ವಿಶ್ವದಲ್ಲಿ ಇಂದು ಸಂಭವಿಸುತ್ತಿರುವ ಮಾಹಿತಿ ಕ್ರಾಂತಿ ಮತ್ತು ಅಗಾಧವಾದ ತಂತ್ರಜ್ಞಾನಿಕ ಪ್ರಗತಿಯಿಂದಾಗಿ ಎಲ್ಲ ಕ್ಷೇತ್ರಗಳು ಆಧುನಿಕವಾಗಿ ರೂಪುಗೊಳ್ಳುತ್ತಿವೆ. ಭಾಷಾ ಕ್ಷೇತ್ರವೂ ಈ ಆಧುನಿಕ ಪ್ರಜ್ಞೆಯಿಂದ ಹಿಂದೆ ಉಳಿಯಲು ಸಾಧ್ಯವಿಲ್ಲ. ಹಾಗಾಗಿಯೇ ಇಂದು ಭಾಷಿಕ ಜಗತ್ತಿಗೆ ಕಂಪ್ಯೂಟರಿನಂತಹ ಉಪಕರಣಗಳು ಸೇರಿಕೊಳ್ಳುತ್ತಿದೆ. ಇದು ಒಂದೆಡೆ ಸಹಕಾರಿ ಎಂಬ ಭಾವನೆ ಹುಟ್ಟಿಸಿದರೆ, ಇನ್ನೊಂದೆಡೆ ಸಾಮಾಜೀಕರಣದಲ್ಲಿ ತಂತ್ರಜ್ಞಾನದ ಪ್ರಭಾವದಿಂದ ತನ್ನತನವೇ ಕಳೆದುಹೋಗುವ ಅಪಾಯವೂ ಇದೆ ಎಂಬ ಅಳುಕು ಇದೆ.

ಆದರೂ ಮಾಹಿತಿಯ ಹರಿಯುವಿಕೆಯನ್ನು ಇಂದು ಒಪ್ಪಿಕೊಳ್ಳಲೇ ಬೇಕಾದ ಪ್ರಮೇಯ ಒದಗಿದೆ. ಭಾಷಾ ವಿಶ್ಲೇಷಣೆಯಲ್ಲಿ, ಅನುವಾದ ಕ್ಷೇತ್ರದಲ್ಲಿ, ಭಾಷಾಧ್ಯಯನದಲ್ಲಿ ಇಂದು ಮಾನವ ಸಂಪನ್ಮೂಲದ ಕೊರತೆ ಹಾಗೂ ಸಮಯದ ಅಭಾವದಿಂದಾಗಿ ತಂತ್ರಜ್ಞಾನಕ್ಕೆ ಮೊರೆ ಹೋಗಬೇಕಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಸಂಬಂಧವನ್ನು ಕಾಣಬಹುದಾಗಿದೆ. ಮೊದಲು ಸೀಮಿತ ವಲಯದಲ್ಲಿ ನಡೆಯುತ್ತಿದ್ದ ಭಾಷಿಕ ಚಟುವಟಿಕೆಗಳು ಇಂದು ವಿಸ್ತೃತಗೊಂಡಿದೆ. ಬರಹದ ಕ್ರಿಯೆಯಿಂದ ಮೂಡಿಸುವ ಕ್ರಿಯೆಗೆ ಜಿಗಿದು ಇಂದು ಮಾತಿನಿಂದ ಬರಹಕ್ಕೆ (ಸ್ವೀಚ್ ಟು ಟಿಕ್ಸ್ಟ್) ಬರಹದಿಂದ ಮಾತಿಗೆ (ಟೆಕ್ಸ್ಟ್ ಟು ಸ್ವೀಚ್) ಎನ್ನುವ ಹಂತದವರೆಗೆ ಬೆಳೆದು ಬಂದಿದೆ. ಅಲ್ಲದೆ ಕಂಪ್ಯೂಟರನ್ನು ಇನ್ನು ಯಾವ ಭಾಷಿಕ ಅಧ್ಯಯನಗಳಿಗೆ ಬಳಸಬಹುದೆನ್ನುವ ಚಿಂತನೆಗಳೂ ನಡೆಯುತ್ತಿವೆ.

