ಸ್ವಲ್ಪ ಸೇರಿಸುವುದರಲ್ಲಿ ಅಭ್ಯಂತರವೇನಿಲ್ಲ ವೆಂದೂ ಸುಗಮವಾಗಿ ಓದಿಸಿಕೊಂಡು ಹೋಗುವುದೇ ಒಳ್ಳೆಯ ಭಾಷಾಂತರದ ಮರ್ಮವೆಂದೂ ಡಾ. ಜಾನ್‌ಸನ್ (1709-84) ಹೇಳುತ್ತಾನೆ.

ಜರ್ಮನ್ ಕವಿ ಗಯಟೆ (1749-1832) ಪ್ರಕಾರ ಭಾಷಾಂತರಕಾರರ ಮುಂದೆ ಎರಡು ದಾರಿಗಳಿರುತ್ತವೆ. ಅವರು ಹೊರಗಿನವರಾದ ಲೇಖಕನನ್ನು ನಮ್ಮವನನ್ನಾಗಿ ಮಾಡಿಕೊಳ್ಳಬೇಕು ಅಥವಾ ಓದುಗನನ್ನು ಮೂಲ ಲೇಖಕನ ಪರಿಸರಕ್ಕೆ ಕೊಂಡೊಯ್ಯಬೇಕು ಅಲೆಕ್ಸಾಂಡರ್ ಫ್ರೇಸರ್ ಟೈಟ್ಲರ್ 1791ರಲ್ಲಿ ಪ್ರಕಟವಾದ ತನ್ನ ಪುಸ್ತಕವೊಂದರಲ್ಲಿ ಮೂರು ಪ್ರಮುಖ ಭಾಷಾಂತರ ತತ್ವಗಳನ್ನು ನಿರೂಪಿಸುತ್ತಾನೆ.

1. ಭಾಷಾಂತರ ಮೂಲಕೃತಿಯ ಭಾವ ಮತ್ತು ಆಶಯಗಳನ್ನು ಪೂರ್ಣವಾಗಿ ಬಿಂಬಿಸಬೇಕು.

2. ಭಾಷಾಂತರದಲ್ಲಿ ಶೈಲಿ ಮತ್ತು ನಿರೂಪಣ ವಿಧಾನ ಮೂಲದ ಅವೇ ಅಂಶಗಳಿಗೆ ತಕ್ಕಂತಿರಬೇಕು.

3. ಭಾಷಾಂತರ ಸಹ ಮೂಲದಂತೆಯೆ ಸರಾಗವಾದ ಸಹಜವಾದ ನಡೆಯನ್ನು ಹೊಂದಿರಬೇಕು.

ಡ್ರೈಡನ್ನನ ಭಾವಾನುವಾದ ಸಿದ್ಧಾಂತವನ್ನು ಟೈಟ್ಲರ್ ಅಷ್ಟಾಗಿ ಸಮರ್ಥಿಸುವು ದಿಲ್ಲ. ಭಾಷಾಂತರ ಇದರಿಂದ ಜಾಳಾಗುತ್ತದೆಂಬುದು ಅವನ ಅಭಿಪ್ರಾಯ. ಆದರೆ ಮೂಲದ ಅಸ್ಪಷ್ಟತೆಯನ್ನು ನಿವಾರಿಸುವ ಸಲುವಾಗಿ ಏನನ್ನಾದರೂ ಸೇರಿಸಲು ಅಥವಾ ಬಿಡಲು ಟೈಟ್ಲರ್ ಸಹ ಸಿದ್ಧ. ಡ್ರೈಡನ್ನನಿಂದ ಟೈಟ್ಲರ್‌ನವರೆಗೆ ಬಂದ ಸಿದ್ಧಾಂತಗಳು ಮೂಲವನ್ನು ಕಲಾಕೃತಿಯ ರೂಪದಲ್ಲಿ ಪರಿಭಾವಿಸಿ ಅದರ ಸತ್ತ್ವವನ್ನು ಹಾಗೂ ಆತ್ಮವನ್ನು ಕಂಡುಕೊಂಡು ಬಿಂಬಿಸುವ ದಿಕ್ಕಿನಲ್ಲಿ ಕಾರ್ಯತತ್ಪರವಾಗಿದ್ದವು. ಕಲ್ಪನಾ ಶಕ್ತಿಯಿಲ್ಲದ ಭಾಷಾಂತರ ಕೇವಲ ಹೊರಗಿನ ತೊಗಟೆಯನ್ನು ಅಥವಾ ಮುಖವಾಡವನ್ನು ಸೃಷ್ಟಿಸಬಲ್ಲದೆ ವಿನಾ ಅದರಲ್ಲಿ ಉಸಿರು ತುಂಬಲಾರದೆಂದು ಕಾಲರಿಜ್ (1772-1834) ಅಭಿಪ್ರಾಯ ಪಡುತ್ತಾನೆ. ಭಾಷಾಂತರದ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯವನ್ನು ತಳೆಯದ ಷೆಲ್ಲಿ (1792-1822) ವಸ್ತುವಿನ ಶ್ರೇಷ್ಠತೆಗಾಗಿ ಒಂದು ಕೃತಿಯನ್ನು ಭಾಷಾಂತರ ಮಾಡುವುದಕ್ಕಿಂತ ಅದರ ಸಾಹಿತ್ಯಿಕ ಗುಣಗಳಿಗಾಗಿ ಮಾಡಬೇಕೆ ನ್ನುತ್ತಾನೆ.

ಭಾಷಾಂತರಗಳ ಸಲುವಾಗಿಯೆ ಒಂದು ಬಗೆಯ ಸಾಹಿತ್ಯಿಕ ಉಪಭಾಷೆ ಯನ್ನು ಸೃಷ್ಟಿಸಿಕೊಳ್ಳುವುದು ಉತ್ತಮವೆಂದು ಎಫ್.ಎಸ್. ಮಾಕರ್ (1768-1834) ಅಭಿಪ್ರಾಯಪಡುತ್ತಾನೆ. ನ್ಯೂಮನ್, ಕಾರ್ಲೈಲ್, ಮಾರಿಸ್ ಮುಂತಾದವರು ಮಾಕರ್‌ನನ್ನು ಸರಿಯೆಂದು ಎತ್ತಿಹಿಡಿಯುತ್ತಾರೆ. ಮ್ಯಾಥ್ಯೂ ಅರ‌್ನಾಲ್ಡ್ (1822-88) ತುಂಬ ಸ್ಪಷ್ಟವಾಗಿ ತನ್ನ ಅಭಿಪ್ರಾಯವನ್ನು ಭಾಷಾಂತರದ ಬಗೆಗೆ ದಾಖಲಿಸಿದ್ದಾರೆ. ಮೂಲ ಕೃತಿ ತನ್ನ ಓದುಗರ ಮೇಲೆ ಪ್ರಭಾವ ಬೀರುವಂತೆ ಭಾಷಾಂತರ ತನ್ನ ಓದುಗ ವರ್ಗದ ಮೇಲೆ ಪ್ರಭಾವ ಬೀರಬೇಕು. ಭಾಷಾಂತರದಲ್ಲಿ ಸೊಬಗನ್ನು ತರುವ ಸಲುವಾಗಿ ಪ್ರತಿಯೊಂದು ಶಬ್ದವನ್ನು, ಯಥಾವತ್ತಾಗಿ ಅನುವಾದಿಸಬೇಕೆಂಬ ಆಗ್ರಹವನ್ನು ದೂರ ಮಾಡಬೇಕು. ಮೂಲಭಾಷೆ ಹಾಗೂ ಅನುವಾದದ ಭಾಷೆ ಎರಡನ್ನೂ ಚೆನ್ನಾಗಿ ಬಲ್ಲ ವಿದ್ವಾಂಸರ ಅಭಿಪ್ರಾಯಗಳನ್ನು ಓದುಗ ನೆಚ್ಚಬೇಕೆನ್ನುತ್ತಾನೆ ಅರ‌್ನಾಲ್ಡ್. ಏಕೆಂದರೆ ಭಾಷಾಂತರ ಎಷ್ಟು ಯಶಸ್ವಿ ಎಂದು ತೀರ್ಮಾನಿಸಬಲ್ಲವರು ಅವರೇ.

