ಅಡು ಮಾತಿಗೂ ಮತ್ತು ಬರವಣಿಗೆಯ ಭಾಷೆಗೂ ಸ್ಪಷ್ಟವಾದ ಮತ್ತು ಖಚಿತವಾದ ವ್ಯತ್ಯಾಸಗಳಿವೆ. ಆಡು ಮಾತಿನಲ್ಲಿ ಪದಗಳು, ವ್ಯಾಕರಣ ನಿಯಮಗಳು ಸ್ಪಷ್ಟವಾಗಿ ವ್ಯಕ್ತವಾಗದೆ ಗೌಣವಾಗಿ ಇರಬಹುದು. ಕೆಲವೆಡೆ ವ್ಯಾಕರಣ ನಿಯಮ ಪಾಲಿಸದೇ ಹೋಗಬಹುದು. ಆದರೆ ಬರವಣಿಗೆ ಭಾಷೆಯಲ್ಲಿ ಹೀಗೆ ಮಾಡಲು ಬರುವುದಿಲ್ಲ. ಆಡು ಮಾತಿಗೆ ಕಾಲ ದೇಶದ ಮಿತಿ ಇರುವುದರಿಂದ ಇದರಲ್ಲಿ ಆಗುವ ತಪ್ಪುಗಳು ಗಮನಕ್ಕೆ ಬರುವುದಿಲ್ಲ. ಬರವಣಿಗೆಯ ಭಾಷೆ ಹಾಗಲ್ಲ. ಇದು ಕಾಲ ದೇಶವನ್ನು ಮೀರಿದ್ದು, ಪಂಪ ಮಾತನಾಡಿರುವುದು ನಮಗೆ ಗೊತ್ತಿಲ್ಲ. ಆದರೆ ಆತನ ಬರವಣಿಗೆ ನಮ್ಮ ಮುಂದೆ ಇದೆ. ಹಾಗಾಗಿ ಬರವಣಿಗೆ ಭಾಷೆ ಸ್ಪಷ್ಟವಾಗಿರಬೇಕು ಮತ್ತು ಖಚಿತವಾಗಿರಬೇಕು. ಆದರೆ ಇತ್ತೀಚಿನ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಇವೆರಡರ ಮಧ್ಯದ ಭಾಷೆಯೊಂದು ರೂಪುಗೊಳ್ಳುತ್ತಿದೆ. ಇದೇ ಎಸ್.ಎಂ.ಎಸ್.ಭಾಷೆ.

ಇಂದಿನ ಆಧುನಿಕ ಪ್ರಪಂಚದ ನಾಗಾಲೋಟದಲ್ಲಿ ದಿನವೂ ಬದುಕಿನ ಕ್ರಮ ಬದಲಾಗುತ್ತ ನಡೆದಿದೆ. ಇದರ ಜೊತೆ ಜೊತೆಗೆ ಭಾಷಾ ಬಳಕೆಯ ವಿಧಾನದಲ್ಳೂ ಸಾಕಷ್ಟು ಬದಲಾವಣೆ ನಡೆಯುತ್ತಿರುವುದನ್ನು ನೋಡಬಹುದು. ಹಿಂದೆ ಬೇರೆ ಬೇರೆ ಪ್ರದೇಶದಲ್ಲಿರುವ ತಮ್ಮವರನ್ನು ಸಂಪರ್ಕಿಸಲು ಬಳಸುತ್ತಿದ್ದ ಮಾಧ್ಯಮ ಎಂದರೆ ಪತ್ರ. ಆಧುನಿಕ ಯುಗದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಬಂದ ಮೇಲೆ ದೂರವಾಣಿ ಮತ್ತು ಮೊಬೈಲ್ ಯಂತ್ರಗಳಿಂದ ಪತ್ರ ಮಾಧ್ಯಮ ಸರ್ಕಾರಿ ಕೆಲಸಗಳಿಗೆ ಮಾತ್ರ ಸೀಮಿತವಾಗಿದೆ. ಅಥವಾ ನಿರಂತರ ದಾಖಲೆಗೋಸ್ಕರ ಸರ್ಕಾರೇತರ ಸಂಸ್ಥೆಗಳು ಈ ಮಾಧ್ಯಮವನ್ನು ಚಾಲ್ತಿಯಲ್ಲಿಟ್ಟುಕೊಂಡಿವೆ. ಇದರಲ್ಲೂ ಮುಂದುವರೆದವರು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ ಪತ್ರ ವ್ಯವಹಾರ ಮಾಡುತ್ತಿರುವುದು ನಡೆದರೂ ಅದು ಪತ್ರ ಮಾಧ್ಯಮಕ್ಕಿಂತ ತೀರ ಭಿನ್ನವಾಗಿ ಬದಲಾವಣೆ ಆಗಿಲ್ಲ ಎಂದೇ ಹೇಳಬಹುದು.