೨೦೦೫ರಲ್ಲಿ ಕನ್ನಡ ಭಾಷಾಧ್ಯಯನ ವಿಭಾಗವು ಭಾಷೆ ಮತ್ತು ತಂತ್ರಜ್ಞಾನ ಎನ್ನುವ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಅನೇಕ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದ್ದರೂ ಕೆಲವು ಪ್ರಬಂಧಗಳು ಮಾತ್ರ ನಮ್ಮ ಕೈ ಸೇರಿದವು. ಇವುಗಳನ್ನು ಸಂಪಾದಿಸುವ ವೈಯಕ್ತಿಕ ಯೋಜನೆಯನ್ನು ೨೦೦೭-೦೮ರಲ್ಲಿ ಕೈಗೊಳ್ಳಲಾಗಿತ್ತು. ಅಂದು ಬಂದ ಪ್ರಬಂಧಗಳಲ್ಲಿ ಮುಖ್ಯವಾಗಿ ಭಾಷಾ ತಂತ್ರಜ್ಞಾನದ ಇತಿಹಾಸ, ಬೆಳವಣಿಗೆ, ಅಕ್ಷರ ವಿನ್ಯಾಸ, ತಂತ್ರಜ್ಞಾನ ಮತ್ತು ಸಮಾಜ, ತಂತ್ರಜ್ಞಾನದ ಪ್ರಭಾವದಿಂದ ಆಗುತ್ತಿರುವ ಭಾಷಿಕ ಬದಲಾವಣೆ ಮತ್ತು ಭಾಷೆ ಮತ್ತು ತಂತ್ರಜ್ಞಾನ ಕುರಿತ ತಾತ್ವಿಕ ಚಿಂತನೆಗಳನ್ನು ಒಳಗೊಂಡ ಲೇಖನಗಳನ್ನು ಒಟ್ಟುಗೂಡಿಸಿ ಈ ಪುಸ್ತಕವನ್ನು ತರಲಾಗುತ್ತಿದೆ. ಅಲ್ಲದೆ ಇದೇ ವಿಷಯಕ್ಕೆ ಸಂಬಂಧಿಸಿದ ಹಾಗೂ ಬೇರೆಡೆ ಪ್ರಕಟವಾಗಿದ್ದ ಮೂರು ಲೇಖನಗಳನ್ನು ಅವುಗಳ ಮೌಲಿಕ ಅಂಶಗಳನ್ನು ಗಮನಿಸಿ ಸೇರಿಸಲಾಗಿದೆ. ಇಲ್ಲಿರುವ ಒಟ್ಟು ಹನ್ನೆರಡು ಲೇಖನಗಳನ್ನು ಕ್ರಮವಾಗಿ ತಂತ್ರಜ್ಞಾನದ ಇತಿಹಾಸ, ಸಮಾಜ, ಭಾಷೆ, ಲಿಪಿ ಮತ್ತು ಇತರ ಭಾಷಾ ಸಂಬಂಧಿ ಅಧ್ಯಯನಗಳಲ್ಲಿ ತಂತ್ರಜ್ಞಾನದ ಪ್ರಭಾವ ಎಂಬ ಅಂಶಗಳ ಆಧಾರದಲ್ಲಿ ಜೋಡಿಸಲಾಗಿದೆ. ಎಲ್ಲ ಲೇಖನಗಳೂ ತಮ್ಮದೇ ಆದ ಗುಣಾತ್ಮಕ ಅಂಶಗಳನ್ನು ಒಳಗೊಂಡು ಭಾಷಾ ತಂತ್ರಜ್ಞಾನ ಕ್ಷೇತ್ರದ ಮಾಹಿತಿ ಅಲ್ಪಮಟ್ಟಿಗಾದರೂ ಒಂದೆಡೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ ಎಂದು ನಂಬಿದ್ದೇನೆ.

ಡಾ. ಸಾಂಬಮೂರ್ತಿ