ಭಾಷಾಂತರ ಓಟ ಪದಗಳ ಪ್ರಯೋಗದ ದೃಷ್ಟಿಯಿಂದಲೂ ಮೂಲದ ಓಟದಂತೆಯೆ ಇರಬೇಕು ಎಂಬ ಅಭಿಪ್ರಾಯವನ್ನು ಮುಂದಿಡುತ್ತಾನೆ ಲಾಂಗ್‌ಫೆಲೊ (1807-81). ಭಾಷಾಂತರಕಾರನ ಕೆಲಸ ಲೇಖಕ ಏನು ಹೇಳಿದ್ದಾನೆ, ಅದನ್ನು ಹಾಗೆಯೆ ಹೇಳುವುದು ಹೊರತು ಅದನ್ನು ವಿವರಿಸುವು ದಲ್ಲ, ಅರ್ಥೈಸುವುದಲ್ಲ. ಅದು ವ್ಯಾಖ್ಯೆ ಮಾಡುವವನ ಕೆಲಸ. ಉಮರ್ ಖಯ್ಯಮನ ರುಬಾಯಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಎಡ್ವರ್ಡ್ ಫಿಟ್ಜೆರಾಲ್ಡ್ (1803-63) ಲಾಂಗ್ ಫೆಲೋನಿಗಿಂತ ವಿರುದ್ಧವಾದ ಅಭಿಪ್ರಾಯ ತಳೆದಿದ್ದ. ಮೂಲಕೃತಿ ಅನುವಾದದ ಭಾಷೆಯ ಸಂಸ್ಕೃತಿಯಲ್ಲಿ ಜೀವಂತವಾಗಿ ಮೈದಳೆಯಬೇಕೆಂಬುದು ಅವನ ಆಶಯ. ಹುಲ್ಲು ತುಂಬಿ ಪ್ರದರ್ಶನಕ್ಕಿಟ್ಟ ಸತ್ತ ಹದ್ದಿಗಿಂತ ಜೀವಂತ ಗುಬ್ಬಚ್ಚಿಯಾಗಿರುವುದೇ ಲೇಸು ಎಂಬುದು ಫಿಟ್ಜೆರಾಲ್ಡ್‌ನ ಪ್ರಸಿದ್ಧವಾದ ಒಂದು ಹೇಳಿಕೆ. ಪ್ರಾಚೀನ ಕೃತಿಗಳನ್ನು ಭಾಷಾಂತರಿಸ ಬೇಕಾದರೆ ಇಂದಿನ ಭಾಷೆಗಿಂತ ಸ್ವಲ್ಪ ಪ್ರಾಚೀನವೆನಿಸುವ ಕಲ್ಪಿತ ಭಾಷಾ ಶೈಲಿಯೊಂದನ್ನು ರೂಪಿಸಿಕೊಂಡು ಅನುವಾದ ಮಾಡುವುದು ಉಪಯುಕ್ತವೇ ಹೇಗೆ ಎಂಬ ಬಗೆಗೆ ಜೆ.ಎಂ.ಕೋಹೆನ್, ಜಾರ್ಜ್ ಸ್ಪೈನರ್ ಮುಂತಾದವರು ಆಲೋಚನೆ ನಡೆಸಿದ್ದಾರೆ.

ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ವಿದ್ವಾಂಸರು ಭಾಷಾಂತರ ವನ್ನು ನೋಡುವ ದೃಷ್ಟಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವು ದಿಲ್ಲ. ಶಬ್ದಶಃ ಭಾಷಾಂತರ ಮಾಡುವುದು, ಭಾಷೆಯನ್ನು ಸ್ವಲ್ಪಮಟ್ಟಿಗೆ ಪ್ರಾಚೀನವಾಗಿಸಿ ಕೊಳ್ಳುವುದು, ಪಾಂಡಿತ್ಯ ಪ್ರದರ್ಶನ ಈ ವಿದ್ಯಮಾನಗಳೇ ಹೆಚ್ಚಾಗಿದ್ದವು. ಸಂರಚನಾವಾದ ಸಂವಹನ ಸಿದ್ಧಾಂತ ಇವುಗಳ ಮುನ್ನಡೆಯ ಹಿನ್ನೆಲೆಯಲ್ಲಿ ಭಾಷಾ ವಿಜ್ಞಾನವನ್ನು ಭಾಷಾಂತರಕ್ಕೆ ಅನ್ವಯಿಸಿ ಅಧ್ಯಯನ ಮಾಡುವ ಪರಿಪಾಠ ಬೆಳೆಯುತ್ತಿದೆ. ಎಜ್ರಾಪೌಂಡ್, ಹಿಲೇರ್ ಬೆಲಾಕೆ, ಜೇಮ್ಸ್ ಮೆಕ್ ಫಾರ್ಲೇಡ್, ಜಾರ್ಜ್, ಸ್ಟೈನರ್. ಮಾರಿಯಾ ಕಾರ್ಟಿ, ಸುಸಾನ್ ಬ್ಯಾಸೆನೆಟ್ ಕ್ಯಾಟ್‌ಫರ್ಡ್, ಇ.ಎ. ನೀಡಾ, ಜೇಮ್ಸ್ ಹಾಮ್ಸ್, ಲ್ಯಾಂಬರ್ಟ್ ಜೋಸೆ, ಆಂಡ್ರೆ ಲೆಫೆವಿ ಯರ್, ಗಿಡಿಯನ್ ಟೌರಿ, ಜಾಕ್ಯೂಸ್ ಡೆರಿಡಾ ಮುಂತಾದವರ ಕೊಡುಗೆ ಈ ನಿಟ್ಟಿನಲ್ಲಿ ಮಹತ್ವಪೂರ್ಣವಾಗಿದೆ.

ಮೇಲ್ಕಂಡ ಅಧ್ಯಯನದ ಹಿನ್ನೆಲೆಯಲ್ಲಿ ಭಾಷಾಂತರಕ್ಕೆ ಅನ್ವಯವಾಗುವ ತತ್ತ್ವಗಳನ್ನು ಹೀಗೆ ನಿರೂಪಿಸಬಹುದು. ಈ ತತ್ತ್ವಗಳ ಆಧಾರದ ಮೇಲೆ ಸಿದ್ಧಾಂತಗಳನ್ನು ರೂಪಿಸಿ, ಸಿದ್ಧಾಂತಗಳ ಅನ್ವಯ ಪ್ರಯೋಗ ಪರೀಕ್ಷೆ-ವಿಮರ್ಶೆ-ಮೌಲ್ಯಮಾಪನ ಮಾಡಬೇಕಾಗುತ್ತದೆ. ಪ್ರಾಯೋಗಿಕ ಅಂಶಗಳಿಗೆ ಹೆಚ್ಚು ಪ್ರಾಶಸ್ತ್ಯವಿರುವ ಕಾರಣ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಪ್ರಯೋಗ, ಪ್ರಯೋಗದ ಫಲಗಳನ್ನು ಆಧರಿಸಿ ಸಿದ್ಧಾಂತಗಳ ನಿರೂಪಣೆ ಹೀಗೆ ಸರಣಿ ಸಾಗುತ್ತದೆ.

ವಿಧೇಯತಾ ತತ್ವ : ಇದು ಭಾಷಾಂತದರಲ್ಲಿ ಎಲ್ಲಕ್ಕಿಂತ ಮಿಗಿಲಾದುದು, ಮೂಲಭೂತವಾದುದು ಹಾಗೂ ಸರ್ವಮಾನ್ಯವಾದುದು. ಪೋಸ್ಟ್ ಗೇಟ್ ಹೇಳುವಂತೆ ಅದು ಎಲ್ಲರೂ ಒಪ್ಪುವ, ಆದರೆ ಯಾವಾಗಲೂ ಎಲ್ಲ ಸಂದರ್ಭ ಗಳಲ್ಲೂ ಪ್ರಯೋಜನಕಾರಿ ಎನಿಸಿಕೊಳ್ಳದ ತತ್ತ್ವ. ಎಲ್ಲರೂ ಸಮ್ಮತಿಸಿದರೂ ಸಾರ್ವತ್ರಿಕ ವ್ಯವಹಾರದಲ್ಲಿ ನೂರಕ್ಕೆ ನೂರರಷ್ಟು ವಿಧೇಯತೆ ಯನ್ನು ಕಾಣಲು ಅಸಾಧ್ಯ. ಇಲ್ಲಿನ ಮುಖ್ಯ ಸಮಸ್ಯೆ ಯಾವುದಕ್ಕೆ ಎಷ್ಟು ವಿಧೇಯವಾಗಿರಬೇಕು ಎಂಬುದು. ಮೂಲ-ಅನುವಾದ, ಮೂಲಭಾಷೆ ಉದ್ದಿಷ್ಟಭಾಷೆ, ಮೂಲ ಭಾಷೆಯ ಓದುಗ- ಅನುವಾದದ ಭಾಷೆಯ ಓದುಗ ಈ ಪೈಕಿ ಯಾರಿಗೆ ಅಥವಾ ಯಾವುದಕ್ಕೆ, ಎಷ್ಟರಮಟ್ಟಿಗೆ, ಹೇಗೆ ವಿಧೇಯ ವಾಗಿರಬೇಕು ಎಂಬುದು ಆಲೋಚನೆಗೀಡುಮಾಡುತ್ತದೆ. ಭಾಷಾಂತರ ವಾಸ್ತವವಾಗಿ ಸ್ವೋಪಜ್ಞ ಚಿಂತನೆ ಹಾಗೂ ಅಪಾರ ಪರಿಶ್ರಮದಿಂದ ಹುಟ್ಟುವಂತಹುದು. ಈ ನಿಟ್ಟಿನಲ್ಲಿ ಅನುವಾದಕರಿಗೆ ಸ್ವಲ್ಪ ಸ್ವಾತಂತ್ರ್ಯ ಅತ್ಯವಶ್ಯಕ. ಆದರೆ ಈ ಸ್ವಾತಂತ್ರ್ಯ, ಸ್ವೇಚ್ಛೆ ಆಗಬಾರದು.