ಇದನ್ನು ಬಿಟ್ಟರೆ ಜನಪ್ರಿಯ ಮಾದರಿ ಎಂದರೆ ಸೆಲ್ ಫೋನುಗಳು. ಈ ಮೊಬೈಲುಗಳ ಮೂಲಕ ಮಾತನಾಡುವ ಕ್ರಮ ಒಂದಾದರೆ ಮತ್ತೊಂದು ಬರೆವಣಿಗೆ. ಯುವ ಜನಾಂಗದಲ್ಲಿ ಮಾತನಾಡುವಂತೆ ಅದಕ್ಕಿಂತ ಹೆಚ್ಚು ಜನಪ್ರಿಯಗೊಂಡಿರುವ ಮಾಧ್ಯಮ ಎಂದರೆ ಎಸ್.ಎಂ.ಎಸ್. ಕಳುಹಿಸುವುದು. ಹೀಗೆ ಎಸ್.ಎಂ.ಎಸ್. ಕಳುಹಿಸುವುದು ಬಹುತೇಕ ಇಂಗ್ಲಿಶ್ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿದೆ. ಇದು ಈಗೀಗ ಕನ್ನಡಕ್ಕೂ ವಿಸ್ತರಿಸಿಕೊಂಡರೂ ಅದೂ ಇನ್ನೂ ಹೆಚ್ಚು ಜನಪ್ರಿಯಗೊಂಡಿಲ್ಲ. ಮುಂದಿನ ದಿನಗಳಲ್ಲಿ ಅದು ಕೂಡ ಜನಪ್ರಿಯವಾಗಬಹುದು. ಈಗ ಇಲ್ಲಿ ಗಮನಿಸುತ್ತಿರುವ ಭಾಷೆ ಕೂಡ ಈಗ ಜನಪ್ರಿಯವಾಗಿರುವ ಇಂಗ್ಲಿಶ್ ಬರವಣಿಗೆಯನ್ನೇ ಕುರಿತದ್ದಾಗಿದೆ.

ಎಸ್.ಎಂ.ಎಸ್. ಭಾಷೆ ಸಮಯ ಮತ್ತು ಜಾಗದ (time and Space) ಕಾರಣದಿಂದ ಸಂಕುಚಿತಗೊಂಡು ಹೊಸ ರೂಪವೊಂದು ರೂಪುಗೊಳ್ಳುತ್ತಿದೆ. ದೊಡ್ಡ ದೊಡ್ಡ ಪದಗಳನ್ನು ಅದರಲ್ಲಿನ ಕೆಲವೇ ಅಕ್ಷರಗಳು ಸಂಕೇತಿಸುತ್ತಿವೆ. ಇನ್ನೂ ಆಶ್ಚರ್ಯವೆಂದರೆ ಕೆಲವೆಡೆ ಒಂದು ಪದದ ಬದಲಿಗೆ ಅದನ್ನು ಒಂದು ಸಂಖ್ಯೆ ಪ್ರತಿನಿಧಿಸುತ್ತಿದೆ. ಉದಾಹರಣೆಗೆ ಈ ಕೆಳಗೆ ಕಾಣಿಸಿದ ಪದಗಳನ್ನು ಗಮನಿಸಬಹುದು.