ಭಾಷಾಂತರದಲ್ಲಿ ವಿಧೇಯತೆಯನ್ನು ಮೀರಿ ಬದಲಾವಣೆ ಮಾಡಿಕೊಳ್ಳು ವುದು ನಂಬಿಕೆ ದ್ರೋಹವೆನಿಸುತ್ತದೆ. ಏಕೆಂದರೆ ಮೂಲ ಲೇಖಕರು ಮತ್ತು ಭಾಷಾಂತರಕಾರರು ಇವರಿಬ್ಬರ ನಡುವೆ – ಇವರು ದೇಶಕಾಲಗಳ ದೃಷ್ಟಿಯಿಂದ ಎಷ್ಟೇ ದೂರವಿರಲಿ – ಒಂದು ಬಗೆಯ ಅಲಿಖಿತ ಒಪ್ಪಂದ ಏರ್ಪಟ್ಟಿರುತ್ತದೆ. ಆ ಪ್ರಕಾರ ಅನುವಾದಕರು ಮೂಲಕೃತಿಯ ವಾಹಕ ಅಷ್ಟೇ ಭಾಷಾಂತರಕಾರ ರಿಗಿರಬೇಕಾದ ವಿಧೇಯತೆ ಎರಡು ಮುಖವುಳ್ಳದ್ದು. ಅವರು ಮೂಲಭಾಷೆಗೆ ವಿಧೇಯನಾಗಿರುವಂತೆ ಉದ್ದಿಷ್ಟ ಭಾಷೆಗೂ ವಿಧೇಯರಾಗಿರಬೇಕು. ಮೂಲದ ಆಶಯಕ್ಕೆ ಅವನು ವಿಧೇಯನಾಗಿರಬೇಕೇ ಹೊರತು, ಮೂಲದ ಪಠ್ಯಕ್ಕಲ್ಲ. ಅನೇಕ ವೇಳೆ ಮೂಲದ ಬಗೆಗೆ ತಳೆಯುವ ಅತಿವಿಧೇಯತೆ, ಅವಿಧೇಯತೆಯ ಇನ್ನೊಂದು ರೂಪವಾಗಬಹುದು, ಅಪಹಾಸ್ಯಕ್ಕೆ ಎಡೆಮಾಡಿಕೊಡಬಹುದು. ಹಾಗಾಗಿ ಒಟ್ಟಿನಲ್ಲಿ ಭಾಷಾಂತರಕಾರರು ಪಿ.ಕೌರ್ ಹೇಳುವಂತೆ ಸಾಧ್ಯವಾದಷ್ಟು ಮೂಲಕ್ಕೆ ವಿಧೇಯರಾಗಿರಬೇಕು, ತೀರ ಅಗತ್ಯವೆನಿಸುವಷ್ಟು ಸ್ವಾತಂತ್ರ್ಯ ವಹಿಸಲೇಬೇಕು.

ಆನಂದತತ್ವ : ಯಾವುದೇ ಕೃತಿಯನ್ನು ಅಥವಾ ಅನುವಾದವನ್ನು ಓದುಗರ ಸಲುವಾಗಿ ಮಾಡುವುದರಿಂದ, ಅವರಿಗೆ ಅದರಿಂದ ಪ್ರಯೋಜನವಾಗದಿದ್ದರೆ ಸಂತೋಷ ದೊರಕದಿದ್ದರೆ ಕೆಲಸಮಾಡಿ ಸಾರ್ಥಕವಾಗುವುದಿಲ್ಲ. ಓದುಗರ ಮನಸ್ಸಿನ ದುಗುಡಗಳನ್ನು ದೂರಮಾಡಿ ಅನುವಾದ ಅವರಿಗೆ ಆನಂದ ನೀಡ ಬೇಕು. ಸುಲಭಗ್ರಾಹ್ಯವಾಗಿಲ್ಲದ, ಸಂತೋಷ ಕೊಡದ ಅನುವಾದ ಇಲ್ಲದಿದ್ದರೂ ಯಾವುದೇ ನಷ್ಟ ಸಂಭವಿಸುತ್ತಿರಲಿಲ್ಲ ಎನ್ನುತ್ತಾನೆ ಸೆವೊರಿ. ಮೂಲದ ಸೌಂದರ್ಯ ಸಾಧ್ಯವಾದಷ್ಟೂ ಅನುವಾದದಲ್ಲಿ ಪ್ರತಿಬಿಂಬಿಸಬೇಕು. ಆದರೆ ಸೌಂದರ್ಯ ಸೃಷ್ಟಿಯ ಹುಮ್ಮಸ್ಸಿನಲ್ಲಿ ಮೂಲಲೇಖಕ – ಕೃತಿ ಮರೆಯಾಗಿ ಹೋಗಬಾರದು. ಕೇವಲ ಓದುಗರನ್ನು ಆಕರ್ಷಿಸುವ ಗೀಳಿಗೆ ಅನುವಾದಕ ಅಂಟಿಕೊಂಡು ಕೃತಿಯ ಹಾಗೂ ಲೇಖಕನ ಹಿರಿಮೆಗೆ ಭಂಗ ಉಂಟು ಮಾಡಬಾರದು.

ಮೂಲಾಭಾಸತ್ವ ತತ್ವ : ಓದುಗನ ಪಾಲಿಗೆ ಅನುವಾದವೇ ಮೂಲಕೃತಿ ಯಾಗಿರುವುದರಿಂದ, ಮೂಲ ಓದಿಸಿಕೊಂಡು ಹೋಗುವಷ್ಟು ಸರಾಗವಾಗಿಯೆ ಅನುವಾದ ಸಹ ಓದಿಸಿಕೊಂಡು ಹೋಗಬೇಕು. ಹೆಜ್ಜೆ ಹೆಜ್ಜೆಗೂ ಅದೊಂದು ಭಾಷಾಂತರ ಎಂದು ತಿವಿಯುತ್ತಿದ್ದರೆ ಓದುಗರು ಅದನ್ನು ಆಸ್ವಾದಿಸಲಾರರು. ಕುರುಡು ಕುರುಡಾಗಿ ಮೂಲನಿಷ್ಠತೆಯೆಂಬ ಆಗ್ರಹದಿಂದ ಅನುವಾದ ಮಾಡುತ್ತಿದ್ದರೆ ಅದರಿಂದ ಜೀವಂತ ಭಾಷಾಂತರ ಹೊರಹೊಮ್ಮಲಾರದು. ಭಾಷಾಂತರ ಮೂಲದಷ್ಟೇ ಹಸನಾಗಿರಬೇಕು, ಚೊಕ್ಕವಾಗಿರಬೇಕು, ಹೃದ್ಯವಾಗಿರಬೇಕು. ಬಿ.ಎಂ.ಶ್ರೀ ಯವರ ಇಂಗ್ಲಿಶ್ ಗೀತೆಗಳು ಸಂಕಲನದ ಪದ್ಯಗಳನ್ನು, ಕುವೆಂಪುರವರ ‘ಬೊಮ್ಮನಹಳ್ಳಿಯ ಕಿಂದರಜೋಗಿ’ಯನ್ನು ಬೇಂದ್ರೆಯವರ ‘ಮೇಘದೂತ’ ಖಂಡ ಕಾವ್ಯದ ಅನುವಾದವನ್ನು ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳಾಗಿ ತೆಗೆದುಕೊಳ್ಳಬಹುದು.

ಅನುರೂಪತಾ ತತ್ವ : ಯಾವುದೇ ಬರವಣಿಗೆಯಲ್ಲಿ ಹೊರ ಆವರಣಕ್ಕೆ ಸಂಬಂಧಪಟ್ಟಂತೆ ಪದಪ್ರಯೋಗಗಳು ಹಾಗೂ ವ್ಯಾಕರಣ ಇರುವುದಾದರೆ ಅದರ ಒಳ ಆವರಣದಲ್ಲಿ ಭಾವದ  ಅಂಶ, ಚಿಂತನೆಯ ಅಂಶ ಅಂತಿಮವಾಗಿ ಕೆಲವೊಮ್ಮೆ ಲೇಖಕರ ದರ್ಶನ ಕಂಡುಬರುತ್ತದೆ. ಮೂಲ ತನ್ನ ಎಲ್ಲ ಪರಿಕರಗಳೊಡನೆ ಸಕಲ ವೈಭವದೊಡನೆ ಸರ್ವಾಂಗೀಣವಾಗಿ ಭಾಷೆ, ಶೈಲಿ, ಛಂದಸ್ಸು, ಒತ್ತು ಎಲ್ಲವೂ ಒಳಗೊಂಡಂತೆ ಅನುವಾದದಲ್ಲಿ ಮೈದಳೆಯ ಬೇಕೆಂಬುದು ಈ ತತ್ತ್ವದ ಆಶಯ, ಅಂತೆಯೆ ಮೂಲದ ಗಾತ್ರ ಮತ್ತು ಅನುವಾದದ ಗಾತ್ರ ಸಾಧ್ಯವಾದಷ್ಟೂ ಸಮನಾಗಿರಬೇಕು. ಭಾಷಾಂತರದಲ್ಲಿ ಮೂಲದ ಸರಳತೆ, ಲಾಲಿತ್ಯ, ಸೌಂದರ್ಯ, ಸೌಕುಮಾರ್ಯ…….. ಒಟ್ಟಿನಲ್ಲಿ ಮೂಲದ ಸಮಸ್ತ ಭಾವಶ್ರೀಮಂತಿಕೆ ಹಾಗೂ ಸೂಕ್ತ ಛಂದೋಬಂಧ ಇವೆಲ್ಲ ಅಸದೃಶ ರೀತಿಯಲ್ಲಿ ಮೈವೆತ್ತಿದ್ದು ಮೂಲವನ್ನು ಬಲ್ಲ ವಿಚಕ್ಷಣ ಓದುಗರು ಮೂಲವನ್ನು ಓದಿದಾಗ ಸವಿಯಬಹುದಾದಂಥ ಆನಂದವನ್ನೇ ಭಾಷಾಂತರದ ಓದುಗರೂ ಸವಿಯುವಂತಾಗಬೇಕು ಎಂಬುದು ಈ ತತ್ತ್ವದ ಒಟ್ಟು ಆಶಯ.

ಪರಿಹಾರ ತತ್ವ : ಭಾಷಾಂತರವನ್ನು ಮಾಡುವಾಗ ಬಹಳಷ್ಟು ವೇಳೆ – ಯಾವ ತತ್ತ್ವಗಳು ಸಿದ್ಧಾಂತಗಳು ಏನೇ ಹೇಳಲಿ – ವ್ಯವಹಾರದಲ್ಲಿ ಮೂಲದ ಸಮಸ್ತವೂ ಅವತರಣಗೊಂಡು ಭಟ್ಟಿ ಇಳಿಯುವುದಿಲ್ಲ. ಮೂಲ ಕವಿಯ ಅಥವಾ ಲೇಖಕನ ಅಭಿವ್ಯಕ್ತಿಯಲ್ಲಿ ಕಂಡುಬರುವ ಆಳ, ವಿಸ್ತಾರ, ಬಳುಕು, ಬೀಸು, ಸೂಕ್ಷ್ಮತೆ ಇವನ್ನೆಲ್ಲ ಒಟ್ಟಾರೆಯಾಗಿ ಸೆರೆಹಿಡಿಯುವುದು ಕಷ್ಟ. ಮೂಲಭಾಷೆ ಮತ್ತು ಉದ್ದಿಷ್ಟ ಭಾಷೆಗಳ ನಡುವೆ ಇರುವ ಭಿನ್ನತೆಗಳು ವೈಪರೀತ್ಯ ಗಳು ಒಂದೆಡೆಯಿಂದ ಸಮಸ್ಯೆ ತಂದೊಡ್ಡಿದರೆ ಅನುವಾದಕರ ವೈಯಕ್ತಿಕ ಇತಿಮಿತಿಗಳು ಇನ್ನೊಂದೆಡೆಯಿಂದ ತೊಡರುಗಾಲಿನಂತೆ ಅನುವಾದದ ಹರಿವಿಗೆ ಅಡ್ಡನಿಲ್ಲುತ್ತವೆ. ಹಾಗಾಗಿ ಅನೇಕ ಸಂದರ್ಭಗಳಲ್ಲಿ – ವಿಶೇಷವಾಗಿ ಕಾವ್ಯದ ಇಲ್ಲವೆ ಸೃಜನಶೀಲ ಸಾಹಿತ್ಯದ ಅನುವಾದದಲ್ಲಿ – ಮೂಲದ ಕೆಲವು ಭಾಗ ಅನುವಾದದಲ್ಲಿ ಆವಿಯಾಗಿ ಹೋಗುವುದು ಸಾಧಾರಣ. ಡೆನ್ ಹ್ಯಾಮ್‌ನ ಈ ಬಗೆಗಿನ ಮಾತುಗಳ ಆಶಯ ಹೀಗಿದೆ : “ಕೇವಲ ಭಾಷೆಯನ್ನು ಭಾಷೆಗೆ ಅನುವಾದಿಸಿದರೆ ಸಾಲದು, ಕಾವ್ಯ ಕೂಡ ಕಾವ್ಯವಾಗಿ ಹೊರಹೊಮ್ಮಬೇಕು. ಆದರೆ ಕಾವ್ಯದ ಬನಿ ಎಷ್ಟು ಸೂಕ್ಷ್ಮವಾದುದೆಂದರೆ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಬಗ್ಗಿಸಿದಾಗ ಅದರ ಸತ್ತ್ವ ಆವಿಯಾಗಿ ಹೋಗುತ್ತದೆ. ಭಾಷಾಂತರ ಮಾಡಬೇಕಾದರೆ ಹೊಸಸತ್ತ್ವವನ್ನು ಸೇರಿಸದೆ ಹೋದರೆ ಅದು ಜೀವಚ್ಛವವಾಗಿ ಬಿಡುತ್ತದೆ”. ಹಾಗಾಗಿ ಒಂದೆಡೆ ಕಳೆದುಕೊಂಡುದಕ್ಕೆ ಬಹು ಮಟ್ಟಿಗೆ ಸಮಾನವಾದ ಅಥವಾ ಅನುರೂಪವಾದ ಸತ್ತ್ವವನ್ನು ಇನ್ನೊಂದು ಸೂಕ್ತವಾದ ಸ್ಥಳದಲ್ಲಿ ತುಂಬಿಕೊಡುವುದು ಆವಶ್ಯಕ, ಅಪೇಕ್ಷಣೀಯ ಎಂಬುದನ್ನು ಪರಿಹಾರ ತತ್ತ್ವ ಸೂಚಿಸುತ್ತದೆ. ಆದರೆ ಎಲ್ಲಿ ಯಾವ ಪ್ರಮಾಣದ ನಷ್ಟ ಉಂಟಾಗಿದೆ. ಅದನ್ನು ಮತ್ತೆಲ್ಲಿ ಎಷ್ಟರಮಟ್ಟಿಗೆ ಉಚಿತವಾದ ರೀತಿಯಲ್ಲಿ ತುಂಬಿಕೊಡಲು ಸಾಧ್ಯ ಎಂಬ ಬಗೆಗೆ ಭಾಷಾಂತರಕಾರರು ತುಂಬ ವಿವೇಚನೆಯಿಂದ ಚಿಂತನೆ ನಡೆಸಬೇಕಾಗುತ್ತದೆ. ಏಕೆಂದರೆ ಭಾಷಾಂತರದಲ್ಲಿ ಅಂತರ್ಗಂಗೆಯಂತಿರುವ ವಿಧೇಯತಾ ತತ್ವಕ್ಕೆ ಇದು ಸರಿ ವಿರುದ್ಧವಾದುದು. ಪರಿಹಾರತತ್ವದ ಆಶಯ ಬೇಡದೆಡೆಯಲ್ಲಿ ಕಳೆದು ಬೇಕಾದೆಡೆಗಳಲ್ಲಿ ಸೇರಿಸು ಎಂದು ಖಂಡಿತ ಅಲ್ಲ. ಭಾಷಾಂತರದಲ್ಲಿ ಎದುರಾಗುವ ಹಲವಾರು ಬಗೆಯ ಮಿತಿಗಳಿಂದಾಗಿ ಮೂಲದ ಸೌಂದರ್ಯ ಸ್ವಾರಸ್ಯಗಳನ್ನು ಯಥಾವತ್ತಾಗಿ ಸೆರೆಹಿಡಿಯುವುದೂ ಅನಿವಾರ್ಯ ವಾಗಿ ಸಾಧ್ಯವಾಗದೆ ಹೋದಾಗ, ಮೂಲದ ಒಟ್ಟು ಪರಿಣಾಮ ರಮಣೀಯತೆಯ ಮೊತ್ತ ಕಡಮೆಯಾಗದ ಹಾಗೆ ಸಮುಚಿತವಾಗಿ ಅಗತ್ಯವಾದಷ್ಟನ್ನು ಮಾತ್ರವೇ ತುಂಬಿಕೊಡಬೇಕೆಂದು ಈ ತತ್ತ್ವದ ಆಶಯ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೇನೆಂದರೆ ಈ ಮೇಲ್ಕಂಡ ತತ್ವಗಳು ತಮ್ಮಲ್ಲೇ ಸ್ವತಂತ್ರವಾದವುಗಳಲ್ಲ. ಇವುಗಳ ಪೈಕಿ ಯಾವುದೇ ಒಂದು ತತ್ವವನ್ನು ಆಧರಿಸಿ ಭಾಷಾಂತರ ಮಾಡುವುದು ಉಚಿತವಾಗುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ, ಈ ತತ್ವಗಳೆಲ್ಲ ಪರಸ್ಪರ ಸಹಕಾರಿಗಳು, ಪೂರಕಗಳು. ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ, ಔಚಿತ್ಯ ಆವಶ್ಯಕತೆಗಳನ್ನು ತೂಗಿನೋಡಿ ಇವುಗಳನ್ನು ಬಳಕೆಮಾಡುವುದು ಕುಶಲರಾದ ಭಾಷಾಂತರಕಾರರಿಗೆ ಬಿಟ್ಟ ವಿಷಯ.