೧. Good morning- Gud morn

೨. Good- Gud

೩. Tea- t(T)

೪. you- u(U)

೫. Are- r(r)

೬. or- r(R)

೭. Please- plse

೮. Colour- color

೯. Photo- F oto

೧೦. your- ur

೧೧. Your are- u r

೧೨. Hai- Hi

೧೩. Mobile- mob

೧೪. To- ೨

೧೫. for- ೪

ಮೇಲಿನ ಪದಗಳನ್ನು ಗಮನಿಸಿದರೆ ಬರವಣಿಗೆಯಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸುವ ಸ್ಪೆಲ್ಲಿಂಗ್ ತಪ್ಪುಗಳಿಗೆ ಇಲ್ಲಿ ಮಾನ್ಯತೆ ಕೊಟ್ಟಿಲ್ಲ. ಲಿಖಿತವಾದ ಬರವಣಿಗೆಯಲ್ಲಿ Goodಗೆ gud ಎಂದು ಬರೆದರೆ ಅದು ತಪ್ಪಾಗುತ್ತದೆ. ಆದರೆ ಆ ಬರವಣಿಗೆ ಎಸ್.ಎಂ.ಎಸ್.ನಲ್ಲಿ ಒಪ್ಪಿತವಾಗಿದೆ. ಬಹುತೇಕ ಜನರು ಇದನ್ನೇ ಬಳಸುತ್ತಿದ್ದಾರೆ. ಮೇಲೆ ಸೂಚಿಸಿದ ಪದಗಳು ಸಂಕ್ಷೇಪ ರೂಪ ಪಡೆದವುಗಳು ಒಂದೆಡೆಯಾದರೆ ಮತ್ತೊಂದು ಒಂದು ಶಬ್ದಕ್ಕೆ ಉಚ್ಚಾರಣ ಸಾಮ್ಯತೆ ಇರುವ ಸಂಖ್ಯೆಯನ್ನು ಬಳಸುವುದು. ಇಲ್ಲಿ ವಿದ್ವಾಂಸರು ಒಪ್ಪಲಿ ಬಿಡಲಿ ಅದರ ಗೊಡವೆಗೆ ಯಾರೂ ಹೋಗುವುದಿಲ್ಲ. ಇಲ್ಲಿ ಜನರಿಗೆ ಸಂವಹನ ಮಾಡುತ್ತಿರುವುದು, ಅದು ತಾವು ಕಳುಹಿಸುವವರಿಗೆ ಸಂವಹನಗೊಳ್ಳುವುದಷ್ಟೇ ಮುಖ್ಯ. ಈ ಬರವಣಿಗೆಯನ್ನು ಯಾರೂ ಬಳಸಬೇಕಾಗಿಲ್ಲವಾದ್ದರಿಂದ ಇದಕ್ಕೆ ತನ್ನದೇ ಆದ ಕಾಲದ ಮಿತಿಯೂ ಕೂಡ ಇದೆ.

ಬರವಣಿಗೆ ಭಾಷೆಯಷ್ಟು ದೀರ್ಘಕಾಲ ಇದು ಉಳಿಯುವುದಿಲ್ಲ. ಕೆಲವು ಸಂದರ್ಭದಲ್ಲಿ ಅದನ್ನು ಉಳಿಸಿಕೊಳ್ಳಲೂಬಹುದು. ಬರವಣಿಗೆ ಭಾಷೆ ಒಂದು ಸಲ ಬರೆದದ್ದಾದ ಮೇಲೆ ಅದನ್ನು ಅಳಿಸಲು ಬರುವುದಿಲ್ಲ. ಆದರೆ ಎಸ್.ಎಂ.ಎಸ್. ಭಾಷೆ ಬರೆದದ್ದೇ ಆದರೂ ಬರವಣಿಗೆ ಭಾಷೆಯ ಲಕ್ಷಣಗಳು ಇದಕ್ಕೆ ಇರುವುದಿಲ್ಲ. ಮತ್ತು ಇದನ್ನು ಬಹುತೇಕ ಓದಿದ ಕೂಡಲೇ ಅಳಿಸಿ ಹಾಕಲಾಗುತ್ತದೆ. ಕೆಲವು ಸಂದರ್ಭದಲ್ಲಿ ಅದನ್ನು ಉಳಿಸಿಕೊಂಡರೂ ಅದು ಆ ಮೊಬೈಲಿಗೆ ಮಾತ್ರ ಸೀಮಿತವಾಗಿರುತ್ತದೆ. ಹಾಗಾಗಿ ಈ ಬರವಣಿಗೆ ಒಬ್ಬ ವ್ಯಕ್ತಿಗೆ ಸೀಮಿತವಾಗಿರುತ್ತದೆ.