ಭಾಷಾಂತರದ ಬಗೆಗಳು : ಭಾಷಾಂತರದ ಕೆಲಸ ಭಾಷೆಯ ಹುಟ್ಟಿ ನೊಂದಿಗೇ ಪ್ರಾರಂಭವಾಗುತ್ತದೆಯಾದರೂ ಸಾಹಿತ್ಯದ ಭಾಷಾಂತರ ಅನೇಕ ಶತಮಾನಗಳಿಂದ ವ್ಯಾಪಕವಾಗಿ ನಡೆಯುತ್ತ ಬಂದಿದೆ. ಹಾಗಾಗಿ ಇದರಲ್ಲಿ ಭಾಷಾಂತರಕಾರರಿಗೆ ಹಾಗೂ ಓದುಗರಿಗೆ ಅನುಕೂಲವೆನಿಸಿದ ಅನೇಕ ಬಗೆಗಳು ಅಥವಾ ಪ್ರಕಾರಗಳು ಕಂಡುಬರುತ್ತವೆ. ಇಂಥ ಕೆಲವು ಬಗೆಗಳನ್ನು ಸ್ಥೂಲವಾಗಿ ಹೀಗೆ ಗುರುತುಮಾಡಿ ತೋರಿಸಬಹುದು:

ಈ ವಿಭಿನ್ನ ಪ್ರಕಾರಗಳ ಅನುವಾದದ ಹೆಸರುಗಳೇ ಅವುಗಳ ಸ್ವರೂಪವನ್ನು ತಕ್ಕಮಟ್ಟಿಗೆ ಸೂಚಿಸುತ್ತಿರುವುದರಿಂದ ಅವುಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು ಉದಾಹರಣೆಗಳನ್ನು ಇಲ್ಲಿ ನೀಡಲಾಗುತ್ತಿಲ್ಲ. ಯಂತ್ರಾನುವಾದ ಅಥವಾ ಕಂಪ್ಯೂಟರ್ ಅನುವಾದದ ಸ್ಥೂಲ ರೂಪರೇಖೆಗಳ ಪರಿಚಯವನ್ನು ಮಾತ್ರ ಮಾಡಿಕೊಳ್ಳೋಣ.

ಕಂಪ್ಯೂಟರ್ ಅನುವಾದ ಅಥವಾ ಯಂತ್ರಾನುವಾದ

ವಿಜ್ಞಾನ ಮತ್ತು ತಂತ್ರಜ್ಞಾನಗಳು, ಅದರಲ್ಲೂ ವಿಶೇಷವಾಗಿ ಇಲೆಕ್ಟ್ರಾನಿಕ್ ಹಾಗೂ ಕಂಪ್ಯೂಟರ್ ವಿಜ್ಞಾನಗಳು ತೀವ್ರಗತಿಯಲ್ಲಿ ಮುನ್ನಡೆಯುತ್ತಿರುವ ಇಂದಿನ ದಿನಗಳಲ್ಲಿ ಭಾಷಾ ಕ್ಷೇತ್ರಕ್ಕೂ ಕಂಪ್ಯೂಟರನ್ನು ಅಳವಡಿಸಲು ಏಕೆ ಸಾಧ್ಯವಿಲ್ಲ ಎಂಬ ಜಿಜ್ಞಾಸೆ ಸಹಜವಾದುದು. ಈ ಬಗ್ಗೆ ಪ್ರಾಯಃ ಮೊದಲ ಆಲೋಚನೆ ಸಾಧ್ಯತೆಗೆ ಒಂದು ರೂಪ ಕೊಟ್ಟು ಮಂಡಿಸಲು ಸಾಧ್ಯವಾದುದ್ದು 1947ರಲ್ಲಿ. ಬೂತ್ ಮತ್ತು ವ್ಯಾರೆನ್ ವೀವರ್ ಮುಂದೆ ಕೆಲವು ಕಾಲ ಈ ಬಗ್ಗೆ ಕೆಲಸ ಮಾಡಿದರೂ ಅಗತ್ಯವಾದ ಯಂತ್ರ ರೂಪತಳೆಯಲು ಸಾಧ್ಯ ವಾಗಲಿಲ್ಲ. ಅಮೆರಿಕೆಯಲ್ಲಿ ವ್ಯಾಸೆನ್ ವೀವರ್ ಮಂಡಿಸಿದ ಈ ಬಗೆಗಿನ ಪ್ರಬಂಧಕ್ಕೆ ವ್ಯಾಪಕ ಪ್ರಚಾರ ದೊರೆಯಿತು. ಮ್ಯೆಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬಾರ್ ಹಿಲೆಲ್ ಆಸಕ್ತಿ ವಹಿಸಿ ಈ ಕೆಲಸದಲ್ಲಿ ತಾವೂ ತೊಡಗಿದರು. 1953ರಲ್ಲಿ ರಾಕ್ ಫೆಲ್ಲರ್ ಪ್ರತಿಷ್ಠಾನ ಈ ಕ್ಷೇತ್ರದಲ್ಲಿ ಆಸಕ್ತಿಯಿಂದ ಕೆಲಸಮಾಡುತ್ತಿದ್ದ ವಿದ್ವಾಂಸರನ್ನು ಆಹ್ವಾನಿಸಿ ಒಂದು ಸಮ್ಮೇಳನ ನಡೆಸಿತು. ಇದಾದ ಸ್ವಲ್ಪ ಕಾಲದಲ್ಲೇ ಐ.ಬಿ.ಎಮ್. ಕಾರ್ಪೊರೇಷನ್ ಮತ್ತು ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಒಟ್ಟಾಗಿ ಪ್ರಯತ್ನ ನಡೆಸಿ ಕೇವಲ 250 ಪದಗಳ ಸೀಮಿತ ಶಬ್ದಕೋಶವನ್ನು ಇಟ್ಟುಗೊಂಡು ಕೆಲವು ರಶ್ಯನ್ ವಾಕ್ಯಗಳನ್ನು ಭಾಷಾಂತರ ಮಾಡಿದವು. ಈ ಪ್ರಯೋಗದ ಬಗ್ಗೆ ವರದಿ ಕೂಡಾ ಹೊರಬಂತು. ಮುಂದೆ ಲಂಡನ್ ವಿಶ್ವವಿದ್ಯಾಲಯದ ಬಿರ್‌ಬೆಕ್ ಕಾಲೇಜಿನಲ್ಲಿ ನಫೀಲ್ಡ್ ಪ್ರತಿಷ್ಠಾನದ ನೆರವಿನಿಂದ 1955ರಲ್ಲಿ ಫ್ರೆಂಚ್ ಹಾಗೂ ಅನಂತರ ಜರ್ಮನ್ ಭಾಷೆಗಳಲ್ಲಿ ಯಂತ್ರಾನುವಾದದ ಸಾಧ್ಯತೆಯನ್ನು ಅಧ್ಯಯನ ಮಾಡಲಾಯಿತು.

ಅಮೆರಿಕೆಯಲ್ಲಿ ರಾಕ್ ಫೆಲ್ಲರ್ ಪ್ರತಿಷ್ಠಾನದ ಸಹಾಯದಿಂದ ಎಂ.ಐ.ಟಿ. ಸಂಸ್ಥೆ ಮತ್ತೆ ತನ್ನ ಕೆಲಸವನ್ನು ಮುಂದುವರಿಸಿತು. ಯಂತ್ರಾನುವಾದದ ಬಗ್ಗೆ ಮೊಟ್ಟಮೊದಲಿಗೆ ಒಂದು ಪುಸ್ತಕ ಹೊರಬಂದುದೇ ಅಲ್ಲದೆ ಎಂ.ಟಿ. ಎಂಬ ನಿಯತಕಾಲಿಕೆಯೂ ಪ್ರಾರಂಭವಾಯಿತು. 1955ರ ಹೊತ್ತಿಗೆ ರಷ್ಯಾ ಕೂಡ ಈ ದಿಶೆಯಲ್ಲಿ ಆಸಕ್ತಿವಹಿಸಿ ಕೆಲಸ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿತು. 1959ರ ವೇಳೆಗೆ ಬಿರ್‌ಬೆಕ್ ಕಾಲೇಜಿನಲ್ಲಿ ಅಪೆಕ್ಸ್ ಸಿ ಕಂಪ್ಯೂಟರನ್ನು ಬಳಸಿಕೊಂಡು ನಡೆಸಿದ ಪ್ರಯೋಗಗಳು ಕೆಲವು ಉತ್ತೇಜನಕಾರಿ ಫಲಿತಾಂಶ ಗಳನ್ನು ನೀಡಿತ್ತು.

ಪ್ರತಿಯೊಂದು ಭಾಷೆಯೂ ಮಾನವ ಬಳಕೆದಾರರ ದೃಷ್ಟಿಯಿಂದ, ಆದರಲ್ಲೂ ಮಾತೃ ಭಾಷೆಯಾಗಿ ಬಳಕೆಮಾಡುವವರ ದೃಷ್ಟಿಯಿಂದ ಕಷ್ಟ ವೆನಿಸುವುದಿಲ್ಲ. ಆದರೆ ಯಂತ್ರದ ದೃಷ್ಟಿಯಿಂದ ಭಾಷೆಗಳ ಸಮಸ್ತ ವೈವಿಧ್ಯ, ಪ್ರಯೋಗದ ಉದ್ದೇಶ, ಅರ್ಥವತ್ತತೆ ಎಲ್ಲವನ್ನೂ ಗಮನಿಸಿ ಅನುವಾದ ಮಾಡುವುದು ಕಷ್ಟಸಾಧ್ಯ. ಭಾಷೆಯಲ್ಲಿರುವ ಸಂದಿಗ್ಧತೆ, ಅನೇಕಾರ್ಥಕತೆ, ಅಪೂರ್ಣತೆ, ವ್ಯಾಕರಣದ ಗೊಂದಲ ಇಂಥ ಕಾರಣಗಳಿಂದ ಯಂತ್ರ ಗಣಿತ ಅಥವಾ ವಿಜ್ಞಾನದ ಲೆಕ್ಕಾಚಾರಗಳನ್ನು ಹಾಕುವಂತೆ ಭಾಷೆಗಳೊಡನೆ ವ್ಯವಹರಿಸಲಾಗದು. ಇಷ್ಟೇ ಅಲ್ಲದೆ ಸಂದರ್ಭ, ಆಶಯ, ಅಭಿವ್ಯಕ್ತಿ ವಿಧಾನ ಇಂಥವು ಕೂಡ ಯಂತ್ರದ ಗ್ರಹಿಕೆಗೆ ಹೊರತಾದುದು.

1960ರ ವೇಳೆಗೆ ಭಾಷಾ ಸಂಬಂಧವಾದ ಸಮಸ್ಯೆಗಳ ಸ್ವರೂಪ ಮನವರಿಕೆಯಾದಂತೆಲ್ಲಾ ನೂರಕ್ಕೆ ನೂರರಷ್ಟು ಯಂತ್ರಾನುವಾದ ಅಸಾಧ್ಯ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದರು. 1966ರಲ್ಲಿ ಅಮೆರಿಕೆಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ALPAC (ಆಟೋಮ್ಯಾಟಿಕ್ ಲಾಂಗ್ವೇಜ್ ಪ್ರೋಅಡ್‌ವೈಸರಿ ಕಮಿಟಿ) ಸಮಿತಿಯ ವರದಿಯನ್ನು ಮಂಡಿಸಿತು. ಆ ವರದಿಯ ಪ್ರಕಾರ ಕಂಪ್ಯೂಟರ್ ಭಾಷಾಂತರ ಕಾರ್ಯ ಸಾಧ್ಯವಲ್ಲವೆಂದೂ ದುಬಾರಿಯೆಂದೂ ಅದಕ್ಕಿಂತ ಮನುಷ್ಯ ಭಾಷಾಂತರವೇ ಉತ್ತಮವೆಂದೂ ಕಡಿಮೆ ಖರ್ಚಿನದೆಂದೂ ಸ್ಪಷ್ಟಪಡಿಸಲಾಗಿತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಹಣ ವೆಚ್ಚ ಮಾಡುವುದು ಅನಗತ್ಯವೆಂದು ಶಿಫಾರಸ್ಸು ಮಾಡಲಾಗಿತ್ತು. ಅಲ್ಲಿಂದ ಮುಂದೆ ಕೆಲವು ಕಾಲ ಅಮೆರಿಕದಲ್ಲಿ ಈ ಸಂಶೋಧನೆ ಕುಂಠಿತ ಗೊಂಡಿತು. ಆದರೆ ರಷ್ಯಾ ತನ್ನ ಪ್ರಯೋಗಗಳನ್ನು ಮುಂದುವರೆಸಿತ್ತು.

1980ರ ದಶಕದಲ್ಲಿ ಯಂತ್ರಾನುವಾದದ ಬೆಳವಣಿಗೆಗೆ ಮತ್ತೆ ಚಾಲನೆ ದೊರೆಯಿತು. ಕಂಪ್ಯೂಟರ್ ಅನುವಾದ ಹಾಗೂ ಕಂಪ್ಯೂಟರಿನಿಂದ ಪಡೆದ ಅನುವಾದಗಳು ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ, ಸರ್ಕಾರಿ ಆಡಳಿತದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಚಾಲ್ತಿಗೆ ಬರತೊಡಗಿದವು. ಪ್ರಪಂಚದಲ್ಲಿ ಒಟ್ಟು ಸುಮಾರು ಹತ್ತು ಕೋಟಿ ಪುಟಗಳಷ್ಟು ಸಾಮಗ್ರಿ ಯಂತ್ರಾನುವಾದಕ್ಕೆ ಒಳಪಟ್ಟಿವೆ ಎಂಬುದು ಒಂದು ಅಂದಾಜು.

ಕಂಪ್ಯೂಟರ್ ಅನುವಾದಕ್ಕೆ ವಿದೇಶಗಳಲ್ಲಿ ಸರ್ಕಾರಕ್ಕಿಂತ ಮಿಗಿಲಾಗಿ ಖಾಸಗಿ ಸಂಸ್ಥೆಗಳು, ಉದ್ಯಮಗಳು ಹೆಚ್ಚು ಉತ್ತೇಜನ ಮತ್ತು ಹಣಕಾಸು ನೆರವು ನೀಡುತ್ತಿವೆ. ಜಪಾನ್ ಮತ್ತು ಐರೋಪ್ಯ ದೇಶಗಳು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿವೆ. ಒಂದಕ್ಕಿಂತ ಹೆಚ್ಚು ಭಾಷೆಗಳ ಬಳಕೆಯಾಗುವ ಕೆನಡಾದಲ್ಲೂ (ಫ್ರೆಂಚ್ ಅಲ್ಲಿಯ ಇನ್ನೊಂದು ಅಧಿಕೃತ ಭಾಷೆ) ಇದಕ್ಕೆ ಹೆಚ್ಚು ಪುರಸ್ಕಾರ. ಒಂದೇ ಭಾಷೆಯನ್ನು ವ್ಯಾಪಕವಾಗಿ ಬಳಸುವ ಅಮೆರಿಕಾ ಇನ್ನೂ ಈ ಬಗ್ಗೆ ಈಚೆಗೆ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿಲ್ಲವೆನ್ನಬಹುದು. ಅಮೆರಿಕೆಯ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಜರ್ಮನಿಯ ಸೀಮನ್ಸ್ ಕಂಪನಿಯ ಆರ್ಥಿಕ ನೆರವಿನಿಂದ Metal ಎಂಬ ಯೋಜನೆ ಪ್ರಗತಿಯಲ್ಲಿದೆ.