ಎಸ್.ಎಂ.ಎಸ್ ಬರವಣಿಗೆಯಲ್ಲೇ ಎರಡು ವಿಧಾನದ ಬರವಣಿಗೆಯನ್ನೂ ಕಾಣಬಹುದಾಗಿದೆ. ಬಿಎಸ್‌ಎನ್‌ಎಲ್, ರಿಲಯನ್ಸ್, ಏರೆಟೆಲ್ ಮುಂತಾದ ಕಂಪನಿಯವರು ಕಳುಹಿಸುವ ಎಸ್.ಎಂ.ಎಸ್ ಬರವಣಿಗೆ ಬಹುತೇಕ ಬರವಣಿಗೆಯ ಭಾಷೆಗೆ ಹತ್ತಿರವಾದ ಭಾಷೆಯೇ ಆಗಿರುತ್ತದೆ. ಇಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಎಸ್ .ಎಂ.ಎಸ್ ಮಾಹಿತಿ ನೋಡಬೇಕಾಗಿರುವುದರಿಂದ ಪ್ರತಿಯೊಬ್ಬರಿಗೂ ಅರ್ಥವಾಗಲಿ ಎನ್ನುವ ದೃಷ್ಟಿಕೋನದಿಂದ ಶಿಷ್ಟ ಮಾದರಿಯನ್ನೇ ಬಳಸಲಾಗುತ್ತದೆ. ಕೆಲವೆಡೆ ಮಾತ್ರ ಭಾಷೆಯನ್ನು ಸಂಕ್ಷೇಪ ರೂಪಕ್ಕೆ ತರಲಾಗುತ್ತದೆ.

ಈ ಎಸ್.ಎಂ.ಎಸ್ ಮಾದರಿಯ ಭಾಷೆ ಕೇವಲ ಮೊಬೈಲುಗಳೀಗೆ ಮಾತ್ರ ಸೀಮಿತವಾಗದೆ ಇಂಟರನೆಟ್‌ಗೂ ಕೂಡ ವಿಸ್ತರಿಸಿಕೊಂಡಿದೆ ಎಂದು ಹೇಳಬಹುದು. ಇತ್ತೀಚೆಗೆ ಮಾಹಿತಿ ಜಾಲದಲ್ಲಿ ಬರುವ ಜಾಹಿರಾತುಗಳಲ್ಲಿ ಈ ಸಂಕ್ಷೇಪ ರೂಪದ ಭಾಷೆಯನ್ನು ಬಳಸಲಾಗುತ್ತಿದೆ. ಉದಾಹರಣೆಗೆ ರೀಡಿಫ್‌ನಲ್ಲಿ ನೀಡುವ ವಿಮಾನಗಳ ದರಪಟ್ಟಿಯನ್ನು ವೀಕ್ಷಿಸುವಾಗ ಇಂಥ ವಾಕ್ಯಗಳು ಕಂಡುಬರುತ್ತವೆ. ಇಲ್ಲಿ ಎರಡು, ನಾಲ್ಕು ಸಂಖ್ಯೆಗಳು ಬಂದಿರುವುದು ಒಂದು ಪದಕ್ಕಿರುವ ಅರ್ಥವನ್ನು ತುಂಬಲು. ಇಲ್ಲಿ ಎರಡು ಅಥವಾ ನಾಲ್ಕು ಸಂಖ್ಯೆಗೆ ಇರುವ ಅಳತೆಯ ಅರ್ಥ ಇಲ್ಲ. ಬದಲಿಗೆ ಒಂದು ಶಬ್ದದ ಅರ್ಥವೇ ಬಂದಿರುವುದು ವಿಶೇಷವಾಗಿದೆ. ಇಂಥ ಪ್ರಯೋಗ ಹಿಂದೆಯೂ ಕೆಲವು ವಿಶೇಷ ಸಂದರ್ಭದಲ್ಲಿ ನಡೆದಿವೆ. ಆದರೆ ಇಷ್ಟೊಂದು ವ್ಯಾಪಕವಾಗಿ ನಡೆದಿಲ್ಲ ಎಂತಲೇ ಹೇಳಬಹುದು. ಇದರಿಂದ ಭಾಷೆಯ ರಚನೆಯಲ್ಲೇ ಬದಲಾವಣೆ ಆಗುವ ಸಂಭವ ಇದೆ. ಇದರ ಪರಿಣಾಮ ಮುಂದೆ ಹೇಗಾಗುತ್ತದೆ ಎಂದು ಕಾದು ನೋಡಬೇಕಾಗಿದೆ.