ಯುರೋಪಿನಲ್ಲಿ ಒಂದು ವೈಶಿಷ್ಟ್ಯವೆಂದರೆ ಅಲ್ಲಿನ ಆರ್ಥಿಕ ಸಮುದಾಯ ತನ್ನ ವ್ಯವಹಾರಕ್ಕಾಗಿ ಒಂಭತ್ತು ಭಾಷೆಗಳನ್ನು ಪರಿಗಣಿಸಿವೆ. 1986ರಲ್ಲಿ ಯುರೋಪು ಅನುವಾದಕ್ಕಾಗಿ ಅಪಾರ ಹಣ ವೆಚ್ಚಮಾಡಬೇಕಾಗಿ ಬಂದಿತು. ಅಲ್ಲಿ ಇದೇ ಕೆಲಸಕ್ಕಾಗಿ 700 ಮಂದಿ ಭಾಷಾಂತರಕಾರರು ದುಡಿಯುತ್ತಿದ್ದಾರೆ. ಯುರೋಪಿನಲ್ಲಿ ಸರ್ಕಾರದ ನೆರವಿನಿಂದ SYSTRAN,  EUROTRA ಮತ್ತು  GEAT ಎಂಬ ಪ್ರಮುಖ ಕಂಪ್ಯೂಟರ್ ಅನುವಾದ ಯೋಜನೆಗಳು ಕಾರ್ಯಗತವಾಗಿವೆ.

ಭಾರತದಲ್ಲಿ ಕಂಪ್ಯೂಟರ್ ಭಾಷಾಂತರದ ಪ್ರಯತ್ನಗಳು

ನಮ್ಮ ದೇಶದಲ್ಲಿ ಸುಮಾರು 70ರ ದಶಕದ ಮಧ್ಯಭಾಗದ ವೇಳೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಪ್ರಾಯೋಗಿಕವಾಗಿ ಇಂಗ್ಲಿಶಿನಿಂದ ಹಿಂದಿಗೆ ಅನುವಾದ ಮಾಡುವ ಪ್ರಯತ್ನ ನಡೆಯಿತು. 80ರ ದಶಕದ ಉತ್ತರಾರ್ಧದಲ್ಲಿ ಎರಡು ಪ್ರಮುಖ ಪ್ರಯತ್ನಗಳು ನಡೆದವು. 1. ಮುಂಬಯಿಯ ಎನ್.ಎಸ್.ಟಿ.ಯಲ್ಲಿ ಎರಡು ಭಾಷೆಗಳ ನಡುವಣ ಮಧ್ಯಂತರ ಭಾಷೆಯನ್ನು ಕಂಪ್ಯೂಟರ್ ಮೂಲಕ ಪಡೆದುಕೊಂಡು ಇಂಗ್ಲಿಶಿನಿಂದ ಹಿಂದಿಗೆ ಭಾಷಾಂತರದ ಕೆಲಸ ನಡೆಯುತ್ತಿದೆ. ಮತ್ತು 2. ಕಾನ್ಪುರದ ಭಾರತೀಯ ತಂತ್ರವಿಜ್ಞಾನ ಸಂಸ್ಥೆಯಲ್ಲಿ (ಐ.ಐ.ಟಿ) ಸಂಸ್ಕೃತವನ್ನು ಮಧ್ಯಂತರ ಭಾಷೆಯಾಗಿ ಬಳಸಿಕೊಂಡು ಹಿಂದಿಯಿಂದ ತೆಲುಗಿಗೆ ಕಂಪ್ಯೂಟರ್ ಭಾಷಾಂತರ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಂತೆಯೇ ಭಾರತ ಸರ್ಕಾರದ ಇಲೆಕ್ಟ್ರಾನಿಕ್ ಇಲಾಖೆ ‘ಭಾರತೀಯ ಭಾಷೆಗಳ ತಾಂತ್ರಿಕ ವಿಕಾಸ’ ಎಂಬ ಯೋಜನೆಯನ್ನು 1990-91ರಿಂದ ಹಮ್ಮಿಕೊಂಡು ಕೆಲಸ ಮಾಡುತ್ತಿದ್ದು, ಅದರಲ್ಲಿ ಕಂಪ್ಯೂಟರ್ ಅನುವಾದವೂ ಸೇರಿಕೊಂಡಿದೆ.

ಭಾರತೀಯ ಭಾಷೆಗಳಲ್ಲಿ ವಾಸ್ತವವಾಗಿ ಯಂತ್ರಾನುವಾದ ನಡೆಯ ಬೇಕಾದುದು ಇಂಗ್ಲಿಶಿನಿಂದ ಹಿಂದಿಗೆ ಹಾಗೂ ಭಾರತೀಯ ಭಾಷೆಗಳ ನಡುವೆ. ಯಂತ್ರಾನುವಾದಕ್ಕೆ ಪೂರ್ವಭಾವಿಯಾಗಿ ಆ ಉದ್ದೇಶಕ್ಕಾಗಿ ಉಪಯುಕ್ತವಾದ ಪದಕೋಶ ರಚಿಸುವುದು ಹಾಗೂ ವ್ಯವಹಾರಿಕ ಪ್ರಯೋಗಗಳ ತಿಳುವಳಿಕೆಯ ಒಂದು ಮೂಲ ಸಾಮಗ್ರಿಯ ಅಥವಾ ಕಾರ್ಪಸ್‌ನ ರಚನೆ ಮಾಡುವುದು ಅವಶ್ಯಕ. 1990-91 ರಿಂದ ದೇಶದ ಆರು ಕೇಂದ್ರಗಳಲ್ಲಿ ಈ ಬಗೆಯ ಕಾರ್ಪಸ್‌ನ ರಚನೆ ಪ್ರಗತಿಯಲ್ಲಿದೆ. ಅವು ಯಾವುವೆಂದರೆ 1. ಸಂಪೂರ್ಣಾ ನಂದ ಸಂಸ್ಕೃತ ವಿಶ್ವವಿದ್ಯಾನಿಲಯ ವಾರಣಾಸಿ (ಸಂಸ್ಕೃತ), 2. ಐ.ಐ.ಟಿ, ದೆಹಲಿ (ಹಿಂದಿ, ಪಂಜಾಬಿ, ಭಾರತೀಯ ಇಂಗ್ಲೀಷ್) 3. ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ, ಪುಣೆ ಕೇಂದ್ರ (ಮರಾಠಿ, ಗುಜರಾತಿ), 4. ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಲಿಂಗ್ವಿಸ್ಟಿಕ್ಸ್ ರಿಸರ್ಚ್, ಭುವನೇಶ್ವರ ಕೇಂದ್ರ (ಬಂಗಾಲಿ, ಅಸ್ಸಾಮಿ, ಒರಿಯಾ), 5. ಭಾರತೀಯ ಭಾಷಾಸಂಸ್ಥೆ, ಮೈಸೂರು (ಕನ್ನಡ, ತೆಲುಗು, ಮಲಯಾಳಂ), ಹಾಗೂ 6. ತಮಿಳು ವಿಶ್ವವಿದ್ಯಾನಿಲಯ, ತಂಜಾವೂರು (ತಮಿಳು).

ಕಂಪ್ಯೂಟರ್ ಅನುವಾದ ಹೇಗೆ?

ಕಂಪ್ಯೂಟರ್ ಅನುವಾದದಲ್ಲಿ ಎಲ್ಲವನ್ನೂ ಕಂಪ್ಯೂಟರೇ ಮಾಡಿಬಿಡುವು ದಿಲ್ಲ. ಮಾನವ ಭಾಷಾವಿಜ್ಞಾನಿಗಳು ಹಾಗೂ ಭಾಷಾಂತರಕಾರರು ಅನುವಾದಿಸ ಬೇಕಾದ ಸಾಮಗ್ರಿಯನ್ನು ಯಂತ್ರ ಅರ್ಥಮಾಡಿಕೊಂಡು ಕೆಲಸ ಮಾಡಬಹು ದಾದ ರೂಪದಲ್ಲಿ ಅದಕ್ಕೆ ಒದಗಿಸಬೇಕು. 1980 ರಿಂದೀಚೆಗೆ ನಮ್ಮಲ್ಲಿ ಫೋರ್ತ್ ಜನರೇಶನ್ ಕಂಪ್ಯೂಟರ್ ಉಪಯೋಗಿಸಿ ಅನುವಾದಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮಲ್ಲಿಗೆ ಆಮದಾಗಿ ಬರುವ ಕಂಪ್ಯೂಟರುಗಳ ಸೆಂಟ್ರಲ್ ಪ್ರೊಸೆಸಿಂಗ್ ಘಟಕ ಹಾಗೂ ಜ್ಞಾಪಕಾಂಗ ಇಂಗ್ಲಿಶ್ ಭಾಷೆಗೆ ಸಂಬಂಧ ಪಟ್ಟಂತಿರುತ್ತದೆ. ಭಾಷಾಂತರವನ್ನು ಮಾಡಬೇಕಾದರೆ ಡಿಜಿಟಲ್ ಕಂಪ್ಯೂಟರ್ ಗಳನ್ನು ಬಳಕೆ ಮಾಡುತ್ತಾರೆ. ಕೋಶವನ್ನು ಕಂಪ್ಯೂಟರಿನ ಜ್ಞಾಪಕಾಂಗದಲ್ಲಿ ಅಳವಡಿಸಿ ಅದಕ್ಕೆ ವ್ಯಾಕರಣ ನಿರ್ದೇಶನಗಳನ್ನು ತರ್ಕಬದ್ಧ ವಾಗಿ ಸೇರಿಸ ಬೇಕಾಗುತ್ತದೆ. ಭಾಷಾಂತರಕ್ಕಾಗಿ ಸಾಮಾನ್ಯವಾಗಿ ಬಳಕೆಯಾಗುವ ಕೆಲವು ಕಂಪ್ಯೂಟರ್ ಭಾಷೆಗಳೆಂದರೆ ಅಟ್ಲಾಸ್-1, ಅಟ್ಸಾಸ್-2, ಟೌರಸ್ ಎಂ.ಯು. ಕಂಪ್ಯೂಟರಿಗೆ ಮಾಹಿತಿ ಒದಗಿಸಬೇಕಾದ ಸಮಯದಲ್ಲಿ ಪೂರ್ವ ಸಂಪಾದಕ (ಪ್ರಿ-ಎಡಿಟರ್) ಹಾಗೂ ಕಂಪ್ಯೂಟರ್ ಅನುವಾದಿಸಿದ ಅನಂತರ ಉತ್ತರ ಸಂಪಾದಕ (ಪೋಸ್ಟ್ ಎಡಿಟರ್) ಇವರುಗಳ ನೆರವಿಲ್ಲದೆ ಒಳ್ಳೆಯ ಅನುವಾದ ಸಾಧ್ಯವಾಗುವುದಿಲ್ಲ.

ಕಂಪ್ಯೂಟರ್ ಅನುವಾದದ ಮಿತಿಗಳು ಹಾಗೂ ಭವಿಷ್ಯದ ಬಗ್ಗೆ ಎರಡು ಮಾತು. ಕಂಪ್ಯೂಟರ್‌ಗಳು ಅತಿಕ್ಷಿಪ್ರವಾಗಿ ಕ್ಷಣಾರ್ಧದಲ್ಲಿ ಕೆಲಸ ಮಾಡ ಬಲ್ಲವೆ ಹೊರತು ಮನುಷ್ಯನ ಮಿದುಳಿಗಿರುವ ಮಟ್ಟಿನ ತರ್ಕ ಮತ್ತು ವಿವೇಚನೆ ಅವುಗಳಿಗೆ ಅಸಾಧ್ಯ. ಭಾಷೆ ಎಂಬುದು ಎಷ್ಟು ಸಂಕೀರ್ಣವಾದು ದೆಂದರೆ ಮಾನವ ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಅತ್ಯಂತ ನಿಕಟವಾಗಿ ಸಂವೇದನಶೀಲವಾಗಿ ವ್ಯಕ್ತಪಡಿಸಲು ಅದರಿಂದ ಸಾಧ್ಯ. ಪದಗಳ ಹಿನ್ನೆಲೆಯಲ್ಲಿ ರುವ ಭಾವಕೋಶವನ್ನು ಮತ್ತು ಸಾಂದರ್ಭಿಕ ಸ್ವಾರಸ್ಯಗಳನ್ನು ಸೆರೆಹಿಡಿಯಲು ಮನುಷ್ಯನ ಮಿದುಳಿಗೆ ಮಾತ್ರ ಸಾಧ್ಯ. ಆದ್ದರಿಂದ ನೇರವಾದ, ಸಂದಿಗ್ಧವಾದ, ಸರಳವಾದ ಭಾಷೆಯಲ್ಲಿರುವ ವಸ್ತುನಿಷ್ಠ ವಿಚಾರಗಳನ್ನು ಭಾಷಾಂತರಿಸಲು ಕಂಪ್ಯೂಟರ್ ನೆರವಾಗಬಹುದಷ್ಟೆ. ಅದಕ್ಕಿಂತ ಮಿಗಿಲಾದ ಸಾಹಿತ್ಯಕವಾದ, ಭಾವನಾತ್ಮಕವಾದ, ಉಕ್ತಿ ಚಾತುರ್ಯಗಳಿಂದ ಕೂಡಿದ ಭಾಷೆಯ ಜೊತೆ ವ್ಯವಹರಿಸುವುದು ಯಂತ್ರದ ಅಳವಿಗೆ ದೂರ. ಕಂಪ್ಯೂಟರ್ ಸಲುವಾಗಿಯೆ ಭಾಷೆಯನ್ನು, ವ್ಯಾಕರಣವನ್ನು, ಲೇಖಕರು ಬರೆಯುವ ರೀತಿ ನೀತಿಗಳನ್ನು ಮಾರ್ಪಡಿಸುತ್ತಾ ಹೋದರೆ ಭಾಷೆಯ ಸಹಜ ವೈವಿಧ್ಯ ಮತ್ತು ಶ್ರೀಮಂತಿಕೆಗಳಿಗೆ ಧಕ್ಕೆಯುಂಟಾಗುತ್ತದೆ.

ಹಾಗಾಗಿ ಭವಿಷ್ಯದಲ್ಲಿ ಕಂಪ್ಯೂಟರ್ ಮಾನವನ ನಿತ್ಯ ವ್ಯಾವಹಾರಿಕ ಬದುಕಿನಲ್ಲಿ ಎದುರಾಗುವ ಭಾಷಾಸಂಬಂಧವಾದ ವಿಚಾರಗಳನ್ನು ನಿರ್ವಹಿಸಲು ನೆರವಾಗಬಹುದು. ತಂತ್ರಜ್ಞಾನದ ಕಾರಣದಿಂದ ಸಮಯದ ಹಾಗೂ ಮನುಷ್ಯ ತಾನೇ ಯಾಂತ್ರಿಕವಾಗಿ ಮಾಡಿಕೊಂಡು ಹೋಗುವ ನೀರಸ ಲೆಕ್ಕಾಚಾರಗಳು ಕಡಮೆಯಾಗಬಹುದು. ಆದರೆ ಕಂಪ್ಯೂಟರ್ ಜೊತೆಗೆ ಮಾನವ ಭಾಷಾಂತರ ಕಾರರು ಇರಬೇಕಾದುದು ಅಪೇಕ್ಷಣೀಯವೇ ಅಲ್ಲ; ಅನಿವಾರ್ಯ ಕೂಡ. ತಂತ್ರಜ್ಞಾನದ ಸಾಧನಗಳು ಇಂದು ಎಷ್ಟು ಜನಪ್ರಿಯವಾಗುತ್ತಿವೆಯೆಂದರೆ ಅಮೆರಿಕೆಯಂತಹ ಮುಂದುವರಿದ ದೇಶಗಳಲ್ಲಿ ಅಚ್ಚಾದ ಶಬ್ದಕೋಶಗಳಿಗಿಂತ ಎರಡು ಎರಡೂವರೆ ಪಟ್ಟು ಕಂಪ್ಯೂಟರ್ ಶಬ್ದಕೋಶಗಳು ಮಾರಾಟವಾಗುತ್ತ ವಂತೆ! ಮುಂದುವರಿದ ದೇಶಗಳೇ ಇಂದು ಯಂತ್ರಭಾಷಾಂತರದ ಸಾಧ್ಯ ಸಾಧ್ಯತೆಗಳ, ಅನುಕೂಲಗಳ ಅವಶ್ಯಕತೆಗಳ ಮತ್ತು ಇತಿಮಿತಿಗಳ ಬಗೆಗೆ ತೀವ್ರವಾಗಿ ಪರ್ಯಾಲೋಚಿಸುತ್ತಾ ಈ ನಿಟ್ಟಿನಲ್ಲಿ ಹಣ ಹೂಡುವುದು ಉಚಿತವೆ ಅಲ್ಲವೆ ಎಂಬ ಜಿಜ್ಞಾಸೆಯಲ್ಲಿರುವಾಗ ಭಾರತದಂತಹ ಮುಂದುವರಿ ಯುತ್ತಿರುವ ದೇಶಗಳು ಅತಿಯಾದ ಉತ್ಸಾಹದಿಂದ ಈ ಬಗ್ಗೆ ಆತುರದ ನಿರ್ಧಾರ ಕೈಗೊಳ್ಳುವುದು ಉಚಿತವೆನಿಸಲಾರದು.